ಕಣಿ, ಭವಿಷ್ಯ, ಮಾಟ, ಮಂತ್ರ ಈ ವಿಶ್ವದಲ್ಲಿ ಮನುಷ್ಯನಿಗೆ ಅರ್ಥವಾಗದ ಭಾಗ ಬಹಳಷ್ಟಿದೆ. ಅದನ್ನು ತನ್ನದೇ ಆದ ರೀತಿಯಲ್ಲಿ ಅರ್ಥಮಾಡಿಕೊಂಡು ವ್ಯಾಖ್ಯಾನಿಸಲು ಅತ್ಯಂತ ಪ್ರಾಚೀನ ಕಾಲದಿಂದಲೂ ಮನುಷ್ಯ ಪ್ರಯತ್ನಿಸುತ್ತಿದ್ದಾನೆ. ಈ ರೀತಿಯ ಜಿಜ್ಞಾಸೆಯಿಂದಲೇ ವಿಜ್ಞಾನದ ಉಗಮವಾಯಿತು. ಮಾನವನಿಗೆ ಉಂಟಾದ ಭಯ, ಐಶ್ವರ್ಯ, ಅನುಮಾನ, ಆಸೆ, ದ್ವೇಷ ಮುಂತಾದ ಭಾವಗಳ ಸಂಕೇತವಾಗಿ ನಂಬಿಕೆಗಳು ಉಗಮಗೊಂಡವು. ನಾಗರಿಕರು, ಅನಾಗರಿಕರು ಎಂಬ ವ್ಯತ್ಯಾಸವಿಲ್ಲದೆ ನಂಬಿಕೆಗಳು ಜೀವನದ ಅನಿವಾರ್ಯ ಅಂಗವಾಗಿವೆ. ವಿದ್ಯಾವಂತ ಸಮಾಜವು ಮೂಡನಂಬಿಕೆಗಳಿಂದ ಹೊರತಾಗಿಲ್ಲ, ಜನಪದ ನಂಬಿಕೆಗಳು ಮತ್ತು ಮೂಢನಂಬಿಕೆಗಳ ಭಾಗವಾಗಿಯೇ ಕಣಿ, ಭವಿಷ್ಯ, ಮಾಟ, ಮಂತ್ರ ಮುಂತಾದವು ರೂಪುಗೊಂಡವು.

13

ಭವಿಷ್ಯ, ಮಾಟ ಮುಂತಾದವುಗಳಲ್ಲಿ ಕಾರ್ಯಕಾರಣ ಸಂಬಂಧವನ್ನು ಹೇಳಲಾಗುತ್ತದೆ. ಆದರೆ ಹೀಗೆ ಹೇಳುವುದಕ್ಕೆ ಯಾವುದೇ ಆಧಾರವಿರುವುದಿಲ್ಲ. ಕಾರ್ಯಕಾರಣ ಸಂಬಂಧವನ್ನು ಹೇಳುವ ವಿಜ್ಞಾನ ಪೂರ್ವ ಯುಗಗಳಿಂದಲೂ ಇದೆ. ಇಂತಹ ವಿವೇಚನೆ ನಡೆಸಿದುದರಿಂದಲೇ ಮಾನವ ವೈಜ್ಞಾನಿಕ ಯುಗಕ್ಕೆ ಕಾಲಿಡಲು ಸಾಧ್ಯವಾಯಿತು. ಜನಪದ ನಂಬಿಕೆಗಳು ಮತ್ತು ಅವುಗಳ ಆಚರಣೆ ವಿಜ್ಞಾನಪೂರ್ವ ಯುಗದ ವಿಜ್ಞಾನವೆಂದರೆ ತಪ್ಪೇನಿಲ್ಲ. ಈ ವಿಜ್ಞಾನವನ್ನು ಕೇವಲ ಅಜ್ಞಾನವೊಂದು ತಳ್ಳಿಹಾಕುವುದರಲ್ಲಿ ಅರ್ಥವಿಲ್ಲ. ಮಾನವ ಮನೋಧರ್ಮದ ವಿಕಾಸವನ್ನೂ ಮಾನವ ಸುಪ್ತಚೇತನ ಸ್ವರೂಪವನ್ನೂ ಅರಿಯಬೇಕಾದರೆ ಇಂತಹವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ನೋಡಬೇಕಾಗುತ್ತದೆ. ಭವಿಷ್ಯ, ಮಾಟ ಮುಂತಾದವುಗಳ ಅಧ್ಯಯನದಲ್ಲಿ ಮನೋವಿಜ್ಞಾನ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಧರ್ಮಶಾಸ್ತ್ರ ಮುಂತಾದವು ನೆರವಾಗುತ್ತವೆ.

ಕರ್ನಾಟಕದಲ್ಲಿ ಕಣಿ, ಭವಿಷ್ಯ: ಕಣಿ, ಭವಿಷ್ಯ, ಶಕುನ, ಹಸ್ತಸಾಮುದ್ರಿಕ, ನಾಡೀಫಲ, ಕಾಲಜ್ಞಾನ, ಮುಂತಾದವೆಲ್ಲಾ ಬಹಳ ಮಟ್ಟಿಗೆ ಒಂದೇ ತರಹದವೇ. ಅವರವರು “ನಮ್ಮದೇ ನಿಜವಾದ ಶಾಸ್ತ್ರ; ಉಳಿದವೆಲ್ಲ ಮೂಢನಂಬಿಕೆಗಳು” ಎಂದು ಹೇಳುತ್ತಿರಬಹುದು. ಆದರೆ ಈ ಎಲ್ಲ ‘ಶಾಸ್ತ್ರ’ಗಳಿಗೂ ವೈಜ್ಞಾನಿಕ ಆಧಾರವಿಲ್ಲ. ಜಗತ್ತಿನ ಎಲ್ಲಾ ಪ್ರದೇಶಗಳಲ್ಲೂ ಎಲ್ಲ ತರಹದ ಜನರಲ್ಲೂ ಈ ಶಾಸ್ತ್ರಗಳ ಬಗೆಗೆ ನಂಬಿಕೆ ಇದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಪ್ರಾದೇಶಿಕ ಪದ್ಧತಿಗಳಲ್ಲಿ ವ್ಯತ್ಯಾಸವಿರಬಹುದು. ಒಂದೊಂದು ಪ್ರದೇಶದಲ್ಲಿ ಭವಿಷ್ಯವಾಣಿಯನ್ನು ಹೇಳೂವ ಮನುಷ್ಯರಲ್ಲಿ ವ್ಯತ್ಯಾಸವಿರಬಹುದು. ನಡೆಯಬಹುದಾದುದನ್ನು ಊಹಿಸಿ ಮೊದಲೇ ಹೇಳುವ ಶಕ್ತಿ ಇದೆ ಎಂದು ಕೆಲವರು ನಂಬುತ್ತಾರೆ. ಈ ಶಕ್ತಿಯನ್ನು ಇಷ್ಟದೇವತೆಗಳು ಪ್ರಸಾದಿಸುತ್ತಾರೆಂಬುದು ಒಂದು ನಂಬಿಕೆ. ಈ ನಂಬಿಕೆಯೇ ಶಾಖೋಪಶಾಖೆಗಳಾಗಿ ವಿಸ್ತರಿಸಿ ಬೇರೆ ಬೇರೆ ರೀತಿಯ ಭವಿಷ್ಯದರ್ಶನಗಳಲ್ಲಿ ಕೊನೆಗೊಂಡಿದೆ ಭವಿಷ್ಯದಲ್ಲಿ ಏನಾಗಬಹುದೆಂಬುದು ಶಕುನದಿಂದ ತಿಳಿಯುತ್ತದೆಂದು ನಂಬುವುದು ಭವಿಷ್ಯದರ್ಶನದ ಒಂದು ಭಾಗ. ಹಾಗೆಯೇ ಹಸ್ತದಲ್ಲೇ ಆ ಮನುಷ್ಯನ ಭವಿಷ್ಯಮುದ್ರೆಯೊತ್ತಿದಂತಿರುತ್ತದೆಂಬುದು ಇನ್ನೊಂದು ಭಾಗ. ಆಕಾಶದಲ್ಲೆಲ್ಲೋ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವ ಗ್ರಹಗಳು ಪ್ರಭಾವ ಬೀರುತ್ತವೆಂದು ನಂಬುವುದು ಇನ್ನೊಂದು ವಿಭಾಗ. ನುಡಿಗಳಲ್ಲಿ ಬರುವುದನ್ನು ತಾತ್ತ್ವಿಕವಾಗಿ ಸೂಚಿಸುವ ಕಾಲಜ್ಞಾನಶಕ್ತಿ ಕೆಲವರಿಗಿದೆ ಎಂಬುದು ನಂಬಿಕೆಯ ವಿಭಾಗ. ಈ ತರಹದ ಭವಿಷ್ಯ ಶಕ್ತಿಯ ಹಲವು ಮುಖಗಳನ್ನು ಕರ್ನಾಟಕದ ಬೇರೆ ಬೇರೆ ಜನ ಹೇಗೆ ಪ್ರದರ್ಶಿಸುತ್ತಾರೆಂಬುದು ಪ್ರಕೃತ ವಿಷಯ.

