ಕೇರಳದ ಆದಿವಾಸಿಗಳು ೨೦೦೧ರ ಜನಗಣತಿಯ ಪ್ರಕಾರ ಕೇರಳದ ಆದಿವಾಸಿ ಬುಡಕಟ್ಟುಗಳ ಜನಸಂಖ್ಯೆ ೩,೬೪,೧೮೯. ಇದು ಕೇರಳದ ಒಟ್ಟು ಜನಸಂಖ್ಯೆಯ ೧.೧% ಆಗಿದೆ. ವಯನಾಡು, ಇಡುಕ್ಕಿ, ಪಾಲಕ್ಕಾಡು ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅತ್ಯಂತ ಕಡಿಮೆ ಸಂಖ್ಯೆಯ ಆದಿವಾಸಿ ಜನರು ವಾಸಿವಾಗಿರುವ ಜಲ್ಲೆ ಆಲಪುಳ, ಅಡಿಯನ್, ಅರನಾಡನ್, ಎರವಾಲನ್, ಹಿಲ್‌ಪಲಯ, ಇರುಳರ್, ಕಾಡರ್, ವಯನಾಡ್‌ ಕಾಡರ್, ಕಾಣಿಕ್ಕಾರ್, ಕಾಟುನಾಯ್ಕನ್, ಕೊಚ್ಚುವೇಲನ್, ಕೊರಗ, ಮಲೆಕುಡಿಯ, ಕುರಿಚ್ಯರ್, ಮುಳ್ಳುಕುರುವನ್, ಕುರುಂಬರ್, ಮಹಾಮಲಕರ್, ಮಲಯರಯರ್, ಮಲಪಂಡಾರಂ, ಮಲವೇಡನ್, ಮಲಕುರವನ್, ಮಲಸರ್, ಮಲಯನ್, ಮನ್ನಾನ್, ಮುದುವಾನ್, ಮುಡುಗರ್, ಪಣಿಯರ್, ಉಳ್ಳವನ್, ಊರಾಳಿ, ಮಲವೇಟುವನ್, ತಚ್ಚನಾಡನ್ ಮೂಪನ್, ಚೋಲನಾಯ್ಕರ್, ಮೂವಿಲಕನ್, ಕರಿಂಬಾಲನ್, ವೇಟ ಕುರುಮನ್, ಮಲಪಣಿಕ್ಕರ್ ಮೊದಲಾದವರು ಸರಕಾರದ ಪಟ್ಟಿಯಲ್ಲಿರುವ ಬುಡಕಟ್ಟು ಆದಿವಾಸಿಗಳು. ಇವರಲ್ಲಿ ಚೋಲನಾಯ್ಕರ್, ಕಾಟುನಾಯ್ಕರ್, ಕುರುಂಬರ್, ಕಾಡರ್, ಕೊರಗ ಮೊದಲಾದ ಪಂಗಡಗಳನ್ನು ಪ್ರಾಚೀನ ಬುಡಕಟ್ಟು ಪಂಗಡಗಳಾಗಿ ಗುರುತಿಸಲಾಗಿದೆ. ಈ ವಿಭಾಗದವರು ಉಳಿದ ಆದಿವಾಸಿ ಪಂಗಡಳಿಗಿಂತ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಉರುಕುವ ಗೌಡಾಲು, ಕನಲಾಡಿ, ಕಂಡುವಡಿಯನ್, ಚಿಂಙತ್ತಾನ್, ಮಲಯಡಿಯನ್, ಮಲಯಾಳನ್ ಮೊದಲಾದವು ಸರಕಾರದ ಪಟ್ಟಿಯಲ್ಲಿಲ್ಲದ ಬುಡಕಟ್ಟು ಪಂಗಡದವರ ಬಗ್ಗೆ ಎ.ಎ.ಡಿ.ಯೂಲಿಸ್ ಎಂಬ ವಿದ್ವಾಂಸರು ಹೇಳುತ್ತಾರೆ.

ಪಶ್ಚಿಮ ಘಟ್ಟಗಳ ಪಶ್ಚಿಮ ತಪ್ಪಲಿನಲ್ಲಿ ಕಾಸರಗೋಡು ಜಿಲ್ಲೆಯಿಂದ ತಿರುವನಂತಪುರದವರೆಗಿನ ಎಲ್ಲ ಜಿಲ್ಲೆಗಳಲ್ಲೂ ಆದಿವಾಸಿ ಪಂಗಡಗಳು ವಾಸವಾಗಿವೆ. ಪಿ.ಆರ್.ಜಿ.ಮಾತೂರ್ ಎಂಬವರು ಕೇರಳದ ಆದಿವಾಸಿಗಳನ್ನು ಭೌಗೋಳಿಕ ಹಿನ್ನೆಲೆಯಲ್ಲಿ ಕೆಲವು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಕಾಸರಗೋಡು, ವಯನಾಡು, ಅಟ್ಟಪಾಡಿ, ಪರಂಬಿಕುಳಂ, ಇಡುಕ್ಕಿ, ತಿರುವನಂತಪುರ ಮುಂತಾದ ರೀತಿ ವಿಭಾಗ ಮಾಡಬಹುದು.

ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಕೊರಗ, ಮಲೆಕುಡಿ, ಮಾವಿಲ, ಮಲವೇಟುವ, ಕರಿಂಬಾಲನ್, ಪಣಿಯ, ಕುರಿಚ್ಯರ್ ಮೊದಲಾದ ಬುಡಕಟ್ಟು ಪಂಡಗದವರು ವಾಸವಾಗಿದ್ದಾರೆ. ಬಹಳ ಮುಖ್ಯ ಆದಿವಾಸಿ ಬುಡಕಟ್ಟು ಕೇಂದ್ರವಾದ ವಯನಾಡಿನಲ್ಲಿ ಅಡಿಯನ್, ಪಣಿಯನ್, ಕೌಟುನಾಯ್ಕ, ವೇಟಕುರುಮ, ಮುಳ್ಳಕುರುಮ, ಕುರಿಚ್ಯನ್, ವಯನಾಡ್, ಕಾಡರ್, ತಚ್ಚನಾಡನ್ ಮೂಪನ್, ಕರಿಂಬಾಲನ್ ಮೊದಲಾದ ಪಂಗಡಗಳು ವಾಸವಾಗಿವೆ. ಪಾಲಕಾಡು ಜಿಲ್ಲೆಯ ಅಟ್ಟಪಾಡಿ ತಾಲೂಕಿನಲ್ಲಿ ಇರುಳರ್, ಮುಡುಗರ್, ಕುರುಂಬರ್ ಎಂಬ ಪಂಗಡಳು ವಾಸವಾಗಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರು ಗುಡ್ಡಗಾಡು ಪ್ರದೇಶದಲ್ಲಿ ಚೋಲನಾಯ್ಕರು ಎಂಬ ಪ್ರಾಚೀನ ಬುಡಕಟ್ಟು ವಿಭಾಗ ವಾಸವಾಗಿದೆ. ಇವರಲ್ಲದೆ, ಕಾಟುನಾಯ್ಕ, ಪಣಿಯನ್, ಕುರುಮರ್, ಮಲಪಣಿಯಕ್ಕರ್, ಮೊದಲಾದ ಪಂಗಡಗಳು ಮಲಪ್ಪುರ ಜಿ‌ಲ್ಲೆಯಲ್ಲಿವೆ. ಇಡುಕ್ಕಿ ಜಿಲ್ಲೆಯಲ್ಲಿ ಮನ್ನಾನ್, ಮುದುವಾನ್, ಊರಾಳಿ, ಮಲಪುಲಿಯ, ಉಳ್ಳಾಡನ್, ಪಳಿಯರ್, ಮಲಯರಯರ್, ಎರವಾಲನ್ ಮೊದಲಾದ ಬುಡಕಟ್ಟು ಪಂಗಡಗಳು ವಾಸವಾಗಿದೆ.

ಬೇಟೆ, ಮೀನು ಶಿಕಾರಿ, ಕಾಡಿನ ಸಂಪತ್ತು ಸಂಗ್ರಹಗಳನ್ನು ಮಾಡುತ್ತಾ, ಒಂದೆಡೆ ಶಾಶ್ವತವಾಗಿ ನಿಲ್ಲದೆ ಅಲೆಮಾರಿ ಬದುಕನ್ನು ನಡೆಸುತ್ತಿದ್ದ ಪಂಗಡವೇ ಆದಿವಾಸಿಗಳು. ಹಸಿರು ಮರಗಿಡಗಳು ತುಂಬಿದ ಕಾಡುಗಳೇ ಅವರ ಆವಾಸ ಕೇಂದ್ರಗಳು. ಒಂದು ಸಾಮಾನ್ಯ ಹೆಸರಿನಿಂದ ಗುರುತಿಸಿಕೊಂಡು ಒಂದೆಡೆ ನೆಲೆಸಿ, ಒಂದು ನಿರ್ದಿಷ್ಟ ಒಳಾಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡು, ನಿರ್ದಿಷ್ಟ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ, ಪೂರ್ವಿಕರ ಆರಾಧಿಸುವ ಪಂಗಡವೇ ಆದಿವಾಸಿಗಳು. ಕೇರಳದ ಬುಡಕಟ್ಟು ಪಂಗಡದಲ್ಲಿ ರಾಜ, ಮಂತ್ರಿ ಹೀಗೆ ಶ್ರೇಣೀಕೃತ ವ್ಯವಸ್ಥೆಯ ಸಮಾಜವಿರುವ ಬುಡಕಟ್ಟು ಪಂಗಡವೇ ಇಡುಕ್ಕಿ ಜಿಲ್ಲೆಯ ಮನ್ನಾನ್. ಬುಡಕಟ್ಟು ಹಿರಿಯನನ್ನು ಗೌರವಿಸಿ, ಅವನ ಆಜ್ಞೆಗಳನ್ನು ಪಾಲಿಸುವುದು ಬುಡಕಟ್ಟು ಸದಸ್ಯರ ಕರ್ತವ್ಯವಾಗಿತ್ತು.

