ಕೊಂತಿ ಪೂಜೆ ವ್ಯವಸಾಯ ಸಂಬಂಧವಾದ ಒಂದು ಧಾರ್ಮಿಕ ಆಚರಣೆ. ದಕ್ಷಿಣ ಕರ್ನಾಟಕದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ವಿಶೇಷವಾಗಿಯೂ ನೆರೆಯ ಜಿಲ್ಲೆಗಳಲ್ಲಿ ವಿರಳವಾಗಿಯೂ ಕಂಡುಬರುತ್ತದೆ. ಆಚರಣೆಯ ಸಂದರ್ಭದಲ್ಲಿ ಹಾಡಲಾಗುವ ಹಾಡುಗಳಿರುವ ಈ ಕೊಂತಿಯು ಮಹಾಭಾರತದ ಕುಂತೀದೇವಿಯೇ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪಾಂಡವರು ಬೇಸಾಯಗಾರರಾಗಿದ್ದರು ಎಂಬ ನಂಬಿಕೆ ಇಲ್ಲಿದೆ. ಅಜ್ಞಾತ ವಾಸದ ಅವಧಿಯಲ್ಲಿ ಪಾಂಡವರು ಅನುಭವಿಸಿದ ಕಷ್ಟಗಳು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂಥ ಬಡತನ, ಇವು ಕೊಂತಿಪದಗಳಲ್ಲಿ ಚಿತ್ರಿತವಾಗಿದೆ. ಪಾಂಡವರು ತಮ್ಮ ತಾಯಿಯೊಂದಿಗೆ ನಮ್ಮ ನೆಲದಲ್ಲಿ ಸಂಚರಿಸಿ, ತಂಗಿ, ಹೋಗಿದ್ದಾರೆಂಬ ನಂಬಿಕೆ ಜನಪದರಲ್ಲಿದೆ. ಅವರು ಬಿಟ್ಟು ಹೋದ ಕುರುಹುಗಳು, ಐತಿಹ್ಯಗಳು, ಹೇರಳವಾಗಿವೆ.

ಈ ಆಚರಣೆಯು ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಕಷ್ಟಪಟ್ಟು ಉತ್ತು ಬಿತ್ತಿದ ಬೆಲೆಯ ಫಲ ನೀಡುವ ಕಾಲ ಕಾರ್ತಿಕ ಮಾಸ. ಕೊಂತಿ ಪೂಜೆಯು ಮೂರ ದೃಷ್ಟಿಗಳಿಂದ ಗಮನಾರ್ಹವೆನಿಸುತ್ತದೆ. ೧.ಪೂಜಾ ಕ್ರಮ ಹಾಗೂ ಅದಕ್ಕೆ ಸಂಬಂಧಿಸಿದ ಹಿನ್ನೆಲೆಗಳು, ೨.ಕೊಂತಿಯ ಪದಗಳು ಹಾಗೂ ಅವುಗಳ ಮಟ್ಟುವೈವಿಧ್ಯ,೩. ಆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮನರಂಜನಾ ವಿಧಾನಗಳು.

ಪಾಂಡವರನ್ನು ವನವಾಸಕ್ಕೆ ಅಟ್ಟಿದ ಮೇಲೂ ಅಸೂಯೆಯ ಇನ್ನೊಂದು ರೂಪವಾದ ಗರ್ವಿಷ್ಠೆ ಗಾಂಧಾರಿಯು ಕುಂತಿದೇವಿಯನ್ನು ಮಾನಸಿಕವಾಗಿಯೂ ಹಿಂಸಿಸಲು ಯೋಚಿಸಿದಳು. ‘ಐರಾವತದ ನೋಂಪಿ’ ಎಂಬ ಹಬ್ಬ ಮಾಡಿ ಊರವರನ್ನೆಲ್ಲಾ ಆಹ್ವಾನಿಸಿದಳು. ಕುಂತಿಗೆ ಮಾತ್ರ ಆಹ್ವಾನ ಇರಲಿಲ್ಲ. ಇದರಿಂದ ಮನನೊಂದ ಕುಂತಿ ಚಿಂತಾಕ್ರಾಂತಳಾಗಿ ಕುಳಿತಿದ್ದಾಗ ಅಲ್ಲಿಗೆ ಬಂದ ಅರ್ಜುನ ಕಾರಣ ತಿಳಿದು ತನ್ನ ತಂದೆಯಾದ ದೇವೇಂದ್ರನಿಂದ ಐರಾವತವನ್ನೂ ಕಾಮಧೇನು ಕಲ್ಪವೃಕ್ಷಗಳನ್ನು ಪಡೆದು ಗಾಂಧಾರಿಗಿಂತ ಅದ್ಧೂರಿಯಾಗಿ ನೋಂಪಿ ಮಾಡಿಸಿದ ಇದು ಗಾಂಧಾರಿಯ ಕಣ್ಣು ಕುಕ್ಕಿತು. ಹಿಟ್ಟಿನ ಆನೆ ಮಾಡಿ ವ್ರತ ಆಚರಿಸಿದ ತನ್ನ ಮುಂದೆ ನಿಜವಾದ ಐರಾವತವನ್ನೇ ತಂದು ತನಗಿಂತ ಅದ್ಧೂರಿಯಾಗಿ ವ್ರತ ಮಾಡಿದ್ದು ಗಾಂಧಾರಿಯ ಗರ್ವಭಂಗಕ್ಕೆ ಕಾರಣವಾಯಿತು. ಈ ಗಾಂಧಾರಿಯ ಗರ್ವಭಂಗವೇ ಕೊಂತಿ ಪೂಜೆ ಪ್ರಾರಂಭವಾಗಲು ಕಾರಣ ಎಂಬ ನಂಬಿಕೆ ಇದೆ. ಈ ಕಥೆಯು ಕೊಂತಿಪೂಜೆಯ ಇತಿಹಾಸವನ್ನು ಮಹಾಭಾರತದ ಕಾಲಕ್ಕೆ ಒಯ್ಯುತ್ತದೆ. ‘ಕುಂತಿಯು ಆಚರಿಸಿದ ಪೂಜೆ’ ಅಥವಾ ‘ಕುಂತಿಯು ಪ್ರಾರಂಭಿಸಿದ ಪೂಜೆ’ ಎಂಬ ಕಾರಣಕ್ಕೆ ಈ ಪೂಜೆಗೆ ಕೊಂತಿ ಪೂಜೆ ಎಂದು ಹೆಸರು ಬಂದಿತು ಎಂಬುದು ಒಂದು ನಂಬಿಕೆ. ಆದರೆ ಇಲ್ಲಿ ಪೂಜೆಗೊಳ್ಳುವವಳು ಕುಂತಿಯೇ ಆಗಿರುವುದರಿಂದ ಇದನ್ನು ಕೊಂತಿ ಪೂಜೆ ಎಂದು ಕರೆಯುವುದು ಈಗಿನ ತಿಳಿವಳಿಕೆ.

