ಕೋಲ ಸ್ವರೂಪ ತಿಂಗಳ್ತಾಯಿ ತೆಯ್ಯ ಕೋಲತ್ತುನಾಡಿನ (ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆ) ಪ್ರಧಾನ ಆರಾಧನ ಕಲೆಯಾಗಿದೆ. ತೆಯ್ಯಂ ಕ್ಷೇತ್ರದಲ್ಲಿ ಮಾತೃದೇವತೆ ಎಂಬ ನೆಲೆಯಲ್ಲಿ ಕಾಳಿ ಹಾಗೂ ಚಾಂಮುಂಡಿ ಮತ್ತು ಭಗವತಿಗಳು ಆರಾಧನೆಗೊಳ್ಳುತ್ತವೆ. ಇವುಗಳೆಲ್ಲ ಗ್ರಾಮದೇವತೆಗಳಾಗಿವೆ. ಕೋಲತ್ತು ನಾಡಿನ ರಾಜನಾದ ಕೋಲತ್ತಿರಿಯ ಮುಖ್ಯ ಧರ್ಮದೈವವೇ ‘ಕೋಲಸ್ವರೂಪ ತಿಂಗಳ್‌ತಾಯಿ’ ಎನಿಸಿದ ತಾಯಿಪರ ದೇವತೆ. ಕೋಲತ್ತಿರಿಯ ಕುಟುಂಬ ದೇವಸ್ಥಾನವಾದ ಮಾಡಾಯಿಕಾವಿನಲ್ಲಿ ಸ್ಥಾನ ಪಡೆದಿರುವುದರಿಂದ ಈ ದೈವವನ್ನು ‘ಮಾಡಾಯಿಕಾವಿಲಚ್ಚಿ’ ಎಂದೂ ಕರೆಯುತ್ತಾರೆ.

ಗ್ರಾಮದೇವತೆಯಾಗಿರುವ ಈ ದೇವತೆ ಪ್ರತಿಯೊಂದು ಹಳ್ಳಿಗಳ ಹೆಸರಿನಲ್ಲಿ ಗುರುತಿಸಲ್ಪಡುತ್ತವೆ. ಅರತ್ತಿಲ್ ಭಗವತಿ, ಅಷ್ಟಮಚಾಲ್ ಭಗವತಿ, ಇಳಂಬಿಚ್ಚಿ ಭಗವತಿ, ಎಡಚಿರ ಭಗವತಿ, ಎಟ್ಟಿಕುರತ್ ಭಗವತಿ, ಎರಿಞಿಕೀಲ್ ಭಗವತಿ, ಕಣ್ಣಮಂಗಲ ಭಗವತಿ, ಕುಮ್ಮಾಡತು ಭಗವತಿ, ಕದಕೀಲ್ ಭಗವತಿ, ಕರಿಯಾಪಿಲ್ ಭಗವತಿ, ಕಲ್ಲೇರಿಯಮ್ಮ, ಕವಿಣಿಶ್ಶೇರಿ ಭಗವತಿ, ಕಳರಿಯಲ್ ಭಗವತಿ, ಕಾದಿಯೋಟು ಭಗವತಿ, ಕಾಪಾಟು ಭಗವತಿ, ಕುಟ್ಟಿಕರ ಭಗವತಿ, ಕುಳುಂದಾಟ್ ಭಗವತಿ, ಕಳೂಲ್ ಭಗವತಿ, ಕೋದೋಳಿ ಭಗವತಿ, ನಡಯಿಲ್ ಭಗವತಿ, ನಿಲಮಂಗಲತ್ ಭಗವತಿ, ಮಠತಿಲ್‌ಭಗವತಿ, ವಲ್ಲಕುಳಂಗರ ಭಗವತಿ, ನೀಲಂಗೈ ಭಗವತಿ, ಪಾಚೇನಿ ಭಗವತಿ, ಬೆಶೀಕರ ಭಗವತಿ, ಪದಿಯಾರಂಬತ್ ಭಗವತಿ ಹೀಗೆ ಹಲವು ಹೆಸರುಗಳನ್ನು ತಾಯಿಪರ ದೇವತೆ ಪ್ರಸಿದ್ಧಳಾಗಿದ್ದಾಳೆ. ವಣ್ಣನ್ ಸಮುದಾಯದವರು ತಾಯಿಪರ ದೇವತೆಯ ಕೋಲವನ್ನು ಕಟ್ಟುತ್ತಾರೆ. ತುಲಾಮಾಸ ಹತ್ತರಿಂದ ಮೇಷ ಮಾಸ ಹತ್ತರವರೆಗೆ ನಿರ್ದಿಷ್ಟ ದಿನಾಂಕಗಳಲ್ಲಿ ತಾಯಿಪರ ದೇವತೆಯ ತಯ್ಯಂಕೋಲ ನಡೆಯುತ್ತದೆ.

ಶಿವನ ಮೂರನೇ ಕಣ್ಣಿನಿಂದ ಸೃಷ್ಟಿಯಾದ ಆರು ದೇವತೆಗಳಲ್ಲಿ ಅತ್ಯಂತ ಶಕ್ತಿಶಾಲಿ ದೇವತೆ ತಾಯಿಪರ ದೇವತೆ. ದಾರುಕಾಸುರನನ್ನು ವಧಿಸಲು ಶಿವನಿಂದ ಹದಿನೆಂಟು ವಿಧದ ಆಯುಧಗಳನ್ನು ಪಡೆದುಕೊಂಡು, ಬೇತಾಳವನ್ನು ಹೆಗಲಲ್ಲಿ ಧರಿಸಿ ಹೊರಟ ಕಾಳಿಯೇ ಈ ದೈವವೆಂದು ನಂಬಲಾಗಿದೆ. ದಾರುಕಾಸುರನ ಪಟ್ಟಣಕ್ಕೆ ಮುತ್ತಿಗೆ ಹಾಕಿದ ಭದ್ರಕಾಳಿ ಏಳು ಹಗಲು ಮತ್ತು ಏಳು ರಾತ್ರಿ ಅವನೊಂದಿಗೆ ಯುದ್ಧ ಮಾಡುತ್ತಾಳೆ. ಕೊನೆಗೆ ಎಂಟನೇ ದಿವಸ ಸಂಜೆ ಬೇತಾಳವನ್ನು ನಾಲಗೆಯಲ್ಲಿ ಧರಿಸಿದ ಕಾಳಿ ದಾರುಕಾಸುರನ ರಕ್ತ ಹೀರಿ, ಘೋರ ರೂಪವನ್ನು ಧರಿಸುವಳು. ಶಕ್ತಿ ಸ್ವರೂಪಿಣಿಯಾದ ಈ ಭದ್ರಕಾಳಿಗೆ ಕೋಲತ್ತಿರಿ ರಾಜ ಮಾಡಾಲುಕಾವಿನಲ್ಲಿ ಸ್ಥಾನವನ್ನು ನೀಡುತ್ತಾನೆ. ಹೀಗೆ ಸ್ಥಾನವನ್ನು ನೀಡಿದ ಬಗ್ಗೆಯೂ ಐಹಿತ್ಯಗಳಿವೆ. ಕೋಲತ್ತಿರಿ ಅರಸನ ಕನಸಿನಲ್ಲಿ ಕಾಣಿಸಿದ ದೇವಿಯು ತನಗೆ ನೆಲೆ ಒದಗಿಸಿ ಪೂಜಿಸುವಂತೆ ಕೇಳಿಕೊಳ್ಳುತ್ತಾಳೆ. ಕಾಳಿಗೆ ನೆಲೆ ಒದಗಿಸಲು ಸರಿಯಾದ ಸ್ಥಳವನ್ನು ರಾಜನಿಗೆ, ಅವನ ಪರಿವಾರದವರಿಗೆ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಮೈಮೇಲೆ ಬಂದ ದೇವಿಯು ನಿಮಿತ್ತವನ್ನು ತೋರಿಸುತ್ತದೆ. ಆವೇಶಗೊಂಡ ವ್ಯಕ್ತಿ ಉರಿಯುವ ಪಂಜನ್ನು ಎಸೆಯುವನು. ಪಂಜು ಬಿದ್ದ ಸ್ಥಳದಲ್ಲಿ ದೇವಿಯ ಪ್ರತಿಷ್ಠೆಯನ್ನು ಮಾಡುತ್ತಾರೆ. ಹೀಗಾಗಿ ಆ ಸ್ಥಳಕ್ಕೆ ತಿರುವರ್‌ಕಾಡು ಎಂಬ ಹೆಸರು ಬಂತು.

