ಗಾಲಿಪಟಂ ಆಂಧ್ರಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾದ ವಿನೋದಗಳಲ್ಲಿ ಗಾಳಿಪಟವೂ ಒಂದು. ಬಣ್ಣ ಬಣ್ಣದ ಗಾಳಿಪಟಗಳನ್ನು ಮೈದಾನಗಳಲ್ಲಿ, ಮಹಡಿಗಳ ಮೇಲೆ, ಕಡಲ ತೀರಗಳಲ್ಲಿ ಹಾರಿಸುವುದನ್ನು ಆಂಧ್ರದ ಅನೇಕ ಪ್ರದೇಶಗಳಲ್ಲಿ ನೋಡಬಹುದು. ಗಾಳಿಪಟವನ್ನು ಕುರಿತ ಉಲ್ಲೇಖಗಳು ಪ್ರಾಚೀನ ಸಾಹಿತ್ಯದಲ್ಲಿ ಸಿಕ್ಕುತ್ತವೆ. ಪತಂಗ್ ಎಂಬ ಹೆಸರಿನಲ್ಲಿ ಉತ್ತರ ಹಿಂದೂಸ್ಥಾನದಲ್ಲಿ ಇದು ಬಹಳ ಜನಪ್ರಿಯವಾಗಿದೆ. ತೆಲಂಗಾಣದಲ್ಲಿ ಪತಂಗ್ ಎಂಬ ಹೆಸರು ಬಳಕೆಯಲ್ಲಿದೆ. ಪತಂಗ್‌ಗಳಲ್ಲಿ ಡೋರೆದಾರ್, ನಾಮಂದರ್, ಆಂಖೇದಾಲ್, ಗಿಲ್ಲೀರ್ ಡೊಪ್ಪನ್, ಪಚ್ಚೀಸ್ ಮುಂತಾದ ಹಲವು ಹೆಸರುಗಳಿವೆ. ಕ್ರಿ.ಪೂ. ದಿಂದಲೂ ಗಾಳಿಪಟದ ಅಸ್ತಿತ್ವ ಇತ್ತೆಂದು ತಿಳಿದುಬರುತ್ತದೆ. ಚೀನಾದಲ್ಲಿ ಜನ್ಮತಾಳಿ ಅಲ್ಲಿಂದ ಮಧ್ಯ ಏಷ್ಯಾಗೆ ಬಂದು ಆಕಡೆಯಿಂದ ಮೊಗಲ್ ಬಾದುಷಾಗಳ ಕಾಲದಲ್ಲಿ ಈ ಕ್ರೀಡೆ ಭಾರತಕ್ಕೆ ಬಂದಿತ್ತೆಂದು ಹೇಳುತ್ತಾರೆ. ಆ ಕಾಲದ ಯುವರಾಜರು ಯುವರಾಣಿಯರು ಗಾಳಿಪಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಎರಡು ಗಾಳಿಪಟಗಳು ಒಮ್ಮೆಲೆ ಹಾರುವಂತೆ ಮಾಡಿ ಎರಡೂ ಒಂದೇ ರೀತಿ ಹಾರುವಂತೆ ಮಾಡುವುದು ಆ ಕಾಲದ ಕಲೆಯಾಗಿತ್ತು. ಆ ರಾಜರ ಕಾಲದಲ್ಲಿ ದಾರ ಬಿರುಸಾಗಲು ವಜ್ರದ ಪುಡಿಯನ್ನು ಬಳಸುತ್ತಿದ್ದರಂತೆ. ಈಗ ಸ್ಪರ್ಧೆಯಲ್ಲಿ ಗಾಳಿಪಟಕ್ಕೆ ಮಾಂಜದಾರವನ್ನು ಉಪಯೋಗಿಸುತ್ತಾರೆ. ಸಾಧಾರಣವಾದ ದಾರ ಮಾಡುಕಟ್ಟೆಯಲ್ಲಿ ಸಿಕ್ಕುತ್ತದೆ. ಆದರೆ ಮಾಂಜದಾರವನ್ನು ಮನೆಯಲ್ಲೇ ತಯಾರಿಸುತ್ತಾರೆ. ಇದಕ್ಕಾಗಿ ಮಾಂಜವನ್ನು ಸಿದ್ಧಮಾಡಿಕೊಳ್ಳುತ್ತಾರೆ. ಗಾಜಿನ ಚೂರುಗಳನ್ನು ತಂದು ಪುಡಿಮಾಡಿ ಅನ್ನದಲ್ಲಿ ಕಲಸಿ ಆ ದಾರವನ್ನು ಇಡೀ ರಾತ್ರಿ ಮಂಜಿನಲ್ಲಿ ತೂಗು ಹಾಕಿ ಬೆಳಿಗ್ಗೆ ಅದಕ್ಕೆ ಮಾಂಜ ಲೇಪಿಸಿ ನೆರಳಿನಲ್ಲಿ ಒಣಗಸುತ್ತಾರೆ. ಹೀಗೆ ಎರಡು ಮೂರು ಸಲ ಮಾಡಿದಾಗ ದಾರ ತುಂಬ ಬಿರುಸಾಗುತ್ತದೆ. ಮಾಂಜದಾರದ ಸಹಾಯದಿಂದ ಎದುರಾಳಿಯ ಸಾದಾದಾರವನ್ನು ಸುಲಭವಾಗಿ ಕತ್ತರಿಸಿ ಹಾಕಬಹುದು.

65

ಕ್ರಿ.ಪೂ. ದ ೪ನೇ ಶತಮಾನದಲ್ಲೇ ಗ್ರೀಕರು ಗಾಳಿಪಟಗಳನ್ನು ಹಾರಿಸಿದರೆಂದು ಹೇಳುತ್ತಾರೆ. ಆದರೆ ಇದು ಚೀನಾದಲ್ಲಿ ಮೊದಲು ಪ್ರಾರಂಭವಾಯಿತೆಂದು ಕ್ರಿ.ಪೂ. ೩ನೆಯ ಶತಮಾನದ ಚೀನ ರಾಜ ಹಸ್ – ಸಿಸ್ ಗಾಳಿಪಟಗಳನ್ನು ಹಾರಿಸಿದ್ದಲ್ಲದೆ ಶತ್ರು ಸೈನ್ಯಗಳನ್ನು ಅವುಗಳ ಸಹಾಯದಿಂದ ಹೆದರಿಸುತ್ತಿದ್ದನೆಂದು ಹೇಳುತ್ತಾರೆ. ನೂರಾರು ಗಾಳಪಟಗಳನ್ನು ಒಮ್ಮೆಲೆ ಹಾರಿಸಿ ಅವುಗಳ ವಿಚಿತ್ರ ಶಬ್ದಗಳಿಂದ ಶತ್ರು ಸೈನ್ಯ ಹೆದರುವಂತೆ ಅವನು ಮಾಡುತ್ತಿದ್ದನೆಂದು ಹೇಳುತ್ತಾರೆ.

ವಿ.ಎಸ್.ಅನುವಾದ ಎ.ಎಂ.ಡಿ.

ಗಾಳಿಪಟ ಬಿದಿರಿನ ಕಡ್ಡಿಗಳು ಮತ್ತು ಬಣ್ಣದ ಕಾಗದಗಳನ್ನು ಬಳಸಿ ರೂಪಿಸುವ ಆಟದ ವಸ್ತು. ವಿವಿಧ ಆಕೃತಿಗಳಲ್ಲಿ ಇದನ್ನು ರಚಿಸಲಾಗುತ್ತದೆ. ನಾಲ್ಕು ಮೂಲೆಯ ಎರಡು ಸೂತ್ರಗಳ ಗಾಳಿಪಟ ಸಿದ್ಧಪಡಿಸಲು ಹೆಚ್ಚು ಸುಲಭ ಹಾಗೂ ಜನಪ್ರಿಯ. ಎರಡು ಸೂತ್ರಗಳಿರಲಿ, ಮೂಡು ಸೂತ್ರಗಳಿರಲಿ ಪ್ರತಿಯೊಂದು ಗಾಳಿಪಟವನ್ನೂ ಸರಾಗವಾಗಿ ಹಾರಾಡುವಂತೆ ರಚಿಸಲಾಗಿರುತ್ತದೆ. ಸೂತ್ರಕ್ಕೆ ದಾರಕಟ್ಟಿ ಆ ದಾರದ ನೆರವಿನಿಂದ ವೇಗವಾಗಿ ಬೀಸುವ ಗಾಳಿಯಲ್ಲಿ ತೇಲಿಬಿಟ್ಟರೆ ಪಟ ಮೇಲೇರಿರುತ್ತದೆ. ಹಾಗೆ ಗಾಳಿಯಲ್ಲಿ ಮೇಲೇರಲು ಸಾಧ್ಯವಾಗುವಂತೆ ಸೂತ್ರದ ರಚನೆ ಇರುತ್ತದೆ. ಈ ಬಗೆಯ ರಚನೆಗೆ ವೈಜ್ಞಾನಿಕ ವಿವರಣೆಯೂ ಲಭ್ಯವಿದೆ.

ಕಡ್ಡಿಗಳು ಸಂಧಿಸುವಲ್ಲಿ ಸಣ್ಣದಾರವನ್ನು ಬಳಸಿ ಅನೇಕ ಸುತ್ತುಗಳನ್ನು ಸುತ್ತುವುದರಿಂದ ಬಿಗಿತ ಸಾಧ್ಯವಾಗುತ್ತದೆ. ಗಾಳಿಪಟಕ್ಕೆ ಒಂದು ಸ್ಥಿರತೆಯನ್ನು ತಂದುಕೊಡುವ ಸಲುವಾಗಿ ಬಾಲಂಗೋಚಿಯನ್ನು ಬಳಸಲಾಗುತ್ತದೆ. ಅನೇಕ ಆಕಾರಗಳಲ್ಲಿ ಗಾಳಿಪಟಗಳನ್ನು ರಚಿಸಲಾಗುತ್ತದೆ. ನಾಲ್ಕು ಮೂಲೆ, ಆರು ಮೂಲೆ, ಎಂಟು ಮೂಲೆಗಳನ್ನುಳ್ಳ ಗಾಳಿಪಟಗಳಲ್ಲದೆ ವಿವಿಧ ಆಕಾರಗಳ ಗಾಳಿಪಟಗಳೂ ಇರುತ್ತವೆ. ಚಂದ್ರ, ಮನುಷ್ಯ, ಹಕ್ಕಿ, ದೋಣಿ, ಚಿಟ್ಟೆ ಹೀಗೆ ಹಲವು ರೂಪಗಳಲ್ಲಿ ರಚನೆ ಆಗುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಒಂದರ ಹಿಂದೆ ಒಂದರಂತೆ ಜೋಡಿಸಿ ಅನೇಕ ಗಾಳಿಪಟಗಳನ್ನು ಒಂದೇ ದಾರದ ಮೂಲಕ ಹಾರಿಸುವುದೂ ಇದೆ. ಗಾಳಿಪಟದ ವಿಸ್ತಾರಕ್ಕೆ ತಕ್ಕಂತೆ ಸಂಖ್ಯೆಗೆ ತಕ್ಕಂತೆ, ದಾರದ ಗಾತ್ರವೂ ಬದಲಾಗುತ್ತದೆ. ಸಾಮಾನ್ಯವಾಗಿ ಗಾಳಿಯು ವೇಗವಾಗಿ ಬೀಸುವುದು ಆಷಾಢಮಾಸದಲ್ಲೇ ಆದ್ದರಿಂದ ಗಾಳಿಪಟದ ಹಾರಾಟವನ್ನು ಆ ಸಂದರ್ಭದಲ್ಲಿ ಕಾಣಬಹುದು. ಆಷಾಢದ ಏಕಾದಶಿಯಂದು ಗಾಳಿಯು ಅತ್ಯಂತ ರಭಸವಾಗಿ ಬೀಸುತ್ತದೆ ಎಂಬ ನಂಬಿಕೆ ಇರುವುದರಿಂದ ಆ ದಿನವನ್ನು ಪಟದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಆ ದಿನ ಉಪವಾಸ ಆಚರಿಸುವ ಸಂಪ್ರದಾಯ ಇರುವುದರಿಂದ ಪಟದ ಹಬ್ಬವನ್ನು ಉಪವಾಸದ ಹಬ್ಬವೆಂದು ಕರೆಯುವುದುಂಟು.

