ಕಾತ್ತವರಾಯನ್ ಕದೈ ತಮಿಳಿನಲ್ಲಿ ಪುಗಳೇಂದಿ ಎಂಬ ವಿದ್ವಾಂಸರು ಬರೆದ ಕಾತ್ತವರಾಯಸ್ವಾಮಿ ಕದೈ, ಸ್ವಾಮಿಕಣ್ಣುಗೌಂಡರ್ ಎಂಬುವರು ಬರೆದ ಕಾತ್ತಮುತ್ತು ನಾಡಗಮ್, ಪರಶುರಾಮ ಆಚಾರಿ ಬರೆದ ಕಾತ್ತವರಾಯನ್ ನಾಡಗಮ್ ಎಂಬ ಹಲವು ಕೃತಿಗಳು ಕಾತ್ತವರಾಯನ ಬಗ್ಗೆ ಇದ್ದರೂ ಕಾಲದ ದೃಷ್ಟಿಯಿಂದ ಪ್ರಾಚೀನತಮವಾದುದು ಕಾತ್ತವರಾಯನ್ ಕದೈಪ್ಪಾಡಲ್. ಇದನ್ನು ಹಾಡಿದವರು ಯಾರು ಎಂದು ತಿಳಿದಿಲ್ಲ. ಕಥೆ ನಡೆದ ಕಾಲವನ್ನು ಊಹಿಸಲು ಕೂಡ ಸರಿಯಾದ ಆಧಾರಗಳು ಸಿಕ್ಕಿಲ್ಲ. ನಾ.ವಾನಮಾಮಲೈ ಕಥೆಯ ಘಟನೆಗಳ ಆಧಾರದಮೇಲೆ ಈ ಕಥೆ ವಿಜಯನಗರ ಆಳ್ವಿಕೆಯ ಕಾಲಕ್ಕೂ ಮುಂಚಿನದು ಎಂದು ನಿರ್ಣಯಿಸಿದ್ದಾರೆ. ಅಂದರೆ ಸುಮಾರು ೬೦೦ ವರ್ಷಗಳ ಹಿಂದೆ ತಿರುಚ್ಚಿಯಲ್ಲಿದ್ದವನು ಕಾತ್ತವರಾಯನ್.

ಕಾತ್ತವರಾಯನು ಪರೈಯರ್ (ದಲಿತರು) ಜಾತಿಗೆ ಸೇರಿದವನು. ಈತನು ಆರಿಯಮಾಲೈ ಎಂಬ ಬ್ರಾಹ್ಮಣರ ಮಗಳನ್ನು ಪ್ರೇಮಿಸುತ್ತಾರೆ. ಆದರೆ ಇವರ ಪ್ರೇಮವನ್ನು ಆ ಕಾಲದ ಸಮಾಜ ಒಪ್ಪಿಕೊಳ್ಳುವುದಿಲ್ಲ. ಆಗ ಕಾತ್ತವರಾಯನ್ ಗಲ್ಲುಗಂಬಕ್ಕೆ ಏರುತ್ತಾನೆ. ಅನಂತರ ಅವನು ದೇವರಾಗುತ್ತಾನೆ. ಆತನ ಜನ್ಮ ಜನ್ಮಗಳ ಚರಿತ್ರೆ ಈ ಹಾಡಿನಲ್ಲಿ ರೂಪುಗೊಂಡಿದೆ.

ಕಥಾ ವಿವರ : ತಿರುಚ್ಚಿ ರಾಜನ ಹತ್ತಿರ ನಾಡಿನ ರಕ್ಷಣಾಧಿಕಾರಿಯಾಗಿ ಚೆಪ್ಪಿಳ್ಳೈಯಾನ್ ಇರುತ್ತಾನೆ. ಈತನ ಹೆಂಡತಿ ಗಂಗಾಪಿಳ್ಳೈ, ಇವರಿಗೆ ಮಕ್ಕಳು ಇಲ್ಲದುದರಿಂದ ಒಂದು ಮಗುವನ್ನು ದತ್ತು ಪಡೆದುಕೊಂಡು ಬೆಳೆಸುತ್ತಾರೆ. ಈ ಮಗುವಿಗೆ ಪರಿಮಣಂ ಎಂದು ಹೆಸರು ಇಡುತ್ತಾರೆ. ಅನಂತರ ಕಾವಲುಗಾರನಾದುದರಿಂದ ಕಾತ್ತವನ್, ಕಾತ್ತವರಾಯನ್ನ ಎಂದು ಕರೆಯುತ್ತಾರೆ.

ಕೊಳ್ಳಿ ಎಂಬ ನದಿಯ ಉತ್ತರ ದಡದಲ್ಲಿ ‘ಗುಣಶೀಲ ಮಂಗಲ ಪುತ್ತೂರು’ ಎಂಬ ಊರು ಇತ್ತು. ಅಲ್ಲಿ ಸೋಮಾಸಿ ಭಟ್ಟ ಎಂಬ ಬ್ರಾಹ್ಮಣ ಇದ್ದ. ಅವನ ಮಗಳು ಆರಿಯಮಾಲೈ. ನೀರು ತರುವುದಕ್ಕಾಗಿ ಆರಿಯಮಾಲೈ ಕೊಳ್ಳಿ ನದಿಗೆ ಬರುತ್ತಾಳೆ. ಕಾತ್ತವರಾಯನೂ ಅಲ್ಲಿ ಸ್ನಾನ ಮಾಡುವುದಕ್ಕೆ ಕಿನ್ನರಿ ನುಡಿಸಿಕೊಂಡು ಹಾಡುತ್ತಾ ಬರುತ್ತಾನೆ. ಆಗ ಆರಿಯಮಾಲೈ ಆ ಸಂಗೀತಕ್ಕೆ ಮೋಹಗೊಂಡು ಕಾತ್ತವರಾಯನ ಹಿಂದೆ ಹೋಗುತ್ತಾಳೆ. ತನ್ನ ಹಿಂದೆ ಬಂದ ಅವಳನ್ನು ಮದುವೆಯಾಗಿ ಕೋಮುದಲೈಪ್ಪಾರ್ ಎಂಬ ನಿಗೂಢ ಸ್ಥಳದಲ್ಲಿ ಇಟ್ಟಿರುತ್ತಾನೆ. ಕಾತ್ತವರಾಯ ಅವಳನ್ನು ಕರೆದುಕೊಂಡು ಹೋಗುತ್ತಿರುವುದಾಗಿ ದಾರಿಹೋಕರ ಹತ್ತಿರ ಹೇಳುತ್ತಾನೆ. ಈ ವಿಷಯವನ್ನು ತಿಳಿದ ಸೋಮಾಸಿ ಭಟ್ಟ ತಿರುಚ್ಚಿಪುರಂ ರಾಜನ ಹತ್ತಿರ ಹೋಗಿ ವಿಷಯವನ್ನು ಹೇಳಿ ಆ ಕಾತ್ತವರಾಯನನ್ನು ಬಂಧಿಸಿ ಕೊಲ್ಲಬೇಕು, ಇಲ್ಲದಿದ್ದರೆ ತಾನು ಕೋಟೆಯ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಾನೆ.

