ಕೇರಳದಲ್ಲಿ ಕಾಳೀಸಂಕಲ್ಪಂ ಕೇರಳದ ಜನ ಮಾತೃದೇವತೆಯನ್ನು ದೇವಿ, ಕಾವಿಲಮ್ಮ, ಭದ್ರಕಾಳಿ ಮುಂತಾದ ವಿಭಿನ್ನ ಹೆಸರುಗಳಿಂದ ಆರಾಧಿಸುತ್ತಾರೆ. ಅನೇಕ ವಂಶಗಳವರು ಪ್ರಧಾನ ದೇವತೆಯಾಗಿ ದೇವಿಯನ್ನು ಆರಾಧಿಸುವರು. ಕನ್ಯಾಕುಮಾರಿಯಿಂದ ತೊಡಗಿ ಕೊಲ್ಲೂರ ಮೂಕಾಂಬಿಕೆಯವರೆಗೆ ಅನೇಕ ದೇವೀ ದೇವಾಲಯಗಳನ್ನು ಕಾಣಬಹುದು. ಕಾಳಿಯು ಏಕಕಾಲದಲ್ಲಿ ಸಂಹಾರವನ್ನೂ ಸಂರಕ್ಷಣೆಯನ್ನೂ ಪ್ರತಿನಿಧಿಸುತ್ತಾಳೆ. ಕೇರಳದ ಕೆಲವೆಡೆ ಕಣಕ್ಕಿಯೇ ಕಾಳಿ ಎಂಬುದಾಗಿ ಪೂಜಿಸಲ್ಪಡುತ್ತಾಳೆ. ಕೇರಳದ ಪ್ರಮುಖ ಕಾಳೀ ದೇವಾಲಯಗಳಲ್ಲೊಂದಾದ ಕೊಡುಂಗಲ್ಲೂರಲ್ಲಿ ಕಣ್ಣಕಿಯೇ ಶ್ರೀ ಕುರುಂಬಾ, ಭಗವತಿ ಮತ್ತು ಕಾಳಿ ಎಂದೂ ಸಂಕಲ್ಪಿಸುತ್ತಾರೆ. ಕಾಳಿಯ ಕುರಿತಾದ ಪುರಾಣಗಳು ಜನಪದ ಪುರಾಣಗಳೇ ಹೊರತು ಅವಕ್ಕೂ ಶಿಷ್ಟ ಪುರಾಣಗಳು ಅಥವಾ ಮಹಾಕಾವ್ಯಗಳಿಗೂ ಅಂಥ ಸಂಬಂಧವೇನೂ ಇಲ್ಲ. ಕಾಳೀ ಸಂಬಂಧವಾದ ಆಚರಣೆಗಳೆಲ್ಲ ಸ್ಥಳೀಯ ದೇವಾಲಯಗಳಲ್ಲಿ (ಕಾಳಿಕಾವುಗಳಲ್ಲಿ) ಹೆಚ್ಚಾಗಿ ನಡೆದು ಬರುತ್ತವೆ. ಆರ್ಯೀಕರಣ ಪ್ರಕ್ರಿಯೆಯಿಂದಾಗಿ ಎಲ್ಲ ಕಾಳಿಕಾವುಗಳೂ ದೇವಾಲಯಗಳಾಗಿ ಪರಿವರ್ತಿತವಾದವು ಮತ್ತು ಎಲ್ಲ ಕಾಳಿಕಾವುಗಳ ಹೆಸರಿನ ಮುಂದೆ ‘ಕ್ಷೇತ್ರ’ ಎಂಬುದನ್ನು ಲಗತ್ತಿಸಲಾಯಿತು. ಉದಾ:’ವಲಯನಾಡು ಕಾವು’ ಎಂಬ ಹೆಸರನ್ನು ‘ವಲಯನಾಡು ಕಾವುಕ್ಷೇತ್ರಂ’ ಎಂದು ಬರೆಯಲಾಗುತ್ತದೆ.

ಕಾಳಿಯ ಕುರಿತಾದ ಪುರಾಣ ಹಲವಾರು ಪಾಠಾಂತರಗಳ ಮೂಲಕ ಕೇರಳದಲ್ಲಿ ಪ್ರಚಾರದಲ್ಲಿದೆ:

ಕಾಳಿಯ ಕುರಿತ ಒಂದು ಪುರಾಣ ಕಥೆಯಲ್ಲಿ ಆಕೆ ಸತೀದೇವಿಯ ಪುನರವತಾರವೆಂದಿದೆ. ಆಕೆ ತನ್ನ ದೇಹವನ್ನು ಯೋಗಾಗ್ನಿಯಲ್ಲ ತೊರೆದಿದ್ದಳು. ಆ ಕಥೆ ಹೀಗಿದೆ – ಸತೀದೇವಿ ಯೋಗಾಗ್ನಿಯಲ್ಲಿ ದೇಹತ್ಯಾಗವನ್ನು ಮಾಡಿದಳು. ಆಕೆಯ ಪತಿ ಪರಶಿವ ಕೋಪದಿಂದ ತನ್ನ ಚಟಾಮಕುಟವನ್ನು ನಿರಾಶೆಯಿಂದ ಕಿತ್ತಿಕೊಂಡ. ಅದರಿಂದ ಕಾಳಿ ಹುಟ್ಟಿದಳು. ಇನ್ನೊಂದು ಕಥೆಯ ಪ್ರಕಾರ ಕಾಳಿಯು ಮಾಯೆಯ ಪುನರ್ಜನ್ಮ. ಮಾಯೆ ಯಶೋದೆಯ ಮಗಳು. ಕಾಳಿಯ ಕುರಿತು ಇನ್ನೂ ಅನೇಕ ಕಥೆಗಳಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದುದೆಂದರೆ ಕಾಳಿ – ದಾರುಕ ಯುದ್ಧ.

ಒಮ್ಮೆ ದೇವತೆಗಳು ಅಸುರರನ್ನು ಪರಾಭವಗೊಳಿಸಿ ಅವರ ನಾಡನ್ನೆಲ್ಲ ಧ್ವಂಶ ಮಾಡಿದರು. ಬಹುಪಾಲು ರಾಕ್ಷಸರು ಸತ್ತರು, ಉಳಿದವರು ಓಡಿಹೋದರು. ಅವರ ಸ್ತ್ರೀಯರು ಪ್ರತ್ಯೇಕಿಸಲ್ಪಟ್ಟರು. ಅವರಲ್ಲಿ ದಾರುಮತಿ ಮತ್ತು ದಾವಾವತಿ ಎಂಬಿಬ್ಬರು ತಮ್ಮ ವಂಶೋದ್ಧಾರಕ್ಕಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದರು. ಬ್ರಹ್ಮನು ಅವರಿಗೆ ಎರಡು ಮಕ್ಕಳಾಗುವಂತೆ ವರವನ್ನಿತ್ತ. ದಾನಾವತಿಯು ದಾನವೇಂದ್ರನಿಗೂ ದಾರುಮತಿಯು ದಾರುಕನಿಗೂ ಜನ್ಮ ನೀಡಿದರು. ಅವರು ದೊಡ್ಡವರಾದಾಗ ತಮ್ಮ ವಂಶದ ಕುರಿತಾದ ಎಲ್ಲ ಕಥೆಗಳನ್ನೂ ತಿಳಿದುಕೊಂಡರು. ದಾರುಕನು ಬ್ರಾಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರವನ್ನು ಪಡೆಯಲು ಬಯಸಿದ. ಆದರೆ ಬ್ರಹ್ಮನು ಅಷ್ಟೊಂದು ಸುಲಭದಲ್ಲಿ ಪ್ರತ್ಯಕ್ಷವಾಗಲಿಲ್ಲ. ದಾರುಕನು ಇನ್ನೂ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮನು ಪ್ರತ್ಯಕ್ಷವಾಗುವಂತೆ ಮಾಡಿದ. ದಾರುಕನ ಮುಂದೆ ಕಾಣಿಸಿಕೊಂಡು ಬ್ರಹ್ಮನು ಅವನಿಗೆ ಮನುಷ್ಯರಿಂದಾಗಲಿ, ದೇವತೆಗಳಿಂದಾಗಲಿ, ಆಯುಧಗಳಿಂದಾಗಲಿ, ಶಸ್ತ್ರಗಳಿದಾಂಗಲಿ, ಹಗಲಾಗಲಿ, ರಾತ್ರಿಯಾಗಲಿ ಮರಣಬಾರದಂತೆಯೂ ಅವನ ದೇಹದಿಂದ ಭೂಮಿಗೆ ಒಂದು ಬಿಂದು ರಕ್ತ ಬಿದ್ದರೆ ಅವನಂತೆಯೇ ಬಲಶಾಲಿಗಳಾದ ಸಾವಿರ ರಾಕ್ಷಸರು ಹುಟ್ಟಿಕೊಳ್ಳುವಂತೆಯೂ ವರವನ್ನು ನೀಡಿದ. ಮಾತ್ರವಲ್ಲ ಬ್ರಹ್ಮದಂಡವನ್ನೂ ನೀಡಿ ಇನ್ನೂ ಕೆಲವು ಗುಪ್ತ ಮಂತ್ರಗಳನ್ನೂ ದಯಪಾಲಿಸಿದ.