ವಸತಿ, ವಸ್ತ್ರ, ಆಹಾರ, ಔಷಧಿ, ಮೊದಲಾದ ತಮ್ಮ ಉಪಜೀವನಕ್ಕಾಗಿ ಕಾಡನ್ನೇ ಆಶ್ರಯಿಸಿದವರು ಬುಡಕಟ್ಟು ಪಂಗಡದವರು. ಕಾಡಿನ ಪ್ರಾಕೃತಿಕ ಸಮಸ್ಯೆಗಳನ್ನು ಮೀರಿ ನಿಲ್ಲುವ ವಸತಿಗಳನ್ನು ಇವರು ನಿರ್ಮಿಸುತ್ತಿದ್ದರು. ಆದಿವಾಸಿ ವಸತಿಗಳನ್ನು ಪದಿ, ಕುಡಿ, ಪಿರೆ, ಚಾಳ ಮೊದಲಾದ ವಿಭಿನ್ನ ಹೆಸರುಗಳಿಂದ ಕರೆಯುತ್ತಿದ್ದರು. ವಸತಿಗಳನ್ನು ನಿರ್ಮಿಸುವ ಪರಂಪರಾಗತ ತಜ್ಞರು ಇವರ ಪಂಗಡದಲ್ಲಿದ್ದರು. ಆದಿವಾಸಿ ಗುಡಿಸಲುಗಳು ಬಿದಿರು ಹಾಗೂ ಮುಳಿ ಹುಲ್ಲಿನಿಂದ ನಿರ್ಮಿತವಾದವು. ಮುಳಿ ಹುಲ್ಲು ಬೆಳೆದು ನಿಂತಾಗ, ದಪ್ಪವಾಗಿ ಹಾಸಿ ಗುಡಿಸಲುಗಳನ್ನು ನಿರ್ಮಿಸುತ್ತಿದ್ದರು. ಪ್ರಾಯಕ್ಕೆ ಬಂದ ಗಂಡುಮಕ್ಕಳನ್ನು, ಹೆಣ್ಣು ಮಕ್ಕಳನ್ನು ಬೇರೆ ಬೇರೆ ಸ್ಥಳಗಳಲ್ಲಿ ತಂಗುವಂತೆ ಮಾಡಲು ‘ಚಾವಡಿ’ ಎಂಬ ಹೆಸರಿನ ಮನೆಗಳನ್ನು ನಿರ್ಮಿಸುತ್ತಿದ್ದರು. ಮುಳ್ಳುಕುರುಮ ಹಾಗೂ ವೇಟಕುರುಮರಲ್ಲಿ ಕುಲದೈವಗಳನ್ನು ಪೂಜಿಸುವ ‘ದೈವಪುರ’ಗಳು ಇದ್ದುವು.

35

ಕೇರಳದ ಪ್ರತಿಯೊಂದು ಆದಿವಾಸಿ ಬುಡಕಟ್ಟು ವಿಭಾಗಕ್ಕೂ ಅವರದ್ದೇ ಆದ ನೈಜ ಸಂಸ್ಕೃತಿ ಇದೆ. ಆದಿವಾಸಿ ಪಂಗಡಗಳು ಇಲ್ಲಂ, ಮಂಡಂ, ಕೂಟಂ ಮೊದಲಾದ ಹೆಸರುಗಳಿಂದ ಒಂದು ಗುಂಪಾಗುತ್ತಿದ್ದರು. ಒಂದೇ ‘ಇಲ್ಲಂ’ ಹೊಂದಿರುವ ಗಂಡು ಹೆಣ್ಣಿನ ಮದುವೆ ನಿಷಿದ್ಧವಾಗಿತ್ತು. ರಕ್ತಸಂಬಂಧ ಮತ್ತು ಮದುವೆ ಸಂಬಂಧಗಳಲ್ಲಿ ಅವರ ಸಾಮಾಜಿಕ ಚೌಕಟ್ಟು ರೂಪುಗೊಂಡಿತ್ತು. ಆದಿವಾಸಿ ಬುಡಕಟ್ಟು ಸಮಾಜದಲ್ಲಿ ಸಾಮಾಜಿಕ ನಿಯಂತ್ರಣಕ್ಕಾಗಿ ಪರಂಪರೆಯಿಂದ ಬಂದ ಪದವಿ, ಯಜಮಾನನ ಸ್ಥಾನ. ಹದಿನೈದರಿಂದ ಇಪ್ಪತ್ತು ಮನೆಗಳಿಗೆ ಒಬ್ಬ ‘ಮೂಪನ್’ ಇರುತ್ತಿದ್ದ. ಪೊನಂಬನ್, ಕಾಣಿಕಾರನ್, ಸ್ಥಾನಿ, ಮುಟ್ಟುಕಾಣಿ ಮೊದಲಾದ ಹೆಸರುಗಳಲ್ಲಿ ಬುಡಕಟ್ಟು ಯಜಮಾನರನ್ನು ಕರೆಯುತ್ತಿದ್ದರು. ಕೆಲವು ಪಂಗಡಗಳಲ್ಲಿ ಯಜಮಾನನು ಮಂತ್ರವಾದ ಹಾಗೂ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸುವವನೂ ಆಗಿದ್ದ. ವ್ಯಕ್ತಿಗಳ ಮಧ್ಯೆ, ಕುಟುಂಬಗಳ ಮಧ್ಯೆ ಏನಾದರೂ ಸಮಸ್ಯೆಗಳು ತಲೆದೋರಿದರೆ ಪರಿಹರಿಸುವ ಜವಾಬ್ದಾರಿ ಯಜಮಾನನದು. ಆಯಾ ಪಂಗಡದ ಜೀವನಾವರ್ತಗಳಾದ ಜನನ, ಮರಣ, ಮದುವೆ, ಋತುಮತಿ, ಆಚರಣೆಗಳು ಹಾಗೂ ಕೃಷಿ ಸಂಬಂಧಿ ಕೆಲಸಗಳಿಗೆ ಮೂಪನ್ ನೇತೃತ್ವ ನೀಡುತ್ತಿದ್ದನು. ಆಡಳಿತ ಸುಗಮಗೊಳಿಸುವುದಕ್ಕಾಗಿ ಮೂಪನ್ ತನ್ನ ಕೈಕೆಳಗೆ ಅಧಿಕಾರಿಗಳನ್ನು ನೇಮಕಗೊಳಿಸುತ್ತಿದ್ದ. ಆರ್ಥಿಕ ವ್ಯವಸ್ಥೆಗೆ ಭಂಡಾರಿ, ಯಜಮಾನನ ಸಂದೇಶವನ್ನು ಜನರಿಗೆ ತಲುಪಿಸುವ ಕುರುತಲ, ಕೃಷಿ ಚಟುವಟಿಕೆಗಳನ್ನು ನಿಯಂತ್ರಿಸುವ ಮಣ್ಣುಕಾರ್ ಮೊದಲಾದವರು ಅಟ್ಟಪಾಡಯ ಕೆಲವು ಬುಡಕಟ್ಟು ಪಂಗಡಗಳಲ್ಲಿ ಕಂಡು ಬರುತ್ತಾರೆ.

ಬುಡಕಟ್ಟು ಪಂಗಡಗಳ ಪುರುಷರು ಹಾಗೂ ಮಹಿಳೆಯರು ವಿಭಿನ್ನ ರೀತಿಯ ಕೇಶಾಲಂಕಾರವನ್ನೂ, ವಸ್ತ್ರಾಲಂಕಾರವನ್ನೂ ಮಾಡುತ್ತಿದ್ದರು. ಪ್ರಾಚೀನ ಕಾಲದಲ್ಲಿ ಹಲವು ಪಂಗಡಗಳು ಮರದ ತೊಗಟೆಯನ್ನು ಕಿತ್ತು, ಹದವರಿಸಿ ವಸ್ತ್ರವಾಗಿ ಬಳಸುತ್ತಿದ್ದರು. ನಿರ್ದಿಷ್ಟ ಮರಗಳ ತೊಗಟೆಗಳನ್ನು ಕಿತ್ತು, ಹದಬರಿಸಿ ವಸ್ತ್ರವಾಗಿ ಬಳಸುತ್ತಿದ್ದರು. ನಿರ್ದಿಷ್ಟ ಮರಗಳ ತೊಗಟೆಗಳನ್ನು ಕಿತ್ತು, ನೀರಿನಲ್ಲಿ ನೆನೆಸಿ, ಬಿಸಿಲಲ್ಲಿ ಒಣಗಿಸಿ ಧರಿಸುತ್ತಿದ್ದರು. ಬುಡಕಟ್ಟು ಮಹಿಳೆಯರು ರವಿಕೆಯನ್ನು ಧರಿಸುತ್ತಿರಲಿಲ್ಲ. ಒಂದೇ ವಸ್ತ್ರವನ್ನು ಉಟ್ಟು, ತಲೆಗೂದಲನ್ನು ಒಂದು ಬದಿಗೆ ಗೊಂಡೆಯಾಕಾರದಲ್ಲಿ ಕಟ್ಟುತ್ತಿದ್ದರು. ಕಾಸರಗೋಡು ಜಿಲ್ಲೆಯ ಮೂಲಿಲನ್ ಮಹಿಳೆಯರು ಧರಿಸುವ ಪರಂಪರೆಯ ಉಡುಗೆಯನ್ನು ‘ಕೊಂಡಚ್ಚಕೆಟ್ಟುಗ’ ಎಂದು ಕರೆಯುತ್ತಿದ್ದರು. ಹಿಂದೆ, ಮುಂದೆ ಮತ್ತು ಮಧ್ಯದಲ್ಲಿ ತಲೆಗೂದಲನ್ನು ಜುಟ್ಟು ಕಟ್ಟುವ ಪದ್ಧತಿ ಆದಿವಾಸಿ ಸ್ತ್ರೀಯರಲ್ಲಿ ಇತ್ತು. ವಯನಾಡಿನ ಕುರಿಚ್ಯರಲ್ಲಿ ಇಂದಿಗೂ ಜುಟ್ಟು ಕಟ್ಟುವ ಸಂಪ್ರದಾಯ ವೃದ್ಧರಲ್ಲಿದೆ. ಕೇರಳದ ಮಿಕ್ಕ ಬುಡಕಟ್ಟು ಸಮುದಾಯಗಳನ್ನು ಅವರ ವಸ್ತ್ರಧಾರಣೆ ಹಾಗೂ ಕೇಶಲಂಕಾರ ವಿಧಾನಗಳಿಂದಲೇ ಗುರುತಿಸಲು ಸಾಧ್ಯ.

