ಕಪಿಲಿ ಪಾಟಲು ವ್ಯವಸಾಯ ಸಂಬಂಧವಾದ ಕೆಲಸ ಕಾರ್ಯಗಳಲ್ಲಿ ಕಪಿಲಿ ಪಾಟಲು ಅಥವಾ ಏತದ ಹಾಡುಗಳು ವಿಶಿಷ್ಟವಾದುವು. ಕಪಿಲೆ ನೀರು ಕೊಡಲು ಉಪಯೋಗಿಸುವ ದೊಡ್ಡ ಗಾತ್ರದ ಪಾತ್ರೆ. ಕಪಿಲೆಯಲ್ಲಿ ನೀರು ತೋಡುವಾಗ ಹಾಡುವ ಹಾಡುಗಳೇ ಕಪಿಲೆ ಹಾಡುಗಳು. ‘ಕಪಿಲೆ’ ಎಂಬ ಶಬ್ದಕ್ಕೆ ‘ಕಪಿಲಿ’ ಅನ್ನುವುದು ಆಡುನುಡಿ. ರಾಯಲ ಸೀಮೆಯಲ್ಲಿ ಕಪಿಲೆ ಬಾವಿಗಳು ಅಧಿಕ, ಅದರಲ್ಲೂ ಅನಂತಪುರ ಜಿಲ್ಲೆಯಲ್ಲಿ ಇವು ಹೆಚ್ಚು ಸಾಧಾರಣವಾಗಿ ರೈತರು ಬೆಳಗಿನ ಜಾವವೇ ಎದ್ದು ಕಪಿಲೆ ಬಾವಿಗಳಲ್ಲಿ ನೀರು ತೋಡುವುದು ಪದ್ಧತಿ. ಇದರಲ್ಲಿ ಎತ್ತುಗಳ ಸಹಕಾರ ಬಹಳ ಮುಖ್ಯ.

ಕಪಿಲೆ ತೋಡುವ ಜನರಲ್ಲಿ ಒಬ್ಬ ಬಾವಿಯ ಬಳಿಗೆ ಹಗ್ಗವನ್ನು ಹಿಡಿದುಕೊಂಡು ಬಂದು ಬಾವಿಯೊಳಗೆ ಅದನ್ನು ಬಿಡುತ್ತಾನೆ. ಆ ಸಮಯದಲ್ಲಿ ರಾಟೆ ತಿರುಗುತ್ತಿರುವಾಗ ‘ಕಿರ್’ ಎಂಬ ಶಬ್ದ ಕೇಳಿಸುತ್ತದೆ. ಈ ಶಬ್ದವಾಗುತ್ತಿದ್ದಂತೆ ದಡದಲ್ಲಿ ನಿಂತಿರುವ ಮತ್ತೊಬ್ಬ ವ್ಯಕ್ತಿ ಕಪಿಲೆ ರಾಟೆಯ ಶಬ್ದಕ್ಕೆ ತಕ್ಕಂತೆ ಹಾಡು ಕಟ್ಟುತ್ತಾನೆ. ಬಾವಿಯೊಳಗೆ ಬಿಟ್ಟ ಕಪಿಲೆ ನೀರಿನಿಂದ ತುಂಬುವವರೆಗೆ ಕಾಯುತ್ತಾನೆ. ಪಾತ್ರೆ ತುಂಬಿ ಪೂರ್ಣವಾಗುವುದರೊಳಗೆ ಹಾಡೂ ಪೂರ್ಣಗೊಳ್ಳುತ್ತದೆ. ಎತ್ತುಗಳನ್ನು ಎಬ್ಬಿಸಿ ಓಡಿಸುತ್ತಾ, ಹಗ್ಗವನ್ನು ಸೇದುತ್ತಾ, ಅದರ ಶಬ್ದಕ್ಕೆ ತನ್ನ ದನಿಯನ್ನೂ ಕೂಡಿಸಿ ಸರಾಗವಾಗಿ ಹಾಡುಗಳನ್ನು ಹೇಳುತ್ತಾರೆ.

ಕಪಿಲೆ ಹಾಡು ಎರಡು ಚರಣಗಳಿಂದ ಕೂಡಿರುತ್ತದೆ. ಈ ಎರಡೂ ಚರಣಗಳು ಒಂದೊಂದು ವಿಷಯ ಸಂಬಂಧಿಯಾದ ಹಾಡಾಗಿ ಅದರಷ್ಟಕ್ಕೆ ಅದೇ ಸ್ವಯಂ ವ್ಯಕ್ತವಾಗುವಂತೆ ಇರುತ್ತದೆ. ಎರಡನೇ ಚರಣಪೂರ್ತಿಯಾಗುತ್ತಿರುವಂತೆ ‘ಹೋ ಭಗಣ’ ಎಂದಾದರೂ ‘ಭಕ್‌ಭಗಣ’ ಎಂದಾದರೂ ‘ಹೋ ಹೋಪ್ಪನ್ನ ರಾಮುಡು’ ಎಂದಾದರೂ ಪಲ್ಲವಿಗಳನ್ನು ಉಪಯೋಗಿಸುತ್ತಾರೆ. ಈ ಪಲ್ಲವಿಗಳು ಅಭ್ಯಾಸ ಬಲದಿಂದ ಬಳಸುವ ಪದಗಳಾಗಿರುತ್ತವೆ. ಇವು ಅವರ ಹಾಡುಗಳಿಗೆ ಒತ್ತಾಸೆಯಾಗಿರುತ್ತವೆ.

ಪ್ರತಿಯೊಂದಕ್ಕೂ ಇಪ್ಪತ್ತೆಂಟು ಮಾತ್ರೆಗಳು ಇರುವ ಈ ಹಾಡುಗಳು ಏಳು ಮಾತ್ರೆಗಳಿಗೆ ಒಂದು ಬಾರಿ ನಿಲುಗಡೆ ಹೊಂದಿ ಮಿಶ್ರಗತಿಯಲ್ಲಿ ತೆಲುಗಿನ ವೃಷಭಗತಿ ರಗಳೆಗೆ ಸರಿಹೊಂದುತ್ತವೆ. ಅ‌‌ನ್ವಯ ಕಾಠಿಣ್ಯವಿಲ್ಲದ ಪದಗಳ ಹೊಂದಿಕೆಯಲ್ಲಿ ಕಾವ್ಯರೂಪ ಹೊಂದಿರುವುದ ಈ ಹಾಡುಗಳ ವೈಶಿಷ್ಟ್ಯ.

ಕಪಿಲೆ ಹಾಡುಗಳಲ್ಲಿ ಹೆಚ್ಚಾಗಿ ಶೃಂಗಾರ ಎದ್ದು ಕಾಣುತ್ತದೆ. ಈ ಹಾಡುಗಳು ಯಾವ ಮಹಾಕವಿಯ ಅನುಭವಕ್ಕೂ ಎಟುಕದ ಶೃಂಗಾರ ರಸ ಪ್ರೇರಕಗಳು. ಯಾವ ಕವಿಯ ಊಹೆಗೂ ನಿಲುಕದ ಶೃಂಗಾರ ರಸಾತ್ಮಕ ವ್ಯಂಜನಗಳು. ಅಶ್ಲೀಲತೆಗೆ ಅವಕಾಶವಿದ್ದರೂ, ಕೇಳಿದಷ್ಟು ಮಧುರ ಭಾವಗಳನ್ನು ಹರಿಸುವ ಮುಕ್ತಗಳು. ಅಲ್ಪಾಕ್ಷರದಲ್ಲಿ ಅನಲ್ಪಾರ್ಥ ರಚನೆಗಳಿಗೆ ಈ ಹಾಡುಗಳು ಮಾದರಿ ತುಣುಕುಗಳು.

– ಜಿ.ಎಸ್.ಎಂ. ಅನುವಾದ ಕೆ.ಎಸ್.

ಕಪ್ಪಲ ಪೆಳ್ಳಿ ಎಲ್ಲಾ ಪ್ರಾಣಿಗಳಿಗೂ ನೀರಿನ ಜೊತೆಗೆ ಅವಿನಾಭಾವ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ರೈತ ತನ್ನ ಜೀವನಕ್ಕೆ ಮಳೆಯನ್ನು ಆಧರಿಸದೆ ತಪ್ಪದು. ಆದರೆ ಆಗಾಗ ಸಂಭವಿಸುವ, ಕ್ಷಾಮಕ್ಕೆ ತುತ್ತಾಗುವ ರಾಯಲಸೀಮೆ ಜಿಲ್ಲೆಗಳಲ್ಲಿ ಗ್ರಾಮೀಣ ರೈತನು ಹಸಿವನ್ನು ಅನುಭವಿಸುತ್ತಿದ್ದಾನೆ. ಸಾಲಮಾಡಿ, ತೀರಿಸುವುದಕ್ಕಾಗದೆ ಸಾವಿಗೆ ಶರಣಾಗುತ್ತಿದ್ದಾನೆ. ಬರಬಂದಾಗ ಮಳೆರಾಯನನ್ನು ಆರಾಧಿಸುತ್ತಾ ತಿರುಮಲದಂಥ ಪುಣ್ಯಕ್ಷೇತ್ರಗಳಲ್ಲಿ ನಿಪುಣರಿಂದ ಋತ್ವಿಜರಿಂದ ವರುಣನ ಮಾರ್ಗಗಳನ್ನು ಮಾಡುವುದು, ‘ಪೋಲಿ’ ಹೆಸರಲ್ಲಿ ಕುರಿಗಳನ್ನು ಬಲಿಕೊಡುವುದು ಬರಪೀಡಿತ ಪ್ರಾಂತಗಳಲ್ಲಿ ಕಪ್ಪೆಗಳ ಮದುವೆ ಮಾಡುವುದು ಸರ್ವೇಸಾಮಾನ್ಯ.

