ಕಾವ್ ಕೇರಳದ ಪ್ರಾಚೀನ ಆರಾಧನೆಯ ಸಂಕೇತಗಳಲ್ಲಲಿ ‘ಕಾವ್’ ಪ್ರಮುಖವಾದುದು. (ಕಾವ್ ಅಂದರೆ ಬನ, ದೇವರ ಕಾಡು ಎಂದರ್ಥ). ಮರಗಳೂ ಬಳ್ಳಿಗಳೂ, ಪೊದೆಗಳೂ ದಟ್ಟವಾಗಿ ಸೇರಿರುವ ಪವಿತ್ತವಾದ ವನಭೂಮಿಗಳಿವು. ಅನಾದಿಕಾಲದಿಂದಲೂ ನಮ್ಮಲ್ಲಿದ್ದ ವೃಕ್ಷಾರಾಧನೆಯ ಮುಂದುವರಿಕೆಯಾಗಿ ಈ ಬನಗಳನ್ನು ಪರಿಗಣಿಸಬಹುದು. ನಮ್ಮ ಗ್ರಾಮದೇವತೆಗಳೆಲ್ಲಾ ಮರಗಿಡಗಳ ಜತೆ ಸಂಬಂಧವುಳ್ಳವುಗಳೇ ಆಗಿವೆ. ಮಾರಿಯಮ್ಮ ವೃಕ್ಷದೇವತೆಯಾಗಿಯೇ ಗುರುತಿಸಲ್ಪಡುತ್ತಾಳೆ. ಯಕ್ಷಿಗಳು ಪಾಲೆಮರದಲ್ಲೂ, ಕಾಲಿಚ್ಚಾನ್ ದೈವವು ಕಾಸರಕನ ಮರದಲ್ಲೂ ಇರುವುದೆಂದು ಪ್ರತೀತಿ. ಸಂಪಿಗೆ ಮರವು ಗುಳಿಗನ ವಾಸಸ್ಥಾನವೆಂದೇ ನಂಬಿಕೆ. ಮರಗಳಿಗೂ ದೇವತೆಗಳಿಗೂ ಇರುವ ಈ ಸಂಬಂಧವೇ ಕಾವ್ (ಬನ) ಎಂಬ ವೃಕ್ಷ ಸಮೂಹದ ಕಲ್ಪನೆ ಮತ್ತು ಅದನ್ನು ಬೆಳೆಸಿ ಉಳಿಸುವ ಪ್ರಕ್ರಿಯೆಗೆ ಕಾರಣವಾಯಿತು.

ವನಭೂಮಿಯಿಲ್ಲದ ಕೇವಲ ಆರಾಧನೆಯ ತಾಣಗಳಾಗಿ ಮಾತ್ರ ಉಳಿದು ಬಂದ ಹಲವು ‘ಕಾವ್‌’ಗಳು ಇಂದು ನಮ್ಮಲ್ಲಿವೆ. ಅಲ್ಲೆಲ್ಲಾ ಹಿಂದೆ ಇದ್ದ ‘ಪವಿತ್ರ ಕಾಡು’ ಗಳು ನಾಶವಾಗಿವೆ. ಕೇವಲ ಆರಾಧನಾಲಯಗಳಾಗಿ ಮಾತ್ರ ಅವು ಉಳಿದುಕೊಂಡಿವೆ. ಹಿಂದೆ ವನವಾಸಿಗಳಾಗಿದ್ದ ದೇವತೆಗಳು ಮುಂದೆ ಗುಡಿಯೊಳಗೆ ಪ್ರತಿಷ್ಠಾಪಿಸಲ್ಪಟ್ಟಾಗ, ಆ ಹಳೆಯ ನೆನಪುಗಳ ಬಲದಲ್ಲಷ್ಟೆ ಅವುಗಳ ‘ಕಾವು’ಗಳೆಂದು ಗುರುತಿಸಲ್ಪಡುತ್ತದೆ. ಹೀಗಾಗಿ ಕೇರಳದಲ್ಲೆಡೆ ಇಂದು ಮರಗಳೇ ಇಲ್ಲದ,ಗುಡಿ ಕಟ್ಟಡಗಳು ಮಾತ್ರ ಇರುವ ‘ಕಾವು’ಗಳು ಮತ್ತು ವೃಕ್ಷ ಸಮೂಹಗಳಿಂದ ಸುತ್ತುವರಿಯಲ್ಪಟ್ಟ ದೇವತಾಣವಾದ ‘ಕಾವು’ಗಳು ಎಂಬ ಎರಡು ವಿಧದ ‘ಕಾವ್’ಗಳನ್ನು ನೋಡಬಹುದು.

ಉತ್ತರ ಕೇರಳದ ‘ಕಾವ್‌’ಗಳಲ್ಲಿ ಹೆಚ್ಚಿನವುಗಳೂ ಭೂತಾರಾಧನೆಯ ಕೇಂದ್ರಗಳೂ ಆಗಿವೆ. ವೃಕ್ಷ ಸಮೂಹಗಳಿಂದ ಕೂಡಿದ ಕಾವ್‌ಗಳಲ್ಲಿ ದೇವತೆಯನ್ನು ಸಂಕೇತಿಸುವ ಕಲ್ಲೋ, ಪೀಠವೋ, ಮರಕ್ಕೆ ನಾಟಲ್ಪಟ್ಟ ತೂಗುದೀಪವೋ, ಶೂಲವೋ ಇರುವುದನ್ನು ಕಾಣಬಹುದು. ಅವುಗಳನ್ನೇ ಪೂಜಿಸಲಾಗುತ್ತದೆ. ಹೆಚ್ಚಿನ ಕಡೆ ‘ಕಾವ್’ನ ಪಕ್ಕದಲ್ಲೇ ಚಿಕ್ಕದೊಂದು ‘ಸ್ಥಾನ’ (ಗುಡಿ) ಇರುತ್ತದೆ. ಇಲ್ಲಿ ಗ್ರಾಮದೇವತೆಗಳ ವಾರ್ಷಿಕ ಉತ್ಸವಗಳೂ, ಭೂತಾರಾಧನೆಯ ಆಚರಣೆಗಳೂ ನಡೆಯುತ್ತವೆ. ಇವುಗಳು ಪಳ್ಳಿಯರ, ಅರೆಕಾಲ್, ಭಂಡಾರದ ಮನೆ, ತಾನ, ಬೂಡು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತವೆ. ‘ಕಾವ್’ನಲ್ಲಿ ನೆಲೆನಿಂತಿರುವ ಪ್ರಮುಖ ದೇವತೆ ಮತ್ತು ಆ ದೇವತೆಯ ಅಧೀನವಾಗಿರುವ ಇತರ ಉಪದೇವತೆಗಳನ್ನ ಇಂತಹ ‘ಸ್ಥಾನ’ಗಳಲ್ಲಿ ದೈವದ ಪಾತ್ರಿಗಳು ಮೈಮೇಲೆ ಆವಾಹಿಸಿಕೊಂಡು ನರ್ತಿಸುತ್ತಾರೆ, ಇದಕ್ಕೆ ‘ತೆಯ್ಯಂ’ (ಭೂತಾರಾಧನೆ) ಎನ್ನುತ್ತಾರೆ.