ಗಾಳಿಪಟವು ಆಟದ ವಸ್ತುವಾಗಿರುವುದರಿಂದ ಜೊತೆಗೆ ನಮ್ಮ ಸಂಪ್ರದಾಯದ ಭಾಗವಾಗಿಯೂ ಬಳಕೆಯಾಗುತ್ತದೆ. ಅಳಿಯನನ್ನು ಮೊದಲ ಸಲ ಮನೆಯಿಂದ ಕಳುಹಿಸುವಾಗ ಜೊತೆಯಲ್ಲಿ ‘ಕಜ್ಜಾಯದ ಬುತ್ತಿ’ ಎಂಬ ತಿಂಡಿಯ ಬುತ್ತಿಯನ್ನು ಕಳುಹಿಸುವುದು ರೂಢಿ. ಹಾಗೆ ಕಳುಹಿಸುವಾಗ ತಿಂಡಿಯ ಬುಟ್ಟಿಯೊಳಗೆ ಗಾಳಿಪಟವನ್ನೂ ದಾರದ ಉಂಡೆಯನ್ನೂ ಕಳುಹಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಕಜ್ಜಾಯದ ಬುತ್ತಿಯ ಕಾರ್ಯಕ್ರಮ ಈ ಮೊದಲೇ ಮುಗಿದು ಹೋಗಿದ್ದರೆ ಪಟದ ಹಬ್ಬದ ಹಿಂದಿನ ದಿನ ತಿಂಡಿ ತಿನಿಸುಗಳನ್ನೂ ಹೊಸಬಟ್ಟೆಗಳನ್ನೂ ಗಾಳಿಪಟದೊಂದಿಗೆ ಅಳಿಯನ ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಗಾಳಿಪಟವು ಕೇವಲ ಆಟದ ವಸ್ತುವಾಗದೆ ಜನಪದ ಸಂಸ್ಕೃತಿಯ ಅಂಗವಾಗಿಯೂ ಸ್ಥಾನ ಪಡೆದಿದೆ.

ಜಿ.ಎಸ್.

ಗೀಗೀಪದ ಕರ್ನಾಟಕದ ಉತ್ತರದ ಜಿಲ್ಲೆಗಳಲ್ಲಿ ತುಂಬಾ ಪ್ರಚಾರದಲ್ಲಿರುವ ಗೀತ ಪ್ರಕಾರವಿದು. ಗೀಗೀ ಪದದ ಮೂಲ ಲಾವಣಿಯಲ್ಲಿದೆ. ಲಾವಣಿ ಎಂಬ ಗೀತ ಪ್ರಸಾರ ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದೆ. ಅದು ಹುಟ್ಟಿದ್ದು ಸೈನಿಕರ ಕ್ಯಾಂಪ್‌ಗಳಲ್ಲಿ. ಹೆಂಡಂದಿರನ್ನು ಅಗಲಿ ವರ್ಷಗಟ್ಟಲೆ ವಿರಹತಾಪವನ್ನು ಅನುಭವಿಸುತ್ತಿದ್ದ ಸೈನಿಕರ ಶುಷ್ಕ ಜೀವನದಲ್ಲಿ ಒಂದಷ್ಟು ಉಲ್ಲಾಸ ಮೂಡಿಸಲು ಲಾವಣಿ ಹಾಡುಗಾರಿಕೆ ಪ್ರಯತ್ನಿಸಿತು. ಒಬ್ಬನೇ ಗಾಯಕ ಡಪ್ಪು ಬಾರಿಸುತ್ತ ಉತ್ಸಾಹದಿಂದ ಲಾವಣಿ ಹಾಕುತ್ತಿದ್ದ. ಲಾವಣಿಯ ಮೊದಲ ಘಟ್ಟದ ಹಾಡುಗಳೆಲ್ಲ ಶೃಂಗಾರ ಲಾವಣಿಗಳಾಗಿದ್ದವು. ೧೭೮೦-೧೮೫೦ ಮರಾಠಿ ಲಾವಣಿಯ ಸುವರ್ಣಯುಗವೆಂದು ಹೇಳುತ್ತಾರೆ.

66

ಕರ್ನಾಟಕದ ಉತ್ತರಭಾಗವನ್ನು ದಕ್ಷಿಣ ಮಹಾರಾಷ್ಟ್ರ ಎಂದು ಕರೆಯುತ್ತಿದ್ದರು. ಎರಡೂ ರಾಜ್ಯಗಳ ಗಡಿಪ್ರದೇಶಗಳ ಜನರು ಕನ್ನಡ ಮರಾಠಿ ಭಾಷೆಗಳಡೆರನ್ನೂ ಬಲ್ಲವರಾಗಿದ್ದರು. ಸಾಂಸ್ಕೃತಿಕವಾಗಿ ಈ ಪ್ರದೇಶಗಳಲ್ಲಿ ಭಿನ್ನತೆಯಿರಲಿಲ್ಲ. ಹೀಗಾಗಿ ಮಹಾರಾಷ್ಟ್ರದ ಲಾವಣಿ ಪ್ರಕಾರ ಕರ್ನಾಟಕಕ್ಕೆ ತರಲು ತಡವಾಗಲಿಲ್ಲ. ಕರ್ನಾಟಕಕ್ಕೆ ಬರುವಷ್ಟರಲ್ಲಿ ಮರಾಠಿ ಲಾವಣಿಯ ವಸ್ತು ವೈವಿಧ್ಯಮಯವಾಗಿ ಬೆಳೆದಿತ್ತು. ಶೃಂಗಾರದೊಂದಿಗೆ ಪೌರಾಣಿಕ ಕತೆಗಳು, ಸಾಮಾಜಿಕ ಸಂಗತಿಗಳು ಲಾವಣಿಯ ಹಾಡುಗಳಾಗಿದ್ದವು.

ಫ್ಲೀಟರು ಸಂಗ್ರಹಿಸಿರುವ ಲಾವಣಿಗಳಲ್ಲಿ ಸಂಗೊಳ್ಳಿರಾಯಣ್ಣನ ಲಾವಣಿ ಅತ್ಯಂತ ಹಳೆಯದು. ರಾಯಣ್ಣನನ್ನು ಗಲ್ಲಿಗೇರಿಸಿದ್ದು ೧೮೨೯ರಲ್ಲಿ. ಮರುವರ್ಷವೇ ಅಂದರೆ ೧೮೩೦ರಲ್ಲಿ ಅವನ ಶೂರಜೀವನ ಕುರಿತು ಲಾವಣಿ ಹುಟ್ಟಕೊಂಡಿತು. ರಾಯಣ್ಣ ಮತ್ತು ಇತರರನ್ನು ಕುರಿತು ಬರೆದ ಲಾವಣಿಗಳು ಅಂದು ಸಾಮಾಜಿಕ, ನಮಗಿಂದು ಐತಿಹಾಸಿಕ.

ಲಾವಣಿ ಹಾಡುಗಾರಿಕೆ ತನ್ನ ಪರಾಕಾಷ್ಠ ಸ್ಥಿತಿ ತಲುಪಿದ್ದು ಶಿವ-ಶಕ್ತಿಯರ ಪರ ವಾದಕ್ಕಿಳಿದಾಗ. ಇದಕ್ಕೆ ಕಲ್ಗಿ-ತುರಾ ಮತ್ತು ಹರದೇಸಿ – ನಾಗೇಸಿ ಎನ್ನುತ್ತಾರೆ – ಕಲ್ಲಿ ಮತ್ತು ನಾಗೇಸಿ ಇವು ಶಕ್ತಿಯ ಪರ, ತುರಾ ಮತ್ತು ಹರದೇಸಿ ಇವು ಶಿವನ ಪರ. ಹೆಣ್ಣು -ಗಂಡು, ಪ್ರಕೃತಿ-ಪುರುಷ, ಶಕ್ತಿ-ಶಿವ ಮಧ್ಯೆ ಕಲ್ಪಿತ ಶ್ರೇಷ್ಠತೆಯನ್ನು ಸ್ಥಾಪಿಸಿ ಅದನ್ನು ಸಮರ್ಥಿಸಿಕೊಳ್ಳುವರು. ಈ ಸಮರ್ಥನೆಗೆ ಪುರಾಣ ಪ್ರಸಂಗಗಳನ್ನು ಧಾರಾಳವಾಗಿ ಬಳಸಿಕೊಳ್ಳುವರು. ಒಂದು ಪಕ್ಷದವರು ತಮ್ಮ ಪಕ್ಷದ ವ್ಯಕ್ತಿಯ ಮಹತ್ವವನ್ನು ವಿವರಿಸುವುದರೊಂದಿಗೆ ಎದರು ಪಕ್ಷದ ವ್ಯಕ್ತಿಯನ್ನು ಹೀಯಾಳಿಸುವರು. ಆಗ ಎದುರು ಪಕ್ಷದ ಲಾವಣಿ ಹಾಡುಗಾರ ಎದ್ದು ತನ್ನ ಪಕ್ಷದ ವ್ಯಕ್ತಿಯ ಮಹಿಮೆಯನ್ನು ವಿವರಿಸುತ್ತ ಮೊದಲಿನ ಲಾವಣಿಕಾರನ ಹೀಯಾಳಿಕೆ ಮೂದಲಿಕೆ ಮೊದಲಾದವುಗಳನ್ನು ತರ್ಕಬದ್ಧವಾಗಿ ಖಂಡಿಸುವನು. ಕೇಲವ ಸಾತ್ವಿಕ ಚರ್ಚೆಯಾಗಿರಬೇಕಾದ ಈ ವಾದ ವಿವಾದ ಅತ್ಯಂತ ರಸವತ್ತಾಗಿರುತ್ತದೆ. ಲಾವಣಿ – ಪ್ರತಿಲಾವಣಿಗಳ ಮೂಲಕ ಸಾಗುವ ಈ ಸ್ಪರ್ಧೆ ತಾರಕಕ್ಕೆ ಮುಟ್ಟಿದಾಗ ತೀರಾ ವಾಚ್ಯವೆನಿಸುವ ಮೂದಲಿಕೆಗಳು ಧಾರಾಳವಾಗಿ ಹರಿದು ಬರುತ್ತವೆ. ಇಂಥ ಲಾವಣಿ ಮೇಳ ರಾತ್ರಿಯಿಡಿ ಸಾಗುವುದು.

ಲಾವಣಿಕಾರನೊಬ್ಬನೇ ಚಿಟಿಕೆ ಹಾಕುತ್ತ ಅಥವಾ ಡಪ್ಪು ಬಾರಿಸುತ್ತ ಹಾಡುವ ಗಾಯನ ಶೈಲಿ ಅನೂಚಾನವಾಗಿ ನಡೆದು ಬಂದಿತು. ೧೯೨೦ ರ ಸುಮಾರಿಗೆ ಈ ಗಾಯನ ಶೈಲಿ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಮೇಲಲಾವಣಿಯಾಯಿತು. ಇದೇ ಗೀಗೀ ಹಾಡುಗಾರಿಕೆ. ಮುಖ್ಯ ಲಾವಣಿ ಗಾಯಕನಿಗೆ ಇಬ್ಬರು ಹಿಮ್ಮೇಳದವರು ಸೇರಿಕೊಂಡರು. ಅವರಲ್ಲಿ ಒಬ್ಬ ತಾಳವಾದಕ ಇನ್ನೊಬ್ಬ ತುಂತುಣಿ (ಶ್ರುತಿ) ವಾದಕ. ಮುಖ್ಯಗಾಯಕ ಡಪ್ಪುವಾದಕ. ಹೀಗೆ ಮೂವರ ವಾದ್ಯಮೇಳ ಒಂದು ಹೊಸ ಅಭಿರುಚಿಯನ್ನು ಬೆಳೆಸಿತು. ಒಂಟಿ ಲಾವಣಿಯ ವಾದ್ಯರಹಿತ ನೀರಸ ನಿರೂಪಣೆಯ ಬದಲಾಗಿ ವಾದ್ಯಮೇಳದೊಂದಿಗೆ ಹಾಡುವ ಕ್ರಮ ಕೂಡಲೇ ಜನಾಕರ್ಷಕವಾಯಿತು. ಹಿಮ್ಮೇಳದವರು ಹಾಡಿನ ಪ್ರತಿ ಸಾಲಿನ ಕೊನೆಯನ್ನು ಹಾಡಿ ಮುಗಿಸಿ ಗೀ ಗೀ ಗೀ ಎಂದು ದೀರ್ಘವಾಗಿ ಎಳೆದು ಸುಸ್ವರದಲ್ಲಿ ಹಾಡುತ್ತಾರೆ. ಈ ಗೀ ಗೀ ಗೀ ಎಂಬ ನಾದ ಹಾಡುಗಾರಿಕೆಯದ್ದಕ್ಕೂ ಅನುರಣನಗೊಳ್ಳುತ್ತಿರುವುದರಿಂದ ಈ ಗೀತಪ್ರಕಾರ ಗೀಗೀ ಪದವೆಂದು ಹೆಸರು ಪಡೆದುಕೊಂಡಿತು.

