ಕುಂಬಳಗಿಡ ಆಟ ಹುಡುಗರು ಸೊಂಟ ಹಿಡಿದು ಸಾಲಾಗಿ ಕುಳಿತುಕೊಳ್ಳುತ್ತಾರೆ. ಸಾಲಿನ ಹಿಂದೆ ಗೌಡ ನಿಲ್ಲುತ್ತಾನೆ. ಸಾಲಿನ ಮುಂದೆ ಸ್ವಲ್ಪ ಅಂತರ ಬಿಟ್ಟು ನೆಲದಲ್ಲಿ ಒಂದು ಕಡ್ಡಿ ಚುಚ್ಚಿ ನಿಲ್ಲಿಸಿ, ಒಬ್ಬ “ನಿಂಬಿ ಗಿಡಕ ನಾ ನೀರು ಹಾಕದೆ | ನನಗೊಂದು ಹಣ್ಣ ಸಿಗಲಟಿಗ್ಯೊ ಸಿಗಲಟಿಗ್ಯೋ” ಎಂದು ನುಡಿಯುತ್ತ ಅದರ ಸುತ್ತ ಕುಂಟುತ್ತಾನೆ. ಹಾಗೆಯೇ ‘ಗೌಡರ ಮನಿ ಎಲ್ಯಾದ’ ಎಂದು ಸಾಲಾಗಿ ಕುಳಿತ ಪ್ರತಿಯೊಬ್ಬರಿಗೆ ಕೇಳುತ್ತ ಅವರಿಂದ ‘ನಮ್ಮ ಮನಿ ಹಿಂದೆ’ ಎಂದು ಉತ್ತರ ಪಡೆಯುತ್ತ ಗೌಡನ ಹತ್ತಿರ ಬಂದು “ಗೌಡ ಗೌಡ ಒಂದು ಕುಂಬಳಕಾಯಿ ಕುಡು” ಎಂದರೆ ಈಗ ‘ಹೂವಾಗಿದೆ’ ಎನ್ನಲು ಬಂದವನು ಕುಂಟುತ್ತ ತಿರುಗಿ ಹೋಗಿ ಮತ್ತೆ ‘ನಿಂಬಿ ಗಿಡಕ ನಾ ನೀರ ಹಾಕದೆ ನನಗೊಂದು ಹಣ್ಣ ಸಿಗಲಟಿಗೋ’ ಎನ್ನುತ್ತ ವರ್ತುಲ ತಿರುಗಿ ಗೌಡನ ಹತ್ತಿರ ಬಂದು, ‘ಗೌಡ ಗೌಡ ಕುಂಬಳಕಾಯಿ ಕುಡು’ ಎಂದರೆ ‘ಈಗ ಮಿಡಿಯಾಗಿದೆ’ ಎನ್ನಲು, ಮೊದಲಿನ ಹಾಗೆ ಮಾಡಿ ಇನ್ನೊಮ್ಮೆ ಬಂದರೆ ‘ಕಾಯಿಯಾಗಿದೆ’, ಹಾಗೆ ಮಾಡಿ, ಮತ್ತೊಮ್ಮೆ ಬಂದರೆ ‘ಹಣ್ಣಾಗಿದೆ ಒಯ್ಯಬಹುದು’ ಎನ್ನುತ್ತಾನೆ. ಬೇಡಲು ಬಂದವ ಸಾಲಿನ ಮುಂದಿನವನ ಕೈಜಗ್ಗುತ್ತಾನೆ. ಸೊಂಟ ಹಿಡಿದ ಹಿಂದಿನ ಹುಡುಗ ಬಿಡುವುದಿಲ್ಲ. ‘ಗೌಡ ಗೌಡ ಕೀಲಿ ಕೊಡು’ ಎನ್ನಲು ಗೌಡ ಬಂದು ಕೀಲಿ ತೆರೆದಂತೆ ಮಾಡಲು, ಆ ಹುಡುಗ (ಕುಂಬಳಕಾಯಿ)ನನ್ನು ಕರೆದುಕೊಂಡು ಹೋಗಿ ಗಿಡದ ಹತ್ತಿರ ಕುಳ್ಳಿರಿಸಿ, ಅವನ ಸುತ್ತ ವರ್ತುಲ ಬರೆಯುತ್ತಾನೆ. ಇದೇ ರೀತಿ ಪ್ರತಿಯೊಂದು ಕುಂಬಳಕ್ಕೂ ಆಚರಿಸಿ, ಒಂದನ್ನು ಹೊರತುಪಡಿಸಿ ಎಲ್ಲ ಹಣ್ಣುಗಳನ್ನು ಒಯ್ಯುತ್ತಾನೆ. ಕೊನೆಗೆ ಇದ್ದೊಂದನ್ನೂ ಬಂದು ಕೇಳುತ್ತಾನೆ. ‘ನಿನ್ನೆ ಒಯ್ದದು ಏನ ಮಾಡಿದಿ?’ ಎಂದು ಕೇಳಿದರೆ ‘ಬೆಕ್ಕು ತಿಂದಿತು’ ಎಂದು, ‘ಮೊನ್ನೆ ಒಯ್ದು ಏನ ಮಾಡಿದಿ?’ ಎಂದು ಕೇಳಿದರೆ ‘ತೊಳೆಯುವಾಗ ನಿರಾಗ ಬಿದ್ದಿತು’ ಎಂದು ಹೀಗೆ ಒಂದೊಂದು ಸುಳ್ಳು ಹೇಳುತ್ತಾನೆ. ಕೊನೆಯದನ್ನು ‘ಬೀಜಕ ಇಟಗೊಂಡೀನಿ’ ಎಂದು ಹೇಳಿದರೂ, ಇಬ್ಬರೂ ಅರ್ಧ ಅರ್ಧ ಹಂಚಕೊಳ್ಳಲು ಒಪ್ಪುತ್ತಾರೆ. ಹೀಂದೆ ಮುಂದೆ ನಿಂತು ಇಬ್ಬರು ಕೊರೆದಂತೆ ಮಾಡಿದ ಬಳಿಕ ಆತನು ಒಯ್ಯುತ್ತಾನೆ. ಆಮೇಲೆ ಗೌಡನಿಗೆ ಊಟಕ್ಕೆ ಕರೆಯಲು ಬರುವುದು. ‘ಗೌಡ ಗೌಡ ಊಟಕ ಬಾ’ ಎಂದರೆ ‘ಎಲಿ ಹಾಕಿಕೊಂಡು ಬರತೇನಿ’ ಹೀಗೆ ಅನೇಕ ಸಲ ಎಡತಾಕಿಸಿ ಕೊನೆಗೆ ‘ನಿಮ್ಮ ಮನ್ಯಾಗ ನಾಯಿ ಇಲ್ಲವೇನು?’ ಎಂದು ಕೇಳಿ, ಇಲ್ಲವೆಂದು ಖಚಿತಪಡಿಸಿಕೊಂಡು ಅನಂತರ ‘ಕುದುರಿ ತೊಗೊಂಡ ಬಾ’ ಎನ್ನುತ್ತಾನೆ. ಒಬ್ಬ ಕುದರಿ ಆಗುತ್ತಾನೆ. ಗೌಡ ಹತ್ತಿ ಬಂದು ಊಟಕ್ಕೆ ಕುಳಿತುಕೊಳ್ಳುತ್ತಾನೆ. ಉಣಬಡಿಸಲಾಗುತ್ತದೆ. ಈ ಮೊದಲೇ ಮಣೆ ಕೆಳಗೆ ಇಟ್ಟಿದ್ದ ಸೆಗಣಿಯತ್ತ ಬೆರಳು ತೋರಿಸಿ, ‘ಗೌಡ ಹೇತಾನು’ ಎಂದು ಕೂಗುತ್ತಲೇ ಗೌಡ ಓಡುತ್ತಾನೆ. ವರ್ತುಲಗಳೊಳಗೆ ಮೌನವಾಗಿ ಕುಳಿತ ಕುಂಬಳ – ಕಾಯಿಗಳೆಲ್ಲ ಈಗ ನಾಯಿಯಾಗಿ ಬೌಬೌ ಎಂದು ಬೆನ್ನು ಹತ್ತುತ್ತವೆ. ಗೌಡ ಓಡಿ ಹೋಗುತ್ತಾನೆ.

– ಎಂ.ಎಂ.ಕೆ.

ಕುಟ್ಟಿಚಾತ್ತನ್ ಉತ್ತರ ಕೇರಳದ ಕಾವುಗಳಲ್ಲಿ ಆರಾಧನೆಗೊಳ್ಳುವ ಪ್ರಧಾನ ದೈವ ಕುಟ್ಟಿ ಚಾತ್ತನ್. ತೆಯ್ಯಂ ಹಾಗೂ ತಿರದ ಮೂಲಕ ಆರಾಧನೆ ನಡೆಯುತ್ತದೆ. ಕೇರಳದ ಮಂತ್ರವಾದ ಪರಂಪರೆಯ ಒಂದು ದೇವತೆಯಾಗಿಯೂ ಕುಟ್ಟಿಚಾತನನ್ನು ಆರಾಧಿಸಲಾಗುತ್ತದೆ. ಕಾಳಕಾಡು, ಕಾಡುಮಾಡಂ, ಅಡಿಯೇರಿ, ಪುಲ್ಲಂಜೇರಿ ಮೊದಲಾದ ಕೇರಳದ ಪ್ರಸಿದ್ಧ ಮಾಂತ್ರಿಕ ಮನೆತನಗಳು ಕುಟ್ಟಿಚಾತನನ್ನು ಆರಾಧಿಸುತ್ತವೆ.

