ಕರ್ನಾಟಕದ ಜನಪದ ವೈದ್ಯ ಪದ್ಧತಿ ಜನಪದ ವೈದ್ಯಪದ್ಧತಿಯನ್ನು ಅನೇಕ ಹೆಸರುಗಳಿಂದ ಗುರುತಿಸಲಾಗುತ್ತದೆ. ಅಜ್ಜಿ ಔಷಧ, ಮನೆಮದ್ದು, ನಾಡಮದ್ದು, ಅನುಭವಚಿಕಿತ್ಸೆ, ರೂಢಿಮದ್ದು, ಹಸಿರು ಔಷಧಿ, ಹಳ್ಳಿಔಷಧಿ, ನಾಟಿವೈದ್ಯ ಮುಂತಾದ ಹೆಸರುಗಳು ಬಳಕೆಯಲ್ಲಿವೆ. ಈ ಹೆಸರುಗಳು ಈ ವೈದ್ಯರ ಬೇರೆ ಬೇರೆ ನೆಲೆಗಳನ್ನೂ ಬೇರೆ ಬೇರೆ ವಿಧಾನಗಳನ್ನೂ ಸೂಚಿಸುತ್ತದೆ. ಪ್ರಕೃತಿ ಚಿಕಿತ್ಸೆಯ ಕೆಲವು ಸರಳ ವಿಧಾನಗಳೂ ಕರ್ನಾಟಕದ ಗ್ರಾಮೀಣದಲ್ಲಿ ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.

ಜನಪದ ವೈದ್ಯನನ್ನು ಮೂರು ವರ್ಗಗಳಾಗಿ ವಿಂಗಡಿಸಿ ಕೊಳ್ಳಲಾಗುತ್ತದೆ. ೧. ಮನುಷ್ಯವೈದ್ಯ, ೨.ಪಶುವೈದ್ಯ, ೩. ಕೃಷಿವೈದ್ಯ, ಹಾಗೆಯೇ ಮೂರು ಬಗೆಯ ಚಿಕಿತ್ಸೆಗಳಿವೆ. ೧.ರೋಗ ಪ್ರತಿಬಂಧಕ, ೨. ರೋಗನಿವಾರಕ, ೩.ಶಕ್ತಿವರ್ಧಕ.

ಮಲೆನಾಡಿನಲ್ಲಿ ಕಂಡುಬರುವ ಗದ್ದೆಗಳಲ್ಲಿ ದೀಪದ ಕೋಲನ್ನು ನೆಡುವ ಪದ್ಧತಿಯು ಕೃಷಿ ವೈದ್ಯಕ್ಕೆ ಸಂಬಂಧಪಟ್ಟದ್ದಾಗಿದ್ದು ಕಾಂಡ ಕೊರೆಯುವ ಕೀಟಗಳು ದೀಪಕ್ಕೆ ಆಕರ್ಷಿತವಾಗಿ ಸಾಯುವುದರಿಂದ ಗಿಡ ಸುರಕ್ಷತವಾಗಿ ಉಳಿಯುತ್ತದೆಯೆಂಬ ಆಶಯವನ್ನು ಹೊಂದಿದೆ.

ಜನಪದ ವೈದ್ಯಕ್ಕಾಗಿ ಬಳಸುವ ಗಿಡಮೂಲಿಕೆಗಳ ಹೆಸರುಗಳನ್ನು ಹೇಳಬಾರದೆಂಬ ನಿಷೇದ ಇದೆ. ಹೇಳಿದರೆ ವೈದ್ಯದ ಶಕ್ತಿ ಕುಂದುತ್ತದೆ ಎಂಬ ನಂಬಿಕೆಯಿದೆ. ವಯಸ್ಸಾದ ವೈದ್ಯರು ತಮ್ಮ ಮಕ್ಕಳಿಗೋ ಮೊಮ್ಮಕ್ಕಳಿಗೋ ಕಲಿಸಬೇಕಾದಾಗ ಸಂಬಂಧಪಟ್ಟ ಗಿಡಮೂಲಿಕೆಗಳನ್ನು ತೋರಿಸಿ ಅದು ಯಾವ ರೋಗಕ್ಕೆ ಔಷಧವಾಗಬಲ್ಲದು ಎಂಬುದನ್ನು ಹೇಳಿಕೊಡುತ್ತಾರೆಯೇ ಹೊರತು ಹೆಸರನ್ನು ಹೇಳುವುದಿಲ್ಲ. ಬೇರೆಯವರ ಮೂಲಕ ಅವನ್ನು ತರಿಸುವುದಿಲ್ಲ. ಹಿತ್ತಿಲಲ್ಲಿ ಬೆಳೆದಿರುವ ಅಥವಾ ಕಾಡುಮೇಡುಗಳಲ್ಲಿ ಎಲ್ಲಿಯಾದರೂ ಬೆಳೆದಿರಲಿ, ತಾವೇ ಹೋಗಿ ಕಿತ್ತು ತರುತ್ತಾರೆ. ಕೆಲವರು ತಮ್ಮ ಮಕ್ಕಳಿಗೆ ಸಸ್ಯಗಳ ಹೆಸರುಗಳನ್ನೂ ಹೇಳುವುದುಂಟು.

ಪಶುವೈದ್ಯಕ್ಕೆ ಸಂಬಂಧಪಟ್ಟಂತೆ, ನಾಯಿಯ ಸಾಕು ಪ್ರಾಣಿಯಾದರೂ ಅದಕ್ಕೆ ಚಿಕಿತ್ಸೆ ಕೊಡುವಂತಿಲ್ಲ. ಏಕೆಂದರೆ ಅದಕ್ಕೆ ಚಿಕಿತ್ಸೆ ನೀಡಿದರೆ ವೈದ್ಯರ ಕೈ ಹತ್ತುವುದಿಲ್ಲವೆಂಬ ನಂಬಿಕೆಯಿದೆ. ಮನುಷ್ಯ ವೈದ್ಯದಲ್ಲಿ ದೈಹಿಕ ಖಾಯಿಲೆಗಳಿವೆ. ಚಿಕಿತ್ಸೆಗಳು ಇರುವಂತೆಯೇ ಮಾನಸಿಕ ಖಾಯಿಲೆಗಳಿಗೂ ಚಿಕಿತ್ಸೆಗಳಿವೆ. ಅಲೌಕಿಕ ಶಕ್ತಿಗಳಿಂದ ಉಂಟಾಗುವ ಮಾನಸಿಕ ವ್ಯತ್ಯಾಸಗಳಿಗೆ ಅಲೌಕಿಕ ಶಕ್ತಿಗಳೇ ನಿವಾರಕಗಳೂ ಆಗುತ್ತವೆ. ವಿಭೂತಿಮಂತ್ರಿಸಿ ಕೊಡುವುದು, ತಾಯಿತ ಕಟ್ಟುವುದು ಅಥವಾ ದುಷ್ಟಶಕ್ತಿಗಳನ್ನು ನಿಯಂತ್ರಿಸುವ ದೈವಗಳಿಗೆ ಮೊರೆ ಹೋಗುವುದು ಮುಂತಾದ ವಿಧಾನಗಳನ್ನು ಇಂಥ ಸಂದರ್ಭಗಳಲ್ಲಿ ಅನುಸರಿಲಾಗುತ್ತದೆ. ಉಳಿದಂತೆ ಆಹಾರ ಪಥ್ಯ ಹಾಗೂ ಹಾಸಿಗೆ ಪಥ್ಯಗಳನ್ನು ಹೇಳುವುದಿದೆ. ಬಿದ್‌ಬೀಳ್ ಮಾಡುವುದು, ಸೃಷ್ಟಿಗೆ ತೆಗೆಯುವುದು, ಕಾಲ್‌ರಂಜು ಹಾಕುವುದು, ಬರೆ ಹಾಕುವುದು, ಚಿಟಿಕೆ ಹಾಕುವುದು ಮುಂತಾದ ವಿಧಾನಗಳೂ ಇವೆ. ಮಕ್ಕಳಾಗದಿದ್ದರೆ, ಅಂಥವರಿಗೆ ಕತ್ತರಿಸಿದ ಮಕ್ಕಳ ಹೊಕ್ಕಳುಬಳ್ಳಿಯನ್ನು ಮುದ್ದೆಯೊಡನೆ ನುಂಗಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿದೆ.

ಚಿಕಿತ್ಸೆಯ ಸಂದರ್ಭದಲ್ಲಿ ಔಷಧದ ಪ್ರಮಾಣವನ್ನು ನಿರ್ಧರಿಸುವಾಗಲೂ ಜನಪದ ವಿಧಾನವನ್ನೇ ಅನುಸರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ತೂಕಕ್ಕೆ ಪರ್ಯಾಯವಾಗಿ ಕೈಗುರುತನ್ನು ಬಳಸಲಾಗುತ್ತದೆ. ಚಿಟಿಕೆ, ಹೆಬ್ಬೆರಳುಗಾತ್ರ, ಗಜ್ಜುಗದ ಗಾತ್ರ, ಕಣ್ಣಳತೆ, ಹನಿ ಅಥವಾ ತೊಟ್ಟು ಹೀಗೆ ಔಷಧದ ಪ್ರಮಾಣ ಇರುತ್ತದೆ.