ಕೇವಲ ಮನರಂಜನೆಗೆ ಮೀಸಲಾಗಿದ್ದ ಗೀ ಗೀ ಪದ ೧೯೩೦ರ ಸುಮಾರಿಗೆ ಹೊಸ ಆಯಾಮ ಪಡೆದುಕೊಂಡಿತು. ಅಷ್ಟೊತ್ತಿಗೆ ಗಾಂಧೀಜಿಯವರಿಂದಾಗಿ ರಾಷ್ಟ್ರೀಯ ಚಳವಳಿಗೆ ಹೆಚ್ಚಿನ ವ್ಯಾಪ್ತಿ-ವೇಗ ಪ್ರಾಪ್ತವಾಗಿತ್ತು. ಗ್ರಾಮೀಣ ಜನತೆಗೆ ರಾಷ್ಟ್ರೀಯ ಚಳವಳಿಯ ಬಗ್ಗೆ ತಿಳವಳಿಕೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮವು ಈ ಹೊಸ ಆಯಾಮಕ್ಕೆ ಕೇಂದ್ರವಾಯಿತು. ಹುಲಕುಂದ ಗ್ರಾಮದ ಭೀಮಕವಿ ಶಿವಲಿಂಗಕವಿ ಮೊದಲಾದವರು ವಿಪುಲ ಸಂಖ್ಯೆಯಲ್ಲಿ ರಚಿಸಿದ ರಾಷ್ಟ್ರೀಯ ಗೀಗಿ ಪದಗಳು ಹಳ್ಳಿಗರತ್ತ ರಾಷ್ಟ್ರೀಯ ಚಳವಳಿಯನ್ನು ಕೊಂಡೊಯ್ದವು. ಸ್ವಾತಂತ್ಯ್ರೋತ್ತರ ಕಾಲದಲ್ಲಿ ಜನಪ್ರಿಯ ಮಾಧ್ಯಮವಾಗಿರುವ ಗೀಗೀ ಪ್ರಕಾರವನ್ನು ಸರಕಾರಗಳು ತಮ್ಮ ತಮ್ಮ ಪ್ರಗತಿ ಯೋಜನೆಗಳನ್ನು ತಿಳಿಸಿ ಹೇಳಲು, ಕುಟುಂಬ ಕಲ್ಯಾಣ, ಪಾನನಿಷೇಧ, ಸಾಕ್ಷರತೆ ಮುಂತಾದವುಗಳನ್ನು ಪ್ರಚಾರ ಮಾಡಲು ಬಳಸಿಕೊಳ್ಳುತ್ತಿವೆ.

ಬಿ.ಎಂ.

ಗುರ್ಚಿ ಹಾಡು ಉತ್ತರ ಕರ್ನಾಟಕದಲ್ಲಿ ಮಳೆತರುವ ದೇವರಿಗಾಗಿ ಒಕ್ಕಲಿಗರು ನಡೆಸುವ ಸಂಪ್ರದಾಯದ ದೇವರ ಹಾಡು. ಸೆಗಣಿಯಿಂದ ಲಿಂಗವನ್ನು ಸ್ಥಾಪಿಸಿ ಅದಕ್ಕೆ ಪವಿತ್ರವೆಂದು ಭಾವಿಸುವ ಗರಿಕೆಗಳನ್ನು ಕಿರೀಟದಂತೆ ಸಿಕ್ಕಿಸಿ ರೊಟ್ಟಿ ಹೆಂಚಿನ ಮೇಲೆ ಅದನ್ನು ಪ್ರತಷ್ಠಾಪಿಸುತ್ತಾರೆ. ಇದನ್ನೇ ‘ಗುರ್ಚಿ’ ಎನ್ನಲಾಗುತ್ತದೆ. ಸೆಗಣಿ, ಗರಿಕೆಗಳು ಸಮೃದ್ಧತೆಗೂ, ಅಕ್ಷಯಗುಣಕ್ಕೂ ಸಂಕೇತವಾಗಿ ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿರುವುದನ್ನು ಇವು ಸಂಕೇತಿಸುತ್ತವೆ. ಉತ್ತರ ಕರ್ನಾಟಕದ ಭಾಗ ಬಹುತೇಕ ಮಳೆಗಾಗಿ ಹಪಹಪಿಸುವ ಪ್ರದೇಶವಾದ್ದರಿಂದ, ವಿಶೇಷವಾಗಿ ಭಾದ್ರಪದ ಹಾಗೂ ಆಶ್ವಯುಜ ಮಾಸಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೊವರು ಇಂಥ ಗುರ್ಚಿಗಳನ್ನು ಹೊತ್ತು ಬೀದಿಬೀದಿಗಳಲ್ಲಿ ಮನೆಮನೆಗಳ ಮುಂದೆ ನಿಂತು ಗುರ್ಚಿಹಾಡು ಹಾಡುತ್ತಾರೆ. ಆ ಹಾಡು ಹುಯ್ಯೋ ಹುಯ್ಯೋ ಮಳೆರಾಯ | ಹೂವಿನ ತೋಟಕೆ ನೀರಿಲ್ಲಾ s| ಬಾರೋ ಬಾರೋ ಮಳೆರಾಯಾ ಬಾಳೇತೋಟಕೆ ನೀರಿಲ್ಲಾ | ಎಂದು ರಾಗಬದ್ಧವಾಗಿರುತ್ತದೆ. ಆಗ ಮನೆಮನೆಯಿಂದ ಕೊಡ ನೀರು ತಂದು ಗುರ್ಚಿ ಮೇಲೆ ಸುರಿಸುತ್ತಾರೆ. ಗುರ್ಚಿ ಹೊತ್ತ ಹುಡುಗ ಹುಡುಗಿಯರ ಒಂದೆಡೆ ನಿಲ್ಲದೆ ಊರಿಡೀ ಹೀಗೆ ಸುತ್ತುತ್ತಾರೆ. ಅವರಿಗೆ ಊರ ಜನ ಮೊರದ ತುಂಬ ಕಾಳುಕಡ್ಡಿ ತುಂಬಿಸಿ ಕಳುಹುತ್ತಾರೆ. ಈ ರೀತಿ ಗುರ್ಚಿ ಹೊತ್ತು ತಿರುಗಿದ ಏಳೆಂಟು ದಿನಗಳಲ್ಲಿ ಮಳೆ ಬಂದೇ ತಿರುತ್ತದೆ ಎಂದು ಜನಪದರು ನಂಬುತ್ತಾರೆ. ತಮಿಳುನಾಡಿನಲ್ಲಿಯೂ ಜನಪದರು ಇದೇ ರೀತಿಯಲ್ಲಿ ಮಳೆಗಾಗಿ ಪ್ರಾರ್ಥಿಸುವುದಿದೆ. ಈಶಾನ್ಯ ಮೂಲೆಯ ಬಯಲು ಭಾಗಗಳಲ್ಲಿ ಸಗಣಿಯ ಬೆನಕವನ್ನು ಗರಿಕೆ ಚುಚ್ಚಿ ಸ್ಥಾಪಿಸಿ ಮುಗಿಲು ಮುಟ್ಟುವಂತೆ ಕೂಗಿ ಕೂಗಿ ವರುಣನನ್ನು ಕರೆಯುತ್ತಾರೆ. ಅನಂತರ ತುಂಬೆ ಹೂ ಬೆರೆಸಿದ ನೀರನ್ನು ಅದರ ಮೇಲೆ ಸುರಿದು ಮುಗಿಲತ್ತ ಮುಖಮಾಡಿ ಮಳೆದೇವರನ್ನು ಕರೆಯುತ್ತಾರೆ. ಕರ್ನಾಟಕದ ಬಯಲು ಸೀಮೆಗಳಲ್ಲಿ ಗಂಡುಮಕ್ಕಳನ್ನು ಬೆತ್ತಲು ಮಾಡಿ ಗುರ್ಚಿಹೊರಿಸಿ ಕಳಿಸುತ್ತಾರೆ.

‘ಗುರ್ಚಿ’ ಗೊಂದು ಜನಪದ ಹಿನ್ನೆಲೆಯಿದೆ. ಗುರ್ಚಿಯು ವೀರಶೈವ ವಿರಕ್ತ ಶರಣನಾದ ಗುರುಸಿದ್ಧನ ಪ್ರತಿರೂಪ. ಈತ ಪವಾಡ ಪುರುಷ ಸಿದ್ಧನಾಗಿದ್ದ. ಒಮ್ಮೆ ಇವನ ಕಾಲದಲ್ಲಿ ಸುತ್ತಲೆಲ್ಲಾ ಮಳೆಯೇ ಬರಬಿದ್ದಾಗ ಜನರ ಹಾಹಾಕಾರ ನೋಡಿ ತಾಳಲಾರದೆ ಈತ ತಾನು ಹೊದ್ದಿದ್ದ ಕರಿಕಂಬಳಿಯನ್ನು ಎತ್ತಿ ಬೀಸಿದ. ಮರುಕ್ಷಣವೇ ಕೆರೆಕೊಳ್ಳ ನದಿಹಳ್ಳವೆನ್ನದೆ ಎತ್ತೆತ್ತಲೂ ಮಳೆ ಆರ್ಭಟದಿಂದ ಸುರಿದು ತುಂಬಿ ಹರಿಯತೊಡಗಿದುವು. ಎತ್ತಲೂ ತುಂಬಿದ ಸಮೃದ್ಧಿಯಿಂದ ಸಂತುಷ್ಟರಾದ ಜನ ಅವನ ಮೂರ್ತಿಯನ್ನು ಸೆಗಣಿಯಲ್ಲಿ ಸ್ಥಾಪಿಸಿ ‘ಗುರ್ಚಿ’ (ಗುರುಸಿದ್ಧ) ಎಂದು ಕರೆದು ಪೂಜಿಸಿದರು. ಅವನ ಪವಾಡಗಳನ್ನು ಕುರಿತು ಮನೆಮನೆಯಲ್ಲೂ ಕತೆ ಬೆಳೆದು ಹಾಡಾದುವು. ಒಕ್ಕಲಿಗರ ಕಣದಲ್ಲಿ ಇದರ  ಸಂಕೇತವಾಗಿಯೇ  ‘ಗುರ್ಚಿ’ ಸ್ಥಾಪಿಸಿ ಪೂಜಿಸಿಇ ಅವನಿಗೆ ಧನ್ಯವಾದ ಸಮರ್ಪಿಸುವುದು ವಾಡಿಕೆ.

ಜಿ.ಎನ್.

