ಕೇರಳದ ಸಾಂಪ್ರದಾಯಿಕ ಆಭರಣಗಳು ಆಭರಣಗಳು ಒಂದು ಸಮುದಾಯದ ಭೌತಿಕ ಸಂಸ್ಕೃತಿಯ ಅಂಗವಾಗಿದೆ. ಭೌತಿಕ ಸಂಸ್ಕೃತಿ ರೂಪುಗೊಳ್ಳಲು ಆಯಾ ಸಮುದಾಯದ ಲೋಕದೃಷ್ಟಿ, ವಾಸಪ್ರದೇಶ, ವೃತ್ತಿ, ಧಾರ್ಮಿಕ ಆಚರಣೆಗಳು, ಆಚಾರವಿಚಾರಗಳು ಹೀಗೆ ಹಲವಾರು ಅಂಶಗಳು ಕಾರಣವಾಗಿದೆ. ಈ ಅಂಶಗಳೆಲ್ಲ ಆಭರಣ ನಿರ್ಮಾಣ ಮತ್ತು ಧಾರಣೆಯಲ್ಲಿ ಸೇರ್ಪಡೆಗೊಂಡಿವೆ.

ಕೇರಳ ಪ್ರಾದೇಶಿಕವಾಗಿಯೂ, ಸಾಮುದಾಯಿಕವಾಗಿಯೂ ವೈರುಧ್ಯಗಳಿಂದ ಕೂಡಿದ ಅನೇಕ ಜಾತಿಗಳಿರುವ ಪ್ರದೇಶವಾಗಿದೆ. ಈ ಜಾತಿ ಸಮುದಾಯಗಳಿಗೆ ಸಮಾನ ಹಾಗೂ ವ್ಯತ್ಯಸ್ತವಾದ ಅನೇಕ ಆಭರಣಗಳಿದ್ದುವು. ಬುಡಕಟ್ಟು ಆದಿವಾಸಿಗಳ ಪರಂಪರಾಗತ ಆಭರಣಗಳು ಪ್ರಕೃತಿಯಲ್ಲಿ ಸಿಗುವ ಹೂ, ಹಣ್ಣು, ಕಾಯಿ, ಎಲೆ ಹಾಗು ಕಲ್ಲುಗಳಿಂದ ತಯಾರಿಸಿದಂಥವು. ಜಾತಿ ಶ್ರೇಣಿಕೃತ ಸಮಾಜದಲ್ಲಿ ವಾಸವಾಗಿದ್ದ ಕೇರಳದ ಜನರು ಸಾಮಾಜಿಕವಾಗಿ, ಆರ್ಥಿಕವಾಗಿ, ಜಾತೀಯವಾಗಿ ತಮ್ಮ ಅಂತಸ್ತನ್ನು ತೋರ್ಪಡಿಸುವಂತೆ ಆಭರಣಗಳನ್ನು ಧರಿಸುತ್ತಿದ್ದರು. ಆಭರಣ ಧಾರಣೆಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು, ಆಚರಣೆಗಳು, ವಿಧಿನಿಷೇಧಗಳು ಕೇರಳ ಸಮಾಜದಲ್ಲಿ ಪ್ರಚಲಿತದಲ್ಲಿವೆ.

ಪ್ರಾಚೀನ ಕಾಲದಲ್ಲಿ ಸ್ತ್ರೀ ಪುರುಷ ಭೇದವಿಲ್ಲದೆ ಕಿವಿ, ಕುತ್ತಿಗೆ, ಸೊಂಟ, ಪಾದ, ಬೆರಳುಗಳಿಗೆ ಮಲಯಾಳಿಗಳು ಆಭರಣಗಳನ್ನು ಧರಿಸುತ್ತಿದ್ದರು. ಸ್ತ್ರೀಯರು ಮೂಗಿನಲ್ಲಿ ಆಭರಣವನ್ನು ಧರಿಸುತ್ತಿದ್ದರು. ಆಭರಣ ಧರಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ಆಚರಣೆಗಳು ಹೆಚ್ಚಿನ ಸಮುದಾಯಗಳಲ್ಲಿ ಚಾಲ್ತಿಯಲ್ಲಿವೆ. ಸೊಂಟಕ್ಕೆ ನೂಲುಕಟ್ಟುವುದು ಅಥವಾ ಸೊಂಟಪಟ್ಟಿ ಕಟ್ಟುವ ವಿಧಿಯನ್ನು ಸಣ್ಣ ಮಕ್ಕಳಿಗೆ ವಿಜೃಂಭಣೆಯಿಂದ ನೆರವೇರಿಸುತ್ತಿದ್ದರು. ೨೦ನೇ ಶತಮಾನದ ಅರ್ಧಭಾಗದ ವರೆಗೆ ಸ್ತ್ರೀಪುರುಷ ಭೇದವಿಲ್ಲದೆ ಕೆಲವು ಸಮುದಾಯಗಳಲ್ಲಿ ಕಿವಿಚುಚ್ಚುವ ಸಂಪ್ರದಾಯವಿತ್ತು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳಲ್ಲಿ ಸ್ತ್ರೀಯರು ಕಿವಿಯ ಮೇಲಿಇನ ಭಾಗವನ್ನು ಚುಚ್ಚಿ ಆಭರಣವನ್ನು ಧರಿಸುವ ಸಂಪ್ರದಾಯವಿತ್ತು. ಆಭರಣಗಳ ತಯಾರಿ ಮತ್ತು ಸಂಬಂಧಪಟ್ಟ ಆಚರಣೆಗಳನ್ನು ಮುಖ್ಯವಾಗಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಅಕ್ಕಸಾಲಿಗರು ನಿರ್ವಹಿಸುತ್ತಿದ್ದರು.

ಆಭರಣಗಳನ್ನು ಧರಿಸುವುದುಧ ಪರಂಪರಾಗತ ಸಂಪ್ರದಾಯವೆಂದು ಸಮಾಜ ನಂಬಿದೆ. ಹಿಂದೂಗಳಲ್ಲಿ ಆಭರಣ ಧರಿಸುವುದರಲ್ಲಿಯೂ ಜಾತಿಭೇದ ಕಂಡುಬರುತ್ತದೆ. ನಂಬೂದಿರಿ ಮಹಿಳೆಯರು ಚಿನ್ನ ಹಾಗೂ ಕಂಚಿನ ಬಳೆಗಳನ್ನು ಧರಿಸಿದರೂ, ಅವರಿಗೆ ಬೆಳ್ಳಿಯ ಬಳೆಗಳು ನಿಷಿದ್ಧ. ಬೆಳ್ಳಿನ ಆಭರಣಗಳನ್ನು ಸಾಮಾನ್ಯವಾಗಿ ಕೆಳಜಾತಿಯವರೂ, ಅಹಿಂದುಗಳೂ ಧರಿಸುತ್ತಿದ್ದರು. ನಂಬೂದಿರಿ ಮಹಿಳೆಯರು ಚೆರುತಾಲಿ, ಮೂನ್ನಿಳಮಣಿ, ಕಳುತ್ತಿಲ, ಕೆಟ್ಟರುಂಬ್, ಕಾಶಾಲಿ, ಪೂತಾಲಿ ಮೊದಲಾದ ಆಭರಣಗಳನ್ನು ಕೊರಳಿಗೆ ಧರಿಸುತ್ತಿದ್ದರು. ಕಿವಿಗೆ ಧರಿಸುತ್ತಿದ್ದ ಆಭರಣದ ಹೆಸರು ಬಿತ್ತ್. ಕಿವಿಯ ದೊಡ್ಡ ರಂಧ್ರದಲ್ಲಿ ಅನೇಕ ಚಿತ್ತ್‌ಗಳನ್ನು ಧರಿಸುತ್ತಿದ್ದರು. ಪ್ರಾಚೀನ ಕಾಲದಲ್ಲಿಯೇ ನಂಬೂದಿರಿಗಳಿಗೆ ಮದುವೆಗೆ ತಾಳಿಕಟ್ಟುವ ಸಂಪ್ರದಾಯವಿತ್ತು. ಎರಡು ತಾಳಿ ಹಾಗೂ ಮೂರು ಮಣಿಗಳನ್ನು ಮಂಗಳಸೂತ್ರದಲ್ಲಿ ಪೋಣಿಸುತ್ತಿದ್ದರು. ನಂಬೂದಿರಿಗಳಲ್ಲಿ ಶ್ರೀಮಂತರು ಕಮಿಳ್‌ತಾಲಿಯನ್ನೂ, ಉಳಿದವರು ಮಲತ್ತಿತಾಲಿಯನ್ನು ಧರಿಸುತ್ತಿದ್ದರು. ಇಲ್ಲಿ ತಾಳಿ ಒಂದು ಆಭರಣವಾಗಿಯೂ, ಮದುವೆಯ ಸಂಕೇತವಾಗಿಯೂ, ಸಾಮಾಜಿಕ ಸ್ಥಿತಿಗತಿಯ ಪ್ರತೀಕವಾಗಿಯೂ ಬಳಕೆಯಾಗುತ್ತಿತ್ತು. ಮುತ್ತೈದೆಯರು ಆಭರಣಗಳನ್ನು ಧರಿಸಬೇಕು ಎಂಬ ನಂಬಿಕೆಯಂತೆ, ವಿಧವೆಯರು ಆಭರಣಗಳನ್ನು ಧರಿಸಬಾರದು ಎಂಬ ನಿಷೇಧವೂ ಸಮಾಜದಲ್ಲಿ ಬಲವಾಗಿತ್ತು. ವಿಧವೆಯರು ಸನ್ಯಾಸ ಹಾಗೂ ವೈರಾಗ್ಯ ಸಂಕೇತವಾದ ರುದ್ರಾಕ್ಷಿ ಮಾಲೆ ಧರಿಸಬಹುದು. ನಂಬೂದಿರಿ ಪುರುಷರು ಕಿವಿ ಚುಚ್ಚಿ ‘ಒಂಟಿ’ಯನ್ನು ಧರಿಸುತ್ತಿದ್ದರು.