ಬ್ರಹ್ಮ ವರಬಲದಿಂದ ಕೊಬ್ಬಿದ ದಾರುಕನು ಇಡೀ ವಿಶ್ವವನ್ನು ಪಾದಾಕ್ರಾಂತವನ್ನಾಗಿಸಿದ. ದೇವತೆಗಳಿಗೆ ತೊಂದರೆಯುಂಟು ಮಾಡಿದ. ದೇವತೆಗಳೆಲ್ಲ ನಾರದನನ್ನು ಮುಂದಿಟ್ಟುಕೊಂಡು ತಮ್ಮ ಸಂಕಷ್ಟಗಳನ್ನು ಶಿವನಲ್ಲಿ ದೂರಿಕೊಂಡರು. ಒಬ್ಬ ಹೆಣ್ಣಿನಿಂದಷ್ಟೆ ದಾರುಕ ನಿಗ್ರಹ ಸಾಧ್ಯವೆಂದು ತಿಳಿದು ಶಿವನು ತಮ್ಮ ಮೂರನೆಯ ಕಣ್ಣಿನಿಂದ ಕಾಳಿಯನ್ನು ಹುಟ್ಟಿಸಿದ. ತಣಿಯದ ರಕ್ತದಾಹಿಯಾದ ಬೇತಾಳನೂ ಕಾಳಿಯ ಸೇವಕನಾಗಿ ಸೇರಿಕೊಂಡ. ಇನ್ನೊಬ್ಬ ಸಹಾಯಕನಾದ ಕೂಳಿಯೊಂದಿಗೆ ಕಾಳಿಯು ಬೇತಾಳ ಸಮೇತಳಾಗಿ ದಾರುಕನನ್ನು ಎದುರಿಸಲು ಹೊರಟಳು. ನಾನಾ ದೇವತೆಗಳಿಂದ ಜನಿಸಿದ ಬ್ರಾಹ್ಮಿ, ಮಹೇಶ್ವರಿ, ವೈಷ್ಣವಿ, ಇಂದ್ರಾಣಿ, ಕೌಮಾರಿ, ವಾರಾಹಿಯರೆಂಬ ಇತರ ಆರು ದೇವತೆಗಳೂ ಅವಳನ್ನು ಸೇರಿಕೊಂಡರು.

ಆರಂಭದಲ್ಲಿ ಅವರು ದಾರುಕನ ಬಲಗಳನ್ನೆಲ್ಲ ಸಂಹರಿಸಿದರು. ಅದನ್ನು ತಿಳಿದ ದಾರುಕ ಕೋಪೋದ್ರಿಕ್ತನಾಗಿ ತಾನು ಬ್ರಹ್ಮನಿಂದ ಪಡೆದಿದ್ದ ಗೂಢ ಮಂತ್ರಗಳನ್ನೆಲ್ಲ ತನ್ನ ಮಡದಿಗೆ ಉಪದೇಶಿಸಿ ಅದನ್ನು ಯಾರಿಗೂ ಕೊಡದಂತೆ ತಾಕೀತು ಮಾಡಿದ. ಬಳಿಕ ಕಾಳಿಯನ್ನೆದುರಿಸಿದ. ಮೂರು ಲೋಕವನ್ನು ನಡುಗುಸುವಂತೆ ಅವರಿಬ್ಬರೊಳಗೆ ಘನ ಘೋರಯುದ್ಧ ನಡೆಯಿತು. ಆತ ಬ್ರಹ್ಮದಂಡವನ್ನು ಪ್ರಯೋಗಿಸಿದಾಗ ಕಾಳಿಯು ಕದನ ವಿರಾಮವನ್ನು ಘೋಷಿಸಬೇಕಾಯಿತು. ಅವಳಿಗೆ ದಾರುಕನ ಮಂತ್ರಗಳನ್ನು ವಶಮಾಡಿಕೊಳ್ಳದಿದ್ದರೆ ಅವನ ವಧೆ ಅಸಾಧ್ಯವೆಂದು ವಿದಿತವಾಯಿತು. ಕಾತ್ಯಾಯಿನಿ ದೇವಿಯು ಆಗ ಒಬ್ಬ ಬಡಬ್ರಾಹ್ಮಣ ವಧುವಿನಂತೆ ವೇಷಧರಿಸಿ ದಾರುಕನ ಮಡದಿ ಮನೋದರಿಯಿಂದ ಆ ಮಂತ್ರವನ್ನು ಪಡೆಯಲು ಸಮರ್ಥಳಾದಳು. ಆ ಮಂತ್ರಗಳನ್ನು ಆಕೆ ಕಾಳಿಗೆ ಕೊಟ್ಟಳು. ಮಂತ್ರಗಳನ್ನು ವಶಪಡಿಸಕೊಂಡ ಕಾಳಿ ದಾರುಕನನ್ನು ಆಕ್ರಮಿಸಿದಳು. ಆ ಯುದ್ಧ ಇಪ್ಪತ್ತೆಂಟು ದಿನಗಳವರೆಗೆ ಮುಂದುವರಿಯಿತು. ಇಪ್ಪತ್ತೆಂಟನೆಯ ದಿನ ಕಾಳಿ ದಾರುಕನಿಂದ ಬ್ರಾಹ್ಮದಂಡವನ್ನು ವಶಪಡಿಸಿಕೊಂಡಳು. ದಾರುಕನನ್ನು ಚೆನ್ನಾಗಿ ಥಳಿಸಿದಳು. ಭಯಭೀತನಾದ ಆತ ಓಡಿಹೋಗಿ ಗುಹೆಯೊಂದರಲ್ಲಿ ಅಡಗಿಕೊಂಡನು. ಆಗ ಸೂರ್ಯನನ್ನು ಕಾಳಿಯು ತನ್ನ ಕೇಶದಿಂದ ಮುಚ್ಚಿದಳು. ಲೋಕವೆಲ್ಲಾ ಅಂಧಕಾರದಲ್ಲಿ ಮುಳುಗಿತು. ತನ್ನ ನಿಡಿದಾಗ ನಾಲಿಗೆಯನ್ನು ಗುಹಾದ್ವಾರಕ್ಕೆ ಚಾಚಿ ಕಾಳಿ ಅಲ್ಲಿ ಹೊಂಚು ಹಾಕಿದಳು. ಕತ್ತಲಾಯಿತೆಂದು ಭ್ರಮೆಗೊಂಡ ದಾರುಕನು ಗುಹೆಯಿಂದ ಹೊರಬಂದ. ಒಮ್ಮೆಲೆ ಆತನನ್ನು ಕಾಳಿ ಸೆಳೆದುಕೊಂಡು ಆಗಸಕ್ಕೆ ಹಾರಿಸಿ ತ್ರಿಶೂಲದಿಂದ ಇರಿದು ಆತನನ್ನು ಕೊಂದುಬಿಟ್ಟಳು. ಒಂದೇ ಒಂದು ಹನಿ ರಕ್ತ ಕೂಡ ಕೆಳಗೆ ಬೀಳದಂತೆ ಬಾಯಾರಿಕೆ ತೀವ್ರವಾಗಿ ಬಾಧಿಸಿದ್ದ ಬೇತಾಳನು ಅದು ಹೊರಬರುತ್ತಿದ್ದಂತೆಯೇ ನೆಕ್ಕಿ ಬಿಡುತ್ತಿದ್ದ.

ಕಾಳಿಯನ್ನು ಅತ್ಯಂತ ಗೌರವ ಭಕ್ತಿಗಳಿಂದ ಕೇರಳದ ಎಲ್ಲ ಸಮುದಾಯದವರೂ ಆರಾಧಿಸುತ್ತಾರೆ. ಪ್ರಾಕೃತಿಕ ವಿಕೋಪಗಳಿಂದ ಪೊರೆಯುವ ಒಬ್ಬ ದೇವತೆಯಾಗಿ ಆಕೆ ಆರಾಧನೆಗೊಳ್ಳುತ್ತಾಳೆ. ಯಾವುದೇ ಭೌಗೋಳಿಕ ಪರಿಸರದಲ್ಲೂ ಆಕೆಯ ಆರಾಧನೆ ನಡೆಯುತ್ತದೆ. ಗುಡ್ಡಗಾಡುಗಳಲ್ಲಿ ಆಕೆ ಪೋರ್ಕಾಳಿ ಭಗವತಿಯಾಗಿಯೂ ಕರಾವಳಿಯಲ್ಲಿ ಶ್ರೀ ಕುರುಂಬಾ ಎಂದೂ ಈ ಮಧ್ಯದ ಪ್ರದೇಶದಲ್ಲಿ ಕಾಳಿಯಾಗಿಯೂ ಆಕೆ ಆರಾಧ್ಯಳಾಗಿದ್ದಾಳೆ.

ಕಾಳಿಯ ಆರಾಧನೆ ಮೂರು ರೀತಿಯದು. ೧. ಅಭಿವ್ಯಕ್ತಿ ಸ್ವರೂಪ. ೨. ಗುಪ್ತ ಸ್ವರೂಪ. ೩. ಸರ್ವಶಕ್ತ ಸ್ವರೂಪ. ಕಾವುಗಳಲ್ಲಿ ಮತ್ತು ದೇವಾಲಯಗಳಲ್ಲಿ ನಡೆಯುತ್ತಿರುವ ಆರಾಧನೆಗಳಿಗೆಲ್ಲ ಮೊದಲ ವರ್ಗಕ್ಕೆ ಸೇರುತ್ತವೆ. ಮೂರ್ತಿ ಪೂಜೆ ಮತ್ತು ಉತ್ಸವಗಳು ಅಭಿವ್ಯಕ್ತಿ ಸ್ವರೂಪದವು. ಗುಪ್ತ ಸ್ವರೂಪದ ಪೂಜೆಗೆ ಪಂಚ ‘ಮ’ ಕಾರವು ಸೇರ್ಪಡೆಯಾಗುತ್ತದೆ. ಮದ್ಯ, ಮಾಂಸ, ಮತ್ಸ್ಯ, ಮಂದ್ರಾ (ಧಾನ್ಯಗಳನ್ನು ಮೊಳಕೆ ಬರಿಸುವುದು) ಮತ್ತು ಮೈಥುನ ಪಂಚಮಕಾರಗಳು. ಇದರ ಹೊರತಾಗಿ ಒಂದಿಷ್ಟು ಹೋಮಗಳು ಮತ್ತು ಯೋಗಿ ಜ್ಞಾನಗಳೂ ಇದರಲ್ಲಿ ಸೇರುತ್ತವೆ, ಇವರು ಕಾಳಿಪೂಜೆಯನ್ನು ಬಹಳ ಹಿಂದಿನಿಂದಲೇ ನಡೆಸಿಕೊಂಡು ಬರುತ್ತಿದ್ದಾರೆ. ಸರ್ವಶಕ್ತ ಸ್ವರೂಪವು ಒಂದು ತೆರನ ತೀವ್ರ ಭಾವುಕ ಸ್ವಭಾವದ್ದು.

