ಕಿನ್ನರಿ ಜೋಗಿಗಳು ಕಿನ್ನರಿ ಜೋಗಿ ಸಂಪ್ರದಾಯದ ಹಾಡುಗಾರರು ಲೌಕಿಕ ವೃತ್ತಿಗಾಯಕರು. ಹಾಡು ಹಾಡಿಯೇ ಹೊಟ್ಟೆ ತುಂಬಿಸಿಕೊಳ್ಳುವವರು. ಇವರು ಕರ್ನಾಟಕಾದ್ಯಂತ ಕಂಡುಬರುತ್ತಾರೆ. ಸದ್ಯ ಇವರು ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ದಕ್ಷಿಣಕನ್ನಡ, ಬಳ್ಳಾರಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡು ಬಂದಿದ್ದಾರೆ. ಹಾಡುಗಾರಿಕೆಯನ್ನೇ ಮುಖ್ಯ ವೃತ್ತಿಯನ್ನಾಗಿ ಅವಲಂಬಿಸಿ ಕಿನ್ನರಿ ವಾದ್ಯ ಹಿಡಿದು ಸದಾ ಸಂಚಾರಶೀಲರಾಗಿ ಊರಾಡಲು ಹೋಗುವ ಇವರು ಕಿನ್ನರಿ ಜೋಗಿಗಳು ಎಂದೇ ಹೆಸರಾಗಿದ್ದಾರೆ. ಇವರು ಜೋಗಿಗಳೆನಿಸಿಕೊಂಡರೂ ವಾಸ್ತವವಾಗಿ ವಿರಾಗಿಗಳೇನಲ್ಲ, ಸಂಸಾರಿಗಳು.

27

ಕಿನ್ನರಿ ಹಿಡಿದು ಹಾಡುವ ಸಿದ್ಧಮತದ ಶಿವಜೋಗಿಗಳನ್ನು ಕಿನ್ನರಿ ಜೋಗಿಗಳೆಂದು ಕರೆಯುವುದು ವಾಡಿಕೆ. ಇವರಲ್ಲಿ ಬಹುಪಾಲು ಮರಾಠಿ ಮಾತನಾಡುತ್ತಾರೆ. ತುಳು, ತೆಲುಗು ಭಾಷಾ ಮೂಲದವರೂ ಇದ್ದಾರೆ. ಕಿನ್ನರಿಯವರು ಸಾಮಾನ್ಯವಾಗಿ ಊರಿಗೆ ಅನತಿ ದೂರದಲ್ಲಿ ತಮ್ಮದೇ ಆದ ಒಂದು ಪ್ರತ್ಯೇಕ ಕೇರಿಯಲ್ಲಿ ವಾಸಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಇವರ ವಾಸದ ಗುಡಿಸಲುಗಳು ಊರಿಗೆ ಹೊಂದಿಕೊಂಡಂತೆಯೂ ಇವೆ. ಮಳೆಗಾಲದ ದಿನಗಳಲ್ಲಿ ಮಾತ್ರ ಆ ಖಾಯಂ ಆದ ಗುಡಿಸಲುಗಳಲ್ಲಿ ವಾಸವಿದ್ದು ವರ್ಷದ ಬೇರೆ ದಿನಗಳಲ್ಲಿ ಎಲ್ಲೆಲ್ಲಿ ಊರಾಡಲು ಹೋಗಿರುತ್ತಾರೊ ಅಲ್ಲಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುವುದು ಕ್ರಮ. ತಮಗಿಂತ ಜಾತಿ ಶ್ರೇಣಿಯಲ್ಲಿ ಉತ್ತಮರೆನಿಸಿದ ಒಕ್ಕಲಿಗತ, ಈಡಿಗ ಹಾಗೂ ಲಿಂಗಾಯತರೊಂದಿಗೆ ಸಲೀಸಾಗಿ ಬೆರೆತು ಸಹಬಾಳ್ವೆ ನಡೆಸುವುದನ್ನು ಕಲಿತಿದ್ದಾರೆ.

ಕಿನ್ನರಿ ಜೋಗಿಗಳ ವಾದ್ಯವಿಶೇಷ ಕಿನ್ನರಿ. ಒಂದು, ಎರಡು, ಮೂರು ಬುರುಡೆಗಳಿರುವ ಬೇರೆ ಬೇರೆ ತೆರನ ಕಿನ್ನರಿ ವಾದ್ಯಗಳಿವೆ. ಈ ಮೂರು ಬಗೆಯ ವಾದ್ಯಗಳು ಮೂರು ಬೇರೆ ಬೇರೆ ವೃತ್ತಿಯನ್ನವಲಂಬಿಸಿದ ಜೋಗಿಗಳನ್ನು ಪ್ರತಿನಿಧಿಸುತ್ತದೆ. ಕಿನ್ನರಿ ಜೋಗಿಗಳು ನುಡಿಸುವ ಕಿನ್ನರಿ ವಾದ್ಯಕ್ಕೆ ಎರಡು ಸೋರೆ ಬುರುಡೆಗಳಿದ್ದು ಅವನ್ನು ಮೂರು ಮೊಳ ಉದ್ದದ ಒಂದು ಬಿದಿರಿನ ಗಳುವಿಗೆ ಜೋಡಿಸಿ ಗಳುವಿನ ಮಧ್ಯಭಾಗದಲ್ಲಿ ಒಂದರ ಪಕ್ಕದಲ್ಲೊಂದರಂತೆ ಹನ್ನೊಂದು ‘ಸಾರಿ’ ಗಳನ್ನು ‘ನಸರಿ’ ಮೇಣದಿಂದ ಅಂಟಿಸಿರಲಾಗಿರುತ್ತದೆ. ಆ ಸಾರಿಗಳ ಮೇಳೆ ಎರಡು ತಂತಿಗಳು ಹಾದು ಹೋಗಿರುತ್ತವೆ. ಶ್ರುತಿಗೈಯಲೆಂದು ಒಂದು ಗಿಣಿ ಕೈರು, ಒಂದು ದೊಡ್ಡ ಕೈರು, ಒಂದು ‘ಸೂಲಕಡ್ಡಿ’ ಯನ್ನು ಅಳವಡಿಸಿರಲಾಗುತ್ತದೆ. ಗಳುವಿನ ಒಂದು ತುದಿಯನ್ನು ಸುಂದರವಾದ ಗಿಣಿ ಚಿತ್ರವೊಂದನ್ನು ಕೊರೆದಿದ್ದು ಇನ್ನೊಂದು ತುದಿಯನ್ನು ನವಿಲುಗರಿಗಳನ್ನು ಸಿಕ್ಕಿಸಿರಲಾಗಿರುತ್ತದೆ.

ಕಿನ್ನರಿ ವಾದ್ಯವನ್ನು ಜೋಗಿಗಳು ವೀಣೆ, ಕಿಂದರಿ, ಕಿನ್ನುರಿ – ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಇತರ ಧಾರ್ಮಿಕ ಹಾಗೂ ಲೌಕಿಕ ಕಥೋಪಜೀವಿಗಳಂತೆ ಇವರು ಕೂಡ ಕಿನ್ನರಿಯನ್ನು ಪೂಜಿಸುತ್ತಾರೆ. ಅದನ್ನು ಬಳಸದ ದಿನಗಳಲ್ಲಿ ದೇವಾಲಯದಲ್ಲೋ ಪವಿತ್ರ ಸ್ಥಳದಲ್ಲೋ ಇಟ್ಟು ಅಲ್ಲೇ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷವಾಗಿ ನವರಾತ್ರಿ ಹಬ್ಬದ ದಿನಗಳಲ್ಲಿ ಕೋಳಿ ಬಲಿ ಕೊಟ್ಟ ಹಣ್ಣುಕಾಯಿಗಳನ್ನಿಟ್ಟು ಪೂಜಿಸಲಾಗುವುದು. ಬಹಿಷ್ಠೆಯಾದ ಹೆಂಗಸರು ವಾದ್ಯವನ್ನು ಮುಟ್ಟಿದರೆ ತಂತಿ ಹರಿದು ಹೋಗುವುದೆಂದೂ ಮೈಲಿಗೆಯಾಗುವುದೆಂದೂ ನಂಬಲಾಗುವುದು.

ಕಿನ್ನರಿ ಜೋಗಿಗಳು ಕಿನ್ನರಿ ನುಡಿಸುತ್ತ ಹಾಡುವುದರೊಂದಿಗೆ ಕುಣಿತವನ್ನೂ ಮಾಡುತ್ತಾರೆ. ಈ ಕುಣಿತ ಮನರಂಜನಾ ಪ್ರಧಾನವಾದುದು. ಕಿನ್ನರಿ, ಡಂಬರಿಗ, ಪಿಳ್ಳಂಗೋವಿ, ಚಿಟಗಿ, ಗಗ್ಗರ, ಕಿರುಗೆಜ್ಜೆ – ಇವು ಇವರು ಬಳಸುವ ಪ್ರಮುಖ ವಾದ್ಯಗಳು. ಕಿನ್ನರಿಯವರು ಮೇಳಗಳನ್ನೂ ನಡೆಸುವುದು ವಿಶೇಷ. ಮೇಳದಲ್ಲಿ, ಸಾಮಾನ್ಯವಾಗಿ ದೀಕ್ಷಾಬದ್ಧರಾದ ಮೂವರು ಅಥವಾ ಐದು ಮಂದಿ ಜೋಗಿಗಳು ಭಾಗವಹಿಸುತ್ತಾರೆ. ಕಿನ್ನರಿ ನುಡಿಸುವವನೇ ಪ್ರಧಾನ ಹಾಡುಗಾರ; ಅವನೇ ಪ್ರಧಾನ ನರ್ತಕನಾಗಿರುತ್ತಾನೆ; ಕಾಲಗೆ ಕಿರುಗೆಜ್ಜೆ ಕಟ್ಟಿಕೊಂಡು ‘ಜೋಗಿ ಉಡುಪು’ ಧರಿಸುತ್ತಾರೆ. ಹಿಮ್ಮೇಳದವರು ಸಾಧಾರಣ ಉಡುಪು ಧರಿಸಿ ಕೈಯಲ್ಲಿ ಚಿಟಗಿ, ತಾಳ, ದಂಬರಿಗೆ ಹಿಡಿದು ಮುಖ್ಯ ಹಾಡುಗಾರನ ಹಾಡಿನ ಗತಿಗನುಗುಣವಾಗಿ ಸೊಲ್ಲು ಹೇಳುತ್ತ ನಾಟಕೀಯವಾಗಿ ಸಂಭಾಷಿಸುತ್ತ ಅಭಿನಯಪೂರ್ವಕವಾಗಿ ಕುಣಿತ ಮಾಡುತ್ತಾರೆ. ಕಾಲಿಗೆ ಕಿರುಗೆಜ್ಜೆ, ಹೆಬ್ಬೆರಳಿಗೆ ಗಗ್ಗರ ಹಾಕಿಕೊಂಡು ಸಂದರ್ಭಾನುಸಾರವಾಗಿ ಕಥೆ ಮಾಡುವವನೊಂದಿಗೆ ನರ್ತನಗೈಯ್ಯುತ್ತಾರೆ. ಕುಣಿತ ಮತ್ತು ಹಾಡು ಕೈ ಕೈ ಹಿಡಿದು ಸಾಗುತ್ತವೆ.

