ಕರ್ನಾಟಕದ ಸ್ಥಳನಾಮಗಳು ಪ್ರದೇಶ ಅಥವಾ ಸ್ಥಳಗಳಿಗೆ ಇಟ್ಟಿರುವ ಹೆಸರುಗಳೇ ಸ್ಥಳನಾಮಗಳು. ಸ್ಥಳನಾಮಗಳು ಸಮೂಹಕ್ಕೆ ಅ‌ನ್ವಯವಾಗುವಂಥವು. ಮಾನವ ತನ್ನ ಸಂಗತಿ ಸ್ಥಳದ ವೈಶಿಷ್ಟ್ಯ, ಪ್ರಯೋಜನಗಳನ್ನು ಗಮನಿಸಿ ಅದಕ್ಕನುಗುಣವಾಗಿ ಸ್ಥಳಗಳಿಗೆ ಹೆಸರಿಡುವ ಪ್ರವೃತ್ತಿಯನ್ನು ಬೆಳೆಸಿಕೊಂಡ. ಈ ಬಗೆಯ ಹೆಸರುಗಳು ಆರಂಭಿಕ ಹಂತದಲ್ಲಿ ರೂಢನಾಮಗಳಾಗಿದ್ದು ಅನಂತರದ ಹಂತಗಳಲ್ಲಿ ಅಂಕಿತನಾಮಗಳಾದವು. ಸ್ಥಳಗಳು ಪ್ರಾಚೀನ ನಾಮಗಳು ವಿವರಣಾತ್ಮಕವಾಗಿದ್ದು ಹೆಚ್ಚು ನೈಜವಾಗಿವೆ. ವಿದ್ವಾಂಸರನೇಕರ ಅಭಿಪ್ರಾಯದಂತೆ ಸ್ಥಳನಾಮಗಳು ಸೃಷ್ಟಿಯೊಂದಿಗೇ ಬೆಳೆದು ಬಂದು ಕಾಲಾಂತರದಲ್ಲಿ ಪ್ರಾಕೃತಿಕ, ಭೌಗೋಳಿಕ, ಐತಿಹಾಸಿಕ, ಜಾನಪದೀಯ, ಪುರಾಣ – ಐತಿಹ್ಯ – ಪ್ರಹೇಳಿಕೆಗಳ ಮೂಲಕ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಹುಟ್ಟಿಕೊಂಡಂಥವು.

ನಾಮವಿಜ್ಞಾನದ ಪ್ರಮುಖ ಶಾಖೆಗಳಲ್ಲಿ ಸ್ಥಳನಾಮವೂ ಒಂದು. ಇದರ ಅಧ್ಯಯನದ ಕಕ್ಷೆ ಜನವಸತಿ ಸ್ಥಳಗಳಾದ ಹಳ್ಳಿ, ಗ್ರಾಮ, ಬೀದಿಗಳು, ಕಾಡು, ಹೊಲ, ತೋಟಗಳು, ನದಿ, ಕಾಲುವೆ, ಕೊಳ್ಳ ಇತ್ಯಾದಿಗಳು ಬೆಟ್ಟಗುಡ್ಡಗಳು ಈ ಎಲ್ಲವುಗಳ ಹೆಸರುಗಳನ್ನೂ ಒಳಗೊಂಡಿದೆ. ಇವುಗಳನ್ನು ಟೋಪೋನಿಮಿ, ಮೈಕ್ರೋಟೋಪೋನಿಮಿ, ಹೊಡೋನಿಮಿ, ಒರೋನಿಮಿ – ಈ ಬಗೆಯ ನಾಲ್ಕು ಉಪವಿಭಾಗಗಳಲ್ಲಿ ಅಧ್ಯಯನ ಮಾಡಲಾಗುತ್ತದೆ.

ಕರ್ನಾಟಕ ಪ್ರಧಾನ ಭಾಷೆಯಾದ ಕನ್ನಡ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಇತರ ದ್ರಾವಿಡ ಸ್ಥಳವಾಚಿಗಳಲ್ಲಿ ಕಂಡುಬರುವಂತೆಯೇ ಎರಡು ಆಕೃತಿಮಾಗಳ ಸ್ಥಳವಾಚಿಗಳನ್ನು ಇದರಲ್ಲಿಯೂ ಗುರುತಿಸಬಹುದಾಗಿದೆ. ಅಂದರೆ ಈ ಬಗೆಯ ಸ್ಥಳವಾಚಿಗಳಲ್ಲಿ ನಿರ್ದಿಷ್ಟ (ಪದದ ಪೂರ್ವಭಾಗ) ಮತ್ತು ವಾರ್ಗಿಕ (ಪದದ ಉತ್ತರಭಾಗ) ಎಂದು ಎರಡು ಆಕೃತಿಮಾಗಳಿದ್ದು, ನಿರ್ದಿಷ್ಟ ಆಕೃತಿಮಾ ಊರಿನ ವೈಶಿಷ್ಟ್ಯವನ್ನೂ ವಾರ್ಗಿಕ ಆಕೃತಿಮಾ ಊರಿನ ಸಾಮಾನ್ಯ ಲಕ್ಷಣವನ್ನೂ ಬಿಂಬಿಸುವಂತಹವಾಗಿದೆ.

ಉದಾ: ಮುಳ್ಳು + ಊರು = ಮೂಳ್ಳೂರು; ಕೊಳ + ಊರು = ಕೊಳುರು; ಮನ + ಗುಂಡಿ = ಮನಗುಂಡಿ; ಹುಪ್ಪ + ವಳ್ಳಿ = ಹುಪ್ಪಳ್ಳಿ, ಕುಪ್ಪ = ಹಳ್ಳಿ = ಕುಪ್ಪಳ್ಳಿ ಇತ್ಯಾದಿ. ಕೆಲವೊಮ್ಮೆ ಎರಡಕ್ಕಿಂತ ಆಕೃತಿಮಾಗಳಿರುವ ಹೆಚ್ಚು ಸ್ಥಳನಾಮಗಳನ್ನೂ ಗುರುತಿಸಬಹುದು. ಉದಾ ತಿರುಮಕೂಡಲು ನರಸೀಪುರ; ಎರಣಿಗೆರೆಯಹಳ್ಳಿ, ಬಮ್ಮರಸಿಕೊಪ್ಪ.

ಸ್ಥಳನಾಮಗಳು ಆಯಾ ಜನರ ಮನೋಧರ್ಮ, ಬುದ್ಧಿ ಸಾಮರ್ಥ್ಯ, ಸಂಸ್ಕೃತಿಗಳ ಪ್ರತೀಕಗಳಾಗಿ ಹೆಚ್ಚು ವೈಶಿಷ್ಟ್ಯಪೂರ್ಣವೆನಿಸಿವೆ. ಭಾರತ ಮೂಲತಃ ಹಳ್ಳಿಗಳ ದೇಶ. ಹಾಗಾಗಿ ಗ್ರಾಮಗಳಿಗೆ, ಸ್ಥಳಗಳಿಗೆ ಹೆಸರಿಟ್ಟ ಮೊದಲ ಜನ ಗ್ರಾಮೀಣರು ಎಂಬುದನದನು ಮರೆಯುವಂತಿಲ್ಲ. ಹೀಗೆ ಗ್ರಾಮೀಣರು ಸ್ಥಳಗಳಿಗೆ ಹೆಸರಿಡುವ ಸಂದರ್ಭದಲ್ಲಿ ಅವರ ಗಮನಕ್ಕೆ ಬಂದದ್ದು ಆಯಾ ಸ್ಥಳಗಳ ಭೌಗೋಳಿಕ ಪರಿಸರ, ನದಿ, ಸರೋವರಗಳು ಮತ್ತು ಸುತ್ತಮುತ್ತಲಿನ ಮೃಗ, ಪಕ್ಷಿ, ಕಾಡು, ಮೇಡುಗಳು ಇತ್ಯಾದಿ. ಹೀಗೆ ಹುಟ್ಟಿಕೊಂಡ ಸ್ಥಳನಾಮಗಳು ಕಾಲಾಂತರದಲ್ಲಿ ನಗರಗಳು, ಅಲ್ಲಿಯ ಜನ, ಅವರಾಡುವ ಭಾಷೆ, ಅನ್ಯಭಾಷಿಕರು – ಇವೆಲ್ಲದರ ಪ್ರಭಾವದಿಂದ ಮೂಲ ಸ್ವರೂಪ, ಅರ್ಥಗಳನ್ನು ಕಳೆದುಕೊಂಡು ಮುಂದಿನ ಪೀಳಿಗೆಯ ಜನರ ಕಲ್ಪನೆಗಳಿಂದ ತಮ್ಮ ಸುತ್ತಲೂ ಹಲವು ಕಥಾಪರಿವೇಶಗಳನ್ನೂ ಪೌರಾಣಿಕ ಹಿನ್ನೆಲೆಗಳನ್ನೂ ಪಡೆದುಕೊಳ್ಳವಂತಾಯಿತು.

ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳನಾಮಗಳು : ಕರ್ನಾಟಕವನ್ನು ಆಳಿದ ಹಲವಾರು ಪ್ರಸಿದ್ಧ ರಾಜವಂಶಗಳು, ರಾಜರು, ಕರ್ನಾಟಕದ ಮೇಲೆ ದಂಡೆತ್ತಿ ಬಂದ ಮುಸಲ್ಮಾರ ದೊರೆಗಳು, ನಶಿಸಿಹೋಗಿರುವ ಕೋಟೆ, ಕೊತ್ತಲಗಳು, ರಾಜರ ಕಾಲದ ರಾಜಕೀಯ ಹಾಗೂ ಸಾಂಸ್ಕೃತಿಕ ವಿಚಾರಗಳು ಕರ್ನಾಟಕದ ಕರ್ನಾಟಕದ ಹಲವಾರು ಸ್ಥಳನಾಮಗಳ ಮೇಲೆ ಪ್ರಭಾವ ಬೀರಿರುವ ಕಾರಣಗಳಿಂದ ಮೂಲಸ್ಥಳನಾಮಗಳು ರೂಪಾಂತರಗೊಂಡಿವೆ. ಅಷ್ಟೇ ಅಲ್ಲದೆ ರಾಜರು ನೀಡಿರುವ ದಾನ, ದತ್ತಿಗಳು ಗ್ರಾಮ, ಊರು, ಕೇರಿಗಳಾಗಿ ಮಾರ್ಪಟ್ಟಿವೆ. ಉದಾಹರಣೆಗೆ : ನರಸಿಂಹರಾಜಪುರ, ಉದಯಾದಿತ್ಯಮಂಗಳ, ಹೈದೂರು, ರಾಜರಾಜ ಮಂಗಳ, ಕೃಷ್ಣರಾಜನಗರ, ಚತುರ್ವೇದಿ ಮಂಗಳ, ಪಟ್ಟದಕಿಸುವೊಳಲು (ಬಿಜಾಪುರ ಜಿಲ್ಲೆಯ ಕಿಸುವೊಳಲು ಎಂಬುದು. ಇದು ಈ ಪ್ರದೇಶದ ಸುತ್ತಲಿದ್ದ ನಸುಗೆಂಪು ಬಣ್ಣದ ಕಲ್ಲುಗುಡ್ಡೆಗಳಿರುವುದರಿಂದಾಗಿ ಬಂದ ಹೆಸರು. ಚಾಳುಕ್ಯರು ತಮ್ಮ ಪಟ್ಟಾಭಿಷೇಕ ಮಹೋತ್ಸವವನ್ನು ಇಲ್ಲಿ ಆಚರಿಸಿಕೊಳ್ಳುತ್ತಿದ್ದುದರಿಂದ ಪಟ್ಟದ ಕಿಸುವೊಳಲಾಯಿತು). ಹಾಗೆಯೇ ರಾಯಚೂರು ಜಿಲ್ಲೆಯ ‘ಕೊಪ್ಪಳ’ ಗಂಗ ಮತ್ತು ಚಾಳುಕ್ಯರ ಕಾಲದಲ್ಲಿ ಕೊಪಣನಗರವಾಯಿತು. ಕೊಪಣ – ಕಂಪಣ, ಕಂಪನಿ ಎಂದೂ ಆದಿತೀರ್ಥವೆಂಬುದು ತುಂಗಭದ್ರಾ ನದಿಯಿಂದಾಗಿ ಮಹಾತೀರ್ಥವೆಂದೂ ಕರೆಯಲ್ಪಟ್ಟಿತು. ಇದೇ ರೀತಿ ಗುರುತಿಸುತ್ತಾ ಹೋದರೆ ಬೆಂದಕಾಳುರು – ಬೆಂಗಳೂರು, ಮಹಿಷಪುರ – ಮೈಸೂರು, ಸಿಂಹಾಸನಪುರ – ಹಾಸನ, ಅತ್ತಿಗುಪ್ಪೆ – ಕೃಷ್ಣರಾಜಪೇಟೆ, ಎಡತೊರೆ – ಕೃಷ್ಣರಾಜನಗರ, ಮಂಜ್ರಾಬಾದ್ – ಸಕಲೇಶಪುರ, ವೇಲೂರು – ಬೇಲೂರು, ಬಾಲೇಂದುಪುರ – ಯಳಂದೂರು, ರಾಬಿನ್‌ಸನ್‌ಪೇಟೆ – ಕುಶಾಲನಗರ, ಮಾಂಡವ್ಯನಗರ – ಮಂಡ್ಯ, ಕುವಲಹ – ಕೋಲಾರ, ಅರ್ಕಪುರಿ – ಅರಕಲಗೂಡು, ಸಿಹಿಮೊಗೆ – ಶಿವಮೊಗ್ಗ, ಧಾರವಾಡ ತಂತುಪುರಿ, ಭಂಡಾರವಾದ – ಅರಸಿಕೆರೆ, ಮಂಗಲಹುರು – ಮಂಗಳೂರು, ಕಡೇವಾರ – ಕಾರವಾರ, ಕೊಳತ್ತೂರು – ಚೆನ್ನರಾಯಪಟ್ಟಣ, ವಿಜಯಪುರ – ವಿಜಾಪುರ ಅಥವಾ ಬಿಜಾಪುರ, ಟುಮಕೆಲೂರು – ತುಮಕೂರು, ಮಡಕೇರಿ – ಕೊಡಗು, ಚಿಂತನಕಲ್ಲುದುರ್ಗೆ – ಚಿತ್ರದುರ್ಗ, ಬೊಳ್ಳಅರೆ (ಬಿಳಿಕಲ್ಲು) ಬಳ್ಳಾರಿ, ಬಿದರೂರು – ಬೀದರ, ಬೊಳ್ಳೆಗಾಂವೆ – ಬೆಳಗಾಂ, ಕಲಂಬರಗೆ – ಕಲ್ಬುರ್ಗಾ / ಗುಲ್ಬರ್ಗಾ, ರಾಚವೂರ – ರಾಯಚೂರು ಮೊದಲಾದವು. ಕನ್ನಗೌಡವಾಡಿ – ಕನ್ನಂಬಾಡಿ; ಮುಸಲ್ಮಾನರು ವಾಸಿಸಲೆಂದೇ ನಿರ್ಮಾಣಗೊಂಡ ಊರು ಶ್ರೀರಂಗಪಟ್ಟಣದ ಗಂಜಾಂ, ಗಂಜೀಫಾ ಕಲೆಗೆ ಪ್ರಸಿದ್ಧಿಯಾಗಿದೆ. ನವಾಬ್ ಹೈದರಲಿಖಾನ್, ಟಿಪ್ಪುಸುಲ್ತಾನ್ – ಇವರ ಕಾಲದಲ್ಲಿ ನಾಮಕರಣಗೊಂಡ ಸ್ಥಳ. ಗಂಜಾಂ ಎಂದರೆ ಉರ್ದು ಭಾಷೆಯಲ್ಲಿ ವ್ಯಾಪಾರಸ್ಥಳ ಅಥವಾ ಪೇಟೆ ಎಂಬರ್ಥವಿದೆ. ಗೌತಮಕ್ಷೇತ್ರ, ಆದಿರಂಗಕ್ಷೇತ್ರ, ಶ್ರೀರಂಗಪುರ, ತಿರುವರಂಗ ನಾರಾಯಣ ಚತುರ್ವೇದಿ ಮಂಗಲ ಇತ್ಯಾದಿ ಹೆಸರುಗಳಿದ್ದ ಸ್ಥಳ. ಅವೆಲ್ಲವೂ ಮಾಯವಾಗಿ ಶ್ರೀರಂಗಪಟ್ಟಣವಾಗಿದೆ. ಶ್ರೀರಂಗನಾಥ ದೇವಾಲಯದಿಂದ ಊರಿಗೆ ಈ ಹೆಸರು ಬಂದಿದೆ.

ಹಾಸನ ಜಿಲ್ಲೆಯಲ್ಲಿಯೂ ಇಂತಹ ಐತಿಹಾಸಿಕ ಅಂಶಗಳನ್ನು ಪ್ರತಿಬಿಂಬಿಸುವ ಸ್ಥಳನಾಮಗಳು ಹಲವಾರಿವೆ. ಗಂಗರು, ಹೊಯ್ಸಳರು, ಅನೇಕ ರಾಜ ಮಹಾರಾಜರು, ನಾಯಕರು ಹಾಗೂ ಪಾಳೇಗಾರರು, ಬ್ರಿಟಿಷರು ಆಳಿ ಹೋದ ಕರ್ನಾಟಕದ ಇಂತಹ ಹಲವಾರು ಪ್ರದೇಶಗಳಲ್ಲಿ ಆಳಿದವರ ನೆನಪಿಗೆ, ಕುರುಹಿಗೆ ಅನೇಕ ಹಳ್ಳಿ, ಪಟ್ಟಣಗಳಿಗೆ ಹೆಸರುಗಳನ್ನಿಡಲಾಗಿದೆ. ಇಂತಹ ಸಂದರ್ಭಗಳ ಹಿನ್ನೆಲೆಗಳಲ್ಲಿ ಸ್ಥಳನಾಮಗಳಿಗೆ ಅವುಗಳ ಮೂಲ ಹೆಸರು ಹೋಗಿ ಮತ್ತೊಂದು ಹೆಸರು ಪ್ರಾಪ್ತವಾಗಿದೆ. ದ್ವಾರಸಮುದ್ರ ಹಾಳಾದ ಮೇಲೆ ಹಳೇಬೀಡಾಯಿತು. ವೇಲಾಪುರಿ – ಬೇಲೂರಾಯಿತು. ಕಳವಪ್ರ ಎಂಬುದು ಶ್ರವಣಬೆಳಗೊಳವೆನಿಸಿತು. ಶ್ವೇಥ ಸರೋವರ ಎಂದು ಕರೆಯಲಾಗುತ್ತಿದ್ದ ಬೆಳ್ಗೊಳ ಎಂಬುದು ಶಾಂತಲಾ, ಮಾಚಲಾದೇವಿಯರೆಂಬ ಇಬ್ಬರು ನಾಟ್ಯಸುಂದರಿಯರಿಂದ ಕಟ್ಟಿಸಲ್ಪಟ್ಟ ಕೆರೆಯಲಾಗಿದೆ. ನುಗ್ಗೆಹಳ್ಳಿ ಎಂಬುದು ಸೈನ್ಯ ನುಗ್ಗುವ ಪ್ರದೇಶವಾಗಿದ್ದುದರಿಂದ ಪಡೆದ ಹೆಸರು. ಮುಂದೆ ಇದು ವಿಜಯನಾಥಪುರವೆನಿಸಿತು. ನುಗ್ಗೆಹಳ್ಳಿ ನಾಯಕನಾಗಿದ್ದ ತಿರುಮಲ ರಾಜನಾಯಕನ ತಂದೆ ದಾಸಪ್ಪ ನಾಯಕನಿಗೆ ಪುಣ್ಯ ಒದಗಲೆಂದು ದಾನವಾಗಿ ಗ್ರಾಮವೊಂದನ್ನು ನೀಡಿದ ಕಾರಣ ಆ ಗ್ರಾಮಕ್ಕೆ ದಾಸನಪುರವೆಂದೇ ಹೆಸರಾಯಿತು. ಕ್ರಿ.ಶ.೧೧ನೇಯ ಶತಮಾನದಲ್ಲಿ ಹೊಯ್ಸಳರಾಣಿ ಕಟ್ಟಿಸಿದ ಕೆರೆಗಾಗಿ ಇದಕ್ಕೆ ಅರಸೀಕೆರೆ ಎಂದೇ ಹೆಸರಿಡಲಾಯಿತು. ಈ ಕೆರೆಯ ಬಳಿ ಬೆಳೆದ ಗ್ರಾಮವೂ ಅರಸೀಕೆರೆ ಎನಿಸಿತು. ಭೈರನೆಂಬ ನಾಯಕ ಕಟ್ಟಿಸಿದ ಕೆರೆ ಭೈರಸಮುದ್ರವೆಂದೂ ಹಾಸನದ ಒತ್ತಿನಲ್ಲಿರುವ, ೧೧ನೇ ಶತಮಾನದಲ್ಲಿ ಚೋಳರ ಆಡಳಿತ ಕೇಂದ್ರವಾಗಿದ್ದ ಚೆನ್ನಪಟ್ಟಣ ಗ್ರಾಮವಿದೆ. ಚೋಳರು ನೇಮಿಸಿದ ಚೆನ್ನನೆಂಬ ನಾಯಕ ಕಟ್ಟಿಸಿದ ಕೋಟೆಯಿಂದ ಚೆನ್ನಪಟ್ಟಣವೆನಿಸಿತು. ಚೆನ್ನಪಟ್ಟಣವೆಂದರೆ ಸುಂದರ ನಗರ ಆತ ನಿರ್ಮಿಸಿ ಹೆಸರಿಟ್ಟದ್ದಕ್ಕಾಗಿ ಚೆನ್ನಪಟ್ಟಣವಾಯಿತು. ಅನಂತರದ ಕಾಲಗಳಲ್ಲಿ ಈ ಸ್ಥಳ ವಿಜಯನಗರದ ಅರಸರ ಸ್ವಾಧೀನವಾಯಿತು. ಈ ಸಂದರ್ಭದಲ್ಲಿಯೇ ಹಾಸನಮ್ಮನ ಗುಡಿಯ ನಿರ್ಮಾಣವಾಯಿತು. ನಾಯಕನಿಂದ ನಿರ್ಮಾಣವಾದ ದೇವಾಲಯವಿದು. ವಿಜಯನಗರದ ಅರಸರು ನೇಮಿಸಿದ ನರಸಿಂಹನಾಯಕನು ಕ್ರಿ.ಶ. ೧೧೬೮ರಲ್ಲಿ ಕೋಟೆಯೊಂದನ್ನು ನಿರ್ಮಿಸಿದ. ಹೊಳೆಯ ಪಕ್ಕದಲ್ಲಿದ ಪಟ್ಟಣವು ರಾಜಾನರಸಿಂಹನ ಹೆಸರನ್ನೂ ಉಳಿಸಿಕೊಂಡು ಹೊಳೆನರಸೀಪುರವೆನಿಸಿತು.

