ಕಳಮೆಳುತ್ತ್ದೇವತಾಮೂರ್ತಿಗಳ ಕಾಲ್ಪನಿಕ ರೂಪಗಳನ್ನು ಬಣ್ಣದ ಹುಡಿಗಳಿಂದ ನೆಲದಲ್ಲಿ ಚಿತ್ರಿಸುವ ಕೇರಳದ ಆಚರಣಾತ್ಮಕ ಧಾರ್ಮಿಕ ಕಲೆಯನ್ನು ‘ಕಳುಮೆಳುತ್ತ್’ ಎನ್ನುತ್ತಾರೆ. ಸಾಮಾನ್ಯವಾಗಿ ದೇವಾಲಯ, ಕಾವು, ಮನೆಗಳಲ್ಲಿ ಪಂಚವರ್ಣದ ಹುಡಿಗಳನ್ನು ಉಪಯೋಗಿಸಿ ‘ಕಳಂ’ ಬರೆಯುವರು. ದ್ವಿಮಾನ, ತ್ರಿಮಾನ ರೂಪಗಳಲ್ಲಿ ಕಳಂ ಚಿತ್ರಗಳನ್ನು ಬರೆಯುವ ಸಂಪ್ರದಾಯವಿದೆ.

ಅನೇಕ ಜನಪದ ಕಲಾಪ್ರಕಾರಗಳು ಸೇರ್ಪಡೆಗೊಂಡಿರುವ ಧಾರ್ಮಿಕ ಆಚರಣಾತ್ಮಕ ಕಲಾರೂಪವಾಗಿದೆ. ಕಳಮೆಳುತ್ತ್. ಈ ಚಿತ್ರದ ಆಯುಷ್ಯ ಕೆಲವೇ ಗಂಟೆಗಳಾದರೂ ನಿರ್ದಿಷ್ಟ ಲೆಕ್ಕಾಚಾರದ ಮೂಲಕ ಪ್ರಮಾಣಬದ್ಧವಾದ ಚಿತ್ರಗಳನ್ನು ಬರೆಯುತ್ತಾರೆ. ದೇವತೆಗಳು, ನಾಗಗಳು, ಸಾಂಕೇತಿಕವಾದ ಇತರ ರೂಪಗಳನ್ನು ನೆಲದಿಂದ ಎದ್ದು ಕಾಣುವಂತೆ ವಿವಿಧ ವಿನ್ಯಸಾಗಳಲ್ಲಿ ರಚಿಸುತ್ತಾರೆ.

23

ಸಾಮಾಜಿಕ ಒಳಿತು, ರೋಗ ನಿವಾರಣೆ, ಶತ್ರುನಿಗ್ರಹ, ಫಲವಂತಿಗೆ ಮೊದಲಾದ ಉದ್ದೇಶಗಳಿಗಾಗಿ ಕಳಂ ರಚಿಸುವರು. ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಯೇ ಕಳಮೆಳುತ್ತಿನ ಅಸ್ತಿತ್ವಕ್ಕೆ ಕಾರಣ. ಕಳಂ ಚಿತ್ರರಚನೆಯ ಜತೆಗೆ ವಾದ್ಯ, ನೃತ್ಯ, ಹಾಡುಗಳೂ ಸೇರಿಕೊಂಡಿದ್ದು, ಇದೊಂದು ಸಂಕೀರ್ಣ ಆರಾಧನ ಕಲೆಯಾಗಿ ಉಳಿದು ಬಂದಿದೆ. ಕೇರಳದಲ್ಲಿ ಭದ್ರಕಾಳಿ ಕಳಗಳನ್ನು ಹೆಚ್ಚಿನ ಕಡೆಗಳಲ್ಲಿ ಬರೆಯುತ್ತಾರೆ. ಅದೆ ರೀತಿ, ಪ್ರಕೃತಿಯ ಆರಾಧನೆಯ ಅಂಗವಾಗಿ ನಾಗಕಳವನ್ನೂ ಬರೆಯುತ್ತಾರೆ. ಕೇರಳದ ಹೆಚ್ಚಿನ ಸಮುದಾಯಗಳಿಗೂ ತಮ್ಮದೇ ಕಳಮೆಳುತ್ತ್‌ ಪರಂಪರೆ ಇರುವುದನ್ನು ಕಾಣಬಹುದು. ಅವುಗಳು ಫಲವಂತಿಕೆಯ ಆಚರಣೆಯೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಬಂಧವನ್ನು ಹೊಂದಿದೆ.

ವಗರ್ಗೀಕರಣ: ಕೇರಳದ ಎಲ್ಲಾ ಕಳಂಗಳೂ ಆರಾಧನೆಯ ಅಂಗವಾಗಿದೆ. ಇಂತಹ ಕಳಂಗಳನ್ನು ಅವುಗಳ ಉದ್ದೇಶಗಳಿಗೆ ಅನುಗುಣವಾಗಿ ಹೀಗೆ ವಿಭಾಗಿಸಬಹುದು.

೧. ದೈವಸಂತುಷ್ಟಿಗಾಗಿ ಬರೆವ ಕಳಂ

೨. ಬಾಧೆಗಳ ಉಚ್ಚಾಟನೆಗೆ ಬರೆವ ಕಳಂ

೩. ಮಂತ್ರವಾದ ಕಳಂ

೪. ತಾಂತ್ರಿಕ ಕಳಂ

. ದೈವಸಂತುಷ್ಟಿಗಾಗಿ ಬರೆವ ಕಳಂ: ದೈವ ದೇವತೆಗಳನ್ನು ಸಂತುಷ್ಟಿಗೊಳಿಸಲು ಆಯಾ ದೇವತೆಯ ರೂಪವನ್ನು ಪಂಚವರ್ಣದ ಹುಡಿಗಳಿಂದ ಬರೆದು, ಆಚರಣಾತ್ಮಕವಾದ ಧಾರ್ಮಿಕ ಕ್ರಿಯೆಗಳನ್ನು ನಡೆಸಿ ಆರಾಧಿಸುವರು. ದೇವತೆಯ ರೂಪವನ್ನು ಸುಂದರವಾಗಿ ರಚಿಸಿ, ಹಾಡು, ಕುಣಿತ, ವಾದನಗಳ ಮೂಲಕ ಆರಾಧಿಸುತ್ತಾರೆ. ಸಾಮಾನ್ಯವಾಗಿ ಇಂತಹ ಕಳಂಗಳನ್ನು ಕಾವು, ಕ್ಷೇತ್ರ, ದೈವಗುಡಿಗಳಲ್ಲಿ ನಡೆಸುವರು. ದೇವಾಲಯಗಳ ವಾರ್ಷಿಕ ಜಾತ್ರೆಯ ಅಂಗವಾಗಿ ಈ ಆಚರಣೆಗಳು ನಡೆಯುತತವೆ. ಕೇರಳದಲ್ಲಿ ಭದ್ರಕಾಳಿ ಅತಿ ಹೆಚ್ಚು ಸಂಖ್ಯೆಯಲ್ಲಿ ರಚಿತವಾಗುತ್ತವೆ. ಉಳಿದಂತೆ ಶಾಸ್ತಾ, ವೇಟಕೊರುಮಗನ್ ಕಳಂಗಗಳು ಮುಖ್ಯವಾಗಿವೆ. ನಾಗಕಳಂಗಳನ್ನು ರಚಿಸುವ ಸಂಪ್ರದಾಯವೂ ಇದೆ. ಪಾಟ್, ತೀಯಾಟ್, ಮುಡಿಯೇಟ್, ಸರ್ಪಂತುಳ್ಳಲ್, ತಿರಿಯುಳಚ್ಚಿಲ್ ಮೊದಲಾದ ಧಾರ್ಮಿಕ ಆಚರಣೆಗಳ ಅಂಗವಾಗಿ ಕಳಂಗಗಳನ್ನು ಬರೆಯುತ್ತಾರೆ.

