ಕ್ರೈಸ್ತ ಜನಪದ ನಾಟಕಗಳು ಜನಪದ ಕಲೆಗಳಲ್ಲಿ ಜನಪದ ನಾಟಕವೂ ಒಂದು. ತಮಿಳುನಾಡಿನಲ್ಲಿ ಕ್ರೈಸ್ತಧರ್ಮ ಹರಡಿದ ಕಾಲದಲ್ಲಿ ಕ್ರೈಸ್ತ ಪಳ್ಳು, ನೊಂಡಿ ನಾಟಕ, ಕೊರವಂಜಿ ನಾಟಕ, ಕೀರ್ತನೆ ನಾಟಕ ಮೊದಲಾದವು ಬರೆಯಲ್ಪಟ್ಟವು. ತಮಿಳುನಾಡಿನ ಉತ್ತರ ಭಾಗದಲ್ಲಿ ಚೆಂಗಲ್ಪಟ್ಟು ಸುತ್ತಮುತ್ತಲ ಅತ್ತಿಪಾಕ್ಕಂ, ನೆಡುಂಗಾಡು, ವೇಟವಲಂ, ಅಣಿವಾಡಿ, ಮುಗೈಯಾರ್ ಮುಂತಾದ ಊರುಗಳಲ್ಲಿ ಇಸ್ತಾಕಿಯಾರ್, ಜ್ಞಾನಸೌಂದರಿ, ಗೋಲಿಯಾತ್, ಅಲ್ಘೋನ್ಸಾ, ಅರುಳಾಯಿ, ಕ್ರಿಸ್ತೀನಮ್ಮಾಳ್, ವರದಿಂದ ಜನಿಸಿದ ವರಪ್ರಕಾಶಿಯಾರ್ ಮುಂತಾದ ನಾಟಕಗಳು ನಡೆಯುತ್ತಿದ್ದವು.

೧) ಪಾಸ್ಕಾ ೨) ವಾಸಗಪ್ಪಾ ೩) ಸವಿಟ್ಟು ನಾಟಕಂ ೪) ಕರು ನಾಟಕಂ ೫) ನಾಡಗಮಾ (Nadagama) – ಇವು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಪ್ರತ್ಯೇಕ ನಾಟಕಗಳು.

) ಪಾಸ್ಕಾ : ಪಾಸ್ಕಾ ಎಂಬ ಪದ ಹಳೆಯ ಒಡಂಬಡಿಕೆಯ (ಬೈಬಲ್) ಯಾತ್ರಾಕಾಂಡದಲ್ಲಿ ‘ಸಾಗುವುದು’ (Pass over) ಎಂಬರ್ಥದಲ್ಲಿ ಬಳಕೆಯಾಗಿದೆ. ಈಜಿಪ್ಟಿಯನ್ನಿರಿಂದ ಇಸ್ರೇಲ್ ಜನರು ಸ್ವಾತಂತ್ರ್ಯ ಗಳಿಸಿದ ದಿನವನ್ನು ಪಾಸ್ಕಾ ಹಬ್ಬವನ್ನಾಗಿ ಆಚರಿಸುತ್ತಿದ್ದರು. ಪಾಸ್ಕಾ ಹಬ್ಬದಲ್ಲಿ ಯೇಸುವಿನ ಜೀವನ ಚರಿತ್ರೆಯನ್ನು ನಾಟಕವಾಡುತ್ತಿದ್ದರು. ಅನೇಕ ಕಡೆ ಯೇಸುಕ್ರಿಸ್ತ ಅನುಭವಿಸಿದ ನೋವುಗಳನ್ನು ನಾಟಕವನ್ನಾಗಿ ಆಡಿಸಲಾಗುತ್ತದೆ. ತಮಿಳುನಾಡಿನಲ್ಲಿ ಆವೂರ್, ಮೇಟ್ಟುಪಟ್ಟಿ, ಇಡೈಕಾಟೂರ್, ಪಸುಮಲೈ, ಮುಂತಾದ ಊರುಗಳಲ್ಲಿ ಇಂದಿಗೂ ಪಾಸ್ಕಾ ನಾಟಕವನ್ನು ನಡೆಸಲಾಗುತ್ತದೆ. ತೂತ್ತುಕುಡಿ ಜಿಲ್ಲೆಯ ಮನಪಾಡು ಗ್ರಾಮದಲ್ಲಿ ಪಾಸ್ಕಾ ನಡೆಸಿದ ವಿಷಯವನ್ನು ಸಂಶೋಧಕರು ದಾಖಲಿಸಿದ್ದಾರೆ.

