ಖೊಂಡೊ  ಖೊಂಡೊಗಳು ಆಂಧ್ರಪ್ರದೇಶದ ವಿಜಯನಗರಂ, ವಿಶಾಕ ಜಿಲ್ಲೆಗಳಲ್ಲಿ ವಾಸಿಸುವ ಆದಿವಾಸಿ ಜನ. ಖೊಂಡೊಗಳು ತಮ್ಮ ಭಾಷೆಯಲ್ಲಿ ತಮ್ಮನ್ನು ತಾವು ‘ಕೂಯಿಂಗ’ ಇಲ್ಲವೆ ‘ಕೊಯ ದೊರ’ ಎಂದು ಕರೆದುಕೊಳ್ಳುತ್ತಾರೆ. ಅವರಲ್ಲಿ ಉಪಪಂಗಡಗಳಿವೆ. ದೊಗ್ರಿಯಾ, ದೇಶ್ಯಾ, ಕುಟ್ಟಿಯಾ, ಟಕ್ರಿಯಾ, ಯೊನೇಟಿ ಖೊಂಡು ಎಂಬ ಐದು ಗೋತ್ರಗಳಿವೆ.

ಏಕಪತ್ನಿತ್ವ ಖೊಂಡೊಗಳ ನಿಯಮ. ಬಹುಪತ್ನಿತ್ವ ವಿರಳ. ತೀರಿಕೊಂಡ ಸೋದರನ ಹೆಂಡತಿಯನ್ನು ಮದುವೆಯಾಗುತ್ತಾರೆ. ಖೊಂಡೊಗಳಿಗೆ ಕುಯಿ ಇಲ್ಲವೆ ಕುವಿ ಎಂದು ಕರೆಯಲಾಗುವ ಸ್ವತಂತ್ರ ಭಾಷೆಯಿದೆ. ಶ್ರೀಕಾಕುಳಂ ಜಿಲ್ಲೆಯಲ್ಲಿ ವಾಸಿಸುವ ಖೊಂಡೊಗಳು ತೆಲುಗನ್ನು ಧಾರಾಳವಾಗಿ ಧಾರಾಳವಾಗಿ ಮಾತನಾಡುತ್ತಾರೆ. ಪ್ರತಿಯೊಂದು ಹಬ್ಬಕ್ಕೂ ಅವರು ನವಿಲಿಯಂತೆ ಮಯೂರ ನೃತ್ಯವನ್ನು ಮಾಡುತ್ತಾರೆ. ಹಳ್ಳಿಯ ಯಜಮಾನನನ್ನು ‘ಹವಾಂತ’ ಎಂದು ಕರೆಯುತ್ತಾರೆ. ಇದು ವಂಶಪಾರಂಪರ್ಯವಾಗಿ ಬರುತ್ತದೆ. ಮದುವೆ, ಭೂಮಿ ಮುಂತಾದವುಗಳು ತಗಾದೆಗಳನ್ನು ‘ಹವಾಂತ’ ಪರಿಹರಿಸುತ್ತಾನೆ. ಸೋದರಳಿಯ, ಸೋದರ ಸೊಸೆಯನ್ನು ಮದುವೆಯಾಗುತ್ತಾರೆ. ಆದರೆ ಅಕ್ಕನ ಮಗಳನ್ನು ಮದುವೆಯಾಗುವುದಿಲ್ಲ. ಪ್ರೇಮ ವಿವಾಹಗಳೂ ಇವೆ. ತಂದೆತಾಯಿಗಳಿಗೆ ಒಪ್ಪಿಗೆಯಿಲ್ಲದಿದ್ದರೆ ಓಡಿ ಹೋಗಿ ಅಸ್ಸಾಂ ರಾಜ್ಯದ ಟೀ ತೋಟಗಳಲ್ಲಿ ಓಲಿ ಕೊಡುತ್ತಾರೆ. ಅನಂತರ ಸಮಾಜ ಒಪ್ಪಿಗೆಯನ್ನು ನೀಡುತ್ತದೆ. ವಿಚ್ಛೇದನಗಳಿವೆ. ಮೊದಲು ಗಂಡನಿಂದ ವಿಚ್ಛೇದನ ಪಡೆದ ಹೆಂಗಸರು ಎರಡನೆಯ ಗಂಡನೊಂದಿಗೆ ಕೂಡಿ ಬದುಕಬಹುದು.

ಆದರೆ ಮಕ್ಕಳ ಜವಾಬ್ದಾರಿ ಮೊದಲ ಗಂಡನಿಗೆ ಅಂದರೆ ತಂದೆಗೇ ಸಲ್ಲುತ್ತದೆ. ಗರ್ಭಿಣಿ ಹೆಂಗಸಿನ ವಿಷಯದಲ್ಲಿಯೂ ಇದೇ ಸಲ್ಲುತ್ತದೆ. ಖೊಂಡೊಗಳಲ್ಲಿ ವಯಸ್ಸಾದ ಹೆಂಗಸರಿಗೆ ತುಂಬಾ ಗೌರವವಿದೆ. ಇವರು ಗ್ರಾಮದಲ್ಲಿ ನಡೆಯುವ ಎಲ್ಲ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿಯೂ ಭಾಗವಹಿಸುತ್ತಾರೆ. ಇವರನ್ನು ‘ಪೆಜ್ಜಿನ ಬುದ್ಧಿ’ ಎಂದು ಕರೆಯುತ್ತಾರೆ. ಗರ್ಭಿಣಿ ಹೆಂಗಸರು ಹೊಲ ದಾಟಬಾರದು. ಹಾವನ್ನು ಕೊಲ್ಲಬಾರದು. ಇದು ಗಂಡನಿಗೂ ಅನ್ವಯವಾಗುತ್ತದೆ. ಪೆಜ್ಜಿನಿ ಬುದ್ಧಿ ನೋವಿನ ಸಂದರ್ಭದಲ್ಲಿ ಗರ್ಭಿಣಿ ಹೆಂಗಸಿಗೆ ಸಹಾಯ ಮಾಡುತ್ತಾಳೆ. ಹೆರಿಗೆಯಾದ ಏಳನೆಯ ದಿನ ತಾಯಿಯಿಂದ ಮಗುವನ್ನು ಬೇರೆ ಮಾಡುತ್ತಾರೆ. ಮನೆಯನ್ನೆಲ್ಲ ಸೆಗಣಿಯಿಂದ ಸಾರಿಸಿ ಮನೆಯನ್ನು ಸ್ವಚ್ಛಗಳಿಸಿ ಆಡಿನ ಮಾಂಸದಿಂದ ತಾಯಿಯೇ ಸ್ವತಃ ಅಡುಗೆ ಮಾಡಿ ಬಂದ ಬಂಧು ಬಳಗಕ್ಕೆಲ್ಲ ಬಡಿಸುತ್ತಾಳೆ. ಖೊಂಡೊಗಳು ಮುಖ್ಯವಾಗಿ ಒಣ ಬೇಸಾಯದಲ್ಲಿ ನಿಷ್ಣಾತರು. ರಾಗಿ, ಗೋಧಿ, ನವಣೆಯಂತಹ ತೃಣ ಧಾನ್ಯಗಳನ್ನು, ಎಳ್ಳು, ಅವಡಲದಂತಹತೈಲ ಬೀಜಗಳನ್ನು ತೊಗರಿಯಂತಹ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಬೇಟೆಯಲ್ಲಿಯೂ ಮೀನು ಹಿಡಿಯುವುದರಲ್ಲಿಯೂ ಬುಟ್ಟಿ ಹೆಣೆಯುವುದರಲ್ಲಿಯೂ ಕುಶಲಿಗರು, ಅಕ್ಷರಸ್ಥರ ಸಂಖ್ಯೆ ಕಡಿಮೆ. ಖೊಂಡೊಗಳು ಹೀರಾಪರ್ಚಿ (ಬಿತ್ತನೆಯ ಹಬ್ಬ), ಮಹಪರ್ಚಿ (ಹೊಸ ಮಾವನ್ನು ತಿನ್ನುವುದು), ಕುಮ್ಲಾ ಪರ್ಚಿ (ಮೆಕ್ಕೆ ಚೋಳ, ಕುಂಬಳಕಾಯಿ ತಿನ್ನುವುದು) ಮೊದಲಾದ ಹಬ್ಬಗಳನ್ನು ಆಚರಿಸುತ್ತಾರೆ.

೨೦೦೧ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೮೫,೩೨೪. ಆದರೆ ಶೇಕಡಾ ೧.೭.

ಬಿ.ಕೆ.ಆರ್. ಅನುವಾದ ಕೆ.ಎಸ್.

ಗಂಗಮ್ಮ ಕಥೆ ಗಂಗಮ್ಮ ಹೆಸರುವಾಸಿಯಾದ ಗ್ರಾಮದೇವತೆ. ಆಕೆ ಇರುವ ಸ್ಥಳದ ಆಧಾರದ ಮೇಲೆ ಆಕೆಯನ್ನು ನಡುಬೀದಿ ಗಂಗಮ್ಮ, ಮೇಲೆ ಬೀದಿ ಗಂಗಮ್ಮ, ಕೆಲಬೀದಿ ಗಂಗೆ, ಕಟ್ಟೆಯ ಮೇಲೆ ಗಂಗೆ, ಎಂದು ಕರೆಯುವುದುಂಟು. ಇದೇ ರೀತಿ ಈಕೆಯನ್ನು ‘ನಲ್ಲ ಗಂಗಮ್ಮ’ (ಕಪ್ಪು) ‘ಕುಂಟಿ ಗಂಗಮ್ಮ’ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಪ್ಪು ಮಚ್ಚೆಗಳಿರುವ ವ್ಯಾಧಿ ಬರುವುದಕ್ಕೆ, ಹಸುಗಳ ಕಾಲು ಹುಳುಗಳು ಬಿದ್ದು ಅವು ಕುಂಟುವುದಕ್ಕೆ ಈಕೆ ಕಾರಣಭೂತವೆಂದು ಹೀಗೆ ಹುಳುಗಳು ಬಿದ್ದು ಅವು ಕುಂಟುವುದಕ್ಕೆ ಈಕೆ ಕಾರಣಭೂತವೆಂದು ಹೀಗೆ ಕರೆಯುತ್ತಾರೆ. ಆದರೆ ಈಕೆಯ ಮೂಲರೂಪ ಒಂದೇ ಎಂದು ಗ್ರಾಮೀಣರ ನಂಬಿಕೆ. ಈಕೆಗೆ ಸಂಬಂಧಿಸಿದಂತೆ ಎರಡು ಕಥೆಗಳು ಹೀಗಿವೆ.