ಹೆಸರೇ ಸೂಚಿಸುವಂತೆ ಚಾತನನ್ನು ಓರ್ವ ಬಾಲಕನೆಂದು ಪುರಾಣಗಳಲ್ಲೂ, ಕಥೆಗಳನ್ನೂ ಚಿತ್ರಿಸಲಾಗಿದೆ. ತೃಪ್ತಿಪಡಿಸಿದರೆ ಯಾವ ಸಹಾಯವನ್ನು ಬೇಕಿದ್ದರೂ ಮಾಡುವ, ಸಿಟ್ಟು ಬಂದರೆ ಕಷ್ಟಗಳನ್ನು ಕೊಡುವ ದೈವವಾಗಿದೆ. ಚಾತನೇರ್ ಎಂಬುದು ಕುಟ್ಟಿಚಾತನ ಬಾಧೆಯಾಗಿದೆ. ಮನೆಗೆ ಎಲ್ಲಿಂದಲೋ ಕಲ್ಲು ಬೀಳುವ ಘಟನೆಗೆ ಈ ಹೆಸರು. ಮನೆ, ಬಾವಿಗಳನ್ನು ಮಲಿಗೊಳಸುವುದು, ಆಹಾರವಸ್ತು, ಹಾಲು ಇತ್ಯಾದಿಗಳನ್ನು ಹಾಳು ಮಾಡುವುದು ಕುಟ್ಟಿಚಾತನ ಬಾಧೆ ಎಂದು ನಂಬಲಾಗಿದೆ. ಜನರಿಗೆ, ಅದರಲ್ಲೂ ಮುಖ್ಯವಾಗಿ ಹೆಂಗಸರ ದೇಹವನ್ನು ಸೇರಿ ಮಾನಸಿಕ ರೋಗಗಳನ್ನು ಉಂಟುಮಾಡುವುದು ಚಾತನ ಶೈಲಿಯಾಗಿದೆ. ಇದನ್ನು ಚಾತನ್‌ಬಾಧೆ ಎಂದು ಕರೆಯುವರು. ಮಂತ್ರವಾದ ಹಾಗೂ ಆರಾಧನೆಯ ಮೂಲಕ ಬಾಧೆಯನ್ನು ನಿವಾರಿಸುವರು. ಇದಕ್ಕಾಗಿ ಚಾತ್ತನ್ ಸೇವೆ ನಡೆಸುವ ಮಂತ್ರವಾದಿಗಳಿರುತ್ತಾರೆ. ಚಾತ್ತನ ಸಂತುಷ್ಟಿಗಾಗಿ ಕಳಂ ಬರೆದು, ಆಯುಧ ಹಿಡಿದು ಕುಣಿಯುವ ಆಚರಣೆಗಳು ಮಧ್ಯಕೇರಳದಲ್ಲಿ ಚಾಲ್ತಿಯಲ್ಲಿದೆ. ಮಲಪುರಂ ಜಿಲ್ಲೆಯ ಪರಯರ ಮಧ್ಯೆ ಚಾತ್ತನ್‌ಕಳಿ ಎಂಬ ಒಂದು ಕಲೆ ಪ್ರಚಲಿತದಲ್ಲಿದೆ.

ಉತ್ತರ ಕೇರಳದಲ್ಲಿ ಅನೇಕ ಕುಟ್ಟಿಚಾತ್ತನ್ ಕಾವುಗಳಿವೆ.ಡ ಪ್ರತಿಯೊಂದು ಕಾವಿನಲ್ಲೂ ವಿಭಿನ್ನವಾದ ಪುರಾಣಗಳ ಹಿನ್ನೆಲೆಯಿದೆ. ಕುಟ್ಟಿಚಾತನನ್ನು ಕೆಲವರು ಶಿವಾಂಶ ಸಂಭೂತನೆಂದೂ, ಇನ್ನು ಕೆಲವರು ವಿಷ್ಣು ಮಾಯೆಯಿಂದ ಜನಿಸಿದವನೆಂದೂ ಹೇಳುತ್ತಾರೆ. ತೆಯ್ಯಂ ಹಾಗೂ ತಿರ ಆರಾಧನೆಯಲ್ಲಿ ಪೂಕುಟ್ಟಿಚಾತ್ತನ್, ತೀಕುಟ್ಟುಚಾತ್ತನ್, ಕರಿಂಗುಟ್ಟಿಚಾತ್ತನ್ ಎಂಬ ಪ್ರಭೇದಗಳಿವೆ. ವೇಷಭೂಷಣ, ಆಕಾರಗಳಲ್ಲಿ ಈ ವೈದೃಶ್ಯ ಪ್ರಕಟವಾಗುತ್ತದೆ.

ಶಿವಪಾರ್ವತಿಯರು ಮನುಷ್ಯಾವತಾರವನ್ನು ತಾಳಿ ಪಡೆದ ಸಂತಾನವೇ ಕುಟ್ಟಿಚಾತನೆಂದು ಕೆಲವು ಪುರಾಣಗಳು ಹೇಳುತ್ತವೆ. ಸಂತಾನಭಾಗ್ಯಕ್ಕಾಗಿ ಶಿವನನ್ನು ಪೂಜಿಸಿದ ಕಾಳಕೆಟ್ಟು ನಂಬೂದಿರಿಗೆ ವಳ್ಳುವ ಜನಾಂಗದ ಮಹಿಳೆ ಹೆತ್ತ ಮಗುವನ್ನು ಶಿವನು ನೀಡಿದನೆಂದು ಕೆಲವು ಕಥೆಗಳು ಹೇಳುತ್ತವೆ. ಕಾಳಕೆಟ್ಟು ನಂಬೂದಿರಿಗೆ ತನ್ನ ದಾಸಿಯಲ್ಲಿ ಹುಟ್ಟಿದ ಮಗನೇ ಕುಟ್ಟಿಚಾತನೆಂದೂ ಹೇಳಲಾಗುತ್ತದೆ. ಹುಟ್ಟಿನಿಂದಲೆ ಕಾರಣಿಕವನ್ನು ಪ್ರದರ್ಶಿಸುತ್ತಿದ್ದ ಕುಟ್ಟಿಚಾತ ಸಾಮಾಜಿಕ ವ್ಯವಸ್ಥೆಗಳನ್ನು ಧಿಕ್ಕರಿಸಿ ಬೆಳೆದನು. ತನಗೆ ಹಾಲು ಕಾಯಿಸಿ ಕೊಡದ ಕುನ್ನ ತಮ್ಮ ಎಂಬವಳನ್ನೂ, ಆಭರಣದ ಚಿನ್ನವನ್ನು ಅಪಹರಿಸಿದ ಅಕ್ಕಸಾಲಿಗನನ್ನೂ ಶಿಕ್ಷಿಸುತ್ತಾನೆ. ಶಾಲೆಯಲ್ಲಿ ತನ್ನನ್ನು ಶಿಕ್ಷಿಸಿದ ಗುರುವಿಗೆ ಹೊಡೆದು, ಬೆತ್ತವನ್ನು ತುಂಡರಿಸುವನು. ಅಸ್ಪೃಶ್ಯರೊಂದಿಗೆ ಊಟ ಮಾಡುತ್ತಾ ಬದುಕಿದ. ಕಾಳಕಟ್ಟಚ್ಚನ್ ಗೌರವಿಸುತ್ತಿದ್ದ ಎತ್ತನ್ನು ಕಡಿದು ರಕ್ತ ಹೀರಿದ. ಹೀಗೆ ಮನೆಯಿಂದ ಹೊರದಬ್ಬಲ್ಬಟ್ಟನು. ಇದು ಎಲ್ಲ ಪುರಾಣಗಳಲ್ಲಿ ಕಾಣುವ ಸಾಮಾನ್ಯ ಅಂಶವಾಗಿದೆ. ಆದರೆ ಪ್ರಾದೇಶಿಕವಾಗಿ ಈ ಪುರಾಣಸಳಲ್ಲಿ ಅನೇಕ ಪ್ರಕ್ಷಿಪ್ತಗಳು ಕಾಣಿಸುತ್ತವೆ.

