ಘಟ್ಟದ ಕೋರೆ ಘಟ್ಟದ ಕೋರೆ ಯಕ್ಷಗಾನ ಸಂಪ್ರದಾಯ ಮಲೆನಾಡು ಮತ್ತು ಬಯಲುಸೀಮೆಗಳ ಸೆರಗಿನಲ್ಲಿ ಮೂಡಲಪಾಯ ಮತ್ತು ಪಡುವಲಪಾಯಗಳೆರಡರ ಸಾರವನ್ನು ಗರ್ಭೀಕರಿಸಿಕೊಂಡಿರುವ ಒಂದು ಹೊಸ ಯಕ್ಷಗಾನ ಸಂಪ್ರದಾಯ. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ರೂಪುಗೊಂಡಂತೆ ತೋರುತ್ತದೆ. ಕರ್ನಾಟಕದ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕು ಕೊಳ್ಳೆಗಾಲ ಪ್ರಥಮ ಕೇಂದ್ರ ಸ್ಥಾನ. ಮಂಡ್ಯ ಜಿಲ್ಲೆಯ ಹೊಸಹೊಳಲು ಸಹ ಮುಖ್ಯ ಕೇಂದ್ರ. ಇವೆರಡು ಈ ಸಂಪ್ರದಾಯದ ಕೇಂದ್ರ ಬಿಂದುಗಳಾಗಿದ್ದವು. ಅಲ್ಲದೆ ನಂಜನಗೂಡು ತಾಲ್ಲೂಕಿನ ತಗಡೂರು, ಕೊಂತಯ್ಯನ ಹುಂಡಿ, ದೇವನೂರು ಮತ್ತು ಬದನವಾಳು ಗ್ರಾಮಗಳಲ್ಲಿ ಈ ಕಲೆ ಬಹಳ ವ್ಯಾಪಕವಾಗಿ ಮತ್ತು ಜೀವಂತವಾಗಿ ಈವರೆಗೂ ಇತ್ತು. ಮೈಸೂರು ಜಿಲ್ಲೆಯ ಬಹುಭಾಗ ಮತ್ತು ಮಂಡ್ಯ ಜಿಲ್ಲೆಯ ಕಿಕ್ಕೇರಿ ಮತ್ತು ಮೇಲುಕೋಟೆಯವರೆಗೂ ಈ  ಸಂಪ್ರದಾಯವನ್ನು ಕಾಣಬಹುದಿತ್ತು.

ಘಟ್ಟದ ಕೋರೆ ಘಟ್ಟದ ಕೆಳಗಿನ ಯಕ್ಷಗಾನ ಸಂಪ್ರದಾಯವನ್ನು ಸ್ವೀಕರಿಸಿ ಮೂಡಲಪಾಯದ ಮೂಲ ಲಕ್ಷಣಗಳ ಹಲವು ಅಂಶಗಳನ್ನು ಉಳಿಸಿಕೊಂಡು ಬೆಳೆದಿರುವುದು ಕಂಡುಬರುತ್ತದೆ. ಘಟ್ಟದ ಮೇಲಿನ ಜನರು ವ್ಯಾಪರಕ್ಕಾಗಿ ಘಟ್ಟದ ಕೆಳಗಿನ ಪ್ರದೇಶಗಳಿಗೆ ಹೋಗಿ ಬರುತ್ತಿದ್ದರು. ಜೊತೆಗೆ ಯಾವುದೋ ದಂಡ ಯಾತ್ರೆಯ ಸಂದರ್ಭದಲ್ಲಿ ಮೈಸೂರು ಸೇನೆಯೊಡನೆ ಬಸವರಾಜ ಅರಸು ಎಂಬುವರು ಹೋಗಿದ್ದರು. ಅವರು ಹಿಂದಿರುಗುವಾಗ ಅನೇಕ ಯಕ್ಷಗಾನ ಹಸ್ತಪ್ರತಿಗಳನ್ನು ತಂದರು. ಇವುಗಳು ಈಗಲೂ ಕೋಳಗಾಲದಲ್ಲಿವೆ. ಬಸವರಾಜ ಅರಸಿನವರು ಭಾಗವತಿಕೆಯನ್ನೂ ಕಲಿತು ಬಂದರು. ಅವರಿಗೆ ಯಕ್ಷಗಾನದಲ್ಲಿ ಅಭಿರುಚಿಯ ಜೊತೆಗೆ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿತ್ತು.

ಭಾಗವತ ಬಸವರಾಜ ಅರಸರು ತಮ್ಮ ಹುಟ್ಟೂರಾದ ಕೋಳಗಾಲಕ್ಕೆ ಬರುವ ಮುಂಚೆ ಈ ಭಾಗದಲ್ಲಿ ಮೂಡಲಪಾಯ ಯಕ್ಷಗಾನ ಪ್ರಚಲಿತವಾಗಿತ್ತು. ಘಟ್ಟದ ಕೋರೆಯ ರಂಗಮಂದಿರ ಸರಳ ಮತ್ತು ಸುಲಭವಾಗಿ ನಿರ್ಮಿಸಬಹುದು. ಈಶಾನ್ಯ ಮೂಲೆಯಲ್ಲಿ ಕಂಬವನ್ನು ನೆಡುವಾಗ ಪೂಜೆ ಮಾಡುವರು. ನಾಲ್ಕು ಕಂಬಗಳನ್ನು ನೆಟ್ಟು ಈ ಚೌಕಟ್ಟಿನಲ್ಲಿ ಚಪ್ಪರ ಹಾಕಿ ಚಪ್ಪರಕ್ಕೆ ಒಂದು ತೆಂಗಿನಕಾಯಿ ಪೂಜಿಸಿ ಕಟ್ಟುತ್ತಾನೆ. ಚೌಕಟ್ಟಿನ ಮುಂಭಾಗದ ಎರಡು ಮೂಲೆಗಳಲ್ಲಿ ಸುಮಾರು ೩ ರಿಂದ ೪ ಅಡಿ ಎತ್ತರವಿರುವ  ಭೂತಾಳೆ ಮರ ಅಥವಾ ಬಾಳೆದಿಂಡನ್ನು ನೆಟ್ಟು ಅದರ ಮೇಲೆ ಸಗಣಿಯನ್ನು ಹಾಕಿ ಕಾಶಿಗಿಡದ (ಪರತದ ಗಿಡ) ತಿರುಳು ಅಥವಾ ಕುಟ್ಟಿದ ಹರುಳು ಬೀಜಹಾಕಿ ಉರಿಸುತ್ತಿದ್ದರು. ಈ ಬೆಳಕು ಪಾತ್ರಧಾರಿಗಳು ಧರಿಸಿದ ವೇಷಭೂಷಣ ಮತ್ತು ಆಭರಣಗಳ ಹೊಳಪನ್ನು ಹೆಚ್ಚಿಸಿ ವಿಶೇಷ ಆಕರ್ಷಣೆಯನ್ನುಂಟು ಮಾಡುತ್ತಿತ್ತು. ಈಗ ಗ್ಯಾಸ್‌ಲೈಟ್‌ಅಥವಾ ವಿದ್ಯುದ್ವೀಪ ಬಳಸುತ್ತಾರೆ.

ಈ ಸಂಪ್ರದಾಯದಲ್ಲಿ ಬಣ್ಣದ ಮನೆ ದೇವಸ್ಥಾನ ಅಥವಾ ರಾಮಮಂದಿರ. ಅದು ಪ್ರದರ್ಶನ ಸ್ಥಳದಿಂದ ಸ್ವಲ್ಪ ದೂರವೇ ಇರುತ್ತದೆ. ಅಲ್ಲಿ ವೇಷಭೂಷಣ ಒಡವೆಗಳಲ್ಲಿ ಕಿರೀಟ ಮುಂತಾದವುಗಳನ್ನು ಸಾಲಾಗಿ ಜೋಡಿಸಿ ಮೇಳದವರು ಮತ್ತು ಪಾತ್ರಧಾರಿಗಳು ಸೇರಿ ಪೂಜೆ ಮಾಡುತ್ತಾರೆ. ಮೊದಲು ಪಾತ್ರಧಾರಿಗಳೇ ಬಣ್ಣ ಹಚ್ಚಿಕೊಂಡು ವೇಷಭೂಷಣಗಳನ್ನು ಧರಿಸಿ ಪಾತ್ರಧಾರಣೆಗೆ ತಯಾರಾಗುತ್ತಿದ್ದರು. ಆದರೆ ಈಗ ಮೇಕಪ್‌ನವರ ಮೊರೆ ಹೋಗಿದ್ದಾರೆ. ಘೋರ ಪಾತ್ರಗಳಿಗೆ ಕೆಂಪು ಮತ್ತು ಕಪ್ಪು ಬಣ್ಣಗಳು ವಿಶೇಷವಾಗಿ ಬಳಕೆಯಾಗುತ್ತವೆ. ಪಾಪಸು ಕಳ್ಳಿಯ ಹಣ್ಣನ್ನು ಕೆಂಪು ಬಣ್ಣಕ್ಕೆ ಉಪಯೋಗಿಸುತ್ತಿದ್ದರು. ಈಗ ಮಾರುಕಟ್ಟೆಯ ಬಣ್ಣಗಳು ಬಳಕೆಯಾಗುತ್ತಿದೆ. ರಾಜಪಾತ್ರಗಳಿಗೆ ಮತ್ತು ಸ್ತ್ರೀ ಪಾತ್ರಗಳಿಗೆ ಗುಲಾಬಿ ಬಣ್ಣವನ್ನು ಬಳಸುತ್ತಾರೆ. ಈಗ ಎಲ್ಲವೂ ಬದಲಾಗಿದೆ.

