ಕೊಮ್ಮುಲವಾರು ತೆಲುಗುನಾಡಿನ ಅತ್ಯಂತ ಮಹತ್ತ್ವದ ಕೆಲವೇ ಕೆಲವು ಜನಪದ ಮಹಾಕಾವ್ಯ ಪರಂಪರೆಗಳಲ್ಲಿ ಕಾಟಮರಾಜನ ಕತೆ ಒಂದು. ಈ ಸುದೀರ್ಘ ಮಹಾಕಾವ್ಯವನ್ನು ಗಾನ ಮಾಡುವವರು ಕೊಮ್ಮುಲವಾರು. ಇವರು ದಲಿತರು, ತಾವು ಜಾಂಬವಂತನ ವಂಶದವರೆಂದು ಹೇಳಿಕೊಳ್ಳುತ್ತಾರೆ. ಇವರನ್ನು ಚಿತ್ತೂರು ಜಿಲ್ಲೆಯಲ್ಲಿ ‘ಬಟ್ಟುವಾರು’ ಎಂದು ಕೂಡ ಕರೆಯುತ್ತಾರೆ. ತೆಲುಗುನಾಡಿನ ಮುಖ್ಯ ಲೌಕಿಕ ಗಾಯಕರಲ್ಲಿ ಇವರನ್ನು ಕೂಡ ಹೇಳಬೇಕು.

ಕೊಮ್ಮುಲವಾರು ಯಾದವರನ್ನು ಭಿಕ್ಷೆ ಬೇಡಿ ಜೀವನ ನಡೆಸುತ್ತಾರೆ. ಯಾದವರ ಗೋತ್ರಗಳನ್ನು ಹೇಳುತ್ತಾರೆ. ಕಾಟಮರಾಜನ ಕತೆಯ ಜೊತೆಗೆ ವಿಷ್ಣುಭಾಗವತ ಅಥವಾ ಕಂಸನಕತೆಯನ್ನು ಹೇಳುತ್ತಾರೆ. ಈ ಕತೆಗಳನ್ನು ಹಾಡುವಾಗ ಇವರು ವೀರಣ, ತಿತ್ತಿ ತಾಳ, ಮತ್ತು ಕೊಮ್ಮು (ಕೊಂಬು) ಎಂಬ ವಾದ್ಯಗಳನ್ನು ಬಳಸುತ್ತಾರೆ. ತಮ್ಮ ವಂಶದ ಕತೆಯನ್ನು ಹೇಳುವುದರಿಂದ ಮತ್ತು ವೀರಕಥಾ ಸಂಪ್ರದಾಯವನ್ನು ಮುಂದುವರಿಸುತ್ತಿರುವುದರಿಂದ ಯಾದವರು ಇವರ ಮೇಲೆ ತುಂಬ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಇವರ ಬಳಿ ಕಾಟಮರಾಜನ ಕಥೆಗಳ ಓಲೆಗರಿಗಳು ಕೂಡ ಸಿಕ್ಕುತ್ತವೆ. ಅಲ್ಲದೆ ಮೌಖಿಕ ರೂಪದಲ್ಲಿಯೂ ಈ ಮಹಾಕಾವ್ಯವನ್ನು ಅವರು ಉಳಿಸಿಕೊಂಡಿದ್ದಾರೆ.

ಗಂಗಮ್ಮನ ಜಾತ್ರೆಗಳಲ್ಲಿ ಈ ಗಾಯಕರು ಪಾಲ್ಗೊಂಡು ಕೊಂಬುಗಳನ್ನು ಊದುತ್ತಾ ಕಾಟಮರಾಜನ ಕಥೆಗಳ ಗಾನ ಮಾಡುವರು. ಪಲನಾಡಿನ ವೀರರ ಕತೆಗಳನ್ನು ಹಾಡುವ ಹಕ್ಕು ವೀರವಿದ್ಯಾವಂತರಿಗೆ ಇರುವಂತೆಯೇ ಕಾಟಮರಾಜನ ಕತೆಗಳನ್ನು ಹಾಡುವ ಹಕ್ಕು ಈ ಗಾಯಕರಿಗಿದೆ.

ಎರ್ರ‍ಗಡ್ಡಪಾಡು ಎಂಬ ಪ್ರದೇಶದಲ್ಲಿ ಯುದ್ಧ ನಡೆದ ಮೇಲೆ ಭಕ್ತಿರನ್ನ ಎಂಬಾತ ಈ ಗಾಯಕರನ್ನು ಕರೆದು ಕಾಟಮರಾಜನ ಕತೆ ಹಾಡುವುದಕ್ಕೆ ಅನುಮತಿಯನ್ನು ಕೊಟ್ಟನೆಂದು ಹೇಳುತ್ತಾರೆ. ಈ ಗಾಯಕರು, ಹಳ್ಳಿ ಹಳ್ಳಿಗೆ ತಿರುಗುತ್ತಾ ಕಾಟಮರಾಜನ ಕಥಾಗಾನ ಮಾಡುತ್ತಾರೆ. ಇವರು ಯಾವ ಯಾದವನ ಮನೆಯ ಮುಂದೆ ಕತೆಯನ್ನು ಹೇಳಿದರೂ ಆತ ಇವರನ್ನು ಸನ್ಮಾನಿಸಲೇ ಬೇಕು. ಹಾಗೆ ಮಾಡದಿದ್ದರೆ ಕೊಮ್ಮುಲವಾರು ಅವನ ಮನೆಯ ಮುಂದೆ ಗುಡಾರ ಹೂಡುತ್ತಾರೆ. ಹೀಗೆಂದು ಭಕ್ತಿರನ್ನ ಶಾಸನ ಮಾಡಿದನು. ಈ ಗಾಯಕರಿಗೆ ಮನ್ನಣೆ ತೋರದಿದ್ದರೆ ಇವರು ಆ ಗುಡಾರವನ್ನು ನೆಲಸಮ ಮಾಡುತ್ತಾರಂತೆ, ಹಾಗೆ ಮಾಡಿದರೆ ಆ ಮನೆಯಲ್ಲಿರುವ ಯಾದವರೆಲ್ಲ ನಾಶವಾಗುತ್ತಾರೆಂಬ ನಂಬಿಕೆ ಇದೆ. ಆದ್ದರಿಂದ ಈ ಗಾಯಕರಿಗೆ ಯಾದವರು ತುಂಬ ಗೌರವ ತೋರಿಸುತ್ತಾರೆ.

