ಜನಪದ ಕುಣಿತಗಳು ಜನಪದ ಕುಣಿತ ಜನಕಪದ ಕಲೆಗಳ ಮೂಲ. ಮನುಷ್ಯ ಆರಂಭದಲ್ಲಿ ಗುಹೆಗಳಲ್ಲಿ, ಕಾಡು ಮೇಡುಗಳಲ್ಲಿ ಪ್ರಾಣಿಗಳಂತೆ ವಾಸಿಸುತ್ತಿದ್ದ. ಆಗ ಪ್ರಕೃತಿಯ ನಾನಾ ಘಟನೆಗಳಿಗೆ ಅವನು ಪ್ರತಿಕ್ರಿಯಿಸುತ್ತಿದ್ದ. ಈ ಪ್ರತಿಕ್ರಿಯೆಗಳೇ ಕುಣಿತದ ರೂಪವನ್ನು ತಳೆದವು. ಭಯಂಕರವಾದ ಮಿಂಚು ಸಿಡಿಲು ಗುಡುಗುಗಳ ಆರ್ಭಟ, ಭಯಂಕರ ಕಾಡುಪ್ರಾಣಿ ಎದುರಾದಾಗ ಮನುಷ್ಯನಲ್ಲಿ ಉಂಟಾಗುತ್ತಿದ್ದ ಭಯದಂತಹ ಭಾವನೆಗಳು, ಹಾಗೆಯೇ ಹೂ ಅರಳಿದಾಗ, ಗಿಡಮರಗಳು ಚಿಗುರಿದಾಗ, ಝರಿ ಹೊಳೆಗಳು ಲಲಿತವಾಗಿ ಹರಿದಾಗ, ಹಕ್ಕಿ ಪಕ್ಷಿಗಳು ಸಂತೋಷದಿಂದ ಹಾಡಿದಾಗ ಉಂಟಾಗುವ ಪ್ರತಿಕ್ರಿಯೆಗಳೆಲ್ಲ ಸಂತೋಷವನ್ನು ವ್ಯಕ್ತಪಡಿಸುವ ಕುಣಿತಗಳಾದವು. ಇದಕ್ಕೆ ಕಾರಣವೂ ಇದೆ. ಚರಿತ್ರೆಯ ಪೂರ್ವದಲ್ಲಿ ಮಾನವನಿಗೆ ಭಾಷೆಯ ಸಂಪರ್ಕವಿರಲಿಲ್ಲ. ಆಗ ತನ್ನೆಲ್ಲ ಅನಿಸಿಕೆಗಳನ್ನು ಕೇವಲ ಆಂಗಿಕ ಅಭಿನಯದ ಮೂಲಕ ಅಭಿವ್ಯಕ್ತಿಸುತ್ತಿದ್ದ. ಇದಕ್ಕೆ ಮಹೆಂಜೋದಾರೋ ಸಂಸ್ಕೃತಿಯಲ್ಲಿ, ಸಿಗುವ ಶಿಲ್ಪಗಳೇ ಉದಾಹರಣೆ.

ಮೊದಮೊದಲಿಗೆ ಅನುಕರಣೆಯಿಂದ ಹುಟ್ಟಿಕೊಂಡ ಕುಣಿತಗಳು ಕ್ರಮೇಣ ಜನಪದರ ಜೀವನದ ಸಾಮಾಜಿಕ, ಧಾರ್ಮಿಕ ಆಚರಣೆಗಳು ಸೇರಿಕೊಂಡವು. ಇದಕ್ಕೆ ಕಾರಣ ಮನುಷ್ಯನಲ್ಲಿ ಉಂಟಾದ ಭಯ. ಮನುಷ್ಯ ಯಾವುದರಿಂದ ತನ್ನ ಅಸ್ತಿತ್ವಕ್ಕೆ ತೊಂದರೆ ಎಂದು ಭಾವಿಸಿದ್ದನೋ ಅಂಥಹ ವಸ್ತುಗಳೆಲ್ಲ ಆರಾಧನೆಯ ಮೂರ್ತರೂಪವನ್ನು ಪಡೆದವು. ಉದಾಹರಣೆಗೆ ಹುಲಿ ಮನುಷ್ಯನನ್ನು ಹೆದರಿಸುವ ಪ್ರಾಣಿ, ಅದನ್ನು ಮನುಷ್ಯ ‘ಹುಲಿರಾಯ’ ಎಂದು ಆರಾಧಿಸಿದ. ಹಾವನ್ನು ‘ನಾಗರಾಜನೆಂದ’ ಇವೆರಡರ ಸಂಕೇತವಾಗಿ ‘ಹುಲಿವೇಷ’, ‘ನಾಗನೃತ್ಯ’ ಪ್ರಾರಂಭವಾದುವು. ಹೀಗೆ ಪ್ರಕೃತಿಯ ಆರಾಧನೆಯ, ದುಷ್ಟಶಕ್ತಿಗಳು ವಶೀಕರಣ ಮುಂತಾದ ಸಂದರ್ಭಗಳಲ್ಲಿ ಧಾರ್ಮಿಕ ಕುಣಿತಗಳು ಹುಟ್ಟಿಕೊಂಡವು. ಕ್ರಮೇಣ ಭಯ ಕಡಿಮೆಯಾಗಿ, ಮನರಂಜನೆಯ ಹಿನ್ನೆಲೆಯಲ್ಲಿ ಲೌಕಿಕ ಕುಣಿತಗಳು ಹುಟ್ಟಿಕೊಂಡವು.

