ಕಂಬಳ ನೃತ್ಯ ಕೇರಳದ ವಯನಾಡು ಜಿಲ್ಲೆಯಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಪಣಿಯರು ನಡೆಸುವ ಪರಂಪರಾಗತ ನೃತ್ಯವೇ ಕಂಬಳ ನೃತ್ಯ. ಕೇರಳದ ಬುಡಕಟ್ಟು ಸಮುದಾಯದಲ್ಲಿ ಬಹು ಸಂಖ್ಯಾತರಾಗಿರುವ ಪಣಿಯರು ಕಣ್ಣೂರು, ಕಲ್ಲಿಕೋಟೆ, ಮಲಪುರಂ ಜಿಲ್ಲೆಗಳಲ್ಲೂ ವಾಸವಾಗಿದ್ದಾರೆ. ವಯನಾಡಿನ ಬುಡಕಟ್ಟು ಸಮಾಜದಲ್ಲಿ ಹಳೆಯ ಕಾಲದಲ್ಲಿ ಜೀತದ ಸಂಪ್ರದಾಯವಿದ್ದು, ಅದನ್ನು ‘ಕುಂಡಲ್‌ಪಣಿ’ ಎನ್ನುವರು. ಒಂದು ವರ್ಷದ ಕಾಲ ವಯನಾಡಿನ ಗದ್ದೆ ಬಯಲುಗಳಲ್ಲಿ, ಮನೆಗಳಲ್ಲಿ ಜೀತದಾಳಾಗಿ ಕೆಲಸ ಮಾಡುವ ಒಪ್ಪಂದವೇ ಕುಂಡಲ್‌ಪಣಿ. ಹೀಗೆ ಗದ್ದೆ ಬಯಲುಗಳಲ್ಲಿ ಕೆಲಸ ಮಾಡುವಾಗ ವಿನೋದಕ್ಕಾಗಿ ನಡೆಸುವ ಕಲಾಪ್ರಕಾರವೇ ಕಂಬಳ ನೃತ್ಯ.

ಶ್ರೀಮಂತರ ಗುಲಾಮರಾಗಿ ಬದುಕುವ ಪಣಿಯರ ಜೀವನ ಸಂಗೀತ ಹಾಗೂ ನೃತ್ಯಗಳಿಂದ ಕೂಡಿದೆ. ಹೀಗಾಗಿ ಶ್ರೀಮಂತರು ಅವರ ಸಂಗೀತ ಹಾಗೂ ಕುಣಿತದ ಆಸಕ್ತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಬೇಸಾಯ ಸಂಬಂಧವಾದ ಹಾಡು ಕುಣಿತವೇ ಕಂಬಳ ನೃತ್ಯ. ಕಂಬಳ ನೃತ್ಯದ ಆವೇಶದಲ್ಲಿ ಒಂದು ತಿಂಗಳ ಬೇಸಾಯದ ಕೆಲಸ ಎರಡು ವಾರಗಳಲ್ಲಿ ಮುಗಿಯುವುದು. ಕಂಬಳ ನೃತ್ಯಕ್ಕಾಗಿ ಪರವೂರಿನ ಪಣಿಯರನ್ನು ಕರೆಸಿಕೊಳ್ಳುತ್ತಿದ್ದರು. ನಿಗದಿತ ದಿವಸ ಪಣಿಯ ಪುರುಷರು ಗದ್ದೆಗಳಲ್ಲಿ ಕುಂಬಳ ನೃತ್ಯ ಮಾಡುವರು. ಮಹಿಳೆಯರು ಚೀನಿ ಹಾಗೂ ದುಡಿಯ ತಾಳಕ್ಕೆ ಅನುಗುಣವಾಗಿ ನಾಟಿ ಕೆಲಸ ಮಾಡುವರು. ಪಕ್ಕದ ಶ್ರೀಮಂತರ ಗದ್ದೆಗಳಲ್ಲಿ ನಾಟಿ ಇದ್ದರು ಮಾಹಿತಿ ತಿಳಿಸಿ, ಎರಡು ಕಳಸೆ ಬತ್ತ ಅಳೆದು ಕೊಟ್ಟು ಕಂಬಳನೃತ್ಯಕ್ಕೆ ಆಹ್ವಾನಿಸುವರು.

ಒಂದು ಕಂಬಳದ ಮೂಲಕ ಮೂರು ನಾಲ್ಕು ಎಕರೆ ಗದ್ದೆ ಬಯಲಿನ ನಾಟಿಯನ್ನು ಮುಗಿಸಲು ಜಮೀನ್ದಾರಿ ಶ್ರೀಮಂತರಿಗೆ ಸಾಧ್ಯವಾಗಿತ್ತು. ಕಂಬಳ ನೃತ್ಯ ಎರಡು ದಿವಸಗಳಿದ್ದರೆ ರಾತ್ರಿ ಹಾಗೂ ಹಗಲು ಕೆಲಸ ನಡೆಯುತ್ತಿತ್ತು. ದುಡಿಯ ಶಬ್ದ ಪಣಿಯರ ಬದುಕಿನ ಭಾಗವಾಗಿದೆ. ದುಡಿಯ ಶಬ್ದದಲ್ಲಿ ಲೀನವಾಗಿ, ದುಡಿಯುವ ಪಣಿಯರಿಗೆ ದುಡಿಮೆಯ ಪರಿಶ್ರಮ ಗೊತ್ತಾಗುವುದಿಲ್ಲ.

ಮಹಿಳೆಯರ ಕುಣಿತ ಹಾಗೂ ಪುರುಷರ ವಾದ್ಯಮೇಳಗಳೊಂದಿಗೆ ಕಂಬಳ ನೃತ್ಯ ನಡೆಯುವುದು. ಯಾವುದೇ ಹಾಡುಗಳಿಲ್ಲದೆ ವಾದ್ಯರವಗಳೊಂದಿಗೆ ನಡೆಯುವ ಕುಣಿತವಾಗಿದೆ ಕಂಬಳ ನೃತ್ಯ. ಕೃಷಿ ಸಂಸ್ಕೃತಿಯ ಮುಖ್ಯವಾದ ಒಂದು ಘಟ್ಟ ಜಮೀನ್ದಾರಿ ಪದ್ಧತಿ. ಸ್ವಂತ ಭೂಮಿ, ಮನೆಗಳಿಲ್ಲದೆ ಪಣಿಯರು ಈ ಪದ್ದತಿಯ ಮೂಲಕ ಶೋಷಣೆಗೊಳಗಾದವರು. ‘ಕುಂಡಲ್ ಪಣಿ’ ಎಂಬ ಒಪ್ಪಂದದ ಮೂಲಕ ಪಣಿಯರು ಜಮೀನ್ದಾರರ ಗದ್ದೆಗಳಲ್ಲಿ ದುಡಿಯುತ್ತಾ, ಬಯಲಿನಲ್ಲಿ ಗುಡಿಸಲು ಕಟ್ಟಿ ವಾಸವಾಗಿದ್ದರು. ಗದ್ದೆಯ ಸಮೀಪದಲ್ಲಿ ಗುಡಿಸಲು ಕಟ್ಟಿ ವಾಸವಾಗುವುದರಿಂದ ಪಣಿಯರು ಯಾವ ಹೊತ್ತಿನಲ್ಲೂ ಕೆಲಸಕ್ಕೆ ಲಭ್ಯರಿರುತ್ತಾರೆ. ಕೂಲಿಯಾಗಿ ಇವರಿಗೆ ಬತ್ತವನ್ನು ಕೊಡುತ್ತಿದ್ದರು. ವಿಶೇಷ ದಿವಸಗಳಲ್ಲಿ ವಸ್ತ್ರ ಹಾಗೂ ಇತರ ಸಾಮಗ್ರಿಗಳನ್ನು ಒದಗಿಸುತ್ತಿದ್ದರು. ಪಣಿಯರ ಜನಪದ ಹಾಡುಗಳಲ್ಲಿ ಅವರ ಬದುಕಿನ ಬವಣೆಯ ಚಿತ್ರಗಳಿವೆ.

ಕೇರಳದಲ್ಲಿ ಜಮೀನ್ದಾರಿ ಪದ್ಧತಿ ನಿಂತು ಹೋದ ಮೇಲೆ ಕೃಷಿ ಸಂಸ್ಕೃತಿಯ ಚಹರೆಯೇ ಬದಲಾಗಿದೆ. ಗದ್ದೆ ಬಯಲುಗಳಲ್ಲಿ ಬೇಸಾಯ ಮಾಡಲು ಪಣಿಯರು ಸಿಗದ ಸ್ಥಿತಿ ಉಂಟಾಯಿತು. ಹೀಗಾಗಿ ಅವರ ಕಂಬಳ ನೃತ್ಯವೂ ಮರೆಯಾಗಿದೆ. ಜಮೀನ್ದಾರಿ ಪದ್ಧತಿಯ ಕಾಲಘಟ್ಟದಲ್ಲಿ ಆದಿವಾಸಿಗಳನ್ನು ಕಲೆಯ ಹೆಸರಿನಲ್ಲಿ ಶೋಷಣೆ ಮಾಡುತ್ತಿದ್ದ ರೀತಿಗೆ ನಿದರ್ಶನವಾಗಿದೆ ಕಂಬಳ ನೃತ್ಯ.

– ಪಿ.ವಿ.ಎಂ. ಅನುವಾದ ಎನ್.ಎಸ್.

