ಚಿಮ್ಮಾನಕ್ಕಳಿ ಕಣ್ಣೂರು ಜಿಲ್ಲೆಯ ಪರಿಶಿಷ್ಟ ಜಾತಿಯವರಲ್ಲಿ ರೂಢಿಯಲ್ಲಿರುವ ನಾಟಕವಿದು. ‘ಕನ್ನಲ್ ಕಳಂಪಾಟ್ಟು’ ಎಂಬ ಗರ್ಭ ಬಲೀಕರಣಕ್ಕೆ ಸಂಬಂಧಿಸಿದಂತಗೆ ಈ ನಾಟಕ ಪ್ರದರ್ಶನಗೊಳ್ಳುತ್ತದೆ. ‘ಕೇಂದ್ರೋನ್‌ಪಾಟ್ಟ್‌’ನೊಂದಿಗೆ ಹಾಡುವ  ‘ಜೋದಿಯುಂ ಪಿಡಯುಂ’ ಎಂಬ ದೀರ್ಘವಾದ ಹಾಡಿನಿಂದ ಆರಿಸಿದ ಹಾಡು ಇದಾಗಿರುವುದರಿಂದ ಇದನ್ನು ‘ಜೋದಿಯುಂ ಪಿಡಯುಂ ಪಾಟ್ಟು’ ಎಂದು ಚಿಮ್ಮಾನಕ್ಕಳಿಯ ಸಾಹಿತ್ಯವನ್ನು ಹೇಳಲಾಗುತ್ತದೆ. ಗರ್ಭಿಣಿಯರನ್ನು ಬಾಧಿಸುವ ತೊಂದರೆಗಳನ್ನು ದೂರವಿಡಲು ನಡೆಸುವ ಕರ್ಮಗಳ ಭಾಗವಿದು.

ಈ ಕಲಾಪ್ರಕಾರದಲ್ಲಿ ದುಡಿಯನ್ನು ಬಾರಿಸುತ್ತ ಹಾಡುತ್ತ ನೃತ್ಯ ಮಾಡುವ ಮಾವಿಲನ್, ಮಾವಿಲೆತ್ತಿ, ಮಾಪಿಳ್ಳೆ, ಜೊತಿಯಾನ್ ಮೊದಲಾದವರು ಮುಖ್ಯ ಪಾತ್ರಧಾರಿಗಳು. ಆರ್ಯರ ನಾಡಿನಲ್ಲಿ ಹುಟ್ಟಿದ ಅನ್ನಪೂರ್ಣೇಶ್ವರಿ ಕೋಲತ್ತು ನಾಡಿಗೆ ಬರುವ ಕಥೆಯನ್ನು ಹೇಳುವುದರೊಂದಿಗೆ ಚಿಮ್ಮನಕ್ಕಳಿ ಆರಂಭಗೊಳ್ಳುತ್ತದೆ. ಕೋಲತ್ತು ನಾಡು ಕನಸನ್ನು ಕಂಡ ದೇವಿ ಹಡಗನ್ನು ನಿರ್ಮಿಸಿದ ಸಾವಿರ ಶೂದ್ರರು, ಸಾವಿರ ಕೊಂಕಣಿಗಳು, ಜೋದಿಗಳು, ಮಾವಿಲರು, ಏಳು ದೇವಿಯರು ಇವರೊಂದಿಗೆ ಹಡಗಿನಲ್ಲಿ ಯಾತ್ರೆ ಆರಂಭಿಸುತ್ತಾರೆ. ಆರಿಯಕ್ಕಡಲ್, ಚೋರಕ್ಕಡಲ್, ಪೊತ್ತಾಲಿಕ್ಕಡಲ್, ತಾವರೆ ಕಡಲು ಇವುಗಳನ್ನೆಲ್ಲಾ ದಾಟಿ ಆಯಿರಂತೆಞಿನಲ್ಲಿ ಹಡಗು ತಲುಪಿತು. ಚಿಕ್ಕ ಕಾಡು ಪ್ರದೇಶಕ್ಕೆ ಬಂದ ದೇವಿ ಜೊತೆಗಿರುವ ದೇವಿಯರನ್ನು ಒಂದೊಂದೆಡೆ ಕಳುಹಿಸಿದಳು. ಮಾವಿಲರು, ಜೋದಿಗಳು ಕಾಡಿನಲ್ಲಿ ಕೃಷಿ ಮಾಡಿ ಜೀವಿಸುವಂತೆ ಹೇಳಿದಳು. ಅನ್ನಪೂರ್ಣೇಶ್ವರಿಯು ಚಿರಕ್ಕನ್ ಬ್ರಾಹ್ಮಣನನ್ನು ಕಂಡು ಭೂಮಿಯನ್ನೂ ಶ್ರೀಕ್ಷೇತ್ರವನ್ನೂ ಖರೀದಿಸಿ ವರ್ಷಂಪ್ರತಿ ಉತ್ಸವ ನಡೆಸಲು ಏರ್ಪಾಡು ಮಾಡಿಸಿದಳು.

ಕಾಡಿಗೆ ಹೋದ ಮಾವಿಲರೂ ಜೋದಿಗಳೂ ಏಕಾದಿರಿ ಬಂದು ತಲುಪಿದರು. ಅಲ್ಲಿಯ ಜಮೀನ್ದಾರ ಪುನಂ ಕೃಷಿಯನ್ನು ಕೈಗೊಳ್ಳುವಂತೆ ಜೋದಿ ಅಂಬುವಿಗೆ ಆದೇಶಿಸುತ್ತಾರೆ. ಕೊಯ್ಲು ಮಾಡಿದ ಬತ್ತಕ್ಕೆ ಕಾವಲು ನಿಲ್ಲುವಂತ ಮಾವಿಲ ಕಣ್ಣನಿಗೆ ಹೇಳುತ್ತಾರೆ. ಮಾವಿಲರು ಕೃಷಿ ಮಾಡಿದರೆ, ಜೋದಿಗಳು ನಾಡಿಗೆ ತೆರಳುತ್ತಾರೆ. ಕಾಡನ್ನು ಕಡಿದು, ಬೆಂಕಿ ಹಾಕಿ, ಮಣ್ಣನ್ನು ಉತ್ತು, ಬಿತ್ತನೆ ಮಾಡಿ ಬತ್ತ ಬೆಳೆದರು. ಕೊಯ್ಲು ಮಾಡಿದರು. ಕಣಜದಲ್ಲಿ ರಾಶಿ ಹಾಕಿದ ಬತ್ತಕ್ಕೆ ಮಾವಿಲ ಕಣ್ಣ ಕಾವಲು ನಿಲ್ಲುತ್ತಾನೆ.

ಮಾಡಾಯಿ ನಗರದಲ್ಲಿ ಸಕ್ಕರೆ, ಕೊಬ್ಬರಿಯನ್ನು ಇಟ್ಟು ತೆರಳುವ ಮಮ್ಮು ಎಂಬ ಮಾಪಿಳ್ಳೆ ಒಂದು ದಿನ ಮಾವಿಲ ಕಣ್ಣನ ಮನೆಗೆ ಬರುತ್ತಾನೆ. ಮನೆಯಲ್ಲಿ ಕಣ್ಣನ ಹೆಂಡತಿ ಕುಂಬ ಮಾತ್ರ ಇರುತ್ತಾಳೆ. ಮಮ್ಮು ಹಾಗೂ ಕುಂಬ ಮಧ್ಯೆ ಪ್ರೀತಿ ಮೂಡುತ್ತದೆ. ಕಣ್ಣ ರಾತ್ರಿ ಹೊತ್ತು ಕಾವಲು ನಿಲ್ಲುವ ವಿಷಯ ತಿಳಿದ ಮಮ್ಮು ರಾತ್ರಿ ಬರುವುದಾಗಿ ಹೇಳಿ ಅಲ್ಲಿಂದ ತೆರಳುತ್ತಾನೆ. ಕತ್ತಲಾಗುತ್ತಿದ್ದಂತೆ ಕುಂಬಳನ್ನು ಹುಡುಕುತ್ತ ಮಾಪಿಳ್ಳೆ ಬರುತ್ತಾನೆ. ಕಾವಲಿನಲ್ಲರುವ ಕಣ್ಣನಿಗೆ ಕುಲದೈವಗಳು ಕನಸಿನಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತದೆ. ಕೈಯಲ್ಲಿ ದೊಂದಿ ದೀಪವನ್ನೂ ಕತ್ತಿಯನ್ನು ಹಿಡಿದುಕೊಂಡು ಕಣ್ಣ ಮನೆಗೆ ಬರುತ್ತಾನೆ. ಕನಸು ಸತ್ಯವೆಂದು ತಿಳಿದಾಗ ಕಣ್ಣ ತುಂಬ ಹಾಗೂ ಮುಮ್ಮವನ್ನು ಕೊಂದು ಮನೆಗೆ ಬೆಂಕಿ ಹಚ್ಚುತ್ತಾನೆ. ಅವರು ರೌದ್ರಾವತಾರಿಗಳಾಗಿ ಹೊರಗೆ ಬರುತ್ತಾರೆ. ಇದೇ ವೇಳೆ ಊರಲ್ಲಿ ತಿರುಗಿಕೊಂಡಿದ್ದ ಜೋದಿಗಳು ಮುಕ್ಕುವರೊಂದಿಗೆ ಸ್ನೇಹ ಬೆಳೆಸಿ ಕಡಲಿಗೆ ಹೋಗಿ ಮೀನು ಹಿಡಿದು ತಂದು ಅದನ್ನು ಊರಲ್ಲಿ ಮಾರಾಟ ಮಾಡಿ,  ಅದರಲ್ಲಿ ಸಿಕ್ಕಿದ ಹಣದಿಂದ ಸಾರಾಯಿ ಕುಡಿದು ಜಗಳ ಮಾಡಿಕೊಂಡು, ಪರಸ್ಪರ ಹೊಯ್ದಾಟ ಮಾಡುತ್ತಾರೆ.

