ಕೇರಳದಲ್ಲಿ ಬೀಜ ಮತ್ತು ಬೀಜಸಂರಕ್ಷಣೆ ಕೇರಳದಲ್ಲಿ ಕೇರಳಕ್ಕೆ ಸಮೃದ್ಧವಾದ ಒಂದು ಕೃಷಿ ಪರಂಪರೆ ಇತ್ತು. ಹೊಲಗದ್ದೆಗಳಲ್ಲಿ, ಬೆಟ್ಟದ ತಪ್ಪಲುಗಳಲ್ಲಿ, ಗುಡ್ಡಗಳ ಮೇಲೆ, ನೀರುನಿಲ್ಲುವಲ್ಲಿ ಕೃಷಿ ಮಾಡಲು ಸಾಧ್ಯವಾಗುವ ಪರಂಪರಾಗತವಾದ ಕೃಷಿಶತ್ರುಗಳು, ವೈವಿಧ್ಯಪೂರ್ಣವಾದ ಬೀಜದ ತಳಿಗಳು ಬಳಕೆಯಲ್ಲಿದ್ದುವು. ಪ್ರತಿ ತಳಿಯೂ ಆಯಾ ಪ್ರದೇಶಕ್ಕೂ ಹವಾಮಾನಕ್ಕೂ ಮಣ್ಣಿನ ಸ್ವಭಾವಕ್ಕೂ ಅನುಸಾರವಾಗಿ ರೂಪುಗೊಂಡವುಗಳಾಗಿದ್ದುವು.

ದೇಶೀತಳಿಗಳ ಅತಿಮುಖ್ಯ ವಿಶೇಷಗಳೆಂದರೆ ಅವುಗಳಲ್ಲಿದ್ದ ತೀವ್ರ ರೋಗ ಪ್ರತಿರೋಧಕಶಕ್ತಿ ಮತ್ತು ಆನೆಹುಟ್ಟಿಸುವ ರುಚಿ. ಅಂತೆಯೇ ಪ್ರತಿಯೊಂದು ಬೀಜದ ತಳಿಗೂ ತನ್ನದೇ ಆದ ವಿಶೇಷತೆಗಳೂ ಇವೆ. ಔಷಧೀಯ ಗುಣದವು, ಬರ ನೆರೆ ಉಪ್ಪುನೀರು ಮುಂತಾದವನ್ನು ತಡೆದುಕೊಳ್ಳಬಲ್ಲವು. ಆರೈಕೆಯೇನೂ ಇಲ್ಲವಾದರೂ ಬೆಳೆದು ಫಸಲು ಕೊಡುವವು, ನೆರಳಲ್ಲೂ ಕರೆಮಣ್ಣಿನಲ್ಲೂ ಬೆಳೆಯಬಲ್ಲವು – ಹೀಗೆ ವಿಭಿನ್ನ ಗುಣದವುಗಳನ್ನು ಕಾಣಬಹುದು.

ನೀರುಕಟ್ಟಿನಿಲ್ಲುವ ಸ್ಥಳಗಳಲ್ಲಿ ಕೃಷಿಮಾಡುವ ಮತ್ತು ಬೆಳೆ ಬರಲು ಹೆಚ್ಚು ಕಾಲಾವಧಿ ಬೇಕಾಗುವ ಬೀಜತಳಿ – ಮುಂಡಕನ್. ಆದರೆ ನೀರುಕಟ್ಟಿನಿಲ್ಲುವ ಸ್ಥಳವಾಗಿದ್ದು ವಾರಗಟ್ಟಲೆ ನೆರೆನಿಲ್ಲುವ ಸ್ಥಳಗಳು ಇದ್ದಾವೆ. ಇಂಥ ಸ್ಥಳಗಳಲ್ಲಿ ಕೃಷಿ ಮಾಡುವುದು ಮುಂಡಕನದೇ ಒಂದು ಭೇದ ತಳಿಯಾದ ಕೊಳುಂಬಿಚ್ಚೀರ ಬೀಜವನ್ನು. ಇದರ ವೈಶಿಷ್ಟ್ಯವೆಂದರೆ ನೀರಿನ ಮಟ್ಟ ಏರುವುದಕ್ಕನುಸಾರವಾಗಿ ಬತ್ತದ ಸಸಿಯೂ ತಲೆಯೆತ್ತಿ ಬೆಳೆಯುವುದು. ಮಾತ್ರವಲ್ಲ ದಂಟು ಬಲಶಾಲಿಯಾಗಿರುವುದರಿಂದ ನೆರೆ ತಗ್ಗಿದಾಗ ಬಾಗುವುದೂ ಇಲ್ಲ. ಕದಿರು/ ತೆನೆಗಳೂ ಬಲಶಾಲಿಯಾದವುಗಳೇ. ಆದುದರಿಂದ ಸಾಧಾರಣ ಮುಂಡಕನಂತೆ ಕೊಯ್ಲಿನಲ್ಲಿ ಬತ್ತದ ಕಾಳುಗಳು ಉದುರುವುದಿಲ್ಲ. ಹೀಗೆ ಕೃಷಿ ಮಾಡುವ ಜಾಗದ ವಿಶೇಷತೆಗನುಸಾರವಾಗಿ ಬೀಜಗಳು ಬದಲಾಗುತ್ತಿದ್ದುವು.

ಪೊಕಾಳಿ, ಓರ್‌ಕ್ಕಯಮ, ಕುದಿರ್ ಮುಂತಾದ ಬೀಜಗಳು ಕೊಳಕು / ಕೆಸರು ನೀರಿನಲ್ಲಿ ಬೆಳೆಯುವಂಥವುಗಳಾದರೆ ಚೋಮಾಲ, ಪಳ್ಳಿಯಾರನ್ ಮುಂತಾದ ಬೀಜಗಳು ಕರೆಪ್ರದೇಶಕ್ಕೆ ಯೋಗ್ಯವಾದವುಗಳು. ಎರ‍ವಪ್ಪಾಂಡಿ, ಕಟ್ಟಿಮೋಡನ್ ಮುಂತಾದ ಬೀಜಗಳು ಬರವನ್ನು ತಡೆದುಕೊಂಡು ಬೆಳೆಯಬಲ್ಲ ತಳಿಗಳು. ಔಷಧೀಯ ಗುಣ ಅಧಿಕವಾಗಿರುವ ತಳಿನವರ. ಇದರಲ್ಲೇ ಕಪ್ಪುನವರ, ಬಿಳಿನವರ ಮುಂತಾದ ಭೇದಗಳಿವೆ. ಇವಲ್ಲದೆ ಕವುಂಙಿನ್‌ ಪೂತ್ತಾಡ, ಕುಂಞೆನೆಲ್ಲ್, ಎರುಮಕ್ಕಾರಿ ಮುಂತಾದವು ಕೂಡ ಔಷಧೀಯ ಗುಣವುಳ್ಳವುಗಳಾಗಿವೆ. ಜೀರಿಗೆ ಸಾಲೆ ತಳಿಗೆ ಔಷಧೀಯ ಗುಣಮಾತ್ರವಲ್ಲ ಸುಗಂಧವೂ ಇದೆ.

ಸಾಧಾರಣ ಎಲ್ಲ ದೇಶೀತಳಿಯ ಬತ್ತಗಳೂ ತಮ್ಮದೇ ಆದ ರುಚಿಯಿಂದಲೂ ಪೌಷ್ಟಿಕಗುಣದಿಂದಲೂ ಉತ್ಕೃಷ್ಟವಾದವುಗಳು. ಅನ್ನಕ್ಕೂ ಗಂಜಿಗೂ ಪಾಯಸಕ್ಕೂ ಅವಲಕ್ಕಿಗೂ ಅರಳಿಗೂ ಸೂಕ್ತವಾದ ತಳಿಗಳು ಬೇರೆ ಬೇರೆಯೇ ಇವೆ. ಅವಲಕ್ಕಿಗೆ ಚಿಟ್ಟೇನಿ ತಳಿ ತುಂಬ ಸೂಕ್ತವಾದರೆ ಗಂಜಿಗೂ ಅನ್ನಕ್ಕೂ ಮುಂಡಕನೂ ಮುತ್ತುಪ್ಪಟ್ಟವೂ ಒಳ್ಳೆಯವು.