ತಾಂತ್ರಿಕ ಆರಾಧನೆಯು ಎರಡು ತೆರನಾಗಿ ವಿಭಜಿಸಲ್ಪಟ್ಟಿದೆ. ಕೌಲಮಾರ್ಗ ಮತ್ತು ಸಮಯಮಾರ್ಗ. ಇದರಲ್ಲಿಯ ಕೌಲಮಾರ್ಗವು ಕೇರಳದ ಕಾಳಿ ಆರಾಧನೆಯಲ್ಲಿ ಸ್ವೀಕೃತವಾಗಿದೆ. ಅದಕ್ಕೆ ನಿರ್ದಿಷ್ಟ ಶಾಸ್ತ್ರ ಗ್ರಂಥಗಳಿಲ್ಲ. ಅಲ್ಲದೆ ಕ್ರಮದಲ್ಲೂ ವಿಭಿನ್ನ ಪಾಠಾಂತರಗಳಿವೆ. ವಿಭಿನ್ನ ಕುಲಗಳು ಮತ್ತು ಗ್ರಾಮೀಣರೂ ವಿಭಿನ್ನ ಆರಾಧನ ಕ್ರಮಗಳನ್ನು ಅವಲಂಬಿಸಿದ್ದಾರೆ. ಅಲ್ಲಿ ಕಾಳಿಯು ವ್ಯತ್ಯಸ್ಥವಾಗಿ ಪೂಜೆಗೊಳ್ಳುತ್ತಾರೆ. ಕೌಲ ಧರ್ಮದ ವಿಶಿಷ್ಟತೆಯೆಂದರೆ ಪಂಚಮಕಾರಗಳು. ಶಾಕ್ತೇಯ ಸಂಪ್ರದಾಯವು ಕೌಲಧರ್ಮದ ಅಂಗವೇ ಆಗಿದೆ. ಮೂಸತು, ಪಿಟಾರಕ, ಯೋಗಿ ಗುರುಕ್ಕಳ್, ನಾಯರ್, ಈಳವ, ಪರವ, ಕಣಿಯನ್, ವಿಶ್ವಕರ್ಮ ಮುಂತಾದ ಜನವಿಭಾಗಗಳು ಕೌಲಧವರ್ಮವನ್ನು ನಂಬುತ್ತಾರೆ ಮತ್ತು ಆಚರಿಸುತ್ತಾರೆ. ಅದರ ಭಕ್ತರಿಗೆ ಅನೇಕೆ ಕಾವುಗಳು ತುಂಬ ಪರಿಚಿತ. ಶಾಕ್ತೇಯ ಕಾವುಗಳಲ್ಲಿ ಕೊಡಂಗಲ್ಲೂರು ದೇವಾಲಯವು ಅತ್ಯಂತ ಹೆಸರುವಾಸಿಯಾಗಿದ್ದು ಶಾಕ್ತೇಯರು ಒಂದು ಮುಖ್ಯ ಕೇಂದ್ರ ಕೂಡ.

ಕುರುದಿ ಮತ್ತು ಬಲಿ ಶಾಕ್ತೇಯ ಪೂಜೆಯಲ್ಲಿ ಮುಖ್ಯವಾದುವುಗಳು, ಬಲಿ ನೀಡಿದ ಪ್ರಾಣಿಗಳ ಅಥವಾ ಹಕ್ಕಿಗಳ ರಕ್ತವು ಕುರುದಿ. ಇದನ್ನು ಕಾಳಿಗೆ ಅರ್ಪಿಸಲಾಗುತ್ತದೆ. ಬ್ರಾಹ್ಮಣರ ಪೂಜೆಯಲ್ಲಿ ಬಳಸಲಾಗುವ ಕುರುದಿ ರಕ್ತದ್ದಲ್ಲ, ಹೊರತಾಗಿ ಸುಣ್ಣ, ಅರಿಸಿನ, ಮತ್ತು ನೀರನ್ನು ಸೇರಿಸಿ ಅವರು ಕುರುದಿ ತಯಾರಿಸುತ್ತಾರೆ. ಬಲಿಗಾಗಿ ‘ಬಡಕ್ಕೇನ್ ವಾದಿಲು’ಗಳು ಸಾಮಾನ್ಯವಾಗಿ ಎಲ್ಲ ಕಾವುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವು ದೇವಾಲಯದ ಬಡಗು ಬಾಗಿಲ ಸಮೀಪದಲ್ಲಿರುತ್ತವೆ. ಬಲಿಗಾಗಿ ಅಲ್ಲಿ ಒಂದು ವೇದಿಕೆ ಇರುತ್ತದೆ. ಬಡಕ್ಕೇನ್ ವಾದಿಲ್ ಸಿದ್ಧವಾದುದು ಇಲ್ಲವಾದರೆ ಬಾಳೆಯ ರೆಂಬೆಗಳಿಂದ ಇದನ್ನು ನಿರ್ಮಿಸಿಕೊಳ್ಳುತ್ತಾರೆ.

ಸಿಡುಬು ರೋಗಕ್ಕೂ ಕಾಳಿಗೂ ಸಂಬಂಧವಿದೆಯೆಂದು ನಂಬುತ್ತಾರೆ. ಸಿಡುಬಿನಿಂದ ಸತ್ತವ್ಯಕ್ತಿಯ ಹೆಣ ಕಾಳಿಗೆ ಆಹಾರವಾಗಿ ಸಂದಾಯವಾಗುತ್ತದೆ. ತನಗೆ ಕೊಡಬೇಕಾದ ವಸ್ತುಗಳನ್ನು ನೀಡದಿದ್ದರೆ ಕಾಳಿ ಸಿಟ್ಟುಗೊಂಡು ಮಸೂರಿ ರೋಗವನ್ನು ಹರಡುತ್ತಾಳೆಂದು ನಂಬಲಾಗಿದೆ. ಎಲ್ಲ ಕಾಳಿಕಾ ದೇವಾಲಯಗಳಲ್ಲಿ ‘ತಾಲಪ್ಪೊಲಿ’ ನಡೆಸುತ್ತಾರೆ. ಕಾಳಿಯನ್ನು ಸಮಾಧಾನ ಪಡಿಸುವುದಕ್ಕಾಗಿ ಇದನ್ನು ನಡೆಸುತ್ತಾರೆ. ದಾರುಕನನ್ನು ಕೊಂದು ಆಕೆ ಕೈಲಾಸಕ್ಕೆ ಮರಳಿದಾಗ ತಾಲಪ್ಪೊಲಿಯನ್ನು ನೀಡಿದ್ದರಂತೆ. ಕಾಳೀ ಸಂಬಂಧವಾಗಿ ವೇಲ ಮತ್ತು ಪೂರಂಗಳನ್ನು ನಡೆಸುತ್ತಾರೆ. ಅವುಗಳಲ್ಲಿ ಭರಣಿವೇಲ ಮತ್ತು ಪೂರಂಗಳನ್ನು ನಡೆಸುತ್ತಾರೆ. ಅವುಗಳಲ್ಲಿ ಭರಣಿವೇಲ ತುಂಬ ಪ್ರಸಿದ್ಧ. ಭರಣಿಯು ದೇವಿಯ ಜನನ ನಕ್ಷತ್ರ. ಭರಣಿವೇಲದ ಅಂಗವಾಗಿಯೇ ಪೊಂಗಾಲವನ್ನೂ ನಡೆಸುತ್ತಾರೆ.

ತಮ್ಮದೇ ಆದ ರೂಪ – ವಿಧಾನಗಳಲ್ಲಿ ವಿಭಿನ್ನ ಜನಸಮುದಾಯಗಳು ಕಾಳೀ ಆರಾಧನೆಯನ್ನು ನಡೆಸುತ್ತಾರೆ. ಬ್ರಾಹ್ಮಣರು ಕಾಳಿಯನ್ನು ಸಾತ್ವಿಕ ವಿಧಾನಗಳಿಂದ ಆರಾಧಿಸುತ್ತಾರೆ. ಇದರ ಅಂಗವಾಗಿ ದುರ್ಗಾಪೂಜೆ, ಭಗವತೀ ಸೇವೆಗಳನ್ನು ನಡೆಸುತ್ತಾರೆ. ವಿರಳವಾಗಿ ಅವರು ಶಕ್ತಿ ಪೂಜೆಯನ್ನೂ ಮಾಡುವುದಿದೆ. ಆದರೆ ಮದ್ಯ ಮಾಂಸಗಳನ್ನು ಬಳಸುವುದಿಲ್ಲ. ಅದರ ಬದಲಿಗೆ ಅವರು ಅರಾದಮ್ (aratham)ನ್ನು ಬಳಸುತ್ತಾರೆ. ಇದು ಸುಣ್ಣ ಮತ್ತು ಅರಿಸಿನದ ಮಿಶ್ರಣ. ಇದಕ್ಕೆ ತೆಚ್ಚಿಹುವನ್ನೂ ಅರಳನ್ನೂ ಸೇರಿಸಿಕೊಳ್ಳುತ್ತಾರೆ. ಬಲಿವೇದಿಕೆಯನ್ನು ಬಾಳೆ ರೆಂಬೆಯಿಂದ ತಯಾರಿಸಿಕೊಂಡು ಅದಕ್ಕೆ ಕೋಲುತಿರಿಗಳನ್ನೂ ತೆಂಗಿನ ಎಳೆಯ ಗರಿಯನ್ನೂ ಸುತ್ತಲೂ ಇರಿಸಿಕೊಳ್ಳುತ್ತಾರೆ. ನಾಯರ್ ಸಮೂಹದವರೂ ತಮ್ಮ ತರವಾಡುಗಳಲ್ಲಿ ಕಾಳಿಯನ್ನು ಆರಾಧಿಸುತ್ತಾರೆ. ಈಳವರು ಚಟುಲಭದ್ರಕಾಳಿಯನ್ನು ಆರಾಧಿಸುತ್ತಾರೆ. ಉತ್ತರ ಕ್ರಿಯೆಯಲ್ಲಿ ಈ ದೈವಕ್ಕೆ ವಿಶೇಷ ಪ್ರಾಧಾನ್ಯವಿದೆ. ಆ ಸಂದರ್ಭದಲ್ಲಿ ಈ ದೈವಕ್ಕೆ ಅವರು ಕುರುದಿ ಕೊಡಬೇಕು. ಮಲಬಾರದಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಕೇರಳದ ನಾನಾ ಕಡೆಗಳಲ್ಲಿ ಪುಲಯರಿಗೆ ತಮ್ಮದೇ ಆದ ಕಾಳೀ ದೇವಾಲಯಗಳಿವೆ. ಅವರು ಕಾಳಿಯನ್ನು ಶ್ಮಶಾನ ಕಾಳಿಯಾಗಿಯೂ ಚಾಮುಂಡಿಯಾಗಿಯೂ ಆರಾಧಿಸುತ್ತಾರೆ. ವಣ್ಣಾನರ ಜಾತೀಯ ಪುರಾಣದಲ್ಲಿ ಕಾಳೀ ಸಂಬಂಧ ಕಂಡುಬರುತ್ತದೆ. ದಾರುಕನೊಂದಿಗಿನ ಯುದ್ಧದಲ್ಲಿ ಕಾಳಿಗೆ ತುಂಬ ಗಂಭೀರವಾದ ಗಾಯವಾಗುತ್ತದೆ. ಅದನ್ನು ಕಂಡ ಮಹಾವಿಷ್ಣು ವಣ್ಣಾನ್‌ನನ್ನು ಸೃಷ್ಟಿಸಿ ಪಾರಂಪರಿಕ ವೈದ್ಯ ವಿಧಾನವನ್ನು ಅವನಿಗೆ ದಯಪಾಲಿಸಿ ಕಾಳಿಯನ್ನು ಶುಶ್ರೂಷೆ ಮಾಡುವಂತೆ ಹೇಳಿದ. ವಣ್ಣಾನನು ಕಾಳಿಯ ಗುಪ್ತಾಂಗಗಳ ಹೊರತಾಗಿ ಎಲ್ಲವನ್ನೂ ಶುಶ್ರೂಷೆ ಮಾಡಿದ. ಆಗ ವಿಷ್ಣುವು ವಣ್ಣಾತ್ತಿಯನ್ನು ಸೃಷ್ಟಿಸಿದನಂತೆ. ಪರವ, ಕುರುಪ್ಪು ಮತ್ತು ವಿಶ್ವಕರ್ಮರು ಕಾಳಿಯನ್ನು ಆರಾಧಿಸುತ್ತಾರೆ. ಮುಕ್ಕುವರು ಮತ್ತು ಕುರುಚ್ಯ, ಕುರುಮ, ಅಡಿಯ ಮುಂತಾದ ಪರಿಶಿಷ್ಟ ವರ್ಗದ ಜನರೂ ಕಾಳಿಯನ್ನು ಆರಾಧಿಸುತ್ತಾರೆ. ಚಾಲಿಯ ಎಂಬ ಕೆಲವು ಜನರೂ ಕೂಡ ಕಾಳಿಯನ್ನು ಆರಾಧಿಸುತ್ತಾರೆ.