ಬ್ರಾಹ್ಮಣನ ಮಾತುಗಳನ್ನು ಕೇಳಿದ ರಾಜ, ಕಾತ್ತವರಾಯನನ್ನು ಹಿಡಿದು ತರಬೇಕಾಗಿ ಕಾವಲುಗಾರನಾದ ಕಾತ್ತವರಾಯನ ತಂದೆ ಚೆಪ್ಪೆಳ್ಳೈಯನಿಗೆ ಆಜ್ಞಾಪಿಸುತ್ತಾನೆ. ಚೆಪ್ಪಿಳ್ಳೈಯನು ಸೈನಿಕರೊಡನೆ ಹಲವು ಸ್ಥಳಗಳಲ್ಲಿ ತನ್ನ ಮಗುವನ್ನು ಹುಡುಕುತ್ತಾನೆ. ಕೊನೆಯಲ್ಲಿ ಕೋಮುತಲೈಪ್ಪಾರ್ ಎಂಬ ಸ್ಥಳದಲ್ಲಿ ಗಂಡು ಹೆಣ್ಣಿನ ಕಾಲುಗಳ ಹೆಜ್ಜೆಯ ಗುರುತನ್ನು ಕಂಡು ಹಿಡಿಯುತ್ತಾನೆ. ಚೆಪ್ಪಿಳ್ಳೈಯನು ಕೋಮತಲೈಪ್ಪಾರ್‌ಗೆ ನುಗ್ಗದೆ ಹೊರಗಿನಿಂದಲೇ ಕಾತ್ತವರಾಯನನ್ನು ಕರೆಯುತ್ತಾರೆ. ಆದರೆ ಅವನು ಹೊರಗೆ ಬರುವುದಿಲ್ಲ. ಅನಂತರ ಚೆಪ್ಪಿಳ್ಳೈಯನು ಹತ್ತಿರದ ಪಾಚ್ಚೂರ್ ಎಂಬ ಊರಲ್ಲಿ ಸಾರಾಯಿ ಮಾರುವ ಪೂವಾಯಿಯ ಹತ್ತಿರ ಕಾತ್ತವರಾಯನನ್ನು ಹಿಡಿಯಲು ಸಹಾಯ ಮಾಡಿದರೆ ಹೆಚ್ಚು ಹಣವನ್ನು ಕೊಡುವುದಾಗಿ ಹೇಳುತ್ತಾನೆ. ಆತನ ಸಹಾಯ ಮಾಡಿದರೆ ಹೆಚ್ಚು ಹಣವನ್ನು ಕೊಡುವುದಾಗಿ ಹೇಳುತ್ತಾನೆ. ಆತನ ಹೆಂಡತಿ ಸಾರಾಯಿಯನ್ನು ಕುಡಿದು ಮತ್ತೇರಿ ಮೂರ್ಛೆ ಹೋಗುತ್ತಾನೆ. ಆಗ ಸೇವಕರು ಅವನನ್ನು ಹಿಡಿದು ರಾಜನ ಹತ್ತಿರ ನಿಲ್ಲಿಸುತ್ತಾರೆ. ಕಾತ್ತವರಾಯ ನಡೆದ ವಿಷಯವನ್ನು ಹೇಳಿ ನ್ಯಾಯವನ್ನು ಕೇಳುತ್ತಾನೆ. ಆದರೆ ರಾಜ ಕಾತ್ತವರಾಯನ ಹಿಂದಿನ ಜನ್ಮದ ಕಥೆಯನ್ನು ಹೇಳುವಂತೆ ಕೇಳಿದಾಗ ಕಾತ್ತವರಾಯನು ಹೇಳುತ್ತಾನೆ.

ಹಿಂದಿನ ಜನ್ಮದಲ್ಲಿ ಈಶ್ವರನ ಶಾಪದಿಂದ ಪಾರ್ವತಿ ಭೂಲೋಕದಲ್ಲಿ ಹುಟ್ಟುತ್ತಾಳೆ. ಅಲ್ಲೊಂದು ಉದ್ಯಾನವನ ರೂಪುಗೊಳ್ಳುತ್ತದೆ. ಪಾರ್ವತಿ ಆ ಉದ್ಯಾನವನದ ಹೂವುಗಳಿಂದ ಶಿವನನ್ನು ಪೂಜಿಸಬೇಕಾಗುತ್ತದೆ. ಶಿವನು ಆ ಹೂವಿನ ತೋಟವನ್ನು ಕಾಯಲು ಒಬ್ಬ ಬಾಲಕನನ್ನು ಸೃಷ್ಟಿಸುತ್ತಾನೆ. ಅವನೇ ಈ ಕಾತ್ತವರಾಯ. ಕಾತ್ತವರಾಯನಿಗೆ ತಿಳಿಯದೆ ನಂದನವನದ ಹೂವುಗಳು ಕಾಣದೆ ಹೋಗುತ್ತಿರುತ್ತವೆ. ಈ ಕೆಲಸ ಮಾಡುತ್ತಿದ್ದವರು ಏಳು ಜನ ದೇವ ಕನ್ಯೆಯರು. ಈ ವಿಷಯ ತಿಳಿದ ಕಾತ್ತವರಾಯ ಒಂದು ದಿನ ಏಳು ಜನ ದೇವ ಕನ್ಯೆಯರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಒಬ್ಬಳ ಬಟ್ಟೆಯನ್ನು ಎತ್ತಿಕೊಂಡು ಮರದ ಮೇಲೆ ಏರಿ ಕುಳಿತುಕೊಳ್ಳುತ್ತಾನೆ. ಕನ್ಯೆಯರು ಬಟ್ಟೆಯನ್ನು ಕಾಣದೆ ಹುಡುಕುವಾಗ ಕೆಳಗೆ ಇಳಿದು “ಹೂವುಗಳನ್ನು ಕದ್ದರೆ ಹೀಗೆಯೇ ಆಗುವುದು ಇನ್ನು ಮುಂದೆ ಹೂವುಗಳನ್ನು ಕದಿಯಬೇಡಿರಿ” ಎಂದು ಹೇಳಿ ಉಡುಪನ್ನು ಕೊಟ್ಟು ಹೋಗುತ್ತಾನೆ. ತಕ್ಷಣ ಏಳು ಜನ ದೇವ ಕನ್ಯೆಯರು ಕೈಲಾಸಕ್ಕೆ ಹೋಗಿ ಶಿವನ ಹತ್ತಿರ ತಾವು ನಂದನವನದ ಹೂವುಗಳನ್ನು ಕಿತ್ತುದ್ದನ್ನು ಹೇಳದೆ ಕಾತ್ತವರಾಯನು ತಮ್ಮ ಉಡುಪನ್ನು ಎತ್ತಿಕೊಂಡು ಹೋದುದಾಗಿ ದೂರು ಹೇಳುತ್ತಾರೆ. ಇದರಿಂದ ಶಿವನು ಕೋಪಗೊಂಡು ಕಾತ್ತವರಾಯನಿಗೆ ಶಾಪ ಕೊಡುತ್ತಾನೆ. ಶಾಪದಂತೆ ಕಾತ್ತವರಾಯ ಕೆಳಜಾತಿಯಲ್ಲಿ ಹುಟ್ಟುತ್ತಾನೆ. ಹಾಗೆಯೇ ಏಳು ಜನ ದೇವಕನ್ಯೆಯರು ಹುಟ್ಟನ್ನು ಪಡೆಯುತ್ತಾರೆ.

ಏಳು ಜನ ಕನ್ಯೆಯರ ಹುಟ್ಟು:

೧. ವಯಿರಚಟ್ಟಿಪ್ಪಾಳೈನಲ್ಲಿ ಶೆಟ್ಟಿಯಾರ್ ಜಾತಿಯಲ್ಲಿ ‘ಒಂದಾಯಿ’.

