ಗೊಡ್ಡೆ ರಾಮಾಯಣ್ ಕೊಂಕಣಿಗಳ ವಿಶಿಷ್ಟ ಕಲೆ ಗೊಡ್ಡ ರಾಮಾಯಣ ಕುಣಿತದ ಹೆಜ್ಜೆಗಳು, ಸಂಗೀತ, ತಾಳಲಯ – ಇವುಗಳಿಂದ ಕೂಡಿಕೊಂಡ ಒಂದು ಗಮನಾರ್ಹ ಜನಪದಕಲಾ ಪ್ರಕಾರವಾಗಿದೆ. ಹದಿನೇಳನೇ ಶತಮಾನದ ಬಳಿಕ ಕೊಚ್ಚಿನ ಅಮರಾವತಿ ಪ್ರದೇಶದಲ್ಲಿ ವೈಶ್ಯವಣಿಕ ಸಮೂಹದವರಿಗಾಗಿ ಸ್ಥಾಪಿಸಲಾದ ಎರಡು ಪ್ರಧಾನ ದೇವಾಲಯಗಳೆಂದರೆ – ಶ್ರೀಮಟ್ಟ್ ಜನಾರ್ದನ ದೇವಾಲಯ ಮತ್ತು ಅಮರಾವತಿ ಆಲ್‌ತ್ತರ ಭಗವತೀ ದೇವಾಲಯ. ಗೊಡ್ಡೆನಡೆಯುವುದು ಇಲ್ಲಿ. ದುಷ್ಟಶಕ್ತಿಗಳನ್ನು ಹೊಡೆದೋಡಿಸಿ ಕ್ಷೇಮಾಭ್ಯುದಯವನ್ನು ಈ ಕಲಾರೂಪವು ಗಳಿಸಿಕೊಡುತ್ತದೆ ಎಂಬ ದೃಢವಾದ ನಂಬುಗಕೆಯಿದೆ. ಫಾಲ್ಗುಣ ಮಾಸದ ಶುಕ್ಷಪಕ್ಷದ ದ್ವಾದಶಿಯಂದು ಈ ಕಲಾರೂಪವು ಪ್ರದರ್ಶಿತವಾಗುತ್ತದೆ.

ಈ ಕಲೆಗೆ ಶತಮಾನಗಳ ಹಳಮೆಯಿದೆ. ಹದಿನೈದನೇ ಶತಮಾನದಲ್ಲಿಯೇ ಇದು ಗೋವೆಯಲ್ಲಿ ಭದ್ರವಾಗಿ ನೆಲೆಯೂರಿತ್ತು. ಗೋವೆಯಲ್ಲಿ ಪೋರ್ಚುಗೀಸರ ಬಾಧೆಯ ಕಾರಣವಾಗಿ ಪಲಾಯನ ಮಾಡಲು ನಿರ್ಬಂಧಿತರಾದ ಕೊಂಕಣಿಗಳು ಒಂದು ಗುಂಪು ಕೊಚ್ಚಿಗೆ ತಲುಪಿತು. ವೈಶ್ಯವಣಕರೆಂದು ಕಲೆಯಲ್ಪಡುವ ಈ ವರ್ಗದವರು ರಾಮಾಯಣವನ್ನು ಸಾಮಾನ್ಯ ಜನರಿಗೆ ತಲುಪಿಸುವುದಕ್ಕಾಗಿ ಜನಪದೀಯ ರೀತಿಯನ್ನು ಅಳವಡಿಸಿಕೊಂಡರು. ಹಾಡುವುದು, ತಾಳ ಹಾಕುವುದು, ಕುಣಿಯುವುದು ಮುಂತಾದವುಗಳ ಮೂಲಕ ರಾಮಾಯಣದ ಭಾಗಗಳನ್ನು ಒಂದು ದೃಶ್ಯಪ್ರಕಾರವಾಗಿ ಪ್ರದರ್ಶಿಸಿದರು. ಇದೇ ಗೊಡ್ಡೆ ರಾಮಾಯಣ್.

ಶ್ರೀರಾಮನ ಭಕ್ತನಾದ ಹನುಮಂತನ ವೇಶ ಧರಿಸಿದ ಒಂದು ಕಥಾಪಾತ್ರವು ಪ್ರವೇಶಿಸಿ ಗೊಡ್ಡೆ ಹಾಡುವವರ ತಾಳಕ್ಕೆ ಅನುಸಾರವಾಗಿ ಕುಣಿಯುತ್ತದೆ. ಕಲೆಯ ಶಿಸ್ತಿಗೆ ಅನುಸಾರವಾಗಿ ವೇಷಧಾರಿಯು ವ್ರತವನ್ನು ಅನುಸರಿಸಬೇಕು. ಹನುಮಂತ ಗೊಡ್ಡೆ ಕುಣಿಯುವುದು ತುಂಬ ಆಕರ್ಷಣೀಯವಾಗಿದೆ. ಹಾಡುವವರ ತಾಳಲಯಾನುಸಾರವಾಗಿ ನಟನು ವಿಶಿಷ್ಟ ರೀತಿಯಲ್ಲಿ ಹೆಜ್ಜೆಗಳನ್ನು ಹಾಕುತ್ತಾನೆ. ಕೈಗಳನ್ನು ಕೊಡವುತ್ತ ಮುಂದಕ್ಕೂ ಹಿಂದಕ್ಕೂ ಬದಿಗಳಿಗೂ ಚಲಿಸಿ ಕುಣಿಯುವಾಗ ಪ್ರೇಕ್ಷಕರು ಪ್ರೋತ್ಸಾಹಿಸುತ್ತ ನಟನನ್ನು ಆವೇಶಭರಿತನಾಗುವಂತೆ ಮಾಡುತ್ತಾರೆ. ಇಷ್ಟರಲ್ಲಿ ಹನುಮಂತ ಜೀವಂತ ಪಾತ್ರವಾಗಿ ಮಾರ್ಪಡುತ್ತಾನೆ. ಆವೇಶಭರಿತನಾದ ಸ್ಥಿತಿಯಿಂದ ಕಥಾಪಾತ್ರವನ್ನು ಬಿಡಿಸಿ ಸಹಜಸ್ಥಿತಿಗೆ ತರಲು ತುಂಬ ಶ್ರಮಪಡಬೇಕಾಗುತ್ತದೆ.

ಗೊಡ್ಡೆ ಆಡುವ ಹನುಮ ಪಾತ್ರಧಾರಿಯು ಜನಾರ್ದನ ದೇವಾಲಯದಿಂದ ಮಧ್ಯಾಹ್ನದ ಮತ್ತು ರಾತ್ರೆಪೂಜೆಗಳ ಪ್ರಸಾದ, ಪಡಿ ಅಕ್ಕಿ, ತೆಂಗಿನಕಾಯಿ, ಉಡುವ ಬಟ್ಟೆ ಮುಂತಾದ ಸಿದ್ಧತೆಗಳೊಂದಿಗೆ ಹೊರಡುತ್ತಾನೆ. ನಟ ಮತ್ತು ಗಾಯಕರ ಗುಂಪು ಒಂದು ಬಿದಿರಿಗೆ ಎರಡು ತೂಗುದೀಪಗಳನ್ನು ಕಟ್ಟಿಕೊಂಡು ಜನಾರ್ಧನ ದೇವಾಲಯದ ಬಳಿ ಇರುವ ಬೀರ್ಮ (ಬ್ರಹ್ಮ) ದೇವಾಲಯಕ್ಕೆ ತೆರಳಿ ಅಲ್ಲಿ ಕುಣಿತ ಮತ್ತು ಹಾಡುಗಳನ್ನು ಆರಂಭಿಸುತ್ತದೆ. ಆ ಬಳಿಕ ರಾಮಾಯಣ ಕಥೆಯನ್ನು ಹೇಳಲಾರಂಭಿಸಿ ಮತ್ತೆ ಜನಾರ್ಧನ ದೇವಾಲಯಕ್ಕೆ ಹೋಗಿ ಅದನ್ನು ಮುಕ್ತಾಯಗೊಳಿಸುತ್ತಾರೆ. ನಟ, ಗಾಯಕರು ಮತ್ತು ಇನ್ನೊಂದಷ್ಟು ಜನ ದೇವಾಲಯದ ಸಮೀಪವಿರುವ ಬೀದಿಗೆ ಹಾಡುತ್ತ ಓಡುತ್ತ ಹೋಗಿ ಮರಳಿ ಬರುತ್ತಾರೆ. ಕಾರ್ಯಕ್ರಮವು ಇಲ್ಲಿಗೆ ಮುಗಿಯುತ್ತಾನೆ.

ಹಿಂದಿನ ಕಾಲದಲ್ಲಿ ‘ಶ್ಮಶಾನ ಸಾಧನ’ (ಮಸಣ ಸಾಧೆ) ಎಂಬ ಒಂದು ಕಾರ್ಯಕ್ರಮ ಕೂಡ ಇರುತ್ತಿತ್ತು. ಗೊಡ್ಡೆ ಕಾರ್ಯಕ್ರಮವು ಮುಕ್ತಾಯವಾದಾಗ ಹನುಮಂತ ವೇಷಧಾರಿಯು ಶ್ಮಶಾನಕ್ಕೆ ಹೋಗಿ ತೆಂಗಿನಕಾಯಿ ಒಡೆಯುತ್ತಿದ್ದ. ಬಳಿಕ ಹನುಮ ವೇಷಧಾರಿಯ ಆವೇಶ ತಗ್ಗುವುದೆಂಬ ನಂಬಿಕೆಯಿತ್ತು. ಒಮ್ಮೆ ಶ್ಮಶಾನಕ್ಕೆ ಹೋದ ಹನುಮ ಮರಳಿ ಬರಲಿಲ್ಲ. ಈ ಕಾರಣದಿಂದ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮವನ್ನು ಆ ಬಳಿಕ ಆಲ್‌ತ್ತರ ಭಗವತೀ ದೇವಾಲಯದಲ್ಲಿಯೇ ನಡೆಸಲಾಗುತ್ತದೆ.

