ಕರ್ನಾಟಕದ ಆಭರಣಗಳು ಭಾರತ ವೈವಿಧ್ಯಮಯ ಆಭರಣಗಳಿಗೆ ಹೆಸರುವಾಸಿಯಾದುದು. ಕ್ರಿ.ಪೂ.೨೫೦ ರಿಂದ ೧೦೦೦ ವರ್ಷ ಕಾಲದ ಚಿನ್ನಾಭರಣಗಳು ತೆಕ್ಕಲಕೋಟೆಯ ಉತ್ಖನನದಲ್ಲಿ ದೊರಕಿವೆ. ಪರಂಪರೆಯ ಆಭರಣಗಳಿಗೆ ದಕ್ಷಿಣ ಭಾರತ ಪ್ರಸಿದ್ಧವಾದುದು. ಮಣಿಪುರದಲ್ಲಿ ಹಿತ್ತಾಳೆ ಮತ್ತು ತಾಮ್ರ ಮಿಶ್ರಿತ ಕಂಠಹಾರಗಳು ದೊರೆತಿವೆ. ಕರ್ನಾಟಕ ಚಿನ್ನದ ಆಭರಣಗಳ ತಯಾರಿಕೆಯಲ್ಲಿ ವಿಶೇಷ ನೈಪುಣ್ಯತೆ ಸಾಧಿಸಿದೆ. ಆದಿಯಲ್ಲಿ ಪ್ರಕೃತಿಯ ಪರಿಕರಗಳೇ ಒಡವೆಗಳಾಗಿ ರೂಪುಗೊಂಡಿರುವ ಅಂಶವನ್ನು ಪ್ರಾಚೀನ ಕಾವ್ಯಗಳು ಶ್ರುತಪಡಿಸುತ್ತವೆ. ಆರಂಭದ ದಿನಗಳಲ್ಲಿ ಮಾನವ ಹೂವಿನ ಅಲಂಕಾರ ಮಾಡಿಕೊಂಡು ಅವು ದೀರ್ಘಕಾಲ ಉಳಿಯುವುದಿಲ್ಲವೆಂಬುದು ಮನವರಿಕೆಯಾದಾಗ, ತಾನು ಬೇಟೆಯಾಡಿ ತಂದ ಪ್ರಾಣಿಗಳ ದಂತ, ಕೊಂಬುಗಳಿಂದ ಆಭರಣಗಳನ್ನು ಮಾಡಿಕೊಂಡ. ಅಷ್ಟೇ ಅಲ್ಲ ಕಾಡಿನಲ್ಲಿ ಸಿಗುತ್ತಿದ್ದ ಬೇರು, ನಾರು, ಬೀಜ, ಕಾಯಿ, ಬಿದುರು, ಮರ, ಎಲೆ, ಹೂ, ಹಣ್ಣುಗಳನ್ನು ಅವುಗಳ ನೈಜ ರೂಪದಲ್ಲೇ ಕಟ್ಟಿಕೊಂಡು ತೊಡಲು ಶುರು ಮಾಡಿದ. ಅನಂತರ ಆಭರಣದ ಆವಿಷ್ಕಾರವಾಯಿತು.

ವ್ಯಕ್ತಿ ಸುಸಂಸ್ಕೃತನಾಗಿ ತೊಡಗಿದಂತೆ ಅವನು ಆಭರಣಗಳಲ್ಲಿ ನಾವೀನ್ಯತೆ, ವೈವಿಧ್ಯತೆಗಳನ್ನು ಸಾಧಿಸಲೋಸುಗ, ಮಣ್ಣಿನಿಂದ ಒಡವೆಗಳನ್ನು ಮಾಡಲು ತೊಡಗಿದ. ಅದೆಲ್ಲ ಶಿಲಾಯುಗದ ಮಾತು. ಮಾನವ ಶಿಲಾಯುಗದಿಂದ ಲೋಹಯುಗಕ್ಕೆ ಬಂದ, ಹೊಳಪಿನ ಮೃದು ಲೋಹಗಳಾದ ಚಿನ್ನ – ಬೆಳ್ಳಿ, ಹಿತ್ತಾಳೆ, ತಾಮ್ರಗಳ ಆವಿಷ್ಕಾರ, ಆಭರಣಗಳ ಬೆಳೆವಣಿಗೆಗೆ ಒಂದು ಹೊಸ ಆಯಾಮ ನೀಡಿತು. ದಿನಕಳೆದಂತೆ ಮನುಷ್ಯನ ಆರೋಗ್ಯದ ಮೇಲೆ ಈ ಲೋಹಗಳು ಉತ್ತಮ ಪರಿಣಾಮ ಬೀರಬಲ್ಲವು ಎಂಬ ಅಂಶ ಬೆಳಕಿಗೆ ಬಂತು. ತಾಮ್ರದ ನೀರು ಮೈಮೇಲೆ ಬಿದ್ದರೆ ಚರ್ಮರೋಗಗಳು ಬರುವುದಿಲ್ಲ. ಚಿನ್ನದ ಪುಡಿಯ ನಿತ್ಯ ಪ್ರಯೋಗ ಹೃದ್ರೋಗವನ್ನು ತಡೆಗಟ್ಟುತ್ತದೆ. ಎಳೆ ಮಕ್ಕಳಿಗೆ ರಚ್ಚೆ ತಾಳಿ ಕಟ್ಟಿದರೆ ರಗಳೆ ಮಾಡುವುದಿಲ್ಲ.

ಬೆಳ್ಳಿತಟ್ಟೆ ರೋಗನಿರೋಧಕವಾದುದರಿಂದ ದಿನವೂ ಅದರಲ್ಲೇ ಊಟ ಮಾಡುತ್ತಿದ್ದರೆ ಆರೋಗ್ಯ ವೃದ್ಧಿಸುತ್ತದೆ. ವಾತರೋಗ, ಕೀಲುರೋಗದಿಂದ ಪಾರಾಗಲು ಚಿನ್ನದ ಉಂಗುರ ಧರಿಸಬೇಕು. ತಾಮ್ರದ ಬಳೆಸರ ಹಾಕುತ್ತಾರೆ. ಉಡುದಾರ ವಾತಪಿತ್ತಗಳಿಂದ ಬರಬಹುದಾದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಕರ್ಣಾಭರಣಗಳು ಮರ್ಮಸ್ಥಾನದಲ್ಲಿ ಉದ್ಭವಿಸುವ ರೋಗಗಳನ್ನು ನಿವಾರಿಸಿ ವಿಶೇಷ ಶಾಂತಿ ಉಂಟು ಮಾಡುತ್ತವೆ. ಜೊತೆಗೆ ವಾತ, ಪಿತ್ತ, ಶ್ಲೇಷಗಳಿಂದ ಉಂಟಾಗುವ ದೋಷಗಳನ್ನು ನಿವಾರಿಸುತ್ತವೆ.

ಕಾಲಿಗೆ ತೊಡಿಸುವ ತೋಡ, ಕಾಲ್ಕಡಗಳು ಸೊಂಟದ ಭಾಗಗಳಿಗೆ ಬಲ ನೀಡುವುದರೊಂದಿಗೆ ಜನನೇಂದ್ರಿಯಗಳ ಆರೋಗ್ಯವನ್ನು ಕಾಪಾಡುತ್ತವೆ. ಒಟ್ಟಿನಲ್ಲಿ ಅಂಗಾಂಗಗಳಿಗೆ ಧರಿಸುವ ಆಭರಣಗಳು ದೇಹಕ್ಕೆ ರೋಗರುಜಿನ ತಗುಲದಂತೆ ಕಾಪಾಡುತ್ತವೆ. ಆಭರಣಗಳನ್ನು ಪ್ರಾದೇಶಿಕ ಭಿನ್ನತೆ, ಲಿಂಗಭೇದ, ಪಾರಂಪರಿಕ, ಆಧುನಿಕ, ಸಾಮಾಜಿಕ, ಧಾರ್ಮಿಕ, ಜಾನಾಂಗಿಕ ಎಂದೆಲ್ಲ ವಿವಿಧ ನೆಲೆಯಲ್ಲಿ ಅವಲೋಕಿಸಬಹುದು. ಆಭರಣಗಳು ಭಾವನಾತ್ಮಕ ಹಿನ್ನೆಲೆಯಲ್ಲಿ ಪ್ರೇಮ, ದ್ವೇಷ, ಅಧಿಕಾರ, ಅಂತಸ್ತು, ಸಂಪತ್ತು, ಆಪದ್ಭನ, ಅಹಂಕಾರ, ಹೆಮ್ಮೆ, ಕನೃತ್ವ, ಸ್ತ್ರೀಯತ್ವ, ಪ್ರದರ್ಶನ ಪ್ರತಿಷ್ಠೆಯ ಸಂಕೇತಗಳಾಗಿವೆ.

ಪ್ರತಿಯೊಂದು ಜನಸಮುದಾಯಕ್ಕೂ, ಪ್ರದೇಶಕ್ಕೂ ಜನಾಂಗಕ್ಕೂ ವಿವಿಧ ಬಗೆಯ ಆಭರಣಗಳು ಮೀಸಲಾಗಿವೆ. ಇವುಗಳನ್ನು ಸ್ಥೂಲವಾಗಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು ಆಭರಣಗಳು ಎಂದೆಲ್ಲ ಪತ್ತೆ ಹಚ್ಚಬಹುದು. ಕೊಳವೆ ಸರ, ಗೋಧಿಸರ, ‘ಗಾಡೆ’ ಎಂಬ ಮೂಗಿನ ಆಭರಣ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿವೆ. ಲಂಬಾಣಿಗಳಲ್ಲಿ ‘ಬುಲಾಕು’ ಎಂಬ ನಾಸಿಕಾಭರಣ, ದಂತದ ಬಳೆಗಳು, ಬಾಬಲಿ/ಬಾವುಲಿ ಎಂಬ ಒಡವೆಗಳು ಚಾಲ್ತಿಯಲ್ಲಿವೆ. ಅಡ್ಡಿಗೆ, ದೊಡ್ಡಗುಂಡು, ಚಿಕ್ಕಗುಂಡು, ಓಲೆಗಳು ದಕ್ಷಿಣ ಕರ್ನಾಟಕದಲ್ಲಿ ಬಳಕೆಯಲ್ಲಿದ್ದರೆ, ಕೊಕ್ಕೆತಾತಿ, ಹೊಮ್ಮಾಲೆ, ಜೋಮಾಲೆ ಗುಂಡಿನ ಸರಗಳು ಕೊಡಗಿನ ವಿಶೇಷ ಆಭರಣಗಳಾಗಿವೆ. ಅಷ್ಟಪಟ್ಟು ಗುಂಡಿನೊಡನೆ ಸೇರಿಸಿದ ಹವಳದ ಸರಗಳು ಕರಾವಳಿಯ ವೈಶಿಷ್ಟ್ಯ. ಬಂದಿಸರಿಗೆ ಮಲೆನಾಡಿನ ವೈಶಿಷ್ಟ್ಯ. ಅದರೊಂದಿಗೆ ಗಂಡಸರು ಕಿವಿಗೆ ಒಂಟಿ, ಹತ್ಕಡಶು, ಕೈಗೆ ಕಪ್ಪ, ಉಂಗುರ, ಕೊರಳಿಗೆ ಹುಲಿಯುಗುರಿನ ಒಂಟಿ ಎಳೆ ಚಿನ್ನದ ಚಿನ್ನ ಬಟಾಟಿಸರ, ಹಗ್ಗದ ಹುರಿಸರ, ಕಾಲ್ಕಡಗ ಹಾಕುತ್ತಾರೆ. ವಿವಾಹಿತ ಹೆಣ್ಣು ಕಿವಿಗೆ ಓಲೆ, ಬುಗುಡಿ, ಲವಂಗದಮೊಗ್ಗು ಇತ್ಯಾದಿ ಒಡವೆಗಳನ್ನು, ಮೂಗುತಿ, ತಾಳೀಸರ, ಕೈಕಡಗ, ಗಾಜಿನಬಳೆ, ಉಂಗುರ, ಡಾಬು, ಕಾಲ್ಚೈನು ಕಾಲುಂಗುರ, ಕಾಲ್ಕಡಗಗಳನ್ನು ಬಳಸುತ್ತಾರೆ.