ಕೇರಳದಲ್ಲಿ ಇಂದು ಮದುವೆಗೆ ಎಲ್ಲ ಜಾತಿಯ ಜನರೂ ತಾಳಿಯನ್ನು ಬಳಸುತ್ತಾರೆ. ಪ್ರಾಚೀನ ಕಾಲದಲ್ಲಿ ‘ತಾಳಿಕೆಟ್ಟ್‌ಕಲ್ಯಾಣ’ ಎಂಬ ಸಂಪ್ರದಾಯ ಕೆಲವು ಸಮುದಾಯಗಳಲ್ಲಿ ರೂಢಿಯಲ್ಲಿತ್ತು. ಸಾಮುದಾಯಿಕವಾಗಿ ಸ್ತ್ರೀಯರನ್ನು ಅಂಗೀಕರಿಸುವ, ಪ್ರಾಯಪೂರ್ತಿ ಪ್ರವೇಶದ ಆಚರಣೆ ಇದೆ. ಈ ಸಂದರ್ಭದಲ್ಲಿ ತಾಳಿಯನ್ನು ಕಟ್ಟುತ್ತಿದ್ದರು. ಬೇರೆ ಬೇರೆ ಆಕಾರಗಳಲ್ಲಿರುವ ತಾಳಿಗಳನ್ನು ವಿವಿಧ ಜಾತಿಯವರು ಬಳಸುತ್ತಿದ್ದರು. ಮದುವೆಯಲ್ಲಿ ತಾಳಿಕಟ್ಟುವ ಸಂಪ್ರದಾಯ ಬ್ರಾಹ್ಮಣರಲ್ಲಿದೆ. ನೂಲಿನಲ್ಲಿ ಪೋಣಿಸಿದ ಎರಡು ತಾಳಿಗಳನ್ನು ಕಟ್ಟುತ್ತಿದ್ದರು. ಇದು ಶಿವ ಮತ್ತು ಶಕ್ತಿಯ ಪ್ರತೀಕವೆಂದು ನಂಬಿಕೆ. ಆಭರಣ ನಿರ್ಮಿಸುವ ಅಕ್ಕಸಾಲಿಗರು ನಾಗ ಹೆಡೆಯ ಆಕೃತಿಯ ತಾಳಿಯನ್ನು ಮದುವೆ ಮಂಟಪದಲ್ಲಿ ನಿರ್ಮಿಸಿಕೊಡುತ್ತಿದ್ದರು.

ತೀಯ ಸಮುದಾಯದಲ್ಲಿ ಮದುವೆಯ ದಿವಸ ಸಂಬಂಧಪಟ್ಟ ಅಕ್ಕಸಾಲಿಗ ವಧುವಿನ ಕಿವಿ ಚುಚ್ಚಿ, ಚಿತ್ತ್ ಆಭರಣ ಧರಿಸುವ ಸಂಪ್ರದಾಯ ರೂಢಿಯಲ್ಲಿತ್ತು. ಕಿವಿಯ ಮೇಲ್ಭಾಗದಲ್ಲಿ ಧರಿಸುವ ಚಿತ್ತ್ ಹಾಗೂ ಸ್ವಲ್ಪ ಕೆಳಗೆ ಧರಿಸುವ ಕೊಪ್ಪು ತೀಯ ಮಹಿಳೆಯರ ವೈಶಿಷ್ಟ್ಯವಾಗಿತ್ತು.

ನವಜಾತ ಶಿಶುವಿಗೆ ಸೊಂಟದಲ್ಲಿ ನೂಲು ಧರಿಸುವ ವಿಧಿಯಲ್ಲಿಯೂ ಜಾತಿಗಳೊಳಗೆ ವ್ಯತ್ಯಾಸಗಳಿವೆ. ಹಿಂದೂಗಳು ಕಪ್ಪು ನೂಲು ಹಾಗೂ ಮುಸ್ಲಿಮರು ಕೆಂಪು ನೂಲು ಬಳಸುತ್ತಿದ್ದರು. ಮುಸ್ಲಿಮರು ‘ಇಚ್ಚಿ’ ಹಾಗೂ ‘ಅರತಾಲಿ’ ಎಂಬ ಒಡ್ಯಾಣಗಳನ್ನು ಧರಿಸುತ್ತಿದ್ದರು. ಇಂದು ಈ ಆಭರಣಗಳಿಗೆ ಕೂಂಬ್, ಪಾತ್ತ್ ಎಂಬ ಹೆಸರುಗಳಿವೆ.

ಕೇರಳದ ಮುಸ್ಲಿಮರ ಆಭರಣಗಳು ವೈಶಿಷ್ಟ್ಯಪೂರ್ಣವಾಗಿವೆ. ಕೇರಳ ಶೈಲಿಯ ಜತೆಗೆ ಅರೇಬಿಯನ್, ಪರ್ಶಿಯನ್ ಶೈಲಿಗಳ ಪ್ರಭಾವವೂ ಅವರ ಆಭರಣಗಳಲ್ಲಿದೆ. ಮುಸ್ಲಿಂ ಮಹಿಳೆಯರು ಕಿವಿಗೆ ‘ಅಲಿಕತ್’ ಎಂಬ ಆಭರಣಗಳನ್ನು ಧರಿಸುತ್ತಾರೆ. ಒಂದು ಕಿವಿಯಲ್ಲಿ ಧರಿಸಿದ ಆಲಿಕತ್ತ್‌ಗಳ ಸಂಖ್ಯೆಗಿಂತ ಒಂದು ಹೆಚ್ಚು ಅಥವಾ ಕಡಿಮೆ ಸಂಖ್ಯೆಯನ್ನು ಇನ್ನೊಂದು ಕಿವಿಯಲ್ಲಿ ಧರಿಸುವುದು ಕ್ರಮ. ಇವರ ಕೆಳಗಿವಿಯನ್ನು ನವಜಾತ ಶಿಶುವಾಗಿರುವಾಗಲೇ ಚುಚ್ಚುತ್ತಾರೆ. ಆದರೆ ಕಿವಿಯ ಮೇಲ್ಭಾಗವನ್ನು ೫ – ೮ ವರ್ಷ ಪ್ರಾಯದಲ್ಲಿ ಚುಚ್ಚುತ್ತಾರೆ. ಅಲಿಕತ್ತ್ ಆಭರಣದಲ್ಲಿ ಪ್ರಾದೇಶಿಕ ರೂಪ ವ್ಯತ್ಯಾಸಗಳನ್ನು ಗುರುತಿಸಬಹುದು.