ಕಾಳಿಯ ಕಥೆಯನ್ನು ವಿಶದವಾಗಿ ವರ್ಣಿಸುವ ಧಾರ್ಮಿಕ ಪ್ರದರ್ಶನ ಕಲೆಗಳೂ ರೂಢಿಯಲ್ಲಿವೆ. ಮುಡಿಯೇಟ್ಟು, ಪಡಯಣಿ, ನಿಣಬಲಿ, ತೆಯ್ಯಂ, ಕೋಟ್ಟಂಪಾಟ್ಟು, ಕಾಳಿಯೂಟ್ಟು, ಕೋಲಂವೊಟ್ಟು, ಪೋದನ್ ನೃತ್ಯಂ, ತೂಕ್ಕಂ, ಕನ್ಯಾರ್ಕಳಿ, ತಿರಯಾಟ್ಟು ಮುಂತಾದುವು ಅವುಗಳಲ್ಲಿ ಕೆಲವು.

ಕಾಳಿ ಆರಾಧನೆ ಕೇರಳದಲ್ಲಿ ಈಗಲೂ ಪ್ರಚಲಿತವಿದ್ದರೂ ಅದರ ಪಾರಂಪರಿಕ ಅನೇಕ ಅಂಶಗಳು ಇಂದು ಕಳಚಿಹೋಗಿವೆ. ಸರಕಾರದ ಕೆಲವು ನಿರ್ಬಂಧಗಳೂ ಇದಕ್ಕೆ ಕಾರಣವಾದುವು. ಕುರುದಿಗೆ ಕೆಲವು ಪ್ರಾಣಿಗಳ ಮತ್ತು ಪಕ್ಷಿಗಳ ರಕ್ತವು ಅಗತ್ಯವಾಗಿತ್ತು. ಅದನ್ನು ನಿಷೇಧಿಸಲಾಗಿದೆ. ಬಳಸಲಾಗುತ್ತಿದೆ. ಎಳವೂರ್‌ತೂಕ್ಕದಂಥ ಆಚರಣೆಗಳು ಸರಕಾರದ ನಿಷೇಧದಿಂದಾಗಿ ನಿಂತೇ ಹೋಗಿವೆ.

– ಸಿ.ಕೆ.ಜಿ. ಅನುವಾದ ಕೆ.ಕೆ

ಕೇರಳದಲ್ಲಿ ಜಾನಪದ ಅಧ್ಯಯನ ಕೇರಳ ಜಾನಪದ ಸಮೃದ್ದವಾಗಿದ್ದರೂ, ಆ ಬಗ್ಗೆ ಅಧ್ಯಯನ ಸಾಕಷ್ಟ ನಡೆದಿಲ್ಲ. ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಈಗಾಗಲೇ ನಡೆದಿರುವ ಕೆಲಸಗಳು, ಪ್ರಮುಖ ಸಾಧನೆಗಳ ಹಾಗೂ ಈಗಿನ ಪರಿಸ್ಥಿತಿಯನ್ನು ಇಲ್ಲಿ ನಿರೂಪಿಸಲಾಗಿದೆ.

ಕೇರಳದಲ್ಲಿ ಜಾನಪದ ಚಟುವಟಿಕೆಯನ್ನು ಮೂರು ಹಂತಗಳಲ್ಲಿ ಗುರುತಿಸಬಹುದು.

೧. ಪಾಶ್ಚಾತ್ಯರ ಕಾರ್ಯಚಟುವಟಿಕೆಗಳು

೨. ದೇಶೀಯ ವಿದ್ವಾಂಸರ ಕಾರ್ಯಚಟುವಟಿಕೆಗಳು,ಮುಖ್ಯವಾಗಿ ಜಾನಪದ ಸಂಗ್ರಹ ಕಾರ್ಯ.

೩. ಆಧುನಿಕ ಯುಗದಲ್ಲಿ ಜಾನಪದವು ಒಂದು ಸೈದ್ಧಾಂತಿಕ ವಿಷಯವಾದ ವಿಷಯ.

ಕೇರಳದಲ್ಲಿ ಮಿಶನರಿಗಳು ಜಾನಪದ ಸಂಗ್ರಹ ಹಾಗೂ ಅಧ್ಯಯನವನ್ನು ಆರಂಭಿಸಿದರು. ಅವರು ಆಸಕ್ತಿ ಶೈಕ್ಷಣಕಕ್ಕಿಂತ ಹೆಚ್ಚಾಗಿ ಮಿಶನರಿ ಚಟುವಟಿಕೆಯನ್ನು ತೀವ್ರಗೊಳಿಸುವುದೇ ಆಗಿತ್ತು. ಅದಕ್ಕಾಗಿ ಅವರು ಸಾಮಾನ್ಯ ಜನರ ನಡವಳಿಕೆಗಳನ್ನು ಅರ್ಥೈಸಿಕೊಳ್ಳುವುದು ಅಗತ್ಯವಾಗಿತ್ತು. ಸ್ಥಳೀಯರ ಭಾಷೆಯ ಪರಿಚಯ ಹಾಗೂ ಸಾಹಿತ್ಯದ ಜ್ಞಾನ ಅವರಿಗೆ ಅಗತ್ಯವಾಗಿ ಬೇಕಾಗಿತ್ತು. ಅದಕ್ಕಾಗಿಯೇ ಅವರು ನಿಘಂಟುಗಳ ಮುದ್ರಣ ಹಾಗೂ ಗಾದೆಗಳ ಸಂಗ್ರಹ ಕಾರ್ಯದಲ್ಲಿ ತೊಡಗಿದರು. ಅವರ ಚಟಿವಟಿಕೆ ಜಾನಪದ ಅಧ್ಯಯನಕ್ಕೊಂದು ದಾರಿಯನ್ನು ಮಾಡಿಕೊಟ್ಟಿತು. ಸಾಮಾನ್ಯ ಜನರೊಂದಿಗೆ ವ್ಯವಹರಿಸುವುದಕ್ಕಾಗಿ ಅವರ ಭಾಷೆಯನ್ನು ಕಲಿಯಲು ಆಸಕ್ತಿ ತೋರಿದರು. ಭಾಷೆಯ ಕಲಿಕೆಗಾಗಿ ಅವರು ಸಾಮಾನ್ಯ ಜನರತ್ತ ತೆರಳಿದರು. ಮಲೆಯಾಳಂ ಭಾಷೆಯಲ್ಲಿನ ವೈಶಿಷ್ಟ್ಯ, ಗಾದೆಗಳ ಬಳಕೆ ಅವರನ್ನು ಸೆಳೆಯಿತು. ಇದರ ಪರಿಣಾಮವಾಗಿ ಫಾ.ಪಳಲಿನೋಸ್ ಅವರ ಅಡಗಿಯ ಮಲಬಾರಿಕಾ (೧೭೯೧) ಹಾಗೂ ಹರ್ಮನ್ ಗುಂಡರ್ಟ್‌ ಅವರು ಸಂಪಾದಿಸಿದ ಪಳಂಜೊಲ್ ಸಮಾಹಾರಂ(೧೮೪೫) ಪ್ರಕಟವಾಯಿತು. ಗುಂಡರ್ಟ್‌ ಅವರ ಮಲಯಾಳಂ ನಿಘಂಟು ಒಂದು ಮಹತ್ವಪೂರ್ಣ ಕೊಡುಗೆಯಾಗಿದ್ದು, ಅಲ್ಲಿನ ಶಬ್ದಗಳು, ಅವುಗಳ ಅರ್ಥಗಳು ಜನಪದರಿಂದ ಸಂಗ್ರಹ ಮಾಡಿದುದಾಗಿದೆ. ಗುಂಡರ್ಟ್‌ ಅವರ ‘ಕೇರಳೋತ್ಪತ್ತಿ’ ಕೇರಳಿಗರ ಮುಲ ಹಾಗೂ ಸ್ಥಳ ಕುರಿತಂತೆ ಪರಿಚಯಿಸುವ ಉತ್ತಮ ಕೃತಿ. ಉತ್ತರ ಮಲಬಾರಿನ ಲಾವಣಿಗಳ ಸಂಗ್ರಹ (೧೮೪೩) ಇನ್ನೊಂದು ಗಮನಾರ್ಹ ಕೃತಿ.

