ಕಾಳಿಯೂಟ್ಟು ದಕ್ಷಿಣ ಕೇರಳದ, ಅದರಲ್ಲೂ ತಿರುವನಂತಪುರಂ ಆಚರಣೆಯ ಕಾಳೀ ಆರಾಧನೆಗೆ ಸಂಬಂಧಿಸಿದ್ದಾಗಿದೆ. ದೇವಾಲಯಗಳಿಂದ ದೇವಾಲಯಗಳಿಗೆ ಈ ಸಂಪ್ರದಾಯದಲ್ಲಿ ವ್ಯತ್ಯಾಸಗಳಿವೆ. ಉದಾಹರಣೆಗೆ ವರ್ಷಕ್ಕೊಂದು ಬಾರಿ, ವೆಳ್ಳಯಾಣಿಯಲ್ಲಿ ಮೂರು ವರ್ಷಗಳಲ್ಲೊಮ್ಮೆ, ಕರಿಂಕುಳಂನಲ್ಲಿ ನಾಲ್ಕು ವರ್ಷಕ್ಕೊಮ್ಮೆ ಕೊಲ್ಲಂಕೋಡು ದೇವೀ ದೇವಾಲಯದಲ್ಲಿ ಏಳು ಅಥವಾ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ದಕ್ಷಿಣ ಕೇರಳದ ಭೌತಿಕ ಆಚರಣೆಯಿಂದಲೇ ತಿಳಿಯಲಾಗುವ ಕಾಳಿಯೂಟ್ಟ್‌ನ ಧಾರ್ಮಿಕ ಆಚರಣೆಗಳು ಒಂಬತ್ತರಿಂದ ಹತ್ತು ದಿನಗಳ ತನಕ ನಡೆಯುತ್ತವೆ. ಕಾಳಿಯೂಟ್ಟುವಿನ ಪುರಾಣದ ಸಾರವು ಕಾಳಿ ಮತ್ತು ದಾರುಕರಿಗೆ ಸಂಬಂಧಿಸಿದುದು.

ದೇವತಾ ಸಂದೇಶ ವಾಹಕವಾದ ನಾರದನ ಮೂಲಕ ಜನ ಶಿವ ದೇವರಿಗೆ ದಾರುಕನ ದುರಾಡಳಿತ ವಿರುದ್ಧ ದೂರು ಕೊಡುತ್ತಾರೆ. ಶಿವನು ಇದರಿಂದ ಸಿಟ್ಟುಗೊಂಡ. ಅವನ ಮೂರನೆಯ ಕಣ್ಣಿನಿಂದ ಕಾಳಿ ಉದ್ಭವಿಸಿದಳು. ಭಯಾನಕಳೂ ಕರಿಯಳೂ ಆದ ಕಾಳಿ ಶಿವನ ಕಣ್ಣಿನಿಂದ ಹೊರನೆಗೆದಳು. ದಾರುಕನೊಂದಿಗೆ ಯುದ್ಧ ತೊಡಗಿದಳು. ದಾರುಕನ ದಾಳಿಗೆ ತತ್ತರಿಸಿ ಪ್ರಜ್ಞಾಶೂನ್ಯಳಾದಳು. ಉಮಾದೇವಿ ದಾರುಕನ ಶಕ್ತಿಮೂಲವನ್ನು ತಿಳಿಸುವ ಮೂಲಕ ಕಾಳಿಗೆ ನೆರವಾದಳು. ಕಾಳಿಯು ಮಾಂತ್ರಿಕ ಶಕ್ತಿಯನ್ನು ಪ್ರಯೋಗಿಸಿದರೂ ದಾರುಕನು ಅವನ್ನೆಲ್ಲ ಸಮರ್ಥವಾಗಿ ತಡೆದು ನಿಂತ. ಆತನ ರಹಸ್ಯ ಶಕ್ತಿಯನ್ನು ತಿಳಿದುಕೊಂಡ ಕಾಳಿ ಅವನನ್ನು ಆಕ್ರಮಿಸಿದಳು. ಅವಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆತ ಪಾತಾಳಕ್ಕೆ ಜಾರಿದ. ತುಂಬ ಕಾಳದವರೆಗೆ ಕಾಳಿ ಅವನನ್ನು ಹುಡುಕಾಡಿದಳು. ಕೊನೆಗೆ ತನ್ನ ಕೇಶರಾಶಿಯಿಂದ ಸೂರ್ಯನನ್ನು ಮರೆಮಾಡಿದಳು. ಆತನಿಗೆ ಕತ್ತಲಲ್ಲಿ ಹೋರಾಡುವ ಸಾಮರ್ಥ್ಯವಿದ್ದುದನ್ನು ಆಕೆ ತಿಳಿದೇ ಇದ್ದಳು. ಈ ಹೊತ್ತಿನಲ್ಲೆ ದಾರುಕನು ತಾನು ಅಡಗಿಕೊಂಡಿದ್ದ ಪಾತಾಳ ಬಿಲದಿಂದ ಹೊರಬಂದ. ಕೂಡಲೆ ಕಾಳಿಯು ಆತನನ್ನು ಆಕ್ರಮಿಸಿ ಕೊಂದು ಹಾಕಿದಳು. ಕಾಳಿಯೂಟ್ಟುವಿನ ತೋಟ್ಟಂಪಾಟ್ಟುವಿನಲ್ಲಿ ವರ್ಣಿತವಾಗಿರುವ ಕಥಾಸಾರ ಇದು.

ಕಳಿಕುರಿಕ್ಕಲ್ (ಆಟ ನಿಶ್ಚಯ) ನಿಂದ ಕಾಳಿಯೂಟ್ಟು ಆರಂಭವಾಗುತ್ತದೆ. ಕಾಳಿಯೂಟ್ಟುವಿನ ಮುಖ್ಯ ಅಂಗಗಳೆಂದರೆ ವೆಳ್ಳಾಟಂ ಕಳಿ, ಕಾಳಿಯೂಟ್ಟುವಿನ ಮುಖ್ಯ ಅಂಗಗಳೆಂದರೆ ವೆಳ್ಳಾಟಂ ಕಳಿ,ಮ ಕುರುತ್ತೋಲಯಾಟ್ಟಂ, ನಾರದರ್ ಪುರಪ್ಪಾಡು, ನಾಯರ್ ಪುರಪ್ಪಾಡು, ಐರಣಿ ಪುರಪ್ಪಾಡು, ಕಣಿಯರ್ ಪುರಪ್ಪಾಡು, ಪುಲಯರ್ ಪುರಪ್ಪಾಡು, ಇಮುಡಿಯುಯಿಚ್ಚೀಲ್, ನಿಲತ್ತಿಲ್ ಪೋರು – ಇವು.

ಕಾಳಿಯೂಟ್ಟುವಿನ ಅಧಿಕಾರವು ತಿರುವಾಂಕೂರಿನ ಪೊನ್ನಾರ್ ವಂಶದ್ದು. ಕಳಿಕುರಿಕ್ಕಲ್‌ನ ದಿನ ದೇವಾಲಯದ ಕಾವಲ್ ಮಡಪ್ಪುರದಿಂದ ಕಾಳಿಯನ್ನು ಅವರು ಆಹ್ವಾನಿಸುತ್ತಾರೆ. ಶ್ರೀ ಬಲಿ ಉತ್ಸವಾನಂತರ ಗರ್ಭಗುಡಿಯಿಂದ ಕಾಳಿಯನ್ನು ಕೂತ್ತುವಿಳಕ್ಕಿಗೆ ಕರೆಯುತ್ತಾರೆ. ಬಳಿಕ ಶಕ್ತಿಪೂಜೆಯನ್ನು ತಿರಿ ಉಯಿಚ್ಚಿಲನ್ನೂ (ಬತ್ತಿ ನಿವಾಳಿಸುವುದು) ನಡೆಸುತ್ತಾರೆ. ಬಳಿಕ ವೆಳ್ಳಾಟಂ ಕಳಿ. ಇದನ್ನು ಪುಲಯ ಜಾತಿಯವರು ನಿರ್ವಹಿಸುತ್ತಾರೆ. ಪ್ರದರ್ಶನಕಾರರು ಪಂಚೆಯುಟ್ಟು ತಲೆಗೆ ರುಮಾಲು ಸುತ್ತಿರುತ್ತಾರೆ. ಕರಡಿಗ (ಒಂದು ಚರ್ಮವಾದ್ಯ) ಮತ್ತು ಚೆಂಗಿಲಗಳು ಪ್ರಧಾನ ವಾದ್ಯಗಳು. ವೆಳ್ಳಾಟಂ ಕಳಿಯನ್ನು ಕುರುತ್ತೋಲತುಳ್ಳಲ್ ಹಿಂಬಾಲಿಸುತ್ತದೆ. ವೆಳ್ಳಾಟಂಕಳಿ ನಡೆಯುವಾಗ ಕಾಳಿವೇಷಧಾರಿಯು ವಿಶ್ರಾಂತಿ ಪಡೆಯುತ್ತಾನೆ. ಕುರುತ್ತೋಲತುಳ್ಳನ್‌ನ್ನು ವಿಶ್ರಾಂತಿಯ ಬಳಿಕ ಕಾಳಿಯನ್ನು ಎಬ್ಬಿಸಲು ನಡೆಸಲಾಗುತ್ತದೆ. ಕಾಳಿಯೂಟ್ಟುವಿನ ಎಲ್ಲ ದಿನಗಳಲ್ಲೂ ವೆಳ್ಳಾಟಂ ಕಳಿ ಮತ್ತು ಕುರುತ್ತೋಲತುಳ್ಳಲ್ ಇರುತ್ತದೆ. ಎರಡನೆಯ ದಿನ ಕುರುತ್ತೋಲಯಾಟ್ಟಂ ನಡೆಯುತ್ತದೆ. ಅದಕ್ಕೆ ನಿರ್ದಿಷ್ಟ ಹೆಜ್ಜೆಗಳೇನೂ ಇಲ್ಲ. ಈ ಪ್ರದರ್ಶನ ಸಂದರ್ಭದಲ್ಲಿ ಉಳಿದವರು ಹಾಡಿನ ಮೂಲಕ ಕಾಳಿಯ ಕಥೆಯನ್ನು ನಿರೂಪಿಸುತ್ತಾರೆ.

