ಕನ್ನಡ ಐತಿಹ್ಯಗಳು ಕನ್ನಡ ನಾಡು ಮೌಖಿಕ ಸಾಹಿತ್ಯದ ಅಗರವಾಗಿದ್ದು, ಇದರಲ್ಲಿ ಐತಿಹ್ಯಗಳು ಒಂದು ಪ್ರಮುಖ ಪ್ರಕಾರವಾಗಿದೆ. ಒಂದು ಪ್ರದೇಶದ ನಿರ್ದಿಷ್ಟ ವ್ಯಕ್ತಿ, ಸ್ಥಳ, ಘಟನೆ, ಚರಿತ್ರೆ, ಸಮಾಜ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಕಥೆಯೇ ಐತಿಹ್ಯ. ಐತಿಹ್ಯದಲ್ಲಿ ತಿಳಿದುಬರುವ ಕಥೆಯನ್ನು ಜನರು ನಂಬುತ್ತಾರೆ. ಇಂದಿಗೂ ಐತಿಹ್ಯಗಳು ಚಲಾವಣೆಯಲ್ಲಿದ್ದು, ಅದರ ಅಸ್ತಿತ್ವಕ್ಕೆ ಜನರ ನಂಬಿಕೆಯೇ ಮುಖ್ಯ ಕಾರಣ ಎಂಬುದು ಗಮನಾರ್ಹ.

ಸಹಜವಾಗಿ ಐತಿಹ್ಯಗಳು ನೇರವಾದ ಮತ್ತು ಗದ್ಯ ನಿರೂಪಣೆಯನ್ನು ಹೊಂದಿರುತ್ತವೆ. ಇನ್ನು ಕೆಲವು ಐತಿಹ್ಯಗಳು ಪದ್ಯ/ಲಾವಣಿಕಥನದ ಮಾದರಿಯಲ್ಲಿ ಇರುತ್ತವೆ. ಉದಾಹರಣೆಗೆ ಕೆರೆಗೆಹಾರ ಕಥನಕಾವ್ಯ. ಇನ್ನುಳಿದಂತೆ ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯಗಳು ಸಹ ಐತಿಹ್ಯಾತ್ಮಕವಾಗದ ಜನಪದ ಕಾವ್ಯ ಎನ್ನಬಹುದು. ಈ ಕಾವ್ಯಗಳಲ್ಲಿ ಬರುವ ಪಾತ್ರ, ಘಟನೆಗಳನ್ನು ಇಂದಿಗೂ ಜನರು ಸ್ಮರಿಸಿ, ಹಾಡುವುದರಿಂದ ಇವು ಐತಿಹ್ಯವನ್ನು ಒಳಗೊಂಡಿರುವುದರಿಂದ ಜನಪದ ಮಹಾಕಾವ್ಯಗಳು ಎನ್ನಬಹುದು. ಕನ್ನಡ ಐತಿಹ್ಯಗಳನ್ನು ಅರೆಚಾರಿತ್ರಿಕ ಐತಿಹ್ಯ, ಸಂಚಾರಿ ಐತಿಹ್ಯ, ಸ್ಥಳನಾಮ ಐತಿಹ್ಯ, ಪೌರಾಣಿಕ ಐತಿಹ್ಯ, ಪ್ರಕೃತಿ ಐತಿಹ್ಯ ಮತ್ತು ಇತರ ಐತಿಹ್ಯಗಳು ಎಂಬುದಾಗಿ ವಿಂಗಡಿಸಿಕೊಳ್ಳಬಹುದು.

ಅರೆಚಾರಿತ್ರಿಕ ಐತಿಹ್ಯಗಳು

ಒನಕೆ ಓಬವ್ವ: ಒನಕೆ ಓಬವ್ವ ಚಿತ್ರದುರ್ಗದ ವೀರಮಹಿಳೆ. ಈಕೆ ಮದಕರಿ ನಾಯಕನ ಕಾಲದಲ್ಲಿದ್ದವಳು. ಚಿತ್ರದುರ್ಗ ಕೋಟೆ ಕಾವಲುಗಾರನ ಹೆಂಡತಿಯಾದ ಓಬವ್ವ ತನ್ನ ಗಂಡ ಊಟಕ್ಕೆ ಬಂದ ಸಂದರ್ಭದಲ್ಲಿ ಕೋಟೆಯ ಬಳಿ ಹೋಗುತ್ತಿರುವಾಗ, ಒಂದು ಸಣ್ಣ ಕಿಂಡಿಯಲ್ಲಿ ಹೈದರ್ ಆಲಿಯ ಸೈನಿಕರು ನುಸುಳುತ್ತಿರುವುದನ್ನು ಗಮನಿಸಿ, ಒನಕೆಯನ್ನು ತೆಗೆದುಕೊಂಡು ಬಂದು, ಕಿಂಡಿಯಲ್ಲಿ ನುಸುಳುತ್ತಿದ್ದ ಸೈನಿಕರನ್ನು ಒಬ್ಬೊಬ್ಬರಾಗಿ ಹೊಡೆದು ಸಾಯಿಸಿದಳು. ಆ ವೇಳೆಗೆ ಆಕೆಯ ಗಂಡ ಅಲ್ಲಿಗೆ ಬಂದು, ಓಬವ್ವನ ಚಂಡಿರೂಪವನ್ನು ಗಮನಿಸಿ ಆಶ್ಚರ್ಯಗೊಳ್ಳುತ್ತಾನೆ.

ಹಕೀಂ ನಂಜುಂಡ: ಟಿಪ್ಪುಸುಲ್ತಾನ್‌ಗೆ ನಂಜನಗೂಡಿನ ನಂಜುಡೇಶ್ವರನ ಮೇಲೆ ನಂಬಿಕೆ ಬೆಳೆದ ಪ್ರಸಂಗ ಕುರಿತ ಐತಿಹ್ಯ ಇಂತಿದೆ. ಟಿಪ್ಪುವಿನ ಪ್ರೀತಿಪಾತ್ರವಾದ ಪಟ್ಟದಾನೆಗೆ ತೀವ್ರ ಖಾಯಿಲೆಯಾಯಿತು. ಎಷ್ಟೋ ಜನ ವೈದ್ಯರು ಪ್ರಯತ್ನಿಸಿದರೂ ಅದು ಗುಣವಾಗಲಿಲ್ಲ. ಕೊನೆಗೆ ಅದನ್ನು ನೋಡಿಕೊಳ್ಳುತ್ತಿದ್ದ ಹಿಂದೂ ಮಾವುತ ಟಿಪ್ಪುವಿನ ಅಪ್ಪಣೆ ಪಡೆದು ನಂಜನಗೂಡಿನ ದೇವಸ್ಥಾನಕ್ಕೆ ಹರಕೆ ಹೊತ್ತ. ಯೋಗಾಯೋಗದಿಂದ ಆನೆಯ ಖಾಯಿಲೆ ಗುಣವಾಯಿತು. ಸಂತೋಷಗೊಂಡ ಟಿಪ್ಪು ನಂಜುಂಡೇಶ್ವರನನ್ನು ಪ್ರೀತಿಯಿಂದ ‘ಹಕೀಂ ನಂಜುಂಡ’ ಎಂದು ಕರೆದು ದೇವಸ್ಥಾನಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಿದ.

ಅಲಮೇಲಮ್ಮನ ಶಾಪದ ಐತಿಹ್ಯ: ಇದು ಮೈಸೂರು, ರಾಜವಂಶದ ಇತಿಹಾಸದಲ್ಲಿ ದಾಖಲಾಗದಿದ್ದರೂ, ಹಳೆ ಮೈಸೂರು ಪ್ರದೇಶದಲ್ಲಿ ಪ್ರಚಲಿತವಿರುವ ಐತಿಹ್ಯ. ಇದು ರಾಜ ಒಡೆಯರ ಕಾಲದಲ್ಲೇ ನಡೆದ ಘಟನೆಯಾಗಿದೆ.

ವಿಜಯನಗರ ಸಾಮ್ರಾಜ್ಯದ ಅವನತಿಯಾದ ಮೇಲೆ ಅದರ ಪ್ರತಿನಿಧಿಯಾಗಿದ್ದ ಶ್ರೀರಂಗರಾಯದಿ ಶ್ರೀರಂಗಪಟ್ಟಣದಲ್ಲಿ ವಾಸಿಸುತ್ತಿದ್ದ. ಅವನು ಹಾಗೂ ಅವನ ಪತ್ನಿ ಅಲಮೇಲಮ್ಮ ಇಬ್ಬರೂ ಶ್ರೀರಂಗನಾಥನ ಭಕ್ತರು. ಪ್ರತಿವರ್ಷ ನವರಾತ್ರಿ ಹಬ್ಬದಲ್ಲಿ ಆಕೆ ತನ್ನ ದೊಡ್ಡ ಮುತ್ತಿನ ಮೂಗುತಿಯನ್ನೂ ಇತರ ಅಮೂಲ್ಯ ಆಭರಣಗಳನ್ನೂ ರಂಗನಾಯಕಿ ಅಮ್ಮನವರ ಅಲಂಕಾರಕ್ಕೆಂದು ಕಳುಹಿಸಿಕೊಡುತ್ತಿದ್ದಳು. ಹಬ್ಬದ ಅನಂತರ ಅವು ವಾಪಸ್ಸು ಬರುತ್ತಿದ್ದವು. ಕಾಲಕ್ರಮದಲ್ಲಿ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಂಡು ಆಳಲಾರಂಭಿಸಿದಾಗ ಈ ದಂಪತಿಗಳು ತಲಕಾಡಿನಲ್ಲಿ ಹೋಗಿ ವಾಸಿಸತೊಡಗಿದರು. ಕೆಲಕಾಲದ ಅನಂತರ ಶ್ರೀರಂಗರಾಯ ಸತ್ತ.

