ಚಾಟ್ಟ್‌  ಚಾಟ್ಟ್‌ಎಂಬುದು ಕಾಣಿಕ್ಕಾರ ವರ್ಗದವರ ಒಂದು ಮಾಂತ್ರಿಕ ಕಲಾರೂಪ. ಇವರ ಕೇರಳದ ದಕ್ಷಿಣ ಭಾಗದ ವನಪ್ರದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳು/ಬುಡಕಟ್ಟಿನವರು. ತಿರುವನಂತಪುರ ಅರಣ್ಯವಲಯದಲ್ಲಿ ಕೂತ್ತುಪುಯ, ಪರುತ್ತಿಪಳ್ಳಿ, ಪಾಲೋಡ್ ಮುಂತಾದ ರೇಂಜ್‌ಗಳಲ್ಲೂ ಕೋಟ್ಟೂರು, ಕ್ಲಾಮಲೆ ಮುಂತಾದೆಡೆಗಳಲ್ಲೂ ಬಹುತೇಕ ಕಾಣಿಕ್ಕಾರರು ವಾಸಿಸುತ್ತಾರೆ.

ಚಾಟ್ಟ್‌ಒಂದು ಮಾಂತ್ರಿಕ ಚಿಕಿತ್ಸಾ ಕರ್ಮರೂಪ. ಚಾಟ್ಟ್ ಪದಕ್ಕೆ ಶುದ್ಧಗೊಳಿಸುವುದು ಎಂಬುದು ಅರ್ಥ. ಆ ಸಂದರ್ಭದಲ್ಲಿ ನಡೆಸುವ ಕ್ರಿಯೆಗೆ ಹೊಂದಿಕೊಂಡು ಹಾಡುವ ಹಾಡುಗಳಿವೆ ಚಾಟ್ಟ್/ಚಾಟ್ಟಿ ಹಾಡುಗಳೆಂದು ಹೆಸರು. ಚಾಟ್ಟ್‌ಗಳು ಕಾಣಿಕ್ಕಾರರ ವೈದ್ಯ ಮತ್ತು ಮಾಂತ್ರಿಕನೂ ಆದ ಪ್ಲಾತಿಯ ನೇತೃತ್ವದಲ್ಲಿ ನಡೆಯುತ್ತವೆ. ಮಂತ್ರ ತಂತ್ರಗಳಲ್ಲಿ ಪ್ರವೀಣನಾದ ಒಬ್ಬನನ್ನು ಕಾಣಿಗಳು ‘ಪ್ಲಾತಿ’ಯಾಗಿ ಸ್ವೀಕರಿಸುತ್ತಾರೆ. ಕೊಡುದಿ, ಚಾಟ್ಟ್ ಮುಂತಾದ ಇಂಥ ಮುಖ್ಯ ಕೆಲಸಗಳ ಉಸ್ತುವಾರಿ ಕೂಡ ಪ್ಲಾತಿಯದು. ಹುಚ್ಚು, ಅಪಸ್ಮಾರ, ಹಾವು ಕಡಿತ, ಜೇಡನ ವಿಷ, ಸಿಡುಬು, ಹುಚ್ಚುನಾಯಿಕಡಿತ, ವಾಂತಿ ಭೇದಿ ಮುಂತಾದ ರೋಗಗಳಿಗೂ ಭೂತಪ್ರೇತ ಬಾಧೆಗೂ ಕಾಣಿಕ್ಕಾರರು ಪ್ಲಾತಿಯನ್ನು ಆಶ್ರಯಿಸುತ್ತಿದ್ದರು. ಒಳ್ಳೆಯ ಕೈಗುಣವುಳ್ಳವನೆಂದು ಹೇಳಿಸಿಕೊಂಡರೆ ಸಾಕು ಅಂಥ ಪ್ಲಾತಿಗೆ ಮತ್ತೆ ಮನೆಯಲ್ಲಿ ಇರಲು ಪುರುಸೊತ್ತೇ ಇರುವುದಿಲ್ಲ. ಮನೆ ಮನೆಗಳಿಗೆ ಹೋಗಿ ಹಗಲೂ ರಾತ್ರಿಯೂ ಕ್ರಿಯೆಗಳನ್ನು ಅವನು ನಡೆಸುತ್ತ ಇರುವಂತಾಗುತ್ತದೆ.

‘ಕೊಕ್ಕರ’ ಎಂಬ ವಿಶಿಷ್ಟ ವಾದ್ಯದ ಸಹಾಯದಿಂದ ಚಾಟ್ಟ್ ನಡೆಯುತ್ತದೆ. ಒಳಗೆ ಟೊಳ್ಳಾಗಿದ್ದು, ಹಲ್ಲಿನಂತಹ ರಚನೆಗಳನ್ನು ಜೋಡಿಸಿದ ಒಂದು ಕಬ್ಬಿಣದ ಕೊಳವೆ ಮತ್ತು ಅದರ ಮಧ್ಯದಿಂದ ಸಂಕಲೆಯ ಮೂಲಕ ಜೋಡಿಸಿದ ಒಂದು ಕಬ್ಬಿಣದ ದಂಟು – ಇವು ಒಟ್ಟಾಗಿ ಕೊಕ್ಕರ ವಾದ್ಯೋಪಕರಣವಾಗುತ್ತದೆ. ಕಬ್ಬಿಣದ ಓಟೆಯನ್ನು ಎಡದ ಕೈಯಲ್ಲೂ ಕಬ್ಬಿಣದ ದಂಟನ್ನು ಬಲದ ಕೈಯಲ್ಲೂ ಹಿಡಿದು ತಮ್ಮೊಳಗೆ ಉಜ್ಜಿ ಒಂದು ವಿಶಿಷ್ಟ ಶಬ್ದವನ್ನು ಹೊರಡಿಸಲಾಗುತ್ತದೆ. ಚಾಟ್ಟುಗಳು ಉದ್ದೇಶಾನುಸಾರವಾಗಿ ಏರ್ಪಾಡಾಗುತ್ತವೆ. ಹಾಡುಗಳನ್ನು ಹೇಳುವ ರೀತಿ, ಕೊಕ್ಕರದ ತಾಳ, ನಡೆಸುವ ವಿಧಾನ – ಇವು ವಿಭಿನ್ನ ಚಾಟ್ಟುಗಳಿಗೂ ಬೇರೆ ಬೇರೆಯೇ ಆಗಿರುತ್ತದೆ. ಕೊಕ್ಕರದ ಕುರಿತು ಕೆಲವು ನಂಬುಗೆಗಳು ಮಧ್ಯೆ ಚಾಲ್ತಿಯಲ್ಲಿರುವುದಾಗಿ ಹೇಳುತ್ತಾರೆ. ಚಾಟ್ಟು ಕಳೆದು ಕೊಕ್ಕರದ ಶಬ್ದ ಮಾರ್ದವವುಳ್ಳದ್ದಾಗಿ ಕಂಡುಬಂದರೆ ಕಾಯಿಲೆ ಬೇಗನೆ ವಾಸಿಯಾಗುತ್ತದೆ ಎಂದೂ ಇಲ್ಲವಾದರೆ ಕಾಯಿಲೆ ವಾಸಿಯಾಗುದಿಲ್ಲವೆಂದೂ ನಂಬುತ್ತಾರೆ. ಕೊಕ್ಕರಕ್ಕೆ ಬೇಗ ತುಕ್ಕು ಹಿಡಿದರೆ ಅದನ್ನು ಉಪಯೋಗಿಸುವ ವ್ಯಕ್ತಿಯ ಆಯುಷ್ಯ ಕಡಿಮೆ ಎಂಬ ನಂಬುಗೆಯೂ ಇದೆ. ಕೊಕ್ಕರದ ಮಾಂತ್ರಿಕ ಶಕ್ತಿಯಲ್ಲಿ ಕಾಣಿಕ್ಕಾರರಿಗಿರುವ ನಂಬುಗೆಯು ಬಲವತ್ತರವಾದುದೇ ಆಗಿದೆ.

