ಕರ್ನಾಟಕದ ಜನಪದ ಕಲೆಗಳು ಧರ್ಮ, ದೇವರು, ಆರಾಧನೆ, ಪಂಥ, ಪಂಗಡ ಹಾಗೂ ಸಾಮಾಜಿಕ ಶ್ರೇಣೀಕರಣಗಳ ಸಂಕೀರ್ಣ ಬದುಕು ಹೇಗೆ ಪ್ರಭಾವ ಬೀರಿತು ಮತ್ತು ಆ ಮೂಲಕ ಜನಪದ ಕಲೆಗಳು ಕಂಡುಕೊಂಡ ಸ್ಥಾನಗಳೇನು ಎಂಬ ವಿಚಾರಗಳು ಕರ್ನಾಟಕದ ಮಟ್ಟಿಗಂತೂ ವಿಸ್ಮಯಕಾರಿ. ಮನುಷ್ಯನ ಸಾಂಸ್ಕೃತಿಯ ಚರಿತ್ರೆಗೂ ಜನಪದ ಕಲೆಗಳ ಉಗಮಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಾತನ್ನು ಗಮನದಲ್ಲಿರಿಸಿಕೊಂಡೇ ನಮ್ಮ ಜನಪದ ಕಲೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಜನಪದ ಕಲೆಗಳು ಹೆಚ್ಚು ವೈವಿಧ್ಯಮಯವಷ್ಟೇ ಅಲ್ಲ, ಸಂಖ್ಯೆಯಲ್ಲಿಯೂ ಹೆಚ್ಚಿವೆ. ಇದಕ್ಕೆ ಕಾರಣ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಭೌಗೋಳಿಕ ಹಿನ್ನೆಲೆ. ಈ ಹಿಂದಿನ ಸಾವಿರಾರು ವರ್ಷಗಳಲ್ಲಿ ಮನುಷ್ಯಕಾಲ ವಿಕಸನದ ಹಲವು ಮಜಲುಗಳನ್ನ ಕಂಡಿರುವ ಕರ್ನಾಟಕವು ಐತಿಹಾಸಿಕವಾಗಿ ನಾನಾ ಧರ್ಮಪರಂಪರೆಗಳ ಹುಟ್ಟಿಗೆ ಕಾರಣವಾಗಿದೆ. ಒಟ್ಟಾರೆ ಈ ಸಾಂಸ್ಕೃತಿಕ ಇತಿಹಾಸದ ವಿವಿಧ ಘಟ್ಟಗಳಲ್ಲಿ ನಾನಾ ಕಾರಣಗಳಿಗಾಗಿ ಹುಟ್ಟಿಕೊಂಡ ಕಲೆಗಳು, ಕರ್ನಾಟಕದ ವೈವಿಧ್ಯಮಯ ಭೌಗೋಳಿಕತೆಯ ಹಿನ್ನೆಲೆಯಲ್ಲಿ ಭಿನ್ನರೂಪಗಳನ್ನು ಪಡೆದಿದ್ದು ಆಯಾ ಪ್ರದೇಶದ ಜನಸಮುದಾಯದ ಆಶೋತ್ತರಗಳನ್ನು ಬಿಂಬಿಸುತ್ತಿವೆ. ಬಯಲುಸೀಮೆ, ಪಶ್ಚಿಮ ಘಟ್ಟಗಳು ಮತ್ತು ಪಶ್ಚಿಮ ಕರಾವಳಿಯ ಒಂದಕ್ಕಿಂತ ಒಂದು ಭಿನ್ನವಾದ ಪ್ರದೇಶ ಸ್ವರೂಪ, ವಿವಿಧ ವರ್ಣ ಮತ್ತು ವರ್ಗಗಳ ಜನಸಮುದಾಯ, ಹತ್ತಾರು ಧರ್ಮ ಮತ್ತು ಉಪಧರ್ಮಗಳ ಅನುಸರಣೆ, ಕನ್ನಡ ಮತ್ತು ಅದರ ಉಪಭಾಷೆಗಳು ಹಾಗೂ ಗಡಿಭಾಗಗಳ ಮರಾಠಿ, ತೆಲುಗು, ತಮಿಳು, ಮಲಯಾಳ ಭಾಷಾ ಸಂಸ್ಕೃತಿಗಳ ಕೊಳು ಕೊಡುಗೆಗಳು ಮುಂತಾದ ಅನೇಕಾನೇಕ ಅಂಶಗಳು ನಮ್ಮ ಕಲೆಗಳ ಸ್ವರೂಪವನ್ನು ನಿರ್ಧರಿಸುತ್ತವೆ.

ಆರಾಧನೆ ಮತ್ತು ಆಚರಣೆಗಳ ಕ್ರಿಯೆಗಳೇ ಕಲೆಗಳಾಗಿ ವಿಕಸನ ಹೊಂದಿ ಪೂರ್ಣಸ್ವರೂಪದ ಕಲೆಗಳಾಗಿದ್ದು ಒಂದು ಬಗೆಯಾದರೆ ಧರ್ಮ ಅಥವಾ ಪಂಥ ಪ್ರಸಾರಕ್ಕಾಗಿ ಹುಟ್ಟಿದ ಕಲೆಗಳು ಅನಂತರ ಧರ್ಮ ಪಂಥದ ಉದ್ದೇಶ ಮೀರಿ ಸಾರ್ವಜನಿಕ ಕಲೆಗಳಾದದ್ದು ಇನ್ನೊಂದು ಬಗೆ. ಕಲೆಯೇ ವೃತ್ತಿಯಾಗಿ ಅನಂತರ ಅದೊಂದು ಪರಂಪರೆಯಾದುದು ಮತ್ತೊಂದು ಬಗೆ. ಹೀಗೆ ಹಲವು ಕುತೂಹಲಗಳನ್ನು ಕೆರಳಿಸುವ ಕರ್ನಾಟಕದ ಕಲೆಗಳು ನಮ್ಮ ಸಂಸ್ಕೃತಿಯ ಅಧ್ಯಯನಕ್ಕೆ ಪ್ರಧಾನ ಆಕರಗಳಾಗುತ್ತವೆ. ಇಂಥ ಕಲೆಗಳ ಶೋಧನೆಯಿಂದ ಬಹುತೇಕ ದುಡಿಯುವ ವರ್ಗದ ಜನರ ಮೌಖಿಕ ಇತಿಹಾಸವನ್ನು ನಿಜಸ್ವರೂಪದಲ್ಲಿ ಅರ್ಥೈಸಿಕೊಳ್ಳಲು ಸಾಧ್ಯ. ಅಲ್ಲದೆ ಈ ಮೂಲಕ ಇತಿಹಾಸವನ್ನು ಕೂಡ ಸತ್ಯದ ಒರೆಗಲ್ಲಿಗೆ ಹಚ್ಚಿ ಪುನಾ ರೂಪಿಸಬಹುದು.

ಕರ್ನಾಟಕದ ಆರಾಧನೆಯ ಕಲೆಗಳಿವೆ, ಧರ್ಮ ಪ್ರಸಾರದ ಕಲೆಗಳಿವೆ, ವೃತ್ತಿ ಗಾಯಕರ ಕಲೆಗಳಿವೆ, ಕೃಷಿಗೆ ಸಂಬಂಧಿಸಿದ ಕಲೆಗಳಿವೆ, ನೀತಿರೂಪದ ಕಲೆಗಳಿವೆ, ಶುದ್ಧ ಮನರಂಜನೆಯ ಕಲೆಗಳಿವೆ, ರಂಗಭೂಮಿ ಕಲೆಗಳಿವೆ ಹಾಗೂ ನಿಸರ್ಗದ ಕೊಡುಗೆ ಅನ್ನಬಹುದಾದ ಈ ಮೇಲಿನವೆಲ್ಲಕ್ಕೂ ಭಿನ್ನವಾದ ಗಿರಿಜನರ ಕಲೆಗಳಿವೆ, ರಂಗಭೂಮಿ ಕಲೆಗಳಿವೆ ಹಾಗೂ ನಿಸರ್ಗದ ಕೊಡುಗೆ ಅನ್ನಬಹುದಾದ ಈ ಮೇಲಿನವೆಲ್ಲಕ್ಕೂ ಭಿನ್ನವಾದ ಗಿರಿಜನರ ಕಲೆಗಳಿವೆ. ಇಷ್ಟಲ್ಲದೆ ಕುಣಿತವೇ ಪ್ರಧಾನವಾದ, ಹಾಡೇ ಪ್ರಧಾನವಾದ, ವಾದ್ಯಗಳೇ ಮುಖ್ಯವಾದ ನಾನಾ ರೀತಿಯ ಕಲೆಗಳಿವೆ. ಯಕ್ಷಗಾನ, ತಾಳಮದ್ದಳೆ, ಬಯಲಾಟ, ಸಣ್ಣಾಟ, ತೊಗಲುಬೊಂಬೆ, ಸೂತ್ರದಗೊಂಬೆ ಮುಂತಾದ ವಿಶಿಷ್ಟ ಕಲೆಗಳು ಕರಾವಳಿಯಲ್ಲಿ ಬೇರೆಯಾಗಿ, ಮಲೆನಾಡಿನಲ್ಲೇ ಬೇರೆಯಾಗಿ, ಬಯಲು ನಾಡಿನಲ್ಲಿ ಮತ್ತೂ ಬೇರೆಯಾಗಿ ತುಂಬ ಕುತೂಹಲ ಹುಟ್ಟಿಸುತ್ತವೆ. ಇಷ್ಟು ವೈವಿಧ್ಯಮಯ ಕಲೆಗಳ ವಿಂಗಡಣೆ ಅಥವಾ ವಿಭಾಗೀಕರಣ ಅಷ್ಟು ಸುಲಭದ ಮಾತೇನೂ ಅಲ್ಲ. ಕರ್ನಾಟಕ ಜಾನಪದ ಕಲೆಗಳ ವಿಂಗಡಣೆ ಮಾಡಿಕೊಂಡಂತೆ ಕಾಣುತ್ತದೆ. ಬಹುತೇಕವಾಗಿ ಧಾರ್ಮಿಕ ಕಲೆ, ಲೌಕಿಕ ಕಲೆ, ಮನರಂಜನ ಕಲೆ, ಅಲೆಮಾರಿ ಕಲೆ ಹಾಗೂ ರಂಗಭೂಮಿ ಕಲೆಗಳು ಎಂಬಂತೆ ಸರ್ವೇಸಾಧಾರಣ ವಿಭಾಗ ಕ್ರಮ ಚಾಲ್ತಿಯಲ್ಲಿದ್ದಂತೆ ಕಾಣುತ್ತದೆ. ಬಹುತೇಕ ವಿದ್ವಾಂಸರು ಕಲೆಗಳನ್ನು ಮುಖ್ಯವಾಗಿ ಧಾರ್ಮಿಕ ಮತ್ತು ಲೌಕಿಕ ಎಂದು ವಿಂಗಡಿಸುತ್ತಾರೆ. ಅವರ ದೃಷ್ಟಿಯಲ್ಲಿ ಧಾರ್ಮಿಕವೆಂದರೆ ಆರಾಧನಾ ಕಲೆಗಳು, ಲೌಕಿಕವೆಂದರೆ ವೃತ್ತಿಗಾಯಕ ಕಲೆಗಳು. ಆದರೆ ಈ ವಿಂಗಡಣೆ ಅಷ್ಟು ಸಮಂಜಸವಲ್ಲ. ಏಕೆಂದರೆ ಅವರ ಪ್ರಕಾರ ಒಬ್ಬ ಗಾಯಕ ತನ್ನ ಇಷ್ಟದೈವದ ಕಥೆಯನ್ನು ಆಧಾರವಾಗಿಟ್ಟುಕೊಂಡು ಕಲಾಪ್ರದರ್ಶನ ನೀಡಿದಾಗ ಅದು ಧಾರ್ಮಿಕ. ಇತರೆ ಕಥೆಗಳನ್ನು ಆಧಾರವಾಗಿಟ್ಟುಕೊಂಡಾಗ ಅದು ಲೌಕಿಕ. ಆದರೆ ಮಲೆಮಾದೇಶ್ವರ ಕಾವ್ಯ ಹಾಡುವ ಗಾಯಕನೊಬ್ಬ ತನ್ನ ಪ್ರದರ್ಶನ ನಡುವೆ ‘ದಾಸಯ್ಯ’ನ ಉಪಕಥೆ ಹಾಡಿದನೆಂದರೆ ಅದು ಅವನ ಪ್ರದರ್ಶನದ ಅವಿಭಾಜ್ಯ ಅಂಗವೇ ಹೊರತು ಎಂದಿಗೂ ಅವನ ಧರ್ಮದಿಂದ ಬೇರ್ಪಟ್ಟು ಲೌಕಿಕವಲ್ಲ. ಹಾಗೆಯೇ ಕಂಸಾಳೆಯವರು, ನೀಲಗಾರರು, ಚೌಡಿಕೆಯವರು, ಗೊಂದಲಿಗರು, ಕಿನ್ನರಿಯವರು, ಕರಪಾಲದವರು ಹಾಡುವ, ನೀಡುವ ಯಾವುದೇ ಪ್ರದರ್ಶನ ಅವನ ಆರಾಧನೆಯ ಒಂದು ಭಾಗವೇ ಹೊರತು ಲೌಕಿಕ ಎಂದು ಬೇರ್ಪಡಿಸುವಂತಿಲ್ಲ. ಈ ಹಿನ್ನಲೆಯಲ್ಲಿ ‘ಧಾರ್ಮಿಕ’ ಮತ್ತು ‘ಲೌಕಿಕ’ ಎಂಬ ಪರಿಕಲ್ಪನೆಗಳನ್ನು ಬಿಟ್ಟು ಬೇರೆಯದೇ ಆದ ಒಂದು ವಿಂಗಡಣಾ ಕ್ರಮವನ್ನು ನಾವು ಇಟ್ಟುಕೊಂಡು ಆ ಮೂಲಕ ಕಲೆಗಳ ಆಶಯಗಳನ್ನು ಅವು ನಿರ್ವಹಿಸುವ ಕಾರ್ಯಗಳನ್ನು ಗುರುತಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಉದಾಹರಣೆಗೆ ಆರಾಧನಾ ಕಲೆಗಳು ಎಂಬ ಪ್ರಮುಖ ಭಾಗದಲ್ಲಿ ಮಾರಿ, ಭೂತ, ನಾಗ, ವೀರಭದ್ರ, ಯಲ್ಲಮ್ಮ, ಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ ಮುಂತಾದವುಗಳಿಂದ ದೈವಗಳ ಆರಾಧನಾ ಕ್ರಮದಲ್ಲಿ ಬರುವ ಕಲೆಗಳನ್ನು ವಿಭಾಗಿಸಬಹುದು. ಬಹುಶಃ ಒಂದು ಕಾಲಕ್ಕೆ ಆಯಾ ದೈವಗಳ ಆರಾಧನೆಯ ಕ್ರಮಗಳಾಗಿ, ಕ್ರಿಯೆಗಳಾಗಿ, ರೂಪುಗೊಂಡು ಕಲಾನಂತರದಲ್ಲಿ ಕಲೆಗಳ ಸ್ವರೂಪವನ್ನು ಪಡೆದ ಅಂಶ ಇಲ್ಲಿ ಮುಖ್ಯ. ಏಕೆಂದರೆ ಈ ಆರಾಧನಾ ಕಲೆಗಳು ಅವುಗಳಷ್ಟಕ್ಕೆ ಅವು ಸ್ವತಂತ್ರವಲ್ಲ. ಅಲ್ಲೊಂದು ದೈವವಿರುತ್ತದೆ. ಒಂದು ಸಂದರ್ಭವಿರುತ್ತದೆ ಹಾಗೂ ಆ ಸಂದಭಕ್ಕೊಂದು ಮಹತ್ವದ ಅರ್ಥವಿರುತ್ತದೆ. ಅಂಥ ವಿಶಿಷ್ಟ ಸಂದರ್ಭದಲ್ಲಿ ಆರಾಧನೆ ಮತ್ತು ಆಚರಣೆಗಳು ಕುಣಿತ, ನರ್ತನ ಹಾಡು ಹಾಗೂ ಅಂಗಾಂಗ ಅಭಿನಯಗಳ ಮೂಲಕ ಪ್ರಕಟಗೊಳ್ಳುತ್ತವೆ. ಆರಾಧನೆಯನ್ನು ಇಂಥ ಕ್ರಿಯೆಗಳ ಮೂಲಕ ಪ್ರಕಟಿಸುವ ವಿಶಿಷ್ಟ ಸಂದರ್ಭದ ಕಲೆಗಳನ್ನು ಕೆಲವೊಮ್ಮೆ ಕಲೆಗಳೆಂದು ಕರೆಯಬೇಕೇ ಅಥವಾ ಆರಾಧನೆಯ ಘಟಕಗಳೆಂದು ಕರೆಯಬೇಕೇ ಎಂಬ ಅನುಮಾನ ಕೂಡ ಹುಟ್ಟುತ್ತದೆ. ಆರಾಧನಾ ಕಲೆಗಳ ವೈಶಿಷ್ಟ್ಯವೇ ಇದು. ಆದರೆ, ಈ ಕಲೆಗಳ ಅಧ್ಯಯನ ಮಾತ್ರ ನಮ್ಮನ್ನು ಬಹುದೂರ ಕರೆದುಕೊಂಡು ಹೋಗಬಲ್ಲದು. ಒಂದು ನಾಡಿನ ಸಾಂಸ್ಕೃತಿಕ ಸಂಘರ್ಷವನ್ನು ಹಾಗೂ ಆ ಮೂಲಕ ಲಿಖಿತವಲ್ಲದೆ ಒಂದು ಮಹತ್ವದ ಧಾರ್ಮಿಕ ಇತಿಹಾಸವನ್ನು ಈ ಕಲೆಗಳ ಅಧ್ಯಯನ ತೆರೆದಿಡುತ್ತದೆ.

