ಕೇರಳದ ಮನೆ ಮನೆಯೆಂದರೆ ಮಾಡು ಹೊದಿಸಿದ ಕಟ್ಟಡ ಎಂದರ್ಥ. ಭಾರತದ ಇತರ ಭಾಗಗಳಿಗಿಂತ ಕೇರಳಕ್ಕೆ ತನ್ನದೇ ಆದೊಂದು ಗೃಹ ನಿರ್ಮಾಣ ಶಾಸ್ತ್ರವಿದೆ. ಅನೇಕ ನೂತನ ನಿರ್ಮಾಣ ಪರಿಕರಗಳೂ ತಾಂತ್ರಿಕ ಕುಶಲತೆಯೂ ಇದ್ದರೂ ಕೇರಳದ ಮನೆಗಳ ನಿರ್ಮಾಣದಲ್ಲಿ ಪಾರಂಪರಿಕ ಜ್ಞಾನವನ್ನು ಹೆಚ್ಚು ಕಡಿಮೆ ಬಳಸಿಕೊಳ್ಳಲಾಗುತ್ತದೆ. ‘ಮನುಷ್ಯಾಲಯ ಚಂದ್ರಿಕೆ’ ಎಂಬ ಕೃತಿಯಲ್ಲಿ ಮನುಷ್ಯರು ವಾಸಿಸುವ ಮನೆಗಳ ಕುರಿತು ಮತ್ತು ‘ತಂತ್ರ ಸಮುಚ್ಚಯ’ ಎಂಬ ಕೃತಿಯಲ್ಲಿ ದೇವಾಲಯಗಳ ನಿರ್ಮಾಣ ಕ್ರಮ ಪ್ರತಿಪಾದಿತವಾಗಿದೆ.

ಹಿಂದಿನ ಕಾಲದಲ್ಲಿ ಕೇರಳದ ಮನೆಗಳು ಚೌಕ ಅಥವಾ ಆಯತಾಕಾರದಲ್ಲಿ ನಿರ್ಮಾಣವಾಗುತ್ತಿದ್ದವು. ಪ್ರಾದೇಶಿಕವಾಗಿ ಲಭ್ಯವಿದ್ದ ವಸ್ತುಗಳಿಂದ ಅವುಗಳನ್ನು ನಿರ್ಮಿಸುತ್ತಿದ್ದರು. ಮಾಡು ಹೊದೆಸಲು ತೆಂಗಿನಗರಿ, ತಾಳೆಗರಿ, ಹುಲ್ಲು, ಬೈ ಹುಲ್ಲು, ಹಂಚು – ಇವುಗಳನ್ನು ಮಣ್ಣಹೆಂಟೆ, ಇಟ್ಟಿಗೆ, ಕೆಂಪು ಕಲ್ಲು, ಅಂಟು ಬರಿಸಿದ ಮಣ್ಣು, ಕಗ್ಗಲ್ಲು ಮುಂತಾದವಗುಳಿಂದ ಗೋಡೆಗಳನ್ನೂ ನಿರ್ಮಿಸುತ್ತಿದ್ದರು. ಮರುಮುಟ್ಟುಗಳಿಂದಲೇ ಪೂರ್ತಿ ಮಾಡನ್ನೂ ಗೋಡೆಗಳನ್ನೂ ನಿರ್ಮಿಸಿದ ಮನೆಗಳೂ ಹಿಂದಿನ ಕಾಲದಲ್ಲಿ ಕಾಣಸಿಗುತ್ತಿದ್ದವರು. ಈಗ ಅಂಥವು ಅಪೂರ್ವವಾಗಿವೆ.

ಕೇರಳದಲ್ಲಿ ಮರಗಳು ಧಾರಾಳ ಲಭ್ಯವಿರುವುದರಿಂದ ತೇಗ, ಬೀಟೆ, ಹಲಸು, ಆಂಜಿಲು (ಮ)ತೆಂಗು ಮುಂತಾದುವನ್ನು ಬಳಸಿಕೊಳ್ಳುತ್ತಾರೆ. ದಕ್ಷಿಣ ಕೇರಳ ಹಾಗೂ ಮಧ್ಯ ಕೇರಳಗಳಲ್ಲಿ ಮನೆಯ ತಳಪಾಯದ ಕೆಳಗೆಯೇ ಹಗೇವುಗಳನ್ನು ಹೊಂದಿದ್ದ ಮನೆಗಳು ಹೆಚ್ಚು ಪ್ರಚಾರದಲ್ಲಿದ್ದವು. ಇದರ ತಳ ಮತ್ತು ಮಾಡುಗಳನ್ನು ಬಿಟ್ಟರೆ ಉಳಿದ ಭಾಗಗಳೆಲ್ಲ ಮರಮುಟ್ಟುಗಳಿಂದಲೇ ರಚಿತವಾಗುತ್ತಿದ್ದವು. ಕರಾವಳಿಯಲ್ಲಿ ಧಾರಾಳವಾಗಿ ಲಭ್ಯವಿರುವ ತೆಂಗು ಮನೆ ನಿರ್ಮಾಣಕ್ಕೆ ಧಾರಾಳವಾಗಿ ಬಳಕೆಯಾಗುತ್ತಿದೆ.

ಹಿಂದಿನ ಕಾಲದಲ್ಲಿ ಮನೆಯ ಮಾಡಿಗಾಗಿ ತೆಂಗಿನಗರಿ, ಹುಲ್ಲು ಮುಂತಾದುವನ್ನು ಬಳಸುತ್ತಿದ್ದರು. ಅದಕ್ಕೆ ಬೆಂಕಿ ತಗಲುವ ಅಪಾಯ ಮತ್ತು ಪ್ರತಿವರ್ಷ ಅವುಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆಗಳ ಕಾರಣಕ್ಕೆ ಅವನ್ನು ಬಿಟ್ಟು, ಆವೆ ಮಣ್ಣಿನಿಂದ ನಿರ್ಮಿಸಿ ಸುಟ್ಟು ತಯಾರಾದ ಹಂಚನ್ನು ಬಳಸತೊಡಗಿದರು. ಹಂಚಿನ ಕುರಿತಾದ ಕೇರಳೀಯರ ಮಮತೆ ಇನ್ನೂ ಜೀವಂತವಾಗಿದೆ. ಮನೆಯ ಛಾವಣಿಯನ್ನು ಕಾಂಕ್ರೀಟಿನಿಂದ ನಿರ್ಮಿಸಿದರೂ ಅದರ ಮೇಲೆ ಹಂಚನ್ನು ಹೊದೆಸುವ ರೂಢಿ ಕೇರಳದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಕೇರಳದ ಒಳನಾಡುಗಳಲ್ಲೂ ಮಲೆ ಪ್ರದೇಶಗಳಲ್ಲೂ ಗಟ್ಟಿ ಮುರಕಲ್ಲಿನ ನೆಲದಿಂದ ಇಷ್ಟಾನುಸಾರ ಗಾತ್ರ ಮತ್ತು ಆಕಾರದಲ್ಲಿ ಕೆಂಪು ಕಲ್ಲನ್ನು ಕಡಿದು ತೆಗೆಯುತ್ತಾರೆ. ಇತ್ತೀಚಿನವರೆಗೂ ಮನೆಯ ತಳಪಾಯ ಮತ್ತು ಗೋಡೆಗಳಿಗೆ ಇಂಥ ಕಲ್ಲುಗಳನ್ನೇ ಉಪಯೋಗಿಸುತ್ತಿದ್ದರು. ಆದರೆ ಈತ ತಳಪಾಯವು ಸಿಮೆಂಟ್ ಮೊಸಾಯಿಕ್, ಟೈಲ್ಸ್, ಮಾರ್ಬಲ್ ಮುಂತಾದ ಘಟ್ಟಗಳನ್ನು ದಾಟಿ ಇದೀಗ ಗ್ರೆನೈಟಿಗೆ ಬಂದು ನಿಂತಿದೆ.