ಪಿ. ಗೋವಿಂದ ಪಿಳ್ಳೈಯವರ ಮಲಯಾಳ ಭಾಷಾ ಚರಿತ್ರಂ (೧೮೮೧) ಮೌಖಿಕ ಜಾನಪದ ಕುರಿತ ಮೊದಲ ಮಲಯಾಳಂ ಕೃತಿಯಾಗಿದೆ. ಕೇರಳ ಜಾನಪದ ಅಧ್ಯಯನ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಈ ಕೃತಿ ಪ್ರಕಟಗೊಳ್ಳುವುದರೊಂದಿಗೆ ಶೈಕ್ಷಣಿಕ ವಲಯದಲ್ಲಿ ಜಾನಪದಕ್ಕೊಂದು ವಿಶಿಷ್ಟ ಸ್ಥಾನ ದೊರೆಯಿತು. ಆವರೆಗೆ ವಿದ್ವತ್ ವಲಯದಲ್ಲಿ ಜಾನಪದಕ್ಕೆ ಅಷ್ಟೊಂದು ಮಹತ್ವವನ್ನು ನೀಡುತ್ತಿರಲಿಲಲ್ಲ. ಗೋವಿಂದ ಪಿಳ್ಳೈಯವರು ತಮ್ಮ ಕೃತಿಯಲ್ಲಿ ಕೇರಳದ ಜಾನಪದ ಹಾಡುಗಳು ಹಾಗೂ ಲಾವಣಿಗಳ ಪ್ರಮುಖ ವಿಧಗಳನ್ನು ಪ್ರಸ್ತಾವಿಸುತ್ತಾರೆ.

೧೮೮೭ರಲ್ಲಿ ಲೋಗನ್ ಅವರ ‘ಮಲಬಾರ್ ಮ್ಯಾನ್ಯುವಲ್’ ಪ್ರಕಟಗೊಂಡಿತು. ಕೇರಳದ ಜಾನಪದ ಹಾಡುಗಳ ಬಹಳಷ್ಟು ವಿವರ ಇದರಲ್ಲಿದೆ. ಮಿಶನರಿಗಳು ನೀಡಿದ ಜಾನಪದೀಯ ಅಂಕಿಅಂಶಗಳು ಹೆಚ್ಚು ಅಧಿಕೃತವಾಗಿವೆ. ಅವರಿಗೆ ಕ್ಷೇತ್ರಕಾರ್ಯ ನಡೆಸಲು ಸಾಧ್ಯವಾಗಿರುವುದರಿಂದ ಅವರು ಸಂಗ್ರಹಿಸಿದ ಮಾಹಿತಿಗಳು ಬಹಳ ಮುಖ್ಯವೆನಿಸುತ್ತವೆ. ಆದರೆ ಲೋಗನ್ ಮತ್ತು ಇತರರು ಪರೋಕ್ಷವಾಗಿ ಮಾಹಿತಿ ಸಂಗ್ರಹಿಸಿ ನೀಡಿದ್ದರಿಂದ ಅವು ಹೆಚ್ಚು ಅಧಿಕೃತವೆನಿಸಲಾರವು.

ಎಲ್.ಕೆ. ಅನಂತಕೃಷ್ಣ ಅಯ್ಯರ್‌ರವರ ‘ಕಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಕೊಚ್ಚಿನ್’ ಅಚ್ಯುತ ಮೆನನ್‌ರವರ ಕೊಚ್ಚಿನ್ ಮ್ಯಾನ್ಯುವಲ್, ಕೆ.ಪಿ.ಪದ್ಮನಾಭ ಮೆನನ್‌ರ ಕೊಚ್ಚಿ ರಾಜಚರಿತಮ್ ಮುಂತಾದ ಕೃತಿಗಳಲ್ಲಿ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಇದೇ ಅವಧಿಯಲ್ಲಿ ವಿದ್ಯಾವಿಲಾಸಿನಿ ಹಾಗೂ ಭಾಷಾ ಪೋಷಣೆ ನಿಯತಕಾಲಿಕಗಳಲ್ಲಿ ಬಹಳ ಜನಪದ ಹಾಡುಗಳು ಪ್ರಕಟಗೊಂಡವು.

ಆಗಿನ ಚೆಂಗಲ್‌ಪಟ್ಟು – ಮದ್ರಾಸ್ ಕಲೆಕ್ಟರ್ ಪರ್ಸಿ ಮ್ಯಾಕ್ವಿನ್‌ರವರು ತಮಿಳುನಾಡಿನ ಗಡಿಯಿಂದ ಕೊಡುಂಗಲ್ಲೂರು ಗಡಿಯ ತನಕ ಕ್ಷೇತ್ರ ಕಾರ್ಯ ನಡೆಸಿ ಬಹಳಷ್ಟು ಜನಪದ ಹಾಡುಗಳು ಹಾಗೂ ಲಾವಣಿಗಳನ್ನು ಸಂಗ್ರಹಿಸಿದರು. ಅಡಿಯೇರಿ ಕುಂಞಿರಾಮನ್ ಅವರ ಸಹಾಯದೊಂದಿಗೆ ೧೯೧೩ ರಿಂದ ೧೯೧೯ ರ ತನಕ ಕ್ಷೇತ್ರ ಕಾರ್ಯ ನಡೆಸಿದರು. ಅನಂತರ ಈ ಹಸ್ತಪ್ರತಿಗಳನ್ನು ಆಧರಿಸಿ ಮದ್ರಾಸ್ ವಿಶ್ವವಿದ್ಯಾಲಯವು ‘ಬ್ಯಾಲೆಡ್ಸ್ ಆಫ್ ನಾರ್ತ್‌ ಮಲಬಾರ್’ ಎಂಬ ಹೆಸರಿನಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟಿಸಿತು. ಮೊದಲ ಸಂಪುಟವನ್ನು ಅಚ್ಯುತ ಮೆನನ್‌ ಹಾಗೂ ಎಸ್.ಕೆ.ನಾಯರ್, ಮೂರನೆ ಸಂಪುಟವನ್ನು ಎಸ್.ಕೆ.ನಾಯರ್ ಸಂಪಾದಿಸಿದರು. ಮೊದಲನೆ ಸಂಪುಟದ ಮುನ್ನುಡಿಯಲ್ಲಿ ಜಾನಪದದ ವಿವಿಧ ಅಂಶಗಳ ಬಗ್ಗೆ ಅಚ್ಯುತ ಮೆನನ್ ಚರ್ಚಿಸಿದ್ದಾರೆ.

ಮ್ಯಾಕ್ವಿನ್ ಅವರು ಸಂಗ್ರಹಿಸಿದ ಅವಧಿಯಲ್ಲೆ ಗೋವಿಂದ ಪಿಳ್ಳೈಯವರು ‘ಮಲಯಾಳತ್ತಿಲ್ ಪಳೆಯ ಪಾಟ್ಟುಕಳ್’ ಕೃತಿ ಪ್ರಕಟಿಸಿದರು. ಬಹಳ ಮಂದಿ ಜನಪದ ಹಾಡುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಪ್ರವೃತ್ತರಾದರು. ಭಾರತಿ ವಿಲಾಸಂ, ಶ್ರೀರಾಮ ವಿಲಾಸಂ ಮತ್ತು ಎಸ್.ಟಿ.ರೆಡ್ಡಿಯಾರ್ ಅವರು ವಡಕ್ಕನ್ ಪಾಟ್ಟುಕಳ್ ಸಂಗ್ರಹವನ್ನು ಹೊರತಂದರು. ೧೯೦೯ ರಿಂದ ೧೯೩೪ರ ಅವಧಿಯವರೆಗೆ ಅವಿರತವಾಗಿ ದುಡಿದ ಕೊಟ್ವಾರತ್ತಿಲ್ ಕಂಗುಣ್ಣಿಯವರು ಎಂಟು ಸಂಪುಟಗಳಲ್ಲಿ ಐತಿಹ್ಯಗಳ ಸಂಗ್ರಹವನ್ನು ಪ್ರಕಟಿಸಿದರು. ಐತಿಹ್ಯಮಾಲಾ ಎನ್ನುವ ಹೆಸರಿನಲ್ಲಿ ಅದು ಬೆಳಕುಕಂಡಿತು. ಇದರಲ್ಲಿ ೧೨೬ ಐತಿಹ್ಯಗಳಿವೆ. ಈ ಕೆಲಸದಲ್ಲಿ ಕೆ.ಎಂ.ವರ್ಗೀಸ್ ಅವರೂ ಸಹಕರಿಸಿದರು.

ಆರಂಭ ಘಟ್ಟದಲ್ಲಿ ಕೇವಲ ಜನಪದ ಹಾಡುಗಳ ಸಂಗ್ರಹ ಮತ್ತು ಪ್ರಕಟಣೆಯೆಡೆಗೆ ಹೆಚ್ಚಿನ ಗಮನಹರಿಸಲಾಯಿತು. ಅವರಲ್ಲೂ ಪ್ರಕಟಣೆಗಳನ್ನು ಹಬ್ಬಗಳ ಸಂದರ್ಭದಲ್ಲಿ ಮಾರಾಟ ಮಾಡುವ ಉದ್ದೇಶವಿರಿಸಲಾಗಿತ್ತು. ಕೇವಲ ಆರ್ಥಿಕ ಲಾಭದ ದೃಷ್ಟಿಯಿದ್ದುದರಿಂದ ಜಾನಪದದ ಮೂಲಭೂತ ತತ್ವಗಳನ್ನು ಅನುಸರಿಲಾಗಿಲ್ಲ. ಪ್ರಕಾಶಕರ ನಿರ್ಧಾರವೇ ಅಂತಿಮವೆನಿಸುತ್ತಿತ್ತು.

