ಕೊಡಗಿನ ಸಂಪ್ರದಾಯಗಳು ಕರ್ನಾಟಕ ರಾಜ್ಯದ ಪುಟ್ಟ ಜಿಲ್ಲೆ ಕೊಡಗು. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸುಂದರ ಪ್ರದೇಶ. ಇದು ವೀರರ ನಾಡು. ಬೆಟ್ಟಗುಡ್ಡಗಳಿದ್ದು ವರ್ಷವಿಡೀ ಹಸುರಿನಿಂದ ಕಂಗೊಳಿಸುತ್ತಾ ಜನರ ಕಣ್ಮನಗಳಿಗೆ ಮುದ ನೀಡುವ ತಾಣ. ಜೀವನದಿಯಾದ ಕಾವೇರಿಯ ಉಗಮಸ್ಥಾನ ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿದೆ. ಅನೇಕ ಪ್ರೇಕ್ಷಣೀಯ ಸ್ಥಳಗಳಿರುವ ಈ ನಾಡು ತನ್ನದೇ ಆದ ವಿಶಿಷ್ಟ ಆಚಾರ – ವಿಚಾರಗಳನ್ನು ಬೆಳೆಸಿಕೊಂಡಿದೆ. ಕೊಡಗಿನಲ್ಲಿ ಅನೇಕ ಜಾತಿ, ಜನಾಂಗದ ಜನ ನೆಲೆಸಿದ್ದಾರೆ.

‘ಕೋಡು’ ಎಂಬುದರಿಂದ ‘ಕೊಡಗು’ ಎಂಬ ಶಬ್ದ ಬಂದಿತೆನ್ನಬಹುದು. ‘ಕೋಡು’ ಎಂದರೆ ಬೆಟ್ಟದ ತುದಿ ಎಂಬ ಅರ್ಥವಿದೆ. ಹಾಗೆಯೇ ‘ಕುನ್ಹಮ್’ ಎಂಬ ಮೂಲದ್ರಾವಿಡದ ಪದ ‘ಕೊಂಡ’ ಎಂದು ಕನ್ನಡ ಮತ್ತು ತೆಲುಗಿನಲ್ಲಿದೆ. ಕೊಂಡ ಎಂದರೂ ಬೆಟ್ವವೆಂದರ್ಥ. ಒಟ್ಟಿನಲ್ಲಿ ಬೆಟ್ಟಗುಡ್ಡಗಳನ್ನು ಹೊಂದಿದ ಕಾರಣಕ್ಕೆ ಈ ಹೆಸರು ಬಂದಿರಬಹುದು. ಇದರ ವಿಸ್ತೀರ್ಣ ಸು.೪,೧೧೦ ಚ.ಕಿ.ಮೀ. ಉತ್ತರ ದಕ್ಷಿಣವಾಗಿ ಉದ್ದ ಸು.೯೦ ಕಿ.ಮೀ. (ಹೇಮಾವತಿ ನದಿಯಿಂದ ದಕ್ಷಿಣದ ಬ್ರಹ್ಮಗಿರಿಯವರೆಗೆ), ಪೂರ್ವಪಶ್ಚಿಮವಾಗಿ ಅಗಲ ಸು.೧೩೫ ಕಿ.ಮೀ. (ಕುಶಾಲನಗರದಿಂದ ಸಂಪಾಜೆಯವರೆಗೆ), ಜಿಲ್ಲೆಯ ಉತ್ತರ ಮತ್ತು ಪೂರ್ವಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳಿದ್ದು, ದಕ್ಷಿಣ ಮತ್ತು ಪಶ್ಚಿಮಕ್ಕೆ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿವೆ. ಕೊಡಗಿನಲ್ಲಿ ಮೂರು ತಾಲ್ಲೂಕುಗಳಿವೆ (ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ). ಅದರಲ್ಲಿ ಮುಖ್ಯ ಪಟ್ಟಣ ಮಡಿಕೇರಿ. ಇದು ಸಮುದ್ರ ಮಟ್ಟದಿಂದ ಸು.೩,೮೦೯ ಅಡಿಗಳಷ್ಟು ಎತ್ತರದಲ್ಲಿದೆ.

58

ಕೊಡಗಿನಲ್ಲಿ ಬಹುಪಾಲು ಜನ ದೇಶರಕ್ಷಣೆಯ ಸೇವೆಯಲ್ಲಿ ತೊಡಗಿರುವರು. ಉಳಿದವರು ಬೇರೆಬೇರೆ ಉದ್ಯೋಗದಲ್ಲಿರುವ ಕೆಲವರು ಬೇಸಾಯದಲ್ಲಿ ತೊಡಗಿಸಿಕೊಂಡಿರುವರು. ಸಸ್ಯಾಹಾರಿಗಳಿಗಿಂತ ಮಾಂಸಹಾರಿಗಳ ಸಂಖ್ಯೆಯೇ ಜಾಸ್ತಿ. ಗಟ್ಟಿಮುಟ್ಟಾದ ಕಾಯವನ್ನು ಹೊಂದಿರುವ ಇಲ್ಲಿನ ಜನ ಧೈರ್ಯವಂತರು ಮತ್ತು ಕಷ್ಟಜೀವಿಗಳು. ಇವರು ಬತ್ತ, ಕಾಫಿ, ಏಲಕ್ಕಿ, ಕಿತ್ತಾಳೆ, ತೆಂಗು, ಅಡಿಕೆ, ಕರಿಮೆಣಸು ಮೊದಲಾದವನ್ನು ಬೆಳೆಸುತ್ತಾರೆ. ಕೊಡಗಿನಲ್ಲಿ ವಾಸಿಸುವವರು ಶಾಂತಿಪ್ರಿಯರು ಮತ್ತು ಸ್ವಾಭಿಮಾನಿಗಳು.

ಕೊಡಗು ಬೆಟ್ಟ ಸೀಮೆಯಾಗಿರುವುದರಿಂದ ಇಲ್ಲಿಯ ಹವೆ ಸಮಶೀತೋಷ್ಣವಾಗಿರುತ್ತದೆ. ಮಾರ್ಚಿಯಿಂದ ಮೇ ಅಂತ್ಯದವರೆಗೆ ಬೇಸಿಗೆಕಾಲ. ಜೂನ್‌ನಿಂದ ಅ‌ಕ್ಟೋಬರ್ ಅಂತ್ಯದವರೆಗೆ ಮಳೆಗಾಲ, ನವೆಂಬರ್‌ನಿಂದ ಫೆಬ್ರವರಿ ಅಂತ್ಯದವರೆಗೆ ಚಳಿಗಾಲ. ಕೊಡಗಿನ ಮುಖ್ಯ ನದಿ ಕಾವೇರಿ. ಭಾಗಮಂಡಲದ ಹತ್ತಿರ ಬ್ರಹ್ಮಗಿರಿಯಲ್ಲಿ ಹುಟ್ಟಿ ಹರಿಯುತ್ತಾಳೆ. ತಲಕಾವೇರಿಯು ಒಂದು ಪುಣ್ಯಕ್ಷೇತ್ರವು ಹೌದು. ಕಾವೇರಿಜೊತೆಗೆ ಕುಮಾರಧಾರಾ, ನೇತ್ರಾವತಿ, ಸುವರ್ಣಾವತಿ, ಲಕ್ಷ್ಮಣತೀರ್ಥ ಹೀಗೆ ಅನೇಕ ಹೊಳೆಗಳು ಹರಿಯುತ್ತವೆ.

ಕೊಡಗಿನಲ್ಲಿ ಪ್ರಮುಖವಾಗಿ ಯುಗಾದಿ, ಕೈಲ್‌ಮುಹೂರ್ತ, ಕಾವೇರಿ ಸಂಕ್ರಮಣ ಮತ್ತು ಹುತ್ತರಿಹಬ್ಬವನ್ನು ಆಚರಿಸುತ್ತಾರೆ. ಉಳಿದಂತೆ ಆಯಾಯ ಊರಿಗೆ ಸಂಬಂಧಪಟ್ಟ ದೇವರ ಹಬ್ಬಗಳು ನಡೆಯುತ್ತವೆ, ಕುಲದೈವದಪೂಜೆ ಪುರಸ್ಕಾರಗಳು, ದೆವ್ವದ ಕೋಲಗಳು ತಮ್ಮ ನಂಬಿಕೆಗನುಸಾರವಾಗಿ ನಡೆಸಿಕೊಂಡು ಬರುತ್ತಾರೆ. ಸಾಮಾನ್ಯವಾಗಿ ಕೊಡಗಿನಲ್ಲಿ ಬೇರೆ ಬೇರೆ ಜನಾಂಗದವರು ವಾಸಿಸುತ್ತಿದ್ದರೂ ಸ್ಥಳೀಯ ಹಬ್ಬಗಳನ್ನು ಸಾಂಕೇತಿಕವಾಗಿಯೂ ಆಚರಿಸುತ್ತಾರೆ.

ಕೊಡಗಿನವರ ವೇಷಭೂಷಣ ತನ್ನದೇ ಆದ ಪರಂಪರೆಯಿಂದ ಮೆರೆಯುತ್ತಿದೆ. ಕೊಡಗಿನಲ್ಲಿರುವ ಗೌಡರಲ್ಲಿ ಗಂಡಸರು ಬಿಳಿ ವಸ್ತ್ರ (ಕುಪ್ಪಸದಟ್ಟಿ), ತಲೆಗೆ ರುಮಾಲು ಸುತ್ತಿರುತ್ತಾರೆ. ಹೆಂಗಸರು ಗೆಂಟಿಗೆ ಕಟ್ಟಿ ಸೀರೆ ಉಡುತ್ತಾರೆ. ಇದೇ ತೆರನಾಗಿ ಎರವರು, ಕುರುಬರು ಧರಿಸುತ್ತಾರೆ. ಕೊಡವರಲ್ಲಿ ಗಂಡಸರು ಕೆಂಪು ಬಣ್ಣದ ಕುಪ್ಪಸದಟ್ಟಿ, ಹೆಂಗಸರು ಗೆಂಟಿಗೆ ಕಟ್ಟಿ ಸೀರೆ ಉಟ್ಟರೂ ನೆರಿಗೆಯನ್ನು ಹಿಂಭಾಗಕ್ಕೆ ಇಟ್ಟಿರುತ್ತಾರೆ., ಇದೇ ರೀತಿಯಾಗಿ ಐರಿ, ಹೆಗ್ಗಡೆ, ಕೆಂಬಟ್ಟಿ ಮೊದಲಾದವರು ಧರಿಸುತ್ತಾರೆ. ಆದರೆ ಇತ್ತೀಚೆಗೆಯೆಲ್ಲ ಮಾರ್ಪಾಡು ಹೊಂದಿ ಭಿನ್ನ ಸ್ವರೂಪ ಪಡೆದುಕೊಂಡಿದೆ. ಆದರೆ ಮದುವೆ ಮತ್ತಿತರ ಸಂದರ್ಭಗಳಲ್ಲಿ ಸಂಪ್ರದಾಯವಸ್ತ್ರವನ್ನು ಧರಿಸುತ್ತಾರೆ.

