ಕೇರಳದ ಕೃಷಿ ಉಪಕರಣಗಳು ಮತ್ತು ಜಲಸೇಚನ ರೀತಿಗಳು ಕೇರಳದಾದ್ಯಂತ ವೈವಿಧ್ಯಮಯವಾದ ಪರಂಪರಾಗತ ಬೀಜದ ತಳಿಗಳೂ ಕೃಷಿ ಪದ್ಧತಿಗಳೂ ಇವನ್ನು – ಸಾಧ್ಯವಾಗಿಸುವ ಅನೇಕ ಕೃಷಿ ಉಪಕರಣಗಳೂ ನೆಲೆಗೊಂಡಿದ್ದವು. ಮಣ್ಣಿನ ಮತ್ತು ಹವಾಮಾನದ ವೈಶಿಷ್ಟ್ಯಗಳಿಗನುಸಾರವಾಗಿ ರೂಪಿಸಿಕೊಂಡಿದ್ದ ಕೃಷಿ ಉಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿದ್ದುವು. ಕೃಷಿ ಮಾಡುವುದು ಮತ್ತು ಶ್ರಮವನ್ನು ಕಡಿಮೆ ಗೊಳಿಸುವುದು ಇವುಗಳ ಮುಖ್ಯ ಉದ್ದೇಶಗಳಾಗಿದ್ದುವು. ಪ್ರಾದೇಶಿಕವಾಗಿ ಲಭ್ಯವಾಗುವ ವಸ್ತುಗಳನ್ನು ಉಪಯೋಗಿಸಿ ಆಯಾ ಪ್ರದೇಶದ ಮಣ್ಣಿನ ಸ್ವಭಾವವನ್ನು ಗಮನದಲ್ಲಿರಿಸಿ ಎಲ್ಲ ಕೃಷಿ ಉಪಕರಣಗಳನ್ನು ತಯಾರಿಸಲಾಗುತ್ತಿತ್ತು. ಆದುದರಿಂದಲೇ ಒಂದೊಂದು ಪ್ರದೇಶದಲ್ಲಿಯೂ ಒಂದೇ ಕೆಲಸಕ್ಕಾಗಿ ಬಳಸುವ ವ್ಯತ್ಯಸ್ತ ಉಪಕರಣಗಳಿರುವುದನ್ನು ಕಾಣಬಹುದು. ಇವುಗಳ ಹೆಸರುಗಳಲ್ಲಿಯೂ ಉಪಯೋಗಿಸುವ ರೀತಿಗಳಲ್ಲಿಯೂ ವ್ಯತ್ಯಾಸಗಳಿರುತ್ತವೆ. ಭತ್ತದ ಕೃಷಿಗೆ ಸಂಬಂಧಿಸಿದಂತೆ ಮುಖ್ಯವಾದ ಕೃಷಿ ಉಪಕರಣಗಳು ಮತ್ತು ಜಲಸೇಚನ ರೀತಿಗಳನ್ನು ಮುಂದೆ ವಿವೇಚಿಸಲಾಗಿದೆ.

ನೇಗಿಲು: ಬತ್ತದ ಕೃಷಿಗೆ ಸಂಬಂಧಿಸಿದಂತೆ ಪ್ರಧಾನ ಕೃಷಿ ಉಪಕರಣವೆಂದರೆ ನೇಗಿಲು. ಎರಡು ಎತ್ತುಗಳನ್ನು (ಕೋಣ/ಹೋರಿಗಳನ್ನು) ಸೇರಿಸಿ ನೊಗವನ್ನು ಇಟ್ಟು ಕಟ್ಟಿ ಉಳಲು ನೇಗಿಲನ್ನು ಬಳಸಿಕೊಳ್ಳಲಾಗುತ್ತದೆ. ಭಾರ ಕಡಿಮೆ ಇರುವ ಮರದಿಂದ ನೊಗವನ್ನು ತಯಾರಿಸುತ್ತಾರೆ. ಎರಡು ಎತ್ತುಗಳನ್ನು ನಿಶ್ಚಿತ ದೂರದಲ್ಲಿ ನಿಲ್ಲಿಸಿಕೊಂಡ ಬಳಿಕ ಕೊರಳಿಗೆ ನೊಗವನ್ನು ಜೋಡಿಸಲಾಗುತ್ತದೆ. ಮರದಿಂದ ಕೋನಾಕೃತಿಯಲ್ಲಿ ತಯಾರಿಸಿದ ನೇಗಿಲಿನ ಭಾಗ ‘ಕರಿ’ ಇದು ನೆಲವನ್ನು ಸೀಳಿಕೊಂಡು ಹೋಗುವ ಭಾಗ. ಇದರ ಕೆಳಭಾಗದಲ್ಲಿ ಕಬ್ಬಿಣದಿಂದ ಮಾಡಿದ ‘ಕೊಮಿ’ (ಪನೋಳು)ಯನ್ನು ಜೋಡಿಸುತ್ತಾರೆ. ಅಮುಕಿ ಹಿಡಿಯಲು ನೇಗಿಲ ‘ಕರಿ’ ಯ ಮೇಲಿನ ತುದಿಯಲ್ಲಿ ಹಿಡಿ ಇರುತ್ತದೆ. ಕರಿಯನ್ನು ನೊಗದೊಂದಿಗೆ ಜೋಡಿಸುವ ನೀಳವಾದ ದಂಡಿಗೆ ಕರಿಕೋಲ್/ಈಯಕ್ಕೋಲ್(ಮೊನೆತು) ಎಂದು ಹೆಸರು. ಕರಿಕೋಲನ್ನು ನೊಗಕ್ಕೆ ಜೋಡಿಸುವ ಭಾಗದಲ್ಲಿ ರಚಿಸಿರುವ ‘ಕೊದ’ (ಕತ್ತಿಯಿಂದ ಕಡಿದು ಗುರುತಗಳು) ಗಳಿಗೆ ಅನುಸಾರವಾಗಿ ಉಳುಮೆಯ ಆಳ ತೀರ್ಮಾನವಾಗುತ್ತದೆ. ಕಟ್ಟವು ಕೆಳಗೆ ಬಂದಾಗ ಉಳುಮೆಯ ಆಳ ಕಡಿಮೆಯಾಗುತ್ತದೆ. ಅದು ಮೇಲೆ ಹೋದಂತೆ ಉಳುಮೆಯ ಆಳವು ಹೆಚ್ಚುತ್ತ ಹೋಗುತ್ತದೆ. ಕರಿಕೋಲನ್ನೂ ನೊಗವನ್ನು ಜೋಡಿಸಲು, ತೆಂಗಿನ ಹೆಡೆಯ ಬುಡದಲ್ಲಿ ಒಳಭಾಗದಿಂದ ಸುಲಿದು ತೆಗೆದ ‘ಪಾಂದ’ವನ್ನು ಬೆಂಕಿ/ಬಿಸಿಲಲ್ಲಿ ಬಾಡಿಸಿಕೊಂಡು ತಯಾರಿಸಿದ ತಳೆಯನ್ನು ಉಪಯೋಗಿಸುತ್ತಾರೆ. ಕೆಲವೆಡೆ ಇದಕ್ಕಾಗಿ ಕಾಡುಬಳ್ಳಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ.

ಪ್ರತಿಯೊಂದು ಪ್ರದೇಶದಲ್ಲೂ ಮಣ್ಣಿನ ಸ್ವಭಾವಾನುಸಾರವಾಗಿ ನೇಗಿಲಿನ ಆಕೃತಿ, ಗಾತ್ರ ಮತ್ತು ಭಾರದಲ್ಲಿ ವ್ಯತ್ಯಾಸವಿರುತ್ತದೆ. ಗದ್ದೆಗಳಲ್ಲಿ ಬೀಜ ಬಿತ್ತುವುದಕ್ಕೆ ಎರಡು ತೆರನ ನೇಗಿಲುಗಳಿವೆ. ಉಳುವುದಕ್ಕಾಗಿ ಗಟ್ಟಿಮುಟ್ಟಾದ ದೊಡ್ಡ ನೇಗಿಲೂ ಬೀಜದ ಮೇಲೆ ಮಣ್ಣು ಹರಡುವುದಕ್ಕಾಗಿ ಸಣ್ಣ ನೇಗಿಲನ್ನು ಬಳಸುತ್ತಾರೆ. ನೇಗಿಲಿನ ‘ಕರಿ’ಯನ್ನು ಹಲಸು, ಮಾವು, ಮರ್ವ ಮುಂತಾದ ಮರಗಳಿಂದ; ನೇಗಿಲಿನ ಮೊನೆಯನ್ನು ತೆಂಗು, ಹನೆ, ತೇಗ ಮುಂತಾದ ಮರಗಳಿಂದ ತಯಾರಿಸುತ್ತಾರೆ.

ನೆಲ ಸಮತಟ್ಟಾಗಿಸುವ ಉಪಕರಣಗಳು: ಉತ್ತ ಗದ್ದೆಯನ್ನು ಸಮತಟ್ಟಾಗಿಸಲು ಗಟ್ಟಿಯಾದ ಮರದ ಹಲಗೆಯನ್ನು ನೊಗಕ್ಕೆ ಜೋಡಿಸಲಾಗುತ್ತದೆ. ನೆಲ ಸಮತಟ್ಟಾಗಿಸುವ ಉಪಕರಣಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಮರಂ, ಮುಟ್ಟಿ, ಞವಿರಿ, ಊರ್ಚ, ಚೆರಿಪ್ಪ್ ಪಲಗ, ತಾವ ಮುಂತಾದ ಹೆಸರುಗಳು ಈ ಉಪಕರಣಕ್ಕಿದೆ. ಸು.ಐದಡಿ ಉದ್ದ, ಒಂದಡಿಯಷ್ಟು ಅಗಲ ಮೂರಿಂಚು ದಪ್ಪದ ಮರದ ಹಲಗೆಯನ್ನು ಸಮತಟ್ಟಾಗಿಸಲು ಬಳಸಲಾಗುತ್ತದೆ. ನೊಗಕ್ಕೆ ಜೋಡಿಸಿದ ಹಲಗೆಯ ಮೇಲೆ ಉಳುವವನು ಹತ್ತಿ ನಿಂತು ಕೊಳ್ಳುತ್ತಾನೆ. ಬಿದ್ದು ಹೋಗದಂತೆ ನೊಗಕ್ಕೆ ಕಟ್ಟಿದ ಹಗ್ಗವನ್ನು ಹಿಡಿದುಕೊಂಡಿರುತ್ತಾನೆ. ಕೆಲವೆಡೆ ಹಲಗೆಗೆ ಒಂದು ಹಿಡಿಕೆ ಇರುತ್ತದೆ. ಇದನ್ನು ಅಮುಕಿಹಿಡಿಯಲಾಗುತ್ತದೆ. ಹಲಗೆಯ ಅಡಿಭಾಗದಲ್ಲಿ ಹಲ್ಲುಗಳಂತೆ ಕೆತ್ತಿಡುವ ಸಂಪ್ರದಾಯವೂ ಇದೆ. ಕೆಸರಿನಲ್ಲಿ ಹಲಗೆಯನ್ನು ಎಳೆಯುವಾಗ ನೀರು ಹೊರಹರಿದು ಹೋಗುವುದಕ್ಕಾಗಿ ಹೀಗೆ ಮಾಡಲಾಗುತ್ತದೆ. ಮಾವು, ಮರ್ವ, ಹಲಸು, ಬೇಂಙೆ, ಪೂವಂ (ಮ) ಮುಂತಾದ ಮರಗಳಿಂದ ಹಲಗೆಯನ್ನು ತಯಾರಿಸುತ್ತಾರೆ. ಎರಡು ಮೂರು ವರ್ಷಗಳಲ್ಲಿ ಹಲಗೆಯು ಸವೆದು ಅದರ ದಪ್ಪವು ಕಡಿಮೆಯಾಗುತ್ತದೆ. ಅಷ್ಟರಲ್ಲೇ ಹೊಸ ಹಲಗೆಯನ್ನು ತಯಾರಿಸಿ ಕೊಳ್ಳಲಾಗುತ್ತದೆ.