. ಬಾಧೆಗಳ ಉಚ್ಛಾಟನೆಗೆ ಬರೆವ ಕಳಂ: ರೋಗಗಳಿಗೆ ದುಷ್ಟ ಶಕ್ತಿಗಳ ಬಾಧೆಗಳೇ ಕಾರಣವೆಂದೂ ಅವುಗಳನ್ನು ಉಚ್ಛಾಟಿಸಿದರೆ ರೋಗ ನಿವಾರಣೆಯಾಗುವುದೆಂದೂ ಜನರು ನಂಬಿದ್ದರು. ಉತ್ತರ ಕೇರಳದಲ್ಲಿ ಈ ನಂಬಿಕೆ ಹೆಚ್ಚು ಕಂಡುಬರುತ್ತದೆ. ಗರ್ಭಿಣಿಯರಿಗೆ ದುಷ್ಟಶಕ್ತಿಗಳು ಬಾಧಿಸುತ್ತವೆ ಎಂದೂ ಅವರ ಫಲವಂತಿಕೆ ಉಳಿಯಬೇಕಾದರೆ ಪ್ರೇತಗಳನ್ನು ಉಚ್ಚಾಟಿಸಬೇಕೆಂದೂ ನಂಬಿದ ಜನರು ಕಳಂ, ಬರೆದು, ಉಚ್ಚಾಟನೆಯ ವಿಧಿ ವಿಧಾನಗಳನ್ನು ನೆರವೇರಿಸುವರು. ಗಂಧರ್ವ, ಯಕ್ಷಿ, ಭೈರವ ಮೊದಲಾದ ಚಿತ್ರಗಳನ್ನು ಕಳಂರೂಪದಲ್ಲಿ ಬಡಿಸುತ್ತಾರೆ. ಬಲಕಳ, ಮಲಯನ್‌ಕೆಟ್ಟ್ ಮೊದಲಾದ ಆಚರಣೆಗಳೊಂದಿಗೆ ಸಂಬಂಧವನ್ನು ಈ ಆಚರಣೆ ಹೊಂದಿದೆ. ಇಂತಹ ಕಳಂಗಳು ಕಲಾತ್ಮಕತೆಯ ತುಂಬ ಮಹತ್ವ ನೀಡುವುದಿಲ್ಲ.

. ಮಂತ್ರವಾದ ಕಳಂ: ಆದಿಮ ಮನುಷ್ಯ ಪ್ರಕೃತಿಯ ಅಗೋಚರ ಶಕ್ತಿಗಳಿಗೆ ಹೆದರಿ, ಅವುಗಳಿಂದ ರಕ್ಷಣೆಯನ್ನು ಪಡೆಯಲು ಮಂತ್ರವಾದ ಮೊದಲಾದ ವಿದ್ಯಗಳನ್ನು ಕಲಿತುಕೊಮಸ. ಕೇರಳದಲ್ಲಿ ಬ್ರಾಹ್ಮಣರ ವಲಸೆಗಿಂತ ಮೊದಲೇ ಮಂತ್ರವಾದ ಕ್ರಿಯೆಗಳಿದ್ದವು ಎಂಬುದಕ್ಕೆ ಸಂಗಂ ಸಾಹಿತ್ಯ ನಿದರ್ಶನವಾಗಿದೆ. ಉತ್ತಮ, ಮಧ್ಯಮ, ಅಧಮ ಮಂತ್ರವಾದ ರೀತಿಗಳನ್ನು ಬಳಸಿ, ಶಾಂತಿ, ಸ್ತಂಭನ, ವಿದ್ವೇಷ, ಉಚ್ಚಾಟನೆ, ಮಾರಣ ಮೊದಲಾದ ಷಟ್ಕರ್ಮಗಳನ್ನು ಮಾಡುವರು. ಮಂತ್ರವಾದ ಕ್ರಿಯೆಗಳನ್ನು ನಡೆಸುವುದಕ್ಕಾಗಿ ಅನೇಕ ರೀತಿಯ ಮಂತ್ರವಾದ ಕಳಂಗಳನ್ನು ರಚಿಸುವರು. ಕೇರಳದಲ್ಲಿ ವೈವಿಧ್ಯಪೂರ್ಣವಾದ ಮಂತ್ರವಾದ ಕಳಂಗಳು ರಚನೆಯಾಗುತ್ತಿವೆ.

ಪ್ರತಿಯೊಬ್ಬ ಮಂತ್ರವಾದಿಗೂ ಒಂದೊಂದು ಉಪಾಸನಾ ಮೂರ್ತಿ ಇರುತ್ತದೆ. ಆ ಮೂರ್ತಿಯ ರೂಪವನ್ನು ಕಳಂದಲ್ಲಿ ಬರೆಯುವುದು ಕ್ರಮ. ಶ್ರದ್ಧೆಯಿಂದ ಕಳಂ ಚಿತ್ರಗಳನ್ನು ಬರೆಯುತ್ತಾರೆ. ಚಿತ್ರದಲ್ಲಿ ದೋಷಗಳಿದ್ದರೆ ಅದು ವ್ಯಕ್ತಿಯನ್ನು ಬಾಧಿಸುತ್ತದೆ ಎಂಬುದು ನಂಬಿಕೆ. ಮಂತ್ರವಾದ ಕಳಂಗಳಲ್ಲಿ ದೇವತೆಯ ರೂಪದ ಬದಲಾಗಿ, ಸಾಂಕೇತಿಕ ರೂಪಗಳನ್ನು ಬರೆಯುವ ಕ್ರಮವೂ ಇದೆ. ಗಣಪತಿ ಹೋಮ ಮೊದಲಾದ ಕ್ರಿಯೆಗಳಿಗೆ ಬರೆವ ಸರಳವಾದ ಕಳಂಗಳಿಂದ ಹಿಡಿದು, ರೋಗ ನಿವಾರಣೆ, ಕುಟುಂಬ ರಕ್ಷಣೆ, ಶತ್ರುಸಂಹಾರ ಮೊದಲಾದ ಉದ್ದೇಶಗಳಿಲಗೆ ನಡೆಸುವ ಮಹಾಸುದರ್ಶನ ಚಕ್ರದಂತಹ ಕಳಂಗಳವರೆಗೆ ಮಂತ್ರವಾದ ಕಳಂಗಳ ವೈವಿಧ್ಯತೆ ಇದೆ. ಈ ಸಂಬಂಧ ಯಾವುದೇ ಧಾರ್ಮಿಕ ಕಲೆಗಳು ಕಂಡು ಬರುವುದಿಲ್ಲ.

. ತಾಂತ್ರಿಕ ಕಳಂ: ಮಂತ್ರವಾದ ಕಳಗಳಂತೆ ತಾಂತ್ರಿಕ ಕಳಗಳೂ ರೂಪದಲ್ಲಿ ಸಮಾನತೆ ಇರುವವುಗಳಾಗಿವೆ. ಇವುಗಳನ್ನು ಮುಖ್ಯವಾಗಿ ದೇವಾಲಯಗಳ ವಿಗ್ರಹಪ್ರತಿಷ್ಠೆ, ಬ್ರಹ್ಮಪ್ರತಿಷ್ಠೆ, ಬ್ರಹ್ಮಕಲಶ ಮೊದಲಾದ ತಾಂತ್ರಿಕಲ ಕ್ರಿಯೆಗಳಿಗೆ ಬರೆಯುತ್ತಾರೆ. ವೃತ್ತ, ತ್ರಿಕೋನ, ಷಟ್ಕೋನ ಮೊದಲಾದ ಆಕೃತಿಗಳಲ್ಲಿ ದೇವತೆಗಳನ್ನು ಸಂಕಲ್ಪಿಸಿ ವೈವಿಧ್ಯ ಪೂರ್ಣ ಕಳಂಗಳನ್ನು ಹೆಸರಿಸುತ್ತಾರೆ. ನಂಬೂದಿರಿ ಬ್ರಾಹ್ಮಣ ಸಮುದಾಯದವರು ಕೇರಳದಲ್ಲಿ ತಾಂತ್ರಿಕ ಕಳಂಗಳನ್ನು ಬರೆಯುವವರು. ತಾಂತ್ರಿಕ ಕಳಂಗಳಿಗೆ ಸಂಬಂಧಿಸಿ ಆಚರಣೆಯ ಧಾರ್ಮಿಕ ಕಲೆಗಳಿಲ್ಲ. ಕಳಂಪೂಜೆಗಳು ಈ ಸಂಬಂಧ ನಡೆಯುತ್ತದೆ.