ಚೇಲನಾಟ್ಟು ಅಚ್ಯುತಮೆನನ್ ಅವರು ಉತ್ತರ ಮಲಬಾರಿ ಲಾವಣಿಗಳ ಕುರಿತು ನಡೆಸಿದ ಅಧ್ಯಯನ ಜಾನಪದ ವಿದ್ವಾಂಸರ ಗಮನ ಸೆಳೆಯಿತು. ಅದೊಂದು ಗಂಭೀರವಾದ ಅಧ್ಯಯನವಲ್ಲವಾದರೂ ಗೌಣವೆನಿಸಿದ್ದ ಜಾನಪದದ ಬಗ್ಗೆ ಒಲವನ್ನು ಮೂಡಿಸಲು ಸಹಕಾರಿಯಾಯಿತು. “ಜಾನಪದ ಹಾಡುಗಳ ಮೌಲ್ಯ ತಿಳಿಯದೆ ವಿದ್ವಾಂಸರು ಅವುಗಳನ್ನು ದೂರವಿರಿಸುತ್ತಾರೆ ಎಂದು ಬಹಳ ದುಃಖದಿಂದಲೇ ಹೇಳಬೇಕಾಗಿದೆ. ನಗರವಾಸಿಗಳು ಇವುಗಳನ್ನು ನಾಗರಿಕತೆಯಿಲ್ಲದ ಜನರದ್ದೆಂದು ತಿರಸ್ಕಾರ ಮಾಡುತ್ತಾರೆ. ಈ ಹಾಡುಗಳಲ್ಲಿ ನಮ್ಮ ಸಾಂಪ್ರದಾಯಿಕ ಅಂಶಗಳು ಬಹಳ ಶುದ್ಧವಾಗಿ ಉಳಿದುಕೊಂಡಿವೆಯೆಂಬುದನ್ನು ನಾವು ತಿಳಿಯಬೇಕು. ಅನಕ್ಷರಸ್ಥರ ಕೈಯ್ಯಲ್ಲಿ ಅವುಗಳಿವೆ ಅಷ್ಟೆ. ಜನರು ಈ ಎಚ್ಚೆತ್ತುಕೊಳ್ಳಲು ಇದೀಗ ಸರಿಯಾದ ಸಮಯವೆಂದು ಹೇಳಬಯಸುತ್ತೇನೆ” (ಅಚ್ಯುತ ಮೆನನ್ ೧೯೩೫ :೧) ಎಂದು ಅವರು ಹೇಳಿದ್ದಾರೆ. ಜಾನಪದ ಒಂದು ಪ್ರತ್ಯೇಕ ಶಿಸ್ತಾಗಿ ಬೆಳೆದ ಕಾರಣ ಕೇರಳದಲ್ಲಿ ಜಾಣಪದ ಹಾಡುಗಳ ಅಧ್ಯಯನಕ್ಕೆ ಹೆಚ್ಚಿನ ಚಾಲನೆ ದೊರೆಯಿತು. ಕೆಲವು ವಿದ್ವಾಂಸರು ಫಾದರ್ ಪಳಲಿನೋಸ್ ಹಾಗೂ ಲೋಗನ್ ಅವರನ್ನು ಅನುಸರಿಸಿದರು.

ರಾಷ್ಟ್ರೀಯ ಚಳವಳಿ ತಲೆಯೆತ್ತಿದ ಸಂದರ್ಭದಲ್ಲಿ ತಮ್ಮ ಸಂಸ್ಕೃತಿಯತ್ತ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡತೊಡಗಿತು. ಇದರಿಂದಾಗಿ ಜಾನಪದ ಹಾಡುಗಳು ಹಾಗೂ ಕತೆಗಳ ಸಂಕಲನಗಳು ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡವು. ಆದರೂ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲಿಲ್ಲ. ಹಾಡುಗಳು ಹಾಗೂ ಲಾವಣಿಗಳ ವಸ್ತುಗಳ ವಿವರಣೆಗೆ ಮಾತ್ರ ಒತ್ತುಕೊಟ್ಟರು.

ಕೇರಳದ ಜಾನಪದ ಇತಿಹಾಸದಲ್ಲಿ ಗಮನಿಸಬೇಕಾದ ಎರಡು ಮುಖ್ಯ ಕೃತಿಗಳೆಂದರೆ, ಅಚ್ಯುತ್ ಮೆನನ್‌ರ ‘ಕೇರಳತ್ತಿಲೆ ಕಾಳಿ ಸೇವ’ ಹಾಗೂ ಎಂ.ಡಿ.ರಾಘವನ್ ಅವರ ‘ಷೋಕ್ ಪ್ಲೇಸ್ ಅಂಡ್ ಡಾನ್ಸಸ್ ಆಫ್ ಕೇರಳ’. ಈ ಎರಡು ಕೃತಿಗಳು ಪ್ರಕಟಗೊಳ್ಳುವ ಮುನ್ನ ಜಾನಪದ ಹಾಡುಗಳ ಬಗ್ಗೆಯೇ ಕೃತಿಗಳು ಬರುತ್ತಿದ್ದವು. ‘ಫೋಕ್ ಪ್ಲೇಸ್ ಅಂಡ್ ಡಾನ್ಸಸ್ ಆಫ್ ಕೇರಳ’ ಕೃತಿಯು ಕೇರಳದ ಪ್ರದರ್ಶನ ಕಲೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತವೆ. ಎಸ್.ಕೆ.ನಾಯರ್ ಅವರ ‘ಕೇರಳತ್ತಿಲೆ ನಾಡೋಡಿ ನಾಡಕಙಳ್’ ಜಾನಪದ ನಾಟಕಗಳ ವೈಶಿಷ್ಟ್ಯಗಳನ್ನು ತಿಳಿಸುವ ಕೃತಿಯಾಗಿದೆ. ಅದೇ ರೀತಿ ಶ್ರೀರಾಮ ನರ್ಮ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಜರ್ನಲ್‌ಗಳಲ್ಲಿ ಕೂಡಾ ಜಾನಪದದ ಬಗ್ಗೆ ಕೆಲವು ಲೇಖನಗಳು ಬಂದಿವೆ. ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಜನರು ಮೌಖಿಕ ಜಾನಪದ ಸಂಗ್ರಹದಲ್ಲಿ ನಿರತರಾಗಿದ್ದರು. ತಮ್ಮ ದೇಶಾಭಿಮಾನವನ್ನು ತೋರಿಸಲು ಜಾನಪದದ ಸಂಗ್ರಹ ಹಾಗೂ ಪ್ರಕಟಣೆಯಲ್ಲಿ ಜನರು ಆಸಕ್ತಿ ತೋರಿದರು. ಪ್ರಕಾಶಕರು ಕೂಡಾ ಇಂತಹ ಸಂಗ್ರಹಗಳನ್ನು ಪ್ರಕಟಿಸಿ ಆರ್ಥಿಕ ಲಾಭ ಗಳಿಸುವಲ್ಲಿ ಯಶಸ್ವಿಯಾದರು.

ಅನಂತರದ ಕೃತಿಗಳನ್ನು ಮಲಯಾಳ ಭಾಷಾ ಚರಿತ್ರಂ ಮುಖ್ಯವೆನಿಸುತ್ತದೆ. ಇದರಲ್ಲಿ ಸಾಹಿತ್ಯ ಚರಿತ್ರೆಯೊಂದಿಗೆ ಜನಪದ ಹಾಡುಗಳು ಹಾಗೂ ಜನಪದ ಕಲೆಗಳ ಬಗ್ಗೆಯೂ ಸಾಕಷ್ಟು ಉಲ್ಲೇಖಗಳು ಬರುತ್ತವೆ. ಉಳ್ಳೂರ್ ಎಸ್.ಪರಮೇಶ್ವರ ಅಯ್ಯರ್ ತಮ್ಮ ‘ಕೇರಳ ಸಾಹಿತ್ಯ ಚರಿತ್ರೆ’ಯಲ್ಲಿ ಜಾನಪದಕ್ಕೂ ಶಿಷ್ಟ ಸಾಹಿತ್ಯದಷ್ಟೇ ಸಮಾನ ಸ್ಥಾನಮಾನ ನೀಡಿದ್ದಾರೆ. ಕೇರಳ ಸಾಹಿತ್ಯ ಚರಿತ್ರೆಯ ಇನ್ನೊಂದು ಕೃತಿ ‘ಸಾಹಿತ್ಯ ಚರಿತ್ರ ಪ್ರಸ್ಥಾನಗಳಿಲೂಡೆ’ ಯಲ್ಲಿ ಜಾನಪದ ವಿಷಯಕ್ಕೆ ಪ್ರತ್ಯೇಕವಾಗಿ ಅಧ್ಯಾಯವನ್ನು ಮೀಸಲಿಡಲಾಗಿದೆ. ‘ಶುದ್ಧ ಮಲಯಾಳ ಶಾಖ’ ಎಂಬ ಹೆಸರಿನ ಈ ಅಧ್ಯಾಯವನ್ನು ಜಿ.ಶಂಕರ ಪಿಳ್ಳೈಯವರು ಬರೆದಿದ್ದಾರೆ. ಜಾನಪದ ಹಾಡುಗಳ ಸೂಕ್ತ ಉದ್ಧರಣೆಯೊಂದಿಗೆ ಹಾಡುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

೬೦ರ ದಶಕಕ್ಕೂ ಮುನ್ನ ಜಾನಪದ ವಿವಿಧ ಪ್ರಕಾರಗಳ ಬಗ್ಗೆ ವಿವಿಧ ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡವು. ಈ ಅವಧಿಯಲ್ಲಿ ಜಾನಪದವನ್ನು ಒಂದು ಶಿಸ್ತಿಗೊಳಪಡಿಸಿ ಅಷ್ಟಾಗಿ ಅಧ್ಯಯನ ನಡೆದಿಲ್ಲ. ಆದರೂ ಅಪ್ಪನ್ ತಂಬುನಾರ್‌ರ ‘ದ್ರಾವಿಡ ವೃತ್ತಞಳುಂ ಅವೈಯುಡೆ ದೇಶ ಪರಿಣಾಮಞಳಂ’, ಕುಟ್ವಿಕೃಷ್ಣ್ ಮಾರಾರ್ ಅವರ ‘ವೃತ್ತಶಿಲ್ಪಮ್’ ಹಾಗೂ ಕೆ.ಕೆ. ವದ್ಯಾರ‍್ರ ‘ವೃತ್ತ ವಿಚಾರಮ್’ ಮೊದಲಾದುವು ಜಾನಪದ ಹಾಡುಗಳ ತಾಳಗತಿಗಳ ಕುರಿತಾದ ವಿಶ್ಲೇಷಣೆಯಲ್ಲಿ ಗಮನ ಸೆಳೆಯುತ್ತವೆ.

