ಚೊರಿ ಮುತ್ತೈಯನಾರ್ ಚೊರಿ ಮುತ್ತೈಯನಾರ್ ಎಂಬುದು ಪೊದಿಗೈ ಮಲೈಯಲ್ಲಿರುವ ತುಂಬ ವಿಶೇಷವಾದ ದೇವಾಲಯ. ಈ ದೇವಾಲಯ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ತುಂಬ ಪ್ರಸಿದ್ಧಿಯನ್ನು ಪಡೆದಿದೆ. ತಿರುನಲ್ವೇಲಿ ಭಾಗದಲ್ಲಿರುವ ಅಯ್ಯನಾರ್ ದೇಗುಲದಲ್ಲಿ ಮುಖ್ಯ ದೇವರೆಂದರೆ ಚೊರಿ ಮುತ್ತೈಯನಾರ್.

ಈ ದೇವಾಲಯ ಹಲವು ಸಾವಿರ ವರ್ಷಗಳ ಹಿಂದೆ ಹುಟ್ಟಿದುದಾಗಿ ಕತೆ, ಹಾಡುಗಳು ಹೇಳುತ್ತವೆ. ನಿಗದಿತ ಕಾಲದಲ್ಲಿ ಮಳೆ ಬರದಿದ್ದರೆ ಊರಿನವರೆಲ್ಲರೂ ಒಂದುಗೂಡಿ ಚೊರಿ ಮುತ್ತೈಯನಾರ್ ಗುಡ್ಡಕ್ಕೆ ಪೂಜೆ ಸಲ್ಲಿಸಿ ಅನ್ನದಾನ ಮಾಡಿದರೆ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ.

ಚೊರಿ ಮುತ್ತೈಯನಾರ್ ಎಂಬ ಹೆಸರು ಬರಲು ಕಾರಣವೇನು ಎಂಬುದಕ್ಕೆ ಜನರು ಒಂದು ಕತೆಯನ್ನು ಹೇಳುತ್ತಾರೆ. ಮಳೆಯು ಮುತ್ತು ಮುತ್ತಾಗಿ ಬೀಳುವುದರಿಂದ ಚೊರಿ ಮುತ್ತೈಯನಾರ್ ಎಂಬ ಹೆಸರು ಬಂದಿದೆ. ಚೊರಿದಲ್ ಎಂದರೆ ಹೂಯ್ಯುವುದು ಅಥವಾ ಬೀಳುವುದು ಎಂದರ್ಥ. ಮುತ್ತು ಎಂದರೆ ಬೆಲೆ ಕಟ್ಟಲಾಗದ ವಸ್ತು. ಆದ್ದರಿಂದ ಮಳೆ ಇಲ್ಲದೆ ಕೊರಗುವ ಕೃಷಿಕರು ಚೊರಿ ಮುತ್ತೈಯನಾರ್ ಗುಡ್ಡಕ್ಕೆ ಬಂದು ಅಯ್ಯನಾರನನ್ನು ಪೂಜಿಸಿದರೆ ಮೋಡ ಮಳೆಯನ್ನು ಸುರಿಸುತ್ತದೆ ಎಂದು ಜನರು ನಂಬುತ್ತಾರೆ. ೨೦೦೩ರ ಜೂನ್‌ನಲ್ಲಿ ಆಗಿನ ತೂತ್ತುಕುಡಿ ಜಿಲ್ಲೆಯ ಆಳ್ವಿಕೆಯ ಅಧ್ಯಕ್ಷರಾಗಿದ್ದ ರಾಜಾರಾಮ್‌ನ ನೇತೃತ್ವದಲ್ಲಿ ಚೊರಿ ಮುತ್ತೈಯನಾರ್‌ಗೆ ವೇಳ್ಪಿಪೂಜೆಯನ್ನು ತಾಮಿರಭರಣಿ ನದಿಯಲ್ಲಿ ನಡೆಸಿದರು. ಅದೇ ಸಮಯ ಮಳೆಯೂ ಬಂತು ಎಂಬುದು ಆಶ್ಚರ್ಯಕರ ಸಂಗತಿ.

ಈ ಗುಡಿ ತಿರುನಲ್ವೇಲಿ ಜಿಲ್ಲೆ ಅಂಬಾಸಮುದ್ರ ತಾಲ್ಲೂಕು ಪಾಪನಾಶಮ್ ಎಂಬ ಊರಿನಲ್ಲಿ ಪೊದಿಗೈಮಲೈಯ ಮೇಲಿರುವ ಕಾರೈಯಾರ್ ಎಂಬ ಸ್ಥಳಕ್ಕೆ ಹೋಗುವ ದಾರಿಯಲ್ಲಿದೆ. ಕಾಣಿಕ್ಕಾರ್‌ಗಳ್‌ಎಂಬ ಬೆಟ್ಟವಾಸಿ ಜನರು ವಾಸಿಸುವ ಅಗಸ್ತ್ಯರ ಕಾಣೆ ಹತ್ತಿರದ ರಸ್ತೆಯ ಬದಿಯಲ್ಲಿ ಒಂದು ಫರ್ಲಾಂಗು ದೂರ ಹೋದರೆ ನದಿಯ ದಡದಲ್ಲಿ ಚೊರಿ ಮುತ್ತೈಯನಾರ್ ಗುಡಿ ಇದೆ. ಈ ದೇಗುಲ ಸಿಂಗಂಪಟ್ಟಿ ಜಮೀನ್ ಎನ್ನುವ ಕುರುನಿಲ ರಾಜರ ಆಳ್ವಿಕೆಗೆ ಒಳಪಟ್ಟಿದುದಾಗಿದೆ.

ಆಷಾಢ ಅಮಾವಾಸ್ಯೆಯಲ್ಲಿ ಈ ದೇಗುಲಕ್ಕೆ ಹೆಣ್ಣು – ಗಂಡು ಬಂದು ಅಯ್ಯನಾರನ್ನು ಪೂಜಿಸಿ ಹೋಗುತ್ತಾರೆ. ತಮಿಳುನಾಡಿನಲ್ಲಿ ಅಷ್ಟೇ ಅಲ್ಲದೆ ಕೇರಳ ಮೊದಲಾದ ರಾಜ್ಯಗಳಿಂದಲೂ ಜನರು ಈ ದಿನಗಳಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಆಷಾಢ ಅಮಾವಾಸ್ಯೆಯಂದು ಈ ಅಯ್ಯನಾರನ್ನು ಪೂಜಿಸಿ ವ್ಯವಸಾಯದಲ್ಲಿ ತೊಡಗಿದರೆ ಬೆಳೆ ವೃದ್ಧಿಯಾಗುವುದು ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ.

ತಾಮಿರಭರಣಿ ನದಿಯ ಪೂರ್ವ ದಡದಲ್ಲಿ ಚೊರಿ ಮುತ್ತೈಯನಾರ್ ಇರುವಂತೆಯೇ ಸೆಂಗೋಟೈ ಆರ್ಯಂಗಾವು (ಶ್ರೇಣಿಗಳಲ್ಲಿ) ಪ್ರಪಾತಗಳಲ್ಲಿ ಆರ್ಯ ಶಾಷ್ತಾರು ಇದ್ದಾರೆ. ಈ ದೇವಾಲಯ ಕಾಶಿಗೆ ಸಮಾನವಾದುದು ಎಂದೂ ಮಹಾಲಿಂಗ ಜ್ಯೋತಿ ರೂಪದಲ್ಲಿದ್ದಾರೆ ಎಂದು ಜನರು ನಂಬುತ್ತಾರೆ.

ಚೊರಿ ಮುತ್ತೈಯನಾರ್ ದೇಗುಲ ಹುಟ್ಟಿದುದರ ಕತೆ ಹೀಗಿದೆ –

ಒಂದಾನೊಂದು ಕಾಲದಲ್ಲಿ ಪಾರ್ವತಿ – ಪರಮೇಶ್ವರ ಮೊದಲಾದ ದೇವರುಗಳು ಉತ್ತರ ದಿಕ್ಕಿಗೆ ಹೋಗಲು ಆ ದಿಕ್ಕು ಕುಗ್ಗಿ ದಕ್ಷಿಣ ಭಾಗ ಉಬ್ಬಿಕೊಳ್ಳುತ್ತದೆ. ಆದ್ದರಿಂದ ಪರಮೇಶ್ವರ ಆಗಸ್ತ್ಯನನ್ನು ಕರೆದು ದಕ್ಷಿಣ ಭಾಗಕ್ಕೆ ಹೋಗಿ ಸಮ ಮಾಡುವಂತೆ ಹೇಳುತ್ತಾರೆ.