ಮನೆಯ ಪ್ರಾಥಮಿಕ ಅಗತ್ಯವೆಂದರೆ ಪ್ರತಿಕೂಲ ಹವೆ ಮತ್ತು ಇತರ ಸಾಹಚರ್ಯಗಳಿಂದ ರಕ್ಷಣೆ. ಹಂಚನ್ನುಳಿದು ಇತರ ವಸ್ತುಗಳಿಂದ ನಿರ್ಮಿತವಾದ ಛಾವಣಿಗಳು ಮಳೆಯ ಹೊರತು. ಶೀತ, ಸೆಖೆ ಮುಂತಾದುವನ್ನು ನಿಯಂತ್ರಿಸಲು ಸಹಾಯಕವಾಗಿದ್ದವು. ಬಿರುಮಳೆಯಿಂದ ರಕ್ಷಣೆ ಪಡೆಯುವುದಕ್ಕೆ ಯೋಗ್ಯವಾಗುವಂತೆ ಇಳಿಜಾರಾಗಿಯೂ ಗೋಡಗಳಿಗಿಂತ ಹೊರಚಾಚಿಯೂ ಇರುವ ಛಾವಣಿಗಳು ನಿರ್ಮಿತವಾಗುತ್ತವೆ. ಮನೆಯ ಸುತ್ತಲೂ ಅಗಲವಾದ ವರಾಂಡ ಮತ್ತು ತಿಟ್ಟಿಗಳಿದ್ದವು. ಗಾಳಿ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಸಾಲಾಗಿ ಬಾಗಿಲು ಕಿಟಿಕಿಗಳು ಇಡಲ್ಪಡುತ್ತಿದ್ದವು. ಛಾವಣಿ ನಿರ್ಮಾಣಕ್ಕೆ ಬಳಸುವಮರಗಳ ವಿಭಿನ್ನ ರೂಪ, ಅವುಗಳ (ಬೆಂಕ್ಟೆ) ಮೊಂದಾಯ, ಪಕ್ಕಾಸು, ರೀಪು, ಬಳೆ (ಮ), ಉತ್ತರ, ಮದನಕ್ಕೆ, ವಾಲ್‌ಪ್ಲೇಟ್ ಮುಂತಾದ ಹೆಸರುಗಳು ಬರುತ್ತವೆ. ಸಿಮೆಂಟು ಬಳಕೆಗೆ ಬರುವ ಮೊದಲು ಕುಮ್ಮಾಯ, ಸುರಕ್ಕಿ (ಸಸ್ಯಗಳ ಅಂಟು), ಅಂಟು ಮಣ್ಣು ಇತ್ಯಾದಿಗಳನ್ನು ಸೇರಿಸಿ ಹದಬರಿಸಿ ಬಳಸಿಕೊಳ್ಳುತ್ತಿದ್ದರು.

ಆಧುನಿಕ ವಾಸ್ತು ಇಂದಿನ ಕೇರಳೀಯ ಮನೆಗಳ ರೂಪ – ಭಾವಗಳನ್ನು ಪ್ರಭಾವಿಸಿದೆ. ನಗರೀಕರಣ, ಹೆಚ್ಚುವ ಜನಸಂಖ್ಯೆ, ಆರ್ಥಿಕ ಸಾಮರ್ಥ್ಯ, ನವೀನ ತಂತ್ರಜ್ಞಾನ – ಇವೆಲ್ಲ ದೊಡ್ಡ ಬದಲಾವಣೆಗಳನ್ನು ತರುತ್ತಿವೆ. ಗ್ರಾಮ – ನಗರ ವ್ಯತ್ಯಾಸ ಅಳಿಸಿ ಹೋಗಿ ಕೇರಳದ ಉದ್ದಗಲಕ್ಕೂ ಹಳೆಯ ಮನೆಗಳ ಜಾಗದಲ್ಲಿ ಅತ್ಯಾಧುನಿಕ ‘ಗೃಹರತ್ನ’ಗಳು ತಲೆಯೆತ್ತುತ್ತಿವೆ. ‘ಇರುವುದನ್ನೆಲ್ಲ ತೆಗೆದುಕೊಳ್ಳುವುದು’ ಎಂಬ ಅರ್ಥವೂ ಇರುವ ಗೃಹ ಎಂಬ ಪದದ ಪ್ರಕೃತ ಅರ್ಥ ಸಾರ್ಥಕವಾಗುವಂತೆ ಮನೆ ನಿರ್ಮಿಸುವ ಹುಚ್ಚು ಕೇರಳೀಯರನ್ನು ಸಾಲದ ಕುಣಿಕೆಯಲ್ಲಿ ಸಿಕ್ಕಿಸಿ ಹಾಕಿದೆ.

– ಕೆ.ಬಿ.ಎಸ್. ಅನುವಾದ ಕೆ.ಕೆ.

ಕೇರಳದ ಮುಖವಾಡಗಳು ದೃಶ್ಯಕಲೆಗಳಲ್ಲಿ, ಕೆಲವು ವಿಶಿಷ್ಟ ನೃತ್ಯ ಕಲೆಗಳಲ್ಲಿ ಮುಖವಾಡಗಳ ಬಳಕೆ ಸಾರ್ವತ್ರಿಕವಾಗಿದೆ. ಇತಿಹಾಸ ಪೂರ್ವ ಕಾಲದ ಸಂಸ್ಕೃತಿಯನ್ನು ಇಂತಹ ಮುಖವಾಡಗಳು ನೆನಪಿಸುತ್ತವೆ. ಅಮಾನುಷ, ಅಲೌಕಿಕ, ಶಕ್ತಿಗಳನ್ನು ಭಯಭಕ್ತಿಗಳಿಂದ ವೀಕ್ಷಿಸಿದ ಆದಿಮಾನವನು ಅವುಗಳ ವೇಷವನ್ನು ಧರಿಸಿ ಆರಾಧಿಸ ತೊಡಗಿದ. ಹೀಗೆ ಅಲೌಕಿಕ ಶಕ್ತಿಗಳ ರೂಪಗಳ ಆವಿಷ್ಕಾರಕ್ಕೆ ಮುಖವಾಡಗಳನ್ನು ಬಳಸಿಕೊಂಡು ಅನಂತರ ಭೂತ, ಪ್ರೇತ, ಪಿಶಾಚಿಗಳನ್ನು ಮುಖವಾಡಗಳಿಂದ ಪ್ರಸ್ತುತಪಡಿಸತೊಡಗಿದರು.

ಸಾಂಸ್ಕೃತಿಕ ಪರಂಪರೆಯಿರುವ ದೇಶಗಳ ನೃತ್ಯಕಲೆಗಳ ವೈಶಿಷ್ಟ್ಯವೇ ಮುಖವಾಡಗಳು. ದೇವತೆಗಳು. ಭೂತ ಪ್ರೇತ ಪಿಶಾಚಿಗಳು, ಯಕ್ಷ, ಗಂಧರ್ವ ಕಿನ್ನರರು, ಮನುಷ್ಯರು, ಮೃಗ ಪಕ್ಷಿಗಳು ಮೊದಲಾದ ಪಾತ್ರಗಳ ಆವಿಷ್ಕಾರಕ್ಕೆ ವಿವಿಧ ರೀತಿಯ ಮುಖವಾಡಗಳನ್ನು ಮುಖ್ಯವಾಗಿ ನಾಲ್ಕು ವಿಭಾಗ ಮಾಡಬಹುದು.