ಪಂಚವರ್ಣಗಳು : ಕೇರಳದ ಚಿತ್ರಕಲೆಯ ಪರಂಪರೆಯು ಪಂಚವರ್ಣಗಳಿಂದ ಕೂಡಿದೆ. ಪ್ರಕೃತಿದತ್ತವಾದ ವಸ್ತುಗಳಿಂದ ತಯಾರಿಸುವ ಬಿಳಿ, ಹಸಿರು, ಕಪ್ಪು, ಕೆಂಪು, ಹಳದಿ ಬಣ್ಣಗಳನ್ನು ಉಪಯೋಗಿಸಿಕೊಂಡು ಕಳಂ ಬರೆಯುತ್ತಾರೆ. ಅಕ್ಕಿ ಹುಡಿಯಿಂದ ಬಿಳಿ, ಎಲೆಗಳಿಂದ ಹಸಿರು, ಅರಿಸಿನದಿಂದ ಹಳದಿ, ಉಮಿ (ಭತ್ತದ ಹೊಟ್ಟು) ಸುಟ್ಟು ಕಪ್ಪು ಹಾಗೂ ಅರಿಸಿನಕ್ಕೆ ಸುಣ್ಣ ಬೆರೆಸಿ ಕೆಂಪು ಬಣ್ಣವನ್ನು ತಯಾಡಿಸುತ್ತಿದ್ದರು. ಪ್ರಾದೇಶಿಕವಾಗಿ ಲಭ್ಯವಿರುವ ನಿರ್ದಿಷ್ಟ ಎಲೆಗಳನ್ನು ಬಳಸಿಕೊಂಡು ಹಸಿರು ಬಣ್ಣವನ್ನು ತಯಾರಿಸುತ್ತಿದ್ದರು. ಮುಂಜಾಡಿ, ಬಾಗೆ ಮೊದಲಾದ ಮರಗಳ ಎಲೆಗಳು ಇದಕ್ಕಾಗಿ ಬಳಕೆಯಾಗುತ್ತಿದ್ದುವು. ನುಣುಪಾದ ಹುಡಿಗಳನ್ನು ಕಳಂ ಚಿತ್ರಕ್ಕೆ ಬಳಸಿ, ಕೊನೆಯಲ್ಲಿ ಹೊಳಪಿನ ಹುಡಿಯನ್ನು ಬಳಸುವ ಕ್ರಮವೂ ಇದೆ.

ರಚನಾ ಶೈಲಿ: ಕಳಂ ರಚಿಸುವುದಕ್ಕೆ ಮುಂಚಿತವಾಗಿ ನೆಲವನ್ನು ಸಾರಿಸಿ ಸ್ವಚ್ಛಗೊಳಿಸಬೇಕು. ಸೆಗಣಿ ಸಾರಿಸಿದ ಅಂಗಳದಲ್ಲಿ ಕಳಂ ರಚಿಸುತ್ತಾರೆ. ಕೆಲವು ಕಡೆಗಳಲ್ಲಿ ಚಿತ್ರದ ಮೇಲೆ ಬಿಳಿ ಬಟ್ಟೆಯ ಚಪ್ಪರ ಹಾಕಿ, ತೆಂಗಿನ ಎಳೆಗರಿಗಳಿಂದ ಸಿಂಗರಿಸುತ್ತಿದ್ದರು. ಕಳಂ ರಚನೆಗೆ ಯಾವುದೇ ನಿರ್ದಿಷ್ಟ ಮಾಪನಗಳಿಲ್ಲ. ತಮ್ಮ ಕಲಾಕೌಶಲ್ಯದಿಂದ, ಭದ್ರಕಾಳಿ, ಶಾಸ್ತಾ ಮೊದಲಾದ ರೂಪಗಳ ಅವಯವಗಳನ್ನು ಅಂಗುಲ ಆಧಾರದಲ್ಲಿ ರಚಿಸುವರು. ಹೀಗೆ ನಿರ್ದಿಷ್ಟ ಅಳತೆಯನ್ನು ಅನುಸರಿಸುವುದರಿಂದ ಕಳಂ ಚಿತ್ರಗಳು ನೆಲದಲ್ಲಿ ಎದ್ದು ಕಾಣುತ್ತವೆ. ಭದ್ರಕಾಳಿ ಕಳದಲ್ಲಿ ಅದರ ಎದೆ ಭಾಗವನ್ನು ಭತ್ತರಾಶಿ ಹಾಕಿ ಎತ್ತರಗೊಳಿಸಿ ರಚಿಸುವರು. ಹೀಗೆ ಮಾಡುವುದರಿಂದ ಕಳಂ ಚಿತ್ರಗಲು ದ್ವಿಮಾನ, ತ್ರಿಮಾನ ಚಿತ್ರಗಳಾಗಿ ಮನಸೂರೆಗೊಳ್ಳುತ್ತವೆ.

ಬಲಗೈಯಲ್ಲಿ ಹುಡಿಯನ್ನು ತೆಗೆದು, ಹೆಬ್ಬೆರಳು ಮತ್ತು ತೋರುಬೆರಳ ಸಂದಿಯಿಂದ ಬಹಳ ಸೂಕ್ಷ್ಮವಾಗಿ ಹುಡಿಯನ್ನು ಹಾಕಿ ಕಳಂ ಚಿತ್ರ ರಚಿಸುವರು. ಕೆಲವೆಡೆಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣದಿಂದ ಚಿತ್ರದ ಆಕಾರಗಳನ್ನು ಬರೆದು, ಅನಂತರ ಬಣ್ಣವನ್ನು ತುಂಬಿಸುವರು. ಅದೇ ರೀತಿ, ನಿರ್ದಿಷ್ಟ ಕೋಲುಗಳನ್ನು, ಗೆರಟೆಯನ್ನು ಇದಕ್ಕಾಗಿ ಬಳಸುವವರೂ ಇದ್ದಾರೆ.

ನಿರ್ದಿಷ್ಟ ದೇವತೆಗಳ ಚಿತ್ರವನ್ನು ಬರೆಯುವಾಗ ಪಾದ ಭಾಗದಿಂದ ಅಥವಾ ಕೇಶಭಾಗದಿಂದ ಆರಂಭಿಸುವರು. ಅನಂತರ ಹೊರಭಾಗದ ಆವರಣವನ್ನು ರಚಿಸುವರು. ಕೆಳವೆಡೆಗಳಲ್ಲಿ ಕಳಂಗಳ ‘ಕಣ್ಣು ತೆರೆಸುವ’ ವಿಧಿ ನಡೆಯುತ್ತದೆ. ಕಳಂ ರಚನೆ ಪೂರ್ಣಗೊಂಡ ಬಳಿಕ ದೀಪ ಬೆಳಗಿಸಿ, ಅಕ್ಕಿ, ಭತ್ತ, ಅಡಕೆ ಮೊದಲಾದ ವಸ್ತುಗಳನ್ನು ಇರಿಸಿ ಅಲಂಕರಿಸುವರು.

ಮಂತ್ರವಾದ ಕಳಂ, ತಾಂತ್ರಿಕ ಕಳಂಗಳನ್ನು ರಚಿಸಲು ನಿರ್ದಿಷ್ಟ ನಿಯಮಗಳಿವೆ. ಮಹಾಸುದರ್ಶನ ಚಕ್ರದಂತಹ ಕಳಂ ರಚನೆಯಲ್ಲಿ ಬಿಂದು, ತ್ರಿಕೋನ, ಷಟ್ಕೋನಗಳೆಲ್ಲ ನಿರ್ದಿಷ್ಟ ಸ್ಥಾನಗಳಲ್ಲಿ ಇರಬೇಕು. ಇದರ ಮಧ್ಯಭಾಗದಲ್ಲಿ ತಾವರೆ ಬಿಡಿಸಿ, ಅದರಲ್ಲಿ ದರ್ಭೆ ಹಾಗೂ ಭತ್ತ ಇರಿಸುವರು. ಅನಂತರ ಎಳ್ಳು, ಸಾಸಿವೆ, ಅಕ್ಕಿ ಮೊದಲಾದ ಧಾನ್ಯಗಳನ್ನು ವಿಧಿಯುಕ್ತವಾಗಿ ಇರಿಸುವರು. ಇಂತಹ ಕಳಂಗಳು ತಾತ್ಕಾಲಿಕ ದೇವಾಲಯಗಳಾಗಿ ಪರಿಗಣಿಸಲ್ಪಡುತ್ತವೆ.

ಸಂದರ್ಭ: ಒಂದು ಧಾರ್ಮಿಕ ಕಲೆ ಎಂಬ ನೆಲೆಯಲ್ಲಿ ಕಂಡು ಬರುವ ಕಳಮೆಳುತ್ ಮನೆ, ದೇವಾಲಯ, ಕಾವುಗಳಲ್ಲಿ ಮುಖ್ಯವಾಗಿ ಕಂಡುಬರುವುದು. ಪ್ರತಿಯೊಂದು ಕಾವು ಅಥವಾ ದೇವಾಲಯಗಳಲ್ಲಿ ವಿಭಿನ್ನ ರೂಪಗಳ ಕಳಂಗಳನ್ನು ಆರಾಧಿಸಲ್ಪಡುತ್ತವೆ. ಮಂತ್ರವಾದ ಕಳಂಗಳಲ್ಲಿ ನಿರ್ದಿಷ್ಟ ಉದ್ಧೇಶಗಳಿಗಾಗಿ ಬೇರೆ ಬೇರೆ ರೂಪಗಳನ್ನು ಬರೆಯುವ ಕ್ರಮವಿದೆ.