ಕೊಂತಿಪೂಜೆಯ ಅವಧಿ ಮೂರು ದಿನಗಳಿಂದ ನಲವತ್ತೈದು ದಿನಗಳವರೆಗೆ ಇರುತ್ತದೆ. ಹುಡುಗರು ಲಗ್ಗೆ ಆಟ ಆಡುವಲ್ಲಿಂದ ಈ ಪೂಜೆಯ ನಿಜವಾದ ಪ್ರಾರಂಭ. ಲಗ್ಗೆ ಆಟಕ್ಕಾಗಿ ಹುಡುಗರು ಮಾಡಿಕೊಳ್ಳುತ್ತಿದ್ದ ಗುಳಿಯೊಳಗೆ ಕೊಂತಮ್ಮನನ್ನು ಪ್ರತಿಷ್ಠಾಪಿಸುವುದು ಒಂದು ಕಾಲದಲ್ಲಿ ಸಾಮಾನ್ಯವಾಗಿತ್ತು. ಈಗ ಈ ಕ್ರಮವು ಅಪರೂಪವಾಗುತ್ತಿದೆ. ವಿಶಾಲವಾದ ಬೀದಿಯ ನಡುವೆ ಪುಟ್ಟ ಚಪ್ಪರ ಹಾಕಿ ಕೊಂತಿಯನ್ನು ಪೂಜುವ ಕ್ರಮ ಈಗಲೂ ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ಯಾರದಾದರೂ ಮನೆಯ ಜಗಲಿಯ ಮೇಲೆ ಪೂಜುವುದೇ ಹೆಚ್ಚು ಬಳಕೆಯಲ್ಲಿದೆ.

ಹಸೆಕಲ್ಲಿನ ಮೇಲೆ ಖಾರ ಅರೆಯಲು ಬಳಸುವ ಕೊಂತದಾಕಾರದ ಕಲ್ಲೇ ಕೊಂತಮ್ಮನಾಗಿ ಬಳಕೆಯಾಗುವುದು ಹೆಚ್ಚು. ಈ ಉದ್ದೇಶಕ್ಕಾಗಿಯೇ ಮುಖವನ್ನುಳ್ಳ ಅಂಥ ಕಲ್ಲನ್ನು ಸಿದ್ಧಪಡಿಸಿ ಪೂಜಿಸುವುದೂ ಉಂಟು. ಕೊಂತಿಯನ್ನು ಪೂಜಿಸುವ ಮೊದಲು ಎಕ್ಕದೆಲೆಯ ಹಾಸನ್ನು ಸಿದ್ಧಪಡಿಸಿ ಅದರ ಮೇಲೆ ಕೂರಿಸಲಾಗುತ್ತದೆ. ಎಕ್ಕದ ಎಲೆಗಳ ಸಂಖ್ಯೆ ಇಷ್ಟೇ ಇರಬೇಕೆಂಬ ನಿಯಮವಿದೆ. ಈ ನಿಯಮ ಅಲ್ಲಲ್ಲಿ ವ್ಯತ್ಯಾಸವಾಗುತ್ತದೆ. ಅವರವರ ನಂಬಿಕೆಗಳಿಗನುಸಾರವಾಗಿ ಎಲೆ ಸಂಖ್ಯೆ ಇದ್ದರೂ, ಬೆಸ ಸಂಖ್ಯೆಯನ್ನು ಎಲ್ಲ ಕಡೆಯೂ ಅನುಸರಿಸಲಾಗುತ್ತದೆ.

ಕೊಂತಿಯನ್ನು ಪೂಜುವ ಪ್ರಾಥಮಿಕ ಹಂತಗಳು ಮುಗಿದ ಮೇಲೆ ಕಾಯಿ ಕಡ್ಡಿ ಕರ್ಪೂರಗಳಿಂದ ಪೂಜೆ ಸಲ್ಲಿಸಿ, ಹಾಡತೊಡಗುತ್ತಾರೆ. ದೀಪ ಹಚ್ಚುವುದು ಸಾಮಾನ್ಯವಾದರೂ ಕೆಲವು ಕಡೆ ಮೊದಲ ದಿನ ದೀಪ ಹಚ್ಚುವ ಪರಿಪಾಠ ಇಲ್ಲ. ಅಂಥ ಕಡೆಗಳಲ್ಲೆಲ್ಲ ಹಾಗೆ ಹಚ್ಚದಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯೆಂದು ಹೇಳಲಾಗುತ್ತದೆ. ಆ ದಿನದ ಕೊಂತಿಯನ್ನು ‘ಕತ್ಲೆ ಕೊಂತಿ’ ಎನ್ನುತ್ತಾರೆ.

ಕೆಲವು ಕಡೆ ಮೊದಲ ಮೂರು ದಿನ ದೀಪಪ ಹಚ್ಚದಿರುವ ಕ್ರಮವೂ ಇದೆ. ಹಚ್ಚಿದರೂ ಆ ಮೂರು ದಿನಗಳ ಕಾಲ ಯಾವ ಪೂಜೆಯೂ ಇಲ್ಲದಿರುವ ಕ್ರಮ ಕೂಡ ಕಂಡಬಂದಿದೆ. ಕೆಲವು ಕಡೆ ಗೋಡೆಗೆ ಅಂಡಿಕೊಂಡಂತೆ ಹಂತಗಳನ್ನು ಮಾಡಿ ಕಲ್ಲನ್ನು ಗೋಡೆಗೆ ಒರಗಿಸಿ ನಿಲ್ಲಿಸುವುದು ಉಂಟು. ಹೀಗೆ ಕೊಂತಿಯನ್ನು ಪೂಜುವ ಸ್ಥಳವನ್ನು ಅದು ಜಗಲಿಯಾಗಿರಲಿದ ನಡುಬೀದಿಯಾಗಿರಲಿ ‘ಕೊಂತಿ ಗುಡಿ’ ಎಂದೇ ಗುರುತಿಸಲಾಗುತ್ತದೆ.

ಕೊನೆಯ ದಿನ ಮಣ್ಣಿನಲ್ಲಿ ಹೆಣ್ಣಿನ ಮೂರ್ತಿಯನ್ನು ರಚಿಸಿ, ಬಣ್ಣ ಇತ್ಯಾದಿ ಅಲಂಕಾರಗಳನ್ನೂ ಮಾಡಿ ಪೂಜಿಸಲಾಗುತ್ತದೆ. ಪೂಜಾಕಾರ್ಯಗಳೆಲ್ಲ ಮುಗಿದ ಮೇಲೆ ಆ ಮೂರ್ತಿಯನ್ನು ಕೊಂಬು ಕಹಳೆ ತಮಟೆ ಡೋಲು ಬಾಣ ಬಿರುಸುಗಳೊಂದಿಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುತ್ತಾರೆ. ಇದು ಸಾಮಾನ್ಯವಾಗಿ ಅವರೆಯ ಹೊಲದಲ್ಲಿ ನಡೆಯುತ್ತದೆ.

‘ಅವರೆ’ ಪಾಂಡವರು ಕೊಟ್ಟಧಾನ್ಯವೆಂಬ ನಂಬಿಕೆಯಿದೆ. ‘ಅವರೆ’ ಎಂಬ ಗ್ರಾಮಕ್ಕೆ ಶಬ್ಧಕ್ಕೆ ‘ಇದ್ದಾರೆ’ ಎಂಬ ಅರ್ಥ ಇದೆ. ‘ಅವರೇಯ ಹೊಲದಲ್ಲಿ ಅವರೆ ಪಾಂಡವರು’ ಎಂಬುದು ಕೊಂತಿ ಪದಗಳಲ್ಲಿಯ ಒಂದು ಸಾಲು. ಅಂದರೆ, ಅವರೆಯ ಹೊಲದಲ್ಲಿ ಪಾಂಡವರು ಇದ್ದಾರೆ ಎಂದು ಅರ್ಥ. ಆದ್ದರಿಂದ, ಮಕ್ಕಳ ಮಡಿಲಿಗೆ ತಾಯಿಯನ್ನು ತಲುಪಿಸುವ ಅರ್ಥವು ಈ ವಿಸರ್ಜನೆಯಲ್ಲಿದೆ. ಅವರೆ ಬೇಳೆ ಇರುವ ಹೊಲವೇ ಕೊಂತಿಯನ್ನು ವಿಸರ್ಜಿಸಲು ಶ್ರೇಷ್ಠವಾದ ಸ್ಥಳ ಎಂಬ ನಂಬಿಕೆಯಿದೆ.

