ಜಾತ್ರೆಗಳು : ಜಾತ್ರೆ ವರ್ಷದ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ಸಮಾಜೋಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ರಿಯೆ. ಸಂಸ್ಕೃತ ಭಾಷೆಯ ‘ಯಾತ್ರಾ’ ಶಬ್ದದ ತದ್ಭವವಾಗಿ ‘ಜಾತ್ರೆ’ ಎಂಬುದು ಕನ್ನಡದಲ್ಲಿ ಬಳಕೆಯಾಗುತ್ತಿದೆ. ಯಾತ್ರೆಯಿಮದ ಜಾತ್ರೆಯಾದರೂ ಇವರೆಡೂ ಪದಗಳ ಅರ್ಥ ಮತ್ತು ರೂಪಗಳಲ್ಲಿ ವ್ಯತ್ಯಾಸವಿದೆ. ‘ಯಾನೇನ ತ್ರಾಯತ ಇತಿ ಯಾತ್ರಾ’ ಅಂದರೆ ಧಾರ್ಮಿಕ ಉದ್ದೇಶದಿಂದ ಪುಣ್ಯ ಕ್ಷೇತ್ರದರ್ಶನಕ್ಕಾಗಿ ಕೈಗೊಳ್ಳುವ ಯಾನವೇ ಯಾತ್ರೆ. ಜಾತ್ರೆಯ ಮೂಲ ಉದ್ದೇಶವೂ ಅದೇ ಆಗಿದ್ದರೂ ಸ್ವರೂಪದಲ್ಲಿ ವ್ಯತ್ಯಾಸವಿದೆ. ಜನ ತಾವು ನಂಬಿಕೊಂಡು ಬಂದಿರುವ ದೈವದ ಆರಾಧನೆಗಾಗಿ ಸಾಮೂಹಿಕವಾಗಿ ಒಂದೆಡೆ ಸೇರಿದಾಗ ಜಾತ್ರೆಯಾಗುತ್ತದೆ. ಜಾತ್ರೆಗೆ ಇದಲ್ಲದೆ ಅನ್ಯ ಉದ್ದೇಶಗಳೂ ಇರುತ್ತವೆ. ಯಾತ್ರೆಗಿರುವ ಪ್ರಶಾಂತತೆ, ಮಹಿಮೆ ಇತ್ಯಾದಿಗಳು ಜಾತ್ರೆಗಿರುವುದಿಲ್ಲ. ಜಾತ್ರೆ ಎಂದ ಕೂಡಲೆ ಜನಸ್ತೋಮ ನೆನಪಾಗುತ್ತದೆ. ಗುಂಪು, ಗದ್ದಲ, ವ್ಯಾಪಾರ ವಹಿವಾಟು, ಹಾಡು, ಕುಣಿತ, ಸಂಭ್ರಮ ಕಂಡುಬರುತ್ತವೆ. ಜಾತ್ರೆಗೆ ಜನಮುಖ್ಯ. ‘ಜನರಿದ್ದರೆ ಜಾತ್ರೆ’, ಜನಜಾತ್ರೆ, ‘ಜನಮರುಳೋ ಜಾತ್ರೆ ಮರುಳೋ’ ಮೊದಲಾದ ಗಾದೆ ಮಾತುಗಳು ‘ನುಡಿಗಟ್ಟುಗಳು’ ಜಾತ್ರೆಯ ಸ್ವರೂಪವನ್ನು ತಿಳಿಸುತ್ತವೆ. ಹಾಗೆಂದ ಮಾತ್ರಕ್ಕೆ ಜನಸೇರಿದ್ದೆಲ್ಲ ಜಾತ್ರೆಯಾಗುವುದಿಲ್ಲ. ಜಾತ್ರೆ ಸೇರುವುದಕ್ಕೆ ಧಾರ್ಮಿಕ ಉದ್ದೇಶ ಪ್ರಮುಖವಾಗಿರುತ್ತದೆ. ದೇವತಾರಾಧನೆ, ತೇರು, ಮೆರವಣಿಗೆ ಮೊದಲಾದವು ಆಕರ್ಷಣೆಯಾಗುತ್ತವೆ. ಇದರ ಜೊತೆ ಜೊತೆಗೆ ಇನ್ನಿತರ ಲೌಕಿಕ ಉದ್ದೇಶಗಳೂ ಇಲ್ಲದಿಲ್ಲ.

ಈ ಹಿನ್ನೆಲೆಯಲ್ಲಿ ಜಾತ್ರೆಗಳನ್ನು ಅಧ್ಯಯನ ಮಾಡುವಾಗ ಜಾತ್ರೆಯ ಒಟ್ಟು ಉದ್ದೇಶ ಪುರುಷಾರ್ಥಗಳ ಸಾಧನೆಯೇ ಆಗಿರುವಂತೆ ಕಾಣುತ್ತದೆ. ಅಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳು ಗುರಿಯಾಗಿರುವುದೇ ಹೆಚ್ಚಾಗಿ ಕಾಣುತ್ತದೆ. ಅಲ್ಲದೆ ಇಂತಹ ಆಚರಣೆಗಳಿಂದ ಸಾಮಾಜಿಕ ಸ್ವಾಸ್ಥ್ಯ, ಅಲೌಕಿಕ ಶಕ್ತಿಗಳ ಒಲುಮೆ, ಹಿರಿಯರ, ಮಹಾತ್ಮರ ಸ್ಮರಣೆ, ತ್ಯಾಗ ಬಲಿದಾನಗಳ ನೆನಕೆ, ಆರ್ಥಿಕ ಚಟುವಟಿಕೆಗಳ ಕುದುರು, ಸಾಂಸ್ಕೃತಿಕ ಬಯಕೆಗಳ ಆಗುವಿಕೆ, ಮುಂದರಿಕೆ ಇತ್ಯಾದಿಗಳು ಈಡೇರುತ್ತವೆ.

ಸಾಮಾನ್ಯವಾಗಿ ಜಾತ್ರೆ ನಡೆಯುವ ಸ್ಥಳಗಳು ನೀರು, ನೆರಳು, ಸಾಕಷ್ಟು ಸ್ಥಳಾವಕಾಶ, ದಾರಿ, ಆಹಾರ ಮುಂತಾದ ಸೌಕರ್ಯಗಳು ಸಾಮಾನ್ಯವಾಗಿ ಸಿಗುವ ಎಡೆಗಳಾಗಿರುತ್ತವೆ. ಜೊತೆಗೆ ಅಲ್ಲೊಂದು ಕ್ಷೇತ್ರ ಮಹಿಮೆ ಇರುತ್ತದೆ. ಇಂತಹ ಎಡೆಗಳಲ್ಲಿ ಜನ ತಮ್ಮ ವರ್ಷದ ದುಡಿಮೆಯ ಚಕ್ರಗತಿಯಲ್ಲಿ ಸ್ವಲ್ಪ ವಿರಾಮ ಸಿಗುವ ಕಾಲದಲ್ಲಿ ಜಾತ್ರಾದಿ ಉತ್ಸವಗಳನ್ನು ನೆರವೇರಿಸಿ ಸಂತೋಷ ಪಡುತ್ತಾರೆ. ಜಾತ್ರೆಗಳಿಂದ ಕೇವಲ ಸಂತೋಷವಲ್ಲದೆ ಸ್ನೇಹ, ಸೌಹಾರ್ದ, ಬಂಧುತ್ವ ವೃದ್ಧಿಗೊಳ್ಳಲು ಅವಕಾಶವಾಗುತ್ತದೆ. ಗ್ರಾಮದ ಒಗ್ಗಟ್ಟು, ಅಭಿಮಾನ, ಭಾವೈಕ್ಯತೆ ಇಂತಹ ಜಾತ್ರೆಗಳ ಸಂದರ್ಭದಲ್ಲಿ ಜಾಗೃತವಾಗುತ್ತದೆ. ‘ನಮ್ಮೂರ ಜಾತ್ರೆ ಯಶಸ್ವಿಯಾಗಬೇಕು. ಊರಿಗೆ ಒಳ್ಳೆಯ ಹೆಸರು ಬರಬೇಕು’ ಎಂಬ ಕಾರಣಕ್ಕಾಗಿ ಏಕತೆಯಿಂದ, ತ್ಯಾಗಮನೋಭಾವದಿಂದ ಮುನ್ನಡೆಯುವುದುಂಟು.