ಕಳಮೆಳುತ್ ಕಲಾವಿದರು: ಕೇರಳದ ಹೆಚ್ಚಿನ ಎಲ್ಲ ಸಮುದಾಯದವರಿಗೆ ಕಳಂ ಬರೆಯುವ ಪರಂಪರೆ ಇದೆ. ಆದರೆ ಪರಂಪರಾಗತವಾಗಿ ಪುಳ್ಳುವರು ಹಾಗೂ ಕಲ್ಲಾಟ್ ಕುರುಪರು ಕಳಮೆಳುತ್ತವನ್ನು ಪ್ರವೃತ್ತಿಯಾಗಿ ಉಳಿಸಿಕೊಂಡು ಬಂದಿದ್ದಾರೆ. ಇವರ ಸೃಷ್ಟಿ ಪುರಾಣವೇ ಕಳಮೆಳುತ್ತಿಗೆ ಸಂಬಂಧಿಸಿದುದಾಗಿದೆ. ಸೃಷ್ಟಿ ಪುರಾಮದಂತೆ ‘ಕಳಂ’ ಬರೆದು ‘ಪಾಟು’ ನಡೆಸಲು ಸೃಷ್ಟಿಯಾದವರೇ ಕಲ್ಲಾಟುಕುರುಪರು. ಅದೇ ರೀತಿ ಪುಳ್ಳುಗರು ನಾಗಾರಾಧನೆ ಹಾಗೂ ಕಳಮೆಳುತ್ತಿಗೆ ಸಂಬಂಧಪಟ್ಟವರಾಗಿದ್ದಾರೆ. ಒಂದೇ ಸ್ವರೂಪದ ಕಳವನ್ನು ಭಿನ್ನ ಸಮುದಾಯದವರು ಬರೆದರೂ ಅವುಗಳಲ್ಲಿ ಸೂಕ್ಷ್ಮವಾದ ವ್ಯತ್ಯಾಸಗಳು ಗೋಚರವಾಗುತ್ತವೆ. ನಾಗಕಳವನ್ನು ಪುಳ್ಳುವರು, ನಂಬೂದಿರಿಗಳು, ಕುರುಪರು, ವಣ್ಣಾನರು ಬರೆಯುತ್ತಾರೆ. ಆದರೆ ರಚನಾಶೈಲಿ, ಆಕೃತಿ, ಬಣ್ಣಗಾರಿಕೆಗಳಲ್ಲಿ ಸಮುದಾಯದಿಂದ ಸಮುದಾಯಕ್ಕೆ ವ್ಯತ್ಯಾಸಗಳು ಗೋಚರವಾಗುತ್ತವೆ.

ಬದಲಾವಣೆಗಳು: ಕೇರಳದ ಪರಂಪರಾಗತವಾದ ಕಳಮೆಳುತ್ ಸಂಪ್ರದಾಯಗಳಲ್ಲಿ ಬದಲಾವಣೆಗಳು ತುಂಬ ವಿರಳವಾಗಿ ನಡೆದಿವೆ. ಬಣ್ಣಗಳ ಬಳಕೆ, ಬರವಣಿಗೆ, ವಿನ್ಯಾಸಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದಕ್ಕೆ ಕಳಮೆಳುತ್ತಿನ ಹಿಂದಿರುವ ಧಾರ್ಮಿಕ ನಂಬಿಕೆಯೇ ಕಾರಣವೆನ್ನಬಹುದು.

ಆದರೆ ಆಧುನಿಕ ಕಾಲದಲ್ಲಿ ಕಳಮೆಳುತ್ತಿಗೆ ಬಳಸುವ ಬಣ್ಣಗಳಲ್ಲಿ ಆಧುನಿಕತೆ ತಲೆದೋರಿದೆ. ಪ್ರಾಕೃತಿಕವಾಗಿ ಸಿದ್ಧಪಡಿಸುವ ಬಣ್ಣಗಳ ಬದಲಾಗಿ ಅಂಗಡಿಗಳಲ್ಲಿ ದೊರಕುವ ಕೃತಕ ಬಣ್ಣದ ಹುಡಿಗಳನ್ನು ಕೆಲವೆಡೆಗಳಲ್ಲಿ ಬಳಸುತ್ತಾರೆ. ಕಳಂಚಿತ್ರದ ಆಕರ್ಷಣೆಯನ್ನು ಹೆಚ್ಚಿಸಲು ನೀಲಿ, ಗುಲಾಬಿ ಬಣ್ಣಗಳನ್ನು ಬಳಸುವವರೂ ಇದ್ದಾರೆ. ಇನ್ನು ಕೆಲವರು ಚಿತ್ರಕಲೆಯ ವಾಸ್ತವವಾದಿ ಶೈಲಿಯನ್ನು ಕಳಂಚಿತ್ರದಲ್ಲಿ ಅಳವಡಿಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಒಂದು ದೇವತಾ ಚಿತ್ರದ ಹಿನ್ನೆಲೆಯಲ್ಲಿ ಮರ, ಮೋಡ, ನಕ್ಷತ್ರ ಇತ್ಯಾದಿಗಳೆಲ್ಲ ಮೂಡತೊಡಗಿವೆ.

ಕಳಮೆಳುತ್ತು ಕೇರಳೀಯರಿಗೆ ಯಾವತ್ತೂ ವಿನೋದ ಕಲೆಯಾಗಿರಲಿಲ್ಲ. ಅದು ಧಾರ್ಮಿಕ ಆಚರಣೆಯ ಮತ್ತು ನಂಬಿಕೆಯ ಭಾಗವಾಗಿತ್ತು. ಆದರೆ ವರ್ತಮಾನ ಕಾಲದಲ್ಲಿ ಕಳಮೆಳುತ್ತ ಎಂಬ ಧಾರ್ಮಿಕ ಕಲೆಯನ್ನು ಚಿತ್ರಕಲೆ ಎಂದು ಬಿಂಬಿಸಿ, ಪ್ರವಾಸೋದ್ಯಮದಂತಹ, ಕ್ಷೇತ್ರಗಳಲ್ಲಿ ಬಳಸುವುದು ಕಂಡುಬರುತ್ತದೆ. ಹೀಗೆ ಒಂದು ಧಾರ್ಮಿಕ ಆಚರಣಾತ್ಮಕ ಕಲೆ ಆಧುನಿಕವಾಗುವುದು ಅದರ ಅಸ್ತಿತ್ವದ ಪ್ರಶ್ನೆಯಾಗಿದೆ. ಕೇರಳದ ಉಳಿದ ಜಾನಪದ, ಧಾರ್ಮಿಕ ಕಲೆಗಳಿಗೆ ಹೋಲಿಸಿದರೆ ಕಳಮೆಳುತ್ತಿನ ಮೇಲೆ ಆಧುನಿಕತೆಯ ಪ್ರಭಾವ ಅಷ್ಟಾಗಿ ಆಗಲಿಲ್ಲ ಎಂಬುದು ಸಮಾಧಾನದ ಸಂಗತಿ.

– ಎ.ಆರ್.ಕೆ. ಅನುವಾದ ಎನ್.ಎಸ್.

ಕಳಮೆಳುತ್ತುಪಾಟ್ ಕೇರಳದ ಉದ್ದಗಲಕ್ಕು ಕಂಡುಬರುವ ಧಾರ್ಮಿಕ ಕಲೆ. ಪಂಚವರ್ಣದ ಹುಡುಗಳಿಂದ ದೇವತೆಹಯ ಚಿತ್ರವನ್ನು ಬಿಡಿಸಿ, ಪೂಜಿಸಿ, ಹಾಡಿ, ಕುಣಿದು, ಕೊನೆಗೆ ಕಳಂ ಚಿತ್ರವನ್ನು ಉಜ್ಜುವ ವಿಧಾನವನ್ನು ಕಳಮೆಳುತ್ತಪಾಟು ಎಂದು ಹೇಳುತ್ತಾರೆ. ಬಣ್ಣದ ಹುಡಿಗಳಿಂದ ರಚಿಸುವ ಅರ್ಧ ಶಿಲ್ಪಗಳಂತೆ ಇವು ಗೋಚರಿಸುತ್ತವೆ. ತ್ರಿಶೂರು, ಪಾಲಕಾಡು, ಕಲ್ಲಿಕೋಟೆ, ಮಲಪುರಂ ಜಿಲ್ಲೆಗಳಲ್ಲಿ ಈ ಆಚರಣಾತ್ಮಕ ಕಲೆ ಧಾರಾಳವಾಗಿ ಕಂಡುಬರುತ್ತದೆ. ಕಲ್ಲಾಟ್ ಕುರುಪ್, ವಾರನ್ನೋತ್ ಕುರುಪ್, ತೀಯಾಟುಣ್ಣಿಗಳು, ತೀಯಾಟು ನಂಬ್ಯಾರ್ ಮೊದಲಾದ ಸಮುದಾಯದವರು ಕಳಂಪಾಟು ನಡೆಸುತ್ತಾರೆ. ಪುಳ್ಳುವರು, ಪೆರುವಣ್ಣಾನರು, ವೇಲರು, ಮೀನಚ್ಚಿಲಾಶಾನ್ ಮೊದಲಾದವರು ಕಳಂಪಾಟು ನಡೆಸಿದರೂ ಆಚರಣೆಗಳಲ್ಲಿ ವ್ಯತ್ಯಾಸಗಳಿವೆ.