ಕೊಡಗಿನ ಗೌಡ ಸಮುದಾಯದವರ ಕುಲದೈವ ತಿರುಪತಿ ವೆಂಕಟರಮಣ ಮತ್ತು ಕುಲಗುರು ಶೃಂಗೇರಿ ಜಗದ್ಗುರುಗಳು. ಗೌಡ ಕುಟುಂಬಳಿಗೆ ಬೇರೆ ಬೇರೆ ಹೆಸರುಗಳಿವೆ. ಸುಮಾರು ೮೦೦ಕ್ಕಿಂತ ಹೆಚ್ಚು ಕುಟುಂಬದ ಹೆಸರುಗಳಿವೆ. ಒಬ್ಬ ವ್ಯಕ್ತಿಯ ಹೆಸರಿನ ಜೊತೆ ಉಪನಾಮದಲ್ಲಿ ಕುಟುಂಬದ ಹೆಸರು ಮತ್ತು ತಂದೆಯ ಹೆಸರು ಸೇರಿರುತ್ತದೆ. ಒಂದೇ ಮನೆತನದವರು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಬೇರೆ ಮನೆತನದವರಾಗಿ ಒಂದೇ ಗೋತ್ರ ಹೊಂದಿದವರು ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂದರೆ ಒಂದೇ ಮನೆತನ ಮತ್ತು ಒಂದೇ ಗೋತ್ರದವರು ಅಣ್ಣ ತಮ್ಮಂದಿರು ಎಂಬ ಭಾವನೆ ಇದೆ. ಹುಟ್ಟಿನಿಂದ ಸಾವಿನತನಕ ನಡೆಯುವ ಪ್ರತಿಯೊಂದು ಕ್ರಿಯೆಯಲ್ಲೂ ವೈವಿಧ್ಯಮಯವಾದ ಆಚರಣೆಗಳಿರುತ್ತವೆ.

ಸಾಮಾನ್ಯವಾಗಿ ಮೊದಲ ಬಾಣಂತನಕ್ಕೆ ಮಗಳನ್ನು ಗಂಡನ ಮನೆಯಿಂದ ಕರದುಕೊಂಡು ಬರುತ್ತಾರೆ. ಕರೆದುಕೊಂಡು ಬರಲು ೪ – ೫ ಜನ ನಿಗದಿಯಾದ ದಿನ ಹೋಗುತ್ತಾರೆ. ಗಂಡನ ಮನೆಯಲ್ಲಿ ಗುರು ಕಾರಣ (ಸತ್ತ ಹಿರಿಯರಿಗೆ)ಕ್ಕೆ ಇಡುವ ಒಂದು ಪದ್ಧತಿಯಿದೆ. ಮಾಂಸಾಹಾರದ ಅಡುಗೆ ಮಾಡಿರುತ್ತಾರೆ. ಅದನ್ನೆಲ್ಲ ಅಡುಗೆಕೋಣೆಯಲ್ಲಿ ಎಡೆಯಿಕ್ಕಿ ಅಲ್ಲಿದ್ದ ಎಲ್ಲರೂ ಅಕ್ಷತೆ ಹಾಕಿ ಪೂಜೆ ಮಾಡಿ ನಮಸ್ಕರಿಸಿ ಬರುತ್ತಾರೆ. ಸ್ವಲ್ಪ ಹೊತ್ತು ಅಡುಗೆ ಕೋಣೆಯ ಬಾಗಿಲನ್ನು ಮುಚ್ಚಿ ಹೊರಬರುತ್ತಾರೆ. ತದನಂತರ ಎಲ್ಲರೂ ಅಲ್ಲಿ ಬಡಿಸಿದ್ದ ಪದಾರ್ಥವನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ಅಲ್ಲಿ ಇದ್ದವರಿಗೂ, ಹೋದವರಿಗೂ ಊಟ ಉಪಚಾರವಾದ ಮೇಲೆ ತವರು ಮನೆಗೆ ಕರೆದುಕೊಂಡು ಬರುತ್ತಾರೆ.

ಮಗು ಹುಟ್ಟಿದ ಮೇಲೆ ೧೧ ದಿನ ಸೂತಕವನ್ನು ಆಚರಿಸುತ್ತಾರೆ. ಅನಂತರ ದೇವಸ್ಥಾನದಿಂದ ತೀರ್ಥ ತಂದು ಮನೆಯನ್ನೆಲ್ಲ ಶುಭ್ರಗೊಳಿಸಿ ಮನೆಗೆಲ್ಲ ತೀರ್ಥವನ್ನು ಪ್ರೋಕ್ಷಣೆ ಮಾಡುತ್ತಾರೆ. ಮಗುವಿಗೆ ೧೬ ದಿವಸ ಅಥವಾ ೨೧ ದಿವಸ, ಇಲ್ಲದಿದ್ದರೆ ಅವರಿಗೆ ಅನುಕೂಲವಾದ ದಿವಸ ತೊಟ್ಟಿಲುಶಾಸ್ತ್ರ ಮಾಡಿ ನಾಮಕರಣ ಮಾಡುತ್ತಾರೆ. ಜೋಯಿಸರ ಹತ್ತಿರ ಮಗು ಹುಟ್ಟಿದ ದಿನ, ಗಳಿಗೆಯನ್ನು ಕೊಡುವುದರ ಮೂಲಕ ಜಾತಕವನ್ನು ಬರೆಯಿಸಿ ಅದರಲ್ಲಿ ಬಂದ ಅಕ್ಷರಕ್ಕೆ ಅನುಗುಣವಾಗಿ ಹೆಸರನ್ನು ಮೊದಲೆಲ್ಲ ಕೊಡಗಿನವರು ಇವರು ಎಂದು ಹೆಸರಿನ ಮೂಲಕವೇ ಗುರುತಿಸಬಹುದಿತ್ತು.

ನಾಮಕರಣದ ದಿವಸ ಬಿದಿರಿನ ತೊಟ್ಟಿಲಿಗೆ ಶೃಂಗಾರ ಮಾಡಿ ಬಿಳಿಬಟ್ಟೆಯನ್ನು ಹಾಸಿ, ಮುತ್ತೈದೆಯರೆಲ್ಲ ಸೇರಿ ಮೊದಲು ಗುಂಡು ಕಲ್ಲನ್ನು ಮೂರು ಬಾರಿ ತೊಟ್ಟಿಲಿನ ಮೇಲಕ್ಕೆ ಕೆಳಕ್ಕೆ ತಂದು, ತೊಟ್ಟಿಲಿನ ಒಳಗೆ (ಒಂದು ಬದಿಯಲ್ಲಿ) ಮಲಗಿಸುತ್ತಾರೆ. ಅನಂತರ ಮಗುವಿನ ತಾಯಿಯ ತಾಯಿ (ಅಜ್ಜಿ). ಮಣ್ಣಿನ ತಟ್ಟೆಯಲ್ಲಿ ಹಾಲು ಅನ್ನ ಕಲಸಿ ಅದನ್ನು ಚಿನ್ನದ ನಾಣ್ಯ ಅಥವಾ ಉಂಗುರದಲ್ಲಿ ಮಗುವನ್ನು ಕಾಲಿನ ಮೇಲೆ ಮಲಗಿಸಿಕೊಂಡು ಕೊಡುತ್ತಾರೆ. ಅದೇ ರೀತಿ ಅಲ್ಲಿ ಬಂದವರೆಲ್ಲ ಮಗುವಿಗೆ ಅನ್ನ ತಿನ್ನಿಸುತ್ತಾರೆ. ಹೀಗೆ ಮಾಡಿದ ಮೇಲೆ ಮಗುವಿಗೆ ಬೇರೆ ಬಟ್ಟೆ ಧರಿಸಿ ಮುತ್ತೈದೆಯರೆಲ್ಲ ಸೇರಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಹೆಸರಿಡುತ್ತಾರೆ. ಮಗುವಿನ ನಾಮಕರಣದ ದಿವಸವೂ ಮಾಂಸಾಹಾರವಿರುತ್ತದೆ. ಉಡುಗೊರೆ ಕೊಡುವವರೆಲ್ಲ ಮಗುವಿಗೆ ಕೊಡುತ್ತಾರೆ. ಮಗುವಿಗೆ ಒಂದು ವರ್ಷವಾದ ಮೇಲೆ ಸೋದರಮಾವ ತಲೆಗೂದಲನ್ನು ತೆಗೆಯುತ್ತಾರೆ.