ಕಿನ್ನರಿ ಜೋಗಿಗಳ ವೇಷಭೂಷಣಗಳು ಅಪೂರ್ವ ಬಗೆಯವು. ಕಿನ್ನರಿ ಹಿಡಿಯದ ದಿನಗಳಲ್ಲಿ ಸಾಧಾರಣ ಉಡುಪಿನಲ್ಲೇ ರಾರಾಜಿಸುವ ಇವರು ಊರಾಡಲು ಹೋಗುವಾಗ ವಿವಿಧ ಬಣ್ಣದ ಉಡುಗೆತೊಡುಗೆಗಳನ್ನು ಧರಿಸುತ್ತಾರೆ. ವಿವಿಧ ರೀತಿಯಲ್ಲಿ ಅಲಂಕೃತವಾದ ಬಣ್ಣದ ಕತ್ತರಿ ಮುಂಡಾಸು ಧರಿಸಿ ಪಂಚಲೋಹದ ಕಾಪಾಲಿ ಮುದ್ರೆಗಳನ್ನು ಕಿವಿಗಳಿಗೆ ಹಾಕಿಕೊಂಡು ಕೊರಳು ಪಟ್ಟಿಗಳಿಂದ ಶೋಭಿತರಾಗಿ ಹಣೆಗೆ ವಿಭೂತಿ ಧರಿಸಿ ಒಂದು ಪಕ್ಕದಲ್ಲಿ ಬಣ್ಣದ ವಸ್ತ್ರವೊಂದನ್ನು ಸಿಕ್ಕಿಸಿ ತ್ರಿಶೂಲವೊಂದನ್ನು ಅಲ್ಲಿ ಅಳವಡಿಸಿಕೊಂಡಿರುತ್ತಾರೆ. ಬಿಳಿಯ ಕಚ್ಚೆಪಂಚೆ, ನಿಲುವಂಗಿಯ ಮೇಲೆ ಹಳೆಯ ಕಪ್ಪನೆಯ ಕೋಟು, ಎದೆಗೆ ಪ್ರದೇಶಗಳಲ್ಲಿ ಅರಿಶಿಣಗವಿ ಅಂಗಿ, ಹಾರೋಗಚ್ಚೆ, ಸೊಂಟ ಮತ್ತು ತಲೆಗೆ ಕೆಂಪು ವಸ್ತ್ರ, ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುವ ಸರಳ ವೇಷಧಾರಿಗಳು ಕಂಡುಬಂದರೆ ಇನ್ನು ಕೆಲವು ಭಾಗಗಳಲ್ಲಿ ಜರಿ, ನೆಖೆ, ಗಿಲೀಟಿನ ಮಣಿಗಳಿಂದ ಅಲಂಕೃತವಾದ ಕಾವಿಬಣ್ಣದ ದುಂಡು ಮುಂಡಾಸು, ನಾನಾ ಬಣ್ಣದ ಉಡುಪುಗಳನ್ನು ತೊಟ್ಟುಕೊಂಡು ಕೊರಳಲ್ಲಿ ರುದ್ರಾಕ್ಷಿ, ಕೈಯಲ್ಲಿ ಗೆಜ್ಜೆಸರ, ಕಾಲಿಗೆ ಬೆಳ್ಳಿ ಸರಿಗೆ ಮತ್ತು ಕಿರುಗೆಜ್ಜೆಗಳನ್ನು ಕಟ್ಟಿಕೊಂಡು ತಿರುಗಾಡುವ ಜೋಗಿಗಳು ಕಂಡುಬರುತ್ತಾರೆ.

ಕಿನ್ನರಿ ಜೋಗಿಗಳ ಸಾಹಿತ್ಯ ಕೂಡ ವಿಶಿಷ್ಟವಾದುದು. ಮಹಾಭಾರತದ ವಿವಿಧ ಪರ್ವಗಳನ್ನು ಅನೇಕ ರಾತ್ರಿಗಳವರೆಗೆ ಹಾಡುವುದರ ಜೊತೆಗೆ ಭೈರವ – ಮಾಳವ್ವರ ಕಥೆಯನ್ನೂ ಹಾಡುತ್ತಾರೆ. ಕಥೆಯೇ ಅಲ್ಲದೆ ಸುದೀರ್ಘ ರಚನೆಯ ಕೆಲವು ರಮ್ಯ ಜನಪದ ಕಥೆಗಳನ್ನೂ ಹಾಡ್ಗತೆಯಲ್ಲಿ ಅತ್ಯಂತ ಸ್ವಾರಸ್ಯಪೂರ್ಣವಾಗಿ ಬೇರೆ ಬೇರೆ ಮಟ್ಟುಗಳಲ್ಲಿ ಹಾಡುತ್ತಾರೆ. ಹಳಗನ್ನಡ ಚಂಪೂ ರೀತಿಯನ್ನು ನೆನಪಿಗೆ ತರುವ ಪದ್ಯಗಂಧಿಯಾದ ಆಡುನುಡಿಯ ಗದ್ಯದಲ್ಲಿ ಕಥೆ ಸಾಗಿಕೊಂಡು ಹೋಗುವುದು ವಿಶೇಷ. ಈ ಗದ್ಯ ಕೂಡ ಕಿನ್ನರಿಯ ಗತ್ತಿಗೆ ಹೊಂದಿಕೊಂಡಂತೆ ಇರುತ್ತದೆ. ಕರ್ನಾಟಕದ ತಂಬೂರಿ ಕರಪಾಲ ಮತ್ತು ಗೊಂದಲಿಗ ಸಂಪ್ರದಾಯದ ಕಥೋಪಜೀವಿಗಳು ಹಾಡುವ ಕೆಲವು ಮುಖ್ಯ ಕಥೆಗಳನ್ನು ಇವರೂ ಹಾಡುತ್ತಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ – ಹೀಗೆ ವಿವಿಧ ವಸ್ತುವಿನ ಸುತ್ತ ಹೆಣೆಯಲ್ಪಟ್ಟ ಅನೇಕ ನೀತಿಪ್ರಧಾನ ಕಥೆಗಳು ಇವರ ಜೋಳಿಗೆಯಲ್ಲಿವೆ.

ಈ ಕಾವ್ಯಗಳ ಜೊತೆಯಲ್ಲಿ ಕೆಲವು ಸ್ವತಂತ್ರ ಸ್ವರೂಪದ ಉಪಕಥೆಗಳನ್ನೂ ಇವರು ಹಾಡುತ್ತಾರೆ. ಜನಪದರ ನಿತ್ಯದ ಬದುಕಿನಲ್ಲಿ ಘಟಿಸುವ ಅನೇಕ ವಾಸ್ತವಿಕ ಸಂಗತಿಗಳನ್ನು ಆಧರಿಸಿ ಅವು ರಚಿತವಾಗಿರುತ್ತವೆ. ಹಾಸ್ಯವೇ ಅವುಗಳ ಮುಖ್ಯ ಗುರಿ. ಸಾಮಾನ್ಯವಾಗಿ ಅವನ್ನು ಮುಖ್ಯ ಕಥೆಯ ನಡುವೆ ಸಂದರ್ಭೋಚಿತವಾಗಿ ಅಳವಡಿಸಿಕೊಂಡ ಹಾಡಲಾಗುತ್ತದೆ. ಈ ಉಪಕಥೆಗಳು ಮುಖ್ಯ ಕಥೆಗಳನ್ನು ಹಾಡುವಾಗ ಪ್ರಾಸಂಗಿಕವಾಗಿ ಬಳಸಿಕೊಳ್ಳುವಂಥವೇ ಆದರೂ ಸ್ವತಂತ್ರ ಅಸ್ತಿತ್ವವುಳ್ಳ ಸ್ವಸಂಪೂರ್ಣವಾದ ಜನಪದ ಕಥನಗೀತೆಗಳ ಮಾದರಿಯಲ್ಲಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಕಿನ್ನರಿ ಜೋಗಿಗಳು ತಮ್ಮ ‘ಹೊಗಳಿಕೆ ಪದ’ ಗಳಿಗಾಗಿ ವಿಶಿಷ್ಟರಾಗಿದ್ದಾರೆ. ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಕ್ಕಲಿಗ, ಈಡಿಗ ಸಮೂಹಗಳನ್ನು ತಮ್ಮಪೈಕಿ ಯಾರಾದರೂ ತೀರಿಕೊಂಡರೆ ಮೃತನ ಅಂತಿಮ ಸಮಾರಾಧನೆಯ ದಿನದಂದು ಇವರನ್ನು ಬರಮಾಡಿಕೊಳ್ಳುವ ಪದ್ಧತಿಯುಂಟು. ಗಡುಡ ಪುರಾಣವನ್ನು ಹೇಳಿ ಮೃತವ್ಯಕ್ತಿ ಬದುಕಿದ್ದಾಗ ಮಾಡಿದ ಸಿದ್ಧಿ ಸಾಧನೆಗಳನ್ನು ಕುರಿತು ‘ಹೊಗಳಿಕೆ ಹಾಕಿ’ ಮೃತ ವ್ಯಕ್ತಿ ಬಳಸುತ್ತಿದ್ದ ವಸ್ತುವಿಶೇಷಗಳನ್ನು ದಾನರೂಪದಲ್ಲಿ ಪಡೆಯುವುದು ವಾಡಿಕೆ. ಮೃತನ ಗುಣಗಾನ ಮಾಡುವುದರಿಂದ ಮಾಡಿಸುವುದರಿಂದ. ಮೃತನ ಕುಟುಂಬಕ್ಕೆ ಪುಣ್ಯ ಲಭಿಸುತ್ತದೆ ಎಂಬುದು ಈ ಜನರ ನಂಬಿಕೆ

– ಎ.ಎಚ್.

