ಕೋಟಿ ಚೆನ್ನಯ ತುಳು ಜಾನಪದರಲ್ಲಿ ಕೋಟಿ ಚೆನ್ನಯ ಕಥೆ, ಐತಿಹ್ಯಗಳಿಗಿಂತಲೂ ಪಾಡ್ದನ ಪ್ರಕಾರದಲ್ಲೇ ಪ್ರಬಲವಾಗಿ ಪ್ರಕಟಗೊಳ್ಳುತ್ತಿದೆ. ಪಾಡ್ದನಗಳು ಸಂವಹನಗೊಳ್ಳಲು ಇರುವ ಆರಾಧನ ಸಂದರ್ಭವು ಉಳಿದ ಪ್ರಕಾರಗಳಿಗೆ ಇಲ್ಲದಿರುವುದೇ ಇದಕ್ಕೆ ಕಾರಣ. ವಸ್ತು, ರಚನೆ, ಶೈಲಿಗಳ ದೃಷ್ಟಿಯಲ್ಲಿ ಕೋಟಿ ಚೆನ್ನಯ ಪಾಡ್ದನವು ಜನಪದ ಮಹಾಕಾವ್ಯದ ಸಾಲಿಗೆ ಸೇರುತ್ತದೆ. ಅವಳಿ ಸಾಂಸ್ಕೃತಿಕ ವೀರರಿಗೆ ಸಂಬಂಧಿಸಿದ ಆಶಯವು ಇಲ್ಲಿ ಮುಖ್ಯವಾಗಿದೆ. ಪವಾಡ ಮತ್ತು ಮಾಂತ್ರಕತೆಯ ಆವರಣವನ್ನೂ ಈ ಮೌಖಿಕ ಮಹಾಕಾವ್ಯ ಪಡೆದುಕೊಂಡಿದೆ. ಶೈಲಿಯ ಸ್ವರೂಪವನ್ನು ಗಮನಿಸಿದರೆ ಈ ಕಾವ್ಯದ ನಿರೂಪಕರು ಕಥಾನಾಯಕರೇ ಆಗಿರುತ್ತಾರೆ. ಕೋಟಿ ಚೆನ್ನಯದಂತಹ ಮೌಖಿಕ ಕಾವ್ಯಗಳನ್ನು ಹಾಡುವ ಕಲಾವಿದರು ಅವನ್ನು ಕಂಠಪಾಠ ಮಾಡಿ ಹೇಳದೆ ನಿರ್ದಿಷ್ಟ ಮೌಖಿಕ ಸೂತ್ರಗಳ ಚೌಕಟ್ಟಿನಲ್ಲಿ ನಿರೂಪಿಸುತ್ತಾರೆ.

ಈ ಕಾವ್ಯದ ಮುಖ್ಯ ಸಂಗತಿಗಳನ್ನೂ ಪಾತ್ರಗಳನ್ನೂ ಚಾರಿತ್ರಿಕ ಮತ್ತು ಪ್ರಮುಖ ವ್ಯಕ್ತಿಗಳನ್ನಾಗಿ ಗುರುತಿಸಲು ಹಾಗೂ ವಿವರಿಸಲು ಸಾಧ್ಯವಾಗುವ ಕಾರಣ ಇದನ್ನು ಚಾರಿತ್ರಿಕ ಮಹಾಕಾವ್ಯದ ಸಾಲಿನಲ್ಲಿ ನೋಡಬಹುದು. ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ನಡೆದ ಪ್ರತಿಭಟನೆ ಮತ್ತು ಹೋರಾಟ ಈ ಕಾವ್ಯದುದ್ದಕ್ಕೂ ಜೀವಧ್ವನಿಯಾಗಿ ಹರಿದಿರುವುದನ್ನು ಗುರುತಿಸಬಹುದು.

ಸೃಷ್ಟಿಯ ಮೂಲದ ಕಲ್ಪನೆ, ಆದಿ ಮಾನವನ ಉಗಮದ ವರ್ಣನೆಗಳು ಕೋಟಿ ಚೆನ್ನಯ ಪಾಡ್ದನ ಪೂರ್ವಭಾಗದಲ್ಲಿವೆ. ಮಾನವ ಸೃಷ್ಟಿಯ ಮೂಲವನ್ನು ನಿರ್ಧರಿಸುವ ಘಟಕಗಳು ಇಲ್ಲಿ ಕೇಂಜವ ಎನ್ನುವ ಎರಡು ಹಕ್ಕಿಗಳು. ಅವು ಅಣ್ಣ ತಂಗಿ ಹಕ್ಕಿಗಳಾಗಿದ್ದು ಮುಂದೆ ದೇವರ ಅನುಮತಿ ಪಡೆದು ಗಂಡಹೆಂಡಿರಾಗುತ್ತವೆ. ಅವುಗಳ ಮೊಟ್ಟೆ ಸಕಲ ಸೃಷ್ಟಿಗೂ ಕಾರಣವಾಗುತ್ತದೆ. ಪ್ರಾಚೀನ ವಿಶ್ವಸೃಷ್ಟಿಯ ಕಲ್ಪನೆಯಂತೆ ‘ಸೃಷ್ಟಿ’ ಎನ್ನುವ ಆಲೋಚನೆ ಸಮುದ್ರ ಹಕ್ಕಿಯೊಂದರ ಮೊಟ್ಟೆಯೊಡೆದು ಚೂರು ಚೂರಾಗುವುದರ ಮೂಲಕ ಭೂಮಿಯ, ಸ್ವರ್ಗದ ಮತ್ತು ದಿವ್ಯಜ್ಯೋತಿಯ ಹುಟ್ಟುಗಳಿಗೆ ಕಾರಣವಾಯಿತು ಎನ್ನುವುದನ್ನು ವಿವರಿಸುತ್ತದೆ. ಜಗತ್ತಿನ ಜನಪದ ಪುರಾಣಗಳು ವ್ಯವಸ್ಥಿತ ವಿಶ್ವದ ಮತ್ತು ವಿಶ್ವ ವಿನ್ಯಾಸದ ತತ್ವಗಳಿಗೆ ಸಂಬಂಧಿಸಿವೆ. ಇಟೆಲಿ ಮತ್ತು ಫಿನ್ನಿಶ್ ವಿದ್ವಾಂಸರು ನಡೆಸಿದ ಧಾರ್ಮಿಕ ಮತ್ತು ಚಾರಿತ್ರಿಕ ಅಧ್ಯಯನ ವಿಶ್ವರಚಕ ಪರಿಕಲ್ಪನೆಯ ಮೇಲೆ ಹೊಸ ದೃಷ್ಟಿ ಹರಿಸಿದೆ. ಅಂಡದಿಂದ ಬ್ರಹ್ಮಾಂಡ ಎನ್ನುವ ಮತ್ತು ಪ್ರಳಯ ಸೃಷ್ಟಿಯ ಕಲ್ಪನೆಯನ್ನು ಕೇಂಜವ ಹಕ್ಕಿಗಳ ಕತೆ ಚೆನ್ನಾಗಿ ವಿವರಿಸುತ್ತದೆ. ಜೊತೆಗೆ ತುಳುನಾಡಿನ ಸಾಮಾಜಿಕ ಆಡಳಿತ ವ್ಯವಸ್ಥೆಯನ್ನೂ ಅದು ಪ್ರತಿನಿಧಿಸುತ್ತದೆ. ದೇವರ ಕಾಣಿಕೆಯಿಂದಾಗಿ ಪರುಸ್ಕೃತವಾದ ಮೊಟ್ಟೆ ರಾಜ್ಯದ ರಕ್ಷಕನಾದ ಬೆರ್ಮೆರ್ ದೈವವನ್ನು ಪ್ರಜಾಪಾಲಕನಾದ ಪರ್ಮಲೆ ಬಲ್ದಾಳ ರಾಜನನ್ನೂ ಸೃಷ್ಟಿಸಿದರೆ, ಕಾಣಿಕೆಗೆ ತಿರಸ್ಕೃತವಾದ ಮೊಟ್ಟೆ ದುಡಿಯುವ ಶೂದ್ರ ವರ್ಗದ ಪ್ರತಿನಿಧಿಗಳಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆದಿಯ ಸೃಷ್ಟಿಗೆ ಕಾರಣವಾಗುತ್ತದೆ. ಎಂದರೆ ಶ್ರೇಣಿಕೃತ ಸಮಾಜ ವ್ಯವಸ್ಥೆಯ ರಚನೆಯನ್ನೇ ಇದು ನಿರೂಪಿಸುವುದು ಮತ್ತು ಸಮರ್ಥಿಸುವುದು.