ಕೇರಳದಲ್ಲಿ ಪ್ರಚಾರದಲ್ಲಿದ್ದ ಬೀಜತಳಿಗಳಲ್ಲಿ ೬೦ ದಿನಗಳಲ್ಲೇ ಬೆಳೆದು ಬೀಡುವ ನವರದಿಂದ ಹತ್ತು ತಿಂಗಳು ಕಾಲಾವಧಿಯ ಕುಟ್ಟಾಡನ್ ತನಕ ಇದ್ದುವು. ಬೀಜಗಳ ಹೆಸರೇ ಅವುಗಳ ವೈವಿಧ್ಯವನ್ನೂ ವೈಚಿತ್ರ್ಯವನ್ನೂ ಸೂಚಿಸುವಂತಿವೆ. ಕೆಲವು ಹೆಸರುಗಳನ್ನು ನೋಡಿ; ಅತಿಯನ್, ಅನ್ನಚೆಂಬ, ಅಯನಿ, ಅರಿಕ್ಕಿನಾಯಿ, ಅಲ್ಲಿಕಣ್ಣನ್, ಆನಕೊಂಬನ್, ಅರುವಾಕಾರಿ, ಆರ್ಯನ್, ಇರಿಪ್ಪಾಲ, ಇರಿಪ್ಪುಚೆಂಬ, ಒಟ್ಟಲ್, ಮುಂಡೋನ್, ಓಕ್ಕಪೂಂಬ, ಓಂಙನ್ ಕುಟ್ಟಾಡನ್, ಓಡಚ್ಚನ್, ಓರ್‌ಕಯಮ, ಕಟ್ಟಮೂಡನ್, ಕಯಮ, ಕರಿಂಚನ್, ಕರಿಂಜಿಟ್ಟೇನಿ, ಕರಿಯಡಕ್ಕನ್, ಕರುಕಕಟ್ಟಾಡನ್, ಕರುತ್ತ ಇಂಡಿಕಂಡಪ್ಪನ್, ಕರುತ್ತೇನಿ, ಕರ್‌ತ್ತರಿಮೂಡನ್, ಕವುಂಙಿಲ್ ಪುತ್ತಾಡ, ಕೀರಿಕಣ್ಣನ್, ಕೀರಿಪಲ್ಲನ್, ಕುಬ್ರೋನ್, ಕುಟ್ಟಾಡನ್, ಕುಟ್ಟಿಮೂಡನ್, ಕುದಿರ್, ಕುಂಞಿತಿ ಕಿರಾಯಿ, ಕುಂಡಿನೆಲ್ಲ್‌, ಕುರುಕ, ಕುದುರಾಯಿ, ಕೊಡುಯನ್ ಚೆಂಬಾವ್, ಕೊಳಪ್ಪಾಲ, ಕೊಳುಂಬಿಚ್ಚೀರ, ಕೋಯಿವಾಲನ್, ಚಾರಚೆಂಬಾವ್, ಚಿಂದಾರ್ ಮಣಿಯನ್, ಚಿಟ್ಟೇನಿ, ಚೀರಚ್ಚೆಂಬ, ಚುವನ್ನ ಇಟ್ಟಿಕಂಡಪ್ಪನ್, ಚೆಂಗಯಮ, ಚೆನ್ನನಾಯಕಂ, ಚೆನ್ನೆಲ್ಲ್, ಚೇರುಮಣಲ್, ಚೆರುವೆಳ್ಳುರಿ ಚೋಪ್ಪ್‌ಪುಂಜ, ಚೋನ್ನಾರಿ, ಚೋನ್ನೋಂಪಾಲ, ಚೋನ್ನಾರ್ಯನ್, ಚೋನ್ನಾಳಿ, ಚೋಮಾಲ, ತಲಳಕಣ್ಣನ್, ತಿರಿಂಞವೆಳ್ಳ, ತೆಕ್ಕನ್ ಚೀರ, ತೊಣ್ಣುರಾನ್‌ವಿದ, ನವರ, ನವರಪ್ಪುಂಜ, ಪರಂಬನ್ ತೊವ್ವಲ್, ಪರಂಬುಂ ಕೊಟ್ಟ, ಪಳ್ಳಿಯಾರನ್, ಪುಂಜಕಯಮ, ಪೂಚ್ಚೆಂಬ, ಮಟ್ಟಚೆಂಬ, ಮರೋಕಿ, ಮಲಯಾರ್ಯನ್, ಮಲೋಡುಂಬನ್, ಮೂಲಕ್ಕಾರನ್, ಮು‌ಕ್ಕುಲತ್ತಿ, ಮುಂಡಕನ್, ಮುಂಡೋಕಣ್ಣನ್, ಮುಂಡೋಕುಟ್ಟಿ, ಮುಂಡೋಂಬಾಲ, ಮುತ್ತುಪ್ಪಟ್ಟ, ಮೋಡೋನ್, ವಡಕ್ಕನ್, ವಟ್ಟನ್, ವಟ್ಟಚ್ಚೀರ, ವರೆನೆಲ್ಲ್, ವೆಟ್ಟಿಕುಟ್ಟಾಡನ್, ವೆಳುತ್ತಕಯಮ, ವೆಳುತ್ತ ಇಟ್ಟಿಕ್ಕಂಡಪ್ಪನ್, ವೆಳುತ್ತೀನಿ ಕಯಮ, ವೆಳ್ಳತೋಪ್ಪನ್, ವೆಳ್ಳಕ್ಕೋಲಿ, ವೆಳ್ಳಪ್ಪುಂಜ, ವೆಳ್ಳರಿ, ವೆಳ್ಳರಿ ಮೂಡಾನ್, ವೆಳ್ಳಮುಂಡ್, ವೈರ, ವೃಶ್ಚಿಕಪ್ಪಾಂಡಿ, ರಾಜಮೇನಿ – ಪರಂಪರಾಗತ ತಳಿಗಳಲ್ಲಿ ದೊಡ್ಡದೊಂದು ಪಾಲು ಇಂದು ಕಂಡುಬರುತ್ತಿಲ್ಲ. ಜಯ, ಭಾರತಿ.ಐ.ಆರ್.ಎಟ್ಟ್‌ನಂತಹ ಅತ್ಯುತ್ಪಾದನ ಸಾಮರ್ಥ್ಯವುಳ್ಳ ತಳಿಗಳು ಇಂದು ಉಪಯೋಗಿಸಲ್ಪಡುತ್ತಿವೆ.

ನಮ್ಮ ಪಾರಂಪರಿಕ ರೈತರು ‘ವಿತ್ತ್‌ಗುಣಂ ಪತ್ತ್‌ಗುಣಂ’ (ಬೀಜದ ಗುಣ ಹತ್ತುಪಾಲು) ಎಂದು ನಂಬಿದವರು. ಆದುದರಿಂದಲೇ ಬೀಜಸಂಗ್ರಹವೂ ಅತಿಶ್ರದ್ಧೆಯಿಂದಲೇ ನಡೆದುಬರುತ್ತಿತ್ತು. ಬೀಜಕ್ಕೆ ತೆಗೆದಿರಿಸುವ ಬತ್ತವನ್ನು ಬೆಳೆಯಲು, ಕೆಲವು ಪ್ರದೇಶಗಳಲ್ಲಿ ಪ್ರತ್ಯೇಕ ಗದ್ದೆಗಳೇ ಇದ್ದುವು. ಇದು ಬೀಜದ ಗದ್ದೆ ಎಂದೇ ಕರೆಯಲ್ಪಡುತ್ತಿತ್ತು. ಲಕ್ಷಣಗಳು ಸರಿಯಾಗಿದ್ದ ಗದ್ದೆಯಿಂದ ಒಳ್ಳೆಯ ಬೆಳೆ ಬರುವ, ಸರಿಯಾಗಿ ಬೆಳದು ಹದಗೊಂಡ, ಬೆರಕೆಯಿಲ್ಲದ ಕದಿರುಗಳನ್ನು ಬೀಜಕ್ಕಾಗಿ ಕೊಯ್ದು ತೆಗೆಯಲಾಗುತ್ತಿತ್ತು. ಕೊಯ್ಲುಮಾಡಿ ಹೊರೆಕಟ್ಟಿ ಒಂದೋ ಎರಡೋ ದಿನಗಳಲ್ಲಿ ಬೀಜಗಳನ್ನು ಬೇರ್ಪಡಿಸಿ ಕೊಂಡು ಅದರಲ್ಲಿನ ಕಸಕಡ್ಡಿಗಳನ್ನು ಬೇರ್ಪಡಿಸಿ ಚೆನ್ನಾಗಿ ಒಣಗಿಸುತ್ತಿದ್ದರು. ನೀರಿನ ಅಂಶವನ್ನು ಪೂರ್ತಿಯಾಗಿ ಇಂಗಿಸುವುದು ಇದರ ಉದ್ದೇಶ. ಆಯಾ ಪ್ರದೇಶಕ್ಕೂ ಬೀಜದ ತಳಿಗೂ ಅನುಸಾರವಾಗಿ ಒಣಗಿಸುವುದರಲ್ಲೂ ವ್ಯತ್ಯಾಸವಿದೆ. ಮುಂಡಕನ್ ಬೀಜಕ್ಕೆ ಸಾಮಾನ್ಯವಾಗಿ ಹದಿನಾಲ್ಕು ದಿನದ ಬಿಸಿಲು ಮತ್ತು ಮಂಜು ತಾಗಬೇಕು. ಮಂಜು ತಾಗಿಸುವುದು ಕದಿರಾದಾಗ / ತೆನೆಬಿಟ್ಟಾಗ ಭತ್ತದ ಕಾಳುಗಳು ಉದರದಿರುವುದಕ್ಕಾಗಿ. ಪ್ರತಿದಿನವೂ ಬೀಜವನ್ನು ಹದವಾಗಿ ಹರಡಬೇಕು. ಆದರೆ ಚಿಟ್ಟೇನಿಯಂಥ ಬೀಜಗಳಿಗೆ ಮೂರೋ ನಾಲ್ಕೋ ದಿನದ ಬಿಸಿಲು ತಾಗಿಸಿದರೆ ಸಾಕು. ಒಣಗಿದ ಬತ್ತವನ್ನು ತೆಗೆದು ಒಡೆದು ಮೊಳಕೆ ಬರುವ ಭಾಗದಲ್ಲಿ ನೋಡಿದರೆ ನೂಲಿನಂತೆ ಬಿಳಿಬಣ್ಣವು ಕಾಣಿಸಿದರೆ ಹದವಾಗಿ ಒಣಗಿದೆ ಎಂದು ತಿಳಿದುಕೊಳ್ಳಬಹುದು.

ಒಣಗಿಸಿ ತೆಗೆದ ಬೀಜವನ್ನು ಬೈಹುಲ್ಲಿನಿಂದ ಮುಡಿಕಟ್ಟಿ ಪತ್ರಾಯಗಳಲ್ಲೋ ಬಿದಿರಿನ ಹೆಡಿಗೆಗಳಲ್ಲೋ, ಈಚಲು ಮರದ ಗೂಡುಗಳಲ್ಲಿಯೇ ತೆಗೆದಿರಿಸಬೇಕಾಗುತ್ತದೆ. ಬೈಹುಲ್ಲಿನ ಮುಡಿಕಟ್ಟುವುದಕ್ಕೆ ಒಳ್ಳೆಯ ಕೌಶಲಬೇಕು. ಹುಲ್ಲನ್ನು ಹಗ್ಗದಂತೆ ಮಾಡಿ ಅಡ್ಡನೀಟವಾಗಿ ಇರಿಸಿಕೊಂಡು ಅದರ ಮೇಲೆ ಒಣಗಿದ ಬೈಹುಲ್ಲನ್ನು ಹರಡಿಕೊಂಡು ಅದರ‍ಲ್ಲಿ ಬತ್ತವನ್ನು ಸುರಿಯಲಾಗುತ್ತದೆ. ಬತ್ತದ ಮೇಲೂ ಬೈ ಹುಲ್ಲು ಹರಡಿ ಸರಿಯಾಗಿ ಮುಚ್ಚಿಕೊಂಡು ಅಡ್ಡನೀಟಕ್ಕೆ ಹಾಸಿದ ಹಗ್ಗಗಳಿಂದ ಬಿಗಿಯಾಗಿ ಬಂಧಿಸುತ್ತ ಉರುಟಾದ ಮುಡಿಗಳನ್ನು ಕಟ್ಟಲಾಗುತ್ತದೆ. ಮೂರು ನಾಲ್ಕು ಪರೆ(ಹತ್ತೂವರೆ ಬಳ್ಳ) ಬತ್ತವನ್ನು ಮುಡಿಕಟ್ಟಬಹುದು. ಕಣಜದ ಕೊಟ್ಟೆಗೆಯಲ್ಲಾಗಲಿ ಮನೆಯೊಳಗಾಗಲಿ ಗಾಳಿತಾಗುವಲ್ಲಿ, ಆದರೆ ಬಿಸಿಲು ನೇರವಾಗಿ ಬೀಳದಲ್ಲಿ ಈ ಮುಡಿಗಳನ್ನು ತೆಗೆದಿಡಬೇಕು. ಅಲ್ಲಿ ಸೆಗಣಿ ಸಾರಿಸಿ ಶುದ್ಧವಾಗಿಟ್ಟಿರುತ್ತಾರೆ. ದಕ್ಷಿಣ ಕೇರಳದಲ್ಲಿ ಬೀಜದ ಮುಡಿಗಳಿಗೆ ಚುರುಣ ಎನ್ನುತ್ತಾರೆ. ಮರದಿಂದ ದೊಡ್ಡಪೆಟ್ಟಿಗೆಗಳನ್ನು ತಯಾರಿಸುತ್ತಾರೆ. ಇವಕ್ಕೆ ಪತ್ರಾಯವೆಂದು ಹೆಸರು. ನೀರಿನ ಪಸೆ ತಾಗದಂತೆ ಹೆಚ್ಚು ಎತ್ತರವಿಲ್ಲದ ಕಾಲುಗಳ ಮೇಲೆ ಇವನ್ನು ಜೋಡಿಸಲಾಗುತ್ತದೆ.