ಉದ್ದ ಹಲ್ಲುಗಳಿಂದ ಕೂಡಿದ ‘ಮುಚ್ಚಿ’ಗಳೂ ಪ್ರಚಾರದಲ್ಲಿದೆ. ಬುಡಗಳಲ್ಲಿ ಮರದ ತುಂಡುಗಳನ್ನು ಜೋಡಿಸಿರುವ ಬಿದಿರಿನ ತುಂಡುಗಳನ್ನು ನಿಶ್ಚಿತ ಅಂತರದಲ್ಲಿ ಜೋಡಿಸಿಕೊಂಡು ಇಂತಹ ‘ಮುಟ್ಟಿ’ಗಳನ್ನು ತಯಾರಿಸಲಾಗುತ್ತದೆ. ಮಣ್ಣನ್ನು ಅಗೆಯುವುದು, ಕಳೆಗಳನ್ನು ಕಿತ್ತು ಬಿಸಾಡುವುದು, ಹೆಚ್ಚಾದ ನೇಜಿಯನ್ನು ಕಿತ್ತು ಕಳೆಯುವುದು ಮುಂತಾದ ಉದ್ದೇಶಗಳಿಂದ ಪಲ್ಲಿ, ಚಕ್ಕ್, ಪಲ್ಲನ್ ಮುಟ್ಟಿ ಮುಂತಾದ ಹೆಸರುಗಳು ಇವಕ್ಕೆ ಇವೆ.

ಒಣಗಿದ ಮಣ್ಣ ಹೆಂಟೆಗಳನ್ನು ‘ಕಟ್ಟಕೋಲ್’ ಎಂಬ ಕಟ್ಟಿಗೆಯ ಉಪಕರಣದಿಂದ ಪುಡಿ ಮಾಡಿಕೊಳ್ಳುತ್ತಿದ್ದರು. ಇದು ಸುತ್ತಿಗೆಯ ಮರದ ರೂಪ. ಹಲಸು, ಕಾಸರ ಮುಂತಾದ ಮರಗಳನ್ನು ‘ಕಟ್ಟುಮುಟ್ಟಿ’ಗೆ ಬಳಸಿಕೊಳ್ಳುತ್ತಾರೆ. ಬಿದಿರು, ಕಂಗಿನ ಸೀಳು ಮುಂತಾದುವನ್ನು ಅದರ ಹಿಡಿಗಾಗಿ ಬಳಸುತ್ತಾರೆ. ‘ಕಟ್ಟಮರ’ದಿಂದ ಪುಡಿಯಾಗದ ಮುಂಡಕನ ದೊಡ್ಡ ಹೆಂಟೆಗಳನ್ನು ‘ಕಟ್ಟಕೋಲ್‌’ನಿಂದ ಪುಡಿಮಾಡುವವರು ಹೆಂಗಸರು. ಎರಡು ಕೈಗಳಿಂದಲೂ ಕಟ್ಟಕೋಲನ್ನು ಎತ್ತಿ ತಾಳಾತ್ಮಕವಾಗಿ ಹೆಂಟೆ ಒಡೆಯುತ್ತಿದ್ದ ಸ್ತ್ರೀಯರಿದ್ದರು.

ವಿವಿಧೋದ್ದೇಶದ ಉಪಕರಣಗಳು: ಕೈಕೋಟ್ಟ್‌ (ಹಾರೆ) ಪಡನ್ನ(ಮ) ಇವು ಸಾರ್ವತ್ರಿಕವಾಗಿ ಉಪಯೋಗವಾಗುವ ವಿವಿದೋದ್ದೇಶ ಕೃಷಿ ಉಪಕರಣಗಳಾಗಿವೆ. ಹಾರೆಯಲ್ಲಿನ ಲೋಹ ಭಾಗದ ಅಗಲ ಕಿರಿದು, ಪಡನ್ನದ ಲೋಹಭಾಗ ಹೆಚ್ಚು ಅಗಲವುಳ್ಳದ್ದು ಹಾರೆಯಿಂದ ಮಣ್ಣು ಕಡಿದು ಹಾಕುವುದು, ಮಾಡಬಹುದು. ಪಚನ್ನದ ಮೂಲದ ಪಾತಿಗಳ ಮಣ್ಣಿತ್ತುವುದು, ಗದ್ದೆ ಹುಣಿಕೆತ್ತುವುದು ಮುಂತಾದ ಕೆಲಸಗಳನ್ನು ಮಾಡಬಹುದು. ಈ ಉಪಕರಣಗಳ ಹಿಡಿಯನ್ನು ಕಾಸರಕದಿಂದಲೋ, ಹಲಸಿನ ಮರದಿಂದಲೋ ಮಾಡಿಕೊಳ್ಳುತ್ತಾರೆ. ಹಾರೆಯ ಅತಿ ಸಣ್ಣ ರೂಪವೇ ‘ಕೊತ್ತ್’ ಎಂಬ ಉಪಕರಣ. ಕುಮರಿ ಕೃಷಿಗಾಗಿ ಆದಿವಾಸಿ ಜನ ಇದನ್ನು ಹೆಚ್ಚು ಬಳಸುತ್ತಾರೆ. ಕಡಿಯುವುದಕ್ಕೂ, ಕಳೆ ನೀಗುವದಕ್ಕೂ ಇದು ಒದಗುತ್ತದೆ. ಇದೇ ಉಪಯೋಗಕ್ಕೆ ‘ಪೇರಕೊಕ್ಕ’ ಎಂಬ ಉಪಕರಣವೂ ಬಳಕೆಯಾಗುತ್ತದೆ. ತುದಿಬಾಗಿರುವ ಇದಕ್ಕೆ ಹರಿತವಾದ ಕಬ್ಬಿಣವನ್ನು ಜೋಡಿಸಿರುತ್ತಾರೆ. ಇದನ್ನು ಕುಮರಿ ಬೇಸಾಯಕ್ಕಾಗಿ ಬಳಸುತ್ತಾರೆ. ಕೈಕೋಟ್ಟ್ ಪಡನ್ನ ಕೊತ್ತ್ ಎಂಬ ಮಲಯಾಳಿ ಪದಗಳಿಗೆ ತುಳುವಿನಲ್ಲಿ ಬಹುಶಃ ಪೂಂಕೊಟ್ಟು, ಕೊಟ್ಟು, ಪರುವಾಯಿ ಎಂಬವುಗಳನ್ನು ಪರ್ಯಾಯವಾಗಿ ಬಳಸುತ್ತಾರೆ.

ಬತ್ತವನ್ನು ಬಾಚುವುದನ್ನು ಮರಗಳನ್ನು ಗಾಳಿಗೆ ಹಿಡಿಯುವುದಕ್ಕೆ ‘ಕಾಟ್ಟೋಲ’ ವನ್ನು ರಾಸಿ ಹಾಕುವುದಕ್ಕೆ ‘ನೆಲ್ಲಕೋರಿ’ ಯನ್ನೂ ಬಳಸುತ್ತಾರೆ. ಮಳೆಯಿಂದ ಪಾರಾಗುವುದಕ್ಕೆ ಕೃಷಿಕರು ‘ತಲಕ್ಕಡ್’ವನ್ನೂ ‘ಪಿರಿಯೋಲ’ವನ್ನು ಧರಿಸುತ್ತಿದ್ದರು. ಹವೆ ಮರದ ಗರಿಗಳಿಂದ ತಯಾರಿಸುವ ದೊಡ್ಡ ಟೊಪ್ಪಿಯೇ ತಲಕ್ಕುಡ. ಹನೆಗರಿಗಳಿಂದಲೇ ಪಿರಿಯೋಲವನ್ನು ತಯಾರಿಸಲಾಗುತ್ತದೆ. ಬಗ್ಗಿ ನೇಜಿನಡುವಾಗ ಉಪಯೋಗವಾಗುವಂತೆ ಇದು ನೀಳಾಕಾರದಲ್ಲಿ ರಚನೆಯಾಗುತ್ತದೆ. ಬಿದಿರಿನಿಂದ ನೀಳ ‘ಮುರ’ಗಳನ್ನೂ ಮಳೆಗೆ ನೆನಯದಂತೆ ಬಳಸಿಕೊಳ್ಳುತ್ತಿದ್ದರು.

ಜಲಸೇಚನ ಉಪಕರಣಗಳು: ಮಳೆಯನ್ನು ಅವಲಂಬಿಸಿರುವ ಕೃಷಿ ಪದ್ಧತಿಯಲ್ಲಿ ನೀರಿನ ಪೂರೈಕೆಗೆ ತುಂಬ ಮಹತ್ವವಿದೆ. ಆದುದರಿಂದಲೇ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ತುಂಬ ಕೊಳಗಳು, ಹೊಂಡಗಳು; ನೀರು ಹಾಗೆಯೇ ಬಯಲು ಪ್ರದೇಶಗಳಲ್ಲಿ ಅಗತ್ಯಾನುಸಾ ನೀರುಣಿಸುವುದಕ್ಕೂ ಹೆಚ್ಚಾಗಿರುವ ನೀರನ್ನು ಹರಿಯುವಂತೆ ಮಾಡಲು ಸಾಕಷ್ಟು ಜಲಸೇಚನ ಉಪಕರಣಗಳನ್ನು ಬಳಸಿಕೊಳ್ಳಬೇಕು.

ನೀರು ಎತ್ತಲು ಸಾರ್ವತ್ರಿಕವಾಗಿ ಉಪಯೋಗಿಸುದ್ದುದು ತೇಕ್‌ ಕೊಟ್ಟ ಎಂಬ ಲಲಿತವಾದ ಒಂದು ಉಪಕರಣವನ್ನು. ಇದಕ್ಕೆ ಕಯಟ್ಟ್‌ಕೂಟ್ಟ, ತೇವ್‌ಕೊಟ್ಟ, ಎರವಟ್ಟಿ ಮುಂತಾದ(ಮ). ಹೆಸರುಗಳಿವೆ. ಹೆಚ್ಚು ಆಳವಿಲ್ಲದ ತೊರೆಗಳಿಂದಲೂ ಹೊಂಡಗಳಿಂದಲೂ ನೀರು ಚೋಕಲು/ತೋಕಲು ಇದನ್ನು ಉಪಯೋಗಿಸಲಾಗುತ್ತಿತ್ತು.ದೊಡ್ಡ ಮುರದ ಆಕೃತಿಯಲ್ಲಿ ಬಿದಿರಿನ ಸೀಳುಗಳಿಂದ ಗಟ್ಟಿಮಟ್ಟಾಗಿ ತೇಕ್ಕ್‌ಕೊಟ್ಟಗಳನ್ನು ನಿರ್ಮಿಸಲಾಗುತ್ತಿತ್ತು. ಬೆತ್ತದಿಂದಲೂ ಇದನ್ನು ತಯಾರಿಸುತ್ತಾರೆ. ಮುರವನ್ನು ಹೆಣೆಯುವ ಹಾಗೆ ಬಹಳ ಹತ್ತಿರ ಹತ್ತಿರವಾಗಿ ಎಡೆಬಿಡದಂತೆ ನೀರು ಸೋರಿ ಹೋಗದಿರಲು ಇದನ್ನು ನಿರ್ಮಿಸಿಕೊಳ್ಳತ್ತಾರೆ. ತೇಕ್ಕ್‌ಕೊಟ್ಟದಿಂದ ನೀರು ತೋಕುವುದಕ್ಕೆ ಇಬ್ಬರು ಬೇಕಾಗುತ್ತದೆ. ಕೆಳಗೂ ಮೇಲೂ ಜೋಡಿಸಿದ ಹಗ್ಗವನ್ನು ಹಿಡಿದುಕೊಂಡು ನೀರಲ್ಲಿ ಮುಳುಗಿಸಿ ನೀರು ತುಂಬಿಸಿಕೊಂಡು ಪಾತಿಗಳಿಗೆ ಹೊಯ್ದುಕೊಳ್ಳುವುದು ಇದರ ಕಾರ್ಯವೈಖರಿ ಇದು ತುಂಬ ಶ್ರಮದಾಯಕವಾದ ಕೆಲಸ.