ಇರುಳಿಗರು: ಇವರನ್ನು ಕಾಡು ಸೋಲಿಗರೆಂದೂ ಕರೆಯುವುದುಂಟು. ಹೆಚ್ಚಾಗಿ ಕಾಡುಪ್ರದೇಶಗಳಲ್ಲಿ ವಾಸ ಮಾಡುವ ಇರುಳರಿಗೆ ಅವರದೇ ಆದ ಭಾಷೆ ಇದೆ. ಅದು ತಮಿಳಿಗೆ ಹತ್ತಿರವಾದುದು. ಇರುಳಿಗರು ಕಣಿ ಹೇಳುತ್ತಾರೆ. ಇರುಳರ ಮುಖ್ಯಸ್ಥನೊಬ್ಬನು ಕಣಿ ಹೇಳುವ ಶಕ್ತಿಯುಳ್ಳವನಾಗಿರುತ್ತಾನೆ. ಯಾವುದಾದರೊಂದು ದಿನ ಕಣಿ ಹೇಳಲು ಮೀಸಲಿಡಲಾಗುತ್ತದೆ. ಅಂದು ಸ್ನಾನ ಮಾಡಿ, ದಟ್ಟಿ ಪಂಚೆಯನ್ನುಟ್ಟು, ದೇವರನ್ನು ಧ್ಯಾನಮಾಡಿ ಕಣಿ ಹೇಳಲು ಪ್ರಾರಂಭಿಸುತ್ತಾನೆ. ತಮಟೆ ಪಕ್ಕವಾದ್ಯವಾಗಿರುತ್ತದೆ. ರಾತ್ರಿ ಸಮಯ ದೇವಸ್ಥಾನದ ಮುಂದೆ ಈ ರೀತಿ ಕಣಿ ಹೇಳುವ ಏರ್ಪಾಡನ್ನು ಮಾಡಲಾಗುತ್ತದೆ. ಮುಖ್ಯಸ್ಥನ ಮೈಮೇಲೆ ದೇವರು ಬಂದು ಕಣಿ ಹೇಳಿಸುತ್ತಾನೆಂದು ನಂಬಲಾಗಿದೆ. ಮಾದೇವಮ್ಮನ ಪೂಜೆ ಮಾಡುವುದರೊಂದಿಗೆ ಕಣಿ ಹೇಳುವ ಸಮಾರಂಭ ಮುಕ್ತಾಯವಾಗುತ್ತದೆ. ಇರುಳರು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಕಾಲಜ್ಞಾನಿಗಳು: ಕಾಲವಿಜ್ಞಾನವನ್ನು ಹೇಳುವುದು ಜಾನಪದಕ್ಕೆ ಮಾತ್ರ ಸೀಮಿತವಾದುದಲ್ಲ. ಕನ್ನಡ ಸಾಹಿತ್ಯದ ವೀರಶೈವ ಕೃತಿಗಳಲ್ಲಿ ಕಾಲಜ್ಞಾನ ತತ್ತ್ವಗಳು ಹೇರಳವಾಗಿವೆ. ಪವಾಡ ಪುರುಷರು ಭವಿಷ್ಯವನ್ನು ತಿಳಿದು ಹೇಳಬಲ್ಲರೆಂದು ನಂಬಲಾಗಿದೆ. ಕಾಲಜ್ಞಾನಗಳಲ್ಲಿ ಪುರುಷರು ಮಾತ್ರವಲ್ಲದೆ ಸ್ತ್ರೀಯಗೂ ಇದ್ದಾರೆ. ಜನಪದ ತತ್ತ್ವ ಪದಗಳಲ್ಲಿ ಕಾಲಜ್ಞಾನವನ್ನು ಹೇಳುವಂಥವು ಅಸಂಖ್ಯಾತವಾಗಿವೆ. ಕಾಲಜ್ಞಾನಿಗಳು ಒಂದು ಜಾತಿ, ಮತಕ್ಕೆ ಸೇರಿದವರಿಬೇಕೆಂಬ ನಿಯಮವಿಲ್ಲ. ಒಂದೊಂದು ಬಾರಿ ಶಿಷ್ಯರ ಕಾಲಜ್ಞಾನಿಗಳೂ ಜಾನಪದರ ಮಟ್ಟಕ್ಕೆ ಇಳಿದು ಅವರಲ್ಲೂ ಪ್ರಚಾರವಾಗಬಹುದು. ಹಾಗೆಯೇ ಜಾನಪದರ ಕಾಲಜ್ಞಾನ ಪದಗಳ ಆಧಾರದಿಂದ ಶಿಷ್ಟ ಕವಿಗಳೂ ಪದಗಳನ್ನು ರಚಿಸಬಹುದು. ರುದ್ರಮುನಿಸ್ವಾಮಿ, ನೀಲಮ್ಮ ಮುಂತಾದವರ ಪದಗಳು ಜಾನಪದರಿಂದಲೂ ಬಳಕೆಯಾಗುತ್ತಿವೆ. ಕೆಳಗಿನದು ‘ಕಲಿಯುಗದ ಕಾಲಜ್ಞಾನ’

ಮುಂದಿನ ಸೂಚನೆ ಚೆನ್ನಾಗಿ ಹೇಳುವೆ ಕೇಳಿರಣ್ಣಾ
ಭೂಮಿ ಮೇಲಣ ವೃಕ್ಷಗಳೆಲ್ಲವೂ ಮುರಿದಾವು ನೋಡಿರಣ್ಣಾ
ಸೀಮೆಗಳೆಲ್ಲವೂ ಹಾಳಾಗಿ ಹೋದವು ಕೇಳಿರಣ್ಣಾ
ಲೋಕಕ್ಕೆ ಮೀರಿದ ಚೋರರು ಬರುತ್ತಾರೆ ಕೇಳಿರಣ್ಣಾ
ಮಾರಾಟ ನಡಿಯಾದು ಹೋರಾಟವಾದೀತು ನೋಡಿರಣ್ಣಾ

ಕುರುಮಾಮ: ಕರ್ನಾಟಕದಲ್ಲಿ ಭವಿಷ್ಯ ಹೇಳುವ ಜನರಲ್ಲಿ ಕುರುಮಾಮ ಎಂಬುವರು ಮುಖ್ಯರು. ಕುರುಹನ್ನು ತೋರಿಸುವವನೇ ಕುರುಮಾಮನೆಂದು ಹೇಳಲಾಗಿದೆ. ಊರೂರು ಸುತ್ತುತ್ತಾ ಭವಿಷ್ಯ ಹೇಳಿ, ಭಿಕ್ಷೆ ಬೇಡಿ ಜೀವನ ನಡೆಸುವ ವ್ಯಕ್ತಿಗಳಿವರು. ಆಂಧ್ರದ ಶ್ರೀಶೈಲ ಮತ್ತು ಭದ್ರಾಚಲ ಪ್ರಾಂತ್ಯಗಳಿಂದ ಬಂದ ಕುರುಮಾಮಗಳು ಕನ್ನಡ ಚೆನ್ನಾಗಿ ಕಲಿತು ಕರ್ನಾಟಕದ ಜನಪ್ರಿಯ ‘ಶಾಸ್ತ್ರಗಾರ’ರಾಗಿ ಬಿಟ್ಟಿದ್ದಾರೆ! ಇವರಿಗೆ ಕೊಂಡಮಾಮ ಎಂದೂ ಹೆಸರಿದೆ, ಕೊಂಡ ಎಂದರೆ ಬೆಟ್ಟ. ಇವರು ಮೂಲಭೂತವಾಗಿ ಬೆಟ್ಟಗಳಲ್ಲಿ ವಾಸಿಸುವ ಜನ, ಭವಿಷ್ಯ ಹೇಳುವುದರ ಜೊತೆಗೆ ಇವರು ಮೂಲಿಕಾ ವೈದ್ಯವನ್ನೂ ಮಾಡುತ್ತಾರೆ. ನಾಡಿಯನ್ನು ನೋಡಿ ವ್ಯಾಧಿಯನ್ನು ಕಂಡುಹಿಡಿಯುವುದರಲ್ಲಿ ಇವರು ಸಿದ್ಧಹಸ್ತರು.

ಕುರುಮಾಮಗಳು ಕಚ್ಚೆಯನ್ನು ಬಿಗಿದು. ಎದೆಗೆ ಕಾವಿಬಟ್ಟೆ ಕಟ್ಟಿಕೊಂಡಿರುತ್ತಾರೆ ಅಥವಾ ಅರೆದೋಳಿನ ಕರಿಯ ಕುಪ್ಪಸವನ್ನು ತೊಟ್ಟಿರುತ್ತಾರೆ. ಮುಡಿಯನ್ನು ಎತ್ತಿ ಬಿಗಿದು ಕಟ್ಟಿರುತ್ತಾರೆ. ಅದಕ್ಕೊಂದು ನವಿಲುಗರಿಯನ್ನು ಸಿಕ್ಕಿಸಿರುತ್ತಾರೆ. ಕೆಲವರು ಅಂಗಿ ಅಥವಾ ಯಾವುದೇ ರೀತಿಯ ಎದೆ ವಸ್ತ್ರವಿಲ್ಲದೆ ಕೆಲವು ಮಣಿಸರಗಳನ್ನು ಧರಿಸಿರುತ್ತಾರೆ. ಮುಂಗೈ ಮತ್ತು ರಟ್ಟೆಗಳಿಗೆ ಲೋಹದ ಬಳೆ ಮುಂತಾದುವನ್ನು ಅಲಂಕರಿಕೊಂಡಿರುತ್ತಾರೆ. ಇವರಲ್ಲಿ ಕೆಲವರು ಕರ್ಣಕುಂಡಲಗಳನ್ನು ಧರಿಸಿ, ನೋಡಲು ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ. ಹಣೆಯ ಮೇಲೆ ಕೆಂಪು ಮತ್ತು ಬಿಳಿ ನಾಮಗಳಿರುತ್ತವೆ. ಒಂದು ಕೈಯಲ್ಲಿ, ಚಿಟಿಕೆ ಮತ್ತೊಂದು ಕೈಯಲ್ಲಿ ಏಕನಾದ ಅಥವಾ ತಂಬೂರಿ ಹಿಡಿದು ಆಕರ್ಷಕವಾದ ನುಡಿಗಳಿಂದ ಭವಿಷ್ಯ ಹೇಳುವ ಕುರುಮಾಮಗಳು ಸಂಚಾರಿ ಶಾಸ್ತ್ರಗಾರರು.

ವ್ಯಕ್ತಿಯ ಹೆಸರಿನ ಸಹಾಯದಿಂದ ಅನ್ಯರ ಭವಿಷ್ಯ ಹೇಳುವುದು, ಕೈನೋಡಿ ಭವಿಷ್ಯ ಓದುವುದು ಕುರುಮಾಮಗಳ ವೃತ್ತಿ. ಎಂತಹ ಬಾಧೆಯಾದರೂ ಕಳೆಯುವಂತೆ ಮಾಡುವುದಾಗಿ ಹೇಳುತ್ತಾ ಇವರು ಓಡಾಡುತ್ತಾರೆ.

ಮಂಡಿ ಬಾದಿನಿ (ಬಾಧೆಯನ್ನು)
ಕೀಲು ಬಾದಿನಿ
ಮುಂಗೈ ಬಾದಿನಿ
ತಲೆ ಬಾದಿನಿ
ಮೂಗಿಲಿ ಪಡಿಸು (ಮುಕ್ಕು ಪಡಿಶಂ – ತೆಲುಗು = ನೆಗಡಿ)
ನೆಗಡಿ ಕೆಮ್ಮಲು
ಏನಾದರೂ ಇರಲಿ
ದೇವಸ್ಥಾನ ಜನ್ಮಸ್ಥಾನ
ಹಿಡಿದು ಕಳೀತೀನಿ

ಎಂಬುದು ಕುರುಮಾಮನ ಶಪಥ!

ಕೊರವಂಜಿ: ಇವರನ್ನು ಕೆಲವು ಕಡೆ ಕೊರಮತಿಯರೆಂದೂ, ಕೊರಮರೆಂದೂ, ಕೊರಚರೆಂದೂ ಕರೆಯುವುದುಂಟು. ಕೊರವಂಜಿ ಎಂಬ ಪಾತ್ರ ಕೆಲವು ಯಕ್ಷಗಾನ, ನಾಟಕಗಳಲ್ಲಿ ಬರುತ್ತದೆ. ಆ ಪಾತ್ರ ಪ್ರಧಾನವಾಗಿರುವ ಯಕ್ಷಗಾನಗಳನ್ನು ‘ಕೊರವಂಜಿ ನಾಟಕ’ ವೆಂದು ಹೇಳುವುದುಂಟು. ಇದು ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಪ್ರಸಿದ್ಧವಾಗಿರುವ ರೂಪಕ.