‘ಕಾವ್’ಗಳಲ್ಲಿ ಹೆಚ್ಚಿನವುಗಳು ಭಗವತೀ ಆರಾಧನೆಯ ಕೇಂದ್ರಗಳು. ಹೆಚ್ಚಿನ ಗ್ರಾಮದೇವತೆಯೂ ಸ್ತ್ರೀರೂಪೀ ದೇವತೆಯಾದ ಭಗವತಿಯೇ ಆಗಿರುತ್ತಾಳೆ. ಆಯಾ ಗ್ರಾಮದ ಹೆಸರಿನಲ್ಲೇ ಆಯಾ ಭಗವತಿಯೂ ಕರೆಯಲ್ಪಡುತ್ತಾಳೆ. ಉದಾಹರಣೆಗ, ತಿರುವನ್‌ಕಾಡ್‌ ಕಾವ್ (ತಿರುವನ್‌ಕಾಡ್‌ ಭಗವತಿ), ಚೀರುಮ್ಮ ಕಾವ್ (ಚೀರುಂಬ/ಕುರುಂಬ ಭಗವತಿ), ಮುಚ್ಚಿಲೋಟ್ಟ್ (ಮುಚ್ಚಿಲೋಟ್ಟ್ ಭಗವತಿ), ಕಣ್ಣಂಗಾಡು ಕಾವ್ (ಕಣ್ಣಂಗಾಟ್ಟು ಭಗವತಿ), ಪೈಚ್ಚಿ ಕಾವ್ (ಪೈಚ್ಚಿ/ಪಳಶ್ಶಿ ಭಗವತಿ), ಪ್ರಮಾಂಚೇರಿ ಕಾವ್ (ಪ್ರಮಾಂಚೇರಿ ಭಗವತಿ), ಕಕ್ಕರ ಕಾವ್ (ಕಕ್ಕರ ಭಗವತಿ), ಕಾಪ್ಪಾಟ್ಟು ಕಾವ (ಕಾಪ್ಪಾಟ್ಟು ಭಗವತಿ), ಪಾರಮೇಲ್ ಕಾವ್ (ಪಾರಮೇಲ್ ಭಗವತಿ), ವಲ್ಲಾರ್ ಕುಳಙ್ಙರ ಕಾವ್ (ವಲ್ಲಾರ್ ಕುಳಙ್ಙರ ಭಗವತಿ) ಅಡೂಣತ್ತ್ ಕಾವ್ (ಅಡೂಣತ್ತ್ ಭಗವತಿ) ಇತ್ಯಾದಿ ನಾಡಿನಾದ್ಯಂತ ಭಗವತಿ ಕಾವ್‌ಗಳು ಧಾರಾಳವಾಗಿ ಕಾಣಸಿಗುತ್ತವೆ. ಮಾಡಾಯಿ ಕಾವ್‌, ತವಿರಿಶ್ಶೇರಿ ಕಾವ್, ಮೀಂತುಳ್ಳಿ ಕಾವ್, ವಡಶ್ಶೇರಿ ಕಾವ್ ಮುಂತಾದ ಕಾವ್‌ಗಳು ಆಯಾ ಪ್ರದೇಶಗಳಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿವೆ. ಪಾಲೋಟ್ಟ್‌ ಕಾವ್, ಊರ್‌ಪೇಶಿ ಕಾವ್ ಎಂಬಿವುಗಳು ಪುರುಷ ದೈವಗಳನ್ನು ಹೊಂದಿರುವ ಕಾವುಗಳು. ಒಂದೇ ಹೆಸರಿನ ಕಾವ್‌ಗಳು ಹಲವೆಡೆಗಳಲ್ಲಿ ಇರುವುದೂ ಇದೆ. ಮುಚ್ಚಿಲೋಟ್ಟ್ ಕಾವ್, ಪೂಮಾಲ ಕಾವ್ ಇತ್ಯಾದಿಗಳು ಇವುಗಳಿಗೆ ಉದಾಹರಣೆಗಳು.

ಕೆಲವು ನಿರ್ದಿಷ್ಟ ಜಾಡಿಯವರಿಗೆ ಸೇರಿದ ಕಾವುಗಳೂ ಇರುವುದಿದೆ. ಕೆಲವೆಡೆ ಇವುಗಳಿಗೆ ‘ಮಂಡ್ಯ’ ಎಂತಲೂ ಕರೆಯುತ್ತಾರೆ. ಇಂತಹ ಕೇಂದ್ರಗಳು ಹಿಂದೆ ಬೇಟೆಯ ಸ್ಥಳದ ಸಂಕೇತಗಳೂ ಆಗಿದ್ದುವು. ಇಲ್ಲಿ ಭೂತದ ಕೋಲಗಳು ನಡೆಯುತ್ತವೆ. ಇವುಗಳಲ್ಲಿ ಹೆಚ್ಚಿನವುಗಳೂ ತೀಯ (ಬಿಲ್ಲವ/ಈಡಿಗ) ಸಮುದಾಯದವರಿಗೆ ಸೇರಿದವುಗಳೇ ಆಗಿವೆ. ಉತ್ತರ ಕೇರಳದ ಚೀಮೇನಿ ಎಂಬಲ್ಲಿಯ ಮುಂಡ್ಯವು ಮಣಿಯಾಣಿ (ಗಾಣಿಗ)ಯವರದ್ದೆಂದು ಹೇಳಲಾಗುತ್ತದೆ. ಇಂತಹ ಮುಂಡ್ಯಗಳಲ್ಲಿ ವಯನಾಟ್ಟು ಕುಲವನ್, ವಿಷ್ಣುಮೂರ್ತಿ, ಚಾಮುಂಡಿ ಮುಂತಾದ ಭೂತಗಳ ಸಂಕೇತಗಳಿದ್ದು ಅಲ್ಲಿ ಅವುಗಳಿಗೆ ಭೂತಾರಾಧನೆಗಳು ನಡೆಯುತ್ತವೆ.

ಚಿತ್ರಕೂಟ ಮತ್ತು ನಾಗಪ್ರತಿಷ್ಠೆಗಳಿಗಿರುವ ಸರ್ಪಕಾವ್ (ನಾಗಬನ)ಗಳೂ ಕೇರಳಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಸಾಮಾನ್ಯವಾಗಿ ದೇವಾಲಯಗಳು ಮತ್ತು ಭೂತಾರಾಧನಾಲಯಗಳ ಭಾಗಗಳಾಗಿ ಇಂತಹ ನಾಗಬನಗಳು ಇರುತ್ತವೆ. ಕೆಲವು ಮನೆತನಗಳ ಮೂಲಮನೆಗಳಲ್ಲೂ ನಾಗಬನ ಇರುವುದಿದೆ. ಉತ್ತರ ಕೇರಳದ ಹಲವು ನಾಗಬನಗಳಲ್ಲಿ ಪ್ರತಿವರ್ಷವೂ ನಾಗ ದೈವ ಆರಾಧನೆಗಳು ನಡೆಯುತ್ತವೆ. ನಾಗೇನಿ ಅಮ್ಮ, ನಾಗೇನಿ ರಾಜ ಎಂಬಿತ್ಯಾದಿ ನಾಗದೈವದ ರೂಪಗಳಲ್ಲಿ ಇಲ್ಲಿ ಆರಾಧನೆಗಳು ನಡೆಯುವ ಪದ್ಧತಿಯಿದೆ. ಇವುಗಳಲ್ಲಿ ಕರಿಪ್ಪಾಲ್ ನಾಗ, ಕಯತ್ತು ನಾಗ, ಎರುಪಾಲ ನಾಗ, ಎಡಾಟ್ಟು ನಾಗ ಇತ್ಯಾದಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಮೇಲೆ ಹೇಳೀದ ಕಾವ್‌ಗಳಲ್ಲದೆ ಅಯ್ಯಪ್ಪನ್ ಕಾವ್, ಗಣಪತಿ ಕಾವ್ ಇತ್ಯಾದಿ ವಿವಿಧ ರೀತಿಯ ಕಾವ್‌ಗಳು ಕೇರಳದಲ್ಲಿ ಕಾನಸಿಗುತ್ತವೆ.

ಇಂತಹ ಕಾವ್‌ಗಳಲ್ಲ ಪಾಟ್ಟ್ (ಸ್ತುತಿ), ಕಳಂ(ಬಣ್ಣದ ಹುಡಿಗಳಿಂದ ರಂಗೋಲಿ ರೂಪದಲ್ಲಿ ದೇವರ ಚಿತ್ರ ಬಿಡಿಸಿ ಪೂಜಿಸುವ ಕ್ರಮ), ವೇಲ, ತೀಯಾಟ್ಟ್ (ಅಗ್ನಿಸೇವೆ), ಕಳಿಯಾಟ್ಟಂ (ಭೂತಾರಾಧನೆ), ತಣ್ಣೀರಮೃತ ಸೇವೆ, ತಾಲಪ್ಪೊಲಿ (ದೀಪಗಳ ಮೆರವಣಿಗೆ), ಚುಟ್ಟುವಿಳಕ್ಕ್ (ಗುಡಿಯ ಸುತ್ತಲೂ ದೀಪಗಳನ್ನು ಉರಿಸಿ ನಡೆಸುವ ಪೂಜೆ) ಕೂತ್ತ್, ತಿರ, ಕಲಶ ಇತ್ಯಾದಿ ನಾನಾ ಬಗೆಯ ಆರಾಧನಾ ರೀತಿಗಳು ನಡೆಯುತ್ತವೆ. ಪ್ರಾದೇಶಿಕ ವೈಶಿಷ್ಟ್ಯಗಳು ಎನ್ನುವಂತೆ ಕೆಲವೆಡೆ ಕೆಲವು ಆಚರನೆಗಳು ಪ್ರಮುಖವಾಗಿರುತ್ತವೆ. ಇವುಗಳಲ್ಲದೆ, ವಿಷು, ಸಂಕ್ರಾಂತಿ, ಹೊಸ್ತಾರೋಗಣೆ ಇತ್ಯಾದಿ ವಾರ್ಷಿಕ ವಿಶೇಷ ದಿನಗಳನ್ನೂ ಇಂತಹ ಕಾವ್‌ಗಳಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ.

