ಕೇರಳೀಯ ಪುರಾವೃತ್ತಂಙಳ್ ಇಂಗ್ಲಿಷಿನ ಮಿತ್ ಎಂಬ ಪದಕ್ಕೆ ಸಮಾನವಾಗಿ ಮಲೆಯಾಳಿಗಳು ಪುರಾವೃತ್ತಂ ಎಂಬ ಪದವನ್ನು ಬಳಸುತ್ತಾರೆ. ಮಿಥಾಲಜಿ ಎಂಬ ಅರ್ಥದಲ್ಲಿ ಪುರಾವೃತ್ತ ಸಂಚಯಂ ಎಂಬ ಪದವೂ ಚಲಾವಣೆಯಲ್ಲಿದೆ. ಪುರಾವೃತ್ತಂ ಎಂಬ ಪದಕ್ಕೆ ಹಿಂದೆ ಆಗಿಹೋದುದು, ಚಾರಿತ್ರಿತೀತ ಕಾಲದಲ್ಲಿ ನಡೆದುದು – ಹೀಗೆ ಅರ್ಥ ಹೇಳಬಹುದು. ಒಂದು ಕಾಲದಲ್ಲಿ , ಮುಖ್ಯವಾಗಿ ಚರಿತ್ರಾತೀತ ಕಾಲದಲ್ಲಿ ನಡೆಯಿತೆಂದು ತಿಳಿಯಲಾಗುವ ಕಥೆಗಳೇ ಪುರಾಣಗಳು. ಇವು ಸಾಮಾನ್ಯವಾಗಿ ಯಾವುದಾದರೂ ವಸ್ತುಗಳ ಇಲ್ಲವೇ ಘಟನೆಯ ಹುಟ್ಟಿನ ಕುರಿತು ಸಂಬಂಧಿಸಿರುತ್ತದೆ. ಹಾಗಾಗಿಯೇ ಇವಕ್ಕೆ ನಂಬುಗೆಗಳ ಜತೆ ಸಂಬಂಧವಿರುತ್ತದೆ. ಆದುದರಿಂದ ಪುರಾಣಗಳು ಪಾವನವಾದ ಕಥೆಗಳಾಗಿ ಪರಿಗಣಿಸಲ್ಪಡುತ್ತವೆ. ಬಿಡಿಬಿಡಿಯಾಗಿಯೋ ಯಾವುದಾದರೂ ವಿಚಾರದ ಕುರಿತಾಗಿಯೋ ಪುರಾಣಗಳನ್ನು ಕಲೆಹಾಕುವುದು, ಅವುಗಳನ್ನು ಅಧ್ಯಯನಯೋಗ್ಯವಾಗಿಸುವುದು – ಇತ್ಯಾದಿ ನಡೆದಿದ್ದರೂ ಸಾಕಷ್ಟು ಕೇರಳೀಯ ಪುರಾಣಗಳನ್ನು ಕಲೆಹಾಕುವ, ವಿಶ್ಲೇಷಿಸುವ ಪ್ರಯತ್ನ ನಡೆದಿಲ್ಲ.

ಪ್ರಪಂಚ ಹೇಗೆ ಉಂಟಾಯಿತು ಎಂಬುದು ಮಾನವ ಸಂಸ್ಕೃತಿಯ ಪ್ರಾರಂಭ ಘಟ್ಟ ಮೊದಲ್ಗೊಂಡು ಹಲವು ಸಂದರ್ಭಗಳಲ್ಲಿ ತಲೆಯೆತ್ತಿರುವ ಒಂದು ಕುತೂಹಲ ಮತ್ತು ಪ್ರಶ್ನೆ. ಕೇರಳೀಯರೂ ತಮ್ಮ ಜಾತಿ ಮತ ದೇಶವಂಶವರ್ಗ ಪರಿಸರಕ್ಕೆ ಅನುಗುಣವಾಗಿ ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಅವೆಲ್ಲವೂ ವಿಭಿನ್ನ ಪುರಾಣಗಳ ಮೂಲಕ ಆವಿಷ್ಕಾರಗೊಂಡು ವಿನಿಮಯ ನಡೆಸಿಕೊಂಡವುಗಳಾಗಿವೆ.

ಲೋಕದ ಎಲ್ಲೆಡೆ ಇರುವ ಕ್ರಿಶ್ಚಿಯನ್ನರ ಹಾಗೆ ಕೇರಳೀಯರ ಕ್ರೈಸ್ತರೂ ದೇವರೇ ಪ್ರಪಂಚವನ್ನೂ ಮನುಷ್ಯನನ್ನೂ ಸೃಷ್ಟಿಸಿದನೆಂದು ನಂಬುತ್ತಾರೆ. ಇದಕ್ಕೆ ಸಂಬಂಧಿಸಿ ಬೈಬಲ್‌ನಲ್ಲಿ ವಿವರಿಸಿರುವ ಪುರಾಣವು ಕೇರಳದಲ್ಲೂ ಪ್ರಚಾರದಲ್ಲಿದೆ. ಪ್ರಪಂಚದ ಮತ್ತು ಮನುಷ್ಯನ ಹುಟ್ಟಿನ ಕುರಿತು ಕುರಾನ್‌ನಲ್ಲಿ ಹೇಳುವ ಪುರಾಣವನ್ನೇ ಕೇರಳದಲ್ಲಿನ ಮುಸ್ಲಿಮರೂ ತಮ್ಮಲ್ಲಿ ಪ್ರಚುರಪಡಿಸಿದ್ದಾರೆ, ನಂಬುಗೆಯನ್ನು ಇರಿಸಿಕೊಂಡಿದ್ದಾರೆ. ಹಿಂದೂ ಪುರಾಣಗ್ರಂಥಗಳಲ್ಲಿ ವಿವರಿಸುವ ಹಾಗೆ ಬ್ರಹ್ಮನೇ ಪ್ರಪಂಚವನ್ನೂ ಮನುಷ್ಯರನ್ನೂ ಸೃಷ್ಟಿಸಿದನೆಂಬ ಪುರಾಣವು ಕೇರಳೀಯ ಹಿಂದುಗಳಲ್ಲಿ ಪ್ರಚಾರದಲ್ಲದೆ. ಇಂಥ ಪುರಾಣಗಳು ಕೇರಳದಲ್ಲಿನ ಹಾಗೆಯೇ ಲೋಕದ ಇತರ ಭಾಗಗಳಲ್ಲಿಯೂ ಪ್ರಚಾರದಲ್ಲಿರುವಂಥವೇ. ಆದುದರಿಂದ ಅವುಗಳನ್ನು ಸಾರ್ವತ್ರಿಕ ಪುರಾಣಗಳೆಂದು ಪರಿಗಣಿಸಬಹುದು. ಅದೇ ಸಂದರ್ಭದಲ್ಲಿ, ಇವು ಪ್ರತಿಯೊಂದೂ ಮತೀಯವಾದ ಪುರಾಣಗಳೂ ಹೌದು. ವರ್ಗ, ವರ್ಣ, ಸಮಾಜ, ಪ್ರಕೃತಿಶಕ್ತಿ, ದೈವ, ಒಳ್ಳೆಯತನ, ಕೆಟ್ಟದು, ಪಾಪ, ಪುಣ್ಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಸಾರ್ವತ್ರಿಕವೂ, ಮತೀಯವೂ ಆದ ಒಂದಷ್ಟು ಪುರಾಣಗಳು ಕೇರಳದಲ್ಲಿ ಪ್ರಚಾರದಲ್ಲಿವೆ. ಕೇರಳದ ಪ್ರಬಲ ಮತ ಸಮೂಹಗಳು ಏಕಕಾಲದಲ್ಲಿ ಸಾರ್ವತ್ರಿಕವೂ ಪ್ರಾದೇಶಿಕವೂ ಆದ ಕೆಲವು ತಾತ್ವಿಕ ವಿಚಾರಗಳನ್ನು ಹಂಚಿಕೊಂಡಿವೆ.

ಸಾರ್ವತ್ರಿಕ ಸ್ವರೂಪದ ಪುರಾಣಗಳಂತೆಯೇ ಕೇರಳದ ಪ್ರಾದೇಶಿಕ. ವಂಶೀಯ, ಜಾತೀಯ, ಪುರಾಣಗಳೂ ಪ್ರಬಲವೂ, ಪ್ರಧಾನವೂ ಆದುದಾಗಿದೆ. ಭೂಮಿ ಉಂಟಾದ ಬಗೆಗಿನ ಕ್ರಿಶ್ಚಿಯನ್ ಪುರಾಣವು ಆದಿಯಲ್ಲಿ ಮಾತು ಉಂಟಾಯಿತು ಎಂದು ಹೇಳಿದರೆ ಕೇರಳದ ಅವರ್ಣೀಯರಾದ ಪುಲಯರು ಮತ್ತು ಪರವರ ಭದ್ರಕಾಳಿಪ್ಪಾಟ್ಟ್‌ನಲ್ಲಿ ಆದಿಯಲ್ಲಿ ನೀರು ಮಾತ್ರ ಇತ್ತು ಎಂದು ಹೇಳಲಾಗಿದೆ. ‘ಏಳು ಲೋಕಗಳೂ ಏಳು ಕಡಲುಗಳಾಗಿದ್ದ ಕಾಲದಲ್ಲಿ ಅದರಲ್ಲೊಂದು ಮರಳಿನ ದಿಬ್ಬವುಂಟಾಯಿತು. ಆ ಮರಳಿನ ದಿಬ್ಬದಲ್ಲಿ ‘ಎದರ’ ಎಂಬ ಹುಲ್ಲು ಇತ್ತು. ಅದರ ದಂಟು ಬಲಿತು ಎಲೆಯುಂಟಾಯಿತು, ಎಲೆ ಹಬ್ಬಿ ಸಾಲು ದಿಕ್ಕುಗಳಾದವು. ಮೇಲಕ್ಕೆ ಬೆಳೆದ ಎಲೆಯಿಂದ ಆಕಾಶವೂ ಕೆಳಕ್ಕೆ ಹೋದ ಬೇರಿನಿಂದ ಭೂಮಿದೇವಿಯೂ ಉಂಟಾದರು. ಇವನ್ನೆಲ್ಲ ಒಳಗೊಂಡ ಒಂದು ಅಂಡವುಂಟಾಯಿತು. ಅದು ಎರಡಾಗಿ ಒಡೆದು ಭೂಮಿಯೂ ಆಕಾಶವೂ ಸೂರ್ಯಚಂದ್ರರೂ ಮನುಷ್ಯರೂ ಆದರು. ಮನುಷ್ಯರಲ್ಲಿ ಗಂಡುಹೆಣ್ಣುಗಳಾದರು’. ಭದ್ರಕಾಳಿಪ್ಪಾಟ್ಟ್‌ನಲ್ಲಿ ಭೂಮಿಯ ಮತ್ತು ಮನುಷ್ಯರ ಹುಟ್ಟು ಆದುದು ಹೀಗೆ ಎಂಬ ವಿವರಗಳಿವೆ.