72

ಕುಣಿತಗಳನ್ನು ‘ಧಾರ್ಮಿಕ ಕುಣಿತಗಳು’, ‘ಮನರಂಜಕ ಕುಣಿತಗಳು’ ಎಂದು ವಿಭಾಗಿಸಿಕೊಳ್ಳಬಹುದು. ಇವುಗಳ ಮೂಲ ಹಾಗೂ ಪ್ರೇರಕ ಶಕ್ತಿ – ನಂಬಿಕೆ, ಅನುಕರಣ ಹಾಗೂ ಮನಸ್ಸಿನ ಭಾವಾಭಿವ್ಯಕ್ತಿ. ನಂಬಿಕೆಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ಜನಪದ ಕುಣಿತಗಳು ಹೆಚ್ಚಾಗಿ ಧಾರ್ಮಿಕ ಕಲೆಗಳ ಗುಂಪಿಗೆ ಸೇರಿದವು. ಏಕೆಂದರೆ ಧರ್ಮ ಮತ್ತು ನಂಬಿಕೆಗಳ ಸಂಬಂಧ ಜಾನಪದದ ಹಿನ್ನೆಲೆಯಲ್ಲಿ ನಿಕಟವಾದದ್ದು. ಪ್ರಕೃತಿಯ ನಡುವೆಯೇ ಹುಟ್ಟಿ ಬೆಳೆದ ಮಾನವನಲ್ಲಿ ಬೆಳೆದು ಬಂದ ಭಾವನಾರೂಪದ ನಂಬಿಕೆಗಳು ಕ್ರಮೇಣ ಬಲಗೊಳ್ಳುತ್ತಾ ಹತ್ತು ಹಲವಾರು ಆಚರಣೆಗಳಿಗೆ ಅವಕಾಶಕಲ್ಪಿಸಿದವು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಂಸಾಳೆ ಕುಣಿತ, ಪೂಜಾಕುಣಿತ ಇತ್ಯಾದಿಗಳನ್ನು ಇಲ್ಲಿ ಉದಾಹರಿಸಬಹುದು. ಧಾರ್ಮಿಕ ಎಂಬ ಮಾತು ಜನಪದರು ಆರಾಧಿಸುವ ದೈವದ ಹಿನ್ನೆಲೆಯಲ್ಲಿ ಆರೋಪಿಸಲಾಗಿದೆ. ಸಾಮಾನ್ಯವಾಗಿ ಆಯಾಯ ಜನಸಮುದಾಯದ ಜಾತಿ, ವೃತ್ತಿಯ ಆಚರಣೆಗಳ ಸಂದರ್ಭದಲ್ಲಿ ಮಾತ್ರ ಧಾರ್ಮಿಕ ಕುಣಿತಗಳು ಪ್ರದರ್ಶನಗೊಳ್ಳುತ್ತವೆ. ಇವುಗಳನ್ನು ಸ್ಥೂಲವಾಗಿ ಶೈವ ಮೂಲದ ಕುಣಿತಗಳು, ವೈಷ್ಣವ ಮೂಲದ ಕುಣಿತಗಳು ಹಾಗೂ ಶಕ್ತಿ ಮೂಲ ಕುಣಿತಗಳು ಎಂದು ವಿಂಗಡಿಸಿಕೊಳ್ಳಬಹುದು. ವೀರಗಾಸೆ, ಕಂಸಾಳೆ, ನಂದಿಕೋಲು ಕುಣಿತ ಮುಂತಾದವು ಶೈವ ಪರಂಪರೆಯ ಸೂಚಕಗಳಾದರೆ ಪಟಾಕುಣಿತ, ಭಾಗವಂತಿಕೆಮೇಳ ಮುಂತಾದವು ವೈಷ್ಣವ ಮೂಲ ಕುಣಿತಗಳು. ಉಳಿದಂತೆ ಪೂಜಾಕುಣಿತ, ಕರಗದ ಕುಣಿತ, ಮಾರಿ ಕುಣಿತ, ಸೋಮನ ಕುಣಿತಗಳು ಶಕ್ತಿದೇವತಾ ಆರಾಧನೆಯ ಫಲ. ಇದನ್ನೆಲ್ಲಾ ಗಮನಿಸಿದರೆ ಜನಪದರ ಬದುಕಿನಲ್ಲಿ ದೈವ ಎಷ್ಟರಮಟ್ಟಿಗೆ ಪ್ರಭಾವ ಬೀರಿತ್ತು. ಅವರ ಬದುಕನ್ನು ಅದು ಹೇಗೆ ನಿಗ್ರಹಿಸುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಕುಣಿತದಷ್ಟೇ ವಿಶೇಷವಾದದ್ದು ಸಾಹಿತ್ಯ. ಅಪ್ಪಟ ದೇಸೀ ಮಟ್ಟಿನ ದೈವಪಾರಮ್ಯವನ್ನು ಅಭಿವ್ಯಕ್ತಿಸುವಂಥದ್ದು. ಇಲ್ಲಿ ಶುದ್ಧ ಪಠ್ಯವೇ ಆಗಬೇಕಿಂದಿಲ್ಲ. ಉಘೇ ಉಘೇ ಎಂಬ ಉದ್ಗಾರಗಳೇ ಸಾಹಿತ್ಯದ ಮೌನವನ್ನು ತುಂಬಬಲ್ಲವು. ಈ ದೈವಪರ ಕುಣಿತಕ್ಕೆ ಸಂಬಂಧಿಸಿದ ಹಾಡುಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಳ್ಳುತ್ತಾ ಜನಮನದಲ್ಲಿ ಚಿರಪರಿಚಿತವಾಗಿ ಉಳಿದಿವೆ.

ಲೌಕಿಕ ಅಥವಾ ಮನರಂಜನೆಯ ಕುಣಿತಗಳು ಹುಟ್ಟಿಕೊಂಡದ್ದು ಮನರಂಜನೆಗಾಗಿಯೇ. ಇದಕ್ಕೆ ಧರ್ಮದ ದೈವದ ಚೌಕಟ್ಟಿಲ್ಲ. ಅದು ಋತು ಸಂಬಂಧಿಯೂ ಅಲ್ಲ. ಯಾವಾಗಬೇಕಾದರೂ ಆಡುವಂಥವು. ಇಲ್ಲಿ ನಿರ್ಬಂಧನೆಗಳೂ ಕಡಿಮೆಯೇ. ಆದರೆ ಕಲಿಕೆಗೆ ಸಂಬಂಧಿಸಿದಂತೆ ಸಾಮಾನ್ಯ ನಿಯಮಗಳು ಇದ್ದೇ ಇರುತ್ತವೆ. .ಸಾಮಾನ್ಯವಾಗಿ ಈ ಕುಣಿತಗಳು ರೈತಾಪಿ ಜನರಲ್ಲೇ ಹೆಚ್ಚು. ಒಕ್ಕಲಿಗನ ಕೆಲಸ ನಿರಂತರವಾದುದಲ್ಲ. ಋತುಮಾನಕ್ಕನುಸಾರವಾಗಿ ಕೆಲಸದ ಜೊತೆಗೇ ಬಿಡುವೂ ಇರುತ್ತದೆ. ಅಂಥ ವಿರಾಮದ ವೇಳೆಯಲ್ಲಿ ಈ ಕುಣಿತಗಳು ಮನಸ್ಸಿಗೆ ಮುದನೀಡುತ್ತವೆ. ಬಂಧು ಬಳಗವನ್ನು ಕೂಡಿಕೊಂಡಂತೆ ಇಡೀ ಗ್ರಾಮ ಇದರಲ್ಲಿ ಪಾಲ್ಗೊಳ್ಳುತ್ತದೆ. ಅವರೇ ಕಲಿತು, ಅವರೇ ಕುಣಿಯುವ ಕುಣಿತಗಳು, ಉದಾಹರಣೆಗೆ ಮರಗಾಲು ಕುಣಿತ, ಕೀಲುಕುದುರೆ, ಗಾರುಡಿ ಗೊಂಬೆ ಇತ್ಯಾದಿ. ಧಾರ್ಮಿಕ ಕುಣಿತಗಳಿಗೆ ಹೋಲಿಸಿದರೆ ಲೌಕಿಕ ಕುಣಿತಗಳ ಸಂಖ್ಯೆ ತೀರಾ ಕಡಿಮೆ. ಇದಕ್ಕೆ ಸಾಮಾಜಿಕವಾದ ಕಾರಣಗಳಿವೆ. ಜನಪದರ ಜೀವನದ ಅನೇಕ ಘಟನೆಗಳ ಹಿನ್ನೆಲೆಯಲ್ಲಿ ಅತಿಮಾನುಷ ಕಲ್ಪನೆಗಳನ್ನು ಕಾಣಬಹುದು. ದೈವ ನಿಯಮದಂತೆ ಎಲ್ಲವೂ ನಡೆಯುತ್ತದೆ ಎಂಬುದು ಜನಪದರ ನಂಬಿಕೆ. ಹೀಗಾಗಿ ಈ ಹಿನ್ನೆಲೆಯ ಕುಣಿತಗಳ ಅಭಿವ್ಯಕ್ತಿಯೇ ಹೆಚ್ಚು. ಆದರೂ ಮನರಂಜಕ ಕುಣಿತಗಳಲ್ಲಿ ಕೂಡ ಜನಪದ ಆಶಯಗಳಿರುತ್ತವೆ. ಉದಾಹರಣೆಗೆ ಜನಪದ ಕಥೆಗಳಲ್ಲಿ ರಾಜಕುಮಾರರು ಸಾಹಸವನ್ನು ಕೈಗೊಳ್ಳಲು ದೇಶಾಂತರ ಹೊರಡುವಾಗ ಕೀಲುಕುದುರೆ ಬಳಸುವುದು. ಕೀಲು ಕುದುರೆ ಕುಣಿತಕ್ಕೆ ಕಥೆಯ ನಾಯಕಿ ಮದುವೆಯಾಗುವವರು ನೆಲದ ಮೇಲೆ ನಡೆದು ಬರುವಂತಿಲ್ಲ ಎಂದು ಸವಾಲು ಹಾಕಿದಾಗ ಅವನು ಮರಗಾಲು ಕಟ್ಟಿಕೊಂಡು ಬಂದ ಎಂಬುದು ಮರಗಾಲು ಕುಣಿತಕ್ಕೆ ಪ್ರೇರಣೆಯಾಗಿರಬಹುದು.