ಪಾಳೆಯಗಾರ ಅರಸರ ಕಾಲದ ಸೀಮೆಗಳ ನಡುವಣ ಗಡಿ ಆಕ್ರಮಣ ಘರ್ಷಣೆಗಳು ಕೋಟಿ ಚೆನ್ನಯದಲ್ಲಿ ಪ್ರಧಾನವಾಗಿ ಚಿತ್ರಣಗೊಂಡಿವೆ. ಈ ವೀರರ ಸಾಹಸ ಕಾರ್ಯಗಳು ಪರ್ಮಲೆ, ಪಂಜ ಮತ್ತು ಎಣ್ಮೂರು ಸೀಮೆಗಳಿಗಷ್ಟೇ ಸೀಮಿತವಾಗಿದ್ದು ಅದೊಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಡೆದ ಚಾರಿತ್ರಿಕ ಘಟನೆಯಾಗಿದೆ ದಾಖಲಾಗಲಿಲ್ಲ. ಈ ಐತಿಹ್ಯ ಮುಖ್ಯವಾಗಿ ಬೇಟೆ ಮತ್ತು ಕೃಷಿಗೆ ಸಂಬಂಧಿಸಿ ಘಟಿಸಿರುತ್ತದೆ. ಜನಪದ ವೈದ್ಯ ಮತ್ತು ಮಾಂತ್ರಿಕ ವಿದ್ಯೆ ಆಗಿನ ಸಮಾಜದಲ್ಲಿ ರೂಢಿಯಲ್ಲಿದ್ದುವು. ಬಾಲ್ಯ ವಿವಾಹ ಪದ್ಧತಿ ಪರಂಪರೆಯ ಸಾಮಾಜಿಕ ವರ್ಗವೊಂದು ಹೆಣ್ಣು, ಮದುವೆಗೆ ಮೊದಲು ಮೈನೆರೆದ ಆಕೆಯನ್ನು ಅಮಾನುಷವಾಗಿ ಬಹಿಷ್ಕರಿಸುವುದಿತ್ತು, ಹೀಗೆ ಬರಿಷ್ಕೃತಳಾದ ಬ್ರಾಹ್ಮಣ ಕನ್ಯೆಯೇ ದೇಯಿ ಬೈಯ್ದೆದಿ ಎನ್ನುವುದು ಆಕೆಯ ಪೂರ್ವಕಥೆಯಿಂದ ವ್ಯಕ್ತವಾಗುತ್ತದೆ. ಪುರುಷ ಪ್ರಧಾನ ಚಿಂತನೆಗೆ ಇಲ್ಲಿ ಮತ್ತೆ ಸಮರ್ಥನೆ ಸಿಗುತ್ತದೆ.

ಬಿಲ್ಲವ ಜನಾಂಗ ವೈದ್ಯ, ಬೇಟೆ, ಕೃಷಿ, ಮೂರ್ತೆ, ಯೋಧ ವಿದ್ಯೆ ಮೊದಲಾದ ಕಾಯಕಗಳನ್ನು ನಿರ್ವಹಿಸುತ್ತಿದ್ದು ಸಮಾಜದಲ್ಲಿ ಒಂದು ಪ್ರಮುಖ ವರ್ಗವಾಗಿತ್ತು. ವೃತ್ತಿಯ ಮೂಲಕ ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸುವ ಕಾಲದ ಬಗೆಗೂ ಇಲ್ಲಿ ಸುಳುಹು ಇದೆ. ಬೇಟೆಗೆ ಸಂಬಂಧಿಸಿ ಬಿಲ್ಲುಗಾರಿಕೆಯಲ್ಲಿ ನಿಪುಣರಾಗಿದ್ದುದರಿಂದ ಅವರು ಬಿರುವರು/ಬಿಲ್ಲವರ ವೈದ್ಯ ವಿದ್ಯೆಯಲ್ಲಿ ಪರಿಣತರಿದ್ದುದರಿಂದ, ಅವರು ಬೈದೈರ್ಲು/ಬೈದ್ಯರು. ಯೋಧ ವಿದ್ಯೆ ಬಲ್ಲವರಾದುದರಿಂದ ಭಟರು/ಬಂಟರು. ಆಚರಣೆ ಆರಾಧನೆಗಳಲ್ಲಿ ಪೂಜಾವಿಧಿಗಳನ್ನು ಮಾಡುವವರಾದ ಕಾರಣ ಪೂಜಾರಿಗಳು. ತಾಳೆ ಮರ ಹತ್ತಿ ಹೆಂಡ ಇಳಿಸಿ ಅದರಿಂದ ಬೆಲ್ಲ ತಯಾರಿಸುತ್ತಿದ್ದುದರಿಂದ ಮೂರ್ತೆಯವರು. ಹೀಗೆ ಇಷ್ಟು ಶ್ರಮಜೀವಿಗಳಾದ ಮತ್ತು ಪ್ರಮುಖವಾದ ವರ್ಗವೊಂದು ತುಳಿತಕ್ಕೊಳಗಾಗಿರುವುದು ಅಷ್ಟೇ ಸತ್ಯ. ಹೆಚ್ಚು ಕಡಿಮೆ ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬಂಟ ಬಲ್ಲಾಳ ಬ್ರಾಹ್ಮಣ ಮತ್ತು ಬಿಲ್ಲವರ ನಡುವಣ ಸಂಬಂಧ ಹಾಗೂ ಸಂಘರ್ಷವನ್ನು ಕೋಟಿ ಚೆನ್ನಯ ಮೌಖಿಕ ಕಾವ್ಯ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.

ಕೋಟಿ ಚೆನ್ನಯ ಪಾಡ್ದನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಲಾಗುತ್ತಿದೆ. ಆಯ್ಕೆ ಮಾಡಿದ ಮುಖ್ಯ ಭಾಗಗಳನ್ನು ಪರವ ಕಲಾವಿದರು ಆರಾಧನ ಸಂದರ್ಭದಲ್ಲಿ ಪರಂಪರೆಯ ವಕ್ತಾರರಾಗಿ ಹಾಡುತ್ತಾರೆ. ನಾಟಿ ಗದ್ದೆಯಲ್ಲಿ ಹೆಂಗಸರೂ ಗಂಡಸರೂ ವರ್ಗ ವ್ಯತ್ಯಾಸವಿಲ್ಲದೆ ಕೆಲಸದ ಹಾಡಾಗಿ ಹಾಡುತ್ತಾರೆ. ಮೂರ್ತೆ ಕಾಯಕದಲ್ಲಿ ಗಂಡಸರು ತಮ್ಮ ಜನಾಂಗದ ವೀರರ ಚರಿತ್ರೆಯಾಗಿ ಹಾಡುತ್ತಾರೆ. ಉಳಿದ ಸಂದರ್ಭಗಳಲ್ಲಿ ಜನಸಾಮಾನ್ಯರ ಧೈರ್ಯ, ಶೌರ್ಯ, ಕಲಿತನದ ಪುರಾಣವಾಗಿಯೂ ಇದನ್ನು ಹಾಡಲಾಗುತ್ತಿದೆ. ದುಡಿಯುವ ವರ್ಗದಿಂದ ವರ್ಗಕ್ಕೆ ಇದೊಂದು ಪರಂಪರೆಯ ಸಂಹವನವಾಗಿ ಹರಿದು ಬರುತ್ತಿದೆ. ಕೆಲವೊಮ್ಮೆ ಕೆಲಸದ ಹಾಡಾಗಿರುವುದಾದರೂ ಒಟ್ಟಿನಲ್ಲಿ ಈ ಪಾಡ್ದನದ ಅರ್ಥ ಜನಾಂಗ ಸಂಬಂಧದಲ್ಲಿದೆ. ಪರಂಪರೆಯ ವೃತ್ತಿ ಸಂಬಂಧವಾದ ಕುಲ ಲಾಂಛನ ಸಂಕೇತಕ್ಕೆ ಒಂದು ಸಾಧನವಾಗಿಯೂ ಈ ಪಾಡ್ದನ ಕಾರ್ಯವೆಸಗುತ್ತದೆ.

