ಕುರುತ್ತೋಲ ಪೆರುನಾಳ್ ಕೇರಳದ ತೆಂಗಿನಗರಿ ಹಬ್ಬ. ಜನಪದ ಆಚರಣೆಗಳು ತೀರಾ ಕಡಿಮೆ ಇರುವ ಸಮುದಾಯವೆಂದರೆ ಅದು ಕ್ರೈಸ್ತರದ್ದು ಎಂಬೊಂದು ಭಾವನೆಯಿದ್ದರೂ ಗ್ರಾಮೀಣ ಬದುಕಿನ ಸೊಗಡನ್ನು ಉಳಿಸಿಕೊಳ್ಳುವುದರಲ್ಲಿ ಕ್ರೈಸ್ತರು ಖಂಡಿತಾ ಹಿಂದೆ ಬಿದ್ದಿಲ್ಲ. ಇಲ್ಲಿನ ಸಂಸ್ಕೃತಿಯ ಜತೆಗೆ ಕ್ರೈಸ್ತ್ರರಿಗಿರುವ ಸಂಬಂಧವು ಸಾಕಷ್ಟು ಪುತಾತನವಾದುದು ಮತ್ತು ಗಾಢವಾದುದು. ಸಂಸ್ಕೃತಿ ಅಧ್ಯಯನಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರು ಈ ಕಾಲದಲ್ಲಿ ಕ್ರೈಸ್ತ ಸಂಸ್ಕೃತಿಯನ್ನು ಕುರಿತ ಅರವಿನ ಅಗತ್ಯವೂ ಹೆಚ್ಚಿದೆ. ಕ್ರೈಸ್ತ ಬದುಕಿನ ಸೊಗಡನ್ನು ಗಟ್ಟಿಗೊಳಿಸುವ ಪ್ರಮುಖ ಸೂತ್ರವೆಂದರೆ ಕ್ರೈಸ್ತ ಆಚಾರಗಳು ಮತ್ತು ನಂಬಿಕೆಗಳು. ಇಂತಹ ಆಚರಣೆ ಮತ್ತು ನಂಬಿಕೆಗಳಲ್ಲಿ ‘ಕುರುತ್ತೋಲ ಪೆರುನಾಳ್’ ಎಂಬ ತೆಂಗಿನ ಗರಿ ಹಬ್ಬವು ಸಾಕಷ್ಟು ವೈಶಿಷ್ಟ್ಯವನ್ನು ಹೊಂದಿದೆ.

‘ಕುರುತ್ತೋಲ’ ಎಂದರೆ ತೆಂಗಿನ ತಿರಿಮಡಲು (ತೆಂಗಿನ ಎಳೆಯ ಗರಿ). ಹಿಂದೆ ಗ್ರೀಕ್‌ನ ಏಥೆನ್ಸ್‌ನಲ್ಲಿ ಗೆದ್ದವರಿಗೆ ಬಹುಮಾನವಾಗಿ ಆಲಿವ್ ಎಲೆಯನ್ನು ನೀಡುತ್ತಿದ್ದರಂತೆ. ಅಲ್ಲಿಂದ ಪ್ರೇರಣೆ ಪಡೆದೇ ಒಲಿಂಪಿಕ್ಸ್‌ನ ಮೂರ ಪದಕಗಳು ರೂಪುಗೊಂಡದ್ದು. ಹಾಗೆಯೇ ಯಾವುದೇ ವಿಜಯೋತ್ಸವ ಆಚರಣೆಗಳಲ್ಲಿ ಮರದ ಮುರಿದ ಗೆಲ್ಲುಗಳನ್ನು ಕೈಯಲ್ಲಿ ಎತ್ತಿ ಹಿಡಿದು ಮೆರವಣಿಗೆ ಹೋಗುವುದು ಮಾನವನ ಸಹಜವಾದ ಒಂದು ಪ್ರವೃತ್ತಿಯಾಗಿತ್ತು. ತೆಂಗಿನ ಗರಿ ಹಬ್ಬದ ಆಚರಣೆಯನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕು. ಕ್ರೈಸ್ತರಿಗೆ ಸಂಬಂಧಿಸಿದಂತೆ ಇದು ಬಹುಮುಖ್ಯವಾದ ಹಬ್ಬಗಳಲ್ಲೊಂದು. ಈ ಹಬ್ಬಕ್ಕೆ ‘ಓಶಾನ’ ಎಂಬ ಮತ್ತೊಂದು ಹೆಸರು ಇದೆ. ‘ಓಶಾನ’ ಎಂಬ ಪದಕ್ಕೆ ‘ದೇವರೇ ರಕ್ಷಿಸು’ ಎಂದರ್ಥ.

ಸಾಮಾನ್ಯ ಜನರು ಏಸುವನ್ನು ಹಾಡಿ ಹೊಗಳುವ ಘೋಷಣೆಗಳನ್ನು ಕೂಗುತ್ತಾ ಜೆರುಸಲೇಂ ನಗರಕ್ಕೆ ರಾಜಕೀಯ ಪ್ರವೇಶಗೈಯುತ್ತಾರೆ. ‘ಓಶಾನ’ದ ಮೂಲ ಇದೇ ಆಗಿದೆ. ಇದನ್ನೇ ಮೊದಲ ‘ಕುರುತ್ತೋಲ ಪೆರುನಾಳ್’ ಎಂಬುದಾಗಿ ಜನ ನಂಬುತ್ತಾರೆ. ಜೆರುಸಲೇಂ ಶಾಂತಿ ಸಮಾಧಾನಗಳ ನಗರ. ಜೀವಮಾನದಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕು ಎನ್ನುವುದು ಯಹೂದ್ಯರ ಮಹಾದಾಸೆಯಾಗಿತ್ತು. ಏಸುವಿನ ಬರವಿಗಾಗಿ ಇಸ್ರೇಲ್‌ನ ಜನ ಕಾದು ಕುಳಿತಿದ್ದರು. ಸರ್ವ ವಿಧದ ಅಧಿಕಾರಗಳಿಂದ ಕೂಡಿದ ಅರಸನಾಗಿ ಏಸು ಬಂದು ನಮ್ಮನ್ನು ರಕ್ಷಿಸುತ್ತಾನೆ ಎಂಬ ನಿರೀಕ್ಷೆ ಅವರದಾಗಿತ್ತು. ಆದರೆ ಸಾಮಾನ್ಯರಲ್ಲಿ ಸಾಮಾನ್ಯವಾದ ಏಸುವು ಗೋಮಾಳದಲ್ಲಿ ಹುಟ್ಟಿದ. ಶಾಂತಿ, ಸಮಾಧಾನಗಳ ಸಂಕೇತವಾಗಿದ್ದ ಕತ್ತೆಯ ಬೆನ್ನೇರಿಕೊಂಡು ಸ್ವಾಗತಿಸಿದರು (ಈಗಿನ ಕೆಂಪು ಹಾಸಿನ ಸ್ವಾಗತದಂತೆ). ಮರದ ಗೆಲ್ಲುಗಳನ್ನು ಮುರಿದು ಕೈಯಲ್ಲಿ ಹಿಡಿದು ಆರ್ತರಾಗಿ ಕರೆದು ಏಸುವನ್ನು ಸ್ವಾಗತಿಸಿದರು. ಇದೇ ಮೊದಲ ‘ಕುರುತ್ತೋಲ ಪೆರನಾಳಿ’ನ ಹಿಂದಿನ ಐತಿಹ್ಯ.

ಸಾಮಾನ್ಯವಾಗಿ ಈಸ್ಟರ್ ಸಂದರ್ಭದ ಒಂದು ಭಾನುವಾರದಿಂದ ಮತ್ತೊಂದು ಭಾನುವಾರದವರೆಗಿನ ೮ ದಿನಗಳನ್ನು ‘ವಿಶುದ್ಧವಾರ’ ಎಂದು ಪರಿಗಣಿಸಲಾಗುತ್ತದೆ. ‘ಓಶಾನ’ ದಿಂದ ಪ್ರಾರಂಭಿಸಿ ಪುನರುತ್ಥಾನ ದಿನ (ಈಸ್ಟರ್ ಸಂಡೇ) ದಂದು ಅದು ಮುಗಿಯುತ್ತದೆ.