ಕೆಳವರ್ಗದ ಐತಿಹ್ಯವೊಂದರ ಪ್ರಕಾರ ತಾಯಿಪರ ದೇವತೆಯನ್ನು ಉರುವಾಡಿ ಎಂಬ ಮಹಿಳೆಯ ಕಥೆಯೊಂದಿಗೆ ಸಮೀಕರಿಸಲಾಗಿದೆ. ಸಣ್ಣ ತಪ್ಪಿಗಾಗಿ ದೇಶಭ್ರಷ್ಟಳಾದ ಈ ಹೆಣ್ಣು ಪ್ರತೀಕಾರ ತೀರಿಸಲು ಸೈನ್ಯವನ್ನು ಸಂಘಟಿಸುವಳು. ಕೋಲತ್ತಿರಿಯೊಂದಿಗೆ ಯುದ್ಧ ಮಾಡಿ ಸಾಯುತ್ತಾಳೆ. ಅವಳು ಸತ್ತನಂತರ ರಾಜನಿಗೆ ಅವರ ನಿರಪರಾಧಿತ್ವ ತಿಳಿಯುತ್ತದೆ. ಹೀಗೆ ಅವಳ ವೀರಮರಣವನ್ನು ಪರಿಗಣಿಸಿ, ಮಾಡಾಯಿಕಾವಿನಲ್ಲಿ ಆಕೆಗೆ ದೈವಿಕ ಸ್ಥಾನವನ್ನು ನೀಡಿ ಆರಾಧಿಸುವನು. ಹೀಗೆ ತಾಯಿಪರ ದೇವತೆ ಕೋಲತ್ತಿರಿವಂಶದ ಕುಲದೇವತೆಯಾಗುವಳು.

ಇನ್ನೊಂದು ಐತಿಹ್ಯದ ಪ್ರಕಾರ, ತಾಯಿಪರ ದೇವತೆ ಕೋಲತ್ತಿರಿಯ ವಂಶದಲ್ಲಿ ಹುಟ್ಟಿದವಳಾಗಿದ್ದಾಳೆ. ವ್ಯಭಿಚಾರಿಣಿ ಎಂದು ಆರೋಪಿಸಿ, ಜಾತಿಭ್ರಷ್ಟೆಯಾದ ಆಕೆಯನ್ನು ತೀಯ ರಾಜನೊಬ್ಬ ರಕ್ಷಿಸುತ್ತಾನೆ. ಯಾವುದೋ ಕಾರಣದಿಂದ ಮಂದನಾರ್ ಹೆಸರಿನ ಆ ರಾಜನು ಆಕೆಯನ್ನು ತ್ಯಜಿಸುವನು. ಅನಾಥೆಯವಾದ ಅವಳು ಮಾಡಾಯಿ ಕಾಡಿನಲ್ಲಿ ಸಾವನ್ನಪ್ಪುತ್ತಾಳೆ. ಸಮಾಜ ಅವಳಿಗೆ ದೈವದ ಸ್ಥಾನವನ್ನು ನೀಡಿ ಆರಾಧಿಸುತ್ತದೆ. ಹೀಗೆ ಕೋಲತ್ತಿರಿ ರಾಜನೂ ತಮ್ಮ ವಂಶದ ಕುಲದೇವತೆಯಾಗಿ ಆಕೆಯನ್ನು ಸ್ವೀಕರಿಕೊಳ್ಳುತ್ತಾನೆ.

ತಾಯಿಪರ ದೇವತೆಗೆ ತೆಯ್ಯಂರಾಧನೆಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವಿದೆ. ದೊಡ್ಡ ‘ಮುಡಿ’ಯನ್ನು ಧರಿಸುವುದರಿಂದ ಈ ತೆಯ್ಯವನ್ನು ‘ನೀಳಮುಡಿ ಭಗವತಿ’ ಎಂದೂ ಕರೆಯುತ್ತಾರೆ. ಇದರ ಮುಡಿ ೪೨ ಅಡಿ ಉದ್ದವಿರುತ್ತದೆ. ಕಂಗಿನ ಮರದ ಸೀಳು ಹಾಗೂ ಬಿದಿರಿನ ಸೀಳುಗಳಿಂದ ಇದನ್ನು ನಿರ್ಮಿಸುತ್ತಾರೆ. ಮೇಲಕ್ಕೆ ಹೋದಂತೆ ಸಪೂರವಾಗುತ್ತಾ ಹೋಗುವ ಈ ಬೃಹತ್ ಮುಡಿಯ ತುದಿ ಚೂಪಾಗಿರುತ್ತದೆ. ಕಪ್ಪು ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಹೊದೆಸುತ್ತಾರೆ. ತೆಯ್ಯಂ ಕೋಲಧಾರಿ ‘ವಿಮಾನತರ’ ಎಂಬ ಬಣ್ಣದ ಉಡುಪನ್ನು ಧರಿಸುವನು. ಕೊರಳಿಗೆ ‘ಏಳುತರ’ ಎಂಬ ಆಭರಣ, ದೇಹಕ್ಕೆ ನಾಗರೂಪಗಳು, ಕಾಲಿಗೆ ಗಗ್ಗರ, ಕೈಗಳಲ್ಲಿ ಖಡ್ಗ, ಗುರಾಣಿ ಮೊದಲಾದ ಆಯುಧಗಳು, ಮುಖಕ್ಕೆ ಚಾಯಿಲ್ಯಂ ಎಂಬ ಬಣ್ಣದ ಬರವಣಿಗೆಗಳು ಈ ತೆಯ್ಯದ ವೈಶಿಷ್ಟ್ಯ.

ತೋಟ್ಟಂ, ತೆಯ್ಯ ಎಂಬ ಎರಡು ಮುಖ್ಯ ಹಂತಗಳು ತಾಯಿಪರ ದೇವತೆಯ ಆರಾಧನೆಯಲ್ಲಿವೆ. ತೋಟ್ಟಂ ನಂತರ ‘ಇಳಂಗೋಲ’ ಹೊರಡುತ್ತದೆ. ಇದು ಚಿಕ್ಕ ಮುಡಿಯನ್ನು ಧರಿಸುತ್ತದೆ. ಪರಿಪೂರ್ಣ ತೆಯ್ಯರೂಪವನ್ನು ಪಡೆಯದ ಇದನ್ನು ‘ಇಳಂಗೋಲ’ ಎಂದು ಅನ್ವರ್ಥವಾಗಿ ಕರೆಯುತ್ತಾರೆ. ‘ತಟ್ಟುಪರಿ’ ಎಂಬ ವಿಶಿಷ್ಟವಾದ ಆಚರಣೆ ತಾಯಪರ ದೇವತೆಯ ಆರಾಧನೆಯಲ್ಲಿದೆ. ತೆಯ್ಯವು ಮುಡಿಯನ್ನು ಧರಿಸಿ ಗುಡಿಗೆ ಮೂರು ಪ್ರದಕ್ಷಿಣೆ ಬರುವಾಗ, ಕಲಶ ವೇದಿಕೆಯನ್ನು ಅಲಂಕರಿಸಿದ ತೋರಣಗಳನ್ನು ಭಕ್ತರು ಕಿತ್ತುಕೊಳ್ಳುವರು. ಈ ಅಲಂಕಾರ ವಸ್ತುಗಳನ್ನು ಭಕ್ತರು ತಮ್ಮ ಮನೆಗೆ ಕೊಂಡೊಯ್ಯುವರು.

‘ವಡಕ್ಕೇವಾದಿಲ್’ ಎಂಬ ಕ್ರಿಯೆಯನ್ನು ತಾಯಿಪರ ದೇವತೆಗೆ ನೆರವೇರಿಸುತ್ತಾರೆ. ದೈವ ಸನ್ನಿಧಿಯ ಉತ್ತರ ದಿಕ್ಕಿನಲ್ಲಿ ಬಾಳೆಯ ಸೀಳುಗಳಿಂದ ನಿರ್ಮಿಸುವ ಬಲಿ ವೇದಿಕೆಯಲ್ಲಿ ರಕ್ತತರ್ಪಣ ನೀಡಲಾಗುವುದು. ಕೋಳಿ ಬಲಿಯನ್ನು ಈ ಸಂದರ್ಭದಲ್ಲಿ ನೀಡುತ್ತಾರೆ.

ಕಳಿಯಾಟ ಮಾತ್ರವಲ್ಲದೆ, ಪೂರಂ, ಕಲಶಂ, ಮೀನಮೃತ, ಕಳತ್ತಿಲರಿ, ಪುತ್ತರಿ, ನಿರ,ಕೂತ್ ಮೊದಲಾದವು ತಾಯಿಪರ ದೇವತೆಯ ಇತರ ಆರಾಧನೆಯಗಳಾಗಿವೆ. ಫೋಕ್‌ಲೋರ್ ನಿಘಂಟುವಿನಲ್ಲಿ ತಾಯಿಪರ ದೇವತೆಯ ಕುರಿತು ಮಾಹಿತಿಗಳಿವೆ. ಡಾ. ಎಂ.ವಿ.ವಿಷ್ಣುನಂಬೂದಿರಿ ಅವರ ‘ತೋಟ್ಟಂ ಪಾಟುಗಳ್’ ಎಂಬ ಪುಸ್ತಕದಲ್ಲಿ ರಾಘವನ್‌ ಪಯ್ಯನಾಡು ಅವರ ‘ಫೋಕ್‌ಲೋರಿನ್ ಒರು ಪಠನಪದ್ಧತಿ ಎಂಬ ಕೃತಿಯಲ್ಲಿಯೂ ತಾಯಿಪರದೇವತೆಯ ಕುರಿತಾದ ಮಾಹಿತಿಗಳಿವೆ.

– ಎನ್.ಎಸ್‌.