ಕಾಣಿಕ್ಕಾರರ ಬದುಕಲ್ಲಿ ಚಾಟ್ಟ್ ಅನಿವಾರ್ಯವಾದ ಒಂದು ಕಾರ್ಯಕ್ರಮವಾಗಿದೆ. ಪ್ರತಿಯೊಂದು ಕರ್ಮಕ್ಕೆ ಅನುಸಾರವಾಗಿಯೂ ಚಾಟ್ಟ್‌ಗೆ ಹೆಸರು ಕೊಡಲಾಗಿದೆ. ದುಡಿಚಾಟ್ಟ್, ಪಿಣಿಚಾಟ್ಟ್‌, ರಾಶಿವೆಟ್ಟಿಚಾಟ್ಟ್‌, ನಾಯಾಟ್ಟ್‌ಚಾಟ್ಟ್, ಕರಿಂಗಾಳಿ ಚಾಟ್ಟ್, ಕೊಡುದಿ ಚಾಟ್ಟ್ ಮುಂತಾದುವು ಚಾಟ್ಟ್‌ಗಳಲ್ಲಿ ಕೆಲವು ಮಾತ್ರ. ಕ್ಷುಲ್ಲಕವಾದ ರೋಗಗಳನ್ನು ದೂರಮಾಡುವುದಕ್ಕಾಗಿ ಬಣಿಚಾಟ್ಟ್‌, ಹೆರಿಗೆ ಸಂಬಂಧ ತೊಂದರೆ ನೀಗುವುದಕ್ಕಾಗಿ ಏಳನೆಯ ತಿಂಗಳಿನಲ್ಲಿ ಬಸುರಿಯರಿಗೆ ದುಡಿಚಾಟ್ಟ್ ನಡೆಯುತ್ತದೆ. ಗೃಹ ದೋಷದಿಂದ ಉಂಟಾಗುವ ಆಪತ್ತಿನ ನಿವಾರಣೆಗೆ ಒಬ್ಬ ವ್ಯಕ್ತಿಯಾಗಲಿ ಮನೆಯೊಂದರ ಎಲ್ಲ ಜನರಿಗಾಗಲಿ ನಡೆಸುವುದು – ರಾಶಿವೆಟ್ಟಿಚಾಟ್ಟ್‌, ದೀರ್ಘಾಯುಷ್ಯಕ್ಕಾಗಿ ನಡೆಸುವ ಮಣ್ಣಳಿ ಚಾಟ್ಟ್ ಕುಶಲರಾದ ಆರು ಪ್ಲಾತಿಯರಿಗಷ್ಟೆ ಸಾಧ್ಯವಾಗುವ ಕಾರ್ಯಕ್ರಮ. ಇದು ಅತ್ಯಂತ ದೀರ್ಘಕಾಲಾವಧಿಯದು. ದೂರವಾಗುವ ಬಾಧೆ, ಕ್ಷುದ್ರ ಶಕ್ತಿಗಳ ಪೀಡೆ ಮುಂತಾದ ಉಪದ್ರವಗಳನ್ನು ಹೋಗಲಾಡಿಸಲು ಕರಿಂಗಾಳಿ ಅಮ್ಮನನ್ನು ಬರಮಾಡಿಸಿ ಸಂಪ್ರೀತಿಗೊಳಿಸುವುದು – ಕರಿಂಗಾಳಿ ಚಾಟ್ಟ್. ಕೃಷಿಯ ಸಮೃದ್ಧಿಗಾಗಿ ನಡೆಸುವುದು – ಕಾರ್ತಿಕ ಚಾಟ್ಟ್. ಸತ್ತವರ ಆತ್ಮ ಶುದ್ಧಿಗಾಗಿ ನಡೆಸುವುದು – ಚಾವು ತೋಟ್ಟಿ ಚಾಟ್ಟ್. ಮೊದಲ ಮಗು ತೀರಿಕೊಂಡರೆ ಚಾವು ತೋಟ್ಟಿಚಾಟ್ಟ್ ನಡೆಸಿ ಮಗುವಿನ ಆತ್ಮವನ್ನು ಶುದ್ಧ ಮಾಡಲಾಗುತ್ತದೆ. ಒಂದು ‘ಕುಡಿ’ಯಲ್ಲಿ ವಾಸಿಸುವ ಒಟ್ಟು ಕಾಣಿಕ್ಕಾರರ ಬಾಧೆ, ಉಪದ್ರವಗಳನ್ನು ಹೋಗಲಾಡಿಸುವುದಕ್ಕಾಗಿ ಪ್ಲಾತಿಯು, ಮಂತ್ರ ಬಲೆಯನ್ನು ಹೆಣೆದು ಬಲೆಗೆ ಆವಾಹಿಸಿ ತೆಗೆಯುವ ಚಾಟ್ಟ್‌ಗೆ ‘ಏಲಕೆಟ್ಟಿಚಾಟ್ಟ್’ ಎಂದು ಹೆಸರು. ಹೀಗೆ ಕಾಣಿಕ್ಕಾರರ ದೈನಂದಿನ ಬದುಕಿನೊಂದಿಗೆ ಸಂಬಂಧಿಸಿದ ಪ್ರತಿಯೊಂದು ಅಗತ್ಯಕ್ಕೂ ಹಲವು ತೆರನಾದ ಚಾಟ್ಟ್‌ಗಳು ಚಾಲ್ತಿಯಲ್ಲಿವೆ. ಯಾವುದೇ ಸಂಕಷ್ಟಗಳಿಂದ ತಮ್ಮನ್ನು ಪಾರು ಮಾಡಲು ಚಾಟ್ಟ್‌ನ ಮೂಲಕ ಮಂತ್ರಪ್ಲಾತಿಗೆ ಸಾಧ್ಯವೆಂಬ ವಿಶ್ವಾಸ ಕಾಣಿಕ್ಕಾರರಲ್ಲಿ ಬಲವಾಗಿಯೇ ಇದೆ.

ಚಾಟ್ಟ್ ಕಲಿಯಲು ಬಯಸುವವರನ್ನು ಮಂತ್ರಪ್ಲಾತಿಯು ಹಣೆಗೆ ಭಸ್ಮಹಚ್ಚಿ ತಲೆಯಲ್ಲಿ ಬತ್ತವನ್ನು ಎರಡು ಬದಿಗೆ ಕಟ್ಟಿ ಇರಿಸಿ ತನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ. ಮಂತ್ರಪ್ಲಾತಿಯು ಉತ್ತಮ ಗುಣಶೀಲವುಳ್ಳವನೂ ಆದರ್ಶವ್ಯಕ್ತಿಯೂ ಆಗಿದ್ದಲ್ಲಿ ಶಿಷ್ಯರು ಅನತಿಕಾಲದಲ್ಲಿ ಚಾಟ್ಟ್ ವಿದ್ಯೆಯನ್ನು ಕಲಿಯಲು ಸಾಧ್ಯವಾಗುತ್ತದೆ. ಚಾಟ್ಟ್ ಮಂತ್ರವನ್ನು ಕಲಿತ ವ್ಯಕ್ತಿ ಚಾಟ್ಟ್ ನಡೆಸಲು ಯೋಗ್ಯನೆಂದು ಕಂಡುಬಂದರೆ ಕಮ್ಮಾರನಿಗೆ ಕೊಕ್ಕರ ತಯಾರಿಸಲು ಹೇಳಿ ಅದನ್ನು ಕೊಡಿಸಲಾಗುತ್ತದೆ. ಕುಟುಂಬದಲ್ಲೆ ಚಾಟ್ಟ್‌ಅನ್ನು ಯಾರಿಗಾದರೂ ನಡೆಸಿದ ಬಳಿಕವಷ್ಟೆ ಬಹಿರಂಗವಾಗಿ ಮಂತ್ರವಿದ್ಯೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಯಾರಿಗಾದರೂ ಆಪತ್ತು ಒದಗಿದರೆ ತನಗೆ ತಿಳಿದಿರುವ ರೀತಿಯಲ್ಲಿ ಔಷಧವನ್ನೂ ಮಂತ್ರವನ್ನೂ ಮಾಡಿ ಅದನ್ನು ನಿವಾರಿಸಿ ಸೌಖ್ಯವನ್ನು ಒದಗಿಸಬೇಕಾದುದು ಒಬ್ಬ ಒಳ್ಳೆಯ ಮಾಂತ್ರಿಕ ಪ್ಲಾತಿಮ ಧರ್ಮವಾಗಿದೆ.

ರೋಗಬಾಧೆ ಮತ್ತು ರೋಗಮುಕ್ತಿ ಪ್ರಕೃತ್ಯತೀತ ಶಕ್ತಿಗಳ ಇಚ್ಛೆ – ಎಂಬ ನಂಬುಗೆಯೇ ಮಾಂತ್ರಿಕ ಚಿಕಿತ್ಸೆ ಚಾಟ್ಟ್‌ನ ಹುಟ್ಟು ಬೆಳೆವಣಿಗೆಗಳಿಗೆ ಪ್ರೇರಕ. ಎಂಥ ಗಂಡಾಂತರದಲ್ಲೂ ಕಾಪಾಡುವ ಮಲೆ ದೈವಗಳನ್ನೂ ಕುಲದೈವಗಳನ್ನೂ ಮಂತ್ರಪ್ಲಾತಿಯು ನೆರವಿಗೆ ಕರೆದುಕೊಳ್ಳುತ್ತಾನೆಂಬ ನಂಬುಗೆಯನ್ನು ಬಲವಾಗಿ ಆಧರಿಸಿಕೊಂಡು ಇಂದು ಕೂಡ ಕಾಣಿಕ್ಕಾರರು ಬದುಕುತ್ತಾರೆ. ಆಧುನಿಕ ಸಂದರ್ಭದಲ್ಲೂ ಚಾಟ್ಟ್‌ನ ಮೇಲೆ ಇವರು ಇಟ್ಟಿರುವ ನಂಬುಗೆಯೂ ಒಂದಿಷ್ಟು ಬದಲಾಗಿಲ್ಲ. ಒಂದು ಕಾಲದಲ್ಲಿ ಕುಮರಿ ಬೇಸಾಯವನ್ನು ಮಾಡುತ್ತ ಬದುಕುತ್ತಿದ್ದ ಕಾಣಿಕಾರರ ಬದುಕಿನ ಕ್ರಮ ಗದ್ದೆ ಬೇಸಾಯಕ್ಕೆ ಒಗ್ಗಿಕೊಂಡರೂ ಇವರ ಧಾರ್ಮಿಕ ಆಚರಣೆಯ ಅಂಗವಾಗಿ ಚಾಟ್ಟ್ ಇಂದೂ ಹಿಂದಿನಂತೆಯೇ ಉಳಿದುಕೊಂಡು ಬಂದಿದೆ.

ಪಿ.ವಿ.ಎಂ. ಅನುವಾದ ಕೆ.ಕೆ.

ಚಾಮುಂಡಿ ಮೈಸೂರಿನ ರಕ್ಷಣಾದೇವತೆ. ಈಕೆಯ ಬಗ್ಗೆ ನಿಶ್ಚಿತವಾಗಿ ಹೇಳಲು ಐತಿಹಾಸಿಕ ಆಧಾರಗಳಿಲ್ಲ. ಪುರಾಣದಂತೆ ಮಹಿಷಾಸುರನೆಂಬ ಅಸುರ ತ್ರಿಲೋಕ ಕಂಟಕನಾಗಿ, ದೇವತೆಗಳಿಗೆ ನೆಮ್ಮದಿ ಕೊಡುತ್ತಿರಲಿಲ್ಲ. ಅವನು ಸ್ವರ್ಗಲೋಕವನ್ನು ಗೆದ್ದುದರಿಂದ ಸ್ವರ್ಗಕ್ಕೆ ಅಧಪತಿಯಾಗಿದ್ದ ದೇವತೆಗಳು ಮಹಿಷನ ನಾಯಕತ್ವವನ್ನು ಒಪ್ಪದೆ, ಅವನ ಸಂಹಾರಕ್ಕಾಗಿ, ತಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಒಂದು ಹೆಣ್ಣಿಗೆ ಹುಟ್ಟಿಗೆ ಕಾರಣಕರ್ತರಾಗುತ್ತಾರೆ. ಚಾಮುಂಡಿಯನ್ನು – ಆದಿಶಕ್ತಿ, ಸರ್ವಮಂಗಳೆ, ಅಂಬೆ, ಈಶ್ವರಿ, ಮಹಾದೇವಿ, ಮಾಹೇಶ್ವರಿ, ಕಾತ್ಯಾಯಿನಿ, ಕಾಳಿ, ಚಂಡಿ, ಭಗವತಿ – ಹೀಗೆ ಹಲವಾರು ಹೆಸರುಗಳಿಂದ ಕರೆಯುವುದಿದೆ. ಈ ಎಲ್ಲ ರೂಪಗಳಿಗಿಂತ ಮಹಿಷಾಸುರಮರ್ದಿನಿಯ ರೂಪ ಹೆಚ್ಚು ಪ್ರಸಿದ್ಧವಾದುದು.

