ಕೆಲವು ಸಮಾನಾರ್ಥಕ ಗಾದೆಗಳು:

ಕ : ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ
ತೆ: ಅಡ್ಡಗೋಡ ಮೀದ ದೀಪಂಲಾಗಾ

ಕ : ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ತೆ: ಅತ್ತ ಕಾಲಂ ಕೊನ್ನಾಳ್ಳು, ಕೋಡಲು ಕಾಲಂಕೊನ್ನಾಳ್ಳು

ಕ: ಅನ್ನ ಹಾಕಿದ, ಮನೆಗೆ ಕನ್ನ ಹಾಕ್ದಂಗೆ
ತೆ: ಅನ್ನಂ ಪೆಟ್ಟಿನ ವಾಡಿಂಟಿಕೆ ಕನ್ನಂ ವೇಸಿನಟ್ಟು

ಕ: ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ
ತೆ: ಒಕ ಕಂಟ್ಲೋ ಬೆಲ್ಲಂ ಇಂಕೋ ಕಂಟ್ಲೋ ಸುನ್ನಂ.

ಅನುಭವದ ಮೂಲಕ, ಕುಟುಂಬದ ಹಾಗೂ ಬಾಂಧವ್ಯದ ಮೂಲಕ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ಹಿನ್ನೆಲೆಯಲ್ಲಿ ರೂಪುಗೊಂಡ ಗಾದೆಗಳಲ್ಲಿ ಸಮಾನತೆಯನ್ನು ನೋಡಬಹುದು. ಆದರೆ ಕನ್ನಡ ನಾಡಿಗೆ, ನುಡಿಗೆ, ಸೀಮಿತವಾದ ಪ್ರಾದೇಶಿಕ ಗಾದೆಗಳಿಗೂ ಕಡಿಮೇನಿಲ್ಲ. ‘ಬುಕ್ಕರಾಯ ಬೆಕ್ಕಿನ ಮರಿಯಿತ್ತ’, ‘ಕೃಷ್ಣರಾಯಭೂಪ ಮನೆಮನೆಗೆ ದೀಪ’, ‘ಕುಂತು ಕುಣಿಗಲು ಗೆದ್ದ ನಿಂತು ಮಾಗಡಿ ಗೆದ್ದಮಾತಿಲ್ಲದೆ ಗೆ‌ದ್ದ ಮಧುರೇನ’ ಮುಂತಾದುವು ಕನ್ನಡನಾಡಿಗೆ ಸಂಬಂಧಿಸಿದ ಗಾದೆಗಳಾಗಿವೆ.

ಕನ್ನಡ ಒಗಟುಗಳಿಗೆ ಸುದೀರ್ಘ ಇತಿಹಾಸವಿದೆ. ಒಂಟು, ಒಡಪು, ಒಡಗಥೆ ಮುಂತಾದವರು ಒಗಟಿಗೆ ಇರುವ ಬೇರೆ ಬೇರೆ ಹೆಸರುಗಳು. ಮುಂಡಿಗೆಯಂಥ ರಚನೆಗಳು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತವೆ. ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳಿವೆ. ಆಧ್ಯಾತ್ಮಿಕ ರಹಸ್ಯವನ್ನೊಳಗೊಂಡ ಇಂತಹ ಬೆಡಗುಗಳನ್ನು ಅಲ್ಲಮ, ಮಹಾದೇವಿಯಕ್ಕ ಮುಂತಾದವರು ರಚಿಸಿದ್ದಾರೆ. ಕಂತಿ ಹಂಪನ ಸಮಸ್ಯೆಗಳು, ಕನಕನ ಮುಂಡಿಗೆಗಳು ಮುಂತಾದುವು ಕೂಡ ಒಗಟುಗಳನ್ನು ಹೋಲುತ್ತವೆ. ಪುರಂದರದಾಸ, ಕನಕದಾಸ, ಸರ್ವಜ್ಞ ಮೊದಲಾದವರು ಕೂಡ ಒಗಟುಗಳನ್ನು ಬಳಸಿದ್ದಾರೆ, ಒಗಟುಗಳನ್ನು ಹೊಲುವ ರಚನೆಗಳನ್ನು ಮಾಡಿದ್ದಾರೆ.

ಗಣಿತ ಸಂಬಂಧವಾದ ಒಗಟುಗಳು, ನಂಬಿಕೆಗಳಿಗೆ ಸಂಬಂಧಿಸಿದವು. ಪ್ರಶ್ನೋತ್ತರ ರೂಪದ ಒಗಟುಗಳು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಕಂಡುಬರುತ್ತವೆ.

ನಾವು
ನಮ್ಮಷ್ಟು
ನಮ್ಮರ್ಧ
ನಮ್ಕಾಲು
ನೀನು ಸೇರಿದರೆ ನೂರು

ಹಾಗಾದರೆ ಬಂದ ಗಿಳಿಗಳೆಷ್ಟು? ಎನ್ನುವ ರೀತಿಯ ಒಗಟುಗಳು ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ಸಿಕ್ಕುತ್ತವೆ.

– ಆರ್.ವಿ.ಎಸ್.

ಕನ್ನಡ ಜಾನಪದ ಅಧ್ಯಯನ ಕನ್ನಡ ಜಾನಪದ ಅಧ್ಯಯನ ೧೯ನೆಯ ಶತಮಾನದಲ್ಲಿಯೇ ಆರಂಭವಾಯಿತು. ಆರಂಭಿಕ ದಿನಗಳಲ್ಲಿ ಕಥೆಗಳು, ಗಾದೆಗಳು, ಸಂಪ್ರದಾಯಾಚರಣೆಗಳನ್ನು ಕುರಿತ ಗ್ರಂಥಗಳು ಉತ್ತರ ಕರ್ನಾಟಕ ಪ್ರದೇಶದಿಂದ ಹೊರಬಂದವು. ದಕ್ಷಿಣ ಕರ್ನಾಟಕ ಭಾಗದಲ್ಲಿ ಕೆಲಸ ಮಾಡಿದ ಪಾಶ್ಚಾತ್ಯ ಮಿಷನರಿಗಳು ಕಥೆ, ಗೀತೆ, ಲಾವಣಿ, ಗಾದೆ ಮುಂತಾದ ಜನಪದ ಸಾಹಿತ್ಯಕ್ಕೆ ಪ್ರಕಾರಗಳ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಕೆಲಸ ಮಾಡಿದರೂ ಇತರ ಕ್ಷೇತ್ರಗಳಲ್ಲಿ ನಡೆದಷ್ಟು ಕೆಲಸ ಇಲ್ಲಿ ನಡೆಯಲಿಲ್ಲ.

ಕರ್ನಾಟಕದ ಜನಪದ ಜೀವನ ವಿಷಯದಲ್ಲಿ ಆಸಕ್ತಿವಹಿಸಿದ ಆದ್ಯ ಸಂಗ್ರಹಕರಲ್ಲಿ ಗಣ್ಯನಾದ ಅಬ್ಬೆ ದುಬಾಯ್ಸ್ ಕರ್ನಾಟಕದಲ್ಲಿ ಬಹಳ ಕಾಲ ಇದ್ದವನು. ಕರ್ನಾಟಕದ ಮೌಖಿಕ ಸಾಹಿತ್ಯ ಸಂಸ್ಕೃತಿ ವಿಷಯದಲ್ಲಿ ಆಸಕ್ತನಾಗಿದ್ದ. ಇವನು ಭಾರತೀಯ ಜನಪದ ಜೀವನ ಮತ್ತು ಸಂಸ್ಕೃತಿಯನ್ನು ಸಾಕಷ್ಟು ವಿಸ್ತಾರವಾಗಿ ಅಭ್ಯಸಿಸಿ ಪ್ರಕಟಿಸಿದ ‘ದಿ ಹಿಂದು ಕಷ್ಟಮ್ಸ್ ಅಂಡ್ ಸೆರೆಮೊನೀಸ್’ ಎಂಬ ಗ್ರಂಥ ಅನೇಕ ದೃಷ್ಟಿಗಳಿಂದ ಗಮನಾರ್ಹ ಕೃತಿ. ೧೭೬೨ರಲ್ಲ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ಬಂದ ಈತ. ಈತನ ಗ್ರಂಥದಲ್ಲಿ ಭಾರತದ ಬಹು ಸಂಸ್ಕೃತಿಗಳ ಸಾಮಾನ್ಯ ಚಿತ್ರ ಸಿಕ್ಕುವುದರ ಜೊತೆಗೆ ಜನಪದ ಸಂಸ್ಕೃತಿಗೆ ಸಂಬಂಧಿಸಿದ ವಿಪುಲ ಸಾಮಗ್ರಿ ಅಡಕವಾಗಿದೆ. ಕರ್ನಾಟಕದ ಕೆಲವು ಹಬ್ಬ ಹರಿದಿನಗಳು, ಕಥೆಗಳು, ಗಾದೆಗಳು ಹಾಗೂ ಸತಿಸಹಗಮನದಂಥ ವಿಲಕ್ಷಣ ಪದ್ಧತಿಗಳ ಬಗೆಗೂ ಮಾಹಿತಿ ಸಂಗ್ರಹಿಸಿ ತನ್ನ ಗ್ರಂಥದಲ್ಲಿ ಅಳವಡಿಸಿದ್ದಾನೆ.

ಕನ್ನಡ ಜಾನಪದ ಅಧ್ಯಯನದಲ್ಲಿ ಆಸಕ್ತಿ ತಳೆದ ಕ್ರೈಸ್ತ ಮಿಷನರಿಗಳ ಪೈಕಿ ಚಾರ್ಲ್ಸ್ ಇ. ಗೋವರ್ ಅವರ ಹೆಸರು ಕುಡ ಗಮನಾರ್ಹವಾದುದು. ೧೮೭೧ರಲ್ಲಿ ಈತ ‘ಫೋಕ್ ಸಾಂಗ್ಸ್ ಆಫ್ ಸದರನ್ ಇಂಡಿಯ’ ಗ್ರಂಥವನ್ನು ಪ್ರಕಟಿಸಿದ್ದಾರೆ. ಕನ್ನಡ ಕೊಡವ, ಬಡಗ, ತಮಿಳು, ಮಲಯಾಳಂ ಭಾಷೆಗಳ ಜನಪದ ಗೀತೆಗಳನ್ನು ಬೇರೆಯವರ ನೆರವಿನಿಂದ ದೊರಕಿಸಿಕೊಂಡು ಅವನ್ನು ಇಂಗ್ಲಿಷೆಇಗೆ ತರ್ಜುಮೆ ಮಾಡಿ, ಪ್ರತಿಯೊಂದು ಭಾಷಾ ಅವತರಣಿಕೆಗೂ ಅಗತ್ಯ ಟಿಪ್ಪಣಿ ಒದಗಿಸಿ ಬೆಲೆಯುಳ್ಳ ಪ್ರಸ್ತಾವನೆಯೊಂದನ್ನು ಬರೆದು ಪ್ರಕಟಿಸಿದ. ಕನ್ನಡಕ್ಕೆ ಸಂಬಂಧಿಸಿದ ೨೮ ಹಾಡುಗಳು ಕನ್ನಡ ಜನಪದ ಗೀತೆಗಳು ಎಂಬ ವಿಭಾಗದಲ್ಲಿವೆ. ಈತನ ಸಂಗ್ರಹದ ಹಾಡುಗಳೆಲ್ಲ ಬಹುಮಟ್ಟಿಗೆ ದಾಸರ ಕೀರ್ತನೆಗಳೇ ಆಗಿವೆ. ಈ ಸಂಕಲನದಲ್ಲಿ ಕೊಡವ ಹಾಡುಗಳ ಭಾಗ ಗಮನಾರ್ಹವಾದುದು. ಕೊಡವರಲ್ಲಿ ಇಂದಿಗೂ ಪ್ರಚಲಿತವಿರುವ ಹುತ್ತರಿ ಹಾಡುಗಳು, ಮದುವೆ ಪದಗಳು, ಶಿಶುಪ್ರಾಸಗಳು ಇಲ್ಲಿ ಲಭ್ಯವಾಗುತ್ತವೆ.

ದುಬಾಯ್ಸ್ ಮತ್ತು ಗೋವರ್ ಅವರಂತೆ ಕನ್ನಡ ಜಾನಪದ ಅಧ್ಯಯನದಲ್ಲಿ ಆಸಕ್ತಿ ತಳೆದ ಆದ್ಯ ವಿದೇಶೀಯರ ಪೈಕಿ ಕರ್ನಲ್ ಮೆಕೆಂಜೆ, ಜಾನ್ ಬೇಡನ್, ಮೋಗ್ಲಿಂಗ್, ಮೇರಿ ಫ್ರೇರೆ, ಟೆಂಪಲ್, ಕಿಟ್ವೆಲ್, ಫ್ಲೀಟ್, ಮ್ಯಾನರ್, ಬರ್ನೆಲ್, ಪೀಟರ್‌ಕ್ಲಾಸ್, ಮಾತಾ ಆಸ್ಟಿನ್, ಲೌರಿ ಹಾಂಕೊ, ಮಾರ್ಕ್‌ ನಿಕ್ಟರ್, ಬ್ರೂಕ್ನರ್ ಮೊದಲಾದವರು ಮುಖ್ಯರೆನಿಸಿದ್ದಾರೆ.

ಮೆಕೆಂಜೆಯ ಕೈಫಿಯತ್ತುಗಳಲ್ಲಿ ಕನ್ನಡ ಜಾನಪದಕ್ಕೆ ಸಂಬಂಧಿಸಿದ ಮಾಹಿತಿ ಸಮೃದ್ಧವಾಗಿದೆ. ಶಾಸನಗಳು, ಐತಿಹಾಸಿಕ ವಿಚಾರಗಳು, ಐತಿಹ್ಯಗಳು, ಸ್ಥಳನಾಮಗಳು, ಅರಸುಮನೆತನಗಳು, ಭೌಗೋಳಿಕ ವೈಲಕ್ಷಣ್ಯಗಳು, ಊರು, ಗುಡಿಗುಡಾರಗಳು, ಅಲ್ಲಿಯ ಜನತೆಯ ಆಚಾರವಿಚಾರ, ರೀತಿ ರಿವಾಜುಗಳು, ನಂಬಿಕೆ ಸಂಪ್ರದಾಯಗಳು, ಆಚರಣೆಗಳು, ವೈದ್ಯಪದ್ಧತಿ, ವ್ಯಾಪಾರ – ವ್ಯವಹಾರ, ಕೃಷಿ, ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ – ಹೀಗೆ ಎಲ್ಲ ವಿವರಗಳು ಕೈಫಿಯುತ್ತುಗಳಲ್ಲಿವೆ. ಸಮಗ್ರ ಜನಪದ ಬದುಕನ್ನು ದಾಖಲಿಸುವುದೇ ಇಲ್ಲಿಯ ಉದ್ದೇಶವಿದ್ದಂತೆ ಕಾಣುತ್ತದೆ. ಮೆಕೆಂಜೆ ಆ ಕಾಲಕ್ಕೆ ದಾಳಲಿಸಿದ ಸಾಮಾಜಿಕ ಇತಿಹಾಸ ಮಹತ್ವದ ಕೈಫಿಯತ್ತುಗಳು ಒದಗಿಸಿದ ಸಾಮಗ್ರಿ ಜಾನಪದ ಅಧ್ಯಯನಕಾರರಿಗೆ ಇಂದಿಗೂ ಉಪಯುಕ್ತವಾಗಿವೆ.

ಟಿಪ್ಪುವಿನ ಪತನದಿಂದಾಗಿ ಕಂಪನಿಯ ಆಡಳಿತಕ್ಕೆ ಒಳಪಟ್ಟು ಪ್ರದೇಶಗಳನ್ನು ಪ್ರತ್ಯಕ್ಷ ಕಂಡ ಪ್ರವಾಸಿ ಬುಕನನ್ ಆ ಪ್ರದೇಶಗಳ ವಿವರವಾದ ಮಾಹಿತಿಯನ್ನು ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರ್, ಕೆನರಾ ಅಂಡ್ ಮಲಬಾರ್’ ಎಂದು ಗ್ರಂಥದಲ್ಲಿ ದಾಖಲಿಸಿದ್ದಾನೆ (೧೮೦೭). ಪ್ರವಾಸದ ಸಂದರ್ಭದಲ್ಲಿ ತಾನು ಕಂಡ ಕೇಳಿದ ಮಾಹಿತಿಯನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ವಸ್ತುನಿಷ್ಠವಾಗಿ ನಿರೂಪಿಸುತ್ತ ಹೋಗಿದ್ದಾನೆ. ಇದರಲ್ಲಿ ಆಹಾ ಪ್ರದೇಶದ ಕೃಷಿ, ವಾಣಿಯ, ಕಲೆ, ಧರ್ಮ, ರೀತಿನೀತಿಗಳು, ಇತಿಹಾಸ ಪ್ರಾಚೀನ ಪಳೆಯುಳಿಕೆಗಳ ಬಗೆಗೆ ವಿವರಗಳು ಸಿಗುತ್ತವೆ.

