ಜನಪದ ಗೀತೆ ಕನ್ನಡದಲ್ಲಿ ಜನಪದ ಗೀತೆ ವೈವಿಧ್ಯಮಯವಾಗಿದೆ. ನೂರಾರು ವರ್ಷಗಳಿಂದ ಈ ಜನಪದ ಗೀತೆಗಳು ಕರ್ನಾಟಕದ ಜನಜೀವನದ ಅನಿವಾರ್ಯ ಅಂಗವಾಗಿವೆ. ಕನ್ನಡ ಜನಪದ ಗೀತೆಗಳಲ್ಲಿಯ ಹೆಂಗಸರ ಹಾಡುಗಳಲ್ಲಿ ಕಾಣುವ ವೈವಿಧ್ಯ ಅಸಾಧಾರಣವಾದುದು. ಈ ಹಾಡುಗಳ ಅಧ್ಯಯನವು – ಜೀವನದುದ್ದಕ್ಕೂ ನೋವು, ತಿರಸ್ಕಾರ ಮತ್ತು ಅಪಮಾನಗಳಿಗೆ ಬಲಿಯಾದ ಜನವರ್ಗವೊಂದರ ಆವರಣದಲ್ಲಿಯ ಸೂಕ್ಷ್ಮ ವಿವರಗಳನ್ನು ಅರ್ಥೈಸಿಕೊಳ್ಳುವ ದೃಷ್ಟಿಯಿಂದ ತುಂಬಾ ಕುತೂಹಲಕರವೂ ಉಪಯುಕ್ತವೂ ಆಗಿದೆ. ಏಕೆಂದರೆ ವರ್ಗ,ವರ್ಣ, ಜಾತಿ, ಅಸ್ಪೃಶ್ಯತೆಗಳ ಹಲವಾರು ವಿಕಾರಗಳನ್ನೂ ಮೀರಿಸುವ ಅನಾರೋಗ್ಯಕರ ಚಟುವಟಿಕೆಗಳಿಗೆ ಲಿಂಗಭೇದ ನೀತಿಯೂ ಫಲವತ್ತಾದ ನಲೆಯಾಗಿರುವುದನ್ನು ನಾವು ಕಾಣುತ್ತೇವೆ. ಶಿಷ್ಟಸಾಹಿತ್ಯದಲ್ಲಿ ಕೇವಲ ಗಂಡಿನ ಚಿಂತನೆ, ಆಶಯಗಳಷ್ಟೇ ಈ ತನಕ ಪ್ರಕಟಗೊಂಡು ಅದು ಅಲ್ಲಿಯ ಮಿತಿಗಳನ್ನೂ ಸೂಚಿಸುತ್ತದೆ. ಮನುಷ್ಯ ಸಹಜವಾದ ಹಕ್ಕು ಅವಕಾಶಗಳನ್ನೇ ಹತ್ತಿಕ್ಕಲಾದ ಸಂದರ್ಭದಲ್ಲಿ ನಿರಾಳವಾದ ಅನಿಸಿಕೆ, ಲವಲವಿಕೆಗಳಿಗೆ ಜಾಗ ಇನ್ನೆಲ್ಲಿರುತ್ತದೆ? ಆದರೆ ಕಾಲ ಕಾಲಕ್ಕೆ ಜಗತ್ತಿನಾದ್ಯಂತ ಸಮಾಜದ ಪ್ರತಿಷ್ಠಿತ ಮೌಲ್ಯಗಳ ಇಕ್ಕಟ್ಟಿನಲ್ಲಿ ನರಳುತ್ತಲೇ ನಾನಾ ಬಗೆಗಳಲ್ಲಿ ಆ ಒರಟು ಚೌಕಟ್ಟಿಗೆ ಕೂಡ ಪ್ರತಿಕ್ರಿಯೆ ಸೂಚಿಸುತ್ತಾ, ಅಲ್ಲಲ್ಲಿ ಅದಕ್ಕೆ ಹೊರತಾಗಿ ಬದುಕುತ್ತಾ ಬಂದ ಮೂಕ ಜನವರ್ಗಗಳು ತಮ್ಮೆಲ್ಲ ಬವಣೆ, ಆಶೋತ್ತರಗಳನ್ನು ಎರಕ ಹೊಯ್ಯುತ್ತಾ ಅದನ್ನೆಲ್ಲಾ ತಿದ್ದುತ್ತಾ, ತೂಗುತ್ತಾ; ಹಲವೊಮ್ಮೆ ಮೈಮರೆಯುತ್ತಾ, ದಿಕ್ಕು ತಪ್ಪುತ್ತಾ ಸಾಗಿ ಬಂದ ಪ್ರಯಾಣದ ಸಂಪೂರ್ಣ ದೀರ್ಘಕಥನ ಜಾನಪದದ ವಿವರಗಳಲ್ಲಿ ಅಡಗಿದೆ. ಅದೇ ರೀತಿಯಲ್ಲಿ ಭಾರತದ ಪರಿಸ್ಥಿತಿಯಲ್ಲಿ ಸುಮಾರು ಐದುಸಾವಿರ ವರ್ಷಗಳಿಂದ ಮಾತು ಕಳೆದುಕೊಂಡ ಶೂದ್ರಾತಿಶೂದ್ರವರ್ಗಗಳ ಹಿಂಚೂಣಿಯಲ್ಲಿ ನಿಂತ ಸ್ತ್ರೀ ಸಮೂಹ ಕೂಡ ತನ್ನ ಎದೆಯಾಳದ ದಾಖಲೆಗಳನ್ನು ಭಾರತೀಯ ಭಾಷೆಗಳ ಜನಪದ ಸಾಹಿತ್ಯದಲ್ಲಿ ಕೂಡಿಟ್ಟುಕೊಂಡಿದೆ. ಈ ಅಮೂಲ್ಯ ಭಂಡಾರದ ಮುದ್ರೆಯನ್ನೊಡೆದು ಅಲ್ಲಿಯ ಸಂಪತ್ತನ್ನು ಕಾಣುವ , ಸಾಧ್ಯವಾದಲ್ಲಿ ಹೊಸ ಸಾಂಸ್ಕೃತಿಕ ಚೌಕಟ್ಟಿನ ಗಟ್ಟಿತನಕ್ಕೆ ಅದರಿಂದ ಅಗತ್ಯ ನೆರವು ಪಡೆಯುವ ಮುಖ್ಯ ಕಾರ್ಯದಲ್ಲಿ ನಾವು ತೊಡಗಬೇಕಾಗಿದೆ.

ಆಚೆ ಕೇರೀಲಿ ಬೇಕಾದ ಸಂಗಾತಿ
ಮಾತಾಡೇನಂದ್ರೆ ಮನೆ ದೂರ| ಸಂಗಾತಿ
ನೀ ರಾತ್ರೇಗೆ ಬಾರೆ ಸಪಾನಕ್ಕೆ
ನನ್ನ ಸಂಗಾತಿ ಬನ್ನೂರ್ ಬಣಜಗ್ಗಿತ್ತಿ
ಪುಣ್ಯಸ್ತ್ರೆಗಾತಿ ಪುರುಷರ| ಮಂಡೇಮ್ಯಾಲೆ
ನನ್ನ ಚಿಂತೇಲೆ ವೊರಗವಳೆ