ಬಣ್ಣದ ಮನೆಯಲ್ಲಿ ಪೂಜೆಯಾಗಿ ವೇಷಗಳು ಸಿದ್ಧಿವಾದ ಮೇಲೆ ಭಾಗವತಾದಿ ಮೇಳದವರು ವಾದ್ಯ ವೃಂದದೊಡನೆ ದಿಗಣ ಹಾಕಿ ಹಾಡಿನೊಡನೆ ರಂಗದ ಹಿಂಬದಿಯಿಂದಲೇ ಪ್ರವೇಶಿಸುವರು. ಮೇಳದವರು ಮತ್ತು ಭಾಗವತರು ಸೇರಿ ಸುಮಾರು ೮ ರಿಂದ ೧೦ ಮಂದಿ ಇರುತ್ತಾರೆ. ಶ್ರುತಿ, ಮುಖವೀಸೆ, ಮದ್ದಲೆ ಮತ್ತು ಹಾರ್ಮೋನಿಯಂಗಳ ಜೊತೆಗೆ ನಾಲ್ಕಾರು ಮಂದಿ ಕಿರುತಾಳ ಹಿಡಿದಿರುವವರು ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಮದ್ದಲೆಯ ಗಾತ್ರ ದೊಡ್ಡದಾದುದರಿಂದ ಒಂದು ಕವೆನೆಟ್ಟು ಅದರ ಮೇಲೆ ಇಡುತ್ತಿದ್ದರು. ಈಗ ಮದ್ದಲೆಯನ್ನು ಚಿಕ್ಕದಾಗಿಸಿ ತಮ್ಮ ಹೆಗಲಿಗೆ ನೇತುಹಾಕಿಕೊಳ್ಳುತ್ತಾರೆ.

ಈ ಸಂಪ್ರದಾಯದಲ್ಲಿ ಮುಖವೀಣೆ ಮತ್ತು ಮದ್ದಲೆ ವಾದ್ಯಗಳದೇ ಪ್ರಾಧಾನ್ಯ. ಭಾಗವತರು ಗಣೇಶ ಸ್ತುತಿ, ಶಾರದೆ, ಆಕಾಶ ದೇವತೆ, ಭೂಮಿದೇವತೆ, ಅಷ್ಟದಿಕ್ಪಾಲಕರು ಮುಂತಾದವರಿಗೆ ವಂದಿಸಿ ನೆರೆದ ಸಭೆಗೆ ವಂದಿಸಿ, ತಮ್ಮ ಪ್ರದರ್ಶನದಲ್ಲಿ ಲೋಪದೋಷಗಳು ಕಂಡುಬಂದರೆ ಹಂಸಕ್ಷೀರ ನ್ಯಾಯದಂತೆ ಸ್ವೀಕರಸಿಬೇಕೆಂದು ವಿನಯದಿಂದ ಪ್ರಾರ್ಥಿಸಿ ಮುಂದೆ ಕಥೆಗೆ ನಾಂದಿಹಾಡುತ್ತಾರೆ.

ಘಟ್ಟದ ಕೋರೆ ಸಂಪ್ರದಾಯದಲ್ಲಿ ಹನುಮನಾಯಕ ಹೆಚ್ಚಾಗಿ ಕಂಡುಬರುವುದಿಲ್ಲ. ಪ್ರಾರಂಭದಲ್ಲಿ ಮಾತ್ರ ಬಂದು ಹೋಗುವ ಈ ಪಾತ್ರಕ್ಕೆ ಕೋಡಂಗಿ ಎಂದೇ ಹೆಸರು. ಇವನ ವೇಷ ಒಂದು ಚೂಪಾದ ಬಣ್ಣ ಕಾಗದದ ಕುಲಾವಿ. ಸೆಣಬಿನ ಗಡ್ಡ ಮೀಸೆ. ಕಚ್ಚೆಪಂಚೆ, ನಿಲುವಂಗಿ, ನಡುವಿಗೆ ವಸ್ತ್ರ ಕಟ್ಟಿರುವುದು. ಕಥಾ ಪ್ರಾರಂಭದಲ್ಲಿ ಆಕಡೆ ಈಕಡೆ ಇಬ್ಬರು ಹಿಡಿದಿರುವ ತೆರೆಯ ಮುಂದೆ ಕಾಣಿಸಿಕೊಂಡು ಒಂದು ಹಾಸ್ಯ ಗೀತೆಗೆ ನರ್ತಿಸಿ ನಿಲ್ಲುವನು. ಭಾಗವತರು ಮತ್ತು ಕೋಡಂಗಿಯ ನಡುವೆ ಸ್ವಾರಸ್ಯ ಸಂಭಾಷಣೆ ನಡೆಯುವುದು. ಅನಂತರ ಗಣೇಶನ ಪೂಜೆ. ಗಣೇಶನ ಮುಖವಾಡ ಧರಿಸಿದ ಬಾಲಕ ಮತ್ತು ಅರ್ಚಕರ ಪ್ರವೇಶ. ಕೋಡಂಗಿ ಮತ್ತು ಅರ್ಚಕರ ನಡುವೆ ವಿನೋದದ ಮಾತುಗಳು. ಇಲ್ಲಿಗೆ ಪೂರ್ವರಂಗ ಮುಗಿಯುವುದು.

ಘಟ್ಟದ ಕೋರೆಯ ಕುಣಿತ ಬಹಳ ಮನಮೋಹಕವಾಗಿದ್ದು ಲಾಲಿತ್ಯದಿಂದ ಕೂಡಿದೆ. ಇಲ್ಲಿಯ ಕುಣಿತಕ್ಕೆ ‘ನಡೆ’ ಎನ್ನುವರು. ರಾಜರು, ಕ್ಷತ್ರಿಯ ವೀರರು, ರಾಕ್ಷಸರು, ದೇವತೆಗಳು, ವಾನರರು ಮಾತ್ರ ಕುಣಿಯುತ್ತಾರೆ. ಇದು ಗಮನಿಸಬೇಕಾದ ಅಂಶ. ಸ್ತ್ರೀಪಾತ್ರ , ನಾರದ, ಋಷಿ ಪಾತ್ರಗಳಿಗೆ ಕುಣಿತವಿಲ್ಲ. ಹೆಣ್ಣು ಪಾತ್ರಗಳಲ್ಲಿ ಭಾವಾಭಿನಯ ಮಾತ್ರ ಕಂಡುಬರುತ್ತದೆ.

ಪುರುಷರ ಕುಣಿತದಲ್ಲಿ ‘ತ್ರಿಪುಟ’ ತಾಳದಲ್ಲಿ ಥಾ ಥೈ ಥ ಕ ಥೈ ಎಂದು ಬೇರೆ ಬೇರೆ ಕಾಲಗಳಲ್ಲಿ ಕುಣಿಸಿದರೆ ಆದಿತಾಳದಲ್ಲಿ ತಾನನಾನಾ ನಾನಾನ್ನನ್ನ ದೆವ ದೇವಾಧಿದೇವಾ’ ಹೀಗೆ ಕುಣಿತದ ನಡೆ ಸಾಗುತ್ತದೆ. ಹೆಜ್ಜೆಯುಗತ್ತಿನ ಜೊತೆಗೆ ಮುಖ ಭಾವ ಮತ್ತು ಸರಳವಾದ ಅಭಿನಯ ನೋಡಲು ಬಹಳ ಆಕರ್ಷಕವಾಗಿರುತ್ತದೆ. ಘಟ್ಟದ ಕೋರೆಯಲ್ಲಿ ಎಲ್ಲಿಯೂ ಒರಟಾದ ಕುಣಿತ ಕಂಡುಬರುವುದಿಲ್ಲ. ಎಲ್ಲವೂ ನಯ, ನಾಜೂಕು ಎಲ್ಲವೂ ಆಪ್ಯಾಯಮಾನ. ಮುಮ್ಮೇಳ, ಹಿಮ್ಮೇಳ ವಾದ್ಯಗಳ ಸಹಕಾರದಿಂದ ಘಟ್ಟದ ಕೋರೆ ಯಕ್ಷಗಾನ ನೃತ್ಯ ವೈವಿಧ್ಯಗಳಿಂದಾಗಿ ಅದ್ಭುತ ಕಲೆಯಾಗಿ ಹೊರಹೊಮ್ಮಿದೆ.

ಈ ಯಕ್ಷಗಾನ ಪರಂಪರೆಯ ಮೂಲಪುರುಷ ಭಾಗವತ ಬಸವರಾಜ ಅರಸಿನವರ ಸಮಾಧಿ ಕೋಳಗಾಲದ ಪೂರ್ವದಿಕ್ಕಿನಲ್ಲಿ ಕಪಿಲಾ ನದಿಯ ದಂಡೆಯ ಮೇಲಿದೆ. ಪ್ರತಿ ಪ್ರದರ್ಶನದ ದಿನವೂ ಸೂರ್ಯಾಸ್ತಕ್ಕೆ ಮುಂಚೆ ಕಲಾವಿದರೆಲ್ಲ ಅಲ್ಲಿ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ. ತಮ್ಮ ಕಲೆಗೆ ಮೂಲಸ್ಫೂರ್ತಿ ಎಂಬ ಶ್ರದ್ಧಾ ಭಕ್ತಿ ಇಂದಿಗೂ ಕೋಳಗಾಲದಲ್ಲಿ ಉಳಿದಿದೆ. ಕೋಳಗಾಲದಲ್ಲಿ ಭಾಗವತ ಬಸವರಾಜ ಅರಸಿನವರ ವಂಶಸ್ಥರು ‘ಘಟ್ಟದ ಕೋರೆ ಯಕ್ಷಗಾನ ಟ್ರಸ್ಟ್‌’ ಒಂದನ್ನು ಸ್ಥಾಪಿಸಿ ಈ ಕಲೆಯ ಉಳಿವಿಗಾಗಿ ಅವಿರತವಾಗಿ ದುಡಿಯುತ್ತಿರುವುದು ಸಂತೋಷದ ವಿಷಯ.