) ವಾಸಗಪ್ಪಾ: ‘ವಾಸಗಪ್ಪಾ’ ಎಂದರೆ ವಾಸಾಪ್ಪು ಪಾಟ್ಟು, ನಾಟಕ ಕಾವ್ಯ, ಸುಖಾಂತ – ದುಃಖಾಂತ ನಾಟಕ ಎಂಬರ್ಥಗಳಿವೆ. (‘ವಾಸಗಂ’ – ವಚನ; ‘ಪಾ’ – ಹಾಡು = ಸಂಭಾಷಣೆ ಮಿಶ್ರಿತ ಹಾಡು.) ವಾಸಗಪ್ಪಾ ಎಂಬ ಪದ ವೀರಮಾಮುನಿ (ಬೆಸ್ಕಿ) ಯವರ ನಿಘಂಟಿನಲ್ಲೂ ಕಂಡುಬರುತ್ತದೆ. ದಕ್ಷಿಣದ ಕೂತ್ತು, ತೆರುಕೂತ್ತು, ಪಳ್ಳು, ಕೊರವಂಜಿ ಮುಂತಾದವುಗಳ ಸಾರವನ್ನು ಹೀರಿ ತಮಿಳುನಾಡಿನಲ್ಲಿ ಉಗಮಗೊಂಡಿದ್ದು ವಾಸಗಪ್ಪಾ ನಾಟಕರೂಪ. ಅಂತೋಣಿಯವರ ವಾಸಗಪ್ಪಾ, ಅರುಳಪ್ಪರ ವಾಸಗಪ್ಪಾ, ದೇವಮಾತೆ ವಾಸಗಪ್ಪಾ, ಎಸ್ತಾಕಿಯರ್ ವಾಸಗಪ್ಪಾ, ದೇವಸಹಾಯಂ ಪಿಳ್ಳೈವಾಸಗಪ್ಪಾ, ಸಮಾಧಿ ವಾಸಗಪ್ಪಾ ಹೀಗೆ ಅನೇಕ ವಾಸಗಪ್ಪಾಗಳು ಕಂಡುಬರುತ್ತವೆ. ತೂತ್ತುಕುಡಿ ಜಿಲ್ಲೆಲ ಕಾಮನಾಯಕನ್‌ಪಟ್ಟಿ ಗ್ರಾಮದಲ್ಲಿ ಇಂದಿಗೂ ಸಮಾಧಿ ವಾಸಗಪ್ಪಾ ನಡೆಯವುದನ್ನು ಕಾಣಬಹುದು.

) ಸವಿಟ್ಟು ನಾಟಕಂ: ‘ಸವುಟ್ಟುದಲ್’ ಎಂಬುದಕ್ಕೆ ಶಿಥಿಲವಾದದ್ದು , ಒಸಕುವುದು, ಕಾಲಿನಿಂದ ತುಳಿಯುವುದು ಮುಂತಾದ ಅರ್ಥಗಳಿವೆ. ‘ಸವಿಟ್ಟು’ ಎಂಬುದನ್ನು ಹೆಜ್ಜೆಗಳು ಎಂದು ಹೇಳಲಾಗುತ್ತದೆ. ಹಾಡು ಮತ್ತು ಹೆಜ್ಜೆಯಿಡುವುದು ಒಗ್ಗೂಡಿ ರೂಪುಗೊಂಡ ನಾಟಕ ಸವಿಟ್ಟು ನಾಟಕ. ಇದಕ್ಕೂ ಇಟಲಿಯ ಒಪೇರಾಗೂ (Opera) ಸಾಮ್ಯತೆ ಇದೆ. ತಮಿಳುನಾಡಿನಲ್ಲಿ ಕಂಡಬರುವ ತೆರುಕೂತ್ತು, ಕೇರಳದ ಕಥಕ್ಕಳಿ ಇವೆರಡೂ ಬೆರೆತು ಸವಿಟ್ಟು ನಾಟಕಳು ಜನ್ಮ ತಾಳಿವೆ. ತಮಿಳುನಾಡಿನ ಅಣ್ಣಾವಿಗಳೇ ಕೇರಳದಲ್ಲಿ ಸವಿಟ್ಟು ನಾಟಕಗಳನ್ನು ಆಡಿಸಿದ್ದಾರೆಂದು ಕೇರಳದ ಜಾನಪದ ತಜ್ಞರಾದ ಚುಮ್ಮೆರ್‌ ಚೂಂಡಲ್ (Chummer Choondal) ಉಲ್ಲೇಖಿಸಿದ್ದಾರೆ. ಇವು ಕೂಡ ಸಂತರ ಜೀವನ ಚರಿತ್ರೆಯನ್ನು ತಿಳಿಸುವ ಕಥೆಗಳಾಗಿವೆ.

