ಕೊಂಕಣಿ ಜಾನಪದ ಗೋವೆಯಲ್ಲಿ ಹಿಂದೂಗಳು, ಮುಸಲ್ಮಾನರು, ಕ್ರಿಶ್ಚಿಯನ್ನರು, ಎಲ್ಲರೂ ಕೊಂಕಣಿಯನ್ನೇ ಸಂಪರ್ಕ ಭಾಷೆಯಾಗಿ ಬಳಸುತ್ತಾರೆ. ಮುಸಲ್ಮಾನರಿಗೆ ಹಿಂದೂಗಳಂತೆ ಅಥವಾ ಕ್ರಿಶ್ಚಿಯನ್ನರಂತೆ ಕೊಂಕಣಿ ತಾಯಿ ಭಾಷೆ ಅಲ್ಲ. ಹಾಗೆಯೇ ಸ್ವಾತಂತ್ರ್ಯಾನಂತರ ಗೋವೆಯಲ್ಲಿ ನೆಲೆಸಿದ ಕನ್ನಡಿಗರು, ತಮಿಳರು, ಮಲಯಾಳಿಗಳು ಹಾಗೂ ತೆಲಗುರಿಗೂ ಕೊಂಕಣಿ ತಾಯಿಭಾಷೆ ಅಲ್ಲ. ಸಂಪರ್ಕಭಾಷೆಯಾಗಿ ಅವರೆಲ್ಲರೂ ಕೊಂಕಣಿಯನ್ನೇ ಬಳಸುತ್ತಾರೆ.

ಇಲ್ಲಿಯ ಕ್ರಿಶ್ಚಿಯನ್ನರು ಮತಾಂತರ ಹೊಂದಿದವರು. ಬಹುತೇಕರು ಕೊಂಕಣಿಯದೇ ಆಗಿದ್ದಾರೆ. ಮತಾಂತರ ಹೊಂದಿದವರಾಗಿ ಅವರ ಎಲ್ಲಾ ಸಂಸ್ಕೃತಿಯಲ್ಲಿ ಪೌರ್ವಾತ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ಮಿಶ್ರಣವೇ ಕಾಣುತ್ತದೆ. ಮೀನುಗಾರಿಕೆ, ಗಣಿಗಾರಿಕೆ ಹಾಗೂ ವಿಶೇಷವಾಗಿ ತೆಂಗು ಅಡಿಕೆಗಳ ಕೃಷಿಕರಿರುವುದರಿಂದ ಹೆಂಡ ಉತ್ಪನ್ನ ಮುಂತಾದುವುಗಳನ್ನೂ ಪ್ರಥಮ ಆದ್ಯತೆಯನ್ನಾಗಿಸಿಕೊಂಡು ವ್ಯಾಪಾರ ನಡೆಸುವುದು ಕಂಡುಬರುತ್ತದೆ. ಸಮುದ್ರ ಉತ್ಪನ್ನಗಳಾದ ವಿವಿಧ ಬಗೆಯ ಮೀನುಗಳು, ಏಡಿಗಳು ಇತರ ದಿನನಿತ್ಯದ ಆಹಾರದ ಒಂದು ಬಗೆ. ಕೃಷಿ ಜಮೀನುಗಳ ಉಸ್ತುವಾರಿ ಬಹುತೇಕ ಬ್ರಾಹ್ಮಣರದ್ದೇ ಆಗಿದ್ದರೂ ಕೆಲಸಗಾರರು ಗಾವಡಿ ಕುಣಬಿಗಳೇ ಆಗಿರುತ್ತಾರೆ. ತೆಂಗಿನಮರದಿಂದ ಹೆಂಡ ಇಳಿಸುವವರನ್ನು ‘ರಂದೇರ್’ ಎನ್ನುತ್ತಾರೆ. ಬಹಳ ಕಾಲ ಗೋವ ಪೋರ್ಚುಗೀಸರ ಆಡಳಿತಕ್ಕೊಳಪಟ್ಟಿದ್ದುದರಿಂದ ಇಲ್ಲಿಯ ಚರ್ಚುಗಳು ರೋಮನ್ ಕ್ಯಾಥೊಲಿಕ್ ಶೈಲಿಯ ವಾಸ್ತುವಿನಿಂದ ಕೂಡಿವೆ. ‘ಓಲ್ಡ್ ಗೋವಾ’ದಲ್ಲಿ ಬೃಹದಾಕಾರದ ಚರ್ಚುಗಳು ಹಲವಾರಿದೆ. ಹಾಗೆ ನೋಡಿದರೆ ಗೋವೆಯಲ್ಲಿ ಬೀದಿ ಬೀದಿಗೂ ಚರ್ಚುಗಳಿವೆ.

ಓಲ್ಡ್ ಗೋವಾದ ಪ್ರಮುಖ ಆಕರ್ಷಣೆ ಅಲ್ಲಿಯ ಸಂತ ಝೇವಿಯರ್ ಚರ್ಚು. ಅಲ್ಲಿ ಸಂತ ಝೇವಿಯರನ ಪಾರ್ಥಿವ ಶರೀರವನ್ನು ಪ್ರದರ್ಶನ ಪೆಟ್ಟಿಗೆಯಲ್ಲಿಡಲಾಗಿದೆ. ಅಲ್ಲಿಗೆ ಹಿಂದೂ, ಮುಸಲ್ಮಾನ, ಕ್ರೈಸ್ತರೆಲ್ಲರೂ ಕೂಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ನೆನೆಸಿದ್ದು ನಡೆಯುತ್ತದೆ ಎಂಬ ನಂಬಿಕೆ ಈ ಪ್ರಾರ್ಥನೆಯ ಹಿಂದಿರುತ್ತದೆ.

ಪ್ರತಿವರ್ಷದ ಡಿಸೆಂಬರ್ ಮೂರನೆಯ ತಾರೀಖು ಸಂತ ಝೇವಿಯರನ ಜಾತ್ರೆ ನಡೆಯುತ್ತದೆ. ಎಲ್ಲ ಜಾತಿಮತದವರೂ ಕೂಡಿಯೇ ಈ ಜಾತ್ರೆ ನಡೆಸುತ್ತಾರೆ. ಮತಾಂತರಗೊಂಡ ಅನೇಕ ಹಿಂದೂಗಳು ತಾವು ಹಿಂದೆ ಅನುಸರಿಸುತ್ತಿದ್ದ ಚಾತುರ್ವರ್ಣ ಪದ್ದತಿಯಲ್ಲಿದ್ದ ಮೇಲುಕೀಳು ಭಾವನೆಯಿಂದ ಇನ್ನೂ ಮುಕ್ತರಾದಂತಿಲ್ಲ. ಮತಾಂತರಗೊಂಡು ಹತ್ತಿರ ಹತ್ತಿರ ನಾಲ್ಕಾರು ವರ್ಷಗಳಿಗಿಂತ ಹೆಚ್ಚೇ ಆಗಿದ್ದರೂ ಅವರಲ್ಲಿದ್ದ ಹಿಂದಿನ ಜಾಯಮಾನಗಳು ಮರೆಯಾಗಿಲ್ಲ.

ಇಲ್ಲಿಯ ಶ್ರೀಮಂತರು ಬಹುತೇಕ ಕ್ರೈಸ್ತ ಬ್ರಾಹ್ಮಣರಾಗಿದ್ದಾರೆ. ಬಹುಶಃ ಪೋರ್ಚುಗೀಸರ ಆಡಳಿತವಿದ್ದ ಕಾಲದಲ್ಲಿ ಅದಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಿದ್ದರಿಂದ ಬ್ರಾಹ್ಮಣರನ್ನು ಎತ್ತರದ ಹುದ್ದೆಗಳಲ್ಲಿ ನೆಲೆಗೊಳಿಸಿದ್ದಿರಬಹುದು. ಇಲ್ಲಿಯ ಕ್ರೈಸ್ತ ಕ್ಷತ್ರಿಯರನ್ನು ‘ಚೌಡ್ಡೆ’ ಎಂದು ಕರೆಯುತ್ತಾರೆ. ರೋಮನ್ ಕ್ಯಾಥಲಿಕರು ಹಾಗೂ ಹೊರ ರಾಜ್ಯಗಳಲ್ಲಿಂದ ಬಂದು ನೆಲಸಿದ ಪ್ರಾಟೆಸ್ಟೆಂಟರು ನಗರಗಳಲ್ಲಿ ಹೇರಳವಾಗಿದ್ದಾರೆ. ಪೋರ್ಚುಗೀಸರು ಮೊದಮೊದಲು ಸಾಮೂಹಿಕವಾಗಿ ಮತಾಂತರಗೊಳಿಸಿದ ಹಿನ್ನೆಲೆಯಲ್ಲಿ ಮುರಗಾವ್, ಪಣಜಿ, ಮಡಗಾವ್, ಬಾರ್ದೇಜ್ ಮುಂತಾದ ಪ್ರದೇಶಗಳಲ್ಲಿ ಕ್ರೈಸ್ತರ ಸಂಖ್ಯೆ ಹೇರಳವಾಗಿದೆ ಮತ್ತು ಈ ಪ್ರದೇಶವನ್ನು ಹಳೆಯ ಕಾಬಿಜಾದಿ ಎಂದು ಕರೆಯುತ್ತಾರೆ.

