ಗೋಂದೋಳು ಕರಾವಳಿ ಕರ್ನಾಟಕ ಮರಾಟಿ -ನಾಯ್ಕರ ಪ್ರಮುಖ ಜಾನಪದ ಆಚರಣೆಗಳಲ್ಲಿ ಗೋಂದೋಲು ಒಂದು. ಇದು ಈ ಸಮುದಾಯದ ಅನನ್ಯತೆಯ ಸಂಕೇತವೂ ಹೌದು. ಗೋಂದೋಳು ಪೂಜೆ, ಅಮ್ನೂರು ಪೂಜೆ, ಮಹಮ್ಮಾಯಿ ಪೂಜೆ, ದುರ್ಗಾ ಪೂಜೆ ಎಂಬೆಲ್ಲ ಹೆಸರುಗಳಿಂದ ಕರೆಯಲಾಗುವುದು. ಉಡುಪಿ ಜಿಲ್ಲೆಯಲ್ಲಿ ಊರಿನ ಸಮಸ್ತರು ಸೇರಿ ಮಾರಿ ಗೋಂದೋಳು ಪೂಜೆಯನ್ನು ಆಚರಿಸುವುದು ಇದೆ.

ನಿಗದಿತ ಮಂಗಳವಾರ ಅಥವಾ ಶುಕ್ರವಾರದಂದು ಈ ಮೊದಲು ನಿರ್ಧರಿಸುವಂತೆ ಪೂಜಾರಿಗಳು ತಮ್ಮ ಪೂಜಾ ಪರಿಕರಗಳೊಂದಿಗೆ ಪೂಜೆ ನಡೆಸಿಕೊಡುವ ಮನೆಯಲ್ಲಿ ಹಾಜರಿರುತ್ತಾರೆ. ತಿಂಗಳ ಹಿಂದೆಯೇ ಪೂಜಾ ತಯಾರಿ ನಡೆದಿರುತ್ತದೆ. ಬಂಧು ಬಾಂಧವರು, ಆಮಂತ್ರತರಿಂದ ಮನೆ ಸಂಭ್ರಮ ಸಡಗರದಿಂದ ಕೂಡಿರುತ್ತದೆ. ಏಳು, ಒಂಬತ್ತು ಅಥವಾ ಹನ್ನೊಂದು ಮಂದಿ ಪೂಜಾರಿಗಳು ಬಂದಿರುತ್ತಾರೆ. ಗುರು ಉಪದೇಶವಿರುವ, ಪಡೆದಿರುವ ಪೂಜಾರಿಗಳಲ್ಲಿ ಲಿಂಗ ತಾರತಮ್ಯ ವಿರುವುದಿಲ್ಲ. ಗುರು ಉಪದೇಶವಿರುವ ಸ್ತ್ರೀ ಪುರುಷರು ಪೂಜಾಕಾರ್ಯ ನೆರವೇರಿಸಲು ಅರ್ಹರಿರುತ್ತಾರೆ.

ಕುಟುಂಬದ ಪ್ರಥಮ ಮಹಿಳೆ ದೀಪ ಬೆಳಗಿಸುವುದರ ಮತ್ತು ಪ್ರಧಾನ ಪೂಜಾರಿಯ ಆರಂಭಿಕ ಪ್ರಾರ್ಥನೆಯೊಂದಿಗೆ ಪೂಜೆ ಆರಂಭವಾಗುತ್ತದೆ. ನಂದಾದೀಪಕ್ಕೆ ಮೂರು-ಮೂರು ಸಾರಿ ತೆಂಗಿನೆಣ್ಣೆ ಬಿಟ್ಟು ಎಲ್ಲ ಪೂಜಾರಿಗಳು ಒಬ್ಬರೊನ್ನೊಬ್ಬರು ಕಾಲು ಮುಟ್ಟಿ ನಮಸ್ಕರಿಸಿ ಗೌರವಿಸುತ್ತಾರೆ. ಹಾಗೆಯೇ ತೋರು ಬೆರಳನ್ನು ಜೋಡಿಸಿ ನೆಲಕ್ಕೆ ತೆಂಗಿನೆಣ್ಣೆಯನ್ನು ತಾಗಿಸುವ ಮೂಲಕ ಕುಟುಂಬದಲ್ಲಿ ಗತಿಸಿಹೋದ ಹಿರಿಯರಿಗೆ ಗೌರವ ಸೂಚಿಸುತ್ತಾರೆ. ಎಲೆ ಅಡಕೆ ಸ್ವೀಕರಿಸಿ ಅಭ್ಯಂಗ ಸ್ನಾನ ಮಾಡಿ ಈಡು ಬಿಟ್ಟ ಹಂದಿ ಕೋಳಿಗಳಿಗೆ (ಪ್ರಧಾನ ಪೂಜಾರಿ) ಅನ್ನಾಹಾರ ನೀಡಿ ತಾವು ಸ್ವೀಕರಿಸುತ್ತಾರೆ. ಸಾಯಂಕಾಲ ಐದು ಗಂಟೆಯ ಬಳಿಕ ಭೈರವ ಬನದಲ್ಲಿ ಅಸುರ ಕ್ರಿಯೆಯಲ್ಲಿ ಪೂಜಾಕಾರ್ಯ ನೇರವೇರುತ್ತವೆ. ಎರಡನೇ ಬಾರಿ ಸ್ನಾನಾದಿಗಳನ್ನು ಮುಗಿಸಿ ಮಹಮ್ಮಾಮಿ ಪೂಜಾಕಾರ್ಯಕ್ಕೆ ಅಣಿಯಾಗುತ್ತಾರೆ. ಪೂಜಾರಿಗಳೆಲ್ಲರೂ ‘ಗದ್ದಿಗೆ’ ಏರಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಬೆಳ್ತಿಗೆ ಅಕ್ಕಿ ಬಳಸಿ ಸೂರ್ಯ, ಚಂದ್ರ, ನಾಗ, ನಕ್ಷತ್ರ, ಕಾಮಧೇನು, ಡಮರುಗ ಇತ್ಯಾದಿ ಚಿತ್ರಗಳನ್ನು ಬರದ ಮಂಡಲದ ಪ್ರತಿ ವೃತ್ತಕ್ಕೂ ತೆಂಗಿನಕಾಯಿ ಹಾಗೂ ಹಣ್ಣುಗಳನ್ನೀಡಲಾಗುತ್ತದೆ. ಮಹಮ್ಮಾಯಿ ಮತ್ತು ಭೈರವನ ಗದ್ದಿಗೆಗೆ ಅನೇಕ ರೀತಿಯ ನೈವೇದ್ಯಗಳನ್ನು ಸಮರ್ಪಿಸುವುದರೊಂದಿಗೆ ಹಂತ ಹಂತವಾಗಿ ಸುಮಾರು ನಲವತ್ತೆಂಟು ಆರತಿಗಳನ್ನು ಮಾಡಲಾಗುತ್ತದೆ. ನಿರಂತರ ಪೂಜಾಕಾರ್ಯಗಳೊಂದಿಗೆ ಹಂದಿ, ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಅದೇ ವೇಳೆಗೆ ಭಜನಾ ಕಾರ್ಯಕ್ರಮ ಆರಂಭವಾಗುತ್ತದೆ. ನೆರೆದ ಆಸಕ್ತ ಯುವಕ -ಯುವತಿಯರೆಲ್ಲ ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಗೋಂದೋಳು ಕುಣಿತ ಮತ್ತು ದರ್ಶನ

ಇದರ ಮಧ್ಯೆಯೇ ಐದು ಜನ ಪುರುಷರು ಗೋಂದೋಳು ಕುಣಿತಕ್ಕೆ ಅಣಿಯಾಗುತ್ತಾರೆ. ಪ್ರಧಾನ ಪೂಜಾರಿಯಿಂದ ನಾಲ್ಕು ದೀವಟಿಗೆಗಳನ್ನು ಸ್ವೀಕರಿಸಿ ಅಂಗಳದ ಒಂದು ಬದಿಯಲ್ಲಿ ಮಂಡಲಾಕಾರವಾಗಿ ಕುಣಿಯುತ್ತಾರೆ. ಇವರ ಮಧ್ಯೆ ಹಾಡುಗಾರನು ಕುಣಿಯುತ್ತಾ ಶೃತಿಯೊಂದಿಗೆ ಹಾಡುತ್ತಾನೆ. ಹಿಮ್ಮೇಳದಲ್ಲಿ ಓಲಗದವರ ಸಹಾಯವಿರುತ್ತದೆ. ಹಾಡು ಹಳೆ ತಲೆಮಾರಿನ ಮರಾಠಿ ಭಾಷೆಯಲ್ಲಿದ್ದರೆ ಇಂದು ಕನ್ನಡ ಭಾಷೆಯಲ್ಲಿಯೂ ಕಂಡುಬರುತ್ತದೆ. ಪೂಜಾರಿಗಳ ದರ್ಶನ ಪ್ರಾರಂಭವಾಗಿ ಪ್ರಧಾನ ದರ್ಶನ ಪಾತ್ರಿಯ ದರ್ಶನ, ಅಭಯ ಆಶೀರ್ವಾದದೊಂದಿಗೆ ಕೊನೆಗೊಳ್ಳುತ್ತದೆ. ಅಂತಿಮವಾಗಿ ಭೋಜನ ಕೂಟದೊಂದಿಗೆ ಗೋಂದೋಳು ಆಚರಣೆ ಕೊನೆಗೊಳ್ಳುತ್ತದೆ.

ಎಸ್.ಎಂ.

ಗೋಂಧಳೆ ಪುರಾಣ ಆಂಧ್ರಪ್ರದೇಶದ ತೆಲಂಗಾಣದ ಕುಲಪುರಾಣಗಳಲ್ಲಿ ಒಂದು. ಇದು ಆರೆ ಕ್ಷತ್ರಿಯರ ಪುರಾಣ. ಇದನ್ನು ಆಶ್ರಿತ ಕುಲದವರಾದ ಗೋಂಧಳಿಗಳು (ಗೊಂದಲಿಗರು) ಹೇಳುತ್ತಾರೆ. ಕಾಕತೀಯರ ಆಳ್ವಿಕೆಯ ಕಾಲದಲ್ಲಿ ತೆಲುಗುನಾಡಿಗೆ ವಲಸೆ ಬಂದ ಆರೆ ಕುಲದವರ ಮೂಲ ಸ್ಥಳ ಮಹಾರಾಷ್ಟ್ರ. ಮರಾಠಿ ಮತ್ತು ತೆಲುಗು ಭಾಷೆಗಳಲ್ಲಿ ಅನೇಕೆ ಕುಲಪುರಾಣಗಳನ್ನು ಗೋಂಧಳಿಗಳು ಪ್ರದರ್ಶಿಸುತ್ತಾರೆ. ಗೋಂಧಳೆ ಪುರಾಣ ಈ ಜನಸಮುದಾಯದ ಉಗಮ ಮತ್ತು ವಿಕಾಸವನ್ನು ಹೇಳುತ್ತದೆ. ಮಹಾರಾಷ್ಟ್ರದಲ್ಲಿ ಸಂತಾನಹೀನರಾದ ದಂಪತಿಗಳು ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ, ವಿಫಲರಾಗಿ ಕೊನೆಗೆ ಭವಾನಿಯ ಕರುಣೆಯಿಂದ ಐವರು ಮಕ್ಕಳನ್ನು ಪಡೆದರು. ಅವರಲ್ಲಿ ಚಿಕ್ಕವನು ಭವಾನಿಯ ಮಂದಿರಕ್ಕೆ ಹೋಗಿ ಅಲ್ಲಿದ್ದ ಹೆಂಡವನ್ನು ಕುಡಿಯುತ್ತಾನೆ. ಆ ರಾತ್ರಿ ಭವಾನಿಮಾತೆ ಅವನ ತಾಯಿಯ ಕನಸಿನಲ್ಲಿ ಬಂದು ‘ನಿನ್ನ ಮಗನನ್ನು ನನ್ನ ಸೇವೆಗಾಗಿ ಮೀಸಲಿಡು’ ಎಂದು ಹೇಳಿದಳು. ಅದರ ಪ್ರಕಾರ ತಾಯಿ ತಂದೆಯರು ತಮ್ಮ ಕಿರಿಯ ಮಗನನ್ನು ಭವಾನಿಯ ಸೇವೆಗಾಗಿ ಬಿಟ್ಟರು.