ಜನಪದ ಕುಣಿತಗಳು ಮೊದಲ ನೋಟಕ್ಕೆ ಒರಟು, ಗಡಸುತನದಿಂದ ಕೂಡಿದವು. ಹೆಜ್ಜೆಯ ಗತ್ತಾಗಲಿ, ಕುಣಿತದ ಏರಿಳಿತವಾಗಲಿ ಅತ್ಯಂತ ತ್ರಾಸದಾಯಕವಾದವು. ಡೊಳ್ಳು ಕುಣಿತದಂತಹ ಕುಣಿತದಲ್ಲಿ ಬಳಸುವ ವಾದ್ಯವನ್ನೂ ಕೊರಳಿಗೆ ಕಟ್ಟಿಕೊಂಡು ದೀರ್ಘಕಾಲ ಕುಣಿಯುವುದಕ್ಕೆ ದೈಹಿಕವಾಗಿ ಬಲಿಷ್ಠರಾಗಿರಬೇಕು. ಹೀಗಾಗಿ ನಂದಿಕುಣಿತ, ಪಟಾಕುಣಿತ, ರಂಗದ ಕುಣಿತ ಮುಂತಾದವು ಗಂಡಸರಿಗೇ ಮೀಸಲು, ಆದಿವಾಸಿ ಕುಣಿತಗಳಲ್ಲಿ ಸ್ತ್ರೀ ಪುರುಷರು ಒಟ್ಟಾಗಿ ಭಾಗವಹಿಸುತ್ತಿದ್ದರು ಎಂಬುದು ನಿಜವಾದರೂ ನಂತರ ಹೆಂಗಸರು ಕುಣಿತಗಳಲ್ಲಿ ಅದರಲ್ಲೂ ಬಿರುಸಿನ ಕುಣಿತಗಳಲ್ಲಿನ ಪಾತ್ರ ಕಡಿಮೆಯೇ. ಬಹುಶಃ ಇದಕ್ಕೆ ಸ್ತ್ರೀಯ ದೇಹ ರಚನೆ, ನೈಸರ್ಗಿಕವಾದ ಹೆರಿಗೆ ಋತು ಸ್ರಾವದಂಥ ಸ್ಥಿತ್ಯಂತರ ಅಂಶಗಳು ಕಾರಣವಿರಬಹುದು. ಹಾಗೆಯೇ ಸಂಸ್ಕೃತಿಯ ವಿಕಾಸದಲ್ಲಿ ಮಹಿಳೆಯ ಸ್ಥಾನಮಾನ, ಸಾಮಾಜಿಕ ವ್ಯವಸ್ಥೆಗಳು ಇದಕ್ಕೆ ಕಾರಣ. ಕರಗದ ಕುಣಿತ, ಕೋಲಾಟ, ಒನಕೆ ಕುಣಿತ, ಲಂಬಾಣಿ ಕುಣಿತಗಳಲ್ಲಿ ಹೆಂಗಸರು ಭಾಗವಹಿಸುತ್ತಾರೆ.

ಜನಪದರ ಜೀವನದ ಒಂದು ಅವಿಭಾಜ್ಯ ಅಂಗವಾಗಿರುವ ಕುಣಿತಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಧಾರ್ಮಿಕ ಉತ್ಸವಗಳಲ್ಲಿ, ಹಬ್ಬ – ಹರಿದಿನಗಳಲ್ಲಿ, ಆಚರಣೆಗಳಲ್ಲಿ ಇದೊಂದು ಪ್ರಮುಖವಾದ ಆಕರ್ಷಣೆಯೂ ಹೌದು. ಕರ್ನಾಟಕವೊಂದರಲ್ಲೇ ನೂರಾರು ಪ್ರಾದೇಶಿಕ ಕುಣಿತಗಳಿವೆ. ಹಾಗೆಯೇ ಭಾರತದಾದ್ಯಂತ ಕೂಡ ಪ್ರಾದೇಶಿಕವಾಗಿ ವಿಭಿನ್ನ ಕುಣಿತಗಳಿವೆ. ಉತ್ತರದ ಮಣಿಪುರಿ ನೃತ್ಯ, ತಮಿಳುನಾಡಸಿನ ಕುಮ್ಮಿ, ಆಂಧ್ರ ಪ್ರದೇಶದ ಸಿದ್ಧಿಗಳ ಕುಣಿತಗಳು ಪಂಜಾಬಿನ ಭಾಂಗ್ರಾ, ಉತ್ತರ ಪ್ರದೇಶದ ರಾಸಲೀಲ, ಕರ್ನಾಟಕದ ಭೂತದ ಕುಣಿತ, ದುಡಿ ಕುಣಿತ, ಹೆಜ್ಜೆ ಕುಣಿತ ಮುಂತಾದವು ಆಯಾ ಪ್ರದೇಶದವರ ಬತ್ತದ ಜೀವನೋತ್ಸಾಹಕ್ಕೆ ಸಂಕೇತವಾಗಿದೆ.