ಹೀಗೆಯೇ ಕದಂಬರ ದುದ್ದರಸನ ಹೆಸರಿನಿಂದ ಗ್ರಾಮದ ಹೆಸರು ‘ದುದ್ದ’ ಆಗಿದೆ. ಕಿತ್ತಾನೆ ಎಂಬ ಗ್ರಾಮಕ್ಕೆ ಕೃಷ್ಣದೇವರಾಯನ ಅರಸಿ ತಿರುಮಲಾಂಬೆಯ ಹೆಸರನ್ನು ನೀಡಿ ತಿರುಮಲಾಪುರ ಎಂಬ ಹೆಸರಿಡಲಾಯಿತು. ಹೀಗೆಯೇ ಬಿಟ್ಟುಗೊಂಡನಹಳ್ಳಿ ಧನಂಜನ ಗ್ರಾಮವೆನಿಸಿದೆ. ಕಲ್ಹಣರಾವುತ ಮತ್ತು ಆತನ ಪತ್ನಿ ಸಹಜದೇವಿ ಮಹಾಲಕ್ಷ್ಮಿ ದೇವಾಲಯವನ್ನು ದೊಡ್ಡ ಗದ್ದುವಳ್ಳಿಯಲ್ಲಿ ನಿರ್ಮಿಸಿದ ಪ್ರಯುಕ್ತ ಆ ಗ್ರಾಮ ಅಭಿನವಕೊಲ್ಲಾಪುರವೆನಿಸಿತು. ಹೊಯ್ಸಳ ರಾಣಿ ಶಾಂತಳೆಯ ಹೆಸರಿನಿಂದ ಸ್ಥಳಕ್ಕೆ ಶಾಂತಿಗ್ರಾಮ ಎಂದು ಹೆಸರಾಯಿತು.

ಹೀಗೆಯೇ ಕರ್ನಾಟಕದ ಗುಲಬರ್ಗಾ ಪ್ರದೇಶವು ೧೪ನೆಯ ಶತಮಾನದಿಂದೀಚೆಗೆ ಮುಸಲ್ಮಾನರ ಆಡಳಿತಕ್ಕೊಳಪಟ್ಟಿದ್ದ ಪ್ರಭಾವದಿಂದ ಮುಸ್ಲಿಂ ಸಂಸ್ಕೃತಿ ಮತ್ತು ಉರ್ದು ಭಾಷೆಯ ಪ್ರಭಾವ ಈ ಪ್ರದೇಶದ ಮೇಲೆ ಗಾಢವಾಗಿದೆ. ಇಂದಿಗೂ ಇಲ್ಲನ ಜನರ ಭಾಷೆಯಲ್ಲಿ ಪ್ರಯೋಗವಾಗುತ್ತಿರುವ ಜಲಸಾ, ಮುಷ್ಕಿಲ್, ದುನಿಯಾದ್, ನಜರ್, ಕಿರಾಮ್, ತೇಜ, ರಜಾಯಿ, ದೋಬಿ, ಸವಾರಿ ಮೊದಲಾದ ಹಲವಾರು ಪದಗಳು ಮುಸ್ಲೀಂಪ್ರಭಾವದಿಂದ ಬಂದಂತಹವು. ಭಾಷೆಯ ಮೇಲಾಗಿರುವಂತೆ ಸ್ಥಳನಾಮಗಳ ಮೇಲೂ ಇವರ ಪ್ರಭಾವಗಳನ್ನು ಗುರುತಿಸಬಹುದು. ಈ ಪ್ರದೇಶದ ಕೆಲವು ಊರುಗಳ ಹೆಸರುಗಳು ಮುಸ್ಲಿಂ ರಾಜ, ರಾಣಿ, ಮಂತ್ರಿಗಳ ಹೆಸರುಗಳಾಗಿವೆ. ಉದಾ: ಫಿರೋಜ್‌ಷಾನ ಆಡಳಿತಕ್ಕೊಳಪಟ್ಟುದಕ್ಕಾಗಿ ಫಿರೋಜಾಬಾದ್, ದೊರೆ ಆದಿಲ್‌ಶಾಹಿಯ ಪತ್ನಿ ಸುಲ್ತಾನಬಿಯ ಸ್ಮರಣಾರ್ಥ ಊರಿಗೆ ಇಟ್ಟ ಹೆಸರು ಸುಲ್ತಾನಪುರ, ಮತ್ತೋರ್ವ ಪತ್ನಿ ಹೀರಾಬಿಯ ಸ್ಮರಣಾರ್ಥ ರೂಪುಗೊಂಡ ಊರು ಹೀರಾಪುರ.

ಗುಲಬರ್ಗಾ ಎಂಬುದು ನಿಜಾಮರ ಕಾಲದಲ್ಲಿ ಪಾರಸಿ ಪ್ರಭಾವ ಪಡೆದು ಬಂದ ಹೆಸರು. ಈ ಹೆಸರಿನ ಮೂಲ ಕಲಬುರಗಿ ಎಂಬುದು. ಎಂ.ಎಂ. ಕಲಬುರ್ಗಿಯವರ ಪ್ರಕಾರ ಕಲಂಬರ + ಕೆಮ್ + ಕಲಂಬರಕೆ (ಗೆ) > ಕಲಂಬರಗೆ > ಕಲಂಬರಗಿ > ಕಲಬುರಗಿ ಆಗಿದೆ. ಪ್ರಾಚೀನದಲ್ಲಿ ಕಲಂಬರ ಜನವರ್ಗದ ವಸತಿ ನೆಲೆ ಇದಾಗಿದ್ದು ಈ ಕಾರಣದಿಂದ ಈ ಹೆಸರು ಬಂದಿದೆ. ಕಲ್ಲುಗಳ ಕಣಿವೆ ಹಾಗು ಕಲಂಬರರ ವಸತಿನೆಲೆಯ ಕೃಷಿ ಪ್ರದೇಶ ಎಂಬ ಎರಡೂ ಅರ್ಥಗಳ ಹಿನ್ನೆಲೆಯನ್ನು ಈ ಹೆಸರಿನ ಹಿಂದೆ ಗುರುತಿಸಲಾಗಿದೆ. ಪಟ್ಟಣಿಗರು ಈ ಸ್ಥಳವನ್ನು ಗುಲಬರ್ಗಾ ಎಂದು ಕರೆದರೂ ಹಳ್ಳಿಗರು ಇಂದಿಗೂ ಈ ಸ್ಥಳವನ್ನು ಕಲುಬುರ್ಗಿ ಎಂದೇ ಕರೆಯುವುದನ್ನು ಗಮನಿಸಬಹುದು.