ಆರೆ ಕುಲದವರ ವಲಸೆಯ ಇತಿಹಾಸವನ್ನು ತಿಳಿಸುವ ಐತಿಹ್ಯವೊಂದು ಪ್ರಚಾರದಲ್ಲಿದೆ. ಹಿಂದೆ ಒಬ್ಬ  ಮರಾಠಿ ಅರಸ ತುಂಬ ಶಕ್ತಿವಂತನಾಗಿದ್ದು ಅನೇಕ ಪ್ರದೇಶಗಳನ್ನು ತನ್ನ ವಶಕ್ಕೆ  ತೆಗೆದುಕೊಂಡಿದ್ದ. ಆದರೆ ಒಬ್ಬ ಶತ್ರು ರಾಜ ದಿಢೀರನೆ ದಾಳಿ ಮಾಡಿದ, ಅವನನ್ನು ಗೆಲ್ಲುವುದು ಅಸಾಧ್ಯವೆಂಬುದು ಈ ಮರಾಠಿ ರಾಜನಿಗೆ ಗೊತ್ತಿತ್ತು. ಆ ರಾತ್ರಿ ಒಂದು ಬಯಲಾಟ ನಡೆಯುತ್ತಿತ್ತು. ಜನರೆಲ್ಲ ಅದನ್ನು ನೋಡುತ್ತಿದ್ದಾಗ, ಆ ಶತ್ರುರಾಜರ ಕಣ್ಣು ತಪ್ಪಿಸಿ ಮರಾಠಿ ರಾಜ ರಹಸ್ಯ ಮಾರ್ಗದಲ್ಲಿ ತನ್ನ ನೆಂಟರಿಷ್ಟರ ಜೊತೆಗೂಡಿ ಅಲ್ಲಿಂದ ಆಂಧ್ರದ ಓರುಗಲ್ಲಿಗೆ ಬಂದ. ಆ ರಾಜ ಬಂದು ಇಳಿದ ಸ್ಥಳ ಮಹಾಲಿಂಗಪಲ್ಲಿ ಎಂದು ಹೇಳುತ್ತಾರೆ.

ಗೋಂಧಳಿಗಳು ತಮ್ಮ ಇತಿಹಾಸ ಸಂಸ್ಕೃತಿಗಳನ್ನು ಕುರಿತು ಕಥೆಗಳನ್ನು ಹೇಳುತ್ತಾರೆ. ತಮ್ಮ ಮೂಲಕ ಬಗ್ಗೆ ಕಥನ ಗೀತೆಗಳನ್ನು ಹಾಡುವುದರ ಜೊತೆಗೆ ಮರಾಠಿ ಇತಿಹಾಸಕ್ಕೆ ಸಂಬಂಧಿಸಿದ ಶಿವಾಜಿ ಕಥೆ, ಸೋಮಾಜಿ ಕಥೆ, ಜಯಾರಾಣಿ ಕಥೆ ಮುಂತಾದವನ್ನು ಬಯಲಾಟದ ರೂಪದಲ್ಲಿ ಪ್ರದರ್ಶಿಸುತ್ತಾರೆ. ಈ ಪ್ರದರ್ಶನಗಳಲ್ಲಿ ಒಬ್ಬ ವ್ಯಾಖ್ಯಾನವನ್ನು ಮಾಡುತ್ತಿರುತ್ತಾನೆ. ಜಯಾರಾಣಿ ಕಥೆ ಬಹಳ ಪ್ರಸಿದ್ಧವಾದುದು. ಮರಾಠ ಅರಸನಾದ ಅಸನ್‌ಸೇನ್‌ಗೆ ನಾಲ್ಕು ಜನ ಮಕ್ಕಳು. ಕಿರಿಯ ಮಗ ಮಾನ್‌ಸಿಂಗ್‌ಗೆ ಸೌಂದರ್ಯರಾಶಿ ಜಯಾರಾಣಿಯನ್ನು ತಂದು ಮದುವೆ ಮಾಡುತ್ತಾರೆ. ಕಾಶಿಯನ್ನು ಆಳುತ್ತಿದ್ದ ಪರ್ವತರಾಜನಿಗೆ ಅವಳ ಮೇಲೆ ಇಷ್ಟವಾಗುತ್ತದೆ. ಅವನು ಕೆಲವು ತಂತ್ರಗಳನ್ನು ಬಳಸಿ ಜಯಾರಾಣಿಯನ್ನು ಕರೆದುಕೊಂಡು ಹೋಗಿ ಒಂದು ಗುಹೆಯಲ್ಲಿ ಸೆರೆಯಿಡುತ್ತಾನೆ. ಜಯಾರಾಣಿಯ ಮಗ ತಾರಾಸಿಂಗ್ ಧೈರ್ಯದಿಂದ ಗುಹೆಯೊಳಗೆ ಪ್ರವೇಶಿಸಿ ತಾಯಿಯನ್ನು ಕರೆತರುತ್ತಾನೆ. ಮಹಾರಾಷ್ಟ್ರದಿಂದ ಬಂದ ಗೊಂದಲಿಗರು ತೆಲಂಗಾಣ ಪ್ರಾಂತ್ಯದಲ್ಲಿ ಜನಪ್ರಿಯ ಕಲಾವಿದರಾಗಿದ್ದಾರೆ.

ಎನ್.ಎಂ.ಎಸ್. ಅನುವಾದ ಎ.ಎಂ.ಡಿ.

ಗೋಲಿಯಾಟ ಮಕ್ಕಳಿಗೆ ಅತ್ಯಂತ ಪ್ರೀತಿಪಾತ್ರವಾದ ಆಟಗಳಲ್ಲಿ ಒಂದು. ಆಂಧ್ರದ ಹಳ್ಳಿ ಹಳ್ಳಿಗಳಲ್ಲೂ ಮಕ್ಕಳು ಮೈದಾನಗಳಲ್ಲಿ ಬೀದಿಗಳಲ್ಲಿ ಮನೆಯ ಮುಂಭಾಗದಲ್ಲಿ ಇದನ್ನು ಆಡುತ್ತಿರುತಾರೆ. ಗೋಲಿಗಳನ್ನು ಗಾಜಿನಿಂದ ಅಥವಾ ಸೀಸದಿಂದ ಅಥವಾ ಕಲ್ಲಿನಿಂದ ಮಾಡುತ್ತಾರೆ. ಈ ಆಟದಲ್ಲಿ ಎರಡು ಮೂರು ಪ್ರಭೇದಗಳಿವೆ.

ಬದ್ದಾಟ: ಇದನ್ನು ನಾಲ್ಕು ಜನ ಸೇರಿ ಆಡುತ್ತಾರೆ. ಪ್ರತಿಯೊಬ್ಬರ ಕೈಯಲ್ಲೂ ಒಂದು ಗೋಲಿ ಇರುತ್ತದೆ. ಸಮತಳವಾದ ಪ್ರದೇಶದಲ್ಲಿ ಒಂದು ಅಂಗುಲ ಆಳ ಒಂದು ಅಂಗುಲ ಅಗಲ ಇರುವ ಗುಳಿ ತೋಡುತ್ತಾರೆ. ಇದಕ್ಕೆ ಬದ್ದಿ ಅಥವಾ ಕಂಚಂ (ತಟ್ಟೆ) ಎಂದು ಹೆಸರು. ಈ ಬದ್ದಿಗೆ ಸುಮಾರು ಹತ್ತು ಅಡಿ ದೂರದಲ್ಲಿ ನಿಂತು  ನಾಲ್ಕು ಜನರ ಗೋಲಿಗಳನ್ನು ಒಬ್ಬರೇ ತೆಗೆದುಕೊಂಡು ಬದ್ದಿಗೆ ಹತ್ತಿರ ಬೀಳುವಂತೆ ಎಸೆಯುತ್ತಾರೆ. ಒಮ್ಮೊಮ್ಮೆ ನಾಲ್ಕು ಜನರ ಗೋಲಿಗಳನ್ನು ಒಬ್ಬರೆ ಎಸೆಯದೆ ಅವರವರ  ಗೋಲಿಗಳನ್ನು ಅವರವರೇ ಎಸೆಯುತ್ತಾರೆ. ಬದ್ದಿಗೆ ದೂರವಾಗಿ ಗೋಲಿ ಬಿದ್ದಾಗ ಅದನ್ನು ಎಸೆದವರು ತಮಗೆ ಹತ್ತಿರ ಇವರು ಗೋಲಿಗೆ ಗುರಿ ನೋಡಿ ಹೊಡೆಯುತ್ತಾರೆ. ಹಾಗೆ ಗುರಿತಪ್ಪದೆ ಹೊಡೆಯುವುದು ಅಥವಾ ಗುಳಿಯಲ್ಲಿ ಬೀಳುವಂತೆ ಗೋಲಿಯನ್ನು ಹಾಕುವುದರಿಂದ ಆಟ ಪ್ರಾರಂಭವಾಗುತ್ತದೆ. ಗುರಿ ತಪ್ಪದೆ ಗೋಲಿಯನ್ನು ಹೊಡೆದರೆ ಅಥವಾ ಗುಳಿಯಲ್ಲಿ ಗೋಲಿಯನ್ನು ಹಾಕಿದರೆ ‘ಒಂದು’ ಎಂದು ಲೆಕ್ಕ ಮಾಡುತ್ತಾರೆ. ಹಾಗೆ ಮಾಡಿದವರಿಗೆ ಗೋಲಿಯನ್ನು ಹೊಡೆಯಲು ಇನ್ನೊಂದು ಅವಕಾಶ ಸಿಕ್ಕುತ್ತದೆ. ಹೀಗೆ ಹತ್ತರವರೆಗೆ ಲೆಕ್ಕ ಮಾಡುತ್ತಾರೆ. ಲೆಕ್ಕ ಮಾಡುವಾಗಲೂ ‘ಒಕಟಿ’, ಒಂಡು, ರಂಡೋಯಿ ರೋಲು, ಮೂಡೋಯಿ ಮುತ್ತಿ, ನಾಲ್ಗೋಯಿ ನವ್ವ, ಐದು ಬಂಡು, ಆರೊಕ ದಾರ, ವಳುಚಾರ ಬೊದ್ದು, ಎನಮದಲ ಕನ್ನು, ತೊಮ್ಮಿದಲ ಮೊಗ್ಗ, ತೊಟ್ಟಕಿ ಲಗ್ಗಂ’ ಎಂದು ಹತ್ತು ಸಲ ಯಾರು ಮೊದಲು ಹೊಡೆಯುತ್ತಾರೋ ಅವರಿಗೆ ಆಟ ಹಣ್ಣಾದಂತೆ. ಹಾಗೆ ಗೆದ್ದವರು ಆಮೇಲೆ ಆಡಬೇಕಾಗಿಲ್ಲ. ಈ ಆಟದಲ್ಲಿ ನುರಿತವರು ಹತ್ತು ಸಲ ಗೋಲಿಯನ್ನು ಹೊಡೆದು ಗೆಲ್ಲುತ್ತಾರೆ. ಹೆಚ್ಚಿನ ನೈಪುಣ್ಯ ಇಲ್ಲದವರು ಒಂಬತ್ತು ಸಲ ಗೋಲಿಯನ್ನು ಬದ್ದಿಯಲ್ಲಿ ಹಾಕಿ ಒಮ್ಮೆಯಾದರೂ ಗೋಲಿಯನ್ನು ಹೊಡೆಯುವುದೆಂದರೆ, ಕೈಯ ಹೆಬ್ಬೆಟ್ಟನ್ನು ನೆಲದಮೇಲಿಟ್ಟು ಬೆರಳ ನಡು ತುದಿಗೆ ಗೋಲಿಯನ್ನಿಟ್ಟು ಅದನ್ನು ಬಿಲ್ಲಿನ ಹಗ್ಗದಂತೆ ಹಿಂದಕ್ಕೆ ಎಳೆದು ಗುರಿ ನೋಡಿ ಹೊಡೆಯುವುದು. ಗೆದ್ದವರು ಸೋತವರನ್ನು ಶಿಕ್ಷಿಸುತ್ತಾರೆ. ಸೋತವರ ಗೋಲಿಯನ್ನು ಬದ್ದಿನ ಹತ್ತಿರ ಇಟ್ಟು ಗೆದ್ದವರು ತಮ್ಮ ಗೋಲಿಯಿಂದ ಅದನ್ನು ಹೊಡೆಯುತ್ತಾರೆ. ಗೋಲಿ ಹೋದ ಸ್ಥಳದಲ್ಲಿ ಕೈಯ ನಾಲ್ಕು ಬೆರಳುಗಳನ್ನು ನೆಲದ ಮೇಲಿಟ್ಟು ಬದ್ದಿನ ಕಡೆಗೆ ಎಳೆಯುತ್ತಾರೆ. ಮೊಣಕೈಯಿಂದ, ಮೊಣಕಾಲಿನಿಂದ ಕೊನೆಗೆ ನಾಲಗೆಯಿಂದಲೂ ಸೋತವರು ನೆಲದ ಮೇಲೆ ತೆವಳಬೇಕು.

