ಕಾಡು ಕುರುಬರು ಕರ್ನಾಟಕದ ಅತೀ ಪ್ರಾಚೀನ ಬುಡಕಟ್ಟುಗಳ ಸಾಲಿಗೆ ಸೇರಿದವರು ಎನ್ನಲಾದ ಕಾಡುಕುರುಬರು ಮತ್ತು ಜೇನು ಕುರುಬರು (ಬೆಟ್ಟ) ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶಗಳಾದ ಹೆಗ್ಗಡದೇವನಕೋಟೆಯ ಬಿಸಿಲವಾಡಿ, ಕಾಕನಕೋಟೆ, ಬೇಗೂರು ಮತ್ತು ಐನೂರು ಮಾರಿಗುಡಿ, ಹುಣಸೂರು, ಪಿರಿಯಾಪಟ್ಟಣ, ಕೊಡಗಿನ ನಾಗರಹೊಳೆ, ಕುಶಾಲನಗರ, ಸೋಮವಾರಪೇಟೆ ವ್ಯಾಪ್ತಿಯ ಅರಣ್ಯಪ್ರದೇಶಗಳಲ್ಲಿ ಇತರ ಬುಡಕಟ್ಟುಗಳ ಜೊತೆಯಲ್ಲಿಯೇ ವಾಸಮಾಡುತ್ತಿದ್ದಾರೆ.

ಅನಂತಕೃಷ್ಣ ಅಯ್ಯರ್ ಅವರು (೧೯೬೯) ‘ಜೇನು ಕುರುಬ’ ಮತ್ತು ‘ಬೆಟ್ಟ ಕುರುಬ’ – ಕಾಡುಕುರುಬರ ಎರಡು ಗುಂಪುಗಳ ಮತ್ತು ಬೆಟ್ಟ ಕುರುಬರಲ್ಲಿ ಮಾತ್ರ ಆನೆ, ಬೇವಿನ, ಕೊಳ್ಳಿ ಎಂಬ ಹೆಸರಿನ ಉಪಪಂಗಡಗಳ ಬಗ್ಗೆ ಹೇಳಿದ್ದಾರೆ.

ಕಾಡುಕುರುಬರು ವಾಸಿಸುವ ಪ್ರದೇಶಗಳನ್ನು ‘ಹಾಡಿ’ಗಳೆಂದು ಕರೆಯುತ್ತಾರೆ. ಕನಿಷ್ಠ ಪಕ್ಷ ೨೦ ರಿಂದ ೩೦ ಕುಟುಂಬಗಳು ಈ ಹಾಡಿಗಳಲ್ಲಿ ವಾಸಿಸುತ್ತಾರೆ. ಕಾಡಿನಲ್ಲಿ ದೊರೆಯುವ ಬಿದಿರು, ಹುಲ್ಲು, ಗರಿ, ಮಣ್ಣು, ನೀರು, ನಾರುಗಳಿಂದ ಈ ಹಾಡಿಗಳಲ್ಲಿಯ ಗುಡಿಸಲುಗಳು ನಿರ್ಮಾಣವಾಗುತ್ತವೆ. ಹಾಡಿಗಳನ್ನು ಕಟ್ಟುವ ಪ್ರದೇಶದಲ್ಲಿ ಕಲ್ಲುಗಳನ್ನು ಪೇರಿಸಿ ಇಟ್ಟಿ ಪೂಜಿಸಿ ಮಾರನೆಯ ದಿನ ಹಿಂತಿರುಗಿ ಬಂದಾಗ ಕಲ್ಲುಗಳು ಹಾಗೆಯೇ ಇದ್ದರೆ ಈ ಪ್ರದೇಶ ಗಾಳಿ, ಗರಗಳಿಂದ ಮುಕ್ತ ಎಂದು ತಿಳಿದು ಗುಡಿಸಲು ನಿರ್ಮಾಣ ಮಾಡುತ್ತಾರೆ. ಇಲ್ಲದಿದ್ದರೆ ಆ ಪ್ರೆದೇಶ ಅಪಾಯಕರ ಎಂದು ನಂಬಿದ್ದಾರೆ. ಗುಡಿಸಲಿಗೆ ಮುಂದೆ ಬೆಂಕಿ ಸದಾಕಾಲವೂ ಇರುತ್ತದೆ. ಮೊದಲಬಾರಿಗೆ ಮನೆಗೆ ಪ್ರವೇಶಿಸುವುದನ್ನು ‘ಹೊಸಮನೆ ಸೇರುವುದು’ ಎನ್ನುತ್ತಾರೆ.

ಕಾಡುಕುರುಬರು ಬಹಳ ಸರಳ ಜೀವಿಗಳು. ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳ ಸಂಗ್ರಹಣೆ ಅಥವಾ ಬಳಕೆ ಇವರಲ್ಲಿ ಕಂಡುಬರುವುದಿಲ್ಲ. ನವದಂಪತಿಗಳು ಬೇರೆ ಗುಡಿಸಲನ್ನು ನಿರ್ಮಿಸುವುದು ಇವರ ರೂಢಿ. ಪ್ರತಿಯೊಂದು ಹಾಡಿಗೂ ‘ಯಜಮಾನ’ ಇರುತ್ತಾನೆ. ಎಲ್ಲ ಕೆಲಸಕಾರ್ಯಗಳಿಗೂ ಈತನ ಅಪ್ಪಣೆ ಬೇಕೇಬೇಕು.

ಕಾಡುಕುರುಬ ಗಂಡಸರು ಲುಂಗಿ ಮತ್ತು ಮೇಲಂಗಿ ಧರಿಸುವುದು ಇತ್ತೀಚೆಗೆ ರೂಢಿಯಲ್ಲಿದೆ. ಗಂಡುಮಕ್ಕಳು ಚಡ್ಡಿ ಮತ್ತು ಮೇಲಂಗಿ ಧರಿಸುತ್ತಾರೆ. ಕೆಲವೊಮ್ಮೆ ಅರೆಬೆತ್ತಲೆಯಾಗಿಯೂ ತಿರುಗುತ್ತಾರೆ. ಹೆಣ್ಮಕ್ಕಳು ಲಂಗ ಮತ್ತು ಕುಪ್ಪಸ ಹಾಕುತ್ತಾರೆ. ಹೆಂಗಸರು ಎದೆಯಿಂದ ಹಾಯ್ದು ಬಂದಂತೆ ಹೆಗಲ ಮೇಲಿನಿಂದ ಸೀರೆ ಸುತ್ತುವುದು ಕಂಡುಬರುತ್ತದೆ.

ಕಾಡಿನಲ್ಲಿ ದೊರೆಯುವ ೪೭ ಜಾತಿಯ ಗೆಡ್ಡೆಗೆಣಸುಗಳನ್ನು ೯೦ ಜಾತಿಯ ಹಣ್ಣುಗಳನ್ನು ತಿನ್ನಲು ಮತ್ತು ಔಷಧಿಗೆ ಉಪಯೋಗಿಸುತ್ತಾರೆ. ೬೦ ಜಾತಿಯ ಸೊಪ್ಪು ಸೆದೆಗಳನ್ನು ಕೂಡ ಇವರು ಬಲ್ಲರು. ಇವುಗಳೊಡನೆ ಕಾಡುಕುರುಬರು ಅವಿನಾಭವ ಸಂಬಂಧವನ್ನು ಹೊಂದಿರುವುದನ್ನು ಅವರ ಕೆಲವು ಕಥೆ, ಹಾಡುಗಳಲ್ಲಿ ಕಾಣಬಹುದು. ಇತ್ತೀಚೆಗೆ ರಾಗಿ, ಜೋಳ, ಅಕ್ಕಿ, ಸಾಂಬಾರ ಪದಾರ್ಥಗಳ ಬಳಕೆ ಕಂಡುಬಂದಿದೆ. ಇವರ ಪ್ರಧಾನ ಕಸುಬು ಜೇನು ಸಂಗ್ರಹ, ಜೇನುಮೊಟ್ಟೆಗಳ ತಟ್ಟಿಯನ್ನು ತಿನ್ನುತ್ತಾರೆ. ಒಟ್ಟಿನಲ್ಲಿ ಆಹಾರ ಸಂಗ್ರಹಣೆ ಮತ್ತು ಉತ್ಪಾದನೆ ಎರಡೂ ಇವರಲ್ಲಿ ಕಂಡುಬಂದಿದೆ. ಇದರ ಜೊತೆಗೆ ಬೇಟೆಯ ನಾನಾ ತಂತ್ರಗಳನ್ನು ಬಳಸಿ ಚಿಕ್ಕ ಚಿಕ್ಕ ಪ್ರಾಣಿ ಪಕ್ಷಿ ಮತ್ತು ಇನ್ನಿತರೆ ದೊಡ್ಡ ಪ್ರಾಣಿಗಳನ್ನು ಸೆರೆಹಿಡಿಯುತ್ತಾರೆ. ತಾವು ತಿನ್ನುವ ಸಸ್ಯದ ಸಂಪೂರ್ಣ ಅರಿವು ಇವರಿಗಿದೆ.