ಕಂಬಿ ಪದ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಜನಪದ ಹಾಡು. ಶ್ರೀಶೈಲದ ಮಲ್ಲಿಕಾರ್ಜುನನ ಭಕ್ತರು ತಮ್ಮ ಆರಾಧ್ಯದೈವದ ದರ್ಶನಕ್ಕೆ ಹೋಗುವಾಗ ದಾರಿಯ ಅಗತ್ಯಕ್ಕಾಗಿ ಹೆಗಲ ಮೇಲೆ ಒಂದು ಬಿದಿರಿನ ಗಳ ಹೊತ್ತು ಅದರ ಎರಡೂ ಬದಿಯಲ್ಲಿ ಒಂದೊಂದು ನಿಲವನ್ನು ಸಿಗಿಸಿ ಒಂದರಲ್ಲಿ ನೀರಿನ ಗಡಿಗೆಯನ್ನು ಮತ್ತೊಂದರಲ್ಲಿ ದೈನಂದಿನ ವಸ್ತುವಸ್ತ್ರಗಳನ್ನು ತುಂಬಿಸಿಕೊಂಡು ಹೋಗುತ್ತಾರೆ. ಇದನ್ನೇ ‘ಕಂಬಿ’ ಎನ್ನುತ್ತಾರೆ. ದಾರಿಯ ದಣಿವಿನ ಪರಿಹಾರಕ್ಕಾಗಿ ಹಾಡಿಕೊಳ್ಳುತ್ತ ಹೋಗುತ್ತಾರೆ. ಅದು ಗಿರಿಮಲ್ಲಯ್ಯನ ಕುರತಿ ಭಕ್ತಿ ಪದವೂ ಹೌದು. ಇದೇ ‘ಕಂಬಿಪದ’. ಇದಕ್ಕೆ ಹಿನ್ನೆಲೆಯಾಗಿ ಸಂಬಾಳ ವಾದ್ಯದ ಲಯವಿರುತ್ತದೆ. ಹಿಂದೆಲ್ಲ ಗಿರಿಮಲ್ಲಯ್ಯನ ದರ್ಶನಕ್ಕೆ ಹೋಗುವಾಗ ನಡೆದುಕೊಂಡೇ ದಾರಿ ಸಾಗಿಸಬೇಕಿತ್ತು. ಹಾಗೆಯೆ ಮಾರ್ಗಾಯಾಸದ ಪರಿಹಾರಾರ್ಥ ಮಲ್ಲಯ್ಯನ ಪವಾಡದ ಕಥೆಗಳನ್ನು ಸಾರುವ ಊರಿನ ಜನಗಳದ್ದೊಂದು ಹಿಂಡೇ ಇರುತ್ತಿತ್ತು. ಇವರೆಲ್ಲ ಕೂಡಿ ಗಿರಿ ಮಲೆ ಕಾನುಗಳಿಗೆ ಹೊರಟರೆಂದರೆ ‘ಪರಿಸೆ ಹೊರಡುವುದು’ ಎಂದೇ ಪ್ರಖ್ಯಾತವಾಗಿತ್ತು. ಹೀಗಾಗಿ ‘ಕಂಬಿ’ ಹೊರುವುದೂ ಅಗತ್ಯವಾಗಿತ್ತು. ಕಂಬಿಯಾದರೂ ಮಲ್ಲಯ್ಯನ ದರ್ಶನಕ್ಕಾಗಿ ಬೇಕಾದ ಅಗತ್ಯಗಳನ್ನು ಹೊರುತ್ತಿದ್ದುದರಿಂದ ಮಲ್ಲಯ್ಯನ ದರ್ಶನಕ್ಕಾಗಿ ಬೇಕಾದ ಅಗತ್ಯಗಳನ್ನು ಹೊರುತ್ತಿದ್ದುದರಿಂದ ಅದಕ್ಕೂ ಒಂದು ರೀತಿ ನೀತಿ ಸಂಪ್ರದಾಯಿಕ ಸಜ್ಜು ಅಗತ್ಯಬಿತ್ತು. ಹಾಗಾಗಿ ಬಿದಿರು ಕೋಲಿನ ಎರಡೂ ಬದಿಗಳಿಗೆ ಟಿಸಿಲುಗಾಲುಗಳನ್ನು ಜೋಡಿಸಿ, ಆ ಎರಡೂ ಕಾಲುಗಳು ಸಂಧಿಸುಂತೆ ಅಡ್ಡವಾಗಿ ಮತ್ತೊಂದು ಗಳ ಸೇರಿಸಿ, ಅದರ ಮಧ್ಯದಲ್ಲೊಂದು ನಂದಿ ವಿಗ್ರಹವನ್ನೂ ನೇತು ಹಾಕಲಾಗುತ್ತಿತ್ತು. ಅದಕ್ಕೆ ಕೂಡಿಸಿದ ಹೊಂಬಣ್ಣದ ಕಳಸ ಹಾಗೂ ‘ಗಲ್ಲಪ’, ಕಂಬಿಯ ಕೋಲಿಗೆ ಬಣ್ಣದ ವಸ್ತ್ರದ ಪತಾಕೆ ಮತ್ತು ಕಂಬಿಗೆ ಅಲ್ಲಲ್ಲಿ ಭಸ್ಮಲೇಪನ. ಹೀಗೆ ಮಲ್ಲಯ್ಯನ ಗಿರಿಗೆ ಹೊರಡುವ ಭಕ್ತರೊಂದಿಗೆ ಕಂಬಿಯೂ ದೈವಿಕ ಭಾವವುಕ್ಕಿಸುವ ಅಲಂಕರಣದೊಂದಿಗೆ ಸಿದ್ಧವಾಗುತ್ತಿತ್ತು. ಇದನ್ನು ಹೊತ್ತು ಸಾಗುವ ಗಿರಿಮಲ್ಲಯ್ಯನ ಭಕ್ತರು ‘ಅಯ್ಯಗಳು.’ ಇವರಂತೆ ಮಲ್ಲಯ್ಯನ ಗಿರಿಗೆ ಹೋಗಲಾರದಂಥವರು ನಿಡಿದ ಹರಕೆಯನ್ನೂ ಈ ಅಯ್ಯಗಳೇ ಹೊರುವುದು ವಾಡಿಕೆ. ಇದನ್ನು ‘ಕಂಬಿಯ ಕಾಯಕ’ ಎನ್ನುತ್ತಾರೆ. ಕಂಬಿ ಹೊತ್ತ ಅಯ್ಯಗಳು ಊರಿಂದೂರಿಗೆ ದಾಟುವಾಗ ಊರಿನ ಜನ ಅವರನ್ನು ಭಯ ಭಕ್ತಿಯಿಂದ ಎದುರುಗೊಳ್ಳುವುದು ಹಾಗೂ ಅಯ್ಯಗಳು ಹೊತ್ತ ಕಂಬಿಗಳನ್ನು ಸಾಲಾಗಿ ಇಟ್ಟು ಮಲ್ಲಯ್ಯನ ಬಿರುದಾವಳಿಗಳನ್ನು ‘ಉಗ್ಗಡಿಸುವುದು'(ಹೇಳುವುದು) ಅನಂತರ ಕಂಬಿಪದಗಳನ್ನು ಹಾಡುವುದು ಸಂಪ್ರದಾಯಿಕವಾಗಿ ನಡೆದುಬಂದಿದೆ. ಗಿರಿಮಲ್ಲಯ್ಯನ ಪವಾಡಗಳನ್ನು ವರ್ಣಿಸುವುದಲ್ಲದೆ ಹಲವಾರು ನೀತಿ, ಮಾರ್ಗದರ್ಶನಗಳನ್ನೂ ಈ ಪದಗಳು ಒಳಗೊಂಡಿರುತ್ತವೆ. ಭಕ್ತಿಯನ್ನು ಸಾರುವುದಷ್ಟೇ ಈ ಪದಗಳ ಉದ್ದೇಶ ಅಲ್ಲ. ಯಾತ್ರಿಕರಿಗೆ ಸ್ವತಃ ಮಾರ್ಗದರ್ಶಿಯಂತೆ ಇವು ಚೈತನ್ಯವನ್ನು ತುಂಬುತ್ತವೆ.

ಕಂಬಿ ಪದಗಳು ಹಾಡಲು ಸುಶ್ರಾವ್ಯವಾಗಿರುವಂತಹ ರಾಗರಚನೆಗಳು. ದ್ವಿಪದಿಯ ರೂಪದಲ್ಲಿದ್ದರೂ ತ್ರಿಪದಿಯಾಗಿಯೇ ಹೆಚ್ಚು ಒಪ್ಪುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. (ಬಿ.ಎಸ್. ಗದ್ದಗಿ ಮಠ, ಕಂಬಿಯ ಹಾಡುಗಳು) ಇವುಗಳ ಧಾಟಿ ಹಾಡುವ ಗತ್ತೂ ಬಿಗಿಯಾದ ಲಯವೂ ಅನೇಕ ವೇಳೆ ಕೋಲಾಟದ ಹಿಂದಿನಿಂದಲೂ ಬಳಕೆಯಲ್ಲಿರುವ ಈ ಹಾಡುಗಳು ಈ ಸಂಪ್ರದಾಯ ಎಷ್ಟು ಹಿಂದಿನಿಂದ ಬಂದಿರಬಹುದು ಎಂಬ ಕುತುಹಲಕ್ಕೂ ಅದರ ಕುರಿತ ಅಧ್ಯಯನಕ್ಕೂ ವಸ್ತುವಾಗಿದೆ.

– ಜಿ.ಎನ್.

ಕಂಸಾಳೆ ಕಂಸಾಳೆ ಮಲೆಮಹದೇಶ್ವರನ ಭಕ್ತರು ಬಳಸುವ ಒಂದು ಜನಪದ ವಾದ್ಯ. ಕಂಸಾಳೆ ಬಾರಿಸುತ್ತ ಹಾಡುತ್ತ ನೃತ್ಯ ಮಾಡುತ್ತಾರೆ. ಇದು ಹೆಚ್ಚಾಗಿ ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಮತ್ತು ಕೋಲಾರದ ಕೆಲವು ಭಾಗಗಳಲ್ಲಿ ಪ್ರಚಲಿತವಿದೆ. ‘ಕಾಂಸ್ಯತಾಳ’ ಎಂಬ ಶಬ್ದದಿಂದ ಕಂಸಾಳೆಯ ನಿಷ್ಪತ್ತಿಯನ್ನು ಹೇಳಲಾಗಿದೆ. ಕಾಂಸ್ಯತಾಳ ಎಂದರೆ ಕಂಚಿನ ತಾಳ. ಕಂಸಾಳೆ ಬಹಳ ಪ್ರಾಚೀನ ಕಾಲದಿಂದಲೇ ಬಳಕೆಯಲ್ಲಿದೆ. ರಾಘವಾಂಕನ ಕಾವ್ಯಗಳಲ್ಲಿ ಕಾಂಸ್ಯತಾಳದ ಉಲ್ಲೇಖವಿದೆ. ಇದಕ್ಕೆ ಕೈಸಾಲೆ, ಕೌಸಾಳೆ, ಕೈತಾಳ, ಬಟ್ಲು ಮುಂತಾದ ಪರ್ಯಾಯ ನಾಮಗಳಿವೆ. ಚಾಮರಾಜನಗರ ಭಾಗದಲ್ಲಿ ಕಂಸಾಳೆಗೆ ‘ಬಿರುದು’ ಎಂದೂ ಕರೆಯುವುದುಂಟು.

ಕಂಸಾಳ ಬಾರಿಸುವರನ್ನು ಮಲೆಯ ಮಾದೇಶ್ವರನ ಸಂಪ್ರದಾಯದವರೆಂದು ಗುರುತಿಸುತ್ತಾರೆ. ಮಾದೇಶ್ವರನ ದೀಕ್ಷೆ ಪಡೆದ ಭಕ್ತರನ್ನು ಗುಡ್ಡರೆಂದು ಕರೆಯುತ್ತಾರೆ. ಈ ಗುಡ್ಡರು ಶಿವನ ಅವತಾರವೆಂಬ ಭಾವನೆ ಇದೆ. ಇವರು ಮಾದೇಶ್ವರನ ಮೇಲಿನ ಕಾವ್ಯಗಳನ್ನು ಹಾಡುತ್ತಾ ಆತನ ಮಹಿಮೆಯನ್ನು ಪ್ರಚುರ ಪಡಿಸುತ್ತಾರೆ. ಈ ದೀರ್ಘವಾದ ಮಹಾಕಾವ್ಯಗಳನ್ನು ಏಳು ಸಾಲುಗಳೆಂದು ಕರೆಯುತ್ತಾರೆ. ಒಂದೊಂದು ಸಾಲು ದೀರ್ಘವಾದ ಕಥನ ಕಾವ್ಯವಾಗಿದ್ದು ಇದನ್ನು ಸಂಪೂರ್ಣವಾಗಿ ಹಾಡಲ ಅನೇಕ ರಾತ್ರಿಗಳು ಬೇಕಾಗುತ್ತದೆ. ಇವನ್ನು ಮೇಳದಲ್ಲಿ ಹಾಡುವುದುಂಟು. ಹಾಡುವಾಗ ಕಂಸಾಳೆ ದಮ್ಮಡಿಯನ್ನು ಬಳಸುತ್ತಾರೆ. ಮೇಳದಲ್ಲಿ ಮೂವರಿಂದ ಎಷ್ಟು ಜನಬೇಕಾದರೂ ಇರಬಹುದು. ಇವರು ಹಾಡುವ ಏಳು ಸಾಲುಗಳು ಈ ಕೆಳಕಂಡಂತಿವೆ.

೧. ತಾಳುಗತೆ – ಭೀಮನ ಕೊಲ್ಲಿಯಲ್ಲಿ ಮಾದೇಶ್ವರರು ಕಾಣಿಸಿಕೊಂಡಿದ್ದರಿಂದ ಹಿಡಿದು ಪೂರ್ವಘಟ್ಟಗಳಲ್ಲಿ ಏಳು ಮಲೆಗಳ ನಡುವೆ ನೆಲಸಿದ್ದು.

