ಕಡಮಟ್ಟತ್ತ್ ಕತ್ತನಾರ್ ಕೇರಳದ ಮಹಾ ಮಾಂತ್ರಿಕನಾದ ಕಡಮಟ್ಟತ್, ಕತ್ತನಾರ್‌ನ ಅದ್ಭುತ ಕಾರ್ಯಗಳು ಪ್ರಶಸ್ತವಾದುವುಗಳು. ಆತನ ಹೆಸರು ಪೌಲೋಸ್ ಎಂದಾಗಿತ್ತೆಂದೂ ಆತ ಒಂದು ಬಡಕುಟುಂಬದಲ್ಲಿ ಹುಟ್ಟಿದವನೆಂದೂ ಹೇಳುತ್ತಾರೆ. ಬಾಲ್ಯದಲ್ಲೇ ಅನಾಥವಾದ ಪೌಲೋಸ್ ತುಂಬಕಾಲ ಬಂಧುಗಳ ಬೈಗುಳವನ್ನೂ ಏಟನ್ನು ಸಹಿಸಿ ಯಾತನಾಮಯ ಬದುಕನ್ನು ಕಳೆದು ಒಂದು ರಾತ್ರೆ ಎಲ್ಲಿಗೆ ಎಂದಾಗಲಿ ಯಾಕೆ ಎಂದಾಗಲಿ ಆಲೋಚಿಸದೆ ದೇವರು ದಾರಿ ತೋರಿಸುತ್ತಾನೆಂಬ ದೃಢ ವಿಶ್ವಾಸದಿಂದ ಊರು ಬಿಟ್ಟ. ಹಾಗೆ ತಲುಪಿದ್ದು ಕಡಮಟ್ಟಂ ಇಗರ್ಜಿಗೆ. ಒಳಹೋಗಿ ಶ್ರೀಮೂರ್ತಿಯ ಮುಂದೆ ಮೊಣಕಾಲೂರಿ ಈ ಭಕ್ತನಿಗೆ ಯೋಗ್ಯವಾದ ಕಾರ್ಯ ಕ್ಷೇತ್ರವನ್ನು ತೋರಿಕೊಡು ಎಂದು ಕಣ್ಣ ನೀರು ತುಂಬಿ ಪ್ರಾರ್ಥಿಸಿದ. ಆಗ ಆ ದಾರಿಯಾಗಿ ಬಂದ ಪಾದ್ರಿ ಪೌಲೋಸವನ್ನು ಸಮಾಧಾನ ಪಡಿಸಿದ. ಬದುಕನ್ನು ಧೈರ್ಯವಾಗಿ ಎದುರಿಸಬೇಕೆಂದು ಉಪದೇಶಿಸಿದ. ಮುಂದುವರಿಸಿ ನೀನು ಎಲ್ಲಿಗೂ ಹೋಗಬೇಡ. ಇಲ್ಲೇ ಗುರುಮನೆ / ಅರಮನೆಯಲ್ಲಿ ಇದ್ದುಕೊಂಡು ಇಲ್ಲಿನ ವ್ಯವಹಾರಗಳನ್ನು ನೋಡಿಕೊ ಎಂದ. ಅಲ್ಲಿಂದ ಪೌಲೋಸನ ಬದುಕಿನ ಗತಿ ಬದಲಾಯಿಸಿತು.

ಪಾಲೋಸನ ಗುಣ ಮತ್ತು ಬುದ್ಧಿ ಮತ್ತೆ ಕೆಲವೇ ದಿನಗಳಲ್ಲಿ ಪಾದ್ರಿಗೆ ವಿದಿತವಾಯಿತು. ಒಳ್ಳೆಯ ವಿದ್ಯಾಭ್ಯಾಸ ನೀಡಿ ಈತನನ್ನು ತನ್ನ ಅನುಯಾಯಿಯಾಗಿಸಿಕೊಳ್ಳಬೇಕೆಂದು ಆತ ತೀರ್ಮಾನಿಸಿದ. ಐದು ವರ್ಷಗಳಲ್ಲಿ ಪೌಲೋಸ್ ಒಳ್ಳೆದು ‘ದೇವದಾಸ’ನಾದ. ಪೌಲೋಸ್ ಶೆಮ್ಮಾಶನ್ ಎಂಬ ಹೆಸರಿನಿಂದ ಖ್ಯಾತನಾದ ಆತ ಊರವರಿಗೆಲ್ಲ ತುಂಬ ಆತ್ಮೀಯನಾದ. ಹೀಗಿರುತ್ತ, ಒಮ್ಮೆ ಕಾಡಿನಲ್ಲಿ ಬೇರೆಯಾಗಿ ಬಿಟ್ಟ ಗುರುಮನೆಯ ಹಸುಗಳನ್ನು ಹುಡುಕುತ್ತ ಹೊರಟ ಊರವರೊಂದಿಗೆ ಹೋದ ಶೆಮ್ಮಾಶ ಹಿಂತಿರುಗಲಿಲ್ಲ. ಅವನನ್ನು ಕಾಡುಪ್ರಾಣಿಗಳು ಕೊಂದು ತಿಂದಿರಬಹುದೆಂದು ಎಲ್ಲರೂ ತಿಳಿದಿದ್ದರು. ಆದರೆ ಸ್ನೇಹ ನಿಧಿಯಾಗಿದ್ದ ಇಗರ್ಜಿಯ ಪಾದ್ರಿ ಹಾಗೆ ತಿಳಿಯದೆ ಶೆಮ್ಮಾಶನಿಗೋಸ್ಕರ ಪ್ರಾರ್ಥನೆ ಸಲ್ಲಿಸಿದ. ಕಾಡಿನಲ್ಲಿ ದಾರಿತಪ್ಪಿದ ಶೆಮ್ಮಾಶ ಕೆಲವು ನರಭಕ್ಷಕರ ವಶವಾದ. ಆದರೆ ದೈವಾನುಗ್ರಹದಿಂದ ಅವರ ಮುಖಂಡನಿಗೆ ಇವರ ಮೇಲೆ ಕರುಣೆ ಮೂಡಿ ಶೆಮ್ಮಾಶನನ್ನು ಕೊಲ್ಲದೆ ತನ್ನ ವ್ಯವಹಾರಗಳನ್ನು ನೋಡಿಕೊಳ್ಳುವಂತೆ ಅವನನ್ನು ನಿಯೋಜಿಸಿದ. ಉಳಿದವರಿಗೆ ಅದು ಒಪ್ಪಿಗೆಯಾಗದಿದ್ದರೂ ಯಾರೂ ಮುಖಂಡನಿಗೆ ಎದುರಾಡಲಿಲ್ಲ. ಹನ್ನೆರಡು ವರ್ಷಕಾಲ ಮುಖಂಡನ ಸಾಕುಮಗನಂತೆ ಶೆಮ್ಮಾಶ ಅಲ್ಲಿ ಕಳೆದ. ಈ ಮಧ್ಯೆ ಮುಖಂಡನಿಂದ ಮಂತ್ರವಾದ, ಇಂದ್ರಜಾಲ, ಮಹೇಂದ್ರಜಾಲ ಮುಂತಾದ ವಿದ್ಯೆಗಳನ್ನು ಆತ ತಿಳಿದುಕೊಂಡ. ಹನ್ನೆರಡು ವರ್ಷಗಳ ಬಳಿಕ ಮುಖಂಡನ ಅನುಜ್ಞೆಯನ್ನು ಆಶೀರ್ವಾದವನ್ನು ಪಡೆದುಕೊಂಡ ಅಲ್ಲಿಂದ ಹಿಂತಿರುಗಿ ಹೋದ.