ಜನಪದ ಕುಣಿತಗಳಲ್ಲಿ ವ್ಯಕ್ತಿಗತ ಅಭಿವ್ಯಕ್ತಿಗಿಂತ ಸಾಮೂಹಿಕ ಅಭಿವ್ಯಕ್ತಿಯೇ ಪ್ರಧಾನ. ಈ ಸಾಮೂಹಿಕ ಕುಣಿತಕ್ಕೆ ಕಲಾವಿದರ ಹೊಂದಾಣಿಕೆ ಮನೋಭಾವ ಅತ್ಯಗತ್ಯ. ಸರಳವಾದ ತಾಳ ಮೇಳಗಳ ಜೊತೆಗೂಡಿ ಕಲಾವಿದ ತನ್ನನ್ನು ತಾನೇ ಮರೆತು ಕುಣಿಯುತ್ತಾನೆ. ಅವನ ಮೈದುಂಬಿದ ಭಾವಾವೇಶ ಪ್ರೇಕ್ಷಕರನ್ನು ಸೆರೆ ಹಿಡಿದು ನಿಲ್ಲಿಸುತ್ತದೆ. ಜನಪದ ಕುಣಿತ – ಗೀತ – ವಾದ್ಯಗಳ ಸಂಗಮವಾದ ಸಮ್ಮಿಶ್ರ ಕಲೆ. ಯಾವುದೇ ಕುಣಿತ ಇವುಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಇವು ಒಂದಕ್ಕೊಂದು ಪೂರಕ ಪ್ರೇರಕ ಹಾಗೂ ಎಲ್ಲವೂ ಆಗಿದೆ. ಕುಣಿತಕ್ಕೆ ಗೀತವೂ ಸೇರಿ ಅದು ಮತ್ತಷ್ಟು ಆಕರ್ಷಕವಾಗುತ್ತದೆ. ಇಲ್ಲಿ ಶ್ರವ್ಯ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿಯಾದಾರೂ ಪ್ರತಿಯೊಂದು ಕುಣಿತಕ್ಕೂ ವಿಶಿಷ್ಟವಾದ ಹಾಡುಗಾರಿಕೆ ಇದೆ. ತನಗೆ ದೊರೆತಿರುವ ಅಪೂರ್ವ ಸಂಪತ್ತಾದ ಭಾಷೆಯನ್ನು ಕುಣಿತದಲ್ಲಿ ಜನಪದರು ವಿಶಿಷ್ಟವಾಗಿ ಬಳಸಿಕೊಂಡಿದ್ದಾರೆ. ಕುಣಿತದ ಸಂಜ್ಞೆ ಸಂಕೇತಗಳು ಕ್ರಮೇಣ ಪದಗಳ ರೂಪವನ್ನು ಪಡೆದು ಬೆಳೆದದ್ದು ಒಂದು ವಿಸ್ಮಯವೇ. ಕ್ರಮೇಣ ಇವು ಸಾಂಪ್ರದಾಯಿಕ ರೂಪವನ್ನು ಪಡೆದುಕೊಂಡವು. ವೇಷಭೂಷಣಗಳಲ್ಲೂ ಇದೇ ಮಾತನ್ನು ಹೇಳಬಹುದು. ಮೂಲದಲ್ಲಿ ಆದಿಮಾನವ ಯಾವ ಉಡುಪುಗಳನ್ನು ಧರಿಸುತ್ತಿದ್ದನೋ ಅದೇ ಮಾದರಿಯ ಉಡುಪುಗಳನ್ನು ಕುಣಿತಗಳಲ್ಲಿ ಕಾಣಬಹುದಾದರೂ ಸಂಸ್ಕೃತಿ ಬೆಳೆದಂತೆ ಇದರಲ್ಲಿ ಸಾಕಷ್ಟು ಮಾರ್ಪಾಟುಗಳಾಗಿವೆ. ಆದರೂ ಜನಪದರ ಶ್ರೀಮಂತ ಕಲ್ಪನೆ ಬೆರಗುಗೊಳಿಸುವಂಥದ್ದು. ಇಲ್ಲಿ ನಮ್ಮ ದೃಷ್ಟಿಗೆ ನಿಲುಕದ, ಕಲ್ಪನೆಗೆ ಮೀರದ ಅದ್ಭುತವಾದ ಕಲ್ಪನಾಶಕ್ತಿ ಇದೆ. ಕೇವಲ ಉಡುಗೆ – ತೊಡುಗೆಗಳಿಂದಲೇ ಈ ವೇಷ ಇಂಥ ಕುಣಿತದ್ದು ಎಂದು ಹೇಳಿಬಿಡಬಹುದು.

ಕುಣಿತಗಳಲ್ಲಿ ವಾದ್ಯಗಳದ್ದೇ ಒಂದು ವಿಶೇಷ ಆಕರ್ಷಣೆ. ಪ್ರಕೃತಿಯ ನಡುವೆಯೇ ಬದುಕನ್ನು ಆರಂಭಿಸಿದ ಮಾನವ ಅಲ್ಲಿನ ವಸ್ತು ಕಂಪನದಿಂದ ಉಂಟಾಗುವ ನಾದ ಮಾಧುರ್ಯಕ್ಕೆ ಮನಸೋತ. ಜುಳು ಜುಳು ಹರಿದ ಝರಿಯ ನಿನಾದ, ಪಕ್ಷಿಯ ಕಲರವ, ಗುಡುಗು – ಸಿಡಿಲಿನ ಆರ್ಭಟ, ಗಾಳಿಯ ಸಿಳ್ಳು, ಬಿಲ್ಲಿನ ನಾರಿನ ಧ್ವನಿ ತರಂಗ – ಹೀಗೆ ಹತ್ತು ಹಲವು ಶಬ್ದಗಳು ಅವನ ಭಾವಕೋಶವನ್ನು ವಿಸ್ತರಿಸಿದವು. ವಾದ್ಯಗಳಿಲ್ಲದೆ ಕುಣಿತವಿಲ್ಲ ಎಂದರೂ ತಪ್ಪಾಗದು. ವಾದ್ಯದ ಗತ್ತು ಗಮ್ಮತ್ತು ಇಲ್ಲದಿದ್ದರೆ ಕಲಾವಿದರ ಪಾದಗತಿ ತಪ್ಪಾದಂತೆ. ಸಾಹಿತ್ಯ, ವಾದ್ಯ, ವೇಷ ಭೂಷಗಣಗಳ ಹುಟ್ಟಿನಹಿಂದೆ ಪಾರಂಪಾರಿಕವಾದ ಧಾರ್ಮಿಕ ಹಿನ್ನೆಲೆ ಇರುವುದು ಸ್ಪಷ್ಟ. ಒಟ್ಟಿನಲ್ಲಿ ನಿಸರ್ಗದ ಮಡಿಲಿನಿಂದಲೇ ಕುಣಿತ – ಹಾಡು – ವಾದ್ಯ – ವೇಷಭೂಷಣಗಳಿಗೆ ಪ್ರೇರಣೆಯನ್ನು ಪಡೆದು ತಾನು ಬೆಳೆದಂತೆ ಅವುಗಳನ್ನು ವೈವಿಧ್ಯಮಯವಾಗಿ ಬೆಳೆಸುತ್ತಾ ಅದ್ಭುತವಾದ ಕುಣಿತಗಳನ್ನು ಜನಪದರು ಇಂದಿಗೂ ಉಳಿಸಿಕೊಂಡಿರುವುದು ವಿಸ್ಮಯವೇ ಸರಿ.

ಎಚ್‌.ಆರ್.ಸಿ.

ಜನಪದ ಗಣಿತ ಜನಪದರ ಬೌದ್ಧಿಕ ಕಸರತ್ತಿನ ವ್ಯವಹಾರ ಜ್ಞಾನದ ಒಂದು ಅಂಗ. ವಿಜ್ಞಾನ ಯುಗ ಪ್ರಾರಂಭವಾಗುವ ಮೊದಲು ಜನಪದರ ಬದುಕಿನಲ್ಲಿ ಕಂಡುಬರುವ ವಿಜ್ಞಾನದ ಬಗೆಗಿನ ಮೂಲ ಸ್ವರೂಪದ ಅಂಶಗಳು ಜನಪದ ಗಣಿತದಲ್ಲಿ ಕಾಣುತ್ತವೆ. ಮಾನವನ ಜೀವನದ ಎಲ್ಲ ಕ್ಷಣಗಳೂ ಲೆಕ್ಕಾಚಾರದ ಹಂದರದಲ್ಲಿಯೇ ಸಾಗುತ್ತಿದ್ದ ಕಾರಣ ಬುದ್ಧಿ ಮತ್ತು ಭಾವಗಳೆರಡರ ಸಂಗಮದಲ್ಲಿ ಈ ಜನಪದ ಗಣಿತ ಮೊಳಕೆಯೊಡೆದಿತ್ತು ಎಂಬುದು ಗೊತ್ತಾಗು ತ್ತದೆ.