ಅಗಸ್ತ್ಯರು ದಕ್ಷಿಣ ಭಾಗದ ಹಲವು ಪ್ರದೇಶಗಳಿಗೆ ಹೋಗುತ್ತಾರೆ. ಪೊದಿಗೈ ಮಲೈಗೆ ಹೋಗುವ ಮಾರ್ಗದಲ್ಲಿ ದೇಗುವ ಇರುವ ಸ್ಥಳದಲ್ಲಿ ವಾಸ್ತವ್ಯ ಹೂಡುತ್ತಾರೆ. ಆ ಭಾಗದಲ್ಲಿ ದೇವತೆಯೊಂದು ನದಿಯಲ್ಲಿ ಸ್ನಾನ ಮಾಡಿ ನಿದ್ರೆಯಲ್ಲಿದ್ದಾಗ ಜ್ಯೋತಿಯೊಂದು ಕಾಣಿಸುತ್ತದೆ. ಅದನ್ನು ಕಂಡ ಅಗಸ್ತ್ಯ ಆಶ್ಚರ್ಯಗೊಂಡು ದೃಷ್ಟಿ ಹಾಯಿಸಿದ. ಅದರಲ್ಲಿ ಪ್ರಪಂಚದ ತಾಯಾಗಿ (ಮಾದ), ಬ್ರಹ್ಮರಾಶಿ, ಪೆಚ್ಚಿ ಮೊದಲಾದ ಎಲ್ಲಾ ಮೂರ್ತಿಗಳೊಡನೆ ಶಾಷ್ತಾ(ಮಹಾಲಿಂಗ) ಎಂಬ ಹೆಸರಿನಿಂದ ಬ್ರಾಹ್ಮಣ ಪೂಜೆ ಮಾಡಿ ಧ್ಯಾನದಲ್ಲಿರುವ ದೃಶ್ಯ ಅವರಿಗೆ ಗೋಚರಿಸುತ್ತದೆ. ಆ ದಿನ ಆಷಾಢ ಅಮಾವಾಸ್ಯೆಯ ದಿನ. ತಕ್ಷಣ ಅಗಸ್ತ್ಯ ಆನಂದದಿಂದ ಹೂಗಳನ್ನು ಕಿತ್ತು ಮಹಾಲಿಂಗಕ್ಕೆ ಅರ್ಚಿಸಿ ದರ್ಶನ ಪಡೆದು ಪ್ರಾರ್ಥನೆ ಮಾಡಿದ.

ಅದು ಮಾತ್ರವಲ್ಲದೆ, ಅಗಸ್ತ್ಯ ಶಿವನ ಹತ್ತಿರ ಅಪೇಕ್ಷೆಯೊಂದನ್ನು ಇಡುತ್ತಾರೆ. ಅದು ಹೀಗಿದೆ: “ಈ ತೀರ್ಥದಲ್ಲಿ ಸ್ನಾನ ಮಾಡಿ ಇಲ್ಲಿರುವ ಮೂರ್ತಿಗಳನ್ನು ಪೂಜಿಸುವವರ ದುಃಖ ಬೆಂಕಿಗೆ ಬಿದ್ದ ಹತ್ತಿಯಂತೆ ಕಾಣದೆ ಹೋಗಬೇಕು. ಪುತ್ರಭಾಗ್ಯದೊಡನೆ ಎಲ್ಲ ತರಹದ ಸುಖಗಳನ್ನು ಪಡೆದು ಬದುಕಬೇಕು” ಎಂದು ಪ್ರಾರ್ಥನೆ ಮಾಡುವಾಗ ದೇವರುಗಳು, ಋಷಿಗಳು ಆಕಾಶದಿಂದ ಹೂವಿನ ಮಳೆಗರೆದರು. ಅಂದಿನಿಂದ ಈ ದೇಗುಲಕ್ಕೆ ಚೊರಿ ಮುತ್ತೈಯನಾರ್ ಎಂಬ ಹೆಸರು ಬಂದಿದೆ.

ಈ ದೇಗುಲದಲ್ಲಿ ಮಹಾಲಿಂಗ, ಸಂಗಲಿ ಬೂದತ್ತಾರ್, ಕಾತ್ತವರಾಯರ್, ದಕ್ಷಿಣಾಮೂರ್ತಿ, ಮೇಲವಾಸಲ್‌ ಬೂದರಿ, ಮೇಲವಾಸಲ್‌ ವಿನಾಯಕರ್, ಕುಂಬ ಮುನಿ, ಪೆರಿಯಸ್ವಾಮಿ, ಪಾದಾಳ ಬೂದಂ, ಕರಡಿ ಮಾಡನ್‌, ಬ್ರಹ್ಮರಾಶೀ, ಪೇಚ್ಚಿ, ಸುಡಲೈಮಾಡನ್‌, ಕರಿಉಪ್ಪನ್‌, ಕರುಷ್ಟಿ, ತಳವಾಯ್‌, ಮಾಡನ್‌, ತೊಂಡಿಲ್‌, ಮಾಡನ್‌, ಪಟ್ಟವರಾಯನ್‌ ಮೊದಲಾದ ಹಲವು ದೇವರುಗಳಿದ್ದಾರೆ.

ಇಷ್ಟೇ ಅಲ್ಲದೆ ಈ ದೇಗುಲದಲ್ಲಿ ಹಲವು ಪರಿವಾರದ ದೇವರುಗಳು ಇವೆ. ಇವೆಲ್ಲ ಇದ್ದರೂ ಮುಖ್ಯವಾಗಿ ‘ಇಪ್ಪತ್ತೊಂದು ಪೀಠ’ ಎಂದು ಈ ದೇಗುಲಕ್ಕೆ ಮುಖ್ಯವಾಗಿ ಹೇಳಲಾಗುತ್ತದೆ. ಚೊರಿಮುತ್ತೈಯ ನಾರ್, ಬೂದತ್ತಾರ್, ಬ್ರಹ್ಮರಾಶಿ ಅಮ್ಮನ್‌, ತಳವಾಯ್‌ ಮಾಡಸ್ವಾಮಕಿ, ದೂಸಿ ಮಾಡಸ್ವಾಮಿ ಪಟ್ಟವರಾಯರ್ ಮೊದಲಾದ ಏಳು ಸನ್ನಿಧಿಗಳು ಈ ದೇಗುಲದಲ್ಲಿದೆ. ಇವುಗಳಲ್ಲಿ ಪಟ್ಟವರಾಯನ ಸನ್ನಿಧಿ ಮುಖ್ಯವಾದುದು. ಮುತ್ತುಪ್ಪಟ್ಟನೈಯ ಭಕ್ತರು ಪಟ್ಟವರಾಯನ ಸನ್ನಿಧಿ ಎಂದೂ ಕರೆಯುತ್ತಾರೆ. ಪಟ್ಟವರಾಯರ್ ದೇಗುಲದಲ್ಲಿ ಭಕ್ತರು ಚಪ್ಪಲಿಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಕಾಣಿಕೆಯಾಗಿ ಕೊಡುವ ಚಪ್ಪಲಿಗಳನ್ನು ಮರದಲ್ಲಿ ಕಟ್ಟಿರುತ್ತಾರೆ. ಆದರೆ ಆ ಚಪ್ಪಲಿಗಳಲ್ಲಿ ಕೆಸರು ಅಂಟಿಕೊಂಡಿರುವುದನ್ನೂ ನೋಡಬಹುದು. ಕಾಣಿಕೆಯಾಗಿ ಬಂದಿರುವ ಚಪ್ಪಲಿಗಳನ್ನು ಪಟ್ಟವರಾಯರ್ ಉಪಯೋಗಿಸುತ್ತಾರಂದು ಜನರು ಇಂದಿಗೂ ನಂಬಿಕೊಂಡು ಬಂದಿದ್ದಾರೆ.

ತ್ರೈ, ಮಾಸಿ, ಆಡಿ, ಅಮಾವಾಸ್ಯೆ ದಿನಗಳಲ್ಲಿ ಮತ್ತು ವಿಶೇಷ ದಿನಗಳಲ್ಲೂ ಭಕ್ತರು ಪಾಣತೀರ್ಥಕ್ಕೆ ಹೋಗಿ ಸ್ನಾನ ಮಾಡಿ ಈ ಅಯ್ಯನಾರ್ ರನ್ನು ಪೂಜಿಸಿ ಹೋಗುತ್ತಾರೆ. ಆಡಿ (ಆಷಾಢ) ಅಮಾವಾಸ್ಯೆಯಂದು ಕೋಮರತ್ತಾಡಿಗಳು ಎಲ್ಲವನ್ನು ಮರೆತು ಕೊಂಡ ಹಾಯುವುದು ಇಲ್ಲಿ ಪ್ರಸಿದ್ಧಿ ಪಡೆದಿದೆ. ಬೂದತ್ತಾರ್, ತಾಳವಾಯ್‌ಮಾಡಸ್ವಾಮಿ, ಪಟ್ಟವರಾಯರ್ ಮೊದಲಾದ ಸನ್ನಿಧಿಗಳ ಮುಂದೆ ಮೂರು ಹಂತವಾಗಿ ಈ ಕೊಂಡ ಹಾಯುವ ಹಬ್ಬ ನಡೆಯುತ್ತದೆ.

ಬ್ರಹ್ಮರಾಶಿ, ಬೂದತ್ತಾರ್, ಪೇಚ್ಚಿಯಮ್ಮನ್‌ ಸನ್ನಿಧಿಯ ಮುಂದೆ ಭಕ್ತಾದಿಗಳು ಬೆಲ್ಲದ ಅನ್ನ ಇಟ್ಟು, ತಳವಾಯ್‌ ಮಾಡಸ್ವಾಮಿ ಧೂಸಿ ಮಾಡಸ್ವಾಮಿ, ಪಟ್ಟವರಾಯನ್‌ ಸನ್ನಿಧಿಗಳ ಮುಂದೆ ಮಾಂಸಾಹಾರ ಎಡೆ ಇಟ್ಟು ಪೂಜಿಸುತ್ತಾರೆ. ಸಂಗಲಿ ಬೂದತ್ತಾರ್, ತಳವಾಯ್‌ ಮಾಡಸ್ವಾಮಿ, ದೂಸಿ ಮಾಡನ್‌ ದೇವರುಗಳ ಮುಂದೆ ಭಕ್ತರು ತಮ್ಮ ಎದೆಗೆ ಕಬ್ಬಿಣದ ಸರದಿಂದ ಹೊಡೆದುಕೊರ್ಳಳುವ ‘ಪಂಗುನಿ ಉತ್ತಿರ’ ಹಬ್ಬವು ಇಲ್ಲಿ ಬಹು ವಿಶೇಷವಾದುದು.