ಜನಪದ ವೈದ್ಯರು ಸಾಮಾನ್ಯವಾಗಿ ತಮ್ಮ ವೈದ್ಯಕ್ಕಾಗಿ ಹಣ ಪಡೆಯುವುದಿಲ್ಲ. ಹಣ ಪಡೆದರೆ ವೈದ್ಯ ಫಲಕಾರಿಯಾಗುವುದಿಲ್ಲ ಎಂಬ ನಂಬಿಕೆಯಿದೆ. ವೈದ್ಯರು ತಮ್ಮಲ್ಲಿ ಕೆಲವು ತುರ್ತು ಔಷಧಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರುತ್ತಾರೆ. ವಿಶೇಷ ಚಿಕಿತ್ಸಾ ಸಂದರ್ಭಗಳಲ್ಲಿ , ಆ ಕ್ಷಣದಲ್ಲಿ ಹೊರಟು ಔಷದಧ ಸಸ್ಯಗಳನ್ನು ಹುಡುಕಿ ತಂದು ಔಷಧವನ್ನು ಸ್ಥಳದಲ್ಲೆ ಸಿದ್ಧಪಡಿಸಿ ಚಿಕಿತ್ಸೆ ನೀಡುತ್ತಾರೆ.

ಜನಪದರು ಮಾಡುವ ಪ್ರಥಮ ಚಿಕಿತ್ಸೆಗಳ ಕೆಲವು ಉದಾಹರಣೆಗಳು ಹೀಗಿವೆ: ಎಡವಿಬಿದ್ದು ಗಾಯಕ್ಕೆ ಮಣ್ಣಿನ ಧೂಳನ್ನು ಎಂಜಲಿಯೊಂದಿಗೆ ಕಲೆಸಿ ಹಚ್ಚುವುದು, ಚರ್ಮರೋಗಕ್ಕೆ ಹುತ್ತದ ಮಣ್ಣನ್ನು ಕಲೆಸಿ ಹಚ್ಚವುದು, ಇಂಥ ಚಿಕಿತ್ಸೆಗಳ ಪ್ರಕೃತಿ ಚಿಕಿತ್ಸೆಗಳೆಂದು ಪರಿಗಣಿಸಲ್ಪಡುತ್ತವೆ. ದೈನಂದಿನ ಬದುಕಿನಲ್ಲಿ ಬಳಕೆಯಾಗುವ ಅನೇಕ ವಸ್ತುಗಳ ತತ್‌ಕ್ಷಣದ ಚಿಕಿತ್ಸೆಗಾಗಿ ಅಥವಾ ಪ್ರಥಮ ಚಿಕಿತ್ಸೆಗಾಗಿ ಬಳಕೆಯಾಗುತ್ತವೆ. ಉದಾ: ಕೊಯ್ತದಿಂದ ಒಸರುವ ರಕ್ತವನ್ನು ನಿಲ್ಲಿಸಲು ಬೆಂಕಿಪೊಟ್ಟಣದ ರಂಜಕದ ಭಾಗವನ್ನು ಕಿತ್ತು ಅಂಟಿಸುವುದು, ಕಾಫಿಪುಡಿ ಉದುರಿಸುವುದು ಇತ್ಯಾದಿ ವಿಧಾನಗಳಿವೆ.

ಪರೋಪಕಾರಿ ಹಾಗೂ ಪುಣ್ಯಕಾರ್ಯ ಎಂಬ ಭಾವನೆಗಳು ಜನಪದ ವೈದ್ಯದ ಮೂಲಸೆಲೆ.

– ಟಿ.ಜಿ.ಆರ್.

ಕರ್ನಾಟಕದ ಬುಡಕಟ್ಟುಗಳು ಕರ್ನಾಟಕದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಜೀವನವನ್ನು ನಡೆಸುತ್ತಿರುವ ಬುಡಕಟ್ಟು ಜನ ವಾಸ ಮಾಡುತ್ತಿದ್ದಾರೆ. ಬುಡಕಟ್ಟು ಸಂಸ್ಕೃತಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ, ಅವುಗಳ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ವ್ಯಾಪಕ ವೈಜ್ಞಾನಿಕ ಕ್ಷೇತ್ರ ಕಾರ್ಯಗಲ ಮೂಲಕ ಬುಡಕಟ್ಟುಗಳನ್ನು ಕುರಿತು ಈಗಾಗಲೇ ಅನೇಕ ಮಂದಿ ವಿದ್ವಾಂಸರು ಅಧ್ಯಯನ ನಡೆಸಿ, ಹಲವಾರು ಕುತೂಹಲಕರ ವಿಚಾರಗಳನ್ನು ಪ್ರಕಟಪಡಿಸಿದ್ದಾರೆ. ಕೆಲವು ಬುಡಕಟ್ಟುಗಳನ್ನಿಲ್ಲಿ ಗಮನಿಸಬಹುದು.

೧. ಇರುಳ: ಬೆಂಗಳೂರಿನಿಂದ ೪೦ – ೫೦ ಕಿ.ಮೀ. ದೂರದಲ್ಲಿ ಮಾಗಡಿಯಿಂದ ರಾಮನಗರ ಸೇರಿ ಕನಕಪುರದವರೆಗೆ ಹರಡಿಕೊಂಡಿರುವ ಬೆಟ್ಟ ಸಾಲು, ಹಿಂದೊಮ್ಮೆ ನಿಬಿಡ ಅರಣ್ಯವಾಗಿದ್ದು, ಈಗಲೂ ಅಷ್ಟಿಷ್ಟು ಉಳಿದುಕೊಂಡಿರುವ ಬೆಟ್ಟ ಸಾಲುಗಳಲ್ಲಿರುವ ಗವಿಗಳಲ್ಲಿ ಇರುಳರು ವಾಸವಾಗಿದ್ದಾರೆ. ಭಾಷೆ, ತಮಿಳು ಮಿಶ್ರಿತ ಕನ್ನಡ. ಇವರು ಗವಿಗಳ ವಾಸ ತೊರೆದು ಗುಡಿಸಲು ವಾಸಕ್ಕಿಳಿದಾಗ, ತಂದೆ ತಾಯಿ ಮಕ್ಕಳೆಲ್ಲ ಒಂದೆ ಗುಡಿಸಲಲ್ಲಿ ವಾಸ ಮಾಡುತ್ತಾರೆ. ಮಕ್ಕಳಿಗೆ ಮದುವೆಯಾದರೆ ಮತ್ತೊಂದು ಗುಡಿಸಲನ್ನು ಕಟ್ಟಿಕೊಂಡು ಅಲ್ಲಿಗೆ ಹೋಗುತ್ತಾರೆ. ಇಲಿಬೇಟೆ, ಜೇನು ಇಳಿಸುವುದು, ಗೆಣಸು ಅಗೆಯುವುದು – ಇವು ದೈನಂದಿನ ಕಸುಬಾಗಿತ್ತು. ಕಾಡು ಕಡಿಮೆಯಾದಂತೆ, ನಗರ ಜನರ ಪ್ರಭಾವದಿಂದ, ಕುರಿ ಮೇಕೆ ಕೋಳಿ ದನಕರುಗಳನ್ನು ಸಾಕುತ್ತಿದ್ದಾರೆ. ನಾಡಗೌಡ, ಬುಡಕಟ್ಟಿನ ಹಿರಿಯ, ಇವನ ಅನಂತರದ ಸ್ಥಾನ ಕಟ್ಟುಗೌಡನದು. ಶಿಕ್ಷೆಯನ್ನು ನೀಡುವಾತ ಕೋಲುಕಾರ. ಕೌಟುಂಬಿಕ ವ್ಯವಸ್ಥೆಯಲ್ಲಿ ಕೂಡಾವಳಿ ಪದ್ಧತಿ ಹೆಚ್ಚಾಗಿರುವುದರಿಂದ, ಗಂಡು ಹೆಂಡತಿಯಿಲ್ಲದೆ ಇರುವುದು ಹೆಣ್ಣು ಗಂಡನಿಲ್ಲದೆ ಇರುವ ಪರಿಸ್ಥಿತಿ ಕಡಿಮೆ.