ಜನಪದ ಗಣಿತ ಇಂದಿನ ಗಣಿತ ಶಾಸ್ತ್ರಕ್ಕೆ ಹೊರತಾದುದಲ್ಲ. ಎರಡರಲ್ಲೂ ಕೆಲವು ಸಮಾನ ಅಂಶಗಳಿವೆ. ‘ಗಣಿತ’ ಎನ್ನುವ ಪದ ‘ಗಣನೆ’, ‘ಎಣಿಕೆ, ಲೆಕ್ಕಾಚಾರ’ ಮೊದಲಾದ ಅರ್ಥಗಳನ್ನು ಒಳಗೊಂಡದ್ದು. ‘ಶಾಸ್ತ್ರ’ ಎನ್ನುವ ಪದ ಇವುಗಳ ವಿಧಾನವನ್ನು ಕುರಿತದ್ದಾಗಿದೆ. ಒಟ್ಟಿನಲ್ಲಿ ಗಣನೆ, ಎಣಿಕೆ, ಲೆಕ್ಕಾಚಾರಗಳ ವಿಧಾನ ನಿರೂಪಣೆಯೇ ‘ಗಣಿತಶಾಸ್ತ್ರ’ ಎನ್ನಬಹುದು. ವಿವೇಚನೆ ಮಾಡುವ ಸಾರ್ವತ್ರಿಕ ಸೂತ್ರಗಳನ್ನು ಭಾವ ಇಲ್ಲವೆ ಸಂಕೇತಗಳ ಮೂಲಕ ವ್ಯಕ್ತಪಡಿಸುವ ಕ್ರಿಯೆ ಗಣಿತದಲ್ಲಿದೆ.

ಜನಪದ ಗಣಿತ ಇಂದಿನ ಗಣಿತ ಶಾಸ್ತ್ರಕ್ಕೆ ಮೂಲವಾಗಿದೆ ಎಂದು ನಿರ್ದಿಷ್ಟವಾಗಿ ಹೇಳಲಿಕ್ಕಾಗದಿದ್ದರೂ ಇಂದಿನ ಗಣಿತಶಾಸ್ತ್ರ ಜನಪದ ಗಣಿತದ ಪರಿಷ್ಕೃತ ರೂಪವೇ ಆಗಿದೆ ಎಂದು ಹೇಳಲಡ್ಡಿಯಿಲ್ಲ. ಹಿಂದಿನ ಗಣಿತಕ್ಕೆ ವಿಜ್ಞಾನ ಪ್ರಯೋಗದ ಸ್ಪರ್ಶವಿಲ್ಲದಿದ್ದರೂ ತನ್ನದೇ ಆದ ಚಮತ್ಕಾರ ಪೂರಿತ ಸೂತ್ರಗಳನ್ನು ಇದು ಬಿಟ್ಟುಕೊಟ್ಟಿಲ್ಲದಿರುವುದು ಗಮನಿಸಬಹುದಾದ ಅಂಶವಾಗಿದೆ.

ಜನಪದ ಗಣಿತಕ್ಕೆ ನಿರ್ದಿಷ್ಟ ರೂಪದ ಪರಂಪರೆ ಇಲ್ಲದಿದ್ದರೂ ಮೌಖಿಕ ಸಂಪ್ರದಾಯದಲ್ಲಿ ಒಬ್ಬರಿಂದೊಬ್ಬರಿಗೆ ಅವರವರ ವಾಕ್‌ಚಾತುರ್ಯ, ವ್ಯವಹಾರ ಚಾಣಾಕ್ಷತೆ, ತಂತ್ರಜ್ಞಾನ ಹಾಗೂ ಸೂಕ್ಷ್ಮತೆಯಿಂದೊಡಗೂಡಿದ ಜಾಣತನ ಈ ಮೊದಲಾದವುಗಳ ಆಧಾರದ ಮೇಲೆ ಉಳಿದುಬಂದಿದೆ; ಬೆಳೆದು ನಿಂತಿದೆ. ಮಾನವನ ಬದುಕು ಲೆಕ್ಕಾಚಾರದ ಹಂದರದಲ್ಲಿ ಸಾಗುತ್ತಿರುವುದರ ನಿಮಿತ್ತ ಅವನ ಉಸಿರಿನ ದ್ಯೋತಕವಾಗಿ, ಬದುಕಿನ ಅಂಗವಾಗಿ, ವ್ಯವಹಾರದ ಸಂಗವಾಗಿ, ಮನರಂಜನೆಯ ರಂಗವಾಗಿ, ವಿನೋಧದ ಸ್ಫುರ್ತಿಸೆಲೆಯಾಗಿ, ಪಂದ್ಯಪಣಗಳಲ್ಲಿಯ ಸಂದರ್ಭದ ಸ್ಪರ್ಧಾರೂಪಕವಾಗಿ, ಮನುಷ್ಯನ ಬುದ್ಧಿಮಟ್ಟಕ್ಕೆ ಕೇಂದ್ರಬಿಂದುವಾಗಿ, ವಯೋಮಾನಕ್ಕೆ ತಕ್ಕಂತೆ ಅವರವರ ಅನುಭವದ ನೆಲೆಯಲ್ಲಿ ಈ ಗಣಿತ ಕಂಡುಬರುತ್ತದೆ. ಜನಪದರ ಧಾಟಿಯಲ್ಲಿರುವ ೧೨ನೆಯ ಶತಮಾನದ ‘ಲೀಲಾವತಿ ಗಣಿತ’ ಜನತೆಯಿಂದಲೇ ಸ್ಫೂರ್ತಿಗೊಂಡದ್ದೆಂಬುದನ್ನು ಇಲ್ಲಿ ಸ್ಮರಿಸಬಹುದು.

ಜನಪದರ ಬದುಕಿನಲ್ಲಿ ಸಹಾಯಕವಾಗಿದ್ದ ಕೋಷ್ಟಕಗಳು ಈಗಿರುವ ಹಳೆಯ ತಲೆಮಾರಿನ ಜನರ ಬಾಯಲ್ಲಿ ಉಳಿದುಕೊಂಡು ಬಂದಿದ್ದು ಇವು ಹಿಂದಿನ ಕಾಲದ ಕೆಲವೊಂದು ಪದ್ಧತಿಗಳ ಕ್ರಮಗಳನ್ನು ಹೇಳುತ್ತವೆ. ನಾಣ್ಯಗಳ, ಹಣದ ಮೌಲ್ಯಮಾಪನದ, ಧಾನ್ಯಗಳ ಅಳತೆಯ, ತೂಕ, ಉದ್ದ, ಗಾತ್ರ, ಅಗಲ, ಎತ್ತರಗಳ, ದೂರದ ಅಳತೆಯ, ಕಾಲಪರಿಮಾಣದ, ಪಕ್ಷ, ತಿಥಿ, ಮಾಸ, ಋತು , ನಕ್ಷತ್ರ, ಸಂವತ್ಸರಗಳ ಬಗೆಗೆ ತಿಳಿಸುವ ಕೋಷ್ಟಕಗಳು ಜನಪದರ ಬದುಕಿನ ವ್ಯವಹಾರವನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸಿ ಹೇಳುತ್ತವೆ.