ಇದಕ್ಕೆ ಮೇಲು ಮುಚ್ಚಳವೂ ಇರುತ್ತದೆ. ಬೀಜಗಳು ಹಾಳಾಗದಂತೆ ಬೇವಿನಸೊಪ್ಪು ಕಾಸರಕ, ಕರಿನೊಚ್ಚಿ (ಮ.)ಸ ಪಾಣನ್ (ಮ.) ಮುಂತಾದ ಯಾವುದಾದರೂ ಸಸ್ಯಗಳ ಎಲೆಗಳನ್ನು ಹಾಕುತ್ತಾರೆ. ಕೆಲವು ಕಡೆ ಬೂದಿ ಮಿಶ್ರಮಾಡುತ್ತಾರೆ. ಹೀಗೆ ಮಾಡಿದ ಬೀಜಗಳನ್ನು ಕೀಟಗಳು ಬಾಧಿಸುವುದಿಲ್ಲ.

ಬೀಜಗಳನ್ನು ಮೊಳಕೆಬರಿಸುವುದಕ್ಕೂ ಬೇರೆ ಬೇರೆ ಕ್ರಮಗಳಿವೆ. ಸಾಮಾನ್ಯವಾಗಿ, ಮೊಳಕೆ ಬರಿಸಬೇಕಾದ ಬೀಜಗಳನ್ನು ನೀರಿನಲ್ಲಿ ಹಾಕಲಾಗುತ್ತದೆ. ಹನ್ನೆರಡು ಗಂಟೆಗಳಿಂದ ೩೬ ಗಂಟೆಗಳ ತನಕ ನೀರಲ್ಲಿ ಮುಳುಗಿಸಿಡಲಾಗುತ್ತದೆ. ನಿಶ್ಚಿತ ಸಮಯದ ಬಳಿಕ ಹೆಡಗೆಗಳಲ್ಲೋ ಗೋಣಿಚೀಲಗಳಲ್ಲೋ ತುಂಬಿಸಿ ಅದರ ಮೇಲೆ ಭಾರವನ್ನು ಹೇರಲಾಗುತ್ತದೆ. ಶಾಖ ಹೆಚ್ಚಿಸುವುದು ಇದರ ಉದ್ದೇಶ. ಸೆಗಣಿ ನೀರನ್ನು ಕೆಲವರು ಸಿಂಪಡಿಸುತ್ತಾರೆ. ಇದರಿಂದ ಸರಿಯಾಗಿ ಮೊಳಕೆಗಳೊಡೆಯುತ್ತವೆ. ಇದರಂತೆ ಕೂವೆಗಿಡದ ಎಲೆಗಳಿಂದ ಬತ್ತವನ್ನು ಮುಚ್ಚಿ ಇಡಲಾಗುತ್ತದೆ. ಇದರಿಂದಲೂ ಬೀಜಗಳು ಬೇಗ ಮೊಳಕೆಯೊಡೆಯುತ್ತವೆ. ದಿನವೂ ಎರಡೋ ಮೂರೋ ಬಾರಿ ನೀರನ್ನು ಸಿಂಪಡಿಸುವುದೆಂದಿದೆ. ಮೂರುದಿನ ಕಳೆದಾಗ ಸೇರಿಸಿದ್ದ ಭಾರವನ್ನು ಇಳಿಸಿ ಬೀಜಗಳನ್ನು ಹರಡಲಾಗುತ್ತದೆ. ಹರಡದಿದ್ದರೆ ಮೊಳಕೆಗಳು ಉದ್ದವಾಗಿ ಬೀಜಗಳು ತಮ್ಮೊಳಗೆ ಹೆಣೆದುಕೊಂಡು ಬಿಡುತ್ತವೆ. ಹರಡಿದ ಬೀಜಗಳನ್ನು ಹದಿನಾಲ್ಕು ದಿನಗಳವರೆಗೆ ಕೇಡಾಗದಂತೆ ಇಟ್ಟುಕೊಳ್ಳಬಹುದು. ನೀರು ತುಂಬುಬ ಗದ್ದೆಗಳಲ್ಲಾದರೆ ನೀರು ಹದವಾಗಿ ಬಸಿದುಹೋಗುವ ತನಕ ಹೀಗೆ ಇಟ್ಟುಕೊಳ್ಳಬೇಕಾಗುತ್ತದೆ. ಬೀಜಗಳನ್ನು ಬಿತ್ತುವ ಮೊದಲು ಒಂದಿಷ್ಟು ಸೆಗಣಿ ನೀರು ಸಿಂಪಡಿಸಿಕೊಳ್ಳುತ್ತಾರೆ. ಇದರಿಂದ ಬೇರುಗಳಿಗೆ ಒಳ್ಳೆಯ ಶಕ್ತಿ ಬರುತ್ತದೆ. ಹಲವು ಬಾರಿ ಉತ್ತು ಹದಗೊಳಿಸಿದ ಗದ್ದೆಗಳಲ್ಲಿ ಬೀಜಗಳನ್ನು ಬಿತ್ತಲಾಗುತ್ತದೆ.

ಬೀಜಬಿತ್ತಿ ಅದನ್ನು ಕಿತ್ತು ನಾಟಿಮಾಡಿ ಪೈರು ಕಟಾವುಮಾಡಿ ಪುನಃ ಬೀಜವಾಗಿ ಶೇಖರಿಸಿ ಸಂರಕ್ಷಿಸಿ ಇಡುವವರೆಗೆ ಬತ್ತದ ಕೃಷಿಗೆ ತುಂಬ ಗಮನ ಮತ್ತು ಪರಿಚರ್ಯೆಯು ಅಗತ್ಯ. ಮಣ್ಣನ್ನು ಹದಗೊಳಿಸುವುದು, ಕಳೆ ಕೀಳುವುದು, ಕೀಟಗಳನ್ನು ನಿಯಂತ್ರಿಸುವುದು, ಗೊಬ್ಬರ ಹಾಕುವುದು, ನೀರುಣಿಸುವುದು ಮುಂತಾದುವಕ್ಕೆಲ್ಲ ಒಂದೊಂದು ಪ್ರದೇಶದಲ್ಲಿ ತಳಿಗೂ ಜಾಗಕ್ಕೂ ಹೊಂದಿಕೊಂಡು ಅನೇಕ ಕ್ರಮಗಳಿದ್ದುವು.

ಹಸಿರು ಕ್ರಾಂತಿಯ ಬಳಿಕ ಅತ್ಯುತ್ಪಾದನ ಸಾಮರ್ಥ್ಯದ ಬೀಜಗಳು ಮತ್ತು ಕೃಷಿ ವಿಧಾನವು ಬಂದ ಮೇಲೆ ಪರಂಪರಾನುಗತವಾದ ಬೀಜದ ತಳಿಗಳು ಹೆಚ್ಚು ಕಡಿಮೆ ನಿಶ್ಶೇಷವಾಗಿವೆ. ಕೃಷಿಕರು, ಕೃಷಿಕಾರ್ಮಿಕರು, ಜಾನುವಾರಗಳು – ಎಲ್ಲರೂ ಜತೆಗೊಂಡು ಮಾಡುತ್ತಿದ್ದ ಸಾಂಘಿಕ ಕೆಲಸವಾಗಿತ್ತು ಬತ್ತ ಕೃಷಿ. ಅದು ಪರಸ್ಪರ ಪ್ರೀತಿ, ಸ್ನೇಹ, ಸಹಕಾರ, ವಿಶ್ವಾಸಗಳಲ್ಲಿ ನೆಲೆನಿಂತುದಾಗಿತ್ತು. ಆದರೆ ಇಂದಿನ ಭತ್ತ ಬೇಸಾಯವು ಯಂತ್ರಗಳಿಂದಲೂ ರಸಗೊಬ್ಬರಳಿಂದಲೂ ಕೀಟನಿಯಂತ್ರಕಗಳಿಂದಲೂ ಕೂಡಿಕೊಂಡ ಒಂದು ವ್ಯಾಪಾರೀವೃತ್ತಿಯಾಗಿ ಮಾರ್ಪಟ್ಟಿದೆ. ಅದರ ಗುರಿ ಲಾಭ. ಇದು ಕೇರಳದ ತನ್ನದೇ ಆದ ಕೃಷಿರಂಗವನ್ನು ಮಾತ್ರವಲ್ಲ ಸಾಮಾಜಿಕ ಸಾಂಸ್ಕೃತಿಕ ರಂಗಗಳನ್ನೂ ಬಾಧಿಸಿದೆ.

– ಪಿ.ಆರ್.ಕೆ. ಅನುವಾದ ಕೆ.ಕೆ.

ಕೇರಳದಲ್ಲಿ ಮನೆಕಟ್ಟುವ ಆಚರಣೆಗಳು ಕೇರಳದಲ್ಲಿ ತ್ರಿಶ್ಶೂರ್ ಜಿಲ್ಲೆಯಲ್ಲೂ ವಳ್ಳುವನಾಡ್ ತಾಲೂಕಿನಲ್ಲೂ ಮನೆಕಟ್ಟುವುದಕ್ಕೆ ತುಂಬ ಆಚರಣ ವಿಶೇಷಗಳಿದ್ದುವು. ಕೆಳಜಾತಿಯ ಜನರ ಮನೆಗಳಿಗೆ ಚಾಳಪೆರ (ಗೀಜಗನ ಗೂಡು) ಎಂದು ಮುಸ್ಲಿಂ ಮನೆಗಳನ್ನು ಕುಡಿ(ಗುಡಿಸಲು) ಎಂದೂ ಕರೆಯುತ್ತಿದ್ದರು. ಗ್ರಾಮೀಣರು ‘ಪೆರ’ ಎಂದು ‘ಪೊರ’ ಎಂದೂ ಹೇಳುತ್ತಿದ್ದುದು ಶಿಷ್ಟಭಾಷೆಯಲ್ಲಿನ ‘ಪುರ’ (ಮನೆ)ವನ್ನು.