೨. ಶ್ರವಣ ದೊರೆಯ ಸಾಲು

೩. ಜುಂಜೇಗೌಡನ ಸಾಲು

೪. ಸಂಕಮ್ಮನ ಸಾಲು

೫. ಇಕ್ಕೇರಿ ದೇವಮ್ಮನ ಸಾಲು

೬. ಬೇವಿನಕಾಳಿಯ ಸಾಲು

೭. ಸರಗೂರಪ್ಪನ ಸಾಲು ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾರ್ವತಿ ಕಣಪ್ಪ ಶರಣು ಶರಣಾರ್ತಿ

11

ಎಂದು ಹಾಡುತ್ತಾರೆ. ಇವರು ಧಾರ್ಮಿಕ ವೃತ್ತಿಗಾಯಕರ ಗುಂಪಿಗೆ ಸೇರುತ್ತಾರೆ. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಜಾನಪದ ವಿದ್ವಾಂಸರು ಕ್ಷೇತ್ರಕಾರ್ಯ ಕೈಗೊಂಡ ಪರಿಣಾಮವಾಗಿ ಕಂಸಾಳೆಯವರು ಹಾಡುವ ಏಳು ಕಾವ್ಯಗಳು ಸಂಗ್ರಹಗೊಂಡು ಇದೊಂದು ಜನಪದ ಮಹಾಕಾವ್ಯವೆಂಬ ವಿಸ್ಮಯ ಅಕ್ಷರ ಲೋಕಕ್ಕೆ ತಿಳಿಯಿತು. ಮಲೆ ಮಾದೇಶ್ವರ ಮಾಹಕಾವ್ಯ ಅಪಾರ ಜನಮನ್ನಣೆಗಳಿಸಿದೆ. ಕಂಸಾಳೆಯವರು ಎಡಗೈಯಲ್ಲಿ ಹಿಡಿಯುವ ಬಟ್ಟಲು ಅಂಗೈ ಅಗಲವಿರುತ್ತದೆ. ಇದಕ್ಕಿರುವ ಭಿಕ್ಷಾ ಪಾತ್ರೆ. ಇದಕ್ಕೆ ಅರ್ಧ ಅಂಗುಲ ಕಂಟವಿರುತ್ತದೆ. ಇದಕ್ಕಿರುವ ಮುಸುಕನ್ನು ಬಲಗೈಯಲ್ಲಿ ಹಿಡಿದಿರುತ್ತಾರೆ. ಇದು ಬಟ್ಟಲಿಗಿಂತ ಅಗವಾಗಿದ್ದು ಚಿಬ್ಬಲಿನಾಕಾರದಲ್ಲಿರುತ್ತದೆ. ಇದನ್ನು ‘ಗರಿ’ಯೆಂತಲೂ ಕರೆಯುತ್ತಾರೆ. ಇದು ಮೂರು ಅಳತೆಯಲ್ಲಿರುತ್ತದೆ. ಮುಸುಕಿನ ನಡುವೆ ಉಬ್ಬಿದ ಭಾಗವಿರುತ್ತದೆ. ಅಲ್ಲಿ ರಂಧ್ರವನ್ನು ಕೊರೆದು ದಾರವನ್ನು ತೂರಿಸಿ ಗಂಟು ಹಾಕಿರುತ್ತಾರೆ. ತೂರಿಸಿದ ಹಗ್ಗ ಕಲಾವಿದನ ಅಭಿರುಚಿಗೆತಕ್ಕಂತೆ ಅಲಂಕಾರಿಕವಾಗಿರುತ್ತದೆ. ಮೇಳದಲ್ಲಿ ಹಾಡುವವರು ಎಡಗೈಯಲ್ಲಿ ಬಟ್ಟಲನ್ನು ಮೇಲು ಮುಖವಾಗಿ ಹಿಡಿದು ಬಲಗೈಯಲ್ಲಿ ಗರಿಯನ್ನು ಕೆಳ ಮುಖವಾಗಿ ಹಿಡುದು ಕುಟ್ಟಿದಾಗ ಕಂಸಾಳೆನಾದ ಹೊರಹೊಮ್ಮುತ್ತದೆ. ಹಾಡುಗಾರಿಕೆಯಲ್ಲಿ ಕಂಸಾಳೆ ನುಡಿಸುವುದಕ್ಕೂ ಕುಣಿತದಲ್ಲಿ ಬಳಸುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಮೇಳದ ಹಾಡುಗಾರಿಕೆಯ ನಂತರ ಬಟ್ಟಲನ್ನೇ ಭಿಕ್ಷಾ ಪಾತ್ರೆಯಾಗಿ ಬಳಸುವುದು ವಿಶೇಷ. ಹಾಡುಗಾರಿಕೆಯಲ್ಲಿ ಕಂಸಾಳೆಯ ಜೊತೆಗೆ ದಮ್ಮಡಿ ಮತ್ತು ಚಿಟಿಕೆಯನ್ನು ಬಳಸುತ್ತಾರೆ. ಕಂಸಾಳೆಯವರು ಸಾಮಾನ್ಯವಾಗಿ ನಿಂತು ಅಥವಾ ಕುಳಿತು ಹಾಡುಗಾರಿಕೆ ಮಾಡಿಕೊಂಡು ಮೇಲ ನಡೆಸುವುದು ವಾಡಿಕೆ. ಇಂದಿಗೂ ಕಂಸಾಳೆಯವರು ಸೋಮವಾರ, ಶುಕ್ರವಾರಗಳಂದು ಊರೂರು ಮೇಲೆ ಹೋಗಿ ಹಾಡುತ್ತಾ ಭಿಕ್ಷೆ ಎತ್ತುತ್ತಾರೆ.

12

ಕಂಸಾಳೆಯು ಹಾಡು ಮತ್ತು ನೃತ್ಯ ಎರಡನ್ನು ಒಳಗೊಂಡಿರುವಂಥದ್ದು ಇದರ ನೃತ್ಯ ಪ್ರಕಾರ ಯಾವಾಗ ಪ್ರಾರಂಭವಾಯಿತು. ಎನ್ನುವುದಕ್ಕೆ ಸರಿಯಾದ ಆಧಾರವಿಲ್ಲ. ಕಾರಯ್ಯ – ಬಿಲ್ಲಯ್ಯರನ್ನು ಪರೀಕ್ಷೆ ಮಾಡಿದ ಮೇಲೆ ಮಾದೇಶ್ವರ ಕಂಸಾಳೆ ಹಿಡಿದು ಬೀಸಿ ಕುಣಿದನೆಂದು ಅಲ್ಲಿಂದ ಈ ಬೀಸು ಕಂಸಾಳೆಯ ಕುಣಿತ ಪ್ರಾರಂಭವಾಯಿತೆಂಬ ಅಭಿಪ್ರಾಯವೂ ಇದೆ. ಇನ್ನೂ ಕೆಲವರ ಪ್ರಕಾರ ದೇವರ ಗುಡ್ಡರೆಂದರೆ ಬರಿಯ ಮಾದೇಶ್ವರನ ಶಿಷ್ಯರು ಮಾತ್ರರಲ್ಲದೆ, ಮಾದೇಶ್ವರನ ಮಹಿಮೆಯನ್ನು ಸಾರಲು ಊರೂರು ಕೇರಿ ಕೇರಿ ಕಾಡು ಮೇಡುಗಳನ್ನೆಲ್ಲ ಅಲೆಯುತ್ತಾರೆ. ಅಲ್ಲದೆ ಮಾದಪ್ಪನ ದೀಕ್ಷೆ ಪಡೆದ ಗುಡ್ಡರು ವರ್ಷಕ್ಕೊಂದು ಬಾರಿಯದರೂ ಶಿವರಾತ್ರಿ ಅಥವಾ ನವರಾತ್ರಿಯಲ್ಲಿ ಬೆಟ್ಟಕ್ಕೆ ಹೋಗಿ ಬರುವುದು ವಾಡಿಕೆ. ಅಂತಹ ಸಂದರ್ಭಗಳಲ್ಲಿ ಹಿಂದಿನ ಕಾಲದಲ್ಲಿ ಕಳ್ಳಕಾಕರಿಂದ ಕ್ರೂರ ಪ್ರಾಣಿಗಳಿಂದ ತಮ್ಮ ರಕ್ಷಣೆ ಮಾಡಿಕೊಳ್ಳಬೇಕಾಗುತ್ತಿತ್ತು. ಇದಲ್ಲದೆ ಹೆಂಗಸರೂ ಗುಡ್ಡರಾಗುವ ಪದ್ಧತಿ ಇದ್ದಂತೆ ಕಾಣುತ್ತದೆ. ಇವರನ್ನು ‘ಗುಡ್ಡಮ್ಮ”ಗುಡ್ಡಿ’ ಯರೆಂದು ಕರೆಯಲಾಗುವುದು. ಆದರೆ ಹೆಂಗಸರೂ ಕುಣೀತ ಮಾಡುತ್ತಿದ್ದುದಕ್ಕೆ ಮಾಹಿತಿ ಇಲ್ಲ. ಇವರೆಲ್ಲಾ ಭಕ್ತರಾದ್ದರಿಂದ ಯಾರ ಮೇಲೂ ಆಯುಧಗಳನ್ನು ಬಳಸುವ ಹಾಗಿರಲಿಲ್ಲ. ಹಾಗಾಗಿ ಪ್ರಚಾರದ ಸಮಯದಲ್ಲಾಗಲಿ ಅಥವಾ ಕಾಡುಗಳಲ್ಲಿ ಯಾತ್ರೆ ಮಾಡುವಾಗ ಪ್ರಯಾಣದ ಏಕತಾನತೆ ನೀಗಲು ಹಾಗೂ ರಕ್ಷಣೆಗಾಗಿ ಈ ಬೀಸು ಕಂಸಾಳೆಯ ಕುಣಿತವನ್ನು ರೂಢಿಗೆ ತಂದಿರಬಹುದು. ಕ್ರಮೇಣ ಇದು ವ್ಯಾಪಕವಾಗಿ ಚಾಲ್ತಿಗೆ ಬಂದಿರಬೇಕು.

ಬೀಸು ಕಂಸಾಳೆ ಮೈಸೂರು ಭಾಗದಲ್ಲಿ ಪ್ರಚಲಿತವಿದ್ದ ಜನಪದ ಕಲೆಯಾಗಿದ್ದುದರಿಂದ ಮೈಸೂರು ಒಡೆಯರ ಕಾಲದಲ್ಲಿ ದಸರಾ ಮೆರವಣಿಗೆಯಲ್ಲಿ ಮತ್ತು ಅರಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಇದಕ್ಕೆ ಸ್ಥಾನಕಲ್ಪಿಸುವ ಮೂಲಕ ರಾಜರ ಪ್ರೋತ್ಸಾಹ ದೊರಕಿತ್ತು. ಸ್ವಾತಂತ್ರಾ ನಂತರದಲ್ಲಿ ರಾಜಕೀಯ ಸಭೆಗಳಲ್ಲಿ, ಸರ್ಕಾರದ ಇತರ ಸಭೆಗಳಲ್ಲಿ ಕಂಸಾಳೆ ಕಲೆಯನ್ನು ಈ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಳ್ಳಲಾಯಿತು. ಕರ್ನಾಟಕದಲ್ಲಿ ಸುಮಾರು ೧೫೦ ರಿಂದ ೨೦೦ರವರೆಗೆ ಬೀಸು ಕಂಸಾಳೆಯ ತಂಡಗಳಿವೆ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಪ್ರಾರಂಭದ ದಿನಗಳಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿದೆ. ಈ ಕಾರಣದಿಂದಲೂ ಬೀಸು ಕಂಸಾಳೆ ತಂಡಗಳು ಹೆಚ್ಚಾಗಿವೆ. ಬೀಸು ಕಂಸಾಳೆಯಲ್ಲಿ ನಾಲ್ಕು ವಿಧ.