ಹಿಂದಿನ ಕಾಲದಲ್ಲಿ ವೇದಶಾಸ್ತ್ರ, ಪಾರಂಗತವಾದ ಬ್ರಾಹ್ಮಣ ಒಬ್ಬನಿದ್ದನು. ಒಬ್ಬ ದಲಿತ ತಾನು ಬ್ರಾಹ್ಮಣನೆಂದು ಆ ಪಂಡಿತನನ್ನು ನಂಬಿಸಿ ಅವರಿಂದ ಎಲ್ಲಾ ಶಾಸ್ತ್ರಗಳನ್ನು ಅಭ್ಯಸಿಸುತ್ತಾನೆ. ಅವನ ವರ್ತನೆಗೆ ಮೆಚ್ಚಿದ ಬ್ರಾಹ್ಮಣನು ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ಅವರಿಗೆ ಗಂಡುಮಕ್ಕಳು ಹುಟ್ಟುತ್ತಾರೆ. ಒಂದು ಹಬ್ಬದ ದಿವಸ ಬ್ರಾಹ್ಮಣನ ಹೆಂಡತಿ ಹೋಳಿಗೆ ಮಾಡುತ್ತಾಳೆ. ಅದನ್ನು ತಿನ್ನುತ್ತಿರುವ ಮಕ್ಕಳು ‘ಅದು ಕೋಣದ ನಾಲಗೆ’ ರೀತಿ ಇದೆ ಹೇಳುತ್ತಾರೆ. ಆಕೆ ತನ್ನ ಗಂಡನನ್ನು ಆತನ ಕುಲದ ಬಗ್ಗೆ ನಿಜ ಹೇಳಬೇಕೆಂದು ಕೇಳುತ್ತಾಳೆ. ನಿಜವನ್ನು ತಿಳಿದು ಗಂಡನನ್ನು ಕೋಣವನ್ನಾಗಿ ಗಂಡು ಮಕ್ಕಳನ್ನು ಟಗರು, ಮೇಕೆ, ಕೋಳಿ ಹುಂಜಗಳಾಗಿ ಆಗಬೇಕೆಂದು ಶಪಿಸುತ್ತಾಳೆ. ಆಕೆಯ ಗಂಡ ಶಾಪ ಪ್ರಭಾವದಿಂದ ಕೋಣ ಆಗುತ್ತಾನೆ. ಆಕೆಯನ್ನು ಕೊಲ್ಲುವುದಕ್ಕೆ ಅಟ್ಟಿಸಿಕೊಂಡು ಓಡುತ್ತಾನೆ. ಆಕೆ ಒಂದು ಹುತ್ತದಲ್ಲಿ ಅಡಗಿ ಕೂರುತ್ತಾಳೆ. ಬಿಡದೆ ಬಲಗಾಲಿನಿಂದ ಹುತ್ತವನ್ನು ಕೆರೆಯುತ್ತಾ, ಕೊಂಬುಗಳಿಂದ ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಾನೆ. ವಿಷಯ ತಿಳಿದ ಗ್ರಾಮಸ್ಥರು ಕೋಣವನ್ನು ಬಂಧಿಸುತ್ತಾರೆ. ಬ್ರಾಹ್ಮಣ ಹೆಂಗಸು ಗಂಗಮ್ಮ ದೇವಿಯಾಗುತ್ತಾಳೆ. ತನ್ನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡಿದ ಕೋಣವನ್ನು ಬಲಿಕೊಟ್ಟು, ಅದರ ಬಲಗಾಲನ್ನು ಕಡಿದು ಅದರ ಬಾಯಲ್ಲಿ ಇಡಬೇಕೆಂದು ಶಪಿಸುತ್ತಾಳೆ. ಟಗರು, ಮೇಕೆ, ಹುಂಜಗಳಾಗಿರುವ  ತನ್ನ ಮಕ್ಕಳನ್ನು ಸಹ ಬಲಿಕೊಡಬೇಕೆಂದು ಬಯಸುತ್ತಾಳೆ. ಗ್ರಾಮಸ್ಥರು ಗಂಗಮ್ಮ ದೇವಿಯ ಜಾತ್ರೆಯನ್ನು ಮಾಡಿ ಆಕೆ ಹೇಳಿದ ಹಾಗೆ ಬಲಿಕೊಡುತ್ತಾರೆ.

ಗಂಗಮ್ಮನಿಗೆ ಸಂಬಂಧಿಸಿದ ಇನ್ನೊಂದು ಕಥೆ ಹೀಗಿದೆ. ಪೂರ್ವಾಂಧ್ರದಲ್ಲಿ ಒಬ್ಬ ಬ್ರಾಹ್ಮಣ ಪಟೇಲ ಇದ್ದನು. ಅವನಿಗೆ ಒಬ್ಬಳೇ ಮಗಳು. ಅಲ್ಲಿಗೆ ವೇದಗಳನ್ನು ಬಲ್ಲ ಒಬ್ಬ ದಲಿತ ಬರುತ್ತಾನೆ. ತಾನು ಬ್ರಾಹ್ಮಣನೆಂದು ನಂಬಿಸಿ ಗ್ರಾಮಸ್ಥರ ಜೊತೆ ಸ್ನೇಹದಿಂದ ಇರುತ್ತಾನೆ. ಗ್ರಾಮಸ್ಥರು ಆತನ ವರ್ತನೆಯನ್ನು ಕಂಡು ಒಳ್ಳೆಯವನೆಂದು ನಂಬಿ, ಪಟೇಲರನ್ನು ಒಪ್ಪಿಸಿ ಅವರ ಮಗಳ ಜೊತೆ ಮದುವೆ ಮಾಡುತ್ತಾರೆ. ಕೆಲವು ದಿನಗಳಾದ ಅನಂತರ ದಲಿತನ ಸ್ವಗ್ರಾಮದಿಂದ ಒಬ್ಬನು ಬಂದು ಇವನ ಮೋಸವನ್ನು ನೋಡಿ ಊರಿಗೆ ಹೋಗಿ ಎಲ್ಲವನ್ನೂ ದಲಿತನ ತಾಯಿಗೆ ಹೇಳುತ್ತಾರೆ. ಆಕೆ ತನ್ನ ಮಗ ಇರುವ ಊರಿಗೆ ಬರುತ್ತಾಳೆ. ಆತ ತನ್ನ ತಾಯಿಗೆ ಬ್ರಾಹ್ಮಣ ವಿಧವೆಯಂತೆ ತಲೆ ಬೋಳಿಸಿ ಮನೆಗೆ ಕರೆ ತರುತ್ತಾನೆ. ಮಾತಾಡಿದರೆ, ‘ಉಚ್ಚರಿಸುವ ರೀತಿ’ ಯಿಂದ ಕುಲ ಗೊತ್ತಾಗುತ್ತದೆ ಎಂದು ಮಾತನಾಡಬಾರದೆಂದು ತಾಕೀತು ಮಾಡುತ್ತಾನೆ.

ಒಂದು ದಿನ ಆತನ ಹೆಂಡತಿ ಶಾವಿಗೆ ಪಾಯಸವನ್ನು ಮಾಡಿ ಗಂಡ ಮತ್ತು ಅತ್ತೆಗೆ ಬಡಿಸುತ್ತಾಳೆ. ಆತನ ತಾಯಿ ಆಶ್ಚರ್ಯದಿಂದ ಅದನ್ನು ನೋಡಿ ಪ್ರಾಣಿಗಳ ಕರುಳಿನ ಹಾಗೆ ಇರುವ ಇವು ಏನೆಂದು ಮಗನನ್ನು ಕೇಳುತ್ತಾಳೆ. ಈ ಮಾತುಗಳನ್ನು ಕೇಳಿಸಿಕೊಂಡ ಆತನ ಹೆಂಡತಿ ಅವರ ಕುಲದ ಬಗ್ಗೆ ನಿಜ ತಿಳಿದ ಅನಂತರ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಬೆಂಕಿ ಹಚ್ಚಿ ಆತ್ಮ ಹತ್ಯೆಗೆ ಶರಣಾಗುತ್ತಾಳೆ. ದೇವತೆಯಾಗಿ ಪ್ರತ್ಯಕ್ಷಳಾಗುತ್ತಾಳೆ. ಒಬ್ಬ ದಲಿತನ ಜತೆ ತನಗೆ ಮದುವೆ ಮಾಡಿದ ತಪ್ಪಿಗೆ ಆ ಊರನ್ನು ನಾಶಮಾಡುತ್ತೇನೆಂದು ಎಚ್ಚರಿಕೆ ಕೊಡುತ್ತಾಳೆ. ಗ್ರಾಮಸ್ಥರ ಪ್ರಾರ್ಥನೆಯನ್ನು ಮನ್ನಿಸಿ ಆ ಗ್ರಾಮದಲ್ಲೆ ನೆಲಸಿರುತ್ತಾಳೆ. ಗಂಡನನ್ನು ಶಪಿಸಿ ಕೋನವನ್ನಾಗಿ ಮಾಡುತ್ತಾಳೆ. ಆತನ ತಲೆ ಕಡಿದು, ಬರಗಾಲನ್ನು ಬಾಯಲ್ಲಿ ಇಟ್ಟು, ತಲೆಯ ಮೇಲೆ ದೀಪವನ್ನಿಟ್ಟು ಜಾತ್ರೆ ಮಾಡಬೇಕೆಂದು ಆದೇಶ ಮಾಡುತ್ತಾಳೆ. ಗ್ರಾಮಸ್ಥರು ಹಾಗೆ ಮಾಡುತ್ತಾರೆ. ಕುಪಿತಗೊಂಡ ಆಕೆಯ ಮಕ್ಕಳು, ತಮ್ಮ ತಂದೆಯನ್ನು ಕೊಂದ ಗ್ರಾಮಸ್ಥರನ್ನು ಕೆಟ್ಟ ಮಾತುಗಳಿಂದ ಬೈಯ್ಯುತ್ತಾರೆ. ಕೆಟ್ಟ ಮಾತುಗಳಿಂದ ಬೈಯುವುದೇ ತನ್ನ ಕಥೆ ಹೇಳುವುದೇ ಜೀವನಾಧಾರವಾಗಿರುವ ‘ಆಸಾದಿ’ಗಳಾಗುವಂತೆ ಜನ್ಮದಲ್ಲೂ ‘ಕೋಣ’ವಾಗಿ ಜನ್ಮ ತಾಳಬೇಕೆಂದು ಅದ್ನನು ತನಗೆ ಬಲಿಕೊಡಬೇಕೆಂದು ಆಜ್ಞಾಪಿಸಿ ಗಂಗಮ್ಮ ದೇವತೆಯಾಗಿ ಪ್ರಸಿದ್ಧಳಾಗುತ್ತಾಳೆ.

ಟಿ.ಎನ್.