ಟಿ.ಎಸ್.ಆರ್.

ಚಕ್ಕರಚೋರ್ ಬೆಲ್ಲ ಬೆರೆಸಿ ಮಾಡಿದ ಅನ್ನಕ್ಕೆ ತೆಂಗಿನಕಾಯಿ, ಶುಂಠಿ, ಜೀರಿಗೆ ಇತ್ಯಾದಿಗಳನ್ನೂ ಸೇರಿಸಿ ‘ಚಕ್ಕರ್ ಚೋರ್’ (ಬೆಲ್ಲದನ್ನ/ಸಿಹಿಯನ್ನ) ತಯಾರಿಸುತ್ತಾರೆ. ಕೇರಳದ ವಿಭಿನ್ನ ಭಾಗಗಳಲ್ಲಿ ವಿಭಿನ್ನ ಸಮುದಾಯದ ಜನರು ವಿಶೇಷ ಸಂದರ್ಭಗಳಲ್ಲಿ ತಯಾರಿಸುವ ಒಂದು ತಿನಿಸು ಇದು. ಸಾಧಾರಣವಾದ ಒಂದು ತಿನಿಸು ಎಂದು ಮಾತ್ರವಲ್ಲದೆ ಇದು ವಿಶೇಷ ಆಚರಣೆಗಳ ಅಂಗವಾಗಿಯೂ ತಯಾರಾಗುವ ಮತ್ತು ಉಪಯೋಗವಾಗುವ ಪರಂಪರಾಗತ ತಿನಿಸು. ಅಕ್ಕಿ, ತೆಂಗಿನಕಾಯಿ, ಬೆಲ್ಲ ಇವನ್ನು ಸೇರಿಸಿ ಘನರೂಪದಲ್ಲಿ ತಯಾರಿಸುವ ಕಾರಣಕ್ಕೆ ಇದನ್ನು ಪಾಯಸವೆಂದು ಕರೆಯದೆ ಅನ್ನ ಎಂದು ಕರೆದಿರಬೇಕು.

ಋತುಮತಿ ಮದುವೆಯ ಸಂದರ್ಭದಲ್ಲಿ ಹೆಚ್ಚಿನ ಸಮುದಾಯಗಳಲ್ಲಿ ಸಿಹಿಯನ್ನ ಉಣ್ಣುವ ಸಂಪ್ರದಾಯವಿತ್ತು. ‘ಎಣಂಙತ್ತಿಮಾರ್’ (ಮದುವೆ ಮಾಡಿಸುವ ಸ್ತ್ರೀಯರು) ಸಿಹಿಯನ್ನು ಕೊಡುವ ಸಂಪ್ರದಾಯವೂ ಇತ್ತು. ನಾಯನ್ಮಾರರಲ್ಲಿ ಹೆಣ್ಣು ಋತುಮತಿಯಾದ ಮೂರನೇ ದಿನ ‘ಸಿಹಿಯನ್ನ ಉಣ್ಣಿಸುವ’ ಕಾರ್ಯಕ್ರಮ. ಕುಟುಂಬದ ಆರ್ಥಿಕ ಸಾಮರ್ಥ್ಯಕ್ಕನುಸಾರವಾಗಿ ಒಂದು ಸೇರಿನಿಂದ ಅನೇಕ ಕಳಸಿಗೆ ಅಕ್ಕಿಯವರೆಗೆ ಸಿಹಿಯನ್ನ ತಯಾರಿಸಿ ಔತಣ ಏರ್ಪಡಿಸುತ್ತಿದ್ದರು. ಸಿಹಿಯನ್ನ ಊಟದ ದಿನ ಋತುಮತಿಯಾದ ಹುಡುಗಿ ‘ಒಪ್ಪೊತ್ತು’ ಮಾಡಿ ರಾತ್ರಿ ಉಪವಾಸವಿರುತ್ತಾಳೆ. ಮನೆಯಲ್ಲಿ ತಯಾರಿಸುವ ಮತ್ತು ನೆಂಟರಿಷ್ಟರು ತರುವ ಸಿಹಿಯನ್ನವನ್ನು ನೆರೆಕರೆಯವರಿಗೂ ನೆಂಟರಿಷ್ಟರಿಗೂ ಔತಣವನ್ನೇರ್ಪಡಿಸಿ ಖುಷಿ ಪಡುವುದು ಶ್ರೀಮಂತ ಕುಟುಂಬಗಳಲ್ಲಿ ಸಾಮಾನ್ಯವಾಗಿತ್ತು.

ಹೊಸಕ್ಕಿ (ಹುತ್ತರಿ) ಬೇಸಾಯ ಸಂಬಂಧಿಯಾದ ಕೇರಳೀಯರ ಒಂದು ಹಬ್ಬ. ಇದು ಭೂಮಿ ಪೂಜೆಯ ಅಂಗಕೂಡ ಆಗಿದೆ. ಈ ಸಂದರ್ಭಗಳಲ್ಲೂ ಸಿಹಿಯನ್ನ ತಯಾರಿಯನ್ನೂ ಕೆಲವೆಡೆ ಮಾಡುವ ರೂಢಿಯಿತ್ತು. ಹೊಸ ಅಕ್ಕಿಯಿಂದ ಸಿಹಿಯನ್ನವನ್ನು ಈ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ‘ದೊಡ್ಡ ಹುತ್ತರಿ’ಗೆ ಇಂಥ ಏರ್ಪಾಡು ಮಾಡುತ್ತಿದ್ದರು.

ಬೇಸಾಯ ಸಂಸ್ಕೃತಿಯ ಅಂಗವಾಗಿರುವ ಆಚರಣೆಗಳಲ್ಲಿ ಸಿಹಿಯನ್ನ ನಾಟಿಯ ಕೆಲಸದ ಅಂಗವಾಗಿ ಸಿದ್ಧವಾಗುತ್ತದೆ. ಬಯಲಲ್ಲಿ ನಾಟಿ ಕೆಲಸ ಮುಗಿಯುವ ದಿನ ಕೃಷಿ ಕೆಲಸದಲ್ಲಿ ಪಾಲ್ಗೊಂಡ ಎಲ್ಲರೂ ಸಿಹಿಯನ್ನ ಉಣ್ಣುವುದು ರೂಢಿಯಲ್ಲಿತ್ತು.

ತೀಯ ಸಮುದಾಯದವರಲ್ಲಿ ಮರಣಾನಂತರ ಆಚರಣೆಯ ಭಾಗವಾಗಿಯೂ ಸಿಹಿಯನ್ನ ತಯಾರಿಸುವ ರೂಢಿ ಕೆಲವೆಡೆಗಳಲ್ಲಿ ಇದೆಯೆನ್ನುತ್ತಾರೆ. ಪಿಂಡ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸಿಹಿಯನ್ನ ಬೇಕು. ಮುಸ್ಲಿಮರು ಕೂಡ ನೇರ್ಚೆ (ಹರಕೆಯ ಉತ್ಸವ)ಯ ಸಂದರ್ಭದಲ್ಲಿ ಸಿಹಿಯನ್ನ ತಯಾರಿಸುತ್ತಾರೆ. ಅವರ ಸಿಹಿಯನ್ನದಲ್ಲಿ ಕಡಲೆಬೇಳೆ ಮುಂತಾದವುನ್ನ ಸೇರಿಸುತ್ತಾರೆ. ‘ವೇಲ’ ಮತ್ತು ‘ಪೂರಂ’ ಗಳನ್ನು ಆಚರಿಸುವ ಸಂದರ್ಭದಲ್ಲಿಯೂ ದಕ್ಷಿಣ ಕೇರಳದಲ್ಲಿ ಸಿಹಿಯನ್ನ ತಯಾರಿಸುತ್ತಾರೆ. ಉತ್ತರ ಕೇರಳದ ದೈವಸ್ಥಾನಗಳಲ್ಲಿ ಕಟ್ಟಿ ಆಡುವ ತೇಯಂಗಳಲ್ಲಿ ಒಂದಾದ ‘ಕೊರತ್ತಿಯಮ್ಮ’ ಮನೆ ಮನೆಗಳಿಗೆ ಸಂದರ್ಶನವೀಯುವ ಸಂಪ್ರದಾಯವೂ ಕೆಲವೆಡೆಗಳಲ್ಲಿದೆ. ಹಾಗೆ ಮನೆಗೆ ಬಂದ ಕೊರತ್ತಿದೈವಕ್ಕೆ ಸಿಹಿಯನ್ನವನ್ನು ತಯಾರಿಸಿ ನೈವೇದ್ಯ ನೀಡುವ ರೂಢಿಯೂ ಇದೆ. ಮನೆಯ ಅಂಗಳದಲ್ಲಿ ಒರಳನ್ನು ಇರಿಸಿ ಅದರ ಮೇಲೆ ಕುಳಿತು ಕೊರತ್ತಿಯಮ್ಮ ಸಿಹಿಯನ್ನವನ್ನು ಸ್ವೀಕರಿಸುತ್ತದೆ.