ತನ್ನನ್ನು ಈ ಹಿಂದೆ ತಂದೆಯಂತೆಯೇ ಪರಿಪಾಲಿಸಿದ್ದ ಕಡಮಟ್ಟಂ ಪಾದ್ರಿಯ ಹತ್ತಿರಕ್ಕೆ ಶಮ್ಮಾಶನು ಕೂಡಲೇ ಹೋಗಲು ತೀರ್ಮಾನಿಸಿದ. ಆದರೆ ದಾರಿ ತುಂಬ ದೂರವಾಗಿತ್ತು. ದಾರಿ ಸರಿಯಾಗಿ ಗೊತ್ತಿಲ್ಲದೆ ಹೋದರೂ ಅಂದಾಜಿನ ಮೇಲೆ ಕಾಡಿನಲ್ಲೆ ನಡೆದ. ಹಾಗೆ ನಡೆದು ನಡೆದು ಸುಸ್ತಾದಾಗ ಒಂದು ಗುಡಿಸಲ ಬಾಗಿಲಿಗೆ ಹೋದ. ಅಲ್ಲಿ ಒಬ್ಬಕೆ ಮುದುಕಿ ಇದ್ದಳು. ತನಗೆ ತುಂಬ ಬಾಯಾರಿಕೆಯೂ ಹಸಿವೆಯೂ ಜೊತೆಗೆ ತುಂಬ ಬಳಲಿಕೆಯೂ ಇದೆ ಎಂದು ಆಕೆಯೊಡನೆ ಹೇಳಿದಾಗ, ಅವಳೆಂದಳು ನಾನೂ ಏನು ಸೇವಿಸದೆ ತುಂಬ ದಿನಗಳಾಗಿವೆ, ಇಲ್ಲಿ ಏನೂ ಇಲ್ಲ. ಕೂಡಲೇ ಶಮ್ಮಾಶ ಆಕೆಗೆಂದ ಹೋಗಿ ನೋಡು. ಮನೆಯಲ್ಲಿ ಒಂದು ಅಕ್ಕಿಕಾಳಾದರೂ ಇಲ್ಲದೆ ಇರಲಾರದು. ಆಕೆ ಪಾತ್ರೆಯಲ್ಲಿ ತಡಕಾಡಿ ಒಂದು ಚಪ್ಪಟೆ ಅಕ್ಕಿಯನ್ನು ಕಂಡಳು. ಬಳಿಕ ಒಲೆಯಲ್ಲಿ ಒಂದಿಷ್ಟು ನೀರು ಇಡುವಂತೆ ಆಕೆಯೊಡನೆ ಆತ ವಿನಿಂತಿಸಿದ. ಆ ಮುದುಕಿ ಮನಸ್ಸಿಲ್ಲದ ಮನಸ್ಸಿನಿಂದ ಅದನ್ನು ಮಾಡಿದಳು. ನೀರು ಕುದಿಯಲಾರಂಭಿಸಿದಾಗ ಅಕ್ಕಿ ಕಾಳನ್ನು ಅದಕ್ಕೆ ಹಾಕಿದಳು. ಸ್ವಲ್ಪ ಕಳೆದು ನೀರನ್ನು ನೋಡಿದ ಆಕೆ ದಿಗ್ಭ್ರಾಂತಳಾದಳು. ಮಡಕೆ ತುಂಬ ಅನ್ನ ! ಅವರಿಬ್ಬರೂ ಹೊಟ್ಟೆ ತುಂಬ ಉಂಡರು. ಅದು ಆತನ ಮೊಲದ ಪವಾಡವಾಗಿತ್ತು.

