ಕಾಕಾರಿಶ್ಶಿನಾಟಕಂ ಕಾಕಾರಿಶ್ಶಿನಾಟಕ, ಕಾಶಾಲ ನಾಟಕ, ಕಾಕಾರಿಶ್ಯಿ ಚರಿತಂ ಹೀಗೆ ಹಲವು ಹೆಸರುಗಳಿಂದ ಪ್ರಸಿದ್ಧವಾಗಿರುವ ಕೇರಳದ ಜನಪದ ರಂಗಸಂಪ್ರದಾಯಕ್ಕೆ ಹಾಗೂ ಕಾಕಲ ಸಮುದಾಯಕ್ಕೆ ಯಾವುದೇ ಸಂಬಂಧವಿಲ್ಲ. ಕಾಕಾಲ ಸಮುದಾಯದವರು ಬರೆದು ಅಭಿನಯಿಸುವ ನಾಟಕವಿದಲ್ಲ. ನಾಟಕ ಹಾಗೂ ಜನಪದ ಕಲೆಗಳಲ್ಲಿ ಆಸಕ್ತಿ ಇರುವ ಉಳಿದ ಸಮುದಾಯದ ಜನರು ಕಾಕಾರಿಶ್ಶಿ ನಾಟಕವನ್ನು ಆಡುತ್ತಾರೆ. ಈ ನಾಟಕದಲ್ಲಿ ನಾಯರ್, ಪಾಣನ್, ಈಟಿವ ಮೊದಲಾದ ಸಮುದಾಯದ ಜನರು ಭಾಗವಹಿಸುತ್ತಾರೆ. ಈ ನಾಟಕವನ್ನು ಕಲಿಸಲು ಪ್ರತ್ಯೇಕ ಗುರುಗಳಿದ್ದಾರೆ. ಅವರ ನೇತೃತ್ವದಲ್ಲಿ ಊರವರು ಸೇರಿಕೊಂಡು ನಾಟಕವನ್ನು ಅಭ್ಯಾಸ ಮಾಡುವರು. ಈ ನಾಟಕದಲ್ಲಿ ಪುರುಷರೇ ಸ್ತ್ರೀ ಪಾತ್ರವನ್ನು ನಿರ್ವಹಿಸುತ್ತಾರೆ. ಶಿಸ್ತು ಬದ್ಧವಾಗಿ ಕುಣಿಯಲು, ಹಾಡಲು ಕಲಿತು, ಓಣಂ, ಶಿವರಾತ್ರಿ, ಊರಜಾತ್ರೆ ಮೊದಲಾದ ವಿಶೇಷ ದಿವಸಗಳಲ್ಲಿ ನಾಟಕಪ್ರದರ್ಶನವನ್ನು ಮಾಡುತ್ತಾರೆ.

ನಾಟಕ ಪ್ರದರ್ಶನಕ್ಕೆ ನೆಲದಿಂದ ಸ್ವಲ್ಪ ಎತ್ತರದಲ್ಲಿ ವೇದಿಕೆ ನಿರ್ಮಿಸುವರು. ವೇದಿಕೆಯ ಹಿಂದುಗಡೆ ಬಣ್ಣ ಹಾಗೂ ವೇಷಗಾರಿಕೆಗೆ ಸ್ಥಳವಿರುವುದು, ಮಸಿ, ಸುಣ್ಣ, ಅಕ್ಕಿಹಿಟ್ಟು, ಕೆಂಪು ಕಲ್ಲಿನ ಪುಡಿಗಳಿಂದ ತಯಾರಿಸಿದ ಬಣ್ಣವನ್ನು ಮುಖಕ್ಕೆ ಹೆಚ್ಚಿಕೊಳ್ಳುವರು.

ಪಾಟುಕಾರನ್ (ಹಾಡುಗಾರ) ಈ ನಾಟಕದ ಮುಖ್ಯ ಪಾತ್ರ. ಆತ ನಟಿಸುವುದಕ್ಕೆ, ಕುಣಿಯುವುದಕ್ಕೆ ಬಾರದಿದ್ದರು, ಅವನ ಪ್ರಶ್ನೆಗಳಿಗೆ ಪಾತ್ರಗಳು ನೀಡುವ ಉತ್ತರಗಳ ಮೂಲಕ ನಾಟಕ ಮುಂದೆ ಸಾಗುತ್ತದೆ. ಹಾಡುಗಳಿಗೆ ನೇತ್ರತ್ವವನ್ನು ಹಾಡುಗಾರ ನೀಡುವನು.

ಈ ನಾಟಕದ ನಾಯಕ ಸುಂದರ ಕಾಕಾನ್, ಹೆಚ್ಚಿನ ಕಾಕಾರಿಶ್ಶಿ ನಾಟಕಗಳಲ್ಲಿ ಸುಂದರ ಕಾಕಾನ್, ಕಾಕಾತ್ತಿಗಳು, ವೇಷನ್ ಮೊದಲಾದ ಸ್ಥಿರಪಾತ್ರಗಳಿವೆ. ಸುಂದರ ಕಾಕಾನ್ ಕಾಕಾಲ ಸಮುದಾಯದ ಪ್ರತಿನಿಧೀ. ಅವನ ಪ್ರತಿಯೊಂದು ಮಾಡು ಕಾಕಾಲ ಸಮುದಾಯದ ಹಿಂದಿನ ಸ್ಥಿತಿಯನ್ನು ಚಿತ್ರಿಸುತ್ತವೆ. ತಾಳಕ್ಕೆ ತಕ್ಕಂತೆ ಕುಣಿಯಲು, ತಿರುವಾದಿರ ನೃತ್ಯ ದ್ರುತತಾಳದಲ್ಲಿ ಸಂಚರಿಸುತ್ತದೆ. ಅದಕ್ಕೆ ಅನುಗುಣವಾಗಿ ಹೆಜ್ಜೆ ಹಾಕಲೂ, ನಟಿಸಲೂ ಸಾಮರ್ಥ್ಯವಿರಬೇಕು.

ಹಾರ್ಮೋನಿಯಂ, ಮೃದಂಗ, ಕಂಜಿರ, ತಾಳಗಳು ಈ ನಾಟಕದ ಸಂಗೀತ ಉಪಕರಣಗಳು. ವೇದಿಕೆಯ ಹಿಂಭಾಗದಲ್ಲಿ ಹಾಡುಗಾರ ಕುಳಿತುಕೊಳ್ಳುವನು. ಅವನ ಪಕ್ಕದಲ್ಲಿ ವಾದ್ಯ ಉಪಕರಣಗಳಿರುವುದು. ಪಾತ್ರಧಾರಿಗಳು ಅವರ ಮುಂದೆ ಕುಣಿಯುತ್ತಾರೆ. ಊರಿನ ಹಿರಿಯರೂ, ಪ್ರತಿಷ್ಠಿತರೂ ವೇದಿಕೆಯ ಮುಂಭಾಗದಲ್ಲಿ ಆಸೀನರಾಗುತ್ತಾರೆ. ಕಾಕಾರಿಶ್ಶಿ ನಾಟಕವನ್ನು ನೋಡಲು ಊರ ಜನರು ಬಹುಸಂಖ್ಯೆಯಲ್ಲಿ ಸೇರುತ್ತಿದ್ದರು.

ಸಂಗೀತ, ಸಂಭಾಷಣೆ, ಕುಣಿತ, ಅಭಿಯನಗಳೆಲ್ಲ ಸೇರಿಕೊಂಡಿರುವ ಕಾಕಾರಿಶ್ಶಿ ನಾಟಕವು ಜನಪದ ರಂಗಭೂಮಿಯ ವೈಶಿಷ್ಟ್ಯವಾಗಿದೆ. ಜನಪದರ ರಂಗಾಸಕ್ತಿ ಹಾಗೂ ಅಭಿನಯ ಸಾಮರ್ಥ್ಯಗಳಿಗೆ ನಿದರ್ಶನವಾಗಿದೆ. ಹಾಸ್ಯ, ತಮಾಷೆ, ಹಾಡು, ಕುಣಿತ, ನಟನೆ ಇವೇ ಕಾಕಾರಿಶ್ಶಿ ನಾಟಕದ ಜೀವಾಳ. ಕೆಲವು ನಾಟಕಗಳಲ್ಲಿ ಸಭಿಕರಿಗೆ ವಂದಿಸುತ್ತಾ ಕಾಕಾಲ ಮತ್ತು ಕಾಕಾತ್ತಿ ಪ್ರವೇಶಿಸುವುದರೊಂದಿಗೆ ನಾಟಕ ಆರಂಭಗೊಳ್ಳುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಕಾಕಾತ್ತಿಯ ತಿರುವಾದಿದೊಂದಿಗೆ ನಾಟಕ ಆರಂಭಗೊಳ್ಳುವುದು ನಾಟಕದ ಕಥೆಗೆ ಹೊಂದಿಕೊಂಡು ಪುರಾಣವನ್ನು ಸ್ವತಂತ್ರವಾಗಿ ವ್ಯಾಖ್ಯಾನಿಸುವ ಕ್ರಮವೂ ಈ ನಾಟಕದಲ್ಲಿದೆ. ನಾಟಕದ ಸೂತ್ರಧಾರ ಪಾಟುಕಾರನೇ ಆಗಿರುತ್ತಾನೆ. ಇಡೀ ನಾಟಕವು ಅವನ ನಿಯಂತ್ರಣದಲ್ಲಿ ಜರುಗುತ್ತದೆ.