ಗುಣಸಾಗರಿ ಹೆಣ್ಣಿನ ಪಾತಿವ್ರತ್ಯಕ್ಕೆ ಸಂಬಂಧಿಸಿದ ವಸ್ತುವುಳ್ಳ ಗುಣಸಾಗರಿ ಕಥೆ ಕರ್ನಾಟಕಾದ್ಯಂತ ಪ್ರಚಾರದಲ್ಲಿದೆ. ಸುಮಾರು ಎರಡು ಸಾವಿರ ಪಂಕ್ತಿಗಳ ಈ ಗುಣಸಾಗರಿಯ ಕಥಾನಕ ಹಳಗನ್ನಡ ಕಾವ್ಯಗಳ ಕಥೆಯ ಮಾದರಿ ಆಶಯಗಳನ್ನು ಹೊಂದಿಕೊಂಡು ಬೆಳೆದಿದೆ. ಗ್ರಾಮೀಣ ಹೆಣ್ಣುಮಕ್ಕಳಿಗೆ ಕಾಡಸಿದ್ದಮ್ಮ, ಸತಿ ಚನ್ನಮ್ಮ ಗೀತೆಗಳಂತೆಯೇ ಗುಣಸಾಗರಿ ಕಥೆಯೂ ಬಹಳ ಪ್ರಿಯವಾದುದು. ಅವರ ನಂಬಿಕೆಯ ಪ್ರಕಾರ ಈ ಕಥನಗೀತೆಗಳ ನಾಯಕಿಯರ ಪಾತ್ರಗಳೆಲ್ಲ ತಮ್ಮ ಪಾತಿವ್ರತ್ಯವನ್ನು ಕಾಪಾಡಿಕೊಂಡು ಮೆರೆದಂಥವು. ಬಹುತೇಕ ಕರ್ನಾಟಕದ ಗ್ರಾಮಗಳಲ್ಲಿ  ಪೂರ್ಣವಾಗಿಯೋ ಆಭಾಗ ಭಾಗವಾಗಿಯೋ ಸಂಗ್ರಹಿಸಲ್ಪಟ್ಟಿರುವ ಗುಣಸಾಗರಿ ಕಥನ ಗೀತೆಗೆ ಪಾಠಾಂತರಗಳೂ ಇವೆ. ಈ ಕಥೆಯಲ್ಲಿ ಮನುಷ್ಯ ಪಾತ್ರಗಳಂತೆ ಪಕ್ಷಿಗಳ ಪಾತ್ರಗಳೂ ಇದ್ದು  ಅವುಗಳ ಸಕ್ರಿಯ ಪಾತ್ರವೂ ಇರುತ್ತದೆ.

ಶ್ರೀಮಂತರ ಮಗ ಪರ್ವತಶೆಟ್ಟಿಗೆ ಮುಕ್ತ ವಯಸ್ಸಿಗೆ ಬರಲು ಹೆಣ್ಣನ್ನು ನೋಡಲಾಯಿತು. ಹಾಗೆ ಗೊತ್ತಾದವಳು ಗುಣಸಾಗರಿ. ಪರ್ವತಶೆಟ್ಟಿಗೂ ಗುಣಸಾಗರಿಗೂ ಹಿರಿಯರ ಸಮ್ಮುಖದಲ್ಲಿ ಮದುವೆ ಆಯಿತು. ತದನಂತರದಲ್ಲಿ ಪರ್ವತಶೆಟ್ಟಿ ತನ್ನ ಗೆಳೆಯರನ್ನು ಕಟ್ಟಿಕೊಂಡು ವ್ಯಾಪಾರಕ್ಕಾಗಿ ದೇಶದ ಮೇಲೆ ಹೊರಟ. ಅರಮನೆಯಲ್ಲಿ ಗುಣಸಾಗರಿ ಅತ್ತೆ ಮಾವಂದಿರು ನಾದಿನಿಯರ ಜತೆ ಇದ್ದರೂ ಒಂಟಿ ಬಾಳು ಕಳೆಯಬೇಕಾಯಿತು.

ಪರ್ವತಶೆಟ್ಟಿಯ ವ್ಯಾಪಾರದ ತಂಡ ಒಂದು ದಿನ ಮರದ ಕೆಳಗೆ ಬೀಡುಬಿಟ್ಟಿತು. ಪರ್ವತಶೆಟ್ಟಿಯಾದರೂ ಮರದ ಕೆಳಗೆ ಮಲಗಿದ್ದ. ಮೇಲಿನ ಕೊಂಬೆಯ ಗೂಡಿನಲ್ಲಿ ಹೆಣ್ಣು ಗೀಜಗಪಕ್ಷಿ ತಡವಾಗಿ ಬಂದಿ‌ದ್ದ ಗಂಡನನ್ನು ದಂಡಿಸುತ್ತ ‘ಯಾವ ಸೂಳೆ ನಿನ್ನ ದಾರಿಯಲ್ಲಿ ತಡೆದಳು’ ಎಂದು ಪ್ರಶ್ನಿಸುತ್ತಿತ್ತು. ಗಂಡು ಗೀಜಗವಾದರೂ ಅಷ್ಟೇ ಪ್ರೀತಿಯಿಂದ ತಂದಿದ್ದ ಕಮಲದ ಹೂವನ್ನು ಹೆಂಡತಿಗೆ ಮುಡಿಸುತ್ತ ‘ಬೇಟೆಕಾರಣ್ಣ ಬೆನ್ನತ್ತಿ ಬರುವಾಗ ಕೇಳೆ ಸೀಗೆ ಮೆಳೆಯಾಗೆ ಸಿಗಿಬಿದ್ದೆ’ ಎಂಬ ಕಾರಣ ಕೊಡುತ್ತಿತ್ತು. ಆ ಪಕ್ಷಿಗಳು ಪ್ರಣಯ ಚೇಷ್ಟೆಯನ್ನು ಕಂಡು ಕೇಳಿದ ಪರ್ವತಶೆಟ್ಟಿಗೆ ತನ್ನ ಚಿಕ್ಕಹೆಂಡತಿಯ ನೆನಪಾಯಿತು. ಕೋಳಿ ಕೂಗಿ ಬೆಳಗಾಗುವುದರೊಳಗಾಗಿ ವಾಪಸಾಗುವ ಯೋಚನೆ ಮಾಡಿದವನೇ ಆರು ಗಾವುದದ ಮೂರು ಗಾವುದದ ಮಾಡಿ, ಅರಮನೆಯ ಬಾಗಿಲ ಬಳಿನಿಂತು ಹೆಂಡತಿಯನ್ನು ಎಚ್ಚರಿಸಿದ. ‘ತಗಿಯೆ ನನ್ನ ಚಿನ್ನ, ತಗಿ ನನ್ನ ರನ್ನ, ನನ್ನ ಕೊರಳಾ ಪದಕಾತಿ, ಪಟ್ಟದರಾಣಿಯೇ ಬಾಗಿಲ ತಗಿಯೇ’ ಎಂದು ಕೂಗಿದ. ಬಾಗಿಲ ತೆಗೆದ ಗುಣಸಾಗರಿಗೆ ಆಶ್ಚರ್ಯವೂ ಸಂತೋಷವೂ ಆಯಿತು. ಊರು, ಮನೆ, ಮಂದಿಯೆಲ್ಲ ತನ್ನ ಗಂಡನನ್ನು ವ್ಯಾಪಾರಕ್ಕೆ ಹೋಗಿರುವವನೆಂದು ತಿಳಿದಿರಬೇಕಾದರೆ ಸರಿರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ತನ್ನ ಗಂಡ ಬಂದನೆಂದು ಆಕೆಗೆ ಇರಿಸು ಮುರಿಸಾಯಿತು. ಹದಿನಾರು ಬಾಳೆಯ ಹಣ್ಣು ಸುಲಿದಿಟ್ಟಳು. ಸರಳೆಮ್ಮೆ ನೊರೆಹಾಲು ತಂದಿಟ್ಟಳು. ಉಣ್ಣುವುದು, ಕುಡಿಯುವುದು ಬಿಟ್ಟು ಪರ್ವತಶೆಟ್ಟಿ ಬಾಲೆಯನ್ನು ಸರಳ ಮಂಚಕ್ಕೆ ಕರೆದ. ಬಂದ ಗುರುತಿಗೆ ಮುದ್ರೆಯುಂಗುರ ನೀಡಿ ಬೆಳಗಾಗುವುದರ ಮುಂಚೆ ಅರಮನೆ ಬಿಟ್ಟು ಬೀದಿಗೆ ಬಂದು ಮರದ ಕೆಳಗೆ ಮಲಗಿದ.

ಅರಮನೆಯಲ್ಲಿ ಗುಣಸಾಗರಿ ಗರ್ಭಿಣಿಯಾದಳು. ಇದು ಅತ್ತೆ, ಮಾವ, ನಾದಿನಿ, ಮೈದುನರಿಗೆ ತಿಳಿಯಿತು. ಗಂಡ ವ್ಯಾಪಾರಕ್ಕೆ ಹೋದ ಮೇಲೆ ಏನಿಲ್ಲದೆ, ಎಂತಿಲ್ಲದೆ ಗುಣಮ್ಮ ಬಸಿರಾದಳೆಂಬ ಸುದ್ದಿ ಊರಲ್ಲೆಲ್ಲ ಹಬ್ಬಿತು. ಈ ಕೆಟ್ಟ ಸುದ್ದಿ ತಾಯಿಯ ಮನೆ ಕಡೆಗೂ ಹೋಯಿತು. ‘ಹುಟ್ಟಿದಾರೊರುಸಾಕ, ಕೆಟ್ಟಿತು ನಿಮ್ಮೆಣ್ಣು ಕೆಟ್ಟವನೊಬ್ಬನಿಗೆ ಸೆರಗುಹಾಸಿ’ ಎಂಬ ಪತ್ರ ತಂದೆಗೆ ಹೋಯಿತು. ಬಂಧು ಬಳಗವೆಲ್ಲ ನೆರೆದು ಕೇಳಲು ಗುಣಸಾಗರಿ ಗಂಡ ಬಂದಿದ್ದರ ಗುರುತಾಗಿ ಮುದ್ರೆಯುಂಗುರ ತೋರಿಸಲು ಮುಂದಾದಳು, ಅದು ಸಿಗಲಿಲ್ಲ. ಅವಳನ್ನು ಕಾಡಿಗೊಯ್ದು ಕೊಂದು ಬಿಡುವುದೆಂದು ತೀರ್ಮಾನವಾಯಿತು. ಕಾಡಿಗೆ ಅವಳನ್ನು ಒಯ್ದು ಭಂಟರು ಅವಳ ಮೇಲೆ ಕತ್ತಿ ಎತ್ತಿದರು. ಆದರೆ ಅವರ ಕತ್ತಿ ಅವರ ಕಡೆಗೇ ತಿರುಗಿತು. ಅವರು ಓಡಿದರು. ಅನಾಥಳಾಗಿ ನಿಂತವಳನ್ನು ಕಾಡಿನ ಪಶು, ಪ್ರಾಣಿ, ಪಕ್ಷಿಗಳು ಸಾಕಿದವು. ಈಶ್ವರನ ಕೃಪೆಯಿಂದ ಗುಣಸಾಗರಿ ಮುದ್ದಣನ ಮನೆಯ ಮಡದಿಯರ ಕಣ್ಣಿಗೆ ಬಿದ್ದಳು. ಗಂಡುಮಗು ಪಡೆದಳು. ಇಂಥ ಸಂದರ್ಭದಲ್ಲಿ ವ್ಯಾಪಾರಿ ತಂಡವೊಂದು ವಾಪಸು ಪಟ್ಟಣಕ್ಕೆ ಹೋಗುತ್ತಿತ್ತು. ಆ ಗುಂಪಿನಲ್ಲಿ ಗುಣಸಾಗರಿ ಗಂಡನನ್ನು ಗುರುತಿಸಿದಳು. ಆದರೆ ಗಂಡ ಗುಣಸಾಗರಿಯನ್ನು ಕಂಡು ತನಗೂ ಇಂಥ ಹೆಂಡತಿ ಅವಳ ಮಡಿಲ ಮಗು ಪಟ್ಟಣದಲ್ಲಿ ಇರಬೇಕೆಂದುಕೊಂಡ. ಅರಮನೆಗೆ ಸೇರಿದವನಿಗೆ ಹೆಂಡತಿಯ ಮುಖ ಕಾಣಲಿಲ್ಲ. ಬಳಿಕ ಮುದ್ದಣ್ಣನ ಅರಮನೆಯ ಕಡೆಬಂದ. ಅಲ್ಲಿ ತನಗಾಗಿ ಪರಿತಪಿಸುತ್ತಿದ್ದ ಪತ್ನಿಯನ್ನೂ ಮಗನನ್ನೂ ಸೇರಿದ. ಬಂದ ಗಂಡನಿಗೆ ಗುಣಸಾಗರಿ ಉಣ್ಣಲು ಇಕ್ಕುತ್ತಿರುವಾಗ ಅವನು ಕೊಟ್ಟಿದ್ದ ಮುದ್ರಯ ಉಂಗುರ ಹರಿವಾಣದ ಮುಂದ ಕಾಣಿಸಿತು. ಈ ಕಥನ ಗೀತೆಯ ಪ್ರಕಾರ ಕರ್ನಾಟಕದ ಜನಪದ ಹಾಡುಗಾರ್ತಿಯರಿಗೆ ಮತ್ತು ಇದನ್ನು ಕೇಳಿಸಿಕೊಳ್ಳುವ ಹೆಣ್ಣುಮಕ್ಕಳಿಗೆ ಗುಣಸಾಗರಿಯೇ ನಾಯಕಿಯಾಗುತ್ತಾಳೆ.

