ಕಣಿಯಾನ್ ತಿರುನೇಲ್ವೇಲಿ, ತೂತ್ತುಕ್ಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ತಮಿಳುನಾಡಿನ ಬಯಲು ಪ್ರದೇಶಗಳಲ್ಲಿ ಬದುಕುತ್ತಿರುವ ಪರಿಶಿಷ್ಟ ಪಂಗಡ. ಈ ಪ್ರದೇಶಗಳಲ್ಲಿ ಸುಡೈಮಾಡನ್ ಎಂಬ ಜನಪದ ದೇವರನ್ನು ಪೂಜಿಸುತ್ತಾರೆ. ಈ ದೇವರಿಗೆ ಪುರುಷರು ‘ಕೊಡೈ’ ಎಂಬ ಪ್ರದರ್ಶನವನ್ನು ನೀಡುತ್ತಾರೆ. ಸುಡೈಮಾಡನ್‌ನ ಪೂಜೆಯ ಸಂದರ್ಭದಲ್ಲಿ ಕೊಡೈ ಮಾತ್ರವಲ್ಲದೆ ‘ಕೂತ್ತು'(ಕುಣಿತ) ಮತ್ತು ಕೈಕತ್ತರಿಸುವುದು ಮುಂತಾದ ಪ್ರದರ್ಶನ ನಡೆಯುತ್ತದೆ. ಈ ಪ್ರದರ್ಶನಗಳಲ್ಲಿ ಕಣಿಯಾನ್‌ಗಳು ಈ ಕುಣಿತದಲ್ಲಿ ಕಥೆ ಹೇಳುವವರು ತಮಟೆ ಬಡಿಯುವವರು, ಹೆಂಗಸರ ವೇಷ ಹಾಕಿ ಕುಣಿಯುವವರು ಮುಂತಾದ ಐದು ಜನರು ಸ್ಥಾನವನ್ನು ಪಡೆದಿರುತ್ತಾರೆ. ಸುಡೈಮಾಡನ ಪೂಜಾವಿಧಿಯಲ್ಲಿ ನಡೆಯುವ ಪ್ರದರ್ಶನದಲ್ಲಿ ಕಣಿಯಾನ್ ಸಮಾಜದ ಜನರು ತಮ್ಮ ಕೈ ಅಥವಾ ನಾಲಗೆಯನ್ನು ಕತ್ತರಿಸಿಕೊಂಡು ರಕ್ತವನ್ನು ಎಡೆಯಲ್ಲಿ ಹಾಕಿ ಪೂಜಿಸುತ್ತಾರೆ.

ಕಣಿಯಾನ್ ಸಮಾಜದವರು ವಾಸಿಸುವ ಪ್ರದೇಶವನ್ನು ಕಣಿಯಾನ್ ಕುಡಿ(ನೆಲೆ) ಎಂದು ಕರೆಯುತ್ತಾರೆ. ಇವರು ಅಂಬಾಸಮುತ್ತಿರಮ್, ತೆನ್‌ಕಾಶಿ, ನಾಂಗುನೆರೆ, ತಿರುವೈಕುಂಡಮ್, ಪಳ್ಳೈಯಾಪೇಟ್ಟೈ, ತಚ್ಚನಲ್ಲೂರ್, ವಡಕ್ಕನ್‌ಕುಳಂ, ತೆನ್‌ತಿರುಪ್ಪೇರೈ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಕಣಿಯಾನ್ ಸಮಾಜದಲ್ಲಿ ಸಾಕಷ್ಟು ಒಳಗುಂಪುಗಳು ಏರ್ಪಟ್ಟಿವೆ. ಇವರು ಇಂದು ತಮ್ಮ ಜೀವನ ನಿರ್ವಹಣೆಗೆ ಸಣ್ಣ ಗುಂಪಗಳಾಗಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಕಣಿಯಾನ್ ಸಮಾಜದವರು ಆಚರಣಾ ಪ್ರದರ್ಶಕರಾಗಿ ಪಾಲ್ಗೊಳ್ಳುವ ಸುಡೈಮಾಡನ್ ದೇಗುಲಗಳೆಲ್ಲವು ‘ಕಾಣಿಯಾಟ್ಟಿ’ ಎಂಬ ಆಳ್ವಿಕೆಗೆ ಒಳಪಟ್ಟಿರುತ್ತದೆ. ಅದೇನೆಂದರೆ ಒಂದೊಂದು ಸುಡೈಮಾಡನ್ ದೇಗುಲಗಳು ಪಾರಂಪರಿಕವಾಗಿ ಒಬ್ಬ ಕಣಿಯಾನ್ ಕುಟುಂಬಕ್ಕೆ ಸೇರಿರುತ್ತದೆ. ಆ ದೇಗುಲಗಳಲ್ಲಿ ಜರಗುವ ಆಚರಣಾ ಪ್ರದರ್ಶನದ ಉಸ್ತುವಾರಿಯನ್ನು ಆ ಕುಟುಂಬದ ಮುಖ್ಯಸ್ಥ ವಹಿಸಿಕೊಂಡಿರುತ್ತಾನೆ. ಅಂದರೆ ಅವರು ಕೈ ಕತ್ತರಿಸಿಕೊಳ್ಳುವ, ಮತ್ತು ಕುಣಿತವನ್ನು ಪ್ರದರ್ಶಿಸುವ ಹಕ್ಕನ್ನು ಪಡೆದಿರುತ್ತಾರೆ. ಕಣಿಯಾನ್ ಕುಟುಂಬದಲ್ಲಿ ಅರ್ಹವ್ಯಕ್ತಿಗಳು ಇಲ್ಲದಿದ್ದರೆ ಆ ಹಕ್ಕನ್ನು ಅವರು ಬೇರೆ ಕಣಿಯಾನ್ ಕುಟುಂಬಕ್ಕೆ ಕೊಡಬೇಕಾಗುತ್ತದೆ.

ಕಣಿಯಾನ್ ಸಮಾಜದವರು ತಮ್ಮ ಪೂರ್ವಿಕರು ಮಲೆನಾಡಿನಲ್ಲಿ ಇದ್ದವರು ಎಂದು ಹೇಳುತ್ತಾರೆ. ಸುಡೈಮಾಡನ್ ಪೂಜೆಯ ಜೊತೆ ಈ ಜನರ ಪೂರ್ವ ಇತಿಹಾಸವನ್ನು ಹೇಳುವ ಹಲವು ಪುರಾಣಗಳು ಉಂಟು. ಅವುಗಳಲ್ಲಿ ಒಂದು ಹೀಗಿದೆ:

ದಟ್ಟನ್ ಎಂಬುವನು ಪ್ರಪಂಚವನ್ನು ಗೆಲ್ಲಬೇಕೆಂದು ವೇಳ್ಪಿಯಲ್ಲಿ ರಾಜ್ಯಭಾರ ಮಾಡುತ್ತ ಕಾರ್ಯ ಪ್ರವೃತ್ತನಾಗುತ್ತಾನೆ. ವೇಳ್ಪಿಯಲ್ಲಿ ಸಿಕ್ಕಿದ ಅಮೃತವನ್ನು ಶಿವನಿಗೆ ಕೊಡುವುದಿಲ್ಲವೆಂದು ದಟ್ಟನ್ ತೀರ್ಮಾನಿಸಿಕೊಂಡಿದ್ದರಿಂದ ಶಿವನು ಅವನನ್ನು ಎದುರಿಸುತ್ತಾನೆ. ತನ್ನ ತಪ್ಪನ್ನು ಅರಿತ ದಟ್ಟನ್ ಕ್ಷಮಿಸುವಂತೆ ಶಿವನನ್ನು ಕೇಳಲು, ಶಿವನು ಸುಡೈಮಾಡನ್‌ನನ್ನು ಬ್ರಾಹ್ಮಣರಿಗೆ ಶಕ್ತಿಯನ್ನು ಹುಟ್ಟಿಸಿದರೆ ಕ್ಷಮಿಸುವುದಾಗಿ ಹೇಳುತ್ತಾನೆ. ಆಗ ಯಜ್ಞ ಯಾಗಾದಿಗಳು ನಡೆದು ಬ್ರಾಹ್ಮಣರಿಗೆ ಶಕ್ತಿ ಹುಟ್ಟುತ್ತದೆ ಮತ್ತು ಸುಡೈಮಾಡನ್ ಸಹ ಹುಟ್ಟುತ್ತಾನೆ. ಆದರೆ ಅವರ ಯಾಗ ಕುಂಡದಿಂದ ಹೊರೆಗೆ ಬರಲು ಸಾಧ್ಯವಾಗುವುದಿಲ್ಲ. ಕಣಿಯಾನ್ ಬಂದು ಕಿರೀಟ ಹೊಡೆದು, ನಾಲಿಗೆ ಕತ್ತರಿಸಿಕೊಂಡು ಪೂಜೆ ಮಾಡಿದರೆ ಹೊರಗಡೆ ಬರುವುದಾಗಿ ಅವರು ಹೇಳಲು, ದಟ್ಟನ್ ಕಣಿಯಾನನ್ನು ಹುಟ್ಟಿಸುವುದು ಹೇಗೆ ಎಂದು ಶಿವನ ಹತ್ತಿರ ಕೇಳುತ್ತಾನೆ. ಆಗ ಶಿವನು ಇಂದಿರಾಣಿ ನಾಯಕತ್ವದಲ್ಲಿ ಏಳು ಜನ ಕನ್ಯೆಯರು ತಮ್ಮೊಡನೆ ಬಂದು ಕುಣಿಯುವಂತೆ ಕೇಳುತ್ತಾನೆ. ಇಂದಿರಾಣಿ ಕುಣಿಯುತ್ತಿರುವಾಗ ಅವಳ ಕಾಲಿನ ಕಡಗ ಶಿವನ ಮುಂದೆ ಬೀಳುತ್ತದೆ. ಅದರಿಂದ ಕಣಿಯಾನ್ ಹುಟ್ಟುತ್ತಾನೆ. ಶಿವನು ಕಣಿಯಾನ್‌ನ ಹತ್ತಿರ ಆಡಿನ (Sheep) ರಕ್ತವನ್ನು ದೇಹಕ್ಕೆ ಹಚ್ಚಕೊಂಡು ಮತ್ತು ಬೊಟ್ಟಾಗಿಟ್ಟು ಕೊಂಡು ಮೊಣಕಾಲು ಊರುವಂತೆ ಹೇಳುತ್ತಾನೆ.