ಟಿಪ್ಪುವಿನ ಪತನಾಂತರ ಶ್ರೀರಂಗಪಟ್ಟಣಕ್ಕೆ ಒದಗಿದ ದುಸ್ಥಿತಿಯನ್ನು ಕುರಿತು ರಚಿತವಾಗಿದ್ದ ಲಾವಣಿಯೊಂದನ್ನು ಜಾನ್‌ಲೇಡನ್ ಎಂಬತ ಮೌಖಿಕ ಪರಂಪರೆಯಿಂದ ದೊರಕಿಸಿಕೊಂಡು ಇಂಗ್ಲಿಷಿಗೆ ಭಾಷಾಂತರಿಸಿ ಪ್ರಕಟಿಸಿದ (೧೮೦೩). ಹರ್ಮನ್ ಮೋಗ್ಲಿಂಗ್ ಪ್ರಕಟಿಸಿದ ಮೂರು ಸಾವಿರ ಗಾದೆಗಳು ಕನ್ನಡದ ಮೊತ್ತ ಮೊದಲ ಗಾದೆಗಳ ಸಂಕಲನ ಎನಿಸಿದೆ (೧೮೪೭). ೧೮೬೮ರಲ್ಲೇ ಪ್ರಕಟಗೊಂಡಿರುವ ಮೇರಿ ಫ್ರೇಕೆಯ ‘ಓಲ್ಡ್ ಡೆಕ್ಕನ್ ಡೇಸ್’ ೨೫ ಜನಪದ ಕಥೆಗಳ ಒಂದು ಮಹತ್ವದ ಸಂಕಲನ. ತನ್ನ ವಕ್ತೃ ಅನ್ನಲಿಬೆರ್ಟಾ ಡಿ ಸೋಜಾ ಮೂಲತಃ ಲಿಂಗಾಯತರವಳಾಗಿದ್ದು ಅವಳಿಂದ ತಾನು ಮುಂಬಯಿಯ ಕರ್ನಾಟಕ ಪ್ರದೇಶದಲ್ಲಿ ಈ ಕಥೆಗಳನ್ನು ಸಂಗ್ರಹಿಸಿರುವುದಾಗಿ ಫ್ರೇರೆ ಒದಗಿಸಿರುವ ಮಾಹಿತಿ ಮಹತ್ವದ್ದಾಗಿದೆ. ಲಿಬೆರ್ಟಾಳ ತಾತ ಕಲ್ಲಿಕೋಟೆಯಲ್ಲಿ ಇದ್ದವನು. ಆತ ಬ್ರಿಟಿಷ್ ಸೈನ್ಯದಲ್ಲಿದ್ದು ನಾಲ್ಕನೆಯ ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ. ಲಿಬೆರ್ಟಾಳ ಅಜ್ಜಿ ಒಳ್ಳೆಯ ಕಥೆಗಾರ್ತಿ. ಅವಳು ತನ್ನ ಮೊಮ್ಮಕ್ಕಳಿಗೆ ಹೇಳಿದ ಕಥೆಗಳೇ ಮೇರಿ ಫ್ರೇರೆ ಲಿಬೆರ್ಟಾಳಿಂದ ಸಂಗ್ರಹಿಸಿದ ಕತೆಗಳು. ಲಿಬೆರ್ಟಾಳ ಅಜ್ಜಿ ಕನ್ನಡತಿಯೇ ಆಗಿದ್ದಳು ಎಂಬುದಕ್ಕೆ ಈ ಸಂಕಲನದ ಅನೇಕ ಕತೆಗಳು ಸಾಕ್ಷಿಯಾಗಿವೆ. ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಜಿ.ಎಫ್.ಫ್ಲೀಟ್ ಅವರ ಹೆಸರು ಚಿರಸ್ಮರಣೀಯವಾದುದು. ಅವರು ಸಂಗ್ರಹಿಸಿದ ಐದು ಲಾವಣಿಗಳು ‘ಇಂಡಿಯನ್ ಆಂಟಕ್ಟರಿ’ ಪತ್ರಿಕೆಯಲ್ಲಿ ಪ್ರಕಟವಾಗಿವೆ (೧೮೮೫ – ೯೦). ಅವರು ಸಂಗ್ರಹಿಸಿದ ಒಟ್ಟು ಎಂಟು ಲಾವಣಿಗಳ ಪೈಕಿ ಐದು ಮಾತ್ರ ಅಚ್ಚಾಗಿವೆ. ಈ ಲಾವಣಿಗಳಲ್ಲಿ ಕೆಲವನ್ನು ದಾಸರಿಂದ ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ಬ್ರಿಟಿಷ್ ಆಡಳಿತಾಧಿಕಾರಿಯಾಗಿದ್ದ ಫ್ಲೀಟ್ ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಸಂಚರಿಸುತ್ತಿದ್ದ ಸಂದರ್ಭಗಳಲ್ಲಿ ಈ ಹಾಡುಗಳನ್ನು ದಾಖಲಿಸಿಕೊಂಡಿದ್ದಾರೆ. ಇವರು ಇಲ್ಲಿಯ ಲಾವಣಿಗಳ ಕನ್ನಡ ಲಾವಣಿಯ ಮೊದಲಿಗೆ ಆಯಾ ಲಾವಣಿಗೆ ಸಂಬಂಧಿಸಿದಂತೆ ಅದರ ರಾಜಕೀಯ, ಸಾಮಾಜಿಕ ಹಿನ್ನೆಲೆಯನ್ನು ಕುರಿತು ಬರೆದಿದ್ದಾರೆ. ಹಾಡುವ ಕ್ರಮ ವಿಧಾನ ಹಾಗೂ ಲಯದ ಏರಿಳಿತಗಳನ್ನು ಗುರುತಿಸಿದ್ದಾರೆ. ಹೀಗೆ ಜಾನಪದ ವೈಜ್ಞಾನಿಕ ಸಂಗ್ರಹಣೆ. ಫ್ಲೀಟರಿಂದಲೇ ಆರಂಭವಾಯಿತು ಎನ್ನಬೇಕು. ಈ ಲಾವಣಿಗಳು ಬ್ರಿಟಿಷ್ ಆಳರಸರ ದೌರ್ಜನ್ಯ, ದುಷ್ಟತನ, ಬ್ರಿಟಿಷರ ಅನ್ಯಾಯಕ್ಕೆ ಹಳ್ಳಿಗರು ಎದೆತೆರೆದು ನಡೆಸಿದ ಪ್ರತಿಭಟನೆ, ಹೋರಾಟ, ಇಂ‌ಗ್ಲಿಷರ ಕ್ರೌರ್ಯದ ವಿಜಯ, ವೈಭವಗಳಿಗೆ ಸಂಬಂಧಿಸಿವೆ. ಒಬ್ಬ ಉನ್ನತ ಬ್ರಿಟಿಷ್ ಅಧಿಕಾರಿಯಾಗಿದ್ದು, ಇಂಗ್ಲಿಷರ ವಿರುದ್ಧದ ಲಾವಣಿಗಳನ್ನು ಸಂಗ್ರಹಿಸುವಲ್ಲಿ, ಪ್ರಕಟಿಸುವಲ್ಲಿ ಫ್ಲೀಟ್ ತೋರಿದ ಐತಿಹಾಸಿಕ ಪ್ರಜ್ಞೆ ಉಲ್ಲೇಖಾರ್ಹ.

ಫ್ಲೀಟ್ ಅನಂತರ ಹೆಸರಿಸಬೇಕಾದ ಮತ್ತೊಂದು ಮುಖ್ಯ ಹೆಸರೆಂದೆ ಎಫ್. ಕಿಟ್ಟೆಲ್ ಅವರದು. ೧೮೯೪ರಲ್ಲಿ ಪ್ರಕಟವಾದ ಇವರ ಕನ್ನಡ – ಇಂಗ್ಲಿಷ್ ಕೋಶದಲ್ಲಿ ಕನ್ನಡದಲ್ಲಿ ಪ್ರಚಲಿತವಿದ್ದ ೪೧೬೮ ಗಾದೆಗಳನ್ನು ಶಬ್ದ ಪ್ರಯೋಗಾರ್ಥವಾಗಿ ನೀಡಿದ್ದಾರೆ. ಕನ್ನಡನಾಡಿನ ಎಲ್ಲ ಪ್ರದೇಶಗಳ ಗಾದೆಗಳು ಇದರಲ್ಲಿ ಸೇರ್ಪಡೆಗೊಂಡಿರುವುದು ವಿಶೇಷ. ಆ ಮೊದಲೇ ಕರ್ನಾಟಕದಲ್ಲಿ ಕೆಲವು ಗಾದೆಗಳು ಸಂಕಲನಗಳು ಹೊರಬಂದಿದ್ದವು. ೧೮೫೨ರಷ್ಟು ಹಿಂದೆಯೇ ಗಾದೆಗಳು ಕಲ್ಲಚ್ಚಿನ ಪ್ರತಿಯೊಂದು ಮಂಗಳೂರಿನಿಂದ ಪ್ರಕಟವಾಗಿತ್ತು. ೧೮೫೯ರಲ್ಲಿ ಮೋಗ್ಲಿಂಗ್ ಕನ್ನಡಗಾದೆಗಳು ಎಂಬ ಕೃತಿಯನ್ನು ಹೊರತಂದರು. ೧೮೮೬ರಲ್ಲಿ ಕೊಡವ ಪಡಿಮೆ ಎಂಬ ಕೊಡವ ಗಾದೆಗಳ ಸಂಕಲನವೊಂದು ಪ್ರಕಟವಾಗಿತ್ತು. ಅದಕ್ಕೂ ಮೊದಲು ಸಹಸ್ರ ಗಾಢಾಮೃತ ಕಲಶವು ಎಂಬ ಸಂಕಲನ ೧೮೭೪ರಲ್ಲೇ ಪ್ರಕಾಶಗೊಂಡಿತ್ತು. ಪಾಪ್ಯುಲರ್ ಕೆನರೀಸ್ ಪ್ರಾವರ್ಟ್ಸ್‌ ಅಂಡ್‌ ದೇರ್ ಇಂಗ್ಲಿಷ್ ಈಕ್ವವಲೆಂಟ್ಸ್‌ ಎಂಬ ಕೃತಿ ೧೮೯೪ರಲ್ಲೆ ಪ್ರಕಟವಾಗಿತ್ತು. ಅದೇ ವರ್ಷ ಬೆಳಗಾವಿಯ ಹನುಮಂತ ಗೋವಿಂದ ಜೋಶಿ ಅವರು ಸಾಮತಿ ಸಂಗ್ರಹ ಎಂಬ ಸಂಕಲವನ್ನು ಹೊರತಂದಿದ್ದರು. ಕಿಟ್ವೆಲ್ ಅವರು ಈ ಎಲ್ಲ ಸಂಕಲನಗಳನ್ನು ಗಮನಿಸಿದ್ದಿರಬೇಕು.

೧೯ನೆಯ ಶತಮಾನದ ಜಾನಪದ ಸಂಗ್ರಹಕಾರ್ಯದಲ್ಲಿ ಪಾಶ್ಚಾತ್ಯ ವಿದ್ವಾಂಸರು ತೋರಿದ ಆಸಕ್ತಿ ಮತ್ತು ಮಾಡಿದ ಸಾಧನೆ ದೇಶೀಯ ವಿದ್ವಾಂಸರ ಮೇಲೆ ಅಷ್ಟೇನೂ ಪ್ರಭಾವ ಬೀರಲಿಲ್ಲ. ಆದರೂ ಅಲ್ಲಲ್ಲಿ ಕೆಲವು ಜಾನಪದ ಸಂಕಲನಗಳನ್ನು ಸ್ಥಳೀಯ ವಿದ್ವಾಂಸರೂ ಪ್ರಕಟಿಸಿದರು. ೧೮೯೧ರಲ್ಲಿ ಪ್ರಕಟವಾದ ಲಾವಣಿ ಸಂಗ್ರಹ, ೧೮೯೩ರಲ್ಲಿ ಪ್ರಕಟವಾದ ‘ಬಾಗಿಲು ತಡೆಯುವ ಪದಗಳು’, ೧೮೯೬ರಲ್ಲಿ ಪ್ರಕಟವಾದ ಅರ್ಜುನ ಜೋಗಿ ಹಾಡು ಮುಂತಾದು ಗಮನಾರ್ಹ. ೨೦ನೆಯ ಶತಮಾನದ ಆರಂಭದ ದಶಕಗಳಲ್ಲಿ ಕನ್ನಡ ಜಾನಪದ ಅಧ್ಯಯನ ಅಷ್ಟು ವ್ಯಾಪಕವಾಗಿ ನಡೆಯಲಿಲ್ಲ. ಲಾವಣಿ ಮತ್ತು ಹಾಗೂ ಗಾದೆಗಳಿಗೆ ಸಂಬಂಧಿಸಿದ ಕೆಲವು ಕೃತಿಗಳೂ ಕೆಲವು ಲೇಖನಗಳೂ ಈ ಅವಧಿಯಲ್ಲಿ ಪ್ರಕಟವಾದುವು. ಕಲ್ಗಿ ತುರಾ ಸಂಪ್ರದಾಯದ ಲಾವಣಿಗಳು, ಅಲ್ಲೊಂದು ಇಲ್ಲೊಂದು ಕೃತಿಗಳು ಬೆಳಕು ಕಂಡವು. ತುರಾಲಾವಣಿ ಜವಾಬುಗಳು ಎಂಬ ಕೃತಿ ೧೯೦೨ ರಲ್ಲೇ ಅಚ್ಚಾಗಿದೆ. ೧೯೧೨ರಲ್ಲಿ ಯೂರೋಪ್ ಖಂಡದ ಮಹಾಯುದ್ಧದ ಲಾವಣಿಗಳು ಎಂಬ ಬೆಳಗಾವಿಯಿಂದ ಹೊರಬಂದಿತು. ಲಾವಣಿಗಳ ಬಗ್ಗೆ ಕರ್ನಾಟಕಾದ್ಯಂತ ತೀವ್ರವಾದ ಆಸಕ್ತಿ ಇದ್ದಿತೆಂಬುದನ್ನು ಈ ಕೃತಿಗಳು ಸಾದರಬಡಿಸುತ್ತವೆ. ೧೯೨೯ರಲ್ಲಿ ಮೈಸೂರಿನ ಈರಮುದ್ದಿ ಎಂಬುವವರು ತುರಾಲಾವಣಿ ಎಂಬ ಶೀರ್ಷಿಕೆಯಲ್ಲಿ ನಾಲ್ಕು ಲಾವಣಿಗಳನ್ನು ಒಳಗೊಂಡ ಪುಟ್ಟ ಸಂಕಲನವನ್ನು ಹೊರತಂದಿದ್ದಾರೆ.

೧೯ನೆಯ ಶತಮಾನದಲ್ಲಿ ಗಾದೆಗಳ ಕ್ಷೇತ್ರದಲ್ಲಿ ನಡೆದ ವ್ಯಾಪಕವಾದ ಸಂಗ್ರಹಕಾರ್ಯ ೨೦ನೆಯ ಶತಮಾನದ ಆದಿಭಾಗದಲ್ಲಿಯೂ ತಕ್ಕಮಟ್ಟಿಗೆ ಮುಂದುವರಿಯಿತು. ೧೯೦೩ರಲ್ಲಿ ಬಾಸೆಲ್ ಮಿಷನ್ ಟ್ರಿಸ್ಟಿನವರು ಹೊರತಂದ ‘ತ್ರಿ ಹಂಡ್ರೆಡ್ ಕೆನರೀಸ್ ಪ್ರಾವರ್ಬ್ಸ್’ ಹಾಗೂ ೧೯೧೨ರಲ್ಲಿ ಪ್ರಕಟವಾದ ‘ಎ ಹ್ಯಾಂಡ್‌ಬುಕ್ ಆಫ್ ಕೆನರೀಸ್ ಪ್ರಾವರ್ಬ್ಸ್ ವಿತ್ ಇಂಗ್ಲಿಷ್ ಈಕ್ವಿವಲೆಂಟ್ಸ್’ – ಇವು ಕನ್ನಡ ಗಾದೆಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯ ಮಾಡಿದ ಸಮರ್ಥ ಕೃತಿಗಳಾಗಿವೆ.

ಜಾನಪದ ಅಧ್ಯಯನದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನಕ್ಕೆ ಅರ್ಹವಾದ ಪಟ್ಟೋಲೆ ಪಳಮೆಯ ಮೊದಲ ಆವೃತ್ತಿ ಪ್ರಕಟವಾದದ್ದು ೧೯೨೪ರಲ್ಲಿ. ಅದರ ಎರಡನೆಯ ಆವೃತ್ತಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಹೊರಬಂದದ್ದು ೧೯೭೩ರಲ್ಲಿ. ಕೊಡಗಿನ ನಡಿಕೇರಿಯಂತ ಚಿಣ್ಣಪ್ಪ (೧೮೭೫ – ೧೯೩೧)ಅವರು ಕೊಡವ ಸಂಸ್ಕೃತಿಯನ್ನು ವಿವರವಾಗಿ ಅಧ್ಯಯನ ಮಾಡಿ ಈ ಗ್ರಂಥವನ್ನು ರಚಿಸಿದ್ದಾರೆ. ಕೊಡವರ ಆಚಾರ ವಿಚಾರಗಳು. ಹಬ್ಬ ಸಂಪ್ರದಾಯಗಳು, ನಂಬಿಕೆಗಳು, ಗಾದೆಗಳು, ಒಗಟುಗಳು, ಗೀತೆಗಳು, ಲಾವಣಿಗಳು ಮುಂತಾದ ಕೊಡವರ ಜೀವನ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಮಸ್ತ ವಿಷಯಗಳನ್ನು ಈ ಗ್ರಂಥ ಪರಿಚಯ ಮಾಡಿಕೊಡುತ್ತದೆ.