ಅಲ್ಲಿಂದ ಮುಂದೆ ನಡೆಯುತ್ತ ನಡೆಯುತ್ತ ಶಮ್ಮಾಶ ಕಡಮಟ್ಟದ ಹತ್ತಿರ ಹತ್ತಿರ ತಲುಪಿದ. ಪ್ರಾಯಾಧಿಕ್ಯದಿಂದ ಕ್ಷೀಣನಾಗಿದ್ದ ದೊಡ್ಡ ಪಾದ್ರಿಗೆ ಫಕ್ಕನೆ ಗುರುತು ಹತ್ತಲಿಲ್ಲ. ತನ್ನ ಸಾಕು ಮಗನೇ ಮುಂದೆ ನಿಂತಿದ್ದಾನೆಂದು ತಿಳಿದಾಗ ಆನಂದಾತಿರೇಕದಿಂದ ಹನಿಗಣ್ಣುಗಳಿಂದ ಪುಟ್ಟ ಪೌಲೋಸನನ್ನು ಆಲಿಂಗಿಸಿಕೊಂಡ. ಇಷ್ಟು ಕಾಲ ಎಲ್ಲಿದ್ದೆಯೋ ಮಗನೆ? ಎಂದು ವಿಚಾರಿಸಿದ. ಅವರು ಮಾತನಾಡುತ್ತಿದ್ದಂತೆ ಗಂಟೆ ಬಾರಿಸುವವ ಓಡಿ ಬಂದು ಇಗರ್ಜಿಯ ಅಂಗಳದಲ್ಲಿ ತೆಂಗಿನಷ್ಟು ಎತ್ತರದ, ಕಪ್ಪು ಕತ್ತಲ ಐದಾರು ಪಿಶಾಚಗಳು ಬಂದು ಎಲ್ಲರನ್ನೂ ಹೆದರಿಸುತ್ತಿದ್ದಾರೆಂದು ತಿಳಿಸಿದ. ಆತನ ಜತೆ ಪೌಲೋಸನೂ ಪಾದ್ರಿಯೂ ಇಗರ್ಜಿಗೆ ಹೋದರು. ಶಮ್ಮಾಶ ಪಿಶಾಚಗಳು ಕೂಡಲೇ ಜಾಗ ಖಾಲಿ ಮಾಡುವಂತೆ ಆಜ್ಞಾಪಿಸಿದ. ಆದರೆ ಅವು ಆತನನ್ನು ಆಕ್ರಮಿಸಲು ಮುಂದಾದುವು. ಎಲ್ಲರೂ ಹೆದರಿ ಕಂಗಾಲಾಗಿ ನಿಂತಿದ್ದಂತೆ ಶಮ್ಮಾಶ ತನ್ನ ಉತ್ತರೀಯವನ್ನು ನಾಲ್ಕಾರು ಬಾರಿ ಮಡಚಿ ಬಲವಾಗಿ ಬೀಸಿ ನೆಲಕ್ಕೆ ಎಸೆದ. ಉತ್ತರೀಯವು ಮಡಚಿದಂತೆ ಮುರಿದು ಮಡಚಿಕೊಂಡ ಆ ಪಿಶಾಚಗಳೂ ಪ್ರಜ್ಞಾಹೀನವಾದುವು, ಅಂಗಳದಲ್ಲಿ ಅಂಗಾತ ಬಿದ್ದು ಬಿಟ್ಟುವು. ಒಟ್ಟಿಗೆ ಇದ್ದವರು ಆಶ್ಚರ್ಯದಿಂದ ಕಣ್ಣರಳಿಸಿ ನೋಡಿದರು. ಗಂಟೆ ಬಾರಿಸುವವ ಬೇಗ ಇಗರ್ಜಿಯ ಗಂಟೆ ಬಾರಿಸಿದ. ಅದನ್ನು ಕೇಳಿ ಎಂದಿಗಿಂತ ಹೆಚ್ಚು ಜನ ಅಂದು ಆರಾಧನೆಗಾಗಿ ಬಂದು ಸೇರಿದರು. ಆರಾಧನೆಗಳೂ ಕರ್ಮಗಳೂ ವಿಧಿಪ್ರಕಾರ ನಡೆದುವು. ಇಗರ್ಜಿಯ ಅಂಗಣದಲ್ಲಿ ಕರಿತಾಳ ಮರಗಳಂತೆ ಪಿಶಾಚಗಳು ಬಿದ್ದು ಹೋದ ಸುದ್ಧಿ ತಿಳಿದು ಇನ್ನೂ ಒಂದಷ್ಟು ಜನ ಅಲ್ಲಿ ಬಂದು ಸೇರಿದರು. ಹಾಗೆ ಬಂದ ಜನರೆಲ್ಲ ಅದು ಶಮ್ಮಾಶನ ವಿದ್ಯಾಪ್ರಭಾವದ ಪರಿಣಾಮವೆಂದು ತಿಳಿದಾಗ ಅವರೆಲ್ಲ ಅದ್ಭುತ ವ್ಯಕ್ತಿಯೆಂಬಂತೆ ಆತನನ್ನು ನೋಡಿ ವಂದಿಸಿದರು.

ಹೆಚ್ಚು ವಿಳಂಬ ಮಾಡದೆ ಮೇಲ್ವರ್ಗದವರೆಲ್ಲ ಸೇರಿ ಪೌಲೋಸ್ ಶಮ್ಮಾಶನಿಗೆ ‘ಕತ್ತನಾರ್’ ಪಟ್ಟ ಕಟ್ಟಿದರು. ಅಂದಿನಿಂದ ಆತನನ್ನು ಕಡಮಟ್ಟತ್ತ್ ಕತ್ತನಾರ್ ಎಂದೂ ಕಡಮಟತ್ತಚ್ಚನೆಂದೂ ಜನೆರೆಲ್ಲ ಆದರದಿಂದ ಕರೆಯತೊಡಗಿದರು. ಆ ಪಾದ್ರಿಯೂ ಜಾತಿಮತ ಭೇದ ಇಲ್ಲದೆ ಎಲ್ಲರ ಬಳಿಗೂ ಹೋಗಿ ಪ್ರೇತ ಭಾದೆ, ಅಪಸ್ಮಾರ, ಭ್ರಾಂತು ಮುಂತಾದ ಗುಣವಾಗದ ರೋಗಗಳನ್ನು ಒಂದಿಷ್ಟು ಖರ್ಚಿಲ್ಲದೆ ಬಹಲ ಸುಲಭ ವಿಧಾನದಿಂದ ವಾಸಿ ಮಾಡಿಕೊಡುತ್ತಿದ್ದ. ಆತನ ಮಾಂತ್ರಿಕ ಕ್ರಿಯೆಗಳು ಉಳಿದವರಿಗಿಂತ ಭಿನ್ನವಾಗಿತ್ತು. ಹೋಮ, ಬಲಿ, ಪೂಜೆ ಯಾವುವೂ ಇರಲಿಲ್ಲ. ಪಾರಿತೋಷಕಗಳನ್ನೂ ಆತ ಬಯಸುತ್ತಿರಲಿಲ್ಲ. ಸಂಕೀರ್ಣಗಳಾಗಿದ್ದ ಜನರ ಸಮಸ್ಯೆಗಳನ್ನೂ ಆತ ಪರಿಹಾರ ಮಾಡಿಕೊಡುತ್ತಿದ್ದ.