ವಿಸರ್ಜನೆಯ ಪೂಜಾವಿಧಿಗಳೆಲ್ಲ ಮುಗಿದ ಮೇಲೆ, ಮೂರ್ತಿಯ ಮಣ್ಣನ್ನು ಎಲ್ಲರೂ ಸ್ವಲ್ಪ ಸ್ವಲ್ಪ ಮುರಿದುಕೊಂಡು ಹೋಗಿ ತಮ್ಮ ತಮ್ಮ ಭೂಮಿಗೆ ಚೆಲ್ಲುತ್ತಾರೆ. ಹಾಗೆ ಮಾಡಿದರೆ ತಮ್ಮ ಭೂಮಿಯ ಫಲವತ್ತಾಗಿ ಒಳ್ಳೆಯ ಬೆಳೆ ಬರುತ್ತದೆಂಬ ನಂಬಿಕೆಯಿದೆ. ಈ ನಂಬಿಕೆಯ ಪ್ರಕಾರ ಕೊಂತಿಯು ಫಲದೇವತೆಯಾಗಿಯೂ ಫಲವತ್ತತೆಯ ಸಂಕೇತವಾಗಿಯೂ ಕಾಣಿಸಿಕೊಳ್ಳುತ್ತಾಳೆ.

ಕೊಂತಿಪೂಜೆಯ ಸಂದರ್ಭದಲ್ಲಿ ಹಾಡಲಾಗುವ ಕೊಂತಿಪದಗಳಲ್ಲಿ ಹದಿನೇಳು ಬಗೆಯ ಮಟ್ಟುಗಳನ್ನು ಗುರುತಿಸಲಾಗಿದೆ.

– ಕೆ.ಆರ್.

ಕೊಂಬಾಟ್ ಇದು ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪುರುಷಪ್ರಧಾನ ಜನಪದ ಕಲೆ. ‘ಕೊಂಬ್’ ಎಂದರೆ ಪ್ರಾಣಿಗಳ ಕೋಡು ಎಂದರ್ಥ. ಜಿಂಕೆ ಅಥವಾ ಕಡವೆಯ ಕೋಡನ್ನು ಎಡಗೈಯಲ್ಲಿ ಎದೆಯ ನೇರಕ್ಕೆ ಹಿಡಿದು, ಬಲಗೈಯಲ್ಲಿ ಚಮರೀಮೃಗದ ಚವುರಿಯಿಂದ ಬೀಸಿಕೊಳ್ಳುತ್ತಾ ಕುಣಿಯುವ ಈ ಕುಣಿತ ಯಶಸ್ವಿ ಬೇಟೆಯ ಸಂತೋಷವನ್ನು ವ್ಯಕ್ತಪಡಿಸುತ್ತದೆ. ಹಾಗೆಯೇ ಲೋಕಕಂಠಕನಾದ ಭಸ್ಮಾಸುರವನ್ನು ಸಂಹರಿಸಲು ವಿಷ್ಣು ಅವತಾರವೆತ್ತಿದಾಗ ಕೊಂಬನ್ನು ಎತ್ತಿ ಹಿಡಿದು ಕುಣಿದನೆಂದೂ ಮತ್ತೊಮ್ಮೆ ಪೀಲಿಯನ್ನು (ನವಿಲುಗರಿ) ಹಿಡಿದು ಕುಣಿದನೆಂದೂ ಮೌಖಿಕ ಕಥೆಗಳು ಹೇಳುತ್ತವೆ. ಬಹಳ ಹಿಂದೆ ಇದನ್ನು ಬೇಡನಾಯಕರು ಮಾತ್ರ ಬೇಟೆಯ ಅನಂತರ ಹರಿಜನ ದುಡಿ, ಕೊಂಬು, ಪರೆ ತಾಳ, ಮೇದರ ವಾಲಗ ಹಾಗೂ ಡೋಲುಗಳೊಂದಿಗೆ ದೇವಾಲಯಗಳ ‘ಮಂದ್’ (ಅಂಗಳ)ದಲ್ಲಿ ನಡೆಸುತ್ತಿದ್ದರೆಂದೂ ಕಾಲಾನಂತರ ಇದೊಂದು ಕೊಡವರ ಸಂಪ್ರದಾಯಿಕ ಕುಣಿತವಾಯಿತೆಂದೂ ಹೇಳುತ್ತಾರೆ. ಕೊಡವರು ಇದನ್ನು ಗ್ರಾಮದ ದೇವರ ಹಬ್ಬಗಳಲ್ಲಿ ಮಾತ್ರ ಆಡುತ್ತಾರೆ. ಉದಾಹರಣೆಗೆ, ವಿರಾಜಪೇಟೆಯ ಗ್ರಾಮಗಳಲ್ಲಿ ಕಾರ್ಕೋಟ ಕಾಲಭೈರವನ ಆರಾಧನೆ ಸಂದರ್ಭಗಳಲ್ಲಿ ಸೋವಾರಪೇಟೆಯ ಜನಪದರು ಕಾಳಿದೇವರ ಆರಾಧನೆಗಳಲ್ಲಿ ಈ ಕುಣಿತ ಮಾಡುತ್ತಾರೆ. ಬೇರೆ ಸಮಾರಂಭಗಳಲ್ಲಿ ಕೊಂಬಾಟ್ ಮಾಡಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ವಿಶೇಷವಾಗಿ ಬೇಟೆಯ ಅನಂತರದ ಶಿಶಿರ ಋತುವಿನ ಸಂದರ್ಭದಲ್ಲಿ.

ಬಲಿ ಸಂದರ್ಭ ದೇವರ ಮುಂದೆ ಪ್ರಾಣಿ ಅವಶೇಷದ ಸಂಕೇತವಾಗಿ ಕೊಂಬು ಹಾಗೂ ಚವುರಿಯನ್ನು ಹಿಡಿದು ಕುಣಿಯುತ್ತಿದ್ದ ಪ್ರಾಚೀನ ಮಾನವನ ದಿನಚರಿ ಸಂಕೇತ ಇದರ ಹಿಂದಿರುವಂತಿದೆ. ಇದನ್ನು ಕೊಡವರು ಎಲ್ಲ ಊರದೇವರಗಳ ಅಂಗಳಗಳಲ್ಲೂ ನಡೆಸುವುದಿಲ್ಲ. ಆದರೆ ಕಾಲಕಳೆದಂತೆ ಈ ಹಬ್ಬದ ಪ್ರಯುಕ್ತ ಶುದ್ಧತೆ ಹಾಗೂ ಮಡಿಗಳನ್ನು ಕಾಪಾಡಿಕೊಳ್ಳಬೇಕೆಂಬ ವಿಶೇಷ ಎಚ್ಚರಿಕೆಗಳನ್ನು ಪುರೋಹಿತವರ್ಗ ವಿಧಿಸುತ್ತಾ ಬಂದಿರುವುದರಿಂದ ಈ ಹಬ್ಬ ಮುಗಿಯುವವರೆಗೂ ಪ್ರಾಣಿಬಲಿ, ಮದ್ಯಮಾಂಸ ಸೇವನೆಗಳನ್ನು ನಿಷೇಧಿಸಲಾಗುತ್ತದೆ.

