ಕೋಯ ಮೇಳಂ ಇದು ಮನರಂಜನಾ ಪ್ರಧಾನವಾದ ಜಾನಪದ ಪ್ರದರ್ಶನ ಕಲೆ. ಆಂಧ್ರಪ್ರದೇಶದ ಅನೇಕ ಪ್ರಾಂತ್ಯಗಳಲ್ಲಿ ಪ್ರದರ್ಶಿಸಲ್ಪಡುತ್ತದೆ. ಈ ಪ್ರದರ್ಶನದಲ್ಲಿ ಅಡವಿಯ ಜೀವನ ಸೌಂದರ್ಯ, ಅಡವಿಭಾಷೆ, ಅಡವಿ ವೇಷಗಳು ಕಂಡುಬರುತ್ತವೆ. ಇದು ಅನುಕರಣಾತ್ಮಕ ಪ್ರದರ್ಶನ ಕಲೆ. ಕೋಯಿ – ಪ್ರಜೆಗಳಂತೆಯೇ ವೇಷವನ್ನು ಧರಿಸಿಕೊಂಡು ಹೆಣ್ಣುಗಂಡೂ ಸೇರಿ ವೃತ್ತಾಕಾರವಾಗಿ ಸುತ್ತುತ್ತಾ ವಿಭಿನ್ನ ವಿನ್ಯಾಸಗಳನ್ನು ಮಾಡುತ್ತಾ, ಬಗೆಬಗೆಯ ನೃತ್ಯಗಳನ್ನು ಮಾಡುತ್ತಾ, ನೀಡುವ ಪ್ರದರ್ಶನವೇ ಕೋಯ ನೃತ್ಯ. ಇದನ್ನೇ ‘ಕೋಯ ಮೇಳ’ ಎಂದು ಕರೆಯುತ್ತಾರೆ. ಮೇಳ ಎಂದರೆ ಸಮೂಹ ಇಲ್ಲವೆ ಗುಂಪು ಎಂದರ್ಥ.

ಇದು ಸಮೂಹ ನೃತ್ಯ. ಉಭಯ ಗೋದಾವರಿ ಜಿಲ್ಲೆಗಳಲ್ಲಿ ಕೋಯ ಮೇಳಗಳು ಸಾಕಷ್ಟಿವೆ. ಈ ಪ್ರದರ್ಶನದಲ್ಲಿ ೧೦ – ೧೨ ಜನ ಭಾಗವಹಿಸುತ್ತಾರೆ. ಇವರೆಲ್ಲರೂ ಗಂಡಸರೇ. ಸ್ತ್ರೀಯರ ವೇಷವನ್ನು ಇವರೇ ಧರಿಸುತ್ತಾರೆ. ಕೆಲವರು ಸ್ತ್ರೀಯರಾಗಿಯೂ ಕೆಲವರು ಪುರುಷರಾಗಿಯೂ ವೇಷಗಳನ್ನು ಮಾಡಿಕೊಳ್ಳುತ್ತಾರೆ. ಇವರನ್ನು ಜಟ್ಟು (ಜೋಡಿ)ಎನ್ನುವರು. ಗಂಡಸರು ಅಡವಿ ಜನರ ಹಾಗೆ ಮೊಣಕಾಲಿನವರೆಗೆ ಹುಲಿ ಚರ್ಮದಂತಹ ಬಟ್ಟೆಗಳನ್ನು ಉಟ್ಟು, ಹಾರಗಳು, ಮಣಿಗಳನ್ನು ಕೊರಳಿಗೆ ಹಾಕಿಕೊಂಡು, ತಲೆಗೆ ಸಣ್ಣ ಟೇಪು ಅಥವಾ ಬಟ್ಟೆಯ ತುಂಡನ್ನು ಸುತ್ತಿಕೊಂಡು ಕಿರೀಟದಲ್ಲಿ ಹಕ್ಕಿಯ ರೆಕ್ಕೆಯ ಪುಕ್ಕಗಳನ್ನು ಸಿಕ್ಕಿಸುತ್ತಾರೆ. ಕೈಯಲ್ಲಿ ಶೂಲದಂತಿರುವ ಆಯುಧಗಳನ್ನು ಹಿಡಿದು ನೃತ್ಯ ಮಾಡುತ್ತಾರೆ. ಸ್ತ್ರೀ ವೇಷದವರೂ ಸಹ ಅದೇ ಬಗೆಯ ವೇಷಧರಿಸಿ ನೃತ್ಯ ಮಾಡುತ್ತಾರೆ. ಎಲ್ಲ ಕಲಾವಿದರ ಕಾಲುಗಳಲ್ಲಿ ಗೆಜ್ಜೆಗಳಿರುತ್ತವೆ. ಕಿವಿಗಳಲ್ಲಿ ದೊಡ್ಡ, ದೊಡ್ಡ ಓಲೆ ಮತ್ತು ಮಣಿಗಳಿರುತ್ತವೆ. ಈ ಪ್ರದರ್ಶನದಲ್ಲಿ ಅನೇಕ ಜಾಣಪದ ಗೀತೆಗಳು ಸುಶ್ರಾವ್ಯವಾಗಿ ಕೇಳಿಸುತ್ತವೆ. ಉಪಯೋಗಿಸುವ ವಾದ್ಯಗಳೆಂದರೆ ಕಂಜರ, ಎರಡು ತಮಟೆಗಳು, ತಾಳಗಳು, ಇವು ಇವರು ಹಾಕುವ ಪ್ರತಿ ಹೆಜ್ಜೆಗೂ ತಕ್ಕ ಸಂಗೀತವನ್ನು ಕೊಡುತ್ತವೆ. ಕೋಯ ಮೇಳಕ್ಕೆ ನಾಯಕ ‘ಗುರು’. ಇವನನ್ನು ಮೇಸ್ತ್ರಿ ಎಂದು ಮೇನೇಜರ್ ಎಂದೂ ಕರೆಯುತ್ತಾರೆ. ಇವನ ಕೊರಳಲ್ಲಿ ಶಿಳ್ಳೆ ಹೊಡೆಯುವ ಸಾಧನ ಇರುತ್ತದೆ. ಈ ಸಾಧನದಿಂದ ಪ್ರದರ್ಶನ ಪ್ರಾರಂಭಿಸುವುದು, ನಿಲ್ಲಿಸುವುದು, ವೇಗ ಚುರುಕುಗೊಳಿಸುವುದು, ಕಡಮೆ ಮಾಡುವುದು, ಹಾಡು ಹಾಡಲಿಕ್ಕೆ ಮತ್ತು ನಿಲ್ಲಿಸಲು ಕಲಾವಿದರನ್ನು ವ್ಯವಸ್ಥಿತವಾಗಿ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಪ್ರದರ್ಶನವನ್ನು “ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ…..” ಎಂಬ ಗೀತೆಯೊಂದಿಗೆ ಪ್ರಾರಂಭಿಸುತ್ತಾರೆ. ಅನಂತರ ಅನೇಕ ಜನಪದ ಗೀತೆಗಳಿಗೆ ಬಲ ಲಯ ತಪ್ಪದಂತೆ ನೃತ್ಯ ಮಾಡುತ್ತಾರೆ. ನೃತ್ಯ ಮಾಡುತ್ತಲೆ ಮಧ್ಯೆ ಮಧ್ಯೆ ಕೆಲವು ವಿನ್ಯಾಸಗಳನ್ನು ಪ್ರದರ್ಶಿಸುತ್ತಾರೆ. ಅವುಗಳಲ್ಲಿ ಮುಖ್ಯವಾದದ್ದು – ಎಂಟು ಮಂದಿ ಕಲಾವಿದರು ವೃತ್ತಾಕಾರವಾಗಿ ನಿಂತು, ಒಬ್ಬರ ಭುಜದ ಮೇಲೆ ಒಬ್ಬರು ಕೋಲು ಹಿಡಿದುಕೊಂಡು ಆ ಕೋಲಿನ ಮಧ್ಯದಲ್ಲಿ ನಿಂತು, ವಾದ್ಯಗಳಿಗನುಗುಣವಾಗಿ ಮೆಲ್ಲಗೆ ವೃತ್ತಾಕಾರವಾಗಿ ಚಲಿಸುತ್ತಾ ನೃತ್ಯ ಮಾಡುತ್ತಾರೆ. ಆಗಾಗ ಒಬ್ಬ ಕಲಾವಿದ ಬಾಯ್ತುಂಬ ಸೀಮೆ ಎಣ್ಣೆ ತುಂಬಿಕೊಂಡು ಪಂಜನ್ನು ಬೆಳಗಿಸಿ ದೊಡ್ಡದಾಗಿ ಬೆಳಕು ಪ್ರಜ್ವಲಿಸುವಂತೆ ಊದಿ ಆಶ್ಚರ್ಯವನ್ನುಂಟು ಮಾಡುತ್ತಾನೆ. ಇವರು ಹಾಡುವ ಹಾಡುಗಳಲ್ಲಿ ಶೃಂಗಾರರಸ ತಾರಸ್ಥಾಯಿಯನ್ನು ಮುಟ್ಟುತ್ತದೆ. ಅಶ್ಲೀಲ ಪದ ಪ್ರಯೋಗವಿದ್ದು, ಇದು ಜನಪದ ಜೀವನದಲ್ಲಿ ಸರ್ವೇ ಸಾಮಾನ್ಯವಾದ ಅಂಶ. ಆದ್ದರಿಂದಲೇ ಇದು ಇಂದಿಗೂ ಪ್ರಚಲಿತದಲ್ಲಿದ್ದ ಸಂಸ್ಕೃತಿಯ ಪ್ರತಿರೂಪದಂತಿದೆ.