) ಕರುನಾಟಕಂ: ಕರ್ನಾಟಕದ ಸಂಗೀತದಲ್ಲಿ ಹಾಡುವುದು ಅಥವಾ ಪ್ರಾಚೀನ ನಾಟಕ ಎಂಬ ಅರ್ಥದಲ್ಲಿ ‘ಕರುನಾಟಕಂ’ ಎಂಬ ಕ್ರೈಸ್ತ ನಾಟಕ ರೂಢಿಯಲ್ಲಿದೆ. ಇದು ತಿರುನೆನ್ವೇಲಿ, ತೂತ್ತುಕುಡಿ ಜಿಲ್ಲೆಗಳಲ್ಲಿ ಕಥೋಲಿಕ ಕ್ರೈಸ್ತರಿಂದ ಚರ್ಚ್‌ ಹಬ್ಬಗಳ ಸಂದರ್ಭದಲ್ಲಿ ನಡೆಯುತ್ತದೆ. ತೆರಕೂತ್ತು (ಬೀದಿ ನಾಟಕ) ಮಾದರಿಯಲ್ಲಿ ರೂಪುಗೊಂಡಿರುವ ಈ ನಾಟಕ ವೆಣ್ಬಾ (ದ್ವಿಪದಿ),ಸಿಂದು, ಕಲಿಪ್ಪಾ, ವೃತ್ತ ಮುಂತಾದ ಛಂದಸ್ಸಿನ ರೂಪಗಳೊಂದಿಗೆ ಲಾಲಿಹಾಡು, ಕಪ್ಪಲ್‌ಪಾಟ್ಟು (ದೋಣಿಹಾಡು), ವಿಲ್ಲುಪಾಟ್ಟು (ಬಿಲ್ಲುಹಾಡು) ಮುಂತಾದವುಗಳೂ ಸೇರ್ಪಡೆಗೊಂಡು ಪ್ರತ್ಯೇಕ ರೂಪವನ್ನು ತಳೆದಿದೆ. ಈ ನಾಟಕ ಪಾಶ್ಚಾತ್ಯ ನಾಟಕಗಳ ಅಂಶಗಳನ್ನು ಒಳಗೊಂಡಿದೆ. ಇಂತಹ ನಾಟಕಗಳು ಸಂತ ಅಂತೋಣಿ, ಸಂತ ಸೆಬಾಸ್ಟಿನ್, ಕನಿಕೂರಂದಮ್ಮಾಳ್, ಜ್ಞಾನಸೌಂದರಿ, ಬಾರ್ಬರಾಲ್ ಮುಂತಾದ ಸಂತರ ಜೀವನ ಚರಿತ್ರೆಗಳನ್ನು ತಿಳಿಸಿಕೊಡುವಂತೆ ರೂಪುಗೊಂಡಿದೆ.

) ನಾಡಗಮಾ: ಶ್ರೀಲಂಕಾದಲ್ಲಿರುವ ಕಥೋಲಿಕ ಕ್ರೈಸ್ತರು ನಡೆಸುವ ನಾಟಕ ‘ನಾಡಗಮಾ’ ಎಂದು ಹೇಳಲಾಗುತ್ತದೆ. ಇದು ಶ್ರೀಲಂಕಾದಲ್ಲಿನ ಕೂತ್ತು (ನಾಟಕ) ರೂಪವನ್ನು ಒಳಗೊಂಡಿದೆ. ಯಕ್ಷಗಾನದ ಪ್ರಭಾವವನ್ನು ಇದರಲ್ಲಿ ಕಾಣಬಹುದು. ಇದನ್ನು ಶ್ರೀಲಂಕಾಗೇ ಸೀಮಿತವಾದ ಪ್ರತ್ಯೇಕ ನಾಟಕ ರೂಪ ಎಂದು ಸಂಶೋಧಕರು ಹೇಳುತ್ತಾರೆ. ಸಿಂಹಳಿ ಭಾಷೆಯಲ್ಲೂ ಈ ನಾಟಕಗಳು ಅನುವಾದಗೊಂಡು ಆಡಿಸಲ್ಪಡುತ್ತವೆ. ಇವು ಕೂಡ ಸಂತರ ಜೀವನ ಚರಿತ್ರೆಯನ್ನು ಪ್ರಚುರಪಡಿಸುತ್ತದೆ.

ಕ್ರೈಸ್ತ ಜನಪದ ನಾಟಕಗಳೆಲ್ಲವೂ ಸಂಗೀತ ಪ್ರಧಾನ ಹಾಡುಗಳೇ ಆಗಿವೆ. ಸಂಭಾಷಣೆಗಳು ಬಹಳ ಕಡಿಮೆ. ಈ ನಾಟಕಗಳು ಬಹುಪಾಲು ಹಿಂದುಳಿದ, ಕೆಳಜಾತಿಗೆ ಸೇರಿದ ಕ್ರೈಸ್ತ ಜನ ತೆರೆದ ಮೈದಾನದಲ್ಲಿ ಆಡುತ್ತಾರೆ. ಕ್ರೈಸ್ತ ಮಂದಿರಗಳ ಬಳಿ ಗರಿಗಳಿಂದ ನಿರ್ಮಿಸಿದ ಪುಟ್ಟ ವೇದಿಕೆಯ ಮೇಲೆ ನಾಟಕ ನಡೆಯುತ್ತದೆ. ಚರ್ಚ್‌ ಹಬ್ಬಗಳ ಸಂದರ್ಭಗಳಲ್ಲಿ ಸ್ಥಳೀಯರೇ ಇದರಲ್ಲಿ ಪಾಲ್ಗೊಂಡು ನಟಿಸುತ್ತಾರೆ. ಪುರುಷರಿಗೆ ಮಾತ್ರ ನಾಟಕದಲ್ಲಿ ಮಾತ್ರ ಮಾಡಲು ಅವಕಾಶವಿದೆ. ಸ್ತ್ರೀಯರು ನಟಿಸಿದರೆ ನಾಟಕದ ಪಾವಿತ್ರ್ಯ ಹಾಳಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಪುರುಷರು ಸ್ತ್ರೀ ವೇಷ ಧರಿಸಿ ನಟಿಸುತ್ತಾರೆ. ನಾಟಕದಲ್ಲಿ ಪಾತ್ರ ಮಾಡುವವರು ನಾಟಕವಾಡಲು ತೀರ್ಮಾನಿಸಿದ ದಿನದಿಂದ, ನಾಟಕ ಮುಗಿಯುವವರೆಗೆ ವ್ರತ ಕೈಗೊಳ್ಳಬೇಕು. ಈ ನಾಟಕಗಳು ರಾತ್ರಿಯಾಗುತ್ತಿದ್ದಂತೆ ಪ್ರಾರಂಭಗೊಂಡು ಮಧ್ಯರಾತ್ರಿಯವರೆಗೆ ನಡೆಯುತ್ತವೆ. ಬಹುತೇಕ ನಾಟಕಗಳು ಮೂರು ದಿನಗಳು ರಾತ್ರಿವೇಳೆ ನಡೆಯುತ್ತದೆ.