ನಟನ ಆವೇಶೋತ್ಕಟತೆಯನ್ನು ಕಡಿಮೆ ಮಾಡಲು ತುಂಬ ಕಷ್ಟಪಡಬೇಕಾಗುತ್ತದೆ ಎಂಬ ಹನುಮಾನ್ ವೇಷಧರಿಸಲು ಹಲವರು ಸಿದ್ಧರಾಗುವುದಿಲ್ಲ. ಯಾರಾದರೂ ಹಾಗೆ ಮುಂದೆ ಬಂದರೂ ಅವನ ಕುಟುಂಬದವರು ಅದನ್ನು ಪ್ರೋತ್ಸಾಹಿಸುವುದಿಲ್ಲ. ಹಾಗಾಗಿ ತುಂಬ ಕಾಲದಿಂದೀಚೆಗೆ ಹನುಮಾನ್ ವೇಷ ಇಲ್ಲ. ಗೊಡ್ಡೇ ಹಾಡುಗಳನ್ನು ಮಾತ್ರ ಹಾಡಲಾಗುತ್ತದೆ. ಈಗ ದೃಶ್ಯ ಪ್ರಧಾನವೂ ಆಗಿದ್ದ ಗೊಡ್ಡೇ ರಾಮಾಯಣ್ ಕಾರ್ಯಕ್ರಮವು ಇತ್ತೀಚೆಗೆ ಕೇವಲ ಶ್ರವ್ಯ ಕಾರ್ಯಕ್ರಮ ಮಾತ್ರವಾಗಿ ಬದಲಾಗಿ ಬಿಟ್ಟಿದೆ.

ಕೆ.ಎಸ್.ಎಚ್. ಅನುವಾದ ಕೆ.ಕೆ.

ಗೊಬ್ಬಿ ಸಂಕ್ರಾಂತಿಯ ಕಾಲದಲ್ಲಿ ಆಂಧ್ರಪ್ರದೇಶದ ಹಳ್ಳಿ ಹಳ್ಳಿಯಲ್ಲೂ ಕಂಡುಬರುವ ಒಂದು ಜನಪ್ರಿಯ ಕುಣಿತ. ಗೊಬ್ಬಿ ಎಂದರೆ ಹಸುವಿನ ಸಗಣಿಯಿಂದ ಗೋಳಾಕಾರದಲ್ಲಿ ಮಾಡಿ ಮನೆಯ ಮುಂದೆ ರಂಗೋಲಿ ಹಾಕಿ ಅದರ ಮಧ್ಯದಲ್ಲಿ ಇಡುವುದು. ಸಗಣಿಯ ಗೋಳದ ಮೇಲೆ ಒಂದು ಕುಂಬಳದ ಹೂವನ್ನು ಇಡುತ್ತಾರೆ. ಗೊಬ್ಬಿಯನ್ನು ಗೋಪೆಮ್ಮ (ಗೋಪಿಕೆ) ಎಂದು ಕೂಡ ಕರೆಯುತ್ತಾರೆ. ಗೊಬ್ಬಿಯ ಸುತ್ತ ಹೆಣ್ಣು ಮಕ್ಕಳು ತಾಳ ತಪ್ಪದೆ ಚಪ್ಪಾಳೆ ತಟ್ಟುತ್ತ ಗೊಬ್ಬಿ ಹಾಡುಗಳನ್ನು ಹಾಡುತ್ತ ವಲಯಾಕಾರವಾಗಿ ಕುಣಿಯುತ್ತಾರೆ. ಪ್ರತಿವರ್ಷ ಧನುರ್ಮಾಸದಲ್ಲಿ ಪ್ರತಿದಿನ ಈ ರೀತಿ ಗುಬ್ಬಿಯನ್ನಿಟ್ಟು ಗುಬ್ಬಿ ಹಾಡುಗಳನ್ನು ಹಾಡುತ್ತ ಕುಣಿಯುವುದನ್ನು ನೋಡುತ್ತೇವೆ. ಇದನ್ನು ಕುರಿತು ತೆಲುಗಿನ ಅನೇಕ ಪ್ರಾಚೀನ ಕಾವ್ಯಗಳಲ್ಲಿ ಉಲ್ಲೇಖಗಳಿವೆ. ಇದರ ಅರ್ಥವನ್ನು ಹೇಳುವುದು ಕಷ್ಟ. ಗೊಬ್ಬಿ ಎಂಬುದು ಒಂದು ರೀತಿಯ ನಮಸ್ಕಾರ ಎಂದು ಇದು ಕುಣಿಯುತ್ತ ದೇವರಿಗೆ ಮಾಡುವ ನಮಸ್ಕಾರದ ಪ್ರಭೇದವೆಂದು ಸಿ.ಪಿ.ಬ್ರೌನ್ ತನ್ನ ನಿಘಂಟಿನಲ್ಲಿ ಹೇಳಿದ್ದಾನೆ. ಇದೊಂದು ಬಾಲಿಕಾ ಕ್ರೀಡಾ ವಿಶೇಷವೆಂದು, ನಮಸ್ಕಾರವೆಂದು ಶಬ್ದರತ್ನಾಕರ ಹೇಳುತ್ತದೆ. ಗೋಪಿ ಎಂಬ ಪದವೇ ಗೊಬ್ಬಿ ಆಯಿತೆಂದು ಕೆಲವರ ಅಭಿಪ್ರಾಯ. ಗುಜರಾತ್ ಮುಂತಾದ ಕಡೆ ಇರುವ ಗರ್ಭೋ ಎಂಬ ಕುಣಿತವೇ ತೆಲುಗಿನಲ್ಲಿ ಗೊಬ್ಬಿಯಾಯಿತೆಂದು ಬೇರೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಕೃತಿಯಲ್ಲಿವೆ. ‘ದ್ವಾರಾವತಿ’, ‘ತಿರುಪ್ಪಾವೈ’ ಎಂಬ ತಮಿಳು ಹಸ್ತಗಳನ್ನು ತಪ್ಪದೇ ಹೊಡೆಯುತ್ತ ಗೋಪಪ್ರಿಯನಿಗೆ ಗೊಬ್ಬಿ ಹಾಡುಗಳನ್ನು ಹಾಡಿದರೆಂದು ಪ್ರಾಚೀನ ಕಾವ್ಯಗಳಲ್ಲಿ ಹೇಳಲಾಗಿದೆ.

ಆಂಧ್ರದ ಕೆಲವು ಪ್ರದೇಶಗಳಲ್ಲಿ ಗೊಬ್ಬೆಮ್ಮನನ್ನು ಇಡುವ ಸಂಪ್ರದಾಯವಿದ್ದರೂ ಹಾಡಿಕುಣಿಯುವ ಸಂಪ್ರದಾಯವಿಲ್ಲ. ತೆಲಂಗಾಣದಲ್ಲಿ ಹುತ್ತದ ಮಣ್ಣಿನಿಂದ ಬೊಡ್ಡೆಮ್ಮನನ್ನು ಮಾಡಿ ಅದರ ಸುತ್ತ ಹಾಡುತ್ತ ಕುಣಿಯುತ್ತಾರೆ. ಗೊಬ್ಬಿ ಹಾಡುಗಳನ್ನು ಹಾಡುವಾಗ ಒಬ್ಬರಿಬ್ಬರು ಹಾಡಿದರೆ ಬೇರೆಯವರು ‘ಗೊಬ್ಬಿಯಲ್ಲೋ’ ಎಂದು ಪಲ್ಲವಿಯನ್ನು ಹಾಡುತ್ತ ಚಪ್ಪಾಳೆ ತಟ್ಟುತ್ತಾರೆ. ಈ ಜನಪದ ಗೀತೆಗಳನ್ನು ಅನುಸರಿಸಿ ಅನ್ನಮಾಚಾರ್ಯರಂಥ ವಾಗ್ಗೇಯಕಾರರು ಗೊಬ್ಬಿ ಕೀರ್ತನೆಗಳನ್ನು ಬರೆದಿದ್ದಾರೆ.

ವಿ.ಎಸ್. ಅನುವಾದ ಎ.ಎಂ.ಡಿ.

ಗೊರವಯ್ಯಲು ಆಂಧ್ರದ ಕಲಾವಿದ ಸಮೂಹಕ್ಕೆ ಸೇರಿದವರು. ಸುಮಾರು ಮೂರು ಇಂಚಿನಷ್ಟು ಅಗಲ, ಆರಡಿ ಉದ್ದ ಇರುವ ದಪ್ಪನೆಯ ಕಪ್ಪು ಬಟ್ಟೆಯ ಮೇಲೆ ಬಿಳಿ ಪಗಡೆಗಳನ್ನು ಕತ್ತಿನಲ್ಲಿ ಹಾಕಿಕೊಂಡು ಕಪ್ಪು ಕಂಬಳಿಯನ್ನು ಹೊದಿಸಿಕೊಳ್ಳುತ್ತಾರೆ. ಕರಡಿಯ ಚರ್ಮವನ್ನು ಕಿರೀಟದಂತೆ ಧರಿಸಿ ಬಲಗೈಯಲ್ಲಿ ಡಮರುಗ, ಎಡಗೈಯಲ್ಲಿ ಕೊಳಲನ್ನು ಹಿಡಿದು, ಕಾಲಿಗೆ ಗೆಜ್ಜೆಯನ್ನು ಕಟ್ಟಿ,  ಹಣೆಗೆ ಸ್ಫುಟವಾದ ವಿಭೂತಿಯ ರೇಖೆಗಳು, ಅದರ ಮೇಲೆ ಬಂಡಾರಿಯ ಬೊಟ್ಟು, ಸೊಂಟಕ್ಕೆ ಜಿಂಕೆ ಅಥವಾ ಹುಲಿ ಚರ್ಮದಿಂದ  ಮಾಡಿದ ಬಂಡಾರು ಚೀಲ ಸಿಕ್ಕಿಸಿಕೊಂಡು,  ತ್ರಿಶೂಲ, ದೊಡ್ಡದಾದ ಜೋಳಿಗೆ, ಇರುವವರು ಗೊರವಯ್ಯರು. ಶೈವಮತ ಪ್ರಚಾರ ಮಾಡುವ ಸಲುವಾಗಿ ‘ಕುರುವ’ ಜಾತಿಯಲ್ಲಿ ಹುಟ್ಟಿದ್ದೇವೆಂದು ಹೇಳಿಕೊಂಡು  ಶೈವಮತವನ್ನು ಪ್ರಚಾರ ಮಾಡುವ ಗುರುಗಳು. ಅನಂತರದ ಕಾಲದಲ್ಲಿ ಬೇರೆ ಕುಲಸ್ಥರು ಸಹಾ ಗೊರವಯ್ಯರು ಆದರೂ ಪ್ರಾಮುಖ್ಯ ಇರುವುದು ಕುಟುಂಬ ಕುಲಸ್ಥರಿಗೆ ಮಾತ್ರ. ಗೊರವ ಸಂಪ್ರದಾಯದಲ್ಲಿ ಅನೇಕ ನಿಯಮಗಳಿರುತ್ತವೆ. ಇವನ್ನು ಪಾಲಿಸಿದವರೆ ಗೊರವಯ್ಯರು. ಇವರು ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ, ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ.