70

ಬಚ್ಚಾಟ ಅಥವಾ ಬರ್ರಾ‍ಟ: ಈ ಆಟದಲ್ಲಿ ನಾಲ್ಕೈದು ಜನ ಭಾಗವಹಿಸುತ್ತಾರೆ. ಮೈದಾನದಲ್ಲಿ ಒಂದು ಕಡೆ ಸುಮಾರು ಆರಂಗುಲದ ವಲಯಕಾರದ ಗೆರೆಯನ್ನು ಎಳೆಯುತ್ತಾರೆ. ಒಬ್ಬೊಬ್ಬರಿಂದ ಒಂದು ಅಥವಾ ಎರಡು ಗೋಲಿಗಳನ್ನು ತೆಗೆದುಕೊಂಡು ಎಲ್ಲವನ್ನು ಒಂದು ಸಾಲಾಗಿ ವಲಯದೊಳಗೆ ಇಡುತ್ತಾರೆ. ಅದಕ್ಕೆ ಐದಾರಡಿ ದೂರದಲ್ಲಿ ನಿಂತು ವಲಯಕ್ಕೆ ದೂರದಲ್ಲಿ ಬೀಳುವಂತೆ ತಮ್ಮ ತಮ್ಮ ಗೋಲಿಗಳನ್ನು ಎಸೆಯುತ್ತಾರೆ. ಯಾರ ಗೋಲಿ ದೂರದಲ್ಲಿ ಬೀಳುತ್ತದೋ ಅವರು ಆಟವನ್ನು ಪ್ರಾರಂಭಿಸುತ್ತಾರೆ. ವಲಯದೊಳಗಿನ ಗೋಲಿಗಳನ್ನು  ಎಸೆಯುತ್ತಾರೆ. ಯಾರ ಗೋಲಿ ದೂರದಲ್ಲಿ ಬೀಳುತ್ತದೋ ಅವರು ಆಟವನ್ನು ಪ್ರಾರಂಭಿಸುತ್ತಾರೆ. ವಲಯದೊಳಗಿನ ಗೋಲಿಗಳನ್ನು ಹೊರಬೀಳುವಂತೆ ಗುರಿಯಿಟ್ಟು ಹೊಡೆಯುತ್ತಾರೆ. ವಲಯದ ಹೊರಗೆ ಬಂದ ಗೋಲಿಗಳನ್ನು ಅವುಗಳನ್ನು ಹೊಡೆದವನು ಗೆದ್ದ ಹಾಗೆ. ಗುರಿ ತಪ್ಪದೆ ಹೊಡೆದರೆ ಇನ್ನೊಮ್ಮೆ ಹೊಡೆಯಲು ಅವಕಾಶ ಸಿಕ್ಕುತ್ತದೆ. ಒಂದು ವೇಳೆ ಗೋಲಿ ವಲಯದೊಳಗೆ ನಿಂತುಹೋದರೆ ಆಟ ಸೋತಂತೆ.

ಗೋಲಿಯ ಆಟದ ಬಗ್ಗೆ ೧೪ನೇ ಶತಮಾನದಿಂದಲೂ ತೆಲುಗು ಸಾಹಿತ್ಯದಲ್ಲಿ ಉಲ್ಲೇಖಗಳಿವೆ. ಈ ಆಟ ಕ್ರಿ.ಶ. ಪ್ರಾರಂಭದ ಶತಮಾನಗಳಲ್ಲಿ ತೆಲುಗುನಾಡನ್ನು ಆಳಿದ ಇಕ್ಷ್ವಾಕು ರಾಜರ ಕಾಲದಿಂದಲೂ ಇದ್ದಂತೆ ಹೇಳಲಾಗಿದೆ. ಈ ಆಟ ದಕ್ಷಿಣ ಭಾರತದ ಮೇಲೆ ಪ್ರದೇಶಗಳಲ್ಲೂ ಜನಪ್ರಿಯವಾಗಿದೆ.

ವಿ.ಎಸ್. ಅನುವಾದ ಎ.ಎಂ.ಡಿ.

ಗೌಡು  ಆಂಧ್ರದ ಶ್ರೀಕಾಕುಳಂ, ವಿಶಾಖ ಪ್ರಾಂತಗಳಲ್ಲಿ ವಾಸಿಸುವ ಈ ಸಮುದಾಯ ಅರಕು, ಚೇಲಿ, ಪಾಡೇರು, ಮುಂಚಿಂಗ್ ಪುಟ್ ಪ್ರಾಂತದ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಗೌಡುಗಳು ಮಾಂಸಾಹಾರಿಗಳು. ಹಂದಿ, ಆಕಳ ಮಾಂಸವನ್ನು ತಿನ್ನುವುದಿಲ್ಲ. ಇವರಲ್ಲಿ ಹೆಚ್ಚಾಗಿ ಸೋದರತ್ತೆ, ಸೋದರ ಮಾವನ ಮಕ್ಕಳನ್ನು ಮದುವೆಯಾಗುತ್ತಾರೆ. ಒಂದು ಕಾಲಕ್ಕೆ ಬಾಲ್ಯ ವಿವಾಹ ಚಾಲ್ತಿಯಲ್ಲಿತ್ತು. ಈಗ ಕಡಿಮೆಯಾಗಿದೆ. ಇವರಲ್ಲಿ ೧. ಕೊರ್ರ‍ (ಸೂರ್ಯ), ೨. ಪಂಗಿ (ಗಾಳಿಪಟ), ೩. ಕಿಲ್ಲೋ (ಹುಲಿ,) ೪.ವಂತಲ (ಹಾವು), ೫. ಸಮರ್ಥಿ (ಹೂವು) ಎಂಬುದಾಗಿ ಭೇದಗಳಿವೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿಯ ಗೌಡುಗಳು ತೆಲುಗು ಮಾತನಾಡುತ್ತಾರೆ. ವಿಶಾಖ, ವಿಜಯನಗರ, ಶ್ರೀಕಾಕುಳ ಜಿಲ್ಲೆಗಳಲ್ಲಿ ವಾಸಿಸುವ ಗೌಡುಗಳು ಆದಿವಾಸಿ ಓಲಿಯಾ ಭಾಷೆಯನ್ನು ಮಾತನಾಡುತ್ತಾರೆ. ಹೆಂಗಸರು ಕಾಲು ಬೆರಳಿಗೆ ಕಾಲುಂಗುರ ಧರಿಸುತ್ತಾರೆ. ಹಾಗೆಯೇ ಕೊರಳಿಗೆ ಕರಿಮಣಿ ಸರವನ್ನು ಹಾಕಿಕೊಳ್ಳುತ್ತಾರೆ. ಇದು ಅವರ ಮದುವೆಯ ಚಿಹ್ನೆ. ಇವರಲ್ಲಿ ವಿವಾಹ ವಿಚ್ಛೇಧನಕ್ಕೆ ಅವಕಾಶವಿದೆ. ಮಕ್ಕಳು ಮೊದಲ ಗಂಡನಿಗೆ ಸೇರಿದವರಾಗುತ್ತಾರೆ. ತೀರಕೊಂಡ ಸೋದರನ ಹೆಂಡತಿಯನ್ನು ಮದುವೆಯಾಗುವ ಪದ್ಧತಿ ಇವರಲ್ಲಿದೆ. ಗೌಡುಗಳಲ್ಲಿ ಬಹಳಷ್ಟು ಒಣ ಬೇಸಾಯವನ್ನು ಮಾಡುತ್ತಾರೆ. ಸ್ಥಿರ ಬೇಸಾಯಗಾರರೂ ಇದ್ದಾರೆ. ಗ್ರಾಮೀಣ ಪ್ರಾಂತಗಳಲ್ಲಿಯ ಗೌಡುಗಳಿಗೆ ಪಶು ಪೋಷಣೆ ಪ್ರಧಾನ ವೃತ್ತಿ, ಹಾಲು ಮಾರಿ ಹಣ ಸಂಪಾದಿಸುತ್ತಾರೆ. ಕಾಡಿನ ಉತ್ಪನ್ನಗಳನ್ನು ಶೇಖರಿಸಿ ಸಂತೆಗಳಲ್ಲಿ ಮಾರಿ ಜೀವನ ಸಾಗಿಸುತ್ತಾರೆ.