14

ಕಣಿಯಾನ್ ಸಮಾಜದವರು ವೆಗುಮಕ್ಕಡಿ, ಕೊರಂದಕ್ಕುಡಿ, ಪಂಡ್ರಿಕ್ಕುಡಿ, ಅವಳಿಕ್ಕುಡಿ, ಕಲಮನಕ್ಕುಡಿ, ಅದಿನಿಕ್ಕುಡಿ, ಪುಲಿಯಾಕ್ಕುಡಿ ಮತ್ತು ಮಕ್ಕಡಕ್ಕುಡಿ ಎಂಬ ಎಂಟು ವಂಶಗಳಿಂದ ಬಂದವರಾಗಿದ್ದಾರೆ. ಇವು‌ಗಳಲ್ಲಿ ಸಹೋದರ ವಂಶಗಳು ಮತ್ತು ವಿವಾಹದ ವಂಶಗಳು ಎಂಬ ಎರಡು ಬಗೆ ಇವೆ. ಒಂದು ವಂಶದವರು ಸಹೋದರ ವಂಶಕ್ಕೆ ಸೇರಿದ್ದರೆ, ಇತರ ವಂಶದವರ ಜೊತೆ ವಿವಾಹ ಮಾಡಲಾಗುತ್ತದೆ. ಉದಾಹರಣೆಗೆ : ಅದಿನಿ ವಂಶಕ್ಕೆ ಸೇರಿದವರು ವೆಗುಮಕ್ಕುಡಿ, ಕೊರಂದಕ್ಕುಡಿ, ಪಂಡ್ರಿಕ್ಕುಡಿ, ಅವಳಿಕ್ಕುಡಿ ವಂಶದವರ ಜೊತೆ ಮಾತ್ರ ಮದುವೆ ಮಾಡಲು ಸಾಧ್ಯ. ಉಳಿದವರು ಸಹೋದರ ವಂಶಕ್ಕೆ ಸೇರಿದವರಾಗಿರುತ್ತಾರೆ. ಇದರಂತೆ ಪ್ರತಿಯೊಂದು ವಂಶಕ್ಕೂ ಪ್ರತ್ಯೇಕ ಮದುವೆ ವಂಶಗಳು, ಸಹೋದರ ವಂಶಗಳು ಇರುತ್ತವೆ. ಈ ವಂಶಗಳು ಹೆಂಗಸರ ಮೂಲಕ ಹುಟ್ಟುತ್ತವೆ. ಅದು ಹೇಗೆಂದರೆ ಒಂದು ಮಗು ತನ್ನ ತಾಯಿಯ ಪಂಗಡದ ಸಂಸ್ಕೃತಿಯನ್ನು ಮತ್ತು ತನ್ನ ತಂದೆ ವಂಶದ ಸಂಸ್ಕೃತಿಯನ್ನು ಪಡೆಯುತ್ತದೆ. ಇದರಿಂದ ಹೆಂಗಸರ ಕಣಿಯಾನ್ ಸಮಾಜದಲ್ಲಿ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಕಾಳ ಬೆಳವಣಿಗೆ, ಸಮಾಜ ವಿಸ್ತರುಸುವುದಕ್ಕೆ ಹೆಂಗಸರು ಬಹಳ ಮುಖ್ಯ. ಕಣಿಯಾನ್ ಎಂಬ ಹೆಸರಿನ ಇತರ ಎರಡು ಒಳಪಂಗಡ ಕನ್ಯಾಕುಮಾರಿ ಜಿಲ್ಲೆಯಲ್ಲಿ ಕಾಣಸಿಗುತ್ತವೆ. ಇದರ ಒಂದು ಪಂಗಡವನ್ನು ‘ಕುಲಶೇಖರ’ ಎಂಬ ಪ್ರದೇಶದಲ್ಲಿ ‘ಕಣಿಕ್ಕರ್’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.

ಇತರ ಕಣಿಯಾನ್ ಪಂಗಡದವರು ಇಟ್ಟಗವೇಲಿ, ಮುಡಿಪ್ಪೆರಂಟು ದೇವಾಲಯಗಳ ಜೊತೆ ಸಂಬಂಧವುಳ್ಳ ‘ಕಾಣೀಕಣಿಯಾನ್’ ಎಂದು ಗುರ್ತಿಸುತ್ತಾರೆ. ಮೊದಲನೆಯ ಪಂಗಡದವರು ಕನ್ಯಾಕುಮಾರಿ ಜಿಲ್ಲೆಯಲ್ಲಿ ಕಾಣಸಿಗುವ ತಂಬಿರಾನ್ ಎಂಬ ಜನಪದ ದೇವರಿಗೆ ನಂದುನಿ ಎಂಬ ಯಂತ್ರದಿಂದ ದೆಯ್‌ವವೊಟ್ಟು ಎಂಬ ಹಬ್ಬವನ್ನು ಆಚರಿಸುತ್ತಾರೆ. ಎರಡನೆಯ ಪಂಗಡದವರು ಮೇಲೆ ಹೇಳಿದ ದೇವಾಲಯದಲ್ಲಿ ಹಬ್ಬ ಮತ್ತು ಪೂಜೆಯ ಸಂದರ್ಭದಲ್ಲಿ ಭಾಗವಹಿಸುತ್ತಾರೆ. ಈ ಸಮಾಜ (ಕಣಿಯಾನ್) ಪರಿವರ್ತನೆಯಾಗಿರುವುದಕ್ಕೆ ಯಾವೊಂದು ಆಧಾರಗಳು ಇಲ್ಲವೇ ಇಲ್ಲ. ತಿರುನೇಲ್ವೇಲಿ, ಚಿದಂಬನಾರ್ ಜಿಲ್ಲೆಗಳಲ್ಲಿ ಸುಡೈಮಾಡನ್ ದೇಗುಲಗಳೊಡನೆ ಸಂಬಂಧವುಳ್ಳ ಕಣಿಯಾನ್ ಪಂಗಡದ ಒಳಪಂಗಡದಲ್ಲಿ ಬರುವ ಉತ್ತರದ ಕುಲಕ್ಕೆ ಸೇರಿದ ಕಣಿಯಾವರು ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

– ಎನ್.ಜೆ.ಎಸ್. ಅನುವಾದ ಆರ್.ಎಸ್.

ಕಣಿಯಾನ್ ಕೂತ್ತು ಕಣಿಯಾನ್‌ಕೂತ್ತು ಕಣಿಯಾನ್ ಜಾತಿಯವರು ಪ್ರದರ್ಶಿಸುವ ಜನಪದ ಕಲೆ. ಇದನ್ನು ಮಕುಟ್ ಕಚ್ಚೇರಿ, ಮಕುಟಾಟ್ಟಂ, ಕಣಿಯಾನ್ ಆಟ್ಟಂ, ಕಣಿಯಾನ್ ಪಾಟ್ಟು ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

ಕಣಿಯಾನ್‌ಕೂತ್ತು ಸುಡಲೈಮಾಡನ್ ದೇವಸ್ಥಾನದ ಆರಾಧನೆಯೊಂದಿಗೆ ಸಂಬಂಧ ಹೊಂದಿದೆ. ಇದೊಂದು ಆಚರಣಾ ಪ್ರಧಾನ ಕಲೆಯು ಹೌದು. ಆದುದರಿಂದ ಈ ಕಲೆಯೊಂದಿಗೆ ಸಂಬಂಧವಿರುವ ಕಾಪ್ಪು (ರಕ್ಷಣೆ) ಕಟ್ಟುವುದು, ದೈವೀ ನರ್ತನ ಮೊದಲಾದವುಗಳನ್ನು ಸೇರಿಸಿ ಅಧ್ಯಯನ ಮಾಡುವ ಅಗತ್ಯವಿದೆ.

ಈ ಕಲೆಯು ಕನ್ಯಾಕುಮಾರಿ, ತಿರುನೇಲ್ವೇಲಿ, ತೂತ್ತುಕುಡಿ ಮೊದಲಾದ ಜಿಲ್ಲೆಗಳ ಸುಡಲೈಮಾಡನ್ ದೇವಸ್ಥಾನಗಳಲ್ಲೂ ದೇವಿಯ ದೇವಸ್ಥಾನಗಳಲ್ಲೂ ನಡೆಯುವ ಉತ್ಸವಗಳಲ್ಲಿ ಮುಖ್ಯವಾಗಿ ಪ್ರದರ್ಶನಗಳ್ಳುತ್ತದೆ. ದೇವಸ್ಥಾನದ ಗರ್ಭಗೃಹದ ಎದುರು ಭಾಗದಲ್ಲಿ ಈ ಪ್ರದರ್ಶನ ನಡೆಯುತ್ತದೆ. ಅಷ್ಟು ಮಾತ್ರವಲ್ಲದೆ, ದೇವಸ್ಥಾನದ ಹೊರಾಂಗಣದಲ್ಲಿ ದೇವರ ಮೂರ್ತಿಯನ್ನು ಹೊತ್ತೊಯ್ಯುವ ವೇಳೆ ಜತೆಗೆ ಹೋಗುವ ಕರಗ, ನೈ‌ಯ್ಯಾಂಡಿ ಮೇಳ ಮೊದಲಾದವುಗಳೊಂದಿಗೆ ಇದು ಸೇರಿಕೊಂಡಿರುತ್ತದೆ. ವೇದಿಕೆಯ ಮೇಲಿನ ಪ್ರದರ್ಶನಕ್ಕೆ ಇದು ಸೀಮಿತವಾಗಿಲ್ಲ. ದೇವಸ್ಥಾನಗಳ ನಿರ್ವಾಹಕರ ಸೂಚನೆಯಂತೆ ಇದರ ಪ್ರದರ್ಶನ ಜಾಗವೂ ಬದಲಾಗಬಹುದು.