೨. ಕಳತ್ತೂರಿನಲ್ಲಿ ಸೆಣಬಿನ ನಾರನ್ನು ತೆಗೆಯುವ ಜಾತಿಯಲ್ಲಿ ‘ಸವುದಾಯಿ’

೩. ಆಟ್‌ಪಾಡಿಯಲ್ಲಿ ಇಡೈಯಾರ್ ಜಾತಿಯಲ್ಲಿ ‘ಕರುಪ್ಪಾಯಿ’

೪. ಪಾಚ್ಚೂರಿನಲ್ಲಿ ಸಾರಾಯಿ ಮಾರುವ ಜಾತಿಯಲ್ಲಿ ‘ಪೂವಾಯಿ’

೫. ಮಾವಡಿ ಮಂಗಲದಲ್ಲಿ ಇಡೈಯಾರ್ ಜಾತಿಯಲ್ಲಿ ‘ನಲ್ಲತ್ತಂಗಾಳ್’

೬. ಪುತ್ತೂರಿನಲ್ಲಿ ವಣ್ಣಾರ್ ಜಾತಿಯಲ್ಲಿ ‘ನಲ್ಲಿ’

೭. ಗುಣಶೀಲ ಮಂಗಲಮ್ ಪುತ್ತೂರು ಚೋಮಾಸಿ ಭಟ್ಟರ ಮಗಳು ಆರಿಯಮಾಲೈ

ಹೀಗೆ ಏಳು ಜನ ದೇವ ಕನ್ಯೆಯರು ಹುಟ್ಟನ್ನು ಪಡೆಯುತ್ತಾರೆ. ಕಾತ್ತಶೆಟ್ಟಿ ಎಂಬ ಹೆಸರಿನಲ್ಲಿ ಕಾತ್ತವರಾಯನ್ ತನ್ನ ಗೆಳೆಯ ಚಿನ್ನನ ಜೊತೆ ನೂಲು ಕೊಳ್ಳಲು ಹೋಗಿ ಒಂದಾಯಿಯನ್ನು ಇಷ್ಟಪಡುವುದು, ಸವುದಾಯಿಯ ಮನೆಯ ಕೋಳಿಯನ್ನು ಸಾಯಿಸುವುದು ಕರುಪ್ಪಾಯಿಯ ಹತ್ತಿರ ಮಜ್ಜಿಗೆ ಕುಡಿಯುವುದು, ನಲ್ಲಿಯ ಹತ್ತಿರ ಹಾಲು ತೆಗೆದುಕೊಂಡು ಆರಿಯಮಾಲೈಗೆ ಕೊಡುವುದು, ಪೂವಾಯಿಯ ಹತ್ತಿರ ಸಾರಾಯಿ ಕೊಂಡು ಕುಡಿಯುವುದು ಹೀಗೆ ಏಳು ಜನ ದೇವ ಕನ್ಯೆಯರುಗಳಲ್ಲಿ ಆರು ದೇವ ಕನ್ಯೆಯರೊಡನೆ ಸಂಬಂಧ ಹೊಂದುತ್ತಾನೆ. ಇದು ಮುಂದೆ ಗೊತ್ತಾಗುತ್ತದೆ.

ಕಾತ್ತವರಾಯ ತನ್ನ ಹಿಂದಿನ ಜನ್ಮದ ವೃತ್ತಾಂತವನ್ನು ಹೇಳಿ ಶಿವನ ಶಾಪದಿಂದಲೇ ತಾನು ಸಾಯುವುದಾಗಿ ರಾಜನ ಹತ್ತಿರ ಹೇಳುತ್ತಾನೆ. ಅನಂತರ ಕಾತ್ತವರಾಯನ ಅಪೇಕ್ಷೆಯಂತೆಯೇ ಗಲ್ಲುಗಂಬ ನೆಡುತ್ತಾರೆ. ಗಲ್ಲುಗಂಬನ ಮೇಲೆ ಕಾತ್ತರಾಯನ ನಿಂತು ತಳವಾರನನ್ನು ಕರೆದು ತನ್ನ ಕತ್ತನ್ನು ಗಲ್ಲುಗಂಬದ ಹಗ್ಗಕ್ಕೆ ನೇತು ಹಾಕುವಂತೆ ಹೇಳುತ್ತಾನೆ. ಅಂತೆಯೇ ತಳವಾರನು ಮಾಡಲು, ಕಾತ್ತವರಾಯ ಗಲ್ಲುಗಂಬದಲ್ಲಿ ನೇತಾಡುತ್ತಾನೆ. ಮೂರು ದಿನಗಳು ಆದರೂ ಅವನ ಪ್ರಾಣ ಹೋಗದಿದ್ದುದರಿಂದ ಏಳು ಜನ ದೇವಕನ್ಯೆಯರಲ್ಲಿ ಒಬ್ಬಳಾದ ಮಾವಡಿ ಮಂಗಲದಲ್ಲಿ ಹುಟ್ಟಿದ ನಲ್ಲತ್ತಂಗಾಳ್ ಗಲ್ಲುಗಂಬದ ಮೇಲೇರಿ ಕಾತ್ತವರಾಯನಿಗೆ ಮಜ್ಜಿಗೆಯನ್ನು ಕೊಡುತ್ತಾಳೆ. ಕಾತ್ತವರಾಯ ನಲ್ಲತ್ತಂಗಾಳ್‌ಳನ್ನು ಹರಸುತ್ತಾನೆ. ತನ್ನ ಪ್ರಾಣ ಹೋಗದೆ ಇರುವುದರಿಂದ ತನ್ನ ಕತ್ತನ್ನು ಕತ್ತಿಯಿಂದ ಕತ್ತರಿಸಿ ಬಿಡುವಂತೆ ಹೇಳಲು ಆಕಾಶ ಮಾರ್ಗದಿಂದ ಬಂದ ಸೂರ್ಯ ಕಾತ್ತವರಾಯನ ಕತ್ತನ್ನು ಕತ್ತರಿಸಲು ಪ್ರಾಣ ದೇಹದಿಂದ ಹಾರಿಹೋಗುತ್ತದೆ.

– ಎಂ.ಸಿ. ಅನುವಾದ ಆರ್. ಎಸ್.

ಕಾಮುನಿ ಪುನ್ನಮಿ ಹೋಳಿಯನ್ನು ತೆಲುಗರು ‘ಕಾಮುನಿ ಪುನ್ನಮಿ’ ಎಂದು ಆಚರಿಸುತ್ತಾರೆ. ಫಾಲ್ಗುಣ ಮಾಸದ ಶುದ್ಧ ಹುಣ್ಣಿಮೆಯ ದಿನ ‘ಕಾಮದಹನಂ’ ಆಚರಿಸುವರು. ಕಾಮಣ್ಣ ಹಬ್ಬ (ಕಾಮನ್ನಪಂಡುಗ) ‘ಹತಾಶನ ಪೂರ್ಣಿಮ’, ‘ಡೋಲಾಪೂರ್ಣಿಮ’, ‘ವಹ್ನ್ಯುತ್ಸವಂ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ‘ಹೋಳಿ ಪೂರ್ಣಿಮ’ ಎಂಬ ಮತ್ತೊಂದು ಹೆಸರು ಸಹ ಇದಕ್ಕೆ ಇದೆ.