ಕೋಲಾಟಂ ಆಂಧ್ರಪ್ರದೇಶದಲ್ಲಿ ಕೋಲಾಟಂ ಅತ್ಯಂತ ಜನಪ್ರಿಯವಾದ ವೈನೋದಿಕ ಕ್ರೀಡೆಗಳಲ್ಲಿ ಒಂದು. ಇದನ್ನು ಕುರಿತು ಪ್ರಾಚೀನ ಕೃತಿಗಳಲ್ಲಿ ಉಲ್ಲೇಖಗಳು ಕಂಡುಬರುತ್ತವೆ. ಹಲ್ಲೀಸಕ, ದಂಡರಾಸಕ, ದಂಡನರ್ತನ ಎಂಬ ಹೆಸರುಗಳಿಂದ ಇದನ್ನು ಪ್ರಾಚೀನ ಕಾಲದ ಕಾವ್ಯಗಳು ಮತ್ತು ಲಕ್ಷಣ ಗ್ರಂಥಗಳು ದಾಖಲಿಸಿವೆ. ೧೧ನೇ ಶತಮಾನದಿಂದಲೂ ಈ ತರಹದ ಉಲ್ಲೇಖಗಳು ತೆಲುಗಿನಲ್ಲಿ ಸಿಕ್ಕುತ್ತವೆ. ಆಂಧ್ರದ ಶಿಲ್ಪಗಳನ್ನೂ ಕೋಲಾಟದ ಕೆತ್ತನೆಗಳಿವೆ. ಕ್ರಿ.ಶ.೩ನೆಯ ಶತಮಾನಕ್ಕೆ ಸೇರಿದ ಇಕ್ಷ್ವಾಕು ರಾಜವಂಶದ ಶಿಲ್ಪಗಳನ್ನೂ ಈ ತರಹದ ಕೆತ್ತೆನಗಳು ಕಂಡುಬರುತ್ತವೆ. ಅಲ್ಲದೆ ಅನೇಕ ದೇವಸ್ಥಾನಗಳಲ್ಲಿ ಕೋಲಾಟದ ಚಿತ್ರಗಳಿವೆ.

ಕೋಲಾಟವನ್ನು ಹತ್ತು ಜನ ಅಥವಾ ಅದಕ್ಕಿಂತ ಹೆಚ್ಚು ಜನ ಪ್ರದರ್ಶಿಸುತ್ತಾರೆ. ಕಲಾವಿದರಲ್ಲಿ ಅನುಭವಿಸಿರುವ ಒಬ್ಬ ನಾಯಕನಿರುತ್ತಾನೆ. ಆತ ಗೀತ, ತಾಳ, ನೃತ್ಯಗಳಿಂದ ಕೋಲಾಟವನ್ನು ಆಕರ್ಷಕವಾಗಿ ನಡೆಸುತ್ತಾನೆ. ಕೋಲಾಟದ ನಾಯಕನನ್ನು ಅಯ್ಯವಾರು, ಮೇಳಗಾಡು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ನಿಯಮಿತವಾದ ಹೊರವಲಯದಲ್ಲಿ ಸವ್ಯ ಮುಖವಾಗಿ ಕದಲುವ ಗುಂಪು ಒಂದಾದರೆ, ಒಳ ವಲಯದಲ್ಲಿ ಅವಸವ್ಯವಾಗಿ ಕದಲುವ ಸಮೂಹ ಇನ್ನೊಂದಿರುತ್ತದೆ. ‘ಥೈಯತಕತದ್ಧಿಮಿತ’ ಎಂದು ಮುಖಂಡರು ಮೊದಲನೆಯ ಸಾಲನ್ನು ಹೇಳಿದ ತಕ್ಷಣ ಬೇರೆಯವರು, ಅದನ್ನು ಅನುಸರಿಸಿ ಆಡಲಾರಂಭಿಸುತ್ತಾರೆ. ಮತ್ತೆ ತಾಳ ಶುದ್ಧಿಗಾಗಿ ಹಾಡನ್ನು ನಿಲ್ಲಿಸಿ ಲಯ ಸರಿಮಾಡಿಕೊಂಡು ‘ತಟಕಿಟ ಧಿಮಿಧಿಮ್ ಧಿಮಿತ ಧಿಮಿಧಿಮ್’ ಎಂದು ಹಾಡನ್ನು ಪ್ರಾರಂಭಿಸುತ್ತಾರೆ. ಹಾಡು, ಅದಕ್ಕೆ ತಕ್ಕ ಹೆಜ್ಜೆ ಮತ್ತು ಕೋಲುಗಳ ಆಟ ಇವೆಲ್ಲ ಲಯಾತ್ಮಕವಾಗಿ ಹೊಂದಿಕೊಂಡು ಬರುವಂತೆ ನೋಡಿ ಕೊಳ್ಳುತ್ತಾರೆ.

ಸಾಮಾನ್ಯವಾಗಿ ಮೊದಲನೆಯ ಕೋಲಾಟ ‘ಶಿವ ಶಿವ ಮೂರ್ತಿವಿ ಗಣನಾಥ ನೀವು ಶಿವುನಿಕುಮಾರುಡವು ಗಣನಾಥ’ ಎಂಬ ಗಣಪತಿಯ ಪ್ರಾರ್ಥನೆಯಿಂದ ಪ್ರಾರಂಭವಾಗುತ್ತದೆ. ಕೋಲಾಟದಲ್ಲಿ ಬಳಸುವ ಹಾಡುಗಳನ್ನು ‘ಕೋಪುಲು’ ಎಂದು ಹೇಳುತ್ತಾರೆ. ತಾಳಕ್ಕೆ ತಕ್ಕಂತೆ ವಿಳಂಬಿತ ಮಧ್ಯ, ಧೃತ ಗತಿಗಳಲ್ಲಿ ಕೋಲಾಟದ ಹಾಡುಗಳು ಮೂಡುತ್ತವೆ. ಈ ಹಾಡುಗಳಲ್ಲಿ ಹಲವಾರು ಚಿತ್ರಗಳು ಕಂಡುಬರುತ್ತವೆ. ಚಿತ್ರಕಾರನ ಭಾವನೆಗೂ ಎಟುಕದಂಥ ಸುಂದರವಾದ ಊಹಾ ಚಿತ್ರಗಳು ಕೋಲಾಟದ ಹಾಡುಗಳಲ್ಲಿ ಕಂಡುಬರುತ್ತವೆ. ಕೋಮಲೆಯ ಕೂದಲಿನ ಮೇಲೆ ದುಂಬಿಗಳು ಹಾರುವ ಚಿತ್ರ, ಬೆವರಿನಲ್ಲಿ ನೆನೆದು ಕೆದರಿದ ಗಂಧದ ಕೆಂಪು ಹಣೆಯ ಮೇಲಿರುವ ಕಸ್ತೂರಿ ತಿಲಕ ಮೂಗಿನ ಮೇಲೆ ಬರುತ್ತಿರುವುದು, – ಇವೆಲ್ಲ ಕೋಲಾಟದ ಹಾಡುಗಳಲ್ಲಿ ಕಂಡುಬರುವ ಊಹಾಚಿತ್ರಗಳು. ಕೋಲಾಟದ ಪದಗಳಲ್ಲಿ ಪರಿಹಾಸದ ಉಕ್ತಿಗಳು ಕೂಡ ಹೇರಳವಾಗಿ ಕಂಡುಬರುತ್ತಿವೆ. ತೆಲುಗಿನಲ್ಲಿ ಕೋಲಾಟದ ಪದಗಳು ಪ್ರತ್ಯೇಕ ಸಾಹಿತ್ಯ ಪ್ರಕಾರವಾಗಿ ಕಂಡುಬರುತ್ತದೆ. ಕೋಲಾಟದಲ್ಲಿ ನಿಯಮಿತವಾದ ಲಯ ಇರುತ್ತದೆ. ಇದು ಕುಣಿತಕ್ಕೆ ಮತ್ತು ಕೋಲಿನ ಶಬ್ದಕ್ಕೆ ಅನ್ವಯಿಸುವಂತಿರುತ್ತದೆ. ಕೋಲಾಟದ ಪಲ್ಲವಿಗಳಲ್ಲಿ ‘ಕೋಲು ಕೋಲೇ ಕೋಲಣ್ಣ ಕೋಲೇ ಕೋಲು ಕೋಲೇ ಕೋಲಣ್ಣ’ ಮುಂತಾದವು ಜನಪ್ರಿಯವಾಗಿವೆ.

– ವಿ.ಎಸ್. ಅನುವಾದ ಎ.ಎಂ.ಡಿ.

ಕೋಲಾಟ ಕೋಲಾಟ ಜನಪದ ಆಟಗಳನ್ನೆಲ್ಲ ಕಲಾತ್ಮಕವೂ ಜನಪ್ರಿಯವೂ ಆದಂಥದು, ಸಂಗೀತ, ನೃತ್ಯ, ಮನರಂಜನೆಯನ್ನು ಒಳಗೊಂಡ ಈ ಆಟದಲ್ಲಿ ಕೋಲೇ ಪ್ರಧಾನವಾಗಿರುವುದರಿಂದ ಕೋಲಾಟವೆಂದು ಕರೆಯುತ್ತಾರೆ, ಈ ಆಟವನ್ನು ಸುಗ್ಗಿಯ ಕಾಲದಲ್ಲಿ ಹಬ್ಬ ಹರಿದಿನಗಳಲ್ಲಿ ಹೆಚ್ಚು ಹಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಇದರಲ್ಲಿ ಎಲ್ಲ ವಯಸ್ಸಿನವರೂ ಭಾಗವಹಿಸುವುದುಂಟು.