ಕಿಳ್ಳೇಕ್ಯಾತರು ತೊಗಲು ಗೊಂಬೆ ಆಟವನ್ನು ಆಡಿಸುವ ನಿರ್ದಿಷ್ಟ ಸಮುದಾಯವನ್ನು ಕಿಳ್ಳೇಕ್ಯಾತರು ಎಂದು ಕರೆಯುತ್ತಾರೆ. ‘ಕಿಳ್ಳೇಕ್ಯಾತ’ , ‘ಶಿಳ್ಳೇಕ್ಯಾತ’ ರೂಪದಿಂದ ಬಂದಿರಬಹುದು. ಅದರಲ್ಲೂ ಉತ್ತರ ಕರ್ನಾಟಕದ ಕಡೆ ಹೋದಂತೆಲ್ಲ ‘ಕಿಳ್ಳೇಕ್ಯಾತ’ ಎಂಬ ಹೆಸರೇ ಹೆಚ್ಚು ರೂಢಿಯಲ್ಲಿದೆ. ಪರಿಶಿಷ್ಟ ಜಾತಿಗೆ ಸೇರಿದ ಈ ಅಲೆಮಾರಿ ಕಿಳ್ಳೇಕ್ಯಾತರನ್ನು ಗೊಂಬೆ ರಾಮರು, ತೊಗಲು ಗೊಂಬೆಯಾಟದವರು, ಬುಂಡೆ ಬೆಸ್ತರು ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಅವರ ವೃತ್ತಿಯೇ ಗೊಂಬೆ ಆಡಿಸುವುದು, ಆ ಮೂಲಕವೇ ಜೀವನವನ್ನು ಸಾಗಿಸುತ್ತಾರೆ. ಒರಟು ಮೈಕಟ್ಟಿನ ಗಿಡ್ಡ ಮೂಗಿನ ಸ್ವಭಾವದ ವ್ಯಕ್ತಿಯೇ ಕಿಳ್ಳೇಕ್ಯಾತ. ಬಯಲಾಟದಲ್ಲಿ ಹನುಮನಾಯಕನ ಪ್ರವೇಶವಾಗುವಂತೆ. ತೊಗಲು ಗೊಂಬೆಯಾಟದಲ್ಲಿ ಕಪ್ಪು ಅಥವಾ ತೀರ ಕೆಂಪು ಬಣ್ಣದ ಡೊಳ್ಳು ಹೊಟ್ಟೆಯ, ಬೋಳುತಲೆಯ, ಪಳ್ಳ ಜುಟ್ಟಿನ, ದಪ್ಪ ತುಟಿಯ ವಕ್ರ ವ್ಯಕ್ತಿಯಾಗಿ ಕಿಳ್ಳೇಕ್ಯಾತ ಕಾಣಿಸಿಕೊಳ್ಳುತ್ತಾನೆ. ಇವನು ತನ್ನ ಹೆಂಡತಿ ಬಂಗಾರಕ್ಕ ಜೊತೆಗೂಡಿಯೇ ರಂಗದ ಮೇಲೆ ಬರುತ್ತಾನೆ. ಹೀಗೆ ಇಡೀ ಆಟ ಕಿಳ್ಳೇಕ್ಯಾತನಿಂದ ನಡೆಯುತ್ತಿದ್ದರಿಂದ ಆ ಹೆಸರೇ ಆಡಿಸುವವರ ಜಾತಿಯ ಹೆಸರಾಗಿ ರೂಢಿಗೆ ಬಂದಿತು.

ಈ ಜನಾಂಗದ ಮೂಲದ ಬಗ್ಗೆ ಪುರಾಣ ಕಥೆಯೊಂದು ಪ್ರಚಲಿತವಾಗಿದೆ. ಇವರ ವಂಶಜಳೊಬ್ಬಳು ಮಹಾರಾಷ್ಟ್ರದ ಕಾಳಾಚಾರಿ ಎಂಬುಬನೊಡನೆ ಸಂಬಂಧ ಇಟ್ಟುಕೊಂಡು, ಏಳು ಜನ ಮಕ್ಕಳಿಗೆ ಜನ್ಮ ನೀಡಿದಳು. ಇದೇ ಕಾಳಾಚಾರಿ ಇವರಿಗೆ ಗೊಂಬೆ ತಯಾರಿಸುವ ಮತ್ತು ಗೊಂಬೆ ಪ್ರದರ್ಶನ ನೀಡುವ ವಿದ್ಯೆ ಕಲಿಸಿದನೆಂದು ಹೇಳಲಾಗುತ್ತದೆ. ಆದರೆ ಕಲಿಯುಗದ ಆರಂಭದಲ್ಲಿ ಗೊಂಬೆ ಕುಣಿಸುವ ಕಲೆ ದೇವರಿಂದಲೇ ಈ ಜನ ವರ್ಗದವರಿಗೆ ಬಂದಿತೆಂದೂ ಆದ್ದರಿಂದ ‘ಕಲಿಕ್ಯಾತ’ ಎಂಬ ಪದ ‘ಕಿಳ್ಳೇಕ್ಯಾತ’ ವಾಯಿತೆಂದು ಹೇಳಲಾಗುತ್ತದೆ. ಕಿಳ್ಳೇಕ್ಯಾತರು ಮಹಾರಾಷ್ಟ್ರದ ಕೊಲ್ಲಾಪುರ ಅಥವಾ ಸತಾರದ ಕಡೆಗಳಿಂದ ಬಹಳ ಹಿಂದೆಯೇ ಕರ್ನಾಟಕಕ್ಕೆ ಬಂದರು ಎಂಬ ವಿಷಯ ಬೆಳಗಾವಿ ಗೆಜೆಟಿಯರಿನ ದಾಖಲೆಗಳಿಂದ ತಿಳಿದು ಬರುತ್ತದೆ. ಹಾಗಾಗಿ ಇಂದಿಗೂ ಇವರ ಮನೆ ಮಾತು ಮರಾಠಿ. ಈ ಗೊಂಬೆರಾಯರು ಮರಾಠಿಗಳಾದರೂ ಕನ್ನಡದ ಕಲೆ ಇವರ ಜೀವನೋಪಾಯಕ್ಕೊಂದು ನೆಲೆ ಕಲ್ಪಿಸಿದೆ. ಮಹಾರಾಷ್ಟ್ರದಲ್ಲಿ ಈ ಜಾತಿಗೆ ‘ಕಟುಬು’ ಎಂಬುದಾಗಿಯೂ ಕರೆಯಲಾಗುತ್ತದೆ. ‘ಕಟುಬು’ ಎಂಬುವುದು ತೊಗಲು ಗೊಂಬೆಯಾಟದಲ್ಲಿ ಬರುವ ವಿದೂಷಕನ ಪಾತ್ರ. ಇವರ ಆಟದಲ್ಲಿ ತುಂಟತನದ ಆಶ್ಲೀಲ ಪದಗಳ ಬಳಕೆ ಹೆಚ್ಚು.

ಈ ಸಮುದಾಯದ ಜನರು ಬೆಳಗಾವಿ, ಬಿಜಾಪುರ, ಗದಗ, ಹಾವೇರಿ, ಕೊಪ್ಪಳ, ಧಾರವಾಡ, ಚಿತ್ರದುರ್ಗ, ಬಳ್ಳಾರಿ; ಹಾಸನಜಿಲ್ಲೆಗಳಲ್ಲಿ ಹೇರಳವಾಗಿಯೂ, ಕೋಲಾರ, ದೊಡ್ಡಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಿರಳವಾಗಿ ಕಂಡುಬರುತ್ತಾರೆ. ಕಿಳ್ಳೇಕ್ಯಾತರಲ್ಲಿ ೧೮ ಬೆಡಗುಗಳಿವೆ. ಮೊರ್ಯ, ಸಾಳ್ವೆ,ಧುಮಾಳ, ವಾಕುಡೆ, ಸಾಸ್‌ನಿಕ್ ಬಾಗಡೆ, ರಸನಕುಂಟೆ ಅವುಗಳಲ್ಲಿ ಪ್ರಮುಖವಾದವು. ಊರಿಂದ ಊರಿಗೆ ಅಲೆದಾಡುತ್ತಾ, ಟೆಂಟು, ಗುಡಾರಗಳಲ್ಲಿ ಬದುಕುವ ಅಲೆಮಾರಿ ಕಿಳ್ಳೇಕ್ಯಾತರಿಗೆ ಐಡೆಂಟಿಟಿ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಶಿಳ್ಳೇಕ್ಯಾತರು ತೊಗಲು ಗೊಂಬೆಯಾಟದ ಕಲಾವಿದರು. ಪ್ರಚಲಿತ ಬಯಲಾಟ ಪಠ್ಯವನ್ನು ಇಟ್ಟುಕೊಂಡು ವಿವಿಧ ಪ್ರದೇಶಗಳಲ್ಲಿ ರಂಗ ಪರಿಸರವನ್ನು ಬೆಳೆಸಿದ ಇವರು ತಮ್ಮ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದ ರಾಮಾಯಣ ಮತ್ತು ಮಹಾಭಾರತದ ಪಠ್ಯಗಳನ್ನು ಜನಪದ ಶೈಲಿಯಲ್ಲಿ ಪುನರ್‌ಸೃಷ್ಟಿ ಮಾಡುತ್ತಾರೆ. ಪ್ರಸಿದ್ಧ ತೊಗಲು ಗೊಂಬೆಯಾಟದ ಜೊತೆಗೆ ಹರಕೆ ಪದಗಳು, ಹೊಗಳುವ ಪದಗಳು, ಸೋಬಾನೆ ಪದಗಳನ್ನು ಹಾಡುವುದಲ್ಲದೆ, ಒಗಟು, ಗಾದೆಗಳಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ.

ಗೊಂಬೆಯಾಟದವರೆಂದರೆ ಕೇವಲ ಪುರಾಣ ಪುಣ್ಯ ಕಥೆಗಳನ್ನು ನಡೆಸಿಕೊಡುವ ‘ದಾಯತ್‌ಕರ್’ (ಕಿಳ್ಳೇಕ್ಯಾತರು) ಗಳಲ್ಲ. ಒಂದು ಕಾಲದಲ್ಲಿ ರಾಜ್ಯದ ಐಕ್ಯತೆಗಾಗಿ ಹೋರಾಡಿದ ವೀರಕ್ಷತ್ರಿಯರು. ಹುಬ್ಬಳ್ಳಿ, ಗದಗ ಭಾಗದಲ್ಲಿಯ ಗೊಂಬೆಯಾಟದವರು ತಮ್ಮ ಕುಲನಾಮದೊಂದಿಗೆ ‘ಕ್ಷತ್ರಿ’ ಎಂಬುದಾಗಿ ಸೇರಿಸಿಕೊಳ್ಳುತ್ತಾರೆ. ಕಿಳ್ಳೇಕ್ಯಾತರ ಇತಿಹಾಸವನ್ನು ಹೇಳುವ ಶಾಸನವನ್ನು ಬೆಂಗಳೂರು, ಮೈಸೂರು ಹೆದ್ದಾರಿಯಲ್ಲಿ ಸಿಗುವ ಚನ್ನಪಟ್ಟಣದ ‘ಕೆಲಗೆರೆ’ ಎಂಬ ಗ್ರಾಮದಲ್ಲಿ ಕಂಡು ಹಿಡಿಯಲಾಗಿದೆ. ೧೮೫೦ ರಿಂದ ೧೯೧೦ ಒಳಗೆ ಹದ್ಬಸ್ತಿನಕಲ್ಲು ಅಥವಾ ಶಿಲಾಲಿಪಿ ಮಾಡಿಸುವ ವಿಚಾರ ತಿಳಿದು ಬರುತ್ತದೆ. ಈ ಸಮುದಾಯದ ಜನ ಪ್ರಾಣಿಗಳನ್ನು ಬೇಟೆ ಆಡುವುದರಿಂದ ವಿಶಿಷ್ಟ ಕೌಶಲ್ಯ ಹೊಂದಿದ್ದಾರೆ. ಬೇಸಿಗೆಯ ಸಂದರ್ಭದ ಹಿನ್ನೀರಿನಲ್ಲಿ ಮೀನು ಹಿಡಿಯುವ ಕಾಯಕವನ್ನು ಮಾಡುವುದರಿಂದ ಇವರನ್ನು ಬುಂಡೆ ಬೆಸ್ತರೆಂದೂ ಕರೆಯುತ್ತಾರೆ. ಕಿಳ್ಳೇಕ್ಯಾತ ಸಮಾಜದ ಹೆಂಗಸರು ಹಚ್ಚೆ ಹುಯ್ಯುವ ಹಾಗೂ ಕೌದಿಯನ್ನು ಹೊಲಿಯುವ ವೃತ್ತಿಯಲ್ಲಿ ಪರಿಣಿತಿ ಹೊಂದಿದ್ದಾರೆ. ಕುಲದೇವತೆ ಮತ್ತು ಗ್ರಾಮದೇವತೆಗಳು ಹಾಗೂ ಪ್ರಾದೇಶಿಕ ದೈವವಾದ ಎಲ್ಲಮ್ಮನನ್ನು ಬಹಳ ಭಕ್ತಿಯಿಂದ ಆರಾಧಿಸುತ್ತಾರೆ. ಇವರಲ್ಲಿ ವಧು ದಕ್ಷಿಣೆ ಹೆಚ್ಚು ಜನಪ್ರಿಯವಾಗಿದ್ದು ಅದನ್ನು ಹಣದ ರೂಪದಲ್ಲಿ ಕೊಡುತ್ತಾರೆ. ಗಂಡು ಮಗುವಿನ ಸಂತಾನಕ್ಕೆ ಹೆಚ್ಚು ಮನ್ನಣೆ ಕೊಡುವ ಕಿಳ್ಳೇಕ್ಯಾತರು ಜನನ ಸೂತಕವನ್ನು ಐದು ದಿನಗಳವರೆಗೆ ಆಚರಿಸಿ ಮಗುವಿಗೆ ನಾಮಕರಣ ಮಾಡುತ್ತಾರೆ.