ಕೋಟಿ ಚೆನ್ನಯದಂತಹ ಮೌಖಿತ ಪರಂಪರೆ ಎನ್ನುವುದು ಒಂದು ಪ್ರಕ್ರಿಯೆಗೆ ಮತ್ತು ಅದರ ಉತ್ಪನ್ನಗಳಿಗೆ ಅನ್ವಯವಾಗುತ್ತದೆ. ಇಂತಹ ಉತ್ಪನ್ನಗಳು ಮೌಖಿಕ ರೂಪದ ಸಂದೇಶಗಳಾಗರುತ್ತವೆ. ಅವು ಗತಕಾಲದ ಸಂದೇಶಗಳು. ಕನಿಷ್ಠ ಒಂದು ತಲೆಮಾರು ಹಿಂದಿನವಾಗಿರಬಹುದು. ಮೌಖಿಕವಾಗಿ ಹರಿದು ಬಂದು ಪ್ರಕ್ರಿಯೆಯನ್ನು ಅವು ಮುಂದುವರಿಸುತ್ತಿರುತ್ತವೆ. ಮೌಖಿಕ ಪರಂಪರೆಯ ಈ ಪ್ರಕ್ರಿಯೆ ಶ್ರವ್ಯ ರೂಪದ ಕಲೆಯಾಗುವುದು ಸಾಧ್ಯ. ಇಂತಹ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕಲಾವಿದರು ಮೌಖಿಕ ಪರಂಪರೆಯ ತಮ್ಮ ಮಾನಸಿಕ ಪಠ್ಯಗಳಿಗೆ ಹೊಸ ರೂಪಗಳನ್ನು ಕೊಟ್ಟಾಗ ಅದೊಂದು ಶ್ರೇಷ್ಠ ಕಲೆಯೆನಿಸಿಕೊಳ್ಳುತ್ತದೆ. ಪಾಡ್ದನಗಳಂತಹ ಮಾನಸಿಕ ಪಠ್ಯಗಳನ್ನು ಪಡೆದಿರುವ ಮೋಂಟೆ ಗೌಡ, ಗೋಪಾಲ ನಾಯ್ಕ, ನರಂಗ ಪರವ, ಬಾಬು ಪರವ, ಡಂಗು ಪಾಣಾರ, ರಾಮಕ್ಕ ಪೂಜಾರಿ, ರಾಮಕ್ಕ ಗಿಡಕರೆಯಂತಹ ಕಲಾವಿದರು, ನಿರೂಪಕರು ಜಾನಪದ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುತ್ತಾರೆ. ಪ್ರಕಾರವೊಂದರ ಅರ್ಥ ಸಂದೇಶಗಳನ್ನು ಗ್ರಹಿಸಿಕೊಳ್ಳಲು ನೆರವಾಗುತ್ತಾರೆ. ಒಂದು ಅರ್ಥದಲ್ಲಿ ಇಂತಹ ನಿರೂಪಕರೇ ಜಾನಪದದ ಅಧಿಕೃತ ಒಡೆಯರಾಗುತ್ತಾರೆ. ಹಾಗೆಂದು ಜಾನಪದದ ಎಲ್ಲ ಪ್ರಕಾರಗಳೂ ಆರಂಭದಲ್ಲಿ ಕೆಲವರ ಸೃಷ್ಟಿಯಾಗಿದ್ದು ಅನಂತರದಲ್ಲಿ ಅವನ್ನು ಜನಪದರು ಸ್ವೀಕರಿಸಿ ಪುನರಾಸೃಷ್ಟಿಸುತ್ತಾರೆ. ನಿರಂತರ ಪುನರಾವರ್ತನೆಯ ಮರು ಸೃಷ್ಟಿ ಕಾರ್ಯದಿಂದಾಗಿ ಅವುಗಳಲ್ಲಿ ಗಣನೀಯ ಮಾರ್ಪಾಟುಗಳು ಆಗುವುದೂ ಸಾಧ್ಯ.

ಪುರಾಣ, ಧರ್ಮ, ಆಚರಣೆಗಳಲ್ಲಿ ವ್ಯಕ್ತಿಯೋರ್ವ ಪಡೆದುಕೊಳ್ಳುವ, ಸಮುದಾಯವೊಂದು ಗಳಿಸಿಕೊಳ್ಳುವ ಒಟ್ಟು ಗ್ರಹಿಕೆ, ಕಲ್ಪನೆಗಳು ವ್ಯಕ್ತಿಯೊಬ್ಬನಲ್ಲಿ ಅಜ್ಞಾತವಾಗಿ ಕೆಲಸ ಮಾಡುವುದು ಮುಖ್ಯವಾಗುತ್ತದೆ. ಕಲ್ಪನೆಗಳು ಪ್ರತಿಮೆ ಪ್ರತೀಕಗಳ ಸ್ವರೂಪ ಪಡೆದು ಮನಸ್ಸಿನ ಪ್ರವೃತ್ತಿಗಳಿಗೆ ದಾರಿ ಮಾಡಿಕೊಡುತ್ತವೆ. ಅವು ನಮ್ಮ ನಿತ್ಯ ಬದುಕಿನ ವ್ಯವಹಾರಗಳಲ್ಲಿ, ಆಚರಣೆಗಳಲ್ಲಿ, ದೈವಿಕ ಕಲ್ಪನೆಯ ಶಿಲ್ಪ ವಿಗ್ರಹದಲ್ಲಿ, ಪ್ರತಿಮೆಗಳಲ್ಲಿ ಮೂಡಿರಬಹುದು. ಕೋಟಿ ಚೆನ್ನಯರಂತಹ ಆರಾಧನ ಕೇಂದ್ರಗಳಲ್ಲಿ ವಿಗ್ರಹಗಳು ಈ ಹಿನ್ನೆಲೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.

ಇಂದು ಆರಾಧನ ಕೇಂದ್ರಗಳಾಗಿರುವ ಗರಡಿಗಳು ಹಿಂದೆ ಯೋಧಕಲೆಯ ಅಂಗಸಾಧನೆಯ ಕೇಂದ್ರಗಳಾಗಿದ್ದುವು. ಯೋಧ ವಿದ್ಯೆ ಕಲಿತು ಯೋಧನಾಗಿ ಪರಿಣತಿ ಪಡೆಯುತ್ತಿದ್ದ. ಕೇರಳದ ಚೇಗವನೋರ್ವ ತುಳುನಾಡಿನ ಗರಡಿ ಗುರುವಿನಿಂದ ಶಿಕ್ಷಣ ಪಡೆದು ಹೋಗುತ್ತಿದ್ದನೆಂಬುದು ಕೇರಳದ ವಡಕನ್ ಪಾಟುಗಳಲ್ಲಿದೆ. ಪಾಂಗಳದ ನಾಯನಾರ್ ಗರಡಿ, ಬ್ರಹ್ಮಾವರದ ವಾರಂಬಳ್ಳಿ ಗರಡಿ, ಕಾಸರಗೋಡಿನ ಚೆಂಗಳ ಗರಡಿಯಂತಹ ಸಾಧನೆಯ ಗರಡಿಗಳ ಅವಶೇಷಗಳು ಇಂದು ಕೂಡ ಕೆಲವೆಡೆ ಇವೆ. ಕೇರಳದ ಕಳರಿಗೂ ತುಳುನಾಡಿನ ಗರಡಿಗೂ ನಿಕಟ ಸಂಬಂಧವಿದೆ. ಗರಡಿ/ಕಳರಿಯಿಂದಲೇ ಕರಾಟೆ/ ತಾಲೀಮು ರೂಪಾಂತರ ಹೊಂದಿರಬಹುದೇ? ಈ ಬಗೆಗೆ ಹೆಚ್ಚಿನ ಅಧ್ಯಯನ ಸಾಧ್ಯತೆಯಿದೆ. ಗರಡಿಗಳಲ್ಲಿ ಬೈದ್ಯೆರ್ಲೆ ಆರಾಧನೆಯೆನ್ನುವುದು ಕೋಟಿ ಚೆನ್ನಯರು ಹೋರಾಟದಲ್ಲಿ ದೌರ್ಜನ್ಯಕ್ಕೊಳಗಾಗಿ ಸತ್ತ ಮೇಲೆ ದೈವತ್ವಕ್ಕೇರಿದ ಸ್ಮರಣೆಯ ಆಚರಣೆಯಾಗಿದೆ. ಗರಡಿ ಸಂಕೀರ್ಣದಲ್ಲಿ ಬೆರ್ಮೆರ್ ಪ್ರಧಾನ ದೇವತೆ. ಕುಟುಂಬ ಕಾಂಜ, ಮೈಂದಾಲ್, ಜೋಗಿ ಪುರುಷ, ಬರ್ಬರ್ಯ ಮೊದಲಾದ ಪರಿವಾರ ದೇವತೆಗಳಿಗೂ ಗರಡಿಗಳಲ್ಲಿ ಆರಾಧನೆ ಸಲ್ಲುತ್ತದೆ.

ಇಂತಹ ವೀರರ ಆರಾಧನೆ ಎನ್ನುವುದು ಒಂದು ಪ್ರಾಚೀನ ಸಂಸ್ಕೃತಿಯಾಗಿದೆ. ಒಂದು ಜನಾಂಗದಲ್ಲಿ ಆವಿರ್ಭವಿಸಿದ ವೀರರ ಹುಟ್ಟು, ಸಾಹಸ, ಸಾಧನೆಗಳನ್ನೂ ಅವರ ಜನಪ್ರಿಯತೆ/ಕೀರ್ತಿಗಳನ್ನೂ ತಲೆಮಾರಿನ ಹಿರಿಯರು ಎತ್ತಿ ಹಿಡಿದು ವೀರಗಾಥೆಯಾಗಿ ಹಾಡಿದ ಪರಂಪರೆಯು ಮೌಖಿಕ ಮಹಾಕಾವ್ಯವಾಗಿ ಬೆಳೆದಿರುವ ಸಾಧ್ಯತೆಯಿದೆ. ಜಗತ್ತಿನ ಅತ್ಯಂತ ಪ್ರಾಚೀನ ಕಾವ್ಯ ಗಿಲ್ಗಮೀಷ್ ಕೂಡ ಒಂದು ವೀರಗಾಥೆಯಾಗಿದೆ. ಅದು ನಾಲ್ಕು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಪುರಾತನ ಸುಮೇರಿನ್ ವಂಶದ ವೀರನ ಕಾವ್ಯವದು. ಕರ್ನಾಟಕದ ಇತರ ಭಾಗಗಳಲ್ಲೂ, ಕೇರಳ ತಮಿಳ್ನಾಡುಗಳಲ್ಲೂ ವೀರ ಆರಾಧನೆಯ ಪರಂಪರೆಯಿದ್ದು, ಈ ವೀರರೆಲ್ಲ ಸುಮಾರು ಹದಿನೈದರಿಂದ ಹದಿನೇಳನೆಯ ಶತಮಾನದ ಕಾಲಘಟ್ಟದಲ್ಲಿ ದೈವತ್ವ ಪಡೆದವರಿರಬೇಕು. ಸ್ಥಳೀಯ ವೀರರು ರೂಪುಗೊಳ್ಳುವ ಹಿನ್ನೆಲೆಯಲ್ಲಿ ರಕ್ಷಕ ದೈವಗಳ/ಪುರಾಣ ದೇವತೆಗಳ ಪಾತ್ರವೂ ಇರುತ್ತದೆ.