ಗಣೇಶ ಸ್ತುತಿಯೊಂದಿಗೆ ಆಟ ಆರಂಭವಾಗುತ್ತದೆ. ಪ್ರಾರಂಭದಲ್ಲಿ ಆಟಗಾರರೆಲ್ಲರೂ ವೃತ್ತಾಕಾರದಲ್ಲಿ ಬಂದು ಮಧ್ಯೆ ಕೋಲುಗಳನ್ನಿಟ್ಟು ಕೈ ಮುಗಿದು ಅನಂತರ ಗುರುವಿಗೆ ನಮಸ್ಕರಿಸಿ ಕೋಲು ಹಿಡಿದು ಸ್ತುತಿ ಆರಂಭಿಸುತ್ತಾರೆ. ಸ್ತುತಿಯೊಂದಿಗೆ ಕೋಲುಗಳ ಸಪ್ಪಳ ನಿಧಾನಗತಿಯಲ್ಲಿ ಸಾಗುತ್ತದೆ. ಗ್ರಾಮಕ್ಕೆ ಸಂಬಂಧಿಸಿದ ವಿವಿಧ ದೇವರ ಹಾಡುಗಳೂ ಆರಂಭವಾಗುತ್ತವೆ. ಸುಮಾರು ೮ – ೨೪ ಜನ ಕಲಾವಿದರು ಈ ಆಟದಲ್ಲಿರುತ್ತಾರೆ. ಆಟ ಯಾವುದೇ ಸಂದರ್ಭದಲ್ಲಿ ನಡೆದರೂ ವಿಧಿ ಕ್ರಿಯೆಯ ಚೌಕಟ್ಟಿನಲ್ಲಿ ಆಚರಿಸಲ್ಪಡುತ್ತದೆ. ಕೋಲು ತರುವ ಸಂದರ್ಭದಲ್ಲಿ ಕೋಲು ಬಿಡುವ ಸಂದರ್ಭದವರೆಗೆ ಆದಿ – ಅಂತ್ಯದ ಚೌಕಟ್ಟೊಂದರಲ್ಲಿ ಇದು ಆಚರಿಸಲ್ಪಡುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ನವರಾತ್ರಿಯ ಮೂಲಾ ನಕ್ಷತ್ರದ ದಿನ ಕೊಡಸಿನ ಗಿಡವನ್ನು ಪೂಜಿಸಿ ಎರಡು ಕೋಲು ಕಡಿಯುತ್ತಾರೆ. ಇತರೆ ಪ್ರದೇಶಗಳಲ್ಲಿ ಅಶ್ವಯುಜ ಮಾಸದ ಹುಣ್ಣಿಮೆ ಹಾಗೂ ಹೋಳಿ ಹುಣ್ಣಿಮೆಗೆ ಮೊದಲು ಕೋಲು ಕಡಿಯುವ ಸಂಪ್ರದಾಯವಿದೆ. ಕೋಲು ಕಡಿಯಲು ನಿಗದಿತ ಮನೆತನಗಳೇ ಇರುವ ಊರುಗಳು ಉಂಟು. ಮೊದಲು ಕಡಿದ ಕೋಲುಗಳಿಗೆ ‘ಗುರುಕೋಲು’ ಎಂದು ಹೇಳುತ್ತಾರೆ. ಇವುಗಳ ಜೊತೆಗೆ ಶ್ರೀಗಂಧ, ಕೊಡಸು, ಕಾರೆ, ಬಗಿನೆ, ಗೊರಬಳೆ, ಹೊನ್ನೆ, ಸೀಬೆ, ಕಣಗಿಲೆ, ಕಗ್ಗಲಿ, ಜಾಲಿ, ಬ್ಯಾಟೆ, ಅಂಕೋಲೆ, ಬಿದಿರು ಮುಂತಾದ ಮರಗಳಿಂದ ಉಳಿದ ಕೋಲುಗಳನ್ನು ಕಡಿಯುತ್ತಾರೆ. ದಶಮಿಯ ದಿವಸ ಕೋಲುಗಳಿಗೆ ಬಣ್ಣ ಹಚ್ಚುತ್ತಾರೆ. ಅದೇ ದಿನ ದೇವಸ್ಥಾನದ ಮುಂದೆ ಕೋಲು ಪೂಜೆ ಮಾಡಿ ಓಟ ಪ್ರಾರಂಭಿಸುತ್ತಾರೆ. ಮಾರನೇ ದಿನದಿಂದ ಊರಿನ ಇತರೆ ದೇವಾಲಯಗಳ ನೆರೆಹೊರೆ ಗ್ರಾಮಗಳ ಗ್ರಾಮದೇವತೆಗಳಿರುವ ಸ್ಥಳ ಮತ್ತು ದೇವರ ಬನಗಳಿಗೆ ಹೋಲಿ ಕೋಲು ಆಡುತ್ತಾರೆ. ಹಾಗೆಯೇ ಗ್ರಾಮದ ಪ್ರಮುಖರ ಮನೆ ಹಾಗೂ ಪ್ರತಿ ಮನೆಯ ಬಳಿಯೂ ಕೋಲಾಟ ಪ್ರದರ್ಶಿಸಿ ಅವರಿಂದ ದವಸ ಧಾನ್ಯಗಳನ್ನು ಪಡೆಯುತ್ತಾರೆ.

59

ಕೋಲಾಟಕ್ಕೆ ನಿಗದಿತ ವೇಷ ಭೂಷಣಗಳಿವೆ. ದಕ್ಷಿಣ ಭಾಗದ ಬಯಲು ಸೀಮೆಯಲ್ಲಿ ಸಾಮಾನ್ಯವಾಗಿ ಬಿಳಿಯ ಅಂಗಿ (ಬನಿಯನ್), ಬಣ್ಣದ ಚಡ್ಡಿ, ತಲೆ ಮತ್ತು ನಡುವಿಗೆ ಬಣ್ಣದ ವಸ್ತ್ರ, ಕಾಲಿಗೆ ಗೆಜ್ಜೆ ಧರಿಸಿದರೆ ಉತ್ತರ ಕರ್ನಾಟಕದಲ್ಲಿ ಬಿಗಿದು ಕಟ್ಟಿದ ಕಚ್ಚೆ, ತಲೆಗೆ ರುಮಾಲು, ನಡುವಿಗೆ ವಸ್ತ್ರ, ಕಾಲಿಗೆ ಗೆಜ್ಜೆಯನ್ನು ಕಟ್ಟುತ್ತಾರೆ. ಬುಡಕಟ್ಟು ಜನರಲ್ಲಿ ಈ ಆಟ ಒಂದು ಸಾಂಪ್ರದಾಯಿಕ ಆರಾಧನೆಯಾಗಿದ್ದು ವೇಷಭೂಷಣಗಳೂ ಸಾಂಪ್ರದಾಯಿಕವಾಗಿಯೇ ಇರುತ್ತವೆ. ಮುಖಕ್ಕೆ ಬಣ್ಣ, ತಲೆಗೆ ಮುಂಡಾಸು, ಇಳಿಬಿಟ್ಟ ಉದ್ದನೆಯ ಅಂಗಿ, ನಡುವಿಗೆ ಕೆಂಪು ವಸ್ತ್ರ, ಕಾಲಿಗೆ ಗೆಜ್ಜೆ ಇರುತ್ತದೆ.

ಕೋಲಾಟಕ್ಕೆ ಸಂಗೀತ ಒದಗಿಸಲು ವಿವಿಧ ವಾದ್ಯಾಗಳನ್ನು ಬಳಸುತ್ತಾರೆ. ಉತ್ತರ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಗುಮಟೆ, ಜಾಗಟೆ, ತಮಟೆ, ಮದ್ದಲೆ, ತಬಲಾ, ಢಕ್ಕೆ ಹಾಗೂ ಕಂಚಿನ ತಾಳಗಳನ್ನು ಬಳಸಿದರೆ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರು ತಾಳ ಮತ್ತು ದಮ್ಮಡಿಗಳನ್ನು ಬಳಸುತ್ತಾರೆ. ಮೈಸೂರಿನ ಕಡೆ ತಮಟೆ ಮುಂತಾದುವನ್ನು ಬಾರಿಸುವ ಪರಿಪಾಠವೂ ಉಂಟು. ಈ ವಾದ್ಯಗಳನ್ನು ಬಾರಿಸುವುದರಿಂದ ಆವೇಶ, ಹುಮ್ಮಸ್ಸು ಲಭ್ಯವಾಗಿ ಕೋಲಾಟಕ್ಕೆ ಪುಷ್ಟಿಯನ್ನು ಒದಗಿಸುತ್ತದೆ.