ಕೋಣೆಗೆ ಸುತ್ತಲೂ ಎಲೆಗಳನ್ನು ಕಟ್ಟಿ ಮರೆಮಾಡಿ ರಂಗಕ್ಕೆ ಬರುವ ಜೋದಿಗಳು ದುಡಿ, ತಾಳಗಳೊಂದಿಗೆ ಹಾಡುತ್ತ ಅಭಿನಯ ಮಾಡುತ್ತ ಕಥೆಯನ್ನು ಪ್ರಸ್ತುತಪಡಿಸುವರು. ಹಾಡಿಗೂ ತಾಳಕ್ಕೂ ಮುದ್ರೆಯನ್ನು ತೋರಿಸುತ್ತ ಹೆಜ್ಜೆ ಹಾಕುವರು. ಆರ್ಯರ ಊರಿನಿಂದ ಹಡಗಿನಲ್ಲಿ ಪ್ರಯಾಣ ಮಾಡುತ್ತ ರಂಗಕ್ಕೆ ಬರುತ್ತಾರೆ.  ಕೃಷಿಯಲ್ಲಿ ಬಳಸುವ ಒಂದೊಂದು ವಿಚಾರವನ್ನೂ ನಾಟಕೀಯವಾಗಿ ಅಭಿನಿಯಿಸುತ್ತಾರೆ. ತಾಳವನ್ನು ಬದಲಾಯಿಸಿ, ಸಾಲುಗಳನ್ನು ಕುಂಠಿತಗೊಳಿಸಿ ರಂಗದಲ್ಲಿ ಬದಲಾವಣೆ ಮಾಡುತ್ತಾರೆ.

ಕಣ್ಣನ ಬರುವಿಕೆ, ಕಾವಲು ನಿಲ್ಲುವ ಕನಸು ಕಾಣುವಿಕೆಯೊಂದಿಗೆ ಕತ್ತಿ ಹಾಗೂ ಪಂಜನ್ನು ಹಿಡಿದುಕೊಂಡು ಬರುವುದು ರಂಗದಲ್ಲಿ ಇನ್ನಷ್ಟು ಕಳೆ ಕಟ್ಟಲು ಕಾರಣವಾಗುತ್ತದೆ. ಕುಂಬ ಮತ್ತು ಮಾಪಿಳ್ಳೆ ನಡುವಣ ಸಲ್ಲಾಪಗಳು ರಸಮಯ ಹಾಡಿನ ಮೂಲಕ ಅಲ್ಲಿ ಪ್ರಸ್ತುಗೊಳ್ಳುತ್ತದೆ. ರಂಗದಲ್ಲಿ ನಿರ್ಮಿಸಲಾದ ಓಲೆಗರಿಯ ಮನೆಗೆ ಪಂಜಿನಿಂದ ಬೆಂಕಿ ಹಚ್ಚುವಾಗ ಘಟನಾವಳಿಗಳು ಆರಂಭಗೊಳ್ಳುತ್ತವೆ.

ಉತ್ತರ ಕೇರಳದ ಕೆಳವರ್ಗದವರ ಚರಿತ್ರೆಯೇ ವಾಸ್ತವವಾಗಿ ಈ ಅನುಷ್ಠಾನ ನಾಟಕದ ಒಟ್ಟು ವಸ್ತುವಾಗಿದೆ. ಮಾವಿಲರೂ, ಜೋದಿಗಳೂ ಮಾಪಿಳ್ಳೆಯೂ ಮುನ್ನೆಲೆಯಲ್ಲಿದ್ದು ರಂಗಕ್ಕೇರುವ ಈ ಪ್ರದರ್ಶನದಲ್ಲಿ ಮುಖ್ಯವಾಗಿ ಹೊಲೆಯರು ತಮ್ಮ ಸ್ವಂತ ಕತೆಯನ್ನು ಹೇಳುತ್ತಾರೆ. ಈಗ ಚಿಮ್ಮಾನಕ್ಕಳಿ ಒಂದು ಆಚರಣೆಯೆಂಬ ನೆಲೆಯಲ್ಲಿ ನಿಂತಿಲ್ಲ. ಇದಕ್ಕೊಂದು ಕಲೆಯ ಸ್ಥಾನ ಸಿಕ್ಕಿದೆ.

ಚಿಮ್ಮಾನಕ್ಕಳಿಯ ಬಗ್ಗೆ ಅಧಿಕೃತವಾದ ಅಧ್ಯಯನ ಈವರೆಗೆ ನಡೆದಿಲ್ಲ. ಬಾಲಕೃಷ್ಣ ಕೊಯ್ಯಾಲಿಯವರ ‘ಕೇರಳದ ಕಲಾರೂಪಗಳು’ ಎಂಬ ಗ್ರಂಥದಲ್ಲಿ ಚಿಮ್ಮಾನಕ್ಕಳಿಯ ಬಗ್ಗೆ ವಿಮರ್ಶೆಯಿದೆ. ಡಾ.ಎಂ.ವಿ.ವಿಷ್ಣು ನಂಬೂದಿರಿಯವರ ಫೋಕ್‌ಲೋರ್ ನಿಘಂಟುವಿನಲ್ಲೂ ಪ್ರಸ್ತಾಪವಿದೆ. ಕೇರಳ ಅಕಾಡೆಮಿಯ ‘ಪೊಲಿ’ ನಿಯತಕಾಲಿಕದಲ್ಲಿ ರಾಮಂತಳಿ ರವಿಯರ ಲೇಖನದಲ್ಲಿ ಇದರ ಬಗ್ಗೆ ಉಲ್ಲೇಖವಿದೆ.

ವಿ.ಎಂ.ಯು. ಅನುವಾದ ಬಿ.ಎಸ್.ಎಸ್.

ಚೆಂಚರು ಆಂಧ್ರಪ್ರದೇಶದಲ್ಲಿರುವ ಬುಡಕಟ್ಟುಗಳಲ್ಲಿಯೇ ಅತ್ಯಂತ ಹಿಂದುಳಿದ ಪಂಗಡವಿದು. ಇವರು ಬೇಟೆಯಾಡಿ, ಜೇನು ಶೇಖರಣೆ ಮಾಡಿ ಜೀವನ ಸಾಗಿಸುತ್ತಾರೆ. ೧೯೪೮ರಲ್ಲಿ ಅಯ್ಯಪ್ಪನ್ ಎಂಬ ಮಾನವಶಾಸ್ತ್ರಜ್ಞ ‘ಚೆಂಚು’ ಎಂಬ ಪದ ಚೆಟ್ಟು(ಮರ) ಎಂಬ ಪದದಿಂದ ಬಂದಿರಬಹುದೇನೋ ಎಂದು ಅಭಿಪ್ರಾಯಪಟ್ಟಿದ್ದಾನೆ. ‘ಚುಂಚು’ (ಇಲಿ)ಗಳನ್ನು ಹಿಡಿಯುವುದರಿಂದ ಇವರಿಗೆ ಈ ಹೆಸರು ಬಂದಿದೆ ಎಂಬ ಅಭಿಪ್ರಾಯವಿದೆ. ಇವರ ನಿವಾಸಗಳನ್ನು ‘ಗೂಡೆಂ’ ಎಂದು ಕರೆಯುತ್ತಾರೆ. ಶಾಸ್ತ್ರಕಾರರು ಇವರನ್ನು ಶ್ರೀಲಂಕಾದಲ್ಲಿಯ ‘ವೆಡ್ಡಾ’ ಪಂಗಡದೊಂದಿಗೆ ಹೋಲಿಸುತ್ತಾರೆ. ದೇಹಾಕೃತಿ ಬಡಕಲಾಗಿದ್ದು ಸುಮಾರು ೧೬೩ ಸೆಂ.ಮೀ. ಎತ್ತರವಿರುತ್ತಾರೆ. ಮೈಬಣ್ಣ ಕಪ್ಪು ಇಲ್ಲವೆ ಕಂದು ಬಣ್ಣದ್ದಾಗಿರುತ್ತದೆ. ಚೆಂಚರಲ್ಲಿಯೇ ಅಡವಿ ಚೆಂಚಲು (ಕಾಡು ಚೆಂಚರು), ಊರ ಚೆಂಚುಲು (ಊರಿನ ಚೆಂಚುಗಳು) ಎಂಬ ಭೇದಗಳಿವೆ. ನಲ್ಲಮಲ ಕಾಡುಗಳಲ್ಲಿ ಜೀವಿಸುವ ಚೆಂಚರನ್ನು ಕಾಡು ಇಲ್ಲವೆ ಕೊಂಡ ಚೆಂಚುಲು (ಗುಡ್ಡಗಾಡು ಚೆಂಚರು) ಎಂದು, ಬಯಲು ಪ್ರಾಂತಗಳಲ್ಲಿ ವಾಸಿಸುವ ಚೆಂಚರನ್ನು ಊರ ಚೆಂಚರು ಎಂದು ಕರೆಯುತ್ತಾರೆ. ಇವಲ್ಲದೆ ಬೊಂತ ಚೆಂಚುಲು (ಬೊಂತೆ ಚೆಂಚುಗಳು), ಕೃಷ್ಣ ಚೆಂಚುಗಳು ಎಂಬ ಇತರ ಭೇದಗಳೂ ಇವೆ. ಅಲೆಮಾರಿಗಳಿವರು. ವೈವಾಹಿಕ ಸಂಬಂಧಗಳು ಚೆಂಚರ ನಡುವೆಯೇ ನಡೆಯುತ್ತವೆ. ಮನೆ ಗೋತ್ರ, ಮನೆತನದ ಹೆಸರಿನ ಆಧಾರದ ಮೇಲೆಯೇ ಮದುವೆಗಳು ನಿಶ್ಚಯವಾಗುತ್ತವೆ. ಸೋದರತ್ತೆ, ಸೋದರ ಮಾವನ ಮಕ್ಕಳು ಮದುವೆಗೆ ವರಸೆಯಾಗುತ್ತಾರೆ. ಚೆಂಚರಲ್ಲಿ ೨೬ ಗೋತ್ರಗಳಿವೆಯಂತೆ. ದಾಸರಿ, ಉಡತ (ಅಳಿಲು) ಮನೆತನದ ಹೆಸರುಗಳು ಮಾತ್ರ ಎಲ್ಲ ಪ್ರಾಂತಗಳಲ್ಲಿಯೂ ಇವೆ. ಗೋತ್ರಗಳು ಹೆಚ್ಚಾಗಿ ಗಿಡಮರಗಳು, ಪ್ರಾಣಿಗಳು ಹೆಸರನ್ನೇ ಹೊಂದಿವೆ. ಉದಾಹರಣೆಗೆ ಅರ್ತಿ (ಅರಟಿ =ಬಾಳೆ), ನಿಮ್ಮಲ (ನಿಮ್ಮ = ನಿಂಬೆ), ಕುಡುಮುಲು (ಕಡುಬು), ಪುಲಿಚೆರ್ಲ (ಹುಲಿ), ತೋಕಲ (ಬಾಲ) ಮೊದಲಾದವು. ಇವರ ಮಾತೃಭಾಷೆ ತೆಲುಗು.