ರಾಯಲಸೀಮೆ ಜಿಲ್ಲೆಗಳಲ್ಲಿ ಸಕಾಲಕ್ಕೆ ಮಳೆ ಗ್ರಾಮಗಳಲ್ಲಿರುವ ಉತ್ಸಾಹಕರಾದ ಕೆಲವು ಪಡ್ಡೆ ಹುಡುಗರು ವ್ಯವಸಾಯ ಭಾವಿಗಳಲ್ಲಿನ ಕೆಲವು ಹೆಣ್ಣು ಕಪ್ಪೆಗಳನ್ನು ಗಂಡು ಕಪ್ಪೆಗಳನ್ನು ಹಿಡಿದು ಅವುಗಳಿಗೆ ಕುಂಕುಮ ಇಟ್ಟು ಅವುಗಳನ್ನು ಬೇವಿನ ಕೊಂಬೆಗಳೊಡನೆ ಒಂದು ಉದ್ದನೆಯ ಕೋಲಿಗೆ ನೇತಾಡಿಸಿ ಕಟ್ಟಿ ಮೆರವಣಿಗೆ ಮಾಡುವರು. ಅಷ್ಟೇ ಅಲ್ಲದೆ ಮನೆಮನೆಗೆ ಹೋಗಿ ‘ಲಬೊ ದಿಬೊ’ ಎಂದು ಬಾಯಿಬಡಿದುಕೊಳ್ಳುತ್ತಾರೆ. ಆ ಮನೆಯೊಡತಿ ಬಂದು ಹುಡುಗರು ಮೇಲೆ ಮತ್ತು ಕಪ್ಪೆಗಳ ಮೇಲೆ ಬಿಂದಿಗೆಯಲ್ಲಿ ನೀರು ಸುರಿಯುತ್ತಾನೆ. ಅಷ್ಟೇ ಅಲ್ಲದೆ ಅವರಿಗೆ ಸ್ವಲ್ಪ ಬತ್ತವನ್ನೋ, ಅಥವಾ ಸ್ವಲ್ಪ ದುಡ್ಡನ್ನೋ ಕೊಡುವುದು ರೂಢಿ. ಆ ರೀತಿ ಬಂದ ಧಾನ್ಯವನ್ನ ಅಂಗಡಿಯಲ್ಲಿ ಮಾರಿ ಬಂದ ಹಣದಿಂದ ಹುರುಗಡ್ಲೆ ಬೆಲ್ಲವನ್ನು ಕೊಂಡು ಎಲ್ಲರು ಹಂಚಿಕೊಳ್ಳುತ್ತಾರೆ. ಈ ಕಪ್ಪೆಗಳ ಮದುವೆಯನ್ನು ಮಕ್ಕಳು ವಿನೋದದಂತೆ ಮಾಡಿದರೂ ಇದರ ಗೂಡಾರ್ಥ ಮಳೆರಾಯನನ್ನು ಪ್ರಸನ್ನ ಮಾಡಿಕೊಳ್ಳಲೆಂದೇ ತಿಳಿಯಬಹುದು. ಕಪ್ಪೆಗಳ ಮೇಲೆ ಮಕ್ಕಳ ಮೇಲೆ ನೀರು ಸುರಿಯುವುದು ಮಳೆ ಬರುವುದರ ಸಂಕೇತ. ಗ್ರಾಮೀಣರ ವಿಶ್ವಾಸಕ್ಕೆ ಇದು ಪ್ರತಿಮೆಯಾಗಿ ನಿಲ್ಲುತ್ತದೆ.

– ಬಿ.ಕೆ.ಆರ್. ಅನುವಾದ ಎ.ಎ.

ಕಮ್ಮರ ಆಂಧ್ರದ ಶ್ರೀಕಾಕುಳಂ, ವಿಜಯನಗರಂ, ಗೋದಾವರಿ ಜಿಲ್ಲೆಗಳಿರುತ್ತಾರೆ. ಇವರನ್ನೇ ‘ಕೊಂಡ ಕಮ್ಮರ’, ‘ಓಜಾ’ಗಳೆಂದು ಕರೆಯುತ್ತಾರೆ. ಇವರ ಸಾಂಪ್ರಾದಾಯಿಕ ವೃತ್ತಿ ಕಮ್ಮಾರಿಕೆ. ಇದರ ಜೊತೆಗೆ ವಡ್ಡರ ವೃತ್ತಿಯಾಗಿದ್ದಾಗ್ಯೂ ಅವರಲ್ಲಿ ಬಹಳಷ್ಟು ಜನರು ಒಣ ಬೇಸಾಯ, ಸ್ಥಿರ ವ್ಯವಸಾಯಗಳನ್ನು ಮಾಡುತ್ತಿದ್ದಾರೆ. ಬತ್ತ, ತೊಗರಿ, ಜೋಳ, ಕಾಯಿಪಲ್ಲೆ ಬೆಳೆಯುತ್ತಾರೆ. ಶೇಂಗಾ ಎಣ್ಣೆಯನ್ನು ಅಡುಗೆಗೆ ಉಪಯೋಗಿಸುತ್ತಾರೆ. ಇವರು ಮಾಂಸಾಹಾರಿಗಳು, ಶುಭಕಾರ್ಯಗಳಲ್ಲಿ ಸಾರಾಯಿ, ಹೆಂಡವನ್ನು ಹೆಂಗಸರು, ಗಂಡಸರು ಕೂಡಿಯೇ ಕುಡಿಯುತ್ತಾರೆ. ಗೋತ್ರ, ಗಣ ಚಿಹ್ನೆಗಳನ್ನು ಹೊಂದಿದ್ದಾರೆ. ಕೊರ್ರ‍ (ಸೂರ್ಯ), ಕಲ್ಲೋ (ಹುಲಿ), ಸಾಲು (ಕರಡಿ), ಸುವರ್ಥಿ (ಪುಷ್ಪ), ಪಂಗಿ(ಗಾಳಿಪಟ) ಇವುಗಳಲ್ಲಿ ಮುಖ್ಯವಾದವು. ವಿವಾಹ ವಿಚ್ಛೇದನ, ವಿಧವಾ ವಿವಾಹ ಈ ಸಮುದಾಯದಲ್ಲುಂಟು. ಸೋದರಳಿಯ, ಸೋದರ ಸೊಸೆಯನ್ನು ಮದುವೆ ಮಾಡಿಕೊಳ್ಳುತ್ತಾರೆ. ಭಾವ ಭಾವಮೈದುನರ ನಡುವೆ ಸರಸ ಸಂಭಾಷಣೆಗಳೂ ಉಂಟು. ಪರಸ್ಪರ ಪ್ರೀತಿ – ಸಹಕಾರಗಳ ಮೂಲಕ, ಪರಿಗ್ರಹಣ, ಸೇವೆ, ಮಾತುಕತೆಗಳ ಮೂಲಕ ವಿವಾಹದ ಒಪ್ಪಂದಗಳು ನಡೆಯುತ್ತವೆ. ತೀರಿಕೊಂಡ ಸೋದರನ ಹೆಂಡತಿಯನ್ನು ಮದುವೆಯಾಗುವ ಆಚಾರವೂ ಉಂಟು. ಕಮ್ಮರರು ಮಾಂಸಾಹಾರಿಗಳು. ಎತ್ತಿನ ಮಾಂಸ, ಹಂದಿಯ ಮಾಂಸವನ್ನು ತಿನ್ನುತ್ತಾರೆ.

ಕಮ್ಮರನ ಸಾಮಾಜಿಕ ಜೀವನದಲ್ಲಿ ಜೀವನದಲ್ಲಿ ಶಿಸ್ತನ್ನು ಅಳವಡಿಸಲು, ಅವರಲ್ಲಿಯ ಒಳಜಗಳಗಳನ್ನು ಬಗೆಹರಿಸಲು ಅವರಿಗೆ ಅವರದೇ ಆದ ಸಂಪ್ರದಾಯಬದ್ದ ಸಂಘವಿದೆ. ಕಮ್ಮರರು ತಮ್ಮ ಪ್ರಾಂತದ ಬುಡಕಟ್ಟುಗಳೊಂದಿಗೆ ಸೇರಿಕೊಂಡು ಪರಸ್ಪರ ಸಹ ಜೀವನವನ್ನು ನಡೆಸುತ್ತಾರೆ. ಅವರು ಇಂದಿಗೂ ವ್ಯವಸಾಯ ಸಲಕರಣೆಗಳನ್ನು ಸಿದ್ಧಪಡಿಸಿ ತಮ್ಮ ಪ್ರಾಂತದಲ್ಲಿಯೂ ಇತರ ಬುಡಕಟ್ಟುಗಳಿಗೂ ಮಾರಿ ಹಣವನ್ನು ಸಂಪಾದಿಸುತ್ತಾರೆ. ಕಮ್ಮರರು ತಮ್ಮ ತಮ್ಮ ಗೋತ್ರಗಳಿಗೆ ಸೇರಿದ ಪ್ರಾಣಿಗಳನ್ನು ಪೂಜಿಸುವುದುಂಟು. ನಿಶಾಹಾನ್, ದೇವತೆ, ಶಂಕು ದೇವತೆ, ಜಕಿರಿ ದೇವತೆ, ಗಂಗಾಲಮ್ಮರನ್ನು ಆರಾಧಿಸುತ್ತಾರೆ. ಚೈತಾ ಪೂರಬ್, ಮಾವಿನ ಬೆಳೆ, ತೊಗರಿಯ ಬೆಳೆ, ಅವರೆಯ ಬೆಳೆ, ನವಣೆಯ ಬೆಳೆಯಂತಹ ಹಬ್ಬಗಳನ್ನು ಆಚರಿಸುತ್ತಾರೆ. ಉಳಿದ ಬುಡಕಟ್ಟುಗಳೊಂದಿಗೆ ಸೇರಿಕೊಂಡು ‘ದಿಂಸಾ’ ಜಾನಪದ ನೃತ್ಯವನ್ನು ಮಾಡುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ ಒಟ್ಟು ೪೫,೦೦೦. ಎಂದರೆ ಶೇಕಡಾ ೦.೮೯.