ಕಿಳ್ಳೇಕ್ಯಾತರಾಟ ಇಂದು ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದಾಗಿ ತನ್ನಮೊದಲಿನ ಜನಪ್ರಿಯತೆಯನ್ನು ಕಳೆದುಕೊಳ್ಳತೊಡಗಿದೆ. ಸಾಂಪ್ರದಾಯಿಕ ಆಯಾಮಗಳನ್ನೇ ಅನುಸರಿಸುತ್ತಿರುವ ಕಿಳ್ಳೇಕ್ಯಾತರಾಟದಲ್ಲಿ ಹೊಸತನ ಮತ್ತು ವಿನೂತನ ಆವಿಷ್ಕಾರ ನಡೆದಿಲ್ಲ. ಪ್ರಸ್ತುತ ಸಾರ್ವಜನಿಕ ಮನರಂಜನಾ ಕ್ಷೇತ್ರದಲ್ಲಿ ರೇಡಿಯೋ, ದೂರದರ್ಶನ, ಚಲನಚಿತ್ರದಂತಹ ಪ್ರಭಾವಶಾಲಿ ಸಮೂಹ ಮಾಧ್ಯಮಗಳು ಜನಪ್ರಿಯವಾಗುತ್ತಿರುವುದರಿಂದ ಇವುಗಳ ಮುಂದೆ ಕಿಳ್ಳೇಕ್ಯಾತರ ಸಾಂಪ್ರದಾಯಿಕ ಆಟ ಮಂಕಾಗಿರುವುದು ಸಹಜ. ಕಿಳ್ಳೇಕ್ಯಾತರು ಯಾವುದೇ ಸನ್ನಿವೇಶವನ್ನು ರಸಾನುಗುಣವಾಗಿ ಪ್ರೇಕ್ಷಕರ ಮನ ಮುಟ್ಟುವಂತೆ ನಿರೂಪಿಸುವಲ್ಲಿ ನಿಸ್ಸೀಮರು. ಯುದ್ಧದ ಸನ್ನಿವೇಶಗಳಲ್ಲಂತೂ ಅವರ ಆರ್ಭಟ, ಹುಮ್ಮಸ್ಸು, ನೋಡಿಯೇ ಅನುಭವಿಸಬೇಕು. ಈ ಕಲಾ ಪ್ರಕಾರಕ್ಕಿರುವ ಕೆಲ ವಿಶೇಷ ಸವಲತ್ತುಗಳೂ ಈ ಸನ್ನಿವೇಶಗಳನ್ನು ಹೆಚ್ಚು ಜೀವಂತ ಹಾಗೂ ಬೆರಗನ್ನುಂಟುಮಾಡುವಂತೆ ಪ್ರದರ್ಶಿಸಲು ಸಾಧ್ಯ ಮಾಡಿಕೊಟ್ಟಿದೆ. ಗೊಂಬೆಯನ್ನು ತೆರೆಯಿಂದ ಹಿಗ್ಗಿಸುವ ಹಾಗೂ ತೆರೆಯಿಂದ ಕುಗ್ಗಿಸುವ, ಆ ಮೂಲಕ ರೂಪಾಂತರಗೊಳಿಸುವ, ಮಾಯಗೊಳಿಸುವ ಕ್ರಿಯೆಗಳು ಗೊಂಬೆರಾಯರ ಕೈಚಳಕದಿಂದ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬರುತ್ತದೆ.

ಆಧುನಿಕ ಭಾರತದ ಇತಿಹಾಸವನ್ನು ತೊಗಲು ಗೊಂಬೆಗಳ ಕುಣಿತದ ಮೂಲಕ ಅಭಿವ್ಯಕ್ತಿಸುವುದು ಸರಳವಾದ ಕೆಲಸವಲ್ಲದಿದ್ದರೂ ಶ್ರೀ ರಾಮಾಂಜನೇಯ ತೊಗಲು ಗೊಂಬೆ ಮೇಳದ ಬೆಳಗಲ್ ವೀರಣ್ಣ ಅವರು ಹೊಸಸಾಧ್ಯತೆಗಳ ಈ ಎಲ್ಲ ತೊಡಕು ತೊಂದರೆಗಳನ್ನು ಬಹಳ ಧೈರ್ಯದಿಂದ ಎದುರಿಸುವ ಸಾಹಸ ಕಾರ್ಯ ಮಾಡಿದ್ದಾರೆ. ಕಿಳ್ಳೇಕ್ಯಾತ ಸಮಾಜದಲ್ಲಿ ಹುಟ್ಟಿದ ಬೆಳಗಲ್ ವೀರಣ್ಣ ಮೂಲತಃ ರಂಗಭೂಮಿಯ ಕಲಾವಿದ. ಸಮಕಾಲೀನ ವಿಷಯಗಳನ್ನು ಗೊಂಬೆ ಆಟದ ಮೂಲಕ ಪರಿಚಯಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ವೀರಣ್ಣ ಅವರಿಗೆ ಕರ್ನಾಟಕ ಸರ್ಕಾರ ‘ಜಾನಪದಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ದೃಶ್ಯ ಹಾಗೂ ಶ್ರವ್ಯ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡ ಕಿಳ್ಳೇಕ್ಯಾತರಾಟವು ಮಾನವನ ನಾಗರಿಕತೆಯಷ್ಟೇ ಪ್ರಾಚೀನ ಕಲೆಯಾಗಿದೆ. ಈ ಜನಪದ ಕಲೆಗೆ ತೊಗಲು ಗೊಂಬೆಯಾಟ ಎಂದು ಕರೆಯುತ್ತಾರೆ. ರಾಮಾಯಣ, ಮಹಾಭಾರತ ಮತ್ತು ಭಾಗವತ ಕಲೆಗಳನ್ನು ಗ್ರಾಮೀಣ ಪ್ರದೇಶದ ಜನತೆಗೆ ತಿಳಿಸಲು ಕಿಳ್ಳೇಕ್ಯಾತರು ಈ ಜನಪದ ಮಾಧ್ಯಮಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

– ಎಂ.ಎನ್.ಎಚ್.

ಕೀಲು ಕುದುರೆ ಕುಣಿತ ಇದು ಕರ್ನಾಟಕದ ಬಿಜಾಪುರ, ಬಳ್ಳಾರಿ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ, ಕೊಡಗು ಮತ್ತು ಇನ್ನು ಹಲವಾರು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜನಪ್ರಿಯ ಕುಣಿತ, ಕೊಡಗಿನಲ್ಲಿ ಇದನ್ನು ‘ಪೊಯ್ ಕುದುರೆ’ ಎನ್ನುವರು. ಈ ಕಲೆ ಯಾವುದೇ ಜಾತಿಯೊಂದಕ್ಕೆ ಬದ್ಧವಾದ ಕುಣಿತವಲ್ಲ. ಕುದುರೆಕೋಲ ಹಾಗೂ ಮರಗಾಲು ಕುಣಿತಳಗು ಇದಕ್ಕೆ ಸಂವಾದಿಯಾದ ಕಲೆಗಳಾಗಿವೆ.

ಕೀಲುಕುದುರೆಯನ್ನು ಮುಖ್ಯವಾಗಿ ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ. ಕಾಲುಗಳನ್ನು ಮಾತ್ರ ಬಿಟ್ಟು ಉಳಿದ ಹೊಟ್ಟೆ, ಎದೆ ಮತ್ತು ಹಿಂಭಾಗವನ್ನು ಕುದುರೆಯ ಆಕಾರದಂತೆ ಬಿದಿರಿನ ತೆಳುವಾದ ದಬ್ಬೆಗಳಿಂದ ಹೆಣೆಯಲಾಗುತ್ತದೆ. ಇದನ್ನು ಆಯಾ ಗ್ರಾಮದ ಕಲಾವಿದರು ಅಂದರೆ ಅಕ್ಕಸಾಲಿಗರು, ಇಲ್ಲವೇ ಚಿತ್ರಗಾರರು ಮಾಡಿಕೊಡುತ್ತಾರೆ. ಕುದುರೆಯ ತಲೆಯನ್ನು ಕಾಗದದ ಹಿಟ್ಟಿನಿಂದ ರಚಿಸುತ್ತಾರೆ. ಇದರ ಒಳಭಾಗ ಟೊಳ್ಳಾಗಿರುತ್ತದೆ. ಕುಣಿಯುವಾಗ ಅದರ ನಾಲಿಗೆಯ ಮೇಲೆ ಕೆಳಗೆ ಚಲಿಸುವಂತೆ ಕೀಲನ್ನು ಅಳವಡಿಸಿರುತ್ತಾರೆ.