ಪ್ರಕೃತಿಯಿಂದ ಸಿಗುವ ವಸ್ತುಗಳಿಂದ ಬುಡಕಟ್ಟು ಸಮುದಾಯದವರು ಆಭರಣಗಳನ್ನು ತಯಾರಿಸುತ್ತಿದ್ದರು. ತಲೆ, ಮೂಗು, ಕಿವಿ, ಕೊರಳು, ಸೊಂಟ, ಕೈಕಾಲುಗಳು, ಬೆರಳುಗಳಿಗೆ ಅವರು ಆಭರಣಗಳನ್ನು ಧರಿಸುತ್ತಿದ್ದರು. ಮಹಿಳೆಯರೇ ಅಧಿಕ ಸಂಖ್ಯೆಯ ಆಭರಣಗಳನ್ನು ಧರಿಸುತ್ತಿದ್ದರು. ಮಹಿಳೆಯರು ತಮ್ಮ ಋತುಮತಿ ಮದುವೆಯ ಅನಂತರ ಆಭರಣಗಳನ್ನು ಧರಿಸಬಹುದಿತ್ತು. ಹರಳು ಮಾಲೆಗಳನ್ನೂ, ಗಾಜಿನ ಬಳೆಗಳನ್ನೂ, ಕಂಚಿನ ಬಳೆಗಳನ್ನೂ ಬುಡಕಟ್ಟು ಮಹಿಳೆಯರು ಧರಿಸುತ್ತಿದ್ದರು. ಪಣಿಯ ಸಮುದಾಯದ ಮಹಿಳೆಯರು ಕಿವಿಯಿಂದ ತಲೆಗೂದಲ ಕಡೆಗೆ ಬೆಳ್ಳಿಯ ಸರವನ್ನು ಪೋಣಿಸಿ ಕೇಶಾಲಂಕಾರವನ್ನು ಮಾಡುತ್ತಿದ್ದರು. ಒಲೆಯ ಆಭರಣಗಳನ್ನು ಅವರು ಕಿವಿಗೆ ಧರಿಸುತ್ತಿದ್ದರು. ತೋಳಬಂದಿ, ಕೈಕಡಗ, ಕಾಲ್ಗಡಗ, ವೆಳ್ಳಿತಂಗಲಿ ಮೊದಲಾದ ಆಭರಣಗಳನ್ನು ಅವರು ಬಳಸುತ್ತಿದ್ದರು.

ಹಚ್ಚೆ ಹಾಕಿಸುವುದರಲ್ಲಿ ಬುಡಕಟ್ಟು ಸಮುದಾಯದವರು ಎತ್ತಿದ ಕೈ. ಹಣೆ, ಕೈಕಾಲುಗಳು, ಸೊಂಟ, ಕೆನ್ನೆ ಮೊದಲಾದ ಅವಯವಗಳಿಗೆ ವಿವಿಧ ರೀತಿಯ ಮುದ್ರೆಗಳನ್ನು ಹಚ್ಚೆ ಹಾಕಿಸುತ್ತಿದ್ದರು. ಕಾಣಿಕಾರ್ ಸಮುದಾಯದ ಪುರುಷರು ಹಣೆಯಲ್ಲಿ ವೃತ್ತಾಕಾರದ ಒಂದು ಚಿತ್ರವನ್ನು ಬರೆದರೆ, ಮಹಿಳೆಯರು ಕೆನ್ನೆಗಳಲ್ಲಿ ಅರ್ಧಚಂದ್ರಾಕೃತಿಯ ಚಿತ್ರವನ್ನು ಹಚ್ಚೆಯಲ್ಲ ಬರೆಯುತ್ತಿದ್ದರು. ವೇಟಕುರುಮ ಮಹಿಳೆಯರು ಹಣೆಯಲ್ಲಿ ಉದ್ದವಾಗಿ ಒಂದು ಕಿವಿಯಿಂದ ಮತ್ತೊಂದು ಕಿವಿಯವರೆಗೆ ಚುಕ್ಕಿ ಚುಕ್ಕಿಯಾಗಿ ಹಚ್ಚೆ ಹಾಕಿಸುತ್ತಿದ್ದರು. ಹಚ್ಚೆ ಹಾಕಿಸುವುದನ್ನು ಅಭಿಮಾನವಾಗಿ ಪರಿಗಣಿಸುತ್ತಿದ್ದ ಬುಡಕಟ್ಟು ಮಹಿಳೆಯರು ಮದುವೆಗಿಂತ ಮುಂಚೆಯೇ ಹಚ್ಚೆ ಹಾಕಿಸಿತ್ತಿದ್ದರು. ಬುಡಕಟ್ಟು ಸಮುದಾಯದಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಹಚ್ಚೆ ಹಾಕಿಸುತ್ತಿದ್ದರು.

ಪ್ರತಿಯೊಂದು ಬುಡಕಟ್ಟು ಪಂಗಡದವರೂ ತಮ್ಮ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಲು ತಮ್ಮದೇ ಆದ ಪರಂಪರಾಗತ ವೈದ್ಯವನ್ನು ರೂಢಿಸಿಕೊಂಡಿದ್ದರು. ಹೆಚ್ಚಿನ ರೋಗಗಳಿಗೂ ನಾಟಿ ವೈದ್ಯದ ಔಷಧಿಗಳಿದ್ದುವು. ವಿವಿಧ ಬಗೆಯ ಬೇರುಗಳು, ಗಡ್ಡೆಗಳು, ಕಾಂಡ, ಎಲೆಗಳನ್ನು ಜಜ್ಜಿ ಮಿಶ್ರ ಮಾಡಿ ಔಷಧಿಗಳನ್ನು ತಯಾರಿಸುತ್ತಿದ್ದರು. ಹಸಿರು ಎಲೆಗಳನ್ನು ಔಷಧಿಗಾಗಿ ವಿವಿಧ ರೀತಿಯಲ್ಲಿ ಬಳಸುತ್ತಿದ್ದರು. ತಿರುವನಂತಪುರ ಜಿಲ್ಲೆಯ ಕಣಿ ಪಂಗಡದವರು ಹಸಿವೆ, ಬಾಯಾರಿಕೆ ಇಂಗಿಸುವ ಸಸ್ಯದ ಔಷಧಿಯನ್ನು ಬಳಸುತ್ತಾರೆ. ವಿಷ ಚಿಕಿತ್ಸೆಗೆ, ಚರ್ಮ ರೋಗಗಳಿಗೆ ಬುಡಕಟ್ಟು ಆದಿವಾಸಿ ಪಂಗಡಗಳಲ್ಲಿ ನಿರ್ದಿಷ್ಟ ಔಷಧಿಗಳಿವೆ.

ಹಿಂದಿನ ಕಾಲದಲ್ಲಿ ಬುಡಕಟ್ಟು ಪಂಡದವರ ಮುಖ್ಯ ಆಹಾರ ಹಣ್ಣು ತರಕಾರಿಗಳಾಗಿದ್ದುವು. ೩೫೦ಕ್ಕಿಂತಲೂ ಅಧಿಕ ಕಾಡಿನ ಆಹಾರ ವಸ್ತುಗಳನ್ನು ಇವರು ಬಳಸುತ್ತಿರುವುದಾಗಿ ಅಧ್ಯಯನಗಳು ತಿಳಿಸುತ್ತವೆ. ಇದರಲ್ಲಿ ನೂರಕ್ಕಿಂತಲೂ ಅಧಿಕ ಕಾಯಿಗಳು, ೨೭ ಅಣಬೆಗಳು, ೧೬ ಬಗೆಯ ಗಡ್ಡೆಗೆಣಸುಗಳು ಸೇರಿಕೊಂಡಿವೆ. ಔಷಧೀಯ ಗುಣವುಳ್ಳ, ಸೇವನೆಗೆ ಯೋಗ್ಯವಾದ ಹಲವು ವಿಧದ ಅಣಬೆಗಳನ್ನು ಗುರುತಿಸುವ ಅರಿವು ಆದಿವಾಸಿಗಳಿಗಿತ್ತು. ಎಳೆಯ ಬಿದಿರು (ಕಣಲೆ) ಹಾಗೂ ಬಿದಿರಿನ ಅಕ್ಕಿ ಹೆಚ್ಚಿನ ಬುಡಕಟ್ಟು ಪಂಗಡದ ಮುಖ್ಯ ಆಹಾರವಾಗಿತ್ತು. ಅಟ್ಟಪಾಡಿಯ ಬುಡಕಟ್ಟು ಜನರು ರಾಗಿಯನ್ನು ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಅಣಬೆ ಹಾಗೂ ಕೆಸುವಿನ ಗಡ್ಡೆ ಕಾಣಿಕ್ಕಾರ್ ಪಂಗಡದ ಇಷ್ಟ ತಿನಿಸು. ಅವರೆ ಮೊದಲಾದ ಧಾನ್ಯಗಳನ್ನೂ, ಅನೇಕ ವಿಧದ ಜೇನುಗಳನ್ನೂ ಅವರು ಸಂಗ್ರಹಿಸುತ್ತಿದ್ದರು. ಕಾಡಿನ ವಿವಿಧ ಪಕ್ಷಿಗಳನ್ನು ಹಗ್ಗದ ಉರುಳಿನಲ್ಲಿ ಹಿಡಿದು ಆಕಾರಕ್ಕಾಗಿ ಬಳಸುತ್ತಿದ್ದರು. ಹೊಳೆಗಳಿಂದಲೂ, ಕೆರೆಗಳಿಂದಲೂ, ಮೀನು ಹಿಡಿಯುವ ಕಲೆ ಇವರಿಗೆ ಕರಗತವಾಗಿತ್ತು. ಬರಿಗೈಯಿಂದ ಮೀನುಗಳನ್ನು ಹಿಡಿಯುವ ಕೈಚಳಕ ಪಣಿಯ ಸಮುದಾಯದ ಮಹಿಳೆಯರದ್ದು.