ಈ ದೇಗುಲದಲ್ಲಿರುವ ಸನ್ನಿಧಿಗಳು ಮುತ್ತುಪಟ್ಟಗ್‌ ಎಂಬ ಪಟ್ಟವರಾಯರ ಸನ್ನಿಧಿ ಎಂದು ಗುರುತಿಸತಕ್ಕದ್ದು. ಮುತ್ತುಪ್ಪಟ್ಟನ ಕತೆ ಹಲವು ವರ್ಷಗಳ ಹಿಂದೆ ನಡೆದುದಾಗಿ ಕತೆ ಮತ್ತು ಹಾಡುಗಳು ಹೇಳುತ್ತವೆ. ಮುತ್ತುಪ್ಪಟ್ಟನ ಎಂಬುವವನು ಬ್ರಾಹ್ಮಣ ವರ್ಗಕ್ಕೆ ಸೇರಿದವನು. ಇವನು ಬೊಮ್ಮಕ್ಕ, ತಿಮ್ಮಕ್ಕ ಎಂಬ ಬ್ರಾಹ್ಮಣ ಸಮಾಜಕ್ಕೆ ಸೇರಿದ ಇಬ್ಬರು ಸಹೋದರಿಗಳ ಮೇಲೆ ಪ್ರೀತಿ ಪ್ರೇಮಕ್ಕೊಳಗಾಗುತ್ತಾನೆ, ಇಬ್ಬರನ್ನು ಮದುವೆಯಾಗುತ್ತಾನೆ. ಅನಂತರ ದನ ಮೇಯಿಸಿ ಬರುವಾಗ ಕಳ್ಳರಿಂದ ಸಾವನ್ನಪ್ಪುತ್ತಾನೆ. ಮುತ್ತುಪ್ಪಟ್ಟನವರ ವೀರ ಕಾರ್ಯಗಳಿಂದ ಅವರಿಗೆ ಆ ಜಾಗದಲ್ಲೇ ದೇಗುಲ ಕಟ್ಟಿ ದೇವರಾಗಿದ್ದಾರೆ. ಅಂದಿನಿಂದ ಪಟ್ಟವರಾಯರ್ ದೇವರು ಎಂದು ಪೂಜಿಸುತ್ತಾ ಬಂದಿದ್ದಾರೆ.

– ಟಿ.ಜಿ. ಅನುವಾದ ಆರ್.ಎಸ್‌.

ಚೋಟಾನಿಕ್ಕರ ದೇವಸ್ಥಾನ: ದೇವಸ್ಥಾನಗಳ ಮೂಲಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಪ್ರಚಲಿತವಿರುವ ಹಲವಾರು ಕತೆಗಳಿಗಿಂತ ಇದು ಭಿನ್ನವಾಗೇನೂ ಇಲ್ಲ. ಚೋಟಾನಿಕ್ಕರ ದೇವಸ್ಥಾನದ ಐತಿಹ್ಯದಲ್ಲೂ ಇದು ಹೀಗೇ ಇದೆ. ಹುಲ್ಲು ಕೊಯ್ಯುತ್ತಾ ಇದ್ದ ಶೂದ್ರ ಮಹಿಳೆಯೊಬ್ಬಳು ತನ್ನ ಕತ್ತಿಗೆ ಸಾಣಿ ಹಿಡಿಯಲೆಂದು ಕಲ್ಲೊಂದಕ್ಕೆ ತಿಕ್ಕಿದಾಗ ಕಲ್ಲಿನಲ್ಲಿ ರಕ್ತ ಒಸರಿದುದನ್ನು ಕಂಡು ಗಾಬರಿಯಾಗಿ ಬೊಬ್ಬಿಡುತ್ತಾ ಓಡಿ ಬಂದು ಬ್ರಾಹ್ಮಣನೊಬ್ಬನಲ್ಲಿ ವಿಷಯ ಪ್ರಸ್ತಾಪಿಸುತ್ತಾಳೆ. ಆತ ಬಂದು ನೋಡಿ ಆ ಜಾಗದಲ್ಲಿ ದೇವೀ ಸಾನ್ನಿಧ್ಯವಿರುವುದನ್ನು ಖಚಿತಪಡಿಸಿ ಪೂಜಾದಿ ಕಾರ್ಯಗಳನ್ನು ಪ್ರಾರಂಭಿಸುತ್ತಾನೆ. ಇದು ಐತಿಹ್ಯ.

ಕೆಲವು ವಿಶಿಷ್ಟ ನಂಬಿಕೆ ಮತ್ತು ಆಚರಣೆಗಳಿಂದಾಗಿ ಚೋಟಾನಿಕ್ಕರ ದೇವಸ್ಥಾನವು ಮಹತ್ವವನ್ನು ಪಡೆದಿದೆ. ಭೂತ, ಪ್ರೇತ, ದೆವ್ವಗಳ ಬಾಧೆಯಿಂದ ಜನರನ್ನು ಮುಕ್ತಿಗೊಳಿಸುವ ಕ್ಷೇತ್ರ ಎನ್ನುವುದು ಇಲ್ಲಿನ ಪ್ರತ್ಯೇಕತೆ. ಬ್ರಹ್ಮ, ವಿಷ್ಣು, ಶಿವ, ಸುಬ್ರಹ್ಮಣ್ಯ, ಗಣಪತಿ, ಶಾಸ್ತಾರ ಎಂಬಿತ್ಯಾದಿ ವಿಗ್ರಹಪ್ರತಿಷ್ಠೆಗಳಿರುವ ಗರ್ಭಗುಡಿಗಳನ್ನು ಈ ದೇವಾಲಯವು ಹೊಂದಿದೆ. ದೇವಾಲಯದ ಹೊರಗಿನ ಕೆರೆಯ ಬಳಿ, ಪೂರ್ವದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಕಾಣುವ, ಬಿಲ್ವಮಂಗಲ ಸ್ವಾಮಿಗಳು ಪ್ರತಿಷ್ಠಾಪನೆ ಮಾಡಿರುವುದೆನ್ನಲಾದ ‘ರುದ್ರಕಾಳಿ’ಯು ಇಲ್ಲಿನ ಪ್ರಧಾನ ದೇವಪ್ರತಿಷ್ಠೆ. ‘ಕೀಳ್‌ಕಾವಿಲಮ್ಮ’ ಎಂದೇ ಈ ದೇವಿಯನ್ನು ಕರೆಯಲಾಗುತ್ತದೆ.

ಶಾಸ್ತಾರ ಮತ್ತು ಕೀಳ್‌ಕಾವಿಲಮ್ಮ ದೇವರುಗಳ ಸನ್ನಿಧಿಯಲ್ಲಿ ಪ್ರೇತೋಚ್ಛಾಟನೆಯ ವಿಧಿಗಳು ನಡೆಯುತ್ತವೆ. ದೆವ್ವ ಹಿಡಿದರೆನ್ನಲಾಗುವ ಮನೋರೋಗಿಗಳನ್ನು ಅವರ ಬಂಧುಗಳ ಚೋಟಾನಿಕ್ಕರ ದೇವೀ ಸನ್ನಿಧಿಗೆ ಕರೆದು ತರುತ್ತಾರೆ. ಅಂಥವರು ದೇವಸ್ಥಾನದಲ್ಲಿ ವ್ರತಾಚರಣೆ ಮಾಡುತ್ತಾ ಕೆಲವು ಕಾಲ ತಂಗಬೇಕು. ಐದು, ಏಳು, ಹನ್ನೊಂದು ಹೀಗೆ ಎಷ್ಟು ದಿನದ ವ್ರತವೆಂದು ಮೊದಲೇ ನಿರ್ಧರಿಸಿರಬೇಕು. ಹಾಗೆ ವ್ರತ ಹಿಡಿದವರು ವ್ರತದ ಅವಧಿಯಲ್ಲಿ ದೇವಸ್ಥಾನ ಬಿಟ್ಟು ಹೊರ ಹೋಗುವಂತಿಲ್ಲ. ಅಲ್ಲಿನ ನೈವೇದ್ಯ ಪ್ರಸಾದವನ್ನೇ ಉಣ್ಣಬೇಕು. (ಬೆಳಿಗ್ಗೆ ಗರ್ಭಗುಡಿಯ ಬಾಗಿಲು ತೆರೆಯುವಾಗಲೇ ಮಾಡುವ ದರ್ಶನ) ವ್ರತಾಚರಣೆಯನ್ನು ಪ್ರಾರಂಭಿಸಬೇಕು. ನಾಮಸ್ಮರಣೆಯನ್ನೋ, ಭಜನೆಯನ್ನೋ ಮಾಡುತ್ತಾ ಕಾಲ ಕಳೆಯಬೇಕು.