ಅಧ್ಯಯನದ ಅನುಕೂಲದ ದೃಷ್ಟಿಯಿಂದ ಆಭರಣಗಳನ್ನು ಮಕ್ಕಳ ಆಭರಣಗಳ ಹೆಣ್ಣಿನ ಆಭರಣಗಳು ಗಂಡಿನ ಆಭರಣಗಳು ವಯಸ್ಕರ ಆಭರಣಗಳು ಮುದಕರ ಆಭರಣಗಳು ಎಂದು ವಿಂಗಡಿಸಿಕೊಳ್ಳಲಾಗಿದೆ, ಆಭರಣಗಳ ವಿಷಯದಲ್ಲಿ ಹೆಣ್ಣನ್ನು ಮುಡಿಯಿಂದ ಅಡಿಯವರೆಗೂ ನೋಡುವ ಪರಿಪಾಠವಿದೆ.

ಮಕ್ಕಳ ಆಭರಣಗಳು: ಆಭರಣಗಳನ್ನು ಧರಿಸಿದ ಮಗುವಿಗೆ ಯಾವುದೇ ರೀತಿಯ ಜಾಡ್ಯಗಳು, ಅಂಟುರೋಗಗಳು ಬರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಏನೋ, ಮಗುವಿಗೆ ಮೂರು ತಿಂಗಳು ತುಂಬುವುದರೊಳಗೆ ಕಿವಿ ಚುಚ್ಚಿಸಿ ಮುರವನ್ನು ಹಾಕುವರು. ಸಾಮಾನ್ಯವಾಗಿ ಮಕ್ಕಳ ಒಡವೆಗಳನ್ನು ಬಹುತೇಕ ಚಿನ್ನ – ಬೆಳ್ಳಿ ಲೋಹಗಳಿಂದಲೇ ಮಾಡುವರು. ಮುರವನ್ನು ಬೆಳ್ಳಿ, ಬಂಗಾರ, ಪಂಚಲೋಹ ಮತ್ತು ತಾಮ್ರದ ತಂತಿಯಿಂದ ಮಾಡಿಸುವರು. ಅಲ್ಲದೆ ಮಾಗಾಯಿ, ಬಿಂದುಲಿ, ದಿಟ್ಟಮಣಿಸರ, ಹವಳದ ಸರ, ಹುಲಿಯುಗುರು, ಬಾಲಿಮಣಿ, ತಟ್ಟುಮಣಿ, ತಾಮ್ರದ ತೂತಿನ ಬಿಲ್ಲೆ ಇವುಗಳಲ್ಲಿ ಕೆಲವನ್ನು ಸೇರಿಸಿ ಮಗುವಿನ ಕೊರಳಿಗೆ ಕಟ್ಟುವುದುಂಟು. ಸೊಂಟಕ್ಕೆ ಉಡುದಾರ, ಅರಳಲೆ ನೇವಳ, ಮಾಗಾಯಿ, ಗೆಜ್ಜೆ ಉಡುದಾರ, ಪಟ್ಟೆ ಉಡುದಾರವನ್ನು ಹಾಕುತ್ತಾರೆ. ಮುಂಗೈಗೆ ಕಪ್ಪುದಾರ, ಕರಿಮಣಿಕಟ್ಟು, ಮಾಗಾಯಿ, ಗೆಜ್ಜೆ ಉಡುದಾರ, ಪಟ್ಟೆ ಉಡುದಾರವನ್ನು ಹಾಕುತ್ತಾರೆ. ಮುಂಗೈಗೆ ಕಪ್ಪುದಾರ, ಕರಿಮಣಿಕಟ್ಟು, ಮುತ್ತು, ಹವಳ, ಕರಿಮಣಿ, ಹಾಲುಮಣಿಗಳನ್ನು ಬಳಸಿ ಮಕ್ಕಳ ಕೈಕಟ್ಟುಗಳನ್ನು ಹಾಕುತ್ತಾರೆ. ಕಡಗ, ನುಲಿಕೆ, ಕಪ್ಪ, ಉಂಗುರಗಳನ್ನು ಮಾಡುವುದಿದೆ. ಕಾಲಿಗೆ – ಕಡಗ ಗೆಜ್ಜೆಚೈನು, ಪೆಂಡೆಗೆಜ್ಜೆ, ಹಾಲ್ಗಡಗ ತೊಡಿಸುವರು. ಜನಪದ ಗೀತೆಗಳಲ್ಲಿ

ಅರಳೆಲೆ ಬೇಕವ್ವ ಬೆರಳಿಗುಂಗುರ ಬೇಕ
ಕೊರಳಿಗೆ ಬೇಕ ಹಸಲೀಯ| ಕಂದsನ
ಕಾಲಿಗೆ ಬೇಕು ಕಿರುಗೆಜ್ಜೆ

ಕಂದೆಲ್ಲಿ ಆಡ್ಯಾನ ಕಡಗೆಲ್ಲಿ ಚೆಲ್ಲವಾ
ದುಂಡು ಮುತ್ತೇಲ್ಲ ಉದುರ್ಯಾವ| ಕಂದsನ
ಬಿಂದುಲಿ ಕಂಡವರು ಕೊಡರವ್ವ

ಕಾಲಂದಿಗೆ ಮುದ್ದು ನೀಲವಜ್ಜರದ ಉಂಗುರ ಮುದ್ದು
ಮಾಗಾಯಿ ಮುದು ತಿಪಟೂರು | ಗೆಜ್ಜೆ ಬಸವ
ನೀ ಮುದ್ದು ನಮ್ಮ ಮನಿಗೆಲ್ಲ

ಮಕ್ಕಳಿಗೆ ತೊಡಿಸುವ ಆಭರಣಗಳ ಪಟ್ಟಿಯೇ ಇವೆ. ಉಡುದಾರಕ್ಕೆ ಅರಳೆಲೆ ಅಳವಡಿಸಿದ್ದರೆ ಅದು ಅರಳೆಲೆ, ಮಾವಿನಕಾಯಿ ಅಳವಡಿಸಿದರೆ ಅದು ‘ಮಾಗಾಯಿ’, ಈ ಅರಳೆಲೆ – ಮಾಗಾಯಿಗಳು ಹೆಣ್ಣು ಮಕ್ಕಳ ಸೊಂಟದ ಆಭರಣಗಳಾದರೂ, ಲಿಂಗಭೇದವೆಣಿಸದೆ ಅದನ್ನು ಗಂಡು ಮಕ್ಕಳಿಗೂ ತೊಡಿಸಿರುವುದು ಜನಪದ ಗೀತೆಗಳಿಂದ ನಮಗೆ ವೇದ್ಯವಾಗುತ್ತದೆ.

ಹೆಣ್ಣಿನ ಆಭರಣಗಳು : ಆಭರಣಗಳಿಗೂ ಹೆಣ್ಣಿಗೂ ಒಂದು ಭಾವನಾತ್ಮಕ ಅನುಬಂಧವಿದೆ. ಆಭರಣಗಳು ಹೆಣ್ಣಿಗ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇವು ಬಹಳ ನವುರಾದ, ನಾಜೂಕಿನ ಕೆತ್ತನೆಗಳಿಂದ ಕೂಡಿರುತ್ತವೆ. ನೆತ್ತಿಯಿಂದ ಕಾಲಿನವರೆಗೂ ನೂರಾರು ಬಗೆಯ ಆಭರಣಗಳು ಕಂಡು ಬರುತ್ತವೆ. ಬೈತಲೆಗೆ ಸಂಬಂಧಿಸಿದ ಒಡವೆಗಳು ಶುಭಸೂಚಕವಾದಂತಹವು. ನರ್ತಿಸುವಾಗ, ನಿಶ್ಚಿತಾರ್ಥದ ಸಂದರ್ಭ, ವಿವಾಹ ಸಮಯದಲ್ಲಿ ಬೈತಲೆ ಮಣಿ, ಬೈತಲೆಸರ, ಬೈತಲೆ ಬೊಟ್ಟು, ಮುಂತಲೆಬಟ್ಟು, ಪದಕಮಣಿ ಮುಂತಾದವು ಬೈತಲೆ ಮಣಿಗೆ ಮೂಗಿನ ನತ್ತಿನಿಂದಲೂ ಕೊಂಡಿ ಸಹಿತವಾದ ಒಂದು ಎಳೆ ಕಿವಿಯ ಮೇಲಿನ ಕೂದಲಿಗೆ ಸಿಕ್ಕಿಸಲ್ಪಟ್ಟರೆ ಅದನ್ನು ‘ಸೀಮಂತಮಣಿ’ ಎನ್ನುವರು. ವಿಶೇಷ ಸಂದರ್ಭಗಳಲ್ಲಿ ಸೂರ್ಯ, ಚಂದ್ರಕೋಲನ್ನು ಮುಂತಲೆಯ ಆಭರಣಗಳಾಗಿ ಬಳಸುತ್ತಾರೆ.

ಹಿಂತಲೆಯ ಆಭರಣಗಳು ರಾಗಟೆ, ನಾಗರು, ಕೊಪ್ಪ, ಕೇದಗೆ ಇತ್ಯಾದಿ ಜಡೆಯ ಆಭರಣಗಳು. ಜಡೆನಾಗರ, ಜಡೆಬಿಲ್ಲೆ, ಜಡೆಸರ, ಜಡೆಗೊಂಡೆ, ಜಡೆ ಬಂಗಾರ, ಮೊಗ್ಗಿನಜಡೆ, ಗಿಳಿಹೆರಳು, ಕುಚ್ಚು ಮುಖ್ಯವಾದುವು. ಜಡೆ ಬಂಗಾರಕ್ಕೆ ‘ಹೆರಳ ಬಂಗಾರ’ ಎನ್ನುವರು. ಅಲ್ಲದೆ – ಕಮಲದ ಹೂ,ಮೇಟಿ, ಸೇವತಿಗೂ ಹೂ, ಮುಳ್ಳು, ಬಂಗರದ ತಿರುಪಣಿ ಹೂ, ಚಾಕಳಿ, ಪಿಂಪಣಿ, ರೋಜಾ ಹೂ ಮುಂತಾದುವೆಲ್ಲವನ್ನೂ ಬಳಸಿದ್ದಾರೆ.