೧. ದೈವಮುಖ (God Mask)

೨. ಭೂತ ಮುಖ (Phantasy Mask)

೩. ಮನುಷ್ಯ ಮುಖ (Human Mask

೪. ಜಂತುಮುಖ (Animal Mask)

ಇವುಗಳಲ್ಲಿ ಮೊದಲ ಎರಡು ವಿಭಾಗಗಳು ಅಲೌಕಿಕ ಹಾಗೂ ಅಮಾನುಷ ಭಾವಗಳನ್ನು ಪ್ರತಿಬಿಂಬಿಸುತ್ತವೆ. ಇವುಗಳಿಗೆ ಕೇರಳೀಯ ದೃಶ್ಯಕಲೆಗಳಿಂದಲೇ ಉದಾಹರಣೆಗಳನ್ನು ಕೊಡಬಹುದು. ಕೃಷ್ಣನಾಟದ ಬ್ರಹ್ಮ, ಯಮಧರ್ಮ, ಕುಮ್ಮಾಟಕಳಿಯ ಗಣಪತಿ, ಶ್ರೀಕೃಷ್ಣ, ಶಿವ, ನಾರದ ಮೊದಲಾದುವು ದೇವತಾಮುಖದ ವೇಷಗಳು. ಪೂತಂಗಳಿಯು ಪೂತಂ, ಪಥೇನಿಯ ಯಕ್ಷಿ ಮೊದಲಾದುವು ಭೂತಮುಖ ವೇಷಗಳಾಗಿವೆ. ಕುಮ್ಮಾಟಿಯ ವೃದ್ಧೆಯ ವೇಷ ಮನುಷ್ಯ ಮುಖಕ್ಕೆ ಉದಾಹರಣೆ. ಕಥಕಳಿಯ ವಾನರಮುಖ, ಅಜಮುಖ ಇತ್ಯಾದಿ ಜಂತುಮುಖಗಳಿಗೆ ಉದಾಹರಣೆ.

ಕೇರಳದ ಜನಪದ ಕಲೆಗಳಲ್ಲಿ ಮುಖವಾಡಕ್ಕೆ ತುಂಬ ಮಹತ್ವವಿದೆ. ಮನರಂಜನಾ ಕಲೆಗಳು ಹಾಗೂ ಆರಾಧನ ಕಲೆಗಳಲ್ಲಿ ರುದ್ರರಮಣೀಯ ಪರಿಸರವನ್ನು ಸೃಷ್ಟಿಸಲು ಮುಖವಾಡಗಳನ್ನು ಬಳಸುವರು. ವಯನಾಡಿನ ಮಲಯರ ಆಚರಣೆಯಾದ ‘ತೀಯಾಟ’ದಲ್ಲಿ ಕಪ್ಪು ಹಾಗೂ ಕೆಂಪು ಬಣ್ಣದ ಮುಖವಾಡಗಳನ್ನು ಧರಿಸಿ, ಕುಣಿಯುತ್ತಾರೆ. ಗಿರಿಜನರ ಬೇಟೆ ನೃತ್ಯದಲ್ಲಿ ಹುಲಿ, ಕರಡಿ, ಸಿಂಹ, ಕುದುರೆ, ಎತ್ತುಗಳ ಮುಖವಾಡವನ್ನು ಧರಿಸುತ್ತಾರೆ. ಪಾಲಕಾಡು ಜಿಲ್ಲೆಯ ಇರುಳರು ನಡೆಸುವ ಕರಡಿಯಾಟದಲ್ಲಿಯೂ ಮುಖವಾಡಗಳ ಬಳಕೆಯಿದೆ. ಗ್ರಾಮೀಣ ಬದುಕಿನ ಅವಿಭಾಜ್ಯ ಘಟಕಗಳಾದ ಜನಪದ ಕಲೆಗಳಲ್ಲಿ ಮುಖವಾಡಗಳ ಬಳಕೆ ಸರ್ವಸಾಧಾರಣವಾದುದು.

54

ಉತ್ತರ ಮಲಬಾರಿನ ಧಾರ್ಮಿಕ ರಂಗಕಲೆಯಾದ ತೆಯ್ಯಾರಾಧನೆಯಲ್ಲಿ ಗುಳಿಗ, ಪೊಟ್ಟ, ಪನಿಯ, ಉಚ್ಚಾರ ಮೊದಲಾದ ತೆಯ್ಯಗಳಿಗೆ ಮುಖವಾಡ ಧರಿಸುವರು. ಪುಳ್ಳೂರು ಕಾಳಿ, ಕಂಡಂಗರಿಂಗಾಳಿ, ಗುಳಿಗೆ ಮೊದಲಾದ ‘ತಿರ’ಗಳಿಗೂ ಮುಖವಾಡಗಳಿವೆ. ಉತ್ತರ ಮಲಬಾರಿನ ಕಲಾಪ್ರಕಾರವಾದ ‘ಕೋದಮುರಿಯಾಟಂ’ದಲ್ಲಿ ಹಾಳೆಯಿಂದ ನಿರ್ಮಿಸಿದ ಎತ್ತಿನ ಮುಖವನ್ನು ಧರಿಸಿ ಕುಣಿಯುತ್ತಾರೆ. ವಳ್ಳುವನಾಡಿನ ಪೂತಂಗಳಿಯಲ್ಲಿ ಹಾಳೆಯಿಂದ ನಿರ್ಮಿಸಿದ ದೊಡ್ಡ ಹಾಗೂ ಸಣ್ಣ ಮುಖವಾಡಗಳನ್ನು ಬಳಸುತ್ತಾರೆ. ಪಾಲಕಾಡು ಜಿಲ್ಲೆಯ ಕುಮ್ಮಾಟಿಯಲ್ಲಿ ಅನೇಕ ಮುಖವಾಡಗಳನ್ನು ಬಳಸುತ್ತಾರೆ. ಗಣಪತಿ, ಕಿರಾತ, ಶ್ರೀಕೃಷ್ಣ, ಶಿವ, ನಾರದ, ಹನುಮಂತ, ದಾರಿಕ, ವೃದ್ಧೆ, ಹುಲಿ, ಎತ್ತು ಮೊದಲಾದ ಪಾತ್ರಗಳು ಮುಖವಾಡಗಳನ್ನು ಧರಿಸುತ್ತವೆ. ಈ ಜಿಲ್ಲೆಯ ಇನ್ನೊಂದು ಕಲೆಯಾದ ‘ಜೋಯಿಕಳಿ’ ಯಲ್ಲಿ ಕಾಲ, ಚಿತ್ರಗುಪ್ತ ಮೊದಲಾದ ಪಾತ್ರಗಳಿಗೆ ಕಪ್ಪು ಬಣ್ಣದ ಮುಖವಾಡಗಳಿವೆ. ಮಧ್ಯ ಕೇರಳದ ಧಾರ್ಮಿಕ ಕಲೆ ‘ಮುಡಿಯೇಟಿ’ನಲ್ಲಿ ಶಿವನ ಪ್ರದೇಶ ಸಂದರ್ಭದಲ್ಲಿ ತೆರೆಯ ಮೇಲೆ ಎತ್ತಿನ ಮುಖವಾಡವನ್ನು ತೋರಿಸುತ್ತಾರೆ. ದಕ್ಷಿಣ ಕೇರಳದ ‘ಗರುಡನ್ ತೂಕ’ ಕಲೆಯಲ್ಲಿ ಗುರುಡ ವೇಷಕ್ಕೆ ಕೊಕ್ಕು ಹಾಗೂ ರೆಕ್ಕೆಗಳನ್ನು ಕಟ್ಟುತ್ತಾರೆ. ಈ ಪ್ರದೇಶದ ‘ಕರಡಿಯಾಟ’ ದಲ್ಲಿ ಕರಡಿ ಹಾಗೂ ಬೇಟೆಗಾರ ಬೇರೆ ಬೇರೆ ಮುಖಗಳನ್ನು ಧರಿಸುವರು. ಸಂಘಕಳಿಯಲ್ಲಿ ‘ಇಟ್ಟಿಕಂಡಪ್ಪನ್’ ಎಂಬ ಪಾತ್ರ ಮುಸುಕು ಧರಿಸಿರುತ್ತದೆ. ಪಡೇನಿ ಎಂಬ ಕಲೆಯಲ್ಲಿದ ಕುದುರೆ, ಪಕ್ಷಿ, ಯಕ್ಷಿ ಮೊದಲಾದ ಕೋಲಗಳು ಮುಖವಾಡಗಳನ್ನು ಧರಿಸುತ್ತವೆ.

