ಕರಪಾಲಮೇಳ ಜನಪದ ಕಲೆಗಳಲ್ಲಿ ಒಂದು ಕರಪಾಲಮೇಳ. ಸಂಗೀತ, ಸಾಹಿತ್ಯ ಮತ್ತು ಕುಣಿತದಿಂದ ಕೂಡಿದ ಸಮ್ಮಿಶ್ರ ಕಲೆ ಇದು. ಈ ಮೇಳದಲ್ಲಿ ಎಲ್ಲ ಪಾತ್ರಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವುದರ ಮೂಲಕ ಇದೊಂದು ಸಾಮೂಹಿಕ ಶ್ರಮದಿಂದ ಶೋಭಿಸುವ ಕಲೆ ಎನಿಸಿದೆ. ಜೊತೆಗೆ ಸಹ‌ಜವಾಗಿಯೇ ಏರ್ಪಡುವ ಒಂದು ಜನಪದ ನಾಟಕ ರೂಪ. ಹಾಸನ, ಅರಸೀಕೆರೆ ಮತ್ತು ತುಮಕೂರು ಜಿಲ್ಲೆಯ ತಿಪಟೂರು ಭಾಗಗಳಲ್ಲಿ ಕಂಡುಬರುವ ಈ ಕಲೆಯನ್ನು ತಿಪಟೂರಿನ ಕೊನೇಹಳ್ಳಿಯ ಕರಪಾಲಸಿದ್ಧಯ್ಯನ ತಂಡ, ಹಾಸನದ ಇಬ್ಬೀಡಿನ ತಂಡ ಪ್ರದರ್ಶನ ಮಾಡಿ ಜನಪ್ರಿಯಗೊಳಿಸಿವೆ.

20

ಮೊದಮೊದಲು ಇದನ್ನು ಜಂಗಮರು ಪ್ರದರ್ಶಿಸುತ್ತಿದ್ದರಾದರೂ ಕಾಲಕ್ರಮೇಣ ಅನ್ಯರು ಇದರ ಆಕರ್ಷಣೆಗೆ ಒಳಗಾಗಿ ಜನಪ್ರಿಯವಾಗ ತೊಡಗಿತು. ಕರಪಾಲ ಮೇಳ ಸಾಮಾನ್ಯವಾಗಿ ಐವರು ಕಲಾವಿದರನ್ನು ಒಳಗೊಂಡಿರುತ್ತದೆ. ಅವರಲ್ಲಿ ಒಬ್ಬ ಮುಖ್ಯಕಥೆಗಾರನಾಗಿದ್ದಾರೆ ಇನ್ನಿಬ್ಬರು ಸಹನೃತ್ಯದವರು, ಉಳಿದಿಬ್ಬರು ಹಿಮ್ಮೇಳದವರಾಗಿರುತ್ತಾರೆ. ತಂಡದಲ್ಲಿ ಎದ್ದು ಕಾಣಿಸುವವನೆಂದರೆ ನಿರೂಪಕನೇ. ಈ ಪಾತ್ರಧಾರಿಗಳ ವೇಷಭೂಷಣವಂತೂ ಆಕರ್ಷಕವಾದುದು. ಉಳಿದಿರಿಬ್ಬರಿಗಿಂತ ಭಿನ್ನವಾದ ವೇಷಭೂಷಣ ಮುಖ್ಯ ಕತೆಗಾರನು. ತಲೆಗೆ ಉದ್ದನೆಯ ಕಿರೀಟಾಕೃತಿಯ ಕುಲಾವಿ, ಅದರ ತುದಿಗೆ ಇಳಿಬಿಟ್ಟ ಮುತ್ತಿನ ತುರಾಯಿ, ಅದರ ಸುತ್ತಲೂ ಸುತ್ತಿದ ರುದ್ರಾಕ್ಷಿ ಮಣಿ ವಿಶೇಷವಾಗಿ ಕಂಗೊಳಿಸುತ್ತಿರುತ್ತದೆ. ಆತನ ಕಿವಿ, ಕೊರಳು ಮತ್ತು ಕೈಗಳಿಗೆಲ್ಲ ರುದ್ರಾಕ್ಷಿ ಮಣಿಗಳು ಅಲಂಕರಿಸುತ್ತವೆ. ಕಾಲಿಗೆ ಗೆಜ್ಜೆ ಕಟ್ಟಿ ಕಚ್ಚೆ ಪಂಚೆ ಉಟ್ಟು, ಅದರ ಮೇಲೆ ಕಾವಿ ನೀಲುವಂಗಿಯನ್ನು ಧರಿಸುವುದು ಸರ್ವೇಸಾಮಾನ್ಯ. ಸೊಂಟಕ್ಕೆ ನಟುಪಟ್ಟಿಕಟ್ಟಿ ಹಣೆಗೆ ವಿಭೂತಿ ಧರಿಸಿ ಕೈಯಲ್ಲಿ ತಾಳಹಿಡಿದು ನಿಂತನೆಂದರೆ ನೋಡುವವರಿಗೆ ಆನಂದವೋ ಆನಂದ. ಇಬ್ಬರದಂತೂ ಸಾಧಾರಣ ವೇಷಭೂಷಣ, ಅವರಲ್ಲಿ ಒಬ್ಬ ತಾಳವನ್ನು ಹಿಡಿದಿದ್ದರೆ ಮತ್ತೊಬ್ಬ ತಮಟೆಯನ್ನು ಹಿಡಿದಿರುತ್ತಾನೆ. ಉಳಿದಿಬ್ಬರನ್ನು ಮೃದಂಗ ಹಾರ್ಮೋನಿಯಂಅನ್ನು ಹಿಡಿದು ಅವರ ಪಕ್ಕದಲ್ಲಿ ನಿಂತಿರುತ್ತಾರೆ. ಹಿಮ್ಮೇಳನ ಕೂಡಿಸುವ ಕೆಲಸ ಇವರದಾಗಿರುತ್ತದೆ.

ಮುಖ್ಯಕಥೆಗಾರ ಸೃಜನಶೀಲನೂ ಪ್ರತಿಭಾನ್ವಿತವಾದಷ್ಟು ಕರಪಾಲ ಮೇಳ ರಂಜಿಸುತ್ತದೆ. ಮೂಲಕಥೆಗೆ ಸಮಕಾಲೀನ ಸಂಗತಿಗಳನ್ನು ಜೋಡಿಸುವಂಥ ಪ್ರತಿಭಾನ್ವಿತ ನಿರೂಪಕನ ಕೈಯಲ್ಲಿ ಕರಪಾಲಮೇಳ ಕ್ಷಣಕ್ಷಣಕ್ಕೂ ಹೊಸ ಹೊಸ ಸ್ವರೂಪ ಪಡೆಯುತ್ತಿರುತ್ತದೆ. ಮುಖ್ಯ ಕಥೆಗಾರನಷ್ಟೇ ಉಳಿದ ಕಲಾವಿದರು ಕರಪಾಲಮೇಳದಲ್ಲಿ ಬಳಸುವ ಕಥೆ ಸಂಗೀತ ಜ್ಞಾನ, ನೃತ್ಯವೈಖರಿ, ಹಾಡುಗಾರಿಕೆ – ಇವನ್ನೆಲ್ಲ ಬಲ್ಲವರಾಗಿರಬೇಕು. ಬಯಲಾಟದಲ್ಲಿ ಮತ್ತು ಭಾಗವತರು ಮುಂದುವರಿಸುವಂತೆ ಇಲ್ಲಿ ಕಥೆಯ ಮಧ್ಯೆ ಬರುವ ಹಾಡನ್ನು ನಿರೂಪಕ ಆರಂಭಿಸುತ್ತಾನೆ. ಅದನ್ನು ಸಹ ನೃತ್ಯಗಾರರು ಮುಂದುವರಿಸಿ ಮುಕ್ತಾಯಗೊಳಿಸುತ್ತಾರೆ.ಆದ್ದರಿಂದ ಅಂತಹವರಿಗೆ ಕುಣಿತದೊಂದಿಗೆ ಹಾಡನ್ನು ಹೇಳುವ ಕಲೆಯು ಕರಗತವಾಗಿರುವುದನ್ನು ಗಮನಿಸಬಹುದು. ಕರಪಾಲಮೇಳ ಅತ್ಯಂತ ಸರಳವಾದುದು. ಆದರೂ ಅದನ್ನು ನಿರ್ವಹಿಸಬೇಕಾದರೆ ಆ ಕಲಾವಿದರು ಜಾಣತನವನ್ನು ತೋರಲೇಬೇಕಾಗುತ್ತದೆ.