ಕೋಟ್ಟಂ : ಕಾವುಗಳಂತೆ ‘ಕೋಟ್ಟಂ’ ಎನ್ನುವ ಕೆಲವು ಆರಾಧನಾ ಕೇಂದ್ರಗಳೂ ಇವೆ. ಇಲ್ಲಿ ಕಾವ್‌ನಲ್ಲಿರುವಂತೆ ವೃಕ್ಷಸಮೂಹ ಗಳಿರುವುದಿಲ್ಲ. ಗರ್ಭಗುಡಿ ಮತ್ತು ಸುತ್ತಲೂ ಎತ್ತರದ ಗೋಡೆಗಳ ಆವರಣವಿರುವ ಕ್ಷೇತ್ರಸನ್ನಿಧಿಗಳಿವು. ಭಗವತಿ ಕೋಟ್ಟಂ, ದೈವತ್ತಾರ್ ಕೋಟ್ಟಂ, ವೇಟ್ಟಕ್ಕೂರುಮಗನ್ ಕೋಟ್ಟಂ, ವೈರಜಾತನ್ ಕೋಟ್ಟಂ, ಪೊಟ್ಟನ್ ಕೋಟ್ಟಂ, ಚಾಮುಂಡಿ ಕೋಟ್ಟಂ, ಕರಿಯಾತ್ತನ್ ಕೋಟ್ಟಂ ಮುಂತಾದ ದೇವ ದೇವತೆಗಳ ಹೆಸರಿನಲ್ಲಿ ಕರೆಯಲ್ಪಡುವ ಕೋಟ್ಟಗಳು ಹಲವಾದರೆ, ವಳಂಜಿಯಾರ್ ಕೋಟ್ಟಂ, ಪುಲಯರ್ ಕೋಟ್ಟಂ ಇತ್ಯಾದಿ ಜಾತಿಸೂಚಕದಲ್ಲಿ ಕರೆಯಲ್ಪಡುವ ಕೋಟ್ಟಂಗಳೂ ಇವೆ. ಕಯ್ಯತ್ತ್ ಕೋಟ್ಟಂ, ಮಯ್ಯತ್ತ್ ಕೋಟ್ಟಂ, ಪಟ್ಟಾಣಿ ಕೋಟ್ಟಂ ಮುಳಙ್ಙತ್ತೇ ಕೋಟ್ಟಂ ಇತ್ಯಾದಿಗಳು ಸ್ಥಳನಾಮಗಳಲ್ಲಿ ಗುರುತಿಸಲ್ಪಡುತ್ತವೆ. ‘ನಾಯರ್‌’ನಿಂದ ‘ಪುಲಯರ್’ ವರೆಗಿನ ವಿವಿಧ ಜಾತಿಗಳವರೆಗೆ ಅವರವರದ್ದೇ ಆದ ಕೊಟ್ಟಗಳಿರುತ್ತವೆ ಮತ್ತು ಅವು ಅವರಿಗೆ ಕುಟುಂಬದ ದೇವಸ್ಥಾನಗಳೂ ಆಗಿರುತ್ತವೆ. ವಿಗ್ರಹರೂಪಿಯಾದ ದೈವದ ಪ್ರತಿಷ್ಠೆ ಇವುಗಳಲ್ಲಿರುತ್ತವೆ. ಹೆಚ್ಚಿನ ಕಡೆ ಬ್ರಾಹ್ಮಣರಿಂದಲೇ ನಿತ್ಯಪೂಜಾದಿ ಕಾರ್ಯಗಳು ನಡೆಯುತ್ತವೆ. ವಾರ್ಷಿಕ ಕಳಿಯಾಟ ಆಚರಣೆಗಳೂ ಇಲ್ಲಿ ಇರುತ್ತವೆ.

ಕೇರಳದ ಕಾವ್‌ಗಳಲ್ಲಿ ಹೆಚ್ಚಿನವುಗಳು ಇಂದು ನಾಶೋನ್ಮುಖವಾಗಿವೆ. ಹಲವೆಡೆ ಕಾವ್‌ಗಳ ಜಾಗವನ್ನು ಅತಿಕ್ರಮಿಸಲಾಗಿದೆ. ಕಾವ್‌ಗಳ ಸಮಕಾಲೀನ ಪ್ರಸ್ತುತತೆಯನ್ನು ಕುರಿತಂತೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಡಾ. ಎಂ.ವಿ.ವಿಷ್ಣು ನಂಬೂದಿರಿ ಅವರ ‘ತೋಟ್ಟಂ ಪಾಟ್ಟುಗಳ್ – ಒರು ಪಠನಂ’, ಘೋಕ್‌ಲೋರ್ ನಿಘಂಟು; ಡಾ. ರಾಘವನ್ ಪಯ್ಯನಾಡ್ ಅವರ ‘ಫೋಕ್‌ಲೋರ್ ಪಠನ ಪದ್ಧತಿ’; ಡಾ. ಇ, ಉಣ್ಣಿಕೃಷ್ಣನ್ ಅವರ ‘ಉತ್ತರ ಕೇರಳತ್ತಿಲೆ ವಿಶುದ್ಧ ವನಂಗಳ್’; ಎಂ.ಎಸ್.ನಾಯರ್ ಅವರ ‘ಮಾಡಾಯಿ ಕಾವ್ – ಒರು ಪಠನಂ’ ಇತ್ಯಾದಿ ಜನಪದ ಅಧ್ಯಯನವು ಗ್ರಂಥಗಳು ಕಾವ್‌ನ ಬಗ್ಗೆ ಸಾಕಷ್ಟು ವಿವರಗಳನ್ನು ಒಳಗೊಂಡಿವೆ.

– ವಿ.ಎಂ.ಯು. ಅನುವಾದ ವಿ.ಸಿ.

ಕಾವಡಿಯಾಟ್ಟಂ ತಮಿಳುನಾಡಿನ ಪ್ರಸಿದ್ಧ ಕುಣಿತ. ಜನರು ಆಚರಿಸುವ ಎಲ್ಲಾ ಕ್ರಿಯಾಚರಣೆಗಳ ಹಿಂದೆಯೂ ಒಂದು ನಿರ್ದಿಷ್ಟ ಉದ್ಧೇಶವಿದ್ದೇ ಇರುತ್ತದೆ. ಅಂತೆಯೇ ತಮಿಳುನಾಡು ಭಾಗಗಳಲ್ಲಿ ಕಂಡುಬರುವ ಆಟ ಅಥವಾ ಪ್ರದರ್ಶಕ ಕಲೆಗಳಲ್ಲಿ ‘ಕಾವಡಿ ಆಟ’ವೂ ಒಂದು. ‘ಕಾವಡಿ ಎಡುತ್ತಲ್’ (ಕಾವಡಿ ಎತ್ತುವುದು) ಸುಬ್ರಹ್ಮಣ್ಯ ಸ್ವಾಮಿ ಪೂಜೆಯಲ್ಲಿ ‘ಕಾವಡಿ’ ಎನಿಸಿದೆ. ಇದನ್ನು ಕಾಲಹರಣಕ್ಕೂ ಆಡುತ್ತಾರೆ. ಎಂಬ ಪ್ರತೀತಿ ಇದೆ. ಕಾವಡಿ ಕುಣಿತದಲ್ಲಿ ಸಂಖ್ಯೆಯ ಮಿತಿ ಇಲ್ಲದಂತೆ ನೂರಾರು ಮಂದಿ ಹೆಗಲ ಮೇಲೆ ಕಾವಡಿ ಹೊತ್ತು ‘ಕಾವಡಿ ಕೊಟ್ಟು’ ಎಂಬ ಸಂಗೀತಕ್ಕೆ ತಕ್ಕಂತೆ ಒಂದೇ ಸಮಯದಲ್ಲಿ ಹೆಂಗಸರೂ ಗಂಡಸರೂ ಕೂಡಿ ಆಡುತ್ತಾರೆ. ಅದಕ್ಕಾಗಿ ಈ ಕಾವಡಿ ಆಟಕ್ಕೆ ವಿಶಾಲವಾದ ರಸ್ತೆ, ಬಯಲು ರಂಗಸ್ಥಳ ಬೇಕಾಗುತ್ತದೆ.