ಆಯಾ ವಯೋಮಿತಿಗನುಗುಣವಾಗಿ ಇವರಲ್ಲಿ ಆಹಾರ ಪದ್ಧತಿಗಳು ರೂಢಿಯಲ್ಲಿವೆ. ಬಾಣಂತಿಯರ, ಗರ್ಭಿಣಿಯರ ಹಾಗೂ ಋತುಮತಿಯಾದ ಹೆಣ್ಣುಮಕ್ಕಳ ಆಹಾರಪದ್ಧತಿಯು ಕೆಲವು ಕಟ್ಟುಪಾಡುಗಳನ್ನು ಒಳಗೊಂಡಿದೆ.

ಕಾಡುಕುರುಬರು ಮತ್ತು ಜೇನುಕುರುಬರ ನಡುವೆ ವೈವಾಹಿಕ ಸಂಬಂಧಗಳು ಕಂಡುಬರುವುದಿಲ್ಲ. ಆದರೆ ಅವರ ನಡುವಿನ ಸಾಮಾಜಿಕ ಸಂಬಂಧಗಳು ಆರೋಗ್ಯಪೂರ್ಣವಾಗಿವೆ. ಎರಡು ಗುಂಪುಗಳಿಗೂ ಪ್ರತ್ಯೇಕವಾದ ಆರಾಧನೆ, ಪೂಜಾ ಪದ್ಧತಿ, ನಂಬಿಕೆ, ಸಂಪ್ರದಾಯಗಳು ಕಂಡುಬರುತ್ತವೆ. ಇವುಗಳು ಕ್ರಮೇಣ ಕೌಟುಂಬಿಕ ಸಂಬಂಧಗಳನ್ನು ನಿಯಂತ್ರಿಸಿವೆ. ಒಂದೇ ಹೆಸರಿನ ದೇವರುಗಳನ್ನು ಪಡೆದವರು ವಿವಾಹವಾಗಲಿಕ್ಕೆ ಅನರ್ಹರು. ಅಣಪೆ ನೂರಾಲ್ ಒಡೆಯ ಗಂಡುದೇವರಾದರೆ ಸಣ್ಣಮ್ಮ ಹೆಣ್ಣು ದೇವರಾಗುತ್ತಾಳೆ.

ಜೇನು ಕುರುಬರಲ್ಲಿ ‘ಬುಂಡೆ ಕರೆಯುವುದು’ ಎಂಬುದು, ದೈವದೊಡನೆ ಸಂಭಾಷಣೆ ಮಾಡುವ ಹಾಗೂ ಪ್ರಶ್ನೋತ್ತರ ಸಂದಂರ್ಭಗಳನ್ನು ಒಳಗೊಳ್ಳುತ್ತದೆ. ‘ಬಿಂಜೆಕಳುವುಗ’ ‘ಬಿಂಜೆಪಾಡುಗ’ ಎಂಬ ಹೆಸರುಗಳನ್ನು ಕೂಡ ಈ ‘ದೇವರು ಕರೆಯುವ’ ಸಂದರ್ಭದಲ್ಲಿ ಬಳಸುತ್ತಾರೆ.

‘ಬುರುಡೆ’ ಎಂಬುದು ಒಂದು ಕಹಿಸೋರೆಕಾಯಿಯನ್ನು ಬಿಸಿಲಲ್ಲಿ ಒಣಗಿಸಿ ಇಟ್ಟುಕೊಂಡ ಒಂದು ಬುರುಡೆ. ಕೂಳಂಗಿ ಎಲೆ ಎಂಬ ಗಿಡದ ಕಾಯನ್ನು ಚೆನ್ನಾಗಿ ಕಪ್ಪಾಗುವವರೆಗೆ ಒಣಗಿಸಿ ಅವುಗಳನ್ನು ಈ ಬುರುಡೆಯ ಹಾಕುತ್ತಾರೆ. ಮತ್ತು ನೆಸರ ಮೇಣಹಾಕಿ ಮುಚ್ಚುತ್ತಾರೆ. ಇವುಗಳನ್ನು ಗುರುಗುಂಜಿ ಎಂದೇ ಕರೆಯುತ್ತಾರೆ. ‘ಬುಂಡೆಪದಗಳು’ ಕಾಡು ಕುರುಬರು ದೇವರನ್ನು ಕರೆಯುವ ಸಂದರ್ಭದಲ್ಲಿ ಹೇಳುವ ಹಾಡುಗಳು. ಈ ಬುರುಡೆಯನ್ನು ಬಲಗೈಯಲ್ಲಿ ಹಿಡಿದು ಅಲ್ಲಾಡಿಸುವಾಗ ಚಿಕ್,ಚಿಕ್, ಚಿಕ್, ಚಿಕ್ ಎಂಬ ಶಬ್ದ ಹೊರಡುತ್ತದೆ. ಇದನ್ನು ಕೈಯಲ್ಲಿ ಹಿಡಿದವನಿಗೆ ದೈವವು ಬರುತ್ತದೆ. ಪ್ರತಿಯೊಂದು ಮನೆಯಲ್ಲೂ ಈ ಬುರುಡೆ ಇರುತ್ತದೆ. ‘ಬೀನ್‌ಮರ್’, ಮುತ್ತಲು ಎಂಬ ಇನ್ನೊಂದು ವಸ್ತುವು ಬಿದಿರಿನಿಂದ ಮಾಡಿದ ಸಣ್ಣ ಮೊರವಾಗಿದೆ. ಇದಕ್ಕೆ ನಾಲ್ಕೈದು ಗೆಜ್ಜೆ ಕಟ್ಟಿರುತ್ತಾರೆ. ‘ಬಿಂಜೆಪಾಡುಗ’ ಹೇಳುವವರು ಇದನ್ನು ಬಳಸುತ್ತಾರೆ. ಬಾಳೆಹಣ್ಣು, ಎಲೆ, ಅಡಿಕೆ,ಹೂವು, ಊದುಕಡ್ಡಿ ಇತ್ಯಾದಿಗಳನ್ನು ಮೊರದಲ್ಲಿ ಇಟ್ಟು ಪೂಜಿಸುವುದು ಇವರಲ್ಲಿ ರೂಢಿ. ‘ಅಂಬಾಳಮ್ಮ’ ಕಾಡಿನ ಮಧ್ಯದಲ್ಲಿ ಕಂಡುಬರುವ ಒಂದು ಶಕ್ತಿದೇವತೆ. ಆನೆ, ಕುದುರೆ ವಿನ್ಯಾಸವಿರುವ ಹಿತ್ತಾಳೆ ದೀಪಗಳನ್ನು ಹರಕೆ ಸಲ್ಲಿಸುವುದು ರೂಢಿ. ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದು ಈ ದೇವತೆಯ ವೈಶಿಷ್ಟ್ಯ.