೨. ಎರವ : ಹೊಟ್ಟೆಪಾಡಿಗಾಗಿ ಭಿಕ್ಷುವೃತ್ತಿಯನ್ನು ಅವಲಂಬಿಸಿರುವವರು. ಇವರು ಕೊಡಗಿನ ದಕ್ಷಿಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಎರವರು ಕಪ್ಪು ಬಣ್ಣದ ಗುಂಗುರು ಕೂದಲಿನ, ದಪ್ಪನೆಯ ತುಟಿಯ, ಚೂಪುಮೂಗು, ಉದ್ದಕೈಕಾಲುಗಳ ಅಷ್ಟೇನೂ ಎತ್ತರವಲ್ಲದ ಜನ. ಇವರಲ್ಲಿ ಪಂಜಿರಿ, ಪಣಿ, ಬಡಗ ಮತ್ತು ಕಾಕೆ ಎರವ ಎಂಬ ನಾಲ್ಕು ಪ್ರಭೇದಗಳಿವೆ. ಇವರಲ್ಲಿ ೩೨ ಕುಲಗಳಿವೆ. ಪೂಕರಿ ಮಣೆ, ಕರಿಚಿರತೆ, ಕಾಳಪ್ಪೆ ಎಂಬ ದೇವರುಗಳಿವೆ. ಇವರಲ್ಲಿ ಹೊಂದಾಣಿಕೆ ಮದುವೆ, ಆಯ್ಕೆಯ ಮದುವೆ, ಪಲಾಯನ ಮದುವೆ ಮತ್ತು ಬಲಾತ್ಕಾರದ ಮದುವೆ ಎಂಬ ನಾಲ್ಕು ಬಗೆಯ ಮದುವೆ ಪದ್ಧತಿಗಳಿವೆ. ವಿಧವೆಯರ ಮರುಮದುವೆಗೆ ಅವಕಾಶವುಂಟು. ಶವವನ್ನು ಹೂಳುತ್ತಾರೆ. ಆದರೆ ಆನೆಯಿಂದ ತುಳಿಸಿಕೊಂಡು, ಹುಲಿಚಿರತೆ ತಿಂದು, ಹಾವು ಕಚ್ಚಿ, ಮರದಿಂದ ಬಿದ್ದು ಸತ್ತ ವ್ಯಕ್ತಿಯ ಶವವನ್ನು ಸುಡುತ್ತಾರೆ. ದೈವ ದೆವ್ವಗಳಿಗೆ ಬಲಿ ಕೊಡುತ್ತಾರೆ. ಎರವ ಎಂಬುದು ಇವರ ಆಡುಭಾಷೆ.

೩. ಕರೆಒಕ್ಕಲ : ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಇವರ ವಾಸ. ಮಣ್ಣಿನ ಗೋಡೆ, ಸೋಗೆ ಅಥವಾ ಹುಲ್ಲಿನ ಛಾವಣಿಯಿಂದ ಇವರ ಗುಡಿಸಲು ಸಿದ್ಧವಾಗುತ್ತವೆ. ಗುಡಿಸಲಿಗೆ ಕಟ್ಟೆ ಅಥವಾ ಚಿಕ್ಕ ಜಗಲಿಯಿರುತ್ತದೆ. ಇದರ ಮೇಲೆ ಇಟ್ಟ ನೀರಿನ ಪಾತ್ರೆಯಲ್ಲಿಯ ನೀರು ಸಂಪೂರ್ಣವಾಗಿ ಖಾಳಿಯಾಗದಂತೆ ನೋಡಿಕೊಳ್ಳಬೇಕೆಂಬ ಕಟ್ಟಳೆ ಇವರಲ್ಲಿದೆ. ಅಲ್ಲದೆ ನೀರು ತುಂಬಿರುವ ಈ ಪಾತ್ರೆಯ ಬಾಯನ್ನು ಮುಚ್ಚುವುದಿಲ್ಲ. ಇದು ಯಾವಾಗಲೂ ತೆರೆದೇ ಇರಬೇಕೆಂಬುದು ನಿಯಮ. ಇವರ ಭಾಷೆ ಕನ್ನಡದ ಒಂದು ಪ್ರಭೇದ.

೪. ಕಾಡುಕುರುಬ: ಮೈಸೂರು ಜಿಲ್ಲೆಯ ನಂಜನಗೂಡು, ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡದೇವನಕೋಟೆ ತಾಲೂಕುಗಳಲ್ಲಿ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಇವರು ಕಂಡುಬರುತ್ತಾರೆ. ಇವರು ವಾಸಮಾಡುವ ಪ್ರದೇಶವನ್ನು ‘ಹಾಡಿ’ ಎನ್ನುತ್ತಾರೆ. ಇವರಲ್ಲಿ ೧೮ ಕುಲಗಳಿವೆ. ಇವನ್ನು ‘ಸಾಲುಗಳು’ ಎಂದು ಕರೆಯುತ್ತಾರೆ. ಬೆತ್ತ ಬಿದಿರನ್ನು ಬಳಸಿ ಬುಟ್ಟಿ ಮೊರ ಇತ್ಯಾದಿಗಳನ್ನು ಮಾಡುವ ಕಾಯಕ ಇವರದು. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುತ್ತಾರೆ. ಇವರಾಡುವ ಕನ್ನಡದಲ್ಲಿ ತಮಿಳು, ಮಲಯಾಳಂ ಭಾಷೆಗಳ ಶಬ್ದಗಳು ಸೇರಿಕೊಂಡು, ವಿಶಿಷ್ಟರೂಪವಾಗಿ ಕಾಣಿಸಿಕೊಂಡಿದೆ.

೫. ಕಾಡುಗೊಲ್ಲ : ಚಿತ್ರದುರ್ಗದ ಪೂರ್ವಭಾಗದ ತಾಲುಕುಗಳಾದ ಜಗಳೂರು, ಮೊಳಕಾಲ್ಮೂರಿ, ಚಳ್ಳಕೆರೆ, ಹಿರಿಯೂರು ಭಾಗಗಳಲ್ಲಿ ಇವರ ನೆಲೆ. ತಾಯ್ನುಡಿ ಕನ್ನಡದ ಒಂದು ಪ್ರಭೇದ. ತಮ್ಮದೇ ಆದ ಹಟ್ಟಿಗಳನ್ನು ಕಟ್ಟಿಕೊಂಡು ಹಳ್ಳಿಯ ಬೇರೆ ಬೇರೆ ಜಾತಿಯ ಜನವಸತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಾರೆ. ಮೂಲ ಕಸುಬು ಪಶುಪಾಲನೆ. ಇವರ ಸಾಂಸ್ಕೃತಿಕ ವೀರರು ಎತ್ತಪ್ಪ ಮತ್ತು ಜುಂಜಪ್ಪ. ಜುಂಜಪ್ಪನ್ನು ಕುರಿತು ಜನಪದ ಮಹಾಕಾವ್ಯವೇ ಇವರಲ್ಲುಂಟು. ಹೆಂಗಸರು ಮುಟ್ಟಾದಾಗ, ಹಟ್ಟಿಯಿಂದ ಹೊರಗೆ ಸೂತಕದ ಗುಡಿಸಲುಗಳಲ್ಲಿ ಕಾಲ ಕಳೆಯುವ ಸಂಪ್ರದಾಯ ಇನ್ನೂ ಉಳಿದುಕೊಂಡು ಬಂದಿದೆ. ಹಟ್ಟಿಯಿಂದ ಹೊರಗೆ ಗುಡಿಸಲಿಲ್ಲ ಹೆರಿಗೆ ಮಾಡಿಸುವ ಪದ್ಧತಿ ಕಾಡುಗೊಲ್ಲರಿಗೇ ಬಹಳ ವಿಶಿಷ್ಟವಾದುದು. ಇವರಲ್ಲಿ ಹೆಣ್ಣು ವಿಧವೆಯಾದರೂ ತಾಳಿ, ಕಾಲುಂಗುರು, ಬಳೆ, ಕುಂಕುಮ ಹೂ ತೆಗೆಯುವುದಿಲ್ಲ.

೬. ಕಿನ್ನರಿಜೋಗಿ : ತಲೆಗೆ ಮುಂಡಾಸು, ಮುಂಡಾಸಿಗೊಂದು ತ್ರಿಶೂಲ, ಮುಂಡಾಸಿಗೆ ಅಂಟಿಕೊಂಡಂತೆ ಗಾಜಿನಕಡ್ಡಿಯ ಗೂಳೊಪು, ತಲೆತುಂಬ ಬಣ್ಣಬಣ್ಣದ ತುರಾಯಿ, ಕರಿಯ ನಿಲುವಂಗಿ, ಕಚ್ಚೆ ಪಂಚೆ, ಕತ್ತಿನ ತುಂಬ ಉದ್ದನೆಯ ಮುತ್ತಿನ ಸರಗಳು, ಕರಿಕೋಟು, ಅದರ ಮೇಲೆ ಕಸೂತಿಯ ಚಿತ್ತಾರದ ಅಡ್ಡಶಲ್ಯ, ಕರ್ಣಕುಂಡಲ, ಕೈಯಲ್ಲಿ ಕಿನ್ನರಿ, ಕಾಲಿಗೆ ಗೆಜ್ಜೆ, ಹೆಗಲಿಗೆ ಜೋಳಿಗೆ – ಇವು ಇವರ ಉಡುಗೆ – ತೊಡಿಗೆಗಳು. ಮೊದಲು ಅಲೆಮಾರಿಗಳಾಗಿದ್ದವರು ಈಗ ಸಾಗರ, ಸಿರಸಿ,ಹಾನಗಲ್ಲು, ಸೊರಬ, ತೀರ್ಥಹಳ್ಳಿ ಮೊದಲಾದೆಡೆ ತಳವೂರಿದ್ದಾರೆ. ಇವರು ಮರಾಠಿ, ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳ ವಿಶ್ರರೂಪವನ್ನಾಡುತ್ತಾರೆ.