ಕಾವಡಿ ಹೊತ್ತುಕೊಂಡು ಪಾದಚಾರಿಯಾಗಿ ಬರುವ ಭಕ್ತರು ರಸ್ತೆಯುದ್ದಕ್ಕೂ ದೇವರ ಹಾಡುಗಳನ್ನು ಹಾಡುತ್ತ ಗುಂಪು ಗುಂಪಾಗಿ ಬರುತ್ತಾರೆ. ಕಾವಡಿ ಆಟದ ಸೌಂದರ್ಯ ವರ್ಧನೆಯಲ್ಲಿ ವೃತ್ತಿಗಾಯಕ ಕಲಾವಿದರು ನಿಸ್ಸೀಮರು ‘ನೈಯ್ಯಾಂಡಿ ಮೇಳ’ದ ಜೊತೆ ಕಾವಡಿ ಹೊತ್ತ ಭಕ್ತರ ಹಾಡಿಗೆ ದೊರತರೆ ಅದರ ಆಕರ್ಷಣೆ ಮತ್ತೂ ಹೆಚ್ಚಾಗುತ್ತದೆ. ಹಾಗಾಗಿ ಕಾವಡಿ ಚಿಂದು ಆಟ ಛಂದೋಲನಕ್ಕೆ ಬದ್ಧವಾಗಿದೆ ಎನ್ನಬಹುದು. ತಮಿಳುನಾಡಿನ ‘ಕಾವಡಿ ಆಟ’ ಕರ್ನಾಟಕದ ಬೆಂಗಳೂರು ಮೈಸೂರಿನಲ್ಲಿ ಕಾಣುವ ‘ಕರಗದ ಕುಣಿತ’, ಮಂಡ್ಯ, ಮದ್ದೂರು ಭಾಗದಲ್ಲಿಯ ‘ಪೂಜಾಕುಣಿತ’ ಒಂದೇ ಮೂಲದ ಆಟ, ಆದರೆ ಭಿನ್ನ ರೂಪಗಳು ಎನಿಸುತ್ತದೆ.

25

ಕಾವಡಿ ಹೊತ್ತ ಕಲಾವಿದರು ತಲೆಯಿಂದ ಕಾಲಿನವರೆಗೂ ಕಾವಡಿಯನ್ನು – ಕರಗವನ್ನು ಕೈಯಿಂದ ಮುಟ್ಟದೆ ನೇರವಾಗಿ, ವೃತ್ತಾಕಾರವಾಗಿ ಕುಣಿಯುವುದು, ಇದ್ದಲ್ಲಿಯೇ ಜಿಗಿಯುವುದು, ಮೂಗಿನಲ್ಲಿ ರೂಪಾಯಿ ನೋಟು, ಸೂಜಿಗಳನ್ನು ಎತ್ತುವುದು ಒಂದು ಬಗೆಯ ಸಾಹಸವೂ ಆಗಿದೆ. ಈ ಎಲ್ಲವೂ ಭಕ್ತಿಯ ಹಿನ್ನೆಲೆಯಲ್ಲಿಯೇ ರೂಪುಪಡೆದಿದ್ದರೂ ಜನರನ್ನು ತಮ್ಮತ್ತ ಆಕರ್ಷಿಸುವ ವಿವಿಧ ಬಗೆಗಳಾಗಿವೆ.

ಕಾವಡಿ ಆಟ ತಮಿಳರ ದೈವ ನಂಬಿಕೆ, ಕಲಾ ಪ್ರೇಮ ಹಾಗೂ ಪರಂಪರೆಯ ಕುರುಹಾಗಿ ಪ್ರದರ್ಶನಗೊಳ್ಳುತ್ತಿದೆ.

– ಓ.ಎಂ. ಅನುವಾದ ಆರ್.ಎಸ್.

ಕಾವಡಿ ಹಬ್ಬ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ತುಮಕೂರು ಜಿಲ್ಲೆಗಳ್ಲಿ ಕಂಡು ಬರುವ ಧಾರ್ಮಿಕ ಸಂಬಂಧದ ಒಂದು ಜನಪದ ಆಚರಣೆ. ತಮಿಳಿರಿಗೆ ಪವಿತ್ರ ಎನಿಸುವ ಆಷಾಢಮಾಸದ ನಿರ್ದಿಷ್ಟ ದಿನದಂದು ಹರಕೆಯನ್ನು ಹೊತ್ತವರು ಕಾವಡಿಯನ್ನು ಹೊತ್ತು ದೈವಸನ್ನಿಧಿಗೆ ಹೋಗುವ ಪರಿಪಾಠವಿದೆ. ಇದು ತಮಿಳುನಾಡಿನ ಕರ್ನಾಟಕಕ್ಕೆ ವಲಸೆ ಬಂದ ಕಲೆ. ತೆಳುವಾದ ಮರದ ಹಲಗೆಯನ್ನು ಅರ್ಧಚಂದ್ರಕಾರದಲ್ಲಿ ಕಮಾನಿನಂತೆ ಬಾಗಿಸಿ ನಯವಾದ ಅಡ್ಡಪಟ್ಟಿ ಜೋಡಿಸಿ ಕಾವಡಿ ಸಿದ್ಧಪಡಿಸುತ್ತಾರೆ. ಕಾವಡಿ ಕುಣಿತ ಮಾಡುವವರಿಗೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಕಾವಡಿ ಹೊತ್ತು ಕುಣಿತ ಮಾಡುವ ಸಂದರ್ಭದಲ್ಲಿ ಉಪವಾಸ ಇರಬೇಕಾಗುತ್ತದೆ. ಹಾಗೆಯೇ ಮಾಂಸಭಕ್ಷಣೇ ನಿಷೇಧ. ಕಾವಡಿ ಹೊತ್ತ ಕಲಾವಿದ ಕಚ್ಚೆಪಂಚೆ ಉಟ್ಟು ಕಾಲಿಗೆ ಗೆಜ್ಜೆ ಕಟ್ಟುವನು. ಕಾವಡಿ ಹಬ್ಬದಲ್ಲಿ ಭಕ್ತನಾದವನು ಕೆಂಪು – ಹಳದಿ ಬಟ್ಟೆಯನ್ನು ಧರಿಸಬೇಕಾದದ್ದು ಸಂಪ್ರದಾಯ. ಇದರಲ್ಲಿ ಸ್ತ್ರೀ – ಪುರುಷ ಎಂಬ ಭೇದಭಾವವಿಲ್ಲ.

ಕಾವಡಿ ಹಬ್ಬ ಸಾಮಾನ್ಯವಾಗಿ ಸುಬ್ರಹ್ಮಣ್ಯಸ್ವಾಮಿಯ ದೇವಾಲಯಗಳ ಮುಂದೆಯೇ ನಡೆಯುತ್ತದೆ. ಹಿಂದೆ ಕರ್ಣಾಟಕದಿಂದ ಪಳನಿ ಮತ್ತು ತಿರುತ್ತಣಿಗೆ ಭಕ್ತರು ಕಾವಡಿಗಳನ್ನು ಹೊತ್ತುಕೊಂಡು ಹೋಗತ್ತಿದ್ದರಂತೆ. ಈಗ ಕರ್ಣಾಟಕದಲ್ಲಿಯೇ ಆಚರಿಸುತ್ತಾರೆ. ಬೆಂಗಳೂರಿನ ಹನುಮಂತನಗರದ ಕುಮಾರಸ್ವಾಮಿ ದೇವಾಲಯ, ಕೃಷ್ಣರಾಜ ಮಾರುಕಟ್ಟೆಯ ಹಿಂಭಾಗದ ಮುರುಗನ್ ದೇವಾಲಯ, ಸಜ್ಜನರಾವ್ ವೃತ್ತದ ಹತ್ತಿರವಿರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಮತ್ತು ಅಲಸೂರಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯಗಳಲ್ಲಿ ಭಕ್ತರು ಕಾವಡಿ ಸೇವೆ ಮಾಡುವುದುಂಟು.

ಕಾವಡಿ ಹಬ್ಬಕ್ಕಾಗಿಯೇ ಕೋಲಾರದ ಕಾಮಸಮುದ್ರ, ವೇಮಗಲ್ ಸಮೀಪದಲ್ಲಿ ದೇವಾಲಯಗಳು ತಲೆಯೆತ್ತಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಗಳಷ್ಟೇ ಅಲ್ಲ ಶಿವಪಾರ್ವತಿಯರ ದೇವಾಲಯಗಳಲ್ಲೂ ಕಾವಡಿ ಸಂಪ್ರದಾಯ ಇತ್ತೀಚೆಗೆ ಬಳಕೆಗೆ ಬಂದಿದೆ.