ಕೊಂಬಾಟದಲ್ಲಿ ಪಾಲ್ಗೊಳ್ಳುವ ಗಂಡಸರೆಲ್ಲರೂ ಸಾಮಾನ್ಯವಾಗಿ ವಯೋಮಾನದಲ್ಲಿ ಹಿರಿಯರೇ ಆಗಿರುತ್ತಾರೆ. ನಾಲ್ಕುಜನ ಹಿರಿಯ ಕೊಡವರು ದುಡಿಯಮ್ಮ ಬಾರಿಸುತ್ತ ಆಯಾ ಊರಿನ ದೇವರ ಮಹಾತ್ಮೆಯನ್ನು ಹಾಡುತ್ತಿದ್ದರೆ ಇತರರು ಅವರ ಸುತ್ತಲೂ ವೃತ್ತಾಕಾರವಾಗಿ ಕುಣಿಯುತ್ತ ಕೊಂಬನ್ನು ಮುಂದಕ್ಕೂ ಎದೆಯಮಟ್ಟಕ್ಕೂ ಚಾಟಿ ಹಿಡಿಯುತ್ತ ಹಾಡನ್ನು ಪುನರಾವರ್ತಿಸುತ್ತಾರೆ. ಹಾಡಿಗೆ ತಕ್ಕಂತೆ ತ್ವರಿತಗತಿಯಲ್ಲಿ ಕೆಲವೊಮ್ಮೆ ಮಧ್ಯಮ ಗತಿಯಲ್ಲಿ ಸಾಮಾನ್ಯವಾಗಿ ಹೆಜ್ಜೆಹಾಕುತ್ತಾರೆ. ಮೊದಲೆಲ್ಲ ಕುಣಿಯುವ ಹಾಗೂ ಪಾದಗತಿಯ ೪೮ ಭಂಗಿಗಳಿದ್ದುವೆನ್ನುತ್ತಾರೆ. ಆದರೆ ಇತ್ತೀಚೆಗೆ ೧೦ ರಿಂದ ೧೨ ರೀತಿಗಳಷ್ಟು ಮಾತ್ರ ಬಳಕೆಯಲ್ಲಿವೆ.

ಕಲಾವಿದರು ಕೊಡಗಿನ ಸಾಂಪ್ರದಾಯಿಕ ಉಡುಗೆಯಾದ ಬಿಳಿಯ ದಟ್ಟಕುಪ್ಪುಸ ಧರಿಸಿ ರೇಷ್ಮೆಯ ‘ಚೇಲೆ’ (ಸೇಲೆ ಅಥವಾ ದಟ್ಟಿ)ಯನ್ನು ಸೊಂಟದ ಸುತ್ತ ಅಥವಾ ಎದೆಯ ಭಾಗದಲ್ಲಿ ಕತ್ತಿರಿಯಾಕಾರದಲ್ಲಿ ಧರಿಸಿರುತ್ತಾರೆ. ತಲೆಗೆ ಪೇಟ ಅಥವಾ ‘ಮಂಡೆತುಣಿ’ (ವಸ್ತ್ರ)ಧರಿಸುತ್ತಾರೆ. ಇದು ಉತ್ತರ ಕೊಡಗಿನ ಕಡೆ ‘ನಮ್ಮೆಹಬ್ಬ’ ಎಂಬ ಹೆಸರಿನಲ್ಲಿ ಭಗವತಿ ಉತ್ಸವ ಸಂದರ್ಭದಲ್ಲಿ ವಿಶೇಷವಾಗಿ ನಡೆಯುತ್ತದೆ.

– ಜಿ.ಎನ್.

ಕೊಂಬು ಕಹಳೆ ಆಂಗ್ಲ ವರ್ಣಮಾಲೆಯಲ್ಲಿಯ S ಅಕ್ಷರದ ಆಕಾರದಲ್ಲಿರುವ ಒಂದು ಜನಪದ ವಾದ್ಯ. ದಕ್ಷಿಣ ಭಾರತದ ಅನೇಕ ಹಳ್ಳಿಗಳಲ್ಲಿ ದೇವರ ಉತ್ಸವಗಳಲ್ಲಿ ಮದುವೆಗಳಲ್ಲಿ, ಯುದ್ಧರಂಗಗಳಲ್ಲಿ ಅತ್ಯಂತ ವ್ಯಾಪಕವಾಗಿ ಬಳಸುತ್ತಿದ್ದ ವಾದ್ಯ ಇದು. ಸಾಂಪ್ರದಾಯಿಕ ದೇವರ ಉತ್ಸವಗಳಲ್ಲಿ ಬಳಸುವ ಶಂಖ, ಜಾಗಟೆಯಾದಿ ‘ಘನಪಂಚವಾದ್ಯ’ಗಳಲ್ಲಿ ಇದೂ ಒಂದು. ಕೇರಳದಲ್ಲಿಯೂ ಸಾಂಪ್ರದಾಯಿಕ ಉತ್ಸವಗಳಾದ ಚಂಡಮೋಳಂ, ಪಂಚಾರಿ ಮೇಳಂ ಇತ್ಯಾದಿ ಸಂದರ್ಭಗಳಲ್ಲಿ ಬಳಕೆಯಾಗುತ್ತದಲ್ಲದೆ ‘ಕೊಂಬು ಪಾಟ್ಟು’ಗಳೆಂದೇ ಏಕವ್ಯಕ್ತಿ ಪ್ರದರ್ಶನಗಳಲ್ಲೂ ಬಳಕೆಯಾಗುವುದುಂಟು. ಜಾತ್ರೆ ಉತ್ಸವಗಳಲ್ಲಂತೂ ಕೊಂಬುಕಹಳೆ ಮೊದಲು ಮೊಳಗಲೇ ಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಮತ್ತು ಭೂತದ ಕೋಲದ ಸಂದರ್ಭಗಳಲ್ಲಿ ಹರಿಜನರಲ್ಲಿ ಒಂದು ಪ್ರಭೇದವಾದ ‘ನಲಿಕೆ’ ಜನಾಂಗದವರು ಕೊಂಬು ಕಹಳೆ ಊದುತ್ತಾರೆ.

ಈ ವಾದ್ಯವನ್ನು ಯುದ್ಧ ಸಂದರ್ಭಗಳಲ್ಲಿ ಒಂದು ‘ಕಾಲಸೂಚಕ’ವಾಗಿಯೂ ಬಳಸಲಾಗುತ್ತಿತ್ತು. ಕೋಟೆಯ ಕಾವಲು ಬುರುಜಿನ ಮೇಲಿನ ಸಿಪಾಯಿ ಯುದ್ಧಾರಂಭಗಳನ್ನು ಸೂಚಿಸಲೂ ಶತ್ರುವಿನಾಗಮನ ಅಥವಾ ಇನ್ನಿತರ ಅಪಾಯದ ಸುಳಿವನ್ನು ಸೂಚಿಸಲು, ಯುದ್ಧ ವಿರಾಮ ಅಥವಾ ಯುದ್ದಾಂತ್ಯಗಳನ್ನು ಸೂಚಿಸಲು ‘ಕೊಂಬು ಕಹಳೆ’ಯನ್ನು ಊದುತ್ತಿದ್ದ. ಇದನ್ನು ಕಾವ್ಯಗಳು ಹಾಗು ಜನಪದರು ‘ರಣ ಕಹಳೆ’ಯೆಂದೇ ಗುರುತಿಸುತ್ತಿದ್ದರು. ಅನೇಕ ವೇಳೆ ಇದು ಸೈನಿಕರಿಗೆ ಸ್ಫೂರ್ತಿ ತುಂಬುವ ದನಿಯಾಗಿಯೂ ಪರಿಗಣಿತವಾಗಿರುತ್ತಿತ್ತು.