ಮೊದಲ ಸಂತಾನದ ಸಂದರ್ಭದಲ್ಲಿ ಗರ್ಭಿಣಿಯಾದ ಹೆಣ್ಣು ಮಗಳು ತವರು ಮನೆಯಲ್ಲಿ ಹೆರಿಗೆ ಮಾಡಿಕೊಳ್ಳುತ್ತಾರೆ. ತಾಯಿ ಒಂಬತ್ತು ದಿನಗಳ ಅನಂತರ ಕೋಳಿ ಮಾಂಸದ ಅಡುಗೆಯನ್ನು ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾಳೆ. ಆ ಹಳ್ಳಿಯ ಹೆಂಗಸರೆಲ್ಲರೂ ಸೇರಿ ಮಗು ಬಾಣಂತಿಗೆ ತಲೆಸ್ನಾನ ಮಾಡಿಸಿ ಮಗುವಿಗೆ ಹೆಸರಿಡುತ್ತಾರೆ. ಹುಡುಗಿ ಮೈನೆರೆತಾಗ ಮನೆಯಲ್ಲಿ ಚಾಪೆಯ ಮೇಲೆ ಕೂರಿಸಿ ಪುಟ್ಟು ಅಕ್ಕಿಯನ್ನು ಪಕ್ಕಕ್ಕೆ ತೆಗೆದಿಡುತ್ತಾರೆ. ಏಳು ದಿನಗಳ ಅನಂತರ ಆ ಚಾಪೆಯನ್ನು ಮತ್ತು ಬಟ್ಟೆಗಳನ್ನು ಅಗಸರಿಗೆ ಕೊಟ್ಟು ಬಿಡುತ್ತಾರೆ. ಯಾರು ಆ ಬಟ್ಟೆಯನ್ನು ಒಗೆಯುತ್ತಾರೋ ಅವರಿಗೆ ಆ ಅಕ್ಕಿಯನ್ನು ಕೊಡುತ್ತಾರೆ. ಸ್ವತಃ ಪಂಚಾಯಿತಿಗಳ ಸಮಸ್ಯೆಗಳನ್ನು ಪರಿಷ್ಕರಿಸಿಕೊಳ್ಳುತ್ತಾರೆ. ಇದನ್ನು ‘ಕುಲಭಾಜ’ ಎಂದು ಕರೆಯುತ್ತಾರೆ. ಶಂಭು ದೇವತೆ, ನಿಷಾನಿ ದೇವತೆ, ಜಕ್ರಾ ದೇವತೆ, ನಂದಿ ದೇವತೆ – ಇವರು ಆರಾಧಿಸುವ ದೇವತೆಗಳು. ದೀಪಾವಳಿಯಂದು ಕೃಷ್ಣನ ಹಾಡುಗಳನ್ನು ಹಾಡುತ್ತಾರೆ. ದಿಂಸಾ ನೃತ್ಯವನ್ನು ಮಾಡುತ್ತಾರೆ.

೨೦೦೧ ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೭,೭೪೯. ಅಂದರೆ ಶೇಕಡಾ ೦.೧೫.

ಬಿ.ಕೆ.ಆರ್. ಅನುವಾದ ಕೆ.ಎಸ್.

ಗ್ರಹಣಂ  ಸೂರ್ಯಗ್ರಹಣ, ಚಂದ್ರಗ್ರಹಣ ಎಂಬ ಎರಡು ರೀತಿ ಗ್ರಹಣಗಳಿವೆ. ಸೂರ್ಯಗ್ರಹಣ ಅಮಾವಾಸ್ಯೆಯ ದಿನಗಳಲ್ಲಿ, ಚಂದ್ರಗ್ರಹಣ ಪೌರ್ಣಮಿಯ ದಿನಗಳಲ್ಲಿ ಸಂಭವಿರುತ್ತವೆ. ಗ್ರಹಣವೆಂದರೆ ಸೂರ್ಯ ಮತ್ತು ಚಂದ್ರನ ಸ್ವಾಭಾವಿಕವಾದ ಬೆಳಕನ್ನು  ನಿರ್ದಿಷ್ಟವಾದ ದಿವಸ ಮತ್ತು ಸಮಯದಲ್ಲಿ, ನಿರ್ದಿಷ್ಟವಾದ ಕಾಲ ಚೆಲ್ಲಲಾರದೆ ಮಂಕಾಗಿರುವುದು. ಅಂದರೆ ಸೂರ್ಯ ಮತ್ತು ಚಂದ್ರನ ಮೇಲೆ, ಬೇರೆ ಗ್ರಹಗಳ ಪ್ರಭಾವ ಜಾಸ್ತಿ ಆಗುವುದು. ಹಳ್ಳಿಗರ ಮಾತಿನಲ್ಲಿ  ಹೇಳುವುದಾದರೆ ರಾಹು ಮತ್ತು ಕೇತು ಗ್ರಹಗಳು ಕಾಲಕ್ಕೆ ತಕ್ಕ ಹಾಗೆ ಸೂರ್ಯ ಮತ್ತು ಚಂದ್ರನನ್ನು ನುಂಗುವುದು. ವೈಜ್ಞಾನಿಕವಾಗಿ ಬೇರೆಯಾದರೂ ಜನಪದರು ಇದೇ ರೀತಿ ನಂಬುತ್ತಾರೆ. ಗ್ರಹಣ ಇರುವ ಕಾಲವನ್ನು ಮೂರು ರೀತಿ ವಿಂಗಡಿಸಬಹುದು. ಸ್ಪರ್ಶಕಾಲ, ಮಧ್ಯಕಾಲ, ಮೋಕ್ಷಕಾಲ, ಇದನ್ನೇ ಗ್ರಹಣ ಹಿಡಿಯುವುದು, ಬಿಡುವುದು ಎಂದು ಜನಪದರು ಅನ್ನುತ್ತಾರೆ. ಗ್ರಹಣದ ಕಾಲ ಸಂದರ್ಭಾನುಸಾರವಾಗಿ ಬದಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಗ್ರಹಣ ಸಂಭವಿಸಿದರೂ ಅದರ ಪ್ರಭಾವ ಭಾರತ ದೇಶದ ಮೇಲೆ ಇರುವುದಿಲ್ಲ. ಇದೇ ರೀತಿ ಕೆಲವು ಸಲ ಭಾರತ ದೇಶದ ಕೆಲವು ಭಾಗಗಳ ಮೇಲೆ ಮಾತ್ರವೇ ಗ್ರಹಣದ ಪ್ರಭಾವ ಇರುತ್ತದೆ.

ಏನೇ ಆದರೂ ಗ್ರಹಣದ ಕಾಲದ ಜನಪದರ ನಂಬಿಕೆಗಳು, ಅವರು ಆಚರಿಸುವ ಪದ್ಧತಿಗಳು ಆಸಕ್ತಿಕರವಾಗಿರುತ್ತವೆ. ಗ್ರಹಣದ ದಿವಸ ಇವರು ಮಾಡುವ ಮೊದಲನೆಯ ಕೆಲಸವೆಂದರೆ ನೀರು ಮತ್ತು ಧಾನ್ಯವಿರುವ ಪಾತ್ರೆಗಳಲ್ಲಿ ದರ್ಭೆಯ ಹುಲ್ಲನ್ನು ಹಾಕುವುದು. ಇದನ್ನು ಗ್ರಹಣ ಮುಗಿದ ಅನಂತರ ತೆಗೆದು ಹಾಕುತ್ತಾರೆ. ಮಕ್ಕಳು ಮತ್ತು  ಬಸುರಿ ಹೆಂಗಸರು ಗ್ರಹಣದ ಸಮಯದಲ್ಲಿ ಮನೆಯಿಂದ ಈಚೆಗೆ ಬರುವುದಿಲ್ಲ. ಗ್ರಹಣ ಕಾಲದಲ್ಲಿ ಅಡುಗೆ ಮಾಡುವುದಿಲ್ಲ. ಊಟ ಸಹ ಮಾಡುವುದಿಲ್ಲ. ಮಕ್ಕಳಿಗೆ, ವಯಸ್ಸಾದವರಿಗೆ ಮತ್ತು ರೋಗಗ್ರಸ್ತರಿಗೆ ಅತ್ಯವಸರ ಸಂದರ್ಭಗಳಲ್ಲಿ ಮಾತ್ರವೇ ಊಟವನ್ನು ಕೊಡುತ್ತಾರೆ. ಅಡುಗೆಯನ್ನು ಗ್ರಹಣ ಕಾಲದಲ್ಲಿ ಹಾಗೆ ಇಡುವುದಿಲ್ಲ.

ಗ್ರಹಣ ಬಿಟ್ಟು ಮೇಲೆ ತಲೆ ಸ್ನಾನ ಮಾಡಿ, ಮನೆಯನ್ನು ಶುಭ್ರಮಾಡಿ, ಪೂಜೆ ಮಾಡಿದ ಮೇಲೆ ಅಡಿಗೆಯನ್ನು ಮಾಡಿ ಎಲ್ಲರೂ ಊಟ ಮಾಡುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೭,೭೪೯. ಅಂದರೆ ಶೇಕಡಾ ೦.೧೫.

ಬಿ.ಕೆ.ಆರ್. ಅನುವಾದ ಕೆ.ಎಸ್.

ಗ್ರಹಣಂ ಸೂರ್ಯಗ್ರಹಣ, ಚಂದ್ರಗ್ರಹಣ ಎಂಬ ಎರಡು ರೀತಿ ಗ್ರಹಗಳಿವೆ. ಸೂರ್ಯಗ್ರಹಣ ಅಮಾವಾಸ್ಯೆಯ ದಿನಗಳಲ್ಲಿ, ಚಂದ್ರಗ್ರಹಣ ಪೌರ್ಣಮಿಯ ದಿನಗಳಲ್ಲಿ ಸಂಭವಿಸುತ್ತದೆ. ಗ್ರಹಣವೆಂದರೆ ಸೂರ್ಯ ಮತ್ತು ಚಂದ್ರನ ಸ್ವಾಭಾವಿಕವಾದ ಬೆಳಕನ್ನು ನಿರ್ದಿಷ್ಟವಾದ ದಿವಸ ಮತ್ತು ಸಮಯದಲ್ಲಿ, ನಿರ್ದಿಷ್ಟವಾದ ಕಾಲ ಚೆಲ್ಲಲಾರದೆ ಮಂಕಾಗಿರುವುದು. ಅಂದರೆ ಸೂರ್ಯ ಮತ್ತು ಚಂದ್ರನ ಮೇಲೆ, ಬೇರೆ ಗ್ರಹಗಳ ಪ್ರಭಾವ ಜಾಸ್ತಿ ಆಗುವುದು. ಹಳ್ಳಿಗರ ಮಾತಿನಲ್ಲಿ ಹೇಳುವುದಾದರೆ ರಾಹು ಮತ್ತು ಕೇತು ಗ್ರಹಗಳು ಕಾಲಕ್ಕೆ ತಕ್ಕ ಹಾಗೆ ಸೂರ್ಯ ಮತ್ತು ಚಂದ್ರನನ್ನು ನುಂಗುವುದು. ವೈಜ್ಞಾನಿಕವಾಗಿ ಬೇರೆಯಾದರೂ ಜನಪದರು ಇದೇ ರೀತಿ ನಂಬುತ್ತಾರೆ. ಗ್ರಹಣ ಇರುವ ಕಾಲವನ್ನು ಮೂರು ರೀತಿ ವಿಂಗಡಿಸಬಹುದು. ಸ್ಪರ್ಶಕಾಲ, ಮಧ್ಯಕಾಲ, ಮೋಕ್ಷಕಾಲ, ಇದನ್ನೇ ಗ್ರಹಣ ಹಿಡಿಯುವುದು, ಬಿಡುವುದು ಎಂದು ಜನಪದರು ಅನ್ನುತ್ತಾರೆ. ಗ್ರಹಣದ ಕಾಲ ಸಂದರ್ಭಾನುಸಾರವಾಗಿ ಬದಲಾಗುತ್ತದೆ. ಕೆಲವು ಸಂದರ್ಭದಲ್ಲಿ ಗ್ರಹಣ ಸಂಭವಿಸಿದರೂ ಅದರ ಪ್ರಭಾವ ಭಾರತ ದೇಶದ ಮೇಲೆ ಇರುವುದಿಲ್ಲ. ಇದೇ ರೀತಿ ಕೆಲವು ಸಲ ಭಾರತ ದೇಶದ ಕೆಲವು ಭಾಗಗಳ ಮೇಲೆ ಮಾತ್ರವೇ ಗ್ರಹಣದ ಪ್ರಭಾವ ಇರುತ್ತದೆ.