ಕಾದಿಲಕರು, ಪೊತ್ತಿಲಕನ್ನಾಡಿ, ವೆಯುರುಕ್ಕ್, ಮುರುತ್ತಿಲಾಟಂ, ಮಿನ್ನಿ, ಅಲಂತೋಡಿ, ಚೆತ್ತುಕೂಡು, ಮುಡಿಮಾಟಿ, ಮಣುಕಾದಿಲ, ಲೋಲಾಕು ಮೊದಲಾದ ಕಿವಿಯ ಆಭರಣಗಳನ್ನು ಮುಸ್ಲಿಂ ಸ್ತ್ರೀಯರು ಧರಿಸುತ್ತಾರೆ. ಸೊಂಟದಲ್ಲಿ ಧರಿಸುವ, ಅರಞಾಣ, ಅರಪಟ್ಟ, ಪೊನ್ನುರುಕು ನೂಲು ಹಾಗೂ ತಲೆಯಲ್ಲಿ ಧರಿಸುವ ಮುಡಿಚಕ್ರ, ಮೂಡಿಪೂನ್, ಪೂರಣಂ ಇಂದಿಗೂ ಮುಸ್ಲಿಂ ವಧುಗಳ ಅಲಂಕಾರಗಳಾಗಿವೆ. ಕಟ್ಟಿವಳ, ಮುಟ್ಟುವಳ, ಚೆತ್ತುವಳ ಮೊದಲಾದ ವಿವಿಧ ಬಳೆಗಳನ್ನು ಮುಸ್ಲಿಂ ಮಹಿಳೆಯರು ಧರಿಸುತ್ತಾರೆ. ತರಿವಳ ಮತ್ತು ಪಿರಿವಳ ಎಂಬ ಬಳೆಯ ಪ್ರಕಾರಗಳನ್ನು ಒಪ್ಪನ ಪ್ರದರ್ಶನಗಳಲ್ಲಿ ಧರಿಸುತ್ತಾರೆ. ಕೊರಲಾರಂ, ಪವನುಮಾಲ, ಕಾಶ್‌ಮಾಲ, ಪೊತಾಲಿತಂಡಮಾಲ, ಬಿತ್ತಪದಕಂ, ಅವಿಲ್‌ಮೂಲ, ಅಂಜುಪದಕಂ ಮೊದಲಾದ ಹಾರಗಳನ್ನು ಮುಸ್ಲಿಂ ಮಹಿಳೆಯರು ಧರಿಸುತ್ತದ್ದರು. ಮುಸ್ಲಿಂ ಪುರುಷರು ಹರಳು ತುಂಬಿದ ಬೆಳ್ಳಿಯ ಉಂಗುರವನ್ನು ಧರಿಸುತ್ತಿದ್ದರು. ಮುಸ್ಲಿಂ ಪುರುಷರು ಕಿವಿ ಚುಚ್ಚುವುದಿಲ್ಲ. ಹಾಗೆಯೇ ಮಹಿಳೆಯರು ಮೂಗಿಗೆ ಆಭರಣಗಳನ್ನು ಧರಿಸುವ ಕ್ರಮವಿಲ್ಲ.

ಕ್ರಿಶ್ಚಿಯನ್ ಸಮುದಾಯದಲ್ಲಿ ವಿಶಿಷ್ಟ ರೀತಿಯ ಆಭರಣಗಳಿವೆ. ಕಿವಿಯಲ್ಲಿ ಧರಿಸುವ ಮೇಕಾಮೋದಿರಂ, ಮುರಿಶ್, ತುಡಲ್ ಕ್ರಿಶ್ಚಿಯನ್ ಮಹಿಳೆಯರ ಆಭರಣ ವಿಶೇಷಗಳಾಗಿವೆ. ವಲಗ, ಕುರುಕ್ ಮೊದಲಾದ ಕಿವಿಯ ಆಭರಣಗಳು ಸಾಂಪ್ರದಾಯಿಕವಾಗಿವೆ. ಕೈಯಲ್ಲಿ ಕಡಗ, ತೋಳುಬಂದಿಯನ್ನು ಧರಿಸುತ್ತಿದ್ದರು. ತಾಲಿ ಅಥವಾ ಮಿನ್ನು ಕಟ್ಟುವುದು ಮದುವೆಯ ಸಂಪ್ರದಾಯ. ಮದುವೆ ವೇಳೆಯಲ್ಲಿ ತಲೆಯಲ್ಲಿ ‘ವೆಂದನ್‌ಮುಡಿ’ಯಿಂದ ಅಲಂಕರಿಸುವರು. ಕಾಲಿಗೆ ಕಡಗ, ಸೊಂಟಕ್ಕೆ ಒಡ್ಯಾಣ ಮಹಿಳೆಯರಲ್ಲಿ ಪ್ರಚಾರದಲ್ಲಿದ್ದುವು. ಚಿನ್ನ, ಬೆಳ್ಳಿ, ಕಂಚಿನ ಆಭರಣಗಳನ್ನು ಧರಿಸುತ್ತಿದ್ದರು. ಮೂಗಿಗೆ ಆಭರಣ ಧರಿಸುತ್ತಿರಲಿಲ್ಲ.

ಬುಡಕಟ್ಟು ಸಮುದಾಯದವರು ಹಾಗೂ ಕೆಳಜಾತಿಯವರು ಬೆಲೆಬಾಳುವ ಲೋಹಗಳ ಆಭರಗಳಗಳನ್ನು ಧರಿಸುತ್ತಿರಲಿಲ್ಲ. ಹೊಲೆಯರು ಹರಳಿನ ಮಾಲೆ ಧರಿಸುತ್ತಿದ್ದರು. ಬೆಳ್ಳಿಯ ಆಭರಣಗಳೂ ಚಾಲ್ತಿಯಲ್ಲಿದ್ದುವು. ಬುಡಕಟ್ಟು ಸಮುದಾಯಗಳಲ್ಲ ಋತುಮತಿಯಾದ ಮೇಲೆ ಸ್ತ್ರೀಯರು ಆಭರಣಗಳನ್ನು ಧರಿಸುವುದು ಕ್ರಮ. ಪಣಿಯ ಮಹಿಳೆಯರು ಓಲೆ, ಚ್ಯುತಮಣಿ ಹಾಗೂ ಮುರಾವಿ ಎಂಬ ಆಭರಣಗಳನ್ನು ಕಿವಿಯಲ್ಲಿ ಧರಿಸುತ್ತಿದ್ದರು. ಕುರಿಕಲ್ಲೆ, ವೆಳ್ಳಿಕಲ್ಲೆ, ತಾತ್ತಿಕಲ್ಲೆ, ಮಾಲೆ ಎಂಬ ಆಭರಣಗಳನ್ನು ಕೊರಳಿಗೆ ಧರಿಸುತ್ತಿದ್ದರು. ಚೋಲನಾಯ್ಕರು ಒಣಗಿದ ಒಂದು ರೀತಿಯ ಹುಲ್ಲಿನಿಂದ ಬಳೆ ಹಾಗೂ ಮೂಗುತಿಯನ್ನು ನಿರ್ಮಿಸುತ್ತಿದ್ದರು. ಮುದುವಾನ್ ಮಹಿಳೆಯರು ಗಾಜಿನ ಬಳೆಗಳನ್ನೂ, ಕಂಚಿನ ಬಳೆಗಳನ್ನೂ, ಹರಳಿನ ಮಾಲೆಗಳನ್ನೂ ಧರಿಸುತ್ತಿದ್ದರು. ಕಾಡಾರ್ ಸಮುದಾಯದ ಪುರುಷರು ಕಂಚಿನ ಕಿವಿಯಾಭರಣವನ್ನು ಧರಿಸುವರು. ಕಿವಿಗಳಿಗೆ ಓಲೆ ಅಥವಾ ಮರದ ತುಂಡುಗಳನ್ನು ಧರಿಸುತ್ತಿದ್ದರು. ಕಂಚು ಹಾಗೂ ಕಬ್ಬಿಣದ ಬಳೆಗಳನ್ನು ಧರಿಸುತ್ತಿದ್ದರು. ಕುರಿಚ್ಯ ಸಮುದಾಯದ ಮಹಿಳೆಯರು ಕುಸುರಿ ಕೆಲಸಗಳಿರುವ ಬೆಳ್ಳಿಯ ಸೊಂಟ ಪಟ್ಟಿಯನ್ನು ಧರಿಸುವರು. ಕಾಣಿಕಾರ್ ವಿಭಾಗದವರು ಚಿಪ್ಪಿಗಳಿಂದ ಪೋಣಿಸಿದ ಹಾರವನ್ನೂ, ಕಬ್ಬಿಣ, ಹಿತ್ತಾಳೆಯಿಂದ ಮಾಡಿದ ಬಳೆಗಳನ್ನು ಧರಿಸುತ್ತಿದ್ದರು. ಬುಡಕಟ್ಟು ಸಮುದಾಯಗಳಲ್ಲಿ ವಿಭಿನ್ನವಾದ ಆಭರಣಗಳು ಪ್ರಚಾರದಲ್ಲಿದ್ದವು.