ಸಿಹಿಯನ್ನ ಸಾಮಾನ್ಯವಾಗಿ ಒಂದು ದೈನಂದಿನ ಆಹಾರ ವಸ್ತುವಲ್ಲ. ಧಾರ್ಮಿಕ ಆಚರಣೆಯ ಅಂಗವಾಗಿ ಅದನ್ನು ತಯಾರಿಸುತ್ತಾರೆ. ಮತ್ತು ತಿನ್ನುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಸಿಹಿ ತಿನ್ನುವುದು ನಮ್ಮ ಆಹಾರ ಕ್ರಮದ ಅಂಗವಾಗಿದೆ. ಇಂದು ಅಂಥ ಸಂದರ್ಭಗಳಲ್ಲಿ ಸಿಹಿ ತಿನಿಸು ಎಂಬ ನೆಲೆಯಲ್ಲಿ ಪಾಯಸವನ್ನು ತಯಾರಿಸುತ್ತಾರೆ. ಅದರ ಸ್ಥಾನದಲ್ಲಿ ಹಿಂದೆ ಸಿಹಿಯನ್ನ ಎಂಬ ವಿಶೇಷ ಆಹಾರವನ್ನು ತಯಾರಿಸಲಾಗುತ್ತಿತ್ತು.

ಋತುಸ್ನಾನ, ಹುತ್ತರಿ ಮುಂತಾದ ಆಚರಣೆಗಳೊಂದಿಗೆ ಸಂಬಂಧಿಸಿ ಸಿಹಿಯನ್ನ ಇಂದು ಕಂಡು ಬರುತ್ತಿಲ್ಲವೆನ್ನಬಹುದು. ಅದರ ಸ್ಥಾನದಲ್ಲಿ ಸಾಧಾರಣ ಸಂದರ್ಭಗಳಲ್ಲಿ ಇಂದು ಪಾಯಸವೇ ಪ್ರಚಾರದಲ್ಲಿದೆ. ಆದರೂ ಕಣ್ಣೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕೊರತ್ತಿಯಮ್ಮನಿಗೆ ನೀಡುವುದಕ್ಕಾಗಿ ಇಂದಿಗೂ ಹಳೆಯ ತಲೆಮಾರು ಸಿಹಿಯನ್ನವೆಂಬ ಪರಂಪರಾಗತ ವಿಶೇಷ ತಿನಿಸನ್ನು ತಯಾರಿಸುವುದು ಕಂಡುಬರುತ್ತದೆ.

ಪಿ.ವಿ.ಕೆ. ಅನುವಾದ ಕೆ.ಕೆ.

ಚರಡ್‌ಪಿನ್ನಿಕ್ಕಳಿ ಗಣಿತದ ಕೌತುಕ ಮತ್ತು ಬೌದ್ಧಿಕ ಮೇಲ್ಮೈ ಅಗತ್ಯವುಳ್ಳ ಕೇರಳದ ಒಂದು ದೃಶ್ಯ ವಿಸ್ಮಯವೆಂದರೆ ಚರಡ್ ಪಿನ್ನಿಕ್ಕಳಿ (ಹಗ್ಗತಿರುಪುವ ಆಟ). ಇದರ ಪ್ರಮುಖ ಆಕರ್ಷಣೆಯೆಂದರೆ ಆಟಕ್ಕೆ ಆಯ್ಕೆ ಮಾಡಿದ ಸ್ಥಳದ ಮಧ್ಯದಲ್ಲಿ ಎತ್ತರಕ್ಕೆ ಏರಿಸಿಕಟ್ಟಿರುವ ಹಲಗೆಯಿಂದ ಕೆಳಕ್ಕೆ ಇಳಿದು ಬಿದ್ದಿರುವ ಹಗ್ಗಗಳು. ಹಗ್ಗಗಳ ಸಂಖ್ಯೆ ಸಾಮಾನ್ಯವಾಗಿ ಹನ್ನೆರಡಾಗಬಹುದು. ಹದಿನೆಂಟು-ಇಪ್ಪತ್ತನಾಲ್ಕೂ ಇರಬಹುದು. ಹಿಂದಿನ ಕಾಲದಲ್ಲಿ ಹದಿನೆಂಟು, ಇಪ್ಪತ್ತನಾಲ್ಕರಷ್ಟು ಹಗ್ಗಳಿದ್ದ ಹಲಗೆಗಳೂ ಇದ್ದುವು. ಹಗ್ಗಗಳು ಆಟಗಾರ್ತಿಯರ ದೇಹಗಳನ್ನು ಬಿಗಿದಿರುತ್ತವೆ. ಹಗ್ಗಗಳ ಸಂಖ್ಯೆಗೆ ಅನುಸಾರವಾಗಿ ಹುಡುಗಿಯರೂ ಹೆಂಗುಸರೂ ಹಾಡಿನ ತಾಳಕ್ಕನುಗುಣವಾಗಿ ಹೆಜ್ಜೆ ಇಕ್ಕುತ್ತ ಹಗ್ಗಗಳಲ್ಲಿ ನಾನಾತೆರನಾದ ರೂಪಗಳನ್ನು ರಚಿಸುತ್ತಾರೆ. ಸಿಕ್ಕ, ಉಯ್ಯಾಲೆ, ಮೂಲೆ ಮುಂತಾದವುಗಳಿಂದ ತೊಡಗಿ ವ್ಯಕ್ತಿರೂಪವನ್ನು ಇದರಲ್ಲಿ ನಿರ್ಮಿಸಿ ಬಿಡುತ್ತಾರೆ. ಮರಳಿ ಇವನ್ನು ಬಿಚ್ಚುವುದು ಕೂಡ ತಾಳಲಯಾನುಸಾರವಾಗಿಯೇ. ಹಗ್ಗಗಳಲ್ಲಿ ಕೋಲುಗಳೊಂದಿಗೆ, ಅಲಂಕೃತವಾದ ಕರಗವನ್ನು ತಲೆಯಲ್ಲಿ ಇರಿಸಿಕೊಂಡು, ನೆಲದಲ್ಲಿ ಉರುಳಾಡುತ್ತ, ವೈವಿಧ್ಯಮಯವಾಗಿ ಈ ಕಲಾರೂಪವು ಪ್ರದರ್ಶಿಸಲ್ಪಡುತ್ತದೆ. ವಸ್ತುವಿಗೆ ಅನುಸಾರವಾಗಿ, ಸಿಕ್ಕದಿಂದ ಬೆಣ್ಣೆ ಕದಿಯುವ ಬಾಲಕೃಷ್ಣನೂ ಉಯ್ಯಾಲೆಯಾಡುತ್ತಿರುವ ಹುಡುಗಿಯೂ ಹಗ್ಗತಿರುಪುವ ಆಟದಲ್ಲಿ ಉಲ್ಲೇಖಿಸಬೇಕಾದ ವೈಶಿಷ್ಟ್ಯಪೂರ್ಣ ಪ್ರದರ್ಶನಗಳಾಗಿವೆ.

ಹಿಂದಿನ ಕಾಲದಲ್ಲಿ ಗ್ರಾಮಮುಖ್ಯಸ್ಥರ ದೊಡ್ಡ ದೊಡ್ಡ ಮನೆಗಳು, ಚೌಕಟ್ಟಿನ ಮನೆಗಳಲ್ಲಿ ತಿರುವಾದಿರದಂತೆಯೇ ಬಹುವ್ಯಾಪಕವಾಗಿ ಆಡುತ್ತಿದ್ದ ಒಂದು ಪ್ರದರ್ಶನ ಕಲೆಯಾಗಿತ್ತು – ಹಗ್ಗತಿರುಪುವ ಆಟ. ಸ್ತ್ರೀಯರು ಮಾತ್ರ ಪಾಲ್ಗೊಳ್ಳುತ್ತಿದ್ದ ಈ ಕಲೆಯಲ್ಲಿ ಬರಬರುತ್ತ ಹುಡುಗಿಯರೂ ಸನ್ಣ ಪ್ರಾಯದ ಹುಡುಗರೂ ಪಾಲ್ಗೊಳ್ಳುವಂತಾಯಿತು. ವೇಷ ಧಾರಣೆಯಲ್ಲೂ ಕಾಲಾನುಸಾರವಾಗಿ ಬದಲಾವಣೆಗಳಾಗಿವೆ. ಹುಣಿಸೆ ಎಲೆಯ ವಿನ್ಯಾಸದ ಅಂಚಿನ ತೆಳುಪಂಚೆಯಿಂದ ದಾವಣಿ, ರೇಷ್ಮೆಯ ಲಂಗ ಸೀರೆಯ ಮುಂತಾದವುಗಳಿಗೆ ಬದಲಾವಣೆಯಾಗಿದೆ. ಪರಂಪರಾಗತವಾದ ಆಭರಣಗಳು, ಗೆಜ್ಜೆ, ಮಲ್ಲಿಗೆ ಹೂ, ಕೆಂಪು ಬೊಟ್ಟು, ಕಳಭ ಮುಂತಾದವುಗಳನ್ನು ಒಳಗೊಂಡ ಲಲಿತವಾದ ಅಲಂಕಾರ ಇದಕ್ಕೆ ಅಗತ್ಯ.

ಕೃಷ್ಣಲೀಲೆ, ಕೃಷ್ಣಚರಿತೆಗಳು ಹಾಡುಗಳು ಮುಖ್ಯವಸ್ತುವಾಗಿರುತ್ತದೆ. ಚಕ್ರತಾಳ, ಗಂಜಿರ, ಡೋಲಕ್ ಮುಂತಾದವು ಪ್ರಧಾನ ವಾದ್ಯೋಪಕರಣಗಳು. ಒಬ್ಬ ಮುಖ್ಯಗಾಯಕನೂ ಇಬ್ಬರು ಸಹಾಯಕ ಗಾಯಕರೂ ಇರುತ್ತಾರೆ. ಹಗ್ಗಗಳು ಹೆಣೆದುಕೊಳ್ಳುತ್ತವೆ ಎಂಬ ಕಾರಣಕ್ಕಾಗಿ ಹಾಡುಗಳೂ ತುಂಬ ಹೆಚ್ಚು ಪ್ರಾಧಾನ್ಯವುಳ್ಳದ್ದಾಗಿವೆ.