ನಾಡಾರ್ ದೇವಸ್ಥಾನಗಳಲ್ಲಿ ಉತ್ಸವ ನಡೆಯುವ ಮಾರ್ಚ್‌ನಿಂದ ಏಪ್ರಿಲ್‌ವರೆಗೂ ಕಾರ್ತಿಕ ಮಾಸದ (ನವೆಂಬರ್ – ಡಿಸೆಂಬರ್) ವಿಶೇಷ ಆರಾಧನೆಗಳಲ್ಲೂ ಈ ನರ್ತನ ನಡೆಯುತ್ತದೆ.

ಈ ತಿಂಗಳುಗಳಲ್ಲಿ ಸುಡಲೈ ಮಾಡನ್ ದೇವಸ್ಥಾನಗಳಲ್ಲಿ ಗುರು, ಶುಕ್ರ, ಶನಿವಾರಗಳಂದೂ, ಅಮ್ಮನವರ ದೇವಸ್ಥಾನದಲ್ಲಿ ಸೋಮ, ಮಂಗಳ, ಬುಧವಾರಗಳಂದೂ ನಡೆಯುತ್ತದೆ. ದೇವಸ್ಥಾನದ ಆರ್ಥಿಕ ಸ್ಥಿತಿಗತಿಗನುಸಾರ ಇದನ್ನು ಏರ್ಪಡಿಸಲಾಗುವುದು.

15

ನಾಡಾರ್ ದೈವದ ಕುರಿತ ಕಥೆಯನ್ನೇ ಕಣಿಯಾನ್ ಆಟದಲ್ಲಿ ಹಾಡಲಾಗುತ್ತದೆ. ಈ ಕಲೆಗೆ ಮಾಡನ್, ಕಾಳಿ ಸಂಬಂಧವಾದ ಕಥೆಗಳ ಹಾಡುಗಳು ಮುಖ್ಯವಾಗುತ್ತವೆ. ಬಿಲ್ಲು ಸಂಗೀತ ಕಲೆಯಲ್ಲಿ ವೈಭವದಿಂದ, ಭಾರತ, ರಾಮಾಯಣ ಮೊದಲಾದ ಕಾವ್ಯಗಳನ್ನೂ ಕೆಲವು ಪುರಾಣ ಕಥೆಗಳನ್ನೂ ಹಾಡುವ ಸಂಪ್ರದಾಯ ಇತ್ತೀಚೆಗೆ ಬೆಳೆದು ಬಂದಿದೆ.

ಕಣಿಯಾನ್ ಆಟ ಕಲಾವಿದರು ಹಾಡುಗಳನ್ನು ಬಾಯಿಪಾಢ ಮಾಡಿಕೊಂಡು ಹಾಡುತ್ತಾರೆ. ಮುಖ್ಯ ಕಲಾವಿದರಾದ ಅಣ್ಣಾವಿ ಎಲ್ಲ ಹಾಡುಗಳನ್ನು ತಿಳಿದಿರಬೇಕು. ಹಾಡುಗಳನ್ನು ಕಾಗದದಲ್ಲಿ ಬರೆದಿಟ್ಟು ನೋಡಿಕೊಂಡು ಹಾಡುವ ಪದ್ಧತಿಯಿಲ್ಲ. ಇಂದಿನ ಪರಿಸ್ಥತಿಯಲ್ಲಿ ಅರುಣಗಿರಿನಾಥರ್, ವಳ್ಳಲಾರ್ ಹಾಡುಗಳನ್ನೂ ಅಣ್ಣಾಮಲೈ ರೆಡ್ಡಿಯಾರ್ ಕಾವಡಿಚಿಂದೂ ಹಾಡುಗಳನ್ನು ಹಾಡುವರು. ಪ್ರೇಕ್ಷಕರನ್ನು ತೃಪ್ತಿಪಡಿಸಲು ಸಿನಿಮಾದ ಭಕ್ತಿಹಾಡುಗಳನ್ನು ಇತ್ತೀಚೆಗೆ ಹಾಡುವ ಪದ್ಧತಿ ಬೆಳೆದು ಬಂದಿದೆ.

ಕಣಿಯಾನ್ ಮತ್ತು ತಂಡದಲ್ಲಿ ಮುಖ್ಯ ಹಾಡುಗಾರನಾದ ಅಣ್ಣಾವಿ, ಹಿನ್ನೆಲೆ ಗಾಯಕರು, ತಮಟೆ ಮಾರಿಸುವವರು, ತಾಳ ಹಾಕುವ ಮೂವರು ಸ್ತ್ರೀ ವೇಷಧಾರಿಗಳು ಎಂದು ಎಂಟು ಮಂದಿ ಇರುತ್ತಾರೆ. ದೇವಸ್ಥಾನದ ಆರ್ಥಿಕ ಸ್ಥಿತಿಗನುಗುಣವಾಗಿ ಸಂಖ್ಯೆಯಲ್ಲಿ ಬದಲಾವಣೆಯಾಗುತ್ತದೆ.

ಈ ಕಲಾ ಪ್ರಕಾರದಲ್ಲಿ ಮಕುಟ, ಜಾಲ್ರಾ, ಝೇಂಕಾರತಾಳ ಮೊದಲಾದ ಸಂಗೀತ ವಾದ್ಯಗಳನ್ನು ಬಳಸುವರು. ಮಕುಟವು ಸಂಗೀತದ ಅನುಸಾರ ಉಚ್ಚ, ಮಂದ್ರ ಎಂಬ ವಿಭಾಗಗಳನ್ನು ಹೊಂದಿದೆ. ಉಚ್ಚ ಸ್ಥಾಯಿಯಲ್ಲಿ ಬಾರಿಸುವವರು ಹಾಡುಗಾರನ ಬಲ ಭಾಗದಲ್ಲೂ ಮಂದ್ರ ಸ್ಥಾಯಿಯವರು ಎಡಭಾಗದಲ್ಲೂ ನಿಲ್ಲುವರು.

ಕಣಿಯಾನ್‌ ಕೂತ್ತಿನಲ್ಲಿ ಹಾಡು, ಮಕುಟ, ಸಂಗೀತ, ನರ್ತನ ಹಾಗೂ ವಿವರಣೆ ಎಂಬ ನಾಲ್ಕು ಭಾಗಗಳಿವೆ. ಕಲಾಕಾರರು ನಿಂತ ಜಾಗದಲ್ಲೆ ಇರಬೇಕೆಂಬ ನಿಯಮವೂ ಇದರಲ್ಲಿದೆ.

ಅಣ್ಣಾವಿ ಹಾಡುವಾಗ ಬೇಡತಿಯರು ಮುಖ್ಯ ದೇವರು ಇರುವ ಗರ್ಭಗೃಹಕ್ಕೂ ಅಣ್ಣಾವಿ ನಿಂತಿರುವ ಜಾಗಕ್ಕೆ ನಡುವೆ ಇರುವ ಜಾಗದಲ್ಲಿ ನರ್ತನ ಮಾಡುವರು. ಅಣ್ಣಾವಿ ಹಾಡನ್ನು ನಿಲ್ಲಿಸಿ ವಿವರಣೆ ನೀಡುವಾಗ ನರ್ತನಗಾರರು ಅಣ್ಣಾವಿಯ ಇಬ್ಬದಿಗಳಲ್ಲಿ ನಿಲ್ಲುವರು. ಅಣ್ಣಾವಿಯ ವ್ಯಾಖ್ಯಾನ ಕೂಡ ರಾಗದಿಂದ ಕೂಡಿರುತ್ತದೆ.

ಅಣ್ಣಾವಿ ಹಾಡುವಾಗ ಸಹ ಗಾಯಕರೂ ಮಕುಟಕಾರರೂ ಹಾಡುವರು. ಮಕುಟವೂ ಗಟ್ಟಿಯಾಗಿ ಧ್ವನಿಸುತ್ತದೆ. ಧ್ವನಿ ಮೊಳಗುವಿಕೆ ಅಧಿಕವಾಗುವುದರಿಂದ ಕಣಿಯಾನ್ ಹಾಡುವುದು ಕೇಳುಗರಿಗೆ ಅರ್ಥವಾಗಲಾರದು. ಇದೊಂದು ಕೊರತೆಯೆನ್ನಬಹುದು.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಹೆಣ್ಣು ಬೇಡತಿ ನರ್ತನಕಾರರೂ ಮಕುಟವಾದಕರೂ ಜತೆಯಾಗಿ ನರ್ತಿಸುತ್ತಿದ್ದರು. ಐವತ್ತರ ದಶಕದೀಚೆಗೆ ಈ ಕ್ರಮ ಬದಲಾಗಿದೆ.

ಕಣಿಯಾನ್ ಆಟವಾಡುವವರು ನೇರ ಸಾಲಿನಲ್ಲಿ ನಿಂತು ಹಾಡುತ್ತಾರೆ.