– ಜಿ.ಬಿ.ಪಿ. ಅನುವಾದ ಎನ್.ಎಸ್.

ಕಾಟಮಯ್ಯ ಕಥೆ ಆಂಧ್ರಪ್ರದೇಶದ ತೆಲಂಗಾಣದಲ್ಲಿ ಪ್ರಚಲಿತವಾಗಿರುವ ಒಂದು ಜನಪದ ಪುರಾಣ. ಎರಡು ವರ್ಷಕ್ಕೊಮ್ಮೆ ತಾಳೆತೋಟದಲ್ಲಿ ನಡೆಸುವ ಹಬ್ಬದಲ್ಲಿ ಗೌಡ ಕುಲದವರು ಈ ಪುರಾಣವನ್ನು ಹೇಳಿಸುತ್ತಾರೆ. ಇಂಥವನ್ನು ಕುಲಪುರಾಣಗಳೆಂದು ಕರೆಯುತ್ತಾರೆ. ನಾಲ್ಕು ದಿನಗಳ ಕಾಲ ಜಟ್ಟಿ ಮತ್ತು ಏನೂಟಿ ಕುಲದವರು ಹಾಡುವ ಈ ಪುರಾಣಕ್ಕೆ ಗೌಡ ಪುರಾಣವೆಂಬ ಹೆಸರಿನ ಸಾಂಪ್ರದಾಯಕ ಪುರಾಣ ಮೂಲ. ಈ ಪುರಾಣದ ಋಷಿಯಾದ ಕೌಂಡಿನ್ಯನ ಆಶ್ರಮ ೧೩ನೆಯ ಶತಮಾನದಲ್ಲಿ ಅನಂತಪುರ ಜಿಲ್ಲೆಯಲ್ಲಿತ್ತೆಂದು ಮುಕ್ತಾಪುರಿ ಶಿಲಾಶಾಸನದಿಂದ ತಿಳಿಯುತ್ತದೆ.

ಮುಗಿಲಿನೆತ್ತರಕ್ಕೆ ಬೆಳೆದ ತಾಳೆಮರಗಳಿಂದ ಕಳ್ಳನ್ನು ಇಳಿಸುವ ವೃತ್ತಿ ತೆಲಂಗಾಣದ ಗೌಡರದು. ಇವರ ಆಚಾರ ವ್ಯವಹಾರಗಳನ್ನು, ಸಂಪ್ರದಾಯಗಳನ್ನು, ಇವರನ್ನು ಆಶ್ರಯಿಸಿ ಬದುಕುವ ಜಟ್ಟಿ, ಏನೂಟಿ ಕುಲದವರು ವರ್ಣಿಸಿ ಹಾಡುತ್ತಾರೆ. ಈ ಪುರಾಣಗಳನ್ನು ಹಾಡಲು ‘ಒಗ್ಗು’ ಎಂಬ ವಾದ್ಯವನ್ನು ಬಳಸುವುದುಂಟು. ಗೌಡ ಪುರಾಣದ ಕಥಾನಾಯಕ ಕಾಟಮಯ್ಯ. ಇದರಲ್ಲಿಯ ಪಾತ್ರಗಳು ಬಹಳಮಟ್ಟಿಗೆ ಪೌರಾಣಿಕ ಪಾತ್ರಗಳೇ ಆಗಿವೆ. ಆದರೆ ಒಂದು ಕಾಳದ ಇತಿಹಾಸವೇ ಐತಿಹ್ಯವಾಗಿ, ಅನಂತರ ಕಾಲದಲ್ಲಿ ಪುರಾಣವಾಗಿರುವ ಸಾಧ್ಯತೆ ಇದೆ. ಕಥಾನಾಯಕ ಕಾಟಮಯ್ಯ ಸ್ವಯಂಭು ಎಂದು ಹೇಳಲಾಗಿದೆ. ರಾಕ್ಷಸರಿಂದ ತಾಳೆ ತೋಟವನ್ನು ರಕ್ಷಿಸುವ ಕೆಲಸ ಕಾಟಮಯ್ಯನದು. ದೈವೀಶಕ್ತಿಯಿಂದ ತಾಳೆ ಮರವನ್ನು ಬಗ್ಗಿಸಿ ಕಳ್ಳನ್ನು ಉತ್ಪತ್ತಿ ಮಾಡುವಂಥ ಪವಾಡಗಳಿದ್ದರೂ ಮುಗಿಲೆತ್ತರದ ತಾಳೆಮರವನ್ನು ಹತ್ತಲು ಬೇಕಾದ ಉಪಕರಣಗಳನ್ನೂ ತಯಾರಿಸಿಕೊಳ್ಳುವ ಜಾಣತನವೂ ಈ ಕಥೆಯಲ್ಲಿದೆ.

ಸಮುದ್ರಮಥನ ಮಾಡಿದಾಗ ಆದಿಶೇಷನ ಬಾಯಿಂದ ಬಿದ್ದ ವಿಷದ ಹನಿಗಳೇ ತಾಳೆ ಮರ ಹುಟ್ಟಲು ಕಾರಣವಾಯಿತೆಂದು ಈ ಸೃಷ್ಟಿ ಪುರಾಣ ಹೇಳುತ್ತದೆ. ಸ್ವರ್ಗಲೋಕದ ಕಾಮಧೇನು ಸತ್ತಾಗ ಅದರ ಪಾದಗಳು ಭೂಮಿಯ ಮೇಲೆ ಬಿದ್ದು ತಾಳೆಯ ಮರ ಹುಟ್ಟಿದೆ ಎಂದು ಇನ್ನೊಂದು ಕಥನ. ಮಾದಕ ದ್ರವ್ಯಗಳ ಪಾನ ವಿಷಾಪಾನವೆಂಬುದನ್ನು ಒಂದು ಕಥನ ಸೂಚಿಸಿದರೆ, ಅದು ಅಮೃತ ಸಮಾನವೆಂದು ಇನ್ನೊಂದು ಕಥನ ಹೇಳುತ್ತದೆ.

ಕುಲ ಪುರಾಣಗಳ ಕಥೆಯನ್ನು ಚಿತ್ರರೂಪದಲ್ಲಿ ಬರೆಸುವುದು ಒಂದು ಸಂಪ್ರದಾಯ. ಚಿತ್ರಪಟಗಳನ್ನು ತೋರಿಸುತ್ತಾ ಕಥೆಯನ್ನು ಹೇಳುವ ಕಲೆಯಾದುದರಿಂದ ಇದೊಂದು ಪ್ರದರ್ಶನ ಕಲೆಯೂ ಹೌದು. ಕಲಾವಿದರು ಒಂದು ಕೋಲನ್ನು ಉಪಯೋಗಿಸಿ ಚಿತ್ರಗಳನ್ನು ತೋರಿಸುತ್ತ ಕಥಾಗಾನವನ್ನು ಮಾಡುತ್ತಿರುವಾಗ, ಉಳಿದ ಕಲಾವಿದರು ಹಾರ್ಮೋನಿಯಂ, ತಬಲ ಮತ್ತು ತಾಳಗಳನ್ನು ನುಡಿಸುತ್ತಾರೆ. ಕಾಟಮಯ್ಯನ ಕಥೆ ತೆಲಂಗಾಣದಲ್ಲಿ ತುಂಬ ಪ್ರಸಿದ್ಧವಾದ ಒಂದು ಕಥನ ಕಲೆಯಾಗಿದೆ.

– ಎನ್.ಎಂ.ಎಸ್. ಅನುವಾದ ಎ.ಎಂ.ಡಿ.