– ಟಿ.ಎಸ್.ಎನ್. ಅನುವಾದ ಎನ್.ಆರ್.

ಕೋರ್ಲಪುನ್ನಮ ಸಂಕ್ರಾಂತಿಗಿಂತ ಮೊದಲು ಬರುವ ಹುಣ್ಣಿಮೆಯನ್ನು ತೆಲುಗರು ಹೀಗೆ ಕರೆಯುವರು. ಇದು ಹಬ್ಬವೇ ಆದರೂ ಈ ದಿನ ಉತ್ಸವ ಆಚರಿಸುವುದಾಗಲಿ ಸಂತೋಷದಿಂದ ಯಾವುದಾದರೂ ಕಾರ್ಯಕ್ರಮಗಳನ್ನು ಮಾಡುವುದಾಗಲಿ ಇರುವುದಿಲ್ಲ. ಇದು ಅಶುಭವನ್ನು ಉಂಟು ಮಾಡುವ ದಿನವೆಂದು ಜನ ಭಾವಿಸುತ್ತಾರೆ. ಈ ಹಬ್ಬದಲ್ಲಿ ಯಾವ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಪ್ರಯಾಣ ಮಾಡುವೆ ಎಂದು ಹೇಳಿ ನಿಲ್ಲಿಸಿಬಿಡುತ್ತಾರೆ. ಈ ಹಬ್ಬಕ್ಕೆ ಮೂರು ನಾಲ್ಕು ದಿನಗಳು ಹಿಂದಿನಿಂದಲೇ ಪ್ರಯಾಣಕ್ಕೆ ಶುಭ ಕಾರ್ಯಗಳಿಗೆ ಅನುಕೂಲವಿಲ್ಲದ ದಿನಗಳು ಎಂದು ಭಾವಿಸುತ್ತಾರೆ. ತೆಲಂಗಾಣದಲ್ಲಿ ಸಹಜವಾಗಿಯೇ ಸಂಕ್ರಾಂತಿಗಿಂತ ಹಿಂದಿನ ದಿನಗಳನ್ನು ಅಶುಭದಿನಗಳೆಂದು ಭಾವಿಸುತ್ತಾರೆ. ಭೀಷ್ಮನು ಅರ್ಜುನನ ಬಾಣಗಳಿಗೆ ತುತ್ತಾದ ಮೇಲೆ ಇಚ್ಛಾಮರಣದ ವರವನ್ನು ಪಡೆದಿದ್ದ. ಅವನು ಆಗಲೇ ತನ್ನ ಪ್ರಾಣವನ್ನು ಬಿಡಲಿಲ್ಲ. ಉತ್ತರಾಯಣ ಪುಣ್ಯಕಾಲದಲ್ಲೇ ತನ್ನ ಪ್ರಾಣವನ್ನು ಬಿಡುವೆನೆಂದು ಅಲ್ಲಿಯವರೆಗೆ ಒಳ್ಳೆಯ ದಿನಗಳು ಇಲ್ಲವೆಂದು ಶರಶಯ್ಯೆಯಲ್ಲಿ ಮಲಗಿದ್ದನು. ಈ ವಿಷಯವನ್ನು ಗಮನಿಸಿದರೆ ಸಂ‌ಕ್ರಾಂತಿಗಿಂತ ಹಿಂದಿನ ದಿನಗಳು ಒಳ್ಳೆಯವಲ್ಲ ಎಂಬ ನಂಬಿಕೆ ಈ ಕಾಲಕ್ಕೆ ಇತ್ತೆಂದು ನಮಗೆ ತಿಳಿಯುತ್ತದೆ. ಸಾಧಾರಣವಾಗಿ ಹಿರಿಯರು ಈ ಹಿಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನಾಗಲಿ ಶುಭ ಕಾರ್ಯಗಳನ್ನಾಗಲಿ ಇಟ್ಟುಕೊಳ್ಳುವುದಿಲ್ಲ. ಇದು ಮಾಮೂಲಿನಂತೆ ಮಾರ್ಗಶಿರ ಮಾಸದಲ್ಲಿ ಬರುತ್ತದೆ. ಆದರೆ ಒಂದೊಂದು ಸಾರಿ ಸಂಕ್ರಾಂತಿಗೆ ಮೊದಲು ಬರುವ ಹುಣ್ಣಿಮೆ ಪುಷ್ಯಮಾಸದಲ್ಲೂ ಬರಬಹುದು. ಏನೇ ಆಗಲಿ ಸಂಕ್ರಾಂತಿಗಿಂತ ಮೊದಲು ಬರುವ ಹುಣ್ಣಿಮೆಯನ್ನೇ ಕೋರ್ಲ ಹುಣ್ಣಿಮೆ ಎಂದು ಭಾವಿಸುತ್ತಾರೆ. ಈ ದಿನಕ್ಕಿಂತ ಒಂದು ದಿನ ಮೊದಲೆ ಪಿಂಡಕ್ಕೆ ಬೇಕಾದ ಅಡುಗೆಯನ್ನು ತಯಾರಿಸುತ್ತಾರೆ. ಕೋರ್ಲಹುಣ್ಣಿಮೆ ಹಬ್ಬಕ್ಕೆ ಕಡುಬು ಅಥವಾ ಪೂರಿ ಮಾಡುತ್ತಾರೆ. ಹಬ್ಬದ ದಿನ ಮುಂಜಾನೆ ಏಳುತ್ತಲೇ ಮುಖವನ್ನು ತೊಳೆಯದೆ ನಾಯಿಯನ್ನು ಕರೆದು ಮಾಡಿದ ಕಡುಬು ಅಥವಾ ಪೂರಿಯನ್ನು ಕಚ್ಚಿ ಅದನ್ನು ತಿನ್ನುತ್ತದೆ. ಹೀಗೆ ಕಚ್ಚಿ ಎಸೆದ ಚೂರನ್ನು ನಾಯಿ ತಿನ್ನುತ್ತಲೇ ಅದರಿಂದ ಹಬ್ಬದ ಮೂಲಕ ಬಂದ ವಿಷ ಹೋಯಿತು ಎಂದು ತಿಳಿಯುತ್ತಾರೆ. ಹಿರಿಯರು ಮಕ್ಕಳು ಎಲ್ಲರಿಗೂ ಕಡ್ಡಾಯವಾಗಿ ಹೀಗೆ ಮಾಡಿ ಆದ ಮೇಲೆ ಮುಖ ತೊಳೆದು ಏನಾದರೂ ತಿನ್ನುವರು ಅಥವಾ ಕುಡಿಯುವರು.

ಆ ದಿನಕ್ಕೆಂದು ಮಾಡಿದ ಆಹಾರ ಪದಾರ್ಥಗಳು ಅಂದೇ ಮುಗಿಯುವಂತೆ ಬಳಸುತ್ತಾರೆ. ಮತ್ತೊಂದು ದಿನಕ್ಕೆಂದು ಇಡುವುದಿಲ್ಲ. ಈ ಹುಣ್ಣಿಮೆಯ ದಿನ ಚಂದ್ರನು ಹೆಚ್ಚು ಬೆಳ್ಳಗಿರದೆ ಸ್ವಲ್ಪ ಕೆಂಪಾಗಿರುವಂತೆ ಮೊದಲು ಹೆಣ್ಣು ಮಗುವನ್ನು ಅತ್ತೆ ಮನೆಗೆಯಿಂದ ಕರೆದು ತರುವುದಾಗಲಿ ಮನೆಗೆ ಬಂದ ಹೆಣ್ಣುಮಗುವನ್ನು ಅತ್ತೆ ಮನೆಗೆ ಕಳುಹಿಸಿ ಕೊಡುವುದಾಗಲಿ ಮಾಡುವುದಿಲ್ಲ. ಈ ಹಬ್ಬಕ್ಕೆಂದು ಹೊಸಬಟ್ಟೆಗಳನ್ನು ಹೊಲಿಸುವುದಿಲ್ಲ, ಹಾಕಿಕೊಳ್ಳುವುದಿಲ್ಲ. ಈ ದಿನ ಯಾರಾದರೂ ಪ್ರಯಾಣ ಮಾಡಿದ ದಾರಿಯಲ್ಲಿ ಏನಾದರೂ ಗಾಯವಾದರೆ ಅಂಥ ಘಟನೆ ಸಂಭವಿಸಿದರೆ ಕೋರ್ಲ ಹುಣ್ಣಿಮೆ ದಿನ ಮಾಡಬೇಡವೆಂದರೆ ಮಾಡಿದ್ದಕ್ಕೆ ಹೀಗೆ ಆಯಿತು ಎಂದು ಹಿರಿಯರು ಹೇಳುತ್ತಾರೆ. ಕೋರ್ಲ ಹುಣ್ಣಿಮೆಗೆ ಸಂಬಂಧಿಸಿದಂತೆ ತೆಲುಗಿನವರಲ್ಲಿ ಇಂತಹ ಹಲವಾರು ನಂಬಿಕೆಗಳಿವೆ.