ಈ ಹಬ್ಬಕ್ಕೆ ಸಂಬಂಧಿಸಿದಂತೆ ಶಿವ ಪಾರ್ವತಿಯರ ಕಥೆಗೊಂದು ಪ್ರಚಾರದಲ್ಲಿದೆ. ಶಿವನು ತಪ್ಪಸ್ಸಿನಲ್ಲಿ ನಿರತನಾಗಿದ್ದಾಗ ಪಾರ್ವತಿ ಅವನನ್ನು ಧ್ಯಾನಿಸುತ್ತಾಳೆ. ಅವರಿಬ್ಬರ ಸಂಯೋಗದಿಂದ ಜಗತ್ತಿನ ಸೃಷ್ಟಿಯನ್ನು ಬಯಸಿದ ದೇವತೆಗಳು ಮನ್ಮಥನನ್ನು ಪ್ರೆರೇಪಿಸಿ ಕಳುಹಿಸುತ್ತಾರೆ. ತನ್ನ ಹೂಬಾಣದಿಂದ ಮನ್ಮಥ ತಪೋನಿರತನಾದ ಶಿವನ ಮನಸ್ಸನ್ನು ಚಂಚಲಗೊಳಿಸುತ್ತಾನೆ. ಕ್ಷಣಕಾಲ ಕಾಮಪರವಶನಾದ ಶಿವ ಕೂಡಲೆ ಎಚ್ಚರಗೊಂಡು ಕಾರಣವನ್ನು ಗ್ರಹಿಸಿದನು. ಶಿವನ ತಪಸ್ಸಿಗೆ ಭಂಗವನ್ನು ಮಾಡಿದ ಕಾಮನನ್ನು (ಮನ್ಮಥ) ತನ್ನ ಮೂರನೇ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು. ಮನ್ಮಥನ ಸತಿ ರತೀದೇವಿ ಬೇಡಿಕೊಳ್ಳಲಾಗಿ ಶಿವನಿಗೆ ಕರುಣೆ ಬಂದು ‘ನಿನ್ನ ಗಂಡ ನಿನ್ನ ಕಣ್ಮಿಗೆ ಮಾತ್ರ ಕಾಣಿಸಲಿ’ ಹೋಗು ಎಂದನು. ಅನಂತರ ಪಾರ್ವತಿ ಪರಮೇಶ್ವರರು ಲೋಕಹಿತವನ್ನು ಮಾಡಿದರು. ಕಾಮನ ಹುಣ್ಣಿಮೆಯ ದಿನ ಉಂಟಾದ ಈ ಮನ್ಮಥ ದಹನವನ್ನೇ ‘ಕಾಮದಹನ ‘ ಹಬ್ಬವನ್ನಾಗಿ ಆಚರಿಸುತ್ತಾರೆ.

ಹುಣ್ಣಿಮೆಯ ರಾತ್ರಿ ಊರಿನ ಮುಖ್ಯ ರಸ್ತೆಯಲ್ಲಿ ಅಥವಾ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹಳೆ ಮರದ ದಿಮ್ಮಿಗಳು, ಒಣ ಸೌದೆ ಮತ್ತಿತರ ಉರುವಲುಗಳನ್ನು ಒಂದೆಡೆ ಸೇರಿಸಿ ಉರಿಮಾಡುತ್ತಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಮನ ಗೊಂಬೆ ತಯಾರಿಸಿ ಆ ದಿನ ಬೀದಿಗಳಲ್ಲಿ ಮೆರೆವಣಿಗೆ ಮಾಡುತ್ತಾರೆ. ಒಂದು ಹಳೆಯ ಅಂಗಿ ಮತ್ತು ಪ್ಯಾಂಟಿಗೆ ಹುಲ್ಲು ತುಂಬಿ ಕಡ್ಡಿಯನ್ನು ಸಿಕ್ಕಸಿ ಮುಖವನ್ನು ತಯಾರಿಸಿ ಒಂದು ಚಪ್ಪರದಡಿಯಲ್ಲಿ ಈ ‘ಕಾಮಣ್ಣ’ನನ್ನು ಕೂರಿಸುತ್ತಾರೆ. ಈ ಹತ್ತೂ ದಿನ ಕಾಮಣ್ಣನನ್ನು ಕುರಿತು ಹಾಡುಗಳನ್ನು ಹಾಡುತ್ತಾರೆ. ಹಾಡುಗಳಲ್ಲಿ ಕೆಲವು ಬೈಗುಳ, ಅಶ್ಲೀಲ ಪದಗಳು ಸೇರಿರುತ್ತವೆ. ಹುಣ್ಣಿಮೆಯ ದಿನ ಈ ಗೊಂಬೆಯನ್ನು ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಹಾಡುಗಳಲ್ಲಿ ‘ಕಾಮಕ್ರಿಯೆ’ಗೆ ಸಂಬಂಧಿಸಿದ ಹಾಡುಗಳೇ ಹೆಚ್ಚಾಗಿರುತ್ತದೆ. ಕೊನೆಯಲ್ಲಿ ಸೌದೆಯನ್ನು ಸೇರಿಸಿರುವ ಸ್ಥಳಕ್ಕೆ ಬಂದು ಸೌದೆಯ ಮೇಲೆ ಗೊಂಬೆಯನ್ನು ಮಲಗಿಸಿ ಮಧ್ಯರಾತ್ರಿಯ ವೇಳೆಗೆ ಬೆಂಕಿಹಚ್ಚುತ್ತಾರೆ. ಹೀಗೆ ದಹಿಸುತ್ತಿರುವ ಬೆಂಕಿಯ ಜ್ವಾಲೆಯ ಸುತ್ತ ಯುವಕರು ಓಡುತ್ತಾ ತಟ್ಟಿ ಲಬ ಲಬೋ ಎಂದು ಬಾಯಿ ಬಡಿದುಕೊಂಡು ಮತ್ತೊಮ್ಮೆ ಹಾಡುಗಳನ್ನು ಹಾಡುತ್ತಾರೆ. ಕಾಮದಹನ ಅನಂತರ ಅದರ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುತ್ತಾರೆ. ಈಗ ಇಂತಹ ಆಚರಣೆಗಳು ಅಪರೂಪವಾದರೂ ಅಲ್ಲಲ್ಲಿ ಕಂಡುಬರುತ್ತದೆ.

ಕೆಲವು ಕಡೆ ‘ಹೋಳಿಕಾ’ ಎಂಬ ರಾಕ್ಷಸನ ಗೊಂಬೆ ಮಾಡಿ ದಹನ ಮಾಡುವುದು ಉಂಟು. ದಹನ ಕ್ರಿಯೆ ನಡೆಯುವವರೆಗೆ ಅಲ್ಲಿ ನೆರೆದಿರುವವರಿಗೆ ಪುರಿ, ಮಿಠಾಯಿ ಮುಂತಾದ ತಿಂಡಿಗಳನ್ನು ಹಂಚುತ್ತಾರೆ. ಉರಿಯುತ್ತಿರುವ ಬೆಂಕಿಗೆ ಕದ್ದು ತಂದ ಸೌದೆಯನ್ನು ಹಾಕುವುದು ಯುವಕರಿಗೆ ಒಂದು ಬಗೆಯ ಮೋಜು. ಸುತ್ತಮುತ್ತ ಮನೆಗಳ ಮುಂದೆ ದೊರೆಯು ಒಣಗಿದ ದಿಮ್ಮಿಗಳು, ಮರದ ತುಂಡುಗಳು, ಗಳುಗಳು ಮತ್ತು ನಿರುಪಯುಕ್ತ ಟೈರ್‌ಗಳು ಮುಂತಾದವನ್ನು ಕತ್ತಲಲಿ ಕದ್ದು ತಂದು ಕೆಲವೊಮ್ಮೆ ಸಿಕ್ಕಿಬಿದ್ದು ಬೈಸಿಕೊಳ್ಳುತ್ತಾರೆ.

