ಕರ್ಬಲ ಪದ ಕನ್ನಡ ಜನಪದ ಗೀತೆಗಳಲ್ಲಿ ಈ ಪದಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಸಂಭವಿಸಿದ್ದರಿಂದ ಇವುಗಳನ್ನು ಕರ್ಬಲ ಪದಗಳೆಂದೇ ಕರೆಯುತ್ತಾರೆ. ಹಜರತ್ ಹುಸೇನ್ ಮತ್ತು ಅವರ ಪರಿವಾರದವರು ಮಡಿದ ಮೇಲೆ ಅವರ ತಲೆಗಳನ್ನು ಮತ್ತು ಕೈಗಳನ್ನು ಭಲ್ಲೆಗಳಿಗೆ ಸಿಕ್ಕಿಸಿಕೊಂಡು ಯುಜೀದನ ಸೈನಿಕರು ಕುಣಿದರು. ಅದಕ್ಕೆ ಮೊದಲು ಹುಲಿ, ಚಿರತೆ ಮೊದಲಾದ ಕ್ರೂರ ಪ್ರಾಣಿಗಳಂತೆ ವೇಷ ಹಾಕಿಕೊಂಡು ಅವರನ್ನು ಹೆದರಿಸಿದರು. ಈ ಸಂದರ್ಭದಲ್ಲಿ ಹಜರತ್ ಅಭಿಮಾನಿಗಳು ತಮ್ಮ ನಾಯಕರ ಸೋಲಿನಿಂದ ಎದೆಗುಂದಿದರು. ಉಪವಾಸ ಬಿದ್ದು ದುಃಖದ ಪದಗಳನ್ನು ಹಾಡುತ್ತಾ ಮುಖಕ್ಕೆ ಬಟ್ಟೆಕಟ್ಟಿಕೊಂಡು ಎದೆ ಎದೆ ಹೊಡೆದುಕೊಳ್ಳುತ್ತಾ ತಮ್ಮೂರುಗಳಿಗೆ ಹಿಂದಿರುಗಿದರು. ಅನಂತರ ಇದರ ನೆನಪಿಗಾಗಿ ಪ್ರತಿವರ್ಷ ಮೊಹರಂ ತಿಂಗಳಲ್ಲಿ ಹಬ್ಬವನ್ನು ಆಚರಿಸಿ, ಉಪವಾಸವಿದ್ದು ಮಡಿದ ಯೋಧರ ಕೈಗಳನ್ನು (ಹಸ್ತ) ಪೂಜಿಸುವ ಹಾಗೂ ಹುಲಿವೇಷವನ್ನು ಹಾಕಿ ಮೊಹರಂ ಹಾಡುಗಳನ್ನು ಹಾಡುತ್ತಾ ಹಬ್ಬವನ್ನು ಆಚರಿಸುತ್ತಾರೆ. ಮೊಹರಂ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದಲ್ಲಿ ಆಚರಿಸುವ ಪ್ರಮುಖ ಹಬ್ಬ.

ಕರ್ಬಲ ಪದಗಳು ಧಾರ್ಮಿಕ ಪರಂಪರೆಯ ತ್ಯಾಗ ಬಲಿದಾನದ ಕಥೆಗಳಿಂದ ಕೂಡಿವೆ. ಇವು ಮೂಲತಃ ಒಂದು ಧಾರ್ಮಿಕ ಜನಪದ ಕಾವ್ಯವಾಗಿದ್ದು ಅನಂತರ ಸೌಲಭ್ಯಾಕಾಂಕ್ಷಿ ಗಾಯಕರು ಅವುಗಳನ್ನು ಬಿಡಿಬಿಡಿಯಾಗಿ ಹಾಡತೊಡಗಿದರು. ಹಾಡುವಾಗ ಇವೆಲ್ಲ ಮೇಳಗೀತೆಗಳಾಗಿ ಉಳಿದು ಬಂದಿವೆ. ಅಲಾವಿ ಮೇಳ ಶೋಕ ಸ್ಥಾಯಿಯ ಹಿನ್ನೆಲೆಯಲ್ಲಿ ಅತ್ಯಂತ ಗಂಭೀರವಾಗಿ ಮೂಡಿಬರುತ್ತದೆ. ಈ ಸಂಗೀತ (ಗಮನೀನ್) ಸ್ವರದ ಅಂತರಾಳದಲ್ಲಿ ಶೋಕದ ಎಳೆಗಳು ಮಿಡಿಯವುದನ್ನು ಕಾಣಬಹುದು. ‘ಅಲಾವಿಹೆಜ್ಜೆ’ ಎಂಬ ಒಂದು ಬಗೆಯ ಮಂದಗತಿಯ ಜಡೆಕೋಲು ಮೇಳದಲ್ಲಿ ಈ ಹಾಡುಗಳನ್ನು ಹಾಡುತ್ತಾರೆ.

ಕರ್ಬಲ ಗೀತೆಗಳಲ್ಲಿ ಕಥನಪರವಾದ ಗೀತೆಗಳೇ ಹೆಚ್ಚು. ಮುಸ್ಲಿಂ ಮೂಲಕ್ಕೆ ಸಂಬಂಧಪಟ್ಟ ಹಾಡುಗಳ ಜೊತೆಗೆ ಹಿಂದೂ ಮೂಲಕ್ಕೆ ಸಂಬಂಧಪಟ್ಟ ಹಾಡುಗಳೂ ಇಲ್ಲಿ ಸೇರಿಕೊಂಡಿವೆ. ಉತ್ತರ ಕರ್ನಾಟಕದ ಲಾವಣಿ ಸಂಪ್ರದಾಯದ ಅನೇಕ ಹಾಡುಗಳು ಕರ್ಬಲ ಗೀತೆಗಳಲ್ಲಿ ಬೆರೆತು ಹೋಗಿವೆ. ಈ ಗೀತೆಗಳೇ ಮೊಹರಂ ಹಬ್ಬದ ಕಿರೀಟ. ಈ ಹಾಡುಗಳಿಂದ ಹಿಜರಿ ಶಕ ೬೧ರ ಮೊಹರಂ ಮಾಸದ ಹತ್ತನೆಯ ದಿನ. ಅರಬಸ್ಥಾನದ ಕರ್ಬಲಾ ಮೈದಾನದಲ್ಲಿ ಏನೇನು ನಡೆಯಿತೆಂಬುದರ ವರದಿ ಸಿಗುತ್ತದೆ.

ಧೀನ್ ಧೀನಂತೆ ಹೊಂಟಾನಾ ಮೌಲಾ
ಚಾರಣರ ಧೂಲಾ
ಹರಸಿದ್ದಾರಲ್ಲಾ
ರಕ್ತದ ಕಾವಲಾ

ಎಂಬ ಸಾಲುಗಳಿಂದ ಕರ್ಬಲ ಪದಗಳು ಆರಂಭಗೊಳ್ಳುವುವು.

ಹತ್ತು ಸಾವಿರದಂಡು ಇತ್ತು ಏಜೀಂದ
ಅವನ ಸ್ವಾಧೀಂದ
ಕೊಲ್ಲಿತು ವೈರೀಂದ
ಆರ್ಭಟದಿಂದ

ಈ ಪದದಲ್ಲಿ ಏಜೀದ ಎಂಬುವನು ಮೋಸ ಕುತಂತ್ರದಿಂದ ಎದುರಾಳಿ ಸೈನ್ಯವನ್ನು ಕೊಲ್ಲಿಸಿದ, ಆಗ ರಕ್ತದ ಕಾಲುವೆ ಹರಿಯಿತು ಎಂದು ಹೇಳುತ್ತದೆ. ಏಜೀದ್ ರಣರಂಗದಲ್ಲಿ ಹಸನಹುಸೇನರ ಜನಗಳಿಗೆ ಅನ್ನ, ನೀರು ಆಶ್ರಯ ಸಿಗದಂತೆ ಮಾಡುತ್ತಾನೆ. ಹಸನ ಹುಸೇನರ ಮಗ ಅಸಗರನೆಂಬ ಮಗು ನೀರಿಲ್ಲದೆ ಬಾಯಿಬತ್ತಿ ಗೋಳಿಡುತ್ತಿದ್ದಾಗ ಏಜೀದ ಇನ್ನಷ್ಟು ಕಠಿಣ ಮನಸ್ಸಿನವನಾಗುತ್ತಾನೆ.