– ಪಿ.ಎಸ್.ಸಿ. ಅನುವಾದ ವಿ.ಆರ್.

ಕೋಲಂ ತಮಿಳುನಾಡಿನಲ್ಲಿ ಬಣ್ಣ ಬಣ್ಣದ ಗೆರೆ ಎಳೆದು ರಂಗೋಲಿ ಹಾಕುವುದನ್ನು ಕೋಲಂ ಎನ್ನುತ್ತಾರೆ.

ಒಂದು ಕಾಲದಲ್ಲಿ ಮಹಿಳೆಯರು ವಿದ್ಯೆ ಮತ್ತು ಸಾಮಾಜಿಕ ಸ್ಥಾನಮಾನಗಳಿಲ್ಲದೆ ಗೃಹಬಂದಿಯಾಗಿದ್ದರು. ತಮ್ಮ ಭಾವನೆಗಳನ್ನು ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಿಪಡಿಸುವ ಸ್ವಾತಂತ್ರ್ಯ ಅವರಿಗಿರಲಿಲ್ಲ. ಈ ಕಾರಣದಿಂದಾಗಿ ಮನೆಯಲ್ಲಿಯೇ ಇದ್ದುಕೊಂಡು ಹಲವು ಕಲಾಮಾದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರಾರಂಭ ಕಾಲಘಟ್ಟದಲ್ಲಿ ಕಾಲಕಳೆಯುವ ಸಲುವಾಗಿ ಜನ್ಮತಾಳಿದ ಕಲೆಗಳು ಮುಂದೆ ಸ್ಪರ್ಧಾತ್ಮಕ ಮನೋಭಾವದಿಂದ ಹೆಮ್ಮರವಾಗಿ ಬೆಳೆದವು. ಮನೆಯಲ್ಲಿಯೆ ಮೊದಮೊದಲಿಗೆ ವಿನ್ಯಾಸಗೊಂಡ ಕೋಲಂ ಅನಂತರ ವಿಸ್ತಾರವಾಗಿ ಬೆಳೆಯಿತು. ಕರ್ನಾಟಕದಲ್ಲಿ ರಂಗೋಲಿ ಎಂದೂ ಬಂಗಾಳದಲ್ಲಿ ಅಲ್‌ಪನಾ ಎಂದೂ ಕರೆಯಲಾಗುವ ಈ ಜನಪದ ಕಲೆಗೆ ತಮಿಳು ನಾಡಿನಲ್ಲಿ ಕೋಲಂ ಎಂದು ಹೆಸರು. ಈ ಕಲೆ ಭಾರತೀಯ ಪರಂಪರೆಯಲ್ಲಿ ಬೆಲೆದಿದ್ದರೂ ಅದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ತಮಿಳು ಮತ್ತು ಬಂಗಾಳ ಸಂಪ್ರದಾಯಕ್ಕೆ ಒಂದು ನಿಕಟ ಸಂಬಂಧವಿದೆ. ಆದ್ದರಿಂದಲೇ ಈ ಕಲೆಯನ್ನು ಬಂಗಾಳಿ ಕಲೆಯೊಂದಿಗೆ ಹೋಲಿಸುವುದುಂಟು.

ತಮಿಳಿನಲ್ಲಿ ಬಣ್ಣ, ರೂಪ, ಸೌಂದರ್ಯ, ಗುಣ, ವೇಷ ಎಂಬ ಪದಗಳಿಗೆ ಕೋಲಂ ಎಂಬ ಅರ್ಥ ಉಂಟು. ಸ್ತ್ರೀಯರು ತಮ್ಮ ಸೌಂದರ್ಯವನ್ನು ಭಾವನೆಯನ್ನು ಹೊರಹೊಮ್ಮಿಸುವ ಈ ಕಲೆ ಕೋಲಂ ಎಂದೇ ಹೆಸರಾಯಿತು.

ಬಂಗಾಳಿ ಭಾಷೆಯಲ್ಲಿ ‘ಆಲ್‌ಪನಾ’ ಎಂಬುದು ‘ಆಲಿಪನಾ’ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ. ‘ಆಲಿ’ ಎಂದರೆ ಬಂಗಾಳಿ ಭಾಷೆಯಲ್ಲಿ ಹೆಣ್ಣು ಕನ್ಯೆ, ಸಖಿ ಮುಂತಾದ ಅರ್ಥಗಳಿವೆ. ‘ಪನಾ’ ಎಂದರೆ ಕಲಿ, ಗುರುತಿಸು, ತೋರಿಸು ಎಂಬ ಅರ್ಥ ನೀಡುತ್ತದೆ. ಆದ್ದರಿಂದ ಹೆಣ್ಣು ಮಾತ್ರ ಕಲಿಯುವಂಥ ಕಲೆ ಇದೆಂದು ಭಾವಿಸಲಾಗಿದೆ.

ತಮಿಳು ನಾಡು ಮತ್ತು ಬಂಗಾಳ ಎರಡೂ ರಾಜ್ಯಗಳಲ್ಲಿ ಕೋಲಂ ಹಾಕುವುದು ಹೆಣ್ಣು ಮಕ್ಕಳೇ. ಇತ್ತೀಚಿನ ದಿನಗಳಲ್ಲಿ ಪುರುಷರು ಈ ಕಲೆಯನ್ನು ಕಲಿಯುತ್ತಿದ್ದಾರೆ. ಟಿ.ವಿ.ಘೋಷ್ ಎಂಬುವರು ‘ಆಲ್‌ಪನಾ’ ಆರ್ಥಿಕ ನೆಲಯಲ್ಲಿ ಇಲ್ಲದ್ದು ಪೂರ್ಣವಾಗಿ ಸಮಯ ಹರಣದ ಬಗೆಯಲ್ಲಿ ಮಹಿಳೆಯರು ಮಾತ್ರ ಒಳಗೊಂಡು ಪಾಲ್ಗೊಂಡು ಬಂದ ಮುಖ್ಯ ಕಲೆಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ ಈ ಕಲೆಯನ್ನು ವಾಣಿಜ್ಯ ದೃಷ್ಟಿಯಿಂದಲೂ ಕಲಿಯಲಾಗುತ್ತದೆ.

ಪ್ರಾಮುಖ್ಯ: ಮಾನವ ತನ್ನ ಕೈಗೆ ಸುಲಭವಾಗಿ ದಕ್ಕುವ ಸಾಮಗ್ರಿಗಳನ್ನು ಖರೀದಿಸಿ ತನ್ನ ಆಂತರ್ಯದಲ್ಲಿ ಅಡಗಿರುವ ಪ್ರತಿಭೆಯನ್ನು ಅಭಿವ್ಯಕ್ತಿಸುವ ಕಲೆಯಾಗಿ ಇದು ಬೆಳೆದು ಬಂದಿದೆ. ಕಚ್ಚಾ ಪದಾರ್ಥಗಳನ್ನು ಕೊಂಡು ಅತೀ ಸೂಕ್ಷ್ಮ ಕುಸುರಿ ಕೆಲಸಗಳಿಂದ ಅದನ್ನು ಮಾಡಲು ಮನುಷ್ಯ ಉದ್ಯುಕ್ತನಾದಾಗ ಅದನ್ನು ನಾವು ಕೊಂಡಾಡುತ್ತೇವೆ; ಅದನ್ನೊಂದು ಕಲೆ ಎಂದು ಮೆಚ್ಚಿಕೊಳ್ಳುತ್ತೇವೆ.