ಕಾಟಮರಾಜನ ಕತೆಗಳನ್ನು ಹಾಡುವವರ ಬಳಿ ಗುಡಾರ, ಕೊಂಬು, ವೀರಣ್ಣ ಹಸು, ವೀರ ಹಗ್ಗ ಮತ್ತು ಬಸವದೇವ’ ಎಂಬ ಆರು ಅಮೂಲ್ಯ ವಸ್ತುಗಳು ಇರುತ್ತವೆ. ಅದರೊಳಗೆ ಯಾದವರಿಗೆ ಇಷ್ಟದೇವತೆಗಳಾದ ಗಂಗೆಯನ್ನು, ಕಾಟಮರಾಜನ ಕತೆಯಲ್ಲಿ ಬರುವ ಮುಖ್ಯ ಸನ್ನಿವೇಶಗಳನ್ನು ಬಣ್ಣ ಬಣ್ಣಗಳಿಂದ ಚಿತ್ರಿಸಿದ ದೊಡ್ಡ ಬಟ್ಟೆಗಳನ್ನು ಅಂಟಿಸುತ್ತಾರೆ. ಇವುಗಳಿಗೆ ‘ತೆರಚೀರ’ (ತೆರೆಸೀರೆ) ಎಂದು ಹೆಸರು. ಇವುಗಳಿಂದಾಗಿ ಈ ಗಾಯಕರಿಗೆ ತೆರೆಸೀರೆ ಭಕ್ತರು ಎಂಬ ಹೆಸರು ಬಂದಿದೆ.

ಕೊಂಬು ಇವರ ಮುಖ್ಯವಾದ್ಯ : ಇದು ಒಂದು ಲೋಹವಾದ್ಯ. ಕಥಾಗಾನವನ್ನು ಪ್ರಾರಂಭಿಸುವ ಮುನ್ನ, ಯಾದವರ ಗೋತ್ರಗಳನ್ನು ಹೇಳುವಾಗ ಈ ಕೊಂಬನ್ನು ಊದುತ್ತಾರೆ. ವೀರಣ ಒಂದು ಚರ್ಮ ವಾದ್ಯ. ವೀರವಿದ್ಯಾವಂತರ ವೀರಜೋಡಿ ಮತ್ತು ಕೊಮ್ಮುಲವಾರು ಬಳಸುವ ವೀರಣ ಈ ಎರಡೂ ಚರ್ಮವಾದ್ಯಗಳೇ. ಆದರೂ ವೀರ ಜೋಡು ಬಹಳ ದೊಡ್ಡದು. ಅದರಿಂದ ಬರುವ ಶಬ್ದ ಹೆಚ್ಚು. ವೀರಣ ಅದಕ್ಕಿಂತ ಚಿಕ್ಕದು. ಕಾಟಮರಾಜನ ಕತೆಯನ್ನು ಹಾಡುವವರು ಎರಡು ವೀರಣಗಳನ್ನು ಬಳಸುತ್ತಾರೆ. ವಾದ್ಯವನ್ನು ಬಳಸುವ ಕಲಾವಿದನ ತೊಡೆಯ ಮೇಲೆ ವೀರಣಗಳನ್ನು ಒಂದರ ಮೇಲೊಂದು ಇಡುತ್ತಾರೆ. ಮೊದಲನೆಯದಕ್ಕೆ ಶ್ರುತಿ ಕಡಿಮೆ, ಇನ್ನೊಂದಕ್ಕೆ ಶ್ರುತಿ ಹೆಚ್ಚು. ಮೊದಲನೆಯ ವೀರಣವನ್ನು ಬೇವಿನ ಮರದಿಂದ ಮಾಡುತ್ತಾರೆ. ಇನ್ನೊಂದನ್ನು ಹಿತ್ತಾಳೆಯಿಂದ ಮಾಡುತ್ತಾರೆ. ಪಲನಾಡಿನ ವೀರರ ಕತೆಗಳಲ್ಲಿ ಬಳಸುವ ವೀರಜೋಡುಗಳೆರಡನ್ನು ಹಿತ್ತಾಳೆಯಿಂದಲೇ ಮಾಡುತ್ತಾರೆ. ವೀರಣಗಳಿಗೆ ಮೇಕೆ ಅಥವಾ ಜಿಂಕೆಯ ಚರ್ಮವನ್ನು ಬಳಸುತ್ತಾರೆ.

ಕಾಟಮರಾಜನ ಕತೆಯಲ್ಲಿ ಬರುವ ಯುದ್ಧದಲ್ಲಿ ಹಸುಗಳು ವೀರಾವೇಶದಿಂದ ಪಾಲ್ಗೊಂಡಿದ್ದವು. ಎರ್ರ‍ ಗಡ್ಡಪಾಡಿನ ಹೋರಾಟದಲ್ಲಿ ಒಂಟಿಕೊಂಬಿನ ಹಸು ಕೂಡ ಪಾಲ್ಗೊಂಡಿತ್ತು. ಅದರ ಗೊಂಬೆಯನ್ನು ಮರದಿಂದ ಅಥವಾ ಹಿತ್ತಾಳೆಯಿಂದ ಮಾಡಿ ಅದನ್ನು ಶಿರಸಿನ ಮೇಲೆ ಇಟ್ಟುಕೊಂಡು ಕುಣಿಯುತ್ತಾರೆ. ಈ ಕುಣಿತ ಅತ್ಯಂತ ವೀರಾವೇಶದಿಂದ ಕೂಡಿರುತ್ತದೆ. ಮೂರು ಗಂಟುಗಳಿಂದ ಕೂಡಿದ ‘ವೀರ ಹಗ್ಗ’ಗಳನ್ನು ತೆಗೆದುಕೊಂಡು ವೀರಾವೇಶದಿಂದ ಕುಣಿಯುವ ಗಾಯಕರ ಕೈಕಾಲುಗಳ ಮೇಲೆ ಹೊಡೆಯುತ್ತಾರೆ. ಯುದ್ಧದ ಸುದ್ದಿಯನ್ನು ತಂದ ಬಸವದೇವನ ವಿಗ್ರಹವನ್ನು ಕೂಡ ಮಾಡಿ ಈ ಗಾಯಕರು ಪೂಜಿಸುತ್ತಾರೆ.