ಕೇರಳದ ಶಿಷ್ಟಕಲೆಗಳಲ್ಲೂ ಮುಖವಾಡಗಳ ಬಳಕೆ ಇದೆ. ಕೃಷ್ಣನಾಟದಲ್ಲಿ ಮುಖವಾಡಗಳನ್ನು ಬಳಸುತ್ತಾರೆ. ಕೂಡಿಯಾಟದಲ್ಲಿ ಬಳಸುವುದಿಲ್ಲ. ಕೃಷ್ಣನಾಟದ ಬ್ರಹ್ಮ, ಜಾಂಬವ, ಯಮ, ನರಕಾಸುರ, ವಿವದ, ಮುರಾಸುರ, ಪೂತನಿ ಮೊದಲಾದ ಪಾತ್ರಗಳೆಲ್ಲ ಮುಖವಾಡಗಳನ್ನು ಧರಿಸುತ್ತವೆ. ರಾಮನಾಟಕದಲ್ಲಿಯೂ ಆರಂಭ ಕಾಲದಲ್ಲಿ ಹಾಳೆಯ ಮುಖವಾಡಗಳ ಬಳಕೆ ಇದ್ದುವಂತೆ. ಕಥಕಳಿಯಲ್ಲಿ ದಕ್ಷ, ಅಂಗದ, ಹಂಸ, ಗರುಡ ಮೊದಲಾದ ಅಪ್ರಧಾನ ವೇಷಗಳಿಗೆ ಮುಖವಾಡಗಳ ಬಳಕೆ ರೂಢಿಯಲ್ಲಿದೆ. ಒಟ್ಟಿನಲ್ಲಿ ಕೇರಳದ ಶಿಷ್ಟಕಲೆಗಳಲ್ಲಿ ಮುಖವಾಡಗಳ ಬಳಕೆ ವಿರಳವೆಂದೇ ಹೇಳಬಹುದು.

ಜನಪದ ಕಲೆಗಳಲ್ಲಿ ಸರಳವಾದ ಮುಖವಾಡಗಳನ್ನು ಕಾಣಬಹುದು. ಹಾಳೆ, ಮೃದು ಮರಗಳು ಮೊದಲಾದ ವಸ್ತುಗಳಿಂದ ಮುಖವಾಡಗಳನ್ನು ರಚಿಸಿ, ಬಣ್ಣ ಬಳಿಯುತ್ತಿದ್ದರು. ಪಡೇನಿ, ಕುಮ್ಮಾಟಿ ಕಲೆಗಳಲ್ಲಿ ಹಾಳೆಯ ಮುಖವಾಡಗಳನ್ನು ಬಳಸುತ್ತಾರೆ. ತೆಯ್ಯಾರಾಧನೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಮುಖವಾಡಗಳ ಬಳಕೆಯಿದೆ. ಆದರೆ ಶಿಷ್ಟ ಕಲೆಗಳಲ್ಲಿ ಸಾಮಾನ್ಯವಾಗಿ ಮರದ ಮುಖವಾಡಗಳನ್ನು ಬಳಸುವರು. ಬೇರೆ ಬೇರೆ ಬಣ್ಣಗಳನ್ನು ಮುಖವಾಡಗಳಿಗೆ ಬಳಸುವರು.

ಭರತಮುನಿ ನಾಟ್ಯಶಾಸ್ತ್ರದಲ್ಲಿ ಹೇಳಿರುವ ನವರಸಗಳನ್ನು ಮುಖವಾಡ ಧರಿಸಿ ಪ್ರಕಟಿಸಲು ಸಾಧ್ಯ. ಹಾಸ್ಯ, ಭಯಾನಕ, ಭೀಭತ್ಸ, ಅದ್ಭುತ ರಸಗಳನ್ನು ಮುಖವಾಡಗಳ ಮೂಲಕ ಬಿಂಬಿಸಬಹುದು. ಹಾಸ್ಯರಸಕ್ಕೆ ಮುಖವಾಡವೇ ಬೇಕೆಂದು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದಾನೆ.

ವಿವಿಧ ರಸಗಳನ್ನು ಪ್ರಕಟಿಸುವ ಮುಖವಾಡ ಧರಿಸುವ ವೇಷಗಳು ಕೇರಳದಲ್ಲಿವೆ. ತೆಯ್ಯಾರಾಧನೆಯ ಪನಿಯ, ಕುಮ್ಮಾಟಿಯ ವೃದ್ಧೆ, ಪಥೇನಿಯಂ ಮರದು ಹಾಸ್ಯ ಪಾತ್ರಗಳಾಗಿವೆ. ಪೂತಂಗಳಿಯ ಪೂತಂ, ಕುಮ್ಮಾಟಿಯ ಕಾಟಾಳ, ಪಥೇನಿಯಂ ಅಂತರಯಕ್ಷಿ, ಕೃಷ್ಣನಾಟದ ಪೂತನಿ ಭಯಾನಕ ವೇಷಗಳು.

ಬಣ್ಣ ಹಾಗೂ ಚಿತ್ರಗಳಿಂದ ಮುಖವಾಡಗಳನ್ನು ಉತ್ತಮವಾಗಿ ಬಳಬಹುದು. ಕಪ್ಪು, ಕೆಂಪು, ಬಿಳಿ, ಹಸಿರು ಬಣ್ಣಗಳು ಆಯಾ ಪಾತ್ರಗಳ ಸ್ವಭಾವಗಳಿಗೆ ಕನ್ನಡಿ ಹಿಡಿಯುತ್ತವೆ. ಕಣ್ಣಿನ ಆಕೃತಿ, ಮೂಗಿನ ಆಕೃತಿ, ಹುಬ್ಬಿನ ಆಕೃತಿಗಳೆಲ್ಲ ಆಯಾ ಪಾತ್ರಗಳ ಗುಣಸ್ವಭಾವವನ್ನು ಚಿತ್ರಿಸುತ್ತವೆ. ಬಾಯಿ, ತುಟಿ ಹಾಗೂ ಹಲ್ಲುಗಳ ರಚನೆ ಪಾತ್ರಗಳಿಗೆ ಜೀವಂತಿಕೆಯನ್ನು ತಂದುಕೊಡುವುದು. ಹೊರಚಾಚಿದ ಹಲ್ಲುಗಳು, ನಾಲಗೆ ಇತ್ಯಾದಿ ಬರವಣಿಗೆಗಳು ಮುಖವಾಡವನ್ನು ಮಾತ್ರವಲ್ಲ ಕಥಾಪಾತ್ರವನ್ನೇ ರುದ್ರರಮಣೀಯವಾಗಿಸುತ್ತವೆ.

– ಎಸ್.ಕೆ. ಅನುವಾದ ಎನ್.ಎಸ್.