ಕೇರಳಾದ್ಯಂತ ಪ್ರಚಾರದಲ್ಲಿದ್ದ ಜನಪದ ಕಲೆಯಾಗಿದ್ದರೂ ಆಧುನಿಕತೆಯ ಬಲವಂತ ನುಗ್ಗುವಿಕೆಯಿಂದ ‘ಆದಿಕಲ’ (ನೆಡುಮಂಗಾಡ್) ಎಂಬ ಸಂಸ್ಥೆಯು ಈ ಕಲೆಯ ಪುನರುಜ್ಜೀವನ ಕ್ರಮವನ್ನು ಕೈಗೊಂಡು ಅದನ್ನು ಪ್ರೋತ್ಸಾಹಿಸುತ್ತಿದೆ. ಕುಂಞಿಯಾಶಾಟ್ಟಿ, ಭಾನುವಾಶನ್, ಭಾರ್ಗವನಾಶನ್ ಮುಂತಾದ ಚರಡ್ ಪಿನ್ನಿಕ್ಕಳಿಯ ತಜ್ಞರ ಶಿಕ್ಷಣದಿಂದ ಸಾಕಷ್ಟು ಜನ ಈ ಕಲಾರೂಪದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆ ಮೂಲಕ ಅದು ಹೆಚ್ಚು ವ್ಯಾಪಕವಾಗಿ ಬೆಳೆಯುತ್ತಿದೆ. ನೆಡುಮಂಗಾಡಿನ ಹಳ್ಳಿ ಪ್ರದೇಶಗಳಲ್ಲಿರುವ ಸಾಕಷ್ಟು ಸಂಘಸಂಸ್ಥೆಗಳು ಜನಪದ ಕಲೆಗಳನ್ನು ಪ್ರೋತ್ಸಾಹಿಸುತ್ತಿವೆ. ಅದರ ಅಂಗವಾಗಿ ಚರಡ್‌ಪಿನ್ನಿಕ್ಕಳಿ ಕೂಡ ಅದರಲ್ಲಿ ಸೇರ್ಪಡೆಗೊಂಡಿದೆ. ರಂಗಪ್ರಭಾತ (ವೆಂಜಾರಮೂಡ್), ಗುರುಕೃಪ (ಆಟ್ಟುಕ್ಕಾಲ್) ಮುಂತಾದುವು ಇಂಥ ಸಂಘಸಂಸ್ಥೆಗಳಲ್ಲಿ ಕೆಲವು.

ಸೂಕ್ಷ್ಮತೆ, ತಾಳಜ್ಞಾನ, ಲಾಲಿತ್ಯ, ಸರಿಯಾದ ತರಬೇತಿ, ಏಕಾಗ್ರತೆ, ದೇಹವಶ್ಯತೆ ಮುಂತಾದುವು ಸಮ್ಮಿಶ್ರವಾದ ಒಂದು ಕಲಾರೂಪ ಚರಡ್‌ಪಿನ್ನಿಕ್ಕಳಿ. ಪ್ರೇಕ್ಷಕರನ್ನು ಮುಳ್ಳುಗಳ ಮೇಲೆ ಬಂತೆ. ಕೌತುಕಗೊಳಿಸುವುದಕ್ಕೂ,ವಿಸ್ಮಯ ಚಕಿತರನ್ನಾಗಿಸುವುದಕ್ಕೂ ಈ ಲಲಿತ ಜನಪದ ಕಲೆಗೆ ಸಾಧ್ಯವಾಗುತ್ತದೆ. ಆವರ್ತನದ ಏಕತಾನತೆ ಇಲ್ಲದ, ಆದರೆ ಆಡುವವರನ್ನೂ ನೋಡುವವರನ್ನೂ ಒಂದೇ ತೆರನಾಗಿ ಹೊಸಬರನ್ನಾಗಿಸುವ, ಹಳಮೆಯ ಮೇಲ್ಮೆಯನ್ನು ಸಾರುವ ಒಂದು ಕಲಾರೂಪವಾಗಿದೆ. ಚರಡ್‌ಪಿನ್ನಿಕ್ಕಳಿ – ಹಗ್ಗ ತಿರುಪುವ ಆಟ.

ಇ.ಕೆ.ಎಸ್. ಅನುವಾದ ಕೆ.ಕೆ.

ಚವಿಟ್ಟ್‌ಕ್ಕಳಿ  ಕೇರಳದ ಚವಿಟ್ಟ್‌ಕ್ಕಳಿಯು ಹೊಲೆಯ, ಕಣಕನ್ ಮೊದಲಾದ ಹರಿಜನರ ಒಂದು ವಿನೋದ ನೃತ್ಯ. ಇದನ್ನು ಪಾಲ್ಘಾಟ್ ಜಿಲ್ಲೆಯಲ್ಲಿ ‘ಚವಿಟ್ಟಳಿ’ ಎಂದೂ ಕರೆಯುತ್ತಾರೆ. ಹೊಲೆಯರು, ಕಣಕನ್ ಮೊದಲಾದವರು ತಮ್ಮ ‘ವನ’ (ಕಾವು)ಗಳಲ್ಲಿ ಹಾಡು ಹೇಳುತ್ತಾ ಉತ್ಸಾಹದಿಂದ ಕುಣಿಯುತ್ತಾರೆ (ಪ್ರಾದೇಶಿಕ ವ್ಯತ್ಯಾಸಗಳಿವೆ). ಪಾಲ್ಘಾಟ್, ಮಲಪ್ಪುರಂ ಜಿಲ್ಲೆಗಳಲ್ಲಿರುವ ಚವಿಟ್ಟ್‌ಕ್ಕಳಿಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿವೆ. ಆದರೆ ತ್ರಿಶ್ಶೂರ್ ಜಿಲ್ಲೆಯ ಕುಣಿತ ಹಲವು ಘಂಟೆಗಳ ಕಾಲ ನಡೆಯುತ್ತಿದೆ. ತ್ರಿಶ್ಶೂರ್ ಜಿಲ್ಲೆಯ ಚವಿಟ್ಟ್‌ಕ್ಕಳಿಯನ್ನು ಇಲ್ಲಿ ಗಮನಿಸಲಾಗಿದೆ. ಹರಿಜನ ಗಂಡಸರು ಮತ್ತು ಹೆಂಗಸರು ತಮ್ಮ ಬಿಡುವಿನ ವೇಳೆಯಲ್ಲಿ ಯಾವುದಾದರೂ ಮನೆಗಳಿಗೆ ಹೋಗಿ ಮನೆ ಮುಂಭಾಗದಲ್ಲಿ ಅಥವಾ ಹಲವು ಜನರು ಸಂಚರಿಸುವ ದಾರಿಗಳಲ್ಲಿ ಹಾಡು ಹೇಳುತ್ತಾ ಕುಣಿಯುವ ಕುಣಿತವೇ ಚವಿಟ್ಟ್‌ಕ್ಕಳಿ. ಸಾಯಂಕಾಲ ಆರು ಘಂಟೆಯಿಂದ ತೊಡಗಿ ಬೆಳಗಿನವರೆಗೆ ಕುಣಿಯುವವರೂ ತ್ರಿಶ್ಶೂರ್ ಜಿಲ್ಲೆಯಲ್ಲಿದ್ದಾರೆ.

ಓಣಂ ದಿನಗಳಲ್ಲಿ ಕುಣಿಯುವಾಗ ಕೇರಳದ ಉತ್ತರ ಭಾಗದಲ್ಲಿ ಪ್ರಚಲಿತವಾಗಿರುವ ಹಾಡುಗಳನ್ನು ಹಾಡುತ್ತಾರೆ. ಹಿಂದೆ ಓಣಂ ದಿನಗಳಲ್ಲಿ ಮಾತ್ರ ಜನರು ಹೊಟ್ಟೆ ತುಂಬ ಊಟ ಮಾಡುತ್ತಿದ್ದರು. ಹಾಗೆ ಊಟ ಮಾಡಿದ ಅನಂತರ ಕುಣಿತಕ್ಕೆ ತೊಡಗುತ್ತಾರೆ. ಓಣಂನಲ್ಲಿ ಮಾತ್ರವಲ್ಲದೆ ಮನೆಯ ಇನ್ನಿತರ ವಿಶೇಷ ದಿನಗಳಲ್ಲೂ ಹೆಜ್ಜೆ ಕುಣಿತ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಈ ಕುಣಿತಕ್ಕೆ ಪ್ರಚಾರ ಕಡಿಮೆಯಾಗಿದೆ. ಈ ಕುಣಿತದ ಒಂದು ಗುಂಪಿನಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರಿರುತ್ತಾರೆ. ಮುದುಕರಿಂದ ತೊಡಗಿ ಮಕ್ಕಳವರೆಗೂ ಇರುತ್ತಾರೆ. ಒಬ್ಬರು ಹಾಡಿದಂತೆ ಇನ್ನುಳಿದವರು ಹಾಡುತ್ತಾ ಕುಣಿಯುತ್ತಾರೆ.