ದೆವ್ವದ ಬಾಧೆಯಿಂದ ತೊಳಲುವವರಾಗಿದ್ದು, ಹೀಗೆ ವ್ರತಾಚರಣೆ ಮಾಡುತ್ತಿರುವವರನ್ನು ನಿಧಾನವಾಗಿ ಮೊದಲು ಶಾಸ್ತಾರ ಗುಡಿಯೆದುರು ಕರೆತಂದು ತಮ್ಮ ಬಾಧೆಯ ಕತೆಯನ್ನೂ ನಿವೇದಿಸುವ ಸಂದರ್ಭವೊದಗಿಸುತ್ತಾರೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುತ್ತದೆ. ಶಾಸ್ತಾರ ಗುಡಿಯಲ್ಲಿ ಎಲ್ಲಾ ಬಾಧೆಗಳೂ ತೊಲಗುವುದಿಲ್ಲ. ಅಂಥವರನ್ನು ಮಧ್ಯಾಹ್ನದ ಪೂಜೆಯ ವೇಳೆ ದೇವೀ ಗುಡಿಯೆದುರು ತರುತ್ತಾರೆ. ರುದ್ರಮೂರ್ತಿಯಾದ ಕೀಳ್‌ಕಾವಿಲಮ್ಮನೆದುರು ಆವೇಶಭರಿತರಾಗುವ ಬಾಧೆಪೀಡಿತರನ್ನು ಪ್ರಶ್ನಿಸುತ್ತಾ ದೇವಿಯೆದುರು ಅವರು ಬಾಧಾರಹಿತರಾಗುವಂತೆ ಮಾಡುತ್ತಾರೆ. ಅವರಿಗೆ ಹಿಡಿದಿದೆಯನ್ನಲಾದ ದೆವ್ವಬಾಧೆಯ ನಿವಾರಣೆಯು ಅಲ್ಲಿ ನಡೆದು ಪಕ್ಕದಲ್ಲಿರುವ ‘ಪಾಲೆಮರ’ಕ್ಕೆ ಮೊಳೆಯೊಂದನ್ನು ನಾಟಿಸಿ ದೆವ್ವಗಳ ಉಚ್ಛಾಟನೆಯನ್ನು ಮಾಡುತ್ತಾರೆ.

ದೇವಿಯೆದುರು ಬಾಧೆ ಹಿಡಿದವರ ಮತ್ತು ಅಮ್ಮನ ಮಧ್ಯೆ ವಾಗ್ವಾದ ನಡೆಯುತ್ತದೆ. ಬಾಧೆ ಪೀಡಿತರೇ ಈ ಎರಡೂ ಪಾತ್ರಗಳಲ್ಲಿ ಮಾತನಾಡುತ್ತಾರೆ. ಎರಡೂ ಪಾತ್ರಗಳ ಧ್ವನಿವ್ಯತ್ಯಾಸಗಳಿಂದ ಅವುಗಳನ್ನು ಗುರುತಿಸುವುದು ಸಾಧ್ಯವಿದೆ. ಒಂದೇ ನಾಲಗೆಯಿಂದ ಶಬ್ದಗಳು ಹೊಮ್ಮಿದ್ದರೂ ಸ್ವರಭೇದ ಮತ್ತು ಭಾಷಾ ವ್ಯತ್ಯಾಸಗಳು ಇರುತ್ತವೆ.

ದೀರ್ಘವಾದ ವಾಗ್ವಾದಗಳ ಬಳಿಕ ಅಮ್ಮನ ಪ್ರಶ್ನೆಯೆದುರು ಬಾಧೆಗೆ ಉತ್ತರಿಸಲಾಗದೆ ಸೋಲೊಪ್ಪಿಕೊಂಡು ದೇಹವನ್ನು ಬಿಟ್ಟು ತೆರಳುತ್ತದೆ ಎನ್ನುವುದು ನಂಬಿಕೆ. ವಿಗ್ರಹದೆದುರು ಉರಿಸಿದ ದೀಪವನ್ನು ಮುಟ್ಟಿ ಪ್ರತಿಜ್ಞೆ ಮಾಡುತ್ತಾರೆ. ಇಲ್ಲೂ ಸುಲಭದಲ್ಲಿ ನಿವಾರಣೆಯಾಗುವ ಬಾಧೆಯಲ್ಲವೆದು ತಿಳಿಯಲಾಗುವವರನ್ನು ಪಕ್ಕದ ಸಾಲೆಮರದ ಸಮೀಪ ಕರೆದುಕೊಂಡು ಹೋಗಿ ಆ ಮಕ್ಕೆ ಕಬ್ಬಿಣದ ಮೊಳೆಯೊಂದನ್ನು ಬಡಿಯಲು ಹೇಳುತ್ತಾರೆ. ಮೊಳೆಯನ್ನು ಯಾವುದೇ ಸುತ್ತಿಗೆಯನ್ನು ಬಳಸದೆ ತಮ್ಮ ಮೊಣಕೈಯಿಂದ ಅಥವಾ ಹಣೆಯಿಂದ ಬಡಿಯಬೇಕು. ಆವೇಶದಲ್ಲಿ ಆ ವ್ಯಕ್ತಿ ಹಾಗೆ ಮಾಡುತ್ತಿರಬೇಕಾದರೆ ರಕ್ತ ಒಸರುತ್ತದೆ. ಎಷ್ಟೋ ವೇಳೆ ಪ್ರಜ್ಞೆ ತಪ್ಪುತ್ತದೆ. ಜೊತೆಗಿರುವವರು ಶುಶ್ರೂಷೆ ಮಾಡುತ್ತಾರೆ. ಪ್ರಜ್ಞೆ ಮರಳಿದಾಗ ಆ ವ್ಯಕ್ತಿ ಬಾಧೆ ಮುಕ್ತನಾಗಿ/ಳಾಗಿ ಮುಂಚಿನಂತವರಾಗಿರುತ್ತಾರೆ. ಅಲ್ಲಿನ ವಾತಾವರಣ ಮತ್ತು ಪೂರಕ ಕ್ರಿಯೆಗಳು ದೆವ್ವಬಾಧೆಯಿಂದ ಬಳಲುವ ಮನೋರೋಗಿಗಳನ್ನು ಈ ರೀತಿಯ ಚಿಕಿತ್ಸೆಗೆ ಒಳಗುಮಾಡುತ್ತದೆ.

ಶುಕ್ರವಾರಗಳಂದು ಇಲ್ಲಿ ‘ಗುರ್ದಿಪೂಜೆ’ ನಡೆಯುತ್ತದೆ. ರಾತ್ರಿಯಲ್ಲಿ ನಡೆಯುವ ಈ ಪೂಜೆ ವಿಶೇಷ ವಾತಾವರಣದಲ್ಲಿ ನಡೆಯುತ್ತದೆ. ಮನೋವಿಭ್ರಮೆಗೊಳಗಾಗುವ ಬಾಧಾಪೀಡಿತರಿಗೆ ಇದು ರೋಗಶಮನಕಾರಕವಾಗುವುದಿದೆ. ಅರಿಶಿನದ ಹುಡಿಗೆ ಸುಣ್ಣ ಬೆರೆಸಿ ತಯಾರಿಸಿದ ರಕ್ತವರ್ಣದ ನೀರನ್ನು ಧಾರೆ ಧಾರೆಯಾಗಿ ಹರಿಸುತ್ತಾರೆ. ಉರಿಯುವ ಪಂಜುಗಳು, ಚೆಂಡೆಯಂತಹ ವಾದ್ಯಗಳ ಅಸುರತಾಳಗಳು ಇತ್ಯಾದಿಗಳು ವಿಶೇಷ ಹಿನ್ನೆಲೆಯೊದಗಿಸುತ್ತವೆ. ಇವು ಬಾಧೆ ಪೀಡಿತರಲ್ಲಿ ಕೆಲವರಿಗೆ ಕೆಲವು ಮನೋಚಾಂಚಲ್ಯವನ್ನು ಉಂಟುಮಾಡುತ್ತವೆ. ಕೆಲವರು ಆವೇಶಭರಿತರಾಗಿ ಕುಣಿಯುತ್ತಾರೆ. ಕುಣಿದು ಕುಣಿದು ಕೊನೆಗೆ ಆಯಾಸಗೊಂಡು ಬೀಳುವ ಅವರು ಪ್ರಜ್ಞೆ ಮರುಕಳಿಸಿದಾಗ ರೋಗ ಮುಕ್ತರಾಗುವುದಿದೆ.

– ಕೆ.ಎಸ್‌.ಎಚ್‌. ಅನುವಾದ ವಿ.ಸಿ.

ಚೋಳಿಕಳಿ: ಪಾಲಕಾಡು ಜಿಲ್ಲೆಯ ತೃತ್ತಾಲ ಬ್ಲಾಕಿನ ತಿರುಮಿತ್ತ ಕಾಡು, ನಾಗಲಕ್ಕೇರಿ ಪಂಚಾಯತಿಗಳಲ್ಲಿ ಮಾತ್ರ ಚೋಳಿಕಳಿ ಪ್ರಚಲಿತದಲ್ಲಿದೆ. ಕುಡಚೋಳಿ ಮತ್ತು ತಿರುವಾದಿರ ಚೋಳಿ ಈ ಕಲೆಯ ಎರಡು ಪ್ರಭೇದಗಳು.

ಮೊದಲ ಬೆಳೆ ಕೈಗೆ ಬಂದಾಗ, ಗದ್ದೆ ಬಯಲುಗಳ ಮಧ್ಯೆ ಒಂದು ಕೈಯಲ್ಲಿ ಬೀಸಣಿಗೆ ಹಾಗೂ ಇನ್ನೊಂದು ಕೈಯಲ್ಲಿ ಕೊಡೆಯೊಂದಿಗೆ ‘ಕೂಡಚೋಳಿ’ ಬರುತ್ತವೆ. ಕೃಷಿ ಸಂಸ್ಕೃತಿಯೊಂದಿಗೆ ನಿಕಟವಾದ ಸಂಬಂಧವಿರುವ ಪ್ರಾಚೀನ ಕಲಾರೂಪವೇ ‘ಕುಡಚೋಳಿ’, ಕೊಯ್ಲು ಮುಗಿದು ಬೆಳೆ ಕೈಗೆ ಬಂದ ಸಂತೋಷದಲ್ಲಿ ಹಾಡುತ್ತಾ ಕುಣಿಯುತ್ತಾ ಕುಡಚೋಳಿ ಕಲಾವಿದ ಗದ್ದೆ ಬಯಲು ನಡೆಯುತ್ತಾನೆ.