ಇದೇ ರೀತಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗುಲಬರ್ಗಾ ಪ್ರದೇಶದ ಇನ್ನಿತರ ಸ್ಥಳಗಳೆಂದರೆ : ಕಾಳಗನೂರು, ಹರನೂರು, ಹೊನ್ನಳ್ಳಿ, ಖಣದಾಣ, ಪೇಟೆ ಇತ್ಯಾದಿ ಸೈನಿಕರಿಗೆ ನೆಲೆ ಒದಗಿಸಿದ ತಾಣ ಖಣದಾಣ ಅಥವಾ ಖಣದಾಳ; ಕಂದಾಯ ವಸೂಲಿ, ಮನೆ, ಭೂಮಿ ಇತ್ಯಾದಿ ಆಸ್ತಿಗಳನ್ನು ನೋಂದಾಯಿಸುವ ಕಛೇರಿ ಮೊದಲಾದ ಸರ್ಕಾರಿ ಕಛೇರಿಗಳನ್ನು ಹೊಂದಿರುವ ಊರು ಪೇಟೆ ಎನಿಸಿದವು. ತಾಲ್ಲೂಕುಗಳೇ ಪೇಟೆಗಳಾಗಿಯೂ ಮಾರ್ಪಟ್ಟವು. ಗುಲಬರ್ಗಾ ಜಿಲ್ಲೆಯ ತಾಲ್ಲೂಕು ಸ್ಥಳವಾದ ‘ಅಫಜಲಪುರ’ ಎಂಬುದು ಅಫಜಲಖಾನನ ಮಂತ್ರಿಯ ಸ್ಮರಣಾರ್ಥ ಪಡೆದ ಹೆಸರಾಗಿದೆ. ಇದೇ ರೀತಿ ಸುರಪುರ ಜಿಲ್ಲೆಯ ನಾಯಕ ದೊರೆಗಳ ಉಪಪತ್ನಿಯರೆನಿಸಿದ್ದ ರಂಗಮ್ಮ, ವೆಂಕಮ್ಮ,ರುಕ್ಕಮ್ಮ, ಹಸನಮ್ಮ ಇಂಥವರ ಸ್ಮರಣಾರ್ಥ ಸ್ಥಳಗಳಿಗಿಟ್ಟಿರುವ ಹೆಸರುಗಳು ರಂಗಂಪೇಟೆ, ವೆಂಕಟಾಪುರ, ರುಕುಂಪೇಟೆ, ಹಸನಾಪುರ ಇತ್ಯಾದಿ.

ಕರ್ನಾಟಕದ ಕುಂದಾಪುರ, ಕುಣಿಗಲು ಇಂತಹ ಪ್ರದೇಶಗಳ ಹೆಸರಿನ ಹಿನ್ನೆಲೆಗಳೂ ಇತಿಹಾಸದ್ದೇ ಆಗಿದೆ. ಉಡುಪಿ ಜಿಲ್ಲೆಯ ತಾಲ್ಲೂಕು ಹಾಗೂ ತಾಲ್ಲೂಕಿನ ಕೇಂದ್ರವಾದ ಕುಂದಾಪುರ ಕುಂದವರ್ಮ ಅರಸ ಪಂಚಗಂಗಾವಳಿಯ ಸಮೀಪ ಕಟ್ಟಿಸಿದ ಕುಂದೇಶ್ವರ ದೇವಾಲಯದ ಸಾಯುಜ್ಯದಿಂದ ಪಡೆದುಕೊಂಡ ಹೆಸರಾಗಿದೆ. ತುಮಕೂರು ಜಿಲ್ಲೆಯ ದಕ್ಷಿಣದ ಕೊನೆಯಲ್ಲಿರುವ ತಾಲ್ಲೂಕು ಹಾಗೂ ತಾಲ್ಲೂಕಿನ ಕೇಂದ್ರ ಕುಣಿಗಲು. ಇದು ಕುಣಿಂಗಲುನಾಡು ಎಂಬ ಪ್ರಾಂತ್ಯಂದ ಕೇಂದ್ರವಾಗಿದ್ದು ಚೋಳರ ಕಾಲದಲ್ಲಿ ‘ರಾಜೇಂದ್ರಚೋಳಪುರಂ’ ಎನಿಸಿತ್ತು.

ಬೀದರ್ ತಾಲ್ಲೂಕಿನಲ್ಲಿ ಈಗಲೂ ಇರುವ ಕನ್ನಳ್ಳಿ, ದದ್ದಾಪುರ, ಕರಕನಹಳ್ಳಿ, ತೈಲಗಾ, ಬಿಜ್ಜಲಗಾವ, ಹುಮ್ನಾಬಾದ, ನಿಜಾಮಪುರ ಮೊದಲಾದವು ಅನುಕ್ರಮವಾಗಿ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಇಬ್ಬರು ಮಕ್ಕಳಾದ ಕನ್ನಡ, ದುದ್ದನ ಸ್ಮರಣಾರ್ಥವಾಗಿಯೂ, ತೈಲಪ ಹಾಗೂ ಬಿಜ್ಜಳನ ಸ್ಮರಣಾರ್ಥವಾಗಿಯೂ ನಿಜಾಂ ದೊರೆಗಳ ಸ್ಮರಣಾರ್ಥವಾಗಿಯೂ ಇಟ್ಟಿರುವ ಹೆಸರುಗಳಾಗಿವೆ.

ಕರ್ನಾಟಕದ ಧಾರವಾಡ ತಾಲ್ಲೂಕಿನ ಕೆಲವು ಸ್ಥಳನಾಮಗಳಲ್ಲಿಯೂ ರಾಜರ ದಾನ, ಯುದ್ಧ, ವಿಜಯಗಳು, ಗ್ರಾಮಗಳು ಅಗ್ರಹಾರಗಳಾಗಿ ಪರಿವರ್ತನೆಗೊಂಡ ಹಿನ್ನೆಲೆಗಳು ಇರುವುದನ್ನು ಗುರುತಿಸಬಹುದು. ಇದಕ್ಕೆ ಉದಾಹರಣೆಯಾಗಿ ಸೂಚಿಸಬಹುದಾದ ಕೆಲವು ಸ್ಥಳನಾಮಗಳೆಂದರೆ; ತಂತುಪುರಿ, ಧಾರನಗರ = ಧಾರವಾಡ, ಬೆಳ್ಳೂಟ್ಟಿಗೆ > ಬೆಳ್ಳಿಟ್ಟಿಗೆ > ಗರಗ; ತೊಳನೂರು > ತೇಗೂರು; ಹುಪ್ಪವಳ್ಳಿ > ದೇವರಹುಬ್ಬಳ್ಳಿ; ಕುಂಭಾಪುರ > ಕುಂದೂರು > ನರೇಂದ್ರ; ಹೊಸವೊಳಲು > ಸಿದ್ಧಾಪುರ; ಹುಲ್ಗುಂಡಿ > ಭಾವಿಹಾಳ ಇತ್ಯಾದಿ. ಕಲಚೂರ್ಯ ಬಿಜ್ಜಳನ ಸೈನ್ಯದೊಂದಿಗೆ ನಡೆದ ಕಾಳಗದ ಸ್ಥಳ ಕಾದರಹಳ್ಳಿ, ಕೊನ್ತಕುಳಿ ಇದೇ ರೀತಿ ನರೇಂದ್ರ, ಭೋಗೂರು, ಮಹರಾಜವಾಡಿ, ಬಮ್ಮರಸಿಕೊಪ್ಪ ಇಂತಹ ಸ್ಥಳಗಳೂ ಕೂಡ ಇತಿಹಾಸದ ಮೇಲೆ ಬೆಳಕು ಚೆಲ್ಲುವಂಥವಾಗಿವೆ.

ಇದೇ ರೀತಿ ಐತಿಹಾಸಿಕ ಸಂಗತಿಗಳ ಕಾರಣಗಳಿಂದ ಹಳೆಯ ಹೆಸರು ಅಳಿದು ಹೊಸ ಹೆಸರು ರೂಢಿಗೆ ಬಂದಿರುವುದಕ್ಕೆ ಮತ್ತಷ್ಟು ಪೂರಕ ಉದಾಹರಣೆಗಳನ್ನು ಪಟ್ಟಿ ಮಾಡಬಹುದು.

ಅರಿಕೊಠಾರ ಎಂಬ ಸ್ಥಳದ ಹೆಸರು ಚಾಮರಾಜ ಒಡೆಯರ ನೆನಪಿಗಾಗಿ ಚಾಮರಾಜನಗರವಾಗಿಯೂ ಅಲ್ಲಿಯ ಆದಿದೈವ ಚಾಮರಾಜೇಶ್ವರನೂ ಆಗಿದ್ದಾನೆ. ಅತ್ತಿಗುಪ್ಪೆ ಕೃಷ್ಣರಾಜಪೇಟೆಯೆನಿಸಿದೆ; ಎಡತೊರೆ – ಕೃಷ್ಣರಾಜನಗರವಾಗಿದೆ; ಹೆಮ್ಮಿಗೆ ಹರಿಹರರಾಜೇಂದ್ರ ಪುರವಾಗಿದೆ; ಕೃಷ್ಣರಾಜ ತಾಲ್ಲೂಕಿನ ಭೇರ್ಯ ದೇವರಾಜಪುರವಾಗಿದೆ; ಮಾರ್ಚಹಳ್ಳಿ ನರಸರಾಜಪುರವಾಗಿದೆ.