68

ಈ ಜಿಲ್ಲೆಗಳಲ್ಲಿನ ಕುರುಬ ಜಾತಿಯ ಮನೆಗಳಲ್ಲಿ ಮನೆಯ ದೊಡ್ಡ ಮಗನು ಅಥವಾ ಚಿಕ್ಕ ಮಗಳು ಯಾರಾದರೂ ಒಬ್ಬರು ತಪ್ಪದೆ ಗೊರವ ದೀಕ್ಷೆಯನ್ನು ಪಡೆಯಬೇಕು. ಗೊರವಯ್ಯರಲ್ಲಿ ಅನುಭವವುಳ್ಳವರು, ತಂದೆ, ತಾಯಿ, ಬಂಧು ಬಳಗದ ಸಮಕ್ಷದಲ್ಲಿ ಗೊರವ ದೀಕ್ಷೆಯನ್ನು ಕೊಡುತ್ತಾರೆ. ಇದು ಧಾರ್ಮಿಕವಾದ ಆಚರಣೆ. ಮನೆಯ ದೊಡ್ಡಮಗನು ಅಥವಾ ಚಿಕ್ಕಮಗನಿಗೆ ಹನ್ನೆರಡು ವರ್ಷಗಳಾದ ಅನಂತರ ಇಪ್ಪತ್ತು ವರ್ಷಗಳು ಆಗುವುದಕ್ಕೆ, ಮದುವೆ ಆಗುವುದಕ್ಕೆ ಮುನ್ನ ಬೆಟ್ಟದ ಮಲ್ಲೇಶನ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಪವನಕ್ರಿಯೆ ಮಾಡಿದ ನಂತರ, ಕಲ್ಯಾಣಿಯಲ್ಲಿ ಸ್ನಾನ ಮಾಡಿಸಿ, ವಿಭೂತಿಯನ್ನು ಬಂಡಾರವನ್ನು ಹಣೆಗೆ ಇಟ್ಟು, ಕಪ್ಪು ಕಂಬಳಿಯನ್ನು ಹರಡಿ ನಾಲ್ಕು ಮೂಲೆಗಳಲ್ಲಿ ನಾಲ್ಕು ಕಳಸಗಳನ್ನಿಟ್ಟು ಮಧ್ಯದಲ್ಲಿ ದೀಕ್ಷೆ ಪಡೆಯುವ ವ್ಯಕ್ತಿಯನ್ನು ಕೂರಿಸುತ್ತಾರೆ. ಆತನ ಕತ್ತಿಗೆ ಕಳಸಗಳಿಗೆ ಹತ್ತಿಯ ದಾರದಿಂದ ಅನುಸಂಧಾನಮಾಡಿ ದೀಕ್ಷೆಯನ್ನು ಕೊಡುತ್ತಾರೆ. ಜೀವನದಲ್ಲಿ ಆತನು ಪಾಲಿಸಬೇಕಾದ ನಿಯಮಗಳನ್ನು ಹೇಳುತ್ತಾರೆ. ಹೊಲದಲ್ಲಿ ಹಸು ಮೇಯುತ್ತಿದ್ದರೆ ‘ಹಸು ಮೇಯುತ್ತಿದೆ’ ಎಂದು ಹೇಳಬಾರದು. ಅದೇ ರೀತಿ ‘ಕರು ಹಾಲು ಕುಡಿಯುತ್ತಿದ್ದರೆ’ ಹಾಲು ಕುಡಿಯುತ್ತಿದೆ’ ಎಂದು ಸಹಾ ಹೇಳಕೂಡದು. ಕಾಲಿಗೆ ಚಪ್ಪಲಿ, ಹಾಕಬಾರದು, ಹಾವುಗಳನ್ನು ಸಾಯಿಸಬಾರದು ಎಂಬ ನಿಯಮಗಳನ್ನು ಹೇಳಿ ಅಹಿಂಸಾ ವ್ರತವನ್ನು ಪಾಲಿಸಬೇಕೆಂದು ಹಾಲಿನ ಮೇಲೆ ಪ್ರಮಾಣವನ್ನು ಮಾಡಿಸಿಕೊಳ್ಳುತ್ತಾರೆ. ಅನಂತರ ಅನುಭವವುಳ್ಳ ಗೊರವಯ್ಯರು ಕತ್ತಿಗೆ ಪಗಡೆಯ ಪಟ್ಟಿಯನ್ನು ಹಾಕಿ, ಹಣೆಯಲ್ಲಿ ಬಂಡಾರನ್ನು ಇಟ್ಟು, ದೀಕ್ಷೆಯ ನಂತರ ಜೋಳಿಗೆ, ಕಂಚಿನ ತಟ್ಟೆಯನ್ನು ಕೊಡುತ್ತಾರೆ. ಅಂದಿನಿಂದ ಗೊರವಯ್ಯ ಎಂದು ಕರೆಯುತ್ತಾರೆ. ಆತನ ತಂದೆ ತಾಯಿಯನ್ನು ‘ಇವನು ಯಾರ ಮಗನೆಂದು’ ಕೇಳುತ್ತಾರೆ. ‘ಇಲ್ಲಿಯ ತನಕ ನಮ್ಮ ಮಗ, ಈಗ ಸ್ವಾಮಿಯ ಮಗ’ ಎಂದು ಹೇಳುತ್ತಾರೆ. ಹೀಗೆ ದೀಕ್ಷೆ ಪಡೆದನ ನಂತರ ಎಂತಹವರಾದರೂ ನಾಲ್ಕೈದು ಮನೆಗಳಲ್ಲಿ ತಪ್ಪದೇ ಭಿಕ್ಷೆಯನ್ನು ಸ್ವೀಕರಸಿಬೇಕು. ಬೆಟ್ಟದ ಮಲ್ಲೇಶ್ವರನಿಗೆ ಸಮರ್ಪಿಸಬೇಕು.

ಹೀಗೆ ದೀಕ್ಷೆಯನ್ನು ಪಡೆದ ಗೊರವಯ್ಯರು ಶೈವ ಧರ್ಮಪ್ರಚಾರ ಮಾಡುತ್ತಾ ನಿಯಮಗಳನ್ನು ಅಹಿಂಸಾ ಧರ್ಮವನ್ನು ಇತರರಿಗೆ ಮಾದರಿಯಾಗುವಂತಹ ಜೀವನವನ್ನು ನಡೆಸುತ್ತಾ ಪೂಜನೀಯರಾದರು. ಇವರನ್ನು ಗೊಗ್ಗಯ್ಯ, ಗಗ್ಗಯ್ಯ ಎಂದು ಕೂಡ ಅನ್ನುತ್ತಾರೆ. ಇವರ ವೇಷಭೂಷಣಗಳನ್ನು ನೋಡಿ ಮಕ್ಕಳು ಹೆದರುತ್ತಾರೆ. ಆದರೆ ಇವರು ಮಾಡುವ ನೃತ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಕಂಚಿನ ಪಾತ್ರೆಯಲ್ಲಿ ಹಾಲನ್ನು ಹಾಕಿ ಒಳಿಯ ಮೇಲಿಟ್ಟು ಪೂಜೆ ಮಾಡಿ ಅದರ ಸುತ್ತ ವಲಯಾಕಾರದಲ್ಲಿ ನೃತ್ಯ ಮಾಡುತ್ತಾ ಡಮರುಗ ಮತ್ತು ಕೊಳಲನ್ನು ಬಾರಿಸುತ್ತಾ ನಾಯಿಗಳಂತೆ ಬೊಗಳುತ್ತಾ ಹಾಲನ್ನು ಕುಡಿಯುತ್ತಾರೆ. ಇದನ್ನು ಯಾವ ಹೊತ್ತಾದರೂ ಮಾಡಬಹುದು.

ಇನ್ನೊಂದು ರೀತಿಯ ನೃತ್ಯವನ್ನು ರಾತ್ರಿಯ ಹೊತ್ತು ಮಾತ್ರ ಮಾಡುತ್ತಾರೆ. ಈ ರೀತಯ ನೃತ್ಯದಲ್ಲಿ ಕೊನೆಯ ಹಂತದಲ್ಲಿ ಡಮರುಗ ಶಬ್ದ ಜಾಸ್ತಿಯಾಗಿ ಮನ ಮೋಹಕವಾಗಿರುತ್ತದೆ. ಈ ರೀತಿಯ ನೃತ್ಯವನ್ನು ಇಡೀ ರಾತ್ರಿ ಮಾಡುತ್ತಾರೆ.

ಟಿ.ಎನ್.

ಗೊರವರ ಕುಣಿತ ಗೊರವರು ಮೈಲಾರಲಿಂಗನ ಭಕ್ತರು. ಗೊರವರಲ್ಲಿ ಕೆಲವರು ಮೈಲಾರಲಿಂಗನಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಹೀಗೆ ಅರ್ಪಿಸಿಕೊಳ್ಳುವುದಕ್ಕೆ ‘ಹೊರೆ ಹೊರುವುದು’ ಅಥವಾ ‘ದೇವರನ್ನು ಹೊರುವುದು’ ಎಂದು  ಕರೆಯಲಾಗಿದೆ. ಹೊರೆಹೊರುವುದು ಗೊರವರಿಗೆ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಸಂತಾನವೃದ್ಧಿಗೆ, ಅನಿಷ್ಟ ನಿವಾರಣೆಗೆ ಅಥವಾ ಹೇಳಿದ ಹರಕೆ ಕೈಗೂಡಿದ್ದರೆ ಈ ಹರಕೆಗಳನ್ನು ಮಾಡುತ್ತಾರೆ. ಇಂತಹ ಮೊರೆಗಳಲ್ಲಿ ಗೊರವಪ್ಪನ ಹೊರೆ ಬಹು ಮುಖ್ಯವಾದುದು.