ಕೀಲುಕುದುರೆ ಹೆಸರೇ ಹೇಳುವಂತೆ ಕೀಲುಗಳಿಂದ ರಚಿತವಾದುದು. ಕೀಲುಕುದುರೆ ಆಡಿಸುವವನು ಕಾಲಿಗೆ ಎರಡು ಅಡಿ ಉದ್ದದ ಮರಗಾಲು ಕಟ್ಟಿಕೊಂಡಿರುತ್ತಾನೆ. ಈ ಮರದ ಕಾಲುಗಳನ್ನು ಹಗುರ ಹಾಗೂ ಗಟ್ಟಿಯಾದ ಮರದಿಂದ ಮಾಡಿ ಅದರ ಮೇಲೆ ಕಲಾವಿದರ ಕಾಲುಗಳನ್ನು ಕೂರಿಸಲು ಅನುಕೂಲವಾಗುವಂತೆ ಮಾಡಿರುತ್ತಾರೆ. ಕುದುರೆ ಆಕಾರದ ಈ ಬಿದಿರಿಗೆ ಅದೇ ಅಳತೆಯ ಬಣ್ಣ ಬಣ್ಣದ ಗೌನನ್ನು ಹೊದಿಸಿರುತ್ತಾರೆ. ರಾಜ ರಾಣಿಯರ ವೇಷಭೂಷಣವನ್ನು ಧರಿಸಿದ ಕಲಾವಿದರು ಈ ಕುದುರೆಯ ಬೆನ್ನಿನಲ್ಲಿ ಸೇರಿ ಹೆಗಲುಗಳಿಗೆ ಕುದುರೆಯ ದಬ್ಬೆಯ ದೇಹವನ್ನು ಬಿಗಿದುಕೊಳ್ಳುವರು. ಕೈಯಲ್ಲಿ ಲಗಾಮು ಹಿಡಿದುಕೊಂಡು ಅದರ ತಲೆ ಬಾಲಗಳನ್ನು ಆಡಿಸುತ್ತ ಹಿಂದು – ಮುಂದು ಮಾಡಿ ಕುಳಿತಾಗ ಅದು ಕುದುರೆಯ ಭಂಗಿಯಂತೆ ಕಾಣುತ್ತದೆ.

ಸಾಮಾನ್ಯವಾಗಿ ಕೀಲುಕುದುರೆ ಕಲಾವಿದರು ರಾಜ ರಾಣಿಯರಂತೆ ಕಿರೀಟ, ಭುಜಕೀರ್ತಿ, ಎದೆಹಾರ, ನಡುಬಿಲ್ಲೆ, ವೀರಗಾಸೆ ಇತ್ಯಾದಿ ರಾಜಯೋಗ್ಯವಾದ ವೇಷಭೂಷಣ ತೊಟ್ಟಿರುತ್ತಾರೆ. ಮುಖಕ್ಕೆ ಬಣ್ಣ, ಕಾಲಿಗೆ ಗೆಜ್ಜೆಗಳಿರುತ್ತವೆ. ಹೆಣ್ಣು ಮತ್ತು ಗಂಡು ವೇಷಗಳು ಜೊತೆ ಜೊತೆಯಲ್ಲಿ ಕುಣಿಯುವುದು ರೂಢಿ. ಕೆಲವು ಕಡೆಗಳಲ್ಲಿ ಕೀಲಿಕುದುರೆಯ ಜೊತೆಯಲ್ಲಿ ನವಿಲಿನ ಆಕೃತಿಗಳನ್ನು ಕಟ್ಟಿಕೊಂಡ ನರ್ತಕರೂ ಇರುತ್ತಾರೆ.

ಜನಪದ ಕತೆಗಳ ಹಿನ್ನೆಲೆಯಿಂದ ಈ ಕೀಲುಕುದುರೆ ಕಲೆ ಮರಗಾಲು ಕುಣಿತವನ್ನು ಹೋಲುತ್ತದೆ. ಮರಗಾಲಿನ ಎತ್ತರ ಎರಡು ಅಥವಾ ನಾಲ್ಕು ಅಡಿಗಳಿದ್ದರೆ ಕೀಲುಕುದುರೆ ಕುಣಿತದಲ್ಲಿ ಅದು ಎರಡು ಅಡಿಯಷ್ಟು ಉದ್ದವಿರುತ್ತದೆ. ಆದರೆ ದಕ್ಷಿಣಕನ್ನಡದಲ್ಲಿ ಪ್ರದರ್ಶನವಾಗುವ ಕೀಲುಕುದುರೆ ಕಲೆಯಲ್ಲಿ ಕೇವಲ ಒ‌ಬ್ಬನೇ ವೇಷಗಾರನಿರುತ್ತಾನೆ. ಅವನೇ ಕುದುರೆ ಸವಾರ. ಕುದುರೆಯನ್ನು ವಾದ್ಯ ಮೇಳಗಳ ನುಡಿತಕ್ಕೆ ವಿವಿಧ ಭಂಗಿಯಲ್ಲಿ ಕುಣಿಸುವುದಷ್ಟೇ ಕಂಡು ಬರುತ್ತದೆ. ದಕ್ಷಿಣ ಕನ್ನಡದ ‘ಕುದುರೆ ಕೋಲ’ ಈ ಮಾದರಿಯದು.

– ಎಚ್.ಸಿ.ಬಿ.

ಕೀಲು ಗುರ್ರ ಜನಪದ ನೃತ್ಯಗಳು ಗಿರಿಜನ ಗುಂಪುಗಳ ರೀತಿಗೆ ತುಂಬ ಹತ್ತಿರವಾಗಿರುತ್ತವೆ. ಅಂತಹ ಕಲೆಗಳಲ್ಲಿ, ಕೀಲು ಕುದುರೆಯು ಒಂದು. ಈ ‘ಕೀಲುಕುದುರೆ’ ಜನಪದ ಕತೆಗಳಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ರಾಜಕುಮಾರನು ಸಪ್ತ ಸಾಗರಗಳನ್ನು ದಾಟಲಿಕ್ಕೆ ಈ ಕೀಲುಕುದುರೆಯನ್ನು ಬಳಸುತ್ತಾರೆ. ಜನಪದ ವಿನೋದಗಳಲ್ಲಿ ಕೀಲುಕುದುರೆ ಮರೆಯಲಾರದ್ದು, ಇಂದಿಗೂ ಹಬ್ಬಹರಿದಿನಗಳಲ್ಲಿ ಜಾತ್ರೆಗಳಲ್ಲಿ, ದೇವರ ಉತ್ಸವಗಳಲ್ಲಿ ಕೀಲುಕುದುರೆಯ ನೃತ್ಯವನ್ನು ಬಿಡಿಯಾಗಿ ಆಗಲಿ ಅಥವಾ ಚಿತ್ತೂರುಜಿಲ್ಲೆಯಲ್ಲಿ ‘ಪಯಾಂಡಿ’ ನೃತ್ಯದೊಡನೆ ಸೇರಿಸಿಯಾಗಲಿ ಆಡುತ್ತಾರೆ.

28

ಕೀಲುಕುದುರೆಗಳನ್ನು ಬಿದಿರಿನ ದಬ್ಬೆಗಳಿಂದ ಕಾಗದಗಳನ್ನು ಅರೆದು ಅದರಲ್ಲಿ ಮೆಂತ್ಯೆಯನ್ನು ಸೇರಿಸಿ ತಲೆಯನ್ನು, ಬೆನ್ನನ್ನು ತಯಾರುಮಾಡುತ್ತಾರೆ. ಬಣ್ಣ ಬಣ್ಣದ ಉಡುಪುಗಳಿಂದ ಕುದುರೆಯನ್ನ ಸಿಂಗರಿಸುತ್ತಾರೆ. ಕುದುರೆಯನ್ನು ಆಡಿಸುವವರು ಕಿರೀಟಗಳು, ಭುಜಕೀರ್ತಿ, ಹಾರಗಳು, ಕಡಗಗಳು ಎಲ್ಲವನ್ನೂ ಬಣ್ಣದ ಕಾಗದಗಳಿಂದ ತಯಾರು ಮಾಡಿಕೊಳ್ಳುತ್ತಾರೆ. ಮುಖಗಳಿಗೆ ಬಣ್ಣ ಬಳಿದುಕೊಳ್ಳುತ್ತಾರೆ. ಒಬ್ಬನು ‘ರಾಜ’ನಂತೆ, ಇನ್ನೊಬ್ಬ ‘ರಾಣಿ’ಯಂತೆ ಸಿಂಗಾರಮಾಡಿಕೊಂಡು ತಮ್ಮಟೆಯ ಲಯಕ್ಕೆ ತಕ್ಕಂತೆ, ಕುಣಿತಕ್ಕೆ ಅನುಗುಣವಾಗಿ, ಕುದುರೆಗಳನ್ನು ಮಧ್ಯಭಾಗದಲ್ಲಿ ತಿರುಗಿಸುತ್ತಾ ಕುದರುಎ ಓಡಿಸುವ ಹಾಗೆ ಅಭಿನಯಿಸುತ್ತಾ ನೃತ್ಯವನ್ನು ಮಾಡುತ್ತಾರೆ. ಇಂತಹ ಸಮಯದಲ್ಲಿ ರಾಜ, ರಾಣಿ ಹೆಜ್ಜೆ ಹಾಕುತ್ತಾ ಎರಡು ಕುದುರೆಗಳನ್ನು ಅಪ್ಪಿಕೊಂಡಂತೆ, ಪ್ರೀತಿಮಾಡುವಂತೆ ಇಬ್ಬರು ಕೈಹಿಡಿದುಕೊಂಡು ಆಡುವಂತೆ ಮಾಡುತ್ತಾರೆ. ಈ ನೃತ್ಯ ನೋಡಲಿಕ್ಕೆ ಆಕರ್ಷಕವಾಗಿ, ಕಿವಿಗಿಂಪಾಗಿ ಕಿರಿಯರನ್ನು ಹಿರಿಯರನ್ನು ಆಕರ್ಷಿಸುವಂತೇ ಇರುತ್ತದೆ. ಆದರೆ ಒಂದೊಂದುಸಾರಿ ಪ್ರಾಣವಿಲ್ಲದ ಕುದುರೆಗಳಿಂದಲ್ಲದೇ ಪ್ರಾಣವಿರುವ ನಿಜವಾದ ಕುದುರೆಗಳಿಂದ ಮದುವೆ, ಮೆರವಣಿಗೆ ಸಂದರ್ಭಗಳಲ್ಲಿ ನೃತ್ಯ ಮಾಡುತ್ತಾರೆ. ಇದರಲ್ಲಿ ಪುರುಷರು ಕುಳಿತುಕೊಂಡು ಕುದುರೆಯ ಕಾಲುಗಳಿಗೆ ಗೆಜ್ಜೆ ಕಟ್ಟಿ ಜೀನನ್ನು ಕೈಯಲ್ಲಿ ಹಿಡಿದು ಲಯಬದ್ಧವಾಗಿ ತಮ್ಮಟೆಯ ನಾದಕ್ಕೆ ಅನುಗುಣವಾಗಿ ಸನಾದಿ ಮೇಳಗಳ ಜೊತೆಯಲ್ಲಿ ಹೆಜ್ಜೆಗಳನ್ನು ಹಾಕಿಸುತ್ತಾರೆ.

– ಬಿ.ಕೆ.ಆರ್. ಅನುವಾದ ಎ.ಎ.