17

ಆ ವರ್ಷ ನವರಾತ್ರಿ ಹಬ್ಬ ಬಂತು. ಆಗ ಎಂದಿನಂತೆ ರಂಗನಾಯಕಿ ಅಮ್ಮನವರಿಗೆ ಅಲಂಕರಿಸಲು ಬೇಕಾಗಿದ್ದ ಒಡವೆಗಳನ್ನು ಕಳುಹಿಸಿಕೊಡುವಂತೆ ರಾಜ ಒಡೆಯರು ದೂತರ ಮೂಲಕ ಹೇಳಿ ಕಳುಹಿಸಿದರು. ಅಲಮೇಲಮ್ಮ ಹಾಗೆ ಕೊಡಲು ನಿರಾಕರಿಸುತ್ತಾಳೆ. ರಾಜ ಒಡೆಯರಿಗೆ ಸಿಟ್ಟು ಬಂತು. ‘ಆ ಒಡವೆಗಳು ಅಲಂಕಾರಕ್ಕೆ ಈಗ ಅಗತ್ಯ ಬೇಕಾಗಿದೆ. ಅವುಗಳಿಂದ ನಿಮಗೇನೂ ಪ್ರಯೋಜನವಿಲ್ಲ. ಅವುಗಳನ್ನು ಅಲಂಕಾರಕ್ಕೆಂದು ಕೊಟ್ಟಲ್ಲಿ ನಿಮಗೆ ಶಾಶ್ವತ ಕೀರ್ತಿ ಬರುತ್ತದೆ. ಆದ್ದರಿಂದ ಕಳಿಸಿಕೊಡಿ’ ಎಂದು ಹೇಳಿ ಕಳಿಸಿದರು. ಒಂದು ವೇಳೆ ಆಕೆ ಕೊಡದಿದ್ದರೆ ಬಲಾತ್ಕಾರದಿಂದ ಅವನ್ನು ತೆಗೆದುಕೊಂಡು ಬರಬೇಕೆಂದು ಹೇಳಿ ರಾಜಭಟರನ್ನು ಕಳುಹಿಸಿದರು. ಈ ಸುದ್ಧಿ ತಿಳಿದ ಅಲಮೇಲಮ್ಮ ತನ್ನ ಒಡವೆಗಳನ್ನು ಉಡಿಯಲ್ಲಿ ಕಟ್ಟಿಕೊಂಡು ತಲಕಾಡನ್ನು ಬಿಟ್ಟು ಸಮೀಪದ ಮಾಲಂಗಿಗೆ ಓಡಿದಳು. ಭಟರು ಅಲ್ಲಿಗೂ ಬಂದರು. ಇನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆಂದು ತಿಳಿದ ಅಲಮೇಲಮ್ಮ ಒಡವೆಗಳನ್ನು ರಾಜರಿಗೆ ಒಪ್ಪಿಸುವುದಕ್ಕೆ ಇಷ್ಟಪಡದೆ, ಅವನ್ನು ತನ್ನ ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿಯ ಬಳಿ ಕಾವೇರಿ ನದಿ ತೀರದಲ್ಲಿ ನಿಂತು ತನ್ನನ್ನು ಪೀಡಿಸುತ್ತಿದ್ದ ರಾಜ ಒಡೆಯರ ವಂಶಕ್ಕೆ ಹೀಗೆ ಶಾಪ ಕೊಟ್ಟಳು: “ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸುರು ಅರಸರಿಗೆ ಮಕ್ಕಳಾಗದಿರಲಿ” ಎಂದು ಶಪಿಸಿ ಅವಳು ಅಲ್ಲೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅ
ಆದರೆ ಕಾಕತಾಳೀಯವೆಂಬಂತೆ ತಲಕಾಡಿನಲ್ಲಿ ಮರಳು ಜಾಸ್ತಿ ಇದ್ದು, ಮೈಸೂರು ಅರಸರಿಗೆ ದತ್ತು ಪುತ್ರ ತೆಗೆದುಕೊಂಡ ಮೇಲೆ ಮಕ್ಕಳಾಗುವುದನ್ನು ಇತಿಹಾದ ವಿವಿಧ ಕಾಲದಲ್ಲಿ ಗಮನಿಸಬಹುದು.

ಸಂಚಾರಿ ಐತಿಹ್ಯಗಳು

ಸಂಚಾರಿ ಐತಿಹ್ಯಗಳು ಲಕ್ಷಣ ಸ್ವಭಾವಗಳಲ್ಲಿ ಸ್ಥಳೀಯ ಐತಿಹ್ಯಗಳಿಂದ ಭಿನ್ನ. ಇವುಗಳಲ್ಲಿ ಆಶಯಗಳು ಜಾಸ್ತಿ ಇದ್ದು, ಐತಿಹ್ಯ ದೀರ್ಘವಾಗಿರುತ್ತದೆ. ಇಂಥ ಐತಿಹ್ಯಗಳು ವಾಸ್ತವಾಂಶ ಏನೇ ಇರಲಿ ಅವು ನಮ್ಮ ಗಮನ ಸೆಳೆಯುವುದು ಅದ್ಭುತ ಕಲ್ಪನಾ ಸಾಮರ್ಥ್ಯದಿಂದ. ಪೌರಾಣಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಅನೇಕೆ ಐತಿಹ್ಯಗಳು ಕರ್ನಾಟಕಾದ್ಯಂತ ಪ್ರಚಲಿತದಲ್ಲಿವೆ. ಅವು ಇಂತಿವೆ:

ಸೀಸೆ ಸೆರಗು: ತುಮಕೂರು ಜಿಲ್ಲೆಯ ರಾಮದೇವರ ಬೆಟ್ಟದ ತುದಿಯಲ್ಲಿ ಸೆರಗಿನಾಕಾರದ ಪಟ್ಟಿ ಈಗಲೂ ಉಳಿದು ಬಂದಿದೆ. ಅದು ಹಿಂದೆ ರಾವಣ ಬಲವಂತ ಮಾಡಿ ಸೀತೆಯನ್ನು ಆಕಾಶಮಾರ್ಗದಲ್ಲಿ ಕದ್ದೊಯ್ಯುವಾಗ ಆಕೆಯ ಸೆರಗು ಜಾರಿ ಬೆಟ್ಟದ ತುದಿಯನ್ನು ಸವರಿಕೊಂಡು ಹೋಯಿತು ಆ ಗುರುತು ಈಗಲೂ ಹಾಗೆಯೇ ಉಳಿದಿದೆ ಎಂಬುದು ಐತಿಹ್ಯ.

ಭೀಮನ ಹೆಜ್ಜೆ: ಮಂಡ್ಯ ಜಿಲ್ಲೆಯ ಬಳಿಯ ಅನಂತಗಿರಿಯಲ್ಲಿ ಭೀಮನ ಹೆಜ್ಜೆ ಗುರುತಿಗೆ ಗುಡಿಕಟ್ಟಿದ್ದಾರೆ. ಇದರ ಹಿಂದಿನ ಐತಿಹ್ಯವೆಂದರೆ ಅರಗಿನ ಮನೆಯಿಂದ ತನ್ನ ತಾಯಿ ಹಾಗೂ ಸೋದರರನ್ನು ಹೆಗಲ ಮೇಲೆ ಹೊತ್ತು ಸಾಗುವಾಗ ಭೀಮ ಇಟ್ಟ ಹೆಜ್ಜೆ ಗುರುತು ಇದಾಗಿದೆ. ಇದು ಒಬ್ಬ ವ್ಯಕ್ತಿ ಹೊರಕ್ಕೆ ಕಾಣದಂತೆ ಮಲಗುವಷ್ಟು ವಿಶಾಲವಾದ ಜಾಗವಿದ್ದು, ಇದಕ್ಕೆ ಭೀಮನ ಹೆಜ್ಜೆ ಎಂದು ಕರೆಯುವರು. ಅಷ್ಟೇ ಅಲ್ಲದೆ ಇಲ್ಲಿಂದ ಕೆಲವು ಮೈಲಿಗಳ ದೂರದಲ್ಲಿ ಆತ ಇಟ್ಟ ಮತ್ತೊಂದು ಹೆಜ್ಜೆಯ ಗುರುತು ಕಾಣಸಿಗುತ್ತದೆ.

ಬಲಿ ಐತಿಹ್ಯಗಳು

ಸೂಳೆ ಕೆರೆ: ಕಟ್ಟಡ, ಕೆರೆ, ಕಟ್ಟೆ, ಕೋಟೆಗಳು ಸ್ಥಿರವಾಗಿ ನಿಲ್ಲಲು ತಮ್ಮನ್ನು ತಾವೇ ಬಲಿ ಕೊಟ್ಟಕೊಂಡವರ ಅನೇಕ ಪ್ರಸಂಗಗಳು ದೊರೆಯುತ್ತವೆ. ನಾಗಮಂಗಲದ ಬಳಿಯಿರುವ ಸೂಳೆಕೆರೆಗೆ ಸಂಬಂಧಿಸಿದಂತೆ ಐತಿ‌ಹ್ಯ ಹೀಗಿದೆ. ರಾಜನೊಬ್ಬ ಕಟ್ಟಿಸುತ್ತಿದ್ದ ಕೆರೆಯ ಏರಿ ಎಷ್ಟು ಪ್ರಯತ್ನಪಟ್ಟರೂ ನಿಲ್ಲದಿದ್ದಾಗ, ಕೊನೆಗೆ ರಾಜನ ಸೂಳೆ ತಾನೆ ಬಲಿಯಾಗಿ ಕೆರೆಯನ್ನು ಉಳಿಸಿದಳಂತೆ.

ಬಿಷ್ಟಮ್ಮನ ಕೆರೆ: ಬೇಲೂರಿನ ದೇವಾಲಯಕ್ಕೆ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ವಿಷ್ಣು ಸಮುದ್ರ ಎಂಬ ಕೆರೆ ಇದೆ. ಜನಪದರು ಇದನ್ನು ಬಿಷ್ಟಮ್ಮನ ಕೆರೆ ಎಂದು ಕರೆಯುವರು. ಗೊಟ್ಟರವಳ್ಳಿಯ ಹೊನ್ನಮ್ಮ (ಬಿಷ್ಟಮ್ಮ)ನನ್ನು ಬಿಟ್ಟರವಳ್ಳಿಯ ಮಲ್ಲೇಗೌಡರ ಮಗನಿಗೆ ಕೊಟ್ಟು ಮದುವೆಯಾಗಿತ್ತು. ಹೊನ್ನಮ್ಮನ ಮಾವ ರಾಜನ ಅಪ್ಪಣೆಯ ಮೇರೆಗೆ ಕೆರೆ ಕಟ್ಟಿಸುತ್ತಿದ್ದ. ಆದರೆ ಆ ಕೆರೆಗೆ ಎಷ್ಟು ಕಲ್ಲು ಇಟ್ಟರೂ ಕಲ್ಲು ನಿಲ್ಲುತ್ತಿರಲಿಲ್ಲ. ಎಷ್ಟು ಮಣ್ಣು ಇಟ್ಟರೂ ಮಣ್ಣು ನಿಲ್ಲುತ್ತಿರಲಿಲ್ಲ. ಆಗ ಕರೆಗೆ ಹಾರ ಕೊಟ್ಟರೆ ಕಟ್ಟಡ ನಿಲ್ಲುತ್ತದೆ. ನೀರು ಬರುತ್ತದೆ ಎಂದು ಸೂಚನೆಯಾಗುತ್ತದೆ. ಹೊನ್ನಮ್ಮನನ್ನು ಬಲಿಕೊಡಲು ನಿರ್ಧರಿಸುತ್ತಾರೆ. ಹೊನ್ನಮ್ಮ ಕೆರೆ ಪ್ರವೇಶಿಸಿದೊಡನೆ ನೀರು ಉಕ್ಕಿ ಬರುತ್ತದೆ. ಹೀಗೆ ಬಲಿದಾನಗೈದ ಮಹಿಳೆ ಹೊನ್ನಮ್ಮನಾದರೂ ಈಕೆಗೆ ಬಿಷ್ಟಮ್ಮನೆಂದು ಕರೆಯುವರು. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬಿಷ್ಟಮ್ಮನ ಜಾತ್ರೆ ಎಂದೇ ಕರೆಯುವರು.