– ಬಿ.ಕೆ.ಆರ್. ಅನುವಾದ ಕೆ.ಎಸ್.

ಕರಕುಶಲ ಕಲೆಗಳು ಕೈಯನ್ನು ಜಾಣತನದಿಂದ ಬಳಸಿ ಕಲಾತ್ಮಕ ಕೌಶಲವನ್ನು ಪ್ರದರ್ಶಿಸುವ ಮೂಲಕ ಸಿದ್ಧವಾಗುವಂಥವು. ಜನಪದ ಕಲೆಗಳು ಎನ್ನುವ ಮಾತನ್ನು ನಾವು ಬಳಸುವಾಗ ಅದರ ಅರ್ಥ ಸಾಮಾನ್ಯವಾಗಿ ಕುಣಿತ ಪ್ರಧಾನವಾದ ಪ್ರದರ್ಶಕ ಕಲೆಯಾಗಿರುತ್ತದೆ. ಕುಣಿತ ಮಣಿತಗಳಿಂದ ಮೋಹಕವಾಗಿ ವಾದ್ಯವಿಶೇಷಗಳ ವ್ಯತ್ಯಾಸವಿದೆ. ಅಬ್ಬರದ ಜನಪದಕಲೆಗಳು ಜನರನ್ನು ತಮ್ಮೆಡೆಗೆ ಆಕರ್ಷಿಸಬೇಕು ಎಂಬ ಉದ್ದೇಶದಿಂದ ಕೂಡಿದ್ದರೆ ಕುಶಲಕಲೆಗಳು ಮನುಷ್ಯನ ಅತ್ಯಂತ ಸೂಕ್ಷ್ಮವೂ ಅತ್ಯಂತ ಸಂಕೀರ್ಣವೂ ಆದ ವ್ಯಕ್ತಿತ್ವದ ಜಾಣತನದ ಅಭಿವ್ಯಕ್ತಿಯಾಗಿವೆ.

ಕರ್ನಾಟಕದ ಸಂಸ್ಕೃತಿಯ ಒಳಪದರಗಳನ್ನು ಮತ್ತು ನಡವಳಿಕೆಯ ಸಂಕೀರ್ಣತೆಯನ್ನು ಬಹುಸೂಕ್ಷ್ಮವಾಗಿ ತೋರಿಸುವಲ್ಲಿ ಜನಪದ ಕುಶಲ ಕಲೆಗಳ ಪಾತ್ರ ಬಹು ಹಿರಿದಾದುದು. ಒಂದು ಜನಾಂಗದ ಆಚರಣೆ, ನಂಬಿಕೆ, ಸಂಪ್ರದಾಯ ಮುಂತಾದವುಗಳ ಅಧ್ಯಯನ ಮಾಡುವ ಮಾನವಶಾಸ್ತ್ರಜ್ಞನಾಗಲಿ, ಅವರ ಸಾಮಾಜಿಕವಾಗಿ ಸ್ಥಾನಮಾನಗಳನ್ನು ಅಭ್ಯಸಿಸುವ ಸಮಾಜಶಾಸ್ತ್ರಜ್ಞನಾಗಲಿ, ಎಲ್ಲಾ ರೀತಿಯ ಸಂಪ್ರದಾಯ ಸಾಹಿತ್ಯಗಳನ್ನು ಅಭ್ಯಾಸ ಮಾಡುವ ಜಾನಪದ ತಜ್ಞನಾಗಲಿ, ಜನಾಂಗ ತನ್ನ ಹೊಟ್ಟೆಯಲ್ಲಿ ಅರಗಿಸಿಕೊಂಡಿರುವ ಒಳಪದರವಾದ ಕುಶಲಕಲೆಗಳನ್ನು ಅಭ್ಯಾಸ ಮಾಡದಿದ್ದರೆ ಸತ್ಯಶೋಧನೆಯಾಗದು; ಬಹುಮುಖಗಳ ಪರಿಚಯವಾಗದು.

ಒಂದು ನಿರ್ದಿಷ್ಟ ಭೂಭಾಗದ ಜನತೆ ತಮ್ಮ ಸುತ್ತಮುತ್ತಲಿನ ಪರಿಸರವನ್ನೇ, ಪ್ರಕೃತಿಯನ್ನೇ ತಮ್ಮ ಬದುಕಿನ ಅವಿಭಾಜ್ಯ ಅಂಗ ಮಾಡಿಕೊಂಡಿರುತ್ತಾರೆ. ಸಾಗರ ತೀರದ ಜನರು ತಮ್ಮ ಬದುಕಿನ ಅವಿಭಾಜ್ಯ ಅಂಗ ಮಾಡಿಕೊಂಡಿರುತ್ತಾರೆ. ಸಾಗರ ತೀರದ ಜನರು ತಮ್ಮ ಬದುಕಿನ ಕೃತಜ್ಞತೆಗಾಗಿ ತಮ್ಮ ಆಚಾರ ವಿಚಾರ ಸಂಪ್ರದಾಯಗಳಲ್ಲಿ, ಸಾಹಿತ್ಯಗಳಲ್ಲಿ, ಕುಶಲಕರ್ಮದಲ್ಲಿ ಅದರ ಪ್ರತಿಬಿಂಬವನ್ನು ಬಿಡಿಸುತ್ತಾರೆ. ಬಯಲುಸೀಮೆಯ ಜನರು ತಮ್ಮ ಮನೋಧರ್ಮ, ಅಭಿವ್ಯಕ್ತಿಗಳಲ್ಲಿ ಬಯಲಿನ ವಿಸ್ತಾರ ಅಗಾಧ ಅನುಭವಗಳನ್ನು ತುಂಬಿಕೊಂಡಿರುತ್ತಾರೆ. ಮಲೆನಾಡಿನ ಜನ ತಮ್ಮ ನಡೆನುಡಿಗಳಲ್ಲಿ ಈ ಮಣ್ಣಿನ ಗುಣವನ್ನು ಈ ಪ್ರಕೃತಿಯ ಬೆಡಗನ್ನು, ಶ್ರೀಮಂತವಾದ ಕಾಡಿನ ಸಹಜತೆಯನ್ನು ಅರಿಗಿಸಿಕೊಂಡಿರುತ್ತಾರೆ. ಹೀಗಾಗಿ ಕರ್ನಾಟಕದ ಕುಶಲ ಕಲೆಗಳಲ್ಲಿ ಈ ಮೂರು ಪ್ರಮುಖ ವಿಭಾಗಗಳನ್ನು ಕಾಣಬಹುದು.