ಕೊರವಂಜಿಯವರು ಹಳ್ಳಿಗಳಲ್ಲ ಹೆಚ್ಚಾಗಿ ಓಡಾಡುತ್ತಿರುತ್ತಾರೆ. ‘ಕಣಿ ಕೇಳೀರೇನಮ್ಮ ಕಣಿ’ ಎಂದು ಹೇಳುತ್ತಾ ತಿರುಗಾಡುವ ಕೊರವಂಜಿ ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಹೊರೆಯ ರಾಜ್ಯಗಳಲ್ಲೂ ಕಾಣಿಸಿಕೊಳ್ಳುತ್ತಾಳೆ. ಕಣಿ ಹೇಳುವ ಈ ಸ್ತ್ರೀಯರು ಭೂತ ಭವಿಷ್ಯದ್ವರ್ತಮಾನಗಳನ್ನು ದೈವೀಶಕ್ತಿಯಿಂದ ಹೇಳುವುದಾಗಿ ತಿಳಿಸುತ್ತಾರೆ. ಕೊರವಂಜಿಯದು ಆಕರ್ಷಕ ವೇಷ. ಇವರ ಮೈತುಂಬ ಹಚ್ಚೆಯ ವಿವಿಧ ಚಿತ್ರಗಳಿರುತ್ತವೆ. ಕಣಿ ಹೇಳುವುದರ ಜೊತೆಗೆ ಹಚ್ಚೆಯ ಚಿತ್ರಗಳನ್ನು ಬಿಡಿಸುವುದೂ ಇವರ ವೃತ್ತಿ. ಕಾಲಿಗೆ ಕಡಗ, ಮೂಗಿಗೆ ಮುಕುರ, ಕಂಕುಳಲ್ಲಿ ಬಿದಿರುಬುಟ್ಟಿ, ಕೈಯಲ್ಲಿ ಕಣಿಕಡ್ಡಿ – ಇದು ಕೊರವಂಜಿಯ ವೇಷ.

ಕೊರವಂಜಿಯವರು ಮುಗ್ಧ ಜನರು. ಶಾಸ್ತ್ರದ ನೆಪದಲ್ಲಿ ತಮಗೆ ತೋಚಿದ್ದನ್ನು ಹೇಳುವ ಪಟ್ಟಣದ ಮೋಸಗಾರರಿಗಿಂತ, ಹೊಟ್ಟೆಪಾಡಿಗಾಗಿ ಕಣಿ ಹೇಳುತ್ತಾ, ಹಚ್ಚೆ ಹುಯ್ಯುವ ಕಲೆಯನ್ನು ಕರಗತ ಮಾಡಿಕೊಂಡು ಜಾನಪದರನ್ನು ರಂಜಿಸುವ ಕೊರವಂಜಿಯರು ಅನುಕಂಪ ತೋರಿಸಬೇಕಾದ ಬಡಜನರೆಂದು ಹೇಳಬಹುದು.

ಗಣೆಯವರು: ಬಿದಿರಿನ ಸಣ್ಣ ಬೊಂಬಿನಿಂದಾದ ಗಣೆ ಎಂಬ ವಾದ್ಯವನ್ನು ಬಳಸುವ ಗಣೆಯವರು ಜುಂಜಪ್ಪನ ಗುಣಗಾನ ಮಾಡುತ್ತಾರೆ. ಯಾದವ ಜನಾಂಗದ ಮಹಾ ಶರಣನಾದ ಜುಂಜಪ್ಪನ ಸಚ್ಚಾರಿತ್ರವನ್ನು, ಪವಾಡಗಳನ್ನು ಗಣೆಯ ಪದಗಳ ಮೂಲಕ ಇವರು ಹಾಡುತ್ತಾರೆ. ಗಣೆಯವರಲ್ಲಿ ಕೆಲವರು ಭವಿಷ್ಯ ಹೇಳುತ್ತಾರೆ. ಇವರು ದೇವರ ಮುಂದೆ ಮತ್ರ ಗಣೆಯನ್ನು ಊದುತ್ತಾರೆ. ಸ್ವಲ್ಪ ಹೆಚ್ಚು ಗಣೆ ಊದಿದ ಅನಂತರ ಭವಿಷ್ಯವಾಣಿ ನುಡಿಯುತ್ತಾರೆ. ಗಣೆಯ ಮೂಲಕ ದೇವರು ಬಂದು ಭವಿಷ್ಯ ಹೇಳುವುದಾಗಿ ಇವರು ನಂಬುತ್ತಾರೆ.

ಗಿಣಿಶಾಸ್ತ್ರ: ಭವಿಷ್ಯ ಹೇಳುವ ‘ಶಾಸ್ತ್ರಕಾರ’ರಲ್ಲಿ ತುಂಬ ಜನಪ್ರಿಯರೆಂದರೆ ಗಿಣಿಶಾಸ್ತ್ರಕಾರರೇ. ಶಾಸ್ತ್ರ ಕೇಳುವವರು ಭವಿಷ್ಯವನ್ನು ಗಿಣಿಗೆ ಬಿಟ್ಟು ಅದರ ಮೂಲಕ ಹಣ ಸಂಪಾದನೆ ಮಾಡುವ ಗಿಣಿಶಾಸ್ತ್ರಕಾರರನ್ನು ಪಟ್ಟಣಗಳಲ್ಲೂ ಜನ ಸಂದಣಿಯಿರುವ ಬೀದಿಗಳಲ್ಲೂ ಕಾಣಬಹುದು.

ಗಿಣಿಶಾಸ್ತ್ರ ಹೇಳುವವರ ಬಳಿ ದಪ್ಪಕಾಗದದ ಲಕೋಟೆ ಅಥವಾ ಓಲೆಗರಿಯ ಕಟ್ಟುಗಳಿರುತ್ತವೆ. ಇವುಗಳಲ್ಲಿ ದೇವರ ಭಾವಚಿತ್ರಗಳು, ಕೆಲವು ವಾಕ್ಯಗಳು ಇರುತ್ತವೆ. ಹಣಕೊಟ್ಟು ತಮ್ಮ ಭವಿಷ್ಯವನ್ನು ತಿಳಿಯಲು ಆಸೆಪಡುವವರು ಕುತೂಹಲದಿಂದ ನೋಡುತ್ತಿದ್ದಂತೆ ಗಿಣಿ ತನ್ನ ಪಂಜರದಿಂದ ಹೊರಬಂದು ಲಕೋಟೆಯೊಂದನ್ನು ಕೊಕ್ಕಿನಿಂದ ಎಳೆಯುತ್ತದೆ. ಲಕೋಟೆಯಲ್ಲಿರುವುದನ್ನು ಗಿಣಿಶಾಸ್ತ್ರಕಾರ ಓದಿ ಹೇಳುತ್ತಾನೆ. ಅದೇ ಕೇಳುವವನ ಭವಿಷ್ಯವಾಗುತ್ತದೆ. ಇದೆಷ್ಟು ಅಶಾಸ್ತ್ರೀಯವಾದುದೆಂಬುದನ್ನು ಅದರ ವಿಧಾನವೇ ಸ್ಪಷ್ಟಮಾಡುತ್ತಿದೆ. ಆದರೂ ಇದರಲ್ಲಿ ಜನರಿಗೆ ತುಂಬ ನಂಬಿಕೆ. ಪ್ರತಿ ಹಾಳೆಯಲ್ಲೂ ಪ್ರತಿಯೊಬ್ಬರಿಗೂ ಅನ್ವಯವಾಗುವ ಒಂದೆರಡು ವಾಕ್ಯಗಳು ಇದ್ದೇ ಇರುತ್ತವೆ. ಇದರಿಂದ ಗಿರಾಕಿಗಳು ‘ಶಾಸ್ತ್ರಕಾರನ’ ಮೇಲೆ ಗುರಿ ಏರ್ಪಡುತ್ತದೆ. ಜಾತ್ರೆ, ಸಂತೆ ಮುಂತಾದ ಸಂದರ್ಭಗಳು ಗಿಣಿಶಾಸ್ತ್ರ ಹೇಳುವವನಿಗೆ ಒಳ್ಳೆಯ ಸಂಪಾದನೆಯನ್ನು ಒದಗಿಸುತ್ತವೆ.

ಜೋಯಿಪಾಟ್‌: ಜ್ಯೋತಿಷದ ಹಾಡು ಕೊಡಗಿನಲ್ಲಿ ಜೋಯಿಪಾಟ್ ಆಗಿದ, ದಕ್ಷಯಜ್ಞದಲ್ಲಿ ಬಿದ್ದು ಸತೀದೀವಿ ಆಹುತಿಯಾದಳು. ಆಗ ಪರಮೇಶ್ವರ ಕೋಪದಿಂದ ಜಟೆಯನ್ನು ಭೂಮಿಗೆ ಹೊಡೆದಾಗ ವೀರಭದ್ರ ಮತ್ತು ಇತರ ಗಣಗಳು ಹುಟ್ಟಿ ಹಾಡಿದ ಹಾಡೇ ಜೋಯಿಪಾಟ್ ಎಂದು ಹೇಳಲಾಗಿದೆ. ಹೆಸರಿಗೆ ಜ್ಯೋತಿಷದ ಹಾಡಾದರೂ ಇದು ಕಲೆಯಾಗಿ ಮಾತ್ರ ಉಳಿದುಬಂದಿದೆ.

ಬುಡುಬುಡಿಕೆಯವರು: ಇದು ಮರಾಠಿಗರಿಂದ ಬಂದ ಕಲೆಯೆಂದು ಹೇಳುತ್ತಾರೆ. ಕರ್ನಾಟಕ ಮತ್ತು ಆಂಧ್ರಗಳಲ್ಲಿ ಬುಡುಬುಡಿಕೆಯವರು ನೂರಾರು ವರ್ಷಗಳಿಂದಲೂ ಓಡಾಡುತ್ತಿದ್ದಾರೆ. ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರಸಣ್ಣ ಎಂದು ಕರೆಯುತ್ತಾರೆ. ಬುಡುಬುಡಿಕೆ ಎಂಬ ಚರ್ಮವಾದ್ಯದಿಂದ ಇವರಿಗೆ ಬುಡುಬುಡಿಕೆಯೆಂಬ ಹೆಸರು ಬಂದಿದೆ. ‘ಬುಡಕ್‌ ಬುಡಕ್‌’ ಎಂಬ ಮೋಹಕ ಶಬ್ದವನ್ನು ಕೊಡುವ ಇವರ ವಾದ್ಯ ಈ ಜನರನ್ನು ಕುತೂಹಲಕಾರಿ ವ್ಯಕ್ತಿಗಳನ್ನಾಗಿ ಮಾಡುತ್ತದೆ.

ಬೆಳಗ್ಗೆ ಮನೆಮನೆಗೆ ಬಂದು ಶಕುನ ಹೇಳುವ ಬುಡುಬುಡಿಕೆಯವರನ್ನು ಕುರಿತಂತೆ ಅನೇಕ ದಂತಕಥೆಗಳಿವೆ. ಶ್ರೀಕೃಷ್ಣ ನುಡಿಸಿದಂತೆ ನುಡಿಯುತ್ತೇವೆಂದು ಹೇಳುವ ಬುಡುಬುಡುಕೆಯವರು ಹೇಳುವ ಭವಿಷ್ಯದ ಬಗ್ಗೆ ಜಾನಪದರಿಗೆ ಅಪಾರವಾದ ನಂಬಿಕೆ. ಇವರು ಸಾಮಾನ್ಯವಾಗಿ ಬಟ್ಟೆ ಕೊಡಬೇಕೆಂದು ಕಾಡುತ್ತಿರುತ್ತಾರೆ. ಒಂದರ ಮೇಲೊಂದರಂತೆ ಹಾಕಿಕೊಂಡು ಕೆಲವು ಸಲ ಈ ಬುಡುಬುಡಿಕೆಯವರು ವಿಚಿತ್ರವಾಗಿ ಕಾಣುತ್ತಿರುತ್ತಾರೆ. ಇವರ ಹೇಳಿಕೆಗಳನ್ನು ‘ಹಾಲಕ್ಕಿ ಶಕುನ’ ಎಂದು ಹೇಳುವುದು ರೂಢಿ. ಶ್ಮಶಾನದಲ್ಲಿ ಹಾಲಕ್ಕಿ ನುಡಿಯುವುದನ್ನು ಕೇಳಿಕೊಂಡು ಊರ ಬೀದಿಗಳಲ್ಲಿ ಅದನ್ನು ಇವನು ಹೇಳುತ್ತಾನೆಂದು ಜನರು ನಂಬುತ್ತಾರೆ. ಹಾಲಕ್ಕಿ ಅಥವಾ ಶಕುನದ ಹಕ್ಕಿ ಹೇಳುವುದು ಬುಡುಬುಡಿಕೆಯವರಿಗೆ ಮಾತ್ರ ಅರ್ಥವಾಗುವುದಂತೆ!