ಮೇಲ್ಜಾತಿಯವರಿಂದ ತೊಡಗಿ ಕೆಳಜಾತಿಯವರೆಗಿನ ಜನರು ಇದನ್ನು ನೋಡಿ ಆನಂದಿಸುತ್ತಾರೆ. ಅದಲ್ಲದೆ ಕುಣಿತವನ್ನು ನೋಡುವವರೂ ಕೆಲವು ಸಲ ಉತ್ಸಾಹದಿಂದ ಕುಣಿಯುವುದಿದೆ. ಹಳಬರ ಜೊತೆಗೆ ಹೊಸಬರು ಸೇರಿ ಕುಣಿದಾಗ ಅದೊಂದು ದೊಡ್ಡ ಕುಣಿತದ ಗುಂಪಾಗಿ ಬಿಡುತ್ತದೆ. ವೃತ್ತಾಕಾರದ ಕುಣಿತಕ್ಕೆ ವಾದ್ಯೋಪಕರಣಗಳನ್ನು ಬಳಸುವುದಿಲ್ಲ. ಅದರ ಬದಲಾಗಿ ಹೆಜ್ಜೆಯ ತಾಳಕ್ಕೆ ಹೊಂದುವಂತೆ ಚಪ್ಪಾಳೆ ತಟ್ಟುತ್ತಾ ಹಾಡುಗಳನ್ನು ಹೇಳುವುದು ಇದರ ಸಂಗೀತ ವಿಶೇಷತೆ. ತಾಳದ ವೇಗ ಹೆಚ್ಚಿದಂತೆ ನೋಟಕರ ಆವೇಶ ಹೆಚ್ಚಿ ಅವರೂ ಜೊತೆಗೆ ಕುಣಿಯುತ್ತಾರೆ.

ಒಟ್ಟು ನಾಲ್ಕು ರೀತಿಯ ಹೆಜ್ಜೆ ಕುಣಿತಗಳಿವೆ.

೧. ವಟ್ಟಕ್ಕಳಿ (ವೃತ್ತಾಕಾರದ ಕುಣಿತ)

೨. ವಡಕ್ಕನ್ ಚುವ್‌ಡ್‌(ಉತ್ತರದ ಕುಣಿತ)

೩. ತೆಕ್ಕನ್ ಚುವ್‌ಡ್‌(ದಕ್ಷಿಣದ ಕುಣಿತ)

೪. ಚವ್‌ಟ್ಟ್‌ತಿರುಮಿ

‘ವಟ್ಟಕ್ಕಳಿ’ ಯಲ್ಲಿ ಎರಡು ಚಪ್ಪಾಳೆ ಹೊಡೆದು ಎರಡು ಹೆಜ್ಜೆಗಳನ್ನಿಡುವುದು  ಕಂಡು ಬರುತ್ತದೆ.

‘ವಡಕ್ಕನ್ ಚವ್‌ಟ್‌’ ನಲ್ಲಿ ಕೈಗಳಿಂದ ಮೂರು ಚಪ್ಪಾಳೆ ಹೊಡೆದು ಎರಡು ಕಾಲುಗಳಿಂದ ಒಂದೊಂದು ಹೆಜ್ಜೆ ಇಟ್ಟು ಅನಂತರ ಮುಂದಕ್ಕೆ ಒಂದು ನೆಗೆತ. ಇದರ ತಾಳ ೧, ೨, ೩ -೧, ೨, ೩ ಹೀಗೆ ಮುಂದುವರಿಯುತ್ತದೆ.

‘ತೆಕ್ಕನ್ ಚವ್‌ಟ್‌’ನಲ್ಲಿ ಎರಡು ಸಲ ಚಪ್ಪಾಳೆ ತಟ್ಟಿ ದೇಹದ ಹಿಂಭಾಗವನ್ನು ಹಿಂದಕ್ಕೆ ತಳ್ಳಿ ಅನಂತರ ಹಿಂತಿರುಗಿ ಹೆಜ್ಜೆಗಳನ್ನಿಡುವುದು ಕಂಡುಬರುತ್ತದೆ. ಇದರ ತಾಳ೧, ೨, -೧, ೨, -೧, ೨ ಹೀಗೆ ಇರುತ್ತದೆ.

‘ಚವ್‌ಟ್‌ತಿರುಮಿ’ಯಲ್ಲಿ ಮುಂದಕ್ಕೆ ಎರಡು ಸಲ ನೆಗೆದು ಎರಡು ಚಪ್ಪಾಳೆ ತಟ್ಟುವುದು. ಅನಂತರ ಎರಡು ಹೆಜ್ಜೆಗಳನ್ನಿಡುವುದು ಇದರ ತಾಳ ೧, ೨, ೩, ೪, -೧, ೨, ೩, ೪ ಈ ರೀತಿಯಾಗಿರುತ್ತದೆ.

ಈ ಕುಣಿತದ ಹಾಡುಗಳು ಆರೋಹಣ ಮತ್ತು ಅವರೋಹಣ ಕ್ರಮಕ್ಕೆ ಹೊಂದಿಕೊಂಡಿರುತ್ತದೆ.

ಐತಿಹ್ಯ: ಚೆರುಮಿ (ಹರಿಜನರ ಒಂದು ಪಂಗಡ) ಯವರು ರಾಜನ ಗದ್ದೆಗಳಲ್ಲಿ ಬೀಜ ಬಿತ್ತುವ, ನಾಟಿ ಮಾಡುವ ಕೆಲಸಗಳನ್ನು ಮಾಡುತ್ತಾರೆ. ಅವರು ಆ ಕೆಲಸ ಮುಗಿಸಿ ಬರುವಾಗ ಹಿಂದಿನ ಕಾಲದಲ್ಲಿ ಅವರಮನೆಯ ರಾಣಿಯರು ದೀಪ ಬೆಳಗಿ, ಭತ್ತ ತುಂಬಿದ ಪರೆ (೧೪ಸೇರು ಭತ್ತ ತುಂಬುವ ಅಳತೆ ಮಾನ) ಯನ್ನು ಹಿಡಿದುಕೊಂಡು ಬಂದು ಸ್ವಾಗತಿಸುತ್ತಿದ್ದರು. ಆ ಚೆರುಮಿಗಳಿಗೆ ಈ ಗೌರವ ಸಿಕ್ಕಿದ ಬಗೆಗೆ ಒಂದು ಐತಿಹ್ಯವಿದೆ.

ಕೋವಿಲನನ್ನು ರಾಜನ ಸೈನಿಕರು ಹಿಡಿದುಕೊಂಡು ಹೋಗುವ ಸಂದರ್ಭದಲ್ಲಿ ಒಬ್ಬಳು ಹೊಲೆಯ ಸ್ತ್ರೀಯು ಭತ್ತವನ್ನು ಗುಡಿಸುತ್ತಿದ್ದಳು. ಕಣ್ಣಕಿ ಚಿಲಂಬು (ಭೂತಗಳ ಕಾಲುಗಳಿಗೆ ಕಟ್ಟುವ ಒಂದು ತರದ ಗೆಜ್ಜೆ)ಹಿಡಿದುಕೊಂಡು ಹೋಗುವಾಗ ಚೆರುಮಿ ಸ್ತ್ರೀ ಹಾಡನ್ನು ಹಾಡುತ್ತಿದ್ದಳು. ನೀನು ಯಾರ ಕುರಿತು ಹಾಡುತ್ತಿದ್ದಿ ಎಂದು ಕೇಳಿದ್ದಕ್ಕೆ ಹಾಡಿಕೊಂಡು ಈ ದಾರಿಯಾಗಿ ಹೋದ ವ್ಯಕ್ತಿಯ ಕುರಿತು ಹಾಡುತ್ತಿದ್ದೇನೆ ಎಂದಳು. ಇಷ್ಟು ಹೇಳಿ ಆ ಸ್ತ್ರೀ ಕಣ್ಣಕಿಗೆ ಕೋವಿಲನು ಹೋದ ದಾರಿಯನ್ನು ತೋರಿಸಿ ಕೊಟ್ಟಳು. ದಾರಿಯನ್ನು ತೋರಿಸಿ ಕೊಟ್ಟದ್ದಕ್ಕೆ ‘ಹಾಡಲು ಮತ್ತು ಕುಣಿಯಲು ನಿಮ್ಮ ಕುಲಕ್ಕೆ ತುಂಬ ಶಕ್ತಿ ಬರಲಿ’ ಎಂದು ಕಣ್ಣಕಿ ಹರಿಸಿದಳು. ಹೀಗೆ ಅವರು ಹಾಡಿಕೊಂಡು ಬಂದ ಹಾಡುಗಳೆ ಮುಂದೆ ಹೆಜ್ಜೆ ಕುಣಿತದ ಹಾಡುಗಳಾದವು.

ಓಣಂ ದಿನಗಳಲ್ಲಿ ಮಹಾಬಲಿ ರಾಜನನ್ನು ಸ್ವಾಗತಿಸುವ ಸಂದರ್ಭಗಳಲ್ಲಿ ಮತ್ತು ಇನ್ನಿತರ ವಿಶೇಷ ಉತ್ಸವಗಳಿಂದು ಚವ್‌ಟ್ಟ್‌ಕ್ಕಳಿ ನಡೆಯುತ್ತದೆ. ಇದಕ್ಕೆ ವಿಶೇಷವಾದ ವೇಷ ಭೂಷಣಗಳೇನೂ ಇರುವುದಿಲ್ಲ. ಕುಣಿಯುವವರೆಲ್ಲ ವೃತ್ತಾಕಾರವಾಗಿ ನಿಂತು ಕೈ ಚಪ್ಪಾಳೆ ತಟ್ಟುತ್ತಾ ಹೆಜ್ಜೆಗಳನ್ನು ಹಾಕುತ್ತಾರೆ. ಚಪ್ಪಾಳೆ ತಟ್ಟುವುದು ಹೆಜ್ಜೆ ಹಾಕುವುದನ್ನು ತಾಳಕ್ಕೆ ಹೊಂದಿದಾಗ ಹಾಡು ಹೇಳುವವರು ಹಾಡಲು ಪ್ರಾರಂಭಿಸುತ್ತಾರೆ. ಆ ಹಾಡುಗಳನ್ನು ಹಾಡುತ್ತಾ ಕುಣಿಯುವವರು ಕುಣಿಯುತ್ತಾರೆ. ಕೇರಳದ ಉತ್ತರಭಾಗದ ಹಾಡುಗಳಲ್ಲಿ ಆರೋಮಲ್ ಚೇಗವರ್, ಆದಿ ರಾಜ, ಚಂದು, ಮತ್ತು ಉಣ್ಣಿಯಾರ್ಚರೇ ಮೊದಲಾದ ವೀರರ ಚರಿತ್ರೆಯನ್ನು ಹೇಳುವುದೇ ಈ ಹಾಡುಗಳ ವಸ್ತು.