57

ಹಳ್ಳಿಗಳಲ್ಲಿ ಜನಪದರು ಕೊಂಬು ಕಹಳೆಗಳನ್ನು ದೇವರ ಉತ್ಸವ ಮೆರವಣಿಗೆ ಹೊರಡುವಾಗ, ಮದುವೆ ದಿಬ್ಬಣಗಳು ಹೊರಟಾಗ ಅದರ ಅದ್ಧೂರಿಯ ಸಂಕೇತವಾಗಿಯೂ ಬಳಸುತ್ತಿದ್ದುದುಂಟು. ಈಗೆಲ್ಲಾ ಧಾರ್ಮಿಕ ಗುರುಗಳು, ಗೌರವಾನ್ವಿತರು ಬಂದಾಗ ಗೌರವ ಸೂಚಕವಾಗಿ ಕೂಡ ಬಳಸುವುದುಂಟು. ಪೂರ್ಣಕುಂಭ ಸ್ವಾಗತ ಸಂದರ್ಭಗಳಲ್ಲಿ ಕೊಂಬು ಕಹಳೆಗೇ ಆದ್ಯತೆ.

ಎಲ್ಲಾ ಜನಾಂಗದವರೂ ಕೊಂಬು ಕಹಳೆಗಳನ್ನು ಊದುವುದಿಲ್ಲ. ಕೆಲವು ನಿರ್ದಿಷ್ಟ ಜನಾಂಗಗಳ ಪಾರಂಪರಿಕ ಸ್ವತ್ತಾಗಿ ಇದು ಉಳಿದು ಬಂದಿದೆ. ಕರ್ನಾಟಕದಲ್ಲಿ ಬಹುತೇಕ ಈ ಕಲೆ ‘ಆದಿ ಕರ್ನಾಟಕ’ ದವರಲ್ಲಿ ಬಳಕೆಯಲ್ಲಿದೆ.

ಕೊಂಬು ಕಹಳೆಯನ್ನು ಸಾಮಾನ್ಯವಾಗಿ ತಾಮ್ರ ಅಥವಾ ಹಿತ್ತಾಳೆಯ ತಗಡಿನಿಂದ ತಯಾರಿಸಲಾಗಿರುತ್ತದೆ. ಇದು ಇಂಗ್ಲೀಷಿನ ‘S’ ಆಕಾರದಲ್ಲಿದ್ದರೂ ಮೂರು ಭಾಗಗಳಾಗಿರುತ್ತದೆ. ಕೊಂಬು ಮತ್ತು ಕಹಳೆಗಳೆರಡನ್ನೂ ಸೇರಿಸಿ ಊದುವಾಗ ವಿಶೇಷ ದನಿಯಿದ್ದು ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿರುತ್ತದೆ.

ಭಾರತದ ಮಟ್ಟದಲ್ಲಿಯೂ ಉತ್ಸವಾದಿ ಸಂದರ್ಭದಲ್ಲಿ ಕೊಂಬು ಕಹಳೆಯನ್ನು ಊದುತ್ತಿದ್ದುದನ್ನು ಶಿಲ್ಪ ಕಲೆಗಳು ಸಾಬೀತು ಪಡಿಸುತ್ತವೆ. ಬಾರಾಬದೂರ್‌ನ ಗೋಡೆ ಶಿಲ್ಪ ಕಲೆಯಲ್ಲಿ ಕೋತಿಯೊಂದು ಕೊಂಬು ಕಹಳೆ ಊದುತ್ತಿರುವ ಚಿತ್ರವಿರುವುದು ಹಾಗೂ ತಾಳೆಗರಿಗಳಲ್ಲಿನ ವೈಭವೋಪೇತ ಮೆರವಣಿಗೆಯ ಚಿತ್ರಗಳಲ್ಲಿ ಈ ವಾದ್ಯವ್ಯಾಪಕವಾಗಿ ಕಾಣಿಸಿಕೊಳ್ಳುವುದು, ಜನಪದರಲ್ಲಿ ಇದಕ್ಕಿದ್ದ ಆದ್ಯತೆಯನ್ನು ಸ್ಪಷ್ಟಪಡಿಸುವುದಾಗಿದೆ.

– ಜಿ.ಎನ್.

ಕೊಟಿಯಾ ಆಂಧ್ರದ ವಿಶಾಖ, ಶ್ರೀಕಾಕುಳಂ ಜಿಲ್ಲೆಗಳಲ್ಲಿ ಇವರು ವಾಸವಾಗಿದ್ದಾರೆ. ಕೋಟಿಯಾ ಸಮುದಾಯದಲ್ಲಿ ೧.ಬೋಡೋ ಕೊಟಿಯಾ, ೨.ಸಾಸೊ ಕೊಟಿಯಾ,೩.ಪುತಿಯಾ ಪೊಯಿಕಾ, ೪.ಧುಲಿಯಾ ಎಂಬ ಶಾಖೆಗಳಿವೆ. ವಿಶಾಖ ಪ್ರಾಂತದಲ್ಲಿ ಬೋಡೋ ಕೊಟಿಯಾಗಳನ್ನು ‘ದೊರೆ’ ಎಂದು ಕರೆಯುತ್ತಾರೆ. ಅವರು ವಿಶಾಖ ಜಿಲ್ಲೆಯಲ್ಲಿ ಸಾಮಾಜಿಕವಾಗಿ ಮೇಲ್ದರ್ಜೆಯಲ್ಲಿರುವ ಭಗತರೊಂದಿಗೆ ಸಮಾನ ಅಂತಸ್ತನ್ನು ಬಯಸುತ್ತಾರೆ. ಬೋಡೋ ಕೊಟಿಯಾಗಳು ಸಾಮಾಜಿಕವಾಗಿ ಕೆಲಸ್ತರದವರೆಂದು ಗುರುತಿಸಲ್ಪಡುವ ಸಾನೋ ಕೊಟಿಯಾರಿಂದ ಮಾಡಿದ ಅಡುಗೆಗಳನ್ನು ತಿನ್ನುವುದಿಲ್ಲ. ಪುತಿಯಾ ಪೊಯಿಕಾರಿಂದ ಸಾನೋ ಕೊಟಿಯಾಗಳು ಆಹಾರವನ್ನು ಸ್ವೀಕರಿಸುವುದಿಲ್ಲ. ಕೊಟಿಯಾಗಳು ವ್ಯವಸಾಯದಾರರು. ಅವರು ರಾಗಿ, ಜೋಳ, ಮೆಕ್ಕೆ ಜೋಳ, ಬತ್ತದಂತಹ ಬೆಳೆಗಳ ಜೊತೆಗೆ ಕೋಸು, ಬದನೆಕಾಯಿ, ಬೆಂಡೆಕಾಯಿ ಮುಂತಾದವನ್ನು ಸಹ ಬೆಳೆಯುತ್ತಾರೆ. ಕಾಡಿನಲ್ಲಿ ಸಿಗುವ ಹುಣಿಸೆಹಣ್ಣು, ಸೀಗೆಕಾಯಿ, ಬಾರಿಗೆ ಹುಲ್ಲು ಮೊದಲಾದ ಕಾಡಿನ ಉತ್ಪನ್ನಗಳನ್ನು ಶೇಖರಿಸಿ, ವಾರಾಂತ್ಯದ ಸಂತೆಗಳಲ್ಲಿ ಮಾರಿ ಹಣ ಗಳಿಸಿ ಜೀವನ ಸಾಗಿಸುತ್ತಾರೆ. ಕೊಟಿಯಾ ಸಮುದಾಯದಲ್ಲಿ ಗೋತ್ರಗಳಿವೆ. ಇವು ಮನೆತನದ ಹೆಸರುಗಳ ರೂಪದಲ್ಲಿ ಚಾಲ್ತಿಯಲ್ಲಿವೆ. ೧.ಮತ್ಸಿಯ (ಮೀನು),೨.ನಾಗ(ಹಾವು), ೩.ಗೀಫ್(ಹದ್ದು), ೪.ಗೊಂಪಿಟ್ಟ(ಒಂದು ತೆರನಾದ ಹಕ್ಕಿ) ಮುಂತಾದವು. ಇವರೆಲ್ಲಾ ಒಡಿಯಾ ಭಾಷೆಯನ್ನು ಮಾತಾಡುತ್ತಾರೆ. ಮದುವೆಗಳು ೧.ಬೊದೋಬಿಲಾ(ಮಾತುಕತೆಯ ಮೂಲಕ), ೨.ಉಡಲಿಯಾಜಿ ಬಾರ್ (ಪ್ರೇಮ, ಪಲಾಯನದ ಮೂಲಕ), ೩.ದಂಗ್‌ ಡೀಜಿಗ್‌ ಬಾರ್ (ಪರಿಗ್ರಹಣದ ಮೂಲಕ), ೪.ಗೊರ್ಜುವಾಯ್ (ಸೇವೆಯ ಮೂಲಕ) ಎಂಬ ನಾಲ್ಕು ರೀತಿಯಲ್ಲಿ ನಡೆಯುತ್ತದೆ.