ಕ್ರೈಸ್ತಮತದ ಆಚರಣೆಗಳು ದೇಶದಿಂದ ದೇಶಕ್ಕೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. ಆಯಾ ದೇಶಗಳ ದೇಸೀ ಪ್ರಭಾವಗಳಿಂದ ಅಲ್ಲಿನ ಆಚರಣೆಗಳು ರೂಪುಗೊಳ್ಳುತ್ತವೆ. ಕೇರಳ ಸಂಸ್ಕೃತಿಯ ಹಿನ್ನೆಲೆಯಲ್ಲಿ ತೆಂಗಿನ ಗರಿ ಬಳಕೆಗೆ ಬಂತು. ಕೇರಳದಲ್ಲಿ ಹೀಂದೂ ಪರಂಪರೆಯ ವಿವಿಧ ಉತ್ಸವಗಳಿಗೂ, ತೆಯ್ಯಂ ( ಭೂತಾರಾಧನೆ) ನಂತಹ ಆಚರಣೆಗಳಿಗೂ, ಅಲಂಕಾರಗಳಿಗೂ ತೆಂಗಿನ ಗರಿಗಳನ್ನೇ ಬಳಸುತ್ತಾರಷ್ಟೇ. ಕ್ರೈಸ್ತ ಹಬ್ಬಗಳಿಗೂ ಇದೇ ಬಳಕೆಯಾಯಿತು. ಬಳಸುವ ತೆಂಗಿನ ಗರಿಗಳು ಸ್ವಚ್ಛವಾಗಿರಬೇಕೆಂಬ ನಿಯಮವಿದೆ.

ಸಂಗ್ರಹಸಿದ ತೆಂಗಿನ ಗರಿಗಳನ್ನು ಹಬ್ಬದ ದಿನದಂದು ಇಗರ್ಜಿಗಳಲ್ಲಿ ಕ್ರೈಸ್ತ ಪುರೋಹಿತರು ಪ್ರಾರ್ಥನೆಯನ್ನು ಹೇಳಿ ‘ಪವಿತ್ರಗೊಳಿಸು’ ತ್ತಾರೆ. ಬಳಿಕ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಒಂದೊಂದು ಗರಿಗಳನ್ನು ನೀಡುತ್ತಾರೆ. ಈ ಗರಿಗಳನ್ನು ಹಿಡಿದುಕೊಂಡು ಇಗರ್ಜಿಯ ಸುತ್ತಲೂ ಮೆರವಣಿಗೆಯ ರೂಪದಲ್ಲಿ ಪ್ರದಕ್ಷಿಣೆ ಹಾಕುತ್ತಾರೆ. ಆ ಬಳಿಕ ಇಗರ್ಜಿಯ ಮುಚ್ಚಿದ ಬಾಗಿಲನ್ನು ಮೂರು ಬಾರಿ ಬಡಿದು ತೆರೆದು ಒಳಗೆ ಪ್ರವೇಶಿಸುತ್ತಾರೆ. ಇಗರ್ಜಿಯೊಳಗಿನ ಧಾರ್ಮಿಕ ಆಚರಣೆಗಳ ಬಳಿಕ ಈ ತೆಂಗಿನ ಗರಿಗಳನ್ನು ಅವರವರ ಮನೆಗಳಿಗೆ ಕೊಂಡುಹೋಗಿ ಜಾಗ್ರತೆಯಾಗಿ ತೆಗೆದಿರಿಸುತ್ತಾರೆ. ಈಸ್ಟರ್‌ಗೆ ಮುಂಚಿನ ೫೦ ದಿನಗಳ ಕಾಲ ವ್ರತಾಚರಣೆ ಮಾಡುವುದಿದೆ. ಮನೆಯಲ್ಲಿ ತೆಗೆದಿರಿಸಿದ್ದ ಇಂತಹ ಪವಿತ್ರ ತೆಂಗಿನ ಗರಿಗಳನ್ನು ಉರಿಸಿ ತಯಾರಿಸಿದ ಭಸ್ಮವನ್ನು ಲೇಪಿಸಿ ಈ ವ್ರತಾಚರಣೆಯನ್ನು ಪ್ರಾರಂಭಿಸುತ್ತಾರೆ. ಹೀಗೆ ತೆಗೆದಿರಿಸಿದ ತೆಂಗಿನ ಗರಿಗಳನ್ನು ಶಿಲುಬೆಯಾಕಾರದಲ್ಲಿ ಕತ್ತರಿಸಿ ಕೆಲವು ನಿರ್ದಿಷ್ಟ ಹಬ್ಬದ ತಿನಸುಗಳಿಗೆ ಬಳಸುವುದೂ ಇದೆ.

ಯಾರೂ ಗಮನಿಸದೆ ಹೋದ ಸಾಮಾನ್ಯವಾದ ಮನುಷ್ಯನೊಬ್ಬನನ್ನು ಗುರುತಿಸಿ ದೈವತ್ವಕ್ಕೇರಿಸಿದ ಆ ನೆನಪುಗಳನ್ನು ಈ ‘ಕುರುತ್ತೋಲ ಪೆರುನಾಳ್’ ನಮ್ಮೆದುರು ತೆರೆದಿಡುತ್ತದೆ.

– ಕೆ.ವಿ.ಎಫ್. ಅನುವಾದ ವಿ.ಸಿ.

ಕುರುಬರು ಭಾರತಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಜನವರ್ಗಗಳಲ್ಲಿ ಕುರುಬ ಸಮುದಾಯವೂ ಒಂದು. ಕರ್ನಾಟಕದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಕುರುಬ ಪದವು ‘ಕುರು’ ಎಂಬ ಪದದಿಂದ ನಿಷ್ಪನ್ನಗೊಂಡಿದೆ. ‘ಕುರು’ ಪದ ಕುರಿಯನ್ನು ಸೂಚಿಸಿದೆ. ಹಾಗಾಗಿ ಕುರುಬ ಎಂದರೆ ಕುರಿಸಾಕುವವನು ಎಂದರ್ಥ. ಈ ವಿಚಾರದಲ್ಲಿ ವಿದ್ವಾಂಸರಲ್ಲಿ ಭಿನ್ನಮತಗಳು ಕಂಡುಬರುತ್ತದೆ. ಸರ್ ಡಬ್ಲ್ಯು ಇಲಿಯಟ್ ಅವರು……”The Kurubas one of the most important elements in the early population of South India. They appear as Kurubas in Kanarese and correspond to the Dhangars of the Marathas and of the Northern Indian….” ಎಂದಿದ್ದಾರೆ. ತಮಿಳಿನ ನಿಘಂಟು ತಜ್ಞ ಪಿಂಗಳಮುನಿ ಕುರುಬರನ್ನು ಕುರಿನಿಲಮನ್ನಾರ್ ಅಥವಾ petty cheieftains ಎಂದು ಕರೆದಿದ್ದಾನೆ. ತಮಿಳು ಪದವಾದ ಕುರುಂಬ – Wickedness ಎಂಬ ಅರ್ಥ ನೀಡಿದರೆ Slaver ಎಂಬ ಇನ್ನೊಂದು ಅರ್ಥ ಕೂಡ ಇದೆ. Bishop Laldwell ಅವರು ‘ಕುರುಂಬ’ ಕನ್ನಡ ಪದವೇ ಆಗಿದೆ, ತಮಿಳಿನದ್ದಲ್ಲ ಎಂದು ಅಭಿಪ್ರಾಯಿಸುತ್ತಾರೆ. ಉತ್ತರ ಮಲಬಾರಿನಲ್ಲಿ ‘ಕುರುಂಬನಾಡು’ ಎಂಬ ತಾಲ್ಲೂಕಿರುವುದೊಂದು ವಿಶೇಷ. ಪ್ರಾಚೀನ ಐತಿಹಾಸಿಕ ಮಾಹಿತಿಗಳು ಇವರನ್ನು ದಕ್ಷಿಣ ಭಾರತವನ್ನಾಳಿದ ಪಲ್ಲವ ವಂಶಕ್ಕೆ ಸೇರಿದವರು ಎನ್ನುತ್ತೇವೆ. ಕಾಲಾನಂತರ ಕೊಂಗ, ಜೋಳ ಮತ್ತು ಚಾಲುಕ್ಯರ ಪ್ರಬಲವಾದ ದಾಳಿಯಿಂದ ೭ ಅಥವಾ ೮ ನೇ ಶತಮಾನದ ವೇಳೆಗೆ ಅವನತಿ ಹೊಂದಿ ಮಲಬಾರ್, ನೀರಗಿರಿ, ಕೊಡಗು, ವೈನಾಡು ಮತ್ತು ಮೈಸೂರು ಪ್ರದೇಶಗಳ ಅಭಯಾರಣ್ಯಗಳಲ್ಲಿ ನೆಲೆಯೂರಿದ್ದಿರಬಹುದು ಎಂದು ಅಭಿಪ್ರಾಯಸಿದ್ದಾರೆ. ಅನಂತರ ಇವರು ತಲೆಮರೆಸಿಕೊಂಡ ಪ್ರಯುಕ್ತ ನಾಗರಿಕ ಜನರ ಸಂಪರ್ಕ ಕಡಿದು ಹೋಗಿ ಕಾಡುಜನರಾಗಿ ಪರಿವರ್ತಿತರಾಗಿದ್ದಾರೆಂಬುದು ಕೂಡ ಇನ್ನು ಹಲವು ವಿದ್ವಾಂಸರ ಅಭಿಪ್ರಾಯ. ಅದು ಏನೇ ಇರಲಿ ಊರುಕುರುಬರಿಗೂ ಮತ್ತು ಕಾಡಿನಲ್ಲಿ ವಾಸಿಸುವ ಕುರುಬರಿಗೂ ಒಂದೇ ಮೂಲ ತಲೆಮಾರಿದೆ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿರುವುದುಂಟು. ಸಂಸ್ಕೃತಿ ಮತ್ತು ಭಾಷೆಗಳಲ್ಲಿರುವ ವ್ಯತ್ಯಾಸದಿಂದಾಗಿ ಈ ಮೂಲ ಹಲವು ಬಾರಿ ಅಸ್ಪಷ್ಟವಾಗಿದೆ. ಹಾಗಾಗಿ ಭಾರತದ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ಹಿಮಾಚಲಪ್ರದೇಶ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಇನ್ನಿತರ ರಾಜ್ಯಗಳಲ್ಲಿ ವಿವಿಧ ಹೆಸರಿನಲ್ಲಿ ಕಂಡುಬರುವ ಇವರು ಆಯಾ ಪ್ರದೇಶಗಳಿಗನುಗುಣವಾಗಿ ವಿವಿಧ ಪದ್ಧತಿಗಳನ್ನು ಅನುಸರಿಸುವುದು ಕಂಡು ಬಂದಿದೆ. ಇವರನ್ನು ‘ಭಾರತದ ಕುರುಬರು’ – ರಾಜಪರಂಪರೆಯ ಬುಡಕಟ್ಟು ಎಂದು ಶ್ಯಾಪಿಂಗ್ ಅವರು ದಾಖಲಿಸಿದ್ದಾರೆ. (The Shepards of India).