ಆತನ ಹೆಸರೂ ಕೀರ್ತಿಯೂ ಪ್ರತಿದಿನ ಹೆಚ್ಚುತ್ತ ಹೋಯಿತು. ಸಾಕಷ್ಟು ಆರಾಧಕರೂ ಶಿಷ್ಯರೂ ಇದ್ದ ಆತನಿಗೆ ವೈರಿಗಳೂ ಕಡಿಮೆ ಇರಲಿಲ್ಲ. ಸಂಸ್ಕೃತ ಭಾಷೆಯ ಮೂಲ ಪಾಠಗಳನ್ನೂ ಕಲಿಯದ ಒಬ್ಬ ಯಕಶ್ಚಿತ್ ಪ್ರಾಣಿ(ಕ್ರಿಶ್ಚಿಯನ್‌ರನ್ನು ಹೀನೈಸಿ ಹೇಳುವ ಪದ) ಮೇಲ್ವರ್ಗದವರಿಗಷ್ಟೇ ಸೀಮಿತವಾಗಿದ್ದ ಮಾಂತ್ರಿಕ ವಿದ್ಯೆಗೆ ಕೈ ಹೆಚ್ಚಿದುದು ಅನೇಕ ಬ್ರಾಹ್ಮಣ ಪುರೋಹಿತರಿಗೂ ಇಷ್ಟವಾಗಲಿಲ್ಲ. ಕೋವಿಗಲಂ ತಂಬುರಾನ್, ಕುಂಜುಮಣ್ ಪೊತ್ತಿ ಮುಂತಾದವರು ಅಂದಿನ ಕಾಲದ ಪ್ರಸಿದ್ಧ ಮಂತ್ರವಾದಿಗಳಾಗಿದ್ದರು. ಏನೂ ಖರ್ಚಿಲ್ಲದ ಕಡಮಟ್ಟತ್ತಚ್ಚನ ಮಾಂತ್ರಿಕ ರೀತಿಗಳಲ್ಲೂ ಅವರಿಗೆ ವಿರೋಧವಿತ್ತು. ಅವರು ಮುಂದಿನಿಂದಲೂ ಹಿಂದಿನಿಂದಲೂ ಆತನಿಗೆ ಪಂಥಾಹ್ವಾನವೊಡ್ಡುತ್ತಲೂ ಹೀನೈಸುತ್ತಲೂ ಇದ್ದರು. ಆದರೆ ಅದಾವುದನ್ನೂ ಕೇಳಿಯೇ ಇಲ್ಲವೆಂಬಂತೆ ಕಡಮಟ್ಟತ್ತಚ್ಚನ್ ಈ ಸೇವಾಕಾರ್ಯಗಳನ್ನು ಮಾಡುತ್ತಲೇ ಇದ್ದ. ಆದರೆ ವೈರಿಗಳು ಸುಮ್ಮನಾಗಲಿಲ್ಲ. ಅವರು ಈತನನ್ನು ಅಪಾಯಕ್ಕೊಳಗಾಗಿಸುವುದಕ್ಕೂ ಅಪಮಾನಿಸಲೂ ಸಕ್ರಿಯರಾಗಿ ಕ್ರಿಯಾಶೀಲರಾದರು.

ಹೀಗಿರುತ್ತ ಒಮ್ಮೆ ಜೆರೂಸಲೇಂನಿಂದ ಒಬ್ಬ ‘ಬಾವತಿರುಮೇನಿ’ (ಬಾವಮಹಾಶಯ) ಮಲಯಾಳ ರಾಜ್ಯವನ್ನು ಸಂದರ್ಶಿಸಿದ. ಆತ ಕಡಮಟ್ಟಕ್ಕೂ ಬಂದ. ಕತ್ತನಾರನ ಕೆಲಸಗಳನ್ನು ಆತನೂ ತಿಳಿದುಕೊಂಡು ಆತನನ್ನು ಅಭಿನಂದಿಸಿದ. ಆದರೆ ಆತ ಮರಳಿ ಹೋಗುತ್ತಿದ್ದಂತೆ ಕೆಲವು ದುರ್ಜನರು ಆತನನ್ನು ಕಂಡು ಏನೋ ಎಲ್ಲ ಹೇಳಿದರು. ಕತ್ತನಾರನು ದುಮಂತ್ರವಾದಿಯೆಂದೂ ಕ್ರೈಸ್ತಮತ ವಿರುದ್ಧವಾದ ಅನೇಕ ಕೆಲಸಗಳನ್ನು ಮಾಡುತ್ತಿದ್ದಾನೆಂದೂ ದುರ್ಮಂತ್ರವಾದ ಗ್ರಂಥಗಳು ಆತನ ಕೈಯಲ್ಲಿವೆಯೆಂದೂ ಮತಾನುಯಾಯಿಗಳು ದಾರಿತಪ್ಪುತ್ತಿದ್ದಾರೆಂದೂ, ಇನ್ನೂ ಏನೇನೋ ಹೇಳಿದರು. ಇದನ್ನು ಕೇಳಿದ ಬಾವಮಹಾಶಯ ಮರಳಿ ಬಂದ ಕತ್ತನಾರ್‌ಗೆ ತಿಳಿ ಹೇಳಿದ. ಪುರೋಹಿತ ವೇಷವನ್ನು ಧರಿಸಲು ಇಷ್ಟಪಡುವುದಾದರೆ ಆ ವೇಷಕ್ಕೆ ಪೂರ್ತಿ ನ್ಯಾಯ ಒದಗಿಸಬೇಕೆಂದೂ ಮಾಂತ್ರಿಕನಾಗಿರುವುದಕ್ಕೆ ಇಷ್ಟ ಪಡುವುದಾದರೆ ಪೌರೋಹಿತ್ಯವನ್ನು ಬಿಡಬೇಕು ಎಂದೂ ಹೇಳಿದ. ಅಲ್ಲದೆ ಅವನಲ್ಲಿರುವ ಪೈಶಾಚಿಕ ಲಿಪಿಯ ಗ್ರಂಥಗಳ ಬಗೆಗೂ ತಾನು ತಿಳಿದೆನೆಂದೂ ಅವನ್ನೆಲ್ಲ ಬೆಂಕಿಗೆ ಹಾಕಬೇಕೆಂದೂ ಹೇಳಿದ. ಇದನ್ನು ಕೇಳಿದ ಕತ್ತನಾರ್ ಕ್ಷುದ್ರಶಕ್ತಿಗಳನ್ನು ಅಡಗಿಸಿ ಜನರಿಗೆ ಉಪಕಾರ ಮಾಡುವ ಆ ಗ್ರಂಥಗಳನ್ನೂ ಅಗ್ನಿಗೆ ಹಾಕಿ ಸುಡಲಾರೆ ಎಂದು ಸ್ಪಷ್ಟವಾಗಿ ಹೇಳಿದ. ಅದನ್ನು ಪರೀಕ್ಷಿಸಿ ನೋಡಿದರೆ ಮಾತ್ರ ನಂಬಲು ಸಾಧ್ಯ. ಬೆಂಕಿಯಲ್ಲಿ ಅದು ಸುಡದಿದ್ದರೆ ದೈವಕ್ಕೆ ವಿರೋಧದ್ದಲ್ಲವೆಂದು ತೀರ್ಮಾನಿಸಬಹುದೆಂದು ಬಾವಮಹಾಶಯನೂ ಹೇಳಿದ.