ಗೊರವರ ವಿಧಿಗಳು ಮತ್ತು ದೀಕ್ಷೆ: ದೀಕ್ಷೆಗೆ ಬದ್ಧರಾದ ಗೊರವರಲ್ಲಿ ಅನೇಕ ಪ್ರಕಾರಗಳಿವೆ. ನಾಯಿ ಗೊರವರು, ಕರಡಿ ಗೊರವರು, ಪಾರಿಗೊರವರು, ಮದ್ದಲಗೊರವರು, ಶಿವಗೊರವರು (ಭಂಡಾರದವರು) ಕಿನ್ನರಿಗೊರವರು, ಕುದುರೆಕಾರರು (ಕುದುರೆ ಗೊರವರು), ಕಂಚಾವೀರರು, ಬಲ್ಲಿನವರು, ನಿಶಾನೆಯವರು, ತ್ರಿಶೂಲದವರು ಮೊದಲಾದ ಪ್ರಕಾರದವರಿದ್ದಾರೆ. ಹಾಗೆಯೇ ಅನೇಕ ಪ್ರಕಾರದ ಗೊರವಿಯರೂ ಇದ್ದು ಸಾಮಾನ್ಯ ಮುದ್ರಿಯವರು, ವಾಲಿಗೊರವಿಯರು (ಭಂಡಾರದವರು), ಎಲಿಚೆಂಚಿ ಚವುರದವರು, ಶಿವಾರದಾಳಿಯವರು, ಕಾವಂತೆಯರು ಮೊದಲಾದವರಿದ್ದಾರೆ. ಸಾಮಾನ್ಯವಾಗಿ ಲಗ್ನಕ್ಕಿಂತ ಮೊದಲು ಗೊರವ ಅಥವಾ ಗೊರವಿ ದೀಕ್ಷೆಯನ್ನು ಪಡೆಯುವುದು ಸಂಪ್ರದಾಯ.

ಗೊರವರಿಗೆ ಒಂದು ನಿರ್ದಿಷ್ಟ ದಿನದಂದು ದೀಕ್ಷೆ ಕೊಡಲಾಗುತ್ತದೆ. ಈ ದೀಕ್ಷೆ ಮೈಲಾರಲಿಂಗನ ಸನ್ನಿಧಿಯಲ್ಲಿ ನಡೆಯುತ್ತದೆ. ದೀಕ್ಷೆಯ ಸಂದರ್ಭದಲ್ಲಿ ಅವರಿಗೆ ಕಂಬಳಿಯ ನಿಲುವಂಗಿಯನ್ನು ತೊಡಿಸಿರುತ್ತಾರೆ. ಗಂಟೆ, ಜೋಳಿಗೆ, ಭಂಡಾರಬಕ್ಸ, ಬೆತ್ತ, ದೋಣಿ, ಡಮರು, ಶೂಲ ಅಥವಾ ತ್ರಿಶೂಲ ಮೊದಲಾದ ವಸ್ತುಗಳನ್ನು ಪೂಜಿಸಿ ಅವರಿಗೆ ಕೊಡುತ್ತಾರೆ. ಹಿಡಿಯುವಾಗ ಮತ್ತು ಇಡುವಾಗ ತ್ರಿಶೂಲವು ಮೇಲ್ಮುಖವಾಗಿರಬೇಕೆಂಬುದು ಸಂಪ್ರದಾಯ. ಕೆಂಪು ಬಣ್ಣದ ಮುರಗಿ ಮುಂಡಾಸು ಕೊರಳಿಗೆ ಕವಡೆಯ ಸರಗಳನ್ನು ಧರಿಸಲಾಗುತ್ತದೆ. ಇದನ್ನು ಒಟ್ಟಾಗಿ ‘ಮುದ್ರೆ’ ಎನ್ನುತ್ತಾರೆ. ಆ ಮೇಲೆ ಅವರಿಂದ ಪ್ರತಿಜ್ಞೆಯನ್ನು ಮಾಡಿಸಲಾಗುತ್ತದೆ.

ಹೀಗೆ ಗೊರವ ಸಂಪ್ರದಾಯವನ್ನು ಸ್ವೀಕರಸಿದವರಲ್ಲಿ ‘ಮಡಿಯವರು’ ಮತ್ತು ‘ಮೈಲಿಗೆಯವರು’ ಎಂದು ಎರಡು ವಿಧ. ಈ ಎರಡು ಪ್ರಕಾರಗಳ ಆಯ್ಕೆಯನ್ನು ದೀಕ್ಷೆ ತೆಗೆದುಕೊಳ್ಳುವವರೇ ಸ್ವೇಚ್ಛೆಯಿಂದ ನಿರ್ಧರಿಸುತ್ತಾರೆ. ಮೈಲಿಗೆಯವರು ಹೆಸರೇ ಹೇಳುವಂತೆ ಆಚರಣೆಯಲ್ಲಿ ಸರಳೀಕರಣವನ್ನು ಪಾಲಿಸುತ್ತಾರೆ. ಅವರು ಒಂದೇ ಹೊತ್ತು ಸ್ನಾನ ಮಾಡುತ್ತಾರೆ. ಮತ್ತು ನೀರು ಸಿಗದಿದ್ದ ಊರುಗಳಲ್ಲಿ ‘ಮುದ್ರೆ’ಯನ್ನು ತೊಳೆಯಲು ಒಂದೇ ತಂಬಿಗೆ ನೀರು ಸಾಕಾಗುತ್ತದೆ. ಅವರು ಬೇರೆಯವರಿಂದ ಎಲೆ – ಅಡಿಕೆ; ಬೀಡಿ-ಸಿಗರೇಟು ಕೇಳಿ ಪಡೆಯಬಹುದು. ಮನೆಯವರು ಮಕ್ಕಳು ಅಥವಾ ಬೇರೆಯವರು ನೀಡಿದ್ದು, ಇಲ್ಲವೇ ಅವರ ಎಂಜಲವನ್ನು ಕೂಡ ಉಣ್ಣಬಹುದು.

ಆದರೆ ‘ಮಡಿ’ಯವರು ಎಲ್ಲ ವಿಷಯಗಳಲ್ಲಿಯೂ ತುಂಬಾ ಕಟ್ಟುನಿಟ್ಟು, ಅವರು ದಿನನಿತ್ಯ ತಪ್ಪದೆ ಎರಡು ಹೊತ್ತು ಸ್ನಾನ ಮಾಡಿ ಮೂರು ಹೊತ್ತು ಪೂಜೆ ಮಾಡಬೇಕು. ಭಕ್ತರ ಮನೆಯಲ್ಲಿ ದೋಣಿ ತುಂಬುವ ಕಾರ್ಯಕ್ರಮವಿದ್ದರೆ ತಾವೇ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು. ಯಾರನ್ನೂ ಮುಟ್ಟಬಾರದು. ಕಂಡಕಂಡಲ್ಲಿ ನೀರು ಆಹಾರ ಸೇವಿಸಬಾರದು ಇತ್ಯಾದಿ ನಿಷೇಧಗಳಿವೆ.

ವೇಷಭೂಷಣ: ಮುರಗಿ – ಮುಂಡಾಸು ಇಲ್ಲವೆ ಕಂಬಳಿಯ ಕುಲಾವಿ, ಕವಡೆ ಸರ, ಹೆಗಲಲ್ಲಿ ಜೋಳಿಗೆ, ದೋಣಿ, ಭಂಡಾರಬಕ್ಸ, ಗಂಟೆ, ತ್ರಿಶೂಲ, ನಾಗಬೆತ್ತ, ಡಮರು ಇವು ಗೊರವರಲ್ಲಿ ಸಾಮಾನ್ಯವಾದ ಆದರೆ ಅಗತ್ಯವಾದ ಸಲಕರಣೆಗಳು. ಇವರಲ್ಲಿ ಕರಡಿ ಗೊರವರು ಸಾಮಾನ್ಯವಾಗಿ ಕವಡೆಯ ದೊಡ್ಡ ಸರಗಳನ್ನು ಮಾತ್ರ ಧರಿಸುತ್ತಾರೆ. ಕರಡಿ ಗೊರವರು ಮುರಗಿ ಮುಂಡಾಸಿನ ಬದಲಿಗೆ ಕರಡಿಯ ಕೂದಲು ಸಹಿತವಾದ  ಚರ್ಮದ ಟೊಪ್ಪಿಯನ್ನು ಧರಿಸುತ್ತಾರೆ. ಕೈಯಲ್ಲಿ ಕೊಳಲು ಅಥವಾ ಪಿಳ್ಳಂಗೋವಿ ಇರುತ್ತದೆ. ಕರಡಿ ಗೊರವರ ವೇಷ ತಕ್ಷಣ ನೋಡಿದರೆ ಹೆದರಿಕೊಳ್ಳುವಂತೆ ಇರುತ್ತದೆ. ಹಳ್ಳಿಗಳಲ್ಲಿ ಅಳುವ ಮಕ್ಕಳನ್ನು ಸುಮ್ಮನಿರಿಸಲು ‘ಗೊರವಯ್ಯನನ್ನು ಕರೀತೀನಿ’ ಎಂದೇ ಹೇಳುತ್ತಾರೆ.

ಗೊರವರು ನುಡಿಸುವ ವಾದ್ಯ ವಿಶಿಷ್ಟವಾಗಿದ್ದು ಅದನ್ನು ‘ಪಾರಿ’ ಎಂದು ಕರೆಯಲಾಗುತ್ತದೆ. ತಗಡಿನ ಎರಡು ಮೂರು ಗಂಟೆಗಳನ್ನು ಉದ್ದವಾದ ಕಟ್ಟಿಗೆಯೊಂದಕ್ಕೆ ಸಾಲಾಗಿ ಕಟ್ಟಿ ಅದನ್ನು ಹಗ್ಗದಿಂದ ಬಿಗಿದು ಹೆಗಲಮೇಲಿಂದ ಕೆಳಕ್ಕೆ ಇಳಿ ಬಿಟ್ಟಿರುತ್ತಾರೆ. ಇದನ್ನು ಪಾರಿಗೊರವರು ಮಾತ್ರ ಧರಿಸುತ್ತಾರೆ. ಇದೇ ರೀತಿ ಕಿನ್ನರಿ ಗೊರವ ‘ಕಿನ್ನರಿ’ಯನ್ನೂ ಮದ್ದಲೆ ಗೊರವ ‘ಮದ್ದಲೆ’ಯನ್ನೂ ಪಡೆದಿರುತ್ತಾರೆ. ಘೋಳ, ತುಂತುಣಿ, ತಾಳ, ಕಾಲ್ಗೆಜ್ಜೆ ಹಾಗೂ ಈಗಾಗಲೇ ತಿಳಿಸಿರುವ ವೇಷಭೂಷಣಗಳಿಂದ ಕುಣಿಯುವುದು ಗೊರವರ ವೈಶಿಷ್ಟ್ಯ. ಗೊರವ ಸಂಪ್ರದಾಯ ಪ್ರಕಾರಗಳಲ್ಲಿರುವ ವೈವಿಧ್ಯವನ್ನು ಅನುಸರಿಸಿ ವೈವಿಧ್ಯವಾಗುತ್ತದೆ. ಡಮರುಗ, ಗೊರವರ ಪವಿತ್ರ ವಾದ್ಯ. ಮಾದರಿಗಾಗಿ ಕೆಲವೊಂದು ಗೊರವರ ಕುಣಿತದ ಪ್ರಕಾರಗಳನ್ನು ವಿವರಿಸಲಾಗಿದೆ.