ಏನೇ ಆದರೂ ಗ್ರಹಣ ಕಾಲದ ನಂಬಿಕೆಗಳು, ಅವರು ಆಚರಿಸುವ ಪದ್ಧತಿಗಳು ಆಸಕ್ತಿಕರವಾಗಿತ್ತವೆ. ಗ್ರಹಣದ ದಿವಸ ಇವರು ಮಾಡುವ ಮೊದಲನೆಯ ಕೆಲಸವೆಂದರೆ ನೀರು ಮತ್ತು ಧ್ಯಾನವಿರುವ ಪಾತ್ರೆಗಳಲ್ಲಿ ದರ್ಭೆಯ ಹುಲ್ಲನ್ನು ಹಾಕುವುದು. ಇದನ್ನು ಗ್ರಹಣ ಮುಗಿದ ಅನಂತರ ತೆಗೆದು ಹಾಕುತ್ತಾರೆ. ಮಕ್ಕಳು ಮತ್ತು ಬಸುರಿ ಹೆಂಗಸರು ಗ್ರಹಣದ ಸಮಯದಲ್ಲಿ ಮನೆಯಿಂದ ಈಚೆಗೆ ಬರುವುದಿಲ್ಲ. ಗ್ರಹಣ ಕಾಲದಲ್ಲಿ ಅಡುಗೆ ಮಾಡುವುದಿಲ್ಲ. ಊಟ ಸಹ ಮಾಡುವುದಿಲ್ಲ. ಮಕ್ಕಳಿಗೆ, ವಯಸ್ಸಾದವರಿಗೆ ಮತ್ತು ರೋಗಗ್ರಸ್ತರಿಗೆ ಅತ್ಯವಸರ ಸಂದರ್ಭದಲ್ಲಿ ಮಾತ್ರವೇ ಊಟವನ್ನು ಕೊಡುತ್ತಾರೆ. ಅಡುಯಗೆಯನ್ನು ಗ್ರಹಣ ಕಾಲದಲ್ಲಿ ಹಾಗೆ ಇಡುವುದಿಲ್ಲ.

ಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ, ಮನೆಯನ್ನು ಶುಭ್ರಮಾಡಿ, ಪೂಜೆ ಮಾಡಿದ ಮೇಲೆ ಅಡಿಗೆಯನ್ನು ಮಾಡಿ ಎಲ್ಲರೂ ಊಟ ಮಾಡುತ್ತಾರೆ. ಗ್ರಹಣ ಕಾಲದಲ್ಲಿ ಹೊಸ ಕೆಲಸಗಳನ್ನು ಮಾಡುವುದು ಅಪಾಯಕಾರಿಯೆಂದು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಇದಲ್ಲದೆ ಗ್ರಹಣವನ್ನು ನೇರವಾಗಿ ನೋಡುವುದಿಲ್ಲ. ಹಾಗೆ ನೋಡಿದರೆ ಅಂಧತ್ವ ಬರುತ್ತದೆಂದು ನಂಬುತ್ತಾರೆ. ಕೆಲವರು ಗ್ರಹಣದ ಸ್ಪರ್ಶ ಮತ್ತು ಮೋಕ್ಷ ಕಾಲಗಳಲ್ಲಿ ಎರಡು ಸಲ ಸ್ನಾನ ಮಾಡುತ್ತಾರೆ. ಸೂರ್ಯ ಗ್ರಹಣದ ಮಧ್ಯಕಾಲಕ್ಕೆ ಮುಂಚಿತವಾಗಿ, ಚಂದ್ರಗ್ರಹಣದ ಮಧ್ಯಕಾಲದ ಅನಂತರ ತತ್‌ಕ್ಷಣ ಬರುವ ರೂಢಿ ಕೆಲವರಲ್ಲಿ, ಮನೆಗೆ ದೂರವಾದ ಹೆಂಗಸರು ಗ್ರಹಣ ಕಾಲದಲ್ಲಿ ತಪ್ಪದೆ ಸ್ನಾನ ಮಾಡಬೇಕು. ಮನೆಯಲ್ಲಿ ಪ್ರತಿ ಒಬ್ಬರು ಪರಿಪೂರ್ಣ ಬಿಂಬದರ್ಶನ ಅನಂತರವೇ ಊಟ ಮಾಡಬೇಕು. ಚಂದ್ರನು ಯಾವ ರಾಶಿಯಲ್ಲಿ ಇದ್ದಾಗ ಚಂದ್ರಗ್ರಹಣ ಆಗುತ್ತದೋ ಆ ನಕ್ಷತ್ರದವರು ಅದೇ ರೀತಿ ಸೂರ್ಯನು ಯಾವ ರಾಶಿಯಲ್ಲಿ ಇದ್ದಾಗ ಗ್ರಹಣ ಆಗುತ್ತದೋ ಆ ರಾಶಿಯವರು ತತ್ಸಂಬಂಧ ಪೂಜೆ ಮಾಡಿದ ಅನಂತರ ದಾನಧರ್ಮ ಕಾರ್ಯಕ್ರಮಗಳು ಮಾಡಬೇಕೆಂದು ನಿಯಮವಿದೆ. ಇಲ್ಲದಿದ್ದರೆ ಅಪಾಯಗಳು ಎದುರಿಸಬೇಕಾಗುತ್ತದೆ. ಎಂದು ನಂಬುತ್ತಾರೆ. ಇವೆಲ್ಲ ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ವಿಷಯಗಳು. ಸೂರ್ಯಗ್ರಹಣ ಕಾಲದಲ್ಲಿ ಶಿವನ ದೇವಸ್ಥಾನದಲ್ಲಿ ಮಂತ್ರೋಪದೇಶ ಮಾಡುವುದು ಅತ್ಯುತ್ತಮವೆಂದು ಹೇಳುತ್ತಾರೆ. ಗ್ರಹಣ ಕಾಲಗಳಲ್ಲಿ ಸೂರ್ಯಗ್ರಹಣ ಸಂದರ್ಭವಾಗಿ ಏಕಾದಶಿಯಿಂದ ತೃತೀಯ ತನಕ, ಚಂದ್ರಗ್ರಹಣದ ಅನಂತರ ದ್ವಾದಶಿಯಿಂದ ತೃತೀಯ ತನಕ ಒಳ್ಳೆಯ ಕಾರ್ಯಗಳು ಮಾಡಬಾರದೆಂಬ ನಿಯಮ ಇದೆ. ಚಂದ್ರಗ್ರಹಣದ ದಿವಸ ಸಮುದ್ರದಲ್ಲಿ ಅಲೆಗಳು ಜಾಸ್ತಿ ಇರುತ್ತವೆಂದು, ಆದ್ದರಿಂದ ಮೀನುಗಾರರು ಮೀನು ಹಿಡಿಯುವುದಕ್ಕೆ ಆ ದಿವಸ ಹೋಗುವುದಿಲ್ಲವೆಂದು ಹೇಳುತ್ತಾರೆ. ಪ್ರಕೃತಿ ವಿಕೋಪಗಳು ಸೂರ್ಯಗ್ರಹಣದ ದಿವಸ ಜಾಸ್ತಿ ಆಗುತ್ತವೆ ಎಂದು ಹೇಳುತ್ತಾರೆ. ಗ್ರಾಮೀಣ ಜನರು ತರ್ಪಣ ಬಿಡುವುದು, ಮಂತ್ರೋಪದೇಶ ಹೊಂದುವುದನ್ನು ಬಿಟ್ಟು ಎಲ್ಲವನ್ನೂ ನಂಬುತ್ತಾರೆ. ಆಚರಿಸುತ್ತಾರೆ. ಗ್ರಹಣ ಕಾಲದಲ್ಲಿ ಪ್ರಮುಖವಾದ ದೇವಸ್ಥಾನಗಳನ್ನು ಮುಚ್ಚುತ್ತಾರೆಂದರೆ ಇದಕ್ಕೆ ಇರುವ ಪ್ರಾಶಸ್ತ್ಯ ಅರ್ಥವಾಗುತ್ತದೆ.

ಟಿ.ಎನ್.

ಗ್ರಾಮದೇವತೆ ಪ್ರಾಚೀನ ಕಾಲದಿಂದ ಇಂದಿನವರೆಗಿನ ಮಾನವನ ಸಂಸ್ಕೃತಿಯ ಇತಿಹಾಸದಲ್ಲಿ ದೇವ-ದೇವತೆಗಳ ಕಲ್ಪನೆ ರೋಚಕವಾದುದು. ಇಂಥ ಮುಗ್ಧ ಮನಸ್ಸಿನ ಆದಿ ಮಾನವನಿಗೆ ಪ್ರಕೃತಿಯೇ ಸರ್ವಸ್ವವಾಗಿತ್ತು. ಸೂರ್ಯೋದಯ, ಸೂರ್ಯಾಸ್ತ, ಚಂದ್ರ, ನಕ್ಷತ್ರ, ಮೋಡ, ಮುಗಿಲು, ಗುಡುಗು, ಸಿಡಿಲು ಮುಂತಾಸ ನಿಸರ್ಗದ ರಹಸ್ಯಗಳಿಗೆ ನಿಬ್ಬೆರಗಾದ ಈತನ ಬುದ್ಧಿಗೆ ಮತ್ತು ಕಣ್ಣಿಗೆ ನಿಲುಕದ ಅದೆಷ್ಟೋ ಅದ್ಭುತಗಳು, ಭಯಮೂಲವಾದ ಅವನ ತರ್ಕ ವಿತರ್ಕಗಳಿಗೆ ಹೊಳಹು ತೋರಿದವು. ಅಜ್ಞಾತವಾದ ವಸ್ತುಗಳ ಬಗೆಗಿನ ಜಿಜ್ಞಾಸೆಯೇ ದೇವರ ಕಲ್ಪನೆಯ ಅದಮ್ಯ ಶಕ್ತಿಯ ಅರಿವನ್ನು ಮೂಡಿಸಿತು. ಆಗ ಸೃಷ್ಟಿಯ ಗೋಚರಾಗೋಚರ ವಸ್ತುಗಳೆಲ್ಲವೂ ಅವನಿಗೆ ಉಪಾಸನಾಯೋಗ್ಯ ದೇವತೆಗಳೆನಿಸಿಕೊಂಡವು. ಹೀಗೆ ಅನೇಕ ದೇವತೆಗಳ ಅಸ್ತಿತ್ವವಾಗಿ ಸಮಾಜದ ಸ್ವಾಸ್ಥ್ಯವನ್ನು ಉಳಿಸಲಿಕ್ಕೆಂದು ಅನೇಕ ಕಟ್ಟುಪಾಡುಗಳು ರೂಢಿಗತವಾಗಿ ಬೆಳದು ಬಂದವು. ಹೀಗೆ ನೈತಿಕ ಪ್ರಜ್ಞೆ, ನಂಬಿಕೆ, ಪುರಾಣ ಪ್ರಜ್ಞೆ, ಎಲ್ಲವುಗಳ ಹಿನ್ನೆಲೆಯಲ್ಲಿ ಹಬ್ಬ, ಹರಿದಿನ, ಜಾತ್ರೆ ಮುಂತಾದವುಗಳು ಪ್ರಾರಂಭವಾದವು.