ಭಾಷಿಕ ದೃಷ್ಟಿಯಿಂದ ನೋಡಿದಾಗ ಇಲ್ಲಿಯೂ ಅನ್ಯಪ್ರಭಾವಗಳು ಸ್ಥಳನಾಮಗಳ ಮೇಲೆ ಆಗಿರುವುದನ್ನು ಗಣನೀಯವಾಗಿ ಗುರುತಿಸಬಹುದು. ಹೈದ್ರಾಬಾದ್ ಕರ್ನಾಟಕದ ಸ್ಥಳನಾಮಗಳಲ್ಲಿ ಶುದ್ಧ ದ್ರಾವಿಡ ಅಂಶಗಳಿದ್ದರೂ ಅನ್ಯಭಾಷಾ ಪ್ರಭಾವ ಸಾಕಷ್ಟಿವೆ. ಬೀದರ್, ಗುಲಬಾರ್ಗ ಜಿಲ್ಲೆಯ ಸ್ಥಳನಾಮಗಳಲ್ಲಿ ಉರ್ದು ಪ್ರಭಾವ ಹೆಚ್ಚಾಗಿದ್ದರೆ ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದೆ. ಸಂಗಮೇಶ್ ಸವದತ್ತಿಮಠ ಅವರು ಹೇಳಿರುವಂತೆ ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳಲ್ಲಿ ಸಾಗರ, ಸಮುದ್ರ, ಹಟ್ಟಿ, ಗುಂಡಿ, ಮುಣುಗು, ಬೆಂಚೆ, ಚೇರು, ಗೋಡು, ಸೆರಗು, ಗುರ್ಕಿ, ಚಿಂತ, ಗುಪ್ಪೆ, ಮಡಗು, ಕುಪ್ಪೆ, ಮಲೆ, ನುಗ್ಗಿ, ಪಟ್ನ, ದುರ್ಗ ಈ ಪದಗಳು ಸ್ಥಳನಾಮಗಳ ಉತ್ತರ ಘಟಕಗಳಾಗಿ ವಿಶೇಷವಾಗಿ ಬಳಕೆಗೊಂಡಿವೆ. ಇವು ಬೀದರ್, ಗುಲಬರ್ಗಾ ಜಿಲ್ಲೆಯ ಸ್ಥಳನಾಮಗಳಲ್ಲಿ ಕಂಡುಬರುವುದಿಲ್ಲ. ಈ ಪ್ರದೇಶಗಳ ಸ್ಥಳನಾಮಗಳಲ್ಲಿ ‘ಗಾಂವ’, ‘ವಾಡಿ’, ‘ಠಾಣ’, ‘ಖೇಡ’, ‘ಗಾ’, ‘ಗೆ’, ‘ಗಿ’, ‘ಗಿ’, ‘ಅಬಾದ್’ ಇಂತಹ ಉತ್ತರ ಘಟಕಗಳು ಬಳಕೆ ಹೆಚ್ಚಾಗಿವೆ. ಅದೇ ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳಲ್ಲಿ ಪೂರ್ವಪದಗಳಲ್ಲಿ ‘ಹಗಂ’, ‘ಹರವಿ’, ‘ಯರ್ರ‍’, ‘ಕುರು’, ‘ಕೊರ್ಲ’, ಇಂತಹ ಪ್ರಯೋಗಗಳನ್ನು ಗುರುತಿಸಬಹುದು.

ಅನ್ಯಭಾಷಾ ಪ್ರಭಾವದಿಂದ ಶಬ್ದಾರಂಭದಲ್ಲಿ ಮೂರ್ಧನ್ಯ ವ್ಯಂಜನಗಳನ್ನೂ ಮಹಾಪ್ರಾಣಗಳನ್ನೂ ಹೊಂದಿರುವ ಸ್ಥಳನಾಮಗಳನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಗುರುತಿಸಬಹುದು. ಉದಾ: ಡೋಂಗರ, ಗಾಂವ, ಡಣಾಪುರ, ಠಾಣಾಕುಸನೂರು ಇತ್ಯಾದಿ. ಮಹಾಪ್ರಾಣಯುಕ್ತ ಸ್ಥಳನಾಮಗಳಿಗೆ ಉದಾ: ಭೀಮಲಖೇಡ, ಭಾಲ್ಕಿ, ಭರತಮುರುಗಿ, ಭಾತಮ್ರ, ಘಟಬೋರಳ, ಖಟಕ ಚಿಂಚೋಳಿ, ಭೈರಾಪುರ ಇತ್ಯಾದಿ.

ಕರ್ನಾಟಕ ಬೀದರ್, ಕಲಬುರ್ಗಿ, ರಾಯಚೂರು ಇಂತಹ ಪ್ರದೇಶಗಳ ಸ್ಥಳನಾಮಗಳನ್ನು ಗಮನಿಸಿದಾಗ ಸುಮಾರು ಶತಮಾನಗಳು ಈ ಪ್ರದೇಶಗಳು ಮಹಮ್ಮದೀಯ ಆಳ್ವಿಕೆಗೆ ಹೆಚ್ಚಾಗಿ ಒಳಪಟ್ಟಿದ್ದ ಕಾರಣ ಈ ಪ್ರದೇಶಗಳ ಪಟ್ಟಣಗಳ ಹೆಸರುಗಳಲ್ಲಿ ಉರ್ದು, ಫಾರಸಿ, ಅರಬ್ಬಿ ಭಾಷೆಗಳ ಪ್ರಭಾವಗಳನ್ನು ಹೆಚ್ಚಾಗಿ ಗುರುತಿಸಬಹುದು. ಉದಾ: ಹುಮ್ನಾಬಾದ (ಹುಮಾಯೂನ್ + ಆಬಾಬ್), ಕುತ್ಬಾಬಾದ(ಖುತುಬ್ + ಆಬಾದ್), ಆಲಿಯಾಬಾದ (ಆಲಿ + ಆಬಾದ) ಇತ್ಯಾದಿ. ಇವುಗಳಲ್ಲಿ ‘ಆಬಾದ್’ ಎಂಬುದು ವರ್ಗವನ್ನು ಸೂಚಿಸುವ ಹೆಸರಾಗಿದೆ. ಇದೇ ರೀತಿ ವರ್ಗಪದಗಳಾಗಿ ಹವೇಲಿ, ಬಾಗ, ಭುಜರ್ಗಾ, ಟೇಕಡಿ, ಖುರ್ದ ಇತ್ಯಾದಿಗಳು ಸ್ಥಳನಾಮಗಳಲ್ಲಿ ಬಳಕೆಗೊಂಡಿವೆ. ಉದಾ: ಗದಲೆಗಾವ ಭುಜರ್ಗಾ, ಹೈಯಲ್ ಭುಜರ್ಗಾ ಇತ್ಯಾದಿ. ಕೆಲವೊಮ್ಮೆ ಗೋಡ ಚಿಂಚೋಳಿ, ಗೋಡಕುಂಬಾರ ಚಿಂಚೋಳಿ, ಲಾಡಮುಗಳಿ ಇತ್ಯಾದಿ ಸ್ಥಳವಾಚಿಗಳಲ್ಲಿ ವರ್ಗನಾಮಗಳು ಪೂರ್ವಸ್ಥಾನಗಳಲ್ಲಿ ಪ್ರಯೋಗಗೊಂಡಿರುವುದನ್ನು ಗಮನಿಸಬಹುದು.

‘ಐವಾನಶಾಹಿ’ ಎಂಬ ಸ್ಥಳನಾಮ ಕಲಬುರ್ಗಿಯಲ್ಲಿ ಈಗಲೂ ಉಳಿದುಕೊಂಡಿವೆ. ಹೈದರಾಬಾದ್ ನವಾಬ ತಂಗುತ್ತಿದ್ದ ಪ್ರದೇಶದಿಂದ ಬಂದ ಹೆಸರು ಇದಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ನೆಹರುಗುಂಜ, ಆಸಿಫ್‌ಗಂಜ, ಅಶೋಕಗಂಜ ಇತ್ಯಾದಿ ಸ್ಥಳಗಳ ಹೆಸರುಗಳಲ್ಲಿ ಕಂಡುಬರುವ ‘ಗಂಜ’ ಎಂಬ ಪದಪ್ರಯೋಗ ವ್ಯಾಪಾರಸ್ಥಳ ಎಂಬುದನ್ನು ಸೂಚಿಸುತ್ತದೆ. ಮಿಜಗುರಿ, ಮೋಮಿನಪುರ, ಶಹಾಬಜಾರ್, ಮತ್ತಂಪುರ್, ಸರಾಫ್‌ಬಜಾರ್, ಲೋಹಾರ್‌ಗಳಲ್ಲಿ, ಬಡೇಪುರ ಕಾಲೋನಿ – ಇತ್ಯಾದಿ ಉರ್ದುವಿನೊಂದಿಗೆ ಬೆರೆತ ಸಮ್ಮಿಶ್ರ ಭಾಷಾ ಪದಗಳು ಓಣಿಗಳ ಪ್ರದೇಶಗಳಿಗಿಟ್ಟ ಹೆಸರುಗಳಾಗಿವೆ. ‘ಕೊಹಿನೂರ ಪಹಾಡ ಶರೀಫ್’ ಇಂತಹ ಮೂರು ನಾಲ್ಕು ಘಟಕಗಳ ಉರ್ದುಭಾಷಾ ಪ್ರಭಾವದ ಸ್ಥಳನಾಮಗಳೂ ಈ ಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡುಬರುತ್ತವೆ.

ಉರ್ದು ಭಾಷೆಯಷ್ಟೇ ಅಲ್ಲದೆ ತೆಲುಗು ಭಾಷೆ ಸಹಜವಾಗಿ ಪ್ರಭಾವ ಬೀರಿರುವ ಸ್ಥಳನಾಮಗಳೂ ಈ ಪ್ರದೇಶಗಳಲ್ಲಿವೆ. ಉದಾ: ಪಾತಾರಾಯಿಪಲ್ಲಿ, ಪೋಲಕಪಲ್ಲಿ, ನಾಗಮಾರಪಲ್ಲಿ – ಬಳ್ಳಾರಿ ಜಿಲ್ಲೆಯ ಇಂತಹ ಸ್ಥಳನಾಮಗಳಲ್ಲಿ ಕಂಡುಬರುವ ‘ಪಲ್ಲಿ’ ಎಂಬುದು ಕನ್ನಡ ಸ್ಥಳನಾಮಗಳಿಗೂ ಅನ್ವಯವಾಗುತ್ತದೆ. ರಾಯಚೂರು ಜಿಲ್ಲೆಯಲ್ಲಿ ತೆಲುಗು ಮೂಲಕ ಸ್ಥಳನಾಮಗಳು ನೂರಾರಿವೆ. ಉದಾ: ರಾಯಿಪಲ್ಲಿ, ಚಿಂತಲಪಲ್ಲಿ ಬೋರಂಪಲ್ಲಿ, ರಾಸೂರು, ನಿಡುವಂಚಿ, ಪುಲಿಚೆರು, ಯರ್ರ‍ ಗುಂಡಿ, ರಾವ್ಯಾಳು ಇತ್ಯಾದಿ. ಬೀದರ್, ಕಲಬುರ್ಗಿ ಈ ಜಿಲ್ಲೆಗಳಲ್ಲಿ ಪಂಡರಿವಾಡಿ, ಧಾರಜವಾಡಿ, ತುಳಜಾಪುರ ಇತ್ಯಾದಿ ಮರಾಠಿ ಭಾಷೆಯ ಪ್ರಭಾವದಿಂದ ಕಾಣಿಸಿಕೊಳ್ಳುವ ಸ್ಥಳನಾಮಗಳಿದ್ದರೂ ಅವು ಕ್ವಚಿತ್ತಾಗಿವೆ.