22

೭. ಕುಡಿಯ : ಕೊಡಗಿನ ಮಡಿಕೇರಿ, ವಿರಾಜಪೇಟೆ ಮೊದಲಾದೆಡೆ ಕಂಡುಬರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡೆ ಕುಡಿಯರನ್ನು ಮಲೆಕುಡಿಯ, ಕುಡಿಯ, ಬಾರಿಕೆಗೌಡ, ಗೌಡ ಮೊದಲಾದ ಹೆಸರುಗಳಲ್ಲಿ ಕರೆಯುತ್ತಾರೆ. ಶಿರಾಡಿ ಮತ್ತು ಚಾರ್ಮಾಡಿ ಘಟ್ಟಗಳ ನಡುವಿನ ದಟ್ಟಾರಣ್ಯದ ನಡುವೆ ಗುರುತಿಸಿಕೊಂಡಿರುವ ಇಳಿಮಲೆ, ಬಾಂಜಾರು ಮಲೆ, ಅಂಬಾಟಿಮಲೆ ಪ್ರದೇಶಗಳು ಇವರ ಮೆಚ್ಚಿನ ತಾಣಗಳು. ಇವರ ಏಲಕ್ಕಿ ತೋಟಗಳಲ್ಲಿ ಕೂಲಿಯಾಳುಗಳಾಗಿದ್ದಾರೆ. ಅರಣ್ಯಗಳ ಪ್ಲಾಂಟೇಶನ್ ಕೆಲಸ, ಮರ ಕಡಿಯುವುದು ಮುಂತಾದ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಮಾತೃಭಾಷೆ ತುಳು. ಮಲೆಕುಡಿಯರು ಮಲಯಾಳಿಗಳ ಜೊತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ, ನಿರರ್ಗಳವಾಗಿ ಮಲಯಾಳ ಭಾಷೆಯನ್ನು ಆಡುತ್ತಾರೆ. ಹೊರಗಿನ ವ್ಯಾವಹಾರಿಕ ಭಾಷೆ ಕನ್ನಡವಾಗಿರುವುದರಿಂದ ಅದೂ ಗೊತ್ತು. ಇವರು ಕಲ್ಲುಟಿರ, ಭೈರವ, ಅಂಬಟಿಮಲೆದೈವ, ಧರ್ಮಸ್ಥಳದ ಮಂಜುನಾಥಸ್ವಾಮಿಯನ್ನು ಆರಾಧಿಸುತ್ತಾರೆ. ಮಲೆಕುಡಿಯರ ಗುಡಿಸಲುಗಳಲ್ಲಿ ಭೂತದ ಮನೆ ಇದ್ದೇ ಇರುತ್ತದೆ. ವಿಧವೆ ಬೇರೆ ಯಾರನ್ನಾದರೂ ವಿವಾಹವಾಗುವ ಅವಕಾಶವುಂಟು. ನ್ಯಾಯತೀರ್ಮಾನಕ್ಕೆ ಗುರಿಕಾರ ಇರುತ್ತಾನೆ.

೮. ಕುಡುಬಿ: ಗೋವಾದಲ್ಲಿ ಪೋರ್ಚುಗೀಸರ ಆಳ್ವಿಕೆ ನಡೆಯುತ್ತಿದ್ದ ಕಾಲದಲ್ಲಿ ಅಲ್ಲಿಂದ ಹಲವಾರು ಬುಡಕಟ್ಟುಗಳು ಹತ್ತಿರದ ಉತ್ತರಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನೆಲೆಸಿದರು. ಅಂತೆಯೇ ದಕ್ಷಿಣ ಕನ್ನಡದ ಉಡುಪಿ, ಕುಂದಾಪುರ ಪ್ರದೇಶಗಳಲ್ಲಿ ನೆಲೆ ನಿಂತರು. ಇವರಲ್ಲಿ ಅನೇಕ ಒಳಪಂಗಡಗಳಿವೆ. ಇವರ ತಾಯ್ನುಡಿ ಕೊಂಕಣಿ. ಮನೆಯಲ್ಲಿ ಸಾಕುವ ಪ್ರಾಣಿಗಳ ಮಾಂಸವನ್ನು ತಿನ್ನದೇ ಇರುವುದು ಗೋವಾ ಕುಡುಬಿಯರ ವಿಶೇಷ. ಕುಟುಂಬದ ರಕ್ಷಣೆಯ ಹೊಣೆಯನ್ನು ಗೋಯೆದೈವ, ಗಡಿದೈವ, ಪಿತೃಆತ್ಮ ಎಂಬ ಆಂತರಿಕ ಶಕ್ತಿಗಳು ನಿರ್ವಹಿಸುತ್ತವೆ.

೯. ಕೊರಗ: ಕರಾವಳಿ ಪ್ರದೇಶ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉದ್ದಕ್ಕೂ ಅಲ್ಲಲ್ಲಿ ಕೊರಗರು ವಾಸಿಸುತ್ತಿದ್ದಾರೆ. ಹತ್ತಾರು ಕುಟುಂಬಗಳು ಒಂದೆಡೆ ವಾಸಿಸುವ ತಾಣವನ್ನು ‘ಕೊರಗರ ಕೊಪ್ಪ’, ‘ಕೊಟ್ಟ’ ಎನ್ನುತ್ತಾರೆ. ಒಣಹುಲ್ಲು ಮತ್ತು ಬಿದಿರಿನಿಂದ ಮಾಡಿದ ತ್ರಿಕೋನಾಖಾರದ ಇಳಿಜಾರಾದ ಹಲವಾರು ಜೋಪಡಿಗಳು ಕೊಪ್ಪದಲ್ಲಿರುತ್ತವೆ. ಇವರಲ್ಲಿ ಇಪ್ಪತ್ತೈದು ಬಳಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಬಂಗಾರಣ್ಣಾಯ ಬಳಯೇ ಶ್ರೇಷ್ಠ. ಕೊರಗರದು ಕಪ್ಪು ಬಣ್ಣದ ನುಣುಪು ಮೈ, ದಷ್ಟಪುಷ್ಟ ದೇಹ, ಗುಂಗುರು ಕೂದಲು, ಅಗಲವಾದ ಇಳಿಜಾರಾದ ಹಣೆ, ಚಪ್ಪಟೆ ಮೂಗು, ದಪ್ಪ ತುಟಿ, ಎತ್ತರವಾದ ಉಬ್ಬಿದ ಕೆನ್ನೆಯ ಎಲುಬು, ಮುಂಚಾಚಿದ ಗಲ್ಲ – ಇವರ ವೈಲಕ್ಷಣ್ಯಗಳು. ತಲೆಗೆ ಅಡಕೆ ಹಾಳೆಯಿಂದ ಮಾಡಿದ ಟೋಪಿ ಧರಿಸುತ್ತಾರೆ. ಯಾವುದೇ ಶುಭ ಅಥವಾ ಅಶುಭ ಸಮಾರಂಭವಾಗಲೀ ಇವರಿಗೆ ಕಳ್ಳು ಕುಡಿತ ಇರಲೇಬೇಕು. ಮಹಿಳೆಯರು ಕುಡಿತವನ್ನು ನಿಷಿದ್ಧವೆಂದು ಭಾವಿಸಿಲ್ಲ. ಇವರಾಡುವ ಭಾಷೆ ಕೊರಗ.

೧೦. ಕೊರಮ: ಇವರ ಮೂಲನೆಲೆ ತಮಿಳುನಾಡು. ಕೊರಮರು ಆಂಧ್ರಪ್ರದೇಶದಲ್ಲಿ ‘ಕುಲ’ಗಳೆಂದು ಕರೆಸಿಕೊಳ್ಳುತ್ತಾರೆ. ಇವರಾಡುವ ಭಾಷೆ ಕುಳುವ. ಆದುದರಿಂದ ತಮ್ಮನ್ನು ಕುಳುವರೆಂದು ಪರಿಚಯಿಸಿಕೊಳ್ಳುತ್ತಾರೆ. ಹಚ್ಚೆ ಹಾಕುವುದರಲ್ಲಿ ಕೊರಮ ಸ್ತ್ರೀ ನಿಪುಣೆ. ಕಾವಾಡಿ, ಶ್ಯಾತಪಾಡಿ, ಮ್ಯಾನಪಾಡಿ, ಮ್ಯಾನ್ರಗುತ್ತಿ ಎಂಬ ನಾಲ್ಕು ಬೆಡಗುಗಳು ಇವರಲ್ಲಿವೆ. ಇವರು ಮಾಡುವ ವೃತ್ತಿಗನುಗುಣವಾಗಿ ಕುಕ್ಕೆ ಹೆಣೆಯುವವರನ್ನು ಕುಕ್ಕೆ ಕೊರಮರು, ವಾಲಗ ಊದುವವರನ್ನು ವಾಲಗದ ಕೊರಮರು, ಹಗ್ಗ ಹೊಸೆಯುವವರನ್ನು ಹಗ್ಗದ ಕೊರಮರು, ಎತ್ತಿನ ವ್ಯಾಪಾರ ಕೊರಮರು, ಕಳ್ಳತನ ದರೋಡೆ ಮಾಡುತ್ತಿದ್ದವರನ್ನು ಕಳ್ಳ ಕೊರಮರು, ಕೋತಿ ಆಡಿಸುವವರನ್ನು ಕೋತಿ ಕೊರಮರು, ಹಾವಾಡಿಸುವವರನ್ನು ಹಾವು ಕೊರಮರು ಎಂದು ಗುರುತಿಸಲಾಗಿದೆ.

