ಕೋಲಾಮಿ ಆಂಧ್ರಪ್ರದೇಶದಲ್ಲಿರುವ ಆದಿಮ ಬುಡಕಟ್ಟು. ಇವರು ಆದಿಲಾಬಾದ್ ಜಿಲ್ಲೆಯಲ್ಲಿಯ ದಟ್ಟವಾದ ಕಾಡುಗಳಲ್ಲಿಯೂ, ಮಹಾರಾಷ್ಟ್ರ, ಮಧ್ಯಪ್ರದೇಶ ಪ್ರಾಂತಗಳಲ್ಲೂ ಕಂಡುಬರುತ್ತಾರೆ. ಕೊಲಾಮಿಗಳು ತಮ್ಮನ್ನು ತಾವು ‘ಕೊಲವಾರ್’ ಎಂದು ಕರೆದುಕೊಳ್ಳುತ್ತಾರೆ. ವಾಸಕ್ಕೆ ೧೨ ರಿಂದ ೧೫ ಗುಡಿಸಲುಗಳನ್ನು ಹಾಕಿಕೊಂಡಿರುತ್ತದೆ. ಇವರ ಮಾತೃಭಾಷೆ ‘ಕೊಲಾಮಿ’. ಇದು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದುದು. ಕೊಲಾಮಿ ಹೆಂಗಸರು ಬೆಳ್ಳಿಯ ಆಭರಣಗಳನ್ನು ಧರಿಸಿದ್ದು, ಬಣ್ಣಬಣ್ಣದ ಸೀರೆಗಳನ್ನು ಉಡುತ್ತಾರೆ. ಬಿದಿರಿನಿಂದ ಬುಟ್ಟಿಗಳನ್ನು ಹೆಣೆಯುವುದರಲ್ಲಿ ಇವರು ಕುಶಲಿಗಳು. ಸುಮಾರು ೫೦ ವರ್ಷಗಳ ಹಿಂದಿನವರೆಗೂ ಕೊಲಾಮಿಗಳು ಸಂಚಾರಿ ಬೇಸಾಯವನ್ನು ಮಾಡುತ್ತಿದ್ದರು. ಒಣ ಬೇಸಾಯ ಪದ್ಧತಿಗಳು ಇವರಿಗೆ ಗೊತ್ತು. ಜೋಳ, ತೊಗರಿ ಬೆಳೆಯುತ್ತಾರೆ. ಕೊಲಾಮಿಗಳ ಆರಾಧ್ಯ ದೈವ ‘ಭೀಮ’. ಅವರ ಭಾಷೆಯಲ್ಲಿ ‘ಅಯನ್’ ಎಂದು. ಪಾಂಡವ ಸೋದರರಲ್ಲಿ ಒಬ್ಬನಾದ ಭೀಮನಿಗೂ ಹಿಡಂಬಿಗೂ ‘ಇಡುಮುಲದೇವಿ’ ಎಂದು ಕರೆಯುತ್ತಾರೆ. ಅದಿಲಾಬಾದ ಜಿಲ್ಲೆಯ ಕಾಡುಗಳಲ್ಲಿಯ ಐದು ಪ್ರಾಂತಗಳಲ್ಲಿ ಭೀಮನ ಆಲಯಗಳಿವೆ. ಅವು ೧. ಪಂಗಿಡಿ, ೨.ಗೊಲಟ್, ೩.ದಂತನ್‌ ಪಲ್ಲಿ, ೪. ಸಿರಸಗಾವ್, ೫.ಸುಂಗಾಪುರ್.ಸ

ಕೊಲಾಮಿಗಳ ನಂಬಿಕೆಯ ಪ್ರಕಾರ ತೀರಿಕೊಂಡವರ ಆತ್ಮ ಭಗವಂತನನ್ನು ಸೇರಿದರೆ ವ್ಯಕ್ತಿತ್ವ ಮಾತ್ರ ಭೀಮನನ್ನು ಸೇರುತ್ತದೆಯಂತೆ. ತೀರಿಕೊಂಡವರನ್ನು ಹೂತು ಕೋಲನ್ನೋ ಕಲ್ಲನ್ನೋ ನೆಡುತ್ತಾರೆ.

ಬೇಟೆಗೆ ಹೋದಾಗ ಶೇಖರಿಸಿದ ಹಣ್ಣು, ಜೇನಿನಂತಹ ಪದಾರ್ಥಗಳನ್ನು ಗ್ರಾಮ ದೇವತೆಯಾದ ಪೊಲಕಮ್ಮನ ಮುಂದೆ ಇಡುತ್ತಾರೆ. ಅನರೋಗ್ಯ ಉಂಟಾದಾಗ ಭೀಮನಿಗೆ ಪ್ರಾಣಿ ಬಲಿ ಕೊಡುತ್ತಾರೆ.

ಕೊಲಾಮಿಗಳಲ್ಲಿ ವಿಚ್ಛೇದನ ಪಡೆಯುವುದನ್ನು’ಪಾರ್ಯಾಟ’ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿ ವಿವಾಹೇತರ ಸಂಬಂಧವನ್ನು ಹೊಂದಿದ್ದರೆ ಆತನನ್ನು ಪಂಚಾಯಿತಿಯಲ್ಲಿ ನಿಲ್ಲಿಸಿ, ಶಿಕ್ಷೆ ವಿಧಿಸಿ ಆತನ ಬಳಿಯಿಂದ ದಂಡದ ರೂಪದಲ್ಲಿ ಹಣವನ್ನು ಪಡೆದು ಆ ಹಣದಿಂದ ಎಲ್ಲರಿಗೂ ಸಾರಾಯಿ ಹಂಚುತ್ತಾರೆ. ಇದನ್ನೇ ‘ದಾಂಡ್’ ಎಂದು ಕರೆಯುತ್ತಾರೆ. ಆ ಗ್ರಾಮದ ಮುಖಂಡನೇ ವಿಚ್ಛೇದನಕ್ಕೆ ಒಪ್ಪಿಗೆಯನ್ನೀಯದ ಅಧಿಕಾರವನ್ನು ಪಡೆದಿರುತ್ತಾನೆ. ಒಂದು ಗಡಿಗೆಯನ್ನು ತಂದು ಮೊದಲು ಗಂಡ ಒಂದು ಕಡ್ಡಿಯನ್ನು ಎರಡಾಗಿ ಮುರಿಯುತ್ತಾರೆ. ಅನಂತರ ಹೆಂಡತಿಯೂ ಇದೇ ರೀತಿ ಮಾಡುತ್ತಾಳೆ. ಅಂದಿನಿಂದ ಅವರು ವಿಚ್ಛೇಧನವನ್ನು ಪಡೆದಂತೆ ಅರ್ಥ. ಆದರೆ ಮದುವೆಯ ಸಂದರ್ಭದಲ್ಲಿ ಹೆಣ್ಣಿನ ತಂದೆತಾಯಿಗಳು ಕೊಟ್ಟ ವಸ್ತು ಸಾಮಗ್ರಿಯನ್ನು ಗಂಡ ಹಿಂದಿರುಗಿಸಬೇಕಾಗುತ್ತದೆ. ಗಂಡು ಹೆಣ್ಣಿನ ಕೊಡುಕೊಳ್ಳುವಿಕೆಗಳು ತಮ್ಮ ತಮ್ಮಲ್ಲಿಯೇ ನಡೆಯುತ್ತವೆ. ಅಕ್ಕನ ಮಗಳನ್ನು ಮದುವೆಯಾಗುವುದಿಲ್ಲ. ಗರ್ಭಿಣಿ ಹೆಂಗಸಿಗೆ ಗ್ರಾಮದ ಅಂಚಿನಲ್ಲಿ ಒಂದು ಪ್ರತ್ಯೇಕ ಗುಡಿಸಿಲಿರುತ್ತದೆ. ಅದರಲ್ಲಿಯೇ ಹೆರಿಗೆಯಾಗಬೇಕು. ಅಮಾವಾಸ್ಯೆ, ಹುಣ್ಣಿಮೆಗಳಂದು ಗರ್ಭಿಣಿ ಹೆಂಗಸು ಹೊರಗೆ ಬರಕೂಡದು. ಮೈನೆರೆತ ಹುಡುಗಿ ಮನೆಯಲ್ಲಿ ವಸ್ತುಗಳನ್ನು ಮುಟ್ಟಬಾರದು. ಮುಟ್ಟಾದ ಹುಡುಗಿಯರು ಸಹ ಮೈಲಿಗೆಯೆಂಬುದಾಗಿ ಮನೆಯಲ್ಲಿ ಅಡುಗೆ ಮಾಡಕೂಡದೆಂಬ ನಿಯಮವಿದೆ.