ಆಭರಣಗಳು ಅಲಂಕಾರಕ್ಕೆ ಮಾತ್ರವಲ್ಲ. ಸಾಮಾಜಿಕ ಸ್ಥಿತಿ, ಆರ್ಥಿಕ ಸ್ಥಿತಿಯ ಪ್ರತೀಕಗಳೂ ಆಗಿವೆ. ಆಭರಣ ಧರಿಸುವುದರ ಹಿಂದೆ ಇನ್ನೂ ಕೆಲವು ಅಂಶಗಳಿವೆ. ಧಾರ್ಮಿಕ ಆಚರಣೆಗಳ ಅಂಗವಾಗಿ ಆಭರಣಗಳನ್ನು ಧರಿಸುವ ಕ್ರಮ ಇಂದಿಗೂ ರೂಢಿಯಲ್ಲಿದೆ. ಬುಡಕಟ್ಟು ನಾಯಕ ಹಾಗೂ ಬೆಳ್ಚಪಾಡ ಮೊದಲಾದ ವ್ಯಕ್ತಿಗಳು ಧರಿಸುವ ಆಭರಣಗಳನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಮಂತ್ರಿಸಿದ ನೂಲು, ಉರುಕ್ಕು, ಯಂತ್ರಗಳನ್ನು ಧರಿಸುವುದು ಅಲೌಕಿಕ ಶಕ್ತಿಗಳ ಬಾಧೆಯಿಂದ ರಕ್ಷಣೆ ಪಡೆಯುವುದಕ್ಕಾಗಿದೆ. ಇಂತಹ ಉದ್ದೇಶಗಳೂ ಆಭರಣ ಧರಿಸುವುದರ ಹಿಂದೆ ಇತ್ತು ಎಂಬುದಕ್ಕೆ ಇದು ನಿದರ್ಶನ. ಮಂತ್ರವಾದದ ಒಂದು ನೆಲೆಯನ್ನು ಇಂದಿಗೂ ಆಭರಣ ಧಾರಣೆಯಲ್ಲಿ ಕಾಣಬಹುದು. ಪ್ರಾಚೀನ ಕಾಲದ ಮನುಷ್ಯ ಪ್ರಕೃತಿಯ ವಿಕೋಪಗಳನ್ನು ಎದುರಿಸಲೂ, ಅಲೌಕಿಕ ಶಕ್ತಿಗಳನ್ನು ತೃಪ್ತಿಪಡಿಸಲೂ ದೇಹದಲ್ಲಿ ಆಭರಣಗಳನ್ನು ಧರಿಸಿದ. ಹೂ, ಕಾಯಿ, ಎಲೆ, ಚರ್ಮ, ಎಲುಬು, ಕಲ್ಲುಗಳನ್ನು ಅದಕ್ಕಾಗಿ ಬಳಸಿದ. ಈ ಆಭರಣಗಳ ಮುಂದುವರಿಕೆಯೇ ಇಂದಿನ ಆಭರಣಗಳು. ಹಿಂದಿನ ಉದ್ದೇಶ ಹಾಗೂ ಕಾರಣಗಳು ವ್ಯತ್ಯಾಸವಾಗಿದ್ದರೂ, ಅಲೌಕಿಕ ಶಕ್ತಿಗಳನ್ನು ತೃಪ್ತಿಪಡಿಸುವುದು, ಕಣ್ಣು ತಾಗದಿರಲು ಮತ್ತು ಭಾಗ್ಯಸಿದ್ಧಿಗಾಗಿ ಇಂದು ಆಭರಣಗಳನ್ನು ಧರಿಸುತ್ತಿದ್ದಾರೆ.

ಇಂದಿನ ಆಭರಣಗಳು ಜಾತಿವ್ಯವಸ್ಥೆಯನ್ನು ಅಥವಾ ಸಾಮಾಜಿಕ ಸ್ಥಿತಿಯನ್ನು ಸೂಚಿಸುವುದಿಲ್ಲ. ಆಭರಣಗಳು ಹಳೆಯ ಸಮಾಜ ವ್ಯವಸ್ಥೆಯಿಂದ ಬೇರೆಯಾಗಿ, ಜಾಗತಿಕ ಮಟ್ಟದ ದೃಷ್ಟಿಕೋನದಲ್ಲಿ ಬದಲಾಗಿದೆ. ಜಾಗತಿಕ ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಯ ಸದ್ಯದ ಪರಿಸ್ಥಿತಿಗೆ ಪರಂಪರಾಗತ ಆಭರಣಗಳು ಸೇರಿಹೋಗಿವೆ.

– ಪಿ.ವಿ.ಕೆ. ಅನುವಾದ ಎನ್.ಎಸ್.

ಕೇರಳದ ಹುತ್ತರಿ ಬೇಸಾಯಕ್ಕೆ ಸಂಬಂಧಿಸಿದ ಮುಖ್ಯ ಹಬ್ಬವಾದ ಹುತ್ತರಿಯ (ಹೊಸಕ್ಕಿ) ಸಿಂಹಮಾಸ (ಆಗಸ್ಟ್‌, ಸೆಪ್ಟಂಬರ್)ದಲ್ಲಿ ದೇವಾಲಯಗಳಲ್ಲೂ, ಮನೆಗಳಲ್ಲೂ ಆಚರಿಸಲ್ಪಡುತ್ತದೆ. ಸ್ತ್ರೀಯರಿಗೆ ಪ್ರಾಧಾನ್ಯವಿರುವ ಈ ಹಬ್ಬದ ದಿನ, ಮುಹೂರ್ತ ಇತ್ಯಾದಿಗಳನ್ನು ಜ್ಯೋತಿಷ್ಯರು ನಿಶ್ಚಯಿಸುತ್ತಾರೆ. ಹೊಸ ಅಕ್ಕಿಯ ಊಟವನ್ನು ಮೊದಲ ಬಾರಿಗೆ ಮಾಡುವ ದಿನವಿದು. ವರ್ಷವಿಡೀ ಕುಟುಂಬದ ಎಲ್ಲ ಸದಸ್ಯರಿಗೂ ಆಹಾರ ದೊರೆಯುವಂತಾಗಲೆಂಬ ಹಾರೈಕೆ ಈ ಆಚರಣೆಯ ಹಿಂದೆ ಅಡಗಿದೆ.