ಕಾಟಮರಾಜು ‘ಕಾಟಮರಾಜು ಕಥೆ’ ಆಂಧ್ರಪ್ರದೇಶದ ಗೊಲ್ಲರಲ್ಲಿ ಪ್ರಚಲಿತವಿರುವ ಜನಪದ ಮಹಾಕಾವ್ಯ. ಜನಪದರು ಇದನ್ನೊಂದು ‘ಪದ’ ಎಂದು ಕರೆಯುತ್ತಾರೆ. ದೀರ್ಘ ಕಥನ ಶೈಲಿಯ ಲಾವಣಿಗಳ ಸರಣಿ ಇದಾಗಿದೆ. ಇದನ್ನು ಹಲವು ರಾತ್ರಿಗಳ ಕಾಲ ಹಾಡುವವರು ಇಂದಿಗೂ ಆಂಧ್ರದ ಗೊಲ್ಲ ಸಮುದಾಯದಲ್ಲಿ ಇದ್ದಾರೆ. ಅನಂತಪುರ ಜಿಲ್ಲೆಯಲ್ಲಿ ಗುತ್ತಿ ಸಮೀಪದ ರಾಮರಾಜು ಪಲ್ಲಿಯ ಕೃಷ್ಣಪ್ಪ ಈ ದೀರ್ಘ ಕಥನವನ್ನು ಹಾಡಬಲ್ಲರು. ಈ ಕಥೆ ಮುಖ್ಯವಾಗಿ ಗೊಲ್ಲರ ವಂಶಾವಳಿಯ ಕಥೆಯಂತಿದ್ದು ಕಾಟಮರಾಜು ಗೊಲ್ಲರ ಸಾಂಸ್ಕೃತಿಕ ನಾಯಕನಾಗಿ ಪ್ರತಿಬಿಂಬಿತನಾಗಿದ್ದಾನೆ. ಆತ ‘ನಮ್ಮವನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕ ಕಾಟಮರಾಜನಿಗೆ ಗೊಲ್ಲರು ವಿಶೇಷವಾದ ಗೌರವಾದರಗಳನ್ನು ತೋರುತ್ತಾರೆ.

ಈ ಕಾವ್ಯದ ಕಥಾನಾಯಕನೂ ಗೊಲ್ಲರ ಸಾಂಸ್ಕೃತಿಕ ವೀರನೂ ಆದ ‘ಕಾಟಮರಾಜು’ವಿನ ಕುರಿತು ರಚಿಸಿದ್ದನೆಂದು ಸಹಜವಾಗಿ ತೀರ್ಮಾನಿಸಬಹುದಾದರೂ ವಾಸ್ತವವಾಗಿ ಗೊಲ್ಲರ ಪ್ರಮುಖ ಮಾತೃದೇವತೆಯಾದ ಗಂಗಮ್ಮ (ಯಾದವ ಗಂಗಮ್ಮ) ಈ ಕಥೆಯಲ್ಲಿ ಪ್ರಮುಖಗಳಾಗಿದ್ದು ಈ ಕಾವ್ಯದ ‘ಪ್ರದರ್ಶನ’ವು ಈ ದೇವಿಯ ಆರಾಧನೆಯ ಒಂದು ಅಂಗವೇ ಆಗಿ ಪ್ರಚಲಿತದಲ್ಲಿ ಸಂಪ್ರದಾಯವೊಂದರ ಮುಂದುವರಿಕೆಯಾಗಿ ಉಳಿದುಬಂದಿದೆ.

ಎಷ್ಟು ವಿಭಿನ್ನ ಜಾತಿಗಳವರು ಈ ಪ್ರದರ್ಶನ ನೀಡುವರೋ ಅಷ್ಟು ವೈವಿಧ್ಯ ಪದ ಕಥಾಂತರಗಳು ಈ ಕಥೆಯ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತವೆ.

ಬಹುತೇಕ ಈ ಕಥಾ ಪ್ರದರ್ಶನ ಪಾಲ್ಗೊಳ್ಳುವವರು ದಲಿತರು. ಕಾಟಮರಾಜು ಹೇಳುವ ಇವರು ‘ಕೊಂಬ’ನ್ನು ಊದುವ ಮೂಲಕ ಹಾಡಿನ ಆರಂಭ ಮಾಡುತ್ತಾರೆ. ಅವರನ್ನು ‘ಕೊಮ್ಮುಲೋಳ್ಳು’ ಎಂದು ಕರೆಯುತ್ತಾರೆ. ಅವರು ಕಾಟಮರಾಜ ಕಥೆ ಹೇಳುವ ವೃತ್ತಿಗಾಯಕರಾಗಿದ್ದಾರೆ. ಹಾಗೆಯೇ ಗೊಲ್ಲ ಸುದ್ದುಲು ಎಂಬ ಸಮುದಾಯವೊಂದು ಕೂಡ ಕಾಟಮರಾಜು ಕಥೆಯನ್ನು ಹೇಳುವುದಿದೆ. ಗೊಲ್ಲ ಸುದ್ದುಲು ‘ಪೂಜಾಗೊಲ್ಲ’ರೆಂಬ ಗೊಲ್ಲ ಸಮುದಾಯಕ್ಕೆ ಸೇರಿದವರು. ಕರ್ನಾಟಕದ ಗಡಿಭಾಗದಲ್ಲಿ ತೆಲುಗಿನ ಪಿಚ್ಚುಕುಂಟ್ಲು (ಹೆಳವರು) ಕಾಟಮರಾಜು ಕಥೆ ಹೇಳುತ್ತಾರೆ.

ಕಾಟಮರಾಜು ಕಥೆ ಹೇಳುವ ವೃತ್ತಿಗಾಯಕರಲ್ಲಿ ಒಂದು ವರ್ಗದವರು ‘ಕಲಂಕಾರಿ’ ಚಿತ್ರಪಟವನ್ನು ಬಳಸಿಕೊಂಡು ಕಥೆ ಹೇಳುತ್ತಾರೆ. ವಂಶಾವಳಿಯ ವಿವರಗಳನ್ನು ತಮ್ಮಲ್ಲಿ ಸಂಗ್ರಹಿಸಿಕೊಂಡು ಆ ಮೂಲಕ ಗೊಲ್ಲ ಜನಾಂಗದ ‘ಅವಲಂಬಿತ ಜಾತಿ’ ಎನ್ನಿಸಿಕೊಂಡ ಹೆಳವ ಅಥವಾ ಪಿಚ್ಚಕುಂಟಲರು ಕಾಟಮರಾಜು ಕಥೆಯನ್ನು, ಗೊಲ್ಲರ ವಂಶಾವಳಿ, ಹೇಳುವಾಗ ಪೂರ್ವಪರಂಪರೆಯ ಸಾಂಸ್ಕೃತಿಕ ನಾಯಕರ ಪ್ರಸ್ತಾಪ ಮಾಡುವ ರೀತಿಯಲ್ಲಿ ಹೇಳುತ್ತಾರೆ. ಕಾಟಮರಾಜು ಕಥೆಯನ್ನು ಗೊಲ್ಲರನ್ನು ಒಂದುಗೂಡಿಸುವ ಒಂದು ಶಕ್ತಿಯಾಗಿ ಇಂದು ಬಳಸಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಇದನ್ನು ಗೊಲ್ಲರ ‘ಅನನ್ಯತೆ’ ಯನ್ನು ಪ್ರತಿಬಿಂಬಿಸಲು ಮತ್ತು ಆ ಮೂಲಕ ಅವರ ವಿಶಿಷ್ಟ ಪರಂಪರೆ ವಿವರಿಸುವ ಮೂಲಕ ಗೊಲ್ಲರದು ಶ್ರೇಷ್ಠ ಪರಂಪರೆಯನ್ನು ಹೊಂದಿರುವ ಸಮುದಾಯ ಎಂಬ ಪ್ರತಿಷ್ಠೆಯನ್ನು ಹೆಚ್ಚಿಸಲು ಬಳಸಲಾಗುತ್ತಿದೆ.

‘ಕಾಟಮರಾಜು’ ಕಥೆಯ ಮೊದಲ ಭಾಗದಲ್ಲಿ ಆತನ ಪೂರ್ವಿಕರ ಸರಣಿಯ ವಿವರಗಳು ಇವೆ. ಸಾಮಾನ್ಯವಾಗಿ ಪ್ರದರ್ಶನಕಾರರು ಕಾಟಮರಾಜುವಿನ ಪೂರ್ವಿಕರ ಹೆಸರುಗಳನ್ನು ಪಟ್ಟಿಮಾಡಿ ಇವರ ಕಥೆಗಳು ಬಹುದೀರ್ಘವಾಗಿವೆ ಎಂದಷ್ಟೇ ಹೇಳಿ ಕಥೆ ಹಂದರ ಬೆಳಸಿಕೊಂಡು ಹೋಗುತ್ತಾರೆ. ಎಲ್ಲೋ ಕೆಲವರು ಮಾತ್ರ ಆ ವಿವರಗಳನ್ನು ದೀರ್ಘವಾಗಿ ಹೇಳಬಲ್ಲವರಾಗಿದ್ದಾರೆ.