ಕೋಲಾಟದಲ್ಲಿ ಹತ್ತಾರು ವೈವಿಧ್ಯಗಳಿವೆ. ಹೆಜ್ಜೆ ಹಾಕುವ ಮತ್ತು ಅದನ್ನು ಬದಲಿಸುವ ವಿಧಾನವನ್ನು ಅನುಸರಿಸಿ ಹಾಗೂ ಒಂದೆಡೆ ಸೇರುವ ಅಥವಾ ಬೇರ್ಪಡಿಸುವ ವಿನ್ಯಾಸವನ್ನು ಅನುಸರಿಸಿ ಕೋಲಾಟದ ವಿಧಗಳನ್ನು ವಿಂಗಡಿಸುತ್ತಾರೆ. ಸುತ್ಕೋಲು, ದಾಟ್ಕೋಲು, ತೇರುಕೋಲು, ಒಂದಾಳ್ ಮತ್ತು ಎರಡಾಳ್ ಸುತ್ತು, ಆಳ್‌ಕಂಡು ಆಳು, ಗೀಜಗನ ಕೋಲು, ಕಾಲುಸಂದಿನ ಕೋಲು, ಹುಲಿದನವಿನ ಕೋಲು, ತೆಕ್ಕೋಲು, ವಸ್ತ್ರಕೋಲು, ರಂಗೋಲಿಕೋಲು, ಪಂಚವದನ, ಝಲಾ, ತಿಪ್ಪರಿ, ಜಡೆಕೋಲು, ಗೀರಕಡ್ಡಿ, ಅರ್ಕಡ್ಡಿ, ಕಾಳ್ಗಡ್ಡಿ, ತಟ್ಕಡ್ಡಿ, ಗೋಪಿನ ಕೋಲು, ಉಯ್ಯಾಲೆ ಕೋಲು, ದಂಡೆಕೋಲು, ಸೋಬಾನೆ ಕೋಲು, ಚಿನ್ನಾಡಿ ಕೋಲು, ಬೆಂಕಿಕೋಲು, ಚಕ್ರಕೋಲು, ಕೊರವಂಜಿ ಕೋಲು ಹೀಗೆ ಪ್ರದೇಶವಾರು ಹಿನ್ನೆಲೆಯಲ್ಲಿ ಅನೇಕ ರೀತಿಯ ಕೋಲಾಟಗಳು ಪ್ರಚಲಿತದಲ್ಲಿವೆ.

ಆಟಗಾರರು ವೃತ್ತಾಕಾರದಲ್ಲಿ ಸುತ್ತುತ್ತಾ ಕೈಗಳಲ್ಲಿರುವ ಕೋಲುಗಳಿಂದ ಒಂದಕ್ಕೊಂದಕ್ಕೆ ಹೊಡೆಯುತ್ತಿದ್ದರೆ ಸುತ್ತುಕೋಲು, ಒಬ್ಬನ ಕೋಲಿಗೆ ಮತ್ತೊಬ್ಬನ ಕೋಲನ್ನು ತಾಳಿಸುವಂತೆ ಹೊಡೆದರೂ ಹೊಡೆಯದೇ ಹಾಗೇ ಹಾರುತ್ತಿದ್ದರೆ ಹಾಟ್ಕೋಲು ಎನಿಸಿಕೊಳ್ಳುತ್ತದೆ. ಅರ್ಧಜನ ಹಿಂದಕ್ಕೂ ಉಳಿದರ್ಧಜನ ಅವರ ಮೇಲೆ ಬಾಗಿದಂತಿದ್ದು ತೇರಿನಂತೆ ಸಾಗುವುದಕ್ಕೆ ತೇರುಕೋಲು, ಒಬ್ಬನಿಗೆ ಮತ್ತೊಬ್ಬ ಮತ್ತು ಹೊಡೆಯುತ್ತಾ ಕೋಲುಕೊಡುವುದಕ್ಕೆ ಒಂದಾಳು ಸುತ್ತು. ಎರಡಾಳಿಗೆ ಸುತ್ತು ಹೊಡೆಯುತ್ತಾ ಕೋಲು ಕೊಡುವುದಕ್ಕೆ ಎರಡಾಳು ಸುತ್ತು ಎನ್ನುತ್ತಾರೆ. ಪ್ರತಿಯೊಬ್ಬ ಆಟಗಾರನೂ ಆಟಗಾರರ ಒಂದೊಂದೇ ಮನೆ ಸಾಗುತ್ತಾ ಒಬ್ಬೊಬ್ಬರನ್ನೇ ದಾಟಿ ಕೋಲು ಕೊಡುವ ವಿಧಾನಕ್ಕೆ ಒಂದು ಮನೆ ಕೋಲೆಂದೂ, ಎರಡು ಮನೆ ದಾಟಿ ಕೋಲು ಕೊಡುವ ವಿಧಾನಕ್ಕೆ ಒಂದು ಮನೆ ಕೋಲೆಂದೂ, ಎರಡು ಮನೆ ದಾಟಿ ಕೋಲು ಕೊಡುವ ವಿಧಾನಕ್ಕೆ ಎರಡು ಮನೆ ಕೋಲೆಂದೂ ಕರೆಯುತ್ತಾರೆ. ಗುಂಪಿನಲ್ಲಿಯೇ ಚದುರಿದಂತೆ ನಿಂತು ಹೊರಗಿನವರು ಒಳಗೂ ಒಳಗಿನವರು ಹೊರಗೂ ಕೋಲನ್ನು ಕೊಡುವುದು ಹೀಗೆ ಆಡುತ್ತಾ ಕುಕ್ಕರುಗಾಲಲ್ಲಿ ಕುಳಿತು ಕುಳಿತು ಕಪ್ಪೆಗಳಂತೆ ಕುಪ್ಪಳಿಸುತ್ತಾ ಒಬ್ಬರಿಗೊಬ್ಬರು ಕೋಲು ಕೊಡುವುದು ಅವರಲ್ಲೇ ಎರಡುಗುಂಪಾಗಿ ಎದುರು ಬದುರು ನಿಂತು ಕೋಲು ಕೊಡುವುದು, ಎರಡು ವೃತ್ತಗಳನ್ನು ರಚಿಸಿ ಒಳ ವೃತ್ತದವರು ಹೊರಗೂ, ಹೊರ ವೃತ್ತದವರು ಒಳಗೂ ನುಗ್ಗಾಡುತ್ತಾ ಎಲ್ಲಿಯೂ ಆಯ ತಪ್ಪದಂತೆ ಕೋಲು ಕೊಡುವುದು, ಒಬ್ಬರ ಹಿಂದೆ ಒಬ್ಬರು ನಿಂತು ಕತ್ತು ಬಗ್ಗಿಸಿ ಸುತ್ತು ಹಾಕುತ್ತಾ ಬೆನ್ನ ಹಿಂದಿನಿಂದ ಕೋಲು ಕೊಡುವುದು ಹೀಗೆ ವಿವಿಧ ಭಂಗಿಗಳಲ್ಲಿ ಕೋಲಾಟ ಹಾಡುತ್ತಾರೆ.

ಗೀಜಗನ ಕೋಲು: ಮತ್ತೊಂದು ವಿಶೇಷ ರೀತಿಯ ಆಟ. ಎರಡೂ ಕೈಗಳಲ್ಲೂ ಜೋಡಿಸಿಕೊಂಡಿರುವ ಕೋಲುಗಳನ್ನು ಎಡಕ್ಕೊಂದು ಬಾರಿ, ಬಲಕ್ಕೊಂದು ಬಾರಿಕೊಟ್ಟು ಮೂರನೆಯ ಏಟಿಗೆ ಎರಡು ಕೈಗಳನ್ನು ಮೇಲೆತ್ತಿ ಹೊಡೆದು ಬಲದಲ್ಲಿದ್ದವನು ಎಡಕ್ಕೆ ಎಡದಲ್ಲಿದವನು ಬಲಕ್ಕೆ ವೃತ್ತಾಕಾರದಲ್ಲಿ ಸುತ್ತುತ್ತಿರುವುದೇ ಈ ಆಟದ ಸ್ವಾರಸ್ಯ.

ಕಾಲು ಸಂದಿನ ಕೋಲು: ಇದು ವಿಚಿತ್ರ ರೀತಿಯ ಆಟಗಾರರಲ್ಲಿ ಇಬ್ಬಿಬ್ಬರು ಎದುರು ಬದುರು, ನಿಂತುಕೊಂಡಿದ್ದು ಪ್ರತಿಯೊಬ್ಬರೂ ಮೊದಲು ತನ್ನ ಎಡಕಾಲನ್ನು ಎತ್ತಿ ಎರಡೂ ಕೈಗಳ ಕೋಲನ್ನು ಅಲ್ಲಿ ಬಡಿಯುವನು. ಎರಡೂ ಕಾಲುಗಳಿಗೂ ಈ ರೀತಿ ಕೋಲು ಬಡಿದು ಮೇಲೆ ಮುಂದಕ್ಕೆ ನೆಗೆದು ಎದುರಿನವನಿಗೆ ಕೋಲು ಕೊಡುವನು. ಇದೇ ರೀತಿ ಈ ಆಟ ಪುನರಾವರ್ತನೆಯಾಗುತ್ತದೆ.