ತೀರಿಕೊಂಡ ಸೋದರನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವುದು, ಹೆಂಡತಿ ತೀರಿಕೊಂಡಾಗ ಆಕೆಯ ಸೋದರಿಯನ್ನು ಮದುವೆ ಮಾಡಿಕೊಳ್ಳಲು ಸಾಮಾಜಿಕವಾಗಿ ಒಪ್ಪಿಗೆಯಿದೆ. ವಿವಾಹ ವಿಚ್ಛೇದನಕ್ಕೆ ಒಪ್ಪಿಗೆಯಿದೆ. ವಿಧವೆಯರು, ಹೆಂಡತಿಯನ್ನು ಕಳೆದುಕೊಂಡವರು ಪುನರ್ವಿವಾಹಕ್ಕೆ ಅರ್ಹರು. ಕೊಟಿಯಾಗಳು ಸಾಮಾಜಿಕ ನಿಯಂತ್ರಣ ಸಮೂಹವನ್ನು ‘ನಾಯಕ್ ಲೋಕ್’ ಎಂದು ಕರೆಯುತ್ತಾರೆ. ಇದನ್ನೇ ನಾಯಕ್ ಎಂಬ ಹೆಸರಿನಲ್ಲಿ ನಾಯಕ ಎನ್ನುತ್ತಾರೆ. ಆತನಿಗೆ ಸುದ್ಧಿ ಸಮಾಚಾರಗಳನ್ನು ಮುಟ್ಟಿಸುವವರನ್ನು ‘ಚಾರಿಕಾ’ ಎಂದು ಕರೆಯುತ್ತಾರೆ. ಇವರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಕೊಟಿಯಾಗಳು ದೊಡ್ಡ ದೇವರು, ಸಂಕು ದೇವರು, ನಂಟಿ ದೇವರು, ಜಕರಿ ದೇವರು, ಗಂಗೆಯಂತಹ ದೇವತೆಗಳನ್ನು ಪೂಜಿಸುತ್ತಾರೆ. ಅವರು ‘ಪುಸನ್‌ ಪುರಬ್‌’, ‘ಭೀಮದೇವರ ಹಬ್ಬ’ ದಂತಹ ಹಬ್ಬಗಳನ್ನು ಆಚರಿಸುತ್ತಾರೆ. ನವಣೆ, ಹೊಸಗೋಧಿ, ಹೊಸ ಮಾವುದಂತಹ ಹೊಸ ಫಸಲನ್ನು ತಿನ್ನುವ ಹಬ್ಬಗಳನ್ನು ಆಚರಿಸುತ್ತಾರೆ. ಅಕ್ಷರಸ್ಥರು ತುಂಬಾ ಕಡಿಮೆ.

೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ ೪೮,೪೦೮ ಅಂದರೆ ಶೇಕಡಾ ೦.೯೬.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಕೊಡಂಗಲ್ಲೂರು ಭರಣಿ ತ್ರಿಶ್ಶೂರು ಜಿಲ್ಲೆಯ ಕೊಡಂಗಲ್ಲೂರು ಶ್ರೀ ಕುರುಂಬಾ ಭಗವತಿ ಕ್ಷೇತ್ರದಲ್ಲಿ ನಡೆಯುವ ಉತ್ಸವವನ್ನು ‘ಭರಣಿ’ ಎಂದು ಕರೆಯುತ್ತಾರೆ. ಕುಂಭಮಾಸದ ಭರಣಿ ನಕ್ಷತ್ರದ ದಿವಸ ಧ್ವಜರೋಹಣಗೊಂಡು ಮೀನಮಾಸದ ಭರಣಿ ನಕ್ಷತ್ರದಲ್ಲಿ ಉತ್ಸವ ಸಮಾಪ್ತಿಗೊಳ್ಳುವುದು. ಮೀನಮಾಸದ ರೇವತಿ, ಅಶ್ವಿನಿ, ಭರಣಿ ನಕ್ಷತ್ರಗಳಲ್ಲಿ ಭರಣಿ ಉತ್ಸವದ ಮುಖ್ಯ ವಿಧಿಯಾಚರಣೆಗಳು ನಡೆಯುತ್ತದೆ. ಕಾಳಿ ಮತ್ತು ದಾರಿಕಾಸುರನ ಕಥೆಯ ಸ್ಮರಣೆ ಮಾಡುವ ಜಾತ್ರೆ ಇದಾಗಿದೆ.

ಧ್ವಜಾರೋಹಣ: ಕುಂಭಮಾಸದ ನಕ್ಷತ್ರದ ದಿವಸ ಧ್ವಜಾರೋಹಣಗೊಳ್ಳುವುದರೊಂದಿಗೆ ಭರಣಿ ಮಹೋತ್ಸವ ಆರಂಭಗೊಳ್ಳುವುದು. ಈ ಆಚರಣೆಗೆ ‘ಮಲಯನ್ ಪಟ್ಟಾನ್’ ವಿಶೇಷ ಹಕ್ಕು ಹೊಂದಿದ್ದು, ಹಿಂದಿನ ದಿವಸವೇ ಕೊಡಂಗಲ್ಲೂರು ಕೋವಿಲಗಂ ತಲುಪಿ, ತುಂಬೂರಾನನ ಅನುಮತಿ ಪಡೆಯಬೇಕು. ಕುಂಭ ಮಾಸದ ಭರಣಿ ನಕ್ಷತ್ರದ ದಿವಸ ಶುಚಿರ್ಭೂತನಾಗಿ ದೇವಸ್ಥಾನಕ್ಕೆ ಮೂರು ಪ್ರದಕ್ಷಿಣೆ ಬಂದು, ಬಲಿಕಲ್ಲಿನಲ್ಲಿ ಒಂದು ಚಿನ್ನದ ತಾಳಿ ಹಾಗೂ ಧ್ವಜದ ಆಕೃತಿಯನ್ನು ಸಮರ್ಪಿಸುವನು. ಇದರೊಂದಿಗೆ ಇತರ ಜನರು ಕ್ಷೇತ್ರದ ಅಂಗಣದಲ್ಲಿ ಆಲದ ಮರದ ಸ್ತಂಭದಲ್ಲಿ ಧ್ವಜವನ್ನು ಏರಿಸುವರು.