ಹೆಣ್ಣು ಋತುಮತಿಯಾದರೆ ಗುಡ್ಲು ಹಾಕುವುದು ರೂಢಿಯಲ್ಲಿದೆ. ಈ ಕಾರ್ಯವನ್ನು ಸೋದರ ಮಾವ ನೆರವೇರಿಸುತ್ತಾನೆ. ಈ ಆಚರಣೆಗೆ ‘ಗುಡ್ಲು ಕಲಾಟ್’ಗೆ ಎನ್ನುತ್ತಾರೆ. ಮಾವು,ಹತ್ತಿ, ಹಲಸಿನ ಸೊಪ್ಪು ಗುಡ್ಲು ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳು. ಸುಮಾರು ೯ ದಿನಗಳವರೆಗೂ ಕನ್ಯೆ ಇಲ್ಲಿರುತ್ತಾಳೆ. ಹೊರಗೆ ಬಂದರೆ ‘ಸೋಂಕು ಆಪುದು’ ಎಂದು ನಂಬಿದ್ದಾರೆ. ‘ಕನ್ನೆಸೂತಕ’ ಎಂದು ಈ ಸಂದರ್ಭವನ್ನು ಕರೆಯುತ್ತಾರೆ. ತಲೆಗೆ ಮೀಯಿಸುವುದು. ತೂಕಮಾಡಿದ ಕೊಬ್ಬರಿಯೊಳಗೆ ಬೇಯಿಸಿದ ಉದ್ದಿನಕಾಳನ್ನು ಒಳ್ಳೆಣ್ಣೆ ಬಿಟ್ಟು ನೆನೆಸಿ, ಮೂರುದಿನದ ಅನಂತರ ತಿನ್ನಿಸುವುದು ಮತ್ತು ಕಡಲೆಬೆಲ್ಲ, ಕೊಬ್ಬರಿ, ಚಿಕ್ಕಿಉಂಡೆ ಇತ್ಯಾದಿ ಇತರ ಕೆಲವು ಆಹಾರ ಪಥ್ಯಗಳು ಇವೆ. ಈ ಸಂದರ್ಭದಲ್ಲಿ ಸೂತಕ ತೆಗೆಯುವಾಗ ‘ಒಸಗೆ ಪದಗಳು’ ಹಾಡುವುದು ರೂಢಿಯಲ್ಲಿದೆ. ‘ಒನಕೆ ದಾಟಿಸುವ’ ಶಾಸ್ತ್ರ ಮೈನೆರೆಯುವ ಹುಡುಗಿಗೆ ಹೊಳೆಬಳಿ ಕರೆದುಕೊಂಡು ಹೋಗಿ ಮಾಡುವಂಥದು.

ಹುಡುಗ ಮತ್ತು ಹುಡುಗಿ ಪರಸ್ಪರ ಮೆಚ್ಚಿ ಓಡಿಹೋಗಿ ಮದುವೆ ಮಾಡಿಕೊಳ್ಳುವುದೂ ಇವರಲ್ಲಿ ಹೆಚ್ಚು ಕಂಡುಬರುತ್ತದೆ. ‘ಹೂ – ಸೂಡು’ ಶಾಸ್ತ್ರ ನಿಶ್ಚಯಶಾಸ್ತ್ರವೇ ಆಗಿದೆ. ವಿವಾಹದ ವೆಚ್ಚವನ್ನು ಎರಡೂ ಕಡೆಯವರು ವಹಿಸಿಕೊಳ್ಳುತ್ತಾರೆ. ಸಂಗಾತಿಯನ್ನು ಆಯ್ಕೆ ಮಾಡುವಾಗ ಸಾಲಾವಳಿಯನ್ನು ಗಮನಿಸುವುದು ವೈಜ್ಞಾನಿಕವಾಗಿಯೇ ಇದೆ. ರಕ್ತಸಂಬಂಧಿಗಳಲ್ಲಿ ವಿವಾಹ ನಿಷಿದ್ಧ. ಮಾವ – ಸೊಸೆ, ಭಾವ – ಮಕ್ಕಳು, ಅತ್ತೇರು, ಅಕ್ಕಂದಿರ ಮಕ್ಕಳು ವಿವಾಹ ಸಂಬಂಧಕ್ಕೆ ಯೋಗ್ಯರು. ಇವರಲ್ಲಿ ವಿವಾಹವಾದ ಅನಂತರ ಹೆಣ್ಣು ಗಂಡಿನ ಮನೆಗೆ ಸೇರುತ್ತಾಳೆ. ಆ ಮನೆಯ ಹೆಸರಿನಿಂದ ತನ್ನ ಮಕ್ಕಳನ್ನು ಕರೆಯುವುದು ರೂಢಿ. ಉದಾ :ತೋಡೆಟ್ಟಿ, ಕುಪ್ಪಲ್ಸಿ, ನಾನ್ಸಿ ಬಳಕೆರೆ, ಕಿಂದೇರಿ, ಕೂಗರ್‌ಮಕ್ಕ್, ಕೊಟಮಕ್ಕ್ ಎಂಬ ಹಲವಾರು ಕುಟುಂಬದ ಹೆಸರುಗಳಿವೆ.

ಹೆಣ್ಣು ತರುವಾಗ ಶಕುನಗಳನ್ನು ನೋಡುವುದು ರೂಢಿಯಲ್ಲಿದೆ. ಕಾಡು ಅರಿಶಿನ ಹಚ್ಚುವುದು ‘ಮಂಗಲಗಾರ್ತಿ’ ಎಂದು ಹುಡುಗಿಯನ್ನು, ‘ಮಂಗಲಗಾರನ್’ ಎಂದು ಗಂಡನ್ನು ಕರೆಯುತ್ತಾರೆ. ಚಾವಡಿಯಲ್ಲಿ ಚಪ್ಪರ ಹಾಕಿ ವಿವಾಹ ನೆರವೇರಿಸುತ್ತಾರೆ. ‘ಹೊಸಲ್ ದಾಟ್ಗ’ ಶಾಸ್ತ್ರ ಹೆಣ್ಣನ್ನು ಮನೆ ತುಂಬಿಸುವುದೇ ಆಗಿದೆ. ‘ರೂಂಕೂಟಗ’ ಪ್ರಸ್ತದ ಶಾಸ್ತ್ರವೇ ಆಗಿದೆ. ಇವರಲ್ಲಿ ‘ಕೂಡಾವಳಿ’ಯೂ ರೂಢಿಯಲ್ಲಿದೆ.

ಗರ್ಭಿಣಿಯರಿಗೆ ಮಡಿಲು ತುಂಬುವುದು ಇವರಲ್ಲಿದೆ. ‘ಪಾಲಭೋದಕಜ್ಜ’ ಎಂಬ ಸಸ್ಯವನ್ನು ತಾಯಿಯ ಹಾಲನ್ನು ಹೆಚ್ಚಿಸಲಿಕ್ಕಾಗಿ ಬಾಣಂತಿಗೆ ನೀಡಲಾಗುತ್ತದೆ.

ಇವರಲ್ಲಿ ಜನಪದ ವೈದ್ಯ ಪದ್ಧತಿಯೂ ಕಂಡುಬರುತ್ತದೆ. ಹಾಗಲಸೊಪ್ಪು, ಕೈಸುಂಡೆಸೊಪ್ಪು, ಬಿಳಿಗಣಿಕೆ ಅರೆದು ಮಗುವಿಗೆ ಹೊಟ್ಟೆನೋವಾದಾಗ ಬಳಸುತ್ತಾರೆ. ತಿಪ್ಪೆಸುಂಡ್ಗಾಯೆಯನ್ನು ಶೀತನಿವಾರಣೆಗಾಗಿ ಬಳಸುತ್ತಾರೆ. ಕತ್ತರಿಸಿದ ಹೊಕ್ಕಳು ವಾಸಿಯಾಗುವವರೆಗೂ ಕಾರವನ್ನು ತಿನ್ನಲಿಕ್ಕೆ ಕೊಡುವುದಿಲ್ಲ. ಒಟ್ಟಾರೆ ಒಬ್ಬ ಹಿರಿಯ ನುರಿತ ಹೆಣ್ಣುಮಗಳು ಮಗುವಿನ ಜನನ ಸಂಬಂಧದಲ್ಲಿ ನೆರವಿಗೆ ಇರುವುದು ಇವರ ರೂಢಿ.