ಮುಂದೆ ವೈರಿಗಳ ಬಾಣಕ್ಕೆ ಕೂಸು ಸತ್ತ ಮೇಲೆ ಅವನ ತಾಯಿ ಅಳುವ ಶೋಕ ಗೀತೆಗಳ ಕರುಣಾಜನಕವಾಗಿದೆ. ಸತ್ತ ಕೂಸನ್ನು ನೋಡಿದ ತಾಯಿ

ಬಾಳ ಪರಿಲಿಂದ ಸಲವಿದ ಪುತುರ
ತೊಟ್ಟಿಲ್ದಾಗ ಹಾಕಿ ನಾನು ತೂಗಿಲ್ಜಾರ
ಸುಮ್ಮನ ಮನಗ್ಯಾನ ಬಿಟ್ಕೋಸಿ ನನ್ ಖಬರ
ಮಾರಿ ತೆರಿವಲ್ಲಾ ಮೊಲಿ ಕುಡಿವಲ್ಲ ಎನಜಿಂವಕೆ ಬಂತೊ ಘೋರ

ಕಾಸೀಮಸಾಬನ ಪದ ಸಹ ಇನ್ನಷ್ಟು ದುಃಖವನ್ನು ಉಂಟು ಮಾಡುವಂತಹುದು. ಅತ್ಯಂತ ಚಿಕ್ಕ ವಯಸ್ಸಿಗೆ ಯುದ್ಧರಂಗದಲ್ಲೇ ವಿವಾಹವಾದ ಕಾಸೀಮ ಮತ್ತು ಅವನ ಹೆಂಡತಿ ಇವರ ನಡುವೆ ನಡೆಯುವ ಮಾತು ಕಥೆಗಳು ಅತಿ ಮಧುರ ಹಾಗೂ ದುಃಖದಾಯಕ.

ಆಗ ತಾನೆ ಮದುವೆಯಾಗಿದ್ದ ಕಾಸೀಮನ ಹೆಂಡತಿ ಕೈಮುಗಿದು ಹೇಳುತ್ತಾಳೆ.

ವೋಗಬ್ಯಾಡ್ರಿ ಕೇಳಿರಿ ಎನ್ನ ವಚನಾ
ನಿಮನಗಲಿ ಹ್ಯಾಂಗ ಇರಲಿ ನಾನಾ
ನಿಮ್ಮ ಸಂಗಡ ಬರತಿನಿ ನಾನಾ

ಎನ್ನುತ್ತಾ ಬೇಡಿಕೊಂಡ ಮಡದಿಗೆ ಮುಂದೊಂದು ದಿನ ರಣದಲ್ಲಿ ಗಂಡ ಸತ್ತ ಸುದ್ದಿ ಬಂದಾಗ ಆಕೆ ನೆಲ ಮುಗಿಲು ಒಂದಾಗುವಂತೆ ಅಳುತ್ತಾಳೆ.

ಈ ಪದಗಳು ಹೆಚ್ಚಾಗಿ ಧಾರ್ಮಿಕ ಚೌಕಟ್ಟನ್ನೇ ಒಳಗೊಂಡಿವೆ. ಕಾರಣ ಈ ಯುದ್ಧ ನಡೆದದ್ದೇ ಧರ್ಮ ರಕ್ಷಣೆಗಾಗಿ. ಈ ಸಂದರ್ಭದಲ್ಲಿ ಹುತಾತ್ಮರಾದ ಹಸನಹುಸೇನರ ಪವಿತ್ರ ಗಾಢಾದಿಂದ ಕೂಡಿದ ಮೊಹರಂ ಆಚರಿಸುವಾಗ ಹಾಡುವ ಪದಗಳಿವೆ. ಈ ಧಾರ್ಮಿಕ ಹಾಡುಗಳಲ್ಲಿ ಮೌಲಾ, ಫಕೀರ, ಪೀರ, ದರ್ಗಾ, ಮಸತಿಯಿ, ಸಾಧ್ವಿಯ ಗುಣಗಾನದ ಮಹತ್ವ ಕಂಡುಬರುತ್ತದೆ.

– ಟಿ.ಎಸ್.ಆರ್.

ಕರ್ರಸಾಮು ಮನರಂಜನಾ ಪ್ರಧಾನವಾದ ಕಲೆಗಳಲ್ಲಿ ದೊಣ್ಣೆವರಸೆಯೂ ಒಂದು. ಇದು ಸಾಮೂಹಿಕ ಪ್ರದರ್ಶನ. ಇದರಲ್ಲಿ ೧೦ ಜನ ಮೇಲ್ಪಟ್ಟು ಎಷ್ಟು ಜನರಾದರೂ ಇರಬಹುದು. ಸಂಖ್ಯಾ ನಿಯಮವಿಲ್ಲ. ಸ್ತ್ರೀಯರಿಗೆ ಅವಕಾಶವಿಲ್ಲ. ಹಗಲು ಇರುಳೆನ್ನದೆ ಯಾವಾಗ ಬೇಕಾದರೂ ಪ್ರದರ್ಶಿಸಬಹುದು. ವಿವಿಧ ಗಾತ್ರದ ದೊಣ್ಣೆಗಳನ್ನು ಉಪಯೋಗಿಸಿಕೊಂಡು ಮಾಡುವ ಕಲೆಯಾದುದರಿಂದ ಇದನ್ನ ದೊಣ್ಣೆ ವರಸೆ ಎನ್ನುತ್ತಾರೆ. ಇದನ್ನೇ ಸಾಧನ, ಸಾಧಕ, ಚೇಡಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಪ್ರದರ್ಶನವನ್ನು ಹೆಚ್ಚಾಗಿ ದಸರಾ, ಸಂಕ್ರಾಂತಿ, ವಿನಾಯಕ ಚತುರ್ಥಿಯಂತಹ ಮುಖ್ಯವಾದ ಹಬ್ಬಗಳಂದು, ಗ್ರಾಮದೇವತೆಯ ಉತ್ಸವ, ಮೆರವಣಿಗೆ, ವೀರಭದ್ರನ ಉತ್ಸವ ಮುಂತಾದ ಸಂದರ್ಭದಲ್ಲೂ ಮಾಡುತ್ತಾರೆ. ದೊಣ್ಣೆವರಸೆಯವರ ವೇಷಭೂಷಣಗಳು ವಿಶೇಷವಾದ ಆಕರ್ಷಣೆಯಿಂದ ಕೂಡಿರುತ್ತವೆ. ಕಲಾವಿದರಲ್ಲಿ ಲಂಗೋಟಿ ಕಟ್ಟಿಕೊಂಡು ಮೇಲೆ ಪಂಚೆಯನ್ನು ಬಿಗಿಯಾಗಿ ಕಟ್ಟಿ, ಬನಿಯನ್ ತೊಟ್ಟು ಸೊಂಟಕ್ಕೆ ಟವಲ್‌ ಬಿಗಿದು ಹಣೆಗೆ ವಿಭೂತಿ ಇಲ್ಲವೆ ಸಿಂಧೂರ ತಿಲಕ ಇಟ್ಟುಕೊಂಡು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರು ಕೊರಳಲ್ಲಿ ಬಗೆಬಗೆಯ ಮಣಿಸರಗಳನ್ನು ಧರಿಸಿರುತ್ತಾರೆ. ಇವರಿಗೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಗುರುವನ್ನು ದೇವರೆಂದು ಭಾವಿಸುವುದು, ಏಕಾಗ್ರತೆ, ವಿನಯಮಿಶ್ರಿತ ಶಕ್ತಿ, ಸಾಹಸ, ನಮ್ರತೆ, ಇವೆಲ್ಲವುಗಳಿಂದ ಕೂಡಿರಬೇಕು. ಹಾಗೆಯೇ ಪ್ರದರ್ಶನಕ್ಕೆ ಮೊದಲು ಪೂಜಾಕಾರ್ಯವನ್ನು ಏರ್ಪಡಿಸಿ ಎಲ್ಲರೂ ಹಣೆಗೆ ಬೊಟ್ಟು ಇಟ್ಟುಕೊಂಡು ಅವರ ದೊಣ್ಣೆಗಳಿಗೂ ಇಟ್ಟು ಪ್ರದರ್ಶನ ಪ್ರಾರಂಭಿಸುತ್ತಾರೆ. ದೊಣ್ಣೆಗೆ ನಮಸ್ಕರಿಸಿ ಇಬ್ಬಿಬ್ಬರು ಕಲಾವಿದರು ಜೋಡಿಯಾಗಿ ವಿಭಾಗವಾಗುತ್ತಾರೆ. ಇವರನ್ನು ‘ಜಟ್ಟು’ ಎನ್ನುವರು. ಇವರು ಎರಡು ವರಸೆಗಳಲ್ಲಿ ಒಬ್ಬರಿಗೆ ಒಬ್ಬರು ಎದುರಾಗಿ ನಿಂತು ಪರಸ್ಪರ ದೊಣ್ಣೆಗಳನ್ನು ಸ್ಪರ್ಶಿಸಿ ಒಂದು ಹೆಜ್ಜೆ ಹಾಕಿ ಮತ್ತೊಮ್ಮೆ ಹಿಂದಕ್ಕೆ ಬಂದು ಇನ್ನೊಮ್ಮೆ ಸ್ಪರ್ಶಿಸಿ ಪ್ರದರ್ಶನ ಪ್ರಾರಂಭಿಸುತ್ತಾರೆ.