ಸಾರುವಯ್ಯ: ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಇವರನ್ನು ನೋಡಬಹುದು. ಕೊಡೆಯನ್ನು ಹಿಡಿದು ಓಡಾಡುವುದರಿಂದ ಇವರಿಗೆ ಕೊಡೆಕಲ್ಲಯ್ಯ ಎಂದೂ ಹೆಸರುಂಟು. ಇವರು ಕಾಲಜ್ಞಾನವನ್ನು ಹೇಳುತ್ತಿರುತ್ತಾರೆ. ಒಂದು ವರ್ಷದಲ್ಲಿ ಆಗುವ ಮಳೆಬೆಳೆಗಳ ಬಗ್ಗೆ, ನಡೆಯುವ ಘಟನೆಗಳ ಬಗ್ಗೆ ಇವರು ಸ್ವಾರಸ್ಯಕರವಾಗಿ ಹೇಳುವರು. ಇವರ ತಲೆಗೆ ಕಾವಿ ರುಮಾಲು. ಕೊರಳಲ್ಲಿ ರುದ್ರಾಕ್ಷಿ, ಹಣೆಗೆ ವಿಭೂತಿ ಇರುತ್ತದೆ. ಬೀದಿಯಲ್ಲಿ ಭವಿಷ್ಯ ನುಡಿಯುತ್ತಾ ಹೋಗುವ ಸಾರುವಯ್ಯನಿಗೆ ನಾವೇ ಭಿಕ್ಷೆ ಹಾಕಬೇಕು, ಅವರಾಗಿ ಕೇಳುವುದಿಲ್ಲ.

ಸುಡುಗಾಡು ಸಿದ್ಧರು: ಕರ್ನಾಟಕದಲ್ಲಿ ಪ್ರಸಿದ್ಧರಾಗಿರುವ ‘ಶಾಸ್ತ್ರಕಾರ’ರಲ್ಲಿ ಸುಡುಗಾಡು ಸಿದ್ಧರು ಸೇರುತ್ತಾರೆ. ಇವರು ಸುಡುಗಾಡಿನಲ್ಲೇ ವಾಸಮಾಡುತ್ತಾರೆಂದು ಹೇಳಲಾಗಿದೆ. ಉತ್ತರ ಕರ್ನಾಟಕದಲ್ಲಿ ಈಗಲೂ ಈ ಸಿದ್ಧರು ಯಕ್ಷಿಣೇ ವಿದ್ಯೆಯನ್ನು ಪ್ರದರ್ಶಿಸುತ್ತಾರೆ. ಕೊರಳ ತುಂಬ ರುದ್ರಾಕ್ಷಿ ಸರಗಳನ್ನು ಧರಿಸುವ ಸುಡುಗಾಡು ಸಿದ್ಧರು ರುಮಾಲು ಕಟ್ಟಿ ಅದಕ್ಕೆ ನವಿಲು ಗರಿಗಳನ್ನು ಸಿಕ್ಕಿಸಿರುತ್ತಾರೆ. ಇವರ ಬಳಿಯಿರುವ ನಾಲ್ಕೈದು ಪದರಗಳ ಜೋಳಿಗೆಯಲ್ಲಿ ಯಕ್ಷಿಣೀ ವಿದ್ಯೆಗೆ ಬೇಕಾದ ಸಾಮಾನುಗಳು ಇರುತ್ತವೆ. ಭವಿಷ್ಯವಾಣಿಯ ಜೊತೆಗೆ ಮನರಂಜನೆ ಮಾಡುವುದು ಇವರ ಪ್ರಧಾನ ವೃತ್ತಿ.

ಸೋಣ ಜೋಗಿಗಳು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರಾವಣ ಮಾಸದಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ. ತುಳು ಭಾಷೆಯಲ್ಲಿ ಸೋಣ ಎಂದರೆ ಶ್ರಾವಣ. ಸೋಣಗ ಎಂದರೆ ಶಕುನ ಹೇಳುವವನೆಂಬ ಅರ್ಥವಿರುವುದರಿಂದ ಈ ಶಬ್ದದಿಂದಲೂ ಸೋಣ ಜೋಗಿ ಎಂಬ ಹೆಸರು ಬಂದಿರಬಹುದು.

ಇಬ್ಬರು ಜೋಗಿಯ ವೇಷ ಹಾಕಿಕೊಂಡು ತೆಂಬರೆ ಎಂಬ ಚರ್ಮವಾದ್ಯವನ್ನು ಹಿಡಿದು ಮನೆಮನೆಗೆ ಹೋಗಿ ಶಕುನ ಹೇಳುತ್ತಾರೆ. ಮುಂಬರುವ ತೊಂದರೆಗಳನ್ನು ಹೇಳಿ ಅದಕ್ಕೆ ಪರಿಹಾರವನ್ನು ಸೂಚಿಸುವ ಸೋಣಜೋಗಿಗಳ ಮೇಲೆ ಜನರಿಗೆ ತುಂಬ ನಂಬಿಕೆ.

ಇದುವರೆಗೆ ವಿವರಿಸಿದ ವಿವಿಧ ರೀತಿಯ ಭವಿಷ್ಯ ನುಡಿಗಳಲ್ಲದೆ, ಸಾಮಾನ್ಯವಾಗಿ ಅನೇಕ ಸಂದರ್ಭಗಳಲ್ಲಿ ಹೇಳಲಾಗದೆ ಜ್ಯೋತಿಷ, ಕಾಲಜ್ಞಾನ ಮುಂತಾದುವಿದೆ. ಜನಪದ ಜ್ಯೋತಿಷದ ಭಾಗವಾಗಿ ಅನೇಕ ರೀತಿಯ ಶಾಸ್ತ್ರಗಳು ಕಂಡುಬರುತ್ತವೆ. ‘ಕವಡೆಶಾಸ್ತ್ರ’ ಎಂಬ ಹೆಸರಿನಲ್ಲಿ ಕೆಲವು ಕಡೆ ಜ್ಯೋತಿಷ ಹೇಳುತ್ತಾರೆ. ಎಣಿಸಿದ ಕವಡೆಗಳು ಸರಿಯೊ ಬೆಸವೂ ನೋಡಿ ಅದರಂತೆ ಫಲವನ್ನು ಹೇಳುತ್ತಾರೆ. ಓಲೆಗರಿಶಾಸ್ತ್ರವೆಂಬುದೂ ಇದೆ. ಓಲೆಗರಿಗಳಲ್ಲಿ ಕೆಲವು ವಾಕ್ಯಗಳು ಬರೆದಿಡಲಾಗುತ್ತದೆ ಜ್ಯೋತಿಷ ಕೇಳಲು ಬಂದವನನ್ನು ಒಂದು ಗರಿಯನ್ನು ತೆಗೆಯುವಂತೆ ಕೇಳುತ್ತಾರೆ. ಅವನ ಕೈಗೆ ಒಂದು ಕಡ್ಡಿಯನ್ನು ಕೊಟ್ಟು, ಮನಸ್ಸಿಗೆ ಬಂದಂತೆ ಕಟ್ಟಿ ಮಧ್ಯದಲ್ಲಿ ಅದನ್ನು ತೂರಿಸಲು ಹೇಳುತ್ತಾರೆ. ಹಾಗೆ ಬಂದ ಗರಿಯೇ ಅವನ ಅದೃಷ್ಟವನ್ನು ತಿಳಿಸಬೇಕು ! ಇಂತಹ ಮೋಸಗಳಿಗೆ ಬಡಜನ ತುತ್ತಾಗಿ ಅನಗತ್ಯ ಭಯಗಳಿಗೆ ಒಳಗಾಗುತ್ತಾರೆ.

ಕಣಿ, ಭವಿಷ್ಯ ಮುಂತಾದವನ್ನು ಪರಿಶೀಲಿಸಿದಾಗ ಅವುಗಳ ವಿವಿಧ ರೀತಿಗಳನ್ನು ಗಮನಿಸಬಹುದು ೧)ಕೇವಲ ನುಡಿಗಳಿಂದ ತಮ್ಮ ತಮ್ಮ ಅನಿಸಿಕೆಗೆ ತಕ್ಕಂತೆ ಭವಿಷ್ಯವನ್ನು ಹೇಳುವುದು ಒಂದು ಬಗೆ ೨) ಕೇಳುವವನ ಮುಖ ಪರೀಕ್ಷೆಯಿಂದ, ಹಸ್ತರೇಖೆಗಳಿಂದ, ನಾಡಿಗಳಿಂದ, ಜಾತಕದಿಂದ, ಹಣೆಯಗೆರೆಗಳಿಂದ, ಹೆಸರಿನಿಂದ, ಇಷ್ಟವಾದ ಹೂವು ಮುಂತಾದ ವಸ್ತುಗಳ ಸೂಚನೆಯಿದೆ, ಇಷ್ಟವಾದ ಬಣ್ಣದ ಸೂಚನೆಯಿಂದ, ಸಂಖ್ಯೆಯಿಂದ ಭವಿಷ್ಯ ಹೇಳುವುದು ೩)ಗಿಣಿ, ಕೋಲೆ ಬಸವ ಮುಂತಾದ ಪ್ರಾಣಿ ಪಕ್ಷಿಗಳ ಸಹಾಯದಿಂದ ಹೇಳುವ ಭವಿಷ್ಯ ೪) ಕವಡೆ, ಓಲೆಗರಿ, ಹೂವು ಮುಂತಾದವನ್ನು ಆರಿಸಿಕೊಳ್ಳಬೇಕೆಂದು ಹೇಳಿ ಅದರಿಂದ ಭವಿಷ್ಯ್ ಹೇಳುವುದು.