ಕಥೆಯ ಪ್ರಮುಖಭಾಗವು ಕಾಟಮರಾಜುವಿನ ತಂದೆಯಾದ ‘ಪೆದ್ದಿರಾಜ’ನ ಹಾಗೂ ತಾಯಿ ‘ಪೆದ್ದಮ್ಮ’ಳ ಕಥೆಯೊಂದಿಗೆ ಬೆಳೆದು ಬರುತ್ತದೆ. ಮಕ್ಕಳಿಲ್ಲದ ಈ ದಂಪತಿಗಳ ಕೊರಗು ಹಾಗೂ ವರಪುತ್ರನಾಗಿ ‘ಕಾಟಮರಾಜು’ವಿನ ವಿವರಗಳು ಇಲ್ಲಿವೆ. ವಾಲಿಕೇತುವ ರಾಜನೆಂಬುವನೊಂದಿಗಿನ ಕಾದಾಟದ ವಿವರಗಳಿದ್ದು ಅದರಲ್ಲಿ ಅನೇಕ ಗೊಲ್ಲವೀರರೊಂದಿಗೆ ‘ಪೆದ್ದಿರಾಜು’ ಕೂಡ ಯುದ್ಧದಲ್ಲಿ ಮಡಿಯುವ ವಿವರಗಳಿವೆ. ಕೇಲವ ಏಳು ವರ್ಷದ ಬಾಲಕನಾದ ಕಾಟಮರಾಜು ಯುದ್ಧ ಭೂಮಿಯಿಂದ ತನ್ನ ತಂದೆಯ ಮೃತದೇಹವನ್ನು ತರಬಯಸಿದಾಗ ಯುದ್ಧ ಭೂಮಿಯಲ್ಲಿ ಗೊಲ್ಲರ ಮಾತೃದೇವತೆ ಗಂಗಮ್ಮಳೊಂದಿಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಅಂತಿಮವಾಗಿ ಜಯ ಕಾಟಮರಾಜನಾದಾಗುತ್ತದೆ. ಗಂಗೆ ಕಾಟಮನಲ್ಲಿ ಅನುರಕ್ತಳಾಗಿ ಮದುವೆಯಾಗೆಂದು ಕೋರುತ್ತಾಳೆ. ಕಾಟಮರಾಜು ಒಪ್ಪುವುದಿಲ್ಲ. ಪರಿಣಾಮವಾಗಿ ಕೋಪಗೊಂಡ ಗಂಗಾದೇವಿ ಅನೇಕ ವಿಧದಲ್ಲಿ ಆತನಿಗೆ ಉಪದ್ರವಗಳನ್ನು ನೀಡಿ ಕಾಟಮರಾಜನನ್ನು ಸೋಲಿಸಲು ಪ್ರಯತ್ನಿಸುತ್ತಾಳೆ. ಅವಳು ನೀಡುವ ಅಡೆತಡೆಗಳನ್ನು ದಾಟಿ ಬಂದ ಕಾಟಮ ಗಂಗೆಯ ತಮ್ಮನೂ ರಾಕ್ಷಸೀ ಗುಣದವನೂ ಆದ ಶವ ಭಕ್ತಕನೂ ಆದ ಪೋತುರಾಜನನ್ನು ಎದುರಿಸಿ ಹೋರಾಡಿ ಗೆಲುವು ಪಡೆಯುತ್ತಾನೆ.

ಪೋತುರಾಜುವಿನ ಹೆಸರಿನಲ್ಲಿ ಸಂಕ್ರಾಂತಿಯ ಸಂದರ್ಭದಲ್ಲಿ ಇಂದಿಗೂ ಗೊಲ್ಲರು ಕುರಿಯನ್ನು ಬಲಿನೀಡುವ ಸಂಪ್ರದಾಯವಿದೆ. ಕಾಟಮರಾಜು ತನ್ನ ಗೊಲ್ಲಬಾಂಧವರೊಡನೆ ದಕ್ಷಿಣಕ್ಕೆ ವಲಸೆ ಬಂದನೆಂಬ ಪ್ರಸ್ತಾಪ ಈ ಕಥೆಯಲ್ಲಿದೆ. ಕಾಟುಮರಾಜುವಿನ ಗೋವುಗಳನ್ನು ಕಾವಲು ಕಾಯುತ್ತಿದ್ದ ಗೊಲ್ಲ ಗೋಪಾಲಕರಿಗೆ ಕೂಗಿ ಕೂಗಿ ಕಾಟ ನೀಡುತ್ತಿದ್ದ ಗಿಳಿಯೊಂದು ನೆಲ್ಲೂರಿನ ಪಾಳೆಯಗಾರ ನಲ್ಲಸಿದ್ಧಿ ಹಾಗೂ ಆತನ ಪ್ರಿಯತಮೆ ಕುಂದಮಾದೇವಿಗೆ ಸೇರಿದ್ದೆಂಬ ಕಾರಣಕ್ಕಾಗಿ ಗೊಲ್ಲರಿಗೂ ನಲ್ಲಸಿದ್ಧಿಗಳೂ ಜಗಳ ಆರಂಭವಾಗುತ್ತದೆ. ಗೊಲ್ಲನೊಬ್ಬ ಗಿಳಿಯಕೂಗಿನ ಗಲಾಟೆ ತಡೆಯಲಾರದೆ ಅದಕ್ಕೊಂದು ಬಾಣಬಿಟ್ಟು ಗಾಯಗೊಳಿಸುತ್ತಾನೆ. ಅದು ಅರಮನೆಗೆ ಹಾರಿಹೋಗಿ ಕುಂದಮಾದೇವಿಗೆ ನಡೆದ ಘಟನೆ ವಿವರಿಸುತ್ತದೆ. ಕೋಪಗೊಂಡ ಆಕೆ ಹಂತಕರನ್ನು ಗೊಲ್ಲರ ಗೋವುಗಳನ್ನು ಕೊಂದು ಹಾಕುವಂತೆ ಆದೇಶಿಸಿ ಕಳುಹಿಸುತ್ತಾಳೆ. ಗೋವುಗಳನ್ನು ಕೊಲ್ಲುವುದು ಮಹಾಪಾಪದ ಕೆಲಸವೆಂದು ಬಗೆದು ಕೋಪಗೊಂಡು ‘ಕಾಟಮರಾಜು’ ನಲ್ಲಸಿದ್ಧಿಗೆ ಗೋವುಗಳನ್ನು ಮೇಯಿಸಲೆಂದು ಹುಲ್ಲುಗಾವಲು ಪ್ರವೇಶಿಸಲು ನೀಡಬೇಕಾಗಿದ್ದ ‘ಹುಲ್ಲುಬನಿ’ ಕಪ್ಪ ಅಥವಾ ತೆರಿಗೆ ನೀಡಲು ನಿರಾಕರಿಸುತ್ತಾನೆ (ಕಾಡುಗೊಲ್ಲರ ಸಾಂಸ್ಕೃತಿಕ ವೀರನಾದ ಜುಂಜಪ್ಪ ಕೂಡ ಪ್ರಕೃತಿ ನೀಡಿರುವ ನೀರು – ಹುಲ್ಲು ಇವುಗಳಿಗೆ ‘ಹುಲ್ಲುಬನಿ’ ತೆರಿಗೆ ಏಕೆ ನೀಡಬೇಕೆಂದು ಪ್ರತಿಭಟಿಸುತ್ತಾನೆ. ಇದು ಮ್ಯಾಸಬೇಡ ಪಾಳೆಯಗಾರರು ಹಾಗೂ ಗೊಲ್ಲರ ನಡವಿನ ನಿರಂತರ ಸಂಘರ್ಷದ ಮೇಲೆ ಬೆಳಕು ಚೆಲ್ಲುವ ಅಂಶ). ಕೋಪಗೊಂಡ ನಲ್ಲಸಿದ್ಧಿ ಕಾಟಮನ ಮೇಲೆ ಯುದ್ಧ ಸಾರುತ್ತಾನೆ. ಯದ್ಧದಲ್ಲಿ ಕಾಟಮರಾಜು ನಲ್ಲಸಿದ್ಧಿಯನ್ನು ಕೊಂದುಹಾಕುತ್ತಾನೆ.