ತಿರುಮಂದಾಕುನ್ನು ಭಗವತಿ, ತಿರುವಳಯನಾಟು ಭಗವತಿ, ಪೊಳಾಯ ಭಗವತಿ, ಕುಟ್ಟಿಪುರತ್ ಭಗವತಿ, ಎಯ್ಯಾಲ್ ಭಗವತಿ ಮೊದಲಾದ ಭಗವತಿಗಳಿಗೂ ಅಯ್ಯಪ್ಪ, ವೇಟಕಾರನ್, ಅಂದಿಮಲಯ, ಅಳಗಿಮಲಯ, ಕರುಮಗನ್, ಅಂದಿಮಹಾಕಾಳನ್, ಬ್ರಹ್ಮರಾಕ್ಷಸ, ನೀಲವಟ್ಟಾರಿ, ಕರುದಿರಾಮನ್ ಮೊದಲಾದ ದೇವತೆಗಳಿಗೂ ಕಳಮೆಳುತ್ತಪಾಟು ನಡೆಸುತ್ತಾರೆ. ಅಕ್ಕಿಹುಡಿ, ಮಸಿ, ಹಸಿರುಹುಡಿ, ಕೆಂಪುಹುಡಿ, ಅರಿಸಿನ ಹುಡಿಗಳನ್ನು ಕಳಂ ರಚಿಸಲು ಬಳಸುತ್ತಾರೆ.

ಕಳಂಪಾಟು ‘ಕುರಯಿಡುಗ’ ಎಂಬ ವಿಧಿಯೊಂದಿಗೆ ಆರಂಭವಾಗುತ್ತದೆ. ಯಜಮಾನನಿಂದ ಕುರುಪ್ ‘ವೀರಾಳಿಪಟ್ಟ್’ ಎಂಬ ವಸ್ತ್ರವನ್ನು ಸ್ವೀಕರಿಸುವನು. ಆಯಾತಾಕಾರದಲ್ಲಿರುವ ಪಾಟು ಮಂಟಪವನ್ನು ಈ ವಸ್ತ್ರದಿಂದ ಅಲಂಕರಿಸುತ್ತಾರೆ. ಗಣಪತಿ, ಸರಸ್ವತಿ ಮೊದಲಾದ ಸ್ತುತಿಯ ನಂತರ ಮುಖ್ಯದೇವತೆಯ ಹಾಡನ್ನು ಹಾಡುವರು. ಪೂಜಾರಿ ಪೂಜೆಯೊಂದಿಗೆ ಉಳಿದ ವಿಧಿಗಳನ್ನು ಆರಂಭಿಸುವನು. ಕಳಂಚಿತ್ರವನ್ನು ಪಂಚತಲ ಅಥವಾ ಅಷ್ಟತಲ ಪ್ರಮಾಣದಲ್ಲಿ ಬರೆಯುವರು. ಕಳಂಪಾಟು ನಡೆಸುವ ಪ್ರದೇಶದ ಆಲದ ಮರ ಅಥವಾ ಯಾವುದಾದರೂ ವೃಕ್ಷದ ಕೆಳಗೆ ಒಂದು ಪೂಜೆ ನಡೆಯುತ್ತದೆ. ಪೂಜೆಯ ನಂತರ ಕುರುಪ್ ಉತ್ತರಕ್ಕೆ ಮುಖಮಾಡಿ ಹಾಡುತ್ತಾನೆ. ಅಲ್ಲಿಂದ ವಾದ್ಯ ಘೋಷಗಳೊಂದಿಗೆ ಪಾಟುಮಂಟಪಕ್ಕೆ ಬರುತ್ತಾರೆ. ಅಷ್ಟರಲ್ಲಿ ಮಾರಾರ್, ಬೆಳ್ಚಪಾಡ ಮೊದಲಾದವರು ಅಲ್ಲಿಗೆ ತಲುಪಿರುತ್ತಾರೆ. ಬೆಳ್ಚಪಾಡ ಈ ಸಂದರ್ಭದಲ್ಲಿ ಕುಣಿಯುತ್ತಾನೆ. ಇದಕ್ಕೆ ‘ಈಡುಂಕೂರುಂ’ ಎಂದು ಹೆಸರು.

ಅನಂತರ ಕಳಪ್ರವೇಶ ನಡೆಯುತ್ತದೆ. ಬೆಳ್ಚಪಾಡನು ಕಳದ ಈಶಾನ್ಯ ಭಾಗದಲ್ಲಿ ಖಡ್ಗದಿಂದ ಕಳಂ ಮುರಿದು ಪ್ರವೇಶಿಸುತ್ತಾನೆ. ಈ ಮಧ್ಯೆ ತಂತ್ರಿ ಅಥವಾ ಪುರೋಹಿತರು ಕಳಂಪೂಜೆ ನಡೆಸುವರು. ಪೂಜೆಯ ಮುಂಚಿತವಾಗಿ ‘ಅಮ್ಮಾನಚಾಯಂ’ ಎಂಬ ಹಾಡು. ಅನಂತರ ‘ನಿರಂಗಳ್’ ಹಾಡುವರು. ವೈವಿಧ್ಯ ಪೂರ್ಣ ತಾಳದಿಂದ ಕೂಡಿದ ಹಾಡು ಮತ್ತು ಕುಣಿತವೇ ನಿರಂಗಳ್. ಅನಂತರ ತೆಂಗಿನಕಾಯಿ ಒಡೆದು (ಮೂರರಿಂದ ೧೨,೦೦೦ ತೆಂಗಿನ ಕಾಯಿಗಳನ್ನು ಒಡೆಯಬಹುದು) ಪಾಟು ಕೊನೆಗೊಳಿಸುವರು. ಹಾಡುವವರನ್ನು ಅನುಗ್ರಹಿಸುವ ಬೆಳ್ಚಪಾಡನು ಆವೇಶದಿಂದ ಕುಣಿಯುತ್ತಾ ಕಳಂಚಿತ್ರವನ್ನು ತುಳಿದು ಅಳಿಸುತ್ತಾನೆ. ಇದು ಕಳಮೆಳುತ್ತು ಪಾಟಿನ ವಿಧಿವಿಧಾನಗಳಾಗಿವೆ. ಇಷ್ಟಕಾರ್ಯಸಿದ್ಧಿ, ಸಂತಾನಲಬ್ಧಿ, ಸಂಪತ್ತು ವೃದ್ಧಿ ಮೊದಲಾದ ಕಾರಣಗಳಿಂದ ಪಾಟು ನಡೆಸುತ್ತಾರೆ.

– ಕೆ.ಎನ್.ಎ. ಅನುವಾದ ಎನ್.ಎಸ್.

ಕಳರಿಯುಳಿಚ್ಚಲ್ ಕೇರಳದ ಶಸ್ತ್ರವಿದ್ಯೆಯ ಕಲೆ ಕಳರಿಯಟ್. ಈ ಕಲೆಯಲ್ಲಿ ಉತ್ತರ ಮತ್ತು ದಕ್ಷಿಣ ಪ್ರಭೇದಗಳಿವೆ. ಕಳರಿ ಒಂದು ಶಸ್ತ್ರ ವಿದ್ಯೆಯ ಕಲೆ ಮಾತ್ರವಲ್ಲದೆ, ಪರಿಪೂರ್ಣ ಚಿಕಿತ್ಸೆಯೂ ಆಗಿದೆ. ಕಳರಿ ಪ್ರಯೋಗದ ಸಂದರ್ಭದಲ್ಲಿ ಉಂಟಾಗುವ ಗಾಯಗಳನ್ನು ನಿವಾರಿಸುವುದಾಗಿ ಕಳರಿ ಚಿಕಿತ್ಸೆ ಆರಂಭವಾಯಿತು. ಕಳರಿ ವಿದ್ಯೆಗೆ ದೇಹವನ್ನು ಅನುಗೊಳಿಸಲು ಕಳರಿ ಚಿಕಿತ್ಸೆ ಅಗತ್ಯವಾಗಿದೆ. ಈ ಚಿಕಿತ್ಸೆಯಲ್ಲಿ ‘ಉಳಿಚ್ಚಿಲ್’ (ನೀವುವುದು) ಪ್ರಧಾನ ಅಂಗವಾಗಿದೆ.

