ಗಾದೆಗಳು  ವಾಚಿಕ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಂತೆ ಗಾದೆಯೂ ಒಂದು ವಿಶಿಷ್ಟ ಕಲಾವರ್ಗಕ್ಕೆ ಸೇರಿದುದಾಗಿದೆ. ಗೀತೆ, ಕಥೆ, ಒಗಟು, ಲಾವಣಿ ಮೊದಲಾದವುಗಳಿಗಿಂತ ಹೆಚ್ಚು ವ್ಯಾಪಕವೂ ಜನಸಂಮುಖವೂ ಜನಪ್ರಿಯವೂ ಆದ ಗಾದೆ ಅನುಭವದ ಸಾಂದ್ರತೆಗೆ, ವಸ್ತು ವೈವಿಧ್ಯತೆಗೆ, ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾದುದು. ಜನಸಾಮಾನ್ಯರ ಬದುಕು ಭಾಷೆಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವುದು ಮಾತ್ರವಲ್ಲದೆ, ಅದಕ್ಕೆ ಶಕ್ತಿಯನ್ನೂ ಸ್ವಾರಸ್ಯವನ್ನೂ ತಂದು ಕೊಟ್ಟಿರುವಂಥದು. ಗಾದೆಯಿಲ್ಲದ ಬದುಕಿಲ್ಲ, ಭಾಷೆಯಿಲ್ಲ. ಮಾತು ಪ್ರಾರಂಭವಾಯಿತೆಂದರೆ ಗಾದೆಗಳ ಸ್ವಾತಿ ಮಳೆಯೇ ಪ್ರಾರಂಭವಾಗುತ್ತದೆ. ಗಾದೆಗಳು ಸಮಯಕ್ಕೆ ಸರಿಯಾಗಿ ಬಾರದೇ ಹೋದರೆ, ‘ಹಿಂದಕ್ಕೆ ಏನೋ ಗಾದೆ ಹೇಳಿದ ಹಾಗಾಯ್ತು’ ಎಂದು ಹೇಳುವುದರ ಮೂಲಕ ಗಾದೆಯಿಲ್ಲದೆ ಸಮರ್ಥವಾಗಿ ಹೋಗಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಡಲಾಗುವುದು. ಗಾದೆ ಜನಸಾಮಾನ್ಯರ ಸೃಷ್ಟಿ ಹೇಗೋ ಹಾಗೆಯೇ ಅವರ ಬದುಕಿನ ಅನನ್ಯ ಸಂಗಾತಿ ಕೂಡ. ಹೀಗಾಗಿ ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ’, ‘ಕಿರಿದರಲ್ಲಿ ಹಿರಿದಾದ ಅರ್ಥ ತುಂಬಿದ’ ಗಾದೆಗಳು ಜೀವನಾನುಭವದ ಸರ್ವಾದರಣೀಯ ಸಣ್ಣ ಹರಳುಗಳಂತೆ ಕಾಣಿಸಿಕೊಳ್ಳುತ್ತವೆ.

ಗಾದೆಯೆಂದರೆ ಸದ್ಯೋಜಾತ ನುಡಿಗಟ್ಟು ; ಸೂಕ್ತ ಸಂದರ್ಭದಲ್ಲಿ ತಾಳಿದ ಯೋಗ್ಯ ನಿರ್ಣಯಗಳು. ಇವು ಮಾನವನ ಬುದ್ಧಿವಂತಿಕೆಗಳೂ ಆಲೋಚನಾದೀಪಿಕೆಗಳೂ ಆಗಿವೆ. ಇವುಗಳಂತೆ ಬದುಕಿನ ಪ್ರತಿ ಭಾಗವನ್ನು ಸ್ಪರ್ಶಿಸುವ ಬೇರೊಂದು ಪ್ರಕಾರ ಇಲ್ಲ. ಗಾದೆ ನೂರಕ್ಕೆ ನೂರು ಪಾಲು ಬಾಳಿನ ಅಭಿವ್ಯಕ್ತಿ. ಪ್ರತಿಯೊಂದು ಗಾದೆಯೂ ಒಂದು ರೀತಿಯಲ್ಲಿ ಬಿಡಿಕವಿತೆಯೇ. ಛಂದೋಬದ್ಧತೆ, ಪ್ರಾಸಾನುಪ್ರಾಸ. ಆಲಂಕಾರಿಕ ನೇಯ್ಗೆ ಸಾಮಾನ್ಯವಾಗಿ ಕಾಣುವ ಗುಣಗಳು. ಸಮಷ್ಟಿಯ ಸೃಷ್ಟಿಶಕ್ತಿಗೆ ಗಾದೆಗಳು ಬಹಳ ಒಳ್ಳೆಯ ನಿದರ್ಶನಗಳಾಗಿವೆ. ‘ಪ್ರತಿಯೊಬ್ಬ ಸತ್ತಾಗಲೂ ಕವಿಯೊಬ್ಬ ಸಾಯುತ್ತಾನೆ’ ಎಂಬ ಸೂಕ್ತಿಯೇ ಇದೆ. ಬಹುತೇಕ ಗಾದೆಗಳ ಈ ಸುಸಂಬದ್ಧ ನಿಶ್ಚಿತ ರಚನೆಗೆ ಕಾರಣ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದೆಂಬ ಭಾವನೆ. ಅವುಗಳಲ್ಲಿ ಕಾವ್ಯದ ಬಿಗಿ, ಬಂಧುರತೆ, ಯೋಜಿತ ಅಭಿವ್ಯಕ್ತಿ, ಸೂಚ್ಯಭಾವ ಹಾಗೂ ವ್ಯಂಗ್ಯ ವೈಚಾರಿಕತೆಗಳು ರೂಪುಗೊಂಡಿರುತ್ತದೆ. ಈ ಕೆಲವು ಗಾದೆಗಳನ್ನು ಗಮನಿಸಿ: ಅಂಗರಕ್ಕೆ ಹಸಿಯಿಲ್ಲ, ಸೊಸೆಗೆ ಬಿಸಿಯಿಲ್ಲ ; ಆಗುವವರೆಗೆ ಆಗನಿಗುಂಟ, ಆಗಾಯ್ತೆ ಬಗನಿಗುಂಟ; ಸೊನ್ನಾಲಿಸೊಸೆಯಲ್ಲ, ಕೊನ್ನಾರಿ ಕಳೆಯಲ್ಲ ; ಕಣ್ಣು ಕಾಣುವತನಕ, ಬೆನ್ನುಬಾಗುವತನಕ; ಜೊಗಟಗಾತಿ ಮನೆ ಜಿಗಟ ಮೂಗಂಡುಗ ; ನನ್ನಂಗಡಿ ಮೇಲೆ ನಿನ್ನಂಗಡಿ, ಬೆಲ್ಲದಂಗಡಿ ಮೇಲೆ ಬೇಳೆ ಅಂಗಡಿ; ನೆಂಟಾಡಿನ ಮನೆ ಕಾಂಟಾಡ್ತು; ಇತ್ಯಾದಿ. ಪದ್ಯದ ಸಾಲುಗಳಂತೆ ಕಾಣಿಸಿಕೊಳ್ಳುವ ಇವು ಅದರ ಅಂಗಾಂಗಗಳೆಲ್ಲವನ್ನೂ ಬಹುಮಟ್ಟಿಗೆ ಸಮರ್ಪಕವಾಗಿ ಪಡೆದಿರುತ್ತದೆ.

ಸಾಹಿತ್ಯದ ಸೃಜನಶೀಲ ಶಕ್ತಿಯನ್ನು ಹೊಂದಿರುವ ಗಾದೆಯ ಭಾಷೆ ಸಾಂಕೇತಿಕ, ಭಾವ ಬಹುಮಟ್ಟಿಗೆ ರೂಪಕ. ಉಪಮಾನ ಕಲ್ಪನೆಗಳ, ಸಾದೃಶ್ಯವೈದ್ಯಗಳ, ಧ್ವನಿ ಹಾಸ್ಯಗಳ ಸರಮಾಲೆಗಳೇ ಆಗಿವೆ. ಗಾದೆಗಳಲ್ಲಿ ನಾಟಕೀಯತೆ, ಅತ್ಯುಕ್ತಿ, ವಿರೋಧಾಭಾಸ ಗುಣಗಳೂ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಅನುಭವವನ್ನು ನೇರವಾಗಿ ಹೇಳುವ ಸ್ವಭಾವೋಕ್ತಿ ಗುಣವನ್ನೂ ಅವು ಪಡೆದಿವೆ. ಯಾವುದೇ ವೇಷವನ್ನು ಹಾಕಿಕೊಳ್ಳುವ ಸರಳ ಸಲಿಲ ಅಭಿವ್ಯಕ್ತಿಗೆ ಈ ನಿದರ್ಶನಗಳನ್ನು ಗಮನಿಸಿ : ನೆರನೆಚ್ಚ ಬೇಡ, ತೊರೆ ಹಾಯಬೇಡ; ಎಳಗರು ಎತ್ತಲ್ಲ, ದಳವಾಯಿ ದೊರೆಯಲ್ಲ; ಉಪ್ಪುತಿಂದವನ ಮನಸ್ಸನು ತುಪ್ಪದ್ಹಂಗೆ, ನಡೀತಾ ಇದ್ರೆ ನಂಟು, ಬೆಳಗ್ತ ಇದ್ರೆ ಕಂಚು; ಇತ್ಯಾದಿ. ಸಾಮಾನ್ಯವಾಗಿ ಎಷ್ಟೋ ಹೋಲಿಕೆಗಳು ಮೂಲ ಭಾವದ ಅರ್ಥಸ್ಪಷ್ಟತೆಗಾಗಿ ಬರುವುದುಂಟು. ಗಾದೆಯ ಅಪರೂಪದ ಲಕ್ಷಣ ಸಮತೂಕ. ಯಾವುದೇ ನಿಜವಾದ ಗಾದೆಯನ್ನು ನೋಡಿದರೂ ಇದು ಗಮನಕ್ಕೆ ಬರುವುದು. ಈ ಗಾದೆಗಳು ಅದಕ್ಕೆ ಸೊಗಸಾದ ಉದಾಹರಣೆಗಳು: ನಾಳೆ ನೋಡು ನಮ್ಮ ರಂಗನ ಮೋಟ, ತೆಗೆದು ನೋಡು ನಮ್ಮ ಅಮ್ಮಿಯ ಮುಸುಕ; ಅತ್ತೆಗೆ ಅಸಮಾನ, ಸೊಸೆಗೆ ನಿಷ್ಠೂರ ; ಆದಷ್ಟೇ ಆರಂಭ, ಹೂದಷ್ಟೇ ಮಳೆಗಾಲ.