ಚಾಮುಂಡಿಗೆ ಸಂಬಂಧಪಟ್ಟ ವಿಷಯಗಳು ಕಾಳಿಕಾಪುರಾಣ, ಶ್ರೀದೇವಿಭಾಗವತ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣ, ವಿಷ್ಣುಧರ್ಮೋತ್ತರ ಪುರಾಣ, ವರಾಹ ಪುರಾಣ, ಅಭಿಲಾಷಿತಾರ್ಥ ಚಿಂತಾಮಣಿ ಅಥವಾ ಚತುರ್ವರ್ಗ ಚಿಂತಾಮಣಿ ಹಾಗೂ ಸನತ್ಕುಮಾರ ಶಿಲ್ಪರತ್ನ ಮುಂತಾದ ಗ್ರಂಥಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ನಿರೂಪಿಸಲಾಗಿದೆ. ಅಲ್ಲದೆ ಇವಳು ಚಂಡ-ಮುಂಡರೆಂಬ ಅಸುರರನ್ನು ವಧಿಸಿರುವುದು ಪುರಾಣಗಳಲ್ಲಿ ಗೋಚರಿಸುತ್ತದೆ.

ಜನಪದ ಸಾಹಿತ್ಯದಲ್ಲಿ ಚಾಮುಂಡಿಯನ್ನು ಚಾಮರಾಯನ ಮಗಳು ಎಂದು ಕರೆಯಲಾಗಿದೆ. ಜನಪದ ಕಥೆಯೊಂದರ ಪ್ರಕಾರ ಉಜ್ಜಯಿನಿ ದೇಶದ ಬಿಜ್ಜಳರಾಯನೆಂಬ ರಾಜನಿಗೆ ಏಳು ಜನ ಹೆಣ್ಣು ಮಕ್ಕಳು. ಅವರಲ್ಲಿ ದೊಡ್ಡ ಮಗಳು ಪಿರಯಾಪಟ್ಟಣದ ಉರಿಮಸಣಿ. ಚಾಮುಂಡಿ ಕೊನೆಯ ಮಗಳು. ಈ ಏಳು ಜನ ಹೆಣ್ಣುಗಳು ಕಾರಣಾಂತರಗಳಿಂದ ಜಗಳ ಮಾಡಿಕೊಂಡು ಉತ್ತರ ದಿಕ್ಕಿನಿಂದ ಹೊರಬಂದು, ದಕ್ಷಿಣ ದಿಕ್ಕಿನ ಬೇರೆ ಬೇರೆಯಾದ ಸ್ಥಳಗಳಲ್ಲಿ ನೆಲೆಗೊಂಡರಂತೆ. ಚಾಮುಂಡಿ ತನ್ನ ವಾಸಸ್ಥಳ ಕಂಡುಕೊಳ್ಳಲು ಬರುವಾಗ ‘ಮಹಿಷ ಮಂಡಲ’ ಅವಳಿಗೆ ಪ್ರಿಯವಾಗುತ್ತದೆ. ಅಲ್ಲಿಯೇ ನೆಲೆಗೊಳ್ಳಲು ನಿರ್ಧರಿಸುವಾಗ, ಮಹಿಷನೆಂಬ ದಾನವನಿಂದ ಅವಳಿಗೆ ಅಡಚಣೆ ಉಂಟಾಗುತ್ತದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲೋಸುಗ ‘ಚಾಮುಂಡಿ’ ಮಹಿಷಾಸುರನನ್ನು ಮರ್ದಿಸಿ, ಮಹಿಷಮಂಡಲವನ್ನು  ತನ್ನ ಸ್ವಾಧೀನಕ್ಕೆ ತೆಗೆದುಕೊಂಡು, ಅಲ್ಲಿಯೇ ಎತ್ತರವಾಗಿದ್ದ ಬೆಟ್ಟದ ಮೇಲೆ ನೆಲೆಸಿದಳೆಂದು ನಂಬಲಾಗಿದೆ. ಮೈಸೂರಿನ ಒಡೆಯರು ಬೆಟ್ಟದ ಮೇಲಿದ್ದ ಮಹಿಷಾಸುರ ಮರ್ದಿನಿಯನ್ನು ‘ಚಾಮುಂಡೇಶ್ವರಿ’ ಎಂಬ ಹೆಸರಿನಿಂದ ಕರೆದು, ಅವಳನ್ನು ತಮ್ಮ ಕುಲದೇವತೆಯಾಗಿ ಸ್ವೀಕರಿಸಿದರು.

ಪಿರಿಯಾಪಟ್ಟಣದ ಲಾವಣಿ, ಮಾಗಡಿ ಕೆಂಪೇಗೌಡನ ಲಾವಣಿಗಳಲ್ಲಿ ಈಕೆ ಮೈಸೂರು ಒಡೆಯರನ್ನು ರಕ್ಷಿಸಲೋಸುಗ ನಂಜುಂಡನೊಡನೆ ಯುದ್ಧ ಮಾಡುವ ಸಂದರ್ಭಗಳ ವರ್ಣನೆ ಬರುತ್ತದೆ. ಹಾಗೆ ನೋಡಿದರೆ ಚಾಮುಂಡಿ ಐತಿಹಾಸಿಕ ವೀರವನಿತೆಯೂ ಹೌದು. ದಸರೆಯ ಹತ್ತನೇ ದಿನ ವಿಜಯದಶಮಿ, ಈ ಹಬ್ಬ ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯನ್ನು ಬೋಧಿಸುವಂತಹುದು. ಸಾಂಕೇತಿಕವಾಗಿ ಮಹಿಷಾಸುರನನ್ನು ಸಂಹರಿಸಿದ ದಿನದೆಂದು ಹೇಳಲಾಗಿದೆ. ಏಕೆಂದರೆ ಅಂದು ಆಚರಿಸುವ ದುರ್ಗಾರಾಧನೆ ಅರಿಷಡ್ವರ್ಗಗಳ ವಿಜಯವನ್ನು ಸೂಚಿಸುತ್ತದೆ.

ಏಳು ಮಲೆ ಮಾದೇಶ್ವರನನ್ನು ಚಾಮುಂಡಿ ಮೋಹಿಸಿರುವುದಾಗಿ ಕೆಲವು ಪುರಾಣಗಳು ಶ್ರುತಪಡಿಸಿದರೆ, ಮತ್ತೆ ಕೆಲವು ಪಾಠಾಂತರ ಭೇದದಿಂದಾಗಿ, ಮಾದೇಶ್ವರ-ಚಾಮುಂಡಿ ಅಣ್ಣ-ತಂಗಿಯೆಂದು ಬಿಂಬಿಸಲಾಗಿದೆ. ಮಾದೇಶ್ವರನಿಗಿಂತಲೂ ಮುಂಚೆಯೇ ನಂಜುಂಡೇಶ್ವರ ಚಾಮುಂಡಿಯಲ್ಲಿ ಅನುರಕ್ತನಾಗಿ, ಅವಳಿಗಾಗಿ ಹಂಬಲಿಸಿರುವುದು ಕಂಡುಬರುತ್ತದೆ. ಈ ಮೂವರು ಬಹುಶಃ ಸಮಕಾಲೀನರೇ ಆಗಿರಬೇಕೆಂದು ನಂಬಲಾಗಿದೆ! ಚಾಮುಂಡಿಯ ಇಂತಹ ಕಥೆಗಳನ್ನು, ಪ್ರಣಯ ಪ್ರಸಂಗವನ್ನು ವೃತ್ತಿಗಾಯಕರಾದ ದೇವರಗುಡ್ಡರು, ನೀಲಗಾರರು, ಹೆಳವರು, ತಂಬೂರಿಯವರು ಮತ್ತು ಜನಪದ ಹೆಂಗಸರು ಹಾಡುತ್ತಾರೆ. ಇವಳು ಜನಪದ ದೇವತೆಯೂ ಹೌದು, ನಗರದೇವತೆಯೂ ಹೌದು. ಐತಿಹಾಸಿಕ ವ್ಯಕ್ತಿಗಳು ಸಮಾಜಗಳಲ್ಲಿ ಗೌರವ, ಮಾನ್ಯತೆಯನ್ನು ಭಕ್ತಿಪೂರ್ವಕವಾಗಿ ಪಡೆದಿದ್ದರೆ, ಅಂತಹವರು ಕಾಲಕ್ರಮೇಣ ಪೌರಾಣಿಕ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂಬುದಕ್ಕೆ ಜ್ವಲಂತ ನಿದರ್ಶನ ಈ ಚಾಮುಂಡಿ.

ಕೆ.ಎಸ್.ಬಿ.

ಚಿಟ್ ಮೇಳ ದಕ್ಷಿಣಕರ್ನಾಟಕದ ಹಾಸನ, ತುಮಕೂರು ಮತ್ತು ಶಿವಮೊಗ್ಗ  ಜಿಲ್ಲೆಗಳಲ್ಲಿ ಪ್ರಚಲಿತವಾಗಿರುವ ಕಲೆಯಿದು. ಏಕಾದಶಿ, ಶ್ರಾವಣ ಮಾಸ, ಜಾತ್ರೆ, ಉತ್ಸವ, ಗೌರಿ ಗಣೇಶ ಹಬ್ಬ, ಮದುವೆ ಮತ್ತು ಗ್ರಾಮದೇವತೆಗಳ ಹಬ್ಬಗಳಲ್ಲಿ ಇದು ಇಡೀ ರಾತ್ರಿ ನೆರವೇರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದನ್ನು  ‘ಚಿಕ್ಕಮೇಳ’ ಎಂದು ಕರೆಯುತ್ತಾರೆ.

ಕಲಾವಿದರು ನಿಲುವಂಗಿ, ವೀರಗಾಸೆ, ನಡುಪಟ್ಟಿ ಹಾಗೂ ಬಿಳಿಯ ರುಮಾಲುಗಳನ್ನು ಧರಿಸಿರುತ್ತಾರೆ, ಶೃತಿ, ವಾಲಗ, ಡೋಲು, ಶಂಖ, ಜಾಲರಿ ಇವುಗಳ ವಾದಕರೂ ಸೇರಿದಂತೆ ಎರಡು ಕರಡೇವು, ಮೂರು ಡೋಣು, ಒಂದು ಜಾಲರಿ ಮತ್ತು ಜಂಗು ಹೀಗೆ ಹತ್ತು ಮಂದಿ ಕಲಾವಿದರು ಈ ಮೇಳದಲ್ಲಿ ಇರುತ್ತಾರೆ. ಇಬ್ಬರು ಪಂಚಮವಾದ್ಯ ನುಡಿಸಿದರೆ ಒಬ್ಬ ಶೃತಿ ಒದಗಿಸುತ್ತಾನೆ. ಒಬ್ಬ ಕರಡೆ ಬಾರಿಸಿದರೆ ಮತ್ತಿಬ್ಬರು ಡೋಲು, ಒಬ್ಬ ಡಂಗ ನುಡಿಸಿದಾಗ ಚಿಟಿಕೆ ತಾಳದವನೊಬ್ಬ ಅದನ್ನು ಅನುಸರಿಸುತ್ತಾನೆ. ಹೀಗೆ ಮೇಳ ನಡೆಯುತ್ತದೆ. ಇತ್ತೀಚೆಗೆ ಜಾಲರಿಯನ್ನು ಬಳಸುವುದು ರೂಢಿಗೆ ಬಂದಿದೆ. ಗತ್ತುಗಳನ್ನು ಬದಲಾಯಿಸಲು ಚಿಟಿಕೆ ಜಾಲರಿ ಹಿಡಿದು ಕಲಾವಿದನೇ ಸೂಚನೆಯನ್ನು ಕೊಡುತ್ತಾನೆ. ಈತ ಮೇಳದ ಸೂತ್ರಧಾರನೂ ಹೌದು. ಅವನ ಸಂಜ್ಞೆಯನ್ನು ಅನುಸರಿಸಿ ಪಂಚಮಸ್ವರದವರು ಬೇರೆ ಬೇರೆ ಧಾಟಿಗಳಲ್ಲಿ ನಾದ ಹೂಡುತ್ತಾರೆ. ಆಗ ಉಳಿದ ವಾದ್ಯದವರು ಮೈ ಕುಲಕಿಸಿ ಹಿಂದಕ್ಕೆ ಮುಂದಕ್ಕೆ ಬಾಗಿ, ಬಳುಕಿ ಕುಣಿಯುತ್ತಾರೆ. ಕಲಾವಿದರು ಒಬ್ಬರ ಹಿಂದೆ ಒಬ್ಬರಂತೆ ಮೂರು ನಾಲ್ಕು ಸಾಲುಗಳಲ್ಲಿ ನಿಂತು ವೃತ್ತಾಕಾರವಾಗಿ ಸುತ್ತುತ್ತ ವಾದ್ಯಗಳನ್ನು ಬಾರಿಸುತ್ತಾರೆ.