ಕೇರಳದ ಮುಸ್ಲಿಂ ವಸ್ತ್ರಧಾರಣೆ ಅನೇಕ ನೆಲೆಗಳಲ್ಲಿ ಕೇರಳೀಯ ಸಂಸ್ಕೃತಿಯೊಂದಿಗೆ ಕೈಜೋಡಿಸಿ ಸಾಗುತ್ತಿದ್ದಾಗಲೂ ವಸ್ತ್ರಧಾರಣೆಯ ವಿಚಾರದಲ್ಲಿ ಕೆಲವು ವೈಶಿಷ್ಟ್ಯಗಳನ್ನು ಮುಸ್ಲಿಂ ಸಮುದಾಯವು ಅನುಸರಿಸುತ್ತಿತ್ತು. ಸಾವಿರದ ಒಂಬೈನೂರ ಇಪ್ಪತ್ತರ ತನಕ ರವಿಕೆ ಧರಿಸುವ ಸ್ವಾತಂತ್ರ್ಯವು ಇಲ್ಲಿ ಮುಸ್ಲಿಂ ಮಹಿಳೆಯರಿಗೆ ಮಾತ್ರ ಇತ್ತು. ಮುಂಡು, ಉದ್ದನ ರವಿಕೆ ಮತ್ತು ತಲೆಗೆ ‘ತಟ್ಟ’ – ಇದು ಮುಸ್ಲಿಂ ಮಹಿಳೆಯ ಬಟ್ಟೆಯಾಗಿತ್ತು. ವೃದ್ಧೆಯರೂ ಬಾಲಕಿಯರೂ ಇದೇ ವಸ್ತ್ರಗಳನ್ನು ಧರಿಸುತ್ತಿದ್ದರು.

ವೆಳ್ಳಕಾಚ್ಚಿ (ಬಿಳಿ ಮುಂಡು) ಉದ್ದ ತೋಳಿನ ಉದ್ದನ ರವಿಕೆ ಮತ್ತು ತಟ್ಟಂಗಳು ಪರಿಷ್ಕೃತ ಸ್ತ್ರೀಯ ಉಡುಪು ಆಗಿತ್ತು. ಅಗಲಪಟ್ಟಿಯ ಬೆಳ್ಳಿಯ ಸೊಂಟಪಟ್ಟಿಯೂ ಇದಕ್ಕೆ ಸೇರಿದ್ದು. ಸೊಂಟದಲ್ಲಿ ಉಟ್ಟ ಕಾಚ್ಚಿಯನ್ನು ಬಿಗಿಯಾಗಿರಿಸುವುದೂ ಇದರ ಉದ್ಧೇಶವಾಗಿತ್ತು. ರವಿಕೆ, ಬಟ್ಟೆ – ಎಲ್ಲದರಲ್ಲೂ ಪ್ರಾದೇಶಿಕ ಭೇದಗಳಿವೆ. ಆದರು ಕೊರಳ ಮಧ್ಯೆ ನೀಳಕ್ಕೆ ಎರಡೋ ಮೂರೋ ಗುಂಡಿಗಳು, ಇದಕ್ಕೆ ಎರಡು ಭಾಗಗಳಲ್ಲಿ ನಿರ್ದಿಷ್ಟ ಅಂತರದಲ್ಲಿ ಅಡ್ಡಕ್ಕೂ ನೀಟಕ್ಕೂ ಎರಡು ಪ್ರತ್ಯೇಕ ಹೊಲಿಗೆಯಾಗಲಿ ಪೈಪಿಂಗ್ ಆಗಲಿ ಇದ್ದ ಕುಪ್ಪಾಯಂ (ಮುಸ್ಲಿಂ ರವಿಕೆ) ಹಳೆಯ ಕಾಲದಲ್ಲಿತ್ತು. ಗುಂಡಿಗಳು ಮಾತ್ರವಿದ್ದು ಇತರ ಕಟ್ಟಿಂಗ್ ಇಲ್ಲದ ಬಿಡುರವಿಕೆ (ಅಯಂಞ ಕುಪ್ಪಾಯ.ಮ.) ಕೋಯಿಕ್ಕೋಡು ಭಾಗದವರಿಗಿತ್ತು. ಅದಕ್ಕೆ ‘ಕುಂಞೆ ಪ್ರಾಕ್ಕ್’ ಎಂಬ ವಿಶೇಷ ಹೆಸರೂ ಇದೆ. ಬಿಳಿ ಬಟ್ಟೆಯ ಮೇಲೂ ಕೆಳಗೂ ಅಲೆಗಳಂತೆ ಸಾಗುವ ಕಡುಬಣ್ಣ ಮುಳುಗಿಸಿರುವಂಥದ್ದೇ ವೆಳ್ಳಕಾಚ್ಚಿ. ತಟ್ಟಂಗೆ ಸಾಮಾನ್ಯವಾಗಿ ಎರಡು ಬದಿಗಳಲ್ಲೂ ನೇರವಾದ ಜರಿ ಹಚ್ಚಿರುತ್ತದೆ. ತಟ್ಟಂ ಧರಿಸುವುದರಲ್ಲೂ ಭಿನ್ನ ಶೈಲಿಗಳಿವೆ. ಕೆಲವರು ಅದನ್ನು ಬಿಡಿಸಿ ಕಿವಿಯ ಎಡೆಗೆ ಸಿಕ್ಕಿಸಿ ಅದನ್ನು ತಲೆಗೆ ಬಿಗಿಗೊಳಿಸಿಕೊಂಡರೆ ಇನ್ನು ಕೆಲವರು ತಲೆಯಲ್ಲಿ ತಟ್ಟಂನ ಒಂದು ಬದಿಯ ಎರಡು ತುದಿಗಳನ್ನೂ ಸೇರಿಸಿ ಬಿಗಿದ ಬಳಿಕ ಹಿಂದಕ್ಕೆ ಕಚ್ಚೆಯಂತೆ ಇಳಿಬಿಡುವನು. ತಟ್ಟವನ್ನೂ ಕೂದಲನ್ನೂ ಸೇರಿಸಿ ಉರುಟಾಗಿ ಸುತ್ತಿಕೊಳ್ಳುವ ರೀತಿಯೂ ಇದೆ.

ವೆಳ್ಳಕಾಚ್ಚಿ ಅಲ್ಲದೆ ಕಪ್ಪುಬಣ್ಣದ ಸೂಂಬಟ್ಟೆಯೂ ಒತ್ತೊತ್ತೆದ ಚುಕ್ಕೆಗಳ ಚುಕ್ಕೆ ಬಟ್ಟೆಗಳನ್ನು ಸ್ತ್ರೀಯರು ಧರಿಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಕಾಚ್ಚಿಗೆ ಹೆಚ್ಚಿನ ಪ್ರಾಧಾನ್ಯವಿದ್ದೇ ಇದೆ.

ಕೌಟುಂಬಿಕ ಅಥವಾ ಸಾಮಾಜಿಕವಾದ ಎಲ್ಲ ಉತ್ಸವಗಳಲ್ಲೂ ಹಿಂದೆ ಮುಸ್ಲಿಂ ಸ್ತ್ರೀಯರು ಈ ಬಟ್ಟೆಗಳನ್ನು ಉಟ್ಟುಕೊಂಡು ಕಾಣಿಸಿ ಕೊಳ್ಳುತ್ತಿದ್ದರು. ಮೇಲುವರ್ಗಕ್ಕೆ ಸೇರಿದ್ದವರೂ ‘ಬೀವಿ’ಯರು ಎಂದು ಕರೆಸಿಕೊಳ್ಳುತ್ತಿದ್ದ ತಂಙಳ್ (ಮುಸ್ಲಿಂ ಪುರೋಹಿತ) ವರ್ಗಕ್ಕೆ ಸೇರಿದ ಸ್ತ್ರೀಯರೂ ಬುರ್‌ಖಾ ಎಂದು ಹೆಸರಾದ ಒಟ್ಟು ಮುಚ್ಚುವ ಒಂದು ತೆರನ ವಸ್ತ್ರವೈವಿಧ್ಯವನ್ನು ಅಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದರು.