ಬುಡಕಟ್ಟು ಪಂಗಡದ ಆಚಾರವಿಚಾರಗಳು ಪರಂಪರೆಯಿಂದ ಬಂದಿರುವಂಥದ್ದು. ಮಗು ಹುಟ್ಟಿದ ಕೂಡಲೇ ಲಿಂಗಾಧಾರಿತ ಆಚರಣೆಗಳು ಆರಂಭವಾಗುತ್ತವೆ. ಕುರಚ್ಯರ್ ಪಂಗಡದಲ್ಲಿ ಹುಟ್ಟಿದ ಮಗು ಗಂಡಾದರೆ ಬಿಲ್ಲಿನ ಹೆದೆ ಮೀಟಿ ಅಥವಾ ಬೇಟೆಯ ಕೂಗೂ ಹಾಕಿ ತಿಳಿಸುತ್ತಾರೆ. ಹೆಣ್ಣಾದರೆ ಗೆರಸೆ ಅಥವಾ ಹಿಡಿಸೂಡಿಯಿಂದ ಶಬ್ದ ಮಾಡುತ್ತಾರೆ. ಬೆಳೆಯುವಾಗ ನಿತ್ಯ ಜೀವನದಲ್ಲಿ ಬಳಸುವ ಸಾಮಗ್ರಿಗಳ ಪರಿಚಯ ಮಾಡುವುದು ಇದರ ಉದ್ದೇಶವಾಗಿರಬೇಕು. ಅನಂತರದ ನಾಮಕರಣ, ಕಿವಿಚು‌ಚ್ಚುವ ವಿಧಿ, ತಾಲಿಕೆಟ್ಟ್, ಋತುಮತಿ ಮದುವೆಗಳೆಲ್ಲ ಬುಡಕಟ್ಟು ಪಂಗಡದವರ ಸಂಸ್ಕಾರ ವಿಧಿಗಳಾಗಿವೆ. ಮಾವ, ಯಜಮಾನ ಅಥವಾ ಹಕ್ಕಿನ ಗಂಡು ಕೊರಳಿಗೆ ಮದುವೆಯಾಗುವ ಮುನ್ನ ತಾಳಿ ಕಟ್ಟುವ ಕಾರ್ಯಕ್ರಮವೇ ತಾಲಿಕೆಟ್ಟ್. ಮದುವೆಗಿಂತಲೂ ವಿಜೃಂಭಣೆಯಿಂದ ಅವರು ಋತುಮತಿ ಮದುವೆಯನ್ನು ನಡೆಸುತ್ತಾರೆ. ಹುಡುಗಿಯರನ್ನು ಅಪಹರಿಸಿ ಮದುವೆಯಾಗುವುದು ಪ್ರಾಚೀನ ಕ್ರಮವಾಗಿತ್ತು. ವಧುವನ್ನು ಅಪಹರಿಸಿ, ಒಟ್ಟಿಗೆ ಸಂಸಾರ ನಡೆಸಿ, ಅನಂತರ ಹಿರಿಯರ ಒಪ್ಪಿಗೆ ಪಡೆಯುವುದು ಕ್ರಮ. ವರದಕ್ಷಿಣೆಯ ಬದಲಾಗಿ ವಧುದಕ್ಷಿಣೆ ಸಂಪ್ರದಾಯ ರೂಢಿಯಲ್ಲಿತ್ತು. ಬುಡಕಟ್ಟು ಪಂಗಡಗಳಲ್ಲಿ ಮಹಿಳೆಯರ ಸ್ಥಾನಮಾನವನ್ನು ಇದು ಸೂಚಿಸುತ್ತದೆ. ಬಹುಪತ್ನಿತ್ವ ಹಾಗೂ ವಿಧವಾ ವಿವಾಹ ಬುಡಕಟ್ಟು ಜಾತಿಗಳಲ್ಲಿ ರೂಢಿಯಲ್ಲಿದ್ದುವು.

36

ಬುಡಕಟ್ಟು ಸಮಾಜದಲ್ಲಿ ಅನೇಕ ವಿಧಿ ನಿಷೇಧಗಳು ಚಾಲ್ತಿಯಲ್ಲಿದ್ದುವು. ಋತುಮತಿಯಾಗುವಾಗ, ಮುಟ್ಟಾಗುವಾಗ, ಹೆರಿಗೆಯ ವೇಳೆಯಲ್ಲಿ ಮಹಿಳೆಯರಿಗೆ ಅಸ್ಪೃಶ್ಯತೆಯನ್ನು ಕಲ್ಪಿಸಿ ಪ್ರತ್ಯೇಕ ಮನೆಗಳಲ್ಲಿರಿಸುತ್ತಿದ್ದರು. ಹೀಗೆ ಪ್ರತ್ಯೇಕವಾಗಿ ವಾಸಮಾಡುವ ಅವಧಿ ಬೇರೆ ಬೇರೆ ಪಂಗಡಗಳಲ್ಲಿ ವ್ಯತ್ಯಸ್ತವಾಗಿವೆ. ಮುದುವಾನ್ ಪಂಗಡದಲ್ಲಿ ಪ್ರಾಯಪೂರ್ತಿಯಾದ ಗಂಡು ಹಾಗೂ ಹೆಣ್ಣುಮಕ್ಕಳು ಪರಸ್ಪರ ಮಾತನಾಡುವುದು, ನೋಡುವುದು ನಿಷಿದ್ಧವಾಗಿತ್ತು. ವೃಕ್ಷಾರಾಧನೆ, ಪ್ರಾಣಿಗಳ ಆರಾಧನೆ, ಪೂರ್ವಿಕರ ಆರಾಧನೆಗಳು ಕೇರಳದ ಬುಡಕಟ್ಟು ಪಂಗಡಗಳಲ್ಲಿ ಕಂಡುಬರುತ್ತವೆ. ಅನಾರೋಗ್ಯವಾದರೆ ಮಂತ್ರವಾದವನ್ನು ಮೊರೆ ಹೋಗುತ್ತಿದ್ದರು. ಕೊರಗರು, ಕಾಣಿಕ್ಕಾರ್, ಮುದವರು, ಊರಾಳಿಗಳಲ್ಲಿ ಸೂರ್ಯನ ಆರಾಧನೆ ವಿಶಿಷ್ಟವಾಗಿದೆ. ಬುಡಕಟ್ಟು ಪಂಗಡಗಳು ತಾವು ವಾಸವಾಗಿರುವಾಗ ಗಿರಿಬೆಟ್ಟಗಳನ್ನು ಆರಾಧಿಸುವ ಸಂಪ್ರದಾಯವಿತ್ತು. ಇದಕ್ಕೆ ಅಗಸ್ತ್ಯಮುಡಿ, ಕರಿಮಲಗೋಪುರ, ಮಲ್ಲೀಶ್ವರ ಮುಡಿಗಳು ನಿದರ್ಶನಗಳಾಗಿವೆ. ಮತೀಯ ಆಚರಣೆಗಳನ್ನು ನೆರವೇರಿಸಲು ಬುಡಕಟ್ಟು ಸಮಾಜದಲ್ಲಿ ನಿರ್ದಿಷ್ಟ ವ್ಯಕ್ತಿಗಳಿರುತ್ತಾರೆ. ಕಾಣಿಕಾರ ಪಂಗಡದ ಪ್ಲಾತಿ, ಮಲಯರ ಪೂಜಾರಿ ಮೂಪನ್ ಮೊದಲಾದವರು ಇದಕ್ಕೆ ನಿದರ್ಶನ.

ಆದಿವಾಸಿ ಬುಡಕಟ್ಟು ಸಮಾಜಗಳು ಹಿಂದಿನಿಂದಲೇ ಕುಮರಿಕೃಷಿ, ಅರಣ್ಯಸಂಪತ್ತು ಸಂಗ್ರಹ, ಮನೆ ಬಳಕೆಯ ಸಾಮಗ್ರಿಗಳ ನಿರ್ಮಾಣದಲ್ಲಿ ತೊಡಗಿದ್ದವು. ಕುಮರಿ ಕೃಷಿ ಬುಡಕಟ್ಟು ಪಂಗಡದವರಿಗೆ ವಿಶಿಷ್ಟವಾದ ಕೃಷಿ ಪದ್ಧತಿ. ಒಮ್ಮೆ ಕೃಷಿ ಮಾಡಿದ ಸ್ಥಳವನ್ನು ಬಿಟ್ಟು ಬೇರೆ ಸ್ಥಳವನ್ನು ಆಯ್ದುಕೊಳ್ಳುವುದು ಇದರ ರೀತಿ. ಮಣ್ಣಿನ ಫಲವತ್ತತೆಯನ್ನು ಉಳಿಸಿ ಬೆಳೆಸುವ ಈ ಕೃಷಿ ಪದ್ಧತಿ ಪ್ರಾಕೃತಿಕವಾಗಿದ್ದು, ಸಾಂಪ್ರದಾಯಿಕವಾಗಿದೆ. ಬತ್ತ, ರಾಗಿ, ಎಳ್ಳು, ಸಾಸಿವೆ, ಕುಂಬಳಕಾಯಿ, ಚೀನಿಕಾಯಿ ಮೊದಲಾದ ಮಿಶ್ರ ಬೆಳೆಯನ್ನು ಅವರು ಬೆಳೆಯುತ್ತಿದ್ದರು. ಪಣಿಯರ್, ಅಡಿಯರ್, ಎರವಾಲನ್, ಮಾವಿಲನ್ ಮೊದಲಾದವರು ಬೇಸಾಯವೃತ್ತಿಯನ್ನು ಕೈಗೊಂಡವರಾಗಿದ್ದರು.

ವಯನಾಡಿನ ಕುರಿಚ್ಯರು ಹಾಗೂ ಕುರಮರು ಬೇಟೆಯಲ್ಲಿ ಸಮರ್ಥರಾಗಿದ್ದರು. ಕುರಚ್ಯರ ನೇತಾರ ತಲಯ್ಕಲ್ ಚಂದು ಪಳಶ್ಶಿರಾಜನ ಮುಖ್ಯ ಸೈನಿಕನಾಗಿದ್ದ. ಕೇರಳದ ಮಿಕ್ಕ ಬುಡಕಟ್ಟು ಪಂಗಡಗಳು ತಮಗೆ ವಿಶಿಷ್ಟವಾದ ರೀತಿಯಲ್ಲಿ ಬುಟ್ಟಿ, ಚಾಪೆ, ಗೆರಸೆ ಮೊದಲಾದ ಗೃಹ ಬಳಕೆಯ ಸಾಮಗ್ರಿಗಳನ್ನು ತಯಾರಿಸುತ್ತಿದ್ದರು. ಕೇರಳದ ‘ಆರ್ಟಿಸಾನ್ ಟ್ರೈಬ್’ ಎಂಬ ಹೆಸರಿನಿಂದ ಗುರುತಿಸ್ಪಡುವ ವೆಟ್ಟಕುರುಮರು ಕರಕುಶಲ ಚಿತ್ರಗಳಿರುವ ಮಡಕೆಗಳನ್ನು ನಿರ್ಮಿಸುತ್ತಿದ್ದರು. ಅವರು ಕಬ್ಬಿಣದ ಕೆಲಸಗಳನ್ನು ಸಮರ್ಥವಾಗಿ ಮಾಡುತ್ತಿದ್ದರು. ಮುದುವಾನ್ ಸಮುದಾಯದ ‘ಕನ್ನಾಡಿ ಪನಂಬ್’ ಕರಕೌಶಲ್ಯ ವಸ್ತುವಾಗಿದೆ. ಧಾನ್ಯಗಳನ್ನು ಸಂಗ್ರಹಿಸಲು ಬೆಳೆದ ಚಿಣಿ ಕಾಯಿಯ ಹೊರ ಕವಚ, ಸೋರೆ ಬುರುಡೆಗಳನ್ನು ಬಳಸುತ್ತಿದ್ದರು. ನೀರು ಹಾಗು ಜೇನು ಸಂಗ್ರಹಿಸಲು ದಪ್ಪ ಬಿದಿರಿನ ಹಂಡೆಗಳನ್ನು ಬಳಸುತ್ತಿದ್ದರು. ಕೊಂಡೆ, ಬಳ್ಳ, ಕಳಸೆ ಮೊದಲಾದ ಅಳತೆ ಸಲಕರಣೆಗಳು, ವಾದ್ಯೋಪಕರಣಗಳನ್ನು ನಿರ್ಮಿಸುವುದರಲ್ಲಿ ಬುಡಕಟ್ಟು ವಿಭಾಗದವರು ಸಮರ್ಥರಾಗಿದ್ದರು.