ಕಿವಿ ಸ್ತ್ರೀಯ ಪುಟ್ಟ ಅಂಗ. ಸೂಕ್ಷ್ಮವಾದ ಹಾಲೆ ಹೊಂದಿರುವ ಕಿವಿಗೆ ಏಳು ತೂತುಗಳನ್ನು ಮಾಡಿ, ಚಿಕ್ಕದಾದ ಏಳು ಆಭರಣಗಳನ್ನು ತೊಡಿಸಿದ್ದಾರೆ. ಮೇಲು ಕಿವಿಗೆ ಬುಗುಡಿ, ಸಿಂಹಮೆಟ್ಟಿದ ಮುರುವು, ತಟ್ಟು, ಬಾಬುಲಿ, ಮೇಟಿಕೊಳವೆ ಧರಿಸುವರು. ಬುಡುಡಿಯಲ್ಲಿ ನೆಲ್ಲಿಕಾಯಿ, ಎಲೆ, ಕಡ್ಡಿ, ಗೆಜ್ಜೆ ತಳುಕಿನ ಬುಗುಡಿ ಪ್ರಮುಖವಾದವು. ಬಾವುಲಿ, ಮರವನ್ನು ಬುಗುಡಿಯ ನೆರೆಯ ಮೇಲುಗಿವಿ ಮುಚ್ಚುವಂತೆ ಧರಿಸುವರು. ಇದಕ್ಕೆ ಉಪಯೋಗಿಸುವ ವಸ್ತುಗಳಿಂದಾಗಿ, ಹರಳಿನ ಬಾವಲಿ, ಮುತ್ತಿನ ಬಾವಲಿ, ಚಂದ್ರಬಾವಲಿ, ಗುಬ್ಬಿ ಬಾವಲಿ, ಕಿಡಕಿ ಬಾವಲಿ, ಮೊಗಬಾವಲಿ, ಬುರುಗಿನ ಬಾವಲಿಗಳನ್ನು ಹೆಸರಿಸಬಹುದಾಗಿದೆ. ಕಿವಿಯ ಮುಂದೆ ಬಾವಲಿಯ ಮೇಲ್ಭಾಗದಲ್ಲಿ ‘ಚೌಕಳಿ’ ಎಂಬ ಒಡವೆ ಹಾಕುವರು. ‘ಅಗಸಿಕಡ್ಡಿ’ ಕಿವಿಯ ಮೇಲ್ಭಾಗದಲ್ಲಿ ಮುರುವಿಗಿಂತ ತುಸು ಕೆಳಗೆ ಹಾಕುವರು. ಇದು ಲವಂಗದಾಕಾರದ ಆಭರಣ. ‘ಎಸಳು’ ಎಂಬ ಚಿಕ್ಕ ಆಭರಣವನ್ನು ಮುರದ ಪಕ್ಕದಲ್ಲಿ ಹಾಕುವರು. ಇದು ಹೂವಿನ ಎಸಳಿನ ಆಕಾರದಲ್ಲಿರುತ್ತದೆ. ‘ತಾಲೂಕ’ ಎಂಬ ಒಡವೆಯನ್ನು ಓಲೆಯಿಂದ ಸ್ವಲ್ಪ ಮುಂದಕ್ಕೆ ಹಾಕುವರು. ‘ಹುಜರ’ ಎಂಬುದು ಸಹ ಕಿವಿಯ ಆಭರಣ. ಕೆಳಗಿನ ಕಿವಿಗೆ ಗುಮ್ಮಂಚಿನವಾಲೆ, ತಟ್ಟಂಚಿನವಾಲೆ, ಕೆನ್ನಸರಪಣಿ, ಬಿಚ್ಚೋಲೆ, ಹರಳಿನೋಲೆ, ನವರತ್ನದೋಲೆ, ವಜ್ರದ ಬೆಂಡೋಲೆ, ದಂತದೋಲೆ, ಬೆಳ್ಳಿತುಂಬು, ಕರ್ಣಮೂಲ, ಕರ್ಣಪೂರ, ರತ್ನಕುಂಡಲ, ಶಂಖದೋಲೆ, ವೋಲೆ ಬಹು ಪ್ರಮುಖವಾದುವು.

ಮೂಗಿಗೆ – ಮೂಗುತಿ, ನತ್ತು, ಮೂಗು ಬಟ್ಟು, ಬುಲಾಕು, ಮುರ, ಚಂದ್ರ, ಅಕ್ಕಿಗೋಟ, ಮುಂಬಬಟ್ಟು ಮುಂತಾದವನ್ನು ಬಳಸುವರು. ಮದುವೆಗೆ ಮೊದಲು ಬಲಕ್ಕೆ ಅನಂತರ ಎಡಕ್ಕೆ ಮೂಗು ಚುಚ್ಚಿಸುವ ಸಂಪ್ರದಾಯ ಕೆಲವು ಸಮುದಾಯಗಳಲ್ಲಿದೆ. ಮುಕುರವು ಗುಂಡಗಿದ್ದು ಸುತ್ತಲೂ ಚಿನ್ನದ ಗೆಜ್ಜೆಗಳನ್ನು ಹೊಂದಿರುತ್ತದೆ. ಬೆಸಸಂಖ್ಯೆಯ ಹರಳುಗಳನ್ನು ಹಾಕಿ ಮಾಡಲ್ಪಟ್ಟ ಮುಗುಬೊಟ್ಟನ್ನು ಬೇಸರಿ ಎನ್ನುವರು. ‘ಗಾಡೆ’ ಎಂಬುದು ಗೋಡಂಬಿ ಆಕೃತಿಯ ಆಭರಣ. ಮೂಗುತಿಗೆ ‘ನಾಸಾಗುಮೌಕ್ತಿಕ’ ನಾಸಾಂಬರಿ, ನಾಸಾಮಣಿ ಎಂಬ ಹೆಸರುಗಳಿವೆ.

ಹೆಣ್ಣಿನ ಕಂಠಾಭರಣಗಳು ಅಪಾರ ಸಂಖ್ಯೆಯಲ್ಲಿವೆ. ದೊಡ್ಡ ಗುಂಡು, ಸಣ್ಣಗುಂಡು, ಕಟ್ಟಾಣಿ, ಅಡ್ಡಿಕೆ, ಚಿಂತಾಕು ಹಾರಗಳು, ಮಾಲೆಗಳಿ, ಸರಗಳು ತಾಳಿ ಪ್ರಸಿದ್ಧವಾದವು. ತಾಳಿಯ ಬಗೆಗೆ ಅನೇಕ ವಿಧಿ ನಿಷೇದಗಳಿವೆ. ತಾಳಿಗೆ – ಮಾಂಗಲ್ಯ, ಮಂಗಳಸೂತ್ರ ಎಂಬ ಹೆಸರುಗಳಿವೆ. ಹಿಂದಿದ್ದ ತಾಳಿಗಳು ಈಗಿನ ತಾಳಿಗಳಂತೆ ಗಟ್ಟಿ ಮುಟ್ಟಾಗಿರಲಿಲ್ಲ. ಅದರೊಳಗೆ ಅರುಗು ಅಥವಾ ಮೇನವನ್ನೋ ತುಂಬಿ ಅದನ್ನು ಗಟ್ಟಿಗೊಳಿಸುತ್ತಿದ್ದರು. ಕಡು ಬಡವರು ಅರಿಶಿನದ ಕೊನೆಗೆ ಅರಿಶಿನ ದಾರವನ್ನು ಕಟ್ಟಿ ತಾಳಿಯಂತೆ ಬಳಸಿದ ನಿದರ್ಶನಗಳಿವೆ. ‘ಅರಿಶಿನ ಕೊನೆ’ ತಾಳಿಯಷ್ಟೇ ಪವಿತ್ರವಾದುದು, ಮಾನ್ಯವಾದುದು. ತಾಳಿಯ ಆಕಾರ ಒಂದೊಂದು ಜಾತಿಗೂ ವಿಭಿನ್ನವಾಗಿದೆ. ಬ್ರಾಹ್ಮಣೇತರ ತಾಳಿಗಳಲ್ಲಿ ಬಹುತೇಕ ಒಂದೇ ಬಗೆಯವು ಸೇಟುಗಳು ತಾಳಿಗೆ ‘ಬೋರ್’ ಎನ್ನುವರು. ಮುಸ್ಲಿಮರು ಚಂದ್ರನನ್ನು ತಾಳಿಯಲ್ಲಿ ಧರಿಸಿದರೆ, ತಮಿಳರು – ಸೂರ್ಯ ಚಂದ್ರರನ್ನು ತಾಳಿಯಲ್ಲಿ ಕೆತ್ತಿಸಿಕೊಳ್ಳುವರು. ತಮಿಳು ಮುಸಲ್ಮಾನರು ಕೊಳವೆಯಾಕಾರದ ತಾಳಿಯೇ ನಿಜವಾದ ತಾಲಿ ಎನ್ನುವರು. ಕ್ರೈಸ್ತರು ಶಿಲುಬೆಗೇರಿದ ಏಸುವಿನ ಸಾಂಕೇತಿಕ ಚಿತ್ರವಿರುವ ತಾಳಿಯನ್ನು ಧರಿಸುವರು. ಬ್ರಾಹ್ಮಣ ಹೆಣ್ಣು ನಾಗೋಲಿ ತಾಳಿ, ಧಾರೆತಾಳಿ, ತವರುಮನೆ ತಾಳಿ ಧರಿಸುವಳು. ಕೆಲವರು ತಾಳಿಯ ಮೇಲೆ ದೇವರ ಚಿತ್ರ ಕೆತ್ತಿಸಿರುತ್ತಾರೆ. ಅಲ್ಲದೆ ಶಂಖ, ಚಕ್ರ, ಮಧುರೈ ಮೀನಾಕ್ಷಿ ಚಿತ್ರ, ಮುಂತಾದುವು ಇರುತ್ತವೆ. ಅಯ್ಯಂಗಾರರ ತಾಳಿ ಆಂಗ್ಲಾಕ್ಷರ ‘M’ ಆಕಾರದಲ್ಲಿದ್ದರೆ, ಸಂಕೇತಿಗಳ ತಾಳಿ ತ್ರಿಕೋನಾಕಾರದ ಗಟ್ಟಿ ಮುದ್ದೆಯಂತೆ ಇರುತ್ತದೆ. ಜೊತೆಗೆ – ಗುಪ್ಪೆತಾಳಿ, ಲಿಂಗಾಕಾರದ ತಾಳಿ, ಜಾಗಟೆತಾಳಿ, ಗುಳ್ಳಿಮಣಿತಾಳಿ, ಪೆರಿಯಾರ್ ತಾಳಿಗಳು ಇವೆ.

ಸಾಮಾನ್ಯವಾಗಿ ತಾಳಿಗಳು ರೂಪಾಯಿ ಅಗಲದ ತಟ್ಟೆಯ ಆಕಾರದಲ್ಲಿದ್ದು, ಅದರ ಮುಂಭಾಗದಲ್ಲಿ ಕೆಂಪು ಹರಳು ಅಥವಾ ಚಿನ್ನದ ಗುಂಡುಗಳಿರುತ್ತವೆ. ನಿತ್ಯಸುಮಂಗಲಿ ಅಥವಾ ಮುತ್ತೈದೆಯರು ತಾಳಿಯನ್ನು ಪೋಣಿಸುವ ಸಂಪ್ರದಾಯವಿದೆ. ತಾಳಿಯ ಅಕ್ಕ – ಪಕ್ಕದಲ್ಲಿ ಹವಳ ಗುಂಡು, ಕರಿಮಣಿಗಳನ್ನು ಹಾಕಬೇಕೆಂಬ ನಿಯಮವಿದೆ. ಕೆಲವರು ಲಕ್ಷ್ಮೀಕಾಸು, ಚಿನ್ನದ ಗುಂಡುಗಳನ್ನು ತಾಳಿಸರಕ್ಕೆ ಹಾಕಿಕೊಳ್ಳುತ್ತಾರೆ.