೨೦೦೧ ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೪೫,೬೭೧. ಅಂದರೆ ಶೇಕಡಾ ೦.೯.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಕೋವಲನ್ – ಕಣ್ಣಗಿ ಕದೈ ತಮಿಳುನಾಡಿನಲ್ಲಿ ಪ್ರಚಲಿತವಾಗಿರುವ ಕಥೆ. ಒಂದು ಊರಿನಲ್ಲಿ ಮುತ್ತುಶೆಟ್ಟಿ ಎಂಬ ವ್ಯಾಪಾರಿಗೆ ಒಂದು ತೋಟವಿತ್ತು. ಅಲ್ಲಿದ್ದ ಕಾಮಧೇನು ದಿನನಿತ್ಯ ಅದೇ ತೋಟದಲ್ಲಿ ಮೇಯುತ್ತಿತ್ತು. ಇದರಿಂದ ಕೋಪಗೊಂಡ ಮುತ್ತುಶೆಟ್ಟಿ ಆ ಕಾಮಧೇನುವಿಗೆ ಬಾರುಕೋಲಿನಿಂದ ಹೊಡೆದನು. ಆ ಏಟಿನಿಂದ ಅದರ ಕರು ಮೂರ್ಛೆತಪ್ಪಿ ಕೆಳಗೆ ಬಿತ್ತು. ಆಗ ಕೋಪಗೊಂಡ ಕಾಮಧೇನು ಮುತ್ತುಶೆಟ್ಟಿಯನ್ನು ದಿಟ್ಟಿಸಿ ನೋಡಿ ನಿನ್ನ ಮಗನು ಹದಿನಾರು ವರ್ಷ ತುಂಬಿದ ಮೇಲೆ ಸಾಯುವಂತಾಗಲಿ ಎಂದು ಶಾಪವಿತ್ತಿತ್ತು.

ಮಧುರಾಪುರಿ ಎಂಬ ಪಟ್ಟಣದ ಮಣಿಯರಸ ಎಂಬುವವನ ಮೊದಲ ಮಗ ಎಣ್ಣೆ ವ್ಯಾಪಾರ ಮಾಡುತ್ತಿದ್ದನು. ಆ ವ್ಯಾಪಾರ ಲಾಭದಾಯಕವಾಗಿಲ್ಲದ ಕಾರಣ ಅವನು ಭದ್ರಕಾಳಿ ದೇವಾಲಯಕ್ಕೆ ಎಣ್ಣೆ ದೀಪ ಹಚ್ಚಿ ವ್ಯಾಪಾರ ವೃದ್ಧಿಸುವಂತೆ ಬೇಡಿಕೊಂಡನು. ಆದರೆ ಅವನು ದೀಪ ಹಚ್ಚುವುದಕ್ಕಿಂತ ಮೊದಲು ರಾಜನ ಅನುಮತಿ ಪಡೆಯಬೇಕಾಗಿತ್ತು. ಆದರೆ ಈತ ಪಡೆದಿರಲಿಲ್ಲ. ಇದರಿಂದ ರಾಜ ಅವನನ್ನು ಶಿರಚ್ಛೇದ ಮಾಡಬೇಕೆಂದು ತಮ್ಮ ಸೇವಕರಿಗೆ ಆಜ್ಞಾಪಿಸಿದನು. ಇವರ ಪರಿಣಾಮವಾಗಿ ಕತ್ತರಿಸಲ್ಪಟ್ಟ ವ್ಯಾಪಾರಿಯು ತಲೆ ಕಾಳಿದೇವಿಯ ಪಾದದ ಬಳಿ ಬಿತ್ತು. ಈ ಅಮಾಯಕ ದೃಶ್ಯವನ್ನು ಕಂಡು ಕೋಪಗೊಂಡ ಕಾಳಿಕಾದೇವಿ ಮುಂದೆ ವ್ಯಾಪಾರಿಯಾಗುವ ಕೋವಲನಿಗೆ ಹೆಂಡತಿಯಾಗಿ ಪಾಂಡ್ಯರಾಜನನ್ನು ಸಂಹರಿಸುವೆನು. ಅದರಿಂದ ಮಣಿಯರಸನ ಮಗನ ಬಲಿಗೆ ಪ್ರಾಯಶ್ಚಿತ್ತ ಪಡೆಯುವೆನೆಂದು ಶಾಪವಿತ್ತಳು.

ಮುತ್ತುಶೆಟ್ಟಿ ಮಕ್ಕಳ ಭಾಗ್ಯವಿಲ್ಲದೆ ಶಿವನನ್ನು ಬೇಡಲು, ಶಿವನ ವರದಿಂದ ಹತ್ತು ತಿಂಗಳಲ್ಲಿ ಗಂಡು ಮಗುವೊಂದು ಜನಿಸಿತು. ಅದಕ್ಕೆ ಕೋವಲನ್ ಎಂಬ ಹೆಸರಿಟ್ಟರು. ಅಂತೆಯೇ ಪಾಂಡ್ಯರಾಜ ಮಕ್ಕಳಿಲ್ಲದೆ ಚಿಂತಿಸುತ್ತಿದ್ದ. ಆಗ ಸಾಕ್ಷಾತ್ ಕಾಳಿಯೇ ಬರಿಗಾಲಿನಲ್ಲಿ ಕಾಲ್ಕಡಗ, ಎಡಗಾಲಿನ ಸೊಂಟಕ್ಕೆ ತಾಮ್ರದ ಬಿಂದಿಗೆಯೊಡನೆ ಮಗುವಾಗಿ ಹುಟ್ಟಿತು. ಇದನ್ನು ತಿಳಿದ ಜ್ಯೋತಿಷಿಗಳು ಮಗುವನ್ನು ಪೆಟ್ಟಿಗೆಯಲ್ಲಿಟ್ಟು ವೈಗೈ ನದಿಗೆ ಬಿಡಲು ತಿಳಿಸಿದರು. ಹೀಗೆ ನೀರಿನಲ್ಲಿ ಬಿಟ್ಟ ಆ ಪೆಟ್ಟಿಗೆಯನ್ನು ನಾಗರಹಾವೆಂದು ಕಾವಲು ಕಾಯಿತು. ಆ ಪೆಟ್ಟಿಗೆ ಕಾವೇರಿ ಪಟ್ಟಣಕ್ಕೆ ಬಂದು ತಲುಪಿತು. ಅದನ್ನು ನಾವಿಕನೊಬ್ಬ ತೆಗೆದುಕೊಂಡು ಬೇರೆಯವನಿಗೆ ಮಾರಿದನು. ಈ ವಿಷಯವನ್ನು ಈ ಕುರಿತ ಮಾನಾಯಕ ಆ ಮಗುವನ್ನು ಪಡೆದನು. ಆ ಮಗುವಿಗೆ ಕಣ್ಣಗಿ ಎಂದು ಹೆಸರಿಟ್ಟು ಬೆಳೆಸಿದನು.

ಕಡೆಯೂರಿನಲ್ಲಿದ್ದ ವಸಂತಮಾಲೈ ಎಂಬ ವೇಶ್ಯೆಗೂ ಒಂದು ಹೆಣ್ಣು ಮಗುಹುಟ್ಟಿತು. ಇದು ತನಗಾಗಿ ಬಂದ ದೇವರ ವರಪ್ರಸಾದ ಎಂದು ಭಾವಿಸಿ ಹರ್ಷಗೊಂಡಳು. ತನ್ನ ಮಗಳನ್ನು ಮುದ್ದಿನಿಂದ ಬೆಳೆಸಿ ಐದು ವರ್ಷದಲ್ಲಿಯೇ ಭರತನಾಟ್ಯಕ್ಕೆ ಸೇರಿಸಿದಳು. ಮಗುವಿಗೆ ಹದಿನಾರು ವರ್ಷ ತುಂಬಿ ರಂಗವೇದಿಕೆಯನ್ನು ಏರಿ ಮನ್ಮಥನನ್ನೇ ಕರೆ ತರುವಳು. ಹೀಗೆ ಹನ್ನೆರಡು ವರ್ಷ ಅವನೊಂದಿಗೆ ಬಾಳ್ವೆ ಮಾಡಿ ೧೩ನೇ ವರ್ಷದಲ್ಲಿ ಸಾಯುತ್ತಾಳೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು.

ಕಾವೇರಿ ಪಟ್ಟಣದಲ್ಲಿ ಮುತ್ತುಶೆಟ್ಟಿ, ಅಪ್ಪುಶೆಟ್ಟಿ, ಮಾಣಿಕ್ಕಂಶೆಟ್ಟಿ ಎಂಬ ಮಹಾನಾಯಕರು ತಮ್ಮ ಗಂಡು ಮಕ್ಕಳಿಗೆ ಈ ಹೆಣ್ಣನ್ನು ವಧುವಾಗಿ ಕೋರಿದರು. ಆಗ ವರರ ಹೆಸರುಗಳನ್ನೆಲ್ಲ ಕಾಗದದಲ್ಲಿ ಬರೆದು ಅದನ್ನು ಸುರುಳಿ ಸುತ್ತಿ ಭೂಮಿಗೆ ಎಸೆದು ಅದರಲ್ಲಿ ಒಂದು ಸುರುಳಿ ಕಾಗದವನ್ನು ತೆಗೆದು ಬಿಚ್ಚಿ ನೋಡಿದಾಗ ಅದರಲ್ಲಿ ‘ಕೋವಲನ್’ ಹೆಸರು ಬಂದಿತು. ಹೀಗಾಗಿ ಮೊದಲೇ ತೀರ್ಮಾನಿಸಿದಂತೆ ಕೋವಲನಿಗೆ ಹೆಣ್ಣು ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸಿದರು. ಕೋವಲನ್ ಐದು ವರ್ಷದಲ್ಲಿಯೇ ಕಾಲ್ಗಡಗವನ್ನು ಎತ್ತಿ ಹಿಡಿದ. ಮಾಧವಿಯನ್ನು ಹೆಚ್ಚಿಗೆ ಪ್ರೀತಿಸಿದನು. ರಾಜನು ಪತ್ರ ಬರೆದು ವಸಂತಮಾಲೆಗೆ ಈ ವಿಷಯ ತಿಳಿಸಿದನು. ವಸಂತಮಾಲೆ ಮಗಳು ಮಾಧವಿಯ ಹತ್ತಿರ ವೀಳ್ಯದೆಲೆಯಲ್ಲಿ ಅಂಜನವನ್ನು ಲೇಪಿಸಿ ಕೋವಲವನ್ನು ಕರೆತಾರೆಂದು ಹೇಳಿದಳು.