69

ಕುದುರೆಕಾರರು: ಮೈಲಾರಲಿಂಗನ ವಾಹನ ಕುದುರೆ. ಆದುದರಿಂದ ಕುದುರೆಕಾರ ಗೊರವ ತಮ್ಮನ್ನು ಮೈಲಾರಲಿಂಗನ ವಾಹನಗಳೆಂದೇ ಭಾವಿಸುತ್ತಾರೆ. ಇವರು ಹಸಿರು, ಕೆಂಪು ಬಣ್ಣಗಳ ಕುತನಿಯ ನಿಲುವಂಗಿ ಧರಿಸುತ್ತಾರೆ. ಕಾಲಿಗೆ ಗಗ್ಗರ ಇಲ್ಲವೆ ಗೆಜ್ಜೆಸರ, ಕೈಯಲ್ಲಿ ಬಾರುಕೋಲು ಹಿಡಿದಿರುತ್ತಾರೆ. ಕುದುರೆಯ ಆಹಾರವಾದ ಪರಾಳವನ್ನು ಮುಕ್ಕುತ್ತಾ ಕುಣಿಯುವುದು ಇವರ ವಿಶೇಷ.

ಕಾರಣಿಕದ ಗೊರವ: ಇವರು ಗೊರವರಿಗೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ಪಾಲಿಸುವುದರೊಂದಿಗೆ ಕಾರಣಿಕೆ ಹೇಳಲು ಬೇಕಾದ ಬಿಲ್ಲು ಮತ್ತು ಬಟ್ಟೆಯನ್ನು ಹೆಚ್ಚಿಗೆ ಪಡೆದಿರುತ್ತಾರೆ. ತಲೆಯ ಮೇಲಿನ ಮುರಗೆಗೆ ಇನ್ನೊಂದು ಬಟ್ಟೆಯನ್ನು ಗಮನಿಸಿದಂತೆ ಹಾಕಿಕೊಳ್ಳುತ್ತಾರೆ. ದೋತರದ ಬದಲು ಶೇರವಾಲದಂತಹ ಚಲ್ಲಣ ಧರಿಸಿರುತ್ತಾರೆ. ಮೈಲಾರಲಿಂಗನ ಜಾತ್ರೆಯ ಕಾರಣಿಕೋತ್ಸವದಲ್ಲಿ ಕಾರಣಿಕ ನುಡಿಯುತ್ತಾರೆ.

ಕಂಚಾವೀರರು: ಗೊರವರಲ್ಲಿ ಈ ವರ್ಗದವರು ವಿಶೇಷರಾದವರು. ಇವರನ್ನು ವೀರರು, ಈರರು, ವೀರಗಾರರು, ಈರಯ್ಯಗಳು, ಕಾಸೆಯವರು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇವರಲ್ಲಿ ಸಾಮಾನ್ಯ ಕಂಚಾವೀರರು ಹಾಗೂ ವೀರಗಾಸೆಯವರು ಎಂದು ಎರಡು ವಿಧ. ಸಾಮಾನ್ಯ  ಕಂಚಾವೀರರು ದೋತರ ಅಥವಾ ಚಲ್ಲಣ, ಅಂಗಿ, ಮುರಗಿ, ಮುಂಡಾಸು, ಸೆಲ್ಲೆ ಅಥವಾ ದಡಿಯ, ಕೋಟು, ಕಂಕಣ, ಖಡ್ಗ, ಬೆತ್ತ, ಅಥವಾ ಶಸ್ತ್ರಗಳನ್ನು ಧರಿಸುತ್ತಾರೆ. ವೀರಗಾಸೆಯವರು ತಲೆಯ ಮುಂಡಾಸು ಧರಿಸದೆ ಕೆದರಿದ ಕೂದಲು ಬಿಟ್ಟಿರುತ್ತಾರೆ. ತಲೆಗೆ ಕಾಡು ಆಕಳಿನ ಬಾಲದ ಕೂದಲಿನ ಜಟೆಯನ್ನು ಕಟ್ಟಿ, ಅದಕ್ಕೆ ಗೆಜ್ಜೆ ಸೇರಿದ ಪಟ್ಟಿಯನ್ನು ಬಿಗಿಯುತ್ತಾರೆ. ಕೊರಳಿಗೆ ರುದ್ರಾಕ್ಷಿ, ಲಿಂಗದ ಕರಡಿಗೆ ಹಾಕಿಕೊಂಡು ‘ಜಂಗ’ನ್ನು ಇಳಿಬಿಟ್ಟು ದೋತರ ಕಾಸೆಯನ್ನು ಕಟ್ಟಿಕೊಳ್ಳುತ್ತಾರೆ. ನಡುವಿಗೆ ‘ವೀರಮುಖ’ ಹಾಗೂ ಸುತ್ತಲೂ ಕೂದಲಿನ ಕುಚ್ಚಗಳನ್ನು ಇಳಿ ಬಿಟ್ಟಿರುತ್ತಾರೆ. ಉಳಿದಂತೆ ಗೊರವರ ಮಾಮೂಲು ಆಭರಣ ವಿಶೇಷಗಳಿರುತ್ತವೆ.

ಗೊರವರ ಕುಣಿತ: ಗೊರವರ ಸಾಂಪ್ರದಾಯಿಕ ವೇಷ ಭೂಷಣಗಳ ಬಗ್ಗೆ ಈಗಾಗಲೇ ಹೇಳಲಾಗಿದೆ. ಗೊರವರ ಕುಣಿತ ಕೂಡ ತುಂಬ ಸಾಂಪ್ರದಾಯಿಕವಾದದ್ದೇ. ಅವರ ಹಬ್ಬ ಮತ್ತು ಜಾತ್ರೆಗಳಲ್ಲಿ ಅಲ್ಲದೆ ಆಹ್ವಾನಿಸುವ ಭಕ್ತರ ಮನೆಗಳಲ್ಲಿ ಈ ಕುಣಿತ ನೆರವೇರುತ್ತವೆ. ನೂತನ ಗೃಹಪ್ರವೇಶಕ್ಕೂ ಗೊರವರ ಕುಣಿತಕ್ಕೂ ಸಂಬಂಧವಿರುವುದು ಈ ಕುಣಿತದ ಮತ್ತೊಂದು ವಿಶೇಷ. ಹೊಸಮನೆ ಕಟ್ಟಿದ ಭಕ್ತರು ಗೊರವರನ್ನು ಆಹ್ವಾನಿಸುತ್ತಾರೆ. ಈ ಸಂದರ್ಭದ ಕುಣಿತವನ್ನು ‘ಮಾಣಿಸೇವೆ’ ಅಥವಾ ‘ಒಗ್ಗಸೇವೆ’ ಎಂದು ಕರೆಯಲಾಗುತ್ತದೆ. ಹೊಸಮನೆಯಲ್ಲಿ ನಡುವೆ ಹಾಸಿದ ಕರಿಯ ಕಂಬಳಿಯ ಮೇಲೆ ಪುಟ್ಟ ‘ದೋಣಿ’ಗಳಲ್ಲಿ ಹಾಲು ತುಂಬಿಡುತ್ತಾರೆ. ಬಾಳೆಹಣ್ಣು ಕಜ್ಜಾಯಗಳ ರಸಾಯನವನ್ನು ತುಂಬಿಡುವುದುಂಟು. ಹಣ್ಣು ಹೂವು, ಕಡ್ಡಿ ಕರ್ಪೂರಗಳಿಂದ ಈ ಹಾಲು ಹಣ್ಣು ನೈವೇದ್ಯವನ್ನು ಪೂಜಿಸಿದ ಬಳಿಕ ಕಂಬಳಿಯ ಸುತ್ತ ಗೊರವಯ್ಯಗಳು ಲಯಬದ್ದ ಹೆಜ್ಜೆ ಹಾಕುತ್ತಾ ಕುಣಿಯತೊಡಗುತ್ತಾರೆ. ಕಾಲಿನ ಗೆಜ್ಜೆಯ ನಿಯತಸದ್ದಿಗೂ, ಕೈಯಲ್ಲಿಯ ಡಮರುಗದ ಗಂಭೀರ ನಿನಾದಕ್ಕೂ ನಡುವೆ ದೈವವನ್ನು ಕುರಿತ ಉದ್ಗಾರಗಳು ಇರುತ್ತವೆ. ಹಾಗೆ ಕುಣಿಯುತ್ತಾ ಕುಣಿಯುತ್ತಾ, ಬಾಗಿ ಬಾಗಿ, ಕುಳಿತು, ಎದ್ದು, ಕಂಬಳಿಯಲ್ಲಿಟ್ಟು ರಸಾಯನವನ್ನು ತಿನ್ನುವ ಭಂಗಿಯನ್ನು ಪ್ರದರ್ಶಿಸುತ್ತಾರೆ. ದೈವದ ಮಹಿಮೆಯನ್ನು ಹೇಳುತ್ತಾ ಹೇಳುತ್ತಾ ಕುಣಿತದ ನಡುವೆಯೇ ಅಂಗಾತ ಹಾಗೆ ಮಲಗಿದಂತೆ ಮಾಡಿ ಹಾಲನ್ನು ಕುಡಿಯುತ್ತಾರೆ. ಹಣ್ಣು ಕಜ್ಜಾಯಗಳ ರಸಾಯನವನ್ನು ತಿನ್ನುತ್ತಾರೆ. ತಪ್ಪಿಯೂ ಕೈಯಿಂದ ಮುಟ್ಟುವುದಿಲ್ಲ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಇದನ್ನು ‘ಮಣೆ ಸೇವೆ’, ‘ಮಣೇವು ಸೇವೆ’, ‘ಮಣೇವು ಕುಣಿತ’ ಎಂದು ಕರೆಯಲಾಗುತ್ತದೆ.