ಕೋಟಿ ಚೆನ್ನಯ ಮೌಖಿಕ ಕಾವ್ಯದ ನಿರೂಪಕರು ಮತ್ತು ಶ್ರೋತೃಗಳು ಅದೊಂದು ಚಾರಿತ್ರಿಕ ಘಟನೆ ಎನ್ನುವುದನ್ನು ಬಲವಾಗಿ ನಂಬಿದರು. ಸಾಮಾಜಿಕ ಪರಂಪರೆಯ ಮೇಲ್ವರ್ಗದ ನಡುವೆ ಇರಬೇಕಾದ ತಮ್ಮ ಅಲಕ್ಷಿತ ಬದುಕನ್ನು ಪ್ರತ್ಯೇಕಿಸಿ ಇನ್ನೊಂದು ಜಗತ್ತಿಗೆ ತಲುಪಿಸಲು ವಾಹಕಗಳಾಗಿ ಇಂತಹ ಮೌಖಿಕ ಕಾವ್ಯಗಳು ಸಹಕರಿಸುತ್ತವೆ. ಒಂದು ಕಾಲದ ಚಾರಿತ್ರಿಕ ವ್ಯಕ್ತಿಗಳು, ಘಟನೆಗಳು, ಅವರು ನಡೆದಾಡಿದ ಸ್ಥಳಗಳನ್ನು ಅವರು ಬಳಸುತ್ತಿದ್ದ ಭೌತಿಕ ವಸ್ತುಗಳು ಪಾವಿತ್ರ್ಯದ ಆವರಣವನ್ನು ಪಡೆದು ಆಚರಣಾತ್ಮಕ ಸಂಬಂಧವನ್ನು ಪಡೆದುಕೊಳ್ಳುತ್ತವೆ. ಬೈದ್ಯೆರ್ಲೆ ಕೋಲ ಎನ್ನುವುದು. ಒಂದು ಭಾವುಕ ಮನೋಭೂಮಿಯಾಗಿರುವ ಆಚರಣೆ ಅದೊಂದು ಅತ್ಯಂತ ಆಕರ್ಷಕವಾಗಿರುವ ಜನಪದ ರಂಗಭೂಮಿ ಕೂಡ. ಈ ರಂಗಭೂಮಿಯ ರೂಪಕ ನಿರೂಪಣೆಗೆ ಅದೇ ಕಾವ್ಯದ ಎರಡು ಪಾತ್ರಗಳನ್ನು ಆಯ್ಕೆಗೊಳಿಸಲಾಗಿದೆ. ಆ ಪಾತ್ರಗಳೇ ಸಮುದಾಯವೊಂದು ನಿರೀಕ್ಷಿಸುವ ಕೋಟಿ ಚೆನ್ನಯ ವೀರ ಸಹೋದರರು. ಶೂದ್ರ ಪ್ರಜ್ಞೆಯನ್ನು ಜಾಗೃತಗೊಳಿಸಿದ ಈ ವೀರರ ಮೂಲಕ ಬಿಲ್ಲವ ವರ್ಗ ತನ್ನ ಜನಾಂಗದ ಸಾಂಸ್ಕೃತಿಕ ಅನನ್ಯತೆಯನ್ನು ಪುನಾಸ್ಥಾಪಿಸಿ ಸ್ಥಿರೀಕರಿಸುತ್ತಿರುವುದನ್ನು ಗಮನಿಸಬಹುದು.

ಕೋಟಿ ಚೆನ್ನಯರು ಇದ್ದರೋ ಇರಲಿಲ್ಲವೋ ಎನ್ನುವುದು ಮುಖ್ಯವಲ್ಲ. ಇಂದು ಅವರು ಈ ಜಿಲ್ಲೆಗಳಲ್ಲಿ ಇರುವ ಇನ್ನೂರ ಹದಿನೇಳು ಗರಡಿಗಳಲ್ಲಿ ಆರಾಧನಗೊಳ್ಳುತ್ತಿರುವುದೇ ಮುಖ್ಯವಾಗುತ್ತದೆ. ಈ ಜಿಲ್ಲೆಗಳ ಗಡಿದಾಟಿ ಮಡಿಕೇರಿ, ಮುಂಬಯಿಗಳಲ್ಲೂ ಗರಡಿಗಳು ಹುಟ್ಟುಕೊಂಡಿರುವುದನ್ನು ನೋಡಿದರೆ ಅವರ ಜನಪ್ರಿಯತೆ ಮತ್ತು ಜನಪದರ ಮಾನಸಿಕ ಸಂಬಂಧವನ್ನು ಇಲ್ಲಿ ಗುರುತಿಸಬಹುದು.

ಯೋಧಕಲೆಯಾಗಿದ್ದ ಕಳೋರಿ/ಕಳರಿ ವಿದ್ಯೆಯ ಅಡವುಗಳು ತಾಲೀಮು, ಕರಾಟೆ, ನಿಯು‌ದ್ಧ ಪ್ರದರ್ಶನಗಳಲ್ಲೂ ಕಾಣಿಸುತ್ತವೆ. ಹುಲುವೇಷ ಕುಣಿತ ಹೆಜ್ಜೆಗಳ ವಿನ್ಯಾಸ ಕಳರಿ ವಿದ್ಯೆಯ ಅಡವುಗಳನ್ನೇ ಹೋಲವುದು. ಬೈದ್ಯೆರ್ಲೆ ಕುಣಿತದ ಹೆಜ್ಜೆ ವಿನ್ಯಾಸಗಳಲ್ಲೂ ಈ ಅಡವುಗಳನ್ನು ಗುರುತಿಸುವುದು ಸಾಧ್ಯ. ಐತಪ್ಪ, ಮಂಜಪ್ಪರಂತಹ ಕಳರಿ ಪಟುಗಳು ಪುತ್ತೂರು ಮೊದಲಾದ ಪ್ರದೇಶಗಳಲ್ಲಿ ಇದ್ದರು. ಅವರಿಗೆ ಪಿಲಿ ಮಂಜಪ್ಪ ಇಂತಹ ಬಿರುದುಗಳೂ ಇದ್ದುವು, ಎಂದರೆ ಹುಲಿ ಕುಣಿತ ವಿದ್ಯೆಗೂ ಕಳರಿ ವಿದ್ಯೆಗೂ ಸಾಮ್ಯತೆಯನ್ನು ಅದು ಹೇಳುತ್ತದೆ.

ಗರಡಿಗಳಲ್ಲಿ ಪಾಳೆ ಮರ/ಹಾಳೆ ಮರದಂತಹ ವೃಕ್ಷಗಳನ್ನು ಗಮನಿಸಬಹುದು. ಹಾಳೆ ಮರದ ತೊಗಟೆ ಔಷಧಿಗೆ ಬಳಕೆಯಾಗುವುದು. ನಾಟಿ ವೈದ್ಯಕ್ಕೆ ಬೇಡಿಕೆಯಿದ್ದ ಕಾಲದಲ್ಲಿ ಇಂತಹ ಮರಗಳ ಕಟ್ಟೆಗಳಿಗೆ ಮಹತ್ವವಿತ್ತು. ಗಿಡಮೂಲಿಕೆಯ ಮದ್ದು ತಯಾರಿಕೆಯಲ್ಲಿ ವೈದ್ಯ/ಬೈದ್ಯ ಜನಾಂಗ ಪ್ರಧಾನವಾಗಿ ತೊಡಗಿಸಿಕೊಂಡಿದ್ದುದು ಪ್ರಕಟವಾಗುತ್ತದೆ. ಈ ತರಹದ ಔಷಧಿಯ ಮರಗಳಿಗೆ ಮಾಂತ್ರಿಕ ಗುಣವನ್ನು ಆರೋಪಿಸಿ ಅವುಗಳನ್ನು ಜನಸಾಮಾನ್ಯರು ನಾಶಪಡಿಸುವಂತಹ ನಂಬಿಕೆಗಳನ್ನು ಹುಟ್ಟುಹಾಕಲಾಗಿದೆ. ಹಾಗಾಗಿಯೇ ಹಾಳೆ ಮರ ದೈವದ ಮರವಾಗಿದೆ.