ಕೊಮ್ಮುಲವಾರು ಕಾಟಮರಾಜನ ಕತೆಗಳನ್ನು ಹಾಡುವಾಗ ವೀರಣಗಳನ್ನು ಅಲ್ಲದೆ ಶ್ರುತಿಗಾಗಿ ತಿತ್ತಿಯನ್ನು ಲಯಕ್ಕಾಗಿ ತಾಳಗಳನ್ನು ಉಪಯೋಗಿಸುತ್ತಾರೆ. ಇವರಲ್ಲಿ ಪ್ರಧಾನ ಕಥಾನಾಯಕನಿಗೆ ವೀರವಿದ್ಯಾವಂತರು ಧರಿಸುವಷ್ಟು ವೇಷ ಇರುವುದಿಲ್ಲ. ಆದರೆ ಪೇಟ, ಗೆಜ್ಜೆ, ನಡುಕಟ್ಟು ಮುಂತಾದವು ಮಾತ್ರ ಇರುತ್ತವೆ. ಗಂಗತರ್ಕ ಎಂಬ ಕತೆಯನ್ನು ಹಾಡುವಾಗ ಒಬ್ಬರು ಗಂಗೆಯ ವೇಷವನ್ನು ಇನ್ನೊಬ್ಬರು ಕಾಟಮರಾಜನ ವೇಷವನ್ನು ಧರಿಸಿ ಕೈಯಲ್ಲಿ ಕತ್ತಿಯನ್ನು ಹಿಡಿದು ಆ ಕತ್ತಿಯ ತುದಿಯಲ್ಲಿ ನಿಂಬೆಹಣ್ಣನ್ನು ಸಿಕ್ಕಿಸಿ ಕಾಲಿಗೆ ಗೆಜ್ಜೆ ಕಟ್ಟಿ ಕತ್ತಿಯನ್ನು ತಿರುಗಿಸುತ್ತ ಕುಣಿಯುತ್ತಾರೆ. ಗಂಗೆ ಕಾಟಮರಾಜರ ಸಂವಾದ ನಡೆಯುತ್ತದೆ. ಕಡಪ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಗಂಗಮ್ಮನ ಜಾತ್ರೆಯ ಸಂದರ್ಭದಲ್ಲಿ ಗಂಗೆ ತರ್ಕದ ಕತೆಯನ್ನು ಪ್ರದರ್ಶಿಸುತ್ತಾರೆ.

ಕಾಟಮರಾಜನ ಕಥಾಗಾನದಲ್ಲಿ ಪ್ರಧಾನ ಕಥಾಗಾಯಕನಿಗೆ ಮೂರುಜನ ಸಹಗಾಯಕರು ಇರುತ್ತಾರೆ. ಇವರಲ್ಲಿ ಒಬ್ಬ ತಿತ್ತಿಯನ್ನು ಇನ್ನೊಬ್ಬ ವೀರಣವನ್ನು ಮತ್ತೊಬ್ಬ ತಾಳವನ್ನು ಹಿಡಿದಿರುತ್ತಾನೆ. ಆಂಧ್ರದ ಮುಖ್ಯ ಕಥಾಗಾನಗಳಲ್ಲಿ ಕಾಟಮರಾಜನ ಕಥಾಗಾನ ಪ್ರದರ್ಶನವು ಒಂದು. ಇದು ಅನೇಕ ದಿನಗಳ ಕಾಲ ನಡೆಯುತ್ತದೆ. ಕಾಟಮರಾಜನ ಕಥೆ ಸುದೀರ್ಘ ಮಹಾಕಾವ್ಯವಾಗಿ ತೆಲುಗರ ಜನಪದ ಜೀವನದ ಮುಖ್ಯ ಭಾಗವಾಗಿ ಕಾಣಿಸಿಕೊಳ್ಳುತ್ತದೆ.

– ಟಿ.ವಿ.ಎಸ್. ಅನುವಾದ ಎ.ಎಂ.ಡಿ.

ಕೊರಗರು ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವ ಗಿರಿಜನರು. ಗುಂಪುಗುಂಪಾಗಿ ವಾಸಿಸುವ ಇವರ ವಾಸಸ್ಥಾನಕ್ಕೆ ‘ಕೊಪ್ಪಕೊಟ್ಟ’ ಎನ್ನುತ್ತಾರೆ. ತ್ರಿಕೋನಾಕಾರದ ಇಳಿಜಾರಾದ ಛಾವಣಿಯನ್ನುಳ್ಳ ಜೋಪಡಿಗಳ ಸಮೂಹವೇ ‘ಕೊಪ್ಪಕೊಟ್ಟ’ ಬಿದಿರು ಮತ್ತು ಒಣ ಹುಲ್ಲುಗಳನ್ನು ಬಳಸಿ ಜೋಪಡಿಗಳನ್ನು ನಿರ್ಮಿಸಿಕೊಳ್ಳುತ್ತಾರೆ.

ಮಂಗಳೂರು ಪರಿಸರದ ಕುದ್ಕೋರಿ ಗುಡ್ಡೆ, ಬಜಪೆ, ಮರವೂರು, ಬೈಕಂಪಾಡಿ, ಹಳೆಯಂಗಡಿ, ದೇರಬೈಲು, ಮೂಲ್ಕಿ, ಕಿನ್ನಿಮೂಲ್ಕಿ, ಮಿಜಾರು, ಬಪ್ಪನಾಡು, ಉಡುಪಿ ಬಳಿಯ ಪುತ್ತೂರು, ಬನ್ನಂಜೆ, ಇಂದ್ರಾಳಿ, ಮಣಿಪಾಲ, ಪರ್ಕಳ, ಕೊರಂಗ್ರಪಾಡಿ, ಚಿತ್ಪಾಡಿ, ಕುತ್ಪಾಡಿ; ಕುಂದಾಪುರದ ಅಸೋಡು, ಬಿದ್ಕಲ್‌ಕಟ್ಟೆ, ಅಮಾಸೆಬೈಲ್, ವಕ್ಪಾಡಿ, ಕುಂಬಾರೆ, ವಡೇರ ಹೋಬಳಿಗಳಲ್ಲಿ: ಕಾರ್ಕಳ, ಸುಳ್ಯ, ಬೆಳ್ತಂಡಿ ತಾಲ್ಲುಕುಗಳ ಕೆಲವು ಭಾಗಗಳಲ್ಲಿ ದಟ್ಟವಾಗಿ ಕಂಡುಬರುತ್ತಾರೆ.

ಇವರದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಹೆಣ್ಣು ಮಕ್ಕಳಿಗೆ ವಿಶೇಷ ಪ್ರಾಧಾನ್ಯ. ಮನೆತನದ ಎಲ್ಲ ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳು ತಾಯಿಯ ಅಥವಾ ಸೋದರಿಯ ಹೆಸರಿನಲ್ಲಿ ನಡೆಯುತ್ತವೆ. ಇವರದು ಬಂಧುತ್ವ ಸಮಾಜ. ವಂಶಪ್ರಧಾನವಾದುದು. ವಂಶವನ್ನು ಬಳ್ಳಿ ಎಂದು ಕರೆಯುತ್ತಾರೆ. ಅಂಥ ಇಪ್ಪತ್ತೈದು ಬಳ್ಳಿಗಳನ್ನು ಗುರುತಿಸಲಾಗಿದ್ದು ಒಂದೇ ಬಳ್ಳಿಯ ಒಳಗೆ ವಿವಾಹ, ಸಂಬಂಧ ನಿಷಿದ್ಧ. ಬಳ್ಳಿಗಳಲ್ಲಿ ಶ್ರೇಣಿಕರಣವಿದ್ದು ಸೂಕ್ತ ಬಳ್ಳಿಗಳ ನಡುವೆ ಮಾತ್ರ ವಿವಾಹಗಳು ನಡೆಯುತ್ತವೆ. ಬಾಲ್ಯವಿವಾಹ ಇಲ್ಲ. ಹೆಣ್ಣು ಗಂಡು ಪರಸ್ಪರ ಒಪ್ಪಿದ ಮೇಲೆ ಹಿರಿಯರು ನಿಂತು ವಿವಾಹ ನೆರವೇರಿಸುತ್ತಾರೆ.