ಇಂದು ಹಳೆಯ ತಲೆಮಾರಿಗೆ ಸೇರಿದ ಕೆಲವೇ ಮಂದಿ ಸ್ತ್ರೀಯರು ಮಾತ್ರ ಕಾಚ್ಚಿಯನ್ನೂ ಕುಪ್ಪಾಯವನ್ನೂ ಧರಿಸುತ್ತಾರೆ. ಬಾಕಿ ಇರುವವರು ಸಾಧಾರಣ ವಸ್ತ್ರಗಳನ್ನು ಧರಿಸುವ ಸಂಪ್ರದಾಯಕ್ಕೆ ಸೇರಿಹೋಗಿದ್ದರೂ ಮಲಬಾರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ವಿರಳವನ್ನಿಸಬಹುದಾದರೂ ಇಂದೂ ಈ ಉಡುಪು ಕಾಣಸಿಗುತ್ತದೆ.

ಕಳ್ಳಿಮುಂಡು (ಚಿಕ್ಕ ಚೌಕಾಕಾರಗಳ ವಿನ್ಯಾಸದ ಪಂಚೆ) ಮತ್ತು ಅಗಲವಾದ ಹಸಿರು ಬೆಲ್ಟು ಅರ್ಧತೋಳಿನ ಬನಿಯನ್ ಮತ್ತು ತಲೇಕೆಟ್ಟ್ (ಮುಂಡಾಸು) – ಇದು ಪರಿಷ್ಕೃತ ಮುಸ್ಲಿಂ ಪುರುಷರ ಉಡುಪು. ಬಿಳಿ ಪಂಚೆ ಮತ್ತು ಷರ್ಟನ್ನು ಉಪಯೋಗಿಸುತ್ತಿದ್ದಾಗಲೂ ಅಗಲ ಬೆಲ್ಟು ಮತ್ತು ತಲೇಕೆಟ್ಟ್ ಅವರ ವಸ್ತ್ರಧಾರಣೆಯ ವೈಶಿಷ್ಟ್ಯಗಳಾಗಿದ್ದುವು. ಅಗಲ ಬೆಲ್ಟಲ್ಲಿ ಹಣವನ್ನೂ ಚಾಕುವನ್ನು ಕೂಡ ಇರಿಸಿಕೊಳ್ಳಲು ಜಾಗವಿರುತ್ತದೆ. ಕೆಲವು ಹಳ್ಳಿಪ್ರದೇಶಗಳಲ್ಲಿ ಈ ವೇಷವನ್ನು ಧರಿಸುವವರನ್ನು ಈಗಲೂ ಕಾಣಬಹುದು. ಆದರೂ ಸಾಮಾನ್ಯವಾಗಿ ತಲೆಯಲ್ಲಿ ಟೊಪ್ಪಿ ಇಂದು ವ್ಯಾಪಕವಾಗಿ ಕಾಣಿಸಿಕೊಂಡಿದೆ.

ಈ ವಸ್ತ್ರಧಾರಣ ರೀತಿಯನ್ನು ಒಟ್ಟಿನಲ್ಲಿ ಬೆಲೆಕಟ್ಟುವಾಗ, ಹಿಂದೆ ಕೇವಲ ವಸ್ತ್ರಧಾರಣೆಯಿಂದಲೇ ಕೇರಳದಲ್ಲಿ ಮುಸ್ಲಿಮರ ವಿಶಿಷ್ಟ ಅಸ್ತಿತ್ವವನ್ನು ಗುರುತಿಸಲು ಸಾಧ್ಯವಾಗುವ ರೀತಿಯಲ್ಲಿ ಅದರ ವಿನ್ಯಾಸವಿತ್ತು ಎಂಬುದನ್ನು ತಿಳಿಯಬಹುದು. ಇಂದು ಇವರು ಕೂಡ ಕೇರಳದಾದ್ಯಂತ ಇತರ ಜನರೂ ಅಂಗೀಕರಿಸಿದ ಆಧುನಿಕತೆಯ ವಸ್ತ್ರಧಾರಣ ಸಂಪ್ರದಾಯವನ್ನು ಸ್ವೀಕರಸಿರುವುದು ಕಂಡುಬರುತ್ತದೆ. ಪರ್ದಾ, ಮಫ್ತ (ಮಫ್ತ = ಮುಖಮಾತ್ರ ಬಿಟ್ಟು ತಲೆ, ಕೊರಳು ಮುಂತಾದುವನ್ನು ಮುಚ್ಚುವ ಒಂದು ಉದ್ದ ಟೋಪಿ), ಬಳಿಟೊಪ್ಪಿ, ಬಿಳಿಪಂಚೆ – ಇವೆಲ್ಲ ಮತಸಂಬಂಧಿಯಾದ ಬದುಕಿಗೆ ಹೆಚ್ಚಿನ ಸ್ಥಾನವನ್ನು ನೀಡುವ ಒಂದು ಸಣ್ಣವಿಭಾಗದ ಜನರ ವಸ್ತ್ರಧಾರಣ ಪರಿಕರಗಳಾಗಿ ಬಿಟ್ಟಿವೆ.

ಮಾಪ್ಪಿಳೆ ಕಥಾಪಾತ್ರವನ್ನು ಪ್ರದರ್ಶಿಸುವ ‘ಚಿಮ್ಮಾನಕ್ಕಳಿ’ಯಂಥ ಧಾರ್ಮಿಕ ಕಲಾರೂಪಗಳಲ್ಲಿ ಪರಿಶ್ಕೃತ ವೇಷ ಎಂಬ ನೆಲೆಯಲ್ಲಿ ಹಳೆಯ ರೀತಿಯ ಬಟ್ಟೆಬರೆಗಳು ಉಳಿದುಕೊಂಡಿವೆ. ಸಿನೆಮಾ – ನಾಟಕಗಳಂಥ ದೃಶ್ಯಮಾಧ್ಯಮಗಳಲ್ಲೂ ಪರಿಷ್ಕೃತವಾದ (Stylized) ಈ ಮುಸ್ಲಿಂ ವೇಷವು ಹೆಚ್ಚು ಚರ್ಚೆಗಳಿಗೆ ಒಳಗಾಗಿದೆ.

ಮತೀಯ ಸಂಘಟನೆಗಳ ಅಧಿಪತ್ಯ ಮತ್ತು ಪ್ರಭಾವವು ಸ್ತ್ರೀಯರಲ್ಲಿ ಪರ್ದಾ ವ್ಯಾಪಕವಾಗಿ ಬಳಕೆಯಾಗುವುದಕ್ಕೆ ಕಾರಣವಾಗಿದೆಯಾದರೂ ಪರ್ದಾಗಳಲ್ಲೆ ಇರುವ ವೈವಿಧ್ಯವು ಅನೇಕ ಫ್ಯಾಶನ್ ಬಟ್ಟೆಗಳಲ್ಲಿ ಅದೂ ಒಂದು ಎಂದು ಒಪ್ಪಿಕೊಳ್ಳುವಂತೆ ಹೊಸ ತಲೆಮಾರನ್ನು ಪ್ರೇರೇಪಿಸಿರುವುದನ್ನು ಕಾಣಬಹುದಾಗಿದೆ.

– ಇ.ಕೆ.ಎಸ್. ಅನುವಾದ ಕೆ.ಕೆ.