೧೯೨೦ರ ಅನಂತರ ಕನ್ನಡ ಜಾನಪದ ಕೆಲವು ಪ್ರಕಾರಗಳ ಮೇಲೆ ವಿಚಾರ ವಿಮರ್ಶೆ ಬೆಳೆಯತೊಡಗಿತು. ಕೆ.ಎಚ್.ಮಲ್ಲಪ್ಪ ಅವರ ಕನ್ನಡ ಗಾದೆಗಳ ಜೀರ್ಣೋದ್ಧಾರ ಎಂಬ ಬರಹ ೧೯೨೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿ ಸಮಗ್ರ ಜಾನಪದದದ ಪುನಶ್ಚೇತನದ ಕಡೆಗೆ ಕನ್ನಡಿಗರ ದೃಷ್ಟಿಯನ್ನು ಸೆಳೆಯುವ ಆದ್ಯ ಲೇಖನವೆನಿಸಿತು. ಅದಕ್ಕೆ ಮೊದಲು ೧೯೦೭ರ‍ಲ್ಲೇ ಎಸ್.ಜಿ. ನರಸಿಂಹಾಚಾರ್ಯರು ಕನ್ನಡ ಗ್ರಂಥಕರ್ತರ ಸಮ್ಮೇಳನದಲ್ಲಿ ಜಾನಪದ ಕುರತಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸದ್ದರು. ಮುಂದೆ ಸಾಹಿತ್ಯ ಸಮ್ಮೇಳನಗಳ ವೇದಿಕೆಯಲ್ಲಿಯೂ ಜಾನಪದದ ಬಗ್ಗೆ ವಿಚಾರಾತ್ಮಕ ಪ್ರಬಂಧಗಳು ಮಂಡಿತವಾದವು. ಬಿಜಾಪುರದಲ್ಲಿ ೧೯೨೩ರಲ್ಲಿ ಜರುಗಿದ ೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಧುರಚೆನ್ನ, ಪಿ.ಧೂಲಾ ಅವರು ಜನಪದ ಸಾಹಿತ್ಯದ ಸಾಹಿತ್ಯಕ ಸೊಗಸಿನ ಕಡೆ ಕನ್ನಡಿಗರ ಆಸಕ್ತಿಯನ್ನು ಸೆಳೆದರು. ೧೯೨೫ರಲ್ಲಿ ಸಾಹಿತ್ಯ ಪರಿಷತ್ಪತ್ರಿಕೆ ಪ್ರಕಟಿಸಿದ ಮಾಸ್ತಿಯವರ ‘ಕನ್ನಡ ಲಾವಣಿ ಸಾಂಗತ್ಯ’ ಎಂಬ ಬರಹ ಅನೇಕ ದೃಷ್ಟಿಗಳಿಂದ ತುಂಬ ಮಹತ್ತ್ವದ್ದು. ಕನ್ನಡ ಜನಪದ ಸಾಹಿತ್ಯದ ವಿವಿಧ ಮುಖಗಳ ಕಡೆ ಮಾಸ್ತಿಯವರು ಕನ್ನಡಿಗರ ಆಸಕ್ತಿಯನ್ನು ಸೆಳೆದು, ಅನೇಕ ಗೀತ ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲಿದರು.

ಕನ್ನಡ ಜಾನಪದ ಅಧ್ಯಯನದಲ್ಲಿ ೧೯೩೦ ರಿಂದ ೧೯೫೦ರ ನಡುವಣ ಅವಧಿ ಬಲು ಮಹತ್ವದ ಕಾಲವೆಂದು ಗುರುತಿಸಬಹುದು. ಕರ್ನಾಟಕದಲ್ಲಿ ನವೋದಯ ಸಾಹಿತ್ಯದ ಜೊತೆಯಲ್ಲಿಯೇ ಜಾನಪದ ಬಗೆಗಿನ ತಿಳಿವಳಿಕೆಯೂ ಬದಲಾಯಿತು. ನವೋದಯ ಕಾಲದ ಬಹುಪಾಲು ಲೇಖಕರು ಒಂದಲ್ಲ ಒಂದು ವಿಧದಲ್ಲಿ ಜಾನಪದದ ಬಗೆಗಿನ ತಿಳಿವಳಿಕೆಯನ್ನು ಇಟ್ಟುಕೊಂಡವರೇ ಆಗಿದ್ದರು. ಇದರಿಂದಾಗಿ ಹಲವು ಉತ್ತಮ ಸಂಕಲನಗಳು ಹೊರಬರಲು ಕಾರಣವಾಯಿತು. ೧೯೩೧ರಲ್ಲಿ ಕನ್ನಡದ ಮೊದಲ ತ್ರಿಪದಿಗಳ ಸಂಕಲನವಾದ ‘ಗರತಿಯ ಹಾಡು’ ಪ್ರಕಟವಾಯಿತು. ಅನಂತರದಲ್ಲಿ ಸಿಂಪಿಲಿಂಗಣ್ಣ ಮತ್ತು ಪಿ.ಧೂಲಾ ಅವರು ಕಲ್ಗಿ ತುರಾಯಿ ಸಂಪ್ರದಾಯದ ಲಾವಣಿಗಳ ಸಂಕಲನ ‘ಜೀವನ ಸಂಗೀತ’ವನ್ನು ಹೊರತಂದರು (೧೯೩೩. ‘ಮಲ್ಲಿಗೆದಂಡೆ ಸಂಕೀರ್ಣ ಜನಪದ ಗೀತೆಗಳ ಸಂಕಲನವಾಗಿ ಹೊರಬಂದಿತು (೧೯೩೫). ಕಥೆಯ ಹಾಡುಗಳು, ಮದುವೆಯ ಹಾಡುಗಳು, ಸೋಬಾನದ ಹಾಡುಗಳು ಇಂಥ ಕೆಲವು ಪ್ರಮುಖ ಪ್ರಕಾರಗಳೊಡನೆ ಪ್ರಣಯ, ಹಾಸ್ಯ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಆಕರ್ಷಕ ಗೀತೆಗಳನ್ನೊಳಗೊಂಡ ಈ ಕೃತಿ ತನ್ನ ಸಾಹಿತ್ಯಕ ಸತ್ವದಿಂದ ತುಂಬ ಜನಪ್ರಿಯವಾಯಿತು.

ಉತ್ತರ ಕರ್ನಾಟಕದಲ್ಲಿ ಆರಂಭವಾದ ಈ ಪ್ರಯತ್ನ ದಕ್ಷಿಣದ ಕಡೆಗೂ ವ್ಯಾಪ್ತಿಸಿತು. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮತಿಘಟ್ಟ ಕೃಷ್ಣಮೂರ್ತಿ – ಇವರು ಈ ಕ್ಷೇತ್ರದ ಕಡೆ ಹೊರಳಿ ಸಂಗ್ರಹಕಾರ್ಯವನ್ನು ಆರಂಭಿಸಿದರು. ಇವರಿಬ್ಬರೂ ಮೊದಲೇ ಅರ್ಚಕ ಬಿ.ರಂಗಸ್ವಾಮಿಯವರು ೧೯೩೩ರಲ್ಲಿ ‘ಹುಟ್ಟಿದ ಹಳ್ಳಿ ಹಳ್ಳಿಯ ಹಾಡು’ ಎಂಬ ಕೃತಿಯನ್ನು ಹೊರತಂದರು. ಇದರಲ್ಲಿ ರಂಗಸ್ವಾಮಿಯವರು ಬಯಲುಸೀಮೆಯ ಜನಜೀವನ, ಆಚಾರ ವಿಚಾರ, ಸಂಪ್ರದಾಯ, ಆಚರಣೆ, ಹಬ್ಬ, ಉತ್ಸವ, ಗಾದೆ, ನಡೆನುಡಿ, ಕುಣಿತ, ಕಲೆ ಮುಂತಾದವನ್ನು ಕ್ರಮಬದ್ಧವಾಗಿ ಸಂಗ್ರಹಿಸಿ ಅದಕ್ಕೆ ಒಂದು ಕೃತಿರೂಪವನ್ನು ಕೊಟ್ಟರು. ಈ ಕೃತಿಯ ಹೆಸರೇ ಸೂಚಿಸುವಂತೆ, ಹುಟ್ಟಿದ ಹಳ್ಳಿ ಆ ಹಳ್ಳಿಯ ವಿವರಗಳನ್ನೂ ಜನಜೀವನ ಸಂಸ್ಕೃತಿಗಳನ್ನೂ ಪ್ರತಿನಿಧಿಸಿದರೆ ಹಳ್ಳಿಯ ಹಾಡು ಈ ಕೃತಿಯಲ್ಲಿ ಸಂಕಲಿತವಾಗಿರುವ ಜನಪದ ಗೀತೆಗಳನ್ನು ಪ್ರತಿನಿಧಿಸುತ್ತದೆ. ತ್ರಿಪದಿಗಳನ್ನು ಮಾತ್ರ ಸಂಗ್ರಹಿಸುವುದರಲ್ಲಿ ಆಸಕ್ತಿ ತೋರಿದ ಇವರು ದೇವರು, ಮದುವೆ ಮತ್ತು ಬಾಂಧವ್ಯ ಸಂಬಂಧವಾದ ಗೀತೆಗಳನ್ನು ಹೆಚ್ಚಾಗಿ ಕಲೆ ಹಾಕಿದ್ದಾರೆ. ಆದ್ಯ ಜಾನಪದ ಸಂಗ್ರಾಹಕರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರು ಹಾಸ ಮತ್ತು ಮೈಸೂರು ಜಿಲ್ಲೆಗಳ ಹಾಡುಗಳನ್ನೊಳಗೊಂಡ ಹಳ್ಳಿಯ ಹಾಡುಗಳು ಎಂಬ ಸಂಕಲನವನ್ನು ಪ್ರಕಟಿಸಿದರು (೧೯೩೮).

ಗುಣದ ದೃಷ್ಟಿಯಿಂದ, ವೈವಿಧ್ಯದ ದೃಷ್ಟಿಯಿಂದ, ಕ್ರಮಬದ್ಧ ಸಂಪಾದನೆಯ ದೃಷ್ಟಿಯಿಂದ ‘ನಾಡಪದಗಳು’ ಮಹತ್ವದ ಸಂಕಲನ. ಈ ಸಂಕಲನ ೧೯೪೭ರಲ್ಲಿ ಪ್ರಕಟವಾಯಿತು. ಹಳೇಬೀಡು ಪ್ರಾಂತ್ಯದ ಪ್ರಾತಿನಿಧಿಕ ಗೀತೆಗಳು ಈ ಸಂಕಲನದಲ್ಲಿದೆ. ಒಂದೇ ಗ್ರಾಮದಲ್ಲಿ ಸಂಗ್ರಹಿಸಿದ ರಚನೆಗಳು ಇಲ್ಲಿ ಸೇರಿರುವುದು ವಿಶೇಷ. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಕರ್ನಾಟಕ ಜಾನಪದ ಅಧ್ಯಯನ ವ್ಯಾಪಕವಾಗಿ ನಡೆಯದಿದ್ದರೂ ನಡೆದಷ್ಟು ಕೆಲಸದಲ್ಲಿ ಅಚ್ಚುಕಟ್ಟು ಮತ್ತು ಪ್ರಾಮಾಣಿಕ ದೃಷ್ಟಿಯನ್ನೂ ಕಾಣಬಹುದು.

ಸ್ವಾತಂತ್ರ್ಯೋತ್ತರ ದಿನಗಳಲ್ಲಂತು ಜಾನಪದದ ಬೇರೆ ಬೇರೆ ಪ್ರಕಾರಗಳಿಗೆ ಸಂಬಂಧಪಟ್ಟಂತೆ ಗಮನಾರ್ಹವಾದ ಕೆಲಸ ನಡೆಯಿತು.

ಸ್ವಾತಂತ್ರ್ಯಾನಂತರ ಜಾನಪದ ಅಧ್ಯಯನವನ್ನು ಯಶಸ್ವಿಯಾಗಿ ಮುಂದುವರಿಸಿದವರು ಬಿ.ಎಸ್.ಗದ್ದಗಿಮಠ. ಅವರು ಉತ್ತರ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ ಸಾಹಿತ್ಯ ಸಂಗ್ರಹ ಮಾಡಿದರು. ಅಲ್ಲಿಯ ಸಂಪ್ರದಾಯಗಳನ್ನು ಜಾಣಪದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದರು. ‘ಕನ್ನಡ ಜಾನಪದ ಗೀತಗಳು’ ಎಂಬ ತಮ್ಮ ಪಿಎಚ್.ಡಿ. ಮಹಾಪ್ರಬಂಧದಲ್ಲಿ ಉತ್ತರ ಕರ್ನಾಟಕದ ಎಲ್ಲ ಪ್ರಮುಖಗೀತ ಸಂಪ್ರದಾಯಗಳನ್ನು ಕಲೆಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನ ನಡೆಸಿದ್ದಾರೆ. ಇದರ ಜೊತೆಗೆ ಇವರು ಹೊರತಂದಿರುವ ನಾಲ್ಕು ನಾಡಪದಗಳು (೧೯೫೨), ಜನತಾಗೀತೆಗಳು (೧೯೫೯) ಕುಮಾರರಾಮನ ದುಂದುಮೆ (೧೯೫೫) ಮತ್ತು ವಲ್ಲಮಲ್ಲಾಣಿ (೧೯೫೯) ಗಮನಾರ್ಹ ಗೀತಸಂಕಲನಗಳು. ಹಂತಿ ಸಂಪ್ರದಾಯ, ಕಂಬಿ ಸಂಪ್ರದಾಯ, ಕೋಲಾಟ ಹಾಗೂ ಮದುವೆ ಸಂಪ್ರದಾಯದ ಹಾಡುಗಳನ್ನು ಒಳಗೊಂಡ ಸಂಕಲನಗಳವು.

ಉತ್ತರ ಕರ್ನಾಟಕ ಭಾಗದಲ್ಲಿ ಗದ್ದಗಿಮಠ ಅವರು ದುಡಿದಂತೆ ದಕ್ಷಿಣ ಕರ್ನಾಟಕದಲ್ಲಿ ಜೀ.ಶಂ.ಪರಶಿವಯ್ಯನವರು ಗೀತೆ, ಲಾವಣಿ, ಕಥೆಗಳ ಜೊತೆಗೆ ದಕ್ಷಿಣ ಕರ್ನಾಟಕ ಪ್ರದೇಶದ ವೃತ್ತಿಗಾಯಕ ಪರಂಪರೆಗಳನ್ನು ಶೋಧಿಸಿ ಅವುಗಳ ಅಧ್ಯಯನ ನಡೆಸಿದರು. ‘ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು’ ಎಂಬ ಇವರ ಪಿಎಚ್.ಡಿ. ಮಹಾಪ್ರಬಂಧದಲ್ಲಿ ಹಳೆಯ ಮೈಸೂರು ಭಾಗದ ಎಲ್ಲ ಜನಪದ ಕಾವ್ಯ ಸಂಪ್ರದಾಯಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಲಾವಣಿ ಮತ್ತು ಖಂಡಕಾವ್ಯಗಳ ಸ್ವರೂಪ ಲಕ್ಷಣಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಮತ್ತು ಎಲ್ಲಮ್ಮ ಕಾವ್ಯ ಸಂಪ್ರದಾಯಗಳ ವಿವೇಚನೆಯೂ ಇಲ್ಲಿದೆ. ಜೀಶಂಪ ಅವರು ಕ್ಷೇತ್ರದಕಾರ್ಯದ ಮೂಲಕ ಸಂಗ್ರಹಿಸಿ ಹೊರತಂದಿರುವ ಸಂಕಲನಗಳ ಪೈಕಿ ಜನಪರ ವೀರ ಕಾವ್ಯಗಳು, ದೊಂಬಿದಾಸರ ಲಾವಣಿಗಳು, ಹೆಳವರ ಕಾವ್ಯಗಳು, ಜನಪದ ಕಾವ್ಯಕಥೆಗಳು, ಮುಡುತೊರೆ ಮಲ್ಲಿಕಾರ್ಜುನ – ಇವೇ ಮುಂತಾದವು ಮುಖ್ಯವಾದವು.

ದಕ್ಷಿಣ ಕರ್ನಾಟಕ ಪ್ರದೇಶದ ಸಂಗ್ರಾಹಕರ ಪೈಕಿ ಕ.ರಾ.ಕೃಷ್ಣಸ್ವಾಮಿ (ಕ.ರಾ.ಕೃ.) ಅವರ ಹೆಸರು ಕೂಡ ಗಮನಾರ್ಹವಾದುದು. ಇಪ್ಪತ್ತೈದಕ್ಕೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿರುವ ಕರಾಕೃ ಅವರು ಜನಪದ ಗೀತೆ ಹಾಗೂ ಲಾವಣಿಗಳ ಕ್ಷೇತ್ರದಲ್ಲಿ ಸಾಕಷ್ಟು ಸಂಗ್ರಹಕಾರ್ಯ ನಡೆಸಿದವರು. ೧೯೫೭ರಲ್ಲಿ ಜೇನಹನಿಗಳು ಸಂಕಲನದಿಂದ ಈ ಕ್ಷೇತ್ರವನ್ನು ಪ್ರವೇಶಿಸಿದೆ ಇವರು ಮಲ್ಲಿಗೆ ನಗುತಾವೆ, ಜಾನಪದ ಕಥನ ಗೀತೆಗಳು, ಶ್ರೀ ಆದಿಚುಂಚನಗಿರಿ, ಹಣತೆ ಉರಿಯುತಿದೆ ಮುಂತಾದ ಸಂಕಲನಗಳನ್ನು ಹೊರತಂದರು. ಈ ಕೆಲವು ಸಂಕಲನಗಳೊಂದಿಗೆ ಚನ್ನಿಗ ಚಲುವಯ್ಯ, ಗಿರಿಕಾಣೆ ಮೂಡಲಗಿರಿ, ಮಲೆಮಾದೇಶ್ವರ ಮುಂತಾದ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಗೀತೆಗಳನ್ನು ಹೊರತಂದಿದ್ದಾರೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಗೀತೆಗಳನ್ನು ಹೊರತಂದಿದ್ದಾರೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ವ್ಯಾಪಕವಾಗಿ ಕ್ಷೇತ್ರಕಾರ್ಯ ನಡೆಸಿರುವ ಇವರು ಪಾಳೆಗಾರ ಪದಗಳು, ಸೂಸಿ ಹರಿದಾಳೆ ಶಿವಗಂಗೆ, ಮೈಲಾರಲಿಂಗ ಈರಬಡಪ್ಪ, ಹಚ್ಚ ಹೊಂಬಾಳೆ ಕುಣಿದಾವೆ, ಕಾಳಿಂಗರಾಯ, ನಾಡಕತೆಗಳು ಮುಂತಾದ ಸಂಕಲನಗಳನ್ನು ಹೊರತಂದಿದ್ದಾರೆ. ಈ ಸಂಕಲನಗಳಲ್ಲಿ ಇವರ ಪರಿಶ್ರಮವನ್ನು ಗುರುತಿಸಬಹುದಾಗಿದೆ.