ವೃತ್ತಾಕಾರದ ಕುಣಿತದಲ್ಲಿ ವೃತ್ತ ತಪ್ಪದಂತೆ ನೋಡಿಕೊಳ್ಳಲು ಕುಣಿಯುವವರ ಮಧ್ಯೆ ಉರುಳನ್ನು ಇಡಲಾಗುತ್ತದೆ. ಆ ಉರುಳಿನ ಮೇಲೆ ಉರಿಸಿದ ದೊಡ್ಡ ಕಾಲು ದೀಪ ಇಡುತ್ತಾರೆ. ಕುಣಿತ ನೋಡಲು ಬಂದವರು ದಕ್ಷಿಣೆಯಾಗಿ ಐದು ಅಥವಾ ಹತ್ತು ರೂಪಾಯಿಗಳನ್ನು ಉರುಳಿನ ಮೇಲಿಡುವುದು ಇದೆ. ಇತ್ತೀಚೆಗೆ ಈ ಚವ್‌ಟ್ಟ್‌ಕ್ಕಳಿ ನಡೆಯವುದು ಬಹಳ ಅಪರೂಪ. ಓಣಂ ಕಾಲದಲ್ಲಿ ಕೆಲವು ಸಂಘ, ಸಂಸ್ಥೆಯವರು ಇದನ್ನು ಏರ್ಪಡಿಸುತ್ತಾರೆ.

ಕೆ.ಯು.ಎಚ್. ಅನುವಾದ ಕೆ.ಕೆ.ಎಸ್.

ಚವಿಟ್ಟು ನಾಟಕಂ ಚವಿಟ್ಟು ನಾಟಕವು ಕೇರಳದ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಒಂದು ಕಲಾರೂಪವಾಗಿದ್ದು ಅದನ್ನೊಂದು ಜನಪದ ಕಲಾರೂಪವೆಂದು ಪರಿಗಣಿಸಲಾಗಿದೆ. ಅದೊಂದು ತಾಂತ್ರಿಕ ಕಲಾರೂಪಕೂಡ. ಇದು ಎರ್ನಾಕುಲಂ ಮತ್ತು ಪಾಲ್ಘಾಟು ಜಿಲ್ಲೆಗಳಲ್ಲಿ ಪ್ರದರ್ಶಿತವಾಗುವ ಧಾರ್ಮಿಕ ಕಲಾರೂಪ. ಇದರ ಪ್ರದರ್ಶನ ಕಾರರು ತ್ರಿಶ್ಶೂರಿನ ಬಳಿಯ ಕೋತುರುತ್ತು ದ್ವೀಪವಾಸಿಗಳು. ಯೇಸು ಕ್ರಿಸ್ತನ ಬದುಕಿನ ಮುಖ್ಯ ಘಟನಾವಳಿಗಳನ್ನು ಆಧರಿಸಿದ ನವಂಬರ ಇಪ್ಪತ್ತೇಳು ಮತ್ತು ದಶಂಬರ ಮೂರನೇ ತಾರೀಖಿನ ಮಧ್ಯೆ ಬರುವ ಆದಿತ್ಯವಾರವನ್ನೊಳಗೊಂಡ ಒಂದು ಪರ್ವಕಾಲವಾದ ಎಡ್ವೆಂಟ್ (Ad-vent) ನಿಂದ ಇದು ಆರಂಭವಾಗುತ್ತದೆ. ಕ್ರಿಸ್ಮನ್ ಸಂದರ್ಭದಲ್ಲಿ ಇಗರ್ಜಿಗಳಲ್ಲಿ ಮೂವರಸರ್ ನಾಟಕ, ಜೆನೋವಾ, ಕಾರಲ್‌ಮನ್, ಗ್ರಾಮಸುಂದರಿ, ಅಲ್ಲೀಸು ನಾಟಕ ಮತ್ತು ಯಾಕ್ಕೋಬು ನಾಟಕಗಳು ಪ್ರದರ್ಶಿತವಾಗುತ್ತವೆ.

71

ಪಾಲ್ಘಾಟಿನ ಕೊಳಿಂಞಪಾರದಲ್ಲಿ ಮೂವರಸರ್ ನಾಟಕವು ಪ್ರದರ್ಶಿತವಾಗುತ್ತದೆ. ಬಾಲಕ್ರಿಸ್ತನನ್ನು ಪುಣ್ಯ ನಕ್ಷತ್ರದ ಬೆಳಕಿನ ಆಧಾರದಲ್ಲಿ ಕಾಣಲು ಬಂದ ಮೂವರು ಅರಸರ ಕಥೆಯನ್ನು ಇದರಲ್ಲಿ ಅನುಕರಿಸಲಾಗುತ್ತದೆ. ಈ ನಾಟಕವನ್ನಾಡುವ ಹಕ್ಕು ಪಾಲ್ಘಾಟು ಜಿಲ್ಲೆಯ ಗಡಿಪ್ರದೇಶದ ಮೂವತ್ಮೂರು ‘ದೇಶಂ’ಗಳ ಜನರಿಗೆ ಸೇರಿದುದು. ಕೇರಳದ ರಂಗಪರಂಪರೆಗೆ ಅನುಗುಣವಾಗಿ ವೇಷಭೂಷಣ, ಮುಖವಾಡ, ತೆರೆ ಮುಂತಾದುವು ಇದರಲ್ಲಿ ಬಳಕೆಯಾಗುತ್ತದೆ. ಹಿಂದೂ ಪುರಾಣಕಥೆಗಳನ್ನು ಪ್ರದರ್ಶಿಸುವ ಕಥಕ್ಕಳಿಗೆ ಸಮಾಂತರವಾಗಿ ಈ ಕಲೆ ಬೆಳೆಯಿತು ಎನ್ನುತ್ತಾರೆ. ಸಬೀನಾ ರಾಫಿ, ಚುಮ್ಮರ್ ಚೂಂಡಾಲ್ ಮುಂತಾದವರು ಪೋರ್ಚುಗೀಸ್ ವಲಸೆಕಾರರಿಂದ ಈ ರಂಗಕಲೆ ಬಂತೆಂದು ಅಭಿಪ್ರಾಯಪಡುತ್ತಾರೆ. ವೇಷಭೂಷಣ ಮತ್ತು ಇತರ ಹಿನ್ನೆಲೆಯ ಪರಿಕರಗಳಲ್ಲಿ ಕಥಕ್ಕಳಿಯ ಪ್ರಭಾವವು ಇದರ ಮೇಲಾಗಿದೆ. ಯುದ್ಧವು ಕಳರಿಪಯಟ್ಟುವಿನ ಮಾದರಿಯಲ್ಲಿದೆ.

ಹದಿನೆಂಟನೆಯ ಶತಮಾನದಲ್ಲಿ ಕಥಕ್ಕಳಿಯಲ್ಲಿ ಸುಧಾರಣೆಯಾದ ಕಾಲಘಟ್ಟದಲ್ಲಿ ಚವಿಟ್ಟುನಾಟಕವು ಮೂಡಬಂತೆನ್ನುತ್ತಾರೆ. ಹಿಂದೂಗಳಾಗಿದ್ದು ಮತಾಂತರಗೊಂಡ ಕ್ರಿಶ್ಚಿಯನ್ನರು ಕಥಕ್ಕಳಿಯಂಥ ಕಲಾರೂಪವೊಂದು ತಮಗೂ ಬೇಕೆಂದು ಇದನ್ನು ಅಳವಡಿಸಿಕೊಂಡಿರಬಹುದು. ಅಂತೆಯೇ ಪಾಶ್ಚಾತ್ಯ ನಾಟಕಗಳ ಪ್ರಭಾವವೂ ಚವಿಟ್ಟು ನಾಟಕವು ಮೂಡಿಬರಲು ಪ್ರೇರಣೆಯಾಗಿರಬೇಕು. ಪುರಾಣ ಪಾತ್ರಗಳ ಬದಲಾಗಿ ಇದರಲ್ಲಿ ಐತಿಹಾಸಿಕ ನಾಯಕರು ಬರುತ್ತಾರೆ. ತಮಿಳುನಾಡಿನ ತೆರುಕೂತ್ತುವಿನೊಂದಿಗೂ ಸಂಬಂಧವುಳ್ಳ ಚವಿಟ್ಟು ನಾಟಕವು ಪೋರ್ಚುಗೀಸರು ಕೇರಳದಲ್ಲಿ ತಳವೂರುವುದಕ್ಕೂ ಮೊದಲೇ, ಅಂದರೆ ಹದಿನಾರನೆಯ ಶತಮಾನದಲ್ಲಿ ಸಿಲೋನ್‌ನಿಂದ ಕೊಚ್ಚಿರಾಜ್ಯಕ್ಕೆ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಮೂಲಕ ಬಂದಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಯುರೋಪಿನ ಚಕ್ರವರ್ತಿಗಳ ಬದುಕನ್ನು ಆಧಾರವಾಗಿಸಿಕೊಂಡ ಚವಿಟ್ಟು ನಾಟಕಗಳಲ್ಲಿ ಅವರು ಕ್ರೈಸ್ತಮತಕ್ಕೆ ಪರಿವರ್ತನೆಗೊಂಡ ಘಟನೆಗಳೂ ಬರುತ್ತವೆ. ಹಾಡುಗಳು ಮತ್ತು ಗಾಯನಗಳಿಂದ ಕೂಡಿಕೊಂಡು ಇದು ಭಾವಗೀತಾತ್ಮಕವಾಗಿದೆ. ಹಾಡುಗಳು ತಮಿಳು ಛಂದೋರೂಪವು ಆಗಾಗ ಕಾಣಿಸಿಕೊಳ್ಳುತ್ತದೆ. ಕಲಿಪ್ಪಾ, ಕವಿ, ಇನ್ನಿಸೈ, ಕೊಚ್ಚಗಂ, ವೆನ್ಬಾ ಮತ್ತು ಪಾರಾಣಿಗಳೆಂಬ ಛಂದಸ್ಸು ಬಳಕೆಯಾಗಿದೆ.  ‘ಕಾಂತಾರು’ ಎಂದು ಕರೆಯಲ್ಪಡುವ ರೋಮನ್ ಕೆಥೋಲಿಕ್ ಚರ್ಚ್‌‌ನ ಸಂಗೀತದ ಲಯ ಕೂಡ ಕಾಣಿಸಿಕೊಳ್ಳುತ್ತದೆ.