ತೆಂಗಿನ ಸೀಳು, ಪನೆ ಮರದ ನೀರು ವೈಕೋಲ್‌ಪಟ್ಟ (ಬೈಹುಲ್ಲುಕಂತೆ) ಬಿದಿರು, ಕಂಗು ಮುಂತಾದುದವನ್ನು ಉಪಯೋಗಿಸಿ ‘ಪೆರ’ಗಳನ್ನು ಕಟ್ಟುತ್ತಿದ್ದರು. ಹಿಂದಿನ ಕಾಲದಲ್ಲಿ ಆಚರಣೆಗಳನ್ನು ನೆರವೇರಿಸಿ, ಸಮಾಜದ ಬೆಂಬಲದಿಂದ ಮನೆಗಳನ್ನು ನಿರ್ಮಿಸಿಕೊಳ್ಳಲಾಗುತ್ತಿತ್ತು. ಹಿಂದೆ ಹಂಚು ಹೊದೆಯಿಸಿದ ಮನೆಗಳು ವಿರಳವಾಗಿದ್ದುವು. ಹಂಚು ಹೊದೆಸಿದ ಮನೆಗಳೆಂದರೆ ಕೆಲವು ಅರಮನೆಗಳು ಮತ್ತು ನಂಬೂದಿರಿಗಳ ಭವನಗಳು ಮಾತ್ರವಾಗಿದ್ದುವು.

ವರ್ಷಕ್ಕೊಮ್ಮೆ ಮನೆಗೆ ಮಾಡು ಹೊದೆಯಿಸುವುದು ಒಂದು ದೊಡ್ಡ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿತ್ತು. ಮನೆ ಕಟ್ಟುವ ಕಾರ್ಯಕ್ರಮಕ್ಕೆ ತುಂಬ ಜನಗಳ ಗುಂಪೇ ಅಲ್ಲಿ ನೆರೆಯುತ್ತಿತ್ತು. ಮನೆ ಕಟ್ಟುವುದಕ್ಕೆ ಅಗತ್ಯವಾದ ಮರವನ್ನು ತೆಂಗಿನ ಹೆಣೆದ ಗರಿಗಳನ್ನೂ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಸಿದ್ದಪಡಿಸಿಕೊಳ್ಳುತ್ತಿದ್ದರು. (ಮರಕುಯ್ಯುವುದು). ಕುಂಭಮಾಸದ ಏಕಾದಶಿಯಂದೋ ಏಕಾದಶಿ ಬಳಿಕದ ದಿನಗಳಲ್ಲೋ ಮನೆ ಕಟ್ಟಲು ಬೇಕಾದ ಮರಗಳನ್ನೋ ತೆಂಗಿನ ಸೀಳುಗಳನ್ನೋ ಕೊಯ್ಯುತ್ತಿದ್ದರು. ಇಲ್ಲವಾದರೆ ಮರಗಳು ಬೇಗನೆ ಹಾಳಾಗಿ ಬಿಡುತ್ತವೆಂದು ನಂಬುತ್ತಿದ್ದರು. ಅಂತೆಯೇ ಚೆನ್ನಾಗಿ ಬೆಳೆದ ಮತ್ತು ಫಲಕೊಡದಿರುವ ಕೌಂಗು, ಬಿದಿರುಗಳನ್ನಷ್ಟೆ ಕಡಿದು ಉಪಯೋಗಿಸಲಾಗುತ್ತಿತ್ತು. ಅನಿಷ್ಟದಿನಗಳನ್ನುಳಿದು ಮಾತ್ರ ಮನೆಕಟ್ಟುವ ಕೆಲಸ ಮಾಡುತ್ತಿದ್ದರು. ಅನಿಷ್ಟದಿನಗಳೆಂದರೆ ಅಮಾವಾಸ್ಯೆ, ತ್ರಯೋದಸಿ, ದ್ವಾದಶಿ ಮುಂತಾದವು. ಇಂಥ ದಿನಗಳಲ್ಲಿ ಮನೆಯ ಮಾಡು ಹೊದೆಸಿದರೆ ಮನೆ ಉರಿದು ಹೋದೀತು ಎಂಬ ನಂಬುಗೆಯಿಂದ. ಮಾಡಿಗೆ ತ್ರಿಶ್ಶೂರು, ಮಲಪ್ಪುರಂ ಜಿಲ್ಲೆಗಳಲ್ಲಿ ತೆಂಗಿನ ಹೆಣೆದ ಗರಿಗಳನ್ನು ಉಪಯೋಗಿಸುತ್ತಾರೆ. ತೆಂಗಿನ ಗರಿಗಳಾದರೆ ಅವುಗಳನ್ನು ಮತ್ತು ಸಲಿಕೆಗಳನ್ನು ಜೋಡಿಸಿ ಕಟ್ಟಲು ತೆಂಗಿನ ‘ಪಾಂದ’ವನ್ನು ಬಳಸಿಕೊಳ್ಳುತ್ತಾರೆ. ಪನೆಮರದ ಸೀಳುಗಳಾದರೆ ಪನೆಪಾಂದವನ್ನು ಬಳಸುತ್ತಾರೆ. ಚೆನ್ನಾಗಿ ಒಣಗಿದ ಮುಂಡಕನ್, ತವಳ ಕಣ್ಣನ್ ಮುಂತಾದ ಭತ್ತದ ಬೈಹುಲ್ಲನ್ನು ಮಾಡಿಗೆ ಹೊದೆಸಲು ಉಪಯೋಗಿಸುತ್ತಾರೆ. ಮನೆದೇವರಿಗೆ ಕಾಣಿಕೆ ಇರಿಸಿದ ಬಳಿಕವಷ್ಟೇ ಮನೆಕೆಲಸಗಳನ್ನು ಆರಂಭಿಸುತ್ತಿದ್ದರು.

ಬೇಸಗೆ ಆರಂಭವಾಗುವಾಗಲೆ ಮನೆಯ ಹೆಂಗಸರ ಮನಸ್ಸಲ್ಲಿ ಆತಂಕ. ಮನೆಕಟ್ಟಲು ಅಗತ್ಯವಾದ ತೆಂಗಿನ ಗರಿಗಳನ್ನು ಹೆಣೆದು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ಒಣಗಿ ಬಿದ್ದ ತೆಂಗಿನ ಗರಿಗಳನ್ನು ತುಂಡರಿಸಿಕೊಂಡು ಮಧ್ಯೆಸೀಳಿ ನೀರಲ್ಲಿ ಹಾಕಿ ನೆನಸಿ ಹದಬರಿಸಿದ ಬಳಿಕ ಅವನ್ನು ಹೆಣೆಯುವುದು. ಇಲ್ಲವಾದರೆ ಹಸಿ ಹೆಡೆಗಳನ್ನು ಕತ್ತರಿಸಿ ಹೆಣೆದು ಬಳಿಕ ಒಣಗಿಸಿಕೊಳ್ಳಬೇಕು. ಹೆಚ್ಚು ಕಾಲ ಬಾಳಿಕೆ ಬರಲು ನೆನೆಸಿದ ತೆಂಗಿನ ಗರಿಗಳನ್ನು ಬಳಸುತ್ತಾರೆ. ಬಾಕಿ ಉಳಿದ ಹೆಡೆಯ ಬುಡುವನ್ನು, ಓಲೆಗಳನ್ನು ತುದಿಗಳನ್ನು ಹೆಂಗುಸರು ಮಳೆಗಾಲದಲ್ಲಿ ಬೆಂಕಿ ಉರಿಸಲು ತೆಗೆದಿರಿಸಿಕೊಳ್ಳುತ್ತಾರೆ. ಓಲೆಗಳ ತುದಿಗಳನ್ನು ‘ಸೂಟೆ’ಯಂತೆ ಕಟ್ಟಿ ಇರಿಸಿಕೊಳ್ಳುತ್ತಾರೆ. ಮನೆಕಟ್ಟುವ ಕೆಲಸ ಎರಡು ದಿನಗಳ ಕಾಲ ಮುಂದುವರಿಯುತ್ತವೆ. ಒಂದನೇ ದಿವಸ ‘ಮನೆ ಮುರಿಯುವುದು’, ಎರಡನೆಯ ದಿನ ‘ಮನೆ ಕಟ್ಟುವುದು’ ನಡೆಯುತ್ತದೆ. ಮನೆ ಮುರಿಯುವ ದಿನ ಮನೆಯೊಳಗಿನ ಎಲ್ಲ ವಸ್ತುಗಳನ್ನು ದೂರಸರಿಸಿ ಇಟ್ಟುಕೊಳ್ಳುತ್ತಾರೆ. ಬಳಿಕ ಮಕ್ಕಳಾಗಲಿ ವೃದ್ಧರಾಗಲೀ ಕತ್ತಿಯಿಂದ ಕತ್ತರಿಸಿ ಮನೆ ಮುರಿಯ ತೊಡಗುತ್ತಾರೆ. ಹಾಗೆ ಮುರಿದಾಗ ಸಿಗುವ ಕರಿಓಲೆ (ಮಸಿ ಹಿಡಿದು ಕಪ್ಪಾದ ಜೀರ್ಣಗೊಂಡ ತೆಂಗಿನಗರಿ) ಯನ್ನು ಒಂದು ಕೋಲಿನಿಂದ ಹೊಡೆದು ಚೆನ್ನಾಗಿರುವುದನ್ನು ಹಾಳಾಗಿರುವುದನ್ನು ಪ್ರತ್ಯೇಕಿಸುತ್ತಾರೆ. ಚೆನ್ನಾಗಿರುವ ಗರಿಗಳೆಂದರೆ ಗಟ್ಟಿ ಮುಟ್ಟಾದ ತೆಂಗಿನ ಗರಿಯ ಕಡ್ಡಿಗಳಿರುವುದು. ಅಂಥವನ್ನು ಹೊಸ ಗರಿಗಳ ಜತೆ ‘ಮನೆ ಕಟ್ಟಲು’ ಉಪಯೋಗಿಸುತ್ತಾರೆ. ಮನೆಕಟ್ಟುವ ದಿವಸ ಮನೆಯ ಅಂಗಳದಲ್ಲಿ ತೆಂಗಿನ ಗರಿಗಳನ್ನೋ ಪನೆಮರದ ಓಲೆಯನ್ನೋ ಜೋಡಿಸಿ ಇಟ್ಟುಕೊಳ್ಳುತ್ತಾರೆ. ‘ಮನೆಕಟ್ಟುವ’ ಕೆಲಸದ ನೇತೃತ್ವವನ್ನು ಅದರಲ್ಲಿ ಪರಿಣತರಾದವರು ವಹಿಸುತ್ತಾರೆ. ಪ್ರತಿಯೊಂದು ಮನೆಗೂ ತಮ್ಮದೇ ಮನೆಕಟ್ಟುವ ಮನೆನಿರ್ಮಾಣ ತಜ್ಞನ ಶಿಷ್ಯರು ಯಾರಾದರೂ ಇದ್ದರೆ ಚಾವಡಿಗೆ ತೆಂಗಿನ ಗರಿ ಕಟ್ಟುವುದು ಆತನೇ. ಆಗಲೂ ಮನೆಯ ಮೋಂದಾಯ (ಮಾಡಿನ ಶಿಖರ) ವನ್ನು ಕಟ್ಟುವುದೂ ಆತನೇ. ಮನೆಯ ಕೆಳಭಾಗಕ್ಕೆ ನಮಸ್ಕರಿಸಿದ ಬಳಿಕವಷ್ಟೆ ಮನೆಯ ಮಾಡಿಗೆ ಏರಬಹುದು. ಮನೆಕಟ್ಟುವವನ ಉಡುಪು ಸಾಮಾನ್ಯವಾಗಿ ಖಾಕಿ ಇರುತ್ತದೆ. ಖಾಕಿ ಟ್ರೇಸರ್, ಷರ್ಟು; ನಾರಿನಿಂದ ಒಂದು ಕಟ್ಟು – ಇಷ್ಟೆ ಇದರ ಬದಲು ಕೆಲವೊಮ್ಮೆ ಕೌಂಗಿನ ಹಾಳೆಯನ್ನು ನನೆಹಾಕಿ ಸೀಳಿಕೊಂಡ ನಾರುಗಳನ್ನು ಬಳಸುತ್ತಾರೆ. ಖಾಕಿ ಬಟ್ಟೆ ಧರಿಸುವುದು ಬೈಹುಲ್ಲಿನ ಶಾಖ ತಗಲದಿರುವುದಕ್ಕಾಗಿ, ಮಂಗಳವಾರ, ಶುಕ್ರವಾರ, ಶನಿವಾರ – ಈ ದಿನಗಳಲ್ಲಿ ಮಾತ್ರ ಮನೆಕಟ್ಟುವ ಕೆಲಸ ಮಾಡುತ್ತಿದ್ದರು.