ದಕ್ಷಿಣ ಕರ್ನಾಟಕ ಭಾಗದ ಆದ್ಯ ಜಾನಪದ ಸಂಗ್ರಹಕಾರರ ಪೈಕಿ ಸ.ಚ. ಮಹದೇವನಾಯಕ, ಎಸ್.ಕೆ. ಕರೀಂಖಾನ್, ಕೆ.ಆರ್. ಲಿಂಗಪ್ಪ ಗೊ.ರು.ಚನ್ನಬಸಪ್ಪ, ಕೆ.ಆರ್. ಲಿಂಗಪ್ಪ ಅವರ ಹೆಸರುಗಳು ಮುಖ್ಯವಾದವು. ಎಸ್.ಕೆ. ಕರೀಂಖಾನ್ ಮತ್ತು ಕೆ.ಆರ್. ಲಿಂಗಪ್ಪ ಅವರು ೧೯೫೦ರ ಈಚೆಗೆ ಸಾಹಿತ್ಯ ಸಂಗ್ರಹದಲ್ಲೂ ತೊಡಗಿಸಿಕೊಂಡು ಹಾಡುಗಾರಿಕೆಯನ್ನೂ ಜೊತೆಜೊತೆಯಲ್ಲೇ ನಡೆಸಿಕೊಂಡು ಹೋದವರು. ಜನಪದ ಹಾಡುಗಳಿಗೆ ಸಾಕಷ್ಟು ಪ್ರಚಾರವನ್ನು ದೊರಕಿಸಿಕೊಟ್ಟರು. ಗೊ.ರು.ಚನ್ನಬಸಪ್ಪನವರ ಮೈದುನ ರಾಮಣ್ಣ, ಬಾಗೂರು ನಾಗಮ್ಮ ಉತ್ತಮ ಗೀತಸಂಕಲನಗಳು.

೧೯೬೬ರ ಅನಂತರ ಕರ್ನಾಟಕ ಜಾನಪದ ಅಧ್ಯಯನದಲ್ಲಿ ಹೊಸ ತಿರುವು ಕಾಣಿಕೊಂಡಿತು. ಜಾನಪದವನ್ನು ಪಾಶ್ಚಾತ್ಯ ಮಾದರಿಯ ಅಧ್ಯಯನ ವಿಧಾನದಲ್ಲಿ ಅಧ್ಯಯನ ಮಾಡುವ ಪ್ರವೃತ್ತಿ ಬೆಳೆಯಿತು. ಅಧ್ಯಯನದ ವ್ಯಾಪ್ತಿ ಸಾಹಿತ್ಯ ಸಂಗ್ರಹಕಷ್ಟೇ ಸೀಮಿತವಾಗದೆ ಸಾಹಿತ್ಯ ಮತ್ತು ಇತರ ಕ್ಷೇತ್ರಗಳೆಡೆಗೂ ವ್ಯಾಪಿಸಿತು. ಜಾನಪದ ಅಧ್ಯಯನ ಕ್ಷೇತ್ರ ವಿಸ್ತಾರಗೊಂಡಿತು. ಜಾನಪದವನ್ನು ಒಂದು ಅಧ್ಯಯನ ವಿಷಯವಾಗಿ ಕನ್ನಡ ಸ್ನಾತಕೋತ್ತರ ಪದವಿಗೆ ಅಳವಡಿಸುವುದರ ಮೂಲಕ ಮೈಸೂರು ವಿಶ್ವವಿದ್ಯಾನಿಲಯ ಭಾರತೀಯ ಜಾನಪದ ಅಧ್ಯಯನದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸಿತು (೧೯೬೬). ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಲೇಖಕರ ಸಮ್ಮೇಳನದ ಜಾನಪದ ಗೋಷ್ಠಿ ಅನಂತರದ ಜಾನಪದ ಅಧ್ಯಯನದ ಮೇಲೆ ವಿಶಿಷ್ಟ ಪ್ರಭಾವವನ್ನು ಬೀರಿತು. ಹಾ.ಮಾ. ನಾಯಕ ಅವರು ಮಂಡಿಸಿದ ಜಾನಪದ ಸಾಹಿತ್ಯ ಮತ್ತು ಅದರ ಸ್ವರೂಪ ಎಂಬ ಪ್ರಬಂಧ ಜಾನಪದದ ವೈಜ್ಞಾನಿಕ ಅಧ್ಯಯನದ ವ್ಯಾಪ್ತಿ ಉದ್ದೇಶಗಳತ್ತ ಕನ್ನಡಿಗರ ಆಸಕ್ತಿಯನ್ನು ಎಳೆದು ಜಾನಪದದ ಸಮಗ್ರ ಸ್ವರೂಪವನ್ನು ಪರಿಚಯ ಮಾಡಿಕೊಟ್ಟಿತು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಯನ ಆರಂಭಗೊಳ್ಳಲು ಮುಖ್ಯ ಕಾರಣಕರ್ತರಾದ ದೇಜಗೌ ಅವರು ಅದೇ ವರ್ಷ (೧೯೬೭)ಹೊರ ಬಂದ ‘ಜನಪದ ಸಾಹಿತ್ಯ ಸಮೀಕ್ಷೆ’ ಎಂಬ ಕೃತಿಗೆ ಬರೆದ ಮುನ್ನುಡಿಯಲ್ಲಿ ಜಾನಪದದ ಮೂಲಗಳನ್ನೆಲ್ಲ ವಿವರಿಸಿ ಅದರ ಸಮಗ್ರ ಸ್ವರೂಪವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದರು.

ಮೈಸೂರು ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ಸಾಂಸ್ಕೃತಿಕ ಮಹತ್ವದ ಅಪೂರ್ವ ಮತ್ತು ವಿಶೇಷಗಳಿಂದ ಸಾಮಾಜಿಕ ವಿಜ್ಞಾನ ಕ್ಷೇತ್ರದ ಆಸಕ್ತರ ಗಮನ ಸೆಳೆದಿದೆ. ದೇಶ್ಯಮೂಲವಾದ ಪರಂಪರಾಜ್ಞಾನದ ವಿವಿಧ ಮಜಲುಗಳನ್ನು ಗುರುತಿಸುವ, ಜನಜೀವನದ ಪ್ರಾಚೀನ ವೈಭವವನ್ನು ಬಿಂಬಿಸುವ ಕನ್ನಡಿಗರ ಜೀವನಶ್ರದ್ಧೆ, ವೃತ್ತಿ ವೈವಿಧ್ಯ ಹಾಗೂ ಕಲಾ ಕೌಶಲವನ್ನು ಪರಿಚಯ ಮಾಡಿಕೊಡುವ ಈ ಜಾನಪದ ವಸ್ತುಸಂಗ್ರಹಾಲಯ ಪೂರ್ವ ಏಷಿಯಾದಲ್ಲೇ ವಿಶಿಷ್ಟವಾದುದು. ಈ ವಸ್ತು ಸಂಹ್ರಹಾಲಯದ ನಿರ್ಮಾಣದಲ್ಲಿ ದೇಜಗೌ, ಹಾ ಮಾ ನಾಯಕ, ಜೀ.ಶಂ.ಪರಶಿವಯ್ಯ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಯು.ಎಸ್. ರಾಮಣ್ಣ ಅವರ ಪಾತ್ರ ಹಿರಿದಾದುದು.

ಜಾನಪದ ವಸ್ತು ಸಂಗ್ರಹಾಲಯ ನಿರ್ಮಾಣ ಮತ್ತು ಅದರ ಪುನಶ್ಚೇತನದಲ್ಲಿ ಆಸಕ್ತಿ ತಳೆದಂತೆ ಮೈಸೂರು ವಿಶ್ವವಿದ್ಯಾನಿಯಲವು ಜಾನಪದ ಸಂಬಂಧವಾದ ಸಂಶೋಧನ ಚಟುವಟಿಕೆಗಳಲ್ಲೂ ವಿಶೇಷ ಆಸಕ್ತಿ ತೋರಿದೆ. ಇದುವರೆಗೆ ಜಾಣಪದ ಮಾಲೆಯಲ್ಲಿ ಎಪ್ಪತ್ತೈದ್ಕೂ ಹೆಚ್ಚು ಶೀರ್ಷಿಕೆಗಳನ್ನು ಹೊರತಂದಿದೆ. ಇದರ ಜೊತೆಗೆ ವಿವಿಧ ಪ್ರದೇಶಗಳಲ್ಲಿ ಜಾನಪದ ಪರಿವೀಕ್ಷಣೆಯ ಕಾರ್ಯವನ್ನು ಕೈಗೊಂಡು ಅಧ್ಯಯನ ನಡೆಸುತ್ತಿದೆ. ಇಲ್ಲಿಯ ಸಂಶೋಧನಾಂಗ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ ಜಾನಪದ ಸಂಗ್ರಹಕಾರ್ಯ ನಡೆಸಿದೆ. ಜನಪದ ಗೀತೆ, ಲಾವಣಿ, ನಾಟಕ ಮುಂತಾದವನ್ನು ಧ್ವನಿ ಮುದ್ರಣ ಮಾಡಿ ಸಂರಕ್ಷಿಸಿ ಇಡಲಾಗುತ್ತಿದೆ. ಸಂಶೋಧನೆ, ಪ್ರಕಟಣೆಗಳೊಂದಿಗೆ ಒಂದು ಕಲಿಕೆಯ ವಿಷಯವಾಗಿ ಉನ್ನತ ಶಿಕ್ಷಣದಲ್ಲಿ ಅಳವಡಿಸಿದ್ದು ಮೈಸೂರು ವಿಶ್ವವಿದ್ಯಾನಿಲಯ. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ (೧೯೬೬), ದಕ್ಷಿಣ ಭಾರತೀಯ ಅಧ್ಯಯನ ಪದವಿಯಲ್ಲಿ ಜಾನಪದ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದೇ ಅಲ್ಲದೆ ಜಾನಪದ ಡಿಪ್ಲೊಮಾ ಹಾಗೂ ಜಾನಪದದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ (೧೯೭೪) ಆರಂಭಿಸಿದುದು ಒಂದು ಕ್ರಾಂತಿಕಾರಕ ಪ್ರಯತ್ನ.

ಮೈಸೂರು ವಿಶ್ವವಿದ್ಯಾನಿಲಯ ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿದ ಕರ್ನಾಟಕ ವಿಶ್ವವಿದ್ಯಾನಿಲಯವೂ ಜಾನಪದ ಅಧ್ಯಯನ ಮತ್ತು ಪ್ರಕಟಣೆಗಳಿಗೆ ಆದ್ಯತೆ ನೀಡಿದೆ. ಮೊದಲಿಗೆ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ನೀಡುತ್ತಿದ್ದ ಕರ್ನಾಟಕ ವಿಶ್ವವಿದ್ಯಾಲಯ ಇದೀಗ ಜನಪದ ಸಾಹಿತ್ಯಕ್ಕೆ ಬದಲಾಗಿ ಸ್ವತಂತ್ರವಾಗಿ ಜಾನಪದದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿದೆ. ಕಳೆದ ಕಾಲು ಶತಮಾನದಿಂದ ತಪ್ಪದೆ ನಡೆಸಿಕೊಂಡು ಬರುತ್ತಿರುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಹಾಗೂ ಗೋಷ್ಠಿಗಳಲ್ಲಿ ಮಂಡನೆಗೊಂಡ ಸಂಪ್ರಬಂಧಗಳ ಸಂಕಲನಗಳನ್ನು ಹೊರತರುತ್ತಿರುವುದು ಮಹತ್ವದ ಸಂಗತಿಯಾಗಿದೆ.

ಇದೇ ಮಾದರಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗ ಮತ್ತು ಬುಡಕಟ್ಟು ಅಧ್ಯಯನ ವಿಭಾಗಗಳ ಸಾಧನೆಯೂ ಉಲ್ಲೇಖಾರ್ಹ. ಸ್ವತಂತ್ರ ಜಾನಪದ ಅಧ್ಯಯನ ವಿಭಾಗವಲ್ಲದೆ ಸಂಶೋಧನೆ ಹಾಗೂ ಪ್ರಕಟಣೆಗಳಿಗೆ ಅಲ್ಲಿ ವಿಶೇಷ ಗಮನಹರಿಸಲಾಗಿದೆ. ಕರ್ನಾಟಕದ ಉದ್ದಗಲಕ್ಕೂ ಕ್ಷೇತ್ರಕಾರ್ಯ ಕೈಗೊಂಡು ಬೃಹತ್‌ಗಾತ್ರದ ಸಂಶೋಧನೆ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಮೌಖಿಕ ಮಹಾಕಾವ್ಯ ಸಂಪುಟಗಳೊಂದಿಗೆ ವಿಶೇಷ ಆಸಕ್ತಿಯ ಅಲಕ್ಷಿತ ಜ್ಞಾನ ಪರಂಪರೆಯನ್ನು ಪ್ರಕಾಶಗೊಳಿಸಲು ಯತ್ನಿಸುತ್ತಿದೆ. ಕುವೆಂಪು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳು ಕೂಡ ತಮ್ಮ ತಮ್ಮ ಪ್ರದೇಶ ವ್ಯಾಪ್ತಿಯ ಸ್ಥಳೀಯ ಜ್ಞಾನ ಪರಂಪರೆಯ ಅಧ್ಯಯನಕ್ಕೆ ಒತ್ತುಕೊಟ್ಟು ಸಂಶೋಧನೆ ಹಾಗೂ ಪ್ರಕಟಣೆಗಳನ್ನು ಹೊರತರುತ್ತಿವೆ. ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ಜಾನಪದ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದೇ ಜಾಡಿನಲ್ಲಿ ನಾಡಿನ ಬೇರೆ ಬೇರೆ ಸಂಘ ಸಂಸ್ಥೆಗಳೂ ಕೆಲಸ ಮಾಡುತ್ತಿರುವುದು ಗಮನಾರ್ಹ. ಕರ್ನಾಟಕ ಜಾನಪದ ಪರಿಷತ್ತು, ೬೦ರ ದಶಕದಲ್ಲಿ ತನ್ನ ಚಟುವಟಿಕೆಗಳಿಂದ ನಾಡಿನಾದ್ಯಂತ ಜಾನಪದದತ್ತ ಆಸಕ್ತಿ ಕುದುರಿಸಿತ್ತು. ಪರಿಷತ್ತು ಹೊರತರುತ್ತಿದ್ದ ಜಾನಪದ ಎಂಬ ಪತ್ರಿಕೆ ಜಾನಪದ ಸಂಶೋಧನೆಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆದಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ನಾಟಕ ಜಾನಪದ ಟ್ರಸ್ಟ್, ಉಡುಪಿಯ ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ ಮುಂತಾದ ಸಂಸ್ಥೆಗಳು ೮೦ರ ದಶಕದಿಂದೀಚೆಗೆ ಜಾನಪದ ಅಧ್ಯಯನದಲ್ಲಿ ತೀವ್ರ ಆಸಕ್ತಿ ತಳೆದು ಸಂಶೋಧನೆ, ಪ್ರಕಟಣೆ ಸಂವರ್ಧನೆ, ಕಲಾವಿದರ ಪೋಷಣೆ ಮುಂತಾದ ಕಾರ್ಯಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು ನಾಲ್ಕೂ ನಿಟ್ಟಿನಿಂದ ಜಾನಪದ ಕ್ಷೇತ್ರ ಸುಮುಖವಾಗಿ ಬೆಳೆಯಲು ಕಾರಣವಾಗಿದೆ.

ಜಾನಪದ ಅಧ್ಯಯನಕ್ಕೆ ೬೦ರ ದಶಕದಲ್ಲಿ ಹೊಸ ತಿರುವು ದೊರಕಿದ ಅನಂತರ ಅಪಾರ ಸಂಖ್ಯೆಯ ಉತ್ಸಾಹಿಗಳು ಕ್ಷೇತ್ರಕಾರ್ಯಕ್ಕೆ ತೊಡಗಿ ಗಣನೀಯ ಪ್ರಮಾಣದಲ್ಲಿ ಜಾನಪದ ಕೃತಿರಾಶಿ ಬೆಳಕು ಕಂಡಿದೆ. ೭೦ರ ದಶಕದ ಅನೇಕ ಶೀರ್ಷಿಕೆಗಳು ವಿದ್ವಜ್ಜನರ ಸಂಶೋಧಕರ ಆಸಕ್ತಿಯನ್ನು ಸೆಳೆದಿವೆ. ಹಾ ಮಾ ನಾಯಕ ಅವರು ಸಿದ್ಧಪಡಿಸಿದ ‘ಜಾನಪದ ಗ್ರಂಥಸೂಚಿ’ ೧೯೭೪ರ ವರೆಗಿನ ಜಾನಪದ ಶೀರ್ಷಿಕೆಗಳ ವಿವರಗಳನ್ನು ನೀಡುತ್ತದೆ. ಕಾವ್ಯ, ಲಾವಣಿ, ಕಥೆ, ಐತಿಹ್ಯ, ಭಾಷಾಂತರ ಕೃತಿಗಳು, ಗಾದೆ, ಒಗಟು, ನಾಟಕ, ರಂಗಭೂಮಿ, ವಿಚಾರ, ವಿಮರ್ಶೆ, ಸಂಶೋಧನೆ ಹಾಗೂ ಸಂಕೀರ್ಣ ಸ್ವರೂಪದ ಕೃತಿ ಮಾಲೆಯಲ್ಲಿ ೫೩.೨ ಕೃತಿಗಳು ಕನ್ನಡದಲ್ಲಿ ಪ್ರಕಟಗೊಂಡಿರುವುದನ್ನು ಅಲ್ಲಿ ಲಕ್ಷಿಸಲಾಗಿದೆ. ಇದರ ಮುಂದುವರಿಕೆಯಾಗಿ ಸಿ.ಟಿ. ಗುರುಪ್ರಸಾದ್ ೧೯೭೫ರಿಂದ ೨೦೦೦ ಜನವರಿವರೆಗೆ ಪ್ರಕಟಗೊಂಡಿರುವ ೧೦೧೭ ಜಾನಪದ ಗ್ರಂಥಗಳನ್ನು ‘ಕನ್ನಡ ಜಾನಪದ ಗ್ರಂಥಸೂಚಿ’ಯಲ್ಲಿ ನಮೂದಿಸಿದ್ದಾರೆ. ೨೦೦೦ ಜನವರಿಯಿಂದ ಈ ದಿನಾಂಕದವರೆಗೆ ಅದಕ್ಕೂ ಹೆಚ್ಚು ಕೃತಿಗಳು ಕನ್ನಡದಲ್ಲಿ ಪ್ರಕಟಗೊಂಡಿರುವುದನ್ನು ಇನ್ನೂ ನಮೂದಿಸಬೇಕಾಗಿದೆ.