ಇಗರ್ಜಿಯ ಅಂಗಣದಲ್ಲಿ ಅಗ್ನಿಕುಂಡ ಉರಿಯಿತು. ಎಲ್ಲರೂ ನೋಡುತ್ತಿದ್ದಂತೆ ತನ್ನ ಮಂತ್ರ ಗ್ರಂಥಗಳನ್ನು ಒಂದೊಂದಾಗಿ ಕತ್ತನಾರ್ ಬೆಂಕೆಗೆಸೆದ. ಆದರೆ ಅವಾವುದಕ್ಕೂ ಬೆಂಕಿ ಹಿಡಿಯಲೂ ಇಲ್ಲ, ಬೂದಿಯಾಗಲೂ ಇಲ್ಲ. ಅವು ಪಕ್ಷಿಗಳಾಗಿ ಬದಲಾದವು ಆಗಸದಲ್ಲಿ ಸುತ್ತುತ್ತ ಹಾರಿದುವು. ಆ ದೃಶ್ಯ ಮಹಾಶಯವನ್ನು ಚಕಿತಗೊಳಿಸಿತು. ಆತನಿಗೆ ನಂಬುಗೆ ಬಂತು. ಆತನೆಂದ ಮಗನೇ ಕ್ರಿಶ್ಚೀಯ ಸಭೆಯ ತೀರ್ಮಾನವನ್ನು ನಾನು ನಿನಗೆ ತಿಳಿಸಿದೆ. ಸತ್ಯ ಪ್ರಮಾಣಗಳಿಗೆ ವಿರುದ್ಧವಾಗಿ ನೀನು ಏನನ್ನೂ ಮಾಡಬಾರದು. ಬಾಕಿ ಎಲ್ಲವನ್ನೂ ನೀನೇ ತೀರ್ಮಾನಿಸಿಕೋ. ಬಾವ ಹೊರಟು ಹೋದ ಬಳಿಕವೂ ಆತ ಹೇಳಿದ ಮಾತುಗಳೆಲ್ಲ ಕತ್ತನಾರನ ಕಿವಿಗಳಲ್ಲಿ ಮಾರ್ದನಿಗೊಡುತ್ತಲೇ ಇದ್ದುವು. ಮಾಂತ್ರಿಕ ವಿದ್ಯೆಗಳು ಪುರೋಹಿತನೊಬ್ಬನಿಗೆ ಯೋಗ್ಯವಾದವುಗಳೇ? ಆಗ ಆಕಾಶದಲ್ಲಿ ಪಕ್ಷಿಗಳಾಗಿ ಹಾರಾಡುತ್ತಿದ್ದ ಮಾಂತ್ರಿಕ ಗ್ರಂಥಗಳು ಪುನಃ ಆತನ ಕೈಗಳಿಗೆ ಬಂದು ಸೇರಿದುವು. ಮುಂದೆ ಅನೇಕರಿಗೆ ಉಪಕಾರವಾಗುವ ಆ ಗ್ರಂಥಗಳೊಂದಿಗೆ ಆತ ಅರಮನೆಗೆ ನಡೆದ.

ಮುಂದಿನ ಕಾಲವನ್ನೆಲ್ಲ ಆತ ಆಶಂಕಾಕುಲವಾದ ಮನಃಸ್ಥಿತಿಯಲ್ಲೆ ಕಳೆದ. ತಾನು ಜನರ ಒಳಿತಿಗಾಗಿ ಮಾಡುವುದಾದರೂ ಮಂತ್ರವಾದವನ್ನು ಸಭೆ ಅಂಗೀಕರಿಸುವುದಿಲ್ಲ. ಚಿಂತಿಸಿದಂತೆಲ್ಲ ಕತ್ತನಾರನ ಮನದಲ್ಲಿ ಗೊಂದಲಗಳು ಹೆಚ್ಚುತ್ತಲೇ ಹೋದುವು. ಹೀಗೆ ಒಂದೊಂದನ್ನೇ ಚಿಂತಿಸುತ್ತ ಚಿಂತಿಸುತ್ತ ಆತನಿಗೆ ಬಳಲಿಕೆ ಹೆಚ್ಚಿತು, ದೇಹ ದುರ್ಬಲವಾಯಿತು. ಒಂದು ದಿನ ನಿದ್ರಿಸುತ್ತಿದ್ದಾಗ ಮಗನೇ ಎಂದು ಕ್ಷೀಣದನಿಯೊಂದು ಕೇಳಿದಂತಾಯಿತು. ಅದಿ ಹಳೆಯ ಕಾಡು ಮನುಷ್ಯರ ಮುಖಂಡರ ಧ್ವನಿಯಾಗಿತ್ತು. ತನ್ನ ಕೊನೆಗಾಲವು ಸಮೀಪಸಿದೆಯೆಂದೂ ಅದಕ್ಕೆ ಮುಂಚಿತವಾಗಿ ನಿನ್ನ ಮುಖವನ್ನೊಮ್ಮೆ ನೋಡಬೇಕೆಂದೂ ಮುಖಂಡ ಕೇಳಿ ಕೊಳ್ಳುತ್ತಿದ್ದ. ಅದನ್ನು ಕೇಳಿ ಹಾಸಿಗೆಯಿಂದ ಥಟ್ಟನೆ ಎದ್ದ ಕತ್ತನಾರ್ ಕತ್ತಲು ತುಂಬಿದ್ದ ದಾರಿಗಳಲ್ಲಿ ನಡೆಯುತ್ತ ಇಗರ್ಜಿಯ ಸಮೀಪದಲ್ಲಿ ಬಾವಿಯಂತೆ ಕಾಣುವ ಗುಹೆಯಲ್ಲಿ ಇಳಿದು ಮಾಯವಾದ.