ಕೋಳಿಕಲ್ಲ್ ಮೂಡಲ್: ಭರಣಿ ಮಹೋತ್ಸವದ ಮುಖ್ಯ ಆಚರಣೆ ಇದು. ಮೀನಮಾಸದ ಶ್ರವಣ ನಕ್ಷತ್ರದ ದಿವಸ ದೇವಸ್ಥಾನದ ಉತ್ತರ ದ್ವಾರದ ವೃತ್ತಾಕಾರದ ಎರಡು ಕಲ್ಲುಗಳನ್ನು ಗುಳಿ ತೋಡಿ ಮುಚ್ಚುವ ಕ್ರಮವಿದೆ. ಕಲ್ಲುಗಳಿದ್ದ ಸ್ಥಳದಲ್ಲ ಮಣ್ಣು ತುಂಬಿಸಿ, ಕೆಂಪು ವಸ್ತುವನ್ನು ಹಾಡುವರು. ಕೋಳಿಕಲ್ಲು, ಮುಚ್ಚುವ ಹಕ್ಕು ದೇವಸ್ಥಾನದ ಪಕ್ಕವಿರುವ ‘ಭಗವತಿವೀಟಿಲ್’ ಎಂಬ ನಾಯರ್ ತರವಾಡಿಗೆ ಸೇರಿದ್ದು, ಈ ಕಲ್ಲುಗಳಲ್ಲಿ ಮೊದಲ ಕೋಳಿ ಬಲಿಯನ್ನು ನೀಡುವ ಹಕ್ಕು ಮಲಬಾರಿನ ‘ತಚ್ಚೋಳಿ’ ಮನೆತನಕ್ಕೆ ಸೇರಿದ್ದು, ಅನಂತರ ಉಳಿದವರು ತಂದಿರುವ ಕೋಳಿಗಳನ್ನು ಬಲಿಯಾಗಿ ನೀಡುತ್ತಾರೆ.

ತೇಂಙಯುಡಕ್ಕಲ್: ಕೋಳಿಕಲ್ಲು ಮುಚ್ಚಿದ ನಂತರ ‘ಅಶ್ವತಿಪೂಂಡ್‌’ವರೆಗೆ ದೇವಸ್ಥಾನದ ಉತ್ತರ ದ್ವಾರದ ತಪ್ಪಂಗಾಯಿ ಕಲ್ಲಿಗೆ ಭಕ್ತರು ತೆಂಗಿನಕಾಯಿ ಒಡೆಯುತ್ತಾರೆ. ಭಕ್ತರು ತಂದ ಅರಿಸಿನ, ಕರಿಮೆಣಸು, ನಾಣ್ಯ ಮೊದಲಾದ ಹರಕೆಗಳನ್ನು ಸುತ್ತು ಗೋಪುರದ ಕಡೆಯಿಂದ ಗರ್ಭಗುಡಿಯ ಕಡೆಗೆ ಎಸೆಯುವರು. ತೆಂಗಿನಕಾಯಿ ಹಾಗೂ ಕೋಳಿಗಳನ್ನು ಹರಕೆಯ ರೂಪದಲ್ಲಿ ಒಪ್ಪಿಸುವರು.

ವೇಳಿಚ್ಚಪಾಡ್ ತುಳ್ಳಲ್: ಕೆಂಪು ವಸ್ತ್ರವನ್ನು ಧರಿಸಿದ, ಕಾಲಿಗೆ ಗಗ್ಗರ, ಸೊಂಟಕ್ಕೆ ಅರಮಣಿ ಧರಿಸಿದ, ಕೈಯಲ್ಲಿ ಮಣಿಗಳಿಂದ ಕೂಡಿದ ಖಡ್ಗವನ್ನು ಹಿಡಿದ ವೆಳಿಚ್ಚಪಾಡರ ಕುಣಿತ ಕೊಡಂಗಲ್ಲೂರಿನಲ್ಲಿ ವಿಶಿಷ್ಟವಾಗಿದೆ. ಸ್ತ್ರೀಯರು ಕೂಡಾ ವೆಳಿಚ್ಚಪಾಡ್ ತುಳ್ಳಲ್ ವಿಧಿಯಲ್ಲಿ ಭಾಗವಹಿಸುವರು. ವೆಳಿಚ್ಚಪಾಡರು ಆವೇಶದಿಂದ ಕುಣಿಯುತ್ತಾ, ಕತ್ತಿಯಿಂದ ತಮ್ಮ ತಲೆಗೆ ಹೊಡೆದುಕೊಳ್ಳುವರು. ಇವರಿಗೆ ಸಲಹೆಯನ್ನು ಕೊಡಲು ಹಾಗೂ ಗಾಯಗಳಿಗೆ ಅರಿಸಿನ ಹಾಕಿ ಆಶೀರ್ವದಿಸಲು ಅನೇಕ ಪಾತ್ರಿಗಳು ಅಲ್ಲಿರುತ್ತಾರೆ. ಕತ್ತಿ ಹಾಗೂ ಗಗ್ಗರ ಧರಿಸಿ ಹೊಸ ಪಾತ್ರಿಗಳಾಗಲು ದೇವಸ್ಥಾನದ ಸಮೀಪದ ಮಠದಲ್ಲಿ ವ್ಯವಸ್ಥೆ ಇದೆ.

ಭರಣಿಪಾಟ್: ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಗುಂಪು ಗುಂಪಾಗಿ ದೇವಿಸ್ತುತಿಗಳನ್ನು ಹಾಡುತ್ತಾರೆ. ಇದನ್ನು ಭರಣಿಪಾಟ್ ಎನ್ನುವರು. ಅಶ್ಲೀಲ ಹಾಡುಗಳು ಇವುಗಳಲ್ಲಿರುವುದರಿಂದ ಬೈಗುಳಹಾಡು ಎಂದು ಹೇಳುವರು.

ಪುಲಪಾಡಂ ಪೂಜೆ: ಕೊಡಂಗಲ್ಲೂರು ದೇವಸ್ಥಾನದಿಂದ ಸುಮಾರು ಒಂದು ಕಿ.ಮೀ.ಪೂರ್ವಕ್ಕೆ ‘ಪುಲಕಾಡಂ’ ಎಂಸ ಸ್ಥಲವಿದೆ. ದೇವಿ ವಿಗ್ರಹ ಪ್ರತಿಷ್ಠೆ ಇರುವ ಈ ಸ್ಥಾನದಲ್ಲಿ ಪೂಜಾದಿ ಕರ್ಮಗಳಿವೆ. ಪುಲಯ ತರವಾಡಿನ ಹಿರಿಯ ‘ವಳ್ಳೋನ್’ ಎಂಬ ಪದವಿಯ ವ್ಯಕ್ತಿ ರೇವತಿ ನಕ್ಷತ್ರದ ದಿವಸ ಇಲ್ಲಿ ವಿಶೇಷ ಪೂಜೆ ನೆರವೇರಿಸುವರು. ಚಪ್ಪರ ಹಾಕಿ, ಕಳಂಚಿತ್ರ ಬರೆದು ವಳ್ಳೇನ್ ಎತ್ತರದ ವೇದಿಕೆಯನ್ನೇರಿ ಭಕ್ತರನ್ನು ಅನುಗ್ರಹಿಸುವನು.

ರೇವತಿವಿಳಕ್ಕ್: ರೇವತಿ ನಕ್ಷತ್ರದ ದಿವಸ ದೇವಸ್ಥಾನ ಹಾಗೂ ಪರಿಸರವನ್ನು ದೀಪಾಲಂಕಾರ ಮಾಡಲಾಗುವುದು. ಇದನ್ನು ‘ರೇವತಿವಿಳಕ್ಕ್’ ಎನ್ನುವರು. ರೇವತಿವಿಳಕ್ಕ್ ದರ್ಶನ ಪುಣ್ಯಸ್ತರ ಎಂದು ಭಕ್ತರು ನಂಬಿದ್ದಾರೆ.