ಇನ್ನು ಮಗುವಿಗೆ ಹೆಸರು, ಗಂಡಾದರೆ ಕಲಕನ, ಸಮಕನ್, ಕೇತಿ, ಭೋಕನ್, ಬಡ್ಬರನ್ ಇತ್ಯಾದಿ ಇಡುತ್ತಾರೆ. ಹೆಣ್ಮಕ್ಕಳನ್ನು ಮಾಸ್ತಿ, ಕಾಳಿ, ಕರಿಕಿ, ಬೊಮ್ಮಿ, ಪುಟ್ಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಶವಸಂಸ್ಕಾರಗಳು ಎರಡು ಬಗೆಯಲ್ಲಿ ಇವರಲ್ಲಿ ರೂಢಿಯಲ್ಲಿದೆ. ಹೂಳುವುದು ಮತ್ತು ಸುಡುವುದು. ಸತ್ತಮೇಲೆ ‘ನೆರಳು ಎತ್ತುವ’ ಸಂಪ್ರದಾಯವಿದೆ. ಹೆಣವನ್ನು ಮುಟ್ಟುವುದಿಲ್ಲ. ಕೆಲವೊಮ್ಮೆ ಅರಣ್ಯಪಾಲಕರ ನೆರವನ್ನು ಪಡೆಯುತ್ತಾರೆ. ಪ್ರತಿಯುಗಾದಿಯಲ್ಲಿ ಈ ಗುಂಪುಗಳು ಕಾಡಿನಲ್ಲಿಯೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತವೆ. ಆ ಸಂದರ್ಭದಲ್ಲಿ ಯಾರಾದರೂ ಸತ್ತರೆ, ಆ ಸ್ಥಳ ಬಿಡುತ್ತಾರೆ.

ಸಾವು ಸಹಜವೇ, ಅಸಹಜವೇ ಎಂದು ತಿಳಿಯುವ ಆಚರಣೆಗಳು ಇವರಲ್ಲಿ ಬಹಳಷ್ಟಿವೆ. ಸೂರ್ಯನ ಚಲನೆಯ ದಿಕ್ಕಿನಿಂದಲೇ ಸಮಯವನ್ನು ತಿಳಿಯುತ್ತಾರೆ. ಅನೇಕ ಸಂದರ್ಭದಲ್ಲಿ ಹಾಡುಹೇಳುವುದು ಇವರಲ್ಲಿ ರೂಢಿಯಲ್ಲಿದೆ. ಜೊತೆಗೆ ಕೋಲು ಹುಯ್ಯುವುದು ಕೂಡ ರೂಢಿಯಲ್ಲಿದೆ. ಕುಂತಿ ಪೂಜೆಯ ಹಾಡು, ರಂಗೋಲಿ ಹಾಡು ಇತ್ಯಾದಿ ಇವರಲ್ಲಿ ಕಂಡುಬರುತ್ತದೆ.

ಕಾಡಿನಲ್ಲಿ ಕಂಡುಬರುವ ಹಳ್ಳ, ಝರಿಗಳಲ್ಲಿ ಚಿಕ್ಕಮಕ್ಕಳು ಮೀನು ಹಿಡಿಯುತ್ತಾರೆ. ಹಕ್ಕಿ ಪಕ್ಷಿಗಳನ್ನು ಬೇಟೆಯಾಡುವುದು, ಉಳ್ಳುಹಾಕಿ ಪ್ರಾಣಿಗಳನ್ನು ಕೊಲ್ಲುವುದು, ಕಾರೇಕಾಯಿಗಳನ್ನು ತಂದು ಜಜ್ಜಿ ನೀರಿನಲ್ಲಿ ಕದಡಿಬಿಟ್ಟಾಗ ತಿನ್ನಲು ಮೇಲೆ ಬರುವ ಮೀನುಗಳನ್ನು ಹಿಡಿಯುವುದು. ಪೈಪೋಟಿಗೆ ಜೇನು ತೆಗಿಯುವುದು ರೂಢಿಯಲ್ಲಿದೆ.

ಪರಸಂಗ ಹೇಳುವುದು, ಚೌಕಾಬಾರ, ಅಳಿಗುಳಿಮನೆ ಆಟ, ಕುಂಟಬಿಲ್ಲೆ, ಎಲೆಯಾಟ ಇವರಲ್ಲಿ ರೂಢಿಯಲ್ಲಿದೆ. ಕಾಡು ಕುರುಬರು ಬಹಳ ಹೆಮ್ಮೆಯಿಂದ ಆಡುವ ಭಾಷೆಯನ್ನು ‘ನಂಗ ಭಾಷೆ’ ಎನ್ನುತ್ತಾರೆ. ‘ಕುರುಬನ ಮಾತು ನಂಗ ಮಾತು’ ಎಂದು ಕೂಡ ಹೇಳುತ್ತಾರೆ.

ಗೀತೆ, ಗಾದೆ, ಒಗಟು, ಜೇನು ಹಕ್ಕಿಯ ಕಥೆಗಳು ಕೂಡ ಕಾಡು ಕುರುಬರಲ್ಲಿ ಕಂಡುಬರುತ್ತವೆ. ಬುಂಡೆಪದ, ಜೇನುಪದ, ರಾಗಿಕಲ್ಲುಪದ, ಸೋಬಾನೆಪದ, ಅತ್ತೆ – ಸೊಸೆ ಪದ, ನಾಡಿಪದ, ಕೊಂತಿಪದ ಇತ್ಯಾದಿ ಕಂಡುಬರುತ್ತವೆ.

– ಎ.ಸಿ.ಎಲ್.

ಕಾಡುಗೊಲ್ಲರು ಕಾಡುಗೊಲ್ಲರು ಕರ್ನಾಟಕದ ಹಿಂದುಳಿದ ಅರೆ ಅಲೆಮಾರಿ ಬುಡಕಟ್ಟಿಗೆ ಸೇರಿದವರು. ಇವರು ಮೊದಲಿಗೆ ಕಾಡುಗಳಲ್ಲಿ ವಾಸಮಾಡುತ್ತಿದ್ದು ದನಗಳನ್ನು ಸಾಕುತ್ತಿದ್ದರು. ಕಾಡುಗಳು ಹಾಗೂ ಹುಲ್ಲುಗಾವಲುಗಳು ಕಡಿಮೆಯಾದ ನಂತರ ಇವರು ಪ್ರಧಾನವಾಗಿ ಕುರಿ ಸಾಕಣೆ ಮಾಡುತ್ತಿದ್ದಾರೆ. ಕೆಲವರು ಬೇಸಾಯಗಾರರೂ ಆಗಿದ್ದಾರೆ. ಕನ್ನಡ ಮಾತೃಭಾಷೆಯಾಗಿರುವ ಹಾಗೂ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ಈ ಬುಡಕಟ್ಟಿನ ಜನ ಕರ್ನಾಟಕದ ತುಮಕೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿಯೂ ಆಂಧ್ರಪ್ರದೇಶದ ಅನಂತರಪುರ ಜಿಲ್ಲೆಯ ರಾಯದುರ್ಗ, ಕಲ್ಯಾಣದುರ್ಗ ಮತ್ತು ಮಡಕಸಿರಾ ತಾಲ್ಲೂಕುಗಳಲ್ಲಿಯೂ ವಾಸವಾಗಿದ್ದಾರೆ. ಹಿರಿಯೂರು, ಸಿರಾ ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ ಇವರ ಜನಸಂಖ್ಯೆ ದಟ್ಟವಾಗಿದ್ದು, ಇವರ ಪ್ರಮುಖ ಧಾರ್ಮಿಕ ಕೇಂದ್ರಗಳು ಹಾಗೂ ನ್ಯಾಯತೀರ್ಮಾನ ಮಾಡುವ ಕೇಂದ್ರಗಳಾದ ‘ಕಟ್ಟೆಮನೆಗಳು’ ಈ ತಾಲ್ಲುಗಳಲ್ಲಿಯೇ ಕೇಂದ್ರೀಕೃತವಾಗಿವೆ.