ನಿರೂಪಕ ಮಾತನ್ನು ನಿಲ್ಲಿಸಿ ಹಾಡಿನ ಮೊದಲ ಚರಣವನ್ನು ಹೇಳಿದಾಗ ಜೊತೆಯಲ್ಲಿನ ನೃತ್ಯಗಾರನು ಅದಕ್ಕೆ ತಕ್ಕಂತೆ ಹಿಂದಕ್ಕೂ ಮುಂದಕ್ಕೂ ಚಲಿಸುವ ರೀತಿಯಲ್ಲಿ ಕುಣಿಯ ತೊಡಗುತ್ತಾರೆ. ಸಹ ನೃತ್ಯಗಾರರು ಹಾಸ್ಯಮಾಡುವುದರಲ್ಲಿ ಅತ್ಯಂತ ನಿಪುಣರು. ಮಂಗಲ ಹಾಡುವಾಗಲೂ ಹಿಮ್ಮೇಲ ಮುಮ್ಮೇಳದವರೆಲ್ಲ ಒಟ್ಟಿಗೆ ಕೂಡಿ ಹಾಡುತ್ತಾರೆ. ಶಿವನ ಆಗಮನ ನಿರ್ಗಮನದ ಸಂದರ್ಭ ಬಂದಾಗಲೆಲ್ಲ ಮುಖ್ಯ ಕಥೆಗಾರ ‘ಜೈನಮ’ ‘ಪಾರ್ವತಿಪತೇ’ ಎನ್ನುತ್ತಾರೆ. ಆಗ ಹಿಮ್ಮೇಳದವರು ಪ್ರೇಕ್ಷಕರೊಂದಿಗೆ ಸೇರಿ ‘ಹರಹರ ಮಹದೇವ’ ಎನ್ನುತ್ತಾರೆ. ಕರಪಾಲ ಮೇಳದಲ್ಲಿ ಕುಣಿತ, ಸಂಗೀತ ಎಷ್ಟು ಮುಖ್ಯವೋ ಕಥೆ ಹೇಳುವ ಧಾಟಿಯೂ ಅಷ್ಟೇ ಮುಖ್ಯವಾಗುತ್ತದೆ. ನಿರೂಪಕ ತಾನು ನಿರೂಪಿಸುವ ಕಥೆಯಲ್ಲಿ ಪುರುಷ, ಸ್ತ್ರೀ ಅಥವಾ ಅನಾಥ ಪಾತ್ರಗಳು ಬಂದಾಗ, ಅವುಗಳಿಗೆ ತಕ್ಕಂತೆ ಒನಪು, ವೈಯ್ಯಾರ, ಗಂಭೀರ ಗತ್ತುಗಾರಿಕೆಯನ್ನು ವ್ಯಕ್ತಪಡಿಸುವುದರ ಮೂಲಕ ತನ್ನ ನಟನಾ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. ಆ ಮೂಲಕ ಮೇಳದ ವೈಶಿಷ್ಟ್ಯವನ್ನು ಹೆಚ್ಚಿಸುತ್ತಾನೆ. ಸಂದರ್ಭಾನುಸಾರ ಯಾವ ರಸವನ್ನಾಗಲಿ ಸೂಸುವ ಸಮರ್ಥಶಾಲಿಯಾಗಿರುತ್ತಾನೆ.

ಕರಪಾಲಮೇಳ ನಿರೂಪಣಾ ಪ್ರಧಾನ ಕಲೆ. ಯಾವುದೋ ದೇಶದ ರಾಜ್ಯ,ಯಾವುದೋ, ದೇಶದ ರಾಣಿ, ಅವರಿಗೆ ಬರಬಾರದ ಕಷ್ಟಗಳು. ಅನುಭವಿಸುವ ಬವಣೆ ಕೊನೆಗೆ ಶಿವ ಪ್ರತ್ಯಕ್ಷ – ಹೀಗೆ ಕಥೆಯ ಘಟನಾವಳಿಗಳು ಮುಂದುವರಿಯುತ್ತವೆ. ಕರಪಾಲ ಮೇಳದ ಕಥೆಗಳಲ್ಲಿ ಬರುವ ಕೌಟುಸಿದ್ದಮಾ, ಬಾಲನಾಗಮ್ಮ, ಕಾಳಿಂಗ ಕುಮಾರ ಮುಂತಾದವರನ್ನ ಕುರಿತ ಕತೆಗಳೆಲ್ಲ ಪ್ರಚಲಿತವಾಗಿರುವಂಥವು. ದೇವತಾ ಪ್ರಾರ್ಥನೆಯೊಂದಿಗೆ ಕತೆ ಪ್ರಾರಂಭವಾಗಿ ಮಂಗಳದಲ್ಲಿ ಮುಕ್ತಾಯ ಹೊಂದುತ್ತದೆ. ‘ನಾವು ಬಲ್ಲವರಲ್ಲಿ ನಾವು ತಿಳಿದವರಲ್ಲ / ಯಾವ ತಪ್ಪಿದ್ದರೂ ತಿದ್ದಿಕೊಡಬೇಕು’ – ಹೀಗೆ ಹೇಳಿ ಮುಖ್ಯಕಥೆಗೆ ಧಾವಿಸುತ್ತಾರೆ. ಸಂದರ್ಭವರಿತು ನಿರೂಪಕ ಉಪಕತೆಗಳನ್ನ ಹೇಳಿಕೊಡುತ್ತಾನೆ. ಇದರಲ್ಲಿ ಬಯಲಾಟದ ಧಾಟಿ ಬರುವಂತೆ ಹರಿಕತೆಯ ಮೋಹಕತೆಯೂ ಜನಪದ ಸಂಗೀತದ ಸ್ವಾರಸ್ಯವೂ ಇರುವುದರಿಂದ ಕರಪಾಲಮೇಳವನ್ನು ರಂಗರೂಪದ ಕಲೆ ಎಂದು ಕರೆಯಲು ಸಾಧ್ಯವಾಯಿತು.

– ಜಿ.ಆರ್.ಟಿ.

ಕರಿಭಂಟನ ಕಾಳಗ ಕರಿಭಂಟನ ಕಥೆ ದಕ್ಷಿಣ ಕರ್ನಾಟಕದಲ್ಲಿ ಪ್ರಸಿದ್ಧವಾದುದು. ಮೌಖಿಕ ಸಂರದಾಯದಲ್ಲಿದ್ದ ಕರಿಭಂಟನ ಕಥೆ ಗೀತೆಯಾಗಿ ಬಯಲಾಟವಾಗಿ ನಾಟಕವಾಗಿ ಯಕ್ಷಗಾನವಾಗಿ ಪ್ರಚಲಿತದಲ್ಲಿದೆ. ಕರಿಭಂಟನಿಗೆ ಸಂಬಂಧಿಸಿದ ಐತಿಹ್ಯಗಳು ದೊರೆಯುವ ಎರಡು ಪ್ರಮುಖ ಸ್ಥಳಗಳೆಂದರೆ ಚಿತ್ರದುರ್ಗ ಸಮೀಪದ ಹಾಯಿಕಲ್ಲು ಮತ್ತು ಶ್ರೀರಂಗಪಟ್ಟಣದ ಹತ್ತಿರದ ತೊಣ್ಣೂರು. ಈ ಸಂಬಂಧದ ಕಥೇ ತಮ್ಮ ಊರಿನಲ್ಲಿ ನಡೆಯಿತೆಂದು ಹಾಯಿಕಲ್ಲು ಸುತ್ತಿನ ಜನರು ಈಗಲೂ ಹೇಳುವರಲ್ಲದೆ ಅನೇಕ ಕುರುಹುಗಳನ್ನು ತೋರಿಸುವರು. ಹಾಗಾಯೆ ತೊಣ್ಣೂರು ಮಲ್ಲಿಗನೂರು ಮೂಗೂರು ಸಮೀಪದ ಜನಪದರು ಆ ಘಟನೆಗಳು ತಮ್ಮ ಊರಿನಲ್ಲಿಯೇ ಸಂಭವಿಸಿದುವೆಂದು ಪುರಾವೆಗಳು ಸಹಿತ ನಿರೂಪಿಸುವರು. ಇದೇ ರೀತಿಯ ಸ್ಥಳೀಯ ಅಂಶಗಳನ್ನು ಒಳಗೊಂಡ ಇನ್ನಷ್ಟು ಕಥೆ ಕರ್ನಾಟಕದ ಇತರ ಭಾಗಗಳಲ್ಲಿಯೂ ದೊರಕಬಹುದು.