ಪ್ರತಿಯೊಂದು ಬುಡಕಟ್ಟು ಸಮಾಜಕ್ಕೂ ಅವರದ್ದೇ ಆದ ಹಾಡುಗಳೂ ನೃತ್ಯ ವಿಧಾನಗಳೂ ಇವೆ. ಮದುವೆ ಹಾಡುಗಳು, ಸೂತಕದ ಹಾಡುಗಳು, ಬೇಸಾಯದ ಹಾಡುಗಳು, ಉತ್ಸವದ ಹಾಡುಗಳು – ಹೀಗೆ ಹಾಡುಗಳನ್ನು ವರ್ಗೀಕರಿಸಬಹುದು. ಬತ್ತ ತುಳಿಯುವಾಗ ಹಾಡುವ ಒಕುಲಪಾಟ್, ಮಕ್ಕಳನ್ನು ತೊಟ್ಟಿಲಲ್ಲಿ ತೂಗುವಾಗ ಹಾಡುವ ಕಾಕಪಾಟ್ ಮೊದಲಾದ ಅನೇಕ ಜನಪದ ಹಾಡುಗಳು ಪಣಿಯರಲ್ಲಿವೆ. ಭೂಮಿ, ಕಾಡು, ಕಾಡಿನ ಸಂಪತ್ತುಗಳ ಕುರಿತು ಇವರ ಹಾಡುಗಳಲ್ಲಿ ವರ್ಣನೆಗಳಿವೆ. ಕಾಡಿನ ಪ್ರಾಣಿಗಳ ಕುರಿತಾದ ವಿವರಗಳಿರುವ ಮಾನ್‌ಪಾಚ್‌, ಕೂಮನ್‌ಪಾಟುಗಳು ಇವರಲ್ಲಿ ಹೇರಳವಾಗಿವೆ. ಎಲ್.ಎ. ಅನಂತಕೃಷ್ಣ ಅಯ್ಯರ್ ಅರು ಆದಿವಾಸಿಗಳ ನೃತ್ಯಗಳನ್ನು ಯುದ್ಧ ನೃತ್ಯಗಳು, ಆಚಾರಣಾತ್ಮಕ ನೃತ್ಯಗಳು, ಉತ್ಸವ ನೃತ್ಯಗಳು ಎಂದು ವಿಭಾಗಿಸಿದ್ದಾರೆ. ಅಟ್ಟಪಾಡಿ ಬುಡಕಟ್ಟು ಸಮಾಜದ ಆಟಂ, ಊರಾಳಿಗಳ ಮಲಕೂತ್, ಮನ್ನಾ‌ನ್‌ಕೂತ್, ಮಾವಲರ ಮಂಗಲಂಕಳಿ, ಎರುದುಂಕಳಿ, ಮಲಯರ ಕೋಲ್ಕಳಿ, ಪಣಿಯರ ಕಸಳಕಳಿ, ವೆಟ್ಟಕುರುಮರ ವಟ್ಟಕಳಿಗಳೆಲ್ಲ ಇತರ ನೃತ್ಯ ರೂಪಗಳು. ಕೇರಳದ ಆದಿವಾಸಿ ಪಂಗಡಗಳಲ್ಲಿ ಅನೇಕ ರೀತಿಯ ಬಿದಿರಿನ ವಾದ್ಯಗಳು, ಚರ್ಮ ವಾದ್ಯಗಳು, ಸುಷಿರವಾದ್ಯಗಳಿದ್ದುವು. ಅವುಗಳನ್ನು ನಿರ್ಮಿಸುವುದರಲ್ಲಿಯೂ, ನುಡಿಸುವುದರಲ್ಲಿಯೂ ಅವರು ಪ್ರವೀಣರಾಗಿದ್ದರು.

ಕೇರಳದ ಆದಿವಾಸಿಗಳು ವಿಭಿನ್ನ ವ್ಯಾವಹಾರಿಕ ಭಾಷೆಗಳನ್ನು ನಿರ್ವಹಿಸಬಲ್ಲವರಾಗಿದ್ದರು.ಪ್ರತಿಯೊಂದು ಬುಡಕಟ್ಟು ಪಂಗಡಕ್ಕೂ ತನ್ನದೇ ಆದ ಭಾಷೆಯಿದೆ. ಇಡುಕ್ಕಿ ಜಿಲ್ಲೆಯ ಮಲಯಳ್ಳಾಡನ್, ಊರಾಳಿ, ಮಲಯರಯರು ಮೊದಲಾದವರು ಮಲಯಾಳದ ಸಾಮಾಜಿಕ ಉಪಭಾಷೆಗಳನ್ನು ಆಡುತ್ತಿದ್ದರು. ಅನೇಕ ಪಂಗಡಗಳ ಉಪಭಾಷೆಗಳು ಕನ್ನಡ, ಮಲಯಾಳ, ತಮಿಳು ಮಿಶ್ರಿತವಾಗಿವೆ. ಭಾಷಾವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕಾದ ಪ್ರಾಚೀನ ಶಬ್ದಗಳೂ ವಾಕ್ಯ ಸರಣಿಗಳೂ ಆದಿವಾಸಿಗಳ ಭಾಷೆಗಳಲ್ಲಿವೆ.

ಪುನರ್ಜನ್ಮದ ಕಲ್ಪನೆ ಆದಿವಾಸಿಗಳಲ್ಲಿದೆ. ವ್ಯಕ್ತಿ ಸತ್ತ ಅನಂತರವೂ ಅವನ ಆತ್ಮ ಜೀವಂತವಾಗಿರುತ್ತದೆ ಎಂಬ ನಂಬಿಕೆ ಇದಕ್ಕೆ ಆಧಾರ. ಸತ್ತವನು ಉಪಯೋಗಿಸುತ್ತಿದ್ದ ಮುಖ್ಯು ವಸ್ತುಗಳನ್ನು ಮೃತದೇಹದೊಂದಿಗೆ ಇರಿಸುತ್ತಿದ್ದರು. ಕುರಿಚ್ಯರು, ಕುರುಮರು ಮೊದಲಾದ ಪಂಗಡಗಳ ಪುರುಷರು ತೀರಿ ಹೋದರೆ ಅವರ ಪ್ರಧಾನ ಆಯುಧವಾದ ಬಾಣ ಹಾಗೂ ಮಹಿಳೆಯರಾದರೆ ಕುಡುಗೋಲನ್ನು ಮೃತದೇಹದೊಂದಿಗೆ ಇರಿಸುತ್ತಿದ್ದರು. ಮತ್ತೆ ಕೆಲವು ಪಂಗಡಗಳಲ್ಲಿ ಸತ್ತ ವ್ಯಕ್ತಿ ಧರಿಸಿದ ಆಭರಣಗಳನ್ನೂ, ತಾಂಬೂಲ ಪೆಟ್ಟಿಗೆಯನ್ನೂ ಹೂಳುತ್ತಿದ್ದರು. ಕೆಲವು ಪಂಗಡಗಳು ವ್ಯಕ್ತಿ ಸತ್ತ ಮೇಲೆ ಆ ಮನೆಯನ್ನು ಸುಟ್ಟು ವಲಸೆ ಹೋಗುವ ಪದ್ಧತಿಯೂ ಇದೆ.

– ಪಿ.ವಿ.ಎಂ. ಅನುವಾದ ಎನ್.ಎಸ್.

ಕೇರಳದ ಉಡುಗೆ ವಸ್ತ್ರ ಮತ್ತು ವಸ್ತ್ರಧಾರಣೆಯು ಭೌತಿಕ ಸಂಸ್ಕೃತಿ ಅಧ್ಯಯನದ ಅಂಗವಾಗಿದೆ. ಅದು ಯಾವುದೋ ಆಶಯಗಳ ಪ್ರಕಟನಾಮಾರ್ಗ ಕೂಡ. ಚಿಹ್ನೆ ವ್ಯವಸ್ಥೆಯ ಭಾಗ ಕೂಡ ಆಗಿರುವ ವಸ್ತ್ರ ಮತ್ತು ಅದನ್ನು ಧರಿಸುವುದರಲ್ಲಿ ಸಾಮಾಜಿಕ ಬದಲಾವಣೆಗಳಿಗೆ ಅನುಸಾರವಾಗಿ ಅರ್ಥವ್ಯತ್ಯಾಸ ಕೂಡ ಆಯಿತು. ಕೇರಳದಲ್ಲಿ ಪಾಶ್ಚಿಮಾತ್ಯ ಮತ್ತು ಉತ್ತರ ಭಾರತೀಯ ವಸ್ತ್ರಗಳ ಮಾದರಿಗಳು ಪ್ರಭಾವ ಬೀರಿದುವು. ಕೇರಳೀಯ ಜನತೆ ಸಾಲವಾಗಿ ಪಡೆದುಕೊಂಡಿರುವ ಆವೃತ್ತಿಗಳಿಂದ ಹೊಸ ಆವೃತ್ತಿಗಳನ್ನು ಸೃಷ್ಟಿಸಕೊಳ್ಳುತ್ತಿದೆ.