ಈಗಾಗಲೇ ಹೇಳಿರುವಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಚಿಟ್ ಮೇಳ ವಿಶೇಷವಾಗಿ ದಸರಾ ಹಬ್ಬದ ಸಮಯದಲ್ಲಿ ನಾಲ್ಕು ದಿವಸಗಳ ಕಾಲ ರಾತ್ರಿಯಲ್ಲಿ ಪ್ರದರ್ಶನವಾಗುತ್ತದೆ. ಸಂಜೆಯ ವೇಳೆಗೆ ಕಲಾವಿದರು ಊರಿನ ನಿವಾಸಿಯೊಬ್ಬರ ಮನೆಯಲ್ಲಿ ಕುಳಿತು ಬಣ್ಣ ಹಚ್ಚಿ ವೇಷ ಕಟ್ಟಿಕೊಳ್ಳುತ್ತಾರೆ. ಇದರಲ್ಲಿ ಒಂದು ಸ್ತ್ರೀವೇಷ ಮತ್ತೊಂದು ಪುರುಷವೇಷವಿರುತ್ತದೆ. ಹಿಮ್ಮೇಳದಲ್ಲಿ ಭಾಗವತ, ಮೃದಂಗ ವಾದಕ, ಹಾರ್ಮೋನಿಯಂ ನುಡಿಸುವಾತ ಹೀಗೆ ಮೂರು ಜನರಿರುತ್ತಾರೆ. ಯಕ್ಷಗಾನ ಪ್ರಸಂಗಗಳಲ್ಲಿ ಪುರುಷ ಮತ್ತು ಸ್ತ್ರೀ ಪಾತ್ರಗಳು ಬರುವ ಸನ್ನಿವೇಶಗಳನ್ನು ಆಯ್ದುಕೊಂಡು ಕಲಾವಿದರು ಅಭಿನಯಿಸುತ್ತಾರೆ. ಮೊದಲಿಗೆ ಈ ಪ್ರದರ್ಶನ ಯಾವುದಾದರೂ ದೇವರ ಗುಡಿಯಲ್ಲಿ ನಡೆಯುತ್ತದೆ. ಅನಂತರವೇ ಮೇಳ ಮನೆಮನೆಗೆ ಹೋಗಿ ಇಡೀ ರಾತ್ರಿ ಪ್ರದರ್ಶನ ನೀಡುತ್ತದೆ. ಚಿಟ್‌ಮೇಳವು ಕರಡೆಮಜಲನ್ನು ಬಹುವಾಗಿ ಹೋಲುತ್ತದೆ. ಕರಡಿ ಮೇಳದಲ್ಲಿರುಷ್ಟೇ ಮಂದಿ ಕಲಾವಿದರು ಇಲ್ಲಿಯೂ ಇರುತ್ತಾರೆ. ಅದೇ ವಾದ್ಯ ಪರಿಕರಗಳೂ ಇರುತ್ತವೆ. ಒಂದು ರೀತಿಯಲ್ಲಿ ಬಯಲು ಸೀಮೆಯ ಹಳ್ಳಿಗರ ಸಂಗೀತ ಗೋಷ್ಠಿ ಎಂದು ಕರೆಯಬಹುದಾದ ಈ ಕಲೆ ಬಯಲಾಟದ ಹಾಡುಗಳ ಧಾಟಿ ರಾಗವಲ್ಲದೆ ಇತ್ತೀಚೆಗೆ ಸಿನಿಮಾ ಧಾಟಿಗೂ ಮನಸೋತಿದೆ.

ಎಚ್.ಸಿ.ಬಿ.

ಚಿಣಿಫಣಿ ಆಟ ಇದಕ್ಕೆ ‘ಚಿಣಿದಾಂಡ ಆಟ’ ಎಂದೂ ಹೆಸರು. ಸುಮಾರು ಒಂದೂವರೆ ಅಡಿಯ ಉದ್ದನೆಯ ಕಟ್ಟಿಗೆಯ ಕೋಲಿಗೆ ದಾಂಡ ಎಂದೂ, ಎರಡು-ಮೂರು ಅಂಗುಲ ಉದ್ದನೆಯ ಕಟ್ಟಿಗೆಯ ತುಂಡಿಗೆ ಚಿಣಿ ಎಂದೂ ಹೆಸರು. ಈ ಆಟಕ್ಕೆ ಒಂದು ಸೆರೆಯಾಕಾರದ ತಗ್ಗು ತೆಗೆಯುತ್ತಾರೆ. ಇದಕ್ಕೆ ಕುಣಿ ಅಥವಾ ಪುಚ್ಚಿ ಎಂದು ಹೆಸರು. ಕುಣಿಯ ಮೇಲೆ ಚಿಣಿಯನ್ನು ಅಡ್ಡವಾಗಿಟ್ಟು ದಾಂಡಿನಿಂದ ಚಿಮ್ಮಬೇಕು. ಇಪ್ಪತ್ತು ಅಡಿ ದೂರದಲ್ಲಿ ನಿಂತ ಎದುರಾಳಿ ಅದನ್ನು ಬುತ್ತಿ ಹಿಡಿಯುವಲ್ಲಿ ವಿಫಲವಾದರೆ ಆಟ ಮುಂದುವರಿಯುತ್ತದೆ. ಆಗ ಚಿಮ್ಮಿದವನು ದಾಂಡನ್ನು ಕುಣಿಯ ಮೇಲೆ ಅಡ್ಡ ಮಲಗಿಸಬೇಕು, ಇಲ್ಲವೆ ಕುಣಿಯಲ್ಲಿ ಲಂಬವಾಗಿ ಊರಿ ಹಿಡಯಬೇಕು. ಎದುರಾಳಿ ಚಿಮ್ಮಿ ಬಿದ್ದ ಚಿಣಿಯನ್ನು ಎತ್ತಿ ಅಲ್ಲಿಂದಲೇ ದಾಂಡಿಗೆ ಗುರಿಯಿಟ್ಟು ಎಸೆಯಬೇಕು. ದಾಂಡಿಗೆ ಮುಟ್ಟದಿದ್ದರೂ ಕುಣಿಯಿಂದ ಒಂದು ದಾಂಡದ ಅಳತೆಯ ಒಳಗೆ ಚಿಣಿ ಬೀಳದಿದ್ದರೂ ಆಟ ಮುಂದುವರಿಯುತ್ತದೆ. ಆಗ ಕುಣಿಯಿಂದ ಚಿಣಿ ಬಿದ್ದ ಅಂತರವನ್ನು ದಾಂಡದಿಂದ ಅಳೆಯುತ್ತ ಕೆಲವು ಪ್ರಾಸಗಳನ್ನು ಹೇಳುತ್ತಾರೆ. ಇಂಥ ಪ್ರಾಸಗಳು ಎರಡು ತೆರನಾಗಿದೆ.

೧) ಏಕನ ಪಾವ, ಜೋಕನ ಜಿಟ್ಟಿ, ಮುರಕನ ಮುಟ್ಟಿ, ಚರಕೆನ ಗೌಡ, ಪಚಕನ ಪುಚ್ಚಿ, ಸೇಮಂಡೋಳ ಜುಲ್ಲ.

೨) ಪಾವ, ಚಿಟ್ಟಿ, ಮುಟ್ಟಿ, ಗೌಡ, ಪುಚ್ಚಿ, ಡೋಳ, ಜುಲ್ಲ.

ಎಂ.ಎಂ.ಕೆ.

ಚಿನ್ನಪ್ಪ ರೆಡ್ಡಿ ಕಥ ತೆಲುಗಿನಲ್ಲಿ ಜನಪ್ರಿಯವಾದ ಒಂದು ಜನಪದ ವೀರ ಕಾವ್ಯದ ನಾಯಕ ಚಿನ್ನಪ್ಪರೆಡ್ಡಿ. ಸಾಹಸದಲ್ಲಿ ರಾಬಿನ್‌ಹುಡ್, ಕುದುರೆ ಸವಾರಿಯಲ್ಲಿ ರಿಚರ್ಡ್‌ಚಕ್ರವರ್ತಿ ಎಂದು ಹೆಸರುವಾಸಿಯಾದವನು ಚಿನ್ನಪ್ಪರೆಡ್ಡಿ. ಗುಂಟೂರು ಜಿಲ್ಲೆಯ ನರಸಾರಾವು ಪೇಟ ತಾಲ್ಲೂಕಿನ ಕೋಟಪ್ಪ ಕೊಂಡದ ಹತ್ತಿರ ಶಿವರಾತ್ರಿ ಉತ್ಸವದಲ್ಲಿ ಕ್ರಿ.ಶ. ೧೯೦೯ ಫೆಬ್ರವರಿ ತಿಂಗಳು ೧೮ನೇ ತಾರೀಕು ನಡೆದ ಘಟನೆಯನ್ನು ಆಧರಿಸಿ ಬಂದ ವೀರಕಾವ್ಯ ಇದು. ಚಿನ್ನಪ್ಪರೆಡ್ಡಿ ಕತೆಯನ್ನು ಹಾಡುತ್ತಾರೆ. ಸರ್ವಾಯಿಪಾಪಡು ಕತೆಯನ್ನು ಮುಸ್ಲಿಂ ಚರಿತ್ರೆಕಾರರು ತಿರುಗುಮುರುಗು ಮಾಡಿದಂತೆ ಚಿನ್ನಪ್ಪ ರೆಡ್ಡಿ ಕತೆಯನ್ನು ಕೂಡ ಬ್ರಿಟಿಷರು ವಕ್ರವಾಗಿ ಚಿತ್ರಿಸಿದರು. ರೆಡ್ಡಿ ದರೋಡೆಕೋರನೆಂದು ಹೇಳಿದರು. ಆದರೆ ಇದು ಸರಿಯಲ್ಲ ಚಿನ್ನಪ್ಪರೆಡ್ಡಿ ಒಂದೇ ಮಾತರಂ ಚಳವಳಿಯಲ್ಲಿ ಪಾಲ್ಗೊಂಡ ಸ್ವಾತಂತ್ಯ್ರಸಮರ ವೀರ. “ಸೈಸೈರಾ ಚಿನ್ನಪ್ಪರೆಡ್ಡಿ ನೀಪೇರೆ ಬಂಗಾರುಕಡ್ಡಿ” ಎಂಬ ಪಲ್ಲವಿಯಿಂದ ಚಿನ್ನಪ್ಪರೆಡ್ಡಿ ಗೀತೆ ಮುಂದುವರಿಯುತ್ತದೆ.