ಕೇರಳದಲ್ಲಿ ಕಣ್ಣಕಿ ದ್ರಾವಿಡ ಭಾಷೆಗಳಲ್ಲಿ ತಮಿಳಿನ ಪ್ರಥಮ ಕಾವ್ಯ ‘ಸಿಲಪ್ಪದಿಕಾರ’ವು ಚೇರರಾಜಕುಮಾರ ಇಳಂಗೋ ಅಡಿಗಳ್‌ನಿಂದ ರಚಿತವಾಗಿದ್ದು, ಕಣ್ಣಕಿ ಸಂಪ್ರದಾಯದ ಮೊದಲ ಲಿಖಿತ ದಾಖಲೆಯಾಗಿದೆ. ಇಳಂಗೋ ಅಡಿಗಳ್ ಕಣ್ಣಕಿ ಕಥೆಯನ್ನು ತಮಿಳು ಕವಿ ಚೇತನಾರ್‌ನಿಂದ ತಿಳಿದುಕೊಂಡ. ದಕ್ಷಿಣ ಭಾರತದಲ್ಲಿನ ಕಣ್ಣಕಿ ಕಥೆಗಳ ಅಧ್ಯಯನದಿಂದ ತಿಳಿದುಬರುವ ವಿಚಾರವೇನೆಂದರೆ ಸಿಲಪ್ಪದಿಕಾರಂಗಿಂತ ಮೊದಲೇ ಆ ಕಥೆಯು ತೋಂಡಿ ಸಂಪ್ರದಾಯದಲ್ಲಿ ಪ್ರಚಲಿತವಾಗಿತ್ತು. ಮಧ್ಯಕಾಲೀನ ಯುಗದ ಅನೇಕ ಮೌಖಿಕ ಕಥೆಗಳು ಸಿಲಪ್ಪದಿಕಾರಂನಿಂದ ಹುಟ್ಟಿಕೊಂಡವುಗಳಾಗಿವೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಪ್ರಚಲಿತವಾಗಿರುವ ಕಣ್ಣಕಿ ಕಥೆಗಳನ್ನು ಮೂರು ತೆರನಾಗಿ ವಿಂಗಡಿಸಿಕೊಳ್ಳಬಹುದು.

೧. ಕಣ್ಣಕಿ ಮತ್ತು ಕೋವಲನ್‌ರ ಕಥೆ. ೨.ಕಾಳಿ ಆರಾಧನೆಯ ಅಂಗವಾಗಿ ಕಣ್ಣಕಿ, ೩. ಕೇರಳದಲ್ಲಿ ಕಣ್ಣಕಿ ಕಥೆಗೆ ಗುಡ್ಡಗಾಡು ಜನರ ಆವೃತ್ತಿ.

ಮೊದಲ ವಿಭಾಗದಲ್ಲಿ ಕಣ್ಣಕಿಯನ್ನು ಒಬ್ಬ ಪತ್ನಿಯಾಗಿ ಚಿತ್ರಿಸುವ ಕೆಲಸ; ಶಾಂತಚಿತ್ತಲೂ ಬುದ್ದಿವಂತೆಯೂ ಮನೆವಾರ್ತೆಯವಳೂ ಆದ, ಕಾವೇರಿ ಪಟ್ಟಣದ ಕೋವಲನ ಪತ್ನಿ ಕಣ್ಣಕಿ, ಮದುವೆಯ ಬಳಿಕ ತುಂಬ ನೋವು ಅನುಭವಿಸಿದಳು. ಪಾಂಡ್ಯರಾಜಧಾನಿ ಮಧುರೈಗೆ ತನ್ನ ಗಂಡನ ಜತೆ ಹೋದಳು. ಒಬ್ಬ ಅಕ್ಕಸಾಲೆಯ ಕುತಂತ್ರಕ್ಕೊಳಗಾಗಿ ಕೋವಲನು ಮರಣದಂಡನೆಗೆ ಗುರಿಯಾಗುತ್ತಾನೆ. ಕಣ್ಣಕ್ಕಿ ಪಾಂಡ್ಯ ಅರಸನ ಆಸ್ಥಾನಕ್ಕೆ ಹೋಗಿ ತನ್ನ ಗಂಡನ ನಿರಪರಾಧಿತ್ವವನ್ನು ಸಾಬೀತುಪಡಿಸಿ ಮದುರೈ ಹೊತ್ತಿ ಉರಿಯುವಂತೆ ಮಾಡುತ್ತಾಳೆ. ಬಳಿಕ ವೈಗೈ ನದೀ ತೀರದಲ್ಲೆ ಪಯಣಿಸುತ್ತ ಅವಳು ಚೆನ್‌ಕುಮ್ರವಿಗೆ, ಹದಿನಾಲ್ಕು ದಿನಗಳ ನಿರಂತರ ಪಯಣದ ಬಳಿಕ ತಲುಪಿ ಸಾವನ್ನಪ್ಪುತ್ತಾಳೆ. ಕಣ್ಣಕಿಯೇ ಬೇಟ್ಟುವರ ಕೊಟ್ರವೈ ದೇವತೆ. ಅವರು ಈ ಸುದ್ಧಿಯನ್ನು ಚೇರ ಅರಸ ಸೆಂಗುಟ್ಟವನಿಗೆ ತಲುಪಿಸುತ್ತಾರೆ. ಸೆಂಗುಟ್ಟವನು ಹಿಮಾಲಯದಿಂದ ಪವಿತ್ರ ಶಿಲೆಯನ್ನು ತರಿಸಿ ಕಣ್ಣಕಿಯ ಮೂರ್ತಿಯನ್ನು ಮಾಡಿಸಿ ವಂಚಿಯಲ್ಲಿ ಸ್ಥಾಪಿಸುತ್ತಾನೆ. ಮಹಿಳಾ ಪುರೋಹಿತೆ ದೇವಂತಿ ಮತ್ತು ದಕ್ಷಿಣದ ಜನ ಕಣ್ಣಕಿಯನ್ನು ‘ಪತ್ನಿ ದೈವ’ ಎಂದು ಆರಾಧಿಸಿದರು. ಬಳಿಕ ಈ ಕಥೆಯು ಚೇರ ರಾಜ್ಯದ ಕಾಳಿ ಆರಾಧನೆಯೊಂದಿಗೆ ತಳುಕು ಹಾಕಿಕೊಂಡಿತು. ಕಣ್ಣಕಿಯ ಕುರಿತಾದ ಪೌರಾಣಿಕ ಐತಿಹ್ಯಕ್ಕೆ ಹಲವಾರು ಆವೃತ್ತಿಗಳಿವೆ. ತಮಿಳುನಾಡಿನಲ್ಲಿ ವಟ್ಟಪ್ಪುರಿಯಮ್ಮನ್ ಪಂಥ ಮತ್ತು ಮರಿಯಮ್ಮನ್ ಪಂಥ ಮುಂತಾದವುಗಳು ಕಣ್ಣಕಿ (ಪತಿನಿ ದೈವದ) ವಿಭಿನ್ನ ಮಾದರಿಗಳೆಂದು ತಿಳಿಯಲಾಗಿದೆ.

ವಿದ್ವಾಂಸರು ಅಭಿಪ್ರಾಯಪಡುವಂತೆ ಶ್ರೀ ಕುರುಂಬ ಭಗವತಿ (ಕೊಡುಂಗಲ್ಲೂರು)ಯೇ ಉತ್ತರ ಕೇರಳದ ಚೀರ್ಮ (ಶ್ರೀ ಕುರುಂಬ> ಶ್ರೀ ಕೂರ್‌ಂಬ>ಚೀರುಂಬ>ಚೀರ್ಮ). ಉತ್ತರ ಕೇರಳದಲ್ಲಿ ಚೀರ್ಮ – ಒಂದು ಮಾತೃದೇವತೆಯಾಗಿದ್ದು ಅವಳಿಗೆ ಕರಾವಳಿಯ ಜನರ ಮೇಲೆ ಅತೀವ ಪ್ರಭಾವವಿದೆ. ಮುಕ್ಕುವ ಜನರಿಂದ (ಬೆಸ್ತ) ಈಕೆ ಜನಾಂಗದ ಆರಾಧ್ಯ ದೈವವಾಗಿಯೂ ಸ್ವೀಕೃತಳಾದಳು. ಇದೇ ದ್ರಾವಿಡ ಪಂಥದ ಸಾಲಿಗ ಮತ್ತು ಅಕ್ಕಸಾಲಿಗ ಸಮುದಾಯದವರಿಂದಲೂ ಸ್ವೀಕೃತಳಾದಳು. ಆರಂಭದಲ್ಲಿ ಚೀರ್ಮ ಪಂಥವು ದಕ್ಷಿಣ ಕೇರಳದ ಈಳವರಿಂದ ಸ್ವೀಕೃತವಾದ ಬಳಿಕ ಈಳವರು ಉತ್ತರ ಕೇರಳಕ್ಕೆ ವಲಸೆ ಹೋದಾಗ ಅಲ್ಲಿಯೂ ಆಕೆ ತೀಯರ ಪ್ರಧಾನ ದೇವತೆಯಾದಳು.