ರಕ್ತ ಕೊಳ: ಪಿರಿಯಾಪಟ್ಟಣದಲ್ಲಿರುವ ಕೊಳಕ್ಕೆ ‘ರಕ್ತ ಕೊಳ’ ಎಂದು ಕರೆಯುತ್ತಾರೆ. ಇದರ ಹಿಂದಿನ ಐತಿಹ್ಯವನ್ನು ವಕ್ತೃವಿನಿಂದ ಡಾ. ಪಿ.ಕೆ. ರಾಜಶೇಖರವು ಈ ರೀತಿ ಸಂಗ್ರಹಿಸಿದ್ದಾರೆ.

ಊರಿನ ಸಮೀಪದಲ್ಲಿರುವ ಗುಂಡು ತೋಪಿನಲ್ಲಿ ಬಿಡಾರಬಿಟ್ಟಿದ್ದ ಸೈನ್ಯ ರಾತ್ರಿಯಾಯಿತೆಂದರೆ ಊರಿಗೆ ನುಗ್ಗಿ ಕೊಲೆ ಸುಲಿಗೆ ಅತ್ಯಾಚಾರಗಳಲ್ಲಿ ತೊಡಗುತ್ತಿದ್ದರಂತೆ. ಇದನ್ನು ಸಹಿಸಲಾರದೆ ಊರಿನ ಜನ ಕಂಗೆಟ್ಟಿರುವಾಗ ಹೋಬಳಿದಾಗ ಕುಳ್ಳಪ್ಪ ಹಾಗೂ ಕುಳವಾಡಿ ಸರಗೂರಯ್ಯ ಈ ಇಬ್ಬರೂ ಉಪಾಯವೊಂದನ್ನು ಮಾಡಿ ಒಂದು ರಾತ್ರಿ ಶತ್ರುಗಳು ಬರುವ ದಾರಿಯ ಪೊದೆಯಲ್ಲಿ ಅಡಗಿ ಕುಳಿತರಂತೆ. ಹೀಗೆ ಬಂದಬಂದವರನ್ನೆಲ್ಲ ಚಂದ್ರಾಯುಧದಿಂದ ಕತ್ತರಿಸುತ್ತಿದ್ದರಂತೆ. ಇದನ್ನು ಕಂಡುಕೊಂಡ ಶತ್ರುಪಕ್ತದವನೊಬ್ಬ ಮರದ ಮೇಲೆ ಕುಳಿತು ಇವರಿಬ್ಬರನ್ನು ಗುಂಡು ಹಾರಿಸಿ ಕೊಂದನಂತೆ. ಗುಂಡೇಟಿನಿಂದ ಕೆಳಕ್ಕುರುಳಿದ ಇವರ ರಕ್ತ ಕೊಳವನ್ನು ಸೇರಿ ಕೊಳವೆಲ್ಲ ರಕ್ತಮಯವಾಯಿತು.ಈ ಕಾರಣದಿಂದ ಈ ಕೊಳಕ್ಕೆ ‘ರಕ್ತಕೊಳ’ ಎಂಬ ಹೆಸರು ಅಂದಿನಿಂದ ಉಳಿದು ಬಂದಿದೆ.

ಸ್ಥಳನಾಮ ಐತಿಹ್ಯಗಳು

ಕರ್ನಾಟಕದಲ್ಲಿರುವ ಅನೇಕ ಊರಿನ ಹೆಸರಿನ ಹಿಂದೆ ಒಂದೊಂದು ಐತಿಹ್ಯಗಳಿವೆ. ಅಂಥ ಐತಿಹ್ಯಗಳು ಪೌರಾಣಿಕ, ಚಾರಿತ್ರಿಕ ಮತ್ತು ಸ್ಥಳೀಯ ವ್ಯಕ್ತಿಗಳ ವಿವರವನ್ನು ತಳುಕು ಹಾಕಿಕೊಂಡಿರುತ್ತದೆ. ಊರಿನ ಹೆಸರುಗಳ ನಿಷ್ಪತ್ತಿಯನ್ನು ಹಿಂಬಾಲಿಸಿದಂತೆ ಅದರ ಮೂಲ ತಿಳಿಯುತ್ತದೆ.

ರಾಮನಾಥಪುರ: ಹೇಮಾವತಿ ತೀರದ ರಾಮನಾಥಪುರಕ್ಕೆ ರಾಮ ಬಂದಿದ್ದನಂತೆ, ದೋಷ ನಿವಾರಿಸಿಕೊಳ್ಳಲು ಅಲ್ಲಿ ತಪಸ್ಸು ಮಾಡಿದನಂತೆ, ಅದೇ ರಾಮನಾಥಪುರವಾಯಿತು. ಶ್ರೀರಾಮನು ಬಾಣ ಬಿಟ್ಟು ನೀರು ತೆಗೆದ. ಅದೇ ರಾಮದೇವರ ಹಳ್ಳವಾಯಿತು. ಶ್ರೀರಾಮನ ಬಿಲ್ಲುಬಾಣಗಳನ್ನು ಲಕ್ಷ್ಮಣ ವಿಧೇಯನಾಗಿ ಹೊತ್ತು ಬರುತ್ತಿದ್ದ. ಇದ್ದಕ್ಕಿದ್ದಂತೆ ಮೈಮೇಲೆ ದೇವರು ಬಂದಂತೆ ಬಿಲ್ಲು ಬಾಣ ನೆಲಕ್ಕೆ ಎಸೆದ. ಸೆಟೆದು ನಿಂತ. ಅದೇ ಬಾಣಾವರವಾಯಿತು. ಗೌತಮ ಮಹರ್ಷಿಗಳು ಅಗ್ನಿದೇವರಿಗೆ ಪೂಜೆ ಸಲ್ಲಿಸಿದ ಸ್ಥಳವೇ ಅರ್ಕಾಪುರಿಯಾಗಿ ಅರಕಲಗೂಡು ಎಂದಾಯಿತು.

‘ಮಾಕಲ್ಲಯ್ಯ’ ಗುಡ್ಡ ಇದು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿದೆ. ಅರಣ್ಯವಾಸದ ಕಾಲದಲ್ಲಿ ಸೀತಾರಾಮ ಲಕ್ಷ್ಮಣರು ದಶರಥನ ಹೆಸರಿನ ಲಿಂಗವೊಂದನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ಇದು ಅವರಿಗೆ ಕಷ್ಟ ಕಾಲದಲ್ಲಿ ಎಚ್ಚರಿಕೆ ಕೊಡುತ್ತ ಮಾರ್ಗದರ್ಶಿಯಾಗಿತ್ತು. ಹೀಗಿರುವಾಗ ಸನ್ಯಾಸಿ ವೇಷದ ರಾವಣ ಸೀತೆಗೆ ಭಿಕ್ಷೆ ನೀಡಲು ಹೇಳಿದ. ಲಿಂಗದ ಎಚ್ಚರಿಕೆಯನ್ನು ಗಮನಿಸದೆ ಸೀತೆ ಭಿಕ್ಷೆ ನೀಡಲು ಹೇಳಿದ. ಲಿಂಗದ ಎಚ್ಚರಿಕೆಯನ್ನು ಗಮನಿಸದೆ ಸೀತೆ ಭಿಕ್ಷೆ ನೀಡಲು ಹೇಳಿದ. ಲಿಂಗದ ಎಚ್ಚರಿಕೆಯನ್ನು ಗಮನಿಸದೆ ಸೀತೆ ಭೀಕ್ಷೆ ನೀಡಲು ಮುಂದಾದಳು. ಫಲವಾಗಿ ಮಾತಾಡುತ್ತಿದ್ದ ದಶರಥ ಮಾತಾಡದಾದ; ಕಲ್ಲಾದ, ಸೀತಾಪರಹರಣ ಸಮಯದಲ್ಲಿ ಸೀತೆ ಮಾವನನ್ನು ಕೂಗಿದಳು, ಮಾತಾಡಲಿಲ್ಲ. ಆಗ ಅವಳು ‘ಮಾವ ಕಲ್ಲಾದೆಯಾ, ಮಾವಕಲ್ಲಾದೆಯಾ’ ಎಂದಳು. ಈ ‘ಮಾವ ಕಲ್ಲಾದೆಯಾ’ ರೂಪವೇ ಕ್ರಮೇಣ ಮಾಕಲ್ಲಯ್ಯ ಆಗಿ, ಅದಕ್ಕೆ ‘ಗುಡ್ಡ’ ಸೇರಿತು ಇಂದು ಇದು ಮಾಕಲ್ಲಯ್ಯನ ಗುಡ್ಡ’ ವೆಂದೇ ಪ್ರಸಿದ್ಧವಾಗಿದೆ.

ಐತಿಹ್ಯಗಳು ಮೌಖಿಕ ಚರಿತ್ರೆಯ ಒಂದು ಭಾಗ. ಇದರಲ್ಲಿ ವ್ಯಕ್ತಿ, ಸ್ಥಳ, ಘಟನೆ, ಪ್ರಾದೇಶಿಕ ಚರಿತ್ರೆಯ ಅಂಶಗಳನ್ನು ಸ್ಥಳೀಯತೆಯೊಂದಿಗೆ ಹೊಂದಿಸಿಕೊಂಡು ರೂಪುಗೊಂಡಿರುವುದನ್ನು ಗುರುತಿಸಬಹುದು. ಐತಿಹ್ಯಗಳ ಸಂವೇದನೆಯ ರೂಪಗಳು ಸಂಕೀರ್ಣವಾಗಿದ್ದು, ಅದರ ರಚನೆ ಸರಳವಾಗಿ ಗೋಚರಿಸಿದರೂ, ಒಳಗಿನ ವಿನ್ಯಾಸ ಹಿಡಿತಕ್ಕೆ ಸಿಗದು. ಕನ್ನಡ ಐಹಿತ್ಯಗಳ ಸಂಗ್ರಹಣೆ ಇನ್ನೂ ಶೈಶಾವಸ್ಥೆಯಲ್ಲೇ ಇದೆ. ಆದ್ದರಿಂದ ಸ್ಥಾಪಿತ ಚರಿತ್ರೆಯ ಎದುರಾಗಿ ಮೌಖಿಕ ಚರಿತ್ರೆಯನ್ನ ಸಂಗ್ರಹಣೆ ಇನ್ನೂ ಶೈಶಾವಸ್ಥೆಯಲ್ಲೇ ಇದೆ. ಆದ್ದರಿಂದ ಸ್ಥಾಪಿತ ಚರಿತ್ರೆಯ ಎದುರಾಗಿ ಮೌಖಿಕ ಚರಿತ್ರೆಯನ್ನು ಪುನರಚಿಸಲು ಐತಿಹ್ಯಗಳ ಸಂಗ್ರಹಣೆ ಮತ್ತು ಸಂಶೋಧನೆ ಕನ್ನಡನಾಡಿನಲ್ಲಿ ನಡೆಯಬೇಕಾದ ಅವಶ್ಯಕತೆ ಇದೆ.