ಈ ಗ್ರಾಮದೇವತೆಗಳಲ್ಲಿ ಪ್ರಮುಖವಾದ ಅಂಕಾಲಮ್ಮ, ಅಂತರಗಟ್ಟಮ್ಮ, ಅಟ್ಟಿಲಕ್ಕಮ್ಮ, ಉತ್ತಹಳ್ಳಿಮಾರಿ, ಉತ್ತರಹಳ್ಳಿ ಉರುಕಾತಿ, ಎಲ್ಲಮ್ಮ, ಏಳು ಮಂದ್ಯಮ್ಮ, ಐತ್ಗಮ್ಮ, ಕಟ್ಟೆಮಾರಮ್ಮ, ಕಣ್ಣೂರಹಳ್ಳಿಯಮ್ಮ, ಕತ್ತಿಮಾರಮ್ಮ, ಕನಕದುರ್ಗ, ಕಬ್ಬಾಳಮ್ಮ, ಕರಗದಮ್ಮ, ಕರುಳ ಕೆಲ್ಲದೇವಮ್ಮ, ಕಲ್ಲೂರ ಮಲ್ಲುಗದೇವಿ, ಕಾಟೇರಮ್ಮ, ಕಾಲರದಮ್ಮ, ಕಾಳಮ್ಮದೇವಿ, ಕಿಕ್ಕೇರಿಯಮ್ಮ, ಕಿವುಡ್ಮಾರಿ, ಕುಂಡ್ಮಾರಿ, ಕುರಿ ಪಟ್ಲಮ್ಮ, ಕೊಡಗಿನ ಮಮ್ಮಾಯಿ, ಕೋಲಾರಮ್ಮ, ಗಂಗಮ್ಮ, ಗಾಳಿಯಮ್ಮ, ಗುಡ್ಡದಮ್ಮ, ಗುರು ಮುತ್ಯಾಲಮ್ಮ, ಚಿಕಿದೇವಿ, ಚಿಲ್ಲಾಯಿ, ಚೌಡಿ, ಚೌಡೇಶ್ವರಿ, ದಂಡಿನ ಮಾರಿ, ದಡಾರಮ್ಮ, ದುರುಗಮ್ಮ, ದುರ್ಗೆ ದೂರದ ದುಬ್ಲಮ್ಮ, ದೊಡ್ಡಮ್ಮ , ದ್ರೌಪದಮ್ಮ, ನರಡಮ್ಮ, ನಲ್ಲಾತ್ತಾಳ್, ಪಟಾಲಮ್ಮ, ಪಳಕ್ಷಮ್ಮ, ಬಾಚಳ್ಳಿ ಅಮ್ಮ, ಬಾಣಂತಮ್ಮ, ಬಿಸಲಾಳಿಯಮ್ಮ ಬೆಟ್ಟದ ಚಾಮುಂಡಿ, ಬೆಟ್ಟದ ಚಿಕ್ಕಮ್ಮ, ಬೆಟ್ಟಳ್ಳಿಮಾರಮ್ಮ, ಮದ್ದೂರಮ್ಮ, ಮಹೇಶ್ವರಮ್ಮ, ಮಾಕಳ್ಳಿ ಮಾಮಾರಿ, ಮಾರಿಯಮ್ಮ, ಮಾಸ್ತಮ್ಮ, ಮಾಹೇಶ್ವರಮ್ಮ, ಮುತ್ಯಾಲಮ್ಮ, ಮೂಗೂರು ತಿಬ್ಬಾದೇವಿ, ಮೊಗಯಮ್ಮ, ಸತ್ಯಮ್ಮ, ಸಪ್ತಮಾತೃಕೆ, ಸಪ್ಪಲಮ್ಮ, ಸವಾರಮ್ಮ, ಸಿಡುಬಮ್ಮ, ಸೀತಾಳಮ್ಮ, ಸುಗ್ಗಲಮ್ಮ, ಸೊಲ್ಲಾಪುರದಮ್ಮ, ಹಾಸನದಮ್ಮ, ಹೊನ್ನಾದೇವಿ ಹೀಗೆ ಅನೇಕ ದೇವತೆಗಳನ್ನು ಕಾಣಬಹುದು.

ಈ ಗ್ರಾಮ ದೇವತೆಯ ಕಲ್ಪನೆ ದ್ರಾವಿಡರಲ್ಲಿ ಪ್ರಾರಂಭದ ಹಂತದಲ್ಲಿ ಆಯಿತು. ಇವುಗಳ ಅಸ್ತಿತ್ವದ ಆಳದ ಶೋಧನೆಯನ್ನು ತಿಳಿಯಬೇಕಾದರೆ ದ್ರಾವಿಡ ಜನಾಂಗಗಳ ಸಂಸ್ಕೃತಿ ಅಧ್ಯಯನ ಬಹಳ ಪ್ರಮುಖವಾದ ಅಂಶವಾಗಿದೆ. ಒಟ್ಟಿನಲ್ಲಿ ಗ್ರಾಮದೇವತೆಗಳ ಕಲ್ಪನೆಗೆ ಮಾತೃ ಪ್ರಧಾನ ಕುಟುಂಬವೆ ವ್ಯವಸ್ಥೆಯೇ ಕಾರಣ. ಮಾತೃದೇವತಾ ಪಂಥದ ಜನಪದ ರೂಪಗಳೇ ಗ್ರಾಮ ದೇವತೆಗಳು. ಅತಿ ಪ್ರಾಚೀನವಾದ ಭೂಮಿ ಪೂಜೆ ಅಥವಾ ಮಾತೃ ಸ್ಪಷ್ಟವಾಗಿ ಫಲವಂತಿಕೆಯ ಸಂಕೇತಗಳಾಗಿ ಗ್ರಾಮದೇವತೆಯ ನೆಲೆಯಲ್ಲಿ ಆರಾಧನೆಗೊಳ್ಳುತ್ತವೆ. ಹೀಗೆ ಕೃಷಿಯು ಆರಂಭದ ಚರಿತ್ರೆಯಲ್ಲಿ ಹೆಣ್ಣಿನ ಸ್ಥಾನಮಾನಗಳನ್ನು ಗಮನಾರ್ಹವಾಗಿ ಬದಲಾವಣೆ ಮಾಡಿತಲ್ಲದೆ, ಅನೇಕ ಸ್ತ್ರೀ ದೇವತೆಗಳ ಹುಟ್ಟಿಗೆ ಕಾರಣವಾಯಿತು. ಪ್ರಪಂಚದ ಎಲ್ಲ ದೇವರುಗಳ ಶಕ್ತಿಯ ಸೃಷ್ಟಿಯೆಂಬ ನಂಬಿಕೆ ಬೆಳೆದು ‘ಶಕ್ತಿ’ ಚಿರಕನ್ಯೆಯೆಂದೂ ಗರ್ಭಧರಿಸದೆಯೇ ದೇವರುಗಳನ್ನ ಜನಸಮುದಾಯವನ್ನು ಸೃಷ್ಟಿಸಿದಳೆಂದೂ ಪುರಾಣ ಕತೆಗಳು ಹುಟ್ಟಿದವು. ಇಂಥ ಪುರಾಣಗಳಲ್ಲಿ ಋತುಮಾನ ಬದಲಾವಣೆಗೆ ಸಂಬಂಧಿಸಿದ ಪುರಾಣಗಳು, ವಿಶಿಷ್ಟ ನೈಸರ್ಗಿಕ ಸಂದರ್ಭಗಳನ್ನು ಕುರಿತ ಪುರಾಣಗಳು, ನಿಸರ್ಗದ ಹುಟ್ಟನ್ನು ಕುರಿತ ಪುರಾಣಗಳು, ದೇವತೆಗಳ ಹುಟ್ಟನ್ನು ಕುರಿತ ಪುರಾಣಗಳು, ಪ್ರಾಣಿ ಮತ್ತು ಮನುಷ್ಯರ ಹುಟ್ಟನ್ನು ಕುರಿತ  ಪುರಾಣಗಳು, ರೂಪಾಂತರ ಕುರಿತ ಪುರಾಣಗಳು, ಸಾಂಸ್ಕೃತಿಕ ನಾಯಕರು, ಸಂಸಾರ ಮತ್ತು ದೇಶಗಳ ಸೃಷ್ಟಿಯ ಕುರಿತ ಪುರಾಣಗಳು, ಸಾವಿನ ಅನಂತರದ ವಿಚಾರ ಕುರಿತ ಪುರಾಣಗಳು, ಚಾರಿತ್ರಿಕ ಘಟನೆಗಳ ಕುರಿತ ಪುರಾಣಗಳು ಹಾಗೂ ಇತರೆ ಪುರಾಣಗಳು ಎಂದು ವಿಂಗಡಿಸಿಕೊಳ್ಳಬಹುದು.

ಇನ್ನು ದೇವತೆಗೆ ಸಂಬಂಧಿಸಿದ ಐತಿಹ್ಯವನ್ನು ವ್ಯಕ್ತಿ ಪ್ರಧಾನ, ಸ್ಥಳ ಪ್ರಧಾನ, ಘಟನಾ ಪ್ರಧಾನ, ಐತಿಹ್ಯಗಳೆಂದು ವರ್ಗೀಕರಿಸಬಹುದು. ಈ ದೇವತೆಗಳಿಗೆ ಸಂಬಂಧಿಸಿದ ನಂಬಿಕೆಗಳನ್ನು ಸೂಕ್ಷ್ಮವಾಗಿ ಧಾರ್ಮಿಕ, ಗೃಹ, ಔದೋಗ್ಯಿಕ, ಪ್ರಾಣಿ, ಜ್ಯೋತಿಷ್ಯಾತ್ಮಕ, ಐತಿಹ್ಯಾತ್ಮಕ, ವೈದ್ಯಕೀಯ, ನೈಸರ್ಗಿಕ, ಮಂತ್ರಸಂಬಂಧಿ ಮತ್ತು ಸಂಕೀರ್ಣ ನಂಬಿಕೆಗಳೆಂದು ವಿಭಾಗಿಸಬಹುದು.