ಈ ಯಾವ ಗಾದೆಯನ್ನು ಪರಿಶೀಲಿಸಿದರೂ ಎರಡು ಸಮಭಾಗಗಳು ಕಾಣಿಸಿಕೊಳ್ಳುತ್ತವೆ. ಪೂರ್ವೋತ್ತರ ಭಾಗಗಳೆರಡೂ ಛಂದಸ್ಸಿನಲ್ಲಿ, ಪ್ರಾಸದಲ್ಲಿ, ಕಡೆಗೆ ಅಕ್ಷರಗಳ ಸಂಖ್ಯೆಯಲ್ಲಿ ಸಮವಾಗಿ ಬಂದಿರುತ್ತವೆ. ಪೂರ್ವದ ನಿಲುಗಡೆಯ ಹಾಗೆಯೇ ಉತ್ತರದ ನಿಲುಗಡೆ ಕೂಡ ತಾಳ ಪೂರ್ವದ ನಿಲುಗಡೆಯ ಹಾಗೆಯೇ ಉತ್ತರದ ನಿಲುಗಡೆ ಕೂಡ ತಾಳ ಹೊಡೆದ ಹಾಗೆ ಇರುತ್ತದೆ. ಚಿಕ್ಕ ಚಿಕ್ಕ ವಾಕ್ಯಗಳಂತೆ ತೀರ ಉದ್ದವಾದ ವಾಕ್ಯಗಳಲ್ಲಿ ಸ್ಪಷ್ಟವಾದ ಸಮತೂಕ ತೋರದಿದ್ದರೂ, ಸಂಪೂರ್ಣ ಹೊರತಾಗಿ ನಿಂತುಕೊಳ್ಳುತ್ತದೆ. ಇವನ್ನು ನಿಡಿದಾದ ಗಾದೆಗಳು ಎಂದು ಹೇಳಲು ಬರುವುದಿಲ್ಲ.

ಗಾದೆಗಳು ಸಾಹಿತ್ಯವೂ ಹೌದು ಶಾಸ್ತ್ರವೂ ಹೌದು. ಸಾಹಿತ್ಯವೂ ಹೌದು ಎಂದಾಗ ಶಿಷ್ಟಸಾಹಿತ್ಯದೊಡನೆ ಹೋಲಿಸಿ ನೋಡುವ ಆತುರ ತೋರಬಾರದು. ಮೂಲಭೂತವಾಗಿಯೇ ಕೆಲವು ವ್ಯತ್ಯಾಸಗಳೂ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತವೆ; ಉದ್ದೇಶದಲ್ಲಿಯೂ ಪರಿಣಾಮದಲ್ಲಿಯೂ ಬೇರೆಯಾಗುತ್ತವೆ. ಶಿಷ್ಟ ಕೃತಿ ತನ್ನ ಸೃಷ್ಟಿ ಮೂಲದಲ್ಲಿ ಒಬ್ಬರ ರಚನೆ; ಅದು ಬದಲಾವಣೆ ರಹಿತವಾದುದು. ಅದು ಪ್ರಜ್ಞಾಪೂರ್ವಕವಾಗಿ ಕಲಾತ್ಮಕವಾಗಿರುವುದು  ಸಾಧ್ಯವಿರುತ್ತದೆ. ಆದರೆ ಗಾದೆ ಸೃಷ್ಟಿ ಮೂಲದಲ್ಲಿ ಒಬ್ಬನಾದರೂ ಸಮಷ್ಟಿಯದು; ಬದಲಾವಣಾ ರೂಪದ್ದು. ಕಲಾತ್ಮಕತೆ ಇದ್ದರೂ ಪ್ರಜ್ಞಾಪೂರ್ವಕವಲ್ಲ. ಗಾದೆಗಳು ಮೊದಲಿನಿಂದಲೂ ಬದುಕಿನೊಡನೆ ಕ್ರಿಯಾಶೀಲ ಸಂಬಂಧವನ್ನು ಪಡೆದಿರುವಂಥವು. ಸಾಹಿತ್ಯದಲ್ಲಿ ಅನುಭವ ಮತ್ತು ಅಭಿವ್ಯಕ್ತಿ ಎಂಬೆರಡು ಮುಖ್ಯ ವಿಷಯಗಳು. ಈ ಸರಳ ಸೂತ್ರವನ್ನು ಗಾದೆಗಳಿಗೂ ಅನ್ವಯಿಸಿ ವ್ಯಾಖ್ಯಾನಿಸುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಗಾದೆಗಳನ್ನು ‘ಹಲವರ ಜ್ಞಾನ, ಒಬ್ಬನ ವಿವೇಕ’ ಎಂಬುದಾಗಿ ಹೇಳಬಹುದು. ಹಲವರ ಜ್ಞಾನ ಒಬ್ಬನ ಸೃಷ್ಟಿ ವಿವೇಕದಲ್ಲಿ ಮೂಡಿ ಗಾದೆಯಾಯಿತೆಂಬುದು ಇಲ್ಲಿಯ ಅರ್ಥ. ಇಲ್ಲಿಯ ‘ಜ್ಞಾನ’ವೇ ಅನುಭವ. ‘ವಿವೇಕ’ವೇ ಅಭಿವ್ಯಕ್ತಿ. ಅಂದರೆ ಹಲವರ ಅನುಭವ ಒಬ್ಬನಲ್ಲಿ ಅಭಿವ್ಯಕ್ತಿ ಪಡೆಯಿತು ಎಂದಾಯಿತು. ಅನುಭವ ಎಲ್ಲರಲ್ಲಿಯೂ ಇರುವುದಾದರೂ ಅಭಿವ್ಯಕ್ತಿ ಸಾಮರ್ಥ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಗಾದೆಗಳನ್ನು ಒಯ್ಯುವವರೆಲ್ಲ ಇದರ ಸೃಷ್ಟಿಕಾರರಲ್ಲ. ಇಂಥ ಸಾಮರ್ಥ್ಯವನ್ನು ಹೊಂದಿರುವವರು ಕೆಲವರು ಮಾತ್ರ ಇದಕ್ಕೆ ಕಾರಣರಾಗಿದ್ದಾರೆ.

ಗಾದೆಗಳು ಏಕಕಾಲದಲ್ಲಿ ಆಸ್ವಾದನೀಯವೂ ವಿಚಾರ ಪ್ರಚೋದಕವೂ ಆಗಿವೆ. ಇವುಗಳನ್ನು ದಿನನಿತ್ಯದ ಜೀವನದ ಅನುಭವ ಕೋಶದಿಂದ ತೆಗೆದ ಸರಳವೂ ಮೌಲ್ಯವನ್ನು ದೃಢಪಡಿಸುತ್ತದೆ. ಗಾದೆಗಳ ಮಾಸದ ಹೆಸರಿಗೆ ಅವುಗಳಲ್ಲಿರುವ ಸರಳ ಸಾಮಾನ್ಯ ಕೌಟುಂಬಿಕ ರೂಪಕಗಳು ಕಾರಣವಾಗಿವೆ. ಗಾದೆಗಳ ಸಮರ್ಥ ಅಭಿವ್ಯಕ್ತಿಗೆ ಈ ರೂಪಕಶಕ್ತಿ ಬಹಳಷ್ಟು ಕೆಲಸ ಮಾಡಿದೆ. ನಿಲುಕದ ವಸ್ತುವಿಗೆ ಕೈಚಾಚದೆ ತನ್ನ ಸುತ್ತಮುತ್ತಲು ವಸ್ತು ಸಾಮಗ್ರಿಯನ್ನು ದೃಷ್ಟಾಂತ ರೂಪಕಗಳನ್ನಾಗಿ ಅಳವಡಿಸಿಕೊಂಡಿರುವುದು ಅನುಭವದ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಇಂತಹ ಹಲವಾರು ಗಾದೆಗಳು ಉತ್ತಮ ಸಾಹಿತ್ಯಾಂಶಗಳಿಂದ ಕೂಡಿರಲು ಅರ್ಹವಾಗಿದೆ. ಒಂದು ಉದಾಹರೆಣೆಯಿಂದ ಇದನ್ನು ವಿವರಿಸಬಹುದು:

ಅಲಲಾ ಅನ್ನೋ ಅಳ್ಳಿಮರ ನಂಬಬಹುದು
ಮಳ್ಳಿ ಹಂಗಿರೋ ಕಳ್ಳಿ ನಂಬಾರ್ದು

ಮನುಷ್ಯನ ವಿಭಿನ್ನ ಸ್ವಭಾವವನ್ನು ಪ್ರಕೃತಿ ರೂಪಕಗಳಿಂದ ಚಿತ್ರಿಸುವುದು ಇಲ್ಲಿಯ ಉದ್ದೇಶವಾಗಿದೆ. ಇದರಲ್ಲಿ ಬಳಸಲಾಗಿರುವ ‘ಅಳ್ಳಿ’ ಮತ್ತು ‘ಕಳ್ಳಿ’ ಪ್ರಾಸಕ್ಕಾಗಿ ಮಾತ್ರ ಬರದೆ, ಭಿನ್ನ ಪ್ರಕೃತಿಯನ್ನು ಚಿತ್ರಿಸಲು ಬಳಕೆಯಾಗಿವೆ. ಒಳಗೊಂದು ಹೊರಗೊಂದು ಇಲ್ಲದೆ ಎಲ್ಲವನ್ನೂ ಆಡಿ ತೋರಿಸಿಬಿಡುವ ಮನುಷ್ಯ ಪ್ರಕೃತಿಗೆ ಅರಳಿ ಮರ ರೂಪಕವಾಗಿದ್ದರೆ, ಏನೂ ಅರಿಯದ ಹ್ಯಾಪಾಯಿಯಂತಿದ್ದರೂ ಹಾವುಮರಿಯನ್ನು ಮಡಗಿರುವ ವ್ಯಕ್ತಿಪ್ರಕೃತಿಗೆ ಕಳ್ಳಿಗಿಡ ರೂಪಕವಾಗಿದೆ. ಅರಳಿಮರ ಪ್ರಯೋಜನಕಾರಿಯೂ ನಿರಪಾಯಕಾರಿಯೂ ಆದುದು; ಅದರ ಅಲ್ಲಾಡುವ ಎಲೆಗಳೂ ಕೂಡ. ಆದರೆ ಕಳ್ಳಿಯ ಹೊರ ರೂಪ ಮುಳ್ಳು, ಒಳಗಿನ ಹಾಲು ಅಪಾಯಕಾರಿ; ಒಟ್ಟು ನಿರುಪಯುಕ್ತ. ಅರಳಿಮರ ನಮ್ಮ ಸಂಸ್ಕೃತಿಯ ಭಾಗವೇ ಆಗಿ ಅರ್ಥ ಪಡೆದುಕೊಂಡಿದ್ದರೆ, ಊರಿನಾಚೆಯ ಒಬ್ಬೆಯೊಂದರಲ್ಲಿ ಬೆಳೆಯುವ ಕಳ್ಳಿಗೆ ಈ ಗುಣವಿರುವುದಿಲ್ಲ.