ಉಯ್ಯಾಲೆ ಕೋಲು: ಉಯ್ಯಾಲೆಯಂಥ ಸುಂದರ ಚಲನೆಯೊಂದು ಕಂಡುಬರುತ್ತದೆ. ಪ್ರಾರಂಭದಲ್ಲಿ ಆಟಗಾರರು ವೃತ್ತಾಕಾರದಲ್ಲಿ ನಿಂತ ಎಡಕ್ಕೊಮ್ಮೆ ಬಲಕ್ಕೊಮ್ಮೆ ಕೋಲುಕೊಡುತ್ತಿರುತ್ತಾರೆ. ಅನಂತರ ಮಧ್ಯದಲ್ಲಿ ನಾಲ್ವರು ಎದುರೆದುರಾಗಿ ಉಳಿದ ನಾಲ್ವರು ಅಕ್ಕಪಕ್ಕದಲ್ಲಿ ನಿಂತು ಕೋಲು ಕೊಡುವರು. ಆಮೇಲೆ ಅಕ್ಕಪಕ್ಕದಲ್ಲಿದ್ದವರು ಮಧ್ಯಕ್ಕೆ ಬಂದು ಮಧ್ಯದಲ್ಲಿದ್ದವರು ಅತ್ತ ಸರಿಯುವರು. ಈ ರೀತಿಯ ವೇಗದ ಆಟದಿಂದಾಗಿ ಉಯ್ಯಾಲೆ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ನೀಲ್ಕೋಲು: ಸ್ಪರ್ಧಾತ್ಮಕವಾಗಿ ಬೆಳೆಯುವುದೇ ನಿಲ್‌ಕೋಲ್ ಅಥವಾ ವಾದದ ಕೋಲಿನ ವೈಶಿಷ್ಟ್ಯ. ಸಮಭಾಗವಾಗಿ ನಿಂತ ಆಟಗಾರರು ಪ್ರಶ್ನಾರ್ಥಕವಾದ ಸವಾಲ್ – ಜವಾಬ್ ರೀತಿಯ ಹಾಡುಗಳನ್ನು ಹಾಡುತ್ತಾ ಪರಸ್ಪರ ಆಕರ್ಷಕ ಭಂಗಿಯಲ್ಲಿ ಅಟ್ಟಿಸಿಕೊಂಡು ಹೋಗುವುದೇ ಈ ಆಟದ ತಿರುಳು.

ಜಡೆಕೋಲು: ಆಟ ಪ್ರಾರಂಭವಾಗುವುದಕ್ಕೆ ಮೊಲದು ಹಗ್ಗಗಳಿಂದ ಜಡೆಯ ದಿಂಡನ್ನು ಹೆಣೆದು ಒಟ್ಟುಗೂಡಿಸಿ ಅವುಗಳಿಂದ ತುದಿಯ ಜಡೆ ಅಥವಾ ಹಗ್ಗವನ್ನು ಬಿಡಿಯಾಗಿಯೇ ಬಿಡಬೇಕು. ಈ ಬಿಡಿ ಹಗ್ಗಗಳನ್ನೆಲ್ಲ ಸೇರಿಸಿದ ದಿಂಡು ಜಡೆಯನ್ನು ಯಾವುದಾದರೊಂದು ಉಪಕರಣಕ್ಕೆ ಕಟ್ಟಿರುತ್ತಾರೆ. ಉಳಿದ ಬಿಡಿ ಹಗ್ಗಗಳನ್ನು ಕಲಾವಿದರು ಸೊಂಟಕ್ಕೆ ಕಟ್ಟಿರುತ್ತಾರೆ. ಕೋಲು ಹುಯ್ಯುವಾಗ ಬಿಡಿ ಹಗ್ಗಗಳೆಲ್ಲ ಸೇರಿಕೊಂಡು ಜಡೆಯ ಆಕಾರಕ್ಕೆ ತಿರುಗುತ್ತದೆ. ಹೀಗೆ ಹೆಣೆದುಕೊಂಡ ಜಡೆಯನ್ನು ಮತ್ತದೇ ರೀತಿಯಲ್ಲಿ ಬಿಡಿಸುತ್ತಾರೆ. ಈ ಕೋಲಾಟದ ವಿಶೇಷವೆಂದರೆ ಲೆಕ್ಕಾಚಾರದ ಹೆಜ್ಜೆ, ಒಂದು ಹೆಜ್ಜೆ ತಪ್ಪಿದರೂ ಜಡೆ ಬಿಡಿಸಲಾಗದೇ ಅವಮಾನವಾಗುವ ಸಂಭವವಿರುತ್ತದೆ. ಜಡೆ ಹಾಕುವಾಗ ಒಂದು ರೀತಿಯ ಹಾಡನ್ನು ಹಾಡಿದರೆ ಜತೆ ಬಿಡಿಸುವಾಗ ಮತ್ತೊಂದು ರೀತಿಯ ಹಾಡನ್ನು ಹಾಡುತ್ತಾರೆ.

ಗೋಪು ಕುಣಿತ: ಉತ್ತರ ಕನ್ನಡದ ಬ್ರಾಹ್ಮಣ ಹೆಣ್ಣು ಮಕ್ಕಳು ಮೊದಲ್ಗೊಂಡು ಮರಾಠಿ, ಕೊಮಾರ ಪಂಠ, ಪಡತಿ ವೈಶ್ಯ ಹಾಗೂ ಅಂಬಲಿಗರು ಈ ಕುಣಿತವನ್ನು ಮಾಡುತ್ತಾರೆ. ಇದು ಜಡೆ ಕೋಲಾಟದ ಇನ್ನೊಂದು ಮಾದರಿ. ಇಲ್ಲಿ ಹಗ್ಗಕ್ಕೆ ಬದಲಾಗಿ ಬಣ್ಣ ಬಣ್ಣದ ಬಟ್ಟೆ ಅಥವಾ ಸೀರೆಗಳು ಬಳಕೆಯಾಗುತ್ತವೆ. ಪ್ರದರ್ಶನ ಸಂದರ್ಭದಲ್ಲಿ ಕುಣಿತದ ಜೊತೆಗೆ ಕೈಯಲ್ಲಿ ಹಿಡಿದ ಸೀರೆಗಳಿಂದ ಬಳೆ, ಸರಪಳಿ, ಗೋಪು, ಜಡೆ, ನೆಲವು ಮುಂತಾದವುಗಳನ್ನು ಹೆಣೆಯುತ್ತಾರೆ.

ಬೆಂಕಿ ಬಳುಕಿನ ಕೋಲಾಟ: ಇದರಲ್ಲಿ ಗೇಣುದ್ದದ ತಂತಿಗೆ ಪಂಜನ್ನು ಕಟ್ಟ ಅದನ್ನು ಕೋಲಿನ ತುದಿಗೆ ಬಿಗಿದು ವಿವಿಧ ಬಗೆಯಲ್ಲಿ ಕೋಲುಗಳನ್ನು ತಾಕಿಸುತ್ತಾ, ಬಳಿಕುತ್ತಾ, ವೃತ್ತಾಕಾರದಲ್ಲಿ ಚಮತ್ಕಾರದಿಂದ ಆಟ ಆಡುತ್ತಾರೆ. ಇದರಲ್ಲಿ ಬರುವ ಹಾಡುಗಳು ಹೆಚ್ಚಾಗಿ ರಾಮಾಯಣದ ಲಂಕಾದಹನಕ್ಕೆ ಸಂಬಂಧಿಸಿದ ವಸ್ತುವನ್ನು ಒಳಗೊಂಡಿರುತ್ತದೆ.ಸ

ಚಕ್ರಕೋಲಾಟ ಅಥವಾ ಚಕ್ರಾಟದಲ್ಲಿ ಎಂಟುಜನ ಆಟಗಾರರಿದ್ದು ಅಷ್ಟೂ ಜನ ಎತ್ತಿನಗಾಡಿಯ ಚಕ್ರದ ಮೇಲೆ (೬.೭ ಅಡಿ ಎತ್ತರದಲ್ಲಿ) ಇದ್ದು ಪ್ರತಿಸಾರಿ ಕೋಲು ಹುಯ್ದ ಬಳಿಕ ಒಬ್ಬನು ತನ್ನ ಸ್ಥಾನದಿಂದ ಚಕ್ರದ ಮಧ್ಯೆ ಹೋಗಿ ಪುನಃ ಒಮ್ಮೆ ಕೋಲು ಹುಯ್ದು ತನ್ನ ಮುಂದಿನ ಸ್ಥಾನಕ್ಕೆ ಬರುತ್ತಾನೆ. ಈ ಸ್ಥಾನವು ಅವನ ಹಿಂದಿನ ಸ್ಥಾನ ಅವನ ಎಡಪಕ್ಕದಲ್ಲಿರುವವನಿಂದ ತುಂಬಲ್ಪಟ್ಟಿರುತ್ತದೆ. ಅಂದರೆ ಚಕ್ರದ ಮೇಲಿದ್ದವರೆಲ್ಲರೂ ಒಂದೊಂದು ಹೆಜ್ಜೆ ಬಲಕ್ಕೆ ಸರಿದು ಚಕ್ರದ ಮಧ್ಯೆ ಮೇಲಿದ್ದವರೆಲ್ಲರೂ ಒಂದೊಂದು ಹೆಜ್ಜೆ ಬಳಕ್ಕೆ ಸರಿದು ಚಕ್ರದ ಮಧ್ಯೆ ಹೋಗಿ ಬಂದು ತ್ರಿಕೋನಾಕಾರದಲ್ಲಿ ಚಲಿಸುತ್ತಿರುತ್ತಾರೆ. ಹಾಡಿನ ವೇಗ ಹೆಚ್ಚಿದಂತೆ ಇವರ ವೇಗವೂ ಹೆಚ್ಚಾಗುತ್ತದೆ. ಜೊತೆಗೆ ಚಕ್ರವೂ ವೇಗವಾಗಿ ತಿರುಗುತ್ತಿರುತ್ತದೆ.