33

ಕರ್ನಾಟಕದಲ್ಲಿ ವಾಸಿಸುವ ಕುರುಬರನ್ನು ಹಾಲು ಮತದವರು ಎಂದು ಕರೆಯುವ ವಾಡಿಕೆ ಇದೆ. ಇವರಲ್ಲಿ ಹಾಲು ಮತಸ್ಥರು, ಅಂಡೇ ಕುರುಬರು,ಕಂಬಳಿ ಕುರುಬರು ಎಂಬ ಮೂರು ಪ್ರಧಾನ ಗುಂಪುಗಳನ್ನು ಕಾಣಬಹುದು. ಇವರೊಂದಿಗೆ ಹೊಸ, ಹಳೆ, ಸಾಧ, ಕುಂಚಿ, ಮುಳ್ಳು ಇನ್ನಿತರ ಹೆಸರುಗಳನ್ನು ಕಾಣಬಹುದು. ಇವರಲ್ಲಿ ಕೆಲವರಿಗೆ ಕಳ್ಳು ಕುಡಿಯುವುದು ನಿಷೇಧ. ಮೈಸೂರಿನ ಕುರುಬರಲ್ಲಿ ಸೋಮವಾರದವರು, ಗುರುವಾರದವರು, ಭಾನುವಾರದವರು ಎಂಬು ಮೂರು ಪ್ರಧಾನ ಧಾರ್ಮಿಕ ಗುಂಪುಗಳನ್ನು ಕಾಣಬಹುದು.

ವೈವಾಹಿಕ ಸಂಬಂಧಗಳಲ್ಲಿ ಹತ್ತಿ ಕಂಕಣ ಮತ್ತು ಉಣ್ಣೆ ಕಂಕಣದವರು ಎಂಬ ಪ್ರಭೇದಗಳಾಗಿ ವಿಂಗಡಿಸಿರುವುದಿದೆ. ಇವೆರಡು ಕಂಕಣದವರು ಪರಸ್ಪರ ದೊಡ್ಡಪ್ಪನ ಮತ್ತು ಚಿಕ್ಕಪ್ಪನ ಮಕ್ಕಳು ಎಂದು ಗುರುತಿಸಲ್ಪಡುತ್ತಾರೆ. ಕುರುಬರಲ್ಲಿ ಕಂಡುಬರುವ ಕುಲದ ಸಂಖ್ಯೆಯೆಷ್ಟು ಎಂದು ಕೇಳಿದರೆ ಒಂದು ಬಳ್ಳ ರಾಗಿ ನೆಲಕ್ಕೆ ಚೆಲ್ಲಿದರೆ ಅಲ್ಲಿ ಕಂಡುಬರುವ ಪ್ರತಿಯೊಂದು ಕಣಕಣದ ರಾಗಿಯಷ್ಟೆ ಇದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇವರಲ್ಲಿ ಹೆಚ್ಚಿನವರು ಮಾಂಸಾಹಾರಿಗಳು ಕೆಲವರು ಸಸ್ಯಾಹಾರಿಗಳೂ ಇದ್ದಾರೆ. ಆದರೆ ‘ಪೂಜಾರಿಕೆ’ ಮಾಡುವ ಕುಟುಂಬಗಳು ಲಿಂಗಧಾರಣೆ ಮಾಡಿಕೊಂಡು ಸಸ್ಯಾಹಾರಿಗಳಾಗಿದ್ದುಕೊಂಡು ತಮ್ಮನ್ನು ‘ಒಡೆಯರು’ ಎಂದೇ ಗುರುತಿಸಿಕೊಳ್ಳುತ್ತಾರೆ. ಇವರಲ್ಲಿ ಕೆಲವರು ಗುರುಸ್ಥಾನದಲ್ಲಿದ್ದುಕೊಂಡು ಧಾರ್ಮಿಕ ಕಾರ್ಯಗಳಲ್ಲಿ ಮಾರ್ಗದರ್ಶನ ಮಾಡುತ್ತಾರೆ.

ಕುರುಬರಲ್ಲಿ ಒಂದೇ ಕುಲದವರಲ್ಲಿ ವಿವಾಹಗಳು ಏರ್ಪಡುವುದಿಲ್ಲವಾದರೂ ಏಕಕಾಲದಲ್ಲಿ ಪರಸ್ಪರ ಹೆಣ್ಣು ಕೊಟ್ಟು ಹೆಣ್ಣು ತರುವುದಕ್ಕೆ ನಿಷಿದ್ಧವಿಲ್ಲ. ಬೀರೇದೇವರು ಅಥವಾ ಬೀರಪ್ಪ ಕುರುಬರ ಆರಾಧ್ಯ ದೈವ. ವಿವಾಹಕಾರ್ಯಗಳೆಲ್ಲವೂ ಈತನ ಹೆಸರಿನಲ್ಲಿ ನಡೆಯುತ್ತದೆ. ಲಗ್ನಪತ್ರಿಕೆ ಮೊದಲರಸಿನ ಶಾಸ್ತ್ರ, ಚಪ್ಪರದ ಶಾಸ್ತ್ರ ಎಲ್ಲವೂ ಪೂಜಾರಿಯ ಸಮ್ಮುಖದಲ್ಲಿ ನಡೆಯುತ್ತದೆ. ವಿವಾಹದ ದಿನದಂದು ಹೊಸಗಡಿಗೆಗಳಲ್ಲಿ ಮಡಿಯಾಗಿ ನೀರು ತಂದು ಅವುಗಳಲ್ಲಿ ಹೊಂಬಾಳೆ ಇರಿಸಿ ಕೊಠಡಿಯೊಂದರಲ್ಲಿ ಪೂಜಿಸಿವುದು ಕುರುಬರಿಗೆ ಕಡ್ಡಾಯ. ಇತರ ಕೆಲವು ಜಾತಿಗಳಲ್ಲೂ ಈ ಆಚರಣೆ ಇದೆ.