ಮೂರನೆಯ ದಿನ ನಾರದಪುರಪ್ಪಾಡು ಪ್ರದರ್ಶನವಿರುತ್ತದೆ. ನಾರದನು ಒಬ್ಬ ವೀಕ್ಷಕನಂತೆ ಕಾಣಿಸಿಕೊಂಡು ಕಾಳಿಯೂಟ್ಟುವಿನ ಪ್ರಸ್ತಾವನೆಯನ್ನು ಮಾಡುತ್ತಾನೆ. ಈ ಪ್ರದರ್ಶನದ ವೇಳೆ ದಾರುಕನ ಕಥೆಯು ಬಿತ್ತರಿಸಲ್ಪಡುತ್ತದೆ. ಈ ಮಧ್ಯೆ ಒಂದು ವಿಡಂಬನಾತ್ಮಕ ಮತ್ತು ವಿಮರ್ಶಾತ್ಮಕ ನೆಲೆಯಿಂದ ಕಥನ ಪ್ರಶ್ನೋತ್ತರ ವಿಧಾನದಲ್ಲಿ ನಾರದನಿಂದ ಮುಂದೆ ಸಾಗುತ್ತದೆ. ನಾಲ್ಕನೆಯ ದಿನ ನಾಯರ್ ಪುರಪ್ಪಾಡು, ಕಾಳಿಯೂಟ್ಟುವಿನ ಪ್ರಾಯೋಜಕನಂತೆ ನಾಯರ್ ಕಾಣಿಸಿಕೊಳ್ಳುತ್ತಾನೆ. ಅದನ್ನು ಕಾವಿಲದಾಯ ನಾಯರ್ ಪುರಪ್ಪಾಡು ಎಂದು ಕೂಡ ಕರೆಯುತ್ತಾರೆ. ವಿಭಿನ್ನ ಜಾತಿಯ ವರ ವಿಮರ್ಶೆ, ವಿಡಂಬನೆಗಳು ನಡೆಯುತ್ತವೆ. ಜತೆಗೆ ತಮ್ಮನ್ನೆ ತಾವು ಗೇಲಿ ಮಾಡಿಕೊಳ್ಳುತ್ತಾರೆ ಕೂಡ. ಕಾವಿಲದಾಯಂ ಎಂಬುದು ಆ ಹುದ್ದೆಯ ಹೆಸರು. ಕಾಳಿಯ ಮಡಪ್ಪುರದ ಸಂರಕ್ಷಕನಾತ. ಆಯಿರಾಣಿ ಪುರಪ್ಪಾಡು ಐದನೆಯ ದಿನ ನಡೆಯುವ ಕಾರ್ಯಕ್ರಮ. ಓಬೀರಾಯನ ಕಾಲದ ಬ್ರಾಹ್ಮಣಕ ಆಚರಣೆಗಳು ಮತ್ತು ಪದ್ದತಿಗಳು ಇಲ್ಲಿ ತೀವ್ರ ಟೀಕೆಗೆ ಒಳಗಾಗುತ್ತದೆ. ಆರನೆಯ ದಿನ ಕಣಿಯೂರು ಪುರಪ್ಪಾಡು ನಡೆಯುತ್ತದೆ. ನಾಯನಾರ್ ಕಣಿಯಾರ್ ಮತ್ತು ಕಾಂದನ್ ಕಣಿಯಾರರು ಮುಖ್ಯ ಪಾತ್ರಗಳು. ಅಲ್ಲಿ ಗ್ರಹಗತಿಯ ಒಂದು ಲೆಕ್ಕಾಚಾರವನ್ನು ಅವರು ಮಾಡುತ್ತಾರೆ. ಇದು ಕಾಳಿಯೂಟ್ಟು ನಡೆಯುವ ಜಾಗದ ಗುಣದೋಷಗಳನ್ನು ಹೇಳುತ್ತದೆ ಮತ್ತು ಕೆಲವು ಸಮಸ್ಯೆಗಳನ್ನು ಎತ್ತಿ ಹೇಳಿ ಅದರ ಪರಿಹಾರವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮದ ಮೂಲಕ ಪುರೋಹಿತ ವರ್ಗದ ಧನದಾಹವನ್ನು ಗೇಲಿ ಮಾಡುತ್ತಾರೆ. ಏಳನೆಯ ದಿನ ಪುಲಯರ್ ಪುರಪ್ಪಾಡು, ಕಳ್ಳುಕುಡಿಯ ಪುರಪ್ಪಾಡು, ಪಾಂಡಿ ಬ್ರಾಹ್ಮಣ ಪುರಪ್ಪಾಡು, ಸುಬ್ರಹ್ಮಣ್ಯ – ಏಳ್ಳಿ, ಪರಿಣಯ ಕಥೆ – ಇತ್ಯಾದಿಗಳಿರುತ್ತವೆ. ಎಂಟನೆಯ ದಿನ ಮುಡಿಯುಯಿಚ್ಚಿಲ್. ಏಳು ದಿನಗಳ ಕಾರ್ಯಕ್ರಮಗಳೂ ತುಳ್ಳಲ್‌ಪುರ (ಕುಣಿತದ ಮನೆ) ಯಲ್ಲಿ ನಡೆಯುತ್ತದೆ. ಆದರೆ ಎಂಟನೆಯ ದಿನದ್ದು ಸಮೀಪದ ಬಯಲಲ್ಲಿ ದಾರುಕನನ್ನು ಹುಡುಕಾಡುತ್ತ ದುರ್ಗಾದೇವಿ ಮತ್ತು ಕಾಳಿ ಉತ್ತರಕ್ಕೂ ದಕ್ಷಿಣಕ್ಕೂ ಏಕಕಾಲಕ್ಕೆ ಸಂಚರಿಸುತ್ತಿದ್ದರು. ಅವರು ನಾಗಕಟ್ಟುಗಳು ಮತ್ತು ಮುತ್ತು ರತ್ನಗಳಿಂದ ಕೂಡಿದ ಕಿರೀಟಗಳನ್ನು ಧರಿಸಿದ್ದರು. ಇದು ಕಟಾವಿನ ಕಾಲವಾಗಿದ್ದು ರೈತರು ತಮ್ಮ ಫಸಲಿನಿಂದ ಈ ದೇವಿಯರಿಗೆ ಕಾಣಿಕೆಗಳನ್ನು ಅರ್ಪಿಸಿದರು. ದೇವಿಯರು ಅವರನ್ನು ಹರಸಿದರು. ದೇವಿಯರಿಗೆ ದಾರುಕನ ಪತ್ತೆಯಾಗಲಿಲ್ಲ. ಹತಾಶ ದೇವಿಯರಿಗೆ ದೇವಾಲಯದಲ್ಲಿ ಉಚ್ಚಾಲಿ (ಮ.)ಯನ್ನು ಏರ್ಪಡಿಸಲಾಯಿತು. ಈ ಹೊತ್ತಿಗೆ ದಾರುಕನ ವೆನ್ನಿಪ್ಪರ (ಒಂದು ಚರ್ಮವಾದ್ಯ)ದ ಸದ್ದು ಕೇಳಿತು. ಇದನ್ನು ಮೊದಲು ಕೇಳಿಸಿಕೊಂಡು ಶಿವ. ನಾರದವನ್ನು ಅದೇನೆಂದು ತಿಳಿಯಲು ಶಿವ ಕಳುಹಿಸಿದ ನಾರದ ಅಲ್ಲಿಗೆ ತಲಪಿದಾಗ ದಾರುಕನು ದೇವತೆಗಳಿಂದ ಕಳುಹಿಸ್ಪಟ್ಟಿದ್ದ ಆರು ದೇವಿಯರನ್ನು ಪರಾಭವಗೊಳಿಸಿದ. ಶಿವನಿಗೆ ಈ ವಿಷಯವನ್ನು ನಾರದ ತಿಳಿಸಿದಾಗ ಶಿವನು ಸಿಟ್ಟಾಗಿ ಕಾಳಿಯನ್ನು ಸೃಷ್ಟಿಸಿದ. ಕಾಳಿಯು ದಾರುಕನನ್ನು ಕೊಲ್ಲಲು ಶಕ್ತಳಾಗುವಲ್ಲಿಗೆ ಮುಡಿಯುಯಿಚ್ಚಿಲ್ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಒಂಬತ್ತನೆ ದಿನದ ಪ್ರದರ್ಶನ ತಿರುಳೆಂದರೆ ನಿಲತ್ತಿಲ್ ಪೋರು (ನೆಲದಲ್ಲಿ ಹೋರಾಟ ಮತ್ತು ದಾರುಕ ವಧೆ. ಈ ಪ್ರದರ್ಶನಕ್ಕಾಗಿ ಎರಡು ಚಪ್ಪರಗಳು ನಿರ್ಮಿತವಾಗುತ್ತವೆ. ತೆಂಗಿನ ಮರವನ್ನು ಉಪಯೋಗಿಸಿಕೊಂಡು ಕಾಳಿಗಾಗಿ ನಲವತ್ತೆರಡು ಅಡಿ ಎತ್ತರದ್ದೊಂದು ಚಪ್ಪರವೂ (ಉತ್ತರ ಭಾಗದಲ್ಲಿ) ದಕ್ಷಿಣದಲ್ಲಿ ಇಪ್ಪತ್ತೇಳು ಅಡಿ ಎತ್ತರದ ಚಪ್ಪರವು ದಾರುಕನಿಗೂ ಸಿದ್ಧವಾಗುತ್ತವೆ. ಉಳಿದವರು ಕಾಳೀ ತೋಟ್ಟಂಗಳನ್ನು ಹಾಡುತ್ತಾರೆ.