ಜನಪದ ಗಣಿತವನ್ನು ವ್ಯವಹಾರ ಗಣಿತ ಮತ್ತು ವಿನೋದ ಗಣಿತ ಅಥವಾ ಜಾಣಗಣಿತ ಅಥವಾ ಚಮತ್ಕಾರಗಣಿತ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ವ್ಯವಹಾರ ಒಬ್ಬ ವ್ಯಕ್ತಿಗೇ ಸೀಮಿತವಾದುದಲ್ಲ; ಸಮಾಜದ ಪ್ರತಿಯೊಬ್ಬ ವ್ಯಕ್ತಿಯೊಡನೆ ಆಯಾ ಕಸುಬುದಾರರ ಕೊಡುಕೊಳುವಿಕೆಯ ಸಂಬಂಧವಾಗಿದೆ. ಯಾವುದೇ ಒಂದು ವಸ್ತುವನ್ನು ಮಾರುವುದು, ಕೊಳ್ಳುವುದು, ಹಂಚುವುದು, ಸಾಟಿ(ಅದಲು ಬದಲು) ಮಾಡಿಕೊಳ್ಳುವುದು ಇದು ಒಂದು ರೀತಿಯ ಅವಿನಾಭಾವ ಸಂಬಂಧ ಬೆಳೆಸಿಕೊಳ್ಳುವಂತೆ ಮಾಡಿದೆ. ಇಲ್ಲಿಯ ವ್ಯವಹಾರದ ಜೊತೆಗೆ ಬುದ್ಧಿಯ ಕೆಲಸ ಚುರುಕಾಗಿರುತ್ತದೆ. ಇಂಥ ಸಂಬಂಧದ ಲೆಕ್ಕಾಚಾರ ವಿನಿಮಯ ಪದ್ಧತಿಯೇ ಜನಪದ ಗಣಿತಕ್ಕೆ ತಳಹದಿಯಾಗಿದ್ದಂತೆ ಕಂಡುಬರುತ್ತದೆ. ಹೀಗೆ ಜನಪದ ಗಣಿತದಲ್ಲಿ ವ್ಯವಹಾರದ ಸ್ವರೂಪವನ್ನು ತಿಳಿಸುವ ಲೆಕ್ಕಗಳು ಬರುಬರುತ್ತಾ ವಿನೋದಾಂಶವುಳ್ಳ ಚಮತ್ಕಾರಿಕ ರೂಪಗಳಾಗಿರುವುದನ್ನು ಕಾಣುತ್ತೇವೆ. ಮಾನವನ ಬುದ್ಧಿ ವಿಕಾಸವಾದಂತೆ ವಿನೋದ, ವಿರಾಮ, ಪಂದ್ಯ, ಪಣ ಮೊದಲಾದ ವೇಳೆಗಳಲ್ಲಿ ವಿನೋದಗಣಿತ ಹುಟ್ಟಿಕೊಂಡಿದೆ. ಹಾಗಾಗಿ ವ್ಯಾವಹಾರಿಕ ಅನುಭವಗಳಿಗೆ ಕಾಲ್ಪನಿಕ ರೂಪವನ್ನು ಕೊಟ್ಟು ಒಡ್ಡುವ, ಬಿಡಿಸುವ ಗುಣವನ್ನು ಇಲ್ಲಿ ತಂದಿರಲು ಸಾಧ್ಯವಿದೆ. ವ್ಯವಹಾರದೊಂದಿನ ವಿನೋದ ವ್ಯಕ್ತಿಯ ಬದುಕಿನಲ್ಲಿ ಸಹಜವಾಗಿ ಬೆರತುಕೊಂಡು ರಂಜನೆಯನ್ನು ಒದಗಿಸಲು ಕಾರಣವೆನಿಸಿದೆ.

ಜನಪದ ಗಣಿತದ ಲಕ್ಷಣಗಳು ಹೀಗಿವೆ: ಒಬ್ಬರು ಒಡ್ಡುವುದು, ಮತ್ತೊಬ್ಬರು ಬಿಡಿಸುವುದು; ಇಂತಹ ಲೆಕ್ಕಗಳನ್ನು ಬಿಡಿಸುವುದು ಸುಲಭವೆಂದರೂ ಇಲ್ಲಿಯ ಜಾಣತನವನ್ನು ಬಿಟ್ಟುಕೊಡದಿರುವುದು; ಕಾಲಮಿತಿಯನ್ನು ಒಳಗೊಂಡಿರುವುದು; ಜನಪದರ ಜ್ಞಾನ, ಜಾಣತನ, ತಂತ್ರ, ಸೂಕ್ಷ್ಮತೆಗಳನ್ನು ಎತ್ತಿ ತೋರಿಸುವುದು; ಇಂಥ ಲೆಕ್ಕಗಳನ್ನು ಗಮನಿಸಿದಾಗ ನಮಗೆ ವಿಸ್ಮಯ ಉಂಟಾಗುವುದರ ಜೊತೆಗೆ ಹೇಳುವ, ಬಿಡಿಸುವವನ ಚಾತುರ್ಯ, ಕೌಶಲ, ಜಾಣ್ಮೆಗಳ ಅರಿವಾಗುವುದು. ಒಟ್ಟಿನಲ್ಲಿ ವ್ಯವಹಾರಕ್ಕೆ ಜ್ಞಾನ ವಿಕಾಸಕ್ಕೆ, ಬೌದ್ಧಿಕ ಚಾತುರ್ಯಕ್ಕೆ, ಕ್ರಿಯಾಶೀಲತೆಗೆ, ಮನರಂಜನೆಗಾಗಿ ಕಟ್ಟಿಕೊಂಡಂಥವು ಈ ಲೆಕ್ಕಗಳು.

ಜನಪದ ಗಣಿತದ ಮುಖ್ಯ ಭಾಗವೇ ‘ವಿನೋದ ಗಣಿತ’ ಅಥವಾ ‘ಜಾಣಗಣಿತ’ ಅಥವಾ ‘ಚಮತ್ಕಾರ ಗಣಿತ’ವಾಗಿದೆ. ಜಾಣಗಣಿತದ ಪ್ರಮುಖ ಉದ್ದೇಶ ರಂಜನೆ, ಪ್ರಚೋದನೆ, ಮನೋಲ್ಲಾಸ ಉಂಟುಮಾಡುವುದು; ಪ್ರತಿಯೊಬ್ಬ ವ್ಯಕ್ತಿಯ ಬೌದ್ಧಿಕ ಚಾತುರ್ಯ, ಚಮತ್ಕಾರ, ಕೌಶಲ, ಜಾಣ್ಮೆಗಳನ್ನು ಅನಾವರಣಗೊಳಿಸುವುದು; ಚುಟುಕಾಗಿ, ಚುರುಕಾಗಿ ಹೇಳುವ – ಬಿಡಿಸುವ ಜಾಣ್ಮೆ ತೋರುವುದು; ಪಂದ್ಯ ಪಣ, ಸ್ಪರ್ಧಾ ಕೇಂದ್ರಗಳಲ್ಲಿ ಭಾಗವಹಿಸಿ ಕೀರ್ತಿ, ಹಿರಿಮೆ ಗಳಿಸುವುದು; ‘ಬಾಯಲ್ಲಿ ಲೆಕ್ಕ ಹೇಳ್ತೇನೆ ಚೊಕ್ಕಲ ಬಿಡಿಸೋ ಈ ಲೆಕ್ಕ’ ಎಂಬ ಸವಾಲನ್ನೊಡಿ ಎದುರಾಳಿಯನ್ನು ಕೆಣಕಿ ಉತ್ತರ ಕಂಡುಕೊಳ್ಳುವುದು ಹಾಗೂ ಪ್ರತಿಸ್ಪರ್ಧಿಯ ಸವಾಲಿಗೂ ಧೈರ್ಯದಿಂದಲೇ ಉತ್ತರಿಸುವುದು ಇತ್ಯಾದಿಯಾಗಿ ಹೇಳಬಹುದು.