ಈ ಹಬ್ಬದಲ್ಲಿ ಬಣ್ಣದ ನೀರನ್ನು (ವಸಂತ ನೀರು) ಪರಸ್ಪರ ಎರಚಿಕೊಳ್ಳುವುದು ಒಂದು ಸಂಪ್ರದಾಯ. ಕೆಲವು ಪ್ರಾಂತ್ಯಗಳಲ್ಲಿ ತಮ್ಮ ಮನೆಯ ಮುಂದೆ ವಸಂತ ನೀರನ್ನು ಇಟ್ಟಿರುತ್ತಾರೆ. ಈ ನೀರನ್ನು ಚಿಮ್ಮುವ ಸಾಧನಗಳಿಂದ ಎಲ್ಲರ ಮೈಮೇಲೆ ಬೀಳುವಂತೆ ಚಿಮ್ಮುತ್ತಾರೆ. ಹೀಗೆ ಪರಸ್ಪರ ನೀರನ್ನು ಎರಚಿಕೊಳ್ಳುವ ಸಂದರ್ಭ ಅತಿರೇಕಕ್ಕೆ ಹೋದಾಗ ಜಗಳಗಳಾಗುತ್ತವೆ.

– ಪಿ.ಆರ್.ಎಚ್. ಅನುವಾದ ವಿ.ಆರ್.

ಕಾರ ಹುಣ್ಣಿಮೆ ಬಯಲು ಸೀಮೆಯಲ್ಲಿ ನಡೆಯುವ ವಿಶೇಷ ಹಬ್ಬ. ಕಾರಹುಣ್ಣಿಮೆ ಮಳೆಗಾಲದ ಮೊದಲಲ್ಲಿ ಬರುವ ಹುಣ್ಣಿಮೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟ್ರದ ಗಡಿ ಭಾಗದಲ್ಲೂ ಈ ಹಬ್ಬವನ್ನು ಜ್ಯೇಷ್ಠ ಮಾಸದಲ್ಲಿ ಆಚರಿಸುತ್ತಾರೆ. ಕೃಷಿಕರು ತಮ್ಮ ಜೀವನಾಧಾರವಾದ ಎತ್ತುಗಳನ್ನು ಈ ದಿನದಂದು ಪೂಜಿಸುವರು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಸಂಕ್ರಾಂತಿಯಂದು ಸಾಮಾನ್ಯವಾಗಿ ಹಸುಗಳನ್ನು ಅಲಂಕರಿಸಿ ಪೂಜಿಸಿ ಆರತಿ ಮಾಡುವುದುಂಟು. ಕರ್ನಾಟಕದ ಕೆಲವೆಡೆ ಕಾರಹುಣ್ಣಿಮೆಯಂದು ಮಾಡುವ ಎತ್ತುಗಳ ಪೂಜೆ ವಿಶೇಷವಾದುದು. ಸಂಸ್ಕೃತದಲ್ಲಿ ಈ ಪುಜೆಗೆ ಅನಡ್ವಾಹ ಪೌರ್ಣಿಮಾ ಎಂಬ ಹೆಸರಿನ ಅನಡ್ವಾಹ ಎಂದರೆ ಎತ್ತು.

ಕಾರಹಬ್ಬ ಎರಡು ದಿನ ನಡೆಯುತ್ತದೆ. ಜ್ಯೇಷ್ಠ ಶುದ್ಧ ಚತುರ್ದಶಿ ಕಾರ ಹಬ್ಬದ ಮೊದಲ ದಿನ ಬರುತ್ತದೆ. ಮಾರನೆ ದಿನ ಹುಣ್ಣಿಮೆ. ಈ ಚತುರ್ದಶಿಗೆ ‘ಹೊನ್ಹುಗ್ಗಿ’ ಎಂತಲೂ ಹೆಸರಿದೆ. ಅಂದು ಹಳ್ಳಿಗರು ತಮ್ಮ ಮನೆಗಳ ದನ ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಬಣ್ಣಗಳನ್ನು ತುಂಬಿ ಮೈಗೆ ನೀಲಿ ಬಣ್ಣವನ್ನು ಹಚ್ಚಿ, ಮೈಮೇಲೆ ಚಂದ ಕಾಣಲು ಕುಂಟೆಯ ಮುದ್ರೆ ಒತ್ತುತ್ತಾರೆ. ಕೊರಳಿಗೆ ಕಿರು ಗಂಟೆಗಳು ಹಸುಗಳಿಗೆ ಹಾಕುವ ನಾನಾಭರಣಗಳನ್ನು ಅಂದು ಹಾಕುತ್ತಾರೆ. ಕೊರಳಿಗೆ ಬೇವು ಮಾವಿನ ಎಲೆಗಳನ್ನು ಸುತ್ತಿ ಸರ ಹಾಕುತ್ತಾರೆ.

ಬೆಳಗ್ಗೆ ಎಲ್ಲ ಎತ್ತು, ಹೋರಿಗಳನ್ನು ಪೂಜಿಸುತ್ತಾರೆ. ಅರಿಸಿನ – ಕುಂಕುಮ ಇ‌ಟ್ಟು ಆರತಿ ಎತ್ತುತ್ತಾರೆ. ನೈವೇದ್ಯಕ್ಕೆಂದು ಕೆಲವೆಡೆ ಜೋಳದಲ್ಲಿ ತಯಾರಿಸಿದ ಹುಗ್ಗಿ ಕೊಟ್ಟರೆ ಕೆಲವೆಡೆ ಅಕ್ಕಿಯಿಂದ ತಯಾರಿಸಿದ ಇಡ್ಲಿಯನ್ನು, ರಾಗಿ ಅಂಬಲಿಯನ್ನು ನೀಡುತ್ತಾರೆ. ಅದನ್ನೇ ಮನೆಯ ಜನ ತಳಿಗೆ(ಪ್ರಸಾದ) ಎಂದು ತಿನ್ನುತ್ತಾರೆ. ಹುಣ್ಣಿಮೆ ದಿನದಂದು ದನಗಳನ್ನು ತೊಳೆದು ಪೂಜೆ ಮಾಡಿ, ಮಧ್ಯಾಹ್ನ ಬೆಲ್ಲದ ಅನ್ನ, ಹೋಳಿಗೆ, ಪಾಯಸ ಹೀಗೆ ವಿವಿಧ ತಿಂಡಿಗಳನ್ನು ಮಾಡುವರು. ಅಲಂಕರಿಸಿದ ಎತ್ತುಗಳನ್ನು ಮೆರವಣಿಗೆ ಹೊರಡಿಸುತ್ತಾರೆ. ಇದೇ ಸಮಯ ಕೆಲವೊಂದು ಭಾಗಗಳಲ್ಲಿದ ಬೀಜಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದು ಪ್ರಾದೇಶಿಕವಾಗಿ ಹಲವು ರೀತಿಯಲ್ಲಿ ವ್ಯತ್ಯಾಸಗೊಂಡಿದೆ.