ಮಕರ, ಮೇಷ, ತಿಂಗಳುಗಳಲ್ಲಷ್ಟೆ ಮನೆಕಟ್ಟುತ್ತಾರೆ. ಹತ್ತಿರ ಹತ್ತಿರದ ಮನೆಗಳನ್ನು ಒಂದೇ ದಿನ ಕಟ್ಟುವುದಿಲ್ಲ. ಮನೆ ಕಟ್ಟುವುದಕ್ಕಾಗಿ ಮಾಡನ್ನು ಏರಿದ ತಜ್ಞರು ಸಲೀಸಾಗಿ ನಡೆಯುವುದಕ್ಕಾಗಿ ಹೀಗೆಲ್ಲ ಕೂಗಿಕೊಳ್ಳುತ್ತಾನೆ.

ಹಾಂ ! ಬರಲಿ. ಆ ಭಾಗಕ್ಕೆ ತೆಂಗಿನ ಗರಿ ಬರಲಿ.

ಹಾಂ ! ಸಣ್ಣದು. ದೊಡ್ಡದು. ಗರಿ

ಹಾಂ ! ಹಗ್ಗ ಬರಲಿ.

ಹೀಗೆ ಕೂಗಿ ಕೊಳ್ಳುವುದಕ್ಕೆ ಅನುಸಾರವಾಗಿ ಹೆಂಗಸರು ಕೆಳಗಿನಿಂದ ಅಗತ್ಯವಾದುವುಗಳನ್ನು ಎಸೆದುಕೊಡುತ್ತಾರೆ. ಇಬ್ಬರು ಇದ್ದರೆ ನಾಡ ತಮಾಷೆಗಳೂ ಹಳೆಯ ಅನುಭವಗಳೂ ಬಿಚ್ಚಿಕೊಳ್ಳುತ್ತವೆ. ಮನೆ ಕಟ್ಟಿ ಮೋಂದಾಯ (ಮಾಡಿನ ಶಿಖರ) ವನ್ನು ‘ಕುತ್ತು’ ವಾಗ (ಶಿಖರದ ಗಾತ್ರನುಸಾರವಾಗಿ ಕಂಗಿನಿಂದ ತಯಾರಿಸಿದ ಚೂಪು ಮೊನೆಗಳ ಮೂರೋ ಐದೋ ಕೋಲುಗಳನ್ನು ಶಿಖರದ ಎದೆ ಭಾಗದಲ್ಲಿ ಸುರಿದು ಹಗ್ಗದಿಂದ ಅವುಗಳ ಎರಡು ಬದಿಗಳನ್ನೂ ಬಿಗಿದರೆ ಗಾಳಿಗೆ ಮಾಡಿನ ಶಿಖರ ಸರಿದಾಡುವುದಿಲ್ಲ). ತೆಂಗಿನಕಾಯಿ ಒಡೆಯುತ್ತಾರೆ. ಇದು ಒಂದು ಮುಖ್ಯ ಕಾರ್ಯಕ್ರಮ. ಮನೆ ನಿರ್ಮಾಣ ತಜ್ಞನು ಮೋಂದಾಯದಲ್ಲಿ ಕುಳಿತುಕೊಂಡೇ ಮನೆಯವರ ಉಪಸ್ಥಿತಿಯಲ್ಲಿ ತೆಂಗಿನ ಕಾಯನ್ನು ಒಡೆಯುತ್ತಾನೆ. ಮೋಂದಾಯದ ಮೇಲೆ ಕುಳಿತುಕೊಂಡು ಕೆಲಸವನ್ನೆಲ್ಲ ಮುಗಿಸಿ ಆತ ತೆಂಗಿನಕಾಯಿಯ ಮೇಲೆ ಕತ್ತಿಯಿಂದ ನಾಲ್ಕಾರು ಅಕ್ಕಿ ಕಾಳುಗಳನ್ನು ಇರಿಸಿ ಎರಡು ಬಾರಿ ಕತ್ತಿಯಿಂದ ತೆಂಗಿನ ಕಾಯಿಗೆ ಆನಿಸಿ ಮೂರನೇ ಬಾರಿ ಅದನ್ನು ಒಡೆಯಬೇಕಾದುದು ಅದರ ಕ್ರಮ (ಮೂರನೇ ಬಾರಿಯ ಹೊಡೆತಕ್ಕೆ ತೆಂಗಿನಕಾಯಿ ಒಡೆಯದಿರದು ಎಂಬುದು ನಂಬಿಕೆ). ಎರಡು ಬದಿಗೂ ಬೀಳುವ ತೆಂಗಿನ ಹೋಳುಗಳಲ್ಲಿ ಒಂದು ಕವುಚಿಯೂ ಇನ್ನೊಂದು ಅಂಗಾತವೂ ಆಗಿ ಬಿದ್ದರೆ ಮುಂದಿನ ವರ್ಷ ಆ ಮನೆಗೆ ಹೆಂಚು ಹೊದೆಸುವ ಭಾಗ್ಯವೆಂತಲೂ ಎರಡೂ ಅಂಗಾತ ಬಿದ್ದರೆ ಮಳೆಗಾಲಪೂರ್ತಿ ಮನೆ ಸೋರೀತೆಂದೂ ಎರಡೂ ಕವುಚಿ ಬಿದ್ದರೆ ಮನೆ ಹಿಂದಿನಹಾಗೆಯೇ ಬದಲಾವಣೆ ಇಲ್ಲದೆ ಮುಂದುವರಿಯುವುದೆಂದೂ ನಂಬಿಕೆಯಿದೆ.

ಮನೆಕಟ್ಟಿ ಮುಗಿದರೆ ‘ಪದಾರ್ಥ ಮಾಡುವುದು’ ಕೂಡ ಅದಕ್ಕೆ ಸಂಬಂಧಿಸಿದ ಆಚರಣೆಯೇ ಅಕ್ಕಿ ಪುಡಿ, ಬೆಲ್ಲ, ಸಣ್ಣ ನೀರುಳ್ಳಿ – ಇವನ್ನು ಸೇರಿಸಿ ತಯಾರಿಸುವ ಪಾಯಸವಿದು. ಮನೆಕಟ್ಟುವ ಜನರ ಶ್ರಮವು ಈ ಸಿಹಿಯಿಂದ ಮಾಯವಾಗಿ ಬಿಡುತ್ತದೆ. ಮನೆ ಕಟ್ಟಿದ ಬಳಿಕ ಮೊದಲ ಸಾಮೂಹಿಕ ಭೋಜನ ಈ ‘ಕರಿವೆಕ್ಕುಗ’ (ಪದಾರ್ಥ ಮಾಡುವುದು)ವೇ ಆಗಿರಬೇಕೆಂಬುದು ಕಡ್ಡಾಯ.

– ಕೆ.ಯು.ಎಚ್. ಅನುವಾದ ಕೆ.ಕೆ.

ಕೇರಳದ ವಿನೋದ ಗಾನಗಳು ಕೇರಳದ ಮುಟ್ಟುವ ಆಟ, ಕಣ್ಣು ಮುಚ್ಚಾಲೆ ಮುಂತಾದವುಗಳಲ್ಲಿ ಉಳಿದವರನ್ನು ಮುಟ್ಟಬೇಕಾದ ಆಟಗಾರ (ಇಂಥ ಆಟಗಾರ – ಕಾಗೆ) ನನ್ನೂ, ಕಣ್ಣು ಮುಚ್ಚಬೇಕಾದ ಆಟಗಾರನನ್ನೂ ನಿರ್ನಯಿಸುವುದು ಒಂದೆ ಹಾಡನ್ನು ಹಾಡುವ ಮೂಲಕ. ಇದನ್ನು ‘ಎಣ್ಣಪ್ಪಾಟ್ಟ್’ (ಲೆಕ್ಕ ಹಾಕುವ ಹಾಡು) ಎಂದು ಕೆಲವೆಡೆ ಕರೆಯುತ್ತಾರೆ. ಆಟವಾಡುವ ಎಲ್ಲರನ್ನೂ ಮುಖಾಮುಖಿಯಾಗುವಂತೆ ಸುತ್ತಲೂ ಕುಳ್ಳಿರಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಮುಂಗೈ ಮೇಲಾಗುವಂತೆ ಹಿಡಿಯುತ್ತಾರೆ. ಪರಸ್ಪರ ತಾಗುವಂತೆ ಹಿಡಿದಿರುವ ಈ ಮುಂಗೈಗಳು ವೃತ್ತಾಕಾರದಲ್ಲಿ ಇಟ್ಟಿರುತ್ತವೆ. ಗುಂಪಿನಲ್ಲೊಬ್ಬ ಬಲಕೈಮುಷ್ಟಿ ಹಿಡಿದು ಹಾಡು ಹಾಡುತ್ತ ಪ್ರತಿಯೊಂದು ಮುಂಗೈಯಲ್ಲೂ ಕುಟ್ಟುತ್ತಾನೆ. ಹಾಡಿನ ಒಂದೊಂದು ಪದವನ್ನು ಉಚ್ಚರಿಸುವಾಗಲೂ ಆಗಾಗಲೇ ಮುಂಗೈಯ ಮೇಲೆ ಕಟ್ಟು ಬೀಳುತ್ತದೆ. ಹಾಡಿನ ಕೊನೆಯ ಶಬ್ದವನ್ನು ಉಚ್ಚರಿಸುವಾಗ ಯಾವ ಮುಂಗೈಗಳ ಮೇಲೆ ಕುಟ್ಟು ಬೀಳುತ್ತದೋ ಆ ವ್ಯಕ್ತಿ ಅಂಗೈಮೇಲಾಗಿ ಇಡುತ್ತಾನೆ. ಹಾಡೂ ಕುಟ್ಟೂ ಮುಂದುವರಿಯುತ್ತದೆ. ಹಾಡಿನ ಕೊನೆಗೆ ಆ ಅಂಗೈಗಳ ಮೇಲೆ ಮತ್ತೆ ಕುಟ್ಟು ಬಿದ್ದರೆ ಅಂಗೈಗಳು ಹೊರಗೆ ಉಳಿಯುತ್ತವೆ. ಹಾಗೆಯೇ ಕೊನೆಗೆ ಬಾಕಿಯಾಗುವ ಕೈಗಳ ವ್ಯಕ್ತಿ ಕಾಗೆ ಅಥವಾ ಕಣ್ಣು ಮುಚ್ಚುವ ವ್ಯಕ್ತಿಯಾಗುತ್ತಾನೆ. ಒಂದು ನಿಶ್ಚಿತ ಸಂಖ್ಯೆಯವರೆಗೆ ಎಣಿಸಿ ಅದನ್ನು ಪುನರಾವರ್ತಿಸುತ್ತ ಜನರನ್ನು ‘ಔಟ್‌’ ಮಾಡಿ ಆಟಗಾರರನ್ನು ಕಂಡುಕೊಳ್ಳುವ ವಿದ್ಯೆಯೇ ಈ ಹಾಡುಗಳಲ್ಲಿ ಅಡಗಿರುವುದು.