ಮೂಲತಃ ಹಿಂದೂ ಚಾತುರ್ವರ್ಣದ ಪದ್ಧತಿಯ ಆಚರಣೆಯಲ್ಲಿದ್ದುದರಿಂದ ಮತಾಂತರಗೊಂಡರೂ ಈ ಕ್ರೈಸ್ತರನ್ನು ಹಳೆಯ ಆಚಾರ ವಿಚಾರಗಳು ಕಾಡಿವೆ. ಭಾರತದ ಇನ್ನಾವ ಕ್ರೈಸ್ತ ಸಮುದಾಯದಲ್ಲೂ ಇಲ್ಲದಷ್ಟು ವರ್ಣವ್ಯವಸ್ಥೆಯ ಹಂತಗಳು ಇವರಲ್ಲಿಚಾಲ್ತಿಯಲ್ಲಿವೆ. ಇಲ್ಲಿಯ ಸಾರಸ್ವತ ಬ್ರಾಹ್ಮಣರನ್ನು ‘ಬಾಮಣ’ರೆಂದೂ ಕ್ಷತ್ರಿಯರನ್ನು ‘ಚಾಡ್ಡೆ’ ಅಥವಾ ‘ಚಾರಡೆ’ ಎಂದೂ ಶೂದ್ರರನ್ನೂ ‘ಸುದೀರ’ ಎಂದೂ, ವೈಶ್ಯರನ್ನು ‘ವಾಣಿ’ಗಳೆಂದೂ ಕರೆಯುವುದಿದೆ. ಶೂದ್ರರಲ್ಲಿ ಹಲವಾರು ಹಂತದವರಿದ್ದಾರೆ. ಗಾವಡಿ ಕುಣಬಿಗಳು, ಮಡಿವಾಳರು, ‘ಖಾರವಿ’ಗಳೆಂಬ ಮೀನುಗಾರರು, ‘ಪದೇರ’ ಎಂಬ ಬ್ರೇಡ್ ತಯಾರಕರು, ‘ಮಹಾರ’ರೆನ್ನಿಸಿಕೊಳ್ಳುವ ಹೊಲೆಯರು. ಚೌಂಬಾರರು (ಚಮ್ಮಾರರು) ಹೀಗೆ ‘ಅನ್ಯ’ರ ಸಾಲಿನಲ್ಲೇ ಕ್ರೈಸ್ತರು ಇಲ್ಲಿ ಗುರುತಿಸಲ್ಪಡುತ್ತಾರೆ. ಮತಾಂತರಗೊಂಡ ಕ್ರೈಸ್ತರು, ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು, ಕ್ರೈಸ್ತರ ಹಬ್ಬಗಳನ್ನು ಆಚರಿಸುವುದು ಇತ್ಯಾದಿಗಳಲ್ಲಿ ಕ್ರೈಸ್ತರನ್ನೇ ಅನುಸರಿಸಿದರೂ ಸಹ ದೇವರಿಗೆ ಹರಕೆ ಹೊರುವುದು ‘ಹೂ ಕೇಳುವುದು’, ಭೂತ ದೆವ್ವಗಳಿಗಾಗಿ ಹರಕೆ ಕೊಡುವುದು, ‘ಪಾತ್ರಿ’ ಗಳಿಂದ ಪ್ರಶ್ನೆ ಕೇಳಿಸುವುದು ಮುಂತಾಗಿರುವ ಹಿಂದೂ ಆಚರಣೆಗಳನ್ನು ಬಿಡದೆ ನಡೆಸಿಕೊಂಡು ಬರುತ್ತಾರೆ. ಗೋವು ಹಾಗೂ ಹಂದಿಯ ಮಾಂಸ ಇವರಿಗೆ ನಿಷೇಧ. ಆದರೆ ಭೂತಾದಿಗಳಿಗೆ ‘ಸೋರೋರೋಂಟೀ’ (ಸೊರೊ ಎಂದರೆ ‘ಸಾರಾಯಿ ಮತ್ತು ರೊಟ್ಟಿ’) ‘ಖಾರಾರೋಂಟಿ’ಗಳನ್ನು ಅರ್ಪಿಸುತ್ತಾರೆ.

ವನಸಮೃದ್ಧಿಯನ್ನು ನಾಶಪಡಿಸದಿರಲು ಅನೇಕ ಹಿಂದೂ ದೇವಾಧಿದೇವತೆಗಳ ವಾಸಸ್ಥಾನವೆಂದು ಮರಗಳಿಗೆ ಪೌರಾಣಿಕ ಕಥೆಗಳನ್ನು ಹೆಚ್ಚಿ ‘ವನದೇವಿ’ಯೆಂದು ಆ ವೃಕ್ಷ ಸಂಪತ್ತನ್ನು ಉಳಿಸಿಕೊಳ್ಳುತ್ತಾ ಬಂದದ್ದು ಹಿಂದೂ ಭಾರತೀಯ ಸಂಪ್ರದಾಯವೇ ಆಗಿದೆ. ಕೊಂಕಣಿಗರು ಕ್ರೈಸ್ತ ಮತಾವಲಂಬಿಗಳೇ ಆಗಿ ಹೋಗಿದ್ದರೂ ಈ ಆರ್ಷೇಯ ನಂಬಿಕೆಯನ್ನು ಉಳಿಸಿಕೊಂಡೇ ಬಂದಿದ್ದಾರೆ. ‘ಶ್ರದ್ಧಾಸ್ಥಾನ’ಗಳೆಂದು ಗುರುತಿಸಿ ಕೆಲವು ನಿರ್ದಿಷ್ಟ ಮರಗಳನ್ನು ಕಡಿಯುವಂತಿಲ್ಲ. ಕೆಲವು ಮರಗಳು ಭೂತದ ಅಥವಾ ಬ್ರಹ್ಮ ಪಿಶಾಚಿಯ ಆವಾಸ ಸ್ಥಾನಗಳಾಗಿವೆ. ಬೂರಲ ಮರಗಳಲ್ಲಿ ಭೂತಪಿಚಾಚಿಗಳಿರುವುದರಿಂದ ಅವಕ್ಕೆ ಆಯುಧ ಸ್ಪರ್ಶವಾಗುವಂತಿಲ್ಲ. ಅಶ್ವತ್ಥ ವೃಕ್ಷ ಬ್ರಹ್ಮನ ಆವಾಸ ಸ್ಥಾನ; ಔದುಂಬರ ದತ್ತಾತ್ರೇಯನ ಪವಿತ್ರಸ್ಥಾನ; ಬಾಳೆ, ಮಾವು, ತೆಂಗು ಮುಂತಾದುವು ನೈವೇದ್ಯಕ್ಕಾಗಿನ ಪವಿತ್ರಫಲಗಳು; ನದಿ ಕೆರೆಗಳಲ್ಲಿ ವಿವಿಧ ದೇವ ದೇವತಾದಗಿಳ ಪವಿತ್ರ ತೀರ್ಥಗಳು; ನೆಲ ಅಗೆದು ಮಣ್ಣು ನಾಶಪಡಿಸುವಂತಿಲ್ಲ, ಅವಳು ಪವಿತ್ರ ‘ಭೂಮಿತಾಯಿ’ ಹಾಗೆಯೇ ನಿರ್ದಿಷ್ಟ ಸ್ಥಳಗಳಲ್ಲಿ ಪಕ್ಷಿಗಳನ್ನು ಶಿಕಾರಿ ಮಾಡಬಾರದೆಂಬ ನಿಯಮಗಳನ್ನು ಈ ಜನ ನಂಬುತ್ತಾರೆ. ಸರ್ಪಕ್ಕೆ ಕ್ಷೇತ್ರ ಪತಿಯ ಸ್ಥಾನವಾದ್ದರಿಂದ ಇಲ್ಲಿನ ಕಾಡು ಪ್ರದೇಶಗಳಲ್ಲಿ ಹೇರಳವಾಗಿ ನಾಗಾಸ್ಥಾನಗಳಿವೆ.

ಇವರ ವಿಶೇಷ ಹಬ್ಬ ಹರಿದಿನಗಳು ಹಳದಿ ಕುಂಕುಮ, ನೂಲಹುಣ್ಣಿಮೆ, ಸೂರ್ಯಪೂಜೆ, ವಟಪೌರ್ಣಿಮ, ನಾಗಪಂಚಮಿ, ಕಾರ್ತಿಕ ಪಾಡ್ಯ, ತುಳಸಿ ಕಲ್ಯಾಣ ಇತ್ಯಾದಿ.