ಸಾಮಾನ್ಯವಾಗಿ ಅಕ್ಕಿಯನ್ನು ಹಿಟ್ಟು ಮಾಡಿ ಇಲ್ಲವೆ ನೀರಿನಲ್ಲಿ ನೆನೆಹಾಕಿ ಅದನ್ನು ರುಬ್ಬಿ ರಂಗೋಲಿ ಹಾಕಲು ಉಪಯೋಗಿಸುವುದುಂಟು. ಇದನ್ನು ಅಲಂಕರಿಸಲು ಹಲವು ಬಣ್ಣಗಳ ಬಳಕೆಯೂ ಇದೆ. ತಮಿಳು ಸಾಹಿತ್ಯ ಮೂಲಗಳಲ್ಲಿ ರಂಗೋಲಿ ಬಿಡಿಸಲು ಕೆಂಪುಮಣ್ಣನ್ನು ನೀರಿನಲ್ಲಿ ಬೆರೆಸಿ ಅದ್ನನು ಕೋಲಂನ ನಾಲ್ಕು ಕಡಗಳಲ್ಲಿ ಗಡಿಯಾಗಿ ಹಾಕುವ ಪದ್ಧತಿ ಇದೆ. ಇಂತಹ ಹವ್ಯಾಸವನ್ನು ತಮಿಳುನಾಡಿನಾದ್ಯಂತ ಕಾಣಬಹುದು. ಇದರೊಂದಿಗೆ ಗಿಡ ಮೂಲಿಕೆಗಳಿಂದ ಸಿದ್ಧಪಡಿಸಿದ ಹಲವು ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ತಮಿಳು ನಾಡಿನಲ್ಲಿ ಮಾರ್ಗಳಿ ಮಾಸದಲ್ಲಿ (ಶರತ್‌ಕಾಲ) ಪೂರ್ಣವಾಗಿ ತಮ್ಮ ಮನೆ ಬಾಗಿಲಿನಲ್ಲಿ ಬಣ್ಣ ಬಣ್ಣದ ಕೋಲಂಗಳನ್ನು ಬಿಡಿಸುವುದುಂಟು.

ತಮಿಳುನಾಡಿನಲ್ಲಿ ದಿನನಿತ್ಯವು ಬೆಳಗ್ಗೆ ಹಾಗೂ ಸಾಯಂಕಾಲ ಎರಡು ವೇಳೆ ಬೀದಿಯನ್ನು ಸಗಣಿಯಿಂದ ಸಾರಿಸಿ ಕೋಲಂ ಹಾಕುವ ಪದ್ಧತಿ ಇದೆ. ಹಾಗೆಯೇ ಮನೆಯ ಒಳಭಾಗವನ್ನು ನೀರಿನಿಂದ ಶುದ್ಧಗೊಳಿಸಿ ಕೋಲಂ ಬಿಡಿಸುವುದು. ಹಬ್ಬ ಹರಿದಿನ ಮತ್ತು ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಆಕರ್ಷಕವಾದ ಕೋಲಂ ಬಿಡಿಸುವುದು ಇದೆ. ತಮಿಳುನಾಡಿನಲ್ಲಿ ಕೋಲಂ ಹಾಕುವ ಮೊದಲು ನೆಲವನ್ನು ಸಾರಿಸುವುದು ಬಹುಮುಖ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ನವೀನ ಯಂತ್ರೋಪಕರಣಗಳನ್ನು ಬಳಸಿ ರಂಗೋಲಿ ಹಾಕಲಾಗುತ್ತದೆ. ಆದರೆ ಕೈಯಿಂದ ಬಿಡಿಸುವ ಕೋಲಂನ ನೈಜತೆ ಇದಕ್ಕೆ ಬರುವುದಿಲ್ಲ.

ಕೋಲಂನ ಬಗೆಗಳು: ಸಾಮಾನ್ಯವಾಗಿ ಬಣ್ಣವಿಲ್ಲದೆ ಅಕ್ಕಿಹಿಟ್ಟನ್ನು ಮಾತ್ರ ಬಳಸಿ ಕೋಲಂ ಬಿಡಿಸುವುದು ಸಹಜವಾದದ್ದು. ಕೋಲಂಅನ್ನು ಹಲವು ಬಣ್ಣಗಳಿಂದ ಚಿತ್ರಿಸುವುದುಂಟು. ತಮಿಳು ಕೋಲಂಗಳನ್ನು ಕುರಿತು ‘ಕಲೆಯ ಗಣಿ’, ಚುಕ್ಕಿ ಕೋಲಂ, ಗೆರೆಕೋಲಂ, ವೃತ್ತಾಕಾರದ ಕೋಲಂ, ಹೆಣೆದಿರುವ ಕೋಲಂ ಎಂದು ಹಲವು ಬಗೆಯಲ್ಲಿವೆ. ಹಾಗೆಯೇ ರಂಗೋಲಿಯ ಮೂಲಕ ಹೆಸರು, ದೇವರುಗಳು ಮೊದಲಾದವನ್ನು ಬರೆಯಲಾಗುತ್ತದೆ. ಡಾ. ಷಣ್ಮುಖ ಸುಂದರಂ ಅವರು ಹೇಳುವಂತೆ ವೃತ್ತಕೋಲಂ ಚಚ್ಚೌದಕೋಲಂ, ಹೋವುಗಳಿಂದ ರಚನೆ ಮಾಡುವ ಕೋಲಂ ಪ್ರಕೃತಿ ವೈಭವವನ್ನು ವರ್ಣಿಸುವ ಕೋಲಂ ಎಂದು ವಿಭಾಗಿಸಲಾಗಿದೆ.

ತಮಿಳುನಾಡಿನಲ್ಲಿ ಮಂಗಳವಾರ ಮತ್ತು ಶುಕ್ರವಾರಗಳನ್ನು ಪುಣ್ಯದಿನ ಎಂದು ಪರಿಗಣಿಸಿ ಅಂತಹ ದಿನಗಳಲ್ಲಿ ತಾವರೆ ಆಕಾರದ ಹೂವಿನ ಕೋಲಂ ಹಾಕುವುದುಂಟು. ಸಮಯಪ್ರಜ್ಞೆಯುಳ್ಳ ಮಹಿಳೆಯರು ಶಂಖ, ಚಕ್ರ ಮೊಲದಾದವುಗಳನ್ನು ಬಿಡಿಸುವುದುಂಟು. ಬಿಲ್ವಪತ್ರೆಗಳನ್ನು ಉಪಯೋಗಿಸಿ ಕೋಲಂ ಕಾಹುವ ಪದ್ಧತಿಯೂ ಇದೆ.

ತಮಿಳುನಾಡಿನ ದೇವಾಲಯಗಳಲ್ಲಿ ಹಾಕುವ ಮಂದಿರಕೋಲಂ ಪ್ರಸಿದ್ಧವಾದದ್ದು. ದೇವತೆಗಳ ಕೆಟ್ಟದೃಷ್ಟಿ ತಮ್ಮ ಮೇಲೆ ಬೀಳದಿರಲೆಂದು ‘ಆರು ಕೋನಂ’ (ಆರು ಕೋನ), ಏಳು ಕೋನಂ (ಏಳು ಕೋನ)ಗಳ ಕೋಲಂ ಹಾಕಿ ಅವುಗಳ ಮಧ್ಯದಲ್ಲಿ ‘ಶರವಣಭವ’, ‘ಶ್ರೀರಾಮ ಜಯ’, ಜಯ್ ಶ್ರೀರಾಮ್ ಮೊದಲಾದ ದೇವರ ಹೆಸರುಗಳನ್ನು ಚಿತ್ರಿಸುವುದುಂಟು. ನೀರಿನ ಕೆಳಗೆ ಬಿಡಿಸುವ ಕೋಲಂ, ಬೆಂಕಿಯ ಮೇಲೆ ಹಾಕುವ ಕೋಲಂ ಮುಂತಾದವು ವಿಶಿಷ್ಟ ಬಗೆಯವು.