ಚೆಂಚುಗಳದು ಪಿತೃಪ್ರಧಾನ ವ್ಯವಸ್ಥೆ. ತಂದೆಯಿಂದ ಮಗನಿಗೆ ಆಸ್ತಿ ವಂಶಪಾರಂಪರ್ಯವಾಗಿ ಸಂಕ್ರಮಿಸುತ್ತದೆ. ವರದಕ್ಷಿಣೆ ಇಲ್ಲವಾದರೂ ಓಲಿ ಕಟ್ಟಬೇಕಾಗುತ್ತದೆ. ಇವರ ಗುಡಿಸಲುಗಳು ಭೂಮಿಯ ಮೇಲಿಂದ ನಾಲ್ಕು ಅಡಿಯವರೆಗೂ ಬಿದಿರಿನ ತಡಿಕೆಗಳಿಂದ ವೃತ್ತಾಕಾರವಾಗಿದ್ದು, ಅನಂತರದ್ದು ಕೊನಿಕಲ್ ಆಕಾರದಲ್ಲಿದ್ದು ಗುಡಿಸಲಿಗೆ ಮೇಲೆ ಛಾವಣಿಯನ್ನು ಹಾಕಲಾಗಿರುತ್ತದೆ. ತಟ್ಟಿಗಳಿಗೆ ಸೆಗಣಿಯಾಗಲಿ ಇಲ್ಲವೆ ಮಣ್ಣನ್ನಾಗಲಿ ದಪ್ಪನಾಗಿ ಮೆತ್ತಿ ಗೋಡೆಯಂತೆ ಬಲಪಡಿಸಿರುತ್ತಾರೆ. ಗುಡಿಸಲಿಗೆ ಛಾವಣಿಗೆ ಕಾಡಿನ ಹುಲ್ಲನ್ನು ಬಳಸುತ್ತಾರೆ. ೮ ರಿಂದ ೧೫ ಅಡಿಗಳ ವಿಸ್ತೀರ್ಣದಲ್ಲಿ ಈ ಗುಡಿಸಲುಗಳಿರುತ್ತವೆ. ಇನ್ನು ಕೆಲವು ಚೆಂಚರು ಗುಹೆಗಳಲ್ಲಿ ವಾಸಿಸುತ್ತಾರೆ. ಚೆಂಚರು ಅಂಟಿನ (ಗೋಂದು) ಶೇಖರಣೆ, ಜೇನಿನ ಶೇಖರಣೆ, ವಿಪ್ಪಪುವ್ವು (ವೊವುವಾ) ಶೇಖರಣೆಯನ್ನು ಮಾಡುವುದರಲ್ಲಿ ಹೆಚ್ಚಿನ ನಿಷ್ಣಾತರು. ಅಂಟನ್ನು ಪೇಟೆಯಲ್ಲಿ ಮಾರಿದ ನಂತರ ಅಷ್ಟಿಷ್ಟು ಪದಾರ್ಥಗಳನ್ನು, ಸಾರಾಯಿಯನ್ನು ಕೊಂಡು ಕುಡಿಯುತ್ತಾರೆ.

ಜೇನನ್ನು ತೆಗೆಯುವ ವಿಧಾನ: ಒಂದು ಸಣ್ಣ ಬಿದಿರಿನ ಬೊಂಬನ್ನು ತೆಗೆದುಕೊಂಡು ಒಂದು ಕಡೆ ಸೂಜಿಯಂತೆ ಮೊನಚಾಗಿ ಕೆತ್ತುತ್ತಾರೆ. ಇನ್ನೊಂದು ಕಡೆ ತುಂಬಾ ಉದ್ದನಾದ, ತೆಳ್ಳನಾದ ಹಗ್ಗವನ್ನು ಕಟ್ಟುತ್ತಾರೆ. ಆ ಹಗ್ಗವನ್ನು ಕಾಡಿನಲ್ಲಿ ಸಿಗುವ ನಾರು ಪದಾರ್ಥಗಳಿಂದ ಹೆಣೆಯುತ್ತಾರೆ. ಜೇನಿನ ಶೇಖರಣೆಗೆ ಭಾವಮೈದುನ, ಇಲ್ಲವೆ ಅಳಿಯನೊಂದಿಗಾಗಲಿ ಹೋಗುತ್ತಾರೆ. ಅಣ್ಣ ತಮ್ಮಂದಿರಾದರೆ ಆಸ್ತಿಗಾಗಿ ತಮ್ಮ ಸಾವನ್ನು ಬಯಸುತ್ತಾರೆಂದು ಅವರಿಗೆ ಹೆದರಿಕೆಯಂತೆ. ಅನಂತರ ಬೊಂಬನ್ನು ಹಿಡಿದು ಆ ಕಡೆಯಿಂದ ಗುಡ್ಡವನ್ನು ಹತ್ತುತ್ತಾರೆ. ಜೇನಿನ ತಿಟ್ಟು ಹತ್ತಿರಾದಂತೆ ಒಮ್ಮೆಗೇ ಅದಕ್ಕೆ ಬಿದಿರಿನ ಮೊನೆಯನ್ನು ಚುಚ್ಚುತ್ತಾರೆ. ಮೈಗೆ ಬೂದಿಯನ್ನು ಬಳಿದುಕೊಂಡಿರುವುದರಿಂದಾಗಿ ಅವರನ್ನು ಜೇನುಹುಳ ಕಚ್ಚುವುದಿಲ್ಲ. ಹಾಗೆ ಚುಚ್ಚಿದ ಬೊಂಬಿನ ಈ ಬದಿಗೆ ಹಗ್ಗ ಕಟ್ಟಿರುವ ಕಾರಣ ಆ ಹಗ್ಗದ ಮೂಲಕವಾಗಿಯೇ ಜೇನು ಸೋರುತ್ತದೆ. ಜೇನನ್ನು ಹೀಗೆ ಶೇಖರಿಸುತ್ತಾರೆ.

ಬೇಟೆಗೆ ಹೋಗಬೇಕಾದರೆ ಜೊತೆಗೆ ತಪ್ಪದೆ ಬೇಟೆ ನಾಯಿಗಳಿದ್ದು ಕೈಯಲ್ಲಿ ಬಿದಿರಿನ ಕೋಲುಗಳು, ಬಿಲ್ಲುಗಳನ್ನು ಇಟ್ಟುಕೊಂಡಿರುತ್ತಾರೆ. ಇವರಿಗೆ ಪ್ರಿಯವಾದ ಮಾಂಸ ಉಡ. ಚೆಂಚರು ವನ ಮೂಲಿಕೆಗಳನ್ನೇ ವೈದ್ಯಕೀಯಕ್ಕೆ ಉಪಯೋಗಿಸುತ್ತಾರೆ. ಪ್ರಕಾಶಂ, ಕರ್ನೂಲ್, ಮಹಬೂದ್‌ನಗರ್ ಜಿಲ್ಲೆಗಳಲ್ಲಿ ಇವರನ್ನು ನೋಡಬಹುದು.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೪೯,೨೩೨. ಅಂದರೆ ಶೇಕಡಾ ೦.೯೮.

ಬಿ.ಕೆ.ಆರ್. ಅನುವಾದ ಕೆ.ಎಸ್.