ಕಳರಿಪಯಟ್ ಕಲಿಯುವ ಆರಂಭದಲ್ಲಿಯೇ ದೇಹವನ್ನು ಅದಕ್ಕಾಗಿ ಸಿದ್ಧಗೊಳಿಸಲು ‘ಉಳಿಚ್ಚಿಲ್’ ಕ್ರಿಯೆಗಳನ್ನು ಮಾಡುವರು. ಕಳರಿ ಗುರುಗಳು ಈ ಚಿಕಿತ್ಸಾವಿಧಿಗೆ ನೇತೃತ್ವವನ್ನು ನೀಡುವರು. ಉಳಿದಂತೆ ಕೇರಳದ ಮರ್ಮ ಚಿಕಿತ್ಸೆಯಾಗಿಯೂ ‘ಉಳಿಚ್ಚಿಲ್’ ನಡೆಯುವುದು. ಸಾಮಾನ್ಯವಾಗಿ ತಂಪಾದ ಕಾಲದಲ್ಲಿ ಈ ಚಿಕಿತ್ಸೆಯನ್ನು ಮಾಡುತ್ತಾರೆ. ಕರ್ಕಾಟಕ ಮಾಸದಲ್ಲಿ ‘ಸುಖಚಿಕಿತ್ಸೆ’ ಎಂಬ ಹೆಸರಿನಲ್ಲಿ ‘ಉಳಿಚ್ಚ ಲ್’ ನಡೆಸುವರು. ಬೇಸಗೆಯ ಉಷ್ಣಕಾಲದಲ್ಲಿ ಈ ಚಿಕಿತ್ಸೆಯನ್ನು ನಡೆಸುವಂತಿಲ್ಲ. ಏಳು ಅಥವಾ ಹದಿನಾಲ್ಕು ದಿವಸಗಳ ಅವಧಿಯ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಆಹಾರದಲ್ಲಿ ಪಥ್ಯವನ್ನು ಅಳವಡಿಸಿಕೊಳ್ಳಬೇಕು. ಊಟ ಮಾಡಿದ ತಕ್ಷಣ ಉಳಿಚ್ಚಿಲ್ ನಡೆಸಬಾರದು.

ಕಾಲು ನೀವುವುದು, ಕೈ ನೀವುವುದು ಹೀಗೆ ಎರಡು ಬಗೆಯ ಚಿಕಿತ್ಸೆಗಳಿವೆ. ನಿಂತುಕೊಂಡು, ಮಲಗಿ ಈ ಚಿಕಿತ್ಸೆಗೆ ಒಳಗಾಗಬಹುದು. ದೇಹದ ಎಲ್ಲಾ ಅಂಗಗಳನ್ನು ಚಿಕಿತ್ಸೆ ನೀಡುವ ಚಿಕಿತ್ಸೆ ನೀಡುವ ವ್ಯಕ್ತಿಯು ಅಂಗೈಯಿಂದ ಅಥವಾ ಅಂಗಾಲಿನಿಂದ ಎಣ್ಣೆ ಹಾಕಿ ನೀವುತ್ತಾನೆ. ಶರೀರದ ಹಿಂಭಾಗದಿಂದ ಆರಂಭವಾಗುವ ಈ ನೀವುವ ಕ್ರಿಯೆ ಎದೆ, ಹೊಟ್ಟೆ, ತಲೆಯ ಭಾಗವನ್ನು ದಾಟಿ ಹಿಂಭಾಗದಲ್ಲಿ ಕೊನೆಗೊಳ್ಳುವುದು. ಚಿಕಿತ್ಸೆ ನೀಡುವ ವ್ಯಕ್ತಿ ಅಂಗೈಗಳನ್ನು ಬಿಡಿಸಿ, ಹೆಬ್ಬೆರಳುಗಳಿಂದ ಶರೀರದ ವಿವಿಧ ಭಾಗಗಳನ್ನು ನಿರ್ದಿಷ್ಟ ರೀತಿಯಲ್ಲಿ ಬಿತ್ತುವನು. ಮೇಲೆ ಕಟ್ಟಿದ ಹಗ್ಗವನ್ನು ಹಿಡಿದುಕೊಂಡು ಮಗಗಿರುವ ವ್ಯಕ್ತಿಯ ಬೆನ್ನನ್ನು ಅಂಗಾಲಿನಿಂದ ನೀವುವ ವಿಧಾನ ಇದೆ. ಸಾಮಾನ್ಯವಾಗಿ ಔಷಧ ಗುಣವುಳ್ಳ ಎಣ್ಣೆಯನ್ನು ಈ ಚಿಕಿತ್ಸೆಗೆ ಬಳಸುತ್ತಾರೆ. ಶುದ್ಧಬಲತೈಲ ಸಾಮಾನ್ಯವಾಗಿ ಬಳಸುವ ಎಣ್ಣೆ. ಉಳಿಚ್ಚಿಲ್ ಚಿಕಿತ್ಸೆ ಕಳೆದು ಅರ್ಧಗಂಟೆಯ ನಂತರ ಮಾತ್ರ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ತಲೆಗೆ ತಣ್ಣೀರನ್ನೂ, ದೇಹಕ್ಕೆ ಬಿಸಿ ನೀರನ್ನೂ ಬಳಸಬೇಕು. ಪಚ್ಚೆ ಹೆಸರು, ಹುರುಳಿ ಮೊದಲಾದ ಧಾನ್ಯಗಳ ಪುಡಿಯನ್ನು ಉಪಯೋಗಿಸಿ ಸ್ನಾನ ಮಾಡಬೇಕು.

ನಿಲ್ಲಿಸಿ ನಡೆಸುವ ಉಳಿಚ್ಚಿಲ್ ಚಿಕಿತ್ಸೆಯಲ್ಲಿ ವ್ಯಕ್ತಿ ಗೋಡೆಗೆ ಮುಖ ಮಾಡಿ ನಿಲ್ಲಬೇಕು. ಚಿಕಿತ್ಸೆ ಮಾಡುವ ವ್ಯಕ್ತಿ ಎಡಭಾಗದಲ್ಲಿ ನಿಂತು ಹೊಕ್ಕುಳ ಕಡೆಯಿಂದ ವೃತ್ತಾಕಾರದಲ್ಲಿ ನೀವುತ್ತಾ ಬೆನ್ನೆಲುಬಿನ ಕೆಳಭಾಗದಲ್ಲಿ ನಿಲ್ಲಿಸುತ್ತಾನೆ. ಅನಂತರ ಮೇಲಕ್ಕೆ ಬಲಗಿವಿಯ ಕಡೆಗೆ ನೀವುತ್ತಾನೆ. ಎಡಭಾಗದಲ್ಲಿಯೂ ಇದೇ ರೀತಿ ಮಾಡುತ್ತಾನೆ. ಹೀಗೆ ಏಳು ಬಾರಿ ಉಳಿಚ್ಚಿಲ್ ಕ್ರಿಯೆ ನಡೆಯುತ್ತದೆ. ದೇಹದ ಹಿಂಭಾಗ, ಮುಂಭಾಗ ಹಾಗೂ ಹೊಕ್ಕುಳಿನ ಸುತ್ತಲೂ ನೀವುನ ಕ್ರಿಯೆ ಏಳೇಳು ಸಲ ನಡೆಸುತ್ತಾನೆ. ಮುಖ, ತಲೆ ಹಾಗೂ ಕಾಲಿನ ಭಾಗಗಳನ್ನು ನೀವುವುದರೊಂದಿಗೆ ಈ ಚಿಕಿತ್ಸೆ ಮುಕ್ತಾಯಗೊಳ್ಳುವುದು.