ವೀರಕಾವ್ಯದ ಪ್ರಕಾರ ಚಿನ್ನಪ್ಪರೆಡ್ಡಿ ಹುಟ್ಟಿದ್ದು ರೆಡ್ಡಿಪಾಳೆಂ ಎಂಬಲ್ಲಿ ಬೆಳೆದದ್ದು ಚೇಬ್ರೋಲು ಎಂಬ ಪ್ರದೇಶದಲ್ಲಿ. ತಂದೆ ಸುಬ್ಬಾರೆಡ್ಡಿ, ತಾಯಿ ಲಿಂಗಮ್ಮ. ಇವರಿಗೆ ಪೆದರಾಮಿರೆಡ್ಡಿ, ಚಿನರಾಮಿರೆಡ್ಡಿ, ರಾಘವರೆಡ್ಡಿ, ನರಿಸಿರೆಡ್ಡಿ ಎಂಬವರು ಅಣ್ಣಂದಿರು. ಇವನ ಹೆಂಡತಿ ರತ್ನಮ್ಮ, ತಿಮ್ಮಾರೆಡ್ಡಿ ಅಪ್ಪಯ್ಯ ಗೋವಿಂದು ಅನುಚರರು. ಇವರ ಜೊತೆ ಸೇರಿ ನಾಲ್ಕು ಭಾಷೆಗಳನ್ನು ಕಲಿತರು. ಚೀರಾಲ, ಪೇರಾಲ, ಒಂಗೋಲು, ಬಾಪಟ್ಲ, ಪೊತಕಮೂರು, ನೆಲ್ಲೂರು, ವಿನುಕೊಂಡ, ಗುಂಟೂರು ಪಟ್ಟಣಗಳನ್ನು ಕೊಳ್ಳೆ ಹೊಡೆದ. ಚೇಬ್ರೋಲು ಸುತ್ತ ೧೨ ಯೋಜನಾ ದೂರದಲ್ಲಿ ಬೆಂಕಿ ಇಲ್ಲದೆಯೇ ಉರಿಸಿದ ಮಹಾ ಸಾಹಸಿ ಚಿನ್ನಪ್ಪರೆಡ್ಡಿ. ಬ್ರಿಟಿಷ್ ಸರ್ಕಾರದವರು ಇವನ ಹೆಸರು ಕೇಳಿದರೆ ನಡುಗುತ್ತಿದ್ದರು. ಕುದುರೆಯನ್ನು ಹತ್ತಿರ ರೆಡ್ಡಿಯನ್ನು ಹಿಡಿಯಲು ಬ್ರಹ್ಮನಿಗೂ ಸಾಧ್ಯವಿರುತ್ತಿರಲಿಲ್ಲ.

ಪ್ರತಿವರ್ಷ ಮಹಾಶಿವರಾತ್ರಿ ದಿನ ಗುಂಟೂರು ಜಿಲ್ಲೆಯ ಕೋಟಪ್ಪಗೊಂಡ ಸಮೀಪದಲ್ಲಿ ದೊಡ್ಡ ಉತ್ಸವ ನಡೆಯುತ್ತದೆ. ಸುತ್ತಮುತ್ತ ಇರುವ ಹಳ್ಳಿಗಳಿಗಿಂತ ರೈತರು ಎತ್ತಿನಗಾಡಿಗಳಿಗೆ ಅಲಂಕಾರ ಮಾಡಿಕೊಂಡು ಅಲ್ಲಿಗೆ ಬರುತ್ತಾರೆ. ೧೯೦೯ರಲ್ಲಿ ಮಹಾಶಿವರಾತ್ರಿಯ ದಿನ ಚಿನ್ನಪ್ಪರೆಡ್ಡಿ ಅಲಂಕರಿಸಿದ ಗಾಡಿಯಲ್ಲಿ ಕೋಟಪ್ಪಕೊಂಡಕ್ಕೆ ಬಂದ. ಅಲ್ಲಿ ಪೊಲೀಸಿನವರು ಈತನನ್ನು ತಡೆದರು. ಆಗ ಚಿನ್ನಪ್ಪರೆಡ್ಡಿ ಅವರನ್ನು ಲೆಕ್ಕಿಸಲಿಲ್ಲ. ಪೊಲೀಸರು ೨೦೦ ತುಪಾಕಿಗಳನ್ನುದ ಪ್ರಯೋಗಿಸಿದರು. ಎತ್ತುಗಳು ಹೆದರಿಕೊಂಡು ಜನಗಳನ್ನು ತುಳಿದವು. ಪೊಲೀಸರು ಆ ಎತ್ತುಗಳ ಮೇಲೆ ಪ್ರತಿಭಟಿಸಿದರು. ಕೆಲವರು ಪೊಲೀಸರನ್ನು ಕೊಂದು ಹಾಕಿದರು. ಚಿನ್ನಪ್ಪರೆಡ್ಡಿ ತನ್ನ ಕುದುರೆಯನ್ನು ಪೊಲೀಸರ ಮೇಲಿಂದ ಹಾರಿಸಿ ಓಡಿ ಹೋದನು. ಈ ಗೊಂದಲದಲ್ಲಿ ಉತ್ಸವಕ್ಕೆ ಬಂದ ಜನರಿಗೆ ಗಾಯಳಾದವು. ಅನಂತರ ಚಿನ್ನಪ್ಪರೆಡ್ಡಿಯನ್ನು ಬಂಧಿಸಿ ನೇಣು ಹಾಕಿದರು.

ವೀರಕಾವ್ಯದ ಕೆಲವು ಸಾಲುಗಳು ಆಂಗ್ಲೇಯರ ಪಾಕ್ಷಿಕ ದೃಷ್ಟಿಯನ್ನು ತೋರುವ ರಚನೆಗಳು. ಆದರೆ ಇವನು ಬ್ರಿಟಿಷರ ದೌರ್ಜನ್ಯವನ್ನು ಎದುರಿಸಿದ ಧೀರ. ಪ್ರಮುಖ ಸ್ವಾತಂತ್ಯ್ರ ಸಮರ ವೀರರು, ದೇಶಭಕ್ತರು, ರಾಷ್ಟ್ರೀಯ ನಾಯಕರು ಆದ ಅಯ್ಯದೇವರ ಕಾಳೇಶ್ವರರರಾವು ತಮ್ಮ ಆತ್ಮಕಥನದಲ್ಲಿ ಚಿನ್ನಪ್ಪರೆಡ್ಡಿಯ ಕಥೆಯಲ್ಲಿರುವ ವಾಸ್ತವ ಅಂಶಗಳನ್ನು ವಿವರಿಸಿದ್ದಾರೆ. “೧೯೦೯ನೇ ಇಸವಿ ಫೆಬ್ರವರಿಯಲ್ಲಿ ಸರಸಾರವು ಪೇಟ ತಾಲ್ಲೂಕು ಕೋಟಪ್ಪಕೊಂಡದಲ್ಲಿ ನಡೆದ ಶಿವರಾತ್ರಿ ಉತ್ಸವಕ್ಕೆ ಸಾವಿರಾರು ಜನ ಬಂದಿದ್ದರು. ಅವರಲ್ಲಿ ಅನೇಕರು ಒಳ್ಳೆಯ ಎತ್ತುಗಳನ್ನು ಚೆನ್ನಾಗಿ ಅಲಂಕರಿಸಿಕೊಂಡು ಬಂದರು. ಚಿನ್ನಪ್ಪರೆಡ್ಡಿ ಎಂಬ ರೆಡ್ಡಿ ನಾಯಕ ಮತ್ತು ಅವನ ಮಿತ್ರರು ಅಲಂಕರಿಸಿದ ತಮ್ಮ ಗಾಡಿಗಳಲ್ಲಿ ಅಲ್ಲಿಗೆ ಬಂದಿದ್ದರು. ಪೊಲೀಸರು (Law and Order) ಲಾ ಅಂಡ್ ಆರ್ಡರ್ ಎಂಬ ಹೆಸರಿನಲ್ಲಿ ಅವರ ಮೇಲೆ ಅನಗತ್ಯವಾಗಿ ದಬ್ಬಾಳಿಕೆ ನಡೆಸಿ ಮನುಷ್ಯರನ್ನು, ಎತ್ತುಗಳನ್ನು ಬೆತ್ತಗಳಿಂದ ಹೊಡೆದ ಆಗ ಎತ್ತುಗಳು ಹೆದರಿ ಓಡಿದವು. ಪೊಲೀಸರು ಗುಂಡು ಹಾರಿಸಿ ಚಿನ್ನಪ್ಪರೆಡ್ಡಿ ಎತ್ತುಗಳನ್ನು ಸಾಯಿಸಿದರು. ಆಗ ಆತನ ಗೆಳೆಯರು ಪೊಲೀಸನ ಮೇಲೆ ತಿರುಗಿಬಿದ್ದರು. ಪೊಲೀಸರ ಗೋಲಿಬಾರಿನಿಂದ ಕೆಲವರು ಅಸುನೀಗಿದರು. ಜನ ಪೊಲೀಸರನ್ನು ಹೊಡೆಯಲಾರಂಭಿಸಿದರು. ಆ ಸಮಯದಲ್ಲಿ ‘ವಂದೇ ಮಾತರಂ’ ‘ಬ್ರಿಟಿಷ್ ಸರ್ಕಾರವನ್ನು ಒದ್ದೋಡಿಸಿ, ಸ್ವರಾಜ್ಯ ಬೇಕು’ ಎಂಬ ಕೂಗುಗಳು ನಾಲ್ಕು ದಿಕ್ಕುಗಳಲ್ಲೂ ಮೊಳಗಿದವು. ಗೊಂದಲ ಹೆಚ್ಚಾಗಿ ಎಲ್ಲರು ಚೆಲ್ಲಾಪಿಲ್ಲಿಯಾದರು. ಆಮೇಲೆ ಚಿನ್ನಪ್ಪರೆಡ್ಡಿಯನ್ನು ಬಂಧಿಸಿ ಗಲ್ಲಿಗೆ ಹಾಕಿದರು. ಬೇರೆ ಕೆಲವರಿಗೆ ಸುರ್ದಿರ್ಘ ಕಾಲ ಶಿಕ್ಷೆ ವಿಧಿಸಿದರು. ಆಗ ಕೆರಷಸ್ಟು ಎಂಬುವನು ಸಬ್‌ಕಲೆಕ್ಟರಾಗಿದ್ದನು. ಅವನು ರಾಜೀನಾಮೆ ಕೊಟ್ಟು ಹೋದನು. ಕೆಲವು ಉದ್ಯೋಗಿಗಳನ್ನು ಕರ್ತವ್ಯ ನಿರ್ವಹಣೆಯ ಲೋಪ ತೋರಿಸಿ ಕೆಲ ಹುದ್ದೆಗಳಿಗೆ ವರ್ಗಾಯಿಸಿದರು. ಇದು ಕೂಡ ಸ್ವಾತಂತ್ಯ್ರ ಚಳವಳಿಗೆ ನೆರವಾಯಿತು. ಚಿನ್ನಪ್ಪರೆಡ್ಡಿಯನ್ನು ವೀರನೆಂದು ಹೊಗಳುತ್ತಾ ಹಾಡುಗಳನ್ನು ಬರೆದರು. ಈಗಲೂ ಇವುಗಳನ್ನು ಹಾಡುತ್ತಿದ್ದಾರೆ.”