ವರ್ತಮಾನ ಕಾಲದಲ್ಲಿ ಚೋಳಿಕಳಿಪಾಟ್‌ ವಿರಳವಾಗಿದೆ. ಕುಡಚೋಳಿಗಳು ದುಡಿಯ ಬಡಿತಕೊಂಡು ಹಾಡು ಹೇಳುತ್ತಾ ಬರುತ್ತವೆ. ಎತ್ತಿನಾಟವನ್ನು ಕಲಾವಿದರು ಪ್ರದರ್ಶಿಸುತ್ತಾರೆ. ಎತ್ತು ಶಿವನ ವಾಹನ ಎತ್ತು ಕೃಷಿ ಸಂಸ್ಕೃತಿಯ ಪ್ರತೀಕವಾಗಿದೆ. ಸಾಂಕೇತಿಕವಾಗಿ ಈ ಆಟಗಳು ನಡೆಯುತ್ತವೆ.

ತಿರುವಾದಿರ ಚೋಳಿ: ಧನುಮಾಸದ ತಿರುವಾದಿರ ದಿವಸ ದೇಹಕ್ಕೆ ಸೊಪ್ಪು ಕಟ್ಟಿಕೊಂಡು, ಚೆಂಡೆ, ತಾಳಗಳ ಹಿಮ್ಮೇಳದೊಂದಿಗೆ ಹಾಡುತ್ತಾ ತಿರುವಾದಿರ ಚೋಳಿಗಳು ಮನೆಮನೆಗಳಿಗೆ ಭೇಟಿ ನೀಡುತ್ತವೆ. ಈ ಚೋಳಿಗಳಿಗೆ ತೆಂಗಿನಕಾಯಿ, ಹಣ್ಣು, ಧೋತಿ ಮೊದಲಾದ ವಸ್ತುಗಳನ್ನು ನೀಡುವರು.

ತಿರುವಾದಿರ ಚೋಳಿಯ ಕುರಿತು ಒಂದು ಐತಿಹ್ಯವಿದೆ. ಕಾಮನ ದಹನದ ನಂತರ ಕಾಮನ ಪುನರ್ ಸೃಷ್‌ಇಗಾಗಿ ಜಗತ್ತಿನ ಹೆಂಗಸರೆಲ್ಲ ಶಿವಪಾರ್ವತಿಯರನ್ನು ಪ್ರಾರ್ಥಿಸುತ್ತಾರೆ. ಶಿವನ ಜನ್ಮ ನಕ್ಷತ್ರವಾದ ತಿರುವಾದಿರ ದಿವಸ ರಾತ್ರಿಯಿಡೀ ಹೆಂಗಳೆಯರು ವ್ರತಾಚರಣೇಯನ್ನು ಮಾಡುವರು. ಈ ಸ್ತ್ರೀಯರ ವ್ರತಾಚರಣೆಯನ್ನು ಪರೀಕ್ಷೆ ಮಾಡಲು ಪಾರ್ವತಿ ಕಳುಹಿಸುವ ಭೂತಗಣಗಳೇ ಚೋಳಲಿಗಳು. ತಿರುವಾದಿರ ಚೋಳಿಗೆ ನಿರ್ದಿಷ್ಟವಾಧ ಹಾಡುಗಳೋ, ಕೃತಿಗಳೋ ಇಲ್ಲ. ವಡಕ್ಕನ್‌ ಪಾಟುಗಳ ಧಾಟಿಯಲ್ಲಿ ಸಿದ್ಧಗೊಂಡ ನೂತನ ಹಾಡುಗಳನ್ನು ಹಾಡುತ್ತಾರೆ. ಪ್ರದೇಶ ವರ್ಣನೆ ಈ ಕಲೆಯ ಮುಖ್ಯ ಅಂಶವಾಗಿದೆ. ಕುಡಚೋಳಿ ಕಲಾವಿದರಲ್ಲಿ ತಂಬೂರಾನ್‌ ‘ಎಲ್ಲಿಂದ ಬರುವಿರಿ? ’ ಎಂದು ಪ್ರಶ್ನಿಸುವಾಗ ತಾವು ಬಂದ ಊರು, ಗದ್ದೆ, ಬಯಲುಗಳ ದಾರಿಯನ್ನು ಹಾಡಿನ ಮೂಲಕ ಕಲಾವಿದನು ವಿವರಿಸುತ್ತಾನೆ.

ಹಳ್ಳಿಯ ಯಾವುದಾದರೂ ದೇವಸ್ಥಾನಗಳಲ್ಲಿ ಚೋಳಿಕಳಿಯ ಕಲಾವಿದರು ವೇಷ ಧರಿಸುತ್ತಾರೆ. ಕುಡಚೋಳಿ ಕಲಾವಿದ ಒಂದು ವಸ್ತ್ರವನ್ನುಟ್ಟು ಅದರ ಮೇಲೆ ಕೆಂಪು ವಸ್ತ್ರವನ್ನು ಸುತ್ತುವನು. ಒಂದು ಕೈಯಲ್ಲಿ ಕೊಡೆ ಹಾಗೂ ಇನ್ನೊಂದು ಕೈಯಲ್ಲಿ ಬೀಸಣಿಕೆ ಇರುವುದು. ದೇಹಕ್ಕೆ ಶ್ರೀಗಂಧ ಬಳಿದು ಕುಣಿಯುತ್ತಾ ಹೋಗುತ್ತಾರೆ. ತಂಬೂರಾನನ ಮನೆಯಂಗಳದಲ್ಲಿ ಆಟ ಮುಗಿಯುತ್ತದೆ. .ಪ್ರಶ್ನೋತ್ತರ ಹಾಡುಗಳೊಂದಿಗೆ ಆಕರ್ಷಕವಾಗಿ ಆಟ ಮುಗಿಯುತ್ತದೆ.

ಇಂದು ಚೋಳಿಕಳಿ ಅಪೂರ್ವವಾಗಿದೆ. ಮೆರವಣಿಗೆ, ಶೋಭಾಯಾತ್ರೆಗಳಲ್ಲಿ ಕೆಲವೆಡೆ ಕಂಡುಬರುತ್ತದೆ.

ಕೆ.ಯು.ಎಚ್‌. ಅನುವಾದ ಎನ್‌.ಎಸ್‌.

ಚೌಡಿಕೆಯವರು ಕರ್ನಾಟಕದ ವೃತ್ತಿಗಾಯಕ ಸಂಪ್ರದಾಯಗಳಲ್ಲಿ ಚೌಡಿಕೆ ವೃತ್ತಿಗಾಯಕ ಸಂಪ್ರದಾಯ ತುಂಬ ಪ್ರಸಿದ್ಧವಾದುದು. ಎಲ್ಲಮ್ಮನ ಉಪಾಸಕರಾದ್ದರಿಂದಲೂ ಕಥಾಮೇಳಕ್ಕೆ ಚೌಡಿಕೆ ವಾದ್ಯವನ್ನು ಬಳಸುವುದರಿಂದಲೂ ಈ ವರ್ಗದ ಗಾಯಕರನ್ನು ಚೌಡಿಕೆ ವೃತ್ತಿಗಾಯಕರು ಎಂದು ಕರೆಯಲಾಗುತ್ತದೆ.

ಚೌಡಿಕೆಯವರು ಸದ್ಯ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಬಾಗಲಕೋಟೆ, ಬಿಜಾಪುರ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬಂದಿದ್ದಾರೆ. ಈ ಹಾಡುಗಾರಿಕೆ ಕಲೆ ವಂಶಪಾರಂಪರ್ಯವಾಗಿಯಾಗಲಿ, ಗುರುಮುಖೇನವಾಗಿಯಾಗಲಿ ಬಂದದ್ದಲ್ಲ. ಪ್ರತಿಭಾವಂತ ಕಲಾವಿದರು ತಮ್ಮ ಸುತ್ತಿನ ಹಳ್ಳಿಗಳಿಗೆ ಆಗಾಗ ಬಂದು ನಡೆಸಿದ ಕಥಾಮೇಳಗಳಿಂದ ಕಲಾಪ್ರದರ್ಶನಗಳಿಂದ ಪ್ರಭಾವಿತರಾಗಿ ಸ್ವಯಿಚ್ಛೆಯಿಂದ ಈ ಕಲೆಯನ್ನು ರೂಢಿಸಿಕೊಂಡವರ ಸಂಖ್ಯೆಯೇ ಹೆಚ್ಚು. ವ್ಯವಸಾಯ, ದೇವರಪೂಜೆ, ಕೂಲಿ, ಭಿಕ್ಷಾಟನೆ – ಹೀಗೆ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿದ ಜನ ಈ ಕಲೆಯಲ್ಲಿ ಪರಿಣತಿಯನ್ನು ಸಾಧಿಸಿಕೊಂಡಿದ್ದಾರೆ. ಲಿಂಗಾಯತರು, ಹರಿಜನರು, ಬೆಸ್ತರು, ಮರಾಠಿಗರು, ತೆಲುಗುವಡ್ಡರು, ಎಣ್ಣೆ ಜೋಗಿಗಳು – ಹೀಗೆ ಬೇರೆ ಬೇರೆ ಭಾಷೆಯನ್ನಾಡುವ ಬೇರೆ ಬೇರೆ ಕುಲಕ್ಕೆ ಸೇರಿದ ಜನ ಚೌಡಿಕೆ ವಾದ್ಯವನ್ನು ನುಡಿಸುತ್ತಾ ಕಥಾಮೇಳಗಳನ್ನು ನಡೆಸುವುದು ಕಂಡುಬಂದಿದೆ. ಒಕ್ಕಲಿಗರು ಮತ್ತು ಮುಸ್ಲಿಮ್‌ ಕಲಾವಿದರು ಈ ಸಂಪ್ರದಾಯದ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡಿರುವುದಾಗಿಯೂ ತಿಳಿದುಬರುತ್ತದೆ. ಒಟ್ಟಿನಲ್ಲಿ ಚೌಡಿಕೆ ಸಂಪ್ರದಾಯ ಎಲ್ಲ ಬಗೆಯ ಜನರನ್ನು ಆಕರ್ಷಿಸಿದೆ.