ಪ್ರದರ್ಶನದ ವೇಳೆ ವಿವಿಧ ಭಂಗಿಗಳಲ್ಲಿ ವೈವಿಧ್ಯಮಯವಾದ ವಿನ್ಯಾಸಗಳನ್ನು ಮಾಡುವರು. ಅವರು ಹಾಕುವ ಹೆಜ್ಜೆಗಳಲ್ಲಿ ಮುಖ್ಯವಾಗಿ ಹೆಸರಿತಕ್ಕವು – ಮುಂದ್ಹೆಜ್ಜೆ, ಹಿಂದ್ಹೆಜ್ಜೆ, ಸುತ್ತೆಜ್ಜೆ, ಒಂಟ್ಹೆಟ್ಟ, ಎದುರ್ಹೆಜ್ಜೆ, ಕತ್ತರಿಹೆಜ್ಜೆ, ಅಡ್ಡಕತ್ತರಿ ಹೆಜ್ಜೆ ಮೊದಲಾದವು. ಪ್ರಧಾನ ಕಲಾವಿದನು ವಿಭಿನ್ನವಾದ ಹೆಜ್ಜೆಗಳನ್ನು ಹಾಕುತ್ತಾ ದೊಣ್ಣೆವರಸೆ ಮಾಡಿದ ಮೇಲೆ ದೊಣ್ಣೆಯನ್ನು ಬಗೆಬಗೆಯ ಶೈಲಿಗಳಲ್ಲಿ ತಿರುಗಿಸುತ್ತಾನೆ. ದೊಣ್ಣೆಯನ್ನು ತುಂಬಾ ವೇಗವಾಗಿ ತಿರುಗಿಸುವುದೇ ಅಲ್ಲದೆ, ಮೇಲೆ, ಕೆಳಗೆ, ಪಕ್ಕಕ್ಕೆ ಕಂಕುಳು, ಕಾಲುಗಳ ಮಧ್ಯದಿಂದ ತಲೆಯ ಮೇಲಿಂದ ತಿರುವುತ್ತಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಾನೆ. ಹೀಗೆ ತಿರುಗಿಸುವ ವರಸೆಗಳಲ್ಲಿ ಮುಖ್ಯವಾದವು ಬಾಣತಿರುವು, ಬಂಗಾಳ ತಿರುವು, ಪಕ್ಕತಿರುವು, ಬೆನ್ನು ತಿರುವು, ತಲೆ ತಿರುವು, ಅಭಿಮನ್ಯು ತಿರುವು, ಪಟ್ಟಿ ತಿರುವು, ಎರಡು ದೊಣ್ಣೆಗಳ ಜೋಡಿ ತಿರುವು, ದೊಮ್ಮಿ ತಿರುವು, ಮೊದಲಾದವು. ಹೀಗೆ ಪ್ರದರ್ಶನ ನೀಡಿದ ಬಳಿಕ ಕೊನೆಯಲ್ಲಿ ದೊಣ್ಣೆವರಸೆ ಕಲಾವಿದರು ಒಟ್ಟಿಗೆ ಅನೇಕ ವಿನ್ಯಾಸಗಳನ್ನು ತೋರಿಸುತ್ತಾರೆ. ತೆಲುಗು ಜನಪದ ಪ್ರದರ್ಶನ ಕಲೆಯಲ್ಲಿ ದೊಣ್ಣೆವರಸೆ ಒಂದು ಪ್ರತ್ಯೇಕವಾದ ಸ್ಥಾನವನ್ನು ಪಡೆದಿದೆ. ಈ ಕಲೆ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿ ನಮ್ಮ ಪ್ರಾಚೀನ ಸಾಂಸ್ಕೃತಿಕ ಪ್ರತಿನಿಧಿಯಾಗಿ ನಿಂತಿದೆ.

– ಟಿ.ಎಸ್.ಎನ್. ಅನುವಾದ ಎನ್.ಆರ್.

ಕಲ್ಗಿ – ತುರಾಯಿಲಾವಣಿಗಳು ಕಲ್ಗಿ ತುರಾಯಿ ವಿಶಿಷ್ಟವಾದ ಲಾವಣಿ ಸಂಪ್ರದಾಯ. ಈ ಪ್ರಸಿದ್ಧ ಕಲೆ ಕರ್ನಾಟಕದ ಅನೇಕ ಭಾಗಗಳಲ್ಲಿ ಕಂಡು ಬರುತ್ತದೆ. ಇದನ್ನು ಸಾಮಾನ್ಯವಾಗಿ ಜಾತ್ರೆ, ಉತ್ಸವ, ಹಬ್ಬಹರಿದಿನಗಳಲ್ಲಿ ಏರ್ಪಡಿಸುವುದು ಪದ್ಧತಿ. ಆದರೆ ಇಂತಹ ಸಂದರ್ಭದಲ್ಲಿಯೇ ನಡೆಯಬೇಕೆಂಬ ನಿಯಮವೇನಿಲ್ಲ. ಕಲ್ಗಿಯವರು ಹೆಣ್ಣಿನ ಪಕ್ಷ. ಆದಿಶಕ್ತಿಯನ್ನು ಪ್ರಧಾನವಾಗಿ ಪ್ರತಿನಿಧಿಸುತ್ತಾರೆ. ತುರಾಯಿಯವರು ಗಂಡನ್ನು ಕುರಿತು ಹಾಡುವ ಪಕ್ಷ; ಶಿವನೇ ಹೆಚ್ಚು ಎಂದು ಪ್ರತಿಪಾದಿಸುತ್ತಾರೆ. ಇವರು ಪುರಾಣ, ಗಾದೆ, ಒಗಟು, ರಾಮಾಯಣ, ಮಹಾಭಾರತ, ಹಿತಿಯ ಕವಿಗಳ ಹೇಳಿಕೆಗಳು, ಪ್ರಾದೇಶಿಕ ಘಟನೆಗಳು ಮುಂತಾದ ಹತ್ತು ಹಲವು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ತಮ್ಮ ಪಕ್ಷವನ್ನು ಎತ್ತಿ ಹಿಡಿಯುತ್ತಾರೆ. ಇವರುಗಳು ತಮ್ಮ ತಮ್ಮ ಪಕ್ಷವನ್ನು ಎತ್ತಿ ಹಿಡಿಯುವ ಮತ್ತು ಬೆಳೆಸುವ ದೃಷ್ಟಿಯಿಂದ ಪ್ರತಿಪಕ್ಷದವರನ್ನು ಮಿತಿಮೀರಿದ ಖಂಡನೆಗೆ ಗುರಿಮಾಡುವುದುಂಟು.