ಇತರ ಸಮುದಾಯಗಳಲ್ಲಿರುವಂತೆ ಕುರುಬರಲ್ಲೂ ಕೆಲವು ನಂಬಿಕೆ ಆಚರಣೆಗಳಿವೆ. ಹೆಣ್ಣು ನೆರೆದಾಗ ಗುಡ್ಲು/ಸೊಪ್ಪು ಹಾಕುವುದು, ಸೋದರ ಮಾವನೇ ಈ ಕಾರ್ಯವನ್ನು ಮಾಡುವುದು, ಯಾರ ಕೆಟ್ಟ ಕಣ್ಣು ತಾಕದಿರಲು ಗುಡ್ಲ ಬಳಿ ಪೊರಕೆ, ಹಳೆ ಚಪ್ಪಲಿ, ಎಕ್ಕದಕುಡಿ ಇಡುವುದು. ಮೃತಪಟ್ಟಾಗ ಹನ್ನೊಂದು ದಿವಸ ಸೂತಕ ಆಚರಿಸುವುದು. ಸತ್ತ ಮೂರು ದಿನಕ್ಕೆ ಹಾಲು ತುಪ್ಪ ಮಾಡುವುದು, ಈ ಸಮುದಾಯದಲ್ಲಿ ಶವವನ್ನು ಹೂಳುವ ಪದ್ಧತಿ ರೂಢಿಯಲ್ಲಿದೆ. ಆದರೆ ಇತ್ತೀಚೆಗೆ ಶವವನ್ನು ಸುಡುವುದು ಕೂಡ ರೂಢಿಗೆ ಬಂದಿದೆ. ದೇಹವನ್ನು ಬಿಟ್ಟ ಆತ್ಮಕ್ಕೆ ಯಾವ ರೀತಿಯ ಲೋಪವಾಗಬಾರದೆಂದು ರೂಢಿ ಸಂಪ್ರದಾಯಗಳೊಂದಿಗೆ ಭಕ್ಷ್ಯಭೋಜನಗಳೊಂದಿಗೆ ಬೀಳ್ಕೊಡುತ್ತಾರೆ. ಸಮಾಧಿ ಪೂಜೆಯನ್ನು ಸತ್ತ ಮೂರನೇ ದಿನ, ಹನ್ನೊಂದನೇ ದಿನ ಮತ್ತು ವರ್ಷಕ್ಕೊಮ್ಮೆ ಪೂಜಿಸುವುದು ರೂಢಿಯಲ್ಲಿದೆ. ಒಟ್ಟಾರೆ ಮೃತಪಟ್ಟ ಹಿರಿಯರೆಲ್ಲರಿಗೂ ಮಹಾಲಯ ಅಮಾವಾಸ್ಯೆಯಂದು ಪಿತೃಪಕ್ಷ ಆಚರಿಸುತ್ತಾರೆ. ಕುರುಬರಲ್ಲಿ ಸತ್ತವರಿಗೆ ಮಾಂಸಾಹಾರ ಎಡೆಯಿಡುವುದು ರೂಢಿಯಲ್ಲಿದೆ.

ಇವರಲ್ಲಿ ಶೈವ ಮತ್ತು ವೈಷ್ಣವ ಸಂಪ್ರದಾಯದವರು ಕಂಡಬರುತ್ತಾರೆ. ಯಾವುದೇ ಶುಭ ಕಾರ್ಯವನ್ನೂ ಅವರ ಲಾಂಛನವೆಂದೇ ಹೇಳುವ ಕಂಬಳಿಯ ಮೇಲೆ ಕುಳಿತು ಮಾಡುತ್ತಾರೆ. ನ್ಯಾಯಪಂಚಾಯಿತಿಗೂ ಈ ಕಂಬಳಿಯ ಮೇಲೆ ಕುಳಿತೇ ನಡೆಯುತ್ತದೆ. ಯಜಮಾನ, ಗೌಡ, ಬುದ್ಧಿವಂತ ಎಂಬ ಹೆಸರುಗಳಿಂದ ಪಂಚಾಯಿತಿಯ ಹಿರಿಯರನ್ನು ಕರೆಯುತ್ತಾರೆ.

ಕುರುಬರ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರಗಳೆಂದರೆ – ಬಳ್ಳಾರಿ ಜಿಲ್ಲೆ ಹಿರೇಮೈಲಾರಲಿಂಗ, ಧಾರವಾಡ ಸಮೀಪದ ಮೈಲಾರಲಿಂಗ, ಮೈಸೂರು ಜಿಲ್ಲೆಯ ಮೂಡುಕುತೊರೆ ಮಲ್ಲಿಕಾರ್ಜುನ ಕ್ಷೇತ್ರಗಳು. ಇವರು ಮಲೆಯ ಮಾದೇಶ್ವರ ಗುಡ್ಡರಾಗುವುದು ಕೂಡ ಒಂದು ಸಂಪ್ರದಾಯವೇ ಆಗಿದೆ. ಕಂಚಿನ ಕಂಸಾಳೆ ಹಿಡಿದು, ಬೀಸು ಕಂಸಾಳೆ ನೃತ್ಯ ಪ್ರದರ್ಶಿಸುತ್ತಾ ಭಕ್ತಿಯಿಂದ ಏಳುಮಲೆ ಸ್ವಾಮಿಗೆ ಹಾಡಿನ ಮೂಲಕ ತಮ್ಮ ನಂಬಿಕೆಯನ್ನು ಅಭಿವ್ಯಕ್ತಿಸುತ್ತಾರೆ. ಮಾದೇಶ್ವರ ಬೆಟ್ಟಕ್ಕೂ ಹೋಗುವ ಸಂಪ್ರದಾಯವಿದೆ. ಉತ್ತರ ಕರ್ನಾಟಕದ ಕುರುಬರು ಡೊಳ್ಳೆ ಕುಣಿತ ಪ್ರದರ್ಶನ ನೀಡುವ ಮೂಲಕ ತಮ್ಮ ಧಾರ್ಮಿಕ ಸೇವೆಯನ್ನು ನೆರವೇರಿಸುತ್ತಾರೆ

– ಎ.ಸಿ.ಎಲ್.

ಕುಲಶೇಖರ ಪಟ್ಟಣದ ದಸರಾ ತಮಿಳುನಾಡಿನ ದಕ್ಷಿಣ ಸಮುದ್ರ ತೀರದ ತೂತ್ತುಕ್ಕುಡಿ ಜಿಲ್ಲೆಯ ತಿರುಚ್ಚೆಂದೂರ್ ತಾಲ್ಲೂಕಿನಲ್ಲಿರುವ ಸಣ್ಣ ಊರೇ ಕುಲಶೇಖರ ಪಟ್ಟಣ. ತಮಿಳುನಾಡಿನ ಪಾಳೈಯಂಕೋಟೆಯಲ್ಲಿ ಪ್ರತಿ ವರ್ಷವೂ ಬಹಳ ವಿಜೃಂಭಣೆಯಿಂದ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಜನರು ವರ್ಷದಲ್ಲಿ ಒಂದು ಬರಿ ಬಂದು ಪರಸ್ಪರ ಬೆರೆತು ಆಚರಿಸಿಕೊಳ್ಳುವ ಬಹಳ ದೊಡ್ಡ ಹಬ್ಬವೇ ಈ ದಸರಾ ಹಬ್ಬ. ಈ ದಸರಾ ಹಬ್ಬವೂ ಪ್ರತಿಯೊಂದು ವರ್ಷವೂ ಪುರಟ್ಟಾಸಿ ತಿಂಗಳಲ್ಲಿ (ಸೆಪ್ಟೆಂಬರ್ ಕೊನೆಯ ೧೫ ದಿನ ಮತ್ತು ಅಕ್ಟೋಬರ್ ಮೊದಲ ೧೫ ದಿನ) ೧೨ ದಿನಗಳ ಕಾಲ ಆಚರಿಸಲಾಗುತ್ತದೆ. ಪುರಾಣದಲ್ಲಿ ಹೇಳಲಾಗುವ ಪರಾಶಕ್ತಿಯ ಯಾಗದಲ್ಲಿ ಒಂಬತ್ತು ದಿನಗಳವರೆಗೂ ನವರಾತ್ರಿಯಾಗಿಯೂ, ಮಹಿಷಾಸುರನನ್ನು ನಾಶಗೊಳಿಸಿದ ಹತ್ತನೆಯ ದಿನವನ್ನು ‘ದಸರಾ’ ಎಂಬುದಾಗಿಯೂ ಆಚರಿಲಸಾಗುತ್ತದೆ. ಈ ಹತ್ತು ದಿನಗಳೊಂದಿಗೆ ತೀರ್ಥ ಎರಚುವಿಕೆ, ಮುತ್ತಾರಮ್ಮನ ಮೆರೆವಣಿಗೆ ಎಂಬೆರಡು ದಿನಗಳನ್ನೊಳಗೊಂಡಂತೆ ಒಟ್ಟು ಹನ್ನೆರಡು ದಿನಗಳ ಹಬ್ಬವನ್ನು ಆಚರಿಸಲಾಗುತ್ತದೆ.