ನೆಲದಲ್ಲಿ ಕಾದಾಟ ಶುರುವಾಗುತ್ತದೆ. ಮಧ್ಯದಲ್ಲೊಮ್ಮೆ ದಾರುಕನ ಬಾಣತಾಗಿ ಕಾಳಿಯು ಪ್ರಜ್ಞಾಶೂನ್ಯಳಾಗಿ ನೆಲಕ್ಕೆ ಬೀಳುತ್ತದೆ. ಬಳಿಕ ಚಪ್ಪರವನ್ನು ಪುನಃ ಏರಿ ಶಿವಪ್ರಸಾದವನ್ನು ಬೇಡುತ್ತಾಳೆ. ಆಗ ಪುನಃ ಕಾದಾಟ ಶುರುವಾಗುತ್ತದೆ. ಕೊನೆಗೆ ದಾರುಕನ ಕಿರೀಟವನ್ನು ಕಾಳಿ ತೆಗೆದುಬಿಡುತ್ತಾಳೆ. ಬಾಳೆ ಹಣ್ಣಿನ ಚಿಪ್ಪೊಂದನ್ನು ಕತ್ತರಿಸುವ ಮೂಲಕ ದಾರುಕ ವಧೆಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಲಾಗುತ್ತಿದೆ. ಕಾಳಿಯು ಬಳಿಕ ಸಂತಸದಲ್ಲಿ ಕುಣಿಯತೊಡಗುತ್ತಾಳೆ. ಇದಕ್ಕೆ ‘ಮುಡಿತಲಮಾಡಲ್’ ಎಂದು ಹೆಸರೂ ಇದೆ. ದೇವಾಲಯವು ಕೈಲಾಸದಲ್ಲಿ ಹಾಗೆ ಅಲಂಕೃತವಾಗುತ್ತದೆ. ಆಗ ದಾರುಕನ ಕಿರೀಟವು ಕಾಳಿಯ ಕಿರೀಟದ ಸುತ್ತ ಸುತ್ತುತ್ತಿರುತ್ತದೆ. ಇದನ್ನೇ ‘ಮುಡಿಯುಯಿಜ್ಜಿಲ್’ ಎಂದು ಕರೆಯುವುದು. ಕಾಳಿಯ ಮುಡಿಯನ್ನು ಆ ಮೇಲೆ ಇಳಿಸಲಾಗುತ್ತದೆ. ಅಷ್ಟರ ತನಕ ಸಂಗ್ರಹಿತವಾದ ಕಾಳುಗಳನ್ನೆಲ್ಲ ಹಂಚಲಾಗುತ್ತದೆ. ಮುಖ್ಯ ಅರ್ಚಕರ ಸಮ್ಮುಖದಲ್ಲಿ ಇದು ನಡೆಯುತ್ತದೆ. ಕಾಳಿಯೂಟ್ಟು ಇದರೊಂದಿಗೆ ಮುಕ್ತಾಯವಾಗುತ್ತದೆ.

ಕಾಳಿಯೂಟ್ಟಿನ ಬಗ್ಗೆ ಕೆಲವೊಂದು ಅಧ್ಯಯನಗಳು ನಡೆದಿದ್ದರೂ ಕೆಲವಷ್ಟೆ ಗಂಭೀರವಾದವುಗಳು. ಕೇರಳ ಪರಿಸರದಲ್ಲಿ ಕಾಳೀ ಸಂಕಲ್ಪ ಎಂಬೊಂದು ಲೇಖನದಲ್ಲಿ ಸ್ವಲ್ಪ ವಿವರಗಳಿವೆ.ಸ ಈ ಆಚರಣೆಯು ಈಗ ತಿರುವನಂತಪುರ ಜಿಲ್ಲೆಯಲ್ಲಿದೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಆಚರಣೆಯ ಇದ್ದು ಅವಕ್ಕೆ ತಮ್ಮದೇ ಮಿತಿಗಳಿವೆ.

– ಸಿ.ಕೆ.ಜಿ. ಅನುವಾದ ಕೆ.ಕೆ.

ಕಾಳಿವೇಡಂ ಕಾಳಿವೇಷವನ್ನು ಹಾಕಿಕೊಂಡು ಆಡುವ ಕಲೆಗೆ ಕಾಳಿ ವೇಷ ಎಂದು ಕರೆಯಲಾಗುತ್ತದೆ. ಈ ರೀತಿಯ ಪೂಜಾವಿಧಾನದ ಆಚರಣೆಗಳು ಜನತೆಯ ಜೀವನದ ಒಂದು ಭಾಗವಾಗಿರುತ್ತದೆ. ಪುರುಷರು ಕಾಳವೇಷವನ್ನು ಹಾಕಿಕೊಂಡು ಪದ್ಧತಿ ತಮಿಳುನಾಡಿನ ಹಲವು ಭಾಗಗಳಲ್ಲಿ ರೂಢಿಯಲ್ಲಿದೆ. ಈ ಕಲೆಯನ್ನು ಕಾಳಿವೇಡಂ (ಕಾಳಿವೇಷ), ಕಾಳಿಯಾಟ್ಟಂ (ಕಾಳಿಯಾಟ), ಕಾಳಿತಿರುನಡನಮ್ (ಕಾಳಿಕುಣಿತ), ಕಾಳಿವೀದಿವಿಳಾ (ಬೀದಿ ಮೆರವಣಿಗೆ) ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಈ ಕಲೆ ಪ್ರದೇಶದಿಂದ ಪ್ರದೇಶಕ್ಕೆ ಪ್ರದರ್ಶಿಸುವ ವಾತಾವರಣ, ಪ್ರದರ್ಶನದ ಉದ್ದೇಶ, ಪ್ರದರ್ಶನಗೊಳ್ಳುವ ರೀತಿ, ಉಪಯೋಗಿಸುವ ಸಂಗೀತ ವಾದ್ಯಗಳು ಮೊದಲಾದವುಗಳಿಂದ ಬದಲಾವಣೆಗೊಳ್ಳುತ್ತದೆ.