ಬಿಸಿಲು ಮಳೆಗಳ ನಡುವೆ ಬದುಕುವ ಕೊರಗರ ಮೈಬಣ್ಣ ಸಹಜವಾಗಿಯೇ ಕಪ್ಪು. ದಷ್ಟಪುಷ್ಟ ದೇಹ, ಗುಂಗುರು ಕೂದಲು, ಅಗಲವಾದ ಇಳಿಜಾರಾದ ಹಣೆ, ಚಪ್ಪಟೆ ಮೂಗು, ದಪ್ಪ ತುಟಿ, ಉಬ್ಬಿದ ಕೆನ್ನೆಯ ಎಲುಬು, ಮುಂಚಾಚಿದ ಗಲ್ಲ ಹೀಗೆ ಎದ್ದು ಕಾಣುವ ರೂಪಭಿನ್ನತೆ. ಈ ಎಲ್ಲ ದೈಹಿಕ ಲಕ್ಷಣಗಳಿಂದಾಗಿ ಇವರನ್ನು ಪ್ರೋಟೋ ಅಸ್ಟ್ರಲಾಯಿಡ್ ಗುಂಪಿಗೆ ಸೇರಿದವರೆಂದು ಮಾನವಶಾಸ್ತ್ರಜ್ಞರು ಗುರುತಿಸಿದ್ದಾರೆ.

ಇವರಲ್ಲಿ ಬಟ್ಟೆತೊಡಬಾರದೆಂಬ ನಿಷಿದ್ಧತೆ ಇದೆ. ಸೊಂಟದಿಂದ ಕೆಳಕ್ಕೆ ಕಪ್ಪು ಬಟ್ಟೆಯನ್ನೂ, ಸೊಂಟದಿಂದ ಮೇಲೆ ಬಿಳಿ ಬಟ್ಟೆಯನ್ನೂ ಸುತ್ತಿಕೊಳ್ಳುತ್ತಾರೆ. ತಲೆಯ ಮೇಲೆ ಅಡಿಕೆ ಹಾಳೆಯ ಟೊಪ್ಪಿಗೆ. ಕಿವಿಗೆ ಹಿತ್ತಾಳೆ ಓಲೆ, ಕೈಗಳಿಗೆ,ಕಬ್ಬಿಣದ ಬಳೆ, ಸೊಂಟಕ್ಕೆ ಉಡುದಾರ. ಹೆಣ್ಣು ಮಕ್ಕಳು ತುಂಡುಬಟ್ಟೆ ಸುತ್ತಿಕೊಂಡು ಮೇಲೆ ರವಿಕೆ ತೊಡುತ್ತಾರೆ.

ಹೆಣ್ಣು ಮೈನೆರೆದಾಗ ಹರಿಯುವ ನೀರಿನಲ್ಲಿ ಸ್ನಾನ ಮಾಡಿಸಿ, ಪ್ರತ್ಯೇಕವಾಗಿ ಇರಿಸಿ, ಕ್ರಿಯಾವಿಧಿಗಳು ಮುಗಿದ ಮೇಲೆ ಮನೆಯೊಳಕ್ಕೆ ಸೇರಿಸಿಕೊಳ್ಳುತ್ತಾರೆ. ಇದನ್ನು ಪರಿವರ್ತನ ವಿಧಿ ಎನ್ನುತ್ತಾರೆ. ಹೆಣ್ಣು ಮಕ್ಕಳಿಗೆ ಹೆರಿಗೆಯಾದರೆ ಏಳುದಿನಗಳವರೆಗೆ ‘ಆಮೆ ಸೂತಕ’. ಆ ಅವಧಿಯಲ್ಲಿ ಪ್ರತ್ಯೇಕ ಗುಡಿಸಿಲಿನಲ್ಲಿ ಇರಿಸುತ್ತಾರೆ. ಸೂತಕದ ಅವಧಿ ಕಳೆದ ಮೇಲೆ ಪರಿವರ್ತನ ವಿಧಿಗಳು ಇರುತ್ತವೆ.

ಕೊರಗರು ಮಾಂಸಾಹಾರಿಗಳು. ಕಳ್ಳುಸೇವನೆ ಇದೆ. ಸವರ್ಣೀಯರ ಎಂಜಲೆಲೆ ತಿನ್ನುವುದು ಒಂದು ಸಂಪ್ರದಾಯ. ಆಮೆ ಬೇಟೆ ಪ್ರಿಯವಾದ ಹವ್ಯಾಸ. ಬಳಿ ಆಮೆಯ ಮಾಂಸ ಇಷ್ಟ. ಇದು ಕ್ಷಯರೋಗಕ್ಕೆ ಔಷಧಿ ಎಂಬ ನಂಬಿಕೆ ಇದೆ. ಇವರ ನಡುವೆ ಏನೇ ವ್ಯಾಜ್ಯಗಳಿದ್ದರೂ ಅವನ್ನು ಗುರಿಕಾರ ನಿರ್ವಹಿಸುತ್ತಾರೆ. ಹೆಂಗಸರೂ ಪಾಲ್ಗೊಳ್ಳುವುದಿದೆ. ಹಬ್ಬ ಉತ್ಸವ ಮದುವೆ ಮುಂತಾದ ಎಲ್ಲರೂ ಸೇರುವ ಸಂದರ್ಭಗಳನ್ನು ನ್ಯಾಯ ವಿತರಣೆಗಾಗಿ ಬಳಸಿಕೊಳ್ಳುತ್ತಾರೆ.