ಕಾವೇರಿ ಪಟ್ಟಣಕ್ಕೆ ಬಂದು ಮಾಧವಿ ತನ್ನ ಚಿನ್ನದ ಹಾರವನ್ನು ಕಳೆದು ಬಿಸಾಡಿದಳು. ಆ ಸರ ಕೋವಲನ ಕತ್ತಿಗೆ ಬಿತ್ತು. ಆಗ ಮಾಧವಿ ‘ತಾಂಬೂಲ ತಿನ್ನು’ ಎಂದು ನೀಡಿದಾಗ ತಿನ್ನುತ್ತಿದ್ದಂತೆಯೇ ಕೋವಲನು ಯಾರ ಮಾತನ್ನು ಕೇಳದೆ ಮಾಧವಿಯನ್ನು ಜೊತೆಗೆ ‘ತಿರುಕ – ಡೈಯೂರ್‌’ಗೆ ಬಂದು ತಾವು ಪರಸ್ಪರ ಅಗಲುವುದಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡಿದನು. ಕೋವಲನು ಹನ್ನೆರಡು ಹಡಗಿನಷ್ಟು ಹಣವನ್ನು ಪಡೆದು ಹನ್ನೆರಡು ವರ್ಷ ಸುಖವಾಗಿ ಮಾಧವಿಯೊಂದಿಗೆ ಇದ್ದನು.

ಇತ್ತ ಕಾವೇರಿ ಪಟ್ಟಣದಲ್ಲಿ ಕಣ್ಣಗಿಗೆ ಹನ್ನೆರಡು ವರ್ಷ ವಯಸ್ಸಾಯಿತು. ಅವಳು ಒಂದು ದಿನ ಕೈಗನ್ನಡಿಯಲ್ಲಿ ತನ್ನನ್ನು ನೋಡಿ, ಕತ್ತಲ್ಲಿದ್ದ ಮಾಂಗಲ್ಯ ಸರ ಕಂಡು ದಾದಿಯರ ಬಳಿ ಗೊಣಗಿದಳು. ಆ ದಾದಿಯರು ನಿನ್ನ ಗಂಡ ವೇಶ್ಯೆಯ ಬಳಿ ಇದ್ದಾನೆ ಅವನನ್ನು ಕರೆದುಕೋ ಎಂದರು. ಆಗ ಕಣ್ಣಗಿ ದುಃಖತಪ್ತಳಾಗಿ ತನ್ನ ದೇಹದಿಂದ ಜೀವ ದೂರಾಗುವ ಮುನ್ನವೇ ನಿನ್ನ ನೋಡಬೇಕೆಂದು ಬೇಡುತ್ತಾ ಓಲೆ ಬರೆದಳು. ಇದನ್ನು ಕಂಡ ಹೆಂಡತಿಯನ್ನು ನೋಡಬೇಕೆಂದು ಕೋವಲನು ಮಾಧವಿಯನ್ನು ಕೇಳಿದನು. ನೀವು ಹೋಗುವುದಾಗಿದ್ದರೆ, ‘ಒಂದು ಚಿನ್ನದ ಪುತ್ಥಳಿಯನ್ನು ಮಾಡಿ ಅದಕ್ಕೆ ಮಾತಾಡುವ ಶಕ್ತಿಯನ್ನು ಕೊಟ್ಟು ಹೋಗು’ ಎಂದಳು. ಇದರಿಂದ ಕೋವಲನಿಗೆ ದುಃಖವಾಯಿತು. ಆದರೆ ಕಣ್ಣಗಿಯ ಶೀಲವಂತಿಕೆಯಿಂದ ಆ ಪುತ್ಥಳಿ ನಿರ್ಮಾಣವಾಗಿ ಅದು ಮಾತನಾಡಿತು. ಕೋವಲನ್ ಕಣ್ಣಗಿಯನ್ನು ನೋಡಲು ಹೋಗುತ್ತಿದ್ದಂತೆಯೇ ಇತ್ತ ವಸಂತಮಾಲೆ ತನ್ನ ಮಗಳು ಮಾಧವಿಗೆ ಹಾವು ಕಚ್ಚಿ ಸತ್ತಳು ಎಂದು ಕಾಗದ ಕಳುಹಿಸಿದಳು. ಈ ಸುದ್ಧಿಯನ್ನು ಕೇಳಿ ಕೋವಲನು ಹಿಂದಿರುಗಿ ಬಂದು ನೋಡಲು ಮಾಧವಿ ತಾಂಬೂಲ ಮೆಲ್ಲುತ್ತ ಸಂಭ್ರಮದಿಂದ ಕುಳಿತಿದ್ದಳು. ಇದನ್ನು ಕಂಡು ಕೋವಲನು ಕೋಪಗೊಂಡನು. ಮಾಧವಿ, ಅವಳ ತಾಯಿ ವಸಂತಮಾಲೆ ಇಬ್ಬರೂ ಸೇರಿ ಕೋವಲನನ್ನು ಕೊಲ್ಲಲು ಹುನ್ನಾರ ನಡೆಸಿದರು.

ಮಾಧವಿ ಕೋವಲನ ಬಳಿ ಇದ್ದ ಎಲ್ಲಾ ಐಶ್ವರ್ಯವನ್ನು ಪಡೆದರೂ ಅವನನ್ನು ಬಾವಿಗೆ ನೂಕಿ ಸಾಯಿಸಲು ಯೋಚಿಸಿದಳು. ಕಣ್ಣಗಿಯ ಪಾತಿವ್ರತ್ಯ ಶಕ್ತಿಯಿಂದ ಬಾವಿಯಲ್ಲಿ ನೀರು ತುಂಬಿ ಅವನು ತಪ್ಪಿಸಿಕೊಂಡನು. ಮಾಧವಿ ನಯವಂಚನೆಯಿಂದ ನದಿಗೆ ಕೋವಲವನ್ನು ತಳ್ಳಿದಳು. ಅಲ್ಲಿಯೂ ಕೂಡ ಕಣ್ಣಗಿಯ ಪಾತಿವ್ರತ್ಯ ಶಕ್ತಿಯಿಂದ ಕಾವೇರಿ ಪಟ್ಟಣದ ದಡ ಸೇರಿ ಕಣ್ಣಗಿಯನ್ನು ಸೇರಿದನು. ಆಗ ಕಣ್ಣಗಿ ಮಾಡಿದ್ದ ಒಳ್ಳೆಯ ಭೋಜನವನ್ನು ಮಾಡುವಾಗ ಮಾಧವಿಗೆ ಕೊಟ್ಟ ಮಾತು ನೆನಪಿಗೆ ಬಂದು ತಿನ್ನಲು ನಿರಾಕರಿಸಿದನು. ಆಗ ಕಣ್ಣಗಿ ತನ್ನ ಕಾಲ್ಗಡವನ್ನು ಮಾರಿ ಮಾಧವಿಯ ಮಾತನ್ನು ನೆರವೇರಿಸಲು ಆಲೋಚಿಸಿದಳು. ತನ್ನ ಕಾಲಿನಿಂದ ಕಾಲ್ಕಡಗವನ್ನು ತೆಗೆಯುವಾಗ ಅಪಶಕುನದ ಸೂಚನೆ ಎಂಬಂತೆ ಕೋವಲನಿಗೆ ಮಧುರೈಗೆ ಹೋಗುವ ಪ್ರಯಾಣದಲ್ಲಿ ತೊಂದರೆ ಉಂಟಾಯಿತು. ಕಣ್ಣಗಿಯ ತೊಂದರೆಯ ನಡುವೆಯೇ ಮಧುರೆಗೆ ಬಂದಳು.