ಮನೆಗಳಲ್ಲಿ ಕಿರುಹುತ್ತರಿ, ಹಿರಿಹುತ್ತರಿ – ಎಂದು ಎರಡು ಹುತ್ತರಿಗಳನ್ನು ಆಚರಿಸುವುದಿದೆ. ದೇವಾಲಯ / ದೈವಸ್ಥಾನಗಳಲ್ಲಿ ತೀರ್ಮಾನಿಸಿದ ದಿನಗಳ ಮುಹೂರ್ತದಲ್ಲಿ ಕಿರುಹುತ್ತರಿಯನ್ನು ಆಚರಿಸಲಾಗುತ್ತದೆ. ಮುಹೂರ್ತದಲ್ಲಿ ದೇವಾಲಯ ದೈವಾಲಯಗಳಲ್ಲಿ ಕದಿನ ಸಿಡಿಮದ್ದಿನ ಸದ್ದು ಕೇಳಿದಾಗ ಈಗಾಗಲೇ ಮಿಂದು ಬೊಟ್ಟಿಟ್ಟು ಸಿದ್ಧವಾಗಿರುವ ಹೆಂಗಸರು ಮತ್ತು ಹೆಣ್ಮಕ್ಕಳನ್ನು ಬಿಳಿಬಟ್ಟೆಯನ್ನೂ ಕಂಬಳಿಯನ್ನೂ ಹಾಸಿ ಗೃಹಿಣಿ ಕುಳ್ಳಿರಿಸುತ್ತಾಳೆ. ಅಕ್ಕಿಹುಡಿ, ತೆಂಗಿನಕಾಯಿ, ಬೆಲ್ಲ ಮುಂತಾದುವನ್ನು ಸೇರಿಸಿ ಮಾಡಿದ ಉಂಡೆಯ ಮೇಲೆ ಗದ್ದೆಯಿಂದ ತಂದ ಹೊಸ ಬತ್ತದ ತೆನೆಗಳಿಂದ ತೆಗೆದ ಬತ್ತವನ್ನೂ ಅದರ ಮೇಲೆ ಕಾಳುಮೆಣಸನ್ನೂ, ಬೆಣ್ಣೆ, ಜೇನು ಸೇರಿಸಿ ತಯಾರಿಸಿದ ‘ಆಕ್ರಮಣ’ ಎಂಬ ತಿಂಡಿಯನ್ನೂ ಕೆಸುವಿನ ಎಲೆಯಲ್ಲಿ (ಕೆಲವೆಡೆ ಬಾಳೆಯ ತುದಿ ಎಲೆಯಲ್ಲಿ) ಇಟ್ಟು ಅವರಿಗೆ ನೀಡಲಾಗುತ್ತದೆ. ಕೊಯ್ಲು ಮುಗಿದು ಹೊಸ ಬತ್ತವು ಮನೆಯಲ್ಲಿ ಸಂಗ್ರಹವಾದ ಬಳಿಕ ಹುತ್ತರಿಯನ್ನು ಆಚರಿಸುವುದಿದ್ದರೆ ಹೊಸ ಬತ್ತದಿಂದ ಅವಲಕ್ಕಿಯನ್ನು ತಯಾರಿಸಿಯೇ ಹೊಸ ಅಕ್ಕಿಯನ್ನು ಹುರಿದು ಅದಕ್ಕೆ ಬೆಲ್ಲ, ತೆಂಗಿನಕಾಯಿ,ತುಪ್ಪ ಮುಂತಾದುವನ್ನು ಸೇರಿಸಿ ‘ಹುತ್ತರಿಯುಂಡೆ’ಗಳನ್ನು ತಯಾರಿಸಿಯೇ ಆಚರಿಸುವ ಕ್ರಮವೂ ಇದೆ. ಮನೆಯ ಸಾಂಪತ್ತಿಕ ಸ್ಥಿತಿಯನ್ನು ಹೊಂದಿಕೊಂಡು ಕಿರು ಹುತ್ತರಿಯ ಬಳಿಕ ಹಿರಿಹುತ್ತರಿಯನ್ನೂ ಆಚರಿಸುವುದಿದೆ. ಬಡವರಿಗೆ ಅಷ್ಟು ತಾಕತ್ತು ಇ‌ಲ್ಲವಾದುದರಿಂದ ಹಿರಿಹುತ್ತರಿಯನ್ನು ಆಚರಿಸುವುದಿಲ್ಲ. ಮನೆಯವರು ನಿಶ್ಚಯಿಸಿದ ದಿನ ಕೆಲಸದ ಆಳುಗಳನ್ನು ಆಶ್ರಿತರನ್ನೂ ಕರೆದು ಭಾರಿ ಭೋಜನವನ್ನು ನೀಡುವುದು ಹಿರಿಹುತ್ತರಿಯ ಒಂದು ಪ್ರಧಾನ ಲಕ್ಷ್ಯವಾಗಿದೆ.

ಈ ಆಚರಣೆಯಲ್ಲಿ ಪ್ರಾದೇಶಿಕ ಭೇದ ಕಂಡುಬರುತ್ತದೆ. ಉದಾಹರಣೆಗೆ, ತ್ರಿಚ್ಚೂರು ಜಿಲ್ಲೆಯಲ್ಲಿ ಹುತ್ತರಿಯುಂಡೆಯನ್ನು ತಿನ್ನುವ ಪರಿಪಾಠವಿದ್ದರೂ ಹೊಸ ಅಕ್ಕಿಯಿಂದ ತಯಾರಿಸುವ ಪಾಯಸಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಹುತ್ತರಿ ಪಾಯಸದ ಜತೆ ಕಾಳುಮೆಣಸಿನ ಎಲೆ, ತಗತೆಯ ಎಲೆ, ಹುತ್ತರಿ ಎಲೆ ಮುಂತಾದುವನ್ನು ಸೇರಿಸಿ ಬೇಯಿಸಿ ಬಡಿಸುವುದೂ ವಿಶೇಷವಾಗಿದೆ. ಹುತ್ತರಿಪಾಯಸಕ್ಕೆ ಹಣ್ಣುಗಳನ್ನು ಸೇರಿಸುತ್ತಾರೆ. ಜತೆಗೆ ಕಲ್ಲು, ಬತ್ತ, ಚುಂಡಕಾಯಿಗಳನ್ನೂ ಸೇರಿಸುತ್ತಾರೆ. ಪಾಯಸ ತಿನ್ನುವಾಗ ಬತ್ತ ಜಗಿಯಲು ಸಿಕ್ಕಿದರೆ ಒಳ್ಳಯದು, ಅಂತೆಯೇ ಕಲ್ಲು ಮಸಿ ತುಂಡು ಸಿಕ್ಕರೆ ಕೆಡುಕು. ಹೀಗೆ ಭವಿಷ್ಯತ್ತನ್ನೂ ಹೇಳುವ ರೀತಿಯಲ್ಲಿ ಆಚರಣೆಯನ್ನು ರೂಪಿಸಿಕೊಳ್ಳಲಾಗಿದೆ.

ಹುತ್ತರಿಗೆ ಸಂಬಂಧಿಸಿದಂತೆ ಆಯಾ ವರ್ಷ ಉಂಟಾಗುವ ಕಷ್ಟಸುಖಗಳನ್ನು ಅಂದಾಜಿಸುವ ಇನ್ನೂ ಬೇರೆ ಬೇರೆ ಕಾರ್ಯಕ್ರಮಗಳು ವಿಭಿನ್ನ ಪ್ರದೇಶಗಳಲ್ಲಿ ಚಾಲ್ತಿಯಲ್ಲಿವೆ. ತಾಮ್ರದ ಕೊಡಪಾನವನ್ನು ತೆಗೆದುಕೊಂಡು ಅದರಲ್ಲಿ ಬತ್ತ, ಅಕ್ಕಿ, ಹಣ, ಹೂವು, ಗಂಧ, ಮಸಿತುಂಡು, ಹಳದಿ ತುಂಡು, ಕಬ್ಬಿಣ ಮುಂತಾದವುಗಳನ್ನು ಬೇರೆ ಬೇರೆಯಾಗಿ ಕಟ್ಟಿ, ಕೊಡದ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಮುಚ್ಚಿಡುತ್ತಾರೆ. ಊಟದ ಬಳಿಕ ಮನೆಯ ಅತ್ಯಂತ ಕಿರಿಯ ವ್ಯಕ್ತಿ ಕೊಡದೊಳಗಿನ ಒಂದು ಕಟ್ಟನ್ನು ಎತ್ತುತ್ತಾರೆ. ಹೀಗೆ ಮೂರು ಬಾರಿ ಕಟ್ಟುಗಳನ್ನು ತೆಗೆದು ಹತ್ತಿರ ಹತ್ತಿರವೇ ಇಡುತ್ತಾನೆ. ಪಾಯಸದಿಂದ ಸಿಗುವ ವಸ್ತು ಮತ್ತು ಕೊಡದಿಂದ ತೆಗೆದ ವಸ್ತುಗಳನ್ನು ಪರಾಮರ್ಶಿಸಿ ಒಳ್ಳೆದು – ಕೆಟ್ಟುದನ್ನು ನಿಷ್ಕರ್ಷಿಸುತ್ತಾರೆ.