ಕರಿಭಂಟನ ಕಥೆ ಕರಿರಾಯ ಚರಿತ್ರೆ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಮೌಖಿಕ ಸಂಪ್ರದಯಾದಲ್ಲಿದ್ದ ಈ ಕಥೆಯನ್ನು ಆಧರಿಸಿ ಕೆಂಪಣ್ಣಗೌಡ ಎಂಬ ಕವಿ ಯಕ್ಷಗಾನ ಕಾವ್ಯ ರಚಿಸಿದ್ದಾನೆ. ಅನಂತರ ಸು.೧೮೦೦ ರಿಂದ ಈಚೆಎ ಈ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ಇನ್ನೂ ಕೆಲವು ಕೃತಿಗಳು ನಿರ್ಮಿತವಾಗಿವೆ. ಎಲ್ಲ ಕೃತಿಗಳೂ ಕರಿಭಂಟನ ಶೌರ್ಯ ಸಾಹಸ ಸೌಂದರ್ಯವನ್ನು ಎತ್ತಿಹಿಡಿಯುತ್ತವೆ. ಆದರೆ ಕಥೆಯ ಆಶಯಕ್ಕೆ ಬಾಧಕವಾಗುವಂತಹ ಅಲ್ಪಸ್ವಲ್ಪ ವ್ಯತ್ಯಾಸಗಳೂ ಅಲ್ಲಲ್ಲಿ ಗೋಚರಿಸುತ್ತವೆ.

ಕರಿಭಂಟನ ಕಥೆ ಸ್ಥೂಲವಾಗಿ ಹೀಗಿದೆ: ಈತನ ಮಾವ ಹೆಣ್ಣು ಕೊಡುವುದಾಗಿ ಆಹ್ವಾನಿಸುತ್ತಾನೆ. ಅದಕ್ಕಾಗಿ ಈತ ದುರ್ಗಮ ಪ್ರದೇಶದಲ್ಲಿದ್ದ ಮಾವನ ಊರಿಗೆ ಪ್ರಯಾಣ ಬೆಳೆಸುತ್ತಾನೆ. ಬಹಳ ದೂರ ಬಂದ ಮೇಲೆ ಆಯಾಸ ಪರಿಹರಿಸಿಕೊಳ್ಳಲು ಒಂದು ಕೆರೆಯ ಏರಿ ಮೇಲೆ ಕುಳಿತುಕೊಳ್ಳುತ್ತಾಣೆ. ಈತನ ಸೌಂದರ್ಯವನ್ನು ಕಂಡು ಪುಂಡರೀಕಾಕ್ಷಿಯ ಗೌಡಿಯರು ಮೂರ್ಛಿತರಾಗುತ್ತಾರೆ. ಪುಂಡರೀಕಾಕ್ಷಿ ತೊಂಡನೂರು ರಾಕ್ಷಸಿಯ ಮಗಳು. ಈಕೆ ಚೇತರಿಸಿಕೊಂಡು ಆತನನ್ನು ಒಲಿಸಿಕೊಂಡು ಮನೆಗೆ ಕರೆದೊಯ್ಯುತ್ತಾಳೆ. ಆದರೆ ತೊಂಡನೂರು ರಾಕ್ಷಸಿಗೆ ಮಗಳನ್ನು ತನ್ನ ತಮ್ಮ ಬೊಮ್ಮಣ್ಣನಿಗೆ ಕೊಡಬೇಕೆಂಬ ಇರಾದೆ. ಹಾಗಾಗಿ ಮಗಳು ಪುಂಡರೀಕಾಕ್ಷಿಗೆ ತಿಳಿಯದಂತೆ ಕರಿಭಂಟನನ್ನು ಕೊಲ್ಲಿಸಲು ಪ್ರಯತ್ನಿಸುವಳು. ಇದನ್ನು ತಿಳಿದ ಮಗಳು ತಂತ್ರದಿಂದ ಕರಿಭಂಟನನ್ನು ಪಾರು ಮಾಡಿಸುತ್ತಾಳೆ. ರಾಕ್ಷಸಿ ಕರಿಭಂಟನೆಂದು ಭಾವಿಸಿ ತಮ್ಮನನ್ನೇ ಕೊಲ್ಲುತ್ತಾಳೆ. ಇದು ತಿಳಿದಾಗ ಕರಿಭಂಟನನ್ನು ಬೆನ್ನಟ್ಟಿ ಹೋಗುವಳು. ಆತ ತನ್ನ ಕತ್ತಿಯನ್ನು ಬಾವಿಯ ಮೇಲಿಟ್ಟು ನೀಟು ಕುಡಿಯಲು ಇಳಿದಾಗ ರಾಕ್ಷಸಿ ಬರುವುದನ್ನು ಕಂಡು ಆ ಕತ್ತಿಯನ್ನು ಬಿಟ್ಟು ಓಡಿ ಹೋಗುವನು. ರಾಕ್ಷಸಿ ಆ ಕತ್ತಿಯನ್ನು ತೆಗೆದುಕೊಂಡು ಅದನ್ನು ಮಗುವನ್ನಾಗಿ ಮಾಡಿ ತಾನು ಬಾಣಂತಿಯ ವೇಷವನ್ನು ಧರಿಸಿ ಕರಿಭಂಟನನ್ನು ಹಿಂಬಾಲಿಸುತ್ತ ಹೋಗುವಳು. ಎಳೂರ ಗೌಡರಿಗೆ ತನ್ನ ಗಂಡ ತನ್ನನ್ನು ತೊರೆದು ಹೋಗುತ್ತಿದ್ದಾನೆಂದು ದೂರು ನೀಡಿ ನ್ಯಾಯ ಕೇಳುವಳು. ಕರಿಭಂಟ ಈಕೆ ರಕ್ಕಸಿಯೆಂದು ಗೌಡರಿಗೆ ಹೇಳಿದರೂ ಅವರು ನಂಬದೆ ಆತನನ್ನು ಬಾಣಂತಿ ವೇಸದ ರಕ್ಕಸಿಯೊಂದಿಗೆ ಊಡ ಚಾವಡಿಯಲ್ಲಿ ಆ ರಾತ್ರಿ ಕೂಡಿಹಾಕುವರು. ಮಧ್ಯರಾತ್ರಿಯಲ್ಲಿ ರಾಕ್ಷಸಿ ಕರಿಭಂಟನನ್ನು ಕೊಂದು ಓಡಿಹೋಗುವಳು. ಬೆಳಗಾದ ಬಳಿಕ ನಿಜಸ್ಥಿತಿ ಅರಿತ ಗೌಡರು ಹಾಗೂ ಪುಂಡರೀಕಾಕ್ಷಿ ಮನನೊಂದು ಕರಿಭಂಟನಿಗಾಗಿ ಪ್ರಾಣಕಳೆದುಕೊಳ್ಳಲು ಸಿದ್ಧರಾದಾಗ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಸತ್ತವನನ್ನು ಬದುಕಿಸುವರು; ಕಥೆ ಸುಖಾಂತವಾಗುವುದು. ಕರಿಭಂಟ ಮಾವನ ಮಗಳನ್ನೂ ಮದುವೆಯಾಗುವನು.