– ವಿ.ಕೆ.

ಕನ್ನಡ ಜನಪದ ಸಾಹಿತ್ಯ ದಾಖಲೆಗಳಿಂದದ ಕೂಡಿದ ಇತಿಹಾಸ ಇಲ್ಲದಿರುವುದೇ ಜನಪದ ಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದಾದರೂ ಕನ್ನಡ ಸಾಹಿತ್ಯಕ್ಕೆ ಭವ್ಯ ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ವಾಚಿಕ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಕನ್ನಡದ ಇತಿಹಾಸ ಇನ್ನೂ ಐದಾರು ಶತಮಾನಗಳ ಹಿಂದಕ್ಕಾದರೂ ಹೋಗುತ್ತದೆ. ‘ಕವಿರಾಜಮಾರ್ಗ’ ಪೂರ್ವದಲ್ಲೇ ಕನ್ನಡ ಕವಿಗಳ ಗದ್ಯ ಮತ್ತು ಪದ್ಯ ಕೃತಿಗಳ ರಚನೆಯಾಗಿರುವುದು ಸ್ಪಷ್ಟವಾಗಿರುವುದರಿಂದ ಜನಪದ ಕಾವ್ಯ, ಕಥೆ, ಗಾದೆ, ಒಗಟು ಮುಂತಾದವು ಇನ್ನೂ ಬಹಳ ಹಿಂದೆಯೇ ರೂಪುಗೊಂಡಿರಬೇಕೆನಿಸುತ್ತದೆ.

ಕ್ರಿಸ್ತಶಕ ಏಳನೆಯ ಶತಮಾನಕ್ಕೆ ಸೇರಿದ ಕಪ್ಪೆ ಆರಭಟ್ಟನ ಬಾದಾಮಿ ಶಾಸನದಲ್ಲಿ ತ್ರಿಪದತಿಗಳಿರುವುದರಿಂದ, ಆ ಕಾಲಕ್ಕೆ ತ್ರಿಪದಿಗಳಿಂದ ಕೂಡಿದ ಜನಪದ ಸಾಹಿತ್ಯ ಸಮೃದ್ಧವಾಗಿರಬೇಕೆಂದು ಊಹಿಸಿದರೆ ತಪ್ಪೇನಿಲ್ಲ. ಒಂಬತ್ತನೆಯ ಶತಮಾನದ ಒಂದು ಶಾಸನದಿಂದ ಶಿವಮಾರನ ಗಜಾಷ್ಟಕ ಓವನಿಗೆಯೂ ಒನಕೆವಾಡಾಗಿತ್ತೆಂದು ತಿಳಿದು ಬರುತ್ತದೆ. ಶ್ರೀ ವಿಜಯ, ವಡ್ಡಾರಾಧನೆಯ ಕರ್ತೃ, ಪಂಪ ಮುಂತಾದ ಕವಿಗಳು ತಮ್ಮ ಕಾಲದ ಜನಪದ ಸಾಹಿತ್ಯದಿಂದ ಪ್ರಯೋಜನ ಪಡೆದಿರುವುದಕ್ಕೆ ಅವರ ಕಾವ್ಯಗಳಿಂದ ಆಧಾರಗಳು ಲಭಿಸುತ್ತವೆ.

ಜನಪದ ಗೀತೆ: ಕನ್ನಡ ಜನಪದ ಗೀತೆಗಳಲ್ಲೂ ಮೊದಲು ಹೇಳಬೇಕಾಗಿರುವಂಥವು ಕೆಲಸದ ಹಾಡುಗಳು. ಈ ವರ್ಗದ ಹಾಡುಗಳಲ್ಲಿ ಬೇಸಾಯದ ಹಾಡುಗಳಿಗೆ ಅಗ್ರಸ್ಥಾನ. ಮಳೆರಾಯನನ್ನು ಬರಮಾಡಿಕೊಳ್ಳುವುದರಿಂದ ಹಿಡಿದು ಬೇಸಾಯದ ಎಲ್ಲ ಕೆಲಸಗಳನ್ನೂ ಮುಗುಸಿಕೊಂಡು ಮನೆಗೆ ಹೋಗುವವರೆಗೆ ಹಾಡುಗಳನ್ನು ಹೇಳುವುದುಂಟು.

ಮಳೆಗಾಗಿ ಅತಿಮಾನುಷ ಶಕ್ತಿಗಳನ್ನು ಸ್ತುತಿಸುವುದು ವೇದ ಕಾಲದಿಂದಲೂ ಇದೆ.

ಸ್ವಾತೀಯ ಮಳೆ ಬಂದು ಮಳೆರಾಜ
ಸುತ್ತ ದೇಶಕೆ ಆಗ್ಯಾದೆ ಮಳೆರಾಜ….. ಎಂದೋ

ಹುಯ್ಯೊ ಹುಯ್ಯೊ ಮಳೆರಾಯ
ಹೂವಿನ ತೋಟಕೆ ನೀರಿಲ್ಲ……
ಎಂದೋ ಕನ್ನಡಿಗರು ಹೇಳುವಂತೆಯೇ
ವಾನಲ್ಲು ಕುರವಾಲಿ ವಾನದೇಮುಡಾ
ವರಿಚೇಲು ಪಂಡಾಲಿ ವಾನದೇಮುಡಾ. …….

(ಮಳೆಯು ಬೇಕು ಮಳೆದೇವರೇ ಬೆಳೆಯಾಗಬೇಕು ಮಳೆದೇವರೇ) ಎಂದು ತೆಲುಗರು ಅದೇ ಲಯದಲ್ಲಿ ಹಾಡುತ್ತಾರೆ.

ಕನ್ನಡ ನಾಡಿನ ಬೇಸಾಯದ ಹಾಡುಗಳು ಒಂದೊಂದು ಪ್ರಾಂತ್ಯಕ್ಕೂ ಭಿನ್ನವಾಗಿದೆ. ಉತ್ತರ ಕರ್ನಾಟಕದಲ್ಲಿ ನಾಟಿ ಹಾಕುವಾಗ ಹೇಳುವ ಹಾಡುಗಳು ಇಲ್ಲ. ಕೊಯ್ಲಿನ ಕಾಲದಲ್ಲಿ ಹೇರಳವಾಗಿ ಹಾಡುಗಳು ಕೇಳಿಬರುತ್ತವೆ. ದಕ್ಷಿಣ ಕರ್ನಾಟಕದಲ್ಲಿ ನಾಟಿ ಹಾಕುವಾಗ, ಕಳೆಕೀಳುವಾಗ, ಕೊಯ್ಲಿನ ಕಾಲದಲ್ಲಿ ಅಸಂಖ್ಯಾತರಾಗಿ ಜನದ ಗೀತೆಗಳು ಕೇಳಿ ಬರುತ್ತವೆ. ಉತ್ತರ ಕರ್ನಾಟಕದ ಬೇಸಾಯದ ಹಾಡುಗಳು ಮೇಲೂ ವೀರಶೈವ ಧರ್ಮದ ಪ್ರಭಾವ ಕಂಡು ಬರುವುದೊಂದು ವಿಶೇಷ.

ಮೂರು ಕಾಲಿನ ಮೆಟ್ಟು ಮೂರು ಲಿಂಗಗಳೇನೊ
ತೂರುವನು ಜೀವಿ ಚಿತ್ಕಳೆಯ ! ವಚನಗಳು
ತೂರಿದಾ ರಾಶಿ ಶಿವಮತಕೆ

ಕಣವೆ ಮಂಟಪವಾತೊ ಗುಣವಂತ ಬಸವೇಶ
ಹೊಣೆಗಾರ ರೈತ ದಂಡೇಶ ! ಕಣಮೇಟಿ
ಗಣಿ ಗುರುವು ಕಣಕೆ ಪ್ರಭುಲಿಂಗೊ

ಇಂಥ ಹಾಡುಗಳನ್ನು ದಕ್ಷಿಣ ಕರ್ನಾಟಕದಲ್ಲಿ ಕೇಳಲಾಗದು. ಬೇಸಾಯದ ಹಾಡುಗಳಲ್ಲೇ ಉತ್ತರ ಕರ್ನಾಟಕದ ವಿಶಿಷ್ಟ ಪ್ರಕಾರವಾಗಿ ಹಂತಿಯ ಹಾಡುಗಳು ಬಳಕೆಯಲ್ಲಿವೆ. ಕೊಯ್ಲಿನ ಕಾಲದಲ್ಲಿ ಹಂತಿ ಕಟ್ಟಿದಾಗ ಇವನ್ನು ಹಾಡುತ್ತಾರೆ. ಇಂಥವೇ ಬಂತಿ ಕಟ್ಟುವ ಹಾಡುಗಳು ಆಂಧ್ರದ ರಾಯಲಸೀಮೆಯಲ್ಲಿವೆ.

ಕರ್ನಾಟಕದ ಕೆಲವು ಕಡೆ ಹೊಲಿ ಹಾಡುಗಳು ಕೇಳಿಬರುತ್ತವೆ. ‘ಹೋಲಿ ಬಾರ ನಮ್ಮ ಮನೆ ತುಂಬ’ ಮುಂತಾದ ವಾಕ್ಯಗಳಿಂದ ‘ಹೊಲಿ’ ಎಂದರೆ ಧಾನ್ಯದ ಸಮೃದ್ಧಿ ಎಂದು ಅರ್ಥವಾಗುತ್ತದೆ. ನರಕ ಚತುರ್ದಶಿಯಂದು ಬಲಿ ಚಕ್ರವರ್ತಿಯನ್ನು, ಧಾನ್ಯದ ರಾಶಿಯನ್ನು ಪೂಜಿಸುವ ಸಂಪ್ರದಾಯವೊಂದಿದೆ.