ಗಂಗಮ್ಮ ಜಾತ್ರೆ  ಗಂಗಮ್ಮದೇವತೆಯನ್ನು ವರ್ಷಕ್ಕೆ ಒಂದು ಸಲ ಪೂಜೆ ಮಾಡುವು ಸಂಪ್ರದಾಯವನ್ನು ಗಂಗಜಾತ್ರ ಎನ್ನುತ್ತಾರೆ. ಚಿತ್ತೂರು ಜಿಲ್ಲೆಯಾದ್ಯಂತ ತಿರುಪತಿ, ಪಲಮನೇರು, ಪುಂಗನೂರು, ಕುಪ್ಪಂ ಮುಂತಾದ ಕಡೆ ಬಹಳ ವಿಜೃಂಭಣೆಯಿಂದ ಈ ಜಾತ್ರೆಯನ್ನು  ಆಚರಿಸುತ್ತಾರೆ. ಕೆಲವು ಕಡೆ ಮೂವತ್ತು ನಲವತ್ತು ಹಳ್ಳಿಗಳಿಗೆ ಒಂದು ಕಡೆ ಆ ಜಾತ್ರೆಯನ್ನು ಆಚರಿಸುತ್ತಾರೆ. ತಿರುಪತಿ ಗಂಗ ಜಾತ್ರೆ ಸ್ವಲ್ಪ ಭಿನ್ನವಾಗಿ ಕಾಣಿಸಿದರೂ ಮಿಕ್ಕಿದ ಕಡೆ ಒಂದೇ ರೀತಿಯ ಆಚರಣೆ, ಆರಾಧನೆ ಇರುತ್ತದೆ. ಗಂಗಜಾತ್ರೆಯಲ್ಲಿ ಪ್ರಮುಖವಾಗಿ ‘ಚೌಟು’ ‘ಕರಗವನ್ನು ನಿಲ್ಲಿಸುವುದು’,’ ಪೊಂಗಲಿ’ ಶಿರಸ್ಸು, ಬಲಿ, ಗಾವುಸಿಗಿತ, ಪೊಲಿ, ಗಾವು ಅನ್ನ ತಿನ್ನುವುದು, ಜಲಧಿ ಎಂಬ ಅಂಶಗಳು ಕಾಣಿಸುತ್ತವೆ.

ಗ್ರಾಮದಲ್ಲಿ ಗಂಗಜಾತ್ರೆ ನಡೆಸುವುದಕ್ಕೆ ಹದಿನೈದು ದಿನ ಮುಂಚಿತವಾಗಿ ಹಿರಿಯರು ಒಂದು ಕಡೆ ಸೇರಿ ಜಾತ್ರೆಯ ದಿನವನ್ನು ನಿಗದಿ ಮಾಡಿ ಡಂಗುರ ಸಾರುತ್ತಾರೆ. ಇದನ್ನೆ ‘ಚಾಟು’ ಎನ್ನುತ್ತಾರೆ. ಅಂದಿನಿಂದ ಹದಿನೈದು ದಿವಸ ಗಂಗಜಾತ್ರೆ ನಡೆಯುವುದರಿಂದ, ಆ ಗ್ರಾಮದ ಜನರು ಬೇರೆ ಕಡೆ ಹೋಗದಂತೆ ಸಾರುವುದು. ಅಕಸ್ಮಾತ್ ಹೋದರೂ ಸಂಜೆಯ ಒಳಗಾಗಿ ಆ ಗ್ರಾಮಕ್ಕೆ ಮತ್ತೆ ಬರಬೇಕೆಂಬ ನಿಯಮ ಇರುತ್ತದೆ.

‘ಚೌಟು’ ಸಾರಿದ ದಿನವೇ ಕರಗವನ್ನು ನಿಲ್ಲಿಸುವುದುಂಟು. ಈ ಕಾರ್ಯಕ್ರಮವನ್ನು ರಾತ್ರಿಯ ವೇಳೆ ನಡೆಸುತ್ತಾರೆ. ಕರಗವನ್ನು ನಿಲ್ಲಿಸುವುದಕ್ಕೆ ಗಂಗಮ್ಮನ ಪೂಜಾರಿ, ಅಗಸ, ತೋಟ (ಊರಿನ ಕಾವಲುಗಾರ) ಗ್ರಾಮದ ಹಿರಿಯರು ಪೂರ್ವ ಅಥವಾ ಪಶ್ಚಿಮದಲ್ಲಿರುವ ಒಂದು ಬಾವಿ ಹತ್ತಿರ ಸೇರುತ್ತಾರೆ. ಕೆಲವರು ತಮಟೆ ಬಾರಿಸುತ್ತಿದ್ದಾಗ ಪೂಜಾರಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾನೆ. ಒಂದು ಹಸಿ ಮಡಕೆಯನ್ನು ನೀರಲ್ಲಿ ಶುಭ್ರ ಮಾಡಿ ಅದರಲ್ಲಿ ಸ್ವಲ್ಪ ನೀರು, ಅರಿಸಿನ, ಕುಂಕಮ, ಒಂದು ನಾಣ್ಯವನ್ನು ಹಾಕುತ್ತಾರೆ. ತೆಂಗಿನಕಾಯಿಯನ್ನು ಒಡೆದು ಆರತಿ ಬೆಳಗಿದ ಮೇಲೆ ‘ಗಂಗಮ್ಮ’ನ್ನು ಆಸಾದಿಗಳು ಸ್ತುತಿಸುತ್ತಾರೆ. ಆ ಸಮಯದಲ್ಲಿ ಪೂಜಾರಿ ಮೈಮೇಲೆ ‘ಅಮ್ಮ’ ಬರುತ್ತಾಳೆ. ಇದನ್ನೇ ‘ಪುನಕ’ ವೆಂದು ಕರೆಯುತ್ತಾರೆ. ಆ ಸಮಯದಲ್ಲಿ ಪೂಜಾರಿ ಹಣೆಯಲ್ಲಿ ‘ಭಂಡಾರ’ವನ್ನಿಟ್ಟು ಅಂಗೈಯಲ್ಲಿ ಕರ್ಪೂರವನ್ನಿಟ್ಟು ಹಚ್ಚುತ್ತಾರೆ. ಉರಿಯುತ್ತಿರುವ ಕರ್ಪೂರವನ್ನು ಪೂಜಾರಿ ಹಾಗೆಯೇ ನುಂಗುತ್ತಾನೆ. ಚಡಿಯಿಂದ ತನ್ನನ್ನು ತಾನೆ ಒಡೆದುಕೊಳ್ಳುತ್ತಾನೆ. ಅನಂತರ ಪೂಜಾರಿಗೆ, ತೋಟಿಗೆ, ಅಗಸನಿಗೆ ಕಂಕಣಗಳನ್ನು ಕಟ್ಟುತ್ತಾರೆ. ನೆನಸಿಟ್ಟ ನವಧಾನ್ಯಗಳನ್ನು ಮೊಳಕೆ ಕಟ್ಟುತ್ತಾರೆ. ಇದನ್ನು ‘ತೋಟ’ ಎತ್ತುಕೊಳ್ಳುತ್ತಾನೆ. ಕರಗವನ್ನು ಪೂಜಾರಿ ಎತ್ತಿಕೊಳ್ಳುತ್ತಾನೆ. ಪೂಜಾರಿಗೆ ಮೈಮೇಲೆ ಸ್ವಾಧೀನ ಇಲ್ಲದಿರುವುದರಿಂದ ಭಕ್ತರು ಕರಗವನ್ನು ಬೀಳದಂತೆ ಹಿಡಿದುಕೊಳ್ಳುತ್ತಾರೆ. ಪೂಜಾರಿ ಹೆಜ್ಜೆಯ ಮೇಲೆ ಹಜ್ಜೆ ಹಾಕುತ್ತಾ, ತೂರಾಡುತ್ತಾ ದೇವಸ್ಥಾನದ ಕಡೆ ಬರುತ್ತಾನೆ. (ಗಂಗೆ ಆ ಬಾವಿಯಿಂದ ಬರುತ್ತಿರುವುದರಿಂದ ಅದನ್ನು ಗಂಗೆಯ ತವರು ಮನೆ ಅನ್ನುತ್ತಾರೆ.) ಹೀಗೆ ಬರುತ್ತಿರುವ ಕರಗಕ್ಕೆ ಗ್ರಾಮೀಣ ಜನರು ತೆಂಗಿನಕಾಯಿಗಳನ್ನು ಒಡೆದು, ಆರತಿ ಬೆಳಗಿ, ಕುರಿ ಮುಂತಾದವುಗಳನ್ನು ಕರಗವನ್ನು ಇಳಿಸಿ, ಪಕ್ಕದಲ್ಲಿ ಮೊಳಕೆ ಕಟ್ಟಿದ ಧಾನ್ಯವನ್ನು ಇಡುತ್ತಾರೆ. ಅನಂತರ ಪೂಜಾರಿ ಮೈಮೇಲಿಂದ ಗಂಗಮ್ಮ ತಾಯಿ ಇಳಿಯುತ್ತಾಳೆ. ಈ ಸನ್ನಿವೇಶವನ್ನೇ ಕರಗ ನಿಲ್ಲಿಸುವುದೆನ್ನುತ್ತಾರೆ.

ಆ ದಿನದಿಂದ ಪೂಜಾರಿ, ಅಗಸ, ತೋಟ ಅರಿಸಿನ ಬಟ್ಟೆಗಳನ್ನು ಧರಿಸಿ, ಬ್ರಹ್ಮಚರ್ಯೆಯನ್ನು ಅನುಸರಿಸುತ್ತಾ, ದೇವಸ್ಥಾನದಲ್ಲೇ ಮಲಗುತ್ತಾ ಕರಗದ ಪೂಜೆ ಮುಂತಾದವುಗಳನ್ನು ಮಾಡುತ್ತಾ ಇರುತ್ತಾನೆ.

ಜಾತ್ರೆಯ ಮುಂದಿನ ದಿನ ದೇವಸ್ಥಾನದ ಮುಂದೆ ಸ್ತ್ರೀಯರು ‘ಪೊಂಗಳ್ಳು’ (ಪೊಂಗಳ್ಳು : ಅಕ್ಕಿ, ಹೆಸರುಬೇಳೆ, ಬೆಲ್ಲ, ತುಪ್ಪದಿಂದ ನೈವೇದ್ಯ ಮಾಡುವುದು) ಇಟ್ಟು ಕರಗದ ಮುಂದೆ ನೈವೇದ್ಯ ಇಡುತ್ತಾರೆ. ‘ಚಿರಿಪಿಂಡಿ’ (ತಂಬಿಟ್ಟು), ದೀಪಗಳಿಂದ ಅಲಂಕರಿಸಿ ದೇವಸ್ಥಾನವನ್ನು ಪ್ರದಕ್ಷಿಣೆ ಮಾಡುತ್ತಾರೆ. ಗಂಡಸರು ಕುರಿ, ಮೇಕೆ ಕೋಳಿಗಳನ್ನು ಬಲಿಕೊಟ್ಟು ತಲೆಗಳನ್ನು ಪೂಜಾರಿ, ಅಗಸ, ತೋಟಿಗೆ ಕೊಡುತ್ತಾರೆ.