ದೇವಾಲಯದ ಹುತ್ತರಿ: ದೇವಾಲಯಗಳಲ್ಲಿ ಹುತ್ತರಿ ಕಾರ್ಯಕ್ರಮಕ್ಕೂ ಮನೆಗಳಲ್ಲಿಯ ಹುತ್ತರಿ ಕಾರ್ಯಕ್ರಮಕ್ಕೂ ವ್ಯತ್ಯಾಸವಿದೆ. ಮುಹೂರ್ತ ನೋಡಿ ಹುತ್ತರಿ ತೀರ್ಮಾನವಾದಂತೆ ಅಂದಿನ ದಿನ ಬೆಳಗ್ಗೇನೇ ದೇವಾಲಯದ ಬಾಗಿಲು ತೆಗೆದು ವಿಶೇಷ ಸೇವೆಗಳನ್ನು (ದೇವತಾ ಪ್ರೀತಿಗಾಗಿ ದೀಪ, ಧೂಪ, ನೈವೇದ್ಯಾದಗಿಳನ್ನು ಅರ್ಪಿಸಿ) ನಿರ್ವಹಿಸುತ್ತಾರೆ ಬಳಿಕ ಹೊಸ ಬತ್ತದಿಂದ ತಯಾರಿಸಿದ ಅವಲಕ್ಕಿ ಮತ್ತು ಬೆಳ್ತಿಗೆ ಅಕ್ಕಿಗಳನ್ನು ದೇವತೆಗೆ ಸಮರ್ಪಿಸುತ್ತಾರೆ. ಭಕ್ತರನ್ನು ಕರೆದು ಪ್ರಸಾದವನ್ನು ನೀಡುತ್ತಾರೆ.

ದೇವಾಲಯಗಳ ಹುತ್ತರಿ ಆಚರಣೆಯಲ್ಲಿಯೂ ವ್ಯತ್ಯಾಸಗಳಿವೆ. ಕುನ್ನತ್ತೂರ್‌ ಪಾಡಿ ಎಂಬಲ್ಲಿಯ ಮುತ್ತಪ್ಪನ್ ಸ್ಥಾನದಲ್ಲಿ ಕನ್ನಿ ತಿಂಗಳಲ್ಲಿ (ಅಕ್ಟೋಬರ್ – ನವಂಬರ್) ಹುತ್ತರಿಯನ್ನು ನಡೆಸುತ್ತಾರೆ. ಮುಹೂರ್ತದ ದಿನವನ್ನು ನಿಶ್ಚೈಯಿಸದರೆ ಅಂದಿನ ಬೆಳಗ್ಗೆ ದೈವ ವೆಳ್ಳಾಟ(ದೈವೀ ಪ್ರತೀಕ ಪುರುಷರು ನಡೆಸುವ ದೈವಸಂಬಂಧಿ ಆಚರಣೆ) ನಡೆಯುತ್ತದೆ. ಸಂಜೆ ವಾಣವರಿಂದ (ಪ್ರದೇಶದ ಒಡೆಯನಾದ ಶ್ರೀಮಂತ ಆಢ್ಯ) ಪುತ್ತರಿಚೂಟ್ಟ್ ನಡೆಯುತ್ತದೆ. ಮರುದಿನ ಬೆಳಗ್ಗೆ ವಾಣವರಿಂದ ಮರುಹುತ್ತರಿ. ಇವುಗಳನ್ನೆಲ್ಲ ಒಟ್ಟಾಗಿ ‘ಹುತ್ತರಿ ವೆಳ್ಳಾಟಂ’ ಎಂದು ಕರೆದಿದ್ದಾರೆ. ದೈವಸ್ಥಾನಕ್ಕೆ ಸಂಬಂಧಿಸಿದ ಗದ್ದೆಯಿಂದ ಹೊಲತಿಯರು ಕುಯಿದುತಂದ ಬತ್ತವನ್ನು ಒಣಗಿಸಿ ಕುಟ್ಟಿ ಬೆಳ್ತಿಗೆ ಅಕ್ಕಿಯನ್ನು ಮಾಡಿಕೊಂಡು (ಮುತ್ತಪ್ಪನ ಪ್ರಧಾನ ಹರಕೆಗಳು) ಇರಿಸಿದ ಬಳಿಕವೇ ವೆಳ್ಳಾಟ ಪ್ರಾರಂಭವಾಗುತ್ತದೆ. ಬಂದು ಸೇರಿದ ಭಕ್ತರಿಗೆ ಮುಂದೆ ಹೊಸಕ್ಕಿಯ ಊಟವನ್ನು ನೀಡಲಾಗುತ್ತದೆ. ಹೀಗೆ ಮುತ್ತಪ್ಪನ ಅನುಗ್ರಹ ಪಡೆದ ಬಳಿಕವಷ್ಟೆ ಮುತ್ತಪ್ಪನಿಗೆ ಸಂಬಂಧಿಸಿದ ಇತರ ದೈವಸ್ಥಾನಗಳಲ್ಲೂ ಹುತ್ತರಿ ನಡೆಸಬೇಕು.

ಇಂದು ಹುತ್ತರಿಯ ಆಚರಣೆ ದೇವಾಲಯಗಳಲ್ಲೂ ದೈವ ಸ್ಥಾನಗಳಲ್ಲೂ ವಿರಳವಾಗುತ್ತದೆ. ಮನೆಗಳಲ್ಲೂ ಈ ಆಚರಣೆ ಹೆಚ್ಚು ಕಡಿಮೆ ನಿಂತೇ ಹೋದಂತಿಂದೆ. ಬೇಸಾಯದ ಅವನತಿಯೇ ಇದಕ್ಕೆ ಪ್ರಧಾನ ಕಾರಣ.

ಹುತ್ತರಿಗೆ ಸಂಬಂಧಿಸಿದಂತಗೆ ಹೆಚ್ಚಿನ ಅಧ್ಯಯನಗಳು ನಡೆದಂತಿಲ್ಲ. ವಿಶಿಷ್ಟವಾದ ಜಾತಿಗಳಿಗೆ ಸಂಬಂಧಿಸಿದ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಅಧ್ಯಯನವೇನೋ ನಡೆದಿದೆ. ಅಂತಹ ಕೆಲವು ಸೂಚನೆಗಳನ್ನು ಕೇರಳ ಫೋಕ್‌ಲೋರ್ ಅಕಾಡೆಮಿಯ ‘ಜೀವಿತವುಂ ಸಂಸ್ಕಾರವುಂ’ ಎಂಬ ಕೃತಿ ಸಂಪುಟಗಳಲ್ಲಿ ನೋಡಬಹುದಾಗಿದೆ. ಎಂ.ವಿ. ವಿಷ್ಣು ನಂಬೂದಿರಿಯವರ ‘ಪೋಕ್‌ಲೋರ್ ನಿಘಂಟು’ ವಿನಲ್ಲೂ ಹುತ್ತರಿಯ ಬಗೆಗೆ ವಿವರಣೆಗಳಿವೆ.

– ವಿ.ಎಂ.ಯು. ಅನುವಾದ ಕೆ.ಕೆ.

ಕೇರಳೀಯ ಜನಪದ ಸಂಗೀತ ಡಿಸೆಂಬರ ತಿಂಗಳ ಅರ್ಧದಿಂದ ಮುಂದಿನ ನಾಲ್ಕೈದು ತಿಂಗಳು ಉತ್ತರ ಕೇರಳದಲ್ಲಿ ತೆಯ್ಯಂನ ಕಾಲಾವಧಿ. ಕೋಪಾಳರಿಂದ ತೊಡಗಿ ಪೆರುವಣ್ಣಾನರ ತನಕದ ವಿಭಿನ್ನ ಸಮುದಾಯದವರು ಆಚಾರಾನುಸಾರವಾಗಿ ತೆಯ್ಯಂ ಕಟ್ಟುತ್ತಾರೆ. ನೂರಾರು ತೆಯ್ಯಂಗಳು. ಅವುಳಗ ಭಾಷೆ ತುಳು ಅಥವಾ ಮಲಯಾಳ. ಮಲಯಾಳಂ ಮಾತನಾಡುವ ತೆಯ್ಯಂಗಳ ತೋಟ್ಟಂ (ಪಾಡ್ಡನ)ಗಳನ್ನು ಕೇಳಬೇಕು. ಪ್ರತಿಯೊಂದು ತೋಟ್ಟಂನ ಪ್ರಸ್ತುತಿ ಆಯಾ ತೆಯ್ಯದ ವ್ಯಕ್ತಿತ್ವಕ್ಕೆ ಅನುಗುಣವಾಗಿರುತ್ತದೆ. ಗುಳಿಗನ್ ತೋಟ್ಟಂನ ಲಯವು ಮುಚ್ಚಿಲೋಟ್ಟ್‌ ಭಗವತಿ ತೋಟ್ಟಂಗೆ ಇಲ್ಲ. ಮೊದಲಿನದಕ್ಕೆ ರಾಜನ ಅಂಶವು ಹೆಚ್ಚಾಗಿದ್ದರೆ ಎರಡನೆಯದಕ್ಕೆ ಸಾತ್ವಿಕ ಅಂಶವು ಹೆಚ್ಚು. ಮಾಕ್ಕಪ್ಪೋದಿ (ಒಂದು ಸ್ತ್ರೀ ದೈವ) ತೋಟ್ಟಂ ಶೋಕಭಾವ ಪರಿಪುಷ್ಪವಾದುದು. ಸಾವಿರಾರು ಸಂಖ್ಯೆಯ ಸ್ತ್ರೀಯರು ಆರೇಳು ಗಂಟೆಗಳ ಕಾಲ ಅದನ್ನು ಕೇಳಿ ಭಾವ ಪರವಶರಾಗುತ್ತಾರೆ. ತೆಯ್ಯತೋಟ್ಟಂಗಳ ಸ್ವರೂಪವು ಅನುಷ್ಠಾನಪರ ಮತ್ತು ಧಾರ್ಮಿಕ. ಇತರ ಹಾಡುಗಳೋ? ಅವು ಕೇರಳ ತೀರದಲ್ಲಿ ಅಲೆಗಳು ಎರಗುವ ಹಾಗೆ ಕೇಳುತ್ತಲೇ ಇರುತ್ತವೆ.