ಹೆಣ್ಣು ಮಗಳು ಋತುಮತಿಯಾದ ವಿಚಾರ ತಿಳಿಯುತ್ತಿದ್ದಂತೆ, ಆಕೆಯನ್ನು ಫಲಬಿಡುವ ಮರ ಸಾಮಾನ್ಯವಾಗಿ ಹಲಸಿನ ಮರದಡಿಯಲ್ಲಿ ಕೂರಿಸಿ ತಲೆ ಮೇಲಿನಿಂದ ನೀರು ಹಾಕುತ್ತಾರೆ. ಅನಂತರ ೧೬ ದಿವಸಗಳವರೆಗೆ ಆಕೆಯ ಕೈಯಿಂದ ಯಾವ ಕೆಲಸವನ್ನೂ ಮಾಡಿಸುವುದಿಲ್ಲ. ಮನೆಯ ಒಳಗಡೆ ಓಡಾಡುವಂತಿಲ್ಲ. ಹೊರಗಡೆ ಕೋಣೆಯಲ್ಲಿ ಚಾಪೆಯ ಮೇಲೆ ಕೂರಬೇಕು, ಮಲಗಬೇಕು. ೧೬ ದಿವಸದ ತನಕ ಆಕೆಗೆ ಹುರಿದ ಅಕ್ಕಿಯಿಂದ ಪಾಯಸದ ರೀತಿಯ ತಿನಿಸನ್ನು ಮತ್ತು ತಂಪಾದ ಆಹಾರವನ್ನು ನೀಡಿ ಆರೈಕೆ ಮಾಡುತ್ತಾರೆ. ಪ್ರತಿದಿನ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಾರೆ. ೧೬ದಿವಸ ಕಳೆದ ಮೇಲೆ ಮುತ್ತೈದೆಯರೆಲ್ಲ ಸೇರಿ ಸ್ನಾನ ಮಾಡಿಸಿ ಕಾಲಿಗೆ ಕಾಲುಂಗರ ತೊಡಿಸಿ ,ಹೊಸ ಸೀರೆಯನ್ನು ಉಡಿಸಿ ಅಲಂಕಾರಮಾಡಿ, ಗಂಗೆ (ಅವರವರ ಮನೆ ಹತ್ತಿರವಿರುವ ಬಾವಿ, ಹೊಳೆ)ಗೆ ಪೂಜೆ ಮಾಡಿಸಿ, ಆಕೆಯ ತಲೆಯ ಮೇಲೆ ಒಂದು ತಂಬಿಗೆ ನೀರು ಹೊರಿಸಿಕೊಂಡು ಬರುತ್ತಾರೆ. ಆಗ ಕೂಡ ಹುಡುಗಿಗೆ ಕಾಣಿಗೆ ಕೊಡುವವರು ಕೊಡಬಹುದು. ಇಲ್ಲಿಯೂ ಊಟ ಉಪಚಾರವಿರುತ್ತದೆ. ಇದಕ್ಕೆ ನೆರೆದ ಮದುವೆ ಎನ್ನುತ್ತಾರೆ.

ಗಂಡು – ಹೆಣ್ಣು ವಯಸ್ಸಿಗೆ ಬಂದ ಅನಂತರ ವರವಧುವಿನ ಅನ್ವೇಷಣೆ ನಡೆಯುತ್ತದೆ. ಮೊದಲು ಗಂಡಿನ ಮನೆಯವರು ೪ – ೫ ಜನ ಹೆಣ್ಣಿನ ಮನೆಗೆ ಹೋಗುತ್ತಾರೆ. ಅಲ್ಲಿಗೆ ಬರುವುದನ್ನು ಮುಂಚಿತವಾಗಿ ತಿಳಿಸಿರುತ್ತಾರೆ. ಗಂಡಿನ ಕಡೆಯವರು ಮನೆಗೆ ಬಂದ ತಕ್ಷಣ ನೀರು ಕೊಟ್ಟು ಮಾತನಾಡಿಸಬೇಕು. ಅನಂತರ ಎಲೆ ಅಡಿಕೆ ತಟ್ಟೆಯನ್ನು ನೀಡಿ ಕಷ್ಟ ಸುಖ ವಿನಿಮಯ ಮಾಡಿಕೊಳ್ಳುತ್ತಾರೆ. ಆ ಹೊತ್ತಿಗಾಗಲೇ ಹುಡುಗಿ ಕಾಫಿ ತಿಂಡಿ ತರುತ್ತಾಳೆ. ಆಗ ಗಂಡಿನ ಕಡೆಯವರು ನೋಡುತ್ತಾರೆ. ಹುಡುಗಿ ಇಷ್ಟವಾದರೆ ಊಟ ಮಾಡಿ ಹೊರಡುತ್ತಾರೆ. ಇಲ್ಲದಿದ್ದರೆ ಕಾಫಿ ತಿಂಡಿ ತಿಂದು ಹೋಗುತ್ತಾರೆ. ಅಡುಗೆ ಮಾಡುವ ಸಂದರ್ಭದಲ್ಲಿ ಹುಡುಗಿಯನ್ನು ಅಡಿಯಿಂದ ಮುಡಿಯವರೆಗೆ ಗಮನಿಸುತ್ತಾರೆ. ಹಾಗೆಯೇ ಹುಡುಗಿ ಮನೆಯವರು ಹುಡುಗನ ಮನೆಗೆ ಹೋಗಿಬರುತ್ತಾರೆ. ಹೋಗಿ ಬಂದ ಕ್ರಿಯೆ ಮುಗಿದ ಮೇಲೆ ವೀಳ್ಯಶಾಸ್ತ್ರ ಮಾಡುತ್ತಾರೆ. ಎರಡು ಕಡೆಯ ತುಂಬ ಹತ್ತಿರದ ಸಂಬಂಧಿಗಳು ಮಾತ್ರ ಆಗಮಿಸುತ್ತಾರೆ. ಈ ಶಾಸ್ತ್ರ ನಡೆಯುವುದು ವಧುವಿನ ಮನೆಯಲ್ಲಿ.

ವರ – ವಧುವಿನ ಮನೆಯಲ್ಲಿ ಮೊದಲು ಗುರುಕಾರಣವನ್ನು ನೆನೆದು ಎಡೆ ಇಕ್ಕಿದ ಅನಂತರವೇ ಇಲ್ಲ ಕಾರ್ಯಕ್ರಮಗಳು ನಡೆಯುವುದು. ಹುಡುಗನ ಮನೆಯವರೆ ಎಲೆ ಅಡಿಕೆಯನ್ನು ತಂದಿರುತ್ತಾರೆ. ಮುಖ್ಯಸ್ಥರು ಬಿಳಿ ಷರಟು. ಬಿಳಿ ಕಚ್ಚೆ ಪಂಚೆ ಹಾಕಿ. ಜರಿಪೇಟ ಕಟ್ಟಿ ಹೆಗಲಿಗೆ ಶಾಲು ಹಾಕಿಕೊಂಡಿರಬೇಕು. ಎದುರು – ಬದಿರು ಮೂರು ಮೂರು ಜನ ಚಾಪೆ ಮೇಲೆ ಕುಳಿತುಕೊಂಡು. “ಹತ್ತು ಕುಟುಂಬ ಹದಿನೆಂಟು ಗೋತ್ರ ಬಂಧು ಬಾಂಧವರು ನೆಂಟರು ಇಷ್ಟರು ಸರ್ವಸ್ವಜಾತಿ ಗೃಹಸ್ಥರಲ್ಲಿ ಕುಲಸ್ಥರ ಸಭೆಯಲ್ಲಿ ಸಮಸ್ತ ಸಂಗಡ ಕೇಳಿ..” ಎಂದು ಎಲ್ಲಿ ಶಾಸ್ತ್ರ ಸಂದರ್ಭದಲ್ಲೂ ಹೇಳಿ ಅಪ್ಪಣೆ ಪಡೆದು ನಡೆಸಬೇಕು.

ಮೊದಲನೆಯ ವೀಳ್ಯ ಸಾಲಾವಳಿ ವೀಳ್ಯ. ಎರಡನೆಯ ವೀಳ್ಯೆ ಮಾತು ಕರಾರು (೭ ಕವಳೆ ವೀಳ್ಯದೆಲೆ ೭ ಅಡಕೆ), ಮೂರನೆಯ ವೀಳ್ಯ ವೀಳ್ಯ ಶಾಸ್ತ್ರದ ವೀಳ್ಯ(೯ ಕವಳೆ ವೀಳ್ಯದೆಲೆ ೯ ಅಡಕೆ), ನಾಲ್ಕನೆಯ ವೀಳ್ಯ ಲಗ್ನ ಕುರಿತು (೫ ಕವಳೆ ವೀಳ್ಯದೆಲೆ ೫ ಅಡಕೆ), ಐದನೆಯ ವೀಳ್ಯ ಬಣ್ಣ ಬಂಗಾರ (೭ ಕವಳೆ ವೀಳ್ಯದೆಲೆ ೭ ಅಡಕೆ), ಆರನೆಯ ವೀಳ್ಯ ಗುರು ವೀಳ್ಯ (೯ ಕವಳೆ ವೀಳ್ಯದೆಲೆ ೯ ಅಡಕೆ). ಕೊನೆಗೆ ಸರ್ವರಿಗೂ ವೀಳ್ಯ ಎಂದು ವೀಳ್ಯೆ ಕೊಡಬೇಕು. ಒಟ್ಟು ಒಂಬತ್ತು ವೀಳ್ಯ ಕೊಡಬೇಕು. ವೀಳ್ಯಶಾಸ್ತ್ರದಲ್ಲಿ ೬ ವೀಳ್ಯ ಕೊಟ್ಟು ಉಳಿದ ಮೂರನ್ನು ವಧುವಿನ ಮನೆಗೆ ದಿಬ್ಬಣ ಬಂದಾಗ ಕೊಡುತ್ತಾರೆ. ವೀಳ್ಯ ಶಾಸ್ತ್ರದ ದಿನವೇ ಲಗ್ನ ಪತ್ರಿಕೆಯನ್ನು ಬರೆಯುತ್ತಾರೆ. ವೀಳ್ಯ ಶಾಸ್ತ್ರವಾದ ಮೇಲೆ ಹುಡುಗ – ಹುಡುಗಿಗೂ ಕೆಲವು ನಿರ್ಬಂಧಗಳಿವೆ. ಇಬ್ಬರೂ ಸಂಧಿಸಕೂಡದು. ಯಾವುದೇ ಮದುವೆಯ ಚಪ್ಪರದ ಕೆಳಗೆ ಹೋಗಬಾರದು. ಯಾರ ಮನೆಯಲ್ಲೂ ಉಳಿಯಬಾರದು. ದೊಡ್ಡ ಮರ ಹತ್ತಬಾರದು. ತುಂಬಾ ದೂರ ಪ್ರಯಾಣ ಮಾಡಬಾರದು. ಒಬ್ಬೊಬ್ಬರೆ ಓಡಾಡಬಾರದು – ಹೀಗೆ ಅನೇಕ ನಿಯಮಗಳಿವೆ.