ಕೆ.ಎಚ್.

ಗೂಗೂಡು ಕುಳ್ಳಾಯಿ ಸ್ವಾಮಿ ಅನಂತಪುರ ಜಿಲ್ಲೆ ನಾರ್ಪಲ ಮಂಡಲದಲ್ಲಿರುವ ಗೂಗೂಡುನಲ್ಲಿ ನೆಲೆಸಿರುವ ಕುಳ್ಳಾಯಿ ಸ್ವಾಮಿ. ಆಂಜನೇಯ ಸ್ವಾಮಿ ದೇವಾಲಯಗಳು ಅಕ್ಕ ಪಕ್ಕದಲ್ಲೇ ಇದ್ದು ವಿಶ್ವಮಾನವ ಶ್ರೇಯಸ್ಸಿಗೂ, ಮಾನವತ್ವಕ್ಕೂ  ಔನ್ನತ್ಯಕ್ಕೂ ಸರ್ವ ಮತ ಸೋದರಭಾವಕ್ಕೂ ಪ್ರತಿಮೆಗಳಾಗಿ ನಿಂತಿವೆ. ಜಾತಿ ಮತಗಳ ಹೆಸರಿಂದ ಹಗೆ ಸಾಧಿಸುತ್ತಾ ಅನುದಿನ ಹೊಡೆದಾಡುತ್ತಾ ಸಾಯುವವರಿಗೆ ಪ್ರತಿ ವರ್ಷ ಇಲ್ಲಿ ನಡೆಯುವ ‘ಮೊಹರಂ’ ಬ್ರಹ್ಮೋತ್ಸವಗಳು ಕಂಗೊಳಿಸುತ್ತವೆ. ಗುಡಿಯಲ್ಲಿನ ಪೂಜಾವಿಧಾನಗಳು ಭಿನ್ನವಾಗಿದ್ದರೂ ಮಾವನ ಜಾತಿಗೆ ಭಗವಂತನೊಬ್ಬನೇ ಎಂದು ಹಿಂದೂ, ಮುಸ್ಲಮರ ನಡುವೆ ಸೋದರ ಭಾವವನ್ನು ತೋರುತ್ತಾ ಪರಂಪರಾಗತವಾಗಿ ಮತ ಸಾಮರಸ್ಯಕ್ಕೆ ಪ್ರತಿಮೆಯಾಗಿ ನಿಲ್ಲುತ್ತದೆ. ಮತ ಪರವಾಗಿ ಮುಸಲ್ಮಾನರು ಕುಳ್ಳಾಯಿ ಸ್ವಾಮಿಯನ್ನು ನಂಬುತ್ತಾರೆ. ಇಲ್ಲಿ ಮಾತ್ರ ಮುಸಲ್ಮಾನರೊಡನೆ ಹಿಂದುಗಳೂ ಕೂಡಾ ಕುಳ್ಳಾಯಿ ಸ್ವಾಮಿಯನ್ನು ಆರಾಧ್ಯ ದೈವವಾಗಿ ಭಾವಿಸಿ ಪೂಜಿಸುವರು. ಅಷ್ಟಿಷ್ಟು ಅಲ್ಲದೇ ಕುಳ್ಳಾಯಿ ಸ್ವಾಮಿ “ಮಕಾನ್” ಹತ್ತಿರವೇ ಆಂಜನೇಯಸ್ವಾಮಿ ಗುಡಿಯಲ್ಲಿ ಮುಸಲ್ಮಾನರು ಕೂಡಾ ಸಂಪ್ರದಾಯಬದ್ಧವಾಗಿ ಪೂಜಗೈದು ಭಕ್ತಿಯಲ್ಲಿ ತಲ್ಲೀನರಾಗುತ್ತಾರೆ. ಆದ್ದರಿಂದ ಗೂಗೂಡು ಗ್ರಾಮದಲ್ಲಿ ಪರಂಪರಾಗತವಾಗಿ ನಡೆಯುತ್ತಿರುವ ‘ಮೊಹರಂ’ ಉತ್ಸವಗಳು ಲಕ್ಷಾಂತರ ಜನ ಹಿಂದೂ ಮುಸಲ್ಮಾನರು ಭಾಯಿ, ಭಾಯಿ ಎಂಬ ಭಾವವನ್ನು ನಿಜಮಾಡಿವೆ. ಗೂಗೂಡುಗಳಲ್ಲಿ ಹತ್ತು ದಿನಗಳವರೆಗು ನಡೆಯುವ ಬ್ರಹ್ಮೋತ್ಸವಗಳಲ್ಲಿ ಒಂದು ಕಡೆ ಮುಸಲ್ಮಾನರು ನಮಾಜ್ ಬ್ರಹ್ಮೋತ್ಸವಗಳಲ್ಲಿ ಒಂದು ಕಡೆ ಮುಸಲ್ಮಾನರು ನಮಾಜ್ ಮಾಡುತ್ತಿದ್ದರೆ ಮತ್ತೊಂದು ಕಡೆ ವೇದ ಮಂತ್ರ ಉಚ್ಚಾರಣೆಗಳಿಂದ ಈ ಪರಿಸರ ಪ್ರಾಂತಗಳು ಪ್ರತಿಧ್ವನಿಸುತ್ತವೆ. ಬ್ರಹ್ಮೋತ್ಸವಗಳ ಸಂದರ್ಭವೇ ಅಲ್ಲದೇ ವಾರದ ಪ್ರತಿ ಗುರು, ಶುಕ್ರವಾರಗಳಲ್ಲಿ ‘ಕಂಧೋಃ’  ಮತ್ತಿತರ ಕಾರ್ಯಕ್ರಮಗಳನ್ನು ನಿರ್ವಹಿಸುವ ನೂರಾರು ಭಕ್ತಾದಿಗಳು ಈ ಗ್ರಾಮವನ್ನು ಸಂದರ್ಶಿಸುತ್ತಾರೆ.

ಗೂಗೂಡು ಗ್ರಾಮ ಐತಿಹ್ಯ: ಹಿಂದೆ ಗುಹೆ ಎಂಬ ಮುನೀಶ್ವರ ಇಲ್ಲಿ ಒಂದು ಆಶ್ರಮವನ್ನು ಸ್ಥಾಫಿಸಿದರು. ಆ ಸಮಯದಲ್ಲಿ ಶ್ರೀರಾಮಚಂದ್ರ ಸೀತಾ ಲಕ್ಷ್ಮಣ ಸಮೇತನಾಗಿ ಅರಣ್ಯವಾಸ ಮಾಡಲು ಈ ಆಶ್ರಮಮಾರ್ಗದ ಮುಖಾಂತರ ಹೋಗುತ್ತಾ ಗುಹನ ಆಶ್ರಮವನ್ನು ಸಂದರ್ಶಿಸಿದ.

ಗೂಗೂಡುನಲ್ಲಿನ ಜನಪದ ಕಥೆಯ ಪ್ರಕಾರ ಇನ್ನೂರ ವರ್ಷಗಳ ಹಿಂದೆ ಗೂಗೂಡು ಹತ್ತಿರದಲ್ಲಿ ಚೆನ್ನಕೇಶವ ಸ್ವಾಮಿ ಆಲಯವಿತ್ತು. ಆ ದೇವಾಲಯದ ಹತ್ತಿರ ಚಂಡ್ರಾಯಪೇಟೆ ಎಂಬ ಗ್ರಾಮವಿತ್ತು. ಈ ಗ್ರಾಮ ವಿಶ್ವಕರ್ಮದ ಬೀದಿಯಲ್ಲಿ ವಿಶ್ವಕರ್ಮ ಬ್ರಾಹ್ಮಣರಾದ ರಾಮಾಚಾರಿ ಲಕ್ಷ್ಮಣಾಚಾರಿ ಎನ್ನುವ ಇಬ್ಬರು ಸೋದರರಿಬ್ಬರು. ಅವರಿಬ್ಬರು ಷರಾಬು ಕೆಲಸದಲ್ಲಿ ಶಿಲ್ಪ ಕಲಾ ನೈಪುಣ್ಯದಲ್ಲಿ ಸಿದ್ಧ ಹಸ್ತರೆಂದು ಹೆಸರುಗಳಿಸಿದರು. ಇವರಿಬ್ಬರೂ ಒಂದು ದೃಢ ಸಂಕಲ್ಪದಿಂದ ತಮ್ಮ ಜೀವನ ಕಾಲದಲ್ಲಿ ಯಾವುದಾದರೂ ಒಂದು ಮಹತ್ತರವಾದ ಕೆಲಸವನ್ನು ಶಾಶ್ವತವಾಗಿ ಉಳಿದು ಹೋಗುವಂತೆ ಮಾಡಬೇಕೆಂದು ನಿಶ್ಚಯಿಸಿಕೊಂಡರು. ನಿರ್ಮಲವಾದ ಮನಸ್ಸಿನಿಂದ ಲೋಹಗಳಿಂದ ಒಂದು ಪಂಜು ತಯಾರು ಮಾಡಿದರು. ಅದು ತಯಾರು ಮಾಡಿದಾಗಲಿಂದಲೂ ಆ ಸೋದರರಿಬ್ಬರೂ ಕಷ್ಟಗಳು ಆರಂಭವಾದವು. ಇದರ ಜೊತೆಗೆ ಆ ಗ್ರಾಮ ಬೆಂಕಿಗೆ ಆಹುತಿಯಾಯಿತು. ಮುಂಬರುವ ಕಾಲದಲ್ಲಿ ತಮಗೆ ಇನ್ನೆಷ್ಟು ಕಷ್ಟಗಳು ಬರುತ್ತವೋ ಎಂದು ಭಯಪಟ್ಟು ಆ ಇಬ್ಬರು ವಿಶ್ವ ಬ್ರಾಹ್ಮಣ ಸೋದರರು ದೀವಟಿಗೆ ಕೂಡಿ ಬರಲಿಲ್ಲವೆಂದು ಗ್ರಹಿಸಿ ಗ್ರಾಮಕ್ಕೆ ದಕ್ಷಿಣದ ಕಡೆ ೨ ಕಿ.ಮೀ. ದೂರದಲ್ಲಿರುವ ಗಂಗನ ಪಲ್ಲೆ ಸನಿಹದಲ್ಲಿರುವ ಇಳಿಬಾವಿನಲ್ಲಿ ದೀವಟಿಗೆಯನ್ನು ಹಾಕಿ ಬಿಟ್ಟರು. ಅನಂತರ ಸ್ವಲ್ಪ ಕಾಲಕ್ಕೆ ಗೂಗೂಡು ಗ್ರಾಮಕ್ಕೆ ಸೇರಿದ ತಿರುಮಲ ಕೊಂಡಣ್ಣ ಎಂಬ ಕುರಿಕಾಯುವವ ಬಾವಿ ಹತ್ತಿರ ಹೋದನು. ಆ ಸಮಯದಲ್ಲಿ ಬೇಸಿಗೆಯಾಗಿದ್ದರಿಂದ ದಾಹ ತೀರಿಸಿಕೊಳ್ಳಲು ಕುರಿಗಳನ್ನು ಆ ಬಾವಿಯೊಳಕ್ಕೆ ಅಟ್ಟಿಸಿದ್ದನ್ನು ಕುರಿಗಳ ಜೊತೆಯಲ್ಲೇ ಕೊಂಡಣ್ಣನೂ ಕೂಡ ಬಾವಿಯೊಳಕ್ಕೆ ಇಳಿದು ದಾಹ ತೀರಿಸಿಕೊಳ್ಳಲು ನೀರನ್ನು ಕುಡಿಯುತ್ತಿರುವಾಗ ಆ ಸಮಯದಲ್ಲಿ ದೀವಟಿಗೆ ಕಾಣಿಸಿತು. ಆ ದೀವಟಿಗೆ ಕೊಂಡಣ್ಣನ ಜೊತೆ ಮಾತನಾಡುತ್ತಾ ನನ್ನನ್ನು ತೆಗೆದುಕೊಂಡು ಹೋಗಿ ಗೂಗೂಡು ಗ್ರಾಮದಲ್ಲಿಟ್ಟುಕೊಂಡು ಪೂಜಿಸಿದರೆ ಎಲ್ಲ ಕುಲದವರ ಆರಾಧ್ಯದೈವವಾಗಿ ಬೆಳಗುತ್ತಾ ಹರಕೆಗಳು ತೀರಿಸುತ್ತೇನೆಂದು ತಿಳಿಸಿತು.