ಕೆಲವೊಮ್ಮೆ ಗ್ರಾಮಗಳೊಳಗೆ, ಗ್ರಾಮ ಗ್ರಾಮಗಳ ನಡುವೆ ಉಂಟಾದ ಕಲಹ, ವ್ಯಾಜ್ಯಗಳನ್ನು ಜಾತ್ರೆಯಲ್ಲಿ ದೈವ ಸನ್ನಿಧಿಯ ಸಾಕ್ಷ್ಯದಲ್ಲಿ ಬಗೆಹರಿಸುವುದೂ ಉಂಟು. ಜಾತ್ರೆಗಳು ಗ್ರಾಮೀಣ ಜನತೆಯ ವ್ಯಾಪಾರ ಕೇಂದ್ರಗಳೂ ಆಗಿರುತ್ತವೆ. ತಾವು ಬೆಳೆಸ ದವಸ ಧಾನ್ಯಗಳು, ಉತ್ಪಾದಿಸಿದ ಅಪರೂಪದ ವಸ್ತುಗಳು, ಜಾನುವಾರುಗಳು ಇತ್ಯಾದಿಗಳನ್ನು ಮಾರುವ, ಕೊಳ್ಳುವ ಕೇಂದ್ರಗಳಾಗಿ ಹಲವಾರು ಜಾತ್ರೆಗಳು ಪ್ರಸಿದ್ಧವಾಗಿವೆ. ಅದಕ್ಕಾಗಿ ಜಾತ್ರೆ ಸೇರುವ ಸ್ಥಳದ ಬೀದಿ ಬೀದಿಗಳಲ್ಲಿ ಹಲವು ರೀತಿಯ ಅಂಗಡಿ ಮುಂಗಟ್ಟುಗಳು ಸೇರುತ್ತವೆ.

ಜಾತ್ರೆಗಳು ಜನಪದರ, ನಾಗರಿಕರ ಕಲಾಶಕ್ತಿಯನ್ನು ಕೆರಳಿಸುತ್ತವೆ ಹಾಗೂ ತಣಿಸುತ್ತವೆ ಎನ್ನಬಹುದು. ಜಾತ್ರೆಗಳಲ್ಲಿ ಅನೇಕ ಮನೋರಂಜಕ, ಧಾರ್ಮಿಕ ಪರಿವೇಶದ ಕಲೆಗಳು ಪ್ರದರ್ಶನಗೊಳ್ಳುತ್ತವೆ. ಪ್ರಪಂಚದ ಬಹುತೇಕ ಕಲೆ, ಸಾಹಿತ್ಯಗಳು, ಧಾರ್ಮಿಕ ಸನ್ನಿವೇಶಗಳಿಂದಲೇ ಹುಟ್ಟಿ ಬೆಳೆದಿರುವುದನ್ನು ಗಮನಿಸಬಹುದು. ಸೋಮನ ಕುಣಿತ, ವೀರಗಾಸೆ, ಮರಗಾಲು ಕುಣಿತ, ಡೊಳ್ಳು ಕುಣಿತ, ಕಂಸಾಳೆ, ಕೀಲುಕುದುರೆ, ಕೋಲಾಟ, ಕರಗ ಕುಣಿತ, ಮಾರೀಕುಣಿತ ಮೊದಲಾದ ಕಲೆಗಳು ಆ ಸಂದರ್ಭದಲ್ಲಿ ಹೇಳುವ ವೈವಿಧ್ಯಮಯವಾದ ಹಾಡುಗಳು ಜಾತ್ರೆಯ ಉತ್ಪನ್ನಗಳೇ ಆಗಿವೆ. ಅಲ್ಲದೆ ಜನರ ಮನೋರಂಜನೆಗಾಗಿ ಬಯಲಾಟ, ಮೋಡಿ, ಡೊಂಬರಾಟ, ಕರಡಿ ಕುಣಿತ, ಕೋತಿ ಕುಣಿತ ಮೊದಲಾದವು ಪ್ರಮುಖ ಆಕರ್ಷಣೆಗಳಾಗಿ ಗಮನ ಸೆಳೆಯುತ್ತವೆ.

ಜಾತ್ರೆಯ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಗ್ರಾಮೀಣ ಕರಕುಶಲ ಕಲೆಗಳನ್ನು, ಕೈಗಾರಿಕೆಗಳನ್ನು ಉಳಿಸುವ ಹಾಗೂ ಬೆಳೆಸುವ ದಿಸೆಯಲ್ಲಿ ಅವುಗಳು ವಹಿಸುವ ಪಾತ್ರ, ಜಾತ್ರೆಯ ಉತ್ಸವ ಮೂರ್ತಿಗಳಣ್ನು ಮಾಡುವಲ್ಲಿ ಅಕ್ಕಸಾಲಿ, ಜೀನಗಾರ, ಕರಗಗಳೇ ಮೊದಲಾದ ಮಡಕೆ, ಕುಡಿಕೆಗಳ ಮಾಡುವಲ್ಲಿ ಕುಂಬಾರ, ತೇರು ನಿರ್ಮಿಸುವಲ್ಲಿ ಬಡಗಿ, ಕಬ್ಬಿಣದ ಪರಿಕರಗಳಿಗಾಗಿ ಕಮ್ಮಾರ, ಮೊರ, ಬುಟ್ಟಿ, ಹೆಡಿಗೆಗಳ ಮಾಡುವ ಮೇದರವ ಹೀಗೆ ಅನೇಕ ವೃತ್ತಿಗಾರರು ಜಾತ್ರೆಗೆ ವಿಧಿಪೂರ್ವಕವಾಗಿ ಆಮಂತ್ರಿತರಾಗುತ್ತಾರೆ. ಹಕ್ಕು ಚಾಜಗಳನ್ನು ಪಡೆಯುತ್ತಾರೆ. ಆಯ ಪಡೆಯುತ್ತಾರೆ. ಇದೇ ಕಾರಣಕ್ಕಾಗಿ ಗ್ರಾಮೀಣ ಕುಶಲ ಕಲೆ, ವೃತ್ತಿಗಳನ್ನು ಸ್ಥಿತ್ಯಂತರಗೊಂಡ ಈ ಸಂದರ್ಭದಲ್ಲಿಯೂ ಕೆಲವೆಡೆ ಉಳಿದಿದೆ.

ಇದೆಲ್ಲದರ ಜೊತೆಗೆ ಜನತೆಗೆ ಯಾವುದೇ ಅಭದ್ರತೆ ಕಾಡಿದಾಗಲೂ ಅಸ್ಥಿರವಾಗದಂತೆ, ದೈವದ ಮೊರೆ ಹೋಗಿ; ಆತನ ಮೇಲೆ ಭಾರ ಹಾಕಿ; ಇದರಿಂದ ಸಾರ್ವತ್ರಿಕ ಕ್ಷೇಮವಿದೆ ‘ನಂಬಿದ ದೇವರು ಕಾಯುತ್ತಾನೆ’ ಎಂಬ ಒಂದು ಅಚಲವಾದ ನಂಬಿಕೆ ದೊರೆಯುತ್ತದೆ. ಧೈರ್ಯವೂ ಜೀವನವನ್ನು ಈಸುವ ಶಕ್ತಿಯೂ ದೊರೆಯುವುದು ಸುಳ್ಳಲ್ಲ. ಅಲ್ಲದೆ ಆಗಾಗ ದೊರೆಯುವ ಇಂತಹ ಅವಕಾಶಗಳಿಂದ, ಅಲ್ಲಿ ದೊರೆಯುವ ಸಂತೋಷ, ಸಂಭ್ರಮಗಳಿಂದ ಮುಂದಿನ ಬದುಕನ್ನು ನಡೆಸುವಲ್ಲಿ ಒಂದು ಉತ್ಸಾಹವೂ ಜೀವನ ನೀರಸವಲ್ಲ ಎಂಬ ಆಶಾದಾಯಕ ಮನಸ್ಥಿತಿಯೂ ದೊರೆಯುವುದು.

ಜಾತ್ರೆಗಳಿಂದ ಹಲವಾರು ಪ್ರಯೋಜನಗಳಿರುವ ಹಾಗೆಯೆ ಕೆಲವು ತೊಂದರೆಗಳೂ ಇವೆ. ಜಾತ್ರೆಗಳಲ್ಲಿ ನಡೆಯುವ ಆಚರಣೆಗಳು ತೀರಾ ಸೂಕ್ಷ್ಮ ಆಲೋಚನೆಗೆ ಹಚ್ಚುವುದಿಲ್ಲ. ವೈಚಾರಿಕತೆಯನ್ನು ಬೆಳೆಸುವುದಿಲ್ಲ. ಬದಲಾಗಿ ಅಂಧಾನುಕರಣೆಯನ್ನು ಮೌಢ್ಯವನ್ನು ಬಿತ್ತುತ್ತವೆ. ಅನೇಕ ಸಾಮಾಜಿಕ ಅನಿಷ್ಟಗಳನ್ನು ಬೆಳೆಸುತ್ತವೆ. ಈ ಹಿನ್ನೆಲೆಯಲ್ಲಿ ಆಲೋಚಿಸುವಾಗ ಮೊದಲು ಕಾಣುವುದು ಬಸವಿ ಪದ್ಧತಿ, ಬೆತ್ತಲೆ ಸೇವೆ ಮೊದಲಾದುವು. ಈ ಆಚರಣೆಗಳನ್ನು ಒಪ್ಪುವ ಮನಸ್ಸುಗಳು ದೇವರನ್ನು ಮಾನವರಂತೆಯೇ ಅರಿಷಡ್ವರ್ಗಗಳಿಂದ ಪೀಡಿತನೆಂದೂ ಆತ ಕಾಮುಕನೆಂದೂ ತಿಳಿದಂತೆ ಕಾಣುತ್ತದೆ. ಆತನ ಬಯಕೆಗಳ ಈಡೇರಿಕೆಗಾಗಿ ಹೆಣ್ಣು ಮಗಳೊಬ್ಬಳನ್ನು ‘ಬಸವಿ’ ಎಂದು ದೇವದಾಸಿ ಎಂದು ಬಿಡುವುದು ಒಂದು ಅನಿಷ್ಟ ಪದ್ಧತಿ, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವುದಕ್ಕೆ ಅದು ಕಾರಣವೂ ಆಗುವುದಿದೆ. ದೇವರ ಹೆಸರಿನಲ್ಲಿ ಕಂಡವರ ಹೆಣ್ಣುಮಕ್ಕಳ ಬೆತ್ತಲೆ ದೇಹವನ್ನು ನೋಡಿ ಆನಂದಿಸುವ ಸಲುವಾಗಿಯೇ ‘ಬೆತ್ತಲೆ ಸೇವೆ’ಯಂತಹ ಅನಿಷ್ಟ ಪದ್ಧತಿಗಳನ್ನು ಆಚರಣೆಗೆ ತಂದಂತಿವೆ. ಸವದತ್ತಿ ಎಲ್ಲಮ್ಮನ ಜಾತ್ರೆ. ಚಂದ್ರಗುತ್ತಿಯ ಜಾತ್ರೆ ಮೊದಲಾದವು ಈ ಹಿನ್ನೆಲೆಯಲ್ಲಿ ನಿದರ್ಶನಗಳಾಗುತ್ತವೆ.