ಕೊರವಂಜಿ ಕೋಲು: ಸಾಮಾನ್ಯವಾಗಿ ಕೋಲಾಟದ ಮುಕ್ತಾಯದ ಹಂತದಲ್ಲಿ ಕೊರವಂಜಿ ಕೋಲನ್ನು ಆಡುತ್ತಾರೆ. ಹಾಡು,ಕುಣಿತ, ಸಂಭಾಷಣೇ, ಹಾಸ್ಯ, ಬೈಗುಳ ಎಲ್ಲ ಸೇರಿ ನೃತ್ಯ ರೂಪಕವಾಗಿ ಈ ಕೋಲಾಟ ರಂಜಿಸುತ್ತದೆ. ಶ್ರೀಕೃಷ್ಣ ಮತ್ತು ಆತನ ಪ್ರೇಯಸಿ ಸತ್ಯಭಾಮಳ ನಡುವೆ ಈ ಕಥೆ ಹೆಣೆದುಕೊಂಡಿದೆ. ಇದರಲ್ಲಿ ಕೊರವಂಜಿ ವೇಷದ ಸತ್ಯಭಾಮೆಯನ್ನು (ಸ್ತ್ರೀವೇಷ) ಪುರುಷ ವೇಷದ ಕೊರವಂಜಿ ಹಿಡಿಯಲು ತೊಡಗುವನು. ಕೋಲು ಆಡುತ್ತಿರುವವರ ಮಧ್ಯದಲ್ಲಿ ಕೊರವಂಜಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವಳು. ಅವಳನ್ನು ಅಟ್ಟಿಸಿಕೊಂಡು ಹೋಗುತ್ತಾ ಕಡೆಗೊಮ್ಮೆ ಹಿಡಿಯುವನು. ಈ ಆಟವು ಮಂಡ್ಯ, ಹಳೇ ಮೈಸೂರು, ಬೆಂಗಳೂರು, ಹಾಸನ, ತುಮಕೂರು, ಚಿತ್ರದುರ್ಗ ಮುಂತಾದ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸುಗ್ಗಿ ಮತ್ತು ಕಾಮನ ಹುಣ್ಣೀಮಯೆ ದಿನಗಳಲ್ಲಿ ವೇಷ ಹಾಕಿಕೊಂಡು ಆಡುವ ಹಲವು ಕೋಲಾಟಗಳಿವೆ. ಉತ್ತರ ಕರ್ನಾಟಕದ ಗುಲ್ಬರ್ಗಾ, ಬೀದರ್ ಮುಂತಾದ ಭಾಗಗಳಲ್ಲಿ ಈ ದಿನಗಳಂದು ರಾಮ, ಕೃಷ್ಣ, ಹನುಮಂತ ಮುಂತಾದ ವೇಷಗಳನ್ನು ಹಾಕಿ ಕೋಲಾಟ ಆಡುವುದು ಅಲ್ಲಿಯ ವಿಶೇಷ. ಮಲೆನಾಡಿನ ಭಾಗದ ಕೆಲವು ಹಳ್ಳಿಗಳಲ್ಲಿ ಹುಲಿ ಹಸುವಿನ ವೇಷಗಾರರು ಕೋಲು ಹಾಕುವವರ ನಡುವೆ ನುಗ್ಗಾಡುತ್ತಾ ಗೋವಿನ ಕಥೆಯನ್ನು ನೆನಪಿಗೆ ತರುತ್ತಾರೆ.

ಕರ್ನಾಟಕದಲ್ಲಲ್ಲದೆ ಆಂಧ್ರ, ತಮಿಳುನಾಡಿನ ಅನೇಕ ಕಥೆಗಳಲ್ಲಿ ಕೋಲಾಟದ ಸನ್ನಿವೇಶಗಳು ಬರುತ್ತವೆ. ಶಿವನ ವಾಹನವೆನಿಸಿದ ಬಸವ ಈ ಕೋಲಾಟ ಹಬ್ಬದ ಕೇಂದ್ರ ಬಿಂದು. ಪ್ರತಿವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಮವಾಸೆಯಂದು ಆರಂಭಗೊಂಡ ಕೋಲಾಟ ಹುಣ್ಣಿಮೆಯ ದಿನ ಪೂರ್ಣಗೊಳ್ಳುತ್ತದೆ. ಇದು ನಡೆಯುವಷ್ಟು ದಿನವೂ ಜೇಡಿಮಣ್ಣಿನ ಬಸವನ ಪ್ರತಿಮೆಯಿಟ್ಟು ಸ್ನಾನಾದಿಗಳನ್ನು ಮಾಡಿ ಹುಲ್ಲು ಮತ್ತು ನೀರನ್ನು ಬಸವನಿಗೆ ಅರ್ಪಿಸಿ ಕೋಲಾಟವಾಡುತ್ತಾರೆ. ಹುಣ್ಣಿಮೆಯ ದಿನ ಹೆಣ್ಣು ಮಕ್ಕಳು ಹೊಸ ಉಡುಗೆ – ತೊಡುಗೆಗಳನ್ನು ಧರಿಸಿ ಬಸವನ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಕೊನೆಗೆ ನದಿಯಲ್ಲಿ ಮುಳುಗಿಸುತ್ತಾರೆ. ಬಸವನೊಂದಿಗೆ ಕೋಲನ್ನು ಕೆಲವರು ನದಿಗೆ ಬಿಟ್ಟರೆ, ಹೋಳಿ ಹುಣ್ಣಿಮೆಯಲ್ಲಿ ಕೋಲಾಟ ಆಡುವವರು ಕಾಮನನ್ನು ಸುಡುವಾಗ ಕೋಲನ್ನು ಅದರೊಂದಿಗೆ ಸುಡುತ್ತಾರೆ.

ಹೀಗೆ ಕೋಲಾಟ ಪ್ರದೇಶವಾರು ಹಿನ್ನೆಲೆಯಲ್ಲಿ ವಿವಿಧ ಕಾರಣಗಳಿಗಾಗಿ ವಿವಿಧ ರೀತಿಯಲ್ಲಿ ಆಚರಿಸಲ್ಪಡುವ ಸಾಂಪ್ರದಾಯಿಕ ಆಚರಣೆಯಾಗಿದೆ.

– ಎನ್.ಆರ್.

ಕೋಲಾಟ್ಟಂ ತಮಿಳುನಾಡಿನ ಹೆಣ್ಣುಮಕ್ಕಳು ಸುಂದರವಾದ ಎರಡು ಬಣ್ಣದ ಕೋಲುಗಳನ್ನು, ಎರಡೂ ಕೈಗಳಿಂದ ಒಂದರ ಮೇಲೆ ಒಂದನ್ನು ಬಡಿಯುತ್ತಾ ಸದ್ದಿನೊಂದಿಗೆ ಆಡುವ ಆಟ. ಈ ಆಟದಲ್ಲಿ ಹಾಡುವ ಹಾಡುಗಳೇ ಕೋಲಾಟ ಪದಗಳಾಗಿವೆ. ಹೆಣ್ಣುಮಕ್ಕಳು ವೃತ್ತಾಕಾರವಾಗಿ ನಿಂತು ತಾಳಬದ್ಧವಾಗಿ ಕುಟ್ಟುತ್ತಾ ಸುತ್ತುಬರುವುದು ಮಂಡಲ ಕೋಲಾಟವೆನಿಸುತ್ತದೆ. ಇದರಲ್ಲಿ ಒಳಗಿನ ಸುತ್ತು ಮತ್ತು ಹೊರಗಿನ ಸುತ್ತು ಎಂಬ ಎರಡು ಸುತ್ತುಗಳಲ್ಲಿ ನಿಂತು, ಒಳಗಿನ ಸುತ್ತಿನವರು ಗಡಿಯಾರದ ಮುಳ್ಳಿನಂತೆ ಪ್ರದಕ್ಷಿಣಾಕಾರವಾಗಿಯೂ, ಹೊರಸುತ್ತಿನವರು ಅದಕ್ಕೆ ವಿರುದ್ಧ ದಿಕ್ಕಿನಲ್ಲಿಯೂ ಸುತ್ತುವುದು ಜೋಡುವೃತ್ತ ಕೋಲಾಟವಾಗಿದೆ. ಹಾಗೆಯೇ, ನೀಳ ಕೋಲಾಟ, ಹೆಣೆದುಕೊಂಡ ಕೋಲಾಟ ಮುಂತಾಗಿ ಹಲವು ವಿಧಗಳಿವೆ. ಎಳೆಯ ಹುಡುಗಿಯರು ಜೋರಾಗಿ ಕುಣಿದು ಕುಪ್ಪಳಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬವೆನಿಸುತ್ತದೆ. ಕೋಲುಗಳನ್ನು ಹಾಡಿನ ತಾಳಗತಿನ್ನನುಸರಿಸಿಕೊಂಡು, ಬಡಿದುಕೊಂಡು ಆಡುವುದು, ಕೈಗಳನ್ನು ಎತ್ತಿಹಿಡಿಯುತ್ತಾ ಮತ್ತು ಕೆಳಗ್ಗೆ ತಗ್ಗಿಸಿ ಹೊಡೆಯುತ್ತಲೂ ಹಿಂದಕ್ಕೆ ಮುಂದಕ್ಕೆ ತಿರುಗಿಸಿಕೊಂಡು, ಬದಲಾಯಿಸುತ್ತಾ ಹಲವಾರು ವಿಧಗಳಲ್ಲಿ ಆಡುವ ಈ ಆಟವು ೬೦ ವರ್ಷಗಳ ಹಿಂದೆ ದೀಪಾವಳಿಯ ಮುಂದಿನ ಒಂದು ತಿಂಗಳಕಾಲ ದೇವಾಲಯದ ಎದುರು ಹಾಗೂ ಸಣ್ಣಪುಟ್ಟ ಊರೂಗಳಲ್ಲಿಯೂ ನಡೆದುಕೊಂಡು ಬರುತ್ತಿದೆ. ಒಂದೊಂದು ದಿನ, ರಾತ್ರಿಯಲ್ಲೂ ಎರಡು ಮೂರು ತಾಸುಗಳ ಕಾಲ ಆಡುತ್ತಾರೆ. ಒಳ್ಳೆಯ ಗಂಡಸು ಸಿಗುವಂತಾಗಲು ಹಾಗೂ ಉತ್ತಮ ಮಳೆ ಬೆಳೆಯಾಗುವಂತೆಯೂ ಇದು ಪ್ರಯೋಜನಾಕಾರಿ ಎಂಬ ನಂಬಿಕೆ ಜನರಲ್ಲಿದೆ.