ಲೆಕ್ಕ ಹಾಕುವುದರ ಸ್ಥಾನದಲ್ಲಿ ಕೆಲವ ನಿರ್ವಹಿಸುವ ಈ ಹಾಡುಗಳು ಆದ್ಯಂತವಾಗಿ ತಾಳಾತ್ಮಕವಾಗಿರುತ್ತವೆ. ಇವು ನಿರ್ದಿಷ್ಟ ಅರ್ಥಕೊಡುವ ಹಾಡುಗಳೇನೂ ಅಲ್ಲ. ಒಂದು ಮುಂಗೈ/ಅಂಗೈಯಿಂದ ಮುಷ್ಟಿತೆಗೆದು ಇನ್ನೊಂದು ಮುಂಗೈಗೆ ಕುಟ್ಟಲು ಇರುವ ಸಮಯವನ್ನು ಕ್ಲುಪ್ತಗೊಳಿಸುವಂತೆ ಸಮಾನವಾದ ಮಾತ್ರೆಗಳು ಇರುವು ಪದಗಳು ಈ ಹಾಡಿನಲ್ಲಿರುತ್ತವೆ. ಕೆಲವು ಪದಗಳನ್ನು ಪ್ರತ್ಯೇಕವಾಗಿಯೇ ತೆಗೆದುಕೊಂಡರೆ ಒಂದೊಮ್ಮೆ ಅದಕ್ಕೆ ಅರ್ಥ ಇರಲೂ ಬಹುದು. ಆದರೆ ಹಾಡನ್ನು ಪೂರ್ತಿಯಾಗಿ ತೆಗೆದುಕೊಂಡರೆ ಒಟ್ಟಿನ ಆಶಯವು ಸ್ಪಷ್ಟವಾಗಿ ಸಿಗಬೇಕೆಂದಿಲ್ಲ. ಆದರೆ ಆಟದಲ್ಲಿ ಕ್ರಿಯಾತ್ಮಕತೆಗೆ ಚಾಲನೆ ಕೊಡುವುದಕ್ಕೆ ನಾಟಕೀಯವಾದ ಸ್ವಾಗತಾಖ್ಯಾನವನ್ನು ಇವು ನಿರ್ವಹಿಸುವುದನ್ನು ಕಾಣಬಹುದು. ಮೊದಲ ಹಾಡಲ್ಲಿ ‘ಎಂದಂಬು’ ಎಂಬ ಪ್ರಶ್ನೆಗೆ ‘ಮುರಿಕುಂಬು’ ಎಂಬ ಉತ್ತರವು ಒಂದು ನಿರ್ದಿಷ್ಟ ಆಶಯವನ್ನು ವ್ಯಂಜಿಸುತ್ತಿಲ್ಲವಾದರೂ ವಚನ – ಪ್ರತಿವಚರ್ನ ಪ್ರತೀತಿಯನ್ನು ಸೃಷ್ಟಿಸುತ್ತವೆ. ಎರಡನೆಯ ಪದಕ್ಕೂ ವಿಶೇಷ ಅರ್ಥವೇನೂ ಇಲ್ಲ. ಆದರೂ ‘ಆನೆ ಬರುವಾಗ’ ಎಂಬ ಪ್ರಯೋಗವು ಸಜೀವವಾದ ಒಂದು ಚಿತ್ರವನ್ನು ನೀಡುತ್ತದೆ. ಮೂರನೆಯ ಹಾಡು ಸಂವಾದ ರೂಪದಲ್ಲಿ ರಚನೆಯಾಗಿದೆ. ಆಟಕ್ಕೆ ಲವಲವಿಕೆ ತುಂಬಲಿರುವ ಉಪಾಯಗಳು – ಇವೆಲ್ಲ. ವಿಚಾರಕ್ಕಿಂತಲೂ ಕ್ರಿಯೆಗೆ ಪ್ರಾಧಾನ್ಯ. ಹಳ್ಳಿ ಹಳ್ಳಿಗಳಲ್ಲೂ ಈ ಆಟಕ್ಕೆ ಬಳಕೆಯಾಗುವ ಹಾಡುಗಳ ಪ್ರಭೇದಗಳಿವು.

ಇದೇ ಆಟವನ್ನು ಅಂಗೈ/ಮುಂಗೈಗಳಿಗೆ ಕುಟ್ಟದೆಯೂ ಆಡಲಾಗುತ್ತದೆ. ಹಾಡಿನ ಒಂದೊಂದು ಪದವನ್ನು ಹಾಡುವಾಗಲೂ ಒಬ್ಬೊಬ್ಬನನ್ನು ಮುಟ್ಟುತ್ತ ಹಾಡಿನ ಕೊನೆಯ ಪದವು ಯಾರಲ್ಲಿ ಮುಗಿಯುತ್ತದೋ ಆ ವ್ಯಕ್ತಿ ವೃತ್ತದಿಂದ ಹೊರ ಹೋಗಬೇಕು. ಕೊನೆಗೆ ಹೊರ ಹೋಗಲು ವಿಧಿಸಲ್ಪಟ್ಟಾತ ‘ಕಾಗೆ’ಯಾಗಿ ಬದಲಾಗುತ್ತಾನೆ. ಇದೂ ಲೆಕ್ಕ ಹಾಕುವಂಥದ್ದೇ.

ಅತ್ತಳಿ /ಇತ್ತಳಿ /ಪರಂಗಿತ್ತಾಳಿ
ಞೂನೆಣ್ಣ / ನೀಯೆಯ

ಸಟ್ಟಮ /ಸಟ್ಟಿಮ ಸಾಸ
ಮಣ್ಣೆಣ್ಣ /ಪೆಟ್ರೋಲ್

ಈ ಹಾಡಿನ ಯಾವುದೇ ಸಾಲುಗಳು ಒಂದು ಸಂಪುಷ್ಟವಾದ ಆಶಯವನ್ನು ಕೊಡುವುದಿಲ್ಲ.

ಆಟದ ಸಿದ್ಧತೆ ಮಾಡುವ ಹಾಡುಗಳು ಮೇಲಿನವು. ಇನ್ನು ಆಟದ ಜತೆಗೇ ತುಂಬಿನಿಲ್ಲುವ ಹಾಡುಗಳನ್ನು ಗಮನಿಸೋಣ. ಯಾವುದಾದರೂ ಒಂದು ಕೈಯಲ್ಲಿ ಮಂಜಟ್ಟಿ ಬೀಜವನ್ನೋ, ಹುಣಿಸೆ ಬೀಜವನ್ನೋ ಹಿಡಿದುಕೊಂಡು ಎರಡು ಕೈಗಳನ್ನು ಮೇಲೆ ಎತ್ತಿಹಿಡಿದು ಬೀಜ ಯಾವ ಕೈಯಲ್ಲಿದೆ ಎಂದು ಕೇಳಿ ಆಡುವ ಆಟದಲ್ಲಿ ಎದುರು ಪಂಗಡದವರಲ್ಲಿ ಕೇಳುವುದು ತಾಳಬದ್ಧವಾದ ಒಂದು ಹಾಡಿನ ಮೂಲಕ.

ಅಕ್ಕಾ ಪಕ್ಕಾ ಚೆಮ್ಮಾಂಕಣ್ಣಿ
ಎಕ್ಕೈಮ ತಾರಂ?

ಈ ಸಾಲುಗಳನ್ನು ಹಾಡಿದ ಕೂಡಲೇ ಮರು ಪಂಗಡದವರು ಉತ್ತರ ಹೇಳಬೇಕು. ಇದರ ಹಾಗೆಯೇ ಮರಳಿನಲ್ಲಿ ದಾಳವನ್ನು ಹೂತಿಟ್ಟು ಆಡುವಾಗಲೂ ಹಾಡು ಹಾಡುತ್ತಾರೆ.

ಕೀಚ್ಚಿಕೀಚ್ಚಿ ಪೂಂದೋಲಂ
ಆರು ಪರಂಞಂ ಪೂಂದೋಲಂ
ಇಟಾನ್ ಪರಂ
ಞ ಪೂಂದೋಲಂ
ಪೂಂದೋಲುಂಡೆಂಗಿಲೆಣ್ಣೆಕ್ಕೋ

ಈ ಹಾಡನ್ನು ಹಾಡಿ ಮುಗಿಸುವುದರ ಮಧ್ಯೆ ದಾಳವನ್ನು ಮರಳಲ್ಲಿ ಎಲ್ಲಿಯಾದರೂ ಹೂತು ಬಿಡಲಾಗುತ್ತದೆ.