ಕೇರಳೀಯ ಜಾತಿವ್ಯವಸ್ಥೆಯಲ್ಲಿ ಪರಯರು ಅತ್ಯಂತ ದಲಿತರು ‘ಪರಯಿಪೆಟ್ಟಪಂದಿರಿಕುಲ’ದ ಪಾಕ್ಕನಾರ್, ಪರಯ ಸಮುದಾಯದವನು. ಇವರ ವಂಶೋತ್ಪತ್ತಿಯ ಕುರತು ಪಾಕ್ಕನಾರ್ ಪಾಟ್ಟು ವಿವರಿಸುತ್ತದೆ. ಅದರ ಆರಂಭದಲ್ಲಿ ಭೂಮಿಯ ಹುಟ್ಟಿನ ಬಗೆಗೆ ಹೀಗೆ ಹೇಳುತ್ತದೆ. ಆದಿಯೂ ಅಂತ್ಯವೂ ಇರುಳೂ ಹಗಲೂ ಇಲ್ಲದೇ ಇದ್ದ ಕಾಲದಲ್ಲಿ ಅಣುವಿನಷ್ಟು ನೂರು ತಗ್ಗಿ ಬಂದು ಒಂದು ಮೊಟ್ಟೆಯುಂಟಾಯಿತು. ಮೊಟ್ಟೆ ಎರಡಾಗಿ ಒಡೆದು ಮೇಲುಲೋಕವೂ ಕೆಳಲೋಕವೂ ಆದುವು. ಕೋಟಿ ಸೂರ್ಯರೂ ಪಂಚಭೂತಗಳೂ ಒಂದಾಗಿದ್ದುದೇ ಹೊರತು ಭೂಮಿ ಉಂಟಾಗಲಿಲ್ಲ. ಮೂತಿಗಳೂ ರೆಕ್ಕೆಗಳೂ ಮೊಳೆತು ಕೋದಕೇರಿ ಮತ್ತು ನೀರಕೇರಿ ಎಂಬ ಎರಡು ತುಂಬಿಗಳು ಹುಟ್ಟಿದ್ದವು. ಅವರಿಗೆ ಇಳಿಯಲು ಭೂಮಿ ಇಲ್ಲದೆ ಅವು ಹಾರಾಡಿ ಬಳಲಿದುವು. ಕೊನೆಗೆ ಕೆಂದಾವರೆ ಹಾಲುಗಡಲ ನಡುವಿನ ಹೂವಿನ ಮರದಲ್ಲಿ ಕುಳಿತು ವಿಶ್ರಾಂತಿ ಪಡೆದುವು. ಜೇನುಕುಡಿದು ಬಳಲಿಕೆ ನೀಗಿದುವು. ಬಳಿಕ ಭೂಮಿದೇವಿಯನ್ನ ಕರೆದುವು. ವಾಸಿಸಲು ಭೂಮಿಯೂ ಹಾರಾಡಿ ಹೋಗಿ ಇರಲು ಮರಗಳೂ ಇಲ್ಲದೆ ತೊಂದರೆಗೆ ಒಳಗಾಗಿದ್ದೇವೆ ಎಂದು ದುಃಖ ತೋಡಿಕೊಂಡುವು. ಭೂಮಿದೇವಿ ಮೂರುಉಂಡೆ ಮಣ್ಣನ್ನು ಉಂಡೆಮಾಡಿ ದುಂಬಿಗಳಿಗೆ ಕೊಟ್ಟಳು. ಆಗಲೇ ನಾಲ್ಕು ದಿಕ್ಕಿಗೂ ಗಾಳಿಬೀಸಿತು, ಭೂಮಿ ನಿಚ್ಚಳವಾಗಿ ಭೂಮಿದೇವಿ ಪ್ರತ್ಯಕ್ಷಳಾದಳು.

ಭೂಮಿ ಉಂಟಾಗಿ ಸಾವಿರ ವರ್ಷ ಕಳೆದಾಗ ಮಹಾವಿಷ್ಣುವಿಗೆ ರೋಗವು ಬಾಧಿಸಿತು. ಮಹಾವಿಷ್ಣು ರೋಗಬಾಧಿತನಾಗಿ ಮಲಗಿದಾಗ ದೇವತೆಗಳೂ ರಾಕ್ಷಸರೂ ಅವರ ಇಷ್ಟದಂತೆ ಬದುಕಲು ಆರಂಭಿಸಿದರು. ವಿಷ್ಣುವಿನ ರೋಗಪರಿಹಾರಕ್ಕಾಗಿ ‘ರಾಶಿಪ್ರಶ್ನೆ’ ಇಟ್ಟಾಗ ಪಾಕ್ಕನಾರವನ್ನು ಬರಮಾಡಿಸಿ ಚಿಕಿತ್ಸೆ ಮಾಡಬೇಕೆಂದು ಕಂಡುಬಂತು. ಹೋರಿಯ ತೊಗಲಿನಿಂದ ತಯಾರಿಸಿದ ಪರೆಯನ್ನು ಬಡಿದು ಆ ಸದ್ದಿಗೆ ಪಾಕ್ಕನಾರ್ ಬಾಧೆಯನ್ನು ಆವಾಹಿಸಿದ. ಐದು ರೀತಿಯ ಮೂರ್ತಿಗಳನ್ನು ಆರಾಧಿಸಲು, ಮಂತ್ರವಾದ ನಡೆಸಲು, ಹೆಡಿಗೆ ಮೂಡೆ ಗೆರಸೆ ಮುಂತಾದವುಗಳನ್ನು ಹೆಣೆಯಲು – ಇಂಥ ಅಧಿಕಾರವನ್ನು ನೀಡಿ ಮಹಾವಿಷ್ಣು ಪಾಕ್ಕನಾರ್‌ನನ್ನು ಅನುಗ್ರಹಿಸಿದ.

ಒಂದು ಬ್ರಾಹ್ಮಣಕುಟುಂಬಕ್ಕೆ ತೆಂಕುಇಲ್ಲಂ ಬಡಗುಇಲ್ಲಂ ಎಂಬ ಎರಡು ಶಾಖೆಗಳು ಇದ್ದುವು. ಆಗ ಭೂಮಿಯಲ್ಲಿ ಹಸುಗಳು ಇಲ್ಲದೆ ಇದ್ದುದರಿಂದ ಅವರಿಗೆ ತುಂಬ ತೊಂದರೆಯಾಯಿತು. ಮೇಲುಲೋಕಕ್ಕೆ ತೆರಳಿ ಹಸುಗಳಿಲ್ಲದ ದುಃಖವನ್ನೂ ತೋಡಿಕೊಂಡರು. ಮೇಲುಲೋಕ ಮತ್ತು ಕೆಳಲೋಕದ ನಡುವೆ ಇರುವ ಭೂಮಿಗೆ ಹೋಗಲು ಹಸುಗಳು ಸಿದ್ಧವಾಗಲಿಲ್ಲ. ಮನುಷ್ಯರು ತೊಂದರೆ ಕೊಡುತ್ತಾರೆಂದು ಹೇಳಿ ಅವು ಹೋಗಲು ಒಪ್ಪಲಿಲ್ಲ. ವಯಸ್ಸಾಗಿ ಕೊಂಬೂಗೊರಸೂ ಹಣ್ಣಾಗಿ ಅಲ್ಲಿದ್ದ ಒಂದು ಮುದಿಹಸು ಮಾತ್ರ ಹೋಗಲು ಸಿದ್ಧವಾಯಿತು. ಭೂಮಿಯಲ್ಲಿ ಸಾಕಷ್ಟು ಹುಲ್ಲು ಬೆಳೆದಿದ್ದ ಮಲೆಯಲ್ಲಿ ಮೇದು ಮುದಿಹಸು ತನ್ನ ಆರೋಗ್ಯವನ್ನು ಮರಳಿ ಪಡೆಯಿತು. ಭೂಮಿಗೆ ಬಂದಿದ್ದ ಈ ಪೈಂಗುರಾಲಿ ಹಸುವಿಗೆ ಮೇಲುಲೋಕದಿಂದ ಬಂದ ಮುಟ್ಟಿಕ್ಕುರಾಲನ್ ಹೋರಿಯಿಂದ ಗರ್ಭವಾಯಿತು. ಅದು ಕರುಹಾಕಿತ್ತು. ಅದರ ಹಾಲಿಗಾಗಿ ತೆಂಕಿಲ್ಲಂ ಮತ್ತು ಬಡಗನಿಲ್ಲಂ ಮನೆಗಳಿಗೆ ಜಗಳವಾಯಿತು. ಈತನ್ಮಧ್ಯೆ ಹಸು ಸತ್ತು ಹೋಯಿತು. ಎರಡು ಮನೆಯವರೂ ಸೇರಿ ಹಸುವನ್ನು ಸುಟ್ಟರು. ಚಿತೆಯ ಬೆಂಕಿಯಲ್ಲಿ ಹಸುವಿನ ದೇಹದ ಮಾಂಸ ಸಿಡಿದು ಎರಡು ಮನೆಯವರ ಮೈಮೇಲೆಯೂ ಬಿತ್ತು. ತೆಂಕಿಲ್ಲದವರು ಅದನ್ನು ಎಂಜಲು ತಾಗಿಸಿ ತೆಗೆದರು. ಬಡಗನಿಲ್ಲಂನವರು ಅದನ್ನು ಎಲೆಯಿಂದ ಒರಸಿ ತೆಗೆದರು. ಎಂಜಲು ತಾಗಿಸಿ ತೆಗೆದವರನ್ನು ಉಳಿದವರು ‘ಹಸೂನ ತಿಂದ ಪರೆಯ ಪಾಕ್ಕನಾರರು’ ಎಂದು ಕರೆದು ನಿಂದಿಸಿದರು. ಅವರನ್ನು ಮಣ್ಣು ನೀರುಗಳಲ್ಲಿ ಗಡಿವಿಧಿಸಿ ದೂರವಿರಿಸಿದರು. ಹಾಗೆ ಬ್ರಾಹ್ಮಣರಿಂದ ಹೊರಹಾಕಲ್ಪಟ್ಟ ಅವರು ಪರಯರು ಎಂಬ ಹೆಸರಲ್ಲಿ ಬೇರೆಯೇ ಒಂದು ಜಾತಿಯವರಾದರು. ಭೂಮಿಯ ಹುಟ್ಟಿನ ಜತೆಗೇನೆ ಪರಯರಿಗಷ್ಟೆ ಇರುವ ಐದುಮೂರ್ತಿಗಳ ಆರಾಧನೆ, ಪ್ರತ್ಯೇಕ ಉದ್ಯೋಗ ಉಂಟಾದ ವಿಚಾರ, ಅವರು ಒಂದು ಪ್ರತ್ಯೇಕ ಜಾತಿಯಾಗಿ ಬದಲಾದುದರ ಕಥೆಯನ್ನೂ ಈ ಪುರಾಣವು ಹೇಳುತ್ತದೆ. ಒಂದು ವಂಶದ ಮತ್ತು ಅವರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹುಟ್ಟಿನ ಬಗೆಗೆ ಹೇಳುವುದರಿಂದ ಇದನ್ನು ಒಂದು ವಂಶಪುರಾಣವೆಂದು ಪರಿಗಣಿಸಬಹುದು.

ಕೇರಳದ ಹಲವಾರು ಜಾತಿಗಳಲ್ಲಿ ಸಮಾನವಾದ ಪುರಾಣಗಳಿವೆ. ಇವುಗಳಲ್ಲಿ ಒಂದು ಪುರಾಣದ ಪ್ರಕಾರ ‘ತೀಯ’ನನ್ನು ಸೃಷ್ಟಿಸಿ ಅವನಿಗೆ ಸೇಂದಿ ತೆಗೆಯುವ ಉದ್ಯೋಗವನ್ನೂ ಅದರ ಕುರಿತಾದ ಮಾರ್ಗದರ್ಶನವನ್ನು ನೀಡಿದುದು ಶಿವ. ಕುರುಚ್ಯರ ಒಂದು ಪುರಾಣವು ಅವರು ಶ್ರೀರಾಮನ ಭಟರಾಗಿದ್ದವರೆಂದು ಹೇಳುತ್ತದೆ. ಶ್ರೀರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋದಾಗ ನಿರಾಶ್ರಿತರಾದ ಇವರಿಗೆ ಭರತನು ಒಂದು ಪ್ರದೇಶವನ್ನು ಕೊಟ್ಟನೆಂದೂ ಅವರೇ ಮತ್ತೆ ಕುರುಚ್ಯರಾದರೆಂದೂ ಹೇಳುತ್ತದೆ.

ದೇವತೆಗಳು, ಭೂಮಿ, ವಂಶಗಳ ಕುರಿತು ಮಾತ್ರವಲ್ಲ ದೇಶಗಳ ಮೃಗಪಕ್ಷ್ಯಾದಿಗಳ ಉತ್ಪತ್ತಿಯ ಬಗೆಗೂ ಪುರಾಣಗಳಿವೆ. ಕೇರಳವು ಸೃಷ್ಟಿಯಾದದ್ದೇ ಪರಶುರಾಮ ಸಮುದ್ರಕ್ಕೆ ಕೊಡಲಿ ಎಸೆದಾಗ ಸಮುದ್ರವು ಹಿಂದೆ ಚಲಿಸಿದುದರಿಂದ ಎಂದು ಕೇರಳೋತ್ಪತ್ತಿಯ ಕುರಿತಾದ ಪುರಾಣವು ಹೇಳುತ್ತದೆ.