ಕೇರಳವು ಒಂದು ದೊಡ್ಡ ಮಿಶ್ರ ಸಮಾಜ. ಪ್ರಸ್ತುತ ಮಿಶ್ರ ಸಮಾಜದ ಒಳಗೆ ಭೌಗೋಳಿಕವಾಗಿಯೂ ಸಾಂಸ್ಕೃತಿಕವಾಗಿಯೂ ಒಳಗೊಂಡಿದ್ದ ಅನೇಕ ಉಪಸಮುದಾಯಗಳನ್ನು ವಸ್ತ್ರ ಮತ್ತು ವಸ್ತ್ರಧಾರಣ ರೀತಿಯಿಂದಲೂ ಗುರುತಿಸಲಾಗುತ್ತಿತ್ತು. ಇಪ್ಪತ್ತನೆಯ ಶತಮಾನದಲ್ಲಿಯೂ ಕೇರಳದ ಸಾಮಾನ್ಯ ಜನ ಬೈರಾಸನ್ನು ಮಾತ್ರ ಉಟ್ಟು ಬದುಕುತ್ತಿದ್ದರು. ಮೊಣಕಾಲ ಮೇಲಿನವರೆಗೆ, ಮೊಣಕಾಲವರೆಗೆ. ಕಣಕಾಲವರೆಗೆ, ಕಾಲಗಂಟಿನವರೆಗೆ ಎಂಬಂತೆ ವಸ್ತ್ರಧಾರಣದ ಶಿಷ್ಟಾಚಾರಗಳಿದ್ದುವು. ಅವರ್ಣೀಯನು ಮೊಣಕಾಲ ಮೇಲೆ ಮಾತ್ರ ಪಂಚೆ ಉಟ್ಟುಕೊಳ್ಳಲು ಅನುಮತಿಯಿತ್ತು. ಈಳವಾದಿ ಹಿಂದುಳಿದ ವರ್ಗದವರು ಮೊಣಕಾಲು ಮುಚ್ಚುವವರೆಗೆ ಉಡಬಹುದಾಗಿತ್ತು. ನಾಯರ್ ಮುಂತಾದ ಉಚ್ಛವರ್ಣೀಯರಿಗೆ ಕಣಕಾಲವರೆಗೂ ಬ್ರಾಹ್ಮಣರಿಗೆ ಕಾಲಗಂಟಿನವರೆಗೂ ಬರುವಂತೆ ಪಂಚೆ ಉಡಬಹುದಾಗಿತ್ತು. ಬ್ರಾಹ್ಮಣ ಸ್ತ್ರೀಯರಿಗಷ್ಟೆ ಸೊಂಟದ ಮೇಲೆ (ಎದೆಯನ್ನು) ಚೆನ್ನಾಗಿ ಮರೆಮಾಡಿಕೊಳ್ಳುವ ಅಧಿಕಾರವಿತ್ತು. ಬಾಲಕ ಬಾಲಿಕೆಯರು ಕೋವಣವನ್ನು ಮಾತ್ರ ಉಡಬೇಕಿತ್ತು. ಪ್ರಜಾಪ್ರಭುತ್ವ – ಸಮಾಜವಾದದ ಸಾಮೂಹಿಕ ಕ್ರಮದಲ್ಲಿ ಈ ರೀತಿಯ ಭೇದಗಳು ಇಲ್ಲವಾದುವು. ಉಪಭೋಗೀಕರಣವು ಸಾರ್ವತ್ರಿಕವಾದಾಗ ಲೋಕಾದ್ಯಂತ ವಸ್ತ್ರ ಮತ್ತು ವಸ್ತ್ರಧಾರಣ ರೀತಿಗಳು ಬದಲಾದವು. ಪ್ರಾಯ, ಲಿಂಗ, ಜಾತಿ, ವರ್ಣ ಎಂಬುವಕ್ಕೆಲ್ಲ ವಸ್ತ್ರದ ಮೂಲಕ ಸಮಾಜವು ನಿರ್ಮಿಸಿದ್ದ ಗಡಿಗಳು ಮಾಯವಾದವು. ಕೇರಳದ ವಿಭಿನ್ನ ಸಮುದಾಯಗಳ ವಸ್ತ್ರದಲ್ಲೂ ವಸ್ತ್ರಧಾರಣ ರೀತಿಯಲ್ಲೂ ಮೇಲೆ ಹೇಳಿದ ತೆರನಾದ ಬದಲಾವಣೆಗಳು ನಡೆದುವು.

ಕೇರಳದ ಗಂಡಸರ ವಸ್ತ್ರಗಳೂ ಅದರ ಧಾರಣಪದ್ಧತಿಯೂ ಪೂರ್ತಿಯಾಗಿ ಪಾಶ್ಚಿಮಾತ್ಯ ರೀತಿಗೆ ಬದಲಾಗುತ್ತಿದೆ. ಸ್ತ್ರೀಯರ ವಸ್ತ್ರ ರೀತಿಗಳು ಸಾಮಾನ್ಯವಾಗಿ ಕೇರಳೀಯ ರೀತಿಯನ್ನು ಬಿಟ್ಟಿಲ್ಲ. ಫ್ರಾಕ್, ಲಂಗ, ಚೂರಿದಾರ್, ಸೀರೆ, ಸೆಟ್ಟ್‌ಸೀರೆ, ಮ್ಯಾಕ್ಸಿ ಮುಂತಾದ ಉಡುಪುಗಳನ್ನು ಇಂದಿನ ಹೆಂಗಸರು ಧರಿಸುತ್ತಾರೆ. ಇಂಥ ಬಟ್ಟೆಗಳಿಗೆ ಅನೇಕ ಆವೃತ್ತಿಗಳೂ ಇವೆ. ಯೌವನದಿಂದ ತೊಡಗ ಮಧ್ಯವಯಸ್ಸಿನ ತನಕದ ಸ್ತ್ರೀಯರು ಮ್ಯಾಕ್ಸಿ ಧರಿಸುತ್ತಾರೆ. ಪುರುಷರಲ್ಲಿ ಹೆಚ್ಚಿನವರೂ ಪ್ಯಾಂಟ್‌ಷರ್ಟುಗಳನ್ನು ಧರಿಸುತ್ತಾರೆ. ವೃದ್ಧರೂ ಗ್ರಾಮೀಣ ಪುರುಷರೂ ಪಂಚೆ ಷರ್ಟುಗಳನ್ನು ಉಪಯೋಗಿಸುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಸಾಮಾನ್ಯವಾಗಿ ಪಂಚೆ ಮತ್ತು ಷರ್ಟುಗಳನ್ನು ಉಪಯೋಗಿಸಬೇಕಾಗುತ್ತದೆ. ರಾಜಕೀಯ ನೇತಾರರು ಪಂಚೆ ಮತ್ತು ಷರ್ಟು ಧರಿಸುತ್ತಾರೆ. ಸ್ತ್ರೀ ಪುರುಷರು ಮನೆಯ ಹೊರಗೆ ಸಾಮಾನ್ಯವಾಗಿ ಧರಿಸುವ ಬಟ್ಟೆಗಳನ್ನು ಮನೆಯ ಒಳಗೂ ಬಳಸುತ್ತಾರೆ. ಮಧ್ಯವಯಸ್ಕ ಪುರುಷರು – ಬೈರಾಸು, ಲುಂಗಿ ಇವನ್ನು ಮನೆಯಲ್ಲಿ ಬಳಸುವರು. ಮಕ್ಕಳೂ ಯುವಕರೂ ಮನೆಯಲ್ಲಿ ಬರ್ಮುಡ ಧರಿಸುವುದು ಹೆಚ್ಚು ವ್ಯಾಪಕವಾಗುತ್ತಿದೆ. ಬಾಲಕರು ನಿಕ್ಕರ್, ಷರ್ಟು, ಪ್ಯಾಂಟ್‌ಗಳನ್ನು ಧರಿಸುತ್ತಾರೆ. ಹುಡುಗಿಯರು ಫ್ರಾಕ್, ಲಂಗ, ಲಂಗ ದಾವಣಿ ಮುಂತಾದುವನ್ನು ಧರಿಸುತ್ತಾರೆ. ಮಗುವಿನ ಒಂದು ವರ್ಷ ಪ್ರಾಯದವರೆಗೆ ಮಾತ್ರ. ಸ್ತ್ರೀ ಪುರುಷರ ಒಳ ಉಡುಪುಗಳಿಗೆ ದೊಡ್ಡದೊಂದು ಮಾರುಕಟ್ಟೆಯೇ ಸಿದ್ಧವಾಗಿ ಬಿಟ್ಟಿದೆ. ಹಿಂದಿನ ಕಾಲದಲ್ಲಿ ಪುರುಷರಿಗೆ ಕೌಪೀನವೂ ಸ್ತ್ರೀಯರಿಗೆ ತಟ್ಟು(ಮ.) ಕಚ್ಚೆಗಳೂ ಒಳವಸ್ತ್ರಗಳಾಗಿದ್ದುವು. ಇಂದು ಪುರುಷರಿಗೂ ಸ್ತ್ರೀಯರಿಗೂ ವಿಭಿನ್ನ ರೀತಿಯ ಚಡ್ಡಿ/ಜಟ್ಟಿಗಳೂ ಅಂಡರ್‌ವೇರ್‌ಗಳೂ ಇದ್ದಾವೆ. ಪುರುಷರು ಬನಿಯನನ್ನು ಒಳಉಡುಪಾಗಿ ಬಳಸುವುದು ವಿರಳವಾಗುತ್ತಿದೆ. ಸ್ತ್ರೀಯರು ಒಳಉಡುಪಾಗಿ ಒಳಲಂಗವನ್ನು ಬಳಸುತ್ತಿದ್ದಾರೆ.

ಧಾರ್ಮಿಕ ಕಾರ್ಯಗಳಲ್ಲಿ ಬಳಸುವ ವಸ್ತ್ರ ಮತ್ತು ವಸ್ತ್ರಧಾರಣವು ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರಿಯುತ್ತಿದೆ. ಹಿಂದೂ ವಿಭಾಗದ ಪುರುಷರು ಆಚಾರ – ಅನುಷ್ಠಾನಗಳಲ್ಲಿ ಸಾಮಾನ್ಯವಾಗಿ ಪಂಚೆ ಮತ್ತು ಷರ್ಟುಗಳನ್ನು ಉಪಯೋಗಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಸ್ತ್ರೀಯರು ಜರಿಸೀರೆ ಅಥವಾ ಕೆಟ್ಟ್‌ಮುಂಡ್ (ಮ.) ಬಳಸುತ್ತಾರೆ. ವಿವಾಹ ಮುಂತಾದ ಕೆಲವು ಮುಖ್ಯ ಸಂದರ್ಭಗಳಲ್ಲಿಯೂ ವಸ್ತ್ರವನ್ನು ಉಡುಗೊರೆಯಾಗಿ ಕೊಡುವುದು ಒಂದು ಮುಖ್ಯ ಕಾರ್ಯಕ್ರಮವಾಗಿರುತ್ತದೆ. ಇಂದಿಗೂ ಸಾಮಾನ್ಯವಾಗಿ ಹಿಂದೂ ವಿವಾಹ ಕ್ರಮದಲ್ಲಿ ಒಂದು ಮುಖ್ಯ ಕಾರ್ಯಕ್ರಮ – ಪುಡವಕ್ಕೊಡ (ಪುಡವ ಕೊಡುವುದು). ಮದುವೆ ಎಂಬ ವಿಚಾರವನ್ನೇ ಹಲಬರು ಇಂದಿಗೂ ‘ಪುಡವಕೊಡ’ ಎಂಬ ಪದದಿಂದ ನಿರ್ದೇಶಿಸುತ್ತಾರೆ.