ಇಂತಹ ಗ್ರಾಮದೇವತೆಗಳ ಆಚರಣೆಗಳಲ್ಲಿ ಪ್ರಮುಖವಾಗಿ ಸಾಟಿ ಇಡುವುದು, ಕಂಬ ನೆಡುವುದು, ಹೊಳೆ ಆಡಿ ಬರುವುದು, ಕಾಪುಕಟ್ಟುವುದು, ಹೊನ್ನೇರು ಕರಗದ ಜಾತ್ರೆ, ತಂಪು ದೇವರ ಜಾತ್ರೆ, ಎಡೆ ಹಾಕುವುದು, ದೀಪಗಳು, ಅಗ್ನಿಕೊಂಡ, ಬಲಿಯಾಚರಣೆ, ಸಿಡಿ, ಪಲ್ಲಕ್ಕಿ, ಬಾಯಿಬೀಗ, ದ್ವಾಪರ, ಕಿವಿ ಚುಚ್ಚುವುದು, ದನಗಳ ಜಾತ್ರೆ, ಗಾವು ಸಿಗುಯುವುದು, ಘಟಿ ಪೂಜೆ, ಹಸಿಕರಗದಾಚರಣೆ, ಕರಗದ ಶಕ್ತ್ಯುತ್ಯವ, ಪೊಂಗಲುಸೇವೆ, ನಡೆಮಡಿ, ಅಲಗುಸೇವೆ, ಛಡಿಸೇವೆ, ಏಳುಸುತ್ತಿನ ಕೋಟೆ, ಅನ್ನ ಸಂತರ್ಪಣೆ, ಉಟ್ಲು ಕಾಯಿ, ಉಟ್ಟಕ್ಕೆ ಕೂಡಿಸು ವುದು, ಉರುಳುಸೇವೆ, ಮಡಿಲಕ್ಕಿ ಕಟ್ಟುವುದು, ಕಿಚ್ಚು ಹಾಯಿಸುವುದು, ಮೀಸಲು ಮಾಡುವುದು, ಅಂಬುಹಾಕವುದು, ಹಣ್ಣು ಕಾಯಿ ಮಾಡಿಸುವುದು, ಕಂಬ ಕೀಳುವುದು, ಸಾಗು ಹಾಕುವುದು, ಮತ್ತು ಮರಿಹಬ್ಬಗಳನ್ನು ಕಾಣಬಹುದು. ಈ ಸಂದರ್ಭದಲ್ಲಿ ಅನೇಕ ಬಗೆಯ ಕಲಾಪ್ರಕಾರಗಳು ಮತ್ತು ಇತರ ಸೇವೆಗಳು ತಾಯಿಯ ಸೇವಾರ್ಥವಾಗಿ ನೆರವೇರುತ್ತವೆ. ಅವುಗಳಲ್ಲಿ ಪ್ರಮುಖವಾದವು: ಅಖಂಡದೀಪದಾರತಿ, ಬೆತ್ತಲೆ ಸೇವೆ, ಎಲ್ಲಮ್ಮನ ಕುಣಿತ, ಕರಡಿ ಮಜಲು, ಕಲ್ಯಾಣೋತ್ಸವ, ಕೋಲೆ ಬಸವನಾಟ, ಗರುಡ ವಾಹನೋತ್ಸವ, ಡೊಳ್ಳು ಕುಣಿತ, ತಂಬಿಟ್ಟಿನಾರತಿ, ದನಗಳ ಜಾತ್ರೆ, ದಿಂಡುರುಳು ಸೇವೆ, ಧೂಳಮರಿ ಸೇವೆ, ಧ್ವಜಾರೋಹಣ, ನಿತ್ಯಹೋಮ, ಪಟಾಕುಣಿತ, ಪಟ್ಟಕ್ಕೆ ಕೂಡಿಸುವುದು, ಪೂಲಂಗಿಸೇವೆ, ಅಭಿಷೇಕ, ಅರವಂಟಿಕೆಯಂತಹ ಸೇವೆಗಳು ದೇವರಿಗೆ ಸಲ್ಲುತ್ತದೆ.

ಇದಲ್ಲದೆ ಬಲಿಹರಣ, ಬಾಯಿಸಿಡಿ, ಬ್ರಹ್ಮ ರಥೋತ್ಸವ, ಮಂಟಪ್ಪಡಿ ಸೇವೆ, ಮಡಿಲಕ್ಕಿ, ಮೀಸಲು ಮಾಡುವುದು, ಮುಡುಪುಕಟ್ಟುವುದು, ಮುತ್ತಿನ ಪಲ್ಲಕ್ಕಿ, ಮೆಟ್ಟಿಲು ತೆಂಗಿನಕಾಯಿ, ರಕ್ಷಾಬಂಧನ, ರುದ್ರನಾಲಿಗೆ, ಸಿಡಿಕಂಬ, ಸೋಮನ ಕುಣಿತ, ಹುಟ್ಟಿದ ಮನೆ ನಡೆಸುವುದು, ಹುಲಿವೇಷ, ಹೆಜ್ಜೆ ನಮಸ್ಕಾರ ಮುಂತಾದವುಗಳನ್ನು ಇಲ್ಲಿ ಸೇವೆಯ ರೂಪದಲ್ಲಿ ಕಾಣಬಹುದು.

ಗ್ರಾಮದೇವತೆಗಳನ್ನು ಕುಲದೇವತೆ, ಗೃಹದೇವತೆ, ಸ್ಥಾನದೇವತೆ, ಇಷ್ಟದೇವತೆ, ಪ್ರಾಣಿರಕ್ಷಣಾ ದೇವತೆ, ಸಸ್ಯರಕ್ಷಣಾ ದೇವತೆ, ಅಧಿದೇವತೆ, ಮನೆದೇವತೆ, ಕುಲದೇವತೆ, ಮೂಲದೇವತೆ, ಉಪದೇವತೆ, ಪೂರಕ ದೇವತೆ ಎಂದು ವಿಂಗಡಿಸಬಹುದು. ಸಪ್ತ ಮಾತೃಕೆಯರನ್ನು ಗ್ರಾಮದೇವತೆಗಳ ಸ್ಥಾನದಲ್ಲಿ ಗುರುತಿಸುವ ಕೆಲಸ ಅನೇಕ ವಿದ್ವಾಂಸರು ನಡೆಸಿದ್ದಾರೆ. ಇವುಗಳನ್ನು ಕ್ರಮವಾಗಿ ಬ್ರಾಹ್ಮಿ, ಮಹೇಶ್ವರಿ, ಕುಮಾರಿ, ವೈಷ್ಣವಿ, ವಾರಾಹಿ, ನಾರಸಿಂಹಿ ಮತ್ತು ಇಂದ್ರಾಣಿ ಎಂದು ಗುರುತಿಸಬಹುದು. ಇವರೆಲ್ಲರೂ ಬ್ರಹ್ಮ, ಈಶ್ವರ, ಕುಮಾರ (ಸ್ಕಂದ) ವಿಷ್ಣು, ವರಾಹ, ನರಸಿಂಹ ಮತ್ತು ಇಂದ್ರನ ಶಕ್ತಿಯ ಅಂಶ. ಇವರು ದೇವರ ಸ್ತ್ರೀರೂಪಗಳೆಂದು ಗುರುತಿಸಿ ಕೊಂಡಿದ್ದಾರೆ. ಈಗಲೂ ಯೋಗಿನಿ, ಯೋಗೇಶ್ವರಿ, ಕುಮಾರಿ ಪೂಜೆಗಳು ಅನೇಕ ದೇವಾಲಯಗಳಲ್ಲಿ ನಡೆಯುತ್ತವೆ. ಕನ್ಯೆಯ ರೂಪದಲ್ಲಿ ಇರುವ ಮಾತೃಸ್ವರೂಪಿ ದೇವತೆಗಳನ್ನು ಕುಮಾರಿ ಪೂಜೆಯನ್ನು ಆರಾಧಿಸುತ್ತಾರೆ.

ಈ ಗ್ರಾಮದೇವತೆಗಳನ್ನು ಸ್ತ್ರೀ ಮತ್ತು ಪುರುಷ ದೇವತೆಗಳ ಹಿನ್ನೆಲೆಯಲ್ಲೂ ಗುರುತಿಸುತ್ತಾರೆ. ಈ ಸ್ತ್ರೀ ದೇವತೆಗಳಲ್ಲಿ ಸೌಮ್ಯ ಸ್ವಭಾವಕ್ಕಿಂತ ಉಗ್ರ ಸ್ವಭಾವದ ದೇವತೆಗಳೇ ಹೆಚ್ಚು. ಈ ಉಗ್ರ ದೇವತೆಗಳ ಶಕ್ತಿ ದೇವತೆಗಳೆಂದು, ಶಕ್ತಿ ದೇವತೆಗಳು ಶಿವನಿಗೆ ಸಂಬಂಧಿಸವೆಂದು ವಿದ್ವಾಂಸರು ಪರಿಗಣಿಸುತ್ತಾರೆ. ಶೈವ ಧರ್ಮದಲ್ಲಿ ಕಾಣಿಸಿಕೊಳ್ಳುವ ಒಳ ಪ್ರಭೇದಗಳು ಇದಕ್ಕೆ ಕಾರಣ. ಶಾಕ್ತ, ಭೈರವ, ಕಾಪಾಲಿಕ ಮೊದಲಾದರು ತಮ್ಮ ತಂತ್ರಮಂತ್ರಗಳಿಂದ ಜನರನ್ನು ಆಕರ್ಷಿಸಿ, ದೇವತೆಗಳ ಹೆಸರಿನಲ್ಲಿ ಇವರು ಸೇವೆ ಸಲ್ಲಿಸುತ್ತಾರೆ. ಹಲವು ವಿದ್ವಾಂಸರು ಕಾಳಾಮುಖರೂ, ಕಾಪಾಲಿಕರು ಒಂದೇ ಎಂದು ಹೇಳುತ್ತಾರೆ. ಇದಕ್ಕೆ ಯಾವ ಆಧಾರವೂ ಇಲ್ಲಿ. ಕಾಪಾಲಿಕರು ಸಂಪೂರ್ಣವಾಗಿ ವಾಮಾಚಾರ ಪಂಥವಾದರೆ, ಕಾಳಾಮುಖರು ಶುದ್ಧ ಸಾತ್ವಿಕಾಚರಣೆಗಳ ಪಂಥ. ಇವರು ಪಾಶುಪತ – ಲಾಕುಲವರ್ಗಕ್ಕೆ ಸೇರಿದವರೆಂಬುದು ಸ್ಪಷ್ಟವಾಗಿದೆ.

ಈ ಗ್ರಾಮದೇವತೆಗಳ ಹಿನ್ನೆಲೆಯಲ್ಲಿ ಅನೇಕ ವಿಧಿ – ನಿಷೇಧಗಳನ್ನು ಕಾಣುತ್ತೇವೆ. ಅವುಗಳನ್ನು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ವಿಧಿ – ನಿಷೇಧಗಳಿಂದ ಗುರುತಿಸಿ ಗ್ರಾಮದೇವತೆಗಳ ಅಧ್ಯನವನ್ನು ನಡೆಸಬಹುದು, ಗ್ರಾಮದೇವತೆಗಳ ಅಧ್ಯಯನವನ್ನು ನಡೆಸಬಹುದು, ಗ್ರಾಮದೇವತೆಯ ಸ್ವರೂಪವೆಂದು ಲಜ್ಜಾ ಗೌರಿಯನ್ನು ಕರ್ನಾಟಕದಲ್ಲಿ ಪೂಜಿಸುವುದಿದೆ. ಅಂತೆಯೇ ಬೆತ್ತಲೆ ಭೈರವನನ್ನೂ ಪೂಜಿಸುತ್ತಾರೆ.

ಎಸ್.ಎಲ್.ಡಿ.