ಜಾತ್ರೆಗಳು ಹಿಂಸೆಯನ್ನು ಪ್ರತಿಪಾದಿಸುತ್ತವೆ. ದೇವರ ಪ್ರೀತ್ಯರ್ಥ ಕುರಿ, ಕೋಣ, ಕೋಳಿ ಇತ್ಯಾದಿ ಜೀವ ಜಂತುಗಳನ್ನು ಬಲಿ ನೀಡುವುದು ಮಹಾಹಿಂಸೆಯ ಪ್ರತಿಪಾದನೆಯಲ್ಲಿದೆ. ಜನ್ನನ ಯಶೋಧರ ಚರಿತ್ರೆಯಲ್ಲಿ ಮಾರಿಕಾಂಬೆಯ ಜಾತ್ರೆಯ ವರ್ಣನೆಯನ್ನು ಗಮನಿಸಿದರೆ ಜಾತ್ರೆಯ ನೆಪದಲ್ಲಿ ನಡೆಯುವ ಹಿಂಸೆ ತಿಳಿಯುತ್ತದೆ. ಇದೇ ರೀತಿ ಗಾವು ಸಿಗಿಯುವುದು, ಸಿಡಿ ಆಡುವುದು, ಮುಳ್ಳು ಗದ್ದುಗೆ ಸೇವೆ, ಚಾವಟಿ ಸೇವೆ ಮೊದಲಾದವು ಯಾವುದೇ ಹಣೆಪಟ್ಟಿಯಿದ್ದರೂ ಅವು ಹಿಂಸೆಯ ಮೂರ್ತರೂಪಗಳೇ ಆಗಿವೆ. ‘ಯಾರ‍್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬ ಗಾದೆ ಮಾತು ಹಣದ ಪೋಲು, ಸೂಳೆಗಾರಿಕೆ, ಜೂಜು ಮುಂತಾದ ಸಾಮಾಜಿಕ ಪಿಡುಗುಗಳ ಪೋಷಣೆಯಲ್ಲಿ ಜಾತ್ರೆಗಳ ಸ್ಥಾನವೇನು? ಎಂಬುದನ್ನು ಮಾರ್ಮಿಕವಾಗಿ ತಿಳಿಸಿಕೊಡುತ್ತದೆ.

ಅಲ್ಲದೆ ಜಾತ್ರೆಗಳಲ್ಲಿ ಎಷ್ಟೇ ಏಕತಾಭಾವ ಮೂಡಿದರೂ, ಗುಪ್ತ ಗಾಮಿನಿಯಾಗಿ ಇಲ್ಲವೆ ಪರೋಕ್ಷವಾಗಿ ವರ್ಣಾಶ್ರಮ ಪದ್ಧತಿಯನ್ನು ಜೀವಂತವಾಗಿರಿಸುವಲ್ಲಿ ತಕ್ಕ ಮಟ್ಟಿನ ಪ್ರಯತ್ನ ಇರುತ್ತದೆ. ಜಾತ್ರೆಗಳಲ್ಲಿ ನಡೆಯುವ ಕೆಲ ಆಚರಣೆಗಳ ಮೂಲಕ ಯಾವ ಯಾವ ಜಾತಿಯವನು, ಏನೇನು ವೃತ್ತಿಮಾಡಬೇಕು ಮತ್ತು ತಲೆಮಾರುಗಳವರೆಗೆ ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆಂಬುದನ್ನು ಪ್ರತಿಪಾದಿಸಲಾಗುತ್ತದೆ. ಆ ಮೂಲಕ ಅಭಿರುಚಿಗೆ ತಕ್ಕ ವೃತ್ತಿಯ ಆಯ್ಕೆಯನ್ನು ಸ್ವಲ್ಪಮಟ್ಟಿಗೆ ನಿರ್ಬಂಧಿಸಿದಂತಾಗುತ್ತದೆ.

ಈ ಎಲ್ಲದರ ನಡುವೆ ಜಾತ್ರೆ, ಉತ್ಸವದಂಥವು ಗ್ರಾಮೀಣ ಜೀವನದ ಅವಿಭಾಜ್ಯ ಅಂಗಗಳಾಗಿ ಮುಂದುವರಿಯುತ್ತಿವೆ.

– ಕೆ.ಟಿ.

ಜೋಕುಮಾರನ ಹಾಡು ಕಾಮ ಮತ್ತು ಜೋಕುಮಾರರು ಜೀವನದ ಕಾಮುಕ ಮುಖದ ಸಂಕೇತಗಳು. ಇವುಗಳಲ್ಲಿ ಕಾಮನ ಕಲ್ಪನೆ ಹೆಚ್ಚು ಪುರಾಣ ಸಂಬಂಧಿ, ಜೋಕುಮಾರನದು ಹೆಚ್ಚು ಜಾನಪದ ಸಂಬಂಧಿ. ಕನ್ನಡ ಸಾಹಿತ್ಯದಲ್ಲಿ ಜೋಕುಮಾರನನ್ನು ಉಲ್ಲೇಖಿಸುವ ಕೃತಿಗಳು ಶ್ರೀಧರಾಚಾರ್ಯನ ಜಾತಕತಿಲಕ, ಬಂಧುವರ್ಮನ ಜೀವಸಂಬೋಧನೆ, ಬ್ರಹ್ಮಶಿವನ ಸಮಯಪರೀಕ್ಷೆ, ಬಸವಣ್ಣನವರ ವಚನ, ಪಾರ್ಶ್ವಕವಿಯ ಪಾರ್ಶ್ವಪುರಾಣ, ವಿಜಯದಾಸರ ಸುಳಾದಿ, ನಾರಸಿಂಹನ ಅನುಭವ ಶಿಖಾಮಣಿ – ಈ ಕೃತಿಗಳ ಪ್ರಕಾರ ‘ಜೋಕುಮಾರ ಒಬ್ಬ ದೇವತೆಯ ಮಗ (ಮಾರಿ ಮಗ), ಅಲ್ಪಾಯುಷಿ. ಹುಟ್ಟಿದ ಏಳು ದಿನಗಳಲ್ಲಿ ತೀರಿಕೊಂಡ. ಅವನ ತಾಯಿ ದೇವತಾ ಸ್ತ್ರೀಯಾಗಿದ್ದರೂ ಅವನನ್ನು ಕಾಪಾಡಲಾರದೆ ಹೋದಳು. ಜನರು ಪೂಜಿಸುವ (ಕ್ಷುದ್ರ) ದೇವತೆಗಳಲ್ಲಿ ಅವನೂ ಒಬ್ಬ’ ಎಂಬ ಸಂಗತಿಗಳು ತಿಳಿದುಬರುತ್ತವೆ. ಅನುಭವ ಶಿಖಾಮಣಿಯಲ್ಲಿ ಜೋಕುಮಾರನ ಕಥೆ ಹೀಗೆ ಬರುತ್ತದೆ: ಸಪ್ತರ್ಷಿಗಳು ವರ್ಣಿಸಿದ ಮರ್ತ್ಯಲೋಕದ ವೈಭವಕ್ಕೆ ಮರುಳಾಗಿ, ಅವರ ಸೇವಕ ಜೋಕನೆಂಬವನು ಮರ್ತ್ಯಕ್ಕೆ ಬಂದು, ಋಷಿಗಳ ಬುದ್ಧಿವಾದವನ್ನು ಮರೆತು, ಮಾರಿದೇವತೆಯನ್ನು ಮೋಹಿಸಿ ತನ್ನ ಆಕಾರ್ಯಕ್ಕೆ ಪಶ್ಚಾತ್ತಾಪಪಡುತ್ತಾನೆ. ಋಷಿಗಳ ಹತ್ತಿರ ಹೋಗಿ ಕ್ಷಮೆ ಕೇಳಿದರೆ ಏಳು ದಿನಗಳ ತರುವಾಯ ನೀನು ನಮ್ಮಲ್ಲಿಗೆ ಬರಲು ಅರ್ಹವಾಗುತ್ತೀಯೆ ಎನ್ನುತ್ತಾರೆ. ಇತ್ತ ಮಾರಿಗೆ ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕುಮಾರ (ಜೋಕ + ಕುಮಾರ) ಹುಟ್ಟಿದ. ತನ್ನ ತಂದೆಯನ್ನು ಹುಡುಕಹೊರಟು ಏಳನೆಯ ದಿನ ದಾರಿಯಲ್ಲಿ ಅಗಸರ ಕನ್ಯೆ ಸುಕರ್ಣಿಕೆಯ ಮಾನಭಂಗಕ್ಕೆ ಪ್ರಯತ್ನಿಸಿ, ಅಗಸರಿಂದ ಗತಪ್ರಾಣನಾದ. ತಕ್ಷಣ ತಂದೆ ಜೋಕನನ್ನು ಸಪ್ತರ್ಷಿಗಳು ಬರಮಾಡಿಕೊಂಡರು. (ಮಗ ಜೋಕುಮಾರನ ವಧೆಯ ರೂಪದಲ್ಲಿ ತಂದೆ ಜೋಕನ ಪಾಪವೀರ್ಯ ಹಾಳಾಗಿ ಅವನು ಪರಿಶುದ್ಧನಾದನೆಂಬ ಭಾವನೆ). ಇದು ಶಿಷ್ಟ ಸಾಹಿತ್ಯದಲ್ಲಿ ಬರುವ ಜೋಕುಮಾರನ ಕಥೆ ಜೋಕುಮಾರನ ಹಾಡುಗಳಲ್ಲಿ