೧. ಒಂಟಿ

೨. ಜೋಡಿ

೩. ಗುಂಪು

೪. ಮರಗಾಲು ಕುಣಿತ

ವಾಲಿಗವೋ ನಿಮ್ಮ ವಾಲಿಗವೋ
ಶಿವನ ಮಹದೇವನ್ ವಾಲಿಗವೋ
ವಾಲಿಗವೆಂದಾರೆ ರೇಗೂತ ಬರುತ್ತಾರೆಸ
ಶಿವನ ಮಹದೇವನ್ ವಾಲಿಗವೋ

ಎಂಬ ಮೇಳದವರ ಹಾಡಿಗೆ ಒಂಟಿ ನೃತ್ಯದಲ್ಲಿ ಮೊದಲು ಒಬ್ಬನೇ ಕಂಸಾಳೆಯನ್ನು ಬೀಸುತ್ತಾ ಕುಣಿಯುತ್ತಾನೆ. ‘ಮನೆ’ ಕಟ್ಟುವ ಪದ್ಧತಿಯೊಂದು ಕಾಣಬರುತ್ತದೆ. ಕಲಾವಿದ ರಂಗದ ಮೇಲೆ ಸುತ್ತಿ ಹಾರಿ, ಬಾಗಿ, ಮಲಗಿ, ಹುಲಿಯಂತೆ ಗೆಜ್ಜೆಹಾಕಿ, ಜಿಂಕೆಯಂತೆ ನೆಗೆದು, ಬಳ್ಳಿಯಂತೆ ಬಳುಕಿ ಸುಮಾರು ಐದರಿಂದ ಆರು ನಿಮಿಷಗಳಕಾಲ ಕುಣಿಯುತ್ತಾನೆ. ಒಂಟಿಯಾಗ ಮಾಡುವವರು ವಿರಳ. ಇದು ಕಠಿಣವಾದುದು. ತಂಡದಲ್ಲಿ ಒಬ್ಬಿಬ್ಬರು ಮಾಡುತ್ತಾರೆ. ಕಂಸಾಳೆ ಮಹಾದೇವಯ್ಯನವರು ಒಂಟಿ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು. ಜೋಡಿ ಕುಣಿತದಲ್ಲಿ ಇಬ್ಬರು ಭಾಗವಹಿಸುತ್ತಾರೆ. ಇದರಲ್ಲಿ ಮೈನವಿರೇಳಿಸುವ ಚಮತ್ಕಾರಗಳನ್ನು ನೋಡಬಹುದು. ‘ಕಳರಿ ಪಯಟ್ಟು’ವಿನ ಮಾದರಿಯಲ್ಲಿ ಕಲಾವಿದರು ಕುಣಿಯುತ್ತಾರೆ. ಇತ್ತೀಚೆಗೆ ಒಂಟಿ ಮತ್ತು ಜೋಡಿ ಕುಣಿತ ಮಾಡುವವರು ಕಡಿಮೆಯಾಗಿದ್ದಾರೆ. ಜೋಡಿ ಕುಣಿತದ ಕೊನೆಯಲ್ಲಿ ಈ ಜೋಡಿಗೆ ಒಬ್ಬೊಬ್ಬರಾಗಿ ಸೇರುತ್ತಾ ಬಂದು ನೃತ್ಯ ಮಾಡುವುದೇ ಗುಂಪು ಕುಣಿತ. ಇದು ಸಮ ಸಂಖ್ಯೆಯಲ್ಲಿರುತ್ತದೆ. ಗುಂಪಿನ ಆಕಾರ ಕಮಲದ ಹೂವಿನಂತಿದ್ದು ಮೊದಲು ಮೊಗ್ಗಾಗಿ, ನಂತರ ಅರಳಿದ ಕಮಲದಂತೆ, ವಿವಿಧ ಭಂಗಿಗಳಲ್ಲಿ ಸುಮಾರು ೪೫ ನಿಮಿಷಗಳ ಕಾಲ ಮೇಳದ ಹಾಡಿನ ನಾದಕ್ಕೆ ತಕ್ಕಂತೆ ಕುಣಿದು ಒಬ್ಬೊಬ್ಬರಾಗಿ ನೇಪಥ್ಯಕ್ಕೆ ಸರಿಯುತ್ತಾ ಹೋಗುತ್ತಾರೆ. ಕೆಲವು ತಂಡಗಳು ಮರಗಾಲು ಕುಣಿತವನ್ನು ಮಾಡುವುದುಂಟು. ಹಿಂದೆ ಮರಗಾಲು ಕಂಸಾಳೆಯ ತಂಡಗಳೇ ಇದ್ದವು. ಈಗ ಒಂದೆರಡು ತಂಡಗಳಿಗೆ ಮಾತ್ರ ಸೀಮಿತವಾಗಿವೆ. ಒಂಟಿ ಕುಣಿತ ಮಾಡುವ ಕಲಾವಿದ ಕಡೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಣಿಯುವುದನ್ನು ನೋಡಬಹುದಾಗಿತ್ತು. ಈಚಿನ ದಿನಗಳಲ್ಲಿ ಬೇರೆ ನೃತ್ಯಗಳು ಹೆಜ್ಜೆಗಳನ್ನು ಅಳವಡಿಸಿಕೊಂಡು ಕುಣಿತ ಮಾಡುವುದು ಕಂಡುಬರುತ್ತದೆ.

ಕಂಸಾಳೆ ಕೆಲ ಅನೇಕ ವರ್ಷಗಳಿಂದ ಬೆಳೆದು ಬಂದಿದ್ದರೂ ಇದು ಮಾದೇಶ್ವರನ ಗುಡ್ಡರು ಭಿಕ್ಷೆ ಎತ್ತುವಾಗ ಮಾಡುವ ಒಂದು ನೃತ್ಯವೆಂಬ ಭಾವನೆ ಸಾಮಾನ್ಯವಾಗಿತ್ತು. ಜಾನಪದ ಯಾವಾಗ ವಿಶ್ವವಿದ್ಯಾನಿಲಯದ ಕದ ತಟ್ಟಿತೋ ಅಂದಿನಿಂದ ಅದರ ಕೀರ್ತಿ ಎಲ್ಲೆಡೆಯೂ ಪಸರಿಸತೊಡಗಿತು. ಕಂಸಾಳೆ ಮಹಾದೇವಯ್ಯ ಅವರನ್ನು ಸಂದರ್ಶನ ಕಲಾವಿದರಾಗಿ ಮೈಸೂರು ವಿಶ್ವವಿದ್ಯಾನಿಲಯ ತೆಗೆದುಕೊಂಡ ಮೇಲಂತು ಅದರ ಪ್ರಚಾರ ವಿಸ್ತಾರಗೊಂಡಿತು. ಈಗಿನ ತರುಣರು ಕಂಸಾಳೆ ಕಲೆಯನ್ನು ಸಿನಿಮಾಗಳಲ್ಲಿ, ರಂಗಭೂಮಿಯಲ್ಲಿ, ನಾಟಕಶಾಲೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸವುವುದನ್ನು ಕಾಣಬಹುದಾಗಿದೆ. ಗಂಡು ಕಲೆ ಎನಿಸಿಕೊಂಡಿದ್ದ ಕಂಸಾಳೆಯನ್ನು ಹೆಣ್ಣು ಮಕ್ಕಳೂ ಕಲಿತು ಪ್ರದರ್ಶನ ನೀಡುತ್ತಿರುವುದು ಕೂಡ ಒಳ್ಳೆಯ ಬೆಳೆವಣಿಗೆಯಾಗಿದೆ.

– ಯು.ಎಸ್.ಆರ್.

ಕಚ್ಚೆಗೌಳಿಗರು ಮೂಲ ಸಂಸ್ಕೃತಿಯನ್ನು ದಟ್ಟವಾಗಿ ಉಳಿಸಿಕೊಂಡು ಬಂದಿರುವ ಒಂದು ವಿಶಿಷ್ಟ ಬುಡಕಟ್ಟು. ಇವರ ಮನೆಮಾತು ಮರಾಠಿ. ಎಮ್ಮೆ ಸಾಕಾಣಿಕೆಗಾಗಿ ಗೋವಾ ಮತ್ತು ಮಹಾರಾಷ್ಟ್ರ ಪ್ರಾಂತ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದವರು. ಇವರು ಕರ್ನಾಟಕಕ್ಕೆ ಹೇಗೆ? ಏಕೆ? ಎಲ್ಲಿಂದ ಬಂದರು ಎಂಬ ಪ್ರಶ್ನೆಗೆ ಸ್ಪಷ್ಟ ಲಿಖಿತ ದಾಖಲೆಗಳಿಲ್ಲದಿದ್ದರೂ ಅವರ ಕಸುಬೇ ಅವರು ಇಲ್ಲಿಗೆ ಬಂದ ನಿಜವಾದ ಕಾರಣಗಳನ್ನು ಹೇಳುತ್ತದೆ. ಮೂರು ನಾಲ್ಕು ತಲೆಮಾರುಗಳಿಂದ ಕರ್ನಾಟಕದಲ್ಲಿ ಮಾಸಿಸುತ್ತಿರುವ ಗೌಳಿಗರು ಇಂದಿಗೂ ಮೂಲನೆಲೆಯೊಂದಿಗೆ ತಮ್ಮ ಗಾಢವಾದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಮಹಾರಾಷ್ಟ್ರದ ಖಂಡೋಬಾ ದೇವರಿಗೆ ನಡೆದುಕೊಳ್ಳುವ ಇವರು ತಮ್ಮನ್ನು ಧಂಗರ್ ಜಾತಿಯವರು ಎಂದು ಕರೆದುಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಗೌಳಿಗರು ಸಾಮಾನ್ಯವಾಗಿ ದಟ್ಟಡವಿಗಳಲ್ಲೇ ತಮ್ಮ ಹಾಡಿಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಶಿವಮೊಗ್ಗ, ಧಾರವಾಡ, ಬೆಳಗಾಂ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಗೌಳಿಗರ ಹಾಡಿಗಳಿವೆ. ಹಸಿರು ತುಂಬಿದ ಬೆಟ್ಟ ಗುಡ್ಡಗಳಿಂದ ಆವೃತವಾದ ಪ್ರದೇಶವನ್ನು ಆರಿಸಿಕೊಂಡು ಹಾಡಿಗಳನ್ನು ನಿರ್ಮಿಸುವ ಗೌಳಿಗರು ತಾವು ಸಾಕುವ ಎಮ್ಮೆಗಳಿಗೆ ಸರಿಯಾದ ಆಹಾರ ನೀರು ದೊರೆಯುತ್ತದೆಯೋ ಎಂಬುದನ್ನು ಖಚಿತಪಡಿಸಿಕೊಂಡೇ ಮನೆಗಳನ್ನು ನಿರ್ಮಿಸಲು ತೊಡಗುತ್ತಾರೆ.

ಎಮ್ಮೆ ಸಾಕಾಣಿಯನ್ನೇ ಪ್ರಧಾನ ವೃತ್ತಿಯಾಗಿ ಅವಲಂಬಿಸಿರುವ ಇವರನ್ನು ಅಲೆಮಾರಿಗಳು ಎಂದು ಭಾವಿಸಲಾಗಿದೆ. ಎಮ್ಮೆ ಹಿಂಡುಗಳೊಡನೆ ಅವಕ್ಕೆ ಮೇವು – ನೀರುಗಳನ್ನು ಅರಸುತ್ತ ಹುಲ್ಲುಗಾವಲಿನಿಂದ ಹುಲ್ಲುಗಾವಲಿಗೆ, ಅಡವಿಯಿಂದ ಅಡವಿಗೆ, ಕಣಿವೆಯಿಂದ ಕಣಿವೆಗೆ ಅಲೆಯುವ ಮಂದಿ ಇವರು. ಎಮ್ಮೆಗಳಿಗೆ ಎಲ್ಲಿ ಸಮೃದ್ಧವಾಗಿ ಹುಲ್ಲು ನೀರು ದೊರಕುತ್ತದೊ ಅಲ್ಲಿ ಇವರ ವಾಸ. ಮತ್ತೆ ಮೂರು ತಿಂಗಳಿಗೂ ಆರು ತಿಂಗಳಿಗೂ ಇನ್ನೊಂದು ಅಡವಿಗೆ ಪಯಣ. ತಮ್ಮ ಎಮ್ಮೆಗಳನ್ನು ರೋಗರುಜಿನಗಳಿಂದ ಪಾರು ಮಾಡುವ ಸಲುವಾಗಿ, ಅವಕ್ಕೆ ಮೇವು ನೀರುಗಳನ್ನು ಒದಗಿಸುವ ಉದ್ದೇಶದಿಂದ ಇಂಥ ಅಲೆಮಾರಿ ಅಡವಿಯ ಬದುಕು ಇವರಿಗೆ ಅನಿವಾರ್ಯ.

ಎಮ್ಮೆ ಸಾಕಾಣಿಕೆಯೊಂದಿಗೆ ಜೇನುತುಪ್ಪ, ನಸರಿತುಪ್ಪ ಸಂಗ್ರಹಿಸುವ, ಸಣ್ಣ ಸಣ್ಣ ಪ್ರಾಣಿಗಳನ್ನು ಬೇಟೆಯಾಡುವ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಉಳಿದಂತೆ ಬೇರೆ ಯಾವ ದಂಧೆಯೂ ಇವರಿಗೆ ಗೊತ್ತಿಲ್ಲ.