ಚೆಂಚಿತ ಕಥ ಇದು ಭಕ್ತಿ ಪ್ರಧಾನವಾದ ತೆಲುಗು ಜನಪದ ಪ್ರದರ್ಶನ ಕಲೆ. ಅಲೆಮಾರಿಗಳಾದ ‘ಚೆಂಚರು’ ಈ ಕಥೆಯನ್ನು ಗೀತೆಯ ರೂಪದಲ್ಲಿ ಹಾಡುತ್ತಾರೆ. ಇವರ ಆರಾಧ್ಯ ದೈವವಾದ ಚೆಂಚು ಲಕ್ಷ್ಮಿಯನ್ನು ಪ್ರಧಾನವಾಗಿಟ್ಟುಕೊಂಡು ಹಗಲು ರಾತ್ರಿ ಕಥೆ ಹೇಳುತ್ತಾರೆ. ಈ ಕಥೆಯನ್ನು ಹಾಡಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಕುಲ ಸಂಪ್ರದಾಯಕ್ಕೆ ಸೇರಿದ ಕಲೆಯಿದು. ಇವರು ಕಥೆಯನ್ನು ಗೀತೆ ರೂಪದಲ್ಲಿ ಹಾಡುವುದರಿಂದ ಚೆಂಚಿತ ಕಥೆಯಾಗಿದೆ. ಇಲ್ಲಿ ಕಥೆಯನ್ನು ಇಬ್ಬರು ಹಾಡುತ್ತಾರೆ. ಒಬ್ಬನು ಮುಖ್ಯ ಕಥೆಗಾರ ಇನ್ನೊಬ್ಬನು ಜೊತೆಗೆ ಧ್ವನಿಗೂಡಿಸುವವನು. ವೇಷಧಾರಣೆ ನವಿಲುಗರಿಯ ಕುಚ್ಚನ್ನು ತಲೆಯ ಮುಂಭಾಗ ಇರುವಂತೆ ಕೆಂಪು ಬಟ್ಟೆಯಿಂದ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ. ಈಗ ನವಿಲು ಗರಿಯ ಕುಚ್ಚು ತಲೆಯ ಮೇಲೆ ನಿಂತು ಅರಳಿದ ಪುಷ್ಪದಂತಿರುತ್ತದೆ. ಅಷ್ಟೇ ಅಲ್ಲದೆ ಬಿಡಿ ನವಿಲು ಗರಿಗಳನ್ನು ತಲೆಯ ಸುತ್ತ ಸಿಕ್ಕಿಸಿಕೊಂಡು, ಅವು ಬಿದ್ದು ಹೋದ ಕೂದಲಿನಂತೆ ಕಾಣುವ ರೀತಿ ಅಲಂಕರಿಸಿಕೊಳ್ಳುತ್ತಾನೆ. ಲುಂಗಿ ಉಟ್ಟುಕೊಂಡು ಉದ್ದನೆಯ ಅಂಗಿಯನ್ನು ಧರಿಸಿ ಕಂಕುಳಲ್ಲಿ ಜೋಳಿಗೆ, ಬಲಗೈಯಲ್ಲಿ ವಿಜಯ ಗಂಟೆ. ಇಲ್ಲವೆ ಕಂಚಿನ ತಮಟೆಯನ್ನು ಹಿಡಿದಿರುತ್ತಾರೆ. ಇದನ್ನು ಕಡ್ಡಿಯಿಂದ ನುಡಿಸುತ್ತಾನೆ. ಕಿವಿಗಳಿಗೆ ದೊಡ್ಡದಾದ ರಿಂಗ್‌ಗಳನ್ನು ಹಾಕಿಕೊಂಡಿರುತ್ತಾರೆ. ಇವನ ಮುಖ್ಯವಾದ್ಯ ಕನಕ ತಮಟೆ ಅಥವಾ ವಿಜಯ ಗಂಟೆ ಇದನ್ನು ನುಡಿಸುತ್ತಾ ಮುಖ್ಯ ಕಥೆಗಾರ ಕಥೆ ಹೇಳುತ್ತಾನೆ. ಧ್ವನಿಗೂಡಿಸುವ ಕಲಾವಿದ ಕೊಳಲನ್ನು ಆರಂಭದಲ್ಲೂ ಕಥೆಯ ಕೊನೆಯಲ್ಲೂ ೧೦ -೧೫ ನಿಮಿಷಗಳ ಕಾಲ ನಿಲ್ಲಿಸದೆ ನುಡಿಸುತ್ತಾನೆ. ಈ ಕೊಳಲು ಎಂಟು ಗಿಣ್ಣುಗಳು, ಆರು ರಂಧ್ರಗಳು ಇರುವ ಒಂದು ಸಣ್ಣ ಬಿದಿರು ಕೋಲು ಸುಮಾರು ಒಂದೂವರೆ ಅಡಿ ಇರುತ್ತದೆ. ಇವರು ಸುಮಾರು ಮೂರು ಗಂಟೆಗಳ ಕಾಲ ಕಥೆ ಹೇಳವರು. ಕಥೆಯನ್ನು ಪ್ರಾರಂಭಿಸುವ ಮುನ್ನ ಊದುವ ಕೊಳಲಿನ ಧ್ವನಿಯನ್ನು ಪ್ರಾರ್ಥನಗೀತೆಯೆಂದು ಭಾವಿಸುತ್ತಾರೆ. ಅನಂತರ ಕಥೆಗಾರ ತಮಟೆ ನುಡಿಸುತ್ತಾ “ಓ ಆದಿ ಲಕ್ಷ್ಮಿ ವಂದನೆ ಓ ಚೆಂಚುಲಕ್ಷ್ಮಿ ವಂದನೆ ಎಂದು” ಚೆಂಚಿತ ಕಥೆಯನ್ನು ಹಾಡಿನ ರೂಪದಲ್ಲಿ ಕೇಳಿಸುತ್ತಾನೆ. ಈ ಕಥೆಯಲ್ಲಿ ಚೆಂಚುಲಕ್ಷ್ಮಿಯ ಜನನ, ನರಸಿಂಹ ಸ್ವಾಮಿ ಮಾಡಿದ ಮೋಸ, ನರಸಿಂಹ ಸ್ವಾಮಿಯ ಮಾಯದ ಮಾತುಗಳು ಮೊದಲಾದ ವಿಷಯಗಳು ಈ ಕಥೆಯಲ್ಲಿ ಪ್ರಧಾನ ಅಂಶಗಳು. ಇವರು ನರಸಿಂಹಸ್ವಾಮಿಯನ್ನು ನಾನಾ ರೀತಿಯಲ್ಲಿ ಅಶ್ಲೀಲಬೈಗುಳಗಳ ಮೂಲಕ ನಿಂದಿಸುವುದು  ಈ ಕಥೆಯ ವೈಶಿಷ್ಟ್ಯ. ಜನಪದರ ನಂಬಿಕೆಗಳು, ವಶೀಕರಣ ಪದ್ಧತಿಗಳು ಈ ಕಥೆಯಲ್ಲಿ ಬರುವ ಸಾಂಸ್ಕೃತಿಕ ಅಂಶಗಳು. ಇವರು ಉಭಯ ಗೋದಾವರಿ ಜಿಲ್ಲೆಗಳ ಅನೇಕ ಪ್ರಾಂತ್ಯಗಳಲ್ಲಿ ಸಂಚರಿಸುತ್ತಾ ಕಥೆಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಟಿ.ಎಸ್.ಎನ್. ಅನುವಾದ ಎನ್.ಆರ್.

ಚೆಂಡೆ ಚೆಂಡೆಯು ಕೇರಳದಲ್ಲಿ ಅತಿಹೆಚ್ಚು ಪ್ರಚಾರದಲ್ಲಿರುವ ಒಂಚು ಚರ್ಮವಾದ್ಯ. ಅಧಿಕಾರಿಕವಾದ ಸಂಗೀತ ಶಾಸ್ತ್ರಗ್ರಂಥಗಳಲ್ಲಿ ಯಾವುದರಲ್ಲೂ ಇದರ ಕುರಿತು ವಿಷದವಾದ ವಿವರಗಳಿಲ್ಲ. ನಿರ್ಮಾಣ, ರೂಪ, ಪ್ರಯೋಗರೀತಿ – ಇವೆಲ್ಲವುಗಳಲ್ಲೂ ಪ್ರಾದೇಶಿಕವಾದ ವ್ಯತ್ಯಾಸಗಳಿದ್ದರೂ ಕೇರಳದ ಉದ್ದಗಲಕ್ಕೂ ಚೆಂಡೆಯ ಉಪಯೋಗ ಕಂಡುಬರುತ್ತದೆ. ಚೆಂಡೆಯ ಗುಂಪಿಗೆ ಸೇರುವ ಮರಂ, ಪರಚ್ಚೆಂಡ, ಉರುಟ್ಟುಚೆಂಡ, ಮುರಿಚೆಂಡ, ವೀಕ್ಕ್‌ಚೆಂಡ (ಡೋಲು) ಇತ್ಯಾದಿ ತುಂಬ ವಾದ್ಯಗಳು ಪ್ರಚಾರದಲ್ಲಿವೆ. ಇವುಗಳಲ್ಲಿ ಹಲವು ಜನಪದ  ಕಲೆಗಳಲ್ಲಿ ಬಳಕೆಯಾಗುತ್ತವೆ. ಶಾಂಡಿ, ಡಿಂಡಿಮ, ತ್‌ಡರ್, ಜತ್‌ಧರಿ, ಭೇರಿ, ದುಂದುಭಿ, ತ್ಥಲ್ಲುರಿ ಮುಂತಾದ ಸಂಸ್ಕೃತ ಪದಸಂಜ್ಞೆಗಳು ಚೆಂಡೆಯ ಪರ್ಯಾಯ ಪದಗಳಾಗಿಯೋ, ಸಮಾನ ಪದಗಳಾಗಿಯೋ ಪ್ರಯೋಗವಾದುದು ಕಂಡುಬರುತ್ತದೆ.

ಚೆಂಡೆಯ ವರ್ಗದಲ್ಲೆ ಸೇರುವ ‘ಮರಂ’ ಪರಯರ ಮತ್ತು ಪುಲಯರ ವಾದ್ಯ ದೇವಾಲಯಗಳ ನಿತ್ಯಪೂಜೆಗೆ ಸಂಬಂಧಿಸಿದಂತೆ ಪಾಣಿಬಾರಿಸುವುದು ಎಂಬ ಕಾರ್ಯ‌ಕ್ರಮ ನಡೆಯುತ್ತದೆ. ಪಾಣಿಬಾರಿಸಲು ‘ಮರಂ’ ಅನ್ನು ಉಪಯೋಗಿಸಲಾಗುತ್ತದೆ. ಗಿರಿಜನರೂ, ಹರಿಜನರೂ ಉತ್ಸವಾಚರಣೆಯ ಸಂದರ್ಭದಲ್ಲಿ ಬಳಸುವುದು ‘ಪರಚೆಂಡ’ವನ್ನು.