ಕರ್ನಾಟಕದ ಜನಸಾಮಾನ್ಯರ ಪರ್ಯಾಯ ಸಂಸ್ಕೃತಿ ಎಂದು ಕರೆಯಬಹುದಾದ ಗ್ರಾಮದೇವತೆಗಳ ಕಲ್ಪನೆ ಹಾಗೂ ಆ ಗ್ರಾಮದೇವತೆಗಳನ್ನು ಆರಾಧಿಸುವ ವಿಧಿವಿಧಾನಗಳು ಕಲೆಯ ಅಧ್ಯಯನಕ್ಕೆ ತುಂಬ ಪೂರಕವಾಗುತ್ತದೆ. ಕರ್ನಾಟಕದಾದ್ಯಂತ ಆರಾಧಿಸಲ್ಪಡುವ ಕಲೆಗಳು ನಮ್ಮನ್ನು ತೀವ್ರವಾದ ಆಲೋಚನೆಗೆ ಹೆಚ್ಚುತ್ತವೆ. ಮಾರಿ ಪುರಾಣದಲ್ಲಿ ಕಂಡು ಬರುವ ವಿಶಿಷ್ಟಾಂಶವೆಂದರೆ ಈಗಿನ ಮಾರಿಕಾಂಬ ‘ಬ್ರಾಹ್ಮಣ’ ಹೆಣ್ಣು ಮಗಳು ಎಂಬುದು. ಆಕೆ ಮದುವೆಯಾಗುವುದು ಒಬ್ಬ ದಲಿತನನ್ನು. ಆತ ದಲಿತ ಎಂಬುದು ಗೊತ್ತಾದ ಮೇಲೆ ಅವಳು ಅವನ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ, ಆದರೆ, ಇಂದು ನಡೆಯುವ ಆಚರಣೆಗಳಲ್ಲಿ ಕೋಣನನ್ನು ಕೊಲ್ಲುವ ಮೂಲಕ ಆ ಸೇಡನ್ನು ಅಭಿನಯಿಸುವವರು ಸ್ವತಃ ದಲಿತರೇ, ಅಂದರೆ ವರ್ಣವ್ಯವಸ್ಥೆಯನ್ನು ಮುರಿದ ಕಾರಣಕ್ಕಾಗಿ ಕೋಣದ ರೂಪದ ದಲಿತನನ್ನು ದಲಿತರೇ ಕೊಲ್ಲುತ್ತಾರೆಯೇ? ಪುರಾಣಕ್ಕೂ ಇವತ್ತಿನ ಆಚರಣೆಗೂ ಪರಸ್ಪರ ವಿರುದ್ಧವಾದ ವಿಪರ್ಯಾಸವೊಂದು ಇಲ್ಲಿ ಕಾಣಿಸಿಕೊಳ್ಳುತ್ತದೆ.

ಆದರೆ, ಸಮೃದ್ಧಿ ದೇವತೆಯಾಗಿ ಮಾರಿಯನ್ನು ನೋಡಿದಾಗ ಮೇಲಿನ ಪುರಾಣ ಹಿಂದೆ ಸರಿಯುವ ಸಂಭವ ಇದೆ. ಇಲ್ಲಿ ‘ ಮರದಮ್ಮ’ ‘ಮಾರಮ್ಮ’ ಆಗಿರಮ್ಮ ಕ್ರಿಯೆಯನ್ನೇ ನಾವು ಹೆಚ್ಚು ಪರಿಶೀಲಿಸಬೇಕಾದ ಅಗತ್ಯವಿದೆ ಎನಿಸುತ್ತದೆ. ಏಕೆಂದರೆ ಅನೇಕ ಊರುಗಳಲ್ಲಿ ಊರ ಹೊರಗೆ ಒಂದು ದಿಣ್ಣೆಯ ಮೇಲೆ ನೆಟ್ಟ ಒರಟು ಮರದ ತುಂಡೇ ಮಾರಮ್ಮ ಎಂದು ಕರೆಸಿಕೊಳ್ಳುತ್ತಿದೆ. ಇತ್ತೀಚೆಗೆ ಕೆಲವು ಕಡೆ ಅಂಥ ಮರವನ್ನು ಕಿತ್ತು ಚಾಮುಂಡಿ ರೂಪದ ದೇವತೆಯನ್ನು ಪ್ರತಿಷ್ಠಾಪಿಸಿ ಗುಡಿ ಕಟ್ಟಿರುವ ಪ್ರಸಂಗಗಳೂ ಬೇಕಾದಷ್ಟಿವೆ. ಈ ಹಿನ್ನೆಲೆಯಲ್ಲಿ ಮಾರಮ್ಮ ಸಸ್ಯವನ್ನು ಸಂರಕ್ಷಿಸುವ ದೇವತೆಯೇ ಆಗಿರಬಹುದು ಎಂಬ ನಂಬಿಕೆ ಬಲವಾಗುತ್ತದೆ. ‘ಹುಲುಸು’ ನೀಡುವ ಮತ್ತು ಕೋಣವನ್ನು ಕಡಿದು ಹೊಲಕ್ಕೆ ‘ಚರಗ ಚೆಲ್ಲುವ’ ಆಚರಣೆಯೂ ಇದಕ್ಕೆ ಪುಷ್ಟಿ ನೀಡುತ್ತದೆ. ಹೀಗೆ ಚರಗ ಚೆಲ್ಲುವ ಮೂಲಕ ಬೆಳೆ ಹುಲುಸಾಗಿ ಬರುತ್ತದೆ ಎಂಬ ನಂಬಿಕೆ ಮತ್ತು ನಮ್ಮನ್ನು ಅನಾದಿಕಾಲದ ಕಾಡು ಮೃಗಗಳ ಹಾವಳಿಯ ಕಡೆಗೆ ಕರೆದೊಯ್ಯುತ್ತದೆ. ರೈತರು ಬೆಳೆದ ಬೆಳೆಯನ್ನು ಹಿಂಡು ಹಿಂಡಾಗಿ ಬಂದು ನಾಶಮಾಡುತ್ತಿದ್ದ ಕಾಡೆಮ್ಮೆಗಳನ್ನು ಕೊಲ್ಲುವ ಹಿಂದಿನ ಆಶಯವೂ ಇಲ್ಲಿರಬಹುದು. ಇಂಥ ಪ್ರಾಣಿಗಳನ್ನು ಮಾರಮ್ಮ ನಿಯಂತ್ರಿಸುತ್ತಾಳೆ ಎಂಬ ನಂಬಿಕೆಯೂ ಜನರಿಗಿದ್ದಿರಬಹುದು. ಮಾರಮ್ಮ, ಮರದಮ್ಮನೇ ಅಗಿದ್ದಲ್ಲಿ ಅದರ ನಾಶಕ್ಕೆ ಕಾರಣವಾಗುವ ಕೋಣನ ಸಂತತಿಯ ಬಗ್ಗೆ ‘ ಮಾರಮ್ಮ’ನಿಗೆ ವಿರೋಧವಿದ್ದೇ ಇರುತ್ತದೆ ಅಥವಾ ಮತ್ತೊಂದು ರೀತಿಯಲ್ಲಿ ಯೋಚಿಸುವುದಾದರೆ ಸೃಷ್ಟಿಯ ಮತ್ತು ಸಮೃದ್ಧಿಯ ಬಲಿಷ್ಠ ಸಂಕೇತವಾದ ಕೋಣವನ್ನು ಕಡಿದು ಅದರ ರಕ್ತವನ್ನು ಹೊಲಕ್ಕೆ ಚೆಲ್ಲುವ ಮೂಲಕ ಬೆಳೆ ಹುಲುಸಾಗಲಿ ಎಂಬ ಆಶಯವೂ ಇರಬಹುದು. ಇವೆಲ್ಲವನ್ನು ಮೀರಿ ಒಂದು ಮಾತು ಹೇಳಬಹುದಾದರೆ ಮಾಂಸಾಹಾರಿ ಪದ್ಧತಿಯ ಸಹಜ ಭೋಜನಾರ್ಥವಾಗಿ ಹಬ್ಬಗಳಲ್ಲಿ ಕೋಣಗಳನ್ನು ಬಲಿಕೊಡುವ ಆರಂಭಿಸಿ ಆಮೇಲೆ ಅದೊಂದು ಆಚರಣೆಯಾಗಿ ಹಾಗೂ ಕಲೆಯಾಗಿ ರೂಪುಗೊಂಡಿತ? ಇವೆಲ್ಲ ಇನ್ನೂ ಇತ್ಯರ್ಥವಾಗಬೇಕಾದ ಪ್ರಶ್ನೆಗಳೇ ಆಗಿವೆ.