ಕಲ್ಗಿ ತುರಾಯಿ ಲಾವಣಿಗಳನ್ನು ಹರದೇಶಿ – ನಾಗೇಶಿ, ಸವಾಲ್ – ಜವಾಬ್, ಶಾಹಿರಿಕೆ ಮತ್ತು ಗೀಗೀ ಎಂದು ಕರೆಯುತ್ತಾರೆ. ಉರ್ದುವಿನಲ್ಲಿ ಕಲ್ಗಿಯನ್ನು ‘ಲಸ್ಸಾ’ ಎಂದು ತುರಾಯಿಯನ್ನು ‘ಕಮ್ಮತ್ತರ್’ ಎಂದು ಕರೆಯುತ್ತಾರೆ.

ಕಿಟ್ಟೆಲ್ ಶಬ್ದಕೋಶದಲ್ಲಿ ಕಲ್ಗಿ ಎಂಬ ಪದವನ್ನು ಉಲ್ಲೇಖಿಸಿಲ್ಲ. ತುರಾಯಿ ಎಂಬ ಶಬ್ದಕ್ಕೆ ಪೇಟ ಅಥವಾ ಕಿರೀಟಕ್ಕೆ ಸಿಕ್ಕಿಸುವ ಹೂವಿನ ಅಥವಾ ಮುತ್ತಿನ ಆಭರಣ ಎಂಬ ವಿವರಣೆ ಇದೆ. ಜೊತೆಗೆ ಈ ಶಬ್ದ ಮೂಲ ಮರಾಠಿ ಮತ್ತು ಹಿಂದೂಸ್ಥಾನಿ ಎಂದು ಹೇಳಿದ್ದಾರೆ.

ಔರಂಗಜೇಬನ ಆಸ್ಥಾನದಲ್ಲಿ ಪಹಾಲಿ ಮತ್ತು ತುಕಾನ್ ಗಿರಿ ಎಂಬ ಪ್ರಸಿದ್ಧ ಲಾವಣಿಕಾರರಿದ್ದರು. ಒಮ್ಮೆ ಬಾದಷಹನ ಮುಂದೆ ಸವಾಲ್ – ಜವಾಬ್ ಹಾಡಿದರು. ಇವರ ಹಾಡುಗಾರಿಕೆಗೆ ಮೆಚ್ಚಿದ ದೊರೆ ಷಹಾಲಿಗೆ ಮಾವಿನಕಾಯಿಯಾಕಾರದ ಒಂದು ಬೆಲೆ ಬಾಳುವ ಆಭರಣಗಳನ್ನು ಉಡುಗೊರೆಯಾಗಿ ಕೊಟ್ಟ. ಹಾಗೆಯೇ ತುಕಾನ್‌ಗಿರಿಗೆ ಬೆಲೆ ಬಾಳುವ ಮುತ್ತಿನ ದಂಡೆಯನ್ನು ನೀಡಿದ. ಆ ಬಿರುದುಗಳಿಗೆ ಅನುಕ್ರಮವಾಗಿ ಕಲ್ಗಿ ಮತ್ತು ತುರಾಯಿ ಎಂಬ ಹೆಸರಿದ್ದಿತು. ಅಂದಿನಿಂದ ಆ ಹೆಸರೇ ವ್ಯಾಪಕವಾಗಿ ಪ್ರಚಾರ ಪಡೆಯಿತು. ಉತ್ತರದಿಂದ ಹೇಗೋ ದಕ್ಷಿಣಕ್ಕೆ ಬಂದ ಈ ಸಂಪ್ರದಾಯ ಕರ್ನಾಟಕದಲ್ಲಿ ಚೆನ್ನಾಗಿ ಬೇರೂರಿತು. ಮೂಲ ಸಂಪ್ರದಾಯಕ್ಕೆ ಅನುಗುಣವಾಗಿ ಮತ್ತು ಧಕ್ಕೆ ಬರದಂತೆ ಪ್ರಾದೇಶಿಕ ಭಾಷೆಯಲ್ಲಿ ಅನೇಕ ಹೊಸಹೊಸ ರಚನೆಗಳನ್ನು ಮಾಡಲಾಯಿತು. ‘ಕಲ್ಗಿ – ತುರಾಯಿ’ ಲಾವಣಿ ಸಂಪ್ರದಾಯ ಕರ್ನಾಟಕದಲ್ಲಿ ಒಂದು ಜೀವಂತ ಕಲೆಯಾಗಿ ಉಳಿದಿದೆ.

ಕಲ್ಗಿ – ತುರಾಯಿ ಲಾವಣಿ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಇಂದಿಗೂ ವ್ಯಾಪಕ ಕಲೆಯಾಗಿದೆ. ಇದರ ಕಲಾವಿದರಿಗೆ ಒಳ್ಳೆಯ ಅವಕಾಶಗಳಿವೆ ಮತ್ತು ಪ್ರೋತ್ಸಾಹವಿದೆ. ಬೆಳಗಾಂ ಜಿಲ್ಲೆ ಗೋಕಾಕ್ ಊರಿನಲ್ಲಿ ಹಿಂದೆ ಕಲ್ಗಿ – ತುರಾಯಿಯ ಎರಡು ಮಠಗಳಿದ್ದು ಅವುಗಳು ತಮ್ಮ ತಮ್ಮ ನಿಶಾನಿ ಹಾರಿಸುತ್ತಿದ್ದರೆಂಬುದಕ್ಕೆ ಪುರಾವೆ ಇದೆ. ಮೈಸೂರಿನಲ್ಲಿ ಕಲ್ಗಿ ಗರಡಿ ಮತ್ತು ತುರಾಯದ ಎರಡು ಗರಡಿಗಳಿದ್ದು ಕುಸ್ತಿ ಸಮಯದಲ್ಲಿ ಕಲ್ಗಿಯವರು ಕೆಂಪು ಕಾಚಾ, ತುರಾಯಿದವರು ಹಸಿರು ಬಣ್ಣದ ಕಾಚಾವನ್ನು ಧರಿಸುವುದು ವಾಡಿಕೆಯಾಗಿತ್ತು. ಮೈಸೂರಿನವರು ಸಹ ನಿಶಾನಿಯನ್ನು ಹೊಂದಿದ್ದಾರೆ. ಆಯಾ ಗರಡಿಯ ಮಂದಿಯಲ್ಲಿ ಕಲ್ಗಿ – ತುರಾಯವನ್ನು ಹಾಡುತ್ತಾರೆಂಬ ಅಭಿಪ್ರಾಯ ಬೇಕಾಗಿಲ್ಲ ಅಥವಾ ಆ ಗರಡಿಗೆ ಸೇರಿದವರೆಲ್ಲ ಪೈಲ್ವಾನರಾಗಬೇಕಾಗಿಲ್ಲ. ಅದೊಂದು ಗುರುತಿಸುವ ಹಾಗೂ ಗೌರವವನ್ನು ಹೆಚ್ಚಿಸುವ ಸಲುವಾಗಿ ಮಾಡಿಕೊಂಡ ಏರ್ಪಾಡು ಎಂದು ಹೇಳಬಹುದು.