ನರ್ತನಕಾರರು ಹಿಂಭಾಗವನ್ನು ತೋರಿಸದೆ ನರ್ತಿಸಬೇಕೆಂಬುದು ಸಂಪ್ರದಾಯ. ಈ ಕಲಾ ಪ್ರದರ್ಶನ ದೇವರ ಸನ್ನಿಧಿಯಲ್ಲಿ ನಡೆಯುವುದರಿಂದ ನರ್ತನಕಾರರು ತಮ್ಮ ಉಡುಗೆ ಜಾರಿ ಬೀಳದಂತೆ ನೋಡಿಕೊಳ್ಳುವರು.

ಕರಗ ಆಟದಂತಹ ಈ ನರ್ತನವೂ ಆರಂಭ, ವೇಗ, ಅತಿವೇಗ ಎಂಬ ಮೂರು ನೆಲೆಗಳಲ್ಲಿ ನಡೆಯುತ್ತದೆ. ಅತಿವೇಗ ಹಂತದಲ್ಲಿ ತಮಟೆ ಬಹಳ ಜೋರಾಗಿ ಮೊಳಗುತ್ತದೆ.

ಈ ಕಲಾಕಾರರ ತಂಡದಲ್ಲಿ ಅಣ್ಣಾವಿ ಅಂಗಿ ಧರಿಸುತ್ತಾರೆ. ಮಕುಟಗಾರರು ಹೆಚ್ಚಾಗಿ ಅಂಗಿ ಹಾಕಿರುವುದಿಲ್ಲ. ಈ ಆಟದಲ್ಲಿ ಗಂಡಸರೇ ಬೇಡತಿ ವೇಷ ಹಾಕುವುದು ರೂಢಿ. ಇವರು ರೇಷ್ಮೆ ಇಲ್ಲವೇ ಇತರ ಸೀರೆ ಧರಿಸುತ್ತಾರೆ. ಕೊರಳಲ್ಲಿ ಸರ, ಕೈಗೆ, ಬಳೆ, ಕಾಲಿಗೆ ಗೆಜ್ಜೆ ಇತ್ಯಾದಿ ಆಭರಣ ಧರಿಸುವುದು ವಾಡಿಕೆ. ಹಿಂದಿನ ಕಾಲದಲ್ಲಿ ಹೆಣ್ಣು ಬೇಡತಿಗೆ ಸೀರೆ ಊಟ ಯಜಮಾನ ಕೊಡುತ್ತಿದ್ದರು. ಈಗ ಆ ಸಂಪ್ರದಾಯವಿಲ್ಲ.

ಹಾಡು, ನರ್ತನ, ಮಕುಟ ವಾದ್ಯ ಬಾರಿಸುವಿಕೆ ಇವನ್ನೆಲ್ಲ ಗುರುವಿನಿಂದಲೋ ತಂದೆಯಿಂದಲೋ ಕಲಿಯಬೇಕಾಗಿಲ್ಲ. ಹಿರಿಯ ಕಲಾವಿದರಿಂದ ಅಥವಾ ನಾಟಕ ನಡೆಯುವಾಗ ನೋಡಿ ಕಲಿಯುವುದೂ ಇದೆ. ಆರಂಭದಲ್ಲಿ ನರ್ತನಗಾರರಾಗಿದ್ದು ಆಮೇಲೆ ಅಣ್ಣಾವಿಯಾಗುವರು.

ದೇವಸ್ಥಾನದ ಉತ್ಸವ ಆರಂಭಗೊಳ್ಳುವ ದಿನ (ಸೋಮವಾರ ಅಥವಾ ಗುರುವಾರ)ದಂದು ಕಾಪ್ಪು ಕುಟ್ಟುವಿಕೆ ನಡೆಯುತ್ತದೆ. ಆರಂಭದಲ್ಲಿ ರಾಜಮೇಳ ನಡೆಯುತ್ತದೆ. ಅದು ಮುಕ್ತಾಗೊಳ್ಳುತ್ತಿದ್ದಂತೆ ಕಾಪ್ಪುಕಟ್ಟುವಿಕೆ ಕಾರ್ಯಕ್ರಮವಿರುತ್ತದೆ. ಮುಖ್ಯ ದೇವರ ಮುಂಭಾಗದಲ್ಲಿ ಕುಳಿತು ಕೈಗೆ ಹಳದಿ ನೂಲನ್ನು ಕಟ್ಟಿಕೊಳ್ಳುವುದೇ ಕಾಪ್ಪು ಕಟ್ಟುವಿಕೆ.

ದೇವಸ್ಥಾನದ ದೈವಗಳಿಗೆ ಬಲಿಕೊಡುವ ಮುನ್ನ ಕಾಪ್ಪು ಕಟ್ಟಿಕೊಳ್ಳುವವರು ಕೈಯನ್ನೂ ನಾಲಿಗೆಯನ್ನೂ ಗಾಯಮಾಡಿಕೊಂಡು ಹನಿ ರಕ್ತವನ್ನು ಕೆಳಕ್ಕೆ ಬೀಳಿಸುತ್ತಾರೆ. ಇದನ್ನು ಕೈವೆಟ್ಟ್‌ (ಕೈ ತುಂಡರಿಸು) ಎನ್ನುವರು. ದೇವಸ್ಥಾನದ ದಕ್ಷಿಣ ಭಾಗದಲ್ಲಿ ಪಾಳುಭೂಮಿ ಇಲ್ಲವೇ ಸುಡುಗಾಡಿನಲ್ಲಿ ರಾತ್ರಿ ೧೨ ಗಂಟೆಗೆ ‘ತಿರುಳೈ’ ಬೀಸುವಿಕೆ ನಡೆಯುತ್ತದೆ. ಕಾಪ್ಪು ಕಟ್ಟುವವರು ಇದನ್ನು ಮಾಡುವರು. ಇವರು ಕೈಯನ್ನು ಗೀರಿ ತೆಗೆದ ರಕ್ತ, ಮೇಕೆ ಇಲ್ಲವೇ ಕೊಳ್ಳಿಯ ರಕ್ತ, ಬೆಳ್ತಿಗೆ ಅಕ್ಕಿ ಅನ್ನವನ್ನು ಬೆರೆಸಿ ಆಕಾಶಕ್ಕೆ ಎಸೆಯುವುದೇ ‘ತಿರಳೈ’ ನೀಡುವಿಕೆ. ಈ ಅನ್ನವನ್ನು ಪಿಶಾಚಿಗಳು ತಿನ್ನುತ್ತವೆ ಎಂಬ ನಂಬಿಕೆಯಿದೆ.

ಕೈ ಕತ್ತರಿಸುವಿಕೆ ಮುಗಿದ ನಂತರ ಪಾತ್ರಿಗಳು ನರ್ತಿಸುವರು. ಆಗ ಪಿಶಾಚಿ ನರ್ತನ ನಡೆಯುವುದು. ಸೊಂಟಕ್ಕೆ ಕಾವಿ ಬಟ್ಟೆಯುಟ್ಟು, ಮುಖಕ್ಕೆ ಬಟ್ಟೆ ಹಾಕಿ ಕಣಿಯಾನ್ ದೆವ್ವ ನರ್ತಕರು ನರ್ತಿಸುವರು.

ತಿರುನೆಲ್ವೇಲಿ, ತೂತ್ತುಕುಡಿ, ಕನ್ಯಾಕುಮಾರಿ ಜಿಲ್ಲೆಯಲ್ಲಿ ವಾಸವಾಗಿರುವ ಜಾತಿಯವರು ಮಾತ್ರ ಈ ಕೂತ್ತು (ಆಟ) ವಿನಲ್ಲಿ ಭಾಹವಹಿಸುವರು. ಕಣಿಯಾನ್ ಹುಟ್ಟಿನ ಬಗೆಗಿನ ವಿವರ ಸುಡಲೈಮಾಡನ್ ಕತೆಯಲ್ಲಿ ಬರುತ್ತದೆ. ಕಣಿಯಾನ್ ಆಡಬೇಕಾದ ಆಟದ ಬಗ್ಗೆ ಸಿವನ್

ತಿದ್ದಿಮಿ ತಿದ್ದಿಮಿ ದಿಮಿ ಎನ್ನಿ
ನೆಗೆಯುತ ಆಡಿಬಾ ದೈವ ಕಣಿಯಾನ್
ಮದ್ದಳೆ ಮಕುಟವನು ತಟ್ಟಿಯೊಡನೆ
ದೊಡ್ಡದಾದ ದೆವ್ವ ಮುಖವನು ಮುಟ್ಟಿಯಾಡಲು
ಭೀತಿಯಿಲ್ಲದ ಸುಡಲೈ ದೇವನು ಕಂಡು ಮೆಚ್ಚಲು
ಕ್ರಮಬದ್ಧವಾಗಿ ನಿಂತು ಆಡುವ ಕಣಿಯಾನ್

ಎಂದು ಹೇಳುತ್ತಾರೆ.

ಕಣಿಯಾನ್ ಆಟದ ಬಗ್ಗೆ ಮುಕ್ಕೂಡಲ್ ಪಳ್ಳು, ದೈವ ಸಿಲ್ಕೆಯಾರ್ ವಲರಿವಿಡು ತೂದ್ ಮುಂತಾದ ಕಿರು ಸಾಹಿತ್ಯಗಳಲ್ಲಿ ಬರುವುದರಿಂದ ಇದು ೧೬ನೇ ಶತಮಾನಕ್ಕಿಂತಲೂ ಹಿಂದಿನದೆಂದು ತಿಳಿಯಬಹುದು.

ಇತ್ತೀಚೆಗೆ ಕಣಿಯಾನ್ ಆಟದ ಕಲಾವಿದರು ಚೂಡಿದಾರದಂಥ ಆಧುನಿಕ ಉಡುಗೆಯುಟ್ಟು ನರ್ತನ ಮಾಡುತ್ತಾರೆ. ಆಧುನಿಕ ಕಾಲಘಟ್ಟದಲ್ಲಿ ಕಣಿಗರು, ಪರಯರು, ಸಾಂಬವರು ಮೊದಲಾದ ಜಾತಿಯವರು ಕೂಡ ಈ ಆಟವನ್ನು ಪ್ರದರ್ಶಿಸುತ್ತಾರೆ.