ಮಧುರೈಗೆ ಬಂದ ಕೋವಲನೂ ಕಣ್ಣಗಿಯೂ ಗೊಲ್ಲತಿಯರ ಮನೆಯಲ್ಲಿ ವಾಸವಿದ್ದರು. ತಮ್ಮ ರಕ್ಷಣೆಗಾಗಿ ಮರದಪೆಟ್ಟಿಗೆ, ಹೂ, ತೆಂಗಿನಕಾಯಿ, ನೀರು, ದೀಪ, ಮಾವಿನಹಣ್ಣು, ಗಂಧ ಮೊದಲಾದವುಗಳನ್ನು ಗೊಲ್ಲತಿಗೆ ನೀಡಿದ್ದರು. ಈ ದಾಸಿ ಬೀದಿಯಲ್ಲಿ ಕಾಲ್ಗಡಗ ಮಾರಲು ಮುಂದಾದಾಗ ಅದು ಅತ್ತು ತನ್ನನ್ನು ಮಾರದಂತೆ ಕೋರಿತು. ಕೋವಲನು ದಾರಿಯಲ್ಲಿ ಗುರುಗಳನ್ನು ಕಂಡು ಕಾಲ್ಗಡಗ ಮಾರಲು ಮುಂದಾದಾಗ ವಂಜೆಪತ್ತಿನ ಮಕ್ಕಳು ತಪ್ಪು ಹೊರಿಸಿ ತನ್ನ ತಂದೆಯ ಹತ್ತಿರ ಕೋವಲನ್ ಕತೆಯನ್ನು ಹೇಳಿ ಅವನನ್ನು ಕಳ್ಳನೆಂದು ಸಾಬೀತು ಮಾಡಿದನು. ಕೋವಲನು ವಂಜಪತ್ತಿನ ಬಳಿಗೆ ಹೋಗಲು ಅಲ್ಲಿಯೂ ಸುಳ್ಳು ಆಪಾದನೆ ಹೊತ್ತು ರಾಜನ ಬಳಿಗೆ ಹೋದನು. ಆಗ ಮಂತ್ರಿಗಳು ಕೋವಲನಿಗೆ ‘ಪಾಂಬು ಕುಡಂ’, ವೇಂಗೈಕೂಡು, ನೇಯ್ (ತುಪ್ಪ) ಕಾಯಿಸಿದ ಮಡಿಕೆ ಮೊದಲಾದವುಗಳಿಂದ ಶಿಕ್ಷಿಸಿದರು. ಆದರೂ ಕೋವಲನು ಕಣ್ಣಗಿಯ ಪಾತಿವ್ರತ್ಯದಿಂದ ಜಯಗಳಿಸಿದನು.

ಕೊಟ್ರವನ್ (ರಾಜ) ಕೋವಲನನ್ನು ಕೊಲ್ಲಲು ಆಜ್ಞೆಯಿತ್ತನು. ಸೇವಕರು ಕೊಲ್ಲಲು ಬಂದಾಗ ಕೋವಲನು ಮೀನಾಕ್ಷಿಯನ್ನು ನೆನೆದು ಶಿವಲೋಕದ ಪದವಿ ಬಯಸಿದುದರಿಂದ ಆ ಖಡ್ಗ ಹಾರವಾಗಿ ಬದಲಾಯಿತು. ಹೀಗಿದ್ದರೂ ಅವನ ಬಯಕೆಯಂತೆ ದೇಹ ಎರಡು ಭಾಗವಾಯಿತು. ಈಕಡೆ ಗೊಲ್ಲತಿ ಕೋವಲನಿಗೆ ಕೊಟ್ಟು ಸುಳಿವು ತಪ್ಪಾಗಿತ್ತು. ಆದ್ದರಿಂದ ಗೊಲ್ಲತಿ ಕೋವಲನ್ನು ಹುಡುಕಿಕೊಂಡು ಬಂದಳು. ಅಲ್ಲಿ ಕೋವಲನ ಮರಣದ ಸುದ್ಧಿ ಕೇಳಿ ಕಣ್ಣಗಿಗೆ ತಿಳಿಸಿದಳು. ದನಗಾಯುವ ಮಕ್ಕಳೊಂದಿಗೆ ಯುದ್ಧ ಭೂಮಿಗೆ ಬಂದು ಎರಡು ಭಾಗವಾಗಿದ್ದ ಅವನ ದೇಹವನ್ನು ಚಿನ್ನದ ದಾರದಿಂದ ಹೊಳಿದಳು ಮತ್ತು ಶತ್ರುಗಳನ್ನು ಹುಡುಕಿದಳು.

ಕಣ್ಣಗಿ ಕೋವಲವನ್ನು ಒಮ್ಮೆ ಮಾವಿನ ಹಣ್ಣು ತೆಗೆದುಕೊಂಡು ಬಾ ಎಂದಾಗ ಅವನು ಒಳ್ಳೆಯ ಹಣ್ಣುಗಳನ್ನು ಮಾಧವಿಗೂ ಕೆಟ್ಟ ಹಣ್ಣುಗಳನ್ನು ಕಣ್ಣಗಿಗೂ ನೀಡಿದನು. ಇದರಿಂದ ಕಣ್ಣಿಗಿಗೆ ಕೋಪ ಬಂದು ಅವನ ದೇಹಕ್ಕೆ ಹೊಲಿದಿದ್ದ ಚಿನ್ನದಾರ ಎಳೆದು ಪುನಃ ದೇಹ ಎರಡಾಗುವಂತೆ ಸೀಳಿದಳು.

ಕೊನೆಗೆ ಕಣ್ಣಗಿ ಪಾಂಡ್ಯ ರಾಜರ ಬಳಿ ಹೋಗಿ ಕಾಲ್ಗಡಗ ಕೇಳಿ ಪಡೆದು ಕಾಳಿಯ ರೂಪ ತೋರಿಸಿದಳು. ಅನಂತರ ಗೊಲ್ಲತಿ ಹಾಗೂ ಹೊಲತಿಯರ ಬೀದಿಯನ್ನು ದಾಟಿ ಮುಂದೆ ಮಧುರೈಗೆ ಬಂದಳು. ಅಲ್ಲಿ ಮಧುರೈಯನ್ನು ಸುಟ್ಟು ಭಷ್ಮ ಮಾಡಿ ತನ್ನ ಕೋಪಾವೇಶವನ್ನು ತೀರಿಸಿಕೊಂಡಳು. ಇಲ್ಲಿಯೇ ಮಾಧವಿಗೆ ಕೋವಲನ ಸಾವು ದುಃಖ ತಂದಿತು. ಕೋವಲನೊಡನೆ ಚಿತೆಯಲ್ಲಿ ಸಹಗಮನ ಹೊಂದಿದಳು. ಮಾಧವಿ ಇಬ್ಬರ ಅಸ್ಥಿತಿಯನ್ನು ಗಂಗೆಯಲ್ಲಿ ಬಿಟ್ಟು ಪುನಃ ತಿರುವೊಟ್ರಿಯೂರ‍್ನಲ್ಲಿ ಕಾಳಿ ನೆಲೆಸಿದಳು. ಅಂದಿನಿಂದಲೂ ಆಕೆ ಮಾನವರನ್ನು ಬಲಿ ತೆಗೆದುಕೊಳ್ಳುತ್ತಿದ್ದಳು. ಅನಂತರ ಜನರ ಕೋರಿಕೆಯಂತೆ ಪ್ರಾಣಿ ಬಲಿ ಪಡೆದು ದೇವತೆಯಾಗಿ ರಾರಾಜಿಸುತ್ತಿದ್ದಾಳೆ ಎಂಬ ವಿಚಾರ ತಮಿಳು ನಾಡಿನಾದ್ಯಂತ ಜನಪದ ಕತೆಯಾಗಿ ಮೂಡಿಬಂದಿದ್ದು ಜನರ ಬಾಯಲ್ಲಿ ಹರಿದಾಡುತ್ತಿದೆ.

– ಎನ್.ವಿ.ಕೆ. ಅನುವಾದ ಆರ್.ಎಸ್.

ಕೋವಲನ್ ಚರಿತ್ತಿರಮ್ ತಮಿಳುನಾಡಿನ ಕಣ್ಣಗಿಯನ್ನು ಕುರಿತಾದ ಕಥೆ ದಕ್ಷಿಣ ಭಾರತದಲ್ಲೂ ಶ್ರೀಲಂಕಾದಲ್ಲೂ ವ್ಯಾಪಕವಾಗಿ ಹರಡಿಕೊಂಡಿದೆ. ಶಿಲಪ್ಪದಿಗಾರಂ ಎಂಬ ಮಹಾಕಾವ್ಯ ವಿದ್ಯಾವಂತರ ಕೈಸೇರುವುದಕ್ಕಿಂತ ಮುನ್ನ ಪತಿವ್ರತಾ ದೇವತೆಯಾದ ಕಣ್ಣಗಿಯ ಕಥೆಯನ್ನು ಕೇವಲ ಬಾಯ್ಮಾತಿನ ರೂಪದಲ್ಲೇ ಜನರು ಬೆಳೆಸಿದ ರೀತಿಯನ್ನು ಕಾಣಬಹುದಾಗಿದೆ.