ಕಾಳಕೆಟ್ಟ್ ಕುಟ್ಟಿಚಾತ್ತನ್ ಪುರಾಣದ ಪ್ರಕಾರ ಕಾಳಕೆಟ್ಟಚ್ಚನ್ ಚಾತ್ತನನ್ನು ಬಂಧಿಸಿ ಕಾಞರಪುಳ ಎಂಬ ಹೊಳೆಯಲ್ಲಿ ತಲೆಕಡಿಯುತ್ತಾನೆ. ಆದರೆ ಕಾಳಕೆಟ್ಟಚ್ಚನ್ ಹಿಂದಿರುಗಿದಾಗ, ಚಾತ್ತನ್ ಮನೆಯ ಒಳಗಿದ್ದನು. ಅನಂತರ ಮಂತ್ರವಾದಿಗಳನ್ನು ಕರೆಸಿ, ಹೋಮ ಮಾಡಿ ಚಾತ್ತನನ್ನು ಬಂಧಿಸುತ್ತಾನೆ. ೩೯೦ ತುಂಡುಮಾಡಿ ಚಾತನನ್ನು ೨೧ ಹೋಮಕುಂಡಗಳಲ್ಲಿ ಹಾಕುತ್ತಾನೆ. ಹೋಮ ಕುಂಡದಿಂದ ಉತ್ತಮ ಕುಟ್ಟಿಚಾತ, ಮಧ್ಯಮ ಕುಟ್ಟಿಚಾತ, ಅಧಮ ಕುಟ್ಟಿಚಾತ, ಪೂಕುಟ್ಟಿಚಾತ ಮೊದಲಾದ ೩೯೦ ಕುಟ್ಟಿಚಾತರು ಉದ್ಭವಿಸಿದರೆಂದು ಕೆಲವು ಕಥೆಗಳು ತಿಳಿಸುತ್ತವೆ. ೪೩ ಮನೆತನಗಳು ಚಾತನಿಗೆ ಲಭಿಸಿದುವು. ಮಲಯನ್, ಮುನ್ನೂಚಾನ್, ಪಾಣನ್, ಪರಯನ್ ಮೊದಲಾದ ಸಮುದಾಯದವರು ಕುಚ್ಚಿಚಾತನ್ ತೆಯ್ಯಂ ಹಾಗೂ ತಿರವನ್ನು ಕಟ್ಟುವ ಕಲಾವಿದರು. ಕೆಲವೆಡೆ ಚಾತನಿಗೆ ಮದ್ಯವನ್ನು ಅರ್ಪಿಸುತ್ತಾರೆ.

– ಕೆ.ಎಂ.ಬಿ. ಅನುವಾದ ಎನ್.ಎಸ್.

ಕುಡುಬಿಯರು ಕರ್ನಾಟಕದ ಬುಡಕಟ್ಟುಗಳಲ್ಲಿ ಕುಡುಬಿ ಒಂದು ಆದಿವಾಸಿ ಸಮುದಾಯ. ಇವರು ಹೆಚ್ಚಾಗಿ ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ.

ಪೋರ್ಚುಗೀಸರ ದಬ್ಬಾಳಿಕೆ ಹಾಗೂ ಅವರು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವಂತೆ ಬಲಾತ್ಕರಿಸಿದಾಗ ಕುಡುಬಿಯರು ರಾತ್ರೋ ರಾತ್ರಿ ಗೋವಾವನನ್ನು ಬಿಟ್ಟು ಬೇರೆ ಬೇರೆ ಕಡೆಗೆ ವಲಸೆ ಬಂದುದಾಗಿ ತಿಳಿಸುತ್ತಾರೆ. ಗೋವಾ ಮೂಲದವರೆಂದು ಹೇಳಿಕೊಳ್ಳುವ ಈ ಸಮುದಾಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಒಂದೆಡೆ ನೆಲೆನಿಂತು, ಆಧುನಿಕತೆಗೆ ಪೂರ್ಣವಾಗಿ ತೆರೆದುಕೊಳ್ಳದೆ ಕಟ್ಟಾ ಸಂಪ್ರದಾಯಬದ್ಧರಾಗಿ ಬದುಕನ್ನು ನಡೆಸುತ್ತಿದ್ದಾರೆ. ಇವರಲ್ಲಿ ಅನೇಕ ಒಳಪಂಗಡಗಳು ಇವೆ. ಅವುಗಳೆಂದರೆ – ಗೋವಾ ಕುಡುಬಿ, ಅರೆ ಕುಡುಬಿ, ಜೋಗಿ ಕುಡುಬಿ, ಕುಡಿಯಾಲ ಕುಡುಬಿ, ನಾಡ ಕುಡುಬಿ, ಕಾಡು ಕುಡುಬಿ, ಕುಮ್ರಿ ಕುಡುಬಿ. ಇವರು ಕಾಡಿನಲ್ಲಿಯೇ ಹೆಚ್ಚಾಗಿ ವಾಸಿಸುತ್ತಿದ್ದರು, ಮೂಲ ವೃತ್ತಿಯಾದ ಕುಮ್ರಿ ಬೇಸಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಬಹುಪಾಲು ಬುಡಕಟ್ಟು ಸಮುದಾಯಗಳು ಪ್ರಕೃತಿಯನ್ನು ಆರಾಧಿಸುವುದುಂಟು. ಇದಕ್ಕೆ ಪೂರಕವಾಗಿ ಕುಡುಬಿಯರು ತುಳಸಿ ಪೂಜೆಗೆ ಪ್ರಥಮ ಸ್ಥಾನವನ್ನು ನೀಡಿದ್ದಾರೆ. ಇವರಿಗೆ ಧರ್ಮಸ್ಥಳದ ಮಂಜುನಾಥೇಶ್ವರ, ತಿರುಪತಿ ತಿಮ್ಮಪ್ಪನ ಬಗ್ಗೆ ಎಲ್ಲಿಲ್ಲದ ಭಯ ಭಕ್ತಿ. ಇವರು ಮಲ್ಲಿಕಾರ್ಜುನನನ್ನೂ ಪೂಜಿಸುತ್ತಾರೆ.

ತಾವು ವಾಸಿಸುವ ಮನೆಗಳನ್ನು ಪ್ರಕೃತಿದತ್ತವಾಗಿ ಕಾಡಿನಲ್ಲಿ ದೊರೆಯುವ ಮಣ್ಣನಿಂದ ಗೋಡೆ ನಿರ್ಮಿಸಿಕೊಂಡು, ಅದರ ಮೇಲೆ ಕಾಡು ಮರಗಳನ್ನು ಬಳಸಿ ಮೇಲ್ಛಾವಣಿಯನ್ನು ಹುಲ್ಲಿನಿಂದ ಮುಚ್ಚುತ್ತಾರೆ. ಇವರಲ್ಲಿ ಪ್ರಮುಖವಾಗಿ ಮನೆಯ ಮುಖ್ಯದ್ವಾರ ದಕ್ಷಿಣ ಇವರಲ್ಲಿ ಪ್ರಮುಖವಾಗಿ ಮನೆಯ ಮುಖ್ಯದ್ವಾರ ದಕ್ಷಿಣಕ್ಕಿದ್ದರೆ ಪಶ್ಚಿಮಕ್ಕೆ ಹಿಂಬಾಗಿಲನ್ನು ನಿರ್ಮಿಸಿರುತ್ತಾರೆ. ಕುಡುಬಿ ಸಮುದಾಯದಲ್ಲಿ ಅನ್ಯ ಸಮುದಾಯದವರಿಗೆ ಒಳ ಪ್ರವೇಶ ನಿಷಿದ್ಧ. ಇವರ ಮನೆಗಳಲ್ಲಿ ಪ್ರಮುಖವಾಗಿ ದೇವರ ಕೋಣೆ, ಮಲಗುವ ಕೋಣೆ, ವಿಶಾಲವಾದ ಒಂದು ಹಜಾರ ಇರುತ್ತದೆ. ವಿಶೇಷವೆಂದರೆ ಮನೆಯ ಮುಖ್ಯ ದ್ವಾರ ಮತ್ತು ಹಿಂಬಾಗಿಲಿನ ದ್ವಾರಕ್ಕೆ ಬಾಗಿಲನ್ನು ಬಿಟ್ಟರೆ ಉಳಿದಂತೆ ಮತ್ತಾವ ಕೋಣೆಗೂ ಬಾಗಿಲುಗಳಿರುವುದಿಲ್ಲ. ಮತ್ತೊಂದು ವಿಶೇಷ ಅಂಶವೆಂದರೆ ಮನೆಯವರೆಲ್ಲರೂ ಊಟ ಮಾಡಿದ ಅನಂತರ ಮನೆಯ ಒಳಗಡೆ ಗೋಮೂತ್ರವನ್ನು ಸಿಂಪಡಿಸುತ್ತಾರೆ.

ತಮ್ಮ ಮನೆಗಳನ್ನು ಎತ್ತರವಾದ ಪ್ರದೇಶದಲ್ಲಿ ನಿರ್ಮಿಸಿಕೊಂಡು, ಮನೆಯಿಂದ ಕೂಗಳತೆ ದೂರದಲ್ಲಿ ಸಮತಟ್ಟಾದ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾರೆ. ಉಳುಮೆಯಲ್ಲಿ ಕೋಣಗಳನ್ನು ಬಳಸುತ್ತಾರೆ. ಇವರು ಕೋಣ, ಎಮ್ಮೆ, ಹಸು, ಎತ್ತು, ನಾಯಿಗಳನ್ನು ಸಾಕುತ್ತಾರೆ.

29

ಭಾಷೆಯ ದೃಷ್ಟಿಯಿಂದ ‘ಕುಡುಬಿ’ ಪದಕ್ಕೆ ಒಕ್ಕಲುತನ ಎಂದೂ, ‘ಕುಣಿಬಿ’ಯೆಂದರೆ ಮರಾಠಿಯಲ್ಲಿ ರೈತ ಎಂದೂ ಅರ್ಥ. ಇಂಡೋಆರ್ಯನ್ ಭಾಷಾ ಸಮುದಾಯಕ್ಕೆ ಭಾಷಾ ಸಮುದಾಯಕ್ಕೆ ಸೇರಿದ ‘ಕೊಂಕಣಿ’ ಕುಡುಬಿಯರ ಮಾತೃ ಭಾಷೆಯಾಗಿದೆ. ಇವರು ಕನ್ನಡ, ಮರಾಠಿ, ತುಳು ಮತ್ತು ಕೊಂಕಣಿ ಮಿಶ್ರಿತ ಭಾಷೆಯನ್ನು ಮಾತನಾಡುತ್ತಾರೆ. ಇತರರ ಜೊತೆ ವ್ಯವಹಾರಕ್ಕೆ ಮರಾಠಿ, ತುಳು, ಕನ್ನಡ ಬಳಸುತ್ತಾರೆ.

ಕುಡುಬಿಯರಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಇದೆ. ಆದರೆ ಮಾಂಸಾಹಾರದಲ್ಲಿ ಕೆಲವು ನಿಷೇಧಗಳಿವೆ. ಕಾಡಿನಲ್ಲಿಯೇ ವಾಸಿರುವ ಇವರು ಅಲ್ಲಿ ಸಿಗುವ ಪ್ರಾಣಿ, ಪಕ್ಷಿಗಳನ್ನು ಮಾತ್ರ ಆಹಾರವಾಗಿ ಬಳಸುವುದು ಕಂಡು ಬರುತ್ತದೆ. ಸಾಕು ಪ್ರಾಣಿಗಳಾದ ಕುರಿ, ಆಡು, ದನ, ಊರ ಹಂದಿ, ಊರ ಕೋಲಿ, ಮಂಗಗಳ ಮಾಂಸಗಳು ನಿಷೇಧ. ಜೊತೆಗೆ ನವಿಲಿನ ಮಾಂಸವನ್ನು ಸಹ ನಿಷೇಧಿಸಿದ್ದಾರೆ. ಬೇಟೆಯ ಸಮಯದಲ್ಲಿ ನವಿಲು ಸಿಕ್ಕರೆ ಬೇಟೆಯಾಡುವುದಿಲ್ಲ. ಅಕಸ್ಮಾತ್ ಬೇಟೆಯಾಡುವಾಗ ಸಿಕ್ಕಿಬಿದ್ದರೆ ತಿನ್ನಬಹುದು ಎಂದು ಹೇಳುತ್ತಾರೆ. ಕಾಡುಹಂದಿಯ ಮಾಂಸ ಇವರಿಗೆ ಪ್ರಿಯವಾದ ಆಹಾರ. ಇವರು ತಮ್ಮ ಹೊಲಗದ್ದೆಗಳಲ್ಲಿ ಹಾಗೂ ಮನೆಯ ಸುತ್ತಮುತ್ತ ಬೆಳೆಯುವ ತರಕಾರಿಗಳನ್ನು ಅಂದರೆ ಮೂಲಂಗಿ, ಬದನೆ, ಈರುಳ್ಳಿ, ಟೊಮ್ಯಾಟೊ, ಗೆಣಸು, ಮೆಣಸಿನಕಾಯಿ, ಇತರ ತರಕಾರಿಯನ್ನು ತಮ್ಮ ಅಡುಗೆಯಲ್ಲಿ ಬಳಸುತ್ತಾರೆ.

ಕುಡುಬಿ ಅಥವಾ ಕುಣಿಬಿಯಲ್ಲಿ ಹೆಚ್ಚಾಗಿ ಅವಿ ಭಕ್ತ ಕುಟುಂಬ ವ್ಯವಸ್ಥೆ ಇದೆ. ಪಿತೃ ಪ್ರಧಾನ ಪದ್ಧತಿ ಇದ್ದು ಇವರಲ್ಲಿ ಏಕಪತ್ನಿತ್ವ ಜಾರಿಯಲ್ಲಿದೆ. ಗಂಡು ಹೆಣ್ಣಿಗೆ ಸಮಾನತೆ ಇದೆ. ಮಕ್ಕಳ ಪಾಲನೆ ಪೋಷಣೆ ಸ್ತ್ರೀಯರ ಕರ್ತವ್ಯ. ಇವರಲ್ಲಿ ಗಂಡಸರು ಊಟವಾದ ಮೇಲೆ ಸ್ತ್ರೀಯರು ಊಟ ಮಾಡುವುದು ವಾಡಿಕೆ. ಹಾಗೆಯೇ ವಿವಾಹ ವಿಚ್ಛೇದನ ಇವರಲ್ಲಿ ನಿಷಿದ್ಧ.

ಕುಡುಬಿ ಸಮುದಾಯದಲ್ಲಿ ಯಾವುದೇ ತೀರ್ಮಾನವಾಗಲಿ, ನ್ಯಾಯ ದಾನವಾಗಲಿ ಎಲ್ಲವೂ ಕುಟುಂಬದ ಹಿರಿಯ ಯಜಮಾನನ ಎದುರು ನಡೆಯುತ್ತದೆ. ಇವರು ಪ್ರಾಚೀನ ಕಾಲದಿಂದಲೂ ಬಂದ ನ್ಯಾಯ ಪದ್ಧತಿಯನ್ನೇ ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಎಂತಹ ಸಮಸ್ಯೆಯಿರಲಿ ಅದನ್ನು ಮೂರು ಜನರ ಸಮ್ಮುಖದಲ್ಲಿ ಇಲ್ಲವೆ ಹಾಡಿಯ ಜನರ ಎದುರಲ್ಲಿ ಆ ಗುಂಪಿನ ಮುಖಂಡರು ತೀರ್ಮಾನ ತೆಗೆದುಕೊಂಡು ಅವರು ಮಾಡಿರುವ ತಪ್ಪಿಗೆ ಅನುಗುಣವಾಗಿ ದಂಡ ವಿಧಿಸಬಹುದು ಸಮುದಾಯದಿಂದ ಬಹಿಷ್ಕಾರ ಹಾಕಬಹುದು. ಈ ಎಲ್ಲ ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ ಕುಡುಬಿಯ ಮುಖಂಡನಿಗೆ ಇರುತ್ತದೆ.

ಆಚರಣೆಗಳು, ಹಬ್ಬಗಳು, ಕುಣಿತ ಎಲ್ಲವೂ ಅವರ ಮನೆಯಲ ಮುಂದೆ ಇರುವ ತುಳಸಿಕಟ್ಟೆಯ ಎದುರು ನಡೆಯುತ್ತದೆ. ಅಲ್ಲದೆ ಇವರು ರಾಮಾಯಣ, ಮಹಾಭಾರತವನ್ನು ತಮ್ಮ ಭಾಷೆಯಲ್ಲಿ ನಾಲ್ಕೈದು ದಿನಗಳ ಕಾಲ ನಿರಂತರವಾಗಿ ಹಾಡುವುದಿದೆ.

ವರ್ಷವಿಡೀ ಕೃಷಿ, ಬೇಟೆ, ಉಪಕಸುಬುಗಳನ್ನು ಮಾಡಿ ದುಡಿದು ಸಾಕಾಗಿ ತಮ್ಮ ಬೇಸರಿಕೆಯನ್ನು ಹೋಗಲಾಡಿಸುವುದಕ್ಕೋಸ್ಕರ ಹಾಡಿಯ ಜನರೆಲ್ಲ ಕೆಲವು ಹಬ್ಬ – ಆಚರಣೆಗಳನ್ನು ಮಾಡಿ ಹಾಡಿ – ಕುಣಿಯುವುದರ ಮುಖೇನ ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ವಿಶೇಷವಾಗಿ ಕುಡುಬಿಯರು ಆಚರಿಸುವ ಹಬ್ಬಗಳೆಂದರೆ :ಹೋಳಿ, ದಸರ, ದೀಪಾವಳಿ, ಶಿವರಾತ್ರಿ, ಯುಗಾದಿ, ನಾಗರಪಂಚಮಿ, ಚೌವುತಿ ಹಬ್ಬ. ಇವರಿಗೆ ಈ ಹಬ್ಬಗಳಲ್ಲೆಲ್ಲ ಪ್ರಮುಖವಾದುದು ಹಾಗೂ ಶ್ರೇಷ್ಠವಾದುದು ಹೋಳಿ ಹಬ್ಬ. ಈ ಹಬ್ಬದಲ್ಲಿ ಉಡದ ಚರ್ಮದಿಂದ ತಯಾರಿಸಿದ ‘ಗುಮಟೆ’ಯನ್ನು ಬಾರಿಸುತ್ತಾ ವೇಷಭೂಷಣಗಳನ್ನು ತೊಟ್ಟು ಅದರ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ.