ಚೆಂಗಲ್ಪಟ್ಟು, ಸೇಲಂ, ಧರ್ಮಪುರಿ, ತೆನ್ನಾರ್ಕಾಡು, ವಡಾರ್ಕ್ಕಾಡು, ತಿರುಚ್ಚಿ, ತಂಜಾವೂರು ಮೊದಲಾದ ಉತ್ತರ ತಮಿಳುನಾಡಿನ ಬಗ್ಗೆ ದ್ರೌಪದಿಯಮ್ಮರ ದೇವಾಲಯಗಳಲ್ಲಿ ಹಬ್ಬದ ದಿನ ಮಹಾಭಾರತದ ಕಥೆಯನ್ನು ಪ್ರದರ್ಶಿಸುತ್ತಾರೆ. ಕಥೆಯಲ್ಲಿ ಅರ್ಜುನನ ಮಗನಾದ ಅರವಾನೈಯನ್ನು ಕಾಳಿಗೆ ಬಲಿ ಕೊಡುವ ಕಾರ್ಯಕ್ರಮವು ಪ್ರಾರಂಭವಾಗುವುದಕ್ಕೆ ಮುಂಚೆ ಒಬ್ಬರು ಕಾಲಿವೇಷಹಾಕಿಕೊಂಡು ಕುಣಿದುಕೊಂಡು ಊರಿನ ಸುತ್ತ ಬರುವರು. ಅವರು ತಮ್ಮ ಹತ್ತಿರ ಬರುವವರನ್ನು ಆವೇಷದಿಂದ ಅಟ್ಟಿಸಿಕೊಂಡು ಹೋಗುವರು. ಕಾಳಿವೇಷಧಾರಿಗಳನ್ನು ಹಗ್ಗದಿಂದ ಕಟ್ಟಿ ಹಿಂಭಾಗದಲ್ಲಿ ಇಬ್ಬರು ಹಿಡಿದುಕೊಂಡು ಬರುವರು. ಅವರ ಮುಂದೆ ಕತ್ತಿವರಸೆ, ಕಾಲ್ಗಡಗದ ಕುಣಿತ ಮೊದಲಾದ ಕಲೆಗಳು ಪ್ರದರ್ಶನಗೊಳ್ಳುತ್ತವೆ. ಭೂತ ಹಿಡಿದ ಹೆಂಗಸರು ಕಾಳಿಯ ಮುಂದುಗಡೆ ಬಂದು ನಿಲ್ಲಲು ಕಾಳಿ ವೇಷವನ್ನು ಹಾಕಿಕೊಂಡವರು ತನ್ನ ಕೈಯಲ್ಲಿ ಹಿಡಿದಿರುವು ಮೊರ, ಪೊರಕೆಗಳಿಂದ ಹೆಂಗಸರಿಗೆ ಹೊಡೆಯುವುದು – ಈ ರೀತಿ ಮಾಡಿದರೆ ಭೂತ ಬಿಟ್ಟು ಹೋಗುವುದು ಎಂದು ನಂಬಲಾಗುತ್ತದೆ.

ತಂಜೈ ಜಿಲ್ಲೆಗೆ ಸೇರಿದ ಕುಂಭಕೋಣಂ, ಆಡುತ್ತರೈ, ತಿರುಪುವನಂ, ತಿರುಮಂಗಲಕ್ಕುಡಿ, ವಡಮಟ್ಟಂ, ತೇಪ್ಪೆರುಮಾನಲ್ಲೂರ್ ಮೊಲದಾದ ಊರುಗಳ ತಿರುಚ್ಚಿ ಜಿಲ್ಲೆಗೆ ಸೇರಿದ ಕೀಳಪ್ಪಳೂರ್, ಉಡೈಯಾರ್ ಪಾಳೈಯಮ್, ಚೆಯಂಗೊಂಡಮ್ ಮೊಲದಾದ ಊರುಗಳ ಪಚ್ಚೈಕಾಳಿ (ಹಸಿರು ಬಣ್ಣದ ಕಾಳಿ), ಪವಳಕಾಳಿ (ಹವಳದ ಕಾಳಿ), ಶ್ರೀಮಧುರಕಾಳಿ, ಸುಂದರಮಾಕಾಳಿ, ವಡಭದ್ರಕಾಳಿ ಮೊದಲಾದ ಕಾಳಿ ದೇವಾಲಯಗಳಲ್ಲಿ ಕಾಳಿ ತಿರುನಡನಮ್ (ಕಾಳಿ ವೇಷ ಹಾಕಿ ಕುಣಿಯುವುದು) ಪ್ರದರ್ಶನ ನಡೆಯುತ್ತದೆ.

ಜನರು ಆಚರಣೆಯ ಒಂದು ಭಾಗವಾಗಿ ಕಾಳಿವೇಷವನ್ನು ಹಾಕುತ್ತಾರೆ. ಕಾಪ್ಪುಕಟ್ಟಿದ (ತೋರಣ) ದಿನದಿಂದ ಕಟ್ಟುನಿಟ್ಟಿನ ವ್ರತವನ್ನು ಕಾಳಿವೇಷಧಾರಿಗಳು ಕೈಗೊಂಡು ವೇಷ ಧರಿಸುತ್ತಾರೆ. ಕಾಳಿವೇಷ ಧರಿಸುವುದಕ್ಕಾಗಿ ಕಾಳಿಯ ದೇಹದ ಭಾಗಗಳನ್ನು ದೇವಸ್ಥಾನದಲ್ಲಿ ಇಟ್ಟು ರಕ್ಷಿಸಲಾಗಿರುತ್ತದೆ. ಒಳ್ಳೆಯ ಅತ್ತಿ ಮರದಿಂದ ಮಾಡಿದ ಬಣ್ಣ ಹಚ್ಚಲಾಗಿರುವ ಕಾಳಿಯ ಮುಖವಾಡವನ್ನು ಹಾಕಿಕೊಂಡು,ಕೈಗಳನ್ನು ಜೋಡಿಸಿಕೊಂಡು ನೈಯ್ಯಾಂಡಿ ಮೇಳದ ಸಂಗೀತಕ್ಕೆ ತಕ್ಕಂತೆ ಕುಣಿದು ಕಾಳಿವೇಷದವರು ಬೀದಿ ಮೆರೆವಣಿಗೆ ಮಾಡುತ್ತಾರೆ. ಈ ರೀತಿ ಕಾಳಿ ವೇಷಧರಿಸಿರುವವರು ಊರನ್ನು ಸುತ್ತಿ ಬರುವಾಗ ಒಳ್ಳೆಯ ಮಾತನ್ನು ನುಡಿಯುವುದು ತಮಿಳು ನಾಡಿನ ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿದೆ.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಪ್ರದರ್ಶನಗೊಳ್ಳುವ ಕಾಳಿವೇಷ ಎಂಬ ಕಲಾ ಪ್ರಕಾರ ಮಹಾಭಾರತ ಕಥೆಯನ್ನು, ಊರಿನ ಪುರಾಣ ಕಥೆಗಳನ್ನು ಹರಕೆ ಮೊದಲಾದವುಗಳನ್ನು ಆಧಾರವಾಗಿ ಇಟ್ಟು ಕೊಂಡಿರುತ್ತದೆ. ಕಾಳಿವೇಷವನ್ನು ಹಾಕುವ ಕಲಾವಿದರ ವೇಷಭೂಷಣವು ತಗಿಡಿನಿಂದ ಮಾಡಿದ ಮುಖವಾಡ, ಮರದಿಂದ ಮಾಡಿದ ಮುಖವಾಡ, ಉಬ್ಬಿದ ಎದೆ ಮೊದಲಾದವನ್ನು ಒಳಗೊಂಡಿರುತ್ತದೆ. ಕಾಲಿನಲ್ಲಿ ಕಾಲ್ಗಡಗ ಕೈಯಲ್ಲಿ ಬಳೆಗಳು, ಉದ್ದವಾದ ಕೇಶರಾಶಿ, ಕೈಯಲ್ಲಿ ತ್ರಿಶೂಲ ಮೊದಲಾದವು ಕಾಳಿಯ ವೇಷದಲ್ಲಿ ಸ್ಥಾನ ಪಡೆದಿರುತ್ತವೆ. ಹರಕೆ ತೀರಿಸುವುದಕ್ಕಾಗಿ ಜನರು ಕಾಳಿವೇಷವನ್ನು ಸಾಮಾನ್ಯವಾಗಿ ಹಾಕುತ್ತಾರೆ. ನಲ್ಲೈ, ಪಾಳೈಯಂಗೋಟೈ, ಕುಲಶೇಖರಪಟ್ಟಿಣಂ ಮೊದಲಾದ ಊರುಗಳಲ್ಲಿ ಕಂಡುಬರುವ ಕಾಳಿವೇಷದಲ್ಲಿ ಮರದ ಮುಖವಾಡ ಇರುವುದಿಲ್ಲ.