ಚಿನ್ನಪ್ಪರೆಡ್ಡಿ ಕತೆಯನ್ನು ಎರಡು ರಾತ್ರಿಗಳಲ್ಲಿ ಹಾಡುತ್ತಾರೆ. ಅವನ ಜನ್ಮ, ಬೆಳೆದದ್ದು, ಮೈಸೂರಿಗೆ ಹೋಗಿ ಎತ್ತುಗಳನ್ನು ತಂದ್ದದ್ದು ಇವೆಲ್ಲ ಮೊದಲನೆಯ ರಾತ್ರಿಯ ಕತೆಯಲ್ಲಿವೆ. ಕೋಟಪ್ಪಕೊಂಡ ಉತ್ಸವ, ಚಿನ್ನಪ್ಪರೆಡ್ಡಿ ಮದ್ರಾಸಿಗೆ ಹೋಗಿ ಕುದುರೆಯನ್ನು ಖರೀದಿ ಮಾಡಿ ತರುವುದು, ಸರ್ಕಾರದವರು ಇವನನ್ನು ಮೋಸದಿಂದ ಹಿಡಿಯುವುದು, ಚಿನ್ನಪ್ಪರೆಡ್ಡಿಗೆ ಶಿಕ್ಷೆ ವಿಧಿಸುವುದು – ಇವೆಲ್ಲ ಎರಡನೆಯ ರಾತ್ರಿಯ ಕತೆಯಲ್ಲಿ ಬರುತ್ತವೆ.

ಚಿನ್ನಪ್ಪರೆಡ್ಡಿಗೆ ತಂಬಿ ಒಬ್ಬಳು ಇದ್ದಳು. ಆಕೆ ಕೂಡ ವೀರ ಮಹಿಳೆ. ಅಣ್ಣನಿಗೆ ಸಮವಾಗಿ ಕಾರ್ಯ ಪ್ರದರ್ಶನ ಮಾಡಿ ಪೊಲೀಸರ ಜೊತೆ ಹೋರಾಡಿದಂತೆ ಒಂದು ವೀರಕಾವ್ಯದಲ್ಲಿದೆ. ಘಟನೆ ನಡೆದ ಕೂಡಲೇ ವೀರ ಕಾವ್ಯ ಹುಟ್ಟುತ್ತದೆ ಎಂಬ ನಂಬಿಕೆಗೆ ತಕ್ಕಂತೆ ಚಿನ್ನಪ್ಪರೆಡ್ಡಿ ಕತೆ ಮೂಡಿಬಂದಿದೆ.

ಟಿ.ವಿ.ಎಸ್. ಅನುವಾದ ಎ.ಎಂ.ಡಿ.

ಚಿನ್ನಮಾಯಿ ಕಲ್ಲರೈ ವಳಿಬಾಡು ತಂಜಾವೂರು ಕ್ರೈಸ್ತಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ ತಚ್ಚಂಗುರಿಚಿ ಎಂಬ ಗ್ರಾಮ ಇದೆ. ಇದು ಕಥೊಲಿಕ್ ಕ್ರೈಸ್ತರು ಹೆಚ್ಚಾಗಿ ವಾಸಿಸುತ್ತಿರುವ ಗ್ರಾಮ. ಇದರ ಉಪಗ್ರಾಮವಾದ ಸವೇರಿಯಾರ್ ಪಟ್ಟಿಯಲ್ಲಿ ಚಿನ್ನಮಾಯಿ ಸಮಾಧಿ ಇದೆ. ಇದು ಕಥೊಲಿಕ್ ಕ್ರೈಸ್ತರಿಗೆ ಪೂಜನೀಯ ಸ್ಥಳವಾಗಿದೆ. ಜನರು ತಮ್ಮ ಅನೇಕ ಬೇಡಿಕೆಗಳು ಹಾಗೂ ಹರಕೆ ತೀರಿಸಲು ಎತ್ತಿನ ಗಾಡಿಗಳಲ್ಲಿ ಇಲ್ಲಿಗೆ ಬಂದು, ಅಡುಗೆ ಮಾಡಿ ಉಂಡು, ಬಡಬಗ್ಗರಿಕೆ ಅನ್ನದಾನ ಮಾಡುವುದು ರೂಢಿಯಲ್ಲಿದೆ. ಈ ಸಮಾಧಿಪೂಜೆಯಲ್ಲಿ ಗಹಮನಾರ್ಹವಾದ ಅನೇಕ ವೈಶಿಷ್ಟ್ಯಗಳಿವೆ.

ಸುಮಾರು ಐದು ತಲೆಮಾರಿಗೆ ಮುನ್ನ ತಚ್ಚಂಗುರಿಚಿ ಎಂಬ ಗ್ರಾಮ ವಲ್ಲಂ ಚರ್ಚ್‌‌ಗೆ ಸೇರಿತ್ತು. ಆಗ ಅಲ್ಲಿಯ ಪಾದ್ರಿ ಮರುದ ಮುತ್ತು ಒಡೆಯರ್ ಎಂಬ ವ್ಯಕ್ತಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದರು. ಕ್ರೈಸ್ತ ಧರ್ಮದಲ್ಲಿ ಅವರಿಗೆ ಚಿನ್ನಪ್ಪನ್ ಎಂದು ನಾಮಕರಣ ಮಾಡಲಾಯಿತು. ಇವರು ಚಿನ್ನಮ್ಮಾಳ ಎಂಬಾಕೆಯನ್ನು ಮದುವೆಯಾದರು. ಇವರಿಗೆ ಜಮೀನು ಹೆಚ್ಚಾಗಿದ್ದುದರಿಂದ ಮುಂಗಾರು ಬೆಳೆಯಾಗಿ ಬತ್ತ, ಕಬ್ಬು, ಜೋಳ, ನವಣೆ ಮುಂತಾದ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತಿದ್ದವು.

ಜಮೀನಿನಲ್ಲಿ ಬೆಳೆದ ಧಾನ್ಯಗಳನ್ನು ಮನೆಯಲ್ಲಿದ್ದ ಕಣಜಗಳಲ್ಲಿ ಸಂಗ್ರಹಿಸಿಟ್ಟರು. ಇವರಿಗೆ ಮಕ್ಕಳಿಲ್ಲದೆ ಕಾರಣ ಧಾನ್ಯಗಳು ಹೆಚ್ಚಾಗಿ ಖರ್ಚಾಗುತ್ತಿರಲಿಲ್ಲ. ಒಳ್ಳಯ ಬೆಲೆ ಬಂದಾಗ ಧಾನ್ಯಗಳನ್ನು ಮಾರಬಹುದು, ಆಗ ಹೆಚ್ಚು ಲಾಭವಾಗುತ್ತದೆ ಎಂದು ಚಿನ್ನಪ್ಪನ್ ಭಾವಿಸಿದ್ದರು. ಆದರೆ ಹಿಂಗಾರಿನಲ್ಲಿ ಬಿತ್ತಿದ ಬೆಳೆಗಳು ಮಳೆಯ  ಅಭಾವದಿಂದ ನಾಶವಾಗಿ ಊರಲ್ಲಿ ತೀವ್ರ ಬರಗಾಲ ಎದುರಾಯಿತು. ತಿನ್ನಲು  ಆಹಾರವಿಲ್ಲದೆ ಬಡವರು ಹಸಿವಿನಿಂದ ಪರಿತಪಿಸುವುದನ್ನು ಕಂಡು ಚಿನ್ನಮ್ಮಾಳ್ ಮರುಗಿದಳು. ನಮ್ಮ ಮನೆಯಲ್ಲಿ ಧಾನ್ಯಗಳಿದ್ದು, ಅವುಗಳನ್ನು ನೀಡಿದರೆ ಅವರು ತಮ್ಮ ಹಸಿವನ್ನು ನೀಗಿಸಕೊಳ್ಳಬಹುದಲ್ಲವೆ? ಎಂದು ಮನದಲ್ಲೇ ಯೋಚಿಸುತ್ತಿದ್ದಳು. ಆದ್ದರಿಂದ ಗಂಡನಿಗೆ ತಿಳಿಯದಂತೆ ಅವರ ಅನುಮತಿ ಪಡೆಯದೆಯೇ ಕಣಜದಲ್ಲಿ ಸಂಗ್ರಹಿಸಿಟ್ಟಿದ್ದ ಬತ್ತ, ಜೋಳ, ಕಬ್ಬು, ನವಣೆ ಮುಂತಾದ ಧಾನ್ಯಗಳನ್ನು ಹಸಿವಿನಿಂದ ಪರದಾಡುತ್ತಿದ್ದ ಬಡವರಿಗೆ ಧಾರಾಳವಾಗಿ ನೀಡಿದಳು. ಅಂಬಲಿ ಮಾಡಿ ಎಲ್ಲರಿಗೂ ಹಂಚಿದರು. ಇದರಿಂದ ಹಸಿವಿನಿಂದ ನರಳುತ್ತಿದ್ದ ಎಲ್ಲರೂ ಸಂತಸಗೊಂಡರು.