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗುಗಳು ವಿಪರೀತ ಮಳೆಬೀಳುವ ಪ್ರದೇಶಗಳಾದ್ದರಿಂದ ಈ ಭಾಗಕ್ಕೆ ಬೇರೆ ಕಡೆಯಿಂದ ಜನರು ವಲಸೆ ಬರುವುದು ಕಮ್ಮಿ. ಇಲ್ಲಿಯವರೂ ಬಯಲುಸೀಮೆಗೆ ವಲಸೆ ಹೋಗುವುದಿಲ್ಲ. ಹೋದರೆ ಪಶ್ಚಿಮ ಘಟ್ಟಗಳನ್ನಿಳಿದು ಕರಾವಳಿಗೆ ಕೆಲವು ಕಾಲದವರೆಗೆ ಹೋಗಿರಬಹುದು. ಕರಾವಳಿಯವರು ಘಟ್ಟದ ಮೇಲುಭಾಗಕ್ಕೆ ಬಂದು ಹೋಗುತ್ತಾರೆ. ಹೀಗಾಗಿ ಕರಾವಳಿಭಾಗ ಮತ್ತು ಮಲೆನಾಡಿನ ಕುಶಲಕಲೆ ಕರ್ನಾಟಕದ ಕರಕುಶಲ ವಸ್ತುಗಳಲ್ಲಿ ಗಮನ ಸೆಳೆಯುವಂತೆ ಎದ್ದು ಕಾಣಿಸುವ ವಸ್ತಗಳೆಂದರೆ ಒಡವೆಗಳ ವಿವಿಧ ಸೆಳೆಯುವಂತೆ ಎದ್ದು ಕಾಣಿಸುವ ವಸ್ತುಗಳೆಂದರೆ ಒಡವೆಗಳ ವಿವಿಧ ನಮೂನೆಗಳು, ಪುತ್ಥಳಿಗೆ ಸರ, ಸವನ್ಸರ, ಸರಿಗೆ, ಬಂದಿ, ಗೆಜ್ಜೆಟಿಕ್ಕಿ, ಚಕ್ರಹಾರ, ಬೋರಿಸರ, ಕಣ್ಣಾಣಿಸರ, ವಡ್ಯಾಣಿ ಸರ, ಚಪಲ ಹಾರ, ಕೊತ್ತುಂಬ್ರಿ ಸರ, ಏಕತಾನಿ ಸರ, ಮಂಗಳಗೌರಿ ಸರ, ನೆಲ್ಲಿಕಾಯಿ ಸರ, ಕಾಫಿ ಬೀಜದ ಸರ ಮುಂತಾದವು ಮಲೆನಾಡ ಭಾಗದಲ್ಲಿ ವಾಸಿಸುವ ಮಂದಿ ಹಾಕಿಕೊಳ್ಳುವ ಕೊರಳ ಸರಗಳು. ಹಾಗೆಯೇ ಬಯಲುಸೀಮೆಯ ಜಿಲ್ಲೆಗಳಲ್ಲಿ ಕಾಸಿನ ಸರ, ಗುಂಡಿನ ಸರ, ಗೆಜ್ಜೆಡಾಬು, ಕಾಲಂದುಗೆ, ಗೆಜ್ಜೆ ಚೈನು, ಪದಕ, ಚಿಂತಾಕು – ಇವುಗಳನ್ನು ಕೊರಳಿಗೂ, ವಂಕಿ, ಬುಗುಡಿ, ಮಾವಿನಕಾಯಿ ಓಲೆ, ಗಿಣಿ ಓಲೆ, ಪ್ಲೇಟಿನೋಲೆ, ಕಮಲದ ಓಲೆ, ನತ್ತು ಬೊಟ್ಟು, ವೆಂಕಿ ಉಂಗುರ – ಇವುಗಳನ್ನು ದೇಹದ ಇತರ ಭಾಗಗಳಿಗೂ ಹಾಕಿಕೊಂಡಿರುತ್ತಾರೆ. ಕರಾವಳಿ ತೀರದಲ್ಲಿ ಕಿವಿಗೆ, ಒಂಟಿ, ಕಾಲಂದುಗೆ, ಮೂಗಿಗೆ ಕಪ್ಪು ಇವುಗಳನ್ನು ಧರಿಸುತ್ತಾರೆ. ಮೇಲೆ ಹೇಳಿದ ಬಯಲು ಸೀಮೆಯ, ಮಲೆನಾಡಿನ ಎಷ್ಟೋ ಒಡವೆಗಳನ್ನು ಕರಾವಳಿ ತೀರದಲ್ಲೂ ಧರಿಸುತ್ತಾರೆ. ಮೇಲೆ ಹೇಳಿದ ಒಡವೆಗಳು ಚಿನ್ನ ಬೆಳ್ಳಿಗಳಿಂದ ತಯಾರಾದಂತಹವು. ಶಿವಮೊಗ್ಗ, ಶಿಕಾರಿಪುರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಇರುವ ಲಂಬಾಣಿಗರು ತಮ್ಮ ತಮ್ಮ ಉಡುಪುಗಳನ್ನು ತಾವೇ ಸಿದ್ಧಮಾಡಿಕೊಳ್ಳುತ್ತಾರೆಯೇ ಹೊರತು ಮಿಷನ್‌ಗಳಲ್ಲಿ ಹೊಲಿಸುವುದಿಲ್ಲ. ಲಂಗಗಳಿಗೆ ಚೌಲಿಗಳಿಗೆ ಕವಡೆ, ಚಿಕ್ಕ ಚಿಕ್ಕ ಕನ್ನಡಿಗಳನ್ನು ನಾಣ್ಯಗಳನ್ನು ಹೊಲಿದುಕೊಂಡಿರುತ್ತಾರೆ. ಕೈಗಳಿಗೆ, ಕೊರಳಿಗೆ, ತಲೆಗೂದಲಿಗೆ ಇವರು ಹಾಕಿಕೊಳ್ಳುವ ಆಭರಣಗಳು, ಕನ್ನಡಿ ತುಣಕುಗಳ ರೂಪದ ಬೇರೆ ಬೇರೆ ಆಕಾರಗಳು (ಗುಂಡಾದ, ಚೌಕಾಕಾರದ, ನಕ್ಷತ್ರಾಕಾರದ, ತ್ರಿಕೋಣಕಾರದ) ಉಡುಪಿನ ತುಂಬಾ ಕಲಾತ್ಮಕವಾಗಿ ಶೋಭಿಸುತ್ತದೆ. ಅತ್ತೆ ಸೊಸೆಗೆ, ಆ ಸೊಸೆ ತನ್ನ ಸೊಸೆಗೆ ಇಂಥ ಉಡುಪು ಒಡವೆಗಳನ್ನು ತಯಾರು ಮಾಡಿಕೊಳ್ಳುವುದನ್ನು ಕಲಿಸುತ್ತಾರೆ. ಮುಂಗೈಗೆ ರಟ್ಟೆಗೆ ದಂತದ ಬಳೆಗಳನ್ನು ಕಾಲಿಗೆ ಬೆಳ್ಳಿಯ ಇಲ್ಲವೇ ದಂತದ ಕಾಲಂದುಗೆಗಳನ್ನು ಹಾಕಿಕೊಂಡಿರುತ್ತಾರೆ. ಸೌದೆಯನ್ನು ಮಾರಿ ಜೀವನ ಮಾಡುವವರಾದ್ದರಿಂದ ಕಟ್ಟಿಗೆ ಬಾಚಣಿಗೆ, ಸೀರಣಿಗೆ, ದೀಪ ಇಡುವ ಸ್ತಂಭಗಳು ಮುಂತಾದ ಕುಶಲವಸ್ತುಗಳನ್ನು ತಯಾರುಮಾಡುತ್ತಾರೆ.

18

ಜನಪದ ನೃತ್ಯಗಳು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಇರುವುದರಿಂದ ಈ ನೃತ್ಯಗಳಿಗೆ ಸಂಬಂಧಪಟ್ಟಂತಹ ವಾದಯವಿಶೇಷಗಳನ್ನು ವೇಷಭೂಷಣಗಳನ್ನು ದೇವರ ಮೂರ್ತಿಗಳನ್ನು ಮಾಡಿಕೊಳ್ಳುವುದರಲ್ಲಿ ಈ ಜನಗಳ ಕುಶಲಕಲೆ ಎದ್ದು ಕಾಣುತ್ತದೆ. ಕೋಲಾರ ಜಿಲ್ಲೆಯಲ್ಲಿ ಆಂಧ್ರದ ಪ್ರಭಾವದಿಂದ ಮೂಡಿಬಂದ ಕಲೆಗಳು ಪ್ರಚಲಿತದಲ್ಲಿರುವುದರಿಂದಾಗಿ ಆಂಧ್ರದ ಸೆರಗಿನಲ್ಲಿರುವ ಕುಶಲಕಲೆ ಇಲ್ಲೂ ಕಾಣುತ್ತದೆ. ಇಲ್ಲಿ ಹೆಚ್ಚಾಗಿ ಕಂಡುಬರುವ ನೃತ್ಯ ಬುರ್ರಕಥಾಮೇಳ. ಇದರಲ್ಲಿ ಮೂರು ಮಂದಿ ಭಾಗವಹಿಸುತ್ತಾರೆ. ಮುಖ್ಯ ಗಾಯಕ ತಂಬೂರಿ ಹಿಡಿದರೆ ಅಕ್ಕಪಕ್ಕದವರು ಮಣ್ಣಿನ ಕುಡಿಕೆಯಂತಿರುವ ಬುರ್ರವನ್ನು ಹಿಡಿದಿರುತ್ತಾರೆ. ಈ ತಂಬೂರಿ ಬುರ್ರಗಳು ಮಾಮೂಲಿನಂತಿರದೆ ನಾನಾ ವಿಧವಾದ ಕೆತ್ತನೆಯಿಂದ ಅಲಂಕೃತವಾಗಿರುತ್ತದೆ. ಬುರ್ರಗಳ ಬುರುಡೆಯ ಮೇಲೆ ಬಣ್ಣಬಣ್ಣದ ಚಿತ್ತಾರಗಳಿರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿರಸಿ, ಕುಮಟ, ಅಂಕೋಲಗಳಲ್ಲಿರುವ ಗುಮಟೆ ಎಂಬ ವಾದ್ಯ ಈ ಬುರ್ರಗಳನ್ನೇ ಹೋಲುತ್ತದೆ. ಇದನ್ನು ಬಡಿದುಕೊಂಡು ಹಾಡು ಹೇಳುವ ಪದ್ಧತಿ ಈ ಭಾಗದ ಜನಪದರಲ್ಲಿದೆ. ಗುಮಟೆ ಸಾಮಾನ್ಯವಾಗಿ ಹಿತ್ತಾಳೆಯದ್ದಾಗಿದ್ದರೆ ಬುರ್ರ ಎನ್ನವುದು ಮಡಿಕೆಯದೇ ಆಗಿರುತ್ತದೆ. ಒಮ್ಮೊಮ್ಮೆ ಹಿತ್ತಾಳೆಯ ಬುರ್ರಗಳನ್ನೂ ಕೋಲಾರದ ಕಡೆ ಕಾಣಬಹುದು. ಹಾಗೆಯೇ ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಮುಂತಾದ ಕಡೆ ಹೆಚ್ಚಾಗಿ ಪ್ರಚಲಿತವಿರುವ ಕರಪಾಲ ಮೇಳವೂ ಬುರ್ರಕಥೆಯನ್ನು ಹೋಲುವಂಥದು. ಇಲ್ಲೂ ಮೂರು – ಜನ ನರ್ತಿಸುವವರಿದ್ದು ಮುಖ್ಯ ಗಾಯಕ ತಂಬೂರಿಯ ಬದಲು ತಾಳ ಹಿಡಿದಿರುತ್ತಾನೆ. ಉಳಿದಿಬ್ಬರು ಗುಮಟೆಗಳನ್ನು ಇಲ್ಲವೆ ದಪ್ಪು ಹಿಡಿದಿರುತ್ತಾರೆ. ಈ ಕಲೆಗೆ ಬೇಕಾದ ಹಾರ್ಮೋನಿಯಂ, ತಾಳ, ದಪ್ಪು, ಗುಮಟೆ, ಚಿಟಿಕೆ ಇವೆಲ್ಲವೂ ಜನಪದರು ಸ್ವತಃ ತಯಾರಿಸಿದ ಕುಶಲ ಕಲೆಗಳು. ಚರ್ಮಗಳನ್ನು ವಾದ್ಯಗಳಿಗೆ ಬಳಸುವಾಗ ಯಾವ ಯಾವ ಆಕಾರ‍ಕ್ಕೆ ಯಾವುದನ್ನು ಬಳಸಬೇಕು ಎಂಬ ನಿಷ್ಕರ್ಷೆಯಲ್ಲಿಯೇ ಅವರ ಕಲೆಗಾರಿಕೆ ಎದ್ದು ಕಾಣುತ್ತದೆ.