ಬ್ರಾಹ್ಮಣ ಜಾತಿಯವರಲ್ಲಿಯಂತೆ ಇಲ್ಲಿಯ ಮೇಲ್ವರ್ಗದಲ್ಲಿಯೂ ಸಹ ಷೋಡಶ ಸಂಸ್ಕಾರಗಳಿವೆ. ಗರ್ಭದಾನದಂದು ಪತಿ ಪತ್ನಿಯ ಮೂಗಿನಲ್ಲಿ ಗರಿ ಕೆರಸ ಹಿಂಡುತ್ತಾನೆ. ಹಾಗೂ ಶಯನ ಗೃಹದ ಕಾಲು ದೀವಿಗೆಯಲ್ಲಿ ಅಕ್ಕಿ ತೆಂಗಿನಕಾಯಿ ಇಟ್ಟು ಹಚ್ಚಿದ ದೀಪವಿರುತ್ತದೆ. ಇದು ಬಹುತೇಕ ಮೇಲ್ವರ್ಗವಷ್ಟೆ ಅಲ್ಲದೆ ಕೆಳವರ್ಗದ ಜನರಲ್ಲೂ ಕಂಡುಬರುತ್ತದೆ. ಬಾಣಂತಿಯರಿಗೆ ಕೋಣೆಯಲ್ಲಿ ಸದಾ ಉರಿಯುವ ದೀಪ ಇಡುವುದು, ಬಾಣಂತಿಯ ಮಂಚದ ಕೆಳಗೆ ಕಬ್ಬಿಣದ ಕತ್ತಿಯಿಡುವುದು, ಬಾಣಂತಿಗೆ ಎರಡು ತಿಂಗಳು ಕಳೆಯವವರೆಗೂ ಬಾಣಂತಿ ಹಾಗೂ ಮಗುವಿಗೆ ತೆಂಗಿನೆಣ್ಣೆ ಹಚ್ಚಿ ನೀರಿನ ಸ್ನಾನ ಕೊಡುವುದು ಹೊಟ್ಟೆಗೆ ಮೆಂತ್ಯದ ಗಂಜಿ, ಗೋಡಂಬಿಯ ಹಳತಾದ ಫೇಣಿಯನ್ನು ನಿತ್ಯದ ಆಹಾರವಾಗಿ ಕೊಡುವುದು ಉಂಟು. ಮದುವೆ, ಶೋಭನ, ಇತ್ಯಾದಿ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ರೆಂಜೆ ಹೂವಿನ ಅಲಂಕಾರ ಮಾಡಲಾಗುತ್ತದೆ. ಇದು ಕೊಂಕಣಿಗಳಲ್ಲಿ ವಿಶೇಷ ಒಂದೊಮ್ಮೆ ಆ ಹೂವಿನ ಋತುವಿಲ್ಲದಿದ್ದಲ್ಲಿ, ಒಣಗಿಸಿಟ್ಟ ರೆಂಜೆಹೂವಿನ ಪಕಳೆಗಳನ್ನಾದರೂ ವಧುವಿನ ಮುಡಿಯಲ್ಲಿ ಸೂಡುವುದುಂಟು. ಮನೆಗೆ ಬಂದ ಅತಿಥಿಗಳಿಗೆ ವಿವಿಧ ಹೂಗಳಿಂದ, ಹಣ್ಣುಗಳಿಂದ ತಯಾರಿಸಿದ ಪೇಯಗಳನ್ನು ವಿತರಿಸುವುದು ವಿಶೇಷ. ಮೀನಿನ ವೈವಿಧ್ಯಮಯ ಖಾದ್ಯಗಳಷ್ಟೇ ವೈವಿಧ್ಯಮಯವಾಗಿ ಈ ಪೇಯಗಳನ್ನು ತಯಾರಿಸುವುದರಲ್ಲಿ ಇವರದು ಎತ್ತಿದ ಕೈ.

ಕೊಂಕಣಿಯರಿಗೇ ವಿಶೇಷವಾದ ಕೆಲವು ಕಲಾ ವೈಶಿಷ್ಟ್ಯಗಳನ್ನು ಹೆಸರಿಸಬಹುದು. ವಿಶೇಷವಾಗಿ ಗೋವೆಯ ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿರುವ ಮುಸಳ ನೃತ್ಯಚಾನಕೆಯು ಕುಣಿತ ಕದಂಬರ ಕಾಲದಲ್ಲಿ ರಾಜಧಾನಿಯಾಗಿದ್ದ ಚೌಂದರದ ಕ್ಷತ್ರಿಯರು ಮಾಡುವಂಥದ್ದು. ಚೌಂದರದ ಕೋಣೆಯನ್ನು ಚೋಳರಿಂದ ವಿಜಯನಗರದರಸ ಹರಿಹರ ಗೆದ್ದುಕೊಂಡಾಗ ವಿಜಯೋತ್ಸವದ ಸಂಕೇತವಾಗಿ ಈ ನೃತ್ಯಮಾಡಿದ್ದು ಎಂದು ಹೇಳುತ್ತಾರೆ. ಮುಸಲರಿಂದ ಯದುಕುಲ ಸಂಹಾರವಾದ ಕತೆಗೂ ಇದಕ್ಕೂ ತಳುಕು ಹಾಕುವ ಕತೆಗಳೂ ಇವೆ.

‘ರಣಮಾಲೆ’ ಎಂಬ ‘ಆಟ’ ಕ್ಷತ್ರಿಯರು, ತೋಟಿಗರು ಮಾಡುವ ರಾಮಕಥಾ ನಿರೂಪಣೆಯನ್ನು ಒಳಗೊಂಡಿರುವಂಥದ್ದು. ಇದಕ್ಕೆ ಡೋಲು, ತಾಳೆ, ಕಂಸಾಲೆಗಳು, ಮುಖ್ಯವಾದ್ಯಗಳು. ಭಾಗವತರ ಹಾಡು ಹಾಗೂ ಅಭಿನಯ ಪೂರ್ವಕ ಪಾತ್ರಧಾರಿಗಳು ಯಕ್ಷಗಾನದ ನೆನಪು ತರುತ್ತಾರೆ. ಹಾಗೆಯೇ ಕ್ರೈಸ್ತ ಮತಕ್ಕೆ ಮತಾಂತರಗೊಂಡ ಗಾವಡಿಗಳು ಪ್ರದರ್ಶಿಸುವ ಗಾವಡಾಜಾಗರ ಮತ್ತೊಂದು ವಿಶಿಷ್ಟ ನೃತ್ಯ ಪ್ರಕಾರ. ಊರಿನ ನಡುವಿನ ‘ಮಾಂಡ’ (ಅಂಗಣ)ದಲ್ಲಿ ಪರದೆ ನೇಪಥ್ಯಗಳಿಲ್ಲದೆ ಭೂತ ಕೋಲದೊಂದಿಗೆ ವರ್ತಮಾನದ ಪ್ರಸಂಗಗಳು ಸಮೀಕರಿಸಿ ಆಡುತ್ತವೆ. ಇಡೀ ರಾತ್ರಿ ಜಾಗರ ನಡೆದು ಬೆಳಗಿನಲ್ಲಿ ಮುಗಿಯುತ್ತದೆ. ಕೊಂಕಣಿಗಳಲ್ಲಿ ಅತ್ಯಂತ ವೈಭವೋಪೇತವಾಗಿ ಜನಮನದಲ್ಲಿ ಪ್ರಭಾವ ಬೀರಿದ್ದು ‘ಕಾಲಾ’ ಪ್ರಕಾರ. ಒಂದು ವಿಸ್ತಾರವಾದ ಬಯಲಿನಲ್ಲಿ ಎತ್ತರವಾದ ದೀವಿಗೆ ಹಾಗೂ ದೀವಟಿಕೆಗಳ ಬೆಳಕಿನಲ್ಲಿ ಈ ಮನೋರಂಜಕ ರಂಗ ಪ್ರಯೋಗ ನಡೆಯುತ್ತದೆ. ಅದಕ್ಕೆ ಸುಮಧುರವಾದ ಮೃದಂಗ ಧ್ವನಿಯ ಹಿನ್ನೆಲೆಯಲ್ಲಿ ತಾಳಧಾರಿ, ಸೂತ್ರಧಾರನಂತೆ ‘ಭಟಜೀ’ ರುದ್ಧಿಸಿಧಿಯೆಂಬ ಹೆಣ್ಣು ಪಾತ್ರಧಾರಿಗಳು ಎಲ್ಲಕ್ಕೂ ಮುಂದೆ ಮುಖವಾಡದ ಗಣಪತಿ ಬರುತ್ತಾರೆ. ಮತ್ಸ್ಯಾವತಾರದ ವಿಷ್ಣು, ವೇದಗಳನ್ನು ಕದ್ದು ತಂದ ಸಂಕಾಸುರನನ್ನು ವಧಿಸುತ್ತಾರೆ. ಹಿಂದೆಲ್ಲ ದಶಾವತಾರ ಎಲ್ಲಾ ಪ್ರಸಂಗಗಳನ್ನು ನಡೆಸುತ್ತಿದ್ದುದಾಗಿ ಇದೆ. ಇದೇ ರೀತ ಗೌಳಣ ಕಾಲಾ, ಸಂಕಾಸುರಕಾಲಾ, ರಾತಕಾಲಾ ಎಂಬ ವಿಶೇಷಗಳಲ್ಲಿ ಇದು ಇಡೀ ದಕ್ಷಿಣ ಕನ್ನಡ ಭಾಗದಲ್ಲಿ ಅತ್ಯಂತ ಸಂಚಲನವನ್ನುಂಟು ಮಾಡಿದ ಜನಪದ ಕಲೆಯಾಗಿದೆ.

– ಜಿ.ಎನ್.