ಹೆಳವರು ನಿರೂಪಿಸುವ ಕರಿಭಂಟನ ಕಥೆಯಲ್ಲಿ ಈತ ಮಾರಭೂಪಾಲನ ಮಗ. ಹುಲಿಯನ್ನು ಕೊಲ್ಲಲು ಹೋಗಿ ಮಾರಭೂಪಾಲ ಹತನಾಗುತ್ತಾನೆ. ಮುಂದೆ ಈತನ ಮಗನಾದ ಕರಿಭಂಟನೇ ಹುಲಿಯನ್ನು ಕೊಲ್ಲುತ್ತಾನೆ. ಕರಿಭಂಟ ರಾಜಕೂಮಾರಿ ಲೀಲಾವತಿಯನ್ನು ವಿವಾಹವಾಗಿ ಹಿಂದಿರುಗುತ್ತಾನೆ. ಕೆಲವು ಪಾಠಗಳಲ್ಲಿ ಕರಿಭಂಟ ಹುಲಿಯನ್ನು ಕೊಲ್ಲಲು ಹೋಗುವಾಗ ಮಾರ್ಗ ಮಧ್ಯದಲ್ಲಿ ಪುಂಡರೀಕಾಕ್ಷಿಯನ್ನು ಕಾಣುತ್ತಾನೆ. ಮುಂದಿನ ಘಟನೆಗಳು ಯಥಾಪ್ರಕಾರ ಜರುಗುತ್ತವೆ. ಯಕ್ಷಗಾನ ಕಾವ್ಯಗಳಲ್ಲಿ ಕರಿಭಂಟ ವಿವಾಹವಾಗಲು ಹಳೆಯಬೀಡಿಗೆ ಪ್ರಯಾಣ ಬೆಳೆಸುವ ಅಂಶವಿದೆ. ಕೆಲವು ಕಾವ್ಯಗಳಲ್ಲಿ ಹಳೆಯಬೀಡಿನ ರಾಜಕುಮಾರಿ ಭುವನಮೋಹಿನಿಯನ್ನು ವಿವಾಹವಾಗುವ ವಿಚಾರವಿದ್ದರೆ ಭಾಳಾಕ್ಷನ ಯಕ್ಷಗಾನದಲ್ಲಿ ವೀರಬಲ್ಲಾಳನ ಮಗಳನ್ನೇ ಕರಿಭಂಟ ಮದುವೆಯಾದಂತೆ ಸ್ಪಷ್ಟಪಡಿಸಲಾಗಿದೆ. ಈ ಒಂದು ಅಂಶದಿಂದಾಗಿ ಕರಿಭಂಟನ ಕಥೆ ಹೊಯ್ಸಳರ ಕಾಲದಲ್ಲಿ ಜರುಗಿದ ಸತ್ಯ ಘಟೆನೆಯೆಂದು ಕೆಲವು ವಿದ್ವಾಂಸರು ಊಹಿಸುವುದಿದೆ. ಸಾಹಸ, ಪ್ರಣಯ, ಸತ್ಯ ಮೊದಲಾದ ಅಂಶಗಳನ್ನು ಒಳಗೊಂಡ ಕರಿಭಂಟನ ಕಾಳಗದ ಕಥೆ ಆಧುನಿಕ ನಾಟಕಕಾರರಿಗೂ ಸ್ಫೂರ್ತಿ ನೀಡಿದೆ. ಕರಿಭಂಟ ಎಂದು ಒಂದು ಜಾತಿಯ ರಾಗಿಗೂ ಹೆಸರಿತ್ತೆಂದು ತಿಳಿದುಬರುತ್ತದೆ.

– ವೈ.ಸಿ.ಬಿ.

ಕರುಪಟ್ಟಿ ತಮಿಳಿನ ‘ಕರುಪಟ್ಟಿ’ ಎಂದರೆ ‘ಕಪ್ಪಾದಗಟ್ಟಿ’ ಎಂದರ್ಥ. ಕರುಪಟ್ಟಿ ಎಂಬ ಕಪ್ಪುಗಟ್ಟಿ (ಪನೆಬೆಲ್ಲ) ಸಿಹಿ ತಿಂಡಿ – ತಿನಿಸುಗಳನ್ನು ತಯಾರಿಸುವಾಗ ಸಿಹಿಯನ್ನು ಹೆಚ್ಚಿಸಲು ಬಲಸುವ ಪದಾರ್ಥ. ಇದನ್ನು ಕಾಫಿ ತಯಾರಿಸಲು ಉಪಯೋಗಿಸಲಾಗುತ್ತದೆ. ಸಿಹಿಯಿಂದ ಕೂಡಿದ ಆಹಾರ ಪದಾರ್ಥಗಳ ತಯಾರಿಕೆಗೆ ಇದು ಮುಖ್ಯ ಕಚ್ಚಾವಸ್ತು ಆಗಿದೆ. ಪನೆಬೆಲ್ಲ ಪನೆವಾರದ ಒಂದು ಮುಖ್ಯ ಉತ್ಪನ್ನ. ಇದನ್ನು ಪನೆಮರದಿಂದ ಇಳಿಸುವ ನೀರಾದಿಂದ ತಯಾರಿಸಲಾಗುತ್ತದೆ. ‘ನೀರಾ ಕಾಯಿಸುವುದು’ ಎಂಬುದು ಪನೆಬೆಲ್ಲ ತಯಾರಿಸುವುದನ್ನು ಸೂಚಿಸುತ್ತದೆ.

ಪನೆಮರದಿಂದ ಸಂಗ್ರಹಿಸಿದ ನೀರಾವನ್ನು ಅದರಲ್ಲಿರುವ ಕಸಕಡ್ಡಿ, ಇರುವೆ ಮುಂತಾದ ಅನ್ಯವಸ್ತುಗಳನ್ನು ಬೇರ್ಪಡಿಸುವ ನಿಟ್ಟಿನಿಂದ ಪ್ಲಾಸ್ಟಿಕ್ ಜಾಲರಿಯಿಂದ ಸೋಸಲಾಗುತ್ತದೆ. ಸೋಸಿದ ನೀರಾವನ್ನು ಹಂಡೆಗೆ ಸುರಿಯಲಾಗುತ್ತದೆ. ಹಂಡೆ ಎಂಬುದು ಹದಿನೈದು ಲೀಟರ್ ಸಾಮರ್ಥ್ಯದ, ಅಳತೆಯಲ್ಲಿ ಎತ್ತರ ಕಡಿಮೆ ಇದ್ದು ಅಗಲ ಜಾಸ್ತಿ ಇರುವ ಕಲಾಯಿ ಮಾಡಿಸಿದ ವೃತ್ತಾಕಾರದ ಪಾತ್ರೆ ಇದರಲ್ಲಿ ನೀರಾವನ್ನು ಬೆಳಗ್ಗೆ ಐದು ಗಂಟೆ ವೇಳೆಗೆ ಅಗವಾದ ಒಲೆಯ ಮೇಲಿಟ್ಟು ಬೆಂಕಿ ಹಾಕುತ್ತಾರೆ. ಪನೆಮರದ ಉಪವಸ್ತುಗಳಾದ ಗರಿ, ಮಟ್ಟೆ, ಮತ್ತು ಜಾಲಿಮರದ ಮುಳ್ಳು ಮುಂತಾದವುಗಳನ್ನು ಸೌದೆಯಾಗಿ ಬಳಸಲಾಗುತ್ತದೆ. ಹೀಗೆ ಸುಮಾರು ಐದು ಗಂಟೆಗಳ ಕಾಲ ನೀರಾವನ್ನು ಕಾಯಿಸಲಾಗುತ್ತದೆ. ಕಾಯಿಸುವಾಗ ನೀರಾವನ್ನು ಪನೆಮರದ ಮಟ್ಟೆಯಿಂದ ಮಾಡಿದ ಸಾಧನದಿಂದ ಸತತವಾಗಿ ತಿರುವುತ್ತಿರಬೇಕು. ನೀರಾದಲ್ಲಿ ನೀರಿನ ಅಂಶ ಕಡಿಮೆಯಾಗಿ ಪಾಕದ ಹಂತವನ್ನು ತಲುಪಿದಾಗ ನೀರಿನ ಅಂಶ ಕಡಿಮೆಯಾಗಿ ಪಾಕದ ಹಂತವನ್ನು ತಲುಪಿದಾಗ ಕುದಿದು ಉಕ್ಕು ಬರುತ್ತದೆ. ಆಗ ಹರಳು ಬೀಜ ಅಥವಾ ಕೊಬ್ಬರಿ ಎಣ್ಣೆಯನ್ನು ಪಾಕಕ್ಕೆ ಸೇರಿಸಲಾಗುತ್ತದೆ. ಇದು ಪಾಕ ಉಕ್ಕುವ ವೇಗವನ್ನು ಕಡಿಮೆ ಮಾಡುತ್ತದೆ. ನಿರ್ದಿಷ್ಟ ಸಮಯದ ಅನಂತರ ಒಂದು ಚಿಕ್ಕ ಪನೆಗರಿಯ ಸಹಾಯದಿಂದ ಪಾಕ ಯಾವ ಹಂತದಲ್ಲಿದೆ ಎಂದು ತಿಳಿಯಲಾಗುತ್ತದೆ. ಪಾಕ ಕಠಿಣವಾಗಿದ್ದರೆ ಅದು ಬೆಲ್ಲ ಮಾಡುವ ಹಂತವನ್ನು ತಲುಪಿದೆ ಎಂದರ್ಥ. ಅದು ಮೃದುವಾಗಿದ್ದರೆ ಮತ್ತೆ ಕಾಯಿಸಲಾಗುತ್ತದೆ.