ಈ ಕ್ರೈಸ್ತ್ರ ನಾಟಕದ ಒಂದು ಭಾಗ ಆಚರಣೆಯಾಗಿ ನಡೆಯುವುದನ್ನು ಕಾಣಬಹುದು. ನಾಟಕದ ಮುಖ್ಯ ಪಾತ್ರವಾದ ಸಂತರು ಹಿಂಸೆಗೆ ಗುರಿಯಾದಾಗ ಅಥವಾ ಶಿಕ್ಷಿಸಲ್ಪಡುವಾಗ ಇಡೀ ಊರೇ ಶೋಕದಲ್ಲಿ ಮುಳುಗಿರುತ್ತದೆ. ನಾಟಕವನ್ನು ನೋಡುತ್ತಿರುವ ಪ್ರೇಕ್ಷಕರು ನಾಟಕದ ವೇದಿಕೆಗೆ ಬಂದು ಸಂತರಿಗೆ ಹಾರಗಳನ್ನು ಹಾಕಿ ಕಾಣಿಕೆಗಳನ್ನು ನೀಡುತ್ತಾರೆ. ಸಂತರ ಪಾತ್ರವಹಿಸಿದ ವ್ಯಕ್ತಿಯನ್ನು ವಂದಿಸಿ ಆಶೀರ್ವಾದ ಪಡೆಯುವರು. ಈ ಕಾರ್ಯಕ್ರಮ ಅನೇಕ ಗಂಟೆಗಳ ಕಾಲ ನಡೆಯುತ್ತದೆ.

ಕ್ರೈಸ್ತ ಜನಪದ ನಾಟಕಗಳನ್ನು ನಿರ್ದೇಶಿಸುವವರನ್ನು ‘ಅಣ್ಣಾವಿ’ ಎಂದು ಕರೆಯಲಾಗುತ್ತದೆ. ಈ ನಾಟಕಗಳು ತಾಳೆಗರಿಯಲ್ಲಿವೆ. ಇವನ್ನು ಪವಿತ್ರವೆಂದು ಬಗೆದು ಹಿಂದಿನಿಂದಲೂ ಅಣ್ಣಾವಿಗಳು ಸಂರಕ್ಷಿಸುತ್ತಿದ್ದಾರೆ. ಅಣ್ಣಾವಿಗಳಿಗೆ ಊರಿನಲ್ಲಿ ವಿಶೇಷ ಗೌರವವಿದೆ. ಅಣ್ಣಾವಿ ಎಂಬ ಪದ ಗುರು ಎಂಬರ್ಥದಲ್ಲಿ ಅನೇಕ ಗ್ರಾಮಗಳಲ್ಲಿ ರೂಢಿಯಲ್ಲಿದೆ. ಉಳಿದವರಿಗೆ ಆ ತಾಳೆಗರಿಗಳನ್ನು ಮುಟ್ಟಲು ಸಹ ಅನುಮತಿ ಇಲ್ಲ.