ಲಗ್ನ ಪತ್ರಿಕೆ ಅಚ್ಚಾದ ಮೇಲೆ ಹತ್ತಿರದ ಬಂಧುಗಳಿಗೆ ಅಂದರೆ ಸೋದರ ಮಾವ ಅತ್ತೆ ಮನೆಗಳಿಗೆ ಮತ್ತು ಕುಟುಂಬದವರಿಗೆ ಮನೆಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನಿಸಿ ಬರಬೇಕು. ಹಾಗೆಯೇ ಮದುವೆ ಕಾರ್ಯಕ್ಕೆ ನೆರವಾಗುವ ಮಡಿವಾಳ, ವಾದ್ಯದವರು, ಅಡುಗೆಯವರು ಇವರಿಗೆಲ್ಲ ವೀಳ್ಯ ಕೊಟ್ಟು ಮುಂಗಡ ಹಣ ನೀಡಬೇಕು. ಮದುವೆಗೆ ೪ – ೫ ದಿನ ಮುಂಚಿತವಾಗಿ ಮನೆಯ ಮುಂಭಾಗದಲ್ಲಿ ಎರಡು ಮನೆಯ ಕಡೆಯವರು ೧೨ ಕಂಬಗಳನ್ನು ಹಾಕಿ ಚಪ್ಪರ ಹಾಕುತ್ತಾರೆ. ಇದನ್ನು ನೆರೆ ಹೊರೆಯವರು ಹಾಗೂ ಕುಟುಂಬದವರು ಮಾಡುತ್ತಾರೆ. ಕಂಬಗಳ ಹಾಲು ಬರುವ ಫಳ ನೀಡುವ ಕಂಬಗಳಾಗಿರಬೇಕು. ಚಪ್ಪರದ ಮೇಲೆ ಹಲಸಿನ ಮರದ ಚಿಕ್ಕ ಚಿಕ್ಕ ರೆಂಬೆಗಳನ್ನು ಹಾಕುತ್ತಾರೆ. ಮದುವೆ ದಿವಸ ಚಪ್ಪರಕ್ಕೆ ಅಲಂಕಾರ ಮಾಡುತ್ತಾರೆ. ಹಾಗೆಯೇ ಮಡಿವಾಳ ಬಿಳಿ ಬಟ್ಟೆಯನ್ನು ಮೇಲ್ಕಟ್ಟು ಕಟ್ಟುತ್ತಾನೆ. ಅಲ್ಲಿಯೇ ತೂಗು ದೀಪವನ್ನು ತೂಗಿ ಬೆಳಗಿಸಲಾಗುತ್ತದೆ. ಅಡುಗೆ ತಯಾರು ಮಾಡುವ ಸ್ಥಳದಲ್ಲಿ ಒಲೆ ಪೂಜೆ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸೋಬಾನೆ ಹಾಡುಗಳು ಮೂಡಿ ಬರುತ್ತವೆ.

ಹುಡುಗನಿಗೆ ಅವನ ಮನೆಯಲ್ಲೂ ಹುಡುಗಿಗೆ ಅವಳ ಮನೆಯಲ್ಲೂ ಎಣ್ಣೆ ಅರಿಶಿನ ಶಾಸ್ತ್ರ ನಡೆಯುತ್ತದೆ. ಇದಕ್ಕಿಂತ ಮೊದಲು ಸೋದರ ಮಾವಂದಿರು ಕಾಸ್ತಾಳಿ (ಚಿನ್ನದ ಗುಂಡು ಇರುವ ಸರ)ವನ್ನು ಕಟ್ಟುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ಚಪ್ಪರದ ಕೆಳಗೆ ಮುತ್ತೈದೆಯರೆಲ್ಲ ಸೇರಿ ಎಣ್ಣೆ ಅರಿಶಿನ ಹಚ್ಚುತ್ತಾರೆ. ಅನಂತರ ಸ್ನಾನ ಮಾಡಿಸಿ ಗಂಗೆ ಪೂಜೆ ಮಾಡಿಸಿ, ಮನೆ ಒಳಗೆ ಕರೆದುಕೊಂಡು ಬಂದು ನೆಲ್ಲಕ್ಕಿ (ದೇವರ ಪಟ ಇಟ್ಟು ನಂದಾದೀಪ ಹಚ್ಚುವ ಸ್ಥಳ)ದಲ್ಲಿ ಕೂರಿಸುತ್ತಾರೆ. ಅಲ್ಲಿಯೇ ಮದುರಂಗಿ ಶಾಸ್ತ್ರವನ್ನು ಮಾಡಲಾಗುತ್ತದೆ. ಕುಲದೈವ ಮತ್ತು ಕುಲಗುರುವಿಗೆ ಹರಕೆ ಹಣವನ್ನು ಕಟ್ಟುತ್ತಾರೆ. ಇದೆಲ್ಲ ಮದುವೆಯ ಹಿಂದಿನ ದಿನ ನಡೆಯುತ್ತದೆ. ಇದಕ್ಕೆ ಚಪ್ಪರವೆಂದು ಕರೆಯುತ್ತಾರೆ.

ಗಂಡಿನ ಮನೆಯಲ್ಲಿ ಈ ಎಲ್ಲ ಶಾಸ್ತ್ರಗಳು ಮುಗಿದ ಮೇಲೆ ಹೆಣ್ಣಿನ ಮನೆಗೆ ದಿಬ್ಬಣ ಬರುತ್ತಾರೆ. ಹುಡುಗಿಗೆ ಬಟ್ಟೆ ಬರೆ ಮತ್ತು ಬಂಗಾರದ ಆಭರಣಗಳನ್ನು ತರುತ್ತಾರೆ. ಬಂದವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಚೆನ್ನಾಗಿ ಸತ್ಕಾರ ಮಾಡುತ್ತಾರೆ. ದಿಬ್ಬಣ ಬಂದವರಲ್ಲಿ ಮುಖ್ಯಸ್ಥ ಸ್ಥಾಣವನ್ನು ಅಲಂಕರಿಸಿದ್ದ ವ್ಯಕ್ತಿ ಎಲ್ಲ ಶಾಸ್ತ್ರಗಳನ್ನು ಚೆನ್ನಾಗಿ ಬಲ್ಲವನಾಗಿರಬೇಕು. ಏನಾದರೂ ತಪ್ಪು ಮಾಡಿದರೆ, ತಪ್ಪು ವೀಳ್ಯೆ ಕೊಡಬೇಕಾಗುತ್ತದೆ. ಅನಂತರ ಹುಡುಗಿಗೆ ಹುಡುಗನ ಮನೆಯಿಂದ ತೆಗೆದುಕೊಂಡು ಹೋದ ವಸ್ತ್ರವನ್ನು ಹಾಕಿ ಅಲಂಕಾರ ಮಾಡಲಾಗುತ್ತದೆ. ನೆಲ್ಲಕ್ಕಿ ಹತ್ತಿರದಿಂದ ಸೋದರಮಾವ ಹುಡುಗಿಯನ್ನು ಎತ್ತಿಕೊಂಡು ಬಂದು ಸೀತಾವಳಿ ಚಪ್ಪರದ ಕೆಳಗೆ ನಿಲ್ಲುಸುತ್ತಾರೆ. ಅಷ್ಟೊತ್ತಿಗಾಗಲೆ ವರನನ್ನು ಕೂಡ ಅಲ್ಲಿಗೆ ಕರೆದು ತಂದಿರುತ್ತಾರೆ. ವಧುವಿನ ತಂದೆ ತಾಯಿ ವರನಿಗೆ ಧಾರೆ ಎರೆದು ಕೊಡುತ್ತಾರೆ. ಅನಂತರ ಮಾಂಗಲ್ಯಧಾರಣೆ ಕೂಡ ಅಲ್ಲಿಯೇ ನಡೆಯುತ್ತದೆ.

ವರನ ಕಡೆಯಿಂದ ಬಂದವರಿಗೆಲ್ಲ ಉಟೋಪಚಾರ ನಡೆಯುತ್ತದೆ. ಆಮೇಲೆ ವಧುವನ್ನು ಕರೆದುಕೊಂಡು ವರನ ಮನೆಗೆ ಹೋಗಲಾಗುತ್ತದೆ. ಈಗೆಲ್ಲ ಛತ್ರಗಳಲ್ಲಿ ನಡೆಯುವುದರಿಂದ ಎರಡು ಕಡೆಯವರು ಒಂದೆಡೆಯಲ್ಲಿಯೇ ಮಾಡುತ್ತಾರೆ. ವಧುವರರಿಗೆ ಅಕ್ಕಿ ಶಾಸ್ತ್ರ ಮಾಡಿದ ಮೇಲೆ ಹುಡುಗಿ ಕೈಯಲ್ಲಿ ಗೊಬ್ಬರವನ್ನು ಹೊರಿಸಿ ಗದ್ದೆಗೆ ಹಾಕಿಸಿ, ಅಲ್ಲಿಂದ ಬರುತ್ತಾ ಬಿಂದಿಗೆಯಲ್ಲಿ ನೀರನ್ನು ತರಿಸುತ್ತಾರೆ. ಆಮೇಲೆ ಹುಡುಗಿ ಮನೆಯಿಂದ ಕೊಟ್ಟ ಒಡವೆ ವಸ್ತ್ರ ಸಾಮಗ್ರಿಗಳ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕೆ ನಾಗೋಳಿಶಾಸ್ತ್ರವೆಂದು ಕರೆಯುತ್ತಾರೆ.

ಮದುವೆ ಕಳೆದ ೩ ಅಥವಾ ೫ ನೇ ದಿವಸಕ್ಕೆ ಹುಡುಗನ ಮನೆಯಿಂದ ಹುಡುಗಿಯ ಮನೆಗೆ ತುಪ್ಪ ತರುವ ಶಾಸ್ತ್ರ ಮಾಡಲಾಗುತ್ತದೆ. ೭ ಅಥವಾ ೯ ಜನ ಬರುತ್ತಾರೆ. ತಂದ ತುಪ್ಪವನ್ನು ನಂದಾದೀಪಕ್ಕೆ ಹಾಕಿ ದೇವರಿಗೆ ಕೈಮುಗಿಯುತ್ತಾರೆ. ಬಂದವರು ಅದೇ ದಿವಸ ವಾಪಸ್ಸು ಹೋಗುತ್ತಾರೆ. ಮತ್ತೆ ೪ – ೫ದಿವಸ ಕಳೆದು ಹುಡುಗಿಯ ಮನೆಯವರು ೧೦ದಿವಸ ತವರು ಮನೆಯಲ್ಲಿ ಉಳಿಯಲು ಹುಡುಗಿಯನ್ನು ಕರೆದುಕೊಂಡು ಬರುತ್ತಾರೆ. ಅನಂತರ ಹುಡುಗನ ಮನೆಯವರು ಬಂದು ಹುಡುಗಿಯನ್ನು ಕರೆದುಕೊಂಡು ಹೋಗುತ್ತಾರೆ. ಅನಂತರ ಪುಣ್ಯಕ್ಷೇತ್ರಗಳಿಗೆ, ಹತ್ತಿರದ ಬಂಧುಬಾಂಧವರ ಮನೆಗೆ ಹೋಗಿ ಬರುತ್ತಾರೆ.