ಗ್ರಾಮದೇವತೆಗಳು ಭಂಟರು ಅಥವಾ ದೂತರು ಎಂದು ಕರೆಸಿಕೊಂಡ ಸೋಮಗಳು ಆಯಾ ದೇವತೆಯರ ಹಬ್ಬಗಳಲ್ಲಿ ದೇವತೆ ಮಾಡಲಾರದ್ದನ್ನು ಮಾಡುತ್ತವೆ. ಅವು ದೇವತೆಯ ಅನುಪಸ್ಥಿತಿಯನ್ನು ತುಂಬುತ್ತವೆ, ದೇವತೆಯ ಪ್ರತಿನಿಧಿಗಳಾಗಿ ಸೇವೆಯನ್ನು ಸ್ವೀಕರಿಸುತ್ತವೆ. ಸೋಮ ಮತ್ತು ದೇವತೆಯರ ಆಶಯ ಹಾಗೂ ಕ್ರಿಯೆಗಳಲ್ಲಿ ಅವಿನಾಭಾವ ಸಂಬಂಧ ಇರುವಂತೆ ಕಂಡರೂ ಮೂಲದಲ್ಲಿ ಮಾಂತ್ರಿಕಕ್ರಿಯೆ ಮತ್ತು ಆಚರಣೆಗಳ ಪ್ರತೀಕವಾಗಿದ್ದ ಈ ‘ಭೂತ’ಗಳು, ಕಾಲ ಕ್ರಮೇಣ ‘ದೂತ’ಗಳಾಗಿರುವಂತೆ ತೋರುತ್ತದೆ. ಸೋಮನ ಆಚರಣೆ ಮತ್ತು ಕುಣಿತಗಳಲ್ಲಿ ಕಾಣವು ಸಾಂಸ್ಕೃತಿಕ ಸಂಘರ್ಷವನ್ನು ಇಲ್ಲಿ ಮುಖ್ಯವಾಗಿ ವಿವೇಚಿಸಬೇಕಾಗುತ್ತದೆ. ಕರಿರಾಯ – ಕೆಂಚರಾಯ ಆಗಬಹುದು, ಇಲ್ಲವೇ ಈರಣ್ಣ ಪಾಪಣ್ಣ ಆಗಬಹುದು. ಇವೆರಡೂ ಪ್ರತ್ಯೇಕ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತವೆ. ಒಂದು ನಾಮ ಹಾಕಿಕೊಂಡ ವೈಷ್ಣವ ಪಂಥದ ಪ್ರತೀಕವಾದರೆ; ಇನ್ನೊಂದು ವಿಭೂತಿ ಅಥವಾ ಗಂಧ ಧರಿಸಿದ ಶೈವ ಪ್ರತೀಕ. ಆದರೆ, ವೈಷ್ಣವಶೈವ ಎಂದು ಇಲ್ಲಿ ಸರಳೀಕರಿಸುವ ಹಾಗಿಲ್ಲ. ಇಲ್ಲಿ ಕರಿರಾಯ ಅಥವಾ ಕೆಂಪು ಸೋಮ ಬಲಿ ಹಾಗೂ ಆ ಮೂಲಕ ಮಾಂಸಾಹಾರ ಬೇಡುವ ‘ಭೂತ’ವಾದರೆ; ಹಳದಿ ಅಥವಾ ಕೆಂಚರಾಯ ಅಪ್ಪಟ ಸಸ್ಯಾಹಾರಿ. ಈಗಾಗಲೇ ನಾವು ಆಚರಣೆಯಲ್ಲಿ ನೋಡಿದಂತೆ ಒಂದು ಸಸ್ಯಾಹಾರಿ ಸೋಮ ಬಲಿಯನ್ನು ನಿಲ್ಲಿಸುವ ಕೆಲಸ ಮಾಡುತ್ತದೆ. ‘ಈರಣ್ಣ’ ಎನ್ನುವ ಸೋಮ ತನ್ನ ಸ್ವಂತ ಅಣ್ಣ ತಮ್ಮಂದಿರೆನಿಸಿದ ಸೋಮಗಳಲ್ಲದೆ ಪರ ಊರಿನಿಂದ ಬಂದ ಮಾಂಸಹಾರಿ ಸೋಮಗಳನ್ನು ಕೂಡ ಯುದ್ಧಮಾಡಿ ಓಡಿಸುತ್ತದೆ; ಮತ್ತೊಮದು ಸೋಮ ಸತ್ತು ಬದುಕುತ್ತದೆ; ಇನ್ನೊಂದು ವ್ಯಾಕುಲಗೊಂಡು ಶೋಕಿಸುತ್ತದೆ. ಇವೆಲ್ಲ ಆಚರಣೆಗಳ ಹಿಂದೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸವೇ ಅಡಗಿರುವಂತಿದೆ. ಜನಸಾಮಾನ್ಯರ ಬದುಕಿನ ವಿವಿಧ ಧರ್ಮಗಳು ಬೀರಿದ ಪ್ರಭಾವವಷ್ಟೇ ಅಲ್ಲದೆ, ಆ ಪ್ರಭಾವದ ಕಾರಣಕ್ಕೆ ನಡೆದ ಘರ್ಷಣೆ ಅಥವಾ ಸಂಧಾನಗಳು ಈ ರೂಪದಲ್ಲಿ ದಾಖಲಾದಂತಿದೆ. ಮಾಂಸಾಹಾರಿಗಳಾಗಿದ್ದು, ಸಸ್ಯಾಹಾರಕ್ಕೆ ಪರಿವರ್ತಿತವಾದ ಅಥವಾ ಶೈವರಾಗಿದ್ದು ವೈಷ್ಣವಕ್ಕೆ ಮತಾಂತರಗೊಂಡ ಎರಡು ಧರ್ಮಗಳ ನಡುವೆ ನಡೆದ ಮಾನಸಿಕ ಘರ್ಷನೆ ಕೂಡ ಇದಾಗಿರಬಹುದು. ಇದಕ್ಕೆ ತಕ್ಕ ಹಾಗೆ ಊರ ಹಬ್ಬಗಳಲ್ಲಿ ಮೊದಲನೆಯ ಹಂತ ಸಿಹಿದಿನ ಹಾಗೂ ಎರಡನೆಯ ಹಂತ ಮಾಂಸಾಹಾರದ ದಿನ. ಮೊದಲ ಆಚರಣೆಗಳು ಸೌಮ್ಯ, ಅನಂತರದ್ದು ಬಲಿ, ಸಿಡಿ ಇತ್ಯಾದಿ ಉಗ್ರ ಸ್ವರೂಪದ್ದು. ಅಲ್ಲದೆ ಒಂದು ದೇವತೆ ನಾನಾ ಪ್ರಭಾವದಿಂದ ಸಸ್ಯಾಹಾರಿಯೂ ಆದಾಗ ಆ ದೇವತೆ ನಾನಾ ಪ್ರಭಾವದಿಂದ ಸಸ್ಯಾಹಾರಿಯೂ ಆದಾಗ ಆ ದೇವತೆಯ ಮೊದಲಿನ ಆಹಾರವನ್ನು ಸ್ವೀಕರಿಸಲು ಅವಳ ಬಂಟ ಸೋಮ ಬರುವುದು ಇನ್ನಷ್ಟು ಕುತೂಹಲಕರ. ಒಟ್ಟಾರೆ ಸೋಮಗಳ ಆರಾಧನೆ ಹಾಗೂ ಕಲೆ ಜನಸಾಮಾನ್ಯರ ನಡುವಿನ ಧಾರ್ಮಿಕ ವಿಚಾರಗಳನ್ನು ಹೇಳುವ ಮೂಲಕ ಹೊಸ ಇತಿಹಾಸ ನಿರೂಪಣೆಗೆ ಒತ್ತಾಯಿಸುವುದಲ್ಲದೆ ಚರಿತ್ರೆಯ ಹುಡುಕಾಟಕ್ಕೆ ದಾರಿ ತೋರುತ್ತದೆ.

ವೀರಭದ್ರನ ಆರಾಧನೆಯ ಹಿಂದಿನ ಉ‌ದ್ದೇಶಗಳೇನಿರಬಹುದು? ಇದು ಅಷ್ಟು ಸುಲಭವಾಗಿ ಪರಿಹರಿಸಿಕೊಳ್ಳಬಹುದಾದ ಪ್ರಶ್ನೆಯಲ್ಲವಾದರೂ ಒಂದು ಕಾಲಕ್ಕೆ ನಡೆದಿರಬಹುದಾದ ಶೈವ ಮತ್ತು ಪಂಥಗಳೆರಡರ ಘರ್ಷಣೆ ಇದರ ಹಿಂದಿರುವಂತೆ ತೋರುತ್ತದೆ. ದಕ್ಷಬ್ರಹ್ಮ ನಡೆಸುತ್ತಿದ್ದ ಯಜ್ಞವನ್ನು ನಾಶ ಮಾಡುವ ಆಶಯ ಹೊತ್ತ ಈ ಕುಣಿತ ಯಜ್ಞಗಳನ್ನು ಆಚರಿಸುತ್ತಿದ್ದ ಜನರ ವಿರುದ್ಧ ಬಂಡೆದ್ದ ಇನ್ನೊಂದು ಗುಂಪಿನ ಜನರ ಆಕ್ರೋಶವನ್ನು ಪ್ರತಿನಿಧಿಸುತ್ತದೆ. ಭಾರತದ ಪ್ರಾಚೀನ ದೈವಗಳಲ್ಲಿ ಒಂದೆನಿಸಿದ ಶಿವನು ಒಬ್ಬ ಭೈರಾಗಿ. ಅವನ ವಸ್ತ್ರ ಪ್ರಾಣಿಯ ಚರ್ಮ, ಕುತ್ತಿಗೆ ವಿಷಸರ್ಪ, ಕೆದರಿಬಿಟ್ಟ ಕೆಂಜೆಡೆ, ಅವನ ವೇಷಭೂಷಣವೇ ಅವನೊಬ್ಬ ಕಾಡಿನ ಜೀವಿ ಎಂಬುದನ್ನು ನಿರ್ಧರಿಸುತ್ತದೆ. ಈ ಮೂಲದೈವವನ್ನು ಉಪೇಕ್ಷಿಸಿ ಹೀಯಾಳಿಸಿ ಅಟ್ಟಹಾಸಗೈಯುವ ದಕ್ಷಬ್ರಹ್ಮ ಈ ಸ್ಥಳೀಯತ್ವವನ್ನು ತುಚ್ಛವಾಗಿ ಕಾಣುವ ಹೊರಗಿನಿಂದ ಬಂದ ಪ್ರತಿನಿಧಿ. ಅರ್ಥಾತ್ ಇದು ಆರ್ಯದ್ರಾವಿಡರ ನಂಬಿಕೆಗಳ ನಡುವಿನ ಘರ್ಷಣೆ. ಯಜ್ಞ ನಾಶವೆಂದರೆ ಅದು ಆರ್ಯರು ಹೇಳುತ್ತಿರುವ ವೈದಿಕತೆಯ ಬಗೆಗಿನ ತಿರಸ್ಕಾರ ಎಂದೆ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಇನ್ನಷ್ಟು ಚರ್ಚೆ ಮತ್ತು ಆಲೋಚನೆಗಳು ನಡೆಯಬೇಕಾದ ಅಗತ್ಯವಿದೆ. ಒಟ್ಟಾರೆ ವೀರಶೈವರ ಈ ಆಚರಣೆಯ ಕುಣಿತ ತಮ್ಮ ಅಸ್ತಿತ್ವದ ಸ್ಥಾಪಕತ್ವದ ಪ್ರತೀಕ ಎಂದು ಹೇಳಬಹುದು. ಈ ಧೋರಣೆ ವೀರಗಾಸೆ ಮತ್ತು ಪುರವಂತಿಕೆ ಮೇಳಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಇರುವುದನ್ನು ನಾವು ಕಾಣಬಹುದು.