ಸಾಮಾಜಿಕ ಸಮೂಹಗಳಲ್ಲಿಯೇ ಕುಟುಂಬ ಮೂಲಭೂತವಾದದ್ದೂ ಮುಖ್ಯವಾದದ್ದೂ ಆಗಿದೆ. ದಾಂಪತ್ಯ ಸಂಬಂಧದ ಮೂಲಕ ಅಸ್ತಿತ್ವಕ್ಕೆ ಬರುವ ಇದು ಸಂಸ್ಕೃತಿಯನ್ನು ರವಾನಿಸುವ ಒಂದು ಸಂಸ್ಥೆಯೂ ಆಗಿದೆ. ಈ ವ್ಯವಸ್ಥೆಯಲ್ಲಿ ಗಂಡನಿಗೆ ಹೆಂಡತಿ ಮತ್ತು ಹೆಂಡತಿಗೆ ಗಂಡ ತಕ್ಷಣದ ನಿಕಟ ಬಂಧು. ನಮ್ಮ ಸಾಂಪ್ರದಾಯಿಕ ಕುಟುಂಬಗಳಲ್ಲಿ ಒತ್ತು ಬಹುಮಟ್ಟಿಗೆ ಹೆಣ್ಣಿನ ಮೇಲಿದ್ದು, ಅದರ ಏರುಪೇರುಗಳೆಲ್ಲಾ ಹೆಣ್ಣನ್ನು ಅವಲಂಬಿಸಿರುವಂತೆ ಕಾಣುತ್ತದೆ. ಇಂಥ ಅನ್ಯೋನ್ಯತೆಯನ್ನು ಚಿತ್ರಿಸಲು ಬಂದಿರುವಂತಿದೆ ಈ ಗಾದೆ:

ಕೈ ಹಿಡಿದ ಹೆಂಡ್ರು
ಬೆನ್ನು ಹತ್ತಿದ ಚರ್ಮ

ಇದರಲ್ಲಿ ಹೆಂಡತಿಯನ್ನು ಅಧೀನಳೆಂದು ಭಾವಿಸಿದಂತೆ ತೋರಿದರೂ, ಕಡೆಗೆ ಆ ಅರ್ಥ ನಿಲ್ಲುವಂತೆ ಕಾಣುವುದಿಲ್ಲ. ದೇಹಕ್ಕೆ ಚರ್ಮ ಸೌಂದರ್ಯವನ್ನು ತಂದಿರುವುದಷ್ಟೇ ಅಲ್ಲದೆ, ಶರೀರದ ಶೀತೋಷ್ಣಗಳನ್ನು ಸಮಾನವಾಗಿರುವಂತೆ, ಅಂದರೆ ಒಂದು ವ್ಯವಸ್ಥೆಯಲ್ಲಿರುವಂತೆ ನೋಡಿಕೊಳ್ಳುತ್ತದೆ; ಅದು ಸ್ವಲ್ಪ ವ್ಯತ್ಯಾಸವಾದರೂ ಅಪಾಯ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಹೆಂಡತಿ ಸಂಸಾರಕ್ಕೆ ಒಂದು ಚೆಲುವನ್ನು ಸಂಪಾದಿಸಿಕೊಡುವುದಲ್ಲದೆ, ಅದರ ಸಮತೋಲನಕ್ಕೂ ಕಾರಣವಾಗುತ್ತಾಳೆ. ಸಂಸಾರದಲ್ಲಿಯ ಗಂಡ-ಹೆಂಡತಿಯರ ಅವಿಭಾಜ್ಯ ರೀತಿಯ ಅನಿವಾರ್ಯತೆಯನ್ನು ‘ಬೆನ್ನು ಹತ್ತಿದ ಚರ್ಮ’ ಒತ್ತಿ ಹೇಳುತ್ತದೆ. ಇಡೀ ಗಾದೆಯೇ ಒಂದು ರೂಪಕವಾಗಿ ನಿಲ್ಲುತ್ತದೆ.

ಗಾದೆಗಳು ತಮ್ಮ ರೂಪಕಗಳನ್ನು ದೈನಂದಿನ ಜೀವನಾನುಭವದಿಂದ ಎತ್ತಿಕೊಳ್ಳುವಂತೆ, ಪ್ರಕೃತಿಯ ಅನುಭವದಿಂದಲೂ ಆಯ್ದುಕೊಳ್ಳುತ್ತವೆ. ಹಾಗೆ ಪ್ರಕೃತಿಯಿಂದ ಆಯ್ದುಕೊಂಡಾಗ ಅದು ಪ್ರಕೃತಿ ಪ್ರಕ್ರಿಯೆಯ ಸ್ವಯಂಪೂರ್ಣ ಘಟಕವಾಗಿದ್ದು ಕೆಲಬಗೆಯ ತಿಳಿವನ್ನು ತಂದುಕೊಡುತ್ತವೆ. ಇಷ್ಟಕ್ಕೆ ಸೀಮಿತವಾಗದೆ ಅವು  ಮಾನವನ ಜೀವನಾನುಭವಕ್ಕೆ ವಿಸ್ತರಿಸಿಕೊಳ್ಳುತ್ತದೆ. ಉದಾಹರಣೆಗೆ, ‘ಸಸಿಲು’ ತೆಳ್ಳಗೆ ಬೆಳ್ಳಗೆ ಇರುವಂಥ ಒಂದು ಬಗೆಯ ಮೀನಾಗಿದ್ದು, ನೀರಿನ ಮೇಲು ಭಾಗದಲ್ಲೆ ಸದಾ ಮೋಹಕವಾಗಿ ಆಡುತ್ತಿರುತ್ತದೆ. ‘ಕೊರವ’ ತೋರ ಆಕಾರದ ಕಪ್ಪಗಿರುವ ಕೆಸರಿನಲ್ಲಿ ಅಡಗಿಕೊಂಡಿರುವ ಮತ್ತೊಂದು ಬಗೆಯ ಮೀನಾಗಿದ್ದು, ಮೇಲೆ ಬರದೆ ಹುದುಗಿಕೊಂಡಿರುತ್ತದೆ. ಮೀನು ಹಿಡಿಯುವವನು ‘ಸಸಿಲು’ ಮೀನಿಗೆ ಬಲೆಹಾಕಿದಾಗ ‘ಕೊರವ’ ಮೀನೂ ಸಿಕ್ಕಿಕೊಳ್ಳುತ್ತದೆ. ‘ಸಸಿಲು’ ಮೋಹಕವಾಗಿ ಮೇಲೆ ಓಡಾಡಿದ್ದೇ ಇದಕ್ಕೆ ಕಾರಣವಾಯಿತು. ಈ ಹಂತದಲ್ಲಿ ಇದೊಂದು ಅನುಭವ ಮಾತ್ರ. ಆದರೆ ಇದು ಮಕ್ಕಳ ಕಾರಣದಿಂದ ದೊಡ್ಡವರು ತಲೆಕೊಡಬೇಕಾದ ಮಾನವಾನುಭವಕ್ಕೆ ವಿಸ್ತರಿಸಿದಾಗ ಇದೊಂದು ರೂಪಕವಾಗಿ ಪರಿಣಮಿಸುತ್ತದೆ.

ಗಾದೆಗಳಲ್ಲಿ ರೂಪಕಾಲಂಕಾರದಂತೆಯೇ ಉಪಮಾಲಂಕಾರವೂ ಬಳಕೆಯಾಗಿದೆ. ಇಲ್ಲಿಯೂ ಪ್ರಕೃತಿ, ಪ್ರಾಣಿ, ದೈನಂದಿನ ವಸ್ತು ವಿಷಯಗಳು ಯಾವುದರಿಂದಲೂ ಉಪಮೆಗಳನ್ನು ಆರಿಸಿಕೊಳ್ಳಬಹುದು. ಜೀವನಾನುಭವವನ್ನು ದಟ್ಟದಾಗಿ ಚಿತ್ರಿಸುವುದಕ್ಕೆ ಉಪಮೆಗಳೂ ಸಾಕಷ್ಟು ಸಹಾಯ ಮಾಡಿವೆ. ಇದಕ್ಕೆ ‘ಕಪ್ಪೆ ತಕ್ಕಡಿಗೆ ಹಾಕಿದ್ಹಂಗೆ’ ಎಂಬ ಗಾದೆ ಒಂದು ನಿದರ್ಶನ. ಕಪ್ಪೆಯನ್ನು ತಕ್ಕಡಿಗೆ ಹಾಕಿದಂತೆಲ್ಲಾ ಕುಪ್ಪಳಿಸಿ ಹೊರ ಹಾರುವುದು ಅದರ ಸ್ವಭಾವ. ಮಾನವನ ಚಂಚಲ ಸ್ವಭಾವಕ್ಕೆ ಇದು ಹೋಲಿಕೆ. ಪ್ರಾಣಿ ಸ್ವಭಾವೊಂದರ ಮೂಲಕ ಮಾನವ ಸ್ವಭಾವೊಂದನ್ನು ಅತ್ಯಂತ ಸಮರ್ಥವೂ ಅಡಕವೂ ಆದ ರೀತಿಯಲ್ಲಿ ಚಿತ್ರಿಸಲಾಗಿದೆ.