ಆಳವಾದ ಕೆರೆಗಳಿಂದ ನೀರು ಎತ್ತುವ ಸಂಕೀರ್ಣವಾದ ಒಂದು ಉಪಕರಣವೆಂದರೆ ‘ಕಾಳತ್ತೇಕ್ಕ್’ ಎತ್ತುಗಳ ಸಹಾಯದಿಂದ ಇದು ಕಾರ್ಯನಿರ್ವಹಿಸುತ್ತದೆ. ವಿಶಿಷ್ಟ ರೀತಿಯಲ್ಲಿ ಜೋಡಿಸಿದ ಲೋಹ ಪಾತ್ರೆಗಳಲ್ಲಿ ತುಂಬಿಸುತ್ತವೆ. ವಿಶಿಷ್ಟ ರೀತಿಯಲ್ಲಿ ಜೋಡಿಸಿದ ಲೋಹಪಾತ್ರೆಗಳಲ್ಲಿ ತುಂಬುವ ನೀರು ಎತ್ತುಗಳು ಹಿಂದಕ್ಕೂ ಮುಂದಕ್ಕೂ ನಡೆಯುವುದಕ್ಕೆ ಅನುಸಾರವಾಗಿ ತುಂಬುತ್ತವೆ. ಮತ್ತು ಖಾಲಿಯಾಗುತ್ತದೆ. ಮಲಪ್ಪುರಂ, ಪಾಲ ಕ್ಕಾಡ್ ಮುಂತಾದ ಪ್ರದೇಶಗಲ್ಲಿ ಕಾಳತ್ತೇಕ್ಕ್ ಪ್ರಚಾರದಲ್ಲಿತ್ತು.

ಹೊಂಡಗಳಿಂದ ನೀರನ್ನು ಎತ್ತಿಕೊಂಡ ಪಾತಿಗಳಿಗೆ/ಗದ್ದೆಗಳಿಗೆ ಸುರಿಯುವ ಇನ್ನೊಂದು ಉಪಕರಣವೆಂದರೆ ಏತ. ಇದಕ್ಕೆ ತುಲಾನ್ ಎಂದೂ ಹೆಸರಿದೆ. ‘ಸೀಸಾ’ ದಂತೆ ಬ್ಯಾಲೆನ್ಸ್ ಮಾಡಿಕೊಂಡು ಇದರ ಕಾರ್ಯ ವೈಖರಿ. ಒಂದು ಕಡೆಯಲ್ಲಿ ನೀರೆತ್ತಲು ಜೋಡಿಸಿರುವ ಏತದತೊಟ್ಟೆ/ಜೊಟ್ಟೆಯನ್ನು ಇನ್ನೊಂದು ಕಡೆಯಲ್ಲಿ ಭಾರವನ್ನೂ ಹೇರಿದ ಒಂದು ದಂಡವೂ ಏತದ ಪ್ರಧಾನವಾದ ಭಾಗ. ಇದನ್ನು ನಾಲ್ಕು ಕಾಲುಗಳಲ್ಲಿ ಎತ್ತಿ ಏತದ ತೊಟ್ಟೆಯು ನೀರಲ್ಲಿ ಮುಳುಗಲು ಸಾಧ್ಯವಾಗುವಂತೆ ಸ್ಥಾಪಿಸಲಾಗುತ್ತದೆ. ಏತದ ತೊಟ್ಟೆಯಲ್ಲಿ ನೀರು ತುಂಬಿದಾಗಿನ ಭಾರಕ್ಕಿಂತ ಇನ್ನೊಂದು ಭಾಗದ ಭಾರ ಹೆಚ್ಚಾಗಿರುತ್ತದೆ. ಆದುದರಿಂದಲೇ ದಂಡದಲ್ಲಿ ಕಟ್ಟಿದ ಹಗ್ಗ ಎಳೆದಾಗ ಏತದ ತೊಟ್ಟಿ ಮೇಲೇರಿ ಬರುತ್ತದೆ. ಏತವನ್ನು ಎಳೆಯುವುದಕ್ಕೆ ತಾರತಮ್ಯೇನ ಶ್ರಮವು ಕಡಿಮೆ.

ಏತದ ತತ್ವವನ್ನೇ ಅನುಸರಿಸಿ ಬಳಕೆಯಾಗುವ ಇನ್ನೊಂದು ಉಪಕರಣ ದೋಣಿ. ದೋಣಿ ಆಕಾರದಲ್ಲಿರುವುದರಿಂದ ಇದಕ್ಕೆ ಈ ಹೆಸರು. ಇದನ್ನು ಮರದಿಂದ ನಿರ್ಮಿಸಲಾಗುತ್ತದೆ. ದೋಣಿಯ ಒಂದು ತುದಿಯು ತೆರೆದು ಕೊಂಡಿರುತ್ತದೆ. ಗದ್ದೆಗಳ ಸಮೀಪವಿರುವ ಹೊಂಡಗಳಿಂದ ನೀರನ್ನು ಎತ್ತಿ ಸುರುವಲು ದೋಣಿಯ ಬಳಕೆಯಾಗುತ್ತದೆ. ದೋಣಿಯ ತೆರೆದುಕೊಂಡ ತುದಿಯನ್ನು ಗದ್ದೆಗೆ ಅಭಿಮುಖವನ್ನು ಜೋಡಿಸಲಾಗುತ್ತದೆ. ಇನ್ನೊಂದು ತುದಿ ನೀರಲ್ಲಿ ಮುಳುಗಿಸಲು ಸಾಧ್ಯವಾಗುವಂತೆ ಇರುತ್ತದೆ. ಬಾಲದ ಹತ್ತಿರವೇ ನೆಟ್ಟಗೆ ನಾಟಿರುವ ಗಟ್ಟಿ ಕಂಭದಲ್ಲಿ ದೋಣಿಗೆ ಸಮಾಂಥರವಾಗಿ ಒಂದು ಬಿದಿರನ್ನು ಜೋಡಿಸಲಾಗುತ್ತದೆ. ಇದರ ಒಂದು ತುದಿಗೆ ದೋಣಿಯನ್ನು ಜೋಡಿಸಲಾಗುತ್ತದೆ. ಇನ್ನೊಂದು ಭಾಗದಲ್ಲಿ ಒಳ್ಳೆಯ ಭಾರವಸ್ತುವನ್ನು ನೇತಾಡಿಸುತ್ತಾರೆ. ಹೊಂಡದಲ್ಲಿ ಅಡ್ಡವಾಗಿ ಇರಿಸಿದ ಹಲಗೆಗಳಲ್ಲಿ ನಿಂತುಕೊಂಡು ನೀರು ತೋಕುವವನು ದೋಣಿಯನ್ನು ನೀರಲ್ಲಿ ಮುಳುಗಿಸುತ್ತಾರೆ. ನೀರು ತುಂಬಿದಾಗ ಇನ್ನೊಂದು ಬದಿಯಲ್ಲಿನ ಭಾರದಿಂದ ದೋಣಿ ತಾನಾಗಿ ಎತ್ತಲ್ಪಟ್ಟು ನೀರು ಗದ್ದೆಗಳಿಗೆ ಹಾಯುತ್ತದೆ. ಏತದ ಹಾಗೆಯೇ ಇದಕ್ಕೂ ಶ್ರಮ ಕಡಿಮೆ ಸಾಕು.

ತ್ರಿಚ್ಚೂರು, ಪಾಲ್ಘಾಟು, ಮಲಪ್ಪುರಂ ಜಿಲ್ಲೆಗಳಲ್ಲಿ ಬಳಕೆಯಲ್ಲಿದ್ದ ಒಂದು ತೋಕುವ ಉಪಕರಣವೆಂದರೆ ವೇತ್ತ್. ಆಳ ಕಡಿಮೆಯಿರುವ ತೋಡುಗಳಿಂದ ಗದ್ದೆಗಳಿಗೆ ನೀರು ತೋಕಲು ಇದನ್ನು ಉಪಯೋಗಿಸುತ್ತಿದ್ದರು. ಎತ್ತಿ ನಿಲ್ಲಿಸಿದ ಮುಕ್ಕಾಲಿ (ಮೂರು ಕಾಲುಳ್ಳದ್ದು) ಯಲ್ಲಿ ಗಟ್ಟಿಗೊಳಿಸಿದ ಆಯಾತಾಕಾರದ ಪೆಟ್ಟಿಗೆ ವೇತ್ತ್. ಇದರ ಮೇಲ್ಭಾಗ ಮತ್ತು ಒಂದು ಬದಿ ತೆರೆದಿರುತ್ತದೆ. ಪೆಟ್ಟಿಗೆಯ ಹಿಂಭಾಗದಲ್ಲಿ ಒಂದು ಹಿಡಿಕೆ ಇರುತ್ತದೆ. ಹಿಡಿಯ ಸಹಾಯದಿಂದ ಪೆಟ್ಟಿಗೆಯನ್ನು ನೀರಲ್ಲಿ ಮುಳುಗಿಸಿ ನೀರನ್ನು ತುಂಬಿಸಿಕೊಂಡು ಪಾತಿಗಳಿಗೆ ಸುರಿಯುವುದು ಇದರ ಕಾರ್ಯ ವೈಖರಿ. ಸುಲಭದಲ್ಲಿ ಉಪಯೋಗಿಸಿಕೊಳ್ಳಬಹುದಾದ ಒಂದು ಜಲಸೇಚನೋಪಾಯ – ವೇತ್ತ್.