ಕಾವಡಿ ಹಬ್ಬದ ಸಂದರ್ಭದಲ್ಲಿ ಅನೇಕ ಬಗೆಯ ಸೇವೆಗಳನ್ನು ಸಲ್ಲಿಸುವ ರೂಢಿ ಇದೆ : ಪದಾರ್ಥರೂಪದ ಸೇವಾಕಾವಡಿ, ಪನ್ನೀರು ಕಾವಡಿ, ಪುಷ್ಪ ಕಾವಡಿ, ಶ್ರೀಗಂಧ ಕಾವಡಿ, ಎಳನೀರು, ಕಾವಡಿ, ಫಲಾಹಾರ ಕಾವಡಿ, ಅನ್ನದಾನ ಸೇವೆ ಇತ್ಯಾದಿ. ತಮಿಳುನಾಡಿನಿಂದ ಹೊರಟು ನೆರೆಹೊರೆಯ ರಾಜ್ಯಗಳಲ್ಲೂ ಕಂಡುಬರುತ್ತಿರುವ ಈ ಕಲೆಯಲ್ಲಿ ಸಾಂಸ್ಕೃತಿಕ ಪ್ರಸರಣ ಶಕ್ತಿ ಇರುವುದನ್ನು ಕಾಣಬಹುದು.

– ಪಿ.ಎಂ.

ಕಾವಿಕಲೆ ಧಾರ್ಮಿಕ ಆಚರಣೆಗಳ ಹಬ್ಬದ ಸಂದರ್ಭದಲ್ಲಿ ಜನಪದರು ಮನೆ, ಮಠ, ದೇವಾಲಯ, ಬಸದಿ, ಜಿನಾಲಯ, ಭೂತಗೃಹ, ಗುಡಿ – ಗೋಪುರಗಳ ಮೇಲ್ಛಾವಣಿಯ ಕಟ್ಟಡ ಗೋಡೆಗಳ ಒಳ, ಹೊರ ಬದಿಗೆ ಹುರಮಂಜಿ (ಕಾವಿಮಣ್ಣು) ನಿಂದ ಸಿದ್ಧಪಡಿಸಿ ಬಿಡಿಸಿದ ಬಣ್ಣದ ಚಿತ್ತಾರ. ಇದು ಸ್ಥಳೀಯವಾಗಿ ದೊರೆಯುವ ಒಂದು ಖನಿಜ ಬಣ್ಣ. ಕಾವಿಹುಡಿಯನ್ನು ನಯಗೊಳಿಸಿದ ಸುಣ್ಣದೊಂದಿಗೆ ಮಿಶ್ರಣಗೊಳಿಸಿ ತಯಾರಿಸಿದ ಬೆಣ್ಣೆಯಂತೆ ಹಿಟ್ಟನ್ನು ಗೋಡೆಗಳಿಗೆ ತೆಳುವಾಗಿ ಲೇಪಿಸಿ, ಅದು ಆರುವುದಕ್ಕಿಂತ ಮುಂಚೆ ಮೊನೆಯುಳ್ಳ ಕಂಟವೊಂದರಿಂದ ಅದರ ಮೇಲೆ ಗೀಚಿ, ಬೇಕಾದ ಚಿತ್ರಗಳನ್ನು ಬಿಡಿಸುವುದೇ ಇದರ ವೈಶಿಷ್ಟ್ಯ. ಕ್ರಿ.ಪೂ. ೧೫೦೦ರಲ್ಲಿ ಈಜಿಪ್ಟ್ ದೇಶದಲ್ಲಿ ಸತ್ತವರ ಸಮಾಧಿಗಳ ಮೇಲೆ ಕಾವಿಕಲೆಯ ಚಿತ್ತಾರಗಳನ್ನು ಬಿಡಿಸುತ್ತಿದ್ದರು. ಅಲ್ಲದೆ ಎಟ್ರುಸ್ಕನ್ ಜನಾಂಗದವರು ತಮ್ಮ ಗುಹೆಗಳಲ್ಲಿ ಸತ್ತವರ ನೆನಪಿಗಾಗಿ ಕಾವಿಬಣ್ಣದಿಂದ ಚಿತ್ರಬಿಡಿಸಿದರೆ, ಗ್ರೀಕ್ ಮತ್ತು ರೋಮನ್ನರು ತಮ್ಮ ಪಾತ್ರೆ – ಪಡಗಗಳ ಮೇಲೆ ಪೌರಾಣಿಕ ಸನ್ನಿವೇಶದ ಚಿತ್ರಗಳನ್ನು ಕೆಂಬಣ್ಣದಿಂದ ಬಿಡಿಸುತ್ತಿದ್ದರು. ಜರ್ಮನಿಯ ಸಂಶೋಧಕರಾದ ಗ್ರೀಟ್ಲಿಮೀಟರ್ ಭಾರತದ ಗೋವದಲ್ಲಿ ಕಾವಿಕಲೆಯನ್ನು ಅಭ್ಯಸಿಸುವಾಗ ಈ ಕಲೆ ಮೂಲತಃ ಇಟಲಿಯ ಗ್ರಾಫಿಕ್ ಕಲೆ (ಯಾಗಿದ್ದು) ಯೆಂದು ಗುರುತಿಸಿದ್ದಾನೆ. ಅಲ್ಲದೆ ಪೋರ್ಚ್‌‌ಗೀಸರು ಭಾರತಕ್ಕೆ ಬಂದಾಗ ಈ ಕಲೆಯನ್ನು ತಮ್ಮ ಜೊತೆಯಲ್ಲೆ ತಂದರು ಎಂಬ ಅಭಿಪ್ರಾಯವಿದೆ.

26

ಕರ್ನಾಟಕದ ಪುರಾತನ ಕಲೆ ಎನಿಸಿದ ಕಾವಿಕಲೆ ಗೋವಾದಲ್ಲಿಯ ಕೊಂಕಣಗರ, ನಾಯಕರ ಆಚರಣೆಗಳಲ್ಲಿ ರೂಢಿಯಲ್ಲಿದೆ. ಆರಂಭದ ಹದಿಮೂರು, ಹದಿನಾಲ್ಕನೆಯ ಶತಮಾನದಲ್ಲಿ ವಲಸೆ ಬಂದಂಥ ಕೊಂಕಣಿಗಳು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈ ಕಲೆಯನ್ನು ಪಸರಿಸುವುದು ವಿಶೇಷ. ಇವರು ಕರಾವಳಿಯ ಜೀವನಕ್ಕೆ ಒಗ್ಗಿಕೊಂಡು ತಮ್ಮ ಪ್ರಾಂತೀಯ ದೈವಗಳಾದ ಶಾಂತದುರ್ಗ, ಮಂಗೇಶ, ಮ್ಹಾಳಸಾ, ನಾಗೇಶ, ರಾಮನಾಥ, ರವಳನಾಥ, ದಾಮೋದರ, ಸತ್ತಕೋಟೇಶ್ವರ, ಮಹಾಮಾಯಿ ಮುಂತಾದ ದೇವಾಲಯಗಳನ್ನು ನಿರ್ಮಿಸಿ, ತಮ್ಮ ಸಂಸ್ಕೃತಿ ಅಭಿರುಚಿಗೆ ತಕ್ಕಂತೆ ಈ ಮಂದಿರಗಳಲ್ಲಿ ಇಂದಿಗೂ ಕಾವಿಚಿತ್ರಗಳು ಜೀವಂತಿಕೆ ಪಡೆದಿವೆ. ಕರಾವಳಿ ಪ್ರದೇಶಗಳನ್ನು ಆಳುತ್ತಿದ್ದ, ರಾಜಮಾಂಡಲಿಕರು ಹೊನ್ನಾವರ, ಭಟ್ಕಳ, ಬಸರೂರು, ಬಾರಕೂರು, ಬ್ರಹ್ಮಾವರ, ಮೂಲ್ಕಿ, ಕುಮಟ ಮಾವಿನಕುರ್ಮೆ, ಶಿರಸಿ, ವೆಂಕಟಾಪುರ, ಬಿಳಗಿ, ಹೊಸಾಠ, ಅಶನೋಟಿ. ಚಿತಾಕುಲಾ ಹಳದಿಪುರ, ಅವರ್ಸಾ, ಅಗ್ರಹಾರ, ಅಯದಳ್ಳಿ, ಕೊಲ್ಲೂರು, ಉಲ್ಲಾಳ, ಮಂಗಳೂರು ಇಲ್ಲೆಲ್ಲ ಕೊಂಕಣಿಗರಿಗೆ ಆಶ್ರಯ ನೀಡಿ ದೇವಾಲಯಗಳ ಸ್ಥಾಪನೆಗೆ ಕಾರಣರಾದರು. ದೇವಾಲಯ ನಿರ್ಮಾಣದ ಸಂದರ್ಭದಲ್ಲಿ ಗೋವೆಯ ಸ್ಥಾನಿಕರಾದ ಗಾಜಿಗಾರರು, ಗುಡಿಗಾರರು, ಪರಿರಾತ ಶಿಲ್ಪಿಗಳನ್ನೆಲ್ಲ ಕೊಂಕಣಿಗರು ವಿಶ್ವಾಸದಿಂದ ಬರಮಾಡಿಕೊಂಡು, ದೇವಾಲಯ ನಿರ್ಮಿಸುವಲ್ಲಿ ಯಶಸ್ವಿಯಾದರು. ಇಲ್ಲಿಯ ದೇವಾಲಯಗಳ ಒಳಗೋಡೆ ಹಾಗೂ ಹೊರಗೋಡೆಗಳಲ್ಲಿ ಕುಸ್ತಿಪಟುಗಳು, ಸಮಾಜಸುಧಾರಣಾ ವ್ಯಕ್ತಿಗಳು ಪ್ರಕೃತಿಯಲ್ಲಿಯ ಪ್ರಾಣಿಪಕ್ಷಿಗಳು, ದ್ವಾರಪಾಲಕರು, ಕುಲದೇವತೆಳು ಮೊದಲಾದವರು ರೇಖಾಚಿತ್ರ ಹಾಗೂ ಜ್ಯಾಮಿತಿ ಆಕೃತಿಯ ಚಿತ್ರಗಳನ್ನು ರಚಿಸುತ್ತ ಬಂದರು. ಇಲ್ಲಯ ಕಾವಿ ಚಿತ್ರಗಳು ಕರ್ನಾಟಕದ ಭಿತ್ತಿ ಚಿತ್ರಗಳ ಸಾಮ್ಯ ಹೊಂದಿದ್ದು, ರಾಮಾಯಣ, ಮಹಾಭಾರತ, ದೇವಿಭಾಗವತ, ವಿಷ್ಣು ಭಾಗವತ, ಶಿವಪುರಾಣ, ಕಮಲ ಪುರಾಣಗಳ ಸಾಮಾಜಿಕ ಸನ್ನಿವೇಶಗಳನ್ನು ಚಿತ್ರಿಸುವ ಈ ಕಾವಿ ಕಲೆ ಉತ್ತರ ಕನ್ನಡ, ದಕ್ಷಿಣ ಜಿಲ್ಲೆಯ ದೇವಾಲಯಗಳಲ್ಲಿ ಜೀವಂತವಾಗಿದೆ.