ಕೆ.ಎಸ್.ಎಂ.ಅನುವಾದ ಎ.ಎ.

ಗೃಹೋಪಕರಣಗಳು ಭೂಮಿಯನ್ನು ಹದಗೊಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ ಮನುಷ್ಯ ಕೃಷಿ ಆವಿಷ್ಕಾರದ ಅನಂತರ ಹಲವು ಕೃಷಿಸಂಬಂಧಿ ಸಾಧನ ಸಲಕರಣೆಗಳನ್ನು ಕಂಡುಕೊಂಡ. ಮುಂದುವರಿದು ಕಲ್ಲು, ಮಣ್ಣು, ನಾರು, ಲೋಹ, ಮರ ಮುಂತಾದವುಗಳಿಂದ ಗೃಹಬಳಕೆಯ ವಸ್ತುಗಳನ್ನು ತಯಾರಿಸಿಕೊಂಡು ಉಪಯೋಗಿಸತೊಡಗಿದ. ಜನಪದರ ಸಂಸ್ಕೃತಿಯನ್ನು ಗುರುತಿಸುವಲ್ಲಿ ಗೃಹೋಪಕರಣಗಳು ಪ್ರಮುಖ ಪಾತ್ರವಹಿಸುತ್ತವೆ. ಇವು ಜನಪದರ ಸಂಸ್ಕೃತಿಯ ಪ್ರತೀಕಗಳು.

ಮಣ್ಣಿನ ವಸ್ತುಗಳು: ಮಣ್ಣು ನಿಸರ್ಗದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು. ಇದನ್ನು ಬಳಸಿಕೊಂಡು ಜನಪದರು ಗುಡಾಣಗಳು, ಮಡಕೆಕುಡಿಕೆಗಳು, ಗಡಿಗೆಗಳು, ಪೂಜಾ ಸಾಮಗ್ರಿಗಳು ಮುಂತಾದವುಗಳನ್ನು ತಯಾರಿಸಿಕೊಂಡು ಬಳಸುತ್ತಿದ್ದರು. ಮಡಕೆಯಲ್ಲಿ ಅಡುಗೆ ಮಾಡುವ, ಹಾಲುಕಾಯಿಸುವ, ತುಪ್ಪಕಾಯಿಸುವ, ಬೆಣ್ಣೆ ಇಡುವ, ಮೊಸರು ಕಡೆಯುವ ಮಡಕೆಗಳೆಂದು ಬೇರೆ ಬೇರೆ ವಿಧಗಳಿವೆ.

ಅಡುಗೆ ಮನೆಯಲ್ಲಿ ಅಕ್ಕಿ, ರಾಗಿ, ಕಾಳುಕಡಿಗಳನ್ನು ತುಂಬಿಡಲು ದೊಡ್ಡದೊಡ್ಡ ಗುಡಾಣಗಳನ್ನು ಬಳಸುತ್ತಾರೆ. ಇವುಗಳನ್ನು ಒಂದರಮೇಲೊಂದು ಜೋಡಿಸಿ ಇಡಲಾಗುತ್ತಿತ್ತು. ಇದಕ್ಕೆ ಗುಡಾಣದ ಸಾಲು ಎಂದು ಕರೆಯುತ್ತಿದ್ದರು. ಇದಕ್ಕೆ ಮನೆಯ ಗೃಹಿಣಿ ಬೆಳಗ್ಗೆ ಎದ್ದ ಕೂಡಲೆ ವಿಭೂತಿ ಹಚ್ಚಿ ನಮಸ್ಕರಿಸುವ ಪದ್ಧತಿ ಚಾಲ್ತಿಯಲ್ಲಿತ್ತು./ ದೊಡ್ಡ ಪ್ರಮಾಣದ ಆಹಾರಧಾನ್ಯಗಳನ್ನು ಸಂಗ್ರಹಿಸಲು ವಾಡೆಗಳನ್ನು ಬಳಸುತ್ತಿದ್ದರು. ಗಡಿಗೆಗಳನ್ನು ಎಣ್ಣ, ತುಪ್ಪಗಳನ್ನು ಸಂಗ್ರಹಿಸಲು ಬಳಸುತ್ತಿದ್ದರು. ಮದುವೆಯಂತಹ ಶುಭ ಸಂದರ್ಭದಲ್ಲಿ, ಶವಸಂಸ್ಕಾರದ ಸಂದರ್ಭದಲ್ಲಿ ಗಡಿಗೆಗಳನ್ನು ಬಳಸುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಅಡುಗೆಮನೆಯಲ್ಲಿ ಬಳಸುವ ಮಡಕೆ ಮೇಲೆ ಮುಚ್ಚುವ ಬೋಗುಣಿ, ಒಗ್ಗರಣೆಗೆ ಬಳಸುವ ಬಟ್ಟಲು, ಎಣ್ಣೆ ಮಿಳ್ಳೆಗಳು ಮಣ್ಣಿನಿಂದ ತಯಾರಾದ ವಸ್ತುಗಳು. ಕರಗಜವೆಂದು ಕರೆಯುವ ಬಟ್ಟೆಯನ್ನಿಡುವ ಮಡಕೆ ಒಂದು ವಿಶೇಷ ಗೃಹೋಪಕರಣ.

ಮಣ್ಣಿನ ಮಡಕೆಗಳು ಬಹಳ ಸೂಕ್ಷ್ಮ. ಹೀಗಾಗಿ ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ ಹುಟ್ಟಿಕೊಂಡಿದೆ. ಮಡಕೆಗಳ ಬಳಕೆ ಹರಪ್ಪ ಮೊಹೆಂಜದಾರೊ ನಾಗರಿಕತೆಯಲ್ಲಿಯೆ ಇದ್ದ ಬಗ್ಗೆ ಉತ್ಖನನಗಳು ತಿಳಿಸುತ್ತದೆ. ಮಡಕೆಯಲ್ಲಿ ತಯಾರಿಸುವ ಆಹಾರ ಸ್ವಾದಿಷ್ಟಕರ ಹಾಗೂ ಆರೋಗ್ಯಕ್ಕೂ ಪೂರಕ. ಶುಚಿಗೊಳಿಸುವುದು ಅತ್ಯಂತ ಸುಲಭದ ಕೆಲಸ.

ಕಲ್ಲಿನ ವಸ್ತುಗಳು: ಕಲ್ಲಿನಿಂದ ರಚಿತವಾದ ವಸ್ತುಗಳಲ್ಲಿ ಬೀಸುವ ಕಲ್ಲು ಮತ್ತು ಒರಳುಕಲ್ಲಿಗೆ ಪ್ರಮುಖ ಸ್ಥಾಣವಿದೆ. ಅರೆಯುವ ಕಲ್ಲು, ಕಲಬತ್ತು ಕಲ್ಲಿನ ರಚನೆಗಳೇ ಆಗಿದೆ. ರಾಗಿ, ಜೋಳದಿಂದ ಹಿಟ್ಟನ್ನು ತಯಾರಿಸಲು, ಅಲಸಂದೆ, ಉದ್ದು, ತೊಗರಿ, ಹೆಸರು ಮುಂತಾದ ಕಾಳುಗಳಿಂದ ಬೇಳೆ ಮಾಡಲು ಬೀಸುವ ಕಲ್ಲನ್ನು ಬಳಸುತ್ತಿದ್ದರು. ಮನೆಯ ಒಂದು ಮೂಲೆಯಲ್ಲಿ ಸ್ಥಾಪಿತವಾಗುತ್ತಿದ್ದ ಕಲ್ಲಿನಲ್ಲಿ ಎರಡು ಭಾಗಗಳಿದ್ದು, ಮೇಲಿನ ಕಲ್ಲಿನ ಮಧ್ಯಭಾಗದಲ್ಲಿ ಧಾನ್ಯ ಹಾಕಲು ಅಗಲವಾದ ರಂಧ್ರವಿರುತ್ತದೆ. ಅದೇ ಕಲ್ಲಿನ ಒಂದು ಕೋನದಲ್ಲಿರುವ ಗೂಟವನ್ನು ಹಿಡಿದು ಬೀಸಿದಾಗ ಧಾನ್ಯ ಹೊರಬರುತ್ತದೆ. ಬೀಸುವ ಕಲ್ಲು ಉತ್ಕೃಷ್ಟ ಜನಪದ ಸಾಹಿತ್ಯದ ಸೃಷ್ಟಿಗೂ ಕಾರಣವಾಗಿದ್ದು, ಜನಪದರು ಈ ಕಲ್ಲಿಗೆ ದೈವಿಕ ಸ್ಥಾನವನ್ನು ನೀಡಿದ್ದಾರೆ. ಬೀಸುವ ಕಲ್ಲಿನಂತೆ ಒರಳುಕಲ್ಲು ಜನಪದರ ಜೀವನದಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ರುಬ್ಬುವ ಕಲ್ಲು, ವರಳುಕಲ್ಲು ಎಂದು ಕರೆಸಿಕೊಳ್ಳುವ ಒರಳುಕಲ್ಲಿನ ಎರಡು ಭಾಗಗಳಿರುತ್ತವೆ. ಈ ಕಲ್ಲನ್ನು ಧಾನ್ಯ ಅರೆಯಲು ಮಾತ್ರವಲ್ಲದೆ ಮದುವೆಯಂಥ ಶುಭಸಂದರ್ಭದಲ್ಲಿ ಶಾಸ್ತ್ರಕ್ಕಾಗಿ ಬಳಸುತ್ತಾರೆ. ಖಾರ ಅರೆಯುವ ಅಗಲವಾದ, ಚಚ್ಚೌಕಾಕಾರದ ಕಲ್ಲಿಗೆ ಹಸೆಕಲ್ಲೆಂದು ಕರೆಯುತ್ತಾರೆ. ಒಂದು ಗೇಣು ಉದ್ದದ ದುಂಡಗಿನ ಕಲ್ಲನ್ನು ಹಸೆಕಲ್ಲಿನ ಮೇಲೆ ಹೊರಳಿಸುತ್ತಾ ಖಾರ ಅರೆಯುತ್ತಾರೆ. ಕರಿಯ ಕಲ್ಲು ಮತ್ತು ಅಮೃತಶಿಲೆಯಿಂದ ರಚಿತವಾಗುವ ಕಲಬತ್ತು ಔಷಧಿ ಮುಂತಾದವನ್ನು ಅರೆಯಲು ಕುಟ್ಟಲು ಬಳಕೆಗೊಳ್ಳುತ್ತದೆ. ಕಲಬತ್ತಿನ ಒರಳಿನ ರಚನೆಯು ದೋಣಿ ಅಥವಾ ಕಮಲದ ಎಸಳಿನ ಆಕಾರದಲ್ಲಿರುತ್ತದೆ. ಕಲ್ಲನಿಂದ ರಚಿತವಾದ ರೊಟ್ಟಿಬಂಡಿ, ಕುಟಾಣಿ, ದೀಪಗಳು ಮುಂತಾದವನ್ನು ಜನಪದರ ಗೃಹೋಪಕರಣಗಳಲ್ಲಿ ಕಾಣಬಹುದು.