ಮೇಲೆ ಹೇಳಿದವು ಒಬ್ಬ ಇನ್ನೊಬ್ಬನ ಬಳಿ ಹೋಗಿ ಕೇಳುವಂತಹವು ಅಥವಾ ಸಿದ್ಧರಂತಹವರು ಜನರು ಉದ್ದೇಶಿಸಿ ಹೇಳುವಂತಹವು. ಇವಲ್ಲದೆ ಕೆಲವರಿಗೆ ಶಕುನಗಳಿಂದಾಗಿ, ನಿಮಿತ್ತಗಳಿಂದಾಗಿ, ಕನಸುಗಳಿಂದಾಗಿ ಭವಿಷ್ಯದಲ್ಲಿ ಏನಾದರೊಂದಾಗುತ್ತದೆಂಬ ನಂಬಿಕೆಯಿರುತ್ತದೆ. ಇದನ್ನು ಬೇರೆಯವರನ್ನು ಕೇಳಿ ತಿಳಿದುಕೊಳ್ಳಬಹುದು ಅಥವಾ ಅವರವರ ನಂಬಿಕೆಗಳಿಗೆ ಅನುಸಾರವಾಗಿ ಅರ್ಥಮಾಡಿಕೊಳ್ಳಬಹುದು. ಇವೆಲ್ಲ ಬಹಳ ಮಟ್ಟಿಗೆ ಮನುಷ್ಯನ ಭಯದಿಂದ ಉಂಟಾದುವು. ತನಗೆ ಭವಿಷ್ಯತ್ತಿನಲ್ಲಿ ಎಲ್ಲ ಒಳ್ಳೆಯದೇ ಆಗಬೇಕೆಂಬ ಆಸೆ ಮನುಷ್ಯ ಅನೇಕ ರೀತಿಯ ನಂಬಿಕೆಗಳನ್ನು ಕಲ್ಪಿಸಿಕೊಳ್ಳಲು ಅವಕಾಶ ನೀಡಿತು. ಆದರೆ ಈ ರೀತಿ ನಂಬಿಕೆಗಳಿಂದ ಜಾನಪದರನ್ನಾಗಲಿ, ನಾಗರಿಕನ್ನಾಗಲಿ ಬಿಡಿಸುವುದು ತುಂಬ ಕಷ್ಟದ ಕೆಲಸ.

ಮಾಟ, ಮಂತ್ರ: ಇದುವರೆಗಿನ ಭವಿಷ್ಯ ಸಂಬಂಧವಾದ ನಂಬಿಕೆಗಳು ಮಾನವನ ಮನಸ್ಸಿನಲ್ಲಿರುವುದಕ್ಕೆ ಮತ್ತು ವಾಚಿಕ ಜಾನಪದಕ್ಕೆ ಸಂಬಂಧಿಸಿದವು. ಮಾಟ, ಮಂತ್ರ ಕೂಡ ನಂಬಿಕೆಯ ತಳಹದಿಯ ಮೇಲೆ ರೂಪುಗೊಂಡಂಥವೇ. ಆದರೂ ಇವುಗಳಲ್ಲಿ ಕಾರ್ಯಾಚರಣೆ ಮುಖ್ಯ. ಕಾರ್ಯಕಾರಣ ಸಂಬಂಧಕ್ಕೆ ಇವುಗಳಲ್ಲಿ ಹೆಚ್ಚಿನ ಮಹತ್ತ್ವವಿದೆ. ನಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಯಾವುದಾದರೊಂದು ಪರಿಣಾಮ ಆಗೇ ಆಗುತ್ತದೆಂಬ ನಂಬಿಕೆ ಇವುಗಳಿಗೆ ಮೂಲ.

ಆದಿಮಾನವನ ಜೀವನದ ತುಂಬ ಅತಿಮಾನುಷ ಶಕ್ತಿಗಳ ಬಗೆಗಿನ ನಂಬಿಕೆಗಳಿದ್ದವು. ಇದಕ್ಕೆ ಕಾರಣ ಅವನ ಪರಿಸರ. ಪ್ರಕೃತಿ ವೈಪರೀತ್ಯಗಳಿಗೆ ವಿರುದ್ಧವಾಗಿ ಸತತ ಹೋರಾಟ ನಡೆಸಬೇಕಾಗಿದ್ದ ಪ್ರಾಚೀನ ಮಾನವ ಅತಿಮಾನುಷ ಶಕ್ತಿಗಳನ್ನು ಕಲ್ಪಿಸಿಕೊಂಡು ಅವುಗಳಲ್ಲಿ ನಂಬಿಕೆಯನ್ನು ಬೆಳೆಸಿಕೊಂಡುದು ಸಹಜವೇ. ಈ ನಂಬಿಕೆ ಬರಬರುತ್ತಾ ಭಾಷೆಯ ಬಳಕೆ ಮತ್ತು ವಸ್ತುಗಳ ಬಳಕೆಯ ಹಂತವನ್ನೇರಿತು. ಆಚರಣೆಗಳು ಮತ್ತು ಮಂತ್ರವಿದ್ಯೆ ಎಲ್ಲ ಪ್ರಾಚೀನ ಸಮಾಜಗಳಲ್ಲೂ ಇರುವಂತಹವೇ.

ಪ್ರಾಚೀನ ಕಾಲದಿಂದ ಇಷ್ಟು ದೂರ ನಡೆದು ಬಂದ ನಾಗರಿಕರು ಕೂಡ ಮಾಟ ಮಂತ್ರಗಳಲ್ಲಿ ನಂಬಿಕೆಯಿಡುವುದೇಕೆ ಎಂಬ ಪ್ರಶ್ನೆ ಕುತೂಹಲಕಾರಿಯಾದುದು. ವಿದ್ಯಾವಂತ ಸಮಾಜದಲ್ಲಿ ಮಾಟ, ಮಂತ್ರಗಳ ಬಳಕೆ ಬಹಳಷ್ಟು ಕಡಿಮೆ. ಅನಕ್ಷರಸ್ಥರು ಮಾಟ, ಮಂತ್ರಗಳಲ್ಲಿ ಮೂಡನಂಬಿಕೆಯುಳ್ಳವರಾಗಿದ್ದು ಇದರಿಂದ ಇವರಿಗೆ ತುಂಬ ಅನುಕೂಲವಾಗುತ್ತದೆ. ಭಾನಾಮತಿಯಂತಹ ಕೃತ್ಯಗಳಲ್ಲಿ ನಂಬಿಕೆಯುಳ್ಳವರಿಗೆ ಮನೋವೈಕಲ್ಯವುಂಟಾಗಿ ಜನರು ತುಂಬ ತೊಂದರೆಗೆ ಒಳಗಾಗುತ್ತಾರೆ.

ಮಾಟ, ಮಂತ್ರಗಳನ್ನು ಪ್ರಯೋಗಿಸುವವರು ಪವಾಡಪುರುಷರೆಂದು ನಂಬಲಾಗಿದೆ. ಅವರಿಗೆ ಅತಿಮಾನುಷ ಶಕ್ತಿಗಳಿರುತ್ತವೆಂದು ನಂಬಿಕೆ. ರೂಪಾಂತರಗೊಳಿಸುವುದು, ತಮ್ಮನ್ನೇ ರೂಪಾಂತರಗೊಳಿಸಿಕೊಳ್ಳುವುದು, ಹಾರುವುದು, ಮಾಯವಾಗುವುದು, ಮಾಯವಾಗಿಸುವುದು, ವ್ಯಾಧಿಯನ್ನು ತರಿಸುವುದು, ಗುಣಪಡಿಸುವುದು ಮುಂತಾದ ಶಕ್ತಿಗಳನ್ನು ಮಂತ್ರಗಾರರು ಹೊಂದಿರುತ್ತಾರೆಂಬ ನಂಬಿಕೆ ಇದೆ. ಸಂಬಂಧವಿಲ್ಲದ ಎರಡು ವಸ್ತುಗಳ ನಡುವೆ ಅಥವಾ ಮನುಷ್ಯರ ನಡುವೆ ಮನುಷ್ಯ ಮತ್ತು ವಸ್ತುಗಳ ನಡುವೆ ಮಾಟ, ಮಂತ್ರ ಸಂಬಂಧ ಕಲ್ಪಿಸುತ್ತವೆ.

ಮಂತ್ರವಿದ್ಯೆ ಅಥವಾ ಯಾವುದೇ ಅತಿಮಾನುಷ ವಿದ್ಯೆಯಲ್ಲಿ ಕೆಲವು ಸಂವೇದಾತ್ಮಕ (Sympathetic)ವಾದರೆ, ಕೆಲವು ಸಾಂಕ್ರಾಮಿಕ (Contagious). ಅನುಕರಣೆಯಿಂದ ಕೆಲವು ಶಕ್ತಿಗಳನ್ನು ಪಡೆಯಬಹುದೆಂದು ಮಂತ್ರಗಾರರು ನಂಬುತ್ತಾರೆ. ಮಂತ್ರ ಜಪಿಸಿದಾಗ ಅದರ ಫಲ ಬೇರೆಯವರಿಗೆ ತಲುಪುತ್ತದೆಂದೂ ಬೊಂಬೆಮಾಡಿ ಅದಕ್ಕೆ ಹಿಂಸೆಕೊಟ್ಟರೆ ಅದು ಬೇಕಾದವನಿಗೆ ಹಿಂಸೆಯಾಗುತ್ತದೆಂದೂ ತಿಳಿಯಲಾಗಿದೆ. ಭಾನಾಮತಿ, ದೆವ್ವ ಬಿಡಿಸುವುದು, ಕೊಂಡಹಾಯುವುದು, ಬಾಯಿಬೀಗ, ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು, ಮಾಟಮಾಡಿ ರೋಗಗ್ರಸ್ತರನ್ನಾಗಿಸುವುದು, ನಾಲಗೆಯ ಮೇಲೆ ಕರ್ಪೂರ ಉರಿಸುವುದು, ಮೈಮೇಲೆ ಬರುವುದು, ಅನೇಕ ರೀತಿಯಲ್ಲಿ ರಕ್ತ ಬರಿಸಿಕೊಳ್ಳುವುದು ಮುಂತಾದವೆಲ್ಲಾ ಅತಿಮಾನುಷ ಶಕ್ತಿಗಳ ಮೇಲಿನ ನಂಬಿಕೆಯಿಂದ ಮಾಡುವ ಆಚರಣೆಗಳೇ. ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹರಕೆ, ಭಯ, ಭಕ್ತಿ, ನಂಬಿಕೆಗಳಿಂದಾಗಿ ಮಾಡುವಂತಹ ಕಾರ್ಯಗಳೇ ಆಗಿವೆ.

ಕರ್ನಾಟಕದ ಮಾಟ, ಮಂತ್ರಗಳ ಪದ್ಧತಿಗಳನ್ನು ಪರಿಶೀಲಿಸಿದಾಗ ಜಗತ್ತಿನ ಬೇರೆ ಬೇರೆ ಸ್ಥಳಗಳಲ್ಲೂ ಇದೇ ರೀತಿಯ ಪದ್ಧತಿಗಳಿರುವುದನ್ನು ಕಾಣಬಹುದು. ಇವನ್ನು ವಿಶ್ಲೇಷಿಸಿದಾಗ ತಮಗೆ ಶಕ್ತಿಯಿದೆ ಎಂದು ನಂಬಿಕೊಂಡು ತಮ್ಮ ಶಕ್ತಿಯನ್ನು ಪ್ರಯೋಗಿಸುವವರು ಒಂದು ಕಡೆ, ಆ ಶಕ್ತಿಯ ಮೇಲೆ ನಂಬಿಕೆಯಿಂದಲೇ ಅದಕ್ಕೆ ಗುರಿಯಾಗುವವರು ಇನ್ನೊಂದು ಕಡೆ ಇರುವುದು ಕಂಡುಬರುತ್ತದೆ. ಒಂದೊಂದು ಸಾರಿ ಈ ಇಬ್ಬರೂ ಒಂದೇ ಆಗಬಹುದು. ಮಂತ್ರಗಳ ಬಳಕೆಯಿಂದ ತಮಗೆ ಕೆಲವು ಶಕ್ತಿಗಳು ಲಭಿಸಬಹುದೆಂದು ಕೆಲವರು ನಂಬಬಹುದು. ಈ ರೀತಯ ಮಾಟ ಮಂತ್ರಗಳಲ್ಲಿ ಬಳಸುವ ವಸ್ತುಗಳ ಮತ್ತು ಅವುಗಳ ಬಳಕೆಯ ವಿಧಾನವನ್ನೂ ಪರಿಶೀಲಿಸಬೇಕಾಗುತ್ತದೆ.