ಕುಲಶೇಖರ ಪಟ್ಟಣದ ದಸರಾ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅವುಗಳೆಂದರೆ ನಾಗಕನ್ಯೆಯ ಪೂಜೆ, ಕಂಕಣ ಕಟ್ಟುವಿಕೆ (ರಕ್ಷಾ ಸೂತ್ರ), ಬಾವುಟ ಏರಿಸುವಿಕೆ, ಬಾವುಟ ಕಂಬಕ್ಕೆ ಪೂಜೆ, ವಿಘ್ನೇಶ್ವರ ಪೂಜೆ, ಹಾರ ಹಾಕುವಿಕೆ, ಒಂಬತ್ತು ದಿನ ಅಮ್ಮನ ಅವತಾರಗಳು, ಯುದ್ಧ ದರ್ಶನ, ಅಸುರ ಸಂಹಾರ, ವೇಷಾಲಂಕಾರ, ಕಂಕಣ ತೆಗೆದುಹಾಕುವುದು ಮುಂತಾದವುಗಳು.

ಮುತ್ತಾರಮ್ಮನ ತಾಯಿ ಎಂಬುದಾಗಿ ಪುರಾಣದಲ್ಲಿ ಹೇಳಿರುವ ನಾಗಕನ್ನೆಗೆ ದಸರಾ ಆರಂಭದ ಹಿಂದಿನ ದಿನ ಪೂಜೆ ನಡೆಯುತ್ತದೆ. ಕಾಳಿ ವೇಷ ಧರಿಸುವ ಭಕ್ತರೂ, ಹರಕೆ ತೀರಿಸುವವರೂ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ. ಈ ಪೂಜೆ ನಡೆದ ಅನಂತರವೇ ಕಾಳಿ ವೇಷದಿಂದ ಅಲಂಕಾರ ಮಾಡಿಕೊಳ್ಳುವ ಭಕ್ತರು ಕಂಕಣ ಕಟ್ಟುವರು. ನಾಗ ಕನ್ಯೆಗೆ ಪೂಜೆ ಮಾಡಿದ ಅಂದಿನ ರಾತ್ರಿಯೇ ಮುತ್ತಾರಮ್ಮನಿಗೂ ಪೂಜೆ ಮಾಡಿ, ಅರಿಸಿನದ ನೀರಿನಲ್ಲಿ ನೆನೆಸಿರುವ ಹಗುರವಾದ ನೂಲಿನ ಕಂಕಣವನ್ನು ಅಮ್ಮನ ಪಾದದಲ್ಲಿಟ್ಟು ಅದನ್ನು ಮಣಿಕಟ್ಟಿಗೆ (ಮುಂಗೈ) ರಕ್ಷಾ ಸೂತ್ರವಾಗಿ ಪೂಜಾರಿಗಳು ಕಟ್ಟುತ್ತಾರೆ. ಕೆಲವರು ಅವರವೇ ಅದನ್ನು ಕಟ್ಟಿಕೊಳ್ಳುವುದು.

34

ದಸರಾ ಹಬ್ಬದ ಮೊದಲನೇ ದಿನ ಬಾವುಟದ ಪಟ್ಟವನ್ನು ಆನೆಯ ಮೇಲೆ ತೆಗೆದುಕೊಂಡು ಮೆರೆವಣಿಗೆ ಮಾಡಲಾಗುತ್ತದೆ. ಸಿಂಹವಾಹನದಲ್ಲಿ ಅಮ್ಮನು ಕುಳಿತಿರುವಂತೆ ಬಿಳಿ ಬಟ್ಟೆಯ ಬಾವುಟದಲ್ಲಿ ಮುದ್ರಿಸಲಾಗುತ್ತದೆ. ಮೆರೆವಣಿಗೆಯ ಅನಂತರ ಮುತ್ತಾರಮ್ಮನ ದೇವಸ್ಥಾನದೊಳಗೆ ನಿರ್ಮಿಸಿರುವ ಬಾವುಟದ ಕಂಬದಲ್ಲಿ ಪೂಜೆ ಮಾಡಿ ಅದರಲ್ಲಿ ಬಾವುಟವನ್ನೇರಿಸಲಾಗುತ್ತದೆ. ಅನಂತರ ಬಾವುಟ ಕಂಬದ ಅಡಿಯಲ್ಲಿ ದರ್ಬೆ ಹುಲ್ಲನ್ನು ಸುತ್ತಲೂ ಇಟ್ಟು ಬಿಳಿ ಹಗ್ಗದಿಂದ ಕಟ್ಟುವರು. ಅನಂತರ ಬಾವುಟ ಕಂಬದ ಪೂಜೆಯೆಂಬುದು, ಹಲವಾರು ಬಗೆಯ ಸುಗಂಧದ ವಸ್ತುಗಳ ಅಭಿಷೇಕದೊಂದಿಗೆ ಮಾಡಲಾಗುತ್ತದೆ.

ದಸರಾ ಹಬ್ಬದ ಬಾವುಟ ಏರಿಸುವಿಕೆಯ ಕಾರ್ಯಕ್ರಮ ಮುಗಿದ ಅನಂತರ ಪೂಜಾರಿಗಳಲ್ಲದ ಮತ್ತಿತರ ಭಕ್ತಾದಿಗಳಿಗೆ ಕಂಕಣ ಕಟ್ಟುವಿಕೆ ನಡೆಯುತ್ತದೆ. ದಸರಾ ಹಬ್ಬದ ಸಮಯದಲ್ಲಿ ಹತ್ತು ದಿನಗಳಲ್ಲೂ ಇದು ನಡೆಯುತ್ತದೆ. ಪೂಜಾರಿಗಳು ಮಾತ್ರವಲ್ಲದೆ ಕಾಳಿವೇಷ ಧರಿಸುವ ಭಕ್ತರು ಮತ್ತು ಹಿರಿಯ ಭಕ್ತರ ಬಳಿಯೂ ಕಂಕಣ ಕಟ್ಟಿಕೊಳ್ಳುತ್ತಾರೆ. ಸಮುದ್ರದ ಪೂಜೆಯನ್ನು ಮುಗಿಸಿ, ನಾಗ ಕನ್ಯೆಯನ್ನು ಪೂಜಿಸಿ ಅನಂತರ ಮುತ್ತಾರಮ್ಮನ ದೇವಸ್ಥಾನಕ್ಕೆ ಬಂದು ಮೂರು ಬಾರಿ ದೇವಸ್ಥಾನವನ್ನು ಸುತ್ತಿ ಕಾಯಿಹಣ್ಣುಗಳೊಂದಿಗೆ ಅಮ್ಮನನ್ನು ಪೂಜಿಸಿ ಅನಂತರ ಬಲದ ಕೈಗೆ ಪೂಜಾರಿಯ ಬಳಿ ಕಂಕಣವನ್ನು ಕಟ್ಟಿಸಿಕೊಳ್ಳುತ್ತಾರೆ.