ಕೊಡಗಿನಲ್ಲಿ ವ್ಯಕ್ತಿ ಸಾಯುವ ಹಂತ ತಲುಪಿದ್ದಾರೆಂದು ಗೊತ್ತಾದ ತಕ್ಷಣ ಅವರನ್ನು ಮನೆಯ ಮಧ್ಯಭಾಗದ ಕೋಣೆ (ಬಾಡೆ)ಗೆತಂದು ಚಾಪೆ ಮೇಲೆ ಮಲಗಿಸುತ್ತಾರೆ. ಅನಂತರ ಮನೆಯಲ್ಲಿ ಶೇಖರಿಸಿಟ್ಟಿದ್ದ ಪುಣ್ಯ ತೀರ್ಥವನ್ನು ಅಥವಾ ತೆಂಗಿನಕಾಯಿಯ ನೀರನ್ನು ತುಳಸಿದಳದಲ್ಲಿ ಅದ್ದಿ ಬಾಯಿಗೆ ಹಾಕುತ್ತಾರೆ. ಪ್ರಾಣ ಹೋದ ತಕ್ಷಣ ಸುತ್ತಮುತ್ತಲಿನವರಿಗೆಲ್ಲ ತಿಳಿಯಲೆಂದು ಕೋವಿಯಿಂದ ಗುಂಡು ಹಾರಿಸುತ್ತಾರೆ. ಜೊತೆಯಲ್ಲಿ ಎರಡು ಗುಂಡಿನ ಶಬ್ದ ಕೇಳಿದರೆ ಯಾರೋ ತೀರಿಕೊಂಡರೆಂದೇ ಅರ್ಥ. ವಿಷಯ ತಿಳಿದ ಕೂಡಲೇ ಊರಿನವರೆಲ್ಲ ಬಂದು ಸೇರುತ್ತಾರೆ. ಮೊದಲ್ಲೆಲ್ಲ ದೂರದ ಬಂಧುಗಳ ಮನೆಗಳಿಗೆ ಊರಿನ ಯಾರಾದರೊಬ್ಬವ ವ್ಯಕ್ತಿ ಹೋಗಿ ಹೇಲಿ ಬರುತ್ತಿದ್ದ. ಈಗ ದೂರವಾಣಿ ಮೂಲಕ ತಿಳಿಸುವರು. ಸಾವಿನ ಮನೆಗೆ ಬರುವವರು ಬಿಳಿ ಬಟ್ಟೆಯನ್ನು ಧರಿಸಿರುತ್ತಾರೆ. ಹೆಣದ ಮೇಲೆ ಹಾಕಲು ಬಿಳಿ ಬಟ್ಟೆ, ಹೂ, ಗಂಧದ ಕಟ್ಟಿಗೆ ತರುತ್ತಾರೆ. ಹೆಣಕ್ಕೆ ಸ್ನಾನ ಮಾಡಿಸಿ ಶೃಂಗಾರ ಮಾಡಿ ಮಲಗಿಸುತ್ತಾರೆ. ಎಲ್ಲರೂ ಒಂದು ಅಲ್ಲಿಯೇ ಪಕ್ಕದಲ್ಲಿ ಕಂಚಿನ ತಟ್ಟೆಯಲ್ಲಿ ಹಾಲು ಮತ್ತು ತುಳಸಿದಳ ಇಟ್ಟಿರುತ್ತಾರೆ. ಅದರ ಮೂಲ ಬಾಯಿಗೆ ಮುಟ್ಟಿಸಿ ಸ್ವರ್ಗಕ್ಕೆ ಹೋಗು ಅಪ್ಪ/ಅಮ್ಮ/ಮಾವ/ಅತ್ತೆ ಎಂದು ಸಂಬಂಧ ಸೂಚಿಸಿ ಹೇಳಿ ಹಿರಿಯರಾದರೆ ಪಾದ ಮುಟ್ಟಿ ನಮಸ್ಕರಿಸುತ್ತಾರೆ.

ಬಂದವರೆಲ್ಲಾ ಹೆಣ ನೋಡಿದ ಮೇಲೆ ಮನೆಯವರು ಊರಿನವರು ಸೇರಿ ಚಟ್ಟ ತಯಾರು ಮಾಡುತ್ತಾರೆ. ಶವವನ್ನು ಅದರಲ್ಲಿಟ್ಟು ಸ್ಮಶಾನಕ್ಕೆ ಕೊಂಡೊಯ್ಯುತ್ತಾರೆ. ಆ ಜಾಗಕ್ಕೆ ಸೂಟ್‌ಗಳ ಎಂದು ಕರೆಯುತ್ತಾರೆ. ಅಲ್ಲಿ ಮೊದಲೆ ಕಟ್ಟಿಗೆಯನ್ನು ಕಡಿದು ಅದನ್ನು ಜೋಡಿಸಿಟ್ಟಿರುತ್ತಾರೆ. ಅದರ ಮೇಲೆ ಹಣವನ್ನು ಇಟ್ಟು ಸುಡುತ್ತಾರೆ. ಈ ಕೆಲಸವನ್ನೆಲ್ಲ ಮಾಡಲು ಸತ್ತ ವ್ಯಕ್ತಿಯ ಸಾಮಾನ್ಯವಾಗಿ ತಂದೆಯಾದರೆ ಹಿರಿಯ ಮಗ ತಾಯಿಯಾದರೆ ಕಿರಿಯ ಮಗ, ಇಲ್ಲದಿದ್ದರೆ ಹತ್ತಿರದ ಸಂಬಂಧಿ ಎಲ್ಲವನ್ನು ನೆರವೇರಿಸುತ್ತಾರೆ. ಪ್ರತಿಯೊಂದು ಕ್ರಿಯೆಮಾಡುವಾಗಲೂ ಗುಂಡು ಹಾರಿಸುತ್ತಾರೆ. ಮತ್ತು ನುಡಿಸುವವರು ದುಃಖದ ಸಂಕೇತವಾಗಿ ವಾದ್ಯ ನುಡಿಸುತ್ತಾರೆ. ಮಾರನೆಯ ದಿವಸ ಬೆಳಗ್ಗೆ ಮತ್ತೆ ಎಲ್ಲರೂ ಸೇರಿ ಮೂರನೇ ದಿವಸ ಮಾಡುವ ಶುದ್ಧಕ್ರಿಯೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿರುತ್ತಾರೆ. ಹಾಗೆ ವ್ಯಕ್ತಿ ಸತ್ತಗಳಿಗೆಯನ್ನು ಹೇಳಿ ಅದರಿಂದ ಮುಂದೆ ಆಗಬಹುದಾದ ಸಮಸ್ಯೆಗಳಿದ್ದರೆ ಅದಕ್ಕೆ ಪರಿಹಾರವನ್ನು ಮಾಡಿಸಿಕೊಳ್ಳುತ್ತಾರೆ.

ಶುದ್ಧಕ್ರಿಯೆ ಮಾಡುವ ಹಿಂದಿನ ದಿವಸ ಕೋಣೆಯೊಂದರಲ್ಲಿ ಅಕ್ಕಿ ಪುಡಿಯನ್ನು ತೆಳುವಾಗಿ ನೆಲದ ಮೇಲೆ ಹಾಕಿ ಒಂದು ಲೋಟದಲ್ಲಿ ನೀರು ಮತ್ತು ಇನ್ನೊಂದು ಲೋಟದಲ್ಲಿ ಮದ್ಯವನ್ನು ತುಂಬಿಸಿ ಇಟ್ಟಿರುತ್ತಾರೆ. ಅನಂತರ ದೀಕ್ಷೆನಿಂತ ವ್ಯಕ್ತಿ ಸತ್ತು ಹೋದ ವ್ಯಕ್ತಿಯ ಸಂಬಂಧವನ್ನು ಸೂಚಿಸಿ ಮೂರು ಸಲ ಕರೆದು ಆ ಕೋಣೆಯ ಬಾಗಿಲನ್ನು ಸ್ವಲ್ಪ ಹೊತ್ತು ಮುಚ್ಚುತ್ತಾರೆ. ಮತ್ತೆ ಬಾಗಿಲನ್ನು ತೆಗೆದು ಅಕ್ಕಿಪುಡಿಯ ಮೇಲೆ ಏನಾದರೂ ಹೆಜ್ಜೆಯ ಗುರುತು ಇದೆಯೇ ಎಂದು ಪರೀಕ್ಷಿಸುತ್ತಾರೆ. ಅಂದರೆ ಸತ್ತ ವ್ಯಕ್ತಿ ಬಂದಿರಬಹುದೆಂಬ ಊಹೆ. ಮಾರನೆಯ ದಿವಸ ಬೆಳಗ್ಗೆ ಊರಿನವರು ಸೇರಿಕೊಂಡು ಅಡುಗೆ ಕೆಲಸವನ್ನು ಪ್ರಾರಂಭಿಸುತ್ತಾರೆ. ಹತ್ತಿರದ ಸಂಬಂಧಿಗಳು ಸಾಮಾನ್ಯವಾಗಿ ತಲೆಗೂದಲು ಮತ್ತು ಮೀಸೆ ಗಡ್ಡವನ್ನು ತೆಗೆಸುತ್ತಾರೆ. ಇದಕ್ಕಾಗಿಯೇ ಕ್ಷೌರಿಕ ಬಂದಿರುತ್ತಾನೆ. ಹೆಣವನ್ನು ಸುಟ್ಟ ಸ್ಥಳದಲ್ಲಿ ಮಾಡಿದ ಅಡುಗೆ ಪದಾರ್ಥವನ್ನೆಲ್ಲ ಇಟ್ಟು ಇಲ್ಲಿ ಪೂಜೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಸತ್ತ ವ್ಯಕ್ತಿ ಬದುಕಿದ್ದಾಗ ಏನ್ನೆಲ್ಲ ತಿನ್ನುತ್ತಿದ್ದನೋ ಅದನ್ನು ಸಂಬಂಧಿಗಳು ಎಡೆಯ ಜಾಗದಲ್ಲಿ ತಂದು ಇಡುತ್ತಾರೆ. ಅಲ್ಲಿಯೂ ಅದನ್ನು ಇಟ್ಟು ಸ್ವಲ್ಪ ಹೊತ್ತು ಆ ಜಾಗವನ್ನು ನೋಡದೇ ತಿರುಗಿ ನಿಲ್ಲಬೇಕು. ಅನಂತೆ ಅಲ್ಲಿ ಹೋದವರೆಲ್ಲ ಅಲ್ಲಿದ್ದ ಪದಾರ್ಥಗಳನ್ನು ಸ್ವೀಕರಿಸುತ್ತಾರೆ.