ಈ ಎರಡು ತ್ರಿಪದಿಗಳು ಹೆಣ್ಣಿನ ಜೀವನಕ್ರಮದ ದಿಕ್ಕನ್ನು ಸೂಚಿಸುವ ಪ್ರಾತಿನಿಧಿಕ ಗೀತೆಗಳಾಗಿರುವುದನ್ನು ನಾವು ಕಾಣಬಹುದು. ಅದೇ ಹತ್ತಿರದಲ್ಲಿರುವ ಪಕ್ಕದ ಕೇರಿಯ ಗೆಳತಿಯೊಬ್ಬಳಲ್ಲಿ ತನ್ನ ದುಗುಡವನ್ನೆಲ್ಲಾ ಹೇಳಿಕೊಂಡು ಹಗುರಾಗುವ ಅತೀವ ತವಕದಲ್ಲಿರುವವಳಿಗೆ ಅದು ಸಾಧ್ಯವಾಗುತ್ತಿಲ್ಲ. ಅಂಚಿನ ಕೇರಿಯ ಗೆಳತಿಯ ಮನೆ ವಾಸ್ತವವಾಗಿ ತುಂಬಾ ಹತ್ತಿರದ, ಬಹುಶಃ ಕಾಲುನಡಿಗೆಯ ಅಂತರದಲ್ಲಿರುವುದು(ಈಗ ಈಕೆಯು ಹುಟ್ಟಿ ಬೆಳೆದ ವಾತಾವರಣವು ರೂಢಿಸಿಕೊಂಡಿರುವ ಕೆಟ್ಟ ಚಾಳಿಯಿಂದ, ಅದರ ಸಂತೃಪ್ತ ಬೆಳವಣಿಗೆಯ ಕಾರಣಗಳಿಂದ) ದೂರವೇ ಆಗಿ ಪರಿಣಮಿಸಿದೆ. ಮಾನವ ಜೀವಿಗಳ ನಡುವಣ ಉಳಿದ ಎಷ್ಟೋ ಕಂದರಗಳ ಸಂಬಂಧದ ವ್ಯಾಪಕವಾದ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಧಾನೋದ್ಧೇಶದಿಂದ ಹಾತೊರೆಯುವ ಜೀವಕ್ಕೆ ಇಲ್ಲಿ ಆಗಿರುವ ಅಡ್ಡಿ ಕೂಡ ಭಯಂಕರವಾದುದು. ಇಲ್ಲಿ ಕಂಡು ಬರುವ, ಮೂಲತಃ ದುಃಖಮೂಲವಾದ, ಯಾರನ್ನೂ ದೂಷಿಸದ , ಅತ್ಯಂತ ತಣ್ಣನೆಯ ನೋವು – ಪದೇ ಪದೇ ಹತ್ತಿಕ್ಕಲ್ಪಟ್ಟು ಸೋಲನ್ನೇ ಉಂಡುಟ್ಟು ಹೊದೆಯಬೇಕಾದ ಕ್ರೂರ ಪರಿಸ್ಥಿತಿಯೊಂದರ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ತನ್ನಂಥ ಜೀವಿಗಳಿಗೆ ಬದುಕಿನಲ್ಲಿ ಉಳಿದಿರುವ ವಿಶ್ರಾಂತಿಯ ಏಕೈಕ ನಿಲುಗಡೆಯ ತಾಣವನ್ನು ಮೇಲೆ ಸೂಚಿಸಲಾಗಿರುವ ಮೊದಲ ತ್ರಿಪದಿಯ ಕೊನೆಯ ಸಾಲು ವಿವರಿಸುತ್ತದೆ. ಅದೆಂದರೆ, ನೀರವ ರಾತ್ರಿಯ ಕಗ್ಗತ್ತಲಿನ ಆಳದಲ್ಲಿ ಅರಳುವ ಅರ್ಧ ಎಚ್ಚರ ಮತ್ತು ಅರ್ಧ ಮೈಮರೆವಿನ, ಎಲ್ಲ ಬಯಕೆಗಳು ತಪ್ಪದೆ ಹಣ್ಣಾಗುವ ಸಂಭವವುಳ್ಳ ಸ್ವಪ್ನಲೋಕ. ಅದೇ ಹೊತ್ತಿಗೆ ತನ್ನ ಪ್ರಿಯ ಸಂಗಾತಿಯಾದವಳು. ಈಗ ಏನು ಮಾಡುತ್ತಿರಬಹುದೆಂಬ ಅನಿಸಿಕೆ ಮೇಲೇಳುತ್ತದೆ. “ಅಬಲಾವೃಂದ ಸಮ ಸುಖದುಃಖಿಗಳು” , ಆದ್ದರಿಂದ ತನ್ನಂಥದೇ ಹಾಗೂ ತನ್ನ ಚಿಂತೆಯಲ್ಲೇ ಮುಳುಗಿರುವ ಗೆಳತಿಗಾಗಿ ಹಂಬಲಿಕೆ ಕುಡಿಯೊಡೆಯುತ್ತದೆ. ನಿಜಕ್ಕೂ ಮನಸ್ಸನ್ನು ಗೆಲ್ಲಬೇಕಾಗಿದ್ದ, ಅರಳಿಸಬೇಕಾಗಿದ್ದ, ಎಲ್ಲ ಚಿಂತನೆಗಳನ್ನೂ ಹೊಡೆದಟ್ಟಿ ಇನ್ನಿತರ ಆಕಾಂಕ್ಷೆಯ ವಲಯಗಳಲ್ಲಿ ಸಮಜೋಡಿಯಾಗಿ ಅಲೆಯಬೇಕಾಗಿದ್ದ, ಬೇಕೆಂದಲ್ಲಿ ನೆಲೆಗೊಳ್ಳಬೇಕಾಗಿದ್ದ ಗಂಡು ಇಲ್ಲಿ ಇದ್ದೂ ಇಲ್ಲದಂತಾಗಿದ್ದಾನೆ. ಈ ಆಲೋಚನೆಯ ಸರಣಿಯಲ್ಲಿಯೇ ತಾನು ಹೆಣ್ಣಾಗಿ ಹುಟ್ಟಿದ ಒಂದೇ ಒಂದು ತಪ್ಪಿಗಾಗಿ ಈ ಎಲ್ಲ ಸಂಕೋಲೆಗಳೂ ತನ್ನನ್ನು ಆವರಿಸಿರುವುದನ್ನು ಗುರುತಿಸಿಕೊಳ್ಳುತ್ತಾಳೆ.

ಹೀಗಾಗಿ ನಮ್ಮ ಹೆಣ್ಣುಮಕ್ಕಳು ತಮ್ಮೆಲ್ಲ ಭಾವನೆಗಳಿಗೆ ಕೊರಳು ನೀಡಲು ಯತ್ನಿಸಿರುವುದನ್ನು ಕನ್ನಡ ಜನಪದ ಗೀತೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ನಮ್ಮ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರು ಪ್ರಕೃತಿದತ್ತವಾದ ದೈಹಿಕ ರಚನೆಯಲ್ಲಿ ಗಂಡಿಗಿಂತ ಭಿನ್ನರೂ, ಮೊಲೆಮುಡಿಯುಳ್ಳವರೂ ಆಗಿರುವ ವೈಶಿಷ್ಟ್ಯಪೂರ್ಣ ಕಾರಣಕ್ಕಾಗಿಯೇ, ಉಳಿದ ಮಾನವ – ಜೀವಿಗಳೊಡನೆ ಸಮಾನತೆ, ಸಹಭಾಗಿತ್ವವನ್ನು ಪಡೆದುಕೊಳ್ಳಲು, ಗಂಡಿನೊಡನೆ ಹಂಚಿಕೊಳ್ಳಲು ಸಾಧ್ಯವಾಗದೆ ಹೋದ ಅನೇಕ ವಿವರಗಳನ್ನು, ಅದರ ಬೆಳವಣಿಗೆಯ ಕ್ರಮವನ್ನು ಇಲ್ಲಿ ಗುರುತಿಸಬಹುದಾಗಿದೆ. ಇದರ ಫಲವಾಗಿಯೇ ನಮ್ಮ ಕಲೆ, ಸಾಹಿತ್ಯ, ತತ್ವಜ್ಞಾನ ಮತ್ತಿತರ ಕ್ಷೇತ್ರಗಳು ಸಾಕಷ್ಟು ಪ್ರಮಾಣದಲ್ಲಿ ಅಪೂರ್ಣವೂ ಏಕಮುಖವೂ ಉಪಾಧಿಗ್ರಸ್ತವೂ ಆಗಿದ್ದು ಅನೇಕ ಮಿತಿಗಳನ್ನು ತಂತಾನೆ ಸ್ಥಾಪಿಸಿಕೊಂಡಿರುವ ದಾಖಲೆಗಳನ್ನು ಕುರಿತು ನಾವೀಗ ಚರ್ಚಿಸಬೇಕಾಗಿದೆ. ಕೊನೆಗೆ ಈ ಎಲ್ಲ ರೀತಿಯ ಎಡರು – ತೊಡರು ನೋವು ನಿರಾಶೆಗಳ ನಡುವೆಯೂ ಎಂಥ ಇಕ್ಕಟ್ಟಲ್ಲೂ ಮಾನವ ಚೇತನ ತಾನೇನಾಗಬೇಕು. ತನಗೇನು ಬೇಕು ಅನ್ನುವ ತೀವ್ರ ಆಶಯಗಳಿಗಾಗಿ ತುಡಿಯುವ ಚೈತನ್ಯವನ್ನು ನಾನಾ ಬಗೆಯಲ್ಲಿ ಕಾಯ್ದಿಟ್ಟುಕೊಳ್ಳಬಲ್ಲದು, ಆಗಾಗ ಪ್ರತಿಭಟಿಸಬಲ್ಲದು ಎಂಬೆಲ್ಲ – ವಿಚಾರಗಳು ಇಲ್ಲಿ ನಮಗೆ ತುಂಬ ಮುಖ್ಯವಾಗುತ್ತವೆ.

73

ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ, ಮುದ್ದಾಡಿದ ಹೆಣ್ಣು ತನ್ನೆಲ್ಲ ಅನುಭವಗಳ ಹಲವಾರು ಮುಖಗಳನ್ನು ಅತ್ಯಂತ ಸುಂದರವಾದ ಹಲವಾರು ತ್ರಿಪದಿಗಳಲ್ಲಿ ಹಾಡಿದ್ದಾಳೆ. ಈ ಪದಗಳನ್ನು ‘ಲಾಲಿ’, ‘ಜೋಗುಳ’, ‘ನಿದ್ದೆಪದ’ ಹಾಗೂ ‘ತೊಟ್ಟಿಲ ಪದ’ ಮುಂತಾದ ಹೆಸರುಗಳಲ್ಲಿ ಕರೆಯಲಾಗುತ್ತದೆ. ಮಕ್ಕಳನ್ನು ನೋಡಿ, ಆಡಿಸಿ, ಅವುಗಳ ಆಟಪಾಟಗಳಿಂದ ಆನಂದಗೊಂಡ ತಾಯಿ ತೊಟ್ಟಿಲು ತೂಗುತ್ತಾ ರಾಗವಾಗಿ ತನ್ನ ಕಂದನ ಗುಣಗಾನ ಮಾಡುತ್ತಾಳೆ:

ಆಡಿ ಬಾ ನನ್ನ ಕಂದ ಅಂಗಾಲ ತೊಳದೇನು
ತೆಂಗೀನ ಕಾಯ ತಿಳಿನೀರ| ತಕ್ಕೊಂಡು
ಬಂಗಾರ ಪಾದ ತೊಳದೇನು

ತೊಟ್ಟಿಲು ತೂಗುತ್ತಾ ಹಾಡಿ ಮಕ್ಕಳನ್ನು ಮಲಗಿಸುವ ಲಾಲಿ ಪದಗಳ ರೀತಿಯಲ್ಲಿಯೇ ಸಣ್ಣ ಮಕ್ಕಳನ್ನು ಆಡಿಸಲು ಬಳಸುವ ‘ದೂರಿಪದ’ಗಳು ಕೂಡ ಇವೆ. ಮಕ್ಕಳನ್ನು ತೊಡೆ, ಮಂಡಿ ಅಥವಾ ಪಾದದ ಮೇಲೆ ಕೂರಿಸಿ ಹಿಂದಕ್ಕೂ ಮುಂದಕ್ಕೂ ಮೆಲ್ಲಗೆ ತೂಗಾಡಿಸುತ್ತಾ ಹೇಳುವ ಪದಗಳು ಇವೆ. ಕಿವಿಗಳನ್ನು ತುಂಬುವ ನಾದದ ಇಂಪು ಮತ್ತು ಆ ಹಾಡಿನಲ್ಲಿ ಬಳಸಲಾಗುವ ಅಣ್ಣ, ಅಪ್ಪ, ಒಂದು, ಎರಡು, ನೀನು, ನಾನು ಮುಂತಾದ ಪರಿಚಿತ ಶಬ್ದಗಳನ್ನು ಕೇಳುವ ಕುತೂಹಲದಲ್ಲಿ ಮಗುವಿನ ಮನಸ್ಸು ಅರಳುತ್ತದೆ:

ದೂರಿ ದೂರಿ ದುಕ್ಕಲಮ್ಮ
ನಿನಗೆ ಎಷ್ಟು ಮಕ್ಕಳಮ್ಮ?
ದೂರಿ ದೂರಿ ದುಕ್ಕಲಮ್ಮ
ಕೇರಿ ಕೇರಿ ತಿರುಗಳಮ್ಮ
ದೂರಿ ಆಡೋಕೆ ಹೋಗಿ ದೂರಿ ದೂರಿ
ಅವಳು ದೂರಾನೆ ತಂದ್ಲು ದೂರಿ ದೂರಿ
ಯಾರ್ಯಾಗೆ ತಂದ್ಲು ದೂರಿ ದೂರಿ
ಅವ್ರಪ್ಪನ್ಗೆ ತಂದ್ಲು ದೂರಿ ದೂರಿ
ಅವಳೇಳೇಳು ಬಳಗಾಕೆ ತಂದ್ಲು ದೂರಿದೂರಿ

ಮಕ್ಕಳಿಗೆ ತುಂಬಾ ಉಪಯುಕ್ತವಾದ ಶಿಶುಪ್ರಾಸಗಳು ಮನರಂಜನೆಯನ್ನು ಒದಗಿಸುತ್ತವೆ. ಅನೇಕ ಆಚರಣೆಗಳು ಮತ್ತು ನಂಬಿಕೆಗಳು ಹಳೆಯ ತುಣುಕುಗಳನ್ನು ಹೊತ್ತು ತರುತ್ತವೆ. ನಾನಾ ಜನ ಸಮುದಾಯದ ಪ್ರಾರಂಭದ ಬದುಕಿನ ಪೂರ್ಣ ಅಧ್ಯಯನಕ್ಕೆ ಬೇಕಾದ ಹೇರಳ ಸಾಮಗ್ರಿ ಇಲ್ಲಿ ದೊರೆಯುತತದೆ. ಈ ತೊದಲು ಮಕ್ಕಳ ಕಾವ್ಯಗಳಲ್ಲಿ ವಯಸ್ಸಕರು ಮತ್ತು ಶಾಲಾಮಕ್ಕಳು ಕಟ್ಟಿ ಸೇರಿಸಿದ ಪ್ರಾಸಗಲೂ ಇವೆ. ಶಾಲೆಯ ಮಕ್ಕಳ ಪ್ರಾಸಗಳು ವಸ್ತು ಮತ್ತು ರಚನೆಯ ದೃಷ್ಟಿಯಿಂದ ತುಂಬಾ ಬರಡಾಗಿರುತ್ತವೆ. ಮಕ್ಕಳ ಮನಸ್ಸನ್ನು ಅರಿತ ಮತ್ತು ಅವುಗಳ ಕೂಡ ಆಡುವ ಮನಸ್ಸಿನ ದೊಡ್ಡವರು ಕಟ್ಟಿದ ಪ್ರಾಸಗಳು ಬಹುಪಾಲು ರಂಜನೀಯವಾಗಿರುತ್ತವೆ. ಪ್ರಾಸವೇ ಇಲ್ಲಿ ಹೆಚ್ಚು, ಅರ್ಥ ತೀರ ಕಡಿಮೆ. ವಸ್ತು, ರಚನೆ, ನಾದಗಳಲ್ಲಿ ವೈವಿಧ್ಯ ಕಡಿಮೆ. ಹಿಂದಿನಿಂದಲೂ ಮಕ್ಕಳು ಹೊತ್ತು ತರುತ್ತಿರುವ ಈ ಪದ್ಯಗಳು ತಮಾಷೆ ಮತ್ತು ಚಮತ್ಕಾರದ ಭರದಲ್ಲಿ ಆದ ರಚನೆಗಳು. ಆಟದ ಬಯಲಿಗೆ ಸಂಬಂಧಿಸಿದವುಗಳೂ ಹೆಚ್ಚಾಗಿವೆ. ಅನೇಕ ಸಲ ಅರ್ಥವಿಲ್ಲದ ಪದಪೂಂಜಗಳ ಪ್ರಾಸದ ಗೀಳಿನ ಜೋಡಣೆ ಇರುತ್ತದೆ. ಆದರೆ ನಾದದ ಮಾಧುರ್ಯ ಮಾತ್ರ ಬೆಲೆಯುಳ್ಳದ್ದು. ಚಮಕು, ನಾಟಕೀಯತೆ ಹಾಗೂ ಕಥನ ಕಲೆಗಳನ್ನು ಒಳಗೊಂಡ ಪದ್ಯಗಳು ಕೂಡ ಇವೆ.

ಕುಟ್ಟುವಾಗ, ಬೀಸುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ ಮುಂತಾದ ಅನೇಕ ದುಡಿಯುವ ಸಂದರ್ಭಗಳಲ್ಲಿ ಹೆಂಗಸರು ನಾನಾ ಬಗೆಯ ಪದಗಳನ್ನು ಹಾಡುತ್ತಾರೆ. ಹೀಗೆ ಹಾಡುವವರಿಗೆ ಮತ್ತು ಕೇಳುವವರಿಗೆ ತಾವು ಮಾಡುತ್ತಿರುವ ಶ್ರಮದ ಕೆಲಸ ಅರಿವಾಗುವುದೇ ಇಲ್ಲ. ಹಾಡುಗಳು ಕೂಡ ಮುಗಿಯುವುದಿಲ್ಲ. ದೇವರು, ಭಕ್ತಿ, ಪ್ರಕೃತಿ, ತವರಿನವರು, ರಕ್ತಸಂಬಂಧ, ಗೆಳೆತನ, ನೋವು – ನಲಿವುಗಳು, ಪ್ರೇಮ, ದುರಂತಮಯ ಬದುಕು – ಇವೇ ಮೊದಲಾದ ಹಲವು ಹನ್ನೊಂದು ಸಂಗತಿಗಳನ್ನೂ ಈ ಹಾಡುಗಳು ಒಳಗೊಂಡಿವೆ. ಇಂಪಾಗಿ ಹಾಡುವ ಕಡೆಗೆ ಇಲ್ಲಿ ಹೆಚ್ಚಿನ ಒತ್ತು ಇರುತ್ತದೆ. ಅಲ್ಲಲ್ಲಿ ಹೇಳಿದ್ದನ್ನೇ ಹೇಳುವ ಸಾಲು ಮತ್ತು ಪದಪುಂಜಗಳು ಕಂಡುಬರುತ್ತವೆ. ಅನೇಕ ವಿಚಾರಗಳಲ್ಲಿ ಸಮಾಜ ಮೇಲುನೋಟಕ್ಕೆ ಒಪ್ಪಿಕೊಂಡಿರುವ ಮೌಲ್ಯಗಳನ್ನು ಈ ಹಾಡುಗಳು ಪ್ರತಿಬಿಂಬಿಸಿವೆ. ಇದನ್ನು ಮೀರಿದ ಕೆಲವು ಅಂಶಗಳು ಅಲ್ಲಲ್ಲಿ ತಲೆಹಾಕಿರುವುದನ್ನು ನಾವು ಕಾಣುತ್ತೇವೆ. ಸಾಮಾಜಿಕವಾಗಿ ಆರೋಗ್ಯಕರವಲ್ಲವೆಂದು ಕಂಡುಬರಬಹುದಾದ ಇಲ್ಲಿಯ ಅನೇಕ ಸಂಗತಿಗಳನ್ನು ನಾವು ಕಂಡಾಗ ಮೂಗು ಮುರಿಯಬೇಕಾದ ಅಗತ್ಯವಿಲ್ಲ. ಇಲ್ಲಿ ತೊಡಗಿರುವ ಸಾಮಾಜಿಕ ಬದುಕು ತನ್ನ ದಾರಿಯನ್ನು ಕಂಡುಕೊಳ್ಳದಿದದ ಕಾರಣಕ್ಕಾಗಿ ಆದ ಅಪಾಯದ ಎಳೆಗಳನ್ನು ಪತ್ತೆಹಚ್ಚುವುದು ಕೂಡ ಮುಖ್ಯವಾದ ಕರ್ತವ್ಯ. ಈ ದೃಷ್ಟಿಯಿಂದ ಜನತೆಯ ಅದರಲ್ಲೂ ಗಂಡಸಿನ ದಬ್ಬಾಳಿಕೆಯನ್ನು ಒಪ್ಪಿ ಕಾಲನೂಕುತ್ತಾ ಬಂದ ಹೆಂಗಸರ ಅನುಭವದ ಸಂಪತ್ತು ನಮಗೆ ಹೆಚ್ಚು ಲಾಭದಾಯಕವಾದ ಸರಕು ಎಂಬುದನ್ನು ಮರೆಯಬಾರದು.