ಹುಟ್ಟಿದೇಳು ದಿವಸಕ ಪಟ್ನಾವ ತಿರುಗ್ಯಾನ
ದಿಟ್ನಾ ದೇವಿ ನಿನ ಮಗನ
| ಕೋಮರಾಮ
ಕೊಟ್ಟಾರ ಏಳು ದಿನಗಳನು

ರಾಣೇದ ಹಚ್ಚಡ ಹೊತ್ತಾನ ಕೊಮರ
ರಾಯರ ಓಣ್ಯಾಗ ಸುಳದಾನ
| ನನ ಕೊಮರ
ರಾಯರು ಹೆಂಡರು ತನಗೆಂದ

ಹಾರೂರಗೇರ್ಯಾಗ ಹೊಕ್ಕಾನ ನನ ಕೊಮರ
ಗಾರೂಡಿಗಣ್ಣ ತಿರುವೂತ
| ತನ್ನಯ
ತಾಯಂದಿರಿದ್ದರು ಬಿಡಲಿಲ್ಲ

ಪುಂಡನ ಪುಂಡಾಟ್ಕ ಹಿಂಡ ಮಂದಿ ಕೂಡ್ಯಾರ
ಕಂಡಲ್ಲಿ ಕಲ್ಲೀಗಿ ಬಡದಾರ
| ರಾತ್ರ್ಯಾಗ
ಅಗಸಾರ ಕಲ್ಲಾಗ ತುರಕ್ಕಾರ

ಹೀಗೆ ಕೆಲವು ಕಥಾತ್ಮಕ ಎಳೆಗಳು ಸಿಗುತ್ತಿದ್ದರೂ ಪೂರ್ಣಕಥೆಯ ಪುನಾರಚನೆ ಇದರಿಂದ ಸಾಧ್ಯವಾಗುವುದಿಲ್ಲ. ಮೇಲಾಗಿ ಜನಪದ ಸಾಹಿತ್ಯದಲ್ಲಿ ಒಂದೊಂದು ಪ್ರದೆಶದವರು ಒಂದೊಂದು ಕಥೆಯನ್ನು ಹೇಳುವರಾದರೂ ಜೋಕುಮಾರನೊಬ್ಬ ಕಾಮುಕ, ಆಯುಷ್ಯ ಏಳುದಿನ, ಅಗಸರಿಂದ ಹತನಾದನೆಂಬ ಮೂಲಘಟನೆಗಳಲ್ಲಿ ಮಾತ್ರ ಭಿನ್ನಾಭಿಪ್ರಾಯವಿಲ್ಲ.

ಜೋಕುಮಾರ ಭಾದ್ರಪದ ಶುದ್ಧ ಅಷ್ಟಮಿಯ ದಿನ ಹುಟ್ಟಿ, ಏಳು ದಿನ ಇದ್ದು, ಅನಂತರ ಹುಣ್ಣಿಮೆಯ ದಿನ ಸಾಯುತ್ತಾನೆ. ಈ ಹುಣ್ಣಿಮೆಗೆ ಜೋಕೇನ ಹುಣ್ಣಿಮೆ ಎಂದು ಹೆಸರು. ಜೋಕುಮಾರ ಸುಮಾರು ೩ – ೪ ಅಡಿ ಎತ್ತರದ ಮಣ್ಣಿನ ಮೂರ್ತಿ. ಅತಿ ದೀರ್ಘವೂ, ನೇರವೂ ಆದ ಶಿಶ್ನ ಇರುವುದು ಈ ಮೂರ್ತಿಯ ವೈಶಿಷ್ಟ್ಯ. ಇವನ ಏಕಾಕ್ಷಿತನವನ್ನು ಸೂಚಿಸಲು ಕಣ್ಣಿನ ಸ್ಥಾನದಲ್ಲಿ ಒಂದು ಕವಡೆಯನ್ನು ಬೋರಲು ಹಚ್ಚಿ ಬಾಯಿಗೆ ಬೆಣ್ಣೆ ಲೇಪಿಸಿರುತ್ತಾರೆ. ಇಂಥ ಅತಿಕಾಮಿ ಮೂರ್ತಿಯನ್ನು ಬೇವಿನ ತಪ್ಪಲಿನಿಂದ ತುಂಬಿದ ಒಂದು ಬುಟ್ಟಿಯಲ್ಲಿ ಇಟ್ಟುಕೊಂಡು, ಕಬ್ಬಿಲ, ತಳವಾರ ಇಲ್ಲವೆ ಅಂಬಿಗರ ಹೆಣ್ಣುಮಕ್ಕಳು ಮೊದಲು ಊರ ಹಿರಿಯಮಠಕ್ಕೆ, ತರುವಾಯ ಗೌಡರ ಮನೆಗೆ, ಆಮೇಲೆ ಎಲ್ಲರ ಮನೆಗಳಿಗೆ ಹೋಗುತ್ತಾರೆ. ಅಲ್ಲಿ ಬುಟ್ಟಿಯನ್ನು ಇಟ್ಟು ಜೋಕುಮಾರನ ಚರಿತ್ರೆ, ಕಾಮುಕತೆ, ಮಹತಿ ಮತ್ತು ಹರಕೆ ಮೊದಲಾದ ಸಂಗತಿಗಳನ್ನೊಳಗೊಂಡ ಹಾಡುಗಳನ್ನು ಹೇಳುತ್ತಾರೆ.

ಅಷ್ಟಮಿ ದಿನ ಹುಟ್ಯಾನ ನನ ಕೊಮರ
ಸೆಟ್ಟೀರ ನೋಡಿ ಬೆಸಗೊಂಡ
| ಜೋಕುಮಾರ
ಹುಟ್ಟಿದೇಳು ದಿವಸಕ ಮರಣವ

ಒಕ್ಕಲಗೇರ್ಯಾಗ ಹೊಕ್ಕಾನ ನನ ಕೊಮರ
ಚಕ್ಕರಗಣ್ಣ ತಿರವೂತ
| ಜೋಕುಮಾರ
ಒಕ್ಕಲಿಗರ ಹೆಣ್ಣ ನನಗೆಂದ

ಹರಗೀದ ಹೊಲದಾಗ ಹರಿದು ಚಂಡಾಡ್ಯಾನ
ಹರದೀಯ ಮಗನ ಕೊಮರಯ್ಯ
| ಚಂಡಾಡಿದಲ್ಲಿ
ಹವಳ ಮುತ್ತುಗಳು ಬೆಳೆದಾವ