ಅಲ್ಲಿಂದ ಬಂದ ಅನಂತರ ಸ್ನಾನ ಮಾಡಿ ಶುದ್ಧಕ್ರಿಯೆಗೆ ನಿಂತುಕೊಳ್ಳಬೇಕು. ಇಲ್ಲಿ ಮಡಿವಾಳ ಅನಿವಾರ್ಯ. ಆತನೇ ಈ ಕ್ರಿಯೆಯನ್ನೆಲ್ಲಾ ನೆರವೇರಿಸುತ್ತಾನೆ. ಊರಿನವರು ತಾವು ಮಾಡಿಟ್ಟ ಅಡುಗೆಯನ್ನು ಮೊಲದು ಮನೆಯವರಿಗೆ ಬಡಿಸಿ ಆಮೇಲೆ ಉಳಿದವರಿಗೆ ಬಡಿಸುತ್ತಾರೆ. ಕುಂಬಳಕಾಯಿ ಸಾರು ಮತ್ತು ಬಾಳೆಕಾಯಿ ಹುರುಳಿಕಾಯಿ ಹಾಕಿದ ಸಾರು ಪ್ರಮುಖವಾಗಿರುತ್ತದೆ. ಉಳಿದಂತೆ ಅವರವರ ಶಕ್ತ್ಯಾನುಸರ ಊಟದ ವ್ಯವಸ್ಥೆ ಮಾಡಿರುತ್ತಾರೆ. ಅದೇ ದಿವಸವೇ ತಿಥಿಗೆ ಆಮಂತ್ರಿಸುವ ಪತ್ರವನ್ನು ಎಲ್ಲರಿಗೂ ನೀಡಲಾಗುತ್ತದೆ. ಅಂದರೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ಒಂದು ಭೋಜನ ಕೂಟ. ಅದು ಮಾಂಸಾಹಾರ.

ತಿಥಿ ದಿವಸ ಬೆಳಗ್ಗೆ ಸತ್ತ ವ್ಯಕ್ತಿಯ ಫೋಟೋ ಮತ್ತು ಆತ ಬಳಸುತ್ತಿದ್ದ, ಇಷ್ಟಪಡುತ್ತಿದ್ದ ವಸ್ತುಗಳನ್ನೆಲ್ಲ ಒಂದು ಮಂಚದ ಮೇಲೆ ಇಟ್ಟು, ಆ ದಿನ ತಯಾರು ಮಾಡಿದ ಭಕ್ಷ್ಯಭೋಜ್ಯಗಳನ್ನೆಲ್ಲ ಎಡೆ ಹಾಕುವುದುಂಟು. ಹಾಗೆಯೆ ಹತ್ತಿರದ ಸಂಬಂಧಿಗಳು ಸತ್ತ ವ್ಯಕ್ತಿಗೆ ಇಷ್ಟವಾದ ಪದಾರ್ಥ ತಂದು ಆ ಎಡೆಯಲ್ಲಿ ಇಟ್ಟ ಅಕ್ಷತೆ ಹಾಕಿ ನಮಸ್ಕಾರ ಮಾಡುತ್ತಾರೆ. ಮಧ್ಯಾಹ್ನ ಹತ್ತಿರದ, ದೂರದ ಎಲ್ಲ ಸಂಬಂಧಿಗಳಿಗೂ ಊಟ. ಮತ್ತೆ ಸಂಜೆ ೭ ಗಂಟೆಗೆ ಬೆಳಗ್ಗೆ ಇಟ್ಟ ಎಡೆಯನ್ನು ಪೂಜೆ ಮಾಡಿ ಅಲ್ಲಿಂದ ತೆಗೆದು ಎಲ್ಲರೂ ಸ್ವೀಕರಿಸುತ್ತಾರೆ.

ತಿಥಿ ಕರ್ಮಾಂತರವೆಲ್ಲ ಮುಗಿದ ಮೇಲೆ ೧೬ನೇ ದಿವಸ (ವ್ಯಕ್ತಿ ಸತ್ತ ದಿನದಿಂದ) ಹದಿನಾರು ಕೊಲೆ ಸೇರಿಸುವುದು ಎಂಬ ಒಂದು ಪದ್ಧತಿಯಿದೆ. ಅದನ್ನು ಐನ್‌ರ ಮನೆ (ಎಲ್ಲರಿಗೂ ಸೇರಿದ್ದ ದೊಡ್ಡಮನೆ) ಯಲ್ಲಿ ಏರ್ಪಡಿಸಲಾಗಿರುತ್ತದೆ. ಅಲ್ಲಿಯೂ ಮಾಂಸಾಹಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಮೊದಲು ೧೬ ಬಾಳೆಎಲೆಗೆ ಎಡೆಯನ್ನು ಬಡಿಸಿರುತ್ತಾರೆ. ಮತ್ತೊಂದು ಬಾಳೆ ಎಲೆಯಲ್ಲಿ ಎಡೆ ಬಡಿಸಿ ದೂರವಿಟ್ಟಿರುತ್ತಾರೆ. ಅಲ್ಲಿ ಪೂಜೆ ಎಲ್ಲ ಆದ ಮೇಲೆ ೧೬ರಲ್ಲಿ ಒಂದನ್ನು ತೆಗೆದು,ಮೊದಲು ದೂರವಿಟ್ಟ ಬಾಳೆ ಎಲೆಯನ್ನು ಅದಕ್ಕೆ ಸೇರಿಸುತ್ತಾರೆ. ಇದಕ್ಕೆ ಹದಿನಾರು ಕೊಲೆ ಸೇರಿಸುವುದು ಎನ್ನುತ್ತಾರೆ.

ಸತ್ತ ವ್ಯಕ್ತಿಯ ಮನೆಯವರು ಆ ವರ್ಷದಲ್ಲಿ ಬರುವ ಕಾವೇರಿ ಸಂಕ್ರಮಣ ಅಥವಾ ಶಿವರಾತ್ರಿಗೆ ತಲಕಾವೇರಿಗೆ ಹೋಗಿ ಪಿಂಡ ಹಾಕಿ ಬರುತ್ತಾರೆ. ಆ ವರ್ಷದಲ್ಲಿ ದೀಪಾವಳಿಯಲ್ಲಿ ಅವಲಕ್ಕಿ ಎಡೆಯನ್ನು ಹಾಕಲಾಗುತ್ತದೆ. ಸತ್ತ ವ್ಯಕ್ತಿಯ ಕುಟುಂಬದವರಿಗೆ ಶುದ್ಧಕ್ರಿಯೆ ಕಳೆಯುವ ತನಕ ಸೂತಕ. ಅವರು ದೇವಸ್ಥಾನಕ್ಕಾಗಲಿ, ಶುಭ ಸಮಾರಂಭಗಳಿಗಾಗಲೇ ಹೋಗುವಂತಿಲ್ಲ. ಆ ಕುಟುಂಬದ ಹಿರಿಯ ವ್ಯಕ್ತಿ ಸತ್ತರೆ ಆ ವರ್ಷ ಹುತ್ತರಿಹಬ್ಬವನ್ನು ಮಾಡುವಂತಿಲ್ಲ.

ಯುಗಾದಿ ಹಬ್ಬವನ್ನು ನಾಡಿನ ಎಲ್ಲೆಡೆ ಆಚರಿಸುವಂತೆ ಆಚರಿಸುತ್ತಾರೆ. ಕೈಲ ಮೂರ್ತ ಮತ್ತು ಹುತ್ತರಿಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಕೈಲ ಮೂರ್ತ ಹಬ್ಬವನ್ನು ನಾಟಿ ಕೆಲಸ ಮುಗಿದ ಕೂಡಲೆ ಅಂದರೆ ಸೆಪ್ಟೆಂಬರ್ ೩ನೇ ತಾರೀಖು ಆಚರಿಸುತ್ತಾರೆ. ಮನೆಯಲ್ಲಿದ್ದ ಆಯುಧಗಳನ್ನೆಲ್ಲ ತೊಳೆದು ಮತ್ತು ಗದ್ದೆಕೆಲಸಕ್ಕೆ ಉಪಯೋಗಿಸುವ ಸಾಮಾನುಗಳನ್ನೆಲ್ಲ ತೊಳೆದು, ಎತ್ತು ಕೋಣಗಳಿಗೆ ಸ್ನಾನ ಮಾಡಿಸಿ, ಪೂಜೆ ಮಾಡುತ್ತಾರೆ. ಕೆಲವರು ಆ ದಿನ ಬೇಟೆಯಾಡಲು ಹೋಗುತ್ತಾರೆ. ಈ ಹಬ್ಬದಲ್ಲಿ ಹಂದಿಮಾಂಸವೇ ಮುಖ್ಯ. ಹುತ್ತರಿಹಬ್ಬವನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಆಚರಿಸುವುದಿದೆ. ಹುಣ್ಣಿಮೆ ದಿನ ರೋಹಿಣಿ ನಕ್ಷತ್ರದಲ್ಲಿ ಗದ್ದೆಯಿಂದ ಬತ್ತವನ್ನು ತರುವುದೇ ಹಬ್ಬದ ಪ್ರಮುಖವಾದ ಅಂಶ. ಅಂದರೆ ಒಳ್ಳೆಯ ದಿನ ಲಕ್ಷ್ಮಿಯನ್ನು ಮನೆ ತುಂಬಿಸಿ ಕೊಳ್ಳುವುದು ಅಥವಾ ಹೊಸ ಬತ್ತವನ್ನು ಮನೆ ತುಂಬಿಸಿಕೊಳ್ಳುವುದು ಹುತ್ತರಿ ಹಬ್ಬದ ದಿನ ಮಾತ್ರ ಸಿಹಿ ಊಟದ ವ್ಯವಸ್ಥೆ ಇರುತ್ತದೆ. ಅಡಿಕೆ ಹಿಟ್ಟು, ತಂಬಿಟ್ಟು, ಹುತ್ತರಿಗೆಣಸಿನ ಸಾರು ಮತ್ತು ಅಕ್ಕಿಪಾಯಸ ಇದ್ದೇ ಇರುತ್ತದೆ. ಇನ್ನು ನಾನಾ ತರಹದ ಭಕ್ಷ್ಯಗಳು ಇರುತ್ತವೆ.