೧೧. ಗಾಮೊಕ್ಕಲು : ಕುಮಟ, ಹೊನ್ನಾವರ, ಗಂಗಾವತಿ, ಅಘನಾಶಿನಿ ಹಾಗೂ ಶರಾವತಿ ನದಿ ತೀರದ ಕೊಳ್ಳ ಪ್ರದೇಶಗಳಲ್ಲಿ ನೆಲೆಸಿದ ಒಕ್ಕಲು ಬುಡಕಟ್ಟಿನ ಒಂದು ವರ್ಗವಿದು. ಇವರಲ್ಲಿ ಪ್ರಚಲಿತವಿರುವ ಆಕರ್ಷಕ ಸಾಂಪ್ರದಾಯಿಕ ಕಲೆಯೆಂದರೆ ‘ಹೂವಿನ ಮಕ್ಕಳ ಕುಣಿತ’. ಇವರ ನರ್ತನದಲ್ಲಿ ಬೇಸಾಯಗಾರರ ಗದ್ದೆ ಹೂಡುವ, ಬೀಜ ಬಿತ್ತುವ, ಸಸಿಗೆ ನೀರೆರೆಯುವ, ಸಸಿ ನೆಡುವ, ಗದ್ದೆ ಕೊಯ್ಯುವ, ಬತ್ತವನ್ನು ಕಣಜಕ್ಕೆ ತುಂಬುವ ಕಾರ್ಯಗಳ ಅನುಕರಣೆಯಿರುತ್ತದೆ. ‘ಕೋಳಿ ಅಂಕ’ ಇವರಲ್ಲಿಯ ಜನಪ್ರಿಯ ಜನಪದ ಕ್ರೀಡೆ. ಗಾಮೊಕ್ಕಲು ಎಂಬುದೇ ಕನ್ನಡದ ಒಂದು ಸಾಮಾಜಿಕ ಉಪಭಾಷೆ.

೧೨. ಗೊಂಡ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರು ತಾಲೂಕು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲುಕಿನಲ್ಲಿ ಕಂಡುಬರುತ್ತಾರೆ. ಭಟ್ಕಳ ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಶಿರಾಲಿಯಲ್ಲಿ ಹೆಚ್ಚಾಗಿ ವಾಸಿಸುತ್ತಾದ್ದಾರೆ. ಇವರಾಡುವ ಕನ್ನಡದಲ್ಲಿ ಕೋಟ ಕನ್ನಡದ ಪ್ರಭಾವವಿದೆ. ಇವರ ಉದ್ಯೋಗ ಬೇಸಾಯ : ತಮ್ಮ ತೋಟಗಳಲ್ಲಿ ಬೆಳೆಯುವ ಅಡಕೆ, ಹಸಿಮೆಣಸು, ಅನಾನಸು, ಬಾಳೆ, ಪರಂಗಿ, ವೀಳ್ಯದೆಲೆಯನ್ನು ಸಂತೆಗೆ ತಂದು ಮಾರುತ್ತಾರೆ. ದೀಪಾವಳಿ ಇವರಿಗೆ ದೊಡ್ಡ ಹಬ್ಬ. ಇದನ್ನು ಹಾಲು – ಹಬ್ಬ ಎನ್ನುತ್ತಾರೆ. ಶಿವರಾತ್ರಿಯ ಸುಗ್ಗಿ ಕುಣಿತ ಇವರ ವಿಶಿಷ್ಟ ಜನಪದ ಕುಣಿತ. ಗಂಡ ಸತ್ತಾಗ ವಿಧವೆ ತಾಳಿಯನ್ನು ಇಟ್ಟುಕೊಳ್ಳಬಹುದು. ಗಂಡನ ಮರಣದ ಮೂರು ದಿನಗಳ ಬಳಿಕ ಮೂಗುತಿ ಧರಿಸಬಹುದು. ಗಂಡ ಬಿಟ್ಟವಳನ್ನು, ಹೆಂಡತಿ ಬಿಟ್ಟವನನ್ನು ವಿವಾಹವಾಗಬಹುದು. ವಿಧವೆಯ ಪುನರ್ವಿವಾಹ ಚಾಲ್ತಿಯಲ್ಲಿಲ್ಲ. ಶವವನ್ನು ಸುಡುತ್ತಾರೆ, ಆದರೆ ಬಾಲಕರು, ಗರ್ಭಿಣಿಯರು, ಬಾಣಂತಿಯರು ಸತ್ತಾಗ ಅಂಥವರ ಶವಗಳನ್ನು ಹೂಳುತ್ತಾರೆ. ಭೂತಪ್ರದೇಶಗಳಲ್ಲಿ ಅಪಾರ ನಂಬಿಕೆ.

೧೩. ಗೌಳಿಗ : ಇವರು ಕಚ್ಚೆ ಹಾಕುವುದರಿಂದ ‘ಕಚ್ಚೆ ಗೌಳಿಗ’ರೆಂದು ಮರಾಠಿ ಮಾತಾಡುವುದರಿಂದ ಕಚ್ಚೆ ,ಮರಾಠ, ಕಚ್ಚೆಧಂಗರು ಎಂದೂ ಕರೆಯುತ್ತಾರೆ. ಮುಂಡಗೋಡು, ಯಲ್ಲಾಪುರ, ಹಳಿಯಾಳ, ಜೊಯಿಡಾ, ತಾಲೂಕುಗಳಲ್ಲಿ ಕಂಡಬರುತ್ತಾರೆ. ಇವರು ಇಪ್ಪತ್ತನೆಯ ಶತಮಾನದ ಆದಿಯಲ್ಲ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದಿರಬಹುದೆಂದು ಊಹಿಸಲಾಗಿದೆ. ಇವರ ನೆಲೆಗಳಿಗೆ ವಾಡೆಗಳೆನ್ನುತ್ತಾರೆ. ಇವರಲ್ಲಿ ಮೂವತ್ತು ಕುಳಿ (ಕುಲ)ಗಳಿವೆ. ಬಿದಿರು ಬೊಂಬಿನ ಗುಡಿಸಲು ನಿರ್ಮಿಸಿ ಜೊಂಡುಹಲ್ಲಿನ ಮಾಡು ರಚಿಸುತ್ತಾರೆ. ಸೊಳ್ಳೆ, ನುಸಿ, ಕ್ರಿಮಿಕೀಟಾದಿಗಳು ಗುಡಿಸಲೊಳಗೆ ಬರುವುದನ್ನು ತಪ್ಪಿಸಲು ನೆಲ್ಲೆಸೊಪ್ಪು ಹೊದಿಸುತ್ತಾರೆ. ಕುಡಿತ ಇವರಲ್ಲಿ ಸಾಮಾನ್ಯ. ಹೆಣ್ಣುಗಂಡೆಂಬ ಭೇದವಿಲ್ಲದೆ ಎಲ್ಲರೂ ಕಳ್ಳು, ಸೇಂದಿ, ಕಳ್ಳಭಟ್ಟಿ ಕುಡಿಯುತ್ತಾರೆ. ಹೊಗೆಸೊಪ್ಪು ಸೇವಿಸುತ್ತಾರೆ. ಹಬ್ಬದ ಸಂದರ್ಭಗಳಲ್ಲಿ ‘ಪುಗಡಿ ನೃತ್ಯ’ ಮಾಡುತ್ತಾರೆ. ಮಾಟಮಂತ್ರಗಳಲ್ಲಿ ನಂಬಿಕೆ ಹೆಚ್ಚು.

೧೪. ದುರುಗ – ಮುರಗಿ :ದುರುಗಮ್ಮ ದುರ್ಗಿಯ ಗ್ರಾಮ್ಯರೂಪ, ಮುರುಗಮ್ಮ ಮಾರಿದೇವತೆಯ ಗ್ರಾಮ್ಯರೂಪ. ಈ ಇಬ್ಬರು ಗ್ರಾಮದೇವತೆಗಳ ಆರಾಧನೆಯನ್ನು ವೃತ್ತಿಯನ್ನಾಗಿಸಿಕೊಂಡು ಬದುಕುತ್ತಿರುವವರನ್ನು ದುರುಗ – ಮುರುಗಿಯರೆಂದು ಗುರುತಿಸಲಾಗಿದೆ. ದೇವಿಯನ್ನು ತಲೆ ಮೇಲೆ ಹೊತ್ತು ತಿರುಗುತ್ತಾ, ದೇವಿಯ ಮಹಿಮೆಯನ್ನು ಗುಣಗಾನ ಮಾಡುತ್ತಾ ಊರಿಂದೂರಿಗೆ ಅಲೆಯುವ ಅಲೆಮಾರಿಗಳಿವರು. ಮೂಲತಃ ಇವರು ಆಂಧ್ರಪ್ರದೇಶದವರು. ಹುಬ್ಬಳ್ಳಿ, ಬಿಜಾಪುರ ಮೊದಲಾದೆಡೆ ಕಾಣಸಿಗುತ್ತಾರೆ. ಇವರು ನುಡಿಸುವ ವಾದ್ಯ ಉರುಮೆ. ನಾರಿನಿಂದ ಹೊಸೆದ ಬಾರುಕೋಲಿಗೆ ‘ಲಡ್ಡು’ ಎನ್ನುತ್ತಾರೆ. ಪೂಜಾರಿ ತನ್ನ ದೇಹದಂಡನೆಗೆ ಇದನ್ನು ಬಳಸುತ್ತಾರೆ.