ಅಲಂಕಾರಗಳಿಂದ ಗಾದೆಗಳು ಹೆಚ್ಚು ಕಲಾತ್ಮಕವಾಗಿರುತ್ತವೆ ಎಂಬುದು ನಿಜ. ಆದರೆ ಸ್ವಭಾವೋಕ್ತಿ ಗಾದೆಗಳೂ ಕೆಲವೊಮ್ಮೆ ಈ ಮಟ್ಟಕ್ಕೆ ತಲುಪುವುದಿದೆ. ಹಾಗೆ ನೋಡಿದರೆ ಸ್ವಭಾವೋಕ್ತಿಯೂ ಒಂದು ಅಲಂಕಾರವೇ. ಈ ಬಗೆಯ ಗಾದೆಗಳು ಯಾವುದೇ ರೀತಿಯ ರೂಪಕ ಉಪಮಾದಿಗಳನ್ನು ಬಳಸುವುದಿಲ್ಲ ;ಬದಲಾಗಿ, ಒಂದು ಅನುಭವ ಸ್ಮೃತಿಗೊಂಡಿರುತ್ತದೆ. ಈ ಗಾದೆಯನ್ನು ಗಮನಿಸಿ:

ಅವ್ವನಿಗೆ ಹೊಟ್ಟೆಕಡೆಗ್ಯಾಗ
ಹೆಂಡ್ರಿಗೆ ಮೊಟ್ಟೆಕಡೆಗ್ಯಾನ

ಇದಕ್ಕೆ, ತಾಯಿ ಹೊಟ್ಟೆ ನೋಡಿದಳು

ಹೆಂಡತಿ ಮೊಟ್ಟೆ ನೋಡಿದಳು

ಎಂಬ ಬೇರೊಂದು ಪಾಠವೂ ಇದೆ. ತಾಯಿಯಾದವಳು ತನ್ನ ಮಗ ಊಟಮಾಡಿದನೆ ಇಲ್ಲವೆ ಎಂದು ಸದಾ ಅವನ ಹೊಟ್ಟೆಯನ್ನೆ ನೋಡುತ್ತಿರುತ್ತಾಳೆ. ಆದರೆ ಹೆಂಡತಿಗೆ ಗಂಡ ತಂದ ಮೊಟ್ಟೆ ಕಡೆಗೆ ಗಮನವಿರುತ್ತದೆ ; ‘ಮೊಟ್ಟೆ’ ಎಂದರೆ ಹಣದ ಗಂಟು. ಒಬ್ಬಳು ಆರೋಗ್ಯವನ್ನು ನೋಡಿದರೆ, ಮತ್ತೊಬ್ಬಳು ಸಂಪತ್ತನ್ನು ಅಪೇಕ್ಷಿಸುತ್ತಾಳೆ. ತಾಯಿಗೂ ಹೆಂಡತಿಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಗಾದೆ ಹೇಳುತ್ತದೆ. ಇಲ್ಲಿ ಅಭಿವ್ಯಕ್ತಿಗೊಂಡಿರುವ ಅನುಭವ ಸಾರ್ವಕಾಲಿಕವಾಗಿರುವಂತೆ  ತೋರುವುದು. ಇದನ್ನು ಚಿತ್ರಿಸಲು ಗಾದೆ ವೈದೃಶ್ಯ ತಂತ್ರವನ್ನು ಬಳಸಿಕೊಂಡಿದೆ. ಗಾದೆಯಲ್ಲಿ ‘ಹೊಟ್ಟೆ’ ಮತ್ತು ‘ಮೊಟ್ಟೆ’ಗಳು ಪ್ರಾಸ ಸ್ಥಾನದಲ್ಲಿದ್ದು, ಇವುಗಳ ಮೇಲೆ ಸಹಜವಾಗಿಯೇ ಒತ್ತು ಬಿದ್ದಿದೆ.

ಗಾದೆಗಳಲ್ಲಿ ಕಾಣಿಸಿಕೊಳ್ಳುವ ಮತ್ತೆರಡು ವಿಶೇಷಗಳೆಂದರೆ ವಿಡಂಬನೆ ಮತ್ತು ಹಾಸ್ಯ. ಇವು ಕೆಲವು ಸಮಯದಲ್ಲಿ ಹಾಸುಹೊಕ್ಕಾಗಿರುವುದೂ ಉಂಟು. ಇವುಗಳಲ್ಲಿ ಭಾಷೆಯ ಮೊನಚು ಮತ್ತು ಭಾವದ ಬನಿ ಸೊಗಸಾಗಿ ಗೋಚರಿಸುವ ಎರಡು ವಿಶಿಷ್ಟಾಂಗಗಳು. ಯಾರನ್ನಾದರೂ ಹೀಯಾಳಿಸುವಾಗ, ಬೈಯುವಾಗ ಶಾಪ ಹಾಕುವುದಿದೆ. ಹೆಂಗಸರು ಜಗಳಕ್ಕೆ ನಿಂತುಕೊಂಡಾಗ ಹಳ್ಳಿಯ ಪರಿಸರದಲ್ಲಿ ಈ ಬಗೆಯ ಶಾಪ ಮೇಲಿಂದ ಮೇಲೆ ಗೋಚರವಾಗುವುದು. ಈ ಸಮಯದಲ್ಲಿ ಬೈದ ವ್ಯಕ್ತಿಗೆ ಮತ್ತೊಂದು ವ್ಯಕ್ತಿ ಪ್ರತಿಕ್ರಿಯೆ ನೀಡುವ ಪರಿಯಿದು:

ದುಡುವಂತೆ ಧೂಪ ಹಾಕಿದ್ರೆ
ಗುಡಿ ಕಲ್ಲೆಲ್ಲ ದಡಾರ್ ಅಂದೊ

ಈ ವಿಡಂಬನೆ ಚಾಟಿಯೇಟಿಗೇನೂ ಕಡಮೆಯಿಲ್ಲ. ಇಲ್ಲಿಯ ಪದಗಳ ಧಾಟಿ ಅಂಥದು. ಅಭಿವ್ಯಕ್ತಿಯ ತೀವ್ರತೆಯೇ ಗಾದೆಯ ಅರ್ಥವಂತಿಕೆಯನ್ನು ಹೇಳುತ್ತದೆ. ಶಾಪದ ಪರಂಪರೆಗೆ ಪ್ರತಿರೋಧ ಸೂಚಿಸುವಂತಿದೆ ಪ್ರಸ್ತುತ ಗಾದೆ. ಶಾಪದ ವಿಫಲತೆಯನ್ನು ವ್ಯಂಗ್ಯದ ಮೂಲಕ ಸೂಚಿಸುವಂತಿದೆ ಈ ಮಾತು. ಸಂಸ್ಕೃತಿಯ ಶೋಧಕ್ಕೂ ಈ ಗಾದೆ ಉದಾಹರಣೆಯಾಗಬಲ್ಲುದು. ಒಳಗೆ ಏನೂ ಇಲ್ಲಿದಿದ್ದರೂ ಮೇಲೆ ಮಾತ್ರ ಜಂಬದ ನಟನೆಯಿಂದ ಗಾದೆಗಳಿಗೇನೂ ಕೊರತೆಯಿಲ್ಲ. ನಟನೆಯನ್ನೇ ಜೀವನ ಸಂಗಾತಿ ಮಾಡಿಕೊಂಡಿರುವುದರ ಬಗ್ಗೆ ಉಕ್ತಿ ಕೊಡುತ್ತದೆ ಈ ಗಾದೆ:

ಬಡಾಯ ನೋಡಿದ್ರೆ ಕಡಾಯ ಗಾತ್ರ
ಕಡಾಯದಲ್ಲಿ ಒಕ್ಕಳರಾಗಿಲ್ಲ

ಅಪ್ಪಟ ಬಡಾಯಗಾರರನ್ನು ದೃಷ್ಟಾಂತಗಳ ಮೂಲಕ ಚಿತ್ರಿಸುವ ಈ ಪರಿಯ ಗತ್ತು ಗಾದೆಗಳಿಗೆ ಮಾತ್ರ ಸಾಧ್ಯ. ಭಾವ ಮತ್ತು ಭಾಷೆಯ ವಿದ್ಯುದಾಲಿಂಗವನ್ನೇ ಇಲ್ಲಿ ನೋಡುತ್ತೇವೆ. ವಿಡಂಬನೆಗಳ ಚಿತ್ರಿತ ಸೃಷ್ಟಿಯ ರೀತಿಗೂ ಇದು ನಿದರ್ಶನ. ಮಾತು ಮತ್ತು ಮನಸುಗಳು ಒಂದಾದರೆ ಮಾತ್ರ ಇಂಥ ಅಭಿವ್ಯಕ್ತಿ ಸಾಧ್ಯ. ಇದೇ ಅರ್ಥವನ್ನು ಧ್ವನಿಸುವಂತಿದೆ. ‘ಬಟ್ಟೆ ಬರಿಯಲ್ಲಿ ದಿಟ್ಟಸಾರ, ಹೊಟ್ಟೆಗಿಲ್ಲವಲ್ಲ ನನ್ನ ಬಟ್ಕಾಳ’ ಗಾದೆ. ಎರಡರಲ್ಲೂ ಚಿತ್ರಿತವಾಗಿರುವುದು ಒಂದು ತೋರಿಕೆಯ ಸಂಸ್ಕೃತಿ ಮತ್ತು ಅದನ್ನು ಒಪ್ಪದ ಜನಮಾನಸದ ನಿಲುವು.