ಈ ಕಾಲಘಟ್ಟದಲ್ಲಿ ಹೆಚ್ಚಾಗಿ ಜಾನಪದ ಹಾಡುಗಳ ಕುರಿತಾಗಿ ಅಧ್ಯಯನ ನಡೆಸಲಾಗಿದೆ. ಗಾದೆ, ಒಗಟುಗಳನ್ನು ಕೆಲವರು ಅಧ್ಯಯನ ಮಾಡಿದ್ದಾರೆ. ಆರಂಭ ಕಾಲದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ವಿದ್ವಾಂಸರೇ ಜಾನಪದವನ್ನು ಅಧ್ಯಯನಕ್ಕೆ ಎತ್ತಿಕೊಂಡಿದ್ದರಿಂದ ಹಾಡುಗಳ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಯಿತು. ಮಲಯಾಳ ಪಳಂಚೊಲ್ಲುಗಳ್ (೧೯೫೭) ರಂಡಾಯಿರತ್ತೊನ್ನು, ಪಳಂಚೊಲ್ಲುಗಳ್ (೧೯೫೨), ದ್ರಾವಿಡ ಚೊಲ್ಲುಗಳು (೧೯೫೭) ಇಲ್ಲಿ ಉಲ್ಲೇಖಿಸಬೇಕಾದ ಕೃತಿಗಳು.

ಜಾನಪದದ ಆಧುನಿಕ ಪ್ರವೃತ್ತಿಗಳು : ಅರವತ್ತರ ದಶಕದ ನಂತರ ಜಾನಪದ ಅಧ್ಯಯನದಲ್ಲಿ ಹೊಸ ತಿರುವು ಕಂಡುಬಂತು. ಇತರ ಜ್ಞಾನ ಶಾಖೆಗಳ ಸಂಶೋಧಕರು ಈ ಕ್ಷೇತ್ರದತ್ತ ಆಸಕ್ತಿ ತೋರಿಸಲಾರಂಭಿಸಿದರು. ಇದರೊಂದಿಗೆ ಅಂತರ್ – ಶಿಸ್ತೀನ ಅಧ್ಯಯನವೂ ಆರಂಭಗೊಂಡಿತು. ಪಾಶ್ಚಾತ್ಯ ಸಿದ್ಧಾಂತಗಳನ್ನು ಅನ್ವಯಿಸಿ ಜಾನಪದವನ್ನು ಅಧ್ಯಯನ ಮಾಡಲು ವಿದ್ವಾಂಸರು ಮುಂದೆ ಬಂದರು. ಜಾನಪದ ಹಾಡುಗಳು ಹಾಗೂ ಜಾನಪದ ಕಲೆಗಳ ಬಗ್ಗೆ ಹಲವಾರು ಕೃತಿಗಳು ಬೆಳಕು ಕಂಡವು. ಸಾಹಿತ್ಯ ಪ್ರವರ್ತಕ ಸಹಕರಣ ಸಂಘಂ ಮತ್ತು ನ್ಯಾಷನಲ್ ಬುಕ್ ಸ್ಟಾಲ್‌ಗಳು ಲೇಖಕರಿಗೆ ಪ್ರೋತ್ಸಾಹ ನೀಡಿ ಸಾಕಷ್ಟು ಕೃತಿಗಳು ಪ್ರಕಟವಾಗಲು ಸಹಕರಿಸಿದವು. ಆದರೂ ವಿದ್ವಾಂದರು ಜಾನಪದದ ಇತರ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಲಿಲ್ಲ.

ಕೇರಳದ ಜಾನಪದ ಕಲಾಪ್ರಕಾರಗಳಾದ ತಿರ, ತೆಯ್ಯಂ, ಕುಮ್ಮಟ, ಪೊರಟ್ಟುನಾಟಕಂ, ಮುಡಿಯೆಟ್ಟು, ಪಡಯಣಿ, ಪೂರಕ್ಕಳಿ, ಕೋತಮ್ಮೂರಿ ಇವುಗಳ ಕುರಿತು ಪುಸ್ತಕಗಳು ಬಂದುವು. ಒಗಟುಗಳ ಬಗ್ಗೆ ಕುಂಜುಣ್ಣಿ ಬರೆದ ಪುಸ್ತಕವೂ ಪ್ರಕಟಗೊಂಡಿತು. ಜಿ.ಪಿ.ವೇಣುಗೋಪಾಲ ಪಣಿಕ್ಕರ್ ಒಗಟುಗಳ ಬಗ್ಗೆ ಮಲೆಯಾಳದಲ್ಲಿ ಬರೆದ ಮುನ್ನುಡಿ ಒಂದು ಉತ್ತಮ ಅಧ್ಯಯನ ಲೇಖನವಾಗಿದೆ. ‘ಪದಿನಾಯಿರಂ ಪಳಂಚೊಲ್ಲುಗಳ್’ ಕೂಡಾ ಇಲ್ಲಿ ಗಮನಿಸಬೇಕಾದ ಲೇಖನ. ಮಲೆಯಾಳದಲ್ಲಿ ಜಾನಪದದ ಬಗ್ಗೆ ಬಂದ ಬಹುತೇಕ ಪುಸ್ತಕಗಳು ಕೇರಳದ ಜನಪದ ಸಾಹಿತ್ಯ ಹಾಗೂ ಜನಪದ ಕಲೆಗಳನ್ನು ಕುರಿತೇ ವಿಶ್ಲೇಷಣೆ ಮಾಡಿವೆ. ನಂಬಿಕೆ, ಆಚರಣೆ, ಜಾನಪದ ಆಟಗಳು, ಭೌತಿಕ ಸಂಸ್ಕೃತಿ, ಜನಪದ ನುಡಿ ಇತ್ಯಾದಿಗಳು ವಿದ್ವಾಂಸರ ಗಮನವನ್ನು ಸೆಳೆಯಲಿಲ್ಲ. ಕೆ.ಕೆ.ಎನ್. ಕುರುಪ್‌ರ್ ತೆಯ್ಯಂ ಆರಾಧನೆ ಹಾಗೂ Hero Worship in Kerala ಮತ್ತು ಚುನ್ನಿಮಾರ್ ಚೊಂಡಲ್ ಅವರ ಕೇರಳ ಜನಪದ ಸಾಹಿತ್ಯ ಈ ಅವಧಿಯಲ್ಲಿ ಬಂದ ಪ್ರಮುಖ ಗ್ರಂಥಗಳಾಗಿವೆ.

ಈ ಕಾಲಘಟ್ಟದಲ್ಲಿ ವಿದ್ವಾಂಸರು ಜಾನಪದವನ್ನು ಒಂದು ಶೈಕ್ಷಣಿಕ ನೆಲೆಯಲ್ಲಿ ಅಧ್ಯಯನ ಮಾಡಲು ತೊಡಗಿದರು. ಚುಮ್ಮಾರ್ ಚೂಂಡಲ್ ಭಾರ್ಗವನ್ ಪಿಳ್ಳೈ, ಎಂ.ವಿ.ವಿಷ್ಣು ನಂಬೂದಿರಿ,ಎ.ಕೆ. ನಂಬಿಯಾರ್ ಹಾಗೂ ರಾಘವನ್ ಪಯ್ಯನಾಡ್ ಮೊದಲಾದವರು ಈ ನಿಟ್ಟಿನಲ್ಲಿ ಪ್ರಮುಖರು.

ಸಾಮಾನ್ಯ ಓದುಗರಿಗಾಗಿ ಪ್ರಕಟವಾಗುತ್ತಿದ್ದ ಕೆಲವು ಮಲಯಾಳಂ ಮ್ಯಾಗಜಿನ್‌ಗಳು ಹಾಗೂ ಸಾಪ್ತಾಹಿಕಗಳು ಜಾನಪದಕ್ಕೆ ಸಂಬಂಧಿಸಿದ ಲೇಖನಗಳನ್ನೂ ಪ್ರಕಟಿಸುತ್ತಿದ್ದುವು. ವಿಜ್ಞಾನ ಕೈರಳಿ, ಭಾಷಾ ಸಮಿತಿ ಹಾಗೂ ಮಲಯಾಳ ವಿಮರ್ಶಂ ಮ್ಯಾಗಜಿನ್‌ಗಳನ್ನು ಹೊರತುಪಡಿಸಿದರೆ ಗಂಭೀರ ಲೇಖನಗಳನ್ನು ಪ್ರಕಟಿಸಲು ಬೇರೆ ಮ್ಯಾಗಜಿನ್‌ಗಳಿರಲಿಲ್ಲ.

ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವೇಜಸ್ ಸಂಸ್ಥೆಯು ವಿಜ್ಞಾನ ಕೈರಳಿ ಜಾನಪದಕ್ಕೆ ಸಾಕಷ್ಟು ಪ್ರಾಶಸ್ತ್ಯ ನೀಡಿತು. ವಿಜ್ಞಾನ ಕಾಸಿಯ ಪತ್ರಿಕೆಯಲ್ಲಿ ಜಾನಪದಕ್ಕೆ ಸಂಬಂಧಿಸಿದ ಲೇಖನಗಳು ಪ್ರಕಟಗೊಂಡು ಅದಕ್ಕೆ ಇನ್ನಷ್ಟು ಮಾನ್ಯತೆ ಸಿಗಲಾರಂಭಿಸಿತು. ಅಷ್ಟು ಮಾತ್ರವಲ್ಲದೆ ಸಂಸ್ಥೆಯು ಜಾನಪದ ಎಂಬ ಗ್ರಂಥವನ್ನೂ ಜಾನಪದ ನಿಘಂಟನ್ನೂ ಪ್ರಕಟಿಸಿತು.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕೇರಳದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಜಾನಪದಕ್ಕೊಂದು ಪ್ರತ್ಯೇಕ ವಿಭಾಗವಿಲ್ಲ. ಮಲಯಾಳಂ, ಇತಿಹಾಸ ಹಾಗೂ ಭಾಷಾ ವಿಜ್ಞಾನ ವಿಭಾಗಗಳಲ್ಲಿ ಎಂ.ಫಿಲ್./ಪಿಎಚ್.ಡಿ ಅಧ್ಯಯನದಲ್ಲಿ ಒಂದು ವಿಷಯವಾಗಿ ಮಾತ್ರ ಅಧ್ಯಯನಕ್ಕೆ ಅವಕಾಶವಿದೆ. ಆದರೆ ಜಾನಪದ ಸಂಶೋಧನಾ ವಿಧಾನವನ್ನು ಇಲ್ಲಿ ಅಳವಡಿಸಲಾಗಿಲ್ಲ. ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿರುವ ಸಾಂಪ್ರದಾಯಿಕ ಜಾನಪದ ಪ್ರದರ್ಶನ ಕಲಾ ಕೇಂದ್ರವು ಬಹಳಷ್ಟು ದಾಖಲೀಕರಣ ಕೆಲಸ ಮಾಡುತ್ತಿದೆ.

ಪ್ರಾಚ್ಯ ವಸ್ತು ಇಲಾಖೆ ಅಡಿಯಲ್ಲಿ ಕೇರಳ ರಾಜ್ಯ ಸರ್ಕಾರದ ಜಾಣಪದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಸಂಸ್ಥೆ ರಾಜ್ಯದಲ್ಲಿ ಜಾನಪದ ಚಟುವಟಿಕೆಯ ಬೆಳವಣಿಗೆಗೆ ಯಾವುದೇ ರೀತಿಯ ಯೋಜನೆ ಹಾಕಿಕೊಳ್ಳಲು ಅಧಿಕಾರವನ್ನು ಹೊಂದಿಲ್ಲ. ಸಂಸ್ಕೃತಿ ಇಲಾಖೆಯು ಜಾನಪದ ಕೃತಿಗಳ ಪ್ರಕಟಣೆಗೆ ಹಣಕಾಸು ಸಹಾಯ ನೀಡುತ್ತಿದೆ. ಜಾನಪದ ಕಲಾವಿದರಿಗೂ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಜನಪದ ಕಲಾ ಪ್ರದರ್ಶನಗಳಿಗೆ ಅವಕಾಶ ನೀಡಲಾಗುತ್ತಿದೆ. ೧೯೯೬ರಲ್ಲಿ ಕೇರಳ ಸರ್ಕಾರವು ಜಾನಪದ ಅಕಾಡೆಮಿಯನ್ನು ಸ್ಥಾಪಿಸಿದ್ದು ಇನ್ನಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ.

ಇದರೊಂದಿಗೆ ಸಾಹಿತ್ಯ ಅಕಾಡೆಮಿ ಹಾಗೂ ಸಂಗೀತ ನಾಟಕ ಅಕಾಡೆಮಿ ಕೂಡ ಜನಪದ ಸಾಹಿತ್ಯ, ಸಂಸ್ಕೃತಿಯ ಸಂರಕ್ಷಣೆಗೆ ಸಾಕಷ್ಟು ಬೆಂಬಲ ನೀಡುತ್ತಿವೆ. ಸಂಗೀತ ನಾಟಕ ಅಕಾಡೆಮಿ ಹಲವಾರು ಜಾನಪದ ಉತ್ಸವಗಳನ್ನು ಏರ್ಪಡಿಸಿದೆ. ಜಾನಪದ ಕಲಾ ಮಾಹಿತಿಕೋಶ ಹಾಗೂ ತೆಯ್ಯಂ ಕುರಿತ ಪುಸ್ತಕಗಳನ್ನೂ ಪ್ರಕಟಿಸಿದೆ. ಜಿ.ಶಂಕರ ಪಿಳ್ಳೈಯವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಪ್ರಮುಖ ಜನಪದ ಕಲಾ ಪ್ರಕಾರಗಳನ್ನು ಚಿತ್ರೀಕರಣಗೊಳಿಸಲಾಗಿದೆ. ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಇದು ಲಭ್ಯವಿದೆ. ಸಾಹಿತ್ಯ ಅಕಾಡೆಮಿಯು ಹಾಡುಗಳ ಸಂಗ್ರಹ ‘ಕೇರಳ ಭಾಷಾ ಗಾನಙಳ್’ ಹಾಗೂ ಬುಡಕಟ್ಟು ಪ್ರತ್ಯೇಕ ಸಂಪುಟಗಳನ್ನು ಪ್ರಕಟಿಸಿದೆ.

ಎಪ್ಪತ್ತರ ದಶಕದಲ್ಲಿ ಬೇರೆ ಬೇರೆ ಸಾಂಸ್ಕೃತಿಕ ಸಂಘಗಳ ಮೂಲಕ ಜಾನಪದ ಚಟುವಟಿಕೆಗೆ ಹೆಚ್ಚಿನ ಆಚರಣೆ ಸಿಗುವಂತಾಯಿತು. ಗ್ರಾಮಗಳ ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ವಿಚಾರಗೋಷ್ಠಿಗಳು, ಚರ್ಚಾ ಕೂಟಗಳು ನಡೆಯುತ್ತಿವೆ. ಜನಪದ ಕಲಾ ಉತ್ಸವಗಳನ್ನು ಕೂಡ ಅಲ್ಲಲ್ಲಿ ಏರ್ಪಡಿಸಲಾಗುತ್ತಿದೆ. ಜನರು ಸಾಂಪ್ರದಾಯಿಕ ಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದು ಅವುಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ರಾಜಕೀಯ ಪಕ್ಷಗಳು ಜನಪದ ಕಲಾ ಪ್ರದರ್ಶನಗಳನ್ನು ತಮ್ಮ ಪ್ರಣಾಳಿಕೆಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಕೇರಳ ಜಾನಪದವು ಸೈದ್ದಾಂತಿಕವಾಗಿ ಆನ್ವಯಿಕ ಜಾನಪದದ ನೆಲೆಯತ್ತ ಸಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳ ಸಂರಕ್ಷಣೆಯ ನಿಟ್ಟಿನಲ್ಲಿ ಅಂಚಿನಲ್ಲಿರುವ ಕಲಾಪ್ರಕಾರಗಳ ಸರಂಕ್ಷಣೆಯ ನಿಟ್ಟಿನಲ್ಲಿ ಇತ್ತೀಚೆಗೆ ಸಾಕಷ್ಟು ಕೆಲಸ ನಡೆಯುತ್ತಿದೆ. ಇದರ ಪರಿಣಾಮವಾಗಿ ಗಣನೀಯ ಜಾನಪದ ಗ್ರಂಥಗಳು ಪ್ರಕಟಗೊಳ್ಳುತ್ತಿವೆ.

ವಿವಿಧ ವಿಶ್ವವಿದ್ಯಾಲಯಗಳಲ್ಲಿರುವ ಮಲಯಾಳಂ ಭಾಷೆ ಮತ್ತು ಸಾಹಿತ್ಯ ವಿಭಾಗಗಳಲ್ಲಿ ಎಂ.ಫಲ್., ಪಿಎಚ್.ಡಿ. ಅಧ್ಯಯನಕ್ಕಾಗಿ ಜಾನಪದ ವಿಷಯವನ್ನು ಆಯ್ಕೆಮಾಡಿಕೊಳ್ಳಲಾಗುತ್ತಿದೆ. ಆದರೂ ಇಂತಹ ಸಂಶೋಧನಾ ಪ್ರಬಂಧಗಳು ಗ್ರಂಥಾಲಯಗಳಲ್ಲಿ ಮೂಲೆ ಪಾಲಾಗುತ್ತಿರುವುದರಿಂದ ಜಾನಪದ ಅಧ್ಯಯನದ ಬೆಳವಣಿಗೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದರೂ ಪ್ರಸ್ತುತ ಜಾನಪದ ಅಧ್ಯಯನವು ಮುಖ್ಯ ವಾಹಿನಿಯತ್ತ ಸರಿಯುತ್ತಿದೆ.

ಪಾಶ್ಚಾತ್ಯ ವಿದ್ವಾಂಸರು ಜಾನಪದ ಅಧ್ಯಯನಕ್ಕೆ ಚಾಲನೆ ನೀಡಿದರು. ಆರಂಭ ಘಟ್ಟದಲ್ಲಿ ಸಂಗ್ರಹ ಮತ್ತು ಪ್ರಕಟಣೆಗೆ ಮಾತ್ರ ಗಮನಹರಿಸಲಾಯಿತು. ಕೇರಳದಲ್ಲಿ ಕೂಡಾ ಇದೇ ಕೆಲಸ ಹೆಚ್ಚಾಗಿ ನಡೆಯಿತು. ಆದರೆ ಈಗ ಜಗತ್ತಿನ ಇತರ ಭಾಗಗಳಲ್ಲಿ ರೂಪಿಸಲಾದ ಸಿದ್ಧಾಂತಗಳತ್ತ ಗಮನಹರಿಸಬೇಕಾದ ಅಗತ್ಯವಿದೆ. ಕೇಳರದಲ್ಲ ವೈಜ್ಞಾನಿಕ ಜಾನಪದ ಅಧ್ಯಯನಕ್ಕೆ ಈಗಿನ ಪರಿಸ್ಥಿತಿ ಹೆಚ್ಚು ಸೂಕ್ತವಾಗಿದೆ.

– ಆರ್.ಪಿ.ಎನ್. ಅನುವಾದ ಬಿ.ಎಸ್.ಎಸ್.