ಪಚ್ಚೈಕ್ಕಾಳಿ, ಪವಳಕ್ಕಾಳಿ ವೇಷ ಹಾಕುವವರಲ್ಲಿ ವೇಷಭೂಷಣ ಅತ್ಯಧಿಕವಾಗಿರುತ್ತದೆ. ಕಾಳಿಯ ಮುಖವನ್ನು ಮರದಿಂದ ಕೆತ್ತಿಸಿ ಬಣ್ಣ ಹೆಚ್ಚಿ ಸಿದ್ಧಪಡಿಸಿ ಅನಂತರ ಮುಖವಾಡವನ್ನು ಮುಖಕ್ಕೆ ಹಾಕಿಕೊಳ್ಳುತ್ತಾರೆ. ಬಿದುರುಗಳಿಂದ ಅಲಂಕರಿಸಿದ ತಟ್ಟಿಯನ್ನು ಕಟ್ಟಿಕೊಳ್ಳುತ್ತಾರೆ. ಉಬ್ಬಿದ ಎದೆಗಳನ್ನು ಕಟ್ಟಿಕೊಂಡು ದೇಹದ ಮೇಲೆ ಕಾವಿಬಟ್ಟೆಯನ್ನು ಧರಿಸಿ, ಸೊಂಟದಲ್ಲಿ ಸೀರೆಯನ್ನು ಕಟ್ಟಿಕೊಳ್ಳುತ್ತಾರೆ. ಪಚ್ಚೈಕಾಳಿ ವೇಷಭೂಷಣಗಳೆಲ್ಲವೂ ಹಸಿರು ಬಣ್ಣದಿಂದಲೂ ಪವಳಕ್ಕಾಳಿ ವೇಷಭೂಷಣಗಳೆಲ್ಲವೂ ಕೆಂಪುಬಣ್ಣದಿಂದಲೂ ಕೂಡಿರುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಈ ವೇಷದಲ್ಲಿ ವ್ಯತ್ಯಾಸವನ್ನು ಕಾಣಬಹುದು.

ಪೂಜಾ ಆಚರಣೆಗಾಗಿ ಕಾಳಿ ವೇಷ ಹಾಕುವ ಹಕ್ಕು ನಿಗದಿತ ಜನ ಸಮುದಾಯಕ್ಕೆ ಇರುತ್ತದೆ. ಒಂದೇ ಕುಟುಂಬದಲ್ಲಿ ಇಬ್ಬರು ಇರುವಾಗಲೂ ಮೊದಲಿಗೆ ಒಬ್ಬರು, ಅನಂತರ ಇನ್ನೊಬ್ಬರು ವೇಷ ಹಾಕಿಕೊಳ್ಳಬೇಕು. ತಮಿಳುನಾಡಿನ ತಂಜೈ ಜಿಲ್ಲೆಯಲ್ಲಿ ಚೆಂಗುಂದ ಮೊದಲಿಯಾರ್ ೬೪ ಮನೆ ಬೇಲಾಳ ಶೆಟ್ಟರು, ವನ್ನಿಯರು ಮೊದಲಾದ ಜಾತಿಯವರು, ದಕ್ಷಿಣ ತಮಿಳುನಾಡು ಜಿಲ್ಲೆಗಳಲ್ಲಿ ಯಾದವರು ಮತ್ತು ಇತರ ಜಾತಿಯವರು, ಉತ್ತರ ತಮಿಳುನಾಡು ಜಿಲ್ಲೆಗಳಲ್ಲಿ ವನ್ನಿಯರು ಕಾಳಿವೇಷ ಧರಿಸುವವರಾಗಿರುತ್ತಾರೆ. ಹರಿಜನರು ಯಾರೂ ಕಾಳವೇಷವನ್ನು ಹಾಕುವುದಿಲ್ಲ.

ಈ ಕಲೆ ಪ್ರಸ್ತುತದಲ್ಲಿ ವೃತ್ತಿ ಕಲೆಯಾಗಿ ಬೆಳೆದಿದೆ. ತಿರುವಾರೂರು ಜಿಲ್ಲೆಯ ನಾಗಪಟ್ಟಣದಲ್ಲಿ ಈ ಕಲೆಯನ್ನು ಪ್ರದರ್ಶಿಸುವ ವೃತ್ತಿ ಕಲಾವಿದರು ಇದ್ದಾರೆ. ಕರಗಾಟ ಮೊದಲಾದ ಪ್ರದರ್ಶನದ ಮೂಲಕ ಕಾಳಿವೇಷ ಧರಿಸಿ ಕುಣಿಯುವ ರೂಢಿ ತಮಿಳು ನಾಡಿನಲ್ಲಿದೆ.

– ಪಿ.ಎಸ್.ವಿ. ಅನುವಾದ ಪಿ.ಎಂ.

ಕಾಳೈಮಾಟ್ಟುನಡನಮ್ ಪ್ರದರ್ಶಕ ಕಲೆಗಳು ಜನಪದ ಕಲೆಗಳ ವಿಶಿಷ್ಟ ಕೊಡುಗೆ. ಇಂತಹವುಗಳಲ್ಲಿ ತಮಿಳುನಾಡಿನ ಜಿಲ್ಲೆಗಳಲ್ಲಿ ಕಂಡುಬರುವ ‘ಎತ್ತಿನ ಆಟ’ ಒಂದು ಪ್ರಸಿದ್ಧ ಕಲಾ ರೂಪ. ಇಲ್ಲಿ ಎತ್ತಿನ ನೃತ್ಯ ಮಾಡುವ ವೇಷಧಾರಿಗಳು ಎತ್ತಿನ ವೇಷವನ್ನು ಧರಿಸಿ ಎತ್ತಿನಂತೆ ಆಡುವ, ಓಡುವ, ತಿವಿಯುವ, ಗರ್ಜಿಸುವ ಎಲ್ಲಾ ಬಗೆಯನ್ನು ತಮ್ಮ ಕುಣಿದಲ್ಲಿ ಪ್ರದರ್ಶಿಸುತ್ತಾರೆ. ಈ ಬಗೆಯ ಆಟವನ್ನು ‘ಎತ್ತಿನ ಆಟ’ ಅಥವಾ ಕಾಳೈಮಾಟ್ಟು ನಡನಮ್ ಎನ್ನುತ್ತಾರೆ. ಇದರ ಉಗಮ ಆಧುನಿಕ ಕಾಲದಲ್ಲಿ ಆದದ್ದೆಂದು ಜನರ ಅಭಿಪ್ರಾಯ. ಜನಪದ ಕಲೆಗಾಗಿಯೇ ತಮ್ಮ ಜೀವಮಾನವೆಲ್ಲಾ ಮುಡಿಪಾಗಿಟ್ಟಿರುವ ತಂಜೈ, ಮದುರೈ, ಪ್ರದೇಶಕ್ಕೆ ಸೇರಿದ ವೃದ್ಧ ಜನಪದ ಕಲಾವಿದರು. ಈ ಆಟವನ್ನು ಮೊಟ್ಟಮೊದಲು ೧೯೬೬ರಲ್ಲಿ ಪುದುಕೋಟೈ ಜಿಲ್ಲೆಯಲ್ಲಿರುವ ಇರಣಿಯೂರು ಎಂಬ ಗ್ರಾಮ ವಾಸಿಗಳಾದ ಜನಪದ ಕಲಾತಂಡದವರ ಮೂಲಕ ಆಡಿಸಿದರೆಂದು ಮಾಹಿತಿ ದೊರೆಯುತ್ತದೆ.