ಇವರಲ್ಲಿ ಮುಖ್ಯವಾಗಿ ಚಿತ್ತಮುತ್ತಿಯವರು, ಚಂದಮುತ್ತಿಯವರು ಮತ್ತು ರಾಮೇಗೌಡನ ಕುಲದವರು ಎಂಬ ಮೂರು ಒಳಪಂಗಡಗಳನ್ನು ಗುರುತಿಸಬಹುದು. ಚಿತ್ತಮುತ್ತಿಯವರು ಎಂಬ ಒಳಪಂಗಡದಲ್ಲಿ ಕರಡಿಗೊಲ್ಲರು (ತಾಳಿಕಟ್ಟುವವರು), ಮಾರನವರು (ತಾಳಿ ಕಟ್ಟಿದವರು) ಎಂಬ ಎರಡು ‘ಬೆಡಗು’ಗಳಿವೆ. ಚಂದ್ರಮುತ್ತಿಯವರು ಎಂಬ ಒಳಪಂಗಡದಲ್ಲಿ ಸನ್ನರ ಗೊಲ್ಲರು, ಸೋಮನವರ ಗೊಲ್ಲರು, ಬೊಮ್ಮನವರ ಗೊಲ್ಲರು, ಕೋಣನವರ ಗೊಲ್ಲರು, ಪೋಲನವರ ಗೊಲ್ಲರು, ಕಂಬಿಯವರ ಗೊಲ್ಲರು, ಕಹಳೆಯವರ ಗೊಲ್ಲರು, ಒಡೆಯರ ಗೊಲ್ಲರು, ಒನಕೆಯರ ಗೊಲ್ಲರು, ಚೀರನವರ ಗೊಲ್ಲರು, ಮಾಸಿನವರ ಗೊಲ್ಲರು ಮೊದಲಾದ ಬೆಡಗುಗಳಿವೆ (ಬೆಡಗು = ಉಪವಿಭಾಗ). ಸಾಮಾನ್ಯವಾಗಿ ಚಿತ್ತಮುತ್ತಿಯ ಒಳಪಂಗಡದ ಬೆಡಗುಗಳಲ್ಲಿ ವಿವಾಹ ಸಂಬಂಧಗಳೇರ್ಪಡುತ್ತವೆ. ಒಂದೇ ಒಳಪಂಗಡದ ವಿವಿಧ ಬೆಡಗುಗಳವರು ತಮ್ಮ ತಮ್ಮನ್ನೇ ಮದುವೆ ಆಗುವಂತಿಲ್ಲ.

ಕಾಡುಗೊಲ್ಲರು ವಾಸಮಾಡುವ ಪ್ರದೇಶವನ್ನು ‘ಹಟ್ಟಿ’ ಎಂದು ಕರೆಯುತ್ತಾರೆ. ಹಟ್ಟಿಗಳು ಹಳ್ಳಿಗಳಿಂದ ದೂರವಿದ್ದು ಪ್ರತ್ಯೇಕವಾಗಿರುತ್ತವೆ. ಕೆಲವು ಕಡೆ ರಸ್ತೆಯ ಒಂದು ಕಡೆಗೆ ಹಳ್ಳಿ, ಇನ್ನೊಂದು ಕಡೆಗೆ ಹಟ್ಟಿ ಇರುತ್ತವೆ. ಇಂಥ ಕಡೆ ಹಟ್ಟಿಯ ಮೇಲೆ ನಾಗರಿಕತೆಯ ಪ್ರಭಾವ ಹೆಚ್ಚಾಗಿರುತ್ತದೆ. ಹಟ್ಟಿಯ ಮೇಲೆ ನಾಗರಿಕತೆಯ ಪ್ರಭಾವ ಹೆಚ್ಚಾಗಿರುತ್ತದೆ. ಹಟ್ಟಿಯ ಸುತ್ತ ಜಾಲಿಮುಳ್ಳಿನ ಬೇಲಿಯನ್ನು ಹಾಕುವುದು ಇವರ ಸಂಪ್ರದಾಯ. ಬಾದೆ ಹುಲ್ಲು ಹೆಂಚಿಹುಲ್ಲು ಅಥವಾ ಸೋಗೆಗರಿಯ ಗುಡಿಸಲುಗಳಲ್ಲಿ ಕಾಡುಗೊಲ್ಲರು ವಾಸವಾಗಿರುತ್ತಾರೆ. ಈಚೆಗೆ ಕೆಲವರು ಹೆಂಚಿನ ಮನೆಗಳಲ್ಲೂ ತಾರಸಿ ಮನೆಗಳನ್ನೂ ಕಟ್ಟಿಕೊಂಡಿದ್ದಾರೆ. ಹಟ್ಟಿಗಳ ಮಧ್ಯೆ ದೇವಸ್ಥಾನವಿರುತ್ತದೆ. ಇದರ ಸುತ್ತಲೂ ಮುಳ್ಳಿನ ಬೇಲಿಯಿರುತ್ತದೆ. ದೇವಸ್ಥಾನ ಗೋಳಾಕಾರವಾಗಿದ್ದು ಇದನ್ನು ‘ಗುಬ್ಬ’ ಎಂದು ಕರೆಯುತ್ತಾರೆ.

ಕಾಡುಗೊಲ್ಲರಲ್ಲಿ ವ್ಯವಸ್ಥಿತವಾದ ಸಾಮಾಜಿಕ ರಚನೆ ಇದೆ. ಮೊದಲನೆಯದು ಹಟ್ಟಿ. ಅನೇಕ ಹಟ್ಟಿಗಳು ಸೇರಿ ‘ಕಣತಿ’ ಅನೇಕ ಕಣತಿಗಳು ಸೇರಿ ಒಂದು ‘ಅಂಬು’; ಅನೇಕ ಅಂಬುಗಳು ಸೇರಿ ಒಂದು ಗುಡಿಕಟ್ಟು; ಅನೇಕ ಗುಡಿಕಟ್ಟುಗಳು ಸೇರಿ ಒಂದು ಕಟ್ಟೆಮನೆ. ಗುಡಿಕಟ್ಟುಗಳು ಧಾರ್ಮಿಕ ಕೇಂದ್ರಗಳು; ಕಟ್ಟೇಮನೆಗಳು ನ್ಯಾಯತೀರ್ಮಾನದ ಕೇಂದ್ರಗಳು. ಚಿತ್ರದುರ್ಗ ಜಿಲ್ಲೆಯಲ್ಲಿರುವ ಕರೇ ಓಬೇನಹಳ್ಳಿ, ತಾಳವಟ್ಟಿ ಮತ್ತು ರಾಮನಹಳ್ಳಿಗಳು ಕಟ್ಟೆಮನೆಗಳು. ಚಿತ್ರದೇವರು, ಕಾಟಮದೇವರು, ಎತ್ತಪ್ಪ, ಜುಂಜಪ್ಪ, ಕೇತೇದೇವರು ಪಾತೇದೇವರು, ಕಾಡುಗೊಲ್ಲರಿಗೆ ವಿಶಿಷ್ಟವಾದ ಶೈವ ದೇವತೆಗಳು. ಈ ದೇವತೆಗಳ ಹೆಸರಿನಲ್ಲಿ ಪ್ರತಿವರ್ಷ ಜಾತ್ರೆಗಳು ನಡೆಯುತ್ತವೆ. ತಿರುಪತಿ ತಿಮ್ಮಪ್ಪ ಇವರು ಪೂಜಿಸುವ ವೈಷ್ಣವ ದೇವತೆ. ಈ ದೇವತೆಗಳು ಮಾತ್ರವಲ್ಲದೆ ತಮ್ಮ ಬುಡಕಟ್ಟಿನ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಅಜ್ಜಪ್ಪ, ವೀರಣ್ಣ, ಸಿರಿಯಣ್ಣ ಮೊದಲಾದ ಹಿರಿಯ ವ್ಯಕ್ತಿಗಳ ಹೆಸರಿನಲ್ಲಿ ಕತ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ. ಕಾಡುಗೊಲ್ಲರು ತಮ್ಮ ಪ್ರಮುಖ ದೇವತೆಗಳ ಬಗ್ಗೆ ಕಥನಕವನಗಳನ್ನೂ, ಮಹಾಕಾವ್ಯಗಳನ್ನೂ ಹಾಡುತ್ತಾರೆ. ಜುಂಜಪ್ಪನ ಕಾವ್ಯ ಇವುಗಳಲ್ಲಿ ಅತ್ಯಂತ ದೀರ್ಘವಾದ ಮಹಾಕಾವ್ಯ. ಇವರಲ್ಲಿ ಪುರಾಣಗಳು ಮತ್ತು ಐತಿಹ್ಯಗಳು ಮಾತ್ರವಲ್ಲದೆ ನೆಪದ ಕಥೆಗಳೂ ಲಭ್ಯವಾಗಿದ್ದು ಕೆಲವು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಸಂಗ್ರಹಗೊಂಡು ಪ್ರಕಟವಾಗಬೇಕಾದ ಸಾಹಿತ್ಯ ಇನ್ನೂ ಸಾಕಷ್ಟಿದೆ.