ಪಾಕ ಹದಕ್ಕೆ ಬಂದ ಮೇಲೆ ಅದನ್ನು ಅಚ್ಚುಗಳಿಗೆ ಸುರಿದು ಬೆಲ್ಲ ಮಾಡಲಾಗುತ್ತದೆ. ರಂಧ್ರವಿರುವ ತೆಂಗಿನ ಕರಟವನ್ನು ಅಚ್ಚಾಗಿ ಬಳಸಲಾಗುತ್ತದೆ. ಪಾಕವನ್ನು ಕರಟಕ್ಕೆ ಸುರಿಯುವ ಮುನ್ನ ಕರಟಗಳನ್ನು ನೀರಿನಲ್ಲಿ ನೆನೆ ಹಾಕಲಾಗುತ್ತದೆ. ಇವುಗಳನ್ನು ಮರಳಿನ ಮೇಲೆ ಬಟ್ಟೆ ಹಾಸಿ ಅದರ ಮೇಲೆ ಇಡಲಾಗುತ್ತದೆ. ಈ ಕರಟಗಳಿಗೆ ಪುಟ್ಟ ಸೌಟಿನ ನೆರವಿನಿಂದ ಪಾಕವನ್ನು ತುಂಬಿಸಲಾಗುತ್ತದೆ. ಅದೇ ವೇಳೆ ಹಂಡೆಯಲ್ಲಿರುವ ಪಾಕ ಗಟ್ಟಿಯಾಗಿ ಘನರೂಪಕ್ಕೆ ತಿರುಗದಂತೆ ಮಟ್ಟೆಯಿಂದ ತಿರುವಲಾಗುತ್ತದೆ. ಹಂಡೆಯ ಬದಿಗಳಲ್ಲಿ ಗಟ್ಟಿಯಾಗುತ್ತಿರುವ ಪಾಕವನ್ನು ಕೆರೆದು ದ್ರವಸ್ಥಿತಿಯಲ್ಲಿ ಇರುವ ಪಾಕದೊಂದಿಗೆ ಸೇರಿಸಿ ತಿರುವಲಾಗುವುದು. ಕರಟದಲ್ಲಿರುವ ಪಾಕದ ನೀರಿನಂಶವನ್ನೇ ರಂಧ್ರದ ಮೂಲಕ ಮರಳು ಹೀರಿಕೊಳ್ಳುತ್ತದೆ. ಒಂದು ಗಂಟೆ ಸಮಯ ಕಳೆದ ಮೇಲೆ ಕರಟವನ್ನು ಕು‌ಟ್ಟಿದರೆ ಬೆಲ್ಲ ಕರಟದ ಮೇಲೆ ಅಂಟದ ಬೇರೆಯಾಗಿ ಬೀಳುತ್ತದೆ. ಮನೆಯೊಳಗೆ ನೆಲದ ಮೇಲೆ ಚಾಪೆ ಹಾಸಿ ಸಂರಕ್ಷಿಸಲಾಗುತ್ತದೆ. ಅನಂತರ ಅವುಗಳನ್ನು ಬಳಕೆಗೆ ಅಥವಾ ಮಾರಾಟಕ್ಕೆ ಕಳುಹಿಸಲಾಗುತ್ತದೆ.

ನೀರಾ ಪಾಕವನ್ನು ಕರಟದಲ್ಲಿ ಹುಯ್ಯುವ ಬದಲು ಹೊಸ ಮಣ್ಣಿನ ಮಡಕೆಯಲ್ಲಿ ಹಾಕಿ ಅದನ್ನು ಹಾಗೆಯೇ ಇಟ್ಟರೆ ಅದು ಮಡಕೆ ಪನೆಬೆಲ್ಲ ಆಗುತ್ತದೆ. ಮಡಕೆಯಲ್ಲಿ ಪಾಕವನ್ನು ಹಾಕುವಾಗ ಪನೆಮರದ ಗರಿಯನ್ನು ಒಳಗೆ ಜೋಡಿಸಿ ಪಾಕವನ್ನು ಹುಯ್ದು ನಲ್ವತ್ತು ದಿನಗಳು ಕಳೆದ ಅನಂತರ ನೋಡಿದರೆ ಮಡಕೆಯ ಮೇಲ್ಭಾಗದಲ್ಲಿ ‘ಪನೆಕಲ್ಲು ಸಕ್ಕರೆ’ ರೂಪುಗೊಂಡಿರುತ್ತದೆ. ಅದನ್ನು ನೀರಿನಲ್ಲಿ ಹೆಚ್ಚಾಗಿ ಜಾಲಿಸಿ ಒಣಗಿಸಿ ಇಟ್ಟುಕೊಳ್ಳಲಾಗುತ್ತದೆ. ಪಾಕವನ್ನು ಕರಟದಲ್ಲಿ ಹುಯ್ಯುವ ಬದಲು ಮರಳನ್ನು ಹರಡಿ ಅದರ ಮೇಲೆ ಬಟ್ಟೆ ಹಾಸಿ, ಪುಟ್ಟಪುಟ್ಟ ಗುಳಿಗಳನ್ನು ಮಾಡಿ ಅದರಲ್ಲಿ ಪಾಕವನ್ನು ಹುಯ್ದು ತೆಗೆಯುವುದನ್ನು ‘ಸಿಲ್ಲು ಕರುಪಟ್ಟಿ’ ಎಂದು ಕರೆಯಲಾಗುತ್ತದೆ.

ಪನೆಬೆಲ್ಲ ವೃತ್ತಿಯಲ್ಲಿ ಹೆಂಗಸರೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಈ ಕೆಲಸಕ್ಕೆ ಮೂರು ಜನ ಬೇಕು. ನೀರಾವನ್ನು ಕಾಯಿಸುವಾಗ ಭದ್ರಕಾಳಿಗೆ ನಮಿಸಿ ಕೆಲಸವನ್ನು ಪ್ರಾರಂಭಿಸುತ್ತಾರೆ. ಪನೆಬೆಲ್ಲ ಔಷಧೀಯ ಗುಣಗಳನ್ನು ಹೊಂದಿರುವುದು ಗಮನಾರ್ಹ. ನೀರಾ ಕಾಯಿಸುವ ವೃತ್ತಿಯಲ್ಲಿ ನಾಡಾರ್ ಜಾತಿಯ ಜನರೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ನಾಡಾರ್ ಜಾತಿಯ ಮೇಲೆ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದರಿಂದ ಪರಿಣಾಮವಾಗಿ ಇಂದಿಗೂ ಬಹುಜನ ದೇವಸ್ಥಾನದ ಆಹಾರ ಪದಾರ್ಥಗಳಲ್ಲಿ ಪನೆಬೆಲ್ಲಕ್ಕೆ ಸ್ಥಾನ ದೊರೆತಿಲ್ಲ. ಆದರೆ ನಾಡಾರ್ ಜನರ ಮದುವೆ, ಶೋಭನಗಳಂತಹ ಆಚರಣೆಗಳಲ್ಲಿ ಪನೆಬೆಲ್ಲ ಪ್ರಮುಖ ಸ್ಥಾನ ಪಡೆಯುತ್ತದೆ.