ಕಥೆಯ ಉಳಿದ ಭಾಗಗಳು ಪೆದ್ದಿರಾಜುವಿನ ನಾಲ್ವರು ಸಹೋದರರು ಹಾಗೂ ಅವರ ಮಕ್ಕಳು ಬದುಕು ಹಾಗೂ ಅವರು ನಡೆಸಿದ ಯುದ್ಧಗಳ ವಿವರಗಳನ್ನು ಒಳಗೊಂಡಿದೆ. ಕಾಟಮರಾಜುವಿನ ಕಥೆಯ ಕೆಲವು ಪಾಠಗಳಲ್ಲಿ ಗೊಲ್ಲರ ಪೂರ್ವಿಕರ ಅನೇಕೆ ವಿವರಗಳಿದ್ದು ಈ ವಂಶಾವಳಿಯ ವೇದಕಾಲದ ಯಾದವರ ವಿವರಗಳವರೆಗೂ ಸಾಗಿದ್ದು ಮಹಾಭಾರತದ ಶ್ರೀಕೃಷ್ಣನನ್ನೂ ಈ ವಂಶಾವಳಿ ಒಳಗೊಳ್ಳುತ್ತದೆ ಎಂದು ಗೊಲ್ಲರು ನಂಬಿದ್ದಾರೆ. ಮಹಾಭಾರತದ ಕೆಲವು ಭಾಗಗಳೂ ಈ ವೃತ್ತಾಂತದಲ್ಲಿ ಅಲ್ಲಲ್ಲಿ ಸೇರಿಹೋಗಿವೆ.

ಕಾಟಮರಾಜು ಕಥೆಯ ಪ್ರಸ್ತಾಪವಿರುವುದು ತೆಲುಗಿನ ಶ್ರೀನಾಥ ಕವಿ ರಚಿಸಿದ ಕಥಾವೃತ್ತಾಂತದಲ್ಲಿ. ಇದೊಂದು ಲಾವಣಿಗಳ ಸರಣಿಯೇ ಆಗಿದೆ. ಹೀಗಾಗಿ ಸಂಗ್ರಹಿತ ಪಠ್ಯಗಳಲ್ಲಿ ಅನೇಕ ಪಾಠಾಂತರಗಳನ್ನು ಗುರುತಿಸಲು ಸಾಧ್ಯ. ಇದೊಂದು ಚಾರಿತ್ರಿಕ ಘಟನೆಗಳ ಸರಣಿ ಎಂಬಂತೆ ಕಾಣಿಸುತ್ತದೆ. ಆದರೆ ಅದನ್ನು ಕಾಲಘಟ್ಟದ ನೆಲೆಯಲ್ಲಿ ‘ಇಲ್ಲಿ – ಈ ಕಾಲದಲ್ಲಿ’ ನಡೆದಿದ್ದು ಎಂದು ಸೂಚಿಸಲು ಅಗತ್ಯವಾದ ಐತಿಹಾಸಿಕ ಪುರಾವೆಗಳ ಕೊರತೆ ಇದೆ.

ಟಿ.ವಿ. ಸುಬ್ಬರಾವ್ ಅವರು ‘ಕಾಟಮರಾಜು ಕಥಲು’ ಕೃತಿಯನ್ನು ಎರಡು ದೀರ್ಘ ಸಂಪುಟಗಳಲ್ಲಿ ತೆಲುಗಿನಲ್ಲಿ ಪ್ರಕಟಿಸಿದ್ದಾರೆ. ಆರ್.ವಿ.ಎಸ್.ಸುಂದರಂ ಅವರು ಕನ್ನಡದಲ್ಲಿ ‘ಕಾಟಮರಾಜು ಕಥೆ’ಯನ್ನು ಸಂಗ್ರಹವಾಗಿ ಪ್ರಕಟಿಸಿದ್ದಾರೆ. ವಿ.ನಾರಾಯಣರಾವ್, ಪೀಟರ್ ಜೆ.ಕ್ಲಾಸ್ ಇವರುಗಳು ಕಾಟಮರಾಜು ಕುರಿತ ಲೇಖನಗಳನ್ನು ಇಂಗ್ಲಿಷಿನಲ್ಲಿ ಪ್ರಕಟಿಸಿದ್ದಾರೆ.

ಕಾಟಮರಾಯ: ಕಾಟಮರಾಯ, ಕಾಟಮಯ್ಯ, ಕಾಟಯ್ಯ, ಕಾತೇಲಿಂಗ ಇವು ಕನಾಟಕದ ಕಾಡುಗೊಲ್ಲರ ಪೂಜಿಸುವ ಸಾಂಸ್ಕೃತಿಕ ವೀರನೊಬ್ಬನ ಹೆಸರು. ಸಂಕ್ರಂತಿಯ ದಿನ ಕೋಲಾರ, ಚಿತ್ತೂರು ಜಿಲ್ಲೆಗಳ ಗಡಿಭಾಗದಲ್ಲಿರುವ ಗೊಲ್ಲರು ವಿಶೇಷವಾಗಿ ಕಾಟಮರಾಯನಿಗೆ ಪೂಜೆಸಲ್ಲಿಸುತ್ತಾರೆ. ಸಾಮಾನ್ಯವಾಗಿ ಗೊಲ್ಲರು ಹೆಚ್ಚಾಗಿ ವಾಸಿಸುವ ಹಟ್ಟಿಗಳಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಐದು ಕರಿಯ ಕಲ್ಲುಗಳನ್ನು ನೆಟ್ಟು ಅದನ್ನು ಕಾಟಮರಾಯನೆಂದು ಪೂಜಿಸುವ ಪರಿಪಾಟವಿದೆ. ಈ ಕಾಟಮರಾಯನ ಕುರಿತು ಗೊಲ್ಲರಲ್ಲಿ ವಿಶೇಷವಾದ ಕಥಾವಿವರಗಳೇನೂ ದೊರಕುವುದಿಲ್ಲ. ಈ ಕಾಟಮರಾಯನಿಗೂ ಆಂಧ್ರದ ಕಾಟಮರಾಜುವಿಗೂ ಯಾವುದೇ ಸಂಬಂಧವಿದ್ದಂತೆ ತೋರುವುದಿಲ್ಲ. ಈತ ಬಹುತೇಕ ಕರ್ನಾಟಕದ ಕಾಡುಗೊಲ್ಲರ ಹಿರಿಯ ತಲೆಮಾರಿನ ಸಾಂಸ್ಕೃತಿಕ ವೀರರಲ್ಲಿ ಒಬ್ಬನಾಗಿರಬಹುದು. ಕಾಡುಗೊಲ್ಲರಲ್ಲಿ ಕಾಟಮ – ಚಿತ್ತಯ್ಯರ ಕುರಿತು ದೀರ್ಘಕಾವ್ಯ ದೊರಕಿದೆ.

ಸಂಕ್ರಾಂತಿಯ ದಿನ ‘ಕಾಟಮಲಿಂಗನ’ ಕಲ್ಲುಗಳನ್ನು ತೊಳೆದು ಶುಭ್ರಗೊಳಿಸಿ ಪೂಜೆಗೆ ಅಣಿಗೊಳಿಸುತ್ತಾರೆ. ಹಾಲು ಹಣ್ಣಿನ ನೈವೇದ್ಯ ಅರ್ಪಿಸಿದ ಅನಂತರ ಎತ್ತುಗಳನ್ನು ಓಡಿಸಿಕೊಂಡು ಬಂದು ಕಾಟಮರಾಯನ ಕಲ್ಲಿನ ಬಳಿ ಅವುಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಕೋಲಾರ ಜಿಲ್ಲೆಯ ಪಿಚ್ಚಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆಸಿದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕಂಡುಬಂತು. ಆಂಧ್ರದ ಗಡಿಭಾಗದ ಕೆಲವು ಹಳ್ಳಿಗಳಲ್ಲಿ ಉದಾಹರಣೆಗೆ ಚಿತ್ತೂರು ಜಿಲ್ಲೆಯ ಕೊತ್ತ ಇಂಡ್ಲು ಗ್ರಾಮದಲ್ಲಿ ಕಾಟಮರಾಯನ ಕಲ್ಲುಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.