ಅನಂತರ ರಾತ್ರಿ ಸುಮಾರು ಹನ್ನೊಂದು ಗಂಟೆಯಲ್ಲಿ ಕುಂಬಾರನು ಗಂಗಮ್ಮನ ಶಿರಸ್ಸು ಮಾಡುತ್ತಾನೆ. ಆದ್ದರಿಂದ ಗಂಗಮ್ಮನಿಗೆ ಕಂಬಾರರ ಮನೆ ತವರುಮನೆ. ಈ ಶಿರಸ್ಸು ಸುಮಾರು ಮೂರು ಅಡಿ ಇರುತ್ತದೆ. ಇದನ್ನು ಅಗಸನ ತಲೆಯ ಮೇಲೆ ಇಡುತ್ತಾರೆ. ಅಗಸನು ಮೈಮೇಲೆ ದೇವರು ಬಂದಿರುವ ಹಾಗೆ ತೂರಾಡುತ್ತಾ ಇರುತ್ತಾನೆ. ಭಕ್ತರು ಶಿರಸ್ಸನ್ನು ಬೀಳದ ಹಾಗೆ ಹಿಡಿದುಕೊಳ್ಳುತ್ತಾರೆ. ತಮಟೆ ಸದ್ದು, ಜನಪದ ಕಲಾ ಪ್ರದರ್ಶನಗಳೊಂದಿಗೆ ಶಿರಸ್ಸಿನ ಮೆರೆವಣಿಗೆ ಆಗುತ್ತದೆ. ಅನಂತರ ದೇವಸ್ಥಾನದಲ್ಲಿ ಎತ್ತರವಾದ ಸ್ಥಳದಲ್ಲಿ ಪೀಠದ ಮಧ್ಯಭಾಗದಲ್ಲಿ ಶಿರಸ್ಸನ್ನು ಇಡುತ್ತಾರೆ. ಮುಂದೆ ಬೆಲ್ಲದನ್ನದ ನೈವೇದ್ಯವನ್ನು ಇಡುತ್ತಾರೆ. ಇದನ್ನೇ ‘ಕುಂಭಕೂಡು’ ಅನ್ನುತ್ತಾರೆ. ಶಿರಸ್ಸನ್ನು ನಿಲ್ಲಿಸುವ ಕಾರ್ಯಕ್ರಮ ಸುಮಾರು ಬೆಳಗ್ಗೆ ಮೂರು ಕಾಲು ಗಂಟೆಗೆ ಮುಗಿಯುತ್ತದೆ.

ಅನಂತರ ಗಂಗಮ್ಮನಿಗೆ ‘ಬಲಿ’ ಕೊಡುವ ಕೋಣವನ್ನು ಅಲಂಕರಿಸುತ್ತಾರೆ. ಹಣೆಗೆ ಅರಿಸಿನ ಕುಂಕುಮಗಳನ್ನಿಟ್ಟು, ಬೇವಿನ ಸೊಪ್ಪಿನ ಹಾರವನ್ನು ಕತ್ತಿಗೆ ಹಾಕಿ ಮನೆ ಮನೆಗೂ ಕರೆದುಕೊಂಡು ಹೋಗುತ್ತಾರೆ. ಗೃಹಸ್ಥರು ಅದನ್ನು ಪೂಜಿಸಿ ಮೀಸಲು (ಮುಡುಪು) ಕಟ್ಟುತ್ತಾರೆ. ಹೀಗೆ ಪ್ರತಿ ಮನೆಯ ಮುಂದೆ ಪೂಜಾದಿಗಳನ್ನು ಸ್ವೀಕರಸಿದ ಮೇಲೆ ಕೋಣವನ್ನು ಗಂಗಮ್ಮನ ಎದುರಿಗೆ ನಿಲ್ಲಿಸುತ್ತಾರೆ. ಅಲ್ಲಿ ಒಂದು ದಪ್ಪನೆಯ ಕವುಗೋಲನ್ನು ನೆಟ್ಟಿರುತ್ತಾರೆ. ಪೂಜಾರಿ ಬಲಿ ಕೊಡುವುದಕ್ಕೆ ಪ್ರಾರ್ಥಿಸಿ ನೀರನ್ನು ಕೋಣದ ತಲೆಯ ಮೇಲೆ ಚೆಲ್ಲುತ್ತಾನೆ. ಕೋಣ ತಲೆಯನ್ನು ಅಲ್ಲಾಡಿಸಿದ ಬಳಿಕ ಬಲಿಷ್ಠರಾದ ವ್ಯಕ್ತಿಗಳು ಅದರ ತಲೆಯನ್ನು ಕವಗೋಲಲ್ಲಿ ಸಿಕ್ಕಿಸಿರುತ್ತಾರೆ. ಇಬ್ಬರು ಅದರ ತಲೆಯನ್ನು ಹಗ್ಗದಿಂದ ಎಳೆಯುತ್ತಿರುತ್ತಾರೆ. ತೋಟಿ ದೊಡ್ಡದಾದ ಕತ್ತಿಯನ್ನು ಎತ್ತಿ ಅದರ ಕತ್ತಿನ ಮೇಲೆ ಎರಡು ಸಲ ಇಟ್ಟು ಮೂರನೇ ಸಲ ‘ಓಟ್ಕಲ್ಲಲ್ಲಲ್ಲಲ್ಲೊ’ ಎಂದು ಜೋರಾಗಿ ಕೂಗುತ್ತಾ ಪೂಜಾರಿ ಅದರ ಕತ್ತನ್ನು ಕಡಿಯುತ್ತಾನೆ. ಮೂಡು ಸಲ ಮಾತ್ರ ಕಡಿಯಬೇಕೆಂಬ ನಿಯಮ ಇದೆ. ತಲೆ ಮುಂಡದಿಂದ ಬೇರಾದ ಅನಂತರ ರಕ್ತದ ಮೇಲೆ ಬಿಂದಿಗೆಗಟ್ಟಲೆ ನೀರು ಹೊಯ್ಯುತ್ತಾರೆ. ತಲೆಯನ್ನು ಮೊರದಲ್ಲಿಟ್ಟು ಗಂಗಮ್ಮನ ಮುಂದೆ ಇಡುತ್ತಾರೆ. ಕೋಣದ ಹೊಕ್ಕಳಿನ ಹತ್ತಿರ ಇರುವ ಚರ್ಮವನ್ನು ಕುಯ್ದು ಕಣ್ಣುಗಳನ್ನು ಮುಚ್ಚುತ್ತಾರೆ. ಬಲಗಾಲನ್ನು ಕಡಿದು ಬಾಯಿಗೆ ಸಿಕ್ಕಿಸುತ್ತಾರೆ. ತಲೆಯ ಮೇಲೆ ದೀಪವನ್ನು ಇಡುತ್ತಾರೆ.

ಅನಂತರ ಪೂಜಾರಿ ಕುರಿಯನ್ನು (ಟಗರು) ಬಲಿಕೊಟ್ಟು ಹೊಟ್ಟೆಯನ್ನು ಸೀಳಿ ಕರುಳನ್ನು ಕತ್ತಲ್ಲಿ ಹಾಕಿಕೊಳ್ಳುತ್ತಾನೆ. ಒಂದು ಕರುಳನ್ನು ಕಂಕಣವಾಗಿ ಕಟ್ಟಿಕೊಳ್ಳುತ್ತಾನೆ. ಅನಂತರ ಹೊಟ್ಟೆಯಲ್ಲಿ ಮರಿ ಇರುವ ಕುರಿಯನ್ನು ಬೆನ್ನಿನಿಂದ ಕಡಿಯುತ್ತಾನೆ. ಆದರೆ ಕೆಲವು ಗ್ರಾಮಗಳಲ್ಲಿ ಇದರ ಬದಲಾಗಿ ‘ಗಾವುಸಿಗಿತ’ ಇರುತ್ತದೆ. ಕುರಿ ಅಲ್ಲದೆ ಮೇಕೆಯನ್ನು ‘ಆಸಾದಿ’ ಕತ್ತಿನ ಮೇಲೆ ಹಾಕಿಕೊಂಡು ಮೇಕೆಯ ಕತ್ತನ್ನು ಹಲ್ಲುಗಳಿಂದ ಸೀಳುತ್ತಾನೆ. ಹೊಟ್ಟೆಯಲ್ಲಿ ಸೀಳಿ ಕತ್ತಲ್ಲಿ ಕರುಳಿನ ಹಾರವನ್ನು ಹಾಕಿಕೊಂಡು, ಒಂದು ಕರುಳಿನಿಂದ ಕಂಕಣವನ್ನು ಕಟ್ಟಿಕೊಳ್ಳುತ್ತಾನೆ. ಇದನ್ನೇ ಗಾವಿಸಿಗಿತ ಅನ್ನುತ್ತಾರೆ.

ಬಲಿ, ಗಾವು ಸಿಗಿತ ಆದ ಮೇಲೆ ಕೋಣದ ತಲೆ ಮತ್ತು ದೀಪ ಇರುವ ಮರವನ್ನು ತೋಟಿಯ ತಲೆಯ ಮೇಲೆ ಇಡುತ್ತಾರೆ. ಒಂದು ಜಾತ್ರೆಯಲ್ಲಿ ಟಗರು ರಕ್ತಕ್ಕೆ ಬೇವಿನ ಸೊಪ್ಪು, ಅನ್ನವನ್ನು ಕಲಸುತ್ತಾರೆ. ತೋಟಿ ತಲೆಯ ಮೇಲೆ ಇರುವ ದೀಪ ನಂದಿಸದಂತೆ ಕೈಗಳನ್ನು ಮರೆಮಾಡಿಸಿಕೊಳ್ಳುತ್ತಾರೆ. ಹೀಗೆ ತೋಟಿಯನ್ನು ಗ್ರಾಮದ ಗಡಿ ಪ್ರಾಂತಕ್ಕೆ ಕರೆದುಕೊಂಡು ಹೋಗುತ್ತಾರೆ. ಒಬ್ಬನು ಮುಂದೆ ನಡೆಯುತ್ತಾ ಕತ್ತಿಯನ್ನು ಮೇಲಕ್ಕೆ ಎತ್ತಿ ‘ಓಟ್ಕೆಲ್ಲಲ್ಲಲ್ಲೊ’ ಎಂದು ಜೋರಾಗಿ ಕಿರುಚುತ್ತಾ ಇರುತ್ತಾನೆ. ಮತ್ತೊಬ್ಬನು ರಕ್ತದ ಜೊತೆ ಬೆರಸಿದ ಅನ್ನವನ್ನು ‘ಪೊಲೋಪೊಲಿ’ ಎಂದು ಕೂಗುತ್ತಾ ಚಲ್ಲುತ್ತಿರುತ್ತಾನೆ. ಹೀಗೆ ಮಾಡುವುದರಿಂದ ದುಷ್ಟಶಕ್ತಿಗಳು ಓಡಿಹೋಗುತ್ತವೆಂದು, ಗ್ರಾಮವನ್ನು ಕಾಪಾಡುತ್ತಿರುವ ಶಕ್ತಿಗಳು ರಕ್ತದ ಅನ್ನವನ್ನು ತಿನ್ನತ್ತವೆಂದು ಜನಪದರು ನಂಬುತ್ತಾರೆ. ಗ್ರಾಮದ ಸರಹದ್ದನ್ನು ಮೂರುಸಲ ಪ್ರದಕ್ಷಿಣೆ ಮಾಡಿದ ಬಳಿಕ ದೇವಸ್ಥಾನಕ್ಕೆ ಬರುತ್ತಾರೆ. ಕೋಣದ ತಲೆ ಇರುವ ಮರವನ್ನು ಕೆಳಗಡೆ ಇಟ್ಟು ಪ್ರಾರ್ಥನೆ ಮಾಡುತ್ತಾರೆ. ಅನಂತರ ಹಿರಿಯರ ಅನುಮತಿಯಂತೆ ಕೋಣದ ತಲೆ ಇರುವ ಮರವನ್ನು ಗ್ರಾಮದ ಗಡಿಗೆ ಆಚೆ ಇರುವ ಪ್ರಾಂತದಲ್ಲಿ ಇಟ್ಟು ಬರುತ್ತಾರೆ. ಅಲ್ಲಿನ ತನಕ ಕೋಣದ ತಲೆಯ ಮೇಲೆ ದೀಪ ನಂದದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಬಲಿಯ ಫಲ ಸಿಗುವುದಿಲ್ಲವೆಂದು ಗ್ರಾಮೀಣರ ನಂಬಿಕೆ. ಅದಕ್ಕೆ ವಿಸರ್ಜನೆ ಮಾಡುವ ಮೊದಲು ಬೆಳಗುತ್ತಿರುವ ದೀಪವನ್ನು ಹಿರಿಯರಿಗೆ ತೋರಿಸುತ್ತಾನೆ. ಕೆಲವು ಗ್ರಾಮಗಳಲ್ಲಿ ಕೋಣದ ತಲೆಯನ್ನು ತೋಟಿಗೆ ಕೊಡುತ್ತಾರೆ. ಕೆಲವು ಕಡೆ ನೀರಲ್ಲಿ ನಿಮಜ್ಜನ ಮಾಡುತ್ತಾರೆ. ಇನ್ನೂ ಕೆಲವು ಕಡೆ ಗಂಗಮ್ಮದೇವಿಯ ಮುಂದೆ ಮಾರನೆಯ ದಿನ ಅರ್ಧರಾತ್ರಿಯ ತನಕ ಹಾಗೆ ಇಡುತ್ತಾರೆ.