ಬೈದೈರ್ಲೆ ಕೋಲದ ಸಂದರ್ಭ ಬಡಿಸುವ ಅಗೆಲು ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಮತ್ತು ಬಹುಮುಖ್ಯವಾದ ಆಹಾರಕ್ಕೆ ಮಹತ್ವ ನೀಡುತ್ತವೆ. ಬಡಿಸುವ ಅಗೆಲು ಆಹಾರದಲ್ಲಿ ಅಗತ್ಯವಾಗಿರಬೇಕಾದ ಆಹಾರಾಂಶಗಳಿಗೆ ಮಹತ್ವ ನೀಡಲಾಗಿದೆ. ಆರೋಗ್ಯವಂತ ಮನುಷ್ಯನಿಗೆ ಬೇಕಾದ ಸಮತೂಕವನ್ನು ಅಗೆಲು ಪ್ರತಿನಿಧಿಸುತ್ತದೆ. ಇಂತಹ ಆಹಾರ ಸಿದ್ಧಗೊಳಿಸುವಲ್ಲಿ ವಹಿಸಬೇಕಾದ ಶುಚಿತ್ವ/ಶುದ್ಧಾಚಾರ, ಮುಂಜಾಗ್ರತೆ ಮೊದಲಾದವುಗಳನ್ನು ಇಲ್ಲಿ ಗಮನಿಸಬಹುದಾಗಿದೆ.

ಚಪ್ಪರಂಬು/ಅಪ್ಪರಂಬು ಶೀರೋಭೂಷಣ ಅಗಲವಾದ ಮತ್ತು ದೊಡ್ಡದಾದ ಕವಲು ಕೀರಿಟದ ಹಾಗೆ ಇರುತ್ತದೆ. ಕೋಟಿ ಚೆನ್ನಯರಿಗೆ ಮಾತ್ರ ಇದು ಸೀಮಿತವಲ್ಲ. ಮುಗೇರ್ಲೆ ಕೋಲದಲ್ಲೂ ಇದನ್ನು ಕಾಣಬಹುದು. ಭೂತಾರಾಧನೆಯಲ್ಲಿ ಬಳಕೆಯಾಗುವ ಅಣಿ ಪ್ರಭಾವಳಿಗಳು ಸಾಕಷ್ಟು ದೊಡ್ಡ ಗಾತ್ರದವುಗಳೇ ಆಗಿವೆ. ರಾಜನ್‌ದೈವ/ಅರಸು ಭೂತಗಳಿಗೆ ಅಂತಹ ಅಣಿಗಳಿರುತ್ತವೆ. ಆದರೆ ಕೋಟಿ ಚೆನ್ನಯ, ಮುಗೇರರು, ಅಣ್ಣಪ್ಪ ದೈವ, ಶಿರಾಡಿ ಭೂತ, ಬಸ್ತಿ ನಾಯಕ, ಗಿಳಿ ರಾಮ, ಕುಮಾರ ದೈವ, ಕಲ್ಲುರ್ಟಿಗಳಂತಹ ಜನಾಂಗದ ವೀರರ ಆರಾಧನೆಯಲ್ಲಿ ಈ ಅಣಿ ಪ್ರಭಾವಳಿಗಳೇ ಪರಿಷ್ಕಾರಗೊಂಡು ಚಪ್ಪರಂಬು ಶೀರೋಭೂಷಣವಾಗಿರುವುದು ಒಂದು ಬೆಳವಣಿಗೆ. ಈ ಕಾರಣದಿಂದಲೇ ಇಂತಹ ಸಂದರ್ಭಗಳಲ್ಲಿ ಅಣಿ ಪ್ರಭಾವಳಿ ಬಳಕೆಯಿರುವುದಿಲ್ಲ. ಮುಖವಾಡ ಕೂಡ ಇರುವುದಿಲ್ಲ. ಅಣಿ ಪ್ರಭಾವಳಿ ಕಿರಿದಾಗಿರುವ ಸಂದರ್ಭಗಳೆಂದರೆ ಕುಣಿತಕ್ಕೆ ಅನುಕೂಲ ಕಲ್ಪಿಸಿಕೊಡುವುದು. ವೀರರ ಅಟ್ಟಹಾಸದ ಕುಣಿತಗಳಿಗೆ ಕಿರಿದಾದ ಮತ್ತು ಹಗುರವಾದ ಶಿರೋಭೂಷಣಗಳೇ ಬೇಕು. ಕವಲು ಕಿರೀಟಗಳೇ ಬೇಕು. ಈ ಕವಲು ಕಿರೀಟಗಳು ಆರಂಭ ಕಾಲದಲ್ಲಿ ಸಿರಿ, ತೆಂಗಿನ ಹಾಳೆಗಳಿಂದಲೇ ತಯಾರಾಗುತ್ತಿದ್ದವು. ಮುಂದೆ ಅವು ಲೋಹಕ್ಕೆ ಪಲ್ಲಟಗೊಂಡವು. ವೈದಿಕ ಪರಂಪರೆಯ ಉತ್ಸವ ಬಲಿಮೂರ್ತಿಗಳ ಪ್ರಭಾವಳಿಗಳು ಅಣಿಗಳ ಚಿಕ್ಕರೂಪಗಳೇ ಆಗಿವೆ.

ಗಂಡುಮಗುವನ್ನು ಬಯಸಿದಾಗ ದೈವ ಪ್ರೇರಣೆಯಿಂದ ಹೆಣ್ಣು ಮಗುವೇ ಹುಟ್ಟುತ್ತದೆ. ಹೆಣ್ಣು ಮಗುವಿನ ಮೂಲಕ ಮುಂದೆ ಗಂಡು ಮಗು ಪ್ರಾಪ್ತವಾಗುತ್ತದೆ. ಕೋಟಿ ಚೆನ್ನಯರಂತಹ ವೀರರ ಸಂದರ್ಭಗಳಲ್ಲಿ ಅವರನ್ನು ಹೆರುವ ತಾಯಿಯ ಹುಟ್ಟು ಮುಖ್ಯವಾಗುತ್ತದೆ. ವೀರರ ಹೋರಾಟ ಸಾಧನೆಗಳಲ್ಲಿ ತಾಯಿ/ಅಕ್ಕ/ತಂಗಿ/ಪತ್ನಿಯಂತಹ ಸ್ತ್ರೀ ಶಕ್ತಿ ಸಹಾಯಕವಾಗಿ ಹಿನ್ನೆಲೆಯಲ್ಲಿರುವುದು. ಉಳ್ಳಾಕುಳು ವೀರರಿಗೆ ತಂಗಿ ದೈಯ್ಯಾರ್, ಕಲ್ಕುಡನಿಗೆ ತಂಗಿ ಕಲ್ಲುರ್ಟಿ, ಮುಗೇರರಿಗೆ ತಂಗಿ ತನ್ನಿಮಾನಿಗ ಮತ್ತು ಕೋಟಿ ಚೆನ್ನಯರಿಗೆ ಅಕ್ಕ ಕಿನ್ನಿದಾರು ಇರುವುದನ್ನು ಗಮನಿಸಬೇಕು. ಹೆಣ್ಣು, ಸೃಷ್ಟಿಗೆ ಮೂಲ ಎನ್ನುವ ಕಲ್ಪನೆಯ ಜೊತೆಯಲ್ಲೇ ಮಾತೃದೇವತೆಯ ವೈಭವೀಕರಣ, ದೇವತಾಸ್ತ್ರೀಯರ ಆವಿರ್ಭಾವ, ಜನಾಂಗದ ವೀರರ ಹೋರಾಟ, ಸಾಧನೆಗಳಿಗೆ ಪ್ರೇರಕ ಮತ್ತು ಪೂರಕವಾಗಿರುವುದನ್ನು ಗಮನಿಸಬಹುದಾಗಿದೆ.