ಸಮುದ್ರ ಮಟ್ಟದಿಂದ ಕೆಳಗೆ ಇರುವ ಗದ್ದೆಗಳ ಕೇರಳದ ವೈಶಿಷ್ಟ್ಯವಾಗಿದೆ. ಕುಟ್ಟನಾಡಿನ ಕೋಳ್‌ನೆಲಗಳು (ಸವುಳು ಭೂಮಿ) ಮತ್ತು ತ್ರಿಶ್ಶೂರಿನ ‘ಪೊಕ್ಕಾಳಿ’ ಗದ್ದೆಗಳು ಈ ತೆರನಾದವು. ಹೀಗೆ ಆಳವಾಗಿರುವ ಗದ್ದೆಗಳ ಸಮೂಹದಿಂದ ನೀರನ್ನು ತೋಕಿ ಬರಿದಾಗಿಸಲು ಬಳಸುವ ಒಂದು ಪ್ರಧಾನ ತೋಕುವ ಉಪಕರಣವೆಂದರೆ ಜಲಚಕ್ರ. ದಪ್ಪ ಕಡಿಮೆ ಇರುವ ಮರದ ಹಲಗೆಗಳಿಂದ ತಯಾರಿಸಿಕೊಂಡ ಚಕ್ರವೇ ಈ ಜಲಚಕ್ರ. ಇದರ ಮರಹಲ್ಲುಗಳು ಹೊರಕ್ಕೆ ಚಾಚಿನಿಂತಿವೆ. ಹಲ್ಲುಗಳ ಸಂಖ್ಯೆ ಹೆಚ್ಚುತ ಹೋದಂತೆ ಚಕ್ರದ ಗಾತ್ರವೂ ಬೆಳೆಯುತ್ತದೆ. ನಾಲ್ಕರಿಂದ ಇಪ್ಪತ್ತರವರೆಗೆ ಹಲ್ಲುಗಳಿದ್ದ ಚಕ್ರಗಳಿದ್ದುವು. ಇದಕ್ಕೆ ಅನುಸಾರವಾಗಿ ಚಕ್ರವನ್ನು ತುಳಿಯುವವರ ಸಂಖ್ಯೆಗಳೂ ಹೆಚ್ಚು ಕಡಿಮೆಯಾಗುತ್ತಿ‌ದ್ದುವು. ಗದ್ದೆಗಳ ತೆವರಿನ ಬದಿಗಳಲ್ಲಿ ಬಿದಿರಿನ ಕೋಲುಗಳಿಗೆ ಚಕ್ರವನ್ನು ಘಟಿಸುತ್ತಿದ್ದರು. ಚಕ್ರದ ಕೆಳಭಾಗದ ಹಲ್ಲು ನೀರಲ್ಲಿ ಮುಳುಗಿರಬೇಕು. ಚಕ್ರದ ಒಂದು ಭಾಗದಲ್ಲಿ ಕಟ್ಟಿದ ಮೆಟ್ಟಿಲುಗಳಲ್ಲಿ ಕುಳಿತುಕೊಂಡು ಕಾಲುಗಳಿಂದ ತುಳಿಯುತ್ತ ಚಕ್ರವನ್ನು ತಿರುಗಿಸಬೇಕು. ಚಕ್ರವು ತಿರುಗುವುದಕ್ಕೆ ಅನುಸಾರವಾಗಿ ನೀರು ಹೊರಕ್ಕೆ ಹರಿಯುತ್ತದೆ. ಇದಕ್ಕೆ ತುಂಬ ಪರಿಶ್ರಮದ ಅಗತ್ಯವಿದೆ. ಚಕ್ರವನ್ನು ತುಳಿಯುವಾಗಿನ ಶ್ರಮವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ನೀರು ತೋಕುವವರು ತೋಕುವ ಹಾಡುಗಳನ್ನು ಹಾಡಿಕೊಳ್ಳುತ್ತಿದ್ದರು.

ಕೃಷಿ ಉಪಕರಣಗಳ ಮತ್ತು ಜಲಸೇಚನ ರೀತಿಯ ವಿಶೇಷತಗಳೆಂದರೆ ತಲೆಮಾರಿನಿಂದ ಸಿದ್ದಿಸಿಕೊಂಡ ಅನುಭವ ಮತ್ತು ನಿರೀಕ್ಷಣೆಯ ಬೆಂಬಲ ಹಾಗೂ ಗ್ರಾಮೀಣ ತಂತ್ರಜ್ಞಾನದ ಪ್ರಯೋಗಗಳು. ಹಲವಾರು ಕೃಷಿ ಉಪಕರಣಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾದರೆ ಜಾನುವಾರುಗಳ ಸಹಾಯ ಅತ್ಯಗತ್ಯವಾಗಿತ್ತು. ಈಎಲ್ಲ ಕಾರಗಳಿಂದ ಪರಂಪರಾಗತ ಬತ್ತ ಬೇಸಾಯವು ಒಂದು ಸಾಂಘಿಕ ಚಟುವಟಿಕೆಯಾಗಿತ್ತು.

ಇಂದು ಹೆಚ್ಚಿನ ಎಲ್ಲ ಕೃಷಿ ಉಪಕರಣಗಳಿಗೆ ಬದಲಾಗಿ ಯಂತ್ರಗಳು ಬಳಕೆಗೆ ಬಂದಿವೆ. ಇಂದು ಎತ್ತುಗಳನ್ನು ಕಟ್ಟಿ ನೆಲವನ್ನು ಉಳುವುದು ಅಪೂರ್ವವಾಗಿದೆ. ಎತ್ತುಗಳ ಬದಲಿಗೆ ಟಾಕ್ಟರ್, ಟಿಲ್ಲರ್‌ಗಳು ಬಳಕೆಯಾಗುತ್ತಿವೆ. ಭತ್ತ ಬೇಸಾಯ ಮತ್ತು ಜಾನುವಾರಗಳಲ್ಲಿನ ಸಂಬಂಧವು ಪರಸ್ಪರ ಅವಲಂಬಿಯಾದುದು. ಜಾವುವಾರುಗಳ ಮುಖ್ಯ ಆಹಾರ ಬೈಹುಲ್ಲು. ಅವುಗಳ ಸೆಗಣಿಯು ಹೊಲಗದ್ದೆಗಳ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅಷ್ಟೆ ಅಲ್ಲ, ಕೃಷಿಕರು ಎತ್ತುಗಳನ್ನು ನೀರೆತ್ತುವುದಕ್ಕೂ ಉಳುವುದಕ್ಕೂ, ಒಕ್ಕಲಿಗೂ ಬಳಸಿಕೊಳ್ಳುತ್ತಿದ್ದರು. ಹೀಗೆ ಪರಸ್ಪರಾವಲಂಬಿಯಾದ ಒಂದು ಜೈನ ಚಕ್ರವು ಬತ್ತಬೇಸಾಯದಲ್ಲಿದೆ. ಎತ್ತುಗಳ ಸ್ಥಾನದಲ್ಲಿ ಟ್ರಾಕ್ಟರ್/ಟೆಲ್ಲರ್ ಬಂದಾಗ ಈ ಜೈವಚಕ್ರವು ತುಂಡಾಗಿ ಬಿತ್ತು. ಜಾನುವಾರುಗಳ ಕಡಿಮೆಯಾದಂತೆ ಅವುಗಳ ಸೆಗಣಿಗೊಬ್ಬರವೂ ಕಡಿಮೆಯಾಗಿ ಭೂಮಿಯ ಫಲವತ್ತತೆಯನ್ನು ಬಾಧಿಸುತ್ತದೆ.

– ಪಿ.ಆರ್.ಕೆ. ಅನುವಾದ ಕೆ.ಕೆ.

ಕೇರಳದ ಗ್ರಾಮೀಣ ಪಾನೀಯಗಳು ಜನಪದ ಸಾಂಸ್ಕೃತಿಕ ಬದುಕು ಸ್ವೀಕರಿಸಿದ ಕೆಲವು ವಸ್ತುಗಳಲ್ಲಿ ಗ್ರಾಮೀಣ ಪಾನೀಯಗಳು ಗಣನೀಯವಾಗಿದೆ. ದೇಶ, ಜಾತಿ, ಮತ, ಧರ್ಮಗಳ ಆಧಾರದಲ್ಲಿ ಪಾನೀಯಗಳು ವಿಭಿನ್ನ ಸ್ವರೂಪ ಪಡೆಯುತ್ತವೆ. ದೇಶವೊಂದರಲ್ಲಿ ಇರುವ ಎಲ್ಲರೂ ಒಂದೇ ರೀತಿ ಪಾನೀಯಗಳನ್ನು ತಯಾರಿಸುವುದಾಗಲಿ ಸೇವಿಸುವುದಾಗಲಿ ಮಾಡುವುದಿಲ್ಲ. ಸಿದ್ಧಪಡಿಸಲು ಬಳಸುವ ಪರಿಕರಗಳು, ಸಿದ್ಧತೆಯ ರೀತಿ, ಕುಡಿಯುವ ವಿಧಾನ, ಕುಡಿಯುವ ಹೊತ್ತು, ಪಾತ್ರೆಗಳ ವಿಚಾರ ಸಂಗತಿಗಳೆಲ್ಲ ಸಮಾಜದಲ್ಲಿ ಬಂದ ಬದಲಾವಣೆಗಳಿಗನುಸಾರವಾಗಿ ಪಾನೀಯಗಳ ವಿಚಾರದಲ್ಲೂ ಬದಲಾವಣೆಗಳಾಗಿವೆ.

ಜನಪದ ಬದುಕಿನಲ್ಲಿ ಪಾನೀಯಗಳನ್ನು ದಿನಚರಿ, ಬಾಯಾರಿಕೆ, ಅತಿಥಿ ಸತ್ಕಾರ, ಔಷಧೀಯ ಪಾನೀಯ, ಧಾರ್ಮಿಕಚಾರಣೆ, ಅಮಲು ಪದಾರ್ಥ – ಇತ್ಯಾದಿ ಸಂದರ್ಭ – ಉದ್ದೇಶಗಳಿಗಾಗಿ ಸೇವಿಸುತ್ತಾರೆ. ಬೆಳಗ್ಗೆ, ಮಧ್ಯಾಹ್ನ(ಆಹಾರದ ಜತೆ) ಸಂಜೆ, ರಾತ್ರಿ (ಆಹಾರದ ಜತೆ – ನಿದ್ದೆಗೆ ಮೊದಲು) – ಹೀಗೆ ದಿನಚರಿಯ ಸಂದರ್ಭಗಳಲ್ಲಿ ಪಾನೀಯಗಳನ್ನು ಉಪಯೋಗಿಸುತ್ತಾರೆ. ಬೆಳಗ್ಗೆದ್ದು ಹಲ್ಲುಜ್ಜುವುದೇ ಮುಂತಾದ ಪ್ರಾತರ್ವಿಧಿಗಳ ಬಳಿಕ ಚಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಇಂದು ಸಾಮಾನ್ಯವಾಗಿ ಕಂಡುಬರುತ್ತದೆ. ಇವೆರಡನ್ನೂ ಕುಡಿಯದವರು ಹಾಲನ್ನಾಗಲಿ ಹಾಲುನೀರನ್ನಾಗಲಿ ಕುಡಿಯುತ್ತಾರೆ. ಹಿಂದಿನ ಕಾಲದಲ್ಲಿ ಹಣವಂತರು ‘ಹಾಲುಗಂಜಿ’ಯನ್ನು (ಗಂಜಿಗೆ ಹಾಲು ಸಕ್ಕರೆ ಸೇರಿಸಿದ್ದು) ಸೇವಿಸುತ್ತಿದ್ದರು. ಮಣ್ಣಿನ ಪಾತ್ರೆಯ ಹಾಲುಗಂಜಿಯ ಕುರಿತು ವಡಕ್ಕನ್ ಪಾಟ್ಟುಗಳಲ್ಲಿ ಉಲ್ಲೇಖ ಸಿಗುತ್ತದೆ. ರಾಜ ಕುಟುಂಬಗಳವರು ಹಾಲುಗಂಜಿ ಕುಡಿಯುತ್ತಿದ್ದರೆಂಬ ಸೂಚನೆಗಳಿವೆ. ಆರ್ಥಿಕವಾಗಿ ಹಿಂದುಳಿದ ಜನ ಬೆಳಗ್ಗೆ ‘ತಂಗುಳು’ ಕುಡಿಯುತ್ತಿದ್ದ ರೂಢಿಯಿತ್ತು. ಬೆಳಗ್ಗೆದ್ದು ಮಿಂದು ತುಳಸೀತೀರ್ಥ ಮಾತ್ರ ಕುಡಿಯುತ್ತಿದ್ದ ರೀತಿಯೂ ಇತ್ತು.