ಕಾಡುಗೊಲ್ಲರಲ್ಲಿ ಅನೇಕ ಜನಪದ ವೈದ್ಯರಿದ್ದಾರೆ. ಇವರಿಂದ ವೈದ್ಯಕೀಯ ವಿವರಗಳನ್ನು ಸಂಗ್ರಹಿಸಿ, ಸಂಶೋಧನೆ ನಡೆಸಬೇಕಾಗಿದೆ. ಕೋಲಾಟ ಇವರ ಪ್ರಮುಖ ಕಲೆ. ಇವರ ವೇಷ – ಭೂಷಣಗಳೂ ವಿಶಿಷ್ಟ, ಗಂಡಸರು ತಲೆಗೆ ಪೇಟವನ್ನು ಸುತ್ತಿ, ಕರಿಯ ಕಂಬಳಿಯನ್ನು ಹೊದ್ದಿರುತ್ತಾರೆ. ಸಾಂಪ್ರದಾಯಿಕ ಹೆಂಗಸರು ರವಿಕೆ ತೊಡುವುದಿಲ್ಲ. ಎಡಗೈಗೆ ಹಿತ್ತಾಳೆಯ ಗೊಲ್ಲಕಡಗವನ್ನೂ ಹಾವಿನಾಕಾರದ ತೋಳಬಂದಿಯನ್ನೂ ಗಾಜಿನ ಬಳೆಗಳನ್ನೂ ತೊಡುತ್ತಾರೆ. ವಿಧವೆಯರು ತಲೆ ಬೋಳಿಸುವುದಿಲ್ಲ. ಬಳೆಗಳನ್ನೂ ಗೊಲ್ಲಕಡಗವನ್ನೂ ತೆಗೆಯದೆ ಮತ್ತೈದೆಯರಂತೆಯೇ ಇರುತ್ತಾರೆ. ಜೀವನಾವರ್ತನದ ಇವರ ಸಂಪ್ರದಾಯಗಳು, ಆಚರಣೆಗಳು ವಿಶಿಷ್ಟವಾಗಿವೆ. ಮುಟ್ಟಾದ ಹೆಂಗಸರು, ಬಾಣಂತಿಯರು ಹಟ್ಟಿಯಿಂದ ಹೊರಗೆ ಗುಬ್ಬಗಳಲ್ಲಿದ್ದು ಜೆನ್ನಿಗೆ ಕುರಿಯ ಹಾಲನ್ನು ತೀರ್ಥವಾಗಿ ಸ್ವೀಕರಿಸಿ, ನಂತರ ಹಟ್ಟಿಯೊಳಕ್ಕೆ ಬರುತ್ತಾರೆ. ಇವರ ಮದುವೆಯ ಸಂಪ್ರದಾಯಗಳೂ ವಿಶಿಷ್ಟವಾಗಿವೆ. ಸತ್ತವರನ್ನು ಹೂಳುತ್ತಾರೆ. ‘ಅಮಾವಾಸ್ಯೆ ಪೂಜಾರಿ’ಯನ್ನು ಹಟ್ಟಿಯ ಜನರು ನೇಮಿಸಿ, ತೀರಿಹೋದ ಹಿರಿಯರಿಗೆ ಒಟ್ಟಾರೆ ಪೂಜೆ ಮಾಡಿಸುತ್ತಾರೆ.

ಈಚಿನ ವರ್ಷಗಳಲ್ಲಿ ಕಾಡುಗೊಲ್ಲರ ಜನಜೀವನದಲ್ಲೂ ಆಧುನಿಕತೆಯ ಪ್ರಭಾವದಿಂದಾಗಿ ಅನೇಕ ಬದಲಾವಣೆಗಳಾಗಿವೆ. ಆಧುನಿಕ ವಿದ್ಯಾಭ್ಯಾಸದಿಂದ ಹಲವಾರು ಪ್ರಾಥಮಿಕ ಶಿಕ್ಷಣವನ್ನೂ ಕೆಲವರು ಉನ್ನತ ಶಿಕ್ಷಣವನ್ನೂ ಪಡೆದಿದ್ದಾರೆ, ಪಡೆಯುತ್ತಿದ್ದಾರೆ. ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕಾನೂನು, ವಿಜ್ಞಾನ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಕೆಲವು ಕಾಡುಗೊಲ್ಲರು ಉದ್ಯೋಗದಲ್ಲಿದ್ದು ಆಧುನಿಕ ಜೀವನವನ್ನು ರೂಢಿಸಿಕೊಂಡಿದ್ದಾರೆ.

– ಟಿ.ಎನ್.ಎಸ್.

ಕಾಣಿಕ್ಕಾರ್ ಕಾಣಿಗಳೆಂದು ಸಾಮಾನ್ಯವಾಗಿ ಕರೆಯಲ್ಪಡುವ ಕಾಣಿಕ್ಕಾರರು ‌ದಕ್ಷಿಣ ತಿರುವಾಂಕೂರಿನ ಬೆಟ್ಟಗಳಲ್ಲಿ ನೆಲೆಯೂರಿರುವ ಗುಡ್ಡಗಾಡು ಜನಾಂಗದವರು. ಕುಳ್ಳಾಗಿದ್ದು, ಕಪ್ಪು ಮೈಬಣ್ಣದ, ಉರುಟು ಮೂಗಿನ ಚಹರೆಯುಳ್ಳವರು ಇವರು. ಈ ಜನ ಅಭಿಮಾನಿಗಳು, ನೇರ ನಡೆನುಡಿಯವರು, ವಿಶ್ವಾಸಾರ್ಹರು ಮತ್ತು ಸತ್ಯನಿಷ್ಠರೆಂದು ಮಾತಿದೆ. ಬೆಟ್ಟಗಳಲ್ಲಿ ಕೂಡ ಇವರಿಗೆ ಖಾಯಂ ನೆಲೆಗಳಿಲ್ಲ. ಆಗಾಗ ಇವರು ತಮ್ಮ ವಾಸಸ್ಥಳವನ್ನು ಬದಲಾಯಿಸುತ್ತ ಇರುತ್ತಾರೆ. ಇವರ ಆವಾಸ ಕೇಂದ್ರಗಳಲ್ಲಿ ಬಿದುರು ಮತ್ತು ಕಾಡುಹುಲ್ಲನ್ನು ಬಳಸಿಕೊಂಡು ಕಡಿಮೆ ಎತ್ತರದ ಗುಡಿಸಲುಗಳನ್ನು ನಿರ್ಮಿಸಿದುದು ಕಂಡುಬರುತ್ತದೆ. ಈ ಗುಡಿಸಲುಗಳನ್ನು ಅವರ ತೀವ್ರಜ್ವರ ಬಾಧಿಸಿದಾಗ, ವನ್ಯಮೃಗಗಳ ಉಪಟಳ ಸಹಿಸದಾದಾಗ ಅಥವಾ ತಮ್ಮ ವಶದಲ್ಲಿರುವ ಭೂಮಿ ಫಲವತ್ತತೆಯನ್ನು ಕಳಕೊಂಡಾಗ ತ್ಯಜಿಸಿಬಿಡುತ್ತಾರೆ, ಕೂಡ.