ಶಿವರಾತ್ರಿಗೆ ಒಂದು ವಾರ ಮೊದಲು ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಗೊಲ್ಲರ ಹಟ್ಟಿಯಲ್ಲಿ ಕಾಟಮದೇವರ ಜಾತ್ರೆ ನಡೆಯುತ್ತದೆ. ಯರಬಳ್ಳಿಯಿಂದ ನಾಲ್ಕು ಮೈಲಿ ದೂರದಲ್ಲಿರುವ ನನ್ನಿನಾಳದ ಗುಡ್ಡ ಇಂದಿಗೂ ಕಾಡುಗೊಲ್ಲರಿಗೆ ಅತಿ ಪವಿತ್ರವಾದ ಯಾತ್ರಾ ಸ್ಥಳ. ಪುರಾಣ ಪುರುಷರೂ ಕಾಡುಗೊಲ್ಲರ ಸಾಂಸ್ಕೃತಿಕ ವೀರರು ಆದ ಚಿತ್ತಯ್ಯ ಮತ್ತು ಕಾಟಯ್ಯರು ಕೆಲವು ಕಾಲ ಇಲ್ಲಿ ನೆಲಸಿದ್ದರೆಂಬುದು ಇಲ್ಲಿಯ ಐತಿಹ್ಯದಿಂದ ತಿಳಿದು ಬರುತ್ತದೆ. ತಾಳಪಟ್ಟಿ, ಕಟ್ಟೆಮನೆಗೆ ಸೇರಿದ ಕಾಡುಗೊಲ್ಲರು ಕಾಟಮದೇವರಿಗೆ ನೇಮದಿಂದ ನಡೆದುಕೊಳ್ಳುತ್ತಾರೆ. ಇಂದಿಗೂ ನನ್ನಿವಾಳದ ಗುಡ್ಡದಲ್ಲಿ ಚಿತ್ತಯ್ಯ. ಕಾಟಯ್ಯ ಇಬ್ಬರೂ ವಾಸವಿದ್ದಾರೆಂದು ಕಾಡುಗೊಲ್ಲರು ನಂಬಿದ್ದಾರೆ. ಕಾಟಯ್ಯನಿಗೆಂದು ಒಂದು ಚಿಕ್ಕ ಗೂಡನ್ನು ಕಟ್ಟಿದ್ದೂ ಕೂಡ ಅದರಲ್ಲಿ ನೈವೇದ್ಯ ಅಥವಾ ಬಲಿಗೆಂದು ಏನನ್ನೂ ಇಡದೇ ಹಾಗೆಯೇ ಖಾಲಿ ಬಿಟ್ಟಿರುತ್ತಾರೆ. ಆ ಗೂಡನ್ನು ‘ಶೂನ್ಯದ ಗೂಡು’ ಎಂದು ಈ ಕಾರಣಕ್ಕಾಗಿ ಕರೆಯುತ್ತಾರೆ.

ಚಿತ್ತಯ್ಯ ದೇವರ ಪುರಾಣದಲ್ಲಿ ಕಾಟಮನ ಕುರಿತು ಪ್ರಸ್ತಾಪವಿದೆ. ಅದನ್ಣೇ ಚಿತ್ತಯ್ಯ – ಕಾಟಮರ ಪುರಾಣ ಎಂದೂ ಕರೆಯುತ್ತಾರೆ. ಕಾಡುಗೊಲ್ಲರು ಮಾತ್ರ ಚಿತ್ತಯ್ಯನ ಪದ – ಕಾಟಯ್ಯನ ಪದ ಎಂದು ಕರೆಯುತ್ತಾರೆ.

ಈಶ್ವನರ ಬೆವರಿನಿಂದ ಉದಿಸಿದ ಮೂವರು ಸೋದರರಲ್ಲಿ ಮೊದಲಿಗ ಕಾಟಮಯ್ಯ, ಎರಡನೆಯವರು ಚಿತ್ತಯ್ಯ, ಮೂರನೆಯವನು ಓಬಳ ನರಸಿಂಹ. ಈಶ್ವರ ಚಿತ್ರಗಿರಿ ಎಂಬ ನಗರ ನಿರ್ಮಾಣ ಮಾಡಿ ಅವರ ಬದುಕಿಗೆ ದಾರಿಮಾಡಿಕೊಟ್ಟ, ಕಾಟಯ್ಯನಿಗೆ ಚಿನ್ನದ ಗಿಂಡಿ, ಚಿನ್ನದಬೆತ್ತ ಹಾಗೂ ಚಿಂತಾಮಣಿ ಎಂಬ ಪುಸ್ತಕ ಕೊಟ್ಟು ಶಿವ ಪಾರ್ವತಿಯರು ಕೈಲಾಸಕ್ಕೆ ಹೊರಟು ಹೋದರು. ಕೆಲವು ದಿನಗಳ ಬಳಿಕ ಚಿತ್ರಗಿರಿಗೆ ಯಾರು ರಾಜರಾಗಬೇಕೆಂಬ ವಿಷಯದಲ್ಲಿ ವಿಚಿತ್ರ ತಗಾದೆ ಆರಂಭವಾಯಿತು.

ಹಿರಿಯನಾದ ಕಾಟಯ್ಯ ರಾಜನಾಗಬೇಕು ಎಂಬುದು ಚಿತ್ತಯ್ಯನ ಅಭಿಪ್ರಾಯವಾಗಿತ್ತು. ತನಗೆ ರಾಜನಾಗುವುದರಲ್ಲಿ ಆಸಕ್ತಿ ಇಲ್ಲ ಎಂದು ಕಾಟಮ ಅದನ್ನು ನಿರಾಕರಿಸಿದ. ಚಿತ್ತಯ್ಯ ರಾಜನಾಗಲಿ ಎಂದು ಕಾಟಮ ಹೇಳಿದ. ಚಿತ್ತಯ್ಯ ಓಬ್ಯಾನಿಗೆ ಕೇಳಿದಾಗ ತನಗಿಂತ ಹಿರಿಯರು ಇಬ್ಬರು ಇರುವಾಗ ತಾನು ರಾಜನಾಗುವುದು ಸರಿಯಲ್ಲ ಎಂದು ಓಬಳ ನರಸಿಂಹ ನಿರಾಕರಿಸಿದ. ಕೊನೆಗೆ ಬಹುಕಾಲದ ಚರ್ಚೆಯ ಅನಂತರ ಚಿತ್ತಯ್ಯರಾಜನಾಗಬೇಕೆಂದು ತೀರ್ಮಾನಿಸಲಾಯಿತು. ಕಾಟಯ್ಯನಿಗೆ ವಾಹನವಾಗಿ ಬಿಳಿಯ ಆನೆಯನ್ನು ನೀಡಲಾಯಿತು. ಚಿತ್ತಯ್ಯ ಬ್ರಾಹ್ಮಣನ ಮಗಳಾದ ಗಂಗೆ ಮಾಳಮ್ಮಳನ್ನು ಮದುವೆಯಾಗುತ್ತೇನೆಂದಾಗ ಕಾಟಯ್ಯ ಪರಿಪರಿಯಾಗಿ ಆತನಿಗೆ ಅದು ಸಲ್ಲದು ಎಂದು ತಿಳಿಯಹೇಳುತ್ತಾನೆ. ಕೊನೆಗೆ ಚಿತ್ತಯ್ಯನ ಹಟಕ್ಕೆ ಕಟ್ಟು ಬಿದ್ದು ಬ್ರಾಹ್ಮಣ ಬೊಮ್ಮಯ್ಯನ ಮನೆಗೆ ಹೋಗಿ ಕಾಟಯ್ಯನೇ ಚಿತ್ತಯ್ಯನಿಗಾಗಿ ಹೆಣ್ಣು ಕೇಳಿ ಮದುವೆಯನ್ನು ಕಾಡುಗೊಲ್ಲರ ಸಂಪ್ರದಾಯದಂತೆ ಮಾಡಿಸುತ್ತಾನೆ. ಆದರೆ ಮುಂದೆ ಬೇಟೆಗೆಂದು ಹೋಗುವಾಗ ದಂಡಿಗೆ ನೀಡುವ ಗೌರವದ ವಿಷಯದಲ್ಲಿ ಹೀಗೆಯೇ ನಡೆಯಬೇಕೆಂದು ಬೊಮ್ಮಯ್ಯ ಚಿತ್ತಯ್ಯನಿಗೆ ಅನೇಕ ರೀತಿಯಲ್ಲಿ ತೊಂದರೆ ನೀಡುತ್ತಾನೆ. ಹೊಲೆಯರ ಕಮ್ಮೇಶಿಯ ಸಹಾಯದಿಂದ ಅರಮನೆಯ ನೆಲಮಹಡಿಯಿಂದ ಮುತ್ತಿನ ಛತ್ರಿ, ಹೆಗ್ಗಹಳೆ ತರಿಸಿ ಬೊಮ್ಮಯ್ಯನ ಆಸೆ ತೀರಿಸುತ್ತಾನೆ. ಅನಂತರ ಕಾಟಯ್ಯ ಚಿತ್ತಯ್ಯರು ಕಳ್ಳಿಕೊರಮರನ್ನು ತಿರುಗಣಿ ಪಟ್ಟಣದಲ್ಲಿ ಎದುರಿಸಿ ಚಾಕಚಕ್ಯತೆಯಿಂದ ಅವರನ್ನು ಎದುರಿಸಿ ಸೋಲಿಸಿದರು. ಕಾಡುಗೊಲ್ಲರಲ್ಲಿ ಅಜ್ಜಿಯರ ಗೊಲ್ಲರು ಎಂಬ ಬೆಡಗಿನವರು ಕಾಟಯ್ಯನನ್ನು ಮನೆದೇವರೆಂದು ಪೂಜಿಸುತ್ತಾರೆ.