ಕೇರಳೀಯ ಕಲೆಗಳಲ್ಲಿ ಮುಖ್ಯವಾಗಿ ಉರುಟ್ಟುಚೆಂಡ (ಚೆಂಡೆ), ಡೋಲು – ಹೀಗೆ ಎರಡು ತೆರನ ಚೆಂಡೆಗಳಿವೆ. ಚೆಂಡೆಯ ಪ್ರಧಾನ ಭಾಗ ‘ಕುತ್ತಿ’ಯನ್ನು ಹಲಸಿನ ಕಾಂಡದಿಂದ ತಯಾರಿಸುತ್ತಾರೆ. ಹಲಸಿನ ಕಾಂಡವನ್ನು ಒಳಭಾಗದಿಂದ ಕೊರೆದು ‘ಸಿಲಿಂಡರ್’ ನಂತೆ ಮಾಡಿ ಅದರ ಎರಡು ಬದಿಗಳಲ್ಲೂ ಚರ್ಮದ ‘ಮುಚ್ಚಿಗೆ’ ಯಿಂದ ಮುಚ್ಚಬೇಕು. ಪನೆ, ಕೊಂದೆ, ಕಮಿಳು ಮುಂತಾದ ಮರಗಳಿಂದಲೂ ‘ಕುತ್ತಿ’ ತಯಾರಿಸಬಹುದು. ಹಿಂದೆ ಮಿಶ್ರಲೋಹವಾದ ಕಂಚಿನಿಂದಲೂ ‘ಕುತ್ತಿ’ಯನ್ನು ನಿರ್ಮಿಸುತ್ತಿದ್ದರೆಂದು ಹೇಳುತ್ತಾರೆ. ಚೆಂಡೆಕುತ್ತಿಯ ಉದ್ದ ಹದಿನೆಂಟು ಅಂಗುಲ. ವ್ಯಾಸ ಒಂಬತ್ತು ಅಂಗುಲ. ಹಸು ಇಲ್ಲವೇ ಹೋರಿಯ ಚರ್ಮದ ಮುಚ್ಚಿಗೆಯಿಂದ ಅದರ ಎರಡು ಬದಿಗಳನ್ನೂ ಮುಚ್ಚುತ್ತಾರೆ. ಚೆಂಡೆಯ ಮುಚ್ಚಿಗೆಯ ಚರ್ಮವು ಬಿಗಿಯಾಗಿ ಕುಳಿತುಕೊಳ್ಳಲು ಅದರ ಸುತ್ತ ಸಣ್ಣ ಸಣ್ಣ ತೂತುಗಳನ್ನು ಮಾಡಿ ಅವುಗಳಿಗೆ ಸೆಣಬಿನ ಹಗ್ಗವನ್ನು ಕೋದು ಪರಸ್ಪರ ಮುಚ್ಚಿಗೆಗಳನ್ನು ಬಂಧಿಸಲಾಗುತ್ತದೆ. (ಇಡಂದು) ಎಡಮುಚ್ಚಿಗೆ (ಬಲಂದರ) ಬಲಮುಚ್ಚಿಗೆ ಎಂದು ಹೆಸರಿನ ಮುಚ್ಚಿಗೆಗಳಲ್ಲಿ ಇಡಂದಲ ಎರಡು ಬಣ್ಣಗಳದು, ಬಲಂದಲ ಬಿಳಿ ಬಣ್ಣದ್ದು. ಮಂಗಳ ಕಾರ್ಯಗಳನ್ನು ಹೊರತುಪಡಿಸಿ ಎಡಂದಲವನ್ನು ಬಾರಿಸಲಾಗುತ್ತದೆ.

ಚೆಂಡೆಯನ್ನು ಕೋಲುಗಳನ್ನುಪಯೋಗಿಸಿ ಬಾರಿಸಲಾಗುತ್ತದೆ. ಹುಣಿಸೆ, ಮಂದಾರ, ಬಿದಿರು ಇತ್ಯಾದಿಗಳ ಸಣ್ಣಕೋಲುಗಳನ್ನು ತುಂಡರಿಸಿಕೊಂಡು ಅವನ್ನು ನಯವಾಗಿ ಹೆರೆದು ಕೋಲುಗಳನ್ನು ತಯಾರಿಸುತ್ತಾರೆ. ಕೋಲುಗಳಲ್ಲಿ ಹಿಡಿಯುವ ಭಾಗ ಒಂದಿಷ್ಟು ದಪ್ಪವಿರುತ್ತದೆ. ಮುಂಭಾಗ ಸ್ವಲ್ಪ ತೆಳ್ಳಗೆಯೂ ಬಾಗಿಯೂ ಇರುತ್ತದೆ. ಕೇರಳೀಯ ದೇವಾಲಯಗಳ ಪೂಜಾಸಮಯದ ಶಿವೇಲಿ (ಬಲಿ) ದೀಪಾರಾಧನೆಗಳಿಗೂ ಉತ್ಸವ ಸಂದರ್ಭದ ಚೆಂಡೆಮೇಳ, ತಾಯಂಬಕಗಳಿಗೂ ಚೆಂಡೆ ಎಂಬ ಮುಖ್ಯ. ತೆಯ್ಯಂ, ತಿರ ಮುಡಿಯೇಟ್ಟ್, ಅರ್ಜುನನ್  ನೃತ್ಯ, ಕುಮ್ಮಾಟ್ಟಿ ಮುಂತಾದ ಜನಪದ ಕಲೆಗಳಿಗೂ ಕಥಕ್ಕಳಿಗೂ ಉರುಟ್ಟು ಚೆಂಡೆ ಒಂದು ಪ್ರಧಾನ ಉಪಕರಣವಾಗಿದೆ.

ಡೋಲು ಚೆಂಡೆಯ ಕುತ್ತಿಯನ್ನೂ ಹಲಸಿನಿಂದಲೇ ತಯಾರಿಸಲಾಗುತ್ತದೆ. ಪನೆ, ಕೊಂದೆ, ಕುಮಿಳು ಮುಂತಾದುವನ್ನೂ ಬಳಕೆ ಮಾಡುತ್ತಾರೆ. ಚೆಂಡೆಗೆ ಹೋಲಿಸಿದರೆ ಇದರ ಉದ್ದ ಕಮ್ಮಿ, ವ್ಯಾಸ ಹೆಚ್ಚು. ಇದರ ಉದ್ದ ಹನ್ನೆರಡಂಗುಲ, ವ್ಯಾಸ ಹತ್ತಂಗುಲ. ಕುತ್ತಿಯ ಎರಡು ಭಾಗವನ್ನೂ ದನ ಇಲ್ಲವೇ ಹೋರಿಯ ಚರ್ಮದಿಂದ ಮುಚ್ಚಲಾಗುತ್ತದೆ. ಚೆಂಡೆಯ ಹಾಗೆಯೇ ಇದರ ನಿರ್ಮಾಣ ವಿಧಾನ ಕೂಡ. ಸ್ವಲ್ಪ ಹೆಚ್ಚು ದಪ್ಪದ ಕೋಲಿನಿಂದ ಬಾರಿಸಲಾಗುತ್ತದೆ. ಇದಕ್ಕೆ ತೆಂಗಿನ ಗೊನೆಯನ್ನು ಬಳಸುತ್ತಾರೆ. ದೇವಾಲಯಗಳ ಧಾರ್ಮಿಕಾಚರಣೆಗಳಿಗೂ ಉತ್ಸವಗಳ ಮೇಳಗಳಿಗೂ ‘ತಾಳವಾದ್ಯ’ ಎಂಬ ನೆಲೆಯಲ್ಲಿ ಡೋಲನ್ನು ಉಪಯೋಗಿಸಲಾಗುತ್ತದೆ. ತೆಯ್ಯಂ, ತಿರ, ಮುಡಿಯೇಟ್ಟ್, ಪಡಯಣಿ ಮುಂತಾದ ಜನಪದ ಕಲೆಗಳಲ್ಲೂ ಇದರ ಬಳಕೆಯಿದೆ.

ಕೇರಳದಲ್ಲಿ ಹೆಚ್ಚು ಪರಿಚಿತವಾಗಿರುವ ವಾದ್ಯಕಲೆಗಳಾದ ಚೆಂಡೆಮೇಳ, ತಾಯಂಬಕಗಳಲ್ಲಿ ಉರುಟ್ಟು ಚೆಂಡೆಗೆ ಹೆಚ್ಚು ಪ್ರಾಧಾನ್ಯವಿದೆ. ಡೋಲನ್ನು ತಾಳಹಿಡಿಯಲು ಬಳಸಲಾಗುತ್ತದೆ. ಪಂಜಾರಿಮೇಳಂ, ಚೆಂಬಡಮೇಳಂ, ಅಡಂದಮೇಳ, ಪಾಂಡಿಮೇಳಂ, ಮುಂತಾದವು ಪ್ರಧಾನವಾದ ಮೇಳಗಳಾಗಿವೆ. ತೃಶ್ಶೂರ್ ಪೂರಂ ದಿನಗಳಲ್ಲಿ ವಡಕ್ಕುಂನಾಥ ದೇವಾಲಯದ ಅಂಗಣದಲ್ಲಿ ನಡೆದುಬರುತ್ತಿರುವ ‘ಇಲಂಜಿತ್ತರ ಮೇಳ’ವು ತುಂಬ ಪ್ರಸಿದ್ಧಿಯನ್ನು ಪಡೆದುದಾಗಿದೆ.

ಎಸ್.ಕೆ. ಅನುವಾದ ಕೆ.ಕೆ.