ಇತ್ತ, ಚಿನ್ನಪ್ಪನ್ ತನ್ನ ಮನೆಯಲ್ಲಿದ್ದ ಧಾನ್ಯಗಳನ್ನು ಮಾರುವ ಸಲುವಾಗಿವ್ಯಾಪಾರಿಗಳನ್ನು ಕರೆದುಕೊಂಡು ಬಂದನು. ವ್ಯಾಪಾರಿಗಳನ್ನು ಮನೆಯ ಮುಂಭಾಗದ ಕೋಣೆಯಲ್ಲಿ ಕುಳ್ಳಿರಿಸಿ ಮನೆಯೊಳಗೆ ಬಂದು ಕಣಜ ನೋಡಿದಾಗ ಧಾನ್ಯಗಳು ಕಾಣಲಿಲ್ಲ. ಎರಡು ಕಣಜಗಳಲ್ಲಿ ತಳಭಾಗದಲ್ಲಿ ಮಾತ್ರ ಸ್ವಲ್ಪ ಧಾನ್ಯಗಳಿದ್ದವು. ಕೂಡಲೆ ಯಾವುದೇ ಆತಂಕಕ್ಕೆ ಒಳಗಾಗದೆ, ಇಂದು ಮಂಗಳವಾರವಾಗಿರುವುದರಿಂದ ಧಾನ್ಯಗಳನ್ನು ಮಾರಾಟ ಮಾಡಬೇಡಿ ಎಂದು ಮನೆಯಲ್ಲಿ ಹೇಳುತ್ತಿದ್ದಾರೆ. ಆದ್ದರಿಂದ ನೀವು ನಾಳೆ ಬನ್ನಿ ಎಂದು ಹೇಳಿ ವ್ಯಾಪಾರಿಗಳನ್ನು ನಯವಾಗಿ ಹಿಂದಕ್ಕೆ ಕಳುಹಿಸಿದನು. ಅಂದು ಚಿನ್ನಮ್ಮಾಳ್ ಮನೆಯಿಂದ ಧಾನ್ಯಗಳನ್ನು ಒಯ್ದು ತೋಟದಲ್ಲಿ ಅಂಬಲಿ ಕಾಯಿಸಿ ಬಡವರಿಗೆ ವಿತರಣೆ ಮಾಡಿ, ಕೊಡದಲ್ಲಿ ನೀರನ್ನು ಹೊತ್ತುಕೊಂಡು ಮನೆಗೆ ಬಂದರು. ಆಗ ಧಾನ್ಯಗಳನ್ನು ಕೊಳ್ಳಲು ವ್ಯಾಪಾರಿಗಳು ಮನೆಗೆ ಬಂದು ಹೋದದ್ದನ್ನು ಆಕೆಗೆ ಅಕ್ಕಪಕ್ಕದವರು ತಿಳಿಸಿದರು. ಇದರಿಂದ ತನ್ನ ಗಂಡ ಕೋಪದಲ್ಲಿರುವುದನ್ನು ಅರಿತ ಚಿನ್ನಮ್ಮಾಳ್, ಮನೆಯೊಳಗೆ ಹೋಗಿ ಒಬ್ಬಳೇ ಕುಳಿತು ಅಳುತ್ತಿದ್ದಳು. ಕೂಡಲೇ ಚಿನ್ನಪ್ಪನ್ ‘ಯಾಕೆ ಅಳುತ್ತಿರುವೆ? ಇಲ್ಲಿಗೆ ಬಾ’ ಎಂದು ಪ್ರೀತಿಯಿಂದ ಕರೆದರು. ಚಿನ್ನಮ್ಮಾಳ್ ಅಳುತ್ತಲೇ ಭಯಭೀತಳಾಗಿ ನಡುಗುತ್ತ ‘ನನ್ನನ್ನು ಕ್ಷಮಿಸಿ ಬಿಡಿ’ ಎಂದು ತನ್ನ ಗಂಡನ ಕಾಲಿಗೆ ಬಿದ್ದು ಗೋಳಾಡಿದಳು.

ಚಿನ್ನಪ್ಪನಿಗೆ ಏನು ಮಾಡಬೇಕೆಂದು ತೋಚದೆ, ‘ನಿನ್ನನ್ನು ಕ್ಷಮಿಸುತ್ತೇನೆ. ಏಳು ಮೇಲೆ’ ಎಂದು ಮರುಕದಿಂದ ನುಡಿದರು. ಜೊತೆಗೆ ಪತ್ನಿಯನ್ನು ಕುರಿತು ‘ಕಣಜದಲ್ಲಿದ್ದ ಜೋಳ, ಕಬ್ಬು, ನವಣೆ ಎಲ್ಲವೂ ಎಲ್ಲಿ? ಏನಾಯಿತು?’ ಎಂದು ಕೇಳಿದರು. ಚಿನ್ನಮ್ಮಾಳ್ ಪ್ರತ್ಯುತ್ತರವಾಗಿ, ‘ಹಸಿವಿನಿಂದ ಬಸವಳಿದ ಬಡವರನ್ನು ಕಂಡು ನನ್ನ ಮನ ಮಿಡಿಯಿತು. ನಮಗಾದರೂ ಮಕ್ಕಳಿಲ್ಲ. ಆದ್ದರಿಂದ ಹಸಿವಿನಿಂದ ಕಂಗೆಟ್ಟ ಮಕ್ಕಳಿಗೆ ಆಹಾರ ನೀಡಿದೆ. ಅವರು ಹೊಟ್ಟೆ ತುಂಬಾ ಉಂಡದ್ದನ್ನು ನೋಡಿ ನನ್ನ ಮನಸ್ಸು ಸಂತಸಗೊಂಡಿತು. ಬಡವರಿಗೆ ಆಹಾರ ನೀಡುವ ಮುನ್ನ ನಿಮ್ಮನ್ನು ಕೇಳಿದರೆ, ಅನುಮತಿ ನೀಡದಿದ್ದರೆ ಏನು ಮಾಡುವುದೆಂದು ಬಗೆದು, ದಾನ ಮಾಡಿದ ಬಳಿಕ ನಿಮಗೆ ಹೇಳಿದರಾಯಿತು ಎಂದು ಭಾವಿಸಿ ದಾನ ನೀಡಿದ್ದೇನೆ. ಇನ್ನು ಮುಂದೆ ನಿಮ್ಮ ಅನುಮತಿ ಇಲ್ಲದೆ ಹೀಗೆ ಮಾಡುವುದಿಲ್ಲ. ನನ್ನನ್ನು ಕ್ಷಮಿಸಿ ಎಂದು ವಿನಂತಿಸಿ ಕೊಂಡಳು. ಕೂಡಲೆ ಚಿನ್ನಪ್ಪನ್ ಉದಾರ ಮನಸ್ಕರಾಗಿ ‘ನೀನು ಏನೇ ಮಾಡಿದರೂ ಒಳ್ಳೆಯದಕ್ಕೆ ಮಾಡಿರುತ್ತೀಯ, ಕಣಜದಲ್ಲಿ ಉಳಿದಿರುವ ಧಾನ್ಯಗಳನ್ನು ಸಹ ನಿನ್ನ ಬಲಗೈಯಿಂದ ದಾನ ಮಾಡಿ ಬಿಡು’ ಎಂದು ನುಡಿದನಂತೆ. ಆಗಿನಿಂದ ಜಮೀನಿನಲ್ಲಿ ಎಷ್ಟು ಆಹಾರ ಪದಾರ್ಥಗಳ್ನು ಬೆಳೆದರೂ, ಏನು ಮಾಡಿದೆ ಎಂದು ಚಿನ್ನಪ್ಪ ಪತ್ನಿಯನ್ನು ಪ್ರಶ್ನಿಸುತ್ತಿರಲಿಲ್ಲ.

ಎಲ್ಲ ಅನುಕೂಲಗಳಿದ್ದರೂ, ಜಮೀನುಗಳಿದ್ದರೂ ಮನೆಯಲ್ಲಿ ಮಕ್ಕಳಿಲ್ಲವಲ್ಲ ಎಂಬ ಚಿಂತೆ ಇದ್ದರೂ, ಅದನ್ನು ಬದಿಗೊತ್ತಿ ಇತರರು ಚೆನ್ನಾಗಿರಬೇಕು ಎಂಬ ಚಿನ್ನಮ್ಮಾಳ್ ಭಾವನೆ ದೊಡ್ಡದು. ಆಕೆಯ ಆ ಧಾರಾಳತನ, ವಿಶಾಲ ಮನಸ್ಸು, ದಾನ ಮಾಡುವ ಗುಣ, ಹಂಚಿ ತಿನ್ನುವ ಮನೋಭಾವ ಮುಂತಾದ ಮಾನವೀಯ ಮೌಲ್ಯಗಳು ಆಕೆಯನ್ನು ಅನಂತರದ ಕಾಲದಲ್ಲಿ ಜನರು ಸ್ಮರಿಸಿಕೊಳ್ಳುವಂತಹ ಉನ್ನತ ಮಟ್ಟಕ್ಕೆ ಏರಿಸಿತು. ಆಕೆಯ ಗಂಡ ಚಿನ್ನಪ್ಪನ್ ಸಹ ಪತ್ನಿಯ ಧಾರಾಳತನ ಮತ್ತು ಬಡವರಿಗೆ ದಾನ ನೀಡುವ ಗುಣವನ್ನು ಸಂಕುಚಿತ ದೃಷ್ಟಿಯಿಂದ ನೋಡಲಿಲ್ಲ. ಅದರ ಬದಲು ತನ್ನ ಪತ್ನಿ ಬಡವರಿಗೆ ಊಟ ಹಾಕಿದ್ದನ್ನು ಪ್ರಶಂಸಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿನ್ನ ಬಲಗೈಯಿಂದ ಅಗತ್ಯವಿರುವವರಿಗೆ ದಾನ ನೀಡು ಎಂದು ಹೇಳಿದರು. ಅಲ್ಲದೆ, ಜಮೀನಿನಲ್ಲಿ ಎಷ್ಟು ಬೆಳೆ ಬೆಳೆದರೂ ಅದನ್ನು ತನ್ನ ಪತ್ನಿ ಯಾರಿಗೆ ಎಷ್ಟು ನೀಡಿದರೂ ಕೇಳುತ್ತಿರಲಿಲ್ಲ ಎಂದು ತಿಳಿದುಬರುತ್ತದೆ.