ತೆಂಗು ಮತ್ತು ತೆಂಗಿನಕಾಯಿಯ ಕುರಿತಾದ ಪುರಾಣವು ಕೇರಳದಲ್ಲಿ ಹೀಗೆ ಪ್ರಚಲಿತವಾಗಿದೆ. ವಿಶ್ವಾಮಿತ್ರನು ತನ್ನ ತಪಶ್ಯಕ್ತಿಯಿಂದ ತ್ರಿಶಂಕು ಎಂಬ ಅರಸನನ್ನು ದೇಹ ಸಮೇತ ಸ್ವರ್ಗವೇರಿಸಿದ. ಚಂಡಾಲನಾದ ಒಬ್ಬನು ಸ್ವರ್ಗವೇರುವುದನ್ನು ತಡೆಯಲು ಇಂದ್ರನು ತ್ರಿಶಂಕುವನ್ನು ತಲೆಕೆಳಗಾಗಿಸಿ ಭೂಮಿಯತ್ತ ತಳ್ಳಿದ. ಇಬ್ಬರ ಶಕ್ತಿ ಪ್ರದರ್ಶನದ ಕೊನೆಗೆ ವಿಶ್ವಾಮಿತ್ರನು ತ್ರಿಶಂಕುವನ್ನು ಭೂಮಿ ಮತ್ತು ಸ್ವರ್ಗಗಳ ನಡುವೆ, ತ್ರಿಶಂಕುವಿಗಾಗಿಯೇ ಒಂದು ಸ್ವರ್ಗವನ್ನು ಸೃಷ್ಟಿಸಿ ಅಲ್ಲಿ ನೆಲಗೊಳಿಸಿದ. ಕೆಳಗೆ ಬೀಳದಂತೆ ‌ತ್ರಿಶಂಕುವಿಗೆ ಒಂದು ಆಧಾರವನ್ನೂ ಕೊಟ್ಟ ಅದೇ ಆಮೇಲೆ ತೆಂಗು ಎಂದಾಯಿತು. ಅದರಲ್ಲಿ ತ್ರಿಶಂಕುವಿನ ತಲೆಯಂತೆ ಕಾಯಿಗಳೂ ಆದುವು. ಕರಾವಳಿಯಲ್ಲಿರುವ ಇನ್ನೊಂದು ಪುರಾಣದ ಪ್ರಕಾರ ಮಂತ್ರಶಕ್ತಿಯಿಂದ ತಲೆಯನ್ನು ಕಳಚಿ ತೀರದಲ್ಲಿರಿಸಿ ಮುಂಡಮಾತ್ರವಾಗಿ ನೀರಿಗಿಳಿದ ಒಬ್ಬ ಮಡಿಯನ ತಲೆಯೇ ಆಮೇಲೆ ತೆಂಗಾಗಿ ಮಾರ್ಪಟ್ಟಿತು. ಅದರಲ್ಲಿ ಮನುಷ್ಯನು ತಲೆಯಂಥ ಕಾಯಿಗಳಾದವು.

ವಯನಾಡಿನ ಜೇನುಕುರುಬರ ಪುರಾಣದ ಪ್ರಕಾರ ಒಬ್ಬ ಜೇನು ಕುರುಬನಿಂದ ಗರುಡ ಪಕ್ಷಿಯ ಉತ್ಪತ್ತಿ. ತಮ್ಮನೊಬ್ಬ ಜೇನು ತೆಗೆಯುವುದಕ್ಕಾಗಿ ಮರವೇರಿದ. ತಮ್ಮನ ಹೆಂಡತಿಯನ್ನು ತನ್ನವಳನ್ನಾಗಿಸಿಕೊಳ್ಳಲು ಅಣ್ಣ, ತಮ್ಮನು ಮರ ಇಳಿದು ಬಾರದ ಹಾಗೆ ಹಗ್ಗದ ಏಣಿಯನ್ನು ಎಳೆದು ಕೆಳಗೆ ಬೀಳಿಸಿ ಮನೆಗೆ ಹೋದ. ಅಣ್ಣ ಹೇಳಿದ್ದರಲ್ಲಿ ನಂಬುಗೆಬಾರದ ಹೆಂಡತಿ ನಿಜ ತಿಳಿಯುವುದಕ್ಕಾಗಿ ಕಾಡಿಗೆ ಹೋದಾಗ ಅಲ್ಲಿ ತನ್ನ ಗಂಡ ಮರದ ಮೇಲೆ ಇರುವುದನ್ನು ಕಂಡುಹಿಡಿದಳು. ಆಗ ಅವನೂ ಕಾಣಿಸಿಕೊಂಡು ಅವಳು ನೇರವಾಗಿ ಮುಂದಕ್ಕೆ ಸಾಗುವಂತೆ ಹೇಳಿದ. ಅವಳು ಹಾಗೆ ಮುಂದೆ ಸಾಗಿದಾಗ ಅವನು ಕುಳಿತ ಮರದ ಕೊಂಬೆ ಸಮೇತ ಕೆಳಗಿಳಿಯತೊಡಗಿದ. ಆದರೆ ಈ ಮಧ್ಯೆ ಅವಳು ತನ್ನ ನೋಟವನ್ನು ಮರದ ಮೇಲೆ ಹಾಯಿಸಿಬಿಟ್ಟಳು. ಆಗ ಅವನು ಒಮ್ಮೆಲೆ ಗರುಡಪಕ್ಷಿಯಾಗಿ ಬದಲಾಗಿಬಿಟ್ಟ.

ಕುರುಬರ ಇನ್ನೊಂದು ಪುರಾಣದ ಪ್ರಕಾರ ಜೇನುನೊಣ ಮತ್ತು ಜೇಡರಹುಳ ಸಹೋದರರು. ಜೇನುನೊಣವು ತಾಯಿಯನ್ನೂ ಚೆನ್ನಾಗಿ ನೋಡಿಕೊಂಡರೆ ಜೇಡರಹುಳು ಹಾಗೆ ಮಾಡುತ್ತಿರಲಿಲ್ಲ. ತನ್ನ ಪ್ರೀತಿಯನ್ನು ಅರ್ಥಮಾಡಿಕೊಳ್ಳಲಾರದ ಜೇಡವು ಎಲ್ಲೇ ಹೋದರೂ ಜನರು ಅದನ್ನು ಓಡಿಸುವಂತಾಗಲೆಂದು ತಾಯಿ ಶಪಿಸಿತು. ಒಳ್ಳೆಯವನಾದ ಜೇನುನೊಣಕ್ಕೆ ಒಳ್ಳೆಯ ಸಿಹಿಯನ್ನು ಲೋಕಕ್ಕೆ ಕೊಡುವ ಯೋಗ್ಯತೆ ಪ್ರಾಪ್ತವಾಗಲೆಂದೂ ತಾಯಿ ಅನುಗ್ರಹಿಸಿತು.

ಹಾಗೆ ದೇಶ, ವಂಶ, ಜಾತಿ, ಮತ, ವರ್ಗ ಮುಂತಾದ ಹಲವು ವಿಷಯಗಳ ಕುರಿತು ಬೇರೆ ಬೇರೆ ಸಮೂಹಗಳಲ್ಲಿ ಅವರದೇ ಆದ ಪುರಾಣಗಳಿವೆ. ಇವು ಯಾವುವೂ ಒಂಟಿಯಾಗಿಯೇ ಪ್ರಚುರವಾಗಿಲ್ಲ. ಬದಲಾಗಿ ಒಂದು ಸಮೂಹದ ಒಂದಷ್ಟು ಸಂಗತಿಗಳು ಹಾಸುಹೊಕ್ಕಾಗಿರುತ್ತದೆ. ಇತರ ಜನಪದ ಸಾಹಿತ್ಯ ಪ್ರಕಾಗಳೊಂದಿಗೆ ಸಂಬಂಧವಿರಿಸಿಕೊಂಡೇ ಅಸ್ತಿತ್ವದಲ್ಲಿವೆ. ಜನತೆಯೊಂದರ ಗತಕಾಲ ಸಂಸ್ಕೃತಿ, ಇತಿಹಾಸ, ಪರಂಪರೆ, ಲೋಕದೃಷ್ಟಿ, ದೇವತಾವಿಶ್ವಾಸ, ಬದುಕಿನ ಕುರಿತ ಮತ್ತು ಮರಣಾನಂತರದ ನಂಬುಗೆಗಳು ಮುಂತಾದುವು ಕೂಡ ಪುರಾಣಗಳಲ್ಲಿ ಅಂತರ್ಗತವಾಗಿವೆ. ಸಮೂಹವೊಂದರ ಅಸ್ಮಿಕತೆಯ ಬೇರೆ ಬೇರೆ ಪದರುಗಳನ್ನು ನಿರ್ಣಯಿಸುವುದರಲ್ಲಿ ಮೇಲಿನ ಅರಿವು ಬಹು ಮುಖ್ಯವಾದುದು. ಕೇರಳದ ಪ್ರಬಲಮತಗಳು ಒಂದೇ ವಿಷಯದ ಬಗೆಗೆ ಸಾರ್ವತ್ರಿಕವಾದ ಪುರಾಣ ವೃತ್ತಾಂತಗಳನ್ನು ನೀಡುವಾಗಲೂ ಅವು ಪರಸ್ಪರ ವೈರುದ್ಧವುಳ್ಳವುಗಳಾಗಿವೆ. ಈ ವೈರುಧ್ಯಗಳನ್ನು ಮುಂದಿಟ್ಟುಕೊಂಡು ಅವಕ್ಕೆ ವ್ಯತ್ಯಸ್ತವಾದ ಅಸ್ಮಿತೆಯೊಂದನ್ನು ಅಭಿವ್ಯಕ್ತಿಸಲು ಸಾಧ್ಯ.

ಯಾವುದೇ ಪುರಾಣ ವೃತ್ತಾಂತಗಳು ಏಕಾಕಿಯಾಗಿ ನಿಲ್ಲುವಂಥವಲ್ಲ. ಅವು ಪುರಾಣವೃತ್ತಾಂತ ಸಂಕಲನವೊಂದರ ಭಾಗವಾಗಿವೆ. ಒಳಹೂರಣದಿಂದ ಪ್ರಾದೇಶಿಕವೆಂದು ಕಾಣಬಹುದಾದರೂ ಸ್ವಭಾವದಿಂದಲೂ ವಿವರಳಿಂದಲೂ ಪ್ರಪಂಚದಾದ್ಯಂತ ಪ್ರಚುರವಾಗಿರುವ ಒಂದು ವೈದಿಕ ಪುರಾಣದ ಭಾಗವಾಗಿಯೇ ‘ಕೇರಳೋತ್ಪತ್ತಿಯ ಪರಶುರಾಮ ಕಥೆಯೂ ವಿಶ್ವಾಮಿತ್ರನೊಂದಿಗೆ ಸಂಬಂಧವುಳ್ಳ ತೆಂಗಿನ ಹುಟ್ಟಿನ ಕಥೆಯೂ ಕಾಣಿಸಿಕೊಳ್ಳುತ್ತದೆ. ಇಂಥ ಪುರಾಣವೃತ್ತಾಂತಳಗಳನ್ನು ಉಚ್ಛ ವೃತ್ತಾಂತಗಳೆನ್ನುತ್ತಾರೆ. ಪೂರ್ತಿ ಪ್ರಾದೇಶಿಕವೂ ವಂಶೀಯವೂ ಆಗಿರುವುವು – ಅವಯ ಪುರಾಣವೃತ್ತಾಂತಗಳು ಉಚ್ಛ ವೃತ್ತಾಂತಗಳಿಂದ ಭಿನ್ನವೂ ಹಲವು ಬಾರಿ ಅದರ ವಿರುದ್ಧವಾಗಿರುವುವುಗಳೂ ಆಗಿವೆ. ಒಂದು ಸಮೂಹದಲ್ಲಿ ಸಾರ್ವತ್ರಿಕವಾದ ಅಸ್ಮಿತೆಯ ಪದರುಗಳು ಇರುವಂತೆಯೇ ಪ್ರಾದೇಶಿಕವೂ ವಂಶೀಯವೂ ಆದ ವ್ಯತಿರಿಕ್ತ ಅಸ್ಮಿತೆಯನ್ನು ಜೀವಂತವಾಗಿರಿಸುವಲ್ಲಿ ಇವು ಮುಖ್ಯ ಪಾತ್ರವಹಿಸುತ್ತವೆ.

– ಕೆ.ಎಂ.ಬಿ. ಅನುವಾದ ಕೆ.ಕೆ.