ಪೂರ್ವ ದಿಕ್ಕಿನ ರಾಜ್ಯವಾದ ಕೇರಳದಲ್ಲಿ ಇಡುಕ್ಕಿ ಎಂಬ ಜಿಲ್ಲೆಯ ಕಾಡುಗಳಲ್ಲಿ ವಾಸಿಸುವ ಮನ್ನಾನ್ ಎಂಬ ಜಾತಿಯವರು ‘ಕಣ್ಮಗಿ ಕತೆ’ಯನ್ನು ಕೋವಿಲನ್ ಚರಿತ್ರೆ ಎಂಬುದಾಗಿ ಮಾಡಿಕೊಂಡು ಕುಣಿತದ ರೂಪದಲ್ಲಿ ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಈ ಜನ ಮಧುರೈಯಿಂದ ಬಹು ಹಿಂದಿನ ಕಾಲದಲ್ಲೇ ಇಡುಕ್ಕಿ ಜಿಲ್ಲೆಗೆ ಬಂದು ಜೀವಿಸಿರುವುದಾಗಿ ಬಾಯ್ಮಾತಿನ ಇತಿಹಾಸ ಜನರ ಮಧ್ಯೆ ಇದೆ. ‘ಮುದುವರ್’ ಎಂಬು ಜನರಲ್ಲಿ ಹಾಡು ಮತ್ತು ಕುಣಿತದ ರೂಪಗಳು ಇವೆ. ‘ಮುದುವರ್’ ಎಂಬ ಜನರಲ್ಲಿ ಹಾಡು ಮತ್ತು ಕುಣಿತದ ರೂಪಗಳು ಇವೆ. ಬಯಲು ಪ್ರದೇಶದ ಭಾಗಗಳನ್ನು ಬಿಟ್ಟು ಬೆಟ್ಟದಲ್ಲಿ ತಮ್ಮ ವಾಸ್ತವ್ಯವನ್ನು ಕಂಡುಕೊಂಡ ಮತ್ತೊಂದು ಜಾತಿಯವರೆಂದರೆ ಕಾಣಿಯವರು. ಇವರು ಕೂಡ ಕಣ್ಣಗಿ ಕಥೆಯನ್ನು ಪ್ರದರ್ಶಿಸಿಸುತ್ತಿದ್ದರು ಎಂಬುದಾಗಿ ತಿಳಿದುಬರುತ್ತದೆ.

‘ಮನ್ನಾನ್’ ಜಾತಿಯವರಲ್ಲಿ ಪ್ರದರ್ಶನಗೊಳ್ಳುವ ಕಥನ ಗೀತೆಗಳು ಕೋವಿಲನ್ ಚರಿತ್ರೆ ರೂಪುಗೊಂಡಂತೆ ಇರುತ್ತವೆ. ಈ ಕತೆಯ ಪ್ರದರ್ಶನ ಬಹುಪಾಲು ಕುಣಿತದ ರೂಪದಲ್ಲಿ ಇರುತ್ತದೆ. ಇದು ಬಹಳ ಮುಖ್ಯವಾಗಿ ಹಬ್ಬ ಹರಿದಿನಗಳಲ್ಲೂ ರಾತ್ರಿವೇಳೆಯಲ್ಲಿ ನಡೆಯುವ ಶಾಸ್ತ್ರ ಕಾರ್ಯಗಳಲ್ಲೂ ಈ ಕುಣಿತವನ್ನು ಪ್ರದರ್ಶಿಸಲಾಗುತ್ತದೆ. ಒಬ್ಬ ಹಾಡನ್ನು ಹಾಡುತ್ತಿದ್ದರೆ ಉಳಿದವರೆಲ್ಲರೂ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಾರೆ. ರಾಜಮನ್ನಾನ್, ಕಾಣಿ ಮೊದಲಾದವರಲ್ಲಿ ಮನೆಯ ಗುಡಾರವೇ ಈ ಪ್ರದರ್ಶನ ನೀಡುವ ರಂಗಭೂಮಿಯಾಗುತ್ತದೆ. ಸಂಗೀತ ಪರಿಕರಗಳಾದ ವಾದ್ಯ, ಕಂಜ್ರಾ, ಗೆಜ್ಜೆ, ಗಂಟೆ ಇವು ಮುಖ್ಯವಾದವು. ಪಾತ್ರಕ್ಕೆ ತಕ್ಕಂತೆ ವೇಷಭೂಷಣಗಳನ್ನು ಹಾಕಿ ಕುಣಿಯುವುದು ಕಂಡುಬರುತ್ತದೆ.ಸ

ಕಣ್ಣಗಿ ಇವರುಗಳ ಪಾಲಿಗೆ ಪೂಜಿಸುಕೊಳ್ಳುವ ದೇವರಾಗಿ ಕಂಡುಬರುವುದಿಲ್ಲ. ಅಂದರೆ ೧೭ನೆಯ ಶತಮಾನದ ರಾಜಕೀಯ, ಧಾರ್ಮಿಕ ಕಾರಣಗಳಿಂದ ನೆಲೆಗೊಂಡ ಈ ಮನ್ನಾನ್ ಜಾತಿಯವರು ಮೊದಲೇ ತಾವು ತಿಳಿದಿದ್ದ ಕತೆಯನ್ನು ಹಾಡಾಗಿಸಿದ್ದಾರೆ. ಈ ಹಾಡಿನ ಸಂರಚನೆ ಬಿಲ್ಲಿನ ಹಾಡಿಗೆ ತಕ್ಕಂತೆ ಇರುತ್ತದೆ. ಅದರ ಜೊತೆಗೆ ಸಂಭಾಷಣೆ ಮತ್ತು ಸಂಗೀತ ರಚನೆಯನ್ನು ಒಳಗೊಂಡ ರೂಪ ಪಡದಿರುತ್ತದೆ. ಇದರ ಹಿನ್ನೆಲೆ ಗಾಯನದ ರೀತಿ ಬಿಲ್ಲು ಹಾಡುಗಳನ್ನು ನೆನಪು ಮಾಡಿಕೊಳ್ಳುವಂತಿದೆ.

ಬಂಜೆತನವನ್ನು ಅನುಭವಿಸುತ್ತಿದ್ದ ವರ್ಣ ಎಂಬ ಬೆಟ್ಟದ ತಾಯಿ ಶಿವನ ಹತ್ತಿರ ವರ ಪಡೆದು ಕೋವಿಲನನ್ನು ಹೆತ್ತ ಎಂಬ ವಿಷಯ ಜನರ ಮಧ್ಯೆ ಇವೆ. ಅಂತೆಯೇ ಮಕ್ಕಳ ಭಾಗ್ಯವಿಲ್ಲದೆ ಪರಿತಪಿಸುತ್ತಿದ್ದ ಪಾಂಡ್ಯರಾಜನನ್ನು ಜನರು “ಮಹಾರಾಜರೇ ನೀವು ಯಾಕೆ ಶಿವನ ಹತ್ತಿರ ವರ ಕೇಳಬಾರದೆಂದರು. ಅದೇ ವೇಳೆಯಲ್ಲಿಯೇ ಪಾಂಡ್ಯರಾಜ ಕಾಳಿ ದೇಗುಲದಲ್ಲಿ ದೀಪ ಹಚ್ಚಬಾರದು. ಪೂಜೆಯನ್ನು ಕೂಡ ಮಾರಬಾರದು” ಎಂಬ ಕಟ್ಟಾಜ್ಞೆಯನ್ನು ವಿಧಿಸಿದ್ದರು. ಆದರೆ ಈ ವಿಧಿಯನ್ನು ‘ವಳೈಕಣ್ಣನ್’ (ಎಣ್ಣೆ ವ್ಯಾಪಾರಿ) ಎಂಬಾತನು ಮೀರುತ್ತಾನೆ. ಆಗ ಆ ದೇಗುಲದಲ್ಲಿ ವಳೈಕಣ್ಣನ್‌ನ ಸಾವು ಸಂಭವಿಸುತ್ತದೆ.