ಆಹಾರದ ಜತೆಗೆ ಅಥವಾ ಅದರ ಬಳಿಕ ನೀರು ಕುಡಿಯುವ ಕ್ರಮ ಸರ್ವೇ ಸಾಮಾನ್ಯ. ತಣ್ಣೀರು, ತಣಿದ ಬಿಸಿನೀರು, ಶುಂಠಿನೀರು(ಕುದಿಸಿದ ನೀರಲ್ಲಿ ಶುಂಠಿ ಬೆರಸಿದ್ದು) – ಹೀಗೆ ಮಧ್ಯಾಹ್ನಕ್ಕೂ ರಾತ್ರಿಗೂ ಊಟದ ಜತೆಗೆ ಅಗತ್ಯವಿದ್ದಷ್ಟು ನೀರು ಕುಡಿಯುವ ಕ್ರಮ ಎಲ್ಲ ಜನರಲ್ಲೂ ಇದೆ. ಮೇಲ್ವರ್ಗದ ಜನ ಊಟದ ಜತೆಗೆ ಮೊಸರು, ಮಜ್ಜಿಗೆ – ಇತ್ಯಾದಿಗಳನ್ನು ಸೇವಿಸುತ್ತಾರೆ. ಆದರೆ ಇವುಗಳ ಉಪಯೋಗ ರಾತ್ರಿ ಹೊತ್ತಿನಲ್ಲಿ ಇಲ್ಲ. ಹಗಲಿಡೀ ದುಡಿದು ಮನೆಗೆ ಮರಳಿದಾಗ ಜನರು ಚಹಾವೋ ಕಾಫಿಯೋ ಕುಡಿಯುವ ಅಭ್ಯಾಸವುಳ್ಳವರು. ರಾತ್ರಿ ಮಲಗುವ ಸ್ವಲ್ಪ ಮೊದಲು ಹಾಲು ಕುಡಿಯುವವರಿದ್ದಾರೆ.

ದಾಹ ನಿವಾರಕ ಎಂಬ ನೆಲೆಯಲ್ಲಿ ಅನೇಕ ಪಾನೀಯಗಳಿವೆ. ಮಣ್ಣಿನ ಮಡಕೆಯಲ್ಲೋ ಹೂಜಿಯಲ್ಲೋ ರಾಮಚ್ಚವನ್ನು (ಒಂದು ಗಿಡದ ಬೇರು) ಹಾಕಿಟ್ಟ ತಂಪು ನೀರು, ಕುದಿಸಿ ತಣಿಸಿದ ಶುಂಠಿ ನೀರು, ಕೊತ್ತಂಬರಿ ನೀರು, ಜೀರಿಗೆ ನೀರು, ಕರಿಂಗಾಲಿ/ ಕಾಚಿನೀರು ಮುಂತಾದುವನ್ನು ಬಾಯಾರಿಕೆ ನೀಗಲು ಸಾಮಾನ್ಯವಾಗಿ ಬಳಸಲಾಗುತ್ತದೆ. ನಿಂಬೆಹಣ್ಣನ್ನು ಹಿಂಡಿ ಅದರ ರಸಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಬೆರೆಸಿ ತಯಾರಿಸುವ ಶರಬತ್ತು ಸಾಮಾನ್ಯ ಬಳಕೆಯ ಪಾನೀಯ. ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ಗಂಜಿ ತಿಳಿಯನ್ನು ಕುಡಿಯುತ್ತಾರೆ. ಬ್ರಾಹ್ಮಣರು, ಕ್ಷತ್ರಿಯರು, ನಾಯನ್ಮಾರರು ಮುಂತಾದವರು ಮಜ್ಜಿಗೆನೀರು ಕುಡಿಯುತ್ತಾರೆ. ತಣ್ಣೀರಿನಗೆ ಮಜ್ಜಿಗೆ, ಉಪ್ಪು, ಒಂದಿಷ್ಟು ಹಸಿ ಮೆಣಸು, ಬೇವಿನ ಸೊ‌ಪ್ಪು, ಗಜನಿಂಬೆಯ ಎಲೆ ಮುಂತಾದವನ್ನು ಸೇರಸಿ ಅದನ್ನು ತಯಾರಿಸುತ್ತಾರೆ. ಹಿಂದಿನ ಕಾಲದಲ್ಲಿ ದಾರಿಯ ಬದಿಯಲ್ಲಿ ಚಪ್ಪರಗಳನ್ನು ಹಾಕಿ (ತಣ್ಣೀರ್ ಪಂದಲ್ – ಎರಪ್ಪಕಟ್ಟೆ/ಅರವಟಿಗೆ)ಮಜ್ಜಿಗೆ ನೀರನ್ನು ಕೊಡುತ್ತಿದ್ದರು. ಉತ್ತರ ಕೇರಳದಲ್ಲಿ ಬಾರಾರಿಕೆಗಾಗಿ ನೀಡುವ ಇನ್ನೊಂದು ಪಾನೀಯ ಪಾನಕ. ನೀರಿನಲ್ಲಿ ಬೆಲ್ಲ, ಜೀರಿಗೆ, ಶುಂಠಿ, ಕಾಳುಮೆಣಸು, ಏಲಕ್ಕಿ ಮುಂತಾದುವನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಕುಡಿಕೆಗಳಲ್ಲಿ ಇದನ್ನು ತುಂಬಿಸಿ ಕುಡಿಯಲು ಕೊಡುತ್ತಾರೆ. ಈ ಕುಡಿಕೆಗಳನ್ನು ಪಾನಕ ಕುಡಿಕೆಗಳೆಂದು ಕರೆಯುತ್ತಾರೆ. ಬುಡಕಟ್ಟು ಜನ ಗಂಜಿನೀರು, ಜೇನು ನೀರು, ರಾಗಿ ನೀರು,ಕಾಫಿ ನೀರು, ಮಜ್ಜಿಗೆ ನೀರು ಮುಂತಾದುವನ್ನು ಬಾಯಾರಿಕೆ ನೀಗಿಕೊಳ್ಳಲು ಕುಡಿಯುತ್ತಾರೆ. ಇತ್ತೀಚೆಗೆ ಕಲ್ಲಂಗಡಿ ಶರಬತ್ತು ವ್ಯಾಪಕವಾಗಿ ಬಾಯಾರಿಕೆ ನೀಗುವ ಪೇಯವಾಗಿ ಬಳಕೆಯಾಗುತ್ತದೆ.

ಬಂದ ನಂಟರನ್ನು, ಅತಿಥಿಗಳನ್ನು ಸತ್ಕರಿಸುವುದು ಗ್ರಾಮೀಣ ಸಂಸ್ಕೃತಿಯ ಅಂಗವೇ ಆಗಿದೆ. ಸಾಮಾಜಿಕ ಆರ್ಥಿಕ ಸ್ಥಿತಿಗೆ ಅನುಸಾರವಾಗಿ ಆತಿಥ್ಯಕ್ಕೆ ಪಾನೀಯಗಳನ್ನು ನೀಡಲಾಗುತ್ತದೆ. ಎಳನೀರು, ಕಬ್ಬಿನ ಹಾಲು, ಜೇನು ನೀರು, ಮಜ್ಜಿಗೆ ನೀರು ಮುಂತಾದವನ್ನು ಸಾಮಾನ್ಯವಾಗಿ ಸ್ಥಿತಿವಂತರು ಅತಿಥಿಗಳಿಗೆ ನೀಡುತ್ತಾರೆ. ‘ಮಧುಪರ್ಕ’ ಎಂಬ ಒಂದು ಪಾನೀಯವನ್ನೂ ಅತಿಥಿಗಳಿಗೆ ನೀಡುತ್ತಾರೆ. ಮೊಸರು, ತುಪ್ಪ, ಹಾಲು, ಜೇನು, ನೀರು, ತೆಂಗಿನಕಳ್ಳು, ಈಚಲಕಳ್ಳು ಮುಂತಾದುವನ್ನು ಅತಿಥಿಗಳಿಗೆ ನೀಡುತ್ತಾರೆ.

ಕ್ರಿಶ್ಚಿಯನ್ನರು ‘ವೀಂಞ್’ನ್ನು ವಿಶೇಷ ಪಾನೀಯವಾಗಿ ಕುಡಿಯಲು ಕೊಡುತ್ತಾರೆ. ಅವಲಕ್ಕಿ ಮತ್ತು ನೀರು ಇಲ್ಲವೇ ಅವಲಕ್ಕಿ ಮತ್ತು ಹಾಲು ಇತ್ತೀಚೆಗೆ ವ್ಯಾಪಕವಾಗಿ ಹಳ್ಳಿಗಳಲ್ಲಿ ಬಳಕೆಗೆ ಬರುತ್ತಿರುವ ಪಾನೀಯಗಳಾಗಿವೆ. ಬುಡಕಟ್ಟಿನವರು ಜೇನು, ಮಜ್ಜಿಗೆ, ಕಾಫಿ ಸಿಪ್ಪೆಯ ನೀರು, ಕಳ್ಳು ಇತ್ಯಾದಿಗಳನ್ನು ಅತಿಥಿಗಳಿಗೆ ನೀಡುತ್ತಾರೆ.

ಧಾರ್ಮಿಕಾಚರಣೆಯ ಅಂಗವಾಗಿ ಪಾನೀಯಗಳನ್ನು ಸಿದ್ಧಪಡಿಸುವುದು ಸಾಮಾನ್ಯ. ಏಕಾದಶಿ, ಅಮಾವಾಸ್ಯೆ, ನೋಂಪಿ ಮುಂತಾದ ವ್ರತಾನುಷ್ಠಾನುಗಳು, ಆರಾಧನಪರವಾದ ಆಚರಣೆಗಳು – ಇವುಗಳಲ್ಲೆಲ್ಲ ವೈವಿಧ್ಯ ಪೂರ್ಣವಾದ ಪಾನೀಯಗಳನ್ನು ತಯಾರಿಸುವುದು ಮತ್ತು ಕುಡಿಯುವುದು ಚಾಲ್ತಿಯಲ್ಲಿದೆ. ಏಕಾದಶಿಯಂದು ತುಳಸೀ ತೀರ್ಥವನ್ನು ಮಾತ್ರ ಕುಡಿದು ವ್ರತದಲ್ಲಿರಬೇಕು ಎಂಬುದು ನಂಬುಗೆ. ತಿರುವಾದಿರ(ಆರ್ದ್ರಾ) ನೋಂಪಿಯ ಅಂಗವಾಗಿ ಸ್ತ್ರೀಯರು ಎಳನೀರು ಕುಡಿಯುತ್ತಾರೆ. ಮುಸಲ್ಮಾನರು ರಂಜಾನ್ ವ್ರತದ ದಿನಗಳಲ್ಲಿ ದಿನದ ವ್ರತವನ್ನು ‘ತರಿಕಂಞ’ (ರವೆಗಂಜಿ) ಕುಡಿದು ಮುಕ್ತಾಯಗೊಳಿಸುತ್ತಾರೆ. ಗೋಡಂಬಿ, ದ್ರಾಕ್ಷಿ, ಏಲಕ್ಕಿ, ನೀರುಳ್ಳಿ ಇತ್ಯಾದಿಗಳನ್ನು ತುಪ್ಪದಲ್ಲಿ ಹುರಿದು ನೀರು ಸೇರಿಸಿ ಕುದಿಸುತ್ತಾರೆ. ಅದಕ್ಕೆ ಒಂದಿಷ್ಟು ರವೆಯನ್ನು ಹಾಕಿ ಬೇಯಿಸಿ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ತರಿಕಂಞೆಯನ್ನು ತಯಾರಿಸುತ್ತಾರೆ.