– ಎ.ಕೆ.ಪಿ. ಅನುವಾದ ಬಿ.ಎಸ್.ಎಸ್.

ಕಣ್ಣೇರ್ ಕೇರಳದಲ್ಲಿ ಪ್ರಚಲಿತವಾದ ದೃಷ್ಟಿದೋಷದ ಒಂದು ನಂಬಿಕೆಯಾಗಿದೆ ಕಣ್ಣೇರ್. ಕೆಲವರ ನೋಟದಲ್ಲಿಯೇ ದೋಷ ಸಂಭವಿಸುತ್ತದೆ ಎಂಬುದು ಇದರ ನಂಬಿಕೆಯಾಗಿದೆ. ಕರಿಕಣ್ಣು, ಅಪಕಣ್ಣು, ಪೊಟ್ಟಿಕಣ್ಣು, ಕಣ್ಣಪಟ್ಟಲ್, ಕಣ್ಣಿಪಟ್ಟಲ್, ಕಣ್ಣಿಕೊಳ್ಳಲ್ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಒಬ್ಬ ವ್ಯಕ್ತಿ ಹೊಸ ವಸ್ತುಗಳನ್ನು ವಿಷಯಗಳನ್ನು, ಆಸೆಯಿಂದಲೂ ಅಸೂಯೆಯಿಂದಲೂ ನೋಡುವಾಗ ದೃಷ್ಟಿದೋಷ ಸಂಭವಿಸುತ್ತದೆ ಎಂಬುದು ಜನರ ನಂಬಿಕೆ. ಈ ಆಸೆಯನ್ನೂ, ಅಸೂಯೆಯನ್ನೂ ಮನಸ್ಸಿನಲ್ಲಿ ಯೋಚಿಸಿದರೂ ದೃಷ್ಟಿದೋಷ ಸಂಭವಿಸಬಹುದು. ಸಾಮಾನ್ಯ ವ್ಯಕ್ತಿಗಳು, ಮಕ್ಕಳು, ಗರ್ಭಿಣಿಯರು, ಮೂಲೆಯೂಣಿಸುವ, ತಾಯಂದಿರು, ಸುಂದರಿಯರು ಮೊದಲಾದವರಿಗೆ ಅತೀ ಬೇಗನೆ ದೃಷ್ಟಿದೋಷ ತಟ್ಟುತ್ತದೆಂಬುದು ನಂಬಿಕೆ. ಮನೆ, ಬಾವಿ, ಬೆಳೆ, ದನ – ಕರುಗಳು, ಕೋಳಿ ಮೊದಲಾದವುಗಳಿಗೆ ದೃಷ್ಟಿದೋಷ ಸಂಭವಿಸುವ ಸಾಧ್ಯತೆಯನ್ನು ಜನ ರು ನಂಬಿದ್ದಾರೆ. ಆಧುನಿಕ ಕಾಲದಲ್ಲಿ ಕಾರು, ವ್ಯಾನ್ ಮೊದಲಾದ ವಾಹನಗಳಿಗೂ ದೃಷ್ಟಿದೋಷದ ವ್ಯಾಪ್ತಿ ಇದೆ.

ಕಣ್ಣೇರ್ ತಾಗದಂತೆ ತಡೆಯುವ ಕ್ರಿಯೆಗಳನ್ನು ನಡೆಸುತ್ತಾರೆ. ಚಿಕ್ಕ ಮಕ್ಕಳಿಗೆ ದೃಷ್ಟಿಯಾಗದಂತೆ ಕೆನ್ನೆಗೆ ಕಪ್ಪು ಬೊಟ್ಟು ಇಡುತ್ತಾರೆ. ಪ್ರಯಾಣದ ಅನಂತರ ಚಿಕ್ಕಮಕ್ಕಳಿಗೆ ಉಪ್ಪು ಹಾಗೂ ಮೆಣಸು ನಿವಾಳಿಸುವ ಕ್ರಮವಿದೆ. ಮಕ್ಕಳಿಗೆ ಆರೋಗ್ಯ ಕೆಡುವುದಕ್ಕೆ ದೃಷ್ಟಿಯೇ ಕಾರಣವೆಂದು ಜನರು ನಂಬುತ್ತಾರೆ. ಗರ್ಭಿಣಿಯರಿಗೂ ಮೊಲೆಯುಣಿಸುವ ತಾಯಂದಿರಿಗೂ ದೃಷ್ಟಿ ತಲಗದಂತೆ ಓಲೆಯಲ್ಲಿ ‘ಯಂತ್ರ’ವನ್ನು ಬರೆದು ‘ತಾಯಿತ’ ವಾಗಿ ದೇಹದಲ್ಲಿ ಧರಿಸುತ್ತಾರೆ. ಮೊಲೆಯುಣಿಸುವ ತಾಯಂದಿರಿಗೆ ಹಾಲು ಬತ್ತಿ ಹೋದಾಗ ಸೃಷ್ಟಿಯಾಗಿದೆ ಎಂದು ನಂಬುತ್ತಾರೆ. ದೃಷ್ಟಿ ನಿವಾರಣೆಗಾಗಿ ನಿವಾಳಿಸುವುದು, ಮಂತ್ರವಾದ ಕ್ರಿಯೆಗಳನ್ನು ನಡೆಸುತ್ತಾರೆ. ಸುಂದರಿಯರು ಎಡಗೆನ್ನೆಯಲ್ಲಿಯೂ, ನರ್ತಕಿಯರೂ ಗಲ್ಲದಲ್ಲಿ ಕಪ್ಪು ಬೊಟ್ಟನ್ನಿಟ್ಟು ದೃಷ್ಟಿಯನ್ನು ನಿವಾರಿಸಿಕೊಳ್ಳುತ್ತಾರೆ.

ಬೆಳೆಗಳಿಗೆ ದೃಷ್ಟಿ ತಗುಲದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆದರುಗೊಂಬೆ ಇರಿಸುತ್ತಾರೆ. ಕಪ್ಪು ಮಡಕೆಯಲ್ಲಿ ಸುಣ್ಣದಿಂದ ಬರೆಯವುದು, ಮಡಕೆಯಲ್ಲಿ ಕಣ್ಣು ಮೂಗು ಬರೆಯುವುದು ಬೆದರುಗೊಂಬೆಯ ಶೈಲಿ. ಹೊಸತಾಗಿ ಮನೆ ನಿರ್ಮಿಸುವಾಗ ಅದರ ಮುಂದೆ ಬೆದರುಗೊಂಬೆಗಳನ್ನು ನಿರ್ಮಿಸುತ್ತಾರೆ. ದೃಷ್ಟಿಯಿಂದಾಗುವ ತೊಂದರೆಗಳನ್ನು ನಿವಾರಿಸುವ ಮಂತ್ರವಾದಿ, ಕುರುದಿ, ನಿವಾಳಿಸುವ ಕ್ರಿಯೆಗಳನ್ನು ಮಾಡುತ್ತಾರೆ. ಕಣ್ಣೇರ್ ದೋಷವನ್ನು ನಿವಾರಿಸುದಕ್ಕೆ ಕೆಲವರು ‘ಕಣ್ಣೇರ್ ಪಾಟ್’ ಹಾಡುತ್ತಾರೆ. ಮನುಷ್ಯರಿಗೆ ಜಾನುವಾರುಗಳಿಗೆ, ಬೆಳೆಗಳಿಗೆ ಹಾಗೂ ಮನೆಗಳಿಗೆ ತಗಲುವ ದೋಷವನ್ನು ಈ ಹಾಡು ನಿವಾರಿಸುತ್ತದೆಂಬ ನಂಬಿಕೆ. ‘ತೋಲುಳಿಚ್ಚಲ್’ ಎಂಬುದು ಹಾಡುತ್ತಾ ಇಷ್ಟದೈವಗಳಿಗೆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಮಲೆಯರು, ಪಾಣರು, ಪುಳ್ಳುವರು ಮೊದಲಾದ ಸಮುದಾಯದವರು ಈ ಹಾಡಿನೊಂದಿಗೆ ಮಂತ್ರವಾದ ಕ್ರಿಯೆಗಳನ್ನು ನಡೆಸುತ್ತಾರೆ.

– ಎಸ್.ಕೆ. ಅನುವಾದ ಎನ್.ಎಸ್.