ಗ್ರಾಮೀಣ ಪ್ರದೇಶದ ಜನಪದ ವೈದ್ಯರು ಎರಡು ಮೂಲಗಳಿಂದ ಚಿಕಿತ್ಸೆಯನ್ನು ನೀಡುವ ತಂತ್ರವನ್ನು ರೂಢಿಸಿಕೊಂಡಿದ್ದಾರೆ. ಮೊದಲನೆಯದಾಗಿ ತಮ್ಮ ಹಿತ್ತಲಲ್ಲಿ ಬೆಳೆಯಬಹುದಾದ ಹಾಗೂ ಅಡುಗೆಮನೆಯಲ್ಲಿ ಬಳಸುವ ಅರಿಸಿನ, ಶುಂಠಿ, ಉಪ್ಪು, ಜೀರಿಗೆ, ಮೆಣಸು ಅಲ್ಲದೆ ಬೂದಿ, ಗೋಮೂತ್ರ, ಮಾನವ ಮೂತ್ರ, ಸಗಣಿ ಮುಂತಾದವನ್ನು ಬಳಸುತ್ತಾರೆ. ಇದರೊಂದಿಗೆ ಪ್ರಕೃತಿಯ ಮಡಿಲಲ್ಲಿ, ಸುತ್ತಮುತ್ತ ಕಾಡುಮೇಡುಗಳಲ್ಲಿ ಅಲೆದು ಗಿಡಮೂಲಿಕೆಗಳು, ಬೇರು, ನಾರು, ಎಲೆ, ಬಳ್ಳಿ, ತೊಗಟೆ ಇತ್ಯಾದಿಗಳನ್ನು ಹುಡುಕಿ ತಂದು ಒಣಗಿಸಿ, ಸಂಸ್ಕರಿಸಿ ಪುಡಿಯ ರೂಪದಲ್ಲಿ ಇರಿಸುತ್ತಾರೆ. ಇನ್ನೂ ಕೆಲವೊಮ್ಮೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಸ್ಥಳ ಸಂಪತ್ತನ್ನು ಕಾಯಿಲೆಯನ್ನು ಗುಣಪಡಿಸುವ ಸಸ್ಯಗಳೆಂದು ಗುರುತಿಸಿದ್ದಾರೆ. ಅವುಗಳಲ್ಲಿ ಬಾಯಿಬಸಳೆ, ಗಣಕೆ, ಪುಲ್ಲಂಪಚ್ಚಿ, ಮುಟ್ಟಿದರೆ ಮುನಿಸೊಪ್ಪು, ದಾಸವಾಳ ಮುಂತಾದವು ಸೇರಿವೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಜನಪದ ವೈದ್ಯರು ಬಳಸದ ಸಸ್ಯವೇ ಇಲ್ಲ. ಅಲ್ಲದೆ ಪಾರಿವಾಳ, ಕೋಳಿ, ಕುರಿ, ಆಡು, ಮೇಕೆ ಇತ್ಯಾದಿಗಳ ಕೆಲವು ದೇಹದ ಭಾಗಗಳನ್ನು ಮತ್ತು ಕೊಬ್ಬುಗಳನ್ನು ಸಂಗ್ರಹಿಸಿ ಲೇಪಿಸುವುದರಿಂದ ಚಿಕಿತ್ಸೆಮಾಡುವುದನ್ನು ಕಂಡುಕೊಂಡಿದ್ದಾರೆ. ಜಿಗಣೆಯಿಂದ ರಕ್ತಹೀರಿಸಿ ಕೆಲವು ಚರ್ಮರೋಗಗಳನ್ನು ಗುಣಪಡಿಸುವುದಕ್ಕಾಗಿ ಬಳಸುವುದು ರೂಢಿಯಲ್ಲಿದೆ.

ಎರಡೆನಯದಾಗಿ ದೈವದ ಅಥವಾ ಅಗೋಚರಶಕ್ತಿಯ ನೆರವಿನಿಂದ ಮಂತ್ರ, ತಂತ್ರ, ಸ್ನಾನ, ಲೇಪನ ಇತ್ಯಾದಿಗಳಿಂದಲೂ ಕೂಡ ಕಾಯಿಲೆಗಳನ್ನು ಗುಣಪಡಿಸುವುದನ್ನು ಕಾಣುತ್ತೇವೆ. ಕಾರಣದಂತೆ ಪರಿಣಾಮ ಮತ್ತು ಒಮ್ಮೆ ಏರ್ಪಟ್ಟ ಸಂಪರ್ಕ ಶಾಶ್ವತ ಸಂಪರ್ಕ ಎಂಬ ಸೂತ್ರಗಳನ್ನು ಇವು ಆದರಿಸಿವೆ. ಇಲ್ಲಿ ವಿಶೇಷ ವಸ್ತುಗಳಾಗಿ ಲೋಹಗಳಿಂದ ಮಾಡಿದ ಪರಿಕರಗಳನ್ನು ಬಳಸಲಾಗುತ್ತದೆ. ಇವರನ್ನು ಮಾಂತ್ರಿಕ ಧಾರ್ಮಿಕ ವೈದ್ಯರೆಂದು ಕರೆಯುತ್ತಾರೆ. ಒಟ್ಟಾರೆ ಈ ಮೇಲೆ ಹೇಳಿದ ವೈದ್ಯ ಪದ್ಧತಿಯಲ್ಲಿ ಪರಿಣಿತಿ ಹೊಂದಲು ಕೆಲವೊಮ್ಮೆ ನಾಟಿವೈದ್ಯರು ಮತ್ತು ಮಾಂತ್ರಿಕ ಧಾರ್ಮಿಕ ವೈದ್ಯರು ತಮ್ಮ ತಮ್ಮ ಕುಟುಂಬದ ಪರಿಸರದಲ್ಲೇ ವಿಶೇಷ ತರಬೇತಿಯನ್ನು ಪಡೆಯುವುದನ್ನು ನಾವು ಗಮನಿಸಬೇಕಾದ ಸಂಗತಿ. ಈ ತರಬೇತಿಯು ಕಾಯಿಲೆಗಳನ್ನು ಗುಣಪಡಿಸುವ ಸಸ್ಯ ಮತ್ತು ಪ್ರಾಣಿ ಪರಿಕರಗಳ ಬಗೆಗಿನ ತಿಳಿವಳಿಕೆಯನ್ನು ಒಳಗೊಂಡಿದೆ. ಹಾಗಾಗಿ ಎಲ್ಲಿಯೂ ಯಾವ ಕಾರಣಕ್ಕೂ ಈ ಸಂದರ್ಭದಲ್ಲಿ ಬಳಸುವ ಗಿಡಮೂಲಿಕೆಗಳ ಹೆಸರನ್ನು ಬಹಿರಂಗಗೊಳಿಸಬಾರದೆಂಬ ನಿಷೇಧವನ್ನು ಇಲ್ಲಿ ಹೇರಲಾಗುತ್ತದೆ.

ಈ ಮೇಲೆ ಹೇಳಿದ ಕೆಲವು ಸಂಗತಿಗಳು ಗ್ರಾಮೀಣ ಸಮುದಾಯದಲ್ಲಿ ಜನಪದ – ವೈದ್ಯವನ್ನು ಜೀವಂತವಾಗಿರುವಂತೆ ಪ್ರೇರೆಪಿಸಿವೆ.

ಜನಪದ – ವೈದ್ಯರಲ್ಲಿ ಆಹಾರ ಪಥ್ಯವು ಪ್ರಧಾನ ಪಾತ್ರವನ್ನು ವಹಿಸುತ್ತದೆ. ದೇಹಕ್ಕೆ ಶೀತವಾಗುವ, ಉಷ್ಣಾಂಶವನ್ನು ತರುವ ಅರ್ಜಿರ್ಣವಾಗಿಸುವ, ಆಲಸ್ಯನೀಡುವ, ರಕ್ತಸ್ರಾವವನ್ನು ಹೆಚ್ಚಿಸುವ ಮತ್ತು ಬರುವ ಕಾಯಿಲೆಗಳಿಗೆ ಮಾರಕವಾಗುವ ಆಹಾರ ಸೇವನೆ ನಿಷಿದ್ಧ. ಜನಪದರಲ್ಲಿ ಕರ್ನಾಟಕಾದ್ಯಂತ ಉಳುಕು – ಚಳುಕು, ವಿಷಜಂತುಗಳ ಸಂಪರ್ಕ, ವಿಷಮ ಕಾಯಿಲೆ, ಮಕ್ಕಳನ್ನು ಕಾಡಿಸುವ ದೈಹಿಕ ಸಮಸ್ಯೆಗಳು, ಗರ್ಭಿಣಿ, ಸ್ತ್ರೀ, ಪುರುಷ, ಪಶು, ಪ್ರಾಣಿ, ಪಕ್ಷಿಗಳಿಗಾಗಿಯೇ  ಪ್ರಕೃತಿಯಲ್ಲಿ ಲಭ್ಯವಾಗುವ ಸಸ್ಯ, ಪ್ರಾಣಿ, ಖನಿಜ ಸಂಪತ್ತಿನಲ್ಲಿಯ ವೈದ್ಯಕೀಯ ಗುಣವನ್ನು ಗುರುತಿಸಿ ಅವುಗಳನ್ನು ಯಥೇಚ್ಛವಾಗಿ ವೈವಿಧ್ಯವಾಗಿ ಬಳಸಿಕೊಂಡಿದ್ದಾರೆ.

ಪ್ರೀತಿಯಿಂದ ಸಾಕಿದ ನಾಯಿ, ಕುರಿ, ಕೋಳಿ, ಎಮ್ಮೆ, ಎತ್ತು ಇನ್ನಿತರ ಪ್ರಾಣಿಗಳಿಗೂ ಕೂಡ ರೋಗಗಳು ಕಾಡಿದ ಸಂದರ್ಭದಲ್ಲಿ ಕೆಲವು ಚಿಕಿತ್ಸೆಯನ್ನು ಕಂಡುಕೊಂಡ ನಿದರ್ಶನಗಳಿವೆ. ಫಲಕೊಡದ ಮರ, ಸೋಂಕುಪೀಡಿತಮರ, ಬೆಳೆಯ ಸಮೃದ್ಧತೆಗಾಗಿ, ಫಸಲಿಗೆ ತಗುಲಿರಬಹುದಾದ ಕೆಟ್ಟ ದೃಷ್ಟಿ ಇತ್ಯಾದಿಗಳಿಗೆ ಮೊಳೆ ಹೊಡೆಯುವುದು, ಅರಿಸಿನವನ್ನು ನೀರಿನಲ್ಲಿ ಹಾಕಿ ಸಿಂಪಡಿಸುವುದು, ಹಿಡಿದಿರುವ ದುಷ್ಟಶಕ್ತಿಗಳನ್ನು ಬೇರೆಡೆಗೆ ರವಾನಿಸುವುದನ್ನು ಒಳಗೊಳ್ಳುತ್ತದೆ. ಎತ್ತು, ಎಮ್ಮೆ, ಕೋಣ ಮುಂತಾದವುಗಳಿಗೆ ಖಾಯಿಲೆ ಬಂದಾಗ ‘ಬಲ್ಲವನಿಗೆ ಹುಲ್ಲೆ ಮದ್ದು’ ಎಂಬಂತೆ ಔಷಧಿ ಸಾಮಗ್ರಿಗಳನ್ನು ಸಸ್ಯಮೂಲ, ಪ್ರಾಣಿಮೂಲ, ಖನಿಜ ಮೂಲ, ಮಾನವಮೂಲಗಳಿಂದ ಕಂಡುಕೊಳ್ಳುವುದರಲ್ಲಿ ಜನಪದರು ಸಿದ್ಧಹಸ್ತರು. ಹಾಗಾಗಿ ಕರ್ನಾಟಕಾದ್ಯಂತ ಬಗೆಬಗೆಯ ಔಷಧಿಗಳು ಸಸ್ಯ, ಪ್ರಾಣಿ, ಖನಿಜ, ಮಾನವ ಮೂಲ ಪರಿಕರಗಳು ಪ್ರಾದೇಶಿಕ ಹೆಸರಿನೊಂದಿಗೆ, ತಯಾರಿಕೆಯೊಂದಿಗೆ ಇಂದಿಗೂ ಲಭ್ಯವಿದೆ. ಆದರೆ ‘ಆಲಸ್ಯ ಮಾಡಿದರೆ ಅಮೃತವೂ ವಿಷವಾಗುತ್ತದೆ’ ಎಂಬಂತೆ ಜನಪದ ವೈದ್ಯದ ಬಳಕೆಯನ್ನು ಹೆಚ್ಚಿಸಿ ಇದರ ಬಗೆಗಿನ ತಿಳಿವಳಿಕೆಯನ್ನು ಉಂಟುಮಾಡಬೇಕಾದ ಅವಶ್ಯಕತೆ ಇದೆ.

ಎ.ಸಿ.ಎಲ್.