ಆದಿತ್ಯ ವಾರವನ್ನು ಮುಖ್ಯ ದಿನವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಆಚರಣೆಯ ಸಂದರ್ಭದಲ್ಲೂ ಸೂರ್ಯನಿಗೆ ಕೈ ಮುಗಿಯುವುದಿದೆ. ಭೂತಾರಾಧನೆ ಇದೆ. ಚೌತಿ ಇವರಿಗೆ ತುಂಬ ಸಂಭ್ರಮದ ಹಬ್ಬ. ಕಂಬಳದ ನಿರ್ವಹಣೆಯಲ್ಲಿ ಇವರದು ಪ್ರಮುಖ ಪಾತ್ರ. ಊರ ಜಾತ್ರೆ ಕೋಲ ನೇಯಗಳ ಸಂದರ್ಭದಲ್ಲಿ ಗುಡಿಗೆ ದೂರದಲ್ಲಿ ನಿಂತು ಡೋಲು ನುಡಿಸುವುದು ಇವರ ಕರ್ತವ್ಯ. ಪ್ರತಿಯೊಂದು ಹಬ್ಬದಲ್ಲೂ ದೂರ ನಿಂತು ಡೋಲು, ಅಡ್ಡಕೊಳಲು, ತಾಳ ಬಡಿಯುತ್ತಾ ಕುಣಿತ ಮಾಡುತ್ತಾರೆ. ಇವರು ಆಡುವ ಭಾಷೆಗೆ ‘ಕೊರಗಭಾಷೆ’ ಎಂದೇ ಹೆಸರು. ಜನಪದ ಸಾಹಿತ್ಯವೂ ಸಾಕಷ್ಟಿದೆ.

– ವಿ.ಎಂ.

ಕೊರವಂಜಿ ಸ್ತ್ರೀಪ್ರಧಾನ ಅಲೆಮಾರಿ ಜನಪದ ಗಾಯಕರು. ಇವರಿಗೆ ಕುರತ್ತಿ, ಕೊರವಿ, ಕೊರವಂಜಿ, ಕೊರಮತಿ ಎಂಬ ಹೆಸರುಗಳೂ ಇವೆ. ಗಾನರೂಪದಲ್ಲಿ ಕಣಿ ಹೇಳುತ್ತಾ ದವಸಧಾನ್ಯ ಹಾಗೂ ಹಣಕಾಸು ಸಂಪಾದನೆ ಮಾಡುವುದು ಇವರ ನಿತ್ಯಕಾಯಕ. ಕೊರವಂಜಿ ಹಾಡುಗಳೆಂದು ಕರ್ನಾಟದಲ್ಲೂ ಕುರತ್ತಿಪಾಟ್ಟ್‌ ಎಂದು ತಮಿಳುನಾಡಿನಲ್ಲೂ ಇವರ ಜನಪದ ಹಾಡುಗಳು ಪ್ರಸಿದ್ಧವಾಗಿವೆ. ಕರ್ನಾಟಕದ ಬೆಳಗಾವಿ, ಬಿಜಾಪುರ, ಧಾರವಾಡಗಳಲ್ಲಿ ಇವರು ವಾಸ್ತವ್ಯ ಹೇರಳವಾಗಿದೆ. ಹಾಗೆಯೇ ತಮಿಳುನಾಡಿನ ‌ದಕ್ಷಿಣ ಅರ್ಕಾಟ್, ತಂಜಾವೂರು, ಕೊಯಮತ್ತೂರು, ಸೇಲಂ, ದಿಂಡಿಗಲ್, ತರುಚಿನಾಪಳ್ಳಿಗಳಲ್ಲಿ ಇವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕದ ಕೊರವಂಜಿಯವರು ಕನ್ನಡದೊಂದಿಗೆ ಮರಾಠಿ, ತೆಲುಗು, ತಮಿಳುಗಳನ್ನು ಬೆರೆಸಿ ಮಾತನಾಡುವುದು ಕಂಡುಬರುತ್ತದೆ. ಬಹಳ ಪ್ರಾಚೀನ ಕಾವ್ಯಗಳಲ್ಲೂ ಇವರ ಉಲ್ಲೇಖಗಳಿವೆ. ಪ್ರೇಮಿಯು ತನ್ನ ಪ್ರಿಯನನ್ನು ಕಾಣಲು ‘ಕೊರವಂಜಿ’ ವೇಷದಲ್ಲಿ ಹೋಗುವಂತಹ ಸಂದರ್ಭದಲ್ಲಿ ಉಲ್ಲೇಖ ಹಲವಾರು ಇವೆ. ಪಾರ್ವತಿ ಕೊರವಂಜಿಯ ವೇಷಧರಿಸಿ ಕಣಿ ಹೇಳಿದ್ದುದಾಗಿ ಈ ಜನ ತಮ್ಮ ಬುಡಕಟ್ಟಿನ ಕುರಿತು ಪೌರಾಣಿಕ ವ್ಯಾಖ್ಯಾನ ನೀಡುತ್ತಾರೆ. ಆದ್ದರಿಂದಲೇ ಪಾರ್ವತಿ ತನ್ನ ಮಗು ಮಲಗುವುದಕ್ಕಾಗಿ ‘ಮೇದರ’ ವನ ಹತ್ತಿರ ಹೋಗಿ ಸರ್ಪವೊಂದರ ಗರ್ಭವನ್ನು ಸೀಳಿ ಅದರಲ್ಲಿ ಅಡಗಿದ್ದ ವಜ್ರವೈಡೂರ್ಯಗಳಿಂದ ತೊಟ್ಟಿಲನ್ನು ಮಾಡಿಕೊಡಬೇಕೆಂದು ಕೇಳುತ್ತಾಳೆ. ಮೇದರವರು ಒಪ್ಪುವುದಿಲ್ಲ. ಆದರೆ ‘ಕೊರಚ’ನು ಹಾಗೇ ಆಗಲೆಂದು ಮಾಡಿಕೊಟ್ಟನಂತೆ. ಅಗ ಪಾರ್ವತಿ ಸಂತುಷ್ಟಳಾಗಿ ತನ್ನ ಮಂತ್ರದಂಡವನ್ನೂ ಕೇರುವ ಮೊರವನ್ನೂ ಬಹುಮಾನವಾಗಿ ಕರುಣಿಸಿದಳಂತೆ. ಮತ್ತೊಂದು ಕಥೆಯ ಪ್ರಕಾರ ಧರ್ಮರಾಯ ವನವಾಸದಲ್ಲಿದ್ದಾಗ ಅವನನ್ನು ಮೋಹಿಸಿದ ಹೆಣ್ಣುಮಗಳು ತನ್ನ ವೇಷ ಮರೆಸಿಕೊಂಡು ಅವನನ್ನು ಸೇರಿದಾಗ ಹುಟ್ಟಿದ ಮಕ್ಕಳೇ ಕೊರವರು. ಅವರು ಚೆನ್ನಾಗಿರಲೆಂದು ಧರ್ಮರಾಯ ನೀಡಿದ ವರವೇ ಅವರಿಗೆ ‘ಕಣಿ’ ಹೇಳುವ ಹಕ್ಕಾಗಿ ಮಾರ್ಪಾಡಾಯಿತಂತೆ. ಪದ್ಮಾವತಿ ಕಲ್ಯಾಣ ಸಂದರ್ಭದಲ್ಲಿಯೂ ಶ್ರೀನಿವಾಸ ‘ಕೊರವಿ’ಯ ರೂಪದಲ್ಲಿ ಬಂದು ಅವಳನ್ನು ‘ಶ್ರೀನಿವಾಸನು ವರಿಸುತ್ತಾನೆ’ ಎಂದು ಕಣಿ ಹೇಳಿದ್ದಾಗಿ ಪುರಾಣಕತೆಯಿದೆ. ಇದೇ ರೀತಿ ಜನಪದ ರಾಮಾಯಣದಲ್ಲಿ, ಅಶೋಕವನದಲ್ಲಿ ರಾಮನ ಬರವಿಗಾಗಿ ಕಾಯುತ್ತಿದ್ದ ಸೀತೆಗೆ, ‘ರಾಮನು ಬಂದು ರಾವಣನನ್ನು ಸಂಹರಿಸಿ ಸೀತೆಯನ್ನು ಒಯ್ಯುವುದಾಗಿ’ ಕೊರವಂಜಿ ವೇಷದ ಹನುಮಂತ ಸಂತೈಸುತ್ತಾರೆ. ರುಕ್ಮಿಣಿ ಕೃಷ್ಣನನ್ನೇ ವರಿಸಲು ಮನಸ್ಸು ಮಾಡಿದ್ದರೂ ಬಲರಾಮ ಅವಳನ್ನು ಶಿಶುಪಾಲನಿಗೆ ಮದುವೆ ಮಾಡಿಸುವ ಸಿದ್ಧತೆಯಲ್ಲಿದ್ದಾಗ ಆತಂಕಗೊಂಡ ಅವಳನ್ನು ಸಂತೈಸಲು ಕೃಷ್ಣ ಕೊರವಿ ರೂಪ ಧರಿಸಿ ಬಂದು ಅವಳನ್ನು ಕೃಷ್ಣನೇ ವರಿಸುವುದಾಗಿಸ ‘ಕಣಿ’ ನುಡಿಯುವ ಸಂದರ್ಭವಿದೆ. ಹೀಗೆ ‘ಕೊರವಂಜಿ’ ಉಲ್ಲೇಖಗಳು ಹಲವಾರು ಪುರಾಣ, ಕಾವ್ಯ ಸಂದರ್ಭಗಳಲ್ಲಿ ಸಿಗುತ್ತವೆ.