ಗಾದೆಗಳಲ್ಲಿ ಹಾಸ್ಯವೂ ಒಂದು ವಸ್ತುದ್ರವ್ಯ. ಸಾಮಾನ್ಯವಾಗಿ ಇದರಲ್ಲಿ ಎರಡು ಬಗೆಗಳಿರುತ್ತವೆ: ಒಂದು, ಯಾವುದೇ ಮರ್ಮವಿಲ್ಲದೆ ನಕ್ಕುನಗಿಸಬಲ್ಲವು ; ಎರಡು, ವಿಡಂಬನೆಯನ್ನು ಹುದುಗಿಟ್ಟು ಹಾಸ್ಯ ಲೇಪಿತವಾದಂಥವು. ಅನೌಚಿತ್ಯದಿಂದ ಹಾಸ್ಯ ಹುಟ್ಟುತ್ತದೆ ಎಂದು ಹೇಳುತ್ತಾರೆ. ಗಾದೆಗಳಲ್ಲಿಯೂ ಇದು ಪ್ರವೇಶವಾಗಿ ನಗೆಯನ್ನು ಉಕ್ಕಿಸಬಲ್ಲವು. ಇದಕ್ಕೆ ಸಾಕ್ಷಿಯಾಗಿ ಕೆಳಗಿನ ಎರಡು ಗಾದೆಗಳನ್ನು ನೋಡಬಹುದು:

ಕಸಿರಿಪಿಸಿರಿ ತಿಂದು ಕಿಸ್ಕೊಂಡು ಬಿದ್ದವನೆ ಹಣತೆ ಹಿಡೀರಿ;
ಹವಣಕ್ಕೆ ತಿಂದಿದ್ದರೆ ಅವನ್ಯಾಕೆ ಬೀಳೋನು ಹಟ್ಟಿಗೆ ಹಿಡೀರಿ

ಮೋಜು ಬಂದಾದ ಮೊಗ ಕ್ವಾರೆ ಅಂದ
ನನ್ಗೂ ಮೋಜು ಬಂದಾದೆ
ಕದಿನ ಮೂಲ್ಗೆ ಬಿಸ್ಹಾಕಿ ಅಂದ್ಲು

ಇಂತಹ ಹಲವಾರು ಹಾಸ್ಯಗಾದೆಗಳಲ್ಲಿ ಎದ್ದು ಕಾಣುವ ವಿಶೇಷವೆಂದರೆ ಅದರ ನವಿರಾದ ಸಂಭಾಷಣೆ; ಉಕ್ತಿ ಚಮತ್ಕಾರ. ಗಾದೆಯ ಕಲಾಕೌಶಲಕ್ಕೂ ಇಂತಹ ಗಾದೆಗಳು ನಿದರ್ಶನವಾಗಬಲ್ಲುವು. ಒಟ್ಟಾರೆ ಇಲ್ಲಿಯ ಅಭಿವ್ಯಕ್ತಿಯ ಸೊಗಸು ಸಂಬಂಧಿಸಿದ ಗಾದೆಗಳನ್ನು ಲವಲವಿಕೆಯಿಂದ ಇರಿಕಿಕೊಂಡಿರುವುದು ಸ್ಪಷ್ಟವಾಗುತ್ತದೆ. ಮಾನವ ತನ್ನ ಮನಸ್ಸನ್ನು ಹಸುರ ಮಾಡಿಕೊಳ್ಳುವುದಕ್ಕೆ ಹಾಸ್ಯವನ್ನು ಮೊದಲಿನಿಂದಲೂ ಬೆಳಸಿಕೊಂಡ. ಗಾದೆಗಳ ಸಾಹಿತ್ಯಿಕ ಮೌಲ್ಯದಲ್ಲಿ ಮನರಂಜನೆಯ ಪಾತ್ರವನ್ನೂ ಮರೆಯುವಂತಿಲ್ಲ. ‘ಹಾಸ್ಯವಿದ್ದರೂ ಅನುಭವದಿಂದ ವಂಚಿತವಾಗಿಲ್ಲ. ಗಂಡಹೆಂಡಿರ ಸರಸಕ್ಕೆ ಸಂದರ್ಭಕ್ಕೆ ಗಾದೆ ಒಂದು ಚೌಕಟ್ಟು ಕೊಟ್ಟಿದೆ. ಪದಗಳ ವಿವರಣೆ ಕೂಡ ಇದಕ್ಕೆ ಅನುಕೂಲವಾಗಿ ಕೆಲಸಮಾಡಿದೆ. ಇಂತಹ ತಿಳಿಹಾಸ್ಯದ ಒಡಲಿನಲ್ಲಿಯೇ ವಿಡಂಬನೆ ಸ್ಫೋಟಕವನ್ನು ಮರೆಮಾಚಿ ಬರುವ ಗಾದೆಗಳಿಗೆ ಅಭಾವವೇನೂ ಇಲ್ಲ:

ಸಾಯ್ತೀನಿ ಸಾಯ್ತೀನಿ ಅಂತ
ಸಾವಿರ ಕೋಳಿ ತಿಂದನಂತೆ

ಯಾವುದು ಆಗಿಲ್ಲವೊ ಅದನ್ನು ಆಗಿದೆ ಎಂದು ಹೇಳುತ್ತದೇ ಮೂಲ ಕ್ರಿಯೆಯ ಮೇಲೆ ಒತ್ತು ತರುವುದು ಈ ಗಾದೆಯ ಲಕ್ಷಣವಾಗಿದೆ. ಗಾದೆಗಳ ಆಕರ್ಷಕ ಮಾಟಕ್ಕೆ ಸರಳತೆ ಸೆರೆಹಿಡಿಯಬಲ್ಲ ಗುಣವಾದಂತೆ, ಅದರ ಹಾಸ್ಯಪ್ರವೃತ್ತಿ ನಕ್ಕುನಗಿಸಬಲ್ಲ ವೈಶಿಷ್ಟ್ಯವಾಗುತ್ತದೆ. ಹಾಸ್ಯಕ್ಕೆ ಜೋಡಿಯಾಗಿ ವಿಡಂಬನೆ ಮೊನಚನ್ನೂ ಹರಿತವನ್ನೂ ತಂದುಕೊಡುವುದು. ಹಾಸ್ಯ ಕೊನೆಗೆ ಹಾಸ್ಯವಾಗಿಯೇ ಉಳಿಯದೆ ಗಂಭೀರ ಜ್ಞಾನದ ಪಾದರಸವಾಗಿ ಉಳಿದುಕೊಳ್ಳುತ್ತದೆ. ಇಂತಹ ಗಾದೆಗಳು ಹಾಸ್ಯದ ಮುಸುಕಿನಲ್ಲಿದ್ದರೂ ಅನುಭವದ ವರ್ಣಚಿತ್ರಗಳಾಗುತ್ತವೆ.

ಗಾದೆಗಳಲ್ಲಿ ಹೆಣ್ಣನ್ನು ಕುರಿತವು ಒಂದು ವರ್ಗವಾಗುತ್ತದೆ. ಜಾನಪದ ವಕ್ತಾರರು ಹೆಣ್ಣನ್ನು ತಾಯಾಗಿ, ಹೆಂಡತಿಯನ್ನು, ಅತ್ತೆಯಾಗಿ, ಸೊಸೆಯಾಗಿ, ವೇಶ್ಯಯಾಗಿ – ಹೀಗೆ ಹಲವಾರು ವಿಧಗಳಲ್ಲಿ ಕಂಡಿದ್ದಾರೆ. ವೇಶ್ಯೆಯ ಬಗೆಗಂತು ಹೇರಳವಾದ ಚಿತ್ರಗಳು ದೊರೆಯುತ್ತವೆ. ಸಮಾಜದ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಇಂತಹ ಟೀಕೆಗಳು ಬಂದಿರಬಹುದು. ಅತ್ತೆ ಸೊಸೆಯರಿಗೆ ಸಂಬಂಧಿಸಿದಂತೆ ಹೆಚ್ಚು ಕಡಿಮೆ ಇಷ್ಟೇ ಸಂಖ್ಯೆಯ  ಗಾದೆಗಳು ಸಿಗುತ್ತವೆ. ಅವರ ನೂರಾರು ಸ್ತರಗಳ ಚಿತ್ರಗಳು ಲಭ್ಯವಾಗುತ್ತವೆ. ಅತ್ತೆ ಸೊಸೆಯರ ಕಾದಾಟಕ್ಕೆ ಸಂಬಂಧಿಸಿದ ಒಂದು ಗಾದೆ ಹೀಗಿದೆ:

ಅತ್ತೆಗೆ ಸೊಸೆ ಮುಚ್ಚಳದಲ್ಲಿ ಉಣ್ಣಿಸ್ತೀನಿ ಅಂದಳಂತೆ,
ಅತ್ತೆ: ನೀನು ಮುಚ್ಚಳದಲ್ಲಿ ಕೊಟ್ಟರೆ,
ನಾನು ನಿನಗೆ ಮೊಗೇಲಿ ಕೊಡ್ತೀನಿ ಅಂದಳಂತೆ

ಸೊಸೆಯನ್ನು ಸರಿಯಾಗಿ ನೋಡಿಕೊಂಡ ಅತ್ತೆ ಸಿಗುವುದು ವಿರಳ ಎಂಬ ಅಭಿಪ್ರಾಯ ಜನಪದರದು. ಇಂತಹ ಅತ್ತೆಯ ಕಾಠಿಣ್ಯವನ್ನು ಗಾದೆಗಳು ಹಲವಾರು ರೀತಿಯಲ್ಲಿ ಚಿತ್ರಿಸುತ್ತವೆ. ಅವಳ ಕಲ್ಲಿನಂಥ ಹೃದಯವೂ ಕರಗುವ ಪ್ರಸಂಗ ಬರದೆ ಇಲ್ಲ. ಅದನ್ನು,

ಸೊಸೆ ಸತ್ತ ಮೇಲೆ ಅತ್ತೆಯೂ ಅತ್ತಳಂತೆ

ಎಂಬ ಗಾದೆ ತಂದುಕೊಡುವುದು. ಅತ್ತೆ ಸೊಸೆಯಾಗಿ ಅತ್ತಳೋ ಅಥವಾ ತನಗೆ ಕಷ್ಟಬಂತಲ್ಲ ಎಂದು ಅತ್ತಳೋ ಹೇಳುವುದು ಕಷ್ಟ. ಅವಳು ಅತ್ತದ್ದು ಅವಳಿಗೂ ಮಾನವೀಯತೆ ಇದೆ ಎಂಬುದನ್ನು ಸಮರ್ಥಿಸುವುದೇ ಹೆಚ್ಚು.