ಚರ್ಚ್‌‌ನ ಉತ್ಸವ ಪ್ರಾರಂಭವಾಗುವುದಕ್ಕೆ ಒಂದು ತಿಂಗಳ ಮುನ್ನವೇ, ಅಣ್ಣಾವಿ ತಾಳೆಗರಿ ಪ್ರತಿಯನ್ನು ಚರ್ಚ್‌‌ಗೆ ತರುತ್ತಾರೆ. ಚರ್ಚ್‌‌ನ ಪಾದ್ರಿ ಅದನ್ನು ಪಡೆದು ಅಣ್ಣಾವಿಗೆ ಆಶೀರ್ವದಿಸಿ, ತಾಳೆಗರಿ ಪ್ರತಿಯನ್ನು ಅವರಿಗೇ ಹಿಂದಿರುಗಿಸುವರು. ಈ ಕಾರ್ಯಕ್ರಮವನ್ನು ‘ಕಾನೂನು ನೀಡುವಿಕೆ’ ಎಂದು ಕರೆಯಲಾಗುತ್ತದೆ. ಈ ಪವಿತ್ರ ಆಚರಣೆಯ ಬಳಿಕ ನಾಟಕದ ಪಾತ್ರಧಾರಿಗಳಿಗೆ ಅವರವರ ಪ್ರತಿಗಳನ್ನು ಹಂಚುವರು. ಇತ್ತೀಚೆಗೆ ಕೆಲವರು ಹಾಳೆಗಳಲ್ಲಿ ಬರೆದಿಟ್ಟಿದ್ದಾರೆ. ಜ್ಞಾನಸೌಂದರಿ ನಾಟಕ, ಸಮಾಧಿ ವಾಸಗಪ್ಪಾ, ದೇವಸಹಾಯಂ ಪಿಳ್ಳೈನಾಟಕ, ಅಲೇಸು ನಾಟಕ ಮುಂತಾದ ಅನೇಕ ನಾಟಕಗಳ ಪ್ರತಿಗಳ ತಾಳಗರಿಯಿಂದ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಈ ನಾಟಕಗಳು ತಮ್ಮದೇ ಆದ ಸಂಪ್ರದಾಯವನ್ನು ಹೊಂದಿದೆ. ಇವು ಸ್ತುತಿಗೀತೆಯೊಂದಿಗೆ ಪ್ರಾರಂಭಗೊಳ್ಳುತ್ತವೆ. ಅಡೆತಡೆಯಿಲ್ಲದೆ ನಾಟಕ ಸಾಗಬೇಕೆಂಬ ಉದ್ದೇಶದಿಂದ ದುಷ್ಟ ಶಕ್ತಿಗಳ ನಿಗ್ರಹಕ್ಕಾಗಿ ಹಾಡುಗಳನ್ನು ಹಾಡಲಾಗುತ್ತದೆ. ದೇವದೂತರ ಕೃಪೆಯನ್ನು ಬೇಡಲಾಗುತ್ತದೆ. ಈ ನಾಟಕದ ಪ್ರತಿಗಳಲ್ಲಿ ವೆಣ್ಬಾ, ಕಲಿತ್ತುರೈ, ಸಿಂದು, ಇನ್ನಿಸೈ, ಕೊಚ್ಚಗಂ, ಕಳಿನೆಡಿಲ್ ಮುಂತಾದ ತಮಿಳು ಕಾವ್ಯ ರೂಪಗಳ ಶೀರ್ಷಿಕೆಗಳನ್ನು ಕಾಣಬಹುದು. ಮಂಗಳ ಹಾಡುವುದರೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಈ ಹಾಡುಗಳು ಲಯಬದ್ಧವಾಗಿರುತ್ತವೆ. ಇವುಗಳ ಮಧ್ಯೆ ಬರುವ ಸಂಭಾಷಣೆಗಳಲ್ಲೂ ಒಂದು ಬಗೆಯ ಲಯವನ್ನು ಕಾಣಬಹುದು. ಕೆಲವು ಹಾಡುಗಳು ಅಂತ್ಯಾದಿ (ಪ್ರಾರಂಭ ಮುಕ್ತಾಯ) ರೀತಿಯಲ್ಲಿದೆ.

ಈ ನಾಟಕಕ್ಕೆ ಅಲಂಕಾರ ಮಾಡುವುದನ್ನು ‘ಬಣ್ಣ ಹಚ್ಚುವುದು’ ಎನ್ನುತ್ತಾರೆ. ನಾಟಕದ ವೇದಿಕೆಗೆ ಹೊಂದಿಕೊಂಡಂತೆ ಗರಿಗಳಿಂದ ಮರೆಮಾಡಿದ ಸ್ಥಳದಲ್ಲಿ ಅಲಂಕಾರ ಮಾಡುತ್ತಾರೆ. ಊರಿನ ವ್ಯಕ್ತಿ (ವಿದ್ಯಾವಂತ) ಅಲ್ಲಿಗೆ ಬಂದು ನಟರಿಗೆ ಮುಖ ಕ್ಷೌರ ಮಾಡುತ್ತಾರೆ. ನಟರ ಹಣೆಯಲ್ಲಿ ಶಿಲುಬೆಯ ಗುರುತನ್ನು ಹಾಕಿದ ಬಳಿಕ ಬಣ್ಣ ಹಚ್ಚಲು ಆರಂಭಿಸುತ್ತಾರೆ.