ತಮಿಳುನಾಡಿನ ಕೆಲವು ವರ್ಗದ ಜನರಲ್ಲಿ ಮಾತ್ರ ಅಮಾವಾಸ್ಯೆ, ಸತ್ತವರ ಕಾರ್ಯ ಮಾಡುವ ದಿನಗಳಲ್ಲಿ ರಂಗೋಲಿ ಹಾಕುವ ಪದ್ಧತಿ ಇಲ್ಲ. ಇಲ್ಲಿ ಕೆಂಪು ಮಣ್ಣನ್ನು ನೀರಿನಲ್ಲಿ ಬೆರೆಸಿ ಕೋಲಂ ಇಡಲಾಗುತ್ತದೆಯೇ ಹೊರತು ಅದರ ಧೂಳನ್ನು ಬಳಸಿ ಕೋಲಂ ಹಾಕುವುದಿಲ್ಲ. ಕಪ್ಪು ಇದ್ದಲಿನಿಂದ ಕೋಲಂ ಬಿಡುವ ಪದ್ಧತಿ ಇಲ್ಲ. ಅಕ್ಕಿ ಹಿಟ್ಟಿನಲ್ಲಿ ಕೋಲಂ ಇಟ್ಟರೆ ಎಲ್ಲ ಗೆರೆಗಳನ್ನು ಜೋಡಿ ಜೋಡಿಯಾಗಿ ಬಿಡಿಸುವುದುಂಟು; ಒಂಟಿ ಗೆರೆಗಳಿಂದ ಕೋಲಂ ಬಿಡುವ ಪದ್ಧತಿ ಇಲ್ಲ. ಚಿಕ್ಕ ಮಕ್ಕಳ ಆಟಿಕೆ ಸಾಮಗ್ರಿಗಳಾದ ನೀರನ್ನು ಬಳಸಿ ತಮ್ಮ ಬೆರಳಿನಿಂದ ಗೆರೆಗಳನ್ನು ಹಾಕಲು ಕೂಡ ತಾಯಂದಿರು ತಡೆಹಿಡಿಯುತ್ತಾರೆ. ಒಂಟಿಗೆರೆ ಎಳೆದರೆ, ಇಲ್ಲವೆ ಕೆಂಪು ಮಣ್ಣಿನ ಧೂಳಿನಿಂದ ಗೆರೆ ಎಳೆದರೆ, ಇಲ್ಲವೆ ಕಪ್ಪು ಇದ್ದಲಿನಿಂದ ಗೆರೆ ಎಳೆದರೆ ಇವುಗಳೆಲ್ಲ ಮೃತರನ್ನು ಕುರಿತು ಮಾಡುವ ಕಾರ್ಯವಾದ್ದದ್ದರಿಂದ ಇಂತಹ ಕೋಲಂ ಹಾಕಲು ಮಹಿಳೆಯರು ಇಷ್ಟ ಪಡುವುದಿಲ್ಲ.

ಕೋಲಂ ಕುರಿತ ನಂಬಿಕೆಗಳು: ಒಂದು ಕಾಳಮಿತಿಯಲ್ಲಿ ಕೋಲಂ ಹಾಕುವುದು ಪದ್ಧತಿ. ಬಹುದಿನಗಳವರೆಗೆ ಶಾಶ್ವತವಾಗಿ ನೆಲೆಗೊಳ್ಳಬೇಕೆಂಬ ಅಭಿಪ್ರಾಯದಿಂದ ಸಮಯದ ಮಿತಿಯೊಳಗೆ ಮಾಡುವಾಗ ಅವನ್ನು ಭಯಭಕ್ತಿಯಿಂದ ಮಾಡುವುದರಿಂದ ಅವು ಶಾಶ್ವತವಾಗಿ ನೆಲೆಗೊಳ್ಳಲು ಸಾಧ್ಯವೆಂಬುದು ಜನಪದರ ನಂಬಿಕೆ. ಒಂದು ಕಾಲದಲ್ಲಿ ಸಮಯ ಕಳೆಯಲು ರೂಪುಗೊಂಡು ಕಲೆ ಈಗ ಒಂದು ಕಲೆಯಾಗಿ ರೂಪುಗೊಂಡಿದೆ.

ಹಿಂದೂಗಳನ್ನು ಬಿಟ್ಟರೆ ಅನ್ಯ ಧರ್ಮೀಯರು ಸಾಮಾನ್ಯವಾಗಿ ಕೋಲಂ ಹಾಕುವುದಿಲ್ಲ. ಆದರೂ ಕ್ರೈಸ್ತರಲ್ಲಿ ಕೆಲವು ವರ್ಗದವರು ಕೋಲಂ ಹಾಕುವುದು ಕಂಡು ಬರುತ್ತದೆ. ಹಿಂದೂ ಸಮಾಜದಲ್ಲಿ ಈ ಕಲೆ ಹಾಸುಹೊಕ್ಕಾಗಿದೆ. ಮುಸ್ಲಿಂ ಮತ್ತು ಕ್ರೈಸ್ತರು ಭಾರತಕ್ಕೆ ಬರುವ ಮುನ್ನವೇ ಇಲ್ಲಿ ಕೋಲಂ ಪಸರಿಸಿತ್ತು.

ತಮಿಳುನಾಡಿನಲ್ಲಿ ಬಹುಸಂಖ್ಯಾತರು ಅಕ್ಕಿ ಹಿಟ್ಟಿನಿಂದ ತಮ್ಮ ಮನೆ ಮುಂದೆ ಕೋಲಂ ಬಿಡಿಸುತ್ತಾರೆ. ಅದನ್ನು ದಾಟಿ ಭೂತ ಪ್ರೇತಗಳ ಮನೆಯೊಳಕ್ಕೆ ನುಗ್ಗುವುದಿಲ್ಲ ಎಂಬುದು ಅವರ ಬಲವಾದ ನಂಬಿಕೆ. ಆದ್ದರಿಂದ ಅಮಾವಾಸ್ಯೆ ಮತ್ತು ಸತ್ತವರ ದಿನಗಳಲ್ಲಿ ಕೋಲಂ ಹಾಕುವ ಪದ್ಧತಿ ಬೆಳೆದು ಬಂದಿದೆ.

ಕೋಲಂ ಪ್ರಯೋಜನಗಳು: ಜನಪದ ಕಲೆಗಳಲ್ಲಿ ಇದು ಬಹಳ ಪ್ರಸಿದ್ಧವಾದುದು. ಇಲ್ಲಿಯ ಅಲಂಕಾರ ಚಿತ್ರಗಳು ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತವೆ. ಶುಭ ಕಾರ್ಯಗಳಿಗೆ ಬಳಸಲಾಗುವ ಮಣ್ಣಿನ ಪಾತ್ರೆ (ಮಡಕೆ)ಗಳ ಮೇಲೂ ಕೋಲಂನ ಚಿತ್ತಾರಗಳನ್ನು ಬಿಡಿಸುವುದು ಸರ್ವೇಸಾಮಾನ್ಯವಾಗಿದೆ. ಮೇಜಿನ ಮೇಲೆ ಹಾಕುವ ಬಟ್ಟೆ, ಕಂಬಳಿಗಳು, ಕಿಟಿಕಿಗೆ ಹಾಕುವ ಪರದೆಗಳು ಮೊದಲಾದವುಗಳ ಮೇಲೆ ಕೋಲಂನಂತಹ ಕಸೂತಿ ಕಲೆ ಮಾಡಲಾಗುತ್ತದೆ. ಹೀಗೆ ಕೋಲಂನ ರೂಪವನ್ನು ಜನಪದರು ಸಮರ್ಥವಾಗಿ ಬಳಸಿದ್ದಾರೆ. ಗ್ರಾಮೀಣ ಭಾಗದ ಜನ ಮರದ ದಿಮ್ಮಿ, ಕಲ್ಲು ಮೊದಲಾದವುಗಳ ಮೇಲೂ ಕೋಲಂಅನ್ನು ಬಿಡಿಸಿರುವುದನ್ನು ಕಾಣಬಹುದು. ಕೈವಸ್ತ್ರ, ಹಾಸಿಗೆಯ ಮೇಲ್ಬಟ್ಟೆ ಮೊದಲಾದವುಗಳಲ್ಲೂ ಈ ವೈಶಿಷ್ಟ್ಯಗಳನ್ನು ಕಾಣಬಹುದು.

– ಪಿ.ಎಂ.

ಕೋಲಂ ತುಳ್ಳಲ್ ಭಗವತೀ ದೇವಾಲಯಗಳಲ್ಲಿ ಪಡಯಣಿ ಎಂಬ ಆಚರಣೆಯು ಅಂಗವಾಗಿಯೂ ಮನೆಗಳಲ್ಲಿ ಪ್ರೇತಬಾಧೆ ನೀಗಿಸುವುದಕ್ಕಾಗಿಯೂ ಕೋಲಂ ತುಳ್ಳಲ್ ಎಂಬ ಧಾರ್ಮಿಕ ಕಲಾಪವು ನಡೆಯುತ್ತದೆ. ಇದಕ್ಕೆ ದಕ್ಷಿಣ ಕೇರಳದಲ್ಲಿ ಹೆಚ್ಚು ಪ್ರಚಾರವಿದೆ. ಕೋಲಂನ ಮುಖವರ್ಣಿಕೆಯನ್ನು ಗಣಕ ಸಮುದಾಯವು ಮಾಡಿಕೊಡುತ್ತದೆ. ಸಾಂಬವರ್ ಮುಂತಾದ ಸಮುದಾಯದವರು ಕೋಲಂ ತುಳ್ಳುಲ್‌ನ್ನು ನಡೆಸಿಕೊಡುತ್ತಾರೆ. ಗರ್ಭಿಣಯರು ಮತ್ತು ಕನ್ಯೆಗಳನ್ನು ಬಾಧಿಸುವ ದುರ್ದೇವತೆಗಳನ್ನು ದೂರಮಾಡುವ ‘ವಾತಪಿಣಿ’ ಎಂಬ ಕಾರ್ಯಕ್ರಮವಿದೆ. ಸಾಂಬವರು ಕುಣಿಯುವ ಪ್ರಧಾನವಾದ ಕೋಲಗಳೆಂದರೆ ಯಕ್ಷಿ, ಪಕ್ಷಿ, ಸುಂದರಯಕ್ಷಿ, ಭೈರವಿ, ಗಂಧರ್ವನ್, ಮರುತ ಮತ್ತು ಮಾರನೆಕ್ಷಿ.