ವೀರಗಾಸೆಯು ವೀರಭದ್ರನ ಕುಣಿತಕ್ಕಿಂತ ಹೇಗೆ ಭಿನ್ನ ಎಂಬುದರ ಕಡೆಗೆ ಈಗ ಗಮನಹರಿಸಬಹುದು. ವೀರಗಾಸೆಯ ಮೂಲ ಆಶಯ ಇದೇ ಆದರೂ ಇದರ ಭಿನ್ನತೆ ಇರುವುದು ಜನ ಸಂಪರ್ಕದಲ್ಲಿ. ಇಬ್ಬ ವೀರಭದ್ರನ ಬದಲಾಗಿ ಎಂಟು ಹತ್ತು ಜನ ‘ವೀರಗಾಸೆ’ ಹಾಕಿದ ಕಲಾವಿದರ ಸೇರ್ಪಡೆ ಇಲ್ಲಿ ಮುಖ್ಯ ಅಂಶವಾಗುತ್ತದೆ. ಈ ಸಮೂಹ ನೃತ್ಯ ತಂಡವನ್ನು ಜಾತ್ರೆ, ಸಂತೆ ಮೇಳಗಳಿಗೆ ವಿಸ್ತರಿಸಿದ್ದು ಇನ್ನೊಂದು ಪ್ರಮುಖ ಅಂಶ. ಅಂದರೆ ವೀರಗಾಸೆ ವೀರಶೈವರ ಮಹತ್ವಗಳನ್ನು ಹೇಳುವ ಮತ್ತು ಅವರ ಧರ್ಮವನ್ನು ಪ್ರಚುರ ಪಡಿಸುವ ಕಲೆಯಾಗಿ ಒಂದು ಹಂತದಲ್ಲಿ ಮಾರ್ಪಾಟಾಯಿತು. ಈ ಉದ್ದೇಶದಿಂದಾಗಿಯೇ ವೀರಭದ್ರನ ಒಡಪಿನ ಜೊತೆಗೆ ಹನ್ನೆರಡನೇ ಶತಮಾನದ ಶರಣರ ಒಡಪುಗಳೂ ಈ ಕಲೆಗೆ ಸೇರಿಸಲ್ಪಟ್ಟವು. ಈ ರೀತಿಯಾಗಿ ವೀರಗಾಸೆ ತನ್ನ ಉದ್ದೇಶವನ್ನು ವಿಸ್ತರಿಸಿಕೊಂಡ ಸಂದರ್ಭದಿಂದ ಆಯಾ ಕಲಾತಂಡಗಳನ್ನು ಭಕ್ತರು ಆಹ್ವಾನಿಸುವ ಪರಿಪಾಠವೂ ಆರಂಭವಾಯಿತು. ವಾಸ್ತವಾಗಿ ವೀರಶೈವ ಧರ್ಮ ಎಂಬುದು ಅನೇಕ ವರ್ಗಗಳ ಜನರನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ದೀಕ್ಷೆ ನೀಡುತ್ತಾ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಅಂಥ ಒಂದು ಕ್ರಿಯೆಗೆ ಈ ಕಲೆ ಹಾಗೂ ಕುಣಿತ ಕೂಡ ತನ್ನ ಧರ್ಮ ಪ್ರಸಾರದ ಕಾಣಿಕೆ ನೀಡಿತು.

ಎಲ್ಲಮ್ಮ ಮೂಲದಲ್ಲಿ ಸಮೃದ್ಧಿ ದೇವತೆ ಇರಬಹುದು ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಒಂದು ಕಾಲಕ್ಕೆ ಹೀಗೆ ಫಲಸಮೃದ್ಧಿ ದೇವತೆಯಾಗಿದ್ದ ಎಲ್ಲಮ್ಮನ ಪುರಾಣಕ್ಕೆ ರೇಣುಕೆಯ ಪುರಾಣ ಸೇರಿಕೊಂಡಂತೆ ಕಾಣುತ್ತದೆ. ನಮ್ಮಲ್ಲಿ ತೀರಾ ಪುರಾತನವೆನ್ನಬಹುದಾದ ಸಮೃದ್ಧಿಯನ್ನು ಸಂಕೇತಿಸುವ ಕುಣಿತಗಳು ತುಂಬಿದ ಕೊಡಕ್ಕೆ ಸಂವಾದಿಯಾಗಿ ಕಾಣಸಿಗುತ್ತವೆ. ಕರ್ನಾಟಕದ ಹಲವು ಕಡೆ ಪ್ರಚಲಿತವಿರುವ ಗೌರಿಪೂಜೆ ಹಾಗೂ ಕರಗದ ಕುಣಿತದಲ್ಲಿ ತುಂಬಿದ ಕೊಡದ ಪ್ರಾಧಾನ್ಯತೆಯನ್ನು ಕಾಣುತ್ತೇವೆ. ಆದಿವಾಸಿಗಳ ಯಾವುದೇ ಕುಣಿತಗಳೂ ಮಂಡಲಾಕಾರದಲ್ಲಿದ್ದು ಅವೆಲ್ಲಾ ಫಲವಂತಿಕೆಗಾಗಿ ಪ್ರಾರ್ಥಿಸುವ ಸಂಕೇತಗಳಾಗಿವೆ. ಬಹುಶಃ ಮೂಲದಲ್ಲಿ ಹೀಗಿದ್ದಿರಬಹುದಾದ ಎಲ್ಲಮ್ಮನ ಸಂಪ್ರದಾಯವು ಬರುಬರುತ್ತಾ ತಳುಕು ಹಾಕಿಕೊಂಡ ಪುರಾಣಗಳನ್ನು ಗಮನಿಸಿದರೆ ಯಾವುದೋ ಒಂದು ಘಟ್ಟದಲ್ಲಿ ಇದು ಪರಿವರ್ತಿತವಾದಂತೆ ಕಾಣುತ್ತದೆ. ಶಕ್ತಿ ಪೂಜಕವಾದ ಈ ಪಂಥ ಮುಂದೆ ತನ್ನೊಡನೆ ರೇಣುಕೆಯನ್ನು ಸಮೀಕರಿಸಿಕೊಂಡಂತೆ ಕಾಣುತ್ತದೆ. ಇಲ್ಲಿ ಕೂಡ ಶೀಲವನ್ನು ಮೀರಿದ ರೇಣುಕೆ; ಸ್ತ್ರೀಯ ಸ್ವಾತಂತ್ರಾಯವಲಂಬನೆಯನ್ನು ವ್ಯಕ್ತಪಡಿಸುವ ಪ್ರತೀಕವಾಗಿ ಕಾಣುತ್ತಾಳೆ. ಜಮದಗ್ನಿ ಮತ್ತು ಪರಶುರಾಮ ಪುರುಷ ಪ್ರಧಾನ ವ್ಯವಸ್ಥೆಯ ಪ್ರತೀಕಗಳಾಗಿ ಬರುತ್ತಾರೆ. ಆದರೆ, ಇಂಥ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿನ ಈ ಸಂಘರ್ಷ ಮಧ್ಯಕಾಲೀನ ಕರ್ನಾಟಕ ಶೈವ ಮತ್ತು ವೈಷ್ಣವ ಸಂಘರ್ಷವಾಗಿ ಮಾರ್ಪಟ್ಟಂತೆ ಕಾಣುತ್ತದೆ. ಜೋಗಿ ಸಂಪ್ರದಾಯ ಸಂಪೂರ್ಣ ಶೈವಾರಾಧನೆಯಾಗಿದ್ದು, ವೈಷ್ಣವ ಅವತಾರಗಳಲ್ಲಿ ಒಬ್ಬನಾದ ಪರಶುರಾಮನ ಸೇರ್ಪಡೆಯಿಂದಾಗಿ ಗೊಂದಲವೇರ್ಪಟ್ಟಂತೆ ಕಾಣುತ್ತದೆ. ಈ ನಡುವೆ ಗಂಡಸರು ಜೋಗಮ್ಮಗಳಾಗುವುದು, ಹೆಂಗಸರು ಜೋಗತಿಯರಾಗಿ ದೀಕ್ಷೆ ಪಡೆಯುವುದು ಹಾಗೂ ಆ ಮೂಲಕ ಹುಟ್ಟಿಕೊಂಡ ದೇವದಾಸಿ ಸಂಪ್ರದಾಯ ಇವುಗಳೆಲ್ಲ ಸಂಶೋಧಕರಲ್ಲಿ ಮತ್ತಿಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ ಜಟಿಲಗೊಳ್ಳುತ್ತವೆ. ಇಷ್ಟೆಲ್ಲ ಸಂಕೀರ್ಣತೆಯ ನಡುವೆ ಮಾದಿಗರ ಮೂಲದೈವವೆನಿಸಿದ ಮಾತಂಗಿ ಎಲೆಮರೆಯ ಕಾಯಾಗಿ ಉಳಿಯುತ್ತಾಳೆ. ಮಾದಾರ ಕುಲಕ್ಕೆ ಎಲ್ಲಮ್ಮನಿಗಿಂತ ಮೊದಲು ಮಾತಂಗಿ – ದೈವವಾಗಿದ್ದಳೆ? ಮಾತಂಗಿ ಯಾರು? ಇಂದು ಜೋಗತಿಯರಾಗಿ ಕೆಂಪು ಮುತ್ತು ಕಟ್ಟಿಕೊಳ್ಳುವ ಮೂಲಕ ದೇವದಾಸಿಯರಾಗುತ್ತಿರುವವರು ಕೇವಲ ಕೆಳವರ್ಗದ ಹೆಣ್ಣುಗಳು ಮಾತ್ರ, ಗುರುತು ಮುತ್ತು ಕಟ್ಟಿಕೊಳ್ಳುವ ಮೇಲ್ವರ್ಗದ ಹೆಂಗಸರು ಎಲ್ಲಮ್ಮನ ಭಕ್ತರಾಗಿಯೂ ಏಕೆ ದೇವದಾಸಿಯರಾಗುವುದಿಲ್ಲ. ಇಲ್ಲಿ ಸ್ಪಷ್ಟವಾಗಿ ಕೆಳವರ್ಗದ ಜನರನ್ನು ಶೋಷಿಸುವ ತಂತ್ರಗಳೂ ನಡೆದಿವೆ. ಒಟ್ಟಾರೆ ಚೌಡಿಕೆಯ ಹಾಡಿರಲಿ, ಜೋಗತಿಯ ಕುಣಿತವಿರಲಿ ಈ ಕಲೆಗಳು ಕೇವಲ ಕಲೆಗಳಾಗಿರದೆ ಒಂದು ಸಂಸ್ಕೃತಿಯೊಳಗಿನ ವೈಪರೀತ್ಯಗಳನ್ನು ಹೇಳುವ ಸಂಕೇತಗಳೂ ಆಗಿವೆ ಎನ್ನುವುದೇ ಇಲ್ಲಿ ಮುಖ್ಯವಾಗುತ್ತದೆ.

ಬಳ್ಳಾರಿ ಜಿಲ್ಲೆಯ ಮಣ್ಣು ಮೈಲಾರದಲ್ಲಿ ನಡೆಯುವ ಮೈಲಾರನ ಬೃಹತ್ ಜಾತ್ರೆಯಲ್ಲಿ ‘ಅಣಕು ಕಾಳಗ’ ಅಲ್ಲಿ ಸೇರಿದ ನಿಮ್ನ ವರ್ಗದವರು ‘ಗೊಳೋ’ ಎಂದು ಆಳುವ ಸಂಪ್ರದಾಯವಿದೆಯಂತೆ. ಅಂದರೆ, ತಮ್ಮ ನಾಯಕನಾದ ಮಣಿಮಲ್ಲಾಸುರವನನ್ನು ಕೊಂದದ್ದಕ್ಕಾಗಿ ಇವರು ಅಳುತ್ತಾರಂತೆ. ಅಲ್ಲದೆ ಇದೇ ಜಾತ್ರೆಯ ‘ಕಾರಣಿಕ’ ಸಂಪ್ರದಾಯ ಆಗುತ್ತಿದ್ದ ಹಾಗೇ ಅಲ್ಲಿ ನೆರೆದ ಲಕ್ಷಕ್ಕೂ ಹೆಚ್ಚು ಜನ ಆ ಜಾಗದಿಂದ ಮರಳುವಾಗ ಕಡ್ಡಿಗಳಿಂದ ಮಕ್ಕಳ ಆಟಿಕೆಯಂಥಹ ಪುಟ್ಟ ಪುಟ್ಟ ಮನೆಗಳನ್ನು ಕಟ್ಟಿ ಹೋಗುತ್ತಾರೆ. ಆ ಬಯಲಿನಲ್ಲಿ ಎಲ್ಲಿ ನೋಡಿದರೂ ಸಾವಿರಾರು ಇಂಥ ‘ ಕಡ್ಡಿಮನೆ’ ಗಳನ್ನು ಕಾಣಬಹುದು. ಬಹುಶಃ ಇದು ಕುರುಬರು ತಾವು ಸ್ಥಾಪಿಸಿದ ವಸಾಹತು ಮತ್ತು ಅಲ್ಲಿ ನೆಲೆಗೊಂಡ ಸಂಕೇತ ಇರಬಹುದೇ? ಈ ಚಿಂತನೆಗಳಲ್ಲದೆ ಮತ್ತೊಂದು ದೃಷ್ಟಿಯಲ್ಲೂ ಮೈಲಾರನ ಪಂಥವನ್ನು ನೋಡಬೇಕಾಗಿದೆ. ಮಣ್ಣು ಮೈಲಾರದ ಬೃಹತ್ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಹಿಂಸಾರೂಪದ ಪವಾಡಗಳು, ಚಾವಟಿಯಿಂದ ಹೊಡೆದುಕೊಳ್ಳುವ ಕುದುರೆ ಕುಣಿತ ಮುಂತಾದವುಗಳನ್ನು ನೋಡಿದಾಗ ಇದಕ್ಕೂ ರಹಸ್ಯ ತಾಂತ್ರಿಕ ಪಂಥಗಳಿಗೂ ಏನಾದರೂ ಸಂಬಂಧವಿದೆಯೇ ಎಂಬ ಅನುಮಾನ ಕೂಡ ಬರುತ್ತದೆ. ಗೊರವರ ವೇಷಭೂಷಣ ಹಾಗೂ ಕುಣಿತ ಕೂಡ ಈ ಸಂಬಂಧವನ್ನು ದೃಢಪಡಿಸುತ್ತದೆ.