– ಎನ್.ವಿ.ಕೆ. ಅನುವಾದ ಐ.ಎನ್

ಕರುಪ್ಪಸ್ವಾಮಿ ತಮಿಳುನಾಡಿನ ಹಲವು ಭಾಗಗಳಲ್ಲಿ ಜನರು ಪೂಜಿಸುವ ದೇವರೇ ಕರುಪ್ಪಸ್ವಾಮಿಗೆ ಕರುಪ್ಪರ್ಣಣ ಸ್ವಾಮಿ, ಕೋಟೈಕರುಪ್ಪು ಎಲ್ಲೈಕರುಪ್ಪು, ರಾಜಕರುಪ್ಪಣ್ಣಸ್ವಾಮಿ, ಕಣವಾಯಿ ಕರುಪ್ಪು, ವಿಲಂಗುಕಪ್ಪು, ನೊಂಡಿಕರುಪ್ಪು ಮೊದಲಾದ ಹೆಸರುಗಳು ಬಳಕೆಯಲ್ಲಿವೆ.

ಕರುಪ್ಪನ್ ಎಂಬ ತಮಿಳು ದೇವರೇ ಉತ್ತರ ಭಾರತದಲ್ಲಿ ಕೃಷ್ಣ ಆದನು ಎಂಬ ಅಭಿಪ್ರಾಯ ವಿದ್ವಾಂಸರಲ್ಲಿ ಇದೆ. ಕುರುಪ್ಪನ್ ಎಂಬ ಜನಪದ ದೇವರಿಗೆ, ಪುರಾಣಗಳಲ್ಲಿ ಎತ್ತಿ ಹೇಳುವ ಕೃಷ್ಣನಿಗೂ ಜನರ ರಕ್ಷಣೆಯೇ ಕಾಯಕವಾಗಿದೆ.

ಕರುಪ್ಪಸ್ವಾಮಿ ಕಾವಲು ದೇವರಾಗಿ ಗೋಚರವಾಗುತ್ತಾರೆ. ಈತ ಕೋಟೆಯ ಕಾವಲುಗಾರನಿಗೂ ಊರು ಕಾವಲುಗಾರನಾಗಿಯೂ ದೊಡ್ಡದೇಗುಲಗಳ ಕಾವಲುಗಾರನಾಗಿಯೂ ಕಂಡುಬರುತ್ತಾನೆ. ಅಯ್ಯನಾರ್ ದೇಗುಲಗಳಲ್ಲೂ ಅಮ್ಮನ ದೇಗುಲಗಳಲ್ಲಿಯೂ ಕರುಪ್ಪಸ್ವಾಮಿ ಸಹಾಯ ದೇವರಾಗಿ ಆರಾಧಿಸಲ್ಪಡುತ್ತಾರೆ.

ಈ ಕರುಪ್ಪಸ್ವಾಮಿಗೆ ಸಾಮಾನ್ಯವಾಗಿ ದೇಗುಲ ಊರಿಗೆ ಹೊರಗೆಯೆ ನಿರ್ಮಾಣವಾಗಿರುತ್ತದೆ. ಊರ ಹೊರಭಾಗದಲ್ಲಿರುವ ಕರುಪ್ಪಸ್ವಾಮಿಯೇ ಬೇಟೆಗಾರನೆಂದೂ ಕರೆಯಲಾಗುತ್ತದೆ. ಈ ದೇವರು ರಾತ್ರಿಯ ಹೊತ್ತು ಬೇಟೆಗೆ ಹೋಗುವುದಾಗಿಯೂ, ಕುದುರೆಯಲ್ಲಿ ಊರು ಸುತ್ತಿ ಬರುವುದಾಗಿಯೂ ಜನರು ನಂಬುತ್ತಾರೆ. ಕರುಪ್ಪಸ್ವಾಮಿ ಭೂತ, ಪಿಶಾಚಿ ಮೊದಲಾದ ದುಷ್ಟ ಶಕ್ತಿಗಳಿಂದಲೂ ಊರಿನ ಜನರನ್ನು ದನಕರುಗಳನ್ನು ರಕ್ಷಿಸುವ ಕಾವಲು ದೇವರಾಗಿ ಕಂಡುಬರುತ್ತಾರೆ. ಕರುಪ್ಪಸ್ವಾಮಿ ಕಾವಲು ಕಾಯುವುದರ ಜೊತೆಗೆ ಕೆಲವು ವೇಳೆಗಳಲ್ಲಿ ಸ್ನಾನ ತನ್ನ ಪರಿವಾರದ ನಾಯಿಗಳನ್ನು ಕಾವಲಿಗೆ ಉಪಯೋಗಿಸುವುದುಂಟು. ಕರುಪ್ಪಸ್ವಾಮಿಯನ್ನು ಕಲ್ಲಿನ ಮೂರ್ತಿ ಮತ್ತು ಬಣ್ಣ ಹಚ್ಚಲಾದ ಅಮೃತ ಶಿಲೆಮೂರ್ತಿಗಳಲ್ಲಿ ಪೂಜಿಸುವ ಪದ್ಧತಿ ತಮಿಳುನಾಡಿನಲ್ಲಿ ಕಾಣಲಾಗುತ್ತದೆ. ಈ ದೇವರ ಮೂರ್ತಿಯ ಕಾಲುಗಳು ಸಮನಾಗಿ ಇದ್ದ ಕಾಲುಗಳಲ್ಲಿ ಚಪ್ಪಲಿಗಳು ಇರುತ್ತವೆ. ಈ ದೇವರ ಎಡಗಾಲಿನ ಹತ್ತಿರ ಹಾವು ಇರುವುದನ್ನು ಕಾಣಬಹುದು. ಕಾಲ್ಕಡಗ, ವೀರಕಂಠಮಣಿಗಳು ಕರುಪ್ಪಸ್ವಾಮಿಯ ಕಾಲುಗಳ ಅಲಂಕಾರವನ್ನು ಹೆಚ್ಚಿಸುವುದು. ಸೊಂಟದಲ್ಲಿ ಕಚ್ಚೆ ಪಂಚೆ, ಗೆಜ್ಜೆ, ಒಂದು ಅಥವಾ ಎರಡು ಉಡುದಾರ ಕಟ್ಟಲಾಗಿರುತ್ತದೆ. ಸೊಂಟದ ಎಡಗಡೆ ಕತ್ತಿ, ಬಲಗೈಯಲ್ಲಿ ಎತ್ತಿದಂತೆ ಕುಡುಗೋಲು, ಎಡಗೈಯಲ್ಲಿ ಕೆಳಮುಖವಾಗಿ ದೊಡ್ಡ ದಂಡಾಯುಧ ಊರಿದಂತೆ, ಭುಜಗಳಲ್ಲಿ ಬಳೆಗಳು, ಎದೆ ಭಾಗದಲ್ಲಿ ಆಭರಣಗಳು, ಎದೆ ಭಾಗಕ್ಕಿಂತ ಕೆಳಗೆ ಪದಕ, ತೋಳುಗಳಲ್ಲಿ ಬಾಳೆ ಹೂವಿನ ಅಲಂಕಾರ, ಕಿವಿಗಳಲ್ಲಿ ದೊಡ್ಡಕಿವಿಯೋಲೆ, ತಲೆಯಲ್ಲಿ ಕೂದಲು ಹಣೆಯಲ್ಲಿ ಕಿರೀಟ, ಬಲಗಡೆ ತಲೆಬುರುಡೆ, ಹೊರಗಡೆ ಕಾಣುವ ಸಿಂಹದ ಹಲ್ಲುಗಳು, ದೊಡ್ಡ ಮೀಸೆ, ಚೂಪಾದ ಮೂಗು, ಅಗಲವಾದ ಕಣ್ಣುಗಳು, ಜಡೆಯಲ್ಲಿ ಹೂ, ಬೆರಳುಗಳಲ್ಲಿ ಉಂಗುರು ಇವು ಕರುಪ್ಪಸ್ವಾಮಿಯ ಚಿತ್ರವಾಗಿವೆ.