ಕರ್ನಾಟಕ ವಿಸ್ತಾರವಾದ ಪ್ರದೇಶವಾಗಿದ್ದು ನಾನಾ ಬಗೆಯ ವೈವಿಧ್ಯಗಳಿಂದ ಕೂ”ಡಿದೆ. ಒಂದು ಕಡೆ ಅರಬ್ಬೀಸಮುದ್ರ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗೆಯನ್ನು ಆವರಿಸಿದ ಮಲೆನಾಡು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಣ ಉತ್ತರ ಹಾಗೂ ದಕ್ಷಿಣ ಕರ್ನಾಟಕಗಳ ಬಗೆ ಬಗೆಯ ಪದ್ಧತಿಗಳನ್ನು ಅನುಸರಿಸುವ ಜನಗಳ ಗುಂಪುಗಳನ್ನು ಒಳಗೊಂಡಿದೆ. ಈ ನಡುವೆ ಕೊಡವ, ತುಳು ಮುಂತಾದ ಭಾಷೆಗಳಲ್ಲಿಯ ಜಾನಪದ ಸಂಪತ್ತು ಕೂಡ ಕರ್ನಾಟಕದ ಆವರಣದ ಒಳಗೇ ಅರಳಿರುವುದನ್ನು ಗಮನಿಸಬೇಕು. ಈ ಎಲ್ಲ ಮೂಲೆ ಮೂಲೆಗಳ ಜನಪದ ಸಾಹಿತ್ಯ ಪೂರ್ಣವಾಗಿ ಸಂಗ್ರಹವಾದಾಗ ಮಾತ್ರ ನಮಗೆ ಅದರ ಸ್ವರೂಪದ ಸ್ಪಷ್ಟ ಚಿತ್ರ ಮೂಡಲು ಸಾಧ್ಯವಾಗುತ್ತದೆ.

ಜನಪದ ಬದುಕಿನಲ್ಲಿ ತಮಗೆ ನಿತ್ಯವೂ ನೆರವಾಗುವುದರ ಬಗ್ಗೆ ಇರುವ ಕೃತಜ್ಞತೆಯ ಭಾವವು ದೈವತ್ವವನ್ನು ಕಾಣುತ್ತದೆ. ನಮ್ಮನ್ನು ಹೊತ್ತಿರುವ, ಆಹಾರವನ್ನು ಒದಗಿಸುವ, ಕೊನೆಗೆ ತನ್ನಲ್ಲೇ ಸೇರಿಸಿಕೊಳ್ಳುವ ಭೂಮಿಯನ್ನು ತಾಯಿ ಎಂದೇ ಕರೆಯುತ್ತಾರೆ. ಹಾಗೆಯೇ ಮಳೆರಾಯ ಮತ್ತು ಉಳುವ ಬಸವಣ್ಣ ಕೂಡ ಮುಖ್ಯವಾಗಿರುವ ದೈವಗಳು, ಬೀಸುವ ರಾಗಿಕಲ್ಲು ಕೂಡ ಪವಿತ್ರವಾದುದಲ್ಲವೇನು?

ಏಳು ತಲೆ ಎದ್ದು ಯಾರ್ಯಾರ ನೆನೆದೇವು
ಎಳ್ಳುಜೀರಿಗೆ ಬೆಳೆಯೋಳ| ಭೂಮಿತಾಯ
ನಾವೆಲ್ಲಕೆ ಮೊದಲು ನೆನೆದೇವೆ
ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗೀಯ
ಜಲ್ಲ ಜಲ್ಲಾನೆ ಉದುರಮ್ಮ| ನಮ್ಮನೆ
ಬೆಲ್ಲದಾರತಿಯ ಬೆಳಗೇವು

ಭಕ್ತಮನಸ್ಸು ಪೂರ್ಣವಾಗಿ ಅರ್ಪಿಸಿಕೊಂಡು ಹಗುರವಾಗುವ ವಿಧಾನ ಇಲ್ಲಿ ತುಂಬಾ ಚೆನ್ನಾಗಿ ಪ್ರಕಟವಾಗಿದೆ. ನಯ, ನಾಜೂಕು, ಕೃತಜ್ಞತೆಗಳು ಇಲ್ಲಿ ಹತ್ತಿರ ಸುಳಿಯುವುದಿಲ್ಲ. ತಾವು ಉಡುವ ಸೀರೆ ದೇವತೆಗೆ ಉಡಿಸಿ, ತಮ್ಮ ಆಭರಣಗಳನ್ನು ತೊಡಿಸುತ್ತಾರೆ. ಊಟವೂ ಅದೇ, ಕುರಿಕೋಳಿ ಕೋಣಗಳನ್ನು ಕತ್ತರಿಸಿ ರಕ್ತ ಚೆಲ್ಲುತ್ತಾರೆ. ಮಾಂಸದ ಎಡೆ ಇಡುತ್ತಾರೆ. ತಮ್ಮ ಮಕ್ಕಳು ಮರಿಗಳಿಗೆ ದೇವತೆಯ ಹೆಸರನ್ನು ಇಡುತ್ತಾರೆ. ಜನತೆಯ ಜೀವನದಲ್ಲಿ ಈ ದೇವರುಗಳು ಬೇರ್ಪಡಿಸಲಾರದಂತಹ ಸಂಬಂಧವನ್ನು ಇಟ್ಟುಕೊಂಡಿವೆ. ಈ ಹಾಡು, ವೈಭವ, ಹರಕೆ, ಕೊಂಡಾಟ – ಎಲ್ಲವೂ ಸಾಮೂಹಿಕವಾಗಿ ನಡೆಯುತ್ತವೆ. ಬೇರೆ ಬೇರೆ ಕೆಲಸಗಳನ್ನು ಹಂಚಿಕೊಂಡು ಆತ್ಮತೃಪ್ತಿಗಾಗಿ ಪ್ರತಿಯೊಬ್ಬರೂ ಮುನ್ನುಗ್ಗಿ ಈ ಕಾರ್ಯಕ್ರಮಗಳಲ್ಲಿ ಒಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಹರಿದ ಮನಸ್ಸುಗಳು ಒಂದಾಗುವುದೂ ಉಂಟು. ಎಲ್ಲರೂ ಆನಂದದ ಹುಡುಕಾಟವೆನ್ನುವಂತೆ ಇಲ್ಲಿ ಭಾಗವಹಿಸುತ್ತಾರೆ.

ಹೆಣ್ಣು ಶಾರೀರಕ ರಚನೆಯಲ್ಲಿ ಗಂಡಿಗಿಂತ ಭಿನ್ನಳಾಗಿರುವ ಕಾರಣವೇ ದೊಡ್ಡದಾಗಿ ಅನೇಕ ರೀತಿ ಮಾರ್ಪಾಡುಗಳನ್ನು ತನ್ನ ಜೀವನದಲ್ಲಿ ಕಾಣಬೇಕಾಯಿತು. ಅನುಭವದ ವಲಯ ತೀಋಆ ಚಿಕ್ಕದಾಗಿರುವ ಸತ್ಯ ನಮಗೆ ತಿಳಿದಿದೆ. ಗಂಡಿಗೆ ಇರುವಷ್ಟು ಪ್ರಮಾಣದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರವೇಶಿಸುವ ಅವಕಾಶ ಹೆಣ್ಣಿಗೆ ಒದಗಲಿಲ್ಲ. ಇಂತಹ ಹೆಣ್ಣು ತನ್ನ ಅನುಭವಗಳಿಗೆ ಮಾತುಗಳ ರೂಪ ನೀಡುವ ಸಂದರ್ಭ ಬಂದಾಗ ಈ ಮಿತಿಗಳ ಒಳಗೂ ತನ್ನನ್ನು ಆವರಿಸಿರುವ ಸಂಗತಿಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾಳೆ; ಹೆಣ್ಣು ದೊಡ್ಡವಳಾಗುತ್ತಿದ್ದಂತೇ ತನ್ನ ಆವರಣದಲ್ಲಿ ಹೆಚ್ಚಾಗಿ ಬಯಸುವ ತನ್ನ ತಾಯಿಯನ್ನು ನೆನೆಯುತ್ತಾಳೆ. ಮದುವೆಯಾಗಿ ಗಂಡನ ಮನೆಗೆ ಹೋದ ಮೇಲಂತೂ ತವರು ಮನಸ್ಸಿನ ಅದಮ್ಯ ಬಯಕೆಯಾಗಿ ಕಾಡುತ್ತದೆ. ತನ್ನನ್ನು ಧಾರೆಯೆರೆದು ಕೊಡುವಾಗ ಗಂಡನ ಮನೆಗೆ ಕಳಿಸುವಾಗ ಕಣ್ಣೀರು ತುಂಬಿಕೊಂಡಿದ್ದ ತಂದೆ, ತಾಯಿ, ಅಣ್ಣ, ಅಕ್ಕ, ತಂಗಿ, ತಮ್ಮ ಮುಂತಾದವರು ಕಣ್ಣಲ್ಲಿ ಮರೆಯದ ಚಿತ್ರವಾಗಿದ್ದಾರೆ. ತಾಯಿಯನ್ನು ಕುರಿತು ಈಕೆ ನಾನಾ ಬಗೆಯಲ್ಲಿ ಹಂಬಲಿಸುತ್ತಾಳೆ.