ಚೆಕ್ಕ ಭಜನ ಇದು ಭಕ್ತಿ ಪ್ರಧಾನವಾದ ಜನಪದ ಪ್ರದರ್ಶನ ಕಲೆ. ಇದು ಸಮೂಹ ನೃತ್ಯಕ್ಕೆ ಸಂಬಂಧಿಸಿದ್ದು, ಇದು ಆಂಧ್ರಪ್ರದೇಶದ ಎಲ್ಲಾ ಪ್ರಾಂತ್ಯಗಳಲ್ಲೂ ಇದೆ. ಕೇವಲ ಭಕ್ತಿಪ್ರಧಾನವಾದ ಗೀತೆಗಳನ್ನೇ ಅಲ್ಲದೇ ದೇಶಭಕ್ತಿ ಗೀತೆಗಳು ಸಹ ಈ ಭಜನಗೀತೆಗಳಲ್ಲಿ ಕಾಣಿಸುತ್ತವೆ. ಸುಮಾರು ಒಂದು ಅಡಿಯಷ್ಟು ಉದ್ದವಿರುವ ಮರದ ಹಲಗೆಗಳನ್ನು ಬಲಗೈಯಲ್ಲಿ ಹಿಡಿದುಕೊಂಡು ತಾಳಕ್ಕೆ ಅನುಗುಣವಾಗಿ, ಲಯ ತಪ್ಪದೆ ಆಡುತ್ತಾ, ಹಾಡುತ್ತಾ ಮಾಡುವ ಭಜನೆಯೇ ಚೆಕ್ಕ ಭಜನೆ. ಎರಡು ಹಲಗೆಗಳ ಸಹಾಯದಿಂದ ಮಾಡುವ ಭಜನೆಯಾದ್ದರಿಂದ ಇದಕ್ಕೆ ‘ಚೆಕ್ಕ ಭಜನೆ’ ಎಂಬ ಹೆಸರು ಬಂದಿದೆ. ಹಳ್ಳಿಗಾಡಿನಲ್ಲಿ ಉತ್ಸಾಹಿ ಯುವಕರು ರಾತ್ರಿ ವೇಳೆ ಗುಡಿಯ ಹತ್ತಿರ ಬಂದು ಭಕ್ತಿಭಾವದಿಂದ ಈ ಭಜನೆಯನ್ನು ಮಾಡುತ್ತಾರೆ. ಇದು ಭಕ್ತಿಭಾವಗಳನ್ನು ಬೆಳೆಸುವುದಷ್ಟೇ ಅಲ್ಲದೇ ಶಾರೀರಿಕ ವ್ಯಾಯಾಮಕ್ಕೂ, ಮಾನಸಿಕ ಶಾಂತಿಗೂ ಸಾಕಷ್ಟು ಸಹಕರಿಸುತ್ತದೆ. ಇದರಲ್ಲಿ ಮಕ್ಕಳು, ದೊಡ್ಡವರು, ಸ್ತ್ರೀಯರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಸಂಖ್ಯಾನಿಯಮವಿಲ್ಲ. ಪಾಲ್ಗೊಳ್ಳುವವರಿಗೆ ಎರಡು ಹಲಗೆಗಳಿದ್ದರೆ ಸಾಕು. ಕಾಲಿಗೆ ಗೆಜ್ಜೆ ಕಟ್ಟಿಕೊಂಡರೆ ಈ ಭಜನೆಗೆ ಮತ್ತಷ್ಟು ಮೆರಗು. ಪ್ರದರ್ಶನ ಸಂದರ್ಭದಲ್ಲಿ ಹಾರ್ಮೋನಿಯಂ, ಡೋಲು ಬಳಸುತ್ತಾರೆ.

ಭಜನ ವೃಂದಕ್ಕೆ ನಾಯಕ ಗುರು, ಅವನು ಹಲಗೆ ಮೊಳಗಿಸಿದರೆ ಕಲೆಗಾರರೆಲ್ಲ ಗುರುವಿನ ಸುತ್ತ ಸೇರಿ ಭಜನೆ ಪ್ರಾರಂಭಿಸುತ್ತಾರೆ. ಮೊತ್ತಮೊದಲು ಗುರು ‘ಶ್ರೀಮದ್ರಮಾರಮಣ ಗೋವಿಂದ’ ಎಂದರೆ ಎಲ್ಲರೂ ‘ಗೋವಿಂದ’ ಎನ್ನುತ್ತಾ ಅನಂತರ ಗ್ರಾಮ ದೇವತೆಗಳ ಹೆಸರುಗಳನ್ನ ಒಂದೊಂದಾಗಿ ಹೇಳುತ್ತಿದ್ದರೆ  ಎಲ್ಲರೂ ಜೈ ಎನ್ನುತ್ತಾ ಪ್ರಾರಂಭಿಸಿ, ‘ವಿನಾಯಕ ಸ್ತುತಿ ಗೀತೆ’ ಯೊಂದಿಗೆ ಯಥಾಪ್ರಕಾರ ಭಜನೆ ಪ್ರಾರಂಭವಾಗುತ್ತದೆ. ‘ಶಿವ ಶಿವ ಮೂರ್ತಿವಿ, ಗಣನಾಥ, ನೀವು. ಶಿವುನಿ ಕುಮಾರುಡವು. ಗಣನಾಥ ಎನ್ನುತ್ತಾ’, ಆದಿ ಹೆಜ್ಜೆಯನ್ನು ಹಾಕಿದ ಅನಂತರ ಬೇರೆ ಹೆಜ್ಜೆಯನ್ನು ಹಾಕುತ್ತಾರೆ. ಇದು ನಿಯಮವೆಂದು ಭಾವಿಸುತ್ತಾರೆ. ಚೆಕ್ಕ ಭಜನೆಗಳಲ್ಲಿರುವ ಹೆಜ್ಜೆಗಳಲ್ಲಿ ಮುಖ್ಯವಾಗಿ ಆದಿ ಹೆಜ್ಜೆ, ನಾಲ್ಕನೆಯ ಹೆಜ್ಜೆ, ಐದನೆಯ ಹೆಜ್ಜೆ, ಆರನೆಯ ಹೆಜ್ಜೆ, ಏಳನೆಯ ಹೆಜ್ಜೆ, ಎಂಟನೆಯ ಹೆಜ್ಜೆ, ಒಂಬತ್ತನೆಯ ಹೆಜ್ಜೆ, ಹತ್ತನೆಯ ಹೆಜ್ಜೆ, ಎರಡು ಹೊಡೆತ, ಪರ್ಣಶಾಲೆ, ಕಪ್ಪಡುಗು, ಮೂಡವ ವೃದ್ಧಿ, ಮಾರ್ಪು, ಹಾಸ್ಯ ಹೆಜ್ಜೆ, ರೆಂಡುಮೆಲಿಕ, ಕಚ್ಚಪೋಟು, ಬಂಟಿಮೆ ಪೋರಡಗು, ರೆಂಡು ಕುಪ್ಪ, ಬೈಸಿಕಲ್ ಅಡಗು, ಗುರ್ರ‍ಪು ಅಡಗು, ವಂಟಿಭೇರಿ, ಮೂಡುವ ಭೇರಿ, ಚಿಕ್ಕಲ ಪಂದಿರಿ, ಪದ್ಮವ್ಯೂಹಂ, ಬಜಾರಡಗು, ವಾಲಮು ಮೊದಲಾದವು ಉಲ್ಲೇಖಾರ್ಹ.

ಈ ಹೆಜ್ಜೆಗಳಲ್ಲಿ ಸಾಕಷ್ಟು ಕಣ್ಮರೆಯಾಗಿವೆ. ಪದ್ಮವ್ಯೂಹ ಹೆಜ್ಜೆ, ಚೆಕ್ಕ ಭಜನೆಯಲ್ಲಿ ಅತ್ಯಂತ ಮುಖ್ಯವಾದುವೆಂದು ಹೇಳಬಹುದು. ಈ ಹೆಜ್ಜೆಗಳ ಪೈಕಿ ಕುಲುಕು ಹೆಜ್ಜೆಯಲ್ಲಿ ಕಲೆಗಾರ ಶರೀರವನ್ನು ಬಗೆಬಗೆಯಲ್ಲಿ ಕುಲುಕಿಸಿ, ವಿಶೇಷವಾದ ವಿನೋದವನ್ನುಂಟು ಮಾಡುತ್ತಾನೆ. ಇದು ವೇಗವಾಗಿ ಸಾಗುವ ಹೆಜ್ಜೆ, ಬಗೆಬಗೆಯ ಹೆಜ್ಜೆ ಹಾಕಿದ ಅನಂತರ ಕೊನೆಯಲ್ಲಿ ಮಂಗಳ ಗೀತೆಯೊಂದಿಗೆ ಚೆಕ್ಕ ಭಜನೆ ಪೂರ್ಣಗೊಳ್ಳುತ್ತದೆ. ಅಂತ್ಯದಲ್ಲಿ ಕೆಲವರು ದೇಶಭಕ್ತಿಗೀತೆಯನ್ನು ಹಾಡುತ್ತಾರೆ. ಕೊನೆಗೆ ಮಂಗಳಾರತಿ ತೆಗೆದುಕೊಂಡು ಎಲ್ಲರೂ ಮನೆಗಳಿಗೆ ತೆರಳುತ್ತಾರೆ. ಈ ಭಜನೆಯನ್ನು ವಿನಾಯಕ ಚತುರ್ಥಿ ಉತ್ಸವ ಮೆರೆವಣಿಗೆಗಳಲ್ಲೂ ಪ್ರದರ್ಶಿಸುತ್ತಾರೆ. ಅಷ್ಟೇ ಅಲ್ಲದೆ ಕೆಲವು ಜನಪ್ರಿಯ ಸಂಸ್ಥೆಗಳು ಈ ಕಲೆಯನ್ನು ಸಾಮಾಜಿಕ ಚೈತನ್ಯವನ್ನು, ನಾಗರಿಕ ಪ್ರಾಧಾನ್ಯವನ್ನು ವಿದ್ಯೆ, ವೈದ್ಯ, ಆರೋಗ್ಯ, ಮತ ಸಂಬಂಧ ವಿಷಯಗಳನ್ನು ಪ್ರಚಾರ ಮಾಡಲು ಉಪಯೋಗಿಸುತ್ತವೆ.