ಪ್ರದರ್ಶನಗಳಲ್ಲಿ ಪವವರ ಮಕ್ಕಳು ದೊರೆ ವೇಷ ಮೊದಲಾದ ನೆಪದಲ್ಲಿ ಭಾಗವಹಿಸುವುದು ಪರಂಪರಾಗತ ಕಲೆಯ ಅನೌಪಚಾರಿಕ ತರಬೇತಿಯ ಅತ್ಯುತ್ತಮ ನಿದರ್ಶನಗಳು. ಇಂದು ಇಲ್ಲೆಲ್ಲ ಕುಣಿಯುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಆಗಿರುವುದನ್ನು ನೋಡುತ್ತೇವೆ. ಗರಡಿ, ಬೆರ್ಮೆರ್ ಮತ್ತು ಬೈದ್ಯೆರ್ಲು ಮಾತ್ರವಲ್ಲದೆ ಇತರ ಅನೇಕ ಪರಿವಾಋ ದೈವಗಳ, ಶಕ್ತಿ ಗಣಗಳ ನೆಲೆಯಾಗಿದೆ. ಅವೆಲ್ಲ ಗರಡಿಯ ಒಳಗೆ ಮತ್ತು ಹೊರಗೆ ವ್ಯಾಪಸಿಕೊಂಡಿವೆ. ಒಳಗಣ ಹಾಗೂ ಹೊರಗಣ ದೈವಗಳ ಸಂಕೀರ್ಣವೇ ಗರಿಡಯಾಗಿದೆ. ಹಾಗಾಗಿ ಒಂದು ನಿರ್ದಿಷ್ಟ ಗರಡಿಯೆನ್ನುವುದು ಗ್ರಾಮ ದೇಗುಲವಾಗಿ ಎಲ್ಲ ಜನಾಂಗಗಳ ಶ್ರದ್ಧಾಕೇಂದ್ರದಂತಿದೆ. ಈ ದೃಷ್ಟಿಯಿಂದ ಗರಡಿಗಳ ಆರಾಧನ ಸಂಸ್ಕೃತಿಯನ್ನು ಅವುಗಳ ಸಂಕೀರ್ಣ ಸ್ವರೂಪದಲ್ಲಿ ಗ್ರಹಿಸಿ ಬಹು ಸೂಕ್ಷ್ಮವಾಗಿ ಹಾಗೂ ಜನಸಾಮಾನ್ಯರ ನೆಲೆಯಿಂದ ವಿಶ್ಲೇಷಿಸಬೇಕಾಗಿದೆ. ಸಮುದಾಯಪರವಾದ ಮತ್ತು ಜನಪರವಾದ ಎಳೆಗಳನ್ನು ಶೋಧಿಸಿ ಪ್ರತಿ ಸಂಸ್ಕೃತಿಯೊಂದರ ಪುನಶ್ವೇತನ ಸಾಧ್ಯತೆಯ ದೃಷ್ಟಿಯಿಂದ ನೋಡಬೇಕಾಗಿದೆ. ಅದೊಂದು ಗುಂಪಿನ ಚಟುವಟಿಕೆಯ ಪ್ರಕ್ರಿಯೆ ಎನ್ನುವ ಗ್ರಹಿಕೆ ಬದಲಾಗಬೇಕು. ಬಹು ಮನಸ್ಸುಗಳ ಸೃಷ್ಟಿಯದು. ಸ್ಥಳ, ಕಾಲ, ಗುಂಪುಗಳ ಮಿತಿಯನ್ನು ಮೀರಿದ ಪ್ರಕ್ರಿಯೆಯದು.

ಹಾಳು ಬಿದ್ದ ಗರಡಿಗಳನ್ನು ಜೀಣೋದ್ದಾರ ಮತ್ತು ಅಭಿವೃದ್ಧಿ ಪಡಿಸುವುದರ ಮೂಲಕ ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಬಿಲ್ಲವರು ತಮ್ಮ ಅನನ್ಯತೆಯನ್ನು ಸ್ಥಾಪಿಸುವುದರಲ್ಲಿ ಆಸಕ್ತರಾಗಿರುವುದನ್ನು ಗಮನಿಸಬಹುದು. ಒಂದು ಕಾಲದಲ್ಲಿ ಯಜಮಾನ ಸಂಸ್ಕೃತಿ ಈ ವರ್ಗದವನ್ನು ಸಾಮಾಜಿಕವಾಗಿ ಹೊರಗಿಟ್ಟಿರುವುದು ಒಂದು ಕರಾಳ ಚರಿತ್ರೆ. ಈ ವ್ಯವಸ್ಥೆಯನ್ನು ಮೀರಿ ಇಂದು ಈ ವರ್ಗ ಮುಂದೆ ಬರುತ್ತಿದೆ.

ಗರಡಿಕೋಲ/ನೇಮವನ್ನು ಗಮನಿಸಿದರೆ ಅದು ಬಿಲ್ಲವರಿಗೆ ಮಾತ್ರ ಸೀಮಿತವಲ್ಲ. ತೋರಿಕೆಗೆ ಹಾಗೆ ಕಾಣಬಹುದು. ಹೋರಾಟ ರಂಗದಲ್ಲಿ ದುರಂತ ಕಂಡ ಕೋಟೆ ಚೆನ್ನಯ ವೀರರಗೆ ಗರಡಿ ಸ್ಮಾರಕ ರಚನೆಯಾದ್ದರಿಂದ ಆ ಹೆಸರು ಮುಂದೆ ಜನಪ್ರಿಯವಾಗಿ ರೂಢಿಗೆ ಬಂತು. ಈ ನಿಟ್ಟಿನಲ್ಲಿ ಗರಡಿ ಎನ್ನುವುದು ಬಿಲ್ಲವರ ಅನನ್ಯತೆಯ ಸಂಕೇತ. ಹಾಗೆಂದು ವಸ್ತುವಾಗಿ ಬಿಲ್ಲವರನ್ನು ಹೊರತಾಗಿಯೂ ಜೈನರು, ಬಂಟರು ಮೊದಲಾದವರು ಅನೇಕ ಗರಡಿಗಳ ಯಾಜಮಾನ್ಯ ಉಳ್ಳವರಾಗಿದ್ದಾರೆ. ಜೊತೆಗೆ ಈ ವೀರರ ಸಾಹಸ, ಹೋರಾಟ, ಸಾವು ಇವೆಲ್ಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಅವೆಲ್ಲ ಸಹಜವಾಗಿಯೇ ಸಮಸ್ತ ತುಳುವ ಸಮಾಜಕ್ಕೆ ಸಂಬಂಧಿಸಿದವುಗಳು. ಹಾಗಾಗಿ ಇಲ್ಲಿ ಅನನ್ಯತೆಯನ್ನುವುದು ತುಳುವ ಸಮುದಾಯ ಸಂಬಂಧಿಯಾದುದು. ಗರಡಿ ವಿದ್ಯೆಯ, ಯೋಧ ಕಲೆಯ ನೆಲೆಯಲ್ಲಿ ಪುರುಷರ ಅನನ್ಯತೆಯನ್ನು ಕಾಣುತ್ತೇವೆ. ಆದರೆ ಮದ್ರಂಗಿಯಂತಹ ಆಚರಣೆಯಲ್ಲಿ, ನಾಟಿ ಗದ್ದೆಯಲ್ಲಿ ನೇಮದ ಕಳಗಳಲ್ಲಿ ಸ್ತ್ರೀಯರು ಮಹಾಕಾವ್ಯ ಪ್ರದರ್ಶನದಲ್ಲಿ ಪಾಲು ಪಡೆಯುವುದರಿಂದ ಅಲ್ಲಿ ಸ್ತ್ರೀಯರ ಅನನ್ಯತೆಯೂ ಇದೆ. ಕುತೂಹಲದ ಸಂಗತಿಯೆಂದರೆ ಕೇವಲ ಜಾತಿಯ ಅನನ್ಯತೆಯೂ ಅಲ್ಲ. ಪುರುಷರ/ಸ್ತ್ರೀಯರ ಅನನ್ಯತೆಯೂ ಅಲ್ಲ. ಹಾಗಾಗಿ ಅನನ್ಯತೆಯ ಪ್ರಶ್ನೆ ಬಂದಾಗ ಅದು ಬೇರೆ ಬೇರೆ ಪದರುಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಯಾರೇ ಆಗಲಿ ಅದನ್ನು ಧಾರ್ಮಿಕ ಮತ್ತು ಜಾತಿ ಸಂಬಂಧಿ ಎಂದು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದು. ಈ ಸಂಕೀರ್ಣತೆಯ ಕಾರಣದಿಂದ ಪರವರು ಪರಂಪರೆಯ ನಿರ್ವಾಹಕರಾಗಿದ್ದಾರೆ. ಹಾಗಾಗಿ ಅಲ್ಲಿ ಪರವರ ಅನನ್ಯತೆಯೂ ಇದೆ. ಈ ಎಲ್ಲ ಕಾರಣದಿಂದ ಕೋಟಿ ಚೆನ್ನಯ ಪಠ್ಯ ಮತ್ತು ಪ್ರದರ್ಶನದಲ್ಲಿ ಅನನ್ಯತೆಯ ಸಂಕೇತ ಎನ್ನುವುದು ಬಹುರೂಪಿಯಾಗಿ ಕೆಲಸ ಮಾಡುತ್ತಿದೆ. ಹಾಗೆ ನೋಡಿದರೆ ಜನಾಂಗದ ಅನನ್ಯತೆಯೆನ್ನುವುದು ಮಹತ್ತ್ವದ ಸಂಗತಿಯಲ್ಲ. ವೀರರ ಸಾಹಸಗಳು ಸಾಧನೆಗಳು ಸಹಜವಾಗಿಯೇ ಒಂದು ನಾಡಿನ ಒಟ್ಟು ಸಾಮಾಜಿಕ ವರ್ಗಗಗಳ ಸಂಗತಿ.