ಕಿನ್ನರಿ ಜೋಗಿಗಳನ್ನು ಕುರಿತ ಕಥೆಯೊಂದರಲ್ಲಿ ಒಂದು ಅಭಿಪ್ರಾಯವಿದೆ. ಕಿನ್ನರಿ ಕೊಟ್ಟವನು ಅರ್ಜುನನೂ ಅಲ್ಲ; ಶಿವನೂ ಅಲ್ಲ. ಅದನ್ನು ಜೋಗಿಮಠದ ಸಿದ್ಧರು ಕೊಟ್ಟರು ಎಂಬುದು. ಇದು ಸತ್ಯಕ್ಕೆ ಹತ್ತಿರವಾದ ಮಾತು. ಈ ‘ಜೋಗಿ’ ಸಂಪ್ರದಾಯದ ಹಿಂದೆ ಒಂದು ‘ಪಂಥ’ವೇ ಇದೆ. ಭೈರವನ ಆರಾಧಕರಾದ ಜೋಗಿಗಳು ನಾಥಪಂಥದ ಅನುಯಾಯಿಗಳು. ಮಂಗಳೂರಿನ ಕದ್ರಿ, ಮಂಡ್ಯದ ಆದಿಚುಂಚನಗಿರಿ, ಉತ್ತರಕನ್ನಡದ ಯಾಣ ಇತ್ಯಾದಿಯಾಗಿ ಅನೇಕ ಶೈವಾರಾಧನಾ ಕೇಂದ್ರಗಳಿಗೂ ಈ ಜೋಗಿಗಳಿಗೂ ಸಂಬಂಧವಿದೆ. ಇವರ ಹು‌ಟ್ಟು ಸಾವಿನ ನಡುವಿನ ಆಚರಣೆಗಳ ಕಾಪಾಲಿಕ ಅಥವಾ ಕಾಳಮುಖದಂಥ ಮಧ್ಯಕಾಲೀನ ರಹಸ್ಯ ಪಂಥಗಳ ಜೊತೆಗಿನ ಸಂಭಂಧಗಳನ್ನು ಕುರಿತು ಬೆಳಕು ಚೆಲ್ಲುತ್ತವೆ. ಮೈಲಾರನ ಭಕ್ತರಾದ ‘ಗೊರವರು’ ಎಲ್ಲಮ್ಮನ ಭಕ್ತರಾದ ‘ಜೋಗಿ – ಜೋಗ್ತಿ’ಯರು, ಆದಿಚುಂಚನಗಿರಿ ಭಕ್ತರಾದ ‘ಜೋಗಪ್ಪ’ಗಳು ಇಂಥ ರಹಸ್ಯ ತಾಂತ್ರಿಕವೆನ್ನಬಹುದಾದ ಶೈವ ಹಾಗೂ ಶಕ್ತಿ ಪಂಥದ ಪಳೆಯುಳಿಕೆಗಳಾಗಿ ಇಂದಿಗು ನಮ್ಮ ಮುಂದೆ ಉಳಿದಿರುವುದನ್ನು ನೋಡಿದರೆ ಈ ಕಿನ್ನರಿ ಜೋಗಿಗಳು ಕೂಡ ಈ ಪಂಥದ ಒಂದು ಭಾಗವೇ ಎನ್ನವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಹಲವು ಕಡೆ ಗಮನಿಸಿರುವಂತೆ ಈ ನಾಡು ಮೂಲತಃ ಮಾತೃಮೂಲೀಯವಾದದ್ದು. ಹೆಣ್ಣೀಗೆ ದ್ರಾವಿಡ ಸಂಸ್ಕೃತಿಯಲ್ಲಿ ಪ್ರಥಮ ಸ್ಥಾನ. ಆದರೆ, ಆರ್ಯಸಂಸ್ಕೃತಿಯ ಪ್ರಭಾವದಿಂದಾಗಿ ಕ್ರಮೇಣ ಪುರುಷ ಪ್ರಧಾನ ಸಮಾಜ ನಿರ್ಮಾಣಗೊಳ್ಳತೊಡಗಿತು. ಇದು ತಾತ್ತ್ವಿಕ ಘರ್ಷಣೆಗೆ ಕೂಡ ಕಾರಣವಾಯಿತು. ಇದು ಎಲ್ಲಿಯವರೆಗೆ ಹೋಯಿತೆಂದರೆ ಮಾತೃಮೂಲೀಯವವಾದ ಯಲ್ಲಮ್ಮನ ಸಂಪ್ರದಾಯದಲ್ಲಿ ಗಂಡನ್ನು ಹೆಣ್ಣನ್ನಾಗಿ ಪರಿವರ್ತಿಸುವ ಆಚರಣೆಯೇ ಹುಟ್ಟಿತು. ಹಾಗೆಯೇ ಪುರುಷ ಪ್ರಧಾನ್ಯ ಸಮಾಜ ಹೆಣ್ಣನ್ನು ಸುಡುವ ಮಟ್ಟಕ್ಕೆ ಕೂಡ ಇಳಿಯಿತು. ಇಂಥ ಘರ್ಷಣೆಗಳ ಪ್ರತೀಕ ಬಹುಶಃ ಹರದೇಶಿ ನಾಗೇಶೀಯ ಹುಟ್ಟು ಅನ್ನಿಸುತ್ತದೆ. ಅಲ್ಲದೆ ಈ ಎರಡೂ ವಾದಗಳ ಸಮನ್ವಯದ ಮೂಲಕ ಪ್ರಕೃತಿ ಮತ್ತು ಪುರುಷ ವ್ಯವಸ್ಥೆಗಳ ನಡುವೆ ಸಾಮರಸ್ಯ ಮೂಡಿಸುವುದೇ ಇದರ ಪ್ರಧಾನ ಉದ್ದೇಶವಿರಬಹುದಲ್ಲವೇ? ಲಾವಣಿ ಸಂಪ್ರದಾಯವು ಐತಿಹಾಸಿಕ ಘಟನೆಗಳ ಮತ್ತು ದೈವ, ಧರ್ಮ, ಆಧ್ಯಾತ್ಮವನ್ನು ಕುರಿತ ರಚನೆ ಮಾತ್ರವಾಗಿರದೆ ಸಮಕಾಲೀನತೆಗೂ ತಕ್ಷಣ ಪ್ರತಿಕ್ರಿಯಿಸುವುದು ಒಂದು ವಿಶೇಷ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಂತೂ ಲಾವಣಿಕಾರರು ಮಹತ್ತ್ವವಾದ ಪಾತ್ರವಹಿಸಿದ್ದಾರೆ. ಪ್ರಸ್ತುತ ವರ್ತಮಾನದ ಸಮಸ್ಯೆಗೂ ಸ್ಪಂದಿಸಿದ್ದಾರೆ.

ಇನ್ನು ಕರಗದ ಆಚರಣೆಯ ಬಗ್ಗೆ ನೋಡಬಹುದು, “ಕರಗ ಶುದ್ಧಾಂಗವಾಗಿ ಪ್ರಾರಂಭದಲ್ಲಿ ಸಮೃದ್ಧಿ ಸೂಚಕವಾದ ಯೋನಿ ಪೂಜೆಯಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಪಾಂಡವರ ಕಥೆ ಆಮೇಲೆ ಅದಕ್ಕೆ ಸೇರಿಕೊಂಡಿರಬೇಕು” ಎಂಬ ಅಭಿಪ್ರಾಯದ ಜೊತೆಗೆ “ತನಗಿಂತ ಮೇಲಿನವರ ಜೊತೆ ಗುರುತಿಸಿಕೊಳ್ಳುವ ಕೆಳಜಾತಿಗಳ ಪ್ರಯತ್ನಗಳು ಸಾವಿರಾರು ವರ್ಷಗಳಿಂದ ನಿರಂತರ ನಡೆಯುತ್ತಾ ಬಂದಿದ್ದು ಈ ಬೆಳಕಿನಲ್ಲೇ ಈ ನಂಬಿಕೆಗಳನ್ನು ಗಮನಿಸಬೇಕಾಗಿದೆ” ಎಂಬ ಅಭಿಪ್ರಾಯವೂ ಇದೆ. ಮುಂದುವರಿದು “ಸ್ತ್ರೀಪ್ರದಾನ ಆಚರಣೆಯೊಂದು ಪುರುಷ ಪ್ರದಾನ ವಾಗುವುದನ್ನಷ್ಟೇ ಅಲ್ಲದೆ ದ್ರಾವಿಡ ಆಚರಣೆಯೊಂದು ವೈದಿಕೀಕರಣಗೊಂಡ ಬಗೆಗೆ ಇದು ಸಾಕ್ಷಿಯಾಗಿದೆ” ಎಂದೂ ಹೇಳಲಾಗಿದೆ. ಈ ಉತ್ಸವವು ಮಾತೃದೇವತಾರಾಧನೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ಎಲ್ಲರಿಗೂ ಸಮ್ಮತವಿದೆ.

ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗ್ರಾಮದೇವತೆಯರ ಹಬ್ಬಗಳಲ್ಲಿ ಆರಾಧಿಸಲಾಗುವ ಕರಗ ಉತ್ಸವ ಮೇಲಿನ ಈ ಹೇಳಿಕೆಗೆ ಹತ್ತಿರವಾಗುತ್ತದೆ. ಬಹುಶಃ ಈಗಿರುವ ಎಷ್ಟೋ ಗ್ರಾಮದೇವತೆಯರಿಗೆ ಮೊದಲು ಇಂಥದೆ ರೂಪವೆಂದು ಇರಲಿಲ್ಲ. ಒಂದು ಮರದ ಕಟ್ಟಿಗೆ, ಕಲ್ಲು, ಉಬ್ಬಿದ ಜಗಲಿ ಕೂಡ ಈ ದೇವತೆಯರ ಪ್ರಾಥಮಿಕ ರೂಪಗಳು, ಅಂಥ ದೇವತೆಯನ್ನು ಕರಗದ ರೂಪದಲ್ಲಿ ಹೊತ್ತು ಮರೆಯುತ್ತಿದ್ದ ಪದ್ಧತಿಯೊಂದರ ಪಳೆಯುಳಿಕೆಯಾಗಿಯೇ ಕರಗ ಇಂದಿಗೂ ನಮ್ಮ ಮುಂದಿದೆ ಎಂದೆನ್ನಿಸುತ್ತದೆ. ಮೊದಲಿಗೆ ಗರ್ಭ ಹೊರಬಲ್ಲ ಮಾತೃವಿನ ರೂಪವಾಗಿದ್ದ ಕರಗ, ಆ ದೇವತೆಗೆ ಒಂದು ರೂಪಕೊಟ್ಟುಕೊಂಡು ಮೇಲೆ ಹಳೆಯದರ ಸಂಕೇತವಾಗಿ ಸದಾ ಅದರ ಮುಂದೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಅನ್ನಿಸುತ್ತದೆ. ಅದು ಯೋನಿ ಪೂಜೆಯ ಸಂಕೇತವಿರಬಹುದು ಅಥವಾ ಮಾತೃವಿನ ಗರ್ಭಧಾರಕ ಶಕ್ತಿಯ ಸಂಕೇತವಿರಬಹುದು. ಒಟ್ಟಾರೆ ಈ ಕಲೆ ದ್ರಾವಿಡರಲ್ಲಿ ಪ್ರಚಲಿತವಿದ್ದ ಫಲಸಮೃದ್ಧಿ ಆರಾಧನೆಯ ಪಳೆಯುಳಿಕೆ ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ.