ಮರದ ವಸ್ತುಗಳು: ಜನಪದರು ಗೃಹೋಪಕರಣಗಳಲ್ಲಿ ಮರವನ್ನು ಅಧಿಕವಾಗಿ ಬಳಸಿದ್ದಾರೆ. ಸಾಮಾನ್ಯವಾಗಿ ಹಲಸು, ಮತ್ತಿ, ಬೀಟೆ, ತೇಗದಂತಹ ಮರಗಳಿಂದ ಗೃಹೋಪಕರಣಗಳನ್ನು ತಯಾರಿಸುತ್ತಿದ್ದರು. ಶ್ಯಾವಿಗೆ ಮಾಡಲು ಬಳಸುವ ಶ್ಯಾವಿಗೆ ಒರಳು ಮತ್ತು ಮಣೆ ಬಡಗಿಯ ಕಲಾತ್ಮಕತೆಗೆ ಸಾಕ್ಷಿಯಾಗಿವೆ. ಶ್ಯಾವಿಗೆ ಮತ್ತು ಚಕ್ಕುಲಿ ಒರಳುಗಳೆರಡರಲ್ಲೂ ಎರಡು ಭಾಗಗಳಿದ್ದು, ಕೆಳಭಾಗ ಹಿಟ್ಟನ್ನು ತುಂಬಲು ಅನುಕೂಲವಾಗುವಂತೆ ಮತ್ತು ಮೇಲ್ಭಾಗ ಒತ್ತಲು ಆಗುವಂತೆ ರಚನೆಗೊಂಡಿದೆ. ಊಟದ ತಟ್ಟೆ ಇಟ್ಟುಕೊಳ್ಳುವ ತೇವಟಿಕೆಗಳು, ಪೂಜಾ ತೇವಟಿಕೆಗಳು, ಮಸಾಲೆ ಪದಾರ್ಥಗಳನ್ನು ಸಂಗ್ರಹಿಸುವ ಹಲವು ಕಪಾಟುಗಳಿರುವ ಭರಣಿ, ಕಲ್ಮರಟಿಗಳು ಇಂದಿಗೂ ಕೆಲವು ಸಂಪ್ರದಾಯಸ್ಥರ ಮನೆಯಲ್ಲಿ ಬಳಕೆಯಾಗುತ್ತವೆ. ಈಳಿಗೆಮಣೆ ಅಡುಗೆಮನೆಯ ನಿತ್ಯೋಪಯೋಗಿ ವಸ್ತುವಿನಲ್ಲಿ ಒಂದು. ಇದರ ಪ್ರಮುಖ ಉಪಯೋಗ ತೆಂಗಿನಕಾಯಿ ತುರಿಯುವುದೇ ಆದರೂ ಗಡ್ಡೆಗೆಣಸು, ತರಿಕಾರಿಗಳನ್ನು ಕತ್ತರಿಸಲು ಇದನ್ನು ಉಪಯೋಗಿಸುತ್ತಾರೆ. ತೆಂಗಿನ ಕರಟಕ್ಕೆ ಬಿದಿರಿನ ಕೋಲನ್ನು ಸೇರಿಸಿ ಮಾಡುವ ಸುಟ್ಟುಗ, ಕಲಾತ್ಮಕ ಕೆತ್ತನೆಯುಳ್ಳ ಮರದ ಸೌಟುಗಳು, ಸಾಂಬಾರು ಬಟ್ಟಲುಗಳು, ಮರಿಗೆಗಳು, ಅಳತೆಯ ಸಾಧನಗಳು, ಸಕ್ಕರೆ ಅಚ್ಚುಗಳು ಜನಪದ ಸಂಸ್ಕೃತಿಯ ಸಮೃದ್ಧಿಯನ್ನು ಹೇಳುತ್ತವೆ.

ಲೋಹದ ವಸ್ತುಗಳು: ಪ್ರಾಚೀನ ಕಾಲದಿಂದಲೂ ಲೋಹವನ್ನು ಬಳಸಿ ಗೃಹೋಪಕರಣಗಳನ್ನು ತಯಾರಿಸುವ ಪದ್ಧತಿ ನಡೆದು ಬಂದಿದೆ. ಸಾಮಾನ್ಯವಾಗಿ ಕಂಚು, ತಾಮ್ರ, ಹಿತ್ತಾಳೆ ಮತ್ತು ಕಬ್ಬಿಣದಿಂದ ಗೃಹೋಪಕರಣಗಳನ್ನು ತಯಾರಿಸುತ್ತಿದ್ದರು. ಮನೆಯಲ್ಲಿ ಲೋಹದ ವಸ್ತುಗಳನ್ನು ಬಳಸುವುದು ಸಿರಿವಂತಿಕೆಯ ಪ್ರತೀಕವಾಗಿತ್ತು. ಹಿತ್ತಾಳೆ ಮತ್ತು ತಾಮ್ರಗಳು ಕ್ರಿಮಿನಾಶಕಳಾಗಿರುವುದರಿಂದ ಗೃಹೋಪಕರಣಗಳ ತಯಾರಿಕೆಯಲ್ಲಿ ಹೆಚ್ಚಾಗಿ ಈ ಲೋಹಗಳನ್ನು ಬಳಸಿದ್ದಾರೆ. ಲೋಹದಿಂದ ತಂಬಿಗೆ, ಬಟ್ಟಲು, ಹಂಡೆ ಮತ್ತು ಗಂಗಾಳ ಮುಂತಾದ ವಸ್ತುಗಳನ್ನು ತಯಾರಿಸುತ್ತಿದ್ದರು. ಕಂಚು ಮತ್ತು ಹಿತ್ತಾಳೆಯಿಂದ ತಯಾರಿಸುತ್ತಿದ್ದ ಗಂಗಾಳಗಳ ಬಳಕೆಯನ್ನು ಇಂದು ಸಹ ಕೆಲವು ಸಂಪ್ರದಾಯಸ್ಥ ಮನೆಗಳಲ್ಲಿ ಕಾಣಬಹುದು.

ಬಿದಿರು ಮತ್ತು ನಾರಿನ ವಸ್ತುಗಳು: ಜನಪದ ಬದುಕಿನಲ್ಲಿ ಹುಟ್ಟಿನಿಂದ ಚಟ್ಟದವರೆಗೆ ಬಿದಿರು ಸ್ಥಾನ ಪಡೆದಿದೆ. ಬಿದಿರಿನಿಂದ ಪಾತ್ರೆಗಳನ್ನಿಡುವ ಇರಿಕೆ, ವಿವಿಧ ಉಪಯೋಗಕ್ಕೆ ಬಳಸುವ ಬುಟ್ಟಿಗಳು, ಅನ್ನಬಸಿಯುವ ಚಿಬ್ಬಲು, ಮೊರ ಮತ್ತು ಮಕ್ಕರಿಗಳನ್ನು ತಯಾರಿಸುತ್ತಿದ್ದರು.

ಸಾಮೆಹುಲ್ಲು, ನೆಲ್ಲುಲ್ಲು, ಸೆಣಬು, ಕತ್ತಾಳೆ, ಕೂಗಲಬಳ್ಳಿ, ತೆಂಗಿನನಾರು ಮುಂತಾದ ನಾರಿನಿಂದ ವಿವಿಧ ಬಗೆಯ ಮನೆಬಳಕೆ ವಸ್ತುಳನ್ನು ಮತ್ತು ಪೂಜಾಬುಟ್ಟಿಗಳನ್ನು ತಯಾರಿಸುತ್ತಿದ್ದರು. ಮಹಾಭಾರತದಲ್ಲೇ ಪ್ರಸ್ತಾಪವಾಗಿರುವ ನೆಲುವು ಬೆಣ್ಣೆ, ಮೊಸರು, ಮಜ್ಜಿಗೆ, ತುಪ್ಪದಂತಹ ಪದಾರ್ಥಗಳನ್ನು ರಕ್ಷಿಸಲು ಬಳಕೆಗೊಳ್ಳುತ್ತದೆ.

ಆಧುನಿಕ ತಂತ್ರಜ್ಞಾನದ ಪ್ರಭಾವ ಗೃಹೋಪಕರಣಗಳ ಮೇಲೂ ಆಗಿದೆ. ಮಣ್ಣು ಮತ್ತು ಲೋಹದ ಪಾತ್ರೆಗಳ ಜಾಗದಲ್ಲಿ ಅಲ್ಯೂಮಿನಿಯಂ ಹಾಗೂ ಸ್ಟೀಲ್ ಪಾತ್ರೆಗಳು ಬಂದು ಕುಳಿತಿವೆ. ಕುಟ್ಟುವ, ಬೀಸುವ ಕ್ರಿಯೆ ಕಣ್ಮರೆಯಾಗಿ ಮಿಕ್ಸಿ, ಗ್ರೈಂಡರ್‌ಗಳ ಕರ್ಕಶ ಧ್ವನಿ ಕೇಳುವಂತಾಗಿದೆ. ಹೀಗಾಗಿ ವೈಜ್ಞಾನಿಕ, ಸಾಂಸ್ಕೃತಿಕ ಹಿನ್ನೆಲೆ ಇರುವ ಜನಪದ ಗೃಹೋಪಕರಣಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಎಚ್‌.ಜಿ.

ಗೊಂದಲಿಗರು ಗೊಂದಲ ಎಂಬುದು ಒಂದು ಪೂಜಾವಿಧಾನ. ತಮ್ಮ ಆರಾಧ್ಯದೈವವಾದ ಅಂಬಾ ಭವಾನಿಯ ಮುಂದೆ ಇಡೀ ರಾತ್ರಿ ಯಾವುದಾದರೊಂದು ಕಥೆಯನ್ನು ಹಾಡುತ್ತ, ಕುಣಿಯುತ್ತ, ಅಭಿನಯಿಸುತ್ತ ಕೊನೆ ಮೊದಲುಗಳಂತೆ ನಡುನಡುವೆಯೂ ದೇವೀ ಸ್ತುತಿ ಮಾಡುತ್ತ ಬೆಳಕು ಹರಿಸುವುದೇ ಆ ಪೂಜಾವಿಧಾನ. ಈ ಇಡೀ ರಾತ್ರಿಯ ಕ್ರಿಯೆಗಳಿಗೆ ‘ಗೊಂದಲ ಹಾಕುವುದು’ ಎನ್ನುತ್ತಾರೆ. ಹೀಗೆ ಗೊಂದಲ ಹಾಕುವವರೇ ಗೊಂದಲಿಗರು.