ದಸರಾ ಹಬ್ಬದ ಹತ್ತು ದಿನಗಳಲ್ಲೂ ಅಮ್ಮನಿಗೆ ದಿನಕ್ಕೊಂದು ವೇಷದಲ್ಲಿ ಅಲಂಕಾರ ಮಾಡಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಗುತ್ತದೆ. ಹತ್ತು ದಿನಗಳಲ್ಲೂ ಕ್ರಮವಾಗಿ ದುರ್ಗೆ, ವಿಶ್ವ ಕರ್ಮೇಶ್ವರರ್, ಪಾರ್ವತಿ, ಬಾಲಸುಬ್ರಹ್ಮಣಿ, ನವನೀತ ಕೃಷ್ಣ, ಮಹಿಷಾಸುರಮರ್ದಿನಿ, ಆನಂದ ನಟರಾಜ, ಗಜಲಕ್ಷ್ಮಿ, ಸರಸ್ವತಿ ಮತ್ತು ಪುನಃ ಮಹಿಷಾಸುರಮರ್ದಿನಿ ಮುಂತಾದ ಅವತಾರಗಳಲ್ಲಿ ಅಲಂಕರಿಸಿ ಮೆರೆವಣಿಗೆ ನಡೆಯುತ್ತದೆ.

ಆರನೆಯ ದಿನ ಅಮ್ಮನು ಮಹಿಷಾಸುರಮರ್ದಿನಿ ಅವತಾರ ತಾಳುವಾಗ, ಹತ್ತನೇ ದಿನ ನಡೆಯಲಿರುವ ಯುದ್ಧವನ್ನು ನೋಡುವುದನ್ನೇ ‘ಯುದ್ಧ ದರ್ಶನ’ ಎನ್ನಲಾಗುವುದು.

ದಸರಾ ಹಬ್ಬದ ಹತ್ತನೇ ದಿನದಂದು ಅಸುರನನ್ನು ಅಮ್ಮ ವಧೆ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಮುಂಚಿತವಾಗಿ ಹಗಲಲ್ಲಿ ಸಂಹಾರಕ್ಕೆ ಕೊಂಡೊಯ್ಯಲ್ಪಡುವ ಶೂಲ ಪೂಜಾರಿ ದೇವಸ್ಥಾನದಿಂದ ತೆಗೆದುಕೊಂಡು ಬಂದು ಪಲ್ಲಕ್ಕಿಯಲ್ಲಿ ವಧೆ ಮಾಡಲು ಸಿದ್ಧವಾಗಿರುವ ಮಹಿಷಾಸುರ ಮರ್ದಿನಿಯ ಬಳಿಯಿಟ್ಟು ಪೂಜೆ ಮಾಡಲಾಗುತ್ತದೆ. ಅನಂತರ ಶೂಲವನ್ನು ಪೂಜಾರಿ ಕೈಯಲ್ಲಿ ಹಿಡಿದು ಯುದ್ಧರಂಗದೆಡೆಗೆ ಸಾಗಲು, ಹಿಂದೆ ಮಹಿಷಾಸುರ ಮರ್ದಿನಿಯ ಪಲ್ಲಕ್ಕಿ ಸಾಗುವುದು, ಮಹಿಷಾಸುರನೂ ಹಿಂದೆ ಅದನ್ನು ಹಿಂಬಾಲಿಸುತ್ತಾ ಹೋಗುತ್ತದೆ. ಕೆಲವು ಜಾಗಗಳಲ್ಲಿ ಅಮ್ಮನೂ ಅಸುರನೂ ಮುಂದೆಯೂ ಹಿಂದೆಯೂ ಬಂದು ಯುದ್ಧ ಸಿದ್ಧತೆಯಾಗುವ ಸೂಚಕವನ್ನು ಮಾಡುವರು. ಕಾಳಿವೇಷವನ್ನು ಧರಿಸಿರುವ ಭಕ್ತರು ಕೈಯಲ್ಲಿ ಶೂಲವನ್ನು ಹಿಡಿದು ಅಮ್ಮನ ಪಲ್ಲಕ್ಕಿಯೊಡನೆ ಯುದ್ಧ ವೀರರಂತೆ ಸಾಲುಸಾಲಾಗಿ ಹೋಗುವರು. ಮಹಿಷಾಸುರ ಬೇರೆ ಬೇರೆ ರೂಪಗಳಲ್ಲಿ ಅಮ್ಮನೊಡನೆ ಯುದ್ಧ ಮಾಡುವುದನ್ನು ಸೂಚಿಸುವ ವಿಧವಾಗಿ ಹಿಂದೆ ತನ್ನ ಮುಖಿ, ಸಿಂಹ,ಎಮ್ಮೆ, ಕಾಗೆ, ಗರುಡ, ಆನೆ, ಹುಂಜ ಮುಂತಾದ ಏಳು ರೂಪಗಳಲ್ಲೂ ನಡೆದ ಅಸುರ ಸಂಹಾರದ ಕಾರ್ಯಕ್ರಮ ಈಗ ಅಸರು, ಎಮ್ಮೆ, ಸಿಂಹ, ಹುಂಜ ಮುಂತಾದ ನಾಲ್ಕು ರೂಪಗಳಲ್ಲಿ ಮಾತ್ರ ನಡೆಯುತ್ತದೆ.

ಒಂದೊಂದು ಘಟನೆಯಲ್ಲಿ ಅಸುರ ಅಮ್ಮನನ್ನು ಸುತ್ತಿ ಬಂದು ಹಿಂದಕ್ಕೆ ಸಾಗಿ ನಿಲ್ಲುವನು. ಅನಂತರ ಅಮ್ಮ ಅಸುರನಡೆಗೆ ಧಾವಿಸಿ ಬರುವುದು, ಹಿಂದಕ್ಕೆ ಸಾಗುವುದಾಗಿ ಮೂರು ಸಾರಿ ಮಾಡುತ್ತಾಳೆ. ಅನಂತರ ಪೂಜಾರಿ ಶೂಲಾಯುಧವನ್ನು ತೆಗೆದುಕೊಂಡು ಅಸುರನ ಸಮೀಪಕ್ಕೆ ಸಾಗಿ ತಲೆಗೆ ಚುಚ್ಚುವಂತೆ ಮಾಡುವರು. ಕಾಳಿವೇಷವನ್ನು ಧರಿಸಿದ್ದ ಭಕ್ತರೂ ಅದೇ ರೀತಿ ಮಾಡುವರು. ಈ ರೀತಿ ನಾಲ್ಕು ಸ್ಥಳಗಳಲ್ಲಿ ಮಾಡಲಾಗುತ್ತದೆ.

ಅನಂತರ ಶೂಲವನ್ನು ತೆಗೆದುಕೊಂಡು ಹೋಗಿ ಸಮುದ್ರದ ನೀರಿನಲ್ಲಿ ತೊಳೆದು, ಅಲ್ಲಿರುವ ಬಯಲಿನ ಮಂಟದಲ್ಲಿಟ್ಟು ಪೂಜೆ ಮಾಡುವರು. ಹಲವಾರು ತಂಪು ವಸ್ತುಗಳಿಂದ ಅಭಿಷೇಖ ಮಾಡಿ ಅಮ್ಮನ ಕೋಪವನ್ನು ತಣಿಸುವಂತೆ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಅಂದಿನ ರಾತ್ರಿ ಅಮ್ಮ ಸಮುದ್ರದ ದಂಡೆಯಿಂದ ಹೊರಟು, ಚಿಂದಂಬರೇಶ್ವರರ ದೇವಸ್ಥಾನಕ್ಕೆ ಸಾಗಿ, ಅಲ್ಲಿ ಅಮ್ಮನ ಮಹಿಷಾಸುರಮರ್ದಿನಿ ವೇಷವನ್ನು ತೆಗೆಯಲಾಗುತ್ತದೆ. ಶಾಂತ ಸ್ವರೂಪ ವೇಷವನ್ನು ಅಲಂಕರಿಸಲಾಗುತ್ತದೆ. ಇದೇ ರೀತಿ ಕಾಳಿವೇಷ ಮತ್ತಿತ್ತರ ವೇಷಗಳನ್ನು ಧರಿಸಿದರೂ ಅನಂತರ ತಂತಮ್ಮ ವೇಷವನ್ನು ತೆಗೆಯುವರು. ನಂತರ ಮುಂಜಾನೆಯಲ್ಲಿ ಚಿದಂಬರೇಶ್ವರ ದೇವಸ್ಥಾನದಿಂದ ಹೊರಟು ಮುತ್ತಾರಮ್ಮನ ದೇವಸ್ಥಾನದಲ್ಲಿರುವ, ಅಲಂಕರಿಸಿರುವ ಹೂವಿನ ಪಲ್ಲಕ್ಕಿಯಲ್ಲಿ ಅಮ್ಮನನ್ನು ಕೂರಿಸಿ ಪೂಜೆ ಮಾಡುವರು. ಸಂಹಾರ ಮುಗಿದ ಕೂಡಲೇ ಸಮುದ್ರ ದಂಡೆಯ ಮರಳಿನ ಪ್ರದೇಶದಲ್ಲಿ ದಸರಾ ಗುಂಪಿನವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಲ್ಲಲ್ಲಿ ನಡೆಸುತ್ತಾ ಇರುತ್ತಾರೆ. ಆಕಾಶಬಾಣ ಮುಂತಾದ ವಿನೋದದ ಕಾರ್ಯಕ್ರಮವೂ ನಡೆಯುತ್ತದೆ.