ಕೊಂಡದೊರ ಆಂಧ್ರದ ವಿಶಾಖ, ವಿಜಯನಗರಂ, ಶ್ರೀಕಾಕುಳಂ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ವಾಸವಾಗಿರುವ ಬುಡಕಟ್ಟು. ಇವರ ಭಾಷೆಯಾದ ‘ಕುವಿ’ಯಲ್ಲಿ ಅವರು ತಮ್ಮನ್ನು ತಾವು ‘ಕುಚಿಂಗ್’ ಇಲ್ಲವೆ ‘ಕೊಂಡಾರ್ಗಿ’ ಎಂದು ಕರೆದುಕೊಳ್ಳುತ್ತಾರೆ. ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಕೆಲವರು ‘ಆದಿವಾಸಿ ಒಡಿಯಾ’ ವನ್ನೂ ಮಾತನಾಡಬಲ್ಲರು. ‘ಕೊಂಡದೊರ’ಗಳಲ್ಲಿ ಕೊರ್ರ‍, ಕಿಲ್ಲೋ, ಸ್ವಾಬಿ, ಒಂತಲು, ಕಿಮುದ್, ಪಂಗಿ, ಪರಲೇಕ್, ಬಿಡಕ, ಸೋಮೇ ಲಂಗರ್, ಸರ್ರೆ‍ಕ್, ಗೂಲೋರಿ ಗುಣೇ, ಬಜ್ಜೆಲ್ ಎಂಬ ಗೋತ್ರಗಳಿವೆ. ಒಂದು ಕಾಲಕ್ಕೆ ಇವರಲ್ಲಿ ಬಾಲ್ಯ ವಿವಾಹ ಪದ್ಧತಿ ಹೆಚ್ಚಾಗಿತ್ತು. ಚಿಕ್ಕಂದಿನಲ್ಲೇ ಮದುವೆ ಮಾಡಿ ಮೈನೆರೆತ ಮೇಲೆ ಅತ್ತೆಯ ಮನೆಗೆ ಕಳುಹಿಸುತ್ತಾರೆ. ಬಹುಪತ್ನಿತ್ವ ಸರ್ವೇಸಾಮಾನ್ಯ. ವಿಚ್ಛೇದನಕ್ಕೆ ಸಾಮಾಜಿಕ ಒಪ್ಪಿಗೆಯಿದೆ. ದನದ ಮಾಂಸವನ್ನು, ಹಂದಿಯಮಾಂಸವನ್ನು ತಿನ್ನುತ್ತಾರೆ. ಗ್ರಾಮದ ಹಿರಿಯನನ್ನು ‘ನಾಯುಡು’ ಎಂದು ಕರೆಯುತ್ತಾರೆ. ಗ್ರಾಮದ ಜನಸಂಖ್ಯೆಗನುಗುಣವಾಗಿ ಹನ್ನೆರಡು ಮಂದಿ ಇಲ್ಲವೆ ಐದು ಮಂದಿ ಈ ರೀತಿಯ ‘ನಾಯುಡು’ಗಳಿರುತ್ತಾರೆ. ಇವರೆಲ್ಲರೂ ಹಳ್ಳಿಯ ‘ಚೌದುರು’ ಎಂಬ ಜಾಗದಲ್ಲಿ ಸಮಾವೇಶವಾಗುತ್ತಾರೆ. ಇಲ್ಲಿಯೇ ವ್ಯಭಿಚಾರ, ವಿಚ್ಛೇದನ, ಒಳಜಗಳಗಳು ಬಗೆಹರಿಸಲ್ಪಡುತ್ತವೆ. ನಾಯುಡು ವ್ಯವಸ್ಥೆ ವಂಶಪಾರಂಪರ್ಯವಾಗಿ ಮಗನಿಗೆ ಸಲ್ಲುತ್ತದೆ. ಒಣ ಬೇಸಾಯವನ್ನು ಮಾಡುತ್ತಾರೆ. ಇವರು ಬೊಡ ದೇವತೆ, ಶಂಕು ದೇವತೆ, ನಿಶಾನಿ ದೇವತೆ, ಜಕರ ದೇವತೆಗಳನ್ನು ಪೂಜಿಸಿ ಪ್ರಾಣಿ ಬಲಿಯನ್ನು ಕೊಡುತ್ತಾರೆ. ಚೈತ್ರ ಹಬ್ಬ, ಬಲ್ಲಿ ಹಬ್ಬ, ಹೊಸ ನವಣೆ, ಹೊಸ ಅವರೆ ಮೊದಲಾದ ಹಬ್ಬಗಳನ್ನು ಆಚರಿಸುತ್ತಾರೆ. ಮುಖ್ಯ ಹಬ್ಬವಾಗಿ ‘ಕಾಡ ಪಂದೊಯಿ’ (ಬಿತ್ತನೆಯ ಪೂಜೆ)ಯನ್ನು ಆಚರಿಸುತ್ತಾರೆ. ಇದರನಂತರ ಬೇಟೆಯ ಹಬ್ಬವನ್ನು ಆಚರಿಸುತ್ತಾರೆ. ‘ದಿಂಸಾ’ ನೃತ್ಯವನ್ನು ಮಾಡುತ್ತಾರೆ. ತುಡುಂ, ಡಪ್ಪಿ, ಕಿರಿಟಿ, ಪರೋಡಿ ಎಂಬ ವಾದ್ಯಗಳನ್ನು ಸಂಗೀತಕ್ಕೆ ಉಪಯೋಗಿಸುತ್ತಾರೆ. ಕೊಂಡದೊರೆಗಳಲ್ಲಿ ನಂಬಿಕೆಗಳು ಹೆಚ್ಚು. ಹುಡುಗಿ ಮೈನೆರೆದ ಐದನೆಯ ದಿನದಂದು ತಲೆಸ್ನಾನ ಮಾಡಿಸಿ ಗ್ರಾಮದ ಮೇರೆಯಲ್ಲಿ ಪೂಜಾರಿಯ ಸಮಕ್ಷಮದಲ್ಲಿ ಹುಡುಗಿ “ಈವುಗಿನೀಯಾ ಜುಂಬುಲೋನಾ” ಎಂಬ ಗಿಡವನ್ನು ನೆಡೆಸುತ್ತಾರೆ. ಹುಡುಗಿ ಅದರ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಿ ಬರುತ್ತಾಳೆ. ತೀರಿಕೊಂಡ ಮಕ್ಕಳನ್ನು ಹೂಳುತ್ತಾರೆ. ಕಳ್ಳನ್ನು ಕುಡಿಯುತ್ತಾರೆ. ಅಕ್ಷರಸ್ಥರ ಸಂಖ್ಯೆ ಕಡಿಮೆ. ಹಬ್ಬಗಳಲ್ಲಿ ನೃತ್ಯ ಮಾಡುತ್ತಾರೆ. ಆಗಸ್ಟ್ ತಿಂಗಳಿಂದ ಇವರ ಹಬ್ಬಗಳು ಆರಂಭವಾಗುತ್ತವೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ೨,೦೬,೩೮೧. ಅಂದರೆ ಶೇಕಡಾ ೫.೧.

– ಬಿ.ಕೆ. ಆರ್. ಅನುವಾದ ಕೆ.ಎಸ್.

ಕೊಂಡಮಾಮ ಕರ್ನಾಟಕ ಮತ್ತು ಆಂಧ್ರದ ಪ್ರಮುಖ ಭವಿಷ್ಯಕಾರರಲ್ಲಿ ಕೊಂಡಮಾಮ ಅಥವಾ ಕುರುಮಾಮಗಳು ಮುಖ್ಯರು. ಇವರು ಹಳ್ಳಿ ಹಳ್ಳಿ ಸುತ್ತುತ್ತಾ ಶಾಸ್ತ್ರ ಹೇಳುವಾಗ ಪ್ರತಿಯೊಂದು ಸಾಲಿನದ ಕೊನೆಯಲ್ಲಿ ‘ಕುಕ್ರಿಮಾಮ’ ಎನ್ನುವುದರಿಂದ ಇವರಿಗೆ ‘ಕುಕ್ರಿಮಾಮ’, ‘ಕುರು ಕುರು ಮಾಮ’ ಎನ್ನುತ್ತಾರೆ. ತಮ್ಮ ಶಾಸ್ತ್ರಕ್ಕೆ ಅಧಿದೈವವಾದ ಶ್ರೀರಾಮ ಅಥವಾ ಕೊಂಡದೇವತೆಯನ್ನು ಸ್ತುತಿಸುವುದರಿಂದ ‘ಕೊಂಡಮಾಮ’ ಎಂಬ ಹೆಸರು ಬಂದಿರಬಹುದು.

ಈ ಜನಾಂಗದ ಮೂಲಸ್ಥಾನ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಭದ್ರಾಚಲಂ ಬಳಿ ಇರುವ ಕೊಂಡಯ್ಯಗೂಡ. ಇವರ ಮಾತೃಭಾಷೆ ತೆಲುಗು. ಬಳ್ಳಾರಿ ಕಡೆಯಿಂದ ಕನ್ನಡನಾಡಿಗೆ ಪ್ರವೇಶ ಮಾಡಿ ಕರ್ನಾಟಕದ ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ಗದಗ, ಚಿತ್ರದುರ್ಗ, ತುಮಕೂರು, ಚಳ್ಳಕೆರೆ, ಮೈಸೂರು, ಕೊಳ್ಳೇಗಾಲ, ಹಾಸನ, ಸಿಂಗರಪಲ್ಲಿ, ಹೊಸದುರ್ಗ, ಶಿವಮೊಗ್ಗೆಯ ಸಾಗರ, ಶಿರಾಳಕೊಪ್ಪ, ಆನಂದಪುರ, ಶಿಕಾರಿಪುರ, ಸೊರಬ ಇತ್ಯಾದಿ ಕಡೆಗಳಲ್ಲಿ ಕಾಣಸಿಗುತ್ತಾರೆ.