– ಪಿ.ಜಿ.

ಕಾಶಿ ಕಾವಡಿ ಇದು ಆಂಧ್ರದ ಭಕ್ತಿ ಪ್ರಧಾನ ಪ್ರಾಚೀನ ಜನಪದ ಪ್ರದರ್ಶನ ಕಲೆ. ಕಾವಡಿಯನ್ನು ಭುಜದ ಮೇಲೆ ಇಟ್ಟುಕೊಂಡು ಕಾಶಿ ಕಥೆಗಳನ್ನು ಹೇಳುವುದರಿಂದ ಕಾಶಿ ಕಾವಡಿ ಎಂಬ ಹೆಸರು ಸಹಜವಾಗಿಯೇ ಬಂದಿದೆ. ಪ್ರಾಚೀನ ಕಾಲದಲ್ಲಿ ಕಾಶಿ ಯಾತ್ರೆ ಎಂದರೆ ಮಹಾಪುಣ್ಯಪ್ರದವಾದುದು ಎಂಬ ಅಚಲವಾದ ನಂಬಿಕೆ ಇತ್ತು. ಆದ್ದರಿಂದಲೇ ಕಾಶಿಯಿಂದ ಯಾರೇ ಬರಲಿ ಏನಾದರೂ ತರಲಿ ಅದನ್ನು ಪವಿತ್ರ ವಸ್ತುವೆಂದು ಭಾವಿಸಿ ಸ್ವೀಕರಿಸುವುದು ನಡೆಯುತ್ತಿತ್ತು. ಕಾಶಿಗೆ ಹೋದವನು ಕಾಡಿಗೆ ಹೋದವನು ಹಿಂತಿರುಗಿ ಬರುವುದಿಲ್ಲ, ಎಂಬುದು ಗಾದೆ ಮಾತು. ಒಂದು ವೇಳೆ ಬಂದರೆ ಅವನು ತುಂಬಾ ಕಾವಡಿಯನ್ನು ಹೆಗಲಿಗೆ ಹಾಕಿಕೊಂಡು ಕಾವಡಿಯ ಎರಡು ತುದಿಗಳಲ್ಲಿ ಎರಡು ಬಿಂದಿಗೆಗಳನ್ನು ಅಥವಾ ಬಟ್ಟೆಗಳನ್ನು ಅರಿಸಿನ ತುಂಬಿಕಟ್ಟಿರುತ್ತಾರೆ. ಕಾವಡಿಯಲ್ಲಿ ಕಾಶಿ ವಿಶ್ವನಾಥನ ವಿಗ್ರಹ, ಫಲ, ಪುಷ್ಟ, ಅರಿಸಿನ ಕುಂಕುಮಗಳಿರುತ್ತವೆ.

ಕಾವಡಿ ಹೊತ್ತವನು ಕಾವಿ ಬಟ್ಟೆ ಧರಿಸಿ ವಿಭೂತಿ, ನಾಮಗಳು, ರುದ್ರಾಕ್ಷಿಗಳು, ಗಂಟೆ ಧರಿಸುತ್ತಾರೆ. ಕಾವಡಿಯ ಮೇಲೆ ಕೆಲವು ಗೊಂಬೆಗಳಿಂದ ಕೂಡಿದ ಚಿತ್ರಪಟವನ್ನು ಕಟ್ಟಿರುತ್ತಾನೆ. ಕಾವಡಿ ಹೊತ್ತ ವ್ಯಕ್ತಿ ಅತ್ತಿತ್ತ ಆಡುತ್ತಾ ಕಾಶಿಯಾತ್ರೆಯ ವಿಶೇಷಗಳನ್ನು ಹೇಳಿ ಜೀವನ ಮುಂದುವರಿಸುತ್ತಾನೆ. ಎಲ್ಲರು ಮುಕ್ತಿ ಹೊಂದಬೇಕೆಂದು ಹೇಳುತ್ತಾ ಭಕ್ತಿ ಪ್ರಧಾನವಾದ ಕಥೆಗಳನ್ನು ಪ್ರಚಾರ ಮಾಡುತ್ತಾ ಭಿಕ್ಷೆ ಯಾಚಿಸುತ್ತಾರೆ.

ಇದು ಹಗಲು ವೇಷಗಳಲ್ಲಿ ಒಂದಾಗಿದೆ. ಇದನ್ನು ಹಗಲು ಪ್ರದರ್ಶಿಸುತ್ತಾರೆ. ಈ ಪ್ರದರ್ಶನ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೂ ನಡೆಯುತ್ತದೆ. ಕಾವಡಿಯನ್ನು ನಾಲ್ಕು ಜನ ಒಂದೆಡೆ ಸೇರುವ ಸ್ಥಳದಲ್ಲಿ ನಿಂತು ಕಾವಡಿಯನ್ನು ಪಕ್ಕದಲ್ಲಿಟ್ಟು ಪ್ರದರ್ಶನ ಪ್ರಾರಂಭಿಸುತ್ತಾನೆ. ಹತ್ತು ಮಂದಿ ಕಾವಡಿಸುತ್ತ ಸೇರಿದ ಮೇಲೆ ತನ್ನ ಬಳಿ ಇರುವ ಅಕಂಕಾರಯುಕ್ತ ಗೊಂಬೆ ಚಿತ್ರಗಳಿಂದ ಕೂಡಿರುವ ವಸ್ತ್ರವನ್ನು ತೋರಿಸುತ್ತಾನೆ. ಅದರ ಮೇಲೆ ಕಾಶಿ ಯಾತ್ರೆಯ ವಿಶೇಷಗಳೊಂದಿಗೆ ದೇವಾಲಯದ ಚಿತ್ರಗಳನ್ನು ಚಿತ್ರಿಸಿರುತ್ತಾರೆ. ಅವುಗಳನ್ನು ಕುರಿತು ವಿವರಿಸುತ್ತಾ ಭಕ್ತಿ ವಿಷಯಗಳನ್ನೊಳಗೊಂಡ ಕಥೆಗಳನ್ನು ಹೇಳುತ್ತಾನೆ. ಇದರಿಂದ ಧನ್ಯರಾದ ಜನ ದೈವಭಕ್ತಿ ಪರವಶರಾಗಿ ತಮ್ಮ ಕೈಲಾದ ಕಾಣಿಕೆಯನ್ನು ನೀಡುತ್ತಾರೆ. ಈ ರೀತಿ ಗೊಂಬೆಗಳ ಮೂಲಕ ಕಾಶಿ ಕಾವಡಿ ಪ್ರದರ್ಶನ ಜನಗಳಲ್ಲಿ ಆಧ್ಯಾತ್ಮಿಕ ಚಿಂತನೆ ಮಾಡಿಸಲಿ ಆ ದಿನಗಳಲ್ಲಿ ಉಪಯುಕ್ತ ಕಲೆಯಾಗಿತ್ತು. ಈಗ ಕಣ್ಮರೆಯಾಗುತ್ತಿದೆ. ಕಥೆ ಹೇಳುವ ಕಲಾವಿದರು ಕಾಣುತ್ತಿಲ್ಲ.