ಇನ್ನು ಹಬ್ಬ ಜಾತ್ರೆ ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸುವ ಗೊರವರ ಕುಣಿತ ಮತ್ತಷ್ಟು ಚೆನ್ನಾಗಿರುತ್ತದೆ. ಅವರ ಆ ವೇಷಗಳೇ ನಿಂತು ನೋಡುವಂಥವು. ಎತ್ತರದ ಕಟ್ಟೆ, ಗದ್ದುಗೆ ಅಥವಾ ವೇದಿಕೆಯ ಮೇಲೆ ಸಾಲಾಗಿ ನಿಲ್ಲುವ ಹತ್ತು ಹನ್ನೆರಡು ಜನ ಗೊರವರು ಈ ಕಲಾತಂಡದಲ್ಲಿ ಇರುತ್ತಾರೆ. ದೈವದ ಸ್ತುತಿ ಮಾಡುವ ಮೊದಲು ಹಿರಿಯ ಗೊರವ ಪಿಳ್ಳಂಗೋವಿ(ಕೊಳಲು) ಊದಿ ತನ್ನ ಡಮರುಗಳನ್ನು ಢಗ ಢಗ ಢಗ ಢಗ ಎಂದು ಬಡಿದು ನಿಲ್ಲುತ್ತಾನೆ. ಅನಂತರ ಒಟ್ಟಾಗಿ ದೈವದ ಸ್ತುತಿ ಆರಂಭವಾಗುತ್ತದೆ. ಹತ್ತು ಹನ್ನೆರಡು ಡಮರುಗಗಳು ಢಗಢಗ ಸದ್ದನ್ನು ಮಾಡುತ್ತದೆ. ಈ ಸದ್ದಿಗೆ ತಕ್ಕಂತೆ ಮುಂದೆಜ್ಜೆ, ಹಿಂದೆಜ್ಜೆ ಹಾಕುತ್ತಾ ಕುಣಿತ ಆರಂಭವಾಗುತ್ತದೆ. ಮಧ್ಯೆ ಮಧ್ಯೆ ತಲೆಗೆ ಹಾಕಿದ ಕರಡಿ ಕೂದಲಿನ ಟೊಪ್ಪಿಗೆಯನ್ನು ತೆಗೆದು ಮುಂದೆ ಚಾಚಿ ತೋರಿಸಿದಂತೆ ಮಾಡಿ ಮತ್ತೆ ಧರಿಸುತ್ತಾರೆ. ಆವೇಶಗೊಂಡಂತೆ ಹಿಂದೆ ಮುಂದೆ ತಿರುಗಿ ಗಿರಿಕಿ ಹೊಡೆದಂತೆ ಕುಣಿಯುತ್ತಾ ಮಂಡಲಾಕಾರದಲ್ಲಿ ಸುತ್ತುತ್ತಾರೆ. ಆ ಸಂದರ್ಭದಲ್ಲಿ ತಲೆಯ ಟೊಪ್ಪಿಗೆಗಳನ್ನು ತೆಗೆದು ಮಧ್ಯ ಇಟ್ಟು ಸುತ್ತಲೂ ಕುಣಿಯುವುದೂ ಉಂಟು.

ಗೊವರ ಕಥನ ಮೇಳ: ಗೊರವರ ಕುಣಿತಕ್ಕಿಂತ ಮುಖ್ಯವಾದದ್ದು ಅವನ ಕಥನ ಮೇಳ. ಗೊರವ ಕಲಾವಿದರು ತಮ್ಮ ಎದೆಯಲ್ಲಿ ನೂರಾರು ಹಾಡು ಕಥೆಗಳನ್ನು ಇಟ್ಟುಕೊಂಡ ಪ್ರತಿಭಾವಂತರು. ಆಹ್ವಾನಿಸುವ ಭಕ್ತರ ಮನೆಗಳಿಗೆ ಹೋಗಿ ಇಡೀ ರಾತ್ರಿ ಕಥೆ ನಡೆಸಿಕೊಡುವುದು ಇವರ ವೃತ್ತಿ. ದೀಕ್ಷಾಬದ್ಧ ಗೊರವರು ಭಿಕ್ಷೆಯನ್ನು ಮಾಡಬೇಕಷ್ಟೇ. ಮೈಲಾರಲಿಂಗನ ಕಾವ್ಯವಲ್ಲದೆ ಇತರೆ ಕಥೆಗಳನ್ನು ಗೊರವರು ಹಾಡುತ್ತಾರೆ. ದಕ್ಷಿಣ ಭಾಗದ ‘ಮುಡುಕು ತೊರೆ’ ಕ್ಷೇತ್ರಕ್ಕೆ ಸೇರಿದ ಗೊರವರು ಮಾದೇಶ್ವರ, ಮಂಟೇಸ್ವಾಮಿ ಕಥನಗಳನ್ನು ಹಾಡುವುದುಂಟು. ಹಾಡಿನ ಹಿನ್ನೆಲೆಗೆ ಡಮರುಗವೇ ಇವರ ವಾದನ. ಕಂಚಿನ ತಾಳ, ದಮ್ಮಡಿ ಮತ್ತು ಕೈಗೆ ಗೆಜ್ಜೆ ಕಟ್ಟಿಕೊಳ್ಳುವುದು ಉಂಟು. ಗೊರವರ ಕಾವ್ಯಕಥನದ ರೀತಿ ಕೂಡ ಸಮ್ಮೋಹಕ.

ಮೈಲಾರಲಿಂಗನ ಉದ್ಭವವಾದ ಬಗೆ ಹೇಗೆ, ಯಾರ ನಿಗ್ರಹಾರ್ಥವಾಗಿ ಅಥವಾ ಉದ್ಧಾರಾರ್ಥವಾಗಿ ಅವನು ಕೈಲಾಸದಿಂದ ಭೂಲೋಕಕ್ಕೆ ಬಂದ, ಯಾವ ರೂಪವನ್ನು ಧರಿಸಿ ಅವನು ಮಣಿಮಲ್ಲಾಸುರನನ್ನು ಕೊಂದ ಎಂಬ ವಿಷಯಗಳು ‘ತಾಳುಗತೆ’ಯಲ್ಲಿ ಪ್ರತಿಪಾದಿತವಾಗಿದ್ದು, ಮುಂದೆ ತುಪ್ಪದ ಮಾಳಿಯನ್ನು ಲಗ್ನವಾಗುವುದರಲ್ಲಿ ಮೈಲಾರಲಿಂಗ ತನ್ನ ಮಹಿಮೆಯನ್ನು ಮೆರೆದ ಪ್ರಸಂಗವೇ ವರ್ಣಿತವಾಗಿದೆ. ನಾಯಿಗಳನ್ನು ತನ್ನ ಕಡೆಗೆ ಸೆಳೆದುಕೊಂಡಿದ್ದು, ಏಳು ಹೆಡೆಯ ಸರ್ಪ ತುಪ್ಪದ ಮಾಳಿಯ ಕೊರಳನ್ನು ಬಿಟ್ಟು ಗೊರವನ ತಲೆಗೆ ಸುತ್ತಿಕೊಂಡದ್ದು, ತುಪ್ಪದ ಮಾಳಿಯ ಕೊರಳನ್ನು ಬಿಟ್ಟು ಗೊರವನ ತಲೆಗೆ ಸುತ್ತಿಕೊಂಡದ್ದು, ತುಪ್ಪದ ಮಾಳಿಯ ಅಣ್ಣಂದಿರು ಗೊರವನತ್ತ ಬೀಸಿದ ದೊಣ್ಣೆಯ ಏಟುಗಳು ತುಪ್ಪದ ಮಾಳಿಗೆ ತಾಕಿದುದು. ಕೊನೆಗೆ ಗೊರವ ಆ ಐದು ಮಂದಿ ಕುರುಬಗೌಡಗಳಿಗೂ ಕವಡೆಯನ್ನು ಕಟ್ಟಿ ಗುಡ್ಡರನ್ನಾಗಿ ಮಾಡಿಕೊಂಡದ್ದು. ಈ ಅಂಶಗಳೆಲ್ಲ ಈ ಕತೆಯಲ್ಲಿ ಕಾಣಬರುವುದರಿಂದ ಮೈಲಾರಲಿಂಗನನ್ನು ಕುರಿತ ಜನಪದ ಧಾರ್ಮಿಕ ಕಾವ್ಯವೊಂದು ಖಚಿತರೂಪದಲ್ಲಿ ಲಭ್ಯವಿತ್ತೆನ್ನಲಾಗಿದೆ.

ಎಚ್.ಸಿ.ಬಿ.