ತಂಗಾಳಿ ತೀಡಿದರ ತಂಗಳ ಬಿಸಿಯಾಯ್ತು
ಗಂಗಾದೇವಿ ನನ್ನ ಹಡವ್ವ|
ಮಾಸಿದ ತಲೆಯು ಮಡಿಯಾಯ್ತು

ಮದುವೆಗೆ ಸಂಬಂಧಿಸಿದಂತೆ ಎಲ್ಲ ಕಾರ್ಯಕ್ರಮಗಳಲ್ಲೂ ಗುಂಪು ಗುಂಪಾಗಿ ಸೇರಿದ ಹೆಂಗಸರು ಪದ ಹೇಳುತ್ತಾರೆ. ಈ ಪದಗಳನ್ನು ‘ಸೋಬಾನದ ಪದ’ಗಳೆಂದು ಕರೆಯುತ್ತಾರೆ. ಒಂದು ವಾರದ ಮದುವೆಯೂ ಇದ್ದ ಕಾಲ ಇತ್ತು. ಇಂತಹ ಸಂದರ್ಭದಲ್ಲಿ ಇಡೀ ಊರೇ ಭಾಗವಹಿಸುತ್ತಿತ್ತು . ಬಂಧುಗಳು, ರಕ್ತಸಂಬಂಧಿಗಳು, ಹೆಣ್ಣು – ಗಂಡಿನ ಕಡೆಯವರು, ಬೇಕಾದವರು ಒಂದೆಡೆ ಸೇರಿ ಎಲ್ಲರೂ ಒಟ್ಟಾಗಿ ಸಂತೋಷಪಡುವುದು ಇಲ್ಲಿಯ ಮುಖ್ಯ ಧ್ಯೇಯವಾಗಿತ್ತು. ಶಿವಪಾರ್ವತಿಯ ಮದುವೆಗೆ ಸಂಬಂಧಿಸಿದ ಪದಗಳನ್ನು ಹೇಳುವ ಹೆಂಗಸರು ಇಲ್ಲಿಯ ಹೆಣ್ಣು – ಗಂಡು ಕೂಡ ಅಷ್ಟೇ ಪ್ರಮಾಣದಲ್ಲಿ ಮುಖ್ಯರು ಎನ್ನುವ ಭಾವನೆ ಉಂಟುಮಾಡುತ್ತಿದ್ದರು. ಶಾಸ್ತ್ರದ ನೀರು ತರುವುದು , ಗಂಗೆಯ ಬಳಿ ಕಳಸ ಪೂಜಿಸುವುದು, ಶಾಸ್ತ್ರದ ಬತ್ತ ಕುಟ್ಟುವುದು, ವೀಳೆಯ ಶಾಸ್ತ್ರ ಮಾಡುವುದು, ಹಿರಿಯರನ್ನು ಕರೆದು ವೀಳ್ಯ ನೀಡುವುದು, ಹಸೆ ಬರೆಯುವಿಕೆ, ಹಸೆಗೆ ಕರೆ ತರುವುದು, ಅರಿಸಿನದ ಸಿದ್ಧತೆಯಲ್ಲಿರುವುದು, ಅರಿಶಿನದ ಎಣ್ಣೆ ಇಟ್ಟು ಹೆಣ್ಣು – ಗಂಡುಗಳಿಗೆ ಮಜ್ಜನ ಮಾಡಿಸುವುದು, ಗಂಡು – ಹೆಣ್ಣುಗಳ ಆಗಮನ, ಹೆಣ್ಣಿಗೆ ಮಡಿಲು ತುಂಬುವಿಕೆ, ಧಾರೆ, ತಾಳಿ ಕಟ್ಟುವಿಕೆ, ಹೆಣ್ಣು – ಗಂಡುಗಳನ್ನು ಜರಿಯುವುದು, ನಾನಾ ಸಂದರ್ಭಗಳಲ್ಲಿ ಹೆಣ್ಣು – ಗಂಡುಗಳಿಗೆ ಸೇಸೆ ಇಡುವುದು. ಬಾಗಿಲು ತಡೆಯುವುದು, ಹೆಣ್ಣು ಒಪ್ಪಿಸುವುದು, ತವರು ಬಿಡುವ ಹೆಣ್ಣನ್ನು ಕಂಡು ಅಪ್ಪ ಅಣ್ಣಂದಿರು ಅಳುವುದು, ಓಕಳಿ ಆಡುವುದು, ಸೊಸಿಮರಕ್ಕೆ ನೀರು ಹೊಯ್ಯುವುದು – ಈ ಎಲ್ಲಾ ಸಂಬಂಧದ ವಿವರಗಳನ್ನು ಸೋಬಾನೆ ಪದಗಳು ಬಿಡಿಬಿಡಿಯಾಗಿ ಸರಳವಾಗಿ ವಿವರಿಸುತ್ತವೆ. ಶಾಸ್ತ್ರದ ಬತ್ತ ಕುಟ್ಟುವ ಹಾಡುಗಳಲ್ಲಿ ಒನಕೆಯ ಸದ್ದಿನ ಲಯಕ್ಕೆ ಹೊಂದಿಕೆಯಾಗುವ ಸಾಮರಸ್ಯವನ್ನು ಕಾಣುತ್ತೇವೆ.

ಗಂಡಸರು ಕಟ್ಟಿ ಹಾಡಿರುವ ಪದಗಳು ಕೂಡ ತುಂಬಾ ವಿಶಿಷ್ಟವಾದವುಗಳಾಗಿವೆ. ಕೋಲಾಟ, ಅಂಟಿಗೆ – ಪಂಟಿಗೆ, ಮೊಹರಂ ಮುಂತಾದ ಪದಗಳ ಜತೆಗೆ ರಂಗದ ಪದಗಳು, ಡೊಳ್ಳಿನ ಪದಗಳು, ಹಂತಿಯ ಪದಗಳು – ಹೀಗೆ ಅನೇಕ ಬಗೆಗಳು ಕಂಡು ಬರುತ್ತವೆ. ಕೆಲವು ಸಂದರ್ಭಗಳಲ್ಲಿ ಕುಣಿತ ಉಂಟು. ತಾಳಲಯಬದ್ಧವಾದ ಸಾಲುಗಳು ಹೆಚ್ಚಾಗಿರುತ್ತವೆ. ಪ್ರಸಿದ್ಧವಾದ ಕೆಲವು ಪದಗಳನ್ನು ಹೆಂಗಸರು ಮತ್ತು ಗಂಡಸರಿಬ್ಬರಲ್ಲಿಯೂ ಕಾಣಬಹುದು. ಅನೇಕ ಸಲ ಪರಸ್ಪರ ಪ್ರಭಾವ, ನುಡಿಗಟ್ಟು ಹಾಗೂ ಪದಪುಂಜಗಳಲ್ಲಿಯ ಹೊಂದಾಣಿಕೆಯೂ ಇದೆ. ಇಲ್ಲಿಯ ಸಣ್ಣಪುಟ್ಟ ಅನುಕೂಲಕ್ಕಾಗಿ ಮಾತ್ರ ಈ ವಿಂಗಡಣೆ ಆವಶ್ಯಕವಾಗಿದೆ. ಕಂಸಾಳೆಯವರು, ನೀಲಗಾರರು, ಗೊರವರು, ಗಣೆಯವರು, ಚೌಡಿಕೆಯವರು ಮುಂತಾದ ವೃತ್ತಿಗಾಯಕರುಗಳಿಗೆ ಸಂಬಂಧಿಸಿದ ಹೇರಳ ಸಾಹಿತ್ಯ ಮತ್ತು ಬಯಲಾಟಗಳ ರಚನೆಯಲ್ಲಿ ಗಂಡಸರ ಪಾಲು ಪ್ರಧಾನವಾಗಿದೆ. ಗಾದೆ, ಕಥೆ, ಒಗಟು, ಬೈಗುಳ, ಪಡೆನುಡಿಗಳಲ್ಲಿ ಹೆಣ್ಣು – ಗಂಡುಗಳ ಪಾಲು ಸಮಸಮನಾಗಿಯೇ ಇರುತ್ತದೆ.

ಮುಖ್ಯವಾಗಿ ಮನರಂಜನೆಯನ್ನು ಒದಗಿಸುವ ಸಾಮೂಹಿಕ ಕಲೆ ಕೋಲಾಟ. ಹಬ್ಬ – ಹರಿದಿನಗಳು ಮತ್ತು ವಿಶೇಷ ಸಂದರ್ಭದಲ್ಲಿ ಕೋಲಾಟವನ್ನು ಕಾಣುತ್ತೇವೆ. ಬೇಸಿಗೆ ಕಾಲದಲ್ಲಿ ಬೆಳದಿಂಗಳ ರಾತ್ರಿಯಲ್ಲಿ ಕೂಡ ಗೆಜ್ಜೆಯ ಕಾಲಿನ ಸದ್ದಿನೊಡನೆ ತಾಳ ದಮ್ಮಡಿಗಳ ಗತ್ತಿಗೆ ಅನುಗುಣವಾದ ಕೋಲಾಟ ಕುಣಿತ ಮತ್ತು ಹಾಡುಗಳನ್ನು ಅನೇಕ ಹಳ್ಳಿಗಳು ಉಳಿಸಿಕೊಂಡಿವೆ. ನಡುರಾತ್ರಿ ಕಳೆದರೂ ಕೋಲಾಟ ನಡೆಯುತ್ತಲೇ ಇರುತ್ತದೆ. ಹಲವು ಹತ್ತು ಬಗೆಯ ವೈವಿಧ್ಯಗಳನ್ನು ಕೋಲಾಟದಲ್ಲಿ ಕಾಣುತ್ತೇವೆ. ಉಯ್ಯಾಲೆ ಕೋಲು, ಬಾಗ್ಗೋಲು, ಹರಿಗೋಲು, ತೇರುಗೋಲು, ಜೋಡ್ಗೋಲು, ಜಡೆಕೋಲು, ದಂಡೆಕೋಲು, ಸುತ್ಕೋಲು, ನೀಲ್ಕೋಲು, ಕೊರವಂಜಿಕೋಲು – ಹೀಗೆ ಅನೇಕ ಬಗೆ ಉಂಟು. ಈ ಒಂದೊಂದಕ್ಕೂ ಕುಣಿತ, ಕೋಲು ಹೊಡೆಯುವ ವಿಧಾನ, ಪದಗಳ ಲಯಧಾಟಿಗಳು ಬದಲಾಗುತ್ತಿರುತ್ತವೆ. ಕೋಲಾಟದ ಬಗ್ಗೆ ಎಲ್ಲಿಲ್ಲದ ಹೆಮ್ಮೆ ಈ ಜನಕ್ಕೆ, ಅದರ ಮಹತ್ವ ಕುರಿತು ತಾವೇ ಹಾಡಿದ್ದಾರೆ.