– ವಿ.ಎನ್.

ಕೋಡಿ ಪಂದ್ಯಂ ಕೋಳಿಪಂದ್ಯ ೬೪ ವಿದ್ಯೆಗಳಲ್ಲಿ ಒಂದು ಎಂದು ಹೇಳಲಾಗಿದೆ. ಆಂಧ್ರದಲ್ಲಿ ಈ ಕೋಳಿ ಪಂದ್ಯಕ್ಕೆ ಇತಿಹಾಸವೇ ಇದೆ. ರೆಡ್ಡಿರಾಜರ ಕಾಲದಲ್ಲಿ ಮುಖ್ಯವಾದ ಮನರಂಜನೆ ಕಲೆಯಾಗಿ ಪಲ್ನಾಟಿಯುದ್ದ (೧೩ನೇ ಶತ) ಬೊಬ್ಬಿಲಿಯುದ್ಧ (ಕ್ರಿ.ಶ.೧೭೫೭.) ಕಾಲದಲ್ಲಿ ಗ್ರಾಮೀಣ ಸಂಸ್ಕೃತಿಗೆ ಕನ್ನಡಿಯಾಗಿ ನಿಲ್ಲುತ್ತದೆ. ಜನವರಿ ಬಂತೆಂದರೆ ಕೋಳಿ ಪಂದ್ಯಗಳ ರಾಯರಿಗೆ ದೊಡ್ಡ ಹಬ್ಬ. ಈಗ ರಾಯಲಸೀಮೆ, ತೀರಾಂಧ್ರ ಜಿಲ್ಲೆಗಳಲ್ಲಿ ಕೋಳಿಪಂದ್ಯಗಳು ಇನ್ನೂ ಚಾಲ್ತಿಯಲ್ಲಿವೆ. ಬಣ್ಣಗಳ ಆಧಾರದ ಮೇಲೆ ಕೋಳಿ ಹುಂಜಗಳ ತಳಿಗಳನ್ನು ಕಾಗೆ, ವಾಸಲಿ, ನವಿಲು, ಗಿಡುಗ, ಕೋಸ, ಕಕ್ಕಿರಾಲು, ಪೀಲ, ಸೇತುವ, ಪಿಂಗಳ, ಬೆಡಸ, ಪೂಲ, ಪೆಟ್ಟಮಾರು ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ಮೇಲ್ಜಾತಿ ಕೋಳಿ ಹುಂಜಗಳಿಗೆ ಚಿಕ್ಕಂದಿನಿಂದ ಗೋಡಂಬಿ, ಕೋಳಿಮೊಟ್ಟೆ, ಮಾಂಸ, ಎಣ್ಣೆ, ರಾಗಿ, ಜೋಳ, ಮುದ್ದೆ ಮುಂತಾದ ಪೌಷ್ಟಿಕ ಆಹಾರ ಪದಾರ್ಥಗಳು ಕೊಟ್ಟು ಬೆಳೆಸುತ್ತಾರೆ. ಪಂದ್ಯಗಳಿಗೆ ಕಾಲು ಕರೆಯುವ ರೀತಿ ಅವುಗಳಿಗೆ ಶಿಕ್ಷಣ ನೀಡುತ್ತಾರೆ. ಶಕ್ತಿಯುತವಾಗಿ ಬೆಳೆಯಲಿಕ್ಕೆ ಈಜುವಂತೆ ಮಾಡುತ್ತಾರೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಪ್ರತ್ಯೇಕವಾಗಿ ತಯಾರು ಮಾಡಿದ ಬಟ್ಟೆಗಳಲ್ಲಿ ಇವನ್ನು ಇಡುತ್ತಾರೆ. ಪಂದ್ಯಗಳ ನಿರ್ವಾಹಕರು ೫೦ ರಿಂದ ೧೦೦ ಕೋಳಿ ಹುಂಜಗಳವರೆಗೂ ಹೊಂದಿರುತ್ತಾರೆ.

ಕೋಳಿ ಪಂದ್ಯಗಳು ನಾಲ್ಕು ವಿಧವಾಗಿ ನಿರ್ವಹಿಸುತ್ತಾರೆ. ಒಪ್ಪಂದದ ಪಂದ್ಯದಲ್ಲಿ ಒಂದು ಗುಂಪಿನಲ್ಲಿನ ಹುಂಜವನ್ನು ಎಷ್ಟು ಸಾರಿಯಾದರು ಕತ್ತಿಕಟ್ಟಿ ಪಂದ್ಯಕ್ಕೆ ಬಿಡುವರು. ನವಂಬರ್ – ಏಪ್ರಿಲ್ ಮಧ್ಯ ಕಾಲದಲ್ಲಿ ಮಧ್ಯಾಹ್ನ ಒಂದು ಗಂಟೆಯಿಂದ ಸಾಯಂಕಾಲ ೬ ಗಂಟೆವರೆಗೂ ಪಂದ್ಯ ನಿರ್ವಹಿಸಿದರು. ಈ ಕಾಲದಲ್ಲಿ ಗ್ರಾಮೀಣರಿಗೂ ಸ್ವಲ್ಪ ವಿರಾಮ ಇರುವುದರಿಂದ ಈ ತರಹದ ಪಂದ್ಯಗಳು ಮಾವಿನ ತೋಟಗಳಲ್ಲಿ, ಹುಣಸೇ ಮರಗಳ ಕೆಳಗೆ ನಡೆಸುತ್ತಾರೆ.

ಹಬ್ಬದ ದಿನಗಳಲ್ಲಾಗಲಿ, ಗತಿಸಿಹೋದ ತಂದೆ ತಾಯಿಗಳ ನೆನಪಿಗಾಗಿ ಪಂದ್ಯಗಳನ್ನು ನಡೆಸುತ್ತಾರೆ. ನೀರಿನ ವ್ಯವಸ್ಥೆ, ಊಟ, ಇಸ್ಪೀಟಾಟ ಮೊದಲಾದ ಸೌಕರ್ಯಗಳನ್ನು ಪಂದ್ಯದ ನಿರ್ವಾಹಕರೇ ನೋಡಿಕೊಳ್ಳುತ್ತಾರೆ. ಯಾವ ಕತ್ತಿಯನ್ನು ಕಟ್ಟದೆ ಆರೆ (ಹುಂಜದ ಕಾಳಿನ ಗಡಸುಮೊನೆ ಉಗುರು).ಯಿಂದಲೇ ಪಂದ್ಯನಿರ್ವಹಿಸುವರು. ಈ ವಿಧಾನದಲ್ಲಿ ಪರಾಜಯಗೊಂಡ ಕೋಳಿಯನ್ನಲ್ಲದೆ ಒಪ್ಪಂದ ಒಡ್ಡಿದ ಹಣವನ್ನು ಮಾತ್ರ ಪ್ರತ್ಯಾರ್ಥಿಗೆ ನೀಡುತ್ತಾರೆ. ಕೋಳಿ ಪಂದ್ಯಗಳನ್ನು ಮಾವಿನ ತೋಪುಗಳಲ್ಲಾಗಲಿ, ದೊಡ್ಡ – ದೊಡ್ಡ ಮರಗಳ ನೆರಳಲ್ಲಾಗಲಿ ನಡೆಸುತ್ತಾರೆ. ಸ್ನೇಹಿತರೊಡನೆ, ಬಂಧಗಳೊಡನೆ, ರಾಹುಕಾಲ, ಯಮಗಂಡಕಾಲ ನೋಡಿಕೊಂಡು ಈ ಪಂದ್ಯಕ್ಕೆ ಯಜಮಾನರು ಬರುತ್ತಾರೆ. ಪಂದ್ಯದವರು ಕೋಳಿಗಳನ್ನು ಪಂದ್ಯನಡೆಸುವುದರಲ್ಲಿ ಕತ್ತಿ ಕಟ್ಟುವುದರಲ್ಲಿ ಎಷ್ಟೋ ನೈಪುಣ್ಯ ತೋರುವರು. ಇವರಿಗೆ ಗೆದ್ದ ಕೋಳಿಯಜಮಾನ ಸ್ವಲ್ಪ ದುಡ್ಡು, ಸಾರಾಯಿ, ಕೋಳಿ ಕೊಡುತ್ತಾನೆ.