ಮದುವೆಯಲ್ಲಿ ಒಂದು ವೈಶಿಷ್ಟ್ಯವನ್ನು ಕಾಣಬಹುದು. ಇವರಲ್ಲಿ ಮೊದಲು ಹೆಣ್ಣನ್ನು ಹುಡುಗನ ತಂದೆ ಹಾಗೂ ಮನೆಯ ಹಿರಿಯರು ನೋಡುತ್ತಾರೆ. ಅನಂತರ ಹುಡುಗ ನೋಡಿ ಬರುತ್ತಾನೆ. ಮದುವೆ ನಿಶ್ಚಯವಾದ ಮೇಲೆ ಮದುವೆ ಆಗುವವರೆಗೂ ಹುಡುಗ – ಹುಡುಗಿ ಭೇಟಿಯಾಗಬಾರದು. ಭೇಟಿಯಾದುದು ಕಂಡುಬಂದರೆ ಮದುವೆ ಮುರಿದು ಬೀಳುತ್ತದೆ. ಈ ಸಮುದಾಯದಲ್ಲಿ ವರದಕ್ಷಿಣೆಯಿಲ್ಲ. ಅದರ ಬದಲು ವಧುದಕ್ಷಿಣೆ ಪದ್ಧತಿ ಚಾಲ್ತಿಯಲ್ಲಿದೆ. ತೆರವನ್ನು ವಸ್ತುವಿನ ರೂಪದಲ್ಲಿ ಅಕ್ಕಿ, ಬೆಲ್ಲ ಇತ್ಯಾದಿ ಕೊಡುತ್ತಾರೆ. ಇಲ್ಲಿ ಪ್ರಮುಖವಾಗಿ ‘ಬಳಿ’ಗಳನ್ನು ಆಧಾರವಾಗಿಟ್ಟುಕೊಂಡು ಹೆಣ್ಣನ್ನು ನೋಡಿ ಮದುವೆ ಮಾಡುತ್ತಾರೆ. ಇವರಲ್ಲಿ ಪ್ರಮುಖವಾಗಿ ೩೨ ಬಳಿ (ಗೋತ್ರ)ಗಳಿರುವುದನ್ನು ನೋಡಬಹುದು.

ಇವರಲ್ಲಿ ಗರ್ಭೀಣಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿರುತ್ತಾರೆ. ಆ ಸಂದರ್ಭದಲ್ಲಿ ಯಾವ ಕೋಣೆಯಲ್ಲಿರುತ್ತಾಳೊ ಅಲ್ಲಿಯೇ ಹಾಡಿಯ ನುರಿತ ಸೂಲಗಿತ್ತಿಯಿಂದ ಹೆರಿಗೆ ಮಾಡಿಸುತ್ತಾರೆ. ಹೆರಿಗೆಯಾದ ಮೂರು ದಿನಗಳ ಅನಂತರ ಸಗಣಿ ನೀರನ್ನು ಚಿಮುಕಿಸುವ ಮೂಲಕ ಶುದ್ಧ ಮಾಡುತ್ತಾರೆ. ಏಳನೆಯ ದಿನಕ್ಕೆ ‘ಆಮೆ’ ಪದ್ಧತಿಯಂತೆ ಇಡೀ ಹಾಡಿಯ ಜನಕ್ಕೆ ಸಿಹಿಊಟವನ್ನು ಹಾಕಿಸುತ್ತಾರೆ. ಇಲ್ಲಿ ಬಾಣಂತಿಯ ಖರ್ಚು ವೆಚ್ಚವೆಲ್ಲವನ್ನು ಇಡೀ ಕುಟುಂಬದವರೆಲ್ಲ ವಹಿಸಿಕೊಳ್ಳುತ್ತಾರೆ.

ಕುಡುಬಿಯರು ನಗರಗಳ ಸಂಪರ್ಕ ಪಡೆದುಕೊಂಡ ಮೇಲೆ, ಅವರು ಆಧುನಿಕತೆಗೆ ಪಕ್ಕಾಗಿ ಬದಲಾವಣೆಯ ಕಡೆ ಮುಖ ಮಾಡಿದ್ದಾರೆ. ಅವರ ವೇಷಭೂಷಣ ನಡೆ – ನುಡಿ, ಆರ್ಥಿಕ ಸ್ಥಿತಿ – ಗತಿ, ಶಿಕ್ಷಣ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ.

– ಪಿ.ಎಸ್.

ಕುಡೈಮುರಮ್ ಅಲೆಮಾರಿ ಬುಡಕಟ್ಟಿಗೆ ಸೇರಿದವರಾದ ‘ಕೊರಮ’ರು ತಮ್ಮ ದಿನನಿತ್ಯದ ಜೀವನಕ್ಕೆಂದು ಕೈ ಕಸಬು ಆಧರಿಸಿಕೊಂಡು ಜೀವನವನ್ನು ಸಾಗಿಸುವವರಾಗಿರುತ್ತಾರೆ. ಒಂದು ಸಮಾಜದೊಳಗೆ ಸಿಗುವಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಮ್ಮ ಕೈಚಳಕದ ಮೂಲಕ ಪರಂಪರಾಗತವಾಗಿ ಬೆಳೆದು ಬಂದ ಕಸುಬನ್ನು ಇಂದಿಗೂ ನಡೆಸಿಕೊಂಡು ಹೋಗುತ್ತಿದ್ದಾರೆ. ಅಂಥವುಗಳಲ್ಲಿ ಕುಡೈ ಮುರಮ್ ಒಂದು.

ಕೊರಮರು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಜನರು. ತಮ್ಮ ಪಾರಂಪರಿಕ ಕೈಕಸುಬುಗಳಿಗೆ ಬೇಕಾದಂತಹ ವಸ್ತುಗಳನ್ನು ಪರಿಸರದಿಂದಲೇ ಸ್ವೀಕಾರ ಮಾಡಿಕೊಳ್ಳುತ್ತಾರೆ. ಬೆಟ್ಟ ಪ್ರದೇಶಗಳಲ್ಲಿ ಸಿಗುವ ಬಿದಿರಿನಿಂದ ವಸ್ತುಗಳನ್ನು ತಯಾರು ಮಾಡಿ ಅಂದರೆ ಗೂಡೆಗಳಂತಹ ವಸ್ತುಗಳನ್ನು ಅಲ್ಲದೆ ಮನೆಗಳಲ್ಲಿ ಧಾನ್ಯಗಳನ್ನು ಶೇಖರಣೆ ಮಾಡಿಡಲು ತೊಂಬೆ ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತುಗಳನ್ನು ಸಾಗಿಸಲು ಗೂಡೆಗಳನ್ನು ಹೆಣೆದು ಜನರಿಗೆ ಮಾರುತ್ತಾರೆ.

ಆರು ಸಾವಿರ ವರ್ಷಗಳಿಗಿಂತ ಮುಂಚೆಯೇ ಗೂಡೆಗಳನ್ನು ಬಳಸುತ್ತಿದ್ದರು ಎಂಬುದನ್ನು ಕಾಣಬಹುದು. ಅಲ್ಲದೆ ರೋಮನ್ನರು ಬ್ರಿಟನ್ನಿಗೆ ಬಂದಂತಹ ಸಂದರ್ಭದಲ್ಲಿ ಅಲ್ಲಿಯ ಜನರಿಗೆ ರೋಮನ್ನರು ಗೂಡೆಗಳನ್ನು ಕರಕುಶಲತೆಯಿಂದ ತಯಾರಿಸಿ ಬಳಸಲು ಕೊಡುತ್ತಿದ್ದರು ಎಂಬುದು ಇತಿಹಾಸ ತಜ್ಞರುಗಳಿಂದ ತಿಳಿದುಬರುತ್ತದೆ. ಇದಲ್ಲದೆ ಪ್ರಪಂಚಾದ್ಯಂತ ಕಂಡುಬರುವ ಆದಿವಾಸಿ ಜನ ತಿಳಿದಿದ್ದ ಹಲವು ಬಗೆಯ ಕೈಕಸುಬುಗಳಲ್ಲಿ ಈ ಗೂಡೆ ಹೆಣೆಯುವ ಕಲೆ ಕೂಡ ಒಂದು. ಒಂದೇ ರೀತಿಯಲ್ಲಿ ತಮಿಳುನಾಡಿನ ‘ತೊಲ್’ ಬುಡಕಟ್ಟು ಸಮಾಜಕ್ಕೆ ಸೇರಿದ ಕೊರಮರು ತಮ್ಮ ಪರಂಪರಾಗತವಾದ ಕೈಚಳಕದ ಕಲೆಯಾದ ಗೂಡೆ, ಮೊರ ಹೆಣೆಯುವ ಕಸಬನ್ನು ಮಾಡುತ್ತಿರುವುದನ್ನು ಕಾಣುತ್ತೇವೆ. ಅಲ್ಲದೆ ಉನ್ನಿಮಾರ್ ಕುಚ್ಚಿ (ಉನ್ನಿಗಿಡದ ಕಡ್ಡಿ), ಅಳಿಂಜುಕುಚ್ಚಿ, ನೊಚ್ಚಿಕುಚ್ಚಿ(ನೊಚ್ಚಿಗಿಡ), ನಾಣಲ್ ಕುಚ್ಚಿ (ದರ್ಭೆ ಕಡ್ಡಿ), ಪಟ್ಟುಪೂಚ್ಚಿಕುಚ್ಚಿ (ರೇಷ್ಮೆಗಿಡದ ಕಡ್ಡಿ) ಮೂಂಗಿಲ್ (ಬಿದಿರು) ಈ ಮೊದಲಾದ ವಸ್ತುಗಳ ಸಹಾಯದಿಂದ ಗೂಡೆಯನ್ನು ಹೆಣೆಯುವುದಕ್ಕೆ ಮೂಲ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಾರೆ.