೧೫. ದೊಂಬ : ಅಂಗಸಾಧನೆಯನ್ನೇ ಪ್ರದರ್ಶಿಸುತ್ತಾ, ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬದುಕುವ ವರ್ಗವಿದು. ಕೋಲಾರ, ತುಮಕೂರು, ಬಳ್ಳಾರಿ, ಶಿವಮೊಗ್ಗ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಇವರು ಕಂಡುಬರುತ್ತಾರೆ. ಡೊಂಬರೆ ನೆಲೆ ಇಲ್ಲ; ಡಂಬಿಗೆ ಬೆಲೆ ಇಲ್ಲ ಎಂಬ ಗಾದೆಯಿಂದ ಇವರಿಗೆ ಸ್ಥಿರ ನೆಲೆ ಇರಲಿಲ್ಲವೆಂಬ ವಿಚಾರ ಸ್ಪಷ್ಟವಾಗುತ್ತದೆ. ಮಾಂಸಾಹಾರವನ್ನು ‘ನೀಚೂಟ’ ಎನ್ನುವರು. ಸಂಬಂಧಿಕರು ಬಂದಾಗ ನೀಚೂಟ ಕಡ್ಡಾಯ. ಜೊತೆಗೆ ಹೆಂಡ ಸಾರಾಯಿ ಕಳ್ಳು ಇರಲೇಬೇಕು. ದೊಂಬರ ತಾಯ್ನುಡಿ ತೆಲುಗು. ಕನ್ನಡವನ್ನೂ ಕಲಿತಿದ್ದಾರೆ. ತೆಲುಗಿಗೆ ಮರಾಠಿಯನ್ನು ಬೆರೆಸಿ ಮಾತಾಡುವುದೂ ಉಂಟು. ಉತ್ತರ ಕರ್ನಾಟಕದ ಕೆಲವು ಡೊಂಬರು ಹಿಂದಿಯನ್ನು ಆಡಬಲ್ಲರು. ಇವರಲ್ಲಿ ಒಟ್ಟು ಇಪ್ಪತ್ತೆರಡು ವರ್ಗಗಳಿವೆ.

೧೬. ಪಣಿಯ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಸುತ್ತಮುತ್ತಲಿನ ಪ್ರದೇಶಗಳಾದ ಕುಟ್ಟ, ಗೋಣಿಕೊಪ್ಪ, ಬೆಟ್ಟಂಗಾಲ್, ಹಾರೂರು, ತಿತಿಮತಿ, ಮಾಯಮುಡಿ ಅರವತ್ತೊಕ್ಲು, ಶ್ರೀಮಂಗಲ, ಶೆಟ್ಟಿಕೆರೆ, ಮರೆನಾಡು, ಕೊಗಲಾಡು ಪನ್ನೇಯ ಚಂದನಕೆರೆ ಮೊದಲಾದೆಡೆ ಕಂಡುಬರುತ್ತಾರೆ. ಇವರು ಮೂಲತಃ ಕೇರಳದಿಂದ ಬಂದವರು. ಇಪ್ಪಿಮಲೈನ ಅಂಜಲಕಾವು ಎಂಬ ಪ್ರದೇಶದವರು. ಕೃಷಿ ಕಾಮಿರ್ಕಕರಾಗಿ ಬದುಕುತ್ತಿದ್ದಾರೆ. ಕೂಲಿ ಸಿಗದಿದ್ದಾಗ ಗಡ್ಡೆ ಗೆಣಸು ಅಗೆದು ಮೀನು ನಳ್ಳಿ ಹಿಡಿದು ತಂದು ಉದರ ಪೋಷಣೆ ಮಾಡಿಕೊಳ್ಳುತ್ತಾರೆ. ಇವರಲ್ಲಿ ಪಣಿಯ, ಪಂಜಿರಿ ಮತ್ತು ಕಾಕ ಎಂಬ ವರ್ಗಗಳಿವೆ. ಇವರಾಡುವ ನುಡಿಯಲ್ಲಿ ವ್ಯತ್ಯಾಸವುಂಟು. ಪಣಿಯರ ಭಾಷೆ ಕೊಡವ ಭಾಷೆಯನ್ನು ಹೆಚ್ಚು ಹೋಲುತ್ತದೆ. ಪಂಜಿರಿ ಪಣಿಯರದ್ದು ಕನ್ನಡವನ್ನು ಹೋಲುತ್ತದೆ. ಕಾಕಪಣಿಯರ ಭಾಷೆಯಲ್ಲಿ ಮಲಯಾಳಂ ಭಾಷೆಯ ಪ್ರಭಾವ ಅಧಿಕವಾಗಿದೆ.

೧೭. ಬುಡಬುಡಿಕೆ: ಬುಡಬುಡಿಕೆ, ಡಮರುಗದಂತಹ ಒಂದು ಚಿಕ್ಕ ವಾದ್ಯ. ಇದನ್ನು ಬಾರಿಸುತ್ತಾ ತಮ್ಮ ವೃತ್ತಿಯನ್ನು ಮಾಡುವರು ಬುಡಬುಡಕಿಯವರು. ಇವರು ಮಹಾರಾಷ್ಟ್ರದಿಂದ ವಲಸೆ ಬಂದವರು. ಇವರ ಮಾತೃಭಾಷೆ ಮರಾಠಿ. ಬಿಜಾಪುರ, ಬಾದಾಮಿ, ಕೊಪ್ಪಳ, ಜಮಖಂಡಿ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾಂವಿ, ಗುಲಬರ್ಗಾ, ಬೀದರ್, ರಾಯಚೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಕೊಳ್ಳೇಗಾಲ, ನಂಜನಗೂಡು, ಮೈಸೂರು, ಬೆಂಗಳೂರು ಮೊದಲಾದೆಡೆ ಕಂಡುಬರುತ್ತಾರೆಡ. ಇವರು ಶಕುನ ಹೇಳುವವರು. ತೊಂದರೆ ತಕರಾರು ಅಪಾಯಗಳಿಗೆ ಪರಿಹಾರಗಳನ್ನು ಸೂಚಿಸಿ ಧನಧಾನ್ಯ ಪಡೆಯುತ್ತಾರೆ. ಇವರು ಜನಪದ ವೈದ್ಯರಾಗಿಯೂ ಕೆಲಸ ಮಾಡುತ್ತಾರೆ.

೧೮. ಮುಕ್ರಿ: ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಕುಟಮ ತಾಲ್ಲೂಕಿನಲ್ಲಿ ನೆಲಸಿದ್ದಾರೆ. ಕೃಷಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಹತ್ತು ಬಳಿಗಳಿವೆ. ಬಳಿಗೆ ಸಂಬಂಧಿಸಿದ ಪ್ರಾಣಿಯನ್ನು ಕೊಲ್ಲುವುದಿಲ್ಲ ಮತ್ತು ಆ ಪ್ರಾಣಿಗಳ ಮಾಂಸ ತಿನ್ನುವುದಿಲ್ಲ. ಒಂದೇ ಬಳಿಯಲ್ಲಿ ವಿವಾಹ ನಿಷಿದ್ಧ. ಇವರಾಡುವ ಕನ್ನಡದಲ್ಲಿ ತುಳು ಭಾಷೆಯ ಪ್ರಭಾವವನ್ನು ಗುರುತಿಸಬಹುದು.

೧೯. ಮ್ಯಾಸಬೇಡ: ಚಿತ್ರದುರ್ಗ ಜಿಲ್ಲೆಯ ಜಗಳೂರು, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಭಾಗಗಳಲ್ಲಿ ದಟ್ಟವಾಗಿ ವಾಸಿಸಿದ್ದಾರೆ. ಇವರ ತಾಯ್ನುಡಿ ತೆಲುಗು. ಒಂದು ಮ್ಯಾಸಬೇಡರ ಹಟ್ಟಿ ಎಂದರೆ ಐವತ್ತು ಅರವತ್ತು ಚಿಕ್ಕಚಿಕ್ಕ ಗುಡಿಸಲುಗಳ ಸಮೂಹವಾಗಿರುತ್ತದೆ. ಇವರ ಮೂಲ ಕಸುಬು ಪಶುಪಾಲನೆ. ಇವರ ಸಾಂಸ್ಕೃತಿಕ ವೀರರಾದ ಜಗಳೂರು ಪಾಪನಾಯಕ, ಗಾದ್ರಿಪಾಲನಾಯಕರು ಪಶುಪಾಲಕರಾಗಿದ್ದರು. ಇವರಲ್ಲಿ ಅನೇಕ ಬೆಡಗುಗಳಿವೆ. ಒಂದೊಂದು ಬೆಡಗಿನ ಹುಟ್ಟಿಗೂ ಒಂದೊಂದು ಜನಪದ ಕಥೆಯುಂಟು. ಇವರಲ್ಲಿ ಹನ್ನೆರಡು ಕಟ್ಟೆಮನೆಗಳು ಮುಖ್ಯವಾಗಿವೆ. ಕಾಟಪ್ಪ, ಓಬಳದೇವರು, ಸೂರಲಿಂಗೇಶ್ವರ, ರಾಜಲ, ಬೋರೇದೇವರು, ಬೋಸೇದೇವ, ಕಂಪಳ, ಬೊಮ್ಮ, ದಡ್ಡಿಸೂರನಾಯಕ ಮೊದಲಾದ ದೈವಗಳನ್ನು ಆರಾಧಿಸುತ್ತಾರೆ.