55

ಭವಿಷ್ಯ ಹೇಳುತ್ತಾ ಭಿಕ್ಷೆ ಬೇಡಿ ಜೀವಿಸುವುದೇ ಇವರ ಪ್ರಧಾನ ಕೆಲಸವಾದರೂ ಇವರು ಒಳ್ಳೆಯ ನಾಟಿ ವೈದ್ಯರೂ ಕೂಡ. ಇವರಲ್ಲಿ ಹಲವು ಒಳಪಂಗಡಳಿವೆ. ಇವುಗಳನ್ನು ಹಲವು ಹೆಸರಿನಿಂದ ಗುರುತಿಸುತ್ತಾರೆ. ಗುಂಪುಗಳನ್ನು ಬೆಡಗುಗಳೆಂದು ಹೆಸರಿಸುತ್ತಾ ಸಂಕೋರು, ನ್ಯೂನೋರು, ಮುಗ್ಗೋರು, ಪಾದಗಂಟೋರು, ಕೋಡುಗುಂಟೋರು, ಬಾದಗೋರು, ಕೊಮಾರರು ಇತ್ಯಾದಿಯಾಗಿ ಗುರುತಿಸಿಕೊಳ್ಳುತ್ತಾರೆ. ವಿವಾಹ ಸಂಬಂಧಗಳು ಬೆಡಗುಗಳನ್ನು ಅನುಸರಿಸಿಯೇ ನಡೆಯುತ್ತವೆ. ಬೆಡಗುಗಳ ಮುಖ್ಯಸ್ಥರನ್ನು ‘ಒಂಡಾರರು’ ಎಂದು ಕರೆಯುವುದು ವಾಡಿಕೆ. ಇವರು ಸಣ್ಣ ಸಣ್ಣ ಕುಟುಂಬಗಳಲ್ಲಿ ವಾಸಿಸುವರು. ಹಿಂದೆ ಮಾತೃಪ್ರಧಾನ ಕುಂಟುಬಪದ್ಧತಿ. ಇದ್ದು ಇತ್ತೀಚೆಗೆ ಪಿತೃಪ್ರಧಾನ ಕುಟುಂಬಗಳಾಗಿ ಕಾಣಬರುತ್ತಿವೆ. ಏಕಪತಿತ್ವ ಮತ್ತು ಏಕಪತ್ನಿತ್ವ ಪದ್ಧತಿಗಳು ರೂಢಿಯಲ್ಲಿವೆ. ವಯಸ್ಸಿಗೆ ಬಂದ ಮಕ್ಕಳೆಲ್ಲ ದುಡಿಮೆಗೆ ಹೋಗುತ್ತಾರೆ. ಸಂಪಾದನೆಯ ಹಣವನ್ನು ಸಂಸಾರಕ್ಕೆ ನೀಡಲೇಬೇಕು. ಸಣ್ಣ ಸಣ್ಣ ಗುಂಪುಗಳಾಗಿ ಬೇರೆ ಬೇರೆ ವಲಸೆ ಹೋದ ಕುಟುಂಬಗಳು ಮಳೆಗಾಲ ಆರಂಭವಾಗುತ್ತಲೇ ನಿರ್ದಿಷ್ಟ ಊರು ಅಥವಾ ಸ್ಥಳಗಳಲ್ಲಿ ಪುನಃ ಬಂದು ಸೇರುತ್ತಾರೆ. ಇವರು ದತ್ತು ತೆಗೆದುಕೊಳ್ಳುವ ಕ್ರಮ ರೂಢಿಯಲ್ಲಿಲ್ಲ. ಇವರು ತಮ್ಮ ಮತೀಯ ಕಟ್ಟುಪಾಡುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ.

ತಂದೆಯನ್ನು ಅಬ್ಬ, ತಾಯಿಯ ಅಣ್ಣನನ್ನು ಮಾಮ, ಚಿಕ್ಕಪ್ಪನ ಹೆಂಡತಿಯನ್ನು ಪಿನ್ನಮ್ಮ, ಚಿಕ್ಕಪ್ಪನನ್ನು ಪಿನ್ನಪ್ಪ, ಸೊಸೆಯನ್ನು ಕ್ವಾಡಲು ಪದಗಳಿಂದ ಕರೆಯುತ್ತಾರೆ.

ಕೊಂಡಮಾಮರು ದೀಕ್ಷೆ ಕೊಡಿಸುವ ಸಂಪ್ರದಾಯವನ್ನು ಬಿಡುವುದಿಲ್ಲ. ಹತ್ತು ಹನ್ನೆರಡು ವರುಷಗಳ ಗಂಡು ಮಕ್ಕಳನ್ನು ಶ್ರೀಶೈಲದ ಮಲ್ಲಿಕಾರ್ಜುನನ ದರುಶನಕ್ಕೆ ಕರೆದುಕೊಂಡು ಹೋಗಿ, ತಮ್ಮ ಗುರುಗಳನ್ನು ಭೇಟಿ ಮಾಡಿ ದೀಕ್ಷೆ ಕೊಡಿಸುತ್ತಾರೆ. ದೀಕ್ಷೆಯಾದ ಬಳಿಕ ಗುರುಗಳು ಶಾಸ್ತ್ರ ಹೇಳಲು ಅನುಕೂಲವಾಗುವಂತೆ ‘ಚಿಂತಾಮಣಿ’ ಹೆಸರಿನ ಶಾಸ್ತ್ರಕಟ್ಟು, ರುದ್ರಾಕ್ಷಿಸರ, ವಿಭೂತಿ ಉಂಡೆಗಳನ್ನು ಆಶೀರ್ವಾದಪೂರ್ವಕ ನೀಡುತ್ತಾರೆ. ಅಂದಿನಿಂದ ಕೊಂಡಮಾಮ ಹುಡುಗ ಅವರ ವೃತ್ತಿ ಹಿಡಯಬಹುದು.

ಈ ಕಲಾವಿದರ ವೇಷಭೂಷಣಗಳು ತಲೆಗೆ ಚಿಕ್ಕು ಹಾಕಿ ಮುಡಿಕಟ್ಟಿ, ಕೆಂಪು ಇಲ್ಲವೆ ಮತ್ತ್ಯಾವುದೇ ಬಣ್ಣದ ಟೇಪು, ಮಣಿ ಅಥವಾ ಸಣ್ಣ ರುದ್ರಾಕ್ಷಿಸರ ಸುತ್ತಿರುತ್ತಾರೆ. ಮುಡಿಗೆ ನವಿಲುಗರಿಯನ್ನೂ ಹಕ್ಕಿಯ ಪುಕ್ಕವನ್ನೊ ಸಿಕ್ಕಿಸಿಕೊಂಡು, ಕೊರಳಿಗೆ ಮಣಿಸರ, ಮುಂಗೈ ಮತ್ತು ರಟ್ಟೆಗಳಿಗೆ ಲೋಹದ ಬಳೆ ಮುಂತಾದವುಗಳಿಂದ ಅಲಂಕರಿಸುತ್ತಾರೆ. ಕಿವಿಯ ಮೇಲೆ ಮುಳ್ಳು ಹಂದಿಯ ಮುಳ್ಳನ್ನು ಇಟ್ಟುಕೊಂಡಿದ್ದು ಕಿವಿಗೆ ಕುಂಡಲಗಳನ್ನು ಹಾಕಿರುತ್ತಾರೆ. ಧೋತ್ರವನ್ನು ಉಟ್ಟಿದ್ದು ಸೊಂಟಕ್ಕೆ ಚರ್ಮದ ಪಟ್ಟಿ ಬಿಗಿದಿದ್ದು ಹಣೆಯ ಮೇಲೆ ಕೆಂಪು ನಾಮವಿರುತ್ತದೆ. ಕೊಂಡಮಾಮನ ಕೈಯಲ್ಲಿ ಚಿಟಿಗೆ ಮತ್ತೊಂದು ಕೈಯಲ್ಲಿ ‘ಟಿಂಗ್‌ಟಿಂಗ್’ ಎಂದು ನಾದೆ ಕೊಡುವ ಪುಟ್ಟ ತಂಬೂರಿ ಮತ್ತು ಹೆಗಲಿನಲ್ಲಿ ಜೋಳಿಗೆ ಇರುತ್ತದೆ. ತಂಬೂರಿ ತಂತಿ ಮಿಡಿದಾಗ ಬರುವ ನಾದವೇ ಕುರ್ರ‍ ಮಾಮಗೆ ಹಿಮ್ಮೇಳ ! ಚಿಟಿಕೆಗಳಿಗೆ ಗೆಜ್ಜೆ ಕಟ್ಟಿ ಒಳ್ಳೆಯ ಸದ್ದು ಬರುವಂತೆ ಮಾಡಿರುತ್ತಾರೆ.

ಈ ಸಮುದಾಯದವರಲ್ಲಿ ಗಂಡನ ಮನೆಯಲ್ಲಿಯೇ ಪ್ರಸವ ನಡೆಯುತ್ತದೆ. ಮಗುವನ್ನು ಹೆರಿಗೆಯಾದ ಮೂರು ದಿನಗಳವರೆಗೆ ಬಿದಿರಿನ ಮೊರಗಳಲ್ಲಿ ಮಲಗಿಸುತ್ತಾರೆ. ಮೂರನೆಯ ದಿನದಲ್ಲಿ ಮುತ್ತೈದೆಯರು ಕೂಡಿ ತೊಟ್ಟಿಲಿಗೆ ಹಾಕುವ ಶಾಸ್ತ್ರ ಮಾಡುತ್ತಾರೆ. ಕೊಂಡಮಾಮರು ಆಯಾ ಬೆಡಗುಗಳಲ್ಲಿ ರೂಢಿಯಲ್ಲಿರುವ ಕ್ರಮಗಳನ್ನನುಸರಿಸಿ ಮಕ್ಕಳಿಗೆ ಹೆಸರಿಡುತ್ತಾರೆ. ನಾಮಕರಣದ ದಿನ ಮಾಂಸದ ಊಟ ಏರ್ಪಡಿಸಿರುತ್ತಾರೆ.

ಹಿಂದಿನ ದಿನಗಳಲ್ಲಿ ಸೇವಾ ವಿವಾಹ ರೂಢಿಯಲ್ಲಿತ್ತು. ಹುಡುಗ ವಿವಾಹವಾಗುವುದಕ್ಕಿಂತ ಮುಂಚೆ ಹೆಣ್ಣಿನ ತಂದೆ ತಾಯಿಗಳ ಮನೆಯಲ್ಲಿದ್ದು ಕೆಲಸಕಾರ್ಯಗಳನ್ನು ನಡೆಸಬೇಕಿತ್ತು. ಅವನ ವರ್ತನೆ, ಸೇವೆ ಇಷ್ಟವಾದರೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಒಪ್ಪುತ್ತಿದ್ದರು. ವಿವಾಹ ಸಂಬಂಧಗಳು ‘ಬೆಡಗು’ಗಳ ಆಧಾರದ ಮೇಲೆ ನಡೆಯುತ್ತದೆ. ಮೊದಲು ಮೂರು ದಿನಗಳ ಕಾಲ ನಡೆಯುತ್ತಿದ್ದ ವಿವಾಹ ಈಗ ಸರಳವಾಗಿದೆ.