ಹೊಲಿದೇವ್ರೊ ಬಲಿದೇವ್ರೊ
ಹೊಲಿ ಕೊಟ್ಟ ಬಲಿ ತೈಕಂಡ್
ತಮ್ಮ್ ರಾಜ್ಯಕ್ಕ್ ತಾವೇ ಬಂದ್
ಹೊಲಿಯೇ ಬಾ…

(ಗುಂಡ್ಮಿ ಚಂದ್ರಶೇಖರ ಐತಾಳ, ಕೈಲಿಯೆ ಕರೆದ ನೊರೆ ಹಾಲು, ಪು, ೪೬)

ಹೊಲಿ ಹಾಡುಗಳು ತಮಿಳು ಮತ್ತು ತೆಲುಗುಗಳಲ್ಲೂ ಸಿಕ್ಕುತ್ತವೆ. ತಮಿಳರು ತೆಲುಗರು ಕೂಡ ‘ಪೊಲಿ’ ಎಂದರೆ ಧಾನ್ಯ ಸಮೃದ್ಧಿ ಎಂದೇ ಅರ್ಥ ಹೇಳುತ್ತಾರೆ. ಒಂದೊಂದು ತಿಂಗಳು ಧಾನ್ಯ ಹೇಗೆ ಹೆಚ್ಚಾಗುತ್ತದೆಂದು ಕೆಳಗಿನ ತಮಿಳು ಗೀತೆ ಹೇಳುತ್ತದೆ.

ಒಣ್ಣಾಮ್ ತಿಂಗಳಿಲ್ ಒರು ಮುಳೈ ವಿಟ್ಟು
ಇರಂಡಾಮ್ ತಿಂಗಳಿಲ್ ಇರು ಮುಳೈವಿಟ್ಟು
ಮೂನ್ಹಾಮ್ ತಿಂಗಳಿಲ್ ಮುನ್ಹು ಮುಳೈವಿಟ್ಟು
ಪೊಲಿಕ್ಕು ಐಯಾಯಿರಕ್ಕಲ ಮಾನದು

ತೆಲುಗಿನಲ್ಲೂ ‘ಪೊಲಿ ಕಲುಗು ಪೋಲೋ ಪೊಲಿ’ ಎನ್ನುತ್ತಾ ಹಾಡುಗಳನ್ನು ಹೇಳುತ್ತಾರೆ.

ಕನ್ನಡದಲ್ಲಿ ದೋಣಿಯ ಹಾಡುಗಳು ಕಡಿಮೆ. ಕಡಲತೀರದಲ್ಲಿ ಕೆಲವು ಕಡೆ ಕನ್ನಡೇತರ ಭಾಷೆಗಳೂ ಇರುವುದರಿಂದ ಬಹುಶಃ ಕನ್ನಡದ ದೋಣಿ ಹಾಡುಗಳು ಇರಬೇಕಾದ ಸಂಖ್ಯೆಯಲ್ಲಿ ಇಲ್ಲ ಎನಿಸುತ್ತದೆ.

ಹೂಂ ತತ್ತಯ್ಯ ಕಡ್ಗಿ ಮುತ್ತಯ್ಯ
ಕಳಿನ್ ಚಿಕ್ಕಯ್ಯ ದೋಣಿ ಒತ್ತಯ್ಯ…..

ಮುಂತಾದ ಹಾಡುಗಳು ಕೆಲವು ಮಾತ್ರ ಪ್ರಕಟವಾಗಿವೆ.

ಕನ್ನಡ ಜನಪದ ಗೀತೆಗಳಲ್ಲಿ ಬೀಸುವ ಕಲ್ಲಿನ ಹಾಡು ಮತ್ತು ಒನಕೆಯ ಹಾಡುಗಳು ಸಾವಿರಾರು ಸಂಖ್ಯೆಯಲ್ಲಿ ಸಂಗ್ರಹಗೊಂಡಿವೆ. ಜನಪದ ತ್ರಿಪದಿಗಳು ಅಸಂಖ್ಯಾತ ಸಂಖ್ಯೆಯಲ್ಲಿ ಅಚ್ಚಾಗಿವೆ. ಇವೆಲ್ಲ ಕೆಲಸದ ಹಾಡುಗಳೇ ಆದರೂ ಇವು ಹೆಚ್ಚಾಗಿ ಸ್ತುತಿ ಪದಗಳಾಗಿ, ಬಾಂಧವ್ಯದ ಗೀತೆಗಳಾಗಿ ಜೀವನದ ಹಲವು ಮುಖಗಳನ್ನು ಪ್ರತಿಬಿಂಬಿಸುತ್ತಾ ಬಹುಮುಖ ಅಧ್ಯಯನಕ್ಕೆ ಯೋಗ್ಯವಾಗಿವೆ. ರಾಗಿಕಲ್ಲಿನ ಬಳಕೆಯನ್ನು ನೇರವಾಗಿಯೇ ತಿಳಿಸುವ ಕೆಲವು ಹಾಡುಗಳನ್ನು ಗಮನಿಸಬಹುದು.

ನಾ ನಿನ್ನ ಸೋಲಿಸಿದೆ ನಾ ನಿನ್ನ ನಿದ್ದೆ ಕೆಡಿಸೀದೆ
ನಾ ನಿನ್ನ ನಿದ್ದೆ ಕೆಡಿಸೀದೆ ರಾಗಿಕಲ್ಲೆ……
ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗೀಯ
ಜಲ್ಲಜಲ್ಲನೆ ಉದುರಮ್ಮ ನಾ ನಿನಗೆ
ನೆಲ್ಲಕ್ಕಿ ಪಡಿಯ ನಡೆಸೇನು
ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ……

ಪರಮಾರ್ಥ ಗೀತೆಗಳಲ್ಲೂ ಕೆಲಸ ಮಾಡುವಾಗಲೇ ಹಾಡಬಹುದು, ಪೂಜಾ ಸಂದರ್ಭದಲ್ಲಿ ಹಾಡಬಹುದು ಅಥವಾ ಸಂತೋಷದ ಸಮಾರಂಭಗಳಲ್ಲೂ ಹಾಡಬಹುದು. ‘ಭೂತಾಯ ಎದ್ದೊಂದು ಗಳಿಗೆ ನೆನೆದೇನು’ ಎನ್ನುವ ಜಾನಪದರ ಕೃತಜ್ಞತೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ‘ದೇವರು ನೆನದಾರೆ ಸಾವುಟ್ಟು ನಮಗಿಲ್ಲ’ ಎಂಬುದು ಇವರ ದೃಢವಾದ ಅಭಿಪ್ರಾಯ.

ಪರಮಾರ್ಥ ಗೀತೆಗಳನ್ನು ಕುರಿತು ಹೇಳುವಾಗಲೂ ದಕ್ಷಿಣ ಭಾರತೀಯ ಗೀತ ಪ್ರಕಾರಗಳಲ್ಲಿ ಹೋಲಿಕೆಗಳನ್ನು ಗುರುತಿಸಬಹುದು. ಕೋಲಾಟವೇ ಆಗಲಿ ಯಕ್ಷಗಾನವೇ ಆಗಲಿ ಗಣನಾಯಕನ ಸ್ತುತಿ ಒಂದು ಸಂಪ್ರದಾಯವಾಗಿಬಿಟ್ಟಿದೆ. ತಮಿಳಿನ ಗಣನಾಯಕನ ಸ್ತುತಿಯ ಬಗ್ಗೆ ಹಿಂದೆ ಪ್ರಸ್ತಾವಿಸಲಾಗಿದೆ.

ಶರಣು ಶರಣುವಯ್ಯ ಗಣನಾಯಕ
ನಮ್ಮ ಕರುಣದಿಂದಲಿ ಕಾಯೊ ಗಣನಾಯ್ಕ…

ಎಂಬುದು ಕನ್ನಡದ ಪ್ರಸಿದ್ದ ಸ್ತುತಿ ಪದ. ತೆಲುಗಿನಲ್ಲಿ ಇದೇ ಲಯದ ಗಣನಾಥನ ಸ್ತುತಿಗಳಿವೆ.

ಶಿವಶಿವಮೂರ್ತಿವಿಗಣನಾಥ
ನೀವು ಶಿವುನಿ ಕುಮಾರುಡವು ಗಣನಾಥ…

ಎಂಬುದೊಂದು ಸ್ತುತಿ ಪದ ಮತ್ತು ಕೋಲಾಟದ ಪದ.

ಕನ್ನಡ ಸ್ತುತಿ ಪದಗಳಲ್ಲಿ ಎಲ್ಲ ದೇವತೆಗಳಿಗೂ ಪಾಲಿದ್ದರೂ ಉತ್ತರ ಕರ್ನಾಟಕದ ಹಾಡುಗಳಲ್ಲಿ ಶಿವ ಮತ್ತು ಶಿವಶರಣರಿಗೆ ಸಂಬಂಧಿಸಿದವು ಹೆಚ್ಚಾಗಿ ಕಂಡು ಬರುತ್ತವೆ.

ಕನ್ನಡ ಗರತಿಯರ ಹಾಡುಗಳಲ್ಲಿ ಜನಪದ ಜೀವನದ ಬಾಂಧವ್ಯದ ಚಿತ್ರಣ ಕಂಡು ಬರುತ್ತದೆ. ಇವು ಬಹುಪಾಲು ಕೆಲಸದ ಹಾಡುಗಳೇ ಆದರೂ ವಸ್ತುವಿನ ದೃಷ್ಟಿಯಿಂದ ಬಾಂಧವ್ಯಗೀತೆಗಳೆಂಬ ಪ್ರತ್ಯೇಕ ಪ್ರಕಾರವಾಗಿ ಕರೆಯಲು ಯೋಗ್ಯವಾಗಿದೆ. ತಾಯಿಯಾಗುವ ಬಯಕೆಯನ್ನು ವ್ಯಕ್ತಮಾಡುವ ಗೀತೆಗಳು ದಕ್ಷಿಣ ಭಾರತದಲ್ಲೆಲ್ಲ ಸಿಕ್ಕುತ್ತವೆ. ಉದಾ:

ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡೀಗಿ ಎತ್ತು ದುಡದ್ಹಂಗ…
ಕಂದನ ಕೊಡು ಶಿವನೆ…
ಬಂಜೆಂಬ ಶಬುದ ಹೊರಲಾರೆ

ಭಾರತೀಯ ಸಮಾಜದಲ್ಲಿ ಹೆಂಗಸಿನ ಬಾಳಿಗೆ ಇತಿಮಿತಿಗಳಿವೆ. ಹಳ್ಳಿಯ ಸಮಾಜದಲ್ಲಿ ಹೆಣ್ಣು ಎದುರಿಸಬೇಕಾದ ಅನೇಕ ಸಮಸ್ಯೆಗಳಿವೆ. ಅದಕ್ಕೇ ಕೆಳಗಿನ ರೀತಿಯ ಹಾಡುಗಳು ಮೂಡಿ ಬರುತ್ತವೆ.