– ಟಿ.ಎಸ್.ಎನ್. ಅನುವಾದ ಎನ್.ಆರ್.

ಕಾಳಕೆಟ್ಟ್ ಮಧ್ಯತಿರುವಾಂಕೂರಿನ ಅನೇಕ ದೇವಾಲಯಗಳಲ್ಲಿ ಸಾಂಬವರ್ ಸಮುದಾಯದವರು ನಡೆಸಿಕೊಡುವ ಒಂದು ಹರಕೆಯ ರೂಪವೇ ಬಸವನ ಕೋಲ. ಈ ಕೋಲದ ಆರಂಭದ ಕುರಿತು ವಿದ್ವಾಂಸರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಪರಂಪರೆಯಿಂದ ಕಂಡು, ಕೇಳಿ,ತಿಳಿದು ಆಚರಿಸುತ್ತ ಬಂದಿರುವ ಒಂದು ಕಾರ್ಯಕ್ರಮ ಇದು ಎಂದಷ್ಟೆ ಅವರು ಹೇಳಬಲ್ಲರು. ದೇವಾಲಯದ ಉತ್ಸವಕ್ಕೆ ಸಂಬಂಧಿಸಿದಂತೆ ಈ ಹರಕೆಯ ಸೇವೆ ನಡೆಯುತ್ತದೆ. ಪರಂಪರಾಗತವಾಗಿ ಲಭ್ಯವಾದ ಬೇಸಾಯದ ಸಂಪತ್ಸಮೃದ್ಧಿಯಲ್ಲಿ ಜಾನುವಾರುಗಳದೂ ಪಾಲು ಇದೆ ಎಂದು ಸಾಂಬವರು ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆಕುಯ್ಲಿಗೆ ಸಂಬಂಧಿಸಿದಂತೆ ಕೃಪಾದೇವತೆಯಾದ ಗ್ರಾಮದೈವದ ಮುಂದೆ ತಮ್ಮ ಹರಕೆಯ ಮೂರ್ತಿಗಳ ಪ್ರತಿರೂಪವನ್ನು ಬೈಹುಲ್ಲಿನಿಂದ ನಿರ್ಮಿಸಿ ಕುಣಿಸಿ ಅನುಗ್ರಹವನ್ನು ಸಾಂಬವರು ಬಯಸುತ್ತಿದ್ದರು.

ಪರಶಿವನ ವಾಹನವಾದ ಬಸವನನ್ನು ಮೆರವಣಿಗೆ ಮಾಡಿಸುವುದು ದೇವಾಲಯಕ್ಕೂ ಮನೆಗಳಿಗೂ ಶುಭವೆಂದು ನಂಬುವುದಲ್ಲದೆ, ಕೌಟುಂಬಿಕ ಬದುಕಲ್ಲಿ ಕಷ್ಟ – ಕಾರ್ಪಣ್ಯ, ಆಪತ್ತು – ವಿಪತ್ತುಗಳು ಬಂದಾಗ ಕೂಡ ಬಸವನ ಕೋಲದ ಹರಕೆ ಹೇಳುವ ಸಂಪ್ರದಾಯವು ಇವರಲ್ಲಿದೆ.

ಬಸವಬ ರೂಪವನ್ನು ಬೈಹುಲ್ಲು, ಬಿದಿರು, ಬಟ್ಟೆಮ ಮರದ ಪುಟ್ಟಪುಟ್ಟ ಕೋಲುಗಳಿಂದ ತಯಾರಿಸಿ ಅಲಂಕರಿಸಿ ಮನೆಯಂಗಳಕ್ಕೆ ತಂದು ಪಿತೃಗಳನ್ನು ನೆನೆದು ನೀರಿಟ್ಟು (ಒಂದು ಧಾರ್ಮಿಕ ಕ್ರಿಯೆ) ಪ್ರಾರ್ಥಿಸಿ ಅವನ ಅನುಗ್ರಹವನ್ನು ಬೇಡಿ ಕುಟುಂಬದ ಸದಸ್ಯರು, ಬಂಧು – ಮಿತ್ರು ಎಲ್ಲರೂ ಸೇರಿ ವಾದ್ಯಘೋಷದೊಂದಿಗೆ ಕುರವ (ಬಾಯಿಂದ ಹೊರಡಿಸುವ ಒಂದು ಮಂಗಳ ಸೂಚಕ ಅನುಕರಣ ಧ್ವನಿ)ಹಾಗೂ ಹಾಡಿನೊಂದಿಗೆ ಭಗವತೀ ಆಲಯಗಳಿಗೆ ಮೆರವಣಿಗೆ ಮಾಡಿಸುವುದು ಬಸವಕೋಲದ ಸ್ಥೂಲ ಸ್ವರೂಪ. ಸಾಂಬವರು ಇದನ್ನು ಪರಂಪರೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.

ಬಸವಕೋಲದ ಹಾಡುಗಳನ್ನು ಹಾಡುವ ಮುನ್ನ ‘ವಾಯಿತ್ತಾರಿ’ (ಪೂರ್ವ ವೃತ್ತಾಂತ – ಹುಟ್ಟುಕಟ್ಟು – ಆಯಬೀರ) ಯನ್ನು ಹಾಡಲಾಗುತ್ತದೆ. ವಾಯಿತ್ತಾರಿಯ ವಾದ್ಯಮೇಳದ ಸದ್ದು ತಾರಕ್ಕೇರಿದಾಗ ಹಾಡುಗಳನ್ನು ಹಾರಲಾರಂಭಿಸುತ್ತಾರೆ. ಕರು(ಮ.), ಮರಂ(ಮ.), ನಗಾರಿ, ಉಡುಕ್ಕೆ ಮುಂತಾದುವು ವಾದ್ಯಮೇಳದ ವಾದ್ಯಗಳು. ಚೆಂಡೆಯ ಬಳಕೆ ಈಚೆಗೆ ಆರಂಭವಾಗಿದೆ. ಹಾಡುಗಳ ಮಧ್ಯೆ ಮತ್ತೆ ವಾಯಿತ್ತಾರಿಗಳನ್ನು ಆವರ್ತಿಸುವುದಿದೆ. ವಾಯಿತ್ತಾರಿಗೆ ‘ಕೀಳ್ ಪಾಡುಗ’ ಎಂಬ ಪದವನ್ನೂ ಜನಪದರು ಬಳಸಿದ್ದಾರೆ. ಮುಖ್ಯ ಹಾಡುಗಾರರ ಜತೆ ಸಂಗಡಿಗರು ವಾಯಿತ್ತಾರಿಯನ್ನು, ಹಾಡುಗಳನ್ನು ಆಚರ್ತಿಸಿಕೊಂಡು ಹಾಡುತ್ತಾರೆ. ಈ ಹಾಡಿನ ಲಯಗಳಿಗನುಸಾರವಾಗಿ ಹೆಜ್ಜೆ ಹಾಕಿ ಬಸವನನ್ನು ಕುಣಿಸುತ್ತಾರೆ. ಬಸವಕೋಲವನ್ನು ಆಧರಿಸಿಕೊಂಡಿರುವ ಮುಖ್ಯ ಬಡಿಗೆಯನ್ನು ಮುಂದಿನಿಂದೊಬ್ಬ ಹಿಂದಿನಿಂದೊಬ್ಬ ನಿಂತುಕೊಂಡು ಬಸವನನ್ನು ಕುಣಿಸುತ್ತಾರೆ. ಹಾಡುಗಾರರ ತಾಳಕ್ಕನುಸಾರವಾಗಿ ಅವರು ಹೆಜ್ಜೆ ಇಡುತ್ತಾರೆ. ಕಿರಿಚಾಟ, ಕುರುವೆ ಮತ್ತು ಹಾಡಿನ ಮೇಳದೊಂದಿಗೆ ಜತೆಗಾರರು ದೃಶ್ಯವನ್ನು ಆವೇಶಪೂರ್ಣವಾಗಿ ಮಾರ್ಪಡಿಸಿ ದೇವಾಲಯದ ಬಳಿಗೆ ತಲುಪಿಸುತ್ತಾರೆ. ದೇವಾಲಯ ತಲುಪಿ ಮೂರು ಬಾರಿ ಪ್ರದಕ್ಷಿಣೆ ಹೊಡೆದು ದ್ರುತಗತಿಯಲ್ಲಿ ಕುಣಿದು ಸೇವೆಯನ್ನು ಸಮರ್ಪಿಸಲಾಗುತ್ತದೆ. ಬಸವಕೋಲದ ಹಿಂದೆ ಮುಂದೆ ನಿಲ್ಲುವವರು ಮೂರು ದಿನಗಳ ಕಾಲ ವ್ರತ ಕೈಗೊಳ್ಳಬೇಕಾಗುತ್ತದೆ.