ಕೊರವಿ ಪದಗಳು ಅಥವಾ ಕುರತ್ತಿಪಾಟ್ಟುಗಳು ಕರ್ನಾಟಕ ತಮಿಳುನಾಡುಗಳಲ್ಲಿ ಹೇರಳವಾಗಿ ಸಿಗುತ್ತವೆ. ಬಹುತೇಕ ಎರಡೂ ಕಡೆ ಅವರ ವೇಷಭೂಷಣಗಳು ಒಂದೇ ಆಗಿವೆ. ತುಂಬ ಢಾಳಾಗಿ ವೈಭವೋಪೇತವಾಗಿಲ್ಲದ ಆದರೆ ಅತ್ಯಾಕರ್ಷಕ ಉಡುಗೆ ತೊಡುಗೆ ಕೊರವಿಯರದು. ಮೈತುಂಬ ಚಿತ್ರಚಿತ್ತಾರಳಗ ಹಚ್ಚೆ, ಚೌಕಗಳಿರುವ ಸೀರೆ, ಚಿತ್ರವಿಚಿತ್ರ ಚಿತ್ತಾರದ ಬಣ್ಣ ಬಣ್ಣದ ಕುಬುಸ, ಎತ್ತಿಕಟ್ಟಿದ ತುರುಬು, ಹಲವು ವರ್ಣವಿನ್ಯಾಸಗಳ ಮಣಿಸರಗಳು, ಕಾಲು ಕೈಗಳಿಗೆ ದಪ್ಪನೆಯ ಕಡಗ, ವಿನ್ಯಾಸಗೊಳಿಸಿದ ಉಂಗುರ ನತ್ತು ಮೂಗಿಗೆ, ಹರಳಿನ ಓಲೆ ಕಿವಿಗಿಟ್ಟು, ಚಿತ್ರಗೋಲನ್ನೂ, ಕವಡೆ ನೇಯ್ದ ಮೊರವನ್ನೂ ಸೊಟದಲ್ಲಿಟ್ಟುಕೊಂಡು ಬೆಡಗಿನಿಂದ ಕಣಿ ಹೇಳಲು ಬರುತ್ತಾರೆ.

ಇವರು ಹಚ್ಚೆ ಹುಯ್ಯುವುದಕ್ಕೂ ಪ್ರಸಿದ್ಧರು. ಹಚ್ಚೆ ಹುಯ್ಯುತ್ತ ನೋವು ಕಾಣಿಸದಂತೆ ಕಣಿ ಹಾಡನ್ನು ಹಾಡುತ್ತ ಮೋಹಕವಾಗಿ ರಾಗದ ಸೊಲ್ಲೆತ್ತುತ್ತ ತಾಸುಗಟ್ಟಲೆ ಹಚ್ಚೆ ಹುಯ್ದರೂ ಬೇಸರ ನೋವುಗಳು ಗಮನಕ್ಕೆ ಬಾರದಂತೆ ನಿಭಾಯಿಸುವುದರಲ್ಲಿ ಇವರು ನಿಪುಣರು.

ಉತ್ತರ ಕನ್ನಡದ ಕಡೆಯೆಲ್ಲ ಯಕ್ಷಗಾನ ಪ್ರಸಂಗಗಳಲ್ಲಿ ಕೊರವಂಜಿ ಪಾತ್ರಗಳನ್ನೇ ಮುಖ್ಯವಾಗಿಟ್ಟುಕೊಂಡು ‘ಬ್ರಹ್ಮಕೊರವಂಜಿ’, ‘ಮನ್ಮಂಥ ಕೊರವಂಜಿ’, ‘ಪದ್ಮಾವತಿ ಕೊರವಂಜಿ’. ಇತ್ಯಾದಿ ಪ್ರದರ್ಶನಗಳನ್ನು ಮಾಡುವುದಿದೆ.