ಭಾರತದ ಮಾಟ, ಮಂತ್ರಗಳಿಗೆ ವಿದ್ಯೆಗೆ ಅಥರ್ವ ವೇದದಲ್ಲಿ ಸಾಕಷ್ಟು ಉದಾಹರಣೆಗಳು ಸಿಕ್ಕುತ್ತವೆ. ಅತ್ಯಂತ ಪ್ರಾಚೀನ ಕಾಲದಿಂದ ಭಾರತದಲ್ಲಿ ಬಳಕೆಯಲ್ಲಿರುವ ಇಂತಹ ಕೃತ್ಯಗಳನ್ನೇ ಅಥರ್ವವೇದದಲ್ಲಿ ಸೇರಿಸಿರಬಹುದು. ಅಥರ್ವವೇದಕ್ಕೆ ಅರ್ಥರ್ವಾಂಗಿರಸ ಎಂಬ ಹೆಸರೂ ಇದೆ. ಅಥರ್ವನ್ ಎಂದರೆ ಶುಕ್ಲೇಂದ್ರಜಾಲ (White magic)ಎಂದೂ, ಅಂಗಿರಸವೆಂದರೆ ಕೃಷ್ಣೇಂದ್ರಜಾಲ (Black magic) ಎಂದೂ ಕೆಲವರು ಅರ್ಥ ಹೇಳಿದ್ದಾರೆ. ಅಭಿಚಾರವಿದ್ಯೆ (ಮಾಟ)ಎ ಸಂಬಂಧಿಸಿದ ಅನೇಕ ಸೂಕ್ಷ್ಮಗಳೂ ಅಥರ್ವ ವೇದದಲ್ಲಿದೆ.

ಮಾಟ, ಮಂತ್ರಗಳನ್ನು ಕುರಿತು ವಿಶ್ಲೇಷಿಸಿದಾಗ ನಾಲ್ಕು ವಿಭಾಗಗಳನ್ನು ಮಾಡಿಕೊಳ್ಳಬಹುದು.

೧. ಮಾಟ, ಮಂತ್ರಗಳನ್ನು ಕೆಟ್ಟ ಉದ್ದೇಶದಿಂದ ಬೇರೆಯವರ ಮೇಲೆ ಪ್ರಯೋಗ ಮಾಡುವುದು, ಅದರ ವಿಧಾನಗಳ, ವಸ್ತುಗಳು ಇತ್ಯಾದಿ.

೨. ಮಾಟ, ಮಂತ್ರಗಳ ಕಾಟದಿಂದ ತಪ್ಪಿಸಿಕೊಳ್ಳಲು ಪರಿಹಾರ – ಅದರ ವಿಧಾನಗಳು, ಬಳಸುವ ಪರಿಕರಗಳು ಇತ್ಯಾದಿ.

೩. ಒಳ್ಳೆಯ ಉದ್ದೇಶದಿಂದ ಪ್ರಯೋಗಿಸುವ ಮಂತ್ರ ಇತ್ಯಾದಿ ಕಾಯಿಲೆಗಳನ್ನು ಗುಣಪಡಿಸುವುದು, ದೆವ್ವ ಬಿಡಿಸುವುದು ಮುಂತಾದವು.

೪. ಮನರಂಜನೆಗಾಗಿ ಮಾಡುವ ಇಂದ್ರಜಾಲ, ಮೋಡಿ ಇತ್ಯಾದಿ.

ಇವುಗಳಲ್ಲಿ ಮೊದಲನೆಯದು ಕೃಷ್ಣೇಂದ್ರಜಾಲಕ್ಕೆ ಸೇರಿದ್ದು, ಎರಡನೆಯದು ಕೃಷ್ಣ ಮತ್ತು ಶುಕ್ಲೇಂದ್ರ ಜಾಲಗಳ ಬೆರಕೆ. ಮೂನೆಯದು ಶುಕ್ಲೇಂದ್ರ ಜಾಲ, ನಾಲ್ಕನೆಯದು ಕೂಡ ಅಷ್ಟೆ.

ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಮಾಟಗಾರರು, ಮಂತ್ರಗಾರರು ಇಂದಿಗೂ ಇದ್ದಾರೆ. ಒಂದೊಂದು ಸ್ಥಳದಲ್ಲಿ ಈ ಪ್ರಯೋಗಗಳಿಗೆ ಬೇರೆ ಬೇರೆ ಹೆಸರುಗಳುಂಟು. ಇಂತಹವುಗಳಲ್ಲಿ ಅತ್ಯಂತ ಸರಳವಾದುದೆಂದರೆ ಕೆಟ್ಟಕಣ್ಣು, ಮಕ್ಕಳಗೆ ಏನಾದರೊಂದು ತೊಂದರೆಯುಂಟಾದರೆ ಅಥವಾ ಅವರು ಚಂಡಿ ಹಿಡಿದರೆ ಕೆಟ್ಟ ಕಣ್ಣು ಬಿದ್ದಿದೆ ಅಥವಾ ದೃಷ್ಟಿ ತಾಕಿದೆ ಎಂದು ಇಳಿ ತೆಗೆಯುವುದುಂಟು. ಆಗ “ಕೆಟ್ಟಕಣ್ ಕೀಳ್‌ಕಣ್ ನಾಯಿಕಣ್ ನರಕಣ್ ಬಸ್ತಿಕಣ್ ಬಾಣಂತಿಕಣ್…..” ಎಂದು ಹೇಳುತ್ತಾ ಮುಖದಿಂದ ಇಳಿತೆಗೆಯುತ್ತಾರೆ. ಇದಕ್ಕೆ ಬಳಸುವ ಪದಾರ್ಥಗಳು ಹೆಂಚಿ ಕಡ್ಡಿ, ಉಪ್ಪು, ಮೆಣಸಿನಕಾಯಿ, ಎಲೆ ಅಡಿಕೆ ಮುಂತಾದವು.

ಮಾಟಗಾರರ ಕೃತ್ಯಗಳು ಇಷ್ಟು ಸರಳವಾದವಲ್ಲ. ಮಾಟಗಾರ ಪಡುವ ಪಾಡನ್ನು ನೆನಸಿಕೊಂಡರೆ ಅನುಕಂಪವಾಗುತ್ತದೆ. ಮಾಟ ಮಾಡುವ ಶಕ್ತಿಯನ್ನು ಪಡೆಯಬೇಕಾದರೆ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಗುರಿಯಾಗಬೇಕು. ಬೇರೆಯವರಿಗೆ ಕಷ್ಟ ಕೊಡುವುದೂ ಎಷ್ಟು ಕಷ್ಟವೆಂಬುದು ಇದರಿಂದ ಗೊತ್ತಾಗುತ್ತದೆ.

ಕೃಷ್ಣೇಂದ್ರ ಜಾಲ: ಅತಿಮಾನುಷ ಶಕ್ತಿಗಳಿಗೆ ಸಂಬಂಧಿಸಿದಂತೆ ಭಯಂಕರ ಪದ್ಧತಿಗಳಿಂದ ಕೂಡಿದ ಮಾಟ, ಮಂತ್ರಗಳು, ಕೃಷ್ಣೇಂದ್ರ ಜಾಲದಲ್ಲಿ ಸೇರುತ್ತವೆ. ತಮ್ಮ ಜೀವನದಲ್ಲಿ ಯಾವುದೇ ರೀತಿಯಲ್ಲಾದರೂ ಅಡ್ಡಿಯಾದ ವ್ಯಕ್ತಿಗಳ ನಾಶಕ್ಕಾಗಿ ಕೃಷ್ಣೇಂದ್ರಜಾಲವನ್ನು ಪ್ರಯೋಗಿಸಲಾಗುತ್ತದೆ. ಸವತಿಯರು ಮತ್ತು ಪ್ರೇಯಸಿಯರನ್ನು ಬಯಸಿದ ಪುರುಷರ ಮರ್ಮಾಂಗಗಳೇ ನಾಶವಾಗಬೇಕೆಂದು ಬಯಸುವ ಭಯಂಕರ ಮಂತ್ರಗಳು ಅಥರ್ವವೇದದಲ್ಲಿವೆ.

ಕರ್ನಾಟಕದ ಕೆಲವೆಡೆಗಳಲ್ಲಿ ಮಾಟಕ್ಕಾಗಿ ಬಳಸುವ ವಸ್ತುಗಳು ಮತ್ತು ಪ್ರಯೋಗ ಹೀಗಿದೆ:

ಜೀವವಿರುವ ಕೆಲವು ಪ್ರಾಣಿಗಳನ್ನು ಸಮಾಧಿ ಮಾಡುತ್ತಾರೆ ಅಥವಾ ಅವುಗಳಿಗೆ ಹಿಂಸೆಕೊಡುತ್ತಾರೆ. ಅವುಗಳ ರಕ್ತವನ್ನು ಶತ್ರುಗಳ ಮನೆಯ ಸುತ್ತ ಚೆಲ್ಲುತ್ತಾರೆ. ಕೋಳಿ, ಕುರಿ, ಹಂದಿ ಮುಂತಾದವುಗಳನ್ನು ಇದಕ್ಕಾಗಿ ಬಳಸುತ್ತಾರೆ. ಹಂದಿಯ ಕಿವಿಯನ್ನು ಕೊಯ್ದು ಅದು ನೆಲದ ಮೇಲೆ ಬಿದ್ದು ವಿಲವಿಲ ಎಂದು ತಿರುಗುತ್ತಿದ್ದರೆ ಶತ್ರುಗಳೂ ಹಾಗೆ ತಿರುಗುತ್ತಾರೆಂದು ನಂಬಲಾಗಿದೆ. ಕುರಿಗೆ ಅಥವಾ ಹಂದಿಗೆ ಹೊಟ್ಟೆ ಸೀಳಿ ಅವು ನರಳಿ ನರಳಿ ಸಾಯುವಂತೆ ಮಾಡಿದರೆ ವೈರಿಗಳೂ ಹಾಗೆಯೇ ಸಾಯುತ್ತಾರೆಂದು ತಿಳಿಯಲಾಗಿದೆ.