ಬಲವಂದು ನಿಮ್ಮ ಬಾಗಲಕ ಕುಂತಾನ
ಬಾಗೀನಗಳ ಕೊಡಿರೆವ್ವ
| ಜೋಕುಮಾರ
ಬಾಗಲಕ ಹರಕಿ ಕೊಡತಾನ

ಹೀಗೆ ಹಾಡುಗಳನ್ನು ಮುಗಿಸಿ, ಮನೆಯೊಡತಿ ಮೊರದಲ್ಲಿ ತಂದ ಜೋಳ, ರೊಟ್ಟಿ, ಕೊಬ್ಬರಿ, ಉಪ್ಪುಗಳನ್ನು ಜೋಳಿಗೆಗೆ ಸುರುವಿಕೊಂಡು, ಒಂದು ಹಿಡಿ ಜೋಳ ಬೇವಿನ ತಪ್ಪಲು ಹಾಕಿ ಮೊರವನ್ನು ತಿರುಗಿ ಕೊಡುತ್ತಾರೆ. ಈ ಜೋಳ, ತಪ್ಪಲುಗಳನ್ನು ಹಗೆಯಲ್ಲಿ ಹಾಕಿದರೆ ನುಸಿಯಾಗುವುದಿಲ್ಲವೆಂದು ಜನರ ಭಾವನೆ. ಕೆಲವರು ಬೇವಿನ ಎಲೆಯಲ್ಲಿ ಜೋಕುಮಾರನ ಬಾಯಿಯ ಬೆಣ್ಣೆಯನ್ನು ಇಸಿದುಕೊಂಡು, ನೋವು ಬರಬಾರದೆಂದು ಕಣ್ಣಿಗೆ ಹಚ್ಚಿಕೊಳ್ಳುವುದೂ ಉಂಟು. ಸಾಮಾನ್ಯವಾಗಿ ಪತಿವಂಚಿತೆಯರು, ಬಂಜೆಯರು ಬುಟ್ಟಿಯೆತ್ತಿ ಭವಿಷ್ಯ ತಿಳಿದುಕೊಳ್ಳುತ್ತಾರೆ. (ಕೆಲವು ಕಡೆ ಒಕ್ಕಲಿತಿಯರು ಜೋಕುಮಾರನಿಗೆ ಹುಳನುಚ್ಚನು ನೀಡಿ, ಅವರ ಕೆಲಭಾಗವನ್ನು ಮರಳಿ ಪಡೆದು, ಅದನ್ನು ಹೊಲದಲ್ಲಿ ಚರಗದಂತೆ ಚೆಲ್ಲುತ್ತಾರೆ).

ಶಿವನಿಗೆ ಮರ್ತ್ಯಲೋಕದ ಸಿರಿವಂತಿಕೆಯನ್ನು ಗಣಪತಿ ಹೇಳಿದರೆ, ಬಡತನವನ್ನು ಹೇಳುವವ ಜೋಕುಮಾರನೆಂದು ಜನರ ನಂಬಿಕೆ. ಅದಕ್ಕಾಗಿ ಒಬ್ಬನಿಗೆ ಮೋದಕ ನೈವೇದ್ಯ ಹಿಡಿದರೆ, ಇನ್ನೊಬ್ಬನಿಗೆ ಉಪ್ಪು, ಅಂಬಲಿ ನೀಡುತ್ತಾರೆ. ಸಾಲದುದಕ್ಕೆ ಮರ್ತ್ಯದ ದುಃಖವನ್ನು ಶಿವನಿಗೆ ಇನ್ನೂ ಚೆನ್ನಾಗಿ ನಿವೇದಿಸಲೆಂದು ಜೋಕುಮಾರನ ಮೈಯಲ್ಲಿ ತಗಣಿ ಮೊದಲಾದವುಗಳನ್ನು ಬಿಡುತ್ತಾರೆ. ಇದರಿಂದ ಮನೆಯಲ್ಲಿಯ ತಗಣಿ, ಚಿಕ್ಕಾಡು ಮೊದಲಾದ ಕೀಟಗಳ ಕಾಟ ತಪ್ಪುವುದೆಂದೂ ಜನರ ಭಾವನೆ.

ಭಾದ್ರಪದ ಶುದ್ಧ ಚತುರ್ಥಿಗೆ ಬಂದು, ಐದು ದಿನ ಪೂಜೆಗೊಂಡು ನವಮಿಗೆ ವಿಸರ್ಜನೆಗೊಳ್ಳುವ ಗಣಪತಿ ಮತ್ತು ಅಷ್ಟಮಿಯಂದು ಹುಟ್ಟಿ ಬರುವ ಜೋಕುಮಾರ, ಒಂದು ದಿನ ಮಟ್ಟಿಗಾದರೂ ಭೆಟ್ಟಿಯಾಗುವ ಸಂಭವವಿರುತ್ತದೆ. ಇವರಲ್ಲಿ ಒಬ್ಬರ ಮುಖ ಒಬ್ಬರು ನೋಡಬಾರದೆಂದು ಜನರ ಭಾವನೆ. ಅದಕ್ಕಾಗಿ ಜೋಕುಮಾರ ಮನೆಗೆ ಬಂದರೆ ಗಣಪತಿಯ ಮುಖವನ್ನು ಅರಿವೆಯಿಮದ ಮುಚ್ಚುತ್ತಾರೆ. ಜೋಕುಮಾರನನ್ನು ನೋಡಿದರೆ ಗಣಪತಿಯ ಹೊಟ್ಟೆ ಒಡೆಯುವದೆಂದೂ ಸೊಂಡ್ಯಾ (ಗಣಪತಿ), ಗೆಂಡ್ಯಾ (ಜೋಕುಮಾರ) ಮತ್ತು ಲೊಂಡ್ಯಾ (ಅಲಾವಿ ದೇವರು) ಒಂದೇ ಸಮಯಕ್ಕೆ ಕೂಡುವುದು ಅಪಶಕುನವೆಂದೂ ಜನ ಹೇಳುತ್ತಾರೆ.

ಹೀಗೆ ಆರು ದಿನ ಮನೆ ಮನೆಗೆ ತೆಗೆದುಕೊಂಡು ಹೋಗಿ, ಏಳನೆಯ ದಿನ ರಾತ್ರಿ ಹೊಲಗೇರಿಯಲ್ಲಿಟ್ಟು ಬರುವರು. ಹೊಲೆಯರು ಜೋಕುಮಾರನನ್ನು ಪೂಜೆಮಾಡಿ, ಎತ್ತಿ ನೋಡಿ ಮಳೆ, ಬೆಳೆ, ಭವಿಷ್ಯ ಕೇಳಿ ಒನಕೆಯಿಂದ ಕುತ್ತಿಗೆಗೆ ಹೊಡೆಯುವರು. ರುಂಡ ಅಂಗಾತ ಬಿದ್ದರೆ ದೇಶಕ್ಕೆ ಸುಖ, ಬೋರಲು ಬಿದ್ದರೆ ದುಃಖವೆಂದು ಜನರ ಭಾವನೆ. ಆಮೇಲೆ ಈ ಒಡಕುಗಳನ್ನು ಹಳ್ಳಕ್ಕೆ ಒಯ್ದು ಚೆಲ್ಲುವರು. ಈ ಸಾವಿನಿಮದ ಜೋಕುಮಾರನು ನರಳುತ್ತಿರುವನೆಂದು ನಂಬಿದ ಅಗಸರು, ಮೂರು ದಿನ ಹಳ್ಳದಲ್ಲಿ ಬಟ್ಟೆ ಬಗೆಯುವುದಿಲ್ಲ. ಜನಪದದಲ್ಲಿ ಜೋಕುಮಾರನು ಮಳೆ ತರುವ ದೇವತೆಯೆಂಬ ಭಾವನೆ ಬೇರೂರಿದೆ. ಹೀಗಾಗಿ ಎಲ್ಲ ಮಳೆ ಹೋದರೂ ಜೋಕುಮಾರ ತಪ್ಪದೆ ಮಳೆ ತರುತ್ತಾನೆಂದು ಒಕ್ಕಲಿಗರ ನಂಬಿಕೆ.

– ಎಂ.ಎಂ.ಕೆ.