ಹೆಣ್ಣು ಆಗುದಕಿಂದ ಮಣ್ಣು ಆಗುದು ಲೇಸು
ಮಣ್ಣಿನ ಮ್ಯಾಲೆ ಮರವಾಗಿ ಬೆಳೆದಾರೆ
ಬಂದವರಿಗೆಲ್ಲ ನೆರಳವ್ವ

ಅತ್ತೆ ಸೊಸೆಯರ ಕಹಿ ಸಂಬಂಧವೂ ಭಾರತೀಯ ಸಮಾಜದ ಒಂದು ದುರಂತ. ಬಹುಶಃ ಅವಿಭಕ್ತ ಕುಟುಂಬದಲ್ಲಿ ಹೆಂಗಿಸಿನ ಸ್ಥಾನದಲ್ಲಿ ಆಗುವ ಏರುಪೇರುಗಳು ಅತ್ತೆ, ಸೊಸೆಯರ ನಡುವೆ ವಿರಸಗಳನ್ನುಂಟು ಮಾಡುತ್ತವೆನ್ನಿಸುತ್ತದೆ.

ಅತ್ತೆಯಿಲ್ಲದ ಸೊಸೆ ಉತ್ತಮ ಸ್ತ್ರೀ ಎನ್ನುತ್ತಾರೆ – ತೆಲುಗು ಗರತಿಯರು

ಆಕಳಂತ ಅತ್ತೆ ಗೋಕುಲದಂಥ ಮಾವ
ಶ್ರೀ ಕೃಷ್ಣನಂಥ ಪತಿರಾಯ ಇದ್ದರೆ
ಸಾಕಿದ ತವರ ಮರತೇನು ಎನ್ನುತ್ತಾರೆ ಕನ್ನಡಿಗರು

ಲಾಲಿ ಪದಗಳು, ಉಯ್ಯಾಲೆಯ ಹಾಡುಗಳು, ಶಿಶುಪ್ರಾಸಗಳು, ಜಗತ್ತಿನ ಎಲ್ಲಾ ಪ್ರದೇಶಗಳಲ್ಲೂ ಕಂಡುಬರುತ್ತವೆ. ಕನ್ನಡ ಮತ್ತು ತೆಲುಗುಗಳಲ್ಲಿ ಸಮಾನಾರ್ಥದ ಸಮಾನ ಲಯದ ಹಲವು ಗೀತೆಗಳನ್ನು ಗುರುತಿಸಬಹುದು.

ಯಾಕ್ರಿ ಭಾವ ಕೂತ್ಬಿಟ್ರಿ
ನಾನ್ಹೇಳಿದ ಮರ್
ತ್ಬಿಟ್ರಿ
ಮೈಸೂರ್ಗೆ ಹೋಗೋಣ ಬನ್ನಿ ಭಾವ
ಮೈಸೂರ್ಪಾಕ್ ತಕ್ಕೊಡಿ ಭಾವ…

ಇದೇ ಲಯದಲ್ಲೇ ಇರುವ ತೆಲುಗು ಹಾಡು:

ಬಾವಾ ಬಾವಾ ಪನ್ನೀರು – ಬಾವನು ಪಟ್ಟುಕ ತನ್ನೇರು
ವೀಧೀ ವೀಧಿ ತಿಪ್ಪೇರು – ವೀಸೆಡು ಗಂಧಂ ಪೂಸೇರು

ಮದುವೆಯ ಹಾಡುಗಳು ಸಂತೋಷದ ಹಾಡುಗಳಲ್ಲಿ ಸೇರುತ್ತವೆ. ದಕ್ಷಿಣ ಭಾರತೀಯ ವಿವಾಹ ಸಂಪ್ರದಾಯಗಳನ್ನು ತೌಲನಿಕವಾಗಿ ಪರಿಶೀಲಿಸಬೇಕಾದ ಅವಶ್ಯಕತೆ ಇದೆ. ಹಾಗೆಯೇ ಸಂತೋಷ ಸಂದರ್ಭದಲ್ಲಿ ಕುಣಿದು ನಲಿದು ಹಾಡುವ ಕೋಲಾಟದ ಹಾಡುಗಳೂ ದಕ್ಷಿಣ ಭಾರತದ ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುತ್ತವೆ. ತೆಲಗು ಮತ್ತು ಕನ್ನಡ ಪ್ರಾಂತ್ಯಗಳ ಕೋಲಾಟಗಳಲ್ಲಿ ಹೆಚ್ಚಿನ ಸಾಮ್ಯತೆಯನ್ನು ನೋಡಬಹುದು. ಲಯದಲ್ಲಿ, ಪಲ್ಲವಿಗಳಲ್ಲಿ ಕುಣಿತದ ಧಾಟಿಗಳಲ್ಲಿ ಹೆಚ್ಚಿನ ಹೋಲಿಕೆಯಿದ್ದು ತೌಲನಿಕ ಅಧ್ಯಯನಕ್ಕೆ ಅರ್ಹವಾಗಿದೆ.

ಕನ್ನಡನಾಡಿಗೆ ವಿಶಿಷ್ಟವಾಗಿರುವ ಗೀತಸಂಪ್ರದಾಯಗಳಲ್ಲಿ ‘ಅಂಟಿಕೆ – ಪಂಟಿಕೆ’ ಪದಗಳ ಸಂಪ್ರದಾಯವನ್ನು ಹೇಳಬಹುದು. ಉತ್ತರ ಕರ್ನಾಟಕದ ಗೀತಪ್ರಕಾರಗಳಲ್ಲಿ ಗುಮ್ಮಟೆ ಪದ ಒಂದು. ಮಣ್ಣಿನ ಕುಂಭದಿಂದ ತಯಾರಾದ ಗುಮ್ಮಟೆಯನ್ನು ಬಾರಿಸುತ್ತಾ ಹಾಡುವ ಪದಗಳಿವು.

ಕಥನಗೀತೆ, ಮಹಾಕಾವ್ಯ: ಕನ್ನಡ ನಾಡಿನ ವೃತ್ತಿಗಾಯಕರ ಪರಂಪರೆ ಭವ್ಯವಾದುದು. ಧಾರ್ಮಿಕ ವೃತ್ತಿ ಗಾಯಕರು ಮತ್ತು ಲೌಕಿಕ ವೃತ್ತಿ ಗಾಯಕರು ಕನ್ನಡ ಜನಪದ ಕಾವ್ಯ ಪರಂಪರೆಯನ್ನು ಜೀವಂತವಾಗಿರುವಂತೆ ಕಾಪಾಡಿದ್ದಾರೆ. ದೇವರ ಗುಡ್ಡರು, ಮಲೆಯ ಮಾದೇಶ್ವರನ್ನು ಕುರಿತು ಹಾಡುವ ಧಾರ್ಮಿಕಗಾಯಕರು. ‘ಮಲೆಯ ಮಾದೇಶ್ವರ ಕಾವ್ಯ’ ಜಗತ್ತಿನಲ್ಲೇ ಬೆರಳಿನಲ್ಲಿ ಎಣಿಸಬಹುದಾದ ಜನಪದ ಮಹಾಕಾವ್ಯಗಳಲ್ಲಿ ಒಂದು. ಇದು ಕರ್ನಾಟಕಕ್ಕೆ ಮಾತ್ರ ಸಂಬಂಧಿಸಿರುವ ದೇಶಿ ವಸ್ತುವನ್ನೊಳಗೊಂಡಿದ್ದು, ಜಗತ್ತಿನ ಪ್ರಾಚೀನ ಜನಪದ ಕಾವ್ಯಪರಂಪರೆಗೆ ಕೊಡುಗೆಯಾಗಿದೆ. ಬಹುಶಃ ೧೩ನೇಯ ಶತಮಾನದಲ್ಲಿ ಪ್ರಾರಂಭವಾಗುವ ಮಾದೇಶ್ವರನ ಗೀತ ಸಂಪ್ರದಾಯ, ಅನಂತರ ಕಾಲದ ಒಂದೆರಡು ಶತಮಾನಗಳಲ್ಲಿ ಮಹಾಕಾವ್ಯ ಪರಂಪರೆಯಾಗಿ ರೂಪುಗೊಂಡಿರಬೇಕು.

ನೀಲಗಾರರ ‘ಮಂಟೇಸ್ವಾಮಿ ಕಾವ್ಯ’ವೂ ಕನ್ನಡನಾಡಿನ ಧಾರ್ಮಿಕ ಕಾವ್ಯ ಪರಂಪರೆಯಲ್ಲಿ ಪ್ರಸಿದ್ಧವಾದುದು. ನೀಲಗಾರರು ಕೂಡ ಕರ್ನಾಟಕಕ್ಕೇ ಸೀಮಿತವಾದ ಧಾರ್ಮಿಕ ಪರಂಪರೆಗೆ ಸೇರಿದವರು. ಕನ್ನಡ ನಾಡಿನ ಪ್ರಸಿದ್ಧ ಶಿವಶರಣರ ಉಲ್ಲೇಖಗಳನ್ನೊಳಗೊಂಡ ಮಂಟೇಸ್ವಾಂಇ ಕಾವ್ಯವೂ ಸುಮಾರು ಐದಾರು ಶತಮಾನಗಳ ಹಿಂದೆ ರೂಪುಗೊಂಡಿದ್ದೆಂದು ಹೇಳಬಹುದು.

ಚೌಡಿಕೆ ಸಂಪ್ರದಾಯದವರು ಎಲ್ಲಮ್ಮನ ಭಕ್ತರು. ಎಲ್ಲಮ್ಮ ರೇಣುಕೆಯ ಅವತಾರವೆಂದು ಜನಪದರ ನಂಬಿಕೆ. ಚೌಡಿಕೆಯವರು ಆಂಧ್ರದಲ್ಲೂ ಕಾಕತೀಯರ ಕಾಲದಿಂದ (ಸು. ೧೩ನೆಯ ಶತಮಾನ) ಇದ್ದುದಕ್ಕೆ ಆಧಾರಗಳಿವೆ. ಎಲ್ಲಮ್ಮನನ್ನು ಕುರಿತು ಕಥನಗೀತೆಗಳು ಕನ್ನಡದಲ್ಲೂ ತೆಲುಗಿನಲ್ಲೂ ಹೇರಳವಾಗಿ ಸಿಕ್ಕುತ್ತವೆ. ಚೌಡಿಕೆ ಈ ಗಾಯಕರಿಗೆ ಪವಿತ್ರವಾದದ್ದು. ಪರಶುರಾಮ ಕಾರ್ತವೀರ್ಯವನ್ನು ಕೊಂದು ಅವನು ದೇಹದಿಂದಲೇ ಚೌಡಿಕೆಯನ್ನು ಮಾಡಿಕೊಂಡನೆಂಬ ಐತಿಹ್ಯವಿದೆ. ಪುರಾಣ ಮೂಲವಾದ ಕಥೆಯನ್ನು ತೆಗೆದುಕೊಂಡು ಜನಪದ ಕಥೆಯನ್ನಾಗಿ ಮಾರ್ಪಡಿಸುವಾಗ ಜಾನಪದರು ಸ್ಥಳೀಯ ಇತಿಹಾಸವನ್ನೂ ಜನಪದ ಆಶಯಗಳನ್ನೂ ಗಮನದಲ್ಲಿಟ್ಟುಕೊಂಡರೆಂಬುದು ಎಲ್ಲಮ್ಮನ ಕಾವ್ಯದಿಂದ ತಿಳಿದುಬರುತ್ತದೆ. ಕಾಕತೀಯ ಪ್ರತಾಪರುದ್ರನ ಬಗೆಗಿನ ಉಲ್ಲೇಖಗಳು ಈ ಕಥೆಗೂ ತೆಲುಗುನಾಡಿನ ಓರುಗಲ್ಲಿಗೂ ಇರುವ ಸಂಬಂಧವನ್ನು ತಿಳಿಸುತ್ತದೆ.