ಮುಂದೆ ಇದೇ ಕಲೆ ೧೯೭೫ನೇ ಸಾಲಿನಲ್ಲಿ ಮದುರೈನ ಓಂ ಪೆರಿಸ್ವಾಮಿಯ ತಂಡದವರು ಈ ಆಟವನ್ನು ಆಡುತ್ತಾ ಬಂದಿದ್ದಾರೆ, ಎಂದು ತಿಳಿದು ಬರುತ್ತದೆ. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿದ್ದುಕೊಂಡು ‘ಹುಸಿಕಾಲಿನ ಕುದುರೆ ಆಟ’ವನ್ನು ಆಡುತ್ತಾ ಬಂದಿರುವ ಟಿ.ಸಿ.ಸುಂದರುಮೂರ್ತಿಯವರ ಜನಪದ ಕಲಾ ಪ್ರದರ್ಶನಗಳಲ್ಲೂ ಈ ಎತ್ತಿನ ಆಟ ಸ್ಥಾನ ಪಡೆದಿರುವುದು ಗಮನಾರ್ಹ ವಿಚಾರ. ಇದೇ ಕಾಲದಲ್ಲಿ ಟಿ.ಎಂ.ಪೆನ್ನಿ ಎಂಬುವರಿಂದ ತಂಜೈಯಲ್ಲೂ ಈ ಆಟ ಪ್ರದರ್ಶನಗೊಳ್ಳುತ್ತಾ ಬಂದಿದೆ.

ಇಂದೂ ಈ ಎತ್ತಿನ ಆಟವಿದ್ದು ತಂಜೈ, ಮದುರೈ, ಪುದುಕೋಟೈ, ರಾಮನಾಥಪುರಂ, ಸೇಲಂ, ಕಡಲೂರ್, ಚೆನ್ನೈ ಮೊದಲಾದ ಪ್ರದೇಶಗಳಲ್ಲಿ ಕಾಣಬರುತ್ತಿರುವ ಬಹುಮುಖಿ ಪ್ರದರ್ಶಕ ಕಲೆಗಳಲ್ಲಿ ಈ ಎತ್ತಿನ ಆಟಕ್ಕೆ ಮಹತ್ತ್ವದ ಸ್ಥಾನ ಲಭ್ಯವಾಗಿದೆ. ೧೯೮೨ರಲ್ಲಿ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಏಷ್ಯನ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ವೇಳೆ ಜರುಗಿದ ಪ್ರದರ್ಶಕ ಕಲೆಗಳಲ್ಲಿ ತಮಿಳುನಾಡಿನ ಭಾಗದ ನಲವತ್ತು ಜನ ಕಲಾವಿದರು ಎತ್ತಿನ ಆಟದ ಪ್ರದರ್ಶನ ನೀಡಿ ಬಂದಿದ್ದಾರೆ. ಇದು ಎತ್ತಿನ ಆಟದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬಹುದಾದ ಬಹು ದೊಡ್ಡ ಸಾಧನೆಯಾಗಿದೆ.

ಎತ್ತಿನ ಆಟಕ್ಕೆ ಮುಖವಾಡ ತಯಾರಿಸುವ ಬಗೆ: ಕಲಾವಿದರು ತಾವು ಧರಿಸುವ ಎತ್ತಿನ ವೇಷದ ನಿರ್ಮಾಣಕ್ಕಾಗಿ ಎತ್ತಿನ ಮುಖವಾಡವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಹುಸಿಕಾಲು ಕುದುರೆ ಆಟದ ಮುಖವಾಡ ನಿರ್ಮಾಣದ ವಿಧಾನವನ್ನೇ ಈ ಕಲಾವಿದರು ಸಹ ಅನುಕರಿಸುತ್ತಾರೆ. ಎತ್ತಿನ ಮುಖವಾಡವನ್ನು ಧರಿಸಿಕೊಂಡ ಕಲಾವಿದರು ಅವರ ಜೊತೆಗೆ ಕಾಲ್ಗೆಜ್ಜೆ ಸಹ ಕಾಲಿಗೆ ಕಟ್ಟುತ್ತಾರೆ. ಈ ಗೆಜ್ಜೆಗಳ ನಾದ ಕುಣಿತದೊಂದಿಗೆ ಸೇರಿದಾಗ ಅದರ ಶಬ್ದ ಪ್ರೇಕ್ಷಕರನ್ನು ಮತ್ತುಷ್ಟು ಸೆಳೆಯುತ್ತದೆ. ಮೊದಮೊದಲು ಇಬ್ಬರು ಕಲಾವಿದರು ಎತ್ತಿನ ಮುಖವಾಡವನ್ನು ಹೊತ್ತು ಕುಣಿಯುತ್ತಿದ್ದರು. ತಲೆಯ ಭಾಗದಲ್ಲಿ ಒಬ್ಬ ಕಲಾವಿದ, ಅಂತೆಯೇ ಬಾಲದ ಕಡೆಗೆ ಮತ್ತೊಬ್ಬ. ಆದರೂ ಎತ್ತಿನ ಮುಖವಾಡ ವೇಷದ ಆ ಇಬ್ಬರು ಕಲಾವಿದರು ಇರುವರೆಂಬುದು ನೋಡುಗರಿಗೆ ತಿಳಿಯುತ್ತಿರಲಿಲ್ಲ. ೧೯೮೧ರ ವೇಳೆಗೆ ಇಬ್ಬರು ಕಲಾವಿದರು ಈ ಮುಖವಾಡವನ್ನು ಹೊರುತ್ತಿದ್ದರು. ಅದೇ ೧೯೮೨ರ ಅನಂತರ ಕೇವಲ ಒಬ್ಬನೇ ಕಲಾವಿದ ಎತ್ತಿನ ಮುಖವಾಡವನ್ನು ಧರಿಸಿ ಕುಣಿಯುವುದು ರೂಢಿಗೆ ಬಂತು.

ಹೀಗೆ ಒಬ್ಬನೇ ಕಲಾವಿದ ಎತ್ತಿನ ಮುಖವಾಡವನ್ನು ಹಿಡಿದು ಪ್ರದರ್ಶನ ನೀಡುತ್ತಾನೆ. ಅಂದರೆ ತನ್ನ ಎರಡೂ ಕೈಗಳಿಂದ ಎತ್ತಿನ ಮುಖವಾಡವಿರುವ ಮುಂಭಾಗವನ್ನು ಹಿಡಿದುಕೊಂಡು ಹಿಂಭಾಗವನ್ನು ಸಹ ತನ್ನ ತೋಳುಗಳ ಸಹಾಯದಿಂದಲೇ ಹಿಡಿದು ಕುಣಿಯುವುದು ರೂಢಿಯಲ್ಲಿದೆ.