ತೀಯರಲ್ಲಿ ಕಾಳಿ – ಕಣ್ಣಕಿಯರಿಗೆ ಸಮಾನ ಸ್ಥಾನಮಾನವಿತ್ತು. ತೀಯ ಸಮುದಾಯದಲ್ಲಿ ಕಂಡು ಬರುವಂತೆ ‘ದಾಂಕವಧ’ವು ಅರಯರ (ಮುಕ್ಕುವ) ಆರಾಧನೆಯಲ್ಲೂ ಒಂದು ಮುಖ್ಯ ಘಟ್ಟವಲ್ಲ. ಚೇರ ಚೋಳ ಪಾಂಡ್ಯರ ವಿರುದ್ಧವಾಗಿ ಹೋರಾಡಿದ ಅರಣ್ಯವಾಸಿ ದೊರೆ ದಾರಿಕವನ್ನು ಪುರಾಣಗಳಲ್ಲಿ ಒಬ್ಬ ಅಸುರನಾಗಿ ಚಿತ್ರಿಸಿದೆ ಮತ್ತು ಅವನ ವಧೆಯು ಒಂದು ಮುಖ್ಯ ಕಥೆ.

ಪ್ರಸಿದ್ಧವಾದ ಕೊಡುಂಗಲ್ಲೂರು ದೇವಾಲಯದ ದೇವತೆಯ ಮುಖ್ಯ ಪೌರಾಣಿಕ ಐತಿಹ್ಯದಲ್ಲಿ ಕಾಳಿ – ಕಣ್ಣಕಿ ಮತ್ತು ಭದ್ರಕಾಳಿಯರ ಬೆರಕೆಯಿದೆ. ಮಾತೃದೇವತೆ ಕಾಳಿಯಿಂದಾಗಿ (ಕಣ್ಣಕಿ) ಮತ್ತು ಅವಳ ಗಂಡ ಬಾಲನ್ (ತೋಟ್ಟಂ ಪಾಟ್ಟುವಿನ ಮಣಿಮಂಗ) – ಈತ ಮಾನವನಾಗಿದ್ದ – ಮದುವೆಯ ದಿನದಂದೇ ಪ್ರತ್ಯೇಕಿಸಲ್ಪಟ್ಟರು. ಬಾಲನ್ (ಕೋವಿಲನ್) ವಧಾನಂತರ ಕಣ್ಣಕಿಯು ವೈರಿಗಳ ಕುರಿತು ರೋಷಾವಿಷ್ಟಳಾದಳು. ತೆಯ್ಯಂನ ಪ್ರದರ್ಶನದಲ್ಲಿ ಈ ಐತಿಹ್ಯದ ಅಭಿನಯವಿದೆ. ಕೊಡುಂಗಲ್ಲೂರ್ ಭಗವತಿಗೆ ಸಂಬಂಧಿಸಿ ಅಶ್ಲೀಲ ಹಾಡುಗಳು ಅನಿವಾರ್ಯ ಅಂಗವೆನಿಸಿವೆ. ಆ ದೇವಾಲಯಗಳಲ್ಲಿ ಕೂಡ ಯಾವುದೋ ನಿಗೂಢತೆಯು ಅಡಗಿದ್ದು ಅಲ್ಲಿ ಒಂದು ರಹಸ್ಯ ಕೋಣೆಯಿದೆ ಎಂದೂ ಅದು ಚೇರರಾಜ ಸೆಂಗುಟ್ಟವನಂ ಕಣ್ಣಕಿಗಾಗಿ ಕಟ್ಟಿಸಿದ ಏಕಶಿಲಾರಚನೆಯೆಂದೂ ಹೇಳಲಾಗುತ್ತಿದೆ. ಮಣಿಮಂಗ ತೋಟ್ಟಂಪಾಟ್ಟು, ಕಾಳಿತೆಯ್ಯಂ, ಜೀರ್ಮಪಾಟ್ಟುಗಳು – ಇವೆಲ್ಲ ಕಣ್ಣಕಿಯ ಕಥೆ ಪುರಾಣೀಕೃತವಾದುದಕ್ಕೆ ಅನುಗುಣವಾಗಿಯೇ ಇವೆ.

ಕೇರಳದ ಆದಿವಾಸಿ ಜನತೆಗೆ ಕಣ್ಣಕಿ ಕಥೆ ಅಪರಿಚಿತವಾದುದೇನು ಅಲ್ಲ. ಮನ್ನನ್ ಜನ ಕಣ್ಣಕಿಯ ಕಥೆಯನ್ನು ‘ಕೂತ್ತು’ವಿನ ರೂಪದಲ್ಲಿ ಪ್ರದರ್ಶಿಸುತ್ತಾರೆ. ಮುದುವನ್ ಮತ್ತು ಕಾಣಿಕ್ಕಾರ್ ಸಮುದಾಯದವರು ಕೂಡಾ ಪ್ರದರ್ಶಿಸುತ್ತಾರೆ. ಮುದುವನ್ ಮತ್ತು ಕಾಣಿಕ್ಕಾರ್ ಸಮುದಾಯದವರು ಕೂಡ ಈ ಕಥೆಯನ್ನು ಭಾವಗೀತೆಗಳ ರೂಪದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಹಿಂದೆ ಎಂದೋ ಪಾಂಡ್ಯ ಅರಸನೊಂದಿಗೆ ಭಿನ್ನಾಭಿಪ್ರಾಯದ ಕಾರಣವಾಗಿ ಅವರು ಪಾಂಡ್ಯ ದೇಶದಿಂದ ವಲಸೆ ಹೋದರೆಂದು ಅವರು ಹೇಳುತ್ತಾರೆ. ಬುಡಕಟ್ಟು ಜನರ ಕಣ್ಣಕಿ ಕಥೆಯ ಆವೃತ್ತಿಯಲ್ಲಿ – ಕೋವಲನ ಮೃತದೇಹವನ್ನು ಕಣ್ಣಕಿಯು ಪತ್ತೆ ಹಚ್ಚಿ ಅದೆ ಗಾಯಗಳನ್ನು ಹೊಲಿದು ಜೀವದಾನ ಮಾಡಿದಳು; ಬಳಿಕ ಅವನು ಅವಳಲ್ಲಿ – ನೀನು ಕಣ್ಣಕಿಯೋ ಮಾದವಿಯೋ; ಎಂದು ಪ್ರಶ್ನಿಸಿದ. ಆಗ ಕಣ್ಣಕಿ ಸಿಟ್ಟಿನಿಂದ ಅವನ ಗಾಯಗಳ ಹೊಲಿಗೆಯನ್ನು ಬಿಚ್ಚಿದಳು ಮತ್ತು ಅವನ ದೇಹವನ್ನು ಗಂಧದ ಚಿತೆಯಲ್ಲಿಟ್ಟಳು.

ಕೇರಳದಲ್ಲಿ ಕಣ್ಣಕಿ – ಕಾಳಿ ಆರಾಧನೆ ಅರಯರು (ಬೆಸ್ತರು), ಈಳವರು, ಸಾಲಿಗರು, ಅಕ್ಕಸಾಲಿಗರು ಮತ್ತು ತೀಯ ಸಮುದಾಯದವರ ಚರಿತ್ರೆಯೊಂದಿಗೆ ತಳುಕು ಹಾಕಿಕೊಂಡಿದೆ.

– ಪಿ.ಎನ್. ಅನುವಾದ ಕೆ.ಕೆ.