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕೆಲವು ವಿಶಿಷ್ಟ ಸ್ಥಳನಾಮಗಳನ್ನು ಹೀಗೆ ಸೂಚಿಸಬಹುದು : ಉಜ್ಜಿನಿ, ಗುಂಡುಮುಣುಗು, ಒರುವಾಯಿ, ಚೆಲ್ಳಗುರ್ಕಿ, ರಾವಾಳು, ಮಳಖೇಡ (ಹಿಂದಿನ ಹೆಸರು ಮಳೆಖೇಟಕ [ಮಾನ್ಯಖೇಡ]), ಆಂದೋಲಾ (ಹಿಂದಿನ ಹೆಸರು ಆನೆದೆಲೆ > ಆಂದೇಲೆ > ಆಂದೋಲಾ), ಮಸ್ಕಿ (ಮೊಸಂಗೆ > ಮೊಸಗಿ > ಮಸ್ಕಿ >), ಕೊಪಣ > ಕೊಪ್ಪಳ, ತಿಂಥಿಣಿ ಇತ್ಯಾದಿ.

ಕರ್ನಾಟಕದ ಧಾರವಾಡದಂತಹ ಊರಿನ ಸ್ಥಳನಾಮಗಳನ್ನು ಗಮನಿಸಿದರೆ ಇವು ಸಾಮಾನ್ಯವಾಗಿ ಕೂಡು ನುಡಿಗಳಾಗಿವೆ. ಇಲ್ಲವೆ ಸಮಸ್ತ ಪದಗಳಾಗಿವೆ ಹಾಗೂ ಎರಡರಿಂದ ನಾಲ್ಕು ಆಕೃತಿಮಾಗಳನ್ನು ಹೊಂದಿರುವ ಸ್ಥಳನಾಮಗಳು ಹೆಚ್ಚಾಗಿವೆ. ಉದಾ : ಹುಪ್ಪಳ್ಳಿ (ಹುಪ್ಪ + ವಳ್ಳಿ), ಭಾವಿಹಾಳ, ಮನಗುಂಡಿ, ಕೊಳನೂರು ಇಂತಹವು ಎರಡು ಆಕೃತಿಮಾಗಳನ್ನು ಹೊಂದಿವೆ. ಮರೆಯವಾಡ (ಮರೆ + ಯ + ವಾಡ), ಸವಣಳ್ಳಿ (ಸವಣ + ನ + ಪಳ್ಳಿ) ಇತ್ಯಾದಿ. ಇಲ್ಲಿ ಏಕಪದ ಸ್ಥಳನಾಮಗಳನ್ನೂ ಕಾಣಬಹುದು. ಉದಾ : ಪೂಲಿ, ಖೇಡ, ಸಬ್ಬಿ ಇತ್ಯಾದಿ.

ಧಾರವಾಡದ ಹಳೆಯ ಕೆಲವು ಸ್ಥಳನಾಮಗಳ ಘಟಕಗಳು ಈ ರೀತಿ ಇವೆ : ಅಂಬಿ > ಹುಲ್ಲಂಬಿ; ಕಲ್ಲ / ಗಲ್ಲ > ಉಣಕಲ್ಲ ಕಂದಗಲ್ಲ, ಕುಳಿ > ಕೊಂಡಕುಳಿ, ಕೋಡ > ತಡಕೋಟ, ಗೇರಿ > ಬೆಳವಾಡಿಗೇರಿ, ಕಾದರವಳ್ಳಿ> ಕಾದರೊಳ್ಳಿ, ಪೊಳಲ; ಪೊಸವೊಳಲ > ಸಿದ್ಧಾಪುರ

ಸಂಸ್ಕೃತ ಭಾಷೆಯ ಪ್ರಭಾವದಿಂದಲೂ ಸ್ಥಳಗಳ ಹೆಸರುಗಳು ಬದಲಾವಣೆ ಹೊಂದಿವೆ. ಉದಾ : ಸುತ್ತೂರು – ಶ್ರೋತ್ರಿಯೂರ್; ಬೆಳಗೊಳ – ಧವಳತಟಾಕ; ಬಿಳಿಗಿರಿರಂಗನ ಬೆಟ್ಟ – ಶ್ವೇತಾದ್ರಿ; ಬೇಲೂರು – ವೇಲಾಪುರಿ; ಬಿದರೂರು – ವೇಣುಪುರಿ, ಗುಬ್ಬಿ – ಚಾತಕಪುರಿ; ಹುಲ್ಲಹಳ್ಳಿ – ತೃಣಪುರಿ; ಉಡುಪಿ – ರಜತಪೀಠ ಇತ್ಯಾದಿ. ಮೂಲ ಸಂಸ್ಕೃತ ಪದಗಳ ಸ್ಥಳಗಳು ಹೊಂದಿರುವ ವ್ಯತ್ಯಾಸಕ್ಕೆ ಉದಾ ಶ್ಯಾಮನಹಳ್ಳಿ – ಚಾಮನಹಳ್ಳಿ, ಬ್ರಹ್ಮನಹಳ್ಳಿ – ಬೊಮ್ಮನಹಳ್ಳಿ ಇತ್ಯಾದಿ. ಆಂಗ್ಲರ ಆಳ್ವಿಕೆಯ ಪ್ರಭಾವದಿಂದ ಉಂಟಾದ ಸ್ಥಳನಾಮಗಳಲ್ಲಿ ಉಚ್ಚಾರ ಬದಲಾವಣೆಯನ್ನೂ ಇಲ್ಲಿ ಗಮನಿಸಬಹುದು. ಬೆಂಗಳೂರು – ಬ್ಯಾಂಗಲೂರ್, ಹಾಸನ – ಹಾಸನ್; ಧಾರವಾಡ – ಧಾರ್‌ವಾರ್; ಕಾರವಾರ – ಕಾರ್‌ವಾರ್‌; ಚಿತ್ರದುರ್ಗ – ಚಿತಲ್‌ದುರ್ಗ, ಕೊಡಗು – ಕೂರ್ಗ್; ಮುದುವೊಳಲ್ – ಮುಧೋಳ್; ರಾಮನಗರಂ – ಕ್ಲೋಸ್ ಪೇಟೆ, ಹುಬ್ಬಳ್ಳಿ – ಹೂಬ್ಳಿ ಇತ್ಯಾದಿ.

ಈ ರೀತಿ ಕರ್ನಾಟಕದಾದ್ಯಂತ ಹಲವಾರು ಸ್ಥಳನಾಮಗಳು ಐತಿಹಾಸಿಕ ಕಾರಣಗಳಿಂದ ತಮ್ಮ ಮೂಲ ಹೆಸರಿನಲ್ಲಿ ಬದಲಾವಣೆ ಪಡೆದಿರುವುದಲ್ಲದೆ ಆಯಾ ಕಾಲದ ಐತಿಹಾಸಿಕ ಘಟನೆಗಳನ್ನೂ ಇವು ಬಿಂಬಿಸುವಂತಹವಾಗಿದೆ. ಒಟ್ಟಾರೆಯಾಗಿ ಐತಿಹಾಸಿಕ ಅಂಶದಿಂದ ಸ್ಥಳನಾಮಗಳನ್ನು ಗಮನಿಸಿದರೆ, ಕರ್ನಾಟಕದಾದ್ಯಂತ ಇರುವ ಹಲವಾರು ಸ್ಥಳನಾಮಗಳು, ಆಯಾ ಕಾಲದಲ್ಲಿ ಆಳಿದ ರಾಜರುಗಳು, ನಾಯಕರ ಅಧಿಕಾರದ ಪ್ರಭಾವದಿಂದ, ಅನ್ಯಭಾಷೆಗಳ ಪ್ರಭಾವದಿಂದ ತಮ್ಮ ಪೂರ್ವದ ಹಳೆಯ ಹೆಸರುಗಳನ್ನು ಬದಲಿಸಿಕೊಂಡು ಪ್ರತಿನಾಮಗಳನ್ನು ಪಡೆದಿರುವುದು ಗೋಚರವಾಗುತ್ತದೆ.

ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜಾನಪದೀಯ ಹಿನ್ನೆಲೆಯುಳ್ಳ ಸ್ಥಳನಾಮಗಳು: ಸ್ಥಳನಾಮಗಳಿಂದ ತಿಳಿದು ಬರುವ ಜಾತಿ, ಬುಡಕಟ್ಟು, ಮತ, ಧರ್ಮ, ಭಾಷೆ, ವೃತ್ತಿ, ಗ್ರಾಮ, ಕುಟುಂಬ, ವಂಶ, ಜಾತಿ, ಆಚಾರ, ವಿಚಾರ, ವ್ಯವಹಾರ ಇತ್ಯಾದಿ ವಿಚಾರಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ ಎಷ್ಟೋ ವೇಳೆ ಮನೆತನದ ಬೆಸುಗೆಯಾಗಿಯೂ ಕಂಡುಬರುತ್ತವೆ. ಆಲೂರು, ಮಾಲೂರು, ಹಿರೇಮಲ್ಲೂರು, ಹುನಗುಂದ, ಕಣವಿ ಇತ್ಯಾದಿ ಬಗೆಯ ಸ್ಥಳನಾಮಗಳು ವ್ಯಕ್ತಿನಾಮಗಳಾಗಿಯೂ ಬಳಕೆಯಲ್ಲಿವೆ. ಉದಾ : ಆಲೂರು ವೆಂಕಟರಾಯರು, ಗುಬ್ಬಿವೀರಣ್ಣ, ಹಿರೇಮಲ್ಲೂರು ಈಶ್ವರನ್, ಚೆನ್ನವೀರ ಕಣವಿ ಇತ್ಯಾದಿ.