ಟಿ.ಎಸ್.ಎನ್. ಅನುವಾದ ಎನ್.ಆರ್.

ಚೆಡುಗುಡು ಆಂಧ್ರಪ್ರದೇಶದ ಅತ್ಯಂತ ಜನಪ್ರಿಯವಾದ ಗ್ರಾಮೀಣ ಕ್ರೀಡೆಗಳಲ್ಲಿ ಒಂದು. ಇದನ್ನು ‘ಚಿಡುಗುಡು’ ಎಂದು ಹೇಳುತ್ತಿದ್ದರು. ಅದೇ ಅನಂತರ ಕಾಲದಲ್ಲಿ ಚುಡುಗುಡು ಆಯಿತು. ಜನ ವ್ಯವಹಾರದಲ್ಲಿ ‘ಬಲಿಗುಡು’ ಎಂದು ಕೂಡು ಇದನ್ನು ಹೇಳುತ್ತಾರೆ. ಈಗ ಎಲ್ಲ ಕಡೆ ಜನಪ್ರಿಯವಾಗಿರುವ ‘ಕಬಡ್ಡಿ’ ಸ್ವಲ್ಪಮಟ್ಟಿಗೆ ಚುಡುಗುಡು ಆಟದಿಂದ ಬೇರೆಯಾಗುತ್ತದೆ. ಕಬಡ್ಡಿಯನ್ನು ಗಟ್ಟಿ ನೆಲದ ಮೇಲೆ ಆಡುತ್ತಾರೆ. ಚುಡುಗುಡು ಆಟವನ್ನು ಮರಳಿನ ನೆಲದ ಮೇಲೆ ಆಡುತ್ತಾರೆ. ಕಬಡ್ಡಿ ಆಟದಲ್ಲಿ ‘ಕಬಡ್ಡಿ ಕಬಡ್ಡಿ ಕಬಡ್ಡಿ’ ಎಂದು ಕೂಗಬೇಕೆಂದು ಭಾರತೀಯ ‘ಕಬಡ್ಡಿ’ ಸಂಘದವರು ನಿರ್ಧಾರ ಮಾಡಿದ್ದಾರೆ. ಇದರಿಂದ ‘ಚುಡುಗುಡು ಗುಡುಗುಡು’ ಎಂದು ಕೂಗುವ ಹಳ್ಳಿಯ ಆಟಗಾರರಿಗೆ ಕಷ್ಟವಾಗುತ್ತದೆ. ‘ಕಬಡ್ಡಿ ಕಬಡ್ಡಿ ಕಬಡ್ಡಿ’ ಎಂದಾಗ ಮಧ್ಯದಲ್ಲಿ ಉಸಿರಾಡಿ ಕಳ್ಳ ಆಟ ಆಡಲು ಅವಕಾಶವಿದೆ ಎಂದು ಸಾಂಪ್ರದಾಯಿಕ ಆಟಗಾರರು ಹೇಳುತ್ತಾರೆ. ಉತ್ತರ ಭಾರತದಲ್ಲಿ ಇದಕ್ಕೆ ‘ಹುತುತೂ’ ಅಥವಾ ಡು ಡು ಡು ಎಂಬ ಹೆಸರುಗಳಿವೆ.

ಕಬಡ್ಡಿಯಲ್ಲಿ ಕೂಗುವ ಆಟಗಾರನನ್ನು ಹಿಡಿದ ಆತ ಕೂಗುತ್ತ ಮಧ್ಯದ ಗೆರೆಯನ್ನು ಮುಟ್ಟಿದರೆ ಆತನನ್ನು ಮುಟ್ಟಿರುವವರೆಲ್ಲರೂ ಔಟ್ ಆಗುತ್ತಾರೆ. ಚೆಡುಗುಡು ಆಟದಲ್ಲಿ ಈ ತರಹದ ನಿಯಮವಿಲ್ಲ. ಮೊದಲು ಮುಟ್ಟಿದ ಒಬ್ಬರು ಮಾತ್ರ ಔಟ್ ಆಗುತ್ತಾರೆ.

‘ಚೆಡುಗುಡು’ ಆಡಲು ಹೊರಟ ಹುಡುಗರು ಹೊಳೆಯ ಮರಳು ದಿನ್ನೆಗಳಲ್ಲಿ ಅಥವಾ ಮರಳು ಹೆಚ್ಚಾಗಿರುವ ಮೈದಾನದಲ್ಲಿ ಎರಡು ತಂಡಗಳಾಗಿ ಆಟ ಪ್ರಾರಂಭಿಸುತ್ತಾರೆ. ಒಂದೊಂದು ತಂಡದಲ್ಲಿ ಕೊನೆಪಕ್ಷ ಐದಾರು ಜನ ಆಟಗಾರರು ಇರುತ್ತಾರೆ. ಚಚ್ಚೌಕಾಕಾರದಲ್ಲಿ ಗೆರೆಗಳನ್ನು ಎಳೆದು ಮಧ್ಯದಲ್ಲಿ ಒಂದು ಗೆರೆಯನ್ನು ಎಳೆಯುತ್ತಾರೆ. ಎರಡು ತಂಡಗಳಿಂದ ಒಬ್ಬರು ಮಧ್ಯದ ಗೆರೆಯನ್ನು ದಾಟಿ ‘ಚೆಡುಗುಡು ಗುಡು ಗುಡು’ ಎನ್ನುತ್ತಾರೆ. ಆಚೆ ತಂಡದ ಜನರನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಆಚೆ ತಂಡದವರು ಈ ವ್ಯಕ್ತಿಯನ್ನು ಹಿಡಿಯಲು ಉಪಾಯ ಹುಡುಕುತ್ತಾರೆ. ಈತ ಆಚೆ ತಂಡದರಲ್ಲಿ ಯಾರನ್ನಾದರೂ ಮುಟ್ಟಿ, ಅವರ ಹಿಡಿತಕ್ಕೆ ಸಿಕ್ಕದೆ ಗೆರೆಯನ್ನು ದಾಟಿ ಬಂದು ತನ್ನ ತಂಡವನ್ನು ಸೇರಿದರೆ ಆ ತಂಡಕ್ಕೆ ಒಂದು ಪಾಯಿಂಟ್ ಬರುತ್ತದೆ. ಕೂಗುವಾಗ ಅವನನ್ನು ಹಿಡಿದರೆ ಅಥವಾ ಕೂಗು ಮಧ್ಯದಲ್ಲಿ ನಿಂತು ಹೋದರೆ ಆಚೆ ತಂಡಕ್ಕೆ ಪಾಯಿಂಟ್ ಬರುತ್ತದೆ. ಕೂಗುವವನನ್ನು ಹಿಡಿದರೂ ಬಿಡಿಸಿಕೊಂಡು, ಕೂಗುವುದನ್ನು ಬಿಡದೆ ಮಧ್ಯದ ಗೆರೆಯನ್ನು ಕಾಲಿನ ಬೆರಳುಗಳಿಂದ ಅಥವಾ ಕೈಯ ಬೆರಳುಗಳಿಂದ ಮುಟ್ಟಿದರೆ ಪಾಯಿಂಟ್ ಇವರಿಗೇ ಬರುತ್ತದೆ. ಆಮೇಲೆ ಎರಡನೆಯ ತಂಡದಿಂದ ಇನ್ನೊಬ್ಬರು ಮೊದಲ ತಂಡದವರ ಎಲ್ಲೆಯೊಳಗೆ ಕೂಗುತ್ತ ಹೋಗಿ ಬರುತ್ತಾರೆ.

ಹೀಗೆ ಆಡುವಾಗ ನಿರ್ಣಯಿಸಿದ ಸಂಖ್ಯೆಯನ್ನು (೧೦ ಅಥವಾ ೨೦ ಪಾಯಿಂಟ್‌ಗಳು) ಯಾವ ತಂಡ ಮೊದಲು ಮಾಡಿದರೆ ಅದು ಗೆದ್ದಂತೆ. ಕಾಲಾನುಗುಣವಾಗಿ ಆಟದ ಸ್ಥಳ ಆಟ ಆಡುವವರ ಸಂಖ್ಯೆ, ಆಟ ಆಡುವ ವಿಧಾನ ಮುಂತಾದವೆಲ್ಲ ಬದಲಾಗುತ್ತವೆ. ಈ ಚೆಡುಗುಡು ಆಟವನ್ನು ಕುರಿತು ತೆಲುಗಿನ ಅನೇಕ ಕಾವ್ಯಗಳಲ್ಲಿ ಉಲ್ಲೇಖಗಳಿವೆ. ಇದರಲ್ಲಿ ಕೂಗುವ ಬಾಲಕ ಬೇರೆ ತಂಡದ ಒಬ್ಬರನ್ನು ಅಥವಾ ಇಬ್ಬರನ್ನು ಮುಟ್ಟಿ ಹಿಡಿತಕ್ಕೆ ಒಳಗಾಗದೆ ಮಧ್ಯದ ಗೆರೆಯನ್ನು ಮುಟ್ಟಿಸಿಕೊಂಡ ವ್ಯಕ್ತಿಗಳು ಔಟ್ ಆಗಿ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಕೂಗುತ್ತಿರುವವನ ತಂಡಕ್ಕೆ ಎಷ್ಟು ಜನ ಔಟ್ ಆದರೆ ಅಷ್ಟು ಪಾಯಿಂಟ್ ಬರುತ್ತದೆ. ಕೆಲವು ಪ್ರದೇಶಗಳಲ್ಲಿ ಬೇರೆ ತಂಡದ ಆಟಗಾರರು ಔಟ್ ಆದಾಗ ತಮ್ಮ ತಂಡದಲ್ಲಿ ಔಟ್ ಆದವರು ಮತ್ತೆ ಬದುಕಿ ಆಟ ಆಡುತ್ತಾರೆ. ಈ ಕಾರಣದಿಂದ ಈ ಆಟವನ್ನು ಕೆಲವರು ಬೆಳ್ದಿಂಗಳ ರಾತ್ರಿ ರಸ್ತೆಯ ಮೇಲೆ ನೀರಿನ ಪಟ್ಟಿಗಳನ್ನು ಏರ್ಪಡಿಸಿ ಆಡುತ್ತಾರೆ. ಕೆಲವು ಕಡೆ ಆ ಪಟ್ಟಿಗಳ ಮೇಲೆ ಮಣ್ಣನ್ನು ರಾಶಿ ರಾಶಿಯಾಗಿ ಸುರಿದು ಆಟ ಆಡುತ್ತಾರೆ. ಇದಕ್ಕೆ ‘ಕುಪ್ಪಲ ಚೆಡುಗುಡು’ ಎಂದು ಹೆಸರು. ತಂಡದಲ್ಲಿ ಇಷ್ಟೇ ಜನ ಇರಬೇಕೆಂಬ ನಿಯಮ ಇದರಲ್ಲಿ ಇಲ್ಲ. ಅಲ್ಲದೆ ಔಟ್ದ ಆದವರು ಕ್ರಮ ಕ್ರಮವಾಗಿ ಬದುಕುತ್ತಾರೆ. ಅದಕ್ಕೆ ಇದನ್ನು ಸಾವು ಬದುಕುಗಳ ಆಟ ಎನ್ನುತ್ತಾರೆ.