ಅಂಟಿಗೆ – ಪಂಟಿಗೆ ಕಲೆಯಲ್ಲಿ ಎದ್ದು ಕಾಣುವ ಅಂಶವೆಂದರೆ ‘ದೀಪ’ ಮತ್ತು ಅದಕ್ಕೆ ಸಂಬಂಧಿಸಿದ ನಂಬಿಕೆ. ಹಾಗೆಯೇ ಅದು ದೀಪಾವಳಿಯಿಂದಲೇ ಆರಂಭಗೊಳ್ಳುವ ಒಂದು ಕ್ರಿಯೆ. ಹಾಗೆ ನೋಡಿದರೆ ದೀಪಾವಳಿ ಹಾಗೂ ಅದ್ಕಕೆ ಸಂಬಂಧಿಸಿದ ಜಾನಪದ ಅಥವಾ ಪೌರಾಣಿಕ ಕತೆಗಳೇನೇ ಇರಲಿ ಅದು ಮೂಲತಃ ‘ದೀಪಕ್ಕೆ’ (ಬೆಂಕಿ) ಸಂಬಂಧಿಸಿದ ಆರಾಧನೆ. ನಮ್ಮ ಅನೇಕ ಜಾನಪದ ಆಚರಣೆಗಳೆಲ್ಲವೂ ಬೆಂಕಿಯ ಸುತ್ತಲೇ ‘ಸುತ್ತುವುದು’ ಆಶ್ಚರ್ಯಕರವಾದ ಸಂಗತಿಯೇನಲ್ಲ. ಹಾಗಾದುದರಿಂದ ದೀಪವಳಿಯಂದು ಬೆಂಕಿಯನ್ನು ತಮ್ಮದೇ ಮನೆಯಲ್ಲಿ ಪೂಜಿಸುವುದು ಒಂದು ರೀತಿಯಾದರೆ ದೀಪವನ್ನು ಅಂಟಿಸುವ ಮೂಲಕ ಇನ್ನೊಂದು ಮನೆಯ ಬೆಳಕನ್ನು ಹಾರೈಸುವ ಆರೋಗ್ಯಕರ ಮನಸ್ಸು ಇಲ್ಲಿ ಕೆಲಸ ಮಾಡಿದೆ. ‘ಬೆಂಕಿ’ಯನ್ನು ಕಂಡುಕೊಂಡದ್ದೇ ಮನುಷ್ಯನ ಚರಿತ್ರೆಯಲ್ಲಿ ಒಂದು ಕ್ರಾಂತಿಕಾರಕ ಘಟ್ಟ. ಆ ಬೆಂಕಿಯನ್ನು ಕಾಪಾಡಿಕೊಳ್ಳುವ ಕ್ರಿಯೆ ಕೂಡ ಅಷ್ಟೇ ತ್ರಾಸದಾಯಕವಾದ ಕೆಲಸವಾಗಿತ್ತು. ಅದೂ ಮಲೆನಾಡಿನಂಥ ಬಿರುಮಳೆಯ ನಾಡಿನಲ್ಲಿ ಬೆಂಕಿಯನ್ನು ಕಾಪಾಡಿಕೊಳ್ಳುವುದು ಅಂದರೆ ಅದು ಬೆಳೆಯನ್ನು ಬೆಳೆದಷ್ಟೇ ಮುಖ್ಯವಾದದ್ದು. ಈ ಆತಂಕ ಇಂಥ ಒಂದು ಆಚರಣೆಯ ಹುಟ್ಟಿಗೆ ಕಾರಣವಾಗಿರಬಹುದು. ಮಳೆಗಾಲ ಮುಗಿಯುತ್ತಿದ್ದಂತೆಯೇ ಬರುವ ದೀಪಾವಳಿ ತಿಂಗಳಲ್ಲಿ ಬೆಂಕಿ ಅಥವಾ ದೀಪ ಇಲ್ಲದ ಮನೆಗೆ ದೀಪ ನೀಡುವ ಈ ಸಂಪ್ರದಾಯ ಒಂದು ಕಾಲದ ಬೆಂಕಿಯ ಮಹತ್ವನ್ನು ಕುರಿತು ಹೇಳುತ್ತದೆ. ಅಂಟಿಕೆ ಪಂಟಿಕೆ ಮೂಲಕ ದೀಪ ನೀಡುವ ಈ ಕ್ರಿಯೆ ಅಜ್ಞಾನವನ್ನು, ಕತ್ತಲನ್ನು ಆ ಮೂಲಕ ಸಂಕಷ್ಟಗಳನ್ನು ಕಳೆಯುವ ಆಶಯದ್ದು ಎಂಬ ಊಹೆಯನ್ನು ಮಾಡಬಹುದು.

ಮಲೆನಾಡಿನ ಅಂಟಿಕೆ – ಪಂಟಿಕೆಯ ದಂಡು ಹೊರಡುವುದಕ್ಕೂ ಬಯಲು ಸೀಮೆಯ ಭಾಗವಂತಿಕೆ ಮೇಳದ ‘ದೀವಳಿಗೆ ದಂಡಿಗೂ’ ಯಾವುದೇ ವ್ಯತ್ಯಾಸ ಇಲ್ಲ. ಈ ಎರಡು ಸಂಪ್ರದಾಯಗಳ ಕಾಲವೂ ಒಂದೇ. ಆದರೆ ಅಲ್ಲಿ ದೀಪ ಅಂಟಿಸುವ ಕ್ರಿಯೆ ಮುಖ್ಯವಾಗಿರುತ್ತದೆ. ಅಲ್ಲಿ ಆಯಾ ಊರಿನಲ್ಲಿ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳ ಯೋಗಕ್ಷೇಮ ವಿಚಾರಿಸುವ ಪ್ರಧಾನ ಉದ್ದೇಶವಿದೆ. ಅಲ್ಲದೇ, ದೀವಳಿಗೆಯ ಅನಂತರದ ಕೊಯ್ಲು ಮತ್ತು ಸುಗ್ಗಿ ಒಳ್ಳಯದನ್ನು ಹೊತ್ತು ತರಲಿ ಎಂಬ ಹಾರೈಕೆ ಇದೆ. ಭಾಗವಂತಿಕೆ ಮೇಳ ಕೂಡ ಮೂಲದಲ್ಲಿ ಸಮೃದ್ಧಿಯನ್ನು ಹಾರೈಸುವ ಕೃಷಿ ಬುಡಕಟ್ಟುಗಳ ಆದಿಮ ಆಚರಣೆಯ ಪಳೆಯುಳಿಕೆಯೇ.

ಹೋಳಿ ಹಬ್ಬಕ್ಕೂ ಇದು ನಡೆಯುವ ವಸಂತಮಾಸಕ್ಕೂ ಸಂಬಂಧವಿದೆ. ಹಳೆಪಳೆಯ ವಸ್ತುಗಳನ್ನು ಕಲೆಹಾಕಿ ಸುಟ್ಟು ಭಸ್ಮ ಮಾಡುವ ಕ್ರಿಯೆ, ಹಳೆಯ ಜಾಡ್ಯವನ್ನು ‘ಹೊಲಸನ್ನು’ ನೀಗಿಸಿಕೊಳ್ಳುವ ಕುರುಹಾದರೆ, ಅದೇ ಬೂದಿಯನ್ನು ‘ಹುಲುಸಾಗಿ’ ಹೊಲಕ್ಕೆ ಚೆಲ್ಲುವ ಕ್ರಿಯೆಯಲ್ಲಿ ನವಸೃಷ್ಟಿಯ ಸಂಕೇತವಿದೆ. ವಿದ್ವಾಂಸರ ಪ್ರಕಾರ ಇದು ಫಲವಂತಿಕೆಯನ್ನು ವೃದ್ಧಿಸುವ ಹಾಗೂ ವರ್ಷವನ್ನು ಪುನಶ್ಚೇತನಗೊಳಿಸುವ ಉದ್ದೇಶವುಳ್ಳದ್ದು. ಓಕುಳಿ ಹೋಳಿ ಹಬ್ಬಕ್ಕೆ ಮಾತ್ರ ಸೀಮಿತವಾದ ಸಂಪ್ರದಾಯವಲ್ಲ. ಕರ್ನಾಟಕದ ಹಲವು ಗ್ರಾಮದೇವತೆ ಹಬ್ಬಗಳು ಮುಕ್ತಾಯವಾಗುವ ಸಂದರ್ಭದಲ್ಲಿ ಓಕುಳಿ ಆಡಲಾಗುತ್ತದೆ. ಕೆಲವು ಕಡೆ ಹನುಮಂತ ದೇವರ ಹಬ್ಬದಲ್ಲಿ ಈ ಸಂಪ್ರದಾಯವಿದೆ ಈ ಹಬ್ಬಗಳು ಕೂಡ ಇದೇ ವಸಂತಮಾಸದಲ್ಲಿ ನಡೆಯುತ್ತದೆ ಎಂಬುದು ಇಲ್ಲಿ ಮುಖ್ಯ. ಓಕುಳಿ ಪರಸ್ಪರ ಬೆರೆಯುವ ಮೂಲಕ ಸೃಷ್ಟಿ ಕಾರ್ಯಕ್ಕೆ ಇಂಬುಕೊಡುವ ಒಳಾರ್ಥವನ್ನು ಇಟ್ಟುಕೊಂಡಂತಿವೆ. ಇಲ್ಲಿ ಮತ್ತೊಂದು ವಿಚಾರವನ್ನು ಪ್ರಸ್ತಾವಿಸುವ ಅಗತ್ಯವಿದೆ. ಅದು ‘ಬೆಂಕಿ’ಯ ಮಹತ್ತ್ವಕ್ಕೆ ಸಂಬಂಧಿಸಿದ್ದು. ನಾವು ಈಗಾಗಲೇ ನೋಡಿದ ಅಂಟಿಕೆ – ಪಂಟಿಕೆಯಲ್ಲಿ ಜಟ್ಟಿಗನ ಬನದಲ್ಲಿ ಹಚ್ಚಿಕೊಂಡ ದೀಪದ ಮೂಲಕ ಮನೆ ದೀಪ ಅಂಟಿಸುವ ಸಂಪ್ರದಾಯವಿದೆ. ಆದರೆ ಹೋಳಿಯಲ್ಲಿ ಒಂದು ಕಡೆ ರಾಶಿ ಹಾಕಿ ಸುಟ್ಟ ಮೇಲೆ, ಬೆಳಗಿನ ಜಾವಕ್ಕೆ ಉಳಿದ ಕೆಂಡಗಳನ್ನು ಮನೆಮನೆಗೆ ಕೊಂಡು ಹೋಗಿ ಬೆಂಕಿ ಮಾಡಿಕೊಳ್ಳುವ ಕ್ರಿಯೆ ಇದೆ. ಅಂದರೆ ಒಂದು ಕಾಲಕ್ಕೆ ‘ಬೆಂಕಿ’ ಎಂಬುದು ಎಲ್ಲೆಂದರಲ್ಲಿ ಉತ್ಪತ್ತಿ ಮಾಡುವ ಸರಳ ಸಂಗತಿಯಾಗಿರಲಿಲ್ಲ ಎಂಬುದನ್ನು ಈ ಮೂಲಕ ಮನಗಾಣಬೇಕಾಗಿದೆ. ಬೆಂಕಿಯನ್ನು ಸದಾ ಕಾಯ್ದುಕೊಳ್ಳುವ ಹಂಬಲವಾಗಿ ಕೂಡ ಈ ಆಚರಣೆ ಇರಬಹುದೇ ಅನ್ನಿಸುತ್ತದೆ. ಆದರೆ, ಅಂಟಿಕೆ – ಪಂಟಿಕೆಯಲ್ಲಿ ದೀಪವನ್ನು ಹಚ್ಚುವ ಮೂಲಕ ‘ಬೆಳಕಿನ ದಾನ’ ನೀಡುವ ಉದಾರತಾ ಭಾವವಿದ್ದರೆ, ಹೋಳಿಯ ಕಾಮನನ್ನು ಸುಡುವಲ್ಲಿ ಪೂರ್ವಕಾಲದ ಆರ್ಯರ ‘ಯಜ್ಞ’ಕ್ಕೆ ಸಮಾನಾಂತರವಾದ ದಹನದ ಕ್ರಿಯೆ ಇದೆ. ಒಟ್ಟಿನಲ್ಲಿ ಓಕುಳಿಯಾಡುವಾಗಿನ ಕೆಂಪು ನೀರಿನ ಶೃಂಗಾರದಾಟ ಸೃಷ್ಟಿಕ್ರಿಯೆಗೆ ಹತ್ತಿರದ್ದಾದ ಫಲ ಸಮೃದ್ಧಿಯನ್ನು ಬಯಸುವ ಆಶಯದ್ದೇ ಎಂದು ಮಾತ್ರ ಹೇಳಬಹುದು.