ತಾತ್ಕಾಲಿಕ ವಾಸಕ್ಕೆ ಇವರು ನಿರ್ಮಿಸಿಕೊಳ್ಳುವ ಗುಡಿಸಲು ಮಾದರಿಯೂ ವಿಶಿಷ್ಟ. ಮರದ ಕಂಬಗಳನ್ನಾಧರಿಸಿದ ಬಿದಿರಿನ ಬೊಂಬಿನ ಗುಡಿಸಲು, ಅದಕ್ಕೆ ‘ಜೊಂಡು ಹುಲ್ಲಿನ ಮಾಡು’, ಗೋಡೆಗೆ ಬದಲಾಗಿ ಮಣ್ಣು ಬಳಿದು ಬಿದಿರಿನ ನೆರಿಕೆಯ ‘ತಡಿಕೆ ಬೇಲಿ’, ಗುಡಿಸಲ ಬಾಗಿಲು ಪೂರ್ವ ಇಲ್ಲವೆ ಉತ್ತರ ದಿಕ್ಕಿಗಿರುತ್ತದೆ. ಗುಡಿಸಲಿನ ಮೇಲ್ಛಾವಣಿಯ ಎರಡೂ ಮಗ್ಗಲುಗಳು ನೆಲಮಟ್ಟದಿಂದ ಎರಡು ಅಡಿಗಳಷ್ಟೇ ಅಂತರದ ಎತ್ತರದಲ್ಲಿರುತ್ತವೆ.

ವಾಸದ ಗುಡಿಸಲಿಗೆ ಚಾಚಿಕೊಂಡಂತೆ ಇಲ್ಲವೆ ಗುಡಿಸಲಿಗೆ ಅಭಿಮುಖವಾಗಿ ಎಮ್ಮೆ ‘ಒಡ್ಡಿ’ಯೊಂದು ನಿರ್ಮಾಣಗೊಂಡಿರುತ್ತದೆ. ಅದರ ಪಕ್ಕದಲ್ಲಿ ಒಡ್ಡಿ ಇರುತ್ತದೆ. ಆ ಎರಡೂ ಒಡ್ಡಿಗಳ ನಡುವೆ ಗುಡಿಸಲಿನ ಮುಂಭಾಗದಲ್ಲಿ ಒಂದು ಚಪ್ಪರ ಎದ್ದು ನಿಂತಿರುತ್ತದೆ. ಆ ಚಪ್ಪರದ ಮೇಲೆ ಎಮ್ಮೆಗಳು ತಿನ್ನುವ ಕಾಡಿನಲ್ಲಿ ದೊರಕುವ ಹುಲ್ಲನ್ನು ಬಣವೆ ಹಾಕಿರುತ್ತಾರೆ. ರಾತ್ರಿ ವೇಳೆಯಲ್ಲಿ ದುಷ್ಟ ಪ್ರಾಣಿಗಳ ಹಾವಳಿ ತಪ್ಪಿಸಿಕೊಳ್ಳಲು ಸೊಳ್ಳೆ ಕ್ರಿಮಿಕೀಟಾದಿಗಳನ್ನು ದೂರವಿರಿಸಲು ಗುಡಿಸಲ ನಾಲ್ಕೂ ಕಡೇ ಇಡೀ ರಾತ್ರಿ ಬೆಂಕಿ ಉರಿಸುತ್ತಾರೆ.

ಇವರು ಅಡವಿಯಲ್ಲಿ ತಮ್ಮ ಹಾಡಿಗಳನ್ನು ಆಗಾಗ ಬದಲಿಸುತ್ತಿರುತ್ತಾರೆ. ತಮ್ಮ ಕಸುಬಿನ ಹಿನ್ನೆಲೆಯಲ್ಲಿ ಇವರು ಒಂದು ತಪ್ಪಲಿನಿಂದ ಇನ್ನೊಂದು ತಪ್ಪಲಿಗೆ ತಮ್ಮ ನೆಲೆಗಳನ್ನು ಬದಲಿಸುವುದು ಸಹಜವಾಗಿದೆ. ಆದರೆ ಆ ಎಲ್ಲ ನೆಲೆಗಳೂ ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ. ಖಾಯಂ ನೆಲೆಗಳೂ ಇಲ್ಲದಿಲ್ಲ. ಕಡೇಪಕ್ಷ ನಾಲ್ಕಾರು ವರ್ಷಗಳವರೆಗಾದರೂ ಒಂದೆಡೆ ಖಾಯಂ ಆಗಿ ನೆಲೆಗೊಳ್ಳಲು ಸಾಧ್ಯವಾಗುವಂತೆ ಅನುಕೂಲವೆನಿಸಿದ ಒಂದು ಅಡವಿ ಪ್ರದೇಶದಲ್ಲಿ ಒಂದೊಂದು ಸುಭದ್ರ ಗುಡಿಸಲನ್ನು ನಿರ್ಮಿಸಿಕೊಂಡಿರುತ್ತಾರೆ. ಎಲ್ಲಿಗಾದರೂ ಯಾವುದೇ ಪ್ರದೇಶಕ್ಕೆ ವಲಸೆ ಹೋಗಿದ್ದರೂ ಕೆಲವು ನಿರ್ದಿಷ್ಟ ಮಾಸಗಳಲ್ಲಾದರೂ ಆ ಖಾಯಂ ನೆಲೆಗೆ ಹಿಂದಿರುಗಿ ಒಂದು ಸಾಂಪ್ರದಾಯಿಕ ಜೀವನ ನಡೆಸುವುದು ವಾಡಿಕೆ.

ಕಚ್ಚೆ ಗೌಳಿಗರಲ್ಲಿ ಸುಮಾರು ಇಪ್ಪತ್ಮೂರು ಕುಳಿಗಳಿವೆ ಎಂದು ಹೇಳಲಾಗಿದೆ. ಜೋಗಿ ಕುಳಿ ಕಚ್ಚೆಗೌಳಿಗ ಬುಡಕಟ್ಟಿಗೆ ಹಿರಿಯ ಕುಳಿ. ಗುರುಸ್ಥಾನದಲ್ಲಿರುವ ಶ್ರೇಷ್ಠ ಕುಳಿ ಇದು. ಈ ಕುಳಿಯವರು ಮೂರು ವರ್ಷಕ್ಕೊಮ್ಮೆ ಬುಡಕಟ್ಟಿನ ತಾಣಗಳಿಗೆ ಭೇಟಿ ನೀಡಿ ಒಕ್ಕಲುಗಳಿಂದ ಕಾಣಿಕೆ ಪಡೆದು ಅದನ್ನು ಬುಡಕಟ್ಟಿನ ಸಂಘಟನಾಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಜೋಗಿ ಕುಳಿಯ ಅನಂತರದ ಸ್ಥಾನ ‘ಯಡಿಗ್ಯ’ ಕುಳಿಯದು. ಹಾಡಿಯ ಧಾರ್ಮಿಕ ವಿಧಿ, ಉಪಾಸನೆ, ಆಚರಣೆಗಳನ್ನು ನಡೆಸಿಕೊಡಲು ಇವರೂ ಅರ್ಹರು. ಹಾಡಿಯಲ್ಲಿ ‘ಯಡಿಗ್ಯ’ ರು ಇಲ್ಲದಿದ್ದರೆ ಲಾಂಬೂರ್ ಕುಳಿಯವರು ಅವರ ಸ್ಥಾನವನ್ನು ತುಂಬಹುದು.

ಗೌಳಿಗರು ತಮ್ಮ ಹೆಸರುಗಳ ಮುಂದೆ ಮನೆತನದ ಹೆಸರುಗಳನ್ನು ಉಪಹೆಸರುಗಳನ್ನಾಗಿ ಇಟ್ಟುಕೊಳ್ಳುವುದು ವಾಡಿಕೆ. ಇದರಿಂದ ವ್ಯಕ್ತಿ ಯಾವ ಕುಳಿ ಅಥವಾ ಮನೆತನಕ್ಕೆ ಸೇರಿದವ ಎಂಬುದನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಶಂಕ್ರೆಪ್ಪಲಾಂಬೂರ್, ಜಾನು ಪಟುಕಾರ್, ಲಕ್ಯವಾನೇರಾಯಾ ಈ ಹೆಸರುಗಳು ವ್ಯಕ್ತಿಗಳ ಮನೆತನಗಳನ್ನು ಸೂಚಿಸುತ್ತದೆ.

ಕಚ್ಚೆ ಗೌಳಿಗರ ಉಡುಗೆ ತೊಡುಗೆಗಳು ತುಂಬಾ ಸರಳವಾದವು. ಗಂಡಸರ ನಿತ್ಯ ಉಡುಗೆಯೆಂದರೆ ಕೌಪೀನವೊಂದೇ. ಹೊರಗಡೆ ಪ್ರದೇಶಗಳಿಗೆ ಹೋಗುವಾಗ ಮಾತ್ರ ನಡುವಿಗೆ ತುಂಡುದಟ್ಟಿ ಸುತ್ತುತ್ತಾರೆ. ತಲೆಗೆ ಪಾಣಿ ಪಂಚೆಯ ರುಮಾಲು ಸುತ್ತಿಕೊಳ್ಳುತ್ತಾರೆ. ಶಿವಾಜಿ ವಂಶದವರು ಎಂದು ಹೇಳಿಕೊಳ್ಳುವ ಇವರು ಕೈ ಬೆರಳಿಗೆ ತಾಮ್ರದ ‘ಸಲಾ’ ಬೆಳ್ಳಿ ಕಡಗ, ಕಿವಿಗೆ ಮುರ, ಬಲಗಿವಿಗೆ ಬಲಿಗಿವಿ ಮುರ, ಕೊರಳಿಗೆ ರೂಪಾಯಿಸರ ಮಣಿಸರಗಳನ್ನು ಧರಿಸುವುದೂ ರೂಢಿ.

ಗೌಳಿಗರ ಹೆಂಗಸರು ಹದಿನೆಂಟು ಮೊಳದುದ್ದರ ಸೀರೆಯನ್ನು ಕಚ್ಚೆ (ಕಚೆ) ಹಾಕಿ ಸೊಂಟಕ್ಕೆ ಸುತ್ತಿಕೊಳ್ಳುತ್ತಾರೆ. ಎದೆ, ತೋಳು ಮುಚ್ಚುವಂತೆ ‘ಚೋಳಿ’ (ನಾಲ್ಕಾರು ಬಣ್ಣದ ಬಟ್ಟೆಗಳ ತುಂಡುಗಳನ್ನು ಸೇರಿಸಿ ಹೊಲಿದ ರವಿಕೆ) ಧರಿಸುತ್ತಾರೆ. ಇವರಿಗೆ ಆಭರಣಗಳ ಬಗೆಗೆ ಅಸಾಧಾರಣ ವ್ಯವೋಹವುಂಟು. ಕಿವಿಗಳಿಗೆ ಬುಗುಡಿ, ಕಾಪು, ಕೆನ್ನೆ ಸರಪಣಿ, ಬೀಗ ಬಳೆ, ಮೂಗಿಗೆ ಮೂಗುತಿ, ತೋಳುಗಳಿಗೆ ತೋಳುಮಣಿ, ಕೈಗೆ ಬೆಳ್ಳಿ ಪಾಟ್ಲಿ, ಕೊರಳಿಗೆ ಮಣಿಸರ, ಬಿಲ್ಲೆ ಸರ, ರೂಪಾಯಿಸರ, ಕಾಲಿಗೆ ಬೆಳ್ಳಿ ಉಂಗುರ ಮುಂತಾದ ಆಭರಣಗಳನ್ನು ಹಾಕಿಕೊಳ್ಳುತ್ತಾರೆ.

ಸ್ತ್ರೀಯರ ಹೊರತು ಮಕ್ಕಳಿಂದ ಮೊದಲುಗೊಂಡು ವೃದ್ಧರವರೆಗೆ ಎಲ್ಲರೂ ಅರ್ಧಚಂದ್ರಾಕಾರವಾಗಿ ತಲೆ ಬೋಳಿಸಿಕೊಂಡು ಜುಟ್ಟು ಬಿಟ್ಟು ಕೊಳ್ಳುವುದು ಇವರ ಪದ್ಧತಿ. ಕ್ಷೌರಿಕರ ಸೇವೆಗೆ ಇವರಿಗೆ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪರಸ್ಪರರ ನೆರವಿನಿಂದ ಸ್ವಯಂ ತಾನೇ ಕ್ಷೌರ ಮಾಡಿಕೊಳ್ಳುತ್ತಾರೆ.