ಕೀಲುಬೊಮ್ಮಲಾಟ ತೊಗಲು ಗೊಂಬೆಯಾಟದ ಮೂಲಕ ತೆಲುಗರ ಜನಪದ ಕಲಾ ಸಂಪ್ರದಾಯ ಮತ್ತಷ್ಟು ಸಂಪದ್ಭರಿತವಾಗಿ ಕೀಲುಗೊಂಬೆಯಾಟ ಆಗಿದೆ. ಇದು ಪ್ರಾಚೀನ ಕಲೆ. ಚಾರಿತ್ರಿಕವಾಗಿ ನೋಡಿದರ ಎರಡು ಸಾವಿರ ವರ್ಷಗಳ ಹಿಂದಿನಿಂದ ಈ ಕಲಾರೂಪಕ್ಕೆ ಆಧಾರಗಳು ಸಿಗುತ್ತಿವೆ. ಭರತನ ನಾಟ್ಯ ಶಾಸ್ತ್ರದಲ್ಲಿ ಉಪಯೋಗಿಸಿರುವ ಸೂತ್ರಧಾರ ಶಬ್ದ ಈ ಕಲೆಗಾರನಿಗೆ ಸಂಬಂಧ ಪಡುತ್ತದೆ. ಅನಂತರವೇಈ ಪದವನ್ನು ಅರ್ಥಗಳ ಮೂಲಕ ವಿನಿಯೋಗಿಸುವುದು ನಡೆದಿದೆ. ಅಷ್ಟೇ ಅಲ್ಲ, ನಾಟ್ಯಶಾಸ್ತ್ರದಲ್ಲಿಯ ಆಧಾರದಿಂದ ಬಹಳ ಹಿಂದಿನಿಂದಲೇ ಈ ಕಲೆ ಪ್ರಚಲಿತದಲ್ಲಿತ್ತೆಂದು ತಿಳಿಯುತ್ತದೆ. ಅನಂತರ ಕಾಲದ ಸಂಸ್ಕೃತ ಕಾವ್ಯಗಳಲ್ಲಿ ಕೂಡ ಇದರ ಪ್ರಸ್ತಾಪ ಬಂದಿದೆ. ತೆಲುಗುನಾಡಿನಲ್ಲಿ ಈ ಕಲೆಗೆ ಆಧಾರಗಳನ್ನು ಪರಿಶೀಲಿಸಿದರೆ ೧೨ನೆಯ ಶತಮಾನದ ಪಾಲ್ಕುರಿಕೆದ ಸೋಮನಾಥನ ಪಂಡಿತಾರಾಧ್ಯ ಚರಿತ್ರೆಯಲ್ಲಿ ಈ ಕಲೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಇದೆ. ಭಾರತಾದಿ ಕಥೆಗಳನ್ನು ಜೀವಂತವಾಗಿ ಕಾಣಿಸುವಂತೆ ಗೊಂಬೆಗಳನ್ನು ಆಡಿಸುವವರು ಅದ್ಭುತವಾಗಿ ಸೂತ್ರಗಳಿಂದ ಗೊಂಬೆಗಳನ್ನು ಆಡಿಸುವವರು ಇದ್ದರೆಂದು ಹೇಳಿದ್ದಾರೆ. ಇಲ್ಲಿ ‘ಕಂಬ ಸೂತ್ರವೆಂಬುತೋ ಬೊಮ್ಮಲ ನಾಡಿಂಚುವಾರು’ ಎಂದು ಹೇಳುವ ಮಾತು ಕೀಲುಗೊಂಬೆಯಾಟದ ಪ್ರದರ್ಶನ ಕುರಿತದ್ದೇ ಎಂದು ಸ್ಪಷ್ಟವಾಗುತ್ತದೆ. ಭಾರತೀಯರ ಒಂದು ಶಾಸನದಲ್ಲಿಯೂ ಈ ಕಲೆಗಾರನ ಪ್ರಸ್ತಾಪ ಕಾಣಿಸುತ್ತದೆ. ಗೊಂಬೆಯಾಟ ಯಕ್ಷಗಾನ ಕುರಿತು, ಡಾ. ಎಸ್.ಜೋಗಾರಾವ್ ಅವರು ಮಾಡಿದ ಸಂಶೋಧನೆಯಲ್ಲಿ ೧೩ನೆಯ ಶತಮಾನಕ್ಕೆ ಸೇರಿದ ಒಂದು ಶಾಸನವನ್ನು ಪ್ರಸ್ತಾಪಿಸುತ್ತಾ ಇದರಲ್ಲಿ ಕರ್ಮೋಜ ಬ್ರಹ್ಮೋಜ ಎಂಬ ಗೊಂಬೆ ಕಲಾವಿದರಿಗೆ ದಾನ ನೀಡಿದ ವಿವರಗಳು ಇವೆಯೆಂದು ಹೇಳಿದ್ದಾರೆ. ಇವರನ್ನು ಗೊಂಬೆಯಾಟದ ಕಲೆಗಾರರು ಎಂದು ಹೆಸರಿಸುತ್ತಾ ‘ಓಜ’ – ಎಂದಿರುವುದನ್ನು ಗಮನಿಸಿ ಇವರು ಮಹಾರಾಷ್ಟ್ರದವರಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅರು ತೋರಿಸಿದ ಚಾರಿತ್ರಿಕ ಆಧಾರವನ್ನು ಅಂಗೀಕರಿಸುತ್ತಲೇ ಅವರ ವ್ಯಾಖ್ಯೆ ತಪ್ಪೆಂದು ಹೇಳಲು ಅವಕಾಶವಿದೆ. ಮೊದಲು ಸೂತ್ರಧಾರ ಶಬ್ದ ತೊಗಲು ಗೊಂಬೆಯಾಟದವರಿಗಿಂತ ಕೀಲುಗೊಂಬೆಯಾಟದವರಿಗೆ ಅನ್ವಯಿಸುತ್ತದೆ. ತೊಗಲು ಗೊಂಬೆಗಳನ್ನು ಪನಾಕಡ್ಡಿಯನ್ನು ಪುಳ್ಳೆಯಿಂದ ಆಡಿಸಿದರೆ ಕೀಲುಗೊಂಬೆಗಳನ್ನು ಸೂತ್ರದಿಂದ ಎಂದರೆ ದಾರದಿಂದ ಆಡಿಸುತ್ತಾರೆ.

ಕೀಲುಗೊಂಬೆಗಳನ್ನು ತಯಾರಿಸುವವರು ವಿಶ್ವಬ್ರಾಹ್ಮಣ ಕುಟುಂಬದವರು. ಇಂದಿಗೂ ಕೀಲುಗೊಂಬೆಗಳನ್ನು ಇವರೇ ತಯಾರಿಸುತ್ತಿದ್ದಾರೆ. ಇಂದಿಗೂ ವಿಶ್ವಬ್ರಾಹ್ಮಣ ಕುಟುಂಬಗಳಲ್ಲಿ ಗೊಂಬೆಯಾಟದವರು ಎಂಬ ಮನೆಹೆಸರಿರುವ ತೆಲುಗಿನವರಿದ್ದಾರೆ. ಅವರಿಂದ ವಿಷಯವನ್ನು ಸಂಗ್ರಹಿಸಿದ್ದರಿಂದ ಪೂರ್ವಕಾಲದಲ್ಲಿ ಈ ಕುಟುಂಬದವರು ಕೀಲುಗೊಂಬೆಗಳನ್ನು ಮಾಡುತ್ತಿದ್ದರೆಂದೂ ಅವುಗಳನ್ನು ಆಡಿಸುತ್ತಿದ್ದರೆಂದೂ ಆದ್ದರಿಂದ ಇವರಿಗೆ ಈ ಹೆಸರು ಬಂದಿದೆ ಎಂದೂ ಹೇಳುತ್ತಾರೆ. ಆದ್ದರಿಂದ ಜೋಗಾರಾವ್‌ರವರು ಪ್ರಸ್ತಾವಿಸಿದ ಕಾಕತೀಯರು ಶಾಸನದಲ್ಲಿಯ ಬ್ರಹ್ಮೋಜ, ಕರ್ಮೋಜರು ಮಹಾರಾಷ್ಟ್ರದವರಲ್ಲದೆ ತೆಲುಗಿನವರೇ ಆಗಿರುವರೆಂದು ಹೇಳಬಹುದು. ಹಾಗೆಯೇ ಈ ಕಾಲದಲ್ಲೂ ಕಲಾಪ್ರದರ್ಶನ ಮಾಡುತ್ತಿರುವವರು ಯಾರೂ ಮರಾಠಿ ಭಾಷೆಯವರಿಲ್ಲ. ಎಲ್ಲರೂ ತೆಲುಗಿನವರೇ. ಆಂಧ್ರಪ್ರದೇಶದಲ್ಲಿ ಪ್ರಸ್ತುತ ಈ ಕಲೆಯನ್ನು ಪ್ರದರ್ಶಿಸುತ್ತಿರುವ ತಂಡಗಳು ನಾಲ್ಕೈದಕ್ಕಿಂತ ಹೆಚ್ಚಿಲ್ಲ. ವರಂಗಲ್ ಜಿಲ್ಲೆ ನರ್ಮೆಟ್ಟ ಮಂಡಲ, ಅಮ್ಮಪುರಂ ಗ್ರಾಮದಲ್ಲಿ ಮೋತೆ ಜನಗನ್ನಾಥಂ ತಂಡದವರು ಇದ್ದಾರೆ. ಇದೇ ಜಿಲ್ಲೆಯಲ್ಲಿ ಮುಲುಗು ತಾಲ್ಲೂಕು ವೆಂಕಟಾಪುರ ಮಂಡಲಕ್ಕೆ ಸೇರಿದ ಬೂರುಗು ಪೇಟ ಗ್ರಾಮದಲ್ಲಿ ಯಾದಗಿರಿ, ರಾಮಸ್ವಾಮಿ ತಂಡದವರು ಈ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ವರಂಗಲ್ ಜಿಲ್ಲೆಯಲ್ಲಿ ಇನ್ನೂ ಎರಡು ತಂಡಗಳು ಇರುವಂತೆ ತಿಳಿಯುತ್ತದೆ. ಶ್ರೀಕಾಕಳಂ ಜಿಲ್ಲೆಯಲ್ಲೂ ಕೀಲುಗೊಂಬೆ ಕಲೆಗಾರರು ಇರುವನೆಂದು ತಿಳಿದು ಬಂದಿದೆ. ಈ ಕೀಲುಗೊಂಬೆಯ ಕಲಾಪ್ರದರ್ಶನ ಮಾಡುವವರನ್ನು ಗೊಂಬೆಯವರು ಎಂದು ಕರೆಯುತ್ತಿದ್ದಾರೆ. ಇವರು ಬುಡಗಜಂಗಮ ಕುಲಕ್ಕೆ ಸೇರಿದವರು. ಇವರು ಮಾದಿಗ ಉಪಕುಲಕ್ಕೆ ಸೇರಿದವರು. ಆದರೆ ಇವರು ಆಶ್ರಿತ ಕುಲದವರಲ್ಲ. ಇವರ ಪ್ರದರ್ಶನ ಎಲ್ಲ ಜಾತಿಯವರಿಗೂ ಸಲ್ಲುವಂಥದು.