ಕರ್ನಾಟಕದಲ್ಲಿ ಕಂಡುಬರುವ ಕುರುಬರಹಳ್ಳಿ, ಬೀರನಹಳ್ಳಿ, ಕಂಚಿಗಾರಕೊಪ್ಪಲು, ಗೌಡಗೆರೆ, ವಡ್ಡರಪಾಳ್ಯ, ನಾಯಿಂಡಹಳ್ಳಿ, ಇಟ್ಟಿಗೆಗೂಡು, ಗರಡಿಕೇರಿ, ಬಂಡಿಕೇರಿ, ಗೊಲ್ಲಗೇರಿ, ಗೊಲ್ಲರಹಟ್ಟಿ, ಒಕ್ಕಲಗೇರಿ, ಗೊಲ್ಲರಹಳ್ಳಿ, ಪಡುವಾರಳ್ಳಿ, ಬೆಸ್ತಗೇರಿ, ಮೇದರಕೇರಿ; ಬೇಡರಹೊಸಹಳ್ಳಿ, ಜೋಗಿಹಳ್ಳಿ, ಉಪ್ಪಾರಹಳ್ಳಿ – ಇತ್ಯಾದಿ ಹೆಸರಿನ ಸ್ಥಳಗಳು ಮುಖ್ಯವಾಗಿ ಆಯಾ ಸ್ಥಳದ ಜನರ ವೃತ್ತಿ ಮತ್ತು ಜಾತಿಗನುಗುಣವಾಗಿ ಹೆಸರು ಪಡೆದಿವೆ. ಹೀಗೆಯೇ ಕಮ್ಮಾರರೇ ಮುಖ್ಯವಾಗಿ ನೆಲೆಸಿರುವ ಸ್ಥಳ ಕಮ್ಮಾರಗಟ್ಟಿ ಎಂದೂ ಚಿಬ್ಬಲು, ಪುಟ್ಟಿ, ಹೆಡಿಗೆ ಮೊದಲಾದ ವಸ್ತುಗಳನ್ನು ಮಾಡುವ ಕೊರಚರೇ ವಾಸವಿರುವ ಹಳ್ಳಿ ಕೊಡಚಿಗನಹಳ್ಳಿ ಎಂದಾಗಿದೆ. ಕಂಚಿನ ವಸ್ತುಗಳನ್ನು ಮಾಡುವ ಕಂಚುಗಾರರು ವಾಸವಾಗಿರುವ ಹಳ್ಳಿ ಕಂಚಗಾರಹಳ್ಳಿಯಾಗಿದೆ. ಧಾರವಾಡದ ಮುಂಡರಗಿ, ಕಾದರೊಳ್ಳಿ, ಗೊಲ್ಲರಹಟ್ಟಿ, ನಾಗರಹಾಳ, ಉಂಬರವಾಡಿ, ಬೊಂದರವಾಡ, ತಾವರಖೇಡ, ಅಂಗರಗಟ್ಟಿ, ಕೆಳವರ ಕೊಪ್ಪ – ಇಂತಹ ಸ್ಥಳಗಳೂ ಮುಂಡರು, ಕಾದರು, ಗೊಲ್ಲರು, ನಾಗರು, ಚಿತ್ತರು, ಉಂಬರು, ಬೊಂದರು, ತಾವರು, ಬುಡ್ಡರು, ಹೆಳವರು – ಈ ಬಗೆಯ ಬುಡಕಟ್ಟುಗಳ ವಸತಿ ತಾಣಗಳಾಗಿವೆ.

ಸಾಮಾನ್ಯವಾಗಿ ಸ್ಥಲನಾಮಗಳ ಅಂತ್ಯದಲ್ಲಿ ಬರುವ ಹಳ್ಳಿ, ಹಟ್ಟಿ, ದೊಡ್ಡಿ, ಸಂದ್ರ, ಕೆರೆ, ಕಟ್ಟೆ, ಕೊಳ, ಕೊಪ್ಪ,ಊರು,ಪುರ, ಪಟ್ಣ ಇಂತಹ ಪದಗಳು ಸ್ಥಳಗಳ ಸ್ವರೂಪ, ಲಕ್ಷಣಗಳ ಮೇಲೆ ಬೆಳಕು ಚೆಲ್ಲುವಂತಹವಾಗಿರುತ್ತವೆ. ಕರ್ನಾಟಕದಾದ್ಯಂತ ಈ ರೀತಿ ಕೊನೆಗೊಳ್ಳುವ ಪದಗಳುಳ್ಳ ಸ್ಥಳನಾಮಗಳು ಅಸಂಖ್ಯವಾಗಿವೆ.

ಕೆಲವೊಮ್ಮೆ ಗ್ರಾಮೀಣರು ಉದ್ದವಿರುವ ಸ್ಥಳನಾಮಗಳನ್ನು ಸಂಕ್ಷೇಪರೂಪದಲ್ಲಿ ಕರೆಯುವ ರೂಢಿಯೂ ಉಂಟು. ಉದಾ: ಗೋಪಗೊಂಡನಹಳ್ಳಿ – ಗೋಪಾನಳ್ಳಿ, ಗೋವಿನಕೋವಿ – ಗ್ವಾನ್ಕೇವಿ; ಹರನಹಳ್ಳಿ – ಹಳ್ಳಳ್ಳಿ ಇತ್ಯಾದಿ.

ಚಿನ್ನಾಯ್ಕನಹಳ್ಳಿ, ಚಿಕ್ಕಂಕನಹಳ್ಳಿ, ಹುರಳಿಕ್ಯಾತನಹಳ್ಳಿ, ದುಗ್ಗೆಮಾರನಪಾಳ್ಯ, ಕನ್ನೇಗೌಡನಕೊಪ್ಪಲು, ಮಲ್ಲೇಗೌಡನಕೊಪ್ಪಲು, ಅಚ್ಚಪ್ಪನಕೊಪ್ಪಲು, ಬಾಬುರಾಯನಕೊಪ್ಪಲು, ನಾಗಯ್ಯಹುಂಡಿ, ತಿಪ್ಪೇಗೌಡನಹಳ್ಳಿ, ಬೋರಸಂದ್ರ, ಗಂಗನಕೋಟೆ, ಮಾದನಬಾವಿ, ಕಂಕನಹಳ್ಳಿ, ಕೆಂಚಿಕೊಪ್ಪ, ಕಪ್ಪನಹಳ್ಳಿ, ಸೋಮನಕೊಪ್ಪ, ಹಾಡೋನಹಳ್ಳಿ – ಇಂತಹ ಸ್ಥಳನಾಮಗಳು ವ್ಯಕ್ತಿಯ ಹೆಸರಿನೊಂದಿಗೆ ಹೆಣೆದುಕೊಂಡಿವೆ.

ಮತ, ಧರ್ಮಗಳು, ಧಾರ್ಮಿಕ ವ್ಯಕ್ತಿಗಳು ಪ್ರಭಾವಗಳು ಸ್ಥಳನಾಮಗಳ ಮೇಲೆ ಸಾಕಷ್ಟಿವೆ. ಬಸವನ ಬಾಗೇವಾಡಿ, ಉಡುತಡಿ, ಅಕ್ಕಮಹಾದೇವಿ, ಸೊನ್ನಲಿಗೆ ಸಿದ್ಧರಾಮ; ಗೋಕುಲಪುರ, ಗೋಪಾಲಪುರ, ನಾರಾಯಣಪುರ, ಶ್ರೀರಂಗಪಟ್ಟಣ, ರಂಗನತಿಟ್ಟು, ಕೊಲ್ಲೂರು; ಜೈನರಹಳ್ಳಿ, ಬಸದಿಹಳ್ಳಿ, ಬೂದಿಹಾಳು, ಬೂದಿಪಡಗ; ಕಿಶ್ಚಿಯನ್ ಕೊಪ್ಪಲು, ಸಂತಮೇರಿನಗರ; ಮಹಮದ್‌ಪುರ, ಬೇಂಗಪೇಟೆ – ಈ ಬಗೆಯ ಸ್ಥಳನಾಮಗಳನ್ನು ಗಮನಿಸಿದಾಗ ಇಂತಹ ಹಲವಾರು ಸ್ಥಳನಾಮಗಳು ಶೈವ, ವೈಷ್ಣವ, ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ ಮೊದಲಾದ ಮತ, ಧರ್ಮಗಳಿಗೆ ಪೂರಕವಾದ ನಾಮಗಳಾಗಿವೆ.

ಹಲವಾರು ಸ್ಥಳನಾಮಗಳಿಗೆ ಹಿನ್ನೆಲೆಯಾಗಿರುವ ಅನೇಕ ಐತಿಹ್ಯಗಳು, ಕಥೆಗಳು ಸಾಂಸ್ಕೃತಿಕ ಅಂಶದ ಮೇಲೆ ಬೆಳಕು ಬೀರುವುದರೊಂದಿಗೆ ಜಾನಪದ ಸಂಗತಿಗಳ ಕಡೆಗೂ ಗಮನ ಸೆಳೆಯುತ್ತವೆ. ಲೆಕ್ಕ ಹಾಕಿದರೆ ಈ ಬಗೆಯ ಹಿನ್ನೆಲೆಗಳುಳ್ಳ ಸ್ಥಳನಾಮಗಳು ಕರ್ನಾಟಕದಾದ್ಯಂತ ಅಸಂಖ್ಯಾತ. ಇದಕ್ಕೆ ಕೆಲವು ಉದಾಹರಣೆಗಳೆಂದರೆ; ಮೈಸೂರು ಜಿಲ್ಲೆಯ ಕಾವೇರಿನದಿಯ ಎಡತೀರದಲ್ಲಿರುವ ಎಡತೊರೆ ಅಗಸ್ತ್ಯನ ಮಡದಿ ಕಾವೇರಿ ಗಂಡನನ್ನು ಹಿಂದಿಕ್ಕಿ ವೇಗವಾಗಿ ಹರಿಯಲಾರಂಭಿಸಿದಾಗ ಅಗಸ್ತ್ಯ ಅರ್ಕೇಶ್ವರನ ಪೂಜೆಯ ಮೂಲಕ ಆಕೆ ಓಡಿಹೋಗುವುದನ್ನು ತಡೆಯಲೆತ್ನಿಸುತ್ತಾನೆ. ಆ ಸಂದರ್ಭದಲ್ಲಿ ಜನಸಾಮಾನ್ಯರ ಕ್ಷೇಮಕ್ಕಾಗಿ ಕಾವೇರಿ ಮುಂದೆ ಮುಂದೆ ಹರಿಯುವುದನ್ನು ತಡೆಯಬಾರದೆಂಬ ಋಷಿಗಳ ಪ್ರಾರ್ಥನೆಗೆ ಓಗೊಟ್ಟ ಅಗಸ್ತ್ಯ ತನ್ನ ಎಡಭಾಗದಲ್ಲಿ ಚಲನೆಯನ್ನು ಮುಂದುವರಿಸುವಂತೆ ಮಡದಿ ಕಾವೇರಿಗೆ ಹೇಳುತ್ತಾನೆ. ಈ ಕಾರಣದಿಂದ ಈ ಸ್ಥಳ ಎಡತೊರೆಯೆನಿಸಿತು.