ಹಾಡು ಬಲ್ಲವಳೊಬ್ಬಳು, ಹಾಡಿನ ಮೊದಲ ಸಾಲನ್ನು ಹಾಡಲು, ಅದನ್ನು ಹಿಂಬಾಲಿಸಿ ಎಲ್ಲರೂ ಮತ್ತೆ ಹಾಡುತ್ತಾರೆ. ಹಾಡಿನೊಂದಿಗೆ ಕೋಲಿನ ಸದ್ದೂ ಮೇಳೈಸಿಕೊಂಡಾಗ ಅದನ್ನು ಕೇಳಲು ಅಲ್ಲಿ ಜನ ಸೇರುತ್ತಾರೆ. ಆ ಹಾಡುಗಳಲ್ಲಿ ಹಲವು ಕೃಷ್ಣನನ್ನು ಕುರಿತಾಗಿಯೇ ಇರುತ್ತವೆ. ಆದರೂ ಬೇರೆ ದೇವರುಗಳ ಬಗೆಗೂ ಹಲವಾರು ಹಾಡುಗಳು ಪ್ರಾಸಂಗಿಕವಾಗಿ ಸೇರಿಕೊಳ್ಳುವುದಿದೆ. ದೇವಾಲಯಗಳಲ್ಲಿ ಹಸುವು ಕರುವೂ ಸೇರಿಕೊಂಡಂತಿರುವ ದೊಡ್ಡದಾದ ಮಣ್ಣಿನ ಬೊಂಬೆಯನ್ನು ಮುನ್ನಾ ದಿನವೇ ತಂದು, ಸ್ಥಾಪಿಸಿ ಪೂಜಿಸಿದ ಅನಂತರ ಈ ಕೋಲಾಟ ಪ್ರಾರಂಭವಾಗುತ್ತದೆ. ಪ್ರತಿಯೊಂದು ದಿನವೂ ಹಾಡಲು ಮೊದಲ ಹಾಡು ಹೀಗಿರುತ್ತದೆ:

ಕೋಲೆನ್ನಕೋಲೇ
ಪಾಲಾ ನೀಲಾ ನಾ ಕೋಲೇ
ಬಾಲ ವಿಲೋಚನ ನೀಲ ವಿಲೋಚನ
ಬಾಲ ಪ್ರಪಂಚ ಕೋಲೇ
ಪಸುವಾ ಪಸುವೈಯಾ ಉಮಕ್ಕು
ಪಣಮ್
ರೊಂಬ ನಾನ್ತಾರೇನ್
ಎಟ್ಟಡಿಕ್ಕುಚ್ಚುಕ್ಕಳ್ಳೇ ಸಾಮಿ
ಎತ್ತ ನೈ ನಾಳಿರುಪ್ಪೇನ್
ಮಚ್ಚುವೀಡು ಕಟ್ಟಿತ್ತಾರುಮ್
ಸಾಮಿ
ಮಲೈಯಾಳಮ್ ಪೋಯ್
ವಾರೇನ್

ಕಣ್ಣನ ಬಾಲಲೀಲೆಗಳನ್ನು ಕೀಟಲೆಗಳನ್ನು ಗೋಪಿಯರು ಯಶೋದೆಯೊಡನೆ ದೂರುವ ಹಲವಾರು ಹಾಡುಗಳಿವೆ:

60

ಓ ಯಶೋದಾ ಉನ್ನ ಸೊಲಗಿನ್ಹಾಯ್
ಉನ್
ಪಿಳ್ಳೈ ದುಷ್ಟತ್ತನಮ್ – ಓ ಯಶೋದಾ
ಉರಿ ಮೇಲಿರುಂದ ವೆಣ್ಣೈ
ತಯಿರ್ ಪಾಲ್ ಅತ್ತನೈಯುಮ್
ಮುಳುದುಮಾಗೆ ತಿನ್ಹು ವಿಟ್ಟುಮೂಡಿ ವಿಟ್ಟಾಂಡಿ
ಸರಿಯಿಲ್ಲೈಸರಿಯಿಲ್ಲೈ ಸರಿಯಾಗಬುದ್ದಿಸೊಲ್ಲಿ
ಸರಿಪಡುತ್ತ ವೇಣ್ಡೆ ಮೆನ್ಹು – ಓ ಯಶೋದಾ

ಹೂಗಳನ್ನು ಕುರಿತಾದ ಒಂದು ಹಾಡು:

ಮಲ್ಲಿಗೈಯ ಮುಲ್ಲೈಯಡಿ ಮರುದೇವ ವಾಸಮಾಡಿ
ಮನೋರಂಜಿತ ಮಲರ್
ಪಾರ್ ಪಾರ್ಪಾರ್
ಪಾರ್ಕವೇ ಅಳಗಾಗುದೇ – ಮಲ್ಲಿಗೈ

ಕೋಲಾಟದ ಬಗೆಗೆ ಕಾಂಚಿ ಪುರಾಣದಲ್ಲಿ ‘ಸೆವ್ವಾಯ್ಚಿಯರ್ ಕೋಲಾಟ್ಟಮ್’ ಎಂಬ ಉಲ್ಲೇಖವಿದೆ. ಸಂಸ್ಕೃತದಲ್ಲಿ ‘ದಂಡಲಾಸ್ಯ’ವೆಂದೂ ರಾಜಸ್ಥಾನದಲ್ಲಿ ‘ಚುಂಡಿಯರಾಸ್’ ಎಂದೂ ಹೇಳಲಾಗುತ್ತದೆ.

ಮಧುರೆಯ ಆಸುಪಾಸುಗಳಲ್ಲಿರುವ ಸೌರಾಷ್ಟ್ರ ಗಂಡಸರು ಬೃಂದಾವನ ಕೋಲಾಟವೆಂಬ ಆಟವನ್ನಾಡುತ್ತಾರೆ. ಬೇರೆ ಹಳ್ಳಿ ಊರುಗಳಲ್ಲಿಯೂ ೬೦ ವರ್ಷಗಳಷ್ಟು ಹಿಂದೆಯೇ ಪುರುಷರು ಭಜನಾ ಮಂದಿರಗಳಲ್ಲಿ, ಭಜನೆಯ ಒಂದಂಗವಾಗಿ, ಸೊಂಟಮಟ್ಟದ ಗೂಟದೀಪವನ್ನು ನಡುವಿನಲ್ಲಿ ಸ್ಥಾಪಿಸಿಕೊಂಡು, ಅದರ ಸುತ್ತಲೂ ನಿಂತು, ಓಡುತ್ತ, ಕುಣಿಯುತ್ತ ವೃತ್ತಾಕಾರದಲ್ಲಿ ಸುತ್ತು ಬರುವ ವಿಶೇಷ ರೀತಿಯ ಕೋಲಾಟಗಳನ್ನಾಡುತ್ತಿದ್ದರೆನ್ನಲಾಗಿದೆ. ಇದರ ಒಂದು ಹಾಡು ಈ ರೀತಿಯಾಗಿದೆ:

ರಾಮರಾಯಾ ಪ್ರಭೋರಾಮರಾಯಾ
ಅಯೋಧ್ಯಾಪುರ ನಿವಾಸ ರಾಮರಾಯಾ
ಕೃಷ್ಣರಾಯಾ ಪ್ರಭೋ ಕೃಷ್ಣರಾಯಾ
ದ್ವಾರಕಾಪುರ ನಿವಾಸಾ ಕೃಷ್ಣರಾಯಾ

– ಎಸ್.ವಿ. ಅನುವಾದ ಎಚ್.ಬಿ.