ಅಡವಿಯಲ್ಲಿ ಎಮ್ಮೆಗಳನ್ನು ಸಾಕಿಕೊಂಡಿರುವುದೇ ಗೌಳಿಗರ ಪ್ರಧಾನ ವೃತ್ತಿ. ಅವಕ್ಕೆ ಹುಲ್ಲು, ನೀರು, ಒದಗಿಸಲು ಅಪಾರ ಶ್ರಮ ವಹಿಸುತ್ತಾರೆ.

ಗೌಳಿಗರ ಆಹಾರ ಸೇವನೆಯಲ್ಲಿ ರಾಗಿ ಮತ್ತು ಅಕ್ಕಿಗೆ ವಿಶೇಷ ಪ್ರಾಧಾನ್ಯ ಉಂಟು. ದಿನಕ್ಕೆ ಮೂಡು ಸಲ ಊಟ ಮಾಡುವ ಪದ್ಧತಿ ಇವರಲ್ಲುಂಟು. ಬೆಳಗಿನ ಊಟಕ್ಕೆ ರಾಗಿಯಂಬಲಿ ಮತ್ತು ಮೊಸರು; ಮಧ್ಯಾಹ್ನದ ಊಟಕ್ಕೆ ಅನ್ನ – ರೊಟ್ಟಿ, ಕಾಳುಮೆಣಸಿನ ಚಟ್ನಿ ಮತ್ತು ಬೆಣ್ಣೆ; ರಾತ್ರಿಯೂಟಕ್ಕೆ ಅನ್ನ, ರೊಟ್ಟಿ, ಬೆಣ್ಣೆ ಮತ್ತು ರಾಗಿಯಂಬಲಿಯನ್ನು ಉಪಯೋಗಿಸುತ್ತಾರೆ. ವಿಶೇಷ ಔತಣ ಕೂಟಗಳಲ್ಲಿ ಅನ್ನ, ರೊಟ್ಟಿ, ಸಾರು ಮತ್ತು ಸಿಹಿ ಅಂಬಲಿಯ ಅಡುಗೆಗಳನ್ನು ಅಣಿಗೊಳಿಸುವುದು ಸಾಮಾನ್ಯ. ಹಬ್ಬ ಹರಿದಿನಗಳಲ್ಲಿ ಹಾಲಂಬಲಿ ಪಾಯಸ ಅಣಿಗೊಳಿಸುವುದು ಪದ್ಧತಿ. ಅಕ್ಕಿಯನ್ನು ಹಾಲಿನಲ್ಲಿ ಪಾಕಗೊಳಿಸಿ ತಯಾರಿಸುವ ಒಂದು ವಿಧವಾದ ಪಾಯಸ ಅದು. ತುಪ್ಪ ಬೆಲ್ಲದೊಂದಿಗೆ ಅದನ್ನು ಸೇವಿಸುತ್ತಾರೆ.

ಕುಲಚಿಹ್ನೆಗಳೆನಿಸದೆ ಪ್ರಾಣಿ ಸಸ್ಯಗಳನ್ನು ಇವರು ತಿನ್ನುವುದಿಲ್ಲ. ಹೆಣ್ಣು ಕುರಿಯ ಮಾಂಸ ತಿನ್ನುವುದು ನಿಷಿದ್ಧ. ಕುಡಿತ ಇವರಲ್ಲಿ ಸಾಮಾನ್ಯ. ಸ್ತ್ರೀ ಪುರುಷರು ಎಂಬ ಭೇದವಿಲ್ಲದೆ ಎಲ್ಲರೂ ಕಳ್ಳು, ಸೇಂದಿ, ಕಳ್ಳಭಟ್ಟಿ ಕುಡಿಯುವುದು ಅಭ್ಯಾಸವಾಗಿದೆ.

ಜೀವನಚಕ್ರದ ಮುಖ್ಯ ಘಟ್ಟಗಳಾದ ಜನನ, ಯೌವನಾವಸ್ಥೆ, ಮದುವೆ ಮತ್ತು ಮರಣಗಳಲ್ಲಿ ಇವರು ಅನುಸರಿಸುವ ಸಂಪ್ರದಾಯಗಳು ವಿಶಿಷ್ಟವಾದವು. ಇವರಲ್ಲಿ ಚೊಚ್ಚಲ ಹೆರಿಗೆಯನ್ನು ತವರಿನಲ್ಲೇ ನಡೆಸುವ ಪದ್ಧತಿಯುಂಟು. ಹೆರಿಗೆಯು ವಾಸದ ಗುಡಿಸಲ ಚಾವಡಿಯ ಮರೆಯಲ್ಲಿ ಜರುಗುವುದು. ಹಾಡಿಯ ಸೂಲಗಿತ್ತಿ ಹೆರಿಗೆ ಮಾಡಿಸವು ಹೊಣೆ ಹೊತ್ತಿರುತ್ತಾಳೆ. ಹೆರಿಗೆಯಾದ ದಿನದಿಂದ ತೊಡಗಿ ಮುಂದಿನ ಹತ್ತು ರಾತ್ರಿಗಳನ್ನು ಸೂತಕದ ದಿನಗಳು ಎಂದು ಪರಿಗಣಿಸಲಾಗುವುದು. ಸೂತಕದ ಕಾಲದಲ್ಲಿ ಯಾರೂ ಬಾನಂತಿಯನ್ನು ಮುಟ್ಟುವುದಿಲ್ಲ. ಅವಳು ಉಪಯೋಗಿಸಿದ ವಸ್ತು ವಿಶೇಷಗಳನ್ನು ಬಳಸುವುದಿಲ್ಲ.

ಸೂತಕದ ಐದು ಮತ್ತು ಹನ್ನೊಂದನೆಯ ದಿನಗಳಂದು ಹಾಡಿಯ ಯಡಿಗ್ಯ/ಲಾಂಬೂರ್ ಸೂತಕ ನಿವಾರಣೆಯ ವಿಧಿ ಆಚರಣೆಗಳನ್ನು ನಡೆಸಿಕೊಡುತ್ತಾರೆ. ಸಾಮಾನ್ಯವಾಗಿ ಐದನೆಯ ದಿನ ಮಗುವಿಗೆ ಯಡಿಗ್ಯನು ಹೆಸರಿಟ್ಟುಕೊಡುತ್ತಾನೆ. ಹನ್ನೆರಡೆನೆಯ ದಿನ ಮಗುವನ್ನು ತೊ‌ಟ್ಟಿಲಿಗೆ ಹಾಕುವ ಶಾಸ್ತ್ರವಿರುತ್ತದೆ. ಅಂದು ಮಗುವಿನ ಸೋದರ ಮಾವ ತೊಟ್ಟಿಲ ಹಗ್ಗ ಕಟ್ಟಿಕೊಡುವುದು ವಿಶೇಷ. ಆ ಕೆಲಸವನ್ನು ನಿರ್ವಹಿಸಿದ್ದರ ಗೌರವಾರ್ಥ ಮಗುವಿನ ತಂದೆ ಅವನ ತಲೆಗೆ ಪೇಟ ಕಟ್ಟುವುದು ಸಂಪ್ರದಾಯ.

ಗೌಳಿಗರ ಮದುವೆ ಸಂಪ್ರದಾಯಗಳು ಬುಡಕಟ್ಟು ಸಂಸ್ಕೃತಿಗೆ ಸಹಜವಾದವೇ ಆಗಿದೆ. ಇವರಲ್ಲಿ ಶಾಸ್ತ್ರೋಕ್ತ ವಿವಾಹಪದ್ಧತಿಯೊಂದಿಗೆ ಕನ್ಯಾಪಹರಣ ಪದ್ಧತಿಯೂ ಪ್ರಚಲಿತವುಂಟು. ಹುಡುಗನು ತನಿಗಿಷ್ಟವಿರುವ ಹುಡುಗಿಯೊಡನೆ ದೂರದ ಕಾಡಿಗೆ ಓಡಿ ಹೋಗಿ ಕೆಲವು ದಿನಗಳವರೆಗೆ ತಂಗಿರುತ್ತಾನೆ. ಆರನೆಯ ದಿನ ಹಾಡಿಯ ಜನರು ವಾದ್ಯ ಸಮೇತವಾಗಿ ಕಾಡಿಗೆ ಹೋಗಿ ಇಬ್ಬರನ್ನೂ ಕರೆತರುತ್ತಾರೆ. ಯಜಮಾನನ ಸಮಕ್ಷಮದಲ್ಲಿ ಯಡಿಗ್ಯನು ಮದುವೆ ಕಾರ್ಯ ನಡೆಸಿಕೊಡುತ್ತಾನೆ. ಆ ಕಾರ್ಯದ ಅಂಗವಾಗಿ ಹುಡುಗನು ಹಾಡಿಯ ಜನರಿಗೆ ಔತಣ ನೀಡಬೇಕು.

ವಿಧವಾ ವಿವಾಹವನ್ನು ಇವರು ‘ಸೀರುಡಿಕೆ’ ಎಂದು ಕರೆಯುತ್ತಾರೆ. ಇವರಲ್ಲಿ ವಿಧವೆಯಾದವಳು ಸಮಾಜದ ಒಪ್ಪಿಗೆ ಪಡೆದು ಮರುಮದುವೆಯಾಗಬಹುದಾದರೂ ಆಕೆ ಅವಿವಾಹಿತರನನ್ನು ಮದುವೆಯಾಗುವಂತಿಲ್ಲ. ಅವಳು ತನ್ನ ಮೃತ ಗಂಡನ ಸಂತತಿಯವರನ್ನು ತನ್ನ ತಂದೆಯ ಅಡ್ಡ ಹೆಸರನ್ನು ಹೊಂದಿರುವವರನ್ನು ಮತ್ತು ತಂದೆ ತಾಯಿ ಕಡೆಯ ರಕ್ತ ಸಂಬಂಧಿಗಳನ್ನು ಸೀರುಡಿಕೆ ಮಾಡಿಕೊಳ್ಳುವಂತಿಲ್ಲ. ಸೀರುಡಿಕೆ ಮಾಡಿಕೊಳ್ಳುವ ಮೊದಲ ಮೃತಗಂಡನ ಕುಟುಂಬದವರ ಅನುಮತಿ ಪಡೆಯಬೇಕೆಂಬ ಕಟ್ಟಳೆಯಿದೆ. ಅವಳು ತಾನು ಸೀರುಡಿಕೆ ಮಾಡಿಕೊಳ್ಳುವ ಪುರುಷನಿಗೆ ಹೊಸ ಉಡುಗೆತೊಡುಗೆಗಳನ್ನು ನೀಡಬೇಕು. ಪುರುಷನು ಅವಳ ಕೊರಳೀಗೆ ತಾಳಿ ಕಟ್ಟುವ ಸಂಪ್ರದಾಯವಿದೆ. ಆ ಕಾರ್ಯಕ್ರಮದ ಅಂಗವಾಗಿ ಏರ್ಪಾಡಾದ ಭೋಜನದೊಂದಿಗೆ ಸೀರುಡಿಕೆ ಮುಗಿಯವುದು.

ಗೌಳಿಗರಲ್ಲಿ ಬಹುಪತ್ನಿತ್ವ ಹೆಚ್ಚು ಪ್ರಚಲಿತವಾಗಿದೆ. ಒಬ್ಬ ಪುರುಷ ಏಕಕಾಲದಲ್ಲಿ ಮೂವರಿಗಿಂತಲೂ ಹೆಚ್ಚು ಸ್ತ್ರೀಯರನ್ನು ಪತ್ನಿಯರನ್ನಾಗಿ ಹೊಂದಿರಬಹುದು. ಎಮ್ಮೆಗಳ ಒಡ್ಡಿಗಳನ್ನು ಸ್ವಚ್ಛಗೊಳಿಸುವುದು, ಕರುಗಳ ಹಿತರಕ್ಷಣೆ ಮಾಡುವುದು ಇದೇ ಮುಂತಾದ ಕೆಲಸಗಳೊಂದಿಗೆ ಅಡವಿಯ ಉತ್ಪನ್ನಗಳನ್ನು ಸಂಗ್ರಹಿಸಿಡುವ ಕೆಲಸ ಮಾಡುವುದು ಕಷ್ಟ ಸಾಧ್ಯವಾದ್ದರಿಂದ ಮೂವರು ಹೆಂಡತಿಯರನ್ನು ಹೊಂದಲು ಅವಕಾಶ ಮಾಡಿಕೊಂಡಿದ್ದಾರೆ.