ಕ್ರಿಶ್ಚಿಯನ್ ಸ್ತ್ರೀಯರು ಪರಂಪರೆಯಿಂದ ಧರಿಸುತ್ತ ಬಂದಿರುವುದು ಚಟ್ಟ(ಮ.) ಮತ್ತು ಮುಂಡು(ಪಂಚೆ). ಆದರೆ ಇಂದು ಅಪೂರ್ವವಾಗಿ ಕೆಲವರು ಮಾತ್ರ ಆ ಬಟ್ಟೆ ಧರಿಸುವವರು ಕಾಣಸಿಗುತ್ತಾರೆ. ಪುರುಷರು ಪ್ಯಾಂಟ್ ಷರ್ಟ್‌‌ಗಳಿಗೆ ಬದಲಾಯಿಸಿ ಬಿಟ್ಟಿದ್ದಾರೆ. ಬಟ್ಟೆ ಧರಿಸಿದುದನ್ನು ಮಾತ್ರ ಗಮನಿಸಿ ಮಾತ್ರ ಗಮನಿಸಿ ಈತ ಕ್ರಿಶ್ಚಿಯನ್ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಪುರೋಹಿತರ (ಪಾದ್ರಿಗಳು) ಬಟ್ಟೆ ಮಾತ್ರ ಇಂದು ಮತವನ್ನು ಗುರುತು ಹಿಡಿಯಲು ನೆರವಾಗುತ್ತದೆ. ಪಾಶ್ಚಿಮಾತ್ಯ ಉಡುಪುಗಳನ್ನು ತಟ್ಟನೆ ಸ್ವೀಕರಿಸಿ ಅದಕ್ಕೆ ಬದಲಾಯಿಸಿಕೊಂಡವರಲ್ಲಿ ಕ್ರಿಶ್ಚಿಯನ್‌ನ್ನರದೇ ಮೊದಲ ಪಂಕ್ತಿ. ಸೆಟ್‌ಮುಂಡನ್ನು (ಮ.) ಸಾಮಾನ್ಯವಾಗಿ ಕ್ರಿಶ್ಚಿಯನ್ ಹೆಂಗಸರು ಒಪ್ಪಿಕೊಂಡಿಲ್ಲ, ಅದರಲ್ಲೂ ಗ್ರಾಮೀಣ ಮಹಿಳೆಯರು, ಹಿಂದೂಮತೀಯ ಸ್ತ್ರೀಯರನ್ನು ಈ ಬಟ್ಟೆಯಿಂದ ಗುರುತಿಸಿಕೊಂಡಿರುವುದೇ ಈ ಹಿಂಜರಿಕೆಗೆ ಕಾರಣವಾಗಿರಬೇಕು. ಕಾವಿಬಟ್ಟೆಯನ್ನು ಸಾಮಾನ್ಯವಾಗಿ ಕ್ರಿಶ್ಚಿಯನ್ನರು ಸ್ವೀಕರಿಸಿಲ್ಲ. ಕೆಲವು ವಿಭಾಗಗಳ ಪುರೋಹಿತರಲ್ಲಿ ಮಾತ್ರ ಕಾವಿಬಟ್ಟೆಯುಡುವುದನ್ನು ಕಾಣಬಹುದು ಅಷ್ಟೆ.

ಮುಸ್ಲಿಂ ಮಹಿಳೆಯರು ಪರ್ದಾಕ್ಕೂ ಮಫ್ತಕ್ಕೂ ಬದಲಾಗುತ್ತಿದ್ದಾರೆ. ತಿರುವಾಂಕೂರು ಭಾಗದಲ್ಲಿ ಈ ವಿದ್ಯಮಾನವು ಮಲಬಾರ್ ಪ್ರದೇಶದಷ್ಟು ತೀವ್ರವಾಗಿ ಇಲ್ಲ. ಸೀರೆಯ ಸೆರಗಿನಿಂದಾಗಲಿ ಶಾಲಿನಿಂದಾಗಲಿ ಮುಖವನ್ನು ಮುಚ್ಚಿಕೊಳ್ಳುವ ರೀತಿ ಕಂಡುಬರುತ್ತದೆ. ಮಲಪ್ಪುರಂ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಪರ್ದಾಕ್ಕೆ ಹೆಚ್ಚು ಬೇಡಿಕೆಯಿದೆ. ಮುಸ್ಲಿಂ ಯುವಕರು ಪಾಶ್ಚಿಮಾತ್ಯ ಪೋಷಾಕನ್ನು ಅನುಕರಿಸುತ್ತಿದ್ದಾರೆ. ಪುರುಷರಲ್ಲಿ ಒಂದು ವರ್ಗವು ಪಂಚೆ ಉಡುವಾಗ ಎಡಭಾಗಕ್ಕೆ ಸುತ್ತಿಸಿಕ್ಕಿಸುತ್ತಾರೆ. ಇದು ಈಗಲೂ ಮುಂದುವರಿಯುತ್ತಿದೆ.

ಇಡೀ ದೇಹ ಮುಚ್ಚುವ ಹಾಗೆ ಪರ್ದ ಹಾಕುವಾಗ ಅಂಗ ಸೌಷ್ಟವವನ್ನು ಸ್ಫುಟಗೊಳಿಸುವಂತೆ ಹೊಲಿಸುವ ಜಾಯಮಾನ ಕಾಣುತ್ತಿದೆ. ಆಕರ್ಷಕವಾದ ಡಿಸೈನುಗಳು ಪ್ಯಾಟರ್ನ್‌‌ಗಳೂ ಇರುವ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ತುಂಬ ಬೆಲೆಯಿರುತ್ತದೆ. ಅತ್ಯಂತ ಆಕರ್ಷಕವಾದ ಮಫ್ತವನ್ನು ಉಪಯೋಗಿಸುತ್ತಿದ್ದಾರೆ. ಪರ್ದಾದ ಒಳಗೆ ವಿನ್ಯಾಸಗೊಳಿಸಿದ ಚೂರಿದಾರ್, ಟಾಪ್‌ಗಳನ್ನು ಯುವತಿಯರು ಧರಿಸುತ್ತಾರೆ. ಮನೆಯಿಂದ ಹೊರಡುವಾಗ ಪರ್ದಾ ಧರಿಸಿ ಬಂದು ಕಾಲೇಜಿಗೆ ಬಂದ ಬಳಿಕ ಅದನ್ನು ಬಿಚ್ಚಿಡುವವರೂ ಕಡಿಮೆಯೇನಿಲ್ಲ.

ಮುಸ್ಲಿಂ ಪುರುಷರು ಮತದ ಗುರುತುಗಳನ್ನುಳ್ಳ ಬಟ್ಟೆ ಧರಿಸುವ ಕ್ರಮದಿಂದ ದೂರ ಸರಿಯುತ್ತಿದ್ದಾರೆ. ಸ್ತ್ರೀಯರು ಅದರ ಹತ್ತಿರಕ್ಕೆ ಹೆಚ್ಚು ಹೆಚ್ಚು ಸಾಗುತ್ತಿದ್ದಾರೆ. ಪುರುಷ ಪ್ರಧಾನವಾಗಿರುವ ಒಂದು ಸಮುದಾಯವಾಗಿರುವುದರಿಂದ ಹೀಗೆ ನಡೆಯುತ್ತಿದೆ. ಆದರೆ ಜನ್ಮತಃ ಇರುವ ಪ್ರೇರಣೆಗಳ ಒತ್ತಡದಿಂದ ಮತೀಯ ಗುರುತುಗಳುಳ್ಳ ಬಟ್ಟೆಗಳಾದರೂ ಅವನ್ನು ಆಕರ್ಷಣೀಯವಾಗಿಸಿಕೊಳ್ಳುವ ಜಾಯಮಾನವು ಕಂಡುಬರುತ್ತಿದೆ.

ಕಾವಿಬಟ್ಟೆಯನ್ನು ಸೆಟ್ಟ್‌ಮುಂಡನ್ನೂ, ಮುಸ್ಲಿಂ ಜನತೆ ಸ್ವೀಕರಿಸುತ್ತಿಲ್ಲ. ಕೇರಳೀಯ ಚಿಹ್ನೆಯಾಗಿ ಸೆಟ್ಟ್‌ಮುಂಡು, ಸೆಟ್ಟ್‌ಸಾರಿ ಎಂದು ಘೋಷಿಸುತ್ತಿರುವಾಗಲೂ ಕೇರಳೀಯ ಮುಸ್ಲಿಮರೂ ಕ್ರಿಶ್ಚಿಯನ್ನರೂ ಅದನ್ನು ಹಿಂದುತ್ವದ ಚಿಹ್ನೆಗಳೆಂದು ತಿಳಿದುಕೊಂಡಿದ್ದಾರೆ. ಹಿಂದೂ ಸಮುದಾಯ ಮೇಲಂತಸ್ತಿನ ಜನ ಕೂಡ ಸೆಟ್ಟ್‌ಮುಂಡು ಸೆಟ್ಟ್‌ಸಾರಿಗಳನ್ನು ದೇವಾಲಯಗಳಿಗೂ ಉತ್ಸವಗಳಿಗೂ ಉಡುವುದನ್ನು ಕಾಣಬಹುದು. ಆದುದರಿಂದಲೇ ಅದನ್ನು ದೇಶೀಯ ವಸ್ತ್ರವೆಂದು ಉಳಿದವರು ಕಾಣುವುದಿಲ್ಲ.

ಶ್ರೀ ನಾರಾಯಣ ಗುರು ಪ್ರಸ್ಥಾನದವರು ವಿಶೇಷ ಸಂದರ್ಭಗಳಲ್ಲಿ ಹಳದಿ ಬಟ್ಟೆಗಳನ್ನು ಧರಿಸುತ್ತಾರೆ. ಎಸ್.ಎನ್.ಡಿ.ಪಿ.ಯ ನೇತಾರರು ಸದಾ ಹಳದಿ ಶಾಲು ಧರಿಸುತ್ತಾರೆ.