ಕರುಪ್ಪಸ್ವಾಮಿಗೆ ಪೂಜೆಯ ಸಮಯದಲ್ಲಿ ಹೋತ, ಮರಿಹಾಕದ ಆಡುಗಳನ್ನು ಬಲಿಕೊಡುತ್ತಾರೆ. ಮಾಂಸದ ಎಡೆಯನ್ನು ಕರುಪ್ಪಸ್ವಾಮಿಗೆ ಅರ್ಪಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಕೋಳಿ, ಹುಂಜಗಳನ್ನು ಬಲಿಕೊಡುತಾರೆ. ಕರುಪ್ಪಸ್ವಾಮಿಗೆ ಹಲವು ಧಾನ್ಯಗಳು ಸೇರಿದ ಅನ್ನವಾದ ‘ಪಳ್ಳಯಮ್’ ಅನ್ನು ನೈವೇದ್ಯಕ್ಕೆ ಇಟ್ಟು ಪ್ರಸಾದವಾಗಿ ಹಂಚುತ್ತಾರೆ.

ಕೊಯಮತ್ತೂರು ಪಕ್ಕದಲ್ಲಿ ಅವಿನಾಶಿಗೆ ಹತ್ತಿರದಲ್ಲಿ ಇರುವ ಅರಸೂರ್ ಎಂಬ ಗ್ರಾಮದಲ್ಲಿ ಪ್ರತಿ ವರ್ಷವೂ ಶಿವರಾತ್ರಿಯ ದಿನದಂದು ಕರುಪ್ಪಸ್ವಾಮಿಗೆ ವಿಶೇಷವಾಗಿ ಜಾತ್ರೆಯನ್ನು ನಡೆಸುತ್ತಾರೆ. ಸ್ವಾಮಿಯಿಂದ ವರ ಬೇಡುವವರು ಮೊಣಕಾಲೂರಿ ಕೂರುವರು. ಆಗ ಪುರೋಹಿತರು ಚಾಟಿಯಿಂದ ವರ ಬೇಡುವವರನ್ನು ಹೊಡೆಯುವರು.

ಮಲಯಾಳ ನಾಡಿನಿಂದ ಕರುಪ್ಪಸ್ವಾಮಿ ತನ್ನ ಹದಿನೇಳು ಜೊತೆಗಾರರೊಂದಿಗೆ ಅಳಗರ್ ಮಲೈಪೆರುಮಾಳ್ ದೇವಾಲಯದಲ್ಲಿದ್ದ ಆಭರಣಗಳನ್ನು ಕೊಳ್ಳೆ ಹೊಡೆಯಲು ಹೋದನು. ಆಗ ಅಳಗರ್ ಮಲೈ ಪೆರುಮಾಳ್ ಹದಿನೇಳು ಜನರನ್ನು ತನ್ನ ಹದಿನೇಳು ಮೆಟ್ಟಿಲುಗಳನ್ನಾಗಿ ಮಾಡಿಕೊಂಡನು. ಕೊನೆಯ ಹದಿನೆಂಟನೆಯ ಮೆಟ್ಟಿಲೇ ಕರುಪ್ಪಸ್ವಾಮಿ. ಹೀಗೆ ಹದಿನೆಂಟು ಮೆಟ್ಟಲುಗಳಲ್ಲಿ ತಮ್ಮ ದೇಗುಲವನ್ನು ಕಾವಲು ಕಾಯುವಂತೆ ಹೇಳಿದನು. ಈ ರೀತಿಯ ಪಾರಂಪರಿಕ ಕತೆ ಜನರ ಮಧ್ಯೆ ಇದೆ. ಆದ್ದರಿಂದ ಕರುಪ್ಪಸ್ವಾಮಿಯನ್ನು ಮಲಯಾಳದಿಂದ ಬಂದವನು ಎಂಬ ಪ್ರತೀತಿಯೂ ಇದೆ. ಏಟು ತಿಂದವರಿಗೆ ಸ್ವಾಮಿಯ ವರ ಲಭಿಸುತ್ತದೆ. ಎಂಬ ನಂಬಿಕೆ ಜನರ ಮಧ್ಯೆ ತುಂಬ ಗಾಢವಾಗಿದೆ.

ಮಧುರೈ ಅಳಗರ್ ಗುಡಿಯಲ್ಲಿ ಹದಿನೆಂಟು ಮೆಟ್ಟಲಿರುವ ಗುಡ್ಡ ರೂಪುಗೊಂಡಿದೆ. ಅದರ ಮೇಲೆ ಇಪ್ಪತ್ತು ಅಡಿ ಎತ್ತರವಿರುವ ಕರುಪ್ಪಸ್ವಾಮಿ ಮೂರ್ತಿ ರಚನೆಯಾಗಿದೆ. ಕರುಪ್ಪಣ್ಣನ ಹತ್ತಿರ ಬಿಲ್ಲು, ತ್ರಿಶೂಲ ಮೇಲ್ ಕತ್ತಿ, ಗದೆ ಮೊದಲಾದ ಆಯುಧಗಳು ಹೆಚ್ಚಿನ ಸಂಖ್ಯೆಯಲ್ಲಿರುವುವು. ಇವುಗಳೆಲ್ಲ ಜನರು ಹರಕೆ ಸಲ್ಲಿಕೆಗಾಗಿ ಕೊಟ್ಟವುಗಳೇ ಆಗಿವೆ. ಈ ಗುಡಿಗೆ ಪುರೋಹಿತರು ಬೀಗ ಹಾಕಿ, ಬೀಗದ ಕೈಯನ್ನು ಮನೆಗೆ ತೆಗೆದುಕೊಂಡು ಹೋಗದೆ ಕರುಪ್ಪಸ್ವಾಮಿಯ ಮುಂದುಗಡೆಯೇ ಇಟ್ಟುಹೋಗುತ್ತಾರೆ. ಇದರ ಮುಖ್ಯ ಉದ್ದೇಶ ಕರುಪ್ಪಸ್ವಾಮಿ ಗುಡಿಯನ್ನು ಕಾಯುತ್ತಾನೆಂಬುದು ಜನರ ನಂಬಿಕೆ. ಅಳಗರ್ ದೇವಾಲಯದ ಮುಂದೆ ಜನರು ತಮ್ಮ ವ್ಯಾಜ್ಯಗಳನ್ನು ತೀರ್ಮಾನ ಮಾಡಿಕೊಳ್ಳುತ್ತಾರೆ.

ನಿರಾಭರಣನಾದ ಧಾರ್ಮಿಕ ದೇವರಾಗಿ ಭಾವಿಸಿರುವ ಅಯ್ಯಪ್ಪನ ಸನ್ನಧಿಯಲ್ಲೂ ಕರುಪ್ಪಸ್ವಾಮಿ ಕಾವಲುಗಾರನಾಗಿ ಇದ್ದಾನೆ. ಈತನನ್ನು ಹದಿನೆಂಟನೆಯ ಮೆಟ್ಟಿಲಿನ ಕರುಪ್ಪನ್ ಎಂದು ಕರೆಯಲಾಗುತ್ತದೆ.