ಗೌಳಿಗರ ಮರಣ ಸಂಸ್ಕಾರ ವಿಧಿಗಳು ವಿಶಿಷ್ಟವಾಗಿವೆ. ಸಾವನ್ನು ಇವರು ‘ಕ್ರಿಯಾ ಸಮಾಧಿ’ ಎಂದು ಗುರುತಿಸುತ್ತಾರೆ. ಇವರಲ್ಲಿ ಸತ್ತವರನ್ನು ಹೂಳುವ ಮತ್ತು ಸುಡುವ ಎರಡೂ ಪದ್ಧತಿಗಳಿವೆ. ಮುಟ್ಟಾದ ಸ್ತ್ರೀ ಅಕಾಲಮರಣಕ್ಕೆ ತುತ್ತಾದರೆ, ಗರ್ಭಿಣಿ ಸ್ತ್ರೀ ತೀರಿಕೊಂಡರೆ ಅಂಥವರನ್ನು ಮಣ್ಣು ಮಾಡುವುದು ಪದ್ಧತಿ. ತೊನ್ನು, ಕ್ಷಯ ಮುಂತಾದ ರೋಗಗಳಿಗೆ ತುತ್ತಾಗಿ ಸತ್ತವರನ್ನು ಸುಡುತ್ತಾರೆ. ಅವಿವಾಹಿತರಾಗಿ ಸತ್ತವರಿಗೆ ಉತ್ತರ ಕ್ರಿಯೆಗಳನ್ನು ಆಚರಿಸುವುದಿಲ್ಲ. ಉತ್ತರ ಕ್ರಿಯಾಚರಣೆಗಳಲ್ಲಿ ‘ಕಣ್ಣು ನೀರು ಒರಸುವ’ ಕ್ರಿಯೆ ಮುಖ್ಯವಾದುದು. ಮೃತನ ಕುಟುಂಬದವರಿಗೆ ಸಾಂತ್ವನ ಹೇಳುವ ಸಂದರ್ಭ ಅದು. ಬಂಧುಗಳು ತಮ್ಮ ತಮ್ಮ ಹಾಡಿಗಳಿಗೆ ಹಿಂತಿರುಗಿ ಹೋಗುವ ಮೊದಲು ಸಂತಾಪಸೂಚಕವಾಗಿ ತಲೆಬೋಳಿಸಿಕೊಂಡ ವ್ಯಕ್ತಿಗೆ ಮುಂಡಾಸು ಕಟ್ಟುವ ಸಂಪ್ರದಾಯವಿದೆ. ಅಲ್ಲಿಗೆ ಅವನಿಗೆ ಅಂಟಿದ್ದ ಸೂತಕ ಪರಿಹಾರವಾಯಿತು. ಎಂದು ಭಾವಿಸಲಾಗುವುದು.

ಗೌಳಿಗರಲ್ಲಿ ಗಂಡ ತೀರಿಕೊಂಡಾಗ ಹೆಣ್ಣು ಕುಂಕುಮ ಧರಿಸುವುದಾಗಲಿ, ಕಾಲುಸುತ್ತು, ಉಂಗುರ, ಕಿವಿಬುಗುಡಿ, ತಾಳಿ, ಹೂ ಮುಂತಾದವನ್ನು ಧಾರಣೆ ಮಾಡುವುದು ನಿಷಿದ್ಧ. ಆದರೆ ಓಲೆ, ಮೂಗುತಿ, ಬಳೆ, ಮಣಿಸರಗಳನ್ನು ಧರಿಸಬಹುದು.

ಕಚ್ಚೆ ಗೌಳಿಗಳು ಅಡವಿಯಲ್ಲಿ ವಾಸಿಸುವುದರಿಂದ ಕಟ್ಟಾ ದೈವಭಕ್ತರಾಗಿದ್ದಾರೆ. ಇವರು ಬಹುತೇಕ ಎಲ್ಲ ಹಿಂದೂ ದೈವಗಳಿಗೂ ನಡೆದುಕೊಳ್ಳುತ್ತಾರೆ. ಖಂಡೋಬಾ ಮತ್ತು ಬೀರೋದಾ ಇವರ ಮನೆದೇವರು. ಈ ದೇವರುಗಳಲ್ಲದೆ ಕೆಲವು ಅಡವಿ ದೈವಗಳನ್ನು ಆರಾಧಿಸುತ್ತಾರೆ. ಹಾಡಿಯ ಮಾರಮ್ಮನಿಗೂ ನಡೆದುಕೊಳ್ಳುತ್ತಾರೆ. ವಾಂಶಿಕ ಮೂಲದ ದೈವಗಳಲ್ಲದೆ, ಒಂದೊಂದು ಹಾಡಿಗೂ ಒಂದೊಂದು ಹಾಡಿ ದೈವ ಇದೆ. ಇದೇ ರೀತಿಯಾಗಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಕುಟುಂಬದ ದೈವ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಅವಕ್ಕೆ ಎಡೆಸಲ್ಲಿಸಿ ಪೂಜೆ ನಡೆಸುವುದು ಸಂಪ್ರದಾಯ.

ಕಚ್ಚೆಗೌಳಿಗರು ಹಿಂದೂ ಸಂಪ್ರದಾಯದ ಎಲ್ಲ ಹಬ್ಬಗಳನ್ನೂ ಆಚರಿಸುತ್ತಾರೆ. ಅವುಗಳ ಜೊತೆಗೆ ಅವರಿಗೆ ವಿಶಿಷ್ಟವಾದ ಹಬ್ಬಗಳು ಇವೆ. ದೀಪಾವಳಿ, ಕಾರ್ತಿಕ, ಯುಗಾದಿ, ಗೌರಿಹಬ್ಬ, ಶಿವರಾತ್ರಿ, ವರ್ಕೂತ, ಹಿರಿಯರಹಬ್ಬ ಮತ್ತು ದಸರಾ ಹಬ್ಬ ಇವರು ಆಚರಿಸುವ ಹಬ್ಬಗಳಲ್ಲಿ ಮುಖ್ಯವಾದವು.

ಗೌಳಿಗರು ತಮಗೆ ಕೆಲಸ ಕಾರ್ಯಗಳಿಂದ ಬಿಡುವು ದೊರೆತಾಗ ಆಚರಿಸುವ ಹಬ್ಬ ‘ವರ್ಕೂತ’, ಮನೆ ದೇವರಿಗೆ ವಿಶೇಷ ರೀತಿಯಲ್ಲಿ ಹರಕೆ ಸಲ್ಲಿಸುವ ಸಂದರ್ಭ ಅದು. ವರ್ಷಕ್ಕೊಮ್ಮೆ ಹಾಡಿಯ ಪ್ರತಿಯೊಂದು ಕುಟುಂಬವೂ ಒಂದೊಂದು ದಿನ ಆಚರಿಸುವಂಥದು. ಮನೆದೇವರ ಉತ್ಸವಮೂರ್ತಿ ಮತ್ತು ಅದರ ಸಿಪಾಯಿಗಳಿಗೆ ಎಳೆ ಬಾಳಕಂದಿನ ಮಂಟಪ ನಿರ್ಮಿಸಿ ಆ ಮಂಟಪವನ್ನು ಮಾವಿನ ಚಿಗುರು, ಬಣ್ಣದ ಕಾಗದಗಳಿಂದ ಅಲಂಕರಿಸಲಾಗುವುದು. ಯಡಿಗ್ಯನು ಪೂಜಾಕಾರ್ಯವನ್ನು ನಿರ್ವಹಿಸಿಕೊಡುತ್ತಾನೆ. ಗುಡಿಸಲ ಹೊರಭಾಗದಲ್ಲಿ ದೇವರಿಗೆ ಕುರಿಕೋಳಿಗಳ ಬಲಿಕೊಡಲಾಗುವುದು. ಕೊನೆಯಲ್ಲಿ ದೇವರಿಗೆ ಮಾಂಸದಡುಗೆಯನ್ನು ಎಡೆ ಸಲ್ಲಿಸಿ ಹಾಡಿಯವರೆಲ್ಲರಿಗೂ ಉಣಬರಿಸುವರು.

ಗೌಳಿಗರ ಹಿರಿಯರ ಹಬ್ಬವೂ ಗಮನಾರ್ಹವಾದುದು. ನವರಾತ್ರಿಗೆ ಹದಿನೈದು ದಿನ ಮುನ್ನ ಒಂದು ಅಮಾವಾಸ್ಯೆಯ ದಿನ ‘ಹಿರಿಯರ ಹಬ್ಬ’ವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ತುಂಬ ವಿಶಿಷ್ಟವಾದ ರೀತಿಯಲ್ಲಿ ಆಚರಿಸುತ್ತಾರೆ. ಅಡವಿಯಲ್ಲಿ ದೊರಕುವ ನಾನಾ ಜಾತಿಯ ತರಕಾರಿ ಸೊಪ್ಪುಗಳ ಪಲ್ಯವನ್ನು ಅಣಿಗೊಳಿಸುವುದು, ನೂರೆಂಟು ಬಗೆಯ ಕಾಡು ಹೂಗಳನ್ನು ದೇವರ ತಲೆಯ ಮೇಲೆ ಏರಿಸುವುದು ಈ ಹಬ್ಬದ ಮುಖ್ಯ ವಿಧಿಗಳು. ಹಿರಿಯರ ಹಬ್ಬಕ್ಕೆ ಆಗಮಿಸುವ ಬಂಧುಗಳ ಪೂಜೆ ಈ ಹಬ್ಬದ ಮತ್ತೊಂದು ವಿಶೇಷ. ಮನೆಯ ಯಜಮಾನ ಗುಡಿಸಲಿನ ಹೊಸ್ತಿಲಲ್ಲಿ ಕುಳಿತು ಬಂಧುಗಳ ಕಾಲು ಬೆರಳುಗಳನ್ನು ಅಥವಾ ಕೈಬೆರಳುಗಳನ್ನು ಹೆಂಗಸರು ಕೈ ಬೆರಳುಗಳನ್ನೂ ಚಾಚುವುದು ಪದ್ಧತಿ. ಬಂಧುಗಳ ಪೂಜೆ ಮುಗಿದ ಮೇಲೆ ಹಿರಿಯರಿಗೆ ಎಡೆ ಸಲ್ಲಿಸಿ ಮನೆದೇವರ ಪೂಜೆ ನೆರವೇರಿಸಲಾಗುವುದು. ಈ ಹಬ್ಬವನ್ನು ಹಾಡಿಯ ಎಲ್ಲ ಕುಟುಂಬಗಳೂ ಆಚರಿಸುವ ರಿವಾಜಿಲ್ಲ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಂತೂ ಇದರ ಆಚರಣೆಗೆ ಯತ್ನಿಸುವುದೇ ಇಲ್ಲ, ಅದಕ್ಕೆ ಒಂದು ಪ್ರಬಲ ಕಾರಣವೂ ಇದೆ. ಒಂದು ವರ್ಷ ಈ ಹಬ್ಬವನ್ನು ಆಚರಿಸಿದರೆ ಮುಂದೆ ಕನಿಷ್ಠ ಮೂರು ವರ್ಷಗಳವರೆಗಾದರೂ ಅದನ್ನು ಪಾಲಿಸಿಕೊಂಡು ಹೋಗಬೇಕು. ನಾಲ್ಕು ವರ್ಷಗಳವರೆಗೆ ಬಿಡದೆ ನಡೆಸಿಕೊಂಡು ಹೋದರೆ ಮುಂದೆ ಮತ್ತೆ ಹನ್ನೆರಡು ವರ್ಷ ತುಂಬುವವರೆಗೂ ತಪ್ಪದೆ ಆಚರಿಸಿಕೊಂಡು ಹೋಗಬೇಕೆಂಬ ಕಟ್ಟಳೆಯುಂಟು.