ಕೋಳಿ ಪಂದ್ಯದ ಆಟ ಜೂಜಿನ ರೀತಿಯಲ್ಲವೆಂದು ನಿರ್ವಾಹಕರವಾದ ಆದರೆ ಕಾನೂನು ರೀತ್ಯ ಇದು ಜೂಜು ಎಂದು ಪೊಲೀಸರ ವಾದ. ಸಂಕ್ರಾಂತಿ ದಿನಗಳಲ್ಲ ಮುಖ್ಯವಾಗಿ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸಂಕ್ರಾಂತಿ ದಿನಗಳು ಕೋಳಿ ಪಂದ್ಯಗಳಿಂದ ಕಳೆಯಲೇಬೇಕು. ಈ ಪಂದ್ಯಗಳಲ್ಲಿ ಲಕ್ಷಗಟ್ಟಲೆ ಹಣದ ವ್ಯವಹಾರ ನಡೆಯುತ್ತದೆಂದರೆ ಆಶ್ಚರ್ಯಪಡಬೇಕಿಲ್ಲ. ಗ್ರಾಮೀಣ ಸಂಸ್ಕೃತಿಯೊಡನೆ ಗಂಟುಬಿದ್ದ ಈ ಕೋಳಿ ಪಂದ್ಯಗಳ ನಿರ್ವಹಣೆಯನ್ನು ತಡೆಗಟ್ಟುವ ಸಾಧ್ಯತೆಯಿಲ್ಲ. ಆಗಾಗ ನಿರ್ವಾಹಕರನ್ನು ಅಧಿಕಾರಿಗಳು ನೋಡಿಯು ನೋಡದ ಹಾಗೆ ವ್ಯವಹರಿಸುತ್ತಾರೆ.

– ಬಿ.ಕೆ.ಆರ್. ಅನುವಾದ ಎ.ಎ.

ಕೋಯ ಆಂಧ್ರದ ಪೂರ್ವ, ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿಯೂ ಖಮ್ಮಂ, ವರಂಗಲ್ ಜಿಲ್ಲೆಗಳ ಕಾಡುಮೇಡುಗಳಲ್ಲಿಯೂ ವಾಸವಾಗಿರುವ ಬುಡಕಟ್ಟು. ಕೋಯಗಳು ವಾಸಿಸುವ ಪ್ರದೇಶ ಗೂಡೆಂ (ತಾಂಡಾದಂತೆ). ಹರಿಯುವ ಗೋದಾವರಿ, ಶಬರಿ ನದಿಗಳು ಕೋಯಗಳ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕೋಯಗಳು ತಮ್ಮನ್ನು ತಾವು ‘ದೊರಲ ಸತ್ತಂ’ (ದೊರೆಗಳ ಸಮೂಹ), ‘ಪುಟ್ಟ ದೊರಲು’ ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಸ್ವತಂತ್ರವಾದ ಕೊಯಿ ಭಾಷೆಯಿದೆ. ಆದರೆ ತೆಲುಗನ್ನು ವ್ಯಾವಹಾರಿಕ ಭಾಷೆಯನ್ನಾಗಿ ಮಾತನಾಡುತ್ತಾರೆ. ಗೋತ್ರ ಗುಂಪುಗಳು. ೧.ಮೂಡವ ಗಟ್ಟ, ೨.ನಾಲ್ಗವ ಗಟ್ಟ, ೩.ಐದವ ಗಟ್ಟ,೪.ಆರವ ಗಟ್ಟ, ೫.ಏಡವ ಗಟ್ಟಿ ಎಂಬುದಾಗಿ ಇವೆ.

ತೀರಿಕೊಂಡ ಸೋದರನ ಪತ್ನಿಯನ್ನು ಮದುವೆಯಾಗುವ ಪದ್ಧತಿಯಿದೆ. ವಾರಸತ್ವ ಪುರುಷರಿಗೆ ಸೇರಿದ್ದು. ಹೆಂಗಸರು ಕಷ್ಟ ಜೀವಿಗಳು. ಆಕೆಯೇ ಕುಟುಂಬದ ಆಸ್ತಿ. ವಿಚ್ಛೇದನ ಮೌಖಿಕವಾಗಿದ್ದು ಕುಲ ಪಂಚಾಯಿತಿ ಇದನ್ನು ನಿರ್ಣಯಿಸುತ್ತದೆ. ‘ಮಾರು ಮನುವು’ ಎಂದು ಕರೆಯಲಾಗುವ ವಿಧವೆಗೆ ಪುನರ್ವಿವಾಹಕ್ಕೆ ಕೋಯಗಳಲ್ಲಿ ಅವಕಾಶವಿದೆ. ಆದರೆ ತಾಳಿಯನ್ನು ಹಾಕಿಕೊಳ್ಳುವುದಿಲ್ಲ. ಕುಲ ಪಂಚಾಯಿತಿ ಮುಖಂಡವನ್ನು ‘ಪೋಯಿ’ ಎಂದು ಕರೆಯುತ್ತಾರೆ. ಇವರಿಗೆ ಸಹಚರರಿರುತ್ತಾರೆ. ಕೋಯಗಳು ಸ್ಥಿರ ವ್ಯವಸಾಯಗಾರರು. ಜೋಳ, ರಾಗಿ, ಸಜ್ಜೆ ಬೆಳೆಯುತ್ತಾರೆ. ಕಾಡಿನಲ್ಲಿ ಜೀವನ ಮಾಡುವ ಕೋಯಗಳು ಗೆಡ್ಡೆಗೆಣಸು, ವನ ಮೂಲಿಕೆಗಳು ಮುಂತಾದವನ್ನು ತಂದು ಮಾರಿ ಜೀವನ ಮಾಡುತ್ತಾರೆ.

ಕೋಯಗಳಿಗೆ ಭದ್ರಾಚಲ ದೇವಾಲಯದ ಪ್ರಾಂಗಣದಲ್ಲಿ ಹಿಂದೆ ಒಂದು ಸಣ್ಣ ಗುಡಿಯಿದೆ. ಒಳಗೆಡೆ ಒಂದು ಬಂಡೆಗಲ್ಲಿನ ಮೇಲೆ ಶ್ರೀರಾಮನ ಪಾದುಕೆಗಳಿವೆ. ಗುಡಿ ದಮ್ಮಕ್ಕ ಎಂಬುವಳಿಂದ ಪೂಜಿಸಲ್ಪಟ್ಟ ಆಲಯವೆಂದು ಹೇಳುತ್ತಾರೆ. ದಮ್ಮಕ್ಕ ತಾಳೆಹಣ್ಣು ವಿಪ್ಪಪೂವು (ಮಹುವ ಹೂವು) ಗಳಿಂದ ಪೂಜಿಸುತ್ತಿದ್ದಳೆಂದು ಹೇಳುತ್ತಾರೆ. ಇಂದಿಗೂ ಭದ್ರಾಚಲಂತ ಗುಡಿಯಲ್ಲಿ ವಿಪ್ಪಪೂವುಗಳಿಂದ ದೇವರಿಗೆ ಪೂಜೆ ಮಾಡುವುದಿದೆ. ಈಕೆ ಕೋಯ ಜಾತಿಗೆ ಸೇರಿದ ಹೆಣ್ಣುಮಗಳೆಂದು ಹೇಳುತ್ತಾರೆ.

ಸಮ್ಮಕ್ಕ – ಸಾರಕ್ಕ ಜಾತ್ರೆ ಕೋಯರಿಗೆ ಸೇರಿದ್ದು. ಸಮ್ಮಕ್ಕ ವೆದವಗಟ್ಟೆ ಗೋತ್ರದವಳು. ತಾಯಿಯ ಹೆಸರು ಚಂದ. ನಾಲ್ಗವ ಗಟ್ಟು ಗೋತ್ರದ ಪಗಿಡಿ ಗಿದ್ದರಾಜುನೊಂದಿಗೆ ಮದುವೆಯಾಗಿತ್ತು. ತೀರಿಕೊಂಡವರನ್ನು ಕೋಯಗಳು ಹೂಳುತ್ತಾರೆ. ಇಲ್ಲವೆ ಸುಡುತ್ತಾರೆ. ಮಕ್ಕಳು, ಗರ್ಭಿಣಿ ಹೆಂಗಸರು ಸತ್ತರೆ ಹೂಳುತ್ತಾರೆ. ಕೇವಲ ಮೃತರಿಗೆ ಸಂಬಂಧಿಸಿದ ಗೋತ್ರ ಸದಸ್ಯರು ಮಾತ್ರವೆ ಮೃತದೇಹವನ್ನು ಶ್ಮಶಾನಕ್ಕೆ ಒಯ್ಯುತ್ತಾರೆ. ‘ಪೆರ್ಮಕೋಕ್ ಆಟ’ (ಎತ್ತುಗಳ ಕೋಡಿನ ಆಟ), ಅಂದರೆ ಗಂಡಸರು ಎತ್ತಿನ ಕೊಂಬುಗಳಿಂದ ಮಾಡಿದ ಶಿರಸ್ತ್ರಾಣವನ್ನು ತಲೆಗೆ ಇಟ್ಟುಕೊಂಡು ಬಣ್ಣದ ಉಡುಪುಗಳನ್ನು ಧರಿಸಿ ‘ಢಂಕಾ’ ದೊಂದಿಗೆ ನೃತ್ಯವನ್ನು ಮಾಡುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೫,೬೮,೦೧೯. ಅಂದರೆ ಶೇಕಡಾ ೧೧.೩.

– ಬಿ.ಕೆ.ಆರ್. ಅನುವಾದ ಕೆ.ಎಸ್.