ಪಾಲಕ್ಕ್ ವೇಲನ್ವರವ್: ಅಶ್ವಿನಿ ನಕ್ಷತ್ರದ ದಿವಸ ತಂಬೂರಾನನ ಅನುಮತಿ ಪಡೆದು ‘ಪಾಲಕ್ಕ್ ವೇಲನ್’ ದೇವಸ್ಥಾನಕ್ಕೆ ಆಗಮಿಸುವನು. ಅರಸಿನ ಬೊಟ್ಟು ಹಾಲೆಹೂವಿನ ಮಾಲೆ ಬಿಳಿಬಣ್ಣದ ಟೊಪ್ಪಿ ಧರಿಸಿ ಬರುವನು. ದೇವಸ್ಥಾನದ ಪಶ್ಚಿಮ ದ್ವಾರದ ಬಳಿ ಪೀಠದಲ್ಲಿ ಆಸೀನನಾಗುವ ವೇಲನಿಗೆ ಕೈಮುಗಿದು, ದಕ್ಷಿಣೆ ಸಲ್ಲಿಸಿ ಭಕ್ತರು ಅನುಗ್ರಹ ಪಡೆಯುವರು. ದಾರಿಕಾಸುರನ ಜತೆಯುದ್ಧ ಮಾಡಿ ಗಾಯಗೊಂಡ ಭಗವತಿಯನ್ನು ಚಿಕಿತ್ಸೆ ನೀಡಿ ಗುಣಪಡಿಸಿದವನು ಪಾಲಕ್‌ವೇಲನ ಪೂರ್ವಿಕರೆಂದು ನಂಬಿಕೆ.

ತೃಚಂದನ ಚಾರ್ತ್: ಅಶ್ವಿನಿ ನಕ್ಷತ್ರದ ದಿವಸ ನಂಬೂದಿರಿ ಅರ್ಚಕರ, ನೇತೃತ್ವದಲ್ಲಿ ನಡೆಯುವ ‘ಅತ್ತಾಯಪೂಜೆ’ ಯ ನಂತರ ‘ಅಡಿಗಳು’ ದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸುವರು. ದೇವಸ್ಥಾನದಿಂದ ಎಲ್ಲರನ್ನು ಹೊರಗೆ ಕಳುಹಿಸಿ, ಗರ್ಭಗುಡಿಯ ಬಾಗಿಲು ಒಳಗಿನಿಂದ ಚಿಲಕ ನಡೆಸುವ ಈ ತಾಂತ್ರಿಕ ಪೂಜೆ ಇದು. ಅರಸಿನ ಹುಡಿಯನ್ನು ಬಳಸಿ ನಡೆಸುವ ಈ ತಾಂತ್ರಿಕ ಪೂಜೆಗೆ ತೃಚ್ಛಂದನಚಾರ್ಟ್‌ ಎಂದು ಕರೆಯುತ್ತಾರೆ. ಈ ಪೂಜೆಯ ನಂತರ ಒಮ್ಮೆ ಗರ್ಭಗುಡಿಯ ಬಾಗಿಲು ತೆರೆಯುತ್ತಾರೆ. ಅನಂತರ ಏಳು ದಿವಸ ಕಳೆದು ಬಾಗಿಲು ತೆರೆಯುವರು.

ಕಾವುತೀಂಡಲ್: ತೃಚ್ಚಂದನಚಾರ್ಟ್‌ ಕಳೆದು ಕೊಡಂಗಲ್ಲೂರು ಕೋವಿಲಗಂ ತಂಬೂರಾನ್ ದೇವಸ್ಥಾನದ ಪೂರ್ವದ್ವಾರದ ಬಲಿಕಲ್ಲಿನ ಪಕ್ಕದಲ್ಲಿ ೨೪ ಸ್ಥಾನಿಕರಿಗೆ ಆಯುಧವನ್ನು ನೀಡುವರು. ಹಕ್ಕಿನ ಕುಟುಂಬದವರಿಗೆ ಬೆತ್ತದ ದಂಡವನ್ನು ನೀಡುವುದು ಈ ಆಚರಣೆಯಾಗಿದೆ. ಅನಂತರ ತಂಬೂರಾವ್ ಪೂರ್ವಭಾಗದ ಅರಳಿಕಟ್ಟೆಯನ್ನು ಏರುವನು. ಈ ಸಂದರ್ಭದಲ್ಲಿ ಬಣ್ಣದ ಕೊಡೆಗಳು ಅರಳಿಕೊಳ್ಳುತ್ತವೆ. ಕಾವು ತೀಂಡುವ ಮೊದಲ ಹಕ್ಕು ಪಾಲಕ್ಕ್ ವೇಲನದ್ದು. ಅನಂತರ ಆವೇಶಗೊಂಡ ಪುರುಷ, ಸ್ತ್ರೀ ವೆಳಿಚ್ಚಪಾಡರು ಈ ವಿಧಿಯಲ್ಲಿ ಪಾಲ್ಗೊಳ್ಳುವರು. ಭರಣಿಪಾಡು ಹಾಡುವ ಭಕ್ತರು ದೇವಿಸ್ತುತಿ, ಹಾಡುತ್ತಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುವರು. ಈ ಆಚರಣೆಯನ್ನು ‘ಕಾವುಪೂಕಲ್’ ಎಂದೂ ಕರೆಯುವರು.

ಹೀಗೆ ‘ಕಾವುತೀಂಡಲ್’ ಆಚರಣೆ ಕಳೆದು ಭರಣಿ ಭಕ್ತರು ಆಲದ ಕಟ್ಟೆಯಲ್ಲಿ ನಿಂತಿರುವ ತಂಬೂರಾನಸಿಗೆ ವಂದಿಸಿ, ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಭರಣಿ ನಕ್ಷತ್ರದ ದಿವಸ ಪುಲಪಾಡದಿಂದ ವಳ್ಳೋಣ್ ಬಂದು ‘೯೦ ಕಿಳಿಪಣ’ವನ್ನು ಕಾಣಕೆಯಾಗಿ ಅರ್ಪಿಸುವನು. ಅನಂತರ ಪೂರ್ವ ಬಾಗಿಲಿನ ಬಳಿ ದೀಪ ಬೆಳಗಿಸಿ ದೇವಿಯನ್ನು ಆವಾಹಿಸಲಾಗುತ್ತದೆ.

ಅನಂತರ ಪರಯ ಸಮುದಾಯದವರ ನೇತೃತ್ವದಲ್ಲಿ ‘ಪಾಕನಾರ ಮುತ್ತಪ್ಪನ’ ಆಗಮನವಾಗುತ್ತದೆ. ಆಗ ದಾರಿಕವಧೆಯ ಕಥೆಯನ್ನು ಪರಯರು ಹಾಡುವರು. ಮುತ್ತಪ್ಪನ್ ದೇವಸ್ಥಾನದ ಪೂರ್ವಬಾಗಿಲಿಗೆ ಬರುವುದರೊಂದಿಗೆ ಭರಣಿ ಉತ್ಸವದ ವಿಧಿಗಳು ಮುಕ್ತಾಯಗೊಳ್ಳುತ್ತವೆ. ಅನಂತರ ಅರಯ ಸಮುದಾಯದವರು ದೇವಿಗೆ ಚಿನ್ನದ ತಾಳಿ ಸಮರ್ಪಿಸುತ್ತಾರೆ. ಈ ಉತ್ಸವ ಕಳೆದ ನಂತರ ತಂಬೂರಾನ್ ಅಲ್ಲಿ ಸೇರಿದ ಜನರಿಗೆ ಹಣ ಹಾಗೂ ಹೊದಳು ವಿತರಿಸುವನು. ನಾಡಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದವರು ಕೊಡಂಗಲ್ಲೂರು ಭರಣಿ ಉತ್ಸವದಲ್ಲಿ ಭಾಗವಹಿಸುತ್ತಾರೆ.

– ಕೆ.ವಿ.ಎಸ್. ಅನುವಾದ:ಎನ್.ಎಸ್.