ಆ ಗುಹೆ ಈಗಲೂ ಇದೆ. ಅದರ ಸಮೀಪದಲ್ಲಿರುವ ಸಣ್ಣ ಇಗರ್ಜಿ ‘ಪೋಯೇಡಂ ಪಳ್ಳಿ’ (ಹೋದ ಇಗರ್ಜಿ) ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಇಲ್ಲಿ ಪ್ರತಿವರ್ಷವೂ ಫೆಬ್ರವರಿ ತಿಂಗಳ ಏಳನೇ ತಾರೀಕಿನಿಂದ ಪೆರುನ್ನಾಳ್ (ದೊಡ್ಡದಿನ) ಆಚರಿಸಲಾಗುತ್ತದೆ. ಅಂದು ಇಲ್ಲಿ ನಾನಾ ಜಾತಿಮತಗಳಿಗೆ ಸೇರಿದ ಜನರೆಲ್ಲ ದೊಡ್ಡ ಪರಿಶೆಯಾಗಿ ಸೇರುವುದು ಸಾಮಾನ್ಯ ಕತ್ತನಾರ್ ಮಾಯನಾದನೆಂದು ನಂಬಲಾಗುವ ಗುಹೆಯ ಬಾಗಿಲಲ್ಲಿ ಭಕ್ತರು ‘ಕೋಳಿಕುರುದಿ’, ‘ವೆಚ್ಚೂಟ್ಟ್‌’ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಮಹಾ ಮಾಂತ್ರಿಕನಾಗಿದ್ದ ಕಡಮಟ್ಟತ್ತ್ ಕತ್ತನಾರನ ಸಾನ್ನಿಧ್ಯವು ಇಗರ್ಜಿಯಲ್ಲೂ ಪರಿಸರದಲ್ಲೂ ಈಗಲೂ ಅನುಭವಕ್ಕೆ ಬರುತ್ತಿದೆಯೆಂದು ಅನೇಕರು ನಂಬುತ್ತಾರೆ. ಮಾನವ ಪ್ರೇಮಿಯಾಗಿದ್ದ ಆತ ಕ್ಷುದ್ರ ಶಕ್ತಿಗಳನ್ನೂ ಉನ್ಮೂಲನ ಮಾಡುವುದಾಗಿ ಎಂದೆಂದಿಗೂ ತಮ್ಮೊಂದಿಗಿರುತ್ತಾನೆಂದು ನಂಬುತ್ತ ಬರುತ್ತಾರೆ.

– ಕೆ.ಎಸ್.ಎಚ್. ಅನುವಾದ ಕೆ.ಕೆ.

ಕಣಜ ‘ಕಣಜ’ ಪದವು ‘ಕಣ’ ಎಂಬ ಶಬ್ದದಿಂದ ಬಂದಿರಬಹುದು. ರೈತರು ತಮ್ಮ ಬೆಳೆಗಳನ್ನು ತೂರಿ, ಕೇರಿ, ಶುದ್ಧಗೊಳಿಸಿ ರಾಶಿಗೆ ಪೂಜೆ ಮಾಡಿದ ಅನಂತರ ‘ಕಣ’ ದಿಂದ ತಂದ ದವಸವನ್ನು ಕಣಜಕ್ಕೆ ತುಂಬುತ್ತಿದ್ದರು. ಕಣಜಗಳು ಕರ್ನಾಟಕದ ಉದ್ದಗಲಕ್ಕೂ ಇದ್ದು, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿವೆ. ದವಸದ ಪ್ರಮಾಣವನ್ನು ಹಾಗೂ ಆಕಾರವನ್ನು ಪರಿಗಣಿಸಿ ಕಣಗಳಲ್ಲಿ ಕುಂಬಾರ ಕಣಜ (ವಡೇವು), ಗುಂಡು ಕಣಜ (ತೊಂಬೆ), ಅಡ್ಡ ಕಣಜ. ಹಗೇವು ಇತ್ಯಾದಿ ವಿಂಗಡಿಸಬಹುದು. ಇವು ತನ್ನದೇ ಆದ ವೈಶಿಷ್ಟ್ಯತೆ ಹಾಗೂ ವಿನ್ಯಾಸಗಳಿಂದ ಕೂಡಿದ್ದು ಸ್ಥಳಾವಕಾಶಕ್ಕೆ ತಕ್ಕಂತೆ ರೂಪುಗೊಂಡಿರುತ್ತವೆ.

ಕುಂಬಾರ ಕಣಜ: ಇದನ್ನು ಅಳಗೆ, ವಡೇವು, ವಡೇಕಣಜ ಮುಂತಾದ ಹೆಸರುಗಳಿಂದ ಕರೆಯುವರು. ೧ – ೨ ಖಂಡುಗ ದವಸವನ್ನು ಒಳಗೊಳ್ಳುವಷ್ಟು ಸಾಮರ್ಥ್ಯವನ್ನು ಇದು ಹೊಂದಿರುತ್ತದೆ. ಮೊದಲ ಅರ್ಧಕಣಜವನ್ನು ಜಡಕೆಯಡಿಯಂತೆ ಮಾಡಿ ಅದರ ಮೇಲ ದೊಡ್ಡ ಮಡಕೆಯ ಕಂಠವನ್ನು ಜೋಡಿಸಿ ಕಣಜಾಕಾರವನ್ನು ಕುಂಬಾರ ತಯಾರಿಸುತ್ತಾನೆ. ಅನಂತರ ಇದನ್ನು ಚೆನ್ನಾಗಿ ಸುಟ್ಟು ಗಟ್ಟಿಗೊಳಿಸುತ್ತಾನೆ. ಇದು ದೀರ್ಘಕಾಲ ಬಾಳಿಕೆ ಬಂದು ನೀರು, ಬೆಂಕಿ ಇತ್ಯಾದಿಗಳಿಂದ ಶಿಥಿಲಗೊಳ್ಳುವುದುದಿಲ್ಲ. ಬಿತ್ತನೆಯ ದವಸ ಧಾನ್ಯಗಳನ್ನು ಹಾಗೂ ಅಪರೂಪದ ಒಡವೆ, ಅತ್ಯಮೂಲ್ಯ ವಸ್ತುಗಳನ್ನು ಇದರಲ್ಲಿ ಜೋಪಾನ ಮಾಡುತ್ತಿದ್ದರು. ಈ ಬಗೆಯ ಕಣಜಗಳು ಮೈಸೂರು, ಚಾಮರಾಜನಗರ, ತಮಕೂರು, ಕೋಲಾರ, ಬೆಂಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಗುಂಡು ಕಣಜ: ಇದು ಸುಮಾರು ೩ – ೬ ಖಂಡುಗದಷ್ಟು ದವಸ ಧಾನ್ಯಗಳನ್ನು ಶೇಖರಿಸಬಹುದಾದ ಸಾಧನ. ನುರಿತ ರೈತರು ಅಥವಾ ಕೆಲವು ವೃತ್ತಿಪರ ಕುಟುಂಬಗಳು ಇದನ್ನು ತಯಾರಿಸುತ್ತಿದ್ದವು. ಜೇಡಿಮಣ್ಣು ಮತ್ತು ಬತ್ತದ ಹುಲ್ಲನ್ನು ಚೆನ್ನಾಗಿ ತುಳಿದು ತಟ್ಟಿ ವೃತ್ತಾಕಾರದ ನಾಲ್ಕು ಬಳೆಗಳನ್ನು ಮಾಡಿಕೊಳ್ಳುತ್ತಾರೆ. ಎಲ್ಲ ಬಳೆಗಳು ಮೂರು ಅಡಿ ವ್ಯಾಸವನ್ನು ಹೊಂದಿದ್ದು ತಳಭಾಗದ ಬಳೆಗಳು ಕಂಠವನ್ನು ಹೊಂದಿರುತ್ತವೆ. ಕಂಠದ ವ್ಯಾಸ ಸ್ವಲ್ಪ ಕಿರಿದಾಗಿದ್ದು ಸಮತಟ್ಟಾದ ಕಲ್ಲಿನ ಮೇಲೆ ಕೂರುವಂತೆ ಜೋಡಿಸಿ ಅನಂತರ ಎರಡು ಸಮತಟ್ಟಾದ ಬಳೆ ಬರುವಂತೆ ಮಾಡಿ ಮೇಲ್ಭಾಗಕ್ಕೆ ಕಂಠದ ಬಳೆ ಬಳಿದು ಸುಣ್ಣ ಬಣ್ಣಗಳನ್ನು ಹಚ್ಚುತ್ತಾರೆ. ಈ ಕಣಜ ೬ – ೭ ಅಡಿ ಎತ್ತರವನ್ನು ಹೊಂದಿರುತ್ತದೆ. ಮುಚ್ಚಲು ಹಲಗೆ ಅಥವಾ ತೆಳ್ಳನೆಯ ಕಲ್ಲನ್ನು ಇಡುತ್ತಾರೆ.