ತಮಿಳುನಾಡಿನ ದಿಂಡುಕಲ್ ಮತ್ತು ವೇತಚ್ಚಂದೂರ್ ಜಿಲ್ಲೆಗಳನ್ನು ವ್ಯಾಪಿಸಿರುವ ದೇವರ್ ಮಲೈಕಾಡು, ತರಮಲೈ, ಇರಂಗಮಲೈ,ವಿಡುದಲೈ ಪಟ್ಟಿ, ರಂಗನಾಥಪುರ, ಕೋಟ್ಟೂರ್, ಎರಿಯಾಡು, ಪೂತ್ತಮ್ ಪಟ್ಟಿ ಈ ಮೊದಲಾದ ಊರುಗಳ ಬೆಟ್ಟ ಪ್ರದೇಶಗಳಲ್ಲಿ ಹೇರಳವಾಗಿ ದೊರೆಯುವ ದರ್ಭೆಕಡ್ಡಿಗಳನ್ನು ಹಾಗೂ ಪರ್ವತ ಶ್ರೇಣಿಗಳಲ್ಲಿ ಬಿದಿರುಕಡ್ಡಿಗಳನ್ನು ಕತ್ತರಿಸಿಕೊಂಡು ತರುತ್ತಾರೆ. ಇದೇ ಅಲ್ಲದೇ ತಾವು ವಾಸಿಸುವ ಊರುಗಳಲ್ಲಿ ಬಿದಿರಿನ ಅಂಗಡಿಗಳಲ್ಲಿಯೂ ರೈತರಿಂದಲೂ ಬಿದಿರನ್ನು ನೇರವಾಗಿ ಪಡೆಯುತ್ತಾರೆ.

ಕಾಡಿನಿಂದ ತಂದಂತಹ ಬಿದಿರಿನ ಕಡ್ಡಿಗಳನ್ನು ಹೆಚ್ಚು ದಿನದವರೆಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕಡ್ಡಿ ಹಸಿ ಇರುವಾಗಲೇ ಗೂಡೆಯನ್ನು ಹೆಣೆದುಬಿಡಬೇಕು. ಹಸಿಯಾಗಿ ಕೆಲವು ದಿನಗಳವರೆಗೆ ಇರಲು, ಹೆಣೆಯುವುದಕ್ಕೆ ಸುಲಭವಾಗಲು ನೀರಿನಲ್ಲಿ ನೆನಸಬೇಕು. ಗೂಡೆ ಹೆಣೆಯಲು ಬಿದಿರ ಕಡ್ಡಿಯನ್ನು ಮಧ್ಯಕ್ಕೆ ಸೀಳಿ ತೇವವು ಒಣಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಗೂಡೆ ಹೆಚ್ಚು ದಿನಗಳವರೆಗೆ ಬಾಳಿಕೆ ಬರುತ್ತದೆ.

ಈ ರೀತಿಯಲ್ಲಿ ತಯಾರಾಗುವ ವಿವಿಧ ಆಕಾರದ ಗೂಡೆಗಳೆಂದರೆ, ಉಯ್ಯಾಲೆಗೂಡೆ ಮತ್ತು ಪಂಜಾರಮ್ (ಹಕ್ಕಿ, ಪ್ರಾಣಿ ಮುಂತಾದವುಗಳನ್ನು ಇಡುವ ಗೂಡು) ಮುಖ್ಯವಾದವು. ಇವುಗಳನ್ನು ಹೆಣೆಯಲು ಶೀತ್ತಕುಚ್ಚಿ ಎಂಬ ಕಡ್ಡಿಯನ್ನು ಉಪಯೋಗಿಸುತ್ತಾರೆ. ಈ ಕಡ್ಡಿಯ ಮೇಲ್ಭಾಗ ತುಂಬ ಕಠಿಣವಾಗಿರುವ ಕಾರಣದಿಂದ ತುಂಬ ದಿನಗಳು ಬಾಳಿಕೆ ಬರುತ್ತದೆ.

ಬಿದಿರಿನ ಕಡ್ಡಿಯಿಂದ ಚಕ್ಕುಲಿ ಗೂಡೆ, ಟೊಮೋಟೋ ಗೂಡೆ, ಬಿತ್ತನೆ ಬೀಜ ತುಂಬಿಕೊಂಡು ಹೋಗುವ ಗೂಡೆ ಹಾಗೂ ತಟ್ಟೆಗಳನ್ನು ಹೆಣೆಯಲಾಗುತ್ತದೆ. ಕೊರಮರು ತಮ್ಮ ಊರಿನಲ್ಲಿ ಮಾತ್ರವಲ್ಲದೆ ಬೇರೆ ಊರುಗಳಿಗೂ ಹೋಗಿ ಅಲ್ಲಿ ಸಿಗುವಂತಹ ಬೆಟ್ಟದ ಕಡ್ಡಿಗಳನ್ನು ಕತ್ತರಿಸಿ ತಂದು ಗೂಡೆ, ಮೊರ ಜೊತೆಗೆ ಹಲವಾರು ಬಗೆಯ ಕಲಾತ್ಮಕ ವಸ್ತುಗಳನ್ನು ಹೆಣೆದು ಜನರಿಗೆ ಮಾರುತ್ತಾರೆ. ಜೊತೆಗೆ ಕಿತ್ತುಹೋಗಿರುವ ಹಳೆಯ ಚಾಪೆ, ಗೂಡೆ ಮುಂತಾದವುಗಳಿಗೆ ತೇಪೆ ಹಾಕುವ ಕೆಲಸವನ್ನು ಮಾಡುತ್ತಾರೆ. ಗೂಡೆ ಮೊರ ಮೊದಲಾದ ವಸ್ತುಗಳನ್ನು ಹಸುವಿನ ಸಗಣಿಯಿಂದ ನುಣ್ಣಗೆ ಸಾರಿಸಿ ಒಳಗಿಸುತ್ತಾರೆ. ಅನಂತರ ಧ್ಯಾನಕ್ಕೋ ಹಣಕ್ಕೋ ಮಾರುತ್ತಾರೆ. ಅವಶ್ಯಕತೆಗೆ ಮತ್ತು ಉಪಯೋಗಕ್ಕೆ ತಕ್ಕಂತೆ ಇವುಗಳ ಗಾತ್ರದಲ್ಲಿ ವ್ಯತ್ಯಾಸ ಮಾಡಿರುತ್ತಾರೆ. ಅಂದರೆ ಒಂದೇ ಕಡ್ಡಿಯನ್ನು ಉಪಯೋಗಿಸಿ ಹೆಣೆಯುವ ಜಾಯಮಾನ ಒಂದೆಡೆಯಾದರೆ, ಮತ್ತೊಂದು ಕಡೆ ಎರಡು ಕಡ್ಡಿಗಳನ್ನು ಉಪಯೋಗಿಸುವುದುಂಟು. ಒಟ್ಟಿನಲ್ಲಿ ಬೆಟ್ಟದ ಬಿದಿರಿನ ಕಡ್ಡಿಗಳಿಂದ ತಯಾರಾಗಿರುವ ಗೂಡೆಗಳು ಸಾಮಾನ್ಯವಾಗಿ ಒಂದೇ ಹೆಣಿಗೆಯಿಂದ ರೂಪುಗೊಳ್ಳುತ್ತವೆ. ಗೂಡೆಯನ್ನು ಹೆಣೆಯುವಾಗ ನಿಧಾನವಾಗಿ ಹೆಣೆದು ಗೂಡೆಯ ಆಕಾರಕ್ಕೆ ತಕ್ಕಂತೆ ಗರಿಗಳನ್ನು ಪೋಣಿಸುತ್ತಾರೆ. ಅನಂತರ ಜೋಡಣೆ ಒಪ್ಪವಾಗಿರಲೆಂದು ಕತ್ತಿಯಿಂದ ಗೂಡೆಯನ್ನು ಬಡಿಯುತ್ತಾರೆ. ಗೂಡೆಯನ್ನು ಹೆಣೆದು ಮೇಲೆ ಗೂಡೆಯ ಬಾಯಿಯ ಭಾಗವನ್ನು ಮಡಿಚಿ ಬಿಡುತ್ತಾರೆ.

ಈ ಜನ ನಡೆಸುವ ಮದುವೆ ಸಮಾರಂಭಗಳಲ್ಲಿ ಉಡುಗೊರೆಯಾಗಿ ಗೂಡೆ ಕೊಡುತ್ತಾರೆ. ಅಂದರೆ ವಧುವಿನ ಮನೆಯವರು ವರನ ಕಡೆಯವರಿಗೆ ಒಂದು ಪೆಟ್ಟಿಗೆಯಲ್ಲಿ ಅಂಗಡಿ ಸಾಮಗ್ರಿಗಳನ್ನು ತುಂಬಿಸಿ ಅದರ ಜೊತೆಗೆ ಒಂದು ಗೂಡೆ ಮತ್ತು ಕತ್ತಿಯನ್ನು ಇಟ್ಟುಕೊಡುವ ಪದ್ಧತಿ ರೂಢಿಯಲ್ಲಿದೆ.