ಕೆಲವು ಮಂತ್ರಗಾರರು ಭಿಕ್ಷುಕರಂತೆ ಬಂದು ಹಣೆಗಿಟ್ಟುಕೊಳ್ಳಲು ಬೂದಿಯನ್ನು ಕೊಡುತ್ತಾರೆಂದೂ ಅದನ್ನಿಟ್ಟುಕೊಂಡ ತಕ್ಷಣ ಹೆಂಗಸರು ಅವರನ್ನು ಹಿಂಬಾಲಿಸಿ ಹೋಗುತ್ತಾರೆಂದೂ ದಂತ ಕಥೆಗಳಿವೆ. ಪರಿವರ್ತನೆ ಎಂಬುದು ಇಂದ್ರಜಾಲದ ಮುಖ್ಯ ಲಕ್ಷಣಗಳಲ್ಲಿ ಒಂದು. ಕೆಲವರು ಬೂದಿ ಎರಚಿದ ತಕ್ಷಣ ನಾಯಿಯಾಗಿಯೋ ಗಾಳಿಯಾಗಿಯೋ ಪರಿವರ್ತನೆ ಹೊಂದಿ ಮಂತ್ರಗಾರನ ಕೈಗೆ ಸಿಕ್ಕುತ್ತಾರೆಂದು ಹೇಳುವ ಕಥೆಗಳು ನಮ್ಮಲ್ಲಿವೆ. ಇಂತಹವುಗಳ ಆಧಾರದಿಂದ ಮೇಲಿನ ಕಥೆಗಳು ಹುಟ್ಟಿಕೊಂಡಿರಬಹುದು.

ವೈರಿಯ ಗೊಂಬೆಯನ್ನು ಮರದಿಂದ, ಮಣ್ಣಿನಿಂದ ಅಥವಾ ಬೇರೆ ಯಾವುದಾದರೂ ವಸ್ತುವಿನಿಂದ ಮಾಡಿ ಅದಕ್ಕೆ ಮಂತ್ರಶಕ್ತಿಯಿಂದ ‘ಜೀವ ತುಂಬಿಸಿ’ ಆ ಗೊಂಬೆಗೆ ಹಿಂಸೆ ಕೊಡುತ್ತಾರೆ. ಅದರ ಕೈಕಾಲು ಮುರಿದರೆ ವೈರಿಯ ಕೈಕಾಲು ಮುರಿದುಹೋಗುತ್ತದಂತೆ ! ಗೊಂಬೆಗೆ ಸೂಚಿ ಚುಚ್ಚುವುದು, ಬೆಂಕಿಯಲ್ಲಿ ಸುಡುವುದು, ಕಣ್ಣು ಕೀಳುವುದು ಮುಂತಾದುವನ್ನು ಮಾಡುತ್ತಾರೆ. ಸಾದೃಶ್ಯದ ನಿಯಮದಂತೆ ಈ ರೀತಿಯ ಮಾಟದಿಂದ ಪರಿಣಾಮವಾಗುತ್ತದೆಂದು ನಂಬಲಾಗಿದೆ.

ಸೋಂಕಿನ ಮಂತ್ರವಿದ್ಯೆ ಇನ್ನೊಂದು ರೀತಿಯದು. ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಯಾವುದಾರೊಂದು ವಸ್ತುವನ್ನು ಸಂಪಾದಿಸಿ ಅದರ ಮೂಲಕ ಆ ವ್ಯಕ್ತಿಗೆ ಕೆಡುಕನ್ನುಂಟುಮಾಡುತ್ತಾರೆ. ಕೂದಲನ್ನು, ಉಗುರನ್ನು, ಬಟ್ಟೆಗಳನ್ನು ಈ ರೀತಿಯ ಮಾಟಕ್ಕಾಗಿ ಬಳಸುವುದು ಜಗತ್ತಿನ ಅನೇಕ ಪ್ರದೇಶಗಳಲ್ಲಿ ಕಂಡುಬರುತ್ತದೆ. ವೈರಿಗಳು ಓಡಾಡುವ ದಾರಿಯನ್ನು ಚೆನ್ನಾಗಿ ಗಮನಿಸಿ ಆ ದಾರಿಯಲ್ಲಿ ಮಂತ್ರಿಸಿದ ನೆತ್ತರನ್ನೋ, ಮೂಳೆಯ ನಿಂಬೆಹಣ್ಣನ್ನೋ, ಚೂರುಗಳನ್ನೋ ಹಾಕಿದರೆ ಅವನ್ನು ತುಳಿದ ಕ್ಷಣದಿಂದ ವೈರಿಯ ವಿನಾಶ ಪ್ರಾರಂಭವಾಗುತ್ತದೆಂದೂ ನಂಬಲಾಗಿದೆ.

ಮೋಡಿಯಿಂದಲೂ ಪ್ರತ್ಯರ್ಥಿಯನ್ನು ಸಾಯಿಸುತ್ತಾರೆಂಬ ನಂಬಿಕೆ ಇದೆ. ರಾಜಮೋಡಿ, ರಣಮೋಡಿ ಎಂಬ ಎರಡು ಬಗೆಯ ಮೋಡಿಗಳಲ್ಲಿ ರಣಮೋಡಿ ಇಬ್ಬರ ನಡುವೆಯಾಗುವಂತಹದು. ರಾಜಮೋಡಿ ಮನರಂಜನೆ ನೀಡುವಂತಹದು. ರಣಮೋಡಿಯಲ್ಲಿ ಒಬ್ಬರ ಮೇಲೋಬ್ಬರ ಪ್ರಯೋಗ ಮಾಡಿಕೊಳ್ಳುತ್ತಾರೆ. ಒಂದು ದೇವತಾ ವಿಗ್ರಹವನ್ನು ಮಣ್ಣಿನಿಂದ ಮಾಡಿ, ಅದಕ್ಕೆ ಶಕ್ತಿ ತುಂಬಿ, ಅದರ ಎದುರುಗಡೆ ಒಂದು ಒನಕೆಯನ್ನು ಹೂತು ಅದಕ್ಕೆ ಒಂದು ಕುರಿಮರಿಯನ್ನು ಕಟ್ಟುತ್ತಾರೆ. ಅದನ್ನು ಬಾಯಿಂದ ಕಚ್ಚಿ ಸಿಗಿದು ಬಿಡುತ್ತಾರೆ. ಮೋಡಿ ಹಾಕುವವರ ಬಳಿ ಒಂದು ರಾಟೆ ಇರುತ್ತದೆ. ಅದನ್ನು ತಿರುಗಿಸಿದಾಗ ಪ್ರತಿಸ್ಪರ್ಧಿ ಮೇಲಕ್ಕೆ ನೆಗೆದು ಹಾರಿ ಕೆಳಗೆ ಬಿದ್ದು ಸಾಯುತ್ತಾರಂತೆ. ಇಂತಹ ಪ್ರದರ್ಶನಗಳು ಈಗ ನಡೆಯುವುದಿಲ್ಲ.

ಕರ್ನಾಟಕದ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಹಾಗು ಆಂಧ್ರಪ್ರದೇಶದ ಕೆಲವು ಸ್ಥಳಗಳಲ್ಲಿ ಭಾನಾಮತಿ ಎಂಬ ಹೆಸರಿನ ಮಾಟ ಪ್ರಚಲಿತವಾಗಿದೆ. ಇದರಿಂದಾದ ಕಾಟ ಅಷ್ಟಿಷ್ಟಲ್ಲ. ಭಾನಾಮತಿಯನ್ನು ಪ್ರಯೋಗಿಸುವವರು ಅಮಾವಾಸ್ಯೆಯಂದು ಶ್ಮಶಾನದಲ್ಲಿ ಸಾಧನೆ ಮಾಡುತ್ತಾರೆಂದು ಹೇಳಲಾಗಿದೆ. ಭಾನಾಮತಿಯನ್ನು ಪ್ರಯೋಗಿಸಿದವರು ಮುಗ್ಧ ಜನರನ್ನು ತಮ್ಮ ಬಳಿಗೆ ಕರೆಯಿಸಿಕೊಂಡು ಭಾನಾಮತಿಯನ್ನು ತಮ್ಮ ಬಳಿಯೇ ತೆಗೆಸಿಕೊಳ್ಳಬೇಕೆಂದು ಕಾಡುತ್ತಾರೆ. ಇನ್ನಷ್ಟು ಭಯ ತುಂಬುತ್ತಾರೆ. ವ್ಯಕ್ತಿಯ ಕೂದಲು, ವೀರ್ಯ, ಋತುಸ್ರಾವವಾದ ಬಟ್ಟೆ ಚೂರು ಮುಂತಾದವನ್ನು ಸಂಗ್ರಹಿಸಿ ಬಸರಿ ಮರದಿಂದ ಮಾಡಿದ ಬೊಂಬೆಗೆ ಕಟ್ಟುತ್ತಾರೆ. ಅದನ್ನು ಶ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಪೂಜೆಮಾಡಿ ಭಾನಾಮತಿ ಶಕ್ತಿಯನ್ನು ಆಹ್ವಾನಿಸುತ್ತಾರೆ. ಸೂಜಿಯಿಂದ ಆ ಬೊಂಬೆಗೆ ಬೇಕಾದ ಕಡೆ ಚುಚ್ಚುತ್ತಾರೆ. ಇಂತಹ ಅರವತ್ತು ನಾಲ್ಕು ತರಹದ ಬೊಂಬೆಗಳಿವೆ ಎಂದು ಹೇಳಲಾಗಿದೆ.

ಮೇಲೆ ಹೇಳಿದಂತಹ ಅನೇಕ ರೀತಿಯ ಪ್ರಯೋಗಗಳಿಂದ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ. ಆದರೆ ಪರಿಣಾಮವಾಗುವುದೆಂದು ನಂಬಿದ ಜನರಿಗೆ ಮಾತ್ರ ಯಾವುದಾದರೊಂದು ರೀತಿಯ ಮನೋವೈಕಲ್ಯವುಂಟಾಗುವುದು. ಕೆಲವರಿಗೆ ರಕ್ತ ಹೆಪ್ಪು ಕಟ್ಟುವಂತಹ ವೈಪರೀತ್ಯದ ಅನುಭವಗಳಾಗುತ್ತವೆ. ಪ್ರಜ್ಞೆ ತಪ್ಪಿ ಬಿದ್ದುಬಿಡುವುದು ಸರ್ವೇಸಾಮಾನ್ಯ. ನಗುವುದು, ಅಳುವುದು, ಕಿರಿಚಿಕೊಳ್ಳುವುದು, ಹೆಚ್ಚಾಗಿ ತಿನ್ನುವುದು, ಆಹಾರವನ್ನೇ ಸ್ವೀಕರಿಸದಿರುವುದು ಮುಂತಾದುವು ಇದರ ಪರಿಣಾಮಗಳೆಂದು ಹೇಳುತ್ತಾರೆ. ಆದರೆ ಇಂತಹದಕ್ಕೆ ನೇರವಾದ ಆಧಾರಗಳು ಸಿಕ್ಕುವುದಿಲ್ಲ. ಒಟ್ಟಿನಲ್ಲಿ ಮಾಟದಿಂದಾದ ಪರಿಣಾಮಗಳಿಂದ ನಂಬಲಾದವು ಮನೋದೌರ್ಬಲ್ಯದಿಂದ ಉಂಟಾದುವೆಂಬುದು ಮನೋವಿಜ್ಞಾನಿಗಳ ಸಂಶೋಧನೆಗಳಿಂದ ಖಚಿತವಾಗಿದೆ.