ಈ ರೀತಿಯಲ್ಲಿ ಕೊಲೆಗೆ ಆಹುತಿಯಾದ ವಳೈಕಣ್ಣನ್‌ನನ್ನು ಕಂಡಂತಹ ಕಾಳಿಮಾತೆ ತುಂಬ ಕೋಪಗೊಂಡಳು. ಆಗ ಪಾಂಡ್ಯರಾಣಿಯಾದ ‘ಕೊಪ್ಪುಲಿಂಗೆ ಅಮ್ಮ’ ಎಂಬಾಕೆಯ ಉದರದಲ್ಲಿ ಗರ್ಭಧರಿಸಿ ಪಾಂಡ್ಯಾರಾಜನಿಗೆ ತನ್ನ ಸೇಡು ತೀರಿಸಿಕೊಳ್ಳಲು ಮತ್ತು ಅವತಾರದ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ಮರುಜನ್ಮವನ್ನು ಪಡೆಯುತ್ತಾಳೆ. ಅಂದರೆ ಮಗು ಹುಟ್ಟಿದಾಗ ಒಂದು ಕಾಲಿನಲ್ಲಿ ಗೆಜ್ಜೆಯಿಂದ ಆವೃತ್ತವಾದ ಕಾಲ್ಕಡಗ, ಮತ್ತೊಂದು ಕಾಲಿನಲ್ಲಿ ಮುತ್ತಿನಿಂದ ಅಲಂಕೃತವಾದ ಕಾಲ್ಕಡಗವನ್ನು ಧರಿಸಿದಂತೆಯೇ ಮಗು ಹುಟ್ಟುತ್ತದೆ. ಈ ರೀತಿಯ ಆಶ್ಚರ್ಯಚಕಿತ ಮಗು ಹುಟ್ಟಿರುವುದನ್ನು ನೋಡಿ ರಾಜನು ಭಯಗೊಂಡನು. ತಕ್ಷಣ ತನ್ನ ನಾಡಿನನ ಜ್ಯೋತಿಷ್ಯರನ್ನು ಕರೆಸಿ ಮಗುವಿನ ಜಾತಕವನ್ನು ನೋಡಿಸಿದನು. ಆಗ ಹುಟ್ಟಿರುವ ಮಗುವಿನಿಂದ ರಾಜನಿಗೆ ಕೇಡುತಪ್ಪಿದ್ದಿಲ್ಲ ಎಂಬ ಮಾತು ತಿಳಿದುಬಂತು. ಈ ಕಂಟಕದಿಂದ ಪಾರಾಗಲು ಆ ಮಗುವನ್ನು ಚಿನ್ನದ ಪೆಟ್ಟಿಗೆಯೊಂದರಲ್ಲಿಟ್ಟು ದಕ್ಷಿಣ ದಿಕ್ಕಿನ ಒಣಗಿದ ಒಂದು ನದಿಯ ತೀರದಲ್ಲಿ ಗುಂಡಿಯೊಂದನ್ನು ತೋಡಿ ಹೂತು ಹಾಕಿಬಿಡುತ್ತಾರೆ. ಆ ಮಗು ಕಾಳಿಮಾತೆ ರೂಪದಲ್ಲಿ ಹುಟ್ಟಿದ್ದಾಳೆ ಎಂಬುದು ರಾಜನಿಗೆ ತಿಳಿದುಬಂದಿಲ್ಲ. ಇದಾದ ಸ್ವಲ್ಪ ದಿನಗಳ ಅನಂತರ ಭಾರಿ ಬಿರುಗಾಳಿಯ ಮಳೆ ಹೊಯ್ದುದರಿಂದ ನದಿ ಕೊಳ್ಳಗಳೆಲ್ಲ ಭೋರ್ಗರೆದು ಹರಿಯಿತು. ಈ ದೊಡ್ಡ ಪ್ರವಾಹದಲ್ಲಿ ಆ ಚಿನ್ನದ ಪೆಟ್ಟಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನದಿಯ ಮೇಲೆ ತೇಲುತ್ತಿತ್ತು. ಇತ್ತ ದೋಣಿಯ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವಾಳವಾತ್ತಂ ಚೆಟ್ಟಿಯ ಕೈಗೆ ತೇಲುತ್ತಿದ್ದ ಚಿನ್ನದ ಪೆಟ್ಟಿಗೆ ಸಿಕ್ಕಿತು. ಪೆಟ್ಟಿಗೆಯನ್ನು ತೆರೆದು ನೋಡಿದಾಗ ಹೆಣ್ಣು ಮಗು ಇದ್ದುದ್ದನ್ನು ಕಂಡು ಸಂತೋಷದಿಂದ ಎದೆಗೆ ಅಪ್ಪಿಕೊಂಡು ಮನೆಗೆ ಹೋಗಿ ‘ಕರ್ಣಗೈ’ ಎಂಬ ನಾಮಕರಣವನ್ನು ಮಾಡಿದನು. ಆ ಮಗು ಬೆಳೆದ ದೊಡ್ಡವಳಾದ ಮೇಲೆದ ವಂಡಿಯಾರ್ ಎಂಬ ಪಟ್ಟಣದಲ್ಲಿದ್ದ ಕೋವಿಲನಿಗೆ ಕೊಟ್ಟು ಮದುವೆ ಮಾಡಿದನು.

ಮದಿರಾಪುರಿ ಎಂಬ ಪಟ್ಟಣದಲ್ಲಿ ‘ಮಾದುಗೈ’ ಎಂಬ ಹೆಣ್ಣಿನ ನೃತ್ಯ ನೋಡಲು ಹೋದ ಕೋವಿಲನ್ ಅವಳ ಸೌಂದರ್ಯದ ಬಲೆಗೆ ಸಿಕ್ಕಿಕೊಳ್ಳುತ್ತಾನೆ. ಅನಂತರ ಮಾದಗೈ ಮತ್ತು ಆಕೆಯ ಮೇಲೆ ಕೋವಿಲವನ್ನು ಮನೆಯಿಂದ ಓಡಿಸಿ ಬಿಡುತ್ತಾರೆ. ಅನಂತರ ಕೋವಿಲನ್ ತನ್ನ ಕೈಹಿಡಿದ ಪತ್ನಿ ಕಣ್ಣಗೈ ಹತ್ತಿರ ಬರುತ್ತಾನೆ. ಕೋವಿಲನ್ ಮಾಡಿದ ಸಾಲವನ್ನು ತೀರಿಸಲು ಗಂಡ ಹೆಂಡತಿ ಇಬ್ಬರೂ ಮರುದಾಪುರಿ ಎಂಬ ಪಟ್ಟಣಕ್ಕೆ ಬರುತ್ತಾರೆ. ಆ ಊರಿನ ಆಯ್‌ಚ್ಚಿಯಾರ್ ಎಂಬುವರ ಮನೆಯಲ್ಲಿ ನೆಲೆಗೊಳ್ಳುತ್ತಾರೆ. ತನ್ನ ಗಂಡನ ಸಾಲವನ್ನು ತೀರಿಸುವ ಸಲುವಾಗಿ ಕರ್ಣಗೈ ತನ್ನ ಕಾಲಿನ ಕಾಲ್ಗಡವನ್ನು ಮಾರಲು ಕೊಡುತ್ತಾಳೆ. ಆ ಕಾಲ್ಕಡಗವನ್ನು ಮಾರಲು ಹೋದ ಕೋವಿಲನ್ ಚಿನ್ನದ ವ್ಯಾಪಾರಿಯ ಮೋಸಕ್ಕೆ ಒಳಗಾಗಿಯೂ ರಾಜನ ಅರಮನೆಯಿಂದ ರಾಣಿಯ ಕಾಲ್ಕಡಗವನ್ನು ಕದ್ದಿರುವವನು ಇವನೇ ಎಂದು ಸಾಬೀತಾಗಿ ಪಾಂಡ್ಯ ರಾಜನಿಂದ ಕೊಲೆಗೆ ಒಳಗಾಗುತ್ತಾನೆ. ಈ ಮಧ್ಯೆ ಕರ್ಣಗೈ ಒಂದು ಕೆಟ್ಟ ಕನಸು ಕಾಣುತ್ತಾಳೆ. ಅದೇ ವೇಳೆ ಆಯ್‌ಚ್ಚಿಯಾರ್ ಅಮ್ಮಿಣಿಯ ಮೂಲಕ ರಾಜನ ಆಸ್ಥಾನದಲ್ಲಿ ನಡೆದ ವಿಷಯವನ್ನೆಲ್ಲ ಸವಿವರವಾಗಿ ತಿಳಿದುಕೊಂಡ ಕರ್ಣಗೈ ತನ್ನ ಗಂಡ ಕೊಲೆಯಾದ ಸ್ಥಳವನ್ನು ಹುಡುಕಿ ಹೋಗುತ್ತಾಳೆ. ಅಲ್ಲಿ ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿದ್ದಿದ್ದ ಕೋವಿಲನ್ ದೇಹ ಪತಿವ್ರತೆಯ ಸ್ಪರ್ಶದಿಂದ ಗಂಡ ಬದುಕುತ್ತಾನೆ. ಹೀಗೆ ಮರುಜನ್ಮವನ್ನು ಪಡೆದ ಕೋವಿಲನ್ ತನ್ನ ಹೆಂಡತಿಯನ್ನು ಕುರಿತು ನೀನ್ಯಾರು ಎಂದು ಕೇಳಿದನು. ಹಾಗೆಯೇ ನೀನು ಮಾದುಗೈಯೋ ಕರ್ಣಗೈಯೋ ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿ ಅತೀವ ಕೋಪಗೊಂಡ ಕರ್ಣಗೈ ಇನ್ನೂ ಮಾದಗೈಯ ಮೇಲಿರುವ ಮೋಹ ಹೋಗಿಲ್ಲ ಎಂದು ಭಾವಿಸಿಕೊಂಡು ಜೀವದಾರವನ್ನು ಎಳೆದು ಬಿಡುತ್ತಾಳೆ. (ಕಾಣಿ ಎಂಬ ಜನರು ಪ್ರದರ್ಶಿಸುವ ಕತೆಗಳಲ್ಲಿ ಕೋವಿಲನ್ ದೇಹವನ್ನು ಜೋಡಿಸಿದ ಜೀವದಾರವನ್ನು ಕರ್ಣಗೈ ಎಳೆದು ಬಿಟ್ಟಳು ಎಂಬುದಾಗಿ ಕಥೆಯ ಹಂದರ ಬಂದಿದೆ).