ಸಾಮಾನ್ಯವಾಗಿ ಮೇಳ ರಾತ್ರಿ ಹೊತ್ತು ಪ್ರಾರಂಭವಾಗಿ ಬೆಳಗಾಗುವ ತನಕ ನಡೆಯುವುದುಂಟು. ಕಲ್ಗಿಯವರು ಪ್ರಾರಂಭದಲ್ಲಿ ಸರಸ್ವತಿಯನ್ನು ಪ್ರಾರ್ಥಿಸಿದರೆ ತುರಾದವರು ಗಣಪತಿಯನ್ನು ಪ್ರಾರ್ಥಿಸುತ್ತಾರೆ. ಅನಂತರ ಲಾವಣಿ ಹಾಡುಗಾರಿಕೆ ಪ್ರಾರಂಭವಾಗುವುದು. ಕೆಲವೊಮ್ಮೆ ಎರಡೂ ಪಕ್ಷದವರು ಗಣಪತಿಯನ್ನೇ ಪ್ರಾರ್ಥಿಸುವುದುಂಟು. ಅಂಥ ಸಂದರ್ಭಗಳಲ್ಲಿ ವಾದವಿವಾದ ಪ್ರಾರ್ಥನೆಯ ಹಂತದಿಂದಲೇ ಪ್ರಾರಂಭವಾಗುತ್ತದೆ.

ಪ್ರಾರ್ಥನೆಯಾದ ನಂತರ ಒಂದು ಸಖಿ ಹಾಡುತ್ತಾರೆ. ಸಖಿ ಎಂದರೆ ಸೂಚನಾ ಪಲ್ಲವಿ, ಆಮೇಲೆ ಲಾವಣಿ ಹಾಡುತ್ತಾರೆ. ಲಾವಣಿಗಳಲ್ಲಿ ೯ ನುಡಿಯ ಲಾವಣಿಗಳು ಇವೆ. ಕನಿಷ್ಠ ಪಕ್ಷ ೩ ನುಡಿಯಾದರೂ ಇರಲೇಬೇಕು. ಪ್ರತಿಯೊಂದು ನುಡಿಯಲ್ಲಿಯೂ ಚ್ಯಾಲ, ಏರ, ಇಳಿವು ಎಂಭ ಧಾಟಿಗಳುಂಟು. ಕೆಲವು ಕಡೆ ಚ್ಯಾಲ, ಚಿಕ್ಕ ಉಡಾನ್, ದೊಡ್ಡ ಉಡಾನ್, ಗುಲ್ ಉಡಾನ್, ಶ್ಲೋಕ ಮತ್ತು ಮಿಲಾವ್ ಎಂಬ ಅನೇಕ ರೀತಿಯ ಮಟ್ಟುಗಳುಂಟು. ಕೊನೆಯಲ್ಲಿ ಹಾಡುವ ಭಾಗಕ್ಕೆ ಖ್ಯಾಲಿ ಎಂದು ಕರೆಯುವರು. ಇದು ಉಪಸಂಹಾರ ಸ್ವರೂಪದ್ದಾಗಿರುತ್ತದೆ. ಕವಿಗಳು ಲಾವಣಿಯ ಕೊನೆಯಲ್ಲಿ ತಮ್ಮ ಊರು, ಇಷ್ಟದೇವತೆ ಮತ್ತು ಗುರುವನ್ನು ನೆನೆಸಿ ತಮ್ಮ ಅಂಕಿತವನ್ನು ಹಾಕುತ್ತಾರೆ. ಅವುಗಳನ್ನು ಹಾಡುವ ಮಂದಿ ತಮ್ಮ ಊರು, ದೇವರು ತಮ್ಮ ಹೆಸರು ಹಾಗೂ ಹಿಮ್ಮೇಳವಾಗಿ ತುಂತುಣಿ ಮತ್ತು ತಾಳ ಹಾಕಿದವರ ಹೆಸರುಗಳನ್ನು ಸೇರಿಸಿ ಹಾಡುತ್ತಾರೆ.

ಉತ್ತರ ಕರ್ನಾಟಕದಲ್ಲಿ ಒಂದೊಂದು ಪಕ್ಷದಲ್ಲಿ ಮೂರ ಮೂರು ಮಂದಿ ಇರುತ್ತಾರೆ. ಪ್ರಧಾನ ಹಾಡುಗಾರ ಡಪ್ಪು ಬಾರಿಸಿಕೊಂಡು ಹಾಡುತ್ತಾರೆ. ಹಿಂದಿನವರಲ್ಲಿ ಒಬ್ಬರು ತುಂತುಣಿ ಎಂಬ ವಾದ್ಯವನ್ನು ನುಡಿಸುತ್ತಾರೆ. ಮತ್ತೊಬ್ಬರು ತಾಳ ಹಾಕುತ್ತಾರೆ. ಇವುಗಳಿಗೆ ಕ್ರಮವಾಗಿ ಶೃತಿ ಮತ್ತು ಜಾಂಜ ಎಂದು ಕರೆಯುತ್ತಾರೆ. ಹಿಂದೆ ಹಾಡುಗಾರರು ಕಾಲಿಗೆ ಅಥವಾ ಮುಂಗೈಗೆ ಗೆಜ್ಜೆ ಕಟ್ಟುತ್ತಿದ್ದರು. ಆದರೆ ಕಟ್ಟಲೇಬೇಕೆಂಬ ನಿರ್ಬಂಧವಿಲ್ಲ. ಹಾಡುವಾಗ ಸಂತೋಷದಿಂದ ಲಘುವಾಗಿ ನರ್ತಿಸುವುದುಂಟು. ಆದರೆ ಅನಿವಾರ್ಯವೇನಿಲ್ಲ. ಮೂರು ಮಂದಿಯ ಮೇಳ ನೋಡಲು ಆಕರ್ಷಕವಾಗುತ್ತದೆ.

ಹಳೆಯ ಮೈಸೂರಿನ ಕಲ್ಗಿ, ತುರಾದವರು ಒಬ್ಬೊಬ್ಬರೇ ಡಪ್ಪಿನ ಸಹಾಯದಿಂದ ಹಾಡುವುದು ರೂಢಿ. ಡಪ್ಪಿಗೆ ಕೂಡಾ ಎಂದೂ ಕರೆಯುವುದುಂಟು. ಇಲ್ಲಿ ಹಿಮ್ಮೇಳವಿಲ್ಲ. ವೇಷಭೂಷಣದ ವಿಷಯದಲ್ಲಿ ಅಂತಹ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸಿದಂತೆ ಕಂಡುಬರುವುದಿಲ್ಲ.

ಉತ್ತರ ಕರ್ನಾಟಕದಲ್ಲಿ ಇಂದಿಗೂ ಹೆಣ್ಣುಮಕ್ಕಳು ಕಲ್ಗಿ – ತುರಾ ಲಾವಣಿಗಳನ್ನು ಹಾಡುತ್ತಾರೆ. ಮೈಸೂರಿನಲ್ಲಿ ಒಮ್ಮೆ ಮಾತ್ರ ಈರಮುದ್ದಣ್ಣನವರ ತಂಗಿ ಬೆಲ್ಲದ ಮಲ್ಲಮ್ಮ ಮೇಳದಲ್ಲಿ ಭಾಗವಹಿಸಿದ ನಿದರ್ಶನವುಂಟು. ನಂಜನಗೂಡಿನ ಲಾವಣಿ ಮರಿದೇವರು ತುರಾ ಸಂಪ್ರದಾಯದವರು. ಅವರು ತಮ್ಮ ಮನೆಯಲ್ಲಿ ಒಬ್ಬ ಹೆಣ್ಣು ಮಗಳಿಗೆ ತುರಾ ಲಾವಣಿಗಳನ್ನು ಕಲಿಸಿದ್ದರು. ಬೆಂಗಳೂರಿನ ಕಲಾವಿದರೊಬ್ಬರು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಕಲ್ಗಿ ತುರಾ ಸಂಪ್ರದಾಯವನ್ನು ಕಲಿಸಿದ್ದರು. ಆದರೆ ಇವರಾರೂ ಎಂದೂ ಸಾರ್ವಜನಿಕ ವೇದಿಕೆಯ ಮೇಲೆ ಬರಲಿಲ್ಲ.