ಈ ಆಟಕ್ಕೇ ಯಾವುದೇ ಪ್ರತಿಸ್ಪರ್ಧಿ ಕುಣಿತವಾಗಲಿ ಅಥವಾ ಅಡ್ಡಿ ಆತಂಕ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಕರಗಕುಣಿತ, ಕೊವ ಕೊರತಿ ಆಟ ಮೊದಲಾದ ಜನಪದ ಕುಣಿತಗಳಲ್ಲಿ ಕಾಣಬರುವ ಕೆಲವು ಭಂಗಿಗಳನ್ನು ಈ ಎತ್ತಿನ ಆಟದ ಕುಣಿತದಲ್ಲೂ ಕಾಣಬಹುದು. ಕಲಾವಿದರ ರಂಗಕ್ಕೆ ಬಂದಾಗ ಕುಣಿತದ ಬಗೆಯಾಗಿ ಅಂದರೆ ಒಂದು ವೃತ್ತಾಕಾರವಾಗಿ ರಭಸದಲ್ಲಿ ಬರುವುದು, ಕುಳಿತಿರುವ ವಾದ್ಯದವರನ್ನು ತಿವಿಯುವುದು, ಎತ್ತಿನಂತೆಯೇ ತನ್ನ ದೇಹವನ್ನು ಮೇಲೆ – ಕೆಳಗೆ ಬಾಗಿ ಬಳುಕಿಸುವುದು, ಅಕ್ಕಪಕ್ಕ ತಲೆ ತಿರುಗಿಸುವುದು, ಎತ್ತಿನಂತೆ ಗುಟರು ಹಾಕುವುದು ಮೊದಲಾದ ನಟನೆ ಮಾಡುತ್ತಾನೆ. ಕೆಲವು ವೇಳೆ ಎತ್ತಿನ ವೇಷಧಾರಿಯೊಂದಿಗೆ ಇಬ್ಬರು ಸ್ತ್ರೀ ಕಲಾವಿದರು ಕುಣಿಯುತ್ತಾರೆ. ಇದರ ಮೂಲ ಕರಗ ಹೊತ್ತ ಕಲಾವಿದೆಯರು ಕುಣಿಯುವುದೇ ಆಗಿದೆ. ಆ ಸ್ತ್ರೀಯರು ಬಹಳ ಸಂತೋಷದಿಂದಲೇ ಕುಣಿಯುತ್ತಾರೆ. ಮದುರೈ ಭಾಗದ ಎತ್ತಿನ ಆಟಗಳಲ್ಲಿ ಎತ್ತಿನೊಂದಿಗೆ ಕೇವಲ ಒಬ್ಬ ಹೆಂಗಸು ಮಾತ್ರ ಕುಣಿಯುತ್ತಾಳೆ. ಇದಕ್ಕೆ ಕಾರಣ ಆ ಹೆಣ್ಣು ಒಂದು ಎತ್ತನ್ನು ತುಂಬ ಪ್ರೀತಿಯಿಂದ ಸಾಕಿದಳು. ಆ ಎತ್ತನ್ನು ಹಿಡಿದು ನಿಲ್ಲಿಸಲು ಒಬ್ಬ ವೀರ ಬಂದನು. ಆತನನ್ನು ಆ ಎತ್ತು ತಿವಿದು ಬಿಡುತ್ತದೆ. ಇದನ್ನು ಅರಿತ ಮತ್ತೊಬ್ಬ ವೀರ ಬಂದನು. ತನ್ನ ಶಕ್ತಿ ಸಾಮರ್ಥ್ಯದಿಂದ ಆ ಎತ್ತಿನೊಂದಿಗೆ ಹೋರಾಡಿ ಅದನ್ನು ಕಟ್ಟಿ ಹಾಕಿದನು. ಈ ರೀತಿಯಲ್ಲಿ ಸಾಹಸದಿಂದ ಗೆದ್ದ ವೀರನನ್ನು ಆ ಎತ್ತನ್ನು ಸಾಕಿದ ಹೆಣ್ಣು ವೀರಮಾಲೆ ಹಾಕಿ ಇಬ್ಬರು ಪರಸ್ಪರ ಮದುವೆಯಾದರೆಂಬ ನಂಬಿಕೆ ಬಲವಾಗಿ ಜನರ ಮಧ್ಯೆ ಇದೆ.

ಈ ಎತ್ತಿನೊಂದಿಗೆ ಹೊಲ ಉತ್ತು ಹದ ಮಾಡುವುದು. ಜನರಂಜನೀಯ ಆಟವಾದ ಜಲ್ಲಿಕಟ್ಟು ಪ್ರದರ್ಶನವನ್ನು ನಡೆಸಲಾಗುತ್ತದೆ. ಊರೂರುಗಳ ಮೇಲೆ ನಡೆಯುವ ಈ ಕಲಾಪ್ರದರ್ಶನವನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿದ್ದಾರೆ.

ಇತರ ಪ್ರದರ್ಶನ ಕಲೆಗಳಿಗೆ, ಕುಣಿತಗಳಿಗೆ ಹೇಗೆ ವಾದ್ಯ, ಸಂಗೀತ ಪರಿಕರಗಳ ಅಗತ್ಯವಿದೆಯೋ ಅದೇ ರೀತಿ ಈ ಎತ್ತಿನ ಆಟಕ್ಕೂ ವಾದ್ಯದ ಬಳಕೆ ಇದೆ. ಈ ಕುಣಿತದಲ್ಲಿ ಎತ್ತಿನ ವೇಷಧಾರಿಯ ಒಂದೊಂದು ಹೆಜ್ಜೆಗತಿಗೆ ತಕ್ಕಂತೆ ನಾದಸ್ವರ ಇದ್ದು ಕಲಾವಿದರು ಇದರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.

ಜನಪದ ಪ್ರದರ್ಶಕ ಕಲೆಗಳಲ್ಲಿ ಎತ್ತಿನ ಆಟಕ್ಕೆ ವಿಶಿಷ್ಟ ಸ್ಥಾನ ಪ್ರಾಪ್ತವಾಗಿದೆ. ಇಲ್ಲಿ ಕಲಾವಿದನು ನರ್ತಿಸುವ, ಹೆಜ್ಜೆ ಹಾಕುವ, ತಿವಿಯುವ ಗುಟುರು ಹಾಕುವ, ಹಾರುವ ಇತ್ಯಾದಿ ನರ್ತನದ ಬಗ್ಗೆ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ನಿಯತ ರೀತಿಯ ವಾದ್ಯದೊಂದಿಗೆ ನಡೆಯುವ ಈ ಆಟಕ್ಕೆ ವಿಶಿಷ್ಟ ಸ್ಥಾನಮಾನವಿದೆ.

– ಕೆ.ಎಂ. ಅನುವಾದ ಆರ್.ಎಸ್.

ಕಿತ್ತೂರು ಚೆನ್ನಮ್ಮ ಕರ್ನಾಟಕದ ಪ್ರಸಿದ್ಧ ಜನಪದ ಕಥನಗೀತೆಯ ನಾಯಕಿ. ಬೆಳಗಾವಿ ಜಿಲ್ಲೆಗೆ ಸೇರಿದ ಕಿತ್ತೂರು ಎಂಬ ಇತಿಹಾಸ ಪ್ರಸಿದ್ಧ ಸಂಸ್ಥಾನದ ದೇಸಾಯಿಣಿ ಆಗಿದ್ದುದರಿಂದ ಚೆನ್ನಮ್ಮ ನಮ್ಮ ಸಂಬೋಧಿಸುವಾಗಲೆಲ್ಲ ಕಿತ್ತೂರು ಬಳಕೆಯಾಗುತ್ತದೆ. ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಮಹಿಳೆಯೊಬ್ಬಳು ಕಿತ್ತೂರನ್ನು ಆಳುತ್ತಿದ್ದ ದೊರೆಗಳಲ್ಲಿ ಪ್ರಸಿದ್ಧವಾಗಿದ್ದ ಮಲ್ಲಸರ್ಜ ದೇಸಾಯಿಯ ಎರಡನೆಯ ಹೆಂಡತಿಯಾಗಿ ಅರಮನೆ ಸೇರಿ, ರಾಣಿಯಾಗಿ, ಸಂದರ್ಭಗಳ ಒತ್ತಡದಿಂದ ಆಡಳಿತ ಸೂತ್ರವನ್ನು ಹಿಡಿದು, ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ಸ್ವಾಭಿಮಾನಕ್ಕೆ ಗೌರವ ತಂದುಕೊಟ್ಟವಳು. ತನ್ನ ಒಂದು ಚಿಕ್ಕ ರಾಜ್ಯದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಅಷ್ಟು ದೊಡ್ಡ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದವಳು.

ಮರಾಠರಿಂದ ಸೆರೆ ಹಿಡಿಯಲ್ಪಟ್ಟಿದ್ದ ಮಲ್ಲಿಸರ್ಜ ದೇಸಾಯಿ ತನ್ನ ಜೀವಿತದ ಅಂತ್ಯದಲ್ಲಿ ಬಿಡುಗಡೆ ಹೊಂದಿದ ಮೇಲೆ ಸಾವಿಗೀಡಾಗಿದ್ದ. ಅನಂತರ ಅವನ ಮಗ ಶಿವಲಿಂಗ ರುದ್ರಸರ್ಜ ೧೮೧೬ರಲ್ಲಿ ಪಟ್ಟಕ್ಕೆ ಬಂದು ಎಂಟು ವರ್ಷಗಳ ಕಾಲ ಆಡಳಿತ ನಡೆಸಿ ಅಕಾಲಮರಣ ಹೊಂದಿದ. ಅವನಿಗೆ ಮಕ್ಕಳಿಲ್ಲದಿದ್ದರಿಂದ ರಾಣಿ ಚೆನ್ನಮ್ಮನ ಮಾಸ್ತ ಮರಡಿಯ ಗೌಡರೊಬ್ಬರ ಮಗನಾದ ಶಿವಲಿಂಗಪ್ಪ ಎಂಬ ಬಾಲಕನನ್ನು ದತ್ತು ತೆಗೆದುಕೊಂಡಳು. ಆ ಮಗು ವಯಸ್ಕನಾಗುವವರೆಗೆ ಅವನ ಹೆಸರಿನಲ್ಲಿ ಚೆನ್ನಮ್ಮನೇ ಆಡಳಿತ ನಡೆಸತೊಡಗಿದಳು.