ಹನ್ನೊಂದನೆಯ ದಿನ ಮುಂಜಾನೆಯಲ್ಲಿ ಮುತ್ತಾರಮ್ಮನನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಕುಲಶೇಖರ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡುವರು. ಭಕ್ತರು ಕಾಯಿಹಣ್ಣುಗಳನ್ನು ತಂದು ಪೂಜಿಸಿ ಅಡ್ಡ ಬಿದ್ದು ನಮಸ್ಕರಿಸುವರು. ಕಾಳಿವೇಷವನ್ನು ಧರಿಸಿದ ಭಕ್ತರು ಪಲ್ಲಕ್ಕಿಯೊಡನೆ ಮೈಮೇಲೆ ದೇವರು ಬಂದು ಆಡುತ್ತಾ ಬರುವರು. ಕೆಲವರು ಭವಿಷ್ಯ ಹೇಳುವರು. ಸಾಮಾನ್ಯ ಜನರು ಅವರನ್ನೂ ಅಮ್ಮನೆಂದು ಭಾವಿಸಿ ಆಶೀರ್ವಾದ ಪಡೆಯುವರು. ಅಂದಿನ ಸಂಜೆ ಅಮ್ಮನಿಗೆ ಶೈವ ನೈವೇದ್ಯವನ್ನಿಟ್ಟು ಪೂಜೆ (ಶಾಕಾಹಾರ) ನಡೆಯುತ್ತದೆ. ಅನಂತರ ಮರದಿಂದ ಬಾವುಟದ ಪಟ್ಟವನ್ನು ಇಳಿಸುವ ಕಾರ್ಯಕ್ರಮ ನಡೆಯುತ್ತದೆ. ಅನಂತರ ಅಮ್ಮನನ್ನು ಗುಡಿಯ ಸನ್ನಿಧಿಯೊಳೆ ತಂದು ದೀಪಾರಾಧನೆ ಮಾಡುತ್ತಾರೆ. ಅದಾದ ಮೇಲೆ ಪೂಜಾರಿಗಳೂ, ಕಾಳಿವೇಷ ಧರಿಸಿರುವ ಭಕ್ತೂ ಕಂಕಣವನ್ನು ಕೊಯ್ದುಕೊಳ್ಳುತ್ತಾರೆ. ಇನ್ನುಳಿದ ಭಕ್ತರ ಕಂಕಣವನ್ನು ಕೊಯ್ಯುತ್ತಾರೆ. ಹನ್ನೆರಡನೆಯ ದಿನ ಅಮ್ಮನಿಗೆ ಹಾಲಿನ ಅಭಿಷೇಕ ಮಾಡುವುದರೊಂದಿಗೆ ದಸರಾ ಹಬ್ಬ ಮುಕ್ತಾಯವಾಗುತ್ತದೆ.

ದಸರಾ ಹಬ್ಬದ ಮೊದಲ ದಿನದಂದು ಕೊನೆಯ ದಿನದವರೆಗೆ ಭಕ್ತಿಪೂರ್ವಕವಾದ ಪೂಜಾ ಕಾರ್ಯಕ್ರಮಗಳೂ ಸಂಗೀತ ಕಾರ್ಯಕ್ರಮಗಳೂ ನಡೆದು ವಾತಾವರಣವೇ ಸೊಬಗಿನಿಂದ ಕೂಡಿರುತ್ತದೆ. ಹಲವಾರು ಊರುಗಳಿಂದಲೂ ಭಕ್ತರು ಹರಕೆಯ ಸಲುವಾಗಿ ಹಲವು ಬಗೆಯ ವೇಷಗಳನ್ನು ಧರಿಸಿ ಊರೂರು ಅಲೆದು ಭಿಕ್ಷೆ ಬೇಡಿ, ಅದನ್ನು ಹತ್ತನೆಯ ದಿನದ ಹಬ್ಬದಂದು ದೇವಸ್ಥಾನದ ಗೋಲಕ (ಹುಂಡಿ)ದಲ್ಲಿ ಕಾಣಿಕೆಯಾಗಿ ಹಾಕುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ತಿರುನೆಲ್‌ವೇಲಿ, ತೂತ್ತುಕುಡಿ ಜಿಲ್ಲೆಗಳಲ್ಲಿರುವ ಹಲವು ಊರುಗಳಲ್ಲಿ ದಿನಪೂರ್ತಿ ಕಣ್ಣಿಗೆ ಆಕರ್ಷಣೀಯವಾದ ವೇಷವನ್ನು ಧರಿಸಿದ ಭಕ್ತರು ನಡೆದಾಡುವುದೂ ವಾಹನಗಳಲ್ಲಿ ಮೆರೆವಣಿಗೆ ರೂಪದಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಾಣಿಕೆಯನ್ನು ವಸೂಲಿ ಮಾಡುವುದೂ ಗಮನವನ್ನು ಸೆಳೆಯುತ್ತದೆ.

– ಪಿ.ಎ. ಅನುವಾದ ಎಂ.ಆರ್.

ಕುಲಿಯಾ ಈ ಬುಡಕಟ್ಟುಗಳು ಆಂಧ್ರದ ವಿಶಾಖದಲ್ಲಿಯ ಅರಕು, ಪಾಂಡೇರು, ಪೆದಬಯಲು, ಮುಂಚಿಂಗ್ ಪುಟ್ ಮುಂತಾದ ಕಾಡಿನ ಪ್ರಾಂತಗಳಲ್ಲಿ ವಾಸಿಸುತ್ತಾರೆ. ಅವರನ್ನು ‘ಮುಲಿಯಾ’ ಎಂದು ಸಹ ಕರೆಯುತ್ತಾರೆ. ಒರಿಯಾ ಭಾಷೆಯನ್ನೇ ಇವರು ಮಾತನಾಡುವರಾದರೂ ತೆಲುಗು ಮಾತನಾಡುವುದರಲ್ಲಿಯೂ ಅಷ್ಟೆ ಸಮರ್ಥರು. ಕುಲಿಯಾಗಳು ಸೋದರಳಿಯ, ಸೋದರ ಸೊಸೆ ಮುಂತಾದವರನ್ನು ಮದುವೆ ಮಾಡಿಕೊಳ್ಳುವುದೇ ಹೆಚ್ಚು. ಆದರೆ ಅಕ್ಕನ ಮಗಳನ್ನು ಮಾತ್ರ ಮಾಡಿಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಬಾಲ್ಯ ವಿವಾಹ ಚಾಲ್ತಿಯಲ್ಲಿತ್ತು. ಆದರೆ ಇಂದು ೧೮ ವರ್ಷಗಳ ಅನಂತರವೇ ಮದುವೆ ಮಾಡುತ್ತಾರೆ. ತಾಳಿ, ಕರಿಮಣಿ, ಉಂಗುರ, ಅರಿಷಿಣ ದಾರ, ಕರಿಬಳೆ ಮದುವೆಯಾದ ಹೆಂಗಸಿನ ಚಿಹ್ನೆಗಳು. ಕುಲದ ವ್ಯವಸ್ಥೆಯಿದೆ. ಕುಟುಂಬದ ಯಜಮಾನ ತಂದೆ. ಬಹುಪತ್ನಿತ್ವ ಅವರಲ್ಲಿ ಕಾಣಿಸುತ್ತದೆ. ಪ್ರೇಮ ವಿವಾಹಗಳಿವೆ. ಮದುವೆಯಾದ ಮೇಲೆ ಗಂಡು ಮಕ್ಕಳು ಬೇರೆಯಾಗುತ್ತಾರೆ. ಸಣ್ಣ ಕುಟುಂಬಗಳೇ ಹೆಚ್ಚು. ಆದರೆ ಭೂಮಿಯನ್ನು (ಆಸ್ತಿ) ಹಂಚಿಕೊಳ್ಳುವುದಿಲ್ಲ. ಕುಲಿಯಾಗಳು ಮಾಂಸಹಾರಿಗಳೆ. ಆದರೆ ದನದ ಮಾಂಸ ತಿನ್ನುವುದಿಲ್ಲ. ಕಾಡಿನ ಉತ್ಪನ್ನಗಳಾದ ಗಡ್ಡೆಮೆಣಸು, ಮೂಲಿಕೆಗಳು, ಜೇನು, ಹಣ್ಣು ಮಾರಿ ಜೀವನ ಸಾಗಿಸುತ್ತಾರೆ. ಕುಲಿಯಾಗಳಲ್ಲಿ ಅನೇಕ ಗೋತ್ರಗಳಿವೆ. ಅವರಲ್ಲಿ ೧. ನಾಗವಂಶ, ೨.ಸುಕ್ಜೊವಂಶ, ೩.ಮತ್ಸ್ಯವಂಶ, ೪.ಕಿಲ್ಲೊ ವಂಶ, ೫.ಹನುಮಾನ್‌ ವಂಶ, ೬.ಪಂಗಿ ವಂಶ ಎಂಬುದಾಗಿವೆ. ನೇಸ್ತಂ (ಸ್ನೇಹಬಂಧ) ಎಂಬ ವ್ಯವಸ್ಥೆಯೂ ಇವರಲ್ಲಿದೆ. ಇದನ್ನೇ ‘ಗೋತ್ ಬಂದ್‌ ಬಾರ್‌’ ಎನ್ನುತ್ತಾರೆ.