ಆರಾಧನೆಯ ಅಂಗವಾಗಿ ಪ್ರಸಾದವೆಂಬ ನೆಲೆಯಲ್ಲೂ ಕುಡಿಯುವ ಪಾನೀಯಗಳಿವೆ. ದೇವಾಲಯಗಳಲ್ಲಿ ನೈವೇದ್ಯಕ್ಕೂ ಅಭಿಷೇಕಕ್ಕೂ ಬೇಕಾಗುವ ವಸ್ತುಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಪಂಚಗವ್ಯ ಮತ್ತು ಪಂಚಾಮೃತಗಳು ಇಂಥವು. ಹಾಲು, ಸೆಗಣಿ, ಗೋಮೂತ್ರ, ಮೊಸರು, ಬೆಣ್ಣೆಗಳೆಂಬ ಪಶುವಿನ ಉತ್ಪನ್ನಗಳನ್ನು ಸೇರಿಸಿ ಪಂಚಗವ್ಯವನ್ನು ತಯಾರಿಸಲಾಗುತ್ತದೆ. ಸಕ್ಕರೆ, ಹಾಲು, ದ್ರಾಕ್ಷಿ, ತುಪ್ಪ, ಜೇನು, ಕದಳಿಹಣ್ಣು – ಇವುಗಳನ್ನು ಸೇರಿಸಿ ಪಂಚಾಮೃತ ತಯಾರಾಗುತ್ತದೆ. ಪ್ರಸಾದವೆಂಬ ನೆಲೆಯಲ್ಲಿ ಕೆಲವು ದೇವಾಲಯಗಳಲ್ಲಿ ಭಕ್ತರಿಗೆ ‘ಆಡಿಯ ಎಣ್ಣ’ (ದೇವರಿಗೆ ಅಭಿಷೇಕ ಮಾಡಿದ ಎಣ್ಣೆ) ಲಭಿಸುತ್ತದೆ. ಪಾನಕ, ಕುರ್ದಿ, ಕಳ್ಳು – ಇವುಗಳನ್ನೂ ಧಾರ್ಮಿಕ ಪಾನೀಯಗಳ ಸಾಲಿಗೆ ಸೇರಿಸಬಹುದಾಗಿದೆ.

ಗ್ರಾಮೀಣ ಬದುಕಿನ ಅಂಗವಾಗಿ ಔಷಧೀಯ ಪಾನೀಯಗಳನ್ನು ಸಿದ್ಧಪಡಿಸಲಾಗುತ್ತದೆ. ತುಳಸೀ ನೀರು, ಶುಂಠಿ ನೀರು, ಕಾಳುಮೆಣಸಿನ ಕಷಾಯ ಇತ್ಯಾದಿಗಳನ್ನು ಜ್ವರ, ಶೀತ ಮುಂತಾದುವಕ್ಕೆ ಕೊಡುತ್ತಾರೆ. ವಿಷಮಶೀತ ಜ್ವರಕ್ಕೆ ಎಳನೀರು, ಹೊದಳು ನೀರು ಇವು ಒಳ್ಳೆಯ ಔಷಧಗಳು. ಹೊಟ್ಟೆಯ ಅನಾರೋಗ್ಯಕ್ಕೆ ಬಾರ್ಲಿನೀರು, ಕೂವೆಹುಡಿ ನೀರು (arrow root), ಬಿಸಿ ಮಾಡಿದ ಮಜ್ಜಿಗೆ (ಮಜ್ಜಿಗೆಗೆ ಅರಸಿನ, ಕಾಳು ಮೆಣಸು, ಶುಂಠಿ, ಬೇವಿನ ಎಲೆ, ನೆಲನೆಲ್ಲಿ ಇತ್ಯಾದಿಗಳನ್ನು ಸೇರಿಸಿ ಕುದಿಸಿದ್ದು) ಮುಂತಾದುವನ್ನು ಉಪಯೋಗಿಸುತ್ತಾರೆ. ನೆಲನೆಲ್ಲಿಯ ನೀರು ಕಾಮಾಲೆ ರೋಗಕ್ಕೆ ಕೂಡ ತುಂಬ ಪ್ರಯೋಜನಕಾರಿ. ಮಧುಮೇಹಿಗಳಿಗೆ ನೀಡುವ ಮೆಂತೆಗಂಜಿ ಇನ್ನೊಂದು ಪಾನೀಯ (ಬೆಳ್ತಿಗೆ ಮೆಂತೆ – ಇವನ್ನು ಬೇಯಿಸಿ ತೆಂಗಿನ ಹಾಲು ಸೇರಿಸಿ ತಯಾರಿಸಿದ್ದು). ರಾಗಿಯನ್ನು ಅರೆದು ಕದಡಿ ಓಲೆಬೆಲ್ಲವನ್ನು ಸೇರಿಸಿ ರಾಗಿ ನೀರು ತಯಾರಿಸುತ್ತಾರೆ. ಸುಖಪ್ರಸವಕ್ಕಾಗಿ ಮಹಿಳೆಯರು ‘ಮುಕ್ಕಿಡಿ’ ಕುಡಿಯುತ್ತಾರೆ. ಓಮ, ಬೆಳ್ಳುಳ್ಳಿ, ಹುಣಿಸೆ ಎಲೆ, ಜೀರಿಗೆ, ಶುಂಠಿ, ಕಾಳು ಮೆಣಸು – ಇವನ್ನು ಅರೆದು ನೀರು ಸೇರಿಸಿ ಕುದಿಸಿ ಇದನ್ನು ತಯಾರಿಸುತ್ತಾರೆ.

ಅಮಲು ಪಾನೀಯದ ವಿಷಯಕ್ಕೆ ಬಂದರೆ ಹಳ್ಳಿಗಳಲ್ಲಿ ಉಪಯೋಗವಾಗುತ್ತಿರುವುದು ತೆಂಗಿನ ಕಳ್ಳು ಮತ್ತು ಈಚಲ ಕಳ್ಳು. ಹಳ್ಳಿಗರ ಇನ್ನೊಂದು ಪಾನೀಯ ಶರಾಬು.

ಊಟದಂತೆಯೇ ಎಲ್ಲ ಪಾನೀಯಗಳನ್ನು ಎಲ್ಲ ಜನ ಬಳಸುತ್ತಿರಲಿಲ್ಲ. ಇಂದು ಅದಕ್ಕೆ ಬದಲಾವಣೆ ಬಂದಿರಬಹುದು. ಕಳ್ಳು ಕುಡಿಯುವುದು ಬ್ರಾಹ್ಮಣರಿಗೆ ನಿಷಿದ್ಧ. ಪ್ರಸಾದವಾಗಿಯೂ ಅವರು ಅದನ್ನು ಸೇವಿಸುತ್ತಿರಲಿಲ್ಲ. ಏಕದಶಿ, ಅಮಾವಾಸ್ಯೆಸ ಮುಂತಾದ ವ್ರತಧಾರಿಗಳು, ಶಬರಿ ಮಲೆದರ್ಶನಕ್ಕೆ ಹೋಗುವವರು, ತೆಯ್ಯಂಪಿರ ಭಗವತಿಯಾಟ್ಟ್ ಮುಂತಾದ ಧಾರ್ಮಿಕ ಕಾರ್ಯಗಳಿಗಾಗಿ ವ್ರತಧರಿಸಿದವರು – ಇವರಾರೂ ಮದ್ಯಸೇವನೆ ಮಾಡಬಾರದು. ಕೆಲವು ಪಾನೀಯಗಳನ್ನು ಉಪಯೋಗಿಸುವುದಕ್ಕೆ ಸಮಯದ ವಿಧಿ – ನಿಷೇಧಗಳಿವೆ. ಗಂಜಿ, ಮೊಸರು, ಮಜ್ಜಿಗೆ – ರಾತ್ರಿ ಸೇವನೆಗೆ ಅನುಚಿತವೆಂಬುದು ಹಿರಿಯರ ಮಾತು.

ಪಾನೀಯಗಳ ಕುರಿತು ಸಾಕಷ್ಟು ಗಾದೆಗಳು ಪ್ರಚಾರದಲ್ಲಿವೆ. ನಾಟ್ಟು ಪಾನೀಯಂಙಳ್ (ಜನಪದ ಪಾನೀಯಗಳು) ಎಂಬ ಒಂದು ಪುಸ್ತಕವನ್ನು ಕೊಟ್ಟಾಯಂನ ಡಿ.ಸಿ.ಬುಕ್ಸ್‌ನವರು (ಜನರಲ್ ಎಡಿಟರ್ ಸಿ.ಆರ್.ರಾಜಗೋಪಾಲ್) ಪ್ರಕಟಿಸಿದ್ದಾರೆ.

– ಎಸ್.ಕೆ. ಅನುವಾದ ಕೆ.ಕೆ.

ಕೇರಳದ ಚರ್ಮವಾದ್ಯಗಳು ನಾಟ್ಯಶಾಸ್ತ್ರದ ಪ್ರಕಾರ ತತ, ಸುಷಿರ, ಅವನದ್ಧ, ಘನ ಎಂದು ವಾದ್ಯಗಳನ್ನು ನಾಲ್ಕು ವಿಭಾಗ ಮಾಡಲಾಗಿದೆ. ‘ತತಂ’ ಎಂದರೆ ‘ಬಿಗಿದುಕಟ್ಟಿದ್ದು’ ಎಂದರ್ಥ. ಹಗ್ಗ ಅಥವಾ ತಂತಿಯನ್ನು ಬಿಗಿದುಕಟ್ಟಿ, ಅದರಲ್ಲಿ ಕಂಪನವನ್ನು ಉಂಟು ಮಾಡಿ ನಾದವನ್ನು ಹೊರಡಿಸುತ್ತಾರೆ. ವೀಣೆ, ತಂಬೂರಿ, ವಯಲಿನ್ ಇದಕ್ಕೆ ಉದಾಹರಣೆಗಳು. ವಾದ್ಯೋಪಕರಣಗಳಲ್ಲಿ ತೊತುಮಾಡಿ, ಅದರಲ್ಲಿ ಗಾಳಿ ಹಾಯಿಸಿ ನಾದ ಉಂಟು ಮಾಡುತ್ತಾರೆ. ಶಂಖ, ಕೊಂಬುವಾದ್ಯ, ಕೊಳಲು ಇವೆಲ್ಲ ಸುಷಿರ ವಾದ್ಯಗಳು. ಚೆಂಙೆಲ, ಚಕ್ರತಾಳ, ಕೈತಾಳಗೆಲ್ಲ ಲೋಹದಿಂದ ನಿರ್ಮಿತವಾದ ಘನವಾದ್ಯಗಳು.