ಹೆಣ್ಣನ್ನು ಕುರಿತ ಇಂಥ ಗಾದೆಗಳಲ್ಲಿ ಒಂದು ಕೊರತೆಯೆಂದರೆ ಆಕೆಯನ್ನು ಸಹಾನುಭೂತಿಯಿಂದ ನೋಡದಿರುವುದು. ಹೆಣ್ಣಿನ ಬಗ್ಗೆ ಆಕ್ಷೇಪಣೆಗಳ ಪಟ್ಟಿಯೇ ಜಾಸ್ತಿಯಾಗಿರುವಂತೆ ಕಂಡುಬರುವುದು. ಅವಳ  ಪೂರ್ಣ ವ್ಯಕ್ತಿತ್ವ ಗಾದೆಗಳಲ್ಲಿ ಸಿಗುವುದು ಅಪರೂಪ. ಅವಳನ್ನು ಸಮಗ್ರ ದೃಷ್ಟಿಯಲ್ಲಿ ನೋಡದಿರುವುದೇ ಇದಕ್ಕೆ ಕಾರಣ. ಅವಳ ಕರುಣೆಯ ಸುಂದರ ಚಿತ್ರವಿರಳವಾಗಿಯೂ ಸಿಗುವುದು ಸಮಾಧಾನದ ವಿಷಯ. ಇದರಲ್ಲಿ ತಾಯಿಯ ಚಿತ್ರ ಉದ್ಧರಿಸಲು ಯೋಗ್ಯವಾದುದು. ಮಕ್ಕಳನ್ನು ಹೆತ್ತು ಹೆರವರ ಮನೆಗೆ ಕಳುಹಿಸುವ ಚಿತ್ರ ಜನಪದ ಸಾಹಿತ್ಯದಲ್ಲಿ ಅವಿಸ್ಮರಣೀಯ ಉಲ್ಲೇಖ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂಬ ಗಾದೆ ಪ್ರಸಿದ್ಧವಿದೆಯಷ್ಟೆ. ಹೀಗೆ ಬಾಳಬೇಕಾದ ಹೆಣ್ಣನ್ನು ಹೆತ್ತು ಗಂಡನ ಮನೆಗೆ ಕಳುಹಿಸಿದ ಮೇಲೆ ಮತ್ತೇನೋ ಆಘಾತದಿಂದ ಮತ್ತೆ ತೌರನ್ನು ಆಶ್ರಯಿಸಬೇಕಾಗಿ ಬಂದಾಗ ಪಡೆದ ತಾಯಿ ನೂಕುತ್ತಾಳೆಯೇ, ಇಲ್ಲ;

ತೋಡಿಕೊಳ್ಳುತ್ತಾಳೆ.

ಆವೊತ್ತು ಹೊಟ್ಟೆ ಹಿಡಿಸಿದ್ದು
ಇವೊತ್ತು ಮನೆ ಹಿಡಿಸದೆ?

ಒಂಬತ್ತು ತಿಂಗಳು ಹೊತ್ತು ಸಾಕಿದ ಹೊಟ್ಟೆ ವ್ಯಕ್ತಪಡಿಸುವ ಈ ಮಾತು ಅನನ್ಯವಾದುದೇ ಸರಿ. ಜನಪದ ಸಾಹಿತ್ಯದಲ್ಲಿ ಹೆಣ್ಣು, ತೌರು, ತಾಯಿ ಮುಂತಾದ ಮಾತುಗಳಿಗೆ ಇನ್ನಿಲ್ಲದ ಅರ್ಥವಿದೆ ; ಅಸದೃಶವಾದ ಸಂಬಂಧವಿದೆ.

ಈ ತರಹದ ಗಾದೆಗಳಲ್ಲಿ ಮತ್ತೊಂದು ಗಮನ ಸೆಳೆಯುವ ವ್ಯಕ್ತಿಯೆಂದರೆ ಬಂಜೆ. ಸಮಾಜ ಈಕೆಯನ್ನು ಕೆಕ್ಕರಿಸಿಕೊಂಡು ನೋಡಿದೆ. ಅವಳಷ್ಟು ನತದೃಷ್ಟ ವ್ಯಕ್ತಿ ಬೇರೆ ಯಾರೂ ಇರಲಾರರು. ಇಹದಲ್ಲಿ ಅವಳಿಗೆ ಸುಖವಿಲ್ಲ. ಪರದಲ್ಲಿ ಮೋಕ್ಷವಿಲ್ಲ ; ಸ್ವರ್ಗದ ಬಾಗಿಲು ತೆರೆಯುವುದಿಲ್ಲ. ಹೀಗೆಲ್ಲ ನಂಬಿಕೆಗಳ ಮಧ್ಯೆ ಆಕೆ ಕತ್ತಲೆಯ ಮುದ್ದೆ. ಜನಪದ ಗಾದೆಯೆಂದು ಅದನ್ನು ಚಿತ್ರಿಸುವ ರೀತಿ  ಇದು:

ಪಡೆದವಳಿಗೆ ಪಟ್ಟೇ ಸೀರೆ
ಪಡೆಯದವಳಿಗೆ ಮುತ್ತುಗದ ಹಾಳೆ

ಮಕ್ಕಳಿದ್ದವಳಿಗೆ ಒಂದು ಉಪಚಾರ; ಮಕ್ಕಳಿಲ್ಲವಳಿಗೆ ಬೇರೊಂದು ವಿಚಾರ. ಸಂತಾವಿಲ್ಲದವಳನ್ನು ಸಂಪ್ರದಾಯ ತುಂಬ ಹೀನಾಯವಾಗಿ ನಡೆಸಿಕೊಂಡಿದೆ. ಮಕ್ಕಳಿಲ್ಲದ್ದಕ್ಕೆ ಗಂಡೂ ಕಾರಣವಾಗಬಲ್ಲ ಎಂಬ ವಿಚಾರವನ್ನೇ ಸಾಂಪ್ರದಾಯಿಕ ಜಗತ್ತು ಮರೆತಂತಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣೆ ಶೋಷಣೆಗೆ ಒಳಗಾದವಳು ; ಅಲ್ಲಿಯೇ ಇನ್ನೂ ಹೆಚ್ಚಿನ ಶೋಷಣೆಗೆ ಒಳಗಾದವಳ ವಿಷಾದನೀಯ ಚಿತ್ರವಿದು.

ಗಾದೆಗಳ ಭಾಷೆ ಮತ್ತು ಅಭಿವ್ಯಕ್ತಿಯನ್ನು ಕುರಿತು ಪರಿಭಾವಿಸುವ ಅಗತ್ಯವಿದೆ. ನಾಗರಿಕರ ನಯಗೊಂಡ ಭಾಷೆಗಿಂತ ಭಿನ್ನ ಸ್ವರೂಪದ ಭಾಷೆಯೇ ಗ್ರಾಮೀಣರ ಭಾಷೆ. ಹೆಚ್ಚು ಜೀವಂತವಾದ ಶಕ್ತವಾದ ಭಾಷೆಯೇ ಇದು. ಭಾಷೆಯ ನಿಜವಾದ ಜೀವಾಳವನ್ನು ಕಾಣಬೇಕಾದರೆ ಈ ಗ್ರಾಮ್ಯ ಭಾಷೆಗೇ ಹೋಗಬೇಕು. ಭಾಷೆಯನ್ನು ಬೆಳೆಸತಕ್ಕವರು ಸಾಮಾನ್ಯ ಮನುಷ್ಯ ಮತ್ತು ಸಹಜಕವಿ ಇಬ್ಬರೇ. ಗಾದೆಗಳ ರಚನಕಾರ ಸಾಮಾನ್ಯ ಮನುಷ್ಯ ಇವರಿಬ್ಬರ ಮೂಲ ಸ್ವಭಾವಿರುವುದರಲ್ಲಿ ಸಂದೇಹವಿಲ್ಲ. ನಾಗರಿಕ ಭಾಷಾ ಜಗತ್ತಿನಲ್ಲಿ ಕಾಣದ ಬಳಸದ ಎಷ್ಟೋ ಅಪೂರ್ವ ಪದಗಳು ಗಾದೆಗಳಲ್ಲಿ ಇನ್ನೂ ಜೀವಂತವಾಗಿದೆ. ಉದಾಹರಣೆಗೆ, ಇಡಗರ, ಅಡಾಣಿ, ಆಪಾಟಿ, ಆಸಾದಿ, ಈಟು, ಉಕ್ಕೆ, ಉಪ್ಪಾರ, ಎಕ್ಕಸಾರೆ, ಎಸರು, ಒಡಾಳೆ, ದೊಪ್ಪೆ, ಕಟಪಟಿ, ಕಡಾಯ, ಕಂಟು, ಕ್ಯಾತೆ, ಕೂಡಾವಳಿ, ದೂಡೆ, ತರುವಳಿ, ವೆತ್ತಿ, ತೊಪ್ಪೆ, ನಿಸೂರು, ಪಡ್ಡೆ, ಬರಕತ್ತು, ಬಿಕನಾಸಿ, ಯಾಳ್ಯ ನೇಕು, ಸಾಲಾವಳಿ ಇತ್ಯಾದಿಯಾಗಿ ಪಟ್ಟಿಮಾಡುತ್ತಾ ಹೋಗಬಹುದು. ಈ ಬಿಡಿ ಬಿಡಿ ಪದಗಳಿಂದಲೇ ಗಾದೆಯ ಭಾಷೆಗೆ ಹೊಸ ಆಯಾಮ ಬಂದಿದೆ ಎಂದಲ್ಲ, ಅದರ ಇಡೀ ಅಭಿವ್ಯಕ್ತಿಯೇ ಹಾಗೆ ಇದೆ ಎಂದು ಹೇಳಬೇಕಾಗುತ್ತದೆ.