ಜುಂಜಪ್ಪನ ಸಂಪ್ರದಾಯದ ಕಾಡುಗೊಲ್ಲರು ಕನ್ನಡನಾಡಿನ ಮತ್ತೊಂದು ವೃತ್ತಿಗಾಯಕ ಸಂಪ್ರದಾಯದವರು. ಗೊಲ್ಲರು ಆಂಧ್ರದಲ್ಲೂ ವೃತ್ತಿಗಾಯಕ ಪರಂಪರೆಗೆ ಸೇರಿದ ಮುಖ್ಯಗಾಯಕರಾಗಿದ್ದರೂ ಕರ್ನಾಟಕದ ಜುಂಜಪ್ಪನ ಕಾವ್ಯ ಇಲ್ಲಿಗೇ ಸಂಬಂಧಿಸಿದ್ದು, ಈ ನಾಡಿನಲ್ಲಿ ವಿಶಿಷ್ಟವಾದುದಾಗಿದೆ. ಗೋಪಾಲಕೆ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವ ಈ ಕಾವ್ಯ ಜನಪದ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ. ಗೊರವರು ಆಂಧ್ರ ಮತ್ತು ಕರ್ನಾಟಕಗಳಲ್ಲಿ ಅನೇಕ ಶತಮಾನಗಳಿಂದ ಧಾರ್ಮಿಕಗಾಯಕರಾಗಿ ಹೆಸರುವಾಸಿಯಾಗಿದ್ದಾರೆ. ಗೊರವರು ಶೈವ ಭಕ್ತರೆಂದು ತೆಲುಗು ಸಾಹಿತ್ಯದಲ್ಲಿ ಉಲ್ಲೇಖಿತರಾಗಿದ್ದಾರೆ. ಮೈಲಾರಲಿಂಗನ ಭಕ್ತರಾದ ಕನ್ನಡ ಗೊರವರು ‘ಗೊರವರ ಮೇಳ’ ನಡೆಸುತ್ತಾರೆ.

ತೆಲುಗು ಮೂಲದ ಲೌಕಿಕಗಾಯಕರಲ್ಲಿ ದೊಂಬಿದಾಸರನ್ನು ಹೆಸರಿಸಬಹುದು. ದಾಸರು ತೆಲುಗಿನಲ್ಲೂ ಪ್ರಸಿದ್ಧ ಗಾಯಕರು. ಏಕತಾರಿಯನ್ನು ನುಡಿಸುತ್ತಾ ದೊಂಬಿದಾಸರು ಗಂಗೆ – ಗೌರಿ ಮುಂತಾದ ಕಾವ್ಯಗಳನ್ನು ಹಾಡುವುದೊಂದು ಸೋಜಿಗ. ಇವರು ವೀರವೈಷ್ಣವ ದಾಸರಲ್ಲರೆಂಬುದನ್ನು ಇದು ತಿಳಿಸುತ್ತದೆ. ದಾಸರು ಹಾಡುವ ಕಾವ್ಯಗಳಲ್ಲಿ ಕೆಂಪೇಗೌಡನ ಕಥೆ ಒಂದು. ಕೆಂಪೇಗೌಡ ಯಲಹಂಕದಲ್ಲೇ ನೆಲಸಿದ್ದ. ದೊಂಬಿದಾಸರು ಕೆಂಪೇಗೌಡನ ಕಥೆಯನ್ನು, ಗಂಗಾಗೌರೀ ವಿಲಾಸದ ಕಥೆಯನ್ನೂ ಹೇಳುವುದು ಸಹಜವೆನಿಸುತ್ತದೆ. ಇವಲ್ಲದೆ ತೆಲುಗು ಮತ್ತು ಕನ್ನಡಗಳಲ್ಲಿ ಪ್ರಸಿದ್ಧವಾಗಿರುವ ‘ಬಾಲನಾಗಮ್ಮ’ ಕಥೆಯನ್ನೂ ದೊಂಬಿದಾಸರು ಹೇಳುತ್ತಾರೆ.

ಹೆಳವರು ಕೂಡ ತೆಲುಗು ಮೂಲದ ಗಾಯಕರೇ. ಇವರು ಕರ್ನಾಟಕದ ಎಲ್ಲಾ ಕಡೆಗಳಲ್ಲೂ ಕಂಡು ಬರುತ್ತಾರೆ. ಇವರನ್ನು ತೆಲುಗಿನಲ್ಲಿ ‘ಪಿಚ್ಚುಕುಂಟ್ಲು’ ಎನ್ನುತ್ತಾರೆ. ಇದರರ್ಥ ಭಿಕ್ಷುಕ ಕುಂಟರು. ಹೆಳವರು ಚಾಮುಂಡಿ ಪುರಾಣ, ಯಮದಾಳು ದೇವಮ್ಮ, ಕರಿಬಂಟನಕತೆ ಮುಂತಾದವನ್ನು ಹಾಡುತ್ತಾರೆ. ಕೆಂಪೇಗೌಡನ ಲಾವಣಿಯನ್ನುಇವರು ಹಾಡುತ್ತಾರೆ. ಕೆಂಪೇಗೌಡನ ಬಗೆಗಿನ ಕಥನಗೀತೆಯನ್ನು ಹಾಡುವವರಲ್ಲಿ ತೆಲುಗು ಬಣಜಿಗರೂ ಇದ್ದಾರೆ.

ಕರ್ನಾಟಕದ ಜನಪದ ಗಾಯಕರಲ್ಲಿ ಕಿನ್ನರಿ ಜೋಗಿಗಳನ್ನು ಮುಖ್ಯವಾಗಿ ಹೇಳಬೇಕು. ಜೋಗಿ ಹಾಡು ಮತ್ತು ಮಹಾಭಾರತದ ಇತರ ಕತೆಗಳು ಇವರ ಆಕರ್ಷಕ ವಸ್ತುಗಳು. ವಿರಾಟಪರ್ವ, ಐರಾವತ, ಅರಣ್ಯವಾಸ ಮುಂತಾದವರನ್ನು ಇವರು ಇಡೀ ರಾತ್ರಿ ಹೇಳುತ್ತಾರೆ. ಕನ್ನಡನಾಡಿನ ಜನಪದ ಮೇಳಗಳಲ್ಲಿ ಕರಪಾಲಮೇಳ ಪ್ರಧಾನವಾದುದು. ಇವರು ಹೆಚ್ಚಾಗಿ ಶಿವಕಥೆಗಳನ್ನು ಹೇಳುತ್ತಾರೆ. ಕಾಡಸಿದ್ದಮ್ಮ, ಬಸವಕುಮಾರ, ಲೋಹಿತಕುಮಾರ, ಸೋಮಶೇಖರ ಚಿತ್ರಶೇಖರ ಮುಂತಾದವರು ಇವರು ಹಾಡುವ ಕಾವ್ಯಗಳು.

ಉತ್ತರ ಕರ್ನಾಟಕದಲ್ಲಿ ಕೆಲವು ವಿಶಿಷ್ಟ ಸಂಪ್ರದಾಯಗಳಿವೆ. ಗೊಂದಲಿಗರು ‘ಪಂಪರಾಮಾಯಣ’ದ ಕಾಲದಿಂದಲೂ ಇದ್ದುದಕ್ಕೆ ಉಲ್ಲೇಖಗಳಿವೆ. ತುಳಜಾಪುರದ ಅಂಬಾಭವಾನಿಯ ಭಕ್ತರಾದ ಗೊಂದಲಿಗರು ಮೇಳ ನಡೆಸಿ ಹಾಡುಗಳನ್ನೂ ಹೇಳುತ್ತಾರೆ. ಉತ್ತರ ಕರ್ನಾಟಕದ ಮತ್ತೊಂದು ಮೇಳ ಸಂಪ್ರದಾಯ ‘ಗೀಗೀಮೇಳ’. ಕಲ್ಗಿತುರಾಯಿ ಎಂಬ ಲಾವಣಿ ಸಂಪ್ರದಾಯವನ್ನು ಕೂಡ ಇಲ್ಲಿ ಸ್ಮರಿಸಬೇಕಾಗಿದೆ. ಹೀಗೆ ಕರ್ನಾಟಕದ ಜನಪದ ಕಾವ್ಯ ಸಮಪ್ರದಾಯಗಳಲ್ಲಿ ಬಹಳ ವೈವಿಧ್ಯವಿದೆ.