ಧಾರ್ಮಿಕ ಸಂಪ್ರದಾಯದ ಕಲಾವಿದರಂತೆ ಲೌಕಿಕ ಸಂಪ್ರದಾಯದ ಕಲಾವಿದರು ಕೂಡ ಇರುವುದು ಗಮನಾರ್ಹ. ಲೌಕಿಕ ಸಂಪ್ರದಾಯದವರು, ಧಾರ್ಮಿಕ ಸಂಪ್ರದಾಯದವರಂತೆ ಎಲ್ಲಮ್ಮನಿಗೆ ನಡೆದುಕೊಳ್ಳುತ್ತಾರಾದರೂ ಎಲ್ಲಮ್ಮನ ಹೆಸರಿನಲ್ಲಿ ಲಾಂಛನಗಳನ್ನು ಧರಿಸಿ ದೀಕ್ಷೆ ಪಡೆದು ಹಾಡುಗಾರಿಕೆ ವೃತ್ತಿಯನ್ನು ನಡೆಸುವುದಿಲ್ಲ. ಯಾವ ಒಂದು ದೈವ ಧರ್ಮದ ಕಟ್ಟುಪಾಡುಗಳಿಗೂ ಬಂಧಿತರಾಗದೆ ಹಾಡುಗಾರಿಕೆಯನ್ನೇ ಪ್ರಧಾನ ವೃತ್ತಿಯಾಗಿಸಿಕೊಳ್ಳದೆ ಬಿಡುವು ಸಿಕ್ಕಾಗ ಜನರಿಂದ ಆಹ್ವಾನವಿದ್ದಾಗ ಮಾತ್ರ ಕಥಾಮೇಳ ನಡೆಸುವ ಜನ ಇವರು.

ಎರಡೂ ಸಂಪ್ರದಾಯದ ಕಲಾವಿದರು ಭಿನ್ನರಾಗಿ ತೋರುವುದು ಮೇಳ ನಡೆಸುವಾಗ ಅವರು ಬಳಸುವ ವಾದ್ಯ, ಉಪವಾದ್ಯಗಳಲ್ಲಿ. ಧಾರ್ಮಿಕ ಸಂಪ್ರದಾಯದವರು ‘ಬಾರ್ಕಿ’ ಚೌಡಿಕೆಯನ್ನು ಬಳಸಿದರೆ, ಲೌಕಿಕ ಕಲಾವಿದರು ‘ಶ್ರುತಿ ಚೌಡಿಕೆ’ಯನ್ನು ಬಳಸಿದರೆ, ಲೌಕಿಕ ಕಲಾವಿದರು ’ ಶ್ರುತಿ ಚೌಡಿಕೆ’ಯನ್ನು ಬಳಸುತ್ತಾರೆ. ಧಾರ್ಮಿಕ ಸಂಪ್ರದಾಯದಲ್ಲಿ ಮುಖ್ಯಗಾಯಕ ಬಾರ್ಕಿ ಚೌಡಿಕೆಯನ್ನು ನುಡಿಸಿದರೆ ಲೌಕಿಕ ಸಂಪ್ರದಾಯದಲ್ಲಿ ತಾಳ ಮಾತ್ರ ಹಿಡಿದಿರುತ್ತಾರೆ. ಶ್ರುತಿ ಚೌಡಿಕೆಯನ್ನು ಹಿಮ್ಮೆಳದವನು ನುಡಿಸುವುದು ಲೌಕಿಕ ವೃತ್ತಿಗಾಯಕರ ವಿಶೇಷ. ಇವರ ಇನ್ನೊಂದು ವಿಶೇಷವೆಂದರೆ ಶ್ರುತಿ ಚೌಡಿಕೆಯ ಜೊತೆಗೆ ದಮ್ಮಡಿ, ತಬಲ/‘ಟಕೂರಿ’ ಎಂಬ ಜೋಡಿ ತಬಲದ ಒಂದು ವಾದ್ಯವನ್ನು ಬಳಸುವುದು. ಕಥಾನಿರೂಪಕ ತಾಳ ಹಿಡಿದು ನರ್ತಿಸಿದರೆ ಹಿಮ್ಮೆಳದವರು ಅವನ ಎಡಬಲದಲ್ಲಿ ಇದ್ದು ಶ್ರುತಿಚೌಡಿಕೆಯನ್ನೂ ಟಕೂರಿಯನ್ನೂ ನುಡಿಸುತ್ತಾರೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಹಾಡುಗಾರಿಕೆಯಲ್ಲಿ ಎಲ್ಲಮ್ಮನ ಕಾವ್ಯಕ್ಕೆ ಹೆಚ್ಚಿನ ಆದ್ಯತೆ ಏನನ್ನೂ ಕೊಡುವುದಿಲ್ಲ. ಮತ್ತೊಂದು ಭಿನ್ನತೆಯೆಂದರೆ ಧಾರ್ಮಿಕ ಸಂಪ್ರದಾಯದವರು ಅಚ್ಚಗನ್ನಡದವರಾದರೆ ಲೌಕಿಕ ಸಂಪ್ರದಾಯದವರು ಶುದ್ಧ ಕನ್ನಡಿಗರಲ್ಲದವರಾಗಿರುವುದು. ಪ್ರಾಯಃ ಇದು ಬೇರೆ ಪ್ರಾಂತ್ಯಗಳಿಂದ ಹೊಟ್ಟೆಪಾಡಿಗಾಗಿ ಇಲ್ಲಿಗೆ ವಲಸೆ ಬಂದ ಜನ ಜೀವನ ಹೊರೆಯಲು ಈ ವೃತ್ತಿಯನ್ನು ಅವಲಂಬಿಸಿದುದರ ಪರಿಣಾಮ ಇರಬೇಕು.

ಚೌಡಿಕೆಯವರು ಬಳಸುವ ಶ್ರುತಿಚೌಡಿಕೆ ಬೆರಳಿನಿಂದ ನುಡಿಸುವ ಒಂದು ವಾದ್ಯ. ಕೊಳಗದಾಕಾರದ ಮರದ ಸಾಧನದ ತಳಭಾಗದ ಬಾಯಿಗೆ ಬಾತುಕೋಳಿಯ ಮ್ಯಾತೆಯ ಚರ್ಮವನ್ನು ಅಂಟಿಸಿ ಅದರ ಮಧ್ಯದಲ್ಲಿ ಕೊಳಗದ ಒಳಭಾಗದಲ್ಲಿ ಬರುವಂತೆ ಕರುಳಿನ ಎಳೆಯನ್ನು ತಂತಿಯಂತೆ ಎಳೆದು ಕಟ್ಟಲಾಗಿರುತ್ತದೆ. ಕೊಳಗದ ಮೇಲ್ಭಾಗದಲ್ಲಿ ಬರುವ ಒಂದೂವರೆ ಮೊಳದುದ್ದದ ಗಳುವಿನ ತುದಿಗೆ ಆ ಕರುಳಿನ ಎಳೆಯನ್ನು ಕಟ್ಟಿರುತ್ತಾರೆ. ಗಳುವಿನ ತುದಿಯ ಬಿರಟೆಯನ್ನು ತಿರುಗಿಸಿ ಬಿಗಿಗೊಳಿಸಿ ಸಣ್ಣ ಕಡ್ಡಿಯೊಂದರಿಂದ ಕರುಳಿನ ದಾರವನ್ನು ಮಿಡಿದಾಗ ಏಕತಾರಿಯ ನಾದವನ್ನು ಹೋಲುವ ಸುಶ್ರಾವ್ಯವಾದ ನಾದ ಹೊರಹೊಮ್ಮುತ್ತದೆ. ಹದವಾದ ನಾದ ಬರುವಂತೆ ಶ್ರುತಿ ಎತ್ತಿಕೊಳ್ಳಲು ರಚಿಸಿಕೊಳ್ಳುವ ಈ ವಾದ್ಯಕ್ಕೆ ‘ಶ್ರುತಿಚೌಡಿಕೆ’ ಎಂದು ಹೆಸರು.