ಒಂದು ಕಾಲದಲ್ಲಿ ಯಾವ ಜಾತಿಯವರಾದರೂ ದೀಕ್ಷೆ ಪಡೆದು ಗೊಂದಲಿಗರಾಗಬಹುದಿತ್ತು. ದೀಕ್ಷಾ ವಿಧಾನವು ಹೀಗಿದೆ : ಹತ್ತರಿಂದ ಹನ್ನೆರಡು ವರ್ಷ ವಯಸ್ಸಿನ ಗಂಡುಗಳು ಮಾತ್ರ ದೀಕ್ಷೆ ಪಡೆಯಲು ಅರ್ಹರಾಗಿರುತ್ತಾರೆ. ದೀಕ್ಷೆ ನೀಡುವುದು ಯಾವುದಾದರೊಂದು ಮದುವೆಯ ಸಂದರ್ಭದಲ್ಲಿ. ಅಂಥ ಸಂದರ್ಭವು ಇಲ್ಲದಿದ್ದರೆ, ಒಂದು ಶುಭದಿನ ನಂಟರು ಮತ್ತು ಜಾತಿಯವರು ಊಟಕ್ಕೆ ಆಹ್ವಾನಿಸಲ್ಪಡುತ್ತಾರೆ. ಅವರೆಲ್ಲ ಬಂದ ಮೇಲೆ, ಗೊಂದಲಿಗರ ಮುಖ್ಯಸ್ಥ ಅಥವಾ ಜಾತಿಯ ಹಿರಿಯನೊಬ್ಬ ಒಂದು ಮಣೆಯ ಮೇಲೆ ಅಕ್ಕಿಯನ್ನು ಹರಡುತ್ತಾನೆ. ನೀರು ತುಂಬಿದ ಗಡಿಗೆಯೊಂದನ್ನು ಅದರ ಮೇಲೆ ಇಡುತ್ತಾನೆ. ಅದರೊಳಕ್ಕೆ ಒಂದೂ ಕಾಲು ರೂಪಾಯಿ ಅಥವಾ ಬೆಳ್ಳಿಯ ನಾಣ್ಯಗಳನ್ನು ಹಾಕುವಂತೆ ಹುಡುಗನ ತಂದೆಗೆ ಹೇಳುತ್ತಾನೆ. ಆಮೇಲೆ ಮಾವಿನ ಎಲೆಗಳಿಂದಲೂ ತೆಂಗಿನ ಕಾಯಿಯಿಂದಲೂ ಅದರ ಬಾಯಿಯನ್ನು ಮುಚ್ಚುತ್ತಾರೆ. ಅದು ಕಲಶ, ದೇವಿ ಅಂಬಾ ಭವಾನಿ ಎಂದು ನಂಬಲಾಗುತ್ತದೆ. ಹೂವು ಗಂಧ ಗಂಧದ ಕಡ್ಡಿ ಕರ್ಪೂರಗಳಿಂದ ಕಲಶಕ್ಕೆ ಪೂಜೆ ಸಲ್ಲಿಸಲು ಹುಡುಗನಿಗೆ ಆ ಹಿರಿಯನು ಆದೇಶಿಸುತ್ತಾನೆ. ಆಮೇಲೆ, ಮುಖ್ಯ ಗೊಂದಲಿಗನಾದ ಆ ಹಿರಿಯನು ಕವಡೆಯ ಹಾರವನ್ನು ಹುಡುಗನ ಕತ್ತಿಗೆ ಬಿಗಿದು, ಭವಾನಿ ದೇವತೆಯ ಹೆಸರನ್ನೂ ಮತ್ತಿರ ಮಾಂತ್ರಿಕ ಶಬ್ದಗಳನ್ನೂ ಹುಡುಗನ ಕವಿಯಲ್ಲಿ ಅನೇಕ ಸಲ ಉಚ್ಚರಿಸುತ್ತಾನೆ. ಅತಿಥಿಗಳಿಗೆ ಹಬ್ಬದೂಟ ನೀಡುವ ಮೂಲಕ ಈ ದೀಕ್ಷಾವಿಧಿ ಮುಗಿಯುತ್ತದೆ.

67

ಗೊಂದಲಿಗ ದೀಕ್ಷೆ ಪಡೆದವರನ್ನೆಲ್ಲ ಅವರವರ ಮೂಲ ಜಾತಿಯ ಹೆಸರನ್ನೆತ್ತದೆ ಗೊಂದಲಿಗರೆಂದೇ ಗುರುತಿಸುತ್ತ ಬರಲಾಯಿತು. ಗೊಂದಲಿಗರು ಎಂಬುದು ಒಂದು ಪ್ರತ್ಯೇಕ ಜಾತಿ ಎನ್ನಿಸಿಕೊಂಡಿತು. ಬೇರೆ ಬೇರೆ ಜಾತಿಗಳಿಂದ ಬಂದು ದೀಕ್ಷೆ ಪಡೆಯುವುದನ್ನು ಈ ಜಾತಿಯು ಪ್ರತಿಭಟಿಸಿತು. ಪರಿಣಾಮವಾಗಿ ಹೊಸ ಸೇರ್ಪಡೆಗಳು ಸಂಪೂರ್ಣವಾಗಿ ಇಲ್ಲದಂತಾದುವು. ಗೊಂದಲ ಎಂಬ ಕಲೆಯು ವಂಶಪಾರಂಪರ್ಯ ಆಸ್ತಿಯಾಗಿ ಮುಂದುವರಿಯಿತು.

ಕರ್ನಾಟಕದ ಗೊಂದಲಿಗರು ಮೂಲತಃ ಮಹಾರಾಷ್ಟ್ರದವರು. ಇವರ ಮನೆ ಮಾತು ಮರಾಠಿ. ಶಿವಾಜಿ ಮಹಾರಾಜರ ಆಳ್ವಿಕೆ ಮಹಾರಾಷ್ಟ್ರದಲ್ಲಿ ಇದ್ದಾಗ ನೆರೆಯ ಬಿಜಾಪುರ, ಗುಲ್ಬರ್ಗ ಸಂಸ್ಥಾನಗಳು ಮುಸಲ್ಮಾನ ದೊರೆಗಳ ಆಳ್ವಿಕೆಗೆ ಒಳಪಟ್ಟಿದ್ದುವು. ಆ ಕಾಲದಲ್ಲಿ ಬೇಹುಗಾರಿಕೆ ಸಾಮಾನ್ಯ ಎನ್ನಿಸಿತ್ತು. ದೇವೀ ಭಕ್ತರ ಮನೆಗಳಿಗೆ ಹೋಗಿ ಗೊಂದಲ ಹಾಕುತ್ತ ಜನಪ್ರಿಯರಾಗಿದ್ದ ಗೊಂದಲಿಗರನ್ನು ಶಿವಾಜಿಯು ತನ್ನ ಗೂಢಚಾರರನ್ನಾಗಿ ನೇಮಿಸಿಕೊಂಡಿದ್ದ. ಹೀಗೆ ಶಿವಾಜಿಯ ಗೂಢಚಾರ ವೇಷದಲ್ಲಿ ಗೊಂದಲಿಗರು ಕರ್ನಾಟಕಕ್ಕೆ ಬಂದರು ಎಂಬ ಹೇಳಿಕೆಯು ಬಿಜಾಪುರದ ಗೊಂದಲಿಗರ ಮುಖ್ಯಸ್ಥರದು.

ಇವರಲ್ಲಿ ಮಗು ಹುಟ್ಟಿದ ಐದನೆಯ ದಿನ ‘ಐದ್ದೀಶಿ’ ಎಂಬ ಆಚರಣೆಯಿದೆ. ಸಟವೈ ದೇವತೆ ಮಗುವಿನ ಹಣೆಯ ಮೇಲೆ ಒಳ್ಳೆಯದನ್ನು ಬರೆಯಲಿ ಎಂಬ ಹಾರೈಕೆಯು ಈ ಆಚರಣೆಯ ಹಿನ್ನೆಲೆಯಾಗಿದೆ. ಹೆಣ್ಣು ಋತುಮತಿ ಆದಾಗ ಗುಡ್ಳುಕೂಡೋ ಶಾಸ್ತ್ರ ಇದೆ. ಎಂಟರಿಂದ ಹತ್ತು ದಿನಗಳ ಆ ಶಾಸ್ತ್ರ ಮುಗಿಯುತ್ತಿದ್ದಂತೆಯೇ ಮದುವೆ ಆದವಳಾಗಿದ್ದರೆ, ಕೊನೆಯ ದಿನವೇ ಸೋಬನ ಮಾಡುತ್ತಾರೆ.

ಇವರಲ್ಲಿ ತೊಟ್ಟಿಲು ವಿವಾಹ, ಬಾಲ್ಯವಿವಾಹ ಪದ್ದತಿಗಳು ಜಾರಿಯಲ್ಲಿದ್ದವು. ಅನಂತರ ಹೆಣ್ಣಿಗೆ ಏಳೆಂಟು ವರ್ಷ ವಯಸ್ಸಾಗುವವರೆಗೆ ಕಾಯುವ ಪದ್ಧತಿ ಇತ್ತು. ಮಕ್ಕಳು ಎಳೆತನದಲ್ಲೇ ಸಾವನ್ನಪ್ಪುತ್ತಿದ್ದರೆ, ತೊಟ್ಟಿಲ್ಲಲ್ಲೇ ಮದುವೆ ಮಾಡಿಬಿಡುತ್ತಿದ್ದರು. ಹಾಗೆ ಮಾಡಿದರೆ ಮಗು ಸಾಯುವುದಿಲ್ಲ ಎಂಬ ನಂಬಿಕೆ ಇತ್ತು. ಗೊಂದಲಿಗರಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಮದುವೆ ಬಳಕೆಯಲ್ಲಿದೆ.

ಬಹುಪತ್ನಿತ್ವ ಮತ್ತು ವಿಧವಾ ವಿವಾಹಕ್ಕೆ ಅವಕಾಶವಿದೆ. ಬಹುಪತಿತ್ವ ಇಲ್ಲ. ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ವಿಚ್ಛೇದಿತಳಾದ ಹೆಂಗಸು ತನ್ನ ಗಂಡನಾಗಿದ್ದವನು ಬದುಕಿರುವ ತನಕ ಮತ್ತೆ ಮದುವೆಯಾಗುವಂತಿಲ್ಲ. ಪಿತ್ರಾರ್ಜಿತ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹಿಂದೂ ಕಾನೂನಿನ ರೀತಿಯನ್ನು ಅನುಸರಿಸುತ್ತಾರೆ. ಇವರಲ್ಲಿ ತಮ್ಮದೇ ಆದ ನ್ಯಾಯಪದ್ಧತಿ ಇದೆ. ಸಾವಿನ ಸಂದರ್ಭದಲ್ಲಿ, ಮದುವೆಯಾಗಿದ್ದರೆ ಮಾತ್ರ ಹೊರಲು ಮತ್ತು ಸಂಸ್ಕಾರ ಮಾಡಲು ಹೆಣ ಯೋಗ್ಯವಾಗುತ್ತದೆ. ಮದುವೆಗೆ ಮುಂಚೆಯೇ ಸತ್ತರೆ ಹೆಣವನ್ನು ಎಕ್ಕದ ಗಿಡದೊಂದಿಗೆ ಮದುವೆ ಮಾಡುತ್ತಾರೆ. ಮದುವೆಗೆ ಮುಂಚೆ ಸತ್ತವರನ್ನು ಹೂಳುತ್ತಾರೆ. ಮದುವೆ ಆದ ಮೇಲೆ ಸತ್ತವರನ್ನು ಸುಡುತ್ತಾರೆ. ಸಮಾಧಿಗೆ ಎಡೆ ಇಡುವುದಿದೆ.

ಗೊಂದಲಿಗರು ಸಾಮಾನ್ಯವಾಗಿ ಬಳಸುವ ವಾದ್ಯಗಳು ಮೂರು: ಸಂಬಾಳ, ಚೌಡಿಕೆ, ಪತ್ತ (ತಾಳ). ಗೊಂದಲ ನೃತ್ಯದಲ್ಲಿ ಮೂರು ಬಗೆ:  ಉತ್ತಮ, ಮಧ್ಯಮ, ಕನಿಷ್ಠ. ಕ್ರಮವಾಗಿ ೩೨,೧೬,೮ ಜನರು ನೃತ್ಯದಲ್ಲಿ ಭಾಗವಹಿಸುತ್ತಿದ್ದರು. ಈಗ ಕೇವಲ ಮೂರು ಜನ ಮಾತ್ರ ಇರುತ್ತಾರೆ.

ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ಗೊಂದಲ ನೃತ್ಯದ ಸ್ವರೂಪ ಬದಲಾಗುತ್ತ ಬಂದಿದೆ. ಒಂದೆ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಂಡುಬರುತ್ತಾರೆ. ಪ್ರಾದೇಶಿಕ ರುಚಿ ಅಭಿರುಚಿಗಳನ್ನು ಅವಲಂಬಿಸಿಯೋ ವೇಗವನ್ನು ವೃದ್ಧಿಸಿಕೊಳ್ಳುತ್ತಲೋ, ವ್ಯತ್ಯಸ್ತವಾಗುವ ರೀತಿಯು ಗೊಂದಲಕ್ಕೂ ಅನ್ವಯಿಸುತ್ತದೆ.

ಕೆ.ಆರ್.