ಹೋಳಿ ಹಬ್ಬ ಅಂದರೆ ಫಾಲ್ಗುಣ ಬಹುಳ ಪ್ರತಿಪದೆಯ ಮರುದಿನ ಬೆಳಗ್ಗೆ ಕಾಮನನ್ನು ಸುಟ್ಟ ಬೂದಿಯನ್ನು ವಾದ್ಯಗಳ ಮೊಳಗಿನೊಂದಿಗೆ ನಿರ್ದಿಷ್ಟ ಹಕ್ಕು ಪಡೆದಿರುವವರು ತೆಗೆದುಕೊಂಡು ಹೋಗಿ ಗ್ರಾಮದ ಸುತ್ತಲೂ ಚೆಲ್ಲಿ ರಕ್ಷೆ ಕಟ್ಟುತ್ತಾರೆ. ಇದನ್ನು ಕರಿಕಟ್ಟುವುದು ಎನ್ನುವರು. ಇದಕ್ಕೆ ಕಾರಣವೆಂದರೆ ತಾವು ಬೆಳದಿರಲು ಧಾನ್ಯ ಸಂಪತ್ತೆಲ್ಲವನ್ನು ಕಂಡು ಇನ್ನೊಬ್ಬರು ತೊಂದರೆ ಕೊಟ್ಟರೆ ಅದು ತಾಗದಿರಲಿ ಹಾಗೂ ಅಪಾಯಗಳು ತಟ್ಟದಿರಲಿ ಎಂಬ ಮನೋಭಾವ. ಕಾರ ಹುಣ್ಣಿಮೆ ಮುಗಿಯುವವರೆಗೂ ಧಾನ್ಯಗಳನ್ನು ಮುಟ್ಟಬಾರದೆಂಬ ಸಂಪ್ರದಾಯವಿದೆ. ಹೋಳಿಯ ಹಬ್ಬದಲ್ಲಿ ಕಟ್ಟಿದ ರಕ್ಷೆಯನ್ನು ಕಾರ ಹುಣ್ಣಿಮೆಯಲ್ಲಿ ಹರಿಯುವುದಕ್ಕೆ ಕರಿಹರಿಯುವುದು ಎನ್ನುವರು.

ಕರಿಹರಿಯುವ ಸಂಪ್ರದಾಯದಲ್ಲಿ ಇರುವ ಉಪಕರಣಗಳಲ್ಲಿ ಕೆಲವು ವ್ಯತ್ಯಾಸಗಳಿವೆ ಎನ್ನುವುದನ್ನು ಬಿಟ್ಟರೆ ಮಾತ್ರ ಬಣ್ಣ ಬಣ್ಣದ ಎತ್ತುಗಳನ್ನು. ಕೆಲವೆಡೆ ಎರಡು ಐದು ಎತ್ತುಗಳನ್ನು ಮಾತ್ರ ಬಳಸುತ್ತಾರೆ. ಇಲ್ಲಿರುವ ಹಲವಾರು ಕಾರ್ಯಕ್ರಮಗಳಲ್ಲಿ ಇಂಥಿಂಥವನ್ನು ಇಂಥಿಂಥನದೇ ನಡೆಸಬೇಕೆನ್ನುವ ನಿಯಮವಿದೆ. ಊರ ಗೌಡ, ಮತ್ತು ಸಮಸ್ತರು, ಪಂಚರು, ಹಕ್ಕುದಾರರು ಇವರೇ ನಡೆಸಬೇಕು. ಕರಿ ಹರಿಯಲು ಬಳಸುವ ಪ್ರಮುಖ ಸಾಂಕೇತಿಕ ಸಾಧನ ಬೇವು ಮಾವುಗಳ ಎಲೆಗಳಿಂದ ಕಟ್ಟಿದ ತೋರಣ. ಇದನ್ನು ಎತ್ತುಗಳಿಂದ ಹರಿಸುತ್ತಾರೆ. ಅದರ ಮಧ್ಯದಲ್ಲಿ ತೆಂಗಿನಕಾಯಿ. ಕೊಬ್ಬರಿ ಬಟ್ಟಲುಗಳನ್ನು ಕಟ್ಟಿರುತ್ತಾರೆ. ಊರ ಮುಂದೆ ಎಡ ಬಲಗಳಲ್ಲಿರುವ ಕಂಬಗಳಿಗೆ, ಎತ್ತುಗಳ ನಿಲುವಿನ ಅಳತೆಗೆ ಸರಿಯಾಗುವಂತೆ, ಕರಿಯ ಸರಮಾಲೆ ಕಟ್ಟುತ್ತಾರೆ. ಆಗ ಗೊತ್ತು ಮಾಡಿರುವ ಮನೆಯ ಎತ್ತುಗಳನ್ನು ತಮಟೆ ವಾದ್ಯಗಳ ಸಮೇತ ಮೆರೆವಣಿಗೆ ಮಾಡುತ್ತಾ ಅಗಸೆಯ ಬಾಗಿಲಿಗೆ ತಂದು ನಿಲ್ಲಿಸಿ, ಹೆಂಗಳೆಯರು ಆರತಿ ಎತ್ತಿ ನಿವಾಳಿ ತೆಗೆಯುತ್ತಾರೆ. ಅನಂತರದಲ್ಲಿ ಸಿದ್ಧವಾಗಿರುವ ಎತ್ತುಗಳನ್ನು ಹೊಡೆದು ಓಡಿಸಲಾಗುತ್ತದೆ. ಅವು ಭಯದಿಂದ ರಭಸವಾಗಿ ಕರಿ ತೋರಣದ ತಡೆಯನ್ನು ಹರಿದು ಮುನ್ನುಗ್ಗುತ್ತವೆ. ಈ ಓಡಾಟದಲ್ಲಿ ಕರಿ ಅಥವಾ ಕೆಂಪಾದ ಹಸು ಮುಂದಾದರೆ ಆ ವರ್ಷ ಮುಂಗಾರಿನ ಧಾನ್ಯಗಳು ಸಮೃದ್ಧವಾಗುವವೆಂದೂ ಬಿಳಿಯ ಎತ್ತು ಮುಂದಾದರೆ ಹಿಂಗಾರು ಧಾನ್ಯಗಳ ಹೆಚ್ಚಳವೆಂದೂ ನಂಬುತ್ತಾರೆ. ಇದಾದ ಬಳಿಕ ಎತ್ತುಗಳನ್ನು ಅವರವರ ಮನೆಗೆ ಕಳುಹಿಸಲಾಗುತ್ತದೆ. ಈ ಪ್ರಸಂಗದೊಂದಿಗೆ ಕಾರ ಹುಣ್ಣಿಮೆ ಆಚರಣೆ ಮುಗಿಯುತ್ತದೆ. ಈ ಕಾರ್ಯಕ್ರಮ ಮುಗಿದ ಮೇಲೆಯೇ ಬಿತ್ತನೆ ಮಾಡಲು ತೊಡಗುತ್ತಾರೆ.

– ಸಿ.ಎಸ್.ಪಿ.