ಚೌಡಿಕೆಯನ್ನು ಪರಶುರಾಮನ ವಾದ್ಯವೆಂದೇ ಗುರುತಿಸುವುದು ಸಾಮಾನ್ಯ. ಈ ವಾದ್ಯ ರಚನೆಗೆ ಪೌರಾಣಿಕ ಹಿನ್ನೆಲೆಯ ಒಂದು ಕತೆಯನ್ನು ಹೇಳುವುದು ವಾಡಿಕೆ. ಎಲ್ಲಮ್ಮನ ಸೋದರ ಕಾರ್ತವೀರ್ಯಾರ್ಜುನನು ಜಮದಗ್ನಿಯ ಆಶ್ರಮದಲ್ಲಿದ್ದ ಕಾಮಧೇನುವನ್ನು ಪಡೆಯಲು ಬಯಸಿ ಅದಕ್ಕಾಗಿ ಜಮದಗ್ನಿಯನ್ನು ಕೊಂದು ಕಾಮಧೇನುವನ್ನು ಅಪಹರಿಸುತ್ತಾನೆ. ಪತಿಯನ್ನು ಕಳೆದುಕೊಂಡ ತಾಯಿ ಎಲ್ಲಮ್ಮನ ದುಃಖ ಕಳೆಯಲು ಪರಶುರಾಮ ತನ್ನ ಗಂಡುಕೊಡಲಿಯಿಂದ ಕಾರ್ತವೀರ್ಯನ ಶಿರವನ್ನು ಚಂಡಾಡಿ ಅದರಿಂದ ಚೌಡಿಕೆ ವಾದ್ಯವನ್ನು ರಚಿಸಿಕೊಂಡು ಅದನ್ನು ನುಡಿಸುತ್ತಾ ತಾಯಿಯ ಬಳಿಗೆ ಬಂದ. – ಈ ಕತೆ ಕಾರ್ತವೀರ್ಯಾಜುನನ ಶಿರಸ್ಸಿನಿಂದ ತಯಾರಾದ ವಾದ್ಯವೇ ಚೌಡಿಕೆ ಎಂದು ಪ್ರತಿಪಾದಿಸುತ್ತದೆ.

ಚೌಡಿಕೆಯವರ ವೇಷಭೂಷಣಗಳು ಕೂಡ ಆಕರ್ಷಕವಾದವು. ಬಿಳಿಯ ಮಡಿಗಾಸೆ, ಕಾವಿಬಣ್ಣದ ಉದ್ದನೆಯ ನಿಲುವಂಗಿ, ಜರಿಪಟ್ಟಿ ಇರುವ ಕೆಂಪು ಕೋರೆ ರುಮಾಲು, ಹೆಗಲ ಮೇಲೆ ಶಲ್ಯ, ಸೊಂಟಕ್ಕೆ ಕೆಂಪು ವಸ್ತ್ರ, ಕೊರಳಿಗೆ ರುದ್ರಾಕ್ಷಿ ಸರ, ಕೈಗೆ ರುದ್ರಾಕ್ಷಿ ಬಳೆ, ಕಾಲಿಗೆ ಗೆಜ್ಜೆ, ಕಿವಿಗೆ ತಾಮ್ರದ ಲೋಲಾಕು, ಮುಖಕ್ಕೆ ಹವಳದ ಪಟ್ಟೆಯನ್ನು ಅಡ್ಡಡ್ಡವಾಗಿ ಎಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಶೈವಾರಾಧಕರು ವಿಭೂತಿಯನ್ನೂ ವೈಷ್ಣವಾರಾಧಕರು ಕೆಂಪು ನಾಮವನ್ನೂ ಧರಿಸುವುದು ಪದ್ಧತಿ.

ಬೇರೆಲ್ಲ ವೃತ್ತಿಗಾಯಕರಿಗಿಂತ ಚೌಡಿಕೆ ಕಲಾವಿದರ ಕಥಾಮೇಳ ವಿಶಿಷ್ಟವಾದುದು. ಮೇಳ ಆರಂಭಿಸುವುದಕ್ಕೆ ಮೊದಲು ಕಲಾವಿದರು ತಮ್ಮ ವಾದ್ಯಗಳನ್ನು ರಂಗದಲ್ಲಿಟ್ಟು ಎಲ್ಲಮ್ಮನ ಹೆಸರಿನಲ್ಲಿ ಪೂಜೆ ನಿರ್ವಹಿಸುವುದು ಪದ್ಧತಿ. ಅನಂತರ ಶ್ರೋತೃಗಳಿಗೆ ವಂದಿಸಿ ಎಲ್ಲಮ್ಮನ ಸ್ತುತಿಯೊಂದಿಗೆ ಕಾರ್ಯಕ್ರಮಗಳನ್ನು ಆರಂಭಿಸುವುದು ಕ್ರಮ. ಸರಳವೂ ಸಾಧಾರಣವೂ ಆದ ಜನಪದ ಕತೆಗಳನ್ನು ತಮ್ಮ ಕಲ್ಪನಾರಮ್ಯತೆಯಿಂದ ವರ್ಣನಾ ವೈಖರಿಯಿಂದ ಸುಂದರ ಕಲಾಕೃತಿಗಳನ್ನಾಗಿ ಮಾರ್ಪಡಿಸಿ ಮೇಳ ನಡೆಸುವುದು ಇವರ ವೈಶಿಷ್ಟ್ಯ.

ಇವರ ಮೇಳಗಳಲ್ಲಿ ಕುಣಿತಕ್ಕೆ ಹೆಚ್ಚು ಮಹತ್ವವಿದೆ. ಮೇಳದಲ್ಲಿ ಭಾಗವಹಿಸುವ ಕಲಾವಿದರೆಲ್ಲರೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುತ್ತಾರೆ. ಕೈಯಲ್ಲಿ ವಾದ್ಯಗಳನ್ನು ನುಡಿಸುತ್ತಿರುತ್ತಾರೆ. ಕಥಾ ಸಂದರ್ಭಕ್ಕನುಗುಣವಾಗಿ ಹೆಜ್ಜೆ ಹಾಕಿ ಕುಣಿದು ನರ್ತಿಸುತ್ತಾ ಕಥೆ ಮಾಡುವ ರೀತಿ ಮೋಹಕವಾಗಿರುತ್ತದೆ. ಕಥೆ ಮಾಡುವಾಗ ವಚನದ ಪ್ರತಿ ಸಾಲಿನ ಅಂತ್ಯವನ್ನು ರಾಗವಾಗಿ ಎಳೆದು ಹಾಡುತ್ತಾ ಪದ ವಿನ್ಯಾಸವನ್ನು ಮೆರೆಯುತ್ತಾ ನರ್ತಿಸುವುದು ಇವರ ವಿಶೇಷ. ನಿರೂಪಕ ಕತೆಯಲ್ಲಿ ಬರುವ ಪಾತ್ರಗಳ ಒಳತೋಟಿಯನ್ನು ಮಾತು, ಹಾಡು ಮತ್ತು ಕುಣಿತದ ಮೂಲಕ ತನ್ನ ಅಭಿನಯ ಕೌಶಲದಲ್ಲಿ ಸ್ವರದ ಏರಿಳಿತದಲ್ಲಿ ತುಂಬ ಪರಿಣಾಮಕಾರಿಯಾಗಿ ಪ್ರಕಟಿಸಿ ಶ್ರೋತೃಗಳ ಮೆಚ್ಚುಗೆ ಗಳಿಸುತ್ತಾನೆ. ತನ್ನ ಮುಖ ಭಾವದಲ್ಲಿ ಧ್ವನಿಯ ಏರಿಳಿತದಲ್ಲಿ ಶರೀರ ಭಂಗಿಗಳಲ್ಲಿ ನಿರೂಪಕನು ಪುರುಷಪಾತ್ರದ ಗತ್ತು ಗಾಂಭೀರ್ಯ ಗಡುಸನ್ನೂ ಸ್ತ್ರೀ ಪಾತ್ರದ ಒನಪು ವಯ್ಯಾರಗಳನ್ನೂ ಸಜೀವವಾಗಿ ಅಭಿನಯಿಸಿ ತೋರಿಸುತ್ತಾನೆ.

ಕಥೆ ವಚನ ಶೈಲಿಯಲ್ಲಿ ಸಾಗುವಾಗ ನಿರೂಪಣೆಯಲ್ಲಿ ವೈವಿಧ್ಯವನ್ನು ಮೆರೆಯಲು ನಿರೂಪಕ ಅಲ್ಲಲ್ಲಿ ತನ್ನ ನಿರೂಪಣಾ ಕೌಶಲವನ್ನು ತೋರುತ್ತಾನೆ. ಕುಣಿತವನ್ನು ತರುವುದಕ್ಕಾಗಿ ಕೆಲವು ಸಂದರ್ಭಗಳಲ್ಲಿ ಮಾತಿನ ಕೊನೆಯ ಭಾಗವನ್ನು ರಾಗವಾಗಿ ಎಳೆದು ಉಚ್ಚರಿಸಿಯೊ ಆಲಾಪ ಮಾಡಿಯೊ ಹಾಡುತ್ತಾನೆ. ಹೀಗೆ ಹಾಡುವ ಸಂದರ್ಭ ಒದಗಿದಾಗ ಅವನೊಂದಿಗೆ ಹಿಮ್ಮೇಳದವರೂ ಸಮಯ ಸ್ಫೂರ್ತಿಯಿಂದ ಮಟ್ಟಿಗನುಗುಣವಾದ ರಾಗ ಕೂಡಿಸಿಕೊಂಡು ಹಾಡುತ್ತಾರೆ. ಹಾಡಿನ ಧಾಟಿ ಗತ್ತುಗಳು ಕಥಾ ಸನ್ನಿವೇಶಕ್ಕನುಗುಣವಾಗಿ ಕ್ರಮ ಕ್ರಮವಾಗಿ ಬದಲಾಗುತ್ತ ಹೋಗುತ್ತವೆ. ಪಲ್ಲವಿ ಅನುಪಲ್ಲವಿಗಳು ಕಥಾಸರಪಳಿಯ ಕೊಂಡಿಗಳಾಗಿ ಪರಿಣಮಿಸುತ್ತವೆ.