೨೦. ಸಿದ್ದಿ : ಉತ್ತರಕನ್ನಡ ಚಿಲ್ಲೆಯ ಅಂಕೋಲ, ಯಲ್ಲಾಪುರ, ಶಿರಸಿ, ಹಳಿಯಾಳ, ಮುಂಡಗೋಡು ತಾಲೂಕುಗಳ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇವರದು ದಪ್ಪ ತುಟಿ, ಚಪ್ಪಟೆ ಮೂಗು, ಚಿಕ್ಕ ಹಣೆ, ಒರಟಾದ ಗುಂಗುರುಕೂದಲು, ಕಪ್ಪುಬಣ್ಣ, ಎತ್ತರದ ಮೈಕಟ್ಟು, ಸಿದ್ಧಿ ಎಂಬ ಹೆಸರು ಸಿದಿ(ಕೂಲಿ) ಎಂಬುದರಿಂದ ಬಂದಿರಬಹುದು. ಸಿದ್ದಿನಾಸ ಎಂಬ ತಮ್ಮ ಮೂಲದೈವದಿಂದ ಈ ಹೆಸರು ಬಂತೆಂದು ಹೇಳುತ್ತಾರೆ. ಇವರಲ್ಲಿ ಹಿಂದಿ ಸಿದ್ದಿ, ಮುಸ್ಲಿಮ್ ಸಿದ್ದಿ ಮತ್ತು ಕ್ರೈಸ್ತ ಸಿದ್ದಿ ಎಂಬ ಪಂಗಡಗಳಿವೆ. ಧರ್ಮದಿಂದ ಧರ್ಮಕ್ಕೆ, ಸಂಪ್ರದಾಯದಿಂದ ಸಂಪ್ರದಾಯಕ್ಕೆ ಇವರು ಸುಲಭವಾಗಿ ಬದಲಾಗುತ್ತಾರೆ. ಇವರು ಯಾರ ಮನೆಯಲ್ಲಿ ಕೂಲಿ ಮಾಡುತ್ತಾರೋ ಆ ಮನೆಯವರ ಧರ್ಮವನ್ನು ಅಂಗೀಕರಿಸುತ್ತಾರೆ. ಹಿಂದು ಸಿದ್ದಿಗಳು ಕನ್ನಡ, ಮರಾಠಿ, ಕೊಂಕಿಣಿ ಸಿದ್ದಿಗಳು ಮಿಶ್ರಭಾಷೆಯನ್ನು, ಮುಸ್ಲಿಮ್ ಸಿದ್ದಿಗಳು ಉರ್ದುವನ್ನು ಮತ್ತು ಕ್ರೈಸ್ತ ಸಿದ್ದಿಗಳು ಕನ್ನಡ ಮಿಶ್ರಿತ ಗೋವ ಕೊಂಕಣಿಯನ್ನು ಮಾತನಾಡುತ್ತಾರೆ. ಸುಲಿದ ತೆಂಗಿನಕಾಯಿ ಇವರ ಮನೆದೇವರು. ಗುಮಟೆಪಾಂಗು ಎಂಬ ಮಣ್ಣಿನ ಕೊಡ ನುಡಿಸುತ್ತಾರೆ. ಸ್ತ್ರೀಯರಲ್ಲಿ ಪುಗಡಿ ಕುಣಿತ ವಿಶಿಷ್ಟವಾದುದು. ಮಹಾಲಯ ಅಮವಾಸ್ಯೆ ದಿನ ತಾವೇ ತಯಾರಿಸಿದ ಕಳ್ಳು ಕುಡಿದು ಲಿಂಗಭೇದವಿಲ್ಲದೆ ಗುಮಟೆ ಪಾಂಗು ನುಡಿಸಿ, ನರ್ತಿಸುತ್ತಾ ಪಿತೃಆರಾಧನೆ ನಡೆಸುತ್ತಾರೆ.

೨೧. ಸುಡುಗಾಡು ಸಿದ್ಧ: ಬಿಜಾಪುರ, ಬಳ್ಳಾರಿ, ಗುಲಬರ್ಗಾ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸುಡುಗಾಡು ಸಿದ್ಧರು ಕಂಡುಬರುತ್ತಾರೆ. ಆಂಧ್ರಪ್ರದೇಶದಿಂದ ವಲಸೆ ಬಂದವರಾದ ಇವರು ಅಲೆಮಾರಿಗಳು. ಮಸಣದ ಅಧಿಪತಿಗಳಾದ ಸಿದ್ಧರು ಶವಸಂಸ್ಕಾರಕ್ಕೆ ಬಂದವರಿಂದ ದಾನ ಪಡೆಯುತ್ತಾರೆ. ಇವರು ಮೂಲತಃ ಶೈವರು. ವೀರಭದ್ರ ಇವರ ವಿಶೇಷ ದೇವರು. ಗಂಗಮ್ಮ ದೇವತೆಯನ್ನು ಸ್ತ್ರೀಯರು ವಿಶೇಷವಾಗಿ ಆರಾಧಿಸುವರು. ಸುಗ್ಗಿ ಸಂದರ್ಭದಲ್ಲಿ ಸಿದ್ಧರು ಊರಿಂದೂರಿಗೆ ಹೋಗಿ ಡೇರೆ ಹಾಕಿಕೊಂಡು ವಾಸಿಸುತ್ತಾ, ಭಿಕ್ಷೆ ಬೇಡುತ್ತಾ ಉದರ ಪೋಷಣೆ ಮಾಡಿಕೊಳ್ಳುತ್ತಾರೆ.

೨೨. ಸೋಲಿಗ: ಇವರು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟ ಮೊದಲಾದೆಡೆ ಕಂಡುಬರುತ್ತಾರೆ. ಇವರಲ್ಲಿ ಕುಲವಿಂಗಡಣೆಯೇ ಅಲ್ಲದೆ ಒಳಗುಂಪುಗಳಿವೆ. ಇವರಲ್ಲಿ ಅಪಹರಣ ವಿವಾಹ, ಪಲಾಯನ ವಿವಾಹ, ಸೇವಾವಿವಾಹ ಪದ್ಧತಿಯಿತ್ತು. ಈಗ ಒಪ್ಪಿತ ವಿವಾಹ ಪ್ರಧಾನವಾಗಿದೆ. ಜಡೆಸ್ವಾಮಿ, ಕಾರಯ್ಯ, ಬಿಲ್ಲಯ್ಯ ಮೊದಲಾದ ದೈವಗಳನ್ನು ಆರಾಧಿಸುತ್ತಾರೆ. ಇವರ ತಾಯ್ನುಡಿ ಸೋಲಿಗಕನ್ನಡ, ಕನ್ನಡ ಸಾಮಾಜಿಕ ಉಪಭಾಷೆ.

೨೩. ಹಕ್ಕಿಪಿಕ್ಕಿ: ಇವರ ಮೂಲನೆಲೆ ರಾಜಸ್ಥಾನದ ‘ಬಾಗ್ರಾ’ ಎಂಬ ಸ್ಥಳ. ಆದ್ದರಿಂದಲೇ ಇವರು ತಮ್ಮನ್ನ ವಾಗ್ರಿ (ಬಾಗ್ರಿ) ಎಂದು ಕರೆದುಕೊಳ್ಳುತ್ತಾರೆ. ಗುಲಬರ್ಗಾ, ಬೀದರ್, ಬಿಜಾಪುರ, ಬಳ್ಳಾರಿ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಇವರಲ್ಲಿ ಜಾತ್ ಮತ್ತು ಭುಕ್ಷಾ ಎಂಬ ಎರಡು ಪಂಗಡಗಳಿವೆ. ಬೇಟೆಯನ್ನು ಅವಲಂಬಿಸಿದ ಸಮುದಾಯವಿದು. ಬೇಟೆಯಾಡುತ್ತ, ಕಾಡಿನ ಉತ್ಪನ್ನಗಳನ್ನು ಮಾರಾಟಮಾಡುತ್ತಾ ಊರಿಂದ ಊರಿಗೆ ಹೋಗಿ ಬಿಡಾರ ಹಾಕುತ್ತ ಬದುಕುವ ಮುಂದಿಯಿವರು. ಬಾಲ್ಯವಿವಾಹ ಪದ್ಧತಿ ಇವರಲ್ಲುಂಟು. ವಧುದಕ್ಷಿಣೆ ತೆರಬೇಕು. ಇವರಲ್ಲಿ ವಿವಾಹ ವಿಚ್ಛೇದನ ಸುಲಭವಾದುದು. ಇವರ ಮನೆಮಾತು ವಾಗ್ರಿ (ವಾಗರಿಯೊ). ಗುಜರಾತಿ, ಹಿಂದಿ, ಮರಾಠಿ, ರಾಜಸ್ಥಾನಿ ಭಾಷಾ ಶಬ್ದಗಳು ವಾಗ್ರಿಯಲ್ಲಿ ಹೆಚ್ಚಾಗಿ ಬಳಕೆಯಾಗುತ್ತವೆ.