ಸಾಮಾನ್ಯವಾಗಿ ಗಾದೆಗಳು ಭಾವಕ್ಕೆ ತಕ್ಕಂತೆ ಭಾಷೆಯನ್ನು ದುಡಿಸಿಕೊಳ್ಳುತ್ತವೆ. ಅಭಿವ್ಯಕ್ತಿ ಕೇವಲ ನಿರೂಪಣೆಯಾದಾಗ ಕೂಡ ಭಾಷೆ ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. ಗಾದೆಗಳ ಅಭಿವ್ಯಕ್ತಿಗೆ ಎರಡು ಪ್ರಧಾನ ಗುಣಗಳಿವೆ ; ಧ್ವನಿಯ ಮೂಲಕ ಶಕ್ತಿಯನ್ನು ಹೊರೆಯುವುದು ಮತ್ತು ಸಂಭಾಷಣೆಯ ಮೂಲಕ ವೈವಿಧ್ಯವನ್ನು ಸಾಧಿಸುವುದು. ರೂಪಕಾದಿ ಕಾವ್ಯಾಲಂಕಾರಗಳನ್ನು ಬಳಸಿ ಶೈಲಿ ವಿಶಿಷ್ಟವಾಗುವಂತೆ ಮಾಡಲು ಸೂಚ್ಯ ವಿಧಾನವೇ ಮೊದಲನೆಯದು. ಅಭಿವ್ಯಕ್ತಿಯ ಅತ್ಯುತ್ತಮ ಪರಿಕ್ರಮವೇ ಇದು. ಗಾದೆಗಳ ಇಂತಹ ಕಲಾತ್ಮಕತೆಗೆ ಹಲವು ನಿದರ್ಶನಗಳು ಸಿಗುತ್ತವೆ. ಗಾದೆಗಳ ಜನಪ್ರಿಯತೆಗೆ ಮತ್ತು ಶ್ರೇಷ್ಠತೆಗೆ೩ ಕಾರಣವಾಗುವಂಥವು ಇವು. ಜೀವನವನ್ನು ಪರಿಣಾಮಕಾರಿಯಾಗಿ ಪರಿಭಾವಿಸುತ್ತವೆ ಕೂಡ ಇವು. ನಿದರ್ಶನವಾಗಿ ಈ ಕೆಳಗಿನ ಗಾದೆಯನ್ನು ಪರಿಶೀಲಿಸಿ:

ಅತ್ತೆ ಮನೇಲಿ ಹೆಂಗಿದ್ದಿ ಮಗಳೆ ಅಂದ್ರೆ
ಮಳ್ಳಾಗೆ ಹಾದಿ ನಡೆದ್ಹಂಗೆ
ಮೊಳಕೈಗೆ ಚಿಲಕ ಹೊಡೆದ್ಹಂಗೆ

ಅತ್ತೆ ಮನೆಯಲ್ಲಿಯ ಸೊಸೆಯೊಬ್ಬಳ ಅನುಭವ ಕಥನವಿದು. ಇದನ್ನು ಚಿತ್ರಿಸಲು ಎರಡು ಉಪಮಾಲಂಕಾರಗಳನ್ನು ಬಳಸಿಕೊಳ್ಳಲಾಗಿದೆ. ಮರಳಿನಲ್ಲಿ ಹಾದಿ ನಡೆದ ಅನುಭವ ಒಂದರಲ್ಲೂ, ಮೊಣಕೈಗೆ ಚಿಲಕ ತಾಗಿಸಿಕೊಂಡ ಅನುಭವ ಮತ್ತೊಂದರಲ್ಲೂ ಇದೆ. ಮರಳಿನಲ್ಲಿ ಹೆಜ್ಜೆ ಇಟ್ಟಾಗ ಹಿಂದಕ್ಕೆ ಸರಿದಂತಾಗಿ, ಹೂತುಕೊಂಡಂತಾಗಿ ಮುಂದಕ್ಕೆ ನಡೆಯುವುದೆ ಕಷ್ಟವಾಗುತ್ತದೆ. ಬಾಗಿಲಿನ ಚಿಲಕ ಮೊಣಕೈಗೆ ತಾಗಿದಾಗಲಂತೂ ಪ್ರಾಣವೇ ಹೋದಂತಾಗುತ್ತದೆ. ಹೀಗೆ ಆ ಹೆಣ್ಣುಮಗಳ ಜೀವನ ಮುನ್ನಡೆಯಲು ದುಸ್ತರವಾಗಿ ಮತ್ತು ಅತ್ಯಂತ ನೋವಿನದಾಗಿ ಇತ್ತೆಂಬುದು ಇದರ ಒಬ್ಬರ ಅರ್ಥ. ಆಲಂಕಾರ ಅಭಿವ್ಯಕ್ತಿ ಗಾದೆಗೆ ಗಟ್ಟಿತನವನ್ನೂ ಸಂವಾದರೂಪ ಅದಕ್ಕೆ ಮತ್ತಷ್ಟು ಉಕ್ತಿಮತೆಯನ್ನೂ ತಂದುಕೊಟ್ಟಿದೆ.

ಗಾದೆಯ ಭಾಷಾಭಿವ್ಯಕ್ತಿಯ ಪ್ರಸ್ತಾಪದಲ್ಲಿ ಅದರ ನಾಟಕೀಯತೆಗೂ ಮುಖ್ಯವಾದುದಾಗಿದೆ. ಸಂಭಾಷಣೆಯ ರೀತಿಗಳಲ್ಲಿ ಕಾಣಿಸಿಕೊಳ್ಳುವ ಇಂತಹ ಗಾದೆಗಳೆ ಒಂದು ಗುಂಪಾಗುತ್ತವೆ. ಭಾಷಾವೈವಿಧ್ಯ ಮತ್ತು ಪ್ರಾದೇಶಿಕತೆಗಳು ಇವುಗಳ ಮೂಲಗುಣ; ಹಾಸ್ಯವೇ ಇವುಗಳ ಸ್ಥಾಯಿಭಾವ. ಮನರಂಜನೆಯ ಇಂತಹ ಗಾದೆಗಳ ಮುಖ್ಯ ಉದ್ದೇಶ. ಸಂಕ್ಷಿಪ್ತವಾಗಿರುವುದಕ್ಕಿಂತ  ಇವು ದೀರ್ಘವಾಗಿರುತ್ತದೆ ; ಸಾಂದ್ರಶಕ್ತಿ ಇವಕ್ಕಿಲ್ಲವಾದರೂ ಚೆನ್ನಾಗಿ ರಂಜಿಸುತ್ತದೆ. ಮೂರು ಉದಾಹರಣೆಗಳು ಇಲ್ಲಿವೆ:

ಅಜ್ಜಿ ಮಜ್ಜಿಗೆ ಕುಡಿದ್ಲು,
ಅಜ್ಜ ಏನೆಂದ ‘ಎಮ್ಮೆಕಲಗಚ್ಚುಜ ಕುಡಿದ್ಹಂಗೆ’ ಅಂದ.

‘ಮುಚ್ಚಗಣ್ಣಿ ಮುಚ್ಚಗಣ್ಣಿ

ಮುಚ್ಚಳ ಎಲ್ಲಿ ಮಡಗಿದ್ದಿ‘ ಅನ್ನೊವತ್ಗೆ
‘ಎತ್ತಾಗಿತ್ತು ಕೇನು ಅಂತ
ಎತ್ತಿನ ಕಾಲ್ದಸೇಲಿ ಮಡಗಿವ್ನಿ’ ಅಂದ್ಲಂತೆ.

ಚಂದಕೆ ನನಮಗ ಚೆಲುವೆ ಅಂದೊತ್ತಿಗೆ
ಹಂಗೆ ನನ ಜೀಮ ಅರದೋಯ್ತು

ಜನಸಾಮಾನ್ಯರ  ಭಾಷೆಗೆ ಅನಂತ ಶಕ್ತಿ ಇದೆ ಎನ್ನುವುದಕ್ಕೆ ಇಂತಹ ಗಾದೆಗಳು ನಿದರ್ಶನಗಳಾಗುತ್ತವೆ. ವಿಷಯವನ್ನು ನಾಟಕೀಯವಾಗಿ ಹೇಳುವುದರಲ್ಲಿ ಗಾದೆಯ ರಚನಕಾರರು ನಿಸ್ಸೀಮರು. ವಿಷಯದಲ್ಲಿಯ ಅಸಂಬದ್ಧತೆಯನ್ನು  ಭಾಷೆ ಚೆನ್ನಾಗಿ ಪಡಿಮೂಡಿಸಿದೆ; ಆ ಮೂಲಕ ನಗೆಗೂ ಕಾರಣವಾಗುತ್ತದೆ. ಇಷ್ಟಾದರೂ ಇಂತಹ ಗಾದೆಗಳು ಭಾವಕ್ಕಿಂತ ಭಾಷೆಯ ದೃಷ್ಟಿಯಿಂದಲೇ ಹೆಚ್ಚು ಗಮನಾರ್ಹ.

ಗಾದೆಯ ಲಕ್ಷಣವನ್ನು ಕುರಿತು, ‘ಗಾದೆ ವೇದಕ್ಕೆ ಸಮಾನ’, ‘ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ’ ಎಂಬ ಗಾದೆಗಳೇ ಇವೆ. ವೇದ ಜನಸಾಮಾನ್ಯರಿಗೆ ಎಟುಕದ ಸ್ವತ್ತಾಗಿತ್ತು. ಜನಸಾಮಾನ್ಯರ ಬದುಕಿನಲ್ಲಿ ವೇದದ ಸ್ಥಾನವನ್ನು ಗಾದೆ ಆಕ್ರಮಿಸಿಕೊಂಡಿತ್ತು ; ಗಾದೆ ವೇದಕ್ಕೆ ಸಮಾನವಾಗಿತ್ತು. ಪ್ರಾಚೀನವಾಗಿತ್ತು. ವೇದ ಕೆಲವರ ಮಾತು, ಗಾದೆ ಹಲವರ ಧ್ವನಿ. ಆದ್ದರಿಂದ ಗಾದೆ ವೇದಕ್ಕಿಂತ ಖಚಿತ, ನಿಜ. “It may be true what  some ,men say ; It must bettrue what all men say” ಎಂಬ ಇಂಗ್ಲಿಷ್ ಗಾದೆ ಇದನ್ನೇ ಹೇಳುತ್ತದೆ. ಸಾಮಾನ್ಯರ ವೇದವೂ ಕ್ಷಣದ ಸ್ಮಾರಕವೂ ಆದ ಗಾದೆ ಯಾವೊತ್ತೂ ಜೀವನಕ್ಕೆ ಅಪರೂಪದ ಜೀವನ ಸಂದೇಶವನ್ನು ನೀಡುತ್ತಲೇ ಬಂದಿದೆ.

ಆರ್.ಜಿ.