ಚೆಡುಗುಡು ಆಟದಲ್ಲಿ ಸತತವಾಗಿ ಕೂಗುವುದು ಮುಖ್ಯ, ಕೂಗುಗಳು ಒಂದೊಂದು ಕಡೆ ಬೇರೆಯಾಗುತ್ತವೆ. ಕೆಲವು ಕಡೆ ಕೂಗುಗಳು ಹಾಡುಗಳ ರೂಪದಲ್ಲಿರುತ್ತವೆ. ಈ ಆಟದಲ್ಲಿ ಮಧ್ಯದಲ್ಲಿರುವ ಗೆರೆ ಅಲ್ಲದೆ ಸುಮಾರು ಐದು ಅಡಿಗಳ ದೂರದಲ್ಲಿ ಇನ್ನೆರಡು ಗೆರೆಗಳಿರುತ್ತವೆ. ಇವುಗಳಿಗೆ ‘ಡೆಡ್‌ಲೈನ್ಸ್’ ಎಂದು ಹೆಸರು. ಕೂಗುವವರು ಮಧ್ಯದ ಗೆರೆಯನ್ನು ದಾಟಿ ಡೆಡ್‌ಲೈನ್ ತುಳಿದು ಬರಬೇಕು. ಗ್ರಾಮೀಣ ಕ್ರೀಡೆಯಾದ ಅನೇಕ ಪ್ರದೇಶಗಳಲ್ಲಿರುವ ಈ ಆಟ ಈಗ ಅಖಿಲ ಭಾರತ ಕ್ರೀಡೆಯಾಗಿ ಕಪ್ಪಡಿ ಎಂಬ ಹೆಸರಿನಲ್ಲಿ ಜನಪ್ರಿಯವಾಗಿದೆ.

ವಿ.ಎಸ್. ಅನುವಾದ ಎಂ.ಎಂ.ಡಿ.

ಚೆನ್ನಾಗಮ್ಮ ದೇವಿ ಚರಿತ್ರ ಆಂಧ್ರದ ಐತಿಹ್ಯ. ೧೬ನೇಯ ಶತಮಾನದಲ್ಲಿ ಸತಿಸಹಗಮನ ಮಾಡಿದ ಚೆನ್ನಾಗಮ್ಮ ದೇವತೆಯ ಚರಿತೆ ಅನಂತಪುರ, ಕಡಪ ಜಿಲ್ಲೆಗಳಲ್ಲಿ ತುಂಬ ಪ್ರಾಧಾನ್ಯಗಳಿಸಿದೆ. ಅದಕ್ಕೆ ಸಂಬಂಧಪಟ್ಟ ಕತೆ ಈ ರೀತಿ ಪ್ರಚಾರದಲ್ಲಿದೆ. ೧೬ನೇ ಶತಮಾನದಲ್ಲಿ ಕಡಪ ಜಿಲ್ಲೆ ಜೂಟೂರು, ಗಂಡ್ಲೂರು ಗ್ರಾಮಗಳಿಗೆ ಸೇರಿದ ಕೆಲವು ಮಂದಿ ವಲಸೆ ಬಂದು ಬುಕ್ಕ ಪಟ್ನ, ಗೂನಿಪಲ್ಲಿ, ನಲ್ಲಗುಟ್ಟಪಲ್ಲಿ, ಜಾನಕಂಪಲ್ಲಿ ಗ್ರಾಮಗಳಲ್ಲಿ ಸ್ಥಿರನಿವಾಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಜೂಟೂರು ವಂಶಕ್ಕೆ ಸೇರಿದ ಚಿನ್ನನಾಗಿರೆಡ್ಡಿ ಕುಟುಂಬೀಕರು ಗೂನಿಪಲ್ಲಿಯಲ್ಲಿ ಸ್ಥಿರವಾದರೆ ಗುಂಡ್ಲೂರಿ ವಂಶಕ್ಕೆ ಸೇರಿದ ಪಲ್ಲರೆಡ್ಡಿ ಕುಟುಂಬೀಕರು ನಲ್ಲಿಗುಟ್ಟಪಲ್ಲಿ, ಜಾನಕಂಪಲ್ಲಿಯಲ್ಲಿ ಸ್ಥಿರವಾದರು. ನಲ್ಲಗುಟ್ಟಪಲ್ಲಿಗೆ ಸೇರಿದ ಗಂಟ್ಲೂರಿ ಪೆದಪಲ್ಲಿರೆಡ್ಡಿ ಸೋದರಿ ಚಿನ್ನಾಗಮ್ಮನನ್ನು ಗೂನಿಪಲ್ಲಿಗೆ ಸೇರಿದ ಜೂಟೂರು ಚಿನ್ನನಾಗಿರೆಡ್ಡಿಗೆ ಕೊಟ್ಟು ಮದುವೆ ಮಾಡಿದರು. ಪ್ರಕೃತಿ ವೈಪರೀತ್ಯಗಳಿಂದ ಸರಿಯಾದ ಬೆಳೆಗಳು ಬೆಳೆಯದೆ ಹೋಗಿದ್ದರಿಂದ ಆರ್ಥಿಕವಾಗಿ ಏಟು ಬಿದ್ದಿದ್ದರಿಂದ ಚಿನ್ನನಾಗಿರೆಡ್ಡಿ ಬಾವ ಪಲ್ಲಿರೆಡ್ಡಿ ಅವರನ್ನು ಕರೆದು ಬುಕ್ಕ ಪಟ್ನ ಕೆರೆ ಕಟ್ಟೆ ಹತ್ತಿರದಲ್ಲಿರುವ ಆನೆ ಬಾವಿ ಬಳಿಯ ತಮ್ಮ ಭೂಮಿಯನ್ನು ಬೇಸಾಯ ಮಾಡಿಕೊಳ್ಳಲಿಕ್ಕೆ ಕೊಟ್ಟು ಅವರನ್ನು ಪುಟ್ಟವರ್ತಿಯಲ್ಲಿ ಇರುವಂತೆ ಮಾಡಿದರು. ಆಗ ಅಲ್ಲಿ ದಟ್ಟವಾದ ಅರಣ್ಯ ಮತ್ತು ವನ್ಯ ಮೃಗಗಳಿಗೆ ನಿಲಯವಾದ ಈ ಪ್ರಾಂತ್ಯದಲ್ಲಿ ಪರ್ಲಗುಟ್ಟ  ಎಂಬ ಗ್ರಾಮದ ಹತ್ತಿರ ಜೋಳ, ಕಬ್ಬು, ಬತ್ತ ಮುಂತಾದ ಬೆಳೆಗಳಿಗೆ ಕಾಡಂಹಂದಿಗಳ ಕಾಟ ಜಾಸ್ತಿ ಆಗಿದ್ದರಿಂದ ಕಾವಲಿಗಾಗಿ ಹೋಗುತ್ತಿದ್ದ. ಹೀಗೆ ಕಾವಲು ಕಾಯತ್ತಿರುವಾಗ ಒಂದು ದಿನ ಚೆನ್ನನಾಗಿರೆಡ್ಡಿಯ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿತು. ಪತಿಯಲ್ಲದ ಬಾಳು ವ್ಯರ್ಥವೆಂದು ಭಾವಿಸಿ ಸತಿಸಹಗಮನ ಮಾಡುತ್ತೇನೆಂದು ಆಕೆ ಶಪಥ ಮಾಡಿದಳು. ಇದನ್ನು ಕೇಳಿದ ಚಿನ್ನಾಗಮ್ಮನ ಅಣ್ಣನವರು ದುಂಖ ಪಟ್ಟರು. ಕಡೆಗೆ ಚಿನ್ನಾಗಮ್ಮನ ಸತಿಸಹಗಮನಕ್ಕೆ ಗಂಧದ ಮರದ ಹಲಗೆಗಳನ್ನು ಸೇರಿಸಿ ಮಡಕೆಯಲ್ಲಿ ತುಪ್ಪ ತುಂಬಿಸಿ ಚಿತೆ ಸಿದ್ಧಮಾಡಿದರು. ಚನ್ನಾಗಮ್ಮನ ಸತೀ ಸಹಗಮನದ ಐತಿಹ್ಯ ಜನಪ್ರಿಯವಾಯಿತು.

ಕೆ.ಎಸ್.ಎಂ. ಅನುವಾದ ಎ.ಎ.