ಚಿಟ್‌ಮೇಳದ ವಾದ್ಯಗಳು, ಪಟಾಕುಣಿತದ ವಾದ್ಯಗಳು ಅಲಾವಿ, ಅಸಾದಿ ತಮ್ಮಟೆಗಳು, ಉಮ್ಮತ್ತಾಟದ ವೇಷಭೂಷಣ ಮತ್ತು ತಾಳಗಳು, ಉರಿಮಾರಮ್ಮನ ಉರುಮೆ ವಾದ್ಯ, ಏಕತಾರಿ ಮೇಳದ ಏಕನಾದ ಮತ್ತು ತಾಳ, ಚಿಟಿಕೆಗಳು, ಒನಕೆ ಕುಣಿತದ ಚಿಕ್ಕ ತಮಟೆಗಳು, ಕಂಸಾಳೆಯ ಕಂಚಿನ ತಾಳಗಳು, ಕರಗದ ಮಡಿಕೆ, ಕತ್ತಿ ಕಠಾರಿ ಅದಕ್ಕೆ ಬಳಸುವ ವಾದ್ಯಗಳು, ಕರಡಿ ಮಜಲಿನ ಸಣ್ಣ ಹರೆ ರೀತಿಯ ವಾದ್ಯಗಳು, ಕಂಚಿನ ದೊಡ್ಡ ತಾಳಗಳು, ಸನಾಯಿ, ಮುಖವೀಣೆಗಳು, ಕಾಡೆಮ್ಮೆ ಕುಣಿತದ ಮುಖವಾಡಗಳು, ಕಾವಟಿ ಕುಣಿತದ ಕಾವಟಿಗಳು, ನೀಲಗಾರರ ತಂಬೂರಿ ಡಕ್ಕೆಗಳು, ಕಿನ್ನರಿ ಜೋಗಿಗಳ ಕಿನ್ನರಿ, ಅವರ ವೇಷಭೂಷಣಗಳು, ಕೀಲು ಕುದುರೆಗಳು, ಕೊಂಬು ಕಹಳೆಗಳು, ಕೊಡದ ಕುಣಿತದ ಕೊಡಗಳು, ಕೋಲಾಟದ ವಿವಿಧ ನಮೂನೆಯ ಆಕಾರದ ಕೋಲುಗಳು, ಗೆಜ್ಜೆಗಳು, ತಾಳಗಳು, ಕೋಲೆಬಸವನ ವಾದ್ಯಗಳು, ಗಣಪದದ ಉದ್ದುದ್ದ ಕೊಳಲುಗಳು, ಗಾರುಡಿಗೊಂಬೆಗಳ ವಿವಿಧ ನಮೂನೆಯ ಆಕಾರದ ಗೊಂಬೆಗಳು, ಗೀಗೀ ಮೇಳದ ವಾದ್ಯಗಳು, ಗೊರವರ ವೇಷ ಭೂಷಣ, ಕವಡೆಸರ, ಕೊಳಲು, ಕೈಯಲ್ಲಿ ಹಿಡಿದ ವಾದ್ಯ, ತಲೆಗೆ ಹಾಕುವ ಕರಡಿ ಕೂದಲಿನ ಟೋಪಿಗಳು, ಚೌಡಿಕೆಯವರ ಚೌಡಿಕೆ, ತಾಳಗಳು, ಚಮ್ಮಾಳಗಳು, ವೀರಗಾಸೆಯವರ ವೇಷಭೂಷಣಗಳು, ಕತ್ತಿ ಚಮ್ಮಾಳ ಮುಂತಾದ ವಾದ್ಯಗಳು, ಸೂತ್ರದ ಗೊಂಬೆಗಳು, ತೊಗಲುಗೊಂಬೆಗಳು,ಡೊಳ್ಳುಗಳು, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನದ ವೇಷಭೂಷಣಗಳು, ಭೂತದ ಕೋಲುಗಳು, ಮುಖವಾಡಗಳು, ವಾದ್ಯಗಳು, ತಾಳಮದ್ದಲೆಗಳು, ದುಡಿಕುಣಿತದ ದುಡಿಗಳು, ಮೂಡಲಪಾಯದ ಬಯಲಾಟದ ವೇಷಭೂಷಣಗಳು, ವಾದ್ಯಗಳು, ಮುಖವಾಡಗಳು, ಬುಡಬುಡಕೆಯವರ ಬುಡಬುಡಕೆ ವಾದ್ಯ, ಭಾಗವಂತಿಕೆ ಮೇಳದ ವಿವಿಧ ನಮೂನೆಯ ತಾಳಗಳು, ಸೋಮನ ಕುಣಿತದ ಭಯಂಕರ ಮುಖವಾಡಗಳು, ಹೆರಿಗೆಗಳು – ಇವೆಲ್ಲವೂ ಕರ್ನಾಟಕದ ಉದ್ದಗಲಕ್ಕೂ ಕಾಣಬರುವ ಕುಶಲಕಲೆಯ ವೈವಿಧ್ಯಗಳು. ಇವುಗಳಲ್ಲಿ ಕಂಡುಬರುವ ಕಲೆಗಾರಿಕೆ ಶೇಷ್ಠ ಮಟ್ಟದ್ದು. ತಮ್ಮಟೆ ಎನ್ನುವ ಒಂದು ವಾದ್ಯದಲ್ಲೇ ನಾನಾ ವಿಧದ ನೃತ್ಯಕ್ಕೆ ನಾನಾ ಆಕಾರವನ್ನು ಮಾಡಿಕೊಂಡು ನಾನಾ ವಿಧವಾದ ನಾದ ಅಥವಾ ಶಬ್ದವನ್ನು ಹೊರಡಿಸುವ ಜನಪದರ ಕಲೆಗಾರಿಕೆಗೆ ಆಶ್ಚರ್ಯ ಉಂಟಾಗುತ್ತದೆ.

ಇನ್ನು ಮರಗಳಲ್ಲಿ ಕೆತ್ತನೆ ಮಾಡುವ ಕಲೆಗೆ ಕರ್ನಾಟಕ ಎತ್ತಿದ ಕೈ. ಇಲ್ಲಿ ವಿಶೇಷವಾಗಿ ಶ್ರೀಗಂಧ, ತೇಗ, ಹೊನ್ನೆ ಮುಂತಾದ ಅಪರೂಪದ ಮರಗಳು ಬೆಳೆಯವುದರಿಂದ ಅವುಗಳಲ್ಲಿ ತಮ್ಮ ಕುಶಲಕಲೆಯನ್ನು ನಮ್ಮ ಜನ ತುಂಬಿದ್ದಾರೆ. ಕನ್ನಡ ನಾಡಿನ ಗುಡಿಗಾರಿಕೆ ಇಂದು ಲೋಕವಿಖ್ಯಾತವಾಗಿದೆ. ಸೊರಬ, ಸಾಗರ, ಸಿರಸಿ, ಕುಮಟ, ಸಿದ್ಧಾಪುರ, ಹೊನ್ನಾವರ ಮೊದಲಾದ ಊರುಗಳು ಹಿಂದಿನಿಂದಲೂ ಗುಡಿಗಾರಿಕೆಯ ಕೇಂದ್ರಗಳು. ಗುಡಿಗಾರರು ಪ್ರಧಾನವಾಗಿ ಬಳಸುವುದು ಗಂಧದ ಮರವನ್ನು; ಅವರು ಹೆಚ್ಚಾಗಿ ಮಾಡುವುದು ಕುಸುರಿ ಕೆಲಸ, ಎಂದರೆ ಅಲಂಕರಣ, ಕುಂದಣದ ಕೆಲಸ, ಬಾಗಿಲು, ಕಿಟಕಿ, ರಥ, ಮಂಟಪ, ಮಂದಾಸನ, ಪೀಠ ಮೊದಲಾದವನ್ನು ನಯವಾದ, ನಾಜೂಕಾದ ಅಲಂಕರಣ ವಿನ್ಯಾಸಗಳಿಂದ ಕೂಡಿಸಿ ಬೆರಗುಗೊಳಿಸುವಂಥ ಕಲಾಕೃತಿಗಳನ್ನಾಗಿ ಮಾರ್ಪಡಿಸುವ ಜಾಣತನ ಇವರದ್ದು.