ಜೋಗತಿ ಕುಣಿತ ಜನಪದ ಧಾರ್ಮಿಕ ವೃತ್ತಿಗಾಯಕರಲ್ಲಿ ಎಲ್ಲಮ್ಮನ ಜೋಗತಿಯರು ಸೇರಿದ್ದಾರೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಪರಂಪರಾಗತವಾಗಿ ಈ ಜೋಗತಿ ಸಂಪ್ರದಾಯ ಬೆಳೆದು ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮ ಈ ಜೋಗತಿ ಸಂಪ್ರದಾಯದ ಮಹತ್ವದ ತಾಣ. ಸಾಮಾನ್ಯವಾಗಿ ಕೆಳವರ್ಗದ ಸಮುದಾಯದಲ್ಲಿ ಮಾತ್ರ ಜೋಗತಿ ಬಿಡುವ ಸಂಪ್ರದಾಯವಿದೆ. ಎಲ್ಲರ ಅಮ್ಮ ಎಲ್ಲಮ್ಮನಾದರೂ ಜೋಗತಿ ಕೆಳವರ್ಗದವಳು. ಹೀಗೆ ಎಲ್ಲಮ್ಮನಿಗೆ ಜೋಗತಿ ಬಿಡುವುದು ಅಪರಾಧವೆಂದಾಗಲಿ; ಅನ್ಯಾಯವೆಂದಾಗಲಿ ಭಾವಿಸದೆ, ಅದೊಂದು ಪವಿತ್ರ ಧಾರ್ಮಿಕ ಕಾರ್ಯವೆಂದು ಭಾವಿಸಲಾಗಿದೆ. ಅದು ತಮ್ಮ ಪಾಲಿನ ಕರ್ತವ್ಯವೆಂದೇ ಎಲ್ಲಮ್ಮನ ಆರಾಧಕರ ಭಾವನೆಯಾಗಿದೆ. ಕುಲಧರ್ಮ, ಕುಲಪರಂಪರೆಯನ್ನು ಪಾಲಿಸದಿದ್ದರೆ ಎಲ್ಲಮ್ಮ ಕಷ್ಟಕೋಟಲೆಗಳನ್ನು ಕೊಡುತ್ತಾಳೆಂದು ಜನ ಭಯಪಟ್ಟುಕೊಳ್ಳುತ್ತಾರೆ. ಚಿಕ್ಕಪ್ರಾಯದ ಋತುಮತಿಯಾಗದ ಮುಗ್ಧ ಕನ್ಯೆಯನ್ನು ಮಾತ್ರ ಎಲ್ಲಮ್ಮನಿಗೆ ಲಗ್ನ ಮಾಡಿಕೊಡುತ್ತಾರೆಂದೇ ಜನಪದರ ಭಾವನೆಯಾಗಿದೆ. ಎಲ್ಲಮ್ಮ ದೇವಿಯ ಕಾರ್ಯಕ್ಕೆಂದೇ ಮೀಸಲಾದ ಜೋಗತಿಯನ್ನು ಎಲ್ಲರೂ ಗೌರವಿಸುತ್ತಾರೆ. ಜೋಗತಿಯಾದ ಹೆಂಗಸು ಎಲ್ಲಮ್ಮನ ಸತಿಯಾಗುವುದರಿಂದ ಅವಳು ಇತರರಂತೆ ಶಾಸ್ತ್ರೀಯವಾಗಿ ಮದುವೆಯಾಗುವಂತಿಲ್ಲ. ಜೋಗತಿಯಲ್ಲಿ ಹೆಣ್ಣು, ಜೋಗತಿ, ಗಂಡು ಜೋಗಪ್ಪ ಎಂದು ಎರಡು ಪಂಥ.

‘ಜೋಗತಿ’ ಯರು ಸಾಮಾನ್ಯವಾಗಿ ಜಗ ಹೊತ್ತು ಇಲ್ಲವೆ ಕೊಡ ಹೊತ್ತು ಕುಣಿಯುತ್ತಾರೆ. ‘ಜೋಗತಿ ಕುಣಿತ’ವನ್ನು ‘ಕುಣಿತ’ ಎನ್ನಲಾಗುವುದಿಲ್ಲ. ಅದು ಮನರಂಜನೆಯ ಕುಣಿತವಲ್ಲ, ಎಲ್ಲಮ್ಮನನ್ನು ಆರಾಧಿಸುವ ಒಂದು ಆಚರಣೆ. ಅದನ್ನು ಅವರು ‘ಜೋಗಾಡುವುದು’ ಎನ್ನುತ್ತಾರೆ. ಎಲ್ಲಮ್ಮ ತಮ್ಮನ್ನು ಕುಣಿತದ ರೂಪದಲ್ಲಿ ಆಡಿಸುತ್ತಾಳೆ. ಅದು ಅವಳ ಲೀಲೆಯೆಂದೇ ಅವರು ಭಾವಿಸುತ್ತಾರೆ.

ಜೋಗತಿ ಕುಣಿತ/ಆಟ ಹೆಚ್ಚು ರಭಸವಾಗಿರುತ್ತದೆ. ಕುಣಿಯುವಾಗ ಅವರ ಹೆಜ್ಜೆಗಳು ಬದಲಾಗುತ್ತಿರುತ್ತವೆ. ಬಾರಿಕೆ ಚೌಡಿಕೆಯ ಶ್ರುತಿ ಮತ್ತು ಸಂಬಳದ ಗತಿ ಇವರ ಕುಣಿತಕ್ಕೆ ಹಿನ್ನೆಲೆಯಾಗಿರುತ್ತದೆ. ಜೋಗತಿಯರು ಕುಣಿಯುವಾಗಿನ ಭಕ್ತಿ ಭಾವ ಮತ್ತು ತನ್ಮಯಕೆ ಅವರು ಕಲಾವಿದರಲ್ಲ; ಎಲ್ಲಮ್ಮನ ಆರಾಧಕರೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಕುಣಿತದ ಜೊತೆಗೆ ಎಲ್ಲಮ್ಮನನ್ನು ಕುರಿತ ಸ್ತುತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

ಬಾರಿಕೆ ಚೌಡಿಕೆಯ ತಾಳಗತ್ತಿನೊಂದಿಗೆ ಹೆಜ್ಜೆ ಹಾಕುತ್ತ ಎಲ್ಲಮ್ಮನ ಹೆಸರಿನಲ್ಲಿ ಕುಣಿಯುತ್ತಾರೆ. ಕುಣಿತದ ಭಂಗಿಗಳಲ್ಲಿ ವಿಶೇಷತೆಗಳೇನಿಲ್ಲವಾದರೂ ಗಂಡು ಜೋಗಪ್ಪಗಳು ಹೆಣ್ಣಿನ ಹಾವಭಾವಗಳನ್ನು ಅನುಕರಣೆ ಮಾಡುತ್ತ, ನಿಂತಲ್ಲಿಯೇ ಹೆಜ್ಜೆ ಹಾಕುತ್ತ, ಹುಬ್ಬೇರಿಸುತ್ತ, ಸೀರೆ ಸರಿಪಡಿಸುತ್ತ ಕೈ ಬೀಸಿ ಕುಣಿಯುತ್ತಾರೆ. ಕುಣಿಯುತ್ತ ಕುಣಿಯುತ್ತ ಮೈದುಂಬುವ ಜೋಗತಿಯರು ಆವೇಶಭರಿತರಾಗಿ ಕುಣಿತವನ್ನು ಗೌಣವಾಗಿಸಿ ದೇವಿಯ ಜೊತೆಗೆ ಸಂಭಾಷಿಸುತ್ತ ತನ್ಮಯರಾಗುತ್ತಾರೆ. ಜೋಗತಿ ಕುಣಿತ ಸಾಮಾನ್ಯವಾಗಿ ಮಂಡಲಾಕಾರವಾಗಿರುತ್ತದೆ.

75

ಬಾರಿಕೆ ವಾದ್ಯದ ನಾದ ಅನುಪಮವಾದುದು. ಇದನ್ನು ಒಂದು ಬಗೆಯ ಗಂಡು ದನಿಯಲ್ಲಿ, ವಿಶಿಷ್ಟ ಗತ್ತಿನಲ್ಲಿ ನುಡಿಸುತ್ತ ಕುಣಿಯುತ್ತಾರೆ. ಈ ಚೌಡಿಕೆ ವಾದ್ಯ ಶಕ್ತಿದೇವತೆಯ ಸಂಕೇತ. ಜಗವನ್ನು ಹೊತ್ತು ಹಾಡಿ ಕುಣಿಯುವ ಜೋಗಪ್ಪ ಜೋಗತಿಯರ ಕುಣಿತ, ಬಾರಿಕೆ ಚೌಡಿಕೆಯ ನಾದ ಹಾಗೂ ಅಪೂರ್ವವಾದ ಎಲ್ಲಮ್ಮನ ಮಹಿಮೆಯ ಗೀತೆಗಳು ಆಕರ್ಷಕವಾಗಿರುತ್ತವೆ. ಎಲ್ಲಮ್ಮನ ಮಹಿಮೆಯನ್ನು ಹಾಡಿ ಕುಣಿದು ಪ್ರಸಾರ ಮಾಡುವ, ಜೋತಾಡುವ ಈ ಭಕ್ತ ಕುಣಿತ ರೋಮಾಂಚನವನ್ನುಂಟು ಮಾಡುತ್ತದೆ.

ಜೋಗಮ್ಮ-ಜೋಗಪ್ಪ ಒಂಟಿಯಾಗಿ ಅಥವಾ ಮೇಳಗಳನ್ನು ಕಟ್ಟಿಕೊಂಡು ಶ್ರುತಿ ಚೌಡಿಕೆಗಳನ್ನು ಹಿಡಿದು, ಎಲ್ಲಮ್ಮನ ಗುಣಗಾನ ಮಾಡುತ್ತಾ, ಅವಳ ಪವಾಡ ಮಹಾತ್ಮೆಗಳನ್ನು ಹಾಡಿ ಕುಣಿದು ಜನರನ್ನು ಭಕ್ತಿಪಂಥದತ್ತ ಆಕರ್ಷಿಸುತ್ತಾರೆ.