‘ಪೊಲಿ’ ಕಾರ್ಯಕ್ರಮದ ಅನಂತರದ ಕಾರ್ಯಕ್ರಮ ‘ಗಾವುಕೂಳು’ ತಿನ್ನುವುದು. ಮೂರುಸೇರಿನಷ್ಟು ಅಕ್ಕಿಯನ್ನು ಬೇಯಿಸಿ ಅದಕ್ಕೆ ತಕ್ಕ ಹಾಗೆ ಮೊಸರು, ಬೇಯಿಸಿದ ಬೇಳೆಯ ಮುದ್ದೆಯನ್ನು ತರಿಸಿ ದೇವತೆಯ ಮುಂದೆ ಇಡುತ್ತಾರೆ. ಇದಕ್ಕೆ ಅರಿಸಿನ ಕುಂಕುಮ ಇಟ್ಟು ಪೂಜಿಸಿ ಆಸಾದಿ ಕೈಯಲ್ಲಿ ಮುಟ್ಟದೆ ಬಾಯಿಂದ ತಿನ್ನಬೇಕಾಗುತ್ತದೆ. ಅನಂತರ ಭಕ್ತರು ಗಂಗಮ್ಮದೇವಿಯ ದರ್ಶನ ಮಾಡಿ ತೆಂಗಿನಕಾಯಿಗಳನ್ನು ಒಡೆದು, ಪೂಜಿಸಿ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ.

ಮಾರನೆಯ ದಿನ ಬೆಳಗ್ಗೆ  ‘ಜಲಧಿ’ಕಾರ್ಯಕ್ರಮ, ಪೂಜಾರಿ ಕರಗವನ್ನು, ಅಗಸನು ಗಂಗಮ್ಮನ ಶಿರಸ್ಸನ್ನು, ಮೊಳಕೆ ಕಟ್ಟಿದ ನವಧಾನ್ಯವನ್ನು ಎತ್ತಿಕೊಂಡು ಗ್ರಾಮದಲ್ಲಿ ಪೂಜೆಗಳನ್ನು ಸ್ವೀಕರಿಸಿ ಊರಿಗೆ ಆಚೆ ಇರುವ ಕೆರೆ,  ಕುಂಟೆ, ನದಿಯಲ್ಲಿ ಇವನ್ನು ವಿಸರ್ಜನೆ ಮಾಡುತ್ತಾರೆ. ಈ ಮೂರು ಜನ ಸ್ನಾನ ಮಾಡಿ ಕಂಕಣಗಳನ್ನು ಬಿಚ್ಚಿ, ಪೂಜೆಯ ವೇಳೆ ಯಾವುದಾದರೂ ತಪ್ಪು ಆಗಿದ್ದರೆ ಕ್ಷಣಿಸಬೇಕೆಂದು ಪ್ರಾರ್ಥಿಸಿ ಮನೆಗೆ ಹಿಂತಿರುತ್ತಾರೆ. ಅಲ್ಲಿಗೆ ಗಂಗಮ್ಮನ ಜಾತ್ರೆ ಮುಗಿಯುತ್ತದೆ.

ಟಿ.ಎನ್.

ಗಂಗಾಮತದವರು ಗಂಗಾಮತ ಅಥವಾ ಬೆಸ್ತರ ಅಸ್ತಿತ್ವ ಮತ್ತು ಪ್ರಾಚೀನತೆಯನ್ನು ಕನಿಷ್ಠ ಪಕ್ಷ ರಾಮಾಯಣ, ಮಹಾಭಾರತ ಕಾಲದವರೆಗೂ ವಿಸ್ತರಿಸಲು ಚಾರಿತ್ರಿಕ ಪುರಾವೆಗಳು ಲಭ್ಯವಿದೆ. ಪ್ರಾಚೀನ ಕಾಲದಲ್ಲಿ ಈ ಗಂಗಾಮತದವರು ಕೆರೆ,ಕುಂಟೆ, ನದಿ, ಸರೋವರ, ಸಮುದ್ರ ಮುಂತಾದ ನೀರಿನ ನೆಲೆಗಳ ಸಮೀಪದಲ್ಲಿ ವಾಸಿಸುತ್ತಿದ್ದರು. ಈಗಲೂ ಕೆಲವರಿಗೆ ಈ ನೀರಿನ ನೆಲೆಗಳ ಹತ್ತಿರವೇ ವಾಸಿಸುವುದು ರೂಢಿಯಾಗಿದೆ. ನೀರನ್ನು ಆಶ್ರಯಿಸಿ ನೀರಿನಲ್ಲೇ ಕಸುಬು ಮಾಡುವ ಇವರು ದೋಣಿ, ನಾವೆ, ಹುಟ್ಟುಗಳನ್ನು ನಿರ್ಮಿಸಿಕೊಂಡು ಅವುಗಳ ಮೂಲಕ ಜನರನ್ನು ನದಿ, ಸರೋವರಗಳ ಒಂದು ದಡದಿಂದ ಇನ್ನೊಂದು ದಡಕ್ಕೆ ದಾಟಿಸಿ ಅವರು ಕೊಡುತ್ತಿದ್ದ ಅಲ್ಪ ಹಣದಿಂದ ಜೀವನ ಸಾಗಿಸುತ್ತಿದ್ದರು. ಕೆಲವರು ಬಲೆ, ಕುಕ್ಕೆ ನಿರ್ಮಿಸಿಕೊಂಡು ಮೀನು ಹಿಡಿದು ತಾವೂ ಉಪಯೋಗಿಸಿ, ಮಾಡಿ ಜೀವನ ಸಾಗಿಸುತ್ತಿದ್ದರು. ಈಗಲೂ ಸಾಗಿಸುತ್ತಿದ್ದಾರೆ. ಹೀಗೆ ಈ ಜನಾಂಗದವರು ನೀರನ್ನು ಆಶ್ರಯಿಸಿ ನೀರಿನಲ್ಲೇ ಕಸುಬನ್ನು ಮಾಡುತ್ತಿದ್ದರಿಂದ ಇವರಿಗೆ ಸಹಜವಾಗಿಯೇ ‘ನೀರಿನ ಮಕ್ಕಳು’, ‘ನೀರ್‌ಮಕ್ಕಳು’, ‘ಗಂಗೆಮಕ್ಕಳು’, ‘ಗಂಗಾಪುತ್ರರು’ ಎಂಬ ಹೆಸರು ಬಂದಿತು. ಇವರ ವೃತ್ತಿಯನ್ನೇ ಆಧರಿಸಿ ದೋಣಿ ನಡೆಸುವವರನ್ನು ‘ಅಂಬಿಗರೆಂದೂ’, ಮೀನು ಹಿಡಿಯುವವರನ್ನು  ‘ಬೆಸ್ತರೆಂದೂ’, ‘ಮೀನುಗಾರರೆಂದೂ’ ‘ಮೀಂಗುಲಿಗ’ರೆಂದೂ ಕರೆಯಲಾಯಿತು. ಹೀಗೆ ನೀರಿನಲ್ಲಿಯೇ ಕಸುಬು ಮಾಡಿ ಜೀವನ ಸಾಗಿಸುವ ಅವರ ಕುಲ, ಮನೆತನಗಳನ್ನೂ, ಗಂಗಾಕುಲ, ಗಂಗಾಮತವೆಂದೂ ಕರೆಯಲಾಯಿತು. ಅಲೆಮಾರಿತನವನ್ನು ಪ್ರವೃತ್ತಿಯಾಗಿಸಿಕೊಂಡು, ಅಲೆಮಾರಿ ಸಂಸ್ಕೃತಿಯ ಚರ್ಯೆ, ಲಕ್ಷಣವನ್ನು ಹೊಂದಿರುವ ಇವರು ಶೈಕ್ಷಣೀಕ ಸಾಮಾಜಿಕ, ಆರ್ಥಿಕ ಸವಲತ್ತುಗಳಿಂದ ಬಹುದೂರವೇ ಇದ್ದಾರೆ.