ಹಾಗೆಯೇ ದಂತದ ಕೆತ್ತನೆಗಳಲ್ಲೂ ಕರ್ನಾಟಕದ ಜನಪದರು ನಿಪುಣರು. ಜನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಆಚಾರ್ಯರು ತಮ್ಮ ದಂತದ ಕೆತ್ತನೆಗಾಗಿ ನಾಡಿನಲ್ಲೆಲ್ಲಾ ಹೆಸರಾಗಿದ್ದಾರೆ. ಕಾಡೆಮ್ಮೆಯ ಕೊಂಬು, ಸಾರಂಗದ ಕೋಡು, ಆನೆಯ ದಂತಗಳಲ್ಲಿ ಕೆತ್ತನೆ ಮಾಡುವ ಕೆಲಸ ಕುಮಟ, ಹೊನ್ನಾವರ, ಬೆಳಗಾವಿ ಮತ್ತು ಖಾನಾಪುರಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಮೈಸೂರು, ಕೊಳ್ಳೇಗಾಲ ಮುಂತಾದ ಕಡೆಗಳಲ್ಲೂ ದಂತದ ಕೆತ್ತನೆ ಕೆಲಸ ಕಂಡುಬರುತ್ತದೆ. ಶಿವಮೊಗ್ಗದ ಗುಡಿಗಾರರು ಬಲಾರನ ಮರ (ಎಬೊನಿ) ಮತ್ತು ಬೆಂಡಿನಲ್ಲಿಯೂ ಶಿಲ್ಪ ಮಾಡುತ್ತಾರೆ. ಕೋಲಾರಕ್ಕೆ ಸೇರಿದ ಶಿವಾರಪಟ್ಟಣದ ಕಲ್ಲಿನಲ್ಲಿ ಮೂರ್ತಿ ಕೆತ್ತುವ ಶಿಲ್ಪಿಗಳು ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಇವರು ತಯಾರಿಸುವ ವಿಗ್ರಹಗಳು, ಗೊಂಬೆಗಳು ಹೊರದೇಶಗಳಿಗೂ ಹೋಗುತ್ತವೆ.

ಕಾಡು ಇರುವ ಪ್ರದೇಶದಲ್ಲಿ ಬಿದಿರು ಹೇರಳವಾಗಿ ಸಿಗುವುದರಿಂದ ಬಿದಿರಿನ ಬುಟ್ಟಿಗಳು, ಪೆಟ್ಟಿಗೆಗಳು, ಸಂದೂಕಗಳು, ಕುರ್ಚಿಗಳು, ತಟ್ಟಿ ಮಂಕರಿ, ಸಿಬ್ಬಲು ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ಮಾಡುವುದಲ್ಲದೆ ಅಲಂಕಾರದ ವಸ್ತುಗಳನ್ನೂ ತಯಾರಿಸುತ್ತಾರೆ. ಬಿದಿರು ಹೆಚ್ಚಾಗಿಲ್ಲದ ಬಯಲುಸೀಮೆಗಳಲ್ಲಿ ಲಂಟಾನ ಕಡ್ಡಿ, ಸೀಮಸಿಗರೆಕಡ್ಡಿ, ಲಕಲಿಕಡ್ಡಿ, ಮುಂತಾದವುಗಳಿಂದ ತಟ್ಟಿ, ಗೂಡ, ಸಿಬ್ಬಲು, ಬುಟ್ಟಿ ಮುಂತಾದವನ್ನು ಮಾಡುತ್ತಾರೆ. ಉಪಯೋಗಕ್ಕೆ ಬರದ ಕಾಗದದ ಚೂರುಗಳನ್ನು ಚೆನ್ನಾಗಿ ನೆನೆಹಾಕಿ ಅದಕ್ಕೆ ಮೆಂತ್ಯವನ್ನು ಬೆರೆಸಿ ಚೆನ್ನಾಗಿ ರುಬ್ಬಿ ಅದರಿಂದ ಕಾಗದ ಗೂಡೆ, ಪುಟ್ಟಿಗೆ, ಬಟ್ಟಲು ಮುಂತಾಗಿ ಮಧುಗಿರಿ, ಸಿರಾ, ಪಾವಗಡದ ಸುತ್ತಮುತ್ತ ಮಾಡುತ್ತಾರೆ. ತೆಂಗು ಬೆಳೆಯುವ ತಿಪಟೂರು, ಅರಸೀಕೆರೆ, ಚಿಕ್ಕನಾಯಕನಹಳ್ಳಿ ಕಡೆ ತೆಂಗಿನ ಗರಿಯ ಚಾಪೆ, ತಡಿಕೆ, ತೆಂಗಿನ ಗೊರಟದ ಅನೇಕ ಅಲಂಕಾರದ ಸಾಧನಗಳನ್ನು ಮಾಡುತ್ತಾರೆ. ಈಚಲು ಮರ ಜಾಸ್ತಿ ಇರುವ ಭಾಗದಲ್ಲಿ ಈಚಲು ಗರಿಯ ಚಾಪೆ, ಗೊರಗು ಇವುಗಳನ್ನು ಹೆಣೆಯುತ್ತಾರೆ. ತೀರ್ಥಹಳ್ಳಿ, ಸಾಗರ, ಸಿರಸಿ, ಸಿದ್ಧಾಪುರಗಳಲ್ಲಿ ಅಡಿಗೆ ವಿಶೇಷವಾಗಿ ಬೆಳೆಯುವುದರಿಂದ ಸರಗಳು, ಮಡಿಕೆ ಕುಡಿಕೆಯ ಆಕಾರಗಳು, ಮುದುಕ ಮುದುಕಿಯರ ಚಿತ್ರಗಳು, ದೇವರುಗಳು, ನಾನಾ ಪಕ್ಷಿ ಪ್ರಾಣಿಗಳನ್ನು ಮಾಡಿ ಮನೆಯಲ್ಲಿ ತೂಗು ಹಾಕಿರುತ್ತಾರೆ. ಕಬ್ಬಿನ ಸಿಪ್ಪೆಯಿಂದ ನಾನಾ ಹೂವಿನ ಮಾದರಿಗಳನ್ನು ಮಾಡುವ ಕಲೆ ಮಂಡ್ಯ, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿದೆ. ಬತ್ತವನ್ನು ವಿಪುಲವಾಗಿ ಬೆಳೆಯುವ ತುಂಬಾ ಮತ್ತು ಭದ್ರಾ ಜಲಾಶಯ, ಕನ್ನಂಬಾಡಿಯ ಕಡೆ ಬತ್ತದ ತೆನೆತೆನೆಗಳನ್ನೇ ಬಿಡಿಸಿ ತಂದು ಕಲಾತ್ಮಕವಾಗಿ ನೇಯುವ ಕೆಲಸ ಮಾಡುತ್ತಾರೆ. ತೋರಣ, ಸರ, ಕಳಸದ ಮಾದರಿಯಾಗಿ ಭತ್ತದ ತೆನೆಗಳನ್ನು ಜೋಡಿಸಿಟ್ಟಿರುತ್ತಾರೆ. ಅಡಿಕೆ ಗರಿಗಳಿಂದ ಗೊರಬು, ಬಿಸಿಲು ಬೀಳದಂತೆ ಛತ್ರಿ, ತಲೆಗೆ ಅಡಿಕೆಯ ಹಾಳೆಯ ಟೋಪಿ ಇವುಗಳನ್ನು ಬೆಳ್ತಂಗಡಿ, ಧರ್ಮಸ್ಥಳ, ಕೊಪ್ಪ, ತೀರ್ಥಹಳ್ಳಿ ಮುಂತಾದ ಭಾಗಗಳಲ್ಲಿ ತಯಾಋಉ ಮಾಡಿಕೊಂಡಿರುತ್ತಾರೆ. ಕೊಡಗು, ಮೂಡಿಗೆರೆ, ಚಿಕ್ಕಮಗಳೂರು ಕಡೆಗಳಲ್ಲಿ ಕಾಫೀ, ಟೀ, ಏಲಕ್ಕಿ ಮುಂತಾದ ಬೆಳೆಗಳಲ್ಲಿಯೇ ನಾನಾ ಅಲಂಕಾರ ಮಾಡಿ ಮನೆಗಳಲ್ಲಿ ತೂಗುಹಾಕುತ್ತಾರೆ. ಹೆಚ್ಚಾಗಿ ಇವುಗಳಲ್ಲಿ ಸರಗಳನ್ನು ಮಾಡಿ ಆ ಸರಗಳನ್ನು ಉದ್ದಕ್ಕೆ ಪರದೆಯ ರೀತಿ ಕಿಟಕಿ ಬಾಗಿಲುಗಳಿಗೆ ಇಳಿಬಿಟ್ಟಿರುತ್ತಾರೆ.

ಬಯಲುಸೀಮೆಯ ವ್ಯವಸಾಯ ಮಾಡುವ ಭಾಗಗಳಲ್ಲಿ ವ್ಯವಸಾಯೋಪಕರಣಗಳು ಮೊದಲುಗೊಂಡು ನಾನಾ ಕಲೆಗಾರಿಕೆಯನ್ನು ಮರದಲ್ಲಿ, ಮಣ್ಣಿನಲ್ಲಿ, ಕಲ್ಲಿನಲ್ಲಿ ಮಾಡಿರುವುದು ಕಂಡುಬರುತ್ತದೆ. ಇವಲ್ಲದೆ ಜನಪದ ಮಹಿಳೆಯ ಕೈಯಲ್ಲಿ ಅತ್ಯಂತ ಆಕರ್ಷಕವಾಗಿ ರೂಪುಗೊಳ್ಳುವ ಕಸೂತಿ ಕೆಲಸವನ್ನೂ ಇಲ್ಲಿ ಹೆಸರಿಬೇಕು. ವ್ಯಕ್ತಿಗಳು ಹೆಚ್ಚು ಹೆಚ್ಚು ಸಂವೇದನಾ ಶೀಲರಾದಷ್ಟು ಈ ಕಲೆಗಾರಿಕೆಯ ಕುಸುರಿ ಕೆಲಸ ವೈವಿಧ್ಯ ಪಡೆಯುತ್ತದೆ.

– ಆರ್.ಕೆ.