ನಟರೆಲ್ಲರಿಗೂ ಒಂದು ಬಗೆಯ ಗುಲಾಬಿ ಬಣ್ಣವನ್ನು ಹಚ್ಚಲಾಗುತ್ತದೆ. ರಾಜ, ಮಂತ್ರಿ, ಸೇವಕ ಮುಂತಾದ ಪಾತ್ರಗಳಿಗೆ ದೊಡ್ಡ ಮೀಸೆಗಳನ್ನ ಬರೆಯಲಾಗುತ್ತದೆ. ರಾಜನ ಪಾತ್ರಧಾರಿಯ ಹಣೆಯಲ್ಲಿ ಅರ್ಧ ಚಂದ್ರಾಕಾರವನ್ನು ಬರೆಯುವುದು ರೂಢಿ. ತಾಳೆಗರಿಯಿಂದ ಮಾಡಿದ ಕಿರೀಟದ ತುದಿಯಲ್ಲಿ ಶಿಲುಬೆ ಇರುತ್ತದೆ. ಈ ಕಿರೀಟವನ್ನು ಬಣ್ಣದ ಕಾಗದಗಳಿಂದ ಅಲಂಕರಿಸುತ್ತಾರೆ. ಇದನ್ನು ರಾಜನ ಪಾತ್ರ ಮಾಡುವವರು ತಲೆಗೆ ಧರಿಸುತ್ತಾರೆ. ರಾಜ ಪಾತ್ರಧಾರಿ ಚಕಮಕ ಹೊಳೆಯುವ ವಸ್ತ್ರಗಳನ್ನು ಧರಿಸಿ ಇತರರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವರು. ಗಿಳಿಯ ಆಕಾರದಲ್ಲಿ ಕತ್ತರಿಸಿದ ರಟ್ಟಿನಲ್ಲಿ ಹಸಿರು ಕಾಗದವನ್ನು ಅಂಟಿಸಿ ಅವುಗಳನ್ನು ಎರಡೂ ಭುಜಗಳ ಮೇಲೂ ಧರಿಸುತ್ತಾರೆ. ಎಡಗೈಯಲ್ಲಿ ದಂಡವನ್ನೂ ಬಲಗೈಯಲ್ಲಿ ಬಣ್ಣದ ಕರವಸ್ತ್ರವನ್ನೂ ಹಿಡಿದುಕೊಂಡಿರುತ್ತಾರೆ. ರಾಜನಿಗೆ ಹೊಂಬಣ್ಣದ ಕಾಗದಗಳಿಂದ ಆಭರಣಗಳನ್ನು ತೊಡಿಸಲಾಗುತ್ತದೆ. ದೇವದೂತರು ಬಿಳಿಯ ವಸ್ತ್ರವನ್ನು ಧರಿಸುತ್ತಾರೆ. ಅವರ ಬೆನ್ನಿಗೆ ರೆಕ್ಕೆಗಳಂತೆ ಕತ್ತರಿಸಿದ ರಟ್ಟನ್ನು ಕಟ್ಟಲಾಗುತ್ತದೆ. ತಳವಾರ ಖಾಕಿ ಬಣ್ಣದ ಕಾಲುವಸ್ತ್ರ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಬರುವನು. ಸ್ತ್ರೀ ಪಾತ್ರಗಳನ್ನು ಮಾಡುವ ಪುರುಷರು ಮೀಸೆ ಬೋಳಿಸಿಕೊಂಡು ಉದ್ದದ ತಲೆಗೂದಲು ಧರಿಸಿ ರೇಷ್ಮೆ ವಸ್ತ್ರದೊಂದಿಗೆ ಸ್ತ್ರೀಯರಂತೆ ಒಯ್ಯಾರದಿಂದ ನಡೆದು ಬರುವರು.

ಪ್ರತಿಯೊಬ್ಬ ಪಾತ್ರಧಾರಿಯೂ ತನಗೆ ಹೊಂದುಂಥ ವಸ್ತ್ರವನ್ನು ಧರಿಸುತ್ತಾರೆ. ಅದಕ್ಕೆ ತಗಲುವ ವೆಚ್ಚವನ್ನು ಆ ಪಾತ್ರಧಾರಿಯೇ ಭರಿಸಬೇಕು. ಕೆಲವು ಗ್ರಾಮಗಳಲ್ಲಿ ನಿರ್ದಿಷ್ಟ ಪಾತ್ರವನ್ನು ಮಾಡುವುದಾಗಿ ಹರಕೆ ಹೊರುವುದೂ ಉಂಟು. ನಾಟಕ ನಡೆಯುವ ಕಾಲದಲ್ಲಿ ಜನಿಸಿದ ಮಕ್ಕಳಿಗೆ ಆ ನಾಟಕದ ಮುಖ್ಯ ಪಾತ್ರವಾಗಿರುವ ಸಂತರ ಹೆಸರನ್ನು ಇಡುವುದುಂಟು.

ಇತ್ತೀಚೆಗೆ ಈ ನಾಟಕಗಳನ್ನು ಆಡಿಸುವ ಅಣ್ಣಾವಿಗಳು ಕಡಿಮೆಯಾಗಿದ್ದಾರೆ. ಸಂಗೀತಮಯವಾಗಿ ಹಾಡಿ ನಟಿಸುವ ನಟರು ಸಿಗುವುದೂ ಅಪರೂಪವಾಗಿಬಿಟ್ಟಿದೆ. ಈ ಆಚರಣಾಬದ್ಧವಾದ ನಾಟಕವನ್ನು ಕಳೆದುಕೊಳ್ಳು ಇಷ್ಟಪಡದ ಹಳ್ಳಿ ಜನರು, ಇದನ್ನು ಸಂಭಾಷಣೆಗಳ ರೂಪಕ್ಕೆ ರೂಪಾಂತರಿಸಿ ಪ್ರತಿವರ್ಷ ವಿದ್ಯಾರ್ಥಿಗಳಿಂದ ಆಡಿಸುತ್ತಾರೆ.

– ವಿ.ಕೆ.ಕೆ. ಅನುವಾದ ಐ.ಎಸ್.