ಕೇರಳೋತ್ಪತ್ತಿ ಕೇರಳದ ಪ್ರಾಚೀನ ಇತಿಹಾಸ, ಸಾಮಾಜಿಕ ರಚನೆ, ಸಾಂಸ್ಕೃತಿಕ ವೈಶಿಷ್ಟ್ಯಗಳು ಮುಂತಾದುವನ್ನು ಐತಿಹ್ಯ ರೂಪದಲ್ಲಿ ಸೂಚಿಸುವ ಗ್ರಂಥ – ಕೇರಳೋತ್ಪತ್ತಿ. ಹಲವಾರು ‘ಕೇರಳೋತ್ಪತ್ತಿ’ಗಳು ಲಭ್ಯವಾಗಿವೆ. ಮೂಲಭೂತವಾದ ವ್ಯತ್ಯಾಸಗಳು ಇಲ್ಲವಾದರೂ ಇವುಗಳಲ್ಲಿ ವ್ಯತ್ಯಾಸವಿದೆ. ಬೇರೆ ಬೇರೆ ಕಾಲಗಳಲ್ಲಿ ಇವು ರಚಿತವಾದವುಗಳೆಂದು ತೀರ್ಮಾನಿಸಲಾಗಿದೆ. ಖಚಿತವಾದ ರಚನಾಕಾಲ ನಿರ್ಣೀತವಾಗಿಲ್ಲ. ೧೮೪೩ ರಲ್ಲಿ ಗುಂಡರ್ಟರು ಇದನ್ನು ಮುದ್ರಿಸಿ ಪ್ರಕಟಿಸಿದರು. ಮುಂದೆ ಚೇಲನಾಟ್ಟ್ ಅಚ್ಯುತಮೆನೋನ್, ಕೆ.ಸಿ. ಮಾನವಿಕ್ರಮರಾಜ, ವೇಲಾಯುಧನ ಪಣಿಕಶ್ಶೇರಿ ಮುಂತಾದವರು ‘ಕೇರಳೋತ್ಪತ್ತಿ’ಗಳನ್ನು ಪ್ರಕಾಶನಗೊಳಿಸಿದರು.

ವಿಭಿನ್ನ ಮೌಖಿಕ ಪಠ್ಯಗಳಿಂದ ಕೇರಳೋತ್ಪತ್ತಿ ನಿಬಿಡವಾಗಿದೆ. ಸಾಂಸ್ಕೃತಿಕ ಬದುಕಿನ ನಾನಾ ವಲಯಗಳಲ್ಲಿ ಅವು ವಿಹರಿಸುತ್ತವೆ. ‘ಅಂಕಕಾರನ್’ ಎಂಬ ತೆಯ್ಯಂನ ‘ತೋಟ್ಟಂ ಹಾಡು’ ಮುಖ್ಯವಾಗಿ ಕೇರಳೋತ್ಪತ್ತಿಯ ಹಾಡುಗಾರಿಕೆಯೇ ಆಗಿದೆ. ತೆಯ್ಯಂಗಳ ‘ನುಡಿಗಟ್ಟು’ಗಳಲ್ಲಿ ಕೇರಳೋತ್ಪತ್ತಿಯನ್ನು ವಿವರಿಸಲಾಗುತ್ತದೆ. ತೆಯ್ಯಂಗೆ ಸಂಬಂಧಿಸಿದ ‘ಗಡಿಹಿಡಿಯುವುದು’ ಪೀಠವಲಿಕ್ಕಂ ಮುಂತಾದ ಪರಂಪರಾಗತ ಕಾರ್ಯಕ್ರಮಗಳಲ್ಲಿ ‘ಕೇರಳೋತ್ಪತ್ತಿ’ಯನ್ನು ಪೂರ್ತಿಯಾಗಿ ಹೇಳಿ ಮುಗಿಸಿದ ಬಳಿಕವೇ ಪೂರ್ಣಗೊಳ್ಳುತ್ತದೆ. ಧಾರ್ಮಿಕ ಬದುಕಿನ ಸಕಲ ಚರ್ಯೆಗಳನ್ನೂ ಪ್ರತ್ಯಕ್ಷವಾಗಿಯೇ ಪರೋಕ್ಷವಾಗಿಯೇ ನಿಯಂತ್ರಿಸುವ ಒಂದು ಪ್ರಮಾಣಪತ್ರವೇ ಆಗಿದೆ – ಕೇರಳೋತ್ಪತ್ತಿ.

ಪರಶುರಾಮನು ಕ್ಷತ್ರಿಯ ವಂಶದ ದುಷ್ಟರಾದ ಅರಸರನ್ನು ಇಪ್ಪತ್ತೊಂದು ಬಾರಿ ಕೊಂದು ಕೆಡಹಿದ ಪಾಪ ಪರಿಹಾರಾರ್ಥವಾಗಿ ಗೋಕರ್ಣದ ಕಲ್ಲು ಮಲೆಯ ಮೇಲೆ ನಿಂತು ವರುಣನನ್ನು ಸಂಪ್ರೀತಿಗೊಳಿಸಿ ಸಮುದ್ರವನ್ನು ಹಿಂತಳ್ಳಿ ಕೇರಳವನ್ನು ಪಡೆದುದು, ಅರುವತ್ನಾಲ್ಕು ಗ್ರಾಮಗಳಲ್ಲಿ ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಬ್ರಾಹ್ಮಣರನ್ನು ನೆಲೆಗೊಳಿಸಿದ್ದು, ಬ್ರಾಹ್ಮಣರಲ್ಲಿ ಕೆಲವರಿಗೆ ಆಯಧದಾನ ಮಾಡಿದುದು, ಉದ್ಭವ ನಿರ್ದೇಶ, ಕಳಿಗಂಗಳಲ್ಲಿ ರಕ್ಷಾಧಿಕಾರಿಗಳ ಆಡಳಿತ, ಪರದೇಶಗಳಿಂದ ನಿರಂತರವಾಗಿ ಹದಿನೆಂಟು ಅರಸರನ್ನು ಕರೆತಂದು ಕೈಹಿಡಿದು ಪ್ರತಿಜ್ಞೆ ಮಾಡಿಸಿ ಪೆರುಮಾಳುಗಳನ್ನಾಗಿಸಿ ಮೆರೆಸಿದ್ದು, ತಳಿಯಾದಿರಿಗಳ ಉಪದೇಶಾನುಸಾರವಾಗಿ ನಡೆಯುತ್ತಿದ್ದ ಅವರ ಆಡಳಿತ, ಪೆರುಮಾಳುಗಳ ಹಠಮಾಡಿತನ, ಚೇರಮಾನ್ ಪೆರುಮಾಳನಿಂದ ಕೇರಳ ವಿಭಜನೆ, ಶಂಕರಾಚಾರ್ಯರ ಬಗೆಗಿನ ಕೀರ್ತನೆಗಳು, ಕೇರಳದಲ್ಲಿನ ಜಾತಿ ವಿಭಜನೆಗಳು, ವಸ್ತ್ರವಿಧಾನ, ವ್ಯವಹಾರ ರೀತಿಗಳು, ಕೃಷಿ ರೀತಿಗಳು, ಗೃಹ ನಿರ್ಮಾಣ ಕ್ರಮ ಮುಂತಾದ ಒಂದಷ್ಟು ವಿಷಯಗಳು ಪ್ರಾಚೀನ ಮಲಯಾಳಂ ಗದ್ಯದಲ್ಲಿ ಇತಿಹಾಸವೆಂಬಂತೆ ಕೇರೋತ್ಪತ್ತಿಗಳಲ್ಲಿ ವರ್ಣಿತವಾಗಿದೆ. ಸಾಮಾನ್ಯವಾಗಿ ಬ್ರಾಹ್ಮಣ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸುವುದು ಇವುಗಳ ಪ್ರಧಾನ ಲಕ್ಷ್ಯವಿದ್ದಂತಿದೆ.

ಪರಶುರಾಮನು ಸಮುದ್ರದಿಂದ ಮರಳಿ ಪಡೆದ ನೂರ ಅರುವತ್ತು ಗಾವುದ ಭೂಮಿಯನ್ನು ಅರುವತ್ನಾಲ್ಕು ಗ್ರಾಮಗಳಾಗಿ ವಿಭಜಿಸಿ ಬ್ರಾಹ್ಮಣರಿಗೆ ನೋಡಿಕೊಳ್ಳಲು ಕೊಟ್ಟ. ಗೋಮಕೂಟ, ಕರವಳ್ಳಿ, ಮಲ್ಲೂರ್, ಎಪ್ಪಂದೂರಂ, ಚೆಪ್ಪಂದೂರಂ, ಕಡಲ್ಲೂರಂ, ಕಲ್ಪನ್ನೂರ್, ಆರ್ಯಂಚೆ, ವಾರ್ಯಂಚೆರ, ತ್ವಕ್ಕಣ್ಣಿ, ತ್ವತ್ತಾಡಂ, ತ್ವಕ್ಕಣಂಪಾಲಂ, ತ್ವಚ್ಚಾಲ, ಕೊಲ್ಲೂರ್, ಕೋಮಲಂ, ವೆಳ್ಳರ, ವೆರಿಙೂಡ್, ಪೆತ್ತಡ, ಚೆಂಙೋಡಂ, ಕೋಟೀಶ್ವರಂ, ಮಂಜೀಶ್ವರಂ, ಉಡುಪ್ಪ್, ಶಂಕರನಾರಾಯಣಂ, ಕೋಟ್ಟ, ಶೀವಳ್ಳಿ, ಮೊರ , ಪಂಚ ಇಟ್ಟಲಿ, ಕುಮಾರ ಮಂಗಲಂ, ಅನಂತಪುರಂ, ಕುಂಜುಪುರಂ, ಪಯ್ಯನ್ನೂರ್, ಪೆರಿಂಚೆಲ್ಲೂರ್, ಕರಿಕ್ಕಾಡಂ, ಈಶಾನಮಂಗಲಂ, ಆಲತ್ತೂರ್, ಕರಿಂಙೋಳಂ, ತೃಶ್ಶಿವಪ್ಪೇರೂರ್, ಮಾಣಿಯೂರ್, ಚೊವ್ವಾರಂ, ಪರಪ್ಪೂರ್, ಏರಾಣಿಕ್ಕುಳಂ, ಮೂಷಿಕಕುಳಂ, ಇರಿಂಞಾಲಕ್ಕುಡ, ಅಡಪ್ಪೂರ್, ಚೆಂಙನಾಡ್, ಉಳಿಯನ್ನೂರ್, ಕಳುದನಾಡ್, ಕಳಯೂರ್, ಇಳಿದ್ಯ, ಚೆಮ್ಮುಂಡ, ಆವಟ್ಟಿ, ಪುತ್ತೂರ್, ಕಿಡಂಙೂರ್, ಕಾರನಲ್ಲೂರ್, ಕವಿಯೂರ್, ಏಟ್ಟುಮಾನಿಯೂರ್, ಕುಡಮುರಿ, ನೀರಮಣ್ಣ್, ಆಮಣಿ, ಆಳ್ಳಳಂ, ತಿರುವಲ್ಲಾಯಿ, ಚೆಂಙನಿಯೂರ್ – ಇವು ಅರವತ್ನಾಲ್ಕು ಗ್ರಾಮಗಳು.

ಹೀಗೆ ವಿಭಜಿತವಾದ ನಾಲ್ಕು ಸಾವಿರದ ನಾನ್ನೂರ ನಲುವತ್ತೆಂಟು ದೇವಪ್ರತಿಷ್ಠೆಗಳು, ನೂರೆಂಟು ದುರ್ಗಾಲಯಗಳು ಸ್ಥಾಪಿತವಾದುವೆಂದು ಕೇರಳೋತ್ಪತ್ತಿಗಳು ಹೇಳುತ್ತವೆ. ಗ್ರಾಮಗಳನ್ನು ಸೇರಿಸಿ ತುಳುನಾಡ್, ಕೋಲತ್ತುನಾಡ್, ಪೋಳನಾಡ್, ಕುರುಂಬ್ರನಾಡ್, ಪರವಯಿನಾಡ್, ಏರನಾಡ್, ಪರಪ್ಪನಾಡ್, ವಳ್ಳುವನಾಡ್, ವೆಟ್ಟುತ್ತನಾಡ್, ತಿರುಮನಶ್ಶೇರಿನಾಡ್, ಪೆರುಂಬಡಪ್ಪ್‌ನಾಡ್, ನೆಡುಂಙಾಡ್, ವೆಂಙಾಡ್, ಮುರಿಂಙನಾಡ್, ಓಣನಾಡ್, ವೇಣನಾಡ್ – ಹೀಗೆ ಹದಿನೇಳು ನಾಡುಗಳನ್ನೂ ರೂಪಿಸಿದನೆಂದೂ ಉಲ್ಲೇಖವಿದೆ.