ಇತ್ತೀಚಿನ ಕಾಲದಲ್ಲಿ ಪ್ಲಾಸ್ಟಿಕ್ ಗೂಡೆಗಳು ಹಾಗೂ ಅಲ್ಯುಮಿನಿಯಂನ ಆಹಾರದ ಗೂಡೆಗಳು ಹೆಚ್ಚಾಗಿ ಉಪಯೋಗವಾಗುತ್ತಿದ್ದು ಕೈಕಸುಬಿನಿಂದ ತಯಾರಾಗುವ ಗೂಡೆಗಳು ಜನರ ಬಳಕೆಯಿಂದ ಕಣ್ಮರೆಯಾಗುತ್ತಿವೆ. ಕಾರ್ಖಾನೆಗಳಿಂದ ಬರುವ ವಸ್ತುಗಳು ಪರಂಪರೆಯಿಂದ ಬೆಳೆದು ಬಂದಂತಹ ಕೈಕಸಬನ್ನು ನಾಶ ಮಾಡಿವೆ ಎಂದು ತಿಳಿಯಬಹುದು. ಮಾರ್ಕೆಟ್ಟಿಗೆ ಪ್ಲಾಸ್ಟಿಕ್, ಅಲ್ಯುಮಿನಿಯಂನ ನಾನಾ ರೀತಿಯಲ್ಲಿ ತಯಾರಾದ ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಿದೆ. ಅಂತೆಯೇ ಹೆಚ್ಚು ದಿನಗಳವರೆಗೆ ಬಾಳಿಕೆಯೂ ಬರುತ್ತದೆ. ಈ ಎಲ್ಲ ಕಾರಣಗಳಿಂದ ಈಗೀಗ ಬಿದಿರಿನಿಂದ ತಯಾರಾಗುವ ವಸ್ತುಗಳ ಬಳಕೆ ಕಡಿಮೆಯಾಗಿದೆ. ಹೀಗೆ ಪಾರಂಪರಿಕವಾಗಿ ಬೆಳೆದು ಬಂದ ಕೈಕಸುಬು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಆಧುನಿಕ ಕಾಲದಲ್ಲಿಯ ಮಾನವ ಬದಲಾವಣೆಯನ್ನು ಅಪೇಕ್ಷೆ ಪಡುವುದು ಸಹಜವಾಗಿದೆ. ಆದರೂ ಈ ವೃತ್ತಿಯನ್ನು ಮಾಡುತ್ತಿರುವ ಕೊರಮ ಸಂಪೂರ್ಣವಾಗಿ ಮರೆತಿಲ್ಲ. ತಮ್ಮ ಬಿಡುವಿನ ವೇಳೆಗಳಲ್ಲಿ ಕುಲಕಸುಬು ಕಾಯಕದಲ್ಲಿ ತೊಡಗಿರುತ್ತಾರೆ.

– ಎಂ.ಕೆ.ಪಿ. ಅನುವಾದ ಆರ್.ಎಸ್.

ಕುಪ್ಪಾಯಂ ಪುರುಷರು ಸಾಮಾನ್ಯವಾಗಿ ಸೊಂಟದ ಮೇಲೆ ಧರಿಸುವ ವಸ್ತ್ರಕ್ಕೆ ಕುಪ್ಪಾಯಂ, ಶರ್ಟ್‌, ಉಡುಪ್ಪ್‌ ಎಂದು ಹೆಸರು. ಕೇರಳದಲ್ಲಿ ಈ ಉಡುಪು ಸುಮಾರು ೫೦ ವರ್ಷಗಳಿಂದ ಸಾರ್ವತ್ರಿಕವಾಗಿದೆ. ಈಗಲೂ ಕೆಲವು ಧಾರ್ಮಿಕ ಆಚರಣೆಗಳ ವೇಳೆಯಲ್ಲಿ ಅಂಗಿ ಧರಿಸುವಂತಿಲ್ಲ. ಈ ಉಡುಪು ಶ್ರೀಮಂತಿಕೆ ದ್ಯೋತಕವಾಗಿ ಪ್ರಚಾರಕ್ಕೆ ಬಂದಾಗ, ಇಂತಹ ನಿಬಂಧನೆಗಳು ಚಾಲ್ತಿಗೆ ಬಂದಿರಬೇಕು.

ಕಾಲರ್, ಕೈಗಳು, ಕುತ್ತಿಗೆಯ ಭಾಗ, ಕೆಳಗಿನ ಭಾಗಗಳು ಕುಪ್ಪಾಯದ ಮುಖ್ಯ ಅಂಶಗಳಾಗಿವೆ. ಈಗ ಕುಪ್ಪಾಯಂ ಫ್ಯಾಶನ್ ಕಾರಣವಾಗಿ ತುಂಬ ಬದಲಾಗಿದೆ. ಅರ್ಧ ಕೈ ಅಂಗಿ, ಉದ್ದ ಕೈ ಅಂಗಿಗಳು ವಿವಿಧ ಬಣ್ಣ, ಆಕಾರಗಳಲ್ಲಿ ದೊರಕುತ್ತವೆ.

ಬಟ್ಟೆ ಖರೀದಿಸಿ ಅಂಗಿ ಹೊಲಿಯುವ ಕ್ರಮ ಹಿಂದಿನಿಂದಲೂ ಇತ್ತು. ಈಗ ರೆಡಿಮೇಡ್ ಅಂಗಿಗಳಿವೆ. ಈಗ ಧಾರಾಳವಾಗಿ ಟಿ ಶರ್ಟುಗಳನ್ನು ಜನರು ಧರಿಸುತ್ತಾರೆ. ಹೆಂಗಸರು ಸಾಮಾನ್ಯವಾಗಿ ರವಿಕೆಯನ್ನು ಧರಿಸುತ್ತಾರೆ.

ಹಿಂದಿನ ಕಾಲದಲ್ಲಿ ಕ್ರಿಶ್ಚಿಯನ್ ಮಹಿಳೆಯರು ಧರಿಸುತ್ತಿದ್ದ ಉಡುಪಿಗೆ ಪಟ್ಟು ಕುಪ್ಪಾಯಂ ಎಂದು ಕರೆಯುತ್ತಿದ್ದರು. ಕೇರಳದ ಮುಸ್ಲಿಂ ಮಹಿಳೆಯರು ಧರಿಸುವ ಉಡುಪಿಗೆ ಕಾಚಿಮುಂಡು ಮತ್ತು ಚಟ್ಟಕುಪ್ಪಾಯ ಎಂದು ಹೆಸರು.

– ಬಿ.ಬಿ. ಅನುವಾದ ಎನ್.ಎಸ್.

ಕುಮ್ಮಾಟ್ಟಿ ಇದು ಧಾರ್ಮಿಕ ಆಚರಣೆಯೊಂದಿಗೆ ಒಂದಿಷ್ಟು ವಿನೋದವೂ ಬೆರೆತ ಕಲಾರೂಪ. ಕೇರಳದ ಪಾಲ್ಘಾಟು ಜಿಲ್ಲೆಯ ಪಾಲ್ಘಾಟು, ಒಟ್ಟಪ್ಪಾಲಂ, ಚಿಟ್ಟೂರು, ಆಲತ್ತೂರು ತಾಲ್ಲೂಕುಗಳಲ್ಲಿ ಇದು ಆಚರಣೆಯಲ್ಲಿದೆ. ನೆರೆಯ ಜಿಲ್ಲೆ ತ್ರಿಶ್ಶೂರಿನ ಕೆಲವು ಗ್ರಾಮಗಳಲ್ಲೂ ಇದನ್ನು ಪ್ರದರ್ಶಿಸುತ್ತಾರೆ. ಅಪೂರ್ವವಾಗಿ ವಯನಾಡಿನಲ್ಲೂ ಈ ಕಲಾರೂಪವು ಕಾಣಿಸಿಕೊಳ್ಳುತ್ತದೆ. ಪಾಲ್ಘಾಟು ಜಿಲ್ಲೆಯ ಕುತ್ತನ್ನೂರು, ವಿಳಯನ್ನೂರು, ಕೊಡುವಾಯೂರು, ತೇಂಕುರುಶ್ಶಿ, ತರೂರು, ಪಲ್ಲಶನ, ಕುನಿಶ್ಕೇರಿ, ಚಿಟ್ಟೂರು, ಆಲತ್ತೂರು, ವಡಕ್ಕಾಂಚೇರಿ ಮುಂತಾದಲ್ಲಿನ ದೇವೀಕ್ಷೇತ್ರಗಳಲ್ಲೂ ‘ಕಾವು’ಗಳಲ್ಲೂ ಕುಮ್ಮಾಟ್ಟಿಯನ್ನು ಪ್ರದರ್ಶಿಸಲಾಗುತ್ತದೆ.

30

ಮಕರ, ಕುಂಭ, ಮೀನ, ಮೇಷ ತಿಂಗಳುಗಳಲ್ಲಿ ಪಾಲ್ಘಾಟು ಜಿಲ್ಲೆಯಲ್ಲಿ ಕುಮ್ಮಾಟ್ಟಿ ಪ್ರದರ್ಶನಗೊಳ್ಳುತ್ತದೆ. ತೃಶ್ಶೂರು ಜಿಲ್ಲೆಯಲ್ಲಿ ಇದು ಸಿಂಹಮಾಸದ ಓಣಂಕಾಲದಲ್ಲಿ ಜರುಗುತ್ತದೆ. ಪಾಲ್ಘಾಟಿನವರು ಸಾಮಾನ್ಯವಾಗಿ ಶುಕ್ರವಾರ, ಭಗವತೀ ಕ್ಷೇತ್ರಗಳಲ್ಲಿ ಕುಮ್ಮಾಟ್ಟಿಯನ್ನು ನಡೆಸುತ್ತಾರೆ. ಇದರಲ್ಲಿ ಪಾಲ್ಗೊಳ್ಳುವವರೆಂದರೆ ಬ್ರಾಹ್ಮಣರನ್ನುಳಿದು ಎಲ್ಲ ಹಿಂದೂ ಸಮುದಾಯ. ಇದರ ಪರಂಪರೆ ಹೆಚ್ಚು ಪ್ರಚಲಿತವಾಗಿರುವುದು ನಾಯಾನ್ಮಾರರಲ್ಲಿ. ಇದನ್ನು ಸಾಮಾನ್ಯವಾಗಿ ಬಾಲಕರ ಕಲಾರೂಪವೆಂದು ಪರಿಗಣಿಸಲಾಗುತ್ತದೆ. ಎಲ್ಲಿಯೂ ಹೆಂಗಸರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ; ಅಂತೆಯೇ ವಯಸ್ಕ ಗಂಡಸರು ಕೂಡ. ಭಗವತೀ ಪ್ರೀತ್ಯರ್ಥವಾಗಿಯೂ ವಿನೋದಕ್ಕಾಗಿಯೂ ಇದು ಪಾಲ್ಘಾಟು ಜಿಲ್ಲೆಯಲ್ಲಿ ರಂಗವೇರಿದರೆ, ತ್ರಿಶ್ಶೂರು ಜಿಲ್ಲೆಯಲ್ಲಿ ಇದು ಓಣಂನ ಆಚರಣೆಯ ಅಂಗವಾಗಿ ಪ್ರದರ್ಶಿತವಾಗುತ್ತದೆ.