ಕಣ್ಯಾರ್ ಕಳಿ ಪಾಲ್ಘಾಟು ಜಿಲ್ಲೆಯ ಆಲತ್ತೂರ್, ಚಿಟ್ಟೂರ್, ಪಾಲ್ಘಾಟು ತಾಲೂಕಿನ ಪೂರ್ವಭಾಗ – ಈ ಭಾಗಗಳಲ್ಲಿರುವ ನಾಯರ್ ತರವಾಡುಗಳಲ್ಲಷ್ಟೆ ಈಗ ಕಣ್ಯಾರ್‌ಕಳಿ ಇದೆ. ಇದರ ಹೆಸರು ನಿಜವಾಗಿ ‘ದೇಶತ್ತುಕಳಿ’. ಒಂದು ಪ್ರದೇಶದ ಎಲ್ಲ ಜನರೂ ಸೇರಿ ನಡೆಸುವ ಆಟ – ದೇಶತ್ತುಕಳಿ. ನಿಜವಾಗಿ ಇದು ಒಂದು ಹರಕೆಯ ಆಟ. ತನ್ನ ಕುಟುಂಬ /ಸಂಸಾರಕ್ಕೆ ಬರುವ ಆಪತ್ತುಗಳನ್ನು ದೂರಮಾಡಿಕೊಂಡು, ರೋಗಮುಕ್ತರನ್ನಾಗಿ ಮಾಡು – ಎಂಬಂತೆ ಪ್ರಾರ್ಥಿಸಿಕೊಂಡು ಹಾಗಾದಾಗ, ದೇವಿಯ ಮುಂದೆ ವೇಷಹಾಕಿಕೊಂಡು ಕುಣಿದು ಹರಕೆ ತೀರಿಸಿಕೊಳ್ಳುತ್ತೇವೆ ಎಂಬ ಪ್ರಾರ್ಥನೆಯನ್ನು ಈಡೇರಿಸುವುದಕ್ಕಾಗಿ ಪ್ರತೀ ಕುಟುಂಬ ಸದಸ್ಯರು ನಡೆಸುವ ಹರಕೆಯ ಕಾರ್ಯಕ್ರಮವಿದು. ನಾಯರ್ ತರವಾಡಿನ ಆಸ್ಥಾನ ಭಗವತಿಯ ಮುಂದೆ ಈ ಹರಕೆಯ ಕಾರ್ಯಕ್ರಮವನ್ನು ನಡೆಸುವ ಮೊದಲು ಈ ಪ್ರದೇಶದ ಹಿರಿಯನ ನೇತೃತ್ವದಲ್ಲಿ ವ್ರತಾನುಷ್ಠಾನಗಳ ಶಿಸ್ತಿನಿಂದ ಅಭ್ಯಾಸ ನಡೆಯುತ್ತದೆ. ಕಳಿಕುಂಬಿಡಲ್ (ಆಟ ಪ್ರಾರಂಭದಲ್ಲಿ ವಂದನೆ) ನೊಂದಿಗೆ ವ್ರತ ಆರಂಭವಾಗುತ್ತದೆ. ಇದಕ್ಕೆ ‘ಕಳಿಕ್ಕೂರಯಾಡುಗ’ ಎಂದೂ ಹೆಸರು. ದೇಹವನ್ನೂ ಮನಸ್ಸನ್ನೂ ಸ್ಥಿರಗೊಳಿಸಿ ಕಾಲುಗಳನ್ನೂ ಹೆಜ್ಜೆಗಳನ್ನೂ ಕ್ರಮಬದ್ಧವಾಗಿರಿಸಿಕೊಂಡು ನಡೆಸುವ ಈ ಅಭ್ಯಾಸವು ಸುಮಾರು ಒಂದು ತಿಂಗಳ ಕಾಲ ನಡೆಯುತ್ತದೆ.

ಕಣ್ಣಕಿಯಾರ್‌ಕಳಿ ಎಂಬುದೇ ಕಣ್ಯಾರೆಕಳಿ ಆದುದು ಎಂಬ ಅಭಿಪ್ರಾಯವು ಗಣನೀಯವಾದುದು. ಇದರ ಕಮಿಯನ್ ಸಮುದಾಯದವರ ಆಟವೆಂದೂ, ತರಕಸಮುದಾಯದವರು ತಮಿಳು ನಾಡಿನಿಂದ ತಂದ ಆಟವೆಂದು ವಿಭಿನ್ನ ಅಭಿಪ್ರಾಯಗಳಿವೆ. ಯೋಧ ಕಲೆಯ ರೂಪಭಾವಗಳು ಈ ಆಟದಲ್ಲಿ ಕಂಡುಬರುತ್ತಿದೆ. ನಾಯರ್ ಯೋಧರು ದೇವಪ್ರೀತಿಗಾಗಿ ಅದನ್ನು ಆಡುವುದರ ಜತೆಗೆ ವ್ಯಾಯಾಮ ಅಂಗವಾಗಿಯೂ ಇದನ್ನು ಅಭ್ಯಾಸಮಾಡುತ್ತಾರೆಂಬುದೂ ಗಮನಾರ್ಹ ಸಂಗತಿಯಾಗಿದೆ. ಮನಸ್ಸನ್ನೂ ಶಾರೀರಿಕ ಆರೋಗ್ಯವನ್ನೂ ಶಿಸ್ತಾಗಿಟ್ಟುಕೊಳ್ಳಲು ಮತ್ತು ಅವನ್ನು ಇನ್ನಷ್ಟು ಸ್ವಚ್ಛವಾಗಿರಿಸಿಕೊಳ್ಳಲು ಕೂಡ ಈ ಆಟವನ್ನು ಬಳಸಿಕೊಂಡಂತಿದೆ.

ಆಟವು ಪ್ರದರ್ಶಿಸಲ್ಪಡುವುದು ಮೀನ – ಮೇಷ ತಿಂಗಳುಗಳಲ್ಲಿ, ಹಿಂದಿನ ಕಾಲದಲ್ಲಿ ಹದಿನಾಲ್ಕು ದಿನಗಳವರೆಗೆ ಆಟ ನಡೆಯುತ್ತಿತ್ತೆಂದು ತಿಳಿದುಬರುತ್ತದೆ. ಈಗ ಅದನ್ನು ಮೂರು ದಿನಗಳಿಗೆ ಸಂಕ್ಷೇಪಿಸಲಾಗಿದೆ. ನಾಲ್ಕನೇ ದಿವಸ ‘ಹೂಬಾಚ’ ಲಾಗುತ್ತದೆ. ಅಂದರೆ ಮೂರು ದಿನಗಳ ಆಟದ ಪರಿಸಮಾಪ್ತಿ ಮತ್ತು ಶುದ್ಧೀಕರಣ. ಮೊದಲ ದಿನದ ಆಟವನ್ನು ಆಂಡಿಕುತ್ತೆಂದೂ ಎರಡನೇ ದಿನದ್ದನ್ನು ವಳ್ಳೋನ್ ಕುತ್ತೆಂದೂ ಮೂರನೇ ದಿನದ ಆಟವನ್ನು ಮಲಮ ಎಂದೂ ಕರೆಯುತ್ತಾರೆ.

16

ಆಚಾರಿ ಕೋಲು (=ಇಪ್ಪತ್ತನಾಲ್ಕು ಅಂಗುಲ) ಅರುವತ್ನಾಲ್ಕರ ಸುತ್ತಳತೆಯುಳ್ಳ ಚಪ್ಪರಕ್ಕೆ ಒಂಬತ್ತು ಕಂಬಗಳನ್ನೂ ನಿರ್ಮಿಸಿ ಸಜ್ಜುಗೊಳಿಸಲಾಗುತ್ತದೆ. ತೆಂಗಿನ ಎಳೆಯಗರಿಗಳಿಂದ ಚಪ್ಪರವು ಅಲಂಕೃತವಾಗುತ್ತದೆ. ಚಪ್ಪರದ ಮಧ್ಯದ ಕಂಭದ ಸುತ್ತ ಆಟ ನಡೆಯುತ್ತದೆ. ಅಲ್ಲಿ ಮೊದಲ ದಿನ ‘ಕಾವಿಲ್ ಅಮ್ಮ’ನ ಪ್ರತಿನಿಧಿಯಾದ ಕಮರನು (ಪಾತಿ) ಆವೇಶದಿಂದ ಕುಣಿದು ಆಟವಾಡಲು ಅಪ್ಪಣೆ ಕೊಡಬೇಕು. ಅದರ ಬಳಿಕ ಆ ಕುಂಭದ ಬುಡದಲ್ಲಿ ತುಂಬುಕಳಸೆಯನ್ನೂ ಕಾಲುದೀಪವನ್ನೂ ಪೀಠವನ್ನೂ ಪೀಠದಲ್ಲಿ ಖಡ್ಗವನ್ನೂ ಇಡಲಾಗುತ್ತದೆ. ಈ ಮೂಲಕ ದೇವಿಯ ಪ್ರತ್ಯಕ್ಷ ಸಾನ್ನಿಧ್ಯವು ಅಲ್ಲಿ ಇದೆ ಎಂದು ಸಂಕಲ್ಪಿಸಲಾಗುತ್ತದೆ.

ಆಟಗಾರರು ಚಪ್ಪರಕ್ಕೆ ಪ್ರವೇಶಿಸುವ ಮೊದಲ ಆಟದ ಆಚಾರ್ಯನಾದ ಊರ ಹಿರಿಯನ ನೇತೃತ್ವದಲ್ಲಿ ಭಗವತಿಗೆ ನಮಸ್ಕರಿಸಿ ಅನುಗ್ರಹ ಬೇಡುತ್ತಾರೆ. ಚೆಂಡೆ ಜೇಗಂಟ           ಚಕ್ರತಾಳ ಕೊಳಲು ಮುಂತಾದ ವಾದ್ಯಗಳ ಸಂಗೀತದೊಂದಿಗೆ ಆಟಗಾರರು ಚಪ್ಪರಕ್ಕೆ ಪ್ರವೇಶಿಸಿ ಸುತ್ತಲೂ ನೆರೆದು ನಿಲ್ಲುತ್ತಾರೆ. ದೊಡ್ಡ ವೃತ್ತವೇ ನಿರ್ಮಾಣವಾಗುತ್ತದೆ. ಗುರುದೇವನನ್ನೂ ಭೂಮಿ ದೇವಿಯನ್ನೂ ವಂದಿಸಿ ಇವರು ವಟ್ಟಕ್ಕಳಿ (ವೃತ್ತಾಕಾರದ ಕುಣಿತ) ಆರಂಭಿಸುತ್ತಾರೆ. ಜರಿಪಂಚೆಯುಟ್ಟು ಜರಿರುಮಾಲನ್ನು ತಲೆಗೆ ಕಟ್ಟಿ ಶ್ರೀಗಂಧ – ಕುಂಕುಮಗಳ ಬೊಟ್ಟಿಟ್ಟು ನಿಂತ ಪ್ರತಿಯೊಬ್ಬ ಆಟಗಾರನೂ ಚೊಕ್ಕ ಕುಣಿತದ ಹೆಜ್ಜೆಗಳಿಂದ ನೋಡುಗರ ಮನಸೂರೆಗೊಳ್ಳೂತ್ತಾನೆ. ಹಜ್ಜೆಗಳನ್ನು ಮುಂದಕ್ಕೂ ಹಿಂದಕ್ಕೂ ಬದಲಾಯಿಸುತ್ತ ವೇಗ ಹೆಚ್ಚಿಸಿ ಆಟಕ್ಕೆ ರಂಗೇರಿಸುತ್ತಾನೆ.