ತೋಳಿನ ಆಭರಣಗಳಲ್ಲಿ ನಾಗಮುರಿಗೆ ಒಂದು ಆಕರ್ಷಕವಾದ ಒಡವೆ. ತೋಳ ಬಂದಿ, ತೋಳ್ಬಳೆ, ವಂಕಿಗಳನ್ನು ತೋಳಿಗೆ ತೊಡುತ್ತಾರೆ. ಮುಂಗೈ ಆಭರಣಗಳಾಗಿ – ಬಳೆಗಳು, ಕಡಗ, ಬಂಗಾರದ ಬಳೆಗಳು, ರತ್ನದ ಬಳೆಗಳು, ಗೋಟು, ಬಿಲ್ವಾರ, ಕಂಕಣ, ಪೋಚೆ, ತೋಡೆಗಳು, ಪಾಟ್ಲಿ ಪ್ರಮುಖವಾದುವು. ಕೈಬೆರಳಿಗೆ ಉಂಗುರಗಳನ್ನು ತೊಡುವರು. ಉಂಗುರಗಳನ್ನು ಧರಿಸುವ ಒಂದೊಂದು ಕೈ ಬೆರಳುಗಳಿಗೂ ವಿಶಿಷ್ಟ ಸಂಕೇತಗಳಿವೆ. ಕಿರುಬೆರಳಿಗೆ ಅವಿವಾಹಿತರು ಉಂಗುರ ಧರಿಸುವರು. ಅನಾಮಿಕೆಗೆ ತೊಡಿಸುವ ಉಂಗುರ ವಿವಾಹಿತರದು. ನಡುಬೆರಳಿಗೆ ಧರಿಸಿರುವ ಉಂಗುರ ನಿಶ್ಚಿತಾರ್ಥದ್ದು. ತೋರು ಬೆರಳಿನ ಉಂಗುರ ನಿಶ್ಚಿತಾರ್ಥ ಆಗಲಿರುವುದರಿಂದ ಸಂಕೇತ. ಹೆಬ್ಬೆರಳಿನ ಉಂಗುರ ಯಜಮಾನ್ಯ – ಪಾರುಪತ್ಯ ವಹಿಸಿಕೊಂಡಿರುವುದನ್ನು ಸೂಚಿಸುತ್ತದೆ.

ಸೊಂಟದ ಆಭರಣಗಳು – ಸೊಂಟದ ಪಟ್ಟಿ, ಸಾದಾ ಪಟ್ಟಿ, ವಡ್ಯಾಣ, ಡಾಬು, ಗೆಜ್ಜೆಪಟ್ಟಿ, ಗುಂಡಿನ ಪಟ್ಟಿ, ಸುರುಳಿ ಪಟ್ಟಿ ಮುಂತಾದುವು. ಕಾಲಿಗೆ ಚಿನ್ನದ ಆಭರಣಗಳನ್ನು ಧರಿಸಬಾರದೆಂಬ ನಿಯಮ, ನಿಬಂಧವಿದೆ. ಸಾಮಾನ್ಯವಾಗಿ ಕಾಲಿನ ಆಭರಣಗಳನ್ನು ಶುದ್ಧ ಬೆಳ್ಳಿ ಅಥವಾ ಮಿಶ್ರ ಬೆಳ್ಳಿಯಲ್ಲಿ ಮಾಡಿಸುವರು. ಕಾಲ್ಕಡಗ, ಗೆಜ್ಜೆ, ಪೈಜಣ, ವಿವಿಧ ರೀತಿಯ ಚೈನುಗಳು, ಕಾಲಿನ ಹತ್ತು ಬೆರಳುಗಳಿಗೂ ಬೆಳ್ಳಿ ಆಭರಣಗಳನ್ನು ಹಾಕುವ ಸಂಪ್ರದಾಯವಿತ್ತು. ಅವಿವಾಹಿತರು ಕಾಲುಂಗುರಗಳನ್ನು ಧರಿಸಬಾರದೆಂಬ ಸಂಪ್ರದಾಯವಿದೆ.

ಹೆಬ್ಬೆರಳಿಗೆ ಗೆಜ್ಜೆಯುಂಗರ ಅಥವಾ ರನ್ನಿನ ಜೋಡು. ಎರಡನೇ ಬೆರಳಿಗೆ ಸುತ್ಕಾಲುಂಗರ ಇದರಲ್ಲಿ ಎರಡರಿಂದ ಆರಂಭವಾಗುವ ಸುತ್ತ ಒಂಬತ್ತರವರೆಗೂ ಇರುತ್ತವೆ. ಮೂರನೇ ಬೆರಳಿಗೆ ಸಾದಾಮೀನು ಇಲ್ಲವೆ ವಾರಮೀನು, ನಾಲ್ಕನೇ ಬೆರಳಿಗೆ ಮೂರು ಬಗೆಯ ಕಾಲುಂಗುರ ಧರಿಸುವರು. ಮಿಂಚು, ಸುರುಳಿ, ಉಳ್ಳಾಗಡ್ಡಿ ಪಿಲ್ಲಿ, ಕಿರುಬೆರಳಿಗೆ ಪುಷ್ಪಮಾದರಿಯ ಕಿರುಪಿನಲ್ಲಿ ಹಾಕುವರು.

ಹೆಣ್ಣು ಅಂದಿನ ದಿನಗಳಲ್ಲಿ ಧರಿಸುತ್ತಿದ್ದಳೆಂದು ನಂಬಲಾದ ಆಭರಣಗಳ ಪಟ್ಟಿಯನ್ನು ಈ ಒಂದು ಗೀತೆಯಲ್ಲಿ ಹಿಡಿದಿಟ್ಟಿರುವ ರೀತಿ ಮನ ಸೂರೆಗೊಳ್ಳುವಂತಹದು.

ಜೋಡೆಳೆಯ ಕರಿಮಣಿಯ ತಾಳಿ ಸರವೊಂದು
ನಾರೇರಿಗೆ ಹೆಚ್ಚಿನ ಭೂಷಣವು ದೇವಾ | ತುಂಬಿದ
ಬೆಳದಿಂಗಳ ಮುತ್ತಿನ ಬುಗುಡಿಗಳು
ಹಳ್ಳ ಹಚ್ಚಿದ ವಾಲೆ ಮುತ್ತಿನ ಮೂಗುತಿ
ಮೂಗಿಗೆ ದೇವಾ | ದೊಡ್ಡ ಹೆಜ್ಜದ ಕಿವಿಗೆ
ವಜ್ಜರದ ಬೆಂಡೋಲೆ ಇನ್ನುಳಿದ
ಒಪ್ಪು ಆಭರಣ ದೇವಾ | ಮುರಿಗೆಯ
ವಂಕಿಗಳು ಕೊರೆಯುವ ಬಾಹುಬಂಧ
ಪದಕದ ಸರವೊಂದು ಚಂದಿರ ಹಾರೊಂದು
ಮುತ್ತಿನ ಸರಗಳ ಜೋಡಣೆಯು ದೇವಾ !
ಚಿಂತಾಕ ಸರಗಿಯು ವಜ್ರರುದ್ರಾಕ್ಷಿಗಳು
ನೆಲ್ಲಿಕಾಯಿ ಬಲ್ಲಿದ ಸರಗಳು ದೇವಾ
ರನ್ನದ ಗೋಪುಗಳು ಮುತ್ತಿನ ಬಳೆಗಳು
ಸಿಂಗಾರ ಕೈಗೆ ಭೂಷಣವುದೇನಾ
ವೇಡೂರಿ ವಡ್ಯಾಣ ಸುತ್ತ ಕಿನ್ನರಿ ಗೆಜ್ಜೆ
ಕಾಮನ ಬಿಲ್ಲಿನ ಉಗಮೇನು ದೇವಾ
ಕಿಣಿ ಕಿಣಿ ಪೈಜೂಣ ರುಳಿಗಳು ಮೇಲೆದ್ದು
ನಲಿನಲಿದು ಕುಣಯುವ ದನಿಯೇನು ದೇವಾ

ಪುರುಷರ ಆಭರಣಗಳು : ಆದಿಯಲ್ಲಿ ಸ್ತ್ರೀ ಪುರುಷರು ಹೆಚ್ಚು ಕಡಿಮೆ ಸಮಾನ ಆಭರಣಗಳನ್ನು ಧರಿಸುತ್ತಿದ್ದರು. ರಾಜರು ಮಕುಟ, ಕಿರೀಟ, ಮೌಳಿ ಪಟ್ಟ, ಪದಕ ಸರ, ಕರ್ಣಕುಂಡಲ, ಕಪ್ಪ, ಕಡಗ, ಮಣಿಹಾರ, ಸೊಂಟಿಪಟ್ಟಿ, ಕಾಲ್ಕಡಗಳನ್ನು ತೊಡುತ್ತಿದ್ದರೆನ್ನಲಾಗಿದೆ. ಪುರುಷರ ಆಭರಣಗಳು ಸ್ತ್ರೀಯರ ಆಭರಣಗಳನ್ನು ವೈವಿದ್ಯಮಯವಾಗಿಲ್ಲ. ಅವರ ಕಿವಿ, ಕೊರಳು, ತೋಳು, ಬೆರಳು, ಕಾಲುಗಳಿಗೆ ಕೆಲವೇ ಕೆಲವು ಒಡವೆಗಳಿವೆ. ಕಿವಿಗೆ ಮುರ, ಮುರವು, ಒಂಟಿ, ಕುಂಡಲ, ಬಾವುಲಿ, ಮೋಚಕ, ಕೀಲಗಳನ್ನು ಧರಿಸಿದರೆ, ಕೊರಳಿಗೆ ದಪ್ಪನಾದ ಒಂದೆಳೆ ಚಿನ್ನದ ಸರ, ಕಂಠೀಸರ, ಗುಂಡಿನಸರ, ಪವನಸರ, ಚಪಲಹಾರ, ಗೋಪು, ಅಸಲಿ, ತಾಯಿತ, ಹುಲಿಯುಗುರು, ತಾಬೀಜು, ಕರಿ ಎಳೆ ಚೈನು ಧರಿಸುವರು. ಸೊಂಟಕ್ಕೆ ಸೀವಳ, ಉಡುದಾರ ಹಾಕಿಕೊಳ್ಳುವರು.

ತೋಳಿಗೆ ತೋಳ್ಬಳೆ, ತೋಡೆ, ಕೇಯೂರ, ಬಾಪುರಿ, ಬಾಹುಬಂಧ, ತಾಮ್ರದ ಒಂಟಿ ಬಳೆ, ದುಂಡು ಬಳೆ ಹಾಕಿಕೊಳ್ಳುತ್ತಿದ್ದರು. ಮುಂಗೈಗೆ ತೋಡೆ, ಕಂಕಣ, ಕಡಗ, ಬಿಂದ್ಲಿ, ಪೋಚೆ/ಪಾಟ್ಲಿ, ಕಪ್ಪ, ಬಿದ್ದು, ಬಿರುದು, ನುಲಿಕೆಕಪ್ಪ, ಬಾಪುಲಿ, ಇರುವಂದಗಳು ಆಭರಣಗಳಾಗಿದ್ದವು. ಕೈ ಬೆರಳಿಗೆ ಸಾದಾ ಉಂಗುರ, ಹರಳಿನುಂಗುರ, ಹವಳದುಂಗುರ, ಮುತ್ತಿನುಂಗುರ, ನವರತ್ನದುಂಗುರ, ವಜ್ರದುಂಗುರಗಳನ್ನು ಧರಿಸುತ್ತಾರೆ. ಕಾಲಿಗೆ ಪೆಂಡೆ ಕಾಲ್ಕಡಗ, ತೋಡೆ, ಅಂದುಗೆ ಗಂಡುಮಿಂಚು ಹಾಕಿಕೊಳ್ಳುತ್ತಿದ್ದರು.