ಕೇರಳದ ಉತ್ಪತ್ತಿ, ಪರಿಪಾಲನಾ ರೀತಿ – ಎಲ್ಲವೂ ಪರಶುರಾಮನಿಂದ ಸ್ಥಾಪಿಸಲ್ಪಟ್ಟುವು ಎಂದು ಕೇರಳೋತ್ಪತ್ತಿ ಸಾರುತ್ತದೆ. ಬ್ರಾಹ್ಮಣಪಾರಮ್ಯವನ್ನು ಸ್ಥಾಪಿಸುವಂತೆ ಇರುವ ಇದರ ವಿವರಣೆಗಳು ಫ್ಯೂಡಲ್ ಕಾಲದ ನಿಜ ಇತಿಹಾಸವೆಂದೇ ಪರಿಗಣಿತವಾಗಿತ್ತು. ಆಧುನಿಕ ಇತಿಹಾಸ ಜ್ಞಾನವು ಇದಕ್ಕೆ ಐತಿಹ್ಯ ವೃತ್ತಾಂತಗಳ ಬೆಲೆಯನ್ನಷ್ಟೇ ನೀಡುತ್ತಿದೆ.

ಕೇರಳದ ಇತಿಹಾಸ ಅಧ್ಯಯನ ಕ್ಷೇತ್ರದಲ್ಲೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲೂ ಕೇರಳೋತ್ಪತ್ತಿಯ ವಿಶ್ಲೇಷಣೆಗೆ ಒಳಗಾಗಿದೆ. ಡಾ. ಎಂ.ಜಿ.ಎನ್.ನಾರಾಯಣನ್, ವೇಲಾಯುಧನ್ ಪಣಿಕಶ್ಶೇರಿ ಮುಂತಾದವರ ಇತಿಹಾಸ ಗ್ರಂಥಗಳಲ್ಲಿ ಕೇರಳೋತ್ಪತ್ತಿಯ ಕುರಿತ ಚರ್ಚೆ ಇದೆ. ಫೋಕ್‌ಲೋರ್ ನಿಘಂಟು (ಡಾ. ಎಂ.ವಿ.ವಿಷ್ಣು ನಂಬೂದಿರಿ) ವಿಸ್ತಾರವಾದ ವಿವರಗಳನ್ನು ಕೊಡುತ್ತಿದೆ. ಕೇರಳದ ಬದುಕು ಮತ್ತು ಸಂಸ್ಕೃತಿಗಳನ್ನು ವಿಶ್ಲೇಷಿಸುವ ಹೆಚ್ಚಿನ ಪುಸ್ತಕಗಳು ‘ಕೇರಳೋತ್ಪತ್ತಿ’ಯನ್ನು ಪ್ರಸ್ತಾಪಿಸಿವೆ.

– ವಿ.ಎಂ.ಯು. ಅನುವಾದ ಕೆ.ಕೆ.

ಕೇಳಿಕೆ ಕರ್ನಾಟಕದ ಯಕ್ಷಗಾನ ಬಯಲಾಟ ಪ್ರಕಾರಗಳಲ್ಲಿ ‘ಕೇಳಿಕೆ’ಯೂ ಒಂದು. ಮೂಡಲಪಾಯದ ಅನೇಕ ಲಕ್ಷಣಗಳನ್ನೊಳಗೊಂಡ ಕೇಳಿಕೆಯನ್ನು ಅದರ ಒಂದು ಪ್ರಭೇದವೆಂದು ಗುರುತಿಸಬೇಕಾಗಿದೆ.

‘ಕೇಲಿ’ ಎಂಬ ಸಂಸ್ಕೃತ ಶಬ್ದಕ್ಕೆ ಆಟ, ವಿನೋದ ಎಂದರ್ಥ. ‘ಕೇಳಿಕೆ’ ಎಂಬುದು ಸಂಸ್ಕೃತದ ‘ಕೇಲಿ’ ಯಿಂದಾದ ರೂಪವೆಂದು ಭಾವಿಸಬಹುದು. ‘ಕೇಳಿಕ್ಕೈ’ ಎಂಬ ತಮಿಳು ಶಬ್ದವಿರುವುದನ್ನು ನೋಡಿ ಕೆಲವರು ‘ಕೇಳಿಕ’ (ತೆಲುಗು) ದೇಶ್ಯ ಪದವಿರಬಹುದೆಂದು ಊಹಿಸಿದ್ದಾರೆ. ತಮಿಳಿನ ‘ಕೇಳಿಕ್ಕೈ’ ಹೆಂಗಸರ ಆಟಗಳಲ್ಲಿ ಒಂದು. ಇದಕ್ಕೂ ರಂಗಸಂಪ್ರದಾಯಗಳಿಗೂ ಯಾವ ಸಂಬಂಧವೂ ಇಲ್ಲ.

ರಂಬ ಸಂಪ್ರದಾಯದ ಮಟ್ಟಿಗೆ ‘ಕೇಳಿಕೆ’ ಎಂಬುದೊಂದು ಪಾರಿಭಾಷಿಕ ಶಬ್ದ. ತೆಲುಗಿನ ‘ಕೇಳಿಕ’ ಮತ್ತು ಕನ್ನಡ ‘ಕೇಳಿಕೆ’ ಇನ್ನೂ ಉಳಿದಿವೆ. ಇಂಥದೊಂದು ಯಕ್ಷಗಾನ ಪ್ರಭೇದವಿದೆ ಎಂದು ಗುರುತಿಸಿದ ವಿದ್ವಾಂಸರು ಬಹಳ ಕಡಿಮೆ. ತೆಲುಗು ಸಾಹಿತ್ಯದ ಕೆಲವು ಪ್ರಾಚೀನ ಉಲ್ಲೇಖಗಳನ್ನು ನೋಡಿದಾಗ ಕೇಳಿಕೆಯ ಬಗ್ಗೆ ಕುತೂಹಲ ಉಂಟಾಗುತ್ತದೆ.

ಕೇಳಿಕೆ ಮುನಿಯಪ್ಪ ಎಂಬ ಪ್ರಸಿದ್ಧ ಭಾಗವತರನ್ನು ಕುರಿತ ಪರಿಚಯಾತ್ಮಕ ಲೇಖನದಲ್ಲಿ (‘ಜಾನಪದ ಜಗತ್ತು’ ಸೆಪ್ಟೆಂಬರ್ ೧೯೮೧) ಟಿ.ಗೋವಿಂದರಾಜು ಅವರು ‘ಬಯಲಾಟಕ್ಕೆ ಕೇಳಿಕೆ ಎಂಬ ಹೆಸರೂ ಉಂಟು. ಬಹುಶಃ ತೆಲುಗಿನ ಪ್ರಭಾವದಿಂದ ಬಂದಿರಬಹುದು’ ಎಂದು ಬರೆದಿದ್ದಾರೆ. ಕುಕ್ಕಿಲ ಕೃಷ್ಣಭಟ್ಟರು “ಬೆಂಗಳೂರು ಪ್ರಾಂತದಲ್ಲಿ ಈ ಬಯಲಾಟವನ್ನು ಇಂದಿಗೂ ‘ಕೇಳಿಕೆ’ ಎಂದೇ ಕರೆಯುತ್ತಾರೆ’ ಎಂದು ಬರೆದಿದ್ದಾರೆ (‘ಜಾನಪದ ಜಗತ್ತು’ ಸೆಪ್ಟೆಂಬರ್ – ಡಿಸೆಂಬರ್ ೧೯೮೨).

‘ಕೇಳಿಕೆ’ ಎಂಬುದಕ್ಕೆ ಜನ ವ್ಯವಹಾರದಲ್ಲಿ ಹಲವು ಅರ್ಥಗಳಿರುತ್ತವೆ. ದೇವರು ಮೈಮೇಲೆ ಬಂದಾಗ ‘ಕೇಳಿಕೆ’ ನಡೆಸುತ್ತಾರೆ. ಹಯ್ಯಾಳದಪ್ಪನ ಜಾತ್ರೆ (ಸುರಪುರ ತಾಲ್ಲೂಕು) ಯಲ್ಲಿ ದೇವರ ಪೂಜಾರಿ ಮತ್ತು ಭಕ್ತರ ‘ಹೇಳಿಕೆ ಕೇಳಿಕೆ’ ಪ್ರಸಂಗಗಳು ನಡೆಯುತ್ತವೆ. ಆಗ ವಾರ್ಷಿಕ ಭವಿಷ್ಯವನ್ನು ಕೇಳುವುದು ರೂಢಿ. ಪಡುವಲಪಾಯ ಸಂಪ್ರದಾಯದಲ್ಲಿ ಭಾಗವತರು ರಂಗಸ್ಥಳಕ್ಕೆ ಬಂದೊಡನೆ ಚಂಡೆ, ಮದ್ದಲೆ,ಜಾಗಟೆ ಮತ್ತು ಪಕ್ಕತಾಳಗಳನ್ನು ಬಾರಿಸುವ ಪದ್ಧತಿ ಇದೆ. ಇದನ್ನು ‘ಕೇಳಿ’ ‘ಕೇಳಿ ಹೊಡೆಯುವುದು’ ಎನ್ನುತ್ತಾರೆ. ಮೇಲಿನ ಎಲ್ಲ ಸಂದರ್ಭಗಳಲ್ಲಿ ‘ಕೇಳಿ’, ‘ಕೇಳಿಕೆ’ ಎಂಬುವು ಕೇಳುವುದಕ್ಕೆ ಸಂಬಂಧಿಸಿದುವೇ ಹೊರತು ‘ವಿನೋದ ಅಥವಾ ಆಟ’ ಎಂಬ ಅರ್ಥದಲ್ಲಿಲ್ಲ.

ಆಂಧ್ರದ ದೇವಾಲಯ ನೃತ್ಯಗಳಲ್ಲಿ ಕೇಳಿಕಾ ನೃತ್ಯವೊಂದು. ತೆಲುಗು ನಾಡಿನ ಶಾಸ್ತ್ರೀಯ ನೃತ್ಯ, ನಾಟಕಗಳನ್ನು ನಟ್ಟುವ ಮೇಳ ಮತ್ತು ನಾಟ್ಯಮೇಳ ಎಂಬ ಎರಡು ವಿಭಾಗಗಳಲ್ಲಿ ಗುರುತಿಸಲಾಗಿದೆ. ನಟ್ಟುವ ಮೇಳಗಳಲ್ಲಿ ದೇವದಾಸೀ ಸಂಪ್ರದಾಯ ಮತ್ತು ರಾಜನರ್ತಕಿ ಸಂಪ್ರದಾಯ ಇವೆ. ಕಲ್ಯಾಣ ಮಂಟಪದ ದೇವರ ಮುಂದೆ ದೇವದಾಸಿಯರೇ ಅಲ್ಲದೆ ನಾಟ್ಯ ವಿದ್ಯಾಪಾರಂಗತರಾದ ವಾರಾಂಗನೆಯರು ಕೂಡ ನೃತ್ಯ ಮಾಡಬಹುದು. ಇದು ವಿನೋದಕ್ಕಾಗಿ ಮಾಡುವ ನೃತ್ಯವಾದುದರಿಂದ ‘ಕೇಳಿಕೆ’ ಎನ್ನಲಾಗಿದೆ.

ಕನ್ನಡ ನಾಡಿನ ಕೇಳಿಕೆ ಯಕ್ಷಗಾನದ ಒಂದು ಪ್ರಬೇಧವೆಂದು ಸ್ಪಷ್ಟವಾಗಿ ನಿರ್ದೇಶಿಸುವ ಯಾವ ಉಲ್ಲೇಖವೂ ಕಾವ್ಯಗಳಲ್ಲಿ ಕಂಡುಬರುವುದಿಲ್ಲ. ಆದರೆ ಕುಣಿತ, ವಿನೋದ, ಆಟ ಮುಂತಾದ ಅರ್ಥಗಳಲ್ಲಿ ಈ ಶಬ್ದ ಬಳಕೆಯಾಗಿದೆ.