ಕೂಲಿ ವಿಭಾಗಕ್ಕೆ ಸೇರಿದ ಸಂಘಟಿತ ಕಾರ್ಮಿಕರ ಯೂನಿಯನ್‌ರ ಬಣ್ಣ ನೀಲಿ ಅಥವಾ ಮುಂತಾದ ಇತರ ಬಣ್ಣಗಳಿರಬಹುದು. ‘ಬ್ಲೂ ಕಾಲರ್’ ಎಂಬ ಒಂದು ವಿಭಾಗವೂ ವಿಶ್ವದಾದ್ಯಂತ ಪ್ರಚಲಿತವಾಗುತ್ತಿರುವುದರ ಭಾಗವಾಗಿ ಕೇರಳದಲ್ಲೂ ಇದು ನಡೆಯುತ್ತಿದೆ. ಫುಲ್‌ಕೈ ಷರ್ಟನ್ನು ಇನ್‌ಷರ್ಟ್‌ ಮಾಡಿ ಧರಿಸಿದ ‘ವೈಟ್ ಕಾಲರ್’ ವಿಭಾಗವು ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಾರೆ. ಶಾಲಾ ಶಿಕ್ಷಣ ನೀಡುವ ಸಂಸ್ಥೆಗಳೂ/ಗುಂಪುಗಳೂ ಪ್ರೊಫೆಶನಲ್ ಕಾಲೇಜು ಸಂಸ್ಥೆಗಳೂ ಕಡ್ಡಾಯವಾಗಿ ಯೂನಿಫಾರ್ಮಗಳನ್ನು ಅಳವಡಿಸಿಕೊಂಡಿದ್ದಾರೆ. ಉಚ್ಛವರ್ಗದವರೆಂಬ ಪ್ರತೀತಿಯುಂಟುಮಾಡುವಂತೆ ಓವರ್ ಕೋಟುಳ್ಳ ಯೂನಿಫಾರ್ಮ್‌‌ಗಳು ಖಾಸಗಿ ಶಾಲೆ – ಕಾಲೇಜುಗಳಲ್ಲಿ ವ್ಯಾಪಕವಾಗುತ್ತಿವೆ. ಧರಿಸುವ ಬಟ್ಟೆಯಿಂದ ಜಾತಿಯನ್ನು ಗುರುತಿಸಬಹುದಾಗಿದ್ದ ಸ್ಥಿತಿ ಬದಲಾಗಿರುವುದಾದರೂ ಸಮಾಜದ ನೌಕರಿ ಕ್ಷೇತ್ರದ ಮೇಲು, ಕೀಳು ಬಟ್ಟೆಯಿಂದಲೇ ತಿಳಿದು ಬರುವಂತಾಗಿದೆ. ಸರಕಾರಿ ಸ್ವಾಮ್ಯದಲ್ಲಿನ ಫ್ಯಾಕ್ಟರಿಗಳಲ್ಲೂ ಕಛೇರಿಗಳಲ್ಲೂ ಕೆಳದರ್ಜೆಯ ನೌಕರಿ ಮಾಡುವ ಜನಕ್ಕೆ ಸಾಮಾನ್ಯವಾಗಿ ನೀಲಿ ಸೀರೆ, ನೀಲಿ ಪ್ಯಾಂಟ್ ಷರ್ಟುಗಳನ್ನು ಸಮವಸ್ತ್ರವಾಗಿ ನಿಗದಿಮಾಡಲಾಗಿದೆ.

ಕೇರಳದ ಪುರುಷರು ಯುರೋಪಿಯನ್ ಮಾದರಿಯ ವಸ್ತ್ರಗಳ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಹುಟ್ಟಿದ ದಿನದಿಂದ ಸ್ವಲ್ಪ ಕಾಲ ಮಾತ್ರ ಶಿಶುವಸ್ತ್ರಗಳನ್ನು ಧರಿಸಲಾಗುತ್ತದೆ. ಗಂಡು ಹೆಣ್ಣು ಭೇದವಿಲ್ಲದೆ ಆಗ ಒಂದೇ ತೆರನ ಬಟ್ಟೆ ಧರಿಸಲಾಗುತ್ತದೆ. ನರ್ಸರಿ ಪ್ರಾಯ ಕಳೆದರೆ ಪುರುಷರಿಗೆ ಪ್ರಾಂಟ್ಸ್ ಮತ್ತು ಷರ್ಟು ಎಂಬುದು ಸಾಯುವ ತನಕದ ಉಡುಪು ಎಂಬಂತಾಗಿ ಬಿಟ್ಟಿದೆ. ಸ್ತ್ರೀಯರಿಗೆ ಹೆಚ್ಚು ವೈವಿಧ್ಯವುಳ್ಳ ಉಡುಪುಗಳಿವೆ. ಆದರೆ ಚೂಡಿದಾರನ್ನು ಬಾಲಕಿಯರಿಂದ ಹಿಡಿದು ಮುದುಕಿಯಾಗುವ ತನಕವೂ ಉಪಯೋಗಿಸಲಾಗತ್ತಿದೆ. ಮುದುಕರನ್ನು ಬಟ್ಟೆಯಿಂದಲೆ ಗುರುತು ಹಿಡಿಯಬಹುದಾಗಿದ್ದ ಎಲ್ಲ ಚಿಹ್ನೆಗಳೂ ಮರೆಯಾಗುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಪಂಚೆ, ಷರ್ಟು, ಬೈರಾಸು, ಸೀರೆ ಮುಂತಾದವು ಬಳಕೆಯಲ್ಲಿದೆ.

ಜಾತಿ, ಮತ, ವಯಸ್ಸು ಮುಂತಾದ ಘಟಕಗಳನ್ನು ಕೇರಳದ ಉಪಸಮುದಾಯಗಳು (ಉಪ ಕೊಟ್ಟಾಯಮ್ಮ) ಉಪಯೋಗಿಸುವ ಬಟ್ಟೆ ಬರೆಗಳಿಂದ ಗುರುತಿಸುವುದು ಅಸಾಧ್ಯ. ಮುಸ್ಲಿಂ ವಿಭಾಗದ ಸ್ತ್ರೀಯರ‍ಲ್ಲಿ ಒಂದು ವಿಭಾಗವು ಪರ್ದಾ ಧರಿಸುವುದರಿಂದ ಮಾತ್ರ ಅವರ ಮಾತನ್ನು ಗುರುತಿಸುವುದು ಸಾಧ್ಯ. ಬಟ್ಟೆಗಾಗಿಯೇ ತುಂಬ ಧನವನ್ನು ವೆಚ್ಚ ಮಾಡುವ ಜನರು ಎಂಬ ನೆಲೆಯಲ್ಲಿ ಪರ್ದಾದಲ್ಲಿ ಹಲವು ಆವೃತ್ತಿಗಳನ್ನು ತಂದು ಮಹಿಳೆಯರನ್ನು ಆಕರ್ಷಿಸುವ ಹುನ್ನಾರವನ್ನು ಮಾರುಕಟ್ಟೆಯೂ ಅನುಸರಿಸುತ್ತಿದೆ. ಸ್ತ್ರೀಯರು ಪುರುಷರು ಧರಿಸುವ ಬಟ್ಟೆಗಳನ್ನು ಉಪಯೋಗಿಸುವಾಗಲೂ ತಾವು ಮಹಿಳಾ ಆವೃತ್ತಿಯ ಬಟ್ಟೆಗಳನ್ನು ಧರಿಸುವ ವಿವೇಚನೆಯನ್ನು ಇರಿಸಿಕೊಂಡಿದ್ದಾರೆ. ಯಾವ ಟಾಪ್‌ಗೂ ಯಾವ ಬಾಟಂ ಕೂಡ ಹೊಂದಿಕೆಯಾಗುತ್ತದೆ ಎಂಬ ಹಾಗೆ ಸ್ತ್ರೀಯರ ಉಡುಪು ಬದಲಾಗುತ್ತಿದೆ. ವಸ್ತ್ರಧಾರಣೆಯ ವಿಚಾರದಲ್ಲಿ ಕೇರಳದಲ್ಲಿ ಹಳ್ಳಿ ನಗರಗಳಲ್ಲಿ ವ್ಯತ್ಯಾಸವು ಅಳಿಸಿ ಹೋಗಿದೆ. ಪ್ರಾಯಸೂಚೀ ಬಟ್ಟೆಗಳು ಮತ್ತು ಅವನ್ನು ಧರಿಸುವ ರೂಢಿಯೂ ಕೇರಳೀಯ ಜನಸಮುದಾಯಕ್ಕೆ ಆಸಕ್ತಿಯ ವಿಷಯವಾಗಿ ಉಳಿದಿಲ್ಲ.

ವ್ಯಕ್ತಿ, ಸಮುದಾಯ, ಮಾರುಕಟ್ಟೆ ಎಂಬ ಸಂಬಂಧಗಳು ಶಿಥಿಲವಾಗಿವೆ ಮತ್ತು ಬದಲಾಗಿವೆ. ವ್ಯಕ್ತಿಯ ವಸ್ತ್ರಧಾರಣೆಯ ಅಭಿರುಚಿಯ ವಶವಾಗಿದೆ. ಮಧ್ಯವರ್ಗದ ಸಂಸ್ಕೃತಿಯ ಮಾನ್ಯತೆಯೂ ಜವುಳಿ ಮಾರುಕಟ್ಟೆಯ ಮುಂದೆ ಕೈ ಮುಗಿಯುವಂತಾಗಿದೆ. ಆ ರೀತಿಯಲ್ಲಿ ಹೊಸ ವಸ್ತ್ರ ಮರ್ಯಾದೆಯು ತಲೆಯೆತ್ತಿರುತ್ತ ‘ಪಾರ್ಟಿವೇರ್’ ಮಾರುಕಟ್ಟೆಯಲ್ಲಿ ವೆಚ್ಚವು ಹೆಚ್ಚುತ್ತಿವೆ. ವಿಶೇಷ ಸಂದರ್ಭಗಳನ್ನು ಮಾರುಕಟ್ಟೆಯೇ ಸೃಷ್ಟಿಸಿಬಿಡುತ್ತ ಅಲ್ಲಿನ ವ್ಯವಹಾರವು ಹೆಚ್ಚುವಂತೆ ಮಾಡಿಕೊಂಡಿದೆ. ಹಳೆಯದು ಎಂದರೆ ಫ್ಯಾಶನ್ ಇಲ್ಲದ್ದು ಎಂಬ ಅರ್ಥವು ಬರುವಂತಾಗಿದೆ. ಹಳೆಯ ಫ್ಯಾಶನ್‌ನ ಬಟ್ಟೆಯನ್ನೇ ಅನೇಕರು ಮತ್ತೆ ಮತ್ತೆ ಬಳಸುವ ಸ್ಥಿತಿಯುಂಟಾಗಿದೆ. ಪುರುಷನನ್ನೂ ಸ್ತ್ರೀಯನ್ನೂ ವಿಗ್ರಹಗಳನ್ನಾಗಿಸಿಕೊಂಡು ಒಂದು ಬೃಹತ್ ಮಾರುಕಟ್ಟೆಯ ವ್ಯವಸ್ಥೆಯು ಹೊಸ ಬಂಡವಾಳ ಶಾಹಿಯಿಂದ ಕೇರಳದಲ್ಲಿ ನಿರ್ಮಾಣವಾಗಿದೆ.

– ಬಿ.ಬಿ. ಅನುವಾದ ಕೆ.ಕೆ.