ವಿವಾಹದ ಸಂದರ್ಭದಲ್ಲಿ ಗಂಡು ಬಿಳಿ ಷರಟು, ಕೋಟು, ಕಚ್ಚೆ ಪಂಚೆ, ತಲೆಗೆ ಮುಂಡಾಸು, ಕೊರಳಿಗೆ ಹೂಮಾಲೆ, ಕಾಲಿಗೆ ಮಿಂಚು ಧರಿಸಿರುತ್ತಾರೆ. ಬಲಗೈಯಲ್ಲಿ ನಿಂಬೆಹಣ್ಣನ್ನು ಸಿಕ್ಕಿಸಿದ ಚಾಕನ್ನು ಹಿಡಿದಿರುತ್ತಾನೆ. ಎಡಗೈಯನ್ನು ಒಂದು ಕರವಸ್ತ್ರವಿರುತ್ತದೆ. ಹೆಣ್ಣಿಗೆ ಸೀರೆ, ರವಿಕೆ, ಆಭರಣಗಳಿದ್ದು ಹೊಸ ಬಿಳಿಬಟ್ಟೆಯನ್ನು ಒಂದು ಸೆರೆ ಅಕ್ಕಿ, ಅರ್ಧಕೊಬ್ಬರಿ ಗಿಟುಕು ಕಟ್ಟಿ ಮದುಮಗಳ ಸೊಂಟಕ್ಕೆ ಸುತ್ತಿರುತ್ತಾರೆ. ಇದಕ್ಕೆ ‘ಮಡಿಲಕ್ಕಿ’ ಎಂದು ಹೆಸರು. ಮದುವೆ ಕಾರ್ಯದ ನಂತರ ಇದನ್ನು ಬಿಚ್ಚುತ್ತಾರೆ. ಒಂದೇ ತಾಳಿಯನ್ನು ಕಟ್ಟುತ್ತಾರೆ. ಅಣ್ಣ ತಮ್ಮಂದಿರು ಕ್ರಮವಾಗಿ ಅಕ್ಕ ತಂಗಿಯರನ್ನು ಮದುವೆಯಾಗಬಹುದು. ವಿಧುರ ಹಾಗೂ ವಿಧವಾ ವಿವಾಹಕ್ಕೆ ಸಮ್ಮತಿಯಿದೆ.

56

ಇವರು ಮಹರ್ನಮಿ, ನಾಗರಪಂಚಮಿ, ಗೌರಿ, ದೀಪಾವಳಿ, ಯುಗಾದಿ ಮುಂತದ ಹಬ್ಬಗಳನ್ನು ಆಚರಿಸುತ್ತಾರೆ. ಮಾರಿಹಬ್ಬ ಇವರಲ್ಲಿ ವಿಶೇಷ. ಗೋರುಸಂದ್ರದ ಮಾರಮ್ಮನೆಂದು ಕರೆಯುವ ಆಕೆಯ ಮೂರ್ತಿಯನ್ನು ಹಿತ್ತಾಳೆ ಅಥವಾ ಬೆಳ್ಳಿಯ ತಗಡಿನಿಂದ ಮಾಡಿಸಿರುತ್ತಾರೆ.

ಈ ಜನರು ಸತ್ತಾಗ ಹೂಳುವುದೇ ಹೆಚ್ಚು. ಸುಡುವುದು ತೀರ ಅಪರೂಪ.

ಮಕ್ಕಳಿಗೆ ಬರುವ ಬಾಲಗ್ರಹ, ಗಾಳಿಪೀಡೆ ಮುಂತಾದವಕ್ಕೆ ಯಂತ್ರತಂತ್ರಗಳನ್ನು ಮಾಡುತ್ತಾರೆ. ಈ ಉದ್ದೇಶಕ್ಕಾಗಿ ಗ್ರಹಣದ ದಿನ ಶ್ಮಶಾನಕ್ಕೆ ಹೋಗಿ ಬೂದಿ ತಂದು ‘ಅಷ್ಟಪಾದ ನೆಲಚಕ್ರ’ ಎಂಬ ಗಿಡಮೂಲಿಕೆ ಹುಡುಕಿ ತಂದು ನಾಲ್ಕಾರು ಗಿಡಮೂಲಿಕೆಯೊಂದಿಗೆ ಸೇರಿಸಿ ಕುಟ್ಟಿ ತಾಯತದಲ್ಲಿ ತುಂಬುತ್ತಾರೆ. ಅನಂತರ ಗೋಮೂತ್ರದಲ್ಲಿ ತೊಳೆದು ಧೂಪಹಾಕಿ ಶುದ್ಧಗೊಳಿಸುತ್ತಾರೆ. ಇವರು ವಶೀಕರಣ ವಿದ್ಯೆಯಲ್ಲಿ ಪಾರಂಗತರು.

ಕೊಂಡಮಾಮರು ಕರ್ನಾಟಕದ ಜನಪ್ರಿಯ ಭವಿಷ್ಯಕಾರರು. ಇವರು ಆ ವೃತ್ತಿಯನ್ನು ಸ್ವೀಕರಿಸುವ ಮೊದಲು ಶ್ರೀ ಶೈಲದ ಗುರುಗಳಿಂದ ದೀಕ್ಷೆ ಪಡೆದು ಆಶೀರ್ವಾದ ಪಡೆದುಕೊಂಡು ಬರಬೇಕು. ಜನಪದ ಸಾಹಿತ್ಯದ ಕಥೆ, ಗೀತೆ, ಗಾದೆ, ಒಗಟು ಮುಂತಾದ ಎಲ್ಲ ಪ್ರಕಾರಗಳನ್ನೂ ಹಾಡುತ್ತಾ ಜನರನ್ನು ರಂಜಿಸುತ್ತಾ ಬದುಕುವ ಸರಳ ಜೀವಿಗಳಿವರು.

– ಸಿ.ಎಸ್.ಪಿ.

ಕೊಂಡ ರೆಡ್ಲು ಆಂಧ್ರಪ್ರದೇಶದ ಆದಿಮ ಬುಡಕಟ್ಟು. ಪಶ್ಚಿಮ, ಪೂರ್ವ ಗೋದಾವರಿ ಜಿಲ್ಲೆಗಳಲ್ಲಿಯೂ ಖಮ್ಮಂ ಜಿಲ್ಲೆಯಲ್ಲಿಯೂ ಇದ್ದಾರೆ. ಇವರ ಮಾತೃಭಾಷೆ ತೆಲುಗು. ಪ್ರತಿಗೋತ್ರ ಬಹಿರ್ವಿವಾಡ ಗೋತ್ರ, ಸಹೋದರ ಗೋತ್ರಗಳಲ್ಲಿ ವೈವಾಹಿಕ ಸಂಬಂಧಗಳಿರುವುದಿಲ್ಲ. ಒಣ ಬೇಸಾಯ ಮಾಡುತ್ತಾರೆ. ಕಾಡಿನ ಉತ್ಪನ್ನಗಳಿಂದ ಉಪಜೀವನ ಸಾಗಿಸುತ್ತಾರೆ. ಗಡ್ಡೆ ಗೆಣಸು, ಬೇರುಗಳು, ತಪ್ಪಲು, ಹಣ್ಣು ಕಾಯಿಗಳನ್ನು ಶೇಖರಿಸುತ್ತಾರೆ. ಕೊಂಡರೆಡ್ಡಿಗಳು ಜೋಳವನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಅಲ್ಲದೆ ತೊಗರಿ, ಅಲಸಂದೆ, ಅವರೆ ಮುಂತಾದುವನ್ನು ಬೆಳೆಯುತ್ತಾರೆ. ಹಂದಿಯ ಮಾಂಸವನ್ನು ತಿನ್ನುತ್ತಾರೆ. ಆದರೆ ಆಕಳ ಮಾಂಸವನ್ನು ತಿನ್ನುವುದಿಲ್ಲ.

ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿದೆ. ಬಹುಪತ್ನಿತ್ವವಿರುವ ಕುಟುಂಬಗಳೂ ಇವೆ. ತೀರಕೊಂಡ ಸೋದರನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವುದುಂಟು. ಪ್ರತಿಯೊಂದು ಹಳ್ಳಿಗೂ ‘ಪೆದ್ದಕಾಪು’ ಎಂಬ ಹೆಸರಿನಲ್ಲಿ ಗ್ರಾಮದ ಒಡೆಯನಿರುತ್ತಾನೆ. ‘ಪೆದ್ದಕಾಪು’ ಪಟ್ಟ ವಂಶಪಾರಂಪರ್ಯವಾಗಿ ಬರುತ್ತದೆ. ಈತನೇ ಆ ಗ್ರಾಮದ ಪೂಜಾರಿ. ಈತನ ತಮ್ಮ ಅನಂತರದ ವಾರಸತ್ವದ ಹಕ್ಕುಗಳನ್ನು ಪಡೆಯುತ್ತಾನೆ. ಆತನನ್ನು ‘ಪಿನ್ನ ಪೆದ್ದ’ (ಕಿರಿಯ ಯಜಮಾನ) ಎನ್ನುತ್ತಾರೆ. ವ್ಯಭಿಚಾರ, ವಾವೆವರಸೆಗಳಿಲ್ಲದ ಸಂಭೋಗ, ಇತರ ಕುಲಸ್ಥರೊಂದಿಗೆ ಭೋಜನ ಅಪರಾಧವೆಂದು ಪರಿಗಣಿಸಲಾಗುತ್ತದೆ. ಮುತ್ಯಾಲಮ್ಮ (ಗ್ರಾಮ ದೇವತೆ), ಭೂ ದೇವಿ (ಭೂಮಾತೆ), ಗಂಗಮ್ಮ (ಗಂಗಾದೇವಿ), ವಾನ ದೇವುಡು (ಮಳೆರಾಯ) ಮೊದಲಾದವರು ಆರಾಧ್ಯ ದೇವತೆಗಳು. ಹುಟ್ಟಿದ ಮಗುವಿಗೆ ಎಂಟನೆಯ ದಿನ ಹೆಸರಿಡುತ್ತಾರೆ. ಮೈಬಣ್ಣ ನಸು ಕಂದು ಬಣ್ಣ. ಸ್ವಲ್ಪ ಎತ್ತರವಾಗಿರುತ್ತಾರೆ. ಇವರ ಕೈಯಲ್ಲಿ ಕತ್ತಿ ಬಿಲ್ಲುಗಳು ಇರುತ್ತವೆ. ಗಂಡಸರು ಗೋಚಿ ಹಾಕಿಕೊಂಡು ಅಂಗಿಯಿಲ್ಲದೆ ಓಡಾಡುತ್ತಾರೆ. ಹೆಂಗಸರು ಸೀರೆ, ಕುಪ್ಪಸ ಉಡುತ್ತಾರೆ. ಸೋದರ ಮಾವ, ಸೋದರತ್ತೆಯ ಮಕ್ಕಳನ್ನು ಮದುವೆಯಾಗಬಹುದು. ‘ಓಲಿ’ ವ್ಯವಸ್ಥೆಯೂ ಕಂಡುಬರುತ್ತದೆ. ಮಳೆ ಬಾರದಿದ್ದಾಗ ದೇವತೆಗಳಿಗೆ ಬಲಿಯನ್ನು ಕೊಡುತ್ತಾರೆ. ಬೆಳೆ ಬಂದ ಮೇಲೆ ಕೋಳಿ ಕೊಯ್ದು ಗುಡ್ಡಗಾಡಿನ ದೇವತೆಗೆ ನೈವೇದ್ಯ ಅರ್ಪಿಸುತ್ತಾರೆ. ಇದನ್ನೇ ‘ಕೊತ್ತ ಪಂಡುಗ'(ಹೊಸ ಹಬ್ಬ) ಎಂದು ಕರೆಯುತ್ತಾರೆ. ಜೋಳದ ರೊಟ್ಟಿ, ಅಂಬಲಿ ಮಾಡಿಕೊಂಡು ಉಪ್ಪು, ಕಾರ, ಉಳ್ಳಾಗಡ್ಡೆ ಕಲೆಸಿಕೊಂಡು ತಿನ್ನುತ್ತಾರೆ. ಮೂರು ವರ್ಷಕ್ಕೊಮ್ಮೆ ಸಾಗುವಳಿ ಭೂಮಿಯನ್ನು ಬಿಟ್ಟುಹೊಸ ಭೂಮಿಯನ್ನು ವ್ಯವಸಾಯ ಮಾಡುತ್ತಾರೆ. ಮಾವಿನ ಚಿಗುರಿನಿಂದ ಮಾಡಿದ ಅಂಬಲಿ ಕುಡಿಯುತ್ತಾರೆ. ಇವರಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೭೭ ಮಂದಿ. ಅಂದರೆ ಶೇಕಡಾ ೦.೦೦೧.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಕೊಂಡೋಟ್ಟಿ ನೇರ್ಚ ಮಲ್ಲಪ್ಪುರಂ ಜಿಲ್ಲೆಯ ಕೊಂಡೋಟ್ಟಿ ಪ್ರದೇಶದಲ್ಲಿ ‘ಖುಬ್ಬ’ (ಮಸೀದಿಯ ಬುರುಜು) ಕ್ಕೆ ಸಂಬಂಧಿಸಿ ಕೊಂಡೋಟ್ಟಿ ನೇರ್ಚ ನಡೆಯುತ್ತದೆ. ಕೇಳರದ ಹೆಚ್ಚಿನ ಉತ್ಸವಗಳು ನಡೆಯುವಂತೆಯೇ ಇದು ಕೂಡ ಕೊಯ್ಲು ಮುಗಿದ ಗದ್ದೆಗಳಲ್ಲಿ, ಕೃಷಿ ಕೆಲಸವನ್ನೆಲ್ಲ ಮುಗಿಸಿದ ರೈತರು ನಡೆಸುವ ಹಬ್ಬ. ಕೊಂಡೋಟ್ಟಿ ಮತ್ತು ಪರಿಸರ ಪ್ರದೇಶಗಲ ಕೃಷಿಕರು ಅವರ ಬೆಳೆಗಳನ್ನು ‘ಕೊಂಡೋಟ್ಟಿ ತಂಙಳ್’ (=ಮುಸ್ಲಿ ಧರ್ಮದ ಗೌರವಾನ್ವಿತ ವ್ಯಕ್ತಿ)ಗೆ ಕಾಣಿಕೆಗಾಗಿ ತರುವುದು ಈ ಕಾರ್ಯಕ್ರಮದ ತಿರುಳು. ಹರಕೆಯ ಪ್ರಧಾನ ವಿಧಿ ವಿಧಾನಗಳು ನಡೆಯುವುದು ನಾಲ್ಕು ದಿನಗಳಲ್ಲಿ. ನಾನಾ ಕಲಾರೂಪಗಳ ಪ್ರದರ್ಶನದೊಂದಿಗೆ ವಾದ್ಯ ಘೋಷಣೆಗಳಿಂದೊಡಗೂಡಿ ನೂರಾರು ಜನ ಸೇರಿಕೊಂಡು ಈ ಕಾರ್ಯಕ್ರಮದಲ್ಲಿ, ಆಡುತ್ತ ಹಾಡುತ್ತ ಬರುತ್ತಾರೆ. ಇದನ್ನು ‘ಯೀತ್‌ ಬರುವುದು’ ಎನ್ನುತ್ತಾರೆ. ಆಯಾ ಪ್ರದೇಶದ ಜನರ ತಾಕತ್ತಿಗನುಸಾರವಾಗಿ ಯೀತ್‌ನ ವೈಭವವು ಇರುತ್ತದೆ. ಆನೆ, ಬ್ಯಾಂಡ್‌ಮೇಳ, ಚೆಂಡೆವಾದ್ಯ ಮುಂತಾದವೂ ಇರುತ್ತದೆ. ದೇಹಪೂರ್ತಿ ಶೂಲಗಳನ್ನು ಚುಚ್ಚಿಕೊಂಡವರು, ಕತ್ತಿಗಳಿಂದ ಕೈಚಳಕ ಪ್ರದರ್ಶಿಸುವವರು – ಇವರನ್ನು ‘ಯೀತ್‌ ಬರುವಿಕೆ’ ಒಳಗೊಂಡಿರುತ್ತದೆ. ಕೊಂಡೋಟ್ಟಿ ತಂಙಳರಿಗೆ ನೀಡಲಾಗುವ ಕಾಣಿಕೆಯೂ ಜನರ ಒಂದು ಪುಟ್ಟ ಗುಂಪೂ ಆ ಪ್ರದೇಶದ ಬಾವುಟವೂ – ಇಷ್ಟು ಮಾತ್ರ ಇರುವ ತಂಡಗಳೂ ಇರುತ್ತವೆ. ತಂಙಳರ ಪ್ರದೇಶದ ವ್ಯಾಪ್ತಿಯೊಳಗಿಂದ ಕಾಲ್ನಡಿಗೆಯಲ್ಲೂ ಕಿರುವಾಹನಗಳಲ್ಲೂ ಬಂದು’ಖುಬ್ಬ’ ದಲ್ಲಿ ಕಾಣಿಕೆ ಕೊಟ್ಟು, ಕಲಾಪ್ರದರ್ಶನಗಳನ್ನು ನಡೆಸಿ, ಅನುಗ್ರಹ ಸಂಪಾದಿಸಿ ಹಿಂತಿರುಗುವುದು ಸಾಮಾನ್ಯ ರೂಢಿ. ಖುಬ್ಬದ ಬಳಿಯಿರುವ ಇತರ ಪ್ರಮುಖ ತಂಙಳರ ಮನೆಗಳನ್ನೂ ಈ ಮೆರವಣಿಗೆಯು ಸಂದರ್ಶಿಸಿ ಕಲಾ ಪ್ರದರ್ಶನಗಳನ್ನು ನಡೆಸುವ ಪರಿಪಾಠವಿದೆ.

ಎಲ್ಲ ಉತ್ಸವಗಳ ಇತಿಹಾಸದಲ್ಲೂ ಕಂಡುಬರುವಂತೆ ಇದು ಕೂಡ ಕೊಂಡೋಟ್ಟಿ ತಂಙಳರ ಅಧಿಕಾರದ ಪರಿಧಿಯ ಪ್ರದೇಶಗಳಲ್ಲಿರುವ ಅವರ ಅಧಿಕಾರವನ್ನೂ ಪ್ರಭಾವವನ್ನೂ ಮತ್ತೆ ಗಟ್ಟಿಗೊಳಿಸುವ ಉತ್ಸವವಾಗಿ ಪ್ರಾರಂಭವಾದುದಾಗಿರಬೇಕು. ಕುದುರೆ, ಪತಾಕೆ, ‘ಸತ್ಯಕೊಡೆ’ ಎಂದು ಕರೆಯಲಾಗುವ ಮುತ್ತುಕೊಡೆ (ಸತ್ತಿಗೆ) ಮುಂತಾದ ಅಧಿಕಾರ ಚಿಹ್ನೆಗಳೊಂದಿಗೆ ಕೊಂಡೋಟ್ಟಿ ತಂಙಳ್ ಯೀತ್ ಮೆರವಣಿಗೆಯನ್ನು ಎದುರುಗೊಳ್ಳಲು ಹೋಗುತ್ತಾರೆ.