ಮಲಗಿಸಿ ನಡೆಸುವ ಉಳಿಚ್ಚಿಲ್ ಚಿಕಿತ್ಸೆಗೆ ಮಲಗುವ ಚಾಪೆ ಅಥವಾ ಹಲಗೆಯನ್ನು ಬಳಸುವರು. ಮೊದಲು ಕವುಚಿ ಮಲಗಿಸಿ ಕಾಲುಗಳಿಂದ ನೀವುವ ಕ್ರಿಯೆ ಆರಂಭವಾಗುತ್ತದೆ. ಏಳು ಸಲ ನೀವಿದ ನಂತರ ಬೆನ್ನಿನ ಭಾಗವನ್ನು ಏಳು ಸಲ ನೀವುತ್ತಾರೆ. ಕಟ್ಟಿದ ಹಗ್ಗವನ್ನು ಹಿಡಿದು ಅಂಗಾಲುಗಳಿಂದ ನೀವುವ ವಿಧಿ ಈ ಭಂಗಿಯಲ್ಲಿ ಮಾತ್ರ ಸಾಧ್ಯ. ಬೆನ್ನಿನ ಭಾಗವನ್ನು ಮಾತ್ರ ಈ ರೀತಿ ಅಂಗಾಲುಗಳಿಂದ ನೀವಬಹುದು, ಉಳಿದಂತೆ ತಲೆ, ಮುಖ, ಕಾಲಿನ ಭಾಗಗಳನ್ನು ಕೈಗಳಿಂದಲೇ ನೀವಬೇಕು. ಮಲಗಿಸಿ ಮಾಡುವ ಉಳಿಚ್ಚಿಲ್ ವಿಧಿಯಲ್ಲಿಯೂ ಕೊನೆಯಲ್ಲಿ ನಿಲ್ಲಿಸಿ ಶರೀರದ ಹಿಂಭಾಗವನ್ನು ನೀವಿ, ಒಂದು ಪೆಟ್ಟಿನೊಂದಿಗೆ ಕೊನೆಗೊಳಿಸುತ್ತಾರೆ.

ಈ ರೀತಿಯ ಚಿಕಿತ್ಸೆಯು ಹಿಂದೆ ಕಳರಿಪಯಟ್ ಕಲೆಯ ಭಾಗವಾಗಿದ್ದರೂ, ಇಂದು ಕೇರಳ ಮರ್ಮಚಿಕಿತ್ಸೆಯಾಗಿ ಬದಲಾಗಿದೆ. ಆಧುನಿಕ ಕಾಲದಲ್‌ಇ ಪ್ರವಾಸೋದ್ಯಮದ ಭಾಗವಾಗಿ ಅನೇಕ ಚಿಕಿತ್ಸಾಕೇಂದ್ರಗಳ ಕೇರಳದಲ್ಲಿ ತಲೆ ಎತ್ತಿವೆ. ವಿದೇಶಿಯರು ಸುಖಚಿಕಿತ್ಸೆಗಾಗಿ ದುಂಬಾಲು ಬೀಳುತ್ತಿದ್ದಾರೆ. ಈ ಚಿಕಿತ್ಸಾ ವಿಧಾನದ ಕುರಿತು ಚಿರಯ್ಕಲ್ ಟಿ.ಶ್ರೀಧರನ್, ಆರ್. ರಾಜೀವನ್ ಗುರುಕ್ಕಳ್ ಮೊದಲಾದವರು ಲೇಖನಗಳನ್ನು ಬರೆದಿದ್ದಾಋಎ.

– ಟಿ.ಟಿ.ಕೆ.ಎಂ. ಅನುವಾದ ಎನ್.ಎಸ್.

ಕಳಿಯಲಾಟ್ಟಂ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಆಡುವ ಕುಣಿತಗಳಲ್ಲಿ ಒಂದು ಕಳಿಯಲಾಟ್ಟಂ. ಸ್ತ್ರೀಯರು ಆಡುವ ಕೋಲಾಟದಂತೆಯೇ ಪುರುಷರು ಇದನ್ನು ಆಡುತ್ತಾರೆ. ಈ ಆಟದ ವೇಗ ಮತ್ತು ಪುಟಿಯುವಿಕೆ ಕೋಳಾಟಕ್ಕಿಂತ ವಿಭಿನ್ನವಾಗಿದೆ.

ಕಳಿಯಲಾಟ್ಟಂ ಅನ್ನು ‘ಕಳಿಯಲ್’, ‘ಕನಿಯಲ್’, ‘ಕನಿಲ್’ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಈ ಆಟದಲ್ಲಿ ಕೋಲುಗಳು ಮುಖ್ಯ ಸ್ಥಾನ ಪಡೆಯುತ್ತವೆ. ‘ಕೋಲು’ ಎಂಬ ಪದದ ಹಿನ್ನೆಲೆಯಲ್ಲಿ ಈ ಆಟವನ್ನು ಕಳಿಯಲಾಟ್ಟಂ ಎಂದು ಕರೆಯುತ್ತಾರೆ. ಈ ಕುಣಿತದಲ್ಲಿ ಬಳಸುವ ಕೋಲುಗಳು ಒಂದೂವರೆ ಅಡಿ ಉದ್ದ ಇರುತ್ತವೆ. ಕಳಿಯಲಾಟ್ಟದಲ್ಲಿ ಕೋಲುಗಳು ಸಂಖ್ಯೆಯನ್ನು ಆಧರಿಸಿ ಒಂದು ಕೋಲು ವಿಧಾನ, ಎರಡು ಕೋಲುವಿಧಾನ, ಮೂರು ಕೋಲು ವಿಧಾನ ಎಂದು ಕರೆಯಲಾಗುತ್ತದೆ. ಈ ಕೋಲುಗಳನ್ನು ಅಲಂಕಾರ ಮಾಡುವುದೂ ಉಂಟು.

ಈ ಆಟವನ್ನು ಕಲಿಸುವ ಗುರುವನ್ನು ‘ಅಣ್ಣಾವಿ’ ಎಂದು ಕರೆಯುತ್ತಾರೆ. ಈತ ಉತ್ತಮ ಧ್ವನಿ ಹೊಂದಿದ್ದು, ಹಾಡುಗಾರನಾಗಿರುತ್ತಾನೆ. ಕಳಿಯಲಾಟ್ಟಂ ಸಂದರ್ಭದಲ್ಲಿ ಇರು ತಲೆಗೆ ಪೇಟ ಕಟ್ಟಿ, ವಲ್ಲಿ ಧರಿಸಿ, ಕೈಯಲ್ಲಿ ‘ಜಾಲ್ರಾ’ ಎಂಬ ಕಂಚಿನ ತಾಳದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅಣ್ಣಾವಿ ಹಾಡು ಹಾಡುವಾಗ ಅವರೊಂದಿಗೆ ಸೇರಿ ಹಾಡುವ ಹಿಮ್ಮೇಳದವರು ಇರುತ್ತಾರೆ. ಈ ಆಟದಲ್ಲಿ ತಬಲ, ಗೆಜ್ಜೆ ಮುಂತಾದವು ವಾದ್ಯಗಳು. ಕೋಲುಗಳನ್ನು ಬಡಿಯುವಾಗ ಒಂದು ಬಗೆಯ ಸಂಗೀತ ಸಹಜವಾಗಿಯೇ ಹೊರಹೊಮ್ಮುತ್ತದೆ.

ಒಂದೇ ರೀತಿಯ ಮೈಕಟ್ಟು ಹೊಂದಿರುವ ಎಂಟು ಮಂದಿ ಒಂದು ತಂಡವಾಗಿ ಪಾಲ್ಗೊಂಡು ಅಣ್ಣಾವಿಯ ಹಾಡಿಗೆ ತಕ್ಕಂತೆ ಕೋಲುಗಳನ್ನು ಬಡಿಯುತ್ತ ಕುಣಿಯುತ್ತಾರೆ. ಹತ್ತು, ಹನ್ನೆರಡು, ಹದಿನಾರು ಎಂಬ ಸಂಖ್ಯೆಯಲ್ಲಿ ಆಟಗಾರರು ಆಡುವುದುಂಟು. ‘ಕಳಿಯಲ್ ಗುಮ್ಮಿ’ ಆಟದಲ್ಲಿ ಅನೇಕರು ಪಾಲ್ಗೊಳ್ಳುತ್ತಾರೆ. ಕಳಿಯಲಾಟದಲ್ಲಿ ತಾಳಮರ ಹತ್ತುವವರು ಉಡುವ ಹಾಗೆ ಪಂಚೆಯನ್ನು ಉಟ್ಟಿರುತ್ತಾರೆ. ತಲೆಯಲ್ಲಿ ಪೇಟವನ್ನೂ, ಸೊಂಟಕ್ಕೆ ವಲ್ಲಿಯನ್ನೂ ಧರಿಸಿರುತ್ತಾರೆ. ಮೇಲ್ವಸ್ತ್ರ ಧರಿಸುವುದಿಲ್ಲ.