ಹೆಣ್ಣು ಗಂಡು ಕೂಡಿ ಒಟ್ಟಿಗೆ ಮಾತಾಡುವ ಧಾಟಿಯ ಅನೇಕ ಹಾಡುಗಳು ಕಂಡುಬರುತ್ತವೆ. “ಹದಿಬದೆಯ ಧರ್ಮ’ವನ್ನು ಬರೆದ ಹೊನ್ನಮ್ಮನ ದೃಷ್ಟಿಯಲ್ಲಿ ತುಂಬಾ ತಪ್ಪಾಗಿ ಕಂಡುಬರುವ ಸಂಗತಿಗಳೂ ಕೂಡ ಇವೆ. “ನುಚ್ಚಾಯ್ತು ನೀರ ಹೊಳೆಯಾಗೆ” ಎನ್ನುವ ಕಥನ ಗೀತೆ ಈ ಬಗೆಯದು. ಇಲ್ಲಿಯ ನಾಯಕ ಮತ್ತು ನಾಯಕಿ ಸೇರಿ ರಕ್ತಸಂಬಂಧಿಗಳು ಮತ್ತು ಸಮಾಜ ಕೊಡಬಹುದಾದ ತೊಂದರೆಗಳ್ಯಾಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮ ದಾರಿಯಲ್ಲಿ ಹೋಗುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಬರುವ ಯಾವುದೇ ವಿಪತ್ತನ್ನು ಹಂಚಿಕೊಂಡು ಮುಂದೆ ಸಾಗಬೇಕೆನ್ನುವ ಗಟ್ಟಿಮನಸ್ಸನ್ನು ಇಲ್ಲಿ ಕಾಣುತ್ತೇವೆ.

ಸಪ್ಪಿಗಂತ ನೀನು ಬಾರೆ
ಸೌದಿಗಂತ ನಾನು ಬರ್ತೀನಿ
ದಾರಿಸೇರಿ ಬೇರೆ ಹೋಗೋಣ – ಸುಮಾನುಗಾತಿ
ದಾರಿಸೇರಿ ಬೇರೆ ಹೋಗೋಣ
ಹೊಳೆಯ ದಡದಲ್ಲಿ ಮನೆಯ ಕಟ್ಟೋಣ – ಸುಮಾನುಗಾರ
ಹೊಳೆಯು ಬಂದರೆ ತೇಲಿ ಹೋಗೋಣಾ

ಕೋಲಾಟದ ಪದಗಳಲ್ಲಿ ಗಂಗೆ, ಗೌರಿ ಮತ್ತು ಶಿವನಿಗೆ ಸಂಬಂಧಪಟ್ಟ ಕಥೆಗಳು ಹೆಚ್ಚಾಗಿವೆ. ದೀವಳಿಗೆಗೆ ತಂಗಿಯನ್ನು ಕರೆತರಲು ಬಂದು ಆಕೆಯ ಮೈಮೇಲಿನ ಒಡವೆಗಳಿಗೆ ಆಸೆಪಟ್ಟ ಅಣ್ಣನ ಕಥೆ ಇದೆ. ಚಿಕ್ಕಂದಿನಂದು ಬೇರ್ಪಟ್ಟಿದ್ದ ತಂಗಿಯನ್ನು ಅರಿಯದೆ ಕಾಮಕಿಸಲು ಹೋದವನ ಕಥೆ ಕೂಡಾ ಬರುತ್ತವೆ. ಅರ್ಜುನ, ಹನುಮಂತ ಮುಂತಾದ ಪೌರಾಣಿಕ ವ್ಯಕ್ತಿಗಳು, ಕಿತ್ತೂರು ಚನ್ನಮ್ಮನಂಥ ಇತಿಹಾಸ ಪ್ರಸಿದ್ಧ ಮಹಿಳೆ, ಅಳಿದು ಹೋದ ಕೆಲವು ಪಾಳೆಯಗಾರರು ಕೋಲಾಟದ ಪದಗಳಲ್ಲಿ ಜೀವವನ್ನು ಪಡೆದಿದ್ದಾರೆ. ಬೆಟ್ಟಗುಡ್ಡಗಳ ನಡುವೆ ತಮ್ಮ ದನಕರುಗಳೊಡನೆ ಪ್ರತ್ಯೇಕವಾಗಿ ಹಟ್ಟಿಗಳಲ್ಲಿ ಬದುಕುವ ಗೊಲ್ಲರ ಹಾಡುಗಳು ತುಂಬ ವೈಶಿಷ್ಟ್ಯಪೂರ್ಣವಾಗಿವೆ. ಈ ಎಲ್ಲ ವೈವಿಧ್ಯಗಳ ಮೂಲಕ ಕನ್ನಡ ಜನಪದ ಗೀತೆಗಳ ಸಂಪತ್ತು ಅಪೂರ್ವವೂ ಪರಿಣಾಮಕಾರಿಯೂ ಅದುದ್ದಾಗಿದೆ.

ಕೆ.ಎನ್‌.

ಜನಪದ ತಂತ್ರಜ್ಞಾನ ನಾವು ಅನೇಕ ಶತಮಾನಗಳಿಂದ ಎಲ್ಲರಿಗೂ ಬೇಕಾಗಿ, ಎಲ್ಲರಿಗೂ ಹಂಚಿಕೊಳ್ಳುವ ಎಲ್ಲರ ಕೈಗೂ ಎಟುಕುವ ಜ್ಞಾನಮಾದರಿಯಲ್ಲಿ ಇರುವ ತಂತ್ರಜ್ಞಾನವನ್ನು ಪಾರಂಪರಿಕ ತಂತ್ರಜ್ಞಾನ ಎಂದು ಕರೆಯುತ್ತೇವೆ. ಇದನ್ನು ಮೂಲಭೂತ ತಂತ್ರಜ್ಞಾನ ಎಂದು ಕರೆಯಬಹುದು. ಇದನ್ನೇ ಸಾಮಾನ್ಯ ಅಥವಾ ಜನಪದ ತಂತ್ರಜ್ಞಾನ ಎಂದೂ ಕರೆಯುತ್ತೇವೆ. ಇದು ತಿಳಿವಳಿಕೆ ಮತ್ತು ವಸ್ತು ಎಂಬ ಎರಡು ರೂಪಗಳಲ್ಲಿಯೂ ಇದೆ.

ಉದಾಹರಣೆಗೆ ಮಳೆಯ ಬಗ್ಗೆ ಇರುವ ಜ್ಞಾನ ಮತ್ತು ಮಳೆಯಿಂದ ಏನೇನು ವಸ್ತುಗಳನ್ನು ಉತ್ಪತ್ತಿ ಮಾಡಬಹುದೆಂಬ ವಸ್ತುಜ್ಞಾನ. ಈ ತಂತ್ರಜ್ಞಾನ ಹಳೆಯದು ಹೊಸದು ಎಂದು ಬೇರೆ ಮಾಡಿ ನೋಡುವ ಜ್ಞಾನವಲ್ಲ. ಸರ್ವರಿಗೂ ಸರ್ವಕಾಲಕ್ಕೂ ಅಗತ್ಯವಾಗಿ ಬೇಕಾದಂತಹ ಜ್ಞಾನ. ಉದಾಹರಣೆಗೆ ನೇಗಿಲು ಅಥವಾ ಅಡುಗೆಯ ಪ್ರಾಥಮಿಕ ವಿಧಾನ. ಈಗ ನೇಗಿಲು ಮರದ್ದಾಗಿರಬಹುದು, ಕಬ್ಬಿಣದ್ದಿರಬಹುದು, ಟ್ಯ್ರಾಕ್ಟರ್ ಬಂದಿರಬಹುದು. ಓಲ್ಲರ್’ ಆಗಿರಬಹುದು. ಆದರೆ ಉಳುವ ಕ್ರಮ ಎಲ್ಲ ಕಾಲಕ್ಕೂ ಒಂದೇ. ತಾಳಿಕೆ ಬರುವಂತಹ ಜ್ಞಾನವನ್ನು ಪಾರಂಪರಿಕಜ್ಞಾನ ಅಥವಾ ಜನಪದ ಜ್ಞಾನ ಎಂದು ಕರೆಯುತ್ತೇವೆ.

ಕೃಷಿ: ಕೃಷಿ ಸಂಸ್ಕೃತಿಯೊಂದಿಗೆ ಒಂದು ನಿಯತವಾದಂತಹ ಉತ್ಪಾದನಾ ಮೂಲ ಸೃಷ್ಟಿಯಾಯಿತು. ಇದು ಒಡೆತನವನ್ನು ಸೃಷ್ಟಿ ಮಾಡಿತು. ಶ್ರಮದ ಪರಿಕಲ್ಪನೆ, ಶ್ರಮದ ಹಂಚಿಕೆ, ಉತ್ಪಾದನಾ ಕೇಂದ್ರ, ವಹಿವಾಟು ಆರಂಭ ಹೆಚ್ಚಿನ ಉತ್ಪಾದನೆಗೆ ಕಾರಣವಾಯಿತು. ಇಲ್ಲಿ ನೇಗಿಲನ್ನು ಪ್ರಮುಖ ಸಲಕರಣೆಯಾಗಿ ಗುರುತಿಸಬಹುದು.