ಈ ಗಂಗಾಮತದವರು ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿಯೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ವಾಸಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಮಂಡ್ಯ, ಶಿವಮೊಗ್ಗ, ಧಾರವಾಡ, ಗುಲಬರ್ಗಾ ಮತ್ತು ಯಾದವಗಿರಿ ಜಿಲ್ಲೆಗಳಲ್ಲಿ ಹೆ‌ಚ್ಚಿನ ಸಂಖ್ಯೆಯಲ್ಲಿದ್ದಾರೆ. ನೀರ್ಗಸುಬಿನಿಂದ ಜೀವನ ಸಾಗಿಸಲು ಸಾಧ್ಯವಾಗದಿದ್ದಾಗ, ಸುಣ್ಣ ಸುಡುವ, ಕಟ್ಟಡದ ಕೆಲಸ ಮಾಡುವ, ಕೂಲಿ ಮಾಡುವ, ಉಳ್ಳವರ ಮನೆಯಲ್ಲಿ ಕಸಮುಸುರೆ ತಿಕ್ಕುವ, ಸಣ್ಣ ಪುಟ್ಟ ವ್ಯಾಪಾರ ವಹಿವಾಟಿನಂಥ ಉದ್ಯೋಗ, ಚಾಕರಿಗಳನ್ನು ಮಾಡುವುದು ಇವರಿಗೆ ಅನಿವಾರ್ಯವಾಯಿತು. ಕೆಲವರು ಕಷ್ಟಪಟ್ಟು ಕೂಲಿ ನಾಲಿ ಮಾಡಿ ಅಲ್ಪಸ್ವಲ್ಪ ಹಣ ಸಂಪಾದನೆ ಮಾಡಿ ಜಮೀನು ಕೊಂಡು ರೈತಾಪಿ ವೃತ್ತಿಯನ್ನು ಮಾಡುತ್ತಿದ್ದಾರೆ. ಪ್ರಾದೇಶಿಕ ಮತ್ತು ವೃತ್ತಿ ಭಿನ್ನತೆಯ ಆಧಾರದ ಮೇಲೆ ಈ ಜನಾಂಗದವರನ್ನು ಅಂಬಿಗ, ಬೆಸ್ತ, ಬೋಯಿ, ಸುಣಗಾರ, ಮೊಗವೀರ, ಬಾರಕಿ, ಕಬ್ಬಲಿಗ, ಕೋಳಿ, ಬುಂಡೆಬೆಸ್ತ, ಮೀನುಗಾರ, ತೊರೆಯ, ಹರಿಕ್ರಾಂತ, ಟೋಕರೆ ಕೋಳಿ, ಕೋಳಿ ಡೋರ, ಕಬ್ಬೇರ, ಗಂಗೆಮಕ್ಕಳು, ಗಂಗಾಪುತ್ರ, ಕೋಯಾ, ರಾಜಕೋಯಾ, ಭಿನ್ನಕೋಯಾ, ತೋಟಿಗ, ರಿವಾರ, ರಾಜ ಪರಿವಾರ ಮುಂತಾದ ನಲವತ್ತು ಪರ್ಯಾಯ ಹೆಸರುಗಳಿಂದ ಕರೆಯುತ್ತಾರೆ. ಈ ನಲವತ್ತು ಪರ್ಯಾಯ ಹೆಸರುಗಳಿಂದ ಇವರನ್ನು ಕರೆದರೂ ಈ ಎಲ್ಲ ಪರ್ಯಾಯ ಹೆಸರುಗಳ ಅರ್ಥ ಒಂದೇ ಬಗೆಯದು. ಅದು ಅಂಬಿಗರು, ಮೀನುಗಾರರು, ಬೆಸ್ತರು, ಗಂಗೆಮಕ್ಕಳು, ನೀರುಕುಲದವರೆಂಬುದು. ಈ ಗಂಗಾಮತದ ನಲವತ್ತು ಪರ್ಯಾಯ ಹೆಸರುಗಳ ಜನರು ಯಾವ ಭೇದಭಾವವಿಲ್ಲದೆ ಪರಸ್ಪರ ಹೆಣ್ಣುಗಂಡು ಕೊಡುವ ತೆಗೆದುಕೊಳ್ಳುವ ಬಾಂಧವ್ಯವನ್ನು ಹೊಂದಿದ್ದಾರೆ. ಇದು ಈ ಮತದವರ ವೈಶಿಷ್ಟ್ಯವೆನ್ನಬೇಕು. ಈ ಗಂಗಾಮತ ಅಥವಾ ಬೆಸತ ಇಲ್ಲವೆ ಮೀನುಗಾರ ಜನಾಂಗವನ್ನು, ಕರ್ನಾಟಕ ಹೊರತು ಪಡಿಸಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಪರಿಶಿಷ್ಟ ಬುಡಕಟ್ಟಿಗೆ ಸೇರಿಸಲಾಗಿದೆ. ಯಾಕೆಂದರೆ ಒಂದು ಕಡೆಗೆ ಸ್ಥಿರವಾಗಿ ನಿಲ್ಲದ ಇವರು ಉದ್ಯೋಗ ಮತ್ತು ಆಹಾರವನ್ನು ಹುಡುಕಿಕೊಂಡು ಪ್ರದೇಶದಿಂದ ಪ್ರದೇಶಕ್ಕೆ ಅಲೆಯುವ ಅಲೆಮಾರಿ ಸಂಸ್ಕೃತಿ ಚರ್ಯೆ, ಲಕ್ಷಣವನ್ನು ಹೊಂದಿದವರಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಇವರನ್ನು ಪ್ರವರ್ಗ -I ಕ್ಕೆ ಸೇರಿಸಲಾಗಿದೆ. ಇದರಿಂದಾಗಿ  ಕೇಂದ್ರ ಸರ್ಕಾರದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಇವರಲ್ಲಿ ಸಗೋತ್ರ ಮದುವೆ ನಿಷೇಧ. ಕಾರಣ ಸಗೋತ್ರದ ಗಂಡು-ಹೆಣ್ಣುಗಳ ಅಣ್ಣ-ತಂಗಿಯರಾಗುತ್ತಾರೆಂಬ – ಗಂಡುಗಳು ತಂಗಿ – ಅಣ್ಣರಾಗುತ್ತಾರೆಂಬ ನಂಬಿಕೆ. ಇವರಲ್ಲಿ ಚಿನ್ನ, ಸೂರ್ಯ, ಚಂದ್ರ, ಮುತ್ತು, ಬೆಳ್ಳಿ, ಕಸ್ತೂರಿ, ಹವಳ, ಬಾಸಿಂಗ, ಮುಗಿಲು ರತ್ನ, ಸೂತ ಮುಂತಾದ ಕುಲಗಳಿವೆ. ಕುಲವನ್ನು ಉತ್ತರ ಕರ್ನಾಟಕದಲ್ಲಿ (ಬೆಡಗು ಎಂದು ಕರೆದರೆ ಹಳೆ ಮೈಸೂರಿನ ಭಾಗದಲ್ಲಿ ‘ಬಣ್ಣ’ ಎಂದು ಕರೆಯುತ್ತಾರೆ). ಹಿಂದೆ ಇವರಲ್ಲಿ ಬಸವಿ ಬಿಡುವ ಪದ್ಧತಿ, ಬಾಲ್ಯವಿವಾಹ ಪದ್ಧತಿಗಲು ಚಾಲ್ತಿಯಲ್ಲಿದ್ದವು. ಆದರೆ ಈಗ ಈ ಪದ್ಧತಿಗಳು ಜೀವಂತವಾಗಿಲ್ಲ. ಈ ಜನಾಂಗದವರಲ್ಲಿ ವಿಧವಾ ವಿವಾಹ ಪದ್ಧತಿ ರೂಢಿಯಲ್ಲಿದೆ. ಇವರು ಗಂಗೆ, ಮೀನು, ಡೋಣೆ, ಬಲೆ ಮತ್ತು ಚೌಡಯ್ಯನನ್ನು ಪೂಜಿಸುತ್ತಾರೆ. ಗಂಗೆ, ಅಂಬಿಗರ ಚೌಡಯ್ಯ ಜೋಕುಮಾರಸ್ವಾಮಿ ಇವರು – ಇವರ ಕುಲದೇವತೆಗಳು. ಇವಲ್ಲದೆ ಗ್ರಾಮದೇವತೆಗಳಾದ ಸವದತ್ತಿ ಎಲ್ಲಮ್ಮ, ಮೈಲಾರ ಲಿಂಗ, ಬಸವಣ್ಣನನ್ನು ಪೂಜಿಸುತ್ತಾರೆ. ಸಂಸ್ಕೃತಿಕರಣಗೊಂಡ ಕೆಲವರು ತಿರುಪತಿ ತಿಮ್ಮಪ್ಪ, ಶಿವ, ಸಿದ್ಧಾರೂಡ ಮುಂತಾದ ಶಿಷ್ಟ ದೇವತೆಗಳನ್ನು ಪೂಜಿಸುತ್ತಾರೆ. ಜೋಕುಮಾರಸ್ವಾಮಿಯನ್ನು ಆರಾಧಿಸುವುದು ಗಂಗಾಮತಸ್ಥರ ವೈಶಿಷ್ಟ್ಯವಾಗಿದೆ. ಇದು ಫಲವಂತಿಕೆಯ (Fertility) ಸಂಕೇತವಾದ ಇವರ ಆರಾಧ್ಯ ದೈವ ಮತ್ತು ಕುಲದೈವ. ಗಂಗಾಮತಸ್ಥರನ್ನು ಬಿಟ್ಟರೆ ಬೇರೆ ಯಾವ ಜನಾಂಗದವರೂ ಜೋಕುಮಾರಸ್ವಾಮಿಯನ್ನು ಆರಾಧಿಸುವುದಿಲ್ಲ. ಜೋಕುಮಾರಸ್ವಾಮಿಯಯನ್ನು ಕುರಿತು ರೋಚಕ ಬಗೆಯ ಜನಪದ ಸಾಹಿತ್ಯವಿದೆ. ಮೀನು, ಬಲೆ, ಡೋಣೆ, ಹುಟ್ಟು ಇವು ಇವರ ಕುಲ ಚಿಹ್ನೆಗಳು. ಸಿಡಿ ಹಬ್ಬವೂ ಗಂಗಾಮತಸ್ಥರ ಒಂದು ವಿಶಿಷ್ಟ ಹಬ್ಬ. ಸಿಡಿಯನ್ನು ಗಂಡಸರು ಮಾತ್ರ ಏರುತ್ತಾರೆ.

ಬೆಸ್ತರು ಮೀನು ಹಿಡಿಯಲು ಹೋಗುವಾಗ ಮನರಂಜನೆಗಾಗಿ ಡೋಣೆ ಹಾಡುಗಳನ್ನು ಹಾಡುತ್ತಾರೆ. ಗಂಗೆ, ಭೀಷ್ಮ, ವೇದವ್ಯಾಸ, ಕರ್ಣ, ಜೋಕುಮಾರಸ್ವಾಮಿಗಳ ಮೇಲಿನ ಲಾವಣಿಗಳು ಈಗಲೂ ಪ್ರಚಲಿತದಲ್ಲಿದ್ದು ಪ್ರಸಿದ್ಧವಾಗಿದೆ. ‘ಮೀನುಕುಮಾರ ಕಥೆ’ ಎಂಬ ತುಂಬ ದೀರ್ಘವಾದ ಜನಪದ ಕಥೆ ಇವರಲ್ಲಿ ಪ್ರಚಲಿತದಲ್ಲಿದೆ. ಈ ಕಥೆಯ ಮೂಲಕ ಗಂಗಾಮತಸ್ಥರ ಕುಲಮೂಲ ಶೋಧಿಸುವ ಅವಕಾಶವಿದೆ. ಹರದೇಸಿ, ನಾಗೇಶಿ ಪದಗಳನ್ನು, ಲಾವಣಿ, ಗೀಗೀ ಪದಗಳನ್ನು ಈ ಜನರು ಹಾಡುತ್ತಾರೆ. ಸಣ್ಣಾಟ, ದೊಡ್ಡಾಟಗಳನ್ನು ಆಡುವುದರಲ್ಲಿ ಆಡಿಸುವುದರಲ್ಲಿ, ಮೋಹರಂ ಪದಗಳನ್ನು ಹಾಡುವುದರಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಾರೆ.