ಕೃಷಿಕ ತಾನು ಬೆಳೆದ ಬೆಳೆಗಳನ್ನು ಮನೆಯ ತುಂಬಿಸಿಕೊಂಡ ಮೇಲೆ ಉತ್ಸಾಹದಿಂದ ಆಚರಿಸುವ ಹಬ್ಬ ‘ಸುಗ್ಗಿ’ಯಾದರೂ ಕಡೆಯಲ್ಲಿ ಹೊಲಕ್ಕೆ ‘ಕರಿ’ ಚೆಲ್ಲುವ ಮೂಲಕ ಮುಂದೆ ಬೆಳೆಯುವ ಬೆಳೆಗೆ ಅದು ಹುಲುಸಾಗಿ ಸಜ್ಜಾಗಲಿ ಎಂಬ ಆಶಯವಿದೆ. ಈ ಫಲೋತ್ಪತ್ತಿ ಆಶಯವೇ ಸುಗ್ಗಿ ಹಬ್ಬದ ಹಾಗೂ ಕುಣಿತದ ಅರ್ಥವನ್ನು ಹೆಚ್ಚಿಸಿದೆ. ಈಗಾಗಲೇ ನಾವು ನೋಡಿದ ಹೋಳಿಯ ಆಚರಣೆಗಳಿಗೂ ಸುಗ್ಗಿಯ ಆಚರಣೆಗಳಿಗೂ ಅಂಥ ವ್ಯತ್ಯಾಸಗಳಿಲ್ಲದಿದ್ದರೂ ಹಾಲಕ್ಕಿ ಬುಡಕಟ್ಟಿನ ಸುಗ್ಗಿ ಕುಣಿತ ಸ್ಥಳೀಯ ಸೊಗಡು ಪಡೆದ ಒಂದು ಕಲೆ. ಉತ್ತ ರ ಕನ್ನಡದ ಸುಂದರ ಪ್ರಕೃತಿ ಹಾಗು ಸಮುದ್ರದ ಮೊರೆತಗಳಲ್ಲಿ ಈ ಕಲೆ ಪ್ರಕಟಗೊಳ್ಳುತ್ತದೆ. ಅವರ ತುರಾಯಿ ಬಣ್ಣ ಹಾಗೂ ಗುಮಟೆ ಸ್ಥಳೀಯ ಪ್ರಕೃತಿ ಸೌಂದರ್ಯದ ಅನುಕರಣೆಯಾದರೆ, ಅವರ ಕುಣಿತ ಹಾಗೂ ಹಾಡುಗಳಲ್ಲಿ ಕಂಡು ಬರುವ ಏರಿಳಿತ ಸಮುದ್ರದ ವಿವಿಧ ಸ್ಥಿತಿಗಳ ಅನುಕರಣೆ ಎಂದರೆ ತಪ್ಪಾಗಲಾರದು.

ಗುಡ್ಡಗಾಡಿನ ಕಲೆಗಳಿಗೂ ಪ್ರಕೃತಿಗೂ ಸಂಬಂಧವಿದೆಯೇ? ಇದು ನನ್ನನ್ನು ಬಹಳ ದಿನಗಳಿಂದ ಕಾಡಿರುವ ಪ್ರಶ್ನೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಅವರ ಜೀವನಕ್ಕೂ ಕಲೆಗೂ ಪ್ರಕೃತಿಗೂ ಅಂಥ ವ್ಯತ್ಯಾಸವಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಚಾರವೆಂದರೆ, ನಾಗರಿಕ ಸಮಾಜದ ರೀತಿಯ ಲಿಂಗಭೇದವಿಲ್ಲದಿರುವುದು, ಕುಡಿಯರು, ಯರವರು, ಕುಣಬಿಯರು, ಸಿದ್ಧಿಯರು, ಕೆಂಬಟ್ಟಿಯವರು, ಹೆಂಗಸರು ಗಂಡಸರೆನ್ನದೆ ಒಟ್ಟೊಟ್ಟಾಗಿ ಕುಣಿಯುತ್ತಾರೆ. ಆದರೆ, ಬಯಲುಸೀಮೆಯ ಯಾವ ಜನಪದ ಕಲೆಗಳಲ್ಲಿಯೂ ಗಂಡಸರೊಟ್ಟಿಗೆ ಹೆಂಗಸರಿರುವುದಿಲ್ಲ. ಈಗಾಗಲೇ ಹೇಳಿದಂತೆ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತದಲ್ಲಿ ಸಮುದ್ರದ ಮೊರೆತವಿದೆ; ಏರಿಳಿತವಿದೆ. ಕಡೆಯಲ್ಲಿ ಈ ಕಲೆಯ ವೇಗ ಗಮನಿಸಿದರೆ ಸಮುದ್ರದ ಪ್ರಭಾವ ಖಂಡಿತ ಇರುವಂತಿದೆ. ಕೊಡಗಿನ ಕುಡಿಯರ ಕುಣಿತದ ಮೇಲೆ ಅಲ್ಲಿನ ಅಂಕುಡೊಂಕು ಬೆಟ್ಟ ಗುಡ್ಡಗಳ ಸರಮಾಲೆಯ ಪ್ರಭಾವ ಇದೆ ಅನ್ನಿಸುತ್ತದೆ. ಅವರು ಸುತ್ತು ಗಟ್ಟು ಬಾಗಿ ಬಳುಕುತ್ತಾ ಕುಂತು ಮೇಲೇಳುವ ರೀತಿಯಲ್ಲಿ ಅವರ ಸುತ್ತಣ ಇಡೀ ಪ್ರಕೃತಿಯೇ ಎದ್ದು ಬಂದಂತೆ ಭಾಸವಾಗುತ್ತದೆ. ಅಲ್ಲದೆ ಅವರು ಹಿಂದೆಮುಂದೆ ತಿರುಗಿತಿರುಗಿ ಸುತ್ತುವ ಕ್ರಮದಲ್ಲಿ ಪ್ರಾಣಿಗಳ ಚಲನೆಯ ಎಳೆಯನ್ನು ಗುರುತಿಸಿದಂತೆ ಅನ್ನಿಸತೊಡಗುತ್ತಿದೆ.

ಬಯಲುಸೀಮೆಯಲ್ಲಿ ಸಂಸ್ಕೃತೀಕರಣಗೊಂಡ ‘ಯಕ್ಷಗಾನ’ ಎಂಬ ಹೆಸರು ಪ್ರಚಾರದಲ್ಲಿಲ್ಲವಾದರೂ ‘ಬಯಲು ಕಥೆ’ ಅಥವಾ ‘ಬಯಲಾಟ’ವೆಂಬ ರಂಗ ಪ್ರಕಾರವಂತೂ ಇದೆ. ಕರಾವಳಿಯಲ್ಲಿ ಇರುವಂಥ ಪೌರಾಣಿಕ ಪ್ರಸಂಗಗಳು ಬಯಲುನಾಡಲ್ಲೂ ಇದ್ದವು. ಬಹುಮುಖ್ಯ ವ್ಯತ್ಯಾಸವೆಂದರೆ ಸಂಗೀತದ್ದು. ಬಯಲುಸೀಮೆಯ ಮುಖವೀಣೆ, ಮದ್ದಲೆ, ತಾಳಗಳ ಲಯ ಮತ್ತು ಗತಿಗೂ ಹಾಗೂ ಹತ್ತಾರು ಜನ ಸಾಮೂಹಿಕವಾಗಿ ಸೇರಿ ಉನ್ಮತ್ತ ಸ್ವರದಲ್ಲಿ ಹಾಡುವ ಮೂಲಕ ಸಮೂಹ ಭಾಗವಂತಿಕೆ ಮಾಡುವವರಿಗೂ, ಕರಾವಳಿಯಲ್ಲಿನ ಚಂಡೆ, ಮದ್ದಳೆ, ತಾಳ ಹಾಗೂ ಸೌಮ್ಯವಾದ ಗಮಕ ರೂಪಿಯಾದ ಏಕವ್ಯಕ್ತಿ ಭಾಗವಂತಿಕೆಗೂ ವ್ಯತ್ಯಾಸಗಳಿವೆ. ಆದರೆ, ರಂಗ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ಇಡೀ ದಕ್ಷಿಣ ಭಾರತದ ದ್ರಾವಿಡ ರಂಗಭೂಮಿಯನ್ನು ಲಕ್ಷಿಸಬಹುದಾದರೆ, ಈ ಇಡೀ ಬಯಲಾಟದ ರಂಗ ಸಂಪ್ರದಾಯಕ್ಕೆ ಯಾವುದೋ ಒಂದು ಮೂಲವಿರುವುದನ್ನು ಊಹಿಸಬಹುದಾಗಿದೆ. ಯಕ್ಷಗಾನಕ್ಕೂ ಆರಾಧನೆಗೂ ಇರುವ ಸಂಬಂಧವನ್ನು ಕೂಡ ನಾಡು ಈ ಮೂಲಕವೇ ಹುಡುಕುವುದು ಹೆಚ್ಚು ಸೂಕ್ತೆಂದೂ ಭಾವಿಸಬಹುದು.

ಒಂದು ಆರಾಧನೆಯ ಹಲವು ಕ್ರಿಯೆಗಳೇ ಮುಂದೆ ನಾಟ್ಯಾಂಶ ಪಡೆದು ಕಲೆಗಳಾದವು. ಆರಾಧನೆ ಅನ್ನುವುದು ಕೇವಲ ಉಪಾಸನೆ ಅಲ್ಲ, ಹಾಡುವುದು, ಕುಣಿಯುವುದು, ದೀನನಾಗಿ ಅಡ್ಡಬೀಳುವುದು, ಕೈ ಮುಗಿದು ಧ್ಯಾನಿಸುವುದು. ತಾರಕ ಸ್ವರದಲ್ಲಿ ಅರಿಕೆ ಮಾಡಿಕೊಳ್ಳುವುದು ಇತ್ಯಾದಿಯಾಗಿ ಹಲವು ಅಭಿನಯಗಳು ಅದರಲ್ಲಿರುತ್ತವೆ. ಹೀಗೆ ಅನುಸರಿಸುತ್ತಿದ್ದ ಹಲವು ಆಂಗಿಕ ಚಲನೆಗಳೇ ಒಂದು ಶಿಸ್ತಿಗೆ, ಚೌಕಟ್ಟಿಗೆ ಒಳಪಟ್ಟು ಪಾಡ್ದನಗಳ ರೂಪ ಪಡೆದವು; ವೈದ್ಯ ನೃತ್ಯ, ಕಾಡ್ಯನಾಟ, ಕರಂಗೋಲು, ಆಟಿಕಳಂಜ ಮುಂತಾದ ಕಲೆಗಳಾದವು. ಹೀಗೆ ಉಗಮಗೊಂಡ ಹಾಡು ಮತ್ತು ಕಲೆಗಳು ನಿರ್ದಿಷ್ಟ ಸಂದರ್ಭದಲ್ಲಿ ಮತ್ತಮತ್ತೆ ಪುನರುಕ್ತುಗೊಳ್ಳುವ ಮೂಲಕ ಆಚರಣೆಯ ಭಾಗಗಳಾದವು.

ಇಂಥ ದೈವೀಸಂಬಂಧದ ಕಲೆಗಳೇ ಮುಂದೆ ರಂಗರೂಪ ಪಡೆಯುತ್ತಾ ಬಂದದ್ದು ಇನ್ನಷ್ಟು ಕುತೂಹಲಕರ. ದಕ್ಷಿಣ ಕನ್ನಡದ ‘ಜಾಲಾಟ’ ಹಾಗೂ ಉತ್ತರಕನ್ನಡದ ‘ಹಗರಣ’ ಈ ಹಂತಕ್ಕೊಂದು ಉದಾಹರಣೆ, ಅಂದರೆ, ನಾಟಕಾಂಶ ಬೆರೆತ ಆಚರಣಾ ವಿಧಿಗಳು ದಿನಗಟ್ಟಲೆ ನಡೆಯುವಂತೆ; ಅದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅದನ್ನ ಅದರ‍ಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅದನ್ನ ಮನರಂಜನೆಯನ್ನಾಗಿ ಹಾಗೂ ಆರಾಧನೆಯನ್ನಾಗಿಯೂ ಪರಿಗಣಿಸಿದ ಮಹತ್ತ್ವ ಘಟ್ಟವೇ ಇಂದಿನ ನಮ್ಮ ಯಕ್ಷರಂಗ ಅಥವಾ ಬಯಲಾಟದ ಮಹತ್ವದ ಘಟ್ಟವೇ ಇಂದಿನ ನಮ್ಮ ಯಕ್ಷರಂಗ ಅಥವಾ ಬಯಲಾಟದ ರಂಗಕ್ಕೆ ಪೂರಕ. ಇಡೀ ದಕ್ಷಿಣ ಭಾರತದಲ್ಲಿ ಪ್ರಚಲಿತವಿದ್ದ ಗ್ರಾಮದೇವತೆಗಳ ‘ಹಬ್ಬಾರಾಧನೆ’ ಈ ರಂಗದ ಬೆಳವಣಿಗೆಯ ಹಿಂದೆ ಕೆಲಸ ಮಾಡಿರುವ ಕಾರಣ ಒಂದೇ ರೂಪದ ರಂಗ ಸಂಪ್ರದಾಯ ಹುಟ್ಟಿಕೊಂಡಂತೆ ಕಾಣುತ್ತದೆ. ಅನಂತರ ಆಯಾ ಪ್ರಾದೇಶಿಕ ವೈಲಕ್ಷಣಗಳು ಮತ್ತು ಆಚರಣೆಗಳನ್ನು ಬಳಸಿಕೊಂಡು ಹೊರ ಸ್ವರೂಪದಲ್ಲಿ ಬೇರೆ ಬೇರೆಯಾದಂತೆ ಕಾಣುತ್ತದೆ. ಹೀಗೆ ಹಬ್ಬಗಲ ಸಂದರ್ಭದ ದೇವಾಲಯದ ಭಾಗಗಳಾಗಿ ರೂಪುಗೊಳ್ಳುತ್ತಾ ಬಂದ ಈ ಬಯಲುರಂಗ ಆಯಾ ದೇವತೆಯರ ಕಥೆಯನ್ನೇ ವಸ್ತುವನ್ನಾಗಿಸಿಕೊಂಡು, ಶಿಸ್ತಿಗೆ ಒಳಪಟ್ಟು ಒಂದು ಪೂರ್ಣ ಪ್ರಮಾಣದ ರಂಗವಾಗಿರುವ ಸಾಧ್ಯತೆಯೇ ಹೆಚ್ಚು.