೭೦ರ ದಶಕದಲ್ಲಿ ಅತ್ಯಂತ ಮಹತ್ವದ ಅಧ್ಯಯನ ನಡೆದಿರುವುದು ವೃತ್ತಿಗಾಯಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕರ್ನಾಟಕದ ಕಾವ್ಯ ಸಂಪ್ರದಾಯಗಳನ್ನು ಕುರಿತು ಸಾಕಷ್ಟು ಅಧ್ಯಯನಗಳು ನಡೆದಿರುವುದು ಗಮನಾಹರಹ, ಕಂಸಾಳೆಯವರು, ನೀಲಗಾರರು, ಚೌಡಿಕೆಯವರು ಮುಂತಾದ ವೃತ್ತಿಗಾಯಕರ ಕಾವ್ಯಗಳು ಸಂಗ್ರಹಗೊಂಡು ಪ್ರಕಟವಾಗಿವೆ. ಈ ಸಂಕಲನಗಳಿಂದ ಕರ್ನಾಟಕದ ಪ್ರಮುಖ ವೃತ್ತಿಗಾಯಕ ಸಂಪ್ರದಾಯಗಳ ಹಿನ್ನೆಲೆ ಹಾಗೂ ಕಾವ್ಯಗಳ ಸ್ವರೂಪ ಮನದಟ್ಟಾಗುತ್ತದೆ. ಜೀಶಂ ಪರಮಶಿವಯ್ಯ, ಪಿ.ಕೆ. ರಾಜಶೇಖರ, ಅಂಬಳಿಕೆ ಹಿರಿಯಣ್ಣ, ಕ್ಯಾಗನಹಳ್ಳಿ ರಾಮಣ್ಣ, ಟಿ.ಎಸ್. ರಾಜಪ್ಪ ಹಾಗೂ ಕನ್ನಡ ವಿವಿ ಪ್ರಯತ್ನಗಳು ಲಕ್ಷ್ಯಾಹರಹವಾಗಿವೆ. ಜೀ.ಶಂ. ಪರಮಶಿವಯ್ಯನವರ ಜನಪದ ಕಾವ್ಯ ಕಥೆಗಳು ಪ್ರಮುಖ ವೃತ್ತಿಗಾಯಕ ಸಂಪ್ರದಾಯಗಳ ಮೇಲೆ ಬೆಳಕು ಚಿಲ್ಲುವ ಕೃತಿ. ಇವರು ಸಂಪಾದಿಸಿರುವ ಮಂಟೇಸ್ವಾಮಿ ಕಾವ್ಯ, ದೊಂಬಿದಾಸರ ಲಾವಣಿಗಳು, ಹೆಳವರ ಕಾವ್ಯಗಳು, ಜನಪದ ವೀರ ಕಾವ್ಯಗಳು, ಪಿರಿಯಾಪಟ್ಟಣದ ಕಾಳಗ, ವೃತ್ತಿಗಾಯಕ ಕಾವ್ಯಗಳು, ವಿವಿಧ ವೃತ್ತಿಗಾಯಕ ಕಾವ್ಯಗಳನ್ನೊಳಗೊಂಡ ಗಮನಾರ್ಹ ಸಂಕಲನಗಳು, ಪಿ.ಕೆ. ರಾಜಶೇಖರ ಅವರು ಸಂಪಾದಿಸಿರುವ ಮಲೆಯ ಮಾದೇಶ್ವರ, ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ ಮೌಖಿಕ ಮಹಾಕಾವ್ಯಗಳು, ವಿವಿಧ ವೃತ್ತಿಗಾಯಕ ಪರಂಪರೆ ಮತ್ತು ಕಾವ್ಯ ಸ್ವರೂಪವನ್ನು ಪರಿಚಯಿಸುವ ಶೀರ್ಷಿಕೆಗಳು ಈ ಅಧ್ಯಯನಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಅಂಬಳಿಕೆ ಹಿರಿಯಣ್ಣನವರ ತಂಬೂದಿ ಸಂಪ್ರದಾಯದ ಕಾವ್ಯಗಳು, ಕಿನ್ನರಿ ಸಂಪ್ರದಾಯದ ಕಾವ್ಯಗಳು, ಚೌಡಿಕೆ ಸಂಪ್ರದಾಯದ ಕಾವ್ಯಗಳು ಹಾಗೂ ಕ್ಯಾತನಹಳ್ಳಿ ರಾಮಣ್ಣ ಅವರು ಸಂಪಾದಿಸಿರುವ ಭೂತೇರು ಮತ್ತು ಗೊಂದಲಿಗರ ಕಥೆಗಳೂ ಕೂಡ ವೃತ್ತಿಗಾಯಕ ಸಂಪ್ರದಾಯದ ಸಾಹಿತ್ಯದ ಸಾಲಿಗೆ ಸೇರುವಂಥವಾಗಿವೆ.

ವೃತ್ತಿಗಾಯಕರ ಈ ಕಾವ್ಯ ಸಂಪ್ರದಾಯಗಳೊಡನೆ ಬೇರೆ ಗೀತ ಸಂಪ್ರದಾಯಗಳ ಬಗೆಗೂ ಅಧ್ಯಯನಗಳು ನಡೆದಿವೆ. ಮಲೆನಾಡು ಮತ್ತು ಬಯಲುನಾಡುಗಳ ಅವಳಿ ಸಂಪ್ರದಾಯಗಳಾದ ಅಂಟಿಕೆ ಪಂಟಿಕೆ ಮತ್ತು ಭಾಗವಂತಿಗೆ ಸಂಪ್ರದಾಯಗಳನ್ನು ಕುರಿತು ಅನೇಕರು ಅಧ್ಯಯನ ನಡೆಸಿದ್ದಾರೆ. ಶ್ರೀಕಂಠಕೂಡಿಗೆ ಹಾಗೂ ಹಿರಿಯಣ್ಣ ಮೇಟಿಕೆರೆ ಅವರ ಪ್ರಯತ್ನಗಳು ಉಲ್ಲೇಖಾರ್ಹವಾಗಿವೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರಚಲಿತವಿರುವ ಆನೇಪೀಣೆ ಸಂಪ್ರದಾಯ ಕುರಿತು ಅರವಿಂದ ಮಾಲಗತ್ತಿ ಅಧ್ಯಯನ ನಡೆಸಿದ್ದಾರೆ. ಒಟ್ಟಿನಲ್ಲಿ ೮೦ ಮತ್ತು ೯೦ರ ದಶಕಗಳಲ್ಲಿ ನಡೆದಿರುವ ಬಹುಮಟ್ಟಿನ ಅಧ್ಯಯನವೆಲ್ಲ ಸಾಹಿತ್ಯಿಕ ಬಗೆಗಳಿಗೆ ಸಂಬಂಧಪಡುತ್ತದೆ. ಗೀತೆ, ಕಥನಗೀತೆ, ಲಾವಣಿ, ಕಥೆ, ಗಾದೆ, ಒಗಟು, ಶಿಶುಪ್ರಾಸ ಹಾಗೂ ರಂಗಕಲೆಗಳಿಗೆ ಸಂಬಂಧಿಸಿದಂತೆ ತಕ್ಕಮಟ್ಟಿಗೆ ಸಂಗ್ರಹಕಾರ್ಯ ಹಾಗೂ ಅಧ್ಯಯನಗಳು ನಡೆದಿವೆ. ಈ ಅವಧಿಯ ವೈಶಿಷ್ಟ್ಯವೆಂದರೆ ಸಂಗ್ರಹ ಸಂಪಾದನೆಗಳಿಗಿಂತ ಅಧ್ಯಯನ ಸಂಶೋಧನೆಗಳ ಮೊತ್ತವೇ ಅಧಿಕವಾಗಿರುವುದು.

೧೯೮೦ರ ದಶಕದಲ್ಲಿ ಹೊರಬಂದು ಕಥನಗೀತ ಸಂಕಲನಗಳ ಪೈಕಿ ಕೃಷ್ಣಮೂತಿ ಹನೂರರ ಕತ್ತಲ ದಾರಿ ದೂರ, ಮಹಾಸತಿಯರು ಮತ್ತು ಸ್ತ್ರೀ ಬಲಿದಾನವನ್ನು ಕುರಿತ ರಚನೆಗಳನ್ನು ಒಳಗೊಂಡಿದೆ. ಸತಿ ಪದ್ಧತಿಯ ಬಗೆಗೆ ಉಪಯುಕ್ತ ವಿವರ ಒದಗಿಸುವ ಈ ಸಂಕಲನ ವಕ್ತೃಗಳ ಸಂದರ್ಶನವನ್ನು ಹೊಂದಿರುವುದು ವಿಶೇಷ. ಇದೇ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಹೊರತಂದಿರುವ ಜೀವನ ಜೋಕಾಲಿ ಮಾಲೆಯ ಕೃತಿಗಳು ಸುಶೀಲ ಪಟ್ಟಣಶೆಟ್ಟಿಯವರ ಗುಣದಮ್ಮನ ಕಥೆ, ಎಲ್. ಆರ್. ಹೆಗಡೆ ಅವರ ತಿಮ್ಮಕ್ಕನ ಪದಗಳು, ಕೆಲವು ಲಾವಣಿಗಳೂ, ಪರಮೇಶ್ವರಿಯ ಪದಗಳು, ಟಿ.ಎಸ್. ರಾಜಪ್ಪ ಸಂಪಾದಿಸಿರುವ ಬೆಳಗಾಂವಿ ಜಿಲ್ಲೆಯ ಲಾವಣಿಗಳು ಗಮನಾರ್ಹವಾಗಿವೆ. ನಿಂಗಣ್ಣ ಸಣ್ಣಕ್ಕಿ ಸಂಪಾದಿಸಿರುವ ಬಾಳಗೋಪಾಳನ ಲಾವಣಿಗಳು ಕಲ್ಗಿ ತುರಾಯಿ ಸಂಪ್ರದಾಯದ ಒಂದು ವಿಶಿಷ್ಟ ಸಂಕಲನ. ಕರಾವಳಿ ಪ್ರದೇಶದ ಕೆಲವು ಲಾವಣಿಗಳನ್ನು ಕೈಲಿಯ ಕರೆದ ನೊರೆ ಹಾಲು ಎಂಬ ಶೀರ್ಷಿಕೆಯಲ್ಲಿ ಗುಂಡ್ಮಿ ಚಂದ್ರಶೇಖರ ಐತಾಳ ಸಂಪಾದಿಸಿಕೊಟ್ಟಿದ್ದಾರೆ. ಇಲ್ಲಿಯ ಕೆಲವು ಲಾವಣಿಗಳು ಅನನ್ಯವಾಗಿದೆ. ಕೊಡಗು ಪ್ರದೇಶದ ಲಾವಣಿಗಳನ್ನು ಕೆರೆ ಹೊನ್ನಮ್ಮ ಮತ್ತು ಇತರೆ ರಾಜಪ್ಪ, ಈ ಅವಧಿಯಲ್ಲಿ ಲಾವಣಿ, ಕಾವ್ಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ತೃಪ್ತಿಕರ ರೀತಿಯಲ್ಲಿ ಅಧ್ಯಯನಗಳು ನಡೆದಿವೆ. ಮರುಳಸಿದ್ಧಪ್ಪ ಬಯಲುಸೀಮೆಯ ಲಾವಣಿಗಳು, ಅಂಬಳಿಕೆ ಹಿರಿಯಣ್ಣನವರ ತೀರ್ಥಹಳ್ಳಿ ರಾಜಶೇಖರ ಅವರ ಬೆಟ್ಟದ ಚಾಮುಂಡಿ ಗಮನಾರ್ಹವಾದವು. ಬಿ. ಸಿದ್ಧಗಂಗಯ್ಯ ಕಂಬಾಳು ಅವರ ಚಂದುಳ್ಳ ಮಕ್ಕಳು ಒಂಬತ್ತು ಕೊಡುಸ್ವಾಮಿ ಜನಪದ ಗೀತೆಗಳನ್ನು ಅಧ್ಯಯನ ದೃಷ್ಟಿಯಿಂದ ಯುಕ್ತ ರೀತಿಯಲ್ಲಿ ಬಿಭಾಗಿಸಿ ಅಭ್ಯಸಿಸಿದ ಸಂಕಲನ. ಮುಖ್ಯವಾಗಿ ಅವಹೇಳನಕ್ಕೆ ಗುರಿಯಾಗಿರುವ ಬಂಜೆತನವನ್ನು ಸಾಮಾಜಿಕ ದೃಷ್ಟಿಕೋನದಿಂದ ಇಲ್ಲಿ ಅಭ್ಯಸಿಸಲಾಗಿದೆ. ಎಂ.ಬಿ. ನಳಿನಿ ಅವರು ಕಾಡುಮಲ್ಲಿಗೆ ಒಂದು ಸುಂದರ ಕಥನಗೀತ ಸಂಕಲನ. ಮಲೆನಾಡಿನ ಗರ್ಭವಾದ ತೀರ್ಥಹಳ್ಳಿ ಸುತ್ತಿನ ವಿರಳ ರಚನೆಗಳು ಇಲ್ಲಿವೆ. ಎನ್.ಆರ್. ನಾಯಕ ಸಂಪಾದಿಸಿರುವ ಹೇಳುತೇವೋ ಗುಮ್ಟೆ ಪದನಾವಾ ಮತ್ತು ಕೂಸಾಯ್ತು ನಮ್ಮ ಕೊಮರಾಗೆ ಸಂಕಲನಗಳು ಅಭ್ಯಾಸ ಯೋಗ್ಯವಾಗಿವೆ. ಒಂದೇ ಪ್ರದೇಶದ ಎಂಟು ಸಮುದಾಯಗಳಲ್ಲಿ ಮದುವೆಯ ವಿಧಿ ವಿಧಾನಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಅಭ್ಯಸಿಸಲು ಈ ಸಂಕಲನ ಸಾಕಷ್ಟು ಸಾಮಗ್ರಿಯನ್ನು ಒದಗಿಸುತ್ತದೆ.

ಚನ್ನಣ್ಣ ವಾಲೀಕಾರ ಸಂಪಾದಿಸಿ ಕೊಟ್ಟಿರುವ ಗುಲಬರ್ಗಾ ಜಿಲ್ಲೆಯ ಮೊಹರಂ ಪದಗಳು ಸಂಕಲನ, ಕನ್ನಡ ಜನಪದ ಗೀತೆಗಳಲ್ಲಿ ಒಂದು ವಿಶಿಷ್ಟ ವರ್ಗಕ್ಕೆ ಸೇರುತ್ತವೆ. ಜನಪದ ಸಾಹಿತ್ಯದಲ್ಲಿ ಹಿಂದು ಮುಸ್ಲಿಂ ಸಾಮರಸ್ಯದ ಅರ್ಥಪೂರ್ಣ ಗೀತೆಗಳಾಗಿ ಉಳಿದುಬಂದಿರುವ ಈ ಕೃತಿ ಒಂದು ಗಮನಾರ್ಹ ಸಂಕಲನ. ಬಿ.ಎಸ್.ತಲ್ವಾಡಿ ಅವರ ಕ್ರೈಸ್ತ ಜನಪದ ಗೀತೆಗಳು ಸಮ್ಮಿಶ್ರ ಸಂಸ್ಕೃತಿಯ ಅಂಗವೆಂದೇ ಹೇಳಬೇಕು. ಕ್ರೈಸ್ತ ಜನಪದ ಗೀತೆಗಳ ರಚನೆಯಲ್ಲಿ ಒಂದು ವಿಚಾರಾರ್ಯ ವಿಶೇಷತೆಯುಂಟು. ಮೈಲಹಳ್ಳಿರೇವಣ್ಣ ಸಂಪಾದಿಸಿರುವ ಚಿತ್ರದುರ್ಗ ಸುತ್ತಿನ ಜನಪದ ಕಾವ್ಯಗಳು ಸ್ತ್ರಿಯರೇ, ಅದರಲ್ಲೂ ಮಾದಿಗ ಸಮುದಾಯದ ಸ್ತ್ರೀಯರು ಹಾಡಿದ ರಚನೆಗಳನ್ನು ಒಳಗೊಂಡಿದೆ.