ಈ ವರ್ಗದ ಜನರಿಗೆ ಶಿಕ್ಷಣದ ಸೌಲಭ್ಯ ಈಗಷ್ಟೆ ದೊರೆತು ಕೇವಲ ಕೆಲವರು ಮಾತ್ರ ಪದವಿ ಪಡೆದು ಸರ್ಕಾರಿ, ಅರೆಸರ್ಕಾರಿ ಕೆಲಸದಲ್ಲಿದ್ದಾರೆ. ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಇವರು ತುಂಬ ಹಿಂದುಳಿದವರು. ಆದರೆ ತುಂಬ ಸ್ವಾಭಿಮಾನಿ ಜನ ಇವರು.

ಸಿ.ಪಿ.ಎಸ್.

ಗಂಗಿರೆದ್ದುಲ ಆಟ  ಇದು ಮನರಂಜನಾ ಪ್ರಧಾನವಾದ ಪ್ರಾಚೀನ ಜನಪದ ಪ್ರದರ್ಶನ ಕಲೆ (ಕೋಲೆ ಬಸವ). ಹಿಂದೆ ಈ ಕಲೆಗೆ ಒಳ್ಳೆಯ ಪ್ರೋತ್ಸಾಹವಿತ್ತು. ಇದನ್ನು ರಾತ್ರಿ ಸಮಯ ಪ್ರದರ್ಶಿಸುತ್ತಾರೆ. ರಾತ್ರಿ ವೇಳೆ ಪ್ರದರ್ಶಿಸದರೆ ಮಾತ್ರ ಕೋಲೆ ಬಸವ ತನ್ನತನವನ್ನು ತೋರಿಸುತ್ತದೆ. ಆಡದ ನೈಪುಣ್ಯತೆ, ವಿನಯವಂತಿಕೆ ನೃತ್ಯ ಶೈಲಿ ಪ್ರಕಟಗೊಳ್ಳುತ್ತದೆ. ಬಲವಾಗಿ, ಸುಂದರವಾಗಿ ದಷ್ಟ ಪುಷ್ಟವಾಗಿ ಇರುವ ಎರಡು ಎತ್ತುಗಳನ್ನು ಬಣ್ಣ ಬಣ್ಣದ ವಸ್ತ್ರಗಳಿಂದ ಬಣ್ಣದ ಬಾಸಿಂಗಗಳಿಂದ, ವಿವಿಧ ಮಣಿಗಳಿಂದ, ದೊಡ್ಡ ದೊಡ್ಡ ಗೆಜ್ಜೆಗಳಿಂದ ಅಂದವಾಗಿ ಅಲಂಕರಿಸಿ ಹಗಲ್ಲೆಲ್ಲ ಮನೆ ಮನೆ ಸುತ್ತಾಡಿಸಿ ರಾತ್ರಿ ಸಮಯದಲ್ಲಿ ಅವುಗಳ ಮೂಲಕ ಅದ್ಭುತವಾದ ಅನೇಕ ವಿನ್ಯಾಸಗಳನ್ನು ಮಾಡಿಸಿ ತೋರಿಸುವ ಪ್ರದರ್ಶನವೇ ಕೋಲಬಸವನ ಆಟ. ಗಂಗೆ-ಗೋವು ಸಂತಾನವೇ ಗಂಗೆತ್ತು ಅಥವಾ ಕೋಲೆಬಸವ. ಆದ್ದರಿಂದಲೇ ಇದನ್ನು ಗಂಗೆತ್ತುಗಳೆಂದು ಕರೆಯುತ್ತಾರೆ. ಇದನ್ನು ಕೋಲೆಬಸವ ಮೇಳ ಎಂದೂ ಕರೆಯುವುದಿದೆ.

61

ಈ ಆಟವನ್ನು ವೃತ್ತಿಪರವಾದ ಕಲೆಗಳ ಗುಂಪಿನಲ್ಲಿ ಸೇರಿಸಬಹುದು. ಇದರಲ್ಲಿ ಆಟ ಹಾಡು, ಮಾತು, ನೃತ್ಯ, ಅನುಕರಣ ಅಲಂಕಾರ ಎಲ್ಲವೂ ಸೇರಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪುರಾಣ ಕಥೆಯೊಂದು ಪ್ರಚಲಿತದಲ್ಲಿದೆ. ಒಂದಾನೊಂದು ಕಾಲದಲ್ಲಿ ಗಜಾಸುರನೆಂಬ ರಾಕ್ಷಸ ಘೋರ ತಪಸ್ಸು ಮಾಡಿ ಶಿವನನ್ನು ತನ್ನ ಮನಸ್ಸಿನಲ್ಲಿ ನೆಲೆಯಾಗುವಂತೆ ವರ ಕೇಳಿ ನಿನ್ನ ಕೈಯಿಂದಿಲ್ಲದೆ ಬೇರೆ ಯಾರ ಕೈಯಿಂದ ಸಾವು ಇಲ್ಲದಂತೆ ಮಾಡಬೇಕೆಂದು ಪ್ರಾರ್ಥಿಸಿ ಶಿವನನ್ನು ತನ್ನ ಹೃದಯದಲ್ಲಿ ಬಂಧಿಸಿದನು. ಪಾರ್ವತಿಯ ನೋವನ್ನು ಹೋಗಲಾಡಿಸಲು ಶಿವನನ್ನು ಕರೆ ತರುವುದಾಗಿ ದೇವೇಂದ್ರನು ಇತರ ದೇವತೆಗಳು ಸೇರಿ ಉಪಾಯ ಮಾಡಿದರು. ಶಿವನ ವಾಹನವಾದ ನಂದಿಗೆ ಬಸವನ ವೇಷ ಹಾಕಿಸಿ ವಿಷ್ಣು, ಬ್ರಹ್ಮ, ನಾರದ, ಇಂದ್ರ – ದಾಸನಂತೆ ಮಾರು ವೇಷದಲ್ಲಿ, ವಿಷ್ಣು ಗಂಟೆಯನ್ನು, ಬ್ರಹ್ಮ ವೀರರಣವಾದ್ಯವನ್ನು, ಇಂದ್ರನ ಡೋಲನ್ನು ನಾರದ, ಸನಾದಿ ಹಿಡಿದು ನಂದಿ ಸಮೇತ ಗಜಾಸುರನ ಮನೆಗೆ ಬಂದರು. ವಿಷ್ಣು ತಂಡದ ನಾಯಕನಾದನು. ಗಜಾಸುರನು ಇವರ ಆಟಕ್ಕೆ ಮನಸೋತು ಏನು ಬೇಕೋ ಕೇಳಿ ಎನ್ನುತ್ತಲೇ ಶಿವನನ್ನು ಹೊರಕ್ಕೆ ತೆಗೆದು ನೀನು ಕೈಲಾಸ ಸೇರಿಕೋ ಎಂದರು. ಗಜಾಸುರನು ಏನು ಮಾಡಲು ತೋಚದೆ ನಂದೀಶ್ವರನ ಕೋಡು ತಾಕಿ ಬಲಿಯಾದನು. ಶಿವ ಹೊರಕ್ಕೆ ಬಂದನು. ಕಲಾವಿದರು ಬಸವನಿಗೆ ಒಳ್ಳೆಯ ತರಬೇತಿಯನ್ನು ನೀಡುತ್ತಾರೆ. ಅಯ್ಯನವರಿಗೆ ನಮಸ್ಕರಿಸು, ಅಮ್ಮನವರಿಗೆ ನಮಸ್ಕರಿಸು ಎಂದರೆ ಅದು ಚೆನ್ನಾಗಿ ತಲೆಯಾಡಿಸುತ್ತದೆ. ಇವರು ಮಾಡುವ ಆಟಗಳಲ್ಲಿ ಕೋಲೆಬಸವ ಮಾಡುವ ಭಂಗಿಗಳು ಆಶ್ಚರ್ಯವನ್ನು ಆನಂದವನ್ನು ಉಂಟುಮಾಡುತ್ತದೆ. ಒಂದಕ್ಕೆ ಸೀತೆ ಎಂದೂ ಮತ್ತೊಂದಕ್ಕೆ ರಾಮ ಎಂದೂ ಹೆಸರಿಟ್ಟು ಅದೇ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ. ಕೋಲೆಬಸವ ಮಾಡುವ ವಿನ್ಯಾಸಗಳಲ್ಲಿ ಮುಖ್ಯವಾದವು. ಬಸವ ತನ್ನ ಕಾಲುಗಳ ಕೆಳಗೆ ಮಲಗಿರುವ ಕಲಾವಿದನ ಎದೆಯ ಮೇಲೆ ಕಾಲಿಟ್ಟು ವೈದ್ಯನಂತೆ ಪರೀಕ್ಷಿಸುವುದು. ಹಾಡುಗಳಿಗೆ ಅನುಗುಣವಾಗಿ ನೃತ್ಯ ಮಾಡುವುದು. ಸಣ್ಣ ಪೀಠದ ಮೇಲೆ ಬಸವ ತನ್ನ ನಾಲ್ಕೂ ಕಾಲುಗಳನ್ನು ಮಡಚಿ ಶ್ವಾಸವನ್ನು ಬಿಗಿ ಹಿಡಿದು ಕುಳಿತುಕೊಳ್ಳುವುದು ಮುಂತಾದವು. ಅಲ್ಲದೆ ಅತ್ತೆ ಸೊಸೆಯಂತೆ ಎರಡು ಬಸವಗಳು ಮಾಡುವ ವಿನ್ಯಾಸಗಳು ಆಕರ್ಷಕವಾಗಿರುತ್ತವೆ. ಇವರ ವಾದ್ಯಗಳು – ಗಂಟೆ, ವೀರ ಡೋಲು. ಐದು ಜನ ಕಲಾವಿದರು ಈ  ಪ್ರದರ್ಶನದಲ್ಲಿ ಭಾಗಿಯಾಗಿರುತ್ತಾರೆ.

ಟಿ.ಎಸ್.ಎನ್.ಅನುವಾದ ಎನ್.ಆರ್.

ಗಂಗೆ-ಗೌರಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಜನಪದ ಕಥನ ಗೀತೆಗಳಲ್ಲಿ ಒಂದು. ಪಾರ್ವತಿಯ ತಪೋನಿಷ್ಠೆಗೆ ಮನಸೋತ ಪರಮೇಶ್ವರನು ಆಕೆಯನ್ನು ವಿವಾಹವಾದ ಬಳಿಕ ತನ್ನ ತೊಡೆಯ ಮೇಲೆ ಕುಳ್ಳಿರಿಸಿ ಕೊಳ್ಳುತ್ತಾನೆ. ಭಗೀರಥನ ತಪಸ್ಸಿನ ಫಲವಾಗಿ ಗಂಗೆಯು ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ರಭಸವನ್ನು ತಾಳಿಕೊಳ್ಳಲು ಭೂಮಿಯು ಅಸಮರ್ಥಳೆಂದು ಗ್ರಹಿಸಿದ ಶಿವನು ತನ್ನ ಜಟೆಯೊಳಕ್ಕೆ ಅವಳನ್ನು ಸ್ವೀಕರಿಸಿದನು. ಇದು ಪುರಾಣಮೂಲದ ಕಥೆ. ಅನಂತರ, ಪಾರ್ವತಿಗೆ ಗಂಗೆಯ ಮೇಲೆ ಅಸೂಯೆ ಉಂಟಾಗುವುದೂ ಶಿವನೊಡನೆ ವಾದಕ್ಕಿಳಿಯುವುದೂ ಶಿವನ ಚಮತ್ಕಾರದ ಉತ್ತರಗಳೂ ಶಿಷ್ಟ, ಕಾವ್ಯಗಳಲ್ಲಿ ಕಂಡುಬರುತ್ತವೆ. ಗೌರಿಯ ಅಸಹನೆ, ಅಸೂಯೆಗಳು ಕವಿಗಳಿಂದ ಆರೋಪಿತವಾದವೆಂದೂ ವಾಸ್ತವವಾಗಿ ಅವರಿಬ್ಬರೂ ಸತ್ತ್ವಪ್ರಧಾನವಾದ ಶಕ್ತಿಗಳೆಂದು ಶಿಷ್ಟ ಕವಿಗಳು ಅಭಿಪ್ರಾಯಪಡುತ್ತಾರೆ.