ಯಾವುದೇ ಸಂಗೀತ ಮೇಳಗಳಲ್ಲಿ ಮುಖ್ಯವಾಗಿರುವುದು ಅವನದ್ಧ ವಾದ್ಯಗಳಾಗಿವೆ. ಇವುಗಳನ್ನು ಚರ್ಮದಿಂದ ಹೊದೆದು ಬಿಗಿಯಲಾಗುತ್ತದೆ. ಆದುದರಿಂದ ಇವುಗಳನ್ನು ಚರ್ಮವಾದ್ಯಗಳೆನ್ನಬಹುದು. ಶಿಲಪ್ಪದಿಗಾರಂ ಕೃತಿಯಲ್ಲಿ ಈ ವಾದ್ಯಗಳನ್ನು ‘ತೋಲ್‌ಕುರುವಿ’ ಎಂದು ಕರೆಯಲಾಗಿದೆ. ಈ ವಾದ್ಯಗಳಿಗೆ ದನ ಅಥವಾ ಎತ್ತಿನ ಚರ್ಮವನ್ನು ಬಳಸುತ್ತಾರೆ. ಬಿಳಿ ಬಣ್ಣದ, ಮಾರ್ದವತೆಯಿಂದ ಕೂಡಿದ ಚರ್ಮವನ್ನು ಒಂದು ರಾತ್ರಿ ನೀರಿನಲ್ಲಿ ನೆನೆಹಾಕಿ, ವಾದ್ಯಗಳಿಗೆ ಬಳಸುವರು.

ಆಂಗ್ಯ, ಆಲಿಂಗನ, ಊರ್ಜಂ ಎಂದು ಅವನದ್ಧ ವಾದ್ಯಗಳಲ್ಲಿ ಮೂರು ವಿಧ. ಮಡಿಲಲ್ಲಿಟ್ಟು ನುಡಿಸುವ ಮೃದಂಗಗಳಂತಹ ವಾದ್ಯಗಳು ಆಂಗ್ಯ. ಕರ್ನಾಟಕ ಸಂಗೀತ ಕಚೇರಿ, ಭರತನಾಟ್ಯ, ಕೂಚಿಪೂಡಿ, ಮೋಹಿನಿಯಾಟಂ ಮೊದಲಾದ ಕಲೆಗಳಿಗೆ ಪಕ್ಕವಾದ್ಯವಾಗಿ ಮೃದಂಗವನ್ನು ಬಳಸುತ್ತಾರೆ.

ಚರ್ಮವಾದ್ಯಗಳಲ್ಲಿ ಹೆಚ್ಚಿನವುಗಳಲ್ಲಿ ಆಲಿಂಗ್ಯ ವಿಭಾಗಕ್ಕೆ ಸೇರಿದವುಗಳು. ಇವುಗಳನ್ನು ಶರೀರಕ್ಕೆ ತಾಗಿಸಿ, ತೋಳಲಿ ತೂಗಿಸಿ ಬಾರಿಸುತ್ತಾರೆ. ಚೆಂಡೆ, ಮದ್ದಳೆ, ಢಕ್ಕೆ, ತಿಮಿಲೆ, ದುಡಿ, ತಗಿಲ್, ದಪ್, ಕಂಜೀರಾ ಮೊದಲಾದವು ಈ ವಿಭಾಗಕ್ಕೆ ಸೇರುತ್ತವೆ. ಇವುಗಳಲ್ಲಿ ದಪ್ ಹಾಗೂ ಕಂಜೀರಾ ಒಂದು ಬದಿಯಲ್ಲಿ ಮಾತ್ರ ಚರ್ಮದ ಹೊದಿಕೆಯುಳ್ಳದ್ದು. ಉಳಿದ ವಾದ್ಯಗಳಿಗೆ ಎರಡೂ ಬದಿಗಳಲ್ಲಿ ಚರ್ಮದ ಹೊದಿಕೆಗಳಿವೆ.

ಕೇರಳದಲ್ಲಿ ಅತಿ ಹೆಚ್ಚು ಪ್ರಚಾರದಲ್ಲಿರುವ ಚರ್ಮವಾದ್ಯ ಚೆಂಡೆಯಾಗಿದೆ. ಮರಂ, ಪರಚೆಂಡೆ, ಉರುಟುಚಂಡೆ, ವೀಕುಚೆಂಡ, ಮುರಿಚೆಂಡ ಇವೆಲ್ಲಚೆಂಡೆಯ ಪ್ರಕಾರಗಳು. ಇವುಗಳನ್ನು ಆರಾಧನೆಯ ಸಂದರ್ಭಗಳಲ್ಲಿ, ಜನಪದ ಕಲೆಗಳಲ್ಲಿ ಬಳಸುವರು. ಮರಂ ಮಲಯರು ಮತ್ತು ಪುಲಿಯರು ಬಳಸುವ ವಾದ್ಯವಾಗಿದೆ. ದೇವಾಲಯಗಳಲ್ಲಿ ನಿತ್ಯ ಪೂಜೆಯ ಸಂದರ್ಭಗಳಲ್ಲಿ ‘ಪಾಣಿಕೊಟ್ಟಲ್’ ಮಾಡಲು ಇದನ್ನು ಬಳಸುವರು. ಬುಡಕಟ್ಟು ಸಮುದಾಯದವರು ತಮ್ಮ ಆಚರಣೆಗಳಿಗೆ ಪರಚೆಂಡೆಯನ್ನು ಬಳಸುತ್ತಾರೆ.

ಉರುಟುಚೆಂಡ ಮತ್ತು ವೀಕುಚೆಂಡ ಚೆಂಡೆಯ ಮುಖ್ಯ ವಿಧಗಳು. ಉರುಟು ಚೆಂಡೆ ಸಾಮಾನ್ಯವಾಗಿ ಎಲ್ಲ ಕಡೆ ಬಳಕೆಯಲ್ಲಿರುವುದು. ಹಲಸು, ಹನೆ, ಕೊಂದೆ, ಕುಮಿಳ್ ಮೊದಲಾದ ಮರಗಳಿಂದ ‘ಚೆಂಡಕುತ್ತಿ’ ತಯಾರಿಸುವರು. ಇವರ ಉದ್ದ ೧೮೧/೪ ಅಂಗುಲ ಹಾಗೂ ಒಳವ್ಯಾಸ ೯೧/೨ ರಿಂದ ೯೩/೪ ಅಂಗುಲವಾಗಿದೆ. ದನ ಅಥವಾ ಎತ್ತಿನ ಚರ್ಮವನ್ನು ಬಳಸುತ್ತಾರೆ. ಕುತ್ತಿಯ ಎರಡೂ ಬದಿಗಳನ್ನು ಮುಚ್ಚಿ ಬಿಗಿಯುವರು. ಅನಂತರ ಚೆಂಡೆಯ ಮುಚ್ಚಿಗೆಯ ವೃತ್ತಾಕಾರದ ಬಳೆಗೆ ತೂತೂ ಕೊರೆದು, ಅದರಲ್ಲಿ ಹಗ್ಗವನ್ನು ಬಿಗಿದು ಕಟ್ಟುವರು. ಚೆಂಡೆ ಬಾರಿಸಲು ಕೋಲುಗಳಿಗೆ ಹುಳಿ, ಮಂದಾರ ಅಥವಾ ಬಿದಿರಿನಿಂದ ತಯಾರಿಸಿದ ಕೋಲುಗಳನ್ನು ಬಳಸುತ್ತಾರೆ. ದೇವಸ್ಥಾನಗಳಲ್ಲಿ ನಿತ್ಯ ಪೂಜೆಗೆ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ, ತಾಯಂಬಕ, ಮೇಳಗಳಲ್ಲಿ ಚೆಂಡೆ ಪ್ರಧಾನ ವಾದ್ಯವಾಗಿದೆ.

ವೀಕು ಚೆಂಡೆಯನ್ನು ತಾಳವಾದ್ಯವಾಗಿ ಬಳಸುವರು. ಚೆಂಡೆಗಿಂದ ಉದ್ದ ಕಡಿಮೆಯಾಗಿದ್ದ, ವ್ಯಾಸ ಹೆಚ್ಚಿರುತ್ತದೆ. ದಪ್ಪ ಕೋಲಿನಿಂದ ನಿರ್ದಿಷ್ಟ ತಾಲದಲ್ಲಿ ಚೆಂಡೆ ಮೇಳದಲ್ಲಿ ಬಾರಿಸುತ್ತಾರೆ. ಅವನದ್ಧ ವಾದ್ಯಗಳಲ್ಲಿ ಮುಖ್ಯವಾದುದು ಮದ್ದಳೆ. ಇದರಲ್ಲಿ ಶುದ್ಧ ಮದ್ದಳೆ, ತೊಪ್ಪಿ ಮದ್ದಳೆ ಎಂದು ಎರಡು ವಿಧ. ಸೊಂಟದಲ್ಲಿ ವಸ್ತ್ರ ಬಿಗಿದು ಇವುಗಳನ್ನು ಉಪಯೋಗಿಸುತ್ತಾರೆ. ಎರಡನ್ನೂ ಹಲಸಿನ ಮರದಿಂದ ನಿರ್ಮಿಸುತ್ತಾರೆ. ಶುದ್ಧಮದ್ದಳೆ ೬೦ ರಿಂದ ೬೫ ಸೆ.ಮೀ. ಉದ್ದವಿರುತ್ತದೆ. ತೊಪ್ಪಿ ಮದ್ದಳೆ ಸ್ವಲ್ಪ ಗಿಡ್ಡವಾಗಿರುತ್ತದೆ. ತುದಿಭಾಗದಲ್ಲಿ ವ್ಯಾಸ ಕಡಿಮೆಯಾಗಿದ್ದು, ಮಧ್ಯದಲ್ಲಿ ವ್ಯಾಸ ಹೆಚ್ಚಾಗುತ್ತಾ ಹೋಗುವ ಆಕೃತಿಯಾಗಿದೆ. ಎಡತುದಿಯಲ್ಲಿ ಎಮ್ಮೆ ಚರ್ಮ ಹಾಗೂ ಬಲತುದಿಯಲ್ಲಿ ಎತ್ತಿನ ಚರ್ಮವನ್ನು ಬಿಗಿಯುತ್ತಾರೆ. ಎಡತುದಿಯಲ್ಲಿ ಕಪ್ಪು ಮೆಣವನ್ನು ಹಚ್ಚುವರು. ತೊಪ್ಪಿ ಮದ್ದಳೆಗೆ ಹೀಗಿರುವುದಿಲ್ಲ. ದೇವಸ್ಥಾನಗಳಲ್ಲಿ ಪಂಚವಾದ್ಯ, ಕೇಳಿಕ್ಕೆ ಮೊದಲಾದ ಸಂದರ್ಭಗಳಲ್ಲಿ, ಕಥಕಳಿ ಕೃಷ್ಣನಾಟಂ ಮೊದಲಾದ ಕಲೆಗಳಿಗೆ ಶುದ್ಧ ಮದ್ದಳೆ ಅಗತ್ಯ. ತೊಪ್ಪಿ ಮದ್ದಳೆಯನ್ನು ಕೃಷ್ಣನಾಟದಲ್ಲಿ ಮಾತ್ರ ಬಳಸುವರು.