ಇವೇ ಅಲ್ಲದೆ ಪ್ರಮುಖವಾಗಿ ಹೆಸರಿಸಬೇಕಾದ ಕೆಲವು ಸಂಕೀರ್ಣ ಸ್ವರೂಪದ ಸಂಕಲನಗಳನ್ನೂ ಗಮನಸಿಬೇಕಾಗುತ್ತದೆ. ಎಚ್.ಎಲ್.ನಾಗೇಗೌಡ ಸಂಪಾದಿಸಿದ ಸೋಬಾನೆ ಚಿಕ್ಕಮ್ಮನ ಪದಗಳು ಈ ಅವಧಿಯಲ್ಲಿ ಹೊರಬಂದ ಉತ್ತಮ ಸಂಕಲನಗಳಲ್ಲೊಂದು. ಇಲ್ಲಿ ಒಬ್ಬಳೇ ಅನುಭವಿ ಗಾಯಕಿಯ ಹಾಡುಗಳನ್ನು ಸಂಕಲಿಸಿ ಕೊಡಲಾಗಿದೆ. ಡಿ.ಲಿಂಗಯ್ಯ ಅವರ ಬಯಲುಸೀಮೆಯ ಜನಪದ ಗೀತೆಗಳು ಕೂಡ ವಿವಿಧ ಸಂಪ್ರದಾಯದ ಹಾಡುಗಳು ಮತ್ತು ಹಾಡ್ಗತೆಗಳನ್ನು ತಮ್ಮ ಒಡಲಲ್ಲಿ ಹುದುಗಿಸಿಕೊಂಡಿದೆ. ಇಂಥ ಸಂಕೀರ್ಣ ಸ್ವರೂಪದ ಸಂಕಲನಗಳ ಸಾಲಿನಲ್ಲಿ ಹೆಸರಿಸಲೇಬೇಕಾದ ಹೆಬ್ಬೊತ್ತಗೆ ಮತಿಘಟ್ಟ ಕೃಷ್ಣಮೂರ್ತಿಯವರ ಕನ್ನಡ ಸಾಹಿತ್ಯ ಭಂಡಾರ – ಗೀತೆಗಳು ಎಂಬ ಸಂಕಲನ. ಈ ಸಂಪುಟದಲ್ಲಿ ಸಂಪಾದಕರು ಬಹುಕಾಲದಿಂದ ತಾವು ಸಂಗ್ರಹಿಸಿದ ಗೀತೆಗಳನ್ನೂ ಹಾಡ್ಗತೆಗಳನ್ನೂ ವಿವಿಧ ಸಂಪ್ರದಾಯಗಳಿಗೆ ಸಂಬಂಧಿಸಿದ ಪದಗಳನ್ನೂ ಅಳವಡಿಸಿದ್ದಾರೆ. ಇದೇ ರೀತಿಯಾಗಿ ವೈ.ಸಿ. ಭಾನುಮತಿಯವರ ಪುಟ್ಟ ಮಲ್ಲಿಗೆ ಹಿಡಿ ತುಂಬ ಸಂಕಲನ ಮಲೆನಾಡು ಪ್ರದೇಶದ ವಿವಿಧ ಸಂಪ್ರದಾಯದ ಹಾಡುಗಳು ಮತ್ತು ಹಾಡ್ಗತೆಗಳನ್ನು ಹೊಂದಿದೆ.

ಉತ್ತರ ಕರ್ನಾಟಕದ ಜಿ.ಬಿ. ಖಾಡೆ ಅವರು ಕಾಡು ಹೂಗಳು ಎಂಬ ಶೀರ್ಷಿಕೆಯಲ್ಲಿ ಜಮಖಂಡಿ ಸುತ್ತಿನ ಗೀತೆಗಳನ್ನು ಸಂಕಲಿಸಿರುವಂತೆ ಜ್ಯೋತಿ ಹೊಸೂರ ಅವರು ಬೆರಸಿ ಇಟ್ಟೀನ ಬೆಲ್ಲ ನೆನಗಡಲಿ ಎಂಬ ಸಂಕಲನ ಹೊರತಂದು ಆ ಭಾಗದ ಗೀತೆಗಳ ಕಾವ್ಯ ಸತ್ವವನ್ನು ಪರಿಚಯಿಸಿದ್ದಾರೆ. ಅಂತೆಯೇ ಉತ್ತರ ಕನ್ನಡ ಪ್ರದೇಶದ ಬುಡಕಟ್ಟು ಸಮೂಹಗಳಲ್ಲಿ ಪ್ರಚಲಿತವಿರುವ ಮೌಖಿಕ ಸಾಹಿತ್ಯವನ್ನು ಎಲ್.ಆರ್. ಹೆಗಡೆ, ಎನ್.ಆರ್. ನಾಯಕ ಅವರು ಬಹು ಪರಿಶ್ರಮದಿಂದ ದೊರಕಿಸಿಕೊಟ್ಟಿದ್ದಾರೆ. ಹೆಗಡೆಯವರು ಸಂಪಾದಿಸಿರುವ ಹಾಡುಂಟೆ ತನ್ನ ಮಡಿಲಲ್ಲಿ, ಸುವ್ವಿ ಸುವ್ವಿ ಸುವ್ವಾಲೆ, ಎನ್.ಆರ್.ನಾಯಕ ಸಂಪಾದಿಸಿರುವ ಸುಗ್ಗಿಯ ಪದಗಳು ವಿಶೇಷ ಅಧ್ಯಯನಕ್ಕೆ ಯೋಗ್ಯವಾಗಿವೆ. ಟಿ.ಕೇಶವಭಟ್ಟರ ಹವ್ಯಕರ ಶೋಬಾನೆಗಳು ಹವ್ಯಕರು ಮೈಗೂಡಿಸಿಕೊಂಡಿರುವ ಸದ್ಭಾವನೆ ಸದಾಚಾರಗಳನ್ನು ಬಿಂಬಿಸುತ್ತವೆ. ಅದೇ ೯೦ರ ದಶಕದಲ್ಲಿ ಪ್ರಕಟಗೊಂಡಿರುವ ಕೃಷ್ಣಮೂರ್ತಿ ಹನೂರರ ಜನಪದ ವೀರಗೀತೆಗಳು ಮ್ಯಾಸಬೇಡರು, ಕುಂಚಿಟಿಗರು, ಹರಿಜನರು ಹಾಡಿರುವ ಹಾಡುಗಳನ್ನು ಒಳಗೊಂಡಿದೆ. ಹೀಗಾಗಿ ಅದು ವೈವಿಧ್ಯಮಯವಾಗಿದೆ. ಗಾಯತ್ರೀ ನಾನಡ ಅವರ ಚಿತ್ತಾರ ಬರೆದ ಬದುಕು ಸಮಾಜಶಾಸ್ತ್ರೀಯ ದೃಷ್ಟಿಕೋನವುಳ್ಳದ್ದಾಗಿದೆ. ಸಂಪ್ರದಾಯದ ಹಾಡುಗಳ ಹಿನ್ನೆಲೆಯಲ್ಲಿ ಹೆಣ್ಣಿನ ಒಂದು ಜೀವನಾವರ್ತನವನ್ನು ಗಮನದಲ್ಲಿರಿಸಿಕೊಂಡುಸಂಕಲಿಸಿದ ಕೃತಿ. ಈ ಸಂಕಲನಗಳ ಜೊರೆಗೆ ಇನ್ನೂ ಅನೇಕ ಮಹತ್ವಪೂರ್ಣವಾದ ಗೀತಸಂಕಲನಗಳು ಹೊರಬಂದಿವೆ. ಗುಂಡ್ಮಿ ಚಂದ್ರಶೇಖರ ಐತಾಳ ಸಂಪಾದಿಸಿದ ಮದ್ದುಂಟೆ ಜನದ ಮರಣಕ್ಕೆ ಸಾಕಷ್ಟು ವೈವಿಧ್ಯಮಯ ಸಾಹಿತ್ಯವನ್ನು ಒದಗಿಸುತ್ತದೆ. ಕನ್ನಡ ಜನಪದ ಗೀತೆಗಳ ವೈವಿಧ್ಯ ನಮಗೆ ಆಶ್ಚರ್ಯವನ್ನು ತರುತ್ತವೆ. ಗೀತೆಗಳು, ಗೀತ ಸಂಪ್ರದಾಯಗಳು, ಲಾವಣಿಗಳು, ಲಾವಣಿ ಸಂಪ್ರದಾಯಗಳು ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತೃಪ್ತಿಕರವಾದ ಕೆಲಸ ಕರ್ನಾಟಕದಲ್ಲಿ ಆಗಿದ್ದರೂ ಇನ್ನೂ ಅಪಾರ ಗೀತಸಾಹಿತ್ಯ ಲಭ್ಯವಾಗುವುದರಲ್ಲಿ ಸಂದೇಹವಿಲ್ಲ. ಸಾಮುದಾಯಿಕವಾಗಿ ಪ್ರಾದೇಶಿಕವಾಗಿ ಗೀತ ಸಾಹಿತ್ಯದ ಕ್ರಮಬದ್ಧ ಅಧ್ಯಯನ ಅಗತ್ಯವಾಗಿ ನಡೆಯಬೇಕಾಗಿದೆ.

ಸಂಗ್ರಹ, ಸಂಪಾದನೆ, ಪ್ರಟಕಣೆಯ ದೃಷ್ಟಿಯಿಂದ ಪದ್ಯ ಸಾಹಿತ್ಯದ ಅನಂತರ ಗದ್ಯ ಸಾಹಿತ್ಯವನ್ನು ಗಮನಿಸಬೇಕಾಗುತ್ತದೆ. ಕನ್ನಡ ಜನಪದ ಕಥೆಗಳ ಅಧ್ಯಯನ ಆರಂಭವಾದುದೇ ೭೦ರ ದಶಕದಲ್ಲಿ. ಕಥೆಗಳ ಸಂಗ್ರಹಕಾರ್ಯ ತಡವಾಗಿ ಆರಂಭವಾದರೂ ಸಾಕಷ್ಟು ತೀವ್ರಗತಿಯ ಕೆಲಸ ನಡೆದು ದೊಡ್ಡ ಸಂಖ್ಯೆಯ ಕಥೆಗಳು ಬೆಳಕು ಕಂಡಿವೆ. ಜೀಶಂಪ ಸಂಪಾದಿಸಿರುವ ಕನ್ನಡ ಜನಪದ ಕಥೆಗಳು, ಆಯ್ದ ಜನಪದ ಕಥೆಗಳು, ದಕ್ಷಿಣ ಕರ್ನಾಟಕ ಪ್ರದೇಶದ ಬೇರೆ ಬೇರೆ ಭಾಗಗಳ ಕಥೆಗಳನ್ನೊಳಗೊಂಡ ಸಂಕಲನಗಳು. ರಾಗೌ ಅವರ ಕರ್ನಾಟಕ ಜನಪದ ಕಥೆಗಳು ಇದೇ ಭೂಪ್ರದೇಶದ ಸಮಾಜ – ಸಂಸ್ಕೃತಿಯನ್ನು ಬಿಂಬಿಸುವ ೬೩ ಕಥೆಗಳನ್ನೊಳಗೊಂಡ ಮತ್ತೊಂದು ಮಹತ್ವದ ಸಂಕಲನ. ಎಚ್.ಜೆ.ಲಕ್ಕಪ್ಪಗೌಡ ಸಂಪಾದಿಸಿರುವ ಜನಪದ ಕಥಾವಳಿ ಮೈಸೂರು ಸುತ್ತಿನ ಆಡುಭಾಷೆ ಮತ್ತು ಸಂಸ್ಕೃತಿಯನ್ನು ಯಥಾವತ್ತಾಗಿ ಬಿಂಬಿಸುವ ಕಥೆಗಳ ಒಂದು ಉತ್ತಮ ಸಂಕಲನ. ಜಾನಪದ ಕಥಾಮೃತ – ೧ ಮತ್ತು ಜಾನಪದ ಕಥಾಮೃತ – ೨ ಎಂಬ ಎರಡು ಉತ್ತಮ ಸಂಕಲನಗಳು ಮೂಲಕ ಜನಪದ ಕಥೆಗಳ ವ್ಯಾಪಕ ಅಧ್ಯಯನದ ಕಡೆ ಮೊದಲು ಗಮನ ಸೆಳೆದವರು ಧವಳಶ್ರೀಯವರು. ಕಥೆಗಳ ಮೂಲದ ಭಾಷೆ ಮತ್ತು ನುಡಿಕಟ್ಟುಗಳನ್ನು ಉಳಿಸಿಕೊಳ್ಳುವಲ್ಲಿ ಹಾಗೂ ಕಥೆಗಳ ಮೂಲದ ಸೊಗಡನ್ನು ಹಿಡಿದಿಡುವಲ್ಲಿ ಯೋಜನೆಯಲ್ಲಿ ಕೈಗೆತ್ತಿಕೊಂಡು ಸುಮಾರು ಹದಿನೈದು ಜನಪದ ಕಥಾ ಸಂಕಲನಗಳನ್ನು ಪ್ರಕಟಿಸಿ ಆ ಮೂಲಕ ಕನ್ನಡ ಜನಪದ ಕಥೆಗಳ ಅಧ್ಯಯನಕ್ಕೆ ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ಕೀರ್ತಿ ಮೈಸೂರು ವಿಶ್ವವಿದ್ಯಾನಿಲಯದ್ದು. ಕರಾವಳಿ ಪ್ರದೇಶದ ಮೌಖಿಕ ಸಾಹಿತ್ಯ ಸಂಗ್ರಹ ಅಧ್ಯಯನದಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ಎಲ್.ಆರ್. ಹೆಗಡೆಯವರು ನಮ್ಮ ಜನಪದ ಕಥೆಗಳು, ಉತ್ತರಕನ್ನಡ ಜನಪದ ಕಥೆಗಳು, ಗಿರಿಜನರ ಕಥೆಗಳು, ಸಿದ್ಧಿಯರ ಕಥೆಗಳು ಮುಂತಾದ ಸಂಕಲನಗಳನ್ನು ಪ್ರಕಟಿಸುವುದರ ಮೂಲಕ ಉತ್ತರ ಕನ್ನಡ ಪ್ರದೇಶದ ಸಂಸ್ಕೃತಿಯ ಅಧ್ಯಯನಕ್ಕೆ ಉತ್ತಮ ಸಾಮಗ್ರಿಯನ್ನು ದೊರಕಿಸಿಕೊಟ್ಟಿದ್ದಾರೆ. ಕಥೆಗಳ ಸ್ವಾರಸ್ಯ ಕೆಡದಂತೆ ಆ ಪ್ರದೇಶದ ಆಡುಮಾತಿನಲ್ಲೇ ಯಥಾವತ್ತಾಗಿ ದಾಖಲಿಸುವ ಅವರ ಪ್ರಯತ್ನ ಪ್ರಾಮಾಣಿಕವಾದುದು. ಇದೇ ಬಗೆಯ ಸಂಕಲನಗಳನ್ನು ಹೊರತಂದವರ ಪೈಕಿ ಬಳದೆರೆ ಬೋರೇಗೌಡ, ಡಿ.ಲಿಂಗಯ್ಯ ಮತ್ತು ಜಿ.ವಿ. ದಾಸೇಗೌಡ ಪ್ರಮುಖರು.

೭೦ರ ದಶಕದಲ್ಲಿ ಜನಪದ ಕಥೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಸಂಕಲನಗಳನ್ನು ಹೊರತಂದವರ ಕೃಷಿ ಪೈಕಿ ಸಿ.ವೀರಣ್ಣ ಮತ್ತು ಕೆ.ವೈ. ಶಿವಕುಮಾರ್ ಮುಖ್ಯರು. ಒಬ್ಬನೇ ಕಥೆಗಾರನ ಕಥೆಗಳನ್ನು ಅವುಗಳ ನಿರೂಪಣಾ ವೈವಿಧ್ಯಕ್ಕಾಗಿ ಹಾಗೂ ವಸ್ತುವಿಗಾಗಿ ಸಂಗ್ರಹಿಸಿ ಒಬ್ಬನೇ ಹೇಳಿದ ೨೨ ಜನಪದ ಕಥೆಗಳು ಎಂಬ ಹೆಸರಿನಲ್ಲಿ ಹೊರತಂದವರು ವೀರಣ್ಣ. ಶಿವಕುಮಾರ್ ಅವರು ಎಪ್ಪತ್ತೊಂದು ಜನಪದ ಕಥೆಗಳು ಎನ್ನುವ ಶೀರ್ಷಿಕೆಯಲ್ಲಿ ಒಂದು ಪ್ರದೇಶದ ಕಥೆಗಳನ್ನೆಲ್ಲ ಸಂಗ್ರಹಿಸಿದವರು.