ತ್ರೇತಾಯುಗದಲ್ಲಿ ಚುಂಚನೆಂಬ ಹೆಸರಿನ ರಾಕ್ಷಸನ ಉಪದ್ರವವನ್ನು ತಡೆಯಲಾರದ ಋಷಿಗಳ ಮೊರೆಯಂತೆ ಶ್ರೀರಾಮನು ಚುಂಚ ರಾಕ್ಷಸನಾಗಿದ್ದರೂ ಅವನನ್ನು ಸಂಹರಿಸದೆ ತನ್ನ ಭಕ್ತನಾಗಿದ್ದ ಅವನನ್ನು ಮತ್ತು ಅವನ ಹೆಸರನ್ನು ಚಿರಸ್ಥಾಯಿಗೊಳಿಸಿ ಆ ಸ್ಥಳದಿಂದ ಅವನನ್ನು ದೂರ ಅಟ್ಟಿ ಆ ಸ್ಥಳಕ್ಕೆ ಚುಂಚನ ಹೆಸರನ್ನೇ ಇಟ್ಟನೆಂದು ಕಾವೇರಿ ನದಿಯ ದಡದ ಮೇಲಿರುವ ಪವಿತ್ರಕ್ಷೇತ್ರ ಚುಂಚನಕಟ್ಟೆ ಸ್ಥಳನಾಮಕ್ಕೆ ಐತಿಹ್ಯವಿದೆ.

ಈ ಬಗೆಯ ಐತಿಹ್ಯಗಳ ಹಿನ್ನೆಲೆಯನ್ನು ಮೈಸೂರು, ಬೆಂಗಳೂರು, ಶಿವಮೊಗ್ಗ, ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮಗಳಾದ ಅತ್ತಿಗೋಡು, ರಾವಂದೂರು, ಹಾಸನ ಜಿಲ್ಲೆಯ ಬೇಲೂರು, ಹಾಸನ, ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್, ಈಚೂರು, ಅಂಬುತೀರ್ಥ, ಶಿಗ್ಗಾಂವಿ ತಾಲ್ಲೂಕಿನ ಬೆಂಡಿಗೇರಿ, ಕುಂದಾಪುರ, ವಿಟ್ಲದ ಕೆಳೆಂಜಿಮಲೆ, ಮಂಗಳೂರು ತಾಲ್ಲೂಕಿನ ಕಟೀಲು, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಧರ್ಮಸ್ಥಳ, ಕೊಡಚಾದ್ರಿ, ಧ್ವಜಪುರ – ಹೀಗೆ ಕರ್ನಾಟಕದಾದ್ಯಂತ ಹಬ್ಬಿರುವ ಜಿಲ್ಲೆಗಳು, ತಾಲ್ಲೂಕುಗಳು ಸ್ಥಳನಾಮಗಳು ಹಾಗೂ ಅವುಗಳು ಒಳಗೊಂಡಿರುವ ಹಲವಾರು ಸ್ಥಳಗಳ ನಾಮಗಳಲ್ಲಿ ಈ ಬಗೆಯ ಐತಿಹ್ಯಗಳನ್ನು ಗುರುತಿಸುತ್ತಾ ಹೋಗಬಹುದು. ಸ್ಥಳನಾಂಗಳ ಬಗೆಗಿನ ಇಂತಹ ಐತಿಹ್ಯಗಳು ಪೂರ್ವಿಕರ ಜೀವನದ ಧಾರ್ಮಿಕ, ಸಾಮಾಜಿಕ ನಂಬಿಕೆಗಳು, ಬೆಳೆದು ಬಂದ ಆಚಾರ ವಿಚಾರಗಳ ಮೇಲೂ ಐತಿಹಾಸಿಕವಿಚಾರಗಳ ಮೇಲೂ ಬೆಳಕು ಬೀರುತ್ತವೆ. ಇಂದಿಗೂ ಪುರಾಣಕಥೆಗಳಲ್ಲಿಯ ವ್ಯಕ್ತಿಗಳು, ಅವರು ಸ್ಪರ್ಶಿಸಿದ ಕಲ್ಲು, ಗಿಡಮರಗಳು, ನದಿಗಳು, ಸಂಚರಿಸಿದ ಕಾಡುಗಳು ಐತಿಹ್ಯದ ನೆಲೆಗಳಾಗಿವೆ. ಕೋಟಿಚೆನ್ನಯರ ಬಗೆಗಿನ ಐತಿಹ್ಯಗಳಲ್ಲಿ ಸಾಹಸಾಂಶಗಳಿಗೆ ನೀಡಿರುವ ಮಹತ್ತ್ವವನ್ನು ಸಾರುತ್ತವೆ.

ಐತಿಹ್ಯಗಳಲ್ಲಿ ಪುರುಷರಷ್ಟೇ ಮಹತ್ತ್ವವನ್ನು ಸ್ತ್ರೀಯೂ ಪಡೆಯುವಂತಾಗಿದೆ. ಆದಿಶಕ್ತಿ, ಪಾರ್ವತಿ, ಗಂಗೆ, ಕಾವೇರಿ ಮೊದಲಾದ ಪೌರಾಣಿಕ ಸ್ತ್ರೀಯೂ ಸಿರಿ, ಕಲ್ಲುರ್ಟಿ, ಉಳಾಳ್ತಿಯಂತಹ ಜಾನಪದ ಸ್ತ್ರೀಯರಿಗೂ ಐತಿಹ್ಯಗಳಲ್ಲಿ ಮಹತ್ತ್ವ ಕಲ್ಪಿಸಲಾಗಿದೆ. ನದಿಗಳಿಗೆ ಸಂಬಂಧಿಸಿದ ಐತಿಹ್ಯಗಳು ಹೆಚ್ಚಾಗಿ ಭೌಗೋಳಿಕ ಕಾರಣಗಳಿದುಂಟಾಗಿರುವ ಪ್ರಕೃತಿ ವಿಕೋಪಗಳೊಂದಿಗೆ ಜೋಡಣೆಗೊಂಡಿರುತ್ತವೆ. ಪ್ರಾಣಿಗಳಿಗೆ ಸಂಬಂಧಿಸಿದಂತಹ ಐತಿಹ್ಯಗಳಲ್ಲಿ ಪ್ರಾಣಿಗಳಿಗೂ ಮಾನವರಂತೆಯೇ ಪ್ರಾತಿನಿಧ್ಯ ನೀಡಿರುವುದನ್ನು ಗಮನಿಸಬಹುದು.

ಈ ಎಲ್ಲ ವಿಚಾರಗಳ ಪರಾಮರ್ಶೆಯಿಂದ ತಿಳಿದುಬರುವುದೇನೆಂದರೆ, ಕರ್ನಾಟಕದ ಪ್ರತಿಯೊಂದು ಊರೂ ಹೊಂದಿರುವ ಪ್ರತಿಯೊಂದು ಹೆಸರಿನ ಹಿನ್ನೆಲೆಯೂ ಯಾವುದಾದರೂ ಐತಿಹ್ಯ, ದಂತಕಥೆ, ಪುರಾಣಕತೆಯನ್ನು ಅಡಗಿಸಿಕೊಂಡಿರುತ್ತವೆ. ಅಲ್ಲಿಯ ಕಲ್ಲು, ಮಣ್ಣು, ಪೈರು, ಗುಡ್ಡ, ಹೊಳೆ, ಹಳ್ಳ, ತೊರೆ, ಕೋಟೆ, ಹೊಂಡ ಮೊದಲಾದ ನೈಸರ್ಗಿಕ ಹಿನ್ನೆಲೆಯನ್ನೂ ಹೊಂದಿರುತ್ತದೆ. ಅಷ್ಟೇ ಅಲ್ಲದೆ ರಾಜ, ರಾಣಿ, ರಾಜಕುಮಾರಿ, ಮಂತ್ರಿ, ಧಾರ್ಮಿಕ ಮಹಾಪುರುಷರು, ಸಾಧುಸಂತರು, ಸಮಾಜಸೇವಕರು, ಸಮಾಜ ಸುಧಾರಕರ ಸ್ಮರಣೆಗೂ ಸ್ಥಳನಾಮಗಳ ಹಿನ್ನೆಲೆಯಾಗಿರುವುದನ್ನು ಸಾಮಾನ್ಯವಾಗಿ ಗಮನಿಸಬಹುದು. ಈ ದೃಷ್ಟಿಯಿಂದ ಸ್ಥಳನಾಮಗಳು ಮಾನವನ ಇತಿಹಾಸ, ಧರ್ಮ, ಸಮಾಜ, ಸಂಸ್ಕೃತಿ, ಜಾನಪದ ಈ ಬಗೆಯ ಎಲ್ಲ ಅಂಶಗಳ ಮೇಲೂ ಪರಿಣಾಮಕಾರಿಯಾಗಿ ಬೆಳಕು ಚೆಲ್ಲುವಂಥವಾಗಿವೆ. ಇಂತಹ ಅಂಶಗಳಲ್ಲಿ ಕರ್ನಾಟಕ ಅಷ್ಟೇ ಏಕೆ ಜಗತ್ತಿನ ಎಲ್ಲ ಪ್ರದೇಶಗಳ ಸ್ಥಳನಾಮಗಳ ಹಿನ್ನೆಲೆಯಲ್ಲಿಯೂ ಹಲವಾರು ಸಾಮ್ಯತೆಗಳಿರುವುದನ್ನು ಗುರುತಿಸಬಹುದು.

– ಎನ್.ಕೆ.