ಜನಪದರು ಎಷ್ಟು ಬುದ್ಧಿವಂತರು ಎಂದರೆ ಬರೀ ಬಾಯಲ್ಲೇ ಕೂಡುವ, ಕಳೆಯುವ, ಭಾಗಿಸುವ ಹಾಗೂ ಗುಣಿಸುವ ಸೂತ್ರದ ಲೆಕ್ಕಗಳನ್ನು ನಿರಾಯಾಸವಾಗಿ ಹೇಳಬಲ್ಲರು, ಬಿಡಿಸಬಲ್ಲರು. ಗಣಿತ ಎಂದೊಡನೆ ನೀರಸ, ತಟ್ಟನೆ ಆಕರ್ಷಿಸಲಾರದು ಎಂದು ಭಾವಿಸಬೇಕಿಲ್ಲ. ಎಂಥ ವ್ಯಕ್ತಿಯನ್ನಾದರೂ ತನ್ನತ್ತ ಸೆಳೆದು ಅವರಿಗೆ ಚುಟುಕಾಗಿಯೋ, ಕಥನಾತ್ಮಕವಾಗಿಯೋ ಹೇಳಿ, ಅವರನ್ನು ಅದರಲ್ಲಿ ಕ್ಷಣಕಾಲ ಯೋಚನೆಗೆ ಹಚ್ಚಿಸಬಲ್ಲರು. ಅವರಿಂದ ಸಮಸ್ಯೆಗೆ ಉತ್ತರ ಬಿಡಿಸುವತನಕ ಉತ್ತೇಜಿಸಬಲ್ಲರು. ಅಕಸ್ಮಾತ್‌ ಉತ್ತರ ಹೇಳಲಿಕ್ಕಾಗದೆ ಇದ್ದಾಗ ಬೇರೊಂದು ಸಮಸ್ಯೆಯನ್ನು ಎದುರಿಟ್ಟು ಅವರಿಂದಲು ಇಂತಹ ಸಮಸ್ಯೆಗಳು ಹೊರಹೊಮ್ಮಿದಲ್ಲಿ ಇಬ್ಬರೂ ಸೇರಿ ಸ್ಪರ್ಧೆಯ ರಂಗನ್ನ ಹೆಚ್ಚಿಸಬಲ್ಲರು. ಒಬ್ಬರಿಗೊಬ್ಬರು ಬೌದ್ಧಿಕ ಚಾತುರ್ಯವನ್ನು ಪ್ರದರ್ಶಿಸುವ ಮಟ್ಟಕಕೆ ಸನ್ನಿವೇಶವನ್ನು ಸೃಷ್ಟಿಸಬಲ್ಲರು.

ಕೂಡುವುದಕ್ಕೆ:

ಪ್ರಶ್ನೆ:    ಮೂರು ಸಂಖ್ಯೆಗಳನ್ನು ಕೂಡಿದರೆ ಹಾಗೂ ಗುಣಿಸಿದರೆ ಒಂದೇ ಉತ್ತರ ಬರುತ್ತದೆ. ಹಾಗಾದರೆ ಆ ಸಂಖ್ಯೆಗಳು ಯಾವುವು?

ಉತ್ತರ: ೧,೨,೩ ಕೂಡಿದಾಗಲೂ ಗುಣಿಸಿದಾಗಲೂ ೬ ಇದರ ಉತ್ತರ (೧+೨+೩=೬, ೧x೨x೩=೬)

ಕಳೆಯುವುದಕ್ಕೆ:

ಪ್ರಶ್ನೆ: ೩೦ರಲ್ಲಿ ೧೨ ಕಳೆದರೆ ೧೮ ಉಳಿಯುತ್ತದೆ. ೧೨ ರಲ್ಲಿ ೩೦ ಕಳೆದರೆ ಎಷ್ಟು ಉಳಿಯುತ್ತದೆ?

ಉತ್ತರ: ೩೦ ರಲ್ಲಿ ೧೨ ಕಳೆದೆ ೧೮ ಎಂಬುದು ಸ್ಪಷ್ಟ. ಅಕ್ಷರಸ್ಥರು ೧೨ರಲ್ಲಿ ೩೦ನ್ನು ಕಳೆಯುವಾಗ ೧೨ – ೩೦= – ೧೮ ಎಂದು ಉತ್ತರಿಸುತ್ತಾರೆ. ಆದರೆ ಜನಪದರ ಉತ್ತರವೇ ಬೇರೆ. ೧ ವರ್ಷಕ್ಕೆ ೧೨ ತಿಂಗಳು ತಾನೇ? ಅದರಲ್ಲಿ ೩೦ ದಿನಗಳು ಅಂದರೆ ೧ ತಿಂಗಳು ಕಳೆದರೆ ಉಳಿಯುವುದು ೧೧ ತಿಂಗಳು ಅಲ್ಲವೆ?

ಭಾಗಾಕಾರಕ್ಕೆ:

ಪ್ರಶ್ನೆ: ಒಂದೆರಡು ಮೂರ್ನಾಲ್ಕು ಸಂದೀಲೈದಾರೇಳು ಇದನ್ನು ಇಪ್ಪತ್ತ ಒಂದರಿಂದ ನಿಶ್ಯೇಷವಾಗಿ ಭಾಗಿಸಿ

ಉತ್ತರ: ಏಳು ನಾಕಾರು ಮುಂದೊಂಬತ್ತೇಳು

ಇಲ್ಲಿ ಗಣಿತದ ರೂಪವನ್ನು ಶಬ್ದದ ಚಮತ್ಕಾರ ರೂಪದಲ್ಲಿ ಹಿಡಿದಿಡಲಾಗಿದೆ. ಹೀಗೆ ಬಿಡಿಸಿಕೊಳ್ಳಬೇಕು.

ಒಂದೆರಡು: ೧೧

ಮೂರ್ನಾಲ್ಕು: ೩ ೩ ೩ ೩

ಸಂದೀಲೈದಾರೇಳು: ೬ ೬ ೬ ೬ ೬ ೭

ಕೂಡಿಸಿ ಬರೆದಾಗ: ೧ ೬ ೧೬ ೩ ೬ ೩ ೬ ೩ ೬ ೩ ೭

ಇದನ್ನು ೨೧ ರಿಂದ ಭಾಗಿಸಿದಾಗ

ಏಳು: ೭

ನಾಕಾರು: ೬ ೬ ೬ ೬

ಮುಂದೊಂಬತ್ತೇಳು: ೯ ೯ ೯ ೯ ೭

ಬರುವ ಉತ್ತರ: ೭ ೬ ೯ ೬ ೯ ೬ ೯ ೬ ೯ ೭

ಗುಣಾಕಾರಕ್ಕೆ:

ಪ್ರಶ್ನೆ: ಒಂದು ಮರ, ಆ ಮರಕ್ಕೆ ೧೨ ಕೊಂಬೆಗಳು ಒಂದೊಂದು ಕೊಂಬೆಗೆ ೧೨ ಜನ ಐನೋರು ಒಬ್ಬ ಐನೋರಿಗೆ ೧೨ ಜೋಳಿಗೆ

ಒಂದು ಜೋಳಿಗೆಗೆ ೧೨ ಹೋಳಿಗೆ ಹಾಗಾದರೆ ಇಲ್ಲಿ ಎಷ್ಟು ಐನೋರು ಜೋಳಿಗೆ, ಹೋಳಿಗೆ

ಇವೆ ಅಂತ ಹೇಳ್ತೀರಾ?