– ಜಿ.ಎನ್.ಎಸ್

ಕೊಳುಕ್ಕಟ್ಟೆ ತಮಿಳುನಾಡಿನ ಗ್ರಾಮೀಣ ಜನರಲ್ಲಿ ರೂಢಿಯಲ್ಲಿರುವ ಸಾಂಪ್ರದಾಯಿಕ ಆಹಾರದ ಬಗೆಗಳಲ್ಲಿ ಒಂದು. ವಿಶೇಷ ದಿನಗಳಲ್ಲಿ ಮೋದಕವನ್ನು ತಯಾರಿಸಿ ದೇವರಿಗೆ ಅರ್ಪಿಸಿ ತಿನ್ನುವ ಪದ್ಧತಿ ತಮಿಳುನಾಡಿನಲ್ಲಿದೆ. ಅಕ್ಕಿಯ ಹಿಟ್ಟಿನಿಂದ ತಯಾರಿಸಲಾಗುವ ಮೋದಕವನ್ನು ರಂಧ್ರಗಳಿರುವ ನೀರಾವಿಯ ಪಾತ್ರೆಯಲ್ಲಿಟ್ಟು ಬೇಯಿಸಲಾಗುತ್ತದೆ. ಮೋದಕವನ್ನು ತಿನ್ನುವ ಪದ್ಧತಿ ತಮಿಳುನಾಡಿನಲ್ಲಿ ಹಿಂದಿನಿಂದಲೇ ಬಳಕೆಯಲ್ಲಿದೆ. ಸಕ್ಕೆಯನ್ನು ಬಿಸಿಮಾಡಿ ಅದರೊಂದಿಗೆ ಬೇಳೆಯನ್ನೂ ತೆಂಗಿನಕಾಯನ್ನೂ ಸೇರಿಸಿ ಒಳತಿರುಳಾಗಿಟ್ಟು ತಯಾರು ಮಾಡುವ ಕೊಳುಕಟ್ಟೆಯನ್ನು ‘ಮೋದಕ’ವೆಂದು ತಮಿಳು ಸಾಹಿತ್ಯ ಉಲ್ಲೇಖಿಸುತ್ತದೆ.

ಬೆಲ್ಲ ಅಥವಾ ಪುಡಿಮಾಡಿದ ಸಕ್ಕರೆಯ ಪಾಕವನ್ನು ತಯಾರಿಸಿ

ಹೊರಣವಾಗಿ ಒಳಗಿಟ್ಟು ಬೇಯಿಸಿ ಮಾಡಿದುದೇ ಮೋದಕ. (ಮಧುರೈಕ್ಕಾಂಚಿ)

ಕೊಳುಕ್ಕಟ್ಟೈಯಲ್ಲಿ ಪಿಡಿಕೊಳುಕ್ಕಟೈ, ಎಲೆಕೊಳುಕಟ್ಟೆ, ಪಾಗುಕೊಳುಕಟ್ಟೈ, ಮಂಗಳವಾರ ಗಣಪತಿ ಕೊಳುಕ್ಕಟ್ಟೈ ಎಂದು ಹಲವು ವಿಧಗಳಿವೆ.

ಅಕ್ಕಿಯನ್ನು ಹುರಿದು ಅರೆದು ಬೆಲ್ಲ ಏಲಕ್ಕಿಗಳನ್ನು ಸೇರಿಸಿ ನೀರನ್ನು ಚಿಮುಕಿಸಿ ಕಲೆಸಿ ಕೈಯಲ್ಲಿ ಹಿಡಿದು ತಯಾರಿಸಲ್ಪಟ್ಟು ನೀರಾವಿಯಲ್ಲಿ ಬೇಯಿಸುವುದೇ ಹಿಡಿಮೋದಕವಾಗಿದೆ.

ಬೆಳ್ತಿಗೆ ಅಕ್ಕಿಯ ಹಿಟ್ಟಿಗೆ ನೀರನ್ನು ಚಿಮುಕಿಸಿ ಕಲೆಸಿ ಪೂವರಸು ಮರದ ಎಲೆಯಲ್ಲಿ ಹಿಟ್ಟನ್ನು ಹರಡಿ ಅದರೊಳಗೆ ಹೆಸರುಬೇಳೆ, ಬೆಲ್ಲ, ತೆಂಗಿನಕಾಯಿ ಬೆರೆಸಿದ ಹೂರಣವನ್ನು ಇಟ್ಟು ಎಲೆಯನ್ನು ಮುಚ್ಚಿ ಹೂರಣ ಹೊರಗೆ ಬಾರದಂತೆ ಹಿಟ್ಟನ್ನು ಅಂಟಿಸಿ ನೀರಾವಿಯಲ್ಲಿ ಬೇಯಿಸುವುದು ಎಲೆ ಮೋದಕವಾಗಿದೆ.

ಬೆಲ್ಲದ ಪಾಕದೊಂದಿಗೆ ಬೇಳೆ, ತೆಂಗಿನಕಾಯಿ ಮೊದಲಾದವುಗಳನ್ನು ಕಲೆಸಿ ಹಿಸುಕಿದ ಅಕ್ಕಿಯ ಪುಡಿಯನ್ನು ಚಕ್ಕುಲಿಯನ್ನು ಮಾಡುವ ಅಚ್ಚಿನಲ್ಲಿ ಇಟ್ಟು ಚಕ್ಕುಲಿಯನ್ನು ಒತ್ತುವಂತೆ ಒತ್ತಿ ಕಾಯಿಸಿದ ಪಾಕದಲ್ಲಿಟ್ಟು ಬೇಯಲು ಇಡುವುದೇ ಪಾಕುಕೊಳುಕ್ಕಟ್ಟೈ.

ಮಂಗಳವಾರದ ಗಣಪತಿ ಮೋದಕ ಎನ್ನುವುದು ಹೆಂಗಸರು ಮಾತ್ರವೇ ಪೂಜಿಸಿ ದೇವರಿಗೆ ಅರ್ಪಿಸುವುದಾಗಿದೆ. ಅಮ್ಮನ ವ್ರತ ಎನ್ನುವ ಶಾಸ್ತ್ರ ವಿಧಿಯ ಸಮಯದಲ್ಲಿ ಮಾಡಲಾಗುತ್ತದೆ. ಇದು ಹೊಂಗೆಮರದ ಎಲೆಯಲ್ಲಿ ಬೆಳ್ತಿಗೆ ಅಕ್ಕಿಯ ಹಿಟ್ಟಿನಿಂದ ತಯಾರಿಸುವ ಉಪ್ಪಿಲ್ಲದ ಮೋದಕ.

ಮೋದಕವೆಂಬ ಖಾದ್ಯವನ್ನು ವಿಶೇಷವಾದ ಕೆಲವು ದಿನಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಬೋಗಿ ಹಬ್ಬದ ದಿನ ಹಿಡಿ ಮೋದಕವನ್ನು ತಯಾರಿಸಿ ಮಾರಿಯಮ್ಮನಿಗು ಮನೆಯ ದೇವತೆಗಳಿಗೂ ನಿವೇದಿಸುವ ಪದ್ಧತಿ ತಮಿಳರಲ್ಲಿದೆ. ವಿನಾಯಕ ಚತುರ್ಥಿಯ ದಿನ ಎಲೆಯ ಮೋದಕವನ್ನು ಮಾಡುತ್ತಾರೆ.