೧) ನೆಲ ೨) ನೇಗಿಲು ೩) ಗೊಬ್ಬರ ೪) ಎತ್ತುಗಳು ೫) ಬೀಜ ೬) ಉಳುವ ವಿಧಾನ ೭) ಸಂರಕ್ಷಣೆ ೮) ಕಟಾವು ಮತ್ತು ೯) ಉಳಿಕೆಯನ್ನು ಗಳಿಕೆಯನ್ನಾಗಿ ಮಾಡುವಂಥದ್ದು – ಇದಕ್ಕೆ ಸಂಬಂಧಿಸಿದಂತಹ ಪ್ರಮುಖವಾದ ಅಂಶಗಳು ೧೦) ಮಳೆ ಮತ್ತು ಬಿಸಿಲು – ಇವು ಕೃಷಿ ಸಮಾಜದಲ್ಲಿ ಪೂರಕವಾಗಿರುತ್ತವೆ. ೧೧) ಪಕ್ಷಿ ಮತ್ತು ಸಸ್ಯಗಳಿಗೆ ಸಂಬಂಧಿಸಿದ ಜ್ಞಾನ ಹೆಚ್ಚಿನದಾಯಿತು. ೧೨) ಬೆಳೆಯನ್ನು ಕುರಿತಾದಂತಹ ಆವರ್ತನ ಮತ್ತು ನೈಸರ್ಗಿಕ ಸ್ಥಿರ ಜ್ಞಾನದ ಪರಿಚಯ ೧೩) ಕಾಡಿನ ಬಗ್ಗೆ ಇರಬೇಕಾದ ಹೊಸ ಜ್ಞಾನ ಹೆಚ್ಚಾಯಿತು.

ಸಾಮಾನ್ಯನ ಜೀವನ ತಂತ್ರಜ್ಞಾನವೇ ಬೇರೆಯಾಗಿರುತ್ತದೆ. ಉದಾಹರಣೆಗೆ ವಿಜಯನಗರದ ಕಾಲವನ್ನು ತೆಗೆದುಕೊಂಡರೆ ನಿರಂತರ ಯುದ್ಧಗಳಾಗುತ್ತಿದ್ದರೂ ಕೂಡ ಯುದ್ಧ – ಆಯುಧಗಳನ್ನು ನಿರ್ಮಾಣ ಮಾಡುವ ತಂತ್ರಜ್ಞಾನ ಬೇರೆಯಾಗಿತ್ತು. ಜಿನಪದರನ್ನು ನಿಯಂತ್ರಿಸುತ್ತಿದ್ದ ವೃತ್ತಿ ತಂತ್ರಜ್ಞಾನ ಬೇರೆಯಾಗಿತ್ತು. ಆಧುನಿಕ ತಂತ್ರಜ್ಞಾನದ ಹಾಗೆ ಅದು ಅಣುಬಾಂಬ್‌ ಆಗಿರಲಿಲ್ಲ. ಏಕೆಂದರೆ ಈ ಹೊತ್ತಿನ ತಂತ್ರಜ್ಞಾನ ಮೇಲ್ಮಟ್ಟದ ಜನರನ್ನು ಮಾತ್ರ ತಟ್ಟಿ ಕೆಳಗಿನವರಿಗೆ ಏನೂ ಪರಿಣಾಮವಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನಕ್ಕೆ ನಿರ್ದಿಷ್ಟವಾದ ಒಂದು ಕೇಂದ್ರವಿದೆ. ಆ ಕೇಂದ್ರದಲ್ಲಿ ಆಗುವ ಯಾವುದೇ ಬದಲಾವಣೆ ಜಗತ್ತಿನ ಎಲ್ಲ ಕಡೆಗೂ ತಲುಪುತ್ತದೆ. ಪರಂಪರಾಗತ ತಂತ್ರಜ್ಞಾನದ ಸ್ಥಿತಿಯೇ ಬೇರೆ. ಅದಕ್ಕೆ ಒಂದು ಕೇಂದ್ರ ಎಂಬುದಿಲ್ಲ. ಅದು ನಾನಾ ಕೇಂದ್ರಗಳಲ್ವಲಿ ಹರಡಿಕೊಂಡಿದೆ. ಉದಾಹರಣೆಗೆ ಅಮೆರಿಕದ ಸಾಮಾನ್ಯ ವ್ಯಕ್ತಿಗೆ ಗೊತ್ತಿರುವ ಪಾರಂಪರಿಕ ತಂತ್ರಜ್ಞಾನವೇ ಬೇರೆ. ಭಾರತದ ಸಾಮಾನ್ಯ ವ್ಯಕ್ತಿಗೆ ಗೊತ್ತಿರುವ ತಂತ್ರಜ್ಞಾನವೇ ಬೇರೆ. ಹಾಗೆ ನೋಡಿದರೆ ಭಾರತದ ಸಾಮಾನ್ಯನಿಗೆ ಗೊತ್ತಿರುವ ತಂತ್ರಜ್ಞಾನ ಬಾಂಗ್ಲಾದೇಶ ಅಥವಾ ಶ್ರೀಲಂಕಾದ ಸಾಮಾನ್ಯನಿಗೆ ಗೊತ್ತಿರುವುದಿಲ್ಲ. ಏಕೆಂದರೆ ಪಾರಂಪರಿಕ ತಂತ್ರಜ್ಞಾನ ಪ್ರಮಾಣದಲ್ಲಿ ಏಕಸ್ವರೂಪಿಯಾದುದ್ದಲ್ಲ, ಅದು ಬಹುಸ್ವರೂಪಿ . ಪಾರಂಪರಿಕ ತಂತ್ರಜ್ಞಾನವನ್ನು ಸಾಮಾನ್ಯ ಮತ್ತು ನಿರಂತರ ಎಂದು ಕರೆಯುತ್ತೇವೆ. ಇದು ಸಾರ್ವಕಾಲಿಕ ತಂತ್ರಜ್ಞಾನ ಮತ್ತು ಬಾಳಿಕೆ ಬರುವ ತಂತ್ರಜ್ಞಾನ.

ವೃತ್ತಿ ತಂತ್ರಜ್ಞಾನ

ಚರ್ಮಗಾರಿಕೆ: ಕೃಷಿಯ ಅನಂತರ ಚರ್ಮಗಾರಿಕೆ ವೃತ್ತಿಯಾಗಿ ಬಂದಿರುವ ಸಾಧ್ಯತೆಯಿದೆ. ರಕ್ಷಣಾ ವಿಧಾನವಾಗಿ ಚರ್ಮ ಬಳಕೆಗೆ ಬಂದಂತಿದೆ. ದವಸ – ಧಾನ್ಯಗಳನ್ನು ಸಂಗ್ರಹಿಸುವ, ಆಭರಣಗಳ ರಕ್ಷಣೇ, ಆಯುಧಗಳ ರಕ್ಷಣೆ, ಮನೆ – ಮಠಗಳ ರಕ್ಷಣೆ, ಕಟ್ಟುವ ದಾರವಾಗಿ ಬಳಕೆಗೆ ಬಂದಿದೆ. ವಾದ್ಯಗಳಿಗೆ ಚರ್ಮ ಬಳಕೆಗೆ ಬಂದಿದೆ. ನೀರಿನ ಸಂಗ್ರಹಣೆಗೆ ಚರ್ಮವನ್ನು ಬಳಸಿಕೊಳ್ಳಲಾಗಿದೆ. ಶೀತ ಪ್ರದೇಶಗಳಲ್ಲಿ ಮನೆಬಳಕೆಗೆ ಬಂದಿದೆ.

ಕುಂಬಾರಿಕೆ: ಇದು ಆರಂಭದಿಂದಲೇ ವೃತ್ತಿಯಾಗಿದೆ. ಸಿಂಧೂ ಸಂಸ್ಕೃತಿಯ ಸಂದರ್ಭದಲ್ಲಿಯೇ ಮಡಕೆಗಳ ಬಳಕೆಯನ್ನು ಕಾಣಬಹುದು. ಬಹುಶಃ ಕೃಷಿ ಆರಂಭದೊಂದಿಗೆ ಇದೂ ಆರಂಭವಾಗಿದೆ. ಈ ಸಂದರ್ಭದಲ್ಲೇ ಚಕ್ರದ ಬಳಕೆ ಬಂದಂತಿದೆ. ಉಳುಮೆಯೇ ಮಣ್ಣಿನ ಬಳಕೆ ಹೇಗೆ ಮಾಡಬೇಕು ಎಂಬುದಕ್ಕೆ ಪ್ರೇರಣೆ ನೀಡಿದೆ.

ವೃತ್ತಿಯೇತರ ತಂತ್ರಜ್ಞಾನ

ಬೀಜ ತಂತ್ರಜ್ಞಾನ: ಇರುವುದಕ್ಕಿಂತ ಇನ್ನೂ ಎತ್ತರಕ್ಕೆ ಜೀವನವನ್ನು ಎತ್ತರಿಸಿಕೊಳ್ಳುವ ಕ್ರಮವೇ ತಂತ್ರಜ್ಞಾನ. ಇದು ಆಗಬೇಕಾದರೆ ಹೊಸ ಸಾಧನಗಳನ್ನು ಕಂಡುಹಿಡಿಯಬೇಕು. ಬೀಜ ತಂತ್ರಜ್ಞಾನದಲ್ಲಿ ಅಂಥ ಪ್ರಯೋಗ ನಡೆದಿದೆ.