೨೪. ಹಸಲ: ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ, ಸೊರಬ, ಸಾಗರ, ಮೊದಲಾದೆಡೆ ಹಸಲರು ಕಂಡುಬರುತ್ತಾರೆ. ಇವರ ಭಾಷೆ ಕನ್ನಡ. ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸೆ ಬಂದ ಹಸಲರು ತುಳುಭಾಷೆಯನ್ನಾಡುತ್ತಾರೆ. ಇವರಲ್ಲಿ ಬೆಳ್ಳಿ ಅಥವಾ ಬೆಳ್ಳಾಲ ಹಲಸರು, ಬಗ್ಗಾಲಿನ ಅಥವಾ ಅಂತರಗಾಲು ಹಸಲರು, ನಾಡು ಹಸಲರು, ಮಲೆ ಹಸಲರು, ಕರ ಎಳೆಯುವ ಹಸಲರು ಎಂಬ ಐದು ಪಂಗಡಗಳಿವೆ. ಇವರಲ್ಲಿ ಭಿನ್ನಗೋತ್ರಗಳಿವೆ. ಇವನ್ನು ‘ಬಳಿ’ ಎನ್ನುತ್ತಾರೆ. ಬಳಿಯನ್ನು ಗೊತ್ತು ಮಾಡುವುದು ತಾಯಿ, ಸೋದರಮಾವ ಇವರ ಮೂಲಕ. ಇವರಲ್ಲಿ ಇಪ್ಪತ್ಮೂರು ಬಳಿಗಳನ್ನು ಗುರುತಿಸಲಾಗಿದೆ. ಹಸಲರ ಮಂತ್ರವಾದಿ ‘ಗಾಡಿಗ’. ಅವನು ಭೂತಪ್ರೇತಗಳ ಮೇಲ್ವಿಚಾರಕ. ಹಾವುಗಳೆಂದರೆ ಹಸಲರಿಗೆ ಭಕ್ತಿ. ಚೌಡಿ, ಪಂಜ್ರುಳ್ಳಿ, ತುಳಸಿಗಿಡಗಳನ್ನು ಪೂಜಿಸುತ್ತಾರೆ. ಸಂಕ್ರಾಂತಿ ಯುಗಾದಿ ಹಬ್ಬಗಳಂದು ತಮ್ಮ ಕುಲ ದೈವಗಳನ್ನು ಆರಾಧಿಸುತ್ತಾರೆ.

೨೫. ಹಾಲಕ್ಕಿ ಒಕ್ಕಲಿಗ : ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟ, ಹೊನ್ನಾವರ ತಾಲೂಕುಗಳಲ್ಲಿ ಕಂಡುಬರುತ್ತಾರೆ. ಬೇಸಾಯವೇ ಇವರ ಬದುಕಿನಾಧಾರ. ದುಡಿತಕ್ಕೆ ಸಮರ್ಪಿಸಿಕೊಂಡ ಶ್ರಮಜೀವಿಗಳು. ಇವರ ಗುಡಿಸಲುಗಳು ಗದ್ದೆಗಳ ಹತ್ತಿರದಲ್ಲಿ ಗುಂಪುಗುಂಪಾಗಿರುತ್ತವೆ. ಮಣ್ಣಿನಗೋಡೆಗೆ ಹುಲ್ಲು ಚಾವಣಿ ಹೊದಿಸಿದ ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ನಿತ್ಯ ಸ್ನಾನ ಮಾಡವು ರೂಢಿಯಿಲ್ಲ. ಅಂಗಳದಲ್ಲಿ ಬತ್ತ ಕುಟ್ಟುವುದಕ್ಕೆ ಒಕ್ಕಳು ಇರುತ್ತದೆ. ಇವರ ವಾಸಸ್ಥಳಕ್ಕೆ ‘ಕೊಪ್ಪ’ ಎನ್ನುತ್ತಾರೆ. ಇವರಲ್ಲಿ ನಲವತ್ತೊಂದು ಬಳಿಗಳಿವೆ. ಬಳಿಗಳನ್ನು ಮರ ಗಿಡ ಬಳ್ಳಿಗಳ ಮತ್ತು ಪ್ರಾಣಿಗಳ ಹೆಸರುಗಳು ಸಂಕೇತಿಸುತ್ತವೆ. ಸಂಕೇತಗಳಿವೆ. ಮಾಂಸಾಹಾರಿಗಳಾದರೂ ಇವರು ತಮ್ಮ ಬಳಿಯ ಹೆಸರಿನ ಪ್ರಾಣಿಗಳನ್ನು ತಿನ್ನುವುದಿಲ್ಲ. ಕೊಲ್ಲುವುದಿಲ್ಲ. ಇವರಲ್ಲಿ ಭಿನ್ನಗೋತ್ರ ವಿವಾಹ ಪದ್ಧತಿಯುಂಟು. ಊರಗೌಡನ ನೇತೃತ್ವದಲ್ಲಿ ವಿವಾಹ ನಡೆಯುತ್ತದೆ.

ಇವರ ಮನರಂಜನೆಗಳೆಂದರೆ ಹಗರಣ, ಕೋಲಾಟ, ಸುಗ್ಗಿ ಕುಣಿತ, ಗುಮಟೆಪಾಂಗು. ಈ ಪೈಕಿ ಸುಗ್ಗಿಕುಣಿತ ವಿಶಿಷ್ಟವಾದುದು; ಆಕರ್ಷಕವಾದುದು. ಬಣ್ಣ ಬಣ್ಣದ ಉಡುಪು ಧರಿಸಿ, ಬಣ್ಣದ ಕಾಗದ ಬೆಂಡು ಬೇಗಡೆಯಿಂದ ಸಿಂಗರಿಸಿ ತಯಾರು ಮಾಡಿದ ತುರಾಯಿಯನ್ನು ತಲೆಗೆ ಹಾಕಿಕೊಂಡು ಕುಣಿಯುವ ಸೊಗಸು ಎಲ್ಲರನ್ನು ಆಕರ್ಷಿಸುವಂಥವರು.

ಇವರಲ್ಲಿ ಏಕಪತ್ನಿತ್ವ ಪದ್ಧತಿ ಚಾಲ್ತಿಯಲ್ಲಿದ್ದರೂ ಬಹುಪತ್ನಿತ್ವ ಸೀರುಡಿಕೆ ಸಂಪ್ರದಾಯದಂತೆ ಅವಕಾಶವುಂಟು. ವಿಧವೆಯರು ವಿಧುರರೊಡನೆ ಮಾತ್ರ ವಿವಾಹವಾಗಬಹುದು.

ಹಾಲಕ್ಕಿ ಒಕ್ಕಲಿಗರು ಗಿಡಮೂಲಿಕೆಗಳಿಂದ ಔಷಧ ನೀಡುವಂಥ ಹೆಸರಾಂತ ವೈದ್ಯ ಮನೆತನಗಳಿವೆ. ಇದು ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ವೃತ್ತಿಯಾಗಿದೆ.

ಕಾಲ ಬದಲಾಗುತ್ತಿದೆ. ಆಧುನೀಕರಣ ಹೆಚ್ಚಾಗುತ್ತಿದೆ. ಜಾಗತೀಕರಣ ಪ್ರಭಾವ ಅಧಿಕವಾಗುತ್ತಿದೆ. ಬುಡಕಟ್ಟು ಜನರ ಅಭಿವೃದ್ದಿಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು, ಅವರ ಜೀವನ ಸುಧಾರಣೆಗಾಗಿ ಶ್ರಮಿಸುತ್ತಿದೆ. ಅರಣ್ಯಗಳು ನಾಶವಾಗುತ್ತಿರುವುದರಿಂದ ಬುಡಕಟ್ಟು ಮಂದಿ ತಮ್ಮ ಬದುಕಿನ ಶ್ರಮವನ್ನು ಬದಲಾಯಿಸಕೊಳ್ಳುವುದು ಅನಿವಾರ್ಯವಾಗಿದೆ. ಅವರ ಸಾಮಾಜಿಕ, ಆರ್ಥಿಕ, ಧಾರ್ಮಿಕ ವ್ಯವಸ್ಥೆಗಳಲ್ಲಿ ಮಾರ್ಪಾಟುಗಳು ಕಾಣಿಸಿಕೊಂಡಿವೆ. ಹೀಗಾಗಿ ಅವರು ತಮ್ಮ ಕಸುಬುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ.

– ಆರ್.ಆರ್.