ಕರಗಾಟ್ಟಂ ಜನಪದ ಕಲೆಗಳು ಜನರ ಜೀವನಾಡಿ. ಅದರ ಹುಟ್ಟು, ಅಸ್ತಿತ್ವ, ಬೆಳೆಗಳಿಗೆ ಎಲ್ಲದಕ್ಕೂ ಜನಪದರೇ ಮೂಲ ಕಾರಣ. ಮನರಂಜನೆ ಮತ್ತು ಜೀವನೋಪಾಯಕ್ಕಾಗಿ ಇಂದು ಪ್ರದರ್ಶನಗೊಳ್ಳುತ್ತಿರುವ ಕಾವಡಿ ಆಟಂ, ರಾಜ – ರಾಣಿ ಆಟ, ಕೊರವ – ಕೊರತಿ ಆಟ, ಕರ್ನಾಟಕದ ಕಂಸಾಳೆ, ಡೊಳ್ಳು ಕುಣಿತ ಮುಂತಾದವು ಯಾವ ಕಾಲಘಟ್ಟದಿಂದ ರೂಢಿಗೆ ಬಂದುವು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಅವುಗಳ ಹಿಂದೆ ಧಾರ್ಮಿಕ ಛಾಪು ಇರುವುದಂತೂ ಸತ್ಯ. ಈ ಎಲ್ಲ ಕಲೆಗಳು ಜನರ ಅನುಭವದ ದ್ಯೋತಕ, ಮನರಂಜನೆಯ ಸಾಧನವಾಗಿ ಬಳಕೆಗೆ ಬಂದವು. ಆದರೆ ಅದೇ ಕಾಲಕ್ರಮೇಣ ದೇವರು – ಜಾತ್ರೆ, ಹಬ್ಬ – ಹರಿದಿನ, ವಿಶೇಷ ದಿನಗಳಲ್ಲಿ ಪ್ರದರ್ಶನಗೊಳ್ಳುತ್ತ ಬಂದಿದೆ. ಇವು ಪರಂಪರೆಯಿಂದ ಪರಂಪರೆಗೆ ಹರಿದು ಬಂದ ಕಲೆಗಳು. ಆದುದರಿಂದ ತನ್ನ ವೈಶಿಷ್ಟ್ಯ ಮತ್ತು ಮಹತ್ತ್ವವನ್ನು ಸಾರಿ ಸಾರಿ ಹೇಳುತ್ತದೆ.

ಈ ರೀತಿಯ ಹಲವು ಕಲೆಗಳಲ್ಲಿ ಕರಗಾಟಂ ಒಂದು. ಇದು ತಮಿಳು ನಾಡಿನಾದ್ಯಂತ ಪ್ರದರ್ಶನಗೊಳ್ಳುವ ಕಲೆಯಾಗಿದೆ. ಈ ಪ್ರದರ್ಶನಕ್ಕೆ ಸಮಾಜದಲ್ಲಿ ಹೆಚ್ಚಿನ ಮನ್ನಣೆ ಸಿಕ್ಕಿದೆ. ಇಂದಿಗೂ ಎಲ್ಲ ಕಡೆ ನೋಡಲು ಕಾಣಸಿಗುವ ಕಲೆ. ಸ್ತ್ರೀ ಪುರುಷ ಎಂಬ ಭೇದಭಾವ ಈ ಆಟದಲ್ಲಿ ಕಂಡುಬರುವುದಿಲ್ಲ.

ಸ್ತ್ರೀ – ಪುರುಷರು ಇಬ್ಬರು ತಮ್ಮ ಶಿರದ ಮೇಲೆ ಕರಗ (ಬಿಂದಿಗೆ ಅಥವಾ ಕಳಸ) ಹೊತ್ತು ಕುಣಿಯುವದರಿಂದ ಈ ಆಟಕ್ಕೆ ‘ಕರೆಗಾಟ್ಟಂ’ ಎಂಬ ಹೆಸರು ಬಂದಿದೆ. ಕುಂಬಾಟಂ, ಕುಟ್ಟತ್ತು ಆಟಂ, ಅಮ್ಮನ್ ಕೊಂಡಾಡಿ ಎಂಬುದು ಕರಗಾಟಕ್ಕೆ ಇರುವ ಬೇರೆ ಬೇರೆ ಹೆಸರುಗಳು. ಇದರಲ್ಲಿ ‘ಶಕ್ತಿಕರಗ’ ಮತ್ತು ‘ಅಟಕರಗ’ ಎಂಬ ಎರಡು ಭಾಗಗಳಿವೆ. ಶಕ್ತಿಕರಗ ಎಂದರೆ ದೇವರು, ಧರ್ಮಗಳ ಹಿನ್ನೆಲೆಯಲ್ಲಿ ಅಂದರೆ ಆಧ್ಯಾತ್ಮಿಕ ಆವರಣದ ರೂಪದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆಟಕರಗ ಜನರ ಮನರಂಜನೆಯ ಮತ್ತು ಕಾಲಹರಣದ ಉದ್ದೇಶವಾಗಿ ಬಂದಿದುದಾಗಿದೆ. ಹೀಗೆ ಕರಗ ಆಟದ ಹಿಂದಿನ ಉದ್ದೇಶ ಏನೇ ಇದ್ದರೂ, ಇವು ಜನಪದರ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಪ್ರಸ್ತುತಪಡಿಸುವ ಪ್ರದರ್ಶಕ ಕಲೆಯಾಗಿವೆ.

19

ಈ ಆಟದಲ್ಲಿ ಭಿನ್ನತೆ ಇರುವಂತೆ, ಕಲಾವಿದರು ಧರಿಸುವ ವೇಷ – ಭೂಷಣದಲ್ಲೂ ಭಿನ್ನತೆ ಇರುವುದನ್ನು ಕಾಣಬಹುದು. ವೈವಿಧ್ಯತೆಯನ್ನು ಮೈಗೂಡಿಸಿಕೊಂಡಿರುವ ಈ ಕಲೆ ಪ್ರದರ್ಶನಗೊಳ್ಳುವಾಗ ಜನರು ತುಂಬ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇದರ ಯಶಸ್ಸಿಗೆ ಮುಖ್ಯಕಾರಣ ಮನರಂಜನೆಯಾಗಿದೆ. ಇದು ಸಂಶೋಧನೆಗೆ ಅಗಾಧ ಮಾಹಿತಿಯನ್ನು ಒದಗಿಸಿ ಕೊಡುವ ಕ್ಷೇತ್ರವಾಗಿದೆ. ಆಟಕರಗದ ಪ್ರದರ್ಶನ ವಿಶೇಷ ದಿನಗಳಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ವಿಶೇಷವಾಗಿ ಆಣಿ (ಜ್ಯೇಷ್ಠಮಾಸ), ಆಡಿ (ಆಷಾಢ ಮಾಡ) ತಿಂಗಳುಗಳಲ್ಲಿ, ದೇವಾಲಯದ ವಿಶೇಷ ದಿನಗಳಲ್ಲಿ ಇದು ಪ್ರದರ್ಶನಗೊಳ್ಳುತ್ತಿದೆ. ಇನ್ನೊಂದು ಮುಖ್ಯ ಅಂಶವೆಂದರೆ ಕಗರದ ಮೇಲೆ ಗಿಣಿಯ ರೂಪ ಇರುತ್ತದೆ. ಇಂತಹ ಆಕೃತಿ ಕಡ್ಡಾಯವಾಗಿ ಆಟ ಕರಗದಲ್ಲಿ ಇರುತ್ತದೆ. ಆದರೆ ಶಕ್ತಿಕರಗದಲ್ಲಿ ಇದು ಇರುವುದಿಲ್ಲ.

ಕರಗ ಜನರನ್ನು ಸೆಳೆಯುವಲ್ಲಿ ಅತ್ಯಂತ ಯಶಸ್ಸು ಸಾಧಿಸಿದೆ. ಕರಗ ಹೊರುವ ಪುರುಷರು, ಯುವತಿಯರು ನೋಡಲು ಸುಂದರವಾಗಿದ್ದು ಅವರ ವೇಷ – ಭೂಷಣಗಳು, ಅಲಂಕಾರ ಸಾಧನಗಳು ಜನರ ಆಕರ್ಷಣೆಯ ಪ್ರಮುಖ ಕೇಂದ್ರವಾಗಿರುತ್ತವೆ. ಈ ಕಲಾವಿದರು ವೃತ್ತಿಗಾಯಕರಾಗಿದ್ದು ಇವರ ನರ್ತನ ಹೆಚ್ಚು ರಸಭರಿತವಾಗಿರುತ್ತದೆ. ಕರಗದ ಕುಣಿತ ಕೇವಲ ನಿರ್ದಿಷ್ಟ ಕಲಾವಿದ ಅಥವಾ ಕಲಾವಿದ ತಂಡಗಳು ಮಾತ್ರವೇ ನೀಡುತ್ತಿಲ್ಲ. ಈ ಪ್ರದರ್ಶಕ ಕಲೆಯ ಮಹತ್ತ್ವ ಹೆಚ್ಚಾಗಿರುವಂತೆ ಅದನ್ನು ಪ್ರದರ್ಶಿಸುವ ತಂಡಗಳು ಹೆಚ್ಚು ಅಸ್ತಿತ್ವದಲ್ಲಿವೆ. ತಮಿಳುನಾಡಿನ ತಂಜೈ, ಸೇಲಂ, ಪುದುವೈ, ಮದುರೈ, ಮುಗವೈ, ನೆಲ್ಲೈ, ತೇನಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ತಂಜಾವೂರಿನ ಕಲಾವಿದರು ನೀಡುವ ಕರಗ ಕುಣಿತದ ಪ್ರದರ್ಶನವೇ ಹೆಚ್ಚು ಪ್ರಸಿದ್ಧಿಯಾಗಿದೆ.