ಗಂಗೆ ಗೌರಿಯರ ಚಿತ್ರಗಳು ಕಾವ್ಯಪುರಾಣಗಳಲ್ಲಿ ಕಂಡು ಬರುವುದಕ್ಕಿಂತ ಜನಪದ ಸಾಹಿತ್ಯದಲ್ಲಿ ಹೆಚ್ಚು ಯಶಸ್ವಿಯಾಗಿ ಚಿತ್ರಿತವಾಗಿದೆ. ಯಾಕೆಂದರೆ, ಗಂಗೆ ಗೌರಿ ಶಿವ ಮೂವರು ಇಲ್ಲಿ ಜನಪದರಾಗಿಯೇ ಕಾಣಿಸಿಕೊಳ್ಳುತ್ತಾರೆ. ಅವರ ನಡುವೆ ನಡೆಯುವ ಘಟನೆಗಳು, ಮಾತಿನ ಚಕಮಕಿಗಳು, ಶುದ್ಧ ಜನಪದ ಬದುಕನ್ನೇ ಪ್ರತಿನಿಧಿಸುತ್ತದೆ.

ಒಂದು ಪಾಠಾಂತರದ ಪ್ರಕಾರ ಗಂಗೆ ಗೌರಿ ಇಬ್ಬರೂ ಒಬ್ಬಳೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅವಳಿ ಮಕ್ಕಳು. ಗಂಗೆಯೇ ಹಿರಿಯಳು. ಗಂಗೆಯು ಹುಟ್ಟಿದ ಮನೆಗೆ ಕಂಟಕಪ್ರಾಯಳಾಗುವಳೆಂದು ಪುರೋಹಿತರೂ ಸೂಲಗಿತ್ತಿ ಸಂಗಮ್ಮನೂ ಹೇಳಿದ್ದರಿಂದ ತಂದೆ ಗಿರಿರಾಯ ಆಕೆಯನ್ನು ಒಂದು ತೊಟ್ಟಿಲಲ್ಲಿಟ್ಟು  ನೀರಿನಲ್ಲಿ ತೇಲಿಬಿಡುತ್ತಾನೆ. ಆ ತೊಟ್ಟಿಲು ಮೀನು ಹಿಡಿಯುತ್ತಿದ್ದ ಅಂಬಿಗರ ಗಂಗನಿಗೆ ಸಿಕ್ಕುತ್ತದೆ. ಹೀಗೆ ಗಂಗೆ ಅಂಬಿಗರ ಮಗಳಾಗಿ ಬೆಳೆಯುತ್ತಾಳೆ.

ಕನ್ನಡ ಜನಪದ ಸಾಹಿತ್ಯದಲ್ಲಿ ಗಂಗೆ ಗೌರಿಯರ ಜಗಳವು ಒಂದು ಮೋಜಿನ ಪ್ರಸಂಗವೆನಿಸಿದೆ. ನಮ್ಮ ಹಳ್ಳಿಗಳಲ್ಲಿ ಕಂಡುಬರುವ ಇಬ್ಬರು ಅಶಿಕ್ಷಿತ ಹೆಂಗಸರ ನಡುವೆ ನಡೆಯುವ ಜಗಳ ಅಲ್ಲಿ ಮಿಳಿತವಾಗಿವೆ. ಸವತಿಮಾತ್ಸರ್ಯ, ಅಸೂಯೆ, ಸೇಡು ಇವು ಈ ಜಗಳದ ಮೂಲದ್ರವ್ಯವಾಗಿವೆ.

ಗಂಗೆಯನ್ನು ತರುವ ಪೂರ್ವದಲ್ಲಿಯೇ ಗೌರಿಯ ಮುನಿಸು ಪ್ರಾರಂಭವಾಗುತ್ತದೆ. ಇಲ್ಲಿ ಗಂಗೆ ಕೂಡ ಸುಲಭವಾಗಿ ಶಿವನ ಜೊತೆಗೆ ಬಂದು ಬಿಡುವುದಿಲ್ಲ. ಶಿವನ ಇಚ್ಛೆಯನ್ನು ಅರಿತ ಗಂಗೆಯು ‘ಜಪವ ಮರಿಸವ್ರ ಮಗಳಲ್ಲ’ ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರೂ ಅವಳ ಪ್ರಚ್ಛನ್ನ ಭಾವವು ತಾನು ಬಡವರ ಮನೆಯ ಹೆಣ್ಣು ಎಂಬ ದೈನ್ಯವೇ ಆಗಿದೆ. ಗಂಗೆಯನ್ನು ತರುತ್ತಿರುವ ಸುದ್ಧಿಯನ್ನು ಗಿಣಿರಾಮನಿಂದ ತಿಳಿದ ಗೌರಿಯು ಶಿವನು ಊಟಕ್ಕೆ ಕುಳಿತಾಗ ಎರಡು ಮಣೆಗಳನ್ನು ಹಾಕುತ್ತಾಳೆ. ಎರಡು ತಟ್ಟೆಗಳನ್ನು ಇಡುತ್ತಾಳೆ. ಅದನ್ನು ನೋಡಿ ಶಿವನು ‘ಇಬ್ಬರುಂಟೇನೆ ಪುರುಷಾರು’ ಎಂದು ಕೇಳಿದಾಗ  ‘ಸಿವ್ನ ಕೆಂಜಡೆಯ ಮುಡಿವಳೆಗೆ ಇರುವ ಸಿವ್ಗಂಗೇಗೆ ಒಂದು, ನಿಮಗೊಂದು’ ಎಂದು ಉತ್ತರಿಸುತ್ತಾಳೆ.

ಅನಂತರ ಗೌರಿ, ‘ಅಂಬುಗನ ಮಗಳೆ ಸುಕುಬಾಳೋ’ ಎಂದು ಗಂಗೆಯನ್ನು ಹರಸಿದಾಗ, ತನ್ನನ್ನು ಅಂಬಿಗನ ಮಗಳೆಂದು ಕರೆದಳಲ್ಲ ಎಂದು ಗಂಗೆಗೆ ಕೋಪ ಬರುತ್ತದೆ. ಇಲ್ಲಿಂದ ಪ್ರಾರಂಭವಾಗುತ್ತದೆ. ಗಂಗೆ ಗೌರಿಯರ ಜಗಳ. ‘ಕೆಂಪೇರ ಜಗಳ ಶಂಖ ಬಾರಿಸಿದ್ಹಂಗೆ’ ಒಳ್ಳೊಳ್ಳೆ ಹೂವನ್ನೆಲ್ಲ ತಾನು ಮುಡಿದು ಬಾಡಿ ಬತ್ತಿದ ಹೂವನ್ನು ನನಗೆ ಕಳುಹಿಸಿದ್ದಾಳೆ ಎಂದು ಗಂಗೆಯೂ ಗಂಗೆಯ ಅಣ್ಣ ಮೀನು ಸೀಗಡಿ ಮಾರುವವನೆಂದೂ ಬಂಧು ಬಳಗ ಸುಣ್ಣ ಸುಡುವವರೆಂದೂ ಇತ್ಯಾದಿಯಾಗಿ ಗೌರಿಯೂ, ಪರಸ್ಪರ ಆರೋಪಗಳ ಮಳೆ ಸುರಿಸತೊಡಗಿದಾಗ ಜಡೆ ಜಡೆ ಹಿಡಿದು ಕುಸ್ತಿಗೇ ನಿಲ್ಲುತ್ತಾರೆ. ಹೀಗೆ ಗುದ್ದಾಡುವಾಗ ಗೌರಿಯು ಹೊರಗಾಗುತ್ತಾಳೆ.  ಅವಳು ಸ್ನಾನ ಮಾಡಲು ಆಗದಂತೆ ಗಂಗೆಯು ಭೂಮಿಯ ಮೇಲಿನ ನೀರನ್ನೆಲ್ಲ ಮಾಯ ಮಾಡುತ್ತಾಳೆ. ನೀನು ಬರಬೇಡವೆಂದು ಮಳೆರಾಯನಿಗೂ ಆಣತಿ ನೀಡುತ್ತಾಳೆ.

ನೀರಿಗಾಗಿ ಗೌರಿಯು ಮಗನನ್ನು ಗಂಗೆಯ ಬಳಿಗೆ ಕಳುಹಿಸುತ್ತಾಳೆ. ಮಗನ ಊಟಕ್ಕಾಗುವಷ್ಟು ನೀರನ್ನು ಮಾತ್ರ ಗಂಗೆ ಕೊಡುತ್ತಾಳೆ. ಹಾಲಿನಲ್ಲಿ ಸ್ನಾನ ಮಾಡು, ಜೇನಿನಲ್ಲಿ ಸ್ನಾನ ಮಾಡು ಎಂದು ಶಿವ ಹೇಳಿದಾಗ ಅದ್ಯಾವುದರಿಂದಲೂ ತನ್ನ ಹೊಲೆ ಹೋಗದೆಂದೂ ನೀರೇ ಬೇಕೆಂದೂ ಗೌರಿ ಕೇಳುತ್ತಾಳೆ. ಹಲವು ಬಗೆಯ ಆಸೆ ಆಮಿಷಗಳನ್ನು ಒಡ್ಡಿದರೂ ನೀರನ್ನು ಕೊಡಲು ಗಂಗೆಯು ಒಪ್ಪುವುದಿಲ್ಲ. ಕೊನೆಗೆ ತನ್ನ ಪಾಲಿನ ಶಿವನನ್ನೂ ನಿನಗೂ ಕೊಡುತ್ತೇನೆಂದು ಗೌರಿಯ ಮಾತು ಕೊಟ್ಟಮೇಲೆ ಧೊ ಎಂದು ಮಳೆ ಸುರಿದು ಗೌರಿಯ ಹೊಲೆ ಕಳೆಯುತ್ತದೆ. ಗಂಗೆ ಗೌರಿ ಇಬ್ಬರ ನಡುವೆ ಸೌಹಾರ್ದ ಸಂಬಂಧ ಮೂಡುತ್ತದೆ.

ಕೆ.ಆರ್.