ಕಾರ್ತಿಗೈ ದೀಬಂ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು ಜನಪದರ ಜೀವನ ಮೌಲ್ಯವಾಗಿದೆ. ಈ ಕುರಿತಂತೆ ಅನೇಕ ಹಬ್ಬ ಆಚರಣೆಗಳ ಧಾರ್ಮಿಕ ಹಿನ್ನೆಲೆಯಿಂದ ಬಂದಿದೆ. ಅಂಥವುಗಳಲ್ಲಿ ತಮಿಳುನಾಡಿನಲ್ಲಿ ಕಂಡುಬರುವ ಕಾರ್ತಿಗೈ ದೀಬಂ (ಕಾರ್ತಿಕದೀಪ) ಮಹತ್ತ್ವದ ಹಬ್ಬವಾಗಿದೆ. ತಮಿಳುನಾಡಿನ ತಿರುವಾಯೂರು, ಚಿದಂಬರಂ, ಅಣ್ಣಾಮಲೈ ಪ್ರದೇಶಗಳಲ್ಲಿ ಈ ಹಬ್ಬದ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ. ಈ ಹಬ್ಬ ತೊಲ್ಕಾಪ್ಪಿಯಂ ಎಂಬ ವ್ಯಾಕರಣ ಗ್ರಂಥದ ಕಾಲದಿಂದಲೂ ಆಚರಣೆಯಲ್ಲಿದೆ ಎಂದು ಜನರು ನಂಬುತ್ತಾರೆ.

ಕಾರ್ತಿಕ ದೀಪದ ಹಬ್ಬದಂದು ಮಕ್ಕಳು. ಪಟಾಕಿಗಳನ್ನು ಸಿಡಿಸಿ ಸಂತೋಷ ಪಡುತ್ತಾರೆ. ಮನೆ ಮನೆಗಳು ಮಣ್ಣಿನ ದೀಪಗಳಿಂದ ಅಲಂಕಾರಗೊಂಡಿರುತ್ತವೆ. ಕಾರಣ ಅರಣಾಚಲೇಶ್ವರನು (ಶಿವನು) ಪಂಚಭೂತಗಳಲ್ಲಿ ಒಂದಾದ ಅಗ್ನಿಯ ರೂಪವನ್ನು ತಳೆದಿರುತ್ತಾನೆ. ಎಂಬ ನಂಬಿಕೆ. ಅಂದು ಸ್ಥಳೀಯ ಬೆಟ್ಟವನ್ನು ದೇವಾಲಯವೆಂದು ತಿಳಿದು ಜನರು ದೊಡ್ಡ ಪ್ರಮಾಣದಲ್ಲಿ ಕರ್ಪೂರ ಮತ್ತು ತುಪ್ಪದ ದೀಪಗಳನ್ನು ಹೊತ್ತಿಸಿ ಜ್ಯೋತಿಗಳನ್ನು ಬೆಳಗಿಸುತ್ತಾರೆ. ಈ ಜ್ಯೋತಿ ಬೆಳಗುವಿಕೆ ಸಂಜೆ ಐದು ಗಂಟೆಯ ಅನಂತವಿರುತ್ತದೆ. ಈ ಸಂಜೆ ಕತ್ತಲಿನಲ್ಲಿ ಬೆಳಗುವ ಜ್ಯೋತಿ ಅಜ್ಞಾನವನ್ನು ನಿವಾರಿಸುವ ದಾರಿದೀಪವೆಂಬ ನಂಬಿಕೆ ಜನಪದರಲ್ಲಿ ಇರುತ್ತದೆ. ಆ ವೇಳೆ ನೆರೆದಿರುವ ಜನ ಸಮೂಹ ಅರಣಾಚಲೇಶ್ವರನನ್ನು ‘ಹರೋ ಹರ’ ರಂದು ಪ್ರಾರ್ಥಿಸುತ್ತದೆ. ಆ ವೇಳೆಯಲ್ಲಿ ದೊಡ್ಡ ಜಾತ್ರೆಯೂ ನಡೆಯುತ್ತದೆ. ವಾಹನಗಳಲ್ಲಿ ಅಲಂಕೃತಗೊಂಡ ದೇವರನ್ನು ಮೆರೆವಣಿಗೆ ಮಾಡಲಾಗುತ್ತದೆ. ನವೆಂಬರ್, ಡಿಸೆಂಬರ್‌ನಲ್ಲಿ ಬರುವ ಕಾರ್ತಿಕ ನಕ್ಷತ್ರದ ದಿನ ಈ ಹಬ್ಬ ವೈಭವೋಪೇತವಾಗಿ ತಮಿಳುನಾಡಿನ ಜಿಲ್ಲೆಗಳಲ್ಲಿ ಇಂದಿಗು ನಡೆಯುತ್ತದೆ.

– ಪಿ.ಎಂ.

ಕಾಲಜ್ಞಾನದ ಹಾಡು ಈ ಹಾಡುಗಳನ್ನು ಹೇಳುವವರಿಗೆ ಬಾಲುಬಸವಗಳು, ಸಾರುವ ಅಯ್ಯಗಳು, ಕೊಡೇಕಲ್ಲು ಜಂಗಮರು ಎಂದು ಹೆಸರು. ಮೂಲತಃ ಗುಲ್ಬರ್ಗ ಜಿಲ್ಲೆಯ ಕೊಡೇಕ್ಲು ಬಸವಣ್ಣನ ಕಾಲಜ್ಞಾನ ಹೇಳುತ್ತಿದ್ದರೆಂದೋ, ಈಗ ಯಾವುದೇ ಊರಿನ ಜಂಗಮರಾಗಿದ್ದರೂ ಈ ವೃತ್ತಿ ಮೂಲತಃ ಕೊಡೇಕಲ್ಲ ಜಂಗಮರದೆಂದೋ, ಇವರಿಗೆ ಕೊಡೇಕಲ್ಲ ಜಂಗಮರು ಎಂಬ ಹೆಸರು ರೂಢವಾಗಿರಬೇಕು. ಶರಣರ ಕಾಲಜ್ಞಾನಗಳನ್ನು ನುಡಿಯುವುದು ಇವರ ವೃತ್ತಿ. ಕಾವಿಬಟ್ಟೆ, ವಿಭೂತಿ, ರುದ್ರಾಕ್ಷಿ ಧರಿಸಿ ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಕಂದೀಲು ಹಿಡಿದು, ಇವರು ಸಂಜೆಯಲ್ಲಿ ಲೋಕಭವಿಷ್ಯವನ್ನು ಸಾರುತ್ತಾ ಬರುತ್ತಾರೆ.