ಸೋಪಾನ ಸಂಗೀತ: ಹಲವು ವಿದ್ವಾಂಸರು ಕೇರಳೀಯ ಸಂಗೀತ ಎಂಬುದು ಒಂದು ಇದೆಯೆಂದೂ ಅದು ಸೋಪಾನ ಸಂಗೀತವೆಂದೂ ಹೇಳುತ್ತಾರೆ. ಸೋಪಾನ ಸಂಗೀತವೆಂದರೆ ಗರ್ಭಗುಡಿಯ ಮುಂದೆ ಹಾಡುವ ಸಂಗೀತ. ದೇವಾಲಯಗಳ ಮುಂದೆ ವಂದಿಗಳು ದೇವರನ್ನು ನಿದ್ದೆಯಿಂದೆಬ್ಬಿಸಲು ವಾದ್ಯಬಾರಿಸಿ ಉತ್ಸವ ನಡೆಸುವಾಗ ಸೋಪಾನ ಹಾಡುಗಳನ್ನು ಆಲಾಪಿಸುತ್ತಾರೆ. ಆದರೆ ಕೇರಳದ ಎಷ್ಟು ದೇವಾಲಯಗಳಲ್ಲಿ ಆ ಕಾರ್ಯಕ್ರಮ ನಡೆಯುತ್ತದೆ? ಈ ಪರಶುರಾಮ ಕ್ಷೇತ್ರದಲ್ಲಿ ಆರಾಧನಾಲಯಗಳಾಗಿ ದೇವಾಲಯಗಳು ಮಾತ್ರ ಇವೆಯೇ? ಲೆಕ್ಕಕ್ಕೆ ಸಿಗದ ಕಾವುಗಳೂ ಕೋಟ್ಟ (ಮ)ಗಳೂ ಇಲ್ಲಿ ಇವೆಯಲ್ಲ. ಇಲ್ಲಿಯೂ ಹಾಡುಗಳು ಇವೆಯಷ್ಟೆ? ಇನ್ನು ಸಂಖ್ಯೆಯಲ್ಲಿ ಇವನ್ನು ಮೀರಿಸುವಷ್ಟು ಮತೇತರ ಹಾಡುಗಳೂ ಇವೆಯಲ್ಲವೆ? ವಡಕ್ಕನ್ ಪಾಟ್ಟುಗಳು ಅಂಥವಕ್ಕೆ ಸೇರುತ್ತವೆ. ಇಲ್ಲಿನ ಅನ್ಯಾದೃಶ್ಯ ಪ್ರಸ್ತುತಿ ಕ್ರಮವನ್ನು ಕೈಬಿಡುವುದು ಹೇಗೆ?

ಇಲ್ಲಿ ಗಮನಿಸಬೇಕಾದ ಅಂಶ ಇದು ಕೇರಳದ ದೇವಾಲಯಗಳು ತ್ರೈವರ್ಣದವರು; ಬ್ರಾಹ್ಮಣರು, ಅಂಬಲವಾಸಿಗಳು, ನಾಯನ್ಮಾರರುಗಳು ಉಸ್ತುವಾರಿಯಲ್ಲಿರುವುದು. ತ್ರೈವರ್ಣದವರ ಕೊಡುಗೆಯಾಗಿ ಮಣಿಪ್ರವಾಳ ಎಂಬ ಒಂದು ಸಾಹಿತ್ಯ ರೂಪವೂ ಸೃಷ್ಟಿಯಾಗಿದೆಯಷ್ಟೇ? ಅಂತೆಯೇ ಸಂಗೀತದಲ್ಲಿಯೂ ಉಂಟಾದ ಒಂದು ಪ್ರಕಾರ ಸೋಪಾನ ಸಂಗೀತ. ಕರ್ನಾಟಕ ಸಂಗೀತಕ್ಕಿಂತ ಹೊರತಾದ ಯಾವ ವೈಶಷ್ಟ್ಯಗಳು ಸೋಪಾನ ಸಂಗೀತಕ್ಕೆ ಇವೆ ಎಂಬುದನ್ನು ಪಂಡಿತರು ಪರಿಶೋಧಿಸಬೇಕಾಗಿದೆ. ಕಥಕ್ಕಳಿ ಸಂಗೀತವೂ ಸೋಪಾನದ ರೀತಿಯಿದೆ. ಅದರ ಕೆಲವು ಪದಗಳನ್ನು ಹಾಡುವುದು ಕರ್ಣಾಟಕ ಸಂಗೀತವನ್ನು ಅದೇರೀತಿ ಅನುಸರಿಸಿ ಅಲ್ಲ.

ತಾಳವಾದ್ಯ ಸಂಗೀತ: ಜನಪದ ಸಂಗೀತದ ಕುರಿತಾಗಿ ಅಷ್ಟೇ ಅಲ್ಲ, ಸಂಗೀತದ ಕುರಿತಾಗಿ ಹೇಳುವಾಗ ಇಷ್ಟನ್ನು ಮಾತ್ರ ಹೇಳಿ ಪಾಶ್ಚಿಮಾತ್ಯರು ಮುಗಿಸಿ ಬಿಡುತ್ತಾರೆ. ತಾಳವಾದ್ಯ ಸಂಗೀತದ ಬಗೆಗೆ ಅವರು ಉಸಿರೆತ್ತುವದಿಲ್ಲ. ಆಧುನಿಕ ವಿಜ್ಞಾನವು ಇದಕ್ಕೆ ಪೂರಕವಾಗಿದೆ. ಮನುಷ್ಯನಾದಕ್ಕೂ ಸುಷಿರ – ತಂತುವಾದ್ಯಗಳ ನಾದಕ್ಕೂ ಆಪೇಕ್ಷಿಕತೆ (Sound perspectine ಇರುವಾಗ – ಎಂದರೆ ಈ ನಾದಗಳು ಅನುಮಂದ್ರ, ಮಂದ್ರ, ಮಧ್ಯ, ತಾರಕ, ಅತಿತಾರ ಎಂಬ ಸ್ಥಾಯಿಗಳಲ್ಲಿ ಸಂಚರಿಸಲು ಸಾಧ್ಯ) ಇರುವಾಗ ತಾಳವಾದ್ಯಗಳ ನಾದಕ್ಕೆ ಈ ಸಾಮರ್ಥ್ಯ ಇಲ್ಲ ಎನ್ನುವುದೇ ಇದಕ್ಕೆ ಕಾರಣ. ಆದರೆ ಸಂಗೀತದ ಇತಿಹಾಸವನ್ನು ಹೇಳುವಾಗ ಪಾಶ್ಚಿಮಾತ್ಯರು ತಾಳವಾದ್ಯಗಳಿಂದ ಆರಂಭಿಸುತ್ತಾರೆ. ಇದು ವಿರೋಧಾಭಾಸ. ಹೀಗಿರುವಾಗ ತಾಳವಾದ್ಯಗಳಿಂದ ಆರಂಭಿಸುತ್ತಾರೆ. ಇದು ವಿರೋಧಾಭಾಸ. ಹೀಗಿರುವಾಗ ನಾವು ತಾಳವಾದ್ಯಗಳ ಕುರಿತು ಕೆಲವು ವಿಚಾರಗಳನ್ನು ಗಮನಿಸೋಣ.