ಕ್ರೋಂದೋನ್ ಪಾಟ್ ಕೇರಳದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತವಾಗಿದ್ದ ಫಲವಂತಿಕೆಯ ಒಂದು ಆಚರಣೆಯೇದ ಕ್ರೋಂದೋನ್ ಪಾಟ್ ಅಥವಾ ಗಂಧರ್ವನ್‌ಪಾಟ್‌. ನಾಯರ್ ಹಾಗೂ ಇತರ ಜಾತಿಗಳಲ್ಲಿ ವಣ್ಣಾನ್ ಜಾತಿಗೆ ಸೇರಿದವರು ಈ ಧಾರ್ಮಿಕ ಆಚರಣೆಯನ್ನು ನಡೆಸುವರು. ಪುಲಿಯರ, ಮಾವಿಲರ, ಚೆರವರ ಸಮುದಾಯಗಳಲ್ಲಿ ಆಯಾ ಸಮುದಾಯದ ವ್ಯಕ್ತಿಗಳು ಈ ಆಚರಣೆಯನ್ನು ನಡೆಸುತ್ತಾರೆ. ಗರ್ಭಿನಿಯರಿಗೆ ಏಳನೇ ತಿಂಗಳಲ್ಲಿ ಈ ಆಚರಣೆಯನ್ನು ಮಾಡುತ್ತಾರೆ. ಯಕ್ಷ ಗಂಧರ್ವರ ಬಾಧೆಯಿಂದ ಗರ್ಭಪಾತವಾಗದಂತೆ ತಡೆಯಲು ನಡೆಸುವ ಉಚ್ಛಾಟನಾ ವಿಧಿ ಇದು. ಮನೆಗಳಲ್ಲಿ ಇದರ ವಿಧಿಯಾಚರಣೆಗಳು ನಡೆಯುತ್ತವೆ.

ಸಂಜೆಯ ಹೊತ್ತಿಗೆ ಕ್ರೋಂದೋನ್ ಪಾಟ್ ಆರಂಭಿಸುವರು. ಅಂಗಳದಲ್ಲಿ ಚಪ್ಪರ ಹಾಕಿ, ನೆಲಕ್ಕೆ ಸೆಗಣಿ ಸಾರಿಸಿ, ಕನ್ನಿ, ಕಾಮ ಮೊದಲಾದ ರೂಪಗಳನ್ನು ‘ಕಳಂ’ ಬರೆಯುವರು. ಅನಂತರ ಬಾಧೆಗೊಳಗಾದ ಗರ್ಭಿಣಿ ಮಹಿಳೆ ಕಳಕ್ಕೆ ಬರುವಳು. ಗಣಪತಿ, ಸರಸ್ವತಿ ಸ್ತುತಿಗಳ ಅನಂತರ ಕ್ರೋಂದೋನ್ ಪಾಟಿನ ಆರಂಭಿಕ ಹಂತವನ್ನು ಹಾಡುವರು. ಈ ಸಂದರ್ಭದಲ್ಲಿ ಬಾಧೆಗೊಳಗಾದ ಮಹಿಳೆಗೆ ಅಕ್ಕಿ ಹಾಗೂ ಬತ್ತವನ್ನು ನಿವಾಳಿಸುವರು. ಈ ವಿಧಿಯ ಅನಂತರ ನಾಚಾಯ್ಯಳ ಪಾಟ್ ಹಾಡುವರು.

ನಾಚಾಯ್ಯಳ ಪೂರಂ ವ್ರತ ಮಾಡಿದ ಕಥೆಯನ್ನು ಹಾಡಿನ ಮೂಲಕ ಪ್ರಸ್ತುತಮಾಡಿಸುವಾಗ ಕಾಮ ಹಾಗೂ ಕನ್ನಡಿಯ ತೆಯ್ಯಾ ಕೋಲಗಳು ಬರುತ್ತವೆ. ಕೆಲವು ನಾಯರ್ ಕುಟುಂಬಗಳಲ್ಲಿ ಕುದುರೆಯ ಮೇಲೆ ಸವಾರಿ ಮಾಡುವ ಕಾಮನ ಕೋಲವಿರುತ್ತದೆ. ಇದು ಆಕಾಶಗಾಮಿ ಗಂಧರ್ವವನ್ನು ನೆನಪಿಸುತ್ತದೆ. ಕೋಲತ್ತು ನಾಡಿನ ಉತ್ತರ ಭಾಗದಲ್ಲಿ ನೀಲಿಕೇಶಿ ಪಾಟ್ ಹಾಡುವರು. ಕೆಲವೆಡೆ ನೀಲಿಕೇಶಿಯ ಕೋಲವಿರುವುದು. ಅರ್ಧರಾತ್ರಿಯ ಹೊತ್ತಿಗೆ ಅನೇಕ ಕೋಲಗಳು ನಡೆಯುತ್ತದೆ. ವೇಚಿ, ಮಾಪಳ, ಮಾಯಿಲೋನ್, ಯೋಗಿ ಮೊದಲಾದ ಕಥಾಪಾತ್ರಗಳು ರಂಗಕ್ಕಿಳಿಯುತ್ತವೆ. ಮುಂಜಾನೆಯ ಹೊತ್ತಿಗೆ ಕ್ರೋಂದೋನ್ ಪಾಟು ಮುಗಿಯುವುದು. ಪೊಲಿಪಾಟ್ ಹಾಡಿ, ಅಕ್ಕಿ, ಧಾನ್ಯ, ವಸ್ತ್ರ, ಹಣವನ್ನು ವೃದ್ಧಿಸುವ ಆಚರಣೆ ನಡೆಯುತ್ತದೆ. ಅನಂತರ ತೆಂಗಿನ ಎಳೆಯ ಗೊನೆಯನ್ನು ಬಾಧೆಗೊಳಗಾದ ಮಹಿಳೆಯಿಂದ ನೆಲಕ್ಕೆ ಹೊಡೆಸಿ, ಶಕುನ ನೋಡುವ ಕ್ರಮವಿದೆ.