ಹರಕೆಯ ಉತ್ಸವ ಆರಂಭವಾಗಲು ಒಂದು ತಿಂಗಳು ಮೊದಲೇ ಮುಖ್ಯಬೀದಿಯಲ್ಲಿ ನೆಟ್ಟಿರುವ ಧ್ವಜಸ್ಥಂಭಗಳಲ್ಲಿ ಬಾವುಟಗಳನ್ನು ಹಾರಿಸುತ್ತಾರೆ. ಬಳಿಕದ ಮುಖ್ಯ ಕಾರ್ಯಕ್ರಮವೆಂದರೆ ‘ಕೋವಿ ಹೊರತೆಗೆಯುವುದು’ ಎಂದರೆ ಕೊಂಡೋಟ್ಟಿ ತಂಙಳರ ಅಧೀನದಲ್ಲಿ ಸಂರಕ್ಷಿಸಲ್ಪಟ್ಟಿರುವ ಮೂರು ಫಿರಂಗಿಗಳನ್ನು ಹೊರತೆಗೆದು ಅದನ್ನು ಗದ್ದೆಗೆ ಒಯ್ದು ಮೂರು ‘ಕದಿನ’ ಸಿಡಿಗುಂಡುಗಳನ್ನು ಹಾರಿಸುವುದು. ಈ ಫಿರಂಗಿಗಳನ್ನು ತಂಙಳರಿಗೆ ಟಿಪ್ಪುಸುಲ್ತಾನ್ ನೀಡಿದ್ದ. ಕೋವಿ ತೆಗೆಯುವ ಕಾರ್ಯಕ್ರಮದ ಬಳಿಕ ನಾಲ್ಕು ದಿನಗಳವರೆಗೆ ಹರಕೆಯ ಉತ್ಸವವು ನಡೆಯುತ್ತದೆ.

ಮೊದಲ ‘ಯೀತ್ ಬರುವಿಕೆ’ ಆರಂಭವಾಗುವುದು ವೆಳ್ಳಾಟ್ಟ್‌ಕಡೆಯಿಂದ. ಅದು ಕೊಂಡೋಟ್ಟಿಯ ದಾರಿಗೆ ತಲುಪುವಾಗ ತಂಜ್ಞಳ್ ಮನೆಯ ಮುಖ್ಯರು ಕುದುರೆಯ ಮೇಲೆ ಸವಾರಿಯಲ್ಲಿ ಬಂದು ಅದನ್ನು ಸ್ವಾಗತಿಸುತ್ತಾರೆ. ಬಳಿಕ ಅದನ್ನು ಖುಬ್ಜದವರೆಗೆ ಕರೆದೊಯ್ಯುತ್ತಾರೆ. ಬಳಿಕ ಕಾಣಿಕೆಗಳನ್ನು ಸ್ವೀಕರಿಸುತ್ತಾರೆ. ಅಕ್ಕಿ, ಭತ್ತ, ಅವಲಕ್ಕಿ ಅಡಕೆ ಮುಂತಾದ ಕೃಷ್ಯುತ್ಪನ್ನಗಳನ್ನು ಸಾಮಾನ್ಯವಾಗಿ ಕಾಣಿಕೆಗಾಗಿ ನೀಡಲಾಗುತ್ತದೆ.

ವಳ್ಳಿನೋವಂಬ್ರಂ, ಮೇಲಂಙಾಡಿ, ಮಯಿಲಾಡಿ ಮುಂತಾದ ಪ್ರದೇಶಗಳ ಪರವಾಗಿಯೂ ಅಲ್ಲಿನ ಮುಖ್ಯ ಮನೆಗಳ ಪರವಾಗಿಯೂ ಬರುವುಗಳು ಇವೆ. ಜಾತಿಯಲ್ಲಿ ಕೆಳಗಿನ ಕಣಕರ ಬರುವಿಕೆಗೆ ತಂಙಳ್ ಸ್ವಾಗತಿಸಲು ಬರುವುದಿಲ್ಲವೆಂಬುದು ಗಮನಾರ್ಹ. ಕೊನೆಯ ಬರುವು ‘ತಟ್ಟಾನ್ ಪೆಟ್ಟಿ’ ಎಂದು ಹೆಸರಾಗಿರುವ ಸ್ವಾಮಿ ಮಠದ್ದಾಗಿದೆ. ಇದು ಕಳೆದರೆ ‘ಗಂಧ ತೆಗೆಯುವುದು’ ಎಂಬ ಕಾರ್ಯಕ್ರಮದೊಂದಿಗೆ ಹರಕೆಯ ಉತ್ಸವ ಮುಕ್ತಾಯವಾಗುತ್ತದೆ. ಭಕ್ತರಿಗೆ ಕೊಂಡೋಟ್ಟಿ ತಂಞಳ್ ನೀಡುವ ಕಾಣಿಕೆಗೆ ‘ಚೀರ್ನಿ’ ಎಂದು ಹೆಸರು. ಚೀರ್ನಿಯಾಗಿ ‘ಮರೀದ’ ಎಂದು ಕರೆಯಲಾಗುವ ವಿಶಿಷ್ಟ ವಸ್ತು ಲಭಿಸುತ್ತದೆ. ಈವರೆಗೆ ಹೇಳಿದ ಎಲ್ಲ ಕಾರ್ಯಕ್ರಮಗಳು ಯಾವುದೇ ವ್ಯತ್ಯಾಸವಿಲ್ಲದೆ ಇಂದಿಗೂ ನಡೆದು ಬರುತ್ತಿದೆ. ಕಾಲವ್ಯತ್ಯಾಸಕ್ಕನುಗುಣವಾಗಿ ‘ಬರುವು’ಗಳು ರೀತಿಯಲ್ಲಿ ಬದಲಾವಣೆಗಳಾಗಿವೆ. ಅನೇಕ ಬರವುಗಳಲ್ಲಿ ಹೊಸ ಹಾಡುಗಳೂ ಅವಕ್ಕೆ ಅನುಸಾರವಾದ ಕುಣಿತಗಳೂ ರೂಪುಗೊಂಡಿವೆ. ಅಲಂಕೃತ ವಾಹನಗಳೂ ಹಲವು ಬಣ್ಣದ ಕಾವಡಿಗಳೂ ಸೇರಿ ಹೊಸ ಬರುವಿನ ರೂಪ ಬದಲಾಗಿದೆ. ಹೊಸಕಾಲ ಘಟ್ಟದ ಇತರ ಕೆಲವು ಉದ್ದೇಶಗಳನ್ನು ಇವು ಈಡೇರಿಸುವಂತಿವೆ. ‘ಮೇಲಂಙಾಡಿ ಸಾರ್ವಜನಿಕರ ಪೆಟ್ಟಿಬರವು ಮತ್ತು ಮತಸೌಹಾರ್ದ ರ್ಯಾಲಿ’ ಎಂಬ ಬ್ಯಾನರ್‌ನೊಂದಿಗೆ ೨೦೧೦ರಲ್ಲಿ ಮೇಲಂಙಾಡಿಯವರು ಬಂದರು. ಸರ್ಕಸ್ಸು, ದೈತ್ಯ, ತೊಟ್ಟಿಲಾಟಗಳೊಂದಿಗೆ ವಸ್ತುಪ್ರದರ್ಶನ ವ್ಯವಸ್ಥೆಗೂ ಇಂದಿನ ಹರಕೆಯ ಉತ್ಸವವನ್ನು ಕಳೆಯೇರಿಸುತ್ತದೆ.

ಕೃಷಿಕ ಉತ್ಸವವೆಂಬ ನೆಲೆಯನ್ನೂ ಇದಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಕೃಷಿ ಉಪಕರಣಗಳೂ ಉತ್ಪನ್ನಗಳೂ ಈ ಉತ್ಸವದಲ್ಲಿ ಮುಖ್ಯವಾದ ಮಾರಾಟ ವಸ್ತುಗಳಾಗಿರುತ್ತವೆ. ಗ್ರಾಮವೊಂದರ ಸಮಗ್ರ ಉತ್ಸವವೆಂಬ ಪ್ರತೀತಿಯಿಂದಾಗಿ ಇಂದಿಗೂ ಈ ಉತ್ಸವವು ರೂಪಿತವಾಗುತ್ತದೆ. ಉತ್ಸವದ ಏರ್ಪಾಟಿನಲ್ಲೂ ಪ್ರತಿ ಜಾತಿಯವರಿಗೂ ವಿಶೇಷ ಅಧಿಕಾರಗಳಿವೆ. ಪ್ರದೇಶವೊಂದರ ಎಲ್ಲ ಜನ ವಿಭಾಗಗಳು ಸಹಕಾರದಿಂದ ಪಾಲ್ಗೊಳ್ಳುವಿಕೆ ಮತ್ತು ಜೀವನೋಪಾಯವಾದ ಬೇಸಾಯ ವೃತ್ತಿಯ ಸಂಭ್ರಮ ಹಿತವೇ ಆಗಿ ಕೊಂಡೋಟ್ಟಿ ಹರಕೆಯ ಜಾತ್ರೆಯನ್ನು ಪರಿಗಣಿಸಬಹುದಾಗಿದೆ.

– ಇ.ಕೆ.ಎಸ್. ಅನುವಾದ ಕೆ.ಕೆ.