ಮೃದಂಗ, ತಗಿಲ್, ತಬಲಾ, ಟ್ರಿಪ್ಪಲ್‌ಡ್ರಂ, ಜಾಸ್ಸ್ ಮುಂತಾದ ವಿದೇಶಿ ವಾದ್ಯಗಳನ್ನು ಹೊರಗಿಟ್ಟರು ನಮಗೆ ಹಿರಿದಾದ ತಾಳವಾದ್ಯ ಸಂಪತ್ತು ಇದೆ. ದುಡಿ, ದಪ್ಪ್, ಅರಬನ, ಚಕ್ರತಾಳ, ತಾಳ, ಚೇಂಙಲ(ಮ), ಶುದ್ಧ ಮದ್ದಳಂ, ತೊಪ್ಪಿಮದ್ದಳಂ, ಚೆಂಡೆ, ನಕಾರಂ, ಪಾಣಿ, ಡಕ್ಕೆ, ಮಿಳಾವ್ – ಹೀಗೆ ಅವುಗಳ ಪಟ್ಟಿ ಬೆಳೆಯುತ್ತದೆ. ದೇವಾಲಯದ ಒಳಗಾಗಲಿ ಹೊರಗಾಗಲಿ ತಾಳವಾದ್ಯಮೇಳಗಳು ನಮ್ಮಲ್ಲಿ ಸಾಕಷ್ಟು ಇವೆ. ದೇವಾಲಯದ ಜಾತ್ರೆಗಳಿಗೆ ಸಂಬಂಧಿಸಿ ಚೇಂಙಲ, ಶುದ್ಧ ಮದ್ದಳಂ, ಡಕ್ಕೆ (ಉಡಿಕ್ಕೆ), ತಿಮಿಲ, ಪಾಣಾ – ಇವುಗಳನ್ನು ಬಾರಿಸಲಾಗುತ್ತದೆ. ದುಡಿ ಮತ್ತು ದಪ್ಪ್ ದೇವಾಲಯಗಳಲ್ಲಿ ಬಳಕೆಯಾಗುತ್ತಿಲ್ಲ. ಮಿಚಾವ್ ‘ಕೊತ್ತ್’ ಮತ್ತು ಕುಡಿಯಾಟ್ಟಗಳಿಂಗೆ ಸಂಗಾತಿ. ಚೆಂಡೆಗೆ ಸರ್ವತ್ರ ಸ್ಥಾನವಿದೆ. ನಿರ್ಮಾಣದಲ್ಲಿ ಅದು ಸರಳವಾದ ಉಪಕರಣವಾದರೂ ವಿದಗ್ಧರು ಅದನ್ನು ವಾದನದಲ್ಲಿ ಅತ್ಯಂತ ಪರಿಷ್ಕಾರಗೊಳಿಸಿದ್ದಾರೆ. ಕಥಕ್ಕಳಿಯಲ್ಲಿ ಚೆಂಡೆಯು ಪಡೆದಿರುವ ಪಾತ್ರವೇ ಇದಕ್ಕೆ ಸಾಕ್ಷಿ.

ದೇವಾಲಯಗಳಲ್ಲಿ ತಾಳವಾದ್ಯಗಳನ್ನು ಬಾರಿಸುವುದು ಮಾರಾರ್‌ನವರು. ದೇವಾಲಯಗಳ ಹೊರಗೆ ಮಲಯರು, ಪುಲೆಯರು ಮುಂತಾದವರು. ಇವರ ವಾದನದಲ್ಲಿರುವ ವ್ಯತ್ಯಾಸ ಕೇಳಬೇಕಾದ್ದೇ. ಮಾರರ ವಾದನದಲ್ಲಿ ಡೋಲುಚೆಂಡೆಗೆ ಶಬ್ದ ಕಡಿಮೆ. ಉಳಿದವರಲ್ಲಿ ಹೊಡೆತದ ತೀವ್ರತೆ ಹೆಚ್ಚು. ಡೋಲು ಚೆಂಡೆಗೆ ಬೀಳುವ ಪೆಟ್ಟು ಏರುವಲ್ಲಿದೆ ಜಾನಪದ ವೈಶಿಷ್ಟ್ಯ – ಎಂದರೆ ಮಲೆಯರೂ ಪುಲೆಯರೂ ಬಾರಿಸುವಲ್ಲಿದೆ.

ಕೇರಳದ ಮಲಯ ಕರಿಯ, ತಮಿಳಜ ನಾಡಿನ ಪಿಳ್ಳೆ ಕರಿಯ, ಆಫ್ರಿಕಾದ ನೀಗ್ರೋ ಕರಿಯ. ಇತಿಹಾಸ ಪೂರ್ವ ಕಾಲದಲ್ಲಿ ನಡೆದ ಒಂದು ರಕ್ತ ಸಂಬಂಧದ ಪರಿಣಾಮವಾಗಿ ಈ ಕರಿಯ ಬಣ್ಣ ಇದೆಯೆಂದು ನರವಂಶ ಶಾಸ್ತ್ರಿಗಳ ಅಂಬೋಣ. ಅರಬೀ ಸಮುದ್ರ ಉಂಟಾದುದು ಒಂದೋ ಒಂದಷ್ಟು ಭೂಮಿ ಕುಸಿದದ್ದರಿಂದ, ಇಲ್ಲೇ ಆಫ್ರಿಕಾ ಮತ್ತು ಭಾರತ ಒಡೆದು ಪ್ರತ್ಯೇಕಿಸಲ್ಪಟ್ಟುದರಿಂದ, ಹೀಗೆ ಆಗುವುದಕ್ಕಿಂತ ಮೊದಲು ನೀಗ್ರೋವಿನ ಕರಿಯ ಬಣ್ಣ ತಮಿಳಗಂಗೆ ಪ್ರವೇಶಿಸತೆಂಬುದು ಸಾರ. ಮಲಯನ ಡೋಲು ಚೆಂಡೆಗೆ ಧ್ವನಿ ಹೆಚ್ಚು, ತಮಿಳಿನ ತಕಿಲಿಡಂದಲ (ಮ)ಕ್ಕೆ (ಮಾರಾರ್‌ನವರು ಚೆಂಡೆಯಲ್ಲಿರುವ ಡೋಲುಭಾಗವನ್ನು ವಲಂದ ಎನ್ನುತ್ತಾರೆ.) ಆಫ್ರಿಕ್ನ ನೀಗ್ರೋ ಮುಂದುವರಿಕೆಯಾದ ಅಮೇರಿಕನ್ ನೀಗ್ರೋವಿನ ಜಾಸ್ಸಿನ ಬ್ರಾಸ್‌ಡ್ರಮ್ಮಿಗೆ ಧ್ವನಿ ಹೆಚ್ಚು. ಈ ಸಾಮ್ಯವು ಜನಾಂಗೀಯ ಸಾಮ್ಯದ ಫಲಶ್ರುತಿ.

ಜನಪದ ಸಂಗೀತ ಮತ್ತು ಜನಪ್ರಿಯ ಸಂಗೀತ: ಜನಪದ ಸಂಗೀತ ಮತ್ತು ಜನಪ್ರಿಯ ಸಂಗೀತಗಳು ಒಂದೇ ಅಲ್ಲ. ಇತ್ತೀಚಿನ ಕಾಲದಲ್ಲಿ ಜನಪ್ರಿಯ ಸಂಗೀತದ ಹುಟ್ಟು. ಕೆಲವೊಮ್ಮೆ ಜನಪದ,ಕ ಸಂಗೀತವು ಪರಿಷ್ಕೃತವಾಗಿ ಜನಪ್ರಿಯ ಸಂಗೀತವಾಗಬಹುದು, ಇನ್ನೊಂದೆಡೆ ಶಾಸ್ತ್ರೀಯ ಸಂಗೀತದ ಶೈಥಿಲ್ಯದಿಂದ ಕೂಡ. ರೇಡಿಯೋ, ಸಿನೆಮಾ, ನಾಟಕಗಳ ಮೂಲಕ ಸಂಗೀತ ಸಂವಿಧಾನಕಾರರು ಜನಪ್ರಿಯ ಸಂಗೀತವನ್ನು ಹುಟ್ಟು ಹಾಕಿ ಸಾಕಷ್ಟು ಪ್ರಚಾರ ಮಾಡಿದ್ದಾರೆ.

– ಟಿ.ಪಿ.ಎಸ್. ಅನುವಾದ ಕೆ.ಕೆ.