ಜನಪದ ಕಥೆಗಳ ವಿಶಿಷ್ಟ ಸಂಗ್ರಹಗಳೂ ಬೆಳಕು ಕಂಡಿವೆ. ಜೀನಹಳ್ಳಿ ಸಿದ್ಧಲಿಂಗಪ್ಪ ಅವರ ಕಥೆ ಕೇಳೇ ಗುಬಲಾಡಿ ಶಿವಮೊಗ್ಗ ಜಿಲ್ಲೆಯ ಜೀನಹಳ್ಳಿ ಹಾಗೂ ಹೊನ್ನಾಳಿ ತಾಲ್ಲೂಕಿನ ಪರಿಸರದ ಹಳ್ಳಿಗಳಿಂದ ಸಂಗ್ರಹಿಸಿದ ಜನಪದ ಕಥೆಗಳ ಸಂಕಲನ. ಪ್ರಾದೇಶಿಕ ಅನನ್ಯತೆಯನ್ನು ಅರಿಯುವುದಕ್ಕಾಗಿ ಒಂದೊಂದು ಪ್ರದೇಶದ ಕಥೆಗಳ ಸಂಗ್ರಹಕಾರ್ಯ ಕ್ರಮಬದ್ಧವಾಗಿ ನಡೆಯಬೇಕಾಗಿದೆ. ಕುರುವಬಸವರಾಜ್ ಅವರ ಗುಲಗಂಜಿ ಮಾದೇವಿ ಹೊನ್ನಾಳಿ ತಾಲ್ಲೂಕಿನ ಆಸುಪಾಸಿನಲ್ಲಿ ಸಂಗ್ರಹಿಸಿದ ಕಥೆಗಳನ್ನು ಒಳಗೊಂಡಿದೆ. ಈಗಾಗಲೇ ಪ್ರಕಟಗೊಂಡಿರುವ ಕಥೆಗಳ ಭಿನ್ನರೂಪಗಳೊಡಣೆ ಹೊಸ ಮಾದರಿಗಳೂ ಇಲ್ಲಿವೆ. ಇಲ್ಲಿಯ ಅತಿಮಾನುಷ ಮತ್ತು ಕಿನ್ನರ ಕಥೆಗಳು ವಿವಿಧ ಆಶಯಗಳ ಸೇರ್ಪಡಯಿಂದ ಅತಿ ದೀರ್ಘವಾಗಿ ಬೆಳೆದಿರುವುದು ಗಮನಾರ್ಹ. ಒಟ್ಟಾರೆ ಒಂದು ಪ್ರದೇಶದಲ್ಲಿ ಪ್ರಚಲಿತವಿರುವ ಕಥನ ಮಾದರಿಗಳನ್ನು ತಿಳಿಯಲು ಈ ಸಂಕಲನ ಉಪಯುಕ್ತವಾಗಿದೆ. ಬಸವರಾಜ್ ನೆಲ್ಲೀಸ ಅವರ ಹಠಮಾರಿ ಹೆಣ್ಣು ಮತ್ತು ಇತರ ಜನಪದ ಕಥೆಗಳು ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯ ಜನಪದ ಕಥೆಗಳ ಒಂದು ಸಂಕಲನವಾಗಿದ್ದು ವಸ್ತು ಮತ್ತು ಭಾಷೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡುವವರಿಗೆ ಉಪಯುಕ್ತ ಸಾಮಗ್ರಿ ಒದಗಿಸುತ್ತದೆ. ಪ್ರಾದೇಶಿಕ ಭಾಷೆಯ ವೈಶಿಷ್ಟ್ಯ, ಅಲ್ಲಿಯ ಜನರ ಸಾಂಸ್ಕೃತಿಕ ಸ್ತರಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಕಥೆಗಳ ಮತ್ತೊಂದು ಗಮನಾರ್ಹ ಸಂಕಲನ ಅಡವಿಗುಮಾರ ಮತ್ತು ಇತರ ಜನಪದ ಕಥೆಗಳು ಎಂಬ ಶೀರ್ಷಿಕೆಯಲ್ಲಿ ಮೈಲಹಳ್ಳಿರೇವಣ್ಣನವರಿಂದ ಸಂಪಾದಿತವಾಗಿದೆ. ಪ್ರಾದೇಶಿಕ ವೈಶಿಷ್ಟ್ಯ ಉಳಿಸಿಕೊಂಡಿರುವ ಈ ಸಂಕಲನ ವಿಶಿಷ್ಟ ಬಗೆಯ ಕಥೆಗಳನ್ನು ಒಳಗೊಂಡಿದೆ. ಭೌಗೋಳಿಕ ಅಧ್ಯಯನಕ್ಕೆ ಪೂರಕವಾದ ಸಾಮಗ್ರಿಯನ್ನೊದಗಿಸುವ ಸಂಕಲನಗಳೂ ಹೊರಬಂದಿವೆ. ಮಲ್ಲಿಕಾರ್ಜುನ ಕಲಮರಳ್ಳಿ ಅವರ ಕಥೆಗಲು, ವೈ.ಸಿ.ಭಾನುಮತಿ ಅವರ ಇಬ್ಬೀಡಿನ ಜನಪದ ಕಥೆಗಳು ಆ ಮಾದರಿಯ ಕಥಾಸಂಕಲನಗಳು.

ಜಾನಪದದ ಭಾಷಿಕ ಬಗೆಗಳಲ್ಲಿ ಗಾದೆ, ಒಗಟು, ನುಡಿಗಟ್ಟು ಮುಂತಾದ ಕೆಲವು ಪ್ರಕಾರಗಳಲ್ಲಿ ಹೊರಬಂದಿರುವ ಸಂಕಲನಗಳೂ ಗಮನಾರ್ಹವಾಗಿವೆ. ನಮ್ಮ ಆಡುಭಾಷೆಯ ಸತ್ವ ವೈಖರಿಗಳನ್ನು ಅರಿಯುವ ದೃಷ್ಟಿಯಿಂದ ಒಗಟು, ಗಾದೆಗಳ ಸಂಕಲನಗಳು ಪರಿಶೀಲನಾರ್ಹವಾಗಿವೆ. ಕಳೆದ ಶತಮಾನದ ಮಧ್ಯಭಾಗದಿಂದಲೂ ಸಂಗ್ರಾಹಕರ ಮತ್ತು ಅಧ್ಯಯನಾಸಕ್ತರ ಆಸಕ್ತಿಯನ್ನು ಕೆರಳಿಸುತ್ತ ಬಂದ ಸುಪುಷ್ಟ ಕ್ಷೇತ್ರ ಗಾದೆಯದು. ಈ ನಿಟ್ಟಿನಲ್ಲಿ ಎಚ್.ಎಸ್.ಅಚ್ಚಪ್ಪನವರ ಕನ್ನಡ ಗಾದೆಗಳು, ಗ್ರಂಥಸ್ಥ ಗಾದೆಗಳು, ರಾಗೌ ಅವರ ನಮ್ಮ ಗಾದೆಗಳು, ವಿವೇಕ ರೈ ಅವರ ತುಳುಗಾದೆಗಳನ್ನು, ಸುಧಾಕರ ಅವರ ನಮ್ಮ ಸುತ್ತಿನ ಗಾದೆಗಳು, ಲಠ್ಠೆಯವರ ಉತ್ತರ ಕರ್ನಾಟಕ ಗಾದೆಗಳು, ಕಾಳೇಗೌಡ ನಾಗವಾರರ ಬೀದಿ ಮಕ್ಕಳು ಬೆಲದೂ ಮುಂತಾದ ಸಂಕಲನಗಳು ಪ್ರಾದೇಶಿಕ ಗಾದೆಗಳ ಸ್ವರೂಪ ವೈಶಿಷ್ಟ್ಯಗಳನ್ನು ಪರಿಚಯ ಮಾಡಿಕೊಡುವುದರೊಂದಿಗೆ ಕನ್ನಡ ಗಾದೆಗಳ ವೈವಿಧ್ಯದ ಮೇಲೂ ಬೆಳಕು ಚೆಲ್ಲುತ್ತವೆ. ಬಿ.ಕೃಷ್ಣಪ್ಪರೆಡ್ಡಿ ಅವರ ಗ್ರಾಮೀಣ ಗಾದೆಗಳು ಸಂಕಲನದಲ್ಲಿ ಈವರೆಗಿನ ಪ್ರಕಟಣೆಗಳಲ್ಲಿ ಸೇರಿರದ ಸುಮಾರು ೧೨೨೪ ಗಾದೆಗಳನ್ನು ಅಳವಿಡಿಸಿಕೊಟ್ಟಿದ್ದಾರೆ. ಇಲ್ಲಿಯ ಬಹುಮಟ್ಟಿನ ಗಾದೆಗಳು ಸಹಜ ಜನಪದ ಸೊಗಡಿನಿಂದ ಕಂಗೊಳಿಸುತ್ತವೆ. ಲಿಪಿಯೇ ಇಲ್ಲದ ಲಂಬಾಣಿಗಳ ೨೦೦ ಕ್ಕೂ ಹೆಚ್ಚಿನ ಗಾದೆಗಳನ್ನು ಕನ್ನಡ ಅನುವಾದದೊಡನೆ ಸಣ್ಣರಾಮ ಲಂಬಾಣಿ ಗಾದೆಗಳು, ಎಂಬ ಶೀರ್ಷಿಕೆಯಲ್ಲಿ ಹೊರತಂದಿದ್ದಾರೆ. ಲಂಬಾಣಿಗರ ಆಚಾರವಿಚಾರ, ನ್ಯಾಯನೀತಿ ಧೋರಣೆ, ಸಂಪ್ರದಾಯ ಮೊದಲಾದವುಗಳನ್ನು ಈ ಗಾದೆಗಳಲ್ಲಿ ಗುರುತಿಸಬಹುದಾಗಿದೆ. ಅಲ್ಲಲ್ಲಿ ಗಾದೆಗಳಿಗೆ ಸಂಬಂಧಿಸಿದಂತೆ ಜನಪದ ಕಥೆಗಳನ್ನೂ ನಿರೂಪಿಸಲಾಗಿದೆ. ಪಿ.ಕೆ. ರಾಜಶೇಖರ ಅವರ ಭೂಮಿ ತೂಕದ ಮಾತು ೧೫೦೧ ಗಾದೆಗಳನ್ನು ಒಳಗೊಂಡ ಒಂದು ಗಾದೆ ಸಂಕಲನ. ಸಾಮಾಜಿಕ ಹಾಗೂ ಭಾಷಿಕ ಕಾರಣಗಳಿಂದ ಇದೊಂದು ಉತ್ತಮ ಅಧ್ಯಯನ ಯೋಗ್ಯ ಸಂಕಲನ.

ಒಗಟುಗಳ ಕ್ಷೇತ್ರದಲ್ಲಿಯೂ ಗಾದೆಗಳಂತೆಯೇ ಸಂಗ್ರಹಕಾರ್ಯ ನಡೆದಿರುವುದು ಕಂಡುಬರುತ್ತದೆ. ಕನ್ನಡ ಒಗಟುಗಳ ಸಂಗ್ರಹಕ್ಕೆ ಪ್ರೇರಣೆ ನೀಡಿದ ಜೀಶಂಪ ಅವರ ಕನ್ನಡ ಒಗಟುಗಳು ಪ್ರಕಟವಾದ ಮೇಲೆ ಅನೇಕ ಸಂಕಲನಗಳು ಹೊರಬಂದಿವೆ. ಲಕ್ಕಪ್ಪಗೌಡ ಅವರ ಒಗಟಗಳು, ವಿವೇಕ ರೈ ಅವರ ತುಳು ಒಗಟುಗಳು, ರಾಗೌ ಅವರ ನಮ್ಮ ಒಗಟುಗಳು, ಸೋಮಶೇಖರ ಇಮ್ರಾಪುರ ಅವರ ಸಾಲಿನ ಒಗಟುಗಳು, ಸುಧಾಕರ ಅವರ ಬೆಡಗಿನ ವಚನಗಳು, ನಂ.ನಾರಾಯಣಗೌಡ ಅವರ ಜನಪದ ಒಗಟುಗಳು, ಎಂ.ಎಸ್.ಲಠ್ಠೆ ಅವರ ಉತ್ತರ ಕರ್ನಾಟಕದ ಒಗಟುಗಳು ಮುಂತಾದ ಸಂಕಲನಗಳು ಉಲ್ಲೇಖಾರ್ಹವಾದವು. ವೀರಣ್ಣರಾಜೂರ ಮತ್ತಿತರರು ಪ್ರಕಟಿಸಿರುವ ಜಾನಪದ ಜಾಣ್ಮೆ ಪರಿಶೀಲನ ಯೋಗ್ಯವಾದ ಕೃತಿ. ಜನಪದರ ಅನುಭವ ಗಣಿಗಳಾಗಿರುವ ಜನಪದ ಲೆಕ್ಕಗಳನ್ನು ಕುರಿತಂತೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಮೊದಲಬಾರಿಗೆ ಸಂಗ್ರಹಗೊಂಡಿರುವ ೧೯೬ ಒಗಟುಗಳು ಇಲ್ಲಿವೆ. ಲೆಕ್ಕಗಳಲ್ಲಿ ಹೆಚ್ಚು ವೈವಿಧ್ಯವಿರುವ ಜಾನಪದ ಜಾಣ್ಮೆ ಅಭ್ಯಾಸಯೋಗ್ಯವಾಗಿದೆ. ಜೀನಹಳ್ಳಿ ಸಿದ್ಧಲಿಂಗಪ್ಪ ಸಂಪಾದಿತ ಜಾಣಗಣಿತ ಮತ್ತು ಭಾಷಾ ಚಮತ್ಕಾರ ಅದೇ ಸಾಲಿಗೆ ಸೇರುವ ಮತ್ತೊಂದು ಗಮನಾರ್ಹ ಸಂಕಲನ.

ಮೇಲಿನ ಪ್ರಮುಖ ಪ್ರಕಾಗಳೊಂದಿಗೆ ಇನ್ನೂ ಕೆಲವು ಪ್ರಕಾರಗಳತ್ತ ಸಂಗ್ರಾಹಕರು ಗಮನಹರಿಸಿದ್ದಾರೆ. ಜನಪದ ಭಾಷಿಕ ಬಗೆಗಳಲ್ಲಿ ಒಡಪು ಮುಖ್ಯವಾದ ಒಂದು ಬಗೆ. ಜನಪದ ಪ್ರಾಸ ವ್ಯಾಮೋಹವೇ ಒಡಪು ರಚನೆಗಳಲ್ಲಿ ಎದ್ದು ಕಾಣುವ ಆಕರ್ಷಣೆ. ಜನಪದ ಬುದ್ಧಿಮತ್ತೆಯ ದ್ಯೋತಕ ಎನಿಸುವ ಇವುಗಳ ಸಂಗ್ರಹವೂ ನಡೆದಿದೆ. ಹೆಸರು ಹೇಳ್ತೀನಿ ಒಡಪು ಕಟ್ಟಿ, ಒಲವಿನ ಒಡಪುಗಳು ಪತಿ – ಪತ್ನಿಯರ ಹೆಸರುಗಳನ್ನು ಹೇಳುವಾಗ ಬಳಸುವ ಪದ್ಯರೂಪದ ರಚನೆಗಳನ್ನು ಪರಿಚಯಿಸುತ್ತವೆ. ಎಂ.ಎಸ್.ಲಠ್ಠೆ ಅವರ ಉತ್ತರ ಕರ್ನಾಟಕದ ಒಡಪುಗಳು, ಶಾಂತಾ ಇಮ್ರಾಪುರರ ಜನಪದ ಒಡಪುಗಳು, ಸಾಹಿತ್ಯಾನಂದ ಅವರ ಬಳ್ಳಾರಿ ಜಿಲ್ಲೆಯ ಒಡಪುಗಳು ಉಲ್ಲೇಖನೀಯ. ಶಂಕರಾನಂದ ಉಲ್ಲಾಸರ ಜನಪದ ಒಡಪುಗಳು ಬಿಜಾಪುರ ಜಿಲ್ಲೆಯಲ್ಲಿ ಪ್ರಚಲಿತವಿರುವ ಒಡಪುಗಳ ಒಂದು ಸಂಕಲನ. ಆ ಪ್ರದೇಶದ ಪ್ರಾದೇಶಿಕ ಭಾಷಾ ಸೊಗಡನ್ನು ಪಡೆದ ಈ ಕೃತಿಯಲ್ಲಿ ನವೀನತೆ ಇದೆ. ಜಂಬುನೇರಲೆ ಹಣ್ಣು ಜಗ್ಗಿ ಬಿದ್ದಾವೆ ಜನಪದರ ಜಾಣ್ಮೆ ಕೌಶಲ ಚಾತುರ್ಯಗಳನ್ನು ಸಮರ್ಥವಾಗಿ ಬಿಂಬಿಸುವ ಮೈಲಹಳ್ಳೀರೇವಣ್ಣನವರ ಕೃತಿ.

ಸಾಹತ್ಯೇತರ ಜಾನಪದ ಪ್ರಕಾರಗಳ ಸಂಬಂಧ ನಡೆದಿರುವ ಅಧ್ಯಯನವಂತೂ ಗುಣ ಮತ್ತು ಗಾತ್ರ ಎರಡೂ ದೃಷ್ಟಿಯಿಂದ ಗಮನಾರ್ಹ. ನಂಬಿಕೆ ಮತ್ತು ಸಂಪ್ರದಾಯಗಳ ವಿಷಯದಲ್ಲಿ ಸಂಶೋಧನ ಆಸಕ್ತಿ ಕಾಣಿಸಿಕೊಂಡಿದ್ದು ವಿಶೇಷ. ಡಿ.ಕೆ. ರಾಜೇಂದ್ರ ಅವರ ನಮ್ಮ ಸ್ತುತಿನ ನಂಬಿಕೆಗಳು, ಜಿ.ವಿ.ದಾಸೇಗೌಡ ಅವರ ನಮ್ಮ ಜನಪದ ನಂಬಿಕೆಗಳು, ರಾಗೌ ಮತ್ತು ಇತರರ ಜನಪದ ನಂಬಿಕೆಗಳು ಎಲ್ಲ ಪ್ರದೇಶಗಳ ನಂಬಿಕೆ ಸಂಪ್ರದಾಯಗಳ ಅಧ್ಯಯನಕ್ಕೆ ಒತ್ತಾಸೆ ನೀಡಿದವು.

ಅಂಬಳಿಕೆ ಹಿರಿಯಣ್ಣನವರ ಮಲೆನಾಡಜನಪದ ಸಂಪ್ರದಾಯಗಳು, ಚಲುವೇಗೌಡರ ಕೆಲವು ಜನಪದ ಸಂಪ್ರದಾಯಗಳು, ಸತ್ಯನಾರಾಯಣ ಅವರ ಈಡಿಗ ಜನಪದ ಸಂಪ್ರದಾಯಗಳು, ವೈ.ಸಿ. ಭಾನುಮತಿಯವರ ಮಲೆನಾಡ ಶೈವ ಒಕ್ಕಲಿಗರು, ತೀ.ನಂ.ಶಂಕರನಾರಾಯಣ ಅವರ ಕಾಡುಗೊಲ್ಲರ ನಂಬಿಕೆ ಮತ್ತು ಸಂಪ್ರದಾಯಗಳು, ಅರವಿಂದ ಮಾಗತ್ತಿಯವರ ಕೊರಗಜನಾಂಗ ಅಧ್ಯಯನ ಮೊದಲಾದ ಕೃತಿಗಳು ಕರ್ನಾಟಕದ ಬೇರೆ ಬೇರೆ ಭಾಗದ ಜನಸಮೂಹಗಳ ಜೀವನ ವಿಧಾನ ಮತ್ತು ಜ್ಞಾನ ಪರಂಪರೆಯನ್ನು ಅರಿಯಲು ಸಹಾಯಕವಾಗಿವೆ. ಜನಪದ ವೈದ್ಯ ಪದ್ಧತಿಗೆ ಸಂಬಂಧಿಸಿದಂತೆ ಹೊರಬಂದಿರುವ ಕೃತಿಗಳು ಆಯಾ ಪ್ರದೇಶದ ಜನರ ವೈದ್ಯಕೀಯ ಜ್ಞಾನ ಪರಿಜ್ಞಾನಗಳನ್ನು ಪರಿಚಯಿಸುತ್ತವೆ. ಪಿ.ವಿ. ನಾಯಕ ಅವರ ಅಳಲೆಕಾಯಿ, ಬೋಳೂರು ಎಸ್. ರಾವ್ ಅವರ ಊರ ಔಷಧಿಗಳು ಮತ್ತು ಇತರ ಉಪಯುಕ್ತ ಸೂಚನೆಗಳು, ಬಳ್ಕೂರು ಸುಬ್ರಾಯ ಅಡಿಗರ ಗೃಹವೈದ್ಯ, ಕೊರಡ್ಕಲ್ ವೆಂಕಟರಾವ್ ಅವರ ಮನೆಯದ್ದು, ಎಂ.ಜಿ.ಮುತ್ತೂರು ಅವರ ಹಳ್ಳಿಯ ವೈದ್ಯ, ಮಳಲಿ ವಸಂತಕುಮಾರ ಅವರ ಕರ್ನಾಟಕ ಜನಪದ ವೈದ್ಯ, ಎಲ್.ಆರ್. ಹೆಗಡೆ ಅವರ ಜನಪದ ವೈದ್ಯ ಮುಂತಾದವು ಗಮನಾರ್ಹ ಕೃತಿಗಳಾಗಿವೆ.