ಮದ್ದಳೆಯಂತೆಯೇ ಇರುವ ಇನ್ನೊಂದು ಚರ್ಮವಾದ್ಯ ಮತ್ತಾಳ. ವಣ್ಣಾನ್, ಊರಾಳಿ ಮೊದಲಾದ ಸಮುದಾಯದವರು ಇದನ್ನು ಬಳಸುತ್ತಾರೆ. ಇದರ ಒಂದು ತುದಿಗೆ ಉಡುವಿನ ಚರ್ಮವನ್ನೂ, ಇನ್ನೊಂದು ತುದಿಗೆ ಅಳಿಲಿನ ಚರ್ಮವನ್ನೂ ಬಿಗಿಯುತ್ತಾರೆ. ಹಲಸು, ಆಞೆಲಿ ಮೊದಲಾದ ಮರಗಳಿಂದ ಮತ್ತಾಳವನ್ನು ನಿರ್ಮಿಸುತ್ತಾರೆ. ಕೂತ್, ತೋಟ್ಟಂ ಮೊದಲಾದ ಸಂದರ್ಭಗಳಲ್ಲಿ ಇದನ್ನು ಬಳಸುವರು.

ಕೇರಳದ ದೇವಾಲಯಗಳ ಪ್ರಾಚೀನ ವಾದ್ಯವಾದ ಢಕ್ಕೆ ತೋಳಲ್ಲಿ ತೂಗಿಸಿ ಬಡಿಯುವ ಒಂದು ಚರ್ಮವಾದ್ಯವಾಗಿದೆ. ಹಲಸು, ಮಂದಾರ, ಕುಮಿಳ್ ಮೊದಲಾದ ಮರಗಳಿಂದ ಇದನ್ನು ತಯಾರಿಸುವರು. ಸುಮಾರು ೩೦ಸೆ.ಮೀ. ಉದ್ದವಿರುವ ಈ ವಾದ್ಯದ ತುದಿಯ ವ್ಯಾಸ ೨೦ಸೆ.ಮೀ. ಆಗಿದೆ. ಆಡಿನ ಹೊಟ್ಟೆಯ ಭಾಗದ ತೆಳು ಚರ್ಮವನ್ನು ಹೊದಿಕೆಯಾಗಿ ಬಳಸುತ್ತಾರೆ. ಎರಡು ತುದಿಗಳನ್ನು ಹಗ್ಗದಲ್ಲಿ ಬಿಗಿದು ಅಗತ್ಯಕ್ಕೆ ತಕ್ಕಂತೆ ನಾದವನ್ನು ಹೊರಡಿಸುತ್ತಾರೆ. ಢಕ್ಕೆಯಲ್ಲಿ ಬಣ್ಣ ಬಣ್ಣದ ಹತ್ತಿಯ ಉಂಡೆಗಳನ್ನು ನೇತಾಡಿಸುವರು. ಎಡಗೈಯಲ್ಲಿ ಬೇಕಾದ ಹಾಗೆ ಒತ್ತಿ ಹಿಡಿದು ಶಬ್ದ ವ್ಯತ್ಯಾಸ ಮಾಡಲು ಸಾಧ್ಯವಿದೆ. ಎಡಭುಜದಲ್ಲಿ ತೂಗಿಸಿ, ಬಲಗೈಯಿಂದ ಸಪೂರವಾದ ಕೋಲಿನಲ್ಲಿ ಬಡಿಯುತ್ತಾರೆ. ದೇವಸ್ಥಾನಗಳಲ್ಲಿ ಬಳಸುವ ಪ್ರಧಾನ ವಾದ್ಯವಿದು. ಪಂಚವಾದ್ಯ, ಕಥಕಳಿ ಮೊದಲಾದ ಸಂದರ್ಭಗಳಲ್ಲಿ ಢಕ್ಕೆಗೆ ಸ್ಥಾನವಿದೆ.

ಢಕ್ಕೆಯಂತೆಯೇ ಇರುವ ಇನ್ನೊಂದು ವಾದ್ಯ ‘ತುಡಿ’. ಇದಕ್ಕೆ ಕಡುಂದುಡಿ, ತುಡಿಪುರ ಮೊದಲಾದ ಹೆಸರುಗಳಿವೆ. ಮೃದು ಮರಗಳಿಂದ ತಯಾರಿಸುವ ದುಡಿಗೆ ಉಡು ಅಥವಾ ಮಂಗದ ಚರ್ಮವನ್ನು ಬಳಸುತ್ತಾರೆ. ಪುಲಯ, ಪಾಣ, ಪರಯ, ವಣ್ಣಾನ್, ಮುಞಟನ್, ಪಣಿಯರು, ಕರಿಬಾಲರು ಮೊದಲಾದವರು. ಈ ವಾದ್ಯವನ್ನು ಬಳಸುವರು. ಉತ್ತರ ಕೇರಳದ ಪುಲಿಯರ ‘ತುಡಿಪಾಟ್‌’ಗೆ ಇದು ಬೇಕಾಗಿದೆ. ವುಳ್ಳವನಾಡಿನ ‘ಪೂತಂ’ ದುಡಿಯೊಂದಿಗೆ ಊರಿನಲ್ಲಿ ಸಂಚಾರ ಮಾಡುವುದು, ದುಡಿಪರ ಎಂಬುದು ಇದರ ಇನ್ನೊಂದು ಪ್ರಭೇದ. ಗಾತ್ರದಲ್ಲಿ, ಸ್ವಲ್ಪ ದೊಡ್ಡದಾಗಿದ್ದು, ಕೋಲಿನಿಂದ ಬಡಿಯುತ್ತಾರೆ.

53

ದುಡಿಯ ಹಾಗೆಯೇ ಇರುವ ಮತ್ತೊಂದು ಚರ್ಮವಾದ್ಯ ‘ಉಡುಕ್’. ಸಂಸ್ಕೃತದಲ್ಲಿ ಇದನ್ನು ‘ಢಮರು’ ಎನ್ನುವರು. ಮಧ್ಯ ಸಪೂರವಾಗಿರುವ ಮರದ ಆಕೃತಿಯಾಗಿದೆ. ಅಯ್ಯಪ್ಪನ್ ಪಾಟು ಹಾಗೂ ಮಾರಿಯಮ್ಮನ ಕುಣಿತಗಳಿಗೆ ಈ ವಾದ್ಯ ಮುಖ್ಯವಾಗಿದೆ.

ತಿಮಿಲೆ, ತಗಿಲ್ ಎಂಬಿವು ಎರಡು ತುದಿಗಳನ್ನು ಚರ್ಮದಿಂದ ಬಿಗಿದು ಕಟ್ಟಿದ ವಾದ್ಯಗಳು. ಇದರಲ್ಲಿ ತಿಮಿಲೆಯನ್ನು ದೇವಾಲಯಗಳಲ್ಲಿ ಪೂಜಾವೇಳೆಯಲ್ಲಿ, ಪಂಚವಾದ್ಯ ಸಂದರ್ಭದಲ್ಲಿ ಬಳಸುವರು. ‘ತವಿಲ್’ ಮದುವೆ ಸಮಾರಂಭಗಳಲ್ಲಿ ನಾಗಸ್ವರದೊಂದಿಗೆ ಬಳಸುವ ಚರ್ಮವಾದ್ಯವಾಗಿದೆ.

ಒಂದು ತುದಿ ತೆರೆದಿರುವ ಚರ್ಮವಾದ್ಯವೇ ತಪ್ಪ್ ಅಥವಾ ದಪ್ಪ್. ದನದ ಚರ್ಮವನ್ನು ಇದಕ್ಕೆ ಬಳಸುತ್ತಾರೆ. ಪಡೇನಿಯ ಮುಖ್ಯ ವಾದ್ಯವಾಗಿರುವ ಇದನ್ನು ಎರಡು ರೀತಿಯಲ್ಲಿ ಬಳಸುತ್ತಾರೆ. ಬಿಸಿ ಮಾಡಿ ಬಳಸುವುದನ್ನು ಕಾಚಿತಪ್ಪ್ ಎಂದೂ ಬಿಸಿಮಾಡದೆ ಬಳಸುವುದನ್ನು ಪಚ್ಚತಪ್ಪ್ ಎಂದೂ ಹೇಳುತ್ತಾರೆ.

ಮುಸ್ಲಿಮರು ‘ದಪ್ಪ್ ಮುಟ್ಟು’ ಕಲೆಯಲ್ಲಿ ಬಳಸುವ ದಪ್ ಸ್ವಲ್ಪ ಭಿನ್ನವಾಗಿದೆ. ಮರದ ವೃತ್ತಕ್ಕೆ ಎತ್ತಿನ ಚರ್ಮ ಬಿಗಿಯುತ್ತಾರೆ. ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಬಡಿಯುತ್ತಾರೆ.

ಅವನದ್ಧ ವಾದ್ಯಗಳ ಮೂರನೇ ವಿಭಾಗ ಊರ್ಧಕಗಳು. ಇವುಗಳನ್ನು ಮೇಲ್ಮುಖವಾಗಿ ಬಡಿಯುವುದರಿಂದ ಈ ಹೆಸರು ಬಂದಿರಬೇಕು. ಈ ಅರ್ಥದಲ್ಲಿ ಚೆಂಡೆ, ತಿಮಿಲೆ ವಾದ್ಯಗಳುಈ ವಿಭಾಗಕ್ಕೆ ಸೇರುತ್ತವೆ. ಆದರೆ ನೆಲದಲ್ಲಿರಿಸಿ, ಊರ್ಧ್ವ ಮುಖವಾಗಿ ಬಡಿಯುವ ಕೇರಳೀಯ ವಾದ್ಯಕ್ಕೆ ‘ಮಿಳಾವ್’ ಎಂದು ಹೆಸರು. ಇದು ದೊಡ್ಡ ಪಾತ್ರೆಯ ಆಕಾರದಲ್ಲಿದೆ. ದೊಡ್ಡ ಮಿಳಾವಿನ ಎತ್ತರ ೯೫ಸೆ.ಮೀ. ಮಧ್ಯ ಸುತ್ತಳತೆ ೬೫ ಸೆ.ಮೀ. ಹಾಗೂ ಬಾಯಿಯ ವ್ಯಾಸ ೧೫ಸೆ.ಮೀ. ಆಗಿರುತ್ತದೆ. ಕೊಡದ ಆಕಾರವನ್ನು ಮಣ್ಣಿನಿಂದ ನಿರ್ಮಿಸಿರುತ್ತಾರೆ. ಅದರ ಬಾಯಿಯನ್ನು ದನದ ಚರ್ಮದಿಂದ ಬಿಗಿಯುತ್ತಾರೆ. ಈ ಭಾಗವನ್ನು ಕೈಬೆರಳುಗಳಿಂದ ಬಡಿದು ಶಬ್ದ ಉಂಟು ಮಾಡುವರು. ಈಗ ಸಾಮಾನ್ಯವಾಗಿ ತಾಮ್ರದಿಂದ, ನಿರ್ಮಿಸಿದ ಮಿಳಾವ್‌ಗಳನ್ನು ಬಳಸುವರು. ಕೂಡಿಯಾಟಂ, ಚಾ‌ಕ್ಯಾರ್ ಕೂತ್, ನಂಙ್ಯಾರ್‌ಕೂತ್ ಎಂಬ ಕಲೆಗಳಲ್ಲಿ ಇದು ಮುಖ್ಯ ವಾದ್ಯ. ಮಿಳಾವ್ ತಾಯಂಬಕ ನಡೆಸುವ ಕ್ರಮವೂ ಇದೆ. ಹೀಗೆ ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ, ಶಿಷ್ಟ ಮತ್ತು ಜನಪದ ಕಲೆಗಳಲ್ಲಿ ಚರ್ಮವಾದ್ಯಗಳನ್ನು ಉಪಯೋಗಿಸುವರು.

– ಎಸ್.ಕೆ. ಅನುವಾದ ಎನ್.ಎಸ್.