ಗಾರುಡಿ ಇದು ಮನರಂಜನಾ ಪ್ರಧಾನವಾದ ಜನಪದ ಪ್ರದರ್ಶನ ಕಲೆ. ಪೂರ್ವಗೋದಾವರಿ ಜಿಲ್ಲೆಗೆ ಸೇರಿದ ಪ್ರತ್ಯೇಕವಾದ ಜನಪದ ಕಲೆ ಇದು. ಸಮೂಹ ನೃತ್ಯಕ್ಕೆ ಸಂಬಂಧಿಸಿದ್ದಾಗಿದ್ದು ಕೇವಲ ದಲಿತರು ಮಾತ್ರ ಪ್ರದರ್ಶಿಸುತ್ತಾರೆ. ಎರಡು ದೊಡ್ಡ ದೊಡ್ಡ ನಗಾರಿಗಳನ್ನು ಒಂದಕ್ಕೊಂದು ಕಟ್ಟಿ ಎದುರುಬದುರು ಇಟ್ಟು ೭೦ ಮಂದಿ ಕಲಾವಿದರು ಗಾರುಡಿ ನೃತ್ಯವನ್ನು ಪ್ರದರ್ಶಿಸುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ಬೆತ್ತ ಹಿಡಿದುಕೊಂಡು ಎದುರೆದುರು ನಿಂತು ಅನೇಕ ರಸವತ್ತಾದ ಜನಪದ ಗೀತೆಗಳನ್ನು ಪ್ರದರ್ಶಿಸುತ್ತಾರೆ. ಇವರ ವೇಷಭೂಷಣಗಳು ವಿಶೇಷವಾಗಿರುತ್ತದೆ. ಬಿಗಿಯಾಗಿರುವ ಚಡ್ಡಿ ಮೇಲೆ ದೊಗಲೆ ಬನಿಯನ್, ತಲೆಗೆ ಬಣ್ಣ ಟೇಪ್ ಕಟ್ಟಿಕೊಂಡು ಕೈಯಲ್ಲಿರುವ ದೊಣ್ಣೆಗೆ ನೀಲಿ ಬಣ್ಣ ಅಥವಾ ಕೆಂಪು ಬಣ್ಣದ ಬಾವುಟ ಸಿಕ್ಕಿಸಿರುತ್ತಾರೆ. ಕಾಲುಗಳಿಗೆ ೩.೫ಕೆಜಿ ತೂಕವಿರುವ ಗೆಜ್ಜೆ ಹಾಕಿ ದೊಡ್ಡ ನಗಾರಿಗಳ ನಡುವೆ ಅತ್ತ ಇತ್ತ ತಿರುಗುತ್ತಾ ಪ್ರದರ್ಶನಕ್ಕೆ ಜೀವ ತುಂಬುತ್ತಾರೆ. ನಗಾರಿಗಳು ಗೋಳಾಕಾರದಲ್ಲಿ ದೊಡ್ಡದಾಗಿರುತ್ತದೆ. ಮೊದಲು ಅಂಬೇಡ್ಕರ್ ಅವರನ್ನು ನೆನೆದು ಪ್ರದರ್ಶನ ಪ್ರಾರಂಭಿಸುತ್ತಾರೆ. ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆ ಎಂದರೆ ಸ್ತ್ರೀಪಾತ್ರ. ಗಂಡಸರೇ ಸ್ತ್ರೀಪಾತ್ರ ಧರಿಸಿ ಪ್ರಧಾನ ಕಥೆಗಾರನಿಗೆ ಸಹಕರಿಸುತ್ತಾರೆ. ಹಾವ ಭಾವಗಳನ್ನು ವ್ಯಕ್ತಪಡಿಸಿ ಅತ್ತಿತ್ತ ತಿರುಗುತ್ತಾ, ಹಾಡುವ್ ಹಾಡುಗಳಿಗೆ ಅನುಗುಣವಾಗಿ ನೃತ್ಯ ಮಾಡುತ್ತಾರೆ ಹಾಡು ಮುಗಿಯುತ್ತಿದ್ದಂತೆ ಐದಾರು ನಿಮಿಷ ಸಾವಧಾನದಿಂದ ಕೇವಲ ವಾದ್ಯಕ್ಕೆ ಅನುಗುಣವಾಗಿ ಅತ್ಯಂತ ಉತ್ಸಾಹದಿಂದ ನೃತ್ಯಮಾಡುತ್ತಾನೆ. ಇವರ ಕುಣಿತ ಪ್ರದರ್ಶನ ಮುಗಿಯುವರೆಗೂ ಭೂಮಿ ನಡುಗಿದಂತೆ ಪ್ರತಿಧ್ವನಿಸುತ್ತವೆ.

ಟಿ.ಎಸ್.ಎನ್. ಅನುವಾದ ಎನ್.ಆರ್.

ಗಾರುಡಿ ಗೊಂಬೆ ಬಿದಿರಿನ ದಬ್ಬೆಗಳನ್ನು ಬಳಸಿ ರೂಪಸಿರುವ ಗೊಂಬೆ. ಇಂಥ ಎರಡು ಗೊಂಬೆಗಳು ಈ ಪ್ರದರ್ಶನದಲ್ಲಿ ಇರುತ್ತವೆ. ಒಂದು ಗಂಡು, ಒಂದು ಹೆಣ್ಣು. ಹತ್ತರಿಂದ ಹನ್ನೆರಡು ಅಡಿ ಎತ್ತರ ಇದ್ದು, ಎತ್ತರಕ್ಕೆ ತಕ್ಕ ಗಾತ್ರದಲ್ಲಿ ರಚಿಸಲಾಗುತ್ತದೆ. ಹೆಣ್ಣು ಗೊಂಬೆಯು ಗಂಡು ಗೊಂಬೆಗಿಂತ ಎತ್ತರದಲ್ಲಿ ಒಂದೆರಡು ಅಡಿ ಕಡಿಮೆ ಇರುತ್ತದೆ.

64

ಈ ಗೊಂಬೆಯ ಹೆಸರು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಕೋಲಾರ ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಈ ಗೊಂಬೆಯನ್ನು ‘ಮಾನು ಬೊಮ್ಮಲು’ ಎಂದೂ, ದಕ್ಷಿಣ ಕರ್ನಾಟಕದ ಶಿವಮೊಗ್ಗೆ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ‘ತಟ್ಟಿರಾಯ’ ಅಥವಾ ‘ತಟ್ಟೆರಾಯ’ ಎಂದೂ ಕರೆಯುತ್ತಾರೆ.

ಗೊಂಬೆಯ ಸೊಂಟದ ಎತ್ತರದಲ್ಲಿ ಒಳಗೆ ಗಟ್ಟಿಮುಟ್ಟಾದ ದಬ್ಗೆ ಅಥವಾ ಹಲಗೆಗಳನ್ನು ಜೋಡಿಸಿರುತ್ತಾರೆ. ಗೊಂಬೆಯನ್ನು ಹೊರುವವರ ತಲೆಯಮೇಲೆ ಈ ಹಲಗೆಗಳು ಕುಳಿತುಕೊಳ್ಳುತ್ತವೆ. ಅದೇ ಎತ್ತರದಲ್ಲಿ ಸಣ್ಣ ಕಿಂಡಿಗಳಿದ್ದು ಆ ಕಿಂಡಿಗಳ ಮೂಲಕ ಕಲಾವಿದರ ಹೊರಗೆ ನೋಡಲು ಸಾಧ್ಯವಾಗುತ್ತದೆ.

ಗಂಡುಗೊಂಬೆ ಕೈಯಲ್ಲಿ ಪುಂತಿ ಹಿಡಿದು ಊದುತ್ತಿರುವಂತೆಯೂ ಹೆಣ್ಣು ಗೊಂಬೆ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು ನರ್ತಿಸುತ್ತಿರುವಂತೆಯೂ ರಚನೆಗೊಂಡಿದೆ. ಗಂಡು ಗೊಂಬೆಗೆ ಗಂಡಸರ ವಸ್ತ್ರಗಳನ್ನೂ ಹೆಣ್ಣು ಗೊಂಬೆಗೆ ಹೆಂಗಸರ ವಸ್ತ್ರಗಳನ್ನೂ ಧರಿಸಲಾಗಿರುತ್ತದೆ. ಗೊಂಬೆಗಳ ತಳ ಅಂಚು ನೆಲದಿಂದ ಒಂದು ಅಡಿ ಎತ್ತರದಲ್ಲಿ ಇರುತ್ತದೆ. ಗಂಡು ಗೊಂಬೆಗೆ ಪೇಟವೂ ಹೆಣ್ಣು ಗೊಂಬೆಗೆ ಮೂಗುತಿ ಓಲೆ ಕತ್ತಿನ ಸರ ಇತ್ಯಾದಿ ಎಲ್ಲ ಅಲಂಕಾರಗಳೂ ಇರುತ್ತವೆ.

ಈ ಗೊಂಬೆಗಳ ಕುಣಿತಕ್ಕೆ ನಿರ್ದಿಷ್ಟ    ವಾದ್ಯಗಳೇನೂ ಇರುವುದಿಲ್ಲ. ತಮಟೆ, ವಾಲಗ, ಡೋಲು ಯಾವುದಾದರೂ ಆಗಬಹುದು. ವಾದ್ಯದ ಸದ್ದಿಗೆ ತಕ್ಕ ಹೆಜ್ಜೆ ಹಾಕುತ್ತ, ಗೊಂಬೆಗಳನ್ನು ಎಡಕ್ಕೂ ಬಲಕ್ಕೂ ಹಿಂದಕ್ಕೂ ಮುಂದಕ್ಕೂ ಬಾಗಿಸುತ್ತ, ಕುಣಿಯುವುದಷ್ಟೇ ಆ ಕಲಾವಿದರ ಕೆಲಸ. ಹಬ್ಬಹರಿದಿನಗಳಲ್ಲಿ ಜಾತ್ರೆಗಳಲ್ಲಿ ಉತ್ಸವಗಳಲ್ಲಿ ಮೆರವಣಿಗೆಗಳಲ್ಲಿ ಈ ಗೊಂಬೆಗಳ ಮನೋರಂಜನೆ ಇರುತ್ತದೆ.

ಎನ್.ಆರ್.