ಉತ್ತರ: ೧ ಕೊಂಬೆಗೆ ೧೨ ಜನರಂತೆ ೧೨ x ೧೨= ೧೪೪ ಜನ ಐನೂರು

ಒಬ್ಬ ಐನೋರಿಗೆ ೧೨ ಜೋಳಿಗೆಯಂತೆ ೧೨ x ೧೪೪=೧೬೨೮ ಜೋಳಿಗೆ

೧ ಜೋಳಿಗೆಗೆ ೧೨ ಹೋಳಿಗೆಯಂತೆ ೧೨ x ೧೭೨೮=೨೦೭೩೬ ಹೋಳಿಗೆ

ಇಂಥ ಲೆಕ್ಕ ಚಮತ್ಕಾರಗಳನ್ನು ನಮ್ಮ ಜನಪದರು ಎಷ್ಟು ಬೇಕಾದರೂ ನಿರಾಯಾಸವಾಗಿ ಹೇಳಬಲ್ಲರು. ಇವರಲ್ಲಿ ಹುದುಗಿರುವ ವ್ಯವಹಾರ ಹಾಗೂ ಜಾಣತನ ನಿಜಕ್ಕೂ ಬೆರಗನ್ನು ಉಂಟು ಮಾಡಬಲ್ಲದು.

ಗಣಿತಾತ್ಮಕ ಒಗಟು ಮಾದರಿಯಲ್ಲಿರುವ ಕೆಲವು ಲೆಕ್ಕಗಳು ಒಂದು ರೀತಿಯಲ್ಲಿ ಮೋಸಗೊಳಿಸುವ ಅಂಶಗಳನ್ನು ಒಳಗೊಂಢೇ ಬಿಡಿಸುವವರನ್ನು ಆಶ್ಚರ್ಯಚಕಿತಗೊಳಿಸಬಲ್ಲವು. ಗಣಿತ ಮತ್ತು ಒಗಟು ಎರಡೂ ಜೊತೆ ಜೊತೆಯಾಗಿಯೇ ಸೇರಿಕೊಂಡು ಹಾಸ್ಯ, ರಂಜನೆ, ಕೌಶಲಗಳನ್ನು ವ್ಯಕ್ತಗೊಳಿಸಬಲ್ಲವು.

ಉದಾ:
ಪ್ರಶ್ನೆ:
ಕೆರೆಯಾಗೆ ಏಳೆಮ್ಮೆ
ದಡದ್‌ ಮ್ಯಾಲೆ ಹತ್ತೆಮ್ಮೆ
ಮನೆಯಾಗೆ ಹಿಂಡೆಮ್ಮೆ
ಹಾಗಾದರೆ ಎಷ್ಟೆಮ್ಮೆ?

ಉತ್ತರ: ಒಂದು

ಪ್ರಶ್ನೆ: ನಾನೂರು ಗೂಟದಲ್ಲಿ
ನೂರು ಗೂಟಕ್ಕೆ ಕುದುರೆ ಕಟ್ಟಿದೆ
ಹಾಗಾದರೆ ಉಳಿದ ಗೂಟ ಎಷ್ಟು?

ಉತ್ತರ: ಎಷ್ಟೂ ಇಲ್ಲ (ನಾ – ನೂರು)

ಪ್ರಶ್ನೆ: ನಾಲ್ಕೂವರೆ ಅರ್ಧದ
ಎರಡರಷ್ಟು ಅಂದ್ರೆ ಎಷ್ಟು?

ಉತ್ತರ: ನಾಲ್ಕೂವರೆ

ಪ್ರಶ್ನೆ: ೭ – ೨ ಆಣೆಗೆ ೪ – ೫ ಬಾಳೆಹಣ್ಣು
ಹಾಗಾದರೆ ಒಂದಕ್ಕೆಷ್ಟು

ಉತ್ತರ: ಒಂದು ಆಣೆಗೆ ಒಂದು

ಪ್ರಶ್ನೆ: ಅಡ್ಡಾದುಡ್ಗೆ (ಅರ್ಧದ ದುಡ್ಡು) ಮೂರುಸೇರು ಬೆಲ್ಲ ಆದ್ರೆ ನಿಮ್ಮಪ್ಪನ ಗಡ್ಡಕ್ಕೆಷ್ಟು?

ಉತ್ತರ: ಕತ್ತಿ (ಕೂದಲು ಬೆಳೆದದ್ದನ್ನು ಹೆರೆದುಕೊಳ್ಳಲು)

ಹೀಗೆ ಇವೆಲ್ಲಾ ಮೋಸದ ಜಾಣಲೆಕ್ಕಗಳು, ಒಗಟಿನ ಸೊಗಡು,ಹಾಸ್ಯದ ಹೊನಲು ಎರಡನ್ನು ಒಳಗೊಂಡು ಕ್ಷಣಕಾಲ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಬಲ್ಲವು.

ಇಂತಹ ಲೆಕ್ಕ ಚಮತ್ಕಾರಗಳನ್ನು ಹೇಳುವವರು ಜನಪದರಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಸಿಕ್ಕುತ್ತಾರೆ. ಒಬ್ಬ ವ್ಯಕ್ತಿ ಹತ್ತಕ್ಕಿಂತ ಹೆಚ್ಚು ಹೇಳಲಾರ ಎಂಬ ಮಾತಿದ್ದರೂ ಇಂತಹ ಅಪರೂಪದ ಲೆಕ್ಕ ಚಮತ್ಕಾರಗಳನ್ನು ಇನ್ನೂರು ಮುನ್ನೂರರಷ್ಟು ಹೇಳಿಕೊಟ್ಟ ಒಬ್ಬ ವ್ಯಕ್ತಿ ನಮ್ಮ ಜನಪದರಲ್ಲಿದ್ದುದು ಗಮನಿಸಬೇಕಾದ ಸಂಗತಿ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದ ಸಿದ್ಧಲಿಂಗಪ್ಪ ಇಂತಹ ಲೆಕ್ಕಚಮತ್ಕಾರಗಳನ್ನು ಹೇಳುವುದರಲ್ಲಿ ಅತ್ಯಂತ ಜಾಣನಾಗಿದ್ದ. ‘ಹಳ್ಳಿ ಚಮತ್ಕಾರಿ ಲೆಕ್ಕವಂತ’ ಎಂಬ ಹೆಸರು ಇವರಿಗಿತ್ತಲ್ಲದೆ, ಜನಪದ ಗಣಿತ ಎಂದೊಡನೆ ಇವರ ಹೆಸರು ಜನಪದ ಗಣಿತ ಕ್ಷೇತ್ರದಲ್ಲಿ ಅಚ್ಚಳಿಯದೆ ಉಳಿಯಬಲ್ಲದು.

ಜಿ.ಎಸ್‌.