ಅವರ ಕೃಷಿ ವಿಧಾನವು ಹೀಗಿರುತ್ತದೆ – ಮರಗಿಡಗಳನ್ನು ಕಡಿದು ಒಂದಷ್ಟು ಜಾಗವನ್ನು ಅವರು ಸಪಾಟಾಗಿರುತ್ತಾರೆ. ಬಳಿಕ ಕಡಿದು ಒಣಗಿದ ಮರಗಿಡಗಳಿಗೆ ಬೆಂಕಿ ಹಚ್ಚಿ ಬಿಡುತ್ತಾರೆ. ಆ ನೆಲವನ್ನು ಈ ಹಿಂದೆ ಕೃಷಿಗಾಗಿ ಅವರು ಆ ಬೆಟ್ಟವನ್ನು ಬಿಟ್ಟುಹೋಗುತ್ತಾರೆ. ಸ್ಥಳವನ್ನು ಆಗಾಗ ಬದಲಾಯಿಸಿಕೊಂಡು ಕೃಷಿ ಮಾಡುವುದು ಅವರಲ್ಲಿ ಪ್ರಚಲಿತ. ಅವರು ನಾನಾ ರೀತಿಯ ಧಾನ್ಯ, ಕಾಳುಗಳು, ಮರಗೆಣಸು, ಸಿಹಿಗೆಣಸು, ಗಾಂಜಾ ಮತ್ತು ಹೊಗೆಸೊಪ್ಪನ್ನು ಬೆಳೆಯುತ್ತಾರೆ. ಕೆಲವರು ಕೂಲಿನಾಲಿ ಮಾಡಿಕೊಂಡು ಎಸ್ಟೇಟ್ ಮಾಲೀಕರ ಆಶ್ರಯದಲ್ಲಿದ್ದರೆ, ಇನ್ನು ಕೆಲವರು ಮರಕಡಿಯುವ, ಬಿದಿರು ಕಡಿಯುವ ಕೆಲಸವನ್ನು ಮಾಡುತ್ತಾರೆ. ದೊಡ್ಡ ದೊಡ್ಡ ಮರಗಳ ಮೇಲೆ ಅವರು ‘ಆನಮಾಡಂ’ಗಳನ್ನು ನಿರ್ಮಿಸುತ್ತಾರೆ. ಅವರ ಗುಡಿಸಲುಗಳು ಬಿದಿರು ಮತ್ತು ಕಾಡುಹುಲ್ಲಿನಿಂದ ರಚಿತವಾಗಿ ಸರಳವಾಗಿರುತ್ತವೆ.

ಕಾಣಿಗಳು ಸರಕಾರಕ್ಕಾಗಿ ಜೇನು, ಮೇಣ, ಶುಂಠಿ, ಏಲಕ್ಕಿ, ಆನೆದಂತ ಮುಂತಾದುವನ್ನು ಸಂಗ್ರಹಸಿಕೊಡುತ್ತಾರೆ; ಪ್ರತಿಯಾಗಿ ಒಂದಿಷ್ಟು ಪ್ರತಿಫಲ (ಕುಡಿವಾರಮ್) ಪಡೆಯುತ್ತಾರೆ. ಕಾಡಿನಿಂದ ಜೇನು ಸಂಗ್ರಹಿಸುವುದೇ ಇವರ ಮುಖ್ಯ ಕಸುಬು. ಕಾಣಿಕ್ಕರ್ ಎಂಬ ಶಬ್ದ ಅರ್ಥವು ಭೂಮಿಯ ಪಾರಂಪರಿಕ ಮಾಲಿಕ ಎಂದಾಗುತ್ತದೆ. ಅವರ ಹಿರಿಯರಲ್ಲೊಬ್ಬ ವೀರಪ್ಪನ್ ಅರಯನ್ ಎಂಬಾತ ಪಂಚಪಾಂಡ್ಯ ಅರಸರೊಂದಿಗೆ ಹೋರಾಡಿದವನು. ಆತ ಪಾಂಡ್ಯರಾಜ್ಯಕ್ಕೆ ಹರಿಯುವ ನೀರನ್ನು ತಡೆಯುವುದಕ್ಕಾಗಿ ‘ಮಾರಿಂಪಾಂಡಿ ಅಣೈ’ ಎಂಬ ಹೆಸರಿನ ಒಂದು ಅಣೆಕಟ್ಟನ್ನು ಕಟ್ಟಿಸಿದಾತ. ಕಾಣಿ ದಂತಕಥೆಗಳ ಪ್ರಕಾರ ಅವರು ತಿರುನಲ್ವೇಲಿ (ತಮಿಳುನಾಡು) ಪ್ರದೇಶದಿಂದ ಬಂದವರು.

ಕಾಣಿಗಳಲ್ಲಿಯ ಉಪವಿಭಾಗಗಳನ್ನು ಇಲ್ಲಂಗಳು ಅಥವಾ ಕುಟುಂಬಗಳೆಂದು ಕರೆಯುತ್ತಾರೆ. ಅವುಗಳಲ್ಲಿ ಐದು ಸ್ವಗೋತ್ರವಿವಾಹಗಳು, ಇನ್ನುಳಿದ ಐದು ಭಿನ್ನಗೋತ್ರ ವಿವಾಹಗಳು. ಮೊದಲನೆಯದು ಮಾಚಂಪಿ ಇಲ್ಲಂ (ಭಾವ ಇಲ್ಲಂ) ಗಳೆಂದೂ ಎರಡನೆಯದು ಅಣ್ಣನ್ ತಂಪ್ ಇಲ್ಲಂ (ಅಣ್ಣ ಇಲ್ಲಂ)ಗಳೆಂದೂ ಕರೆಯಲ್ಪಡುತ್ತವೆ. ಕೊಡೆಯಾರ್ ನದಿಯ ದಕ್ಷಿಣಕ್ಕೆ ಇರುವವರು ಅದರ ಉತ್ತರಕ್ಕೆ ಇರುವವರನ್ನು ಮದುವೆಯಾಗುವಂತಿಲ್ಲ. ನದಿಯೇ ಒಂದು ವೈವಾಹಿಕ ಗಡಿಯನ್ನು ಎಳೆದಿದೆ.

ಕಾಣಿಗಳ ಹೆಸರುಗಳು ಹೀಗಿರುತ್ತವೆ – ಪರಪ್ಪನ್ (ಅಗಲ ಮುಖದವನು), ಚಂದಿರಮ್(ಚಂದ್ರ), ಮಾರ್ತಂಡನ್ (ಸೂರ್ಯ), ಮುಂಡನ್ (ಕುಳ್ಳ), ಕಾಳಿಯನ್, ಮಾಡನ್, ನಿಲ್ಲಿ, ಕರುಂಪಿ (ಕಪ್ಪಿನವ), ಕಾಣಿಗಳು ಚಿಕ್ಕಚಿಕ್ಕ ಗುಂಪುಗಳಾಗಿ ಮೂತಕಾಣಿಯ (ಮುಖ್ಯಸ್ಥ) ಜತೆ ವಾಸಿಸುತ್ತಾರೆ. ಅವನಿಗೆ ಅವರ ಮೇಲೆ ತುಂಬ ಪ್ರಭಾವವಿದೆ ಮತ್ತು ಬೇರೆ ಬೇರೆ ಲಾಭಗಳಿವೆ. ದಂಡ ಹಾಕಿ ಸಿಕ್ಕಿದ ಹಣವನ್ನು ದೇವತಾ ಪ್ರೀತಿಯ ಕೆಲಸಗಳಿಗೆ ವೆಚ್ಚಮಾಡಲಾಗುತ್ತದೆ. ತಿರುವಾಂಕೂರು ಪ್ರದೇಶದ ಕಾಣಿಗಳು ಮಲೆಯಾಳಂನ ಉಪಭಾಷೆಯೊಂದನ್ನು ಆಡುತ್ತಾರೆ. (ಅಗಸ್ತ್ಯರ್ ಕೂಡಂ, ನೆಯ್ಯಾಟಿಂಕರ (ತಿರುವನಂತಪುರಂ ಜಿಲ್ಲೆ) ಭಾಗಗಳಲ್ಲಿ ಪತ್ತುಕ್ಕಾಣಿ, ಎಟ್ಟುಕ್ಕಾಣಿಗಳನ್ನು, ಕಾಳಕ್ಕಾಡು ಪ್ರದೇಶದವರು ತಮಿಳಿನ ಉಪಭಾಷೆಯೊಂದನ್ನು ಆಡುತ್ತಾರೆ. ಅವರ ಭಾಷೆಯಲ್ಲಿ ಸಾಮಾನ್ಯವಾಗಿ ತಮಿಳಿನ ಪ್ರಭಾವವು ಹೆಚ್ಚು. ಗುಡ್ಡಪ್ರದೇಶಗಳಲ್ಲಿನ ಕಾಣಿಗಳು ಮಕ್ಕಳಕಟ್ಟು ಕ್ರಮದಂತೆ ಆಸ್ತಿಯ ಹಕ್ಕು ಉಳ್ಳವರು. ವೈಯಕ್ತಿಕ ಆಸ್ತಿಯ ಒಂದು ಸಣ್ಣಪಾಲು ಅಳಿಯಂದಿರಿಗೆ ಹೋಗುತ್ತದೆ.