ಕಳಿಯಲಾಟ್ಟವನ್ನು ಆಡುವಾಗ –

೧) ಅಣ್ಣಾವಿಯ ಆಗಮನ

೨) ಕೋಲು ಸ್ವೀಕರಿಸುವುದು

೩) ವೃತ್ತಾಕಾರವಾಗಿ ನಿಲ್ಲುವುದು

೪) ಧಿಗಿರ್ ಧಾಂ ಥೈ/ಸರಿ

೫) ವೃತ್ತ

೬) ನಮಸ್ಕರಿಸುವುದು

೭) ಕಾರ್ಯಕ್ರಮಕ್ಕೆ ಅನುಗುಣವಾಗಿ ಸೂಕ್ತ ಹಾಡುಗಳು (ಹಲವಾರು ಆಟದ ವಿಧಾನಗಳು

೮) ಮಂಗಳ ಹಾಡುವುದು

೯) ಥಿ ಥೋಂ ಧರಿಕಟ ಧಿಧಿಮಿ ಥೊಮನ ಥೈ

ಎಂಬ ಕ್ರಮವನ್ನು ಅನುಸರಿಸಲಾಗುತ್ತದೆ.

ಕಳಿಯಲಾಟ್ಟದ ಪ್ರಾರಂಭದಲ್ಲಿ, ಭಾಗವಹಿಸುವ ಆಟಗಾರರು ಅಣ್ಣಾವಿಗೆ ನಮಸ್ಕಾರ ಮಾಡಿ ಆಟದ ಕೋಲುಗಳನ್ನು ಪಡೆದುಕೊಂಡು ವೃತ್ತಾಕಾರವಾಗಿ ನಿಲ್ಲುತ್ತಾರೆ. ಅಣ್ಣಾವಿ ಧಿಗಿರ್ ಥಾಂ ಥೈ/ಸರಿ ಎಂದ ಕೂಡಲೆ ಬಡಿಯಲು ಆರಂಭಿಸುವರು. ಅಣ್ಣಾವಿ ವೃತ್ತವನ್ನು ಹಾಡಿ ಮುಗಿಸಿ ನಮನ ಗೀತೆಯನ್ನು ಹಾಡುತ್ತಾರೆ. ಕೋಲಿನ ಆಟದ ವಿಧಾನಕ್ಕೆ ತಕ್ಕಂತೆ ಹಾಡುಗಳನ್ನು ಹಾಡಲಾಗುವುದು. ‘ಥಿ ಥೋಂ ಥರಿ ಕಟ ಥಿಥಿಮಿ ಥೋಮನ ಥೈ’ ಎಂದು ಪ್ರತಿ ಆಟದ ವಿಧಾನ ಮುಗಿಯುವಾಗ ಹಾಡಲಾಗುತ್ತದೆ. ಮಂಗಳ ಹಾಡಿ ಕಳಿಯಲಾಟ್ಟವನ್ನು ಮುಕ್ತಾಯಗೊಳಿಸುತ್ತಾರೆ.

ಕಳಿಯಲಾಟದಲ್ಲಿ ಒಬ್ಬ ಆಟಗಾರ ತನ್ನ ಎದುರು ನಿಂತು ಆಡುವ ತನ್ನ ಸಹ ಆಟಗಾರನ ಕೈಯಲ್ಲಿರುವ ಕೋಲಿನಿಂದ ಎಷ್ಟು ಸಲ ಬಡಿದು ಮುಂದಿನ ಹಂತಕ್ಕೆ ಹೋಗುತ್ತಾನೋ ಅದರ ಆಧಾರದ ಮೇಲೆ ಎಷ್ಟು ಕೋಲಿನ ವಿಧಾನ ಎಂಬುದು ತೀರ್ಮಾನವಾಗುತ್ತದೆ. ಎದುರಾಳಿಯ ಬಲಗೈ ಕೋಲಿನಿಂದ ಒಂದ ಬಡಿತ ಅಥವಾ ಎಡಗೈ ಕೋಲಿನಿಂದ ಒಂದು ಬಡಿತ ಎರಡು ಕೋಲಿನ ವಿಧಾನ, ಮೂರು ಕೋಲಿನ ವಿಧಾನದ ಆಟಗಳು ಕಳಿಯಲಾಟ್ಟದಲ್ಲಿ ರೂಪುಗೊಳ್ಳುತ್ತದೆ. ಈ ಆಟದಲ್ಲಿ ‘ಗುಮ್ಮಿ’, ‘ಒಯಿಲ್’, ‘ಪಿನ್ನಲ್’ ಆಟದ ವಿಧಾನಗಳೂ ಉಂಟು. ಕೋಲಿನ ವಿಧಾನಗಳಿಗೂ ಆಟದ ವಿಧಾನಗಳಿಗೂ ಬೇರೆ ಬೇರೆ ಮಟ್ಟಿನ ಹಾಡುಗಳನ್ನು ಹಾಡಿ ಆಟ ಆಡಿಸುತ್ತಾರೆ.

ಹಿಂದೂ, ಕ್ರೈಸ್ತ, ಮುಸ್ಲಿಂ ಮುಂತಾದ ಧಾರ್ಮಿಕ ಹಾಡುಗಳನ್ನೂ ಈ ಆಟದಲ್ಲಿ ಹಾಡಲಾಗುತ್ತದೆ. ಕಳಿಯಲಾಟ್ಟದಲ್ಲಿ ಹಾಡುವ ಹಾಡುಗಳಲ್ಲಿ ಹಲವು ತಾಳೆಗರಿಗಳಲ್ಲಿ ಇವೆ. ಮಹಾಭಾರತ, ರಾಮಾಯಣ ಮುಂತಾದವುಗಳಿಂದಲೂ ಕೆಲವು ಹಾಡುಗಳನ್ನು ಹಾಡಲಾಗುತ್ತದೆ. ಕಳಿಯಲಾಟ್ಟದಲ್ಲಿ ‘ಮದುವೆ ಗುಮ್ಮಿ’, ‘ಪುರುಷರ ಗುಮ್ಮಿ’, ಕಾವಡಿ ಸಿಂಧು, ವಳಿನಡ್ಯೆ ಚಿಂದು, ಕೀರ್ತನೆ ಹಾಡುಗಳು ಮುಂತಾದವುಗಳೊಂದಿಗೆ ಅಣ್ಣಾವಿಗಳು ತಾವೇ ಹಾಡುವ ‘ಸ್ವಯಂ ಹಾಡು’ಗಳೂ ಸ್ಥಾನ ಪಡೆಯುತ್ತವೆ.

ಕಳಿಯಲಾಟ್ಟಂ ಹಿಂದೆ ಗುರುಕುಲ ಶಾಲೆಗಳಲ್ಲಿ (ತಾಳೆಗರಿ, ಜಗಲಿ ಶಾಲೆ ದೈಹಿಕ ಶಿಕ್ಷಣವಾಗಿ ಇದ್ದುದು ತಿಳಿದು ಬರುತ್ತದೆ. ಶಿಕ್ಷನಾರ್ಥಿಗಳು ಸರಸ್ವತಿ ಪೂಜೆ ದಿನದಂದು ಮನೆಮನೆಗೆ ಹೋಗಿ ಕೋಲುಗಳನ್ನು ಬಡಿದು ಹಣ ಸಂಗ್ರಹಿಸುವುದು ರೂಢಿ. ಕಳಿಯಾಟದ ತಂಡದವರು ಮದುವೆ, ಶುಭಕಾರ್ಯ, ಸ್ವಾತಗ, ಗೃಹಪ್ರವೇಶ, ಸಾವಿನ ಮೆರವಣಿಗೆ, ಶಾಲಾ ಉತ್ಸವಗಳು ಮುಂತಾದ ಕಾರ್ಯಕ್ರಮಗಳಲ್ಲಿ ಕಳಿಯಲಾಟವನ್ನು ಆಡುತ್ತಾರೆ. ಕ್ರೈಸ್ತರು ಚರ್ಚ್‌ ಹಬ್ಬಗಳು ಹಾಗೂ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಇದನ್ನು ಆಡುತ್ತಾರೆ. ಇತ್ತಿಚೆಗೆ ರಾಜಕೀಯ ಪ್ರಚಾರ ಸಮಾರಂಭಗಳಿಗೆಂದೇ ಪ್ರತ್ಯೇಕ ಕಳಿಯಲಾಟ್ಟದ ತಂಡಗಳು ಹುಟ್ಟಿಕೊಂಡಿವೆ.

– ವಿ.ಕೆ.ಕೆ. ಅನುವಾದ ಐ.ಎಸ್.