‘ಚಿನ್ನಮ್ಮಾಳ್’ ಎಂಬ ಹೆಸರು ಜನರ ಬಾಯಲ್ಲಿ ‘ಚಿನ್ನಮಾಯಿ’ ಎಂದು ಬದಲಾಯಿತು. ಚಿನ್ನಮಾಯಿಗೆ ೯೦ ವರ್ಷ ವಯಸ್ಸಾದಾಗ, ತಾನು ಮರಣಿಸುವ ಸಂದರ್ಭದಲ್ಲಿ ತನ್ನ ಪತಿಯನ್ನು ತಮ್ಮ ಕೊನೆಯಾಸೆಯನ್ನು ಈಡೇರಿಸಿ ಕೊಡುವಂತೆ ಕೇಳಿಕೊಂಡರು. ತಾನು ಮರಣ ಹೊಂದಿದ ಮೇಲೆ ತನ್ನನ್ನು ತಮ್ಮ ಜಮೀನಿನಲ್ಲಿರುವ ಬೇವಿನ ಮರದ ಅಡಿಯಲ್ಲಿ ಸಮಾಧಿ ಮಾಡಬೇಕೆಂದು ಕೇಳಿಕೊಂಡಳು. ಒಂದು ವೇಳೆ ಆಕೆ ಆ ಮರದಡಿಯಲ್ಲಿಯೇ ಕುಳಿತು ಹಸಿವಿನಿಂದ ಬಳಲಿ ಬಂದ ಬಡವರಿಗೆ ಗಂಜಿ ಕಾಯಿಸಿ ವಿತರಿಸಿರಬಹುದು. ಆದ್ದರಿಂದ ಅದರ ನೆನಪಿಗಾಗಿ ತನ್ನನ್ನು ಅಲ್ಲೇ ಸಮಾಧಿ ಮಾಡುವಂತೆ ಕೇಳಿಕೊಂಡಿರಬಹುದು. ಚಿನ್ನವಮಾಯಿ ತೀರಿಕೊಂಡ ಮೂರನೇ ವರ್ಷಕ್ಕೆ ಚಿನ್ನಪ್ಪನ್ ಕೂಡ ನಿಧನರಾಗುತ್ತಾರೆ. ಅವರನ್ನು ಸಹ ಚಿನ್ನಮಾಯಿ ಸಮಾಧಿಯ ಬಳಿಯಲ್ಲೇ ಸಮಾಧಿ ಮಾಡಲಾಯಿತು.

ಮೌಖಿಕ ಪರಂಪರೆಯ ಪ್ರಕಾರಾ, ಚಿನ್ನಮಾಯಿ ನಿಧಾನರಾಗಿ ೩೦ ದಿನಗಳು ಕಳೆದ ಮೇಲೆ ಆಕೆಯ ಸಮಾಧಿಯ ಮೇಲೆ ಬಳಿ ಒಂದು ಪವಾಡ ಸಂಭವಿಸಿತು. ತಚ್ಚಂಗುರಿಚಿ ಗ್ರಾಮಕ್ಕೆ ಸೇರಿದ ಒಬ್ಬ ಕೋನಾರ್ ಚಿನ್ನಮಾಯಿ ಸಮಾಧಿಯ ಸಮೀಪ ಕುರಿಗಳನ್ನು ಮೇಯಿಸುತ್ತಿದ್ದನು. ಅವನ ಜೊತೆಗೆ ಇನ್ನೂ ಇಬ್ಬರು ಸೇರಿಕೊಂಡು ಅಲ್ಲೇ ಕುರಿಗಳೊಂದಿಗೆ ತಾತ್ಕಾಲಿಕ ವಾಸ್ತವ್ಯ ಹೂಡಿದ್ದರು. ಆ ಕೋನಾರ್‌ಗೆ ಆಗಾಗ ಹೊಟ್ಟೆ ನೋವು ಬರುತ್ತಿತ್ತು. ಅವನ ಜೊತೆಯಲ್ಲಿದ್ದ ಉಳಿದಿಬ್ಬರೂ ನೀವು ಕುರಿಗಳನ್ನು ನೋಡಿಕೊಳ್ಳಿ. ನಾವು ಊರಿಗೆ ಹೋಗಿ ಊಟ ಮಾಡಿ ನಿಮಗೂ ಊಟ ತರುತ್ತೇವೆ ಎಂದು ಹೇಳಿ ಹೊರಟು ಹೋದರು. ಅವರು ಹೋದ ಸ್ವಲ್ಪ ಸಮಯದ ಬಳಿಕ ಕೋನಾರ್‌ಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಹೊಟ್ಟೆ ನೋವು ತೀವ್ರವಾಗಿ, ಅದನ್ನು ತಾಳಲಾರದೆ ಒದ್ದಾಡಿದ. ಇನ್ನು ಬದುಕುವುದಕ್ಕಿಂತ ಸಾಯುವುದೇ ಲೇಸು ಎಂದು ಬಗೆದು ನೇಣು ಹಾಕಿಕೊಂಡು ಸಾಯಲು ತೀರ್ಮಾನಿಸಿದನು. ಹಗ್ಗವನ್ನು ತೆಗೆದುಕೊಂಡು, ಮರವನ್ನು ಹುಡುಕುತ್ತಾ ಹೋದ. ಚಿನ್ನಮಾಯಿ ಸಮಾಧಿಯ ಬಳಿ ಇದ್ದ ಬೇವಿನ ಮರಕ್ಕೆ ಹಗ್ಗ ಕಟ್ಟಿ, ಕುತ್ತಿಗೆಗೆ ಬಿಗಿದು ಕೊಳ್ಳುವಾಗ, ಆ ಮರದಡಿಯಲ್ಲಿ ಬಿಳಿಯ ಬಟ್ಟೆ ಧರಿಸಿದ ಸ್ತ್ರೀಯೊಬ್ಬಳು ಪ್ರತ್ಯಕ್ಷಳಾದಳು. ‘ಮಗನೇ ಕೆಳಗೆ ಇಳಿದು ಬಾ’ ಎಂದು ಧ್ವನಿ ಕೇಳಿಸಿತು. ಕೂಡಲೇ ಕೋನಾರ್, ‘ಯಾರು ಹೇಳಿದರೂ ಕೇಳಲಾರೆ, ನನಗೆ ಹೊಟ್ಟೆ ನೋವು ಸಹಿಸಲಾಗುತ್ತಿಲ್ಲ. ಆದ್ದರಿಂದ ಸಾಯುತ್ತಿದ್ದೇನೆ’ ಎಂದು ಉತ್ತರ ನೀಡಿದನು. ಮತ್ತೆ ಆ ಹೆಣ್ಮಿನ ಧ್ವನಿ ‘ಮಗನೇ ಕೆಳಗಿಳಿದು ಬಾ! ನಿನ್ನ ಹೊಟ್ಟೆನೋವು ವಾಸಿ ಆಗುತ್ತದೆ’ ಎಂದು ಹೇಳಿತು. ಅಲ್ಲದೆ, ‘ನೀನು ಕೆಳಗೆ ಇಳಿದು ಬಂದು ಈ ಮರದಡಿಯಲ್ಲಿ ಇರುವ ಮಣ್ಣನ್ನು ತೆಗೆದುಕೊಂಡು ತಿನ್ನು; ನಿನ್ನ ಹೊಟ್ಟೆನೋವು ಹೋಗುತ್ತದೆ. ಮಾತ್ರವಲ್ಲ, ನಿನ್ನ ತಲೆಮಾರಿಗೆ ಹೊಟ್ಟೆ ನೋವು ಬರುವುದಿಲ್ಲ. ಆದರೆ ನೀನು ಒಂದು ಕೆಲಸ ಮಾಡಬೇಕು. ಈ ಸ್ಥಳದಲ್ಲಿ ನೀರು ಮಜ್ಜಿಗೆ ವಿತರಣೆ ಮಾಡು ಹಾಗೂ ನಿಮ್ಮ ಊರಿನ ಸಿಲಂಬುಡೈಯಾರ್‌ಗೆ ಪ್ರತಿ ಶನಿವಾರ ಸಾಂಬ್ರಾಣಿ ಧೂಪ ಹಾಕುವಂತೆ ಹೇಳು’ ಎಂದು ಹೇಳಿತು. ಇದು ಚಿನ್ನಮಾಯಿ ಮಾಡಿದ ಮೊದಲ ಪವಾಡ ಎಂದು ಹೇಳಲಾಗಿದೆ.

ಅಂದಿನಿಂದ ಇಂದಿನವರೆಗೂ ಚಿನ್ನಮಾಯಿ ಸಮಾಧಿಯಲ್ಲಿ ಕೋನಾರ್ ಕುಟುಂಬಕ್ಕೆ ಸೇರಿದವರು ಇಲ್ಲಿ ನೀರು ಮಜ್ಜಿಗೆ ವಿತರಿಸುತ್ತಾರೆ. ಲಕ್ಷಾಂತರ ಜನರು ಇಲ್ಲಿಗೆ ಜಮಾಯಿಸಿ ಚಿನ್ನಮಾಯಿ ಸಮಾಧಿಯಲ್ಲಿ ಹರಕೆ ಮಾಡಿಕೊಳ್ಳುತ್ತಾರೆ. ಕೇಳಿದ್ದು ಪ್ರಾಪ್ತಿಯಾದರೆ, ಕೃತಜ್ಞತೆ ಸಲ್ಲಿಸಲು ಮುಂದಿನ ವರ್ಷವೂ ಆಗಮಿಸುತ್ತಾರೆ.

ಜನರು ರೋಗರುಜಿನವಿಲ್ಲದೆ ಬದುಕಬೇಕೆಂಬ ಆಶಯದಿಂದ, ಎಲ್ಲರಿಗೂ ಗುಣಮುಖವಾಗಿಸುವ ಆಶೀರ್ವಾದವನ್ನು ನೀಡುತ್ತಿದ್ದಾರೆ. ಆದ್ದರಿಂದ ದೈಹಿಕ ಕಾಯಿಲೆಗಳಿಂದ ನರಳುವ ಅನೇಕರು ಚಿನ್ನಮೂಲ ಸಮಾಧಿಗೆ ಬಂದು ಪ್ರಾರ್ಥನೆ ಮಾಡಿದರೆ ಕಾಯಿಲೆ ವಾಸಿಯಾಗುತ್ತದೆ. ಕೃಷಿಯಲ್ಲಿ ಏಳಿಗೆಯುಂಟಾಗುತ್ತದೆ ಎಂದು ನಂಬುತ್ತಾರೆ. ‘ಚಿನ್ನಮಾಯಿ ಸಮಾಧಿ’ ಪೂಜೆ ಕಥೋಲಿಕ್ ಧರ್ಮಸಭೆಯಿಂದ ಪೂರ್ಣವಾಗಿ ಅಂಗೀಕೃತವಾಗಿಲ್ಲ. ಆದರೆ ಬಹುಜನರ ಕಥೋಲಿಕ ಭಕ್ತಿಯ ಅಭಿವ್ಯಕ್ತಿಯಾಗಿದೆ.

ಎ.ಇ. ಅನುವಾದ ಐ.ಎಸ್.