ಇನ್ನು ಇವರು ಆಡಿಸುವ ಗೊಂಬೆಗಳು ಒಂದು ಅಡಿಯಿಂದ ಮೂರು ಅಡಿಗಳಷ್ಟು ಎತ್ತರವಿರುತ್ತದೆ. ಕಾಲುಗಳು ಮುಂಡ, ಕೈ, ತಲೆ ಬಿಡಿಬಿಡಿಯಾಗಿ ತಯಾರಿಸಿ ಕೀಲುಗಳ ಸಹಾಯದಿಂದ ಇವುಗಳನ್ನೆಲ್ಲ ಸೇರಿಸುತ್ತಾರೆ. ಈ ಗೊಂಬೆಗಳಿಗೆ ಕೈಗಳಿಗೆ ಕಾಳುಗಳಿಗೆ, ಬೆನ್ನಿಗೆ ಹಗ್ಗಗಳಿರುತ್ತವೆ. ಈ ಹಗ್ಗಗಳು ಅಡ್ಡವಾಗಿದ್ದರೂ ಒಂದು ಗಳುವಿನ ಮೇಲಿಂದ ಹಿಂದಕ್ಕೆ ತೆಗೆದುಕೊಂಡು ಹಿಂದೆ ಇರುವ ಕಲೆಗಾರರು ಕೈಗಳಿಂದ ಆಡಿಸುತ್ತಾರೆ. ಈ ಗೊಂಬೆಗಳ ಕೈ ಕಾಲುಗಳನ್ನು ಆಡಿಸುವುದು ತಲೆಯನ್ನು ಅತ್ತಿತ್ತ ತಿರುಗುವಂತೆ ಮಾಡುವುದು ಒಂದು ವಿಶೇಷವಾದ ಕಲೆ. ಇದಕ್ಕೆ ಸಾಕಷ್ಟು ಪರಿಣತಿ, ಸಾಧನೆ ಬೇಕಾಗುತ್ತದೆ. ಕಥೆಯ ಪ್ರದರ್ಶನಕ್ಕೆ ಇವುಗಳನ್ನು ಆಡಿಸುತ್ತಾ ಹಿಂದಿನಿಂದ ಹಾಡುಗಳನ್ನು ವಚನಗಳನ್ನು ನುಡಿಯುತ್ತ ಕಥೆಯನ್ನು ಮುಂದುವರಿಸುತ್ತಾರೆ. ಸ್ತ್ರೀಪಾತ್ರಗಳಿಗೆ ಸ್ತ್ರೀಯರು ಪುರುಷ ಪಾತ್ರಗಳಿಗೆ ಪುರುಷರು ಹಾಡುತ್ತಾರೆ. ಒಂದು ಹಾರ್ಮೋನಿಯಂನಿಂದ ಶ್ರುತಿಯನ್ನು ಕೊಡುತ್ತಾರೆ. ತಬಲ ತಾಳ, ಸೇರಿಸಿ ಒಟ್ಟಾಗಿ ಸಂಗೀತವೆನ್ನುತ್ತಾರೆ. ಈ ಕಥೆಯಲ್ಲಿ ರಾಗಗಳು, ಕಂದಾರ್ಥಗಳು ಮುಂತಾದವು ಯಕ್ಷಗಾನದಲ್ಲಿಯ ಎಲ್ಲ ರೀತಿಯ ಸಂಗೀತ ವರಸೆಗಳು ಇರುತ್ತವೆ. ಆದರೆ ಇವರಿಗೆ ಕಥೆಯಲ್ಲಿ ಬರುವ ಪಠ್ಯಗಳಿಗೆ ಗ್ರಂಥ ಆಧಾರಗಳಿಲ್ಲ. ಇವರ ಕಥೆಯ ಪಠ್ಯ ಆಶುಕವಿಕೆಯಂತೆ ಬೇಕೆನಿಸಿದಾಗ ಸೃಷ್ಟಸಿಕೊಳ್ಳುತ್ತಾರೆ. ಸ್ಥಿರವಾಗಿರುವ ಹಾಡುಗಳಿದ್ದರೂ ಅವು ಸಹ ಸಂದರ್ಭಕ್ಕನುಗುಣವಾಗಿ ಬದಲಾವಣೆಗೊಳ್ಳುತ್ತವೆ. ಒಂದು ಕಡೆ ವೇದಿಕೆಯಂತಹ ಪ್ರದೇಶದಲ್ಲಿ ಸಮಾನಾಂತರದಲ್ಲಿ ಹತ್ತು ಹನ್ನೆರಡು ಅಡಿಗಳ ವಿಸ್ತಾರದಲ್ಲಿ ಎರಡು ಗಳುಗಳನ್ನು ನೆಡುತ್ತಾರೆ. ಇವುಗಳಿಗೆ ಅಡ್ಡವಾಗಿ ಒಂದು ಕಟ್ಟುವರು. ಇದರಿಂದ ಕೆಳಗೆ ಒಂದು ಪರದೆಯನ್ನು ಬಿಡುತ್ತಾರೆ. ಈ ಗಳುವಿನ ಮೇಲಿಂದಲೇ ಗೊಂಬೆಗಳನ್ನು ಕೆಳಗೆ ಇಳಿಸಿ ಪರದೆಯ ಮುಂದೆ ಪ್ರೇಕ್ಷಕರಿಗೆ ಕಾಣಿಸುವಂತೆ ಮಾಡುತ್ತಾರೆ. ಗೊಂಬೆಗಳ ಕಾಲುಗಳ ನೆಲಕ್ಕೆ ತಾಕುತ್ತದೆ. ಹಿಂದೆ ಇರುವ ಕಥೆಗಾರರು ಕಾಣದಂತೆ ಸ್ವಲ್ಪ ಎತ್ತರದಲ್ಲಿ ಮುಂದೆ ಮತ್ತೊಂದು ಪರದೆಯನ್ನು ವ್ಯವಸ್ಥೆ ಮಾಡುತ್ತಾರೆ. ಬೆಳಕು ತೆರೆಯ ಮುಂದೆ ಬೀಳುತ್ತದೆ. ತೆರೆಯ ಹಿಂದೆ ಅವರಿಗಾಗಿ ಬೇರೆ ದೀಪದ ವ್ಯವಸ್ಥೆ ಇರುತ್ತದೆ. ಮುಂದೆ ಇರುವ ದೀಪಗಳಿಗಿಂತ ಹಿಂದೆ ಇರುವ ದೀಪಗಳು ಕಡಿಮೆ ಕಾಂತಿಯಿಂದ ಇದ್ದು ಪ್ರೇಕ್ಷಕರಿಗೆ ಗೊಂಬೆಗಳು ಚೆನ್ನಾಗಿ ಕಾಣುವಂತೆ ಮಾಡುತ್ತಾರೆ. ಕೀಲುಗೊಂಬೆಗಳ ಮುಖಗಳಿಗೆ, ಕೈಗಳಿಗೆ ಬಣ್ಣದಿಂದ ಅಲಂಕಾರ ಮಾಡಿರುತ್ತಾರೆ. ಉಳಿದ ಭಾಗಗಳಿಗೆ ಬಟ್ಟೆಯನ್ನು ಸುತ್ತಿರುತ್ತಾರೆ.

ಹೆಣ್ಣುಗೊಂಬೆ ಗಂಡು ಗೊಂಬೆಗಳಿಗೆ ಪಾತ್ರಗಳಿಗೆ ಅನುಗುಣವಾಗಿ ವಿವಿಧ ವರ್ಣಗಳ ಬಟ್ಟೆಗಳನ್ನು ಕಟ್ಟುತ್ತಾರೆ. ಇದರಿಂದ ಗೊಂಬೆಗಳು ತುಂಬ ಸುಂಧರವಾಗಿ ಗಂಭೀರವಾಗಿ ಮನೋಹರವಾಗಿ ಕಾಣಿಸುತ್ತವೆ. ಈ ಗೊಂಬೆಗಳು ತೂಕವಾಗಿ, ದಪ್ಪವಾಗಿ ಇರುತ್ತವೆ. ಕಲೆಗಾರರು ಪ್ರದರ್ಶನಕ್ಕೆ ಎಲ್ಲಿಗಾದರೂ ಪ್ರಯಾಣ ಬೆಳೆಸಿದರೆ ಕನಿಷ್ಠ ನಾಳ್ಕು ದೊಡ್ಡ ಪೆಟ್ಟಿಗೆಗಳಲ್ಲಿ ಗೊಂಬೆಗಳನ್ನು ಕೊಂಡೊಯ್ಯುತ್ತಾರೆ. ತುಂಬಾ ತೂಕವಾಗಿಯೂ ಇರುತ್ತವೆ. ಆದ್ದರಿಂದ ಇವುಗಳಿಗೆ ಪ್ರತ್ಯೇಕವಾಗಿ ಒಂದು ವಾಹನದ ಅವಶ್ಯಕತೆಯಿದೆ. ಈ ಕಲೆಗಾರರ ತಂಡದಲ್ಲಿ ಕನಿಷ್ಠ ಎಂಟು ಜನ ಇರಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಪ್ರದರ್ಶನಕ್ಕೆ ಹೊರಟಾಗ ಮೂರ ನಾಲ್ಕು ಎತ್ತಿನಗಾಡಿಗಳಲ್ಲಿ ಹೋಗುತ್ತಿದ್ದರು. ಒಂದು ಗ್ರಾಮಕ್ಕೆ ಹೊರಟರೆ ಕನಿಷ್ಠ ನಾಲ್ಕೈದು ದಿನಗಳ ಕಾಲ ಅಲ್ಲಿ ಪ್ರದರ್ಶನಗಳು ಇರುತ್ತಿದ್ದವಂತೆ. ಕಲಾರೂಪಗಳಲ್ಲಿ ಪ್ರಧಾನವಾಗಿ ಲವಕುಶ, ಬಾಲನಾಗಮ್ಮ, ಚೆಂಚುಲಕ್ಷ್ಮಿ, ಧರ್ಮಾಂಗದ ಚರಿತ್ರೆ ಮುಂತಾದ ಕಥೆಗಳನ್ನು ಪ್ರದರ್ಶಿಸುತ್ತಾರೆ. ಅಮ್ಮಪುರದ ಮೋತೇಜಗನ್ನಾಥ ತಂಡದವರು ಈ ಕಥೆಗಳಲ್ಲದೆ ಇನ್ನೂ ಇತರ ೧೮ ಯಕ್ಷಗಾನವನ್ನು ಪ್ರದರ್ಶಿಸುತ್ತೇವೆ ಎಂದು ಹೇಳಿದರು. ಇವುಗಳಲ್ಲಿ ಪುರಾಣ ಕಥೆಗಳೇ ಅಲ್ಲದೆ ಅದ್ಭುತ ಕಥೆಗಳನ್ನು ಪ್ರದರ್ಶಿಸುವುದಿಲ್ಲ. ತೊಗಲುಗೊಂಬೆಯಾಟಕ್ಕೂ, ಕೀಲುಗೊಂಬೆಯಾಟಕ್ಕೂ ತುಂಬಾ ಸಾಮ್ಯ ಕಂಡುಬರುತ್ತದೆ. ಹಾಗೆಯೇ ಕೆಲವು ವ್ಯತ್ಯಾಸಗಳೂ ಇವೆ. ತೊಗಲು ಗೊಂಬೆಯನ್ನು ಆ ಕಲೆಗಾರರೇ ಮಾಡಿಕೊಳ್ಳುತ್ತಾರೆ. ಕೀಲುಗೊಂಬೆಗಳನ್ನು ಈ ಕಲೆಗಾರರು ಮಾಡುವುದಿಲ್ಲ. ಈ ಗೊಂಬೆಯನ್ನು ಮರದ ಕೆಲಸ ಕುಲವೃತ್ತಿಯಾಗುಳ್ಳ ವಿಶ್ವಬ್ರಾಹ್ಮಣ ಶಿಲ್ಪಿಗಳು ತಯಾರಿಸುತ್ತಾರೆ. ಸಾಧಾರಣವಾಗಿ ಪೋಷಕರು ಯಾರಾದರು ಈ ಗೊಂಬೆಗಳು ತಯಾರಿಸಲು ಆದ ಖರ್ಚನ್ನು ಭರಿಸುತ್ತಾರೆ. ಶಿಲ್ಪಿಗಳ ಮನೆಯ ಪೂಜೆ ಮಾಡಿ ಶಿಲ್ಪಿಗಳ ಮನೆಯಿಂದ ತಾಳ, ಮೇಳಗಳೊಂದಿಗೆ ಕಲೆಗಾರರು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ತೊಗಲುಗೊಂಬೆಗಳನ್ನು, ಕೀಲುಗೊಂಬೆಗಳನ್ನು ಕಲೆಗಾರರು ಮೈಲಿಗೆಯಾಗದಂತೆ ಪವಿತ್ರವಾಗಿ ನೋಡಿಕೊಳ್ಳುತ್ತಾರೆ. ಅಮ್ಮ ಪುರಕ್ಕೆ ಸೇರಿದ ಕೀಲುಗೊಂಬೆ ತಂಡ ಜಗನ್ನಾಥ ತಂಡಕ್ಕೆ ಸೇರಿದವರು. ಅವರ ಹತ್ತಿರವಿದ್ದ ಗೊಂಬೆಗಳು ೧೫೦ ವರ್ಷಗಳ ಹಿಂದಿನವೆಂದು ಇವರಿಗೆ ನಾಲ್ಕೈದು ತಲೆಮಾರುಗಳ ಹಿಂದಿನವೆಂದು ಹೇಳುತ್ತಾರೆ.