– ಎಂ.ಎನ್.ವಿ.

ಕಾಟಿಪಾಪಲು ಆಂಧ್ರಪ್ರದೇಶದ ಭಿಕ್ಷುಕ ಗಾಯಕ ಸಂಪ್ರದಾಯಕ್ಕೆ ಸೇರಿದ ಕಲಾವಿದರು (ಸುಡುಗಾಡು ಸಿದ್ಧರು). ‘ಕಾಡು’ ಎಂದರೆ ‘ಅರಣ್ಯ’ ಎಂಬ ಅರ್ಥವಲ್ಲದೆ ‘ಸುಡುಗಾಡು’ ಎಂಬ ಅರ್ಥವೂ ಇದೆ. ಶ್ಮಶಾನದಲ್ಲಿ ಸಂಚಾರ ಮಾಡುತ್ತಾ ಇಂದ್ರಜಾಲವಿದ್ಯೆಯನ್ನು ಪ್ರದರ್ಶಿಸುವುದರಿಂದ ಇವರಿಗೆ ಕಾಟಿಪಾಪಲು ಎಂಬ ಹೆಸರು ಬಂದಿದೆ. ಇವರು ಬುಡಿಗೆ ಜಂಗಾಲು ಎಂಬ ಸಾಮಾಜಿಕ ವರ್ಗಕ್ಕೆ ಸೇರಿದವರು. ಯಾರಾದರೂ ಸತ್ತಾಗ ಇವರು ಗುಂಪಾಗಿ ಬಂದು ವಾದ್ಯಗಳನ್ನು ನುಡಿಸುತ್ತಾ ಇಂದ್ರಜಾಲ ವಿದ್ಯೆಯನ್ನು ಪ್ರದರ್ಶಿಸುತ್ತಾ ಮರಣಗೀತೆಗಳನ್ನು ಹಾಡುತ್ತಾ ಶ್ಮಶಾನದಲ್ಲಿ ಹೆಣವನ್ನು ಸುಡುವವರೆಗೆ ಇದ್ದು ಕೊನೆಗೆ ಹಣವನ್ನು ಬೇಡಿ ತೆಗೆದುಕೊಂಡು ಹೋಗುತ್ತಾರೆ.

ಕಾಟಿಪಾಪಲು ವಿಚಿತ್ರವಾದ ವೇಷದಿಂದ ಭಯವನ್ನು ಹುಟ್ಟಿಸುವಂತಿರುತ್ತಾರೆ. ತಲೆಗೆ ಕೆಂಪು ಅಥವಾ ಬಿಳಿ ರುಮಾಲು ಇರುತ್ತದೆ. ಹಿತ್ತಾಳೆಯಿಂದ ಮಾಡಿದ ಒಂದಡಿ ಎತ್ತರದ ಹಾವಿನ ಹೆಡೆಯಂತಿರುವ ಕಿರೀಟವನ್ನೂ ಇಟ್ಟುಕೊಳ್ಳುತ್ತಾರೆ. ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯಿಂದ ತಯಾರಿಸಿ ಚಿನ್ನದ ಲೇಪನ ಮಾಡಿದ ಕರ್ಣ ಕುಂಡಲಗಳನ್ನು ಧರಿಸುತ್ತಾರೆ. ಆಕರ್ಷಕವಾದ ಉಡುಪುಗಳನ್ನು ಹೊಂದಿರುತ್ತಾರೆ. ಸೊಂಟಕ್ಕೆ ಬಣ್ಣಬಣ್ಣದ ಬಟ್ಟೆಗಳು ನೇತಾಡುತ್ತಿರುತ್ತವೆ. ಸೊಂಟದ ಸುತ್ತ ಸಣ್ಣ ಸಣ್ಣ ಗಂಟೆಗಳಿರುತ್ತವೆ. ಕೈಗೆ ಹಿತ್ತಾಳೆ, ತಾಮ್ರ, ಕಂಚು ಅಥವಾ ಬೆಳ್ಳಿ ಕಡಗಗಳಿರುತ್ತವೆ. ಕಿರೀಟದ ಹಿಂಭಾಗದಿಂದ ಹೆಗಲಮೇಲೆ ಬರುವಂತೆ ಒಂದು ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಹಾವಿನ ಹೆಡೆಯ ಆಕಾರದಲ್ಲಿರುವ ಪಾದರಕ್ಷೆಗಳನ್ನು ಧರಿಸುತ್ತಾರೆ. ಕಂಕುಳಲ್ಲಿ ಒಂದು ಜೋಳಿಗೆ ಇರುತ್ತದೆ. ಅವರ ಹಕ್ಕುಗಳನ್ನು ತಿಳಿಸುವ ತಾಮ್ರ ಪತ್ರವನ್ನು ಹಿತ್ತಾಳೆಯ ಸರಪಣಿಗೆ ನೇತಾಡಿಸಿ ಸೊಂಟಕ್ಕೆ ಕಟ್ಟಿಕೊಂಡಿರುತ್ತಾರೆ. ಇವರ ಕೈಯಲ್ಲಿ ಒಂದು ಗಂಟೆ ಇರುತ್ತದೆ. ಒಟ್ಟು ವೇಷಧಾರಣೆಗೆ ಪೂರಕವಾಗಿ ಗಡ್ಡ, ಮೀಸೆ ಕೂಡ ಇರುತ್ತವೆ. ಮುಖಕ್ಕೆ ಅರಿಸಿನ ಹಚ್ಚಿ, ಕಣ್ಣಿಗೆ ಕಾಡಿಗೆ ಇಟ್ಟು, ಕೆನ್ನೆಗೆ ಕಾಡಿಗೆ ಅಥವಾ ಕಪ್ಪು ಬಣ್ಣದ ಚುಕ್ಕಿ ಇಟ್ಟುಕೊಳ್ಳುತ್ತಾರೆ. ಹಣೆಗೆ ವಿಭೂತಿ ಹಚ್ಚಿಕೊಂಡು, ದೊಡ್ಡದಾಗಿ ಕುಂಕುಮ ಬೊಟ್ಟನು ಇಟ್ಟಿರುತ್ತಾರೆ. ಇವರ ಬಳಿ ಎರಡು ಸಣ್ಣ ಕೋಲುಗಳಿಗೆ ಹಗ್ಗದಿಂದ ಸುತ್ತಿ ಮಾಡಿದ ‘ಗೊಲ್ಲ ಬುಚ್ಚಮ್ಮ’ ಅಥವಾ ‘ಮಾಯಮಲ್ಲಿ’ ಎಂಬ ಗೊಂಬೆಗಳಿರುತ್ತವೆ. ಚೇಳುಗಳಿರುವ ಡಬ್ಬಿ, ಹಾವುಗಳಿರುವ ಚೀಲ ಮೂಲಿಕೆಗಳು ಇರುತ್ತವೆ.

ಯಾರಾದರೂ ಸತ್ತಾಗ ಹತ್ತು ಹನ್ನೆರಡು ಜನ ಕಾಟಿಪಾಪಲು ಗಂಟೆ ಬಾರಿಸುತ್ತಾ ಹಾಡು ಹೇಳುತ್ತಾ ಬರುತ್ತಾರೆ. ಕೆಲವರು ವೈದ್ಯವನ್ನು ಮಾಡುತ್ತಾರೆ. ಇವರ ಬಳಿ ಹಲವು ತರಹದ ಮೂಲಿಕೆ ಗಳಿರುತ್ತವೆ.