ಪಚ್ಚೆ ಕಡಗವ ಪವಳ ಸರವನು
ಹೆಚ್ಚಿನಾ ಕಾಲಕಡಗ ಗೆಜ್ಜೆಯ
ಪೆಚ್ಚುತನದಲಿ ಧರಿಸಿ ಮೆರೆದನು
ಮುತ್ತಿನಾ ಸರದಿಂದಲಿ

ಮುತ್ತಿನೊಂಟಿಯನ್ನಿಟ್ಟು
ಮುತ್ತಾ ಹಾರವ ತೊಟ್ಟು
ಮುತ್ತು ರುಮಾಲ ತಲೆಗಿಟ್ಟ ನಮ್ಮಣ್ಣಯ್ಯ
ಮುತ್ತಿನಂಥ ಕದಿರ ತರಲ್ಹೋದ

ಆಭರಣಗಳಿಗೆ ಸಂಬಂಧ ಪಟ್ಟ ಹಾಗೆ ಗಾದೆ, ಒಗಟು, ನಂಬಿಕೆ, ವೈದ್ಯಗಳೂ ಇವೆ.

ಗಾದೆಗಳು: ಬಂದಿ ಇಕ್ಕಿದೋಳ ಬಂದಾನ ನೋಡು, ಕಂಕಣ ಇಕ್ಕಿದೋಳ ಕೈನೋಡು; ಬೂಸಿಗಂಡ ಬುಗುಡಿ ಮಾಡ್ಸಕ್ಕಿದ ಅಂದ್ರೆ, ನಂದಿಗೆ ಬಾರೆ ಬಂದಿ ಮಾಡಸ್ತೀನಿ ಅಂದ; ಉಂಗುರ ಕೊಡಲಾರದ ಮಾವ ಬಂಗಾರ ಸಿಗಲಿಲ್ಲ ಅಂದ; ನೀನು ಓಲೆ ಕಿವಿಯವಳನ್ನ ನೋಡಿದರೆ ನಾನು ಒಂಟಿ ಕಿವಿಯವನನ್ನು ನೋಡ್ತೀನಿ; ಕಟ್ಟಾಣಿಗುಂಡಿಗೆ ಕಲ್ಲು ಹಾಕಿದುಂಗುರ; ಆಚೆ ಮನೆಯೊಳು ಓಲೆ ಇಕ್ಕಂಡ್ರೆ ಈಚೆ, ಮನೆಯೊಳು ಕಿವಿ ಕಿತ್ಕಂಡಳಂತೆ

ಒಗಟುಗಳು: ಅಂತಕ್ಕನ ಮಗಳು ಅಂತರದಲ್ಲಿ ಓಲಾಡ್ತಾಳೆ – ಜುಮುಕಿ / ಲೋಲಾಕು; ಬಗ್ಗಿ ದರೆಬಾಯಿಗೆ ಬರುತ್ತೆ, ಎದ್ದರೆ ಎದೆಗೆ ಹೊಡೆಯುತ್ತೆ – ತಾಳಿ, ಕರಿಮಣಿಸರ; ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ; ಡೊಂಕ ಮರಕ್ಕೆ ಸಂಕೋಲೆ ಹಾಕಿದೆ – ಕೈಬಂದಿ; ತಲೆ ಮೇಲೆ ಹರಳು ಬಾಯಲ್ಲಿ ಬೆರಳು – ಉಂಗುರ

ನಂಬಿಕೆಗಳು : ಕಡುಬಣ್ಣದ ಹವಳ ದುಷ್ಟಶಕ್ತಿಗಳಿಗೆ ಇಷ್ಟವಾದುದರಿಂದ ಅದನ್ನು ಧರಿಸಬಾರದು, ನವರತ್ನಗಳನ್ನು ಹೆಂಗಸರು ಕನಸಿನಲ್ಲಿ ಕಂಡಲೆ ಸಂತಾನಲಾಭವಾಗುತ್ತದೆ, ಮಾಂಗಲ್ಯಕ್ಕೆ ಬೆಲೆಕೊಟ್ಟವಳು ಗಂಡನಿಗೂ ಬೆಲೆ ಕೊಡುತ್ತಾಳೆ, ಸುವರ್ಣ ಭಸ್ಮ ದೇಹದ ಯೌವನವನ್ನು ಕಾಪಾಡುವುದು, ಬಸುರಿ ಹೆಂಗಸು ಆಭರಣಗಳಿಗೆ ಆಸೆ ಪಡಬಾರದು ಇತ್ಯಾದಿ.

– ಕೆ.ಎಸ್.ಬಿ.

ಕರ್ನಾಟಕದ ಜನಪದ ಆಟಗಳು ಜನಪದ ಆಟಗಳನ್ನು ಭೌಗೋಳಿಕತೆಯ ಆಧಾರವಾಗಿ ಮಲೆನಾಡು, ಕರಾವಳಿ, ಬಯಲಸೀಮೆ ಆಟಗಳು ಎಂಬುದಾಗಿ ವಿಭಾಗಿಸಲಾಗಿದೆ. ಸಾಮಾಜಿಕ ಮತ್ತು ಕೌಟುಂಬಿಕ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹುಟ್ಟಿಕೊಂಡಿರುವ ಆಟಗಳು ಇವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಟಗಳು ಭಿನ್ನವಾಗಿರಲು ಅದರ ಭೌಗೋಳಿಕ ಪರಿಸರವೇ ಕಾರಣವಾಗಿರುತ್ತದೆ. ಋತುಮಾನಕ್ಕೆ ತಕ್ಕಂತೆ ಆಡುವ ಆಟಗಳೂ ಕೂಡ ಇವೆ. ಚಳಿಗಾಲದಲ್ಲಿ ಕೈಕಾಯಿಸುವ ಆಟ, ಶ್ರಾವಣಮಾಸದಲ್ಲಿ ಗಾಳಿ ಅಧಿಕವಾಗಿರುವುದರಿಂದ ಗಾಳಿಪಟದ ಆಟ, ಮಳೆಗಾಲದಲ್ಲಿ ಆಡುವ ನೀರಿನ ಆಟ. ಗಂಡು ಮತ್ತು ಹೆಣ್ಣು ಶಾರೀರಿಕ ಬೆಳೆವಣಿಗೆ ಮತ್ತು ರಚನೆಗೆ ತಕ್ಕಂತೆ ಜನಪದ ಆಟಗಳು ಬೆಳೆದು ಬಂದಿವೆ. ಈ ಆಟಗಳು ದಿನನಿತ್ಯದ ಕೆಲಸಗಳ ಮೇಲೂ ಅವಲಂಬಿಸಿವೆ. ಅಷ್ಟೇ ಅಲ್ಲದೇ, ಜನಪದ ಆಟಗಳು ವಯಸ್ಸಿನಿಂದ ವಯಸ್ಸಿಗೆ ಬದಲಾಗುತ್ತ ಹೋಗುತ್ತವೆ. ಕೆಲವು ಅವರ ಬೌದ್ಧಿಕ ಬೆಳೆವಣಿಗೆಯನ್ನು ಅವಲಂಬಿಸಿ ಬಂದರೆ ಇನ್ನು ಕೆಲವು ಅವರ ಶಾರೀರಿಕ ಬಲವರ್ಧನೆಯನ್ನು ಅವಲಂಬಿಸಿ ಬದಲಾಗುತ್ತ ಹೋಗುತ್ತವೆ. ಗುರಿಸಾಧನೆಯನ್ನು ಬಳಸಿಕೊಳ್ಳುವುದಕ್ಕಾಗಿ ಗುಂಡು ಚಂಡಾಟಗಳನ್ನು ತಿರುಗಿಸುವಂತಹ ಬಂಗರಿ, ಬುಗರಿ ಆಟಗಳು, ಉಸಿರುಕಟ್ಟಿಸುವಂತಹ ನೀರಾಟ, ಕಬಡ್ಡಿ ಆಟಗಳು, ಭಾರ ಹೇರುವುದಕ್ಕೆ ಕಲಿಸುವ ಆಳಿನೇರಿಕೆ ಆಟಗಳು ಇಂಥವೆಲ್ಲ ಗಂಡುಮಕ್ಕಳಿಗೆ ಮಾತ್ರ ಸೀಮಿತವಾಗಿದ್ದು, ಹೆಣ್ಣು ಮಕ್ಕಳಿಗೆ ಈ ಆಟಗಳನ್ನು ಆಡುವುದಕ್ಕೆ ನಿಷೇಧವಿದೆ. ಒಂದು ವೇಳೆ ಆಡಿದರೆ ಹಂಗಿಸುತ್ತಾರೆ. ಹೆಣ್ಣುಮಕ್ಕಳು ತಮ್ಮ ದೈಹಿಕ ಬಲವರ್ಧನೆ ಹಾಗೂ ಕೆಲಸಕ್ಕೆ ತಕ್ಕಂತೆ ತಮ್ಮ ಆಟಗಳನ್ನು ರೂಢಿಸಿಕೊಂಡಿದ್ದಾರೆ. ಹಗ್ಗದ ಆಟಗಳು, ತಿರುಪಿನ ಆಟಗಳು, ಬಗಾಟ ಬಗರಿ, ಗಿರಿ ಗಿಟ್ಟೆ, ಹಜಾಗಿ ಲಟಪಟ, ಅಕ್ಕಿ ಚೀಲ ದರದರ, ಕಟಕ್ ರೊಟ್ಟಿ, ಅಚ್ಚಚ್ಚೋ ಬೆಲದಚ್ಚೋ, ಬಾರಕೋಲ ಬಿಗಿಬಿಗಿ, ಉದ್ದು ದೌ, ಇಸ್ಸಿಸೌ, ಇಷ್ಟೇ ಗುಲಾಬಿ ಇತ್ಯಾದಿ ಆಟಗಳು ಹೆಣ್ಣುಮಕ್ಕಳ ಮೈಮಣಿತ, ಸೊಂಟಬಿಗಿತ ಹಾಗೂ ತಿರುಗುವ, ಜಿಗಿಯುವ, ಹಗ್ಗದಾಟಗಳಲ್ಲಿ ಕಣ್ಣಿಗೆ ಚಕ್ರಬರದ ಹಾಗೆ ಸಮತೋಲನ ಕಾಯ್ದುಕೊಳ್ಳುವುದನ್ನು ಕಲಿಸುತ್ತಿರುತ್ತವೆ. ಈ ಆಟಗಳನ್ನು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಜನಪದ ಆಟಗಳನ್ನು ಆಡುವವರಿದ್ದಾರೆ.

ಗಂಡುಮಕ್ಕಳು ಕೂಡ ಆಡುವ ಜನಪದ ಆಟಗಳಿವೆ. ಗುಟೋರಿಯಾ, ಮರಕೋತಿ ಆಟ, ಕಲ್ಲು ಕುಟಿ ಆಟ, (ಕೋಲು ಎಸೆಯುವ ಆಟ) ನಂಬರಾಟ (ಅಂಕಿಗಳ ಆಟ) ಕುದುರೆ ಆಟ, ಮೈಸೂರು ಚೆಂಡು (ಸಿಕ್ಕವರಿಗೆ ಸಿಕ್ಕ ಪಾಲು) ಹೆಬ್ಬೆರಳು ಹಿಡಿದು ಕುಂಟುವುದು, ಲಗೋರಿ (ಕಲ್ಲುಗಳನ್ನು ಜೋಡಿಸಿ ಕಲ್ಲಿನಲ್ಲೇ ಮತ್ತೊಬ್ಬರ ಕಲ್ಲಿಗೆ ಹೊಡೆಯುತ್ತಾ ಹೋಗುವುದು).