ಈ ಎರಡು ಆಟಗಳಲ್ಲಿಯೂ ಮರಳಲ್ಲಿ ಹೂತಿಟ್ಟವರಿಗೆ ತನ್ನ ಯಾವ ಕೈಯಲ್ಲಿ ಅದನ್ನು ಹಿಡಿದುಕೊಂಡಿದ್ದೇನೆ ಅಥವಾ ಎಲ್ಲಿ ಹೂತಿಟ್ಟಿದ್ದೇನೆ ಎಂಬ ನೆನಪು ಇದ್ದೇ ಇರುತ್ತದೆ. ಇದು ಮುಖಭಾವದಿಂದ ತಾನು ತಿಳಿಯದೆ ಸ್ವತಃ ಸಿದ್ಧವಾಗಿ ಹೊರಬಂದು ಬಿಡುವ ಸಾಧ್ಯತೆ ಇರುತ್ತದೆ. ಈ ಮುಖಭಾವವನ್ನು ಎದುರು ಪಂಗಡದವರು ಓದಿಬಿಡದಂತೆ ಮರೆ ಮಾಚುವ ಒಂದು ಉಪಾಯ ಹಾಡುಗಳನ್ನು ಹೇಳುವುದು. ಮೇಲೆ ಹಿಡಿದ ಕೈಗಳನ್ನು ಕೆಳತರುವ ವ್ಯಗ್ರತೆಯಿರುವ ಕಾರಣ ‘ಅಕ್ಕಾ ಪುಕ್ಕಾ’ ಹಾಡುವುದು ದ್ರುತಲಯದಲ್ಲಿ. ಆದರೆ ಮರಳು ರಾಶಿ ಹಾಕಿ ಅದರಲ್ಲಿ ಎರಡು ಕೈಗಳನ್ನೂ ಮುಂದಕ್ಕೂ ಹಿಂದಕ್ಕೂ ಎಳೆಯುವಾಗ ಎಳೆತದ ಗತಿಗೆ ಅನುಸಾರವಾಗಿ ಗತಿಯು ಮಂದವಾಗಿರುತ್ತದೆ. ‘ಕೀಚ್ಚಿ ಕೀಚ್ಚಿ’ ಹಾಡುವುದು ಮರಳಲ್ಲಿ ಚಲಿಸುವ ಶಬ್ದದ ಅನುಕರಣವಾಗಿಯೇ. ಎಂದರೆ, ಪ್ರತಿಯೊಂದು ಆಟಕ್ಕೂ ಅದಕ್ಕೆ ಅನುಸಾರವಾದ ರೀತಿಯ ತಾಳ ಮತ್ತು ಪದಸಂಘಾತಗಳನ್ನು ಅಳವಡಿಸಿರುತ್ತದೆ ಎಂದು ಅರ್ಥ. ಮಕ್ಕಳು ತೆಂಗಿನ ಕಡ್ಡಿಯಿಂದ ಮರಳಲ್ಲಿ ಬರೆಯುತ್ತ ಹಾಡುವ ಹಾಡು ಇದು

ವರ /ವರ /ವರಕ್ಕ ಲಮ್ಮಕ್ಕ್ ಭಾಗ್ಯ / ಮುಂಡೆಂಗಿಲ್ / ಎಟ್ಟ್ /ಏರ

ಬರೆದು ಮುಗಿಸಿದಾಗ ಎಂಟು ಗೆರೆಗಳು ಖಚಿತವಾಗಿ ಬಿದ್ದಿರುತ್ತದೆ. ಸಂಖ್ಯೆಗಳನ್ನು ಅಕ್ಷರಗಳಲ್ಲಿ ಬರೆದು ಬಿಡುವ ಉಪಾಯವು ಈ ತೆರನ ಮಕ್ಕಳ ಮೂಲಕವೇ ಬಂದುದಾಗಿರಬೇಕು.

ಮಕ್ಕಳನ್ನು ಆಡಿಸುವಾಗ ಹಾಡುವ ಹಾಡುಗಳು: ಮಕ್ಕಳನ್ನು ಆಡಿಸುವಾಗಲೂ ಹಿರಿಯರು ಹಾಡುವ ಹಾಡುಗಳೂ ವಿನೋದ ಗಾನಗಳೇ. ಶಬ್ಧಗಳಿಂದಲೂ ಲಯದಿಂದಲೂ ಮಕ್ಕಳಿಗೆ ಇವು ಇಷ್ಟವಾಗುತ್ತವೆ. ಸಣ್ಣ ಮಕ್ಕಳ ಅಂಗೈಯಲ್ಲಿ ಹಿರಿಯರು ತಮ್ಮ ಅಂಗೈಗಳನ್ನು ತಟ್ಟುತ್ತ ಹಾಡುವ – ತಪ್ಪೋ ತಪ್ಪೋ ತಪ್ಪಾಣಿ/ ತಪ್ಪು ಕುಡುಕ್ಕೆ ಲೆಂದುಂಡ್ / ಮುತ್ತಶ್ಶಿ ತನ್ನೋರು ಮುತ್ತುಂಡ್/ಮುತ್ತಿನ ಮುಂಙೂನ್ ತೇನುಂಡ್/ ಪೂ ಚೂಡಾನಮ್ಮಯುಂಡ್/ಅಮ್ಮ ಕೊಡುಕ್ಕಾನ್ ಕುಂಞಾಂಡ್.

ಈ ಹಾಡು ಒಂದು ತೆರನ ಸಂವಾದ ಶೈಲಿಯಲ್ಲಿ ರಚನೆಯಾಗಿದೆ. ಮಕ್ಕಳನ್ನು ಆಡಿಸಲು ಒದಗುವ ರೀತಿಯ ತಾಳವನ್ನು ಆದ್ಯಂತ ಇರಿಸಿಕೊಂಡಿದೆ.

ಹಾಡು ಮತ್ತು ಆಟ ಸೇರಿಕೊಂಡ ವಿನೋದ ಗಾನಗಳನ್ನು ಇದುವರೆಗೆ ನೋಡಿದೆವು. ಇನ್ನು ವಿನೋದಕ್ಕಾಗಿ ಮಾತ್ರ ಹಾಡುವ ಹಾಡುಗಳನ್ನು ಗಮನಿಸಬಹುದು. ಯಾವುದೇ ಯುಕ್ತಿಗಳಿಲ್ಲದ ಸಂಗತಿಗಳನ್ನು ಸೇರಿಸಿ ರಚಿಸಿದ ಅಸಂಬದ್ಧ ಗಾನಗಳು ಇದರಲ್ಲಿ ಸೇರುತ್ತವೆ.

ಞೂನೊರು ವೆಳ್ಳಂ ನಟ್ಟಪ್ಪಂ
ಆತ್ತೆದುಂ ಪೂತ್ತೆದುಂ ವೆಂಡಕ್ಕ
ಪೂವೆಂಡಕ್ಕ ಪರಿಚ್ಚ್ ಏಟ್ಟೀಲಿಟ್ಟಪ್ಪಂ
ವೀಟಲ್ ಕಂಡದ್ ಕೊತ್ತಚ್ಚಕ್ಕ
ಕೊತ್ತಚ್ಚಕ್ಕ ಪರಿಚ್ಚ್ ಉಪ್ಪೇರಿ ವೆಚ್ಚಪ್ಪಂ
ಕೊಂಡ್
ಏಳಂಬ್ಯದ್ ಚಾಮಕಂಞ
ಚಾಮಕಂಞೆ ಕುಡಿಚ್ಚಾಮೋದಂ ತೀರ್ತಪ್ಪಂ
ವಯಟ್ಟಲ್ ತಡಂಞದ್ ಕೋಯಿ ಕುಂಞನ್
ಕೋಯಿಕುಂಞನ್ ಚೆರುಪ್ಪತ್ತಿಲ್ ‘ಪಿಯೋ ಪಿಯೋ’
ಞೂನುಂ ಚೆರುಪ್ಪತ್ತಿಲ್
‘ಕ್
ಳ್ಳೇ ಕ್ಳ್ಳೇ

(ನಾನೊಂದು ಸೌತೆಕಾಯಿ ನೆಟ್ಟಾಗ ಚಿಗುರಿದ್ದು ಹೂವಾ‌ದ್ದು ಬೆಂಡೆ ಕಾಯಿ ಬೆಂಡೆ ಕುಯ್ದು ಕುಕ್ಕೆಯಲ್ಲಿ ಹಾಕಿದಾಗ ಮನೆಯಲ್ಲಿ ಕಂಡದ್ದು ದೀವಿಹಲಸು ದೀವುಹಲಸು ಕೊಯ್ದ ಪಲ್ಯ ಮಾಡಿದಾಗ ತಂದು ಬಡಿಸಿದ್ದು ಸ್ಯಾವೆ ಗಂಜಿ ಸ್ಯಾವೆ ಗಂಜಿ ಕುಡಿದು ಖುಷಿಯಲ್ಲಿ ಇದ್ದಾಗ ಹೊಟ್ಟೆಯಲ್ಲಿ ನಿಂತಿತು ಕೊಳಿಮರಿ ಚಿಕ್ಕಂದಿನಲ್ಲಿ ‘ಪಿಯೋ ಪಿಯೋ’ ನಾನೂ ಚಿಕ್ಕಂದಿನಲ್ಲಿ ಕ್‌ಳ್ಳೇ ಕ್‌ಳ್ಳೇ).

ಇದರ ಪ್ರತಿಯೊಂದು ಸಾಲೂ ಯುಕ್ತಿ ರಹಿತವಾದುದು. ಪರಸ್ಪರ ವಿರುದ್ಧವಾದ ಆಶಯಗಳ ಸೇರಿಕೆಯೇ ಇದರಲ್ಲಿ ವಿನೋದವುಂಟು ಮಾಡುತ್ತದೆ. ತುಂಬ ಸಣ್ಣ ಮಕ್ಕಳು ಸುಮ್ಮನೆ ಹಾಡಿ ಖುಷಿ ಪಡುವ ಹಾಡು ‘ಕುಂಞಿ ಕುರುಕ್ಕಾ’ (ಪುಟ್ಟನರೀ) ಎಂದು ಆರಂಭವಾಗುತ್ತದೆ.