ಅನಂತರ ಕರ್ಣಗೈಯು ಕಾಗೆಯ ಮೂಲಕ ಪತ್ರವನ್ನು ಕಳುಹಿಸಿ ಮಾದಗೈಯನ್ನು ಬರ ಹೇಳಿದಳು. ಇಟ್ಕೊಂಡವಳು ತಲೆಹಿಡುಕಿ, ಹೆಂಡತಿ ಕಾಲಿನ ಬೆಂಕಿ ಹೀಗೆ ಹೇಳಿ ಕರ್ಣಗೈ ತನ್ನ ಪತಿವ್ರತ ಧರ್ಮದಿಂದ ಚಟ್ಟಕ್ಕೆ ಬೆಂಕಿ ಹತ್ತಿ ಉರಿಯುವಂತೆ ಮಾಡುತ್ತಾಳೆ. ಆಗ ಮಾದೈಗೆ ಸಹ ಬೆಂಕಿಯಲ್ಲಿ ಬಿದ್ದು ಸಹಗಮನ ಮಾಡುತ್ತಾಳೆ.

ಅನಂತರ ಕರ್ಣಗೈ ಶೋಕಗೀತೆಯನ್ನು ಹಾಡುತ್ತ ಪಾಂಡ್ಯರಾಜನ ಅರಮನೆಗೆ ಹೋದಳು. ತನ್ನ ಗಂಡನ ಪರವಾಗಿ ನ್ಯಾಯ ಕೇಳಿದಳು. ಕೊನೆಯಲ್ಲಿ ಪಾಂಡ್ಯ ರಾಜನ ಅರಮನೆಗೆ ಬೆಂಕಿ ಸ್ಪರ್ಶವಾಗಿ ಸಂಪೂರ್ಣವಾಗಿ ಸುಟ್ಟು ಹೋಗುವಲ್ಲಿ ಕಥಾ ಭಾಗ ಮುಕ್ತಾಯಗೊಳ್ಳುತ್ತದೆ. ಅನಂತರ ಆ ನಾಡಿನಲ್ಲಿ ಮಳೆ ಹೊಯ್ದು ಪೈರು ಬೆಳೆದು ಹಿಂದಿನ ಸಮೃದ್ಧಿ ಅರಳುವಂತೆ ದೇವರಲ್ಲಿ ಪ್ರಾರ್ಥಿನೆ ಮಾಡುತ್ತಾರೆ.

ಕೊನೆಯ ಹಾಡಿನ ಭಾಗದಲ್ಲಿ ಉರೈನಡೈ(ಗದ್ಯ) ಶೈಲಿ ಇರುವುದನ್ನು ಹಿಂದಿನ ಕಾಲದ ಬೀದಿ ನಾಟಕಗಳನ್ನು ನೆನಪಿಗೆ ತರುತ್ತದೆ. ಹಾಗೆಯೇ ಸಂಭಾಷಣಾ ಶೈಲಿ ಮಧ್ಯೆ ಸುಮಧುರ ಸಂಗೀತ ಗೋಚರ ವಾಗುತ್ತದೆ.

ತನ್ನ ತನ್ನೇ ನಾನ ನಾನೇ
ತನ ತನ್ನಿನಾನ ನಾನೇ – ನಾನಾ
ಅಂದ ಚೆಂದದ ಬೆಳ್ಳಿಯ ಗಣಿಯೇ
ಅಲ್ಲಿ ತಾನಾಗಿಯೇ ಬೆಳೆದಿತ್ತು.

ಕಣ್ಣಗಿ ಕತೆಯ ಹಲವಾರು ಪಠ್ಯಗಳು ಮನ್ನಾನ್ ಎಂಬ ಜಾತಿಯವರಲ್ಲಿದೆ. ಇದರಲ್ಲಿ ಕೋವಿಲನ್ ಚರಿತ್ರೆಯೂ ಕೂಡ ಒಂದು. ಈ ಕಥಾ ಹಂದರ‍ದಲ್ಲಿ ಜನಪದ ಕುಣಿತದ ವಿವಿಧ ಬಗೆಗಳನ್ನು ಕಾಣಬಹುದಾಗಿದೆ.

– ಪಿ.ಎನ್. ಅನುವಾದ ಆರ್.ಎಸ್.

ಕೋಳಿ ಅಂಕ ಜನಪದ ಮನರಂಜನೆಗಳಲ್ಲಿ ಒಂದು. ಎರಡು ಹುಂಜಗಳ ನಡುವೆ ಕಾದಾಟ ಏರ್ಪಡಿಸಿ ಅವುಗಳ ಹೋರಾಟವನ್ನು ನೋಡಿ ಸಂತಸಪಡುವುದು ಇಲ್ಲಿಯ ಉದ್ದೇಶ. ಪ್ರಾಣಿ ಪ್ರಾಣಿಗಳ ನಡುವೆ ಉದ್ಭವಿಸುವ ವೈಷಮ್ಯ ಜಿದ್ದಾಜಿದ್ದಿಯನ್ನೇ ಬಂಡವಾಳ ಮಾಡಿಕೊಂಡು ಮನುಷ್ಯ ವಿಚಿತ್ರ ಬಗೆಯ ಸಂತೋಷ ಪಡೆಯಲುದ ಯತ್ನಿಸಿದಾಗಲೇ ಇಂಥ ಕೋಳಿ ಅಂಕ ಆರಂಭವಾಗಿರಬೇಕು. ಇದಕ್ಕೆ ಕೋಳಿಕಟ್ಟ, ಕೋಳಿಕಾಳಗ, ಕೋಳಿಪಡೆ ಎಂದು ನಾನಾ ಹೆಸರುಗಳಿವೆ. ಒಂದು ಕಾಲದಲ್ಲಿ ಕನ್ನಡ ನಾಡಿನ ಹಲವೆಡೆ ಇಂತ ಅಂಕಣಗಳು ನಡೆಯುತ್ತಿದ್ದವು. ಆದರೆ ಇದು ಈಗ ತುಳುನಾಡಿನಲ್ಲಿ ವ್ಯಾಪಕವಾಗಿ, ಮಲೆನಾಡು ಭಾಗದಲ್ಲಿ ಕ್ವಚಿತ್ತಾಗಿ ಕಂಡುಬರುತ್ತದೆ.

ಕೋಳಿ ಅಂಕ ಹಬ್ಬ, ಜಾತ್ರೆ, ನೇಮ, ಕಂಬಳ, ಅಮಾವಾಸ್ಯೆ, ಹುಣ್ಣಿಮೆ ಈ ಸಮಯಗಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಮನೆಗೆ ಬಂಧುಗಳು ಆಗಮಿಸಿದಾಗ ಅಥವಾ ಹಳ್ಳಿಯ ನಾಲ್ಕಾರು ಜನ ಒಟ್ಟಿಗೆ ಸೇರಿದಾಗ ‘ಕಿರುಕೋಳಿಕಟ್ಟ’ ಎಂದು ಆಡಿಸುವುದುಂಟು. ಹಾಗೆಯೇ ಸಾವಿರಾರು ಜನ ಸೇರಿ ನಾಲ್ಕು ದಿನಗಳವರೆಗೆ ಹಗಲು ರಾತ್ರಿ ನಡೆಯುವ ಕೋಳಿಕಾಳಗಗಳೂ ಇವೆ. ಕೋಳಿ ಅಂಕಕ್ಕೆ ವಿಶೇಷ ವೇದಿಕೆಯ ಅಗತ್ಯವಿಲ್ಲ. ವಿಶಾಲವಾದ ಬಯಲು, ಬೆಳೆ ಇಲ್ಲದ ಗದ್ದೆ ಸಿಕ್ಕಿದರೆ ಸಾಕು ಕೋಳಿ ಅಂಕ ಏರ್ಪಡಿಸಬಹುದು.

ಕೋಳಿ ಅಂಕಕ್ಕೆ ಕಳುಹಿಸುವ ಹುಂಜಗಳನ್ನು ಬಹಳ ಜತನದಿಂದ ಸಾಕಲಾಗುವುದು. ಅಂಕಕ್ಕೆ ಆಯ್ದ ಹುಂಜಗಳನ್ನು ಇತರ ಕೋಳಿಗಳೊಡನೆ ಬೆರೆಯಲು ಬಿಡುವುದಿಲ್ಲ. ಹಾಗಾಗಿ ಕಟ್ಟಿಯೇ ಸಾಕುತ್ತಾರೆ. ಇವುಗಳ ಚರ್ಮ ಒರಟಾಗಬೇಕೆಂದು ಬತ್ತವನ್ನು ಬೇಯಿಸಿ ಒಡೆದು ತಿನ್ನಲು ಹಾಕುತ್ತಾರೆ. ಪುಷ್ಪಿಯಾಗಿ ಬೆಳೆಯಲೆಂದು ಕೊಬ್ಬರಿ, ಕೋಳಿಮೊಟ್ಟೆ, ಬೆಣ್ಣೆ, ಬೇಯಿಸಿದ ಮೀನು, ಓಲೆಬೆಲ್ಲ ಮುಂತಾದವನ್ನು ಕೊಡುತ್ತಾರೆ.