ಗಂಡುಮಕ್ಕಳು, ಹೆಣ್ಣುಮಕ್ಕಳು ಇಬ್ಬರೂ ಕೂಡಿ ಆಡುವ ಆಟಗಳು ಕೂಡ ಇವೆ. ಕಣ್ಣಾ ಮುಚ್ಚಾಲೆ ಆಟ, ಕುಂತಿ – ನಿಂತಿ ಆಟ, ಮಳ್ಳೆ ಬಂದೋ ಗಿಳ್ಳಿಪೋ ಕಲ್ಲು ಅವ್ಸುವಾಟ, ಕುಂಬಳಕಾಯಿ ಆಟ, ಮರ ಅಲ್ಲಾಡಿಸೋರ್ಯಾರು? ‘ಹೂಂ’ ಅನ್ನಿಸುವುದು, ಕೆರೆದಡ ಆಟ, ಗಾಂಧೀ ಟೋಪಿ ಆಟ, ಚಿಕ್ಕಮಡಕೆ ದೊಡ್ಡ ಮಡಕೆ ಆಟ. ಮೊದಲಾದ ಆಟಗಳನ್ನು ಮಕ್ಕಳ ಜನಪದ ಆಟಗಳೆಂಬುದಾಗಿ ಗುರುತಿಸಲಾಗಿದೆ.

ವಯಸ್ಕರ ಜನಪದ ಆಟಗಳಲ್ಲಿ ಹುಣಸೇ ಪಚ್ಚಿ ಆಟ, ಪಗಡೆಯಾಟ, ಹರಳುಮಣೆಯಾಟ, ಚೆಂಡಾಟ, ಕೋಲಾಟ, ಬುಗುರಿಯಾಟ, ಟಾಂಗ್ ಬಿರಾಂಗ್ ಆಟ, ಬಳೆಗಾಜಿನ ಆಟ, ಬಪ್ಪದ ಕಲ್ಲಿನ ಆಟ, ತೆಂಗಿನಕಾಯಿ ಜೂಜಿನಾಟ, ತ್ರಿರಂಗದಾಟ, ಸೀಯುವ ಆಟ, ನರಿಕೊಂತನ ಆಟ, ಬಟ್ಟೆ ಆಟ, ಹುಳಸಪ್ಪನ ಆಟ, ಚಿಣ್ಣಿ ಕೋಲಾಟ, ಮೊಟ್ಟೆಯಿಕ್ಕುವಾಟ, ಸುರುಸುರುಕೆಬತ್ತಿಯಾಟ, ಕಾಚಿಕೋತ ಬಂದಿಕೋಲ್ ಆಟಗಳು ಹೊರಾಂಗಣ ಆಟಗಳು ಮತ್ತು ವಯಸ್ಕರು ಆಡುವ ಆಟಗಳು ಕೂಡ ಆಗಿವೆ.

ಈ ಎಲ್ಲಾ ಆಟಗಳು ಬಿಡುವಿನ ವೇಳೆಯಲ್ಲಿ ಆಡುವ ಆಟಗಳೇ ಆಗಿವೆ. ಇಲ್ಲಿ ಗುರುತಿಸಿರುವ ಬಹುಪಾಲು ಆಟಗಳು ಹೆಚ್ಚಾಗಿ ಕ್ರಿಯೆ ಮತ್ತು ಉಪಕರಣಗಳ ಹೆಸರನ್ನು ಅವಲಂಬಿಸಿ ಬಂದಿರುವಂತವುಗಳೇ ಆಗಿವೆ. ಈ ಆಟಗಳಲ್ಲಿ ಪ್ರಾದೇಶಿಕ ಭಿನ್ನತೆಯು ಅಷ್ಟೇ ಸಹಜವಾಗಿದೆ. ಒಂದೇ ಹಳ್ಳಿಯಲ್ಲಿ ಒಂದೇ ಆಟದಲ್ಲಿ ಹೇಳುವ ಪ್ರಾಸಗಳು ಅಷ್ಟೇ ಭಿನ್ನವಾಗಿರುತ್ತವೆ. ಬೇರೆ ಬೇರೆ ಹಳ್ಳಿಗಳಲ್ಲಿ ಆಡುವ ರೀತಿಯೂ ಭಿನ್ನವಾಗಿ ಕಾಣಬರುತ್ತದೆ. ಒಂದು ಆಟದಲ್ಲಿ ಬಳಸುವ ಪ್ರಾಸ, ಉಪಯೋಗವಾಗುವ ಆಟಿಕೆಗಳು, ನಿಯಮಗಳು ಬದಲಗುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಉದಾಹರಣೆಗೆ : ಅಣ್ಣೀಕಲ್ಲಿನಾಟ – ಇದು ಹೆಣ್ಣುಮಕ್ಕಳ ಆಟ. ಗಜ್ಜುಗದ ಗಾತ್ರದ ಕಲ್ಲುಗಳು ಈ ಆಟಕ್ಕೆ ಬೇಕು. ಇಬ್ಬರು ಅಥವಾ ಹೆಚ್ಚು ಜನ ಈ ಆಟ ಆಡಬಹುದು. ಒಬ್ಬೊಬ್ಬರಿಗೆ ಐದೈದು ಕಲ್ಲುಗಳು ಇಟ್ಟುಕೊಳ್ಳುವುದು. ಎಲ್ಲರ ಕಲ್ಲುಗಳನ್ನು ಒಟ್ಟಿಗೆ ಇಟ್ಟು ಯಾರಾದರೊಬ್ಬರು ಆಟ ಪ್ರಾರಂಭಿಸುತ್ತಾರೆ. ಕಲ್ಲುಗಳನ್ನೆಲ್ಲ ಅನುಕೂಲವಾದಷ್ಟು ಎತ್ತರಕ್ಕೆ ಎಸೆದು ಮುಂಗೈ ಮೇಲೆ ಆಟದ ನಿಬಂಧನೆಯ ಪ್ರಕಾರ ಒಂದನ್ನು ಮಾತ್ರ ಆತುಕೊಂಡು ಉಳಿದವನ್ನು ಕೆಳಗೆ ಬೀಳಬಿಡಬೇಕು. ಈ ಬಗೆಯ ಆಟದಲ್ಲಿ ಕೈ ಮೇಲಾಗಲಿ, ನೆಲದ ಮೇಲಾಗಲಿ ಮೂರು ಕಲ್ಲು ಇರಲು ಅವಕಾಶವಿಲ್ಲ. ಇದನ್ನು ‘ಮೂಸ’ ಎನ್ನುತ್ತಾರೆ. ಮೂಸವಾದರೆ ಆಟ ಹೋಯಿತು. ಆಡುವುದರಲ್ಲೂ ವೈವಿಧ್ಯವಿದೆ. ಕಲ್ಲುಗಳನ್ನು ಮೇಲೆಸೆದು ಒಂದು ಮುಂಗೈ ಮೇಲೆ ಮಾಡಿ ಕಲ್ಲುಗಳನ್ನು ಮಾರ್ಗ ಮಧ್ಯದಲ್ಲಿ ಮೇಲಿನಿಂದ ಹಿಡಿಯಬೇಕು. ಇದಕ್ಕೆ ಸೆಣಪಿ ಎನ್ನುತ್ತಾರೆ. ಒಂದು ಕಲ್ಲನ್ನು ಮಾತ್ರ ಮುಂಗೈ ಮೇಲೆ ಆತುಕೊಂಡು ಮತ್ತೆ ಅದನ್ನು ಬೀಳಿಸದಂತೆ ಮೇಲೆಸೆದು ಅಂಗೈಯಲ್ಲಿ ಆನಬೇಕು. ಯಾವ ಸಂದರ್ಭದಲ್ಲಿ ಬಿಟ್ಟರೂ ಆಟ ಹೋಯಿತು. ಕಲ್ಲನ್ನು ಮತ್ತೆ ಮೇಲೆಸೆದು ಅದು ಕೆಳಗೆ ಬೀಳುವಷ್ಟರಲ್ಲಿ ನೆಲದಲ್ಲಿ ಬಿದ್ದಿರುವ ಕಲ್ಲುಗಳಲ್ಲಿ ಒಂದನ್ನು ಎತ್ತಿಕೊಂಡು ಮೇಲಿನದನ್ನು ಆನಬೇಕು. ತಪ್ಪಿದರೆ ಆಟ ಹೋಯಿತು. ನೆಲದ ಮೇಲೆ ಇತರ ಕಲ್ಲುಗಳನ್ನು ಅಲ್ಲಾಡಿಸಿದರೂ ಆಟ ಹೋಯಿತು. ಹೀಗೆ ಒಂದು ಕಲ್ಲಿಂದ ಒಂದೊಂದೇ ಕಲ್ಲಿನಂತೆ ಗೆಲ್ಲುತ್ತ, ಒಂದೂ ಸೀಬೀಬಿ, ಎರಡೂ ಗರಡಾಳ, ಮೂರೂ ಮುತ್ತಿನ ಚೆಂಡು, ನಾಕೂ ನಾಗಪ್ಪ, ಐದೂ ಪಂಚಾಂಗ, ಆರು ದಾಳಿಂಬೆ, ಏಳೂ ಬೇಳೆ, ಎಂಟೂ ರಾಯರ ಗಂಟೆ, ಒಂಬೈನೋಲ್ಗ ಎಂದು ಹೇಳುತ್ತಾ ಇರುವ ಹತ್ತು ಕಲ್ಲುಗಳನ್ನು ಇಬ್ಬರಿದ್ದರೆ ಒಬ್ಬೊಬ್ಬರಿಗೆ ಐದು ಕಲ್ಲುಗಳಂತೆ, ಗೆದ್ದರೆ ಆಟಗಾರ್ತಿ ಗೆದ್ದಂತಾಯಿತು. ಆಮೇಲೆ ಮುಂದಿನವಳ ಆಟ. ಕಲ್ಲಿನ ಸಂಖ್ಯೆಯಲ್ಲಿ ಆನುವುದರ ಭಂಗಿಯಲ್ಲಿ ಗೆದ್ದ ಮೇಲೆ ಸೋತವರಿಗೆ ವಿಧಿಸುವ ಶಿಕ್ಷೆಯಲ್ಲಿ – ಇತರ ನಿಯಮಗಳಲ್ಲಿ ವೈವಿಧ್ಯ ಇದೆ.