ಕೋಲಂ ತುಳ್ಳನ್ ಐತಿಹ್ಯವು ಕಾಳೀ ಸೇವೆಗೆ ಸಂಬಂಧಪಟ್ಟುದು. ದಾರಿಕವಧೆಯ ಬಳಿಕವೂ ಕಾಳಿಯ ಕೋಪವು ಅಡಗಲಿಲ್ಲ. ಆಗ ಶಿವದೇವನು ತನ್ನ ಭೂತಗಳಿಂದ ಕೋಲಗಳನ್ನು ಕಟ್ಟಿಸಿ ಕುಣಿಸಿದ. ಅದನ್ನು ನೋಡಿದ ಕಾಳಿಯ ಕೋಪವು ಶಮನವಾಯಿತು. ಇದರ ನೆನಪಿಗಾಗಿ ಕೋಲಂ ತುಳ್ಳಲ್ ಕಾರ್ಯಕ್ರಮ ನಡೆಯುತ್ತದೆ. ಕೋಲಂ ತುಳ್ಳಲ್‌ಗೆ ಚಾಟ್ಟುಪಾಟುಗಳನ್ನು ಹಾಡುತ್ತಾರೆ. ಗಂಧರ್ವನ್ ಪಾಟ್ಟ್, ಮಾರನ್ ಪಾಟ್ಟ್‌ಗಳನ್ನು ಕೂಡ. ಪ್ರಧಾನ ಸಂಗೀತೋಪಕರಣವು ಮದ್ದಳೆ ಮಾತ್ರ.

ಕಪ್ಪು, ಹಳದಿ, ಕೆಂಪು, ಬಿಳುಪು, ಹಸಿರು ಎಂಬ ಐದು ಬಣ್ಣಗಳಿಂದ ತೆಳುವಾಗಿ ಸಿಪ್ಪೆತೆಗೆದೆ ಕಂಗಿನ ಹಾಳೆಗಳಲ್ಲಿ ಕೋಲಗಳ ಮುಖ ವರ್ಣಿಕೆಯನ್ನು ರಚಿಸಲಾಗುತ್ತದೆ. ಮಾವಿನ ಎಲೆಯನ್ನು ಕಪ್ಪಾಗಿಸಿ, ಬಾಡಿಸಿ ಅದನ್ನು ಅರೆದುಕೊಂಡು ಕಪ್ಪು ಬಣ್ಣವನ್ನೂ ಕೆಂಗಲ್ಲನ್ನು ಅರೆದು ಕೆಂಬಣ್ಣವನ್ನೂ ಹಿಂಭಾಗವನ್ನು ಕೆತ್ತಿದ ಹಾಳೆಯಿಂದ ಹಸಿರು ಬಣ್ಣವನ್ನೂ ತಯಾರಿಸುತ್ತಾರೆ. ತೆಂಗಿನ ಎಳೆಯ ಗರಿಯಿಂದ ಕಡ್ಡಿಯನ್ನು ತೆಗೆದು ಗರಿಯ ತುದಿಯನ್ನು ಜಜ್ಜಿ ಕುಂಚಗಳನ್ನು ತಯಾರಿಸಲಾಗುತ್ತದೆ. ಬಣ್ಣಗಳನ್ನು ಇರಿಸಿಕೊಳ್ಳಲು ಕಂಗಿನ ಹಾಳೆಯಿಂದ ತಯಾರಿಸಲಾಗುತ್ತದೆ. ಬಣ್ಣಗಳನ್ನು ಇರಿಸಿಕೊಳ್ಳಲು ಕಂಗಿನ ಹಾಳೆಯಿಂದ ಚಿಕ್ಕ ಪಾತ್ರೆಗಳನ್ನು ನಿರ್ಮಿಸಿ ಹಾಳೆಯಿಂದ ಚಿಕ್ಕ ಪಾತ್ರೆಗಳನ್ನು ನಿರ್ಮಿಸಿಕೊಳ್ಳಲಾಗುತ್ತದೆ ಅಥವಾ ಗೆರಟೆಯನ್ನು ಬಳಸಿಕೊಳ್ಳಲಾಗುವುದು. ಕೆತ್ತಿ ಸಿದ್ಧಪಡಿಸಿಕೊಂಡ ಬೇರೆ ಬೇರೆ ಹಾಳೆಗಳಲ್ಲಿ ಒಂದೊಂದು ಭಾಗಗಳನ್ನು ಬೇರೆ ಬೇರೆಯಾಗಿ ಬರೆದು ಕೋಲಗಳ ಗಾತ್ರಕ್ಕನುಗುಣವಾಗಿ ರಚಿಸಿದ ಹಂದರಗಳಲ್ಲಿ ಹಸಿ ಮಡಲ ಕಡ್ಡಿಗಳಿಂದ ಜೋಡಿಸಿ ಕಟ್ಟೆ ಕೋಲಗಳನ್ನು ಸಿದ್ಧಪಡಿಸುತ್ತಾರೆ. ಒಂದೊಂದು ದೇವತೆಗೂ ಒಂದೊಂದು ರೂಪವಿರುತ್ತದೆ, ವೇಷವಿರುತ್ತದೆ. ಆ ರೂಪಗಳ ಮುಖವರ್ಣಿಕೆ ಮಾಡಿಕೊಂಡಾಗ ಕೋಲಗಳು ಸಿದ್ಧವಾದಂತೆಯೇ. ಭೈರವಿಯ ಕೋಲಕ್ಕೆ ನೂರ ಒಂದು ಹಾಳೆಗಳು, ಚಟ್ಟತ್ತೆ, ಕೋಲಕ್ಕೆ ಸಾವಿರದ ಒಂದು. ಮುಖವಾಡ ರೀತಿಯ ಕಿರೀಟ ಮಾತೃಕೆಯಲ್ಲಿರುವ ಕೋಲಗಳೂ ಇವೆ. ಪಿಶಾಚ, ಮರುದ ಮುಂತಾದ ಕೋಲಗಳು ಕಿರೀಟ ಮಾತ್ರಕೆಯಲ್ಲಿವೆ. ಭೈರವಿ, ಕಾಂಞಿರಮೂಲ ಮುಂತಾದ ಕೋಲಗಳನ್ನು ತಲೆಯ ಮೇಲೆ ಹೊತ್ತು ಎರಡು ಕೈಗಳಿಂದ ಅವುಗಳ ಹಿಂಭಾಗದಲ್ಲಿನ ಅಡ್ಡಕಟ್ಟಿಗೆಯನ್ನು ಆಧರಿಸಿ ಕುಣಿಯುತ್ತಾರೆ. ಚಟ್ಟತ್ತೆ ಕೋಲವು ಸಿಡಿಯಾಡುತ್ತ ರಂಗಕ್ಕೆ ಬರುತ್ತದೆ. ಮೊದಲು ಕುಣಿಯುವುದು ಗಣಪತಿ ಕೋಲ. ಕೆವವೆಡೆಗಳಲ್ಲಿ ಗಣಪತಿ ಕೋಲ ಎಂಬ ಹೆಸರಲ್ಲಿ ಪಿಶಾಚಿ ಕೋಲವು ಕುಣಿಯುತ್ತದೆ. ಕಳದ ಸುತ್ತ ಉರಿಯುತ್ತಿರುವ ಬೆಂಕಿಯ ಬೆಳಕಲ್ಲಿ ಕೋಲವು ಕುಣಿಯುತ್ತದೆ. ಯಾವುದೇ ಕೋಲವು ಪೂರ್ವಾಭಿಮುಖವಾಗಿ ನಿಂತು ಗಣಪತಿಯನ್ನು ಸ್ತುತಿಸುತ್ತ ‘ಪಡಿವಟ್ಟ’ ಎಂಬ ವಿಶೇಷ ನೃತ್ಯವನ್ನು ಮಾಡಿದ ಬಳಿಕವಷ್ಟೆ ರಂಗವನ್ನು ಪ್ರವೇಶಿಸುತ್ತದೆ. ವಾದ್ಯಮೇಳದ ಹಿನ್ನೆಲೆಯಲ್ಲಿ ನರ್ತಿಸುವಾಗ ಒಂದು ಸಂದರ್ಭದಲ್ಲಿ ಅಲ್ಲಿಯವರೆಗೆ ಅದೃಶ್ಯವಾಗಿದ್ದ ದೇವತೆ, ಕೂಗನ್ನು ಕೇಳಿ ಕಾಳಕ್ಕೆ ಒಂದು ಕೋಲದಲ್ಲಿ ಸೇರಿಕೊಳ್ಳುತ್ತದೆ. ಮುಂದೆ ನರ್ತಿಸುವುದು ದೇವತೆಯೇ ಹೊರತು ಮನುಷ್ಯನಲ್ಲ. ಆಗ ಜನ ಮಾನಸದಲ್ಲಿ ಭಕ್ತಿ, ಆಹ್ಲಾದಗಳು ತುಂಬಿ ತುಳುಕಾಡುತ್ತವೆ. ಆರ್ಪ್‌ (=ಗಂಡಸರು ಮಾಡುವ ಒಂದು ತೆರನ ಆಹ್ಲಾದ ಧ್ವನಿ) ಮತ್ತು ಕುರವೆಗಳಿಂದ (ಅಂಥದೇ ಇನ್ನೊಂದು ತೆರನದ್ದು) ಲವಲವಿಕೆಯ ಪರಿಸರವು ನಿರ್ಮಾಣವಾಗಿ ದೇವತೆ ಆವೇಶದಿಂದ ಕುಣಿದು ಜನರು ದೇವತೆಯ ಬಲಿಯನ್ನು ಕಂಡ ಬಳಿಕ ರಂಗವು ಖಾಲಿಯಾಗುತ್ತದೆ, ದೇವತೆಯೂ ಅಂತರ್ಧಾನವಾಗುತ್ತದೆ ಎಂದು ನಂಬಿಕೆಯಿದೆ.