ಈ ಬೆಳವಣಿಗೆಯನ್ನು ಒಪ್ಪದ ಬ್ರಿಟಿಷರು, ತಮ್ಮ ನಂಬಿಕೆಯವರನ್ನು ಕಾರ್ಯಭಾರಿಗಳನ್ನಾಗಿ ನೇಮಿಸಿದುದೂ ಅಲ್ಲದೆ ಕಿತ್ತೂರಿನ ಖಜಾನೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಚೆನ್ನಮ್ಮನ ಸ್ವಾಭಿಮಾನ ಸೆಟೆದು ನಿಂತು ಅದನ್ನು ಪ್ರತಿಭಟಿಸಿತು. ಚೆನ್ನಮ್ಮನ ಈ ಪ್ರತಿಭಟನೆಯನ್ನು ಬ್ರಿಟಿಷರು ಪುರುಸ್ಕರಿಸಲಿಲ್ಲ. ಎರಡೂ ಕಡೆಯಿಂದ ಪ್ರಯತ್ನಗಳು ನಡೆಯುತ್ತಿರುವಾಗಲೇ ಚೆನ್ನಮ್ಮನು ತನ್ನ ಸೈನ್ಯವನ್ನು ಸಜ್ಜುಗೊಳಿಸ ತೊಡಗಿದಳು. ಚೆನ್ನಮ್ಮನ ನಿರೀಕ್ಷೆ ಹುಸಿಯಾಗಲಿಲ್ಲ. ಯುದ್ಧ ಸಮೀಪಕ್ಕೆ ಬಂದು ನಿಂತಿತ್ತು.

ಚೆನ್ನಮ್ಮನ ವ್ಯವಸ್ಥೆಗಳನ್ನೆಲ್ಲ ಕಾಲಕಾಲಕ್ಕೆ ತಿಳಿದುಕೊಳ್ಳುತ್ತಿದ್ದ ಬ್ರಿಟಿಷರು ಸೈನ್ಯ ಸಮೇತ ಬಂದಾಗ ಕಿತ್ತೂರಿನ ಕೋಟೆಯ ಬಾಗಿಲು ಮುಚ್ಚಿತ್ತು. ಕುಪಿತಗೊಂಡ ಬ್ರಿಟಿಷ್ ಅಧಿಕಾರಿಗಳು ಕೋಟೆಯ ಬಾಗಿಲಿಗೆ ಫಿರಂಗಿಗಳನ್ನು ಗುರಿ ಮಾಡಿ ನಿಲ್ಲಿಸಿ, ಇಪ್ಪತ್ತು ನಿಮಿಷಗಳ ಸಮಯಾವಕಾಶ ನೀಡಿದರು. ಚೆನ್ನಮ್ಮ ಯುದ್ಧವನ್ನೆ ಆರಿಸಿಕೊಂಡಿದ್ದಳು. ಕುದುರೆಯನ್ನೇರಿ ಕತ್ತಿ ಹಿರಿದು ಚೆನ್ನಮ್ಮ ತನ್ನ ಸೈನಿಕರನ್ನು ಹುರುದುಂಬಿಸತೊಡಗಿದಳು. ಚೆನ್ನಮ್ಮನ ಯುದ್ಧ ತಂತ್ರದಿಂದಾಗಿ ಬ್ರಿಟಿಷರ ಕಡೆ ಹಲವರು ಸತ್ತರು. ಹಲವಾರು ಜನ ಸೆರೆ ಸಿಕ್ಕರು. ಅವರಲ್ಲಿ ಇಬ್ಬರು ಅಧಿಕಾರಿಗಳು ಮಕ್ಕಳು ಇದ್ದರು. ಅವರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕೆಂದು ತನ್ನ ಸಿಬ್ಬಂದಿಯ ಕೆಲವರಿಗೆ ಚೆನ್ನಮ್ಮ ಆದೇಶಿಸಿದಳು. ಆ ಯುದ್ಧದಲ್ಲಿ ಬ್ರಿಟಿಷ್‌ ಸೈನ್ಯ ಸೋತು ಹೋಯಿತು. ಇದು ನಡೆದದ್ದು ೧೮೨೪ ಅಕ್ಟೋಬರ್‌ನಲ್ಲಿ.

ಈ ಸೋಲಿನ ಸುದ್ದಿಯಿಂದ ಕೆರಳಿದ ಬ್ರಿಟಿಷ್ ಅಧಿಕಾರಿಗಳಿಬ್ಬರು ಮತ್ತೆ ಭಾರೀ ಸೈನ್ಯದೊಂದಿಗೆ ಒಂದು ತಿಂಗಳೊಳಗಾಗಿ ಮತ್ತೆ ದಾಳಿ ಮಾಡಲು ಬಂದರು. ಮತ್ತೆ ಯುದ್ಧ ನಡೆಯುವುದು ಚೆನ್ನಮ್ಮನಿಗೆ ಇಷ್ಟವಿರಲಿಲ್ಲ. ಗೌರ್ನರ್‌ರಿಗೂ ಕಮಿಷನ್‌ರಿಗೂ ಪತ್ರ ಬರೆದದ್ದು ವ್ಯರ್ಥವಾಯಿತು. ಬಂದಿಗಳ ಬಿಡುಗಡೆಗೆ ಬೇಡಿಕೆ ಬಂದಾಗ ಚೆನ್ನಮ್ಮ ಷರತ್ತು ಒಡ್ಡಿದಳು. ಯುದ್ಧ ಮಾಡುವುದಿಲ್ಲವೆಂದು ಒಪ್ಪಿಕೊಂಡ ಬ್ರಿಟಿಷರು ತಮ್ಮ ಕಡೆಯವರೆಲ್ಲ ಬಿಡುಗಡೆ ಹೊಂದಿದ ಮೇಲೆ ಮಾತಿಗೆ ತಪ್ಪಿದರು.

ಆ ಬೃಹತ್ ಸೈನ್ಯದೆದುರು ಹೋರಾಡುವುದು ವ್ಯರ್ಥವೆಂದು ಗೊತ್ತಿದ್ದರೂ ಚೆನ್ನಮ್ಮನ ಸ್ವಾತಂತ್ರ್ಯ ಪ್ರೇಮ ಯುದ್ಧವನ್ನೇ ಆರಿಸಿಕೊಂಡಿತು. ತಮ್ಮೊಳಗೇ ಇದ್ದ ವಿದ್ರೋಹಿಗಳಿಂದಾಗಿ ಚೆನ್ನಮ್ಮ ಸೋತು ಸೇರೆ ಸಿಕ್ಕಬೇಕಾಯಿತು. ಬೈಲ ಹೊಂಗಲದ ಸೆರೆಮನೆಯಲ್ಲಿ ಆರು ವರ್ಷಗಳ ಕಾಲ ಇದ್ದ ಚೆನ್ನಮ್ಮ ಸೆರೆಯಲ್ಲಿದ್ದಾಗಲೇ ೧೮೩೦ ಫೆಬ್ರವರಿ, ೩೦ ಎಂದು ಗತಿಸಿದಳು.

ಈ ಇತಿಹಾಸವನ್ನು ನಮ್ಮ ಜನಪದರು ಹಾಡಾಗಿಸಿದರು. ಹಾಡಿನ ರೂಪದಲ್ಲಿ ಚೆನ್ನಮ್ಮನ ಕಥೆಯನ್ನು ಹಾಡುತ್ತ ಹಾಡುತ್ತ ಆಕೆಯನ್ನು ಅಮರಳನ್ನಾಗಿಸಿದರು. ಲಾವಣಿಗಳಲ್ಲಿ ಕಂಡುಬರುವ ವಿವರಗಳು ಇತಿಹಾಸಕ್ಕಿಂತ ಚೆನ್ನಮ್ಮನ ಶೌರ್ಯ ಸಾಹಸಗಳನ್ನೂ ಕಿತ್ತೂರು ದೇಸಾಯಿಯರ ಸಿರಿ ಸಂಪತ್ತುಗಳನ್ನೂ ವರ್ಣಿಸುವಲ್ಲಿ ಯಶಸ್ವಿಯಾದವು. ಆ ಮೂಲಕ ಚೆನ್ನಮ್ಮನ ಬಗೆಗಿದ್ದ ತಮ್ಮ ಅಭಿಮಾನವನ್ನೂ ಪ್ರೀತಿಯನ್ನೂ ನಮ್ಮ ಜನಪದ ಕವಿಗಳು ವ್ಯಕ್ತಪಡಿಸಿದ್ದಾರೆ.

– ಕೆ.ಆರ್.