ಗೊರವಲ ನೃತ್ಯಂ ಗೊರವರು ಕುರುಬ ಜಾತಿಗೆ ಸೇರಿದವರು. ಇವರು ಹೆಚ್ಚಾಗಿ ಅನಂಗಪುರ, ಕರ್ನೂಲು ಜಿಲ್ಲೆಗಳಲ್ಲಿ ಇದ್ದಾರೆ. ಕಸಪ ಚಿತ್ತೂರು ಜಿಲ್ಲೆಗಳಲ್ಲಿ ಗೊರವರನ್ನು ಮಲ್ಲೆದರೆ (ಮಲ್ಲಯ್ಯ) ನಾಯಿಗಳೆಂದು ಕರೆಯುತ್ತಾರೆ. ಗೊರವ ವಂಶದಲ್ಲಿ ದೊಡ್ಡಮಗನಾಗಲಿ ಚಿಕ್ಕಮಗನಾಗಲಿ ತಪ್ಪದೇ ಗೊರವನಾಗಬೇಕೆಂಬ ಸಂಪ್ರದಾಯವಿದೆ. ಗೊರವನಾಗಬೇಕಾದರೆ ‘ಗುರು’ ಅಥವಾ ‘ಗಣಾಚಾರಿ’ ಅಗತ್ಯ. ಕರ್ನೂಲು ಜಿಲ್ಲೆಯಲ್ಲಿ ಕುರುಬ ವಂಶಸ್ಥರು ಗೊರವಯ್ಯನಾಗಬೇಕಾದರೆ ಹುಡುಗನನ್ನು ಆ ಊರಿನ ಗುಟ್ಟಮಲ್ಲಯ್ಯ ಬೆಟ್ಟದ ಮೇಲಿರುವ ಮಲ್ಲೇಶನ ಗುಡಿಗೆ ಕರೆದುಕೊಂಡು ಹೋಗುವರು. ಅಲ್ಲಿ ಕಲ್ಯಾಣಿಯಲ್ಲಿ ಸ್ನಾನ ಮಾಡಿದ ನಂತರ ಕಪ್ಪು ಕಂಬಳಿಯ ಮೇಲೆ ಕೂರಿಸಿ ಹುಡುಗನ ಸೋದರ ಮಾವನಿಂದ ಪ್ರಮಾಣ ಮಾಡಿಸುತ್ತಾರೆ. ಕುಲಗುರು ಕವಡೆಯಿಂದ ಕೂಡಿದ ಹಾರವನ್ನು ಕುತ್ತಿಗೆಗೆ ಕಟ್ಟುತ್ತಾರೆ. ಗೊರವಯ್ಯನಾಗಿ ಬದಲಾದ ಹುಡುಗ ಕುಲವೃತ್ತಿಗೆ ದ್ರೋಹ ಮಾಡನೆಂದು, ಇತರರನ್ನು ಮೋಸ ಮಾಡೆನೆಂದೂ, ಸುಳ್ಳು ಹೇಳೆನೆಂದೂ ಗುರುವಿನ ಮುಂದೆ ಪ್ರಮಾಣ ಮಾಡಿ ಗುರುದಕ್ಷಿಣೆ ಕೊಡುತ್ತಾನೆ. ಗೊರವಯ್ಯನಾಗಿ ಬದಲಾದ ವ್ಯಕ್ತಿ ಕೋಟೀಶ್ವರನಾದರೂ ಸಂಕ್ರಾಂತಿ ಹಬ್ಬದಂದು ವಂಶಾನುಕ್ರಮವಾಗಿ ಐದು ಮನೆಗಳಲ್ಲಿ ಭಿಕ್ಷೆ ಬೇಡಬೇಕು. ಕೊರಳಲ್ಲಿ ಕವಡೆಯ ಹಾರವನ್ನು ಧರಿಸಿ ಕಪ್ಪು ಕಂಬಳಿ ಮೈಯೆಲ್ಲಾ ಸುತ್ತಿಕೊಂಡು ಕೈಯಲ್ಲಿ ಡಮರುಗವನ್ನು ಹಿಡಿದು ಎಡಕೈಯಲ್ಲಿ ಕೊಳಲು, ಕಾಲಿಗೆ ಗೆಜ್ಜೆ, ತಲೆಗೆ ಕರಡಿಯ ಚರ್ಮವನ್ನು ಕಿರೀಟವಾಗಿ ಧರಿಸಿ ಹಣೆಯಲ್ಲಿ ಬಂಡಾರವಿಟ್ಟು ಸೊಂಟಕ್ಕೆ ಜಿಂಕೆಯ ಚರ್ಮದಿಂದ ಮಾಡಿದ ಬಂಡಾರು ಚೀಲವನ್ನು ಕಟ್ಟಿಕೊಂಡು ಪ್ರತಿ ಮನೆಯ ಹತ್ತಿರ ಭಿಕ್ಷೆ ಬೇಡುತ್ತಾ ಡಮರುಗವನ್ನು ಬಾರಿಸುತ್ತಾ ಕೊಳಲನ್ನೂದುತ್ತಾ ಶ್ರೀಶೈಲ ಮಲ್ಲಿಕಾರ್ಜುನ ಮೇಲೆ ಭಕ್ತಿಯ ಹಾಡುಗಳನ್ನು ಹಾಡುತ್ತಾರೆ.

ಗೊರವಯ್ಯರೆಲ್ಲಾ ದಸರಾಹಬ್ಬದಂದು ಆ ಊರಿನ ಮಲ್ಲೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಾಡುಗಳನ್ನಾಡುತ್ತಾ ನೃತ್ಯ ಮಾಡುವರು. ತನ್ನ ಶರೀರದಿಂದ ಹೊಸನೆತ್ತರ ತೆಗೆದು ದೇವರಿಗೆ ನೈವೇದ್ಯವಾಗಿ ಕೊಡುತ್ತಾರೆ. ಕಡೆಯಲ್ಲಿ ನಾಯಿಗಳಂತೇ ಕೂಗುತ್ತಾ ನಾಯಿಗಳಂತೇ ನಾಲಿಗೆಯಿಂದ ಹಾಲನ್ನು ನೆಕ್ಕುತ್ತಾರೆ. ಗೊರವಯ್ಯರು ನೃತ್ಯ  ಮಾಡುತ್ತಿರುವಾಗ ಹಾಡನ್ನು ಹಾಡುವುದಿಲ್ಲ. ಹಾಡು ಹಾಡುವ ಬೆರಳುಗಳಿಂದ ಬಾರಿಸುವರು. ಭಿಕ್ಷೆ ಬೇಡುವಾಗ, ನೃತ್ಯ ಮಾಡುವಾಗ ಮಾತ್ರ ಡಮರುಗವನ್ನು ಬಾರಿಸುತ್ತಾರೆ. ಲಯಾತ್ಮಕವಾಗಿ ಊದುವರು. ಗೊರವಯ್ಯರ ನೃತ್ಯದಲ್ಲಿ ಒಬ್ಬರಿಂದ ಎಷ್ಟು ಜನರಾದರೂ ವೃತ್ತಾಕಾರವಾಗಿ ನರ್ತಿಸುವರು.

ಗೊರವಯ್ಯರ ನೃತ್ಯವನ್ನು ನೋಡುತ್ತಿರುವಾಗ ಮಕ್ಕಳು ಭಯಪಡುತ್ತಾರೆ. ಗೊರವಯ್ಯರು ಮನೆಗಳ ಹತ್ತಿರಕ್ಕೆ ಬಂದು ಭಿಕ್ಷೆ ಬೇಡುತ್ತಿರುವಾಗ ಧಾನ್ಯವನ್ನು ನೀಡಿದರೆ ಅವರು ಭಂಡಾರವನ್ನಿಟ್ಟು ಹೋಗುವರು.

ಇವರನ್ನು ಶುಭ ಕಾರ್ಯಗಳಿಗೆ ಮನೆಯಲ್ಲಿ ಅನಿಷ್ಟಗಳು ಬಾರದಂತೇ ಇರಬೇಕೆಂಬ ಬಯಕೆಯಿಂದ ಭಂಡಾರವನ್ನು ಕೊಟ್ಟು ಕರೆಯುತ್ತಾರೆ. ಗೊರವಯ್ಯರು ಬಂದು ಮನೆಯಲ್ಲಿ ಶಿವನನ್ನು ಪೂಜಿಸಿ ಮನೆಯ ಯಜಮಾನನಿಂದ ಪೂಜಿಸಿದ ನಂತರ ಅವರಿಗೆ ಮನೆಯ ಯಜಮಾನ ಇನಾಮು ಕೊಡುತ್ತಾನೆ.

ಬಿ.ಕೆ.ಆರ್. ಅನುವಾದ ಎ.ಎ.

ಗೋಂಗೂರ ತೆಲುಗರಿಗೆ ಅತ್ಯಂತ ಪ್ರಿಯವಾದ ಸೊಪ್ಪು, ಗೋಗಾಕು ಎಂದು ರಾಯಲಸೀಮೆಯಲ್ಲಿ ಪುಂಟಿಕೂರ ಎಂದು ತೆಲಂಗಾಣ ಪ್ರಾಂತ್ಯದಲ್ಲಿ ಇದನ್ನು ಹೇಳುತ್ತಾರೆ.

ಗೋಂಗೂರವನ್ನು ಕರ್ನಾಟಕದಲ್ಲಿ ಪುಂಡಿಸೊಪ್ಪು ಎಂದು ಕರೆಯುತ್ತಾರೆ. ಗೋಂಗೂರದಲ್ಲಿ ಎರಡು ಬಗೆಗಳಿವೆ. ಒಂದು ಪುಲ್ಲಗೋಂಗೂರ, ಎರಡು ದೇಶವಾಳೀಕೂರ. ಪುಲ್ಲಗೋಂಗೂರ ತುಂಬಾ ಹುಳಿ. ದೇಶವಾಳಿ ಗೋಂಗೂರದಲ್ಲಿ ಹುಳಿ ಸ್ವಲ್ಪ ಕಡಿಮೆಯಿರುತ್ತದೆ. ಗೋಂಗೂರಕ್ಕೆ ಆಂಧ್ರದ ಗುಂಟೂರು ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಆವಕಾಯದಂತೆ ಗೋಂಗೂರ ಪಚ್ಚಡಿಯನ್ನೂ ಸಹ ಒಂದೆರಡು ವರ್ಷ ಕೆಡದಂತೆ ಇಡಬಹುದು. ಆದರೆ ಇದಕ್ಕೆ ಎರ್ರ‍(ಕೆಂಪು) ಗೋಂಗೂರ ಸೊಪ್ಪನ್ನು ಬಳಸುತ್ತಾರೆ.

ಪುಲ್ಲಗೋಂಗೂರದಂತೆ ತೆಲ್ಲ ಗೋಂಗೂರ, ಎರ್ರ‍ಗೋಂಗೂರ ಎಂದೂ ಎರಡು ಬಗೆಗಳಿವೆ. ತೆಲ್ಲಗೋಂಗೂರ ಹಸಿರುಕಾಂಡ ಬಣ್ಣ. ಎರ್ರ‍ಗೋಂಗೂರದಲ್ಲಿ ದಂಟು ಕೆಂಪಗಿರುತ್ತದೆ.