ವೇಲುಕುಡಿ ರಮೇಶ್‌ಕುಮಾರ್, ತಂಜಾವೂರಿನ ತೇನ್‌ಮೊಳಿ ರಾಜೇಂದ್ರನ್, ಅಂಜಲಿದೇವಿ, ರಾಜ – ಮಾಣಿಕ್ಕವರ್, ಕುಮಾರ, ರಮ್ಯ ಮೊದಲಾದ ಕಲಾವಿದರು ಈ ಕಲೆಯಲ್ಲಿ ಪ್ರಸಿದ್ಧರಾಗಿದ್ದಾರೆ.

ಕರಗಾಟ್ಟಂ ಕುಣಿತದಲ್ಲಿ ಪ್ರಾರಂಭ, ವೇಗ, ಅತಿವೇಗ, ಎಂಬ ಮೂರು ಹಂತಗಳಿವೆ. ಈ ಕಲೆಯ ಆಕರ್ಷಣೆಗೆ ಮತ್ತೊಂದು ಕಾರಣ ಪ್ರದರ್ಶನದಲ್ಲಿ ಬಳಸುವ ವಾದ್ಯಗಳು. ಪಂಬೈ (ಒಂದು ಬಗೆಯ ಚರ್ಮವಾದ್ಯ), ಉಡುಕ್ಕೆ (ಡಮರುಗ), ತವಿಲ್ (ತಮಟೆ), ನಾದಸ್ವರ, ಉರುಮಿ (ಡೊಳ್ಳು) ಮೊದಲಾದ ಸಂಗೀತ ಪರಿಕರಗಳನ್ನು ಬಳಸಿ ಕುಣಿತದ ಪ್ರದರ್ಶನ ನಡೆಯುತ್ತದೆ. ಈ ಕುಣಿತಕ್ಕೆ ರಂಗವೇದಿಕೆ ಎಂದರೆ, ದೇವಾಲಯದ ಆವರಣ, ವಿಸ್ತಾರವಾದ ಬಯಲು ಪ್ರದೇಶ, ಮೆರವಣಿಗೆಯ ಬೀದಿ ಸಾಳು, ಊರ ಮುಂದಿನ ಮಹಾದ್ವಾರ, ಊರ ಮಧ್ಯದ ವೃತ್ತಗಳಲ್ಲಿ ಒಟ್ಟಾರೆ ಅತಿ ಹೆಚ್ಚು ಜನ ಸೇರಲು ಸಾಧ್ಯವಾಗುವ ಜನನಿಬಿಡ ಸ್ಥಳಗಳಲ್ಲಿ ಈ ಪ್ರದರ್ಶನ ನಡೆಯುತ್ತದೆ.

ಕರಗ ಕುಣಿತ ಕೇವಲ ಧಾರ್ಮಿಕ ನೆಲೆಯಲ್ಲಿ ಮೂಡಿ ಬಂದಿದೆ ಎಂದೂ, ಅದರ ಉತ್ಸವ, ಕುಣಿತ ಕೇವಲ ಶಿಷ್ಟ ಬಗೆಯದು ಎಂಬ ಕಟ್ಟುಪಾಡು ಇಲ್ಲ. ಮನರಂಜನೆ ಹಾಗೂ ಎಲ್ಲರ ಚಿತ್ತವನ್ನು ಸೂರೆಗೊಳ್ಳುವ ಉದ್ಧೇಶದಿಂದ ಇಲ್ಲಿ ಮೈನವಿರೇಳಿಸುವ ಸಾಹಸದ ಭಂಗಿಯನ್ನು ಕುಣಿತದಲ್ಲಿ ಕಲಾವಿದರು ತೋರುತ್ತಾರೆ.

ಕರಗದ ಕುಣಿತ ಮಾಡುತ್ತಿರುವಂತೆಯೇ ಮಣೆಯ ಮೇಲೆ ಹತ್ತುವುದು, ಕಣ್ಣಿನ ರೆಪ್ಪೆಗಳಿಂದ ಸೂಜಿ, ನಾಣ್ಯ, ನೋಟನ್ನು ಎತ್ತುವುದು, ಕಣ್ಣಿಗೆ ಪಟ್ಟಿಕೊಟ್ಟಿಕೊಂಡು ಎದುರಿಗಿರುವ ಮತ್ತೊಬ್ಬ ವ್ಯಕ್ತಿಯ ತಲೆ ಮೇಲಿನ ಬಾಳೆಹಣ್ಣನ್ನು ಖಡ್ಗದಿಂದ ಕತ್ತರಿಸುವುದು ಇತ್ಯಾದಿ. ಈ ಖಡ್ಗದ ಸಾಹಸ ಭಂಗಿ ಎಲ್ಲರನ್ನು ಆಕರ್ಷಿಸುವಂತೆ ನೋಡುಗರಲ್ಲಿ ದಿಗಿಲನ್ನು ಉಂಟುಮಾಡುತ್ತದೆ.

ಕರಗ ಹೊರುವ ಕಲಾವಿದ ಕೇವಲ ಒಂದು ಬಿಂದಿಗೆ ಹೊರುವುದು ಸಾಮಾನ್ಯ ನೋಟ. ಬಹಳಷ್ಟು ವೇಳೆ ಬಿಂದಿಗೆ, ಬಿಂದಿಗೆಗಳ ಮಧ್ಯೆ ತಾಮ್ರದ ತಂತಿಗಳಿಂದ ಬಿಗಿದು ಉದ್ದವಾಗಿ ಐದು ಬಿಂದಿಗೆಗಳವರೆಗೂ ಪೋಣಿಸಿ ಅದು ಕೆಳಕ್ಕೆ ಬೀಳದಂತೆ ಗಮನವಹಿಸುತ್ತಾ ತಾಳ – ವಾದ್ಯಗಳ ಶಬ್ದಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾರೆ. ಇಂತಹ ಕಲಾವಿದರಲ್ಲಿ ವೇಲುಕುಡಿ ರಮೇಶ್‌ಕುಮಾರ್, ಹೆಸರುವಾಸಿ, ಕಾಲ ಸ್ಥಳದ ಬದಲಾವಣೆಗೆ ಅನುಗುಣವಾಗಿ ಕರಗದ ಕುಣಿತ, ಕಲಾವಿದರ ವೇಷ – ಭೂಷಣಗಳಲ್ಲಿಯೂ ಬದಲಾವಣೆಯಾಗುತ್ತದೆ.

ಈ ಕುಣಿತದ ಬಗ್ಗೆ ನಡೆದ ಸಂಶೋಧನೆಯಿಂದ ತಿಳಿದು ಬಂದ ಸಂಗತಿ ಏನೆಂದರೆ, ಇದರಲ್ಲಿ ಕಲಾಮರ್ಯಾದೆ ಆಟ, ಜಣ್ಣಾಂಗಾಲು ಆಟ (ಒಂಟಿ ಕಾಲಿನ ಆಟ),ಶ್ರೀರಾಮಚಂದ್ರ ಆಟಂ, ರಾಜ ಆಟಂ, ಹರಿಶ್ಚಂದ್ರ ಆಟಂ, ಕಟ್ಟಬೊಮ್ಮನ್ ಆಟಂ, ಮಗುಡಿಯಾಟ್ಟಂ, ಕಳ್ಳಪಾರ್ಟ್‌ ಆಟಂ ಎಂಬ ನಾನಾ ವಿಧದ ಆಟಗಳು ಇವೆ. ಇದನ್ನು ನಾ.ರಾಮಚಂದಿರನ್, ಅ.ಕಾ.ಪೆರುಮಾಳ್ ಅವರು ಸ್ಪಷ್ಟಪಡಿಸುತ್ತಾರೆ.

ಕರಗ ಕುಣಿತದ ಸಂದರ್ಭದಲ್ಲಿ ಹಾಡುವ ಹಾಡು ಚಲನಚಿತ್ರ ಗೀತೆಗಳ ಪ್ರಸ್ತುತದಲ್ಲಿ ಬಳಕೆಯಲ್ಲಿವೆ. ಅಲ್ಲದೆ ತೆಮ್ಮಾಂಗುಪಾಟು (ಒಂದು ಜಾತಿಯ ನಾಡಪದಗಳು) ಎಂಬ ಕುಣಿತದ ಹಾಡುಗಳು ಸಹ ಇವೆ. ಈ ಕರಗಕುಣಿತದ ವೈಶಿಷ್ಟ್ಯ ಅದರಲ್ಲಿಯ ಆಧುನಿಕ ಬದಲಾವಣೆಗಳು. ಇದನ್ನು ಕುರಿತು ಸಂಶೋಧನೆ ನಡೆಸಿದ ಆರ್.ರಾಮನಾಥನ್, ಕೆ.ವಿ.ಗುಣಶೇಖರನ್, ನಾ.ವೇಲುಸ್ವಾಮಿ ಮೊದಲಾದವರ ಶ್ರಮದಿಂದ ಈ ಕಲೆಗೆ ಹೆಚ್ಚು ಮನ್ನಣೆ ದೊರೆತಿದೆ. ಓಂ ಪೆರಿಯಸ್ವಾಮಿ, ಚಿನ್ನಪೊಣ್ಣು, ಮಧುರೈ ಚಂದಿರನ್ ಮೊದಲಾದವರು ಈ ಕ್ಷೇತ್ರದಲ್ಲಿ ಪ್ರಾತಃಸ್ಮರಣೀರು.

– ಎ.ಡಿ. ಅನುವಾದ ಆರ್.ಎಸ್.