ಕನ್ನಡದಲ್ಲಿ ವಿಪುಲವಾಗಿರುವ ಕಾಲಜ್ಞಾನಸಾಹಿತ್ಯ, ವಿಶಿಷ್ಟವಾಗಿದೆ. ಹನ್ನೆರಡನೆಯ ಶತಮಾನದ ಶರಣ ಶರಣೆಯರ ಹೆಸರಿನಲ್ಲಿ ವೆಗ್ಗಳವಾಗಿ ಸಿಗುತ್ತಿರುವ ಈ ಸಾಹಿತ್ಯ ಎಮ್ಮ ಬಸವ ಮುಂತಾದವರ ಹೆಸರಿನಲ್ಲಿ ಮುಂದುವರಿದಿದೆ. ಈ ದೃಷ್ಟಿಯಿಂದ ಶಿಷ್ಟ ಸಾಹಿತ್ಯ ಎನ್ನಿಸಿಕೊಳ್ಳುತ್ತಿದ್ದರೂ ಇದರ ಅನುಕರಣದಲ್ಲಿ ಹುಟ್ಟಿದ ಕಾಲಜ್ಞಾನ ಸಾಹಿತ್ಯಕ್ಕೆ ಕೊರತೆಯಿಲ್ಲ. ಹೀಗಾಗಿ ಇದು ಜನಪದಸಾಹಿತ್ಯದ ಒಂದು ಭಾಗವೆಂದು ಪರಿಗಣಿತವಾಗುತ್ತದೆ. ಪ್ರಾಚೀಣ ಹಸ್ತಪ್ರತಿಗಳಲ್ಲಿ ಸಿಗುವ ಈ ಸಾಹಿತ್ಯ ಜಂಪೆ, ತ್ರಿವುಡೆ, ಆಟತಾಳ, ದ್ವಿಪದಿ, ತ್ರಿಪದಿ, ಚೌಪದಿ, ಸಾಂಗತ್ಯ, ಗದ್ಯ ಮೊದಲಾದ ರೂಪಗಳಲ್ಲಿ ಬಿತ್ತರಗೊಂಡಿದೆ. ಅಲ್ಲಿಯೇ ಹೊಯ್ಯಲೋ ಡಂಗುರವ, ಕುರುಹ ಕೇಳಿರೋ, ದಿಮ್ಮಿ ಸಾಲೆನ್ನಿರೋ, ಹಾಕೆಲೋ ಮುಂಡಿಗೆಯ, ಎಚ್ಚರಿಕೆಚ್ಚರಿಕೆ, ಕೇಡ ನೋಡಿ, ಕೂ ಕೂ ಕೂ, ಕಣಿಯ ಕೇಳಿರಿ, ಕೇಳಿರಿ ನೀವು ಕೇಳಿರಿ, ಸುವ್ವಿ, ಸುವ್ವಿ, ಜೋ ಜೋ, ಲಿಂಗವೇ ಲಿಂಗವೇ, ಕೂಗೋ ಕೂಗೋ , ಲಗ್ಗೆಯೋ ಲಗ್ಗೆಯೋ, ಪಕ್ಷಿ ಪಕ್ಷಿ, ಇನ್ನೇನಿನ್ನೇನು, ಕೇಳೀರಣ್ಣ , ಮಾನ್ಯರು ಮೊಲದಾದ ಸೊಲ್ಲು ರೂಪದ ಮುಕ್ತಾಯಗಳು ಕಾಣುತ್ತವೆ. ಈ ಛಂದಸ್ಸು ಮತ್ತು ಸೊಲ್ಲುಗಳಲ್ಲಿ ಕೆಲವಾದರೂ ಈಗ ಸಾರುತ್ತಿರುವ ಸಾಹಿತ್ಯದಲ್ಲಿ ಉಳಿದು ಬಂದಿರಲು ಸಾಕು. ಇದರ ಸಾಗುವಿಕೆ ಕರ್ಣಮಧುರವಾಗಿದ್ದರೂ ಸಾಹಿತ್ಯ ಗುಣ ಕಡಿಮೆ, ಅನೇಕ ಸಲ ಏನು ಹೇಳಬೇಕೆಂಬುದು ಮುಖ್ಯವಾಗಿ, ಹೇಗೆ ಹೇಳಬೇಕೆಂಬುದು ಗೌಣವಾಗಿ ಬಿಡುತ್ತದೆ. ಸಾಮಾನ್ಯವಾಗಿ ಮುಂಬರುವ ದುಃಖ – ದುಮ್ಮಾನಗಳನ್ನು ಹೇಳುವವರು.

ಯಾತಗಿರಿಯ ಸುತ್ತ ಭೂತವು ಹೆಚ್ಯಾವು ಕೇಳಿರಣ್ಣ
ಪರವುತ ಮಲ್ಲಯ್ಯ ಪಾರೆದ್ದು ಹೋದಾನು ಕೇಳಿರಣ್ಣ
ಊರಿಗೆ ಹೋದವರು ಊರೆಲ್ಲ ಸತ್ತಾರು
ನೀರಿಗೆ ಹೋದವರು ನೀರಲ್ಲೆ ಸತ್ತಾರು
ಆಕಾಶ ಒದರೀತು ಭೂಕಾಂತೆ ನಡುಗ್ಯಾಳು
ಹಳ್ಳಿ ಪಟ್ಟಣಗಳ ಕೊಳ್ಳೀಲಿ ಸುಟ್ಟಾರು
ಗುಡಿ – ಗೋಪುರಗಳ ಸೊಡರೆದ್ದು ಸುಟ್ಟೀತು
ಅರಮನೆಯೆಲ್ಲವೂ ಬರಿಮನೆಯಾದಾವು
ಅರಸೀಯರೆಲ್ಲರೂ ಸೆರೆಸೂರೆಯಾದಾರು
ತಂಗೀಯ ಒಡನಾಟ ಸಂಗಾವ ಮಾಡ್ಯಾರು

ಎಂದು ಮುಂತಾದ ಭಯಾನಕ ಸಂಗತಿಗಳನ್ನು ಸಾರಿ, ಚನ್ನಬಸವಣ್ಣ ಹುಟ್ಟಿ ಬಂದು, ಈ ಎಲ್ಲಾ ಆಕಾರ್ಯಗಳನ್ನು ಅಳಿಸಿಹಾಕಿ, ಲೋಕೋದ್ದಾರಗೊಳಿಸುವೆನೆಂದು ಮುಕ್ತಾಯಗೊಳ್ಳುತ್ತದೆ. ಈ ಕಾಲಜ್ಞಾನ ಸಾಹಿತ್ಯದಲ್ಲಿ ಭಯಾನಕ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುತ್ತವೆಯಾದರೂ ಅನಚಾರ, ಪ್ರಳಯ, ಅನೀತಿ, ಅಲ್ಲೋಲ – ಕಲ್ಲೋಲಗಳ ನಿರೂಪಣೆಯ ಮೂಲಕ ದೈವಭಕ್ತರಾದ, ಜನರಲ್ಲಿ ಭೀತಿ ಹುಟ್ಟಿ, ಅವರ ಬದುಕುವ ಧೈರ್ಯ ಕುಸಿಯುತ್ತದೆ. ಅದಕ್ಕಾಗಿ ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚೆಂದರೆ ತಪ್ಪಾಗಲಿಕ್ಕಿಲ್ಲಲ.

ಇದು ತ್ರಿಕಾಲ ಸಾಹಿತ್ಯವಲ್ಲ, ತತ್ಕಾಲ ಸಾಹಿತ್ಯ. ತಾನು ನುಡಿದ ಭವಿಷ್ಯವೆಲ್ಲ ಸತ್ಯವಾದ ಮರುದಿನ ಆ ಸಾಹಿತ್ಯ ಜನತೆಯನ್ನು ತನ್ನತ್ತ ಆಕರ್ಷಿಸಿಕೊಳ್ಳದೆ ಹೋಗುತ್ತದೆ. ಹೀಗೆ ಈ ಸಾಹಿತ್ಯದ ಕೆಲಭಾಗ ಕ್ರಮೇಣ ನಿಷ್ಪ್ರಯೋಜಕವಾದಂತೆ ಹೊಸ ಹೊಸ ಸಾಹಿತ್ಯವನ್ನು ಸೃಷ್ಟಿಸುತ್ತ ಹೋಗುತ್ತಾರೆ, ಬಲಬಸವರು. ಒಟ್ಟಿನಲ್ಲಿ ಜನತೆ ಎಲ್ಲಿಯವರೆಗೆ ಕೇಳಲು ಆಸಕ್ತಿ ತೋರುವರೋ, ಅಲ್ಲಯವರೆಗೆ ಇದರ ಅಳಿಯುವಿಕೆಯೂ, ಬೆಳೆಯುವಿಕೆಯೂ ನಡೆಯುತ್ತದೆ.

– ಎಂ.ಎಂ.ಕೆ.