ಸುಖಪ್ರಸವಕ್ಕಿರುವ ಆಚರಣೆಯಾಗಿ ಪುಲಯರ ಕ್ರೋಂದೋನ್ ಪಾಟು ಕಂಡುಬರುತ್ತದೆ. ಮನೆಯಲ್ಲಿ ನಡೆಯುವ ಈ ಆಚರಣೆಗೆ ಚಪ್ಪರ ಹಾಕುವ ಕ್ರಮವಿಲ್ಲ. ಕೊನೆಯ ವಿಧಿಯನ್ನು ನದಿ ತೀರದಲ್ಲಿ ನಡೆಸುವರು. ಅಂಗಳದಲ್ಲಿ ಬಾಳೆ ಹಾಗೂ ತೆಂಗಿನ ಗರಿಗಳಿಗಂದ ಬಲಿವೇದಿಕೆ ನಿರ್ಮಿಸುವರು. ಬಾಧೆಗೊಳಗಾದ ಮಹಿಳೆ ಕೈಯಲ್ಲಿ ತೆಂಗಿನ ಗರಿ ಹಿಡಿಯುತ್ತಾಳೆ. ಮುಂಜಾನೆ ಹೊತ್ತಿಗೆ ಕ್ರೋಂದೋನ್ ತೆಯ್ಯ ಬರುವುದು. ಅಂಗಳದ ಮಧ್ಯೆ ಹಾಲೆಯ ಗೆಲ್ಲು ನಾಟುವರು. ಅದರಲ್ಲಿ ಕಂಠದ ಮೂಲಕ ಗಂಧರ್ವ ರೂಪವನ್ನು ಬರೆಯುವರು. ಮುಖ್ಯ ಕರ್ಮಿಯಾದ ವ್ಯಕ್ತಿ ಕಳಂಪೂಜೆ ನಡೆಸುವರು. ಅನಂತರ ಬಾಧೆಗೊಳಗಾದ ಮಹಿಳೆಯನ್ನು ಕಳದಲ್ಲಿ ಕುಳ್ಳಿರಿಸಿ, ಉಚ್ಛಾಟದ ತೋಟ್ಟಂಗಳನ್ನು ಹಾಡುವರು. ಅನಂತರ ಕ್ರೋಂದೋನ್ ತೆಯ್ಯಂ ಬರುವುದು. ಬಾಧೆಗೊಳಗಾದ ಮಹಿಳೆ ಅಗಲೂ ಆವೇಶಗೊಳ್ಳದಿದ್ದರೆ ಬಾಧೆಪಾಟು ಹಾಡುವರು. ಇದರ ಜತೆಗೆ ಚಿಮ್ಮಾನಂಕಳಿ ನಡೆಸುವ ಕ್ರಮವೂ ಇದೆ.

ಕ್ರೋಂದೋನ್ ಪಾಟು ಎಂಬ ವಿಧಿಯಾಚರಣೆ ಇಂದು ಅಷ್ಟಾಗಿ ಪ್ರಚಲಿತವಾಗಿಲ್ಲ. ಆರೋಗ್ಯ ಹಾಗೂ ಸಂತಾನಲಬ್ದವಾಗಿ ವಿಧಿಯಾಚರಣೆಗಳನ್ನು ನಡೆಸುತ್ತಿದ್ದ ಕಾಲದ ಅವಶೇಷವಾಗಿ ಇದು ಕಂಡುಬರುತ್ತದೆ. ಅನಾರೋಗ್ಯ ಹಾಗೂ ಸಂಕಷ್ಟಗಳಿಗೆ ಅಲೌಕಿಕ ಶಕ್ತಿಗಳೇ ಕಾರಣ ಎಂದು ನಂಬಿದ್ದ ಜನರು  ಗೀತ, ವಾದ್ಯ, ನೃತ್ಯ, ಚಿತ್ರ, ಅಭಿನಯ ಸಾಹಿತ್ಯಗಳ ಮೂಲಕ ಉಚ್ಛಾಟನೆಯನ್ನು ನಡೆಸುವ ವಿಧಿಯಾಚರಣೆಯಾಗಿ ಕ್ರೋಂದೋನ್ ಪಾಟ್ ಕಂಡುಬರುತ್ತದೆ.

ಈ ಆಚರಣೆಯ ಅಂಗವಾಗಿ ಕನ್ನಲ್ ಪಾಟು, ಮಾರನ್ ಪಾಟು, ನೀಲಿಕೇಶಿ ಪಾಟು, ಸ್ತುತಿಗಳನ್ನು ಹಾಡುತ್ತಾರೆ. ಸಾಮಾನ್ಯವಾಗಿ ಪುಂಸವನ ಸಂದರ್ಭದಲ್ಲಿ ಈ ವಿಧಿಗಳನ್ನು ಮಾಡುತ್ತಾರೆ. ಕ್ರೋಂದೋನ್ ಪಾಟಿನ ಹಿಂದಿರುವ ಆಶಯ ಹಳೆಯ ಸಮಾಜದ ಆಚಾರವಿಚಾರಗಳನ್ನು, ನಂಬಿಕೆಗಳನ್ನು, ವಿಧಿ ನಿಷೇಧಗಳನ್ನು ಉಳಿಸುವುದಾಗಿದೆ.

ಪಿ.ವಿ.ಕೆ. ಅನುವಾದ ಎನ್.ಎಸ್.