ಮಾಟದಿಂದ ತಪ್ಪಿಸಿಕೊಳ್ಳಲು ಮಾಟ: ಮಾಟದಿಂದ ತಪ್ಪಿಸಿಕೊಳ್ಳಲು ಮಾಟದ ಪದ್ಧತಿಗಳನ್ನೇ ಅನುಸರಿಸುವುದುಂಟು. ಮಾಟಗಾರರು ಹಂದಿಗೆ ಹಿಂಸೆ ಕೊಟ್ಟು, ಅದರಿಂದ ತಮ್ಮ ಮೇಲೆ ಪರಿಣಾಮವಾಯಿತೆಂದು ನಂಬುವರು. ಅದೇ ರೀತಿಯ ಹಿಂಸೆಯನ್ನೂ ತಾವೂ ಕೊಟ್ಟು ಈ ಪ್ರಯೋಗವನ್ನು ಮಾಡಿದವರಿಗೇ ತಲುಲುವಂತೆ ಮಾಡುತ್ತಾರೆ. ಇದಲ್ಲದೆ ಕೆಲವು ಪರಿಹಾರ ಕಾರ್ಯಗಳು ಕರ್ನಾಟಕದಲ್ಲಿ ಪ್ರಚಲಿತವಾಗಿವೆ.

ಮಾಟಕ್ಕೆ ವಿರುದ್ಧವಾಗಿ ನಡೆಸುವ ಕೃತ್ಯಗಳಿಗೆ ‘ತಡೆ ಒಡೆಯುವುದೆಂಬ’ ಹೆಸರಿದೆ. ಮಾಟಕ್ಕೆ ಗುರಿಯಾದ ವ್ಯಕ್ತಿಗಳನ್ನು ಸೂರ್ಯನಿಗೆ ಎದುರಾಗಿ ಕೂರಿಸುತ್ತಾರೆ. ಕುಡಿಕೆಯ ಮೇಲೆ ತೆಂಗಿನಕಾಯಿ, ಕಾಯಿ ಮೇಲೆ ಬಿಚ್ಚೋಲೆ, ಅದರ ಮೇಲೆ ನಿಂಬೆ ಹಣ್ಣು ಇಟ್ಟು ‘ಓಂ’ ಎಂದು ನೀರು ಎರಚಿ ಅದರ ಮೇಲೆ ಕಲ್ಲು ಎತ್ತಿ ಹಾಕಿ ಹಿಂದೆ ತಿರುಗಿ ನೋಡದಂತೆ ಹೋಗಬೇಕಾಗುತ್ತದೆ. ತೆಂಗಿನಕಾಯಿ ಹೋಳು ಸರಿಯಾಗಿ ಬಿದ್ದರೆ ಮಾಟ ಮಾಡಿಸಿಲ್ಲವೆಂದೂ, ಹೋಳು ಮೊಕಾಡೆ ಬಿದ್ದರೆ ಮಾಟ ಮಾಡಿಸಿದ್ದಾರೆಂದೂ ನಂಬಿಕೆ.

ಮಾಟಕ್ಕೆ ಗುರಿಯಾದ ವ್ಯಕ್ತಿಗಳನ್ನು ಸೂರ್ಯನಿಗೆ ಎದುರಾಗಿ ಕೂರಿಸಿ, ಒಂದು ನಿಂಬೆಹಣ್ಣನ್ನು ತಲೆಯ ಮೇಲಿಟ್ಟು ಎಂಟು ನಿಂಬೆ ಹಣ್ಣುಗಳನ್ನು ಅವರ ಸುತ್ತ ಇಡುತ್ತಾರೆ. ತಲೆಯ ಮೇಲಿರುವ ನಿಂಬೆ ಹಣ್ಣಿಗೆ ಐದು ಸೂಜಿ ಚುಚ್ಚುತ್ತಾರೆ. ತೆಂಗಿನಕಾಯಿ ಇಳಿತೆಗೆದು ಒಂದೊಂದು ನಿಂಬೆ ಹಣ್ಣಿನ ಮೇಲೂ ಕಾಯಿಯಿಂದ ಹೊಡೆದು, ಕೊನೆಗೆ ತಲೆಯ ಮೇಲಿರುವ ನಿಂಬೆ ಹಣ್ಣು ಕೋಲಿಂದ ಬೀಳಿಸಿ ಜೋರಾಗಿ ಕಾಯಿ ಒಡೆಯುತ್ತಾರೆ. ಆ ಕಾಯಿಯ ಚೂರು ಮತ್ತು ನಿಂಬೆ ಹಣ್ಣುಗಳನ್ನು ಹರಿಯುವ ನೀರಿಗೆ ಹಾಕಬೇಕು. ಆಗ ಮಾಟ ಮಾಡಿಸಿದ್ದರೆ ತಗುಲುವುದಿಲ್ಲವೆಂದೂ ತಮ್ಮ ಕಷ್ಟ ಪರಿಹಾರವಾಗುವುದೆಂದೂ ನಂಬಿಕೆ.

ಶುಕ್ಲೇಂದ್ರ ಜಾಲ: ಕಾಯಿಲೆಗಳನ್ನು ಗುಣಪಡಿಸಲು, ದೆವ್ವ ಬಿಡಿಸಲು ಮಾಡುವ ಕಾರ್ಯಗಳು ಮತ್ತು ಒಳ್ಳೆಯ ಉದ್ಧೇಶದಿಂದ ಮಂತ್ರ ಹಾಕುವುದು ಮುಂತಾದವನ್ನು ಶುಕ್ಲೇಂದ್ರ ಜಾಲವೆನ್ನಬಹುದು. ದೀರ್ಘಾಯುಸ್ಸು, ಧಾನ್ಯ, ಸಮೃದ್ಧಿ, ಸಂತಾನ, ಪಶು ಸಂಪತ್ತು ಮುಂತಾದವನ್ನು ಕೋರಿ ಉಪಯೋಗಿಸುವ ಮಂತ್ರಗಳು ಹಲವಿದೆ. ಹಾವು ಮಂತ್ರ, ಚೇಳು ಕಚ್ಚಿದರೆ ಮಂತ್ರ, ಸಿಡಿಲಿನ ವಿರುದ್ಧ ಮಂತ್ರ, ಪಾಪ ಪರಿಹಾರಕ್ಕೆ ಮಂತ್ರಗಳು ಬಳಕೆಯಲ್ಲಿವೆ. ದುಷ್ಟ ಪರಿಹಾರಕ್ಕೆ ಇಳಿ ತೆಗೆಯುವುದು ಕೂಡ ಒಳ್ಳೆಯ ಉದ್ದೇಶದಿಂದಲೇ. ಕಾಯಿಲೆಗಳನ್ನು ಗುಣಪಡಿಸಲು ಮಂತ್ರಿಸಿದ ನೀರನ್ನು, ಬೂದಿಯನ್ನು, ಕುಂಕುಮವನ್ನು ಕೊಡುವುದು ಬಳಕೆಯಲ್ಲಿದೆ. ಗರಿಕೆ ಹುಲ್ಲಿನಿಂದ ಕಬ್ಬಿಣದ ಕಡ್ಡಿಗಳಿಂದ, ಮರದ ಕಡ್ಡಿಗಳಿಂದ ಮಂತ್ರಿಸುವುದಿದೆ.

ಒಳ್ಳೆಯ ಉದ್ಧೇಶಕ್ಕೇ ಕೆಲವು ಸಲ ಕ್ರೂರ ಪದ್ಧತಿಗಳನ್ನು ಕೂಡ ಬಳಸುವುದುಂಟು. ಬೇವಿನ ಕಟ್ಟು, ಹುಣಿಸೆಯ ಬರಲುಗಳು ಬಳಸುವುದುಂಟು. ಹೆದರಿಸಿ, ಹಿಂಸಿಸಿ, ಕೊರೆಯುವ ನೀರಿನಲ್ಲಿ ಮುಳುಗಿಸಿ, ಕಂಬಕ್ಕೆ ಕಟ್ಟಿ ಚಾವಟಿಯಿಂದ ಹೊಡೆದು ದೆವ್ವವನ್ನು ಬಿಡಿಸುವ ಪದ್ಧತಿಗಳಿವೆ. ಕೊನೆಗೆ ದೆವ್ವ ಅಪಾಯಕಾರಿ ಎಂದು ತಿಳಿದರೆ ದೆವ್ವದ ಸಮೇತ ಸಾಯಿಸುವ ಪದ್ಧತಿಗಳೂ ಕೆಲವು ಕಡೆ ಬಳಕೆಯಲ್ಲಿವೆ.

ಮನರಂಜನೆ: ಮಾಟ, ಮಂತ್ರಗಳಲ್ಲಿ ಕೆಲವು ಮನರಂಜನೆಯ ಮಾಧ್ಯಮಗಳು ಇವೆ. ಮಂತ್ರವಾದಿಗಳು, ಅಮಾನುಷ ವ್ಯಕ್ತಿಗಳೆಂದೆನಿಸಿಕೊಂಡ ಅನೇಕ ಸಿದ್ಧರು ಮುಂತಾದವರು ಮನರಂಜನೆಗಾಗಿ ಇಂದ್ರಜಾಲವಿದ್ಯೆಯನ್ನು ಪ್ರದರ್ಶಿಸುತ್ತಾರೆ. ಪವಾಡಗಳನ್ನು ತೋರಿಸುವುದು ಧರ್ಮದ ಒಂದು ಭಾಗವಾಗಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಂತ್ರ ವಿದ್ಯೆಯ ಭಾಗವಾಗಿರುವ ಮನರಂಜನೆ ಬರಿಯ ಮನರಂಜನೆಯಲ್ಲ. ಇದರಿಂದ ಧಾರ್ಮಿಕ ವ್ಯಕ್ತಿಗಳು ತಮ್ಮ ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಮೋಡಿಯಲ್ಲಿ ಒಂದು ಭಾಗವಾದ ರಾಜಮೋಡಿ ಮನರಂಜನೆ ಪ್ರಭಾವವಾಗಿರುವಂತಹದು. ಇದು ಕೂಡ ಬರಿಯ ಯಕ್ಷಿಣಿ ಪ್ರದರ್ಶನವಾಗಿದೆ ಒಂದು ಪರಂಪರೆಯ ಕತೆಯಾಗಿ ಬೆಳೆದು ಬಂದಿದೆ.

ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಕಂಡು ಬರುವ ಕಣಿ, ಭವಿಷ್ಯ, ಮಾಟ ಮಂತ್ರಗಳ ಮೇಲಿನ ವಿವರಣೆಯಿಂದ ಇವು ಜಗತ್ತಿನ ಬೇರೆಡೆಗಳ ವಿಧಾನಗಳಿಗೆ ಹೋಲಿಸತಕ್ಕವೆಂಬುದು ಖಚಿತವಾಗುತ್ತದೆ. ಆದರೆ ಇಲ್ಲಿಯ ಈ ವಿಧಾನಗಳಿಗೆ ತನ್ನದೇ ಆದ ಪ್ರಾದೇಶಿಕತೆ ಇದೆ. ಸ್ಥಳೀಯ ಭಾಷೆಯ ಬಳಕೆ, ವಸ್ತುಗಳ ಬಳಕೆ, ನಂಬಿಕೆಗಳ ಹಿನ್ನೆಲೆ ಇವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ಅಂಶಗಳ ವಿಶ್ಲೇಷಣೆ ಅತ್ಯಗತ್ಯವೆನ್ನಬಹುದು.

– ಆರ್.ವಿ.ಎಸ್.