ತಿರುಚ್ಚಿ ಜಿಲ್ಲೆಯಲ್ಲಿ ಎಸಿನಿ ಎಂಬ ಊರಿನಲ್ಲಿ ಕರುಪ್ಪಣ್ಣ ದೇವರಿಗೆ ದೇಗುಲ ಇವೆ. ಇಲ್ಲಿ ಮೂರು ವಿಧದ ಕರುಪ್ಪಣ್ಣ ಸ್ವಾಮಿಗಳಿದ್ದಾರೆ. ಬಂಡೂರು ಕರುಪ್ಪಣ್ಣನ್, ಪುದಕರುಪ್ಪನ್, ಊರುಸುತ್ತಿಯಾನ್ ಇವು ಅವರ ಹೆಸರುಗಳಾಗಿವೆ. ಈ ಮೂರ್ತಿಗಳ ಹುಲಿಯ ಮೇಲೆ ಕುಳಿತಿವೆ. ಈ ಗುಡಿಯಲ್ಲಿ ಕರುಪ್ಪಣ್ಣನಿಗೆ ‘ಮಲೈಯಾಯಿ’ ಎಂಬ ಹೆಂಡತಿ ಮಕ್ಕಳು.

ತಿರುನಲ್ವೇಲಿ ಭಾಗದಲ್ಲಿ ದೇವರ್ ಸಮಾಜದ ಜನರು ಕರುಪ್ಪಸ್ವಾಮಿಯನ್ನು ಭಕ್ತಿ – ಭಾವದಿಂದ ಆರಾಧಿಸುವುದನ್ನು ಕಾಣಬಹುದು.

– ಎ.ಎಸ್.ಪಿ. ಅನುವಾದ ಆರ್.ಎಸ್.

ಕರುಮಾಡಿಕುಟ್ಟನ್ ಆಲಪುಳ ಜಿಲ್ಲೆಯ ಅಂಬಲಪುಳ ಸಮೀಪದ ಒಂದು ಪ್ರದೇಶವೇ ಕರುಮಾಡ. ಬತ್ತದ ಗದ್ದೆಗಳಿಂದ ಸುತ್ತುವರಿದ ಈ ಪ್ರದೇಶದಲ್ಲಿ, ನದೀ ತೀರದಲ್ಲಿ ಕಂಡು ಬರುವ ಪ್ರತಿಮೆಯೇ ಕರುಮಾಡಿಕುಟ್ಟನ್. ಈ ಶಿಲಾವಿಗ್ರಹ ಪದ್ಮಾಸನ ಹಾಕಿದ ಯೋಗಿಯ ಭಂಗಿಯಲ್ಲಿದೆ. ಕಪ್ಪು ಮಣ್ಣಿನ ಪ್ರದೇಶದಲ್ಲಿ ಕಂಡುಬಂದ ಪ್ರತಿಮೆಯಾದ ಕಾರಣ ಇದಕ್ಕೆ ಕರುಮಾಡಿಕುಟ್ಟನ್ ಎಂದು ಹೆಸರಾಗಿರಬೇಕು.

ಈ ವಿಗ್ರಹವು ಜೈನ ತೀರ್ಥಂಕರನದ್ದಾಗಿರಬೇಕೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ. ಸುಮಾರು ಮೂರು ಅಡಿ ಎತ್ತರವಿರುವ ಈ ವಿಗ್ರಹದ ಬಗ್ಗೆ ಆ ಪ್ರದೇಶದವರು ಅನೇಕ ನಂಬಿಕೆಗಳನ್ನು ಇರಿಸಿದ್ದಾರೆ. ಈ ನಂಬಿಕೆಗಳಿಗೆ ನಂಬಿಕೆಯ ರೂಪವೂ, ಆಚರಣೆಯ ಸ್ವರೂಪವೂ, ಐತಿಹ್ಯದ ಆಧಾರಗಳೂ ಇವೆ. ಕೆಲವರು ಇದನ್ನು ಬುದ್ಧ ಪ್ರತಿಮೆಯೆಂದೂ ಹೇಳುತ್ತಾರೆ. ಹೀಗಾಗಿ ಜನರು ಈ ವಿಗ್ರಹವನ್ನು ಭಯಭಕ್ತಿಗಳಿಂದ ಆರಾಧಿಸುತ್ತಾರೆ. ೧೯೬೫ರಲ್ಲಿ ಕೇರಳ ಸರಕಾರ ಈ ಪ್ರತಿಮೆಯನ್ನು ಸಂರಕ್ಷಿತ ಪ್ರಾಚ್ಯ ವಸ್ತುವೆಂದು ಘೋಷಿಸಿತು.

ಹೊಲೆಯ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ವಿಗ್ರಹವಿದೆಂಬ ವಾದವೂ ಇದೆ. ವಿಶೇಷವಾದ ಆಚರಣೆಗಳನ್ನೂ ಹರೆಕೆಗಳನ್ನು ಈ ವಿಗ್ರಹದ ಮುಂದೆ ಜನರು ಸಲ್ಲಿಸುತ್ತಾರೆ. ಅದರಲ್ಲಿ ಮುಖ್ಯವಾದುದು ಎಣ್ಣೆ ಸಮರ್ಪಣೆ. ಹೀಗೆ ಅರ್ಪಿಸಿದ ಎಣ್ಣೆಯನ್ನು ಭಕ್ತರು ಮನೆಗೆ ಕೊಂಡು ಹೋಗಿ ಜೋಪಾನವಾಗಿಡುತ್ತಾರೆ. ಈ ಎಣ್ಣೆಗೆ ಔಷಧೀಯ ಗುಣಗಳಿವೆ ಎಂದೂ, ಗಾಯ ಹಾಗೂ ನೋವಿಗೆ ಎಣ್ಣೆಯನ್ನು ಹಚ್ಚಿದರೆ ಗುಣವಾಗುವುದೆಂದೂ ಜನರು ನಂಬಿದ್ದಾರೆ.

ಕರುಮಾಡಿಕುಟ್ಟನಿಗೆ ಸಂಬಂಧಿಸಿದಂತೆ ಇನ್ನೊಂದು ಕಾರ್ಯಕ್ರಮವೇ ‘ದಂಡುಚಾರಲ್’. ಹಕ್ಕಿ ಹೊದಳು, ಬೆಲ್ಲ ಎಂಬಿವುಗಳನ್ನು ಒಂದು ಹಾಳೆಯಲ್ಲಿ ಬೆರೆಸಿ ಈ ವಿಗ್ರಹಕ್ಕೆ ಒರಗಿಸಿಡುತ್ತಾರೆ. ಇದು ಒಂದು ಹರಕೆಯಾಗಿದೆ. ಇನ್ನೊಂದು ಆಚರಣೆ ‘ವೆಚ್ಚಿಮಾನ್ ಕೊಡುಕ್ಕಲ್’. ವೀಳ್ಯದೆಲೆ, ಸುಣ್ಣ, ಅಡಕೆ, ಹೊಗೆಸೊಪ್ಪುಗಳನ್ನು ವಿಗ್ರಹದ ಮುಂದಿರಿಸುತ್ತಾರೆ. ಕೆಲವರು ವೃದ್ಧರಿಗೆ ಕೊಡುವಂತೆ ವೀಳ್ಯ ಮತ್ತು ಅಡಿಕೆಯನ್ನು ಪುಡಿ ಮಾಡಿಕೊಡುತ್ತಾರೆ.

ಪೈರು ಹರಕೆ ಇನ್ನೊಂದು ಆಚರಣೆ. ಗದ್ದೆ ಬಯಲುಗಳಲ್ಲಿ ಇಲಿ ಹಾಗೂ ಹೆಗ್ಗಣ ಪ್ರವೇಶಿಸಿದಂತೆ ತಡೆಯಲು ಈ ಹರಕೆಯನ್ನು ನೆರವೇರಿಸುತ್ತಾರೆ. ನಾಣ್ಯ ಎಸೆಯುವುದು, ಎಣ್ಣೆ ಸ್ನಾನ ಕರುಮಾಡಿಕುಟ್ಟುವ ಸಂಬಂಧವಾಗಿರುವ ಇತರ ಆಚರಣೆಗಳು. ಈ ಆಚರಣೆಗಳೆಲ್ಲ ಅತ್ಯಂತ ಸರಳವಾಗಿರುವುದು ಕರುಮಾಡಿನ ಕುಟ್ಟುವ ಅನನ್ಯತೆಯಾಗಿದೆ.

– ಎ.ಕೆ.ಎನ್. ಅನುವಾದ ಎನ್. ಎಸ್.