ಹರಳುಮಣೆ ಆಟ: ಅಳಗುಳಿ ಮಣೆಯಾಟ, ಚನ್ನೆಮಣೆ ಆಟ ಎಂಬ ಹೆಸರುಗಳೂ ಇವೆ. ಆಟವಾಡಲು ಒಂದೊಂದು ಸಾಲಿನಲ್ಲಿ ಏಳು ಬೀಳು ಪುಟ್ಟ ಬೋಗುಣಿಗಳಂಥ ಎರಡು ಸಾಲು ಗುಳಿಗಳುಳ್ಳ ಸುಮಾರು ಐದಾರು ಅಂಗುಲ ಅಗಲ, ಹದಿನೈದು ಹದಿನಾರು ಅಂಗುಲ ಉದ್ದವುಳ್ಳ ಆಯತಾಕಾರದ ಒಂದು ಮರದ ಮಣೆ ಮತ್ತು ಒಂದು ಗುಳಿಗೆ ಐದರಂತೆ ಹದಿನಾಲ್ಕು ಗುಳಿಗಳಿಗೆ ಎಪ್ಪತ್ತು ಹುಣಿಸೆ ಬೀಜ ಬೇಕು. ಒಂದೊಂದು ಕಡೆಗೆ ಒಬ್ಬೊಬ್ಬರಂತೆ ಇಬ್ಬರಾಡುವ ಆಟದಲ್ಲಿ ಮೊದಲು ಎಲ್ಲ ಮನೆಗಳಿಗೂ (ಗುಳಿ) ಐದೈದರಂತೆ ಹರಳು ತುಂಬಿ ಯಾರಾದರೊಬ್ಬರು ಆಟ ಮೊದಲು ಮಾಡಬೇಕು. ಯಾವುದಾದರೂ ಒಂದು ಮನೆಯ ಐದು ಹರಳನ್ನು ತೆಗೆದುಕೊಂಡು ಮುಂದಿನ ಮನೆಗಳಿಗೆ ಒಂದೊಂದರಂತೆ ಹಾಕುತ್ತಾ ಹೋಗುವುದು, ಮುಗಿದಾಗ ಮುಂದಿನ ಮನೆಯನ್ನು ಮುರಿದು ಅದಕ್ಕೆ ಹಾಕದೆ, ಅದರ ಮುಂದಿನ ಮನೆಗಳಿಗೆ ಹಾಕುತ್ತಾ ಹೋಗಬೇಕು. ಹೀಗೆ ಹಾಕುವಾಗ ಖಾಲಿಮನೆ ಸಿಕ್ಕಿದರೆ ಅದನ್ನು ಬೆರಳುಗಳಿಂದ ಸವರಿ ಮುಂದಿನ ಮನೆಯ ಬೀಜಗಳನ್ನು ತೆಗೆದಿಟ್ಟುಕೊಳ್ಳಬೇಕು. ಅವು ಗೆದ್ದ ಹರಳು, ಅಲ್ಲಿಗೆ ಒಬ್ಬರ ಆಟ ಮುಗಿಯಿತು. ಮನೆ ಬಿಟ್ಟು ಮನೆಯಲ್ಲಿ ಬೀಜವಿದ್ದರೆ ಎಷ್ಟು ಮನೆಗಳಿದ್ದರೂ ಸವರಿ ತೆಗೆದುಕೊಳ್ಳಬಹುದು. ಎದುರು ಬದುರು ಮನೆಗಳು ಖಾಲಿಯಿದ್ದರೂ ಹೀಗೆ ಸವರಿ ತೆಗೆದುಕೊಳ್ಳುವುದು. ಒಂದು ಮನೆಯಲ್ಲಿ ನಾಲ್ಕು ಹರಳಿದ್ದರೆ ಅದಕ್ಕೆ ‘ಕರು’ ಎಂಬುದಾಗಿಯೂ, ಹರಳಿರುವ ತನಕ ಆಯಾಯ ಆಟಗಾರರು ತೆಗೆದಿಟ್ಟುಕೊಳ್ಳುವುದು. ಹೀಗೆ ಕೊನೆಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಹರಳಿರುವ ತನಕ ಆಟ ಆಡುವುದು.

ಚೌಕಬಾರ ಆಟ: ನಾಲ್ವರೊ, ಇಬ್ಬರೊ ಅಥವಾ ಮುವರೊ ಆಡಬಹುದಾದ ಆಟ. ಮೊದಲಿಗೆ ತಲಾ ಐದು ಮನೆಗಳ ಅಥವಾ ಏಳು ಮನೆಗಳಿಗೆ ಚೌಕ ಬರೆದುಕೊಳ್ಳಬೇಕು. ಐದರ ಮನೆಗೆ ನಾಲ್ಕು ಹುಣಿಸೆ ಬೀಜಗಳೊ, ಕವಡೆಗಳೊ ಬೇಕಾದರೆ, ಏಳರ ಮನೆಗೆ ಆರು ಬೇಕಾಗಿರುತ್ತವೆ. ಹೊರಭಾಗದ ಮಧ್ಯದ ಮನೆಗಳು ಕಟ್ಟೆಮನೆಗಳು, ನಡುಮಧ್ಯದ ಮನೆ ಹಣ್ಣಿನ ಮನೆ, ಯಾರಾದರೊಬ್ಬರು ಆಟ ಪ್ರಾರಂಭಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಅವರ ಬಲಗಡೆ ಇರುವವರು ಆಡುವುದು ರೂಢಿ. ಹೊರಗಡೆ ಮನೆಗಳಲ್ಲಿ ಕಾಯಿಗಳಿಗೆ ಒಂದೇ ಅವಕಾಶವಿರುತ್ತದೆ. ಬೇಳೆ ಬಿಡುವಾಗ ನಾಲ್ಕು ಅಂಗಾತಬಿದ್ದರೆ ಚೌಕವೆನ್ನುತ್ತಾರೆ. ಬೋರಲಾಗಿ ಬಿದ್ದರೆ ಬಾರ ಎನ್ನುತ್ತಾರೆ. ಪ್ರತಿಯೊಬ್ಬರೂ ಈ ಚೌಕಬಾರ ನಡೆಸುತ್ತಾ ಒಂದು ಸುತ್ತು ಬಂದು ತಮ್ಮ ತಮ್ಮ ಮನೆಯ ಹಿಂದಿನ ಮನೆಯ ಮೂಲಕ ಒಳನುಗ್ಗಿ ಈಗ ಪ್ರದಕ್ಷಿಣೆಯಾಗಿ ಅನುಕೂಲವಾದ ರೀತಿಯಲ್ಲಿ ಬೇಳೆ ಇದ್ದರೆ ಹಣ್ಣು ಮಾಡಬಹುದು. ನಾಲ್ಕು ಕಾಯಿಗಳನ್ನು ಮೊದಲು ಹಣ್ಣು ಮಾಡಿದವರು ಗೆದ್ದಂತೆ. ಕೊನೆಯಲ್ಲಿ ಉಳಿದವರು ಸೋತಂತೆ.

ಈ ಚೌಕಬಾರದಲ್ಲಿ ಕೆಲವು ನಿಬಂಧನೆಗಳಿವೆ. ಒಂದೇ ಸಮನೆ ಮೂರು ಚೌಕವಾಗಲಿ, ಮೂರು ಬಾರವಾಗಲಿ ಬೀಳಬಾರದು. ಚೌಕ ಅಥವಾ ಬಾರ ಬಿದ್ದಾಗ ಅದಕ್ಕೆ ಕೈ ಉಂಟು. ಕೆಲವರು ಎಲ್ಲ ಕಾಯಿಗಳನ್ನು ಹಣ್ಣಿನ ಮನೆಯಲ್ಲಿಟ್ಟು ಕಾಯಿಸು ಎಂದು ಹೇಳಿ ಪಕ್ಕದಿಂದ ಸೋತವನ ಕೈಗೆ ಏಟು ಕೊಡುತ್ತಾರೆ. ಆಗ ಪ್ರತಿಸಾರಿಯೂ ಒಂದೊಂದು ಕಾಯಿ ಆತನಿಗೆ ದಕ್ಕುತ್ತದೆ.

ಹೊರಾಂಗಣ ಆಟಗಳಾದ ಕುಂಟಾಟ ಮಕ್ಕಳ ಆಟವಾಗಿದೆ. ಈ ಆಟ ಆಡುವವರೆಲ್ಲರೂ ಸೇರಿ ಒಂದು ಚೌಕವನ್ನು (ಆಟದ ಅಂಗಣ) ಬರೆದುಕೊಳ್ಳುತ್ತಾರೆ. ಎಲ್ಲರು ಸೇರಿ ಒಟ್ಟಿಗೆ ಚಪ್ಪಾಳೆ ಹಾಕಿ ಒಂದರ ಮೇಲೊಂದು ಕೈಯಿಟ್ಟು ತೋರಿಸುವುದು. ಕೈಯಿಟ್ಟಿರುವ ರೀತಿಯಲ್ಲಿ ಯಾರದು ಇತರರಿಗಿಂತ ತೋರಿಸುವುದೂ, ಕೈಯಿಟ್ಟಿರುವ ರೀತಿಯಲ್ಲಿ ಯಾರದು ಇತರರಿಗಿಂತ ಭಿನ್ನವಾಗಿರುತ್ತದೊ ಅವರು ಹಿಡಿಯಬೇಕು. ಒಬ್ಬರು ಈ ರೀತಿ ಸಿಕ್ಕುವ ತನಕ ಚಪ್ಪಾಳೆ ತಟ್ಟುತ್ತಿರುತ್ತಾರೆ. ಸಿಕ್ಕಿದವರು ಕುಂಟುತ್ತ, ಕುಂಟುತ್ತ ಚೌಕಟ್ಟಿನೊಳಗೆ ಬಾಕಿಯವರನ್ನು ಹಿಡಿಯಬೇಕು. ಕಾಲು ಬಿಡಕೂಡದು, ಸುಸ್ತಾದಾಗ ಸಮಯಾವಕಾಶ ಕೇಳಬಹುದು. ಮೊದಲು ಸಿಕ್ಕಿಬಿದ್ದವರು ಮುಂದಕ್ಕೆ ಕುಂಟಿಕೊಂಡು ಹಿಡಿಯಬೇಕು. ಎಲ್ಲೆ ಬಿಟ್ಟು ಹೊರ ಹೋದವರೂ ಸಿಕ್ಕಿಬಿದ್ದಂತೆ ಲೆಕ್ಕ.

ರತ್ತೋ ರತ್ತೋ: ಇದು ಹೆಣ್ಣುಮಕ್ಕಳ ಆಟ. ಈ ಆಟವನ್ನು ಆಡುವವರೆಲ್ಲರೂ ವೃತ್ತಾಕಾರವಾಗಿ ಒಬ್ಬರಿಗೊಬ್ಬರು ಕೈ ಕುಟ್ಟಿಕೊಂಡು “ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ ಹದಿನಾರೆಮ್ಮೆ ಕಾಯಲಾರೆ, ಕರೆಯಲಾರೆ, ಕಾಸಲಾರೆ, ಕಾಸಲಾರೆ, ಕುಕ್ಕುರು ಬಸವಿ, ಕೂರು ಬಸವಿ” ಎಂದ ಕೂಡಲೇ ಎಲ್ಲರೂ ತತ್‌ಕ್ಷಣವೇ ಕುಳಿತುಕೊಳ್ಳಬೇಕು. ಕೊನೆಯಲ್ಲಿ ಕುಳಿತವಳು ಸೋತಂತೆ. ಈಗ ಅವಳನ್ನು ಮಧ್ಯದಲ್ಲಿ ನಿಲ್ಲಿಸಿಕೊಂಡು ಉಳಿದವರೆಲ್ಲರೂ ವೃತ್ತಾಕಾರವಾಗಿ ಮೊದಲಿನಂತೆ ಒಬ್ಬರಿಗೊಬ್ಬರು ಕೈಹಿಡಿದು ಮೊದಲು ಹೇಳಿದಂತೆಯೇ ಹೇಳುತ್ತಾ ಸುತ್ತ ತಿರುಗಬೇಕು. ಕೊನೆಯಲ್ಲಿ ಕೂರು ಬಸವಿ ಎಂದು ಎಲ್ಲರೂ ಅವಳ ತಲೆಯ ಮೇಲೆ ಕೈಯಿಟ್ಟು ಬಲಾತ್ಕಾರವಾಗಿ ಕುಕ್ಕರಿಸುವಂತೆ ಮಾಡುತ್ತಾರೆ. ಇದೇ ಆಟವನ್ನು ಬೇರೇ ರೀತಿಯಲ್ಲೂ ಆಡುತ್ತಾರೆ.