ಗೋಂಗೂರ ಸೊಪ್ಪನ್ನು ದಂಟಿಲ್ಲದಂತೆ ಚೆನ್ನಾಗಿ ಸ್ವಚ್ಛ ಮಾಡಿ ಬಾಣಲಿಯಲ್ಲಿ ಹುರಿಯಬೇಕು. ಅನಂತರ ಇದಕ್ಕೆ ಉಪ್ಪನ್ನು ಹಾಕಿ ಜಾಡಿಯಲ್ಲಿ ಇಡಬೇಕು. ಮೆಣಸಿನಕಾಯಿ ಮತ್ತು ಇನ್ನೂ ಸ್ವಲ್ಪ ಉಪ್ಪನ್ನು ಚೆನ್ನಾಗಿ ಅರೆದು, ಹುಣಿಸೇ ಹಣ್ಣನ್ನು ಸೇರಿಸಿ ಇನ್ನೊಂದು ಜಾಡಿಯಲ್ಲಿ ಇಡಬೇಕು. ನಾಲ್ಕು ದಿವಸಗಳ ಅನಂತರ ಈ ಮಿಶ್ರಣವನ್ನು ಗೋಂಗೂರ  ಜೊತೆಯಲ್ಲಿ ಹಾಕಿ ರುಬ್ಬಬೇಕು. ಬಾಣಲಿಯಲ್ಲಿ ಎಣ್ಣೆ ಹಾಕಿ, ಮೆಂತ್ಯವನ್ನು ಹುರಿದು ರುಬ್ಬಿದ ಮಿಶ್ರಣಕ್ಕೆ ಸೇರಿಸಬೇಕು. ಅನಂತರ ಒಗ್ಗರಣೆಗೆ ಎಣ್ಣೆ ಜಾಸ್ತಿ ಹಾಕಿ ಗೋಂಗೂರಕ್ಕೆ ಹಾಕಿ ಕಲಸಬೇಕು. ಇದು ೬-೧೦ ತಿಂಗಳ ಕಾಲ ಕೆಡದೇ ಇರುತ್ತದೆ.

ಗೋಂಗೂರ ಚಟ್ನಿಯಂತೆ ಗೋಂಗೂರ ಪುಲುಸು (ಪುಲುಸು – ಸಾಂಬಾರು) ಗೋಂಗೂರ- ಶನಕಪ್ಪುಕೂರ (ಶನಗಪಪ್ಪ- ಕಡಲೇಬೇಳೆ) ಕೂರ – ಪಲ್ಯ ಪುಂಡಿಕೂರ ಪಪ್ಪು (ಪಪ್ಪು -ತೊವ್ವೆ) ತಯಾರಿಸುತ್ತಾರೆ.

ಗೋಂಗೂರದಲ್ಲಿ ಪೌಷ್ಠಿಕಾಂಶಗಳು ಕಂಡುಬರುತ್ತವೆ. ಇದು ಅರುಚಿಯನ್ನು ಹೋಗಲಾಡಿಸುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ದೇಹಕ್ಕೆ ಉಷ್ಣತೆಯನ್ನು ಕೊಡುತ್ತದೆ. ವೈದ್ಯರು ಇದನ್ನು ರೋಗಿಗಳಿಗೆ ಪಥ್ಯವಾಗಿ ಸೂಚಿಸಿದ್ದಾರೆ.

ಜಿ.ಎಸ್.ಎಂ.

ಗೋಂಡು ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯಲ್ಲಿರುವ ಬುಡಕಟ್ಟು. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿಯೂ ಈ ಜನ ಸಮೂಹ ವಾಸಿಸುತ್ತದೆ. ಗೋಂಡರು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಕೊಯ ಭಾಷೆ ಮಾತನಾಡುತ್ತಾರೆ. ಸಾಮಾಜಿಕ, ಸಾಂಸ್ಕೃತಿಕ , ಆರ್ಥಿಕ ಜೀವನದಲ್ಲಿ ಗೋಂಡ ಮಹಿಳೆಯರ ಪಾತ್ರವನ್ನು ಗಮನಿಸಿದಾಗ ಮಕ್ಕಳ ಜವಾಬ್ದಾರಿಯನ್ನು ಮಹಿಳೆಯರದೇ. ಹೆಂಗಸರು ಬಹಳಷ್ಟು ಸಂಪ್ರದಾಯ ಕಟ್ಟುಪಾಡುಗಳಿಗೆ ಒಳಗಾಗಿರುತ್ತಾರೆ. ಹಿರಿಯರೆದುರಿಗೆ ಚಪ್ಪಲಿ ಹಾಕಿಕೊಂಡು ತಿರುಗುವುದೂ ಅಪರಾಧ. ಅದೇ ರೀತಿ ಅತ್ತೆ ಮಾವಂದಿರ ಎದುರಿಗೆ ಮಂಚದ ಮೇಲೆ ಕುಳಿತುಕೊಳ್ಳಬಾರದು. ಮಗಳ ಒಪ್ಪಿಗಯಿಲ್ಲದೆಯೇ ತಂದೆ ತಾಯಿಗಳ ವರನನ್ನು ಹುಡುಕುತ್ತಾರೆ. ಭೂಮಿಯನ್ನು ಉಳುವುದು ಗೋಂಡು ಸ್ತ್ರೀಯರಿಗೆ ನಿಷೇಧ. ಒಂದು ವೇಳೆ ಹಾಗೆ ಮಾಡಿದರೆ ಮಳೆಯಾಗುವುದಿಲ್ಲವೆಂಬುದು ಅವೆ ನಂಬಿಕೆ.

ಗೋಂಡರಲ್ಲಿ ಪಿತೃಪ್ರಧಾನ ವ್ಯವಸ್ಥೆಯಿದೆ. ಅವರಲ್ಲಿ ನಾಲ್ಕು ತೆರನಾದ ಗೋತ್ರಗಳಿವೆ.

೧. ನೆಲ್ಪೆನ್ ಸಾಗಾ (ನಾಲ್ಕು ಮಂದಿ ಸಹೋದರರ ದಿವ್ಯ ಸಮೂಹ)

೨. ಸಿವೆನ್ ಸಾಗಾ (ಐವರು ಸಹೋದರರ ದಿವ್ಯ ಸಮೂಹ)

೩. ಗುರ್ವೇನ್ ಸಾಗಾ (ಆರು ಮಂದಿ ಸಹೋದರರ ದಿವ್ಯ ಸಮೂಹ)

೪. ಎಡೈನ್ ಸಾಗಾ (ಏಳು ಮಂದಿ ಸಹೋದರರ ದಿವ್ಯ ಸಮೂಹ)

ಗೋತ್ರನಾಮ ವ್ಯಕ್ತಿಯ ಹೆಸರಿನ ಮೊದಲು ಬರುತ್ತದೆ. ಗೋಂಡರಲ್ಲಿ ಏಕಪತ್ನಿ ಪದ್ಧತಿಯಿದ್ದು, ಸಂಪನ್ನ ಗೋಂಡರು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿರುತ್ತಾರೆ. ಒಂದೇ ಗೋತ್ರದ ಕೂಡಲಿಯಲ್ಲಿ ವಿವಾಹ ನಿಷಿದ್ಧ. ವಿವಾಹೇತರ ಸಂಬಂಧಗಳಿಗೆ ಮನ್ನಣೆಯಿಲ್ಲ. ಸೋದರ ಸೊಸೆಯನ್ನು ವಿವಾಹ ಮಾಡಿಕೊಳ್ಳುವುದಿಲ್ಲ. ಮದುವೆಗಳು ೧.ಮಾತುಕತೆ, ೨.ಸೇವೆಯ ಮೂಲಕ, ೩.ಪರಿಗ್ರಹಣ, ೪.ಅನಾಹತ, ೫.ಓಡಿಹೋಗುವ ಮೂಲಕ, ೬.ವಿನಿಮಯಗಳ ಮೂಲಕ ನಡೆಯುತ್ತದೆ. ತೀರಿಕೊಂಡ ಸೋದರನ ಹೆಂಡತಿಯನ್ನು ಮದುವೆಯಾಗಬಹುದು. ವಿಧವಾ ವಿವಾಹ, ಪುನರ್ ವಿವಾಹಗಳನ್ನು ಗೋಂಡ ಭಾಷೆಯಲ್ಲಿ ‘ಪಾಟ್’ ಎಂದು ಕರೆಯುತ್ತಾರೆ. ವಿವಾಹ ವಿಚ್ಚೇದನಕ್ಕೆ ಅವಕಾಶವಿದೆ.

ಗೋಂಡರು ಮದುವೆಯಾಗಿದ್ದ ಗಂಡು, ಹೆಣ್ಣು, ತೀರಿಕೊಂಡರೆ ಸುಡುತ್ತಾರೆ. ಮಕ್ಕಳು ಅವಿವಾಹಿತರ ಮೃತದೇಹಗಳನ್ನು ಹೂಳುತ್ತಾರೆ. ಇವರು ಸಾವನ್ನು ದುಷ್ಟ ಶಕ್ತಿಗಳಿಗೆ ಆಪಾದಿಸುತ್ತಾರೆ.

ಗೋಂಡರು ಬೇಸಾಯವನ್ನು ಮಾಡುತ್ತಾರೆ. ಬೇಸಾಯದ ಕೂಲಿಗಳಾಗಿಯೂ ದುಡಿಯುತ್ತಾರೆ. ಜೋಳ, ಹತ್ತಿ, ತೊಗರಿ, ಉದ್ದು, ಬೆಳೆಯುತ್ತಾರೆ. ಪ್ರಮುಖ ದೇವತೆಗಳು ಅಕಿಯನ್, ವಾತ್ ಆವಾಲ್, ಶಿವ ಆವಾ, ಗೌರಿಪೆನ್ (ಹುಲಿ ದೇವತೆ), ದೊದಿ ಮಾರೈ (ಆಕಳ ದೊಡ್ಡಿಯ ದೇವತೆ), ನೈವೇದ್ಯವನ್ನು ಇಡದೆ ಬೆಳೆದ ಮೊದಲ ಹಣ್ಣುಗಳನ್ನಾಗಲಿ, ಧಾನ್ಯಗಳನ್ನಾಗಲಿ ತಿನ್ನುವುದಿಲ್ಲ. ಹಬ್ಬವನ್ನು ಗೋಂಡ ಭಾಷೆಯಲ್ಲಿ ‘ನೋವಾನ್’ ಎನ್ನುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೨,೫೨,೦೩೮ ಅಂದರೆ ಶೇಕಡಾ ೫.೦೨.

ಬಿ.ಕೆ.ಆರ್. ಅನುವಾದ ಕೆ.ಎಸ್.