ಆಹಾರ ತಂತ್ರಜ್ಞಾನ: ಇರುವ ಆಹಾರವನ್ನು ಹೆಚ್ಚು ಕಾಲ ಬಾಳಿಕೆ ಬರುವ ಹಾಗೆ ಮಾಡುವುದು ಮತ್ತು ಅದರ ವೈವಿಧ್ಯಗಳನ್ನು ವಿಸ್ತರಿಸುವುದು ಆಹಾರ ತಂತ್ರಜ್ಞಾನದ ಉದ್ದೇಶ. ವಾಸ್ತವವಾಗಿ ಆಹಾರ ತಯಾರಿಕೆ ಕ್ರಮವೇ ಒಂದು ತಂತ್ರಜ್ಞಾನ. ನಿಸರ್ಗದ ಕಚ್ಚಾ ಸಾಮಗ್ರಿಗಳಾದ ಬೀಜ, ಸೊಪ್ಪು, ತೊಗಟೆ ಮುಂತಾದವುಗಳನ್ನು ತೆಗೆದುಕೊಂಡು ಆಹಾರವನ್ನು ಮಾಡಲಾಗುತ್ತದೆ. ಹೀಗೆ ಮಾಡುವ ಕ್ರಮವನ್ನೇ ಆಹಾರ ತಂತ್ರಜ್ಞಾನ ಎಂದು ಕರೆಯುತ್ತೇವೆ. ಬಹುಶಃ ಆಹಾರ ತಂತ್ರಜ್ಞಾನಕ್ಕಿರುವ ವೈವಿಧ್ಯತೆ ಮತ್ತು ಬಹುಮುಖತೆ ಬೇರೆ ಯಾವುದೇ ತಂತ್ರಜ್ಞಾನಕ್ಕೂ ಇಲ್ಲ. ಪ್ರತಿಯೊಂದು ಸಣ್ಣ, ದೊಡ್ಡ ಗುಂಪು ತನ್ನದೇ ಆದ ಆಹಾರ ಪದ್ಧತಿಯನ್ನು ಹೊಂದಿದೆ ಹಾಗೂ ಆಹಾರ ತಯಾರಿಕೆ, ಸಂರಕ್ಷಣೆ ಮತ್ತು ವಿಸ್ತರಣೆಯ ಅನುಭವವನ್ನು ಹೊಂದಿದೆ.

ಕಲೆ ಮತ್ತು ಕೈಕಸುಬು: ಕೈಯಿಂದ ಮಾಡುವ ಕುಶಲಕಲಾ ತಾಂತ್ರಿಕತೆಯನ್ನು ಕರಕುಶಲಕಲೆಯ ತಂತ್ರಜ್ಞಾನ ಎಂದು ಕರೆಯುತ್ತೇವೆ. ಕೈಯನ್ನು ಕುಶಲಕಲೆಯ ತಂತ್ರಜ್ಞಾನವಾಗಿ ಬಳಸಿಕೊಳ್ಳುವ ಚಿಂತನೆ ಬಹಳ ಮೌಲಿಕವಾದುದು. ಇದು ಯಾಂತ್ರಿಕ ಬದುಕಿಗೆ ಭಿನ್ನವಾದ ಮತ್ತು ನಿರಂತರವಾಗಿ ಉಳಿದು ಬಂದಿರುವ ಕಲಾತಂತ್ರವಾಗಿದೆ.

ಶಿಲ್ಪಕಲೆ: ಬಹುಶಃ ಮಾನವ ಕಲ್ಲಿನಿಂದ ಆಯುಧ ಮಾಡಲು ತೊಡಗಿದಂದಿನಿಂದಲೇ ಶಿಲ್ಪಶಾಸ್ತ್ರ ಆರಂಭವಾಗಿದೆ ಎಂದು ತೋರುತ್ತದೆ. ಶಿಲ್ಪವನ್ನು ವಿನ್ಯಾಸಗೊಳಿಸಲು ಪ್ರಮುಖವಾಗಿ ಬೇಕಾದುದು ತಂತ್ರಜ್ಞಾನವೇ. ಮೊದಲಿನಿಂದಲೂ ಪಾರಂಪರಿಕ ತಂತ್ರಜ್ಞಾನ ಕೆಲವು ಸಮುದಾಯಗಳಲ್ಲಿ ನೆಲೆಯೂರಿವೆ. ಹೆಚ್ಚು ತಂತ್ರಜ್ಞಾನವನ್ನು ಕುಶಲ ಕಲೆಗಾರಿಕೆಯೂ ಬೇಡುತ್ತದೆ.

ಆಭರಣಗಳು: ಆಭರಣಗಳಲ್ಲಿ ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಆ ಹೊತ್ತಿನಿಂದ ಈ ಹೊತ್ತಿನವರೆಗೂ ಬಹಳ ಸೂಕ್ಷ್ಮವಾದ ಮತ್ತು ದುಬಾರಿಯಾದ ತಾಂತ್ರಿಕತೆಯಿದೆ. ಈ ಆಭರಣಗಳನ್ನು ಕಲೆಗಳಲ್ಲಿ ಬಳಸುವುದೇ ಬೇರೆ, ಮನುಷ್ಯ ಬಳಸುವುದೇ ಬೇರೆ.

ಹೆಣಿಗೆಗಳು: ಹಕ್ಕಿ ಗೂಡುಕಟ್ಟುವ ಕ್ರಮದ ಮೂಲಕ ಮನುಷ್ಯನಿಗೆ ಹೆಣಿಗೆ ಕಲಿಸಿದೆ. ಹುಲ್ಲುಕಡ್ಡಿ ತಂದುಕೊಡುವುದು ಗಂಡು ಹಕ್ಕಿ, ಗೂಡು ಹೆಣೆಯುವುದು ಪ್ರಧಾನವಾಗಿ ಹೆಣ್ಣು ಹಕ್ಕಿ. ಮನುಷ್ಯರಲ್ಲಿ ಕೂಡ ಹೆಣಿಗೆ ವಿಶೇಷವಾಗಿ ಹೆಣ್ಣಿನ ಕಲೆ, ಎಲೆ, ಜೊಂಡು, ನಾರು, ನೂಲು – ಹೀಗೆ ಹತ್ತೆಂಟು ಸಾಮಗ್ರಿಗಳನ್ನು ಬಳಸಿಕೊಂಡು ಹೆಣಿಗೆ ಮಾಡಲಾಗುತ್ತದೆ.

ಕಸೂತಿ: ನೂಲನ್ನು ಮುಖ್ಯವಾಗಿ ಅವಲಂಬಿಸಿದ ಈ ಕಲೆ ಪುರಾತನವಾದುದು. ಹೆಣ್ಣಿನ ಕುಶಲತೆ ಮತ್ತು ಚಾತುರ್ಯ ಈ ಕಲೆಯ ಅಂತರ್ಯವಾಗಿದೆ. ಕೆಲವು ಆದಿವಾಸಿ ಜನರಲ್ಲಿ ಕಸೂತಿ ಇಲ್ಲದೆ ಬದುಕು ಇಲ್ಲ ಎನ್ನುವಂತಿದೆ. ಲಂಬಾಣಿ ಜನರ ಉಡುಗೆ ತೊಡುಗೆಯಲ್ಲಿ ಇದನ್ನು ಕಾಣಬಹುದು.

ಆಟಿಕೆ: ದೇವರಿಗೆ ಮನುಷ್ಯ ಆಟಿಕೆ. ದೊಡ್ಡವರಿಗೆ ಮಕ್ಕಳು ಆಟಿಕೆ. ಮಕ್ಕಳಿಗೆ ಜಗತ್ತೆ ಒಂದು ಆಟಿಕೆ. ಜನಪದ ಸಮಾಜ ಮೊದಲಿನಿಂದಲೂ ಮಕ್ಕಳಿಗಾಗಿ ಆಟಿಕೆಗಳನ್ನು ಬಳಸಿಕೊಂಡು ಬಂದಿದೆ. ತನ್ನ ಸುತ್ತ ಮುತ್ತ ದೊರೆಯುವ ಗರಿ, ಮರ, ಹುಲ್ಲು, ಸೊಪ್ಪು….. ಮುಂತಾದುವನ್ನು ಬಳಸಿಕೊಂಡು ಆಟಿಕೆ ತಯಾರು ಮಾಡುವ ಕಲಾವಿದರು ಇದ್ದಾರೆ.

ಔಷಧ ಪ್ರಕ್ರಿಯೆ: ಇದು ಜನಪದರ ಬಹುಮುಖ್ಯ ತಂತ್ರಜ್ಞಾನ. ಸಾಮಾನ್ಯ ಅಸಾಮಾನ್ಯ ತಂತ್ರಜ್ಞಾನ ಎಂದು ಈ ಜ್ಞಾನವನ್ನು ಗುರುತಿಸಬಹುದು. ಇದರ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುತ್ತದೆ.

ಈಗ ಉನ್ನತ ತಂತ್ರಜ್ಞಾನ ಜನಪದ ತಂತ್ರಜ್ಞಾನ ವೈಜ್ಞಾನಿಕ ಅಲ್ಲ ಎಂದು ಹೇಳಿ ಅದನ್ನು ಹಿಂದಕ್ಕೆ ಇಡಲು ಯತ್ನಿಸಿದೆ. ಆಧುನಿಕ ತಂತ್ರಜ್ಞಾನ ಕೂಡ ಜನಪದ ತಂತ್ರಜ್ಞಾನದಿಂದ ಬೆಳೆದು ಪರಿಷ್ಕೃತವಾದ ಜ್ಞಾನ. ಪರಿಷ್ಕಾರ ಎನ್ನುವುದು ಈ ಶತಮಾನದ ಪ್ರಕ್ರಿಯೆ ಮಾತ್ರವಲ್ಲ. ಯಾವ ಹೊತ್ತಿನಿಂದಲೂ ಅದು ನಡೆದು ಬಂದಿದೆ.

– ಎಚ್‌.ಎಸ್‌.ಆರ್