ಕೊಡಗಿನಲ್ಲಿ ಎಲ್ಲ ತರಹದ ಜನಾಂಗವಿರುವುದ್ದರಿಂದ ಅನೇಕ ಭಾಷೆಗಳನ್ನು ಮಾತನಾಡುವವರನ್ನು ಕಾಣಬಹುದು. ಮುಖ್ಯವಾಗಿ ಕನ್ನಡ, ಅರೆಗನ್ನಡ, ಕೊಡವ, ತುಳು, ಮಲಯಾಳ ಭಾಷೆಯನ್ನಾಡುವ ಜನರ ಸಂಖ್ಯೆಯೇ ಹೆಚ್ಚು. ಆದರೂ ಕೊಡಗಿನಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು.

– ಬಿ.ಪಿ.ಎ.

ಕೊಡಿಯಾಟ್ ಇದೊಂದು ಕೊಡವ ಜನಪದ ಕುಣಿತ. ಕೊಡಗು, ಮಲಯಾಳ, ತಮಿಳು ಭಾಷೆಗಳಲ್ಲಿ ‘ಕೊಡಿ’ ಎಂದರೆ ‘ಬಾವುಟ’ ಎಂದರ್ಥ. ‘ಚಿಗುರು’ ಎಂಬರ್ಥವೂ ಇದೆ. ಇದು ಪುರುಷ ಪ್ರಧಾನವಾದ, ದೇವಾರಾಧನಾ ಅಂತ್ಯದ ದಿನಗಳಲ್ಲಿ ಮಾತ್ರ ಆಡಲಾಗುವ ಕುಣಿತದ ಸೇವೆ. ಊರದೇವರ ಹಬ್ಬದ ಕೊನೆಯ ದಿನದಂದು ನಡೆಸಲಾಗುವ ಅನೇಕ ರೀತಿಯ ಕುಣಿತಗಳಿಗೂ ಮಂಚೆ, ಉದಾಹರಣೆಗೆ ಉತ್ತರ ಕೊಡಗಿನ ಕೊಂಟ್‌ಬಾಟ್‌ ಪೀಲಿಯಾಟ್‌ಗಳಿಗೂ ಮುಂಚೆ ಇದನ್ನು ಮೊದಲ ಆರಾಧನಾ ಕ್ರಮದ ಕುಣಿತವಾಗಿ ಆಡಲಾಗುತ್ತದೆ. ಒಂದು ಎತ್ತರದ ಬಿದಿರಿನ ಕಡ್ಡಿಯನ್ನು ತ್ರಿಕೋನಾಕಾರವಾಗಿ ಇತರ ಕಡ್ಡಿಗಳಿಂದ ರಚಿಸಿ ಅದಕ್ಕೆ ಕೆಂಪು ಬಟ್ಟೆಯನ್ನು ಸುತ್ತಿ ‘ಪವಿತ್ರ ಧ್ವಜ’ವನ್ನು ರಚಿಸಲಾಗುತ್ತದೆ. ಅದನ್ನು ಎತ್ತಿಹಿಡಿವ ಕೊಡವ ‘ವಕ್ಕಗಳ’ಲ್ಲಿ (ಒಕ್ಕಲು) ಪ್ರತಿಯೊಂದು ಮನೆಯ ಸದಸ್ಯನೂ ಕುಣಿತದಲ್ಲಿ ಭಾಗವಹಿಸುತ್ತಾರೆ. ಇದನ್ನು ಕೊಡಗಿನ ಎಲ್ಲ ದೇವಸ್ಥಾನಗಳಲ್ಲೂ ಆಡುವುದಿಲ್ಲ. ಉತ್ತರ ಕೊಡಗಿನ ಕೆಲವು ದೇವಸ್ಥಾನಗಳಲ್ಲಿ ಮಾತ್ರ ಆಡುತ್ತಾರೆ. ನಿರ್ದಿಷ್ಟ ಹಬ್ಬಗಳನ್ನು ಬಿಟ್ಟರೆ ಮಿಕ್ಕ ಯಾವುದೇ ಸಮಾರಂಭಗಳಲ್ಲಿ , ಹಬ್ಬಗಳಲ್ಲಿ ಆ ಆಟ ನಿಷಿದ್ಧ. ಕೊಡವರ ಪ್ರತಿ ಮನೆತನದ ತಕ್ಕ (ಮುಖ್ಯಸ್ಥ)ನೂ ಊರಿನ ಹಿರಿಯರೂ ಆಯ್ಕೆಮಾಡಿದ ಆಯಾ ಮನೆತನಗಳ ಗಂಡಸು ‘ಕೊಡಿ’ ತೆಗೆಯುತ್ತಾರೆ. ಆಯಾ ನಿರ್ದಿಷ್ಟ ಮನೆತನಗಳಲ್ಲಿ ಯಾವುದೇ ಹಿರಿಯ ಗಂಡಸು ಇಲ್ಲಿದಿದ್ದಲ್ಲಿ ಮಾತ್ರ ಕೊಡಿಯಾಟ್‌ನಲ್ಲಿ ಭಾಗವಹಿಸದಿರುವ ಸ್ವಾತಂತ್ರ್ಯ ಆ ಮನೆತನಕ್ಕಿರುತ್ತದೆ. ಇಲ್ಲದಿದ್ದಲ್ಲಿ ಪ್ರತಿ ಪ್ರಮುಖ ಮನೆತನಗಳಿಗೂ ಇದು ಕಡ್ಡಾಯ. ಮನೆತನದಲ್ಲಿ ಆಯ್ಕೆಯಾದ ಗಂಡಸು ಕೊಡಿ ತೆಗೆದು ತಮ್ಮ ‘ಐನ್‌ಮನೆ’ ಯಿಂದ (ಮೂಲ ಮನೆ ಅಥವಾ ಪಾರಂಪರಿಕ ಮನೆ) ಹೊರಟು ದೇವಸ್ಥಾನಕ್ಕೆ ಮಧ್ಯಾಹ್ನದ ಒಂದನೆಯ ಪ್ರಹರದೊಳಗೆ ಜೊತೆಗೆ ಮೇದರವರು ವಾಲಗ ಹಾಗೂ ಡೋಲು ಹಾಕುತ್ತಾ ಸಾಗುತ್ತಾರೆ. ಅವರು ಹೊತ್ತ ‘ಕೊಡಿ’ ದಾರಿಯಲ್ಲಿ ಅಪವಿತ್ರವಾಗದಂತೆ ಯಾರೂ ಅವರನ್ನು ‘ಅಡ್ಡದಾಟ’ ಬಾರದು. ಹಾಗಾದಲ್ಲಿ ಅದು ಅಶುಭಸೂಚಕವೆಂದು ಭಾವಿಸಲಾಗುತ್ತದೆ.

ಕೊಡಿ ತೆಗೆದುಕೊಂಡ ವಕ್ಕ ಮುಖ್ಯಸ್ಥರೆಲ್ಲ ಊರ ದೇವಸ್ಥಾನದ ಹತ್ತಿರ ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಒಟ್ಟು ಸೇರಿ ದೇವಸ್ಥಾನದ ಮುಂಭಾಗದಲ್ಲಿರುವ ‘ಕಲ್ಲ್‌ಬೋಟಿ’ ಎಂದು ಕರೆಯಲಾಗುವ ಧ್ವಜಸ್ತಂಭದ ಸುತ್ತಲೂ ಸಾಂಪ್ರದಾಯಿಕವಾಗಿ ಮೂರು ಸುತ್ತು ಕುಣಿದು ದುಷ್ಟದೈವಗಳನ್ನು ತೊಗಲಿಸಿ ದೇವಸ್ಥಾನದ ಅಂಗಳವನ್ನು ಪವಿತ್ರಗೊಳಿಸುತ್ತಾರೆ. ಅನಂತರ ದೇವಸ್ಥಾನದ ಒಳಾಂಗಣವಾದ ‘ಕಳೆ(ಕಣ)ದಲ್ಲೂ ಕುಣಿದು ಆ ಜಾಗವನ್ನೂ ಹಾಗೆಯೇ ಪವಿತ್ರಗೊಳಿಸುತ್ತಾರೆ. ಇದಾದ ಬಳಿಕ ತಂತಮ್ಮ ಕೊಡಿಯನ್ನು ದೇವಸ್ಥಾನಕ್ಕೆ ಒಪ್ಪಿಸುತ್ತಾರೆ. ಕುಣಿಯುವ ಸಂದರ್ಭದಲ್ಲಿ ಕೊಡಗಿನ ಇತರ ಅನೇಕ ಕುಣಿತಗಳಲ್ಲಿಯಂತೆ ಇಲ್ಲಿಯೂ ಆವೇಶದಿಂದ ಕುಣಿಯುವ ‘ತಿರೊಳಕ್ಕಾರ’ (ಮೈಮೇಲೆ ಬಂದವನು) ಕಲಾವಿದರ ನಡುವೆ ಸೇರಿಕೊಳ್ಳುತ್ತಾನೆ. ಈ ಎಲ್ಲ ಕಲಾವಿದರೂ ನಿರ್ದಿಷ್ಟ ಕಾಲದವರೆಗೂ ಮದ್ಯಮಾಂಸ ಸೇವನೆಯನ್ನು ವರ್ಜಿಸಿ ಶುದ್ಧರಾಗಬೇಕು. ಹಾಲು ಬರುವ ಮರಗಳನ್ನು ಊರಲ್ಲಿ ಆ ದಿನಗಳಲ್ಲಿ ಕಡಿಯಬಾರದು. ಪ್ರಾಣಿಬಲಿ ಅಥವಾ ಯಾವುದೇ ಹಿಂಸಾಕಾರ್ಯಗಳಾಗಬಾರದು ಎಂಬ ಕಟ್ಟುನಿಟ್ಟಿನ ಆದೇಶವಿರುತ್ತದೆ. ‘ತಿರೊಳಕ್ಕಾರ’ ಉತ್ಸವಕ್ಕೆ ಹದಿನೈದು ದಿನಗಳಷ್ಟು ಮುಂಚಿನ ಕಾಲದಿಂದಲೂ ‘ಕಟ್ಟಿ’ನಲ್ಲಿದ್ದು ಮನೆ, ಹೆಂಗಸರ ಸಹವಾಸದಿಂದ ದೂರವಿದ್ದು ‘ಕೊಡಿ’ ತೆಗೆಯುವ ದಿನದಂದು ಸಂಪೂರ್ಣ ‘ಪಟ್ಟಣಿವ್ರತ’ (ಉಪವಾಸ)ವಿರಬೇಕು.