ದೇವದಾಸಿ ಸಂಪ್ರದಾಯ ಎಲ್ಲಮ್ಮ ದೇವಿಯ ಮಹಿಮೆಯನ್ನು ಪ್ರಸಾರ ಮಾಡಲೆಂದೇ ಹುಟ್ಟಿಕೊಂಡಿದೆ. ಅವಳ ಉಗ್ರರೂಪವನ್ನು ಪ್ರಚಾರಪಡಿಸಲೆಂದೇ ಹಲವು ಪವಾಡಗಳನ್ನು, ಕಥೆಗಳನ್ನು ಲೀಲಾಜಾಲವಾಗಿ ಸೃಷ್ಟಿಸಿ ಹಾಡುತ್ತಾರೆ. ಎಲ್ಲಮ್ಮನ ಭಕ್ತರಿಗೆ ಜೋಗತಿಯರ ಬಗ್ಗೆ ಅಪಾರ ಪ್ರೀತಿ ಭಕ್ತಿ ಗೌರವಗಳಿವೆ.

– ಪಿ.ಕೆ.ಕೆ.

ಟೋಟಂ ಒಂದು ಜನಸಮೂಹ ಅಥವಾ ವಂಶಕ್ಕೆ ಮೂಲವಾದುದೆಂದು ಭಾವಿಸಲಾಗುತವ ಪ್ರಾಣಿ, ಪಕ್ಷಿ ಅಥವಾ ವಸ್ತುವನ್ನು ಟೋಟಂ ಎಂದು ಹೇಳುತ್ತಾರೆ. ಇದನ್ನೇ ಕನ್ನಡದಲ್ಲಿ ಕುಲದೇವತೆ ಎಂದು ಟೋಟಮಿಸಂ ಎಂಬುದನ್ನು ಕುಲದೇವತಾ ಪದ್ಧತಿ ಎಂದು ಹೇಳುವುದುಂಟು. ಇದನ್ನೇ ಕುಲ ಸಂಕೇತವೆಂದೂ ಹೇಳಬಹುದು. ಉತ್ತರ ಅಮೆರಿಕೆಯ ಕೆಲವು ಜನಸಮೂಹಗಳಲ್ಲಿ ಬಂಧುತ್ವ ಎಂಬ ಅರ್ಥದಲ್ಲಿ ಓಟೋಟೇಮ ಎಂಬ ಪದ ಬಳಕೆಯಲ್ಲಿದೆ. ಇದರಿಂದಲೇ ಟೋಟಂ ಎಂಬ ಪದ ಬಂದಿದೆ.

ಅರಣ್ಯಜೀವನ ಸ್ಥಿತಿಯಲ್ಲಿ ಮನುಷ್ಯನು ಸಾಮೂಹಿಕವಾಗಿ ಬಾಳುತ್ತಿದ್ದನು. ಇಂಥ ಜನಸಮೂಹಗಳು ಸೇರಿ ಒಂದು ಗುಂಪಾಗಿ ಅಥವಾ ಕುಲವಾಗಿ ರೂಪುಗೊಳ್ಳುತ್ತಿತ್ತು. ಆ ಕಾಲದ ಮನುಷ್ಯನಿಗೆ ಪ್ರಕೃತಿಯನ್ನು ಆರಾಧಿಸುವುದು ಸಹಜ ಸಂಪ್ರದಾಯವಾಗಿತ್ತು. ಪ್ರಾಚೀನ ಕಾಲದ ಆ ಜನ ಪ್ರಕೃತಿಯ ಯಾವುದಾದರೊಂದು ಪ್ರಾಣಿಯನ್ನು, ಗಿಡವನ್ನು ಅಥವಾ ವಸ್ತುವನ್ನು ತಮ್ಮ ಸಮುದಾಯಕ್ಕೆ ಸಂಕೇತವಾಗಿ ಸ್ವೀಕರಿಸುತ್ತಿದ್ದರು. ಈ ಸಂಕೇತ ಆ ಜನಸಮುದಾಯಕ್ಕೆ ಮೂಲವೆಂದು ಕಾಪಾಡುವುದೆಂದು ರಕ್ತಸಂಬಂಧ ಇರುವುದೆಂದು ಭಗವತ್ ಸಮಾನರೆಂದು ನಂಬುತ್ತಿದ್ದರು. ಆ ಸಂಕೇತಗಳನ್ನು ಪವಿತ್ರವಾದುದೆಂದು ಭಾವಿಸಿ ಆರಾಧಿಸುತ್ತಿದ್ದರು. ಈ ಪದ್ಧತಿ ಇಂದಿಗೂ ಅನೇಕ ಬುಡಕಟ್ಟುಗಳಲ್ಲಿ ಕಾಣಿಸುತ್ತದೆ. ಇದರ ಪ್ರಭಾವ ಕೆಲವು ನಾಗರಿಕ ಜನಸಮುದಾಯಗಳ ಮೇಲೂ ಆಗಿರುವುದನ್ನು ಕಾಣಬಹುದು.

ಸಿಗ್ಮಂಡ್ ಫ್ರಾಯಿಡ್ ‘ಟೋಟಂ ಅಂಡ್ ಟ್ಯಾಬು’ ಎಂಬ ಪುಸ್ತಕದಲ್ಲಿ ಕುಲಸಂಕೇತಗಳ ಬಗ್ಗೆ ಮತ್ತು ಅವುಗಳ ಮೇಲಿನ ನಂಬಿಕೆಗಳ ಬಗ್ಗೆ ಬರೆದಿದ್ದಾನೆ. ೧. ಕುಲಸಂಕೇತವಾದ ಪ್ರಾಣಿಯನ್ನು ಕೊಲ್ಲಬಾರದು. ಒಂದು ವೇಳೆ ಆ ಪ್ರಾಣಿ ಸತ್ತರೆ ಅದಕ್ಕೆ ಮನುಷ್ಯರಂತೆಯೇ ಅಪರಕ್ರಿಯೆಗಳನ್ನು ಮಾಡಬೇಕು. ೨. ಕುಲಸಂಕೇತಗಳಾದ ಪ್ರಾಣಿಗಳಿಗೆ ಪಕ್ಷಿಗಳಿಗೆ ಗಿಡಮರಗಳಿಗೆ ಮತ್ತು ವಸ್ತುಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡಬಾರದು. ೩. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಕುಲಸಂಕೇತವಾದ ಪ್ರಾಣಿಯನ್ನು ಬಲಿಕೊಡುತ್ತಾರೆ. ೪. ಕುಲಸಂಕೇತವಾದ ಪ್ರಾಣಿಯ ಮಾಂಸವನ್ನು ಅಥವಾ ಅದರ ಅವಯವಗಳನ್ನು ತಿನ್ನಬಾರದೆಂಬ ನಿಯಮವಿದೆ. ೫. ಮತೀಯ ಕಾರ್ಯಕ್ರಮಗಳಲ್ಲಿ ಕುಲಸಂಕೇತ ಪ್ರಾಣಿಗಳ ಚರ್ಮವನ್ನು ಧರಿಸುತ್ತಾರೆ. ೬. ಕುಲಸಂಕೇತದ ಚಿತ್ರವನ್ನು ಆಯುಧಗಳ ಮೇಲೆ, ಇತರ ವಸ್ತುಗಳ ಮೇಲೆ ಚಿತ್ರಿಸುತ್ತಾರೆ. ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ೭. ಕುಲಸಂಕೇತ ಅಪಾಯಕಾರಿ ಪ್ರಾಣಿಯಾಗಿದ್ದರೆ ಅದರ ಹೆಸರನ್ನು ಇಟ್ಟುಕೊಂಡಾಗ ಆ ಪ್ರಾಣಿ ನಮಗೆ ಹಾನಿ ಉಂಟುಮಾಡುವುದಿಲ್ಲ ಎಂದು ನಂಬುತ್ತಾರೆ. ೮. ಜನಸಮುದಾಯಕ್ಕೂ ಕುಲಸಂಕೇತಗಳಿಗೂ ಸಂಬಂಧವಿರುವುದಕ್ಕೆ ಕಾರಣ ಇಬ್ಬರ ಪೂರ್ವಜರು ಒಂದೇ ಆಗಿರುವುದೆಂದು ತಿಳಿಯುತ್ತಾರೆ.