ವೃತ್ತಾಕಾರದ ರಂಗಮಂದಿರದ ಸುತ್ತ ನೆಲದಲ್ಲಿ ಕುಳಿತುಕೊಳ್ಳುವ ಪ್ರೇಕ್ಷಕರನ್ನು ರಂಗಮಂಟಪದಿಂದ ಪ್ರತ್ಯೇಕಿಸಲು ಒಂದು ಪರದೆಯನ್ನು ಇಬ್ಬರು ಅಗತ್ಯವಾದಾಗಲೆಲ್ಲ ಹಿಡಿದುಕೊಂಡು ರಂಗದ ಹಿಂಬದಿಯಿಂದ ಪಾತ್ರಗಳು ಪ್ರವೇಶಿಸುವುದಕ್ಕೂ ಅನುವು ಮಾಡಿಕೊಡುತ್ತಾರೆ. ಕುಣಿಯುತ್ತ ರಂಗಪ್ರವೇಶಿಸುವ ನಟರು ರಂಗಮಂಟಪದಲ್ಲಿ ಕುಣಿಯುತ್ತ  ಒಂದು ಸುತ್ತ ಬಂದುಬಿಡುತ್ತಾರೆ. ಹಿಮ್ಮೇಳದವರೊಂದಿಗೂ ಜತೆಹಾಡುಗಾರರೊಂದಿಗೂ ರಂಗದ ಹಿಂದೆ ನಿಲ್ಲುವ ಪ್ರಧಾನ ಗಾಯಕ ಅಣ್ಣಾವಿ ತನ್ನ ಸಂಗಡಿಗರೊಂದಿಗೆ ರಂಗದ ಮಧ್ಯಕ್ಕೂ  ಬಂದುಬಿಡುತ್ತಾನೆ. ಒಂದಿಬ್ಬರು ಮಂತ್ರಿಗಳೊಂದಿಗೆ ರಂಗಕ್ಕೆ ಬರುವ ಅರಸನ ಜತೆ ಒಬ್ಬರೋ ಇಬ್ಬರೋ ಸೈನಿಕರೂ ಇರುತ್ತಾರೆ. ರಂಗದಲ್ಲಿ ಗತ್ತಿನಿಂದ ಹೆಜ್ಜೆಹಾಕಿ ಅರಸನು ಸಿಂಹಾಸನದಲ್ಲಿ ಮಂಡಿಸಿದಾಗ ಸೇವಕರು ಚಾಮರವಿಕ್ಕುತ್ತಾರೆ. ಆಗ ‘ಆಸನ ಎರಿದುವ’ ಎಂದು ಕರೆಯಲಾಗುವ ಹಾಡನ್ನು ಅಣ್ಣಾವಿ ಗುನುಗುತ್ತಾನೆ. ಉಳಿದ ಪಾತ್ರಗಳೂ ತಮ್ಮ ಕಾರ್ಯಗಳು, ಉದ್ದೇಶಗಳ ಬಗೆಗೆ ಹಾಡುತ್ತಾರೆ. ಕೆಲವೊಮ್ಮೆ ಹಾಡಿನ ಬಳಿಕ ಒಂದೋ ಎರಡೋ ವಾಕ್ಯಗಳನ್ನು ಗದ್ಯದಲ್ಲಿ ಹೇಳುತ್ತಾರೆ. ಗದ್ಯವು ಶೈಲೀಕೃತ ವಾಚಕಂ. ಇಡೀ ನಾಟಕ ಪ್ರದರ್ಶನಕ್ಕೆ ಸುಮಾರು ಒಂದು ವಾರ ಬೇಕಾಗುತ್ತದೆ. ತೆರುಕೂತ್ತುವಿನ ಕಟ್ಟಿಯಕ್ಕಾರನ್ ಮತ್ತು ಅಣ್ಣಾವಿ ಹಾಗೂ ಶ್ರೀಲಂಕಾದ ನಾಡಗಾಮರ ಪಾತ್ರವು ಚವಿಟ್ಟು ನಾಟಕಂನಲ್ಲಿ ಇರುವಂತೆಯೇ ಇದೆ. ಸಂಗೀತವೂ ಹಾಗೆಯೇ.

ಇದರ ರಂಗತರಬೇತಿನಲ್ಲಿ ಒಂದು ನಿರ್ದಿಷ್ಟ ಚೌಕಟ್ಟಿದ್ದು ಸಂಗೀತ ಮತ್ತು ನೃತ್ಯ ಸಂಯೋಜನೆಯಲ್ಲಿ ವೈಶಿಷ್ಟ್ಯವಿದೆ. ಒನ್ನಾಂಕಾಲು ಮೊದಲ್ಗೊಂಡು ಅಂಜಾಲ ಕಾಲುಗಳು ನೃತ್ಯಭಾಗದ ಐದು ಮುಖ್ಯ ಹೆಜ್ಜೆಗಳಾಗಿವೆ. ರಂಗತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುವವರು ವಾಧ್ಯಾರ್. ದಿನನಿತ್ಯ ಮೂರರಿಂದ ನಾಲ್ಕು ಗಂಟೆಗಳ ಕಾಲ ತರಬೇತಿ ಇರುತ್ತದೆ. ಜನವರಿ ಆರರ ಮುಂಜಾನೆ, ಐತಿಹಾಸಿಕವಾಗಿ ಮುಖ್ಯವಾದ ದಿನದಂದು, ಮೂವರಸರ್ ನಾಟಕವು ಪ್ರಾರಂಭವಾಗುತ್ತದೆ. ಅಂದು ಏಸುಕ್ರಿಸ್ತ ಹುಟ್ಟಿ ಹದಿಮೂರನೆಯ ದಿನ. ನಟರು, ಜನಪದ ಜನ, ಪಾರಿಶ್‌ಪಾದ್ರಿಗಳು – ಎಲ್ಲರೂ ರಂಗಕರ್ಮದ ಅವಿಭಾಜ್ಯ ಅಂಗವಾಗಿ ಬಿಡುತ್ತಾರೆ. ಪಾಪ್ಪನಾಡಿಯಿಂದ ಮೊದಲ ಅರಸ ಬಾಲ್ತಸಾರ್, ನಡುಪಾಳಯಂನಿಂದ ಮೂರನೆಯ ಅರಸ ಕ್ಯಾಸ್ಪರ್ – ಇವರೆಲ್ಲ ಅಲಂಕೃತ ಎತ್ತಿನಗಾಡಿಗಳಲ್ಲಿ ಉರಿಸಿದ ಪಂಜುಗಳು ಮತ್ತು ವಾದ್ಯಘೋಷಣೆಗಳೊಂದಿಗೆ ಹೊರಟು ಚರ್ಚ್‌‌ನ ಪ್ರಾಂಗಣಕ್ಕೆ ಬಂದು ಸೇರುತ್ತಾರೆ. ಮೂವರೂ ಚರ್ಚ್‌‌ನ ಪ್ರಾಂಗಣಕ್ಕೆ ತಲಪುತ್ತಲೆ ಕಾರ್ಯಕ್ರಮವು ಆರಂಭವಾಗುತ್ತದೆ.

ಚವಿಟ್ಟುನಾಟಕಂನಲ್ಲಿ ಬೈಬಲ್ ಕಥೆಗೆ ಸಂಬಂಧಿಸಿದ ವಸ್ತುವು ಸಾಮಾನ್ಯವಾಗಿರುತ್ತದೆ. ಇಸ್ತಾಕಿಯೂ ನಾಟಕಂ, ಪೂರ್ವ ದೂಸೆಫ್ ನಾಟಕಂ ಮುಂತಾದುವು ಇಂಥ ಕಥೆಗಳ ನಾಟಕಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. ಕೋ (ಗೋ)ತುರುತ್ ದ್ವೀಪದ ನಟರು ವಿದ್ವಾಂಸರಿಗೆ ತಿಳಿಸಿದ ವಿಷಯ : ಇತ್ತೀಚೆಗೆ ತಾವು ಕೆಲವು ಚವಿಟ್ಟುನಾಟಕಂಗಳನ್ನು ಪತ್ತೇದಾರಿ ಕಾದಂಬರಿಯ ವಸ್ತುಗಳನ್ನು ಆಧರಿಸಿ ರೂಪಿಸಿಕೊಂಡಿದ್ದಾರೆ. ಪ್ರದರ್ಶನಕಾರರಲ್ಲಿ ಅನೇಕರು ದೇಶದ ಬೇರೆ ಬೇರೆ ಭಾಗದಿಂದ ಸರಕಾರಿ ಸೇವೆಗಾಗಿ ಬಂದಿರುವವರು.

ಪಿ.ಎನ್. ಅನುವಾದ ಕೆ.ಕೆ.