ಕುಂಞಿ ಕುಂಞಿ ಕುರುಕ್ಕಾ ಪುಟ್ಟ ಪುಟ್ಟ ನರಿಯೇ
ನಿನಕ್ಕೆಂದ್ ವೆರುತ್ತಂ ನಿನಗೇನೋ ಸಂಕಟ?
ಎನಿಕ್ಕೆಂಡೆಟ್ಟಾ ನನಗೆ ಏನು ಗೊತ್ತುಂಟಾ
ತಲಕ್ಕುತ್ತ್ ವೆರುತ್ತಂ ತಲೆ ಶೂಲೆ ಸಂಕಟ
ಅದಿನುಂಡ್ ಬೈಶ್ಯಂ ಅದಕ್ಕುಂಟು ಮದ್ದು
ಕಕ್ಕಿರಿ ಪೋಣಂ ಮುಳ್ಳು ಸೌತೆ (ತೋಟಕ್ಕೆ) ಹೋಗಬೇಕು
ಕಕ್ಕಿರಿ ಚೆಲ್ಲಣಂ ಮುಳ್ಳು ಸೌತೆ ತೆಗಿಬೇಕು
ವೆಳ್ಳರಿ ಪೋಣಂ ಸೌತೆಕಾಯಿ(ತೋಟಕ್ಕೆ) ಹೋಗಬೇಕು
ವೆಳ್ಳರಿ ಚೆಲ್ಲಣಂ ಸೌತೆಕಾಯಿ ತೆಗಿಬೇಕು
ಕುನ್ನುಮ್ಮ ಪೋಣಂ ಗುಡ್ಡೆ ಮೇಲೆ ಹೋಗಬೇಕು
ಕೂಕಿ ವಿಳಿಕ್ಕಣಂ ಕೂಗಿ ಕರೆಯಬೇಕು
ಪಾರಮ್ಮ ಪೋಣಂ ಹಾಸುಗಲ್ಲ ಮೇಲೆ ಹೋಗಬೇಕು
ಪರಪರ ತೂರಣಂ ಪರಪರ ಹೇಲಬೇಕು

ಕೃತಜ ಅಲ್ಲದ/ಲಂಗುಲಗಾಮಿಲ್ಲದ ಭಾಷೆ ಇದರಲ್ಲಿದೆ. ಆದುದರಿಂದ ಇಷ್ಟವಾಗುತ್ತದೆ. ಸಮಾಜದ ಸಮಾಜದ ಯಾವುದಾದರೊಂದು ವಿಭಾಗದ ಹೆಸರೆತ್ತಿ ತಮಾಷೆ ಮಾಡುವ ಹಾಡುಗಳೂ ಇವೆ.

ವೆಳ್ಳರಿ ವಳಪ್ಪಿಲ್ ತೀಯತ್ತಿ
ಸೌತೆಗದ್ದೆಯಲ್ಲಿ ತೀಯತಿ (ತೀಯ ಹೆಂಗಸು)
ನಾಯರೆ ಪನ್ನಕ್ಕ್ ತೀ ಪಟ್ಟಿ
ನಾಯರ ಚಪ್ಪರಕ್ಕೆ ಬೆಂಕಿ ಬಿತ್ತು
ತಚ್ಚ್ ಕೊಡುತ್ತಾನ್ ತಚ್ಚತ್ತಿ
ನಂದಿಸಿ ಕೊಟ್ಟುದು ಬಡಗಿತ್ತಿ

ಜಾತಿಗಳ ಹೆಸರನ್ನೂ ಕ್ರಿಯೆಯನ್ನು ಸಮನ್ವಯ ಮಾಡಿ ಪರಿಹಾಸ ಮಾಡಲು ಇದರಲ್ಲಿ ಪ್ರಯತ್ನಿಸಲಾಗಿದೆ. ಹೆಸರುಗಳನ್ನಷ್ಟೆ ಸೇರಿಸಿ ತಾಳ ಸಮೇತ ಹಾಡುವ ಹಾಡುಗಳೂ ಇವೆ.

ಮಹಮ್ಮದ್ ಮುಹಮ್ಮದ್ ಕುಂಞಿ ಮುಹಮ್ಮದ್
ಅಹಮ್ಮದ್ ಆಲಿ ಕುಂಞಿಅಸೀಸ

ಮಕ್ಕಳು ಹಾಡುವ ಇನ್ನೊಂದು ಹಾಡನ್ನು ನೋಡೋಣ –

ಆಶಾಮನಸ್ಸಿಲ್ ವೆಚ್ಚ್ ಆಶೆ ಮನಸ್ಸಲ್ಲೆ ಇಟ್ಟು
ಕೋರನ್ ಕೆಂಙುಮ್ಮ ಕೇರಿ ಕೋರನ್ ತೆಂಗಿಗೆ ಏರಿದ
ಮಟ್ಟಿಲಿಡಿಂಞ್ ಪೋಯಿ ಹೆಡೆ ಕಿತ್ತು ಹೋಯಿತು
ಮಟ್ಟಲಂ ತಾಯತ್ತಾಯಿ ಹೆಡೆ ಅದು ಕೆಳಗೆ ಬಿತ್ತು
ಕೋರನುಂ ತಾಯತ್ತಾಯಿ ಕೋರನೂ ಕೆಳಗೆ ಬಿದ್ದ
ಮುಟ್ಟಲಡುಪ್ಪಿಲಾಯಿ ಹೆಡೆ ಅದು ಒಲೆಗೆ ಹೋಯಿತು
ಕೋರನುಂ ಕಿಡಪ್ಪಿಲಾಯಿ ಕೋರನೂ ಮಲಗಿದಲ್ಲಾದ
ಮಟ್ಟಲುಂ ವೆಣ್ಣೀರಾಯಿ ಹೆಡೆಯದು ಬೂದಿ ಆಯಿತು
ಕೋರನುಂ ವೆಣ್ಣೀರಾಯಿ ಕೋರನೂ ಬೂದಿ ಆದ

ಈ ಹಾಡಲ್ಲಿ ಒಂದು ನೀತಿ ಬೋಧೆ ಇದೆ. ಮಾಡುವ ಕೆಲಸಗಳಲ್ಲಿ ಶ್ರದ್ಧೆಬೇಕು. ಇಲ್ಲವಾದರೆ ತೆಂಗಿನ ಹೆಡೆಗೂ ಮನುಷ್ಯನಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಬೂದಿಯಾಗಿ ಬಿಡುತ್ತವೆ. ಈ ಹಾಡಿಗೆ ಒಂದು ಪಾಠಾಂತರವೂ ಇದೆ. ಕೋರನ್ ಎನ್ನುವುದರ ಬದಲು ಮೂಸಾ ಎಂಬ ಪಾಠಾಂತರ ಇಟ್ಟುಕೊಂಡಿದೆ. ಹಾಗೆ ಆದಾಗ ಈ ಹಾಡಿಗೆ ಇನ್ನೊಂದು ಆಯಾಮ ಕೂಡ ಲಭ್ಯವಾಗುತ್ತದೆ. ನೌಕರಿಯನ್ನೇ ತಳಹದಿಯಾಗಿ ನಚ್ಚಿಕೊಂಡಿರುವ ಒಂದು ಸಮೂಹದಲ್ಲಿ ಅವನವನದಲ್ಲದ ಉದ್ಯೋಗ ಮಾಡಿದರೆ ಹೀಗೆಲ್ಲ ನಡೆದೀತು ಎಂಬ ಒಂದು ಎಚ್ಚರಿಕೆ ಕೂಡ ಇಲ್ಲಿದೆ.

ಹೀಗೆ ಆಶಯವನ್ನುಳ್ಳದ್ದೂ ಸಾಮಾಜಿಕ ಬದುಕನ್ನೂ ಗಟ್ಟಿಗೊಳಿಸಲು ಯೋಗ್ಯವಾದುದೂ ಆದ ಹಾಡುಗಳು ಕೂಡ ವಿನೋದಗಾನಗಳಲ್ಲಿವೆ.

ವಿನೋದ ಗಾನಗಳಲ್ಲಿ ದೊಡ್ಡದೊಂದು ವಿಭಾಗ ಅಶ್ಲೀಲ ಹಾಡುಗಳದು. ವಿಭಿನ್ನ ವಯೋಮಾನದ ಜನ ವಿಭಿನ್ನ ಸ್ವಭಾವದ ಹಾಡುಗಳನ್ನು ಹಾಡಿ ಖುಷಿ ಪಡುತ್ತಾರೆ. ಯೌವ್ವನಕ್ಕೆ ಕಾಲಿಡುವ ಮಕ್ಕಳ ಲೈಂಗಿಕ ಕಾರ್ಯಗಳ ಕುರಿತಾದ ಜಿಜ್ಞಾಸೆಯೂ ಅದರ ಕುರಿತಾದ ಬಣ್ಣ ಬಣ್ಣದ ಭಾವನೆಗಳೂ ಇಂಥ ಹಾಡುಗಳಲ್ಲಿ ಮೂಡಿ ಬರುತ್ತದೆ. ವಿಚಿತ್ರವಾದ ಅನುಭವಗಳನ್ನು ವಿವರಿಸುವ ವಸ್ತು ಹಾಡುಗಳು ಪ್ರೌಢರ ಹಾಡುಗಳ ವಿಷಯ. ಖಾಸಗಿಯಾಗಿ ಹಾಡಿಕೊಳ್ಳುವ ಅಶ್ಲೀಲ ಹಾಡುಗಳ ಸಂಕಲನವು ಸುಲಭಸಾಧ್ಯವಲ್ಲದ್ದರಿಂದ ಇವುಗಳ ಕುರಿತಾದ ಅಧ್ಯಯನವನ್ನು ನಮ್ಮ ಸಮಾಜವು ಇಷ್ಟ ಪಡದಿರುವುದರಿಂದಲೂ ಈ ಕ್ಷೇತ್ರದಲ್ಲಿ ಅಧ್ಯಯನಗಳೇನೂ ನಡೆದಿಲ್ಲ.

ವಿನೋದ ಗಾನಗಳಲ್ಲಿ ಹೆಚ್ಚಿನವು ಅಸಂಬದ್ಧ ಹಾಡುಗಳೆಂಬುದನ್ನು ಕಂಡುಕೊಂಡೆವು. ಹೀಗೆ ಆಗುವುದು ಯಾಕಾಗಿ? ಅಗತ್ಯವಿಲ್ಲದ ಯಾವುದನ್ನು ಮನುಷ್ಯನು ಸೃಷ್ಟಿಸುವುದಿಲ್ಲ. ನಮಗೆ ನಮ್ಮ ಪ್ರಜಾ ಮನಸ್ಸಿಗೆ ಯುಕ್ತಿ ರಹಿತವೆಂದು ಕಂಡುಬರುವ ಹಾಡುಗಳನ್ನು, ಕೆಲವೊಮ್ಮೆ ಸೃಷ್ಟಿಸುವುದು ಯಾವುದೋ ಗುಂಗಿನಲ್ಲಿ ಇರಬೇಕು. ಪ್ರಜ್ಞಾತಲದ ತರ್ಕವು ಅಪ್ರಜ್ಞಾತಲದ್ದಲ್ಲವಲ್ಲ. ಒಂದಂತೂ ಖಂಡಿತ. ಇಂಥ ಹಾಡುಗಳನ್ನು ಹಾಡುವ ಮೂಲಕ ಹಾಡುವವರು ಮಾನಸಿಕವಾಗಿ ಯಾವುದಾದರೂ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇಲ್ಲವಾದರೆ ತಲಾಂತರದಿಂದ ಇಂಥ ಹಾಡುಗಳನ್ನು ಉಳಿಸಿಕೊಳ್ಳಲು ಸಮಾಜವು ಪ್ರಯತ್ನಿಸುತ್ತಲೇ ಇರಲಿಲ್ಲ.

– ಇ.ಕೆ.ಜಿ. ಅನುವಾದ ಕೆ.ಕೆ.