ಎಲ್ಲಮ್ಮನ ಕಥೆಯೊಂದಿಗೆ ಅರಣ್ಯಕೊಮಾರ, ಕಪ್ಪುಗೊರಳ ಚೂಡಾಮಣಿ, ಕಾಂಭೋಜ ರಾಜ, ಸರ್ಜಪ್ಪನಾಯ್ಕ, ಬಸುಕುಮಾರ, ಲೋಹಿತಕುಮಾರ ಇವೇ ಮುಂತಾದ ಮೂವತ್ತಕ್ಕೂ ಹೆಚ್ಚು ಕಥೆಗಳನ್ನು ಹಾಡುತ್ತಾರೆ.

ಬಹುತೇಕ ಚೌಡಿಕೆ ಕಾವ್ಯಗಳು ಪುರಾಣ ಕಥೆಗಳೇ ಆಗಿವೆ. ಜನ ತಮ್ಮನ್ನು ಆಗಾಗ ಆಹ್ವಾನಿಸಿ ಮೇಳಗಳನ್ನು ನಡೆಸುವಂತೆ ಮಾಡುವುದು ಪುಣ್ಯದ ಕೆಲಸ ಎಂಬ ಭಾವನೆ ಉಂಟು ಮಾಡಲು ಪುಣ್ಯಕಥೆಗಳನ್ನೇ ಆಯ್ದುಕೊಳ್ಳುವುದು ಸಾಮಾನ್ಯ.

– ಎ.ಎಚ್‌.

ಜಂತರ್ ಮಂತರ್ ಪೆಟ್ಟಿಆಂಧ್ರರ ಜನಪದ ಪ್ರದರ್ಶನ ಕಲೆಯಾದ ಇದು ಮನರಂಜನಾ ಪ್ರಧಾನವಾದ ಕಲೆ. ಇದು ಚಮತ್ಕಾರ ವಿನೋದಗಳಿಂಧ ಆನಂದ ಉಂಟು ಮಾಡುವಂಥದು. ಇಂದು ಆಂಧ್ರದಲ್ಲೂ ಕಣ್ಮರೆಯಾಗುತ್ತಿದೆ. ಜಂತರ್ ಮಂತರ್ ಪೆಟ್ಟಿಗೆ ಎಂದರೆ ಹಿರಿಯರು ಮಕ್ಕಳು ಎಲ್ಲರೂ ಒಂದು ಕಾಲದಲ್ಲಿ ತುಂಬ ಆಸಕ್ತಿಯಿಂದ ಆಶ್ಚರ್ಯದಿಂದ ನೋಡಿ ಆನಂದಪಡುತ್ತಿದ್ದರು. ಇದು ನಾಲ್ಕು ಹಲಗೆಗಳುಳ್ಳ ಒಂದು ಚೌಕಾಕಾರದ ದೊಡ್ಡ ಪೆಟ್ಟಿಗೆಯಂತಿರುತ್ತದೆ. ಇದು ಎಲ್ಲರನ್ನೂ ಆಕರ್ಷಿಸುವಂತೆ ವಿವಿಧ ಗೊಂಬೆಗಳಿಂದ ಅಲಂಕೃತವಾಗಿರುತ್ತದೆ. ಇದಕ್ಕೆ ಮೂರು ಕಾಲುಗಳಿರುತ್ತವೆ. ಅವುಗಳ ಮೇಲೆ ಈ ಪೆಟ್ಟಿಗೆ ಇಟ್ಟು ಒಂದು ಕಡೆ ಚಿಕ್ಕ ರಂಧ್ರ ಮಾಡಿರುತ್ತಾರೆ. ಈ ರಂಧ್ರದ ಮೂಲಕ ಒಳಗೆ ಇರುವ ದೃಶ್ಯ ನೋಡಲು ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನೊಂದು ಕಡೆ ಜಂತರ್ ಪೆಟ್ಟಿಗೆಯೊಳಗಿನ ಗೊಂಬೆಗಳನ್ನು ಒಂದು ಕ್ರಮದಲ್ಲಿ ತೋರಿಸುವ ವ್ಯಕ್ತಿ ಇರುತ್ತಾನೆ.

ಅವನು ಒಂದು ಕ್ರಮದಲ್ಲಿ ಗೊಂಬೆಗಳನ್ನು ಚಲಿಸುವಂತೆ ಮಾಡುತ್ತಾನೆ. ಇವನ ಸಹಾಯಕ್ಕೆಂದು ಮತ್ತೊಬ್ಬನಿರುತ್ತಾನೆ. ಅವನು ಜನರನ್ನು ಆಕರ್ಷಿಸುವಂತೆ ವಿವಿಧ ಹಾಡುಗಳನ್ನು ಹಾಡುತ್ತಾ ಜಂತರ್ ಪೆಟ್ಟಿಗೆ ವಿಶೇಷವಾದುದೆಂದು ಅದರ ಮಹತ್ತ್ವನ್ನು ಸಾರುತ್ತಾನೆ. ‘ಕಾಶೀಪಟ್ಟಣ ನೋಡೋ ಬಾಬು’ ಎಂದು ತಾಳ ಹೊಡೆಯುತ್ತ ಪ್ರದರ್ಶನ ಪ್ರಾರಂಭಿಸುತ್ತಾನೆ. ಜಂತರ್ ಪೆಟ್ಟಿಗೆಯಲ್ಲಿ ಹಾಡಿಗೆ ತಕ್ಕಂತೆ ದೃಶ್ಯಗಳನ್ನು ತೋರಿಸುತ್ತಾರೆ. ಮಕ್ಕಳಿಗೆ ಈ ಜಂತರ್ ಪೆಟ್ಟಿಗೆ ಕಂಡರೆ ಪಂಚಪ್ರಾಣ. ಈ ಪ್ರದರ್ಶನದಲ್ಲಿರುವ ಇಬ್ಬರು ಕಲಾವಿದರಲ್ಲಿ ಒಬ್ಬ ಗೊಂಬೆಗಳನ್ನು ಅನುಕ್ರಮವಾಗಿ ಜೋಡಿಸಿ ತೋರಿಸುವವನು. ಮತ್ತೊಬ್ಬ ಗೊಂಬೆಗಳಿಗೆ ಅನುಗುಣವಾಗಿ ರಾಗಬದ್ಧವಾಗಿ ಕಥೆ ಗಾಯನ ಮಾಡುವವನು ಮತ್ತು ಹಣ ಪಡೆದು ಒಬ್ಬರ ಅನಂತರ ಒಬ್ಬರಿಗೆ ತೋರಿಸುವವನು. ಈ ಗೊಂಬೆಗಳಲ್ಲಿ ಮುಖ್ಯವಾದವು ರಾಮಾಯಣಕ್ಕೆ, ಭಾರತಕ್ಕೆ ಸಂಬಂಧಿಸಿದವು. ಕೆಲವು ದೇವಾಲಯಗಳಿಗೆ ಸಂಬಂಧಿಸಿದವು. ಕೆಲವು ಮಕ್ಕಳಿಗಾಗಿ ಪ್ರಾಣಿಗಳಿಗೆ ಸಂಬಂಧಪಟ್ಟವು ಇರುತ್ತದೆ.

ಜಂತರ್ ಪೆಟ್ಟಿಗೆಯಲ್ಲಿರುವ ಗೊಂಬೆಗಳು ಚಲಿಸದೆ ಇದ್ದರೂ ಚಲಿಸುತ್ತಿರುವಂತೆ ಭಾಸವಾಗುವಂತೆ ಅವುಗಳನ್ನು ತೋರಿಸುವ ಕಲಾವಿದ ಮಾಡುವ ವ್ಯಾಖ್ಯಾನಕ್ಕೆ ಜನ ಮುಗ್ಧರಾಗಿ ಅದರಲ್ಲೇ ತಲ್ಲೀನರಾಗುತ್ತಾರೆ. ‘ಕಾಶಿ ಪಟ್ಟಣ ನೋಡೋಬಾಬು. ವಿಶ್ವೇಶ್ವರನ ನೋಡೋ ತಮ್ಮ, ಹಸ್ತಿನಾಪುರ ನೋಡೋ ತಮ್ಮ, ಪಾಂಡವರಾಳಿದ ಪಟ್ಟಣ ನೋಡೋ ತಮ್ಮ, ಗಂಗಾನದಿಯನ್ನು ನೋಡೋ ತಮ್ಮ, ಕೃಷ್ಣಾನದಿಯನ್ನು ನೋಡೋ ತಮ್ಮಾ’ ಎಂದು ಮನೋಹರವಾಗಿ ಹಾಡನ್ನು ಹಾಡಿ ಪ್ರದರ್ಶನಕ್ಕೆ ಕಳೆ ತುಂಬುತ್ತಾನೆ. ಈ ಕಲೆ ಇತ್ತೀಚೆಗೆ ಕಂಡುಬರುತ್ತಿಲ್ಲ.

ಟಿ.ಎಸ್‌.ಎನ್‌. ಅನುವಾದ ಎನ್‌.ಆರ್.