ಅಂಕದ ಕೋಳಿಗಳಿಗೆ ತರಬೇತಿಯನ್ನೂ ನೀಡಲಾಗುವುದು. ಮೊದಲು ಅವುಗಳ ಕಾಲಿಗೆ ಕತ್ತಿ ಕಟ್ಟದೆ ಕಾಳಗವಾಡಿಸುವರು. ಕೆಲವರು ಕೋಲನ್ನು ಕಟ್ಟಿ ತರಬೇತಿ ಕೊಡುತ್ತಾರೆ. ಕೋಲಿ ಅಂಕದಲ್ಲಿಯೂ ಹಲವು ಬಗೆ. ಮೆಡ್ಲುಪಡೆ, ವಡ್ಡಿನ ಪಡೆ, ಬಹಿರಂಗ ಪಡೆ, ಪಂಜರದ ಪಡೆ ಇತ್ಯಾದಿ. ಮೆಡ್ಲುಪಡೆ ಎರಡು ಗುಂಪಿನ ನಡುವೆ ನಡೆಯುವಂಥದ್ದು. ಒಂದು ಕಡೆಯವರು ಮುಸುಕಿನಲ್ಲಿ ನಿಲ್ಲಿಸಿದ ಕೋಳಿಗಳಿಗೆ ಎದುರು ಗುಂಪಿನವರು ಸರಿಯಾದ ಪ್ರತಿಸ್ಪರ್ಧೆ ತೋರಿಸಬೇಕು. ಹೆಚ್ಚು ಕೋಳಿ ಗೆದ್ದ ಗುಂಪಿನವರಿಗೆ ಬಹುಮಾನ ದೊರೆಯುತ್ತದೆ. ವಡ್ಡಿನ ಪಡೆ ಎರಡು ಗ್ರಾಮದವರ ನಡುವೆ ಏರ್ಪಡುವಂಥದು. ಬಹಿರಂಗ ಪಡೆಯಲ್ಲಿ ಮುಸುಕು ಇರುವುದಿಲ್ಲ. ಕೋಳಿಯ ಒಡೆಯರೇ ತಮ್ಮ ಕೋಳಿಗೆ ಯೋಗ್ಯವಾದ ಕೋಳಿಯನ್ನು ಆರಿಸಬೇಕು. ಪಂಜರದ ಪಡೆಯಲ್ಲಿ ಎಲ್ಲ ಕೋಳಿಗಳನ್ನು ಪಂಜರದಲ್ಲಿ ಹಾಕುತ್ತಾರೆ. ಅವು ಪರಸ್ಪರ ಕಾದಾಡಿಕೊಳ್ಳುತ್ತ ಸಾಯುತ್ತವೆ. ಒಂದು ಕೋಳಿ ಮಾತ್ರ ಬದುಕುಳಿಯುತ್ತದೆ. ಸತ್ತ ಕೋಳಿಗಳು ಬದುಕಿದ ಕೋಳಿಯ ಕಡೆಯವರಿಗೆ ದೊರೆಯುತ್ತದೆ.

ಕೋಳಿಗಳಿಗೆ ತರಬೇತಿ ನೀಡಿದ ಬಳಿಕ ನಿರ್ದಿಷ್ಟವಾದ ದಿನದಂದು ಕೋಳಿ ಅಂಕ ಏರ್ಪಾಟಾಗುತ್ತದೆ. ತಮ್ಮ ಕೋಳಿಗಳನ್ನು ಕಾಳಗಕ್ಕೆ ಇಳಿಸುವ ಮೊದಲು ಪಂಚಾಂಗ ನೋಡಿಸುವ ಪರಿಪಾಟವಿದೆ. ಅದಕ್ಕಾಗಿ ಕುಕ್ಕುಟ ಪಂಚಾಂಗವೇ ಇರುತ್ತದೆ. ಇದರಲ್ಲಿ ಯಾವ ಯಾವ ವಾರ ಎಂಥ ಬಣ್ಣದ ಕೋಳಿಗೆ ಗೆಲುವಾಗುತ್ತದೆಂಬುದನ್ನು ನಿರೂಪಿಸಲಾಗುತ್ತದೆ. ಕೋಳಿ ಅಂ ಜನಪದದಿಂದ ಶಿಷ್ಟರೂಪ ತಳೆಯುತ್ತಿರುವುದರ ಕುರುಹು ಇದು. ಕೋಳಿ ಅಂಕಕ್ಕೆ ಪೂರ್ವಪ್ರಚಾರದ ಅಗತ್ಯ ಇಲ್ಲದಿದ್ದರೂ ಕಾರ್ಯಕ್ರಮದ ಬಗ್ಗೆ ಕರಪತ್ರಗಳನ್ನು ವಿತರಿಸುವುದಿದೆ.

ಕೋಳಿಗಳನ್ನು ಕಾಳಗಕ್ಕೆ ಬಿಡುವ ಮೊದಲು ಅವುಗಳ ಕಾಲಿಗೆ ಚಿಕ್ಕ ಕತ್ತಿಯನ್ನು ಕಟ್ಟುತ್ತಾರೆ. ಅದಕ್ಕೆ ‘ಬಾಳು’ ಎಂದು ಕರೆಯುವರು. ಇದು ಕೋಳಿಗಳ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಇದನ್ನು ಕಟ್ಟುವುದು ಕೂಡ ಒಂದು ಕಲೆಗಾರಿಕೆ. ಬಾಳು ಕಟ್ಟಲು ಬಳಸುವ ದಾರವೂ ವಿಶಿಷ್ಟವಾದುದು. ಬಾಳನ್ನು ಬಲಗಾಲಿನ ಹೆಬ್ಬೆರಳ ಬಳಿ ಹಿಮ್ಮುಖವಾಗಿ ಕಟ್ಟುವರು. ಇಂಥ ಪೂರ್ವಸಿದ್ಧತೆಗಳಾದ ಬಳಿಕ ಕೋಳಿ ಕಾಳಗ ಆರಂಭ.

ಕೋಳಿಕಾಳಗಕ್ಕೆ ಸಮಜೋಡಿಗಳನ್ನೇ ಕಳಿಸಲಾಗುವುದು. ಅವು ಗರಿ ಕೆದರಿಕೊಂಡು ಮುಖಾಮುಖಿಯಾಗುತ್ತಾ ಬಾಳು ಕಟ್ಟಿದ ಹಿಂಗಾಲಲ್ಲಿ ಹೊಡೆಯುತ್ತ ಕಾದಾಡುತ್ತವೆ. ಪ್ರೇಕ್ಷಕರೂ ಬಹಳ ಕಾತರದಿಂದ ನೋಡುತ್ತಾರೆ. ಯಾವ ಕೋಳಿ ಗೆಲ್ಲುವುದೆಂಬ ಪಂಥ ಕಟ್ಟುವುದೂ ಇದೆ. ಹಾಗಾಗಿ ಕೋಳಿ ಅಂಕವನ್ನು ಒಂದು ವಿಧದ ಜೂಜಾಟ ಎಂದು ಪರಿಗಣಿಸುವುದೂ ಉಂಟು. ಕೋಳಿಗಳು ಗಾಯಗೊಂಡರೆ ಚಿಕಿತ್ಸೆ ನೀಡುವವರೂ ಇರುತ್ತಾರೆ. ಕೋಳಿಗಳು ಹುರುಪಿನಿಂದ ಕಾದಾಡಲೆಂದು ಮದ್ಯಕುಡಿಸುವುದೂ ಉಂಟೆಂದು ಹೇಳುವರು. ಗದ್ದೆ ಕೋಳಿಯನ್ನು ‘ಬಂಟ’ಎನ್ನುತ್ತಾರೆ. ಸೋತಕೋಳಿಗೆ ವಟ್ಟೆ ಎನ್ನುವರು. ತುಳುನಾಡಿನಲ್ಲಿ ಭೂತಾರಾಧನೆಗೂ ‘ಕೋಳಿಕಟ್ಟ’ಕ್ಕೂ ಸಂಬಂಧವಿದೆ. ಭೂತಾರಾಧನೆಗೆ ಮೊದಲು ನಿರ್ದಿಷ್ಟ ದಿನದಂದು ಕೋಳಿಕುಂಟ ಎಂಬ ಸಂಪ್ರದಾಯವಿದೆ. ಆ ಭೂತಾರಾಧನೆಗೆ ಮಂಗಳಕಾರ್ಯ ನಡೆಸಬಾರದೆಂಬ ನಂಬಿಕೆ ಇದೆ. ಕೋಳಿಕಟ್ಟದಿಂದ ತಾವು ನಂಬಿರುವ ದೈವಗಳು ತೃಪ್ತರಾಗುತ್ತವೆ ಎಂಬ ಭಾವನೆಯೂ ಅನೇಕರಲ್ಲಿದೆ. ಹೀಗೆ ಕೋಳಿ ಅಂಕಕ್ಕೆ ಹಲವು ಮಜಲುಗಳಿವೆ. ಅದು ಜನಪದ ಚೌಕಟ್ಟನ್ನು ಮೀರಿ ವಿಭಿನ್ನ ರೀತಿಯಲ್ಲಿ ಬೆಳೆದಿದೆ.

– ವೈ.ಸಿ.ಬಿ.