ಕಣಜದ ಕೆಳಭಾಗದ ಬಳೆಯಲ್ಲಿ ೩ – ೪ ಇಂಚಿನ ಒಂದು ರಂಧ್ರವನ್ನು ಮಾಡಿ ಅದಕ್ಕೆ ತೆಂಗಿನ ಕಾಯಿಯ ಕರಟವನ್ನು ಮುಚ್ಚಲು ಬಳಸುತ್ತಾರೆ. ಈ ರಂಧ್ರದಿಂದ ತಮಗೆ ಬೇಕಾದಾಗ ದವಸಧಾನ್ಯ ಪಡೆಯಲು ಸುಲಭವಾಗುತ್ತಿತ್ತು.ಅಲ್ಲದೆ ಕಣಜದ ತಳಭಾಗದಲ್ಲಿರುವ ಹಳೆಯದವಸ ತೆಗೆದುಕೊಂಡ ಮೇಲ್ಭಾಗದಲ್ಲಿ ಹೊಸ ದವಸವನ್ನು ಉಳಿಸಲು ಅನುಕೂಲವಾಗುತ್ತಿತ್ತು.

ಬಿದಿರು ಹೆಚ್ಚಾಗಿರುವ ಮಲೆನಾಡು ಪ್ರದೇಶಗಳಲ್ಲಿ ಇದೇ ರೀತಿಯ ಕಣಜವನ್ನು ಬಿದಿರಿನ ದಬ್ಬೆಗಳಿಂದ ೬ – ೮ ಅಡಿ ಎತ್ತರಕ್ಕೆ ಬಾವಿಯ ಆಕಾರದಲ್ಲಿ ಕಟ್ಟಿಕೊಳ್ಳುತ್ತಿದ್ದರು. ಇದಕ್ಕೆ ‘ತೊಂಬೆ’ ಎಂದು ಹೆಸರು. ಕಬ್ಬಿಣದ ತಗಡಿನಿಂದಲೂ ಕಣಜವನ್ನು ತಯಾರಿಸುತ್ತಾರೆ.

ಅಡ್ಡ ಕಣಜ: ಒಂದು ಅಂಕಣದ ಗೋಡೆ ಅಥವಾ ೪೧/೨ – ೫ ಅಡಿ ವಿಸ್ತಾರಕ್ಕೆ ಗೋಡೆಯನ್ನು ಕಟ್ಟಿ ಈ ಕಣಜವನ್ನು ನಿರ್ಮಿಸುತ್ತಾರೆ. ೪೦ – ೫೦ ಖಂಡುಗದ ದವಸವನ್ನು ಈ ಕಣಜದಲ್ಲಿ ತುಂಬಬಹುದು. ಧಾನ್ಯ ಹೆಚ್ಚಾಗಿ ಉತ್ಪಾದಿಸುವವರು ಒಂದು ಅಂಕಣಕ್ಕೆ ಒಂದೇ ಕಣಜ ಮಾಡಿಕೊಂಡರೆ, ಧಾನ್ಯ ಹೆಚ್ಚಾಗಿ ಉತ್ಪಾದಿಸುವವರು ಒಂದು ಅಂಕಣಕ್ಕೆ ಒಂದೇ ಕಣಜ ಮಾಡಿಕೊಂಡರೆ, ಧಾನ್ಯ ಕಡಿಮೆ ಇರುವವರು. ಈ ಕಣಜದ ಒಳಗೇ ಮತ್ತೊಂದು ಅಡ್ಡಗೋಡೆಯನ್ನು ನಿರ್ಮಿಸಿ ಒಂದರಲ್ಲಿ ರಾಗಿ ಮತ್ತೊಂದರಲ್ಲಿ ಜೋಳ ಅಥವಾ ಭತ್ತ ಇತ್ಯಾದಿ ಧಾನ್ಯಗಳನ್ನು ತುಂಬುವರು.