ಆಭರಣಗಳ ಅಧ್ಯಯನವೂ ಪರಂಪರಾಜ್ಞಾನದ ವ್ಯಾಪ್ತಿಗೆ ಬರುತ್ತದೆ. ದಾನೇಶ ಎ.ಚೆಕ್ಕಿ ಅವರ ಆಭರಣಗಳ ಬಗೆಗೆ ಸಾಮಾಜಿಕ ದೃಷ್ಟಿಕೋನಗಳು, ಕೆ.ಸೌಭಾಗ್ಯವತಿಯವರಮೈಸೂರು ನಗರದ ಜನಪದ ಆಭರಣಗಳ ಅಧ್ಯಯನ, ಹೇಮಲತಾ ಅವರ ಸೌಭಾಗ್ಯ ಚಿಹ್ನೆಗಳು, ಇವು ಕೆಲವು ಜನಪದ ಆಭರಣ ಸಂಪ್ರದಾಯಗಳನ್ನು ಕುರಿತ ಕೃತಿಗಳು. ಸವಿತಾನಾಯಕ ಅವರ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಪ್ರಸಾಧನಗಳು ಕೂಡ ಇದೇ ಸಾಲಿಗೆ ಸೇರುವ ಗ್ರಂಥ. ಬುಡಕಟ್ಟು ಸಮೂಹಗಳಲ್ಲಿ ಪ್ರಚಲಿತವಿರುವ ಪ್ರಸಾಧಗಳ ವಿವರಣಾತ್ಮಕ ಅಧ್ಯಯನ ಇಲ್ಲಿದೆ.

ಕ್ಷೇತ್ರವಿಜ್ಞಾನ ಎನಿಸಿರುವ ಜಾನಪದಕ್ಕೆ ಸಂಬಂಧಿಸಿದಂತೆ ಕ್ರಮಬದ್ಧವಾದ ಸಂಗ್ರಹಕಾರ್ಯ ನಡೆಯಬೇಕಾದುದು ಅನಿವಾರ್ಯ. ಅದರ ಜೊತೆ ಜೊತೆಯಲ್ಲೇ ಅಧ್ಯಯನ ಕಾರ್ಯವೂ ನಡೆಯಬೇಕಾದುದು ಅತ್ಯಗತ್ಯ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದಲ್ಲಿ ಈವರೆಗೆ ನಡೆದಿರುವ ಜಾಣಪದ ಅಧ್ಯಯನ ಇನ್ನೂ ಬೇರೆ ಬೇರೆ ಆಯಾಮಗಳಲ್ಲಿ ಬೆಳವಣಿಗೆಯನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ. ಅದೇನೇ ಇರಲಿ, ಜನಪದ ಪ್ರದರ್ಶಕ ಕಲೆಗಳ ಸಂಬಂಧವಾಗಿ ನಡೆದಿರುವ ಅಧ್ಯಯನ ಸಾಕಷ್ಟು ವ್ಯಾಪಕವೂ ಗಂಭೀರವೂ ಆಗಿದೆ. ಕರಾವಳಿ ಪ್ರದೇಶದ ವಿದ್ವಾಂಸರ ವಿಶೇಷ ಆಸಕ್ತಿಯ ಫಲವಾಗಿ ರಂಗಕಲೆಗಳ ಅಧ್ಯಯನ ಸಾಕಷ್ಟು ಸಮಾಧಾನಕರ ರೀತಿಯಲ್ಲೇ ನಡೆದಿದೆ. ಶಿವರಾಮಕಾರಂತರ ಯಕ್ಷಗಾನ ಬಯಲಾಟ ಕೃತಿಗಳು, ಕುಕ್ಕಿಲ ಕೃಷ್ಣಭಟ್ಟರ ಪಾರ್ತಿಸುಬ್ಬನ ಯಕ್ಷಗಾನಗಳು, ಆರ್.ಜಿ. ಕುಲಕರ್ಣಿ ಮತ್ತು ಎಂ.ಎಸ್. ಸುಂಕಾಪುರ ಅವರ ಶ್ರೀಕೃಷ್ಣಪಾರಿಜಾತ, ಕು.ಶಿ. ಹರಿದಾಸ ಭಟ್ಟರ ಸಮಗ್ರ ಯಕ್ಷಗಾನ, ಪರಂಪರೆ ಮತ್ತು ಪ್ರಯೋಗ, ಬಸವರಾಜಮಲಸೆಟ್ಟಿಯವರ ಉತ್ತರ ಕರ್ನಾಟಕದ ಬಯಲಾಟಗಳು, ಕೆ.ಆರ್.ದುರ್ಗಾದಾಸ ಅವರ ಬಳ್ಳಾರಿ ಜಿಲ್ಲೆಯ ಬಯಲಾಟಗಳು, ಕೆ.ಆರ್.ದುರ್ಗಾದಾಸ ಅವರ ಬಳ್ಳಾರಿ ಜಿಲ್ಲೆಯ ಬಯಲಾಟಗಳು, ಎನ್.ಆರ್.ನಾಯಕ ಅವರ ಕನ್ನಡ ಬಯಲಾಟ ಪರಂಪರೆ, ಡಿ.ಕೆ. ರಾಜೇಂದ್ರ ಅವರ ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ, ಪ್ರಭಾಕರ ಜೋಷಿಯವರ ಜಾಗರ, ಕೇದಗೆ ಇವೇ ಮುಂತಾದವು. ಯಕ್ಷಗಾನ ಬಯಲಾಟಗಳನ್ನು ಕುರಿತು ಹೊರಬಂದಿರುವ ಮಹತ್ತ್ವದ ಸಂಶೋಧನ ಕೃತಿಗಳು.

ಕರ್ನಾಟಕದ ವಿವಿಧ ಜನಪದ ಕಲೆ, ಆಚರಣೆ, ಸಂಪ್ರದಾಯಗಳನ್ನು ಕುರಿತು ಹಲವಾರು ರೀತಿಯ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ಜನಪದ ಕಲೆಗಳ ಕೋಶ ಸಮಗ್ರ ಕರ್ನಾಟಕ ವ್ಯಾಪ್ತಿಯ ಕಲೆಗಳ ಸ್ಥೂಲ ಪರಿಚಯ ಮಾಡಿಕೊಡುವ ವಿವರಣಾತ್ಮಕ ಕೋಶವಾಗಿದೆ. ಹಿ.ಚಿ.ಬೋರಲಿಂಗಯ್ಯ ಅವರ ಸಂಪಾದಕತ್ವದಲ್ಲಿ ಹೊರಬಂದ ಗ್ರಂಥ ಅದು. ಗೊ.ರು.ಚನ್ನಬಸಪ್ಪ ಅವರ ಕರ್ನಾಟಕ ಜನಪದ ಕಲೆಗಳು, ಎಸ್‌.ಸಿ. ಪಾಟೀಲ ಅವರ ಕರ್ನಾಟಕ ಜನಪದ ಚಿತ್ರಕಲೆ, ವಿ.ಎಂ. ಚಂದ್ರಶೇಖರಯ್ಯನವರ ಕರ್ನಾಟಕ ಕರಕುಶಲ ಕಲೆಗಳು ಕರ್ನಾಟಕದ ಚಿತ್ರಕಲೆ ಮತ್ತು ಕರಕುಶಲ ಕಲೆಗಳ ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸುವ ಗ್ರಂಥಗಳಾಗಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಲೋಕ, ಉಡುಪಿಯ ಪ್ರಾದೇಶಿಕ ಜನಪದ ರಂಗಕಲೆಗಳ ಕೇಂದ್ರ ಇವೇ ಮುಂತಾದ ಸಂಸ್ಥೆಗಳ ಕರ್ನಾಟಕದ ವಿವಿಧ ಬುಡಕಟ್ಟು ಸಮೂಹಗಳು ಹಾಗೂ ಅವುಗಳ ಸ್ಥಳೀಯ ಜ್ಞಾನ ಪರಂಪರೆಯ ದಾಖಲೀಕರಣಕ್ಕೆ ನೀಡಿರುವ ಕೊಡುಗೆ ಸಾಧಾರಣವಾದುದಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿ ಉಪಸಂಸ್ಕೃತಿ ಅಧ್ಯಯನ ಮಾಲೆಯಲ್ಲಿ ಹೊರತಂದಿರುವ ಮೂವತ್ತಮೂರು ಬುಡಕಟ್ಟು ಸಂಸ್ಕೃತಿ ಕುರಿತು ಕೃತಿಗಳು ವಿಶೇಷ ಉಲ್ಲೇಖನೀಯ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಕರ್ನಾಟಕ ಬುಡಕಟ್ಟುಗಳನ್ನು ಕುರಿತಂತೆ ಎರಡು ಸಂಪುಟಗಳನ್ನು ಹೊರತಂದಿದೆ. ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಮಾಲೆಯಲ್ಲಿ ಹೊರತಂದಿರುವ ಮೌಖಿಕ ಮಹಾಕಾವ್ಯಗಳು ಬುಡಕಟ್ಟು ಜನರ ಜ್ಞಾನ ಪರಂಪರೆಯ ಪರಿಚಯಕ್ಕೆ ಸಹಾಯಕವಾಗಿದೆ.

ಜನಪದ ಸಂಸ್ಕೃತಿ ಚಿಂತನೆಗೆ ಈಚಿನ ದಿನಗಳಲ್ಲಿ ಹೆಚ್ಚಿನ ಒಲವು ಕಂಡುಬರುತ್ತಿದೆ. ಜಾನಪದ ಕಾವ್ಯಾಸಕ್ತರು, ಸಂಸ್ಕೃತಿ ಚಿಂತಕರು ವಿಶೇಷವಾಗಿ ದೇಶ್ಯಮೂಲವಾದ ಜ್ಞಾನಕ್ಕೆ ಒತ್ತು ಕೊಟ್ಟು ಅಧ್ಯಯನ ನಡೆಸುತ್ತಿದ್ದಾರೆ. ಮೌಖಿಕ ಸಾಹಿತ್ಯ, ಸಂಸ್ಕೃತಿಯನ್ನು ಗಂಭೀರ ಪರಿಶೀಲನೆಗೆ ಒಡ್ಡಿ ನಾಡು, ನುಡಿ ಸಂಸ್ಕೃತಿಯ ಬಗೆಗೆ ಸಮಾಜದ ಎಲ್ಲ ವರ್ಗದ ಜನರ ಗಮನ ಸೆಳೆಯಲಾಗುತ್ತಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡವರಲ್ಲಿ ವಿವೇಕರೈ, ಸಿ.ಎನ್. ರಾಮಚಂದ್ರನ್, ಕಿ.ರಂ. ನಾಗರಾಜ, ಹಿ.ಚಿ.ಬೋರಲಿಂಗಯ್ಯ, ಮೊಗಳ್ಳಿ ಗಣೇಶ್, ಬಸವರಾಜ ಮಲಸೆಟ್ಟಿ, ಕೆ.ಆರ್. ದುರ್ಗಾದಾಸ್, ಖಂಡೋಬಾ ಡಿ.ಬಿ. ನಾಯಕ, ವೀರಣ್ಣ ದಂಡೆ, ತೀ.ನಂ. ಶಂಕರನಾರಾಯಣ, ಪುರುಷೋತ್ತಮ ಬಿಳಿಮಲೆ, ಎಚ್.ಎಸ್. ರಾಮಚಂದ್ರೇಗೌಡ, ಆರ್.ವಿ.ಎಸ್. ಸುಂದರಂ, ಕೃಷ್ಣಮೂರ್ತಿ ಹನೂರು, ಎಂ.ಎಂ. ಕಲಬುರ್ಗಿ, ಎಂ. ಚಿದಾನಂದ ಮೂರ್ತಿ, ಸಿ.ಪಿ.ಕೆ. ರಾಗೌ, ಶಿವನಾಂದ ಗುಬ್ಬಣ್ಣವರ, ಎಸ್.ಎಸ್. ಹಿರೇಮಠ, ಅಂಬಳಿಕೆ ಹಿರಿಯಣ್ಣ ಇವರೇ ಮುಂತಾದವರ ಪ್ರಯತ್ನಗಳು ಗಮನಾರ್ಹವಾಗಿದೆ.

ಕರ್ನಾಟಕ ಜಾನಪದ ಅಧ್ಯಯನ ಮೇಲೆ ವಿಶೇಷ ಪ್ರಭಾವ ಬೀರಿದ ಸುವರ್ಣ ಸಂಚಯ, ಹೊನ್ನ ಬಿತ್ತೇವು ಹೊಲಕೆಲ್ಲ, ಕರ್ನಾಟಕ ಜಾನಪದ. ಸುವರ್ಣ ಸಂಪುಟ ಭಾಗ – ೧ ಮತ್ತು ಭಾಗ – ೨ ಸಂಪುಟಗಳು ವಿಶೇಷ ಉಲ್ಲೇಖಾರ್ಹವಾಗಿವೆ. ಈ ಸಂಪುಗಳಿಗಾಗಿ ಶ್ರಮಿಸಿದ ಹಾ.ಮಾ.ನಾಯಕ, ಗೊ.ರು.ಚನ್ನಬಸಪ್ಪ, ಜೀ.ಶಂ.ಪರಮಶಿವಯ್ಯ, ವಿಲಿಯಂ ಮಾಡ್ತಾ ಇವರೇ ಮುಂತಾದವರ ಪರಿಶ್ರಮ ಅನನ್ಯ, ಅನುಕರಣೀಯ ಕರ್ನಾಟಕ ಜಾನಪದದ ವಿವಿಧ ಮುಖಗಳನ್ನು ಅವುಗಳ ವ್ಯಾಪ್ತಿ ವಿಸ್ತಾರದೊಂದಿಗೆ ಪರಿಚಿಯಿಸುವುದರೊಂದಿಗೆ ಜಾನಪದ ಅಧ್ಯಯನಕ್ಕೆ ಪೂರಕವಾದ ಅನೇಕ ವಿಚಾರಗಳನ್ನು ಒಳಗೊಂಡ ಈ ಪ್ರಕಟಣೆಗಳು ಒಂದೊಂದು ದೊಡ್ಡ ಸಾಧನೆ ಎಂದೇ ಹೇಳಬೇಕು. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಜಾನಪದ ಸಾಹಿತ್ಯ ದರ್ಶನ ಸಂಪುಗಳು ಹೊರ ತಂದಿರುವ ಜಾನಪದ ಸಾಹಿತ್ಯ ದರ್ಶನ ಸಂಪುಟಗಳು ಕೂಡ ಈ ನಿಟ್ಟಿನ ಉತ್ತಮ ಕೊಡುಗೆಗಳೇ ಆಗಿವೆ. ಈ ಎಲ್ಲ ಪ್ರಕಟಣೆಗಳು ಕರ್ನಾಟಕದಲ್ಲಿ ಜಾನಪದ ಸಂಗ್ರಹ, ಅಧ್ಯಯನಗಳು ಆಳವಾಗಿ, ಗಂಭೀರ ನೆಲೆಯಲ್ಲಿ ನಡೆಯಲು ಪ್ರೇರಣೆ ಒದಗಿಸಿವೆ.

ವಾಸ್ತವವಾಗಿ ಕರ್ನಾಟಕದಲ್ಲಿ ಜಾನಪದದ ವೈಜ್ಞಾನಿಕ ಅಧ್ಯಯನ ಆರಂಭಗೊಂಡದ್ದು ೨೦ನೇ ಶತಮಾನದ ೬೦ರ ದಶಕದಲ್ಲಿ. ಪ್ರಕೃತ ಅಧ್ಯಯನ ಕನ್ನಡದಲ್ಲಿ ಈವರೆಗೆ ನಡೆದ ಜಾನಪದ ಅಧ್ಯಯನದ ವಿವಿಧ ಮಜಲುಗಳನ್ನು ಈವರೆಗೆ ನಡೆದ ಜಾನಪದ ಅಧ್ಯಯನದ ವಿವಿಧ ಮಜಲುಗಳನ್ನು ಸ್ಥೂಲವಾಗಿ ಪರಿಚಯಿಸುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಈ ಅಧ್ಯಯನಕ್ಕೆ ದೊರೆತ ಆದ್ಯತೆ. ಈಗೀಗ ಈ ಅಧ್ಯಯನ ರೂಪುಗೊಳ್ಳುತ್ತಿರುವ ಬಗೆಯನ್ನು ಗಮನಿಸಿದಾಗ ಕರ್ನಾಟಕ ಜಾನಪದ ಅಧ್ಯಯನ ಅರ್ಥಪೂರ್ಣವಾಗಿ ಸಾಗುತ್ತಿದೆ ಎಂದು ಹೇಳಬಹುದು.

– ಎ.ಎಚ್.