“ಹಿಂದೆ ಮಾಹೇಶ್ವರರ ಕೇಳಿಕೆಗಳೊಪ್ಪುತಿರೆ”
(‘ಬಸರಾಜದೇವರ ರಗಳೆ’ ೧೧ – ೬)

“ದಣಿವಿಲ್ಲದೊಲ್ದು ಕುಣಿವೆಚ್ಚ ಕೇಳಿಕೆಗಳಿಂ”
(‘ಉದ್ಭಟಕಾವ್ಯ’ ೩ – ೯೮)

“ಗೀತ ಸರಸದ ತತವಿತತಾದಿ ವಾದ್ಯಪ್ರಸರ ಮೇಳನದಲಿ ಸೊಗಸಲಾಡುತ್ತ ಕೇಳಿಸಲು”
(‘ಬಸವಪುರಾಣ’ ೩೭ – ೨)

“ಒಡರಿಚುವುದೇಂ ಕೇಳಿಕೆಯ ನೀ ನರ್ತನೋಚಿತಕೆ”
(‘ಬಸವಪುರಾಣ’ ೧೨ – ೪೨)

“ಕೇಳಿಕೆಯ ನವಿಲುಗಳ ತುಂಬಿಯ ಮೇಳವದ…..”
(‘ಕುಮಾರವ್ಯಾಸ ಭಾರತ’ ಆದಿ, ೧೦ – ೧)

“ಕೇಳಿಸಿದರಾಹವದ ನಾಟ್ಯಮಂ ರಣರಂಗದೊಳ್ಚಟುಲ ಪಟು ರಥಿಕರು”
(‘ಜೈಮಿನಿ ಭಾರತ’, ೨೨ – ೭)

” ಭಕ್ತಾಳಿ ಭೈರವದೇವರನಿದಿರ ಕೇಳಿಕೆ ಸಹಿತ ಬಂದು”
(‘ಭೈರವೇಶ್ವರ ಕಾವ್ಯ’, ೫ – ೧೧)

೧೩ನೆಯ ಶತಮಾನದ ‘ಬಸವರಾಜ ದೇವರ ರಗಳೆ’ಯಲ್ಲಿ ಕೇಳಿಕೆಯನ್ನು ಕುರಿತು ಹೇಳಿರುವುದೇ ಇದುವರೆಗೆ ಲಭಿಸಿದ ಉಲ್ಲೇಖಗಳಲ್ಲಿ ಪ್ರಾಚೀನವಾದದೆನ್ನಬಹುದು. ‘ಬಸವರಪುರಾಣ’ದ ಉಲ್ಲೇಖಗಳು ತೆಲುಗಿನ ಪಾಲ್ಕುರಿಕ ಸೋಮನಾಥನ ‘ಬಸವಪುರಾಣ’ದಿಂದ ಅನುವಾದಗೊಂಡವು. ಇದೇನಿದ್ದರೂ ೧೩ನೆಯ ಶತಮಾನದ ಕಾಲಕ್ಕೆ ಕನ್ನಡ ಮತ್ತು ತೆಲುಗಗಳಲ್ಲಿ ‘ಕೇಲಿ’ಗೆ ಭಿನ್ನವಾದ ‘ಕೇಳಿಕೆ’ ರೂಪುಗೊಂಡಿತೆಂಬುದು ಸ್ಪಷ್ಟ.

ಕನ್ನಡದಲ್ಲಿ ‘ಕೇಳಿಕೆ’ ಪದದ ಅರ್ಥ ಮತ್ತು ನಿಷ್ಪತ್ತಿಯ ಬಗ್ಗೆ ಎಂ.ಚಿದಾನಂದಮೂರ್ತಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಒಪ್ಪತಕ್ಕದ್ದು. ಇವರು ಮುಖ್ಯವಾಗಿ ಹರಿಹರನ ಬಸವರಾಜದೇವರ ರಗಳೆ ಮತ್ತು ಭೀಮಕವಿಯ ಬಸವಪುರಾಣಗಳಲ್ಲಿ ಬರುವ ಉಲ್ಲೇಖಗಳನ್ನು ಆಧಾರವಾಗಿಟ್ಟುಕೊಂಡು ವಿಚಾರ ಮಾಡಿದ್ದಾರೆ. ಬಸವರಾಜದೇವರ ರಗಳೆಯ ಉಲ್ಲೇಖ ಹೀಗೆದ : ಬಸವಣ್ಣ ಭಂಡಾರಿಯಾಗಿ ಶರಣರ ಸೇವೆ ಮಾಡುತ್ತಿರುವಾಗ ನಾನಾದಿಕ್ಕುಗಳಿಂದ ಶರಣರು ಬಂದರು. ಆಗ ಅವರು ವೃಷಭಧ್ವಜಗಳ ಎತ್ತಿಹಿಡಿದು ಮೃದಂಗಾದಿಗಳನ್ನು ನುಡಿಸುತ್ತಿದ್ದರು. ಸತ್ಯ ಶರಣರ ಕೇಳಿಕೆಗಳು ಒಪ್ಪುತ್ತಿದ್ದವು. ಬಸವಪುರಾಣದ ಉಲ್ಲೇಖಗಳಲ್ಲಿ ಕೇಳಿಕೆಯ ಬಗ್ಗೆ ಇನ್ನೂ ಸ್ವಲ್ಪಮಟ್ಟಿಗೆ ಸ್ಪಷ್ಟ ಚಿತ್ರ ಸಿಕ್ಕುತ್ತದೆ. “ಗೀತ ಸರಸದ ತತವಿತತಾದಿವಾದ್ಯ ಪ್ರಸರ ಮೇಳದಲ್ಲಿ ಸೊಗಸಲಾಡುತ್ತ ಕೇಳಿಸುತ್ತಿದ್ದ” ಪ್ರಸಂಗ ಕೇಳಿಕೆ ಬರಿಯ ಗಾನ ಸಂಪ್ರದಾಯವಲ್ಲ ವೆಂಬುದನ್ನು ಸ್ಪಷ್ಟಪಡಿಸುತ್ತದೆ. ಕೇತಯ್ಯನ ಶವದ ಮುಂದೆ “ವಿಕಟಕಟ ಧಿಕ್ಕಿಟ ಧಿಕಿಟವೆಂಬ ರಸವಸೆವ ಕೇಳಿಕೆ” ಎಂದಿರುವುದರಿಂದ ನೃತ್ಯ ಮತ್ತು ರಸವ್ಯಂಜನ ಕೇಳಿಕೆಯ ಭಾಗಗಳೆಂಬುದು ತಿಳಿದುಬರುತ್ತದೆ. ಮುಖ್ಯವಾದ ಇನ್ನೊಂದು ಉಲ್ಲೇಖದಲ್ಲಿ “ಮೊರೆಯೆ ಜಯಜಯ ಘೋಷಣಗಳು ಪರಿಪರಿಯ ಕೇಳಿಗಳಿಂದೆತ್ತರದೊಳಾಡುತ ಪಾಡುತಂ ಸಲೆ ಕೇಳಿಸು” ತ್ತಿದ್ದರೆಂದು (೬೦ – ೬೪) ಹೇಳಿರುವುದನ್ನು ನೋಡಿದರೆ ಬಸವಪುರಾಣದ ಉಲ್ಲೇಖಗಳಿಂದ ಕೇಳಿಕೆ ಒಂದು ‘ಆಟ’ ಎಂಬುದು ಸ್ಪಷ್ಟವಾಗುತ್ತದೆ. ಕಲ್ಯಾಣದಲ್ಲಿದ್ದ ಭಕ್ತರಲ್ಲಿ ಕೇಳಿಕೆಯ ಮಹಾದೇವಿ ಎಂಬುವಳಿದ್ದಳೆಂದೂ ಬಸವಪುರಾಣ ಹೇಳುತ್ತದೆ (೫೮ –  – ೭). ಇವೆಲ್ಲವನ್ನೂ ಪರಿಶೀಲಿಸಿದ ಚಿದಾನಂದಮೂರ್ತಿ ಅವರು, “ಇದಕ್ಕೂ ಕೇಳ್ ಎಂಬ ಅಚ್ಚಗನ್ನಡದ ಧಾತುವಿಗೂ ಯಾವ ಸಂಬಂಧವೂ ಇಲ್ಲ. ಇದು ಸಂಸ್ಕೃತದ ಕೇಲಿ(ಕೇಲಿಕೆ ಎಂಬ ಪದದ ತದ್ಭವ. ಕೇಲಿಕೆ ಎಂದರೆ ಆಟ, ಕುಣಿತ ಎಂದರ್ಥ” ಎಂದು ಬರೆದಿದ್ದಾರೆ. ಈಗಲೂ ಕೋಲಾರ ಜಿಲ್ಲೆಯಲ್ಲಿ ಪ್ರಚಲಿತವಿರುವ ಕೇಳಿಕೆಯನ್ನು ನೋಡಿದವರಿಗೆ ಮೇಲಿನ ಅಭಿಪ್ರಾಯದೆ ಸರಿ ಎನಿಸದಿರದು.

ತೆಲುಗಿನ ‘ಕೇಳಿಕೆ’ ಕೂಡ ಈಗ ಕೋಲಾರ ಜಿಲ್ಲೆಯಲ್ಲೇ ಬದುಕಿದೆ. ಆಂಧ್ರದಲ್ಲಿ ಯಕ್ಷಗಾನ ಪ್ರಕಾರವಾಗಿ ಕೇಳಿಕೆ ಈಗ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಒಂದು ಕಾಲದಲ್ಲಿ ಇತ್ತೆಂಬುದನ್ನು ಕೆಲವು ಉಲ್ಲೇಕಗಳಿಂದ ಊಹಿಸಬಹುದು. ಈ ಉಲ್ಲೇಖಗಳು ‘ಕೇಳಿಕೆ’ ಪದಕ್ಕೆ ಪಾರಿಭಾಷಿಕ ಅರ್ಥವನ್ನು ನೀಡುತ್ತವೆ.

“ಚಾಗುಬಳಾಯನು ಶಬ್ದಮುಲ್ ಮ್ರೋಯಗಾ ಕೇಳಿಕಲ ತೋಡ ಕರಮರ್ಥಿನೇಗಿ” (‘ಬಸವಪುರಾಣ’, ೭ – ೧೫೪)
(ಚಾಗುಬಳಾ ಎಂಬ ಶಬ್ದಗಳು ಮೊಳಗಲು ಕೇಳಿಕೆಗಳೊಂದಿಗೆ ಹೋಗಿ)

“ಕೋಲಾಟಮುನು ಚಾತ್ರಗೊಂಡ್ಲಿ ಪೇರಣಿಯ ಕೇಳಿಕೆ ಜೋಕೆಯು ಲೀಲ ನಟಿಂಪ” (‘ಬಸವಪುರಾಣ’ ೧ – ೫೨೯)
(ಕೋಲಾಟ ಚಾತ್ರಗೊಂಡ್ಲಿ ಪೇರಣಿ ಕೇಳಿಕೆ ಮತ್ತು ಜೋಕ ಲೀಲೆಯಿಂದ ನಟಿಸಲು

“ಜಕ್ಕಿಣಿ ಕೊರವಂಜಿ ವೇಷಮುಲ ಕೇಳಿಕ ಸಲ್ಪಿರಿ”
(‘ರಾಮಾಭ್ಯುದಯಮು’. ೨ ಆ.)

(ಜಕ್ಕಿಣಿ ಮತ್ತು ಕೊರವಂಜಿಯ ವೇಷಗಳಿಂದ ಕೇಳಿಕ ಮಾಡಿದರು)

ಮೇಲಿನ ಉಲ್ಲೇಖಗಳಲ್ಲಿ ಬಸವಪುರಾಣದ ಎರಡನೆಯ ಉಲ್ಲೇಖವನ್ನು ನೋಡಿದರೆ ಕೋಲಾಟ, ಗೊಂಡ್ಲಿ, ಪೇರಣಿ ಮುಂತಾದ ನೃತ್ಯಾಭಿನಯಗಳೊಂದಿಗೆ ಮುಖ್ಯವಾಗಿ ಗಮನಿಸತಕ್ಕದು. ಕೊನೆಯ ಉಲ್ಲೇಖದಲ್ಲಿ “ಜಕ್ಕಣಿ ಮತ್ತು ಕೊರವಂಜಿಯ ವೇಷಗಳಿಂದ ಕೇಳಿಕಡ ಮಾಡಿದರು” ಎಂದು ಹೇಳಿರುವುದರಿಂದ ‘ರಾಮಾಭ್ಯುದಯ’ರಚಿತವಾದ ೧೬ನೆಯ ಶತಮಾನದ ಕಾಲಕ್ಕೆ ಕೇಳಿಕ ಯಕ್ಷಗಾನವೇ ಆಗಿತ್ತೆಂಬುದು ಖಚಿತವಾಗುತ್ತದೆ.