ಕಲ್ಗಿ – ತುರಾಯಿ ಲಾವಣಿ ಹಾಡುವ ಸಮಯದಲ್ಲಿ ‘ಮೇಕಮುಂಗಲಿ’ ಎಂಬ ಮಾತನ್ನು ಬಳಸುವುದುಂಟು. ಅದು ಕಲಾವಿದರಿಗೆ ನೀಡುವ ಅತ್ಯುನ್ನತ ಗೌರವ. ಬಬಲಾರಿ ಸದಾಶಿವ (ಚನ್ನವೀರ ಎಂಬುವರು ಬೆಡಗುಮುಂಡಿಗೆ ವಚನದಂತೆ ಅನೇಕ ಅನುಭಾವದ ಲಾವಣಿಗಳನ್ನು ರಚಿಸಿ ಅವುಗಳನ್ನು ಸವಾಲ್ ರೂಪದಲ್ಲಿ ಹಾಡಿ, ಇದಕ್ಕೆ ಜವಾಬ್ ಹೇಳಿದವರಿಗೆ ‘ಮೇಕಮುಂಗಲಿ’ ಪ್ರಶಸ್ತಿ ಕೊಡುವುದಾಗಿ ಹೇಳಿದಾಗ ಯಾರೂ ಅದಕ್ಕೆ ಸರಿಯಾದ ಉತ್ತರವನ್ನು ಹೇಳಲಾಗಲಿಲ್ಲ. ಕೊನೆಗೆ ಅವರು ತಮ್ಮ ಶಿಷ್ಯನಿಗೆ ಆ ಪ್ರಶಸ್ತಿಯನ್ನು ಅನುಗ್ರಹಿಸಿದರು ಎಂಬ ಹೇಳಿಕೆ ಇದೆ.

ಮೇಳದಲ್ಲಿ ಗೆಲ್ಲುವುದಕ್ಕಾಗಿ ಕೆಲವೊಮ್ಮೆ ತಂತ್ರಶಾಸ್ತ್ರವನ್ನು ಬಳಸುತ್ತಾರೆ. ಲಾವಣಿಯ ರಚನೆಯಲ್ಲಿ ಕೆಲವು ರಹಸ್ಯಗಳನ್ನು ಅಡಗಿಸಿಡುವ ಕವಿಗಳುಂಟು. ಕವಿಗಳು ಹಾಕಿದ ಕಟ್ಟಳೆಗಳನ್ನು ಮೀರಿದರೆ ಅನಾಹುತಗಳಾಗಿರುವುದಕ್ಕೆ ನಿದರ್ಶನಗಳಿವೆ.

ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿರುವ ಕಲ್ಗಿ – ತುರಾಯಿ ಸಂಪ್ರದಾಯ ಹಳೆಯ ಮೈಸೂರು ಪ್ರಾಂತ್ಯದಲ್ಲಿಯೂ ಒಂದು ಕಾಲದಲ್ಲಿ ಪ್ರಖ್ಯಾತವಾಗಿತ್ತು ಎಂಬುದಕ್ಕೆ ಅನೇಕ ಆಧಾರಗಳಿವೆ. ಇಂದು ಈ ಕಲೆ ಇಲ್ಲಿ ನಶಿಸಿದೆ. ಅದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಉತ್ತರ ಕರ್ನಾಟಕದಲ್ಲಿ ಇಂದಿಗೂ ಬಹಲ ವ್ಯಾಪಕವಾಗಿರುವ ಈ ಕಲೆಗೆ ಅಲ್ಲಿಯ ಜನರ ಅಭಿರುಚಿ, ಪ್ರೋತ್ಸಾಹವೇ ಮುಖ್ಯ ಕಾರಣ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕಲ್ಗಿ – ತುರಾಯಿ ಕಲಾವಿದರು ಮತ್ತು ತಂಡಗಳು ಹೇರಳವಾಗಿವೆ. ಇಂದಿಗೂ ಜೀವಂತ ಕಲೆಯಾಗಿ ಉಳಿದಿದೆ.

– ಟಿ.ಎಸ್.ಆರ್.

ಕಷಾಯ ಜನಪದ ಜೀವನದಲ್ಲಿ ಆರೋಗ್ಯ ಸಂರಕ್ಷಣೆಯ ವಿಧಾನಗಳಲ್ಲಿ ಬಳಕೆಯಾಗುವ ಪಾನೀಯ. ಜನಪದರು ತಮ್ಮ ಅಭಿರುಚಿಗಳಿಗೆ ತಕ್ಕಂತೆ ಆಹಾರ ಪಾನೀಯಗಳನ್ನು, ಶೀತ – ಕೆಮ್ಮು – ಕಫಗಳಿಗೆ ಕಷಾಯಗಳನ್ನು ತಾವೇ ಗುರುತಿಸಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ತಯಾರಿಸಿಕೊಳ್ಳುತ್ತಾರೆ. ಪ್ರತಿಯೊಂದನ್ನು ಹೊಸ ಹೊಸದಾಗಿ ಶೋಧನೆ ಮಾಡುತ್ತಲೆ ತಮ್ಮ ರೋಗ – ರುಜಿನಗಳನ್ನು ನಿವಾರಿಸಿಕೊಳ್ಳುತ್ತ ಬಂದಿದ್ದಾರೆ.

ಕಷಾಯಗಳನ್ನು ಹೆಚ್ಚಾಗಿ ಅನಾರೋಗ್ಯ ಪ್ರಸಂಗಗಳಲ್ಲಿ ಬಳಸುವುದು ವಾಡಿಕೆ. ಶೀತ – ಕೆಮ್ಮು – ಜ್ವರಗಳಿಗೆ ಮನೆ ಮದ್ದಾದ ಕಷಾಯವನ್ನು ಮಾಡಿ ಕುಡಿಯುವುದು ಬಹುಹಿಂದಿನಿಂದ ಬಂದ ಪದ್ಧತಿ. ಅದರಲ್ಲೂ ಅಡಿಗೆ ಮನೆಯಲ್ಲಿ ದೊರೆಯುವ – ಜೀರಿಗೆ, ಮೆಣಸು, ಅರಿಸಿನ, ಶುಂಠಿ, ಉಪ್ಪು, ಕೊತ್ತಂಬರಿ, ಬೆಳ್ಳುಳ್ಳಿ, ಇಂಗು, ಮೆಂತ್ಯ ಇತ್ಯಾದಿಗಳನ್ನು ಬಳಸಿ ಅನೇಕ ಬಗೆಯ ಕಷಾಯಗಳನ್ನು ತಯಾರಿಸುತ್ತಾರೆ.

ತಮ್ಮ ಜೀವಾನಾನುಭವದ ಹಿನ್ನೆಲೆಯಲ್ಲಿ ಕೈಯಳತೆ, ಕಣ್ಣಳತೆ, ಚಿಟಿಕಿಗಳನ್ನು ಬಳಸಿಕೊಂಡು ಕಷಾಯಗಳನ್ನು ತಯಾರಿಸಿ ಸೇವಿಸುವ ಪರಿಯನ್ನು ಕೆಳಕಂಡ ಉದಾಹರಣೆಗಳೊಂದಿಗೆ ನೋಡಬಹುದು.

೧. ಶುಂಠಿ, ಕೊತ್ತಂಬರಿ ಕಾಳು (ಧನ್ಯ), ಲವಂಗದ ಪುಡಿಯನ್ನು ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಹಾಗೂ ಹಾಲನ್ನು ಸೇರಿಸಬಹುದು. ಇದನ್ನು ನೆಗಡಿಗೆ ಜೌಷಧಿಯಂತೆ ಬಳಸುತ್ತಾರೆ.