21

ಇಷ್ಟಲ್ಲದೆ ಸಮೃದ್ಧಿಯನ್ನು ಆರಾಧಿಸುವ ಇನ್ನಷ್ಟು ಕಲೆಗಳಿವೆ. ಸಂಪೂರ್ಣ ಮನರಂಜನೆಯೇ ಮುಖ್ಯವಾದ ಅದೆಷ್ಟೋ ಕಲೆಗಳಿವೆ. ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯಗಳನ್ನು ಪ್ರತಿನಿಧಿಸುವ ಹತ್ತಾರು ಕಲೆಗಳಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ್ಯಂತ ವಿವಿಧ ಸಾಂಸ್ಕೃತಿಕ ಪರಿಸರದಲ್ಲಿ ಕಂಡುಬರುವ ಜನಪದ ಕಲೆಗಳನ್ನು ವಿವಿಧ ಸ್ಥರಗಳಲ್ಲಿ ವಿಂಗಡಣೆ ಮಾಡಿಕೊಂಡು ಈ ಕೆಳಕಂಡಂತೆ ಪಟ್ಟಿ ಮಾಡಬಹುದಾಗಿದೆ.

೧.         ಮಾರಿಯ ಆರಾಧನೆ
ಮಾರಿಕುಣಿತ
ಕೋಣನ ಕುಣಿತ
ವೀರಮಕ್ಕಳ ಕುಣಿತ
ಆಸಾದಿ ಕುಣಿತ
ದಿಮ್ಸಾಲೆ ಕುಣಿತ
ಹೆಬ್ಬಾರೆ ಕುಣಿತ
ಚೌಡಮ್ಮನ ಕುಣಿತ
ಪೂಜಾ ಕುಣಿತ
ರಂಗದ ಕುಣಿತ
ಮಾಯಮ್ಮನ ಕುಣಿತ
ಮಾಂಕಾಳಿ ಕುಣಿತ
ನೃತ್ತ ಮತ್ತು ಕಾಲಾಟ ಕುಣಿತ
ತಾಳುಪ್ಪೊಳಿ
ದುರುಗ ಮುರುಗಿ
ಸೋಮನ ಕುಣಿತ

೨.         ಭೂತಾರಾಧನೆ

೩.         ನಾಗಾರಾಧನೆ
ನಾಗಮಂಡಲ
ಪಾಣರ ಸ್ವಾಮಿ ಕೋಲ
ನಾಗನ ಕೋಲ
ಬೈಲಬಾಕುಡರ ಸರ್ಪ ಕೋಲ
ಸರ್ಪಂಕಳ
ಕಾಡ್ಯನಾಟ
ಪಾಣಾರಾಟ
ಗೊಂಡರ ಮಂಡಲ ಕುಣಿತ

೪.         ವೀರಭದ್ರನ ಆರಾಧನೆ
ವೀರಭದ್ರನ ಕುಣಿತ
ವೀರಗಾಸೆ
ಕಾಸೆ ಕುಣಿತ
ಪುರವಂತಿಕೆ

೫.         ಯಲ್ಲಮ್ಮನ ಆರಾಧನೆ
ಚೌಡಿಕೆ
ಜೋಗತಿ ಕುಣಿತ
ಗೊದಲಿಗರ ಕುಣಿತ
ಭೂತೇರ ಕುಣಿತ

೬.         ಮಲೆಮಾದೇಶ್ವರ ಮತ್ತು ಮಂಟೇಸ್ವಾಮಿ ಆರಾಧನೆ
ಕಂಸಾಳೆ
ನೀಲರಾರ ಮೇಳ

೭.         ಮೈಲಾರಲಿಂಗನ ಆರಾಧನೆ
ಗೊರವರ ಕುಣಿತ
ಡೊಳ್ಳು ಕುಣಿತ
ಡೊಳ್ಳಿನ ಕೈಪಟ್ಟು
ವಾಘೇ ಮುರಳಿ
ಕುರುಬರ ದಟ್ಟಿ ಆಟ

೮.         ಮೊಹರಂ ಆರಾಧನೆ
ಮೊಹರಂ ಕುಣಿತ
ಅಲಾಯಿ ಹೆಜ್ಜೆ
ಅಲಾವಿ ಕುಣಿತ

೯.         ಇತರೆ ಆರಾಧನೆಗಳು
ಕಿನ್ನರಿ ಜೋಗಿ ಮೇಳ
ಕರಪಾಲ ಮೇಳ
ಹೆಳವರು
ಲಾವಣಿ ಸಂಪ್ರದಾಯ
ಭಜನೆ ಸಂಪ್ರದಾಯ

೧೦.       ಸಮೃದ್ಧಿ ಹಾಗೂ ಫಲವಂತಿಕೆ ಆಚರಣೆಯ ಕಲೆಗಳು
ಕರಗ
ಅಂಟಿಕೆ ಪಂಟಿಗೆ
ಆಣಿ ಪೀಣಿ
ಭಾಗವಂತಿಕೆ ಮೇಳ
ಹೋಳಿ ಕುಣಿತಗಳು
ಹೋಳಿ ಸಿಗ್ಮ ಕುಣಿತ
ಹೋಳಿ ಹಬ್ಬದ ಕುಣಿತ
ಕುಡುಬಿ ಮರಾಠಿ ಹೋಳಿ ಕುಣಿತ
ಕೋಲಾಟ
ಕೊರವಂಜಿ ಕೋಲಾಟ
ಜಡೆ ಕೋಲಾಟ
ಬೆಂಕಿ ಬೆಳಕಿನ ಕೋಲಾಟ
ಚಕ್ರ ಕೋಲಾಟ
ಗೋಪು ಕುಣಿತ
ಹಾಲಕ್ಕಿ ಸುಗ್ಗಿ ಕುಣಿತ
ಮಳೆರಾಯನ ಪೂಜೆ ಮತ್ತು ಕುಣತ
ತಾರ್ಲೆ ಕುಣಿತ
ಆಟಿ ಕಳೆಂಜ
ಕರಂಗೋಲು ಕುಣಿತ
ಎರುಕೋಲ
ಕಂಗಿಲು ಕುಣಿತ
ಮಾಯಿದ ಪುರುಷ
ಕುದುರೆ ಕೋಲ
ಸೋಣದ ಜೋಗಿ
ಚೆನ್ನು ನಲಿಕೆ
ಹೌಂದೇರಾಯನ ವಾಲಗ
ಮಾದಿರ ನಲಿಕೆ
ಮದಿಮ್ಮಯ ಮದಿಮ್ಮಲ್ ಕುಣಿತ
ಬಾಲೆ ಸಾಂತು
ಪಿಲಿಪಂಜಿ ಕುಣಿತ
ಸಿದ್ಧವೇಷ
ಕೊಡದ ಕುಣಿತ
ನಂದಿಧ್ವಜ ಕುಣಿತ
ಪಟಾ ಕುಣಿತ ಪಂಜಿನ ಕುಣಿತ

೧೧.       ವಿಶೇಷ ಜನವರ್ಗಗಳ ಮತ್ತು ಬುಡಕಟ್ಟುಗಳ ಕೆಲವು ಕಲೆಗಳು
ಕೊಡವರ ಕುಣಿತಗಳು
ಕೊರಗರ ಕುಣಿತಗಳು
ಚುಣ್ಣ
ನಲ್ಕೆಯವರ ಕೊರಗ ತನಿಯ
ಕುಡುಬಿಯರ ಕುಣಿತ
ಮೇರರ ದುಡಿ ಕುಣಿತ
ಕಾಂತಕ
ಕುಡಿಯರ ಕುಣಿತ
ಯರವರ ಕುಣಿತ
ಸಿದ್ದಿಕಿ ಸಿದ್ದಿ
ಸಿದ್ಧಿಯರ ಕುಣಿತಗಳು
ಹಾಲಕ್ಕಿ ಒಕ್ಕಲಿಗರ ಗುಮಟೆ ಪಾಂಗ್
ಮರಾಠಿಗಳ ಗುಮ್ಮಟೆ ಕುಣಿತ
ಗೌಳಿಗರ ಕುಣಿತಗಳು
ಸಿಂಧ್‌ ಮಾದಗರ ಸಿಂದ್ ಕುಣಿತ
ಬಾಸ್ಟೀಕರ ಪೊಗಡು ಬೊಮ್ಮಲಾಟ
ಕುಲೆ ನಲಿಕೆ
ಮರ್ದ್‌ ಬೇಡನ್
ಕಾಡುಗೊಲ್ಲರ ಗಣೆ ಪದ
ಲಂಬಾಣಿ ಕುಣಿತ

೧೨.       ಸಂಕೀರ್ಣ ಕಲೆಗಳು
ಕರಡಿ ಮಜಲು
ಚಿಟ್ ಮೇಳ
ಜಗ್ಗಲಿಗೆ
ಬುರ್ರ‍ ಕಥಾ ಮೇಳ
ತಮಟೆ ವಾದನ
ನಗಾರಿ ಮೇಳ
ಉರುಮೆ ವಾದನ
ಬುಡಬುಡಕಿ
ಹೆಜ್ಜೆ ಮೇಳ
ದೊಂಬರಾಟ
ಕೀಲುಕುದುರೆ ಕುಣಿತ
ಕೊಂಡಮಾಮ
ದೊಣ್ಣೆ ಸಿದ್ರಾಮಪ್ಪನ ಕುಣಿತ
ಶಸ್ತ್ರ ಕುಣಿತ
ಖಡ್ಗ ನೃತ್ಯ
ಬಿಜಲಿ ವರಸೆ
ಬೆಂಕಿ ಭರಾಟೆ
ಕತ್ತಿ ವರಸೆ
ಗಾರುಡಿ ಗೊಂಬೆ
ಮರಗಾಲು ಕುಣಿತ
ಒಡ್ಡರ ಕುಣಿತ
ದೇವನ್ ಬುಲಾವ್
ಕೋಲೆ ಬಸವ
ಕೊರವಂಜಿ
ಮೋಡಿ ಆಟ
ಸುಡುಗಾಡು ಸಿದ್ಧರ ಕೈಚಳಕದ ಆಟ
ಇರುಳಿಗರ ಕಣಿ
ಹೂವಿನ ಮಕ್ಕಳು
ಬೇಡರ ಕುಣಿತ
ಹನ್ನೆರಡು ಸೆರಗಿನ ಕುಣಿತ
ಕರಿಬೇವಿನ ಸೊಪ್ಪಿನ ವೇಷ
ಬಾರುಡಿ
ಪಾಳ್ಳೇಗಾರನ ವೇಷ
ಹುಲಿ ವೇಷ
ಕರಡಿ ವೇಷ
ಆಂಜನೇಯ ವೇಷ
ಜೋಗಿ ಅರಸು
ಹೂವಿನ ಕೋಲು
ತುಳಸೀ ನೃತ್ಯ
ದೇವರ ನೃತ್ಯ
ಕೊಂಬು ಕಹಳೆ

೧೩.       ಜನಪದ ರಂಗಭೂಮಿ ಕಲೆಗಳು
ಹಗರಣ
ಜಾಲಾಟ
ಬಹುರೂಪಿ ವೇಷಗಾರರು
ಕೇಳಿಕೆ
ಯಕ್ಷಗಾನ
ತಾಳಮದ್ದಲೆ
ಮೂಡಲಪಾಯ ಬಯಲಾಟ
ದೊಡ್ಡಾಟ
ಘಟ್ಟದ ಕೋರೆ
ಸೂತ್ರದ ಗೊಂಬೆಯಾಟ
ತೊಗಲು ಗೊಂಬೆಯಾಟ
ಸಣ್ಣಾಟಗಳು
ದಾಸರಾಟ
ರಾಧಾನಾಟ
ಶರಣರಾಟ
ಶ್ರೀಕೃಷ್ಣ ಪಾರಿಜಾತ

– ಎಚ್.ಸಿ.ಬಿ.