ದಾರಿಕವಧೆಯ ಕಥೆ, ಮಹಾಬಲಿಯ ಐತಿಹ್ಯ, ಕೊಂಗಸೇನೆಯ ನೆನಪುಗಳು – ಇವೆಲ್ಲ ಕುಮ್ಮಾಟ್ಟಿಯ ಪ್ರದರ್ಶನದ ಪ್ರಧಾನ ‘ವಸ್ತು’ಗಳಾಗಿದ್ದರೂ ಕುಮ್ಮಾಟ್ಟಿಗೆ ಇಂಥದೇ ಕಥೆ ಇರಬೇಕೆಂಬ ಕಟ್ಟುನಿಟ್ಟೇನೂ ಇಲ್ಲ. ತಳ್ಳ (ಅಪ್ಪ), ಕುಮ್ಮಾಟ್ಟಿಯ ಪ್ರಧಾನ ಪಾತ್ರವಾಗಿರುತ್ತದೆ. ಶಿವ, ಕಿರಾತ, ನಾರದ, ಶ್ರೀಕೃಷ್ಣ, ದಾರಿಕ, ಎತ್ತು, ಹುಲಿ – ಇಂಥ ವೇಷಗಳು ಕುಮ್ಮಾಟ್ಟಿಯಲ್ಲಿ ಬರುತ್ತವೆ.

ಹೆಚ್ಚಿನ ಸಂಖ್ಯೆಯಲ್ಲಿ ಮುಖವಾಡಗಳನ್ನು ಧರಿಸಿ ಕುಮ್ಮಾಟ್ಟಿಯನ್ನು ಪ್ರದರ್ಶಿಸುತ್ತಾರೆ. ತಳ್ಳ ಕುಮ್ಮಾಟ್ಟಿಗೆ ಹಲ್ಲಿಲ್ಲದ ಮುದುಕಿಯ ಮುಖವಾಡವಿರುತ್ತದೆ. ತಲೆಗೆ ಸ್ತ್ರೀಯರ ಕೂದಲಗಂಟಿನಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಕಿವಿಗೆ ಬದನೆ ಮುಂತಾದವನ್ನು ತೂಗಾಡಿಸುತ್ತಾರೆ. ಹಾಡಿನ ಲಯಕ್ಕನುಸಾರವಾಗಿ ಹೆಜ್ಜೆಡಿಯುತ್ತ, ಅಭಿನಯಿಸುತ್ತ ಪ್ರೇಕ್ಷಕರನ್ನು ಅವ್ವ ಕುಮ್ಮಾಟ್ಟಿ ನಗಿಸುತ್ತಿರುತ್ತಾಳೆ. ಅತಿ ಭಯಾನಕದವಾದ ವೇಷವೆಂದರೆ ಕಾಡು ಮನುಷ್ಯನದು. ಕರಿಯನ್ನು ಅರೆದು ಮರದ ಮುಖವಾಡಕ್ಕೆ ಹಚ್ಚಿ, ಕೊಂಬು ಮತ್ತು ಕೋರೆಹಲ್ಲು ಕಟ್ಟಿಕೊಂಡು ರಾಕ್ಷಸನಂತೆ ಕಾಣುವ ಮುಖವಾಡ ವೇಷವಿದು. ಬಾಗೆಮರದ ಹಲಗೆ ಅಥವಾ ಕಂಗಿನ ಹಾಳೆಯನ್ನು ಉಪಯೋಗಿಸಿ ಮುಖವಾಡಗಳನ್ನು ಸಾಮಾನ್ಯವಾಗಿ ತಯಾರಿಸಲಾಗುತ್ತದೆ.

ಕುಮ್ಮಾಟ್ಟಿ ಕುಣಿತವನ್ನು ಸಾಂಘಿಕವಾಗಿ ನಡೆಸಲಾಗುತ್ತದೆ. ಒಂದು ಪ್ರದೇಶದಲ್ಲಿ ಕುಮ್ಮಾಟ್ಟಿ ನಡೆಸುವುದೆಂದು ತೀರ್ಮಾನವಾದರೆ ಅಲ್ಲಿನ ಮನೆಮನೆಗಳಿಗೆ ಹೋಗಿ ಕುಮ್ಮಾಟ್ಟಿಗಳು ಕುಣಿಯುತ್ತಾರೆ. ಕುಮ್ಮಾಟ್ಟಿಗಳು ಬರುತ್ತಾರೆಂದು ತಿಳಿದರೆ ಚಿಕ್ಕಮಕ್ಕಳು ಕೂಡ ಅವರನ್ನು ಸ್ವಾಗತಿಸಲು ಕಾದು ನಿಲ್ಲುತ್ತಾರೆ. ಅಂಗಳದಲ್ಲಿ ಕಾಲುದೀಪ, ಭತ್ತ, ಅಕ್ಕಿ ಮುಂತಾದುವನ್ನು ತಂದಿಡುತ್ತಾರೆ. ಓಣಂ ಕಾಲದ ಕುಮ್ಮಾಟ್ಟಿಯಾದರೆ ಓಣಂನ ಫಲಾಹಾರಗಳನ್ನು (ತಿನಿಸು) ನೀಡುತ್ತಾರೆ. ಹೊಸಪಂಚೆ, ಇತರ ಬಟ್ಟೆಗಳನ್ನು ಸಾಮಾನ್ಯವಾಗಿ ಕುಮ್ಮಾಟ್ಟಿಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಈಚೆಗೆ ನಾಣ್ಯಗಳನ್ನು ನೀಡುವ ಪರಿಪಾಠವೂ ಬೆಳದು ಬಂದಿದೆ.

ಕುಮ್ಮಾಟ್ಟಿ ಆಟಕ್ಕೆ ಹಾಡುಗಳಿವೆ. ಆಟಗಾರರ ಮುಂದಾಳು ಹಾಡುತ್ತಾನೆ. ಉಳಿದವರು ಆವರ್ತಿಸುತ್ತಾರೆ. ಸ್ವತಃ ಕಾಣುವುದಿಲ್ಲ. ಓಣಂ ಕಾಲದ ಕುಮ್ಮಾಟ್ಟಿ ಆಟ್ಟದ ಪ್ರಧಾನ ‘ವಾದ್ಯಂ ಓಣಂ ಬಿಲ್ಲು’. ದಫ್ ಮತ್ತು ನಾಗಸ್ವರಗಳ ಬಳಕೆಯೂ ಇದೆ. ಮಧ್ಯೆಮಧ್ಯೆ ಕೇಕೆ ಕೂಡ. ಪಾಲ್ಘಾಟಿನಲ್ಲಿ ಪ್ರದರ್ಶಿತವಾಗುವ ಕುಮ್ಮಾಟ್ಟಿಯ ಮುಖ್ಯವಾದವು ಚೆಂಡೆ. ಇಂದು ಅನೇಕ ಕೆಡ ಚೆಂಡೆಮೇಳೆ, ಪಂಚವಾದ್ಯ ಮುಂತಾದುವನ್ನು ಕುಮ್ಮಾಟ್ಟಿಯನ್ನು ಸ್ವಾಗತಿಸಲು ಬಳಸಿಕೊಳ್ಳುತ್ತಾರೆ.

ಕುಮ್ಮಾಟ್ಟಿಗಳೆಂದರೆ ಮಾಂತ್ರಿಕ ವಿದ್ಯೆಗಳನ್ನು ಕರಗತಮಾಡಿಕೊಂಡವರೆಂಬುದು ಸಾಮಾನ್ಯ ನಂಬುಗ. ‘ಬಿಡುಬಾವಿಗೆ ದೊಣ್ಣೆ ಬಿದ್ದರೆ, ಮೊಣಕಾಲೂರಿ ತೆಗೆಯುವ ಕುಮ್ಮಾಟ್ಟಿ; ಕೈಗೇ ಎಟುಕದ ಏಳನೇ ರೆಂಬೆಯ ಹುಣಿಸೇ ಕೊಯ್ಯುವ ಕುಮ್ಮಾಟ್ಟಿ’ – ಇಂಥ ನಂಬುಗೆ ಜನರದು.

– ಎಸ್.ಕೆ. ಅನುವಾದ ಕೆ.ಕೆ.