ಕಣಜದ ಗೋಡೆಯನ್ನು ಕೆಲವರು ಸಂಪೂರ್ಣವಾಗಿ ಕಟ್ಟಿ ದವಸ ಧಾನ್ಯ ಸುರಿಯಲು ಹಾಗೂ ಕಣಜಕ್ಕೆ ಇಳಿಯಲು ಕಿಟಕಿಯಾಕಾರದ ಬಾಗಿಲುಗಳನ್ನು ನಿರ್ಮಿಸುತ್ತಿದ್ದರು. ದವಸ ತೆಗೆದುಕೊಂಡ ಬಳಿಕ ಕಣಜಕ್ಕೆ ಬೀಗ ಹಾಕುವ ವ್ಯವಸ್ಥೆಯೂ ಇದರಲ್ಲಿದೆ. ಹತ್ತಿ ಇಳಿಯಲು ಅನುಕೂಲವಾಗುವಂತೆ. ಕಣಜದ ಗೋಡೆಯಲ್ಲಿ ಕೆಲವು ಗೂಡುಗಳು ಅಥವಾ ಚಿಕ್ಕ ಕಲ್ಲುಗಳನ್ನು ಮೆಟ್ಟಿಲನ ರೂಪದಲ್ಲಿ ಇಡುತ್ತಿದ್ದರು. ಇದೇ ಕಣಜಕ್ಕೆ ಕೆಲವರು ಕಣಜದ ಗೋಡೆಯನ್ನು ಸಂಪೂರ್ಣವಾಗಿ ಕಟ್ಟದೇ ಹತ್ತಿ ಇಳಿಯಲು ಅನುಕೂಲವಾಗುವಂತೆ ಮೇಲ್ಭಾಗವನ್ನು ಹಾಗೆಯೇ ಬಿಡುತ್ತಿದ್ದರು. ಬಿಟ್ಟು ಜಾಗವನ್ನು ಹಲಗೆಗಳಿಂದ ಮುಚ್ಚುತ್ತಿದ್ದರು. ಅಥವಾ ಅದಕ್ಕೆ ಚಿಕ್ಕ ಮೇಲ್ಛಾವಣಿ (ಅಟ್ಟ) ಮಾಡುತ್ತಿದ್ದರು. ಇಂಥ ಕಣಜಗಳು ಸರ್ವೇ ಸಾಮಾನ್ಯವಾಗಿ ಎಲ್ಲ ಕಡೆ ಹೆಚ್ಚಾಗಿ ಕಂಡುಬರುತ್ತವೆ. ಇವು ಶ್ರೀಮಂತರ ಕಣಗಳೆನ್ನಬಹುದು.

ಹಗೇವು: ಯಥೇಚ್ಛವಾಗಿ ಬೆಳೆದ ಉತ್ಪನ್ನಗಳನ್ನು ಮನೆಗಳಲ್ಲಿ ಶೇಖರಿಸುವುದು ಅಸಾಧ್ಯವೆನಿಸಿದಾಗ. ಹಗೇವನ್ನು ನಿರ್ಮಿಸುತ್ತಿದ್ದರು. ಗೊರಜು ಅಥವಾ ಬೆಣಚು ಕಲ್ಲುಗಳಿಂದ ಎತ್ತರವಾದ ಗಟ್ಟಿ ನೆಲ ಇದಕ್ಕೆ ಸೂಕ್ತ ಸ್ಥಳ. ಹಗೇವಿನ ತಳಭಾಗ ಆಟು ಚದರಡಿಯ ವಿಸ್ತಾರವಿದ್ದು (ವಿಸ್ತಾರ ವ್ಯತ್ಯಾಸಗೊಳ್ಳುವುದೂ ಉಂಟು) ಮೇಲೆ ಮೇಲೆ ಬಂದಂತೆ ಕಿರಿದಾಗುತ್ತಾ ಹೋಗಿ ಭೂಮಟ್ಟದಲ್ಲಿ ಎರಡು ಅಡಿಗಳಷ್ಟು ವೃತ್ತಾಕಾರದ ಬಾಯಿ ಬರುವಂತೆ ರೂಪಿಸಿಕೊಳ್ಳುತ್ತಿದ್ದರು. ಮಳೆ ನೀರು ಮತ್ತು ಮಣ್ಣು ಹಗೇವಿಗೆ ಸೇರದಂತೆ ಕಠವನ್ನು ಕಟ್ಟಿ ಚೆನ್ನಾಗಿ ಒಣಗಿಸಿದ ದವಸವನ್ನು ತುಂಬಿ ಸಮತಟ್ಟಾದ ಕಲ್ಲಿನಿಂದ ಅದನ್ನು ಮುಚ್ಚಿ ಭದ್ರಗೊಳಿಸುತ್ತಿದ್ದರು. ದವಸ ಧಾನ್ಯಗಳು ಅಗತ್ಯವೆನಿಸಿದಾಗ ಹಗೇವಿನ ಬಾಯಿಯನ್ನು ಒಂದು ದಿನ ಮೊದಲೇ ತಗೆದು ಅದಕ್ಕೆ ಗಾಳಿ ಸೇರುವಂತೆ ಮಾಡಿ ಮರುದಿನ ಇಳಿಯುತ್ತಿದ್ದರು. ದವಸವೇನಾದರೂ ಅಂದೇ ಪಡೆಯಬೇಕಾದ ಆಕಸ್ಮಿಕ ಸಂದರ್ಭಗಳಲ್ಲಿ ಹಚ್ಚಿದ ದೀಪ ಅಥವಾ ಲ್ಯಾಟೀನನ್ನು ಹಗೇವಿನ ಒಳಗೆ ಬಿಡುತ್ತಾರೆ. ದೀಪದ ಬೆಳಕು ಆರದೆ ಇದ್ದಾಗ ಒಳಗೆ ಇಳಿದು ದವಸವನ್ನು ಪಡೆಯುತ್ತಿದ್ದರು.

ನಾಗರಿಕತೆ ಬೆಳೆದ ಬಳಿಕ ಹಗೇವಿನ ನಾಲ್ಕು ಕಡೆಗೂ ಚಪ್ಪಡಿ ಕಲ್ಲುಗಳನ್ನು ನಿಲ್ಲಿಸಿ ಸಿಮೆಂಟಿನಿಂದ ಭದ್ರಗೊಳಿಸಿ ಮಣ್ಣು, ಇಲಿ, ಹೆಗ್ಗಣಗಳ ಕಾಟವನ್ನು ತಪ್ಪಿಸುತ್ತಿದ್ದರು. ಇಂದಿನ ಹವಾನಿಯಂತ್ರಣ ಕೊಠಡಿಗಳಂತೆ ಅಂದಿನ ಕಣಜಗಳಿದ್ದುವು. ಅಷ್ಟು ವೈಜ್ಞಾನಿಕವಾಗಿ ಸ್ವಾಭಾವಿಕವಾಗಿ ಇವು ರೂಪುಗೊಳ್ಳುತ್ತಿದ್ದವು.

– ಎನ್.ಆರ್.