ಶವಯಾತ್ರೆ ಇಲ್ಲದ ಸಮಯದಲ್ಲಿ ಇವರು ಹಳ್ಳಿಹಳ್ಳಿಗೆ ಸಂಚಾರ ಮಾಡುತ್ತಾ ಇಂದ್ರಜಾಲ ವಿದ್ಯೆಯನ್ನು ಪ್ರದರ್ಶಿಸುತ್ತಾರೆ. ಇದರಲ್ಲಿ ಐದಾರು ಜನ ಪಾಲ್ಗೊಳ್ಳುತ್ತಾರೆ. ಆಕರ್ಷಕವಾಗಿ ಮಾತನಾಡುವುದರಲ್ಲಿ ಇವರು ನುರಿತವರು. ಮಾತನಾಡುವ ಸಮಯದಲ್ಲೇ ಕೈ ಚಳಕದಿಂದ ಅನೇಕ ರೀತಿಯ ಇಂದ್ರಜಾಲದ ಅಂಶಗಳನ್ನು ಮಾಡುವ ವಿದ್ಯೆ ಇವರದು. ಯಾರಾದರೊಬ್ಬ ಹುಡುಗನಿಗೆ ಗೋಲಿಗಳನ್ನು ಕೊಟ್ಟು ಪ್ರೇಕ್ಷಕರನ್ನು ಮಾತನಾಡಿಸುತ್ತ ಎಲ್ಲರೂ ನೋಡುತ್ತಿರುವಾಗಲೇ ಗೋಲಿಗಳನ್ನು ಹುಡುಗನ ಚಡ್ಡಿಯಿಂದ ಕೆಳಗೆ ಬೀಳುವಂತೆ ಮಾಡುತ್ತಾರೆ. ಮೂಗಿನಿಂದ, ಕಿವಿಗಳಿಂದ, ಗಡ್ಡದಿಂದ ನಾಣ್ಯಗಳನ್ನು, ಗೋಲಿಗಳನ್ನು ತೆಗೆಯುತ್ತಾರೆ. ಕೈಯಲ್ಲಿ ಮೂಳೆ ಇಟ್ಟುಕೊಂಡು ಅದನ್ನು ಇಂದ್ರಜಾಲದ ಕೋಲಿನಂತೆ ಅಲ್ಲಾಡಿಸುತ್ತಾ ಆಕರ್ಷಕವಾಗ ಮಾತನಾಡುತ್ತಾ ಬಾಯಿಂದ ವಿಗ್ರಹಗಳನ್ನು, ಕಪ್ಪೆಗಳನ್ನು ತೆಗೆಯುತ್ತಾರೆ. ಎಲ್ಲರೂ ನೋಡುತ್ತಿರುವಾಗಲೇ ಬೇವಿನೆಲೆ ತೆಗೆದು ಅದನ್ನು ಎಸೆದಾಗ ಚೇಳು, ಹಾವು, ಕಪ್ಪೆ ನೆಲದ ಮೇಲೆ ಬೀಳುತ್ತವೆ. ನೋಡುತ್ತಿರುವುವಾಗಲೇ ಅವು ಮಾಯವಾಗುತ್ತವೆ.

ಇವರ ಬಳಿ ತಾಮ್ರಪತ್ರ ಬಂದಿರುತ್ತದೆ. ಅದನ್ನು ಹಕ್ಕುಪತ್ರವೆಂದು ಹೇಳುತ್ತಾರೆ. ಪರಶಿವನೇ ಅದನ್ನು ಬರೆದುಕೊಟ್ಟಿರುವುದಾಗಿ ಕಾಟಿಪಾಪಲು ಹೇಳುತ್ತಾರೆ. ಶಿವನ ಬೆವರಿನಿಂದಲೇ ತಾವು ಹುಟ್ಟಿರುವುದಾಗಿ ತಿಳಿಸುತ್ತಾರೆ. ತಾಮ್ರ ಪತ್ರದಲ್ಲಿ ಕಾಶೀ ವಿಶ್ವನಾಥಣ ಉಲ್ಲೇಖವಿರುತ್ತದೆ. ಭಾರತ ಉಪಖಂಡದ ೫೬ ದೇಶಗಳ ಬಗ್ಗೆ ಉಲ್ಲೇಖವಿರುತ್ತದೆ. ಇವರಿಗೆ ಯಾರಾರು ಸತ್ತರೆ ಎಷ್ಟು ಕೊಡಬೇಕೆಂಬುದನ್ನು ಬರೆದಿಡಲಾಗಿರುತ್ತದೆ. ‘ದಾನ ಧರ್ಮ – ಹಕ್ಕು – ವಸೂಲಿ’ ಎಂಬ ಹೆಸರಿನಲ್ಲಿ ತಾಮ್ರಪತ್ರದಲ್ಲಿ ಕೆಳಗಿನ ವಿವರಗಳನ್ನು ಕೊಟ್ಟಿರುತ್ತಾರೆ.

ಬ್ರಾಹ್ಮಣ ಸತ್ತರೆ – ಸಾವಿರ ಟಂಕಗಳು – ಹೊಸ ಬಟ್ಟೆ

ವೈಶ್ಯ ಸತ್ತರೆ – ಸ್ವಲ್ಪ ಚಿನ್ನ – ಧನ, ಧಾನ್ಯ

ರಾಜರು ಸತ್ತರೆ – ಚಿನ್ನ, ಹಣ

ಒಕ್ಕಲಿಗರು – ಶ್ಯಾನುಭೋಗರು – ಧಾನ್ಯ, ಹೊಸ ಬಟ್ಟೆ

ವಿಶ್ವಕರ್ಮ,ಪದ್ಮಶಾಲಿ – ನೂರಹದಿನಾರು ರೂಪಾಯಿಗಳು, ಹೊಸ ಬಟ್ಟೆ

ಯಾದವರು – ಕುರಿಗಳು, ಮೇಕೆ, ಹಣ

ರಜಕರು – ಹೊಸ ಬಟ್ಟೆ

ದಲಿತರು – ಒಂದು ವರಹ

ಕಾಟಿಪಾಪಲು ತಮ್ಮ ಪ್ರದರ್ಶನಗಳಿಗಾಗಿ ಕೆಲವು ಗೊಂಬೆಗಳನ್ನು ತಯಾರು ಮಾಡುತ್ತಾರೆ. ಆ ಗೊಂಬೆಗಳಿಗೆ ದಾರ ಕಟ್ಟಿ ಅದನ್ನು ಎಳೆದು ಗೊಂಬೆಯನ್ನು ಕುಣಿಸಿ ಪ್ರೇಕ್ಷಕರನ್ನು ನಗಿಸುತ್ತಾರೆ.

ಶವಯಾತ್ರೆ ನಡೆಯುವಾಗ ಅವರು ಹಾಡುವ ಹಾಡುಗಳು ಸ್ವಲ್ಪಮಟ್ಟಿಗೆ ಆಶೀರ್ವಚನ, ಹಕ್ಕುಗಳ ಉಲ್ಲೇಖ, ದಾನ ಕೊಡದವರ ಬಗ್ಗೆ ಬೆದರಿಕೆಗಳನ್ನು ಒಳಗೊಂಡಿರುತ್ತವೆ.

ಮಕ್ಕಳು ಬಯಸುವವ ಪಾಪನೇ
ಬಾಲಕರ ಬಯಸುವವ ಪಾಪವೇ
ಬುಗುರಿಯನು ಆಡಿದ ಪಾಪನೇ
ಕಣಗಿಲೆ ಗುಡ್ಡ ದತ್ರ ಪಾಪನೇ
ಹಕ್ಕುಗಳ ಬಿಡೋದಿಲ್ಲ ಪಾಪನೇ
ಹಕ್ಕುಗಳು ಬೇಕಂತಾನೇ ಪಾಪನೇ
ದಾನಧರ್ಮ ಕೊಡುವದಾತನಿಗೆ
ಕಾಶೀಯಾತ್ರಾ ಪುಣ್ಯವಿದೆ ಸತ್ಯವಿದು
ನರಕ ಲೋಕ ತಪ್ಪದಣ್ಣ ನೋಡಿರಿ
ನಾಕಲೋಕ ಬೇಕಂದ್ರೆ ಕೊಡ್ರಿ

ಈ ರೀತಿಯ ಹಾಡುಗಳು ಇವರ ಅಂತರಂಗವನ್ನು ತಿಳಿಸುತ್ತದೆ.

– ಎನ್.ವೈ.ಎಸ್. ಅನುವಾದ ಎ.ಎಂ.ಡಿ.