ಚಿಣ್ಣಿಕೋಲು: ಇದು ಗಂಡುಮಕ್ಕಳ ಆಟ. ಇದನ್ನು ಆಡಲು ಎರಡು ತುದಿಗಳನ್ನೂ ಚೂಪು ಮಾಡಿದ ಒಂದು ಒಂದೂವರೆ ಅಂಗುಲ ವ್ಯಾಸದಷ್ಟು ಗಾತ್ರದ ಎರಡು ಮೂರಂಗುಲ ಉದ್ದದ ಮರದ ಪುಟ್ಟ ತುಂಡು(ಚಿಣ್ಣಿ)ಬೇಕು. ಮೊಳದುದ್ದದ (ದಾಂಡು) ದಪ್ಪಕೋಲಿನಿಂದ ಚಿಣ್ಣಿಯ ಒಂದು ತುದಿಗೆ ಮೆಲ್ಲಗೆ ಏಟುಕೊಟ್ಟು ಮೇಲಕ್ಕೆ ಪುಟಿದು ಬರುವಂತೆ ಮಾಡಿ ಹೊಡೆಯಬೇಕು. ಈ ಆಟದಲ್ಲೂ ಎರಡು ಪಂಗಡವಿದೆ. ಹೊಡೆಯುವವರು ಮತ್ತು ಕಾಯುವವರು. ಚೆಂಡಾಟದಂತೆ ಇಲ್ಲೂ ಅನೇಕ ನಿಯಮಗಳಿವೆ. ಮೇಲಿಂದ ಬಿದ್ದ ಚಿಣ್ಣಿಯ ದೂರವನ್ನು ದಾಂಡಿನಿಂದ ಅಳೆದು ನೂರಾದರೆ ಒಂದು ಬ್ಯಾಂಕು ಎನ್ನುತ್ತಾರೆ.

ಚಿಣ್ಣಿ ಹೊಡೆಯುವ ಮೊದಲು ತುರ್‌ದಾಂಡ್, ತುರ್‌ಬದ್‌, ತುರ್‌ಚೀಫ್, ಕಟ್‌ಕೋಲ್, ರೆಡಿ ಎಂದು ಕೇಳಿ, ಎದುರಾಳಿಗಳು ರೆಡಿ ಅಂದ ಮೇಲೆ ಹೊಡೆಯುವುದು ವಾಡಿಕೆ. ರೆಡಿ ಎನ್ನುವ ಮಾತಿನಂತೆ ಟ್ರೂ ಬಿಡ್, ಟ್ರೂ ಚಿಪ್, ಕಟ್ ಮೊದಲಾದ ಆಂಗ್ಲ ಪದಗಳ ಜೊತೆ ದಾಂಡು, ಕೋಲ್ ಎಂಬ ಕನ್ನಡ ಪದಗಳೂ ಸೇರಿವೆ.

ಸಿಕ್ಕಿದವರಿಗೆ ಸಿಕ್ಕಪಾಲು (ಸಿಕ್ಕಿದವರಿಗೆ ಸೀರುಂಡೆ): ಎರಡು ಪಂಗಡ ಮಾಡಿಕೊಳ್ಳದೆ ಯಾರು ಬೇಕಾದರೂ ಲಗ್ಗೆ ಬೀಳಿಸಿ, ಆಡುವ ಲಗ್ಗೆ ಚೆಂಡಿನ ಒಂದು ಪ್ರಭೇದಕ್ಕೆ ಈ ಆಟ ಸೇರುತ್ತದೆ. ಪ್ರಮುಖವಾಗಿ ಈ ಆಟಕ್ಕೆ ತೆಗೆದುಕೊಂಡು ಮೂರು ಸಾರಿ ಪುಟಹಾಕಬೇಕು. ಅನಂತರ ಅವನೇ ಆ ಚೆಂಡಿನಿಂದ ಯಾರಿಗಾದರೂ ಹೊಡೆಯಬಹುದು. ಉಳಿದ ಆಟಗಾರರು ದೂರ ಓಡಿ ಹೋಗಬೇಕು. ಈಗ ಯಾರಿಗೆ ಸಿಗುವುದೋ ಅವರು ಹೊಡೆಯಬೇಕು. ಹೀಗೆ ಚೆಂಡು ಸಿಕ್ಕಿದವರು ಯಾರಿಗಾದರೂ ಸರಿಯೆ ಹೊಡೆಯಬೇಕು. ಒಬ್ಬ ಚೆಂಡು ಎತ್ತಿಕೊಂಡಾಗ ಇನ್ನೊಬ್ಬ ಆಟಗಾರ ಬಂದು ಅವನನ್ನು ಮುಟ್ಟಿದರೆ ಅವನಿಗೆ ಹೊಡೆಯುವುದಿಲ್ಲ. ಇದೇ ರೀತಿ ಚೆಂಡು ಸಿಕ್ಕಿದವರು ಹೊಡೆಯುತ್ತ ಇರಬೇಕು. ಚೆಂಡು ಯಾರಿಗೆ ಸಿಗುತ್ತೊ ಅದು ಅವರ ಪಾಲು ಆಗಿರುತ್ತದೆ.

ಗುಟೋರಿಯಾ: ಚಪ್ಪಾಳೆ ಹಾಕಿ ಕಳ್ಳನನ್ನು ಹಿಡಿಯುವ ಆಟ. ಆಟಗಾರರು ದೂರದಲ್ಲಿರುವ ಒಂದು ಗಿಡ ಅಥವಾ ಮರವನ್ನು ತೋರಬೇಕು. ಕಳ್ಳ ಒಂದು ಎಲೆಯನ್ನು ಗುರುತಿಗಾಗಿ ತರಬೇಕು. ಕಳ್ಳ ಆ ಗಿಡದ ಒಳಗೆ ಹೋದಾಗ ಆಟಗಾರರು ಅವಿತುಕೊಳ್ಳಬೇಕು. ಆಟಗಾರರು ಯಾವ ಗಿಡದ ಬಳಿ ಅವಿತಿರುತ್ತಾರೋ ಆ ಗಿಡದ ಬಳಿ ಕಳ್ಳ ಒಂದೇ ಉಸಿರಿಗೆ ಓಡಿ ಹೋಗಿ ಆ ಗಿಡದ ಒಂದೆರಡು ಎಲೆಗಳನ್ನು ಗುರುತಿಗಾಗಿ ಕಿತ್ತುಕೊಂಡು, ಆ ಗಿಡದ ಬಳಿ ಹೋಗಿದ್ದ ಎಂಬ ಗುರ್ತಿಗಾಗಿ ಒಬ್ಬ ಆಟಗಾರನನ್ನು ಹುಡುಕಬೇಕು. ಯಾರಾದರೂ ಅವನ ಕಣ್ಣಿಗೆ ಕಂಡರೆ ಅವರ ಹೆಸರು ಹೇಳಿ ‘ಗುಟೋರಿಯಾ’ ಎನ್ನಬೇಕು (ಉದಾ: ರಾಜು ಗುಟೋರಿಯಾ ಆಗ ರಾಜು ಕಳ್ಳನಾಗಬೇಕು). ಉಳಿದ ಆಟಗಾರರು ಹೊರ ಬಂದು ಮತ್ತೆ ಕಳ್ಳನಾದವನನ್ನು ಗಿಡದ ಬಳಿಗೆ ಕಳುಹಿಸಿ ಅವಿತುಕೊಳ್ಳಬೇಕು.

ಮರಕೋತಿ ಆಟ, ಉಪ್ಪಪುಕಡ್ಡಿ ಆಟ, ಕಲ್ಲು ಕುಟಿ (ಕೋಲು ಎಸೆಯುವ ಆಟ) ನಂಬರಾಟ (ಅಂಕಿಯ ಆಟ), ಕುದುರೆ ಆಟ, ಹೆಬ್ಬೆರಳು ಹಿಡಿದು ಕುಂಟುವ ಆಟ, ಕಣ್ಣು ಮುಚ್ಚಾಲೆ ಆಟ, ಕುಂತಿ ನಿಂತಿ ಆಟ, ಕುಂಬಳಕಾಯಿ ಆಟ ಮೊದಲಾದ ಆಟಗಳು ದೈಹಿಕ ಅಲಸ್ಯವನ್ನು ಕಿತ್ತೊಗೆಯುವುದರ ಜೊತೆಗೆ ಮಾನಸಿಕ ಕೌಶಲ್ಯತೆಯನ್ನು ಸದಾ ಗೆಟ್ಟಿಗೊಳಿಸುತ್ತಿರುತ್ತವೆ. ಇಲ್ಲಿ ತಿಳಿಸಿರುವ ಬಹುಪಾಲು ಜನಪದ ಆಟಗಳು ಇಂದಿಗೂ ಹಳ್ಳಿಗಳಲ್ಲಿ ಜೀವಂತವಾಗಿ ಉಳಿದಿವೆ. ಪಟ್ಟಣಗಳಲ್ಲಿ ನಗರಗಳಲ್ಲಿ ಈ ಆಟಗಳು ಸ್ವಲ್ಪ ಬದಲಾವಣೆ ಹೊಂದಿವೆ. ಈ ಜನಪದ ಆಟಗಳನ್ನು ಆಡಲು ಸಾಧನ ಸಾಮಗ್ರಿಗಳು ಬೇಕಿಲ್ಲ. ಕೆಲವು ಆಟಗಳಿಗೆ ಸಾಧನ ಸಾಮಗ್ರಿಗಳು ಬೇಕಾದರೂ, ಅವುಗಳ ಖರ್ಚು ಕಡಿಮೆ. ಆದ್ದರಿಂದ ಜನಪದ ಆಟಗಳು ಕೆಲ ಪಟ್ಟಣದ, ನಗರದ ಮಕ್ಕಳಿಗೆ ಹಿಡಿಸಿವೆ. ಆದ್ದರಿಂದಲೇ ಈ ಆಟಗಳಿಗೆ ನಗರದವರು ಬೇರೆ ಹೆಸರುಗಳನ್ನಿಟ್ಟು ಈ ಆಟಗಳನ್ನು ಆಡುತ್ತಿದ್ದಾರೆ. ಪೋಲೋ, ಕ್ರಿಕೆಟ್, ಹಾಕಿ, ಚೆಸ್, ವಾಲಿಬಾರ್, ಥ್ರೋಬಾಲ್, ಟೆನಿಸ್, ಕಬ್ಬಡಿ, ಕೊಕೋ, ಹೈಜಂಪ್, ಲಾಂಗ್ ಜಂಪ್, ರನ್ನಿಂಗ್ ಮೊದಲಾದ ಆಟಗಳು ಜನಪದ ಆಟಗಳ ಮೂಲ ಪ್ರೇರಣೆಯಿಂದಲೇ ಜನ್ಮ ತಳೆದವು ಎಂದರೆ ತಪ್ಪಾಗಲಾರದು. ಜಾಗತೀಕರಣ ಬೆಳೆದಂತೆ, ಆರ್ಥಿಕ, ಶೈಕ್ಷಣಿಕ ಮಟ್ಟ ಏರುಗತಿ ಪಡೆದಂತೆಲ್ಲಾ ಕ್ರೀಡಾ ಕ್ರಿಯಾತ್ಮಕ ಚಟುವಟಿಕೆಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಾ ಬಂದಿವೆ.

– ಎಂ.ಕೆ.