೨. ಶುಂಠಿ, ಕೊತ್ತಂಬರಿ ಕಾಳು, ಮೆಣಸು, ಉಪ್ಪು ಅರಿಸಿನವನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಕೆಮ್ಮು ನಿಲ್ಲುತ್ತದೆ.

೩. ರಕ್ತ ಹೊನ್ನೆ (ಬೇಂಗ) ಕಷಾಯವು ರಕ್ತವರ್ಧಕವಾಗಿಯೂ ಶಕ್ತಿ ಪ್ರದಾಯಕವಾಗಿಯೂ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ಹೊಟ್ಟೆ ಹುಣ್ಣು (ಅಲ್ಸರ್), ಮುಟ್ಟುದೋಷ, ಮೂತ್ರ ರೋಗಾದಿಗಳನ್ನು ನಿವಾರಿಸಲು ಇದನ್ನು ಮಧ್ಯೆ ಮಧ್ಯೆ ಬಿಟ್ಟು ಬಿಟ್ಟು ವರ್ಷ ಪೂರ್ತಿ ಸೇವಿಸಬೇಕು.

೪. ಅತ್ತಿ ಮರದ ಕಷಾಯವು ಬಹು ಉಪಯುಕ್ತ ಔಷಧೀಯ ಗುಣವುಳ್ಳದ್ದು. ಈ ಕಷಾಯವು ಹೊಟ್ಟೆ ಹುಳಿ, ಹುಣ್ಣು, ವಾಯು, ಅತಿಸಾರ, ನಿವಾರಕ. ಅಲ್ಲದೆ ಶರೀರದ ವಿಷವನ್ನು ಹೊರಚೆಲ್ಲುತ್ತದೆ. (ಆದರೆ ಇದನ್ನು ಜೂನ್, ಜುಲೈ, ಆಗಸ್ಟ್‌ನಲ್ಲಿ ಸೇವಿಸಬಾರದು).

೫. ಮಕ್ಕಳಿಗೆ ತಾಯಿಯಯ ಹಾಲು ಸಿಗದಿದ್ದ ಪಕ್ಷದಲ್ಲಿ ‘ಬಂದನಾರು’ (ಬ್ರೈಡೀಲಿಯಾ ಸ್ಕಾಂಡೆನ್ಸ್) ಕಷಾಯ ಕೊಡುವುದು ತಾಯಿಯ ಹಾಲಿನಷ್ಟೆ ಪೌಷ್ಠಿಕವಾದುದು. ಹಿಂದಿನ ಕಾಲದಲ್ಲಿ ಮಗು ಹಡೆದು ತಾಯಿ ತೀರಿ ಹೋದರೆ ಮಗುವಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಈ ಕಷಾಯ ಮಾಡಿ ಕುಡಿಸುತ್ತಿದ್ದರು. ಈ ಸತ್ಯದ ಕಾಂಡದ ನಾರನ್ನು ತೆಗೆದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸುತ್ತಾರೆ.

೬. ಹೊಟ್ಟೆ ಭಾರವೆನಿಸಿದರೆ, ಅಜೀರ್ಣವಾದರೆ, ಬಾಯಾರಿಕೆ ಎನಿಸುತ್ತಿದ್ದರೆ, ತುಳಸಿ ಕಷಾಯ ಕುಡಿಯಬಹುದು. ಮಕ್ಕಳಿಗೆ ಶೀತವಾದರೆ ಇದರ ಒಣಗಿದ ಬೀಜವನ್ನು ನೀರಲ್ಲಿ ಹಾಕಿ ಕುದಿಸಿ ಸ್ವಲ್ಪ ಬೆಲ್ಲ ಹಾಕಿ ಕಷಾಯ ಮಾಡಿ ಕುಡಿಸಬೇಕು.

೭. ಮಾವಿನ ಎಲೆಯನ್ನು ನೀರಿನಲ್ಲಿ ಕುದಿಸಿ ನಾಲ್ಕು ಪ್ರಮಾಣದ ನೀರನ್ನು ಒಂದು ಪ್ರಮಾಣಕ್ಕೆ ಬತ್ತಿಸಿ (೪ – ೧ ) ಕಷಾಯ ಮಾಡಿ ಕುಡಿಯುವುದರಿಂದ ಧ್ವನಿ ಬಿದ್ದುದ್ಕಕೆ ರಾಮಬಾಣ.

೮. ಏಕನಾಯಕ ಬೇರನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಸಿಹಿ ಮೂತ್ರ ರೋಗ ನಿವಾರಣೆಯಾಗುತ್ತದೆ.

ಅರಿಸಿನದಂತೆ ಬೆಳೆಯುವ ಕಾಡರಿಸಿನದ ಕೊಂಬನ್ನು ಕೊಯ್ದು ತಂದು ಅದನ್ನು ಸಿಗಿದು ರುಬ್ಬುತ್ತಾರೆ. ಅನಂತರ ವಸ್ತ್ರದಲ್ಲಿ ನೀರು ಬಸಿದು ಬಿಸಲಲ್ಲಿ ಒಣಗಿಸಿಟ್ಟುಕೊಳ್ಳುತ್ತಾರೆ. ಇದನ್ನು ಹಾಲು – ಬೆಲ್ಲದೊಂದಿಗೆ ಕುದಿಸಿ ಕಷಾಯ ಮಾಡಿಕೊಂಡು ಕುಡಿಯುತ್ತಾರೆ. ಇದು ಭೇದಿ ನಿವಾರಕವಾಗಿದೆ. ಹಾಗೆಯೇ ಇದೇ ಕ್ರಮದಲ್ಲಿಯೇ ಅರಿಸಿನದಿಂದಲೂ ಕಾಫಿ ತಯಾರಿಸುತ್ತಾರೆ. ನೆಗೆಡಿ, ಗಂಟಲು ನೋವು, ಕಫ ನೀರಾಗಲು ಇದು ಉಪಯುಕ್ತವಾದುದಾಗಿದೆ.

ಹೀಗೆ ಬೇರೆ ಬೇರೆ ರೀತಿ ಗುಣಮುಖವಾಗಲು ಅನುವಾಗುವಂತೆ ವಿವಿಧ ಕಷಾಯಗಳನ್ನು ಉಪಯೋಗಿಸುವುದು ಜನಪದ ಜೀವನದಲ್ಲಿ ಆರೋಗ್ಯದೃಷ್ಟಿಯಿಂದ ಒಂದು ಸಂಪ್ರದಾಯವಾಗಿ ಮುಂದುವರಿದಿದೆ.

– ಪಿ.ಎಸ್.

ಕಸೂತಿ ಒಂದು ಸಾಂಪ್ರದಾಯಿಕ ಪ್ರಾಚೀನ ಕಲೆ. ಬಹಳ ಸೂಕ್ಷ್ಮತೆ ಹಾಗೂ ಕೌಶಲ್ಯವನ್ನು ಅಪೇಕ್ಷಿಸುವ ಈ ಕಲೆಯನ್ನು ಬಟ್ಟೆ ಮತ್ತು ಚರ್ಮದ ಮೇಲೆ ಸೂಜಿದಾರಗಳಿಂದ ವಿನ್ಯಾಸ ಮಾಡಲಾಗುತ್ತದೆ. ಹೆಣಿಗೆ ಕಸೂತಿಯಲ್ಲಿ ದಾರ ಮತ್ತು ಆಲಂಕಾರಿಕ ಮಣಿಯನ್ನು ಬಳಸುತ್ತಾರೆ.