ವಿಜಯನಗರದ ವೀರನರಸಿಂಹರಾಯನ (೧೫೦೫ – ೧೫೦೯) ಕಾಲದ ಕೂಚಿಪೂಡಿ ಭಾಗವತರು ರಾಜನ ಆಸ್ಥಾನಕ್ಕೆ ಬಂದು ಕೇಳಿಕೆಯನ್ನು ಪ್ರದರ್ಶಿಸಿದರೆಂದು ‘ಮಾಚುಪಲ್ಲಿ ಕೈಫಿಯತು’ (ಮೆಕೆಂಜಿ ಸಂಗ್ರಹ, ಲೋಕಲ್ ರೆಕಾರ್ಡ್‌ ೫೬.ಪು.೬೫ ಹೇಳುತ್ತದೆ. ಇದರಿಂದ ಕೇಳಿಕೆ ೧೬ನೆಯ ಶತಮಾನದಲ್ಲಂತೂ ಒಂದು ಪ್ರದರ್ಶನ ಕಲೆಯಾಗಿ ಆಂಧ್ರದಲ್ಲಿತ್ತೆಂಬುದು ಸ್ಪಷ್ಟ.

ಕೇಳಿಕ, ಯಕ್ಷಗಾನದ ಇತರ ಪ್ರಭೇದಗಳು, ತೆರುಕ್ಕೊತ್ತು, ಕಥಕ್ಕಳಿ, ವೀಥಿನಾಟಕಮು, ವೀಥಿ ಭಾಗವತಂ ಮುಂತಾದವು ‌ದಕ್ಷಿಣ ಭಾರತದ ವಿವಿಧ ಪ್ರಾಂತಗಳಲ್ಲಿ ಪ್ರಚಲಿತವಾಗಿರುವ ಪ್ರದರ್ಶನ ಕಲೆಗಳು. ಇವುಗಳ ಉಗಮದ ಕಾಲ ಮತ್ತು ದೇಶಗಳನ್ನು ನಿರ್ದೇಶಿಸಿ, ಹೇಳುವುದು ಕಷ್ಟ. ಅಸ್ಷಷ್ಟ ಉಲ್ಲೇಖಗಳನ್ನೇ ಆಧಾರವಾಗಿಟ್ಟುಕೊಂಡು ಕೇಳಿಕೆಯಾಗಲಿ, ಇತರ ಕಲೆಗಳಾಗಲಿ ಒಂದು ಪ್ರದೇಶದಲ್ಲಿ ಉಗಮಗೊಂಡವೆಂದು ಹೇಳಲಾಗುವುದಿಲ್ಲ.

ಕನ್ನಡ ನಾಡಿನ ಶಾಸನಗಳಲ್ಲಿ ನಟ ಗಾಯಕ ನೃತ್ಯ ಕಲಾವಿದರ ಬಗ್ಗೆ ಅನೇಕ ಉಲ್ಲೇಖಗಳಿವೆ. ನಾಳ್ಪಗರಣದಂಥ ದೇಶೀಯ ಕಲಾಪ್ರಕಾರಗಳನ್ನು ಕುರಿತ ಉಲ್ಲೇಖ ಕುರಿತಂತೆ ಪಾಲ್ಕುರಿಕೆ ಸೋಮನಾಥನು ‘ಬಸವಪುರಾಣ’ ಮತ್ತು ‘ಪಂಡಿತಾರಾಧ್ಯ’ ಚರಿತ್ರಗಳಲ್ಲಿ ನೀಡಿರುವ ಮಾಹಿತಿಗಳು ಅತ್ಯುಪಕ್ತವಾದುವು. ಈ ಕವಿ ೧೩ನೆಯ ಶತಮಾನದವನು. ದೇಶಿ ನಾಟಕಗಳು. ಮಹಾನಾಟಕ (ದೊಡ್ಡಾಟ) ಖಂಡಿತ ನಾಟಕ (ಸಣ್ಣಾಟ?), ಸಾಂಗ ನಾಟಕ, ಬಹುರೂಪ, ಕೇಳಿಕೆ, ತೊಗಲುಗೊಂಬೆಯಾಟ, ಸೂತ್ರದ ಗೊಂಬೆಯಾಟ, ಗಂಧರ್ವ ಯಕ್ಷ ವಿದ್ಯಾಧರಾದಿಗಳಾಗಿ ಹಾಡುವ ಆಡುವ ಕಲೆಗಳು ಮುಂತಾದವನ್ನೆಲ್ಲ ಸೋಮನಾಥ ಹೇಳಿದ್ದಾನೆ. ಇದೇ ರೀತಿ ೧೩ನೆಯ ಶತಮಾನದ ದೇಶಿ ಕಲೆಗಳಿಗೆ ವಿಶ್ವಕೋಶವೆನನ್ನಬಹುದಾದ ಇನ್ನೊಂದು ಕೃತಿ ಜಾಯ ಸೇನಾಪತಿಯ (ಕ್ರಿ.ಶ. ೧೨೫೩) ‘ನೃತ್ತರತ್ನಾವಳಿ’ ಎಂಬ ೮ ಅಧ್ಯಾಯಗಳ ಸಂಸ್ಕೃತ ಗ್ರಂಥ. ಇದರಲ್ಲಿ ಪ್ರೇರಣೆ, ಪ್ರೇಂಖನ, ಚರ್ಚರಿ, ರಾಸಕ, ಕಂದುಕ, ಭಾಂಡಿಕ, ಚಾರಣ, ಬಹುರೂಪ, ಚಿಂದು, ಕೋಲಾಟ ಮುಂತಾದ ದೇಶಿ ಕಲೆಗಳ ಲಕ್ಷಣಗಳನ್ನು ಸ್ವರೂಪವನ್ನು ವಿವರಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ಕೇಳಿಕೆಯ ಹೆಸರನ್ನು ಧಾರ್ಮಿಕ ನಾಟಕಗಳಿಗೂ ಅನ್ವಯಿಸಿ ಹೇಳುವ ರೂಢಿಯೂ ಇದೆಯೆಂದು ತಿಳಿದು ಬರುತ್ತದೆ. ಮುಖ್ಯವಾಗಿ ಈ ಹೆಸರನ್ನು ಪೌರಾಣಿಕ ನಾಟಕಗಳಿಗೆ ಅನ್ವಯಿಸಿ ಹೇಳುವುದುಂಟು. ಹತ್ತಿಪ್ತತ್ತು ವರ್ಷಗಳ ಹಿಂದೆ ಆಂಧ್ರ ನಾಟಕ ವೃಂದದವರು ಬಂದು ಪೌರಾಣಿಕ ನಾಟಕಗಳನ್ನು ಆಡುತ್ತಿದ್ದರೆಂದೂ ಆ ನಾಟಕಗಳನ್ನು ಕೇಳಿಕೆಗಳನ್ನುತ್ತಿದ್ದರೆಂದೂ ಆ ಹೆಸರನ್ನೇ ಕನ್ನಡಿಗರು ಸ್ವೀಕರಿಸಿದರೆಂದೂ ಕೆಲವು ಹೇಳುತ್ತಾರೆ. ಆದರೆ ಈ ಅಭಿಪ್ರಾಯ ಸರಿಯಲ್ಲ. ಏಕೆಂದರೆ ಕನ್ನಡದಲ್ಲೂ ಕೇಲಿಕೆಯೆಂಬ ಪದ ಅನೇಕ ಶತಮಾನಗಳಿಂದ ಬಳಕೆಯಲ್ಲಿದೆ ಹಿಂದೆ ಸೂಚಿಸುವ ಉಲ್ಲೇಖಗಳಿಂದ ಸ್ಪಷ್ಟಪಡಿಸಲಾಗಿದೆ.

ತೆಲುಗಿನ ಲಾವಣಿಕಾರರು ಕಥೆ ಹೇಳುವುದನ್ನೇ ಕೇಳಿಕೆ ಎನ್ನುತ್ತಾರೆಂದು ಕೆಲವರ ಅಭಿಪ್ರಾಯ. ಬೇಸಿಗೆಯ ದಿನಗಳಲ್ಲಿ ಮನೆಯ ಅಂಗಳದಲ್ಲಿ ಕಥೆ ಹೇಳಿಸುತ್ತಿದ್ದರು. ತಂಬೂರಿಯ ಸಹಾಯದಿಂದ ಒಬ್ಬ ಕಥೆ ಹೇಳುತ್ತಿದ್ದರೆ, ಹಿಮ್ಮೇಳದವರು ದನಿಕೂಡಿಸುತ್ತಿದ್ದರು. ಇದನ್ನೂ ಕೇಳಿಕೆಯೆನ್ನುತ್ತಿದ್ದರೆಂದೂ ‘ಕಾಂಭೋಜರಾಜ ಕಥೆ’ ‘ಬಾಲನಾಗಮ್ಮ ಕಥೆ’ ಮುಂತಾದವನ್ನು ಕತೆಗಾರರು ಹಾಡುತ್ತಿದ್ದರೆಂದೂ ಹೇಳಲಾಗಿದೆ.

ಮನೆಯ ಮೊಗಸಾಲೆಯಲ್ಲಿ ಹೇಳುವ ಕಥೆಯನ್ನು ಕೇಳಿಕೆ ಎನ್ನುತ್ತಾರೆಂದೂ ಇದಕ್ಕೆ ವೇಷಧಾರಣೆಯ ಅಗತ್ಯ ಇಲ್ಲವೆಂದೂ ಕೆಲವರು ಹೇಳುತ್ತಾರೆ. ಪ್ರಧಾನ ಕಥಕನು ಇಬ್ಬರು ಸಹಾಯಕರು ಇರುವರೆಂದು, ತಂಬೂರಿ ಮತ್ತು ಮದ್ದಲೆ ಉಪಯೋಗಿಸುತ್ತಿದ್ದರೆಂದು ಒಂದು ಅಭಿಪ್ರಾಯವಿದೆ.

ಮೇಲಿನ ಕೆಲವು ಅಭಿಪ್ರಾಯಗಳ ಅವರಿವರಿಂದ ತಿಳಿದುಕೊಂಡವಾದುದರಿಂದ ಸರಿಯಾದವೆಂದು ಹೇಳಲಾಗವುದಿಲ್ಲ. ಕೋಲಾರ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಇಂದಿಗೂ ಕೇಳಿಕೆಗಳನ್ನು ಪ್ರದರ್ಶಿಸುವ ಭಾಗವತರ ಕುಟುಂಬಗಳಿವೆ. ಕೇಳಿಕೆ ಮುನಿಯಪ್ಪ ಎಂಬುವರನ್ನು ಕುರಿತು ಹಿಂದೆ ಹೇಳಲಾಗಿದೆ. ಇವರು ತೆಲುಗು ಬಣಜಿಗರು. ದೊಡ್ಡಬಳ್ಳಾಪುರದ ಈ ಭಾಗವತರು ದೇವನಹಳ್ಳಿ, ಬೆಂಗಳೂರು, ತುಮಕೂರು ಮುಂತಾದ ಕಡೆ ಗಯ ಚರಿತ್ರೆ, ಲವಕುಶ, ಸುಧನ್ವ, ಪಂಚವಟಿ, ಕರಿಭಂಟನ ಕಾಳಗ ಮುಂತಾದವನ್ನು ಆಡಿದ್ದಾರೆಂದು ತಿಳಿದು ಬಂದಿದೆ.

ಕೋಲಾರ, ಶ್ರೀನಿವಾಸಪುರ, ಬಾಗೇಪಲ್ಲಿ, ದೊಡ್ಡಬಳ್ಳಾಪುರ ಮುಂತಾದ ತಾಲ್ಲೂಕುಗಳಲ್ಲಿ ಕೇಳಿಕೆಯ ಭಾಗವತರು ಇದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಕೇಳಿಕೆ ಯಕ್ಷಗಾನದ ಒಂದು ಪ್ರಕಾರವೇ ಆಗಿದೆ. ತೆಲುಗಿನ ವೀಥಿ ನಾಟಕಮು ಮತ್ತು ವೀಥಿ ಭಾಗವತದ ಲಕ್ಷಣಗಳನ್ನು, ಕನ್ನಡ ಮೂಡಲಪಾಯದ ಲಕ್ಷಣಗಳನ್ನು ಒಳಗೊಂಡ ಒಂದು ಪ್ರಭೇದವಿದು. ಕೋಲಾರದ ಕೇಳಿಕೆಗಳು ಹೆಚ್ಚಿಗೆ ತೆಲುಗು ಭಾಷೆಯಲ್ಲಿದ್ದರೂ ಕನ್ನಡ ಕೇಳಿಕೆಗಳೂ ಆಗಾಗ್ಗೆ ಪ್ರದರ್ಶಿತಿವಾಗುತ್ತವೆ. ಇದರಿಂದ ಇದನ್ನು ಕರ್ನಾಟಕದ ಯಕ್ಷಗಾನ ಬಯಲಾಟದ ಪ್ರಕಾರಗಳಿಂದ ಹೊರತುಪಡಿಸಲು ಸಾಧ್ಯವಿಲ್ಲ.