ಅನೇಕ ಜನಪದ ಸಾಂಪ್ರದಾಯಿಕ ಕುಣಿತಗಳಿಗೆ ಪ್ರಸಿದ್ಧವಾದ ಉತ್ತರಕೊಡಗಿನಲ್ಲಿ ಈ ‘ಕೊಡಿಯಾಟ್’ ಭದ್ರಕಾಳಿ ದೇವಳಗಳ ಮಂದ್‌ವಿನಲ್ಲಿ ಅತ್ಯಂತ ಸಂಪ್ರದಾಯಬದ್ಧವಾಗಿ ಮಡಿಮಡಿಯಾಗಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಕೊಡಗಿಗೆ ವಲಸೆಬಂದ ೭ ಭದ್ರಕಾಳಿಯರು ಉತ್ತರಕೊಡಗಿನ ಏಳುಕಡೆ ನೆಲೆನಿಂತಿರೆಂದೂ ಅವರ ಪಾವಿತ್ರ್ಯದ ಗುರುತಾಗಿಯೇ ತ್ರಿಕೋನಾಕಾರದ ಕೆಂಪುಕೊಡಿ ಹೊತ್ತ ಕುಣಿತ ನಡೆಯುತ್ತದೆಂದು ಆಸ್ತಿಕರು ವಿಸ್ತರಿಸುತ್ತಾರೆ.

– ಜಿ.ಎನ್.

ಕೊಮ್ಮುಬೂರಲು ಇದು ಸಾಂಪ್ರದಾಯಿಕ ಜಾನಪದ ಪ್ರದರ್ಶನ ಕಲೆ. ಸಾಮೂಹಿಕ ಪ್ರದರ್ಶನ ಕಲೆಯಾದ ಇದು ಒಂದು ಪ್ರತ್ಯೇಕ ಪಂಗಡಕ್ಕೆ ಸಂಬಂಧಿಸಿದ ಕುಲಪರವಾದ ಕಲೆ. ಕಂಚಿನ ಲೋಹದಿಂದ ತಯಾರಿಸಿದ ಡೊಂಕಾಕಾರದ ಕೊಂಬು ಕಹಳೆಯನ್ನು ಊದುತ್ತ ನೀಡುವ ಪ್ರದರ್ಶನವೇ ಕೊಂಬು ಕಹಳೆ ಪ್ರದರ್ಶನ. ಇದನ್ನೇ ಕೊಂಬು ಮೇಳ, ಕೊಂಬು ವೃಂದ ಎಂಬ ಹೆಸರುಗಳಿಂದ ಕರೆಯುವರು. ಇದು ಆಂಧ್ರಪ್ರದೇಶದಲ್ಲಿ ಪ್ರಚಾರದಲ್ಲಿರುವ ಪ್ರದರ್ಶನ ಕಲೆ. ಇದನ್ನು ಗ್ರಾಮದೇವತೆಯ ಉತ್ಸವ, ಮೆರೆವಣಿಗೆಯ ಸಂದರ್ಭದಲ್ಲಿ ಕಡ್ಡಯವಾಗಿ ಪ್ರದರ್ಶಿಸುತ್ತಾರೆ. ಗಂಡಸರೇ ಪ್ರದರ್ಶಿಸುವ ಕಲೆಯಿದು. ಮಾದಿಗರಲ್ಲಿ ಕೊಂಬು ಮಾದಿಗರೆಂಬ ಪ್ರತ್ಯೇಕ ಪಂಗಡವಿರುತ್ತದೆ, ಅವರು ಇದನ್ನು ಪ್ರದರ್ಶಿಸುತ್ತಾರೆ.

ಕೊಂಬು ಊದುವುದರಿಂದ ಇವರನ್ನು ಕೊಂಬು ಊದುಗರೆಂದೇ ಕರೆಯುವರು. ಕೊಂಬು ಕಹಳೆ ಊದುವವರಿಗೆ ಪ್ರತ್ಯೇಕವಾದ ಉಡುಪುಗಳಿರುವುದಿಲ್ಲ. ಜಾತ್ರೆಗೆ ಬಂದಾಗ ರಾತ್ರಿ ಎಂಟು ಒಂಬತ್ತು ಗಂಟೆಯೊಳಗೆ ಪ್ರದರ್ಶನ ಪ್ರಾರಂಭಿಸುತ್ತಾರೆ. ಸಂಖ್ಯಾನಿಯಮವೇನಿಲ್ಲ. ಇವರೊಂದಿಗೆ ತಮಟೆ ವಾದ್ಯವಿರುತ್ತದೆ. ಗ್ರಾಮದೇವತೆಗಳ ಜಾತ್ರೆ ನಡೆಯುವ ಸಂದರ್ಭದಲ್ಲಿ ಎಲ್ಲ ಕಲೆಗಳಿಗಿಂತ ಮೊದಲು ಕೊಂಬು ಊದುವರು. ಇದನ್ನು ಊದಿ ಜನರನ್ನು ಎಚ್ಚರಿಸುತ್ತಾರೆ. ಇವುಗಳ ಶಬ್ದ ಭೋರ್ಗರೆಯವಂತಿದ್ದು ಒಂದು ಹೊಸ ಹುರುಪನ್ನು ತರುತ್ತದೆ. ಈ ಪ್ರದರ್ಶನದ ಮುಖ್ಯ ಕಲಾವಿದನನ್ನು ‘ಮೇಳನಾಯಕ’ ಎನ್ನುತ್ತಾರೆ. ಅವನು ಮೊದಲು ‘ತೂ……..ತ್ತೂ…’ ಎನ್ನುತ್ತಾ ಮಧುರಗಾನವನ್ನು ಕೇಳಿಸುತ್ತಾನೆ. ಮುಂದೆ ಅನೇಕ ರೀತಿಯಲ್ಲಿ ಕೊಂಬು ಕಹಳೆಯನ್ನು ಊದುತ್ತಾ, ಜಾತ್ರೆಗೆ ಮತ್ತಷ್ಟು ಶೋಭೆಯನ್ನುಂಟು ಮಾಡುತ್ತಾನೆ. ಈ ಪ್ರದರ್ಶನ ಮುಂಜಾನೆವರೆಗೂ ನಡೆಯುತ್ತದೆ.

ಪ್ರಾಚೀನ ಸಾಹಿತ್ಯದಲ್ಲೂದ ಇವುಗಳ ಪ್ರಸ್ತಾಪವಿದೆ. ಪ್ರಾಚೀನ ಕಾಲದ ರಾಜರ ಸಮಾರಂಭಗಳಲ್ಲಿ ಕೊಂಬು ಕಹಳೆ ಊದುತ್ತಿದ್ದರು. ರಣವಾದ್ಯಗಳಲ್ಲಿ ಇದೂ ಒಂದು. ಯುದ್ಧಕ್ಕೆ ಹೊರಡುವಾಗ, ವಿಜಯ ಸಾಧಿಸಿದಾಗ ರಾಜ್ಯಕ್ಕೆ ಹಿಂದಿರುವಾಗ ಕಹಳೆ ಊದುತ್ತಿದ್ದರು. ಅಷ್ಟೇ ಅಲ್ಲದೆ ಯುದ್ಧ ನಡೆಯುತ್ತಿದ್ದಾಗ ಶತ್ರು ಸೋತುಹೋದರೆ ಕೊಂಬು ಊದುತ್ತಿದ್ದರು. ಇದನ್ನೆ ‘ಧರ್ಮಧಾರ’ ಎಂದು ಕರೆಯುತ್ತಿದ್ದರು. ರೆಡ್ಡಿರಾಜರ ಕಾಲದಲ್ಲೂ ಕಾಕತೀಯರ ಕಾಲದಲ್ಲೂ ವಿಜಯನಗರ ಅರಸರ ಕಾಲದಲ್ಲೂ ಕೊಂಬು ಕಹಳೆಗೆ ಪ್ರಾಧಾನ್ಯವಿತ್ತು. ರಾಜರು ಆಳಿದರೂ ರಾಜ್ಯಗಳು ಉರುಳಿಹೋದರೂ ಇಂದಿಗೂ ಕೊಂಬು ಕಹಳೆಗಳು ಇನ್ನೂ ತಮ್ಮ ಧ್ವನಿ ಮೊಳಗಿಸುತ್ತಿವೆ.

ಶ್ರೀನಾಥನ ಪಲ್ನಾಟ ವೀರಚರಿತೆಯಲ್ಲಿ, ಬ್ರಹ್ಮನಾಯಕನ ಕಾರಂಪೂಡಿ ಯದ್ಧರಂಗಕ್ಕೆ ಹೊರಟಾಗ – ಯಾವ ವಾದ್ಯಗಳನ್ನು ಮೊಳಗಿಸಬೇಕೆಂದು ವಿವರಿಸುವ ಸಂಧರ್ಭದಲ್ಲಿ ಕೊಂಬು ಕಹಳೆಯನ್ನು ಹೆಸರಿಸಿದ್ದಾನೆ. ಅಯ್ಯಲರಾಜು ನಾರಾಯಣ ಕವಿ ಹಂಸವಿಶಂತಿಯಲ್ಲಿ ಜಾನಪದಕ್ಕೆ ಸಂಬಂಧಿಸಿದ ಅನೇಕ ವಾದ್ಯಗಳನ್ನು ವಿವರಿಸುತ್ತ ಇದರ ಪ್ರಸ್ತಾಪ ಮಾಡಿದ್ದಾರೆ. ಈ ಕೆಲ ಹೆಚ್ಚಾಗಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಂಡು ಬರುತ್ತದೆ. ಜಮಿಡಿಕ ಕಥೆಗಳನ್ನು ಪ್ರದರ್ಶನ ಮಾಡುವಾಗ ಮತ್ತು ಸತ್ಯಮ್ಮನ ಉತ್ಸವಗಳನ್ನು ಜೋಡಿಕಹಳೆ ನುಡಿಸುತ್ತಾರೆ.

– ಟಿ.ಎಸ್.ಎನ್. ಅನುವಾದ ಎನ್.ಆರ್.