ಈ ಗೊಂಬೆಗಳನ್ನು ಮೇದಕ್ ಜಿಲ್ಲೆ ಸಿದ್ಧಿಪೇಟೆ ಮಂಡಲದ ಗಟ್ಲಮುತ್ಯಾಲ ಗ್ರಾಮಕ್ಕೆ ಸೇರಿದ ದೊರೆ ಪೋಷಕನಾಗಿ ಇವರಿಗೆ ಪ್ರಸಾದಿಸಿದ ಹಾಗೆ, ಇವುಗಳನ್ನು ಆಕನೂರು ಗ್ರಾಮಕ್ಕೆ ಸೇರಿದ ಅವುಸಲ ರಾಮಯ್ಯ ಎಂಬ ಶಿಲ್ಪಿ ತಯಾರಿಸಿದಂತೆ ತಿಳಿದು ಬರುತ್ತದೆ. ಇವರ ಹತ್ತಿರವಿರುವ ಗೊಂಬೆಗಳು ತುಂಬ ಸುಂದರವಾಗಿ ಪ್ರತ್ಯೇಕವಾದ ಶೈಲಿಯಲ್ಲಿ ಪ್ರಾಚೀನ ದೇವಾಲಯಗಳ ಶಿಲ್ಪಿಗಳ ಶೈಲಿಯಂತೆ ಕಾಣಿಸುತ್ತಿವೆ. ಮೇಲೆ ಹೇಳಿದ ಕಥೆಗಳು ಪ್ರದರ್ಶಿಸಲು ಅವಶ್ಯಕವಾದ ಗೊಂಬೆಗಳೆಲ್ಲ ಇವರ ಹತ್ತಿರ ಇವೆ. ವಿಶ್ವಕರ್ಮ ಕುಲಕ್ಕೆ ಸೇರಿದ ಈ ಶಿಲ್ಪಿಗಳು ಗೊಂಬೆಗಳನ್ನು ತಯಾರಿಸುವುದಷ್ಟೇ ಅಲ್ಲದೆ ಕಥಾಪ್ರದರ್ಶನಗಳನ್ನು ಸಹ ಮಾಡಿದ್ದಾರೆಂದು ತಿಳಿದುಬರುತ್ತದೆ. ಕೃಷ್ಣಜಿಲ್ಲೆ ನಂದಿಗ್ರಾಮ ತಾಲ್ಲೂಕಿನಲ್ಲಿ ಈ ಜಾತಿಗೆ ಸೇರಿದವರ ಬೊಮ್ಮಾಲಾಟ ಎಂಬ ಮನೆ ಹೆಸರು ಇರುವವರು ಇದ್ದಾರೆ. ಅವರನ್ನು ಪ್ರಶ್ನಿಸಿದರೆ ಹಿಂದಿನ ಕಾಲದಲ್ಲಿ ಈ ಕುಟುಂಬಗಳವರು ಕೀಲುಗೊಂಬೆಗಳನ್ನು ತಯಾರಿಸಿ ಕಥಾಪ್ರದರ್ಶನ ಮಾಡುತ್ತಿದ್ದರೆಂದು ಅವರು ತಿಳಿಸುತ್ತಾರೆ. ಈ ಮನೆಯ ಹೆಸರುಳ್ಳ ಕುಟುಂಬಗಳೂ ಇನ್ನೂ ಇಲ್ಲಿ ಇವೆ. ವಿಶ್ವಕರ್ಮದವರ ಮನೆಯ ಹೆಸರಿನೊಂದಿಗೆ ಓಜ ಶಬ್ದ ಗೌರವಸೂಚಕವಾಗಿರುತ್ತದೆ.

ಕೀಲುಗೊಂಬೆಗಳ ಕಲೆ ಅಗತ್ಯವಾಗುವ ದಿಶೆಯಲ್ಲಿದೆ ಎಂದು ಹೇಳಬಹುದು. ಹಳ ತಲೆ ಮಾರಿನವರು ಯಾರು ಇದನ್ನು ಕಲಿಯುತ್ತಿಲ್ಲ. ಆಸಕ್ತಿಯೂ ತೋರಿಸುತ್ತಿಲ್ಲ. ಈ ತಲೆಮಾರಿನವರು ಹೋದರೆ ಅದು ಪೂರ್ತಿಯಾಗಿ ಅಂತ್ಯಗೊಂಡಂತೆ. ಅಷ್ಟೇ ಅಲ್ಲ, ಸಂಪ್ರದಾಯಬದ್ಧವಾಗಿ ಗ್ರಾಮಕ್ಕೆ ಹೋಗಿ ಹಿಂದೆ ಪ್ರದರ್ಶನಗಳನ್ನು ಕೊಡುತ್ತಿದಂತೆ ಈಗ ಕೊಡುವ ಪರಿಸ್ಥಿತಿ ಇಲ್ಲ. ಯಾವ ಗ್ರಾಮದವರು ಇವರನ್ನು ಪ್ರತ್ಯೇಕವಾಗಿ ಕರೆದು ಕಥಾಪ್ರದರ್ಶನ ಮಾಡುವಂತೆ ಕೋರುವ ಪರಿಸ್ಥಿತಿ ಇಲ್ಲ. ಸರ್ಕಾರದ ಉತ್ಸವಕಾರ್ಯಕ್ರಮಗಳಲ್ಲಿ ವಿದ್ಯಾಸಂಸ್ಥೆಗಳು ಇನ್ನೂ ಇತರ ಸರ್ಕಾರದ ಸಂಸ್ಥೆಗಳಷ್ಟೇ ಇವರನ್ನು ಆಗಾಗ ಕರೆದು ಅವಕಾಶ ಕೊಟ್ಟು ಪೋಷಿಸುತ್ತಿವೆ. ಉಳಿದಂತೆ ಇವರಿಗೆ ಪ್ರದರ್ಶನಗಳು ದೊರೆಯುತ್ತಿಲ್ಲ. ಈ ಕಲಾವಿದರಿಗೆ ಈ ಕಲೆಯಿಂದ ಜೀವನ ನಿರ್ವಹಣೆ ಮಾಡುವ ಅವಕಾಶವಿಲ್ಲ. ಇದನ್ನು ಅವರು ಆಗಾಗ ಬರುವ ಆದಾಯವೆಂದು ಭಾವಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಇವರು ವಿವಿಧ ಬಗೆಯ ವ್ಯಾಪಾರಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ಹೆಂಗಸರು ಗಂಡಸರು ಅಲ್ಯೂಮಿನಿಯಂ ಸಾಮಾನುಗಳನ್ನು ಕೊಂಡು ಅವುಗಳನ್ನು ಹಳ್ಳಿಗಳಿಗೆ ಹೋಗಿ ಹಳೆ ಬಟ್ಟೆಗಳಿಗೆ ಬದಲಾಗಿ ಕೊಟ್ಟ ಆ ಬಟ್ಟೆಗಳನ್ನು ಮಾರುಕಟ್ಟೆಯಲ್ಲಿ ಮಾರಿಕೊಳ್ಳುತ್ತಾರೆ. ಈ ವ್ಯಾಪಾರದಿಂದ ಇವರ ಜೀವನ ನಿರ್ವಹಣೆ ಚೆನ್ನಾಗಿದೆ ಎಂದು ಹೇಳುತ್ತಾರೆ. ಕುಲದಲ್ಲಿ ಬುಡಿಗೆ ಜಂಗಮರಾದ ಇವರು ಇಂದಿಗೂ ಅವರ ಶೈವಾಚಾರಗಳನ್ನು ಪಾಲಿಸುತ್ತಿದ್ದಾರೆ. ಕಥಾಪ್ರದರ್ಶನದಲ್ಲಿ ಇವರು ಸೃಷ್ಟಿಸುವ ಸಾಹಿತ್ಯ ಸಂಗೀತಶೈಲಿ ಜನರಂಜನೆಯಾಗಿ ಕಲಾತ್ಮಕವಾಗಿದ್ದು ಇವರ ಕೌಶಲ್ಯವನ್ನು ಕಲಾಪ್ರತಿಭೆಯನ್ನು ವ್ಯಕ್ತಪಡಿಸುತ್ತಿವೆ. ತೆಲುಗಿನವರ ಈ ಅಪರೂಪ ಕೀಲುಗೊಂಬೆಯ ಕಲೆಯೂ ಅಂತ್ಯಗೊಳ್ಳುವ ದಿಶೆಯಲ್ಲಿದೆ ಎಂದು ಹೇಳಬೇಕಾಗಿದೆ.

– ಪಿ.ಎಸ್.ಸಿ. ಅನುವಾದ ವಿ.ಆರ್.