ಕಾಳತುಳ್ಳಲ್ (ಕಾಳ – ಬಸವ), ಕಾಳಕ್ಕಳಿ, ಕಾಳಕೆಟ್ಟ್ ಮುಂತಾದ ವಿವಿಧ ಹೆಸರುಗಳಲ್ಲಿ ಪ್ರಚಲಿತವಾಗಿರುವ ಈ ಧಾರ್ಮಿಕ ಆಚರಣೆಯ ಕೇರಳದ ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಲ್ಲೆಲ್ಲ ಇತರ ಸಮುದಾಯದವರೂ ಇದನ್ನು ನಡೆಸುತ್ತಾರೆ. ಬಸವ ನಿರ್ಮಾಣದ ರೂಪದಲ್ಲೂ, ಹಾಡಿನಲ್ಲೂ, ಬಳಸುವ ವಾದ್ಯೋಪಕರಣಗಳಲ್ಲೂ, ಆಚಾರಾನುಷ್ಠಾನಗಳಲ್ಲೂ ವೈವಿಧ್ಯವು ಢಾಳಾಗಿ ಕಂಡುಬರುತ್ತದೆ.

– ಎ.ಕೆ.ಎ. ಅನುವಾದ ಕೆ.ಕೆ.

ಕಾಳವಂಡಿ ಎತ್ತುಗಳಿಂದ ಎಳೆಯಲ್ಪಡುವ (ಸರಕು)ಸಾಗಾಣಿಕೆಯ ಗಾಡಿಯನ್ನು ಎತ್ತಿನಗಾಡಿ ಎನ್ನುತ್ತೇವೆ. ಈಗಲೂ ಭಾರತದ ಗ್ರಾಮೀಣ ಜನತೆ ಒಂದೂರಿಂದ ಇನ್ನೊಂದೂರಿಗೆ ವಸ್ತುಗಳನ್ನು ಸಾಗಿಸಲು ಎತ್ತಿನ ಗಾಡಿಗಳನ್ನು ಬಳಸುತ್ತಾರೆ. ಎತ್ತುಗಳ ಬದಲು ಕೋಣಗಳು, ಕುದುರೆಗಳು ಮತ್ತು ಒಂಟೆಗಳನ್ನೂ ಇತರೆಡೆಗಳಲ್ಲಿ ಬಳಸುತ್ತಾರೆ. ಎತ್ತಿನಗಾಡಿಯ ಮುಖ್ಯ ಭಾಗಗಳೆಂದರೆ ಅಚ್ಚು, ಎರಡು ಚಕ್ರಗಳು, ಮೂಕಿ ಮತ್ತು ಗಾಡಿಯ ಮುಂಭಾಗದಿಂದ ಹಿಂಭಾಗದ ವರೆಗೆ ನೀಳಕ್ಕೆ ಜೋಡಿಸಿರುವ ದಿಂಡು.

ಹಿಂದಿನ ಕಾಲದಲ್ಲಿ ಒಂದೂರಿಂದ ಇನ್ನೊಂದೂರಿಗೆ ಸರಕು ಸಾಗಣೆಗೂ ಪ್ರಯಾಣಿಕರನ್ನು ಸಾಗಿಸುವುದಕ್ಕೂ ಬಳಕೆಯಾಗುತ್ತಿದ್ದ ಜನಪ್ರಿಯ ವಾಹನವಾಗಿತ್ತು. ಎತ್ತಿನ ಗಾಡಿಗಳ ಕುರಿತು ಸಂಗಂ ಸಾಹಿತ್ಯದಲ್ಲೂ ಉಲ್ಲೇಖಗಳಿವೆ. ಪೂರ್ವ ಕರಾವಳಿಯಿಂದ ಭಾರತದ ಇತರ ಭಾಗಗಳಿಗೆ ಉಪ್ಪನ್ನು ಸಾಗಿಸಲು (ಉಪ್ಪನ್ನು ಉಮನಕ್ಕಾಟ್ಟು ಎನ್ನುತ್ತಿದ್ದರು) ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು.

ವಿಭಿನ್ನ ಅಗತ್ಯಗಳಿಗಾಗಿ ವಿಭಿನ್ನ ರೀತಿಯ ಎತ್ತಿನ ಗಾಡಿಗಳನ್ನು ಜನರು ಬಳಸುತ್ತಿದ್ದರು. ಕೊಟ್ಟುವಂಡಿ (ಛಾವಣಿಯುಳ್ಳ ಎತ್ತಿನಗಾಡಿ)ಯನ್ನು ಯಾಂತ್ರಿಕರು ಬಳಸುತ್ತಿದ್ದರು. ಹದಿನೆಂಟನೆಯ ಶತಮಾನದ ಬಳಿಕ ಜನರು ‘ವಿಲ್ಲುವಂಡಿ’ಯನ್ನು ಬಳಸಲಾರಂಭಿಸಿದರು. ಅದರ ಚಕ್ರಗಳಿಗೆ ಚಿಮ್ಮುಗುಣ (Spring action) ಮತ್ತು ಘರ್ಷಣೆ ಇಲ್ಲದೆ ಸಾಗುವ ಸಾಮರ್ಥ್ಯವಿತ್ತು. ಜನಪದರು ಕೃಷಿಯ ಅಗತ್ಯಗಳಿಗೆ ಎತ್ತಿನ ಗಾಡಿಯನ್ನು ಬಳಸುತ್ತಿದ್ದರು. ಒಂಟಿ ಎತ್ತನ್ನು ಕಟ್ಟಿ ಗಾಡಿಯನ್ನು ಓಡಿಸುವ ಸ್ಪರ್ಧೆ ‘ಒಟ್ಟಕ್ಕಾಳವಂಡಿ ಓಟ್ಟಂ’ ಯನ್ನು ಜನಪದರು ಮಾಡುತ್ತಾರೆ. ಅದಕ್ಕಾಗಿ ಅವರು ಎತ್ತುಗಳನ್ನು ತರಬೇತಿಗೊಳಿಸುತ್ತಾರೆ. ಇದು ಅವರಲ್ಲಿ ಕ್ರೀಡಾಭಾವ ಬೆಳೆಯಲು ಸಹಾಯಕ.

ಸಂತೆಗಳಿಂದ ವಸ್ತುಗಳನ್ನು ಸಾಗಿಸುವಾಗ ಗಾಡಿ ಹೊಡೆಯುವವರು ಹಾಡುಗಳನ್ನು ಹಾಡುತ್ತಿದ್ದರು ಆ ಹಾಡುಗಳಿಗೆ ‘ವಂಡಿಪಾಟ್ಟು’ ಎಂದು ಹೆಸರು. ತಮಿಳುನಾಡಿನಲ್ಲಿ ಆ ಹಾಡುಗಳನ್ನು ತೆನ್ಪರಿಕು (ತೆಮ್ಮಾಂಗು) ಎಂದು ಕರೆಯುತ್ತಾರೆ. ಇವು ಭಾವಗೀತೆಗಳಾಗಿದ್ದು, ಅವುಗಳ ವಸ್ತು ಪ್ರಣಯ. ಭಾರತೀಯ ಜನಪದರ ಒಂದು ಸಾಂಸ್ಕೃತಿಕ ವಸ್ತು – ಎತ್ತಿನ ಗಾಡಿ ಎನ್ನಬಹುದು.

ಇಂದಿನ ಕಾಲಕ್ಕೆ ಈ ಪರಂಪರೆಯ ಡೀಸೆಲ್ ಲಾರಿಗಳು, ಟ್ರಾಕ್ಟರುಗಳು ಮತ್ತು ಪೆಟ್ರೋಲ್ ಕಾರುಗಳ ಕಾರಣವಾಗಿ ನಿಧಾನವಾಗಿ ಕನ್ಮರೆಯಾಗುತ್ತಿದೆ.

– ಪಿ.ಎನ್. ಅನುವಾದ ಕೆ.ಕೆ.