ಕಣ್ಯಾರ್‌ಕಳಿಯ ಹಾಡುಗಳು ಶಾಸ್ತ್ರೀಯವಾಗಿ ರಚಿತವಾದವುಗಳು. ಸಂಗೀತಾಭ್ಯಾಸ ಮಾಡಿದವರಲ್ಲವಾದರೂ ಒಳ್ಳೆಯ ತಾಳಜ್ಞಾನ ಶಾರೀರ ಗುಣಗಳು ಹಾಡುಗಾರರಿಗಿರುತ್ತದೆ. ಚೆಂಬ, ಚೆಂಬಡ, ತ್ರಿಪಡ, ಮುರಿಯಡಂದ ಮುಂತಾದ ತಾಳಗಳು ಹಾಗೂ ಪುರನೀರ್, ನಾಟ್ಟುಕುರುಂಜಿ, ಚೀಂದ ಮುಂತಾದ ರಾಗಗಳ ಮಾಧುರ್ಯವು ಇವರು ಹಾಡುವ ಹಾಡುಗಳ ಮೂಲಕ ಸಹೃದಯ ವೇದ್ಯವಾಗುತ್ತದೆ.

ಪಾಂಡ್ಯರಾಜ್ಯವನ್ನು ಸುಟ್ಟುರುಹಿ ತಣಿಯದ ಕ್ರೋಧಾನ್ವಿತಳಾಗಿದ್ದ ಕಣ್ಣಕೀದೇವಿಯನ್ನು ಶಾಂತವಾಗಿಸಲು ಊರವರೆಲ್ಲರೂ ಪ್ರಾರ್ಥಿಸಿ ಆತ್ಮ ಸಮರ್ಪಣ ಮಾಡಿಕೊಂಡಾಗ ದೇವಿಯ ಕೋಪವು ಶಮನವಾಯಿತು. ಆ ಕಾರಣದಿಂದ ಕಣ್ಯಾರ್ ಕಳಿಯು ಹುಟ್ಟಿಕೊಂಡಿದೆ ಎಂಬುದು ಇದರ ಐತಿಹ್ಯ.

ಕಣ್ಯಾರ್‌ಕ್ಕಳಿಯು ‘ವಟ್ಟಕ್ಕಳಿ’ ಮಾತ್ರವಾಗಿತ್ತು. ಹಾಡುಗಳೆಲ್ಲ ದೇವರನ್ನು ಸ್ತುತಿಸುವಂಥವು. ದೇವ ದೇವಿಯರನ್ನು ಹಾಡಿ, ಆಡಿ, ಸ್ತುತಿಸಿ, ಸಂಪ್ರೀತಿಗೊಳಿಸುವುದು ಇವುಗಳ ಲಕ್ಷ್ಯ. ವಟ್ಟಕ್ಕಳಿಯನ್ನೇ ತುಂಬ ಹೊತ್ತು ನೋಡುತ್ತ ಕುಳಿತುಕೊಳ್ಳಲು ಬೇಸರವಾದಾಗ ಅದನ್ನು ಹೋಗಲಾಡಿಸಲು ತಮಾಷೆಗಳ ಸಿಹಿಮಿಶ್ರಣ ಸೇರಿಸಿದ ‘ಪೊರಾಟ್ಟ್'(ತಮಾಷೆ) ಗಳನ್ನು ಸೇರಿಸಲಾಯಿತು. ಅದರ ಮಾದರಿ ‘ಪಾಣಪ್ಪೊರಾಟ್ಟ್’ ಗಳಾಗಿದ್ದುವು.

ಪ್ರತಿದಿನ ಯಾವ ರೀತಿಯ ವೇಷಗಳು (ಪೊರಾಟ್ಟ್ ವೇಷಗಳು) ರಂಗಕ್ಕೆ ಬರಬೇಕು ಎಂಬುದನ್ನು ಕೂಡ ನಿಗದಿಗೊಳಿಸಲಾಗುತ್ತಿತ್ತು. ಮೊದಲನೆ ದಿವಸ ಎಂದರೆ ಆಂಡಿಕುತ್ತ್ ನಡೆಯುವಂದು ಕುಂಭಪೂಶಾರಿಗಳು, ವೈಷ್ಣವರು, ತಪಸ್ವಿಗಳು ಮುಂತಾದ ಕೂಟಪೊರಾಟ್ಟುಗಳು; ತೊಟ್ಟಿಯನ್ – ತೊಟ್ಟಿಚ್ಚಿ, ತೆಕ್ಕನ್ – ತೆಕ್ಕತ್ತಿ, ಚೆರುಮಾನ್ – ಚೆರುಮಿ ಎಂಬ ಜೋಡಿ ಪೊರಾಟ್ಟುಗಳು; ಮುಕ್ತಾಯದ ಹೊತ್ತಿಗೆ ಹಾವಾಡಿಗರ ಗುಂಪು ರಂಗಕ್ಕೆ ಬರುತ್ತಿದ್ದವು. ವೆಳ್ಳಾನ್ ಕೂತ್ತ್ (ವಳ್ಳೋಣ್ ಪಾಟ್ಟ್) ನೆಡೆಯುವ ಎರಡನೆಯ ದಿನ ಕಣಕ್ಕರು, ಕೂಟಚೆರುಮಕ್ಕಳ್, ಚಕ್ಕಲಿಯನ್, ಕೊಂಙುಪರಯರ್, ಕುರವನ್ – ಕುರತ್ತಿ, ಚಕ್ಕಲಿಯನ್ – ಚಕ್ಕಿಲಿತ್ತಿ, ತರವಾಟ್ಟಮ್ಮ, ಎಳುತ್ತಚ್ಚನ್, ಶಿಷ್ಯರು ಮುಂತಾದ ಪೊರಾಟ್ಟುಗಳಿಗೆ ಅವಕಾಶ. ಮಲಮದಿನ (ಕೊನೆದಿನ) ಒಂಟಿ ಚಕ್ಕಿಲಿಯನ್, ಜೋಡಿ ಕೂಡಾನ್, ಮಲಯರು – ಮಲಯತ್ತಿಯರು, ವೆಳ್ಳಕೂಡಿಶ್ಶಿ – ವೇಶಕೊಡಿಚ್ಚಿ ಎಂಬ ಪೊರಾಟ್ಟುಗಳು ಬರುತ್ತವೆ. ಇವನ್ನೆಲ್ಲ ನಿಶ್ಚೈಸಿ ನಿಗಿದಗೊಳಿಸಿದ ಸಂಗತಿಗಳೆಂದು ತಿಳಿಯಬಾರದು. ಅದಲು ಬದಲಾಗಿಯೂ ಪೊರಾಟ್ಟುಗಳು ಬರುವ ರೂಢಿಯೂ ಇದೆ.

– ಕೆ.ವಿ.ಸಿ. ಅನುವಾದ ಕೆ.ಕೆ.

ಕತ್ತಿಸಾಮು ಇದು ಧೈರ್ಯ ಸಾಹಸಗಳಿಂದ ಕೂಡಿದ ಜನಪದ ಪ್ರದರ್ಶನ ಕಲೆ. ಇದನ್ನೇ ಕನ್ನಡದಲ್ಲಿ ಕತ್ತಿ ವರಸೆ ಎನ್ನುತ್ತಾರೆ. ಬಲಗೈಯಲ್ಲಿ ಕತ್ತಿಯನ್ನು, ಎಡಗೈಯಲ್ಲಿ ಢಾಲನ್ನು ಹಿಡಿದು ಯುದ್ಧ ಸೈನಿಕನಂತೆ ವಿಭಿನ್ನ ಶೈಲಿಗಳಲ್ಲಿ ಹೆಜ್ಜೆ ಹಾಕುತ್ತಾ ಹೆಜ್ಜೆಗೆ ಒಪ್ಪುವಂತೆ ಅನೇಕ ವಿನ್ಯಾಸಗಳನ್ನು ಮಾಡುತ್ತ ಕೊಡುವ ಪ್ರದರ್ಶನವೇ ಕತ್ತಿಸಾಮು (ಕತ್ತಿವರಸೆ) ಕತ್ತಿಯನ್ನು ಪ್ರಧಾನ ಆಯುಧವಾಗಿ ಬಳಸಿಕೊಂಡು ಮಾಡುವ ಕಲೆಯಾದ್ದರಿಂದ ಇದಕ್ಕೆ ಕತ್ತಿವರಸೆ ಎಂಬ ಹೆಸೆಉ ಬಂದಿದೆ. ಪ್ರಾಚೀನ ಕಾಲದಲ್ಲಿ ಕತ್ತಿವರಸೆಗೆ ತುಂಬಾ ಪ್ರಾಧಾನ್ಯ ಇತ್ತು. ಈ ವಿದ್ಯೆಯನ್ನು ಕಲಿಯಲು ಅನೇಕ ಶಿಕ್ಷಣ ಕೇಂದ್ರಗಳಿದ್ದುವು. ಅವುಗಳನ್ನು ತರಬೇತಿ ಕೇಂದ್ರಗಳು (ತಾಲಿಂಖಾನಾ) ಎನ್ನುವರು. ಈ ಕೇಂದ್ರಗಳಲ್ಲಿ ಕತ್ತಿವರಸೆ – ದೊಣ್ಣೆವರಸೆಗಳನ್ನು ಕಲಿಯುತ್ತಿದ್ದರು.