ಬೇಸಾಯ ಮಾಡುವುದು, ಬಳೆ, ಮಣಿ ಕೃತಕ ಆಭರಣಗಳನ್ನು ಮಾರುವುದು ಅವರ ಸಾಂಪ್ರದಾಯಿಕ ವೃ‌ತ್ತಿ. ಸಾಮಾಜಿಕ, ಧಾರ್ಮಿಕ ಪರವಾದ ವಿಷಯಗಳನ್ನು ‘ಬಾರ ಬಾಯ್’ ಎಂದು ಕರೆಯುತ್ತಾರೆ. ಸತ್ತವರ ಶವವನ್ನು ಐದು ಮಂದಿ ಸ್ಮಶಾನಕ್ಕೆ ಹೊತ್ತಯ್ಯುತ್ತಾರೆ. ಮದುವೆಯಾದವರನ್ನು ಸುಡುತ್ತಾರೆ. ಮದುವೆಯಾಗದಿದ್ದರೆ ಹೂತು ಹೋಗುವಾಗ ಸ್ನಾನಮಾಡಿ ಉಟ್ಟ ಬಟ್ಟೆ ಒಗೆದುಕೊಂಡು ಮನೆಗೆ ಮರಳುತ್ತಾರೆ. ಹತ್ತನೆಯ ದಿನವನ್ನು ಇವರು ‘ದೊಡೋಕೋ ಬಾರ್’ ಎನ್ನುತ್ತಾರೆ. ಆ ದಿನ ಬಂಧು ಬಾಂಧವರೆಲ್ಲರೂ ತೀರಿಕೊಂಡವರಿಗೆ ಇಷ್ಟವಾದ ಪದಾರ್ಥಗಳನ್ನೆಲ್ಲ ಮಾಡಿಡುತ್ತಾರೆ. ಒಂದು ದೀಪವನ್ನು ಬೆಳಗಿ ಹೊಸ ಬಟ್ಟೆ ಮಾಡಿಟ್ಟ ಅಡುಗೆ ಇಟ್ಟರೆ ಅವರ ಆತ್ಮ ಬರುತ್ತದೆಂಬುದು ಇವರ ನಂಬಿಕೆ. ಮಾವು, ತೊಗರಿ, ನವಣೆ ಮುಂತಾದ ಬೆಳೆ ಚೆನ್ನಾಗಿ ಬೆಳೆದಾಗ ಹಬ್ಬಗಳನ್ನು ಆಚರಿಸುತ್ತಾರೆ. ನಿಷಾನಿ, ಪೆದ್ದ ದೇವುಡು, ಜಾನ್ ಕಾರಿ, ಗಂಗದೇವ, ನಂದಿದೇವ ಮುಂತಾದ ದೇವರುಗಳನ್ನು ಬೇರೆ ಬೇರೆ ತಿಂಗಳುಗಳಲ್ಲಿ ಪೂಜಿಸುತ್ತಾರೆ. ಉಳಿದ ಬುಡಕಟ್ಟುಗಳೊಂದಿಗೆ ಸೇರಿಕೊಂಡು ಹಬ್ಬಗಳನ್ನು ಆಚರಿಸುತ್ತಾರೆ. ಇವರಲ್ಲಿ ಮೌಖಿಕ ಸಾಹಿತ್ಯವಿದೆ. ಗಾದೆಗಳು, ಒಡಪುಗಳು, ಇತರೆ ಸಾಹಿತ್ಯವನ್ನು ಹಿರಿಯರು ಕಿರಿಯರಿಗೆ ಕಲಿಸುವರು.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ಶೇಕಡಾ ೦.೦೦೭.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಕುಳಿತಾಳಂ ಕುಳಿತಾಳ(ಗುಳಿತಾಳ)ವು ಕೊಡಂಗಲ್ಲೂರು ದೇವಿ ಸಂಬಂಧವನ್ನು ಹೊಂದಿರುವ ತಾಳವಾಗಿದ್ದು, ಕಳಂಪಾಟಿಗೆ ಇದನ್ನು ಬಳಸುತ್ತಾರೆ. ಪುಲಯರು, ವೇಟುವರು ನಡೆಸುವ ತೋಟ್ಟಂ ಹಾಡುಗಳಲ್ಲಿ ಈ ತಾಳವನ್ನು ಬಳಸುತ್ತಾರೆ. ಕಳಂಪಾಟು ಕುಂಭಮಾಸದಲ್ಲಿ ಆರಂಭವಾಗಿ ಮೀನಮಾಸದಲ್ಲಿ ಕೊನೆಗೊಳ್ಳುವುದು. ಅನಂತರ ಈ ತಾಳ ಬಳಕೆಯಾಗುವುದು ಕಡಿಮೆ.

ಕಂಚಿನ ಈ ತಾಳವನ್ನು ಮೂಶಾರಿ ಸಮುದಾಯದವರು ನಿರ್ಮಿಸುತ್ತಾರೆ. ಈ ತಾಳದ ಒಳಭಾಗವು ಗುಳಿಯಾಗಿದ್ದು, ಒಂದು ಚೆಂಡನ್ನು ಕತ್ತರಿಸಿದ ಆಕಾರದಲ್ಲಿರುತ್ತದೆ. ಮಧ್ಯಭಾಗವು ಹೊರಭಾಗಕ್ಕೆ ಚಾಚಿದ್ದು ದ್ವಾರದಿಂದ ಕೂಡಿದೆ. ಈ ದ್ವಾರದ ಮೂಲಕ್ಕೆ ಒಂದು ದಾರವನ್ನು ಪೋಣಿಸಿ, ತಾಳವನ್ನು ಬಡಿಯುವರು. ಕೊಡಂಗಲ್ಲೂರು ದೇವಿಯ ಕುರಿತಾಗಿರುವ ಹಾಡುಗಳನ್ನು ಈ ತಾಳವನ್ನು ಪರಸ್ಪರ ಬಡಿಯುತ್ತಾ ಹಾಡುವರು. ಪುಲಯರ ಮನೆಗಳಲ್ಲಿ ಏಳು ದಿವಸಗಳ ಕಾಲ ನಡೆಯುವ ಕಳಂಪಾಟಿನಲ್ಲಿ ಈ ತಾಳದ ಬಳಕೆಯಿದೆ. ಕೆಲವು ಭಗವತಿ ಕಾವುಗಳಲ್ಲಿ ಕುಳಿತಾಳವನ್ನು ಬಳಸಿ ರಾತ್ರಿಯಿಡೀ ಸ್ತುತಿ ಹಾಡುವ ಪರಿಪಾಠವಿದೆ.

– ಕೆ.ಯು.ಎಚ್. ಅನುವಾದ ಎನ್.ಎಸ್.