ಕಚ್ಚೆಗೌಳಿಗರಿಗೆ ಹೊಸ ಬಟ್ಟೆ ಧರಿಸಲು ಅವಕಾಶವಾಗುವ ಮತ್ತೊಂದು ಪ್ರಮುಖ ಹಬ್ಬವೆಂದರೆ ‘ದಸರಾ’. ವಿವಿಧ ಕಾರ್ಯ ಕಲಾಪಗಳೊಡನೆ ಹನ್ನೊಂದು ದಿನಗಳ ಕಾಲ ನಡೆಯುವ ಹಬ್ಬ ಇದು. ಇವರ ಪಾಲಿಗೆ ಆ ಹನ್ನೊಂದು ದಿನಗಳು ಪವಿತ್ರ ದಿನಗಳು. ಪ್ರತಿದಿನವೂ ತಪ್ಪದೆ ನದಿಯಲ್ಲಿ ಮುಳುಗೇಳಬೇಕು; ಮಡಿಬಟ್ಟೆ ಧರಿಸಬೇಕು; ಜರಿಪೇಟ ಸುತ್ತಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕುಡಿತ ಮಾಂಸಾಹಾರಗಳನ್ನು ತ್ಯಜಿಸಬೇಕು.

ದಸರಾ, ಹಿರಿಯರ ಹಬ್ಬ, ಶಿವರಾತ್ರಿ ಮುಂತಾದ ಹಬ್ಬ ಸಂದರ್ಭಗಳಲ್ಲಿ ಬುಡಕಟ್ಟಿನ ಪುರುಷರು ಮತ್ತು ಸ್ತ್ರೀಯರು ಬೇರೆ ಬೇರೆಯಾಗಿ ‘ಪುಗಡಿ ನೃತ್ಯ’ ಪ್ರದರ್ಶನ ನೀಡುವುದು ಪದ್ಧತಿ. ತಲಾ ಹತ್ತು ಮಂದಿ ಸ್ತ್ರೀ ಪುರುಷರು ಸಮವಸ್ತ್ರ ಧರಿಸಿ ಎರಡು ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಂಡು ಗೋಲಾಕಾರದಲ್ಲಿ ನಿಂತು ಡೊಳ್ಳಿನ ಸದ್ದು ತಾಳದ ಗತ್ತು ಕೊಳಲಿನ ನಾದಕ್ಕನುಗುಣವಾಗಿ ಚಪ್ಪಾಳೆ ತಟ್ಟುತ್ತಾ ಹೆಜ್ಜೆಯಿಕ್ಕುತ್ತಾ ವಿವಿಧ ಹಾವಭಾವಗಳೊಡನೆ ಅಭಿನಯಪೂರ್ವಕವಾಗಿ ನರ್ತಿಸುತ್ತಾರೆ. ಇದಕ್ಕೆ ‘ಪುಗಡಿ ಹಾಕುವುದು’ ಎನ್ನುತ್ತಾರೆ. ನರ್ತಕರು ಹಿರಿಯರನ್ನು ಸ್ಮರಿಸಿಕೊಳ್ಳುತ್ತ ದಣಿವಾಗುವವರೆಗೆ ಮನೆದೇವರ ಮುಂದೆ ಪ್ರದರ್ಶನ ನೀಡುತ್ತಾರೆ. ಸಮರಾತ್ರಿಯಲ್ಲಿ ಸಿಹಿ ಭೋಜನದೊಂದಿಗೆ ಮತ್ತೆ ನೃತ್ಯಪ್ರದರ್ಶನ ಮುಂದುವರೆಸುವುದು ಕ್ರಮ.

ಕಟ್ಟೆಗೌಳಿಗರಲ್ಲಿ ಅಪರಾಧ ಪ್ರವೃತ್ತಿ ವಿರಳವಾದರೂ ಸಣ್ಣಪುಟ್ಟ ಕಲಹಗಳು ಇದ್ದೇ ಇರುವುದು ಸ್ವಾಭಾವಿಕ. ದಸರಾ ಹಬ್ಬದ ಸಂದರ್ಭದಲ್ಲಿ ಬುಡಕಟ್ಟಿನ ಜನರು ತಮ್ಮ ನಡುವೆ ಇರುವ ಎಲ್ಲ ಬಗೆಯ ಮನಸ್ತಾಪಗಳನ್ನು ಮರೆತು ಕಾರ್ಯಪ್ರವೃತ್ತರಾಗಬೇಕೆಂಬುದು ಕಟ್ಟಳೆ. ತಪ್ಪಿತಸ್ಥರಿಗೆ ಕಟ್ಟೆಗೌಡ ಕಠಿಣದಂಡ ವಿಧಿಸುತ್ತಾನೆ. ಹಬ್ಬದ ಕೊನೆಯ ದಿನ ಬುಡಕಟ್ಟಿನ ಜನರ ಅಂತಃಕಲಹ, ಘರ್ಷಣೆ, ಸಣ್ಣಪುಟ್ಟ ಅಪರಾಧಗಳ ವಿಚಾರಣೆ ನಡೆಸುವುದು ವಾಡಿಕೆ. ಹಾಡಿಯ ಯಜಮಾನ ಮತ್ತು ಗುಂಪಿನ ಮುಖಂಡರು ಆ ವಿಚಾರಣಾ ಸಭೆಯಲ್ಲಿ ಭಾಗವಹಿಸುತ್ತಾರೆ. ಅವರ ಸಲಹೆಯಮೇರೆಗೆ ಕಟ್ಟೆಗೌಡ ತೀರ್ಪನ್ನು ನೀಡುತ್ತಾನೆ. ನ್ಯಾಯ ತೀರ್ಮಾನ ಸಂಬಂಧವಾಗಿ ಇವರಲ್ಲಿ ಪ್ರಚಲಿತವಿರುವ ‘ರಾಜೀ ಸಂಪ್ರದಾಯ’ ವಿಶಿಷ್ಟವಾದುದು. ಕಟ್ಟೆಗೌಡನ ಸಲಹೆಯಂತೆ ಅಪರಾಧಿಯು ತಪ್ಪೊಪ್ಪಿಕೊಂಡು ರಾಜೀನ್ಯಾಯಕ್ಕೆ ಸಿದ್ಧನಾಗಬೇಕು. ಆ ಅಪರಾಧಿ ಏನೇ ಅಪರಾಧ ಮಾಡಿರಲಿ ಕಟ್ಟೆಗೌಡನ ಸೂಚನೆಯಂತೆ ಫಿರ್ಯಾದಿಯು ಅವನಿಗೆ ರಾಜಿಸೂಚಕವಾಗಿ ಮುಂಡಾಸು ಕಟ್ಟಿದರೆ ಅಪರಾಧ ಖುಲಾಸೆಯಾದಂತೆ. ಹೀಗೆ ಮುಂಡಾಸು ಕಟ್ಟಿದಾಗ ಅಪರಾಧಿಯು ಫಿರ್ಯಾದಿಯನ್ನು ಎಲ್ಲೆ ಸಮಕ್ಷಮದಲ್ಲಿ ಪ್ರೀತಿಯಿಂದ ಆಲಿಂಗಿಸಿ ಕೊಳ್ಳಬೇಕು. ಆಮೇಲೆ ಫಿರ್ಯಾದು ಕೊಟ್ಟವನು ಕೂಡ ಆ ಅಪರಾಧಿಯನ್ನು ಅಷ್ಟೇ ಸ್ನೇಹದಿಂದ ತಬ್ಬಿಕೊಳ್ಳುವುದು ಸಂಪ್ರದಾಯ. ಅವರು ಮೊದಲಿಗೆ ಪರಸ್ಪರರ ಭುಜಕ್ಕೆ ಭುಜ ಒತ್ತಿಕೊಂಡು ವಂದಿಸಿಕೊಳ್ಳುವುದು ಆ ಸಂದರ್ಭದ ವಾಡಿಕೆ.

ಯಾವುದೇ ನ್ಯಾಯ ತೀರ್ಮಾನ ಮತ್ತು ರಾಜೀ ಸಂಪ್ರದಾಯಗಳನ್ನು ನಡೆಸುವುದಕ್ಕೆ ಮೊದಲು ಫಿರ್ಯಾದು ಸಲ್ಲಿಸುವವನು ಕಟ್ಟೆಗೌಡನಿಗೆ ‘ಜಾಮೀನುಹಣ’ ಎಂದು ಸ್ವಲ್ಪ ಹಣವನ್ನು ಪಾವತಿ ಮಾಡುವ ಸಂಪ್ರದಾಯವಿದೆ. ನ್ಯಾಯ ಇತ್ಯರ್ಥವಾದ ಮೇಲೆ ಕಟ್ಟೆಗೌಡ ಇಬ್ಬರಿಗೂ ಆ ಜಾಮೀನು ಹಣದಲ್ಲಿ ಒಂದೊಂದು ಪಾಲಿಯನ್ನು ಹಿಂದಿರುಗಿಸುವುದು ಪದ್ಧತಿ.

ಗೌಳಿಗರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಅಲೆಮಾರಿ ಬುಡಕಟ್ಟು ಜನ. ಇವರಲ್ಲಿ ಸಾಕ್ಷರತೆ ಇಲ್ಲದಿರುವುದೇ ಬಹುದೊಡ್ಡ ಕೊರತೆ. ಇತ್ತೀಚಿನ ದಿನಗಳಲ್ಲಿ ಇವರ ಸಾಂಸ್ಕೃತಿಕ ಜೀವನದಲ್ಲಿ ಅಲ್ಪ ಸ್ವಲ್ಪ ಮಾರ್ಪಾಡುಗಳಾಗಿದ್ದರೂ ಇವರ ಜೀವನಮಟ್ಟ ಸುಧಾರಿಸಿಲ್ಲದಿರುವುದು ಒಗಟಾಗಿಯೇ ಇದೆ. ಇವರು ಆರ್ಥಿಕವಾಗಿ ಕೊಂಚ ಸುಧಾರಿಸಿದ ಜನರಾಗಿದ್ದರೂ ಸಂಪಾದನೆಯ ಮುಕ್ಕಾಲು ಭಾಗವನ್ನು ಮದ್ಯಪಾನಕ್ಕೆ ಮೀಸಲಿಡುವುದರಿಂದ ಇವರ ಸ್ಥಿತಿಗತಿಗಳು ಸುಧಾರಣೆಗೊಳ್ಳುವುದು ದುಸ್ಸಾಧ್ಯವಾಗಿದೆ.

ಇಂದಿಗೂ ಕಚ್ಚೆಗೌಳಿಗರು ಕಾಡುಗಳ ನಡುವೆ ನದಿ ದಂಡೆಗಳ ಸಮೀಪದಲ್ಲಿ ವಾಸಿಸುತ್ತಿದ್ದಾರೆ. ಇವರು ಅವಲಂಬಿಸಿರುವ ವೃತ್ತಿಯ ಹಿನ್ನೆಲೆಯಲ್ಲಿ ಅದು ಅನಿವಾರ್ಯವೆನಿಸಿದೆ. ಕರ್ನಾಟಕಕ್ಕೆ ಬಂದಂದಿನಿಂದ ಇಲ್ಲಿಯವರೆಗಿನ ಇವರ ಸಾಂಸ್ಕೃತಿಕ ಇತಿಹಾಸವನ್ನು ಪರಿಶೀಲಿಸಿದರೆ ಇವರ ಜೀವನಕ್ರಮದಲ್ಲಿ, ಧರ್ಮದಲ್ಲಿ ಗುರುತಿಸಬಹುದಾದಂತಹ ಗಮನಾರ್ಹ ಬದಲಾವಣೆಗಳೇನೂ ಇಲ್ಲ. ಸರ್ಕಾರದ ಗುಡ್ಡಗಾಡು ಜನಾಭಿವೃದ್ಧಿಯ ಕಲ್ಯಾಣ ಯೋಜನೆಗಳಾವುವು ಇವರ ಜೀವನಮಟ್ಟವನ್ನು ಸುಧಾರಿಸಲು ಶಕ್ತವಾಗಿಲ್ಲ. ಪ್ರಾಥಮಿಕ ಹಂತದ ಶಿಕ್ಷಣವೇ ಇವರಿಗೆ ದೊರಕಿಲ್ಲವೆಂದರೆ ಇವರ ಸಾಕ್ಷರತೆಯ ಪ್ರಮಾಣದ ಅರಿವಾದೀತು. ಜೀವನಕ್ಕೆ ಶಿಕ್ಷಣವೇ ಬೇಕಿಲ್ಲ ಎಂದು ಭಾವಿಸಿರುವ ಜನರೂ ಇವರಲ್ಲಿ ಉಂಟು. ಇದು ಇವರ ಮೌಢ್ಯ, ಅಜ್ಞಾನವನ್ನು ಸೂಚಿಸುತ್ತದೆ.

– ಎ.ಎಚ್.