ಕತ್ತಿವರಸೆ ಆತ್ಮರಕ್ಷಣೆ, ದೇಶರಕ್ಷಣೆಗೆ ಉಪಯೋಗವಾಗುತ್ತಿತ್ತು. ಈಗ ಕತ್ತಿವರಸೆ ಗ್ರಾಮದೇವತೆಗಳ ಹಾಗೂ ಕುಲದೇವತೆಗಳ ಉತ್ಸವ ಮೆರೆವಣಿಗೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಕಲೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಕುಲ – ಸಂಪ್ರದಾಯಗಳು, ಮತ ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಪ್ರದರ್ಶಿಸುತ್ತಾರೆ. ಒಕ್ಕಲಿಗರು, ಶೆಟ್ಟಿ ಬಲಿಜಿಗರು, ವೀರಮುಷ್ಟಿಯವರು, ಪದ್ಮಶಾಲಿಗರು, ಅಕ್ಕಸಾಲಿಗರು, ಹೊಲೆಯರು ಹೊಲೆಯ ಮುಷ್ಟಿಗಳು ಮೊದಲಾದವರು ಕತ್ತಿವರಸೆಯನ್ನು ಪ್ರದರ್ಶಿಸುತ್ತಾರೆ. ಇವರು ಒಂದು ಪ್ರತ್ಯೇಕವಾದ ಪೂಜಾ ವಿಧಾನವನ್ನು ಪಾಲಿಸುತ್ತಾರೆ. ಮೊದಲ ದಿನ ಕಲಾವಿದರೆಲ್ಲ ದುರ್ಗಾದೇವಿಯ ಬಳಿ ಬಂದು ದೊಡ್ಡ ಆಸನದ ಮೇಲೆ ಬೇತಾಳನ ಚಿತ್ರವನ್ನಿಟ್ಟು ಬೇತಾಳವನ್ನು ಪೂಜಿಸುತ್ತಾರೆ. ಇದನ್ನು ‘ಜಮ್ಮಿಕೊಟ್ಟಡಂ’ ಎನ್ನುತ್ತಾರೆ. ಮುಂದೆ ಒಂದು ವಾರ ಕಾಲ ಬಗೆಬಗೆಯ ವಿನ್ಯಾಸಗಳನ್ನು ಕಲಿತು ಉತ್ಸವ ದಿನದಂದು ಅವನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನದಲ್ಲಿ ಸ್ತ್ರೀಯರಿಗೆ ಅವಕಾಶವಿಲ್ಲ. ವೀರರಸ ಪ್ರಧಾನವಾಗಿ ಸಾಗುವ ಈ ಕಲೆಯಲ್ಲಿ ದೊಡ್ಡ ದೊಡ್ಡ ಕತ್ತಿಗಳಿಂದ ಎರಡು ಗುಂಪುಗಳು ಶತ್ರುಗಳ ಹಾಗೆ ಹೋರಾಡುವುದು, ಹಾಗೆಯೇ ವಿವಿಧ ವಿನ್ಯಾಸಗಳಲ್ಲಿ ಹೆಜ್ಜೆ ಹಾಕುತ್ತ ಬೇರೆ ಬೆರೆ ಆಯುಧಗಳನ್ನು ತಿರುಗಿಸುವುದು ಇರುತ್ತವೆ. ಅವುಗಳಲ್ಲಿ ಮುಂದ್ಹೆಜ್ಜೆ, ಹಿಂದ್ಹೆಜ್ಜೆ, ಚಕ್ರದ್ಹೆಜ್ಜೆ ಎಂಬುವು ಹೆಸರಿಸತಕ್ಕುವು. ಇವರು ಮಾಡುವ ಸಾಹಸಗಳಲ್ಲಿ ಮುಖ್ಯವಾಗಿ ಸಾಲಾಗಿ ೧೦ ಜನ ಗಂಡಸರನ್ನು ನಡುರಸ್ತೆಯಲ್ಲಿ ಮಲಗಿಸಿ ಅವರ ಕೈ ಅಥವಾ ಹೊಟ್ಟೆಯ ಮೇಲೆ ಬಾಳೆಹಣ್ಣೂ, ಸೋರೆಕಾಯಿ ಅಥವಾ ತೆಂಗಿನಕಾಯಿಯನ್ನಿಟ್ಟು ವಾದ್ಯಗಳಿಗನುಸಾರವಾಗಿ ವಿವಿಧ ಶೈಲಿಯಲ್ಲಿ ಹೆಜ್ಜೆ ಹಾಕುತ್ತಾ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಪ್ರಧಾನ ಕಲಾವಿದನು ಉದ್ದನೆಯ ಕತ್ತಿಯಿಂದ ಮಲಗಿರುವವರ ಮೇಲೆ ಇಟ್ಟಿದ್ದ ಮೇಲ್ಕಂಡ ವಸ್ತುವನ್ನು ಒಂದೇ ಏಟಿಗೆ ಎರಡು ಭಾಗವಾಗುವಂತೆ ಕತ್ತರಿಸಿ, ನೋಡುಗರಿಗಚ್ಚರಿಯನ್ನುಂಟು ಮಾಡುತ್ತಾನೆ. ಅಷ್ಟೇ ಅಲ್ಲದೆ ಪಂಜು ತಿರುಗಿಸುತ್ತ ಭಯಭ್ರಾಂರನ್ನಾಗಿಸುತ್ತಾನೆ. ಕತ್ತಿವರಸೆಯ ಕಲಾವಿದರು ಉಪಯೋಗಿಸುವ ಕತ್ತಿಗಳಿಗೆ ಬೇರೆ ಬೇರೆ ಹೆಸರುಗಳಿರುತ್ತವೆ. ಅವುಗಳಲ್ಲಿ ಪ್ರಮುಖವಾದಂಥವು : ಸಾದಾ ಕತ್ತಿ, ಪಟ್ಟಾಕತ್ತಿ, ಹಿಡಿ ಕತ್ತಿ, ವರಕತ್ತಿ, ಫಿರಂಗಿಕತ್ತಿ, ಡೋಲುಕತ್ತಿ, ಬರ್ಮಾಕತ್ತಿ, ಬೇಟೆ ಕತ್ತಿ ಮೊದಲಾದವು. ಇವುಗಳಲ್ಲದೆ ದೊಣ್ಣೆಕತ್ತಿ, ಸದಾಬಲ್ಲೆಂ, ಹಿಡಿ ಬಲ್ಲೆಂ, ಚೇರುಕಾಕು ಬಲ್ಲೆಂ, ಮಾಮೂಲು ಬಲ್ಲೆಂ, ಬೈಜಾರು, ಗಂಡ್ಲಗೊಡ್ಡಲಿ, ಟಗರಿನ ಕೊಂಬುಗಳು ಮೊದಲಾದವುಗಳ ಮೂಲಕ ಕತ್ತಿವರಸೆಯನ್ನು ರಾತ್ರಿಹೊತ್ತು ಪ್ರದರ್ಶಿಸುತ್ತಾರೆ. ಈ ಪ್ರದರ್ಶನಕ್ಕೆ ಕಲಾವಿದರ ಸಂಖ್ಯಾ ನಿಯಮವಿಲ್ಲ. ವಿಶೇಷವಾದ ಉಡುಪುಗಳು ಅಷ್ಟಾಗಿರುವುದಿಲ್ಲ. ಈ ಪ್ರದರ್ಶನವನ್ನು ಒಕ್ಕಲಿಗರು ದಸರಾ ಉತ್ಸವ ಮೆಣವಣಿಗೆಗಳಲ್ಲೂ, ಒಕ್ಕಲಿಗರು, ಬಲಿಜರು, ಬೇತಾಳಸ್ವಾಮಿ, ದಸರಾ ಮೆರವಣಿಗೆಗಳಲ್ಲಳೂ ಪದ್ಮಸಾಲಿಗರು, ಅಕ್ಕಸಾಲಿಗರು ವೀರಭದ್ರನ ಹಬ್ಬಗಳಲ್ಲೂ ಹೊಲೆಯಮಾಸ್ಟಿಕರು ಒಂದು ಗ್ರಾಮವನ್ನು ಬಿಟ್ಟು ಇನ್ನೊಂದು ಗ್ರಾಮಕ್ಕೆ ಹೊರಡುವ ಸಂದರ್ಭದಲ್ಲೂ ಕೃತಜ್ಞತೆಯ ಸೂಚಕವಾಗಿ ಕತ್ತಿ ವರಸೆ ಪ್ರದರ್ಶನ ನೀಡುತ್ತಾರೆ. ಇದು ಉಭಯ ಗೋದಾವರಿ ಜಿಲ್ಲೆಯಲ್ಲಿ (ಪೂರ್ವ ಮತ್ತು ಪಶ್ಚಿಮ) ಇಂದಿಗೂ ಪ್ರಚಾರದಲ್ಲಿದ್ದು ಜನಪ್ರಿಯಗಳಿಸಿದೆ. ರಾಜರು ಹೋದರೂ ರಾಜ್ಯಗಳಳಿದರೂ ಕತ್ತಿವರಸೆ ಇಂದಿಗೂ ಜೀವಂತವಾಗಿ ಉಳಿದಿದೆ. ಅದೇ ಜಾನಪದ ಸತ್ತ್ವ.

– ಟಿ.ಎಸ್.ಎನ್. ಅನುವಾದ ಎನ್.ಆರ್.