ಮನೆಗಳಲ್ಲಿ ಅದಕ್ಕಾಗಿಯೇ ನಿರ್ಮಾಣವಾದ ವೇದಿಕೆಯಲ್ಲಿ ಕೋಲಂತುಳ್ಳಲ್‌ ನಡೆಯುತ್ತದೆ. ಗೊನೆಬಾಳೆ, ಹೂಗೊಂಚಲು, ತೆಂಗಿನ ಎಳೆಯಗರಿ ಮುಂತಾದವುಗಳಿಂದ ಅಲಂಕೃತವಾದ ಚಪ್ಪರದಲ್ಲಿ ಕಾಲುದೀಪವನ್ನು ಉರಿಸಿಡಬೇಕು. ಪಡಯಣಿಯಲ್ಲಿನ ಕೋಲಗಳು ಬೇರೆ ಬೇರೆ ಜಾತಿಯ ಜನರ ಸಾಂಘಿಕ ಯತ್ನದ ಫಲಗಳಾಗಿವೆ. ಕೋಲಂಗಳಿಗೆ ಅಗತ್ಯವಾದ ಕಂಗಿನ ಹಾಳೆ, ಸೂಟೆ, ತೆಂಗಿನ ಗರಿ – ಇವನ್ನು ಅಕ್ಕಸಾಲಿಗ; ದಫ್ ವಾದ್ಯವನ್ನು ಸಿದ್ಧಪಡಿಸಲು ಅಗತ್ಯವಾದ ದನದ ಚರ್ಮವನ್ನು ಪರಯ; ಕೋಲಗಳ ಮುಖವರ್ಣಿಕೆಯ ಬರೆಯುವುದು ಮತ್ತು ‘ಪೊಪ್ಪಡ’ದಲ್ಲಿ ಕುಳಿತುಕೊಳ್ಳುವುದನ್ನು ಮಾರನ್; ಹಾಡುಗಾರಿಕೆಯನ್ನು ಗಣಕ; ಕೋಲಂಗಳೀಗೆ ಅಗತ್ಯವಾದ ಚೌಕಟ್ಟುಗಳನ್ನು ಬಡಗಿ; ಬೆಳಕಿಗಾಗಿ ಸೂಟೆ ಉರಿಸುವುದನ್ನು ಕುರವ; ಭಗವತಿಯ ಉಡುಪು, ಪಂಚದೀವಟಿಗೆ ಪಂಜುಗಳಿಗೆ ಬೇಕಾದ ಮಡಿಬಟ್ಟೆಯನ್ನು ಪದಿಯಾನ್/ ವಣ್ಣಾನ್; ಪಂಚದೀವಟಿಗೆ ಪಂಜುಗಳಿಗೆ ಎಣ್ಣೆಹೊಯ್ಯುವುದು ಮಾರಾನ್ – ಹೀಗೆ ಸಿದ್ಧಪಡಿಸುವ, ಒದಗಿಸುವ, ಅಗತ್ಯ ಸೇವೆ ನೀಡುವ ಕೆಲಸಗಳು ಪರಸ್ಪರ ಕರ್ತವ್ಯ ಪ್ರಜ್ಞೆ – ಸಹಕಾರಗಳಿಂದ ನಡೆಯುತ್ತವೆ.

ಶತಮಾನಗಳ ಕಾಲದ ಜೀವನಾನುಭವಗಳನ್ನೂ ನಂಬುಗೆಗಳನ್ನೂ, ಬೆಸೆದು ಮಧ್ಯತಿರುವಾಂಕೂರಿನ ಮಣ್ಣಲ್ಲಿ ಒಂದು ಕಾಲದಲ್ಲಿ ಕೋಲಂ ತುಳ್ಳಲ್ ಜನಮಾನಸದಲ್ಲಿ ಸ್ಥಾನ ಪಡೆದಿತ್ತು.

– ಕೆ.ಎಸ್.ಎಚ್. ಅನುವಾದ ಕೆ.ಕೆ.

ಕೋಲ ಸಂಬರಂ ಇದು ಭಕ್ತಿಪ್ರಧಾನವಾದ ಪ್ರದರ್ಶನ ಕಲೆ. ಇದರಲ್ಲಿ ಕಥೆ, ಗದ್ಯ, ಗೀತೆ, ಅಭಿನಯ, ಅನುಕರಣೆ, ವೇಷಧಾರಣೆ ಮೊದಲಾದವುಗಳನ್ನೆಲ್ಲ ಒಳಗೊಂಡಿರುತ್ತದೆ. ಕಲಾವಿದರ ಅನೇಕ ಕಥೆಗಳನ್ನು ಮಾಡುವರು. ಪ್ರಧಾನವಾದುದುದ ವೆಂಕಟೇಶ್ವರಸ್ವಾಮಿ ಕಥೆ, ಕೋಲಿನ ಆಧಾರದಿಂದ ಮಾಡುವ ಕಲೆಯಾದ್ದರಿಂದ ಇಕದ್ಕೆ ಕೋಲ ಸಂಬರಂ (ಕೋಲಿನ ವಿನೊದ) ಎಂಬ ಹೆಸರು ಬಂದಿದೆ. ಪ್ರಧಾನ ಕಥೆಗಾರ ಕೋಲನ್ನು ಕೈಯಲ್ಲಿ ಹಿಡಿದು ಅತ್ತಿತ್ತ ತಿರುಗುತ್ತ ಕಥೆಯನ್ನು ನಡೆಸುತ್ತಾನೆ. ಈ ಕೋಲನ್ನು ‘ಗೌರಿಬೆತ್ತ’ ಎಂದು ಕರೆಯುತ್ತಾರೆ. ಇದು ಕಪ್ಪಗೆ ಇರುತ್ತದೆ. ಈ ಬೆತ್ತದ ಸುತ್ತ ಅಲ್ಲಲ್ಲಿ ಹಿತ್ತಾಳೆಯ ಕಟ್ಟುಗಳನ್ನು ಮಾಡಿರುತ್ತಾರೆ. ಇವು ಹನ್ನೆರಡು – ಹದಿನಾರು, ಹದಿನೆಂಟು – ಇಪ್ಪತ್ತಮೂರರವರೆಗೆ ಇರುತ್ತದೆ. ‘ಕೋಲ’ ಎಂದರೆ ಪಂಜಿನಂತಹ ಮತ್ತೊಂದು ಸಾಧನವೂ ಹೌದು. ಹಸಿರು ಚಪ್ಪರದ ಒಳಗೆ ಒಂದು ಮೂಲೆಯಲ್ಲಿ ಒಂದು ಪೀಠವನ್ನು ಹಾಕಿ ಅದರ ಮೇಲೆ ವೆಂಕಟೇಶ್ವರ ಸ್ವಾಮಿಯ ಚಿತ್ರಪಟ ಅಥವಾ ದುರ್ಗಮ್ಮನ ಪಟವನ್ನಿಟ್ಟು ಪಂಜನ್ನು ಬೆಳಗಿಸುವರು. ಅದು ಕಾರ್ಯಕ್ರಮ ಮುಗಿಯುವವರೆಗೂ ಉರಿಯುತ್ತಲೇ ಇರುತ್ತದೆ. ಹಾಗೆ ಬೆಳಗುವ ಪಂಜನ್ನು ಆಧಾರ ಮಾಡಿಕೊಂಡು ಮಾಡುವ ಕಾರ್ಯಕ್ರಮವಾದ್ದರಿಂದ ಪಂಜಿನ ಕಾರ್ಯ ಎಂಬ ಹೆಸರೂ ಬಂದಿದೆ.