ಉತ್ತರ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯ ಮುಂತಾದ ಕಡೆ ತಮ್ಮ ಮೂಲ ಪುರುಷರು ಪ್ರಾಣಿ ಪಕ್ಷಿಗಳಿಂದ ಹುಟ್ಟಿದರೆಂದು ನಂಬುತ್ತಾರೆ. ನಮ್ಮಲ್ಲೂ ಈ ರೀತಿಯ ನಂಬಿಕೆಗಳಿವೆ. ಭಾರತೀಯ ಪುರಾಣಗಳಲ್ಲಿ ಜನಪದ ಸಾಹಿತ್ಯದಲ್ಲಿ, ಆಚಾರಗಳಲ್ಲಿ ಇಂಥ ಕಥೆಗಳು, ನಂಬಿಕೆಗಳು ಹೇರಳವಾಗಿ ಕಂಡುಬರುತ್ತವೆ. ವಸಿಷ್ಠ ಮತ್ತು ಅಗಸ್ತ್ಯ ಮಡಕೆಯಿಂದ ಹುಟ್ಟಿದವರು. ಜಂಬುಕ ಮಹರ್ಷಿ ನರಿಗೆ ಹುಟ್ಟಿದವನು. ವಾಲ್ಮೀಕಿ ಹುತ್ತದಲ್ಲಿ ಹುಟ್ಟಿದರೆ, ಪಾರ್ವತಿ ಪರ್ವತ ಪುತ್ರಿ. ಪೌರಾಣಿಕ ಕತೆಗಳಲ್ಲಿ ಮತ್ತು ಐತಿಹ್ಯಗಳಲ್ಲಿ ಕಾಣುವ ನಾಗರು ಹಾವುಗಳಲ್ಲವೆಂದು ನಾಗಕುಲಕ್ಕೆ ಸೇರಿದ ಮನುಷ್ಯರೆಂದು, ಅವರ ಕುಲಸಂಕೇತ ಹಾವೆಂದು, ಅವರು ಸರ್ಪವನ್ನು ಆರಾಧಿಸುವ ಜನಸಮುದಾಯವೆಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಕುಲಸಂಕೇತಗಳಲ್ಲಿ ವೈಯಕ್ತಿಕ ಕುಲಸಂಕೇತ, ಲೈಂಗಿಕ ಕುಲಸಂಕೇತ, ಸಾಮೂಹಿಕ ಗಣ ಸಂಕೇತ ಎಂಬ ಮೂರು ತರಹದ ಗಣಸಂಕೇತಗಳಿವೆ. ತೆಲುಗರ ಅಡ್ಡ ಹೆಸರುಗಳಲ್ಲಿ ಅಥವಾ ವಂಶದ ಹೆಸರುಗಳಲ್ಲಿ, ಗೋತ್ರದ ಹೆಸರುಗಳಲ್ಲಿ, ಆಚಾರ ವ್ಯವಹಾರಗಳಲ್ಲಿ ಅನೇಕ ಕುಲಸಂಕೇತಗಳು ಕಾಣುತ್ತವೆ.

ಕುಲಸಂಕೇತ ಪದ್ಧತಿ ವೇದಕಾಲದಿಂದಲೂ ಇತ್ತೆಂದು ಊಹಿಸಬಹುದು. ಕುಲಸಂಕೇತಗಳು ಅಗ್ರ ವರ್ಣಗಳಲ್ಲಿ ಗೋತ್ರಗಳಾಗಿರುವುದನ್ನು ನೋಡಬಹುದು. ಆಶ್ವಲಾಯನ ಸೂತ್ರಗಳಲ್ಲಿ ವತ್ಸ (ಕರು) ರಿಕ್ಕ (ಕರಡಿ) ಭರದ್ವಾಜ (ಒಂದು ಹಕ್ಕಿ), ಮುದ್ಗಲ (ಒಂದು ಮೀನು), ಅಜ (ಮೇಕೆ), ವೇಣು (ಬಿದಿರು), ಗೌತಮ (ಹಸು), ಕುಶಿಕ (ಗೂವೆ), ಮಂಡೂಕ (ಕಪ್ಪೆ) ಶಾಂಡಿಲ್ಯ (ಒಂದು ಹಕ್ಕಿ) ಮುಂತಾದ ಗೋತ್ರಗಳನ್ನು ಕುರಿತು ಹೇಳಲಾಗಿದೆ. ತೆಲುಗರಲ್ಲಿ ಇಂದಿಗೂ ವಿವಿಧ ಜಾತಿಗಳಿಗೆ ಹುಲಿ, ಮೊಸಳೆ, ಕೋಳಿ, ಆಮೆ, ನಂದಿ ಎತ್ತು, ಆನೆ, ಹಸು ಚೇಳು ಮುಂತಾದ ಗೋತ್ರಗಳಿವೆ. ಪ್ರಾಣಿಗಳಲ್ಲದೆ ಗಿಡಮರಗಳು ಕೂಡ ಕುಲಸಂಕೇತಗಳಾಗಿವೆ. ಹುಣಿಸೆ, ಅರಳಿ, ಆಲ, ದಾಳಿಂಬೆ, ಬೇವು, ಕುಂಬಳ, ಬಿದಿರು, ನೇರಳೆ, ತಾಳೆ, ಈಚಲು ಮುಂತಾದವು ತೆಲುಗರ ಸಂಕೇತಗಳಾಗಿವೆ. ಕಾಲುವೆ, ಕೆರೆ, ಬಾವಿ, ಬೆಟ್ಟ, ಮಡು, ಕಣಿವೆ ಮುಂತಾದವು ಪ್ರಕೃತಿ ಸಂಬಂಧವಾದವು. ಶೂಲ, ಬಿಲ್ಲು, ಕತ್ತಿ, ಕೋಲು, ಗಂಟೆ ಮುಂತಾದವು ವಸ್ತು ಸಂಬಂಧವಾದವು.

ವಂಶದ ಹೆಸರುಗಳಲ್ಲಿ, ಗೋತ್ರಗಳಲ್ಲಿ ಮಾತ್ರವಲ್ಲದೆ ಆಚಾರ ವ್ಯವಹಾರಗಳಲ್ಲಿ ಕೂಡ ಕುಲಸಂಕೇತದ ಪ್ರಭಾವ ಕಾಣಿಸುತ್ತದೆ. ಮದುವೆಯ ಸಂದರ್ಭದಲ್ಲಿ ವೆಲಮ ಜಾತಿಯವರು ಆನೆಯನ್ನು, ಬಲಿಜ ಜಾತಿಯವರು ಕತ್ತೆಯನ್ನು ಚಿತ್ರಿಸುತ್ತಾರೆ. ವಿವಿಧ ಕುಲಸಂಕೇತಗಳನ್ನು ಹೊಂದಿರುವ ಜನರು ಆ ಸಂಕೇತಗಳ ಬಗ್ಗೆ ಭಯ ಭಕ್ತಿಗಳಿಮದ ವ್ಯವಹರಿಸುತ್ತಾರೆ. ಕೋಳಿ ಗೋತ್ರಜರು ಕೋಳಿಯನ್ನು ಕೊಲ್ಲುವುದಿಲ್ಲ, ತಿನ್ನುವುದಿಲ್ಲ. ನಾಗೋಲ್ಲಾ (ನಾಗದವರು) ಗೋತ್ರಜರು ಹಾವನ್ನು ಸಾಯಿಸುವುದಿಲ್ಲ. ಒಂದು ವೇಳೆ ಸಾಯಿಸಿದರೆ ದಹನ ಕಾರ್ಯ ಮಾಡುತ್ತಾರೆ. ಹುಲಿ ಗೋತ್ರಜರು, ಮೊಸಲೆ ಗೋತ್ರಜರು ತಮ್ಮ ಗೋತ್ರದ ಪ್ರಾಣಿ ಸತ್ತರೆ, ಅಥವಾ ಸತ್ತ ಸುದ್ದಿಯನ್ನು ಕೇಳಿದರೆ ದಿನ ವಾರಗಳನ್ನು ಮಾಡುತ್ತಾರೆ. ಗಿಡಮರಗಳ ಗೋತ್ರ ಇರುವವರು ಅವುಗಳಿಗೆ ಹಾನಿ ಉಂಟುಮಾಡುವುದಿಲ್ಲ. ಅವುಗಳ ಹಣ್ಣುಗಳನ್ನು ತಿನ್ನುವುದಿಲ್ಲ. ದಾಳಿಂಬೆ ಗೋತ್ರಜರು ದಾಳಿಂಬೆ ಗಿಡವನ್ನು ಮುಟ್ಟಬಾರದು, ಹಣ್ಣನ್ನು ತಿನ್ನಬಾರದು ಬೇವಿನ ಗೋತ್ರಜರು ಬೇವಿನ ಮರವನ್ನು, ಎಲೆಗಳನ್ನು ಮುಟ್ಟಬಾರದು. ಹುಣಿಸೆಗೋತ್ರದವರು ಹುಣಿಸೆ ಮರದ ಕೆಳಗೆ ನಿಲ್ಲಬಾರದು. ತಾಳೆಗೋತ್ರದವರು ತಾಳೆ ಹೂವನ್ನು ಧರಿಸಬಾರದು. ಹುತ್ತದವರು ಹುತ್ತ ಅಗೆಯಬಾರದು ಹಲಸಿನ ಗೋತ್ರದವರು ಹಲಸನ್ನು ತಿನ್ನಬಾರದು, ಹಲಸಿನ ಮರಕ್ಕೆ ಹಾನಿ ಮಾಡಬಾರದು. ಕುಲಸಂಕೇತ ಪದ್ಧತಿ ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು, ಪ್ರಕೃತಿಯ ಮೇಲೆ ಮಾನವನಿಗೆ ಇರುವ ಪೂಜ್ಯ ಭಾವವನ್ನು ತಿಳಿಸುತ್ತದೆ.

– ಆರ್. ಪಿ. ಅನುವಾದ ಎ.ಎಂ.ಡಿ.