ತಮಿಳಿನ ಆಡಿ, ತೈಮಾಸಿ ತಿಂಗಳುಗಳಲ್ಲಿ ಮಂಗಳವಾರದ ಗಣಪತಿಗೆ ನಿವೇದಿಸುವಾಗ ಅಕ್ಕಿಹಿಟ್ಟಿನಿಂದ ಉಪ್ಪಿಲ್ಲದ ಮೋದಕವನ್ನು ಮಾಡಿ ಗಂಡಸರಿಗೆ ತಿಳಿಯದಂತೆ ಹೆಂಗಸರು ಮಾತ್ರವೇ ತಿನ್ನುತ್ತಾರೆ.

ಮೋದಕಕ್ಕೆ ಸಂಬಂಧಿಸಿದ ಗ್ರಾಮೀಣ ಜನಪದ ಪದ್ಧತಿಗಳು ಕೆಲವು ಇವೆ. ಮಾತನಾಡುವ ಅಭ್ಯಾಸದಲ್ಲಿ ಒಬ್ಬರು ಕೇಳಿದ್ದಕ್ಕೆ ಉತ್ತರ ಕೊಡದಿರುವುದನ್ನು ನೋಡಿ “ಬಾಯಲ್ಲಿ ಏನು ಮೋದಕವನ್ನು ಇಟ್ಟುಕೊಂಡಿದ್ದೀಯಾ” ಎಂದು ಕೇಳುವುದಿದೆ. ದಪ್ಪ ಶರೀರವನ್ನು ಹೇಳುವುದಕ್ಕೆ ಕೊಳುಕಟ್ಟೆಯನ್ನು ಉಪಮೆಯಾಗಿ ಬಳಸಲಾಗುತ್ತದೆ. ಉದಾ: ಕೊಳುಕ್ಕಟ್ಟೆಯಾಟ ಬೀಗಿರುತ್ತದೆ.

ಬಟ್ಟೆ ಪಾತ್ರೆಯಾದದ್ದರೂ ಮೋದಕ ಬೆಂದರೆ ಸಾಕು ಎನ್ನುವುದೂ ಮೋದಕವನ್ನು ಕುರಿತ ಪ್ರಾಚೀನ ಹೇಳಿಕೆಯಾಗಿದೆ.

‘ಅತ್ತಿರಿಪಾಚ್ಚಾಕೊಳುಕ್ಕಟ್ಟ್’ ಎನ್ನುವ ಜನಪದ ಕತೆಯೊಂದು ಮೋದಕವನ್ನು ಕುರಿತದ್ದಾಗಿದೆ. ಪಾಕು ಕೊಳುಕಟ್ಟೆಯನ್ನು ಮಂಗಳ ಗಣಪತಿಗೆ ನಿವೇದಿಸಿದ ಬಳಿಕ ಮನೆಯಲ್ಲಿರುವ ಗಂಡಸರಿಗೆ, ಮಕ್ಕಳಿಗೆ ತಯಾರಿಸಲಾಗುತ್ತದೆ.

ಮಂಗಳ ಗಣಪತಿಯನ್ನು ಪೂಜಿಸಿ, ನಿವೇದಿಸುವಾಗ ಅವರವರ ಕಲ್ಪನೆಗೆ ತಕ್ಕಂತೆಯೂ ಉದ್ಯೋಗಕ್ಕೆ ತಕ್ಕಂತೆಯೂ ಕೊಳುಕ್ಕಟ್ಟೆಯನ್ನು ಬೇರೆ ಬೇರೆ ಆಕೃತಿಗಳಲ್ಲಿ ತಯಾರಿಸುತ್ತಾರೆ. ರೈತರ ಮನೆಯ ಹೆಂಗಸರು ಬೇಸಾಯದ ಉಪಕರಣಗಳ ಆಕೃತಿಯಲ್ಲಿ ಕೊಳುಕಟ್ಟೆಯನ್ನು ಮಾಡಿ ನಿವೇದಿಸುತ್ತಾರೆ. ಚೇಳಿನ ಆಕೃತಿಯಲ್ಲಿ ಕೊಳುಕಟ್ಟೆಯನ್ನು ತಯಾರಿಸಿ ನಿವೇದಿಸಿದರೆ ಚೇಳು ಕಡಿಯಲಾರದು ಎನ್ನುವ ನಂಬಿಕೆ ಹೆಂಗಸರಲ್ಲಿದೆ.

ವಯಸ್ಸಿಗೆ ಬಂದ ಹೆಣ್ಣಿಗೆ ಕೊಳುಕ್ಕಟ್ಟೆಯನ್ನು ಮಾಡಿಕೊಡುವುದರೊಂದಿಗೆ ಪ್ರಾಯಕ್ಕೆ ಬಂದಾಗ ಮಾಡುವ ಸಂಪ್ರದಾಯದಲ್ಲೂ ಕೊಳಕ್ಕಟ್ಟೆಯನ್ನು ಮಾಡಿಕೊಡುವುದು ಪದ್ಧತಿ.

ಗಣಪತಿ ಹೋಮವನ್ನು ಮಾಡುವಾಗ ಕೊಳುಕಟ್ಟೆಗಳನ್ನು ತಯಾರಿಸಿ ಅವುಗಳನ್ನು ಯಾಗದಲ್ಲಿ ಸಮರ್ಪಿಸುವುದೂ ಇದೆ.

ಮಕ್ಕಳಿಗೆ ಹಲ್ಲು ಮೊಳೆಯಲೆಂಬುದಕ್ಕಾಗಿ ಕೊಳುಕ್ಕಟ್ಟೆ ಮಾಡಿ ನಿವೇದಿಸುವುದಾಗಿ ಬೇಡಿಕೊಳ್ಳುವುದೂ ಹಲ್ಲು ಮೊಳೆತ ಬಳಿಕ ಕೊಳುಕಟ್ಟೆಯನ್ನು ತಯಾರಿಸಿ ನಿವೇದಿಸುವುದೂ ಗ್ರಾಮೀಣ ಜನರಲ್ಲಿ ಕಂಡುಬರುವ ಪದ್ಧತಿಯಾಗಿದೆ.

ಹೊಸತಾಗಿ ಮನೆಕಟ್ಟಿ ಮನೆಯ ಮಹಡಿಯ ಭಾಗದಲ್ಲಿ ಹಂಚನ್ನು ಮುಚ್ಚುವಾಗ ಆಯಾ ರಂಧ್ರದ ಮೂಲಕ ಕೊಳುಕ್ಕಟ್ಟೆಯನ್ನು ಸುರಿಯುವ ಪದ್ಧತಿ ಪುದುಕೋಟ್ಟೈ ಭಾಗದಲ್ಲಿ ಕಂಡುಬರುತ್ತದೆ.

– ಆರ್.ಪಿ.ಯು. ಅನುವಾದ ಎ.ಎಸ್.ಬಿ.