ವನದೇವತೆಯಾದ ಶಾಸ್ತಾ ಇವರ ಪ್ರಧಾನ ಆರಾಧ್ಯದೈವ. ಕಾಣಿಗಳು ಇತರ ದೇವತೆಗಳನ್ನೂ ಆರಾಧಿಸುತ್ತಾರೆ. ಅಮ್ಮನ್ ಭೂತತ್ತಾನ್, ವೆಟಿಕಾಡ್ ಭೂತತ್ತಾನ್, ವಡಮಲ ಭೂತತ್ತಾನ್ ಮುಂತಾದವುಗಳನ್ನು ಅವರು ನಂಬುತ್ತಾರೆ. ಆರಾಧನೆಯ ವೇಳೆ ಕೆಲವೊಮ್ಮೆ ವೆಳಿಚ್ಚಪ್ಪಾಡರಂತೆ (ದೈವಪಾತ್ರಿ)ಆವೇಶವು ಮೈತುಂಬಿ ‘ನುಡಿಕೊಡುವ’ ಕಾಣಿಗಳಿದ್ದಾರೆ. ಆರಾಧನೆಯ ಉತ್ಸವದಂದು ಅವರು ‘ಕೊಕ್ಕಾರ’ ಎಂಬ ಕಬ್ಬಿಣದ ಉಪಕರಣವನ್ನು ನುಡಿಸುತ್ತಾರೆ. ಆಗ ಆವೇಶದ ಕುಣಿತವನ್ನೂ ಆತ ಕುಣಿಯುವುದಿದೆ. ಪುರುಷರ ದೇವತೆಗಳಿಗೆ ಸಂಬಂಧಿಸಿದ ಕಾರ್ಯಕ್ರಮವು – ಪೊದುಗ. ಪುರುಷ – ಸ್ತ್ರೀ ಭೇದವಿಲ್ಲದ್ದು ಚಾವಾ ಕನ್ಯಕೆಯರೆಂದು ಕರೆಯಲಾಗುವ, ಸತ್ತುಹೋದ ಕನ್ಯೆಯರಿಗಿರುವ ಕಾರ್ಯಕ್ರಮ ‘ಅಷ್ಟಮಂಗಲಂ’ ಕಾಣಿಕ್ಕಾರರಲ್ಲಿ ನೂರಾರು ‘ಚಾತುಪ್ಪಾಟ್ಟು’ (ಧಾರ್ಮಿಕ ಆಚರಣೆಯ ಹಾಡು)ಗಳಿವೆ. ಪಿಮಿಪಾಟ್ಟನ್ನು ರೋಗಚಿಕಿತ್ಸೆಗೆ ಹಾಡುತ್ತಾರೆ. ಇವರು ಅಗಸ್ತ್ಯಮುನಿಯ ಹಿಂಬಾಲಕರೆಂದು ಹೇಳಿಕೊಳ್ಳುತ್ತಾರೆ. ಮಾನವ ಜಾತಿಗೆ ಉಪಕಾರವಾಗಲೆಂದು ಅಗಸ್ತ್ಯರು ಇವರಿಗೆ ಕೆಲವು ಮೂಲಿಕೆಗಳನ್ನು ಕೊಟ್ಟರಂತೆ.

24

ಬಾಲ್ಯವಿವಾಹ, ಪ್ರೌಢವಿವಾಹಗಳು ಚಾಲ್ತಿಯಲ್ಲಿವೆ. ಗರ್ಭಧಾರಣೆಯ ಏಳನೆಯ ತಿಂಗಳು ಸ್ತ್ರೀಗೆ ‘ಆಹುತು ಪೊಂಗಲ್’ ಎಂಬ ಕಾರ್ಯಕ್ರಮ ನಡೆಯಬೇಕು. ಆಗ ಸೂರ್ಯನಿಗೆ ಕುಚ್ಚಲಕ್ಕಿಯ ಅನ್ನವನ್ನು ನೈವೇದ್ಯ ಮಾಡುತ್ತಾರೆ.

ಯಾರಾದರೂ ಕಾಯಿಲೆಬಿದ್ದಾಗ ಹಿರಿಯನು ಕೂಡಲೆ ಅಲ್ಲಿಗೆ ತೆರಳಿ ಮಂತ್ರ (ಕುಡುಮಿ ವೆಟ್ಟು ಮಂತ್ರ ಇತ್ಯಾದಿ) ಹೇಳುತ್ತಾನೆ. ಸತ್ತಾಗ ಗಾಂಜಾ, ಬೆಳ್ತಿಗೆ ಅಕ್ಕಿ ಮತ್ತು ತೆಂಗಿನ ಕಾಯಿಯ ಮಿಶ್ರಣವನ್ನು ಮಗ ಅಥವಾ ಅಳಿಯ ಬಾಯಿಗೆ ಹಾಕುತ್ತಾರೆ. ಬಳಿಕ ಒಂದಷ್ಟು ದೂರ ಮಂತ್ರಗಳನ್ನು ಉಚ್ಚರಿಸುತ್ತ ಸಾಗಿ ಹೆಣವನ್ನು ಮನೆಯಿಂದ ದೂರ ಸಂಸ್ಕರಿಸುತ್ತಾರೆ. ಸಾಮಾನ್ಯವಾಗಿ ಹೆಣವನ್ನು ಸುಡುತ್ತಾರೆ. ಸತ್ತರೆ ಅಶೌಚಾಚರಣೆ ಇದೆ. ಕೆಟ್ಟಕರ್ಮಗಳಿಂದ ಸತ್ತವನ ಆತ್ಮಕ್ಕೆ ತೊಂದರೆಯಾಗುತ್ತದೆಂದು ಅವರು ಭಾವಿಸುತ್ತಾರೆ. ತಮ್ಮ ಆಹಾರಕ್ಕಾಗಿ ಅವರು ಕೆಲವು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಕೆಲವು ಕಾಣಿಕ್ಕಾರರು ತಮ್ಮ ಹಣೆಗಳಲ್ಲಿ ನೀಟನಾಮದ ಹಚ್ಚೆ ಅಥವಾ ಚಂದ್ರ ಮತ್ತು ಚುಕ್ಕೆಯ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೆಗಲಲ್ಲಿ ಜೋತಾಡಿಸಿಕೊಂಡು ಬಿಲ್ಲು ಬಾಣಗಳನ್ನು ಬಳಿಯೇ ಇರಿಸಿಕೊಳ್ಳುತ್ತಾರೆ. ಕಾಣಿಕ್ಕಾರರ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ತುಂಬ ಉದಾಸೀನ.

– ಪಿ.ಎನ್. ಅನುವಾದ ಕೆ.ಕೆ.