ಪ್ರಧಾನ ಕಥೆಗಾರರನ್ನು ‘ಗುರು’ ಎಂದು ಕರೆಯುತ್ತಾರೆ. ಆತನ ಬಲಗೈಯಲ್ಲಿ ಗೌರಿಬೆತ್ತ, ಎಡಗೈಯಲ್ಲಿ ನವಿಲುಗರಿಗಳ ಕುಚ್ಚು ಇರುತ್ತದೆ. ಕೊರಳಲ್ಲಿ ವಿವಿಧ ಬಗೆಯ ಮಣಿಗಳು, ಸರಗಳು, ಹಾಕಿಕೊಂಡು ಹಣೆಗೆ ನಾಮ ಕೈಗೆ, ಮಣಿಕಟ್ಟು ಮೇಲೆ ವಿಭೂತಿಯನ್ನು ಅಲಂಕರಿಸಿಕೊಂಡು ಕಥೆ ಪ್ರಾರಂಭಿಸುತ್ತಾನೆ. ಈ ಪ್ರದರ್ಶನದಲ್ಲಿ ಸರಿಸುಮಾರು ೧೬ರಿಂದ ೧೮ ಜನ ಕಲಾವಿದರು ಪಾಲ್ಗೊಳ್ಳುತ್ತಾರೆ. ಇವರಲ್ಲಿ ಒಬ್ಬರೂ ಇಬ್ಬರೂ ಮಕ್ಕಳು ಇರುವರು. ಇವರು ಹೇಳುವ ಕಥೆಗಳಲ್ಲಿ ಒಬ್ಬರೂ ಇಬ್ಬರೂ ಮಕ್ಕಳು ಇರುವರು. ಇವರು ಹೇಳುವ ಕಥೆಗಳಲ್ಲಿ ಒಂದು ವೆಂಕಟೇಶ್ವರ ಕಥೆ, ಎರಡನೆಯದು ದುರ್ಗಮ್ಮನ ಕಥೆ, ಇವುಗಳನ್ನು ವೆಂಕಟಬಾಬು ಸಂಬರಂ (ಸಂಭ್ರಮ ಅಥವಾ ವಿನೋದ) ಸಂಬರಂ ದುರ್ಗಮ್ಮ ಎಂದೂ ಕರೆಯುವರು. ಈ ಪ್ರದರ್ಶನದಲ್ಲಿ ದೊಡ್ಡದಾದ ಹಿತ್ತಾಳೆ ತಾಳಗಳನ್ನು ವಾದ್ಯಗಳಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಭಾಗವಹಿಸುವವರೆಲ್ಲ ಪುರುಷರೇ. ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಾರೆ. ಪ್ರಧಾನ ಕಥೆಗಾರ ಗೋವಿಂದನ ನಾಮ ಸ್ಮರಣೆಯಿಂದ ಕಥೆಯನ್ನು ಪ್ರಾರಂಭಿಸುತ್ತಾನೆ. ಗ್ರಾಮದೇವತೆಗಳಿಗೆಲ್ಲ ನಮಸ್ಕರಿಸಿ, ಗುರುವನ್ನು ಧ್ಯಾನಿಸಿ, ಮೂಲಕಥೆ ಹೇಳಲಾರಂಭಿಸುತ್ತಾನೆ. ‘ಮಾರುತಿ ಮೆರುಪುಲ(ಮಿಂಚುಹುಳ) ರಮಣಾ ಗೋವಿಂದಾ’ ಎಂದು ಹಾಡುತ್ತಾರೆ. ಸಹ ಕಲಾವಿದರು ಧ್ವನಿಗೂಡಿಸುತ್ತಾ ತಾಳ ಹಾಕುತ್ತಾ, ಗುರುವಿಗೆ ನಮಸ್ಕರಿಸುತ್ತಾ ಗುರುವಿಗೆ ಸಹಕಾರ ನೀಡುತ್ತಾರೆ. ಪ್ರದರ್ಶನದ ಆರಂಭ ಆದಿಶಕ್ತಿಯೊಂದಿಗೆ ಆಗುತ್ತದೆ. ಆದಿಶಕ್ತಿಗೆ ಭಯಕೆ ಹುಟ್ಟಿಬರುವುದು, ತ್ರಿಮೂರ್ತಿಗಳನ್ನು ಕೇಳುವುದು, ಕೋಪದಿಂದ ಬ್ರಹ್ಮನನ್ನೂ, ವಿಷ್ಣುವನ್ನು ಭಸ್ಮ ಮಾಡುವುದು, ಶಂಕರನ ಬಳಿಗೆ ಬರುವುದು, ಶಂಖರ ‘ನನಗೆ ಅರ್ಧ ಶಕ್ತಿ ಕೊಟ್ಟರೆ’ ಆಗಬಹುದೆನ್ನಬಹುದು. ಕೊನೆಗೆ ಆದಿಶಕ್ತಿಯನ್ನು ಮೂರನೇ ಕಣ್ಣಿಂದ ಸುಟ್ಟು ಬ್ರಹ್ಮನನ್ನು ವಿಷ್ಣುವನ್ನು ಸೃಷ್ಟಿಸುವುದು, ಅನಂತರ ಭಸ್ಮದ ಒಂದು ಗುಡ್ಡಯಿಂದ ಆದಿಶಕ್ತಿಯನ್ನು ಸೃಷ್ಟಿಸುವುದು, ದುರ್ಗಾದೇವಿ ವೆಂಕಟೇಶ್ವರನಿಗೆ ಅಕ್ಕನಾಗುವುದು ಇಂತಹ ಕಥೆ ಇದರಲ್ಲಿ ಕಾಣಿಸುತ್ತದೆ. ಕೋಲು ಸಂಭ್ರಮದಲ್ಲಿ ೧೯ ಪಾತ್ರಗಳಿರುತ್ತವೆ. ಆದಿಶಕ್ತಿ, ನಾರದ, ಭೃಗು ಮಹರ್ಷಿ, ಗೊಲ್ಲರ ಗೋಪಣ್ಣ., ಲಕ್ಷ್ಮಿದೇವಿ, ವಿಷ್ಣುಮೂರ್ತಿ, ದುರ್ಗಮ್ಮ, ಪಾಂಚಾಲಿ, ಧರಣಿದೇವಿ, ಹಸುಕರು, ಶ್ರೀನಿವಾಸ, ಪದ್ಮಾವತಿ, ಅಗಸರ ಸುಬ್ಬಯ್ಯ, ಅಗಸರ ಅಚ್ಚಮ್ಮ ಮೊದಲಾದವು. ಈ ಪ್ರದರ್ಶನ ಬೆಳಗಿನ ಜಾವ ಕೋಳಿ ಕೂಗುವುದರೊಂದಿಗೆ ಮುಗಿಯುತ್ತದೆ. ಕೊನೆಯಲ್ಲಿ ದುರ್ಗಮ್ಮನ ಪೂಜೆ ಇರುತ್ತದೆ. ಆಗ ‘ಪೊಂಗು ಬೂರೆಲು’ ಎಂಬ ಪದಾರ್ಥವನ್ನು ದುರ್ಗಮ್ಮನಿಗೆ ನೈವೇದ್ಯವಾಗಿಟ್ಟು ಮಂಗಳ ಹಾಡಿ ಕಥೆ ಮುಗಿಸುತ್ತಾರೆ. ಪೂರ್ವ ಗೋದಾವರಿ ಜಿಲ್ಲೆಯ ‘ಎಲ್ಲ’ ಎಂಬ ಹಳ್ಳಿ ಕೋಲು ಸಂಭ್ರಮಕ್ಕೆ ತವರು ಮನೆ ಇದ್ದಂತೆ.

– ಟಿ.ಎಸ್.ಎನ್. ಅನುವಾದ ಎನ್.ಆರ್.