ಗದ್ಯ ಕಥನಗಳು: ಅತಿ ಮಾನುಷ ಶಕ್ತಿಗಳಲ್ಲಿ ನಂಬಿಕೆ, ಆಚರಣೆಗಳಲ್ಲಿ ಶ್ರದ್ಧೆ, ಸಾವಿರಾರು ವರ್ಷಗಳಿಂದ ಮನುಷ್ಯ ಜೀವನದ ಭಾಗವಾಗಿರುವ ಸಂಪ್ರದಾಯಗಳು ಐತಿಹ್ಯ ಮತ್ತು ಪುರಾಣಗಳ ಉಗಮಕ್ಕೆ ಕಾರಣವಾಗಿವೆ. ಕನ್ನಡಗನಾಡಿನ ಗ್ರಾಮದೇವತೆಗಳಿಗೆ ಸಂಬಂಧಿಸಿದ ಅನೇಕ ಪುರಾಣಗಳಿವೆ. ಬಹುಶಃ ಇವು ಕಥೆಗಳಾಗಿ ಹುಟ್ಟಿ, ಐತಿಹ್ಯಗಳಾಗಿ ಮಾರ್ಪಟ್ಟು ಅನಂತರ ಕಾಲದಲ್ಲಿ ಹಳೆಯದಾಗಿ ಪುರಾಣದ ಮಟ್ಟಕ್ಕೇರುತ್ತವೆ. ಕೆಲವು ಪುರಾಣಗಳು ಒಡೆದು ಕಥೆಗಳಾಗುವುದುಂಟು. ಇದು ಒಂದೇ ದಾರಿಯಲ್ಲಿ ನಡೆಯುವ ವಿಕಾಸವೆಂದು ನಿರ್ದಿಷ್ಟವಾಗಿ ಹೇಳವುದೂ ಸರಿಯಲ್ಲ ಎನಿಸುತ್ತದೆ. ಕೋಟೆ ಭದ್ರವಾಗಿರಬೇಕೆಂದು ತನ್ನನ್ನು ಆಹುತಿಕೊಟ್ಟ ಕೊಂಡ ಕೋರಮಂಗಲದ ಅಕ್ಕಮ್ಮನಕಥೆ ಪುರಾಣಗಳಿವೆ. ಶ್ರವಣ ಬೆಳಗೊಳದ ಗುಳಕಾಯಜ್ಜಿಯ ಐತಿಹ್ಯಕ್ಕೆ ದೇವತೆಯ ಸಂಬಂಧವುಂಟಾಗಿ ಅದೂ ಪುರಾಣವಾಗಿದೆ. ಹೀಗೆ ಕಥೆಗಳೂ ಪುರಾಣಗಳಾಗಬಹುದು. ಐತಿಹ್ಯಗಳೂ ಪುರಾಣಗಳಾಗಬಹುದು. ಕರ್ನಾಟಕಕ್ಕೇ ಸೀಮಿತವಾದ ಇಂತಹ ಐತಿಹ್ಯ. ಪುರಾಣಗಳ ಜತೆಗೆ ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಐತಿಹ್ಯಗಳು ಭಾರತ ದೇಶದಾದ್ಯಂತ ಪ್ರಚಲಿತವಾಗಿವೆ. ರಾಮಾಯಣಕ್ಕೆ ಸಂಬಂಧಿಸಿದ ಐತಿಹ್ಯಗಳು ಭಾರತ ದೇಶದ ಗಡಿಯನ್ನು ದಾಟಿ ಶ್ರೀಲಂಕಾ ಜಾವಾ, ಸುಮಾತ್ರಾ, ಬರ್ಮಾ, ಮಲೇಶಿಯಾ ಮುಂತಾದ ಪ್ರದೇಶಗಳಿಗೂ ವ್ಯಾಪಿಸಿವೆ.

ಗುಪ್ತ ನಿಧಿಯನ್ನು ಕುರಿತ ಐತಿಹ್ಯಗಳು ಜಗತ್ತಿನಲ್ಲಿ ಎಲ್ಲ ಪ್ರದೇಶಗಳಲ್ಲೂ ಸಿಕ್ಕುತ್ತವೆ. ಕೆಂಪೇಗೌಡನು ಮಲಗಿದ್ದಾಗ ಹಾವು ಹೆಡೆ ಆಡಿ ತೋರಿಸಿದ್ದು, ಅನಂತರ ಅವನಿಗೆ ಅಪಾರವಾದ ಹಣ ಸಿಕ್ಕಿ ಬೆಂಗಳೂರನ್ನು ಕಟ್ಟಿಸಿದ್ದು ಪ್ರಸಿದ್ದವಾಗಿದೆ. ಇಂಥವೇ ಐತಿಹ್ಯಗಳು ಕೂಡ ಎಲ್ಲ ಕಡೆಯೂ ಸಿಕ್ಕುತ್ತವೆ. ವಿಜಯನಗರ ರಾಜರ ಬಗ್ಗೆ ಇಂತಹ ಐತಿಹ್ಯವಿದೆ. ತಮಿಳುನಾಡಿನ ವೀರಪಾಂಡ್ಯ ಕಟ್ಟಬೊಮ್ಮನ್ ಕಥೆಯಲ್ಲೂ ಇಂಥ ಘಟನೆ ಕಂಡುಬರುತ್ತದೆ. ಸ್ಥಳನಾಮಗಳಿಗೆ ಸಂಬಂಧಿಸಿದ ಐತಿಹ್ಯಗಳು ಒಂದೊಂದು ಪ್ರದೇಶದ ಸಂಸ್ಕೃತಿಗೆ ಕನ್ನಡಿ ಹಿಡಿಯುತ್ತವೆ. ಸ್ಥಳನಾಮ ಚಿಕ್ಕದೇ ಆಗಿದ್ದರೂ ಅದರ ಬಗ್ಗೆ ಹೇಳುವ ಐತಿಹ್ಯಗಳಲ್ಲಿ ಅಲ್ಲಿಯ ಜನರ ನಂಬಿಕೆಗಳು, ಸಂಪ್ರದಾಯಗಳು ವ್ಯಕ್ತವಾಗುತ್ತದೆ. ಮೈಸೂರು, ಮಂಡ್ಯ, ಬೆಂಗಳೂರು ಮುಂತಾದ ಎಲ್ಲಾ ಹೆಸರುಗಳಿಗೂ ಒಂದೊಂದು ಪುರಾಣ ಅಥವಾ ಐತಿಹ್ಯವಿದೆ. ಕನ್ನಡನಾಡಿನ ಕೆಲವು ಪ್ರಾಂತ್ಯಗಳಲ್ಲಿ ಪ್ರಚಲಿತವಾಗಿರುವ ಭೂತಾರಾಧನೆಯಿಂದ ಪ್ರೇರಿತವಾದ ಪುರಾಣಗಳು ಮತ್ತು ಐತಿಹ್ಯಗಳಿವೆ.

ಕರ್ನಾಟಕದ ಹಳ್ಳಿಹಳ್ಳಿಯಲ್ಲೂ ತುಂಬಿಕೊಂಡಿರುವ ಜನಪದ ಕಥಾ ಸಂಪತ್ತನ್ನು ಇನ್ನೂ ಹೆಚ್ಚಿನ ಆಸಕ್ತಿಯಿಂದ ಸಂಗ್ರಹಿಸಿ ಭದ್ರಪಡಿಸಬೇಕಾಗಿದೆ. ಈಗಲೂ ಕನ್ನಡದಲ್ಲಿ ಪ್ರಕಟಗೊಂಡಿರುವಷ್ಟು ಕಥಾಸಂಕಲನಗಳು ಬಹುಶಃ ಭಾರತದ ಇನ್ನಾವ ಭಾಷೆಯಲ್ಲೂ ಪ್ರಕಟವಾಗಿಲ್ಲ. ಬೇರೆ ಭಾಷೆಗಳಲ್ಲೂ ಹೆಚ್ಚಿನ ಸಂಖ್ಯೆಯ ಕಥಾಸಂಕಲನಗಳು ಪ್ರಕಟವಾಗಿ, ಇವುಗಳ ತೌಲನಿಕ ಅಭ್ಯಾಸ ನಡೆದರೆ ಮಾತ್ರ ಕನ್ನಡಕ್ಕೆ ವಿಶಿಷ್ಟವಾದ ಕಥಾವರ್ಗಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದು. ಕನ್ನಡಕ್ಕೆ ವಿಶಿಷ್ಟವಾದ ವರ್ಗಗಳನ್ನು ಗುರುತಿಸಿ ಅವುಗಳ ಬಗ್ಗೆ ಸಂಶೋಧನೆ ನಡೆಸಿದ ಹಿ.ಶಿ.ರಾಮಚಂದ್ರೇಗೌಡ ಹೇಳುವ ಕಥಾವರ್ಗಗಳು ಹೀಗಿವೆ: “೩೬೯ ಕಳೆದ ತಂದೆಗಾಗಿ ಹುಡುಕಾಟ, ೪೦೮ ನಿಂಬೆರಾಣಿ, ೪೦೮ ಎ ತೊಂಡೆಕಾಯಿ ಹೆಣ್ಣು, ೪೨೫ಕ್ಕೂ ದೇವಕನ್ನಿಕೆಯರು ಇಟ್ಟುಕೊಂಡ ಗಂಡ, ೪೪೧ ಎ ಮಳೆರಾಯನ ಮಡದಿ ೪೫೧ ಬಿ ತಂಗಿಯನ್ನು ಬಯಸುವ ಅಣ್ಣ, ೪೬೫ ಈ ಶಿವನ ಮೈದ, ೫೦೨ ಎ ಗುಳಕಾಯಿ ತಮ್ಮ ೫೧೧ ಸಿ ನಾಯಿಕೊಟ್ಟ ಭರಣಿ, ೫೧೨ ಚಿಕ್ಕ ಹೊನ್ನಿ ದೊಡ್ಡ ಹೊನ್ನಿ, ೫೧೬ – ೨ ಅ‌ಲ್ಪಯುಷ್ಯದ ಮಗು, ೫೧೬ – ೪ ಕಥೆಗಳ ಕೋಪ – ಇಂಥ ಸಾಕಷ್ಟು ಕಥಾವರ್ಗಗಳು ಕನ್ನಡಕ್ಕೆ ವಿಶಿಷ್ಟವಾದುವು ಎನಿಸುತ್ತದೆ”.

ಗಾದೆಗಳು – ಒಗಟುಗಳು: ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಸಾರವಾಗುವ ಜನಪದ ಪ್ರಕಾರಗಳಲ್ಲಿ ಪ್ರಮುಖವಾದ ಗಾದೆ ಮತ್ತು ಒಗಟುಗಳಲ್ಲಿ ಸಮಾನತೆ ಕಂಡು ಬಂದರೆ ಆಶ್ಚರ್ಯವೇನಿಲ್ಲ. ಭೌಗೋಳಿಕವಗಿಯೂ, ಸಂಸ್ಕೃತಿಕವಾಗಿಯೂ ನಿಕಟ ಸಂಪರ್ಕವಿರುವ ದಕ್ಷಿಣ ಭಾರತದ ಭಾಷೆಗಳಲ್ಲಿ ಭಾಷಾಂತರಗಳಂತೆ ಕಾಣುವ ಗಾದೆಗಳು ನೂರಾರು ಸಿಕ್ಕುತ್ತವೆ. ಅದರಲ್ಲೂ ಮುಖ್ಯವಾಗಿ ಕನ್ನಡ ಮತ್ತು ತೆಲುಗುರಲ್ಲಿ ಒಂದೇ ರೀತಿಯ ಗಾದೆಗಳು ಸಾವಿರ ಸಂಖ್ಯೆಗಳಲ್ಲಿ ಕಂಡು ಬರುತ್ತವೆ. ಇಂತಹ ಸಮಾನಾರ್ಥಕ ಗಾದೆಗಳ ಒಂದು ಸಂಕಲನವೇ ಬಂದಿದೆ

(ಜಿ.ಎಸ್.ಮೋಹನ್,೧೯೭೭)