ಇದು ಪ್ರಾಚೀನ ಕಲೆ ಎಂಬುದಕ್ಕೆ ಸಾಕ್ಷಿಯಾಗಿ ಗುಹೆಯ ಚಿತ್ರಗಳನ್ನು ಉದಾಹರಿಸಬಹುದು. ಈಜಿಪ್ತಿನ ದೇವತೆ ಹಾಗೂ ವೀರಯೋಧರ ಶಿಲ್ಪಗಳ ಉಡುಪುಗಳು ಮತ್ತು ಮೆಸಪೋಟೋಮಿಯದಲ್ಲಿ ಹೆಣ್ಣು ಮಕ್ಕಳ ಉಡುಪುಗಳನ್ನು ಕಸೂತಿ ಇತ್ತೆಂದು ತಿಳುಸುತ್ತದೆಂದು ಹೇಳಲಾಗಿದೆ. ಮೆಗಾಸ್ತನಿಸ್ ತನ್ನ ಇಂಡಿಕಾ ಗ್ರಂಥದಲ್ಲಿ ಭಾರತದಲ್ಲಿ ಚಿನ್ನದ ಎಳೆ ಹಾಗೂ ರತ್ನವನ್ನು ಉಪಯೋಗಿಸುತ್ತಿದ್ದ ಬಗ್ಗೆ ಹೇಳಿದ್ದಾನೆ.

ಕಸೂತಿಯ ರಚನೆಯಲ್ಲಿ ಸೂಜಿ, ಕ್ರೋಸ (ಕೊಕ್ಕೆಯಾಕಾರದ ಲೋಹದ ಕಡ್ಡಿ) ದಾರ, ಪೆನ್ಸಿಲ್, ಮಾರ್ಕರ್, ಕಟ್ಟಿಗೆಯ ರಿಂಗ್ ಇತ್ಯಾದಿ ಉಪಕರಣಗಳನ್ನು ಬಳಸುತ್ತಾರೆ. ಪೀಠೋಪಕರಣ ಮತ್ತು ಹಾಸಿಗೆಯ ಬಟ್ಟೆಗಳು, ಬಾಗಿಲ ತೋರಣಗಳು, ಕೈಚೀಲ, ಕಿಟಿಕಿ, ಬಾಗಿಲಿನ ಪರದೆಗಳು ಮುಂತಾದವುಗಳ ಮೇಲೆ ಕಸೂತಿಯನ್ನು ವಿನ್ಯಾಸ ಮಾಡುತ್ತಾರೆ. ಕಸೂತಿಯಲ್ಲಿ ಹಲವು ಪ್ರಾಣಿಪಕ್ಷಿಗಳು ಧಾರ್ಮಿಕ ಚಿಹ್ನೆಗಳು, ಸಂಕೇತಗಳು, ದೇವರು ಮತ್ತು ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಚಿತ್ರಗಳು, ಭೂಮಿತಿ, ಆಕೃತಿ,ಸ ಗಿಡಮರಬಳ್ಳಿ ಹಾಗೂ ಅಕ್ಷರ ವಿನ್ಯಾಸದಂತಹ ಮಾದರಿಗಳಿವೆ.

ಕಸೂತಿಯನ್ನು ಹೊಲಿಗೆಯ ಮೂಲಕ ಮಾಡಿದರೆ ಹೊಲಿಗೆ ಕಸೂತಿ ಎಂದು ಕರೆಯುತ್ತಾರೆ. ಇದರಲ್ಲಿ ಸೂಜಿ ಮತ್ತು ಬಣ್ಣಬಣ್ಣದ ಸಾದಾ ಹಾಗೂ ರೇಷ್ಮೆಯ ದಾರವನ್ನು ಬಳಸುತ್ತಾರೆ. ದಾರವನ್ನು ಹೊಲಯುವ ವಿ‌ನ್ಯಾಸವನ್ನು ಆಧರಿಸಿ ಎಳೆಹೊಲಿಗೆ, ಸುತ್ತಿಗೆ ಹೊಲಿಗೆ, ಕತ್ತರಿ ಹೊಲಿಗೆ, ಗಂಟಿನ ಹೊಲಿಗೆ, ಜೇಡರ ಬಲೆ ಹೊಲಿಗೆ, ಕಾಶ್ಮೀರಿ ಹೊಲಿಗೆ, ದೇಟಿನ ಹೊಲಿಗೆ, ಅಂಚಿನ ಹೊಲಿಗೆ ಎಂದು ಬೇರೆ ಬೇರೆ ರೀತಿಯಲ್ಲಿ ಕಸೂತಿ ಹಾಕಬಹುದು. ಈ ರೀತಿಯ ಕಸೂತಿಯ ನೋಡಲು ಸುಂದರವಾಗಿರುವುದಷ್ಟೇ ಅಲ್ಲದೆ ದೀರ್ಘಕಾಲ ಬಾಳಿಕೆ ಬರುತ್ತದೆ.

ಕಸೂತಿಯನ್ನು ಹೆಣಿಗೆ ಮೂಲಕ ಮಾಡಿದರೆ ಹೆಣಿಗೆ ಕಸೂತಿ ಎಂದು ಕರೆಯುತ್ತಾರೆ. ಇಲ್ಲಿ ಉಲ್ಲನ್‌ದಾರ ಅಥವಾ ರೇಷ್ಮೆಯ ದಾರವನ್ನು ಎಡಗೈಯ ತೋರುಬೆರಳಿಗೆ ಸುತ್ತಿಕೊಂಡು ಹೆಣಿಗೆ ಹಾಕುವ ಕ್ರೋಸವನ್ನು ಬಲಗೈಯಲ್ಲಿ ಹಿಡಿದು ಎಡಗೈಯಲ್ಲಿ ಸುತ್ತಿದ ದಾರವನ್ನು ಸ್ವಲ್ಪಸ್ವಲ್ಪವೇ ಬಿಟ್ಟುಕೊಳ್ಳುತ್ತ ಹೆಣಿಗೆ ಮಾಡಲಾಗುತ್ತದೆ. ಮಣಿಯನ್ನು ಸೂಜಿ ಮತ್ತು ದಾರದಿಂದ ಹೆಣೆಯುವ ವಿಧಾನವು ಈ ಹೆಣಿಗೆ ಕಸೂತಿಯಲ್ಲಿದೆ.

ಕಸೂತಿ ರಚನೆಯಲ್ಲಿ ಕಸೂತಿಗಾರನಿಗೆ ಸೂಕ್ಷ್ಮಗ್ರಹಣಶಕ್ತಿ ಇರಬೇಕು. ಬಣ್ಣಗಳನ್ನು ಎಚ್ಚರದಿಂದ ಚಿತ್ರವಿನ್ಯಾಸದಲ್ಲಿ ಬಳಸಬೇಕು. ಚಿತ್ರರಚನೆಯ ಕೌಶಲ್ಯ ತಿಳಿದಿರಬೇಕು. ತಾಳ್ಮೆಯನ್ನು ಬಯಸುವ ಕಸೂತಿಕಲೆ ಮೈಮನಸ್ಸನ್ನು ಪುಳಕಗೊಳಿಸಿ ಉಲ್ಲಾಸದಿಂದಿಡುತ್ತದೆ.

ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಕಡಿಮೆ ಸಮಯದಲ್ಲಿ ಸುಂದರವಾಗಿ ಹಾಕಬಹುದಾದ ಯಂತ್ರ ಕಸೂತಿ ಈಗ ಪ್ರಚಲಿತದಲ್ಲಿದೆ. ಇದರಿಂದ ಸಾಂಪ್ರದಾಯಿಕ ಕೈಸೂತಿಗೆ ಪೆಟ್ಟುಬಿದ್ದರೂ ವರ್ಣರಂಜಿತ ಕೈ ಕಸೂತಿಯಲ್ಲಿರುವ ಸೃಜನಶೀಲತೆಯನ್ನು ಜನ ಗುರುತಿಸುತ್ತಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ಕೈಕಸೂತಿ ಮತ್ತೆ ತನ್ನ ಹಿಂದಿನ ಮೌಲ್ಯವನ್ನು ಪಡೆಯುತ್ತಿದೆ.

– ಎಚ್.ಜಿ.