ಕೇಳಿಕೆಯ ಮುಖ್ಯ ಪ್ರಸಂಗಗಳು ಇವು:

ಸಂಪೂರ್ಣ ರಾಮಾಯಣ ಹರಿಶ್ಚಂದ್ರ
ಲವಕುಶ ಪ್ರಹ್ಲಾದ ಚರಿತ್ರೆ
ಸೀತಾ ಸ್ವಯಂವರ ರುಕ್ಮಿಣೀ ಕಲ್ಯಾಣ
ವಿರಾಟ ಪರ್ವ ಪಾಂಡವ ವಿಜಯ
ಕರಿಭಂಟನ ಕಥೆ ಕಂಸಾಸುರನ ಕಥೆ

ಮೂಡಲಪಾಯ ಯಕ್ಷಗಾನದ ವಸ್ತುಗಳಿಗೂ, ಮೇಲೆ ಹೆಸರಿಸಿದ ವಸ್ತುಗಳಿಗೂ ಏನೂ ವ್ಯತ್ಯಾಸವಿಲ್ಲ. ರಾಮಾಯಣ ಮತ್ತು ಮಹಾಭಾರತದ ಕಥಗಳು ಆಂಧ್ರದಲ್ಲೂ ಯಕ್ಷಗಾನಗಳಿಗೆ ಮುಖ್ಯವಸ್ತುಗಳಾಗಿವೆ. ಕರಿಭಂಟನ ಕಥೆ ಆಂಧ್ರದ ರಾಯಲಸೀಮೆ ಪ್ರಾಂತದಲ್ಲೂ ಪ್ರಚಲಿತವಾಗಿದೆ.

ಕೇಳಿಕೆ ಒಂದು ಸಮ್ಮಿಶ್ರ ಕಲೆಯೇ ಹೊರತು ಕೇಲವ ಗಾನಶೈಲಿ ಅಥವಾ ಲಾವಣಿ ಅಲ್ಲ. ಸಂಗೀತ, ಸಾಹಿತ್ಯ, ಕುಣಿತ ಮತ್ತು ಅಭಿನಯ ಈ ಕಲೆಯಲ್ಲಿ ಸೇರಕೊಂಡಿವೆ. ಕನ್ನಡದ ಬೇರೆ ಯಕ್ಷಗಾನ ಸಂಪ್ರದಾಯಗಳಿಗಿಂತ ಕೇಳಿಕೆಯಲ್ಲಿ ಕುಣಿತ ಹೆಚ್ಚಾಗಿದೆಯೆಂದು ಕೆಲವರು ತಿಳಿಸಿದ್ದಾರೆ. ಆದರೆ ಈ ಕುಣಿತ ಭರತನಾಟ್ಯ ಸಂಪ್ರದಾಯದ ಶಿಷ್ಟ ನೃತ್ಯದಲ್ಲಿ. ಕೇಳಿಕೆ ಇಡೀ ರಾತ್ರಿ ನಡೆಯುವ ಸಾಂಪ್ರದಾಯಿಕ ಜನಪದ ಕಲೆ. ವೃತ್ತಿ ರಂಗಭೂಮಿಯ ಶಿಷ್ಟತೆಯನ್ನು ಗಳಿಸಿಕೊಳ್ಳದೆ ಇನ್ನೂ ಜನಪದ ಮಟ್ಟದಲ್ಲೇ ಉಳಿದಿರುವ ಕೇಳಿಕೆ ಪಡುವಲಪಾಯಕ್ಕಿಂತ ಮೂಡಲಪಾಯಕ್ಕೆ ಹೆಚ್ಚು ಸಮೀಪದ್ದು.

ಕೇಳಿಕೆಯ ಇತರ ಲಕ್ಷಣಗಳನ್ನು ಗಮನಿಸಿದಾಗಲೂ ಇದು ವೀಥಿ ನಾಟಕ ಮತ್ತು ಮೂಡಲಪಾಯಗಳಿಗೆ ಹೆಚ್ಚು ಹತ್ತಿರವಾದುದೆಂಬುದು ಸ್ಪಷ್ಟವಾಗುತ್ತದೆ. ಕೇಳಿಕೆಯ ಪ್ರಸಂಗ ಸಾಹಿತ್ಯದ ಗದ್ಯಪದ್ಯಗಳೆರಡೂ ಕವಿ ನಿರ್ಮಿತವಾಗಿರುತ್ತವೆ. ಮಧ್ಯಮಧ್ಯದಲ್ಲಿ ಕೆಲವು ಸಂಭಾಷಣೆಗಳನ್ನು ಮಾತ್ರ ಪಾತ್ರಧಾರಿಗಳು ಹೇಳುವುದುಂಟು.

ಕೇಳಿಕೆ ಪಾತ್ರಧಾರಿಗಳ ವೇಷಭೂಷಣಗಳಿಗೂ ಮೂಡಲಪಾಯ ಸಂಪ್ರಾದಾಯಕ್ಕೂ ಹೆಚ್ಚು ವ್ಯತ್ಯಾಸಗಳಿಲ್ಲ. ಪಡುವಲಪಾಯದಂತೆ ಪಗಡಿ ಸುತ್ತುವ ಕ್ರಮ ಕೇಳಿಕೆಯಲ್ಲ ಇಲ್ಲ. ಕಿರೀಟವನ್ನು, ಎದೆಹಾರವನ್ನು, ಭೂಜಕೀರ್ತಿಗಳನ್ನು ಧರಿಸುವ ಸಂಪ್ರದಾಯವಿದೆ. ಪಾತ್ರಗಳಿಗೆ ತಕ್ಕಂತೆ ಕಿರೀಟಗಳನ್ನು, ಬೇರೆ ಆಭ ರಣಗಳನ್ನು ವೈವಿಧ್ಯಪೂರ್ಣವಾಗಿ ಕಂಗೊಳಿಸುವಂತೆ ಮಾಡುತ್ತಾರೆ. ಕಿರೀಟ, ಎದೆಹಾರ ಮತ್ತು ಭುಜಕೀರ್ತಿಗಳನ್ನು ಹಗುರವಾದ ಮರದಿಂದ ತಯಾರು ಮಾಡುತ್ತಾರೆ.

ಕೇಳಿಕೆಯ ವಾದ್ಯಗಳು ಮೂಡಲಪಾಯದವೇ ಆಗಿವೆ. ಮೂಡಲಪಾಯದ ಮುಖವೀಣೆ ಕೇಳಿಕೆಯಲ್ಲೂ ಕೇಳಿಬರುತ್ತದೆ. ಪಡುವಲಪಾಯ ಸಂಪ್ರದಾಯದಲ್ಲಿ ಮುಖವೀಣೆ ಇಲ್ಲ. ಪಡುವಲಪಾಯದ ಚಂಡೆ ಕೇಳಿಕೆಯಲ್ಲಿಲ್ಲ. ಕೇಳಿಕೆಯ ಮುಖ್ಯವಾದ್ಯಗಳು ಮದ್ದಲೆ, ತಾಳ ಮತ್ತು ಮುಖವೀಣೆ.

ವಿವಿಧ ಆಟಗಳು: ದೊಡ್ಡಾಟ, ಸಣ್ಣಾಟ, ಭಾಗವತರಾಟ, ಬಯಲಾಟ ಮುಂತಾದ ‘ಆಟ’ಗಳ ಸಂಸ್ಕೃತೀಕೃತ ರೂಪವೇ ಕೇಳಿಕೆ. ಸಂಸ್ಕೃತ ‘ಕೇಲಿ’ಯನ್ನು ಕನ್ನಡ ಮತ್ತು ತೆಲುಗು ಭಾಷೆಗಳ ಜಾಯಮಾನಕ್ಕೆ ತಕ್ಕಂತೆ ‘ಕೇಳಿಕೆ’ ಮಾಡಿಕೊಳ್ಳಲಾಗಿದೆ. ಇದು ಪ್ರೇಕ್ಷಕರು ‘ಕೇಳಲು’ ಉದ್ದೇಶಿತವಾದ್ದಾದರಿಂದ ‘ಕೇಳಿಕೆ’ ಎಂದು ಯಾರಾದರೂ ವ್ಯುತ್ಪತ್ತಿಯನ್ನು ಹೇಳುವ ಸಾಧ್ಯತೆ ಇದೆ. ಆದರೆ ತೆಲುಗಿನಲ್ಲಿ ‘ಕೇಳು’ ಎಂಬುದಿಲ್ಲ. ಇದು ಎರಡು ಭಾಷೆಗಳಿಗೂ ಸಂಬಂಧಿಸಿದ ಪದವಾದುದರಿಂದ ಎರಡು ಭಾಷೆಗಳಲ್ಲೂ ಪ್ರಾಚೀನ ಕಾಲದಿಂದ ಬಳಕೆಯಾಗಿರುವುದರಿಂದ ‘ಕೇಳಿಕೆ’ ಸಂಸ್ಕೃತ ಮೂಲದ್ದೇ ಎನ್ನಬಹುದು. ದೇವಾಲಯ ನೃತ್ಯಗಳಲ್ಲಿ ಅಭಿನಯ ಯೋಗ್ಯವಾದ ಕಲೆ ‘ಕೇಳಿಕಾ ನೃತ್ಯ’ ಎಂದಿರುವುದರಿಂದ ‘ಕೇಳಿಕೆ’ ‘ಆಟ’ವೇ ಹೊರತು ಕೇಳುವಂಥದಲ್ಲ.

ನಮ್ಮಲ್ಲಿ ಯಕ್ಷಗಾನ ಆರಾಧನೆಗಳಿಂದ ರೂಪುಗೊಂಡಿದ್ದೆಂಬ ಬಲವಾದ ಅಭಿಪ್ರಾಯವಿದೆ. ಈ ಆಲೋಚನೆಗೆ ಕೇಳಿಕೆ ಪೋಷಕವಾಗಿದೆ. ಹಿಂದಿನ ಕಾಲದ ಕವಿಗಳ ಉಲ್ಲೇಖಗಳು ಕೇಳಿಕೆ ಭಗವಂತನ ಪ್ರೀತ್ಯರ್ಥವಾಗಿ ರೂಪುಗೊಂಡ ಹಾಡು, ನೃತ್ಯ, ಆಟ, ವಿನೋದ ಮುಂತಾದ ಅರ್ಥಗಳನ್ನು ಕೊಡುತ್ತವೆ. ಮೊದಲು ಭಗವಂತನ ಆರಾಧನಾರೂಪವಾಗಿ ಉಗಮಗೊಂಡು, ಅನಂತರ ಕಾಲದಲ್ಲಿ ಮನರಂಜನೆ ಬಯಲಾಟವಾಗಿ ವಿಕಾಸಗೊಂಡ ಜನಪದ ರಂಗ ಸಂಪ್ರದಾಯಗಳಿಗೆ ಕೇಳಿಕೆ ಪ್ರತಿನಿಧಿಯಂತಿದೆ. ಬೇರೆ ಜನಪದ ರಂಗಪ್ರಕಾಗಳು ತಮ್ಮ ರಚನೆಯಿಂದ ಮಾತ್ರ ಆರಾಧನಾ ಸಂಪ್ರದಾಯದ ಕುರುಹುಗಳನ್ನು ಸೂಚಿಸುತ್ತಿದ್ದರೆ, ಕೇಳಿಕೆ ತನ್ನ ಹೆಸರು ಮತ್ತು ಸ್ವರೂಪಗಳಿಂದ ಬಯಲಾಟದ ಪ್ರಾಚೀನ ರೂಪ, ಉಗಮ ಮತ್ತು ಪ್ರಯೋಜನಗಳ ಮೇಲೆ ಬೆಳಕು ಚೆಲ್ಲುತ್ತದೆ.

– ಆರ್.ವಿ.ಎಸ್.